ದೇವಚಂದ್ರನ ರಾಜಾವಳಿಯನ್ನು ಓದುವ ಮುನ್ನ ನನ್ನ ಒಂದು ಪ್ರಶ್ನೆ ಏನಿತ್ತೆಂದರೆ ಪ್ರಸ್ತುತ ಜಾಗತೀಕರಣವೆಂಬ ಈ ಭಯೋತ್ಪಾದಕ ಯುಗದಲ್ಲಿ ಇಂಥ ಒಂದು ಬೃಹತ್ (ಸು.೪೦೦ ಪುಟ) ಗ್ರಂಥವನ್ನು ತಿಂಗಳಾನುಗಟ್ಟಲೆ ಓದುತ್ತಾ ಕೂರುವುದರಲ್ಲಿ ಅರ್ಥವಿದೆಯೇ ಎಂಬುದ; ಆ ಮೇಲಿನ ಆತಂಕ ಏನಿತ್ತೆಂದರೆ, ವಿಶ್ವವಿದ್ಯಾಲಯಗಳು ಕೂಡಿಸುವ ಇಂಥ ಅಕಾಡೆಮಿಕ್ ಗೋಷ್ಠಿಗಳಲ್ಲಿನ ನನ್ನಂಥ ಸಾಮಾನ್ಯ ಓದುಗ ಹೇಳುವುದಾದರೂ ಏನಿರುತ್ತದೆ ಎಂಬುದು ಮತ್ತೂ ಹೇಳಬೇಕೆಂದರೆ, ನಮ್ಮ ವಿ.ವಿ.ಗಳು ಇಂಥ ಕೃತಿಗಳನ್ನು ಕುರಿತು ಸಾಂಸ್ಕೃತಿಕ ಕೇವಲ ಕೊಟ್ಟಣ ಕುಟ್ಟುವ ಕೆಲಸ ಮಾಡುವುದರಿಂದ ವೃಥಾ ಕಾಲಹರಣ ಹಾಗೂ ಧನವ್ಯಯವಲ್ಲವೇ ಎಂಬ ಆಕ್ಷೇಪ ನನ್ನದು. ಹಾಗೇನೂ ಇಲ್ಲವಾದರೆ, ಇಂಥ ಚರ್ಚೆ, ಸಂವಾದಗಳಿಂದ ಈ ದೇಶದ ಅತ್ಯಂತ ಕೆಳಗಿನ ಸಮುದಾಯಗಳಿಗೆ ಏನಾದರೂ ಪ್ರಯೋಜನ ಆಗುವ ಸಾಧ್ಯತೆ ಉಂಟೇ ಎಂಬ ಕಿಂಚಿತ್ ಆಶೆ ನನ್ನದು. ಏಕೆಂದರೆ ಈಚಿನ ದಿನಗಳಲ್ಲಿ ಇಂಥ ಸಂವಾದ ಗೋಷ್ಠಿಗಳಲ್ಲಿ ಕುಳಿತು ‘ಬೋರ್’ ಮಾಡಿಸಿಕೊಳ್ಳುವುದಕ್ಕಿಂತ ಹೊರಗೆ ಹಾಯ್ದು ಹೋಗುವ ಮುಷ್ಕರ ಮೆರವಣಿಗೆಗಳಲ್ಲಿ ‘ಸಪ್ತಪದಿ’ ಹೆಜ್ಜೆ ಹಾಕಿ ಇದು ಯಾರ ಪರ? ಉಳ್ಳವರ ಪರವೊ? ಇಲ್ಲದವರ ಪರವೊ? ಎಂದು ಕೇಳುತ್ತ ಅವರು ನೀಡಿದ ಕರಪತ್ರಗಳ ಪ್ರಾಮಾಣಿಕತೆಯನ್ನು ಪರಿಶೀಲಿಸುವ ಕುತೂಹಲ ನನಗೆ, ಅದಿರಿಲಿ.

ಇಂಥ ಒಂದು ಮನಃಸ್ಥಿತಿಯಲ್ಲಿ ನಾನು ರಾಜಾವಳಿ ಕಥಾಸಾರವನ್ನು, ಹಿಂದೆಂದೂ ಓದದವನು, ಈಗ ಓದುತ್ತಾ ಹೋದೆ. ಹೇಗೆಂದರೆ ಅವನೇ ಪ್ರತಿಯೊಂದು ಅಧಿಕಾರದ ಆರಂಭದಲ್ಲೂ ವಿನಂತಿಸಿಕೊಳ್ಳುತ್ತಾನಲ್ಲ “ವಿಚಾರ ದಕ್ಷರ್ ವೈಷಮ್ಯಮನ್ ಉಳಿದು ಕೇಳ್ವುದು” ಆ ಒಂದು ಸೈರಣೆಯಿಂದ ಒಂದೆರಡು ಬಾರಿ ಓದಿದೆ. ಆಗ ಮೊಟ್ಟಮೊದಲಿಗೆ ಅನ್ನಿಸಿದ್ದೇನೆಂದರೆ, ಈ ಕಥೆಗಾರ ‘ರಾಜಾವಳಿ ಕಥಾಸಾರ’ ಎಂದು ಹೆಸರಿಟ್ಟು, ಹಿಂದೆ ಕೌಟಿಲ್ಯ ಎಂಬುವವನು ‘ಅರ್ಥಶಾಸ್ತ್ರ’ ಎಂದು ಹೆಸರಿಟ್ಟು ರಾಜಕೀಯ ಶಾಸ್ತ್ರವನ್ನೇ ಮುಂದೊತ್ತಿ ಹೇಳಿದಂತೆ, ಇದರಲ್ಲಿ ಧರ್ಮಾವಳಿ ಹಾಗೂ ಪ್ರಜಾವಳಿ ಕಥಾಸಾರವನ್ನೇ ಮುಂದೊತ್ತಿ ಹೇಳುತ್ತಿದ್ದಾನಲ್ಲವೆ ಎಂದು. ಆಮೇಲ ಅನ್ನಿಸಿತು. ರಾಜಿಕ ಹಾಗೂ ದೈವಿಕರ ಲೆಕ್ಕಾಚಾರಯುಕ್ತ ಲೌಕಿಕ ದುರಾಚಾರಗಳನ್ನು ಜನೋಕ್ತವಾಣಿಯಲ್ಲಿ ನಿಯಂತ್ರಿಸಲು ಹೊರಟಿದ್ದಾನಲ್ಲವೆ ಎಂದು. ನಿಜ, ಇವತ್ತಿನ ನಮ್ಮ ಧರ್ಮರಾಜಕಾರಣದ ಗೊಂದಲಮಯ ಸಮಸ್ಯೆಗಳಿಗೆ ಜನತಾಂತ್ರಿಕ ದೃಷ್ಟಿಯ ಕೆಲವು ಪರಿಹಾರೋಪಾಯಗಳು ಇಲ್ಲುಂಟು ಎಂಬುದೂ ನನ್ನ ಅರಿವಿಗೆ ಬಂದಿತು. ಆದಕಾರಣ ಈ ಕೃತಿಯ ಬಗ್ಗೆ ಒಂದು ಬಗೆಯ ಮೋಹ ಹುಟ್ಟಿತು, ಓದಿದೆ. ಮತ್ತೆ ಅನ್ನಿಸಿದೇನೆಂದರೆ, ಇವತ್ತಿಗೆ ಅತ್ಯಗತ್ಯವಾಗಿ ಆಗಬೇಕಾದ ಧಾರ್ಮಿಕ ಸೌಗಾರ್ದತೆಯನ್ನು ರೇಖಿಸಿರುವ ‘ನೀಲಿ ನಕ್ಷೆ’ ಇದು ಎಂದು. ಮುಂದುವರಿಯುತ್ತಾ ಹೋದಂತೆ, ಒಂದು ಕಡೆ ಟಾಲ್‌ಸ್ಟಾಯ್ ಅವರ ‘ವಾರ್‌ಅಂಡ್ ಪೀಸ್’ ನೆನಪಾದರೆ, ಇನ್ನೊಂದು ಕಡೆಯಿಂದ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ನೆನಪಾಗುತ್ತ ಹೋದವು. ಏಕೆಂದರೆ ರಾಜ ಮಹಾರಾಜರ ಕಥಾವಳಿಯೊಂದಿಗೆ ಅತ್ಯಂತ ಕೆಳಗಿನ ಮನುಷ್ಯರ ಕಥೆಯೂ ಇಲ್ಲಿ ಸಮೀಕರಣಗೊಂಡಿದೆಯಲ್ಲ ಅದಕ್ಕಾಗಿ ಮತ್ತು ಜನ ಸಮುದಾಯಗಳ ಕಷ್ಟಕಾರ್ಪಣ್ಯಗಳಿಗೆ ಕಾರಣರು ಯಾರು? ರಾಜ ಮಹಾರಾಜರೋ? ಧಾರ್ಮಿಕ ಮತಚಾರ್ಯಾರೊ? ಅಥವಾ ಇಬ್ಬರೂ ಕೈಜೋಡಿಸಿದ್ದಾರೆಯೊ? ಎಂಬುದನ್ನು ಚಿಂತಿಸಿ, ನಿಧಾನಿಸಿ, ಧ್ಯಾನಿಸಿ ಆ ಕೇಡಿನ ಮೂಲಚೂಲಗಳನ್ನು ಗುರ್ತಿಸಿ ಕಥಾಸಂರಚನೆ ಮಾಡುತ್ತಾ ಹೋಗುತ್ತಾನೆ. ನಿರ್ಲಕ್ಷಿತ ಸಮೂಹಗಳು ರಾಜರ ಹಾಗೂ ದೈವಿಕರ ವಿಷವ್ಯೂಹದ ವಿರುದ್ಧ ಪ್ರತಿಭಟನಾರೂಪದಲ್ಲಿ ಕಟ್ಟಿರುವ ಮೌಖಿಕ ಪುರಾಣಗಳು, ಪ್ರತೀಕಗಳು, ದಂತಕಥೆಗಳು, ಐತಿಹ್ಯಗಳು ಮುಂತಾದವುಗಳನ್ನು ದೇವಚಂದ್ರ ತನ್ನ ಕಥಾ ಪ್ರಪಂಚದೊಳಕ್ಕೆ ನುಗ್ಗಿಸಿಕೊಂಡು ಆ ಜನಜನಿತ ಅಲಿಖಿತ ಪಠ್ಯಗಳಿಗೆ ಲಿಖಿತ ರೂಪ ಕೊಡುತ್ತಾನೆ. ಎಂದರೆ ಸಂಕಲಿಸುತ್ತಾನೆ ಎಂದಲ್ಲ ಮರು ಹುಟ್ಟು ಕೊಡುತ್ತಾನೆ ಎಂದು. ಇವನ ಕೃತಿ ದೇಸಿಯೊಳ್ ಪುಗುವುದಲ್ಲ, ಮಾರ್ಗ, ದೇಸಿಗಳೆರಡನ್ನೂ ಬಗ್ಗಿಸುವುದು ಮತ್ತು ಒಗ್ಗಿಸುವುದು ಎಂದರೆ ಸರಿ ಹೋದೀತು.

ಇಂಥ ಒಂದು ಕೃತಿ ಇಷ್ಟು ದಿನ ಕನ್ನಡ ವಾಚಕರಿಂದ ಅಲಕ್ಷ್ಯಕ್ಕೆ ಗುರಿಯಾದದ್ದು ಏಕೆ? ಮತ್ತು ಹೇಗೆ? ಎಂದರೆ ನನ್ನ ಪ್ರಕಾರ, ಇದೊಂದು ಸಾಹಿತ್ಯ ಕೃತಿಯಾಗಿ ಸುಕುಮಾರ ಜೀವಿಗಳ ಕಾಂತಾ ಸಂಮಿತಿಯ ಕಾವ್ಯವಲ್ಲದಿರುವುದು, ಅದ್ದರಿಂದ ರಿ ಸೈಕ್ಯ ಪಕ್ಷಪಾತಿಗಳಿಗೆ ಇದು ಸುತ್ರಾಂ ಹಿಡಿಸದು; ಎರಡನೆಯದಾಗಿ, ಇದು ಪುರಾಣವಲ್ಲ ಪುಣ್ಯಕಥೆಯಲ್ಲದಿರುವುದು; ಮೂರನೆಯದಾಗಿ, ಇದರ ಹಳಗನ್ನಡ ನಡುಗನ್ನಡ ಹೊಸಗನ್ನಡ ಲೌಕಿಕವಾಗಿರುವುದು.

ಮಿಶ್ರಣ ಶೈಲಿ ಹಾಗೂ ಸಂಸ್ಕೃತಿ ಕನ್ನಡ ಪದ್ಯಗಳು ಹಾಗೂ ಶ್ಲೋಕಗಳು ಸಾಮಾನ್ಯ ಓದುಗನಿಗೆ ತೊಡಕಾಗಿರುವುದು. ಮತ್ತು ಆಡುಮಾತಿನ ದಾಟಿ ನಮ್ಮ ಮಡಿವಂತರಿಗೆ ಹಿಡಿಸದಿರುವುದು; ನಾಲ್ಕನೆಯದಾಗಿ, ರಾಜಾವಳಿ ಕಥಾಸಾರದ ಸಂವಾದಕ್ಕೆ ಇನ್ನೂ ಕಾಲ ಕೂಡಿ ಬರದೇ ಇದ್ದುದು ಎಂದರೆ ಇವತ್ತಿನಂತೆ ನಮ್ಮ ಪ್ರಾಚೀನ ಕೃತಿಗಳನ್ನು ಗ್ರಾಮೀನ ಸಂಸ್ಕೃತಿಯ ಸಂದರ್ಭದಲ್ಲಿಟ್ಟು ಮೌಲ್ಯಮಾಪನ ಮಾಡುವ ಪರಿಪಾಠಿ ಇಲ್ಲದೇ ಇದ್ದದ್ದು. ಈ ಮುಂತಾದ ಕಾರಣಗಳಿಂದ ಈ ಕೃತಿ ಅಜ್ಞಾತದಲ್ಲಿ ಉಳಿದಿರಬೇಕೆಂದು ನನ್ನ ಊಹೆ.

ದೇವಚಂದ್ರನ ಜೀವಿತಕಾಲ ೧೭೭೦ ರಿಂದ ೧೮೪೧. ಈ ಅವಧಿ ಕರ್ನಾಟಕವೇ ಏಕೆ, ಇಡೀ ಭರತಖಂಡವೇ ಕುದ್ದುಕೊಳ್ಳುತ್ತಿದ್ದ ಕಾಲ. ಮೈಸೂರು ರಾಜ್ಯದ ಮಟ್ಟಿಗಂತೂ ಪ್ರಭುತ್ವಗಳ ‘ಅದಲು-ಬದಲು ಕಂಚೀಕದಲು’ ಆಗುತ್ತಿದ್ದ ಕಾಲ. ಮೈಸೂರು ಒಡೆಯರು, ಹೈದರ್-ಟಿಪ್ಪೂಸುಲ್ತಾನರು, ಕಡೆಗೆ ಬ್ರಿಟಿಷ್ ರೆಸಿಡೆಂಟ್. ಈ ಅವಧಿಯಲ್ಲಿ ಆಳಿದರು. ವಸಾಹತುಶಾಹಿ ಸಾಮ್ರಾಜ್ಯದ ನೀಳ ನಾಲಿಗೆ ಚಾಚಿ ಟಿಪ್ಪುವಿನ ಪತನಾನಂತರ (೧೭೯೯) ನಿರಾತಂಕವಾಗಿ ದೋಚಲು ಅವರಿಗೆ ದಾರಿ ಸುಗಮವಾಯಿತು. ರಾಜರು, ಸಾಮಂತರು ಮತ್ತು ಮಠಮಾನ್ಯಗಳ ಪಾರುಪತ್ಯಗಾರರು ಹಲ್ಲು ಕಿತ್ತಹಾವಾಗಿ ಅರಮನೆ ಗುರುಮೆನಗಳಲ್ಲಿ ಬಂಧಿತರಾದರು. ಟಿಪ್ಪುವಿನ ಕಾಲಾವಧಿಯಲ್ಲಿ “ನೂತನ ತಾಂತ್ರಿಕತೆಗಳ ಆವಿಷ್ಕಾರ ಮತ್ತು ಅಳವಡಿಕೆ, ಏಷ್ಯಾಖಂಡದ ದೊಡ್ಡ ಗ್ರಂಥಾಲಯಗಳಲ್ಲೇ ಒಂದಾದ ಗ್ರಂಥಾಲಯವನ್ನು ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಿ, ಆಧುನಿಕ ಜ್ಞಾನವನ್ನು, ನೂತನ ವಿಚಾರಗಳನ್ನು ಪಡೆಯಲು ಪ್ರಯತ್ನಿಸಿದುದು, ಯುದ್ಧ ಸಾಧನಗಳನ್ನು ತಯಾರಿಸುವ ಕೈಗಾರಿಕಗಳ ಸ್ಥಾಪನೆ, ರೇಷ್ಮೆಬೇಸಾಯ, ಮುತ್ತು ತೆಗೆಯುವುದು, ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಬದಲೀಮಾರ್ಗಗಳ ಅನ್ವೇಷಣೆ, ಮೊದಲಾದ ಆಧುನಿಕ ಪ್ರವೃತ್ತಿಗಳು ಕಂಡುಬಂವು”. (೨೧೪) ಹೀಗೆ ವಸಾಹತುಶಾಹಿಗೆ ಅಧೀನವಾಗದ ಆಧುನಿಕ ರಾಜ್ಯವನ್ನು ಕಟ್ಟಲು ಟೀಪು ಪ್ರಯತ್ನಿಸಿದನು. ಆದರೆ ಅವನು ಪರಾಭವದಿಂದಾಗಿ ಅವನ ಪ್ರಯೋಗ ಪರಿಣತಿಗಳೆಲ್ಲ ಮೂಲೆಗುಂಪಾದವು. ೧೭೯೯ರಿಂದ ೧೮೩೧ರ ವರೆಗಿನ ಮೈಸೂರು ರಾಜ್ಯವು ಮುಮ್ಮಡಿ ಕೃಷ್ಣರಾಜ ಒಡೆಯರ ದುರ್ಬಲ ಆಳ್ವಿಕೆಯಿಂದ ಬ್ರಿಟಿಷರ ನೇರ ಆಳ್ವಿಕೆಗೆ ಒಳಪಟ್ಟಿತು. ಬ್ರಿಟಿಷ್ ಆಡಳಿತವು ಕನ್ನಡ ಭಾಷಾ ಸಮುದಾಯಗಳನ್ನು ಮುಂಬೈ, ಹೈದರಾಬಾದ್, ಮದ್ರಾಸ್ ಹಾಗೂ ಮೈಸೂರು ಹೀಗೆ ಹರಿದು ಹಂಚಿಹಾಕಿತು. ಏಕೆಂದರೆ “ಒಂದು ಭಾಷಾ ರಾಷ್ಟ್ರೀಯ ಪ್ರಾಂತ್ಯವನ್ನು ಒಂದೇ ಆಗಿ ಇರಲು ಬಿಟ್ಟರೆ, ಕಾಲಕ್ರಮೇಣ ಅದು ತನ್ನ ರಾಷ್ಟ್ರೀಯತಾ ಸ್ವಭಾವವನ್ನು ದೃಢಪಡಿಸಿಕೊಂಡು ತನ್ನ ಆರ್ಥಿಕ ಮತ್ತು ರಾಜಕೀಯ ಆಧಿಪತ್ಯದ ವಿರುದ್ಧ ತಿರುಗಿ ಬೀಳುತ್ತದೆ ಎಂಬುದನ್ನು ಬ್ರಿಟಿಷರು ತರ್ಕಿಸಬಲ್ಲವರಾಗಿದ್ದರು” (ಬಂಜಗೆರೆ ಜಯಪ್ರಕಾಶ್, ಕನ್ನಡ ರಾಷ್ಟ್ರೀಯತೆ.೨೨೨) ಇದೇ ಅವಧಿಯಲ್ಲಿ ಕಿತ್ತೂರು ಚೆನ್ನಮ್ಮ (೧೮೨೪) ಸಂಗೊಳ್ಳಿರಾಯಣ್ಣ ಮುಂತಾದವರು ಬ್ರಿಟಿಷ್‌ರ ವಿರುದ್ಧ ದಂಗೆ ಎದ್ದು ಆಳಿದರು. ಬೂದಿಬಸಪ್ಪನ ದಂಗೆಯನ್ನು (೧೮೩೦) ಬ್ರಿಟಿಷರ ನೆರವಿನಿಂದ ಮಯಸೂರು ಅರಸರು ತಹಬಂದಿಗೆ ತಂದರು. ಒಟ್ಟಾರೆ, ವಸಾಹತುಶಾಹಿ ಆಳ್ವಿಕೆಯಲ್ಲಿ ಭರಪೂರ ತೆರಿಗೆ ಕಂದಾಯಗಳಿಂದ ಮೈಸೂರು ಪ್ರಾಂತ್ಯದ ಸಾಮಾಜಿಕರು ಕಂಗಾಲಾಗಿ ಬಿಟ್ಟರು. ಆರ್ಥಿಕ ಹಿಂಜರಿತ ಉಂಟಾಯಿತು. ಆದರೆ ಧರ್ಮ ರಾಜಕಾರಣದ ಹಿಡಿತದಿಂದ ಎಷ್ಟೋ ಪಾರಾಗಿ ಆಸುಲಿಗೆ ಕೋರರನ್ನು ಪ್ರಶ್ನಿಸುವ ಧೈರ್ಯಮಾಡಿದರು. ಇಂಥ ಹೊತ್ತಿನಲ್ಲಿ ಬರೆಯಲು ತೊಡಗಿದ ದೇವಚಂದ್ರ, ರಾಜಕೀಯ ಗುಲಾಮಗಿರಿಗಿಂತ ಮತೀಯ ಗುಲಾಮಗಿರಿ ಅನಿಷ್ಟಕಾರಕ ಎಂಬುದನ್ನು ತಿಳಿಸಲು ಪ್ರಯತ್ನಿಸಿದ. ಆದ್ದರಿಂದ ಈತ ಮಾನಸಿಕ ದಾಸ್ಯ ವಿಮೋಚನೆಗಾಗಿ ವೈಚಾರಿಕತೆಯ ಕಿಡಿಯನ್ನು ಹೊತ್ತಿಸಿದ. ಆದುದರಿಂದಲೇ ಇಪ್ಪತ್ತೊಂದನೇ ಶತಮಾನದ ಹೊಸ್ತಿಲಿನಲ್ಲಿ ನಿಂತಿರುವ ನಾವು ವಿಸ್ಮಯ ಪಡುವಂತೆ ಅವನ ವೈಚಾರಿಕ ಬುದ್ಧ ಪ್ರಖರವಾಗಿದೆ. ಯಾರಿಗೂ ಎಲ್ಲಿಯೂ ಈತ ರಾಜಿ ಹಾಗೂ ರಿಯಾಯಿತಿಗಳನ್ನು ತೋರಿಸಲಾರದ ತೀಕ್ಷ್ಣಮತಿ. ಸಂಸ್ಕೃತಿ ಸಂದರ್ಭದಲ್ಲಿ ನಾವೀಗ ಗುರ್ತಿಸಿ ಕೊಂಡಿರುವ ಶಿಷ್ಟ (great tradition) ಪರಿಶಿಷ್ಟ (little tradition) ಈ ಎರಡರ ನಡುವೆ ಇರುವ ಅಂತರವನ್ನು ಪಠ್ಯ (ವೇದಾಗಮಗಳು, ಕಟ್ಟುಕಥೆಗಳು) ನಡಾವಳಿ (ಯಜ್ಞಗಳು, ಹರಕೆಗಳು) ಸಾಮಾಜಿಕ ವ್ಯವಸ್ಥೆ (ವರ್ಣಾಶ್ರಮ ಪದ್ಧತಿ ಒಳಜಾತಿಗಳು) ಹಾಗೂ ಪುರಾಣಾಖ್ಯಾನ (ದೇವಾದಿ ದೇವತೆಗಳು, ಕ್ಷುದ್ರದೈವಗಳು) ಎಂಬೀ ನಾಲ್ಕೂ ನೆಲೆಗಳಲ್ಲಿ ತುಂಬಿಕೊಂಡಿರುವ ಅಸಾಂಗತ್ಯಗಳನ್ನು ವೈರುಧ್ಯಗಳನ್ನು ದೇವಚಂದ್ರನು ಅತ್ಯಂತ ಕಟುವಾಗಿ ವಿಡಂಬಿಸುತ್ತಾನೆ. ಅವನ ಇರ್‌ಬಾಯಿ ಖಡ್ಗದ ಮುಂದೆ ಶಿಷ್ಟ ಪರಿಶಿಷ್ಟ ಎಂಬ ಭಿನ್ನ ಭೇದವಿಲ್ಲ. ಎಲ್ಲವನ್ನೂ ಎಲ್ಲೆಂದರಲ್ಲಿಗೆ ಸವರಿಹಾಕುತ್ತದೆ. ಯಾವುದನ್ನು ನಾವು ಅಖಂಡ ಭರತ ಖಂಡದ ಹೆಮ್ಮೆಯ ಸಂಸ್ಕೃತಿ ಎಂದು ಉದ್ ಘೋಷಿಸಿಕೊಳ್ಳುತ್ತಾ ಬಂದಿದ್ದೇವೆಯೋ ಅದನ್ನು ಸ್ವ-ವಿಮರ್ಶೆಯ ನಿಕಷಕ್ಕೆ ಒಡ್ಡಿ ತೀಡಿ ಬಿಡುತ್ತಾನೆ. ಕರ್ನಾಟಕದ ಮಲೆಯೂರನಲ್ಲಿ ನೆಲೆನಿಂತು ಜಾಗತಿಕ ಸತ್ಯಗಳನ್ನು ಹಿಡಿಯಲು ಹವಣಿಸುತ್ತಾನೆ. ಇದು ರಾಜಾವಳಿ ಕಥಾಸಾರದ ದೊಡ್ಡಸ್ತಿಕೆ.

ದೇವಚಂದ್ರನ ವ್ಯುತ್ಪತ್ತಿಜ್ಞಾನ ಅಸಾಧರಣ; ಅವನ ಲೋಕಾನುಭವವಂತೂ ಮೈಜುಂದಟ್ಟಿಸುವಂತಿದೆ. ಅವನಿಗೆ ವೇದ ವೇದಾಂತ ಸಿದ್ಧಾಂತಗಳ ಪೂರ್ಣ ಪರಿಚಯವಿತ್ತು; ಷಣ್ ಮತಗಳಾದ ನಯ್ಯಾಯಿಕ, ಕಾಣಾದ, ಮೀಮಾಂಸಕ, ಸಾಂಖ್ಯ, ಬೌದ್ಧ ಮತ್ತು ಚಾರ್ವಾಕ ಇವುಗಳ ತಾರ್ಕಿಕ ಲಯ ಗೊತ್ತಿತ್ತು; ಚಂದ್ರಗುಪ್ತಮೌರ್ಯ ಮೊದಲು ಗೊಂಡು ನಮ್ಮ ಮೈಸೂರು ಒಡೆಯರವರೆಗಿನ ರಾಜಾವಳಿ ಇತಿಹಾಸದ ಜ್ಞಾನವಿತ್ತು; ತುರುಕರು ಹಾಗೂ ಇಂಗರೇಜಿ ಆಡಳಿತಗಳನ್ನು ಆತ ಕಂಡುಂಡವನಾಗಿದ್ದಾ; ಹಾಗೆಯೇ ಹಿಂದೂ, ಮುಸಲ್ಮಾನ, ಕ್ರೈಸ್ತ, ಪಾರ್ಸಿ ಮುಂತಾದ ಮತಧರ್ಮಗಳ ಬಗ್ಗೆ ಆತನಿಗೆ ತಿಳಿದಿತ್ತು. ಸತ್ಯ, ಪ್ರೇಮ, ಕರುಣೆಗಳೇ ಪ್ರತಿಯೊಂದು ಧರ್ಮದ ಮೂಲ ಸೆಲೆಯಾಗಿರುವಾಗ ಪ್ರಪಂಚದಲ್ಲಿ ಇಷ್ಟೊಂದು ಧರ್ಮಗಳು ಏಕೆ ಹುಟ್ಟಿಕೊಂಡವೊ ತಿಳಿಯದು ಇವತ್ತು ಭಿನ್ನ ಮತೀಯ ನಾಯಕರು ಹೊಸ ಪಕ್ಷಗಳನ್ನು ಹುಟ್ಟುಹಾಕಿದಂತೆ ಹಿಂದಿನ ಕಾಲದಲ್ಲಿ ಭಿನ್ನಮತೀಯ ಆಚಾರ್ಯರಿಂದ ಹೊಸ ಸುಧಾರಿತ ಮತಗಳು ಹುಟ್ಟಿಕೊಂಡವು. ಆದರೆ ಕಾಲಕ್ರಮೇಣ ಅವುಗಳಿಗೂ ಧರ್ಮಗ್ಲಾನಿ ಬಡಿದುಕೊಂಡಿತು. ಲೋಕೋದ್ಧಾರಕ್ಕೆ ಬದಲಾಗಿ ಲೋಕಕಂಟಕವೆನಿಸಿದವು. ಇದು ಧಾರ್ಮಿಕ ಇತಿಹಾಸ.

ಸಾಮಾನ್ಯವಾಗಿ ಮತಸಂಪ್ರದಾಯಗಳು ರಾಜ್ಯದಲ್ಲಿ ಗಳಿಸಿದ ಲೌಕಿಕ ಅಧಿಕಾರ ಹಾಗೂ ಸ್ಥಾನಮಾನಗಳಿಗೆ ಅವು ಅಳವಡಿಸಿಕೊಂಡ ಪುರಾತನ ಪಠ್ಯಗಳು, ವಿಧಿ-ಆಚರಣೆಗಳು, ಸಾಮಾಜಿಕ ವ್ಯವಸ್ಥೆ ಹಾಗೂ ಪುರಾಣಾಖ್ಯಾನಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಇಂಥ ಒಂದು ಸಂದರ್ಭದಲ್ಲಿ ಪ್ರತಿಯೊಂದು ಮತ ಸಂಪ್ರದಾಯವೂ ತಂತಮ್ಮ ಮೇಲ್ಮೆಯನ್ನು ಸ್ಥಾಪಿಸುವುದಕ್ಕಾಗಿ ಆಕ್ರಮಣಕಾರಿ ಪ್ರವೃತ್ತಿಯಿಂದ ವರ್ತಿಸಿದೆ. ಈ ಬಗೆಯ ಧಾರ್ಮಿಕ ಇತಿಹಾಸದ ಒಳನೋಟಗಳು ರಾಜಾವಳಿ ಕಥಾಸಾರದಲ್ಲಿ ಎಡೆಬಿಡದೆ ಉಲ್ಲೇಖಗೊಂಡಿವೆ. ಮಧ್ಯಕಾಲೀನ ಶೈವ, ವೈಷ್ಣವ, ಬೌದ್ಧ, ಜೈನ ಹಾಗೂ ಮುಸಲ್ಮಾನ ಮತ ಸಂಪ್ರದಾಯಗಳು ತಮ್ಮ ತಮ್ಮ ಮೇಲ್ಮೆಗಾಗಿ ನಡೆಸಿರುವ ಧರ್ಮಯುದ್ಧಗಳು ಅನೇಕ. ಇಂಥ ಸಂಘರ್ಷಗಳಲ್ಲಿ ಜೈನ ಚೈತ್ಯಾಲಯಗಳು, ಬೌದ್ಧ ವಿಹಾರಗಳು, ವೈಷ್ಣವ ದೇವಾಲಯಗಳು ನಾಶವಾಗಿ ಹೋಗಿದೆ.

ಇಂಥ ಸನ್ನಿವೇಶದಲ್ಲಿ ದುರ್ಬಲ ಧರ್ಮಗಳ ಪೂಜಾಪವಿತ್ರ ಸ್ಥಳಗಳಲ್ಲಿ ಪ್ರಬಲ ಧರ್ಮಗಳವರು ತಮ್ಮ ಪೂಜಾ ಮಂದಿರಗಳನ್ನು ಕಟ್ಟಿಕೊಂಡರು. ಶ್ರವಣಬೆಳುಗೋಳ, ಚಾಮುಂಡಿಬೆಟ್ಟ, ಶೃಂಗೇರಿ ಮುಂತಾದ ಕಡೆ ಹೀಗೆ ಬದಲಾವಣೆಗಳಾದುವೆಂದು ದೇವಚಂದ್ರ ಹೇಳುತ್ತಾನೆ. ದೇವಚಂದ್ರನ ಧಾರ್ಮಿಕ ಸೌಹಾರ್ದತೆ, ಜನತಾಂತ್ರಿಕ ದೃಷ್ಟಿ, ಸಾಮಾಜಿಕ ವಿಶ್ಲೇಷಣೆಗೆ ಸಾಕ್ಷಿಯಾಗಿರುವ ಕೆಲವು ನಿದರ್ಶನಗಳನ್ನು ಎತ್ತಿ ಹೇಳಬಹುದು.

೧. ಶೀಲತ ಮಹಾರಾಜನ ಆಸ್ಥಾನದಲ್ಲಿ ಸರ್ವಧರ್ಮಸಭೆಯನ್ನು ಏರ್ಪಡಿಸಿರುವುದು. (ಪುಟ.೧೪೮)

೨. ಚಿಕ್ಕದೇವರಾಜ ಒಡೆಯರ ಆಸ್ಥಾನಕ್ಕೆ ಕುಲವಾಡಿಗಳೆಲ್ಲಾ ಬಂದು ತಂತಮ್ಮ ಕುಲದ ಶ್ರೇಷ್ಠತೆಯನ್ನು ಮಂಡಿಸಲು ಅವಕಾಶ ಕಲ್ಪಿಸಿರುವುದು (ಪುಟ-೨೯೨ ರಿಂದ ೨೯೯)

೩. ಬುಸವಶೆಟ್ಟಿ ಎಂಬ ಸಜ್ಜನನನ್ನು ಜೈನ ಹಾಗೂ ವೈಷ್ಣವ ಸಮುದಾಯಗಳಿಗೆಲ್ಲ ನಾಯಕನನ್ನಾಗಿ ಸ್ವೀಕರಿಸಿರುವ ಶ್ರವಣಬೆಳುಗೊಳದ ಶಾಸನಕ್ಕೆ ವಿಶೇಷ ಮಾನ್ಯತೆ ಕೊಟ್ಟು ಕೃತಿಯ ಒಡಲಿನೊಳಕ್ಕೆ ತಂದು ಕೊಂಡದ್ದು. (ಪುಟ-೧೯೯) ಇತ್ಯಾದಿ.

ಇಲ್ಲಿರುವ ಒಂದನೆಯ ನಿದರ್ಶನದ ಪ್ರಕಾರ, ಶೂನ್ಯವಾದಿಯಾದ ಬುದ್ಧದಾಸನು ಆತ್ಮವಾದಿಯಾದ ಜೈನಾಚಾರ್ಯನ ಎದುರು ವಾದದಲ್ಲಿ ಸೋತಾಗ ರಾಜನು ಬುದ್ಧದಾಸ ನನ್ನು ಕಲ್ಲುಗಾಣಕ್ಕೆ ಹಾಕುವಂತೆ ಆದೇಶಿಸುತ್ತಾನೆ. ಆದರೆ ಅಹಿಂಸಾವಾದಿಯಾದ ಜೈನಾ ಚಾರ್ಯನು ಅದನ್ನು ಬೇಡವೆಂದು ತಡೆಯುತ್ತಾನೆ. ಆ ಮೇಲೆ ಬುದ್ಧದಾಸ ಮತ್ತು ಅವನ ಶಿಷ್ಯರನ್ನು ಸಿಂಹಳ ಮುಂತಾದ ದ್ವೀಪಾಂತರಕ್ಕೆ ಗಡೀಪಾರು ಮಾಡಲಾಗುತ್ತದೆ. ವಾಸ್ತವಾಗಿ ಬೌದ್ಧಧರ್ಮ ಈ ನೆಲದಲ್ಲಿ ನೆಲೆ ಕಾಣದಂತಾಯಿತು ಎಂಬ ಸತ್ಯಮಾತ್ರ ವೇದ್ಯವಾಗುತ್ತದೆ. ಇಂಥ ಧಾರ್ಮಿಕ ಸಂವಾದಕ್ಕೆ ವೇದಿಕೆಯನ್ನು ಸಜ್ಜುಗೊಳಿಸಿದ ಕಥೆಗಾರನ ಆಶಯ ಮೆಚ್ಚುವಂತಹದು.

ಎರಡನೆಯ ನಿದರ್ಶನದ ಪ್ರಕಾರ, ಅಕ್ಕಸಾಲಿ, ಕುಂಬಾರ, ಕುರುಬ, ನೇಕಾರ, ಒಕ್ಕಲಿಗ, ಬಡಗಿ, ಗೊಲ್ಲ, ಉಪ್ಪಾರ, ಕೆಲಸಿಗ, ಅಗಸ, ವಡ್ಡ, ದೊಂಬ, ಹೊಲೆಯ, ಮಾದಿಗ, ಗಾಣಿಗ ಹೀಗೆ ಕುಲವಾಡಿಗಳು ರಾಜಸನ್ನಿಧಿಗೆ ಬಂದು ತಂತಮ್ಮ ಕುಲದ ಶ್ರೇಷ್ಠತೆಯನ್ನು ಮಂಡಿಸುವ ದೃಶ್ಯ ಅತ್ಯಾಧುನಿಕವಾಗಿದೆ. ಪ್ರತಿ ಸಂಸ್ಕೃತಿಗಳ ಮೌಲ್ಯವನ್ನು ಮನ್ನಿಸುವ ದೊಡ್ಡತನವಿದೆ. ನಮ್ಮೀಕಾಲದಲ್ಲಿ ಕಂಡಂತೆ ರಿಜರ್ವೇಷನ್ನಿಗಾಗಿ ಕ್ಯಾಸ್ಟ್ ಸರ್ಟಿಫಿಕೇಟುಗಳನ್ನೂ ಸಾಮಾಜಿಕ ಸ್ಥಾನಮಾನಕ್ಕಾಗಿ ಕುಲಪುರಾಣಗಳನ್ನೂ ಹೊತ್ತು ತಿರುಗುವ ಪ್ರಜಾಜನರ ಸಾಲುದೃಶ್ಯಗಳು ರಾಜಾವಳಿ ಕಥಾಸರದಲ್ಲಿ ಎಂದೋ ಮುಂಗಾಣ್ಕೆಯಾಗಿ ಬಂದಿವೆ.

ಇನ್ನು ಮೂರನೆಯ ನಿದರ್ಶನದ ಪ್ರಕಾರ, ಬುಸವಶೆಟ್ಟಿಯನ್ನು ನಾಯಕನನ್ನಾಗಿ ಒಪ್ಪಿಕೊಳ್ಳುವುದರಲ್ಲಿ ಜೈನ ಹಾಗೂ ವೈಷ್ಣವ ಮತಸ್ಥರ ಧಾರ್ಮಿಕ ಉದಾರತೆಯನ್ನೂ, ಸಹಿಷ್ಣುತಾಭಾವವನ್ನೂ ಮನಗಾಣಬಹುದು. ಮತೀಯ ಮೂಲಭೂತವಾದ ಭುಗಿಲೆದ್ದಿರುವ ನಮ್ಮ ಕಾಲಕ್ಕೆ ಶ್ರವಣ ಬೆಳುಗೊಳದ ಶಾಸನದೀಪ ಬೆಳಕು ಚೆಲ್ಲುವಂತಿದೆ. ಇಂಥ ಎಷ್ಟೆಷ್ಟೋ ನಿದರ್ಶನಗಳು ರಾಜಾವಳಿ ಕಥಾಸಾರದಲ್ಲಿ ಒಡಮೂಡಿ ಬಂದಿವೆ.

ದೇವಚಂದ್ರನೂ ವಡ್ಡಾರಾಧನೆಯ, ಧರ್ಮಾಮೃತದ, ಧರ್ಮಪರೀಕ್ಷೆಯ ಸಮಯ ಪರೀಕ್ಷೆಯ ಪರಂಪರೆಯವನೇ ಆದರೂ ಈತ ಅಲ್ಲಿರುವ ಹಾಗೆ ಪರಮತ ಖಂಡನೆಗೆ, ಸ್ವಮತ ಮಂಡನೆಗೆ ಕೈಹಾಕಿದವನಲ್ಲ. ಮೇಲಾಗಿ ಧಾರ್ಮಿಕ ಸಾಮರಸ್ಯಕ್ಕೆ ಬರೆಯುವವನು. ಜೈನಾಗಮ ಪುರಾಣಗಳನ್ನು ಪೂರ್ವಪಕ್ಷವಾಗಿ ಮಂಡಿಸಿದ್ದರೂ ಎಲ್ಲಿಯೂ ಅದರ ಮೇಳ್ಮೆಯನ್ನು ಎತ್ತಿ ಹಿಡಿಯಲು ಹೋರಾಡಿಸದವನಲ್ಲ. ವಾಸ್ತವವಾಗಿ ದಿಗಂಬರ ಸನ್ಯಾಸಿಗಳನ್ನು ಕುರಿತು ನಾಗರಿಕ ಸಭ್ಯತೆ ಇಲ್ಲದವರು ಎಂದೇ ಭಾವಿಸುತ್ತಾನೆ. ಪಾರ್ಶ್ವಭಟ್ಟಾರಕನೆಂಬುವವನು ಗಣಧರನಾಗಲು ಸಾಧ್ಯವಾಗದಾಗ ಅಲ್ಲಾಖುದನೆಂಬ ನವೀನಮತ ಸ್ಥಾಪಿಸಿದನೆಂದು ಕೀಲ್‌ಗಳೆಯುತ್ತಾನೆ. ಅಭಕ್ಷ್ಯ ಭೋಜನ ಹಾಗೂ ರಾತ್ರಿ ಊಟ ಮಾಡುವ ಜೈನಮತೀಯರನ್ನು ಎಲ್ಲೆಂದರಲ್ಲಿ ಹೀಗಳೆಯಲಾಗಿದೆ. ಅವನಿಗೆ ಹೀಗೆ ಸ್ವ-ಪರ ಎಂಬ ಭಿನ್ನ ಭೇದವಿಲ್ಲ.

ದೇವಚಂದ್ರನದು ಹೇಳಿ ಹೇಳಿ ಜಾತ್ಯಾತೀತ ನಿಲುವು. ಆದ್ದರಿಂದಲೇ ಆತ ಯಾವ ಮುಲಾಜು ಇಲ್ಲದೆ ಧಾರ್ಮಿಕ ತಾರತಮ್ಯ ಮಾಡುವ ಡಾಂಭಿಕ ಯತಿವರೇಣ್ಯರನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ. ಇಂಥವರ ಅಹಂಮಿನ ಬೀಜಕ್ಕೆ ಕೈ ಹಾಕಿ ಚೆನ್ನಾಗಿ ಕಡಿ (eastration) ಮಾಡುತ್ತಾನೆ. ಕಬ್ಬಿಣ ಕಾದಿತ್ತು ಅವನು ಚೆನ್ನಾಗಿಯೇ ಬಡಿದ. ಏಕೆಂದರೆ ಮತ ಮೌಢ್ಯಕ್ಕೆ ಇವರು ಕಾರಣರಾದರೆ, ರಾಜಕೀಯ ದಾಸ್ಯಕ್ಕೆ ಪ್ರಭುತ್ವಗಳು ಕಾರಣವಾಗಿದ್ದವು. ಆದರೆ ಆಂಗ್ಲರ ಸರ್ವಾಧಿಕಾರದಲ್ಲಿ ಇವರೆಲ್ಲ ಹಲ್ಲುಕಿತ್ತ ಹಾವಾಗಿದ್ದಾರಷ್ಟೆ ಇಲ್ಲವಾಗಿದ್ದಾರೆ ಹುರಿದು ಮುಕ್ಕು ಬಿಡುತ್ತಿದ್ದರು. ಇಲ್ಲವೆ ಜೀವಂತ ಸುಟ್ಟು ಬಿಡುತ್ತಿದ್ದರು ದೇವಚಂದ್ರನನ್ನು. ಅವನ ವಿಚಾರವಂತಿಕೆಗೆ ಮಾರು ಹೋದ ಮೆಕಂಜಿ ಸಾಹೇಬ ಆತನ ಬರವಣಿಗೆಗೆ ಪ್ರೋತ್ಸಾಹ ಕೊಟ್ಟ. ಮತಧರ್ಮ ಮತ್ತು ರಾಜಕಾರಣ ಒಂದೇ ನಾಣ್ಯದ ಎರಡು ಮುಖಗಳು ಇವುಗಳನ್ನು ಪ್ರತ್ಯೇಕಿಸಿ ನೋಡುವುದು ಇವತ್ತಿಗೂ ಅಸಾಧ್ಯ. ಬಾಯಲ್ಲಿ ಜಾತ್ಯಾತೀತತೆಯ ಮಂತ್ರ, ಕಾರ್ಯತಃ ಜಾತಿ ರಾಜಕಾರಣ. ಇದು ಇವತ್ತಿಗೆ ಹೊಸದೇನಲ್ಲ ಎಂಬುದನ್ನು ರಾಜಾವಳಿ ಕಥಾಸಾರ ಚೆನ್ನಾಗಿಯೆ ಗ್ರಹಿಸಿದೆ. ಇದಕ್ಕೆ ಸಾಕಷ್ಟು ಪುರಾವೆಗಳನ್ನು ನೀಡಬಹುದು. ತಮ್ಮ ಶಾಸ್ತ್ರ ಪುರಾಣಗಳ ಮರುಳು ಮಾತುಗಳಿಗೆ ಜನರು ಒಲಿದು ಬಾರದಿದ್ದಾಗ ಬಲತ್ಕಾರದಿಂದಲಾದರೂ ಅವರನ್ನು ಹಿಡಿದು ತಂದು ತಂತಮ್ಮ ಮತೀಯ ಸಂಖ್ಯಾಬಲಕ್ಕಾಗಿ ಮತಾಂತರಗೊಳಿಸಲಾಯಿತು. ನಾಮ, ಲಿಂಗ, ಮುದ್ರೆಗಳನ್ನು ಒತ್ತಿ, ಬ್ಯಾಂಕಿನವರು ಪಶುಗಳಿಗೆ ಬ್ಯಾಡ್ಜ್‌ಹಾಕುವಂತೆ, ಇವರು ಲಾಂಛನಗಳನ್ನು ಹಾಕುತ್ತಿದ್ದರು. ಮುಸ್ಲಿಂಮರ ಕಾಲದಲ್ಲಿ ಪೈಜಾಮ ಕುಪ್ಪಸಗಳು ಸಮವಸ್ತ್ರಗಳಾದವು. ಬ್ರಾಹ್ಮಣರ ಪ್ರಾಬಲ್ಯದಲ್ಲಿ ನಾಯಿಗೂ ವೇದ ಬರುತ್ತಿತ್ತಂತೆ; ವೀರಶೈವ ಕಾಲದಲ್ಲಿ ನಾಯಿಕುನ್ನಿಗೂ ಲಿಂಗ ಕಟ್ಟಲಾಯಿತಂತೆ, ವೈಷ್ಣವರ ಕಾಲದಲ್ಲಿ ದಾರಿ ಹೋಕರಿಗೆಲ್ಲ ಹಿಡಿದು ನಾಮಮುದ್ರೆಗಳನ್ನು ಹಾಕಲಾಗುತ್ತಿತ್ತು. ಮಿಂಡ ಜಂಗಮರನ್ನು ಸಂಗಮನೆಂದೇ ಪೂಜಿಸಲಾಗುತ್ತಿತ್ತು ಇತ್ಯಾದಿ ಸಂಗತಿಗಳು ಹಲವಾರು.

ಅಲ್ಲದೇ ಇದೇ ದಾಟಿಯಲ್ಲಿ ಬರುವ ಒಂದು ಫ್ಯಾಂಟಸಿ ಇಂತಿದೆ. ದೇವರು ಮನುಷ್ಯ ಮತಗಳನ್ನು ನಿರ್ಣಯಿಸಿಬಿಟ್ಟಾಗ ಲಿಂಗಾಯತರು ಬಹಳ ಹಗುರ ಆದರು. ಆಗ ಅವರಿಗೆ ಲಿಂಗ ಕಟ್ಟಿ ತೂಕ ಸರಿಪಡಿಸಿದನಂತೆ; ವೈಷ್ಣವರಿಗೆ ಸ್ವಲ್ಪ ಕಡಿಮೆ ಎಂದು ನಾಮಹಾಕಿದನಂತೆ; ಬ್ರಾಹ್ಮಣರಿಗೆ ಸಮಕಟ್ಟಲು (light and soft wear) ಜನಿವಾರ ಹಾಕಿದನಂತೆ; ಇಷ್ಟೆಲ್ಲ ಸಮಕಟ್ಟಿದ ಮೇಲೆ ತುರಕರು ಎಲ್ಲರಿಗಿಂತ ಹೆಚ್ಚು ತೂಕ ಇರಲು ಏನುಮಾಡುವುದೆಂದು ಚಿಂತಿಸಿ ಅವರ ಶಿಶ್ನದ ಮುಂತುದಿಯ ಚರ್ಮವನ್ನು ಕತ್ತರಿಸಿ ಹಾಕಿ ಸರ್ವಸಮಾನತ್ವವನ್ನು ಕಾಪಾಡಿದನಂತೆ. ಕತ್ತರಿಸುವ ವ್ಯಂಗ್ಯ ಇರಿಯುವ ವಿಡಂಬನೆ!

ರಾಜಾವಳಿ ಕಥಾಸಾರವನ್ನು ಚಾರಿತ್ರಿ,ಸಾಹಿತ್ಯಕ, ಧಾರ್ಮಿಕ ಹಾಗೂ ಜನಪದವೆಂಬ ಈ ನಾಲ್ಕೂ ನೆಲೆಯಿಂದ ಅಭ್ಯಾಸ ಮಾಡಬಹುದಾದರೂ ಎಣ್ಣೆ ಸವರಿಕೊಂಡು ನಿಂತ ಜಗಜಟ್ಟಿಯಂತೆ ದೇವಚಂದ್ರ ನಮ್ಮೊಂದಿಗೆ ಜೂಟಾಟವಾಡುತ್ತ ಯಾವ ನೆಲೆಗೂ ಬದ್ಧನಾಗದೆ ತಪ್ಪಿಸಿಕೊಂಡು ಬಿಡುತ್ತಾನೆ. ಈ ವಿಭಾಗ ಕ್ರಮ ಏನಿದ್ದರೂ ನಮ್ಮ ಅಧ್ಯಯನದ ಶಿಸ್ತಿಗಾಗಿ ಮಾತ್ರವೇ, ಹಾಗೇನಾದರೂ ಪ್ರತ್ಯೇಕಿಸಿ ನೋಡಲು ಹೊರಟರೆ ಅತಿವ್ಯಾಪ್ತಿ ಇಲ್ಲವೆ ಅವ್ಯಾಪ್ತಿದೋಷಕ್ಕೆ ಗುರಿಯಾಗುವ ಸಾಧ್ಯತೆ ಉಂಟು. ಈ ಒಂದು ಎಚ್ಚರದಿಂದ ನೋಡುವಾಗ ಇದುವರೆಗಿನ ಚರಿತ್ರೆ ಯಾವ ಸಾಕ್ಷ್ಯಾಧಾರಗಳಿಂದ ರಾಜಮಹಾರಾಜರ ಅರಮನೆ ಗುರುಮನೆಗಳ ಚರಿತ್ರೆಯನ್ನು ದಾಖಲಿಸಿದೆಯೋ ಆ ಚರಿತ್ರೆ ಇಲ್ಲಿ ಅಪ್ರಸ್ತುತ ವಾಗುತ್ತದೆ. ಏಕೆಂದರೆ ಚರಿತ್ರೆಯನ್ನು ನೋಡುವ ದೃಷ್ಟಿಯೇ ಈಗ ಬದಲಾಗುತ್ತಿದೆ. ಈ ಆಯಾಕಾಲದ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವಾಸ್ತವಗಳೇ ಮುಖ್ಯವೆನಿಸುತ್ತವೆ. ಜನ ಸಮುದಾಯಗಳ ಬದುಕಿನ ರೀತಿನೀತಿಗಳು ತವಕ ತಲ್ಲಣಗಳು ಏನೆಂಬುದನ್ನು ತಿಳಿಯುವುದೇ ಇಂದಿನ ಚರಿತ್ರೆಯ ಮೂಲ ಉದ್ದೇಶವಾಗಿದೆ. ಇಂಥ ಅರಿವಿನ ನೆಲೆಯಿಂದ ರಾಜಾವಳಿ ಕಥಾಸಾರವನ್ನು ಪರಿಶೀಲಿಸಿದರೆ ಇಲ್ಲಿರುವ ಒಳನೋಟ ನಮ್ಮನ್ನು ಮೂಕ ವಿಸ್ಮಿತರನ್ನಾಗಿ ಮಾಡುತ್ತದೆ.

ದೇವಚಂದ್ರನಲ್ಲಿ ಪ್ರಖ್ಯಾತ ರಾಜಮಹಾರಾಜರು, ಅವರ ದ್ವಿಗಜಯಗಳು, ದಂಡಯಾತ್ರೆಗಳು, ವಂಶಾವಳಿಗಳು ಅವುಗಳಿಗೆ ಸಂಬಂಧಿಸಿದ ವಿಚಾರಗಳು ಅವಜ್ಞೆಗೆ ಒಳಗಾಗುತ್ತವೆ. ಆದರೆ ಕೆಲವು ಜನ-ಜನಿತಕಥೆಗಳು, ಕೆಲವು ಸ್ವಾತಂತ್ರ ಕಲ್ಪನೆಗಳು ಜಾಗ ಪಡೆಯುತ್ತವೆ. ಅವುಗಳ ಚಾರಿತ್ರಿಕ ಸತ್ಯಕ್ಕಿಂತ ಭಾವಸತ್ಯ ನಮ್ಮನ್ನು ಕಲಕುತ್ತದೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಹೆಸರಿಸುವುದಾದರೆ, ಫಕೀರನೊಬ್ಬನ ದೆಸೆಯಿಂದ ಕುಂಟ ಕುರುಬರ ಹುಡುಗ ಡಿಳ್ಳಿಯ ಪಾದಶಾಯಿ ಆದದ್ದು; ಬಸವಣ್ಣ  ಬಿಜ್ಜಳನ ಭಂಡಾರವನ್ನು ಲೂಟಿ ಹೊಡೆದದ್ದು; ಕುರುಬರ ಹೆಂಗಸೊಬ್ಬಳ ಮಗ ಕೃಷ್ಣದೇವರಾಯನೆಂದು ಹೇಳಿದ್ದು; ಮಾದಿಗರ ಹುಡುಗನೊಬ್ಬ ಮಲೈಮಹದೇಶ್ವರ ಸ್ವಾಮಿಯಾದದ್ದೂ ಇತ್ಯಾದಿ. ಈ ವಿಷಯಗಳು ಚರಿತ್ರೆಯ ವ್ಯಸನಿಗಳಿಗೆ ನಿದ್ದೆ ಕೆಡಿಸಿದರೂ ಜನಪರಿಗೆ ಹಾಗೇನಿಲ್ಲ. ಯಾಕೆಂದರೆ, ಪಟ್ಟದಾನೆ ಹೂಮಾಲೆ ಹಾಕಿದ ತಿರುಕನೊಬ್ಬ ಅಲ್ಲಿ ರಾಜನಾಗುತ್ತಾನೆ; ಕುರುಬನೊಬ್ಬ ಕಾಳಿದಾಸನಾಗುತ್ತಾನೆ; ಬೇಡನೊಬ್ಬ ವಾಲ್ಮೀಕಿಯಾಗುತ್ತಾನೆ; ಬೆಸ್ತನೊಬ್ಬ ವ್ಯಾಸನಾಗುತ್ತಾನೆ; ಹಾಗಾದರೆ ಮೇಲಿನ ವಿಷಯಗಳಿಗೂ ಇದೇ ತರ್ಕ ಅನ್ವಯವಾಗುತ್ತದಲ್ಲ!

ದೇವಚಂದ್ರನದು ಸಾಮುದಾಯಿಕ ಪ್ರತಿಭೆ. ಕೇವಲ ಸಾದೃಶ್ಯಕ್ಕಾಗಿ ಹೇಳುವುದಾದರೆ ಬಾಬ್ರಿ ಮಸೀದಿಯನ್ನು ಕೆಡವಲು ನುಗ್ಗಿದ ಕರ ಸೇವಕರಂತೆ ಸಮುದಾಯದ ಪಾತ್ರಗಳು ಅವನ ಕಥಾ ಪ್ರಪಂಚುವಿನೊಳಕ್ಕೆ ನುಗ್ಗಿ ನುಗ್ಗಿ ಬರುತ್ತವೆ, ಆದರೆ ವಿನಾಶಕ್ಕಾಗಿ ಅಲ್ಲ. ಅವರು ತಮ್ಮೊಂದಿಗೆ ಲೆಕ್ಕವಿಲ್ಲದಷ್ಟು ಕಥೆಗಳು, ಐತಿಹ್ಯಗಳು, ದಂತ ಕತೆಗಳು, ಪುರಾಣಗಳು ಫ್ಯಾಂಟಸಿಗಳು ಮುಂತಾದವುಗಳನ್ನು ಕಟ್ಟಿಕೊಂಡೇ ಬರುತ್ತಾರೆ. ಮತ್ತು ಅವರ ಆಚರಣೆಗಳು ನಂಬಿಕೆಗಳು, ಕಲೆಗಳು, ಕ್ರೀಡೆಗಳು, ಶಿಕ್ಷಣ, ಆಡಳಿತ, ಕುಟುಂಬ-ಕಸುಬು ಇತ್ಯಾದಿ ಎಲ್ಲವನ್ನೂ ಹೊತ್ತುತರುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅವರೊಂದಿಗೆ ಅವರ ಮಾತಂತೂ ಸೊಗಡು ಸೂಸುತ್ತದೆ. ಹಳಗನ್ನಡ, ನಡುಗನ್ನಡ, ಹೊಸಗನ್ನಡ ಮಿಶ್ರಣದಲ್ಲಿ ಅವರ ಗದ್ಯ ಮುಂಬರುವ ಹೊಸಗನ್ನಡ ಗದ್ಯಕ್ಕೆ ನಾಂದಿಯಾಗಿದೆ, ಈ ಮಾತಿರಲಿ.

ರಾಜಾವಳಿ ಕಥಾಸಾರದಲ್ಲಿರುವ ಜನಪದ ಕಥೆಗಳ ವೈವಿಧ್ಯ ಅಸಾಧಾರಣ. ಅವುಗಳಲ್ಲಿ ಕೆಲವನ್ನು ಇಲ್ಲಿ ಹೆಸರಿಸಬಹುದು. ರಾಜನ ಅವಿವೇಕವನ್ನು ತಿಳಿಸಿಕೊಡುವ ಕಳ್ಳನ ಕಥೆ; ಬಂಧು ಸತ್ಕಾರದಲ್ಲಿ ಕಪಟ ನಡತೆಯನ್ನು ತೋರಿಸುವ ಎಡಶ್ರುತಿಯ ಕಥೆ; ಅಪ್ರಬುದ್ಧನಾದ ಕೇತಗೌಡನ ಕಥೆ; ಪರರ ಕಷ್ಟವನ್ನು ಅರಿಯಲಾರದ ಸುಖಿಗಳು ಹೇಗಿರುತ್ತಾರೆಂಬುದಕ್ಕೆ ಒಬ್ಬ ದಾಸನ ಕಥೆ; ಪ್ರಣಯಿಗಳು ಪಾದಾಶಾಯಿಯ ಸಮಕ್ಷಮ ಪ್ರೇಮ ಪರೀಕ್ಷೆಗೆ ಒಳಗಾದ ಕಥೆ; ಮಾರಿ ದೇವತೆ ಕೊಡಲಿಗೆ ಹೆದರಿ ಸೌದೆ ಹೊರೆಹೊರುವ ಕಥೆ; ಹಲವಾರು ಸ್ತ್ರೀಚರಿತೆ ವರ್ಣನೆಗಳು-ಹೀಗೆ ಹಲವು ಹತ್ತಾರು ಜನಪದ ಕಥಾಚಿತ್ರಗಳು ಈ ಕಥಾಬಿತ್ತಿಯಲ್ಲಿ ವರ್ಣರಂಜಿತವಾಗಿವೆ. (ದಶಮಾಧಿಕಾರಂ) ಗ್ರಾಮೀಣರ ಬುದ್ಧಿ ಚಾತುರ್ಯ ಬೆರಗು ಬಡಿಯುವಂತಿದೆ.

ದೇವಚಂದ್ರನ ವ್ಯುತ್ಪತ್ತಿ ಜ್ಞಾನಕ್ಕೆ ವಿನೋದ ಪ್ರವೃತ್ತಿಗೆ, ವೈಚಾರಿಕ ಪ್ರಜ್ಞೆಗೆ ನಿದರ್ಶನವಾಗಿ ಶಿವನ ಪ್ರಜಾಪತಿ ಪ್ರಸಂಗವನ್ನು ಇಲ್ಲಿ ಉದಾಹರಿಸಿದರೆ ಸಾಕು. (ಪುಟ-೧೩೮) ಇದನ್ನು ಕಂಡು ಯಾವ ಆಧುನಿಕ ಮಾನವಶಾಸ್ತ್ರಜ್ಞನೂ ನಾಚಿ ನೀರಾಗಬೇಕು ಹಾಗಿದೆ. ಶಿವ-ಪಾರ್ವತಿಯರು ಜಗತಃ ಮಾತಾಪಿತೃಗಳು. ಅವರ ಲಿಂಗ-ಯೋನಿಗಳನ್ನು ಸಾಂಕೇತಿಕವಾಗಿ ಪೂಜೆಗೊಳ್ಳಲಾಗುತ್ತದೆ. ಲಿಂಗಪೂಜೆ ಫಲವತ್ತತೆಯ ಪ್ರತೀಕ. ಸೃಜನ ಶೀಲತೆಗೆ ಶಿವಲಿಂಗವೇ ಸಂಕೇತ. ಆದ್ದರಿಂದ ಶಿವ-ಪಾರ್ವತಿಯರ ಸುತ್ತ ಶಿಷ್ಟ-ಪರಿಶಿಷ್ಟ ಪುರಾಣಗಳು ಲೆಕ್ಕವಿಲ್ಲದಷ್ಟು. ಆ ಹಿರಿಯರ ಜಾರ-ಚೋರತನಗಳೆಷ್ಟು? ಅವನ ಕಾಮಕ್ರೀಡೆ ಕೇಳಿಗಳೆಷ್ಟು? ಅಟ್ಟಹಾಸದ ಹಾವಭಾವ ಭಂಗಿಗಳೆಷ್ಟು? ಒಟ್ಟಿನಲ್ಲಿ ಮನುಕುಲದ ಪ್ರಜಾಪತಿಯ ಉತ್ಪತ್ತಿಗೆ ಮೂಲಸ್ವರೂಪ ಆ ಪರಶಿವನ ಪ್ರಜಾಪತಿಯೇ ಎಂಬುದನ್ನು ದೇವಚಂದ್ರ ಸ್ವಾಭಾವಿಕವೆಂಬಂತೆ ರೋಚಕವೂ ಉದ್-ಬೋಧಕವೂ ಆದ ಶೈಲಿಯಲ್ಲಿ ಚಿತ್ರಿಸುತ್ತಾನೆ. ಹೀಗೆ ಶಿಷ್ಟ ಪುರಾಣವನ್ನು ಪುಡಿಗುಟ್ಟುತ್ತಲೂ ಪರಿಶಿಷ್ಟರ ಕಟ್ಟು ಕಥೆಗಳನ್ನು ತನ್ನ ಕೃತಿ ಲೋಕಕ್ಕೆ ಎತ್ತುತ್ತಲೂ ಸಾಗುತ್ತಾನೆ.

ಕುರುಡು ದೈವ ಕುಂಟುದೈವಗಳ ಕಥೆ ಮನುಷ್ಯನ ಪ್ರಚಂಡ ಬುದ್ಧಿಗೆ ಹಿಡಿದ ಅದ್ಭುತ ಸಂಕೇತವಾಗಿದೆ. ಮನುಷ್ಯ ಸ್ವಭಾವತಃ ಸುಲಿಗೆ ಕೋರ. ದೇವರು, ದೈವ್ವ ಯಾರಾದರಾಗಲಿ ಅವರನ್ನು ದುಡಿಸಿಕೊಳ್ಳದೆ ಬಿಡಲಾರ. ಇತ್ತ ಅದೇ ಶೋಷಿತವರ್ಗದ ನೈತಿಕ ನಡತೆಯನ್ನೂ ಇಲ್ಲಿ ಮೌಲಿಕವಾಗಿ ಗುರುತಿಸಲಾಗಿದೆ.

ಕೃಷಿಕರ ಸೃಜನಶೀಲ ಪ್ರಜ್ಞೆಗೆ ಸಾಕ್ಷಿ ಎಂಬಂತಿರುವ ಇನ್ನೊಂದು ಕಥೆ. ರಾಜನಿಗೆ ಒಪ್ಪಿಸುವ ಸಿದ್ಧಾಯತನ ಕುರಿತದ್ದು. ಈ ಕಥೆಯ ಪ್ರಕಾರ ಭೂಮಿ ರಾಜನಿಗೆ ಸೇರಿದ್ದು; ಅವನಿಗೆ ಕಂದಾಯ (ಸಿದ್ಧಾಯತನ=ಬೆಳೆದು ಆರನೇ ಒಂದು ಭಾಗ) ಕೊಡುವುದೇಕೆ ಎಂದು ಕೃಷಿಕರು ಪ್ರತಿಭಟಿಸಿ ಕಾಡಿಗೆ ಹೋಗಿ ಬೇಸಾಯ ಮಾಡುತ್ತಾರೆ. ವಸೂಲಿ ಭಟರು ಅಲ್ಲಿಗೂ ಬರುತ್ತಾರೆ. ರೈತರಿಗೂ ರಾಜಭಟರಿಗೂ ಮಧ್ಯೆ ಒಪ್ಪಂದವೇರ್ಪಡುತ್ತದೆ. ಆ ಪ್ರಕಾರ ಬೆಳೆಯಲ್ಲಿ ಆರನೇ ಒಂದು ಭಾಗವನ್ನು ಕೊಡಲಾರದೆ ಬೆಳೆವ ಬೆಳೆಯನ್ನೇ ವರ್ಷಕ್ಕೊಮ್ಮೆ ಪಲ್ಲಟಿಸಿ ರಾಜಭಟರಿಗೆ ಚಳ್ಳೇಹಣ್ಣು ತಿನ್ನಿಸುತ್ತಾರೆ. ಪ್ರಸ್ತುತ ಆತ್ಮಹತ್ಯೆಯ ಅಂಚಿನಲ್ಲಿರುವ ನಮ್ಮ ರೈತಾಪಿ ವರ್ಗ ಈ ಬಗೆಯ ಚಾತುರ್ಯವನ್ನು ಯಾಕೆ ಮರೆತರೊ ತಿಳಿಯದಾಗಿದೆ.

ಜನಪದ ವೈದ್ಯಳಾದ ತೂಂಕಾರಿ ಎಂಬುವವಳ ಕಥೆ ಅತ್ಯಂತ ದಾರುಣವಾದರೂ, ತಾನೆ ಬಲಿಪಶುವಾಗಿ ಕಲಿತ ಅವಳ ವಿದ್ಯೆಯಿಂದ ಲೋಕೋಪಕಾರವಾಗುತ್ತದೆ. ಕಾರಣಾಂತರದಿಂದ ಈಕೆ ಕಿರಾತರ ಕೈಗೆ ಸಿಕ್ಕಿ ಅವರಿಂದ ನೇಕಾರಿಗೆ ಮಾರಲ್ಪಟ್ಟು, ಅವರು ಅವಳ ಮೈಯಲ್ಲಿ ಗಾಯಮಾಡಿ ರಕ್ತ ತೆಗೆದು ತಮ್ಮ ನೂಲುಂಡೆಗಳಿಗೆ ಸವರುವುದು ಮತ್ತು ಅವಳ ಗಾಯಕ್ಕೆ ಲಾಕ್ಷಾಮೂಲ ತೈಲವನ್ನು ಹಚ್ಚಿ ವಾಸಿಮಾಡುವುದು ಹೀಗೆ ಹದಿನೈದು ದಿನಕ್ಕೊಮ್ಮೆಯಂತೆ ಅವಳಿಗೆ ವ್ರಣಮಾಡಿ ಮಾಯಿಸುವು ಕ್ರಿಯೆ ಜರುಗುತ್ತಿತ್ತು. ತೂಂಕಾರಿ ಕಡೆಗೆ ಬಿಡುಗಡೆಗೊಂಡ ನಂತರ ಲಾಕ್ಷಾಮೂಲ ತೈಲದಿಂದ ಬೆಂದ ಗಾಯಗಳಿಗೆ ಮದ್ದು ಮಾಡುವುದರಲ್ಲಿ ನಿಷ್ಣಾತೆಯಾಗುತ್ತಾಳೆ.

ಹೀಗೆ ರಾಜಾವಳಿ ಕಥಾಸಾರದಲ್ಲಿ ಕೃಷಿಕರು, ವೈದ್ಯರು, ಕುಶಲಕರ್ಮಿಗಳು, ಕಳ್ಳರು, ಸುಳ್ಳರು ಒಟ್ಟಾರೆ ಜನಪದ ಜಾತ್ರೆಯೇ ಅಲ್ಲಿ ನೆರೆಯುತ್ತದೆ. ನೂರಾರು ಸಾವಿರಾರು ಸಮುದಾಯ ಪಾತ್ರಗಳು ಇಲ್ಲಿ ನೆರೆದು ನಾಮುಂದು ತಾಮುಂದು ಎಂದು ಕಥಾಸಾಗರದೊಳಕ್ಕೆ ಡೈ ಹೊಡೆಯಲು ಹವಣಿಸುತ್ತವೆ. ಜನಾಂತರ್ ದೃಷ್ಟಿಯ ಈ ಲೇಖಕನಿಗೆ ಅವರನ್ನು ಕಂಡು ಕಣ್ಣು ಸೋಲದು, ಕೇಳಿ ಕಿವಿ ಸವೆಯದು, ಹೇಳಿ ಬಾಯಿ ದಣಿಯದು, ಬರೆದು ಕೈ ಸೋಲದು. ಆದ್ದರಿಂದ ಜನಪದವನ್ನು ಈ ಕೃತಿಯಿಂದ ಮೈನಸ್ ಮಾಡಿದರೆ ಉಳಿಯುವುದು ಕೇವಲ ಶುಷ್ಕ ಪದಾವಳಿ.

ಇನ್ನು ದೇವಚಂದ್ರನ ಸ್ತ್ರೀ ಸಂವೇದನೆಯ ಬಗ್ಗೆ ಇಲ್ಲಿ ಕೆಲವು ಮಾತುಗಳನ್ನು ಹೇಳಬೇಕು. ದೇಶಾಂತರ ಸುತ್ತುವ ಬ್ರಾಹ್ಮಣರು ಧರ್ಮಶಾಲೆಗಳಲ್ಲಿ ತಂಗಿರುವಾಗ ಹೊತ್ತುಕಳೆಯಲೆಂದು ಪೊಳ್ಳುಹರಟೆ (Time pass gasips)ಗಳನ್ನು ಕೊಚ್ಚುತ್ತಿದ್ದರು. ಅವು ಬಹುಪಾಲು ಜಾರ ಸ್ತ್ರೀ ಸಂಬಂಧವಾಗಿರುತ್ತಿದ್ದವು. ಆ ಪ್ರಕಾರ, ಸ್ತ್ರೀಯರೆಂದರೆ ಮೋಕ್ಷದ ಬಟ್ಟೆಗೆ ಮುಳ್ಳುಗಳು; ಮುಕ್ತಿಮಾರ್ಗದ ಕಾಪಿನ ನಾಯ್ಗಳು; “ಸ್ತ್ರೀಯರಂ ಪೊರ್ದಿದಂಗೆ ಇಹ ಪರಂ ಕೆಡುಗುಂ” (ಪುಟ-೨೫೮) ಎಂದು ಉದ್ಗರಿಸುವರು. ಮತ್ತು ಉತ್ತಮ ಸ್ತ್ರೀಯರಿಂದ ಉಭಯ ಲೋಕಸೌಖ್ಯವೂ ದೊರೆಕೊಳ್ಳುವುದು (ಪುಟ-೨೬೩) ಎಂದು ಮುಂತಾಗಿ ಮಾತಾಡಿಕೊಳ್ಳುವರು. ಇವರ ಪ್ರಕಾರ ಆದರ್ಶ ಸ್ತ್ರೀಯರೆಂದರೆ ಯಶಸ್ವತಿ, ಸೀತಾ ಮುಂತಾದವರು. ಕುಲಟಿಯರೆಂದರೆ, ಭೂತಮತಿಯ ಪತ್ನಿಯಜ್ಞೆ, ಗಾರ್ಗ್ಯೋಪಾಧ್ಯಾಯನ ಪತ್ನಿ ಮತ್ತು ಆಕೆಯ ಶಿಕ್ಷಾ ಗುರುವಿನ ಸ್ಥಾನದಲ್ಲಿರುವ ಭೋಗಾವತಿ. ವಾಸ್ತವವಾಗಿ ಈ ಸ್ತ್ರೀಯರು ಮನುವಿನ ಪಂಜರದ ಪಕ್ಷಿಗಳು, ಸ್ವತಂತ್ರರಲ್ಲ. ಗಂಡಿನ ಮುಕ್ತಿ ಬೇಟೆಯಲ್ಲಿ ಇವರು ದೀವಮೃಗವಾಗುತ್ತಾರೆ ಅಷ್ಟೆ. ಇಲ್ಲವಾಗಿದ್ದರೆ ಕರ್ಮಠ ಬ್ರಾಹ್ಮಣ ಗಾರ್ಗ್ಯೋಪಾಧ್ಯಾಯನ ಪತ್ನಿ ಜಾರತನಕ್ಕೆ ಹೋದಾಗ ತನ್ನ ಎಳೆಕೂಸು ಅನಾನುಕೂಲವೆಂದು ಅದರ ಕತ್ತು ಹಿಸುಕಿ ಕೊಲ್ಲುತ್ತಿದ್ದಳೆ? ಮಗುವನ್ನು ಕೊಂದದ್ದೂ ತಾಯಿಯೋ? ಇಲ್ಲ ನಿಷ್ಕರುಣೆ ಪುರುಷ ಪ್ರಧಾನ ಸಂಸ್ಕೃತಿಯೋ? ಅವಳು ಹಾಗೆ ಮಾಡಿದ್ದು ಯಾಕೆಂದರೆ ಅವಳನ್ನು ಹಿಂಬಾಲಿಸಿ ಬರುತ್ತಿದ್ದ ಬ್ರಹ್ಮಚಾರಿ ವಿದ್ಯಾರ್ಥಿಯೊಬ್ಬನನ್ನು ವೈರಾಗ್ಯ ಸೀಮೆಗೆ ದಾಟಿಸಲಿಕ್ಕಾಗಿ; ಅಮೃತಮತಿ ದೀಪವಾಗಿ ಯಶೋಧರನನ್ನು ವೈರಾಗ್ಯಕ್ಕೆ ದಾಟಿಸಿದಂತೆ. ಯಜ್ಞೆ ಎಂಬುವವಳು ಸೂಳೆಗಾರಿಕೆ ಹೋದವಳಲ್ಲ. ಒಬ್ಬ ದೇಶಾಂತಿ ಬ್ರಾಹ್ಮಣನನ್ನು ಕಟ್ಟಿಕೊಂಡ ಇವಳು ವಿವಾಹ ಪೂರ್ವದಲ್ಲಿ ತಾನು ಇಚ್ಛಿಸಿದ್ದ ಯಜ್ಞನನ್ನು ವರಿಸಲು ಮನೆಗೆ ಬೆಂಕಿ ಹಾಕಿ ಸುಟ್ಟು ಅವನೊಂದಿಗೆ ಓಡಿ ಹೋದಳು. ಆದರೂ ದೇವಚಂದ್ರನ ಕರುಣೆ ಅವಳ ಮೇಲೆ ಬಿದ್ದಿದೆ. ಅವಳ ಗಂಡ ಭೂತಮತಿಯೇ ಇವರಿಬ್ಬರಿಗೆ ಆಶೀರ್ವದಿಸಿ ಕಳುಹಿಸುತ್ತಾನೆ. ಭೋಗಾವತಿಯೆಂಬ ಯುವ ವಿಧವೆಯ ವೃತ್ತಾಂತ ಅಪೂರ್ವವಾಗಿದೆ. ಈಕೆ ನಮ್ಮ ಸಮಾಜ ಹಾಕಿದ ಸಂಕೋಲೆಗಳನ್ನು ಕಡಿದು ಹಾಕಿ ತನ್ನ ಸಂಬಂಧಿ ಪ್ರಿಯಕರನೊಂದಿಗೆ ದೇಶಾಂತರ ಹೋಗಿ ಹೊಸಸಂಸಾರ ಹೂಡಿ ಮಕ್ಕಳನ್ನು ಪಡೆದು ಸುಖವಾಗಿರುತ್ತಾಳೆ. ಹಾಗಾದರೆ ಮೇಲಿನ ಸ್ತ್ರೀಯರನ್ನು ಪೂಳ್ಳುಹರಟೆಯ ಬ್ರಾಹ್ಮಣರ ಜಾರಸ್ತ್ರೀಯರೆಂದು ಕರೆದದ್ದು ಯಾಕೆ? ಅದರ ನಿರ್ಣಯವನ್ನು ವಾಚಕರೇ ಮಾಡಿಕೊಳ್ಳಲಿ ಎಂದು ಬಿಟ್ಟುಬಿಡುತ್ತಾನೆ ಕಥೆಗಾರ. ಇಂಥ ಇನ್ನೂ ಅನೇಕ ಜನ ಸ್ತ್ರೀಯರು ಇಲ್ಲಿ ಕಂಡುಬರುತ್ತಾರೆ. ತನ್ನ ಮಗನ ಸೂಳೆಗಾರಿಕೆಗೆ ಕಾರಣಳಾದಳೆಂದು ಆರೋಪಿಸಿದ ರಾಜನೊಬ್ಬ ಆ ಹೆಣ್ಣಿನ ಯೋನಿಗೆ ಕಾದ ಹಾರೆಯನ್ನು ಹಾಕಿಸುವ ಕಥೆ ಒಂದಿದೆ. ಮತ್ತೊಬ್ಬ ಹಾದಿ ಹೋಕ ಹೆಣ್ಣೊಬ್ಬಳನ್ನು ಕುದುರೆ ಹತ್ತಿ ಸಾಯಿಸಿದ ಒಂದು ಕಥೆ ಇಲ್ಲಿದೆ. ಅನಾಥ ಹೆಣ್ಣನ್ನು ಕಂಡರೆ ಸವಾರನಿಗಿರಲಿ ಅವನ ಕುದುರೆಯೇ ಕಾಲೆತ್ತುತ್ತದೆ. ಇಂಥ ಸ್ತ್ರೀಯರ ಆಕ್ರಂದನ ಕಿವಿಯಲ್ಲಿ ನಿರಂತರ ಮೊಳಗುತ್ತದೆ. ಸ್ತ್ರೀಪರ ಸಂವೇದನಾಶೀಲರು ರಾಜಾವಳಿ ಕಥಾಸಾರದತ್ತ ತಿರುಗಿ ನೋಡಬೇಕ. ಪ್ರಭುತ್ವಗಳು ಪಲ್ಲಟಗೊಳ್ಳುವ ಮುನ್ನ ಹೊಸದಾಗಿ ಅಧಿಕಾರಕ್ಕೇರುವ ರಾಜ್ಯ ಸಂಸ್ಥೆಗಳು ತಮ್ಮ ಧಾರ್ಮಿಕ ಕೈಯೊಂದರಿಂದ ನೆಲವನ್ನು ಹದಗೊಳಿಸುತ್ತ ಸಾಗುವುದು ಸಾಮಾನ್ಯ. ಆಮೇಲೆ ಈ ಧಾರ್ಮಿಕ ಕೈ ತನ್ನಿಂದಲೇ ಆಳುವ ಕೈಗೆ ಬಲ ಬಂದಿತೆಂದು ಭಾವಿಸುತ್ತ ಅಗ್ರೆಸೀವ್ ಆಗಿ ನಡೆದುಕೊಂಡ ಅನೇಕ ನಿದರ್ಶನಗಳು ರಾಜಾವಳಿ ಕಥಾಸಾರದಲ್ಲಿವೆ. ಈ ಹಿನ್ನೆಲೆಯಲ್ಲಿ ನೋಡಿದರೆ ಹೊಯ್ಸಳರ ಕಾಲದಲ್ಲಿ ಶ್ರೀವೈಷ್ಣವರೂ, ಬಿಜ್ಜಳನ ಕಾಲದಲ್ಲಿ ಶಿವ ಶರಣರೂ ಬಹಳ ಆಕ್ರಮಣಕಾರಿಗಳಾಗಿ ವರ್ತಿಸಿದಂತೆ ಕಂಡುಬರುತ್ತದೆ. ಹಾಗೆಯೇ ಮುಸ್ಲಿಮರ ಆಳ್ವಿಕೆಯಲ್ಲಿ ಮುಲ್ಲಾಗಳ ಹಾವಳಿಯೂ ನಡೆದಿದೆ. ವೀರಶೈವ ಚಳುವಳಿಯ ಸಂದರ್ಭವೊಂದನ್ನು ಇಲ್ಲಿ ಎತ್ತಿ ಮಾತಾಡುವುದಾದರೆ, ಬಸವಣ್ಣನವರ ಅನುಯಾಯಿಗಳಾದ ಮಹೇಶ್ವರ ಸ್ಥಲದ ಏಕಾಂತರಾಮಯ್ಯ, ಆದಯ್ಯ ಮುಂತಾದ ಶಿವ ಶರಣರು ಭವಿಗಳ ಬಗ್ಗೆ ತೀರ ಅಸಹನೆಯಿಂದ ವರ್ತಿಸಿರುವುದುಂಟು. ಮತ್ತು ಶಿವಭಕ್ತರಿಗೊಂದು, ಭವಿಗಳಿಗೊಂದು ಆರ್ಥಿಕ ನೀತಿಯಾದುದರಿಂದ ಡಾಂಭಿಕ ಭಕ್ತರ ಸೇರ್ಪಡೆಯೂ ಅಧಿಕವಾಯಿತು. ಅಲ್ಲಮಪ್ರಭು ಇಂಥವರನ್ನು ಯದ್ವಾತದ್ವಾ ಖಂಡಿಸಿದ್ದಾನೆ. ಬಿಜ್ಜಳ ಭಂಡಾರದ ಅನೇಕ ಸವಲತ್ತುಗಳು ಶಿವಶರಣರ ಪಾಲಾದಾಗ ಅನ್ಯಧರ್ಮಗಳಲ್ಲಿದ್ದ ಅಥವಾ ಯಾವ ಧರ್ಮದ ತೆಕ್ಕೆಗೂ ಒಗ್ಗಲಾರದ ಅಪಾರ ಶೂದ್ರ ಜಗತ್ತಿಗೆ ಆ ಕಾಲದಲ್ಲಿ ಯಾವ ಸವಲತ್ತುಗಳು ಇದ್ದವು? ಅವರ ದನಿಯನ್ನು ಕೇಳುವರಾರಿದ್ದರು? ಆ ಕಾಲದಿಂದಲೂ ಜನಜನಿತವಾಗಿ ಬಂದಿದ್ದ ಇಂಥ ಅನೇಕ ಅಸಮಧಾನ ಪ್ರತಿಭಟನೆಯ ದನಿಗಳನ್ನು ದೇವಚಂದ್ರ ಎತ್ತಿಹಿಡಿಯುತ್ತಾನೆ. ಉತ್ಪ್ರೇಕ್ಷೆ ಏನೇ ಇದ್ದರೂ ವೀರಶೈವೇತರರಿಗೆ ಅನ್ಯಾಯವಾಗಿರಲಿಕ್ಕಂತೂ ಸಾಧ್ಯ ಎಂಬ ಮಾತನ್ನು ಈ ಕಥೆಗಾರ ತರ್ಕಿಸಿದ್ದಾನೆ. ಎಂದರೆ ಶಿವಶರಣರು ಇನ್ನು ಮಾಗಬೇಕಿತ್ತು, ಅವಸರಿಸಿದರು. ಆದ್ದರಿಂದ ಅಂಥ ಸುವರ್ಣ ಆಶಯಗಳನ್ನು ಹೊಂದಿದ್ದ ಒಂದು ಚಳುವಳಿ ವಿಫಲವಾಯಿತು ಎನ್ನದೆ ವಿಧಿ ಇಲ್ಲ. ಇದು ರಾಜಾವಳಿ ಕಥಾಸಾರದಿಂದ ತಿಳಿದುಬರುವ ಸಂಗತಿ.

ಈ ಮಾತನ್ನು ಇನ್ನೊಂದು ನೆಲೆಯಿಂದ ವಿಶ್ಲೇಷಿಸಿ ಹೇಳುವುದಾದರೆ, ಬ್ರಿಟಿಷರ ಆಳ್ವಿಕೆಗೆ ಮುನ್ನ ಮಿಶನರಿಗಳು ದುಡಿದು ಆಯಾ ದೇಶದಲ್ಲಿ ನೆಲವನ್ನು ಹದಗೊಳಿಸಿದ್ದು ಸಾಮಾನ್ಯವೇ? ಇವತ್ತಿಗೂ ಪಾಶ್ಚಾತ್ಯರ ಮಾನ ಕಾಪಾಡುತ್ತಿರುವುದು ಈ ಮಿಷನರಿಗಳ ಕಾಯಕವೇ ಅಲ್ಲವೇ? ಹಾಗೆ ನೋಡಿದರೆ ಬಿಜೆಪಿಯ ಧಾರ್ಮಿಕ ಕೈಯಾದ ಸಂಘಪರಿವಾರ, ವಿಶ್ವ ಹಿಂದೂ ಪರಿಷತ್ ಹಾಗೂ ಭುಜರಂಗ ದಳಗಳು ಮಾಡುತ್ತಿರುವುದು ಇದೇ ಕೆಲಸ ತಾನೆ? ಆದರೆ ಅವು ಅಗ್ರೆಸೀವ್ ಆದಾಗ ರಾಷ್ಟ್ರೀಯತೆಗೆ ಒದಗುವ ವಿಪತ್ತು ಮಾತ್ರ ಎಷ್ಟು ಭಯಂಕರ ಎಂಬುದನ್ನು ನಾವು ತಿಳಿಯಬೇಕಾಗಿದೆ. ಅವರು “ನಾವು ಹಾಗೇನಿಲ್ಲ” ಎಂಬುದನ್ನು ಪ್ರಜಾ ಕೋಟಿಗೆ ಸಾದರಪಡಿಸಲು ಈಗ “ಸಮರ ಸತ್ ಸಂಗಮ” ಮುಂತಾದ ಆಟಗಳನ್ನು ಕಟ್ಟಿತೋರಿಸುವುದಾಗಿದೆ. ಆದರೂ ಜನರು ಜಗ್ಗುವುದೇ ಇಲ್ಲ. ಅವರು ವಿವಿಧ ಪಗರಣಗಳನ್ನು ಆಡುತ್ತ ಹಿಡಿಯಲು ಬರುತ್ತಲೇ ಇರುತ್ತಾರೆ, ಇವರು ಸಿಕ್ಕದೆ ಪಾರಾಗುತ್ತಲೆ ಇರುತ್ತಾರೆ. ಈ ನಿರಂತರ ಆಟ ಸಾಗಿಯೇ ಸಾಗಿದೆ. ಇದು ಹಳೇ ಇತಿಹಾಸ.

ಕೊನೆಯದಾಗಿ, ಜಾತಿರಾಜಕಾರಣ ಮಾಡುತ್ತ ಪ್ರಜಾರಾಜ್ಯವನ್ನು ಕುಲಗೆಡಿಸುವ ಇಂದಿನ ಜಾತಿ ರಾಜಕಾರಣಿಗಳಿಗೆ ದೇವಚಂದ್ರನ ಕಿವಿಮಾತು ಏನೆಂದರೆ; “ಲೋಕದೊಳು ಜಾತಿಯೆಷ್ಟು ಮನುಷ್ಯಂ ಬದುಕುವುದೆಷ್ಟು ದಿನಂ? ಅಲ್ಲಿ ಸುಮಾನುಷನೆಂತು? ಕುಮಾನುಷನೆಂತು?” ಉತ್ತರ ಪ್ರಪಂಚದಲ್ಲಿ ಹೆಣ್ಣೊಂದು ಜಾತಿ, ಗಂಡೊಂದು ಜಾತಿ. ಹುಟ್ಟಿದ ಹಾಗೂ ಸಾಯುವ ಎರಡು ದಿನಗಳನ್ನು ಕಳೆದರೆ ಉಳಿದ ಐದು ದಿನಗಳು ಮಾತ್ರ ಬದುಕುವುದು. ಸುಮಾನುಷನೆಂದರೆ ಸೂಜಿಗೂ ಸಂಧಿ ಇಲ್ಲದಂತೆ ಕೂಡಿಸುವವನು. ಕುಮಾನುಷನೆಂದರೆ ಕರ್ತರಿ ಕುಠಾರದಂತೆ ಸಂಧಿಯನ್ನು ಅಗಲಿಸುವವನು. (ಪು.-೨೪೨) ನಿಜವಾದ ಸೆಕ್ಯುಲರ್ ದೃಷ್ಟಿ ಎಂದರೆ ಇದಲ್ಲವೆ/ ಮತ್ತುಮತೀಯ ಸಹಿಷ್ಣುತೆಯೊಂದಿಗೆ ಸೈದ್ಧಾಂತಿಕ ರಾಜಕೀಯವೂ ಏಕೀಭವಿಸಿದರೆ ಜನತಂತ್ರ ಗಟ್ಟಿನಿಲ್ಲುತ್ತದೆ. ಇಲ್ಲವಾದರೆ ಮರಳಮನೆ. ಈ ಬಗ್ಗೆ ದೇವಚಂದ್ರನ ಮತ್ತೊಂದು ಮಾತೆಂದರೆ “ಜನಬಲ ಧನಬಲ, ಅಧಿಕಾರ ಬಲಮುಳ್ಳವರು ಪಿಡಿದ ಅನ್ಯಾಯವೆ ಕಾಲದೋಷದಿಂದ ನ್ಯಾಯಮಪ್ಪುದು, ನಾಲವರ್ ಅನ್ಯಾಯಮಂ ಪಿಡಿದೊಡೆ ಒರ್ವನ ನ್ಯಾಯಂ ನಿಲ್ಲಲರಿಯದು, ಇವರೊಳು ನುಡಿದೊಡಂ ವ್ಯರ್ಥಂ ಅಲ್ಲದೆ ಸ್ವಾರ್ಥಂ ಆಗದು” (ಪುಟ-೨೭೦) ಇವತ್ತಿನ ಶಕ್ತಿ ರಾಜಕಾರಣಕ್ಕೆ ಬರೆದ ಭಾಷ್ಯವೋ ಎಂಬಂತಹ ನುಡಿಗಳು. ಎಷ್ಟೇ ತಿಳಿಯ ಹೇಳಿದರೂ ‘ತಾನಿಡಿದ ಮೊಲಕ್ಕೆ ಮೂರು ಕೊಂಬುಂಟು’ ಎಂದು ಸಾಧಿಸುವ ಮೊಂಡರ ಕುತರ್ಕಕ್ಕೆ ಕೃತಿಕಾರ ರೋಸಿ ಹೋಗುತ್ತಾನೆ. ವಿಚಾರವಂತರ ಧ್ವನಿ ಇಂತಲ್ಲದೆ ಬೇರೆ ಹೇಗಿರಲು ಸಾಧ್ಯ? ಹೀಗೆ ವಿಷಾದ ಪಟ್ಟುಗೊಂಡ ಚತುರ್ಮುಖ ಶಾಸ್ತ್ರಿಗಳು ನಂಜನಗೂಡಿನ ತಮ್ಮ ಅಧ್ಯಯನ ಕೇಂದ್ರದತ್ತ ಸಾಗಿ ಹೋಗುತ್ತಾರೆ. (ದೇವಚಂದ್ರ ಮತ್ತು ಈ ಶಾಸ್ತ್ರಿಗಳು ಬೇರೆ ಬೇರೆ ಅಲ್ಲ) ವಿಚಾರದಕ್ಷರು ವೈಷಮ್ಯವಿಲ್ಲದೆ ದೇವಚಂದ್ರನ ರಾಜಾವಳಿ ಕಥಾಸಾರವನ್ನು ಓದುತ್ತಾ ಹೋದಂತೆ ಹಿಂದೆ ಚೈನಾದಲ್ಲಿ, ಸಂಚಾರಿ ಜನತಾ ವಿಶ್ವವಿದ್ಯಾನಿಲಯದಂತೆ, ಇದ್ದ ಪ್ರಾಚೀನ ತತ್ತ್ವಜ್ಞಾನಿ ಕನ್‌ಫ್ಯೂಷಿಯಸ್‌ನ ನೆನಪು ಬರುತ್ತದೆ.

ಇಷ್ಟಾಗಿಯೂ ಈ ಕಥೆಗಾರನ ಸಾಂಸಾರಿಕ ಜೀವನ ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿದ್ದು ಪ್ರಾಚೀನ ತಬರನನ್ನು ನೆನಪಿಸುವಂತಿದೆ. ಇಪ್ಪತ್ತೈದು ಜನರಿಂದ ಕೂಡಿದ್ದ ದೇವಚಂದ್ರನ ಅವಿಭಕ್ತ ಕುಟುಂಬ ಕೇವಲ ಅರ್ಚಕ ವೃತ್ತಿಯನ್ನು ಅವಲಂಬಿಸಿತ್ತು. ರಾಜಾವಳಿ ಕಥಾಸಾರ ದಂತಹ ಗಾತ್ರದಲ್ಲಿ ಮತ್ತು ಪಾತ್ರದಲ್ಲಿ ಮಹತ್ವವೆನಿಸುವ ಈ ಕೃತಿಯನ್ನು ಬರೆದು ಮೈಸೂರು ಒಡೆಯರಿಗೆ ಅರ್ಪಿಸಿ ಮಾಶಾಸನಕ್ಕಾಗಿ ಈ ವಿದ್ವಾಂಸ ಮೂರು ವರ್ಷಗಳ ಪರ್ಯಂತಕಾದರೂ ಮಹಾರಾಜರು ಮಂಜೂರು ಮಾಡಲಿಲ್ಲ. ಬಹುಶಃ ಈ ನಿಷ್ಠುರ ವಿಮರ್ಶಕನ ಸಹವಾಸವೇ ಬೇಡ ಎಂದು ಮಧ್ಯವರ್ತಿ ನೌಕರಶಾಹಿಯು ಈತನ ಅಹವಾಲಿಗೆ ದಸಕತ್ತು ಹಾಕಿಸದಂತೆ ನೋಡಿಕೊಂಡಿರಬೇಕು. ಇಲ್ಲದವರ ಪರವಾಗಿ ದನಿ ಎತ್ತಿ ಕಟ್ಟೆ ಪುರಾಣದಲ್ಲಿ ಕಥೆ ಮಾಡಿದ ದೇವಚಂದ್ರ ಆರ್ಥಿಕವಾಗಿ ನೋಡಿದರೆ ಕನ್ನಡದ ಮೊದಲ ದಲಿತ ಲೇಖಕ ಎನ್ನಬಹುದು. ಇದೇ ಹಿನ್ನೆಲೆಯಲ್ಲಿ ನೋಡಿದರೆ ಮತ್ತೊಂದು ವ್ಯಸನಕರ ಸಂಗತಿಯೆಂದರೆ, ಈ ಹಿರಿಯರ ವಿದ್ವಾಂಸ ತನ್ನ ಅರಿವೇ ಇಲ್ಲದಂತೆ, ಬಹುಶಃ ಮೆಕಂಜಿ ಸಾಹೇಬನು ಕೊಡಬಹುದಾದ ಇನಾಮಿನ ಆಸೆಗಾಗಿ, ಇಂಡಿಯಾದ ಸಾಂಸ್ಕೃತಿಕ ಜಗತ್ತಿನ ಅನೇಕ ಪ್ರತಿಭಾ ಸ್ತರಗಳನ್ನು ಪರಿಚಯಿಸುವ, ಮಾಹಿತಿ ಸಂಗ್ರಹಿಸಿ ಕೊಡುವ ವಕ್ತಾರನಾದದ್ದು. ಆಧುನಿಕ ನವಸಾಮ್ರಾಜ್ಯ ಶಾಹಿಯು ತನ್ನ ಏಕಮುಖ ಸಂಸ್ಕೃತಿಯನ್ನು ವಿಸ್ತರಿಸಿಕೊಳ್ಳಲು, ದೇಸೀ ಸಂಸ್ಕೃತಿಯನ್ನು ಸವರಿ ಹಾಕಲು, ಇವತ್ತಿನ ಮುಂಚೂಣಿ ಲೇಖಕ ಪ್ರತಿಭಾವಂತರನ್ನು ಮಾಹಿತಿಯ ವಕ್ತಾರರನ್ನಾಗಿ ದುಡಿಸಿಕೊಳ್ಳುವುದೂ ಆ ತಂತ್ರಕ್ಕೆ ಅನೇಕ ಬಗೆಯ ಆಮಿಷಗಳಿಂದ ಇವರು ಕೈ ಜೋಡಿಸುತ್ತಿರುವುದೂ ಈಗ ತಿಳಿದ ವಿಚಾರವೇ. ಆದ್ದರಿಂದ ಬ್ರಿಟಿಷ್ ಸರ್ವೇಯರ್‌ ಮೆಕಂಜಿ ಸಾಹೇಬನು ಇಂಡಿಯಾದ ಭೌಗೋಳಿಕ ಸರ್ವೆ ಮಾತ್ರ ಮಾಡಿದವನಲ್ಲ. ಈ ದೇಶದ ಪ್ರಾಣಪಕ್ಷಿಯಾದ ಸಂಸ್ಕೃತಿ ಸರ್ವೆ ಮಾಡಿ ಬ್ರಿಟಿಷ್ ಸಾಮ್ರಾಜ್ಯ ಅವಿಶ್ರಾಂತವಾಗಿ ನಡೆದು ಕೊಂಡು ಹೋಗಲು ಸಹಾಯಕವಾಗುವಂತೆ ಇಲ್ಲಿದ್ದ ಏಕಮಾತ್ರ ರಾಷ್ಟ್ರೀಯತೆ ಎನಿಸಿದ್ದ ಧಾರ್ಮಿಕತೆಯನ್ನು ತಿಳಿಯಲು ಅವನು ಪ್ರಯತ್ನಿಸಿದ್ದು ತರ್ಕ ಸಮ್ಮತವಾಗಿದೆ ಎನ್ನಬಹುದು. ಆದರೆ, ಈ ಕೃತಿ ಆ ಬ್ರಿಟಿಷ್ ಅಧಿಕಾರಿಯ ಕೈ ಸೇರಲಿಲ್ಲ ಎಂಬುದೇ ಸಮಾಧಾನಕರ ಸಂಗತಿ. ಆದರೆ ಇಂಥ ಅನೇಕ ವಿದ್ವಾಂಸರು ಹೀಗೆ ಬ್ರಿಟಿಷರಿಗೆ ಸಹಕರಿಸದಿದ್ದರೆ ಅವರು ಅಷ್ಟು ದೀರ್ಘಕಾಲ ಇಲ್ಲಿರಲು ಸಾಧ್ಯವಾಗುತ್ತಿತ್ತೆ ಎಂಬುದು ಇನ್ನೂ ಮುಂದಿನ ಸಂಶೋಧನೆಗೆ ನಿಲುಕುವ ವಿಚಾರ.

* * *