ಈಗಿನ ಚಾಮರಾಜನಗರ ಜಿಲ್ಲೆಯ ಮಲೆಯೂರು ಗ್ರಾಮದ ನಿವಾಸಿಯಾಗಿದ್ದ ದೇವಚಂದ್ರ ೧೭೭೦ರಿಂದ ೧೮೪೧ ರವರೆಗೆ ಬದುಕಿದ್ದ ಜೈನ ಪಂಡಿತ. ೧೭೯೯ರ ನಾಲ್ಕನೇ ಮೈಸೂರು ಯುದ್ಧ, ಟಿಪ್ಪುವಿನ ಸಾವು, ಬ್ರಿಟಿಷರ ಆಗಮನ, ಮುಮ್ಮುಡಿ ಕೃಷ್ಣರಾಜ ಒಡೆಯರ ಆಡಳಿತ. ಈ ಮುಖ್ಯ ಚಾರಿತ್ರಿಕ ಘಟನೆಗಳನ್ನು ಕಣ್ಣಾರೆ ಕಂಡಿದ್ದ ದೇವಚಂದ್ರ. ಟಿಪ್ಪುವಿನ ಮರಣದ ನಂತರ ಮೆಕೆಂಜಿ ಎನ್ನುವ ಬ್ರಿಟಿಶ್ ಮೂಲದ ವೀಕ್ಷಣಾಧಿಕಾರಿಯನ್ನು ಈ ಪ್ರದೇಶದ ಬಗ್ಗೆ ‘ಸರ್ವೆ’ ಮಾಡಲು ಕಂಪನಿ ಸರ್ಕಾರ ನೇಮಿಸಿತ್ತು. ಮೈಸೂರು ‘ಸರ್ವೆ’ ಕಾಲದಲ್ಲಿ ಮೆಕೆಂಜಿ ದಕ್ಷಿಣ ಭಾರತದ ಅನೇಕ ಶಾಸನ, ಹಸ್ತಪ್ರತಿ, ಐತಿಹ್ಯ, ಸ್ಥಳಪುರಾಣಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡಿದ್ದ. ಈ ನಿಮಿತ್ತ ೧೮೦೪ ರಲ್ಲಿ ಮೈಸೂರಿನ ಲಕ್ಷ್ಮಣರಾಯನೆಂಬ ದ್ವಿಭಾಷಿಯೊಡನೆ ಕನಕಗಿರಿಗೆ ಬಂದು “ದೇವಚಂದ್ರನನ್ನು ಭೇಟಿಯಾಗಿ ಸ್ಥಳಪುರಾಣಮುಂಟೆ” ಎಂದು ಕೇಳಿದನಂತೆ. ಅದಕ್ಕೆ ದೇವಚಂದ್ರನು ತಾನು ಹಿಂದೆ ರಚಿಸಿದ್ದ ‘ಪೂಜ್ಯಪಾದಚರಿತೆ’ಯನ್ನು ಓದಿ ಹೇಳಿದಾಗ ಮೆಕೆಂಜಿಯು ಕಮರಹಳ್ಳಿಯಲ್ಲಿ ಒಡ್ಡಿದ್ದ ತನ್ನ ಗೂಡಾರದ ಬಳಿಗೆ ದೇವಚಂದ್ರನನ್ನು ಕರೆದುಕೊಂಡು ಹೋಗಿ ಪೂರ್ವದ ವಾರ್ತೆಗಳನ್ನೆಲ್ಲಾ ಮೂರು ರಾತ್ರಿ ಚೆನ್ನಾಗಿ ಲಾಲಿಸಿದನಂತೆ. ಮುಂದೆ ಎರಡು ತಿಂಗಳು ಪರ್ಯಂತ ಬಿಡದೆ ‘ದಿನ ಒಂದಕ್ಕೆ ಗ್ರಾಸಕ್ಕೆ ಒಂದು ಹಣಮಂ ಕೊಡುತ್ತ, ರಾತ್ರಿ ಕಾಲದೊಳು, ಪೂರ್ವದ ಪ್ರಪಂಚಗಳು, ಜಾತಿ ಭೇದಗಳು ಮೊದಲಾದ ವಿವರಗಳೆಲ್ಲವನ್ನು’ ಕೇಳಿಕೊಂಡನಂತೆ. ಅಲ್ಲಿಗೂ ದೇವಚಂದ್ರನನ್ನು ಬಿಡದೆ ಬಂಗಾಲಕ್ಕೆ ಒಯ್ಯಬೇಕೆಂದಿದ್ದ ಆದರೆ ಅವನು ಬಹು ವಿಧವಾಗಿ ಹೇಳಿಕೊಂಡಿದ್ದರಿಂದಲೂ, ಅವನ ಧರ್ಮೋಪಾಧ್ಯಾಯರು ಸಹ ಅಡ್ಡಿ ಮಾಡಿದ್ದರಿಂದಲೂ ದೇವಚಂದ್ರನ ಬಂಗಾಲ ಪ್ರಯಾಣವು ತಡೆದು ನಿಂತಿತು. ಆದರೆ ‘ಕರ್ಣಾಟ ದೇಶದೊಳು ನಡೆದ ಪ್ರಪಂಚಗಳನ್ನೆಲ್ಲಾ ಕ್ರೋಢೀಕರಿಸಿ’ ಬರೆದು ತೆಗೆದುಕೊಂಡು ಬಂದರೆ ಭಾರಿ ಸಂಬಳವನ್ನು ಮಾಡಿಸಿ ಕೊಡುತ್ತೇನೆಂದು ಹೇಳಿ, ಮೆಕೆಂಜಿಯು ಲಕ್ಷ್ಮಣರಾಯನ ಮೂಲಕ ೨೫ ಕುಂಪಣಿ ರೂಪಾಯಿಗಳನ್ನು ಕೊಡಿಸಿದನು. ಆ ಪ್ರಕಾರ ದೇವಚಂದ್ರನು ಬರೆಯಲುಪಕ್ರಮಿಸಿ, ಮುಗಿಸಲಿದ್ದಾಗ ಮೆಕೆಂಜಿ ಮೈಸೂರನ್ನು ಬಿಟ್ಟು ದೂರ ಹೋಗಿ ಬಿಟ್ಟಿದ್ದನು. ಇದುವೆ ‘ರಾಜಾವಳೀಕಥೆಯ’ ಉದಯ” [ಶ್ರೀನಿವಾಸ ಹಾವನೂರು, ಪುಟ: ೧೪೫, ೧೪೬]. “ಇಂತಪ್ಪ ಸೂರಿ ಪಂಡಿತನೀ ರಾಜಾವಳಿ ಕಥೆಯಂ ಮಾಡಿಸಿದಂ” (ಸಂ. ಬಿ.ಎಸ್.ಸಣ್ಣಯ್ಯ ಪುಟ: ೩೧೫) ಎಂದು ಸೂರಿಪಂಡಿತನನ್ನು ನೆನೆಯುತ್ತಾನೆ.

ರಾಜಾವಳಿ ಕಥೆಯಲ್ಲಿ ೧೩ ಅಧಿಕಾರಗಳಿವೆ. ಮೆಕೆಂಜಿಗೆ ಕೊಡುವ ಉದ್ದೇಶದಿಂದ ಮೊದಲು ೧೧ ಅಧಿಕಾರಗಳನ್ನು ಬರೆದ. ಆದರೆ ಅವನು ದೇಶಬಿಟ್ಟು ಹೋದುದರಿಂದ ಈ ಕೃತಿ ಕೆಲಕಾಲ ನೆನೆಗುದಿಗೆ ಬಿತ್ತು. ನಂತರ ಮೈಸೂರಿನ ಕೃಷ್ಣರಾಜ ಒಡೆಯರನ್ನು ಭೇಟಿಯಗುವ ಉದ್ದೇಶವೂ ಈಡೇರಲಿಲ್ಲ. ಆದರೆ ಮೈಸೂರಿನ ಮಹಾರಾಣಿಯನ್ನು (ಮಹಾಮಾತುಶ್ರೀ ದೇವಿರಾಂಬೆ) ಭೇಟಿಯಾಗಿ ತನ್ನ ಕೃತಿಯ ಬಗ್ಗೆ ಹೇಳಿಕೊಂಡ. ಮೈಸೂರಿನ ಮಾತುಶ್ರೀ ದೇವರಾಂಬೆ. ಮೈಸೂರು ಒಡೆಯರ ವಂಶಾವಳಿಯನ್ನು ಈ ಕೃತಿಗೆ ಸೇರಿಸು ಎಂದು ಹೇಳಿದ್ದಕ್ಕಾಗಿ ೧೨ ಮತ್ತು ೧೩ನೆಯ ಅಧಿಕಾರಗಳನ್ನು ಕೊನೆಗೆ ಸೇರಿಸಿದ್ದಾನೆ. ಆದರೆ ರಾಜರ ಆಸ್ಥಾನದಿಂದ ಕೃತಿಗೆ ಸಿಗಬೇಕಾದ ಮನ್ನಣೆ ಸಿಗದೆ ಕೊನೆಗೆ ಈ ಪಂಡಿತ ಬಡತನದಲ್ಲೇ ಬದುಕಬೇಕಾಯಿತು.

ಕನ್ನಡದ ಕವಿಚರಿತೆಕಾರರಾದ ಆರ್. ನರಸಿಂಹಚಾರ್‌ರವರು ರಾಜಾವಳಿ ಕಥೆಯನ್ನು ‘ಜೈನ ಸಾಹಿತ್ಯ ಚರಿತ್ರೆ’ ಎಂದು ಕರೆದಿದ್ದರೂ, ಮುಂದೆ ಸಾಹಿತ್ಯಾಸಕ್ತರು, ಇತಿಹಾಸಕಾರರು ಈ ಕೃತಿಯನ್ನು ಗಂಭೀರವಾಗಿ ಪರಿಗಣಿಸಿದಂತೆ ಇಲ್ಲ. ಕಾರಣವಿಷ್ಟೆ ‘ರಾಷ್ಟ್ರೀಯ ಇತಿಹಾಸ’ ಕಲ್ಪನೆ ೧೯ನೇ ಶತಮಾನದಲ್ಲಿ ಬಲವಾಗಿತ್ತು. ಅದು ಬ್ರಿಟಿಶ್ ಮಾದರಿಗಳಿಂದ ನಮ್ಮದನ್ನು ಹೊಂದಿಸುವ ಕ್ರಮವಾಗಿತ್ತು. ರಾಜಾವಳಿ ಕಥೆ ಈ ಕ್ರಮಕ್ಕೆ ವಿರುದ್ಧವಾದ ಪಠ್ಯವಾಗಿತ್ತು. ಇತಿಹಾಸಕಾರರು ಗುರುತಿಸುತ್ತಿದ್ದ ಕಾಲಾನುಕ್ರಮ ಏರುಪೇರಾಗಿತ್ತು. ಆದ್ದರಿಂದ ಈ ಕೃತಿಯನ್ನು ಚರಿತ್ರಕಾರರು, ಸಾಹಿತ್ಯಾಸಕ್ತರು ಗಂಭೀರವಾಗಿ ಪರಿಗಣಿಸಲಿಲ್ಲ. ಕರ್ನಾಟಕ ‘ಚರಿತ್ರೆ’ (ದೇವಚಂದ್ರನ ಪ್ರಕಾರ ಪೂರ್ವ ಪ್ರಪಂಚು) ಬರೆಯಬೇಕೆಂಬ ಒತ್ತಡ ಮೆಕೆಂಜಿಯಿಂದ ಉಂಟಾದದ್ದು. ಭಾರತೀಯರು ಚರಿತ್ರೆಯನ್ನು ಕಟ್ಟುವ ಕ್ರಮಕ್ಕೂ ಬ್ರಿಟಿಷರು ಚರಿತ್ರೆಯನ್ನು ಕಟ್ಟುವ ಕ್ರಮಕ್ಕೆ ಭಿನ್ನತೆಗಳಿವೆ. ದೇವಚಂದ್ರ ಇವೆರಡನ್ನು ಬಳಸುವ ಪ್ರಯತ್ನ ಮಾಡಿದ್ದರಿಂದ ಆತನ ಕೃತಿ ಒಂದು ಸಂಕರ ಪಠ್ಯವಾಗಿ ಬಿಡುತ್ತದೆ. ದೇವಚಂದ್ರ ಈ ಕೃತಿಗೆ ಆಕರಗಳಾಗಿ ಬರೀ ಲಿಖಿತ ಪಠ್ಯಗಳನ್ನಷ್ಟೆ ಅಲ್ಲದೆ, ಜಾನಪದ, ಐತಿಹ್ಯ, ಸ್ಥಳಪುರಾಣಗಳನ್ನು ಬಳಸುತ್ತಾನೆ. ಆದ್ದರಿಂದ ಮಧ್ಯಕಾಲೀನ ಅನೇಕ ಸಾಂಸ್ಕೃತಿಕ ಪಂಥಗಳ ಮೊಟ್ಟ ಮೊದಲ ದಾಖಲಾತಿ ಈ ಕೃತಿಯಲ್ಲಿ ಸಿಗುತ್ತದೆ.

ದೇವಚಂದ್ರನಿಗೆ ಈ ಕೃತಿ ರಚಿಸಲು ಮೆಕೆಂಜಿ, ಸೂರಿಪಂಡಿತ, ಮಹಾಮಾತುಶ್ರೀ ದೇವಿರಾಂಬೆ ಮುಂತಾದವರ ಬಾಹ್ಯ ಒತ್ತಡಗಳಿದ್ದರೂ ರಾಜಾವಳಿ ಕಥೆಯಲ್ಲಿ ‘ಜಿನಮತವೇ ಆದಿಮತ’ ಎಂಬುದನ್ನು ಪ್ರತಿಪಾದಿಸುವುದು ದೇವಚಂದ್ರನ ಮುಖ್ಯ ಉದ್ದೇಶವಾಗಿದ್ದಂತೆ ಕಾಣುತ್ತದೆ. ಇದಕ್ಕೆ ಕೆಲವೊಮ್ಮೆ ವೈದಿಕ ಮೂಲದ ಆಕರಗಳನ್ನು ಬಳಸುತ್ತಾನೆ. ಉದಾ: ಚಾರ್ತುವರ್ಣ ಕಲ್ಪನೆ, ಮಹಾಕಾವ್ಯಗಳು, ಭಾಗವತ ಇತ್ಯಾದಿ. ಅಸಂಖ್ಯಾತ ಜೈನ ಕಥೆಗಳನ್ನು ಬಳಸುವ ದೇವಚಂದ್ರ, ವೈದಿಕ ಧರ್ಮ, ಶೈವ ಧರ್ಮ ಕೊನೆಗೆ ಇಸ್ಲಾಂ ಧರ್ಮಕ್ಕೂ ಜೈನ ಧರ್ಮವೇ ‘ಆದಿ’ ಎಂದು ಸಮೀಕರಿಸಿಬಿಡುತ್ತಾನೆ.

ಜೈನ ದರ್ಶನಗಳು ಮೂಲತಃ ನಾಸ್ತಿಕ ನೆಲಗಟ್ಟಿನವು. ವೈದಿಕರು ದೇವರ ಸೃಷ್ಟಿಯನ್ನು ನಂಬದ ಜೈನರನ್ನು ತಾತ್ವಿಕವಾಗಿ ವಿರೋಧಿಸುತ್ತಿದ್ದರು. ಜಿನವಾಣಿ ಆಗದ ವೇದಗಳನ್ನು ಜೈನರು ಪ್ರಾಮಾಣ್ಯಗಳಾಗಿ ಸ್ವೀಕರಿಸದೆ ಜೈನಾಗಮಗಳನ್ನು ಆಕರಗಳಾಗಿ ಬಳಸಿದರು. ದೇವಚಂದ್ರ ಇವುಗಳನ್ನು ಮುಂದಿಟ್ಟುಕೊಂಡು ವೇದ ಪ್ರಾಮಾಣ್ಯಗಳನ್ನು ನಿರಾಕರಿಸುತ್ತಾನೆ. ಕೃತಿಯಲ್ಲಿ ಎದ್ದು ಕಾಣುವ ಅವನ ವೈಚಾರಿಕ ಪ್ರಖರತೆಗೆ ಜೈನ ಧರ್ಮದ ನೀರೀಶ್ವರವಾದನೇ ಕಾರಣ. ಜೈನಾಗಮಗಳನ್ನು ಪೂರ್ಣ ಪಕ್ವವಾಗಿ ಮಂಡಿಸಿದರು. ಇದು ಅಂತಿಮವಲ್ಲ ಎನ್ನುವ ಎಚ್ಚರವನ್ನು ಇಟ್ಟುಕೊಂಡವನಂತೆ ಕಾಣುತ್ತಾನೆ. ವೈದಿಕ ಧರ್ಮದ ಚಾರ್ತುವರ್ಣ ಕಲ್ಪನೆಯನ್ನು ಮಂಡಿಸುತ್ತಲೇ. “ಇಂತು ಮನುಷ್ಯ ಜಾತಿಯೊಂದೆಯಾದೊಡಮವರವರ ವೃತ್ತಿಭೇದದಿಂ ಬ್ರಾಹ್ಮಣಾದಿಗಳಾಗೆ ಪದಿನೆಂಟು ಜಾತಿಗಳು ಮವರವರ ವೃತ್ತಿಯಿಂದಲೆ ಭೇದಂಗಳಾಗಿಪ್ಪವು” (ಸಂ.ಬಿ.ಎಸ್. ಸಣ್ಣಯ್ಯ ಪುಟ.೭) ನೀಚಜಾತಿಯವನಾದೊಡಂ ಮಧ್ಯಮಾಂಸಮಂ ಬಿಟ್ಟು ಜ್ಞಾನಿಯಾದೊಡಾತನೆ ಬ್ರಾಹ್ಮಣನಪ್ಪ ನೆಂದಾ… (ಸಂ. ಬಿ.ಎಸ್.ಸಣ್ಣಯ್ಯ ಪುಟ.೬೧) ಎನ್ನುವ ವೈಚಾರಿಕತೆಯನ್ನು ಪ್ರಕಟಪಡಿಸುತ್ತಾನೆ. ಈ ತರದ ಅನೇಕ ಸಂಗತಿಗಳು ರಾಜಾವಳಿ ಕಥೆಯಲ್ಲಿವೆ.

ವೀರಶೈವ ಧರ್ಮ ಮತ್ತು ಶ್ರೀ ವೈಷ್ಣವ ಧರ್ಮ ಬಸವಣ್ಣ ಮತ್ತು ರಾಮಾನುಜರಿಂದ ಮಧ್ಯಕಾಲೀನ ಚರಿತ್ರೆಯಲ್ಲಿ ಹುಟ್ಟಿ ಕರ್ನಾಟಕದಲ್ಲಿ ಅತ್ಯಂತ ಪ್ರಬಲವಾದ ಧರ್ಮಗಳಾಗಿ ಪರಿವರ್ತನೆಗೊಂಡಿದ್ದವು. ಉತ್ತರ ಕರ್ನಾಟಕದಲ್ಲಿ ಕಾಣಿಸಿಕೊಂಡ ವೀರಶೈವ ಧರ್ಮ ದೇವಚಂದ್ರನ ಕಾಲಕ್ಕೇ ದಕ್ಷಿಣದಲ್ಲೂ ತನ್ನ ಗಾಢವಾದ ಪ್ರಭಾವವನ್ನು ಬೀರಿತ್ತು. ಆದರೆ ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ಶೇ. ೮೦ ಭಾಗದ ಗ್ರಾಮನಾಮಗಳು ಜೈನಮೂಲವನ್ನು ಸಾಬೀತು ಪಡಿಸುತ್ತವೆ. ಉದಾ: ಕನಕಗಿರಿ, ಅರಿಕುಠಾರ, (ಚಾಮರಾಜನಗರ) ಮುಡಿಗುಂಡ, ಬಸ್ತಿಪುರ, ಕೊಳ್ಳೇಗಾಲ, ಮಧುವನಹಳ್ಳಿ, ದೊಡ್ಡಿಂದುವಾಡಿ, ತೆರಕಣಾಂಬಿ, ಇಕ್ಕಡಹಳ್ಳಿ, ಮುಕ್ಕಡಹಳ್ಳಿ, ಇತ್ಯಾದಿ. ಆದರೆ ಈ ಊರುಗಳಲ್ಲಿ ಜೈನ ಧರ್ಮದ ಪ್ರಭಾವ ದೇವಚಂದ್ರನ ಕಾಲಕ್ಕೆ ಅವಸಾನಗೊಂಡಿತ್ತು. ವೀರಶೈವ, ಶ್ರೀವೈಷ್ಣವ ಧರ್ಮ ಹೆಚ್ಚು ಚಾಲ್ತಿಯಲ್ಲಿತ್ತು.

ಆದ್ದರಿಂದ ದೇವಚಂದ್ರ ಮಧ್ಯಕಾಲೀನ ಈ ಎರಡು ಪಂಥಗಳನ್ನು ತೀವ್ರವಾಗಿ ವಿರೋಧಿಸುತ್ತಾನೆ. ಮತ್ತು ಸ್ಥಳನಾಮಗಳು ಮೂಲಕ ‘ಜಿನಮತ ಆದಿ ಮತ’ ಎಂಬುದನ್ನು ಪ್ರತಿಪಾದಿಸುವ ಪ್ರಯತ್ನ ಮಾಡುತ್ತಾನೆ ಮತ್ತು ಇವೆರಡು ಧರ್ಮಗಳು ಜೈನಧರ್ಮದ ಮೇಲೆ ಆಕ್ರಮಣ ಮಾಡಿವೆ ಎಂದು ಆಕ್ಷೇಪಿಸುತ್ತಾನೆ. ಶೃಂಗೇರಿ, ಮೇಲುಕೋಟೆ, ಚಾಮುಂಡಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ತಿರುಪತಿ ಇತ್ಯಾದಿಗಳಲ್ಲಿದ್ದ ಜಿನ ಪ್ರತಿಮೆಗಳನ್ನು ತೆಗೆಸಿ ಅವರವರ ಧರ್ಮದ ಮೂರ್ತಿಗಳನ್ನಿಟ್ಟರು ಎಂದು ಆರೋಪಿಸುತ್ತಾನೆ.

ಪರಿವರ್ತನೆ ಅಥವಾ ಬದಲಾವಣೆ ಸಮುದಾಗಳ ಆಯ್ಕೆ ಬಿಟ್ಟದ್ದು. ಇವು ಯಾರ ಒತ್ತಡದಿಂದಲೂ ಉಂಟಾದವಲ್ಲ. ಆದರೆ ದೇವಚಂದ್ರ ಇಲ್ಲಿ ಸಂಪ್ರದಾಯವಾದಿಯಂತೆ ಉಲ್ಲೇಖಿಸಿ, ಅಷ್ಟಕ್ಕೆ ನಿಲ್ಲದೆ ಇವೆಲ್ಲ ಕಾಲದೋಷ ಎನ್ನುವ ತಾತ್ವಿಕತೆಗೆ ಬಂದು ಬಿಡುತ್ತಾನೆ.

ಬಾಹುಬಲಿ ಅಣ್ಣನ ವಿರುದ್ಧ ಯುದ್ಧ ಮಾಡುವುದು, ವಿಜಯನಗರ ಸಾಮ್ರಾಜ್ಯ ಬಹುಮನಿಗಳಿಂದ ನಾಶವಾದದ್ದು. ರಮಾನುಜಚಾರ್ಯ, ಬಸವಣ್ಣ ಹೊಸ ಮತಗಳನ್ನು ಸ್ಥಾಪಿಸಿದ್ದು ಇವೆಲ್ಲಾ ಹುಂಡಾವಸರ್ಪಣಿ ಕಾಲದೋಷ ಎನ್ನುವ ನಿಲುವಿಗೆ ದೇವಚಂದ್ರ ಬರುತ್ತಾನೆ. ಒಟ್ಟು ರಾಜಾವಳಿ ಕಥೆ ಲೇಖಕನ ಈ ತೀರ್ಮಾನದಿಂದ ಹೊಸ ರೂಪವನ್ನು ಪಡೆದುಕೊಳ್ಳುತ್ತದೆ. ಮತಪ್ರಪಂಚು, ಮಿಥ್ಯತ್ವ, ಧರ್ಮಯುದ್ಧ, ಜಾತಿಮತ ಇತ್ಯಾದಿ ಸ್ಥಾವನ ಕಲ್ಪನೆಗಳನ್ನೆಲ್ಲಾ ದೇವಚಂದ್ರ ಈ ತಾತ್ವಿಕತೆಯ ಒಳಗೆ ಮುಳುಗಿಸಿ ಕೃತಿಗೊಂದು ಹೊಸ ಆಯಾಮ ಕೊಡುತ್ತಾನೆ. ಆದ್ದರಿಂದ ಕೃತಿ, ‘ಮತಪ್ರಪಂಚು’ಗಳನ್ನೆಲ್ಲಾ ಬಳಸಿಕೊಳ್ಳುವುದು ಅವುಗಳನ್ನು ಮೀರುವುದಕ್ಕಾಗಿಯೇ. ಈ ಅರ್ಥದಲ್ಲಿ ದೇವಚಂದ್ರ ನಿರೀಶ್ವರವಾದಿಯಾಗಿಯೇ ಉಳಿಯುತ್ತಾನೆ.

ಗ್ರಂಥ ಸೂಚಿ

೧. ಸಣ್ಣಯ್ಯ ಬಿ.ಎಸ್., ಸಂ. ೧೯೮೮, ದೇವಚಂದ್ರ ವಿರಚಿತ ರಾಜಾವಳಿ ಕಥಾಸಾರ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು

೨. ಸಣ್ಣಯ್ಯ ಬಿ.ಎಸ್., ೨೦೦೦, ದೇವಚಂದ್ರನ ರಾಜಾವಳಿ ಕಥಾಸಾರ (ಹೊಸ ಗನ್ನಡ ಗದ್ಯಾನುವಾದ) ಕನಕಗಿರಿ ಪ್ರಕಾಶನ, ಮಲೆಯೂರು

೩. ಶ್ರೀನಿವಾಸ ಹಾವನೂರು, ೨೦೦೦, ಹೊಸಗನ್ನಡದ ಅರುಣೋದಯ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

೪. ರಾಜಶೇಖರ ಪಿ.ಕೆ. ೧೯೭೫, ಮಲೆಯಮಾದೇಶ್ವರ ಕಾವ್ಯ, ಹೊನ್ನಾರಿ ಜನಪದ ಗಾಯಕರು, ಮೈಸೂರು.

೫. ಗಾಯಕ್ವಾಡ್, ವಿಠಲರಾವ್, ಅನು. ೨೦೦೦. ತಾರೀಖೆ-ಇಸ್ಕಂದರಿ (ಮರಾಠಿ ಅನುವಾದ ಆಧರಿಸಿ) ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೬. ಗುಂಡಾಜೋಯಿಸ್, ಕೆಳದಿ. ಅನು. ೧೯೭೬ (೧೯೯೯). ಲಿಂಗಣ್ಣ ಕವಯ ಕೆಳದಿನೃಪವಿಜಯ (ಗದ್ಯಾನುವಾದ), ಬೆಂಗಳೂರು : ಕ.ಸಾ.ಪ

೭. ಕಲಬುರ್ಗಿ ಎಂ.ಎಂ. ಸಂ. ೧೯೯೪, ಕರ್ನಾಟಕ ಕೈಫಿಯತ್ತುಗಳು, ವಿದ್ಯಾರಣ್ಯ : ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ವೆಂಕಟೇಶ ಇಂದ್ವಾಡಿ