೨೧ನೆಯ ಶತಮಾನದ ಪ್ರಾರಂಭದಲ್ಲಿ ಬದುಕಿರುವ ನಮಗೆ ನಮ್ಮ ಭಾರತೀಯ ಇತಿಹಾಸದ ಕುರಿತು ಈಗಾಗಲೇ ಸಿದ್ಧವಾದ ಗ್ರಹಿಕೆಗಳು ಇವೆ. ನಮ್ಮ ಮತೀಯ ಇತಿಹಾಸದ ಕುರಿತೂ ನಮಗೆ ಈಗಾಗಲೆ ಸಿದ್ಧವಾದ ಸತ್ಯಗಳು ಇವೆ. ಇವನ್ನೆಲ್ಲ ಕಳೆದ ನೂರು ವರ್ಷಗಳಿಗಿಂತಲೂ ದೀರ್ಘಕಾಲದ ಆಕರ ವಿಮರ್ಶೆ, ಸತ್ಯಶೋಧನೆ ಹಾಗೂ ವೈಜ್ಞಾನಿಕ ವಿಧಾನಗಳ ಮೂಲಕ ಕಟ್ಟಿದ್ದೇವೆ. ಹಾಗಾಗಿ ನಮಗೆ ಇದೇ ಅಧಿಕೃತವಾದ ಇತಿಹಾಸ ಎಂಬ ಭದ್ರ ನಂಬಿಕೆ ಕೂಡ ಇದೆ. ೧೮ನೇ ಶತಮಾನದ ಉತ್ತರಾರ್ಧದ ಪ್ರಾರಂಭದಲ್ಲಿ ಮೈಸೂರಿನಲ್ಲಿ ಬದುಕಿದ್ದ ಪಂಡಿತನೊಬ್ಬನಿಗೆ ನಮ್ಮ ಈ ಇತಿಹಾಸವನ್ನು ಬರೆಯುವುದು ಸಾಧ್ಯವಿರಲಿಲ್ಲ. ಹಾಗಾಗಿ ದೇವಚಂರನ ‘ರಾಜಾವಳಿ ಕಥಾಸಾರ’ವನ್ನು ಓದುವಾಗ ನಮ್ಮ ಇಂದಿನ ಇತಿಹಾಸಕ್ಕೆ ಸುಳ್ಳಾಗಿ, ಅಸಂಬದ್ಧವಾಗಿ ಕಾಣಿಸಬಹುದಾದ ಸಂಗತಿಗಳು ಮೇಲಿಂದ ಮೇಲೆ ಕಾಣಿಸಿ ನಮಗೆ ಆತನ ‘ಇತಿಹಾಸ’ದ ಕುರಿತು ಉಪೇಕ್ಷೆಯನ್ನು ಹುಟ್ಟಿಸುತ್ತವೆ. ದೇವಚಂದ್ರನ ಮತೀಯ ಪ್ರತಿಪಾದನೆ, ಹಾಗೂ ಅನ್ಯಮತಗಳ ಕುರಿತು ಆತನಿಗಿದ್ದ ಅಸಡ್ಡೆ ಎಲ್ಲವೂ ‘ರಾಜಾವಳಿ’ಯಲ್ಲಿ ಯಾವುದೇ ಮುಚ್ಚು-ಮರೆಯಿಲ್ಲದೇ ಸ್ಪಷ್ಟವಾಗಿವೆ. ದೇವಚಂದ್ರನ ಉದ್ದೇಶವೂ ಕೂಡ ಇಂಥ ಸ್ಪಷ್ಟತೆಯನ್ನು ಸಾಧಿಸುವುದೇ ಆಗಿದೆ. ಅಂದರೆ ‘ರಾಜಾವಳಿ’ಯನ್ನು ಓದಿದ ಯಾರಿಗಾದರೂ ಜೈನಮತವೇ ‘ಆದಿಮತ’ ಹಾಗೂ ನಿಜವಾದ ಮೋಕ್ಷಮಾರ್ಗ ಎಂಬುದರಲ್ಲಿ ಸಂಶಯ ಉಳಿಯಬಾರದು; ಹಾಗೇ ಬರೆಯಲಾಗಿದೆ. ಈ ಪ್ರತಿಪಾದನೆಯೇ ಆತನ ಗುರಿಯಾಗಿರುವುದರಿಂದ ತನ್ನ ವಾದವನ್ನು ದೃಢೀಕರಿಸುವ ಪೂರ್ವಸಂಗತಿಗಳನ್ನು ವಿಮರ್ಶೆಗೊಳಪಡಿಸುವ ಅರ್ಥಹೀನ ಕೆಲಸಕ್ಕೆ ಆತನು ಸಮಯವನ್ನು ಹಾಳುಮಾಡಲಿಲ್ಲ. ಅಂಥ ವಿಮರ್ಶೆ ಆತನ ಕಾರ್ಯಕ್ರಮವಾಗಿರಲಿಲ್ಲ.

ಆದರೆ ರಾಜಾವಳಿ ಕೇವಲ ಒಂದು ಸಾಂಪ್ರದಾಯಿಕ ಮತ ಪುರಾಣವಲ್ಲ. ಏಕೆಂದರೆ ಅದರ ಹುಟ್ಟೇ ಹಾಗಿದೆ. ನಮ್ಮ ನಾಡಿನ ಪೂರ್ವ ಇತಿಹಾಸವನ್ನು ತನ್ನ ‘ಹಿಸ್ಟರಿ’ಯನ್ನಾಗಿ ಪರಿವರ್ತಿಸಿಕೊಳ್ಳುತ್ತಿದ್ದ ಪಾಶ್ಚಾತ್ಯನೊಬ್ಬನ ಬೇಡಿಕೆಯ ಮೆರೆಗೆ ಅದನ್ನು ಬರೆಯಲಾಯಿತು. ಕರ್ನಲ್ ಮೆಕೆಂಜಿ ೧೯೦೫ರಲ್ಲಿ ದೇವಚಂದ್ರನನ್ನು ಭೇಟಿಮಾಡಿ ‘ಈ ಕರ್ಣಾಟ ದೇಶದೊಳು ನಡೆದ ಪ್ರಪಂಚುಗಳನ್ನೆಲ್ಲಾ ಕ್ರೋಢೀಕರಿಸಿ ಬರೆದು’ ಕೊಡುವಂತೇ ಈತನನ್ನು ಕೇಳಿಕೊಳ್ಳುತ್ತಾನೆ. ಈ ‘ಪೂರ್ವ ಪ್ರಪಂಚು’ಗಳೆಂದರೆ ಪೂರ್ವ ಘಟನೆ ಅಥವಾ ಸಂಗತಿಗಳು. ಈ ಸಂಗತಿಗಳನ್ನು ಕ್ರೋಢೀಕರಿಸಬೇಕೆಂದೂ ಆತ ತಿಳಿಸುತ್ತಾನೆ ಹಾಗೂ ಅವು ‘ನಡೆದ’ ಸಂಗತಿಗಳೂ ಆಗಿರಬೇಕೆಂಬುದೂ ಇಲ್ಲಿ ಇಂಗಿತವಾಗಿದೆ. ಅಂದರೆ ಮೆಕೆಂಜಿಗೆ ಈ ನಾಡಿನಲ್ಲಿ ಏನೇನು ನಡೆಯಿತೆಂದು ಎಲ್ಲವನ್ನೂ ತಿಳಿದುಕೊಳ್ಳುವ ಉದ್ದೇಶ ಇತ್ತು. ಈ ರೀತಿ ಪಾಶ್ಚಾತ್ಯ ಸರದಾರನು ದೇಶೀ ಪಂಡಿತನೊಬ್ಬನನ್ನು ವಸಾಹತುವಿನ ‘ಹಿಸ್ಟರಿ’ಗಾಗಿ ಆಶ್ರಯಿಸುತ್ತಾನೆ. ಈ ಪಂಡಿತನು ಅದನ್ನು ‘ನಡೆದ ಪೂರ್ವ ಪ್ರಪಂಚುಗಳ ಕ್ರೋಢೀಕರಣ’ ಎಂಬುದಾಗಿ ಗ್ರಹಿಸುತ್ತಾನೆ. ಹಾಗೂ ‘ಇದ್ದುದನಿದ್ದಂತೊರೆದೆನು’, ‘ಇಲ್ಲದ ಸಂಗತಿಯಂ ತಾ ಬಲ್ಲಂದವಿ ಕವಿತೆಯಿಂದಮದ್ಭುತ ಮಾಗಿಯು ಸೊಲ್ಲಿಸಿದುದಲ್ಲ’ ಎಂದು ಈ ಕೃತಿಯ ಕುರಿತು ಹೇಳಿಕೊಳ್ಳುತ್ತಾನೆ. (ಪುಟ ೩೬೪)[1] ಏಕೆ ಪುನಃ ಪುನಃ ದೇವಚಂದ್ರನು ಈ ‘ರಾಜಾವಳಿ’ಯಲ್ಲಿ ಘಟನೆಗಳ ಸತ್ಯವನ್ನು ಹೀಗೆ ಪ್ರಮಾಣ ಮಾಡುತ್ತಾನೆ ಎಂಬುದು ಸೋಜಿಗವನ್ನುಂಟು ಮಾಡುತ್ತದೆ. ಬಹುಶಃ ದೇವಚಂದ್ರ ಮೆಕಕೆಂಜಿಯ ಹುಡುಕಾಟವನ್ನು ಗ್ರಹಿಸಲಾರದಷ್ಟು ಮಂದಬುದ್ಧಿಯ ವನಾಗಿರಲಿಲ್ಲ. ಆದರೆ ಅದನ್ನು ಯಥಾವತ್ತಾಗಿ ಪೂರೈಸುವುದು ಎಂದರೆ ಏನು? ಎಂಬುದು ಮಾತ್ರ ಅವನಿಗೆ ಎಟುಕದ ಸಂಗತಿಯಾಗಿತ್ತು. ಇಲ್ಲಿನ ಪೂರ್ವ ಪ್ರಪಂಚುಗಳಲ್ಲಿ ರಾಜರ, ರಾಜವಂಶಗಳ ಕಥನವೂ ಬರುತ್ತದೆ. ಈ ರೀತಿ ತನ್ನ ಮತದ ಹಾಗೂ ಅನ್ಯಮತದ ರಾಜರುಗಳನ್ನೆಲ್ಲ ಯಾವುದೇ ತಾರತಮ್ಯವಿಲ್ಲದೇ ‘ನಡೆದ ಸಂಗತಿ’ ಎಂಬ ಮಾತ್ರಕ್ಕೇ ಸಮಾನ ಮಹತ್ವಕೊಟ್ಟು ವಿವರಿಸುವ ಪರಿಯೇ ದೇವಚಂದ್ರನಿಗೆ ಎಟುಕದ್ದಾಗಿತ್ತು. ಅದೇ ರೀತಿ ಎಲ್ಲ ಮತಗಳನ್ನೂ ‘ನಡೆದ ಸಂಗತಿ’ಗಳೆಂಬ ಒಂದೇ ಕಾರಣಕ್ಕೆ ಸಮಾನ ಪಾವಿತ್ರ್ಯತೆಯಲ್ಲಿ ವರ್ಣಿಸಿ ಕೈಬಿಡುವುದು ಆತನಿಗೆ ಪಾಪಕಾರ್ಯವಾಗಿ ಕೂಡ ಕಾಣಿಸಿರಬಹುದು. ಹಾಗಾಗಿ ದೇವಚಂದ್ರನ ಜಗತ್ತಿಗೆ ಮೆಕೆಂಜಿಯ ‘ಹಿಸ್ಟರಿ’ ಕಲ್ಪನೆ ಅರ್ಥಪೂರ್ಣವಾಗುವ ಸಾಧ್ಯತೆಗಳು ಬಹಳ ಕಡಿಮೆ ಇದ್ದವು.

ಆದರೆ ‘ಇದ್ದದ್ದನ್ನು ಇದ್ದಂತೇ ಹೇಳಿದ್ದೇನೆ’ ಎಂದು ಗಟ್ಟಿಯಾಗಿ ಪ್ರತಿಪಾದಿಸುವ ಜರೂರು ದೇವಚಂದ್ರನಿಗೆ ಬೇರೊಂದು ಕಾರಣಕ್ಕೆ ಕೂಡ ಅನಿವಾರ್ಯವಾಗತೊಡಗಿತು. ಈ ಗ್ರಂಥವನ್ನು ಬರೆಸಿದ ಮೆಕೆಂಜಿ ಇದರ ಓದುಗನಾಗಲಿಲ್ಲ. ಇದನ್ನು ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ನೀಡಿ ತನ್ನ ಬಡತನವನ್ನು ನೀಗಿಸಿಕೊಳ್ಳುವ ಕಟು ವಾಸ್ತವ ಆತನಿಗುಂಟಾಯಿತು. ‘ಪೂರ್ವ ಪ್ರಪಂಚು’ಗಳೆಂಬ ಹೆಸರಿನಲ್ಲಿ ಜೈನ ಮತೀಯ ಜಗತ್ತು ತನಗೆ ಅನುಕೂಲವಾಗುವಂತೇ ಉಳಿಸಿಕೊಂಡು ಬಂದ ಸಂಗತಿಗಳೆಲ್ಲ ಇಲ್ಲಿವೆ. ಅನ್ಯಮತಗಳು ಹಾಗೂ ಅವುಗಳಿಗೆ ಆಶ್ರಯ ನೀಡಿದ ರಾಜರು ಇವುಗಳನ್ನು ನಮ್ಮ ‘ಪೂರ್ವ ಪ್ರಪಂಚು’ಗಳೆಂದು ಒಪ್ಪಿಕೊಳ್ಳಲು ಯಾವ ಕಾರಣಗಳೂ ಇರಲಿಲ್ಲ. ಕೃಷ್ಣರಾಜ ಒಡೆಯರು ಜೈನಮತದ ಕ್ಷೇತ್ರಗಳಿಗೂ ಧಾರಾಳವಾಗಿ ದಾನದತ್ತಿಗಳನ್ನು ನೀಡಿದ್ದರೂ ಜೈನೇತರ ಮತಗಳೇ ಆಸ್ಥಾನದಲ್ಲಿ ನಿರ್ಣಾಯಕವಾಗಿದ್ದವು. ಹಾಗೂ ಖಾಸಗಿಯಾಗಿ ಆತ ಜೈನಮತಾವಲಂಬಿ ಯಾಗಿರಲಿಲ್ಲ. ಅಂಥವರಿಗೆ ಈ ಜೈನ ರಾಜಾವಳಿ ಮನಸ್ಸಿಗೆ ಹಿಡಿಸುವುದೂ ಅಸಾಧ್ಯ. ಅದಲ್ಲದೇ ರಾಜಾವಳಿಯಲ್ಲಿ ಅನ್ಯಮತಗಳಿಗೆ ಹಾಗೂ ಮೈಸೂರು ವಂಶದವರಿಗೆ ಅಪ್ರಿಯವಾದ ಸಂಗತಿಗಳು ಸಾಕಷ್ಟಿದ್ದವು ಎಂಬುದು ನಮಗೆ ಅದನ್ನೋದಿದಾಗ ತಿಳಿದುಬರುತ್ತದೆ. ದೇವಚಂದ್ರನೂ ಇದಕ್ಕೆ ಸೂಚನೆ ನೀಡುತ್ತಾನೆ. ಆತನಿಗೆ ಈ ಗ್ರಂಥವನ್ನು ಒಪ್ಪಿಸಿ ಆಸ್ಥಾನದಿಂದ ಬಹುಮಾನವನ್ನು ಪಡೆಯುವಲ್ಲಿ ಬಹಳ ಕಷ್ಟವಾಯಿತು. (ಪುಟ. ೩೬೧-೬೨) ನಂತರ ರಾಜಮಾತೆಯು ಮೈಸೂರು ರಾಜ ಪರಮೇಶ್ವರರ ವಂಶ ಪರಂಪರೆಯನ್ನು ಆಮೂಲವಾಗಿ, ಸಹಜವಾಗಿ ಬರೆದು ಒಪ್ಪಿಸುವಂತೇ ನಿರೂಪ ಮಾಡಿದರು. ನಂತರ ಹನ್ನೆರಡಯ ಅಧಿಕಾರವನ್ನು ಆತನು ಆ ಸಲುವಾಗೇ ಬರೆದು ಅಲ್ಲಿ ‘ತಾನೇ ಹೇಳಿದ್ದೆಲ್ಲ ನಿಜ’ವೆಂದು ವಿಶೇಷವಾಗಿ ಹೇಳಬೇಕಾಯಿತು. ಅಲ್ಲದೇ ಕೃಷ್ಣರಾಜನು ‘ಎಲ್ಲಾ ಮತಗಳನ್ನೂ ಆದರಿಸುವವನಾದ್ದರಿಂದ ಷಣ್ಮತಗಳ ಕುರಿತೂ ಬರೆದಿದ್ದೇನೆ’ ಎಂದು ದೇವಚಂದ್ರ ಅಲ್ಲಿ ಹೇಳಿಕೊಳ್ಳುತ್ತಾನೆ. (ಪು. ೩೬೪)

ಈ ರೀತಿ ದೇವಚಂದ್ರನಿಗೆ ಬೇರೆ ಬೇರೆ ಕಾರಣಗಳಿಗಾಗಿ ಜೈನ ಪುರಾಣದ ಚೌಕಟ್ಟನ್ನು ಮೀರಿ ರಾಜಾವಳಿಯ ವಿಷಯವನ್ನು ಕ್ರೋಢೀಕರಿಸಬೇಕಾಯಿತು. ಈ ಗ್ರಂಥ ‘ಭರತದಾರ್ಯ ಖಂಡದ ಪ್ರಪಂಚುವನ್ನು ಆದಿಯಿಂದ’ ಹೇಳುವ, ಜೈನೇತರ ಮತಗಳನ್ನೂ ಕುರಿತು ನಿರೂಪಿಸುವ ಕೃತಿಯಾಯಿತು. ಹಾಗೂ ಅಲ್ಲಿ ಹೇಳಿದ್ದೆಲ್ಲ ‘ನಿಜವಾಗಿ ನಡೆದಂಥವು’ ತಾನು ಯಾವುದೇ ಸುಳ್ಳುಗಳನ್ನು ಹೇಳಿಲ್ಲ ಎಂದೂ ಘೋಷಿಸಬೇಕಾಯಿತು. ಈ ಎಲ್ಲ ಅಂಶಗಳೂ ನಾವು ಇಂದಿನ ಅರ್ಥದಲ್ಲಿ ‘ರಾಷ್ಟ್ರೀಯ ಇತಿಹಾಸ (ಹಿಸ್ಟರಿ)’ ಎಂದು ಗುರುತಿಸಬಹುದಾದ ಕೃತಿಯೊಂದರ ಹುಟ್ಟಿಗೆ ಕಾರಣವಾದವು. ಈ ದೃಷ್ಟಿಯಿಂದ ‘ರಾಜಾವಳಿ’ ಹತ್ತೊಂಬತ್ತನೆಯ ಶತಮಾನದ ಆದಿಭಾಗದಲ್ಲಿ ಇನ್ನೂ ಬ್ರಿಟಿಷ್ ವಿದ್ವಾಂಸರಿಗೆ ಭಾರತದ ‘ಹಿಸ್ಟರಿ’ ರೂಪುಗೊಳ್ಳುತ್ತಿದ್ದ ಸಮಯದಲ್ಲೇ ಒಬ್ಬ ಜೈನ  ಪಂಡಿತನಿಂದ ಕನ್ನಡದಲ್ಲಿ ಬರೆಯಲ್ಪಟ್ಟಿದ್ದು ನಮ್ಮ ಸಂಭ್ರಮಾಶ್ಚರ್ಯಗಳನ್ನು ಹುಟ್ಟಿಸುತ್ತದೆ. ಆದರೆ ಇಂದಿನ ಅರ್ಥದಲ್ಲಿ ಇತಿಹಾಸ ಎಂದು ತೆಗೆದುಕೊಂಡರೆ ಅದೊಂದು ಮತೀಯ ಪೂರ್ವಗ್ರಹದ ನಂಬಲರ್ಹವಲ್ಲದ ಇತಿಹಾಸವಾಗಿ ಅದನ್ನು ಸುಲಭವಾಗಿ ಮೂಲೆಗೂ ತಳ್ಳಬಹುದು. ದೇವಚಂದ್ರನು ಕೊಡುವ ಪೂರ್ವಪ್ರಪಂಚುಗಳ ಕುರಿತು ನಾವಿಂದು ಸಾಕ್ಷ್ಯಾಧಾರಗಳ ವಿಶ್ಲೇಷಣೆಯಿಂದ ನಿಜವಾದ ಇತಿಹಾಸವನ್ನು ಕಟ್ಟಿಕೊಂಡಿದ್ದೇವೆ. ಆತನು ನೀಡುವ ರಾಜವಂಶಗಳ ಕುರಿತು ವ್ಯವಸ್ಥಿತವಾದ ರಾಜಮನೆತನಗಳ ಇತಿಹಾಸವನ್ನು ರಚಿಸಿದ್ದೇವೆ. ದೇವಚಂದ್ರನು ಏನನ್ನು ಮಾಡಬೇಕೆಂದು ಅವನಿಂದ ರಾಜಾವಳಿಯನ್ನು ಬರೆಸಿದ್ದರೋ ಅದನ್ನು ನಾವು ಸಮರ್ಥವಾಗಿ ಇಂದು ನಿರ್ವಹಿಸಿದ್ದೇವೆ. ನಮ್ಮ ಭಾರತದ ಇತಿಹಾಸ ಇಂದು ನಿಜವಾದ ‘ರಾಜಾವಳಿ’ಯ ಇತಿಹಾಸವಾಗಿ ಮೈತಳೆದಿದೆ. ‘ನಿಜಘಟನೆ’ಗಳೆಂದು ಇತಿಹಾಸಕಾರರು ಒಪ್ಪಿಕೊಂಡ ಘಟನೆ ಗಳಿಂದಲೇ ನಾವು ಈ ಇತಿಹಾಸವನ್ನು ಕಟ್ಟಿದ್ದೇವೆ. ಹಾಗಾಗಿ ದೇವಚಂದ್ರನು ಏನನ್ನು ಘೋಷಿಸಿಕೊಂಡು ರಾಜಾವಳಿಯ ಮಹತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದನೋ ಅದನ್ನು ನಾವು ನಿಜವಾಗಿಯೂ ಆಚರಿಸಿದ್ದೇವೆ ಎಂದು ನಂಬಿದ್ದೇವೆ. ಇದರ ಪರಿಣಾಮವಾಗಿ ದೇವಚಂದ್ರನ ‘ರಾಜಾವಳಿ’ ಸರಿಯಾದ ‘ನಿಜವಲ್ಲ’ ಎಂಬುದೂ ನಮಗೆ ಓದಿದ ತಕ್ಷಣ ತಿಳಿದುಬರುತ್ತದೆ. ಹೀಗೆ ನಮ್ಮ ಇಂದಿನ ಇತಿಹಾಸದ ಮುಂದೆ ದೇವಚಂದ್ರನ ‘ರಾಜಾವಳಿ’ ಅಂದಿನ ಕಾಲದ ಅಂಥದೊಂದು ಅಪರೂಪದ ಕೃತಿ ಎಂಬ ಅಂಶವನ್ನು ಬಿಟ್ಟರೆ ತನ್ನ ಉಳಿದ ಅರ್ಥಗಳನ್ನು ಕಳೆದುಕೊಂಡು ಬಿಡುವ ಸಂಭವವಿದೆ.

ದೇವಚಂದ್ರನ ಸುಳ್ಳುಗಳನ್ನು ಹಾಗೂ ಪೂರ್ವಗ್ರಹಗಳನ್ನು ಸುಲಭವಾಗಿ ಕಂಡುಕೊಳ್ಳುವ ಹಂತಕ್ಕೆ ಏರಿರುವ ನಮ್ಮ ಇಂದಿನ ರಾಷ್ಟ್ರೀಯ ಇತಿಹಾಸಕ್ಕೆ ಅವನ ‘ರಾಜಾವಳಿ’ಯ ಅಗತ್ಯವೇನಾದರೂ ಇದೆಯೆ? ಎಂಬ ಪ್ರಶ್ನೆ ಏಳುತ್ತದೆ. ಅವನು ನಿರೂಪಿಸಿದ ಘಟನೆಗಳ ನಿಜಸ್ವರೂಪವನ್ನು ನಾವು ಇಂದು ಸಾಧಿಸಿರುವುದರಿಂದ ನಾವು ಅವನನ್ನು ಅವಲಂಬಿಸುವ ಅಗತ್ಯವಿಲ್ಲ ಎಂಬ ಅಭಿಪ್ರಾಯವೂ ಬರಬಹುದು. ಆದರೆ ಇಂದಿನ ಹಂತದಲ್ಲಿ ಇನ್ನೂರು ವರ್ಷಗಳ ಹಿಂದಿನ ಈ ಇತಿಹಾಸವನ್ನು ನೋಡಿದಾಗ ನಮಗೆ ಕಾಣುವುದು ಅದರ ಸುಳ್ಳು ಮತ್ತು ಪೂರ್ವಗ್ರಹಗಳು ಮಾತ್ರವಲ್ಲ. ಅದರ ಜೊತೆಗೇ ನಮ್ಮ ಇಂದಿನ ರಾಷ್ಟ್ರೀಯ ಇತಿಹಾಸದ ಸುಳ್ಳು ಮತ್ತು ಪೂರ್ವಗ್ರಹಗಳೂ ಕೂಡಾ. ಈ ಇನ್ನೂರು ವರ್ಷಗಳಲ್ಲಿ ನಮ್ಮ ಇತಿಹಾಸ ಯಾವ ಯಾವ ನಿಜಗಳನ್ನು ಕಳೆದುಕೊಳ್ಳುತ್ತಾ, ಸುಳ್ಳುಗಳನ್ನು ಕಟ್ಟುತ್ತಾ ಸಾಗಿಬಂದಿದೆ ಎಂಬ ದರ್ಶನವೂ ಈ ‘ರಾಜಾವಳಿ’ಯನ್ನು ಓದಿದಾಗ ಸಾಧ್ಯವಾಗಬಹುದು. ಅದರ ಜೊತೆಗೇ ನಮಗೆ ನಮ್ಮ ನಿಜಗಳು ಇದ್ದಂತೇ ದೇವಚಂದ್ರನಿಗೆ ಅವನ ನಿಜಗಳು ಏನಿದ್ದವು? ಹೇಗಿದ್ದವು? ಏಕೆ ಹಾಗಿದ್ದವು? ವಸಾಹತುಪೂರ್ವದ ಇತಿಹಾಸವನ್ನು ಕಟ್ಟಲು ಅವನ ನಿಜಗಳು ನಮ್ಮ ನಿಜಗಳಿಗಿಂತ ಹೆಚ್ಚು ‘ನಿಜ’ವಲ್ಲವೆ? ಎಂಬ ಪ್ರಶ್ನೆಗಳೂ ಅಗತ್ಯವಾಗಿವೆ. ಈ ಎಲ್ಲ ದೃಷ್ಟಿಯಿಂದ ನೋಡಿದಾಗ ನಮ್ಮ ಹಲವು ನಿಜಗಳನ್ನು ಒರೆಗಲ್ಲಿಗೆ ಹಚ್ಚುವ ಸಾಮರ್ಥ್ಯವೂ ಕೂಡ ಈ ರಾಜಾವಳಿಗೆ ಇದೆ.

ಪ್ರಸ್ತುತ ಪ್ರಬಂಧದಲ್ಲಿ ‘ರಾಜಾವಳಿ’ಯ ಮತ ಪ್ರಪಂಚದ ಕುರಿತು ವಿಶ್ಲೇಷಿಸಲಾಗಿದೆ.  ಮತೀಯ ಸಂಘರ್ಷ ಮತ್ತು ಸಹಬಾಳ್ವೆ ಎರಡನ್ನೂ ಮೇಳೈಸಿಕೊಂಡ ಸಮಾಜವೊಂದರ ಇತಿಹಾಸವನ್ನು ಕುರಿತು ನಾವು ಇಲ್ಲಿ ಪರಿಶೀಲಿಸುತ್ತಿದ್ದೇವೆ. ಅದು ಸಂಘರ್ಷವಿರಬಹುದು. ಇಲ್ಲ ಸಹಬಾಳ್ವೆ ಇರಬಹುದು, ಅವು ಆಯಾ ಮತಗಳ ಸಾಹಿತ್ಯದ ಉಕ್ತಿಗಳಿಂದ ನಮಗೆ ಸಿಗುತ್ತವೆ, ಇಲ್ಲ ಇನ್ನಿತರ ದಾಖಲೆಗಳಿಂದ ಸಿಗುತ್ತವೆ. ಆದರೆ ಇಂಥ ಮತಗಳು ಭಾರತೀಯ ಸಮಾಜದ ಯಾವ ಪಾತಳಿಯಲ್ಲಿ ಅಸ್ತಿತ್ವದಲ್ಲಿದ್ದವು? ಹಾಗೂ ಎಷ್ಟರ ಮಟ್ಟಿಗೆ ಅಸ್ತಿತ್ವದಲ್ಲಿದ್ದವು ಎಂಬುದು ನಾವು ಇಂದು ಗುರುತಿಸಬೇಕಾದ ಸಂಗತಿಯಾಗಿದೆ. ನಮ್ಮ ರಾಷ್ಟ್ರೀಯ ಇತಿಹಾಸವು ಈ ಭಾರತದಲ್ಲಿದ್ದ ಸಕಲ ಜನ-ಜಾತಿಗಳೂ ಒಂದಲ್ಲಾ ಒಂದು ಮತಗಳ ಲೋಕದೃಷ್ಟಿ ಹಾಗೂ ಆಚಾರಗಳನ್ನು ಆಧರಿಸಿಯೇ ಜೀವನ ನಡೆಸಿದರು ಎಂಬ ಗ್ರಹಿಕೆಯಿಂದ ಈ ಮತಗಳ ಇತಿಹಾಸವನ್ನು ಕಟ್ಟುತ್ತದೆ. ಅಂದರೆ ಈ ಮತೀಯ ದಾಖಲೆಗಳನ್ನು ಒಂದು ಸಾರ್ವತ್ರಿಕ ‘ನಿಜ’ಗಳೆಂಬಂತೇ ಪರಿಭಾವಿಸುತ್ತದೆ. ಈ ಯಾವುದೇ ಮತಗಳನ್ನು ಅವಲಂಬಿಸುವ ಸಮಾಜಗಳು ಈ ಇತಿಹಾಸಕ್ಕೆ ಪ್ರಸ್ತುತವಾಗುವುದಿಲ್ಲ. ಅದೇ ರೀತಿ ಈ ಮತ ಯಾವ ಯಾವ ಸ್ವರೂಪ ತಳೆದು ಅವುಗಳ ಪರಿಧಿಯಲ್ಲಿ ಬಂದ ಸಮಾಜಗಳಲ್ಲಿ ಚಾಲ್ತಿಯಲ್ಲಿದ್ದವು ಎಂಬುದೂ ಇಲ್ಲಿ ಪ್ರಧಾನ ಚರ್ಚೆಯಾಗುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ಇಂದಿನ ಇತಿಹಾಸವೂ ‘ರಾಜಾವಳಿ’ಗಿಂತ ಗುಣಾತ್ಮಕವಾಗಿ ಮೇಲ್ಮಟ್ಟದಲ್ಲಿ ಇಲ್ಲ ಎಂಬುದು ಗಮನಿಸಬೇಕಾದ ವಿಷಯ. ಇಂದಿನ ನಮ್ಮ ಮತಗಳ ಇತಿಹಾಸವೂ ಕೂಡ ಪ್ರಧಾನವಾಗಿ ವಿಭಿನ್ನ ಮತ ಪ್ರತಿಪಾದನೆಗಳ ಇತಿಹಾಸವಾಗಿಯೇ ಮುಂದುವರಿದಿದೆ. ಆದರೆ ನಾವು ಈ ಇತಿಹಾಸವನ್ನು ಯಾವುದೇ ಮತದ ಇತಿಹಾಸ ಎಂದು ‘ರಾಜಾವಳಿ’ಯಂತೇ ನಿಚ್ಚಳವಾಗಿ ತೋರಿಸುವುದಿಲ್ಲ. ಇದು ರಾಷ್ಟ್ರದ ಸಮಸ್ತ ಜನರ ಇತಿಹಾಸ ಹಾಗೂ ಅವೆಲ್ಲ ನಿಜಗಳು ಎಂಬ ಎರಡು ರೀತಿಯ ಮೋಸಗಳನ್ನು ಅದರಲ್ಲಿ ಹೊಂದಿದ್ದೇವೆ.

ಈ ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ರಾಜಾವಳಿಯಲ್ಲಿ ದೇವಚಂದ್ರನು ಪ್ರತಿಪಾದಿಸುವ ಜೈನಮತದ ಸ್ವರೂಪ ಏನು? ಅನ್ಯಮತಗಳಿಂದ ಅದು ಎಲ್ಲಿ ಭಿನ್ನವಾಗುತ್ತದೆ ಹಾಗೂ ಎಲ್ಲಿ ಅವುಗಳ ಜೊತೆ ಏಕಮತವನ್ನು ಹೊಂದಿದೆ? ಅದು ದರ್ಶಿಸುವ ಮತದ ವೈವಿಧ್ಯಪೂರ್ಣ ಅಸ್ತಿತ್ವಗಳು ಜಾತಿ ಸಮಾಜದಲ್ಲಿ ಹೇಗಿದ್ದವು? ಈ ಮತದ ರಚನೆಯ ವೈಶಿಷ್ಟತೆಯನ್ನು ಹೇಗೆ ಗ್ರಹಿಸಬಹುದು? ಎಂಬ ವಿಷಯಗಳ ಕುರಿತು ಪರಿಶೀಲಿಸಲಾಗುವುದು.

ಜಿನಮತ ಮತ್ತು ಮಿಥ್ಯಾಪ್ರಪಂಚ

ದೇವಚಂದ್ರನು ‘ಜಿನಮತ’ ಎಂಬ ಶಬ್ದವನ್ನು ‘ಜಿನನ ಪ್ರತಿಪಾದನೆ ಅಥವಾ ದರ್ಶನ’ ಎಂಬ ಅಥದಲ್ಲಿ ಬಳಸುತ್ತಾನೆ. ‘ಜೈನಧರ್ಮ’ವು ಈ ದರ್ಶನವನ್ನು ಆಧರಿಸಿ ಅಳವಡಿಸಿಕೊಂಡ ನೀತಿ ಅಥವಾ ಆಚಾರಗಳು, ಇದನ್ನು ಪ್ರತಿಪಾದಿಸುವ ಶಾಸ್ತ್ರಗಳು ‘ಜಿನಮತ ಶಾಸ್ತ್ರಗಳು’ ಜಿನಮತವೇ ಈ ಲೋಕದಲ್ಲಿ ‘ಆದಿಮತ’ ಎಂಬುದು ಆತನಿಗೆ ‘ನಿಜ’. ಹಾಗಾಗಿ ಜೈನ ಸಂಪ್ರದಾಯದ ಲೋಕವರ್ಣನೆ ಆತನಿಗೆ ಭರತಾರ್ಯಖಂಡದ ಇತಿಹಾಸದ ಪೂರ್ವರಂಗವಾಗುತ್ತದೆ. ಹಾಗೂ ಇಲ್ಲಿ ಉದ್ಭವಿಸಿದ ಆದಿಬ್ರಹ್ಮನು (ಆದಿ ತೀರ್ಥಂಕರನು) ಇಲ್ಲಿ ಪ್ರಜಾನಿಕರಕ್ಕೆ ಧರ್ಮವನ್ನು ಕಲ್ಪಿಸುತ್ತಾನೆ. ಆದಿಬ್ರಹ್ಮನು ಕೇವಲಜ್ಞಾನವನ್ನು ಹೊಂದಿ ಸಮವಸರಣವನ್ನು ಪಡೆಯುತ್ತಾನೆ. ಅವನಿಂದ ಮಹಾವೇದ, ಮಹಾಶಾಸ್ತ್ರಗಳು ಹೊರಬರುತ್ತವೆ. ಅದನ್ನು ತಿಳಿದು ಬರತೇಶ್ವರನು ಈ ಜಿನಧರ್ಮವನ್ನು ಪ್ರವರ್ತಿಸಿದ ಮೂಲಪುರುಷ. ಹಾಗಾಗಿ ಈ ಭರತಾರ್ಯಖಂಡಕ್ಕೆ ಮೂಲತಃ ಇದ್ದ ಧರ್ಮ ಜೈನಧರ್ಮವೇ.

ದೇವಚಂದ್ರನು ವರ್ಣಿಸುವ ಈ ಮೇಲಿನ ‘ಜಿನಮತ’ದ ಸ್ವರೂಪವನ್ನು ಗಮನಿಸಿದರೆ ಅವನು ‘ಜೈನ’ ಎಂಬ ಪ್ರಭೇದದಲ್ಲಿ ಏನೇನನ್ನು ಒಪ್ಪಿಕೊಂಡಿದ್ದ ಎಂಬುದು ತಿಳಿದುಬರುತ್ತದೆ. ದೇವಚಂದ್ರನ ಕಾಲಕ್ಕೆ ಭಕ್ತಿಪಂಥದ ಆದಿದೇವತೆಗಳೆಲ್ಲ ಜೈನರ ‘ಜಿನ’ರಾಗಿ ಬದಲಾವಣೆ ಹೊಂದಿದರು. ಹಾಗಾಗಿ ಅವರು ಆದಿಬ್ರಹ್ಮ, ಆದಿಪರಮೇಶ್ವರ ಎಂದೇ ಇಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ. ಈ ಆದಿದೇವತೆ ಗರ್ಭಾವತರಣದಿಂದ ಭರತ ಖಂಡದಲ್ಲಿ ಹುಟ್ಟಿ, ಕೇವಲ ಜ್ಞಾನಸಂಪನ್ನನಾಗಿ ಸಮವಸರಣವನ್ನು ನಿರ್ಮಿಸಿ ನಂತರ ಮೋಕ್ಷಕ್ಕೆ ಸಲ್ಲುತ್ತಾನೆ. ಈ ಆದಿಬ್ರಹ್ಮನಿಗೆ, ಹರಿ, ಹರ, ವಿಷ್ಣು, ಮಹೇಶ್ವರ, ತೀರ್ಥಂಕರ, ಜಿನ ಎಂಬ ಸಾವಿರದ ಎಂಟ ಉನಾಮಗಳು ಉಂಟಾಗುತ್ತವೆ. ಹಾಗೂ ಮೂಲವೇದ ಆತನ ವಾಣಿಯೇ ಆಗಿದೆ. ಆತನೇ ಬ್ರಾಹ್ಮಣಾದಿ ನಾಲ್ಕು ವರ್ಣಗಳನ್ನೂ ಸೃಷ್ಟಿಸುತ್ತಾನೆ. ಈ ವರ್ಣಗಳೂ ವೈದಿಕ ಸಂಪ್ರದಾಯದವೇ ಆಗಿವೆ. ಕ್ಷತ್ರಿಯರಲ್ಲಿ ವಿಭಿನ್ನ ರಾಜವಂಶಗಳು ಉತ್ಪನ್ನವಾಗುತ್ತವೆ. ಅದರಲ್ಲೂ ಬ್ರಾಹ್ಮಣ ವರ್ಣಕ್ಕೆ ಇಲ್ಲಿ ವಿಶೇಷ ಸ್ಥಾನವಿದೆ. ಭರತ ಚಕ್ರವರ್ತಿಯು ಸ್ವತಃ ದ್ವಿಜರೆಲ್ಲರನ್ನೂ ಪರೀಕ್ಷಿಸಿ ಅವರಲ್ಲಿ ಬ್ರಾಹ್ಮಣರಾದವರನ್ನು ಸತ್ಕರಿಸಿ ದಾನ-ಮಾನಗಳಿಂದ ಸನ್ಮಾನಿಸುತ್ತನೆ. ಈ ಬ್ರಾಹ್ಮಣರು ಅಹಿಂಸಾ ತತ್ವವನ್ನು ಹಾಗೂ ಜೈನಾಚಾರವನ್ನು ನಂಬಿದವರು. ದೇವಚಂದ್ರನೂ ಇಂಥದೇ ಒಬ್ಬ ಬ್ರಾಹ್ಮಣ ಎಂಬುದು ಇಲ್ಲಿ ಮುಖ್ಯ.

ಆದರೆ ದೇವಚಂದ್ರನು ತನ್ನ ಸಮಕಾಲೀನರಾದ ಇತರ ಬ್ರಾಹ್ಮಣರನ್ನೂ, ಮತಪ್ರತಿ ಪಾದಕರನ್ನೂ ಎದುರಿಸಿ ತನ್ನ ಜಿನಾಚಾರವನ್ನು ಪ್ರತಿಪಾದಿಸಬೇಕಿತ್ತು. ಏಕೆಂದರೆ ಐತಿಹಾಸಿಕವಾಗಿ ಜೈನಮತ ಇವರೆಲ್ಲರೊಂದಿಗೆ ಸಂಘರ್ಷಿಸಿಕೊಂಡು ಬಂದಿತ್ತು. ಅದರಲ್ಲೂ ಈ ಅನ್ಯಮತದವರು ರಾಜ್ಯಗಳಲ್ಲಿ ಪ್ರಬಲರಾಗಿ ಜೈನರ ಮೇಲೆ ತಮ್ಮ ಆಕ್ರಮವನ್ನು ನಡೆಸಿದ್ದರು. ವೈದಿಕರು ಜೈನಮತವನ್ನು ವೇದವಿರೋಧಿ ಎಂದು ಗ್ರಹಿಸಿದ್ದರು. ಭಕ್ತಿಪಂಥಗಳ ಪ್ರತಿಪಾದಕರು ದೇವರ ಸೃಷ್ಟಿಯನ್ನು ನಂಬಿದ ಜೈನರನ್ನು ತಾತ್ವಿಕವಾಗಿ ವಿರೋಧಿಸಿದ್ದರು. ಇವರೆಲ್ಲರ ಜೊತೆಗೆ ಜೈನಮತ ಪ್ರತಿಪಾದಕರಿಗೂ ತಾತ್ವಿಕ ವಿರೋಧಗಳು ಇದ್ದವು. ಜಿನವಾಣಿಯಾಗದ ವೇದಗಳು, ಶಾಸ್ತ್ರಗಳು ಪ್ರಮಾಣವಾಗಲು ಸಾಧ್ಯವಿಲ್ಲ ಎಂದು ಜೈನರು ವೈದಿಕರನ್ನೂ ತಿರಸ್ಕರಿಸಿದರೆ, ಈ ಭವಾವಳಿಯಲ್ಲಿ ತೀರ್ಥಂಕರನಿಗಿಂತಲೂ ಕೆಳಗೆ ಕರ್ಮ ಸವೆಸುತ್ತಿರುವ ದೇವತೆಗಳು ಮೋಕ್ಷವನ್ನು ನೀಡಲಾರರು ಎಂದು ಭಕ್ತಿಪಂಥಗಳ ಶ್ರದ್ಧೆಯನ್ನು ಅವರು ತಿರಸ್ಕರಿಸಿದ್ದರು. ದೇವಚಂದ್ರನೂ ತನ್ನ ‘ರಾಜಾವಳಿ’ಯಲ್ಲಿ ಈ ಅನ್ಯ ಮತಗಳನ್ನೆಲ್ಲ ಜೈನ ಸಾಂಪ್ರದಾಯಿಕ ವಾದಗಳಿಂದಲೇ ವಿಡಂಬಿಸುವುದು ಕಂಡುಬರುತ್ತದೆ. ಉದಾಹರಣೆಗೆ ವೈದಿಕರನ್ನು ಅವನು ‘ಹಿಂಸಾಯಜ್ಞ’ವನ್ನು ನಂಬುವವರು ಎಂಬ ಕಾರಣಕ್ಕೆ ಆಚಾರ ಹೀನರೆಂದೂ, ಕರ್ಮಚಾಂಡಾಲರೆಂದೂ ಹಳಿಯುತ್ತಾನೆ. ವೇದಗಳನ್ನು ಯಾರು ಹೇಳಿದ್ದಾರೆಂಬುದೇ ಗೊತ್ತಿಲ್ಲವಾದ್ದರಿಂದ ಅವುಗಳ ವಾಣಿಯೂ ಪ್ರಮಾಣಗಳಲ್ಲ ಎನ್ನುತ್ತಾನೆ. ಅದೇ ರೀತಿ ಭಕ್ತಿಪಂಥಗಳು ಭಕ್ತರ ಮೂಢಾಚಾರಗಳಿಗೆ, ಹಿಂಸೆಗೆ ದೇವನು ಒಲಿದು ಮೋಕ್ಷವನ್ನು ಕರುಣಿಸುತ್ತಾನೆ ಎಂದು ಪ್ರತಿಪಾದಿಸುವುದರಿಂದ ಅವೂ ಅಸಂಬದ್ಧಗಳು ಎಂದು ತಿರಸ್ಕರಿಸುತ್ತಾನೆ. ಇದೇ ರೀತಿ ಬೌದ್ಧರದೂ ಕೂಡ ಅಜ್ಞಾನದ ವಾದಗಳು ಎನ್ನುತ್ತಾನೆ. ಈ ಎಲ್ಲ ಮತಗಳ ಆಚಾರ್ಯರು ಜೈನ ಆಚಾರ್ಯರ ಜೊತೆಗೆ ಬೇರೆ ಬೇರೆ ರಾಜರ ಆಸ್ಥಾನದಲ್ಲಿ ವಾದಿಸಿ ಸೋತುಹೋಗುವ ಪ್ರಸಂಗಗಳೂ ‘ರಾಜಾವಳಿ’ಯಲ್ಲಿ ಮೇಲಿಂದ ಮೇಲೆ ಬರುತ್ತವೆ. ಇಸ್ಲಾಂ ಮತವನ್ನೇ ನಂಬಿದ ಪಾದಶಾಯಿ (ಬಾದಶಾಹ)ಗಳು ಜೈನಮತವೇ ಆದಿಮತ ಎಂಬುದನ್ನು ಒಪ್ಪುತ್ತಾರೆ. ರಾಜಾವಳಿಯ ತುಂಬೆಲ್ಲ ಜೈನಮತ ಅನ್ಯಮತಗಳ ಜೊತೆ ಹೋರಾಡಿ ಗೆಲ್ಲುವ ಚಿತ್ರಣವಿದೆ.

ಜೈನಮತವೇ ಆದಿಮತ, ಜಿನಮತಶಾಸ್ತ್ರವೇ ಶಾಸ್ತ್ರ ಎಂದು ರಾಜಾವಳಿಯಲ್ಲಿ ಮತ್ತೆ ಮತ್ತೆ ತೀರ್ಮಾನಗಳು ಬರುವಂತೇ ದೇವಚಂದ್ರನು ನಿರೂಪಿಸಿದರೂ, ಅನ್ಯಮತಗಳೆದುರಿಗೆ ಜೈನಮತವು ಕಂಡ ಲೌಕಿಕ ಸೋಲನ್ನು ಮುಚ್ಚಿಡುವುದು ಅವನಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ತನ್ನ ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ ಭರತಾರ್ಯಾಖಂಡದ ಪೂರ್ವ ಪ್ರಪಂಚುಗಳನ್ನು ಕ್ರೋಢೀಕರಿಸುವ ದೇವಚಂದ್ರನಿಗೆ ಇಲ್ಲಿನ ನಿಜಗಳು ಅವನ ನಂಬಿಕೆಗೆ ಸವಾಲಾಗುತ್ತವೆ. ಈ ಜಗತ್ತೆಲ್ಲ ಜೈನತತ್ವಕ್ಕೇ ಬದ್ಧವಾಗಿರುವಾಗ ಜೈನೇತರ ಮತಗಳು ಅದನ್ನು ಅಲ್ಲಗಳೆದು, ಜೈನರನ್ನು ಒತ್ತರಿಸಿ ಹೇಗೆ ಬೆಳೆದುಕೊಂಡವು? ಏಕೆ ಅವು ಜನರಿಂದ, ರಾಜರಿಂದ ಮಾನ್ಯತೆ ಗಳಿಸಿದವು? ಏಕೆ ಜಿನಧರ್ಮದಂಥ ಚಿರಂತನವಾದ ಧರ್ಮ ಅನಾದರಕ್ಕೆ ತುತ್ತಾಯಿತು? ನಷ್ಟವಾಯಿತು? ಎಂಬೆಲ್ಲ ಪ್ರಶ್ನೆಗಳು ರಾಜಾವಳಿಯಲ್ಲಿ ಮುಂದೊತ್ತಿ ಕೊಳ್ಳುತ್ತವೆ. ದೇವಚಂದ್ರನು ನಿರೂಪಿಸುವ ಪ್ರಪಂಚುಗಳಲ್ಲಿ ಅನ್ಯಮತಗಳು ಜೈನಮತೀಯರ ಮೇಲೆ ನಡೆಸಿದ ಆಕ್ರಮಣ ಹಾಗೂ ಜೈನ ಬಸದಿಗಳ ನಾಶಗಳು ಸಾಕಷ್ಟು ಬರುತ್ತವೆ. ತಾನು ‘ಷಣ್ಮತಗಳ ಓಜೆ’ಯಿಂದ ಈ ಕೃತಿಯನ್ನು ರಚಿಸಿದ್ದೇನೆಂದು ದೇವಚಂದ್ರನು ಘೋಷಿಸಿ ಕೊಂಡರೂ ಅನ್ಯಮತಗಳು ಜೈನಮತಕ್ಕೆ ಹೇಗೆ ಮುಳುವಾದವೆಂಬುದನ್ನೇ ಆತನು ನಿರೂಪಿಸುತ್ತಾನೆ. ಹಾಗಾಗಿ ರಾಜಾವಳಿಯಲ್ಲಿ ಜೈನ ಪಂಡಿತನೊಬ್ಬನ ಸೋಲಿನ ಧ್ವನಿ ಸ್ಥಾಯಿಯಾಗಿ ಮೂಡುತ್ತದೆ. ಜೈನರು ಅನ್ಯಮತೀಯರನ್ನು ಭೌತಿಕವಾಗಿ ಎದುರಿಸುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದರು. ಬಹುಶಃ ಈ ವಾಸ್ತವವನ್ನು ಮೀರಲಿಕ್ಕಾಗಿ ‘ರಾಜಾವಳಿ’ ಜೈನ ಪಂಡಿತರು ಅನ್ಯಮತೀಯರನ್ನೂ ತಮ್ಮ ತರ್ಕದಿಂದಷ್ಟೇ ಅಲ್ಲದೇ ಮಂತ್ರ-ತಂತ್ರಗಳಿಂದಲೂ ಸೋಲಿಸಿ ಹೆಚ್ಚುಗಾರಿಕೆಯನ್ನೂ ಮೆರೆಯುವ ಪುರಾಣಗಳನ್ನು ಕಥಿಸುತ್ತದೆ.

ಈ ಮೇಲಿನ ಭೌತಿಕ ಕಹಿ ಸತ್ಯಗಳನ್ನು ಎದುರಿಸಿ ಜೈನಮತವೇ ಆದಿಮತ ಎಂದು ಪ್ರತಿಪಾದಿಸಲು ದೇವಚಂದ್ರನು ‘ರಾಜಾವಳಿ’ಯನ್ನು ಬಳಸಿಕೊಳ್ಳುತ್ತಾನೆ. ಸ್ಥೂಲವಾಗಿ ಎರಡು ರೀತಿಯಲ್ಲಿ ಆತನು ಇದನ್ನು ಸಾಧಿಸುತ್ತಾನೆ. ೧. ಅವು ತಪ್ಪು ಮಾರ್ಗಗಳು, ನಿಜವಾದ ಮೋಕ್ಷ ಮಾರ್ಗ ಜೈನರದೇ ಎಂದು ನಿರೂಪಿಸುವುದು. ೨. ಹೇಗೆ ಮತ್ತು ಏಕೆ ಈ ತಪ್ಪು ಮಾರ್ಗಗಳೇ ಲೌಕಿಕವಾಗಿ ಪ್ರಾಬಲ್ಯವನ್ನು ಸ್ಥಾಪಿಸಿವೆ ಎಂಬುದಕ್ಕೆ ವಿವರಣೆಯನ್ನು ನೀಡುವುದು.

ಈ ತಪ್ಪು ಮಾರ್ಗಗಳನ್ನು ಆತನು ಮಿಥ್ಯಾಜ್ಞಾನಗಳೆಂದು ವರ್ಣಿಸುತ್ತಾನೆ. ಈ ಮಿಥ್ಯಾತ್ವಗಳು ಐದು ವಿಧವಾಗಿದ್ದು ವೈದಿಕ, ಬೌದ್ಧ, ಭಕ್ತಿಪಂಥಗಳು ಹಾಗೂ ಇಸ್ಲಾಂ ಮತಗಳು ಮಿಥ್ಯೆಗಳಲ್ಲಿ ಒಂದೊಂದನ್ನು ಪ್ರಕಟಿಸುತ್ತವೆ. ಅಂದರೆ ನಿಜವಾದ ದರ್ಶನವನ್ನು ಅವು ತಪ್ಪಾಗಿ ಭಾವಿಸಿವೆ ಹಾಗೂ ಸುಳ್ಳನ್ನು ಪ್ರತಿಪಾದಿಸುತ್ತಿವೆ. ಈ ಮೂಲಕ ಅವುಗಳ ಪ್ರತಿಪಾದನೆಗಳು ಮಿಥ್ಯಾದರ್ಶನಗಳೆಂದು ಟೀಕಿಸುವುದರ ಜೊತೆಗೇ ಅವುಗಳು ಮೂಲದಲ್ಲಿ ನಿಜದರ್ಶನವಾದ ಜೈನ ಮತದಿಂದಲೇ ಉದ್ಭವಿಸಿದೆ ಎಂದೂ ರಾಜವಳಿಯ ಪ್ರಪಂಚುಗಳು ತಿಳಿಸುತ್ತವೆ. ಹಾಗಾಗಿ ಜೈನವಾಣಿಯೇ ನಿಜವಾದ ‘ವೇದ’ ಹಾಗೂ ವೈದಿಕ ಸಂಪ್ರದಾಯ ದವರ ನಾಲ್ಕುವೇದಗಳು ಮತ್ತು ಅದನ್ನಾಧರಿಸಿದ ಶಾಸ್ತ್ರಗಳು ಮಿಥ್ಯಾತ್ವಗಳು ಎಂಬ ವಾದ ಇಲ್ಲಿ ಬರುತ್ತದೆ. ಹಾಗೇ ಜೈನ ಬ್ರಾಹ್ಮಣರೇ ನಿಜವಾದ ಬ್ರಾಹ್ಮಣರು, ಉಳಿದ ಬ್ರಾಹ್ಮಣರು ಕರ್ಮಪತಿತರರು ಎನ್ನಲಾಗಿದೆ. ಜೈನರ ದೇವತಾ ಕಲ್ಪನೆಯೇ ನಿಜವಾದ ಕಲ್ಪನೆಗಳು ಹಾಗೂ ಶಿವ, ವಿಷ್ಣು ಮುಂತಾದ ದೇವತೆಗಳೆಲ್ಲ ಜಿನಾಚಾರವನ್ನೇ ಎತ್ತಿ ಹಿಡಿಯುತ್ತಾರೆ. ಆದರೆ ಈ ದೇವತೆಗಳ ಭಕ್ತಿ ಪ್ರತಿಪಾದಕರು ಸುಳ್ಳು ಪ್ರಚಾರಗಳನ್ನು ಮಾಡುತ್ತಾರೆ ಎನ್ನಲಾಗಿದೆ. ಬಹುಶಃ ಬ್ರಾಹ್ಮಣತ್ವ ಮತ್ತು ದೈವತ್ವಗಳೆರಡನ್ನೂ ತನ್ನದನ್ನಾಗಿ ಸ್ವೀಕರಿಸಿದ ಪಂಡಿತನೊಬ್ಬನು ತಾನೇ ಅವುಗಳಿಗೆ ನಿಜ ವಾರಸುದಾರ, ಆ ಹೆಸರನ್ನೇ ಹೇಳಿಕೊಂಡು ಪ್ರಾಬಲ್ಯವನ್ನೂ ಗಳಿಸಿದ ಉಳಿದವರು ಸುಳ್ಳು ವಾರಸುದಾರರು ಎಂಬ ವಾದವನ್ನು ಹುಟ್ಟು ಹಾಕುವುದು ಗಮನಾರ್ಹ. ಹಾಗಾಗಿ ಈ ಸುಳ್ಳುಗಳನ್ನು ಬಯಲಿಗೆಳೆದು ಅದರ ಪ್ರತಿಪಾದಕರಲ್ಲಿ ಹಾಗೂ ಅನುಯಾಯಿಗಳಲ್ಲಿ ನಿಜದರ್ಶನವನ್ನು ಜಾಗೃತಗೊಳಿಸುವ ಜವಾಬ್ದಾರಿ ಜೈನರದಾಗುತ್ತವೆ. ಆದರೆ ರೋಗಿಗೆ ಸಿಹಿ ಅಪಥ್ಯವಾಗುವಂತೇ ಈ ಅನ್ಯಮತೀಯರಿಗೆ ಜೈನರ ವಾದ ಹಿಡಿಸುವುದಿಲ್ಲ. ಅವು ಜಿನದ್ವೇಷಿಗಳಾಗುತ್ತಾರೆ. ಇವರ ವಾದ ಹಿಡಿಸಿದವರು ಸರಿದಾರಿಗೆ ಬರುತ್ತಾರೆ. ಬ್ರಾಹ್ಮಣತ್ವವನ್ನು ಅಹಿಂಸೆಯ ನೆಲೆಯ ಮೇಲೆ ನಿಲ್ಲಿಸಿ ಅದರ ಶ್ರೇಷ್ಠತೆಯನ್ನು ಕಾಪಾಡಿದ ಶ್ರೇಯಸ್ಸು ದೇವಚಂದ್ರನಂಥ ಜೈನಪಂಡಿತರ ಪ್ರಕಾರ ಜಿನಮತಕ್ಕೇ ಸಲ್ಲಬೇಕು.

ಈ ಅನ್ಯಮತಗಳು ಜನರನ್ನು ಮರುಳುಮಾಡಿ ತಮ್ಮ ಹೆಚ್ಚುಗಾರಿಕೆಯನ್ನು ಸ್ಥಾಪಿಸಿವೆ ಎಂಬಂತೇ ರಾಜಾವಳಿಯ ನಿರೂಪಣೆ ಇದೆ. ಇಂಥ ವಿವರಗಳು ಭಕ್ತಿಪಂಥದ ಆಚಾರ್ಯರ ಕುರಿತು ಬರುತ್ತದೆ. ಅದರಲ್ಲಿ ಬಸವೇಶ್ವರ ಮತ್ತು ರಾಮಾನುಜರು ಹೀಗೇ ಚಿತ್ರಿತರಾಗಿದ್ದಾರೆ. ಬಸವೇಶ್ವರನು ಬಾಲ್ಯದಲ್ಲಿ ಕಾಳಿಕಾದೇವಿಯನ್ನು ಆರಾಧಿಸಿ ಆಕರ್ಷಣ, ವಶ್ಯ, ವಿದ್ವೇಷಣ, ಸ್ತಂಭನ, ಮೋಹನ ವ್ಯಭಿಚಾರಗಳನ್ನು ಸಾಧನೆ ಮಾಡಿದ್ದನು. ನಂತರ ಬಿಜ್ಜಳನ ಆಸ್ಥಾನದಲ್ಲಿ ಆತನು ವೀರಶೈವ ಮತವನ್ನು ಜನಪ್ರಿಯಗೊಳಿಸುವಲ್ಲಿ ಇವನ್ನೇ ಉಪಯೋಗಿಸುತ್ತಾನೆ. ಜನರನ್ನು ಏಕೀಕರಣ ಮಾಡಲು ಸಾಧ್ಯವಾಗದಿದ್ದಾಗ ಅವರನ್ನು ಭಯಗೊಳಿಸಿ ಲಿಂಗಧಾರಣೆ ಮಾಡಿಸಿದನು. ಇಂಥ ಮಾರ್ಗವನ್ನು ‘ಪದ್ದುಪವಾಡ’ಗಳೆಂದು ದೇವಚಂದ್ರನು ವ್ಯಂಗ್ಯವಾಗಿ ಉಲ್ಲೇಖಿಸುತ್ತಾನೆ. ರಾಮಾನುಜರು ಕೂಡ ತಮ್ಮ ಹೆಣ್ಣುಮಕ್ಕಳಾದ ಭಂಗಾರೆ, ಸಿಂಗಾರೆ ಎಂಬವರ ಸಹಾಯದಿಂದ ಬಲ್ಲಾಳನನ್ನು ವಶಮಾಡಿಕೊಂಡು ಆತನಿಗೆ ಶ್ರೀ ವೈಷ್ಣವ ದೀಕ್ಷೆ ನೀಡಿ ವಿಷ್ಣುವರ್ಧನನನ್ನಾಗಿ ಮಾಡುತ್ತಾನೆ. ನಂತರ ಆತನ ರಾಜ್ಯದ ಒಕ್ಕಲು ಜಾತಿಗಳಿಗೆಲ್ಲ ನಾಮಧಾರಣೆಯನ್ನು ಬಲವಂತವಾಗಿ ಮಾಡಲಾಯಿತು.

ಈ ಮೇಲಿನ ವಿವರಣೆಗಳಲ್ಲಿ ದೇವಚಂದ್ರನ ಜೈನ ಪೂರ್ವಾಗ್ರಹ ಸ್ಪಷ್ಟವಾಗೇ ಇದೆ. ಹಾಗೂ ಇತಿಹಾಸದ ವಿವರಗಳ ಕುರಿತೂ ಆತನು ನೀಡುವ ಕಥೆಗಳನ್ನು ನಾವು ಇಂದಿನ ಇತಿಹಾಸ ಜ್ಞಾನದಿಂದ ಅಲ್ಲಗಳೆಯಬಹುದು. ಆದರೆ ದೇವಚಂದ್ರನು ಹಾಗೂ ಆತನ ಜೈನ ಸಂಪ್ರದಾಯ ಏಕೆ ಬಸವೇಶ್ವರ-ರಾಮಾನುಜರ ಕುರಿತು ಈ ರೀತಿಯ ನಿಜಗಳನ್ನು ಕಟ್ಟಿಕೊಂಡಿದೆ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರವಾಗಿದೆ. ಇವರೆಲ್ಲ ಸಹಸ್ರಾರು ಜೈನದೇವಾಲಯಗಳನ್ನು ನಾಶಮಾಡಿದರು, ಜೈನರ ಮೇಲೆ ಹಲ್ಲೆ ಮಾಡಿದರು, ಜೈನರಾಜರ ಮೇಲೆ ತಮ್ಮ ಪ್ರಭಾವ ಬೀರಿ ಅವರನ್ನು ತಮ್ಮ ಮತಕ್ಕೆ ಎಳೆದುಕೊಂಡರು ಹಾಗೂ ಜೈನ ಸಮುದಾಯಗಳನ್ನು ಮತಾಂತರ ಮಾಡಿದರು ಎಂದು ದೇವಚಂದ್ರ ಉದ್ದಕ್ಕೂ ನಿರೂಪಿಸುತ್ತಾನೆ.

ಇವರೊಂದೇ ಅಲ್ಲದೇ ಶಂಕರಾಚಾರ್ಯರು ಹಾಗೂ ಕೂನಪಾಂಡ್ಯ ಮುಂತಾದವರೂ ಜಿನಬಿಂಬಗಳನ್ನು ತೆಗೆಸಿ ದೇವಾಲಯಗಳಾಗಿ ಪರಿವರ್ತಿಸಿದರು ಎಂಬ ಉಲ್ಲೇಖಗಳೂ ಇವೆ. ಅವನು ನೀಡುವ ಅಂಕಿ ಅಂಶಗಳನ್ನು ನಾವು ಅತಿಶಯೋಕ್ತಿಗಳೆಂದೋ, ಪರಿಶೀಲಿಸಬೇಕಾದವು ಎಂದೋ ಪಕ್ಕಕ್ಕಿಡಬಹುದು. ಆದರೆ ಜೈನ ಪಂಡಿತನಿಗೆ ಈ ಭಕ್ತಿ ಹಾಗೂ ಪೂಜಾ ಪಂಥಗಳು ಜೈನಮತಕ್ಕೆ ಯುಳುವಾಗಿವೆ ಎಂಬ ಭಾವನೆಯನ್ನು ಇಲ್ಲಿ ಗಮನಿಸಲಾಗದೇ ಇರುವುದಿಲ್ಲ. ಹಾಗೂ ಐತಿಹಾಸಿಕವಾಗಿ ಜೈನ ಮತದ ಜೊತೆ ಇಂಥ ಸಂಘರ್ಷಗಳು ಉದ್ದಕ್ಕೂ ನಡೆದದ್ದೂ ಕೂಡ ದಾಖಲೆಯಾಗಿವೆ.

ದೇವಚಂದ್ರನು ಭಕ್ತಿಮಾರ್ಗದ ಕುರಿತು ಪ್ರಕಟಿಸುವ ತನ್ನ ವಿರೋಧಗಳಿಗೆ ಜೈನ ತಾತ್ವಿಕತೆಯ ಜೊತೆಗೇ ಈ ಮೇಲಿನ ಐತಿಹಾಸಿಕಥೆಯೂ ಕಾರಣವಾಗಿರಬಹುದು. ಹಾಗಾಗಿ ಅವನು ‘ವೀರಶೈವ’ ಎಂಬುದು ಒಂದು ಮಿಥ್ಯಾಮತ ಎಂದಷ್ಟೇ ಅಲ್ಲ ಬಸವೇಶ್ವರನೇ ಜೈನರ ಮೇಲಿನ ಆಕ್ರಮಣಗಳಿಗೆ ಕಾರಣ ಎಂದೂ ಸಮೀಕರಿಸುತ್ತಾನೆ. ಇವರೆಲ್ಲ ‘ಪದ್ದುಪವಾಡ’ಗಳಿಂದ ಅದನ್ನು ಸಾಧಿಸುತ್ತಾರೆ. ಅದರ ಪರಿಣಾಮವಾಗಿ ಜೈನರ ನಿಜವಾದ ದರ್ಶನ ಹಾಗೂ ಆಚಾರಗಳು ಆಕ್ರಮಣಕ್ಕೆ ತುತ್ತಾಗಿವೆ. ಶೈವರ ಭಕ್ತಿಯ ಕಥೆಗಳನ್ನು ವಿಡಂಬಿಸುತ್ತ ‘ಅಜ್ಞಾನ ಹಾಗೂ ಮೌಢ್ಯದಿಂದ, ಹಿಂಸೆಯಿಂದ ಸದ್ಗತಿ ಪಡೆದವರ ಕಥೆಗಳನ್ನು ಸೃಷ್ಟಿಸಿ ಅದನ್ನು ಕೇಳಿದವರಿಗೂ ಸದ್ಗತಿಯಾಗುತ್ತದೆ ಎಂದು ಹೇಳುವುದು ‘ವಿಷವನ್ನು ಉಂಡು ಬದುಕುವೆ ಎಂದಂತೇ’ ಎಂದು ಹೇಳುತ್ತಾನೆ. ಈ ರೀತಿ ಭಕ್ತಿಪ್ರತಿಪಾದಕರನ್ನು ಅವನು ತಿರಸ್ಕರಿಸುವಾಗ ಈ ಆಚಾರ್ಯರು ನಿಜವನ್ನು ಮರೆಸಿದ್ದಾರೆ ಎಂಬ ಆರೋಪವನ್ನು ಗಮನಿಸಬಹುದು. ಶಿವ-ವಿಷ್ಣು ಮುಂತಾದ ದೇವತೆಗಳನ್ನು ತನ್ನವರನ್ನಾಗಿ ಮಾಡಿಕೊಂಡ ದೇವಚಂದ್ರನಿಗೆ ಅವರ ಕುರಿತ ಭಕ್ತಿಪಂಥದ ನಿರೂಪಣೆ ಸುಳ್ಳಾಗಿ ಕಾಣಿಸುತ್ತದೆ. ಈ ದೇವತೆಗಳು ಕೇವಲ ಜ್ಞಾನಸಂಪನ್ನರಾಗಿ ‘ಜಿನ’ರಾಗಿರುವುದರಿಂದಲೇ ಪೂಜ್ಯರಾಗಿದ್ದಾರೆ. ಅವರು ಈ ಹಿಂಸೆ, ಹಾಗೂ ಮೌಢ್ಯಗಳನ್ನು ಒಪ್ಪುವುದಿಲ್ಲ ಎಂಬುದು ಆತನ ನಂಬಿಕೆ.

ಜೈನ ಮತಕ್ಕೆ ಸವಾಲಾದ ಈ ಮೇಲಿನ ಸಂಪ್ರದಾಯಗಳನ್ನು ಕುರಿತು ಬರೆಯುವಾಗ ಅವನ್ನೆಲ್ಲ ಜೈನ ವಿಶ್ವದಿಂದ ಹೊರಗಿಡಲು ದೇವಚಂದ್ರನಿಗೆ ಸಾಧ್ಯವಾಗುವುದಿಲ್ಲ. ಏಕೆಂದರೆ ತಾನೇ ಒಬ್ಬ ಬ್ರಾಹ್ಮಣನಾಗಿ, ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಒಪ್ಪಿಕೊಂಡಿದ್ದನು. ಜೊತೆಗೇ ಮೂರ್ತಿಪೂಜೆ, ದೇವಾಲಯ ಮುಂತಾದವುಗಳ ವಿಶ್ವದಲ್ಲೇ ಆತನ ಜೈನತ್ವ ರೂಪುಗೊಂಡಿತ್ತು. ಇವೆಲ್ಲ ಜೈನ ವಿಶ್ವಕ್ಕೆ ಹೊರಗಿನವು ಎಂಬ ಸಾಧ್ಯತೆಯೇ ಅವನಿಗೆ ಇರಲಿಲ್ಲ. ಹೀಗಾಗಿ ಈ ವಿಶ್ವ ಅನ್ಯ ಬ್ರಾಹ್ಮಣರು ಹಾಗೂ ಮೂರ್ತಿಪೂಜಕರು ನಿರೂಪಿಸಿದಂತೆ ಇಲ್ಲ ಎಂದಷ್ಟೇ ಆತನು ಹೇಳಬಹುದಾಗಿತ್ತು. ಜೈನ ಬ್ರಾಹ್ಮಣ್ಯ ಹಾಗೂ ಮೂರ್ತಿಪೂಜೆಯ ಆಚಾರ ಹಾಗೂ ತಾತ್ವಿಕಥೆಗೆ ಅನ್ಯರವು ‘ಅನಾಚಾರ’ಗಳಾಗಿ ಕಾಣಿಸುತ್ತಿದ್ದವು. ದೇವಚಂದ್ರನ ಕಾಲದಲ್ಲಿ ಇಂಥ ‘ಅನಾಚಾರ’ಗಳಾದರೂ ಎಷ್ಟರಮಟ್ಟಿಗೆ ಪ್ರಚಲಿತದಲ್ಲಿದ್ದವು ಎಂಬುದೂ ಸ್ಪಷ್ಟವಿಲ್ಲ. ಏಕೆಂದರೆ ವೈದಿಕ ಬ್ರಾಹ್ಮಣ, ವೀರಶೈವ, ಶ್ರೀ ವೈಷ್ಣವ ಮುಂತಾದ ಸಂಪ್ರದಾಯಗಳಲ್ಲೂ ಹಿಂಸೆ, ಮೌಢ್ಯ ಮುಂತಾದವುಗಳು ಸದಾಚಾರ ಅಲ್ಲ ಎಂಬ ಪ್ರತಿಪಾದನೆಗಳಿದ್ದವು. ಇಂಥ ವಿಚಾರಗಳು ದೇವಚಂದ್ರನು ತುಚ್ಛೀಕರಿಸುವ ವಚನಕಾರರಲ್ಲಿ ಪ್ರತಿಪಾದಿತವಾಗುವ ರೀತಿಗೂ, ಆತನು ಪ್ರತಿಪಾದಿಸುವ ರೀತಿಗೂ ಸಮಾನವಾಗಿಯೇ ಇದ್ದವು. ದೇವಚಂದ್ರನು ಈ ಅಂಶಗಳನ್ನು ತನ್ನ ಕಥನದಿಂದ ಹೊರಗೇ ಇಟ್ಟುಬಿಡುತ್ತಾನೆ. ಏಕೆಂದರೆ ಅವನ ವಾಸ್ತವಕ್ಕೆ ಇವರೆಲ್ಲ ಜೈನ ವಿರೋಧಿಗಳು. ಅದರ ಈ ಜೈನವಿರೋಧಿ ಮತಗಳನ್ನು ತನ್ನ ಸದ್ಧರ್ಮ ಕಲ್ಪನೆಯಿಂದ ಹೊರಗಿಟ್ಟರೂ ಅವುಗಳ ಮೌಲ್ಯಗಳನ್ನು ಅಂತರ್ಗತ ಮಾಡಿಕೊಂಡ ದೇವಚಂದ್ರನಿಗೆ ಈ ಬ್ರಾಹ್ಮಣ್ಯ ಮತ್ತು ದೈವಪೂಜೆಯನ್ನು ಮೂಲತಃ ಜೈನಧರ್ಮಗಳೆಂದೇ ಭಾವಿಸಬೇಕಾಗುತ್ತದೆ. ಈ ಹಂತದಲ್ಲಿ ಆತನಿಗೆ ‘ಜೈನಧರ್ಮ’ ಏಕೆ ಹಾಳಾಯಿತು? ಅನಾಚಾರ ಏಕೆ ಪ್ರಬಲವಾಯಿತು ಎಂದು ವಿವರಿಸಲಿಕ್ಕೆ ಆತನು ಜೈನ ವಿಶ್ವಕಲ್ಪನೆಯನ್ನೇ ಬಳಸಿಕೊಳ್ಳುತ್ತಾನೆ. ಆದರೆ ಈ ವಿಶ್ವಕಲ್ಪನೆ ಕೂಡ ಜೈನೇತರ ಸಂಪ್ರದಾಯಗಳು ನಂಬಿಕೊಂಡು ಬಂದಿದ್ದರೆ ಒಂದು ಜೈನ ನಿರೂಪಣೆ ಎಂಬುದು ಗಮನಾರ್ಹ.

ಈ ವಿಶ್ವಕಲ್ಪನೆಯ ಪ್ರಕಾರ ತನ್ನಷ್ಟಕ್ಕೇ ಇರುವ ಈ ವಿಶ್ವದ ಮೂರು ಲೋಕಗಳಲ್ಲಿ ಮಧ್ಯಲೋಕದಲ್ಲಿ ಬರುವ ಭರತ ಕ್ಷೇತ್ರಕ್ಕೆ ಕಾಲವ್ಯವಸ್ಥೆ ಇದೆ. ಈ ಕಾಲಕ್ಕೆ ಉತ್ಸರ್ಪಿಣಿ. ಅವಸರ್ಪಿಣಿ ಎಂಬ ಧರ್ಮದ ವೃದ್ಧಿ-ಕ್ಷಯದ ಎರಡು ಅವಸ್ಥೆಗಳಿವೆ. ಈಗ ಹುಂಡಾವ ಸರ್ಪಿಣಿ ಕಾಲ ಪ್ರವರ್ತಿಸುತ್ತಿದೆ. ಇದರಲ್ಲಿ ಮೊದಲ ಭಾಗದಲ್ಲಿ ೨೪ ತೀರ್ಥಂಕರರು ಆಗಿಹೋಗಿದ್ದಾರೆ. ಈಗ ಈ ಕಾಲದ ಐದನೆಯ ಭಾಗವಾದ ದುಷ್ಮಮಕಾಲ ಪ್ರವರ್ತಿಸುತ್ತಿದೆ. ಈ ಕಾಲದಲ್ಲಿ ಸಾವಿರ ವರ್ಷಕ್ಕೆ ಒಬ್ಬ ಕಲ್ಕಿ ಮತ್ತು ಐನೂರು ವರ್ಷಕ್ಕೆ ಒಬ್ಬ ಉಪಕಲ್ಕಿ ಆಗುತ್ತಾರೆ. ಈ ಕಾಲದಲ್ಲಿ ಪಂಥಮಿಥ್ಯಾತ್ವಗಳು ಹುಟ್ಟಿಕೊಳ್ಳುತ್ತವೆಯಾದ್ದರಿಂದ ಮೋಕ್ಷಮಾರ್ಗವಿಲ್ಲ. ಜೈನರೂ ಇದಕ್ಕೆ ಹೊರತಲ್ಲ. ವರ್ಧಮಾನದ ನಂತರ ತೀರ್ಥಂಕರರೇ ಇಲ್ಲ. ಜೈನಧರ್ಮವೂ ಕೆಟ್ಟುಹೋಗಿ ನಾನಾ ರೀತಿಯ ಶಾಖೆಗಳು, ಜಾತಿಗಳು ಹುಟ್ಟಿಕೊಳ್ಳುತ್ತವೆ. ವಿವಿಧ ಮತಾಚಾರ್ಯರು ವಿಪರೀತ ಗ್ರಾಹಿಗಳಾಗಿ ಆದಿ ವೇದವನ್ನೂ, ಆದಿ ದೈವವನ್ನೂ ನಾನಾ ರೀತಿ ಮಿಥ್ಯಾ ನಿರೂಪಣೆಗೊಳಪಡಿಸಿ ಈ ವಿಚಾರಗಳು ಕೆಟ್ಟು ಹೋಗಲಿಕ್ಕೆ ಕಾರಣರಾಗುತ್ತಾರೆ. ಇವರು ಮಿಥ್ಯಾಶಾಸ್ತ್ರಗಳನ್ನು ರಚಿಸಿ ಬಾವಿಯೊಳಗಿನ ಕಪ್ಪೆಗಳು ಸಮುದ್ರವನ್ನು ಕಲ್ಪಿಸಿ ಬರೆಯುವಂತೇ ಜ್ಞಾನಶೂನ್ಯರಾಗಿದ್ದಾರೆ. ಈ ರೀತಿ ಇವೆಲ್ಲ ಕಾಲದೋಷದ ಪ್ರಭಾವ, ಮನುಷ್ಯರು ಏನನ್ನೂ ಮಾಡುವಂತಿಲ್ಲ. ಈ ದುಷ್ಷಮ ಕಾಲಕ್ಕೆ ತುತ್ತಾದ ಭರತಾರ್ಯಾಖಂಡದ ಪೂರ್ವಪ್ರಪಂಚುಗಳು ಇನ್ನು ಬೇರೆ ಹೇಗಿರಲು ಸಾಧ್ಯ? ಜೈನ ಮತವೇ ತಮ್ಮ ಮೂಲಮತ ಎಂಬುದನ್ನು ಒಪ್ಪದೇ ಅದರ ಮೇಲೆ ಹಲ್ಲೆ ಮಾಡುವ ಇತರ ಮತಗಳ ದೋಷವನ್ನು ಕಾಲಕ್ಕೆ ಆರೋಪಿಸುವ ಮೂಲಕ ನಿಜವಾದ ಮನುಷ್ಯರನ್ನು ಆ ದೋಷದಿಂದ ಬಿಡುಗಡೆ ಮಾಡುವ ಒಂದು ದಾರಿಯನ್ನೂ ಈ ನಿರೂಪಣೆ ತಳೆಯುತ್ತದೆ.

ಈ ಮೇಲಿನ ತಾತ್ವಿಕತೆಗೆ ಅನುಗುಣವಾಗಿ ಜೈನ ವಿರೋಧಿ ಮಿಥ್ಯಾಮತಗಳೆಲ್ಲ ಜೈನ ಪೂರ್ವಜರಿಂದಲೇ ಹುಟ್ಟಿಕೊಳ್ಳುವ ‘ವಿಚಿತ್ರ ಆದರೂ ನಿಜ’ ಪ್ರಪಂಚುಗಳು ರಾಜಾವಳಿಯಲ್ಲಿ ಬರುತ್ತವೆ. ಭರತ ಚಕ್ರವರ್ತಿಗೆ ಅನಂತಸೇನೆಯಲ್ಲಿ ಹುಟಿದ ಮರೀಚಿಯು ಸ್ವಯಂಬುದ್ಧನಾಗಿ ಕಪಿಲ ಸಿದ್ಧಾಂತವನ್ನು ಬೋಧಿಸುತ್ತಾನೆ. ಈ ಸಿದ್ಧಾಂತವನ್ನೇ ಅಂಗೀರಸಾದಿ ಬ್ರಾಹ್ಮಣರು ಅನುಸರಿಸಿ ಪಂಚಮಿಥ್ಯಾತ್ವಗಳನ್ನು ಪ್ರಕಟಿಸಿದರು. ಮೂಲತಃ ಜೈನರಾಗಿದ್ದವರೇ ‘ಮನಃಕಷಾಯ’ ಉದಿಸಿ ತಪ್ಪು ಸಿದ್ಧಾಂತಗಳನ್ನು ಪ್ರಚಲಿತದಲ್ಲಿ ತರುತ್ತಾರೆ. ಬಸವೇಶ್ವರನ ಪೂರ್ವಜರೂ ಜೈನರೇ ಆಗಿದ್ದು ಸಹವಾಸದೋಷದಿಂದ ವೈದಿಕ ಬ್ರಾಹ್ಮಣರಾಗುತ್ತಾರೆ. ಒಟ್ಟಿನಲ್ಲಿ ಕಪಿಲ ಸಿದ್ಧಾಂತದಿಂದ ಹುಟ್ಟಿದ ಮತಗಳೇ ಮೂಲ ಜೈನ ದರ್ಶನವನ್ನು ಅಲ್ಲಗಳೆಯುವವು. ಈ ಮತಗಳಲ್ಲೇ ಬೌದ್ಧ, ವೈದಿಕ, ವೀರಶೈವ, ವೈಷ್ಣವ ಮತಗಳೆಲ್ಲ ಬರುತ್ತವೆ. ಇವನ್ನೇ ಕೆಲವೊಮ್ಮೆ ದೇವಚಂದ್ರನು ಷಣ್ಮತಗಳಲ್ಲಿ ಸೇರಿಸುತ್ತಾನೆ.

ಭರತಾರ್ಯಾಖಂಡದ ‘ಷಣ್ಮತ’ಗಳೆಲ್ಲವನ್ನೂ ಪೂರ್ವಪಕ್ಷವನ್ನಾಗಿ ಮಾಡಿ ಮುಸಲಮಾನರ ಮತವನ್ನು ಹುಟ್ಟುಹಾಕಿದವನು ಪಾರ್ಶ್ಪಭಟಾರಕನೆಂಬವನು. ಆತನು ತಾನು ವರ್ಧಮಾನ ಸ್ವಾಮಿಗೆ ಗಣಧರನಾಗಬೇಕೆಂದು ಬಯಸಿದ್ದನು. ಆದರೆ ಅದು ಅವನಿಗೆ ದಕ್ಕಲಿಲ್ಲವಾದ್ದರಿಂದ ಕ್ರೋಧದಿಂದ ತನ್ನದೇ ಸಮವಸರಣವನ್ನು ಒಡ್ಡುತ್ತಾನೆ. ಆತನು ತಾನು ವರ್ಧಮಾನ ಸ್ವಾಮಿಗೆ ಗಣಧರನಾಗಬೇಕೆಂದು ಬಯಸಿದ್ದನು. ಆದರೆ ಅದು ಅವನಿಗೆ ದಕ್ಕಲಿಲ್ಲವಾದ್ದರಿಂದ ಕ್ರೋಧದಿಂದ ತನ್ನದೇ ಸಮವಸರಣವನ್ನು ಒಡ್ಡುತ್ತಾನೆ. ಹಾಗೂ ತನ್ನನ್ನು ಅಲ್ಲಾಕುದನೆಂದು ಕರೆದುಕೊಂಡು ಹೊಸ ಮತವನ್ನು ಮಾಡಿದನು. ಮಕ್ಕಾದೇಶದ ಪೈಗಂಬರ ಮಹಮ್ಮದರೆಂಬ ಬೌದ್ಧಾಚಾರದ ದೊರೆಗಳು ಇದನ್ನು ಪ್ರಸಾರ ಮಾಡಿದರು. ಪಾರ್ಶ್ಪಭಟ್ಟನ ಶಿಷ್ಯ ಮಲ್ಲಿಭಟ್ಟನು ‘ಮುಲ್ಲಾಶಾಸ್ತ್ರ’ವನ್ನು ಮಾಡಿದನು. ಈ ಹೊಸಮತದ ಸೂತ್ರಗಳು, ವೇಷ, ಭಾಷೆ, ನಡೆ ಎಲ್ಲವೂ ಹೊಸದಾಗಿದ್ದವು. ಅದೇ ರೀತಿ ದ್ಪೀಪಾಂತರಗಳಲ್ಲಿದ್ದ ವಿದ್ಯಾಧರರು ಕಾಲದೋಷದಿಂದ ತಮ್ಮ ಮಹಿಮೆ ಕುಂದುತ್ತ ಬರಲು ಸರ್ವೇಶ್ವರ ಮತವನ್ನು ಪ್ರಕಟಿಸಿದರು. ಈ ಸರ್ವೇಶ್ವರನ ಅವತಾರವಾಗಿ ಜೇಸುನಾಥ (ಏಸು) ಹುಟ್ಟಿದನು ಎಂದು ನಂಬುವವರು ಇಂಗರೀಜರೆಂದಾದರು. ಹೀಗೆ ದೇವಚಂದ್ರನ ಅರಿವಿಗೆ ಬಂದ ಯಾವ ಮತವೂ ಜೈನ ವಿಶ್ವಕ್ಕೆ ಹೊರತಾಗುವುದಿಲ್ಲ. ಆದರೆ ಅದು ‘ನಿಜ’ ದರ್ಶನವೂ ಆಗುವುದಿಲ್ಲ.

ಅನ್ಯಮತವನ್ನು ಒಪ್ಪದೆಯೂ ಅದನ್ನು ತನ್ನ ವಿಶ್ವಕಲ್ಪನೆಯಲ್ಲಿ ಒಳಗೊಳ್ಳುವ ಹಾಗೂ ‘ಇದೆಲ್ಲೆ ಕಾಲದೋಷ’ ಎಂಬ ನಿರ್ಲಿಪ್ತತೆಯನ್ನು ತಳೆಯುವ ದೇವಚಂದ್ರನ ಜೈನ ತಾತ್ವಿಕಥೆ ಆಸಕ್ತಿಪೂರ್ಣವಾಗಿದೆ. ಅಹಿಂಸಾತತ್ಪವನ್ನು ತನ್ನ ಧರ್ಮ ಎಂದು ಪ್ರತಿಪಾದಿಸಿದ ಮತವೊಂದಕ್ಕೆ ವಾಸ್ತವವನ್ನು ಹೀಗೆ ಅರ್ಥೈಸುವುದೇ ಅನಿವಾರ್ಯ ಆಗಿರಬಹುದು ಎಂಬ ತರ್ಕವೂ ಇಲ್ಲಿ ಸಾಧ್ಯವಿದೆ. ಮನುಷ್ಯನನ್ನೇ ಅವನ ಕಾರ್ಯಗಳಿಗೆಲ್ಲ ಕಾರಣಕರ್ತನನ್ನಾಗಿ ನೋಡುವ ನಮ್ಮ ಇಂದಿನ ಇತಿಹಾಸಕಾರರಿಗೆ ಸಾಧ್ಯವಾಗದ ಒಂದು ನಿರ್ಲಿಪ್ತತೆ ಈ ಕಾಲದೋಷವನ್ನು ನಂಬಿದ ಜೈನ ಪಂಡಿತನಿಗೆ ಸುಲಭ ಸಾಧ್ಯವಾಗುತ್ತದೆ. ಬಹುಶಃ ಈ ಅಂಶವನ್ನು ಮುಸ್ಲಿಂ ಮತದ ಕುರಿತು ದೇವಚಂದ್ರನು ಹೇಗೆ ಗ್ರಹಿಸಿದ್ದ ಎಂಬುದನ್ನು ಪರಿಶೀಲಿಸಿ ಮನದಟ್ಟು ಮಾಡಿಕೊಳ್ಳಬಹುದು.

ಪಾರ್ಶ್ವಭಟಾರನ ಮುಸಲಮಾನರ ಮತ: ಅಜ್ಞಾನ ಮಿಥ್ಯಾತ್ಪ

ರಾಜಾವಳಿಯ ಇತರ ನಿಜಗಳಂತೇ ಇಸ್ಲಾಂ ಮತದ ಕುರಿತು ದೇವಚಂದ್ರನ ನಿರೂಪಣೆ ಹೇಗಿದೆ ಮತ್ತು ಹಾಗೇಕಿದೆ ಎಂಬುದನ್ನು ಪರಿಶೀಲಿಸುವುದು ಇಂದಿನ ಸಂದರ್ಭಕ್ಕೆ ಅತ್ಯಗತ್ಯವಾಗಿದೆ. ಇಂಥ ಕಥನಗಳು ಕನ್ನಡದಲ್ಲಿ ವಿರಳವಾಗಿವೆಯಷ್ಟೇ ಅಲ್ಲ, ಅಂಥ ಕಥನಗಳನ್ನು ನಾವು ಮತ-ಪಂಥಗಳ ರಾಷ್ಟ್ರೀಯ ಇತಿಹಾಸವನ್ನು ರಚಿಸುವಾಗ ನಿರ್ಲಕ್ಷಿಸಿದ್ದೇವೆ ಎಂಬುದೂ ಗಮನಿಸಬೇಕಾದ ಸಂಗತಿ. ದೇವಚಂದ್ರನಿಗೆ ಇಸ್ಲಾಂ ಮತವೂ ಅನ್ಯಮತಗಳಂತೇ ಒಂದು ಮತವಾಗಿದ್ದು ವಿಶೇಷವಾದ ಅರ್ಥವನ್ನೇನೂ ಅದು ಪಡೆದಿರಲಿಲ್ಲ. ಬದಲಾಗಿ ಆತನಿಗೆ ವೀರಶೈವ ಮತದ ಕುರಿತು ಇದ್ದ ವಿಶೇಷವಾದ ಕ್ರೋಧ ಇಸ್ಲಾಂ ಮತದ ಕುರಿತು ಇರಲಿಲ್ಲ ಎಂಬುದೂ ಕುತೂಹಲಕಾರಿಯಾಗಿದೆ. ಹತ್ತೊಂಭತ್ತನೆಯ ಶತಮಾನದ ಮೈಸೂರು ಪ್ರಾಂತ್ಯದ ವಾಸ್ತವದಲ್ಲಿದ್ದ ಜೈನಪಂಡಿತನೊಬ್ಬನಿಗೆ ವಾಸ್ತವ ಹೀಗೇ ಏಕೆ ಕಾಣಿಸಿತು ಎಂಬ ಅಂಶ ನಮ್ಮ ರಾಷ್ಟ್ರೀಯ ಇತಿಹಾಸದ ಸುಳ್ಳುಗಳ ಪದರಗಳನ್ನು ಬಿಡಿಸಿ ತೋರಿಸಲು ಸಹಾಯವಾಗಬಹುದು.

ದೇವಚಂದ್ರನು ಈ ಮತವನ್ನು ಕುರಿತು ವಿವರಿಸುವಾಗ ‘ಇಸ್ಲಾಂ ಮತ’ ಎಂಬ ಶಬ್ದವನ್ನು ಬಳಸುವುದಿಲ್ಲ. ಬದಲಾಗಿ ‘ಮುಸಲಮಾನ’ ಜಾತಿ ಈ ಮತವನ್ನು ಅವಲಂಭಿಸಿದಂತೆ ವಿವರಣೆ ಬರುತ್ತದೆ. ದೇವಚಂದ್ರನ ವಿವರಣೆಯಲ್ಲಿ ಸೌರಾಷ್ಟ್ರದ ಪಾರ್ಶ್ವಭಟಾರನು ಈ ಮತವನ್ನು ಮಾಡಿದನು. ಅದನ್ನು ಮಕ್ಕಾದೇಶದ ಪೈಗಂಬರ ಮಹಮ್ಮದರೆಂಬವರು ಉಳಿದ ದೇಶಗಳ ಅರಸುಗಳಿಗೆ ಉಪದೇಶಿಸುತ್ತಾರೆ. ಈ ಮಕ್ಕಾದೇಶ ಕೂಡ ಭರತಾರ್ಯಾಖಂಡದ ಒಂದು ದೇಶವೆಂದೇ ದೇವಚಂದ್ರ ಗ್ರಹಿಸಿದಂತೇ ತೋರುತ್ತದೆ. ಅವರು ಮಾಡುವ ಉಪದೇಶದಲ್ಲಿ ‘ವೇದದಲ್ಲಿ ಹೇಳಿದಂತೇ ಮಂತ್ರಪೂರ್ವಕ ಜೀವವನ್ನು ಕೊಂದು ತಿಂದೊಡೆ ಪಾಪವಿಲ್ಲ’ ಎಂಬ ಇಹಲೋಕ ಸುಖದ ವಾಕ್ಯವೂ ಇದೆ. ದೇವಚಂದ್ರನಿಗೆ ಯಜ್ಞಕ್ಕಾಗಿ ಪ್ರಾಣಿಬಲಿಯನ್ನು ಒಪ್ಪಿಕೊಳ್ಳುವ ವೈದಿಕ ಮತಕ್ಕೂ, ಮುಸಲಮಾನರ ಮತಕ್ಕೂ ಈ ದೃಷ್ಟಿಯಿಂದ ಭೇದವಿಲ್ಲ. ಪಾರ್ಶ್ವಭಟಾರನ ಶಿಷ್ಯ ಮಲ್ಲಿಭಟ್ಟ ಎಂಬವನು ಮುಲ್ಲಾ ಶಾಸ್ತರವನ್ನು ಮಾಡಿದನು ಶಾಸ್ತ್ರವನ್ನು ಮಾಡುವವನು ‘ಭಟ್ಟ’ನೇ. ಮುಸಲಮಾನರ ಮತ ಶಾಸ್ತ್ರಕ್ಕೆ ಭರತಾರ್ಯಾಖಂಡಕ್ಕೆ ಪರಕೀಯವಾದ ಯಾವ ಅಂಶವೂ ಈ ಕಥನದಲ್ಲಿ ಇಲ್ಲ. ಅದೇ ರೀತಿ ಜಾತಿ-ಮತ ಬೇಧಗಳು. ಮುಲ್ಲಾಶಾಸ್ತ್ರದಲ್ಲಿ ಪಾರ್ಶಿ-ದಖನಿ ಎಂಬ ಎರಡು ಭೇದಗಳಾದವು. ಮುಸಲಮಾನರು ನಾಲ್ಕು ಭೇದಗಳಾಗಿ ಹಾಗೂ ಮತ್ತು ೧೮ ಭೇದಗಳಾಗಿ ವರ್ತಿಸುತ್ತಾರೆ. ದೇವಚಂದ್ರನಿಗೆ ಮಹಮ್ಮದ ಪೈಗಂಬರರಿಂದ ಹುಟ್ಟಿತೆನ್ನಲಾದ ‘ಇಸ್ಲಾಂಮತ’ ಮುಸ್ಲಿಮರ ಮಧ್ಯೆ ಇದ್ದೂ ಅರವಿಗೆ ಬಂದಿರಲಿಲ್ಲ. ಮುಸಲ್ಮಾನರ ಮತಕ್ಕೆ ಶಾಸ್ತ್ರ ಬರೆದವನೇ ಬೇರೆ ಹಾಗೂ ಅದರಲ್ಲೂ ಭೇದಗಳಿವೆ. ನಾವು ಗ್ರಹಿಸುವ ಒಂದು ಏಕರೂಪೀ ಮತದ ಕಲ್ಪನೆ ಈ ಕಥನದಲ್ಲಿ ಮೂಡಿ ಬರುವುದಿಲ್ಲ.

ಪಾರ್ಶ್ವಟ್ಟನು ‘ಅಲ್ಲಾಕುದ’ನೆಂದು ಕರೆದುಕೊಂಡು ರಚಿಸಿದ ಮತಕ್ಕೆ ಷಣ್ಮತಗಳೇ ಪೂರ್ವಪಕ್ಷಗಳು. ಹಾಗೂ ಆ ಮತದವರ ವೇಷ. ಭಾಷೆ ಎಲ್ಲವನ್ನೂ ಈ ಷಣ್ಮತದವರಿಗಿಂತ ಬೇರೆಯೇ ಆಗಿ ಮಾಡಲಾಯಿತು. ಈ ಮುಂತಾದ ವಿವರಗಳಲ್ಲಿ ದೇವಚಂದ್ರನು ಮುಸ್ಲಲ್ಮಾನರಿಗೂ ಭರತದ ಉಳಿದೆಲ್ಲ ಮತಗಳವರಿಗೂ ಒಂದು ಭೇದ ಇದ್ದುದನ್ನು ತಿಳಿಸುವ ಜೊತೆಗೇ ಷಣ್ಮತಗಳನ್ನೂ ಮುಸಲ್ಮಾನರಿಂದ ಪ್ರತ್ಯೇಕಿಸುತ್ತಾನೆ. ಷಣ್ಮತಗಳಿಗೂ ಈ ಮೂಲಕ ಒಂದು ಸಾಮಾನ್ಯತೆಯನ್ನು ಕೂಡ ಆರೋಪಿಸುತ್ತಾನೆ. ಹಾಗೂ ಈ ಸಾಮಾನ್ಯ ಪ್ರಭೇದ ‘ಹಿಂದೂಜನ’ಎಂಬ ಪರಿಭಾಷೆ ಮುಸಲಮಾನರಿಂದ ಉಪಯೋಗವಾಗುತ್ತಿದ್ದುದರಿಂದ ಅವರ ಸಂದರ್ಭದಲ್ಲಿ ಈ ಶಬ್ದವನ್ನು ಬಳಸಲಾಗಿದೆ ಎಂಬುದು ಸ್ಪಷ್ಟ. ಜೊತೆಗೇ ಇದೊಂದು ಮತವಾಗಿರದೇ, ವಿಭಿನ್ನಮತಗಳನ್ನು ಅನುಸರಿಸುವವರು ಇದರಲ್ಲಿ ಇದ್ದರು. ಈ ವಿಭಿನ್ನ ಮತಗಳನ್ನು ಅನುಸರಿಸುವವರಲ್ಲೂ ಹಲವಾರು ಜಾತಿಗಳಿದ್ದವು, ಹಾಗೂ ಈ ವಿಭಿನ್ನ ಮತಾವಲಂಬಿಗಳು ಜಾತಿಗಳೂ ಆಗಿದ್ದವು. ಹಾಗಾಗಿ ‘ಷಣ್ಮತದ ಹಿಂದೂ ಜನರನ್ನು ಕರೆಯಿಸಿ ಅವರಲ್ಲಿ ಮುಸಲ್ಮಾನ ಕುಲವೇ ಹೆಚ್ಚೆಂದು ವಾದಿಸುತ್ತಾ ಎಲ್ಲಾ ಜಾತಿಯವರನ್ನು ತನ್ನ ಮತಕ್ಕೆ ತರಲೆಂದು’ ಡಿಳ್ಳಿಯ ಪಾದಶಾಯಿ ಖಾದಿರಲಿಂಗ ಎಂಬವನನ್ನು ಕಳುಹಿಸುತ್ತಾನೆ. ದೇವಚಂದ್ರನ ಕಥನದಲ್ಲಿ ‘ಮತ’ ಮತ್ತು ‘ಜಾತಿ’ ಶಬ್ದಗಳು ಉಪಯೋಗವಾಗುವ ಸಂದರ್ಭವನ್ನು ಗಮನಿಸಿದಾಗ ಜಾತಿ ಎಂಬುದು ಒಂದು ಸಾರ್ವತ್ರಿಕ ಹಾಗೂ ಮೂಲ ಪ್ರಭೇದವಾಗಿ ಮತ ಎಂಬುದು ಅವುಗಳ ಬದಲಾಗುತ್ತಿರುವ ಗುರುತಾಗಿ ಕಾಣಿಸುತ್ತದೆ.

ಇದಕ್ಕೆ ಇಂದು ನಾವು ಕರೆಯುವ ಹಿಂದೂಗಳೂ, ಮುಸಲ್ಮಾನರೂ ಇಬ್ಬರೂ ಹೊರತಾಗಿರಲಿಲ್ಲ. ಹಳೆಮೈಸೂರಿನ ಈ ಪಂಡಿತನಿಗೆ ಜಾತಿ ಎಂಬ ಶಬ್ದ ಸಮುದಾಯಗಳನ್ನು ಸೂಚಿಸಲು ಮತಕ್ಕಿಂತ ಹೆಚ್ಚು ಸೂಕ್ತವಾಗಿತ್ತು.

ಖಾದಿರಲಿಂಗನಿಗೆ ಷಣ್ಮತದ ಲಾಂಛನಗಳನ್ನೆಲ್ಲ ಕಟ್ಟಿ, ಮಂತ್ರ, ತಂತ್ರಾದಿಗಳನ್ನು ಕಲಿಸಿ ಶಿಷ್ಯರ ಸಮೇತ ನಾಲ್ಕುದಿಕ್ಕುಗಳಿಗೂ ಕಳುಹಿಸಿಲಾಯಿತು. ಹೀಗೆ ಪರಮತದ ಮೇಲೆ ವಿಜಯ ಸಾಧಿಸಲು ಹೊರಟ ಖಾದಿರಲಿಂಗನ ಕಾಲಿಗೆ ಎಲ್ಲ ಲಾಂಛನಗಳನ್ನು ಕಟ್ಟಿದ ವರ್ಣನೆಯನ್ನು ಮಾಡಿದರೂ ಆತನು ಹಂಪೆಯಲ್ಲಿ ವೀರಶೈವರನ್ನು ಮಣ್ಣುಮುಕ್ಕಿಸುವ ಕಥೆಯನ್ನು ಮಾತ್ರ ಸವಿಸ್ತಾರವಾಗಿ ಹೇಳುತ್ತಾನೆ. ಅಲ್ಲಿ ಶೈವರನ್ನು ಸಾಕಷ್ಟು ವಿಡಂಬಿಸಲಾಗಿದೆ. ಅಂದರೆ ಖಾದಿರಲಿಂಗನು ಶೈವರ ಅಹಂಕಾರವನ್ನು ಮರ್ದಿಸಿದಂತೇ ಹಾಗೂ ಶೈವರ ಪೊಳ್ಳುತನವನ್ನು ಬಯಲಿಗೆಳೆಂತೇ ಚಿತ್ರಿಸಲು ದೇವಚಂದ್ರನು ಈ ಪ್ರಪಂಚವನ್ನು ಉಪಯೋಗಿಸಿ ಕೊಳ್ಳುತ್ತಾನೆ. ಈ ಕಥನದಲ್ಲಿ ‘ಹಿಂದೂಜನ’ ಎಂಬ ಮುಸಲ್ಮಾನರು ಸೂಚಿಸುವ ಸಮುದಾಯ ದೇವಚಂದ್ರನಂಥವರಿಗೆ ಪ್ರಸ್ತುತವಾಗಿರಲಿಲ್ಲ. ಆತನಿಗೆ ತನ್ನ ವೈರಿಗಳಾದ ವೀರಶೈವ ಮತದವರ ಮಿಥ್ಯೆಯನ್ನು ಖಾದಿರಲಿಂಗನು ಬಯಲು ಮಾಡಿದನೆಂಬುದೇ ಮುಖ್ಯ. ಆದರೆ ಜೈನಮತದ ಪ್ರಶ್ನೆ ಬಂದಾಗ ದೇವಚಂದ್ರ ‘ತನ್ನದು’ ಎಂಬ ಭಾವನೆಯನ್ನು ಪ್ರಕಟಿಸುತ್ತಾನೆ. ಖಾದಿರಲಿಂಗನನ್ನು ಯಾವ ಮತದವರೂ ಎದುರಿಸಲು ಸೋತಾಗ ‘ಹಿಂದೂಜನರಂ ತುರುಕರಂ’ ಮಾಡುವೆನೆಂದು ಪಾದಶಾಯಿ ನಿರ್ಧರಿಸುತ್ತಾನೆ. ಆದರೆ ಅವರೆಲ್ಲ ಜೈನರ ಮೊರೆಹೋಗುತ್ತಾರೆ. ಅಂತಿಮವಾಗಿ ಜೈನ ಗುರುಗಳು ಪಾದಶಾಯಿಗೆ ಜೈನಮತವೇ ಆದಿಮತ ಎಂದು ದರ್ಶನ ಮಾಡಿಸುತ್ತಾನೆ. ಪಾದಶಾಯಿ ಅದನ್ನು ಒಪ್ಪಿಕೊಂಡು ಜೈನಗುರುಗಳನ್ನು ಸನ್ಮಾನಿಸುತ್ತಾನೆ.

ಜೈನಮತ ಕೇವಲ ಭಾರತದ ಷಣ್ಮತಗಳಿಗೆ ಮಾತ್ರವಲ್ಲ ಮುಸಲ್ಮಾನರ ಮತಕ್ಕೂ ಆದಿ ಮತವಾಗುತ್ತದೆ. ಜೈನ ಗುರುಗಳು ದಿಳ್ಳಿ ಪಾದಶಾಯಿಯ ಭವಾವಳಿಯನ್ನು ತಿಳಿಸುತ್ತಾರೆ. ಅದರ ಪ್ರಕಾರ ಆತನು ಹಿಂದಿನ ಜನ್ಮದಲ್ಲಿ ಒಬ್ಬ ಕುರುಬನಾಗಿದ್ದನು. ‘ಮುಸಲಮಾನ’ ಮತ್ತು ‘ಕುರುಬ’ ಎರಡೂ ಜಾತಿಗಳೇ ಆದ್ದರಿಂದ ಆತ್ಮನಿಗೆ ಕರ್ಮವನ್ನು ಸವೆಸಲು ಒಂದೇ ಆಗುತ್ತವೆ. ಅದರಲ್ಲೂ ಕುರುಬ ಜನ್ಮಕ್ಕಿಂತ ಮುಸಲಮಾನ ‘ಪಾದಶಾಯಿ’ ಜನ್ಮ ಜೈನ ಭವಾವಳಿಯಲ್ಲಿ ಮೋಕ್ಷಕ್ಕೆ ಹೆಚ್ಚು ಹತ್ತಿರವಾಗುವುದನ್ನೂ ಗಮನಿಸಬಹುದು. ಅಂದರೆ ವೇಷ, ಭಾಷೆ, ಎಲ್ಲದರಲ್ಲೂ ಬೇರೆಯಾಗಿ, ಷಣ್ಮತಗಳನ್ನು ಎದುರಾಳಿಗಳನ್ನಾಗಿ ಭಾವಿಸಿದ ಮುಸಲ್ಮಾನರ ಪ್ರತ್ಯೇಕಥೆಗೆ ಜೈನರ ಭವಾವಳಿಯನ್ನು ಮೀರುವಷ್ಟು ಮಹತ್ವ ಇರಲಿಲ್ಲ. ನಮ್ಮ ಸೆಕ್ಯೂಲರ್ ಯುಗದ ಇತಿಹಾಸದ ರಚಿಸಿಕೊಂಡ ಹಿಂದು-ಮುಸ್ಲಿಂ ಪ್ರಭೇದ ೧೯ನೇ ಶತಮಾನದ ಈ ಮತೀಯ ದೃಷ್ಟಿಕೋನದ ಪಂಡಿತನಿಗೆ ನಿರರ್ಥಕವಾಗಿತ್ತು.

ಈ ಹಿನ್ನೆಲೆಯಲ್ಲೇ ಮುಸಲ್ಮಾನ ಪಾದಶಾಯಿ ಹಾಗೂ ಸುರತಾಳರು ಅನ್ಯಮತಗಳ ಮೇಲೆ ನಡೆಸಿದ ಆಕ್ರಮಣಗಳ ವರ್ಣನೆಯನ್ನು ಗ್ರಹಿಸಬೇಕಾಗುತ್ತದೆ. ಹಾಗೂ ಅನ್ಯಮತಗಳು ಜೈನರ ಮೇಲೆ ನಡೆಸಿದ ಅಕ್ರಮಗಳ ವರ್ಣನೆಯನ್ನೂ ಇದಕ್ಕಿಂತ ತೀರ ಬೇರೆಯಾಗಿ ನೋಡುವಂತಿಲ್ಲ. ಅಂದರೆ ಒಂದು ಮತ ಮತ್ತೊಂದು ಮತದ ದೇವಾಲಯಗಳನ್ನು ನಾಶಮಾಡುವುದು ಕಾಲದೋಷದ ಒಂದು ಅಭಿವ್ಯಕ್ತಿಯೇ ಆಗಿದೆ. ರಾಜರುಗಳು ಈ ರೀತಿ ಮಿಥ್ಯಾಮತಗಳನ್ನು ಹಿಡಿದು ಅನ್ಯಮತಗಳನ್ನು ಕಡೆಗಣಿಸಿದರೆ, ಅದು ಜೈನರ ಸಂಬಂಧಿಸಿಯೇ ಆದರೂ ಅದು ಅವರ ದೋಷವಲ್ಲ. ಏಕೆಂದರೆ ಕಾಲವೇ, ಹಾಗಿದೆ. ಡಿಳ್ಳಿ ಪಾದಶಾಯಿ ತಾನು ಆಳುವ ದೇಶದೊಳಗಿದ್ದ ಜಿನಗೃಹ, ಶಿವಾಲಯ, ವಿಷ್ಣುವಿನಾಲಯ ಮುಂತಾಗಿ ಸಕಲ ದೇವಸ್ಥಾನಗಳನ್ನೂ ಹೇಳ ಹೆಸರಿಲ್ಲದಂತೇ ಹಾಳು ಮಾಡುತ್ತಾನೆ. ಹಾಗೂ ಅಲ್ಲಲ್ಲಿ ಮಸೀದಿಗಳನ್ನು ನಿರ್ಮಿಸುತ್ತಾನೆ. ಚಂದ್ರದ್ರೋಣ ಪರ್ವತದಲ್ಲೂ (ಬಾಬಾಬುಡನ್‌ಗಿರಿ) ಚೈತ್ಯಾಲಯವನ್ನು ತೆಗೆದು ಫಕೀರರನ್ನು ನೆಲೆ ಸಿದ್ದಲ್ಲದೇ ಅಲ್ಲಿನ ಹಿಂದೂ ಮಠಗಳಿಗೂ ದಾನಗಳನ್ನು ನೀಡುತ್ತಾನೆ. ಇಂಥ ವಿವರಗಳಿಗೆ ಯಾವ ವಿಶೇಷ ಅರ್ಥವೂ ರಾಜಾವಳಿಯ ಕಥನಗಳಲ್ಲಿ ಬರುವುದಿಲ್ಲ. ಅದರ ಪೂರ್ವ ಪ್ರಪಂಚುಗಳಲ್ಲಿ ಇದರಂತೇ ಪಾದಶಾಯಿ ಜೈನ ಮುನಿಗಳಲ್ಲಿ ತಮ್ಮ ಭವಾವಳಿಯನ್ನು ಕೇಳಿ ತಿಳಿದುಕೊಂಡದ್ದು, ತಮ್ಮ ಮಗಳಾದ ವರನಂದಿಗೆ ಬಲ್ಲಾಳರಾನ ಕತ್ತಿಯೊಂದಿಗೆ ಮದುವೆ ಮಾಡಿಕೊಟ್ಟಿದ್ದು ಮುಂತಾದವೂ ಬರುತ್ತವೆ. ಜೊತೆಗೇ ಬಸವೇಶ್ವರ, ರಾಮಾನುಜ, ಶಂಕರಾಚಾರ್ಯ ಮುಂತಾದವರು ಜೈನ ದೇವಾಲಯಗಳನ್ನು ಪರಿವರ್ತಿಸಿದ್ದು ಕೂಡ ದೇವಚಂದ್ರನ ಪೂರ್ವಪ್ರಪಂಚವೇ ಆಗಿದೆ. ಹಾಗಾಗಿದೆಲ್ಲ ನಿಜವೆ? ಅವನು ನೀಡುವ ಸಂಖ್ಯೆಗಳು ನಿಜವೆ? ಎಂಬ ಪ್ರಶ್ನೆಗಳೇ ಅಪ್ರಸ್ತುತ. ದೇವಚಂದ್ರನ ಜೈನ ಲೋಕಕ್ಕೆ ಇವೆಲ್ಲವೂ ಸಮನಾಗಿ ಪ್ರಸ್ತುತವಾಗಿದ್ದವು. ಅಷ್ಟೇ ಅಲ್ಲ ವೀರಶೈವರು ಹಾಗೂ ವೈಷ್ಣವರು ಮುಸಲ್ಮಾನರಿಗಿಂತ ಹೆಚ್ಚು ಪ್ರಸ್ತುತರಾಗಿದ್ದರು ಎಂಬುದು ನಮಗೆ ಇಂದು ಹೆಚ್ಚು ಪ್ರಸ್ತುತವಾಗಿದೆ.

ದೇವಚಂದ್ರನ ಇತಿಹಾಸ ಜ್ಞಾನದ ನೈಜತೆಯನ್ನು ನಾವು ಇಂದು ಪ್ರಶ್ನಿಸಿ ಸುಳ್ಳುಗಳನ್ನು ಕೂಡ ಎತ್ತಿ ತೋರಿಸಬಹುದು. ಆದರೆ ಆ ಇತಿಹಾಸ ಜ್ಞಾನವನ್ನೇ ಆತನು ಪೋಷಿಸಿಕೊಂಡಿದ್ದನು. ವಿಜಯನಗರದ ಇತಿಹಾಸದ ಸಂಬಂಧಿಸಿ ನಮ್ಮ ಜ್ಞಾನಕ್ಕೂ ಅವನ ಜ್ಞಾನಕ್ಕೂ ತುಲನೆ ಮಾಡಿದಾಗ ಹೇಗೆ ಇತಿಹಾಸದ ಘಟನಾವಳಿಗಳ ಕಾಲಾನುಕ್ರಮಣಿಕೆ ಮತ್ತು ಹೆಸರು ಮತ್ತು ಘಟನೆಗಳಷ್ಟೇ ಇತಿಹಾಸದ ನಿಜವನ್ನು ತಿಳಿದುಕೊಳ್ಳಲು ಪ್ರಯೋಜನವಿಲ್ಲ ಎಂಬುದು ತಿಳಿದುಬರುತ್ತದೆ. ದೇವಚಂದ್ರನ ಇತಿಹಾಸಕ್ಕೆ ವಿಜಯನಗರ ರಾಜರು ಜೈನ ಮತದ ಜೊತೆಗೆ ಯಾವ ಸಂಬಂಧವನ್ನು ಇಟ್ಟುಕೊಂಡಿದ್ದರು ಎಂಬುದೇ ಮುಖ್ಯವಾಗುತ್ತದೆ. ಜೊತೆಗೇ ನಮಗೆ ಮುಖ್ಯ ಎನ್ನಿಸದ ವಿವರಗಳು ಆತನಿಗೆ ಇತಿಹಾಸ ಜ್ಞಾನವಾಗುತ್ತದೆ. (ಪು.೧೬೦) ವಿದ್ಯಾನಗರವನ್ನೂ ಸ್ಥಾಪಿಸಿದವನು ವಿದ್ಯಾನಂದಿ ಎಂಬ ಜೈನ ಆಚಾರ್ಯ. ಆ ರಾಜವಂಶದಲ್ಲಿ ಮೂವರು ಜಿನಸಮಯಿಗಳು, ಮೂವರು ಜಿನಸಮಯದ ಕುರಿತು ಉದಾಸೀನರು ಹಾಗೂ ಮೂವರು ಜಿನದ್ವೇಷಿಗಳಾದರು. ಹೀಗಾದಾಗ ಕರ್ನಾಟಕ ದೇಶದಲ್ಲಿ ಪಾಪವು ವೃದ್ಧಿಸಿ, ಮನುಷ್ಯರ ಅನ್ಯಾಯ ಚರಿತದಿಂದ, ಹಾಗೂ ಸ್ಥಾವರ ಜಂಗಮ ಭೇದಗಳು ಕಾಣಿಸಿಕೊಳ್ಳಲು ದೇವತೆಗಳು ಕೋಪಿಸಿ ಉತ್ಪಾತಗಳನ್ನುಂಟು ಮಾಡಿದರು. ಈ ಉತ್ಪಾತಗಳ ಭಯಂಕರ ಸ್ವರೂಪವನ್ನು ದೇವಚಂದ್ರ ವಿವರವಾಗಿ ವರ್ಣಿಸಿದ್ದಾನೆ. ಎಲ್ಲೂ ಮುಸ್ಲಿಮರ ದಾಳಿಯ ಉಲ್ಲೇಖವೇ ಬರುವುದಿಲ್ಲ. ಆದರೆ ವಿಜಯನಗರ ರಾಜ್ಯ ನಾಶವಾಗುತ್ತದೆ. ದೇವಚಂದ್ರನಿಗೆ ಸ್ಥಾವನಜಂಗಮ ಭೇಧಗಳು ಮಾತ್ರ ಇಲ್ಲಿ ಮತೀಯ ಅಂಶಗಳಾಗಿ ಮಹತ್ವದವೆನ್ನಿಸುತ್ತವೆ.

ನಮ್ಮ ಇಂದಿನ ವಿಜಯನಗರದ ಇತಿಹಾಸದಲ್ಲೂ ವಿಜಯನಗರ ಸ್ಥಾಪನೆ ಮಾಡಿದವರು ಮತಾಚಾರ್ಯರೇ. ಹಾಗಾಗಿ ದೇವಚಂದ್ರನ ಇತಿಹಾಸದಿಂದ ಆ ಮಟ್ಟಿಗೆ ನಮ್ಮದು ಬೇರೆಯೇನಲ್ಲ. ಈ ಸ್ಥಾಪನೆಯನ್ನು ‘ವಿದ್ಯಾರಣ್ಯ’ರಿಗೆ ಆರೋಪಿಸಿ ಒಂದು ವೈದಿಕ ಬ್ರಾಹ್ಮಣ ಮತೀಯ ಇತಿಹಾಸ ಮೊದಲು ರೂಪುಗೊಂಡಿತು. ಹಾಗೂ ಅದನ್ನು ಪ್ರಶ್ನಿಸಿ ಈ ಸ್ಥಾಪನಾಚಾರ್ಯರು ಕಾಳಾಮುಖ ಕ್ರಿಯಾಶಕ್ತಿ ಎಂಬ ಯತಿಗಳು ಎಂಬ ಶೈವಮತೀಯ ನಿರೂಪಣೆಯೊಂದು ಹೋರಾಡುತ್ತಿದೆ. ದೇವಚಂದ್ರನ ‘ವಿದ್ಯಾನಂದ’ ಆಚಾರ್ಯ ಈ ಇತಿಹಾಸಕಾರರಿಗೆ ಕಟ್ಟುಕಥೆಯಾಗಿ, ಅಸಂಬದ್ಧವಾಗಿ ಕಾಣಿಸುತ್ತಾನೆ. ವಿಜಯನಗರವು ಮುಸ್ಲಿಮರ ಭಾಷೆಯಲ್ಲಿನ ‘ಹಿಂದೂಜನ’ರ ರಾಜರ ರಾಜ್ಯ. ಈ ಹಿಂದೂ ಜನರು ಷಣ್ಮತಗಳ ಅನುಯಾಯಿಗಳು. ‘ಹಿಂದೂ’ ಎಂಬ ಶಬ್ದವನ್ನು ‘ರಿಲಿಜನ್’ ಎಂಬ ಪರಿಭಾಷೆಯಿಂದ ಒಂದುಗೂಡಿಸಿದಾಗ ಈ ವೈದಿಕ, ಶೈವ, ಜೈನರದೆಲ್ಲ ಅಂತಃಕಲಹವಾಗಿ ಮುಸಲ್ಮಾನರು ಬಾಹ್ಯವೈರಿಗಳಾಗುತ್ತಾರೆ. ದೇವಚಂದ್ರನ ಸಮಸ್ಯೆಯನ್ನು ಇಂದಿನ ಇತಿಹಾಸಕಾರರು ಈ ರೀತಿ ಪರಿಹರಿಸಿಕೊಂಡು ವಿಜಯನಗರದ ರಾಜರನ್ನು ತಮ್ಮವರನ್ನಾಗಿ ಮಾಡಿಕೊಳ್ಳುತ್ತಾರೆ. ಹಾಗೂ ಆ ಮೂಲಕ ಆ ರಾಜ್ಯದ ನಾಶಕ್ಕೆ ಮುಸಲ್ಮಾನರ ಮತವೇ ಕಾರಣ ಎಂಬ ಇತಿಹಾಸವನ್ನು ಕಟ್ಟುತ್ತಾರೆ. ಈ ರೀತಿ ಮತದಲ್ಲೇ ಹುಟ್ಟಿ ಮತದಲ್ಲೇ ಅಳಿಯುವ ಈ ರಾಜ್ಯದ ಇತಿಹಾಸ ದೇವಚಂದ್ರನ ಇತಿಹಾಸಕ್ಕಿಂತ ಶ್ರೇಷ್ಠವೇನಲ್ಲ. ೧೯ನೇ ಶತಮಾನದಲ್ಲಿ ಹೈದರ ಅಲಿ ಮತ್ತು ಟಿಪ್ಪುಸುಲ್ತಾನರ ಆಳ್ವಿಕೆಗೊಳಪಟ್ಟು, ಅದರಿಂದ ಬಿಡುಗಡೆ ಹೊಂದಿದ ನಂತರವೂ ಒಬ್ಬ ಜೈನ ಪಂಡಿತನಿಗೆ ತನ್ನ ಇತಿಹಾಸದ ನಿಜಗಳು ಬೇರೆಯೇ ಇದ್ದವು. ನಮ್ಮ ಇಂದಿನ ಇತಿಹಾಸದ ನಿಜಗಳು ೧೯ನೇ ಶತಮಾನದ ಈ ವಾಸ್ತವವನ್ನು ಗಮನಿಸಿಲ್ಲ ಎಂದಾದರೆ ನಮ್ಮ ನಿಜಗಳೂ ದೇವಚಂದ್ರನ ‘ಸುಳ್ಳು’ಗಳಿಗಿಂತ ಹೆಚ್ಚೇನಲ್ಲ.

 

[1]ಈ ಲೇಖನದಲ್ಲಿ ಸೂಚಿಸಿದ ಪುಟ ಸಂಖ್ಯೆಗಳನ್ನು ದೇವಚಂದ್ರ ವಿರಚಿತ ರಾಜಾವಳಿ ಕಥಾಸಾರ ಸಂ.ಬಿ.ಎಸ್.ಸಣ್ಣಯ್ಯ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು, ೧೯೮೮ ಇದರಿಂದ ತೆಗೆದುಕೊಳ್ಳಲಾಗಿದೆ