ಜಾತಿ ಮತ್ತು ಮತಗಳು-ಮತಾಂತರ

‘ರಾಜಾವಳಿ’ಯಲ್ಲಿ ವ್ಯಕ್ತವಾಗುವಂತೇ ಮನುಷ್ಯರೆಲ್ಲ ವಿಭಿನ್ನ ಜಾತಿಗಳಿಗೆ ಸೇರಿರುತ್ತಾರೆ. ಈ ಜಾತಿಗಳ ಜನರ ಮತವೂ ಬೇರೆ ಬೇರೆಯಾಗಿರಬಹುದು. ಆದರೆ ಒಂದೇ ಮತದಲ್ಲೂ ಕೂಡ ಜಾತಿಭೇದಗಳು ಪ್ರವರ್ತಿಸುತ್ತವೆ. ಅದರಂತೆ ಕೆಲ ಜಾತಿಗಳು ಒಂದೊಂದು ಕಾಲದಲ್ಲಿ ಒಂದೊಂದು ಮತದ ಪ್ರಭಾವಕ್ಕೆ ಸಿಲುಕಬಹುದು. ಅಂತೂ ಈ ಜಾತಿ ಮೂಲ ಸತ್ಯವಾಗಿ ಉಳಿಯುತ್ತದೆ. ಮತಾಚಾರ ಈ ಜಾತಿಗಳ ಅಸ್ತಿತ್ವವನ್ನು ನಾಶಮಾಡುವುದಿಲ್ಲ. ಆದರೆ ದೇವಚಂದ್ರನಿಗೆ ಈ ‘ಜಾತಿ’ಗಳ ಕುರಿತೂ ಅಷ್ಟು ಸ್ಪಷ್ಟವಾದ ವಿವರಣೆ ಸಾಧ್ಯವಾಗುವುದಿಲ್ಲ. ಬಹುಶಃ ಅದೊಂದು ವಿವರಿಸಬೇಕಾದ ವಿಷಯವಲ್ಲ ಎಂಬಷ್ಟರ ಮಟ್ಟಿಗೆ ಆತನಿಗೆ ಅವೊಂದು ಸ್ವಾಭಾವಿಕ ಸಂಗತಿಗಳಾಗಿದ್ದವು. ಭಾರತೀಯ ಇತಿಹಾಸದಲ್ಲಿ ಮತಗಳ ಕುರಿತು ನಾವು ಕಟ್ಟಿಕೊಂಡ ಇತಿಹಾಸ ಕಲ್ಪನೆಗಳು ಎಷ್ಟು ಅಸೂಕ್ಷ್ಮ ಹಾಗೂ ಜಡವಾಗಿವೆ ಎಂಬುದನ್ನು ‘ರಾಜಾವಳಿ’ ಯಂಥ ಕೃತಿಗಳು ಎತ್ತಿ ತೋರಿಸುತ್ತವೆ.

ಈ ಬೇರೆ ಬೇರೆ ಜಾತಿಗಳುಹೇಗಾದವು ಎಂಬುದನ್ನು ವಿವರಿಸುವಾಗ ದೇವಚಂದ್ರನಿಗೆ ವಿಪರೀತ ಗೊಂದಲಗಳುಂಟಾಗುತ್ತವೆ. ಜಾತಿ ಎಂಬುದು ಅಹಂಕಾರ, ಆತ್ಮನಿಗೆ ಕರ್ಮ ಅಂಟಿಕೊಂಡಿದ್ದರಿಂದ ಜಾತಿ ಅಹಂಕಾರ ಹುಟ್ಟುತ್ತದೆ. ಮನುಷ್ಯಜಾತಿ ಒಂದೇ ಎಂದು ಆತನು ತಿಳಿಸುತ್ತಾನೆ. ಅವರಲ್ಲೇ ವ್ರತಪಾಲನೆ ಮಾಡಿ ಮಾಂಸಾದಿಗಳನ್ನು ತೊರೆದವರು ಶ್ರೇಷ್ಠ ಜಾತಿಗಳಾದರು. ದನದ ಮಾಂಸ ತಿನ್ನುವುದರಿಂದ ಹೊಲೆ ಮಾದಿಗರಾದರು. ನರಮಾಂಸವನ್ನು ತಿಂದವರು ರಾಕ್ಷಸರಾದರು. ಹಾಗಾಗಿ ಬ್ರಾಹ್ಮಣರು ಗೋಮಾಂಸವನ್ನು ತಿಂದು ಸೆರೆ ಕುಡಿದರೆ ಅವರೂ ಹೊಲೆಯರೇ (ಪು.೬೧). ಅದೇ ರೀತಿ ನೀಚ ಜಾತಿಯವನೂ ಮಾಂಸ ಭಕ್ಷಣ, ಸುರಾಪಾನವನ್ನು ಬಿಟ್ಟರೆ ಬ್ರಾಹ್ಮಣನೇ ಆಗುವನು. ಮನುಷ್ಯ ಜಾತಿ ಒಂದೇ ಎನ್ನುತ್ತಲೂ ಅದರಲ್ಲಿನ ಆಚಾರ ಭೇದದಿಂದ ಉಚ್ಛ-ನೀಚ ಜಾತಿಗಳ ಅಸ್ತಿತ್ವವನ್ನು ದೇವಚಂದ್ರನು ಒಪ್ಪಿಕೊಳ್ಳುತ್ತಾನೆ. ಈ ರೀತಿ ಬೇರೆ ಬೇರೆ ಅಭಕ್ಷ್ಯ ಭಕ್ಷಣಗಳನ್ನು ಸ್ವೀಕರಿಸಿ ಬ್ರಾಹ್ಮಣರಲ್ಲಿ ಹತ್ತು ಭೇದವಾಯಿತು. ಎನ್ನಲಾಗಿದೆ. ಹಾಗೂ ಕ್ಷತ್ರಿಯರಲ್ಲಿ, ಮುಸಲ್ಮಾನರಲ್ಲಿ, ಇಂಗರೀಜರಲ್ಲಿ ಹೀಗೆ ನಾನಾ ರೀತಿಯ ಸಮುದಾಯಗಳನ್ನು ಕುರಿತು ವರ್ಣಿಸುವಾಗ ಅವರಲ್ಲಿ ಭೇದಗಳು ಹುಟ್ಟಿಕೊಂಡು ನಾನಾ ರೀತಿಯ ಜಾತಿಗಳು ಅಸ್ತಿತ್ವದಲ್ಲಿ ಬಂದ ವರ್ಣನೆ ರಾಜಾವಳಿಯ ತುಂಬೆಲ್ಲ ಇದೆ. ಇವೆಲ್ಲ ದುಷ್ಟಮಕಾಲದ ಕಾಲದೋಷ ಎಂಬ ನಿರ್ಣಯವೂ ಇಲ್ಲಿ ಇದೆ.

ಆದರೆ ಜಾತಿ ಎಂಬುದು ಅಹಂಕಾರ ಎನ್ನುವ ದೇವಚಂದ್ರನಿಗೆ ಉಚ್ಛ-ನೀಚ ಜಾತಿಗಳ ಧರ್ಮಾಧಿಕಾರದ ಕುರಿತು ತನ್ನದೇ ತರತಮಗಳು ಇದ್ದವು. ಉಚ್ಛ-ನೀಚ ವಿಭಾಗಗಳು ಮಾಂಸ ತಿನ್ನುವ, ಮದ್ಯ ಸೇವಿಸುವ, ರಾತ್ರಿ ಭೋಜನ ಮುಂತಾದ ನಿಷಿದ್ಧ ಆಚಾರಗಳನ್ನು ನಡೆಸುವ ಅಂಶಗಳಿಂದ ನಿರ್ಣಯವಾಗುತ್ತಿತ್ತೆಂದು ಆತನು ವರ್ಣಿಸುತ್ತಾನೆ. ಆದರೆ ‘ರಾಜಾವಳಿ’ಯ ಪ್ರಪಂಚುಗಳು ಇದರಾಚೆಗಿನ ಸತ್ಯಗಳನ್ನು ಕೂಡ ತಿಳಿಸುತ್ತವೆ. ಆತನು ಬಸವೇಶ್ವರನ ವಿಡಂಬನೆ ಮಾಡುವಾಗ ಅವನು ನೀಚ ಜಾತಿಗಳಿಗೆಲ್ಲ ಲಿಂಗಧಾರಣೆ ಮಾಡಿ, ಅವರ ಪಾದಸ್ಪರ್ಶ ಮಾಡಿದ ವಿಷಯ ಒಂದು ಹಾಸ್ಯಾಸ್ಪದ ವಿಷಯ ಎಂಬಂತೇ ಚಿತ್ರಿತವಾಗುತ್ತದೆ. ಅದೇ ರೀತಿ ರಾಮಾನುಜರು ತಿರುಕುಳ ದಾಸರನ್ನು ಸೃಷ್ಟಿಸುವುದು, ಮಲೆಮಾದೇಶ್ವರ ಮೂಲತಃ ಮಾದಿಗನಾಗಿದ್ದುದು, ಮುಂತಾದ ಪ್ರಪಂಚುಗಳನ್ನು ವರ್ಣಿಸುವಲ್ಲೂ ಆಯಾ ಸಂಪ್ರದಾಯಗಳ ಪಾವಿತ್ರ್ಯತೆಯನ್ನು ಲೇವಡಿ ಮಾಡುವ ಧ್ವನಿಯನ್ನು ಅವನಲ್ಲಿ ಗಮನಿಸದೇ ಇರಲಾಗುವುದಿಲ್ಲ.

ದೇವಚಂದ್ರನ ನಿರೂಪಣೆಯ ಮೂಲದಲ್ಲಿ ಜೈನ ಸೃಷ್ಟಿಯಾದ ನಾಲ್ಕುವರ್ಣಗಳಿದ್ದು ಅವು ಮುಷ್ಕರ ಕರ್ತವ್ಯವನ್ನಾಧರಿಸಿ ಇದ್ದವು. ಕಾಲಾಂತರದಲ್ಲಿ ಜೈನಧರ್ಮ ಕೆಟ್ಟಿರುವುದರಿಂದ ಜಾತಿಮತ ಬೇಧಗಳು ಹುಟ್ಟಿದವು. ಆದರೆ ರಾಜಾವಳಿಯಿಂದ ನಾವು ತಿಳಿದುಕೊಳ್ಳುವಂತೇ ದೇವಚಂದ್ರನಿಗೆ ಜಾತಿ ಅವನ ಸುತ್ತಲಿನ ನಿಜವಾಗಿದ್ದು ಅವನೂ ಅದರಲ್ಲೇ ಬದುಕುತ್ತಿದ್ದ, ಹಾಗಾಗಿ ತಾನೂ ಈ ಜೈನ ಧರ್ಮದ ವಿಷಮ ಕಾಲದಲ್ಲೇ ಇರುವ ಕಾರಣದಿಂದ ಅದನ್ನು ಒಪ್ಪದೇ ವಿಧಿಯಿಲ್ಲ ಎಂಬ ಧಾಟಿಯೂ ಇದೆ. ಜೈನರಲ್ಲಿ ಇರುವ ಜಾತಿ ಬೇಧದ ಕುರಿತು ಆತನ ಜಾತಿನಿರ್ಣಯ ಎಂಬ ೧೩ನೇ ಅಧಿಕಾರ ಹಲವಾರು ಸಂಗತಿಗಳನ್ನು ತಿಳಿಸುತ್ತದೆ. ಇಂಥ ಜಾತಿ ಸಮಸ್ಯೆ ಬರಲಿಕ್ಕೆ ಕಾರಣ ಎಂದರೆ ಜೈನರು ನಾನಾ ಕೆಳಜಾತಿಯವರನ್ನು ತಮ್ಮ ಮತಕ್ಕೆ ಒಳಗೊಳ್ಳಲು ಮಾಡಿದ ಪ್ರಯತ್ನಗಳು. ಕಾಲಾಂತರದಲ್ಲಿ ಇಂಥ ಪ್ರಯತ್ನಗಳಿಂದ ಜೈನರಲ್ಲೂ ಚತುರ್ಥ ಪಂಚಮರ ವರ್ಣ ಸೃಷ್ಟಿಯಾಯಿತು. ಈ ಚತುರ್ಥ ಪಂಚಮರೆಂದರೆ ಬಹುಶಃ ಶೂದ್ರರು ಹಾಗೂ ಅಸ್ಪೃಶ್ಯರು. ಈ ಜಾತಿಗಳಲ್ಲಿ ಜಿನಧರ್ಮದ ಆಚಾರಗಳನ್ನು ಬೋಧಿಸುವಾಗ ಜೈನ ಗುರುಗಳು ಅವರಿಗೆ ನೀವು ಪೂರ್ವದಲ್ಲಿ ಇಭ್ಯ[1]

ಕುಲದವರಾಗಿದ್ದು ಕಾಲದೋಷದಿಂದ ಪಂಚಮರಾಗಿರುವಿರಿ ಎಂದು ಹೇಳುವುದೂ ರಾಜಾವಳಿಯಲ್ಲಿ ಸಾಮಾನ್ಯವಾಗಿದೆ. ಎಂದರೆ ಮೂಲತಃ ಜೈನರು ಒಪ್ಪಿಕೊಳ್ಳುವುದು ಮೇಲಿನ ಮೂರೇ ವರ್ಣಗಳನ್ನು ಏಕೆಂದರೆ ಇವರು ದ್ವಿಜರು. ಚತುರ್ಥ ಪಂಚಮ ಜಾತಿಗಳು ಇಂಥ ದ್ವಿಜರು ಕರ್ಮಭ್ರಷ್ಟರಾಗಿ ಹುಟ್ಟಿದವರು ಎಂಬ ನಿರೂಪಣೆಯನ್ನು ಸಾಧಿಸಿ ಅವರನ್ನು ಒಳಗೊಳ್ಳುವ ಒಂದು ವಿಧಾನ ಇಲ್ಲಿ ಕಾಣಿಸುತ್ತದೆ. ಇಂತವರು ‘ತ್ರಿಕಾಲ ಸಂಧ್ಯಾವಂದನೆ’ ಗೆಯ್ದು ಧರ್ಮಚಕ್ರವನ್ನು ಚಂದನದಿಂದ ಧರಿಸಿ, ಗರ್ಭಾದಾನ, ನಾಮಕರಣ ಮುಂತಾದವುಗಳಲ್ಲಿ ಹೋಮವನ್ನು ಗೃಹಶುದ್ಧಿಯಿಂದ ಮಡಿಸಿ ವ್ರತದಲ್ಲಿ’ ನಡೆದರೆ ಅವರು ಜೈನರಾಗುತ್ತಿದ್ದರು (ಪು.೩೭೧) ಅಷ್ಟರ ನಂತರ ಈ ಚತುರ್ಥ ಪಂಚಮರು ‘ದೇವಗುರು ಬ್ರಾಹ್ಮರೊಳ್ ಭಕ್ತಿಗೂಡಿ ಕೆಲವರು ಜಿನಧರ್ಮವನ್ನು ಪ್ರಕಟಿಸಿ ಧಾರ್ಮಿಕರೆನಿಸಿದರು’.

ಹೀಗೆ ಜೈನಮತದ ಪರಿಧಿಯೊಳಗೆ ತಂದ ಜಾತಿಗಳು ಆಯಾ ಜಾತಿಗಳಾಗೇ ಮುಂದುವರಿಯುವುದು ಕಂಡು ಬರುತ್ತದೆ. ಉದಾಹರಣೆಗೆ ಗಟ್ಟದ ಕೆಳಗಿನ ಪ್ರದೇಶದಲ್ಲಿ ಜೈನಮತಕ್ಕೆ ತರಲಾದ ಭಂಟರನ್ನು ಜೈನ ಭಂಟರೆಂದು ಆಚಾರ್ಯರು ವ್ರತವನ್ನು ನೀಡುತ್ತಾರೆ (ಪು೩೭೧). ಮತ್ತೊಂದು ಉದಾಹರಣೆಯಲ್ಲಿ ಕೆಲವರು ಪಂಚಮರು ಸಚ್ಚಾರಿತ್ರ್ಯವಂತರಾಗಿ ಧಾರ್ಮಿಕರಾಗಿ ಇರುವುದರಿಂದ ಹಾಗೂ ಪಂಚಮರೇ ಪ್ರಬಲರಾಗಿ ಈ ಪ್ರದೇಶದಲ್ಲಿ ಇರುವುದರಿಂದ ಅವರಿಗೆ ಜಾತಕರ್ಮಾಧಿಗಳನ್ನು ಸಂಕ್ಷೇಪದಿಂದ ನಡೆಸಿಕೊಂಡು ಬರುತ್ತಾರೆ. ಸರಗೂರು, ಅರಿಕುಠಾರ ಮುಂತಾದ ಸ್ಥಳಗಳಲ್ಲಿನ ಪಂಚಮರು ತಮ್ಮ ಕುರಿತು ಹೊಂದಿದ ಶ್ರದ್ಧೆಯನ್ನು ತಿಳಿದು ಅವರಿಗೆ ಸ್ನಾನ, ಸಂಧ್ಯಾವಂದನೆ ಮುಂತಾದವುಗಳನ್ನು ಬರೆದುಕೊಟ್ಟು ಹೇಳಿ, ಮದುವೆಯಲ್ಲಿ, ನಾಗವಲಿ ವಿಧಾನವನ್ನು ಮಾಡಿಸಿದರು. ಗೋತ್ರ ಸೂತ್ರಾದಿಗಳು ಅವರಿಗೆ ಇಲ್ಲದುದರಿಂದ ಗುಂಬದಲ್ಲಿ (ಮಡಕೆ) ಗೋತ್ರಗಳ ಚೀಟಿ ಬರೆದಿಟ್ಟು ಎತ್ತಿಸಿ ಅವರು ಎತ್ತಿಕೊಂಡ ಗೋತ್ರಗಳನ್ನು ಅವರಿಗೆ ನಿಶ್ಚಯಮಾಡಿದರು. (ಪು.೩೭೫) ಹೀಗೆ ಕೆಲಪಂಚಮರು ದೇವಸ್ಥಾನದ ಪೂಜೆ ಮಾಡಲು ಅನ್ಯರಿಲ್ಲದಿದ್ದಾಗ ತಾವೇ ನಡೆಸಿಕೊಂಡು ಬಂದರು. ಶ್ರವಣಬೆಳ್ಗೊಳದಲ್ಲೂ ಆಚಾರ್ಯ ಪಟ್ಟಗಳು ಬ್ರಾಹ್ಮಣೇತರರಿಗೆ ಆದುವು. ಇವೆಲ್ಲ ಬದಲಾವಣೆಗಳು ನಡೆಯುತ್ತಿದ್ದಾಗ ಜೈನರಲ್ಲಿ ಈ ರೀತಿಯ ಶ್ರಾವಕ ಜಾತಿಗಳಿಗೆ ಪಟ್ಟವಾಗುವುದೂ, ಆಚಾರ್ಯ ದೀಕ್ಷೆ ನೀಡುವುದೂ ಧರ್ಮಬದ್ಧವೆ? ಎಂಬ ವಿವಾದಗಳು ಏಳತೊಡಗಿದವು. ಏಕೆಂದರೆ ಇಷ್ಟಾಗಿಯೂ ಕೆಲಪಂಚಮರು ಮತ್ತೆ ಏಕನಾತಿ, ಎಲ್ಲಮ್ಮ ಮುಂತಾದ ನೀಚ ದೈವಗಳ ಒಕ್ಕಲಾಗಿ ದರ್ಶನ ಭ್ರಷ್ಟರೂ ಆಗಿದ್ದರು. ಸೋದೆಯ ಗುರುಪೀಠಕ್ಕೆ ಒಬ್ಬ ಪಂಚಮನನ್ನು ಉತ್ತರಾಧಿಕಾರಿಯನ್ನಾಗಿ ಮಾಡುವುದೆಂದು ನಿರ್ಧಾರವಾದಾಗ ಅದನ್ನು ಬ್ರಾಹ್ಮಣರಾದಿಯಾಗಿ ಎಲ್ಲ ಜೈನರೂ ವಿರೋಧಿಸಿ ದ್ವಿಜವರ್ಣಗಳಿಗೇ ಅದು ಸಲ್ಲಬೇಕೆಂದು ಆ ನಿರ್ಧಾರವನ್ನು ಬದಲಿಸಿದರು. (ಪು.೩೭೩)

ಕನಕಗಿರಿಯ ಸ್ವಾಮಿಗಳೂ ಈ ಮೇಲಿನ ಜಾತಿ ಸಮಸ್ಯೆಯನ್ನೂ ಎದುರಿಸಬೇಕಾಯಿತು. ಅರಿಕುಠಾರದ ಪ್ರದೇಶದ ಶ್ರಾವಕರು ಮಂಗಲ ದಿನಗಳಲ್ಲಿ ತಮ್ಮಮನೆಯಲ್ಲೇ ಬೇರೆ ಕೋಣೆಯಲ್ಲಿ ದ್ವಿಜರಿಂದ ಹೋಮ ಮಾಡಿಸಿ, ಪಾಕಶುದ್ಧ ಮಾಡಿಸಿ ದೀಕ್ಷಾಸಮಾರಂಭದಲ್ಲಿ ಸ್ವಾಮಿಗಳಿಗೆ ಆಹಾರ ನೀಡುತ್ತಿದ್ದರು. ಆದರೆ ಕ್ರಮೇಣ ಅವರು ತಾವೇ ಆಹಾರವನ್ನು ತಯಾರಿಸಿ ಕೊಡುತ್ತೇವೆ ಎಂದು ಪ್ರಾರ್ಥಿಸತೊಡಗಿದರು. ಆಗ ಸ್ವಾಮಿಗಳು ನೀವು ಹಿಂದೆ ಒಂದು ಕಾಲದಲ್ಲಿ ಇಭ್ಯ ಕುಲದವರೇ ಆಗಿದ್ದಿರಿ. ಕಾಲಾಂತರದಲ್ಲಿ ಚಾರಿತ್ರ್ಯಗೆಟ್ಟು ಬೇರೆ ಹೆಸರುಗಳನ್ನುಹೊಂದಿದ್ದರಿಂದ ಬ್ರಾಹ್ಮಣರು ನಿಮ್ಮಲ್ಲಿ ಆಹಾರ ತೆಗೆದುಕೊಂಡರೆ ತಪ್ಪೇನಿಲ್ಲ. ಆದರೆ ಉಳಿದ ಬೋಗಾರು ಮೊದಲಾದ ನಿಮ್ಮ ಕೂಡುವಳಿ ಸಂತಾನಗಳಿಗೆ ಜಾತಿ ಗೋತ್ರಗಳು ಇಲ್ಲದುದರಿಂದ ನಿಮ್ಮಲ್ಲಿ ಆಹಾರ ತೆಗೆದುಕೊಂಡರೆ ಅವರಲ್ಲೂ ತೆಗೆದುಕೊಳ್ಳಬೇಕಾಗುತ್ತದೆ. ಬ್ರಾಹ್ಮಣನಾದವನು ಜಾತ್ಯಭಿಮಾನವನ್ನು ಬಿಡಬೇಕು ಎಂಬುದು ಸರಿಯೇ. ಆದರೆ ತಪಸ್ವಿಗೆ ಜಾತಿ ಇಲ್ಲ ಎಂದು ಕಂಡವರಲ್ಲಿ ಆಹಾರ ಸ್ವೀಕರಿಸಿದರೆ ಅವನು ಸನ್ಯಾಸಿ ಹೇಗಾಗುತ್ತಾನೆ? ಅದು ಚಾರ್ವಾಕ ಮತವಾಗುವುದು. ಹಾಗಾಗಿ ಚಾರಿತ್ರ್ಯವಂತ ಮಾದಿಗನನ್ನೂ ಕೊಂಡಾಡಬಹುದೇ ಹೊರತೂ ಅನ್ನಪಾನಾದಿಗಳನ್ನು ಅವನಿಂದ ಕೊಂಡರೆ ಲೌಕಿಕ ವಿರೋಧವಾಗುವುದು” ಎಂದು ಆ ವಿಚಾರವನ್ನು ಪುರಸ್ಕರಿಸಲಿಲ್ಲ. ಹಾಗೂ ಈ ರೀತಿ ಜೈನರಲ್ಲೂ ಜಾತಿ, ಗೋತ್ರ, ಕುಲ, ಆಚಾರ ಎಂಬ ನಾಲ್ಕು ವ್ಯತ್ಯಾಸಗಳನ್ನು ಒಪ್ಪಿಕೊಳ್ಳಲಾಯಿತು (ಪು.೩೭೬). ದೇವಚಂದ್ರನು ಬಸವೇಶ್ವರನು ಕೆಳಜಾತಿಗಳಿಗೆ ಲಿಂಗಧಾರಣೆ ಮಾಡಿಸಿ ಅವರಿಗೆ ವಂದಿಸುತ್ತಿದ್ದ ಸಂಗತಿಯನ್ನು ಕುರಿತು ಲೇವಡಿಯ ಧ್ವನಿಯಲ್ಲಿ ಏಕೆ ಬರೆಯುತ್ತಾನೆ ಎಂಬುದಕ್ಕೆ ಬಹುಶಃ ಇದೇ ಕಾರಣವಿರಬೇಕು.

ಕೇವಲ ಕೆಳಜಾತಿಗಳಲ್ಲಿ ಮಾತ್ರವೇ ಅಲ್ಲ, ದ್ವಿಜಜಾತಿಗಳಲ್ಲೂ ಕೂಡ ಜೈನರಿಗೆ ಇಂಥ ತೊಂದರೆಗಳು ಬರುತ್ತಿದ್ದವು. ಜೈನ ಆಚಾರಗಳನ್ನು ಸ್ವೀಕರಿಸಿದ ‘ಒಕ್ಕಲು ದ್ವಿಜ’ ಎಂಬ ಸಮುದಾಯಗಳು ಇದ್ದವು. ಅವರೂ ಕ್ರಮೇಣ ಜೈನಾಚಾರಗಳನ್ನು ಮರೆತು ರಾತ್ರಿಭೋಜನ, ಅಭಕ್ಷ್ಯ ಭಕ್ಷ್ಯಣ ಮುಂತಾದವುಗಳಿಂದ ಆಚಾರ ಹೀನರಾಗುತ್ತಿದ್ದರು. ದೇವಚಂದ್ರನು ಬಲ್ಲಾಳರಾಯನ ಕಾಲದ ಒಂದು ಸಂಗತಿಯನ್ನು ಉಲ್ಲೇಖಿಸುತ್ತಾನೆ. ಅದರ ಪ್ರಕಾರ ಆ ಕಾಲದಲ್ಲಿ ಹಳೆ ಮೈಸೂರಿನ ೭೦೦ ಮಂದಿ ಒಕ್ಕಲು ದ್ವಿಜರಲ್ಲಿ ೫೧೫ ಮಂದಿ ಜಿನಾಚಾರವನ್ನು ತ್ಯಜಿಸಿದ್ದರು. ಆ ಸಂದರ್ಭದಲ್ಲಿ ಬಲ್ಲಾಳರಾಯನು ಒಂಭತ್ತು ಗೋತ್ರದ ಬ್ರಾಹ್ಮಣರನ್ನು ಹೊರಗಿನಿಂದ ತನ್ನ ನಾಡಿಗೆ ಕರೆಸಿಕೊಳ್ಳುತ್ತಾನೆ. ಹೀಗೆ ಬಂದ ಬ್ರಾಹ್ಮಣರು ೭೦೦ಮಂದಿ ಒಕ್ಕಲು ದ್ವಿಜರಲ್ಲಿ ಭೋಜನ-ಪ್ರತಿಭೋಜನವನ್ನು ನಿರಾಕರಿಸಿ ‘ನೀವು ಪ್ರಾಯಶ್ಚಿತ್ತ ಮಾಡಿಸಿಕೊಳ್ಳಿ’ ಎಂದು ಆದೇಶಿಸುತ್ತಾರೆ ಆದರೆ ೫೧೫ ಒಕ್ಕಲು ದ್ವಿಜರು ಅದನ್ನೊಪ್ಪದೇ ದ್ವೇಷಮಾಡಿ ಬೇರೆ ನಿಲ್ಲುತ್ತಾರೆ. ಹಾಗೂ ಅವರಲ್ಲೇ ಕೆಲವರು ಶಂಕರಚಾರ್ಯರ ಶಿಷ್ಯರಾಗಿ ರಾತ್ರಿಭೋಜನ ಪ್ರೀತರಾದರು.(ಪು.೧೬೪-೬೫).

ಶೂದ್ರ ಪಂಚಮ ಜಾತಿಗಳು ಒಂದಲ್ಲಾ ಒಂದುಮತದ ಆಚಾರವನ್ನು ಸ್ವೀಕರಿಸಿ ಅದರಿಂದ ಭ್ರಷ್ಟರಾಗುವ ಅಥವಾ ಮತಾಂತರ ಹೊಂದುವ ಸಂಗತಿ ಸಾಮಾನ್ಯವಾಗಿದ್ದಂತೇ ತೋರುತ್ತದೆ. ದೇವಚಂದ್ರನು ಬಸವೇಶ್ವರ, ರಾಮಾನುಜ, ಮುಸಲಮಾನರು ಮುಂತಾದವರೆಲ್ಲ ತಮ್ಮ ಮತಾಚಾರಗತಳನ್ನು ಕೆಳಜಾತಿಗಳಿಗೆ ನೀಡಿ ತಮ್ಮ ಮತದ ಪರಿಧಿಗೆ ಅವರನ್ನು ಸೆಳೆದುಕೊಳ್ಳುವ ವಿಷಯದ ಕುರಿತು ಈ ರೀತಿಯಲ್ಲೇ ವರ್ಣಿಸುತ್ತಾನೆ. ಈ ಕೆಳಜಾತಿಗಳಿಗೆ ಶ್ರಾವಕಾಚಾರವನ್ನು ನೀಡುವುದರ ಮೂಲಕವೋ, ಲಿಂಗ-ನಾಮ ಧಾರಣೆಗಳನ್ನು ಮಾಡಿಸುವ ಮೂಲಕವೋ ಅವರಿಗೆ ಮತದ ಗುರುತನ್ನು ನೀಡಲಾಗುತ್ತಿತ್ತೇ ವಿನಃ ಅವರ ‘ಜಾತಿ’ಯನ್ನು ಅದು ಬದಲಿಸಿದಂತೇ ಕಾಣುವುದಿಲ್ಲ. ಬಹುಶಃ ಇಂಥ ಮತಗಳ ಪ್ರಭಾವಕ್ಕೆ ಒಳಗಾದವರು ತಮ್ಮ ಆಚಾರವನ್ನು ಬದಲಿಸಿಕೊಂಡುದರಿಂದ ಅವರ ಜಾತಿಗಳಲ್ಲೇ ಅವರು ಪ್ರತ್ಯೇಕ ಗುಂಪಾಗಿ ಹೊಸ ಹೆಸರನ್ನು ಪಡೆಯುತ್ತಿದ್ದರು. ಜೈನ ಭಂಟರು, ನಾಮಧಾರಿ ಒಕ್ಕಲುಗಳು ಮುಂತಾದ ಹೆಸರುಗಳು ಇದನ್ನು ಸೂಚಿಸುತ್ತವೆ. ಈ ರೀತಿಯ ಮತ ಪ್ರಚಾರದಲ್ಲಿ ಅನ್ಯಮತದವರು ಈಗಾಗಲೇ ಜೈನ ಶ್ರಾವಕರಾಗಿರುವವರನ್ನೂ ತಮ್ಮೆಡೆಗೆ ಸೆಳೆದುಕೊಂಡಿದ್ದಾರೆ ಎಂಬ ಉಲ್ಲೇಖಗಳೂ ‘ರಾಜಾವಳಿ’ಯಲ್ಲಿ ಇವೆ. ಕಂಠೀರವರಸನ ಕಾಲದಲ್ಲಿ ಮಲೆಯೂರು ಸುತ್ತಮುತ್ತ ದೇವಸ್ಥಾನಗಳ ಜೈನಬ್ರಾಹ್ಮಣರು ಕಾಲದೋಷದಿಂದ ಶಿಥಿಲವಾದರು ಹಾಗೂ ಗ್ರಾಮಾನುಗ್ರಾಮಗಳಲ್ಲಿದ್ದ ಜೈನಗೌಡರೆಲ್ಲ ನಾಮ-ಲಿಂಗಧಾರಿಗಳಾಗಿ ಊರೂರಲ್ಲಿ ಬಸವನ ಗುಡಿಗಳನ್ನು ಮಾಡಿಕೊಂಡು ಜಂಗಮರ ಶಿಷ್ಯರಾದರು (ಪು.೨೮೭). ಕೆಲವೆಡೆ ಜೈನ ಒಕ್ಕಲುಗಳು ಮಲ್ಲಿಕಾರ್ಜುನನ ಒಕ್ಕಲಾಗಿ ಲಿಂಗಧರಿಸುತ್ತಾರೆ. ಅಂದರೆ ಜೈನರಾಗಲೀ ಅನ್ಯಮತದವರಾಗಲೀ ಅವರಲ್ಲಿನ ಬ್ರಾಹ್ಮಣ-ಜಂಗಮ ವರ್ಗಗಳು ಸದಾ ಮತೀಯ ಆಚಾರಗಳನ್ನು ನಿರ್ದೇಶಿಸುತ್ತಾ ಇರಬೇಕಿತ್ತು. ಅವರು ಐತಿಹಾಸಿಕವಾಗಿ ಆ ಭಾಗದಲ್ಲಿ ಅನುಪಸ್ಥಿತರಾದರೆ ಈ ಕೆಳಜಾತಿಗಳು ಆಚಾರ ಭ್ರಷ್ಟರಾಗಿಯೋ, ಮತಾಚಾರವನ್ನು ಆಚರಿಸಿಯೇ ಬದುಕುವುದು ಸಾಮಾನ್ಯವಾಗಿತ್ತು.

ಜಾತಿ ಮತ್ತು ಧರ್ಮಾಧಿಕಾರದ ನಿರ್ಣಯ

ದೇವಚಂದ್ರನ ಜಾತಿನಿರ್ಣಯ ಎಂಬ ಅಧ್ಯಾಯವು ಜೈನ ಋಷಿಗಳ ಮತವನ್ನು ತಿಳಿಸಲಿಕ್ಕಾಗಿ ಬರೆದುದಾಗಿದೆ. ಅಂದರೆ ತಮ್ಮ ಕಾಲದಲ್ಲಿ ಜೈನ ಆಚಾರವನ್ನು ಸ್ವೀಕರಿಸಿ ಜೈನ ಮತದ ವಿಶ್ವದೊಳಗೆ ಬಂದ ಈ ವಿಭಿನ್ನ ಜಾತಿಗಳಿಗೆ ಧರ್ಮದ ಆಚರಣೆಯಲ್ಲಿನ ಅಧಿಕಾರ ಯಾವ ಸ್ವರೂಪದ್ದು? ಎಂಬುದನ್ನು ಜೈನ ಋಷಿಗಳೇ ನಿರ್ಣಯಿಸಬೇಕು. ಅನ್ಯಮತಗಳನ್ನು ಅವಲಂಬಿಸಿದ ಜಾತಿಗಳು ಇಲ್ಲಿ ಪ್ರಸ್ತುತವಾಗಲು ಸಾಧ್ಯವಿಲ್ಲ. ಹಾಗಾಗಿ ವೀರಶೈವರು ಅಥವಾ ಶ್ರೀವೈಷ್ಣವರು ತಮ್ಮಮತಗಳಲ್ಲಿ ಇಂಥದೇ ಸಮಸ್ಯೆಗಳನ್ನೂ ಹೊಂದಿದ್ದರೆ? ಹಾಗೊಮ್ಮೆ ಹೊಂದಿದ್ದರೆ ಅವರು ಹೇಗೆ ತಮ್ಮ ಧರ್ಮ ಕಲ್ಪನೆಯಲ್ಲಿ ಅದನ್ನು ನಿರ್ಧರಿಸಿದರು? ಎಂಬ ನಮ್ಮ ಪ್ರಶ್ನೆಗಳಿಗೆ ದೇವಚಂದ್ರನು ಉತ್ತರಿಸುವುದಿಲ್ಲ. ಆದರೆ ‘ರಾಜಾವಳಿ’ ಈ ಪ್ರಶ್ನೆ ಏಳುವಂತೇ ಮಾಡುತ್ತದೆ. ಉತ್ತರ ಸಿಕ್ಕದಿದ್ದರೂ ಇಂಥ ಪ್ರಶ್ನೆಗಳನ್ನೇ ನಾವು ಉಪೇಕ್ಷಿಸಿದ್ದೇವೆ ಎಂಬ ನಿಜವಂತೂ ನಮ್ಮ ಗಮನಕ್ಕೆಬಾರದೇ ಇರದು.

ಅಂದರೆ ಒಂದು ಕಾಲದಲ್ಲಿ ಹಾಗೂ ಪ್ರದೇಶದಲ್ಲಿ ಇದ್ದ ಜಾತಿಗಳ ಧರ್ಮಾಧಿಕಾರವನ್ನು ನಿರ್ಣಯಿಸುವ ‘ಏಕ ಕೇಂದ್ರ’ ಮತೀಯ ನೆಲೆಯಲ್ಲಿ ಇರಲು ಸಾಧ್ಯವಿಲ್ಲ. ಏಕೆಂದರೆ ಧರ್ಮ ಧರ್ಮ ಕಲ್ಪನೆ, ಮುಸಲ್ಮಾನರ ಧರ್ಮಕಲ್ಪನೆಗಳೆಂತೇ ಜೈನರ ಧರ್ಮ ಕಲ್ಪನೆಗೆ ಕೂಡ ತನ್ನದೇ ಆದ ತಾತ್ವಿಕ ಆಧಾರಗಳು ಇದ್ದವು. ಹಾಗೆಂದು ಅವೆಲ್ಲ ಈ ಪ್ರತ್ಯೇಕಥೆಗಳನ್ನು ಸಮಾಜದ ಯಾವ ಪಾತಳಿಯಲ್ಲಿ ಕಾಯ್ದುಕೊಂಡಿದ್ದವು ಎಂಬುದೂ ಮುಖ್ಯವಾದ ಪ್ರಶ್ನೆಯಾಗಿದೆ. ಈಮೇಲಿನ ಎಲ್ಲರ ಧರ್ಮ ಕಲ್ಪನೆಯಲ್ಲೂ ಮತ ಪ್ರತಿಪಾದಕ ವರ್ಗ ಹಾಗೂ ಮತಪ್ರಭಾವಕ್ಕೆ ಒಳಗಾದ ವರ್ಗ ಎಂಬ ಎರಡು ಬೇಧಗಳನ್ನು ಸ್ಥೂಲವಾಗಿ ಗಮನಿಸಬಹುದು. ಮೊದಲನೆಯ ವರ್ಗ ತನ್ನ ತಾತ್ವಿಕಥೆ ಹಾಗೂ ಆಚಾರಗಳ ಒಂದು ಮಾದರಿಯನ್ನು ನಿದರ್ಶಿಸುತ್ತಿದ್ದರೆ ಎರಡನೆಯ ವರ್ಗ ಈ ಮೇಲಿನವರ ಸಂಸರ್ಗಕ್ಕೆ ಬಂದು ಅದಕ್ಕೆ ಆಶ್ರಯದಾತನಾಗುತ್ತದೆ. ಇವರಲ್ಲಿ ವಿಭಿನ್ನ ರಾಜರೂ, ಪ್ರಾಪಂಚಿಕ ಕರ್ಮಗಳಲ್ಲಿ ಜೀವಿಸಿಕೊಂಡಿರುವ ವಿಭಿನ್ನ ಜಾತಿಗಳೂ ಸೇರಿವೆ. ಈ ಜಾತಿಗಳಲ್ಲಿ ಆಯಾ ಮತವು ಪ್ರತಿಪಾದಿಸಿದ ಧರ್ಮವು ಆಂಶಿಕವಾಗಿ ಮಾತ್ರ ಇರುವುದರಿಂದ ಅವು ಆಯಾ ಧರ್ಮದ ‘ಅವಸಾನ’ ಸ್ಥಿತಿಯನ್ನು ಮಾತ್ರ ನಿದರ್ಶಿಸಬಹುದು. ಧರ್ಮದ ಮಾದರಿಯನ್ನು ಪ್ರತಿಪಾದಿಸುವವರೂ ಆಚಾರದಲ್ಲಿ ಅದನ್ನು ಸಂಪೂರ್ಣವಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಒಟ್ಟಾರೆಯಾಗಿ ದುಷ್ಷಮ ಕಾಲ ಪ್ರವತಿಸುತ್ತಿದೆ ಎನ್ನದೇ ವಿಧಿ ಇಲ್ಲ.

ಈ ಮತಗಳೆಲ್ಲ ತಮ್ಮ ಮಾದರಿಯ ಆಚಾರಗಳನ್ನು ‘ಬ್ರಾಹ್ಮಣ್ಯ’ ಎಂದು ಪರಿಗ್ರಹಿಸಿದ್ದು ಕಂಡುಬರುತ್ತದೆ. ಹಾಗಾಗಿ ಧರ್ಮಾಚಾರವನ್ನು ನಿರ್ದೇಶಿಸುವ ಅಧಿಕಾರ ಅವರಿಗೆ ಬರುತ್ತದೆ. ಅನುಯಾಯಿಗಳಿಗೆ ಮಾತ್ರ. ಏಕೆಂದರೆ ಜೈನರು ವೈದಿಕರ ಬ್ರಾಹ್ಮಣ್ಯವನ್ನು ‘ಮಾದರಿ’ ಎಂದು ಒಪ್ಪಿಕೊಳ್ಳುವುದಿಲ್ಲ. ವೈಷ್ಣವರು ವಿಷ್ಣುವನ್ನು ಪೂಜಿಸಿದ ಶೈವರದನ್ನೂ ಬ್ರಾಹ್ಮಣ್ಯರ ಮಾದರಿ ಎಂದು ಒಪ್ಪಿಕೊಳ್ಳಲು ತಯಾರಿಲ್ಲ. ಅಂದರೆ ವೇದ, ವರ್ಣಕಲ್ಪನೆ, ಜನಿವಾರ, ಸಂಧ್ಯಾವಂದನೆ ಮುಂತಾದವುಗಳ ಜೊತೆಗೇ ವಿಭೂತಿ, ನಾಮ ಮುಂತಾದವೂ ಆಯಾ ಬ್ರಾಹ್ಮಣರಿಗೆ ಬ್ರಾಹ್ಮಣ್ಯದ ಮಾದರಿಯನ್ನೂ ನಿರ್ಧರಿಸುವ ಅಂಶಗಳಾಗಿರುತ್ತವೆಯಾದ್ದರಿಂದ ಅವುಗಳೆಲ್ಲ ಪ್ರತ್ಯೇಕಥೆಯನ್ನೂ ಹೊಂದುತ್ತವೆ. ಈ ಪ್ರತ್ಯೇಕಥೆಯನ್ನೂ ದೇವಚಂದ್ರನು ‘ಮತ’ ಎಂಬ ಪರಿಭಾಷೆಯಿಂದ ಸೂಚಿಸುತ್ತಾನೆ. ಹಾಗೂ ಈ ಮತ ಬ್ರಾಹ್ಮಣ್ಯದ ಒಂದು ವೈಶಿಷ್ಟ್ಯವಾಗಿ ಬರುತ್ತದೆ ಎಂಬುದು ಗಮನಿಸಬೇಕಾದ ವಿಷಯ, ಹಾಗಾಗೇ ‘ಮುಲ್ಲಾಶಾಸ್ತ್ರ’ವನ್ನೂ ಬರೆದವನು ದೇವಚಂದ್ರನ ಕಥನದಲ್ಲಿ ‘ಮಲ್ಲಭಟ್ಟ’ ಎಂಬ ಬ್ರಾಹ್ಮಣನಾಗುತ್ತಾನೆ. ಮುಸಲಮಾನರದೂ ಒಂದು ಶಾಸ್ತ್ರವೇ ಆಗಿದ್ದರೆ ಅವರಲ್ಲೂ ಬ್ರಾಹ್ಮಣರು ಇರಲೇಬೇಕು ಎಂಬ ನಂಬಿಕೆ ಇಲ್ಲದೆ. ಹಾಗೂ ಅಷ್ಟೇ ಸಹಜವಾಗಿ ಅವರ ಶಾಸ್ತ್ರವೇ ಬೇರೆ, (ಅದು ಮಿಥ್ಯಾಶಾಸ್ತ್ರವೇ ಆಗಿರಬಹುದು) ಎಂಬ ನೆಲೆಯಲ್ಲಿ ದೇವಚಂದ್ರನು ತನ್ನಮತೀಯ ಪ್ರತ್ಯೇಕಥೆಯನ್ನು ಗುರುತಿಸಿಕೊಳ್ಳುತ್ತಾನೆ.

ಜಾತಿಗಳ ಧರ್ಮಾಧಿಕಾರ ಈ ರೀತಿ ಎಲ್ಲ. ಮತಗಳಿಗೂ ಸಾಮಾನ್ಯವಾಗಿರುವ ‘ಬ್ರಾಹ್ಮಣ್ಯ’ದ ಸಮಸ್ಯೆಯಾಗಿ ಮತಪ್ರಪಂಚದಲ್ಲಿ ಪ್ರಸ್ತುತತೆ ಪಡೆಯುತ್ತದೆ. ಏಕೆಂದರೆ ಹಾಗೇ ಅನ್ಯ ಬ್ರಾಹ್ಮಣ್ಯಗಳ ಮಾದರಿಯನ್ನು ಅಲ್ಲಗಳೆಯುವ ಕೆಲಸವೂ ನಡೆಯುತ್ತದೆ. ಈ ಎಲ್ಲ ಮತಗಳ ಮಧ್ಯೆ ನಡೆದ ಸಂಘರ್ಷಗಳು ಇಂಥ ವಿಭಿನ್ನ ಬ್ರಾಹ್ಮಣ್ಯಗಳ ಮುಂದಾಳತ್ವದಲ್ಲಿ ಅದರ ಅನುಯಾಯಿಗಳು ನಡೆಸಿದ ಸಂಘರ್ಷಗಳಾಗಿವೆ. ಆದರೆ ಬ್ರಾಹ್ಮಣ್ಯ ಕಲ್ಪನೆ ಅಲ್ಲಿ ಹೊಡೆದಾಡುವ ವಿಷಯವಾಗುವುದಿಲ್ಲ. ಬದಲಾಗಿ ದೇವರ ಸ್ವರೂಪ ಏನು? ಅವನನ್ನು ಯಾವ ಹೆಸರಿನಿಂದ ಪೂಜಿಸಬೇಕು? ಹೇಗೆ ಪೂಜಿಸಬೇಕು? ಎಂಬ ವಿಷಯ ನಿರ್ಣಾಯಕವಾಗಿ ಬಿಡುತ್ತದೆ. ಅಥವಾ ಇನ್ನೂ ಸರಿಯಾಗಿ ಹೇಳಬಹುದಾದರೆ ‘ಮೋಕ್ಷಸಾಧನೆ’ಯ ಮಾರ್ಗ ಮತ್ತು ಕಲ್ಪನೆ ಈ ಮತಗಳೆಲ್ಲ ರಾಜಿಮಾಡಿಕೊಳ್ಳಲಾಗದ ವಿಷಯವಾಗುತ್ತದೆ. ಹಾಗೂ ತಂತಮ್ಮ ಮೋಕ್ಷ ಸಾಧನೆಯ ಮಾರ್ಗಕ್ಕೆ ಅನುಯಾಯಿಗಳನ್ನು ಬೆಳೆಸಿಕೊಳ್ಳುವ ಹಾಗೂ ಆ ಮೂಲಕ ಸಾಮುದಾಯಿಕ ಬಲವನ್ನೂ, ಭದ್ರತೆಯನ್ನು ಗಳಿಸಿಕೊಳ್ಳುವ ಸ್ಪರ್ಧೆ ಈ ವಿಭಿನ್ನ ಮತಗಳಿಗೆ ಪ್ರಧಾನವಾಗುತ್ತದೆ.

ಆದರೆ ವಿಭಿನ್ನ ಜಾತಿಗಳನ್ನು ಒಳಗೊಳ್ಳುವ ಪ್ರಕ್ರಿಯೆಯಲ್ಲಿ ಧರ್ಮಾಧಿಕಾರದ ಸಮಸ್ಯೆ ಜೈನ ಮತದಂಥ ಮತಕ್ಕೂ ಹುಟ್ಟುತ್ತದೆ. ಹಾಗೂ ಅದು ಜೈನ ಬ್ರಾಹ್ಮಣ್ಯದ ಕಲ್ಪನೆಯಿಂದಲೇ ನಿರ್ಧಾರವಾಗುತ್ತದೆ. ಜೈನದಲ್ಲಿ ಈ ಸಮಸ್ಯೆ ಪ್ರಕಟವಾಗುವ ರೀತಿಯನ್ನು ‘ರಾಜಾವಳಿ’ಯಲ್ಲಿ ಗಮನಿಸಬಹುದು. ಜೈನ ಪಂಡಿತರಲ್ಲಿ ಜೈನ ಬ್ರಾಹ್ಮಣರು ಹಾಗೂ ಉಳಿದ ಜೈನ ದ್ವಿಜರು ಧರ್ಮಾಧಿಕಾರದಲ್ಲಿ ಸಮಾನರೆ? ಎಂಬ ವಿವಾದವೂಇತ್ತು. ದ್ವಿಜರಲ್ಲೆಲ್ಲ ಬ್ರಾಹ್ಮಣರೇ ಶ್ರೇಷ್ಠ. ಏಕೆಂದರೆ ಭರತ ಚಕ್ರವರ್ತಿಯೇ ಇದನ್ನು ಸಿದ್ಧಮಾಡಿದ್ದಾನೆ. ಆದರೆ ಜೈನ ಋಷಿಗಳು ವರ್ಣದ ಕ್ರಮವನ್ನು ಕ್ಷತ್ರಿಯ, ಬ್ರಾಹ್ಮಣ ಎಂಬ ಕ್ರಮದಲ್ಲಿ ಹೇಳಿರುವುದರಿಂದ ಕ್ಷತ್ರಿಯರೇ ಮೇಲು ಎಂಬ ವಾದವೂ ಇತ್ತು. ಆದರೆ ದೇವಚಂದ್ರನ ಕಾಲದಲ್ಲಿ ಕ್ಷತ್ರಿಯರೆಂದರೆ ಗೋತ್ರ, ಸೂತ್ರಗಳೇ ಸರಿಯಾಗಿ ಇಲ್ಲದ ಜಾತಿಗಳಾಗಿದ್ದವು. ವ್ಯಾಪಾರ ಮಾಡುವವರನ್ನು ವೈಶ್ಯರೆಂದು ಸಾಮಾನ್ಯವಾಗಿ ಕರೆಯಲಾಗಿದೆ. ಹಾಗೂ ಒಂದು ವೈದಿಕ ವರ್ಣಕಲ್ಪನೆಯಲ್ಲೇ ಜೈನರು ಈ ವರ್ಣಗಳನ್ನು ಗ್ರಹಿಸಿದ್ದರು ಎಂಬುದು ಸ್ಪಷ್ಟ. ಈ ಕೆಳಗಿನ ಎರಡೂ ವರ್ಣಗಳಿಗೂ ಪುರೋಹಿತರಾಗಿ, ಉಪಾಧ್ಯಾಯರಾಗಿ, ದಾನ-ದೀಕ್ಷೆಗೆ ಯೋಗ್ಯರಾದವರು ಬ್ರಾಹ್ಮಣರು ಮಾತ್ರವಾಗಿದ್ದರು. ಆದರೂ ಆಚಾರ್ಯ ಪಟ್ಟ, ಅರ್ಚಕ ವೃತ್ತಿಗಳಿಗೆ ವರ್ಣತ್ರಯರೂ ಯೋಗ್ಯರೆಂಬುದನ್ನು ಜೈನ ಆಚಾರ್ಯರು ಅನಿವಾರ್ಯ ಪ್ರಸಂಗಗಳಲ್ಲಿ ಒಮ್ಮತದಿಂದ ಒಪ್ಪಿಕೊಂಡದ್ದೂ ಕಂಡುಬರುತ್ತದೆ. ಈ ವರ್ಣತ್ರಯಗಳ ಜಾತಿಗಳಲ್ಲಿ ಭೋಜನ. ಪ್ರತಿಭೋಜನವಲ್ಲದೇ ಮದುವೆ ಸಂಬಂಧಗಳೂ ಸಮ್ಮತಿಸಲ್ಪಟ್ಟಂತೇ ತೋರುತ್ತದೆ.

ಈ ಮೇಲಿನ ದ್ವಿಜ ಜಾತಿಗಳಲ್ಲದೇ ಚತುರ್ಥ, ಪಂಚಮ ಶೂದ್ರಾದಿಗಳು ಸಂಸ್ಕಾರ ಹೀನರು ಎಂದು ಕರೆಯಲಾಗಿದೆ. ಹಾಗಾಗಿ ಅವರು ಆಶೀರ್ವಾದ ಕೊಡಲು ಯೋಗ್ಯರಲ್ಲ ಎಂಬ ಅಭಿಪ್ರಾಯ ಜೈನರಲ್ಲಿ ಬಲವಾಗಿತ್ತು. ಅದಕ್ಕೆ ಮುಖ್ಯ ಕಾರಣವೇ ಈ ಶೂದ್ರಾದಿಗಳಿಗೆ ಉಪನಯನ ಸಂಸ್ಕಾರ ಇಲ್ಲ ಎಂಬುದಾಗಿ ‘ರಾಜಾವಳಿ’ಯಲ್ಲಿ ಬರುತ್ತದೆ. ಎಂದರೆ ಈ ಶೂದ್ರಾದಿ ಜಾತಿಗಳು ಜೈನ ಸಮಾಜದ ಅಂತರ್ಗತ ಭಾಗಗಳಾಗಿರಲಿಲ್ಲ. ಆದರೆ ಅವರಿಗೆ ಶ್ರಾವಕಾಚಾರವನ್ನು ನೀಡಿ ಜೈನರ ಅನುಯಾಯಿಗಳನ್ನಾಗಿ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿತ್ತು. ಕೆಲವು ಜಾತಿಗಳಿಗೆ ಗೋತ್ರ-ಸೂತ್ರಗಳನ್ನೂ ನೀಡಿ ಸಂಧ್ಯಾವಂದನಾದಿಗಳನ್ನು ಕಲಿಸಿ ಅವರನ್ನು ದ್ವಿಜರನ್ನಾಗಿ ಮಾಡುವ ಹಂತಗಳನ್ನೂ ನೋಡಬಹುದು. ಆದರೆ ಸಾಧಾರಣವಾಗಿ ಇಂಥ ಶ್ರಾವಕರಿಗೆ ಸ್ವತಃ ದ್ವಿಜರಾಗುವ ಸಾಧ್ಯತೆ ಇರಲಿಲ್ಲ. ಹಾಗಾಗಿ ಪಾಕಶುದ್ಧಿಗೆ ಅವರು ದ್ವಿಜರ ಸಹಾಯವನ್ನೇ ಪಡೆಯುತ್ತಿದ್ದರು. ಇಂಥ ಜಾತಿಗಳ ಜೊತೆಗೆ ದ್ವಿಜರು, ಅದರಲ್ಲೂ ಆಚಾರ್ಯ-ಬ್ರಾಹ್ಮಣರು ಸಹಭೋಜನವನ್ನು ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಏಕೆಂದರೆ ಜೈನರು ತಮ್ಮ ಕಾಲದ ಲೌಕಿಕಕ್ಕೆ ವಿರೊಧವಾಗದಂತೇ ನಡೆದುಕೊಳ್ಳುವ ಸಲುವಾಗಿ ಹೀಗೇ ಮಾಡಬೇಕೆಂದು ಆಚಾರ್ಯರು ನಿರ್ಣಯಿಸಿದ್ದರು. ಹೀಗೆ ಜೈನಾ ಚಾರ್ಯರು ತಮ್ಮ ಕಾಲದ ರೂಢಿಗಳಿಗೆ ಬದ್ಧರಾಗಿ ಜೈನ ಜಾತಿನಿರ್ಣಯವನ್ನು ಮಾಡಿದ್ದು ಕಂಡುಬರುತ್ತದೆ. ಜೈನರ ವೈಶಿಷ್ಟ್ಯ ಎಂದರೆ ಈ ಜಾತಿನಿರ್ಣಯವನ್ನು ಲೌಕಿಕ ರೂಢಿ, ಅನಿವಾರ್ಯ, ಕಾಲದೋಷ ಎಂದೇ ಅವರ ಆಚಾರ್ಯರು ನಿರೂಪಿಸುತ್ತಾರೆ. ಅವರ ಸೃಷ್ಟಿಯಲ್ಲಿ ಮೂಲತಃ ಮನುಷ್ಯರಲ್ಲಿ ಜಾತಿಬೇಧ ಇರಲಿಲ್ಲ.

ಈ ರೀತಿ ಆಯಾ ಮತಗಳಲ್ಲಿ ಪುರೋಹಿತ ಜಾತಿಗಳ ಪಾತಳಿಯಲ್ಲಿ ಅವುಗಳ ಪ್ರತ್ಯೇಕ ಅಸ್ತಿತ್ವ ಅನೂಚಾನವಾಗಿ ಮುಂದುವರಿಯಿತು. ಪುರೋಹಿತ ಜಾತಿಗಳಿಗೆ ನಿರ್ಣಾಯಕರಾದವರೆಂದರೆ ಅವರ ಶ್ರಾವಕರು ಹಾಗೂ ಆಳುವವರ ಆಶ್ರಯ. ದೇವಚಂದ್ರನಿಗೂ ರಾಜಾಶ್ರಯ ಜೈನರ ಉಳಿವಿಗೆ ತೀರ ನಿರ್ಣಾಯಕ ಎಂದು ಎನ್ನಿಸಿದೆ. ಹಾಗಾಗೇ ಯಾವ ರಾಜರು ಜೈನ ಮತಕ್ಕೆ ಆಶ್ರಯ ನೀಡದರು ಎಂಬುದು ಆತನಿಗೆ ಮುಖ್ಯ. ಇಲ್ಲಿನ ಮತಪ್ರಚಾರಗಳೆಲ್ಲ ಮೊತ್ತ ಮೊದಲು ರಾಜನನ್ನು ಮತಾಂತರಿಸುವ ಮೂಲಕ ನಡೆಯುತ್ತವೆ. ಈ ರಾಜರ ಮೇಲೆ ಹಿಡಿತ ಸಾಧಿಸಿದ ನಂತರ ಚತುರ್ಥ-ಪಂಚಮರಿಗೆ ಒತ್ತಾಯದಿಂದ ಮತಾಚಾರ ದೀಕ್ಷೆ ನೀಡಲಾಗುತ್ತದೆ. ಈ ಚತುರ್ಥ ಪಂಚಮ ಜಾತಿಗಳು ಅನೂಚಾನವಾಗಿ ಈ ರೀತಿಯ ಮತಾಚಾರಗಳನ್ನು ಉಳಿಸಿಕೊಂಡು ಬರುವ ಶಕ್ತಿಯನ್ನು ಹೊಂದಿಲ್ಲ. ಹಾಗೂ ಶ್ರಾವಕಾಚಾರವನ್ನು ಅವರು ಸುಲಭವಾಗಿ ಬಿಡುತ್ತಾರೆ.

ಜಾತಿಗಳ ಧರ್ಮಾಧಿಕಾರವನ್ನು ವಿಭಿನ್ನ ಮತಗಳು ನಿರ್ಣಯಿಸುವಾಗ ಈ ನಿರ್ಣಯಗಳು ‘ಆಚಾರ್ಯ ಪಟ್ಟ’, ಆರ್ಚಕ ಸ್ಥಾನದ ಸಂಬಂಧಿಸಿ ಸಮಸ್ಯಾತ್ಮಕವಾಗುವುದು ಸಾಮಾನ್ಯವಾಗಿದೆ. ಅದನ್ನೂ ಆಯಾ ಮತಗಳು ತಂತಮ್ಮದೇ ಸಮಾಂತರ ಪ್ರಮಾಣಗಳಿಂದ ತಂತಮ್ಮ ಅನುಯಾಯಿ ಜಾತಿಗಳ ಅಧಿಕಾರವನ್ನು ಮಾತ್ರ ನಿರ್ಣಯಿಸಿಕೊಳ್ಳುತ್ತಿದ್ದವು. ಅವರವರ ಪ್ರಪಂಚಕ್ಕೆ ಹೊರಗಿನ ಜಾತಿಗಳು ಅವರ ಧರ್ಮ ನಿರೂಪಣೆಗೆ ಪ್ರಸ್ತುತತೆ ಪಡೆದಿರಲಿಲ್ಲ. ಹಾಗೇ ಜಾತಿಗಳ ಅಧಿಕಾರ ನಿರ್ಣಯ ಮಾಡುವ ಕೆಲಸ ಮತಗಳಿಗೇ ಸೀಮಿತವಾಗಿರಲಿಲ್ಲ. ವಿಭಿನ್ನ ಅಧಿಕಾರ ರಚನೆಗಳಲ್ಲಿ ಅಧಿಕಾರ ಪಟ್ಟವನ್ನು ಹೊಂದಿದ್ದವರು ತಮಗೆ ಸೂಕ್ತವಾಗುವ ರೀತಿ ತಂತಮ್ಮ ಕ್ಷೇತ್ರಗಳಲ್ಲಿ ಜಾತಿನಿರ್ಣಯಗಳನ್ನು ಮಾಡಿಕೊಳ್ಳುತ್ತಿದ್ದಂತೇ ತೋರುತ್ತದೆ. ಆದರೆ ಅವರಿಗೆ ಆ ಅಧಿಕಾರವನ್ನು ಕೊಡಿಸುವಲ್ಲಿ ಮತಗಳು ನಿರ್ಣಾಯಕವಾಗುತ್ತಿದ್ದವು ಎಂಬುದು ಈ ಕೆಳಗಿನ ದೃಷ್ಟಾಂತದಲ್ಲಿ ವ್ಯಕ್ತವಾಗಿದೆ.

ಚಿಕ್ಕದೇವರಾಜನ ಕಾಲದಲ್ಲಿ ಮೈಸೂರು ಅರಸರು ತಮ್ಮ ಆಳ್ವಿಕೆಯನ್ನು ಸ್ಥಿರೀಕರಿಸಿದ ನಂತರ ಮೈಸೂರು ಅರಸರಿಗೆ ತಮ್ಮ ಶೂದ್ರತ್ವದಿಂದ ಕ್ಷತ್ರಿಯತ್ವಕ್ಕೆ ಏರುವ ಅಗತ್ಯ ಬೀಳುತ್ತದೆ. ಹಾಗಾಗಿ ಷಣ್ಮತಗಳನ್ನೂ ವಿಚಾರಿಸಿ, ಮತಾಂತರಗಳನ್ನು ವಿಚಾರಿಸಿ, ಜಾತಿ-ಕುಲಾಚಾರ ಭೇದಗಳನ್ನೆಲ್ಲ ಅವಗಾಹನೆಗೆ ತಂದುಕೊಂಡು ತಮ್ಮ ಅರಸು ವಂಶಪರಂ ಪರೆಯನ್ನು ನಿರ್ಣಯಿಸಲು ಆತನು ಬುದ್ಧಿವಂತರನ್ನು ಕರೆಸುತ್ತಾನೆ. ಈ ಬುದ್ದಿವಂತರು ಆತನ ವಂಶ ಚಂದ್ರವಂಶವೆಂದೂ, ಗೋತ್ರ ‘ಆತ್ರೇಯ’ವೆಂದೂ, ಅವರದು ಅಶ್ವಲಾಯನ ಸೂತ್ರ ಋಕ್ ಶಾಖೆ ಎಂದೂ ನಿರ್ಣಯಿಸುತ್ತಾರೆ. ಹಾಗಾಗಿ ಈ ಬುದ್ಧಿವಂತರು ಬ್ರಾಹ್ಮಣರೇ ಎಂಬುದರಲ್ಲಿ ಸಂಶಯವಿಲ್ಲ. ಅವರು ಅರಸು ಮನೆತನಗಳಲ್ಲಿ ಕನ್ಯಾಸ್ವೀಕಾರ ಮುಂತಾದವಕ್ಕೆ ೧೩ ಹಾಗೂ ೧೮ ಮನೆತನಗಳನ್ನು ವಿಂಗಡಿಸಿ ನಿಯಮಿಸಿದರು. ಆದರೆ ಕಾಲಾಂತರದಲ್ಲಿ ಆ ೧೩ ಮನೆಗಳ ಹೊರತಾಗಿ ಅನ್ಯರು ಪಟ್ಟವೇರಬಹುದೆ? ಎಂಬ ಸಮಸ್ಯೆ ಉಭವವಾಯಿತು. ಆಗ ರಾಜನೇ ನಿರ್ಣಯ ಕೊಡುತ್ತಾನೆ. ಅದರ ಪ್ರಕಾರ ಈ ಕಾಲದಲ್ಲಿ ಜಾತಕ್ಷತ್ರಿಯ ತೀರ್ಥಕ್ಷತ್ರಿಯ ಎಂದು ಎರಡು ವಿಧವಾಗಿದ್ದಾರೆ. ಈಗ ಸಜ್ಜಾತಿ ಇಲ್ಲದೇ ನಾನಾ ವಿಧವಾಗಿ ಸಂಕರವಾಗಿರುವುದರಿಂದ ಯೋಗ್ಯಾಯೋಗ್ಯತೆಯೇ ಇಲ್ಲಿ ಮುಖ್ಯ. ಯಾವ ಜಾತಿಯೊಳಗಾದರೂ ಪೂರ್ವಪುಣ್ಯದಿಂದ ಶೌರ್ಯ, ವೀರ್ಯ, ಪರಾಕ್ರಮವುಳ್ಳವರು ಹುಟ್ಟಿ ಅಧಿಪತಿಗಳಾಗುವರು. ಆದ್ದರಿಂದ ಈ ಕಾಲದಲ್ಲಿ ಬ್ರಾಹ್ಮಣರಿಂದ ತೊಡಗಿ ಆ ಚಾಂಡಾಲ ಮತ ಜಾತಿಗಳಲ್ಲಿ ಹುಟ್ಟಿದವರೆಲ್ಲ ಸಿಂಹಾಸನಕ್ಕೆ ಅಧಿಪತಿಗಳಾಗಿ ಕುಲಜರನ್ನು ಎರಗಿಸಿಕೊಳ್ಳುತ್ತ ರಾಜ್ಯವನ್ನು ಆಳುವರು. ಮೈಸೂರು ಅರಸರ ಗೋತ್ರ ಕುಲಗಳನ್ನು ನಿರ್ಣಯಿಸಲು ಬುದ್ಧಿವಂತರು ಬೇಕಾದರೂ, ಯಾರು ಪಟ್ಟಕ್ಕೆ ಯೋಗ್ಯ ಎಂಬ ರಾಜರ ವ್ಯಾವಹಾರಿಕ ಚಾಣಾಕ್ಷತೆಗೆ, ಯೋಗ್ಯತೆಗೆ ಸಂಬಂಧಪಟ್ಟ ವಿಷಯದಲ್ಲಿ ಜಾತಿನಿರ್ಣಯವನ್ನು ರಾಜನೇ ನೀಡುತ್ತಾನೆ ಎಂಬುದು ಇಲ್ಲಿ ಕುತೂಹಲಕಾರಿಯಾದ ವಿಷಯವಾಗಿದೆ. ಹಾಗಾಗಿ ಜಾತಿಗಳ ಅಧಿಕಾರದ ಸಂಬಂಧಿಸಿ ಯಾವ ಅಧಿಕಾರ ಬಿಂದುಗಳಿಗೆ ಯಾವ ರೀತಿ ಪ್ರಸ್ತುತವಾಗಿತ್ತೋ ಆ ರೀತಿ ಅವರು ನಿರ್ಣಯಿಸಿಕೊಂಡು ವ್ಯವಹರಿಸಿದ್ದು ಕಂಡುಬರುತ್ತದೆ.

ಈ ಮೇಲಿನ ದೃಷ್ಟಾಂತಗಳು  ತಿಳಿಸುವಂತೇ ನಾವು ಭಾರತೀಯ ಜಾತಿಗಳ ಕುರಿತು ಯಾವುದಾದರೊಂದು ಸಂಪ್ರದಾಯದ ನಿರೂಪಣೆಯನ್ನಾಧರಿಸಿ ಸಾಮಾನ್ಯೀಕರಿಸಿದರೆ ಅದು ಅವಾಸ್ತವವಾಗಿ ಬಿಡಬಹುದು. ಜಾತಿ ಪದ್ಧತಿಯ ಕುರಿತು ನಾವು ಇಂದು ರಚಿಸಿಕೊಂಡು ಬಂದ ಪರಿಕಲ್ಪನೆಗಳು ಎಷ್ಟು ಸರಳವಾಗಿವೆ ಎಂಬುದನ್ನು ರಾಜಾವಳಿ ಈ ರೀತಿ ಎತ್ತಿ ತೋರಿಸುತ್ತದೆ. ಸಾಧಾರಣವಾಗಿ ಭಾರತೀಯ ಇತಿಹಾಸದ ಜಾತಿಗಳ ಕುರಿತು ನಾವು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ವೈದಿಕ ಸಂಪ್ರದಾಯದ ನಿರೂಪಣೆಯನ್ನು ಅವಲಂಬಿಸುತ್ತೇವೆ. ಈ ವರ್ಣಗಳಿಗೂ ಜಾತಿಗಳ ನಿರೂಪಣೆಗೂ ಸಂಬಂಧಿಸಿ ಧರ್ಮಶಾಸ್ತ್ರಗಳಲ್ಲಿಯೇ ಇರಬಹುದಾದ ಕ್ಲಿಷ್ಟತೆಗಳನ್ನು ಎಷ್ಟು ಶೋಧಿಸಿದರೂ ಜಾತಿಗಳ ಕುರಿತ ಒಂದು ವಸ್ತುನಿಷ್ಠ ಚಿತ್ರವನ್ನು ಗ್ರಹಿಸುವುದು ಅಸಾಧ್ಯ ಎಂಬುದು ‘ರಾಜಾವಳಿಯ’ ಚಲನಶೀಲ ಸಮಾಜದಿಂದ ವಿದಿತವಾಗುತ್ತದೆ.

ಉಪಸಂಹಾರ

ಭಾರತೀಯ ಇತಿಹಾಸದಲ್ಲಿ ಮತ ಸಂಘರ್ಷಗಳಿಂದ ಸೋತು ಮೂಲೆ ಗುಂಪಾದ ಮತದ ಒಬ್ಬ ಪಂಡಿತನಿಂದ ರಚಿತವಾದ ಕೃತಿ ‘ರಾಜಾವಳಿ’ ಎಂಬುದನ್ನು ಗುರುತಿಸಿ ಅದರ ವಾಸ್ತವಗಳು ಇಂದು ನಮಗೆ ಹೇಗೆ ಪ್ರಸ್ತುತ ಎಂಬುದನ್ನು ತಿಳಿದುಕೊಳ್ಳುವ ಅಗತ್ಯವಿದೆ. ತನ್ನ ಈ ವಾಸ್ತವದಲ್ಲಿ ಆತನು ತನ್ನ ಮತ ಪ್ರತಿಪಾದನೆಯನ್ನು ನಡೆಸುತ್ತಾನೆ. ತನ್ನ ಮತವೆ ಹೇಗೆ ಆದಿಮತ ಹಾಗೂ ನಿಜವಾದ ಮಾರ್ಗ ಮತ್ತು ಉಳಿದ ಮತಗಳು ಮಿಥ್ಯಾತ್ವಗಳು ಎಂಬುದು ಆತನ ನಿರಂತರವಾದ ವಾದವಾಗಿದೆ. ಈ ವಾದವನ್ನು ಸಾಧಿಸಲು ಇತಿಹಾಸದ ಪೂರ್ವಪ್ರಪಂಚುಗಳನ್ನು ಬಳಸಿಕೊಳ್ಳುತ್ತಾನೆ. ಆತನ ಕಥನ ವ್ಯಕ್ತಪಡಿಸುವಂತೇ ಆತನು ತನ್ನದೇ ಆದ ರೀತಿ ಪರಿಷ್ಕರಿಸಿ ಒಳಗೊಂಡಿದ್ದನು. ಜೈನ ಮತಾಚಾರ್ಯರೂ ಕೂಡ ಧರ್ಮಾಧಿಕಾರದ ಸಂದರ್ಭದಲ್ಲಿ ತಾವೂ ಅಳವಡಿಸಿಕೊಂಡ ಲೋಕ ರೂಢಿಗಳನ್ನು ಎತ್ತಿಹಿಡಿಯಬೇಕಾಗಿತ್ತು. ಈ ರೀತಿ ತಮ್ಮ ಮೇಲೆ ಆದ ಐತಿಹಾಸಿಕ ಧಾಳಿ ಮತ್ತು ತಮ್ಮ ವರ್ತಮಾನದ ಅನಿವಾರ್ಯಗಳನ್ನು ದುಷ್ಷಮ ಕಾಲದ ವಿಪರೀತಗಳು ಎಂಬ ತಾತ್ಪಿಕಥೆಯಲ್ಲಿ ವಿವರಿಸಿ ತಮ್ಮ ಸಮಸ್ಯೆಯನ್ನು ಅವರು ಬಗೆಹರಿಸಿಕೊಳ್ಳುತ್ತಾರೆ.

ನಮ್ಮ ಇಂದಿನ ಇತಿಹಾಸದ ಮುಂದೆ ದೇವಚಂದ್ರನದು ಕಟ್ಟುಕಥೆಗಳು ಎಂದು ನಾವು ತೀರ್ಮಾನಿಸುವಾಗ ಇತಿಹಾಸದ ಮೇಲ್ಪದರದ ವಿವರಗಳನ್ನಷ್ಟೇ ನಾವು ಉದ್ದೇಶಿಸಿದ್ದೇವೆ. ಒಂದು ಘಟನೆಯ ಸತ್ಯಾಸತ್ಯತೆ ಇತಿಹಾಸದ ನಿಜಗಳನ್ನು ಗ್ರಹಿಸಲು ಎಷ್ಟರಮಟ್ಟಿಗೆ ಸಹಾಯವಾಗಬಲ್ಲದು? ಎಂಬ ಪ್ರಶ್ನೆ ‘ರಾಜಾವಳಿ’ಯಿಂದ ನಾವು ಕೇಳಿಕೊಳ್ಳಬಹುದ್ದಾಗಿದೆ. ಈ ಘಟನೆಗಳನ್ನು ನಿರೂಪಿಸುವುದರಲ್ಲಿ ನಮ್ಮ ಇತಿಹಾಸ ರಾಜಾವಳಿಗಿಂತ ಭಿನ್ನವಾಗೇನೂ ಇಲ್ಲ. ಆದರೆ ‘ರಾಜಾವಳಿ’ಯು ಈ ಘಟನೆಗಳ ಕುರಿತು ತಳೆಯುವ ತಾತ್ವಿಕ ದೃಷ್ಟಿಯನ್ನು ನಾವು ನಮ್ಮ ಇತಿಹಾಸದ ಕುರಿತು ನಮ್ಮದೇ ಆದ ರೀತಿಯಲ್ಲಿ ಕಂಡುಕೊಂಡಿಲ್ಲ. ಇತಿಹಾಸದ ಘಟನೆಗಳಿಂದ ಒಂದು ಭಾವನಾತ್ಮಕ ಪ್ರತ್ಯೇಕಥೆಯನ್ನು ಸಾಧಿಸಲು ಈ ತಾತ್ವಿಕ ದೃಷ್ಟಿ ಅತ್ಯಗತ್ಯವಾಗಿದೆ. ಇಲ್ಲವಾದರೆ ಇತಿಹಾಸದ ಓದು ವರ್ತಮಾನಕ್ಕೆ ರಚನಾತ್ಮಕವಾಗುವುದರ ಬದಲು ವಿಧ್ವಂಸಕಾರಿಯಾಗಿ ಪರಿಣಮಿಸುತ್ತದೆ.

ಬಹುಶಃ ಮತಗಳ ಇತಿಹಾಸವನ್ನು ಸರಿಯಾಗಿ ನಮ್ಮ ಸಮಾಜದ ಸಂದರ್ಭದಲ್ಲಿ ಗುರುತಿಸುವ ಮೂಲಕ ನಾವು ಅವುಗಳ ದೃಷ್ಟಿಕೋನದಿಂದ ಕಳಚಿಕೊಳ್ಳಬಹುದು. ಒಂದು ಮತ ಸಮಾಜದಲ್ಲಿ ಪ್ರವೃತ್ತಿಸಿದ ಪಾತಳಿ ಯಾವುದು? ಹಾಗೂ ಅದು ಆಚರಣೆಯಲ್ಲಿ ನಿರ್ದಿಷ್ಟವಾಗಿ ಹೇಗೆ ಮತ್ತು ಎಷ್ಟರಮಟ್ಟಿಗೆ ತನ್ನ ಆಸ್ತಿತ್ವವನ್ನು ಉಳಿಸಿಕೊಂಡಿತ್ತು ಎಂಬುದು ಪರಿಶೀಲನಾರ್ಹ. ಭಾರತೀಯ ಸಮಾಜದ ಬಹುಸಂಖ್ಯಾತ ಜಾತಿ ಮತ್ತು ಸಮುದಾಯಗಳು ಈ ಮತಗಳ ಜೊತೆ ಯಾವ ಸಂಬಂಧವನ್ನು ಹೊಂದಿದ್ದವು ಎಂಬುದನ್ನು ಗಮನಿಸುವ ಇತಿಹಾಸ ಇಂದು ನಮಗೆ ಮುಖ್ಯ. ನಾವು ಇಂದು ರಚಿಸಿಕೊಂಡ ಸಾಮಾಜಿಕ ಇತಿಹಾಸದಲ್ಲಿ ಮತಶಾಸ್ತ್ರಗಳು ಕೇಂದ್ರಸ್ಥಾನವನ್ನು ವಹಿಸುತ್ತವೆ. ಆ ಮೂಲಕ ನಾವು ಕೂಡ ಒಂದು ಮತಶಾಸ್ತ್ರೀಯ ಇತಿಹಾಸವನ್ನು ಗಟ್ಟಿ ಗೊಳಿಸುವಲ್ಲಿ ನಮ್ಮ ವೈಜ್ಞಾನಿಕ ವಿಧಾನಗಳನ್ನು ಬಳಿಸಿಕೊಂಡಿದ್ದೇವೆ. ಹಾಗಾಗಿ ಮತಾಂತರ ಅಥವಾ ಮತಾಚಾರಗಳ ಪ್ರಚಾರದ ವೈಶಿಷ್ಟ್ಯತೆ ಮತ್ತು ಸಾಮಾಜಿಕ ಪ್ರಕ್ರಿಯೆಗಳನ್ನು ಗಮನಿಸುತ್ತಿಲ್ಲ. ಇದನ್ನು ಗಮನಿಸಬೇಕಾದರೆ ‘ಜಾತಿ’ಗಳನ್ನು ಈ ಮತಗಳಿಂದ ಪ್ರತ್ಯೇಕವಾಗಿ ನೋಡುವುದು ಅಗತ್ಯ. ಈ ಜಾತಿಗಳನ್ನು ಯಾವ ಯಾವ ಅಧಿಕಾರ ಬಿಂದುಗಳು ಹೇಗೆ ನಿರೂಪಿಸಿಕೊಂಡಿದ್ದವು ಹಾಗೂ ಇವೆಲ್ಲ ಸೇರಿ ಒಂದು ಸಾಮಾನ್ಯವಾದ ಚೌಕಟ್ಟನ್ನೇನಾದರೂ ಈ ಸಮಾಜಕ್ಕೆ ನಿರ್ಮಿಸಿದ್ದವೆ? ಹಾಗೆ ನಿರ್ಮಿಸಿದ್ದರೆ ಯಾವ ಯಾವ ಅಂಶಗಳನ್ನು ಇವೆಲ್ಲವುಗಳಿಗೂ ಸಾಮಾನ್ಯ ಎಂದು ಗುರುತಿಸಬೇಕಾಗುತ್ತದೆ? ಎಂಬ ಪ್ರಶ್ನೆಗಳ ಜೊತೆಗೇ ಇಂಥ ನಿರೂಪಣೆಗಳಿಂದ ಹೊರಗಿದ್ದ ಸಮಾಜಗಳ ಕುರಿತೂ ಗಮನಿಸಬೇಕಾಗುತ್ತದೆ. ಇಂಥ ಪರಿಶೀಲನೆಗಳಿಂದ ಬಹುಶಃ ನಾವು ಭಾರತೀಯ ಸಾಮಾಜಿಕ ಇತಿಹಾಸವನ್ನು ಮತೀಯನೆಲೆಯಿಂದ ಸ್ವತಂತ್ರಗೊಳಿಸಬಹುದು.

ಇನ್ನೂ ಮತಗಳ ಕುರಿತು ಇಂದಿನ ಇತಿಹಾಸದಲ್ಲಿ ಹೊಸದೇ ಆದ ಪರಿಕಲ್ಪನೆಯನ್ನು ನಾವು ಬಳಸುತ್ತಿದ್ದೇವೆ. ಅದೆಂದರೆ ಹಿಂದೂ ಎಂಬ ಪ್ರಭೇದ ಬಹುಶಃ ದೇವಚಂದ್ರನು ಈ ಸಂಬಂಧಿಸಿ ನಿಜವನ್ನು ಗ್ರಹಿಸಿದ್ದನು. ಹಾಗಾಗಿ ನಮ್ಮದೇ ನಿಜವಲ್ಲ.

ಹೀಗೆ ದೇವಚಂದ್ರನ ‘ರಾಜಾವಳಿ’ ಪರಿಶೀಲಿಸಿದಾಗ ನಮ್ಮ ಇತಿಹಾಸ ಕಲ್ಪನೆಗಳನ್ನು ಒಡೆದು ಕಟ್ಟಿಕೊಳ್ಳಬೇಕೆಂದೆನಿಸುವುದೇ ಅದರ ಮಹತ್ವವಾಗಿದೆ.

* * *

 

[1]ಇಭ್ಯ ಎಂಬ ಶಬ್ದಕ್ಕೆ ಸೇವಕ, ಎಂಬ ಅರ್ಥ ಮೊದಲು ಇತ್ತು. ೧೬ನೇ ಶತಮಾನದ ಸುಮಾರಿಗೆ ಹಾಗೆಂದರೆ ಶ್ರೀಮಂತ ಹಾಗೂ ಆಸ್ತಿವಂತ ಎಂಬ ಅರ್ಥ ಬರುತ್ತದೆ.