ಕೇವಲ ಕಥೆಯೇ ಪ್ರಧಾನವೆನ್ನಿಸುವ ಕನ್ನಡ ಸಾಹಿತ್ಯ ಪರಂಪರೆಯಲ್ಲಿ, ಹದಿನೆಂಟನೇ ಶತಮಾನದ ಉತ್ತರಾರ್ಧದಲ್ಲಿ ಚಾಮರಾಜನಗರ (ಆಗಿನ ಹೆಸರು ಆಗಿನ ಅರಿಕುಠಾರನಗರ) ಕನಕಗಿರಿ ಕ್ಷೇತ್ರದ ಮಲೆಯೂರು ಗ್ರಾಮದಲ್ಲಿದ್ದ ದೇವಚಂದ್ರನಿಂದ ರಚಿಸಲ್ಪಟ್ಟ ರಾಜಾವಳೀ ಕಥಾಸಾರ ಏಕಕಾಲಕ್ಕೆ ಅಷ್ಟೊಂದು ವಿವರಗಳ ದಾಖಲೆಯನ್ನು ಹೊಂದಿರುವುದು ಆಶ್ಚರ್ಯದ, ಮಹತ್ವದ ಸಂಗತಿಯೆನಿಸುತ್ತದೆ. ಹೀಗಾಗಿ ಇದು ಕನ್ನಡದ ಮೊದಲ ವಿಷಯ ವಿಶ್ವಕೋಶ. ಅಸಾಧಾರಣ ಪೂರ್ವಾಪರ ವಿವೇಚನೆ ಹೊಂದಿದ್ದಂತೆ ಕಂಡುಬರುವ ದೇವಚಂದ್ರ ಅತ್ಯಂತ ಮುಗ್ಧನಂತೆ ಆ ಕಾಲದ ಸತ್ಯಕಥೆಗಳನ್ನು, ಪುರಾಣ ಸಂಗತಿಗಳನ್ನು, ದಂತಕಥೆಗಳನ್ನು, ಆ ಹಿಂದೆ ಜರುಗಿಹೋದ ಜೀವಂತ ಘಟನೆಗಳನ್ನು ಸರಳವಾಗಿ ಹೇಳುತ್ತ ಹೋಗುತ್ತಾನೆ. ಹಾಗೆ ಹೇಳುವಾಗ ತಾನು ಹೇಳುವ ಸಂಗತಿಗಳಲ್ಲೇ ಯಾವುದು ಮಹತ್ವಪೂರ್ಣ, ಯಾವುದು ದೋಷಯುಕ್ತ ಎಂಬುದರ ಅರಿವೂ ದೇವಚಂದ್ರನಿಗೆ ಇದ್ದಂತೆ ತೋರುತ್ತದೆ.

ದೇವಚಂದ್ರನ ಕಥನಕ್ರಮ

ಕಥೆ ಹೇಳುವಿಕೆಯಲ್ಲಿ ದೇವಚಂದ್ರ ಯಾವ ನಿಯಮವನ್ನೂ ಅನುಸರಿಸಿದಂತೆ ಕಾಣುವುದಿಲ್ಲ. ಆದರೆ ಕಳೆದ ಶತಮಾನಗಳಲ್ಲಿ ವಂಶಾವಳಿಯನ್ನು ಬರೆಯುವ ಕ್ರಮವೇ ಹಾಗಿದ್ದಿತೆನ್ನಬೇಕು. ದೇವಚಂದ್ರನ ಈ ಕಥನ ಮೈಸೂರು ಅರಸರ ವಂಶಾವಳಿಯನ್ನು ಹೇಳುವುದಿದ್ದು, ಅದರ ಜತೆಗೆ ಇಡೀ ಪರಿಸರದ ಘಟನೆ, ಪಾರಂಪರಿಕ ಕಥೆ ಇವನ್ನೆಲ್ಲ ಜೋಡಿಸುತ್ತ ಹೋಗುತ್ತಾನೆ. ಹಾಗೆ ಜೋಡಿಸುವಲ್ಲಿ ಭೂತಕಾಲದ ಕಥೆಗಳನ್ನು ತನ್ನ ಸಮಕಾಲೀನ ಘಟನೆಗಳಾಗಿ ಪರಿವರ್ತಿಸುತ್ತಾನೆ. ಇದು ಸಾಮಾನ್ಯವಾಗಿ ಕೈಫಿಯತ್ತು ಮತ್ತು ಬಖೈರುಗಳ ರಚನಾ ಮಾದರಿ. ಜನಪದರ ಜೀವನಕ್ರಮದಲ್ಲಿ ಒಂದು ಕಾಲಕ್ಕೆ ಮನೆಮನೆಗೆ ಬರುತ್ತಿದ್ದ ಹೆಳವರು ಶ್ರೀಮಂತರ ಮನೆಯ ಕಥೆಗಳನ್ನು ಗಂಟೆ ಬಾರಿಸುತ್ತ ಹೇಳುತ್ತಿದ್ದರು. ಹಾಗ ಕಥೆ ಹೇಳುವಾಗ ಗತಿಸಿಹೋದ ಮನೆತನದ ಹಿರಿಯರನ್ನೆಲ್ಲ ಕಣ್ಣಮುಂದೆ ತಂದು ಅವರ ಬದುಕಿನ ಘಟನೆಗಳನ್ನೆಲ್ಲ ಆಗಲೇ ನಡೆದಂತೆ ಬಿತ್ತರಿಸಿ, ತದನಂತರ ಬದುಕಿರುವವರ ಕಥೆಗೂ ಬರುತ್ತಿದ್ದರು. ಹೀಗೆ ದೇವಚಂದ್ರ ಗತಶತಮಾನದ ಸಂಗತಿಗಳನನೆಲ್ಲ, ಐತಿಹಾಸಿಕ ವಿವರಗಳನ್ನೆಲ್ಲ ಕಣ್ಣಮುಂದೆಯೇ ನಡೆದುವು ಎಂಬಂತೆ ವಿವರಿಸುತ್ತಾನೆ. ಮಹಾಭಾರತ ರಾಮಾಯಣ ಕಥೆಗಳನ್ನೂ ಕೂತು ಹೇಳುವ ಕೇಳುವ ಕ್ರಮ ಹೀಗೆಯೆ! ಗತಿಸಿಹೋದ ಹಿರಿಯರ ಕಥೆಗಳು ಇದೀಗಲೇ ಜರುಗುತ್ತಿವೆಯೆಂಬಂತೆ ವೈಶಂಪಾಯನನು ಜನಮೇಜಯನಿಗೆ ಅಂದರೆ ಅಭಿಮನ್ಯುವಿನ ಮೊಮ್ಮಗನಿಗೆ ಅವನ ತಾತ ಮುತ್ತಾತಂದಿರ ಕಥೆಗಳನ್ನೆಲ್ಲ ಹೇಳುತ್ತಾನೆ. ಇದಕ್ಕಿಂತ ಇನ್ನೊಂದು ಕಥನಕ್ರಮವನ್ನು ನೆನೆಯುವುದಾದರೆ ಕುರುಕ್ಷೇತ್ರದಲ್ಲಿ ನಡೆಯುವ ಘಟನೆಗಳನ್ನು ಸಂಜಯ ಧೃತರಾಷ್ಟ್ರನ ಮುಂದೆಯೇ ನಡೆಯುತ್ತಿರುವಂತೆ ವಿವರಿಸುವುದು. ಹೀಗೆ ಜರುಗಿ ಹೋದ ಘಟನೆಗಳನ್ನು ಕಣ್ಣಮುಂದೆ ತಂದುಕೊಂಡು ಅದು ಈಗಲೇ ಘಟಿಸಿದ್ದು ಎಂಬಂತೆ ಹೇಳುವ ಒಂದು ಬಗೆಯ ಕಥನಕ್ರಮ ಕನ್ನಡ ಶಿಷ್ಟ ಮತ್ತು ಜನಪದ ಪರಂಪರೆಯಲ್ಲಿ ಸಾಗಿಬಂದಿದೆ. ಇಂಥ ಕಥನಕ್ರಮವನ್ನೇ ಅನುಸರಿಸುವ ದೇವಚಂದ್ರ ವಚನ ಚಳುವಳಿಯನ್ನು ಕೂಡ ರಾಮಾನುಜಾಚಾರ್ಯರ ಮತ ಪ್ರಚಾರ ಕಾರ್ಯವನ್ನೂ ಸಹ ಕಣ್ಣಮುಂದೆ ತಂದುಕೊಂಡೇ ಅದು ವರ್ತಮಾನದ ಘಟನೆಯೆಂಬಂತೆ ವರ್ಣಿಸುತ್ತಾನೆ.

ರಾಜಾವಳಿ ಕಥೆಯ ಪರಂಪರಾಗತ ಆಶಯಗಳು

ರಾಜಾವಳಿ ಕಥೆಯನ್ನು ಓದುವಾಗ್ಗೆ ನಮಗೆ ಗೋಚರವಾಗುವ ಮತ್ತೊಂದು ವಿವರವೆಂದರೆ ಸಂಸ್ಕೃತ ಕಾವ್ಯ ಕಥನಗಳ, ಹಳಗನ್ನಡ ಕಥನಗಳ ಆಶಯಗಳು ಮತ್ತು ಅದೇ ಆಶಯಗಳು ಜನಪದ ಕಥಾಸಂದರ್ಭಗಳಲ್ಲಿ ಪುನರಾವರ್ತನೆಗೊಳ್ಳುವುದನ್ನು ನಾವು ಸಮಾನವಾಗಿ ಕಾಣುವುದಿದೆ. ಯಾವುದೇ ಕಾವ್ಯಕಥೆ ಅಥವಾ ಜನಪದ ಕಥನ ಪರಂಪರಾಗತ ಆಶಯಗಳ ಮೇಲೆಯೇ ರಚನೆಗೊಳ್ಳುತ್ತ, ಹೆಣೆದುಕೊಳ್ಳುತ್ತ ಸೃಷ್ಟಿಯಾಗಿರುವುದನ್ನು ಗಮನಿಸಬಹುದು. ಈ ಆಶಯಗಳು ಜನಪದಕ್ಕೆ ಬೇರೆಯಲ್ಲ, ಶಿಷ್ಟಪರಂಪರೆಗೆ ಬೇರೆಯಲ್ಲ. ಪಂಪ, ಕುಮಾರವ್ಯಾಸ, ಲಕ್ಷ್ಮೀಶರಂಥ ಪ್ರತಿಭಾವಂತ ಕವಿಗಳು ಜನಪದ, ಶಿಷ್ಟ ಎಂಬ ವ್ಯತ್ಯಾಸವಿಲ್ಲದೆ ತಮ್ಮ ಕಾವ್ಯ ನಿರ್ಮಿತಿಗೆ ಅಗತ್ಯವೆನಿಸುವ ಆಶಯಗಳನ್ನೆಲ್ಲ ಬಳಸಿಕೊಂಡಿರುತ್ತಾರೆ. ಈ ಅರ್ಥದಲ್ಲಿ ದೇವಚಂದ್ರನೂ ಸಹ ಪರಂಪರಾಗತ, ಶಿಷ್ಟ ಮತ್ತು ಜನಪದ ಆಶಯಗಳ ಹಿನ್ನೆಲೆಯ ಕಥೆಗಳನ್ನೆಲ್ಲ ತನ್ನ ಕೃತಿಯಲ್ಲಿ ಬಳಸಿಕೊಂಡಿರುತ್ತಾನೆ.

ದೇವರು ಮತ್ತು ಧರ್ಮಸಂಬಂಧದ ವಿವರಗಳು ಬಂದಾಗ ಪರಂಪರಾಗತ ಆಶಯಗಳೇ ಹೆಚ್ಚು ಪುನರಾವರ್ತನೆಯಾಗುತ್ತವೆ. ಉದಾಹರಣೆಗೆ ಬೇಡರ ಕಣ್ಣಪ್ಪನ ಮುಗ್ಧಭಕ್ತಿಯ ವಿವರ: ‘ಬೇಡರ ಕಣ್ಣ ಎಂಬುವನು ಎಂಜಲ ಮಾಂಸವನ್ನು ಎಡದಕೈಯಲ್ಲಿ ಹಿಡಿದು ಬಂದು ಲಿಂಗಸ್ಥಾನಕ್ಕೆ ನಡೆದನು. ಅಲ್ಲಿ ಮೊದಲೇ ಮಾಡಿದ್ದ ಅಲಂಕಾರವನ್ನು ಬಲಗಾಲ ಕೆರೆದಿಂದ ತೆಗೆದು, ಬಾಯಲ್ಲಿದ್ದ ನೀರನ್ನು ಮುಕ್ಕಳಿಸಿ ಉಗಿದು ಎಡಗೈಯ್ಯ ಮಾಂಸವನ್ನು ತೋರಿಸಿ ಕೈಲಾಸವನ್ನು ಸೇರಿದ…’ ಎಂಬ ಈ ಮಾದರಿಯ ಆಶಯಗಳು ಜನಪದ ಹಾಗೂ ಶಿಷ್ಟ ಎರಡೂ ಪರಂಪರೆಯಲ್ಲಿ ಪ್ರವಹಿಸುತ್ತವೆ. ಮೈದಾಳು ರಾಮಣ್ಣನ ಕಥೆ, ಕೋಳೂರು ಕೊಡಗೂಸು, ಮಾರ್ಕಂಡೇಯ, ಧ್ರುವ ಈ ಕಥೆಗಳೆಲ್ಲ ಮುಗ್ಧಭಕ್ತಿಗೆ ದೇವರು ಬೇಗ ಒಲಿಯುತ್ತಾನೆ ಎಂಬುದನ್ನು ಪ್ರಚಾರ ಮಾಡುವ ಆಶಯದ ಕಥೆಗಳು. ಇದರ ಜತೆಗೆ ದೇವಚಂದ್ರ ಅನೇಕ ಜನಪದ ಮೂಲ ಆಶಯಗಳ ಕಥೆಗಳನ್ನೂ ಹೇರಳವಾಗಿ ಉದಾಹರಿಸುತ್ತಾರೆ. ವಿಶೇಷವೆಂದರೆ ದೇವಚಂದ್ರ ಉದಾಹರಿಸುವ ಪರಂಪರಾಗತ ಆಶಯಗಳ ಆ ಕಥೆಗಳೆಲ್ಲ ಮಾನವೀಯ ಮನೋಧರ್ಮದ ಹಿನ್ನೆಲೆಯಲ್ಲೇ ಇವೆ. ಈ ಬಗೆಯ ಶಿಷ್ಟ ಹಾಗೂ ಜನಪದ ಕಥೆಗಳ ಆಯ್ಕೆಯಲ್ಲಿ ದೇವಚಂದ್ರನ ಪೂರ್ವಾಪರ ವಿವೇಚನೆ ಹೆಚ್ಚು ಕೆಲಸ ಮಾಡಿರುವಂತೆ ತೋರುತ್ತದೆ.

ದೇವಚಂದ್ರ ಹೇಳುವ ಜಾತಿ ವಿವರ

ಮನುಷ್ಯರೆಲ್ಲ ಒಂದೇ ಆದರೂ, ಜಾತಿ ಹದಿನೆಂಟಾದವು ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿಯೇ ದೇವಚಂದ್ರ ‘….ಆ ಬ್ರಾಹ್ಮಣರು ಆದಿಬ್ರಹ್ಮನ ಮುಖದಿಂದ ಹುಟ್ಟಿ ಕ್ರಿಯಾ ಮಂತ್ರೋಪದೇಶದಿಂದ ದ್ವಿಜನ್ಮರಾಗಿ ವದನಜರೆನಿಸಿಕೊಂಡರು. ಕ್ಷತ್ರಿಯರು ಬಾಹುಬಲ ಪರಾಕ್ರಮದಿಂದ ಜೀವನ ನಡೆಸುವವರಾದುದರಿಂದ ಬಾಹುಜರಾಗುವರು. ವೈಶ್ಯರು ಕಾಲಬಲದಿಂದ ಜಲಸ್ಥಲಾದಿಗಳಲ್ಲಿ ಸಂಚರಿಸಿ ಜೀವಿಸುವುದರಿಂದ ಊರುಜರಾಗುವರು. ಶೂದ್ರರು ಉಳಿದ ಮೂರು  ವರ್ಗಗಳ ಪಾದಸೇವಾದಿಗಳನ್ನು ಮಾಡಿ ಜೀವಿಸುವುದರಿಂದ ಪಾದಜರಾಗುವರು. ಹೀಗೆ ಮಾನವಜಾತಿ ಒಂದೇ ಆದರೂ ಅವರವರ ವೃತ್ತಿಭೇದದಿಂದ ಬ್ರಾಹ್ಮಣರೇ ಮೊದಲಾದ ಹದಿನೆಂಟು ಜಾತಿಗಳಾದವು’ ಎಂಬ ಪರಂಪರಾಗತ ವಿವರ ಕೊಡುತ್ತಲೇ ದೇವಚಂದ್ರ, ಇನ್ನೆರಡು ವಾಕ್ಯಗಳನ್ನೂ ಕೃತಿಯ ಕೊನೆಯಲ್ಲಿ ಉದ್ಧರಿಸುವುದನ್ನು ಓದುಗರು ಗಮನಿಸಬೇಕು. ‘….ವರ್ಣನಾಂ ಬ್ರಾಹ್ಮಣೋ ಗುರುವೆಂದು ಗರ್ವವನ್ನು ಹೊಂದಿರುವ ಜಾತಿಯ ಅಭಿಮಾನವನ್ನು ಬಿಡಬೇಕು’ ಎನ್ನುತ್ತ ಇದರ ಮುಂದಿನ ಮಾತಾಗಿ ‘…ದರ್ಶನ ಸಂಪನ್ನನಾದ ಮಾದಿಗನನ್ನು ಉತ್ತಮ ದೃಷ್ಟಿಯುಳ್ಳವರು ದ್ರವ್ಯಭಾವದಿಂದ ಕೊಂಡಾಡಿ ಪ್ರಶಂಸಿಸಬೇಕು’ ಎಂದು ಬರೆಯುತ್ತಾನೆ.

ಸಾಮಾಜಿಕ ಏರುಪೇರುಗಳ ಅವಾಂತರ, ಜಾತಿಸಂಬಂಧದ ಮೇಲಾಟ, ಧರ್ಮದ ಹಿನ್ನೆಲೆಯ ಹೊಡೆದಾಟಗಳ ಅರಿವು ದೇವಚಂದ್ರನ ಸೂಕ್ಷ್ಮದೃಷ್ಟಿಗೆ ಸ್ಪಷ್ಟವಾಗಿಯೆ ಅರಿವಿಗೆ ಬಂದಿತ್ತೆನಿಸುತ್ತದೆ. ಜಿನಸೇನರ ಪೂರ್ವಪುರಾಣದಲ್ಲಿಯೇ ಬರುವ ಮಾತನ್ನು ಪಂಪ ಕನ್ನಡಕ್ಕೆ ಭಾಷಾಂತರಿಸುತ್ತ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಇದರ ಹಿಂದಿನ ಸಮಸ್ಯೆಯನ್ನು ವಿಕ್ರಮಾರ್ಜುನ ವಿಜಯದಲ್ಲಿ ಭೀಷ್ಮ ಕರ್ಣರ ನಡುವೆ ಚರ್ಚೆಗೆ ಒಳಪಡಿಸಿರುವುದು ಈಗಾಗಲೇ ಓದುಗರಿಗೆ ವಿದಿತವಾಗಿರುತ್ತದೆ. ಆದರೆ ದೇವಚಂದ್ರ ಈ ಸಮಸ್ಯೆಯನ್ನು ತನ್ನ ಕೃತಿಯಲ್ಲಿ ಹೆಚ್ಚು ಜೀವಂತ, ಜ್ವಲಂತ ಸಮಸ್ಯೆಯಾಗಿ ಚಿತ್ರಿಸುತ್ತ, ಅದಕ್ಕೆ ಹತ್ತಾರು ಉದಾಹರಣೆಗಳನ್ನು ಕೊಡುತ್ತಾನೆ.

ವಚನಕಾರರ ಜಾತಿರಹಿತ ಸಮಾಜ ನಿರ್ಮಾಣದ ಚಳುವಳಿಯ ನಂತರವೂ ಕರ್ನಾಟಕದಲ್ಲಿ ಜಾತಿ ವ್ಯವಸ್ಥೆಯನ್ನು ನಂಬಿಕೊಂಡೇ ಜನಸಮೂಹ ನಡೆಸಿದ ಹೊಡೆದಾಟಗಳನ್ನು ದೇವಚಂದ್ರ ಅಕಸ್ಮಾತ್ತಾಗಿಯೇ, ತಸ್ಮಾತ್ತಾಗಿಯೋ ಎಂಬಂತೆ ಮುಗ್ಧ ಮನಸ್ಸಿನಿಂದ ಹೇಳುತ್ತ ಹೋಗುತ್ತಾನೆ. ಇದು ಕುತೂಹಲದ ಸಂಗತಿ. ಸೂಕ್ಷ್ಮವಾಗಿಯೂ ಗಮನಿಸಬೇಕಾದ ಅಂಶ. ಇಷ್ಟೆಲ್ಲ ಆಗಿ ದೇವಚಂದ್ರ ಸ್ವಾನುಭವದಿಂದಲೋ, ಆರ್ಜಿತ ವಿದ್ಯೆ ಮತ್ತು ಸಂಸ್ಕಾರ ದಿಂದಲೋ, ತನ್ನ ಬಡತನದ ಬದುಕಿನ ಬವಣೆಯ ಹಿನ್ನೆಲೆಯಿಂದಲೋ, ಮನುಷ್ಯಧರ್ಮವೊಂದೇ ದೊಡ್ಡದು ಎಂಬುದರ ನಿಲುವು ಆತನಿಗಿದ್ದಂತೆ ತೋರುತ್ತದೆ.  ಈ ಕಾರಣವಾಗಿ ಸಕಲೆಂಟು ಜಾತಿಯ ವಿವರಗಳನ್ನು ಪ್ರಸ್ತಾಪ ಮಾಡುತ್ತಲೇ ದೇವಚಂದ್ರ ಇವೆಲ್ಲವೂ ಮನುಷ್ಯನ ಬದುಕಿಗೆ ಮೂಲಭೂತವಾದುವಲ್ಲ ಇವು ಯಾವುದೋ ಒಂದು ಸಂದರ್ಭದ ಅಹಂಕಾರ ಜನ್ಯಸಂಗತಿಗಳು, ಅಜ್ಞಾನಮೂಲವಾದವು ಅಥವಾ ಲಾಭದ ಆಸೆಗೆ ಸೃಷ್ಟಿಯಾದವೆಂಬುದನ್ನು ವ್ಯಂಗ್ಯವಾಗಿ ಸೂಚಿಸಿರುವಂತೆ ಕಾಣುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆ ಬೇರೆ ಬೇರೆ ಜಾತಿಗಳ ಸೃಷ್ಟಿ, ಅದರ ಹಿನ್ನೆಲೆಯಲ್ಲಿ ಆ ಸಮೂಹಕ್ಕಿರುವ ಹೆಮ್ಮೆ, ಅಲ್ಲದೆ ಜಾತಿಯ ಹಿಂದೆ ಕಥೆ ಕಟ್ಟಿಕೊಂಡು ಆ ಮೂಲಕ ತಂತಮ್ಮ ಹಿರಿಮೆ ಸಾಧಿಸುವುದನ್ನು ದೇವಚಂದ್ರ ಮಾರ್ಮಿಕವಾಗಿ ವಿವರಿಸುವುದು ಅರ್ಥಪೂರ್ಣವೆನಿಸುತ್ತದೆ.

ರಾಜಾವಳಿ ಕಥೆಯಲ್ಲಿ ವಚನ ಚಳುವಳಿಯ ವಿವರಗಳು

ವಚನಕಾರರ ಚಳುವಳಿಯ ಬಗೆಗೆ ದೇವಚಂದ್ರನು ಕೊಡುವ ವಿವರಗಳನ್ನು ಗಮನಿಸಿದರೆ, ಅದು ಜೈನಧರ್ಮಾನುಯಾಯಿಯಾದ ದೇವಚಂದ್ರನಿಂದ ಸಂಪೂರ್ಣ ಪೂರ್ವಗ್ರಹದಿಂದಲೇ ಬರೆಯಲ್ಪಟ್ಟಿದೆ ಎಂದು ಹೇಳಲು ಬರುವುದಿಲ್ಲ. ಧರ್ಮಕ್ಕೆ ಸಂಪೂರ್ಣ ತಮ್ಮನ್ನು ಅರ್ಪಿಸಿಕೊಳ್ಳುತ್ತಿದ್ದ ಆ ಕಾಲದ ಜನಸಮೂಹ ಆಯಾ ಧರ್ಮದಡಿಯ ಧಾರ್ಮಿಕ ಸಂಗತಿ ಗಳಿಗಿಂತ ಮೂಢನಂಬಿಕೆ ಅಥವಾ ಅವಿವೇಕದ ಮಾರ್ಗಗಳನ್ನೇ ಅನುಸರಿಸಿರುವುದು ವಚನಗಳಿಂದಲೂ, ಇನ್ನಿತರ ಕಾವ್ಯಕಥನಗಳಿಂದಲೂ ತಿಳಿದು ಬರುತ್ತದೆ. ವಿಜ್ಞಾನ ಸಂಬಂಧಿ ಮಾತುಗಳು ವ್ಯಾಪಕವಾಗಿರುವ, ನಾಗರಿಕತೆಯ ಹೊಸ್ತಿಲು ಮುಟ್ಟಿರುವ ಈ ಹೊತ್ತಿನಲ್ಲಿಯೇ ಅಂಧಶ್ರದ್ಧೆ, ಕವಿದ ಧರ್ಮಮೂಲ ಸಂಗತಿಗಳು ಜನಸಮೂಹವನ್ನು ವಿಚಲಿತ ಗೊಳಿಸುತ್ತಿರಬೇಕಾದರೆ, ಎಂಟುನೂರು ವರ್ಷಗಳ ಹಿಂದಿನ ಜನ ಜೀವನದ ತಪ್ಪಿದ ಮಾರ್ಗವನ್ನು ಊಹಿಸುವುದೂ ಅಸಾಧ್ಯ. ಇದರಿಂದ ಬಸವಣ್ಣ ಹಾಕಿಕೊಟ್ಟ ಮಾರ್ಗದಲ್ಲಿ ನಡೆದವರೆಲ್ಲ ಶರಣರೇ ಆಗಿರಲು ಸಾಧ್ಯವಿರಲಿಲ್ಲ. ಹಾದಿ ತಪ್ಪಿದ ಅನೇಕಾನೇಕ ಶರಣರು ಬಸವಣ್ಣನ ಹೆಸರಿನಲ್ಲೇ ಜರುಗಿಸಿರಬಹುದಾದ ಅವಿವೇಕಗಳ ಪಟ್ಟಿ ರಾಜಾವಳೀ ಕಥೆಯಲ್ಲಿ ನಿಚ್ಚಳವಾಗಿ ದೊರೆಯುತ್ತದೆ. ಇವನ್ನೆಲ್ಲ ಬಸವಣ್ಣನ ಮೇಲಿನ ಗೌರವದಿಂದಷ್ಟೇ ಸುಲಭವಾಗಿ ತಳ್ಳಿಹಾಕುವಂತಿಲ್ಲ. ‘…ಬೇವಿನ ಬೀಜದಷ್ಟು ಲಿಂಗವುಳ್ಳವನೂ ಎಲ್ಲ ದೋಷಗಳಿಂದ ಮುಕ್ತನಾಗಿ ಕೈಲಾಸ ಸೇರುವನು ಎಂದು ಯಥೇಚ್ಛವಾಗಿ ದ್ರವ್ಯವನ್ನು ಕೊಡುತ್ತಿದ್ದರು. ಇದಕ್ಕಾಸೆ ಪಟ್ಟ ಕೆಲವರು ಕಲ್ಲು ಅಡಕೆ ಬದನೆಕಾಯಿ ಮೊದಲಾದುವನ್ನು ಕಟ್ಟಿಕೊಂಡು ಬಂದು ಬಸವನಿಂದ ಹಣವನ್ನು ಪಡೆದರು. ಲಿಂಗವಿಲ್ಲದವನನ್ನು ಭವಿಯೆಂದು ಗಣಿಸದೆ ಬಸವನು ಕೊಲ್ಲಿಸುವನೆಂದು ಹೆದರಿದ ಕೆಲವರು ಬರಿಯ ಸೆಜ್ಜೆ ವಸ್ತ್ರಾದಿಗಳನ್ನು ಕೊರಳಲ್ಲಿ ಕಟ್ಟಿಬಂದು ಮನ್ನಣೆ ಪಡೆದರು… ‘…ಒಬ್ಬನು ಬಳ್ಳವನ್ನು ಕವುಚಿಕ್ಕಿ ಲಿಂಗವೆಂದು ಪೂಜಿಸಿ ಹಣವನ್ನು ಪಡೆದನು. ಕಾರಗೊಟ್ಟಿಗನೆಂಬ ಗೊಲ್ಲನು ಆಡಿನ ಹಿಕ್ಕೆಯನ್ನು ಲಿಂಗವೆಂದು ಅರ್ಚಿಸಿ ಬಸವನಿಂದ ಸಂಪತ್ತನ್ನು ಹೊಂದಿದನು. ಬಾಗೂರ ಬೊಮ್ಮನು ಜೋಳದ ರಾಶಿಯನ್ನರ್ಚಿಸಿ ಭಾಗ್ಯವಂತನಾದನು. ಲಿಂಗಮಜ್ಜನಕ್ಕೆ ಹಾಲು ತರುತ್ತಿದ್ದ ಸ್ತ್ರೀಯು ನಾಯನ್ನು ಎಡಹಿ ಬೀಳಲು ಅವಳನ್ನು ಬಸವನು ಎತ್ತಿಕೊಂಡು ಬಂದು ಸಾಕೆನಿಸುವಷ್ಟು ಹೊನ್ನನ್ನು ನೀಡಿದನು. ಮಿಂಡ ಜಂಗಮನ ಸೂಳೆಯು ಬಸವರಾಜನ ರಾಣಿಯರಾದ ನೀಲಮ್ಮನು ಉಡುವ ಪೀತಾಂಬರವನ್ನು ಬೇಡಿದಳು. ಆಕೆಯು ಕೊಡದೇ ಹೋಗಲು ಬಸವನು ಆ ಸೂಳೆಗೆ ಆ ಸೀರೆಯನ್ನು ಕೊಡಿಸಿದನು..’ ಹನ್ನೆರಡನೇ ಶತಮಾನದಲ್ಲಿ ಜರುಗಿಹೋದ ಮತ್ತು ಕರ್ಣಾಕರ್ಣಿಕೆಯಾಗಿ ಬಂದ ಮೇಲಿನ ಘಟನೆಗಳನ್ನು ವರ್ತಮಾನದ ಸಂಗತಿಯಾಗಿ ಹೇಳುವಲ್ಲಿ ಪರಮತನಿಂದೆ ಇರುವುದಕ್ಕಿಂತ ಸತ್ಯವೇ ಅಡಗಿರುವಂತೆ ಕಾಣುತ್ತದೆ. ವರ್ತಮಾನದಲ್ಲಿಯೂ ಕೂಡ ಮಠಮಾನ್ಯಗಳಲ್ಲಿ ಅಥವಾ ಶರಣ ಪರಂಪರೆಯಲ್ಲಿ ದೇವಚಂದ್ರ ಈ ಬಗೆಯ ಧಾರ್ಮಿಕ ಕಪಟ ನಾಟಕಗಳನ್ನು ಕಂಡಿದ್ದಿರಬಹುದು.

ಬಸವಣ್ಣನ ಶಿಷ್ಯಪರಂಪರೆ ಬೆಳೆಯುತ್ತ ಹೋದಂತೆ ಅದಕ್ಕೊಂದು ಭ್ರಷ್ಟ ಸ್ವರೂಪ ಹತ್ತಿಕೊಂಡಿರಬೇಕು. ವಚನಕಾರರ ಚಳುವಳಿಯಲ್ಲಿ ಅವಿವೇಕಿಗಳ ಸಮೂಹವೂ ಇದ್ದು ಕೇವಲ ವೇಷಹಾಕಿ ದಾಸೋಹಕ್ಕಾಗಿಯೇ ಬದುಕಿದ್ದವರ ವಿವರ, ಇತರ ವಚನಕಾರರ ವಚನಗಳಲ್ಲಿಯೇ ಕಂಡುಬರುತ್ತದೆ. ಇದರೊಂದಿಗೆ ಕಲ್ಯಾಣ ಕ್ರಾಂತಿಯ ಪರಂಪರೆಯನ್ನು ಹದಿನೈದನೇ ಶತಮಾನದಲ್ಲಿ ಮಂಟೇಸ್ವಾಮಿ, ಮಹದೇಶ್ವರರು ಕೊತ್ತಿಗೂ ಲಿಂಗ, ಕೋಳಿಗೂ ಲಿಂಗ, ಕಳ್ಳನಿಗೂ ಲಿಂಗ, ಸುಳ್ಳನಿಗೂ ಲಿಂಗ ಎಂದು ಹೀಯಾಳಿಸುವ, ಹಾಗೆ ತಿರಸ್ಕರಿಸಿ ಹೊರಬರುವ ಕಥಾನಕಗಳು ದೇವಚಂದ್ರನ ಅಭಿಪ್ರಾಯಕ್ಕೆ ಪುಷ್ಟಿ ನೀಡುವಂತೆ ಹಾಡಿಕೊಳ್ಳಲ್ಪಡುತ್ತಿವೆ.

ದೇವಚಂದ್ರ ಹೇಳುವಂತೆ ಮದ್ಯಮಾಂಸವೂ ಆರಾಧನೆಯ ಒಂದು ಭಾಗವೇ ಆಗಿತ್ತೆಂಬುದು ಈ ಹೊತ್ತಿಗೂ ಮಂಟೇಸ್ವಾಮಿ ಪರಂಪರೆಯಿಂದ ತಿಳಿದು ಬರುತ್ತದೆ. ಅಂದರೆ ಕಲ್ಯಾಣದ ಶರಣಸಮೂಹದಲ್ಲಿ ಅತ್ಯಂತ ಸಾತ್ವಿಕನೆನಿಸುವ ಬಸವಣ್ಣನೂ, ಉಗ್ರವಾದಿಯೆನಿಸುವ ಅಂಬಿಗರ ಚೌಡಯ್ಯನೂ, ಮಾದಾರ ಚನ್ನಯ್ಯನಂಥ ಅಂತ್ಯಜರೂ ಇದ್ದರು. ಅವರವರು ತಮ್ಮ ಮನೋಧರ್ಮದನುಸಾರ ಮಹಾಮನೆಯಲ್ಲಿ ಒಂದಾಗಿದ್ದರು ಎಂಬುದು ಐತಿಹಾಸಿಕ ಸತ್ಯ ಸಂಗತಿ. ಹಾಗೆ ನೋಡಿದರೆ ಅಲ್ಲಮಪ್ರಭು ಮತ್ತು ಬಸವಣ್ಣನವರ ವ್ಯಕ್ತಿತ್ವ ಅಭಿವ್ಯಕ್ತಿಯಲ್ಲಿಯೇ ಸೂಕ್ಷ್ಮವ್ಯತ್ಯಾಸಗಳಿವೆ. ಹೀಗಾಗಿ ವಚನ ಚಳುವಳಿಯನ್ನು ಭಾವುಕವಾಗಿ ನೋಡದೆ, ಆ ಕಾಲಕ್ಕೆ ಬಸವಣ್ಣನವರ ಜಾತ್ಯತೀತ ಚಳುವಳಿಯ ಸಮಸ್ಯೆಯ ಸ್ವರೂಪ ಹೇಗಿತ್ತು ಎಂಬುದನ್ನು ವಾಸ್ತವವಾಗಿ ನೋಡುವಂತೆ ಕಾಣುತ್ತಾನೆ ದೇವಚಂದ್ರ.

ನಾಲ್ಕುನೂರು ವರ್ಷಗಳ ನಂತರವೂ ದೇವಚಂದ್ರ ತನ್ನ ಕಣ್ಣಮುಂದಿನ ಘಟನೆಯಂತೆ ಪ್ರಸ್ತಾಪಿಸುವ ವಚನ ಚಳುವಳಿಯ ಬಹುತೇಕ ವಿವರಗಳು ಉತ್ಪ್ರೇಕ್ಷೆ ಎಂದೆನಿಸುವುದಿಲ್ಲ. ಈ ಕಾರಣವಾಗಿ ವಚನಗಳು ಮತ್ತು ವಚನಕಾರರನ್ನು ಕುರಿತು ಬಂದ ತದನಂತರದ ಕಾವ್ಯಕಥಾ ಸಾಹಿತ್ಯ ಮತ್ತು ದೇವಚಂದ್ರನ ಹೇಳಿಕೆಗಳು ಇವನ್ನೆಲ್ಲ ಒಂದೆಡೆ ಇಟ್ಟು ಅಧ್ಯಯನ ಮಾಡಬೇಕಾದ ಸಾಧ್ಯತೆಯನ್ನು ದೇವಚಂದ್ರ ತನ್ನ ರಾಜಾವಳಿ ಕೃತಿಯಲ್ಲಿ ಹುಟ್ಟುಹಾಕಿದ್ದಾನೆನ್ನಬಹುದು.

ರಾಜಾವಳಿಯಲ್ಲಿ ಇತಿಹಾಸ

ಹೈದರಾಲಿಯ ಆಳ್ವಿಕೆಯನ್ನು ಕುರಿತು ದೇವಚಂದ್ರ ಹಲಕೆಲವು ಐತಿಹಾಸಿಕ ಸಂಗತಿಗಳನ್ನು ದಾಖಲಿಸಿರುತ್ತಾನೆ. ಅವಿದ್ಯಾವಂತನಾದರೂ ಅತಿ ಜಾಣನಾಗಿದ್ದ ಹೈದರಾಲಿಖಾನ್ ಸಾಮಾನ್ಯ ಕುದುರೆ ಸವಾರನಾಗಿದ್ದು, ವಾತಾವರಣ ಅವನಿಗೆ ಅನುಕೂಲವಾಗಿ ಬರಲು ಹೇಗೆ ನವಾಬನಾದ ಎಂಬ ಪರಿಯನ್ನು ದೇವಚಂದ್ರ ಕುತೂಹಲಕರ ರೀತಿಯಲ್ಲಿ ಮಂಡಿಸುತ್ತಾನೆ. ಹನ್ನೆರಡನೇ ಶತಮಾನದ ವಚನ ಚಳುವಳಿಯನ್ನು ಹೇಗೆ ಚಿತ್ರವತ್ತಾಗಿ ಹೇಳುತ್ತಾನೋ ಹಾಗೆಯೇ ತನ್ನ ಸಮಕಾಲೀನ ಸಂಗತಿಯನ್ನೂ ದೇವಚಂದ್ರ ಸ್ಪಷ್ಟವಾಗಿ ನಿರೂಪಿಸುತ್ತಾನೆ. ಬಹುಶಃ ಟಿಪ್ಪುವಿನ ಬದುಕಿನ ಎಲ್ಲ ವಿವರಗಳನ್ನೂ ಅವರು ಯುದ್ಧದಲ್ಲಿ ಹೋರಾಡಿ ಮಡಿದ ಸಂಗತಿಯನ್ನೂ ದೇವಚಂದ್ರ ಕವಿಯಾರೆ ಕೇಳಿರಬೇಕು, ಕಣ್ಣಾರೆ ಕಂಡಿರಬೇಕು. ಹೈದರನ ಮರಣಕ್ಕೆ ಬೆನ್ನುಫಣಿ ರೋಗ ಕಾರಣವಾಯಿತೆಂಬ ಸತ್ಯವನ್ನು ಉಲ್ಲೇಖಿಸುತ್ತ, ಅವನು ಸತ್ತನಂತರ ಅವನ ಸಮಾಧಿ ಶ್ರೀರಂಗಪಟ್ಟಣದ ಪೂರ್ವದಲ್ಲಿ ಸ್ಥಾಪಿತವಾಗಿ ಪೂಜೆ ಆರಂಭವಾಯಿತೆಂದು ಉಲ್ಲೇಖಿಸುತ್ತಾನೆ. ಅನುಮಾನದ ಪ್ರವೃತ್ತಿಯವನಾಗಿದ್ದ ಹೈದರ್ ತಪ್ಪಿತಸ್ಥರಿಗೆ ಅವನು ನೀಡುತ್ತಿದ್ದ ಶಿಕ್ಷೆಯ ಕ್ರಮಗಳು ದೇವಚಂದ್ರ ಹೇಳುವ ಮಾದರಿಯಲ್ಲೇ ಈಗಲೂ ಜನಪದರ ನೆನಪಿನಲ್ಲಿ ಚಾಲ್ತಿಯಲ್ಲಿವೆ. ದೇವಚಂದ್ರನ ಕಾಲ ಹೈದರನಿಗಿಂತ ಟಿಪ್ಪುವಿಗೇ ಹೆಚ್ಚು ಹತ್ತಿರವಿದ್ದರೂ ಟಿಪ್ಪುವಿನ ಸಾಧನೆ ಸಾಹಸ ಕುರಿತು ರಾಜಾವಳಿ ಕಥೆಯಲ್ಲಿ ಹೆಚ್ಚು ಮಾಹಿತಿ ಇಲ್ಲ. ಬಹುಶಃ ದೇವಚಂದ್ರನಿಗೆ ಹೈದರನ ಆಕ್ರಮಣ ಅಥವಾ ಆಗಮನವೇ ಅನ್ಯಾಕ್ರಮಣ ಎನಿಸಿರಬೇಕು. ಅನ್ಯ ಸಂಸ್ಕೃತಿಯ ಪ್ರವೇಶಕ್ಕೆ ಒಗ್ಗದ ಆತನ ಮನಸ್ಸು ಸ್ಥಳೀಯ ರಾಜರು ಮತ್ತು ಜಾತಿಮತಗಳ ಮೇಲಾಟವನ್ನೇ ಆಸಕ್ತಿಯಿಂದ ಚಿತ್ರಿಸಿದ್ದಾನೆ ಎನ್ನಿಸುತ್ತದೆ.

ರಾಘವಾಂಕನ ಸೋಮನಾಥ ಚಾರಿತ್ರ್ಯದಿಂದ ಹಿಡಿದು ಕನ್ನಡದ ಅನೇಕ ಶಾಸನಗಳಲ್ಲಿಯೂ ಸಹ ಧರ್ಮಮೂಲದ ಹೋರಾಟದ ಚಿತ್ರಣಗಳಿವೆ. ಈ ಧರ್ಮಗಳು ಸಾಮಾಜಿಕ ಜೀವನವನ್ನು ಹದಗೆಡಿಸುವುದರಲ್ಲಿ ಯಾವ ಪಾತ್ರ ವಹಿಸುತ್ತಿದ್ದವೆಂಬುದನ್ನು ಊಹಿಸುವುದು ಕಷ್ಟ. ದೇವಚಂದ್ರನ ಕೃತಿಯನ್ನು ಕೂಲಂಕಷವಾಗಿ ಓದಿದವರಿಗೆ ತೀವ್ರವಾಗಿ ತಟ್ಟುವ ಒಂದು ಸಂಗತಿ, ಧರ್ಮಗಳೆಂದೂ ಮನುಷ್ಯಜೀವನವನ್ನು ಒಂದಾಗಿ ಬೆಸೆಯುವತ್ತ ಪ್ರಯತ್ನಿಸಿಲ್ಲವೆಂದೇ ತಿಳಿದುಬರುತ್ತದೆ.

ಸಂತರು, ದಾರ್ಶನಿಕರ ಮನೋಭಾವದಂತೆ, ಅವರ ಹೇಳಿಕೆಯಂತೆ ಧರ್ಮವೆಂಬುದು ಕೇವಲ ಮಾನವಧರ್ಮವೇ ಆಗಿರುವುದಾದರೆ, ಸಾಮಾನ್ಯರ ಮಟ್ಟದಲ್ಲಿ ರಾಜಮಹಾರಾಜರ ಕೈಯ್ಯಲ್ಲಿ ಒಂದೊಂದು ಸಮೂಹಕ್ಕೆ ಒಂದೊಂದು ಬಗೆಯ ಅಸ್ತ್ರವಾಗಿ ವೈರ ದ್ವೇಷವನ್ನು ಬಿತ್ತುವ ಕಾಯಕ ಮಾಡಿರುವಂತೆ ತೋರುತ್ತದೆ. ದೇವಚಂದ್ರನಂಥ ಪ್ರಬುದ್ಧ ಮನಸ್ಸುಳ್ಳ ಕವಿಗೂ ತನ್ನ ಧರ್ಮಬಿಟ್ಟು ಅನ್ಯಧರ್ಮಗಳೂ ಆ ಧರ್ಮದ ಸಂತರೂ ಸಾಮಾನ್ಯರಾಗಿಯೇ ಕಾಣಿಸುತ್ತಾರೆ. ಅನ್ಯಧರ್ಮದ ಕವಿಗಳಂತೂ ‘ಎನ್ನ ನಾಲಿಗೆಯೊಳು ಅನ್ಯ ದೈವಂಗಳ ಸ್ತುತಿಸಿದೆನಾದೊಡೆ’ ತಮ್ಮ ತಲೆಯನ್ನೇ ದಂಡವಾಗಿಡುವ ಪ್ರತಿಜ್ಞೆ ಮಾಡಿರುತ್ತಾರೆ. ಈ ಕಾರಣದಿಂದ ದೇವಚಂದ್ರ ತನ್ನ ಧರ್ಮವನ್ನೂ ಒಳಗೊಂಡಂತೆ ಕೊಡುವ ಬೇರೆ ಬೇರೆ ಧರ್ಮಗಳ ನಡುವಣ ಹೋರಾಟ, ಹೊಡೆದಾಟಗಳ ಮಾಹಿತಿಯನ್ನು ಸತ್ಯವೆಂದೇ ತಿಳಿಯಬೇಕಾಗುತದೆ. ಇಂಥ ವೇಳೆ ಅಗಾಧ ಅಂಧಶ್ರದ್ಧೆಯಲ್ಲಿ ತೊಳಲುತ್ತಿದ್ದ ಕೆಳವರ್ಗದವರ ಬದುಕು ಇನ್ನೂ ಊಹಿಸಲು ಅಸಾಧ್ಯವಾಗಿದ್ದಿರಬಹುದು. ಈ ದಿಕ್ಕಿನಲ್ಲಿ ಧರ್ಮಗಳ ನಡುವೆ ಸಿಕ್ಕದ ಸಾಮಾನ್ಯರ ಮತ್ತರ ಆಳರಸರುಗಳ ದೊಂಬರಾಟಗಳನ್ನು ದೇವಚಂದ್ರ ನೂರಾರು ಉದಾಹರಣೆಗಳೊಡನೆ ವಿವರಿಸುತ್ತಾನೆನ್ನುವುದು ಕುತೂಹಲಕರ.

ಮನುಷ್ಯ ಸ್ವಭಾವ ಹಾಗೂ ಜೀವನ

ದೇವಚಂದ್ರ ತನ್ನ ಗಮನಕ್ಕೆ ಬಂದದ್ದನೆಲ್ಲ ಹೇಳುತ್ತ ಹೋಗುವ ರಾಜಾವಳೀ ಕಥೆಯಲ್ಲಿ ಒಂದು ವಿಷಾದದ, ವಿಚಿತ್ರ ಸಂಗತಿ, ಹೀಗೆ ನಿರೂಪಣೆಗೊಂಡಿದೆ: ‘ಆ ವರುಷದಲ್ಲಿಯೇ ಪಟಕಿ ಮತ್ತು ಮಿಡತೆಗಳ ಹಿಂಡುಗಳು ಶಲಭಾದಿ ಹುಳುಗಳು ಮುತ್ತಿದವು. ಮತ್ತೆ ಮೋಡಕವಿದು ಅವಿಚ್ಛಿನ್ನವಾದ ಮಳೆಯಿಂದ ಸಮುದ್ರ ಹೆಚ್ಚಿ ಚನ್ನಪಟ್ಟಣದ ಪೇಟೆಯನ್ನು ಮುಚ್ಚಿತು. ಕೆಲವು ಗೃಹಗಳು ನೀರಿನಿಂದ ತುಂಬಿದವು. ಚಿತ್ರಭಾನು ಸಂವತ್ಸರದ ಮಾರ್ಗಶಿರಮಾಸ ಕಳೆಯಲು ರಾಜ್ಯದಲ್ಲಿ ಪ್ರಜಾಕ್ಷೋಭೆ ಉಂಟಾಯಿತು. ಸೇನೆಯ ಉಜ್ಜೈನಿ ಪಟ್ಟಣದ ಮೇಲೆ ಹೋಗಿಬರುವಲ್ಲಿ ಕರ್ನಾಟ ದೇಶದಲ್ಲಿ ವಾಂತಿಭೇದಿಯಾದ ನರಮಾರಿ ರೋಗವು ಬಂದಿತು. ಇದರಿಂದ ಅನೇಕಜನರು ನಷ್ಟವಾದರು. ಆ ರೋಗ ಬಂದಲ್ಲಿ ಕೆಲಕೆಲವೆಡೆ ದೊಡ್ಡಮ್ಮ ಚಿಕ್ಕಮ್ಮನೆಂದು ಹೆಸರಿಟ್ಟು ಗುಡಿಯನ್ನು ಕಟ್ಟಿಸಿ ದೇವತಾ ಸಂಕಲ್ಪ ಮಾಡಿದವು…’ ಸಾಮಾಜಿಕ ರೋಗರುಜಿಗಳ ಹಾವಳಿಯನ್ನು ದೇವಚಂದ್ರ ಹೆಚ್ಚು ಹೇಳದಿದ್ದರೂ ಮೇಲಿನ ಇದೊಂದೇ ಉಲ್ಲೇಖ ಆ ಕಾಲದ ಸಾಮಾನ್ಯರ ದುರ್ಬರ ಬದುಕನ್ನು ವಿಸ್ತರಿಸಿ ಹೇಳುವಂತಿದೆ. ಪ್ಲೇಗು, ಕಾಲರಾದಂಥ ರೋಗಗಳು ಜನ ಜೀವನವನ್ನು ಹೇಗೆ ಅಸ್ತವ್ಯಸ್ತಗೊಳಿಸುತ್ತಿದ್ದವು ಎಂಬುದನ್ನು ನಾವು ಈ ಶತಮಾನದ ಆರಂಭದ ಕಥೆ ಕಾದಂಬರಿಗಳಲ್ಲಿಯೂ ಗಮನಿಸಬಹುದಾಗಿದೆ.

ಕೇವಲ ರಾಜಕಾರಣದ ಅವಾಂತರ, ರೋಗರುಜಿನಗಳು, ಧಾರ್ಮಿಕ ಮೇಲಾಟಗಳಷ್ಟೇ ಮುಖ್ಯ ವಿವರಗಳಾಗಿದ್ದರೆ, ರಾಜಾವಳಿ ಕಥೆ ಒಂದು ಮುಖ್ಯಗ್ರಂಥವೆನಿಸಿಕೊಳ್ಳುತ್ತಿರಲಿಲ್ಲ. ದೇವಚಂದ್ರ ಕೊಡುವ ಹಲಕೆಲವು ಘಟನೆಗಳು ಕಥೆಗಳು ಮಾನವ ಸ್ವಭಾವವನ್ನು ನಿಚ್ಚಳವಾಗಿಯೇ ಪ್ರತಿನಿಧಿಸುವಂತಿವೆ. ಕನ್ನಡದಲ್ಲಿ ಪಂಪ, ಕುಮಾರವ್ಯಾಸ, ಲಕ್ಷ್ಮೀಶರನ್ನು ಬಿಟ್ಟರೆ ಮನುಷ್ಯ ಸ್ವಭಾವದ ವೈಚಿತ್ರ್ಯಗಳು ತೆರೆದುಕೊಳ್ಳುವುದು ದೇವಚಂದ್ರನ ಕೃತಿಯಲ್ಲೇ, ವೇಶ್ಯೆಯೊಬ್ಬಳನ್ನು ಕೂಡಲು ವಿಟಪುರುಷನೊಬ್ಬ ಬಂದ. ಆ ಹೊತ್ತಿನಲ್ಲಿ ವೇಶ್ಯೆಯ ಮನೆ ಹೊತ್ತಿ ಉರಿಯುತ್ತಿತ್ತು. ವಿಟಪುರುಷನಾದರೋ ಹಾಸಿಗೆ ಎಲ್ಲಿ ಹಾಸುವೆ ಎಂದು ಕೇಳಿದನಂತೆ. ಮತ್ತೊಂದು ಸಂದರ್ಭಕೂಡ ಇಂಥದ್ದೇ! ದಾಸಯ್ಯನೊಬ್ಬ ನದಿಯ ಈ ದಡದಲ್ಲಿ ನಾಮಹಾಕಿಕೊಳ್ಳುತ್ತಿದ್ದ. ಆಚೆ ದಡದಲ್ಲಿ ಒಬ್ಬ ವ್ಯಕ್ತಿ ನಿಂತಿದ್ದ. ಅವನನ್ನು ದಾಸಯ್ಯ ತುರ್ತಾಗಿ ಕರೆದ. ಆಳುದ್ದ ನೀರಿನಲ್ಲಿ ಈಜಿ ಬಂದವನನ್ನು ದಾಸಯ್ಯ, ‘ನನ್ನ ಹಣೆಯ ನಾಮ ಚೆನ್ನಾಗಿ ಕೂತಿದೆಯೇ ನೋಡಿ ಹೇಳು’ ಎಂದ. ಹೆಣ್ಣು ಗಂಡಿನ ಪ್ರೇಮಸಂಬಂಧದ ಕಥೆಯೊಂದು ಮನಮುಟ್ಟುವಂತಿದೆ: ‘ವರ್ತಕನ ಮಗಳೊಡನೆ ಮತ್ತೊಬ್ಬ ಶೆಟ್ಟಿಯ ಮಗನು ಜೊತೆಗೂಡಿದ್ದರು. ಯಾರ್ಯಾರು ಎಷ್ಟು ಬಗೆಯಾಗಿ ಹೇಳಿದರೂ ಒಬ್ಬರನ್ನೊಬ್ಬರು ಅಗಲದಾದರು. ಇದನ್ನು ಪಾದಶಾಯಿಗೆ ತಿಳಿಸಲು ಆತನು ಅವರನ್ನು ಹಿಡಿದು ತರಿಸಿ ಬಿಸಿಲಲ್ಲಿ ನಿಲ್ಲಿಸಿದನು. ನೆಲದ ಮಣ್ಣು ಕಾದು ತಡವರಿಸುತ್ತಿದ್ದ ಮಿಂಡಗಾರನ ಕಾಲಕೆಳೆಗೆ ಆಕೆ ತಾನುಟ್ಟ ಸೀರೆಯನ್ನೆಲ್ಲಾ ಹರಿದು ಹಾಸುತ್ತಿದ್ದಳು ಅದನ್ನು ನೋಡಿದ ಪಾದಶಾಯಿಯು ಇದು ಜನ್ಮಾಂತರದ ಸಂಬಂಧವೆಂದು ಇಬ್ಬರನ್ನೂ ಬೇರೆ ಮಾಡದೆ ಕಳುಹಿಸಿಕೊಟ್ಟನು.’

ತಾನು ಕಂಡ, ಕೇಳಿದ ಸಾಮಾಜಿಕ ವಿವರಗಳನ್ನು ಅತ್ಯಂತ ಸರಳವಾಗಿ, ಮುಗ್ಧವಾಗಿ ಹೇಳಿಕೊಂಡು ಹೋಗಿರುವ ದೇವಚಂದ್ರನ ಕೃತಿ ರಾಜಾವಳೀ ಕಥಾಸಾರ ಕನ್ನಡ ಸಾಹಿತ್ಯ ಪರಂಪರೆಯ ಅಥವಾ ಕಳೆದ ಶತಮಾನಗಳ ಬದುಕಿನ ಒಂದು ಮುಖ್ಯ ದಾಖಲೆಯೆನಿಸುತ್ತದೆ. ವಿದ್ವಾಂಸರು ಅತ್ಯಂತ ತಾಳ್ಮೆಯಿಂದಲೂ, ಶ್ರದ್ಧೆಯಿಂದಲೂ ರಾಜಾವಳೀ ಕಥೆಯನ್ನು ವ್ಯಾಖ್ಯಾನಿಸಬೇಕಾಗಿದೆ.

‘ಬುದ್ಧಿವಂತರಾದವರು ಯಾವುದನ್ನು ಪರೀಕ್ಷಿಸಿ, ಸ್ವೀಕರಿಸುವರು. ಕ್ರೋಧ, ಮಾಯೆ, ಲೋಭಮೋಹಗಳನ್ನು ತ್ಯಜಿಸಿ ನಿಜಸ್ವರೂಪವನ್ನು ನಂಬುವುದು ಜ್ಞಾನಿಗಳ ಲಕ್ಷಣವಾಗಿದೆ…’ ‘… ವಿಚಾರ ಶಕ್ತಿಯಿಲ್ಲದೆ ಧರ್ಮವನ್ನು ಸ್ವೀಕರಿಸಿದರೆ ಅನರ್ಥವಾಗುವುದು…’ ಎಂಬ ವಾಕ್ಯಗಳನ್ನೆಲ್ಲ ಉದ್ಧರಿಸುವ ದೇವಚಂದ್ರ ಮತ್ತೊಂದು ಮುಖ್ಯಸೂಕ್ತಿ ಪ್ರಕೃತಿಯ ಚೇತನವೇ ಮನುಷ್ಯ ಚೇತನಕ್ಕಿಂತ ದೊಡ್ಡದೆಂದು ಭಾವಿಸಿ ರಾಜಾವಳಿ ಕಥೆಯನ್ನು ಆರಂಭಿಸಿದ್ದಾನೆ. ಹೀಗಾಗಿ ದೇವಚಂದ್ರ ಕಾಲಜ್ಞಾನ ಹೇಳುವ ಕಾಲಜ್ಞಾನಿಯಂತೆ, ಆ ಕಾಲದ ಅನೇಕ ಸತ್ಯ ಸಂಗತಿಗಳನ್ನು ಹೇಳುವ ಸಂತನಂತೆ, ಇತಿಹಾಸದ ವಿವರಗಳನ್ನು ದಾಖಲಿಸುವ ಚರಿತ್ರಕಾರನಂತೆ, ಕಥೆಗಳನ್ನು ಒಂದರ ಮೇಲೆ ಒಂದರಂತೆ ಹೇಳುವ ಕಥೆಗಾರನಂತೆ ಕಾಣಿಸುತ್ತಾನೆ. ಇದರಿಂದಾಗಿ ರಾಜಾವಳಿ ಕಥೆ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಒಂದು ಮುಖ್ಯ ಸಾಂಸ್ಕೃತಿಕ ಪಠ್ಯವೆನಿಸುತ್ತದೆ.

* * *