ನಾಟಕೀಯ ಹುಟ್ಟು

ಚತುರುಪಾಯಪ್ರಾಪ್ತ ಸಪ್ತಾಂಗ ರಾಜ್ಯರ್… ಸುಚರಿತರ್ ಉಪಕಾರರ್ ಕುಂಪಣೀ ಭೂಮೀಪಾಲರ್, ವೈರಿವನಿತಾ ದೀಕ್ಷಾಗುರು, ಸ್ಥಿರಸಾಮ್ರಾಜ್ಯ ವಿರಾಜಮಾನ ಜಗದೀಶರ್, ಕುಂಪಿಣೀ ಭೂಮಿಪರ್

– ಇವು ‘ರಾಜಾವಳಿಕಥೆ’ಯಲ್ಲಿ ಕವಿ ದೇವಚಂದ್ರನು ಮತ್ತೇಭವಿಕ್ರೀಡಿತ ಹಾಗೂ ಮಾಲಿನೀ ವೃತ್ತಗಳಲ್ಲಿ ಮಾಡುವ ಬ್ರೀಟಿಶರ ಸ್ತುತಿ, ಹಳಗನ್ನಡದಲ್ಲಿ ಛಂಧೋಬದ್ಧವಾದ ಪದ್ಯಗಳಲ್ಲಿ ಯುರೋಪಿಯನರಾದ ಬ್ರಿಟಿಶರನ್ನು ಕನ್ನಡದ ಕವಿಯೊಬ್ಬ ಸ್ತುತಿಸುವುದು ವಿಚಿತ್ರ ಅನಿಸುತ್ತದೆ. ಈ ಸ್ತುತಿಯು ರಾಜಾವಳಿಕಥೆಯು ಎಂತಹ ಚಾರಿತ್ರಿಕ ಸಂದರ್ಭದಲ್ಲಿ ಯಾವ ನಾಟಕೀಯ ಸನ್ನಿವೇಶದಲ್ಲಿ ಹುಟ್ಟಿತು ಎನ್ನುವುದಕ್ಕೆ ಸೂಚನೆಯಾಗಿದೆ.

ನಾಲ್ಕನೇ ಮೈಸೂರು ಯುದ್ಧದಲ್ಲಿ (೧೭೯೯) ಟಿಪ್ಪುವನ್ನು ಸೋಲಿಸಿ ಮೈಸೂರು ರಾಜ್ಯವನ್ನು ವಶಪಡಿಸಿಕೊಂಡ ಬಳಿಕ, ಈಸ್ಟ್ ಇಂಡಿಯಾ ಸರಕಾರವು ಇಡೀ ರಾಜ್ಯವನ್ನು ಸಮೀಕ್ಷೆ ಮಾಡಿ ವರದಿ ತಯಾರಿಸಲು ಶುರುಮಾಡಿತು. ಈ ಕೆಲಸಕ್ಕಾಗಿ ಕಂಪನಿ ಸರಕಾರದಿಂದ ನಿಯೋಜಿತನಾಗಿ ಕರ್ನಲ್ ಮೆಕೆಂಜಿಗೂ ಚಾಮರಾಜನಗರ ಜಿಲ್ಲೆಯ ಮಲೆಯೂರಿನಲ್ಲಿದ್ದ ಸಾಂಪ್ರದಾಯಕ ಜೈನ ವಿದ್ವಾಂಸನಾದ ದೇವಚಂದ್ರನಿಗೂ ಆಕಸ್ಮಿಕ ಭೇಟಿಯುಂಟಾಯಿತು. ಮೆಕೆಂಜಿಯು ಮಲೆಯೂರಿನ ಮಗ್ಗುಲಿಗಿರುವ ಕನಕಗಿರಿ ಬೆಟ್ಟದಲ್ಲಿದ್ದ ದೇವಚಂದ್ರನನ್ನು ಕಂಡು “ಸ್ಥಳಪುರಾಣಮುಂಟೆ?” ಎಂದು ಕೇಳಿದಾಗ, ಉತ್ತರವಾಗಿ ದೇವಚಂದ್ರ ಜೈನಮುನಿಗಳಾದ ಪೂಜ್ಯಪಾದ ಚರಿತೆಯನ್ನು ಹೇಳುತ್ತಾನೆ. ಆದರೆ ಮೆಕೆಂಜಿಗೆ ಬೇಕಾದುದು ‘ಪೂಜ್ಯಪಾದಚರಿತೆ’ಯಲ್ಲ “ಕರ್ನಾಟಕದ ಪೂರ್ವದ ಪ್ರಪಂಚು”ಗಳು, ಅಂದರೆ ಕರ್ನಾಟಕ ಸಮಾಜಕ್ಕೆ ಸಂಬಂಧಿಸಿದ ಸಂಗತಿಗಳು, ದೇವಚಂದ್ರನಂತಹ ಪ್ರತಿಭಾಶಾಲಿಯಾದ ಸ್ಥಳೀಯ ಸಹಾಯಕನನ್ನು ಕಂಡ ಕೂಡಲೇ ಮೆಕೆಂಜಿಯು ಅವನನ್ನು ಹಿಡಿದು “ಎರಡು ತಿಂಗಳ ಪರ್ಯತ ಬಿಡದೆ ರಾಜ್ಯ ಸೀಮೆಗಳ ಚಕ್ರದಿಂದಳೆದು ವಿಂಗಡಿಸುತ್ತ ಗ್ರಾಮಾಧಿಗ್ರಾಮಗಳಿಗೆ ನಕ್ಷೆಯನ್ನು ಬರೆಯಿಸಿ, ಜಾತಿಕೋಮುವಾರು ಕುಳ ಮನೆ ಜನಜೀವನ ಮೊದಲಾದ ವಂಜಮಾಬಂದು ಮುಂತಾದವಂ ಬರೆಯಿಸು”ವ ಕೆಲಸ ಮಾಡಿಸುತ್ತಾನೆ. ಇದಕ್ಕಾಗಿ ಅವನು ಕೊಡುವುದು “ದಿನ ಒಂದಕ್ಕೆ ಗ್ರಾಸಕ್ಕೆ ಒಂದು ಹಣ”

‘ರಾಜಾವಳಿಕಥೆ’ಯ ಹುಟ್ಟಿನ ಹಿನ್ನೆಲೆಯಲ್ಲಿರುವ ಮೆಕೆಂಜಿ ದೇವಚಂದ್ರರ ಭೇಟಿ ಪ್ರಸಂಗವು ತೀರ ಆಕಸ್ಮಿಕವೆಂದು ಕಾಣುತ್ತದೆ. ಆದರೆ ಈ ಆಕಸ್ಮಿಕವು ಚಾರಿತ್ರಿಕವಾಗಿ ಬಹಳ ಮುಖ್ಯವೂ ಮಾರ್ಮಿಕವೂ ಆಗಿದೆ. ಇಡೀ ಸನ್ನಿವೇಶದ ಅನಿವಾರ್ಯತೆ ಇರುವುದು ಅಮಾಯಕನಾದ ದೇವಚಂದ್ರನ ಬಡತನದಲ್ಲಿ ಹಾಗೂ ಬಹಳ ಎಚ್ಚರಿಕೆಯಿಂದ ಕೆಲಸ ಸಾಧಿಸಿಕೊಂಡು ಹೋಗಲು ಬಂದಿರುವ ಮೆಕೆಂಜಿಯ ಜಾಣ್ಮೆ ಅಧಿಕಾರದಲ್ಲಿ. ದೇವಚಂದ್ರನಿಗೆ ಬಡತನದ ಬವಣೆಯ ಜತೆಗೆ, ಪೂಜ್ಯಪಾದರ ಚರಿತೆಯನ್ನು ಹೊಸ ಅಧಿಕಾರದ ಪ್ರತಿನಿಧಿಯಾದ ಮೆಕೆಂಜಿಗೆ ಒಪ್ಪಿಸುವ ಧಾರ್ಮಿಕ ಶ್ರದ್ಧೆಯೂ ಇದೆ. ಒಬ್ಬ ವಿದೇಶಿಗನಿಗೆ ತನ್ನ ಧರ್ಮಗ್ರಂಥವನ್ನು ಯಾಕೆ ಸಲ್ಲಿಸಬೇಕು ಎಂಬ ಅಭಿಮಾನದ ಪ್ರಶ್ನೆ ದೇವಚಂದ್ರನಿಗೆ ಇಲ್ಲ. ರಾಜಕೀಯ ಅಧಿಕಾರದ ಶಕ್ತಿಯೇ ಅಂಥಹುದು. ಮೆಕೆಂಜಿಯೇನೋ ಪೂಜ್ಯಪಾದ ಚರಿತೆಯನ್ನು ಸ್ವೀಕರಿಸುತ್ತಾನೆ. ಆದರೆ ‘ಕರ್ನಾಟಕದೊಳು ನಡೆದ ಪ್ರಪಂಚುಗಳನ್ನೆಲ್ಲಾ ಕ್ರೋಢೀಕರಿಸಿ ಬರೆದು ನಾವಿದ್ದಲ್ಲಿಗೆ ತೆಗೆದುಕೊಂಡು ತಿಂಗಳ ಒಳಗೆ ಬಂದರೆ ಭಾರಿ ಸಂಬಳ ಮಾಡಿಕೊಡುತ್ತೇವೆ ಎಂದು ಆಸೆಹುಟ್ಟಿಸಿ “ಇಪ್ಪತ್ತೈದು ಕುಂಪಣಿ ರೂಪಾಯ”ನ್ನು ಕೊಟ್ಟು ಅಪ್ಪಣೆ ಮಾಡುತ್ತಾನೆ. ಹೀಗೆ ಮೆಕೆಂಜಿಯ ರಾಜಕಾರಣ, ದೇವಚಂದ್ರನ ಬಡತನ ಹಾಗೂ ಮತಶ್ರದ್ಧೆಗಳು ಕೂಡಿ “ಕರ್ನಾಟಕದೊಳು ನಡೆದ ಪ್ರಪಂಚು”ಗಳ ರೂಪವಾದ ‘ರಾಜಾವಳಿಕಥೆ’ಯ ಮೊದಲ ಕರಡು ಸಿದ್ಧವಾಗುತ್ತದೆ. ಸ್ವೀಕರಿಸಲು ಮೆಕೆಂಜಿ ಮತ್ತೆ ಸಿಗುವುದೇ ಇಲ್ಲ. ಭಾರತದ ಪ್ರಪಂಚುಗಳನ್ನು ಸಂಗ್ರಹಿಸುತ್ತ ಬಂಗಾಳಕ್ಕೆ ಹೋಗಿಬಿಡುತ್ತಾನೆ.

‘ರಾಜಾವಳಿಕಥೆ’ಯ ವಿಶಿಷ್ಟತೆ ಅಡಗಿರುವುದು ಅದರ ನಾಡಕೀಯವಾದ ಹುಟ್ಟಿನಲ್ಲಾದರೂ ಈ ನಾಟಕೀಯತೆ ಇಲ್ಲಿಗೆ ಮುಗಿಯುವುದಿಲ್ಲ. ಮೆಕೆಂಜಿಯಿಲ್ಲವೆಂದಾದ ಮೇಲೆ, ದೇವಚಂದ್ರ ಈ ಕೃತಿಯನ್ನು ಮೈಸೂರ ಒಡೆಯರಿಗೆ ಒಪ್ಪಿಸಿ ತನ್ನ ಜೀವನ ನಿರ್ವಹಣೆಗೆ ಅನುಕೂಲ ಪಡೆಯಲು ಯತ್ನಿಸುತ್ತಾನೆ. ಆದರೆ ಮಹಾರಾಜರ ಮುಖಾಮುಖಿ ಆಗುವುದೇ ಇಲ್ಲ. ಕಡೆಗೆ ಅರಮನೆಯಲ್ಲಿದ್ದ ಸೂರಿಪಂಡಿತನೆಂಬ ಜೈನ ಅಧಿಕಾರಿಯ ಮೂಲಕ ಹೇಗೋ ಮಹಾರಾಣಿಯ ಭೇಟಿಯಾಗುತ್ತದೆ. ಮಹಾರಾಣಿ ರಾಜಾವಳಿಕಥೆಗಳನ್ನು ಅಲಿಸಿ ಅದರಲ್ಲಿ ಮೈಸೂರೊಡೆಯರ ಕಥೆಗಳು ಸರಿಯಾಗಿ ಇಲ್ಲದ್ದನ್ನು ಕಂಡು, ಅವನ್ನು ವಿವರವಾಗಿ ಬರೆದು ಸೇರಿಸಲು ಸೂಚಿಸುತ್ತಾನೆ ಅಕ್ಷರಸಃ ೧೧ನೇ ಅಧ್ಯಾಯನಕ್ಕೆ ‘ಭದ್ರಂ ಶುಭಂ ಮಂಗಲಂ’ಎಂದು ಮಂಗಳಹಾರಿ ಮುಗಿದುಹೋಗಿದ್ದ ಕೃತಿ ಮತ್ತೆ ಇನ್ನೆರಡು ಅಧ್ಯಾಯಗಳಲ್ಲಿ ಬೆಳೆಯುತ್ತದೆ.

ದೇವಚಂದ್ರನ ಅಸಹಾಯಕತೆ ದಾಸ್ಯ ಮನೋಭಾವಗಳಲ್ಲಿ ರೂಪುಪಡೆದ ಈ ಕೃತಿಯ ಬ್ರಿಟಿಶರು ಈ ನೆಲದಲ್ಲಿ ಬೇರುಬಿಡಲು ಮಾಡುತ್ತಿದ್ದ ಹವಣಿಕೆಯನ್ನೂ ಹೇಳುತ್ತಿದೆ. ಬ್ರಿಟಿಶರು ರಾಜಕೀಯವಾಗಿ ಭಾರತವನ್ನು ಆಕ್ರಮಿಸಿಕೊಳ್ಳುವುದಕ್ಕೆ ಮುಂಚೆ. ಈ ನಾಡಿನ ಭಾಷೆ, ವ್ಯಾಕರಣ, ಜಾತಿ, ಧರ್ಮಗಳ ಅಧ್ಯಯನ ಶುರುಮಾಡಿದ್ದರು. ಜನಪದ ಸಾಹಿತ್ಯ ಸಂಗ್ರಹ, ಶಾಸನ ಸಂಗ್ರಹ, ಹಸ್ತ ಪ್ರತಿಗಳ ಸಂಗ್ರಹ ಮಾಡುತ್ತಿದ್ದರು. ಮಾಹಿತಿ ಸಂಗ್ರಹಿಸುವುದಕ್ಕೆ ‘ರಾಜಾವಳಿಕಥೆ’ ಇಂತಹ ಮಾಹಿತಿ ಸಂಗ್ರಹಿಸಿ ಕೊಡುವ ಕೆಲಸವನ್ನು ಕನ್ನಡದಲ್ಲಿ ಉದ್ಘಾಟಿಸುತ್ತದೆ. ಜಾಗತೀಕರಣದ ಈ ಸಂದರ್ಭದಲ್ಲಿ ಈಗಲೂ ದೇವಚಂದ್ರನ ಕೆಲಸವನ್ನು ಮಾಡಿ ಕೊಡುವ ಅನೇಕರು ನಮ್ಮಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ‘ರಾಜಾವಳಿಕಥೆ’ಯ ಚರ್ಚೆಗೆ ಮೂರು ಶತಮಾನಗಳ ಬಳಿಕ ವಿಚಿತ್ರ ತೀರಿಯಲ್ಲಿ ಸಾಂದರ್ಭಿಕತೆ ಬಂದಿದೆ. ನಾಡಿನ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ ಆಧುನಿಕ ಕಾಲದ ಅನೇಕ ದೇಶೀ ವಿದ್ವಾಂಸರು ಬ್ರಿಟಿಶ್ ಅಧಿಕಾರಿಗಳಿಗೆ ಸಹಾಯಕರಾಗಿ ಕೆಲಸ ಮಾಡುತ್ತ ಹೆಸರಾದವರು. ಲೂಯಿ ರೈಸನಿಗೆ ಸಹಾಯಕರಾಗಿದ್ದ ಆರ್ ನರಸಿಂಹಾಚಾರ್ ಅವರು ‘ಕರ್ನಾಟಕ ಕವಿಚರಿತೆ’ಯನ್ನು ರಚಿಸಿದರು. ಎಡ್ಗರ್ ಥಸ್ಟನ್ ಜತೆ ನಂಜುಂಡಯ್ಯ ನವರು ಸೇರಿ ನಮ್ಮ ದೇಶದ ಜಾತಿಗಳ ಮೇಲೆ ಕೆಲಸ ಮಾಡಿದರು. ಈ ವಿದ್ವಾಂಸರು ತಮ್ಮ ಕೋಶಗಳನ್ನು ಮೊದಲು ಇಂಗ್ಲಿಷಿನಲ್ಲಿ ಪ್ರಕಟಿಸಿದರು ಎಂಬುದು ಗಮನಾರ್ಹ. ದೇವಚಂದ್ರನು ಇದೇ ಸಾಲಿನಲ್ಲಿ ಬರುವ ವಸಾಹತುಶಾಹಿ ಮಾಹಿತಿದಾರ ವಿದ್ವಾಂಸರಲ್ಲಿ ಒಬ್ಬನಾದರೂ, ಅವನು ಸ್ವತಂತ್ರವಾಗಿ ಕನ್ನಡ ಭಾಷೆಯಲ್ಲಿ ತನ್ನದೇ ಆದ ಸಾಮಾಜಿಕ ಅಸಹಾಯಕತೆ ಹಾಗೂ ಧಾರ್ಮಿಕ ನಿಲುವಿನಲ್ಲಿ “ಕರ್ನಾಟಕದ ಪ್ರಪಂಚು”ಗಳನ್ನು ಸಂಗ್ರಹಿಸಿದನು.

ರಾಜಾವಳಿಕಥೆಯು ಯಾವ ಬಗೆಯ ಗ್ರಂಥ?

ಇದು ಪಂಪರ ರನ್ನರ ಅದಿಪುರಾನ ಅಜಿತನಾಥಪುರಾಣದಂತಹ ಆಗಮಿಕ ಕೃತಿಯಲ್ಲ. ಅಜೈನ ಮತಗಳ ವಿಚಾರನೆ ಮಾಡುವ ಕೆಲಸ ಮಾಡಿದರೂ ಧರ್ಮಶಿವನ ‘ಸಮಯಪರೀಕ್ಷೆ’ಯಂತೆ ಮಿಶನರಿ ಹಠದ ಕೃತಿಯೂ ಅಲ್ಲ. ನೂರಾರು ಕತೆಗಳನ್ನು ಒಳಗೊಂಡಿದ್ದರು ‘ವಡ್ಡಾರಾಧನೆ’ ಧರ್ಮಾಮೃತ’ದಂತಹ ಜೈನಕಥಾಕೋಶವೂ ಅಲ್ಲ. ಇದು ಕನ್ನಡದ ಯಾವ ಜೈನಗ್ರಥದ ಜತೆಗೂ ಹೋಲಿಸಲು ಸಾಧ್ಯವಿಲ್ಲದಂತಹ ಅನನ್ನಯ ಕೃತಿ. ಇಲ್ಲಿ ದಾಖಲಾತಿ ಮಾಡುವ ಸಹಾಯಕನ ಪ್ರಜ್ಞೆ ಮುಖ್ಯವಾಗಿ ಕೆಲಸ ಮಾಡಿದ್ದರೂ. ದಾಖಲಿಸುವಾಗ ಸಹಜವಾಗಿ ದೇವಚಂದ್ರನ ಜೈನಪರವಾದ ಪೂರ್ವಗ್ರಹ ಹಾಗೂ ನಂಬಿಕೆಗಳೂ ಭಾಗವಹಿಸಿವೆ. ಪುರಾಣ ಮತ್ತು ಇತಿಹಾಸದ ವಸ್ತುವನ್ನು ಇಟ್ಟುಕೊಂಡು ತನ್ನ ಸಮಾಜಕ್ಕೆ ಸ್ಪಮದಿಸಿ ಸ್ವಯಂಪ್ರೇರಣೆಯಿಂದ ಮರುಸೃಷ್ಟಿಸುವ ಯಾವ ಉದ್ಧೇಶವೂ ದೇವಚಂದ್ರನಿಗಿರಲಿಲ್ಲ. ಇದೊಂದು ಸಾಂಪ್ರದಾಯಕ ರಚನೆ ಶೈಲಿಯಲ್ಲಿ ಮೂಡಿರುವ ವಸಾಹತುಶಾಹಿ ಪಠ್ಯ, ಇಷ್ಟಕ್ಕೆಲ್ಲ ಕಾರಣ ಅದರ ಹುಟ್ಟು ವಿಶಿಷ್ಟವಾದ ಚಾರಿತ್ರಿಕ ಇಕ್ಕಟ್ಟಿನಲ್ಲಿರುವುದು. ಈ ಚಾರಿತ್ರಿಕ ಇಕ್ಕಟ್ಟೆ ಇದನ್ನು ಕನ್ನಡದ ಪ್ರಮುಖ ಸಾಂಸ್ಕೃತಿಕ ಪಠ್ಯವಾಗಿಸಿದೆ

ಕೃತಿಯ ಹೆಸರು ‘ರಾಜಾವಳಿಕಥೆ ಎಂದಿದ್ದರೂ ಇದು ಬರೀ ರಾಜಮಹಾರಾಜರ ಕಥೆಗಳನ್ನು ಒಳಗೊಂಡಿಲ್ಲ. ರಾಜರ ಕತೆಗಳಿವೆ, ರಾಜರ ಬಗ್ಗೆ ಜನಕಟ್ಟಿನ ಕತೆಗಳಿವೆ. ಜನರು ಪರಿಸರದಲ್ಲಿರುವ ಜಾತಿಧರ್ಮ ಸಮುದಾಯಗಳ ಬಗ್ಗೆ ಕಟ್ಟಿದ ಕತೆಗಳಿವೆ. ಈ ಕತೆಗಳು ಪುರಾಣರೂಪದಲ್ಲಿವೆ. ಘಟನೆ ವರದಿಗಳ ರೂಪದಲ್ಲಿವೆ. ಜನಪದ ಕತೆಗಳ ರೂಪದಲ್ಲಿವೆ. ಒಟ್ಟಿನಲ್ಲಿ ಇವು ೧೮-೧೯ನೇ ಶತಮಾನದ ಕರ್ನಾಟಕದಲ್ಲಿ ಜನಜನಿತವಾಗಿದ್ದ ಕರ್ನಾಟಕದ ‘ಪ್ರಪಂಚು’ಗಳು. ಪ್ರಶ್ನೆ ಇರುವುದು-ಈ ಪ್ರಪಂಚುಗಳನ್ನು ಕರ್ನಾಟಕದ ಅಧಿಕೃತ ಚರಿತ್ರೆಯ ಆಕರವಾಗಿ ಸ್ವೀಕರಿಸಬೇಕೇ ಬೇಡವೇ ಎಂಬುದಕ್ಕಲ್ಲ. ಸಂಬಳಕ್ಕಾಗಿ ಬ್ರಿಟಿಶರ ಉದ್ದೇಶವನ್ನು ಅರಿಯದೆ ಅಥವಾ ಅರಿತೋ ಒಬ್ಬ ಸ್ಥಳೀಯ ವ್ಯಕ್ತಿಯಾಗಿ ದೇವಚಂದ್ರ ಕೆಲಸ ಮಾಡಿದನಾದರೂ ಮೆಕಂಜಿ ಬಯಸಿದ ರೂಪದಲ್ಲಿ ‘ರಾಜಾವಳಿಕಥೆ’ ತಯಾರಾಯಿತೇ? ಮೆಕಂಜಿಗೆ ವರದಿಯಾಗಲೆಂದು ಹುಟ್ಟಿದ ಈ ಕೃತಿ, ನಮ್ಮ ಸಮಾಜದ ಬಗ್ಗೆ ನಾವೇ ಕಟ್ಟಿಕೊಂಡಿರುವ ಕಥನಗಳನ್ನು ಹೇಗೆ ಬಿಚ್ಚುತ್ತದೆ? ಈ ಕಥನಗಳು ಆಕಾಲದ ಜನಸಮುದಾಯಗಳ ಲೋಕದೃಷ್ಟಿಯನ್ನು ಹೇಗೆ ಒಳಗೊಂಡಿವೆ? ಬಡವನೂ ಅಧಿಕಾರಸ್ಥರ ಮರ್ಜಿಗಾಗಿ ಕಾದುನಿಂತವನೂ ಅಲ್ಪಸಂಖ್ಯಾರ ಸಮಾಜಕ್ಕೆ ಸೇರಿದವ ನೂ ಆದ ವ್ಯಕ್ತಿಯೊಬ್ಬನ ಮುಖಾಂತರ ಈ ಪ್ರಪಂಚು ಹೇಗೆ ಪ್ರಕಟವಾಗಿದೆ? ಹಾಗೆ ಪ್ರಕಟವಾಗಲು ಏನು ಕಾರಣ? ಇಂತಹದೊಂದು ಸಂಕೀರ್ಣ ಪಠ್ಯವನ್ನು ಸೃಷ್ಟಿಮಾಡಿದ ೧೯ನೇ ಶತಮಾನದಲ್ಲಿ ಕರ್ನಾಟಕ ಎಂತಹ ಬದಲಾವಣೆಗಳ ಮೂಲಕ ಹಾಯುತ್ತಿತ್ತು? ಇವು ನಿಜವಾಗಿ ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಇವಕ್ಕೆ ಉತ್ತರ ಹುಡುಕಲು ‘ರಾಜಾವಳಿಕಥೆ’ ಸವಾಲು ಹಾಕುತ್ತದೆ.

ಮೊದಲನೆಯದಾಗಿ ರಾಜಾವಳಿಯು ನೀಡುವ ಕರ್ನಾಟಕದ ಮತೀಯ ಸಂಘರ್ಷ ಚಿತ್ರಗಳನ್ನು ಗಮನಿಸಬಹುದು. ಮತ ಸಂಗರ್ಷಗಳಲ್ಲಿ ಜೈನಮತವು ಮಾಡುವ ಮುಖ್ಯ ಮುಖಾಮುಖಿ ವೈದಿಕ ಮತದ ಜತೆಗೆ ಇದೆ. ಇಲ್ಲಿ ‘ವೈದಿಕ’ ಎಂದರೆ ೧೯ನೇ ಶತಮಾನದ ಮೈಸೂರು ಸೀಮೆಯ ಶ್ರೀವೈಷ್ಣವ, ರಾಜಾಶ್ರಯಕ್ಕಾಗಿ ಜೈನ ಹಾಗೂ ಶ್ರೀವೈಷ್ಣವ ಮತಗಳು ನಡೆಸುತ್ತಿದ್ದ ಮೇಲಾಟದ ಘಟನೆಗಳಿವು. (ಮಾಸ್ತಿ ಈ ವಿದ್ಯಮಾನಕ್ಕೆ ಸಂಬಂಧಿಸಿದ ವಸ್ತುವಿಟ್ಟುಕೊಂಡು ಕತೆ ಬರೆಯುತ್ತಾರೆ.) ‘ರಾಜಾವಳಿಕಥೆ’ಯು ವೈದಿಕ ಬ್ರಾಹ್ಮಣರನ್ನು ಟೀಕಿಸುವ ಪ್ರಸಂಗಗಳು ಕುತೂಹಲ ಹುಟ್ಟಿಸುತ್ತವೆ. ಬ್ರಾಹ್ಮಣರ ಮಾಂಸ ಸೇವನೆ ಬಗ್ಗೆ ಅವರ ಗೋಹತ್ಯಾದೋಷದ ಪರಿಕಲ್ಪನೆಯ ಬಗ್ಗೆ, ಅವರ ಅಜಯಾಗದ ಮೇಲೆ, ಅವರ ಜೋತಿಷ್ಯಶಾಸ್ತ್ರ ಸುಳ್ಳಾಗುವುದರ ಬಗ್ಗೆ, ಅವರು ಅಧಿಕಾರಸ್ಥರ ಹತ್ತಿರ ಹೋಗಲು ಮಾಡುವ ಉಪಾಯಗಳ ಬಗ್ಗೆ ಇರುವ ಘಟನೆಗಳಿವು, ಹೆಚ್ಚಿನ ಘಟನೆಗಳು ಜೈನರಿಗೆ ಲಗತ್ತು ಪಡೆದಂತಹವು, ಪದ್ಮಾವತಿ ಯಕ್ಷಿಯ ಗುಡಿಯನ್ನು ಶಂಕರಾಚಾರ್ಯರು ಶಾರದಾಂಬೆ ಗುಡಿಯನ್ನಾಗಿಸುವುದು (ಪು.೧೬೩): ವೀರಬಲ್ಲಾಳನು ಜಿನಾಲಯಗಳನ್ನು ಧ್ವಂಸವನ್ನು ಶ್ರೀವೈಷ್ಣವ ಗುಡಿಗಳನ್ನು ಸ್ಥಾಪಿಸುವುದು; ದಿವಾನ್ ಪೂರ್ಣಯ್ಯ ಪೂಜೆಯಿಲ್ಲದ ಬಸ್ತಿಗಳನ್ನು ಕೆಡದಿ ಕಲ್ಲನ್ನು ಸಾಗಿಸುವುದು ಪುರಾಣ ಚರಿತ್ರೆಯ ಕಥನಗಳಿಂದ ಹಿಡಿದು ಸಮಕಾಲೀನ ವಿದ್ಯಮಾನದವರೆಗೆ ಎರಡು ಮತಗಳ ನಡುವಣ ಸಂಘರ್ಷಗಳನ್ನು ಸೂಚಿಸುವ ಸಂಗತಿಗಳಿವು. ವಿಶೇಷ ಎಂದರೆ ಸಂದರ್ಭಗಳಲ್ಲಿ ಜೈನವು ಆಕ್ರಮಣಕ್ಕೆ ನಷ್ಟಕ್ಕೆ ಒಳಗಾಗುತ್ತದೆ. ಚರಿತ್ರೆಯಲ್ಲಿ ಸೋತವರಿಗೆ ಬಹುಶಃ ಬರೀ ದುಸ್ವಪ್ನಗಳೇ ಬೀಳುತ್ತವೆಯೆನಿಸುತ್ತದೆ.

ಮಾರ್ಮಿಕ ಸಂಗತಿಯೆಂದರೆ ಈ ಮತೀಯ ಮುಖಾಮುಖಿಗಳು ಅರಸರ ಮುಂದೆ ಅಸ್ಥಾನದಲ್ಲಿ ನಡೆಯುತ್ತಿವೆ ಎನ್ನುವುದು. ಸಂಘರ್ಷ ಅಥವಾ ವಾಗ್ವಾದದ ಬಳಿಕ ಗೆದ್ದಮತವು ರಾಜನ ಪೋಷಣೆಗೆ ಒಳಗಾಗುತ್ತದೆ. ಸೋತಮತ ತನ್ನ ಬದುಕುವ ಹಕ್ಕನ್ನೆ ಕಳೆದುಕೊಂಡು ಗಡಿಪಾರಾಗುತ್ತದೆ. ಇಲ್ಲವೇ ಎರಡನೇ ದರ್ಜೆಯ ಸ್ಥಾನವನ್ನು ಒಪ್ಪಿಕೊಳ್ಳುತ್ತದೆ. ಮತಗಳು ತಮ್ಮ ಅಸ್ತಿತ್ವಕ್ಕಾಗಿ ಮಾಡುವ ಸೆಣಸಾಟಕ್ಕೆ ಮಾತ್ರವಲ್ಲ. ಪ್ರಭುತ್ವಕ್ಕೆ ಹತ್ತಿರವಾಗಿ ಯಾರು ಇರಬೇಕು ಎಂಬುವರ ಸೆಣಸಾಟದ ರೂಪಕಗಳಾಗಿ ಕೂಡ ಈ ಕಥೆಗಳು ಕಾಣುತ್ತವೆ. ವಸುಪಾಲನೆಂಬ ಅರಸರ ಆಸ್ಥಾನದಲ್ಲಿ ವೇದಾಂತಿ ಬ್ರಾಹ್ಮಣರಿಗೂ ಜೈನರಿಗೂ ನಡೆಯುವ ವಾಗ್ದಾದ ಇದಕ್ಕೆ ಉದಾಹರಣೆ, ಕುಟ್ಟಿಭಟ್ಟನೆಂಬ ವೇದಾಂತಿ ಬ್ರಾಹ್ಮಣನು ತಮ್ಮ ಲೋಕದೃಷ್ಟಿಯನ್ನು ಮಂಡಿಸಿದಾಗ ‘ಮತದ್ವೇಷದಿಂದ ಮಾಡಿದ ಪುರಾಣಮಿದುಂ ನಮಗೆ ಪ್ರಮಾಣಮಲ್ಲ’ ಎಂದು ಜೈನೋಪಾಧ್ಯಾಯರು ಅದನ್ನು ತಿರಸ್ಕರಿಸಿ, ತಮ್ಮದೇ ಆದ ಜೈನಪುರಾಣಗಳ ಲೋಕದೃಷ್ಟಿಯನ್ನು ಮಂಡಿಸುತ್ತಾರೆ. ಅದು ರಾಜನಿಗೆ ಒಪ್ಪಿಗೆಯಾಗಿ ಅವನು “ಸಕಲದೇಶಂಗಳೊಳ್ ಜೈನ ಬ್ರಾಹ್ಮಣರ್ ಪೌರೋಹಿತ್ಯ ಮೊದಲಾದ ಕರ್ಮಾದಿಗಳಂ ಜೈನ ಬ್ರಾಹ್ಮಣರಿಂ ಮಾಡಿಸಿಕೊಂಬುದೆ ಯೋಗ್ಯಮೆಂದು ವಸುಪಾಲ ಮಹಾರಾಜಂ ಜೈನಬ್ರಾಹ್ಮಣರ್ಗೆ ಗ್ರಾಮ ಕ್ಷೇತ್ರ ಗೃಹಾದಿ ದಾನಂಗೊಟ್ಟು ಮಂತ್ರಿಪದ ಪುರೋಹಿತ ವೈದ್ಯ ಜ್ಯೋತೀಷ ಮಂತ್ರವಾದಾದಿಗಳುಂ ಇವರ್ಗೆ ಸಲ್ಲುವುದೆಂದು ಶಾಸನ ಚಪ್ಪೋಡು ಮಾಡಿಸುತ್ತಾನೆ. (೧೧೫) ಇನ್ನೊಂದು ಉದಾಹರಣೆ ಹೇಮಶೀತಳ ದೊರೆಯದು, ಜೈನರ ಹೆಸರಿಲ್ಲದಂತೆ ಮಾಡುವೆನೆಂದು ಪ್ರತಿಜ್ಞೆತೊಟ್ಟ ಬೌದ್ಧಮತಪ್ರೇಮಿ ಹೇಮಶೀತಳನು, ಬೌದ್ಧ ಹಾಗೂ ಜೈನರ ನಡುವೆ ವಾಗ್ವಾದ ಏರ್ಪಡಿಸುತ್ತಾನೆ. ಜೈನಮತ ಗೆಲ್ಲುತ್ತದೆ. ಗೆದ್ದಮತವನ್ನು ಸೇರುವ ದೊರೆ ಬೌದ್ಧರನ್ನು ದೇಶಾಂತರ ಕಳಿಸುತ್ತಾನೆ. ಈ ವಸುಪಾಲ ಅಥವಾ ಹೇಮಶೀತಳರು ಚಾರಿತ್ರಿಕವಾಗಿ ಇದ್ದರೋ ಇಲ್ಲವೋ ತಿಳಿಯದು. ಆದರೆ ಅವರು ಸಾಂಕೇತಿಕವಾಗಿ ದೇವಚಂದ್ರನ ಸಮಕಾಲೀನರಾಗಿದ್ದ ಮೈಸೂರು ದೊರೆಗಳೂ ಆಗಬಹುದು, ಬ್ರೀಟಿಶರೂ ಆಗಬಹುದು. ಇಲ್ಲಿನ ಬ್ರಾಹ್ಮಣರು ಜೈನರು ಪುರಾಣ ಚರಿತ್ರೆಗಳ ಪಾತ್ರಗಳಂತೆ ಕಂಡರೂ ಅವರು ದೇವಚಂದ್ರನ ಸಮಕಾಲೀನ ಪ್ರತಿನಿಧಿಗಳು ಆಗಿರಬಹುದು.

ವಿಚಿತ್ರ ಎಂದರೆ ರಾಜಾವಳಿಯು ಬಹುಶಃ ತನ್ನ ಸಮಕಾಲೀನ ಸಮಾಜದಲ್ಲಿ ಇರದಿದ್ದ ಬೌದ್ಧ ಮತದ ಜತೆಗೆ ಮಾಡುವ ಮುಖಾಮುಖಿಯನ್ನೂ ಒಳಗೊಂಡಿರುವುದು, ಬೌದ್ಧ ಜೈನ ವೀರಶೈವ ಇವು ಚಾರಿತ್ರಿಕವಾಗಿ ವೈದಿಕ ಮತದ ಜತೆ ಸಂಘರ್ಷ ಮಾಡಿಕೊಂಡು ಹುಟ್ಟಿದ ದರ್ಶನಗಳು, ಮೂರೂ ಮತಾಂತರ ಅಧರಿಸುವ ಮತಗಳು, ಅದರಲ್ಲೂ ಬೌದ್ಧ ಹಾಗೂ ಜೈನಗಳು ತಾತ್ವಿಕವಾಗಿ ದೇವರನ್ನೂ ನಂಬದ ನಾಸ್ತಿಕಮತಗಳು, ಆದರೆ ಚಾರಿತ್ರಿಕ ಸಂದರ್ಭಗಳ ಹಾಗೂ ಸಾಮಾಜಿಕ ವಾಸ್ತವಗಳು ಅವು ತಂತಮ್ಮೊಳಗೆ ಸಂಘರ್ಷ ಮಾಡಿಕೊಳ್ಳುವ ಸನ್ನಿವೇಶ ನಿರ್ಮಿಸಿಬಿಟ್ಟವು, ವೀರಶೈವರು ಬಹುಸಂಖ್ಯಾತರೂ ಶಕ್ತರೂ ಆಗಿರುವ ಪ್ರದೇಶದಲ್ಲಿ ಹುಟ್ಟಿದ ರಾಜಾವಳಿಕಥೆಯು ವೀರಶೈವಮತದ ಪುರಾಣ ಭಜನದ ಕೆಲಸವನ್ನು ಜಾಣತನದಿಂದ ಬೌದ್ಧರ ಮೂಲಕ ಮಾಡಿಸುತ್ತದೆ. ವೀರಶೈವರನ್ನು ಸೋಲಿಸಿ ಜಯಪತ್ರ ತೆಗೆದುಕೊಂಡ ಬಂದ ಬೌದ್ಧರನ್ನು ತಾನು ಸೋಲಿಸುವಂತೆ ಸನ್ನಿವೇಶ ಸೃಷ್ಟಿಸಿ, ಈ ಮೂಲಕ ಎರಡೂ ಎದುರಾಳಿಗಳ ಮೇಲೆ ಗೆಲುವನ್ನು ಪಡೆಯುತ್ತದೆ. ಇಲ್ಲಿ ಮುಖ್ಯವಾದುದು ಸೋಲು ಗೆಲುವುಗಳದ್ದಲ್ಲ. ಸೋತವರನ್ನು ಗೆದ್ದವರು ನಡೆಸಿಕೊಳ್ಳುವ ವಿಧಾನದ್ದು. ಹೇಮಶೀತಳ ಏರ್ಪಡಿಸಿದ ಸ್ಪರ್ಧೆಯಲ್ಲಿ ಸುಗತಚಾರ್ಯರು ಸೋತಬಳಿಕ ಮದಿಸಿದ ಆನೆಯು ಬುದ್ಧಾಗಮವನ್ನು ಕಾಲಲ್ಲಿ ತುಳಿದು ಜಿನಾಗಮವನ್ನು ತಲೆಯಲ್ಲಿ ಇರಿಸಿಕೊಳ್ಳುತ್ತದೆ. ಸೋತ ಬೌದ್ಧರನ್ನು ಕಲ್ಲುಗಾಣಕ್ಕೆ ಹಾಕಲು ರಾಜನು ನಿರ್ಧರಿಸುತ್ತಾನೆ. ಆಗ ಅಕಲಂಕಮುನಿಗಳು ಕರುಣೆದೋರಿ ತಡೆದಾಗ, ಅವರು ಕರ್ನಾಟಕ ದೇಶಬಿಟ್ಟು ಸಿಂಹಳದ್ವೀಪಕ್ಕೆ ಹೋಗುತ್ತಾರೆ. ಬೌದ್ಧರನ್ನು ಇಲ್ಲಿ ಶೂನ್ಯವಾದಿಗಳು ಹೊಣೆಗೋಡಿ ಚಾರ್ವಾಕರು ಎಂಬಂತೆ ಸಾಧ್ಯವಾದಷ್ಟು ರಾಕ್ಷಸೀಕರಣ ಮಾಡಲಾಗಿದೆ.

ತನ್ನನ್ನು ಪ್ರತಿಷ್ಠಾಪಿಸಿಕೊಳ್ಳುವುದಕ್ಕೆ ಎದುರಾಳಿಯನ್ನು ರಾಕ್ಷಸೀಕರಣ ಮಾಡುವುದು ಮತೀಯ ರಾಜಕೀಯ ಸಿದ್ಧಾಂತಗಳು ಅನುಸರಿಸುವ ತಂತ್ರಗಾರಿಕೆ. ಇದನ್ನು ಜರ್ಮನಿಯ ನಾಜಿಗಳಿಂದ ಹಿಡಿದು. ಅಮೆರಿಕದ ಯುದ್ಧನೀತಿಗಳಲ್ಲೂ ಭಾರತದ ಹಿಂದೂ ಕೋಮವಾದಿಗಳಲ್ಲೂ ಕಾಣಬಹುದು. ಮುಸ್ಲಿಂ ಮೂಲಭೂತವಾದಿಗಳಲ್ಲೂ ಇದಿದೆ. ವ್ಯಂಗ್ಯವೆಂದರೆ ರಾಜಾವಳಿಯಲ್ಲಿ ಎದುರಾಳಿಗಳನ್ನು ರಾಕ್ಷಸೀಕರಿಸಿ ತಾನು ಗೆದ್ಧಂತೆ ಚಿತ್ರಿಸಿಕೊಳ್ಳುತ್ತಿರುವ ಜೈನವು. ವಾಸ್ತವದಲ್ಲಿ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವುದು ಕರ್ನಾಟಕದ ಮಟ್ಟಿಗಂತೂ ಜೈನಮತವು ತನ್ನ ಅಸ್ತಿತ್ವದ ಸಮಸ್ಯೆಯನ್ನು ಎದುರಿಸಿದ್ದು ವೀರಶೈವದ ಜತೆಗಿನ ಸೆಣಸಾಟದಲ್ಲಿ. ಹರಿಹರನ ಏಕಾಂತರಾಮಯ್ಯನ ರಗಳೆ ಈ ಸೆಣಸಾಟದ ಭೀಕರ ಪ್ರತೀಕವಾಗಿದೆ. ರಾಜಾವಳಿಕಥೆಯಲ್ಲೂ ಜೈನ ವೀರಶೈವರ ನಡುವಣ ಸಂಘರ್ಷಗಳು ಕಹಿಯಾಗಿವೆ. ಉದಾ: ಮಧುರೆಯ ಕೂನಪಾಂಡ್ಯನು ಜೈನಯಕ್ಷಿಯ ಗುಡಿಯನ್ನು ಮೀನಾಕ್ಷಿ ಗುಡಿಯನ್ನಾಗಿ ಮಾಡಿ, ಅಲ್ಲಿದ್ದ ಜಿನಮುನಿಗಳನ್ನು ಕೊಂದು, ಜಿನದ್ವೇಷದಿಂದ ಪ್ರತಿವರುಷ ಮಾಡಿ” ಜೈನರನ್ನು ಕೊಲ್ಲುವ ಹಂಚಿಕೆ ಮಾಡಿದಾಗ ಜೈನರು ಪಲಾಯನ ಮಾಡುವ ಪ್ರಸಂಗ ಬರುತ್ತದೆ. ಮತೀಯ ಹಿಂಸೆಗೆ ಈ ದೇಶದಲ್ಲಿ ಬಹಳ ಉದ್ದನೆಯ ಚರಿತ್ರೆಯಿದೆ. ಗುಜರಾತು ಈಚಿನ ನಿದರ್ಶನ ಅಷ್ಟೆ.

ಜೈನಮತದ ಬಿಕ್ಕಟ್ಟು ಹೇಳುವ ಕೃತಿ

“ಜಿನಧರ್ಮ ಕುಂದುತ್ತ ಬರ್ಪಿನಂ” (೧೨೬) ಜಿನಮುನಿಗಳು ಜಿನಧರ್ಮವನ್ನು ಪುನುರುಜ್ಜೀವಿಸಲು ಕರ್ನಾಟಕದ ತುಂಬ ತಿರುಗಾಟ ವರ್ಣನೆಗಳಿವೆ. ಈ ತಿರುಗಾಟದಲ್ಲಿ ಬರುವ ಜೈನಧರ್ಮದ ಗೆಲುವಿನ ಕಥನವು (ಅಧ್ಯಾಯ೧೩) ಬಹುಶಃ ಜೈನಮುನಿಗಳ ಒತ್ತಾಯಕ್ಕೆ ದೇವಚಂದ್ರ ಬರೆದು ಸೇರಿಸಿದಂತಿವೆ. ಜೈನಧರ್ಮದಲ್ಲಿ ಸವಣರು ಬೆತ್ತಲೆ ಇರುವುದರ ಬಗ್ಗೆ ಕೃತಿಯಲ್ಲಿ ಸುದೀರ್ಘ ಸಮಥನೆಯಿದೆ. ಆದರೆ ಈ ಆತ್ಮ ಸಮರ್ಥನೆಯಲ್ಲಿ ಆತ್ಮ ವಿಶ್ವಾಸವೇ ಇಲ್ಲ. “ಬೆತ್ತಲೆ ನಿರ್ಗ್ರಥನಾಗಿಪ್ಪುದು ಪೊಲ್ಲಮೆಂದೊಡೆ ಅವುದೊಂದು ವಸ್ತುವಾದೊಡಂ ನಿರ್ಗ್ರಂಥಮಾಗಲ್ಲದೆ ಯೋಗ್ಯಮಾಗದು, ಅದು ಎಂತೆನೆ ನೆಲಂ ನಿರ್ಗ್ರಂಥಮಾಗೆ ಬೀಜಕ್ಕೆ ಬಲಂ, ಆಕಾಶಂ ನಿರ್ಗ್ರಂಥಮಾಗೆ ಶುಭಕಾರ್ಯಕ್ಕೊಳಿತ್ತು. ನೀರು ನಿರ್ಗ್ರಂಥಮಾಗೆ ರೋಗಹರಂ, ಕಿಚ್ಚು ನಿರ್ಗ್ರಂಥಮಾದೊಡೆ ಅಡುಗೆಯ ಕಾರ್ಯಮಕ್ಕುಂ, ಸೂರ್ಯ ನಿರ್ಗ್ರಂಥಮಾಗೆ ದಿನಶುದ್ಧಿ, ಚಂದ್ರಂ ನಿರ್ಗ್ರಂಥಮಾದೊಡೆ ರಾತ್ರಿ ಶುದ್ಧಿ, ಅಕ್ಕಿ ನಿರ್ಗ್ರಂಥಮಾಗಲ್ ಅನ್ನದರುಚಿ”; ರಾಜಾವಳಿಕಾರ ನೀಡುವ ಹೋಲಿಕೆಗಳು ಸುಂದರವಾಗಿವೆ. ಆದರೆ ಅಳದಲ್ಲಿ ಅವು ಬಿಕ್ಕಟ್ಟನ್ನೇ ಸೂಚಿಸುತ್ತವೆ. ಜೈನಮತವು ಸಮರ್ಥನ ಧಾಟಿ ಬಿಟ್ಟುಕೊಟ್ಟು ಕೆಲವು ಕಡೆ, ಆಕ್ರಮಣಶೀಲತೆಯನ್ನು ಪಡೆಯುತ್ತದೆ. ಬತ್ತಲೆಯಿದ್ದವರನ್ನು ಕಂಡರೆ ಸಾವು ಬರುತ್ತದೆ ಎಂಬ ಜನರ ನಂಬಿಕೆಗೆ ಉತ್ತರಿಸುತ್ತ :ರತಿಯೊಳ್ ತಾನುಂ ತನ್ನ ಪೆಂಡತಿಯುಂ ಬತ್ತಲೆ ರಾಗದಿಂ ನೆರೆವಂದು ಸತ್ತವರಾರುಮಿಲ್ಲ”(೧೪೩) ಎನ್ನುತ್ತದೆ. ಸವಣರಂ ಕಂಡುದಿರಂ ದೋಷಂ ಎಂಬ ನಂಬಿಕೆಯು ಉತ್ತರಿಸುತ್ತ “ಜಿನೃಉಷಿಯರ ಕಂಡವರ ಮನೆ ಪಶು ಎಮ್ಮೆಗಳ್ ಕರೆಯವೇ ಕೂಳ್ ಬೇಯದೇ ಪುಳ್ಳೆಗಳಡಕಿದೊಡಂ ಕಿಚ್ಚುರಿಯವೇ? ಮಕ್ಕಳು ಮರಿಗಳ್ ಕಾರಣಮಿಲ್ಲದೆ ಸಾವವೆ? ಉಂಡರೆ ಪಸಿವು ಪೋಗದೆ? ನೀರುಂ ಕೂಳಂ ರುಚಿಯಾಗದೆ?” (೧೪೩) ಬೈಗುಳದ ಧಾಟಿಯಲ್ಲಿ ಪ್ರಶ್ನಿಸುತ್ತದೆ. ಇವೆಲ್ಲ ೧೯ನೇ ಶತಮಾನದಲ್ಲಿ ಜೈನಮತವು ಎದುರಿಸುತ್ತಿದ್ದ ಸಾಮಾಜಿಕ ನಿರಾಕರಣೆಯ ವಿಷಯ ಪರಿಸ್ಥಿತಿಯನ್ನು ಸೂಚಿಸುತ್ತವೆ.

ವೈದಿಕ ಬೌದ್ಧ ಚಾರ್ವಾಕ ಶೈವ ಹಾಗೂ ಜಾನಪದ ಮತಗಳ ಜತೆ ಜೈನವು ನಡೆಸುವ ಧಾರ್ಮಿಕ ತಾತ್ವಿಕ ಸಂಗರ್ಷಗಳು ವಡ್ಡರಾಧನೆ’ಯಿಂದ ಆರಂಬಿಸಿ ಜೈನಪಠ್ಯಗಳ ಪರಂಪರೆಯ ಭಾಗವಾಗಿಯೇ ಬಂದಿವೆ. ಜೈನಮತದ ಶ್ರೇಷ್ಠತೆಯ ಪ್ರತಿಪಾದನೆಯಗಾಗಿ ಏನಾದರೂ ನೆಪದಲ್ಲಿ ಧಾರ್ಮಿಕ ವಾಗ್ವಾದಗಳನ್ನು ಪ್ರಾಸಂಗಿಕವಾಗಿ ತರುವ ಕೆಲಸವನ್ನು ಇವು ಮಾಡುತ್ತವೆ. ಇವು ರಾಜಾವಳಿಯಲ್ಲೂ ಮುಂದುವರಿದಿವೆ. ರಾಜಾವಳಿಯು ಇಂತಹ ವಾಗ್ವಾದಗಳ ಕೊನೆಗೆ “ಷಣ್ಮತಂಗಳೊಳ ಜೈನಮತಮೆ ಸತ್ಯವೆಂದು ಸರ್ವರ್ ನಿಶ್ಚಯಂ ಮಾಡಿದರ್” ಎಂಬ ಹೇಳಿಕೆ ಮಾಡುತ್ತದೆ. ಆದರೆ ವಾಸ್ತವ ಬೇರೆಯೇ ಇದೆಯೆಂದು ಇದೇ ಕೃತಿ ಕಾಣಿಸುತ್ತದೆ. ಏನು ಮಾಡಿದರೂ ಜೈನಮತದ ಶೈಥಿಲ್ಯಗಳನ್ನು ಬಚ್ಚಿಡಲು ಸಾಧ್ಯವಾಗುವುದಿಲ್ಲ. ರಾಜಾವಳಿಕಥೆ ಜೈನಮತದ ಸವಕಳೀಯ ಚಿತ್ರಣವನ್ನು ನಿಷ್ಠರುವಾಗಿ ನೀಡುತ್ತದೆ. ರತ್ನಾಕರವರ್ಣಿಯು ಜೈನ ಗುರುಗಳ ತಾತ್ವಿಕ ಭಿನ್ನಾಪ್ರಾಯದಿಂದ ಜಿನಮತ ತೊರೆದು ಲಿಂಗಾಯತನಾದನೆಂದು ಹೇಳುತ್ತದೆ. ರಾತ್ರಿ ಊಟಮಾಡುವ ಜೈನರನ್ನು ಮತದಿಂದ ಉಚ್ಛಾಟಿಸಿದರು ಎಂದು ದಾಖಲಿಸುತ್ತದೆ. ಮಾತ್ರವಲ್ಲ. ಅಲ್ಪಸಂಖ್ಯಾತರಾದ ಜೈನರು ತಂತಮ್ಮ ಊರಿನ ದೈವಗಳಿಗೆ ಮಣಿಯಬೇಕಾದ ಒತ್ತಡ ನಿರ್ಮಾಣವಾಗುವುದನ್ನು ಸೂಚಿಸುತ್ತದೆ. ವಸುಪಾಲನ ಅಸ್ಥಾನದಲ್ಲಿ ವಿಪ್ರರ ವಿರುದ್ಧ ಗೆದ್ದು ಜಯಪತ್ರ ಪಡೆದ ಬಳಿಕ ಏನಾಗುತ್ತದೆ ಗಮನಿಸಿ. “ಕಾಲಂತರದೊಳೆಲ್ಲಾ ವಿಪ್ರರ್ ಜಿನಸಮಯಮಂ ಬಿಟ್ಟು ಮಿಥ್ಯಮಂ ಹೊಂದಿದರ್. ಕೆಲರು ಕ್ಷತ್ರಿಯ ವೈಶ್ಯರೊಳೆ ಕೂಡಿದರ್. ದಕ್ಷಿಣದೇಶ ಮೊದಲಾದವರೊಳ್ ಭಿನ್ನಮಾಗಿರ್ದು ಕೆಲಂಬರ್ ಪ್ರತಿನಾಮಧಾರಿಗಳಾಗಿ ಜಿನಸಮುಯಮಂ ಪೊರ್ದಿದರ್, ಕೆಲರ್ ಸಮ್ಯಕ್ತ್ವಮಂ ಬಿಟ್ಟು ವ್ಯಸನಿಗರಾಗಿ ವಿಜಾತಿ ಸ್ತ್ರೀಯರಂ ಕೂಡಿರ್ದರ್” (೧೧೫) ಗೆದ್ದ ಜಯಘೋಷದ ಒಳಗೆ ಸೋತೆನೆಂದು ಕೊರಗುವ ಪರಿಮಾತ್ರ ವಿಚಿತ್ರವಾದುದು.

ಹೀಗಾಗಿ ರಾಜಾವಳಿಕಥೆ ಹೇಳುವಂತೆ ಜೈನಮತವು ಅನ್ಯಮತದ ವಿರುದ್ಧ ವಾಗ್ವಾದದಲ್ಲಿ ಗೆದ್ದು ಜಯಪತ್ರಪಡೆಯುವಲ್ಲಿ ಅರ್ಧಸತ್ಯವಿದ್ದರೆ, ಇನ್ನರ್ಧ ಸತ್ಯವು ನಂತರ ಏನಾಯಿತು ಎಂಬ ಚಿತ್ರದಲ್ಲಿದೆ. ಒಂದು ಕಾಲಕ್ಕೆ ರಾಜಾಶ್ರಮ ಪಡೆದು ಝಗಝಗಿಸುವ ತಾರೆಯಾಗಿದ್ದ ಜೈನಮತವು, ಉಲ್ಕೆಯಿಂದ ಗಗನದಿಂದ ಉರಿದು ಬೀಳುತ್ತ ತಂದುಕೊಂಡ ಚಾರಿತ್ರಿಕ ಛಿಧ್ರತೆಯನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಬಹುಶಃ ವಸಾಹತುಶಾಹಿ ಆಧುನಿಕತೆಯು ಅದನ್ನು ಮತ್ತಷ್ಟು ಚೂರುಮಾಡಿರಬೇಕು. ಇದನ್ನು ದೇವಚಂದ್ರ ಕಠೋರವಾಗಿ ದಾಖಲಿಸುತ್ತಾನೆ. ಬಹುಶಃ ಜೈನಮತವು ಕಂಡ ಬಿಕ್ಕಟ್ಟು ಶೈಥಿಲ್ಯದ ತಾರ್ಕಿಕ ಕೊನೆ ಎಂದರೆ ಜೈನಧರ್ಮ ಬಿಟ್ಟು ಹೋಗುವುದಿಲ್ಲ. ‘ಅಲ್ಲಾಖುದಾ’ ಎಂಬ ಹೊಸಮತವನ್ನೇ ಹುಟ್ಟು ಹಾಕುವುದು. ಪಾರ್ಶ್ಚಭಟ್ಟಾರಕನು ಇಂತಹ ಮತ ಹುಟ್ಟುಹಾಕುತ್ತಾನೆ. ಇಂತಹದೆ ಕತೆಯನ್ನು ಆಧರಿಸಿ ದೇವಚಂದ್ರನ ಸಮಕಾಲೀನನಾದ ಚಂದ್ರಸಾಗರವರ್ಣಿ ‘ಮುಲ್ಲಾಶಾಸ್ತ್ರ’ ಎಂಬ ಕೃತಿಯನ್ನೇ ಬರೆದನು. ಇದು ಜೈನರ ಇಸ್ಲಾಮೀಕರಣ ಅಥವಾ ಸೂಫೀಕರಣ ಪ್ರಕ್ರಿಯೆಯೊ ಅಥವಾ ಭಟ್ಕಳದ ಜೈನರು ಇಸ್ಲಾಮನ್ನು ಸ್ವೀಕರಿಸಿದ್ದನ್ನು ರಾಜಾವಳಿ ರೂಪಕಾತ್ಮಕವಾಗಿ ಹೇಳುತ್ತಿದೆಯೊ (ಭಟ್ಕಳದ ಈಗಿನ ನವಾಯಿತ ಮುಸ್ಲಿಮರು ಹಿಂದೆ ಜೈನರಾಗಿದ್ದವರು) ಮುಖ್ಯವೆಂದರೆ ರಾಜಾವಳಿ ಕಥೆಯು ಕರ್ನಾಟಕದ ಧಾಮಿಕ ಸಾಮರಸ್ಯ ಸಮನ್ವಯಗಳ ಬಗ್ಗೆ ೨೦ನೇ ಶತಮಾನದ ಕನಾಟಕದ ಸಂಸ್ಕೃತಿ ಚಿಂತಕರು ನೀಡುವ ಗ್ರಹಿಕೆಗಳು ಛಿದ್ರಮಾಡುತ್ತಿರುವುದು.

ವೈದಿಕ ವಿರೋಧವು ಜೈನಪಠ್ಯಗಳಲ್ಲಿ ಮೊದಲಿಂದಲೂ ಇರುವಂತಹ ಒಂದು ತಾತ್ವಿಕ ಎಳೆಯನ್ನುವುದು ನಿಜ. ಹೀಗೆನ್ನುವಾಗ ಮರೆಯಬಾರದ ಮಾತೆಂದರೆ, ಜೈನವು ತಾನೂ ವೈದಿಕದಂತಾಗಲು ಮಾಡಿದ ಒದ್ದಾಟಗಳು. ಅದರ ವಿರೋಧ ಪರ್ಯಾಯಕ್ಕಲ್ಲ ಸಮಾನನಾಗುವುದಕ್ಕೆ. ಈ ಸಮಾನನೆಲೆ ಪಡೆಯಲು ಜೈನಮತವು ವೈದಿಕರ ಸಾಮಾಜಿಕ ನಿಲುವುಗಳನ್ನು ತಾತ್ವಿಕವಾಗಿ ಒಪ್ಪುತ್ತದೆ. ಅದರ ಕರ್ಮಸಿದ್ದಾಂತದ ನಂಬಿಕೆಯು ಕೂಡ ಜಾತಿಸಮಾಜದ ಶ್ರೇಣಿಕರಣವನ್ನು ಒಪ್ಪಲು ಕಾರಣವಾಗಿರಬೇಕು. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ. ಬ್ರಾಹ್ಮಣೀಕರಣದ ಸೆಳೆತಕ್ಕೆ ಸಿಲುಕಿದ ಸಮುದಾಯಗಳಲ್ಲಿ ದಿಗಂಬರ ಜೈನವು ಒಂದು. ರಾಜಾವಳಿಯು “ಕರ್ನಾಟಕದ ಪ್ರಪಂಚು”ಗಳ ದಾಖಲಾತಿ ಮಾಡುವಾಗ ಯಾವ ನಟನೆಯನ್ನು ಮಾಡದೆ ಜೈನರ ಯಥಾಸ್ಥಿತಿವಾದಿ ಸಾಮಾಜಿಕ ನಿಲುವನ್ನು ದೃಢಪಡಿಸುತ್ತದೆ. ಅದು ಜಾತಿಸಮಾಜದ ಶ್ರೇಣೀಕರಣಗಳನ್ನು ಒಪ್ಪಿಕೊಳ್ಳುವುದು ಮಾತ್ರವಲ್ಲ, ಅದರ ಜಾತಿಯ ಕಟ್ಟುಪಾಡುಗಳು ಸಡಿಲವಾಗಿ ಜನ ‘ಕರ್ಮಹೀನ’ರಾಗುವುದರ ಬಗ್ಗೆ ಆತಂಕದಿಂದ ವಿರೋಧಿಸುತ್ತದೆ. ಈ ವರ್ಣಜಾತಿಗಳನ್ನು ಸ್ವತಃ ಆಧಿನಾಥನ ಮಗನಾದ ಭರತನು ಮಾಡಿದನೆಂದು ಅದಕ್ಕೆ ಧಾರ್ಮಿಕ ಮುದ್ರೆ ನೀಡುತ್ತದೆ. ದೇವಚಂದ್ರ ಉಲ್ಲೇಖ ಮಾಡುವ ಅನೆಕ ಶ್ಲೋಕಗಳು, ಜನಪ್ರಿಯ ಗಾದೆಗಳು ಆಗಿನ ಸಾಮಾನ್ಯ ಸಾಮಾಜಿಕ ನಂಬಿಕೆಯನ್ನು ಮಾತ್ರ ಸೂಚಿಸುವುದಿಲ್ಲ. ಅದಕ್ಕೆ ಜೈಮನತದ ಒಪ್ಪಿಗೆ ಇರುವುದನ್ನೂ ಸೂಚಿಸುತ್ತವೆ. ಚಾಂಡಾಲ ಸ್ತ್ರೀಯರನ್ನು ಹೊಲೆಮಾದಿಗರನ್ನು ಕುರಿತ ಜೈನಮತದ ನಂಬಿಕೆ ಪೂರ್ವಗ್ರಹಿಕೆಗಳು (ಪು ೧೪೪) ಭೀಕರವಾಗಿವೆ.

ಇದರ ಮುಂದುವರಿಕೆಯಾಗಿಯೆ ‘ರಾಜಾವಳಿಕಥೆ’ಯು ಸಾಮಾಜಿಕ ಬದಲಾವಣೆಗಾಗಿ ಪ್ರಯತ್ನಿಸಿದ ಸಾಂಸ್ಕೃತಿಕ ನಾಯಕರನ್ನು ಸಂಪ್ರದಾಯವಾದಿಯಾಗಿ ಚಿತ್ರಿಸುತ್ತದೆ. ಉದಾ: ಮಲೆಯ ಮಾದೇಶ್ವರ ಹಾಗೂ ಬಸವಣ್ಣನವರ ಬಗೆಗಿನ ಚಿತ್ರಗಳು. ಮಾದೇಶ್ವರನನ್ನು ದೇವಚಂದ್ರ ಅನಾದರದಲ್ಲಿ ಚಿತ್ರಿಸಲು ಕಾರಣ. ಅವನು ಶ್ರವಣದೊರೆಯನ್ನು ಕೊಂದವನೆಂಬ ಆಗ್ರಹ ಒಂದಾದರೆ, ಇನ್ನೊಂದು ಕಾರಣ, ಮಾದೇಶ್ವರ ಮೂಲದಲ್ಲಿ ಮಾದಿಗರ ಹುಡುಗ ಎಂಬುದು. ರಾಜಾವಳಿಕಥೆಯು ಬಸವಣ್ಣನ ಬಗ್ಗೆ ಮಾಡುವ ವರ್ಣನೆಯಂತೂ ಕಹಿ ವಿಡಂಬನೆಯಿಂದ ತುಂಬಿಹೋಗುತ್ತದೆ. ಈ ಕಹಿಗೆ ಬಹುಶಃ ಜೈನರು ಬಸವಣ್ಣನ ಬಗ್ಗೆ ನಿರ್ಮಾಣಮಾಡಿರುವ ಕಥನಗಳಾದ ‘ಬಿಜ್ಜಳರಾಯನ ಚರಿತೆ’ ಮುಂತಾದ ಕೃತಿಗಳು ಬೀರಿದ ಪ್ರಭಾವ ಕಾರಣವಿರಬಹುದು ಅಥವಾ ಶರಣರಿಂದ ಕೊಲ್ಲಲ್ಪಟ್ಟ ಬಿಜ್ಜಳನು ಜೈನದೊರೆಯಾಗಿದ್ದನು ಎಂಬ ನಂಬಿಕೆ ಕಾರಣವಿರಬಹುದು. ಬಸವಣ್ಣನು ರಾಜಾವಳಿಕಥೆ ಪ್ರಕಾರ ಒಬ್ಬ ಸ್ವಾಮಿದ್ರೋಹಿ. ‘ಹೊಲೆಯ ಮಾದಿಗ ಮುಂತಾದೆಲ್ಲರ್ಗ ಲಿಂಗಧಾರಣೆ ಮಾಡಿಸುತ್ತ ತನ್ನಿಚ್ಛೆ ಮೀರಿದವರನ್ನು ಕೊಲಿಸುತ್ತ ಗ್ರಾಮಶಾರ್ದೊಲಪುಚ್ಛದಂತೆ ಜನಂಗಳೆಲ್ಲರು ವಶಂ ಮಾಡಿಕೊಂಡು ತಿರುಗುವವನು. ‘ಬಸವಣ್ಣನ ದಲಿತರಿಗೆ ದೀಕ್ಷೆಕೊಟ್ಟುದುದನ್ನು ಬಹಳ ಖಾರವಾಗಿ ವಿಡಂಭಿಸುವ ರಾಜಾವಳಿಕಥೆಯು, ಜಾತಿಪದ್ಧತಿ ಬಗ್ಗೆ ತನ್ನ ಪ್ರತಿಗಾಮಿ ಅಭಿಪ್ರಾಯವನ್ನೇ ಮಂಡಿಸುತ್ತದೆ. ವೈದಿಕವಿರೋಧ ದಲಿತಪರವಾಗಿರಬೇಕಿಲ್ಲವಷ್ಟೆ. ವೈದಿಕ ವಿರೋಧವು ಬಸವಣ್ಣನಲ್ಲಿ ದಲಿತರ ಪರವಾದ ವಾದವಾಗಿ ಪರ್ಯಾಯ ಸಮಾಜದ ಕಲ್ಪನೆಯಾಗಿ ಮಾರ್ಪಟ್ಟರೆ, ಜೈನರಲ್ಲಿ ವೈದಿಕ ವಿರೋಧವು ದಲಿತವಿರೋಧದ ನೆಲೆಯ ಜತೆ ಮುಂದುವರೆಯುತ್ತದೆ. ಜೈನಧರ್ಮವು ಏಕಕಾಲಕ್ಕೆ ತಾತ್ವಿಕವಾಗಿ ವೈದಿಕ ವಿರೋಧಮಾಡುವ ಸಾಮಾಜಿಕವಾಗಿ ಬ್ರಾಹ್ಮಣರ ಮೇಲಂತಸ್ತನ್ನು ನಂಬಿರುವ ದಲಿತರ ಶೂದ್ರರ ಕೆಳತನ ಒಪ್ಪಿರುವ ಧರ್ಮವಾಗಿದೆ. ಈ ನಿಲುವೇ ಜೈನಧರ್ಮಕ್ಕೆ ಸಮಾಜದ ಚಲನಶೀಲತೆಯ ಸಂಬಂಧವನ್ನು ಕಳೆದು ಹಾಕಿದ ಹಾಗೂ ಜೈನಸಾಹಿತ್ಯದ ಸ್ವರೂಪವನ್ನು ನಿರ್ಣಾಯಕವಾಗಿ  ನಿರ್ಧರಿಸಿರುವ ಸಂಗತಿಯಾಗಿದೆ.

ಈ ಲೋಕದ ಆಸ್ತಿ. ಜಾತಿಗಳನ್ನು ಧರ್ಮಗಳನ್ನು ಒಂದು ಕೃತಿ ಹೇಗೆ ಗ್ರಿಹಿಸಿದೆ ಎಂಬುದು ಅವುಗಳು ಪ್ರತಿಗಾಮಿಯೇ ಅಲ್ಲವೇ ಎಂದು ಪರೀಕ್ಷೆಗೆ ಆಧಾರವಾಗಿವೆ. ರಾಜಾವಳಿಕಥೆಯ ಪ್ರಕಾರ ಅಂದಣಮನೇರಿ ಸುಳಿಸುವುದು “ಮುನ್ನ ಮಾಡಿದ ಪುಣ್ಯಫಲ” ಹಾಗೆ ಕಂಡರೆ ಸ್ವತಃ ಬಡತನದಿಂದ ದೀನನಾದ ದೇವಚಂದ್ರನು ಬಡತನದ ಬಗ್ಗೆ ಕಾಳಜಿಯಿಂದ ಬರೆಯುತ್ತಾನೆ. ಇಲ್ಲಿ ಬಡತನ ಕುರಿತ ಜನಪದ ಕತೆಗಳು, ಸಂಸ್ಕೃತ ಶ್ಲೋಕಗಳು ಹೆಚ್ಚು ಸಂಖ್ಯೆಯಲ್ಲಿವೆ, ಆಶೀರ್ವಾದ ರೂಪಮಾಲಾ ಮಂತ್ರಂಗಳಂ ಬರೆದು ಹಣಯಾಚಿಸುವ ಪ್ರಸಂಗವಿದೆ. ಆದರೂ ಅವನ ಮತದ ನಂಬಿಕೆಯ ಪ್ರಕಾರ ಬಡತನವು ಕರ್ಮಫಲ. ಅದು ಉಳ್ಳವರನ್ನು ಆಶ್ರಯಿಸುವುದರಿಂದ ಹೋಗುತ್ತದೆ. ಒಂದು ಮತವು ಧರ್ಮಶಾಸ್ತ್ರದಲ್ಲಿ ಹೇಳುವ ತತ್ವಗಳಿಗೂ ಅದರ ಅನುಯಾಯಿಗಳು ವಾಸ್ತವಿಕವಾಗಿ ಸಮಾಜದಲ್ಲಿ ಬದುಕುವುದಕ್ಕೂ ನಡುವೆ ಇರುವ ಅಂತರಗಳೇ ಇಂತಹ ಪಠ್ಯಗಳನ್ನು ವರ್ನರಂಜಿತಗೊಳಿಸುವುದು.

ವ್ಯವಸ್ಥೆಯ ಪರವಾದ ಕಥನಕಾರನೆ?

ಒಂದು ಬಗೆಯಲ್ಲಿ ರಾಜಾವಳಿಕಥೆಯು ವ್ಯವಸ್ಥೆಯ ಪರವಾದ ಕಥನವಾಗಿದೆ. ಯಾರು ತನಗೆ ಆಶ್ರಯ ಕೊಡುತ್ತಾರೋ ಅವರನ್ನು ಅದು ಬಣ್ಣುಸುತ್ತದೆ. ಮೆಕಂಜಿ ಕುಂಪಣಿ ರೂಪಾಯಿಗಳನ್ನು ಕೊಟ್ಟನೆಂದು ಕುಂಪಿಣಿ ಭೂಮಿಪಾಲರನ್ನು ಅದು ಸ್ತುತಿಸುತ್ತದೆ. ಹಾಗೆ ಮಾಡುವಾಗ ಅದು ಬ್ರಿಟಿಶರ ಯಾವ ಕ್ರೌರ್ಯವನ್ನೂ ಹೇಳುವುದಿಲ್ಲ. ದೇವಚಂದ್ರನ ಕಾಲದಲ್ಲೇ ಬ್ರಿಟಿಶರು ಟಿಪ್ಪುವನ್ನು ಸೋಲಿಸಿಕೊಂಡು ಮೈಸೂರನ್ನು ವಶಪಡಿಸಿಕೊಂಡರು. ಕೃಷ್ಣರಾಜ ಒಡೆಯನ ಅಧಿಕಾರ ಕಿತ್ತುಕೊಂಡರು. ಕೊಡಗಿನ ಚಿಕವೀರರಾಜನನ್ನು ದೇಶಭ್ರಷ್ಟಗೊಳಿಸಿದರು. ಇದನ್ನೆಲ್ಲವನ್ನು ರಾಜಾವಳಿ ಅವರು ಜನರಿಗೆ ಮಾಡಿದ ಸಹಾಯ ಎಂದೇ ಬಣ್ಣಿಸುತ್ತದೆ. ಬ್ರಿಟಿಶರು ತಮಗೆ ‘ಇತರನಾದ’ ಕೊಡಗಿನ ಚಿಕವೀರರಾಜನನ್ನು ಕಾಶಿಗೆ ಓಡಿಸಿದ್ದನ್ನು ಸಮರ್ಥಿಸುತ್ತದೆ. ಒಡೆಯರಿಂದ ಅಧಿಕಾರ ಕಿತ್ತುಕೊಂಡ ಬ್ರಿಟಿಶರು ಮಾಡಿದ ಆಡಳಿತ ಸುಧಾರಣೆಗಳನ್ನು ಮೆಚ್ಚುಗೆಯ ದನಿಯಲ್ಲಿ ಬಣ್ಣಿಸುತ್ತದೆ. ಅವರ ವಿರುದ್ಧ ಬಂಡೆದ್ದ ಸರಜಪ್ಪನಾಯಕ ಮುಂತಾದವರನ್ನು ನಿರ್ಬುದ್ಧಿಗಂ ಎಂದೂ, ದೋಂಡಿಯಾ ವಾಘನನ್ನು ತುಂಟ ಮತ್ತು ಕಳ್ಳ ಎಂದೂ ಟೀಕಿಸುತ್ತದೆ. ರಾಜಾವಳಿ ಹೈದರ್ ಮತ್ತು ಟಿಪ್ಪು ಆಡಳಿತದ ಕ್ರೌರ್ಯಗಳನ್ನು ಚಿತ್ರಿಸುತ್ತದೆ. ಬ್ರಿಟಿಶರು ಮೈಸೂರನ್ನು ವಶಪಡಿಸಿಕೊಂಡ ಬಗ್ಗೆ ನಿರ್ಲಿಪ್ತವಾದ ವರದಿಯನ್ನು ಮಾಡುತ್ತದೆ. ಹಾಗೆ ಕಂಡರೆ ಟಿಪ್ಪುವನ್ನು ಕುರಿತು ೧೫೦೩ರಲ್ಲಿಯೇ ಮೈಸೂರು ಭಾಗದಲ್ಲಿ ಲಾವಣಿಗಳನ್ನು ಹುಟ್ಟಿಕೊಂಡಿದ್ದವು. ಅವು ಬ್ರಿಟಿಶರ ಹಾಗೂ ಮೀರಸಾದಿಕರ ಕಟುಟೀಕೆಯನ್ನು ಉಳ್ಳವು. ಆದರೆ ಜನಪದ ಕಥನಗಳನ್ನು ಚರಿತ್ರೆಯ ಆಕರಗಳಾಗಿ ಶ್ರದ್ಧೆಯಿಂದ ಮಂಡಿಸುವ ಕೃತಿ ಇಲ್ಲಿ ಹುಶಾರಾಗಿ ಕೈಬಿಡುತ್ತದೆ. ಬ್ರಿಟಿಶರಿಗೆ ಸಹಾಯಮಾಡಿದ ಮೀರಸಾದಿಕನ ಬಗ್ಗೆ ಕೆಟ್ಟದಾಗಿ ಬರೆಯುವುದಿಲ್ಲ. ಬ್ರಿಟಿಷರ ಆಳ್ವಿಕೆಯನ್ನು ಅದು ಹೀಗೆ ಬಣ್ಣಿಸುತ್ತದೆ.

ತೆಂಕಣ ಸಮುದ್ರದಿಂ ತೊಟ್ಟು ಮೂಡಣ ಪಡುವಣ ಸಮುದ್ರಾಂತಮುಳ್ಳ
ಸಮಸ್ತ ದೇಶಂಗಳೆಲ್ಲಮಂ ಮುನ್ನಮೆ ವಶಂ ಮಾಡಿ, ಉತ್ತರದೊಳು ಕಾಶಿ
ಮೊದಲ್ಲೊಂಡು ಭರತಪುರ ಪರ್ಯಂತರಕ್ಕೂ ಸ್ವಾಜ್ಞಾ ನಿರರ್ಗಳಮಾಗೆ
ಸರ್ವಗುಣ ಹಿತಮಂ ಮಾಡುತ್ತ ಸತ್ಯಮಂ ಬಿಡದೆ ನಯವಿನಯನೀತಿ ನಿದಾನ
ದಯ ದಾಕ್ಷಿಣ್ಯದಿಂ ಕ್ರೋಧಮಿಲ್ಲದ ಶೌರ್ಯ ವೀರ್ಯ ಪರಾಕ್ರಮದಿಂದಪ್ಪುದು” (೩೧೦)

ದೇವಚಂದ್ರ ಒಬ್ಬ ಆಳುವವರ್ಗದ ಚರಿತ್ರೆಕಾರ ಎನ್ನುವುದಕ್ಕೆ ಬಹಳ ಸಾಕ್ಷಿಗಳೇನು ಬೇಕಿಲ್ಲ.

ರಾಜಾವಳಿಕಥೆಯು ಆಳುವರ್ಗದ ಕಥನವಾಗಿದೆ ಎಂಬುದು ನಿಜವಾದರೂ ಅದು ತನ್ನ ಉದ್ದೇಶವನ್ನು ಮೀರಿ ಆಳುವರ್ಗಕ್ಕೆ ವಿರುದ್ಧವಾದ ಆಯಾಮವನ್ನೂ ಪಡೆದಿದೆ. ಇದಕ್ಕೆ ಕಾರಣ ಅದು ಸಮುದಾಯದ ಲೋಕಗಳನ್ನು ಅಪಾರವಾದ ಜನಪದ ಕತೆಗಳನ್ನು ಒಳಗೊಂಡಿದ್ದರುವ ಅದರ ರಚನಾ ವಿನ್ಯಾಸ. ಹೀಗಾಗಿ ಇದೊಂದು ಕೇವಲ ಕ್ಲಾಸಿಕಲ್ ಅಲ್ಲದ ಜನೊದ ಕತೆಗಳ ವಿಶಿಷ್ಟ ಪಠ್ಯವಾಗಿದೆ. ಕಂಠೀರವನರಸರಾಜವಿಜಯಗಳು ಆಳುವವರ್ಗದ ನೆಲೆಯಿಂದ ಚರಿತ್ರೆಯನ್ನು ನೋಡುತ್ತವೆ. ಆದರೆ ‘ಪಿರಿಯಾಪಟ್ಟಣದ ಕಾಳಗ’ ‘ಸಿರುವಣ ನಾಯಕನ ಸಾಂಗತ್ಯ’ ‘ಕುಮಾರರಾಮನ ಚರಿತೆ’ ಇವು ಜಾನಪದ ಮನಸ್ಥಿತಿಯಿಂದ ಹುಟ್ಟಿದ ಪರ್ಯಾಯ ಚರಿತ್ರೆಗಳು, ಜನಪದ ನೆಲೆಯ ಚರಿತ್ರೆಗಳು ರಾಜಕೀಯ ಚರಿತ್ರೆಯನ್ನು ಮಾನವೀಕರಣ ನೆಲಯ ಮೂಲಕ ಮಂಡಿಸುತ್ತವೆ. ರಾಜಕೀಯ ಮಹತ್ವವುಳ್ಳ ಘಟನೆಯ ಕಾರಣವನ್ನು ಮಾನವೀಯವಾದ ಇನ್ನವುದೋ ಸಣ್ಣಸಂಗತಿಯಲ್ಲಿ ಹುಡುಕುತ್ತವೆ. ಮಗಳನ್ನು ತಂದೆ ಮೋಹಿಸಿದ್ದರಿಂದ ಪಿರಿಯಾಪಟ್ಟಣದ ಕಾಳಗವಾಯಿತು ಎಂದು ಹೇಳುತ್ತವೆ. ಒಬ್ಬ ಹೆಣ್ಣು ತನ್ನ ಪ್ರೇಮವನ್ನು ಕುಮಾರರಾಮ ಧಿಕ್ಕರಿಸಿದ್ದರಿಂದ ರತ್ನಾಜಿಯಾಗಿ ಹುಟ್ಟಿ ಆಕೆ ಅವನನ್ನು ಬಲಿತೆಗೆದುಕೊಳ್ಳುತ್ತಾಲೆ ಎಂದು ಕುಮಾರರಾಮನ ಕಥೆ ಹೇಳುತ್ತದೆ. ಉದಾ: ವೀರಬಲ್ಲಾಳನ ಕಥೆಯಲ್ಲಿ ಡಿಳ್ಳಿ ಸುಲ್ತಾನನ ಮಗಳು ಪ್ರವೇಶಿಸಿ ಒಂದು ತಿರುವು ಕೊಡುವ ಕಥೆ. ಇದು ಜನಪದ ನೆಲೆಯ ಕಥನಗಳ ಮೂಲಕ ಚರಿತ್ರೆ ಕಟ್ಟುವ ವಿಧಾನ. ಇಂತಹ ಕತೆಗಳನ್ನು ರಾಜಾವಳಿ ಯಥೇಚ್ಛವಾಗಿ ಸಂಗ್ರಹಿಸುತ್ತದೆ. ಇವನ್ನು ನಮ್ಮ ಇತಿಹಾಸವೆಂಬ ನಂಬಿಕೆಯಿಂದಲೇ ಅದು ಹೊರಡುತ್ತದೆ. ರಾಜಾವಳಿಯ ಕತೆಗಳು ಬಾರತೀಯರ ಇತಿಹಾಸಪ್ರಜ್ಞೆ ಕೆಲಸ ಮಾಡುವ ವಿಶಿಷ್ಟ ವಿಧಾನಗಳನ್ನು ಒಳಗೊಂಡಿವೆ. ವಾಸ್ತವವಾಗಿ ರಾಜಾವಳಿಯು ಪ್ರಭುತ್ವ ನಿರ್ಮಿತ ಆಕರಗಳನ್ನು ಬಿಟ್ಟು ಜನನಿರ್ಮಿತ ಆಕರಗಳನ್ನು ದಾಖಲಿಸಿದೆ. ಉದಾ: ಮೈಸೂರು ರಾಜಗೌಡನ ಅಧಿಕಾರಿ ಶಾಂತಯ್ಯನ ಜಾಣತನದ ಕಥೆ. ರಾಜರು ಹಾಕುತ್ತಿದ್ದ ತೆರಿಗೆಗಳನ್ನು ಕುರಿತ ಅಪರೂಪದ ವರ್ಣನೆ; ಹೈದರಾಲಿ ನೀಡುತ್ತಿದ್ದ ಶಿಕ್ಷೆಗಳ ವರ್ಣನೆ; ರಾಮಾನುಜನಿಂದ ಆಗದ ಜೈನ ಮತಾಂತರವನ್ನು ನಾವು ಮಾಡುತ್ತೇವೆಂದು ಅವನ ಇಬ್ಬರು ಮಕ್ಕಳು ಕೈಗೆತ್ತಿಕೊಳ್ಳುವ ಕತೆಯಂತೂ ಪಕ್ಕಾ ಜಾನಪದ ಕತೆಯ ಆಶಯವಾಗಿದೆ. ಇದು ಬಹಳ ಜನಪ್ರಿಯವಾದ ಜನಪದ ಕತೆಯಾಗಿದೆ. ತಂತಮ್ಮ ಜಾತಿಮತಗಳ ಪುರಾಣಗಳನ್ನು ಹೇಳಲು ಚಿಕ್ಕದೇವರಾಜ ಅರಸು ಸಬೆ ಏರ್ಪಾಟು ಮಾಡುವುದಂತೂ ಅದ್ಬುತವಾಗಿದೆ. ಕರ್ನಾಟಕ ಜಾತಿಗಳ ಲೋಕಸೃಷ್ಟಿಯ ಈ ಪುರಾಣಗಳು, ಜಾತಿನಿಂದಕ ಕಿರುಗತೆಗಳು, ಸಮಾಜಶಾಸ್ತ್ರೀಯ ಅಧ್ಯಯನಕ್ಕೆ ಸವಾಲನ್ನು ಒಡ್ಡುವಂತಿವೆ.

ಹೀಗೆ ರಾಜಾವಳಿಕಥೆಯು ಒಂದು ಬಗೆಯಲ್ಲಿ ಜನಪದ ಕತೆಗಳನ್ನು ಸಂಗ್ರಹಿಸುತ್ತ ಇವುಗಳ ಪಠ್ಯವಾಗಿದೆ. ಈ ಕತೆಗಳ ಜತೆಗೆ ಆಟವಾಡುತ್ತ ‘ರಾಜಾವಳಿಕಥೆ’ಯು ಜಾನಪದ ಕಥನಕ್ರಮವನ್ನು ತಾನೂ ಪಡೆದುಕೊಂಡಿದೆ. ಇದನ್ನು ಇಲ್ಲಿನ ಕಥೆಗಳ ಆಶಯಗಳಲ್ಲಿ ಗಮನಿಸಬಹುದು. ಸಾಮಾಜಿಕವಾಗಿ ಅಪಮಾನ ಅನುಭವಿಸುವ, ಐಡೆಂಟಿಟಿ ಬಿಕ್ಕಟ್ಟನ್ನು ಅನುಭವಿಸುವ ನಾಯಕರು ತಮ್ಮ ಅಪಮಾನವನ್ನು ನಿವಾರಿಸಲು ಛಲತೊಡುವ ಹಾಗೂ ಕೊನೆಗೂ ಗೆಲುವು ಸಾಧಿಸುವ ಆಶಯಗಳು ಇಲ್ಲಿನ ಕತೆಗಳಲ್ಲಿ ಮತ್ತೆಮತ್ತೆ ಬರುತ್ತವೆ. ಉದಾ; ಬಾಣನ ಕಾದಂಬರಿಗೆ ಸವಾಲು ಹಾಕಿದ ನೇಮಿಚಂದ್ರನು ಲೀಲಾವತಿ ಕಾವ್ಯ ಬರೆದು ಕಾದಂಬರಿ ಸುಟ್ಟು ಕಪ್ಪನಿರಿಸಿಕೊಳ್ಳುವ ಕತೆ, ತನ್ನ ಬಟ್ಟೆಬರೆಯಿಂದ ದರಿದ್ರನೆಂದು ಹೀನಾಯಗೊಂಡ ಶ್ರೀಮಂತನೊಬ್ಬ ಹೀಯಾಳಿಸಿದವರಿಗೆ ತನ್ನ ಸಂಪತ್ತು ತೋರಿಸಿ ಚಕಿತಗೊಳಿವ ಕಥೆ; (ಇಂತಹದೊಂದು ಕತೆಯನ್ನು ದೇವರನೂರರ ‘ಕುಸುಮಬಾಲೆ’ಯು ಬಳಸಿಕೊಂಡಿದೆ.) ಶ್ರೀರಂಗಪಟ್ಟಣದ ಶ್ರೀರಂಗರಾಯನು ಮಹಿಸೂರ ರಾಜಗೌಡನನ್ನು ಆಸ್ಥಾನಕ್ಕೆ ಕರೆಸಲು, ಶಾನುಭೋಗನಾದ ದೊಡ್ಡಶಾಂತಯ್ಯ ತಮ್ಮ ರಾಜ್ಯದ ಬಡತನ ತೋರಲು ಮಾಡಿದ ಉಪಾಯದ ಕಥೆ; ಕಂದಾಯ ಕೊಡಲು ನಿರಾಕರಿಸುವ ರೈತರು ರಾಜನಿಗೆ ಜಾಣ್ಮೆಯಿಂದ ಬುದ್ದಿಕಲಿಸುವ ಕಥೆ, ಬರವನೂ ದರಿದ್ರನೂ ರಾಜಾಶ್ರಯ ಸಿಗದೆ ಒದ್ದಾಡುವ ದೇವಚಂದ್ರ ನಿರಾಕರಣೆಗೆ ಒಳಗಾದವರ ಪ್ರಕರಣಗಳನ್ನು ಬಹಳ ಆಸ್ಥೆಯಿಂದ ಬರೆಯುತ್ತಾನೆ. ಹೆಚ್ಚಿನ ಕಥೆಗಳು ದುರ್ಬಲರ ಚಾತುರ್ಯಕ್ಕೆ ಸಂಬಂಧಿಸಿದವು. ದಡ್ಡ ಹುಡುಗನ ಕಥೆ, ಜಿಪುಣ ದಂಪತಿಗಳ ಕಥೆ, ಹುಣಿಸೆಕಾಯಿ ಮಾಡುತ್ತಿದ್ದವಳು ರಾಣಿಯಾದ ಕಥೆ, ಹೊಸದಾಗಿ ಆಭರಣ ಮಾಡಿಸಿಕೊಂಡ ಅಂಗಚೇಷ್ಟೆ ಕಲಿತವಳ ಕಥೆ, ಹೊಟ್ಟೆಕಿಚ್ಚಿನ ನೆರೆಮನೆಯವರ ಕಥೆ, ಹೂಸು ಬಿಟ್ಟ ರಾಜನ ಕಥೆ-ಮುಂತಾದ ಮೆಲುಸ್ತರದವರ ಪರವಾಗಿಲ್ಲ, ಕೆಳಗಿನವರ ಪರವಾಗಿವೆ ಎಂಬುದು ಗಮನಾರ್ಹ ದೇವಚಂದ್ರನ ಸೀಮೆಗೆ ಸೇರಿದ ಮುಂಟೆಸ್ವಾಮಿ ಮಲೆಮಾದೇಶ್ವರ ಎಂಬ ಎರಡು ಮಹಾಕಾವ್ಯಗಳ ನಾಯಕರು ಕೂಡ ಇಂತಹ ಅಪಮಾನಿತ ಹಾಗೂ ಛಲದ ಹಿನ್ನೆಲೆಯುಳ್ಳವರು ಎಂಬುದನ್ನು ನೆನೆಯಬೇಕು, ನಿರ್ಲಕ್ಷಿತರು ಅಪಮಾನಿತರಾಗಿ ಸವಾಲನ್ನು ಸ್ವೀಕರಿಸಿ ನಾಯಕರಾಗಿ ಬೆಳೆಯುವ ಕತೆಗಳ ಆಶಯಕ್ಕೆ ಜೈನಮುನಿಗಳು ಕೂಡ ಒಂದು ಬಗೆಯ ಉದಾಹರಣೆಗಳಾಗಿದ್ದಾರೆ. ಸ್ವತಃ ದೇವಚಂದ್ರನೂ ಇಂತಹ ನಾಯಕನೇ.

ಜೈನಧರ್ಮವು ಮೂಲತಃ ಪುರಾಣಗಳ ಧರ್ಮ, ಅತಿಮಾನುಷವಾದ ಸಂಗತಿಗಳನ್ನು ಉಳ್ಳ ಪುರಾಣಗಳು ಅಲ್ಲಿವೆ. ಹೀಗಾಗಿ ರಾಜಾವಳಿಕಥೆಯಲ್ಲಿರುವ ಚರಿತ್ರೆಯ ಚೌಕಟ್ಟಿಗೆ ಕಾಲದೇಶಗಾಳಚೆ ಹೋಗುವ ಪೌರಾಣಿಕ ನೆಲೆಯೂ ಇದೆ. ಈ ಕೃತಿಯು ಭೂಮಿಯ ಉತ್ಪತ್ತಿಯಿಂದ ಕಥನದಿಂದ ಶುರುವಾಗುತ್ತದೆ. ಸಮಕಾಲೀನವಾದ ಸಮಸ್ಯೆಯನ್ನು ಕೂಡ ಪುರಾಣಕಾಲದ ಜತೆಗೆ ಬೆಸೆಯುವ ಭಾರತೀಯ ಚಿಂತನಕ್ರಮ ಇದಕ್ಕೆ ಕಾರಣ. ಇದು ಒಂದು ಬೆಗಯಲ್ಲಿ ದೇಶಕಾಲಗಳಾಚೆ ಹೋಗಿ ವರ್ತಮಾನವನ್ನು ಅಲೌಕಿಕದೊಂದಿಗೆ ಬೆಸೆಯುವ ವಿಧಾನ. ಇನ್ನೊಂದು ಅರ್ಥದಲ್ಲಿ ವರ್ತಮಾನವನ್ನು ಅದರ ಸಾಮಾಜಿಕ ರಾಜಕೀಯ ನೆಲೆಯಲ್ಲಿ ನೋಡಲಾಗದೆ ಭೋಳೆತನದ ಸಂಕೇತ. ಇದೇ ಮೈಸೂರು ಸೀಮೆಯಲ್ಲಿ ಹುಟ್ಟಿದ ‘ಕಂಠೀರವ ನರಸರಾಜ ವಿಜಯ’ಯಂತಹ ಪಕ್ಕಾ ರಾಜಕೀಯ ಕಥನ ಕೂಡ, ದೇವಲೋಕದಲ್ಲಿ ವಿಷ್ಣುವಿಗೆ ಭೂಭಾರ ಇಳಿಸಲು ಲೋಕದ ಜನರು ಬೇಡುವ ಅವನು ನರಸಿಂಹರಾಜನಾಗಿ ಅವತರಿಸುವ ಪುರಾಣ ಚೌಕಟ್ಟನ್ನು ಹೊಂದಿದೆ. ಹರಿಹರನ ರಗಳೆಗಳು ತಮ್ಮ ಸಮೀಪಕಾಲೀನರಾದ ಶರಣರನ್ನು ಕುರಿತು ಕೂಡ ಇಂತಹದೇ ಕಥನಕ್ರಮದ ಚೌಕಟ್ಟಿನಲ್ಲಿ ಬಂಧಿಸುತ್ತವೆ. ಕುಮಾರರಾಮನ ಕಥೆಯಲ್ಲೂ ಈ ಚೌಕಟ್ಟು ಬರುತ್ತದೆ. ಈ ಚೌಕಟ್ಟು ಭಾರತದ ಕ್ಲಾಸಿಕಲ್ ಧರ್ಮಗಳಲ್ಲಿ ಮಾತ್ರವಲ್ಲ. ಜನಪದ ಮಹಾಕಾವ್ಯ ಎಂದು ಕರೆಯಲಾಗುವ ಆಚರಣ ಪಠ್ಯಗಳಲ್ಲೂ ಕಾಣಬರುತ್ತದೆ. ಉದಾಹರಣೆಗೆ ಮಂಟೆಸ್ವಾಮಿ ಕಾವ್ಯದಲ್ಲಿದೆ.

ಆದರೆ ಪುರಾಣಗಳನ್ನು ಕುರಿತಂತೆ ರಾಜಾವಳಿಕಥೆಯು ದ್ವಂದ್ವನಿಲುವು ಹೊಂದಿದೆ. ಜೈನಪುರಾಣಗಳ ಬಗ್ಗೆ ಅದರ ನಿಲುವು ಸಮರ್ಥಕವಾದುದು, ಆದರೆ ಜನರಲ್ಲಿ ಇರುವ ಮಿತ್‌ಗಳನ್ನು ಕೃತಿ ಉಲ್ಲೇಖಿಸುವಾಗ ನಿರಾಕರಣೆಯ ನಿಲುವನ್ನು ತೋರುತ್ತದೆ. ಅಜೈನ ಪುರಾಣಗಳು ಬಂದಾಗ ಅವನ್ನು “ಇಂತನೇಕ ಅನೃತವಾದ ಪುರಾಣಮಂ ಕಲ್ಪಿಸಿ” ಎಂದು ಕಡೆಗಣಿಸಿ ಬಿಡುವುದು. ಉದಾ: ಪಾಂಡವರು ದ್ರೌಪದಿಯನ್ನು ತಂದು ಒಂದು ಹೆಣ್ಣು ತಂದಿದ್ದೇವೆ ಎಂದಾಗ ಕಿವುಡಿಯಾದ ಕುಂತಿಯು ಹಣ್ಣು ಎಂದು ಕೇಳಿಸಿಕೊಂಡು ‘ಐವರೂ ಹಂಚಿಕೊಳ್ಳಿ’ ಎನ್ನುವ ಮಿತ್, ರಾಜಾವಳಿಕಥೆ ನಿರಾಕರಿಸುವ ಅನೇಕ ಪುರಾಣಕತೆಗಳು ವೈದಿಕ ಲೋಕಕ್ಕೆ ಸಂಬಂಧಿಸಿದವು; ಋಷಿಗಳ ಅತಿಕಾಮ ವಿಕೃತಕಾಮ ಮತ್ತು ಹುಟ್ಟಿನ ಹಿನ್ನೆಲೆಯ ಪುರಾಣಗಳನ್ನು ಅದು ವಿಡಂಬಿಸುತ್ತದೆ. ಶಿವ ಪಾರ್ವತಿ ಗಣಪತಿ ಪುರಾಣ ಕತೆಗಳನ್ನು ತುಂಟತನದಿಂದ ಹೇಳುತ್ತದೆ. ಸ್ತ್ರೀಸಹವಾಸದ ಪರಣಾಮಕ್ಕೆ ಶಿವನು ಗಂಗೆಯನ್ನು ಮೋಹಿಸುವ ಪುರಾಣ ಕತೆ ಹೇಳಿ ಶೈವರನ್ನು ವಿಡಂಬಿಸುತ್ತದೆ.

ಬಹುಶಃ ಪೈಪೋಟಿ ಮಾಡುವ ಎಲ್ಲ ಮತಗಳು ಇಂತಹ ಇಬ್ಬಂದು ವಿಧಾನವನ್ನು ಬಳಸುತ್ತವೆ ಅನಿಸುತ್ತದೆ. ವೈದಿಕ ಪುರಾಣಗಳನ್ನು ಒಡೆಯಲು ಜೈನಮತವು ವಿಚಾರವಾದವನ್ನು ಕಾಮನ್ಸೆನ್ಸನ್ನು ಬಳಸುತ್ತದೆ. ಆದರೆ ತನ್ನ ಮತದ ಪುರಾಣಗಳು ಬಂದಾಗ ಈ ವಿಚಾರವಾದವನ್ನು ಬಲಸುವುದಿಲ್ಲ. ಈ ನಿಲುವನ್ನು ತನ್ನ ಹಿಂದಿನ ಜೈನಪಠ್ಯಗಳಂತೆ ರಾಜಾವಳಿಕಥೆ ಕೂಡ ತೋರುತ್ತದೆ.

ಪಂಪ ರನ್ನರು ಕೂಡ ಅನ್ಯ ಮತದ ಪುರಾಣಗಳನ್ನು ವಿಡಂಬಿಸುವವರು, ಆದರೆ ಅವರು ಆಳದಲ್ಲಿ ಅವುಗಳಲ್ಲಿ ಇರುವ ಸಾಂಕೇತಿಕ ಸತ್ಯವನ್ನು ನಂಬುವ ಕವಿಗಳು, ದೇವಚಂದ್ರನು ಕವಿಯಲ್ಲ, ಸಾಹಿತ್ಯಕವಾಗಿ ಅಮೂಲ್ಯವಾದ ವಸ್ತುವನ್ನು ಅವನು ಮುಟ್ಟುತ್ತಾನೆ.  ಮಾಹಿತಿಗಾರನಾಗಿ ಅವನ್ನು ಪೂರ್ವಗ್ರಹಗಳೊಂದಿಗೆ ಸಂಗ್ರಹಿಸುತ್ತಾನೆ. ಆದರೆ ಅವನ್ನು ಕವಿ ಸಹನೆಯಿಂದ ತನ್ನ ಅನುಭವ ಕಲ್ಪನೆದರ್ಶನಗಳಿಂದ ಅರಳಿಸುವುದಿಲ್ಲ. ಅವನ್ನು ಬಳಸಿ ಹೊಸಕಥನ ಕಟ್ಟುವುದಿಲ್ಲ. ಒಂದು ಪಾತ್ರವನ್ನೂ ಘಟನೆಯನ್ನೋ ಹಿಡಿದುಕೊಂಡು ಮಾನವೀಯವಾದ ರೀತಿಯಲ್ಲಿ ನೋಡಿ ಹೋಸ ಕಥನವನ್ನು ಅರಳಿಸುವುದಾಗಿದ್ದರೆ. ಅವನೊಬ್ಬ ದೊಡ್ಡ ಕಥೆಗಾರನಾಗಬಹುದಾಗಿತ್ತು. ಆದರೆ ಅದಕ್ಕೆ ಬೇಕಾದ ತಾಳ್ಮೆ ಪ್ರತಿಭೆಗಳೂ ಅವನಲ್ಲಿಲ್ಲ. ಅದು ಅವನ ಉದ್ದೇಶವೂ ಅಲ್ಲ.

ಮೆಕಂಜಿ ಹೇಳಿದ “ಹಿಂದಿನ ಪ್ರಪಂಚು”ಗಳನ್ನೆಲ್ಲ ಕ್ರೋಡೀಕರಿಸು ಎಂದು ಹೇಳಿದ್ದೆ ರಾಜಾವಳಿಯ ರಚನವಿನ್ಯಾಸಕ್ಕೆ ಮುಖ್ಯ ಕಾರಣ, ನಿಜ ಆದರೂ ದೇವಚಂದ್ರನಲ್ಲಿ ಒಂದು ಬಗೆಯ ಕತೆಗಾರಪ್ರಜ್ಞೆ ಕೆಲಸಮಾಡಿದೆ. ಅವನೊಬ್ಬ ಹರಿಕಥೆದಾಸನಿದ್ದಂತೆ, ಕಥೆಗಳನ್ನು ಪುರಾಣಗಳನ್ನು ಚಾರಿತ್ರಿಕ ಘಟನೆಗಳನ್ನು ತನ್ನ ಆಶಯಕ್ಕೆ ತಕ್ಕಂತೆ ಜೋಡಿಸುತ್ತಾನೆ. ಕನ್ನಡ ಗಾದೆ, ಸಂಸ್ಕೃತ ಸೂಕ್ತಿ, ದಾಖಲೆ ಜನಪದ ಕತೆ, ಪುರಾಣದ ಕತೆ ಸಿಕ್ಕದ್ದೆಲ್ಲವನ್ನು ತನ್ನ ಉದ್ದೇಶಕ್ಕೆ ಬಳಸಿಕೊಳ್ಳುತ್ತಾನೆ. ಜನಪದ ಕಥೆಗಳಿಗೆ ತಾನು ಕಲಿತ ಸಂಸ್ಕೃತ ಶ್ಲೋಕ ಕೂಡಿ ಇಡೀ ಕಥೆಯನ್ನು ರಾಜಾವಳಿಯ ಕಥನದ ಹಾಸಿನಲ್ಲಿ ಜೋಡಿಸುತ್ತಾನೆ. ಅವುಗಳ ನಡುವೆ ವ್ಯತ್ಯಾಸ ಮಾಡುವುದಿಲ್ಲ. ಕತೆಗಳ ಒಳಗೆ ಇರುವ ಅದ್ಬುತ ನಾಟಕೀಯತೆಯನ್ನು ಕೆಲವು ಕಡೆ ಕಳೆಯದೆ ತರುತ್ತಾನೆ. ಶ್ರೀರಂಗಪಟ್ಟಣದ ರಂಗರಾಜನಿಗೂ ಮೈಸೂರು ಗವಡುನ ನಿಯೋಗಿಯಾಗಿ ಬಂದ ದೊಡ್ಡಶಾಂತಯ್ಯನಿಗೂ ಆಸ್ಥಾನದಲ್ಲಿ ನಡೆದ ಮಾತುಕತೆಯು ಉಲ್ಲೇಖಾರ್ಹವಾಗಿದೆ.

ದೊರೆ : ಏನೋ ನಿನ್ನ ಗೌಡಂಗೆ ಕುಂಡೆ ಕಡಿಯುತ್ತಿದೋ? ಹೇಳಿ ಕಳುಹಿಸ್ತರೆ ಬಾರದೆಯಿದ್ದಾನೆ.

ಶಾಂತಯ್ಯ; ಅಪಥ್ಯ ಭೋಜನದಿಂ ದೆಹದೊಳುಯಟ್ಟೆಯಿಂ ವಿಸರ್ಪತಿಮಿರ ಕಂಡು ಪುಟ್ಟಿ ಎರಡು ಪೊರವಾರೊಳು ವೇದನೆ ತೋರಿಪ್ಪುದರಿಂ ಬರಲಾರದೆ ಎನ್ನಂ ಪೋಗಿ ಪಾದಕ್ಕರಿಕೆ ಮಾಡೆಂದಟ್ಟಿದನ್

ದೊರೆ: ಬಹಳ ಕಷ್ಟವೇ?

ಶಾಂತಯ್ಯ : ದರದ್ರತ್ವದಿಂದ ಅನ್ನಮಿಲ್ಲದದು ಕಷ್ಟಂ.

ದೊರೆ: ಅನ್ನಮಿಲ್ಲದೆ ಮಣ್ಣ ತಿನ್ನತ್ತಾನೋ?

ಶಾಂತಯ್ಯ ; ಅನ್ನಯೇ ತಿಂಬುದು, ಅದೋಡಂ ದಡದ ಸಣ್ಣಕ್ಕಿ ಅನ್ನ ಹಾಳು ಹಣ್ಣುವೆರಸಿ ಉಂಡದಂ ಶರೀರಕ್ಕೊಡಂಬಡದದು.

ದೊರೆ : ಅದೇನದು?

ಶಾಂತಯ್ಯ : ಹಾರಕದಕ್ಕಿಯನ್ನಂ ಹುರುಳಿಹಾಳು, ಮೆಣಸಿಹಣ್ಣು,

ದೊರೆ : ನಿನ್ನ ಗವುಡಂಗಾವುದುಮಿಲ್ಲೆಂದು ಸತ್ಯಮಂ ಮಾಡು.

ಶಾಂತಯ್ಯ : ಅಸತ್ಯಮನ್ ಅರಿಕೆ ಮಾಳ್ಪನಲ್ಲ, ನಾನಾಡಿದುದೆ ಸತ್ಯಂ.

ರಾಜಾವಳಿಕಥೆಯಲ್ಲಿ ಕನ್ನಡ ಭಾಷೆಯ ಧ್ವನಿಪೂರ್ಣತೆಯನ್ನು ಸೂಚಿಸುವ ಅನೇಕ ಭಾಗಗಳಿವೆ. ಅದರಲ್ಲಿ ಸೂರತನಗರದ ಪರದೇಸಿಗೆ ಮುದ್ಧ ಗೌಡನ ಮಗ ಕೇತಗೌಡನು ತನ್ನ ಕತೆ ಹೇಳುವುದು ಒಂದು (೨೩೫) ದೇವಚಂದ್ರ ತನಗೆ ಸಿಕ್ಕ ಮಾಹಿತಿಯನ್ನು ಕೇವಲ ನಿರ್ಲಿಪ್ತವಾಗಿ ಕೊಡುವ ಕೆಲಸವನ್ನೇನು ಮಾಡುವುದಿಲ್ಲ. ಅವನ್ನು ಮಂಡಿಸುವಲ್ಲಿ ತನ್ನ ಕಾಲದ ಕನ್ನಡ ಭಾಷೆಯ ನುಡಿಗಟ್ಟು ತಮಾಶೆ ಗಾದೆ ಕತೆ, ಉಪಕತೆ ಎಲ್ಲದರ ಸಮೇತ ಕೊಡಲು ಯತ್ನಿಸುತ್ತಾನೆ. ದಾಖಲೆಗಳು, ಕಲ್ಪನೆ ಜನೊದ ಶ್ಲೋಕ ಗಾದೆಗಳೆಲ್ಲವನ್ನು ಭೇದಭಾವವಿಲ್ಲದೆ ಮಿಶ್ರಣ ಮಾಡಿ ಒಂದು ಅನನ್ಯ ಶೈಲಿಯನನ್ನು ಹುಟ್ಟಿಸುತ್ತಾನೆ. ತನ್ನ ಮತಶ್ರದ್ಧೆಯ ಭಾಗವಾಗಿ ಅನ್ಯಮತಗಳನ್ನು ಕುರಿತ ಪೂರ್ವಗ್ರಹಗಳನ್ನು ಅದರಲ್ಲೂ ತನ್ನ ಕಾಲದ ಸಮಾಜದ ಪ್ರತಿಷ್ಠಿತರಾದ ವೈದಿಕರ ವಿರುದ್ಧವಾದ ತನ್ನ ನಿಲುವನ್ನು ಬೆರೆಸುತ್ತಾನೆ. ಒಟ್ಟಿನಲ್ಲಿ ಸಾಹಿತ್ಯ ಪರಿಕಲ್ಪನೆಯನ್ನು ಛಿದ್ರಮಾಡುವ ಸಂಕೀರ್ಣಪಠ್ಯವಾಗಿ ರಾಜಾವಳಿಕಥೆ ರೂಪುಗೊಂಡಿದೆ.

ಈ ದೇಶದ ಈ ಸಮಾಜದ ಚರಿತ್ರೆ ಜೀವನ ಕ್ರಮ, ಅಲೋಚನ ಕ್ರಮ ಇವನ್ನು ಅರಿಯುವುದು ಮಾಹಿತಿ ಸಂಗ್ರಹ ಮಾಡಿಸುವವರ ಮೂಲ ಉದ್ದೇಶ. ರಾಜಾವಳಿಯು ಯಾವ ಚಾರಿತ್ರಿಕ ಸಂದರ್ಭದಲ್ಲಿ ರಚನೆಯಾಯಿತು ಎಂಬ ಮಾಹಿತಿಯು ಅದೇ ಹಿನ್ನೆಲೆಯಲ್ಲಿ ನಾವು ಅದನ್ನು ನೋಡುತ್ತ ಹೋಗಲು ಪ್ರೇರಿಸಬಹುದು. ದೇವಚಂದ್ರನು ಮೆಕೆಂಜಿಯ ಅಜ್ಞೆಗೆ ಅನುಸಾರವಾಗಿ ರಚಿಸಿದ ಕೃತಿ ನಿಜ. ಆದರೆ ಅದು ಮೆಕಂಜಿ ಬಯಸಿದ ಕೃತಿಯಾಯಿತೇ ಎನ್ನುವುದು ಕೊನೆಗೂ ಕೇಳಿಕೊಳ್ಳಬೇಕಾದ ಪ್ರಶ್ನೆ. ವ್ಯಂಗ್ಯವೆಂದರೆ, ಯಾವ ಉದ್ದೇಶಕ್ಕೆ ಕರ್ನಲ್ ಮೆಕಂಜಿಯು ಈ ಪಠ್ಯವನ್ನು ರಚಿಸಲು ಹೇಳಿದನೋ, ಅವನು ಈ ಕೃತಿಯ ಪಡೆಯಲು ಸಾಧ್ಯವಾಗಲಿಲ್ಲ. ಒಂದೊಮ್ಮೆ ಮೆಕಂಜಿಗೆ ಈ ಪಠ್ಯ ಸಿಕ್ಕಿದ್ದರೂ ಅದು ಕಂಪನಿ ಅಡಳಿತಕ್ಕೆ ಅನುಕೂಲ ಒದಗಿಸುತ್ತಿತ್ತೇ ಎಂಬ ಬಗ್ಗೆ ಅನುಮಾನ ಹುಟ್ಟಿಸುವಂತೆ ಇದಿದೆ. ಬ್ರಿಟಿಶರಿಗಾಗಿ ತಯಾರಿಸಿದ ಪಠ್ಯವನ್ನು ದೇವಚಂದ್ರನು ತನ್ನ ಹೊಸ ಧಣಿಗಳಾದ ಮೈಸೂರು ಒಡೆಯರ ಇಚ್ಛೆಗೆ ಅನುಸಾರವಾಗಿ ಬದಲಾಯಿಸುತ್ತಾನೆ. ಸಿಗುವ ಮಾಹಿತಿಯನ್ನೆಲ್ಲ ಅವಸರ ಪಟ್ಟು ಸಂಗ್ರಹಿಸಿ ಅದನ್ನು ಮನಸೋ ಇಚ್ಛೆ ತುರುಕುತ್ತಾನೆ. ಇದನ್ನೆಲ್ಲ ಕಂಡರೆ-ಇಡೀ ‘ರಾಜಾವಳಿ ಕಥೆ’ಯು ಒಂದು ಬಗೆಯಲ್ಲಿ ಅವರಿವರ ಉದ್ದೇಶಕ್ಕೆ ಸೃಷ್ಟಿಯಾದ ಮತ್ತು ಬದಲಾವಣೆ ಪಡೆದ ಪಠ್ಯ. ಒಬ್ಬ ಮತಶ್ರದ್ಧೆಯುಳ್ಳ ಜೈನನಾಗಿ, ಯಾವುದೇ ಆಳುವವರ್ಗ ಬಂದರೂ ಅದಕ್ಕೆ ಬೇಕಾದಸೇವೆ ಸಲ್ಲಿಸುವ ಮನೋಧರ್ಮದವನಾಗಿ, ಹಣ ಸಂಪಾದಿಸಬೇಕು ಎಂಬ ಆಸೆಯುಳ್ಳವನಾಗಿ ತಾನು ಕೊಡುವ ಮಾಹಿತಿ ಯಾಕಾಗಿ ಬಳಕೆಯಾಗುತ್ತದೆ ಎಂಬ ಅರಿವಿಲ್ಲದೆ ಮೂಡಿದ ಕೃತಿ. ಎಂತಲೇ ರಾಜಾವಳಿಯು ವಸಾಹತುಶಾಹಿ ಕಾಲಘಟ್ಟವು ಸೃಷ್ಟಿಮಾಡಿದ ವೈಚಿತ್ರಗಳಲ್ಲಿ ಒಂದಾಗಿದೆ.

ಆದರೆ ದೇವಚಂದ್ರನು ತನ್ನ ಯಾವ ಸ್ವಂತಿಕೆಯೂ ಇಲ್ಲದೆ ಕೇವಲ ಮಾಹಿತಿ ಸಂಗ್ರಾಹಕನಾಗಿ ಯಾಂತ್ರಿಕವಾಗಿ ಕೆಲಸ ಮಾಡಿದ ಎಂದು ಭಾವಿಸುವಂತಿಲ್ಲ. ಹೀಗೆ ಭಾವಿಸಿದರೆ, ಬಾರತೀಯ ಮನಸ್ಸು ಕೆಲಸ ಮಾಡುವ ರೀತಿ ಹಾಗೂ ಅದರ ಗ್ರಹಿಕಡಗಳು ಭಾಗವಹಿಸುವದನ್ನು ಅಲ್ಲಗಳೆದಂತಾಗುತ್ತದೆ. ನಿರ್ದಿಷ್ಟ ಉದ್ದೇಶಕ್ಕಾಗಿ ಮಾಡಲಾಗುವ ಕೆಲಸಗಳಲ್ಲಿ ಅವುಗಳ ಮೂಲ ಉದ್ದೇಶ ಮೀರಿದ ಪರಿಣಾಮಗಳು ಸಂಭವಿಸಬಲ್ಲವು ‘ರಾಜಾವಳಿ’ಯಲ್ಲಿ ಮೆಕಂಜಿಯ ಅಪ್ಪಣೆಯನ್ನು ಮೀರಿದಂತೆ ಕೃತಿ ರಚನೆಯಾಗಿದೆ ಎಂಬುದೇ ಅದರ ವಿಶಿಷ್ಟತೆಗೆ ಕಾರಣ ಮಾಹಿತಿ ಕೊಡುವವನ ವೈಯಕ್ತಿಕ ಹಾಗೂ ಸಾಮಾಜಿಕ ವಿಶಿಷ್ಟತೆಗಳಿಗೂ ಯೂರೋಪಿನ ವ್ಯಾಪಾರಿ ಕಂಪನಿಯೊಂದು ಆಡಳಿತಕ್ಕೆ ಬೇಕಾದ ಮಾಹಿತಿ ಪಡೆಯಲು ಬಯಸುತ್ತಿದ್ದ ರೀತಿಗೂ ನಡುವೆ ಇದ್ದ ಅನೇಕ ವೈರುಧ್ಯಗಳನ್ನು ಈ ಪಠ್ಯ ಸೂಚಿಸುತ್ತದೆ. ಭಾರತೀಯ ಸಮಾಜವು ಎಷ್ಟು ಜಟಿಲವಾದುದು. ಭಾರತೀಯ ಮನಸ್ಸು ಎಷ್ಟು ಸಂಕೀರ್ಣವಾದುದು. ಅದು ಚರಿತ್ರೆ ಗ್ರಹಿಸುವ ರೀತಿ ಹೇಗೆ ವಿಶಿಷ್ಟವಾದುದು ಎಂಬುದಕ್ಕೂ ಈ ಪಠ್ಯ ಸಾಕ್ಷಿಯಾಗಿದೆ. ಅದರಲ್ಲಿ ಮುಖ್ಯವಾದುದು ಮಿತ್ ಹಾಗೂ ಚರಿತ್ರೆಗಳನ್ನು ಒಂದೇ ಭಾವಿಸುವುದು. ವೀರಬಲ್ಲಾಳನನ್ನು ಪ್ರೀತಿಸುವ ಡಿಳ್ಳಿ ಬಾದಶಹನ ಮಗಳಾದ ವರನಂದಿಭೀದಿಯು ತನ್ನ ತಂದೆಯನ್ನು ಸೋಲಿಸುವ ವೀರನನ್ನೆ ಮದುವೆಯಾಗುವ ಎಂಬ ಕಥೆಯನ್ನು ಯಾವ ಚಾರಿತ್ರಿಕ ನೆಲೆಯಲ್ಲಿ ನೋಡುವುದು ದಿಲ್ಲಿಯ ಸುಲ್ತಾನರು ಹೊಯ್ಸಳರನ್ನು ಸೋಲಿಸುವ ರಾಜಕೀಯ ಕಥನವು ಪ್ರೇಮಕಥಾನಕವಾಗಿ ಬಿಡುತ್ತದೆ.

ಬಹುಶಃ ಹೊರಗಿನಿಂದ ಬಂದ, ಅನ್ಯ ಸಂಸ್ಕೃತಿಗೆ ಸೇರಿದ. ಖಚಿತ ದಾಖಲೆಗಳ ಮೂಲಕ ಚರಿತ್ರೆಯನ್ನು ಗ್ರಹಿಸುವ ಬ್ರಿಟಿಶರು, ಚರಿತ್ರೆಯ ಈ ಬಗೆಯ ಗ್ರಹಿಕೆಯನ್ನು ಕಂಡು ಸೋಜಿಗಪಟ್ಟಿರಬೇಕು ಅಥವಾ ಈ ದೇಶವನ್ನು ಆಳುವುದು ಎಷ್ಟು ಕಷ್ಟ ಎಂದು ಕಂಗಾಲಾಗಿರಬೇಕು. ಇದು ಭಾರತವು ಯಾವತ್ತೂ ಹೊರಗಿನ ಆಕ್ರಮಣಕಾರಿಗಳಿಗೆ ಉತ್ತರ ಕೊಡುವ ವಿಚಿತ್ರ ವಿಧಾನವಿರಬೇಕು. ಹೀಗಾಗಿಯೇ ‘ಕಂಪನಿ ಭೂಮಿಪಾಲ’ರನ್ನು ಸಂಸ್ಕೃತ ವೃತ್ತಗಳಲ್ಲಿ ಹಳಗನ್ನಡದಲ್ಲಿ ಹೊಗಳುವ ಕೆಲಸವನ್ನು ಮಾಡಿದರೂ, ರಾಜಾವಳಿಯು ಭಾರತದ ಜನ ತಮ್ಮ ಪರಿಸರದ ಬಗ್ಗೆ ತಾವೇ ಕಟ್ಟಿಕೊಂಡಿರುವ ಕಲ್ಪನೆ ‘ಪ್ರಪಂಚು’ಗಳನ್ನು ಹೇಳುವ ಕೃತಿಯಾಗಿದೆ ಅನಿಸುವುದು.

* * *