ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಆಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡ ಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಭಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನ್ವಿತ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾ ಸಂಸ್ಥೆ ಇದು. ಕನ್ನಡಪ್ರಜ್ಞೆ ತನ್ನ ಸತ್ವ ಮತ್ತು ಸ್ವತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡಮಾನವ ವಿಶ್ವಮಾನವನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ ೬೦೦ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷೆ ಮತ್ತು ಸಾಹಿತ್ಯ ವಿಭಾಗವು ಸಾಹಿತ್ಯ ವಿಮರ್ಶೆಯ ಕ್ಷೇತ್ರದಲ್ಲಿ ತನ್ನದೇ ಆದ ಹೊಸದೊಂದು ದಾರಿಯನ್ನು, ಇತರ ಹಲವು ದಾರಿಗಳ ಜೊತೆಗೆ ಹಿಡಿಯುತ್ತಿದೆ; ಈ ಮೂಲಕ ಹೊಸ ಕಾಲದ ಓದುಗರನ್ನು ಪ್ರಾಚೀನ ಕಾಲದ ಕೃತಿಗಳ ಜೊತೆಗೆ ಅರ್ಥಪೂರ್ಣವಾದ ಹೊಸ ರೀತಿಯ ಸಂವಾದದಲ್ಲಿ ತೊಡಗಿಸುತ್ತದೆ. ಚರ್ವಿತ ಚರ್ವಣವಾದ ವರ್ಣನ ವಿಮರ್ಶೆ, ವಿವರಣ ವಿಮರ್ಶೆ, ವ್ಯಾಖ್ಯಾನ ವಿಮರ್ಶೆ, ರಸ ವಿಮರ್ಶೆ ಮುಂತಾದವುಗಳ ದಾರಿಗಳನ್ನು ಹಿಂದಿಕ್ಕಿ ವಿರ್ತಮಾನ ಕಾಲಕ್ಕೆ ಪ್ರಾಚೀನ ಕೃತಿಯೊಂದು ಪ್ರಸ್ತುತವಾಗುವ ಬಗೆಗಳನ್ನು ಮತ್ತು ಯಾವುದೋ ಕಾಲ ಘಟ್ಟದ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಭಿತ್ತಿಯ ಮೇಲೆ ರಚಿತವಾದ ಕೃತಿಗಳು ಆ ಕಾಲಕ್ಕಿಂತ ಭಿನ್ನವಾದ ತಾತ್ವಿಕ, ವೈಚಾರಿಕ, ಸಾಂಸ್ಕೃತಿಕ, ಸಮುದಾಯಿಕ ಅಂಶಗಳನ್ನು ಹೇಗೆ ತನ್ನ ವಿವಿಧ ಸ್ತರಗಳಲ್ಲಿ ಗರ್ಭೀಕರಿಸಿಕೊಂಡಿದೆ ಎಂಬುದನ್ನು ವಿವರಿಸುತ್ತಾ ಒಂದು ಶ್ರೇಷ್ಠ ಕೃತಿ ಹಾಗೆ ಎಲ್ಲ ಕಾಲದ ಒರೆಗಲ್ಲನ್ನು ಮೀರಿ ಓದುಗರ ಮೆದುಳಿನ ಮತ್ತು ಮನಸ್ಸಿನ ಗತಿಯೊಡನೆ ಹೆಜ್ಜೆ ಹಾಕುತ್ತಾ ಬೆಳೆಯಬಲ್ಲದು ಎಂಬುದನ್ನು ಈ ವಿಮರ್ಶಾ ವಿಧಾನ ಸಾದರಪಡಿಸುತ್ತದೆ. ಶ್ರೇಷ್ಠವೆಂದು ಪರಿಗಣಿತವಾದ ಕೃತಿಗಳಿಗೆ ಮಾತ್ರವಲ್ಲ, ಕೇವಲ ಸಾಹಿತ್ಯಕ ಮಾನದಂಡದಿಂದ ಕೃತಿಯೊಂದನ್ನು ನೋಡುವ ಮತ್ತು ಅಳೆಯುವ ಮೂಲಕ ಅದು ಮುಖ್ಯ ಕೃತಿಯಲ್ಲವೆಂದು ಸುಲಭವಾಗಿ ಉಪೇಕ್ಷಿಸಲಾಗದ ಕೃತಿಯೊಂದು ಸಾಹಿತ್ಯೇತರವಾದ ಮಾನದಂಡಗಳ ಮೂಲಕ ಮತ್ತು ಆಧುನಿಕ ಜಗತ್ತಿನ ಬದಲಾಗುತ್ತಿರುವ ವಿಚಾರ ಪ್ರಣಾಳಿಗಳ ಮೂಲಕ ಹೇಗೆ ಅದು ನಮ್ಮ ತಿಳುವಳಿಕೆಯ ಸ್ತರಗಳನ್ನು ಹೆಚ್ಚಿಸುವ ಅಂತಃಸತ್ವವನ್ನು ಪಡೆದಿವೆಯೆಂಬುದನ್ನು ಸೂಕ್ಷ್ಮಗ್ರಹಿಕೆ ಮತ್ತು ವಿಶ್ಲೇಷಣೆ ಮೂಲಕ ಇದು ತೆರೆದಿರಿಸುತ್ತಾ ಹೋಗುತ್ತದೆ; ಹಾಗೆಯೆ ಒಂದು ನೆಲೆಯಿಂದ ಉಪೇಕ್ಷಿತವಾದ ಕೃತಿ ಮತ್ತೆ ಹಲವು ನೆಲೆಗಳಿಂದ ನಮ್ಮ ಜೀವನಕ್ಕೆ ಹತ್ತಿರವಾಗುವ, ನಮ್ಮ ಚಿಂತನ ಶಕ್ತಿಯನ್ನು ವಿಸ್ತರಿಸುವ ವಿಸ್ಮಯವನ್ನು ಇದು ಮುಂದಿಡುತ್ತದೆ. ಕವಿರಾಜಮಾರ್ಗ, ಶೂನ್ಯ ಸಂಪಾದನೆ ಮುಂತಾದ ಕೃತಿಗಳ ಬಗೆಗೆ ಆಧುನಿಕ ದೃಷ್ಟಿಕೋನದ ಬುದ್ಧಿಶೀಲ ಮತ್ತು ಅಂತರಶಿಸ್ತೀಯ ಅಭ್ಯಾಸಶೀಲ ಓದುಗರು ಪ್ರತಿಕ್ರಿಯಿಸುವ ಬಗೆಯನ್ನು ಹೊಸ ಕಾಲದ ಸಾಂಸ್ಕೃತಿಕ ವಿನ್ಯಾಸಗಳ ಕಟು ಪರೀಕ್ಷೆಯ ಮೂಲಕ ಈಗಾಗಲೆ ಹೊರದೆಗೆಯಲಾಗಿದೆ. ಪರಂಪರಾಗತ ಕೃತಿಯೊಂದರ ಬಗೆಗಿನ ಚರ್ಚೆ ಎಂದು ಉದಾಸೀನದಿಂದ ಒಳಗೆ ಹೋದ ಓದುಗರ ಹೊಸ ರೀತಿಯ ಚರ್ಚೆಗಳ ಅರ್ಥಪೂರ್ಣ ಮಳೆಯಲ್ಲಿ ನೆಂದು ಹೊರಗೆ ಬಂದು ತಮ್ಮ ಕಣ್ಮನಸ್ಸುಗಳನ್ನು ಹೊಸ ಕ್ಷಿತಿಜಕ್ಕೆ ಹೊಂದಿಕೊಳ್ಳತೊಡಗಿದ್ದಾರೆ. ಈ ಪ್ರಕ್ರಿಯೆ ಓದುಗರ ಪ್ರಜ್ಞಾವಲಯವನ್ನು ವಿಸ್ತರಿಸುವಲ್ಲಿ ಪರಿಣಾಮಕಾರಿಯಾದ ಕಾರ್ಯವನ್ನು ನಿರ್ವಹಿಸುತ್ತಿದೆ. ರಾಜಾವಳಿ ಕಥೆ ಬಗೆಗೆ ನಡೆದ ಕುತೂಹಲಕರ ಚರ್ಚೆಗಳು, ಆದರಿಂದ ಹೊರಬಂದ ಹೊಸ ಕೃತಿಯ ಅಪರೂಪದ ಆಯಾಮ ಪ್ರಾಚೀನ ಕೃತಿಗಳನ್ನು ಮರು ಓದಿಗೆ ತೀವ್ರವಾಗಿ ಹಚ್ಚುವಲ್ಲಿ ನಡೆದ ಹೊಸ ಬಗೆಯ ಪ್ರಯತ್ನಗಳಾಗಿವೆ.

ದೇವಚಂದ್ರನ ರಾಜಾವಳಿ ಕಥೆ ಮೇಲ್ನೋಟಕ್ಕೆ ಕೇವಲ ಸಾಮಾನ್ಯ ಕತೆಗಳ ಗುಂಪನವೆಂದು ಕಂಡುಬಂದರೂ ಅದರ ಆಳಕ್ಕೆ ಇಳಿದಂತೆಲ್ಲ ವಿಸ್ತಾರಕ್ಕೆ ಈಜಿದಂತೆಲ್ಲ ಅದು ಹೊಮ್ಮಿಸುವ ವೈಚಾರಿಕ ಅಲೆಗಳು ನಮ್ಮನ್ನು ತನ್ನೊಳಗೆ ಸೆಳೆದುಕೊಳ್ಳುತ್ತವೆ. ೧೩ ಜನ ವಿದ್ವಾಂಸರು ೧೩ ಕೋನಗಳಿಂದ ಈ ಕೃತಿಯ ಅಂತರಂಗವನ್ನು ಪ್ರವೇಶ ಮಾಡಿದ ಕಾರಣದಿಂದ ಚಿಮ್ಮಿದ ಬಗೆ ಬಗೆಯ ಪ್ರತಿಕ್ರಿಯೆಗಳು ಸಾಹಿತ್ಯದ ನಿತ್ಯ ಜೀವಂತಿಕೆಯನ್ನು ಪ್ರಸ್ತುತಪಡಿಸುತ್ತವೆ. ಚಾಮರಾಜನಗರದಲ್ಲಿ ನಡೆದ ಈ ವಿಚಾರಸಂಕಿರಣ ವಿದ್ವಾಂಸರನ್ನು ಮಾತ್ರವಲ್ಲ ಹಳ್ಳಿಯ ಜನಪದರನ್ನು ಸಹ ತನ್ನ ಲವಲವಿಕೆಯ ಚರ್ಚೆಯಿಂದ ಬಹುವಾಗಿ ಆಕರ್ಷಿಸಿತು ಮಾತ್ರವಲ್ಲದೆ ಗುಪ್ತಗಾಮಿನಿಯಾಗಿದ್ದ ಕೃತಿಯ ಹಲವು ಅಲಕ್ಷಿತ ಸ್ತರಗಳನ್ನು ಮೇಲೆತ್ತಿ ತಂದಿತು. ಸಾಹಿತ್ಯ ಕೃತಿ ವಿವಿಧ ಕಾಲಮಾನದ ಜನರ ಅಂತಃಸತ್ವದೊಡನೆ ಮತ್ತು ಅಂತರ್‌ದೃಷ್ಟಿಯೊಡನೆ ನೇರವಾಗಿ ಬೆಳೆಯುತ್ತಾ ಹೋಗುತ್ತದೆ ಎಂಬುದನ್ನು ಹಾಗೂ ಸಾಹಿತ್ಯಾಸ್ವಾದನ ಕ್ರಿಯೆ ಒಣಗಿದ ಕೊರಡಲ್ಲ ಎಂಬುದನ್ನು ಪರಿಣಾಮಕಾರಿಯಾಗಿ ಬಿಂಬಿಸಿತು. ಆ ಚರ್ಚೆಗಳ ಸ್ವರೂಪವನ್ನು ಮತ್ತು ಅದು ಹೊರಚೆಲ್ಲಿದ ಅಂಶಗಳನ್ನು ಈ ಕೃತಿಯಲ್ಲಿ ಹಿಡಿದಿಡಲಾಗಿದೆ. ಇಲ್ಲಿ ಅನಾವರಣಗೊಂಡಿರುವ ವಿಷಯ ಮತ್ತು ವಿಚಾರಗಳು ಪರಂಪರಾಗತ ಓದುಗರಿಗೆ ಮಾತ್ರವಲ್ಲದೆ ನವೀನ ದೃಷ್ಟಿಯ ಓದುಗರಿಗೂ ಹೊಸ ಅನುಭವವೊಂದನ್ನು ತಂದುಕೊಡುತ್ತವೆಯೆಂದರೆ ಅತಿಶಯೋಕ್ತಿಯಾಗಲಾರದು. ಇಂತಹ ಸಾಂಸ್ಕೃತಿಕ ಮುಖಾಮುಖಿಯ ವಿಚಾರಸಂಕಿರಣಗಳನ್ನು ಏರ್ಪಡಿಸುತ್ತಾ, ಆ ಮೂಲಕ ಓದುಗರ ಗ್ರಹಿಕೆಯ ಕ್ಷಿತಿಜವನ್ನು ವಿಸ್ತರಿಸುತ್ತಾ, ಅವುಗಳೆಡೆಗೆ  ಕುತೂಹಲದಿಂದ ನೋಡುವ ಹೊಸ ದೃಷ್ಟಿಯನ್ನು ಉಂಟುಮಾಡುತ್ತಿರುವ ಕನ್ನಡ ಭಾಷೆ ಮತ್ತು ಸಾಹಿತ್ಯ ವಿಭಾಗದ ಮಿತ್ರರಿಗೆ, ಈ ಚರ್ಚೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡ ವಿದ್ವಾಂಸರಿಗೆ ನನ್ನ ಅಭಿನಂದನೆಗಳು ಸಲ್ಲುತ್ತವೆ. ಇಂತಹ ಕೃತಿಗಳ ಪ್ರಕಟಣೆ ಜಡ್ಡುಗಟ್ಟಿದ ಬುದ್ದಿಗೆ ಹೊಸ ಹರಿತವನ್ನು, ಮೊನೆಯನ್ನು ತಂದುಕೊಡಲಿ ಎಂದು ಆಶಿಸುತ್ತೇನೆ.

ಡಾ. ಎಚ್.ಜೆ. ಲಕ್ಕಪ್ಪಗೌಡ
ಕುಲಪತಿಗಳು