ಶ್ರೀ ಸುಜನಸ್ತುತ ಸಕಲ ಕ
ಳಾಸದನರ್ ಸುಗುಣಭೂಷಣರ್ ಸಂವಿಚಾರರ್
ಲೇಸೆಂದು ಬಗೆದು ಕೇಳ್ವುದು
ವೈಷಮ್ಯಮನುಳಿದು ಚಿತ್ತ ಸಂಶುದ್ಧಿಯೊಳಂ

ಇಂತು ವರ್ತಿಸುತ್ತಿರಲತ್ತ ಧೋರರಾಯಂ ಬೀಡಂ ನಿರ್ಮಿಸಿ ತನಗೆ ವಶಮಾದ ನಾಡುಗಳನಾಳುತ್ತಂ ದೋರಸಮುದ್ರಮೆಂದು ತಟಾಕಮಂ ಕಟ್ಟಿಸಿ ಧರ್ಮಚಂದ್ರನೆಂಬ ದ್ವಿಜಂ ಮಂತ್ರಿಯಾಗಲಾತನ ಮಗನುಪಾಧ್ಯಾಯನಾಗಿ ಮುನ್ನೂರ್ವರಂತೇವಾಸಿಗಳ್ಗೆ ಛಂದೋಲಂಕಾರ ವ್ಯಾಕರಣ ಕಾವ್ಯಾದಿಗಳಂ ಪೇಳುತ್ತೆ ಮಕ್ಕಳ್ಗಮತಿ ಪ್ರಕಾಶಕ್ಕೆ ಜ್ಯೋತಿಷ್ಮ ತಿತೈಲಮಂ ಮಾಡಿ ಕಂಡಿಕೆಯೊಳಿಟ್ಟು ಮಂದಮತಿಯಾಗಿರ್ದರ್ಗರೆ ಬಿಂದುಮಾತ್ರಮಂ ಕುಡುತ್ತುಮಿಪ್ಪುದುಂ ಕಂತಿಯೆಂಬ ಕೆಳದಿಯರಿಯದೆಯಾ ತೈಲಮೆಲ್ಲಮಂ ಸೇವಿಸಲುರಿಹತ್ತಿ ಬಾವಿಯೊಳ್ ಬಿಳ್ದೊಡಂ ಕಂಠಪ್ರಮಾಣ ನೀರೊಳ್ ನಿಂದುಂ ಜೀವಮುಳಿಯೆ ವಿದ್ಯಾವಿಶಾರದೆಯಾಗಿ ಕವಿತ್ವಮಂ ಪೇಳುತ್ತುಂ ಬಾವಿಯೊಳಿಪ್ಪುದುಂ ದೋರರಾಯನಾಸ್ಥಾನದ ಕನ್ನಡ ಸಂಸ್ಕೃತ ಮಹಾಕವಿಗಧಿಪಂ ಪಂಪಕವಿಯಂ ಕಳುಹಿಸಲಾತಂ ಬಂದು ವಿದ್ಯದಿಂ ಸಾವಿರ ಪ್ರಶ್ನೆಯಂ ಕೇಳಲುತ್ತರಮಂ ಕುಡಲಾಕೆಯಂ ರಾಜಸಭೆಗೆಯ್ದಿಸೆ ವಿದ್ವತ್ಸಮೂಹದೊಳಧಿಕ ಕವೀಶ್ವರಿಯಾರ್ಗಿದಳ್. ಹಂಪಕವೀಶ್ವರನಾದಿಪುರಾಣಮಂ ವಸ್ತುಕದಿಂ ಮಾಡಿ ಕನ್ನಡಕವಿಗಾದಿಯಾಗಿರ್ದನತ್ತ ಚೋಳದೇಶದೊಳಿರ್ದರಸುಳೊಳುಗೊಂಡೆ ಚೋಳರಾಜಂ ಕೊಂಕಣ ಕೊಂಗು ಮಲೆಯಾಳ ಲೀಲಾದ್ರಿ ಕರ್ಣಾಟ ಮೊದಲಾದ ದೇಶಮಂ ಸಾಧಿಸಿ ಕುಡುಗನಾಡ ಕುಡುಗುಲೂರಿಂಗೆ ತೆರಣಾಂಬಿಯೆಂಬನ್ವರ್ಥನಾಮವನಿಟ್ಟು ಲಂಬಕರ್ಣರಾಯನಾಳುತ್ತಿರ್ದನಾ ರಾಜ್ಯಮೆಲ್ಲಮಂ ವಶಂ ಮಾಡಿ ಮಿಶ್ರಪರಿಣಾಮನಾಗಿ ಪ್ರಜೆಗಳಂ ಚೆನ್ನಾಗಿ ಸಲಹುತ್ತಿರಲಂತಪ್ಪ ಚೋಳರ್ ಕ್ರಮದಿಂ ವೀರಪ್ರತಾಪರುಂ ಶಾಂತದೇವ ಭೂದೇವ ಭೀಮ ರುದ್ರ ಧರ್ಮ ಕಲಿಕಾಳಚೋಳರೆಂದು ನವಛೋಳರಾದವರಲ್ಲಿ ಮೂವರ್ ಜಿನಭಕ್ತರ್, ಇರ್ವರ್ ಶಿವಭಕ್ತರ್, ಇರ್ವರ್ ವಿಷ್ಣುಭಕ್ತರ್, ಮತ್ತೀರ್ವರ್ ಎಲ್ಲಾ ಮತಂಗಳಂ ಸಮನಾಗಿ ಕಂಡು ಒಂದರಲ್ಲಿಯು ಶ್ರದ್ಧೆಯುಲ್ಲದಿರ್ದರ್, ಧರ್ಮನೆಂಬ ಚೋಳರಾಜಂಗೆ ಜನ್ಮಾಂತರ‍ದ ಬ್ರಹ್ಮತ್ಯಂ ಬ್ರಹ್ಮಪಿಶಾಚಿಯಾಗಿ ಬಂದು ಆಹಾರಮಂ ಕೊಳ್ಳಲೀಸದೆ ನಿದ್ರೆಯಂ ಮಾಡದಂತು ಪಿಡಿದು ಬಾಧಿಸುತ್ತಿರಲ್ ತಾನಾಳುವ ದೇಶಂಗಳ ಗ್ರಾಮ ಗ್ರಾಮಂಗಳಲ್ಲಿ ತಪ್ಪದೆ ಜಿನಾಲಯ ಶಿವಾಲಯ ಕೆಲವು ವಿಷ್ಣುನಿಕೇತನಂಗಳಂ ಮಾಡಿಸಿ ತಾನುಂ ತನ್ನ ಮಂತ್ರಿಯಪ್ಪ ಕಾಳಿಂಗನೆಂಬಂ ಮೊದಲುಪ್ಪಾರರ ಹುಡುಗನಾಗಿಯು ಪರರ ಮನೆಯ ಕಸಮಂ ಪೊತ್ತು ಬಾಳುತ್ತಿರ್ದನ ಬುದ್ಧಿಗೆ ಮೆಚ್ಚಿ ಮಂತ್ರಿಪದವಿಯಂ ಕೊಟ್ಟರ್ದನಾತನಂ ವಿಚಾರದೊಳಿರಿಸಿ ಬ್ರಹ್ಮಹತ್ಯಮಂ ಪರಿಹರಿಸಲೋಸ್ಕರ ಗ್ರಾಮ ಗ್ರಾಮಂಗಳಲ್ಲಿಯ ದೇವತಾಪ್ರತಿಷ್ಟೆಗಳಂ ಮಾಡಿ ಕಲ್ಲುಗಾಣಮನಿಕ್ಕಿಸಿ ಎಲ್ಲ ದೇವರ್ಗಂ ಎಣ್ಣೆಮಜ್ಜನಂಗೆಯ್ಸಿಯಾ ಎಣ್ಣೆಯೊಳೆ ಅನ್ನಮನುಣ್ಣುತ್ತುಂ ಪನ್ನೆರಡುವರುಷಂಬರಂ ಚರಿಸಿ ಉತ್ತರದ ದೇವಪುರಮೆಂಬೂರ ಬಸದಿಗೆರಡು ಬಾಗಿಲ ರಚಿಸಿರ್ದೊಡಾ ಬಸದಿಯ ಮಹಾದ್ವಾರದಿಂದೊಳಗಂ ಪೊಕ್ಕೊಡಾ ಪಿಶಾಚಿ ತನ್ನ ಕ್ರಮದೊಳಾ ಬಾಗಿಲೊಳೆ ನಿಂದು ಬರವಂ ನೋಡುತ್ತುಮಲ್ಲಿಯೆ ನಿಲ್ವದುಮಾ ಪ್ರತಿಮೆಯಂ ಮಾಡಿಸಿಯಾ ಪ್ರದೇಶದೊಳ್ ಸ್ಥಾಪಿಸಿ ಪೂಜಿಸುತ್ತಿರ್ದರಿತ್ತ ಕಾಳಿಂಗರಾಯಂ ರಾಜ್ಯದೊಳ್ ನಿಂದತಿಪ್ರಬಲನಾಗಿ ಚೋಳರಾಯನಂ ಪಟ್ಟಣಮಂ ಪುಗದಂತು ಕಾಪುಮಾಡಿ ಸ್ವಯಮೇವ ಮೃಗೇಂದ್ರತಾ ಎಂಬಾಂತಾತನು ತನ್ನಿಂದಲೆ ಭೂಪತಿಯಾಗಿಪ್ಪುದುಮಾ ಪುರದೊಳೊರ್ವ ಶೆಟ್ಟಿ ಕಾಳೀಂಗರಾಯಂಗೆ ಮಿತ್ರನಾಗಿರಲ್ ಮಂತ್ರಿ ಪದಿವಿಯನಿತ್ತಂ. ಮತ್ತೊರ್ವ ವ್ಯಾಪಾರಿಗೆ ಶೆಟ್ಟಿಪಟ್ಟಮೆಂದು ಮುಖ್ಯಂ ಮಾಡಿ ಬಣಜಮೆಂದದು ಸಕಲ ಪದಾರ್ಥಂಗಳೊಳೊಂದುಳಿಯದೆಲ್ಲಮಂ ಕ್ರಯ ವಿಕ್ರಯಂ ಮಾಡಿಸುವುದಕ್ಕಧ್ಯಕ್ಷನಾಗಿ ರಲಾತನ ಕುಮಾರಿ ಪಂಚಾಳದ ಸಾಂಬಯ್ಯನೊಳ್ ಪುದುವಾಳುತ್ತಿರಲದಂ ಬಣಜಿಗರರಿದಾಕೆಯಂ ಕಳೆಯಲವಳ್ ಪಂಚಾಳದವನ ಮನೆಯೊಳೆ ನಿಲೆ ಕೋಪಿಸಿ ಕಾಳಿಂಗರಾಯಂಗರಿಕೆಯಂ ಮಾಡಲಾತನಂ ಪಿಡಿದು ಶಿಕ್ಷೆಯಂ ಮಾಡಿಸಲೆಂದಿಪ್ಪನ್ನೆಗಂ ಪಂಚಾಳರೆಲ್ಲಂ ಕೂಡಿ ನವರತ್ನಮಯದಿನನರ್ಘ್ಯಮಪ್ಪ ಕಿರೀಟಮಂ ಮಾಡಿ ಕಾಳಿಂಗರಾಯಂಗೊಪ್ಪಿಸೆ ರಾಯಂ ನೋಡಿ ಆತ್ಯಾಶ್ಚರ್ಯಮಾಗೆ ನಿನ್ನ ಮೆಚ್ಚಂ ಬೇಡೆಂಬುದುಂ ಸಾಂಬಯ್ಯಂ ಮರಳಿ ಬಂದರಿಕೆ ಮಾಡಿಕೊಳ್ಳುತ್ತೇನೆಂದಲ್ಲರೊಳಾಳೋಚಿಸಿ ಬಪ್ಪುದರೊಳೆ ಮಂತ್ರಿ ಆ ರತ್ನಮೌಲಿಯಂ ನೋಡಿ ರಾಯಂಗೆಂದನೀ ಪಂಚಾಳಂ ಬಹು ಮರ್ಮೊದ್ಘಾಟನೆಯಂ ಮಾಡಿದನೀ ಜಾತಿ ಬಹು ಕೆಟ್ಟಜಾತಿ ನೋಡಿದರೆ ಪಾಪ ಮುಂಡೆಯ ಮಗನಿಂ ನೀವು ಪೂರ್ವದೊಳ್ ಕಸಮಂ ಪೊರುತ್ತಿರ್ದ ಮರ್ಮಮನೆತ್ತಿ ಮೆಕ್ಕರಿಯ ಭಾವಮಂ ತೋರಿಸಿದ್ದಾನೆಯೆಂದು ಕಿರೀಟಮಂ ಹಿಂಭಾವಮಂ ತೋರಿಸಿದೊಡಾತಂ ಕೋಪಿಸಿಯಕ್ಕಸಾಲೆಯ ಕಣ್ಣಂ ಕೀಳಿಸಿ ಪಂಚಾಳದ ಜಾತಿಯವರೆಲ್ಲರ ಸರ್ವಸ್ವಮಂ ಕವರ್ತೆಗೊಂಬುದುಂ ಬಣಜಿಗರೆಲ್ಲಂ ಪಂಚಾಳದವರ ಮೇಲೆ ವೈರಮನೆತ್ತಿಕೊಂಡು ಹದಿನೆಂಟು ಬಣ್ಣಕ್ಕೆ ಹೊರಗೆಂದು ಮುನ್ನ ಪೊಲೆಯರತಿ ಬಲರಾಗಿರಲರಸಂ ಬ್ರಾಹ್ನಣರಿಗೆ ಸುವರ್ಣಮಯ ಗೋದಾನಮಂ ಮಾಡಲದಂ ಕೊಂಡುಪೋಪ ಸಮಯದೊಳ್ ಪೊಲೆಯರೆಲ್ಲಂ ಕೂಡಿ ಬಂದಾ ಗೋವು ತಮಗೆ ಸಲ್ವುದೆಂದಡ್ಡಂ ಬಂದಾ ಗೋವಂ ಪೊಲಗೇರಿಗೊಯ್ದಾ ಪೊಲೆಯರೆಲ್ಲ ಪಂಚುಗೊಂಡುದರಿಂದದರ ಕ್ರಯಂ ಪನ್ನೆರಡು ಸಾವಿರ ಪೊನ್ನಾದುದರಿಂ ಹೊಲೆಯರ್ ಪನ್ನೆರಡು ಸಾವಿರದವರೆಂದವರಂ ಬರಿಸಿ ನೀವು ಬಣ್ಣಕ್ಕೆ ಸಲ್ವರಾದುದರಿಂದ ನಿಮಗೆ ಬಿರಿದು ಬಂಕಂಗಳ್ ಸಲ್ವುಮೆಂದವರಿಂ ಪಂಚಾಳರಂ ಕೊಲಿಸಲೆಂದು ರಾಜಾಜ್ಞೆಗೆಯ್ಸಲ್ ಪಂಚಾಳರೆಲ್ಲಂ ಕಾಳಿಂಗರಾಯನ ದೇಶಮಂ ಬಿಟ್ಟೋಡಿ ಪೋಗಿ ಓರುಗಲ್ಲ ಪ್ರತಾಪ ರುದ್ರನ ದೇಶದೊಳೊಂದು ಪೂರಮಂ ಮಾಡಿಕೊಂಡಿರ್ದೊಮ್ಮೆ ಕೆಲಂಬರ್ ಭೈತ್ರಮನೇರಿಯಂತರದ್ವೀಪದೊಳ್ ಕೃತ್ರಿಮಬಾಣಪ್ರಯೋಗಮಂ ಕಲ್ತುಬಂದು ಚೋಳರಾಯಂ ರಾಜ್ಯಭ್ರಷ್ಟನಾಗಿಪ್ಪುದಂ ಕೇಳಬಂದು ಕಂಡು ನಿನ್ನಂ ರಾಜ್ಯದೊಳ್ ನಿಲಿಸುವೆನೆಂದಾರುಮರಿಯದಂತು ಮಾದಿಗರಂ ಬೆಸ್ತರಂ ಕೂಡಿಕೊಂಡು ಬೊಮ್ಮಲಾಟಮಂ ನಿರ್ಮಿಸಿ ಭಾರತ ರಾಮಾಯಣಮಂ ಆಟದೊಳೆ ಸಾಧಿಸುತ ಆ ರಾಜ್ಯದೊಳೆಲ್ಲಂ ಚರಿಸುತ್ತುಂ ಬಂದು ಕಾಳಿಂಗರಾಯನಂ ಕಂಡು ಬಹು ವಿದ್ವಾಂಸರೆಂದು ತಮ್ಮಾಟಪಾಟಂಗಳಂ ತೋರಿಸೆ ಮೆಚ್ಚಯವರ್ಗುಚಿತಂಗಳಂ ಕೊಡೆ ಪದಿನೆಂಟು ದಿವಸ ರಾಮ ರಾವಣ ಯುದ್ಧಮಂ ತೋರಿಸುತ್ತುಂ ಕಡೆಯ ದಿನದೊಳೆ ಕಡ್ಡುಪ್ಪು ಗಂಧಕ ಕರಿಗಳಿಂ ಮಾಡಿದ ಕ್ಷತ್ರಿಮ ಬಾಣದ ಗುಂಡುಗಳಿಂ ಕಾಳಿಂಗರಾಯನಮಾತನ ಮಂತ್ರಿ ಪ್ರಧಾನಿಗಳ್ ಸಹಿತಂ ಲೋಕಾಂತರಿತರಂಮಾಡಿ ಚೋಳರಾಯನಂ ರಾಜ್ಯದೊಳ್ ನಿಲಿಸಿ ಪಂಚಾಳದವರುಂ ತೊರೆಯರುಂ ಮಾದಿಗರುಂ ಕೂಟವಂ ಮಾಡಿ ಬಣಜಿಗರುಂ ಪೊಲೆಯರುಂ ಕೂಡಿ ಸಾಂಬಯ್ಯನ ಕುಲಸ್ತ್ರೀ ಮಗನ ಮದುವೆಯೊಳ್ ದಾಸಿಮಗನಂ ಪ್ರೇರಿಸಿ ಪೊಲೆ ಮಾದಿಗರ್ ಯುದ್ಧಂಗೆಯ್ದರೀ ಪ್ರಕಾರದೊಳೆ ನವಚೋಳರಾಳುತ್ತಿರ್ದರುವರೆಲ್ಲಮಂ ಸೋಮವಂಶಜರ್ ಸ್ವೇಚ್ಛಾಚಾರಿಗಳಾಗಿ ಕೆಲಕಲೆವು ದೇಶಂಗಳನಾಳಿದರ್.

ಇತ್ತಲ್ ಕರ್ಣಾಟಕದೊಳ್ ಜೈನಬ್ರಾಹ್ಮಣನೊರ್ವಂ ವಿದ್ಯಾನಂದನೆಂಬುವಂ ಯವ್ವನದೊಳೆ ಉಣಲುಮುಡಲುಂ ಪಡೆಯದತಿದರಿದ್ರನ ಕಡೆ ಚೋಳರಾಯಂ ಪಂಚಾಳದವನೆಸಗಿದ ಬೊಮ್ಮಲಾಟದೊಳ್ ಶೃಂಗಾರ ವೀರ ಕರುಣಾದ್ಭುತ ಹಾಸ್ಯ ಭಯಾನಕ ಬೀಭತ್ಸ ರೌದ್ರಮೆಂಬ ಎಂಟು ರಸಂಗಳಂ ತ್ರಿಮೂರ್ತಿಗಳ ಕಥೆ ತಜ್ಜಾತಿಗಳೊಳ್ ಸಂಪೂರ್ಣವಾಗಿ ರಚಿಸಿರ್ದೊಡಂ ಆ ಕಥೆಗಳೊಳ್ ಆಯಾಯ ಜಾತಿಗಳ ವೇಷಗಳಂ ತಂದು ಹಾಸ್ಯಕ್ಕೆ ಭಾಜನವಾಗೆ ಆಡಿಸುತ್ತಿರೆ ಒಮ್ಮೆ ಜೈನಸನ್ಯಾಸಿ ವೇಷಮಂ ತಪ್ಪುದುಂ ಹಾಸ್ಯಮಿಲ್ಲದಿರೆ ಅಲ್ಲಿ ಕೂಡಿರ್ದ ಜೈನರ್ ಲೋಚಂ ಮಾಳ್ವುದುಂ ಇನ್ನು ಮೇಲೆ ಈ ವೇಷಮಂ ತಪ್ಪುದಿಲ್ಲೆಂದು ಆ ವೇಷಮಣ ಬಿಟ್ಟರೆಂತದೊಡೆ.

ಶ್ಲೋಕ || ಕಷ್ಟಂ ಖಲು ಮೂರ್ಖತ್ವಂ ಕಷ್ಟಂ ಕಳು ಯೌವನೇಪಿ ದಾರಿದ್ಯ್ರಮ್
ಕಷ್ಟಾದಪಿ ಕಷ್ಟತರಂ ಪರಗೃಹವಾಸಃ ಪ್ರವಾಸಶ್ಚ ||
ಧನವಂತಮದಾತಾರಂ ದರಿದ್ರಮತಪಸ್ವಿನಮ್
ಕಂಠೇ ಬಧ್ವಾ ಶಿಲಾಂ ಗುರ್ವೀಂ ಸಿಂಧುಮಧ್ಯೇ ಏನಿಕ್ಷೀಪೇತ್ ||

ಎಂಬ ನೀತಿಯಂ ನೆನದು ಉತ್ತರ ಯಾತ್ರಯಂ ಮಾಡಿ ಅಲ್ಲಿ ದೀಕ್ಷೆಯಂ ಕೈಕೊಂಡು ಕುರುಜಾಂಗಣದೇಶಮನೆಯ್ದಿ ದೇಹದೊಳಗಣಶುಚಿಯಂ ಕಳೆಯಲ್ ಪೋಗುತ್ತುಮರೆಸಿಕೊಂಡಿರ್ದ ನಿಧಿಯಂ ಕಂಡಾ ಖಾರಿಯ ಮೆಲೆ ವಿಷ್ಠಿಸಿ ಪೋದೊಡೆಲ್ಲಿಗೆ ವಿದ್ಯಾದೇವರಾಯನೆಂಬ ಕ್ಷತ್ರಿಯಪುತ್ರಂ ಬಂದಾ ನಿಧಿಯಂ ತೆಗೆಯಲಲ್ಲಿರ್ದ ಯಕ್ಷಂ ಕಡಾರದ ಕಸವರಮುಂ ವಿದ್ಯಾನಂದಮುನಿಗಲ್ಲದೇವೆಲ್ಲೆಂದು ಪೇಳಲಾ ಯತೀಶ್ವರಂಗೆ ಶಿಷ್ಯತ್ವಮಂ ಪ್ರಕಟಿಸಿ ಉಪಾಯದಿಂ ಕರೆಯಲಾ ಯಕ್ಷಂ ಕಡಾರಂಗಳನೊಪ್ಪಿಸಲಾ ದೇವರಾಯನಾ ಯತಿಯಂ ನಿಧಿಯಂ ಪಡೆದಾ ಗಜಾರಣ್ಯದೊಳೆ ವಿದ್ಯಾನಗರಮಂ ಮಾಡಿಸಿ ಚತುರಂಗಬಲಮಂ ಪಡೆದು ರಾಜ್ಯಮಂ ಸಾಧಿಸಿ ಸದ್ಧರ್ಮದೋಜೆಯೊಳೆ ದಾನ ಪೂಜೆ ಶಿಕೋಪಾಸನಮೆಂಬ ಸಾಗಾರಧರ್ಮದಿಂ ಪನ್ನೊಂದು ವರುಷಂ ರಾಜ್ಯಮಂ ಪಾಲಿಸಿದನಂತರಂ ರಾಜಪರಮೇಶ್ವರನಾ ಪಟ್ಟಣದೊಳೆ ಪದಿಮೂರು ವರುಷ ರಾಜ್ಯಂಗೆಯ್ದನಲ್ಲಿಂದಿತ್ತ ಭೀಮರಾಯನುಂ ವಿರೂಪಾಕ್ಷರಾಯನುಂ ರಾಮದೇವರಾಯನುಂ ರಘುರಾಮದೇವನುಂ ವೀರಮಲ್ಲಿಕಾರ್ಜುನನುಂ ಲಕ್ಷಣ ದೇವರಾಯನುಮೆಂಬೀ ಕ್ಷತ್ರಿಯಪಟಲ ೮ಕ್ಕೆ ಶಕಾಬ್ದಂಗಳ್ ಒಂಬೈನೂರರುವತ್ತೆಂಟು ಪರ್ಯಂತರ ನಡೆದುದಿವರಲ್ಲಿ ಜಿನಸಮಯಿಗಳ್ ಮೂವರ್. ತತ್ಸಮಯದೊಳುದಾಸೀನರ್ ಮೂವರ್ ದ್ವೇಷಿಗಳೀರ್ವರಿಂತು ಕಳೆಯ ವೀರಪ್ರತಾಪಯ ಹಂಪರಾಯ ಪ್ರತಾಪರುದ್ರ ಇಮ್ಮಡಿರಾಮದೇವ ಕಂಪರಾಯ ರಾಮಚಂದ್ರ ಸಾಳುವ ಕಂಪಿಲ್ಲ ಕಂಪಿಲರಾಯರೆಂಬೀ ಕಿರಾತಪಟಲ ೮ಕ್ಕೆ ೨೫೩ ವರುಷಮಕ್ಕುಮಾ ವೀರಮಲ್ಲಿಕಾರ್ಜುನನಿಂ ಮೊದಲೆ ಕರ್ಣಾಟದೇದೊಳುತ್ಪಾತಂಗಳಾದವಾವೆನೆ ಭೌಮನಂ ದೈವಿಕಂಗಳೆಂಬ ಮೂರು ಭೇದಂಗಳೊಳ್ ಮನುಷ್ಯರ ಅನ್ಯಾಯ ಚರಿತಂ ಪಾಪಪ್ರವರ್ಧನದಿಂ ದೇವರೆಗಳ್ ಕೋಪಿಸಿ ಭಯಂಕರಮಾಗೆ – ಸ್ಥಾವರ ಜಂಗಮ ಭೇದಂಗಳಾಗೆಯಲ್ಲಿ ಮಹೋಲ್ಕಾಶನಿ ವಾತೇಂದ್ರ ಭಾಪ ಮೊದಲಾಗೆ ನಾಭಸಂಗಳ್ ದಿವ್ಯೋತ್ಪಾತಮೆಂಬ ಗ್ರಹತಾರಕದಿ ವಿವಧ ವಿಚಾರಂಗಳ್. ಬೃಹತ್ ಮಧ್ಯಲಘುಭೇಂದಿದಿಂ ಪ್ರತ್ಯೇಕಮಾ ಭೂಪತ ಘೋಷದಿ ವಿವರ ವವರ್ಣಮುನ್ನಗ್ನ ದುರ್ಗಂಧಂ ಮೊದಲಾಗೆ ಶಿಲೆಯೊಳ್ ಸಲಿಲಕಂಪ ಮೊದಲಾದ ವಿಕಾರಂ ಕಾಂಬುದು ದೇವತಾಪ್ರತಿಮೆಯೊಳ್ ತನ್ನಿಂದಲೆ ಛೇದ ಭೇದ ಸ್ವೇದಾದ್ಯುನ್ಮಜ್ಜನಿಮಜ್ಜನ ರೋದನ ಆಸ್ಪೋಟಕನಾಕ್ರೋಶ ಕಂಪನ ಹಸನಂಗಳುಂ ಅರಣ್ಯ ಮೃಗ ಪಕ್ಷಿ ವಿಕಾರೋತ್ಪತ್ತಿ ಗುರು ಮಂದಸಿತಾವ್ಯವಸ್ಥಿತಿ ಬಾಲನಕ್ಷತ್ರ ಧೂಮಕೇತು ಮೊದಲಾಗೆ ಹಗಲುಗತ್ತಲೆ ಆಕಾಶ ಧೂಮಧೂಳಿಕ್ಷೇಪ ದಿನಾನಕ್ಷತ್ರದರ್ಶನ ರಾತ್ರಿ ನಕ್ಷತ್ರಾನವಿ ಲೋಕನ ಶಲಭ ಕ್ರಿಮಿ ವ್ಯಾಪಕಸಂಚಾರ ಫಲಪುಷ್ಪ ಹಿರಣ್ಯಧೂಳಿ ರಕ್ತ ಅಗ್ನಿ ಮೊದಲಾದ ವೃಷ್ಟಿ ಮಹ್ಯ್ಸ ಮಂಡೂಕ ಮೃಗ ಸರ್ಪಾದಿಗಳ ವೃಷ್ಠಿಯಂ ಅಸ್ಥಿಮಾಂಸ ಲೋಹ ಪಾಷಾಣದಿ ವೃಷ್ಟಿ ಅಮೋಘವರ್ಷ ನಿರ್ಮಲಗಗನದ ಸೂರ್ಯ ಚಂದ್ರಚ್ಛಾಯಾ ಹಾನಿ ಶೀತೋಷ್ಣವ್ಯತ್ಯಯ ಲತಾವೃಕ್ಷವಿಪರ್ಯಯಂಗಳ್ ಫಲಪುಷ್ಪಾದಿ ವಿಪರ್ಯಯ ರಾತ್ರಿ ಸುರಚಾಪ ಆಕಾಶ ರೋದನಾದಿ ಶಬ್ದಂಗಳ್ ಉಷಃಕಾಲ ನಿರ್ಘಾತ ಗ್ರಹಯುದ್ಧ ಪಂಚ ಷಷ್ಠ ಸಪ್ತ ಗ್ರಹಯೋಗ ಪರಿವೇಷ ಪ್ರತಿಸೂರ್ಯ ಗಂಧರ್ವ ನಗರದರ್ಶನ ಪಿಂಗಳ ಪೋತ ಘೂಕಾದಿಗಳ್ ಗೃಹಗ್ರಾಮಂಗಳೊಳ್ ಧ್ವನಿ ಗೆಯ್ದುದುಂ ಉಟವೋತಿ ಕಾಕ ಶ್ವಾನಾದಿಗಳ್ ಗೃಹಂಗಳಂ ಪುಗುವುದುಂ ಶತಕಂ ಗ್ರಾಮಪ್ರವೇಶಂ ಮಾಳ್ವುದುಂ ಸರ್ಪ ಪಕ್ಷಿ ಸರಟಾದಿಗಳ್ ಗೃಹಂಗಳೊಳ್ ಗೂಡನಿಕ್ಕುವುದುಸ್ರೀಯರಕಾಲದೊಳ್ ವಿಕಾರಗರ್ಭದಿ ತ್ರಿವಿಕಾರ ಶಿಶುಗಳಂ ಪಡೆವುದುಂ.

ಇಂತಿವು ಮೊದಲಾದನೇಕ ಉತ್ಪಾತಂಗಳ್ ಪುಟ್ಟಿ ರಾಜ್ಯಕ್ಷೋಭಮಾಗೆ ಈ ದೇಶಕ್ಕೆ ಐದು ವರುಷ ದುರ್ಬಿಕ್ಷಮಪ್ಪುದೆಂದು ಸಂಗೀತಪುರ ಸಿದ್ಧ ಸಿಂಹಾಸನಾಧೀಶ್ವರ ಶ್ರೀಮದ್ವಿಜಯಕೀರ್ತಿಭಟ್ಟಾಕಲಂಕರ ಶಿಷ್ಯರ್ ಮುನಿಚಂದ್ರದೇವರ್ ಈ ದೇಶದ ಕ್ಷಾಮಮೈದು ವರ್ಷಂ ಕಳೆವನ್ನೆಗಮಿಲ್ಲಿ ಚಾರಿತ್ರಂಗೆಡುವುದರಿಂದುತ್ತರದೇಶಕ್ಕೆ ಜೈನ ಬ್ರಾಹ್ಮಣರ್ ಏಳುನೂರೆಪ್ಪತ್ತೈದು (೭೭೫) ಜನ ಕೆಲರು ಶ್ರಾವಕರ್ ಸಹಿತಮುತ್ತರ ದೇಶಕ್ಕೆ ವಿರೋಧಿಕೃತು ಸಂವತ್ಸರದ ಕಾರ್ತಿಕಮಾಸದೊಳ್ ಬಹುದೂರ ಯಾತ್ರೆ ಪೋಗೆ ಕೆಲರ್ ಕ್ಷತ್ರಿಯರ್ ೬೦ ಒಕ್ಕಲು ಪೋದರ್. ಮತ್ತಂ ಇಲ್ಲಿ ೧೮೫ ಒಕ್ಕಲು ಜೈನಬ್ರಾಹ್ಮಣರ್ ಅರಸುಗಳ್ ಶ್ರಾವಕರ್ ಸಹಿತ ಚೋಳದೇಶದಿಂ ಪಾಂಡ್ಯ ದೇಶಕ್ಕೆ ಪೋದರ್. ಕಡಿಮೆ ಬ್ರಾಹ್ಮಣರ್ ೭೦೦ ಒಕ್ಕಲು ಎಲ್ಲಿಗೂ ಪೋಗದೆ ಸ್ಥಳದಲ್ಲೇ ಇದ್ದು ದುರ್ಭಿಕ್ಷದೊಳೆ ಚಾರಿತ್ರಗೆಟ್ಟು ನಿಶಾಭೋಜನಾದಿಗಳಂ ಅಭಕ್ಷ್ಯಂಗಳಂಕೊಂಡು ಜೀವಿಸಿಕೊಂಡಿರ್ದರ್. ಸಿದ್ಧಾರ್ಥಿ ಸಂ, ಮಾಘಮಾಸದೊಳ್ ಮುನಿಚಂದ್ರದೇವರ್ ೫೦೦ ಜನ ಬ್ರಾಹ್ಮಣರ್,೧೦೦ ಜನ ಶ್ರಾವಕರ್ ಸಹಿತ ಸ್ಥಳಕ್ಕೆ ಬಂದರ್. ಕಡಿಮೆ ಹೋಗಿದ್ದ ಜನ ಅಲ್ಲಿದ್ದ ಜಿನಸಮಯ ಚಾತುರ್ವರ್ಣಂಗಳ್ ವಿಪರೀತ ಬ್ರಾಹ್ಮಣರ್ ಮೊದಲಾಗೆ ಅನ್ಯಮಂ ಪ್ರಕಟಿಸಿದರ್. ಸಾಂಖ್ಯ ಚಾರ್ವಾಕ ಯೌಗಮಿಮಾಂಸಾಕರಾದಿ ಒಂದೊಂದು ಮತದೊಳ್ ಪ್ರತ್ಯೇಕಂ ಅರವತ್ತನಾಲ್ಕು ಭೇದಂಗಳ್ ಪುಟ್ಟಿದರವರ ಪೆಸರಂ ಪ್ರತ್ಯಂತ್ರದೊಳ್ ನೋಡಿಕೊಂಬುದು.

ಕೆಲರ್ ಬ್ರಾಹ್ಮಣರ್ ರಾಯಶಬ್ದಮನಾಮಗೊಂಡು ರಾಜ್ಯಮನಾಳುವರ್. ಅರೆ ರಜಪುತ್ರ ಮರಾಟ ನಾಯಕ ಗೌಡರಾಜ ತೆಲುಗ ಸೆಕುಲಿಗ ಭಂಟ ಭಾರಜ ಮಲೆಯಾಳ ಲಾಳ ಮೊದಲಾದ ಜಾತಿಗಳ್ ಪುಟ್ಟಿ ವರ್ತಿಸಿದವು.ಜೈನದ್ವಿಜರೊಳ್ ಸ್ಥಾನಿಕರಾದರ್ ಕ್ಷತ್ರಿಯರೊಳ್ ಭೋಗಾರರ್ ಮೊದಲಾದವರಾಗಿ ವರ್ತಿಸುವರ್. ತುಳಿವರೊಳ್ ಕ್ಷತ್ರಿಯರ್ ಭಂಗರ್ ಚೌಡರ್ ಅಜಲರ್ ಸಾವಂತರ್ ಹೆಗ್ಗೆಡೆಗಳ್ ಒಂದು ಪೆಸರಾಗಲಿಂತು ಒಂದೊಂದು ಕಾರಣದಿಂ ಚಾತುರ್ವರ್ಣಗಳಂಗಳ್ ನಾನಾ ಬಗೆ ಪೆಸರಿಂದಂ ನಾನಾ ಜಾತಿಭೇಧದಿಂದಮುವೊಬ್ಬರೊಳೊಬ್ಬರ್ ವೈಷ್ಯಮ್ಯದಿಂ ವಿರೋಧಮುಮಾಗೆ ಬಾಳುತ್ತಿರ್ದರ್ ಇತ್ತಲ್ ಕುಂಭಕೋಣೆಯೊಳ್ ಜೈನಮತದೊಳ್ ೧೨ ಭೇದವಾಯಿತು. ಕಂಚಿ ಚೋಳದೇಶ ಕೇರಳದೇಶ ಪಾಂಡ್ಯದೇಶದೊಳೊಳುಪಾಧ್ಯಾಯರ್ ಪಂಡಿತರ್ ನೈಗಾರರೆಂಬ ಭೇದದಿಂ ಜೈನದ್ವಿಜರ್ ೫ ಭೇದವಾದರ್. ಕ್ಷತ್ರಿಯರ್ ಕೆಲರ್ ಈಶ್ವರ ಭಕ್ತರಾದರ್. ಕೆಲಂಬರ್ ವಿಷ್ಣುಭಕ್ತರಾದರ್. ವೈಶ್ಯರ್ ೧೪ ಭೇದವಾದರ್. ಕೊಂಗರೊಳ್ ೧೮ ಭೇದವಾಗಿ ನೆಡೆವರ್ ಮಲೆಯಾಳರ್ ೧೨ ತೆರನಾದರ್,ಪಾಂಡ್ಯದೇಶಮನಾಳ್ವ ದಕ್ಷಿಣ ಮಧುರೆಯೊಳ್ ವೀರಪಾಂಡ್ಯನ ಮಗಂ ಹರಿವಂಶ ಸಮ್ಯಕ್ತ್ವಸಂಪನ್ನನಾಗಿರ್ದು ಜಿನಧರ್ಮಪಾಲಕನಾಗಿರ್ದನಲ್ಲಿಗೆ ಬಸವಣ್ಣ ಸೃಷ್ಟಿ ಜಂಗಮರೆಯ್ತುಂದು ತದ್ವಿಷಯಕ್ಕೆ ಜ್ವರಾದಿ ರೋಗಂಗಳಂ ವ್ಯಭಿಚಾರಕರ್ಮದಿ ತೊಡಗಿಸಿ ತಚ್ಚಾಂತಿಹೇತುವಾಗೆ ಲಿಂಗ ವಿಭೂತಿ ರುದ್ರಾಕ್ಷಿಯಂ ಧರಿಸಿ ವೀರಶೈವಮಂ ಪ್ರಕಟಿಸಿ ಅಂಡಿಗಳ್ ಪ್ರಬಲಮಾಗೆ ಬಂದು ಕೂನಪಾಂಡ್ಯನಂ ಬೋಧಿಸೆ ಲಿಂಗಮಂ ಕಟ್ಟಿ ವೀರಶೈವದೊಳ್ ದೃಢಚಿತ್ತನಾಗಿ ತನ್ನ ಪುರಜನ ಪರಿಜನ ತಾನಾಳ್ವ ದೇಶದ ಚಾತುರ್ವರ್ಣಮೆಲ್ಲಕ್ಕಂ ಲಿಂಗಮಂ ಕಟ್ಟಿಸಿ ಬಲಾತ್ಕಾರದಿಂ ವೀರಶೈವರಂ ಮಾಡಿದ ನಂತರಂ ಜೈನವಿಪ್ರರಾದ ಗೋಪಾಚಾರ್ಯಂ ಗುಣಭದ್ರಯತೀಂದ್ರರಿಂ ರತ್ನತ್ರಯಾಲಂಕೃತನಾಗಿ ದೇವಾಗಮಸ್ತೋತ್ರ ವಿದೇಶಕರಣದ ಶ್ರೀವತ್ಸಗೋತ್ರದಾತನ ಕುಮಾರಂ ಮಲ್ಲಪಂಡಿತಂ ರಾಜಮಂತ್ರಿಯಾಗಿರ್ದೊಂದು ದಿನಸಮಾಸ್ಥಾನದಿಂ ಬಪ್ಪವಸರದೊಳ್ ಗಂಧಕರಿಯು ಮೇಲ್ವಾಯಲದರ ಎರಡು ಕೊಂಬನೆರಡು ಹಸ್ತದಿಂ ಪಿಡದುವುಂಕಿ ನೂಂಕಿದೊಡದು ಕಂಗೆಟ್ಟು ಗೋಳಿಟ್ಟು ಪೋಗಲಾತಂಗೆ ಹಸ್ತಿಮಲ್ಲಾಭಿಧಾನಮಾಗೆ ಗೃಹಸ್ಥಾಚಾರ್ಯನಾಗಿರ್ದು ಪಾರ್ಶ್ವಪಂಡಿತರ್ ಮೊದಲಾದ ಪುತ್ರರಂ ಪಡೆದುಭಯಭಾಷಾ ಕವಿಚಕ್ರವರ್ತಿಯೆನಿಸಿರ್ದು ಸಂಸಾರಭೋಗನಿರ್ವೇಗದಿಂ ಜಿನದೇಕ್ಷೆಯಂ ಕೈಗೊಂಡು ಸರಸ್ವತಿ ಜ್ಚಾಲಿನಿ ಪದ್ಮಾವತಿ ಕಾಮಚಾಂಡಾಲಿ ಮೊದಲಾದ ದೇವತೆಗಳ್ ಪ್ರತ್ಯಕ್ಷ ಮಾಗೆಯಲ್ಲಿ ದ್ವಾದಶಗೋತ್ರದ ವಿಪ್ರರೈವತ್ತು ಒಕ್ಕಲಿರ್ದಡವರೆಲ್ಲರಂ ಕೂನಪಾಂಡ್ಯಂ ಬರಿಸಿ ಲಿಂಗಮಂ ಕಟ್ಟಿಮೆನಲವರೊಡಂಬಡದಿರೆ ಜಂಗಮ ರಾಂಡಿಗಳ್ ಮಾಡಿದ ಕೃತ್ರಿಮಂ ಸೇರದಿರಲಾ ದ್ವಿಜರೆಲ್ಲರಂ ಕುಟುಂಬಸಮೇತಂ ಕೊಲೆಲೆಂದು ಚಂದಿರಾದ್ರಿಯೊಳೆಲ್ಲರಂ ಕಾವಲಿರಿಸೆ ಶಾಸನದೇವಿಯನಾರಾಧಿಸಿ ಅರ್ಘ್ಯ ಪಾದ್ಯಮಂ ಕೊಟ್ಟೊಡಾ ದೇವತೆಗಳ್ ಪ್ರಸನ್ನರಾಗಲದಂ ಕಾವಲಪರ್ ಕಂಡು ಭಯಂಗೊಳೆ ಮರುದಿವಸ ರಾತ್ರಿಯೊಳಾ ಪರ್ವತಂ ಪಾಂಡ್ಯನ ದೇಶದಿಂ ದ್ವಾದಶ ಯೋಜನಮಂ ಬಿಟ್ಟು ಕೇರಳದೇಶದೊಳ್ ಬಂದು ನಿಲೆ ಹಸ್ತಿಮಲ್ಲಿಷೇಣಾಚಾರ್ಯರ್ ದ್ವಾದಶಗೋತ್ರದ ವಿಪ್ರರೈವತ್ತೊಕ್ಕಲು ಸಮೇತಂ ವಿಜಯಮಂಗಲಮೆಂಬ ಪಟ್ಟಣಮಂ ಪೊಕ್ಕಿರಲ್

ಇತ್ತ ಮಧುರಾಪುರದೊಳ್ ಕೂನಪಾಂಡ್ಯ ಜಿನಧರ್ಮದ್ವೇಷಿಯಾಗಿ ತನ್ನ ದೇಶದೊಳಿರ್ದ ಚೈತ್ಯಾಲಯಂಗಳ್ ೯೮೫ನ್ನು ತೆಗೆಯಿಸಿ ಮಧುರೆಯೊಳ್ ೫೦ ಬಸದಿಗಳಂ ತೆಗೆಯಿಸಿ ಪಾಂಡ್ಯವಂಶಕುಲಸ್ವಾಮಿಯಪ್ಪ ನೇಮೀಶ್ವರ ಮಹಾಚೈತ್ಯಾಲಯದೊಳ್ ಮೂಲಸ್ವಾಮಿಯಂ ಮರಸಿ ಕೂಷ್ಮಾಂಡಿದೇವಿಪ್ರತಿಮೆಗೆ ಮೀನಾಕ್ಷೀಯೆಂಬ ನಾಮಮಂ ಪ್ರಕಟಿಸಿ ಇರಿಸಿದರಲ್ಲಿರ್ದ ಜಿನಮುನಿಗಳಂ ವಧಿಯಿಸೆ ಆ ದೇಶದೊಳಿಪ್ಪ ಅಂಡಿಗಳೆಲ್ಲಂ ಜೈನದ್ವೇಷಿಗಳಾಗಿ ಕ್ರೋಧದಿಂ ಶ್ರವಣಶೂಲದ ಹಬ್ಬಮೆಂದು ಮರೆಯಿಸಿ ವರುಷಂಪ್ರತಿ ನಡೆಸುತ್ತಿರ್ದರ್

ಇತ್ತ ಸ್ಮಾರ್ತಬ್ರಾಹ್ಮಣಂ ಶಂಕರಾಚಾರ್ಯಂ ಜೈನೋಪಾಧ್ಯಾಯರೆಲ್ಲ ವಿದ್ಯಾಭ್ಯಾಸಂ ಮಾಡಿ ವೇದ ವೇದಾಂಗಾದಿ ಸಕಲ ಶಾಸ್ತ್ರಪ್ರವೀಣನಾಗಿ ಜೈನೋಪಾಧ್ಯಾಯರೆಲ್ಲ ವಿದ್ಯಾಭ್ಯಾಸಂ ಮಾಡಿ ವೇದ ವೇದಾಂಗಾದಿ ಸಕಲ ಶಾಸ್ತ್ರಪ್ರವೀಣನಾಗಿ ದೇವತಾಪ್ರಸನ್ನತೆವಡೆದು ಶುದ್ಧ ಶೈವಾಚಾರ ಪ್ರವರ್ಧಮಾನನಾಗಿ ಶೃಂಗೇರಿ ಬಸದಿಯೊಳ್ ಮುನ್ನಿರ್ದ ಬಿಂಬಮಂ ಪೂಜಿಸಿ ಸರಸ್ವತಿಯೆಂದು ನಿಲಿಸಿ ಜಿನಪ್ರತಿಮೆಯಂ ಮರಸಿ ಅಲ್ಲಿ ಮಠಮಂ ನಿರ್ಮಿಸಿ ಮಹಾಭಾಷ್ಯಂ ಮೊಲಾಗನೇಕ ಗ್ರಂಥಕರ್ತೃವಾಗಿ ಬಹುಜನಂಗಳಂ ಶಿಷ್ಯರಂ ಮಾಡಿಕೊಂಡು ಪ್ರಸಿದ್ಧಿವಡೆಯಲಾ ಕಾಲದೊಳೆ ಕಾಶಿಪಟ್ಟನದೊಳೆ ವಾಳವಿಭುವೆಂಬ ರಸಂ ಮಿಥ್ಯಮಂ ಪೊರ್ದಿವಿಪರೀತಗ್ರಾಹಿಗಳಪ್ಪ ಅನೇಕ ಬ್ರಾಹ್ಮಣರ್ವೆರಸಿ ಯಜ್ಞಮಂ ಮಾಡಿಸಿ ಬಹುವಿಧ ದಾನಂಗಳಂ ಕೊಟ್ಟು ಕಾಳಭೈರವನಂ ಪ್ರತಿಷ್ಠೆಗೆಯ್ದು ಅಲ್ಲಿರ್ಪ ನದಿಯನಿದು ಮಹಾಗಂಗಾನದಿಯೆಂದು ಕೊಂಡಾಡೆ ಪ್ರಸಿದ್ಧಿಯಾಗೆ ನಾನಾ ದೇಶಂಗಳ ಬ್ರಾಹ್ಮಣರೆಲ್ಲಂ ಬಂದು ತನ್ನದೀಸ್ನಾನಂಗೈದುಮಿಪ್ಪಿನಲ್ಲಿಪ್ಪ ದ್ವಿಜರ್ ಬೇರೊಂದು ಮಹಾನದಿಯಿಪ್ಪುದೆಂದೈನೂರ್ವರ್ ವಿಪ್ರಮಂ ಕರೆದೊಯ್ದು ಮತ್ತೊಂದು ತೊರೆಯ ಮಹಾಮಡುವಿನಳವರ್ಗಪಾಯಮಂ ಮಾಡಿಯವರೊಳಿರ್ದ ವಸ್ತುಗಳನಪಹರಿಸಿ ಕಾಶಿಗಂಗಾಸ್ನಾನಮಾತ್ರಾದಿಂದಾಗಲೆ ಬ್ರಾಹ್ಮಣರೆಲ್ಲಂ ಸ್ವರ್ಗಮಂ ಪಡೆದರೆಂಬ ವಾರ್ತೆಯಂ ಪುಟ್ಟಿಸೆ ನಾನಾ ದೇಶದ ವಿಪ್ರರ ಪುತ್ರ ಪೌತ್ರಾದಿಗಳೈದೆ ಬಂದು ತಂತಮ್ಮ ಪಿತೃಗಳ್ಗೆ ದಶಕರ್ಮಮಂ ಮಾಡಿ ಅವರ್ ಗತವಾದ ಬಳಿಯಲ್ಲಿ ಪಿಂಡಪ್ರದಾನಮಂ ಮಾಡಿದರ್. ಆ ಪ್ರದೇಶಕ್ಕೆ ಗಯಯೆಂಬ ಪೆಸರಾಯ್ತಲ್ಲಿ ಬಪ್ಪ ದ್ವಿಜರ್ಗೆ ಗಯಾವಾಳರೆಂಬ ಹೆಸರಾಗೆ ಕಾಶಿ ಗಯಾಮಹಾತ್ಮೆಯ ಪುರಾಣಮಂ ರಚಿಸಿದಲ್ಲಿಂದಾ ಗಂಗಾಜಲಮಂ ತಂದು ಮುನ್ನ ರಾಮಸ್ವಾಮಿ ಲಂಕೆಗೆತ್ತಿ ಬೀಡಂಬಿಟ್ಟಿರ್ದ ಭೂಮಿಯೊಳ್ ರಾಮೇಶ್ವರನೆಂದು ಲಿಂಗಸ್ಥಾಪನೆಗೆಯ್ದು ಗಂಗಾಜಲದಿಂದಭಿಷೇಕಂಗೆಯ್ದು ತೆಂಕಣ ಸಮುದ್ರಸ್ನಾನಮಂ ಮಾಡಿಬಂದರ್, ಒಬ್ಬ ಬ್ರಾಹ್ಮಣನು ವೇದಮಂ ಸಾಂಗಾಧ್ಯಯನಂಗೆಯ್ದು ಏಕವಿಂಶತಿ ಯಜ್ಞಮಂ ಮಾಡಿ ಕಾಶಿಗಂಗೆಯೊಳ್ ಸ್ನಾನಮಂ ಮಾಳ್ವಾಗಲೊಂದು ವೃದ್ಧ ಗೋವು ದರ್ಭೆಯಂ ತಿನ್ನಲೆಂದು ಬರಲೊಂದು ಕಲ್ಲನಿಟ್ಟೊಡದು ಸುಳಿಯಂ ತಾಗಿದಾಗಲೆ ಸಾಯ್ದುದುಂ ಬ್ರಾಹ್ಮಣಂ ಸ್ನಾನಾರ್ಥದಿಂ ಮಡಂವಿನೊಳ್ ಮುಳುಗಲೊಂದು ಮಕರಂ ಬಂದು ಕಚ್ಚಲದೆ ವ್ರಣಮಾಗೆ ಕ್ರಿಮಿಯಾಗಲನೇಕ ದಿವಸ ತೀವ್ರ ವೇದನೆಯಿಂ ನಮೆದು ಸಾಯೆ ಗೋಹತ್ಯೆಫಲದಿಂದಾತಂಗೆ ನರಕಮಾದುದೆಂದವನ ಉತ್ತರಕ್ರಿಯೆಯಂ ಮಾಡದೆ ಬಿಟ್ಟರ್. ಮತ್ತೊಬ್ಬ ಬ್ರಾಹ್ಮಣಂ ವೇದ ಶಬ್ದ ತರ್ಕಾದಿ ಸಕಲ ಶಾಸ್ತ್ರಮಂ ಕಲ್ತು ಮಹಾಕವಿಯಾಗಿಯಂ ವ್ಯಸನ ಲೋಲುಪ್ತನಾಗಿ ಮಾಂಸಪ್ರಿಯನಾಗಿ

ಶ್ಲೋಕ || ಅವ್ರಣೇ ಮೃಗಶಾಬಸ್ಯ ಪ್ರತ್ಯಕ್ಷಂ ಮೃಗದರ್ಶನೇ
ತಕ್ಷಣಂ ಬಾಧಯೇತ್ಪುಣ್ಯಂ ತ್ಯಕ್ತಂ ಚೇನ್ನರಕಂ ವ್ರಜೇತ್ ||

ಎಂಬ ಸೂತ್ರಾದಿಗಳಂ ಮಾಡಿದಂ ಮದ್ಯಪಾನದೊಳತ್ಯಾಸಕ್ತನಾಗಿ ಘಟಪೂಜೆಯಂ ನಿರ್ಮಿಸಿ “ಮಂತ್ರಪೂತಂ ಸುರಾಸೇವ್ಯಂ” ಎಂದುಂ ಸುರಪಾನಮಂ ಮಾಡಿ “ಆಪತ್ಕಾಲೇ ನಾಸ್ತಿಮರ್ಯಾದಾ” ಎಂದು ಬಟ್ಟೆಬಡಿಕನಾಗಿ ಗಂಡಕಿಯೆಂಬ ಸೂಳೆಯೊಳತ್ಯಾಸಕ್ತನಾಗಿ

ಶ್ಲೋಕ ||ವೇಶ್ಯಾನಾಂ ದರ್ಶನಂ ಪುಣ್ಯಂ ಸ್ವರ್ಶನಂ ಪಾಪನಾಶನಮ್
ಚುಂಬನಂ ಸರ್ವ ತೀರ್ಥಂ ಸ್ಯಾನ್ಮೈಥುನಂ ಮೋಕ್ಷಸಾಧನಮ್ ||
ನದೀತೀರೇ ವಟೇ ವೃಕ್ಷೇ ಬಾಲರಂಡಾಂ ರಜಸ್ವಲಾಮ್
ಬಲಾತ್ಕಾರೇಣ ಗೃಹ್ಣೀಯಾತ್ಕೋಟಿ ಯಜ್ಞಪಲಂ ಭವೇತ್ ||

ಎಂದು ಪೇಳ್ವುದು ಇಂತಪ್ಪ ಪಾಪಸೂತ್ರಮೇನೆಂಬುದುಂ ಗಂಡಕೀನದಿಯೆಂದು ಕಲ್ಪಿಸಿದರ್. ಮತ್ತಮಾ ದ್ವಿಜಂ ಚಾಂಡಾಲಸ್ತ್ರೀಸಂಪರ್ಕಮಂ ಮಾಡಿ ಕೇಳ್ವುದುಂ.

ಶ್ಲೋಕ || ಖಾದನ್ಮಾಂಸಂ ಪಿಬೇನ್ಯದ್ಯಂ ಸಂಗಚ್ಛನ್ನಂತ್ಯಜಾಮಪಿ
ಸದ್ಯೋ ಭವತಿ ಪೂತಾತ್ಮಾ ಕರ್ಣೇ ತುಲಸಿಧಾರಣಾತ್ ||

ಎಂದು ತುಲಸಿಯಂ ಧರಿಸಿ ಕವೀಶ್ವರನಾಡಿದ ಮಾತಿಂಗೆ ಪ್ರತ್ಯುತ್ತರಮಿಲ್ಲೆಂದಾತನಂ ಯೋಗ್ಯಬ್ರಾಹ್ಮಣನೆಂದು ಕೊಂಡಾಡಿದರ್.

ಇತ್ತ ದೀಪಂಗುಡಿ ಚೋಳದೇಶ ಪಾಂಡ್ಯದೇಶದಿಂ ಬಂದ ಹಸ್ತಿಮಲ್ಲಿಷೇಣಾಚಾರ್ಯರುಂ ತತ್ಯಿಷ್ಯರಪ್ಪ ಪಾರ್ಶ್ವಪಂಡಿತ ಲೋಕಪಾಲಾರ್ಯಂ ಮೊದಲಾದ ದ್ವಾದಶ ಗೋತ್ರದ ಜೈನವಿಪ್ರಮಹಾಜನಂಗಳೊಳ್ ಮೂರು ಗೋತ್ರದವರ್ ಜಾಂಗಲದೇಶಂಗಳೊಳೆ ನಿಂದರ್. ಒಂಬತ್ತು ಗೋತ್ರದವರ್ ಕರ್ಣಾಟಕದೇಶಕ್ಕೆ ಬಂದು ಅರಿಕುಠಾರದೊಳ್ ನಿಂತಲ್ಲಿಂ ಬಂದು ಹೊಯ್ಸಳದೇಶಾಧಿಪತಿ ಬಲ್ಲಳರಾಯನಿಂ ಮಾನ್ಯರಾಗಿ ಮಂತ್ರಿಯಗಳಾಗಿಯುಂ ಕರಣೀಯರಾಗಿಯುಂ ಉಪಾಧ್ಯಾಯರಾಗಿಯುಂ ಜ್ಯೋತಿಷ ಮೊದಲಾದ ಯೋಗ್ಯವೃತ್ತಿಯೊಳೊಂದೊಂದು ಗ್ರಾಮಮಂ ನೆಲೆಮಾಡಿಕೊಂಡು ಪ್ರಾಕು ಈ ಸ್ಥಳದೊಳಿರ್ದ ೭೦೦ ಒಕ್ಕಲು ಜೈನದ್ವಿಜರಂ ನೀಮುಂ ದುರ್ಭಿಕ್ಷದೊಳ್ ಚಾರಿತ್ರಗೆಟ್ಟು ರಾತ್ರಿಭೋಜನಂ ಮೊದಲಾದ ಭಕ್ಷಂಗಳಂ ಸೇವಿಸಿದುದರಿಂ ಪ್ರಾಯಶ್ಚಿತ್ತಂಗೊಂಡಲ್ಲದೆ ಭೋಜನ ಪ್ರತೊಭೋಜನಮಾಗದೆಂದು ಪೇಳ್ದೊಡೆ ದೇಶಭ್ರಷ್ಟರಾಗಿ ಬಂದವರ್ ನಿಮಗೆ ಪ್ರಾಯಶ್ಚಿತ್ತವಲ್ಲದೆ ನಮಗೇಕೆಂದು ೫೧೫ ಒಕ್ಕಲು ದ್ವೇಷಮಂ ಮಾಡಿ ಬೇರೆ ನಿಂತರ್. ಉಳಿದ ೧೮೫ ಒಕ್ಕಲೊಳ್ ಪಡುವಸೀಮೆ ಮಲಯಾಳ ತುಳುವ ರಾಜ್ಯ ಮೂಡದೇಶದವರ್ ಜೈನಾಚಾರಮಂ ಬಿಡದೆ ಇದ್ದರು. ಕರ್ಣಾಟ ಗೇರೆಸೊಪ್ಪೆ ಬಟ್ಟಕಳ ಮುಂತಾದ ದೇಶದವರೆಲ್ಲ ಪ್ರಾಯಶ್ಚಿತ್ತವಿಧಿಯಂ ಶುದ್ಧರಾಗಿ ಏಕವಾಗಿರಲಾ ಕಾಲದೊಳ್ ಹೊಯಿಸಳವಿಷಯದ ಶಾಲಿಗ್ರಾಮದೊಳ್ ಬ್ರಾಹ್ಮಣರ್ ಯಜ್ಞಮಂ ಮಾಡಲೆಂದು ಯಜ್ಞಶಾಲೆಯಂ ಮಾಡಿಸಿ ಯಜ್ಞಕ್ಕೆ ಯೋಗ್ಯವಾಗಿ ಲಕ್ಷಣವುಳ್ಳ ಸ್ಥೂಲವಾದ ಇಪ್ಪತ್ತೊಂದು (೨೧) ಮೇಕೆಯಂ ತರಿಸಿ ಕುಲಾಲನಿಂ ಮೇಯಿಸುತ್ತಿಪ್ಪುದುಮೊಂದುದಿನಮಾ ಏಕವಿಂಶತಿ ಪೋತುಗಳ್ ಜಿನಾಲಯಮಂ ಪುಗುವುದುಂ ಕುಂಭಕಾರಂ ಬಂದು ಪೊಡೆದಟ್ಟುವುದುಂ ಗಾಂಧಾರಸ್ವರದಿಂ ಗೋಳಿಡುತ್ತುಂ ಪೋಗದೆ ತಿರುಗಿ ಶರಣ್ಬೊಗುವವಂ ಕಂಡು ಅಲ್ಲಿರ್ದ ಧರ್ಮಾಚಾರ್ಯರೆಂಬ ಋಷಿಗಳ್ ದ್ವಿಜರ್ ಸಹಾ ಆ ಮೇಕೆಗಳಂ ಬಿಡುದಿಪ್ಪುದುಂ ಸೋಮಯಾಜಿಗಳ್ ವೇಂದಾತಿಗಳೆಲ್ಲಂ ಬಂದು ಜೈನರಂ ನಿಕೃಷ್ಟಮಾಗೆ ನಿಂದಿಸುತ್ತುಂ ಮೇಕೆಗಳಂ ಕೊಳ್ಳಲೆಂದು ಗರ್ಜಿಸೆ ಕ್ಷಮೆಗೊಂಡು ವಿರುದ್ಧಾಃ ಕಿಂ ನ ಜಲ್ಪಂತಿ ಎಂಬುದರಿಂ ಕ್ರೋಧಾಗ್ನಿ ಸಂತಪ್ತರಾಗಿ ನುಡಿದರೇನಾಯ್ತು ನೀವು ಪಶುಗಳಂ ಕೊಂದು ನರಕಾದಿ ದುರ್ಗತಿಯೊಳ್ ಬಸವಳಿದು ನೋಯದೆ ಪುಣ್ಯ ವಿಘ್ನಮಪ್ಪ ಪಾಪಯಜ್ಞಮುಮಂ ಬಿಟ್ಟು ಕಳೆವುದೆಂಬ ಜೈನರ್ ಮಾತಿಂಗೆ ಕೋಪಿಸಿ ರಾಜಾದಿತ್ಯ ರಾಜಸಭೆಗೊಯ್ದು ರಾರಾಜಾಜ್ಞೆಯಿಂದುದ್ಯಾನವನದೊಳ್ ಧರ್ಮಾಧಿಕರಣರ ಮಧ್ಯದೊಳ್ ಸ್ಮಾರ್ತರ್ಗಂ ಜೈನರ್ಗಂ ಸಂವಾದಮಾಗೆ ಪ್ರಮಾಣಪರೀಕ್ಷಾ ಪ್ರಮಾಣ ನಿರ್ಣಯ ಸ್ಯಾದ್ವಾದಮಂಜರಿ ಮೊದಲಾದ ಗ್ರಂಥಮಂ ಸವಿಸ್ತರಂ ಪೇಳ್ದು ಪ್ರಾಣಿವಧೆಯಂ ಧರ್ಮಮುಂಟೆಂದು ಮಾಡಿರ್ದ ಶಾಸ್ತ್ರಮಂ ನಿರಾಕರಿಸಿ ಜೀವಹಿಂಸೆಯಿಂ ಪುಣ್ಯಮುಂಟೆಂಬ ಪಾಪಸೂತ್ರಧಾರಿಗಳುಂ ಕರ್ಮಚಾಂಡಾಲರುಂ ದುರಾತ್ಮರುಂ ಜಡರುಂ ಮಾಯಾವಿಗಳುಂ ಲೋಭಿಗಳುಂ ರಾಗದ್ವೇಷಮಲೀಮಸ ಮಾನಸರುಂ ದುರ್ಗತಿ ಸಾಧನರುಂ ಪಾಪಿಷ್ಠರಲ್ಲದೆ ಬ್ರಾಹ್ಮಣರಲ್ಲವೆಂದವರ ಗರ್ವಪರ್ವತಮಂ ವಾಗ್ವಜ್ರದಿಂ ಚೂರ್ಣೀಕೃತಂ ಮಾಳ್ವಗಲಾ ಜೀಯನ ಸಮೀಪದ ವೃಕ್ಷಮನೇರಿ ನೋಡಿತ್ತಿರ್ದ ಐನೂರಹದಿನೈದು ಒಕ್ಕಲೊಳ್ ಕೆಲಂಬರ್ ವೃಕ್ಷಾರೂಢರವರ್ ತಸ್ಯರೆನೆ ಜೈನರೆ ಜಯವಾದಿಗಳಾದವರವರೊಳೆ ಕೂಡಲ್ ಬನ್ನಿಮೆಂದು ಮರದ ಮೇಲಿರ್ದವರೊಳೆ ಕೆಲರ್ ಕೆಲಂಬರ್ ಕೈಯಂ ಪಿಡಿದೆಳೆವುದುಮವರೊಪ್ಪದೆ ಕರೆದರಂ ನೂಂಕುವುದುಂ ದ್ವಿ ತ್ರಿ ಪುರುಷರ್ ವೃಕ್ಷೋಪರಿಯಿಂ ಭೂಮಿಗಧಃಪಾತವಾಗಿ ಕಾಲಂಗಂಡರ್.ಉಳಿದೆಲ್ಲರಂ ಪೋಗಿ ರಾತ್ರಿಭೋಜನಪ್ರೀತರಾಗಿ ಶಂಕರಾಚಾರ್ಯರ ಶಿಷ್ಯರಾಗಿ ಐನೂರಪದಿನೈದು ಒಕ್ಕಲ್ ಹಳಗನ್ನಡಿಗರ್ ತಸ್ಯರು ಮಾರಕರೆಂಬ ಶಬ್ದಮಾಗೆ ಸ್ಮಾರ್ತರಿಂದಲೆ ಗರ್ಭಾದಾನಾದಿ ಕ್ರಿಯೆಯಂ ಮಾಡಿಸಿಕೊಳ್ಳುತ್ತುಂ ಗ್ರಾಮಾಧಿಪತ್ಯ ಶಾನಭೋಗರಾಗಿರ್ದವರೊಳೆ ವಿರುದ್ಧಮಾಗಿ ಸ್ಥಾನವಿಶೇಷದಿಂ ಮೂರು ಭೇದದಿಂ ಮೂಗೂರು ಸೋಸಲೆ ಬಂಡಹಳ್ಳಿಯ ಪೈಕಮೆಂದಾದರ್. ವೇಂದಾತಿ ಬ್ರಾಹ್ಮಣರೊಳ್ ಕೆಲಂಬರ್ ಪಶುವಧೆಗೆ ಭೀತರಾಗಿ ಪಿಷ್ಟಪಶುವಂ ಮಾಡಿಕೊಂಡರ್. ಜೈನಬ್ರಾಹ್ಮಣರ್ ಏಕವಿಂಶತಿ ಬಸ್ತಂಗಳಂ ಸಲಹಿ ಸಮ್ಯಕ್ತೈಮಂ ಕೈಕೊಳಿಸಿದರ್.

ವೃ ||     ವಿಪ್ರಾ ಮಂತ್ರಪದೇನ ಬಸ್ತನಿಕರಾನ್ ಹತ್ವಾ ಯಥೇಚ್ಛಂ ಕಿಲ
ಯಜ್ಞೇ ಸಂಪ್ರತಿ ಭಕ್ಷಯಂತಿ ನಿಖಿಲಾನ್ ಮತ್ವೇತಿ ಬಸ್ತಾಃ ಪುನಃ
ಶೀಘ್ರಂ ತೇ ಜಿನಮಂದಿರಂ ಚ ಶರಣಂ ಯಾತಾಸ್ತದಾ ರಕ್ಷಣಂ
ಬಸ್ತಾನಾಂ ಪರಿರಕ್ಷಣಾಜ್ಜಗತಿ ಭೋ ಬಸ್ತೀತಿ ಭಂಭಣ್ಯತೇ

ಎಂದು ಜಿನವಸತಿಗೆ ಸಕಲ ದೇವರಿಂದಲ್ ಸಂಪತ್ತಿಯಿಂದಲ್ ತುಂಬಿಪ್ಪುದರಿಂ ಬಸ್ತಿಯೆಂಬ ನಾಮಂ ಪ್ರಸಿದ್ಧಿಯಾಯ್ತು. ಈ ಪ್ರಕಾರ ಕಾಲಶಕ್ತಿಯಿಂದಲೆ ವರ್ತಿಸುತ್ತಿರಲತ್ತಲ್ ಬ್ರಾಹ್ಮಣರೊಳ್ ಮಧ್ವಾಚಾರಿಯೆಂಬ ವಿದ್ವಾಂಸ ಪುಟ್ಟೆ ಮೊದಲ ಶಾಸ್ತ್ರಂಗಳೊಳ್ ಸಂದೇಹಗ್ರಸ್ತದಿಂ ವಿಷ್ಣುಪಕ್ಷವಿಡಿದು ಧರ್ಮಾರ್ಥಕಾಮ ತ್ರಿವರ್ಗವಲ್ಲದೆ ಮೋಕ್ಷಮೆಂಬುದಿಲ್ಲ, ಸಾಯುಜ್ಞಮಿಲ್ಲೆಂದು ನಾನಾ ಯುಕ್ತಿಯೊಳೆ ಅನೇಕ ಗ್ರಂಥಂಗಳಂ ರಚಿಸಿ ತನ್ನ ಶಿಷ್ಯವರ್ಗಂಗಳ್ಗೆಲ್ಲ ಮುಪದೇಶಂಗೆಯ್ದು ಮಾಧ್ವಮತಸ್ಥಾಪನೆ ಮಾಡಿದಂ. ಜೈನವೈಶ್ಚರ್ ವಿಜಯನಗರ ಕರ್ಣಾಟ ಮಂತಾಗಿರ್ದವರ್ ಕೆಲರ್ ಚತುರ್ಥರೆಂದು ಕೆಲರ್ ಕ್ರಿಯಾಕರ್ಮವ್ಯತ್ಯಸ್ತರಾದರ್. ಕೆಲಂಬರ್ ಪಂಚಮರೆಂಬ ಪೆಸರಾಂತಿರ್ದು ಚಾರಿತ್ರಗೆಡದೆ ದಾನಯೋಗ್ಯರಾಗಿ ಶೀಲೋಪವಾಸಮಂ ಬಿಡದೆ ಜಿನಮುಕ್ತರಾಗಿಯು ಒಂದೆರಡು ಒಕ್ಕಲು ತಮ್ಮಿಷ್ಟಕ್ಕಾಗಿ ದುರ್ದೆವತಾ ಪ್ರಾರ್ಥನೆಯಂ ಮಾಡಿಕೊಂಡರ್. ಕೆಲಂಬರ್ ಉಡಿಕೆಯೆಂದು ಪತಿ ಹೋದ ಸ್ತ್ರೀಯರ್ಗೆ ಪತಿಗಳಾಗಿ ನಾನಾ ಪೆಸರಿಂ ವರ್ತಿಸುವರ್.ಗುರ್ಜರದೇಶ ಪಜ್ತೆಯೆಂದು ಹೆಚ್ಚು ಕಡಿಮೆಯಾಗಿ ವರ್ತಿಸುವರ್. ಗುರ್ಜರದೇಶ ಮೊದಲಾದವರೊಳಾಯಾಯ ದೇಶನಾಮದಿಂದಲೆ ರಾಜಿಸುವರ್. ಗೌಡದೇಶದಿಂದತ್ತ ಜಾತಿಬೇದಮಿಲ್ಲದೆ ಒಂದು ಗೃಹದೊಳೆ ಒಬ್ಬ ಜೈನಶ್ರಾವಕನು ಶಿವಭಕ್ತ ವಿಷ್ಣುಭಕ್ರನೆಂಬುದಲ್ಲದೇ ಜಾತಿಭೇದಮಿಲ್ಲ. ಜೈನಗೌಡರುಗಳ್ ಕರ್ಣಾಟ ಮೊದಲಾದ ದೇಶದೊಳ್ ಜಂಗಮರಿಂ ಲಿಂಗಧಾರಿಗಳಾಗಿ ಕೆಲರ್ ಜೈನರಲ್ಲೆ ಕೂಡಿರ್ದರ್. ವಿಜಯಮಂಗಲದಿಂ ಬಂದ ಜೈನಬ್ರಾಹ್ಮಣರ್ ಬಲ್ಲಾಳರಾಯರಿಂ ಪೂಜ್ಯರಾಗಿ ಛತ್ರತ್ರಯಪುರ ಮೊದಲಾದ ಸ್ಥಳಾಂತರಂಗದೊಳೊಳ್ ನಿಂತರ್. ಆ ಬಲ್ಲಾಳರಾಯರ ವಂಶ ಪಾರಂಪರಿಯೇನೆಂದೊಡೆ.

ದ್ವಾರಾವತಿಪುರಮಂ ಬಲ
ನಾರಾಯಣರಾಳ್ದು ಬಂದು ಶೌರಿಯಪುರಮಂ
ಸಾರಿರಲವರ ತನೂಭವ
ರೋರಂತೆಯನೇಕ ರಾಜ್ಯವಾಳುತ್ತಿರ್ದರ್

ಆ ವಂಶಪರಂಪರೆಯಿಂ ನಡೆದುಬರುತ್ತಿರ್ಪಿನಂ ವೀರಭೂಪನೆಂಬರಸಂ ಪಾಂಡ್ಯದೇಶದ ದಕ್ಷಿಣ ಮಧುರಾಪುರಕ್ಕೆ ಬಂದು ಪಾಂಡ್ಯರಾಜನೆಂದು ಪೆಸರಾಗೆ ಧರೆಯಂ ಪಾಲಿಸುತ್ತೆ ರತ್ನಮೌಳಿಯನಾಂತು ಕಿರೀಟಪತಿಯೆಂಬ ನಾಮದಿಂ ಪ್ರಸಿದ್ಧಿಯಾಗಿ ಕೆಲವು ದಿವಸ ರಾಜ್ಯಂಗೆಯ್ದನಾತನ ವಂಶದೊಳ್ ವಿಕ್ರಮವಿಜಯ ವಿಖ್ಯಾತ ಶೂರ ಸತ್ಯಂಧರ ಬ್ರಹ್ಮ ಸೋಮಕೀರ್ತಿ ವೀರಪಾಂಡ್ಯರೆಂಬ ಸಮ್ಯಕ್ತ್ವಚೂಡಾಮಣಿಗಳ್ ತಮ್ಮ ಸತ್ಯ ಸಮ್ಯಕ್ತ್ವಕ್ಕೆ ದೇವತೆಗಳ್ ಮೆಚ್ಚಿ ದಿನಂ ಪ್ರತಿದಿನಂ ದೇವತಾರ್ಚನೆಗೆ ಕರಿಯ ಮಲ್ಲಿಕಾ ಪುಷ್ಪಮಂ ತಂದುಕೊಡುತ್ತಿರ್ದರಂತು ಬರುತ್ತಾಮಿರ್ದರಾ ವೀರಪಾಂಡ್ಯಪುತ್ರಂ ಕೂನ ಪಾಂಡ್ಯ ಕೆಲವು ದಿನಸದಿಂ ಮೇಲೆ ವೀರಶೈವಾಚಾರಮಂ ಪರಬೋಧನೆಯಿಂ ಕೈಕೊಂಡು ಲಿಂಗಮಂ ಕಟ್ಟಿ ಜಿನದರ್ಮದ್ವೇಷಿಯಾಗಿರ್ದು ಕೆಲವು ದಿನಸಕ್ಕೆ ರಾಜ್ಯಮೆಲ್ಲಮನರಿ ನೃಪಾಲಕರ್ ಕಟ್ಟಿಕೊಳ್ಳೆ ಅಲ್ಪದೇಶಕ್ಕಧೀಶನಾಗಿರ್ದೊರ್ವ ಪಟ್ಟಸ್ತ್ರೀಯಪ್ಪ ಏಚಲದೇವಿ ಗರ್ಭವಾಗಿರ್ದೊಡಾಕೆಯಂ ಬೇರೂರಿಗೆ ತೌರುಮನೆಗೆ ಕಳುಹಿಸಿರ್ದೊಡಲ್ಲಿಯೆ ಪ್ರಸವವಾಗಿ ಬೆಳೆದು ಗಂಡವಿಮುಕ್ತ ಸಿದ್ಧಾಂತದೇವರ್ ಗುರುಗಳಾಗೆ ವಿದ್ಯಾಭ್ಯಾಸಂಗೆಯ್ದು ಸಪ್ತಮ ವರುಷಮಾಗೆ ವ್ರತಮಂ ಕೈಕೊಂಡು ಆ ಗುರುವಿನಲ್ಲಿ ಮಂತ್ರವಾದ ಶಾಸ್ತ್ರಮನಭ್ಯಾಸಮಂ ಮಾಡಲ್ ತನ್ಮುನಿಯುಪದೇಶದಿಂ ಶಶಕಪುರದ ಪದ್ಮಾವತಿಯ ಸನ್ನಿಧಿಯೊಳೆ ಷೋಡಶಾಕ್ಷರ ಮಹಾಮಂತ್ರಮಂ ಸಾಧಿಸುವಂದು ವಿದ್ಯಾದೇವತೆ ಮಹಾವ್ಯಾಘ್ರನ ರೂಪುಗೊಂಡು ಬಂದು ಮೇಲ್ವಾಯ್ವುದುಂ ಹೊಯ್ಸಳಾ ಎಂದು ಗುರುಗಳ್ ತಮ್ಮ ಕೈಯ ಪಿಂಛಮನಿಡಲದರಿಂ ಪೋದೊಡದು ಕಳೆದು ಪುನರುಚ್ಚಾರಣೆಯಂ ಮಂತ್ರಸಿದ್ಧಿಯಂ ಪಡೆಯಲಾ ಬಾಲಕಂ.

ಚಂ || ಶಕ ಶರದೆಂಟುನೂರರ ವಿಳಂಬಿ [ಸು] ವತ್ಸರ ಚೈತ್ರ ಶುದ್ಧಮಾ
ಪ್ರಕಟಿತಮಪ್ಪುದಾ ದಶಮಿ ಬೃಹಸ್ಪತಿವಾರ ಪುಷ್ಪತಾರೆ ಕೌ
ತುಕ ಧೃತಿಯೋಗ ಗರಿಜಾಕರಣಂ ಲಗ್ನತಾ ಗುರುವಾಗೆ ಸಪ್ರಂ
ವಕಲಂಕಮುನಿಪಂ ಹೊಯಿಸಳಂಗೆ ನೆರೆ ಕೊಟ್ಟು ಮಂತ್ರಸಿದ್ಧಿಯಂ (?)

ಕುಡಲಾ ಕುಮಾರಂವೆರಸು ಮಧುರಯನೆಯ್ದಿಯಾ ತಪಸ್ವಿಗಳ್ ಕುಮಾರನಂ ಪ್ರೇರಿಸೆ ಪಾಂಡುಭೂಪನಲ್ಲಿಗೆ ಪೋಗಿ ನೀನು ಸದ್ಧರ್ಮಮಂ ಬಿಟ್ಟು ವಿಪರೀತಮಂ ಕೈಕೊಂಡೆಯದರಿಂದಿಹಪರಂ ಕೆಟ್ಟು ದುರ್ಗತಿಗೆ ಸಾಧನಮಪ್ಪುದದರಿಂದದಂ ಬಿಟ್ಟು ಸಮ್ಯಗ್ದರ್ಶನ ರನ್ನಮಂ ಕೈಕೊಳ್ವುದೆಂದೊಡೆ ಕಾಯವೆರಸಿ ಕೈಲಾಸಮಂ ಪಡೆವ ವೀರಶೈವಮನೆಂತು ಬಿಡಲಪ್ಪುದೆನೆ ಅದೆ ವಾಗ್ವಾದಮಾಗೆ ಇಂದಿಂಗೆ ಮೂರನೆ ದಿನಸದೊಳ್ ಕೈಲಾಸ ದೇವರೆಂಬುವರ್ ಶಿವಕೃಪೆಯಿಂ ಕಾಯವೆರಸಿ ಕೈಲಾಸಮನೆಯ್ದಿದುದನೆಲ್ಲರ್ ಬಲ್ಲರ್. ಪ್ರತ್ಯಕ್ಷಮಾಗಿ ಕಂಡು ಎಂತು ಬಿಡಲಪ್ಪುದೆನೆ ಕುಮಾರನದು ಪುಸಿಯೆಂಬದುಮೋರೊರ್ವರ್ ಪ್ರತಿಜ್ಞೆಯಂ ಮಾಡೆ ಕುಮಾರಂ ಕೆಲರ್ವೆರಸು ಪೋಗಿ ಕೈಲಾಸದೇವರ ಜಂಗಮಗೃಹಮನೆಯ್ದಿಯಾ ಕೋಣೆಯೊಳ್ ಪೂಳಿರ್ದ ಪೆಣನಂ ಕಿತ್ತು ತೋರಿಸುವುದುಂ ಬೆರಗಾದ ಪುಸಿದಂಗಾಜ್ಞೆಯೇನೆಂದು ಕುಮಾರಂ ಕುದುರೆಯನುಜ್ಜಿಸಿಬಿಡೆಂಬ ಸಳನ ಮಾತಿಂಗೆ ಕಿಂಕರರಾತನ ಕೈಯಂ ಪಿಡಿದು ಕುದುರೆಯಂ ಮೇಲೆ ತಿರುಗಿಸಿ ಬಿಡೆ ಕೂನಪಾಂಡ್ಯಂ ವಿಷಣ್ಣಚಿತ್ತನಾಗಿ ಅನ್ನಪಾನಂಗಳಂ ಬಿಟ್ಟು ಅಧೋಮುಖನಾಗೊರಗಿರ್ಪುದುಂ ಮುನಿಮುಖ್ಯಂ ಬಂದು ಈತಂ ನಿನ್ನ ಮಗನಪ್ಪ ಹೊಯಿಸಳನಾತನ ಗುರುಗಳ್ ನಿನಗಂ ಪ್ರತಿಬೋಧಿಸಲ್ ಬಂದೆವೆನೆ ಗಾಢಾಲಿಂಗನಂಗೆಯ್ದು ಗುರುವಿಂಗೆರಗಿ ಲಿಂಗಮಂ ಕಳೆದು ಸಮ್ಯಗ್ದರ್ಶನಮಂ ಕೈಕೊಂಬುದು ಹೊಯಿಸಳಾಕುಮಾರಂ ಬಂದು ಸ್ವಸ್ತಿಶ್ರೀ ಸಮಸ್ತ ಭುವನಾಶ್ರಯ ಪೃಥ್ವೀವಲ್ಲಭ ಮಹಾರಾಜಾಧಿರಾಜ ಪರಮೇಶ್ವರ ಪರಮಭಟ್ಟಾರಕ ಸತ್ಯಾಶ್ರಯಕುಳತಿಳಕಂ ಚಾಳುಕ್ಯಾಭರಣಂ ಶ್ರೀಮತ್ತ್ರಿಭುವನರಾಜ ಮಲ್ಲದೇವರ್ ಪೃಥ್ವೀರಾಜ್ಯಂಗೆಯ್ಯುತ್ತಮಿರಲಲ್ಲಿಗೆಯ್ದಿ ಕಾಣಲೀ ಕುಮಾರನ ಸಾಹಸ ಧೈರ್ಯಕ್ಕಂ ಸಮ್ಯಕ್ಕ್ವಕ್ಕಂ ಮೆಚ್ಚಿ ಕೆಲವು ರಾಜ್ಯಮನೀಯೆ ದೋರಸಮುದ್ರದೊಳ್ ಬೀಡಂ ಮಾಡಿ ರಾಜ್ಯಭೋಗಮನನುಭವಿಸುತ್ತುಮಿರೆ

||ಸ್ರ ||ಮುದದಿಂ ಜೈನವ್ರತೀಶಂ ಶಶಕಪುರದ ಪದ್ಮಾವತೀದೇವಿಯಂ ಮಂ
ತ್ರದಿ ತಾನುಂ ಸಾಧಿಸಲ್ ಸತ್ಥಿಯೆಯೊಳು ಪುಲಿ ಮೇಲ್ವಾಯೆ ಯೋಗೀ ಶ್ವರಂ ಕುಂ
ಚದ ಕಾಮಿಂದಾಂತದಂ ಹೊಯ್ಸಳನೆನೆ ಅಭಯಂ ಪೊಯ್ದಡಂ ಹೊಯ್ಸಳಾಂಕಂ
ಯದುಭೂಪರ್ಗಾದುದಂದಿದೊಸೆದುದು ಶಳೆಯುಂ ಲೋಲ ಶೂರ್ದೂಲ ಚಿಹ್ನಂ

ಆ ಸಂದ ಯಕ್ಷಿವರದೊಳ
ಗಾ ಸಂಕಾಳಿಕೆಯ ನಾಮದಿಂದಂ ಸಾಗಿಯು
ವಾಸಂತಿಕಾಖ್ಯ ಪೂಜಾ
ವ್ಯಾಸ
[ಗಂ] ಮಾಡಿದಂ ನೃಪಾಲಾಗ್ರಣಿಯುಂ

ಕೈಸಾರ್ದಿರೆ ಪುಲಿಯೊಂದಿಗೆ
ಕೈಸಾರ್ದಿರೆ ವೀರಲಕ್ಷ್ಮಿ ರಿಪುನೃಪರಾಜ್ಯಂ
ಕೈಸಾರ್ದಿರೆ ಪಲಕಾಲದೆ
ಹೊಯ್ಸಳನಾಮದೊಳೆ ಯಾದವೋರ್ವಿಪತಿಗಳ್

ಸತ್ಕುಲದೊ[ಳಗಿಂ]ದು ಮಹೀ
ಭೃತ್ಕುಳಕೊಳಗಚಳನಾದವೆಸೆದಂತೆಸೆದಂ
ತತ್ಕುಲದೊಳ್ ವಿಜಿತರಿಪು ಕು
ಭೃತ್ಕುಳನಾದಿತ್ಯಮೂರ್ತಿ ವಿನಯಾದಿತ್ಯಂ

ಆ ಹೊಯ್ಸಳಬಲ್ಲಾಳಂಗೆ ವಿನಯಾದಿತ್ಯಬಲ್ಲಾಳಂ ಪುಟ್ಟಿ ಪದಿನಾಲ್ಕು ನಾಡಿಂಗರಸಾಗಿ ಸ್ಥಳ ಸಾಲದೆ ನೆಲವೀಡೆಂಬ ಪಟ್ಟಣಮಂ ಮಾಡಿಕೊಂಡು ಸುಖಮಿರ್ದನಾತನ ಮಂತ್ರಿ ಸಾಮಂತ ಪುರೋಹಿತಾದಿಗಳ್ ಜೈನಬ್ರಾಹ್ಮಣರ್ ಗುರುಗಳ್ ಪ್ರಭಾಚಂದ್ರದೇವರುಗಳಾದ ಮಲಧಾರಿದೇವರ್. ಆ ಕಾಲದೊಳೊರ್ವ ಬ್ರಹ್ಮಚಾರಿ ದ್ವಿಜಂ ಚಂದ್ರದ್ರೋಣಪರ್ವತದೊಳ್ ಪಾರ್ಶ್ವಕಲ್ಪ ನಾಗಾರ್ಜುನಕಲ್ಪ ಸಾಧನೆಯಂ ಮಾಡಿ ಒಂದು ಮಾಸಂಬರಂ ಪಾರ್ಶ್ವಕಲ್ಪ ನಾಗಾರ್ಜುನಕಲ್ಪ ಸಾಧನೆಯಂ ಮಾಡಿ ಒಂದು ಮಾಸಂಬಂರಂ ತಪೋಯುಕ್ತನಾಗಿಪ್ಪುದುಂ ಸಿದ್ಧರಸಂ ಸಾಧ್ಯಮಾಗದನೊಂದು ಬುರುಡೆಯೊಳಗಿಟ್ಟು ನೆಲವೀಡಿಂಗೆ ಬಂದೊರ್ವ ಅಜ್ಜಿಯ ಮನೆಗೆಯ್ದಿ ಬಹಳ ಕ್ಷುತ್ತಾಗಿದೆ ಗ್ರಾಸಮನಿಕ್ಕೆಂದು ಪ್ರಾರ್ಥಿಸೆ ಸ್ನಾನಾದ್ಯಷ್ಠಾನಮಂ ಮಾಡಿಬಪ್ಪುದೆನಲೊಂದು ಗೂಢಪ್ರದೇಶದೊಳಾ ಬುರುಡೆಯಂ ನೇಲ್ದುಪೋಪುದುಮಾ ಅಜ್ಜಿ ನೋಳ್ದುನೆಂದು ತೆಗೆಯಲೊಂದು ಬಿಂದು ದೋಸೆ ಕಾವಲಿಯಂ ಸೋಂಕಿದಾಕ್ಷಣವೆ ಸುವರ್ಣಮಾಗೆಯದನಪಹರಿಪೆನೆಂದು ತೆಗೆದು ಬೇರೊಂದೆಡೆಯೊಳಿಟ್ಟು ಮನೆಯನಗ್ನಿಪ್ರೇವೆಶಮಂ ಮಾಡಿ ಅಳುತ್ತಿರ್ದಜ್ಜಿಯಂ ಬ್ರಾಹ್ಮಣಂ ಬಂದು ಕಂಡು ತಿಳಿದು ಸಾಯಲಿರ್ದ ಮುದುಕಿಗಿಂತಾಸೆಯಂ ಮಾಡಿತೀ ತೃಷ್ಣಾಕಾರಿಯಪ್ಪ ಹೇಮಮಂ ನಿರಾಸೆಯಿಂ ತೊರೆದಾತನೆ ಯೋಗಿಯೆಂದು ಪೇಳುತ್ತಿರಲ್ ತಾಳಾರಲ್ ಕೇಳ್ದು ಇರ್ವರುಮನೊಯಿದರಸಂಗೊಪ್ಪಿಸಲಾ ವೃದ್ಧೆ ತಾ ಮಾಡಿದ ಪ್ರಪಂಚಮಂ ಪೇಳ್ದಾ ಪುರುಷಮನರಸಿನ ಮುಂತಿಟ್ಟೊಡಾ ಈರ್ವರಂ ಮೂರು ಕೋಟಿ ದ್ರವ್ಯಮಂ ತನ್ನ ಬೊಕ್ಕಸದಿಂ ತರಿಸಿ ಕನಕಾಭಿಷೇಕಂಗೆಯ್ಸೆ ಆ ಪುರುಷಮಂ ಅರಸಂಗೊಪ್ಪಿಸಿ ಭೌತಿಕಂ ಪೋಪುದುಂ ರಾಯಂ ಪ್ರಜೆಗಳ್ಗೆಲ್ಲಾ ಕುಳಗಳ್ಳಂ ಹಣ ಮಟ್ಟು ಅಡ್ಡ ಹಾಗ ಬೇಳೆ ವೀಸಮಷ್ಟೆಂದವರವರ ಭೂಮಿಗಳ ಸಿದ್ಧಾಯಕ್ಕೆ ಅವರ್ ಉಳುವ ಗುಳುವನ್ನು ತೆಗೆದುಕೊಂಡು ಸುವರ್ಣ ಮಾಡಿಕೊಳ್ಳುತ್ತಾ ನಾಲ್ಕಾರು ವರುಷಂಬರಂ ನಡೆದಷ್ಟರೊಳ್ ಒಬ್ಬ ದ್ವಿಜಂ ಪರುಷಮಂ ಚೋರ ಪ್ರಯೋಗದಿಂದಪಹರಿಸಲ್ ದೇವತೆ ಮರಸಿಬಿಡಲ್ ನಿಲುಕಡೆಯಾದುದು.

ತದಪತ್ಯಂ ರಿಪುನೃಪಭುಜ
ಮದಮರ್ದನನಖಿಳ ವಿಬುಧಜನತಾ ಸೌಖ್ಯ
ಪ್ರದನುದಿತೋದಿತ ಮಹಿಮಾ
ಸ್ಪದನೆನಿಸಿದನಂಗಭೂಪನಂಗಜರೂಪಂ

ಮತ್ತಮಾ ಲಿಂಗರಾಜಂ ರಾಜ್ಯಂಗೆಯ್ಯುತ್ತಮಾತನರಸಿ ಏಚಲದೇವಿಗಂ ಪುರಷಾರ್ಥಮಾದಂತೆ ಬಲ್ಲಾಣನುಂ ವಿಷ್ಣುನೃಪತಿಯುಂ ಉದಯಾದಿತ್ಯನುಮೆಂಬ ಮೂವರ್ ತನಯರಾಗೆಯವರೊಳ್ ವಿಷ್ಣುಮಹೀಭುಜಂ ನಳ ನೆಹುಷ ಭರತ ಚರಿತ್ರನೆನಿಸಿ

ಸ್ಥಿತಿಮಾಗಿ ವಿಷ್ಣುಪರಿವೃಢ
ಧರಣೀಶಂಗೊಲಿದು ಪಟ್ಟಮಾಗಲೊಡಂ ಸಾ
ಗರಪರ್ಯಂತಂ ಧರಣೀ
ಶ್ವರರೊಡನೆಯಿತ್ತು ವಿಶದ ಕೀರ್ತಿಪ್ರಸರಂ

ಶಕವರುಷಂಗಳ್ ೯೬೭ ಸರ್ವಜಿತು ಸಂವತ್ಸರದೊಳ್ ವಿನಯಾದಿತ್ಯ ಬಲ್ಲಾಳನರಸಿ ಏಚಲದೇವಿಯೆಂಬಳ್ ತಮ್ಮ ಸ್ವಕೀಯ ಅರಸಿನ ಪುತ್ರನಂ ತನ್ನ ತಮ್ಮನೆಂದು ಸಲಹಿ ಮರಿಯಾನೆಯೆಂದು ಪೆಸರಾಗೆಯಾತಂಗೆ ದಂಡನಾಯಕಪದಮಂ ಕೊಟ್ಟು ನಿಲಿಸೆ ಹೊಯ್ಸಳ ಕೊಂಕಣ ಸಾಳ್ವ ಖೇಡ ಬಯಲ್ಲಾಡ ತಲಕಾಡ ಸಾಲಮಲಯ ಮಲಪರ ತಲೆಯೊಳ್ ಕೈದುವಿಡಿದು ವಶಂ ಮಾಡಿ ವಿನಯಾದಿತ್ಯ ಮಂಡಳೇಶ್ವರಂ ತನ್ನ ಪ್ರಿಯವಲ್ಲಭೆ ಅತ್ಯಳೆ ಏಚಲದೇವಿವೆರಸು ಸೊಸೆವೂರ ನಲೆ ವೀಡಿನೊಳ್ ರಾಜ್ಯಂಗೆಯ್ಯುತ್ತುಂ ಮರಿಯಾನೆ ದಂಡನಾಯಕಂಗಂದೈತವೆ ದಂಡ ನಾಯಕನಿಂ ಕಿರಿಯಂ ಕನ್ಯಾದಾನಮಂ ಮಾಡಿ ಸಂಧಿನಾಡ ಸಿಂದಿಗೆರೆಯ ಪ್ರಭುತ್ವ ಸಹಿತಂ ನೆಲೆಯಾಗಿ ಸರ್ವಜಿತು ಸಂವತ್ಸರದ ಫಾಲ್ಗುಣ ಶುದ್ಧ ತದಿಗೆ ಸೋಮವಾರ ಕನ್ಯಾಭೂದಾನಮಂ ಧಾರಾಪೂರ್ವಕಂ ಕೊಟ್ಟು ಸದ್ಧರ್ಮಮಾರ್ಗದಿಂ ರಕ್ಷಿಸುತ್ತಿರೆಯಾ ಮರಿಯಾನೆಯೆಂಬ ದಳಪತಿಗೆ ಪದ್ಮಲದೇವಿ ಚಾವಲದೇವಿ ಬಷ್ಪದೇವಿಯರೆಂಬ ಮೂರು ಕನ್ಯಾರತ್ನಮಂ ಸಕಲ ಶಾಸ್ತ್ರ ನೃತ್ಯಗೀತದಿಂದತಿಪ್ರೌಢೆಯರಾಗಲಾ ಕನ್ನಕೆಯರಂ ಸಾವಿರದಿಪ್ಪತ್ತೈದನೆಯ ಶಕೆಯ ಸ್ವಭಾನುಸಂವತ್ಸರದ ಕಾರ್ತಿಕ ಶುದ್ಧ ದಶಮಿ ಗುರುವಾರದಂದು ಬಲ್ಲಾಳಭೂಪಾಳಂ ಮದುವೆನಿಂದು ಸಂಧಿನಾಡಂ ಪುನರ್ದಾನಧಾರಾಪೂರ್ವಕಂ ಕುಡೆ ಕೊಂಡು ಸುಖಮಿರಲಿತ್ತ

|||ಸ್ರ || ಪೆಸರ್ಗೊಂಡಾವಾದ ದೇಶಂಗಳನೆಸುವನದಾವಾದ ದೇಶಗಳಂ ಬ
ಣ್ಣಿಸಿ ಪೇಳುತ್ತಿರ್ಪುದಾವಾವನಿಪರಿಗಳನುಂ ಲೆಕ್ಕಿಸುತ್ತಿರ್ಪುದೆಂಬಂ
ತೆಸಕಂ ಕೈಗೆಣ್ಮೆ ನಾಲ್ಕುಂ ಕಡಲ ತವಡಿರಂ ದಿಗ್ಜಯಕ್ರೀಡೆಯೊಳ್ ಸಾ
ಧಿಸಿದಂ ಭೂಲೋಕಮಂ ಕ್ಷತ್ರಿಯಕುಳತಿಳಕಂ ಧೀರವಿಷ್ಣುಕ್ಷಿತೀಶಂ