ಶ್ರೀಸುಜನಸ್ತುತರಖಿಳಕ
ಳಾಸದನರ್ ಸತ್ಯವಾದಿಗಳ್ ಸುವಿಚಾರರ್
ಲೇಸಾಗೆ ಬರೆಯೆ ಕೇಳ್ವುದು
ವೈಷಮ್ಯವನುಳಿದು ಕ್ರೋಧ ಮೋಹವನುಳಿದುಂ

ಈ ಪ್ರಕಾರದೊಳು ವರ್ತಿಸುತ್ತಿರಲಿತ್ತಲಾನೆಗೊಂದಿ ವಿದ್ಯಾನಗರಿಯೊಳು ಕೃಷ್ಣರಾಯುಂ ತಕ್ಕಷ್ಟು ರಾಜ್ಯದೊಳು ಕಪ್ಪಂಗೊಳ್ಳುತ್ತುಮಿರ್ದನತ್ತ ಕಿರಾತಪಟಲ ಎಂಟು ಜನದೊಳು ಪ್ರತಾಪರಾಯನುಂ ಹಂಸರಾಯನುಂ ಪ್ರತಾಪರುದ್ರನುಂ ಇಮ್ಮಡಿ ಜಗದೇವರಾಯನುಂ ರಾಮದೇವರಾಯನುಂ ಕಂಪರಾಯನುಂ ಸಾಳುವ ಕಂಪಿಲ್ಲರಾಯನುಂ ರಾಮಚಂದ್ರರಾಯನುಮೆಂಬಿವರು ಆಳಿದ್ದು ೨೦೦ ವರುಷವಷ್ಟರಲ್ಲಿ ಭರ್ತೃಹರಿಯೆಂಬಂ ಮಿಮಾಂಸಕಮತಾನುಸಾರಿ ಅತ್ಯಂತ ಸಾತ್ವಿಕ ಪ್ರಕೃತಿ ಪ್ರಜೆಗಳೊಳಗತ್ಯಂತ ದಯಾಪರನಾಗಿ ರಾಜ್ಯಮನಾಳುತ್ತಿರೆ ಪ್ರಜೆಗಳು ಸಿದ್ಧಾಯಮಂ ಕುಡದಿರೆ ನಾವೆಲ್ಲರು ಭೂಮಿಯುತ್ತು ಕಷ್ಟಪಟ್ಟು ನಿಮಗೇಕೆ ಹಣಮಂ ಕೊಡಬೇಕೆಂಬುದುಂ ಭೂಮಿಪತಿಗಳು ರಾಜರಪ್ಪುದರಿಂದಾ ಭೂಮಿಗೇನಾದರು ಕಂದಾಯಮಂ ಕೊಟ್ಟಲ್ಲದೆ ಉಳಲಾಗದೆಂದು ಮಂತ್ರಿ ಸಾಮಂತಾದಿಗಳ್ ಪೇಳ್ವುದುಂ. ಆದರೆ ಕಂದಾಯಮಂ ಕೊಡುವುದಿಲ್ಲ. ಈ ಭೂಮಿ ಬೇಡ, ಅರಣ್ಯದೊಳು ಬೆಳಸ ಮಾಳ್ವೆವೆನೆ ಅರಣ್ಯ ಪರ್ವತ ನದಿಗಳೆಲ್ಲಾ ಸ್ವಾಮಿಗೆ ಸಲ್ವುವು ನೀವು ಎಲ್ಲಿ ಬೆಳೆಯ ಮಾಡಿದಾಗ್ಯು ಬಂದ ಧಾನ್ಯದೊಳು ಆರರೊಳೊಂದು ಭಾಗಮಂ ಪ್ರಭುವಿಂಗೊಪ್ಪಿಸಿ ಬಾಳಿಮೆನೆ ತಾವು ಮಾಡಿದ ಭೂಮಿಯೊಳಾರರೊಳೊಂದು ಭಾಗಮಂ ಬೆಳಸು ಮಾಡಿ ಅರವಾಸಿ ಕೊಡುತ್ತಿದ್ದೇವೆಂದು ನಿಮಗೆ ಮೇಗಣ ಭಾಗವೊ? ಕೆಳಗಣ ಭಾಗವೊ? ಎನೆ ಅರಿಯದವರೆಂದು ಧಾನ್ಯಗಳು ದೊರೆಗೆ ಹುಲ್ಲು ನಿಮಗೆಯಾದ್ದರಿಂದ ಮೇಗಣ ಭಾಗವನೊಪ್ಪಿಸುವುದೆನಲಾ ವರ್ಷಮೆಲ್ಲರು ಶುಂಠಿ ಅರಸಿನ ಗೆಣಸು ಮೂಲಂಗಿ ಈರುಳ್ಳಿ ಬೆಳ್ಳುಳ್ಳಿ ಮೊದಲಾದಮಂ ಬಿತ್ತಿ ಮೇಗಣ ಸೊಪ್ಪನರಮನೆಗೆ ಕುಡೆ ಕೆಳಗಣ ಬೆಳೆ ಬೇಕೆಂದಡೆ ಧಾನ್ಯಮಂ ಬಿತ್ತಿ ಹುಲ್ಲಂ ಕೊಡೆ ಪುನಃ ಕರೆಯಿಸುತ್ತಾ ಮುನ್ನೂರು ಮಾರಿಗೆ ಒಂದು ಹೊನ್ನಿಗೆ ನಿಯಮಕಮಂ ಮಾಡಿ ಮಂತ್ರಿ ಪ್ರಧಾನಿಗಳು ಬಂದು ಭರ್ತೃಹರಿಗೆ ಪೇಳೆ ಅತ್ಯಂತ ಕರುಣವಿಟ್ಟು ಬೆಳಸು ಸಂಪೂರ್ಣದಿಂ ಬೆಳೆದರೆ ಈ ಪ್ರಕಾರ ಕೊಟ್ಟು ಅರ್ಧ ಕಾಲು ಬೆಳೆಯಾಗೆ ಅರೆಹೊನ್ನು ಕಾಲುಹೊನ್ನಂ ಕುಡುವುದೆಂದು ಮನ್ನಿಸಿ ಕಳುಹಿಸೆ ಪೋಗಿ ರಾಜಂ ಬರುವಲ್ಲಿ ತಮ್ಮ ತಮ್ಮ ಇಚ್ಛೆಯೊಳು ಎರಡು ಕಾಲುಗಳಂ ನೀಡಿ ತೆಗೆಯದೆ ಹಾಸ್ಯ ಮಾಡುತ್ತಿರ್ಪುದುಂ ದೊರೆಯು ಬಪ್ಪಲಿ ಕಾಲ ನೀಡಿ ತೆಗೆಯದಿಪ್ಪುದೆ ಎಂದು ಕೇಳಲು ದೊರೆಯೆಂದು ನಾವು ಹೇಗೆ ತಿಳಿಯಬೇಕು? ಇನ್ನು ಮೇಲೆ ದೊರೆ ಬರುವಲ್ಲಿ ನಡುವಿನೊಳೊಂದು ಘಂಟೆಯಂ ಕಟ್ಟಿಕೊಂಡು ಧ್ವನಿಯಂ ಮಾಡುತ್ತೆ ಬಂದರೆ ತಿಳಿದುಕೊಳ್ಳುತ್ತೇವೆ ಎಂದೊಡದು ಸಹಜವೆಂದು ನಡುವಿನೊಳು ಘಂಟೆವೆರಸು ಗಮಿಸುತ್ತ ೬ ವರುಷ ರಾಜ್ಯಂಗೆಯ್ದು

ಶ್ಲೋಕ || ಏಕಾಕೀ ನಿಸ್ಪೃಹಃ ಶಾಂತಃ ಪಾಣಿಪಾತ್ರೋ ದಿಗಂಬರಃ
ಕದಾ ಶಂಭೋ ಭವಿಷ್ಯಾಮಿ ಕರ್ಮನಿರ್ಮೂಲನ ಕ್ಷಮಃ ||

ಎಂದು ನಿರ್ವೇಗದಿಂ ಮಗಂಗೆ ರಾಜ್ಯಮಂ ಕೊಟ್ಟು ಶೃಂಗಾರ ನೀತಿ ವೈರಾಗ್ಯ ಮೆಂಬ ಶತಕತ್ರಯಮಂ ಮಾಡಿ ಶಿಷ್ಯರ್ಗುಪರೇಶಂಗೆಯ್ದು ಪರಿವ್ರಾಜಕನಾಗಿ ಏಕಾಕಿಯಾಗಿ ಪಗಲು ರಾತ್ರಿ ಧ್ಯಾನಮೌನದಿಂ ತಪಂಗೆಯ್ಯುತ್ತ ದೇಶಾಟನದಿ ಸಂಚರಿಸಿ ಬಂದ ಸ್ವಪುರದ ಪರೇತಭೂಮಿಯೊಳು ರಾತ್ರಿ ಪ್ರತಿಮೆ ನಿಲ್ವುದುಂ

ತದ್ರಾತ್ರೊಯೊಳೆ ನಿಶಾಚರರು ಮನೆಬೊಕ್ಕಸಕ್ಕೆ ಕನ್ನಮನಿಕ್ಕಿ ಅಮೂಲ್ಯಮಪ್ಪ ವಸ್ತುವಂ ಕಳ್ದುಬಪ್ಪಲ್ಲಿ ತಳಾರರ್ ಕಂಡು ಬೆನ್ನಟ್ಟಿಬರೆ ನಿತ್ತರಿಸಲಾರದೆ ವಸ್ತುವೆಲ್ಲಮಂ ಯೋಗಿಯ ಮುಂದಿಕ್ಕಿ ಪೋಗೆ ಕಳ್ಳರಂ ಪಿಡಿಯಲಾರದೆ ಸನ್ಯಾಸಿಯೆ ಕೊಂಡಿರ್ದನೆಂದು ಕಾಮಗೊಂಡು ರಾಯಂಗೆ ಪೇಳಲಾತನಂ ಶೂಲದೊಳಿಕ್ಕಿಮೆದಾಜ್ಞೆಗೆಯ್ವುದುಂ ಶೂಲಮನೆತ್ತಿಯದರ ಬಳಿಯೊಳಾ ಯೋಗಿಯಂ ನಿಲಿಸಿ ನಿನ್ನಷ್ಟದೇವರಂ ನೆನೆದು ಭಾವಿಸು ಏರಿಸುವೆವೆಂದು ಪಿಡಿವುದುಮಾತನಿಂತೆಂದಂ

ವೃತ್ತ || ಬ್ರಹ್ಮಾ ಯೇನ ಕುಲಾಲವನ್ವಿಹಿತತೊ ಬ್ರಹ್ಮಾಂಡ ಭಾಂಡೋದರೇ
ವಿಷ್ಣುಸ್ತೇನ ದಶಾವತಾರಗಹನೇ ಕ್ಷಿಪ್ತೋ ಮಹಾಸಂಕಟೇ
ರುದ್ರೇಣೇಹ ಕಪಾಲಪಾಣಿ ಪುಟಕೇ ಭಿಕ್ಞಾಟನಂ ಕಾರಿತೇ
ಸೂರ್ಯಶ್ಚಂದ್ರ ಅನಿತ್ಯಮೇಘಗಮನಸ್ತ ಸ್ಮೈ ನಮಃ ಕರ್ಮಣೇ ||

ಎಂಬುದುಂ…….ಬ ನಾಯಕಂ ಕಾಪಿನವರಲ್ಲಿರಿಸಿ ತಾನು ರಾಯನಲ್ಲಿಗೆಯ್ದಿ ಅಪೂರ್ವಮಾದುದೊಂದು ವಿದ್ಯಮಂ ತೋರ್ಪುದುಂ ಮೆಚ್ಚಿದುದಂ ಬೇಡುವುದೆನೆ ನಿರಪರಾಧಿಯಂ ಶೂಲದೊಳಿಕ್ಕುವದಂ ಮಾಣಿಸಿ ಸಲಹೆನಲು ರಾಯನಿಂತೆಂದಂ

ಶ್ಲೋಕ || ಆಜ್ಞಾಭಂಗೋ ನರೇಂದ್ರಾಣಾಂ ಗುರೂಣಾಂ ಮಾನಮರ್ದನಂ
ಪೃಥಕ್ಛಯ್ಯಾ ಚ ನಾರೀಣಾಮ ಶಸ್ತ್ರಂ ವಧಮುಚ್ಯತೇ ||

ಎಂಬುದುಂ ನಾಯಕನೆಂದಂ ಅವಿಚಾರೇಣ ರಾಜ್ಞಾಂತಂ ಕುರ್ವತೇ ರೌರವಂ ಭವೇತ್ ಎಂಬುದರಿಂದಾತನಂ ನೋಡಿ ಬಿಳಿಕಾಜ್ಞೆಯಂ ಮಾಳ್ಪುದೆನಲಾ ಋಷಿಯಂ ಕರೆಯಿಸೆ ತನ್ನ ತಂದೆಯೆಂದರಿಸು ಸಾಷ್ಟಾಂಗಪ್ರಣತನಾಗಿ ಪೂಜಿಸಿ ತಾನೆಸಗಿದ ವಿಚಾರಕ್ಕೆ ಕೊಕ್ಕರಿಸಿ ನಾಯಕಂಗೆ ರಾಜ್ಯಭಾರಮಂ ಕೊಟ್ಟು ಪಾರಿವ್ರಾಜಕನಾದನತ್ತ ರಾಜಪುರದೊಳು ರಾಜನರೇಂದ್ರಂಗೆ ಸಾರಂಗಧರನೆಂಬೊಂ ಮಗನಾಗಿರೆ ಮತ್ತಂ ರಾಜಂ ಚಿತ್ರಾಂಕಿಯೆಂಬೊಳಂ ತಂದಿಷ್ಟಭೋಗಕಾಮಸುಖಮನನುಭಿಸುತ್ತಿರ್ದು ಮೃಗ ಬೇಂಡೆಗೆ ಪೋಗೆ ಚಿತ್ರಾಂಗಿ ಪೂರ್ವಭವಸಂಬಂಧದಿಂ ಸಾರಂಗಧರನಂ ಬಯಸಿ ನಾನಾ ಬಗೆಯೊಳು ವಿರಹತಾಪದಿಂದೊಡಂಬಡಿಸಲೊಪ್ಪದೆ ಪಾಪಕ್ಕಮಪಖ್ಯಾತಿಗಂ ಭಯಸ್ಥನಾಗಿ ಬಪ್ಪದಿಪ್ಪುದುಂ ರಾಜಂ ಬರೆ ಚಿತ್ರಾಂಗಿ ತನ್ನ ದೇಹಮಂ ವಿಕಾರಂ ಮಾಡಿಕೊಂಡು ನಿನ್ನ ಮಗನೆನ್ನಂ ಬಲಾತ್ಕಾರದಿಂ ಪರಿಭವಿಸಿದನದರಿಂದೆನ್ನಸುವಂ ನೀಗುವೆನೆಂದು ದುಃಖಂಬಡುವುದುಮತ್ಯಂತ ಕೋಪದಿಂ ಮಗನೊಳು ಮುಳಿಯೆ ಅವನಂ ಕೊಂದಲ್ಲದುಳಿಯೆನೆಂದು ಪ್ರತಿಜ್ಞೆಯಂ ಮಾಳ್ಪುದುಂ ಸಾರಂಗಧರನ ಕೈಕಾಲಂ ತೆಗೆವುದೆಂದಾಜ್ಞೆಯಂ ಕುಡೆ ಮಂತ್ರಿಕುಮಾರನ ಸತ್ಯ ಶುಚಿತ್ವಮನರಿವನಾಗಿ ಆಜ್ಞೆಯಂ ನಿಲಿಸಿ ರಾಜಂಗಿಂತೆಂದುಂ

ಶ್ಲೋಕ || ಕವಯಃ ಕಿಂ ನಪಶ್ಯಂತೀ ಕೀಂ ನಜಾನಂತಿ ಯೋಗಿನಃ
ವಿರುದ್ಧಾಃ ಕಿಂ ನಜಲ್ಪಂತಿ ಕಿಂ ನಕುರ್ವಂತಿ ಯೋಷಿತಃ ||

ಎಂಬುದರಿಂದಿದು ಚಿತ್ರಾಂಗಿದೇವಿಯ ಪ್ರಪಂಚಲ್ಲದೆ ಸಾರಂಗಧರನ ಧೋಷಮಲ್ಲದರಿಂದವಿಚಾರನಾದರಸು ಕೆಡುವನೆಂಬುದರಿಂ ವಿಚಾರಿಸಿ ನೆಗಳ್ವುದೆಂಬುದುಂ ಕ್ರಮದಿಂ ರಾಜೇಮದ್ರನರಿದು ರಾಜ್ಯಮಂ ಬಿಟ್ಟು ಕುಮಾರಸಹಿತ ಸದ್ಗತಿಯಂ ಸಾಧಿಸಿಕೊಂಡಂ. ಈ ಪ್ರಕಾರದೊಳೆ [ಕುಮಟ]ದೊಳ್ ಬೇಡರಸಪ್ಪ ಕಂಪಿಲ್ಲರಾಯನ ಮಗಂ ರಾಮಂಗೆ ಚಿಕ್ಕಮ್ಮನಾದ ರತ್ನಾಜಿಯು ಮೋಹಿಸಿದೊಡಂ ಕೊಡಲೊಲ್ಲದಿರಲವಂಗೆ ಮುನಿದು ಕೊಲಿಸಲ್ ಬಗೆದೊಡಾತನದಂ ತಪ್ಪಿಸಿ ಕೀರ್ತಿಯಂ ಪಡೆದಂ.

ಮತ್ತಿತ್ತಲ್ ಚಿತ್ರಶೇಖರ ಸೋಮಶೇಖರರೆಂಬಸುಮಕ್ಕಳ್ ಸಮರ್ಥರಾಗಿಯು ವಂಚಿಸಿ ಕಾರ್ಯಮಂ ಮಾಡಿಕೊಳ್ಳುತ್ತೇ ರಾಜ್ಯಮನಾಳಿದರ್ ಮತ್ತಂ ಶಬರರೊಳ್ ಕರೀಭಂಟನೆಂಬನತಿಸಮರ್ಥನಾಗಿ ಕೆಲವು ಗ್ರಾಮಂಗಳ್ಗೆ ತಾನೆ ಒಡೆಯನಾಗಿರ್ದು ತೊಂಡನೂರಲ್ಲಿ ಒಬ್ಬ ಕುಲುವೀರಿ ಹೆಣ್ಣು ಮಗಳಂ ಹಡೆದು ಮನುಷ್ಯರಂ ಭಕ್ಷಿಸುತ್ತೆ ರಕ್ಕಸಿರೂಪೆಯಾಗಿರಲವಳ ಹೆಣ್ಣುಮಗಳ್ ಕರೀಂಭಂಟಂಗೆ ವಶವಾಗಿರಲ್ ರಕ್ಕಸಿ ಕೊಲಲುದ್ಯೋಗಿಸಲವನುಪಾಯದಿಂದಾಕೆಯ ತಮ್ಮನಂ ಕೊಲಿಸಿ ಕಡೆಯೊಳಾ ರಕ್ಕಸಿಯಿಂದಲೆ ಮೃತನಾದಂ. ಬಲ್ಲಾಳ ಸಂತತಿಯರಸುಗಳ್ ಕೆಲಂಬರುತ್ತರಕ್ಕೆ ಪೋಗಿ ವಿಜಯನಗರದೊಳಿರ್ದರ್. ಕೆಲರ್ ಕಾರಗಹಳ್ಳಿ ಅರಿಕುಠಾರ ತಳಕಾಡು ಮೂಗೂರು ಮೊದಲಾದ ಗ್ರಾಂಗಳೊಳಿರ್ದರ್, ಕೆಲರ್ ಕೇರಳದೇಶಮನೆಯ್ದಿದರ್ ಚಂದ್ರವಂಶಾನ್ವಯಜರ್ ಕಳಲೆ ಹುಲ್ಲನಹಳ್ಳಿ ಮೊದಲಾದ ಗ್ರಾಮಾಂತರಗಳೊಳ್ ಪ್ರಭುಗಳಾಗಿರ್ದರ್. ಕಾರುಗಹಳ್ಳಿ ವೀರಸೂರನೆಂಬ ಮಹಾಬಳಪರಾಕ್ರಮಂ ಕೆಲವು ರಾಜ್ಯಮಂ ಸಾದಿಸಿ ವಾಸಂತಿಕಾದೇವಿಗೆ ಚಾಮುಂಡಿಯೆಂಬ ಪೆಸರಿಟ್ಟು ಮಹಾಘೋರಾರಣ್ಯದೊಳ್ ಪರ್ವತದ ಮೇಲೆ ಸ್ಥಾಪಿಸಿಯಾ ದೇವಿಯ ವರದಿಂದ ಮಹಿಷಾಸುರನೆಂದಿರ್ದ ಮಹಾವನಮಹಿಷವಿರ್ದುದಂ ಕೊಂದು ಮಹಿಷಾಪುರಮೆಂಬ ಪೊಳಲಂ ಮಾಡಿ ಕೆಲವು ಸೀಮೆಯಂ ಸಾಧಿಸಿ ನಿಸ್ಸಂತಾನಮಾದುದರಿಂ ತನ್ನಳಿಯಂಗೆ ಪ್ರಭುತ್ವಮಂ ಕೊಪ್ಪನ್. ಈ ಖಾರಗಳ್ಳಿಯ ತೊರೆಯರೊಳೀರ್ವರತಿಪ್ರಬಲರಾಗಿ ಸಕಲ ವಿದ್ಯಂಗಳಂ ಕಲ್ತು ತಮ್ಮ ಜಾತಿಯೊಳೆಂಟು ಭೇದಮಾದೆಲ್ಲರಂ ಕೂಡಿಕೊಂಡು ಲೋಕಮೆಲ್ಲ ತಮ್ಮ ವಂಶಜರೆ ಎಂದುಮದೆಂತೆಂದೊಡೆ ಮುನ್ನ ಲೋಕಮೆಲ್ಲ ಪ್ರಳಯದಿಂ ಜಲಪ್ರಳಯಮೇಳು ದಿವಸಂ ಬರಲಂಬಿಗಂ ತನ್ನ ಪೆಂಡತಿವೆರಸು ಸೋರೆಬುರುಡೆಯೊಳ್ ಪೊಕ್ಕು ತೇಲುತ್ತಿರ್ದು ಬಳಿಕ ಸ್ಥಲವಪ್ಪುದಾತಂಗೆ ಮೃತ್ಯುಂಜಯನೆಂಬ ಪೆಸರಾತನ ಸತಿಗೆ ಶಕ್ತಿಯೆಂದು ಪೆಸರಾಗಲವರಿರ್ವರ ಬಸಿರೊಳ್ ಮೂದೇವರಾದಿ ಚರಾಚರಿ ಜೀವಂಗಳುತ್ಪತ್ತಿಯಾದುದರಿಂದೆಲ್ಲ ರುಂ ತೊರೆಯನ ವಂಶಮೆಂದದಕ್ಕೆ ತಕ್ಕ ಶಾಸ್ತ್ರಂ ಕಲ್ಪಿಸಿ ದಕ್ಷಿಣಕ್ಕೆ ಬಂದು ನಿಡಗನಕೋಂಟೆಯೆಂಬ ಪುರಮಂ ಮಾಡಿಕೊಂಡಿರ್ದು ಪಶ್ಚಿಮಕ್ಕೆಯ್ದು ಸಿಂಗಪಟ್ಟಮಂ ಜಾಗನಕೋಂಟೆಯಂ ಮಾಡಿ ಕೆಲವು ಭೂಮಿಯನಾಳುತ್ತಿರ್ದರ್. ಅಗಳ್ ರಾಜ್ಯಕ್ಕೆ ಅತಿವೃಷ್ಟಿಯುಮನಾವೃಷ್ಟಿಯುಂ ಸ್ವಚಕ್ರ ಪರಚಕ್ರಂಗಳ್ ತೀರಿಕೋಪದ್ರಮುಂ ಚೋರಬಾಧೆಯುಂ ವ್ಯಾಧಿಯುಂ ಪುಟ್ಟಿ ಪ್ರಜೆಗಳ್ಗು ಪದ್ರವಮಾಗಿ ನರಮಾರಿ ಗೋಮಹಿಷ ಮೇಷಮಾರಿ ಗಜಾಶ್ವವೃಕ್ಷಮಾರಿ ಪುಟ್ಟಿ ದೇಶ ದೇಶಂಗಳೊಳ್ ಬಹಳ ಜನಂಗಳ್ ಸಾಯುತ್ತಿರೆ ಗ್ರಾಮಾನುಗ್ರಾಮಂಗಳೊಳ್ ಶಿಲೆಯೊಳ್ ಮಸನಾದಿ ದಾರುಗಳೊಳ್ ಅಂಕದ ಬಾಗಿಲೊಳ್ ಗ್ರಾಮದೇವತೆ ಮಾರಿಯೆಂದು ಸ್ಥಾಪನಂ ಮಾಡಿ ಕುರಿ ಕೋಳಿ ಕೋಣಂಗಳಂ ತರಿದು ಪೂಜಿಸಿದರಲ್ಲಿ ಕೆಲರ್ ಹಿಂಸೆಗೆ ಭೀರುಗಳಾದ ದಯಾಪರರ್ ಹಣ್ಣುಕಾಯಿ ಮೊದಲಾದವರಿಂ ಪೂಜಿಸುತ್ತೆ ವರುಷಕ್ಕೆ ಒಂದು ವೇಳೆ ಹಬ್ಬವೆಂದು ತಂದಾರಭ್ಯ ಮಾಡಿಕೊಂಡು ಬಂದರ್.

ವೀರಬಲ್ಲಾಳಂ ಪೋದಬಳಿಕ ಡಿಳ್ಳಿ ಪಾದಶಾಯಿ ತಾನಾಳುವ ದೇಶಂಗಳೊಳಿದ್ದಂಥ ಜಿನಗೃಹ ಶಿವಾಲಯ ವಿಷ್ಣುವಿನಾಲಯ ಮುಂತಾಗಿ ಸಕಲ ದೇವಸ್ಥಾನಂಗಳಂ ಇಪ್ಪತ್ತು ವರುಷದಿಂ ತೊಡಗಿ ಎಂಬತ್ತು ವರುಷದವರೆಗೂ ದಿನಂಪ್ರತಿ ತಪ್ಪದೆ ಉತ್ತರದೇಶ ಪೂರ್ವ ಪಶ್ಚಿಮ ದೇಶಂಗಳೊಳಿರ್ದವಂ ಹೆಸರಿಲ್ಲದಂತೆ ಪಾಳುಮಾಡಿ ಅಲ್ಲಲ್ಲಿ ಮಸೀತಿಗಳ ಮಾಡಿಸಿ ಚಂದ್ರದ್ರೋಣಪರ್ವತದೊಳಿರ್ದ ಚೈತ್ಯಾಲಯಗಳಂ ತೆಗೆದಲ್ಲಿ ಮುನಿವಾಸಮ್ಪ ಗಹ್ವರಂಗಳೊಳ್ ಪಕೀರರಂ ನಿಲಿಸಿ ನಿರ್ವಾಣಮಥ ಫಲಾರದ ಮಠಮೆಂದು ಹಿಂದೂಜನರನಿರಿಸಿ ಶಕವರುಷ ೧೩೦೫ ಜಯ ಸಂವತ್ಸರದೊಳಾ ಮಠಗಳಿಗೆ ಐವತ್ತಾರು ದೇಶಂಗಳೊಳ್ ದೊಡ್ಡ ಗ್ರಾಮಂಗಳಲ್ಲಿ ಎರಡು ಹಣ ನಗರ ಪಟ್ಟಣಂಗಳಲ್ಲಿ ಐದು ಹಣ ಧರ್ಮಮಂ ಕೊಡುವಂತೆ ತಾಮ್ರದ ಶಾಸನಮಂ ಬರೆಸಿಕೊಟ್ಟಂ. ಅದರ ಶಾಖೆಯೊಳೈದು ಭೇದಂಗಳಾಗಿ ಸುಡುಗಾಡ ಸಿದ್ಧರೆಂದು ಸ್ಮಶಾನದ ಕಾವಲೆಂದವರ್ಗೆಲ್ಲಿಕ್ಕಿದ ವಸ್ತುವಂ ತೆಗೆದುಕೊಳ್ಳುತ್ತಾ ಬಂದರ್. ಡಿಳ್ಳಿ ಪಾದಶಾಯಿ ಸಮಸ್ತ ರಾಜ್ಯಂಗಳ ಅರಸುಗಳಿಂ ಕಪ್ಪಕಾಣಿಕೆಯಂ ತೆಗೆದುಕೊಳ್ಳುತ್ತಾ ನಿಷ್ಕಂಟಕನಾಗಿ ತಾನುಂ ತನ್ನ ಪೆಂಡತಿಯುಂ ಹೊಲಿಗೆಕೆಲಸದೊಳ್ ಪ್ರವೀಣತೆಯಿಂ ಕುಲಾವಿಷೊಗೆ ಮುಂತಾದವಂ ಕುಶಲತೆಯಿಂ ಪೊಲಿದು ವಿಕ್ರಮಯಂ ಮಾಡಿಬಂದು ಲಾಭದಿಂ ತಮ್ಮ ಗ್ರಾಸಮಂ ಮಾಡಿಕೊಳ್ಳುತ್ತಾ ಸಮಸ್ತ ಜಾತಿಯೊಳು ಮುಸಲ್ಮಾನ ಜಾತಿಯತ್ಯುತ್ಕೃಷ್ಟಮೆಂದು ಅಥರ್ವಣ ಮಂತ್ರ ತಂತ್ರಾದಿಗಳಂ ತನ್ನ ಖಾಜಿ ಪಕೀರರ್ಗೆ ಕಲಿಸಿ ಖಾದಿರಲಿಂಗರೆಂದು ತನ್ನ ಗುರುವಿಗಂ ಕಲಿಸೆ ಷಣ್ಮತದ ಹಿಂದೂಜನಂಗಳಂ ಕರೆಯಿಸಿಯವರೊಳ್ ಮುಸಲ್ಮಾನಕುಲವೆ ಹೆಚ್ಚೆಂದು ವಾದಿಸುತ್ತಾ ಎಲ್ಲಾ ಜಾತಿಯವರಂ ತನ್ನ ಮತಕ್ಕೆ ತರಲೆಂದು ಖಾದಿರಲಿಂಗರಿಗೆ ಒಂದು ಕಾಲಿಂಗೆ ವಿಭೂತಿ ರುದ್ರಾಕ್ಷಿ ಗಂಧ ಜನಿವಾರ ಜಂಗು ಮತ್ತೊಂದು ಕಾಲಿಂಗೆ ನಾಮ ತಿರಚೂರ್ಣ ಗೋಪೀಚಂದನ ಮೊದಲಾದ ಷಣ್ಮತದ ಲಾಂಛನಂಗಳೆಲ್ಲಮಂ ಕಟ್ಟಿ ಚತುರ್ದಿಕ್ಕಿಗು ನಾಲ್ವರ್ ಶಿಷ್ಯರ್ ಸಹಿತ ಕೆಲವು ಮಂದಿ ಕುದುರೆ ಸಹಿತಂ ಪೂರ್ವ ಪಶ್ಚಿಮ ದಕ್ಷಿಣೋತ್ತರ ದೇಶಂಗಳಿಗೆ ಕಳುಹಿಸಿ ವಾದದಿಂದೆಲ್ಲಾ ಮತಂಗಳಂ ಜಯಿಸಿ ಎಲ್ಲರಂ ತನ್ನ ಮತಕ್ಕೆ ತಪ್ಪುದೆಂದು ಕಳುಹಿಸಲವರ್ ಪೋದರ್.

ಅವರೊಳ್ ದಕ್ಷಿಣದೇಶಕ್ಕೆ ಬಂದ ಖಾದಿರಂ ೫೦೦ ಜನ ಪಕೀರರ್ವೆರಸಿ ಬಂದಲ್ಲಿದ್ದ ದೇವರಂ ಸೆರೆಬಿಡಿಸುವೆನೆಂದು ದೇವಾಲಯಮಂ ಕೆಡಹಿಸುತ್ತಾ ಎಲ್ಲಾ ಮತಂಗಳಂ ನಿರಾಕರಿಸುತ್ತ ಹಂಪೆಗೆ ಬರುವಲ್ಲಿ ಪಂಪಾವತಿ ಕೇಳಿ ವೀರಶೈವವನಳಿಯುತ್ತಿದಾನೆ. ಅವನೊಡನೆ ವಾದಮಂ ಮಾಡಿ ಗೆಲ್ದು ಬಪ್ಪುದೆಂದು ತನ್ನ ಗುರುವಪ್ಪ ಬಸವಲಿಂಗದೇವನೆಂಬವನೈನೂರ್ವರ್ ಶಿಷ್ಯರ್ ಸಹಿತವಾಗಿ ಕಳುಹಿಸಲವರ್ ಬಂದು ವಿನಯಂ ಮಾಡಿ ಲಿಂಗಮಂ ಕಾಲೊಳಂ ಧರಿಸಲಹುದೆ ಮಹಾಪಾತಕವಪ್ಪುದರಿಂ ಬಿಟ್ಟು ಕಳೆವುದೆಂದು ಪೇಳೆ ನಿನ್ನ ಮಾತಿಗೆ ಬಿಡುವೆನಲ್ಲೆಂದು ಪಂಪರಾಜನಲ್ಲಿಗೆ ಬಂದು ನಾನು ಪಾದಶಾಯಿ ಗುರು ಸಕಲ ಮತಂಕಗಳ್ ಕ್ಷೀಣವಾದ್ದರಿಂದ ಮೊಣಕಾಲಿಂ ಮೇಲಕ್ಕೆ ಬರಲು ಯೋಗ್ಯವಲ್ಲ. ಈ ಅರ್ಥಕ್ಕೆ ಶಾಸ್ತ್ರವಿದೆ ನಿಮ್ಮ ಹಿಂದೂಜನರಲ್ಲಿ ಘಟ್ಟಿಗರಾದವರಂ ಕರೆಸಿ ತೋರುವೆನೆಂದೊಡೆ ಚತುರಾಚಾರ್ಯರಂ ಬರಿಸೆಯವರ ಮಾತಿಂಗೆ ಪ್ರತ್ಯುತ್ತರಮಂ ಕೊಡಲಾರದೆ ಪರಾಜಿತರಾಗೆಯರಸಿನ ಗುರುವಾದ ಬಸವಲಿಂಗದೇವನೆಂಬಂ ಶಿವಭಕ್ತಿಯೊಳ್ ಬೇಡರ ಕಣ್ಣಯ್ಯನ ಸಮಾನ ದೃಢಚಿತ್ತನಪ್ಪುದರಿಂ ಮಾರ್ಕೊಂಡು ನೀವು ಬಲಿಷ್ಠರಾಗಿ ಸ್ವವಾಕ್ಯಸ್ಥಾಪನೆ ಮಾಡುವುದರಿಂದೆಮಗೆ ಬಪ್ಪುದಿಲ್ಲಾದರೇನಾಯ್ತು; ನಮ್ಮ ಲಿಂಗ ನಿಮ್ಮ ಕಾಲ ಮೇಲೆ ಮೆರೆಯದಂತೆ ತೆಗೆಯಬೇಕೆಂದಾಗ್ರಹಿಸಿ ನುಡಿವುದುಂ ಲಿಂಗ ನಿಮ್ಮದೆಂತಪ್ಪುದಾದರೆ ನಾ ಕಟ್ಟಿದ ಲಿಂಗಮಂ ತೊರೆಯೊಳಿಕ್ಕುವೆಂ ನಿಮ್ಮ ೫೦೦ ಜನರ ಲಿಂಗಮಂ ಪೊಳೆಯೊಳಿಕ್ಕಿ ನಿಮ್ಮದಾದರೆ ನೀವು ಕರೆದು ತೆಗೆದುಕೊಳ್ಳಿ ಎಂದು ಪ್ರತಿಜ್ಞೆಗೆಯ್ದೆಲ್ಲರುಂ ನೀರೊಳ್ ಮುಳುಗಿ ತಂತಮ್ಮ ಲಿಂಗಮಂ ನೀರೊಳಿಕ್ಕಿ ತಡಿಯೊಳ್ ಕುಳಿತು ಮೂರು ದಿವಸಂಬರಂ ತಮ್ಮ ಭಕ್ತಿಯಿಂ ಮಂತ್ರ ತಂತ್ರಾದಿಗಳಿಂ ಬರಿಸಲಶಕ್ಯಮಾಗೆ ಖಾದಿರಲಿಂಗಂ ತನ್ನೆಡಗೆಯ್ಯಂ ನೀಡಿ ಕರೆಯೆ ಕೈಗೆ ಬಂದ ಲಿಂಗಂಗಳೈನೂರಂ ತನ್ನೆಡದ ಕಾಲ ಕೆಳಗಿಟ್ಟು ಬಲಗಯ್ಯಂ ನೀಡಿ ತಾನು ಕಟ್ಟಿದ್ದ ಲಿಂಗಮಂ ಕರೆದು ಕಾಲಿಗೆ ಕಟ್ಟಿಕೊಂಡಲ್ಲಿ ಜಂಗಮರೆಲ್ಲಾ ಉಪವಾಸದಿಂದ ಹೊಳೆಗೆ ಬೀಳಲೆಂದಿಪ್ಪುದುಂ ಆ ಐನೂರು ಲಿಂಗಂಗಳಂ ತನ್ನೆಡಗಾಲಿಂ ಒತ್ತರಿಸಿ ಬಿಟ್ಟುಪೋದನು. ಜಂಗಮರಾ ಲಿಂಗಮಂ ತೆಗೆದು ಪ್ರತಿಷ್ಠೆಗೈದು ಕ್ರಿಯಾಸಮೇತಂ ಕಟ್ಟಿಕೊಂಡು ಪೋಗಿ ಪಂಪಾಪತಿಗೆ ವೀರಶೈವಮಂ ಮುಳುಗಿಸಿದಿರಿ ಎಂದು ವಿಷಣ್ನಚಿತ್ತನಾಗಿರೆ ಆ ಊರೊಳು ಬಸವನೆ ಬಿಟ್ಟಿದ್ದು ಗೂಳಿಯಂ ಪಕೀರರಟ್ಟಿಕೊಂಡು ಬರೆ ಖಾದಿರಲಿಂಗನು ಆ ಗೂಳಿಯನಟ್ಟು ತಿಂದುಬಿಡಿ ಎನಲ್ ಅದನಟ್ಟು ತಿನ್ನಲಾಗಿ ಪಂಪಾವತಿ ವಿರೂಪಾಕ್ಷದೇವರೆಂಬ ಜಂಗಮ ಸಹಿತಂ ಪೋಗಿ ನಮ್ಮ ಬಸವನಪ್ಪ ಗೂಳಿಯಂ ನಿಮ್ಮ ಫಕೀರರ್ ತಿಂದುಬಿಟ್ಟರಂತೆ ಇಂಥಾ ಅನ್ಯಾಯಮುಂಟೆ ಎಂದು ಕೇಳಲಾಗಿ ನಿಮ್ಮ ಬಸವನಾದರೆ ಕರೆಯಿರಿ ಬರುತ್ತದೆ ಎನಲಾಗಿ ಕೊಂದು ತಿಂದರ್ ಇನ್ನೆಂತು ಬಪ್ಪುದು? ನೀವು ಇಂಥಾ ದ್ರೋಹಮಂ ಮಾಡಬಾರದೆಂಬುದುಂ ಪಕೀರರಿಂದಾ ಗೂಳಿಯ ಎಲುವಂ ತಲೆಯಂ ತರಿಸಿ ತೆರೆಯೊಳಿಟ್ಟು ಮಂತ್ರಿಸೆ ತೆರೆಯಿಂದ ಗುಟುರಿಕ್ಕುತ್ತಾ ಗೂಳಿ ಬಂದಂತೆ ಸರ್ವರಿಗೂ ಕಾಣೆ ಜನರೆಲ್ಲಾ ವಿಸ್ಮಯಂಬಡೆ ಪಂಪರಾಜನ ಗುರುವೆಂದನಿದೆಲ್ಲಂ ಈ ಫಕೀರಂ ಮಾಡುವ ಗಾರುಡಮಲ್ಲದೆ ಸತ್ಯಮಲ್ಲೆಂದು ತಿರಸ್ಕರಿಸಿ ನುಡಿವುದುಂ ಕೋಪದಿಂದ ನಿನ್ನ ಗುರುವಿಗೂ ನಮಗೂ ಬಿಟ್ಟು ನೋಡೆಂದು ಒಂದು ಗೋಣಿಯ ಎರಡು ಅಂಡಿಗೆಯೊಳ್ ಸುಣ್ಣದ ಹರಳಂ ತುಂಬಿಸಿಯದರೊಳ್ ಈರ್ವರುಂ ಪೊಕ್ಕು ದಳೆಯಿಸಿ ಅದಂ ಹೊಳೆಯೊಳ್ ಹಾಕಿದೊಡಿರ್ವರ ಸತ್ಯಮಂ ಕಾಣಲಪ್ಪುದೆನಲಂತೆಗೆಯ್ವೆನೆಂದವನ ಮಾಯಮನರಿಯದೆ ಸತ್ಯವಿರ್ದಡೆ ಗೆಲ್ವುದೆಂದಾ ಮೇರೆಯೊಳೆ ಸುಣ್ಣದಂಡಿಗೆಗಳೊಳೀರ್ವರುಂ ಪೊಕ್ಕು ದಳೆಯಿಸಿಕೊಂಡು ಅದಂ ಹೊಳೆಯೊಳ್ ಹಾಕಿದೊಡೀರ್ವರಲ್ಲಿ ಜಂಗಮಂ ಬೇಯೆ ಖಾದಿರಲಿಂಗಂ ಮಾಯಾದಿಂದಾ ಸುಣ್ಣಮಂ ತಿನ್ನುತ್ತೇ ಜಲಕ್ರೀಡೆಯನಾಡುತ್ತುಂ ಬರಲೆಲ್ಲರುಂ ವಿಸ್ಮಿತರಾಗಿ ವಿಷಣ್ಣರಾಗೆ ಪಾದಶಾಹಿಯ ಮಂದಿ ಕುದುರೆ ಸಹವಾಗಿ ಬಂದು ಪಂಪಾ ಲಕ್ಷ್ಮೇಶ್ವರದೊಳ್ ಅಗ್ಘಣಿಹೊನ್ನಯ್ಯ ಮಾಡಿಸಿದ್ದ ಶಿವಾಲಯಂಗಳ ತೆಗೆದು ಕಲ್ಯಾಣ ಪಟ್ಟಣಮಂ ಕಟ್ಟಿಗೆಗೇರಿಯಂ ಮಾಡಿ ದೊಡ್ಡ ದೊಡ್ಡ ವೀರಶೈವರ ಮಠಮಂ ಮುರಿದು ಕೆಲಂಬರಂ ಚೇಲೀಮಾಡಿ ಎಲ್ಲಾ ಜಾತಿಗಲಂ ಚೇಲೀಮಾಡಲೆಂದು ಪಾದಶಾಯಿಗೆ ಪೇಳೆ ಸಕಲ ಮತಸ್ಥರಂ ವಾದದಿಂದೊಳಗುಮಾಡಿ ಮೊದಲು ಈ ಡಿಳ್ಳಿ ಸಂಸ್ಥಾನದೊಳೆ ಅವರವರಂ ಸಮ್ಮತಿಯಿಂದಂ ಚಿಪ್ಪಳಿದ ಮುತ್ತಿನಂತೆ ಹಿಂದೂಜನಮಂ ತುರುಕರಂ ಮಾಳ್ಪೆನೆಂದ ಸ್ಮಾರ್ತ ಶೈವ ವೈಷ್ಣವ ಜೈನರಾದಿ ಎಲ್ಲಾ ಮತದವರಂ ಕರೆಸಿ ಮುಸಲ್ಮಾನಕುಲವೆ ಎಲ್ಲಾ ಕುಲಕ್ಕು ದೊಡ್ಡದೆಂದು ತನ್ನ ಗುರುವಂ ಗೇಣುದ್ದದಿಂ ಮೇಲೆ ನಿಂತಂತೆ ತೋರಿಸುತ್ತುಮಿದಕ್ಕೆ ನಿಮ್ಮ ಮತ ಹೆಚ್ಚಾದರೆ ತೋರಿಸಿ ಇಲ್ಲ ನಮ್ಮ ಮತಮಂ ಕೈಕೊಳ್ಳಿಮೆಂದು ಮೂರು ಮೂರು ದಿವಸಕ್ಕೊಮ್ಮೊಮ್ಮೆ ಕರೆದು ಕೇಳುತ್ತುಮಿರೆ ಮತ್ತೊಂದು ದಿವಸಂ ವಿಷ್ಣು ಮನುಷ್ಯ ಸುಖ ದುಃಖಮನನುಭವಿಸುವುದಂ ಈಶ್ವರಂ ಭಿಕ್ಷಮಂ ಬೇಡಿದನದರಿಂದೆಂತು ದೇವರೆಂಬುದು? ಅರಿಪ ಅಲ್ಲಾ ಖುದ ಬೇರಿಪ್ಪನಾತಂ ದೇವಂ. ಮುನ್ನ ಶಿವನ ಬಳಿಯಿಂದಾ ಖುರಾನು ಬಪ್ಪುದುಂ ನೋಡಿ ಪರಿಣಮಿಸಿದವರ್ ಪರಂಗಿಗಳಾದರ್. ಒಡಂಬಡವರ್ ಹಿಂದೂಗಳಾದರ್. ಓದಿಸಿ ಕೇಳಿದವರ್ ಕರ್ಣಾಟತುರುಕರಾದರ್. ನಂಬಿದವರು ಮಕ್ಕಾಪಟ್ಟಣದ ತುರುಕರಾದರವರಿಂ ತುರುಕೆರೆ ಹೆಚ್ಚೆಂಬುದುಂ ಪದ್ಮನೆಂಬನೆಂದಂ ಎಲ್ಲರಿಂ ತುರುಕರು ಹೆಚ್ಚಾದೊಡಂ ಈಗಲೆಲ್ಲಾ ಜಾತಿಯು ಸಮಾನಾದುದರಿಂ ಭೂಮಿಯೊಳ್ ವರ್ತಿಪರದೆಂತೆನೆ.

ಶಿವಂ ಜಾತಿಯನೆಲ್ಲಾ ತೂಗಿನೋಡಲಾಗಿ ಕೆಲಂಬರ್ ಬಹಳ ಕಡಿಮೆಯಾಗೆ ಲಿಂಗಮೆಂದು ಕಲ್ಲಂ ಕಟ್ಟಿದಂ. ಕೆಲಂಬರಿಗೆ ಸ್ವಲ್ಪ ತಗ್ಗಿದುದರಿಂ ಜನಿವಾರದಾರಾ ಹಾಕಿದಂ. ಮತ್ತಮುಳಿದ ಜಾತಿಗಳೆಲ್ಲಕ್ಕಮವರವರಿಗೊಂದೊಂದು ಚಿಹ್ನೆಯನಿಟ್ಟು ಸಮಮಂ ಮಾಡಿ ತುರುಕರಂ ತೂಗಲೆಲ್ಲರಿಂದಧಿಕಮಾಗೆ ಇವರ್ ಎಲ್ಲಾ ಜಾತಿಗಿಂತಲು ಹೆಚ್ಚಾಗಿರೆ ಸರ್ವಸಮಾನವಾಗಬೇಕೆಂದು ಕಿಂಚಿತು ಚರ್ಮಮಂ ತೆಗೆದು ಮುಂಜಿಯಂ ಮಾಡಿ ಸಮಾಮಾಡಿದನೆಂಬುದುಂ ಕೋಪಿಸಿ ನಿಮ್ಮ ನಿಮ್ಮ ದರ್ಶನಾಂಕಮಂ ತೆಗೆದು ಜಾತರೂಪಾದೊಡೆಲ್ಲರಿಂದಧಿಕವಾಗಿ ಬಳಿಕ ಮುಂಜಿಯಾಗಿ ನಡುವಣ ಚರ್ಮಮಂ ಕಳೆದೊಡೆ ಸಮಮಾಗುವಿರೆಂದು ಚೇಲಿಮಾಡಿಸಿಕೊಳ್ಳಿಯೆಂದು ನುಡಿವುದುಂ. ಇಲ್ಲಿ ಜೈನರ್ ಪೂರ್ವಮತಮೆಂಬುದರಿಂದವರಂ ವಿಚಾರಿಸಿ ಒಪ್ಪಿಸಿದೊಡಾವೆಲ್ಲರುಂ ಒಪ್ಪಿಕೊಳ್ಳುತ್ತಿದೇವೆ ಎನಲಾಗಿ ಮೂರು ನಾಲ್ಕು ಜನ ಜೈನರಿರ್ದೊಡವರಂ ಕರೆದು ಎಲ್ಲಾ ಮತಂಗಳೊಳ್ ಆದಿಮತ ಜೈನಮತವೇ ದೊಡ್ಡದೆಂದು ತಿಳಿದಂಥಾವರು ಹೇಳುತ್ತಿದಾರೆ ಎಂಬುದು ಪಾದಶಾಯಿಯದಕ್ಕೆ ಸಾಕ್ಷಿ ಶಾಸನವೇನಿಪ್ಪುದದಂ ತೋರಿಸುವುದೆನೆ ನಮ್ಮ ಗುರುಗಳ್ ನೂರು ಗಾವುದದಲ್ಲಿದ್ದಾರೆ ಅವರಂ ಕರೆಸಿ ಕೇಳಿದರೆ ಹೇಳುತ್ತಿದಾರೆ ಎನೆ ಅವರು ಬರುವುದಕ್ಕೆಷ್ಟು ದಿವಸ ಬೇಕೆಂಬುದುಂ ಎರಡು ಮೂರು ತಿಂಗಳು ಬೇಕೆಂದೊಡೆ ಎರಡು ತಿಂಗಳೊಳ್ ನೀವು ಪೋಗಿ ಕರೆದುಕೊಂಡು ಬಂದು ಸಾಕ್ಷಿ ತೋರಿಸಿದರೆ ಸಮ, ಅದರ ಮೇಲೊಂದು ದಿನಂ ಮೀರಿದಲ್ಲಿ ಮುಸಲಮಾನರಾಗುತ್ತೇವೆಂದು ಕೈ ಕಾಗದವನ್ನು ಬರೆಸಿಕೊಂಡು ನಿಮ್ಮ ಗುರು ಬಂದು ನಮ್ಮ ಗುರುವಂ ಜಯಿಸಲೆಮ್ಮ ಗುರುವಿಗೆ ಚಿನ್ನದ ಕಡಿವಾಣಮಂ ಸೇರಿಸಿ ಮೇಲೆ ಕುಳಿತು ಮಸೀತಿಪರ್ಯಂತ ಪೋಪುದಿಲ್ಲದೊಡೆ ನಮ್ಮ ಗುರು ಪೋಪುದೆಂದು ಭಾಷೆಗೆಯ್ದುಬಿಡೆ ಯೋಚಿಸಿ ಪೆನುಗೊಂಡೆ ಲಕ್ಷ್ಮೀಸೇನ ಭಟ್ಟಾರಕಂ ವಿದ್ಯಾನುಶಾಸನಮಂ ಪಾರ್ಶ್ವಕಲ್ಪ ಜ್ವಾಲಿನೀಕಲ್ಪ ಪದ್ಮಾವತಿಕಲ್ಪ ಶಾರದಾ ಕಲ್ಪ ಕಾಮಚಾಂಡಾಳಿಕಲ್ಪ ರಕ್ತ ಚಾಮುಂಡೇಶ್ವರಿಕಲ್ಪ ಬಾಹುಬಲಿಕಲ್ಪ ಮತಂಗೇಶ್ವರಿಕಲ್ಪ ಕೂಷ್ಮಾಂಡೀಕಲ್ಪ ನಗಾರ್ಜುನಕಲ್ಪ ಬ್ರಹ್ಮವಿದ್ಯೆ ಬೀಜಕೋಶ ಮೊದಲಾದವಂ ನೋಡಿ ತಿಳಿದು ಜಾಲಿನೀಕಲ್ಪದ ಮಣಿವಿದ್ಯಮಂ ಸಾಧಿಸಿ ಷಟ್ಕರ್ಮದೊಳ್ ಬಲಿಷ್ಠರಾಗಿಪ್ಪವರ ಕರತಪ್ಪುದೆಂದತಿವೇಗದಿಂದೊಂದು ತಿಂಗಳ್ಗೆ ಬಂದಾ ಗುರುಗಳಂ ಕಂಡು ವಂದನೆಗೆಯ್ದು ತಾವು ಬಂದ ಕಾರ್ಯಮಂ ಪೇಳಿ ಬೇಗದಿಂ ಪೋಗಲೆಂಬುದು, ಆದೊಡಾಗಲಿ ಹೋಗಬಹುದೆಂದೇಳೆಂಟು ದಿವಸಂ ಕಳೆಯೆ ನಾವು ತಲುಪುವನ್ನೆಗಂ ಗಡಿಯ ದಿವಸಮಿರುವುದೆಂದೊಡಾಗಲಿ ಎನ್ನುತ್ತಂ ಪದಿನೈದು ದಿವಸಮಾಗೆ ನಾವಿನ್ನಿವರಂ ಕರೆದುಕೊಂಡೆಯ್ದುದರೂ ಎಲ್ಲರನ್ನು ಚೇಲಿಮಾಡದೆ ಬಿಡನೆಂದು ಬಹುಚಿಂತಾಕ್ರಾಂತರಾಗಿ ನಮ್ಮ ಜೀವಮಂ ತೊರೆವುದೆ ನಿಶ್ಚಯಮೆಂದಿರ್ದ

ಮತ್ತೊಂದು ದಿನಂ ಗುರುಗಳ್ ಕರೆದೆಷ್ಟು ದಿವಸಮಿಪ್ಪುದೆನಲಿನ್ನು ಮೂರು ದಿವಸಮೆಂಬುದು ಆ ದಿವಸಮಿರ್ದು ಮರುದಿವಸ ಸಂಜೆಯೊಳ್ ತಮ್ಮ ಸಾಮಾನು ಪುಸ್ತಕ ಮೊದಲಾದುವಂ ಸ್ವಪುರದ ಬಹಿರ್ಭಾಗದೊಳ್ ಗುಡಾರಮನಿಕ್ಕಿಸಿಯದರೊಳಿರಿಸಿ ಶಿಷ್ಯರ್ ಕರೆಯಬಂದ ಮನುಷ್ಯರ್ವೆರಸಿ ಪವಡಿಸಿರ್ದು ದೂರಾಗಮನವೆಂಬ ವಿದ್ಯದಿಂ ಮುಹೂರ್ತದೊಳಗಾಗಿ ಡಿಳ್ಳಿಯ ಬಹಿರ್ಭಾಗಮನೆಯ್ದಿ ಉಷಃಕಾಲದೊಳೆದ್ದು ಗುರುಗಳ್ ಕ್ರಿಯಾನುಷ್ಠಾನಮಂ ಮಾಡುತ್ತಿಪ್ಪ ಸಮಯದೊಳೆಲ್ಲರುಂ ಎದ್ದು ಪೊರಗೆ ಬಂದೀಕ್ಷಿಸೆ ಡಿಳ್ಳೀಪುರಮಂ ಕಂಡಾಶ್ವರ್ಯಂಬಟ್ಟು ಬದುಕಿದೆವೆಂದು ಗುರುಗಳ್ ಬಂದೂರ ಸಮೀಪದೊಳಿರ್ದಪರೆಂದು ಸುರತಾಳಂಗರಿಪಲವರಂ ಬರಿಸಲೆಂದು ಚಿನ್ನ ಬೆಳ್ಳಿ ತಟ್ಟೆಗಳೊಳ್ ಗೋಮಂಸ ಮೊದಲಾದ ನಾನಾ ಬಗೆಯಡಗಂ ತುಂಬಿಸಿ ಪಟ್ಟೆದುಕೂಲಂಗಳನಾಚ್ಛಾದಿಸಿ ಕಾಣಿಕೆಯೆಂದು ಕಳುಹಿಸಲವಂ ಕಂಡು ದೂರದೊಳೆ ಇರಿಸಲೆಂದದಕ್ಕೆ ಪುಷ್ಪಾಕರ್ಷಣಂಗೆಯ್ದು ನಾವಾಸ್ಥಾನಕ್ಕೆ ಬಪ್ಪರಲ್ಲ, ಏನು ಹೇಳಿ ಕಳುಹಿಸಿಕೊಟ್ಟಾಗ್ಯು ಪ್ರತ್ಯುತ್ತರಮಂ ಕೊಡಲಾದೀತು. ಪ್ರತಿಕಣಿಕೆಕೊಟ್ಟರೆಂದಾ ತಂದ ಭಜನಂಗಳಂ ಸುರಿತಾಳ ಗೊಪ್ಪಿಸಿ ಬನ್ನಿಯೆಂದು ಬಂದ ಮನುಷ್ಯರಂ ಕಳುಹಿಸಲಾ ವಾರ್ತೆಯಂ ಪಾದಶಾಯಿಗೆ ಪೇಳಿ ತಟ್ಟೆಗಳಂ ಮುಂದಿಕ್ಕುವುದುಮಾ ವಸ್ತ್ರಂಗಳಂ ತಾನೆ ತೆಗೆದು ನೋಳ್ಪಿನಂ ಜಪಾ ಜಾಜಿ ಕರವೀರ ಚಂಪಕಾ ಮಲ್ಲಿಕಾ ಕುಂದ ನಂದ್ಯಾವರ್ತಾದಿ ನಾನಾ ಜಾತಿ ಕುಸುಮಂಗಳತಿಪರಿಮಳದಿ ಬಿರಿಮುಗಳ್ಗಳಿಂ ತೋರ್ಪುದುಮಾಶ್ಚರ್ಯಂಬಟ್ಟು ನಾಳೆ ನಾನೆ ಬರುವೆನೆಂದು ಮರುದಿವಸಂ ಸ್ವಗುರು ಸಮೇತಂ ಗೂಟಮಿಲ್ಲದ ಪಾವುಗೆಯಂ ಮೆಟ್ಟಿ ಬಪ್ಪಾಗಳಂತರಿಕ್ಷಮೆಂಬ ವಿದ್ಯೆಯಿಂ ಭೂಮಿಯಿಂ ಮೇಲಿಮ್ಮೊಳ ದೊಳು ಪದ್ಮಾಸನದೊಳ್ ಕುಳ್ಳಿರ್ದ ಜೈನಮಿನಿಪಂಗೆ ಸುರಿತಾಳಂ ನಮ್ಮನಾಗಿ ಸಲ್ಲಾಂ ಮಾಳ್ಪುದುಂ ಧರ್ಮಲಾಭಮೆಂದು ಪರಸೆ ಗುರುವೆರಸಿ ಕುಳ್ಳಿರ್ದು ಮತಂಗಳೆಲ್ಲಕ್ಕು ಆದಿ ಜೈನಮತಮುತ್ಕೃಷ್ಟಮೆಂಬುದಕ್ಕೆ ಶಾಸನಗುರಿತು ಸಾಕ್ಷಿಯಂ ತೋರಿಸುವುದೆಂಬುದುಮದು ಮಹಾಘೋರಾರಣ್ಯದೊಳುಂ ಪರ್ವತಂಗಳೊಳುಂ ಸಮುದ್ರದೊಳು ಮಿಪ್ಪುದರಿಂದಿಲ್ಲಿ ತೋರ್ಪುದೆಂತುಮೆಂದಾ ಮುನಿಗಳ್ಗೆಂದನಾವಾವೆಡೆಯೊಳೆಂದೊಡೆ ನೀಲಗಿರಿಯ ಪರ್ವದೊಳಂ ಬೆಳ್ಗೊಳದೊಳು ರುಮ್ಮಿಯ ಉತ್ತರ ಮಹಾ ಅರಣ್ಯದೊಳುಂ ಪಶ್ಚಿಮಸಮುದ್ರದೊಳುಮಿಪ್ಪವಲ್ಲಿಗೆ ಪೋಗಲು ಕಾಣಲಪ್ಪುವುದೆನೆ ಆದೊಡೆ ಪಶ್ಚಿಮ ಸಮುದ್ರಮನೆಯ್ದಿ ನೋಳ್ಪೆವೆಂದದಕ್ಕೆ ತಕ್ಕ ಸಾಮಾಗ್ರಿಸಹಿತ ಮರುದಿವಸಂ ಪಯಣಂ ಮಾಡಿ ಕೆಲವು ದಿವಸಕ್ಕೆ ಸಮುದ್ರಮನೆಯ್ದಿ ತಡಿಯೊಳ್ ಬೀಡಂ ಬಿಟ್ಟು ಪಶ್ಚಿಮಾಭಿಮುಖದೆ ನೋಡೆಂದು ತೋಱೆಸೆ ಉಡಿಯಂ ಮುಟ್ಟಲಿರ್ದ ಸಮುದ್ರಮಂ ಮುಗಿಲಂ ಮುಟ್ಟುವ ಉತ್ತಮಾಂಗದಿಂ ಶುದ್ಧಸ್ಫಟಿಕಕಾಂತಿಯಿಂ ತೊಳಗಿ ಬೆಳಗುತ್ತಿರ್ದ ಪುರುಪರಮೇಶ್ವರನ ಪ್ರತಿಬಿಂಬಮಂ ತೋಪುದುಮತ್ಯಾಶ್ಚರ್ಯಮಾಗೆ ನೋಡಿ ಸಮೀಪಕೆಯ್ದಿ ನೋಡಲೆಂದು ದೋಣಿಗುರಾಬು ಮುಂತಾದವಂ ತರಿಸಿಮವರೊಳೆ ಸಮುದ್ರಮಂ ಪೊಕ್ಕು ನಡೆವುದುಮಾ ಭಟ್ಟಾರಕರ್ ವಸ್ತ್ರಚೌಕಮಂ ನೀರಮೇಲಿಕ್ಕಿ ಜಲಸ್ತಂಭದಿಂ ಕುಳಿತು ಮೇಲೊಂದು ವಸ್ತ್ರಮಂ ಛಾಯೆಗೆಯ್ದು ಆದಿ ಬ್ರಹ್ಮನ ಪ್ರತಿಬಿಂಬದ ಸನ್ನಿಧಿಗೆಯ್ದೆ ಸುರತಾಳಂ ಆಪ್ತರೊಡನೆ ಸಮೀಪಕ್ಕೆಯ್ದಲೆಂದು ಬಹಳ ಪೊತ್ತು ನಡೆಸಿದಾಗ್ಯೂ ನೂರು ಮಾರಿಂದೊಳಗೆ ಪೋಗಲೀಯದಿರೆಯಾ ದೇವನ ನೆಳಲುಪ್ಪಂದಸಮುದ್ರಂ ಸ್ವಾದೋದಕಮಪ್ಪುದುಂ ಭೈತ್ರಂಗಳು ಬಲಕಿಕ್ಕಿ ಪೋಗೆ ಶಂಭಮುಂ ಎಡದಿಂ ಪೋಗೆ ನಷ್ಟಮಪ್ಪುದುಂ ಇದಿರೊಳ್ ಪ್ರತಿದಿನಂ ಸೂರ್ಯೋದಯಮಾಗಲೊಂದು ಕಮಲಂ ವಿಕಸಿತಮಾಗೆ ಆ ಸಮಯದೊಳೊಪ್ಪುವುದುಂ ದೇವ ದಾನವರೆಯ್ದಿ ಪೂಜಿಸುವುದುಂ ಮೊದಲಾದತಿಶಯಮಂ ತೋರಿಸೆ ಮಹದಾಶ್ಚರ್ಯಂಬಟ್ಟು ದೇವಪ್ರತಿಮೆಯ ಪ್ರಮಾಣಮಂ ನೋಳ್ಪೆನೆಂದು ಸೂತ್ರದ ದಾರಮಂ ತರಿಸಿ ಅಳೆಯಿಸಲೆಷ್ಟಳೆಯುತ್ತಾ ಪೋಗಲಷ್ಟಷ್ಟು ಪೆರ್ಚುತ್ತುಂ ಬರಲನೇಕ ವಾರಂ ಅಳೆದಾಗ್ಯೂ ಪ್ರಮಾಣಮಂ ಕಾಣದೆ ಎಲ್ಲರು ಸಾಷ್ಟಾಂಗಪ್ರಣತರಾಗಿ ಡಿಳ್ಳಿಗೆ ಬಂದು ಜಿನಮತಮೆ ಆದಿಯೆಂದು ತನ್ನ ದೇಶಂಗಳ್ಗೆ ಪರವಾನೆ ಬರೆಸಿ ಭಟ್ಟಾರಕರಂ ಪೂಜಿಸಿ ಶ್ವೇತಚ್ಛತ್ರ ಚಾಮರ ಸಿವಿಗೆ ಸಿಂಹ ಶಾರ್ದೂಲ ಮಕರ ಮುಂತಾದ ಬಿರುದಂ ಕೊಟ್ಟು ಮೆರೆಯಿಸಿ ತಾನು ಮಾಡಿದ ಪ್ರತಿಜ್ಞೆಗೆ ಚಿನ್ನದ ಕಡಿವಾಣಮಂ ಕೊಟ್ಟೆಮ್ಮ ಗುರುವಿಗೆ ಹಾಕಿ ನಡೆಸುವುದೆನೆ ನಿಮ್ಮ ಭಾಷೆ ಸಂದುದೀ ಕಡಿವಾಣಮೆಮಗೆ ಬಿರಿದಾಯ್ತೆಂದು ಪೇಳಿದರಂದಿಂದಾ ಅನ್ವಯಕ್ಕೆ ವೆಂಕಟಿ ಕಡಿವಾಣವೆಂದು ಬಿರುದಾಯಿತು.

ಮತ್ತಂ ಪಾದಶಾಯಿ ಜೈನಪುರಾಣಮನೋದಿಸಿ ಕೇಳ್ದು ತನ್ನ ಭವಮಂ ಪೇಳಿಮೆಂದು ಬಹುಬಗೆಯೊಳ್ ಕಾಡಿದೊಡವಧಿಯಲ್ಲೆಂತು ಪೇಳುವೆವೆಂದು ಚಿಂತಿಸುವಾಗಲವರ್ಗೆ ಸ್ವಪ್ನವಾಗಲಾ ಕ್ರಮದೊಳೆ ಪೇಳ್ದರ್. ಸುರಾಷ್ಟ್ರದೇಶದೊಳೊರ್ವನವಧೂತ ಬಹುದಿವಸಂ ನಿರ್ವಾಣದಿಂ ತಪಂಗೆಯ್ದು ಪವಾಸದಿಂ ಬರುತ್ತುಮೊಂದೊರೊಳೊರ್ವ ಕುರುಬಂ ಕುರಿಯಮಾಂಸಮನಡುವಲ್ಲಿಗೆ ಪೋಗಿ ಗ್ರಾಸಮಂ ಬೇಡಿ ಕೈಯನೊಡ್ಡಿದೊಡಾತನಾ ಮಾಂಸಮನಿಕ್ಕಲುಂಬಲ್ಲಿ ಒಂದಿಲಿಯನಟ್ಟಿ ಬಪ್ಪ ಸರ್ಪನಾ ಸನ್ಯಾಸಿಯ ಪಾದಾಂಗುಷ್ಠಮಂ ಪಿಡಿದೊಡೆ ವಿಷಂ ಪೂರಿಸೆ ಸತ್ತು ಈ ಡಿಳ್ಳೀಪಟ್ಟಣದ ಪೊರವೊಳಲ ಕುರುಬಂ ಕರಿಗನೆಂಬಂಗೆ ಮಣಿಕನೆಂಬ ಮಗನಾಗಿ ಬೆಳೆದು ಪಿತನೊಡನೆ ಕುರಿಗಳಂ ಕಾಯಲ್ ಪೋದೊಡೆ ಪಿತ್ತಂ ಪಾಲಂ ಕರೆದು ಕರಗದೊಳದ ತುಂಬಿಕೊಟ್ಟು ಮನೆಗೆ ಕಳಿಪೆ ಬರುವಲ್ಲಿ ಒಂದು ಮಾವಿನ ಮರದಡಿಯೊಳ್ ಧ್ಯಾನ ಮೌನಾನುಷ್ಠಾನದೊಳಿರ್ದ ಜಿನಮುನಿಯಂ ಕಂಡಡ್ಡಗೆಡೆದು ಸ್ವಾಮಿ ಯೋಗಿಗಳೆ ಮೂರು ದಿವಸದಿಂದಿಲ್ಲೆ ಇದ್ದೀರಿ, ಪಸುವನೆಂತು ಪೈರಿಪುದು. ಈ ಹಾಲನಾದರು ತೆಗೆದುಕೊಳ್ಳಿರೆಂದವರ ಬಳಿಯೊಳಾ ಕರಗಮನಿಸಿರಿ ಮನೆಗೆ ಬರೆ ರಾತ್ರಿಯೂಟದೊಳ್ ಪಾಲನೇನ ಪಾಡಿದೆಯೆಂದಾಗ್ರಹದಿಂ ಮಗನಂ ಪೊಯ್ದೊಡಂ ಪೋಗಿ ಪೊರಗೊಂದು ಬೇಲಿ ಮರೆಯೊಳೊರಗಿರಲೊಂದು ಪುಲಿ ಬಂದು ತಿನ್ನೆ ಸತ್ತು ಮೂವತ್ತೈದು ವರ್ಷದೊಳೆ ಬಂದು ಪುಟ್ಟಿ ಪಾದಶಾಯಾದಿರೆಂದು ಪೇಳ್ವುದುಮಾ ಕುರುಬನಂ ಬರಿಸಿ ಕೇಳಲವಂ ಬಂದು ಮೂವತ್ತೈದು ವರ್ಷದೊಳೆನ್ನ ಮಗಂ ಹಾಲ ತರದುದಕ್ಕೆ ನಾಂ ದಂಡಿಸೆ ಹೋಗಿ ಹೊಲದ ಬೇಲಿಯೊಳ್ ಪುಲಿ ಪಿಡಿಯೆ ಸತ್ತನೆಂದು ಪೇಳೆ ನಿಶ್ಚಯವೆಂದು ನಂಬಿದನು.

ಮತ್ತಂ ಕೆಲವು ದಿವಸದಿಂ ಮೇಲೆ ದಂಡಿನೊಳ್ ದೇವೇಂದ್ರಕೀರ್ತಿಗಳಂ ಮನ್ನಿಸಿ ತನ್ನಲ್ಲಿಯೆ ಇರಿಸಿಕೊಂಡಿರ್ದಂ. ಮತ್ತೊಂದು ತಿನಂ ಮೀಸೆಯುಳ್ಳನಾರೆನಲೊಬ್ಬನೆಂದಂ ಹೆಣ್ಣುಮಕ್ಕಳಂ ಪಡೆಯದನೆಂದೊಡೆ ಮೆಚ್ಚುಗೊಟ್ಟಂ. ತನ್ನ ಪೆಂಡತಿಗೆಂದ ನೀಂ ಬಸುರಾಗಿರ್ಪೆ ಕೆಂಪಾಗಿರ್ದ ಗಂಡುಮಗುವ ಹಡೆಯದಿರೆ ನಿನ್ನ ಕೊಂದುಹಾಕುವೆನೆಂದು ಪ್ರತಿಜ್ಞೆಯಂ ಮಾಡಿದೊಡಾಕೆ ತವರುಮನೆಗೆ ಪೋಗಿ ಕಪ್ಪಾದ ಗಂಡುಮಗುವಂ ಪೆತ್ತು ಚಿಪ್ಪಲಿಗಂಗಿತ್ತು ಆತನ ಮಗು ಕೆಂಪಾಗಿರಲದಂ ಕೊಂಡುಬರೆ ಕೆಲವಾನುದಿವಸಕ್ಕಾ ಮಗಂ ಬೆಳೆದು ಅಮಿಲದಾರ ಚೋಪದಾರ ಮಾಮಲದಾರ ವಜ್ಜೀವೀರರೆಂದು ಹುಡುಗರೆಲ್ಲರಂ ಕಟ್ಟಿಕೊಂಡಾಡುತ್ತಿರಲದಂ ದೇವೆಮದ್ರಕೀರ್ತಿಗಳ್ ನಿನ್ನ ಮಗನೆಂದು ಪೇಳಲ್ ಕರೆಯಿಸಿ ಸುವರ್ಣದಭರಣಮನಿಕ್ಕೆ ನಿರಾಜಿ ಪೊದಕೆಯಂ ಪೊದಿಸೆ ಆಡುತ್ತಿರಲೊಬ್ಬ ಭಟ್ಟಂ ಬಂದು ಪೊಗಳೆ ತಾನು ಪೊದೆದಿರ್ದ ವಸ್ತ್ರಮೆಲ್ಲಮಂ ಕೊಟ್ಟು ಬರೆ ಪಿತಂ ಕೋಪಿಸೆ ಬೆಳಗಾಗೆ ಪೋಗಿ ಆಭರಣಂಗಳೆಲ್ಲಮಂ ಭಟ್ಟರ್ಗೆ ಕೊಟ್ಟು ಬರೆ ಶಾಭಾಸೆಂದನು.

ಆ ಊರೊಳೊರ್ವ ವರ್ತಕನ ಮಗಳೊಡನೆ ಮತ್ತೊಬ್ಬ ಶೆಟ್ಟಿಯ ಮಗನು ಪುದುವಾಳುತ್ತಿರಲ್ ಯಾರು ಯಾರು ಎಷ್ಟು ಬಗೆ ಹೇಳಿದಾಗ್ಯೂ ಬಿಡದಿಪ್ಪುದುಂ ಪಾದಶಾಯಿಗೆ ಅರಿಕೆ ಮಾಡಲವರಂ ಹಿಡಿತರಿಸಿ ಬೇಸಗೆಯ ಬಿಸಿಲೊಳ್ ನಿಲಿಸಿರಲಾಗಿ ಹುಡಿ ಕಾದು ತಡವರಿಸುತ್ತಿದ್ದ ಮಿಂಡಗಾರನ ಕಾಲ ಕೆಳಗೆ ತಾನುಟ್ಟ ಸೀರೆಯನೆಲ್ಲಾ ಪರಿದು ಹಾಸುತ್ತಿರಲದಂ ನೋಡಿ ಜನ್ಮಾಂತರದ ಸಂಬಂಧವೆಂದಿರ್ವರಂ ಅಗಲಿಸದೆ ಕಳುಹಿಸಿಕೊಟ್ಟನು. ದೇವೆಂದ್ರಕೀರ್ತಿಗಳ್ ಆಚಾರಮೆಂಬ ಶಾಸ್ತ್ರಮನೋದುತ್ತಿರೆ ಪಟ್ಟದ ಕುದುರೆ ಹೊಲೆಯರಿಂ ಮೈಸೇವೆಯಂ ಮಾಡಿಸಿಕೊಳದೆ ಪುಲ್ಲಂ ನೀರಂ ಕುಡಿಯದಿರೆ ಮುನಿಯಂ ಕೇಳಿ ಉತ್ತಮ ಜಾತಿಗಳಿಂ ಸೇವೆಗೊಟ್ಟು ಶೋಧಿಸಿದ ನೀರು ಒಣಗಿದ ಹುಲ್ಲುಮಂ ಕುಡೆ ಕೊಂಡು ಪರಿಣಮಿಸುತ್ತಿರ್ದುದು. ಒಬ್ಬ ಜಮಾದಾರ ಸವಾರಿ ಪೋಗುತ್ತ ಮಾರ್ಗದೊಳು ಬಪ್ಪ ಶ್ರುತಿ ಮವುರಿಯವರಂ ಕಂಡು ಕರೆದು ಗೀತಾ ಬೋಲೆನಲಾ ಮೌರಿಕಾರಂ ತಾನ ಮಾನ ಗಮಕದಿಂ ತನ್ನ ಶಕ್ತಿಯಂ ಮೀರಿ ಅಂದ ಬಂಧುರನಯದಿಂದೊಂದು ಜಾವಪರ್ಯಂತರಕ್ಕು ಮೆಚ್ಚಿಸಲೆಂದು ಬಾಜಿಸಿದೊಡೆ ಅಚ್ಛಾ ಎಂದು ತಾನು ಪೊದ್ದಿರ್ದ ಪಟ್ಟೆಹಚ್ಚಡಮಂ ಶ್ರುತಿಯವಂಗೆ ಪೊದ್ದಿಸಿ ಸೂಲು ಬಿಡದೆ ಊದಿದನೀತನೆ ಘಟ್ಟಿಗನೆಂದು ಪೋಗುತ್ತಿರೆ ಮೌರಿಗಂ ತನಗೇನಾದರು ಕೊಡುವುದೆಂದು ಕಾಡಿದೊಡವನ ಮೌರಿಯಂ ಕಿತ್ತು ತನ್ನಾಳಿನಿಂ ಕಲ್ಲ ಮೇಲೆ ಬಡಿಸಿ ಪುಡಿಯಾಗಲಾತಂಗೆ ಒಳಗುದ್ದು ಹೊರಗುದ್ದುಮನಿಕ್ಕಿಸಿ ಕಳೆದಂ. ಒಬ್ಬ ವಿಸ್ವಾಂಸಂ ಕೆಲವು ದಿವಸದಿಂ ಡಿಳ್ಳಿಯಂ ನೋಡಲೆಂದು ಪೋಗಿ ಅಲ್ಲಿರ್ದು ಇಂತೆಂದಂ

ವೃ || ಮಸೀತಿ ಶತ ಸಂಕುಲಾತ್ ಪಿಶಿತರಾಶಿ ಪೂರ್ಣಾಪಣಾತ್
ಧ್ವನದ್ಯವನ ಭೀಷಣಾದ್ರಟದನೇಕ ಬಂದೀ ಜನಾತ್
ಸುವರ್ಣ ಸಮಕೇಂಧನಾದ್ದಧಿ ಘೃತಾಗ್ರ ಗಣ್ಯೋದಕಾತ್
ಸದಾ ಶಬರಕೇತನಾದಪಸರಾಮ ಡಿಳ್ಳೀಪುರಾತ್ ||

ಮತ್ತಿತ್ತಲ್ ಹರಿಹರರಾಯನೆಂಬೊಂ ರಾಜ್ಯಮನಾಳುತ್ತುಂ ಹರಿಹರಮೆಂಬ ಪುರಮಂ ಮಾಡಿ ಹರಿಹರದೇವರಂ ಸ್ಥಾಪಿಸಿ

ವೃ || ಪಾಯಾತ್ಕುಮಾರಜನಕಾಖ್ಯ ಉಮಾವಿಲಾಸ
ಶಂಖ ಪ್ರಭಾಶ್ಚನಿಧನೇಶ ಗವೀಶಯಾನಃ
ಗಂಗಾ ಚ ಪನ್ನಗಧರಾಶ್ಚ ಪಿನಾಕಸತ್ತ (?)
ಆದ್ಯಕ್ಷರೇಣ ಸಹಿತೋ ರಹಿತೋ ಭವಂತು (?) ||

ಎಂದು

ವೃ || ಅಳಿನೀಲಾಳಕ ಅಗ್ನಿಭಾಸುರಜಟಾ ಲೋಲೇಕ್ಷಮುಗ್ರೇಕ್ಷಣಂ
ತಿಲಕಾರ್ಧಂ ನಯನಾರ್ಧಮುನ್ನತ ಕುಚಂ ರಮ್ಯೋರುವಕ್ಷಸ್ಥಲಮ್
ವಲಯಾಂಕಂ ಪಣಿಕಂಕಣಂ ಸುವಸನಂ ವ್ಯಾಘ್ರಾಜಿನಂ ಲೀಲಯಾ
ಲಲಿತಂ ಭೀಷಣಮರ್ಧನಾರಿಘಟಿತಂ ರೂಪಃ ಶಿವಃ ಪಾತುವಃ ||

ಎಂಬುದರಿಂದರ್ಧನಾರೀಶ್ವರನಂ ಹರಿಹರನೆಂಬುದವಾ ಯುಕ್ತಿಯೆಂದು ವೀರ ಶೈವರ್ ಚರ್ಚಿಸುವುದುಂ ಹರಿಹರಮಹಾರಾಯಂ ವಿಷ್ಣುಗಮೀಶ್ವರಂಗಂ ಭೇದಮಿಲ್ಲ ಅಜ್ಞಾನಿಗಳ್ ಭೇದಮಂ ಮಾಡಿ ಇಹಪರಮಂ ಕೆಡಿಸಿಕೊಂಬರೆಂದು ಸೂತ್ರಮಂ ಪೇಳಿ ಕೆಲಂಬರನೊಪ್ಪಿಸಿದಂ. ಕೆಲಂಬರ್ ಈಶ್ವರನೇ ಸರ್ವೋತ್ಕೃಷ್ಟನಾತನೆ ಗತಿಮತಿಗೆ ಕಾರಣಮೆಂದು ನಂಬಿದರ್. ಕೆಲಂಬರ್ ವಿಷ್ಣುವೆ ಸಕಲ ದೇವರ್ಗೆ ಮುಖ್ಯಂ, ಈಶ್ವರಂ ಗೌಣಮೆಂದರ್.

ಈ ಹರಿಹರರಾಯನು ೩೬ ವರ್ಷ ರಾಜ್ಯವಾಳಿದಂ. ಬಳಿಕ ವೀರಬುಕ್ಕರಾಯಂ ೭ ವರ್ಷವಾಳಿದಂ. ಮತ್ತಂ ಇಮ್ಮಡಿ ಹರಿಹರರಾಯಂ ೧೦ ವರ್ಷವಾಳ್ದಂ ಭೋಜ ವಿಕ್ರಮಂ ೫ ವರ್ಷವಾಳ್ದನಿಂತೈವತ್ತಾರು ವರ್ಷಂ ಸಲೆ ಹೊಯಿಸಳದೇಶಾಧಿಪತಿ ಎರಡನೆ ಬುಕ್ಕರಾಯಂ ರಾಜ್ಯಪಾಲನೆ ಮಾಳ್ಪಲ್ಲಿ ಮೊದಲು ಕೆಲವಾನು ದಿವಸದಂದು ಕಂಚಿಯೊಳ್ ಶೈವರು ಸ್ಥಾನಮಂ ಮಾಡಿದನಂತರ ರಾಮಾನುಜಮತಸ್ಥಾನಮಂ ಮಾಡಿ ಜಿನಕಂಚಿ ಶಿವ [ಕಂಚಿ] ವಿಷ್ಣುಕಂಚಿಯೆಂದು ಮೂರಾದವರಲ್ಲಿ ಶೈವರೊಳ್ ಅಪ್ಪಯ್ಯ ದೀಕ್ಷಿತರುಂ ದೇವಾಂತಾಚಾರ್ಯರೀರ್ವರು ವಿದ್ವಾಂಸರಾಗತಿಪ್ರಬಳರಾಗಿರೆ ಅಪ್ಪಯ್ಯ ದೀಕ್ಷಿತಂ ಶತಕ್ರತುವಂ ಮಾಳ್ಪೆನೆಂದು ಬಹಳ ಮೇಕೆ ಆಡುಗಳ್ ಮೊದಲಾದವಂ ಹತಿಸಿಬೇಳೆ ಕೆಲವು ಬ್ರಾಹ್ಮಣರ್ಗೆ ಲಿಂಗಧಾರಣೆಯಂ ಮಾಡಿಸಿ ವೀರಶೈವಮಂ ಪ್ರಕಟಿಸುತ್ತಿಪ್ಪುದುಂ, ವೇದಾಂತಾಚಾರಿಗಳ್ ವೀರವೈಷ್ಣವರಂ ತೆಂಗಲೆ ವಡಗಲೆ ಎಂದಾದಿಯಾಗಿ ಚಾತಾಳಪರ್ಯಂತಂ ನಾನಾ ಭೇದಮಾಗೆ ಪೊಲೆಯರ್ಗೆ ತಿರುಕುಲಮೆಂದು ದಾಸರಂ ಪ್ರಕಟಂ ಮಾಡಿ ಬಿಳಿಯ ಕಲ್ಲುಬೆಟ್ಟದೊಳ್ ರಂಗಾಲಯೋದ್ಧಾರಣಂಗೆಯ್ದು ತಿರುಕುಲದಾಸರಿಂ ಪೂಹಿಸಿ ವೈಷ್ಣವಮತೋದ್ಧಾರಕರಾಗಿರ್ದು ಅಪ್ಪಯ್ಯದೀಕ್ಷಿತರು ಮಾಡುವ ಯಜ್ಞಮಂ ದೂಷಿಸೆ ಒಬ್ಬರೊಳೊಬ್ಬರ್ಗೆ ವಾಗ್ವಾದಮಾಗೆ

ವೃತ್ತ || ಯಜ್ಞೇ ಮಂತ್ರಮುಖೇನ ಮೇಷಹನನಾತ್ತ ಸ್ಯೈವ ಮಾಂಸಂ ಪುನ
ಶ್ಚೇಚನ್ಮಾತ್ರಸುಸೇವನಾಚ್ಚ ಸಫಲಮ ಸ್ವಗಮ ಚ ಗಚ್ಛಂತಿ ಯೇ
ನಿತ್ಯಂ ಕೋಟಿಮಿತಂ ಪಶುಂ ಚ ವಿವಿಧಂ ಹತ್ವಾ ಯಥೇಷ್ಟಂ ಪುನ
ರ್ಜಗ್ಧ್ವಾ ತೇ ಯವನಾಶ್ಚ ಶೂದ್ರನಿಚಯಾಃ ಮೋಕ್ಷಂ ನ ತೇ ಯಾಂತಿ ಕಿಮ್
||

ಅಜಂ ಹತ್ವಾ ಸುರಾಂ ಪೀತ್ವಾ ಕೃತ್ವಾ ಪಲಲ ಭೋಜನಮ್
ಯದಿ ಸ್ವರ್ಗಮವಾಪ್ನೋತಿ ನರಕಂ ಕೇನ ಗಮ್ಯತೇ
ನಿಶ್ಚೇಷ್ಟಾನಾಂ ವಧೋ ರಾಜನ್ ಕುತ್ಸಿತೋ ಜಗತೀಪತೇ
ಕ್ರತುಮಧ್ಯೋಪನೀತಾನಾಂ ಪಶೂನಾಮಿವ ರಾಘವ
||

….ಕ್ರತುಂಧ್ವಂಸೀ ಮಹೇಶ್ವರಃ
ವಿರಿಂಚಿರ್ಜಗತಃ ಕರ್ತಾ ಸಹರ್ತಾ ಗಿರಿಜಾಪತಿಃ
ರಕ್ಷಕಃ ಪುಂಡರೀಕಾಕ್ಷ ಇತ್ಯೂಚುಃ ಶ್ರುತಿವೇದಿನಃ
||
ಏಕಾಮೂರ್ತಿಸ್ತ್ರಯೋಭಾಗಾಸ್ಸತ್ಯಂ ಸ್ಯಾದೀದೃಶಂ ವಚಃ
ಬ ಶೈವೋ ವಂದತೇ ವಿಷ್ಣುಂ ಹರಿಭಕ್ತಾಸ್ತು ನೋ ಶಿವಮ್
||

ಎಂಬುದುಂ ವಿಷ್ಣುವಿನ ಭಕ್ತಿ ವಿಶೇಷಮಂ ಪೇಳ್ದರ್

ವೃತ್ತ || ಯೂಯಂ ಕೇ ಹರಿಪಾದವಂದನರತಸ್ತ್ರಿ ಆದಪದ್ಮಾಂತರಾ
ನಾದ ಚ್ಛಿದ್ರವಿಲಂವಿಕೇಶವಿಲುಠಲ್ಲಿಕ್ಷಾಭವಂತೋ
sಪಿ ಕೇ
ಶ್ರೀ ಮದ್ವೈಷ್ಣವಮೇಢದಂಡವಿಗಲನ್ಮೂತ್ರೋತ್ಥ ದೂರ್ವಾಂಕುರ
ಗ್ರಾಸಾಸಕ್ತಖರಕ್ಷತಕ್ರಿಮಿಭುಜಾಂ ದಾಸಾನುದಾಸಾವಯಮ್
||

ಗ್ರಾಮೇ ಸಿಂಹಸಮಾ ರಣೇ ಪಶುಸಮಾಃ ದೇಶಾಂತರೇ ಜಂಬುಕಾಃ
ಆಹಾರೇ ಬಕ ಭೀಮಸೇನಸದೃಶಾಃ ಶ್ವಾನಸ್ಸಮಂ ಮೈಥುನೇ
ರೂಪಂ ಮರ್ಕಟವತ್ ಪಿಶಾಚಲಿಖಿತಂ ಕ್ರೂರಾಃ ಬಲಾ ನಿರ್ದಯಾಃ
ಕಾರ್ಯಾರ್ಥೇ ಮೃದುತಾ ಸಮಾಪ್ತ ಕರಿಣಾ ಏತದ್ವಿಧಾ ದ್ರಾವಿಡಾಃ
||

ಶ್ಲೋಕ || ದ್ರಾವಿಡಾಶ್ಚ ಹತಾ ವಿಪ್ರಾಸ್ತದ್ಧಾರಾವಾರಯೋಷಿತಃ
ಲಾಲನಾದಿ ಪ್ರಬಂಧೇನ ಶ್ರುತಿಸ್ಮೃತಿಹರೋ ಭವೇತ್
||
ದ್ರಾವಿಡೇಷು ಚ ಸರ್ವೇಷು ತ್ರಯೈವ ಖಲು ಸಾಧವಃ
ಅಜಾತಶ್ಚ ಮೃತಶ್ಚೈವ ಯತ್ರ ಚಿತ್ರೇ ವಿಲೇಖಿತಃ
||

ಎಂದಿಂತು ಕೆಲಂಬರ್ ನುಡಿಯುತ್ತಿರ್ದರಿತ್ತ ಬೆಳ್ಗುಳತೀರ್ಥವಂ ವೈಷ್ಣವರ್ ಕೆಲಂಬರ್ ಕಿಡಿಸುತ್ತಿರಲಲ್ಲಿರ್ದ ಜೈನರ್ ನಿತ್ತರಿಸಲಾರದೆ ಇಂತೆಂದರ್:

ವೃತ್ತ || ಬಂದುದನರ್ಘ್ಯಕಾಲ ಬಲುಗಾರರೊಳಾದುದು ಸಾಲಂ
ನಿಂದುದು ಶತ್ರು ಮಧ್ಯ ನಿಲಲಾರದೆ ಪೋದೊಡೆ ಹೀನ ಸಂಧಿ ತನುವಿಗೆ
ಬಂದುದು ವ್ಯಾಧಿ ಪಿರಿದಾದ ದರಿದ್ರತೆ ಪೇಳ್ವರಂದಿನ ರಾಯರಿಲ್ಲ ಜನ
ರ್ಗೊಂದಡಸಿದರೇಳಡಸಿತೆಂಬ ನೀತಿ ನಿಶ್ಚಯಂ (?)
||

ಎಂದು ಬುಸವಿಸಟ್ಟಿಯೆಂಬಂಗೆ ಪೇಳ್ವುದುಂ ಆತಂ ಸಿಂಗಾಚಾರಿ ಎಂಬ ತರುಣ ಪ್ರಾಯದಹಂಕಾರಿಗೆ ನಿಮ್ಮ ಕಡೆ ತುಂಟಜನರು ನಮ್ಮ ಜಿನಾಲಯಂಗಳ ಘಾತ ಪಾತಮಂ ಮಾಡುತ್ತಿದಾರೆ. ಅವರಿಗೆ ಬುದ್ಧಿ ಹೇಳಿ ನಿಲಿಸುವುದೆನೆ ಕುಚೇಷ್ಟೆಯಿಂ ಕುಹಕಂಗಳಂ ಮಾಡಿದನದಕ್ಕೆ

ಕಪೀರಪೊಶ್ಚೋಕಾಪಿಶ | ಯೇನ ಮದೋನ್ಮತ್ತ ವೃಶ್ಚಿಕೇನಂ ಸಂದ
ಷ್ಷಮಪಿ ಚ ಪಿಶಾಚಗ್ರಸ್ತೋ
| ಕಿಂ ಬ್ರೂಮಶ್ಚೇಷ್ಟಿಕಂ ತಸ್ಯ ||

ಎಂಬುದರಿಂ ಮಿಥ್ಯಾದೃಷ್ಟಿಗಿದು ಸ್ವಭಾವಮೆಂದು ಬುಸವಿಶೆಟ್ಟಿಯೊರ್ವನೆ ರಾತ್ರಿಯೊಳ್ ಗಿರಿಯೊಳೊರಗೆ ಸಿಂಗಾಚಾರಿ ತೀಕ್ಷ್ಣ ಪುರುಷರಪ್ಪ ಹರಿದಾಸರ್ ಬಂದು ಕೊಲಲೆಂದು ಬರಲವರ್ಗೆ ಪೊಟ್ಟೆಶೂಲೆಯಿಂ ಕಾಣದೆ ಪೋದರು.

ವೃತ್ತ || ರಣೇವನೇ ಶತ್ರುಜಲಾಗ್ನಿ ಮಧ್ಯೇ | ಮಹಾರ್ಣವೇ ಪರ್ವತಮಸ್ತಕೇವ
ಸುಪ್ತಂ ಪ್ರಮತ್ತಂ ವಿಷಮೇಸ್ಥಿತಂ
| ವಾ ರಕ್ಷಂತಿ ಪುಣ್ಯಾನಿ ಪುರಕೃತಾನಿ ||

ಎಂಬುದರಿಂ ಮರುದಿವಸಂ ಶ್ರಾವಕವಿಪ್ತರ್ ಸಹಿತಂ ಬಂದು ಸಿಂಗಾಚಾರಿಯಂ ಕಾಣೆ ನಿಮ್ಮ ಜೈನಮತಮಂ ಕೆಡಿಸಹಬೇಕೆಂದು ನಮ್ಮ ಶಾಸ್ತ್ರವಿದೆಯೆನಲಾಗಿ ಜೈನಮತ ಮನಾವನಾದೊಡೆ ಪಾಲಿಪನಾತಂಗೆ ಸ್ವರ್ಗಮೋಕ್ಷಂ ಅದಕ್ಕಳುಪಿದಂಗನಂತ ಪಾಪ ಇಹದ ಕೇಡು ಪರದೊಳ್ ನರಕದುಃಖ ತಪ್ಪದೆಂದಾ ವೈಶ್ಯಶ್ರಾವಕದ್ವಿಜರ್ ಪೇಳೆ ಅದಕ್ಕೆ ದೃಷ್ಟ ಶ್ರತಾನುಭವಂಗಳೈನೂರು ಶ್ಲೋಕಮಂ ಪೇಳೆ ನಿಮ್ಮ ಮತಕ್ಕೆ ನೀವು ಬಲಾಮಾಡಿ ಶಾಸ್ತ್ರಮಂ ಮಾಡಿದ್ದೀರಿ ಎಂಬುದುಂ ಬುಸವಿಶೆಟ್ಟಿಯು ಜಿನಮತಶಾಸ್ತ್ರಮೆ ಸತ್ಯಮುಳಿದ ಮತಂಗಳ ಶಾಸ್ತ್ರಂ ಮಿಧ್ಯಮಿದಕ್ಕೆ ನಾಂದೀಪ್ಯಮಂ ಪಿಡಿವೆ ನಿಮ್ಮ ಮತಂ ಸತ್ಯಮೆಂದು ಪಿಡಿಯಿರೆನೆ ಚರ್ಚಿಸಿ ವೀರಬುಕ್ಕರಾಯನಾಸ್ಥಾನಕ್ಕೆ ಪೋಗಿ ಭಾಷಾಪತ್ರಿಕೆಯಂ ಬರೆದು ಬುಸವಿಶೆಟ್ಟಿ ತಪ್ತಮಪ್ಪ ಲೋಹದ ಗುಂಡು ಜಾಜ್ವಲ್ಯಮಪ್ಪುದನೆರಡು ಕೈಯಿಂದೆತ್ತಿ ಪೆಗಲೊಳಿಟ್ಟುಕೊಂಡು ಎರಡು ಘಳಿಗೆವರ ಮೈಮೇಲಾಡಿಸಿ ನೆಲಕ್ಕಿಡಲಾ ಭೂಮಿ ಯೊಳುರಿಯುತ್ತಿರಲೆಲ್ಲ ರಾಶ್ಚರ್ಯಬಡೆ ಸತ್ಯಮತಮೆಂದು ನಿಶ್ಚೈಸಿ ವೀರ ಬುಕ್ಕರಾಂ ತಿರುಮಲೆ ತಾತಯ್ಯಗಳ್ ಮೊದಲಾದೆಲ್ಲಾ ವೈಷ್ಣವರಂ ಬರಿಸಿ ನಿಮ್ಮ ಜನರು ಜೈನರ ಮೇಲೆ ಮಾಡಿದನ್ಯಾಯಮಂ ಪೇಳೆ ವಿಷಣ್ಣ ಚಿತ್ತರಾಗಿ ಎಲ್ಲರು ಜೈನ ಮತಮೇ ಸತ್ಯಮೆಂದು ತಿಳಿದು ತಾವು ಮಾಡಿದ ಕೃತ್ಯಕ್ಕೆ ಕೊಕ್ಕರಿಸೆ ಶ್ರೀ ವೈಷ್ಣವರೊಳ್ ಜೈನರಂ ಕೂಡಿಸಿ ಶಿಲಾಶಾಸನಮಂ ಬರೆಸಿದರದೆಂತೆಂದೊಡೆ ಸ್ವಸ್ತಿ ಸಮಸ್ತ ಪ್ರಶಸ್ತಿಸಹಿತಂ ಪಾಷಂಡಸಾಗರಮಹಾವಡಬಾಮುಖಾಗ್ನಿ ಶ್ರೀ ರಂಗರಾಜ ಚರಣಾಂಬುಜ ಮೂಲದಾಸಃ ಶ್ರೀ ವಿಷ್ಣುಲೋಕಮಣಿಮಂಡಪಮಾರ್ಗದಾಯೀ ರಾಮಾನುಜೋ ವಿಜಯತೇಯತಿ ರಾಜರಾಜಃ

ಶಕವರುಷ ೧೨೯೦ನೆಯ ಕೀಲಕ ಸಂವತ್ಸರದ ಭಾದ್ರಪದ ಶುದ್ಧ ೧೦ ಬೃಹಸ್ಪತ್ಯವಾರ ಸ್ವಸ್ತಿಶ್ರೀಮನ್ಮಹಾಮಂಡಳೇಶ್ವರಂ ಅರಿರಾಯವಿಬಾಡ ಭಾಷೆಗೆ ತಪ್ಪುವ ರಾಯರ ಗಂಡ ಶ್ರೀ ವೀರಬುಕ್ಕರಾಯಂ ಪೃಥ್ವೀರಾಜ್ಯಮಂ ಮಾಡುತ್ತಾ ಇರುವಲ್ಲಿ ಜೈನರಿಗೂ ಭಕ್ತರಿಗೂ ಸಂವಾದಮಾದಲ್ಲಿ ಆನೆಗೊಂದಿ ಹೊಸಪಟ್ಟಣ ಪೆನಗೊಂಡೆ ಕಲ್ಲೇಹದ ಪಣ್ಣದೊಳಗಾದ ಸಮಸ್ತ ಭವ್ಯನಂಗಳ್ ಬುಕ್ಕರಾಯಂಗೆ ಭಕ್ತರ್ ಮಾಡುವ ಅನ್ಯಾಯಂಗಳನ್ನು ಬಿನ್ನಹಂ ಮಾಡಲಾಗಿ ಕೋವಿಲ್ ತಿರುಮಲೆ ಪೆರುಗೋಯಿಲ್ ತಿರುನಾರಾಯಣಪುರಂ ಮುಖ್ಯವಾದ ಸಕಳಾಚಾರ್ಯರು ಸಕಳ ಸಮಯಿಗಳ್ ಸಕಳ ಸಾತ್ವಿಕರ್ ವೇಷ್ಟಿಕರ್ ತಿರುಮಣಿ ತಿರುವಿಡಿ ತಣೀರು ನಾಲ್ವತ್ತೆಂಟು ತಾತಯ್ಯಗಳು ಸಾವಂತಬೊವಕ್ಕಳು ತಿರುಕುಲ ಜಾಂಬವಕುಲದೊಳಾದದಿನ್ನೆರಡರೊಳಾದ ಒಳಗಾದ ಹದಿನೆಂಟುನಾಡ ರಾಯನು ಶ್ರೀ ವೈಷ್ಣವರ ಕೈಯೊಳು ಜೈನರ ಕೈವಿಡಿದು ಕೊಟ್ಟು ಈ ಜೈನದರ್ಶನಕ್ಕೆ ಪೂರ್ವಮರ್ಯಾದೆಯಿಟ್ಟು ಪಂಚಮಹಾ ವಾದ್ಯಂಗಳುಂ ಕಳಶ ಕನ್ನಡಿ ಶ್ವೇತಚ್ಛತ್ರ ಚಾಮರಂಗಳ್ ಮೊದಲಾದ ಬಿರುದುಗಳು ಸಲುವುವು, ಜೈನದರ್ಶನಕ್ಕೆ ಭಕ್ತರ ದೆಸೆಯಿಂದ ಹಾನಿವೃದ್ಧಿಯಾದೊಡಂ ವೈಷ್ಣವ ಹಾನಿವೃದ್ಧಿಯೆಂದು ಪಾಲಿಸಬೇಕು. ಈ ಮರ್ಯಾದೆಯೊಳು ಎಲ್ಲಾ ರಾಜ್ಯಂಗಳೊಳಿಹ ಬಸ್ತಿಗಳಿಗೆ ಶ್ರೀ ವೈಷ್ಣವರು ಶಾಸನವಂ ಕೊಟ್ಟು ಪಾಲಿಸುವರು. ಚಂದ್ರಾರ್ಕಸ್ಥಾಯಿಯಾಗಿ ವೈಷ್ಣವಸಮಯದವರು ಶ್ರೀ ಜೈನದರ್ಶನದವರನತ್ಯಾದರದಿಂ ರಕ್ಷಿಸಿಕೊಂಡುಬಹೆವು. ವೈಷ್ಣವರೂ ಜೈನರ ಒಂದು ಭೇದವಾಗಿ ಕಾಣಲಾಗದು. ಶ್ರೀ ತಿರುಮಲೆಯ ತಾತಯ್ಯಂಗಳು ಸಮಸ್ತ ರಾಜ್ಯದ ಭವ್ಯಜನಂಗಳನುಮತಂಗಳಿಂದ ಬೆಳ್ಗುಳದ ತೀರ್ಥದಲ್ಲಿ ದೇವರ ಅಂಗರಕ್ಷಣೆಗೋಸ್ಕರ ಸಮಸ್ತ ರಾಜ್ಯಂಗಳೊಳಗುಳ್ಳಂಥ ವೈಷ್ಣವರು ಜೈನರ್ಗೆ ಬಾಗಿಲುಗಟ್ಟೆಯಾಗಿ ಮನೆಗೆ ವರುಷ ೧ ಕ್ಕೆ ಒಂದು ಹಣವಂ ಕೊಟ್ಟು ಆಯತ್ತಿ ಬಂದ ಹೊನ್ನಿಂಗೆ ದೇವರ ಅಂಗರಕ್ಷಣೆಗೆ ೨೦ ಆಳನ್ನು ಸಂತವಿಟ್ಟು ಮಿಕ್ಕ ಹೊನ್ನಿಂಗೆ ಜೀರ್ಣ ಜಿನಚೈತಾಲಯೋದ್ಧರಣಕ್ಕೆ ಸೋದೆಯನಿಕ್ಕುವುದು.

ಈ ಮರ್ಯಾದೆಯಲ್ಲು ಚಂದ್ರಾರ್ಕರುಳ್ಳನ್ನಂ ತಪ್ಪಲೀಯದೆ ವರ್ಷವರ್ಷಂಪ್ರತಿ ಕೊಟ್ಟು ಕೀರ್ತಿ ಸಂಪಾದನೆಯನ್ನೂ ಪುರ್ಣವನ್ನೂ ಉಪಾರ್ಜಿಸಿಕೊಂಬುದು. ಈ ಮಾಡಿದ ಕಟ್ಟಳೆಯನ್ನು ಅವನಾನೊಬ್ಬನು ಮೀರಿದವನು ರಾಜದ್ರೋಹಿ ಸಂಘ ಸಮುದಾಯಕ್ಕೆ ದ್ರೋಹಿ, ತಪಸ್ವಿಯಾಗಲಿ ಗ್ರಾಮಣಿಯಾಗಲಿ ಈ ಧರ್ಮಮಂ ಕೆಡಿಸಿದರಾದೊಡೆ ಗಂಗೆಯ ತಡಿಯಲ್ಲಿ ಕಪಿಲೆಯನ್ನೂ ಬ್ರಾಹ್ಮಣನನ್ನೂ ಕೊಂದ ಪಾಪವನ್ನು ಪಡೆದುಪೋಪರು. ಸ್ವದಾತ್ತಂ ಪರದಾತ್ತಾಂ ವಾ || ಕಲ್ಲೇಹದ ಹೆಚ್ಚಶೆಟ್ಟಿ ಮಗ ಬುಸವಶೆಟ್ಟಿಗೆ ಉಭಯ ಸಮಯಗೂಡಿ ಸಂಘನಾಯಕ ಪಟ್ಟಮಂ ಕಟ್ಟಿದರು. ಈ ಶಾಸನಂ ಬೆಳುಗುಳದ ಭಂಡಾರಿ ಬಸದಿಯ ಬಲಗಡೆ ದಕ್ಷಿಣದೊಳುತ್ತರಾಭಿಮುಖವಾಗಿ ಸ್ಥಾಪಿಸಿದೆ. ಈ ಮೇರೆಗೆ ತಪ್ಪದೆ ಕೆಲವು ವರುಷ ನಡೆಸಿಬಂದರು.