ಅಂತಾ ವಾರ್ತೆಯಂರಾಜಗೃಹಾಧಿಪನಪ್ಪ ಶ್ರೇಣಿಕಮಹಾರಾಜಂ ಕೇಳ್ದು ತಾನುಂ ವರ್ಧಮನಾತೀರ್ಥಂಕರ ದರ್ಶನಕ್ಕೆ ಪೋಗಲೆಂದು ಪ್ರಯಾಣಂ ಮಾಳ್ವಾಗಳ್ ಜಠರಾಗ್ನಿ ಮೊದಲಾದಭಾಗವತರ್ಬಂದು ನೀಂಜೈನಿವಾಸಕ್ಕೆ ಪೋಗಲಾಗದು,ಪೋದವರ್ ಮರಳಿ ಬಪ್ಪುದಿಲ್ಲ.ಗೌಡಮಗ್ರಾಮದ ಇಂದ್ರಭೂತಿ ವಾಯುಭೂತಿಗಳ್ ಮೊದಲಾಗೆ ಬ್ರಾಹ್ಮಣರ್ ಪೋದವರಂ ರಾಜಪುರಿಯ ಜೀವಂಧರಮಹಾರಾಜನ ಕೂಡೆ ಪೋದ ಷಣ್ಮತಸ್ಥರುಂ ತಿರುಗಲಿಲ್ಲಾದ್ದರಿಂದ ಪೋಗಲ್ಬಾರದೆಂದು ನಿಲಿಸೆ ನಿಂದು ಚೇಳನಿಮಹಾದೇವಿಗೆ ಗರ್ಭಮಾಗಿ ಕ್ರಮದಿಂ ಗಜಕುಮಾರನುಂ ವಾರಿಷೇಣಕುಮಾರನುಂ ಕುಣಿಕನುಮೆಂಬ ಮೂವರ್ ಮಕ್ಕಳುಂ ಪುಟ್ಟಿ ಬೆಳೆಯಲೊಂದುದಿನಂ ಧರ್ಮರುಚಿಗಳ್ ಮೊಲದಾಗಿ ಮೂವರ್ ತಪೋಧನರ್ಮಾಸೋಪವಾಸದಮಾರಣೆಯಂ ಮಾಡಲೆಂದು ಬಾವಲಿಯಿಟ್ಟು ರಾಜವೀದಿಯೊಳ್ ಬರುತ್ತಿರಲರಸನುಂ ಚೇಳಿನಿಯುಂ ಬಂದು ನಿಲಸಲೆಂದು ಶುಚಿರ್ಭೂತರಾಗಿಅರಮನೆಯ ಬಾಗಿಲೊಳಿರ್ದವರಂ ತಡೆದು ತ್ರಿಗುಪ್ತಿಭ್ಯೋ ನಮಃಎಂದು ಹಸ್ತೋದಕಮನೆರೆಯಲವರಂತರಾಯಮಾಗಿ ಪೋಗಲಿದೇನುಕಾರಣಮೆಂದವರಂ ಬೆಸಗೊಳಲ್ ಚೇಳನಿಯುಂ ಪುರಜನ ಪರಿಜನಮುಂ ಸಹಿತ ವನಮನೆಯ್ದಿ ಪ್ರತ್ಯಾಖ್ಯಾಂನಗೊಂಡು ಯೋಗದೊಳಿರ್ದ ಮುನೀಶ್ವರರಂ ವಂದಿಸಿ ‘ಎಲೆ ಸ್ವಾಮಿಗಳಿರಾನಿಮಗೆ ಭಿಕ್ಷೆಗೆ ವಿಘ್ನಮಾದಕಾರಣಮಾವುದದಂ ಎಮಗೊಂದೊಂದು ಗುಪ್ತಿಹೀನಮಾಗಿರ್ದುದರಿಂದಿಲ್ಲದ ಗುಣಂಗಳಂ ಒಡಂಬಡೆ ನಮ್ಮ ಸಂಯಮಕ್ಕೂನುಮಪ್ಪುದರಿಂದಂತರಾಯಮಾಗೆ ಬಂದೆವೆನಲ್ ಶ್ರೇಣಿಕಂ ಅದೆಂತೆಂದು ಬೆಸಗೊಳೆ ಧರ್ಮಘೋಷಮುನಿಪತಿಗಳ್ ಇಂತೆಂದರ್.

ಆರ್ಯಾಖಂಡದ ದಂತಿಪುರದೊಳ್ ನಾವುಂ ರಾಜ್ಯವಾಳುತ್ತಿರ್ದು ಸೂರ್ಯಗ್ರಹಣದಿಂ ಪಗಲುಂ ರಾತ್ರಿಯಾಗಿ ತೋರಿದೊಡದಂ ಕಂಡು ನಿರ್ವೆಗಮಾಗಿ ತಪಮಂ ಕೈಕೊಂಡು ಗ್ರಾಮೈಕರಾತ್ರೇನಗರದೊಳ್ ಪಂಚರಾತ್ರೇ ಆಟವ್ಯಂ ದಶರಾತ್ರೇಎಂದೀ ಕ್ರಮದೊಳ್ ವಿಹರಿಸುತ್ತುಂ ಕೌಶಂಬೀಪುರಕ್ಕೆ ಬಾವಲಿಯನಿಡೆಯಾಪುರದರಸಿನ ಮಂತ್ರಿ ಗರುಡವೇಗಂ ತನ್ನ ಪೆಂಡತಿ ಸಮತಿವೆರಸಿ ನಿಲಿಸಿ ಕೈಯಂ ಶೋಧಿಸುವಲ್ಲಿ ಒಂದಗಳು ಭೂಮಿಗೆ ಬೀಳಲದನೀಕ್ಷಿಸುವಾಗಳಾ ಸಮತಿಯುಂಗುಟಂ ಪೂರ್ವದ ಪೆಂಡತಿ ಲಕ್ಷ್ಮೀಮತಿಯುಂಗಟಮಂ ಪೋಲ್ವುದೆಂಬ ಮನೋಭಾವಂ ಪುಟ್ಟಲ್ ಚರಿಗೆಯಂಬಿಟ್ಟು ಒಂದು ಪ್ರತ್ಯಾಖ್ಯಾನಗೊಂಡೆವದರಿಂ ಮನೋಗುಪ್ತಿಪೋದುದೆಂದರ್.

ಮತ್ತಂ ಜಿನಪಾಳರೆಂಬ ಮುನಿಗಳೆಂದರ್ ಭೂತಿಳಕಮೆಂಬ ಪುರದೊಳ್ ಜಿನಪಾಳನೆಂಬರಸನಾತನರಸಿ ಧಾರಿಣಿಯೆಂಬಳ್ ಸಹಿತಂ ರಾಜ್ಯಂಗೆಯ್ಯುತ್ತಿರ್ದು ಮಹೋಳ್ಯಾಪಾತದರ್ಶನದಿಂ ನಿರ್ವೇದಮಾಗೆ ಸಮಾಧಿಗುಪ್ತಾಚಾರ್ಯರಿಂ ಸರ್ವಸಂಗ ಪರಿತ್ಯಾಗಂಗೆಯ್ದು ಪುರದ ಬಹಿರುದ್ಯಾನದ ಚೈತ್ಯಾಗಾರದ ಮುಂಗಡೆಯೊಳ್ ಧ್ಯಾನಮೌನಾಷ್ಠಾನದಿಂ ಕಾಯೋತ್ಸರ್ಗಮಿರ್ದಾಗಳ್ ಜಿನಪಾಲನ ಪುತ್ರಂ ಪ್ರಜಾಪಾಲನ ಮಗಳ್ ಸುಕಾಂತೆಯಂ ಕೌಶಂಬಿಪುರದ ಚಂಡಪ್ರದ್ಯೋತಂಬೇಡಿದೊಡೀಯದಿರೆಬಂದು ಪುರಮಂ ಮುತ್ತವಾಗಳ್ ಪ್ರಜಾಪಾಲಂ ಮುನಿಗಳಂಬಂದಿಸಿ ಚಂಡಪ್ರದ್ಯೋತಂ ಬಪ್ಪನೆನಗಭಯಮಂ ದಯಗೆಯ್ವದೆಂದು ಪ್ರಣತನಪ್ಪುದುಂ ನಾಂ ಮೌನದೊಳಿರ್ದೊಡಾತನ ಪುಣ್ಯದೇವತೆಯಿಂಅಂಜವೇಡಾತನೆ ಬಿಟ್ಟುಪೋಪನೆಂಬ ಧ್ವನಿಯುಣ್ಮೆ ಕೇಳ್ದು ಪುರಮಂ ಪುಗಲಾ ಚಂಡಪ್ರದ್ಯೋತಂ ಬಂದು ಪ್ರಜಾಪಾಳನ ಸತ್ಯಮಂ ಸದ್ದರ್ಮಾಚರಣೆಯಂ ಕೇಳ್ದು ಧರ್ಮಪ್ರಭುವಿನೊಳ್ ಕಾಳೆಗಂ ಸಲ್ಲದೆಂದು ಬಿಟ್ಟುಪೋಗೆ ಕೆಲವಾನುಂ ದಿವಸದಿಂ ಚಂಡಪ್ರದ್ಯೋತನ ಸತ್ಯಮಂ ದಯಾಗುಣಮನರಿದು ಪ್ರಜಾಪಲಂ ಬರಿಸಿ ಸುಕಂತೆಯಂ ಕುಡೆ ಮದುವೆಯಾಗಿರ್ದು ಒಂದುದಿನಂ ಸುಕಾಂತೆಗೆ ಎಲೆ ಸತಿ ನಿನ್ನ ಪಿತಂಧರ್ಮಶೀಲನಾದುದರಿಂ ಬಿಟ್ಟೆನಲ್ಲದೊಡೆ ಪುರಂ ಪಾಳುಪ್ಪುದೆನೆ ಸುಕಾಂತೆಯೆಂದಳ್ ನಮ್ಮಗುರುಗಳಮ್ಮ ಪಿತಂಗಭಯನಿತ್ತರೆನೆ ‘ಅದೊಡೆವರ್ಗೆ ಸಮತಾಭಾವಮೆಂತಪ್ಪುದೆಂಬುದು ‘ ಮವರ ವಚನಮಲ್ಲೆಂದು ತಂದೆಯ ಪುಣ್ಯದೇವತೆ ಅವರಮುಂದೆ ಪೇಳ್ದುದೆಂ’ಬುದು ಮಾದೊಡಲ್ಲಿಗೆ ಪೋಗಿ ಕೇಳ್ವೆವೆಂದು ಬಂದೆಮ್ಮನಾ ದಂಪತಿಗಳ್ ವಂದಿಸಿ ಪೇಳ್ದುದೆಂ‘ಬದು’ ಮಾದೊಡಲ್ಲಿಗೆ ಪೋಗಿ ಕೇಳ್ವ’ ವೆಂದು ಬಂದೆಮ್ಮಾನಾ ದಂಪತಿಗಳ್ ವಂದಿಸಿ ಸದ್ಧರ್ಮಶ್ರನಣಾನಂತರಂ ‘‘ಎಲೆ ಸಂಯಮಿಯೆ ಪ್ರಜಾಪಾಲಂ ತನಗಭಯಮಂ ಬೇಡಿದೊಡಾತನ ಪುಣ್ಯದೇವತೆ ಅಭಯಮನಿತ್ತೆನೆಂದು ಪೇಳ್ದುದುಂಟೆ’ ಎಂಬುದುಮಾಗಳ್ ಮೌನಂಗೊಳ್ಳದೆ ಉಂಟೆಂಬ ವಚನಂ ಬಾಯಿಂ ಪೊರಮಡಲಾಗಳಿಮಗೆವಸನಗುಪ್ತಿ ಪೋದುದವರು ಮುನಿಗಳ್ ಸಾಕ್ಷಿ ನುಡಿದರೆಂದು ಪೋದರೆಂಬುದುಂ ಶ್ರೇಣಿಕಂ ಮೂರನೆಯ ಮಣಿಮಾಲರೆಂಬರಂ ಭವದೀಯ ಕಥನಮಂ ದಯಗೆಯ್ದುದೆನಲವರಿತೆಂದರ್.

ಮಾಣಿಮಂಥವಿಷಯದೊಳ್ ಮಣಿಮಂಥ ನಗರದೊಳ್ ಮಾನಿಮಾಲನೆಂಬರಸು ಪೆಂಡತಿ ಗುಣಮಾಲೆಯವರ್ಗಂ ಮಣಿಶೇಖರನೆಂಬ ಮಗನಾಗೆ ರಾಜ್ಯಂಗೆಯ್ಯುತ್ತಿರಲೊಂದುದಿನಸಂ ಗುಣಮಾಲೆ ತನ್ನರಸನ ಕೆನ್ನೆಯೊಳೆರಡು ಬಿಳಿಯ ಕೂದಲಂ ತೋರದೊಡೆ ಯಮದೂತರ್ ಬಂದರೆಂದರಿದದುವೆ ನಿರ್ವೇಗಮಾಗಿ ಮಣಿಶೇಖರಂಗೆ ರಾಜ್ಯಮನಿತ್ತು ಜ್ಞಾನಸಾಗರಮುಮುಕ್ಷುಗಳ ಸಮಕ್ಷದೊಳ್ ದೀಕ್ಷೆಗೊಂಡು ಪರಮಾಗಮದೊಳ್ ಪರಿಣತನಾಗಿ ದ್ವಾದಶವಿಧ ತಪಂಗೆಯ್ಯುತ್ತಿರ್ದುಜ್ಜಿಯಿನೀ ನಗರದ ಪೊರಗಣ ಮಸಣಭೂಮಿಯೊಳಿರಲಾಗಳ್ ಸೂರ್ಯಾಸ್ರಮಯಮಾಗಳ್ ಕಾರ್ಯೋತ್ಸರ್ಗಕ್ಕಾರದೆ ಮೃತಶಯ್ಯೆಯಿಂದಾಗಮೋಕ್ರದಿಂ ಪಟ್ಟಿರ್ದ ಕಾಷ್ಠದಂತೆ ಮಲಗಿ ಧ್ಯಾನರೂಢನಾಗಿರಲಾಗ ಕೃಷಚತುರ್ದಶಿಯಾದುದರಿಂದೊರ್ವಂ ಕಾಪಾಲಿಕಸಿದ್ಧಂ ಭೇತಾಳವಿದ್ಯೆಯಂ ಸಾಧಿಸಲ್ ಬಂದು ನರಶಇಖರರ್ಪರದೊಳ್ ಪಾಲನೆರೆದದರೊಳಕ್ಕಿಯನಿಕ್ಕಿ ಅಂಕೋಲೆ ಬೇರಂ ಪುದುಗಿಸಿ ತಂದದನಡಲ್ ಬಲೆಯಂ ಪೂಡಲೆರಡು ಪೆಣಂಗಳ ತಲೆಯನೆಮ್ಮ ತಲೆಯೊಳ್ ಸಮನಿಸಿ ಮೇಲೆಯಾ ಖಪ್ಪರೆಯನಿಟ್ಟು ಇಂದನಮಂಸಂಧಿಸಿಯಗ್ನಿಯಂಪೊತ್ತಿಸಿ ಬೇಯಿಸುತ್ತಿರಲಾಬೆಂಕಿಯಿಂ ಶಿರಸ್ಸಿನೊಂದು ಪಾರ್ಶ್ವಂ ಬೆಂದೊಡಾ ಉಪಸರ್ಗಮಂಮನದೊಳುಂ ಭಾವಿಸದೆ ಬಾಯಂ ಬಿಡದೆ ಸೈರಿಸುತ್ತಿರ್ದೊಡೆ ಭುಜಂ ಕಡುಕಾಯ್ದು ಬೇಯಲೆಮ್ಮ ಕೈ ಸಿಡಿದೊಲೆಯ ಮೇಲಣಖರ್ಪದಮಂ ಬಡಿಯೆ ಒಳಿಗಿರ್ದ ಪಾಲುಂ ಬೆಂಕಿಯೊಳೊಕ್ಕೊಡಾ ಸಿದ್ಧಂ ಬೆದರಿಪೋದನ್.

ಅನ್ನೆಗಂ ಸೂರ್ಯೋದಯಮಪ್ಪುದುಮಾ ಪೊಳಲ ಜಿನದತ್ತನೆಂಬ ವೈಶ್ಯಂ ಮುನಿಯಂ ಕೊಂಡುಪೋಗಿ ತನ್ನ ಗೃಹದ ಚೈತ್ಯಭವನದೊಳಿರಿಸಿ ಲಾಕ್ಷಾಮೂಲತೈಲದಿಂ ಬೆಂದ ಪುಣ್ಣಂ ಮಾಣಿಸಿದನದರಿಂ ಕಾಯಗುಪ್ತಿಯಿಲ್ಲದುದರಿಂ ಚರಿಗೆಯನುಳಿದೆವೆಂಬುದು ಶ್ರೇಣಿಕಂ ಕೇಳ್ದವರ ಸೂಕ್ಷ್ಮ ವ್ರತಚಾರಕ್ಕೆ ಮೆಚ್ಚಿ ದೃಢಚಿತ್ತನಾಗಿ ವೇದಕ ಸಮ್ಯಕ್ದೃಷ್ಟಿಯಾಗಿ ಮುನಿಗಳ್ಗೆರಗಿ ಪುರಮಂ ಪೊಕ್ಕಿರ್ಪುದುಂ ಚೇಳನಿಮಹಾದೇವಿಗೆ ಹಲ ಬೀಹಲ ಜಿನಶತ್ರು ಮೇಘಕುಮಾರರೆಂಬ ಮಕ್ಕಳಾಗಲಂತು ಕುಮಾರರೆಣ್ಣರುಂ ಬಳೆದು ಜವ್ವನವಾಂತು ಸಕಲ ಕಲಾಕುಶಲರಾದರ್.ಮತ್ತೊಂದು ದಿನಂ ಮರುಳ್ಗಳಂ ನೋಳ್ಪೆನೆಂದಭಯಕುಮಾರನ್ ರುದ್ರಭೂಮಿಯನೈದಿ ಆ ರಾತ್ರಿಯಲ್ಲಿಯಿರೆ ಅಲ್ಲಿ ಆಲದಮರದ ಮೂಲದೊಳ್ ವಿದ್ಯಮಂ ಸಾಧಿಸುತ್ತ ವಿಧ್ಯಾಧರಂ ಪೆರಗೆ ಪನ್ನೆರಡು ವರ್ಷದಿಂ ಸಾಧಿತಿವಿದ್ಯನಾಗದಿರ್ದವನಂ ಬೆಸಗೊಂಡಡಾ ಮಂತ್ರದೊಳ್ ಬಿಂದುವಿಸರ್ಗ ದೀರ್ಘಸ್ವರ ವ್ಯಂಜನ ಉದಾತ್ತಾನುದಾತ್ತ ಸ್ವರಿತ ಪ್ರಚಯಾದಿ ಮಾತ್ರಾಹೀನ ಸಂಧಿಗಳಂ ತಿರ್ದಿಕೊಡಲಾ ಷೋಡಶಾಕ್ಷರಿ ದಶಾಷ್ಟಪಂಚಾಕ್ಷರಿ ಜಪದಿಂದಗಲೆ ಆತಂಗೆ ಪೋಗಿರ್ದ ವಿದ್ಯಮೆಲ್ಲಂ ಕೈಸಾರಲಾತಂ ಅಭಯಕುಮಾರನಂ ಪೂಜಿಸಿ ಕೆಲವು ವಿದ್ಯಮಂ ಕೊಟ್ಟು ಪೋಗೆ ಕುಆರಂ ಪೊಳಲಂ ಪೊಕ್ಕು ಸುಖಮಿರ್ದಂ.

ಮತ್ತೊಂದು ದಿವಸಂ ವಾರಿಷೇಣಕುಮಾರಂ ಶ್ರಾವಕವ್ರತಮಂ ಕೈಕೊಂಡಿಪ್ಪುದರಿಂ ಚತುರ್ದಶಿಯೊಳುಪವಾಸದಿಂ ಶ್ಮಶಾನದೊಳ್ ರಾತ್ರಿ ಪ್ರತಿಮಾಯೋಗದೊಳಿರೆ ನಿಶಾಚರರ ಮನಯೊಳರ್ಘ್ಯವಸ್ತುವಂ ಕಳ್ದು ಬಪ್ಪಾಗಳ್ ಬರ್ಪ ತೀಕ್ಷ್ಣಪುರುಷಂ ಕಂಡಾ ವಸ್ತುವಂ ವಾರಿಷೇಣಕುಮಾರನ ಮುಂದಿಕ್ಕಿ ಪೋಗಲಾ ಭಟರ್ ಸುತ್ತಿಮುತ್ತಿ ಅರಸಂಗೆ ಪೇಳ್ದುದುಂ ಶ್ರೇಣಿಕಂ ತನ್ನ ಮಗನೆಂಬುದುದರಿಯದೆ ಆತನಂ ಕೊಲವೇಳ್ದುದುಂ ಚಂಡಕರ್ಮಂ ಪೋಗಿ ಮಸೆದ ಬಾಳಿಂ ಶಿರಮನೆರಿಯಲ್ ಬಪ್ಪಾಗಳ್ ಆಹಾರ ಶರೀರ ನಿವೃತ್ತಿಯಂ ಕೈಕೊಂಡಿರ್ದ ಕುಮಾರಂ ಪೊಯ್ಯಲಾಗಳ್ ದೇವತೆಗಳ್ ಬಾಳಂ ಪುಷ್ಪಮಾಲೆಯಂ ಅರಸಂಗರುಪಲ್ ಶ್ರೇಣಿಕಂ ಬಂದು ಮಗನೆಂದರಿದು ಮೋಸದಿಂದಿಂತ್ತಾಯ್ತಿದಕ್ಕೆ ಕ್ಷಮೆಗೊಂಬುದೆಂದು ಕೈಯನೆತ್ತಿಸೆ ಈ ಉಪಸರ್ಗಂ ಪಿಂಗೆ ದೀಕ್ಷೆಗೊಳ್ವೆನೆಂದಿರ್ದದರಿಂ ರತಿಗೆ ಸಮಾನಮಪ್ಪ ಮೂವತ್ತೀರ್ವರ್ ಸತಿಯರಂ ಯುವರಾಜಪದಮಂತೃಣಸಮಾಯಮಾಗೆ ತೊರೆದು ಸಮವಸೃತಿಯನೈದಿ ತ್ರಿಲೋಕ ಸ್ವಾಮಿಗಭಿನಂದಿಸಿ ಬಂದು ಪಷ್ಪಗಿರಿಯೊಳಿರ್ದ ಸುರದೇನರೆಂಬಾಚಾರ್ಯರಲ್ಲಿಬಾಹ್ಯಾಭ್ಯಂತರ ಪರಿಗ್ರಹಂಗಳಂ ತೊರೆದುಗ್ರೋಗ್ರ ತಪಂಗೆಯ್ದು ತ್ರಿದಂಡ ತ್ರಿಶಲ್ಯ ತ್ರಿಗಾರವರ್ಜಿತನುಂ ತ್ರಿಗುಪ್ತಿಗುಪ್ತನುಂ ತ್ರಯೋದಶವಿಧ ಚಾರಿತ್ರಸಂಪನ್ನಮಂ ಅಷ್ಟವಿಶಂತಿ ಮೂಲಗುಣಸಂಪನ್ನನುಂ ದಶಧರ್ಮಸಮೇತನುಂ ಚತುಷ್ಕಾಷಾಯ ರಹಿತಮಂ ರಾಗದ್ವೇಷಮೋಹವರ್ಜಿತನುಮಾಗಿ ದ್ವಾದಶವಿಧ ತಪದೊಳ್ ನತಳುತ್ತಿರ್ಪಿನಂ ಜಂಘಚಾರಣತ್ವಂ ದೊರೆಕೊಂಡು ಮಾಸೋಪವಾಸಾನಂತರಂ ಬಾಡಿಗೆ ಎತ್ತಿಗೆ ತೃಣಮನಿಕ್ಕಿ ಹೇರಿಕೊಳ್ವಂತೆ ಕಾಯಸ್ಥಿತಿ ನಿಮಿತ್ತಂ ಪಾರಣಾರ್ಥಂ ರಾಜಗೃಹಕ್ಕೆ ಬಾವಲಿಯನಿಕ್ಕೆ ಶಾಂಡಿಳ್ಯನೆಂಬ ಪುರೋಹಿತನ ಮಗಂ ವ್ಯಾಕರಣಾದಿ ಶಾಸ್ತ್ರದೊಳ್ ಕುಶಲನಪ್ಪ ಪುಷ್ಪದಾಡಂ ಬಾಲಸಖನಾದುದರಿಂ ನಿಲಿಸಿ ನಿರವದ್ಯಾಹಾರಮಂ ಸಪ್ತಗುಣ ನವವಿಧ ಪುಣ್ಯಸಮೇತಂ ಕುಡೆ ನಿರಂತರಾಯಮಾಗೆ ಪರಸಿ ಆಶ್ಚರ್ಯಪಂಚಮಾಗೆ ಆತಂಗೆ ಧರ್ಮೋಪದೇಶಂಗೆಯ್ದು ಕೇಳುತ್ತೆಮುನಿಗಳೊಡನೆ ಅರಣ್ಯಕ್ಕಂ ಬಂದುಪುರಾಣವೈರಾಗ್ಯದಿಂ ದೀಕ್ಷೆಯಂ ಬೇಡಿ ದ್ರವ್ಯ ಋಷಿಯಾಗಿ ತನ್ನ ಪೊಸ ಪೆಂಡತಿಯ ಮನೆಯಂ ನೆನೆಯುತ್ತಿಪ್ಪದುಂ ವಾರಿಷೇಣಮುನೀಂದ್ರನವನಂ ಬಿಡದೆ ಸಮೀಪದೊಳೆ ಚರಿಯುತ್ತಿರಿಸಿ ಹಿಂದಣ ಮಹಾಪುರಷರ್ ಮಹದೈಶ್ಯರ್ಯಮಂ ತೊರೆದು ತಪಂಗೆಯ್ದುದುಂ ಪೇಳುತ್ತುಂ ಈ ಮನಷ್ಯಲೋಕದೊಳಪ್ಪ ಶತಸಹಸ್ರ ಲಕ್ಷ ಕೋಟಿ ಕಾಲಭವಂಗಳೊಳಪ್ಪ ಸುಖಮೆಲ್ಲಂ ಸ್ವರ್ಗದ ವಾಹನದೇವನರೆಗಳಿಗೆಯ ಸುಖ ಸಮಾನಮಿಲ್ಲ. ದ್ವಾದಶತಪದಿಂ ಧ್ಯಾನಮೌನಾದಿಗಳಿಂ ಅನಂತಸುಖಂ ದೊರೆಕೊಳ್ಗುಮೆಂದು ದ್ವಾದಶಾನುಪ್ರೇಕ್ಷಾಭಾವನೆಯಂ ಪೇಳುತ್ತುಮಿರೆ ಒಡೆದ ದೋಣಿಯೊಳ್ ಪೊಯ್ದು ನೀರಂತೆ ನಿಲ್ಲದೊಡಂ, ಗಿಳಿಯಂ ಪಂಚಜರದೊಳಿಕ್ಕಿ ಸಾಕುವಂತೆ ಪನ್ನೆರಡು ವರುಷಂಬರಂ ಇರ್ದೊರದುದಿನಂಸಮವಸರಣಕ್ಕೆ ವಂದನಾನಿಮಿತ್ತಂ ಪೋಗಿ ಕೆಳಗಣ ಸೋಪಾನದ ಪಾದಲೇಪೌಷಧೊಯಂ ಮೆಟ್ಟಿ ಮೇಗಣ ಧೂಳಿಸಾಲಮಂ ಪುಗಲಾ ಪುಷ್ಪದಾಡಂ ಮೆಟ್ಟಿದಿರ್ದು ರಾಜಗೃಹಪ್ರಕ್ಕೆ ಬಂದುಊರ ಮುಂದಣ ವೃಕ್ಷವೇದಿಕಾಗ್ರದೊಳಿರ್ದ ಆತ್ಯಕಿಯರಂ ಕಂಡೊಡಾತನ ಮನಮನರಿದು ಕುಳ್ಳಿರಿಸಿ ಕಾರಿದಶಮನುಂಡ ಕಥೆಯಾದಿಗಳಂ ಪೇಳುತ್ತಮಿರಲಿತ್ತ ಲೋಕೇಶ್ವರಂಗಾತನಾಗಿವಾರಿಷೇಣರ್ ಬಂದು ಪುಷ್ಪದಾಡನಂ ಕಾಣದೆ ಅವಧಿಯಿನರಿದಾ ಪುರಮಂ ಪೊಕ್ಕಾತನನೊಡಗೊಂಡು ತಮ್ಮರಮನೆಯಂ ಪುಗೆ ಚೇಳಿನಿಮಹಾದೇವಿ ಕಂಡು ಭಿಕ್ಷಾಕಾಲಾತಿಕ್ರಮಣಮಾಗೆಬಂದ ಋಷಿಗಳ ಪರೀಕ್ಷಾರ್ಥಂ ಸರಾಗಾಸನ ವಿರಾಗಾಸನಮನಿಕ್ಕೆ ವಿರಾಗಾಸದೊಳ್ ಪ್ರವಿಷ್ಟರಾಗಿ ನಿನ್ನ ಸೊಸೆವಿರಂ ಪುಷ್ಪದಾಡನ ಪೆಂಡತಿಯಂ ಷಹಾಸರ್ವಾಭರಣಭೂಷಿತೆಯರಂ ಮಾಡಿ ಬರಿಸುವುದೆಂದು ಬರಿಸಿ ಪುಷ್ಪದಾಡಂಗೆ ತೋರಿ ಲಜ್ಜಿಸಿ ಅತನಜ್ಞಾನತೆಯಂ ಕಳೆದು ಸಂಸಾರ ಶರೀರ ಭೋಗ ವೈರಾಗ್ಯಮಂ ಸ್ಥಿತಿಕರಣಂ ಮಾಡಿ ಸ್ವರ್ಗಾಪವರ್ಗ ಸುಝ ಸಂಪಾದಕನಂ ಮಾಡಿರುತ್ತಿರಲ್ ಶ್ರೇಣಿಕಮಹಾರಾಜನೊಂದು ದಿವಸಂ ಸರ್ವಾವಸರಮೆಂಬೋಲಗಂಗೊಟ್ಟಿರಲಾಗಳ್ ಋಷಿವೇದಕನಪ್ಪ ವನಪಾಲಕನ ಕಾಲ ಪುಷ್ಪಫಲಾದಿಗಳಂ ಕೊಂಡುಬಂದಿರಿಸಿ ಸಾಷ್ಟಾಂಗಪ್ರಣತನಾಗಿ ದೇವಾ ಈ ನಗರದ ನೈರುತ್ಯ ದಿಗ್ಭಾಗದ ವಿಪುಲಾಚಲಪರ್ವತಶಿಖರಿಗೆ ಶ್ರೀ ವೀರವರ್ಧಮಾನ ತೀರ್ಥಂಕರ ಸಮವಸರಣಂ ಬಂದು ನೆಲೆಗೊಂಡುದೆಂದು ಬಿನ್ನವಿಸೆ.

ಶ್ರೇಣಿಕಂ ಲಲಾಟದೊಳ್ ಕರಪಲ್ಲವಕುಟ್ಮಲನಾಗಿ ನಮ್ರಮಸ್ತಕಂಗಂಚಿತ್ತಮಂ ಕೊಟ್ಟಾನಂದಭೇರಿಯಂ ಪೊಯ್ದಿ ಪುರಜನ ಪರಿಜನ ಪುತ್ರ ಕಲತ್ರಾದಿಗಳ್ವೆರಸು ಗಂಧಗಜಾರೂಢಂ ವಿಪುಲಾಚಲಮನೆಯ್ದಿ ದೂರೋತ್ಸಾರಿತ ರಾಜ ಚಿಹ್ನವಾಗಿ ಸಮವಸರಣಮಂ ಕಂಡು ವಿಂಶತಿಸಹಸ್ರ ಸೋಪಾನಮಂ ವಕ್ಷಣಮಾತ್ರದಂದೇರಿ ಅಲ್ಲಲ್ಲಿಯ ಸೊಬಗನೀಕ್ಷಿಸುತ್ತ ಪೋಗಿ ಗಂಧಕುಟಿಯಂ ತ್ರಿಪ್ರದಕ್ಷಿಣಂಗೆಯ್ದು ದಿವ್ಯಾರ್ಚನೆಯಿಂದರ್ಚಿಸಿ ವಸ್ತುಗುಣ ರೂಪಸ್ತವಂಗಳಿಂ ಸ್ತುತಿಯಿಸಿ ಸಾಷ್ಟಾಂಗ ಪ್ರಣತನಾಗಿ ಗೌತಮಾದಿ ಋಷಿಸಮುದಾಯಮಂ ಪೂಜಿಸಿ ಪೊಡೆವಟ್ಟು ಪನ್ನೊಂದನೆಯ ಮನುಷ್ಯಕೋಷ್ಠದೊಳ್ ಕುಳ್ಳಿರ್ದ ಧರ್ಮಾಧರ್ಮಸ್ವರೂಪಮಂ ಸವಿಸ್ತರಂಕೇಳ್ದು ಶ್ರೋತೃಮುಖ್ಯನಾಗಿ ತದನಂತರಂ ಶ್ರೇಣಿಕಂ ತನ್ನ ಮುನ್ನಿನ ಭವ ಸಂಬಂಧಮಂ ಬೆಸಗೊಳೆ ಸರ್ವಜ್ಞಮುಖಕಮಲ ಸಂಜನಿತ ದಿವ್ಯಭಾಷಾಸಿತರುಂ ಗೌತಮಗುಣನಾಥರುಂ ಈ ಜಂಬೂದ್ವೀಪದ ಭರತದಾರ್ಯಾಖಂಡದಸುರಕಾಂತ ದೇಶದ ಪ್ರತ್ಯಂಪಟ್ಟಣದ ಸಮಿತ್ರನೆಂಬರಸಂ ಸುಷೇಣನೆಂಬ ಪ್ರಧಾನದೊಳ್ ವೈರಮಾಗೆ ಬೇಂಟೆಯೋಗಿ ಮೃಗಂಗಳಂ ವಧಿಸಿ ಬಪ್ಪಾಗಳ್ ಸುಷೇಣಂ ಸಮಿತ್ರನಂ ಬಾವಿಯೊಳ್ ಕೆಡೆನೂಂಕೆ ದುರ್ಧ್ಯಾನದಿಂ ಸತ್ತು ವಿಂಧ್ಯಮಲಯದ ಕುಟಜನವನದಾ ಭೀರದೊಳ್ ಖದಿರಸಾಗರನೆಂಬ ಶರಬರಮುಖ್ಯನಾಗಿಯರಣ್ಯದೊಳ್ ಬೇಂಟೆಬರುತ್ತಂ ಸಮಾಧಿಗುಪ್ತರೆಂಬ ಯೋಗೀಶ್ವರರಂ ಕಂಡು ಪೊಡಮಡೆಯವರ್ ಧರ್ಮಲಾಭಮಕ್ಕೆಂದು ಪರಸುವುದುಂ ಧರ್ಮಮೆಂಬುದೇನದರ ಲಾಭಮಾವುದೆಂದು ಸ್ವರ್ಗಮೋಕ್ಷ ಸುಖಮಂ ಪಡೆವುದೆ ಲಾಭಮೆಂದೊಡೆ ಅಂತಾಸೊಡಾ ಬಿಡಲಾರೆನಂದು ಪಶ್ಚಾತ್ತಾಪಂಬಡೆ ಮುನಿಗಳಾತನ ಚಿತ್ತವೃತ್ತಿಯನರಿದು ‘ನೀಂ ಮುನ್ನೆ ಕಾಕಮಾಂಸಮಂ ಕೊಳ್ವಯಾ’ ಎನೆ ‘ನಾನರಿಯೆನೆ’ನಲು ಅದೊಡೀ ಜನ್ಮದೊಳ್ ತ್ರಿಕರಣ ಶುದ್ಧಿಯಿಂ ಕಾಕಮಾಂಸಬರ್ಜನವ್ರತಮಂ ಕೈಕೊಳ್ವುದೆನೆ ಮಹಾಪ್ರಸಾದಮೆಂದಾ ವ್ರತಮಂ ಕೊಂಡು ಕೊಲೆಯುಂ ಪುಸಿಯುಣ ಕಳವುಂ ಪಾದರಮುಂ ಅತಿಕಾಂಕ್ಷೆಯುಂಎಂಬೀ ಪಂಚಮಹಾಪಾತಕಮಂ ತೊರೆವ ಪಂಚಾಣುವ್ರತಲಕ್ಷಣಮಂ ಕೇಳ್ದು ಮುನಿಗಳಂಬೀಳ್ಕೊಂಡು ಬಂದಾ ಕಾಗೆಯ ಮಾಂಸಮಂ ಕೊಳ್ಳದಿರುತ್ತಿರೆ ಕೆಲವು ದಿವಸಕ್ಕಾತನ ಶರೀರದೊಳ್ ವ್ಯಾಧಿಪುಟಟಿ ನವೆಯುತ್ತಿರ್ದವಸಾನಕಾಲಮಾಗೆ ಚರಕವೈದ್ಯರ್ ಬಂದು ಕಾಕಮಾಂಸಭಕ್ಷಣದಿಂ ಮದ್ದನಿಕ್ಕಿ ಬದುಕಿಸುವೆವೆನೆ ‘ಮುನಿಗಳಿತ್ತ ವೃತಮಂಬಿಡುವೆನಲ್ಲ ಪ್ರಾಣಮಂ ಬಿಡುವೆನೆಂ’ದೆಷ್ಟು ಬಗೆಯೊಳ್ ಪೇಳ್ದೊಡಂ ಕೊಳ್ಳದಿರೆ ಆತನ ಮೈದುನಂ ಸಾಹಸಪುರದ ನಾಯಕಂ ಸೂರವೀರಂ ನೋಡಲೆಂದು ಬರುತ್ತು ಮೊಂದಡವಿಯ ವಟಿತರುಮೂಲದೊಳೆರ್ವ ವ್ಯಂತರದೇವಸ್ತ್ರೀಯು ಶೋಕಂಗೆಯ್ಯುತ್ತಿರಲವಳಂ ಕಂಡು ನೀನಾರೇಂ ನಿಮಿತ್ತಂ ದುಃಖಿಸಿದಪೆಎಂಬುದುಂ ಆಕೆಯಿಂತೆಂದಾಳಾಂ ಯಕ್ಷಿಯೆಂ ವ್ಯಾಧೀಪೀಡತನಪ್ಪ ನಿನ್ನ ಮೈದುನಂ ಖದಿರಸಾಗರಂ ಕಾಕಮಾಂಶವರತಿವ್ರತಫಲದಿನೆನಗೆ ಪರಿಯಾಗಿ ದಿವ್ಯಸುಖಮಂ ಪಡೆಯಲಿರ್ದನಾತಂಗೆ ನೀಂ ಪೋಗಿ ಕಾಕಮಾಂಸಭಕ್ಷಣಣಂಗೆಯ್ದಿ ನರಕಧುಃಖಮನುಣ್ಬಂತು ಮಾಳ್ವಯದರಿಂ ಶೋಕಿಸಿದವಪೆ’ನೆನೆ ಅಂತಾದೊಡಾಂಮಾಣಿಸುವೆನೆಂದು ಬಂದು ಖದಿಸಾಗರನಂ ಕಂಡಾತನ ಮನರುಂ ನೋಡಲೆಂದು ನಾನಾಪ್ರಕಾರದಿಂ ಕಾಕಮಾಂಸಮಂ ಕೊಳ್ಳುವೆಂಸೊಡಂಬಡಿಸೆ ಪ್ರಾಣಂ ಪೋದೊಡೆ ಒಂದೆಭವದ ಕೇಡು ವ್ರತಂ ಕೆಟ್ಟೊಡೆ ಭನಭನದೊಳ್ ಕೇಡಪ್ಪುದರಿಂ ವ್ರತಮಂ ಬಿಟ್ಟೆಪೆನಲ್ಲೆಂದು ದೃಡಚಿತ್ತನಾಗಿರ್ಪಿನಮಾತನ ಧಡಕ್ಕಂ ಮೆಚ್ಚಿತಾಂ ಬಪ್ಪಲ್ಲಿ ಯಕ್ಷಿಣಿ ಪೇಳ್ದ ವೃತ್ತಾಂಮಂ ಸವಿಸ್ತರಂ ಪೇಳೆ ಪೂರ್ವದೊಳ್ ಮುನಿಪತಿಗಳ್ ಪೇಳ್ದ ವ್ರತಂಗಳೊಳ್ ಸಾಮಾನ್ಯಮಪ್ಪುದೊಂದು ವ್ರತದಿಂದಿಂತಾಗೆ ಅವರ್ ಪೇಳ್ದ ವ್ರತಂಗೋಳ್ ಸಾಮಾನ್ಯಮಪ್ಪುದೊಂದು ವ್ರತದಿಂದಿತಾಗೆ ಅವರ್ ಪೇಳ್ದ ಅಣುಗುಣಶಿಕ್ಷಾವ್ರತಂಗಳಿಂದೆನಿತಾಗದಿಪ್ಪುದೆಂದು ಎಲ್ಲಾ ವ್ರತಂಗಳಂ ಕೊಂಡೆನೆಂದಾಹಾರ ಶರೀರ ನಿವೃತ್ತಿಗೆಯ್ದು ಮುನಿಗಳಂ ಭಾವಿಸುತ್ತಂ ಶರೀರಮಂ ಬಿಟ್ಟು ದಿವ್ಯಸುಖಮನೀವ ಸೌಧರ್ಮಕಲ್ಪಮೆಂಬ ಪ್ರಥಮ ಸ್ವರ್ಗದೊಳ್ ಮಹರ್ದಿಕದೇವನಾಗಲಿತ್ತ ಸೂರವೀರಂ ತನ್ನೂರ್ಗೆ ಪೋಪಾಗಲಾ ಯಕ್ಷೆಯಂ ಖದಿರಸಾಗರಚರಂ ‘ನಿನಗೆ ಪತಿಯಾದನೆ’ ಎದು ಕೇಳೆ ‘ನೀಂ ಪೋಗಿ ಪೇಳ್ದುದಕ್ಕೆ ಸಂತೋಷಂಬಟ್ಟು ಅಣುಗುಣ ಶಿಕ್ಷಾವ್ರತಂಗಳೆಲ್ಲಮಂ ಕೊಂಡು ಸಮಾದಿಯಿಂ ಅತ್ಯಂತ ಸುಖಮುಳ್ಳ ಸ್ವರ್ಗದೊಳ್ ಜನಿಸಿದನೆನಗಾಯ್ತಿಲ್ಲಮೆಂದು ವ್ರತಮಹಾತ್ಮೆಯಂ ಪೇಳೆ ಆರ್ಶ್ಚೈದಿಂ ಸೂರವೀರಂ ಮುನಿಗಳ ಸಮಿಪಕ್ಕೆಯ್ದಿ ವ್ರತಂಗಳಂ ಕೊಂಡು ಸದ್ಗತಿಯಂ ಪಡೆದಂ.

ಆ ಸೌಧರ್ಮೇಂದ್ರಂ ಸಮುದ್ರೋಪಮಕಾಲಂ ದಿವ್ಯಭೋಗೋಪಭೋಗಂಗಳ ನುಂಡದರಶೇಷ ಕಿಂಚಿತ್ಸುಖದಿಂ ಬಂದು ಕೂಣಮೆಂಬ ಪುರದ ಕುಣಿಕನೆಂಬರಸಂಗಂ ಶ್ರೀಮತಿಯೆಂಬರಸಿಗಂ ನೀಂಶ್ರೇಣಿಕನಾಗಿ ಮಹಾಮಂಡಳಿಕಪದಮನಾಂತೆ ನಿಮ್ಮ ತಂದೆ ಕುಣಪಪುರದಿಂ ರಾಜಗೃಮಂಪೊಕ್ಕು ಉಪಶ್ರೇಣಿಕನೆಂಬ ಪೆಸರಾಗೆ ನಿನ್ನ ಬುದ್ಧಿಯಂ ಪರೀಕ್ಷಿಸಿ ಚಿಳಾತಿಪುತ್ರಂಗಂ ರಾಜ್ಯಮಂ ಕೊಡಲೆಂದು ನಿನ್ನಂ ಪುರದಿಂ ಪೊರಮಡಿಸೆ ಬಂದು ನಂದಿಗ್ರಾಮದ ಇಂದ್ರದತ್ತನೆಂಬಬ್ರಾಹ್ಮಣಂ ಕಂಡು ತಾನಿಪ್ಪ ವೇಳಾತಟಪುಕ್ಕೊಡಗೊಂಡು ಪೋಗಿ ತನ್ನ ಮಗಳಂ ಕೊಟ್ಟಿಡಾ ನಂದಿಶ್ರೀಗಮಭಯಕುಮಾರಂ ಪುಟ್ಟಿ ವ್ಯಂತರನಾಗಿರ್ದು ಭವಾಂತರದಿಂ ಬಂದು ಕುಳಿಕಲಗ್ನದಲ್ಲಿ ಪುಟ್ಟಿದ ಕುಳಿಕನುಂ ವಾರಿಷೇಣ ಗಜಕುಮಾರಾದಿ ಪುತ್ರರಾಗಿರ್ದಪರ್. ನೀನೀ ಜನ್ಮದೊಳೆ ಮಿಥ್ಯಮಂ ಕೂಡಿ ಬಹ್ವಾರಂಭಪರಿಗ್ರಹದುತ್ಕೃಷ್ಟ ರೌದ್ರಧ್ಯಾನದಿಂದೇಳನೆಯ ನರಕಾಯುಷ್ಯಂ ಬದ್ಧಮಾಗಿರಲ್ ಆದಿಗಮೋಪಶಮವೇದಕ ಸಮ್ಯಕ್ತ್ವಂ ಸೊರೆಕೊಂಡುತ್ಕೃಷ್ಟದಿಂ ಕ್ಷಾಯಿಕ ಸಮ್ಯಗ್ದರಷ್ಟಿಯಾಗಿ ದರ್ಶನವಿಶುದ್ಧಿ ಮೊದಲಾದ ತ್ರೈಲೋಕ ಕ್ಷೋಭಾ ತೀರ್ಥಂಕರ ಪುಣ್ಯಮಂ ಕಟ್ಟಿ ನರಕಾಯುಷ್ಯಮೆಲ್ಲಂ ಸಮೆದು ಪೋಗೆ ಪ್ರಥಮನರಕದ ಜಘನ್ಯಾಯುಷ್ಯದಿಂ ಪೋಗಿ ಪರಸ್ಪರೋದೀರಿತ ದುಃಖಮಿಲ್ಲದಿರ್ದು ಈ ಭರತದೊಳ್ ಮುಂದೆ ಬಪ್ಪುತ್ಸರ್ಪಿಣಿಕಾಲದ ಮಹಾಪದ್ಮರೆಂಬ ಪ್ರಥಮ ತೀರ್ಥಂಕರನಪ್ಪೆಯೆಂದು ನಿರೂಪಿಸಲ್ ಅತ್ಯಂತ ಹರ್ಷೋತ್ಕರಚಿತ್ತಾನಾಗಿ ಪೊಡೆವಟ್ಟಿರಲಭಯಕುಮಾರನಭರಮಂ ಬೆಸಗೊಳಲಿಂತೆದರ್.

ಈ ಭರತಕ್ಷೇತ್ರದಾರ್ಯಖಂಡದ ಹಸ್ತಿನಾಪುರದ ಬ್ರಾಹ್ಮಣಪುತ್ರಂ ವಸುಭೂತಿಯೆಂಬಂ ದೈವಪಾಷಂಡಿ ತೀರ್ಥ ಜಾತಿ ಲೋಕ ಮೂಢ ವ್ಯಾಕುಲಿತ ಕೃತಮತಿ ತತ್ಪ್ರಕಂಪಿತನತದಾಚರಣಮನೆನಿಸಿರ್ದು ವೇದಾಧ್ಯಯನ ಕಂಡೋರೊರ್ವರ್ಗಮತಿ ಸ್ನೇಹಮಾಗೆ ಈರ್ವರುಂ ಪೋಗುತ್ತುಂ ಬಟ್ಟೆಯೊಳೊಂದು ಕಲ್ಲ ಪುಂಜದ ಕೆಲದೊಳಿರ್ದ ತುಲಸಿಯಮ ಕಿವಿಯೊಳ್ ಧರಿಸಿದ ವಸುಭೂತಿಯಂ ಕಂಡಿದೇಕೆ ತರುವಂ ಪ್ರಾರ್ಥಿಸುವೆಯೆಂಬುದುಮಿದಂ ಬ್ರಹ್ಮವೃಕ್ಷಮಿದಂ ಪೂಜಿಸೆ ಸಕಲ ಕಾರ್ಯಂ ಸಿದ್ಧಿ ಸದ್ಗತಿಸಾಧನಂ ತುಲಸಿಯಿಂ ಪರಪಪವಿತ್ರಮಪ್ಪುದೆಂದು

ಶ್ಲೋಕ || ಖಾದನ್ಮಾಂಪಂ ಪಿಬನ್ಮದ್ಯಂ ಸಂಗ [ವಾನಂತ್ಯಜೇಷ್ಬಪಿ]
ಸದ್ಯೋಭವತಿ ಪೂತಾತ್ಮಾ ಕರ್ಣೇ ತುಲಸಿಧರಣಾತ್ ||

ಎಂಬುದು ವಿಪುಲಮತಿಯೆಂದನ್ ಆದರೆಮಗೀ ವೃಕ್ಷಮೈದು ಬಪ್ಪಲಚ್ಚದಮಂ ಕುಡುಗೆಂದು ಪ್ರಾರ್ಥಿಸಿದೊಡದು ಕುಡದಿಪ್ಪುದುಂ ವಸುಭೂತಿಗೆಂದಂ ಈ ಮರಂ ತನ್ನಲ್ಲಿರ್ದುದಂ ಕೊಡಲಾರದಿಲ್ಲದುದನೆಂತು ಕೊಡುವುದು ತುಲಸಿ ಕೆಲದೊಳಿರ್ದಚ್ಛೆಷ್ಟಮಂ ಕಳೆಯದುದಾತ್ಮನಂ ಪವತ್ರಮಂ ಮಾಳ್ಪುದೆಂತು? ನಿನ್ನ ದೈವಮಾರ್ಹತರ್ಗೇನಂ ಮಾಡಲಾರದೆಂದವೆರಡರ ಪತ್ರಮಂ ಕೊಯ್ದು ತನ್ನ ಕಾಲೆರಡಕ್ಕಮುಜ್ಜಿ ಪೊಡೆಯಂ ತೊಡೆದು ನನ್ನ ದೈವಮನಪಮಾನಂಗೆಯ್ದೆಬನೆನಲಾದೊಡೇನಾಯ್ತು ನಿನ್ನ ದೈವಮನಾಮಪಮಾನಂಗೆಯ್ಯದೆ ಬಿಡುವೆನಲ್ಲೆಂದು ಮುಂದೆ ಪೋಗುತ್ತಂ ವಿಪುಲಮತಿಯೊಂದು ನಸುಗುನ್ನಿಯಂ ಕಂಡದಂ ತನ್ನ ದೈವಮೆಂದು ಪ್ರದಕ್ಷಿಣ ನಮಸ್ಕಾರಂಗೆಯ್ಯಲದಂ ವಸುಭೂತಿ ಕಂಡು ಮೆಯ್ಯಂ ಕಾಲಂ ಪೂಸಿದೊಡತ್ಯಂತ ತೀನಿಪುಟ್ಟಿ ವೇದನೆಯಪ್ಪುದುಂ ಮಿಡುಕುತ್ತಿರ್ದನಂ ಎಲೆ ಮಿತ್ರನೆ ಕರ್ಮೋದಯದಿಂದಾತ್ಮಂ ಪಂಚಸ್ಥಾವರದೊಳ್ ಪುಟ್ಟಿ ಏಕೇಂದ್ರಿಯಮಪಪ್ ತರು ಗುಲ್ಮ ಲತಾದಿಗಳಾಗಿ ಜ್ಞಾನಶೂನ್ಯಗಳಪ್ಪವಂ ಪ್ರಾರ್ಥಿಸಿದೊಡವು ನೀರಂ ಕಡೆದಂತೆ ಮಳಲನಡಿಸುವಂತೆ ಗೊಡ್ಡಿಗೆ ಮುನ್ನಡಿಯನಿಕ್ಕಿದಂತೆ ಫಲಮಂ ಪಡೆಯುವೆಂತಂತೆಯಕ್ಕುಮೆಂದು ಸಾರುತ್ತ ಮುಂದೊದೆಡೆಯೊಳ್ ತೊರೆಯಂ ಕಂಡದಂ ಪೊಕ್ಕು ಮುಳುಗಿ ಆತ್ಮಂ ಪವಿತ್ರನಾದನೆಂದು ಭಾಗೀರಥಿಯೆಂದು ಸ್ತುತಿಸುತ್ತಿರಲ್ ಇಂತಿದೇನೆಂದು ಬೆಸಗೊಳೆ ಸ್ನಾನದಿಂದಾನುಂ ಪವಿತ್ರನಾದೆನೆನೆ ತಾನುಂಡು ಮಿಕ್ಕ ಕೊಳಂ ನದಿಯೊಳಿಟ್ಟರ್ದಾಯೆಡೆಯಂ ಪವಿತ್ರಮಾದೊಡಿದಂ ಕೊಳ್ಳೆನೆ ಮುಟ್ಟುದಿಪ್ಪುದಂ ನೀಆಡಿದುದಂ ನೀನೆ ನಂಬದಿರ್ಪೆಯದರಿಂದೀ ನದಿಯಂ ದೇವರೆಂದು ಪೂಜಿಸಿಯಾ ಜಲಮಂ ಕಾಯಿಸಿ ಕುಡಿದು ಪಾದಮಂ ಕರ್ಚಿಯದರೊಳಶುಚಿಯಂ ಬಿಟ್ಟು ಕಳೆವುದರಿಂದಿದು ಬಾಹ್ಯಶರೀರಮಂಪ್ರಕ್ಷಾಲಿಸಿ ಪೊರಗನ ಮಲಮಂ ಕಳೆವುದಲ್ಲದೆ ಕರ್ಮಮಲಮಂ ಕಳೆಯಲಾರದದರಿಂ.

ಶ್ಲೋಕ || ಯಾವದಸ್ಥಿ ಮನುಷ್ಯಾಣಾಂ ಗಂಗಾತೋಯೇನ ತಿಷ್ಠತಿ
ತಾವದ್ವರ್ಷ ಸಹಸ್ರಾಣಿ ಪಿತಾ ಸ್ವರ್ಗೇ ಮಹೀಯತೇ ||

ಎಂಬುದುರಿಂದಾ ನೀರೊಳ್ ಪುಟ್ಟಿಯಲ್ಲಿಯೆ ಸಾಯ್ವ ಜಲಚರರಾದಿಗಳೆಲ್ಲಕ್ಕಂ ಸ್ವರ್ಗಮಪ್ಪುದೇಕಿಲ್ಲದರಿಂ ಘಟಿಯಿಸುವುದು ಮತ್ತಮಪಾತ್ರಕ್ಕೆ ದಾನಮೆಂದು ಭಕ್ರಿಪೂರ್ವಕಂ ಕುಡುವುದುಮ ಕಲ್ಲಂ ಮರಳಂ ಗೋವಂ ಕಂಬಮಂ ಪೊಸ್ತಿಲಂ ಶಸ್ತ್ರಮಂ ಜಲಮಂ ಕಿಚ್ಚುಮಂ ವಾಹನಮಂ ಆಸನ ಮುಂತಾದುದುವಂ ದೇವರೆಂದು ಪೂಜಿಸುವುದುಂ ರಣ ಜಲ ಗಿರಿ ಅಗ್ನಿ ಮೊದಲಾದವರಿಂ ಸತ್ತರೆ ಸ್ವರ್ಗಮಪ್ಪುದೆಂಬುದುಂ ಲೋಕ ಮೂಢಮೆಂದು ಪೇಳಿ ಪುತ್ರರಿಲ್ಲದೊಡೆ ಸ್ವರ್ಗಮಿಲ್ಲೆನಲ್ ಶುನಕ ನರಹ ಮಾರ್ಜಾಲ ಕುಕ್ಕುಟಾದಿಗಳಮನೇಕ ಗಂಡುಮಕ್ಕಳಂ ಪಡೆವವಕ್ಕೆಲಂ ಸ್ವರ್ಗಪ್ರಸಂಗಮಕ್ಕುಂಮತ್ತಂ ನೀಚದೇವತೆಗಳಂ ವರಸಿಯವಕ್ಕೆ ಪ್ರಾಣಿಹಿಸೆಗಳಂ ಮಾಳ್ವದೇಕೆಯವರ ಸಾಮರ್ಥ್ಯಮುಳ್ಳೊಡೆಡ ಕುರಿ ಮೊದಲಾದ ಮೃಗವಿಂಡಂ ಪೊಕ್ಕು ತಂತಮ್ಮ ಮನಸ್ಸಿಗೆ ಬೇಕಾದ ಬಹತ್ ಕಾಯಂಗಳನಾಯ್ದು ಕೊಂಡೊಡೇನಾನುಂ ನಾಯಿ ಕಚ್ಚುಗುಮೊ? ಅಲ್ಲ ಅವಂಕಾಯ್ದುಕೊಂಡಿಪ್ಪರ್ ಕೋಲಿಂದಂ ಬಡಿದಪರೊ? ಸಿಂಹ ಶರಭ ಶಾರ್ದೂಲ ವೃಕಾದಿಗಳಸಾಮರ್ಥ್ಯಮಿಲ್ಲದುದರಿಂ ನೀಚದೇವತೆಗಳೆಂತು ವರಮಂ ಕೊಟ್ಟಪ್ಪರ್ ರಾಗದ್ವೇಷಮೋಹಾದಿಗಳಿಂ ಸಂಸಾರಿಗಳಾಗಿ ಸುಖದುಃಖದೊಳ್ ಕೂಡಿದಜ್ಞಾನಿಗಳಂ ದೇವರೆಂದು ಪೂಜಿಸಲವರಿಂದಂ ಫಲಮಿಲ್ಲ. ಮತ್ತಂ ತನ್ನ ಪೂರ್ವಕೃತ ಪುಣ್ಯಮುಂಟಾದೊಡಂ ಸದ್ದೇವತಾರಾಧನೆಯಿಂದಂ ವಿಘ್ನಂ ಕೆಟ್ಟು ಫಲಮಪ್ಪುದಲ್ಲದೆ ಮುಂದಣಾಮುತ್ರಿಕಾಸೌಖ್ಯಮಂ ಮಾಡಲಾರದೆಂದವನ ದೇವತಾಮೂಢಮಂಬಿಡಿಸಿ, ಮತ್ತಂ ಪಾಪಂಡಮುಢಮಾವುದೆಂದೊಡೆ.

ಶ್ಲೋಕ || ಸದ್ಗ್ರಂಥಾರಂಭ ಹೀನಾನಾಂ ಸಂಸಾರಾವರ್ತವರ್ತಿನಾಂ
ಪಾಷಂಡಿನಾಂ ಪುರಸ್ಕಾರೋಜ್ಞೇಯಂ ಪಾಷಂಡಿಮೋಹನಂ

ಎಂಬಿದಂ ಬಿಟ್ಟು ಜ್ಞಾನಿಯಪ್ಪ ಮೋಕ್ಷಮಾಗ್ಮಂ ಕಂಡಿಪ್ಪಾತಂ ಗುರುಃ ಸ್ವಯಂ ಪರಂ ತಾರಯಿತುಂ ಸಮರ್ಥಃ ಎಂಬುದರಿಂ ಸದ್ ಜ್ಞಾನಮೆಂಬ ದೃಷ್ಟಿಯಿಂ ಮುಕ್ತಿಮಾರ್ಗಮಂ ಕಂಡಿರ್ಪನಂ ಪೊರ್ದೆ ಸದ್ಗತಿಗೆಯ್ದುಸುವಂ ಅಜ್ಞಾನದಿಂ ಕಣ್ಗಾಣದನಂ ಪೊರ್ದಿದೊಡೆ ಮಾರ್ಗಮುಂ ಕಾಣದೆ ಕುರುಡನ ಕೈವಿಡಿದು ಪೋಗುತ್ತಂ ಕುಳಿಯೊಳ್ ಬಿದ್ದಂತೆ ಈರ್ವರುಂ ನರಕಮೆಂಬ ಕುಳಿಯೊಳ್ ಬಿಳ್ದು ದುಃಖಮನುಂಬರೆಂದು ಗುರುಮೂಢಮಂ ಬಿಡಿಸಿ ಮತ್ತಂ ಶುಕ್ಲ ಶೋಣಿತ ಮೊದಲಾದ ಸಪ್ತಧಾತುವಿನೊಳುತ್ಪತ್ತಿಯಾಗಿಯಶುಚಿಯಮಪ್ಪುದು ಆತ್ಮನೆಂಬತ್ತುನಾಲ್ಕು ಲಕ್ಷ ಯೋನಿಗಳೊಳುತ್ಪತ್ತಿಯಾಗಿ ಬಮದುದರಿಂ ಜಾತಿಯೆಂಬಹಂಕಾರಮಾವುದು.

ಶ್ಲೋಕ || ಮನುಷ್ಯಜಾತೀರೇಕೈವ ಜಾತಿನಾಮಾದಯೋದ್ಭವಃ
ವೃತ್ತಿಭೇದಾದ್ಧಿ ತದ್ಭೇದಾಃ ……………….. ||

ಎಂಬುದರಿಂ ಕ್ರಿಯಾಜನ್ಮನಾಗಿ ತಮ ನಿಯಮವೃತವಿಡಿದು ಮದ್ಯ ಮಾಂಸಾದಿಗಳಂ ತೊರೆದರು ಶ್ರೇಷ್ಠಜಾತಿಯಾದರ್. ಅಂತರಾಂತರಂ ಭೇದಮಾಗೆ ಜೀವನದ ಮಾಂಸಮಂ ಸೇವಿಸುವುದರಿಂ ಪೊಲೆ ಮಾದಿಗರೆಂಬರ್. ನರಮಾಂಸಭಕ್ಷಣಂಗೆಯ್ಯೆ ರಾಕ್ಷಸರೆಂಬರ್. ಬ್ರಾಹ್ಮಣರಾವದೇಶದೊಳಾದೊಡಂ ಗೋಮಾಂಸಮಂ ತಿಂದು ಸುರೆಯಂ ಕುಡಿದೊಡೆ ಪೊಲೆಯರೆಂಬೆವಲ್ಲದೆ ಬ್ರಾಹ್ಮಣರೆಂಬುದೆಂತು? ಅದರಿಂ ನೀಚಜಾತಿಯವನಾದೊಡಂ ಮದ್ಯಮಾಮಸಮಂ ಬಿಟ್ಟು ಜ್ಞಾನಿಯದೊಡಾತನೆ ಬ್ರಾಹ್ಮಣನಪ್ಪನೆಂದಾ ವಸುಭೂತಿಗಂ ವಿಪುಲಮತಿಯು ಪೇಳೆ ಕೇಳಿ ಮಿಥ್ಯಾಮೋಹಮೆಂಬಂಧಕಾರದಿಂ ಸುದರ್ಶನಮಂ ಕಾಣದಿರ್ದೆನಲ್ಲದೆ ಮದ್ದುಗುಣಿಕೆಯಂ ತಿಂದವರಿಗೆ ಮಣ್ಣುಂ ಕಲ್ಲುಂ ಮರುಳಿಮಿದ್ದಲುಮೆಲ್ಲಾ ಹೊಂಬಣ್ಣವಾಗಿ ತೋರುವಂತೆ ವಿಪರೀತವಾಗಿರ್ದ ಬುದ್ಧಪ್ರಕಾಸಮಾಯ್ತೆನ್ನ ಜನ್ಮಾಂತರದ ಮಿತ್ರಂ ನೀನೆ ಎಂಬಾತನೊಳ್ ವಿನಯಮಂ ನುಡಿದು ಕಳಿಪಿ ವೇದಾಧ್ಯಯನಮಂ ಕಲಿತು ಮೃತ್ತಿಕಾಸನಮಾನಮಾಗಿ ಮಾರ್ಚಾರನಂತೆ ದ್ವಸಮಯರುಚಿ ಪುಟ್ಟಿ ವರ್ತಿಸುತ್ತರ್ದೊಂದು ದಿವಸಮಾಪೊಳಲ ದಯಾಮಿತ್ರನೆಂಬ ಸಾರ್ಥವಾಹನಲ್ಲಿಗೆ ಪೋಗಿ ‘ಪುನಶ್ಯ್ವಾನೋ ಭವಿಷ್ಯತಿ’ ಎಂಬಂತೆ ತನ್ನ ಅಹಂಕಾರದಿಂ ಸರ್ವಶ್ರೇಷ್ಠನೆನ್ನಂ ಪೂಜಿಸಿ ಗೋವು ಮೊದಲಾಗೆ ಬೂರಿದಾನಂಗೊಟ್ಟು ಕರ್ಮಮಂ ಕಳೆಯದೆ ಬತ್ತಲೆತಲೆಯನರಿದು ಕೊಳೆ ಹತ್ತಿದ ಮೆಯ್ಯುಳ್ಳ ಸವಣರಲ್ಲಿ ಭಕ್ತಿಗೆಯ್ದು ಭೋಗಾಂತರಾಯಮಂ ಮಾಡಿಕೊಳ್ವೆಯೆಂದುಂ ವರ್ಣಾನಾಂ ಬ್ರಾಹ್ಮಣೋ ಗುರುವೆಂಬುದರಿಂದಾನೆ ಗುರುವೆನೆ ದಯಾಮಿತ್ರಶೆಟ್ಟಿ ಮುಗುಳ್ನಗೆವೆರಸಿ ಮನದೊಳ್ ಇಂತೆಂದರೀತಂ ಮಿಥ್ಯಾತ್ವಮೆಂಬ ದರ್ಶನ ಮೋಹನೀಯ ಕರ್ಮೋದಯ ತಮೋವಿಕಾರದಿಂ ಪೇಳ್ವನಿಮಗೆ ಸಮ್ಯಕ್ತ್ವ ಚಾರಿತ್ರಂಗಳಂ ಪೇಳ್ದೊಡೆಂತಪ್ಪುದೆಂದೊಡೆ ಪಿತ್ತಜ್ವರವಿಕಾರದಿಂ ಪೇಳ್ವನಿಮಗೆ ಸಮ್ಯಕ್ವ್ತ ಚಾರಿತ್ರಂಗಳಂ ಪೇಳ್ದೊಡೆಂತಪ್ಪುದೆಂದೊಡೆ ಪಿತ್ತಜ್ವರವಿಕಾರಮುಳ್ಳಂಗೆ ಪಲುಂ ಶರ್ಕರೆಯಂ ಕುಡಲೆಂತುಂ ಕೈಪೆಯಪ್ಪುದಂತಕ್ಕುಮೆಂದು ‘ಬ್ರಹ್ಮಜ್ಞಾನೇನ ಬ್ರಾಹ್ಮಣಃ’ ಎಂಬುದರಿಂ ಜ್ಞಾನಿಗಳಾಗಿಯುಮಾಚಾರಶೀಲಸಂಪನ್ನರಾದುದರಿಂ ನಿಮ್ಮಿಂದಧಿಕರಿಲ್ಲದರಿಂದೆಮ್ಮ ಪಿತೃಪಿತಾಮಹರ ಸಂತಾನದಿಂ ಬಂದುಸೊಂದು ನೋಂಪಿಯುಂಟದಂ ನಿಮುವೊಂದು ತಿಂಗಳ್ವರಮಿರ್ದಾ ವಿಧಾನಮಂ ಮಾಡಿಕೊಟ್ಟೊಡಾ ನೀಮು ಬೇಡಿದನಿತು ದ್ರವ್ಯಮಂ ಕುಡವೆನೆಂಬುದು ದ್ರವ್ಯಲೋಭದಿಂದೊಂದು ತಿಂಗಳೀತಂ ಪೇಳದಂತಿರ್ದು ಸಾಲ್ವನಿತು ದ್ರವ್ಯಮಂ ಕೊಂಬೆನೆಂದು ‘ತಥಾಸ್ತು’ ಎಂದೊಪ್ಪಿಕೊಂಡೊಡೆ ಶೆಟ್ಟಿಯಿತಂ ಲುಬ್ಧ ಪ್ರಕೃತಿಯಪ್ಪನೆಂತೆಂದೊಡೆ.

ಶ್ಲೋಕ || ಲುಬ್ಧಮರ್ಥೇನ ಗೃಹ್ನೀಯಾತ್ ಸ್ತಬ್ಧಮಂಜಲಿಕರ್ಮಣಾ
ಮೂರ್ಖಂ ಛಂದಾನುರೋಧೇನ ಯಾಥಾ ತಥ್ಯೇನ ಪಂಡಿತಮ್ ||

ಎಂದವಂಗೆ ದ್ರವ್ಯದಾಸೆಯ ಮಾಡಿ ಲೋಚಂ ಮಾಡಿಸಿಕೊಳ್ಳಿಮೆಂದು ಮೌನದಿಂ ಕುಳ್ಳಿರಿಸಿ ತಲೆಯಂ ಕೀಳಿಸುವಾಗಳ್ ಶುಂಠಿಯಂ ತಿಂದ ಕೋಡಗದಂತೆ ಸಿಡಿಮಿಡಿಗೊಂಡು ಕ್ಷುತ್ಪಿಪಾಸಾದಿ ಪರೀಷಹಗಳಂಸೈರಿಸಲತ್ಯಂತ ಕಷ್ಟಮಾಗಿ ಸೈರಿಸಲನಿತಕ್ಕೆ ದಯಾಮಿತ್ರಶೆಟ್ಟಿ ಬಂದರಗೆ ನಿಮ್ಮಂತಪ್ಪ ಧನ್ಯರಾರುಮಿಲ್ಲ, ಕೃತಾರ್ಥರಾದಿರಾಸೊಡಂ ಸುಜನತ್ವಮಂ ಕೈಕೊಂಡು ಸಮತಾಭಾವದಿಂ ಸದ್ಬುದ್ಧಿಯಿಂ ಇಂದ್ರಿಯನಿಗ್ರಹಂ ಮಾಡೆ ಅಭ್ಯುದಯ ನಃಶ್ರೇಯಸಪ್ರಾಪ್ತಯಪ್ಪುದೆನೆ.

ಶ್ಲೋಕ || ಬುದ್ಧೇಃ ಫಲಂ ತತ್ವವಿಚಾರಣಂ ಚ ದೇಹಸ್ಯಸಾರೋ ವ್ರತಧಾರನಂ ಚ
ಮಿತ್ತಸ್ಯಸಾರಃ ಖಲು ಪಾತ್ರದಾನಂ ವಾಚಃ ಫಲಂ ಪ್ರೀತಿಕರಂ ನರಾಣಾಂ ||

ಎಂದಾತಂಗೆ ಸದ್ಧರ್ಮತತ್ವಮನೋದಿಸೆ ರಸಮಂ ಪೊರ್ದಿದ ಲೋಹದಂತೆ ಮುನ್ನೆ ವಿಪುಲಮತಿ ಪೇಳ್ದ ಸಮ್ಯಕ್ತ್ವಂ ತಲೆದೋರಿ ದೃಡಚಿತ್ತನಾಗೆ ದಯಾಮಿತ್ರಶೆಟ್ಟಿ ಪರದುಪೋಗುತ್ತುಂ ವಸುಭೂತಿಯಂ ತನ್ನೊಡನೆ ತನ್ನ ಸಮಿಪದೊಳಿರಿಸಿ ವೈಯಾಪೃತ್ಯಮಂ ಮಾಡುತ್ತುಂಭಕ್ರಿಯಿಂ ಕರೆದೊಯ್ಯುತ್ತಿರ್ದೊಡೊಂದು ಏಪಿನಾಮತರದೊಳ್ ಬಿಟ್ಟಿರ್ದೊಡೆಕಿನಾತರ್ ಬಂದು ಮತ್ತಿದಲ್ಲಿ ಘಾತಮಾಗಿ ವಸೂಭೂತಿಯು ಬರ್ಪಲ್ಲಿ ಆಯುಷ್ಯಾವಸಾನಮಾಗೆ ವಿಪುಲಮತಿ ಪೇಳ್ದುದನೇ ನಂಬಿ ಭಾವಿಸುತ್ತೆ ಪಂಚಮಂತ್ರಸ್ಮರಣೆಯಿಂ ಶರೀರಭಾರಮುನಿಳುಪಿ ಸ್ವರ್ಗದೊಳ್ ಮಹರ್ದಿಕದೇವನಾಗಿ ಸಮುದ್ರೋಪಮಕಾಲಂ ದಿವ್ಯ ಸುಖಮನುಂಡು ಬಂದು ನಿನಗಂ ಪಾರ್ವಂತಿ ನಂದರ್ಶರೀಗಮಭಯಕುಮಾರನೆಮಬ ಮಗನಾಗಿ ಸಕಲ ಕಲಾಕುಶಲನಾದನೀತಂ ಮುಂದೆ ತಪಂಗೆಯ್ದು ಸರ್ವಾರ್ಥಸಿದ್ಧಿಯಮಪಡೆದು ಮೋಕ್ಷಲಕ್ಷೀಪತಿಯಪ್ಪನೆಂದು ಗೌತಮಸ್ವಾಮಿಗಳ್ ಶ್ರೇಣಿಕಮಹಾರಾಜಂಗೆ ನಿರೂಪಿಸುವುದುಭಯಕುಮಾರಂ ಕೇಳಿ ನಿರ್ವೇಗಮಾಗೆ ಬಾಹ್ಯಾಧ್ಯಂತರ ಪರಿಗ್ರಹಂಗಳಂ ಪರಿಹರಿಸಿದವಾವಾನೆನೆ.

ಶ್ಲೋಕ || ಕ್ಷೇತ್ರಂ ವಾಸ್ತು ಧನಂ ಧಾನ್ಯಂ ದ್ವಪದಂ ಚ ಚತುಷ್ಟದಮ್
ಯಾನಂ ಶಯ್ಯಾಸನಂ ಕುಡ್ಯಂ ಭಾಂಡಂ ಚೇತಿ ಬಹಿರ್ದಶ |
ಮಿಥ್ಯಾತ್ವವೇದಹಾಸ್ಯಾದಿಷಟ್ಕಷಾಯುಚತುಷ್ಟಯಮ್
ರಾಗದ್ವೇಷೌಚ ಮೋಹಶ್ಚ ಅಂತರಂಗಾಚ್ಚಿ ತುರ್ದಶ |

ಇಂತು ತೊರೆದು ಯೋಗೀಶ್ವರನಗಲಾ ಶ್ರೇಣಿಕಮಹಾಮಂಡಳಿಕಂ ಸರ್ವಜ್ಞರಿಂ ಸಕಲ ಪರಪದಾರ್ಥಂಗಳಂ ಭೂತಕಾಲದೊಳಗಾದ ತ್ರಿಷಷ್ಟಿಮಹಾಪುರುಷರ ಕಥಾಪುರಾಣ ವರ್ತಮಾನರ ಪುರಾಣಮನಾ ಗತಕಾಲದೊಳಪ್ಪ ಶಲಾಕಾಪುರುಷರ ಪುರಾಣಂ ಮೊದಲಾದವಂ ಪ್ರಥಮಾನುಯೋಗದೊಳ್ ಜೀವಂಗಳ್ ಸಮ್ಯಕ್ತ್ವಗ್ರಹಣಾದಿ ಮುಕ್ತಿಯಂ ಪಡೆವ ಪರ್ಯಂತಮವರ ಕಥಾಪ್ರಪಂಚಮಂ ಪೇಳ್ವುದುಂ. ಕರಣಾನುವೇದಮೆಂಬುದು ನರಕ ತಿರಿಕ ಮನುಷ್ಯ ಸ್ವರ್ಗಾದಿಗಳಿಪ್ಪ ಮೂರು ಲೋಕಮನಳತೆಯಿಂ ಸವಿಸ್ತರಂ ಪೇಳ್ವುದು ಚರಣಾನುಯೋಗಂ ಸಾಗಾರನಗಾರ ಸ್ವರೂಪ ಧರ್ಮಮಂ ಪೇಳ್ವದು. ದ್ರವ್ಯಾನುಯೋಗಂ ಪಡ್ಡ್ರವ್ಯ ಪಂಚಾಸ್ತಿಕಾಯ ಸಪ್ತತತ್ತ್ವ ನವಪದಾರ್ಥಮಂ ಪೇಳ್ವದು.ಇವಾದಿಯಾದ ಸಕಲ ಪ್ರಪಂಚಮಂ ಕಂಠೋಷ್ಠಾದಿ ವಚೋನಿಮಿತ್ತಮಿಲ್ಲದೆ ಮೃದುಮಧುರ ಶ್ರವ್ಯ ನವ್ಯದಿವ್ಯಭಾಷಾ ಸ್ವಭಾವದಿಂ ಸರ್ವಜ್ಞಮುಖಪದ್ಮದಿಂ ಪುಟ್ಟಿದ ಶ್ರುತಾಂಬುಧಿಯಮೃತಮಂ ಶ್ರೇಣಿಕಂ ಕರ್ಣದ್ವಯಂಗಳಿಂದೀಂಟೆ ಎಲ್ಲಮಂ ತಿಳಿದು ಹೃಷ್ಟನಾಗಿ

|| ಸ್ರ || ಸರಸಂ ಸಾಹಿತ್ಯ ವಿಧ್ಯಾಧರನಮಲ ಯಶೋಭಾಮಿನೀವಲ್ಲಭಂ ಭಾ
ಸ್ಕರತೇಜಂ ಭವ್ಯಲೋಕಪ್ರಿಯನಮಳ ಗುಣಾಲಂಕೃತಂ ಧರ್ಮಪೀಯೂ
ಷರಸಾಸ್ವಾದಾಂತರಂಗಂ ಪರಮಗೆರಗಿ ಸಂತೋಷದಿಂ ಶ್ರೇಣೀಕಂ ಭಾ
ಸ್ಕರತೇಜಂ ಬಂದು ರಾಜಗೃಹದರಮನೆಯಂ ಪೊಕ್ಕನುತ್ಸಾಹದಿಂದಂ
ಇಂತೀ ಕಥೆಯಂ ಕೇಳ್ವರ
ಭ್ರಾಂತಿಯು ತಾಂ ಕೆಡುಗು ಬಳಿಕಮಾಯುಂ ಶ್ರೀಯುಂ
ಸಂತಾನವೃದ್ಧಿ ಸಿದ್ಧಯು
ಸಂತತ ಸೌಖ್ಯಂಗಳಿಹಪಂರಂಗಳೊಳಕ್ಕುಂ

ಇದು ಸತ್ಯಪ್ರವಚನ ಕಾಲಪ್ರವರ್ತನ ಕಥಾರ್ಣವರೊಳ್ ಕಿಂಚಿನ್ಮಾತ್ರಮನೆತ್ತಿ ವಿಬುಧೇಂದು ವಿರಚಿತ ರಾಜಾವಲಿ ಕಥಾವತಾರದೊಳ್ ಶ್ರೇಣಿಸಮ್ಯಕ್ತೋತ್ಪತ್ತಿ ವರ್ಣನಂ

ಪಂಚಮಾಧಿಕಾರಂ