||ವಿ|| ಧರೆಯುಂ ಪುಟ್ಟುವ ಮಕ್ಕಳುಂ ದಿನಪನುಂ ಗೋವೃಂದಮುಂ ವಾರಣೋ
ತ್ಕರಮುಂ ವ್ಯೋಮಮುಮಬ್ಧಿಯುಂ ತುರುಗಮುಂ ಕಿಚ್ಚುಂ ತರುವ್ರಾತಮುಂ
ಗಿರಿಯುಂ ಲೋಕದೊಳುಳ್ಳ ವಸ್ತುವೆನಿತುಂ ನಿರ್ಗ್ರಂಥಮಪ್ಪಾಜಿನೇ
ಶ್ವರ ಮುದ್ರಾಂಕಿತಮಲ್ಲದುಂಟೆ ಜಗದೊಳ್
ಮತ್ತನ್ಯಸಲ್ಲಾಂಛನಂ||

ಬತ್ತಲೆಯಿಪ್ಪುದೆಲ್ಲಾ ವಸ್ತುಗಳಂ ನೋಡುವ ರತಿಯೊಳ್‌ತಾನುಂ ತನ್ನ ಪೆಂಡತಿಯುಂ ಬತ್ತಲೆ ರಾಗದಿಂ ನೆರೆವಂದು ಸತ್ತವರಾರುಮಿಲ್ಲದಿರಿಂದೆಲ್ಲಾ ಬತ್ತಲೆಯೆ ಎಂದು ಭಾವಿಪುದು ಸವಣರಂ ಕಂಡುದರಿಂ ದೋಷಮೆಂದೊಡಜ್ಞಾನಿಗಳಂ ಪೊಲೆಮಾದಿಗರಂ ದುಷ್ಟದುರ್ಜನರಂ ಮಾಯಾವಿಗಳಂ ಕುಲಹೀನರಂ ಪಾಪಿಗಳಂ ವರಾಹ ಶ್ವಾನಾದಿಗಳಂ ಕಂಡವರ್ ಪರಿಪೂರ್ಣಮಾಗೆ ಪುಣ್ಯಮಂ ಕೀರ್ತಿಯಂ ಲಾಭಮನಾಂತಿಪ್ಪರ್. ಅದನಾ ಜಿನ ಋಷಿಯರ ಕಂಡವರ ಮನೆ ಪಶು ಎಮ್ಮೆಗಳ್‌ಕರೆಯವೇ ಕೂಳ್‌ಬೇಯದೇ ಪುಳ್ಳೆಗಳಡುಕಿದೊಡಂ ಕಿಚ್ಚುರಿಯವೆ? ಮಕ್ಕಳು ಮರಿಗಳ್‌ಕಾರಣಮಿಲ್ಲದೆ ಸಾವವೆ? ಉಂಡರೆ ಪಸಿವು ಪೋಗದೆ? ನೀರುಂ ಕೂಳುಂ ರುಚಿಯಾಗದೆ? ಆಯುಷ್ಯಮಿರ್ದು ಅಂದೆ ಸಾಯ್ವರೆ? ಋಷಿಗಳಂ ಎಂದುಂ ಕಾಣದವರ ಮನೆಯ ಪಶು ಎಮ್ಮೆಗಳ್‌ಗೊಡ್ಡಿಗಳಾಗಿಯುಂ ಕರೆವವೆ? ಬೆಂಕಿಯಿಲ್ಲದೆ ಕೂಳ್‌ಬೇವುದೆ? ಮಕ್ಕಳು ಮರಿಗಳ್‌ಯಾವ ಬಾಧೆಯಿಂದಾದರು ಸಾಯದೆ

ಪೆರಗಣ ಮಾತುಗಳಂ ಮು
ನ್ನರಿಯದವರ ಮುಂದೆ ಬಪ್ಪ ಕಾರ್ಯಮನಿನಿತೆಂ
ದರಿವುದು ಜೀವಂ ಜೀವಂ
ಪರಿಪಡೆ ಧಾರಿಣಿಯೊಳರಿಯಲಾರ್ಕುಮೆ ದೇಹಂ

ಜಾತಿಸ್ಮರತ್ವದಿಂ ಕೆಲರ್ ತಂತಮ್ಮ ಭವಾಂತರಮನಸುವಿಲ್ಲದೊಡೆಂತರಿವರ್? ಜೀವನಿಪ್ಪನ್ನೆವರಂ ಚೈತನ್ಯಮಿಪ್ಪುದದಿಲ್ಲದಂದು ದಶಪ್ರಾಣಂಗಳುಮಿಲ್ಲದೆ ಪೆಣನಾಗಿ ನಿಶ್ಚೇಷ್ಟೆಯಾಗಿ ದೇಹಂ ಕೊಳೆತು ಪುಳಿತು ಪೋಪುದು. ಜೀವಂ ಮುಂದೊಂದು ದೇಹಮಂ ಪೊಕ್ಕು ಕರ್ಮಾಧೀನನಾಗಿಪ್ಪುದು. ಆಸೆಯಿಂ ಸತ್ತು ಭೂತ ಪಿಶಾಚಾದಿಗಳಾಗಿ ತನ್ನವರಂ ಪಿಡಿದು ಕಾಡಿಯುಣ್ಬುದಂ ಕಂಡು ಕೇಳಿಯುಂ ಅಸುವನಿಲ್ಲೆಂಬ ಮರುಳ್ತನಮೇಕೆ? ಮಂತ್ರವಾದಿಗಳಿಂ ಪಾತ್ರಾದಿಗಳೊಳ್‌ಮುನ್ನಿನ ಭವದವನೀಕೆಗೆ ಮಕ್ಕಳಾಗಲೀಯನಿವಳ್‌ಮುನ್ನಿನ ಪೆಂಡತಿಯುಪದ್ರಾದಿಗಳಂ ಮಾಡುವೆನೆಂಬುದರಿಂ ಇಂತಪ್ಪರಿಂತಪ್ಪೆಡೆಯೊಳ್‌ಪುಟ್ಟಿದರೆಂದು ಜಾತಕಫಲಮಂ ನೋಡಿ ಇಂಥಾವನಾಗಿರ್ದಂ, ಮುಂದೆ ಇಂಥಾ ಗತಿಯಂ ಪಡೆವನೆಂದು ಪೇಳ್ವುದಂ ಕೇಳ್ದರಿಯದಂತೆ ನಿನ್ನೊಡಲ್‌ತುಂಬಿ ನಿನ್ನ ನುಡಿಯಿಸುತ್ತ ಸುಖ ದುಃಖಾದಿಗಳನರಿವಂ ಜೀವಮನಿಲ್ಲೆಂದು ನುಡಿವುದಾಶ್ಚರ್ಯಂ. ನಿನ್ನ ಮಿಥ್ಯಾಂಧಕರಾದಿಂದ್ಯಂತಾಸಂಭಾವ್ಯಮಂ ಪೇಳಲಾಗದೆಂದು ದೃಷ್ಟ ಶ್ರುತಾನುಭೂತಂಗಳಂ ಪೇಳ್ದೊಡಂ ನಂಬದೆ ಬುದ್ಧದಾಸಂ ಕೆರಳಿ ಪಲವುಂ ಮಾತಿಂದೇನಪ್ಪುದು? ನಿನ್ನ ದೇಹದೊಳ್‌ಜೀವಮುಂಟಪ್ಪೊಡೀ ನೆರೆದಿಪ್ಪ ನೆರವಿಗಳ ಮುಂದೆ ನಿನ್ನ ದೇಹದಿಂ ಪೊರಮಡಿಸಿ ತೋರುವುದೆಂದು ನುಡಿವುದುಮಕಲಂಕರೆಂದರ್

ಮರುಳೆ ಮರುಳ್ತನದಿಂ [ದು]
ರ್ವರೇಶನಾಸ್ಥಾನರಂಗದೊಳ್
ನೀಂ ಪಿತ್ತ
ಜ್ವರಮಾದರಂತೆ ಗೆಳಪುವ
ಸೆರಗಿಲ್ಲದೆ ನುಡಿವ ಬಡತನಂಚರಿಕೆಯೆ (?)

ಮಾಗಿಯೊಳ್‌ಬೇಸಗೆಯಂ ಬೇಸಗೆಯೊಳ್‌ಮಳೆಗಾಲಮನಾರುಂ ತೋರಲಾರರ್. ನೀನೀ ಮಳೆಗಾಲದೊಳ್‌ಬೇಸಗೆಯಂ ತೋರಿದೊಡೆ ಜೀವಮಂ ನಾಂ ತೋರುವೆಂ. ನೀಂ ನುಡಿಯರಿಯದಾಕಾಶಮಂ ನೋಡಿದನೆಂಬಂತೆನ್ನ ನುಡಿಗುತ್ತರಮಂ ಕಾಣದೆ ನಾನುಮೆಕ್ಕಸಿಕ್ಕಂಗಳ್ಗಳುಕದೆಯಾದೊಡಮೇಂ ಪಾಲೊಳ್‌ತುಪ್ಪಮುಂಟೆಂದು ಕಲ್ಲೊಳ್‌ಚಿನ್ನಮುಂಟೆಂದು ಮರದೊಳಗ್ನಿಯುಂಟೆಂದುಮೆಲ್ಲರ್ ಬಲ್ಲರಾಗಿಯುಂ ತೋರಲದಕ್ಕೆ ತಕ್ಕ ಕ್ರಿಯೆಯಂ ಮಾಡಿದೊಡಲ್ಲದೊಮ್ಮೆಯೆ ತೋರಬಾರದು. ಕ್ರಮವಿಡಿದು ಪಾಲಂ ಕಾಸಿ ಹೆಪ್ಪನಿಟ್ಟು ಕಡೆದು ಬೆಣ್ಣೆಗೊಂಡು ಪದವರಿದು ಕಾಸಿದಾಗಳ್‌ತುಪ್ಪಮ್ಕಕುಂ. ಕಲ್ಲಗರಂ ಮೂಲಿಕಾಪ್ರಯೋಗವಿಡಿದು ಕರಗಲಯಃತಾಮ್ರಮದಿಂ ಕ್ರಮವಿಡಿದು ಮಾಳ್ಪಕ್ರಿಯೆಯಿಂ ಸುವರ್ಣಮಕ್ಕುಂ. ಮರನು ಮನೋಜಾಯಿಲನಾಗಿ ಪೊಸೆಯೆ ಕಿಚ್ಚಕ್ಕುಂ ಎಳ್ಳಂ ಗಾಣದೊಳಿಕ್ಕಿ ಪಿಳಿಯೆ ಎಣ್ಣೆಯಕ್ಕುಮಂತೆ ಕರ್ಮವಶದಿಂ ಶರೀರಿಯಪ್ಪ ಜೀವನೊರ್ಮೆಯೆ ತೋರಲ್ಬಾರದು. ಜೀವನುಂಟೆಂಬ ನಂಬುಗೆಯಿಂ ದಯಾಮೂಲಮಪ್ಪ ಸಾಗಾರನಗಾರ ಧರ್ಮಕ್ಕೆ ಶರೀರಮನೊಡ್ಡಿ ತಪದಿಂ ಪಾಪಾಂಕುರಂಗಳಂ ಕಿತ್ತೊಟ್ಟಿ ಮೆಲ್ಲನೆ ಸ್ವಸ್ವರೂಪನಾಗಿ ಶಾಶ್ವತ ಸುಖದೊಳ್‌ಕೂಡಿದಂದು ಜೀವಂ ಬೇರಕ್ಕುಮಾಗಲ್‌ಜ್ಞಾನದರ್ಶನಸ್ವರೂಪಾಗಿಯಾಸನ್ನಭವ್ಯರ್ಗಂತೋರ್ಕುಮಲ್ಲದೆ ಮನೆಯ ಬಡತನಕ್ಕೆ ಪೊಡೆಯಂ ಕೊಯ್ದಟ್ಟನ್ನಮನರಸಲ್‌ಕಾಣದಂತಕ್ಕುಂ. ನಿನಗೆ ಕರ್ಮಬಂಧಮಪ್ಪ ಜೀವನೆಂತು ಕಾಣ್ಬಂ? ಪಾಲೊಳ್‌ಘೃತಚ್ಛಾಯೆಯಪ್ಪ ಸ್ನಗ್ಧಂ ಶಿಲೆಯೊಳ್‌ಸುವರ್ಣದ ಪೊಗರ್ ಮರದೊಳ್‌ಕಿಚ್ಚು ತೋರುವಂತೆ ನಿನ್ನ ಸೊಲ್ಲುಂ ಚೈತನ್ಯಮುಂ ಬೋಧಮುಮಿಪ್ಪುದರಿಂ ಜೀವನುಂಟೆಂದು ಕಾಂಬುದು. ಸೋರೆಯ ಬುರುಡೆಗೆ ಮಣ್ಣಂ ಮೆತ್ತಿ ಶರಧಿಯೊಳಿಕ್ಕಿದೊಡೆ ಮೇಲಕ್ಕೆ ಬಾರದಂತೆ

ಕರ್ಮಲೇಪನಾದಾತ್ಮನುಮಪವರ್ಗಮನೆಯ್ದಲಾರಂ. ತಾರೆಗಳುಂ ಚಂದ್ರನುಂ ಪಗಲೊಳ್‌ಮುಗಿಲೊಳಿರ್ದು ಕಾಣದಿರೆ ತಾರೆಗಳುಂ ತಾರಾಪತಿಯುಮಿಲ್ಲೆಂದು ವಾದಿಸಲಾಗದು ಏರಂಡಬೀಜಂ ಬಿಸಿಲಿಂದೊಣಗಿ ಪಸುರ್ ಪೋಗೆ ಮೇಲಕ್ಕೆ ಪಾರುವಂತಾತ್ಮಂ ಕರ್ಮ ಚೋಹಂ ಪೋಗೆ ಮೋಕ್ಷದೊಳ್‌ನೆಲೆಯಪ್ಪಂ. ಜೀವಂ ಅನಾದಿ ನಿಧನ ಕರ್ತೃತ್ವ ಭೋಕ್ತೃತ್ವಮುಳ್ಳನಾಗಿಯುಂ ಪಾಪದಿಂ ನಾರಕನುಂ ಪುಣ್ಯದಿಂ ಸ್ವರ್ಗಸ್ಥನುಂ ಪಾಪ ಪುಣ್ಯಮಿಶ್ರದಿಂ ಮನುಷ್ಯನುಂ ಪಾಪಪುಣ್ಯಕ್ಷಯದಿಂ ಮುಕ್ತನುಂ ಅಪ್ಪನೆಂದು ಪೇಳೆ ಸಭೆಯುಂ ಸಭಾಪತಿಯುಂ ಮೆಚ್ಚಿ ಜಯಪತ್ರಮಂ ಕುಡೆ ಸಂಸಾರಿ ಜೀವನಪ್ಪುದರಿಂ ಬುದ್ಧದಾಸಂ ಮೊದಲಾಗೆ ಜೀವನೆಂಬಂ ದೇಹದೊಳೆಲ್ಲಿಪ್ಪನವನ ಕಾಣ್ಬುದೆಂತೆಂದೊಡೆ ಭಟ್ಟಾರಕರಿಂತೆಂದರ್

ಶಾ|| ಅಂಗುಷ್ಠಂ ಮೊದಲಾಗೆ ನೆತ್ತಿವರೆಗಂ ಸರ್ವಾಂಗ ಸಂಪೂರ್ಣನು
ತ್ತುಂಗಜ್ಞಾನಮಯಂ ಸಂದರ್ಶನಮಯಂ ಚಾರಿತ್ರತೇಜೋಮಯಂ
ಮಾಂಗಲ್ಯಂ ಮಹಿಮಂ ಸ್ವಯಂಭುಸುಖಿನಿರ್ಬಂಧಂ ನಿರಾಪೇಕ್ಷನಾ
ಗಂಗಂ ತುಂಬಿಹನೆಂದು ಭಾವಿಸುವವಂ ಕಾಣ್ಬಂ ಪೆರರ್ ಕಾಣ್ಬರೇ

ಯೋಜಗ್ದ್ವಾ ಪಿಶಿತಂ ಸಮತ್ಸ್ಯಕಬಲಂ ಜೀವಂ ಚ ಶೂನ್ಯಂ
ವದನ್ಕರ್ತಾ ಕರ್ಮಫಲಂ ನ ಭುಂಕ್ತ ಇತಿ ಯೋ ವಕ್ತಾ ಸುಬುದ್ಧಾ ಕಥಮ್
|
ಯದ್ಜ್ಞಾನಂ ಕ್ಷಣವೃತ್ತಿ ವಸ್ತು ಸಕಲಂ ಜ್ಞಾತುಂ ನ ಶಕ್ತುಂ ಸದಾ
ಯೋ ಜಾನನ್ಯುಗಪ್ಪಜ್ಜಗತ್ರಯಮಿದಂ ಸಾಕ್ಷಾತ್
ಸ ಬುದ್ಧೋ ಮಮ||

ಎಂದನೇಕ ತೆರದಿಂ ಶಬ್ದಾಗಮ ಯುಕ್ತ್ಯಾಗಮ ಪರಮಾಗಮಂ ಮೊದಲಾಗೆ ಸಂವಾದಘಟವಾದ ಪತ್ರವಾದಾದಿಗಳಿಂ ಸೌಗತಗರ್ವಪರ್ವತಮನಕಲಂಕವಾಗ್ವಜ್ರಪಾತದಿಂ ಚೂರ್ಣೀಕೃತಂ ಮಾಡೆಯಾ ಸಮಯದೊಳ್‌ರಾಜಾಲಯದಿಂ ಭದ್ರಗಜಂ ಮದದಿಂ ಕಂಭಮಂ ಮುರಿದು ರಾಜವೀಧಿಯೊಳ್‌ಕಂಡ ಜನಂಗಳಂ ಕೊಲ್ಲುತ್ತೆ ಬರುತ್ತಿರಲಾ ಸೌಗತರ ಮನೋಗತದಿಂದುಭಯ ಶಾಸ್ತ್ರಂಗಳನರ್ಚಿಸಿ ಕರಿಯು ಬಪ್ಪ ಮಾರ್ಗದೊಳಿಡುವುದುಂ ಮದಗಜಂ ಬೌದ್ಧಾಗಮ ಪುಸ್ತಿಕಮನೆಡಗಾಲಿಂ ಪುಡಿಯಂ ಮಾಡಿ ಜಿನಸಿದ್ಧಾಂತಮನೆತ್ತಿ ಮಸ್ತಕದೊಳಿಟ್ಟು ಗ್ರಾಮಪ್ರದಕ್ಷಿಣಂಗೆಯ್ದೊಡಾ ಶಾಸ್ತ್ರಕ್ಕೆ ಗಂಧಹಸ್ತಿಮಹಾಭಾಷ್ಯಮೆಂಬ ಪೆಸರಾದುದೆಲ್ಲಮಂ ಹಿಮಶೀತಲಮಹಾರಾಜಂ ಕಂಡು ಸುಗತಾಚಾರ್ಯನಂ ಕಲ್ಲುಗಾಣದೊಳಿಕ್ಕಿಸಲೆಂದುದ್ಯೋಗಿಸೆ ಭಟ್ಟಾಕಲಂಕರ್ ಜೀವಘಾತಭೀರುಗಳಾಗಿ ಅರಸಂಗರಿಪೆ ತಾವೇ ಗಾಣದ ಬಳಿಯೊಳಡ್ಡ ಬಂದು ನಿಲಿಸೆ ಸಕಲ ದೇಶಂಗಳೊಳಿಪ್ಪ ಬೌದ್ಧರೆಲ್ಲ ತಮ್ಮ ಸರ್ವಸ್ವಮನರಸಂಗೊಪ್ಪಿಸಿ ಅಂತರ ದ್ವೀಪಂಗಳಾದ ಸಿಂಗಳದ್ವೀಪ ಹಂಸದ್ವೀಪ ವಾನರದ್ವೀಪ ಮೊದಲಾದವರೊಳ್‌ನಿಂತು ಕರ್ಣಾಟ ಮೊದಲಾದ ದೇಸಂಗಳೊಳ್‌ಹೆಸರಿಲ್ಲದಂತಾಗೆ ಹಿಮಶೀತಲಮಹಾರಾಜಂ ಜೈನಾಗಮಮಂ ನಂಬಿ ಸುದೃಷ್ಟಿಯಾಗಿ ರಾಜ್ಯನಾಳಿದಂ ಸಪ್ತ ಶೈಲಾದ್ರಿಶಾಖೆ ಹಿಮಶೀತಲಮಹಾರಾಜಾಃ

ವೃತ್ತ|| ನಾಹಂಕಾರವಶೀಕೃತೇನ ಮನಸಾ ನ ದ್ವೇಷಿಣಃ ಕೇವಲಂ
ನೈರಾತ್ಮ್ಯಂ ಪ್ರತಿಪದ್ಯ ನಶ್ಯತಿ ಜನೇ ಕಾರುರ್ಣಯಬುದ್ಧ್ಯಾ ಮಯಾ|
ರಾಜ್ಞಿಶ್ಶ್ರೀ ಹಿಮಶೀತಲಸ್ಯ ಸದಸಿ ಪ್ರಾಯೋ ವಿದಗ್ಧಾತ್ಮಣಾನೋ
ಬೌದ್ಧೌಘಾನ್
ಸಕಲಾನ್ವಿಜಿತ್ಯ ಸಘಟಃ ಪಾದೇನ ವಿಸ್ಫಾಟಿತಃ|| ||೧||

ಸಂಕ್ಷೋಭೀಕೃತಪಂಕಜಸ್ಯ ವಿಸರೋ ಜ್ಞಾನಿಕೃತಾನೇಕ ಶೋ
ದ್ಭವ್ಯಾನಿ ಪ್ರಕಟೀಕೃತೋರ್ವಿಸರಃ ಸ್ಯಾದ್ವಾದ ಯುಕ್ತ್ಯಾಗಮಃ|
ಧಾವಲ್ಯೀಕೃತ ದಿಕ್ಯಮೂಹಗತ ಸತ್ಕೀರ್ತಿಸ್ಸಮುದ್ರೀಕೃತಃ
ಪ್ರಸ್ಫೀತೋದ್ಧತ ವಾದಿಜಾಲವದನಶ್ಶ್ರೀ ಭಟ್ಟಾಕಲಂಕವ್ರತೀ|| ||೨||

ಯೋರಾಗದ್ವೇಷ ಮೋಹಾದ್ಧೃತಮಲಿನಮಾಶ್ಲಿಷ್ಯದುಷ್ಟಾನ್
ಪ್ರಾಕೃಷ್ಯಾಕ್ಲಿಷ್ಟೈ ಕಾಂತ ಪ್ರವಾದ ಪ್ರಕಟನ ಪಟು ವಾಚಾಟವಾದೀಶವಾದಾನ್‌|
ಉಕ್ತ್ವಾ ಸಂಬೋಧ್ಯ ವಾದೇ ಪ್ರವಚನ ವಿಲಸತ್ಸಾರತತ್ವಾರ್ಥ ಸಾರ್ಥಾನ್
ಜಿತ್ವಾ ಜೇತ್ಯಸ್ರಗಾ ಯಚ್ಛತಿ ಭುವಿ ತಮಹಂ ನೌಮಿ ಭಟ್ಟಾಕಲಂಕಮ್ || ||||

ಪ್ರತಿಕ್ಷಣಂ ಭಂಗಿ ಗತಾನ್ವಿರುದ್ಧ
ಧರ್ಮ ಪ್ರಬುದ್ಧಾಪನೆಯ ಪ್ರಣದ್ಧಾನ್
‌|
ದುರ್ಬುದ್ಧಿ ವಿದ್ಧಾನ ವಿಶುದ್ಧ ಬೌದ್ಧಾನ್
ಜೈತ್ರೋ ಭವತ್ಸೇಷ ಋಷೀಂದ್ರವಂದ್ಯಃ || ||೪|

ತರ್ಕಾತಿಕರ್ಕಶ ಪೃಥಗ್ವಿಧ ಯುಕ್ತಿಮಾರ್ಗೋ
ಚ್ಚ ……… ಸಾ …….. ರುಂಬತಿದೊ ………..|
ಚಾರ್ವಾಕಸಾಂ ………….. ಪೆಲಾದ್ಯಭಿಲಾನ್ಯವೃಂದಾನ್

ಬಹುಗ …………… ಬಹುಶಸ್ಸಜಿ ………..ಕಲಂಕಃ || ||೫||

ಮತ್ತಮಾ ತರುವಾಯದೊಳ್‌ಯದುಕುಲಾಗ್ರಗಣ್ಯನಪ್ಪನಪ್ರತಿಮಲ್ಲಂ ರಾಜಮಲ್ಲಂ ದಕ್ಷಿಣ ಮಧುರೆಯೊಳಿರ್ದ ಕರ್ನಾಟ ದ್ರಾವಿಡ ಮಹಾರಾಷ್ಟ್ರ ತೌರುಷ್ಕಂ ಮೊದಲಾದನೇಕ ದೇಶಮಂ ಸಾಧಿಸಿ ವೀರಮಾರ್ತಾಂಡದೇವನೆಂದು ಪೊಗಳಿಸಿಕೊಳುತಿರ್ದನಾ ಮಹಾಸಾಮಂತಂ ಚೌಂಡರಾಯಂ ಸಮ್ಯಕ್ತ್ವಯುಕ್ತ ಪರಾಕ್ರಮಶಾಲಿ ನೊಣಬಕುಲಾಂತಕ ಗಂಗವಂಶಲಲಾಮನನೇಕರಾಜ್ಯಮಂ ಸಾಧಿಸಿ ಸುಖಸಂಕಥಾ ವಿನೋದದಿಂದಿಪ್ಪುದುಮಾನಂಬಿಕೆ ಸಮ್ಯಕ್ತ್ವಸಂಪನ್ನೆ ಆದಿಪುರಾಣಮಂ ಕೇಳ್ದು ಪೌದನಪುರದೊಳ್‌ಬಾಹುಬಲಿದೇವರ ಪ್ರತಿಬಿಂಬಮೈನೂರು ಚಾಪೋತ್ಸೇಧಮುಂಟೆಂಬುದಂ ಕೇಳ್ದಾತನಂಬಿಕೆ ಕಾಳಿಕಾದೇವಿಯುಂ ತಾನುಮಾ ಬಿಂಬಮಂ ದರ್ಶನಂ ಮಾಡುವನ್ನೆಗಂ ಪಾಲುಂ ಪಣ್ಣುಂ ನಿವೃತ್ತಿಯೆಂದು ಚತುರಂಗಬಲಂಬೆರಸು ಪಯಣಂ ಬಪ್ಪಾಗಳಲ್ಲಲ್ಲಿ ಬೀಡಂ ಬಿಡುತ್ತೆ ಮಾರ್ಗದೊಳೊಂದೊಂದು ಚೈತ್ಯಾಲಯಂಗಳಂ ರಚಿಸಿ ಪ್ರತಿಷ್ಠೆಯಂ ಮಾಡಿಸುತ್ತೆ ಪೋಗಿ ಮುನ್ನ ಭದ್ರಸ್ವಾಮಿಗಳ್ ನಿಷಿದ್ಧಿವಡೆದ ಬೆಟ್ಟದ ಬಳಿಯೊಳ್ ಬೀಡಂ ಬಿಟ್ಟಿರ್ದು ಮುಂದಕ್ಕೆ ಪೋಗಲೆಂದಿರ್ದಾ ರಾತ್ರಿಯೊಳ್ ಪದ್ಮಾವತಿದೇವಿಯು ಮಾತಾಪುತ್ರರ ಸಪ್ನದೊಳ್ ನೀಮುಂ ಪೌದನಾಪುರಕ್ಕೆ ಪೋಗಲ್ ಸಾಮರ್ಥ್ಯಮಿಲ್ಲಮಾದೊಡಂ ನಿಮ್ಮ ದೃಢಭಕ್ತಿಗೆ ಈ ಬೆಟ್ಟದೊಳೆ ಮುನ್ನ ರಾಮ ರಾವಣರಿಂ ಪೂಜಿತಮಪ್ಪ ಗೋಮಟಜಿನಪ್ರತಿಮೆ ಮಂಡೋದರಿಯ ದರ್ಶನದ ಶಿಲಾಂಬಿಂಬಿಪ್ಪುದವಕ್ಕೆ ಮರೆಯಾಗಿದ್ದ ಶಿಲೆಯಂ ತೆಗೆದೊಡೆ ಕಾಣ್ಗುಂ ಅದರ ಕಾಣ್ಕೆಗಾವುದು ಗುರುತೆಂದೊಡೆ ಶುಚಿರ್ಭೂತನಾಗಿ ಚಿಕ್ಕಬೆಟ್ಟದ ಗುಂಡನವಲಂಬಿಸಿ ದಕ್ಷಿಣಾಭಿಮುಖವಾಗಿ ಬಾಣಪ್ರಯೋಗಮಂ ಮಾಡಿದೊಡಾ ರವಕ್ಕೆ ನಿರೀಕ್ಷಣಂಗೆಯ್ಯದಿರ್ದೊಡೆ ಬಿಂಬಂ ಬೆಳೆದು ತೋರ್ಪುದೆಂದು ಸ್ವಪ್ನಮಂ ಕಾಣಿಸಲರ್ಕೋದಯದೊಳಾ ಪ್ರಕಾರದೊಳೆ ಬಾಣಪ್ರಯೋಗಮಂ ಮಾಡಿದೊಡೆ ಮರಸಿರ್ದ ಗುಂಡುಗಳ ಮರೆಯೊಳಿರ್ದ ಭುಜಬಲಿಯತಿವರರ ಪ್ರತಿಬಿಂಬಂ ಕಾಣಲೊಡನವನೀಕ್ಷಿಸಿದೊಡೆ ಪದಿಮೂರು ಪುರುಷಪ್ರಮಾಣದಿಂ ನಿಲ್ವುದುಮವರ ಸುತ್ತ ಪರಿಸ್ಥಲಂಗಳಂ ಮಾಡಿಸಿ ಪ್ರಾಕಾರದೊಳ್ ಚೈತ್ಯಾಲಯಂಗಳಂ ಮಾಡಿಸಿ ಪ್ರತಿಷ್ಠೆಯಂ ಮಾಡಿಸಿಯವಭೃತ ಸ್ನಾನದೊಳೆ ಎಳನೀರು ಮೊದಲಾದ ಪಂಚಾಮೃತಂಗಳಂ ಪ್ರತ್ಯೇಕಂ ನಾಲ್ಕು ಖಾರಿಯಂ ಸಂಪಾದಿಸಿ ಚಿತ್ತಸಮುನ್ನತಿಯಿಂ ಸ್ನಪನಂಗೆಯ್ಸಿದೊಡಂ ನಾಭಿಯಿಂ ಕೆಳಗಿಳಿಯದಿಪ್ಪುದುಂ ವಿಷಣ್ಣಮನದಿ ಲಕ್ಷ ಪರಿಷೆಗಳೆಲ್ಲರ್ಗಂ ಬೆಸಸಿದೊಡವರೆಲ್ಲರುಂ ತಂತಮ್ಮ ಶಕ್ತ್ಯಾನುಸಾರವಾಗಿ ಜಲ ಕ್ಷೀರಾದಿ ಧಾರೆಗಳಿಂದಾಗಲಿಳಿಯದಿರೆ ಚಿಂತಾಕ್ರಾಂತನಾಗೆ ಕೂಷ್ಮಾಂಡಿನೀ ದೇವಿ ವೃದ್ಧರೂಪಾಂತು ಗುಳ್ಳಕಾಯಪೋಳೊಳ್ ಕ್ಷೀರಮಂ ತಂದೆನ್ನ ಭಕ್ತಿಯಂ ಸಲಿಸಲೆಂಬುದೆಲ್ಲರುಮಪಹಾಸ್ಯಂಗೆಯ್ಯೆ ಕೆಲಂವರದಂ ಕೊಂಡಾ ಪ್ರತಿಮೆಯ ಮಸ್ತಕದೊಳ್ ಬಿಡಲಾಕ್ಷಣವೆ ಬೆಟ್ಟಮನುರಮಂ ಪಾಲ್ ಮುಸುಕಲಾ ಪುರಕ್ಕೆ ಬೆಳ್ಗುಳಮೆಂಬ ಪೆಸರಿಟ್ಟನೇಕ ಗ್ರಾಮಂಗಳಂ ನಿರ್ಮಾಣಂ ಮಾಡಿ ತದ್ಧೇವತಾವಿನಿಯೋಗಕ್ಕೆ ಲಕ್ಷದ ಮೇಲೆ ತೊಂಬತ್ತಾರು ಸಾವಿ ಪೊನ್ನಿನ ಗ್ರಾಮ ಸೀಮೆಗಳಂ ಶಿಲಾಶಾಸನಪೂರ್ವಕಂ ಕೊಟ್ಟು ನ್ಯಾಯದಿಂ ರಾಜ್ಯಮಂ ಪಾಲಿಸುತ್ತಿರ್ದಂ.

ಮುನ್ನ ಸುರಾಷ್ಟ್ರದೇಶದ ಗಿರಿಪುರ ಸಮೀಪದೂರ್ಜಯಂತಗಿರಿಯ ಚಂದ್ರ ಗುಹಾನಿವಾಸಿ ಧರಸೇನಾಚಾರ್ಯ ಮಹಾತಪೋಧನ ಪರಮಮುನಿ ಮುಖ್ಯನಾ ಗ್ರಾಯಣಿಯ ಪೂರ್ವಸ್ಥಿತ ಪಂಚವಸ್ತುಗತ ಚತುರ್ಥ ಮಹಾ ಕರ್ಮಪ್ರಾಭೃತತಜ್ಞರಾಗಿರ್ದು ನೀಚಾಯುರಾವಸಾನದೊಳ್ ಇಂದ್ರಾದೇಶದ ವೇಣಾತಟಪುರಸ್ಥಿತ ಭೂತಬಲಿ ಪುಷ್ಪದಂತರಂ ಲೇಖನಮನಟ್ಟಿ ಬರಿಸಿ ಶ್ರೀಮನ್ನೇಮಿಜಿನನಾಥ ಸಿದ್ಧಶಿಲೊಯಳ್ ವಿದ್ಯಾಸಾಧನೆಗೆಯ್ಯೆ ವಿದ್ಯಾದೇವಿ ಪ್ರತ್ಯಕ್ಷಮಾಗೆ ಹೀನಾಧಿಕರ್ಣಮನರಿದು ಮಂತ್ರ ವ್ಯಾಕರಣವಿಧಿಯಂ ವಿದ್ಯಮಂ ಸಾಧಿಸಿ ಸಿದ್ಧವಿದ್ಯರಾಗೆ ಶುಭ ತಿಥಿ ವಾರ ನಕ್ಷತ್ರದೊಳ್ ಗುರುವಿನ ಅಜ್ಞಾವಿಯದಿಂ ವ್ಯಾಖ್ಯಾನ ಪ್ರಾರಂಭಮಾಗೆ ಕೆಲದಿವಸದಿಂದಾಷಾಢ ಶುದ್ಧೈಕಾದಶಿಯೊಳ್ ಗ್ರಂಥಸಮಾಪ್ತಿಯೊಳೆ ದೇವತೆಗಳ್ ಪೂಜಿಸೆ ಭೂತಬಲಿ ಪುಷ್ಪದಂತರ್ ಪ್ರಯಹಿತವಚನಂಗಳಿಂ ದಕ್ಷಿಣಾಭಿಮುಖದೆ ಕರಹಾಟದೇಶಮನೆಯ್ದಿ ಜಿನಪಾಲಿತ ಮುನೀಶ್ವರ ಭಾಗಿನೇಯಂ ಕೂಡಿ ವನವಾಸಮಾಗಿರೆ ಭೂತಬಲಿ ದ್ರಾವಿಡ ದೇಶದ ಮಧುರಾಪುರಕ್ಕೆಯ್ದಿ ಪುಷ್ಪದಂತರ್ ಸ್ವಭಾಗಿನೇಯ ಜಿನಪಾಲಿತಮುನಿಗೆ ಕರ್ಮಪ್ರಕೃತಿ ಪ್ರಭೃತಮುಪಸಂಹಾರ್ಯಗಳಿಂದಾರು ಖಂಡಂಗಳ ವಾಂಛನ್ಗುಣ ಜೀವಾಧಿಕ ವಿಂಶತಿವಿಧ ಸೂತ್ರ ಸತ್ಪ್ರರೂಪಣಯುಕ್ತ ಜೀವಸ್ಥಾನಾದ್ಯಧಿಕಾರಮಂ ವಿರಚಿತ ತದಭಿಪ್ರಾಯಮಂ ಭೂತಬಲಿ ಗುರುಪಾರ್ಶ್ವದೊಳ್ ತತ್ಪ್ರರೂಪಣಮಂ ಕೇಳ್ದು ಮತ್ತಂ ದ್ರವ್ಯರೂಪಾದ್ಯಧಿಕಾರ ಖಂಡ ಪಂಚಕ ಸೂತ್ರಂಗಳಾರು ಸಾಸಿರ ಗ್ರಂಥರಚನೆಯಂ ಮಹಾಬಂಧ ಷಟ್ಖಂಡ ತ್ರಿಶಂತ್ಸಹಸ್ರ ಸೂತ್ರಗ್ರಂಥಗಳೈದು ಖಂಡಮಂ.

ಮತ್ತಂ ಜೀವಸ್ಥಾನಂ ಕ್ಷುಲ್ಲಕಬಂಧಂ ಬಂಧಸ್ವಾಮಿತ್ವಂ ಭಾವಂ ವೇದನಾವರ್ಗಣೆಗಳೆಂಬಾರು ಖಂಡಮಂ ಭೂತಬಲಿಮುನಿ ವಿರಚಿಸೆ ಭಾವಸ್ಥಾಪನಾರೋಪಣಮಂ ಪುಸ್ತಕದೊಳ್ ಬರೆದು ಜ್ಯೇಷ್ಠ ಸಿತ ಪಂಚಮಿಯೊಳ್ ಚಾತುರ್ವರ್ಣ ಚತುಃಸಂಘಸಹಿತಂ ಶಾಸ್ತ್ರಪ್ರತಿಷ್ಠೆಯಿಂ ಪೂಜಿಸೆ ಪ್ರಭಾವನೆಯಂ ಮಾಡಿದರ್. ಜಿನಪಾಲಿತಮುನಿ ಪುಷ್ಪದಂತರ್ ಮಾಡಿದ ಷಡ್ಖಂಡಾಗಮಮೀ ಗ್ರಂಥಮಂ ಕ್ರಿಯಾಕರ್ಮರಚನಾ ಸಿದ್ಧಂತಮಂ ಕೂಡಿ ಘಂಟಾ ಧ್ವಜ ಛತ್ರ ಚಾಮರಾದಿಗಳನನೇಕ ತೂರ್ಯಾರವಂಗಳಿಂ ಪೂಜಿಸಲಂದಿಂ ಬಳಿಯಂ ಶ್ರುತಪಂಚಮಿಯೆಂದು ಪ್ರಸಿದ್ಧಿಯಾಗಲನಂತರಂ ಕಷಾಯ ಪ್ರಾಭೃತಜ್ಞಾನಪ್ರವಾದ ಪಂಚಮ ಪರ್ವಸ್ಥ ದಶಮ ವಸ್ತು ತೃತೀಯ ಪ್ರಾಯ ದೋಷ ಪ್ರಾಭೃತಕಜ್ಞರ್ ಗುಣಧರ ಯತಿವೃಷಭೋಚ್ಚಾರಣಾಚಾರ್ಯರಲ್ಲಿ ಗಾಥಾಚೂರ್ಣ್ಯಚಾರಣ ಸೂತ್ರಂಗಳಿಂದುಪಸಂಹೃತ ಕಷಾಯಪ್ರಾಭೃತಮಂ ತಿಳಿದು ದ್ರವ್ಯಭಾವ ಪುಸ್ರಕಸಮಾ ಸಮಾಗಚ್ಚ ಗುರುಪರಿಪಾಟಿ ಸಿದ್ಧಾಂತ ಶ್ರೀಮತ್ಕುಂದಕುಂದ ಪುರಾಚಾರ್ಯ ಶ್ರೀಪದ್ಮನಂದಿ ಗದ್ದ್ರಪಿಂಛ ಬಲಾಹಕಮಯೂರಪಿಂಛರ್ ಉಮಾಸ್ವಾತಿ ಪೂಜ್ಯಪಾದರೆಂದಿವರನೇಕ ಸಿದ್ಧಾಂತಕರ್ತೃಗಳ್ ಶಾಮಕುಂದಾಚಾರ್ಯರ್ ಮಹಾಬಂಧ ಪ್ರಾಕೃತ ಸಂಸ್ಕೃತ ಕರ್ಣಾಟಕಭಾಷೆಗಳಿಂ ಗ್ರಂಥರಚನಾಪ್ರವೀಣರಾದಿಯಂ ಬಳಿಯಂ ತುಂಬುಲೂರ ನಾಮಾಚಾರ್ಯರೆಂಬತ್ತು ನಾಲ್ಕುಸಾಸಿರ ಗ್ರಂಥಕರ್ತೃಗಳಾಗೆ ಕರ್ಣಾಟಕಭಾಷೆಯಿಂ ಚೂಡಾಮಣಿವ್ಯಾಖ್ಯಾನಮಂ ಮಾಡಿದರ್.

ಮೊದಲು ಪದ್ಮನಂದಿಗಳುಂ ಪೂಜ್ಯಪಾದರುಂ ತತ್ವಾರ್ಥದೊಳ್ ಸಂದೇಹಂ ಬರೆ ಪ್ರಯತ್ನದಿಂ ಪೂರ್ವವಿದೇಹಮನೆಯ್ದಿ ಸಮವಸರಣ ದರ್ಶನ ತೀರ್ಥಂಕರಾವಲೋಕನದಿಂ ನಿಸ್ಸಂದೇಹಮಾಗೆ ಬಂದು ವಿರಿಚಿಸಿದ ಕ್ರಮದೊಳೆ ಸಮಂತಭದ್ರಾಚಾರ್ಯಸ್ವಾಮಿಗಳ್ ಕೌಶಂಭೀನಗರದೊಳ್ ಶಾಸನದೇವಿ ಪ್ರತ್ಯಕ್ಷಮಾಗೆ ಸುವರ್ಣಮಯ ಚಂದ್ರಪ್ರಭುಸ್ವಾಮಿ ಪ್ರತಿಬಿಂಬಮಮ ಲೋಕಾಶ್ಚರ್ಯಮಾಗೆ ತೋರಿಸಿ ವಿವಿಧ ಸಿದ್ಧಂತ ಷಡ್ಖಂಡಾಗಮ ಮೃದು ಸಂಸ್ಕೃತಭಾಷಾಟೀಕಂ ವಿರಚಿಸರಲಾ ಪರಂಪರೆಯಿಂ ಶುಭರವಿ ನಂದಿಮುನಿಗಳ್ ಭೀಮರಥಿ ಕೃಷ್ಣವೇಣಿ ಮಧ್ಯಮವಿಷಯದ ಉತ್ಕಲಿಕಾ ಗ್ರಾಮಸಮೀಪದ ಮಣುವಕವಲ್ಲಿಗ್ರಾಮದ ಬಪ್ಪದೇವಗುರುಗಳ್ಗೆ ಮಹಾಬಂಧ ಷಟ್ಟಂಡದೊಳ್ ಪಂಚಖಂಡವ್ಯಾಖ್ಯಾಪ್ರಜ್ಞಪ್ತಿ ಷಟ್ಟಂಡಕಷಾಯಪ್ರಾಭೃತ ಮೊದಲಾದವನುಪದೇಶಂಗೆಯ್ದರಾ ಬಪ್ಪದೇವರ್ ಮಹಾಬಂಧಮಷ್ಟಸಹಸ್ರ ಗ್ರಂಥರಚನೆಯಿಂ ಮಾಡಿದನಂತರ ಚಿತ್ರಕೂಟ ನಗರವಾಸಿ ಶ್ರೀವಿಲಾಚಾರ್ಯರ್ ಸಿದ್ಧಂತ ತತ್ವಜ್ಞರವರಲ್ಲಿ ವೀರಸೇನಗುರುಗಳ್ ಸಕಲ ತತ್ವಮನರಿದು ಉಪರಿಮನಿಬಂಧನಾದ್ಯಧಿಕಾರಮಷ್ಟಾದಶಾಧಿಕಾರಮಂ ಪೇಳ್ದುರವರನುಜ್ಞೆಯಿಂ ವಾಟಗ್ರಾಮದ ಚೈತ್ಯಾಲಯದೊಳ್ ಉಪರಿಮನಿಬಂಧನಾಧ್ಯಧಿಕಾರಮಷ್ಟಾದಶದೆಪ್ಪತ್ತೆರಡು ಸಾಸಿರ ಗ್ರಂಥರಚನಾ ಪ್ರಾಕೃತ ಸಂಸ್ಕೃತ ಮಿಶ್ರ ಟೀಕಂ ಬರೆದು ಧವಲಮೆಂದುಮವರ ಶಿಷ್ಯರ್ ಜಯಸೇನರ್ ಚತುಷ್ಕಷಾಯ ಪ್ರಾಭೃತ ವಿಂಶತಿಸಹಸ್ರಗ್ರಂಥರಚನಾ ತಚ್ಛೇಷ ಚತ್ವಾರಿಂಶತ್ಸಜಸ್ರಂ ರಚಿತ ಜಯಧವಲಮಾರು ಸಾವಿರ ಗ್ರಂಥಪ್ರಮಾಣ ಟೀಕಂ ಮಾಡಿದರಿಂತು ಮಹಾಧವಲಸಿದ್ಧಾಂತಮಂ ರಚಿಸಿರ್ದ ಪುಸ್ತಕಂಗಳಂ ರಕ್ಷಿಸಲ್ ಸಿದ್ಧಾಂತಬಸ್ತಿಯಂ ಮಾಡಿಸಿ ಅಲ್ಲಿ ಸ್ಥಾಪಿಸಿ ಪೂಜಿಸುತ್ತಂ ತತ್ಕಾಲದೊಳ್ ಸ್ವಭೋಧನಾರ್ಥಂ ನೇಮಿಚಂದ್ರಸೈದ್ದಾಂತಿಕದೇವರ್ ತ್ರಿಲೋಕಸಾರ ಗೊಮ್ಮಟಸಾರ ಲಬ್ದಿಸಾಮೆಂಬ ಸಾತ್ರಯಮಂ ಪ್ರಾಭೃತಕರಚನೆಯಂ ಮಾಡಿದರ್.

ಈ ಚಾಮುಂಡರಾಯನುಮನೇಕ ಜಿನಾಲಯಗಳಂ ಸ್ಥಾಪಿಸಿ ಸ್ವಾಸ್ತ್ಯಂಗಳಂ ಬಿಡಿಸಿ ತನ್ನ ದೇಶದಿಂದರುವತ್ತು ನಾಲ್ಕು ಜೈನಬ್ರಾಹ್ಮಣರಂ ಬರಿಸಿ ಅರ್ಚಕರಂ ಮಾಡಿಟ್ಟ ಶಕಾಬ್ದಂಗಳ್ ೭೮೦ರಲ್ಲಿ ಕೊಲ್ಲಾಪುರ ಡಿಲ್ಲಿಯೆಂಬುದದರೊಳ್ ಶ್ರೀಮಜ್ಜಿನಸೇನ ಮಹಾಮುನಿಗಳ್ ಮೊದಲು ನಂದಿಮುನಿ ಪದ್ಮಮುನಿ ಮಹಾಕವಿ ಸಿದ್ಧಸೇನರ್ ಕವಿಪರಮೇಷ್ಠಿಗಳಿ ವಿರಚಿಸಿರ್ದ ಸಪಾದ ಲಕ್ಷ ಗ್ರಂಥಮುಳ್ವ ಪ್ರಥಮಾನುಯೋಗ ಮಹಾಪುರಾಣಮಂ ಓದಲಾರದ ಜಡಮತಿಗಳ್ಗೆ ತಿಳಿಯಲರಿದೆಂದು ಸತ್ಯಮಾ ಜೀನಸೇನಾಂತಮೆಂಬ ವಚನಮಿರ್ದುದರಿಂ ತ್ರಿಷಷ್ಟಿಲಕ್ಷಣಮಹಾಪುರಾಣಮಂ ದ್ವಾದಶ ಸಹಸ್ರ ಗ್ರಂಥಪ್ರಮಾಣದಿಂ ರಚಿಸಿಲೆಂದು ಪ್ರಾರಂಭಿಸುವಲ್ಲಿ ಮೊದಲು ಮಂಗಳಾಚರಣ ಶ್ಲೋಕದೊಳಗ್ನಿಗಣಮಾಗೆ ತಮ್ಮಿಂದಂ ಸುಪೂರ್ತಿಯಿಲ್ಲೆಂದು ತಮ್ಮ ಶಿಷ್ಯರೈನೂರ್ವ ರೊಳಿರ್ವರಂ ಶುಷ್ಕವೃಕ್ಷಮಂ ವರ್ಣಿಪುರದೆನೆ ಮೊದಲೊರೆದರಂ ಕಠಿಣವಾಕ್ಕೆಂದು ಬಿಟ್ಟು ಮೃದುವಾಕ್ಯ ಸುಮತಿಗಳಪ್ಪ ಗುಣಭದ್ರಮುನಿಯಂ ಕರೆದು ಪತ್ತು ಸಾವಿರ ಗ್ರಂಥಮಂ ರಚಿಸಿರ್ದ ಪುರಾಣಮಂ ಪರಿಪೂರಸೆಂದಪ್ಪೈಸೆ ಅವರ್ ಉಳಿದೆಂಟು ಸಾವಿರದಿಂದಿತ್ತರಪುರಾಣಮಂ ಮಾಡಿರ್ದೊಡದೆಲ್ಲಮಂ ಕರ್ಣಾಟಕಭಾಷೆಯಿಂ ಜಿಗುರುವಪ್ಪ ಅಜಿತಸೇನಭಟ್ನಾರಕರ ನಿರೂಪದಿಂ ಚಾಮುಂಡರಾಯಪುರಾಣಮೆಂಬುದಂ ಮಾಡಿದರ್.

ಇಂತನೇಕ ಧರ್ಮಮಂ ಮಾಡುತ್ತೆ ಸಕಲ ದೇಶಮಂ ಸಾಧಿಸಿ ದುಷ್ಕೃನಿಗ್ರಹ ಶಿಷ್ಟಪ್ರತಿಪಾಲನಂ ಮಾಡುತ್ತೆ ಪ್ರಜಾಪಾಲನಿದಿಂ ಕೃತಯುಗದೊಳ್ ಗಾಂಡೀವಿಯುಮಿನ್ನೀ ತ್ರೇತಾಯುಗದೊಳ್ ರಾಮನುಂ ದ್ವಾಪರಯುಗದೊಳ್ ಗಾಂಡೀವಿಯುಮಿನ್ನೀ ಕಲಿಯುಗದೊಳ್ ವೀರಮಾತಾಂಟನೀ ಚಾಮುಂಡರಾಯನೆಂದು ಸಕಳ ಜನಂ ಪೊಗಳ್ವಿನಂ ಸುರಶೈಲದಿಂ ವಾರ್ಧಿ ವಿಸ್ತರಮಾ ವಾರ್ಧಿಯಿಂ ಭೂತಳಮಾ ಭೂಮಿಗಂ ದಿಗಂತರದಿಂದಾಕಾಶಮದರಿಂ ತನ್ನ ಕೀರ್ತಿ ವಿಶಾಲಮಾಗೆ ರಾಜಿಸಿದನು. ಅಂತಲ್ಲದೆ ಮುನ್ನ ಕಾಲದೋಷದಿಂ ಕಿರಾತರ್ ಪ್ರಬಳರಾಗಿ ರಾಜ್ಯಮೆಲ್ಲಮಂ ತಮ್ಮ ವಶಂ ಮಾಡಿಕೊಂಡು ಧರ್ಮಕಂಟಕರಾಗಿ ಪ್ರಜೆಗಳಂ ಕ್ಷೋಭಂ ಮಾಡುತ್ತಂ ಬರೆ ತನ್ನಾಳ್ದನ ಬೆಸದಿಂ ವಜ್ಜಳನ ನರಿಯ ತಲೆಯನಾನೆ ಮೆಟ್ಟುವಂತೆ ತನ್ನಾನೆಯಿಂ ಮೆಟ್ಟಿಸಿ ಗೆಲ್ದ ಸಹಾಯ ಪರಾಕ್ರಮನಾದುದರಿಂ ಸಮರಧುರಂಧರನುಂ ಸಿಂಗೊಮಾರ ಬಯಲೊಳ್ ಬಂದೊಡ್ಡಿದ ನೊಣಂಬರಂ ಕಾಳಗದೊಳ್ ಜಗದೇಕವೀರನ ಮುಂತೇರಿ ನಿರ್ಮೂಲಮಾಗೆ ಗೆಲ್ದುದರಿಂ ವೀತಮಾರ್ತಾಂಡನುಮುಚ್ಚಂಗೆಯ ಕೋಂಟೆಯೊಳ್ ರಾಜಾಯತನೊಳೊರ್ವನೆ ಪೆಣೆಗರೆದುದರಿಂ ರಣರಂಗಸಿಂಗನುಂ ಬಾಳೆಯೆಳೆಯ ಕೊಂಟೆಯೊಳ್ ತ್ರಿಭುವನವಿಜಯವೀರಂ ಮೊದಲಾಗೆ ಪಲಂಬರ್ ಮುಂಕೊಂಡು ಯಮೋದರಮಂ ಪುಗಿಸಿದುದರಿಂ ವೈರಿಕುಳಕಾಲದಂಡನುಂ ನೃಪಕಾಮನ ಕೋಂಟೆಯೊಳ್ ರಾಜನೆಂಬಧಟನಂ ಬಾಸನೆಂಬ ವಿಕ್ರಮಂ ವರನೆಂಬ ಜಟ್ಟಿಗನಂ ಮಾಣಾಂಕನೆಂಬನಂ ಕಟ್ಟುಗೊಂಡನುಂ ಪೊಯಿಸಳನೆಂಬ ಬಿರಿದಾಂಕನಂ ಪೃಧುವನೆಂಬ ಪೂಣಿಗನಂ ಚಿತ್ತನೆಂಬ ಶೂರನಂ ಮೊದಲಾಗೆ ಪೆರವು ವೈರಿಭೂಭುರನೊಂದೆ ಮೊನೆಯೊಳೆ ಗೆಲ್ದುದರಿಂದಜೇಯ ಛಲಂದಕರಾಜ ಗಂಗನುಂ ಗಂಗರಭಂಟರೆನಿಸಿದ ಮುದುರಾಚಯನೊಳ್ ದಾಳಿಯಿಟ್ಟು ಛಲಂ ಮೆರೆದುದರಿಂ ಸಮರಪರಶುರಾಮನಂ ಮಾರ್ಗಮುರಿಯದಟ್ಟೈಸಿದ ಜಟ್ಟಿಗರನಟ್ಟಿ ರಾಜ್ಯಮಂ ನಿಷ್ಕಂಟಕಂ ಮಾಡಿದುದರಿಂ ಪ್ರತಿಪಕ್ಷ ರಾಕ್ಷಸನುಂ ಕೆಲದ ನೆಲದ ಮಲೆಯ ವೈರಿಗಳ ತಲೆಯ ನೆಲಕ್ಕರಗಿಸಿದ ಭಟಮಾರಿಯುಂ ನಿಶ್ಯಂಕಾದಿ ಗುಣರಕ್ಷಣಥಕ ಕಾರಣಪ್ಪುದರಿಂ ಸಮ್ಯಕ್ತಗುಣಾಳಂಕಾರನು ಸತ್ಯತ್ಯಾಗಾದಿ ಯುಕ್ತನಪ್ಪುದರಿಂ ವಿವೇರತ್ನಾಕರನುಂ ಪರಾಂಗನಾ ಪರದ್ರವ್ಯ ಪರಾಙ್ಮುಖನಪ್ಪುದರಿಂ ಶೌಚಾಚಾರನಿತನುಂ ಹಾಸದೊಳಿನೃತ ವಚನನಪ್ಪುದರಿಂ ಸತ್ಯಯುಧಿಷ್ಟಿರನುಂ ಸ್ವಪರ ಗುರಕ್ಷಣೈಕಕಾರಣನಪ್ಪುದರಿಂ ಗುಣರಕ್ಷಣನುಂ ಕುಲಾಚಲ ಕೂಟಮಾಟಂಗಳೊಳೆ ನವಶತ ಸಂಖ್ಯಾಶಕಾಬ್ದಂಬರಂ ರಾಜ್ಯಪಾಲನೆಯಂ ಮಾಡುತ್ತುಮಿರ್ದಂ.

ತನ್ನ ವಂಶಜರಪ್ಪರಸುಮಕ್ಕಳ್ ಹತ್ತೊಕ್ಕಲಂ ಕರೆಯಿಸಿ ಇರಿಸಿದಂ ವಿಕ್ರಮಾರ್ಕನ ಕಲ ನೂರಮೂವತ್ತಾರು (೧೩೬) ವರುಷದ ಮೇಲೆ ಶಾಲಿವಾಹನಕಾಲಮಲ್ಲಿ ಗುಣಭದ್ರರವರ ಶಿಷ್ಯರ್ ಭೂಪಾಲನೆಂಬರಸುನಾಳುವಂದು ಜಿನಸೇನಾಚಾರ್ಯರವರ ಮೌಖರು ಗುಣಭದ್ರರವರ ಶಿಷ್ಯರ್ ಗೋವಿಂಧಭಟ್ಟರ್ ವೇದಾಗಮ ಸ್ತ್ರೋತ್ರ ವ್ಯಾಖ್ಯಾನಕರ್ತೃಗಳಾದರವರ ಕುಮಾರರ್ ಹಸ್ತಿಮಲ್ಲರಾಚಾರ್ಯರಾದರ್. ಬಳಿಕ ಧಾರಾಪುರದೊಳ್ ಭೋಜರಾಜಂ ದೇವೀವರದಿಂ ಕವೀಶ್ವರನೆನಿಸಿ ಅಮರ ದಂಡಿ ಭವಭೂತಿ ಧನಂಜರೆಂಬರ್ ಮೊದಲಾಗನೇಕ ಕವಿ ಗಮಕಿ ವಾದಿ ವಾಗ್ಮಿಗಳೊಡನೆ ವಿದ್ಯಾಗೋಷ್ಠಿಯೊಳೆ ದಿನಮಂ ಸಲಿಸುತ್ತೆ ಸಮ್ಯಕ್ತ್ವವಿಲ್ಲದೆ ಹಲವು ಸಮಯಂಗಳೊಳ್ ಕೂಡಿದನಾತರಿಗೆ ಮತಿಸಾಗರನೆಂಬ ಸಮ್ಯಗ್ದೃಷ್ಟಿ ಮಂತ್ರಿಯಾಗಿ ಆತನ ಪರಂಪರೆಯಿಂದಿರ್ಪ್ಪುದುಂ ಕಾಳಿದಾಸಾದಿಗಳ್ ಕವಿಗಳಾಗಿ ಕಾಳಿಕಾದೇವಿಯ ಆರಾಧನಮಂತ್ರವಾದಮಂ ಕಲ್ತು ಶಾಸ್ತ್ರದೊಳುಂ ತಾವೆ ಬಲ್ಲಿದರೆಂದು ಗರ್ವೋದ್ಧತರಾಗಿ ಒಂದು ದಿನಂ ರಾಜಸಭೆಯೊಳ್ ಕಾಲಂ ಕೊಯ್ದು ಕೆಂದಿಸುತ್ತಂ ಭಗಂದರರಾಗಿ ಬಂದು ಆ ಕ್ಷಣದೊಳೆ ಮನ್ಮಥರೂಪಂ ತೋರಿ ಗಳಗಂಡ ಮಾಡಿ ಆ ಕ್ಷಣದೊಳೆ ಪರಿಹರಿಸಿ ತೋರಿ ತಮ್ಮ ಸಾಮರ್ಥ್ಯಂ ಕ್ಷಪಣರ್ಗಿಲ್ಲೆಂದು ಪೇಳೆ ಭೋಜಂ ಸತ್ಯಸಾಗರಮಂತ್ರಿಯಂ ನಿಮ್ಮ ನಿಮ್ಮವರಲ್ಲಿ ಇಂಥಾ ಸಾಮರ್ಥ್ಯವುಂಟೆ ಇಲ್ಲವೆಂದು ನಾನಾ ವಿಧದಿಂ ಕ್ಷೀಣಮಾಗಿ ನುಡಿದೊಡೆ ಮಂತ್ರಿ ವಿಷಣ್ಣವಾಗಿ ಮತ್ತೊಂದುದಿನಂ ಮಾನತುಂಗರೆಂಬಾರ್ಯಂ ಬಂದಿರ್ಪುದುಂ ಸಭೆಗೆಯ್ದಿಸೆ ಭೋಜಂ ಲೋಹದ ೨೪ ನಿಗಳಮಂ ಮಸ್ತಕದಿಂ ಪಾವ….ರೆದ ಹಾಕಿಸಿ ನಾಲ್ಕು ನೆಲೆ ಉಪ್ಪರಿಕೆಯೊಳಿಟ್ಟು ನಾಲ್ಕು ಬಾಗಿಲ ಮುದ್ರಿಸಲಾ ರಾತ್ರಿಯೊಳಂ ಭಕ್ರಾಮರಸ್ತ್ರೋತ್ರಮಂ ಮಾಡಿ ಮಂತ್ರಸಹಿತಂ ಪೇಳುತ್ತಿರೆರಡು ನುತಿಮಂತ್ರಗಳಿಗೊಂದೊಂದು ಸಂಕಲೆ ಪರಿದ….. ಬಾಗಿಲ ತೆಗೆದು ಹಸ್ತದ ನಿಗಳವೆರಸು ಸಭೆಗೆ ಬಂದು ನಿಮ್ಮವರಿಂದಿದಂ ಪರಿಹರಿಸುವುದೆನೆ ಅರಿಂದಿಲುಂ ಸಾಗದಿರೆ ಕಡೆಯ ಎರಡು ಸ್ತ್ರೋತ್ರಮಂತ್ರಮಂ ಪೇ[ಳಲಾ]ಕ್ಷಣವೆ ಕಳೆಂಡೊಡೆ ಮಹಾತ್ಮರೆಂದರಸಂ ನಮಿಸಿ ಧರ್ಮೋಪದೇಶಂಗೆ….. ಸಮ್ಯಕ್ತ್ವಮಂ ಕೈಕೊಂಡೊಡೆ ಇವರೆತಿಗಳು ಗೃಹಸ್ಥರೊಳಿಲ್ಲವೆಂದು ಪೇಳ್ದೆಡೆ. ಹೇಮಶ್ರೇಷ್ಠಿಯುಂ ಪಠಿಸೆ ಚಕ್ರೇಶ್ವರಿ ಬಿಡಿಸಿ ಭೋಜನಂ ಕಜ್ಜದೊಳು ಹೇಮಶ್ರೇಷ್ಠಿ ಬಿಡಿಸಿದನು. ಆತನ ಮಗಳುಮಂ ಮಂತ್ರಿಗಳ್ ಕುರುಂಬನೆಂಬಮಗೆ ಮದುವೆಯಿಂ ಮಾಡಿದೊಡವಂಗೆ ಕಾಳಿಕಾ ದೇವೀವರದಿಂ ಕಾಳಿದಾಸನೆಂಬಭಿಧಾನಮಾಗೆ ಕವಿಶ್ರೇಷ್ಠನೆಂದು ಪೊಗಳಿಸಿಕೊಂಬನು ಇಂತಿಪ್ಪುದಮೊಂದು ದಿವಸಂ ವಿದ್ವಾಂಸರು ಬರಿಸಿ ಸಂಸ್ಕೃತಶಬ್ದ ನಿಘಂಟುಗಳು… ಮುನ್ನಿರ್ದವಂ ನೋಡಿ ಪೊಸತಾಗಿ ವಿಪರೀತ ಮಿಥ್ಯಾಪರೀಣಾಮನಾಗಿಯು ಮಹಾ ವಿದ್ವಾಂಸನಾಗಿರ್ದಮರಂಗಂ ಕವಿಶಿಖಾಮಣಿ ಜೈನಸಮಯ….ವ ಧನಂಜಯಮಹಾ ಕವಿಯಪ್ಪ ಅಮರನ ತಂಗಿ ಪತಿಗಂ ನಿಯಮಿಸಲೀರ್ವರುಂ ತಂತಮ್ಮ ಮತಿಗೆ ತಕ್ಕಂತು ಪ್ರತ್ಯೇಕಮೆರಡು ನಿಘಂಟು ಮಾಡಿರ್ದೊಡೊಮ್ಮೆ ಧನಂಜಯನ ಗೃಹದೊಳಿರ್ದ ನಿಘಂಟು ಕಂಡಿದರನ್ನಾಂ ರಚಿಸಿದ ಕೃತಿ ಪೂಜ್ಯಮಾಗದೆಂದದಂ ಕೊಂಡು ಪೊಳೆಯೊಳಿಕ್ಕಿ ಪೋಗೆ ಕೆಲವು ದಿವಸಕ್ಕರಸಂ ಪರೀಕ್ಷಿಸಲ್ ಬರಿಸಲಮರಸಿಂಹಂ ತಾಂ ಮಾಡಿದ ಪುಸ್ತಕಮಂ ಕೊಂಡು ಸಭೆಗೆ ಬಂದಂ. ಧನಂಜಯಂ ತಾಂ ಮಾಡಿದ ಕೃತಿ ಪೋದುದರಿದು ಸಭೆಗೆಯ್ದು ಅರಸಂ ನಾಮಲಿಂಗಾನುಶಾನಮಂ ಕೇಳ್ವನಿತರೊಳೆ ಇನ್ನೂರು ಗ್ರಂಥದಿಂ ಶಬ್ದಸಂಕಿರ್ಣ ಪ್ರರೂಪಣಮನೈವತ್ತು ಶ್ಲೋಕದಿಂ ನಾನಾರ್ಥಮಂ ಕಲ್ಪಿಸೆ ಅಮರಸಿಂಹಂ ಪೇಳ್ದುದಂ ವಿದ್ಧತ್ಸಭಾಜನರೆಲ್ಲಂ ಮೆಚ್ಚಿ ಸಭಾಪತಿಯಂ ಮೆಚ್ಚಿಸಿ ತದನಂತರಂ ಧನಂಜುಕೃತಮಂ ಕೇಳ್ದು ಬುದ್ಧಚತುರತೆಗಾಶ್ಚರ್ಯಂಬಡೆದು ವಿದ್ಯಾ ಸಾಮರ್ಥ್ಯಮಮ ಪೊಗಳಿ ಮನ್ನಣೆಯಂ ಮಾಳ್ವುದುಂ ಧನಂಜುಂ ದ್ವಿಸಂಧಾನದಿಂ ರಾಘವಪಾಂಟವೀಯಮಂ ರಚಿಸೆ ಸಮಸ್ತ ವಿದ್ವಜ್ಜನಂಗಳುಂ ಮೆಚ್ಚಿ ಕವಿತ್ವಮಂ ಪೂಜ್ಯಂ ಮಾಡಿದರ್.

ಶ್ಲೋಕ || ಪ್ರಮಾಣಮಕಲಂಕಸ್ಯ ಪೂಜ್ಯಪಾದಸ್ಯ ಲಕ್ಷಣಮ್
ದ್ವಿಸಂಧಾನಕವೇಃ ಕಾವ್ಯ ರತ್ನತ್ರಯನುಮಶ್ಚಿಮಮ್ಮ ||

ಅಪಶಬ್ದಶತಃ ಮಾಘೇ ಭಾರವೀರೇಕವಿಂಶತಿಘ
ಅನಂತಾಃ ಕಾಳಿದಾಸಸ್ಯ ಕವಿದೇಕೋ ಧನಂಜಯಃ
||

ಜಾತೇ ಜಗತಿ ವಾಲ್ಮೀಕೌ ಶಬ್ದಃ ಕವಿರಿತಿ ಸ್ಥಿತಿಃ
ಕವಶ್ವೇತಿ ತತೋ ವ್ಯಾಸೇ ಕವಯಶ್ವೇತಿ ದಂಡಿನಿ
||

ಕವಯಃ ಕವಯಶ್ವೇತಿ ಬಹುತ್ವಂ ದೂರಮಾಗತಮ್
ವಿನಿವೃತ್ತಂ ಚಿರಾದೇವಿ ಕದೌ ಜಾತೇ ಧನಂಜಯೇ
||

ಇತ್ಯಾದಿ ಪದ್ಯಂಗಳಿಂ ಪ್ರಶಂಸೆಗೆಯ್ದರ್. ಮತ್ತೊಂದು ದಿನಂ ಮೇಘಸಂದೇಶ ಕಾವ್ಯಮಣ ರಚಿಸಿ ಆನೆಯನೇರಿಸಿ ಗ್ರಾಮಪ್ರದಕ್ಷಿಣಂ ಬರಿಸುವಲ್ಲಿ ಜಿನಸೇನಭಟ್ಟಾರಕರ ಮಠದ ಬಾಗಿಲ್ಗೆ ಬಂದಾಗಳವರ ಶಿಷ್ಯರಿರ್ವರ್ ಮಠದ ಬಾಗಿಲೊಳಿದ್ದು ವಿದ್ವಾಂಸರೆಲ್ಲಾ ಮೆಚ್ಚಿ ಮೆರೆಯಿಸಬೇಕಲ್ಲವೆ ಪಾರ್ಥಿವರ್ ಮೆಚ್ಚಿ ಮಾಡಿಸಿದಲ್ಲಿ ಕಾವ್ಯಂ ಪೂಜದಯ ಮಾಗದಾ ಕಾವ್ಯಮೆಂತಿಪ್ಪುದೆಂದೋದಿಸಿ ತಾವೆಕಸಂಧಿ ದ್ವಿಸಂಧಿಗಳಪ್ಪುದರಿಂ ಗ್ರಹಿಸಿ ಈ ಕಾವ್ಯವೆಮ್ಮಲ್ಲಿಪ್ಪುದು. ಅದರೊಳೆ ಕೆಲ ಪ್ರಾಸಂಗಳಂ ಕಳ್ದು ರಚಿಸಿರ್ದ ಪರಿಂದೀ ಕಾವ್ಯಮಂ ದೂರದಿಂ ತರಿಸುವನ್ನೆಗಂ ತಿರುಗಿಸುವುದೆಂದು ತಿರುಗಿಸಿ ತಜನಂ ಒಪ್ಪಿಸಿ ತಮ್ಮ ಗುರುವಿಂಗರುಪಿ ಆ ಪದಪ್ರಾಸಂಗಳೆಲ್ಲಮಿಪ್ಪುದಾಗಿ ಪಾರ್ಶ್ಚಭ್ಯುದಯಮೆಂದು ಕಾವ್ಯಮಂ ರಚಿಸಿ ಕೆಲದಿವಸದಿಂ ಭೋಜಂಗೊಪ್ಪಿಸಿ ಮನ್ನಣೆಯಂ ಪಡೆದರ್.

ಮತ್ತೊಂದು ದಿನವೊರ್ದ ಮಂತ್ರವಾದಿ ವಿದ್ಯಾದೇವಿಯರನಾರಾಧಿಸಿ ಆಕರ್ಷಣ ವಿದ್ವೇಷಣ ಸ್ತಂಭ ಮೋಹ ವಶ್ಯಾದಿಗಳಂ ಬಲ್ಲಮಂ ಬಂದೆರಗಲವನಂ ಬಹುಮೆಚ್ಚಿಯ ವನಂ ಪೊಗುಳುತ್ತುಮಿರ್ದು ಜೈನಮತದ ಪ್ರಸಂಗಂ ಬರೆ ಈ ಮಂತ್ರವಾದಿ ಸಾಮರ್ಥ್ಯಮಾವ ಮತದೊಳೆಮಿಲ್ಲೆಂದರಸು ನುಡಿಯೆ ಶ್ರಾವಕರ್ ನಮ್ಮ ಗುರುಗಳೊಳುಂಟೆನಲ್ ಮಾನತುಂಗಾಚಾರ್ಯರಂ ಬರಿಸಲವರಿಗೆ ಆಪಾದಮಸ್ತಕಂಬರಮಿಪ್ಪುತ್ತುನಾಲ್ಕು ಶೃಂಖಲೆಯಂ ಪೂಡಿಸಿ ಏಳನೆ ನೆಲಯೊಳಿಟ್ಟು ಬಂಧನಮಂ ಮಾಡಿಸೆ ಗಣಧರವಲಯಮಂತ್ರಂಗಳನೆರಡೆರಡಂ ಭಕ್ರಾಮರಸ್ತುತಿಪೂರ್ವಕಂ ಪೇಳೆಲೊಂದೊಂದು ಸಂಕಲೆಯುಮ ಪರಯುತ್ತೆ ನಾಲ್ಕು ಸ್ತ್ರೋತಕೊಂದು ನೆಲೆಗಿಳಿಯುತ್ತುಂ ಬಂದು ಹಸ್ತದೊಂದು ಸಂಕಲೆಸಹಿತಂ ಸಭೆಯೊಳ್ ನಿಂದು ಎಲ್ಲಾ ಪೋದುವಿದೊಂದುಮಂ ನಿಮ್ಮ ವಿದ್ವಜ್ಜನರಿಂ ಬಿಡಿಸುವುದೆಂದು ಪೇಳಲೆಲ್ಲರುಮದಂ ತೊಲಗಿಸಲರಿಯದೆ ಮಂತ್ರವಾದಿ ಬಂದೆರಗೆ ಕಡೆಯವೆರಡು ಮಂತ್ರಮಂ ಸ್ತುತಿಪೂರ್ವಕಂ ಪೆಳ್ದೋಡಾಕ್ಷಣವೆ ಸಂಕಲೆ ಕಳೆದು ಬೀಳ್ವುದುಂ ಜಿನಸಮಯವೆ ಲೋಕೋತ್ತರಮೆಂದಾ ಯತಿಗಳಲ್ಲಿ ಧರ್ಮ ಕರ್ಮ ಸ್ವರೂಪಮಂ ಕೇಳ್ದು ಸಮ್ಯಗ್ದರ್ಶನಮಂ ತಾಳ್ದರ್.

ಭಕ್ತಾಮರಸ್ತ್ರೋತ್ರ ಸಾಮರ್ಥ್ಯದ ಕಥೆ ಇಪ್ಪತ್ತು ನಾಲ್ಕಪ್ಪವಮಂ ನೋಡಿಕೊಂಬುದು. ಮತ್ತವೊಮ್ಮೆ ದಂಡು ಪೋಪಾಗಳುಜ್ಜೈನಿ ಸಮೀಪದ ಹೊಲದ ಬಳಿ ಕೃಷೀವಲನ ಜೀವಾರ್ಯಧೈಯಧಮಂ ಕಂಡಾ ಬಳಿಯೊಳ್ ನೋಳ್ದುಮಂ ವಿಕ್ರಮಾರ್ಕನ ರತ್ನಮಯ ಸಿಂಹಾಸನ ಪದಿನಾರು ಸೋಪಾನಂಗಳಕ್ಕೆಲದೊಳ್ ಮೂವತ್ತೆರಡು ಸ್ತ್ರಿ ಪ್ರತಿಮೆ ಸಹಿತಂ ನಿಕ್ಷೇಪಮಾಗಿರಲಾ ಸಿಂಹಾಸನಮಂ ತಂದದನೇರಲುದ್ಯೋಗಿಸಲಿದಂ ನೀನೇರಲ್ ಯೋಗ್ಯನಲ್ಲೆಂದು ದೈವಂಗಳ್ ಬಾರಿಸೆ ಮಾಣ್ದನದರಿಂದಾ ಸ್ತ್ರೀಪತಿಮೆಗಳ್ ಕಥೆಗಳಂ ಪೇಳ್ದವೆಂದು ನಿರ್ಮಿಸಿದರ್. ಮತ್ತಂ ಭೋಜರಾಜನನವರತಂ ವಿದ್ವಾಂಸರೊಳೆ ಪೋತ್ತುಗಳೆಯುತ್ತುಂ ತಾನುಂ ಕವೀಶ್ವರನಾಗಿ ಸಂಸ್ಕೃತಭಾಷೆಯೆ ಪ್ರಸಂಗಮಾಗೆ ಕಾಳಿದಾಸನಂ ಪೂಜಿಸಿ ಮಾಘ ರಘವಂಶ ಮೊದಲಾದನೇಕ ಕಾವ್ಯಮಂ ರಚಿಸಿ ಛಂಧಸ್ಸು ಅಮರಕಾದಿ ಗ್ರಂಥರಚನೆಯಂ ಮಾಡಿಸಿದನಾ ಪ್ರಪಂಚೆಲ್ಲಮನಿಲ್ಲಿ ಪೇಳಲತಿವಿಶಾಲಮಪ್ಪುದದಂ ಬರೆಯಲಿಲ್ಲಾ ಪ್ರತ್ಯಂತರದಿಂ ನೋಡಿಕೊಂಬುದು.

ರಸನಗಷ್ಟಶಕೇ ಬೋಜರಾಜೋ ವಿರಾಜತೇ ಎಬುದುರಿಂ ವೇದಾಂತಿಗಳ್ ಕೆಲರ್ ಶೂದ್ರಕರನ ಮೇಲೆ ೨೦೨ ವರುಷ ವಿಕ್ರಮರಾಯನಲ್ಲಿ ೧೦೭೮ ರಲ್ಲಿ ಭೋಜರಾಜನಲ್ಲಿಂ ೫೩೫ರಲ್ಲಿ ಶಾಲೀವಾಹನಕಾಲಮೆಂದು ಪೇಳ್ವುದು ಪುಸಿ.

ವೃತ್ತ || ಯುಧಿಷ್ಠಿರೋ ವಿಕ್ರಮ ಶಾಲಿವಾಹನ
ಸ್ತತೋ ನಪೋಸ್ತೋ ವಿಯಾಭಿನಂದನಃ |
ಕ್ರಮೇಣ ನಾಗಾರ್ಜುನಭೂಪತಿರ್ನೃಪಾಃ
ಕಲೌ ಯುಗೇ ಷಡ್ವಧಕಾಲವರ್ತತೇ ||

ಕ್ರಮೇಣ ವೇದಾಬ್ದಿಕ ವಹ್ನಯಸ್ಸಮ ಶರಾಗ್ನಿಚಂದ್ರಃ ಖಖಾಷ್ಟಭೂಮಯಃ | ತತೋಯತಂ ಲಕ್ಷಚತುಚ್ಟಯಂ ಚ ಶಶಿದ್ವಿನಾಗಶ್ಚ ಭೂಪವತ್ಸರಃ || ಯು ೩೦೪೪ | ವಿ ೧೩೬ | [ಶಾ ೧೮,೦೦೦] || ೪,೦೦,೦೦೦ | [ವು ೨೧] ಅವ್ಂ ೪,೩೨,೦೦೦ ||

ಎಂಬುದರಿಂದಲ್ಲಿ ಪೂರ್ವಾಪರ ವಿರೋಧಮಪ್ಪುದು. ಅದರಿಂ ಮೊದಲ ವಾಕ್ಯ ಮೆಂದರಿವುದು.

ಇಂತೀ ಕಥೆಯಂ ಕೇಳ್ವರ
ಭ್ರಾಂತಿಯು ನೆರೆಕಟ್ಟು ಬಳಿಕಮಾಯುಂ ಶ್ರೀಯುಂ
ಸಂತಾನವೃದಧಿಯಪ್ಪುದ
ನಂತಸುಖಂ ಇರಪರತ್ರದೊಳ್ ಸಂಭವಿಕುಂ

ಇದು ಸತ್ಯಪ್ರವಚನ ಕಾಲಪ್ರವರ್ತನ ಪಾರಾವಾರೋದ್ಧತ ದೇವಚಂದ್ರ ವಿರಚಿತ ರಾಜಾವಲಿ ಕಥಾಸಾರದೊಳ್ ಜಿನದತ್ತರಾಯ ಪ್ರಮುಖ ಭೋಜರಾಜಾಂತ ಕಥಾ ನಿರೂಪಣಂ

ಅಷ್ಟಮಾಧಿಕಾರಂ