ಶ್ಲೋಕ || ಅನಭ್ಯಾಸೇ ವಿಷಂ ಶಾಸ್ತ್ರಂ ಅಜೀರ್ಣೇ ಭೋಜನಂ ವಿಷಮ್
ದರಿದ್ರಸ್ಯ ವಿಷಂ ಗೋಷ್ಠೀ ವೃದ್ಧಸ್ಯ ತರುಣೀ ವಿಷಮ್ ||

ಒಂದು ಗ್ರಾಮದೊಳು ಕೆಂಚಂಭಟ್ಟಂಗೆ ಚುಂಚಂಭಟ್ಟನೆಂಬ ಮಗನಾಗೆ ವಿದ್ಯಾಭ್ಯಾಸಂಗೆಯ್ಯದೆ ಅನಕ್ಷರ ಕುಕ್ಷಿಯಾಗಿರ್ದನಾತನ ಪಿತಂ ಲೋಕಾಂತರಿತನಾಗಲ್ ತಾಯಿ ಮಗನಿಗಿಂತೆಂದಳ್ ನಿನ್ನ ತಾನಂ ವಿದ್ಯದೊಳ್ ಪ್ರಸಿದ್ಧನಾಗಿ ಪ್ರಶ್ನ ನಿಮಿತ್ತಂಗಳಿಂ ಸಂಪಾದಿಸುತ್ತಿರ್ದಂ ನೀನೆಂತು ಬಾಳ್ವೆಯೆಂದು ನುಡಿವುದುಂ ಅದೃಷ್ಟಾನುಸಾರದಿಂ ಮನೆಯೊಳ್ ತಾಯಿ ಪೋಳಿಗೆಯಂ ಮಾಡುವ ಶಬ್ದಮಂ ಕೇಳಿ ನೋಡಿ ಲ್ಪಟಲ್ಪಟ ಶಬ್ದಂ ಹೋಳಿಗೆ ದೃಷ್ಟಮೆನಲವರಜ್ಜಿ ಮಗನು ನಿಮಿತ್ತಮನೊಳ್ಳಿತ್ತಾಗರಿವನೆಂದಸಗನ ಕತ್ತೆಯನರಸಿ ತಂದೊಂದು ಪ್ರದೇಶದೊಳ್ ಕಟ್ಟಿ ಅಸಗನ ಕತ್ತೆ ಕಂಡಂ ದೃಷ್ಟಂ ಎಂದಾಮೇಲೆ ಗೌಡನ ಬೆಳ್ಳೆ ಕಂಡಂ ದೃಷ್ಟಮಾದೊಡೀ ವಾರ್ತೆಯಾ ದೇಶದರಸಿನರಮನೆಯೊಳನರ್ಘ್ಯಮಪ್ಪ ಪದಕಂ ಪೋದೊಡವನಂ ಕರಸಿ ಕೇಳ್ದೊಡಂ ಕಣ್ಣಿಂ ಕಾಲಿಗೆ ಬಂತಂ ದೃಷ್ಟಮೆನಲಾ ಹೆಸರ ಗೌಡಿಯರಿಂ ಬರಿಸೆ ತಾನೊಂದು ತಾವಿನೊಳಿಟ್ಟು ತೋರಿಸಲರಸಂ ಮೆಚ್ಚಿ ಉಂಬಳಿ ಸಂಬಳಂಗಳಂ ಕೊಟ್ಟಿಟ್ಟುಕೊಂಬುದುಂ ಮಂತ್ರಿ ಈತನೇನುಮನರಿಯನೆಂದು ತೊಣಚಿಯಂ ಪಿಡಿದು ಕೇಳ್ವುದುಮಿಲ್ಲೆ ಸಿಕ್ಕಿದೆ ಚುಂಚಂಭಟ್ಟಾ ಎಂದೊಡೆಲ್ಲ ಫಲಂ ಭಾಗ್ಯಾನುಸಾರಿಣೀ ಎಂಬುದರಿಂ ಕೂಡಿ ಬಪ್ಪುದೆಂದು ಮತ್ತಂ ಇಂತೆಂದ ಮಂಡಲಿಯೆಂಬಗ್ರಹಾರದೊಳೊರ್ವ ಬ್ರಾಹ್ಮಣಂ ವೃತ್ತಿಯಿಲ್ಲದೆ ಬಿಕ್ಷಾಟನದಿಂ ಜೀವಸಲಾರದೆ ತನ್ನೊಳಿಂತೆಂದಂ

ಆರ್ಯೆ || ಧನವಂತಮದಾತಾರಂ | ದರಿದ್ರಮತಪಸ್ವಿನಮ್ ಕಂಠೇ
ಬದ್ಧ್ಯಾ ಶಿಲಾಂಮುರ್ವೀಂ | ಸಿಂಧುರ್ಮಧ್ಯೇ ವಿನಿಕ್ಷಿಪೇತ್ ||

ಎಂಬುದರಿಂ ತಪಂಗೆಯ್ಯಲುದ್ಯೋಗಿಸಿ ಭೋಗಾಕಾಂಕ್ಷೆಯಂ ಬಿಡದೆ ತಪಮಂ ಮಾಡುತ್ತಿಪ್ಪದುಂ ದೇವತೆಗಳ್ ಪ್ರತ್ಯಕ್ಷಮಾಗಿ ನಿನ್ನಭೀಷ್ಟಮಾವುದೆನೆ ದಾರಿದ್ಯ್ರಂ ಪೋಪಂತೆ ಮಾಳ್ಪುದೆನಲೊಂದು ಝೈಘಂಟೆಯಂ ಕೊಟ್ಟು ಇದನು ನಿನ್ನ ಮನೆಯೊಳ್ ಬಾರಿಸೆ ನಿನಗೆ ಪೂರ್ವಜನ್ಮದಲ್ಲಿ ಪುಣ್ಯಮಂ ಪಡೆಯದಿಪ್ಪುದರಿಂದ ನೆರೆಯವನ ಭಾಗ್ಯಮಂ ಪಚ್ಚಿಗೊಡುವುದರಿಂ ಧನಕನಕ ಸಮೃದ್ಧಿಯೆಂದು ಬಾಜಿಸಲು ಪೊನ್ನ ಮಳೆಗರೆವುದದರೊಳ್ ಅರ್ಧಂ ನೆರೆಯವಂಗಕ್ಕು ಪೋಗೆನಲಾ ಘಂಟೆಯಂ ತನ್ನ ಗೃಹಾಂಗಣದೊಳೆ ಧನಕನಕ ಸಮೃದ್ಧಿಯೆಂದು ಬಾಜಿಸುವುದುಂ ಸುವರ್ಣವೃಷ್ಟಿ ಯಾಯ್ತದರೊಳರ್ಧಂ ನೆರೆಮನೆಯವಂಗಾಗಲದಂ ಕಂಡಾತನ ಪೆಂಡತಿ ಸೈರಿಸದೆ ಕಷ್ಟದಿಂ ಸಂಪಾದಿಸಿ ಪರಂಗೀವುದು ಎಂದು ಕೋಪಿಸಿ ಇದೆಲ್ಲಂ ಪೋಗಲಿಯೆಂದು ಬಾರಿಸೆನೆ ಬಾರಿಸುವುದುಂ ತನ್ನ ಮನೆಯೊಳಿರ್ದುದೆಲ್ಲಂ ಪೋಯಿತು ನೆರೆಮನೆಯವನರ್ಧಂ ಪೋಯಿತು, ಮತ್ತಂ ಕ್ಲೇಶಂ ಪುಟ್ಟಿ ನೆರೆಮನೆಯವೆರಡು ಕಣ್ಣುಂ ಪೋಗಲಿ ಎಂದು ಬಾರಿಸೆ ತನ್ನವೆರಡುಂ ಅವನದೊಂದು ಕಣ್ಣುಂ ಪೋಯಿತು, ಮತ್ತಮವನ ಕಾಲೆರಡುಂ ಪೋಕೆಂದು ಬಾಜಿಸೆ ತನ್ನವೆರಡುಂ ಅವನದೊಂದು ಕಾಲುಂ ಪೋಯಿತು. ಇಂತು ಪೆರರಂ ಕಂಡು ಸೈರಿಸದ ಪಾಪಿಗಳು ತಾವು ಕೆಡುವಲ್ಲಿ ಸಂದೇಹಮಿಲ್ಲದರಿಂ ನೀಚರು ಸೈರಿಸುವರಲ್ಲ “ಮಹಾಂತಹ ಪರಕಲ್ಯಾಣೇ ನೀಚಾಹ ಪರ ವಿಪತ್ತಿಷ” ಎಂಬುದರಿಂ ಮೋಹಿಗಳ್ ಮುಂಗಾಣರೆಂತೆಂದಡೆ ಒಬ್ಬ ವಿಟಪುರುಷಂ ಸೂಳೆಯಲ್ಲಿಗೆಯ್ದಿ ರಾತ್ರಿಗೆ ಬಪ್ಪನೆಂದು ಪೇಳಿ ರಾತ್ರಿಯೊಳ್ ಬಪ್ಪನ್ನೆಗಂ ಆಕೆಯ ಮನೆಯಗ್ನಿಪ್ರವೇಶಮಾಗುರಿಯುತ್ತಿರಲ್ ಆಕೆ ದುಃಖಿಸುತ್ತಿರೆ ಸಮಿಪಕ್ಕೆಯ್ದಿ ಹಾಸಿಗೆಯನೆಲ್ಲಿ ಮಾಳ್ಪೆಯೆಂದು ಕಡಿದೊಡಾಕೆ ಕೋಪಿಸೆ ಆ ಬೆಂಕಿಯೊಳೆ ಕುಂಡೆಯಂ ಕಾಸಿಕೊಂಡು. ಪೋದನೊಬ್ಬ ದಾಸಂ ತೊರೆಯ ತಡಿಯೊಳು ನಾಮಮಂ ಪೆಟ್ಟುಕೊಳ್ಳುತ್ತುಂ ಆಚೆ ಕರೆಯೊಳಿರ್ದನಂ ಬೇಗ ಬಪ್ಪುದೆಂದು ಕರೆದೊಡಾತನಿದೇಕೆಂದು ಪುರುಷಪ್ರಮಾಣ ನೀರಂಪಾಯ್ದು ಕಷ್ಟದಿಂ ಬಂದು ಕೇಳಿದೊಡೆನ್ನ ನಾಮ ಯಾವ ಭಾಗ ಚೆನ್ನಾಗಿ ನೆಟ್ಟಗೆ ಇದೆಯೋ ನೋಡೆಂದು ಕೇಳಿದಂತೆ ಪರರ ಕಷ್ಟಮಂ ಸುಖಿ ಅರಿಯನೆಂದಿವು ಮೊದಲಾದ ಕಥೆಗಳಂ ಪೇಳುತ್ತಿರ್ದ ಸಮಯದೊಳೊರ್ವ ಕುರುಬಂ ಬಂದಿರ್ದು ನಮ್ಮ ಗುರುವಿನೊಳ್ ಮಾತನಾಡಿ ಬನ್ನಿಮೆಂದು ಬಿಡದೆ ಕರೆದೊಯ್ಯಲಾತಂ ದುಷ್ಟ ಜನರಿಂ ಪರಿವೃತನಾಗಿರ್ದೊಡಾ ನೆರವಿಯೊಳೆನ್ನಂ ಕುಳ್ಳಿರಿಸಿ

ವೃತ್ತ || ಹಂಸೋ ನ ಭಾತಿ ಬಲಿಭೋಜನವೃಂದಮಧ್ಯೇ
ಗೋಮಾಯಮಂಡಲ ಗತೋ ನ ವಿಭಾತಿ ಸಿಂಹಃ
ಜಾತ್ಯಾನ ಭಾತಿ ತುರಗೋ ಖರಯೂಥ ಮಧ್ಯೇ
ವಿದ್ಯಾನ್ ನ ಭಾತಿ ಪುರುಷೇಷು ನಿರಕ್ಷರೇಷು ||

ಎಂಬುದರಿಂ ಮೌನದೊಳಿಪ್ಪುದುಮಾ ಕುರುಬರೆಲ್ಲಂ ನೀಂ ತೀರಾ ಓದಿರ್ದೊಡೆಮ್ಮ ಗುರುವಿನೊಳ್ ನುಡಿಯದೇಕಿಪ್ಪೆ ಮಾತನಾಡೆಂದು ಬಾಧಿಸೆ

ಶ್ಲೋಕ || ಮೂರ್ಖೈರಪಕ್ವ ಬೋಧೈಶ್ಚ ಸಹಾಲಾಪೈಶ್ಚದುಷ್ಭಲಮ್
ವಾಚಾಂ ವ್ಯಯೋ ಮನಸ್ತಾಪಸ್ತಾಡನಂ ದುಷ್ಟ್ರವಾದನಮ್ ||

ಎಂಬುದುಂ ತಪ್ಪದೆಂದವರುಪದ್ರಕ್ಕಾರದವನ ಗುರುವಿಂಗಭಿಮುಖಮಾಗಿ ಕಿಂ ಎನಲಾತಂ ಕಿಂಕಂಘಂ ಮತ್ತಂ ಪೇಳೆನಲು ಆಲಸ್ಯಂ ಕಿಂ ಎಂದೊಡಾತಂ ಆಲಸ್ಯಂ ಅಧರಸ್ಯಂ ಇದರಾಸ್ಯಮೆನಲೀ ಮಟ್ಟೆಯೆಂಬುದುಂ ಯಿಂಮಟ್ಟೆ ಅಂಮಟ್ಟೆ ಲೊಳಲೊಟ್ಟೆ ಎಲ್ಲಾ ಪೊಸಪೊಟ್ಟೆ ಎನಲಾ ಕುರುಬರೆಲ್ಲಾ ನಮ್ಮೊಡೆಯಂ ಗಟ್ಟಿ ಇವನನಟ್ಟಿ ಎಂದು ಚಪ್ಪಟೆ ಹಾಕಲು

ಶ್ಲೋಕ || ಅಹೋ ಪ್ರಕೃತಿಸಾದೃಶ್ಯಂ ಶ್ಲೇಷ್ಮಣೋ ದುರ್ಜನಸ್ಯಚ
ಮಧುರೈಃ ಕೋಪಮಾಯಾತಿ ಕಟುಕೈರುಪಶಾಮ್ಯತಿ ||

“ಖಲಾನಾಂ ಕಂಟಕಾನಾಂಚ ಏಕಮೇವ ಪ್ರತಿಕ್ರಿಯಾ” ಎಂಬುದರಿಂ ದುಷ್ಟರು ನಿಗ್ರಹದಿಂದಲ್ಲದೆ ಕ್ರಮಕ್ಕೆ ಬಾರರಿವರಂ ಉಪಾಯದಿಂ ಗೆಲ್ವೆನೆಂದು ಇಂತೆಂದಂ ಈ ವಿದ್ಯದಿಂ ಗೆಲ್ವುದು ದೊಡ್ಡಿತ್ತಲ್ಲ ಇನ್ನೊಂದು ವಿದ್ಯಮುಂಟದರೊಳಾರು ಮುಂದಪ್ಪರವರೆ ಘಟ್ಟಿಗ ವಿದ್ಯಾಂಸರದೇನೆಂದೊಡಾಮಿರ್ವರೊಂದೊಂದು ಚೂರಿಯ ತೆಗೆದುಕೊಂಡೀ ಊರ ಮುಂದಣ ಕೆರೆಯೊಳೆ ಮುಳುಗಿ ಚಮತ್ಕಾರದೊಳು ಕೊನೆಮೂಗನರಿದು ಏಳ್ವರವರ ವಿದ್ಯವೆ ದೊಡ್ಡಿತ್ತೆಂಬುದಾ ಕುರುಬಂ ನಾನೇ ದೊಡ್ಡ ವಿದ್ವಾಂಸನೆಂದು ಮುಂದರಿಯದೆ ಮೂಗಂ ಕೊಯ್ದು ರಕ್ತಮಂ ಪರಿಯಿಸುತ್ತಾ ಏಳ್ವುದುಂ ನಾನು ಪೊಲವಡೆದೆನೆಂದಲ್ಲಿಂದುತ್ತರಮುಖದೆ ನಡೆದು ಡಿಳ್ಳಿಯ ಪಟ್ಟಣಮಂ ಪುಗಲಲ್ಲಿ ಸರ್ವರು ತುರುಕವೇಷದೊಳೆ ಪುರುಷರೆಲ್ಲರ್ಗೆ ಕರ್ಣರಂಧ್ರವಿಲ್ಲದೆ ಯಾವ ಸಮಯದ ಲಾಂಛನಂಗಳಿಲ್ಲದೆ ಮುಸಲಮಾನವೇಷಭಾಷೆಯೊಂದೇ ವಿಜೃಂಭಿಸುತ್ತುಂ ಮತಮತದ ಬ್ರಾಹ್ಮಣಾದಿ ಜಾತಿಯವರೆಲ್ಲರೂ ತಮ್ಮ ತಮ್ಮ ನುಷ್ಠಾನಂಗಳನೆಲ್ಲಾ ತಮ್ಮ ತಮ್ಮ ಗೃಹದೊಳೆ ಮಾಡಿಕೊಂಡು ಬೀದಿಗೆಯ್ದುವಲ್ಲಿ ಎಲ್ಲರು ಒಂದೆ ವೇಷಮಾಗಿ ಸುಳಿವರು. ಒಬ್ಬ ಪಾದಶಾಯಿ ಹದಿನಾರು ವರುಷದಿಂ ತೊಟ್ಟು ಎಂಬತ್ತು ವರುಷ ಪರ್ಯಂತರಕ್ಕೂ ತನ್ನ ದೇಶದೊಳಿರ್ದ ಚೈತ್ಯಾಲಯಂ ಮೊದಲಾಗೆ ಸರ್ವಮತಂಗಳ ದೇವಸ್ಥಾನಂಗಳೆಲ್ಲಮಂ ಹೆಸರಿಲ್ಲದಂತೆ ಮಾಡಿ ಜೈನಮುನಿಗಳ ಮಠಂಗಳು ಡಿಳ್ಳಿಯೊಳು ನಾಲ್ಕು ಆ ದೇಶಗಳೊಳು ಪದಿನಾರು ಇತರ ಗುರುಗಳ ಮಠಗಳು ಎಲ್ಲಮಂ ಕೆಡಿಸಿ ಏಕಜಾತಿಯಂ ಮಾಡಲುದ್ಯೋಗಿಸೆ ಅಷ್ಟರಲ್ಲೆ ಯಮನಿವಾಸಮಂ ಪೊಕ್ಕನಾತಂಗೆ ಸಂತಾನವಿಲ್ಲದೆ ಮತ್ತೊಬ್ಬ ತುರುಕಂಗೆ ಪಟ್ಟವಾಗಿರಲಾಂ ಪೋಗಿ ಕಾಣಲೆಂದವರ ವೇಷದೊಳೆ ಪೋಗಿ ಪಾದಶಾಯನಂ ಕಾಣಲು ನೀನಾರು ಏನು ಕಾರ್ಯನಿಮಿತ್ತಂ ಬಂದೆಯೆಂದು ತನ್ನ ಪಾರಸಿ ಮಾತಿನಿಂ ಕೇಳಲಾ ಭಾಷೆಯೊಳೆ ನಾನುಂ ದೇಶಾಂತರಿ ಬ್ರಾಹ್ಮಣಂ ತಮ್ಮ ಭೇಟಿಯಂ ಮಾಡಿ ಪೋಗಲೆಂದು ಬಂದೆನೆನೆ ಹಿಂದುವೆಂದು ಇಂತೆಂದಂ, ಲೋಕದೊಳು ಜಾತಿಯೆಷ್ಟು ಮನುಷ್ಯಂ ಬದುಕುವುದೆಷ್ಟುದಿನಂ ಸುಮಾನುಷನೆಂತು ಕುಮಾನುಷನೆಂತು ಅವುದಂ ಪೋಲ್ವರಿದಂ ಪೇಳೆಂದು ಕೇಳ್ವುದುಮವನಭಿಪ್ರಾಯಮನರಿದೆಂದೆನೀ ಪ್ರಪಂಚದೊಳು ಹೆಣ್ಣೊಂದು ಗಂಡೊಂದು ಜಾತಿಯೆರಡು ಪುಟ್ಟಿ ಸಾಯ್ವುದೆರಡು ದಿನಂ ಪೋಗಲುಳಿದೈದು ದಿನಂ ಬದುಕುವುದು. ಸುಮಾನುಷಂ ಸೂಜಿಸುವಾಗದಂತೆ ಸಂಧಿಯಂ ಕೂಡಿಸುವಂ, ಕುಮಾನುಷಂ ಕರ್ತರಿಕುಠಾರದಂತೆ ಸಂಧಿಯನಗಲಿಸುವನೆಂಬುದುಂ ರಾಜ್ಯಂಗಳೊಳು ಹಿಂದುವೆಂಬ ಚಿಪ್ಪಿನೊಳು ಮುಸಲಮಾನನೆಂಬ ಮುತ್ತು ಪುಟ್ಟಿ ಅದರಿಂದಂ ತುರುಕರು ಶ್ರೇಷ್ಠಮಾದರೆಂಬುದುಂ

ಚೌಪದಿ || ತುರುಕರುಗಳಿಲ್ಲದಿರೆ ನರಕಕ್ಕೆ ಭಾಜನವು
ತುರುಕರುಗಳಿರೆ ಶುಚಿಯು ರುಚಿಯು ಪಿರಿದಹುದು
ತುರುಕರುಗಳಿಂದೆಲ್ಲರು ಬದುಕಿ ಬಾಳ್ವರು
ಸ[ರುವ] ರರಿಯದಿಪ್ಪರೆ ತುರುಕರುಗಳ ಸಾಹಸಮಂ

ಎಂಬುದುಂ ಮೆಚ್ಚಿ ನಿರಾಜೀ ವಸ್ತ್ರಂಗಳಂ ಶಿರೋವೇಷ್ಟನಾದಿಗಳಂ ಕೊಟ್ಟು ಸಂತೋಷದಿಂ ನೂರು ಹೊನ್ನಂ ತರಿಸಿ ಕೊಟ್ಟೆನ್ನಂ ಬೀಳ್ಕೊಡುವನಿತರೊಳೊರ್ವ ವೈಶ್ಯಪುತ್ರನಾವೂರ ವೈಶ್ಯನ ಮಗಳೊಳು ಪುದುವಾಳುತ್ತಾ ಈರ್ವರುಂ ಬಹಳ ಜನಂಗಳು ಪೇಳಿದಾಗ್ಯು ಬಿಡದಿಪ್ಪುದುಂ ಪಾದಶಾಯಿಗರಿಪಿ ಬಿಡಿಸಲೆಂದವರೀರ್ವರಂ ತಂದಾಸ್ಥಾನದ ಮುಂಗಡೆಯೊಳ್ ನಿಲಿಸಿಪ್ಪುದುಂ ಗ್ರೀಷ್ಮಕಾಲದ ಉಷ್ಣಕರನಿಂ ಪುಡಿಕಾಯ್ದು ನಿಲಲಾರದೆ ಮಿಡುಕುತ್ತುಮಿಪ್ಪ ಮಿಂಡಗಾರನ ಚರಣಂಗಳಿಗೆ ಮಿಂಡಗಾತಿ ತನ್ನ ಶೀರೆಯಂ ಹರಿದು ಪಾಸುತ್ತಿಪ್ಪುದುಂ ಪಾದಶಾಯಿ ನೋಡಿ ಜನ್ಮಾಂತರ ಸ್ನೇಹಿತರಿವರನಗಲಿಸಲಾಗದೆಂದು ನೂರು ಪೊನ್ನನವರ್ಗೆ ಕೊಟ್ಟು ಕಳುಹಿಸ್ತನು. ಅಲ್ಲಿ ಮೊದಲೋರ್ವ ಕಾಮಾಟದ ನಾಯಕಂಗೆ ಕೋಟೆಯಂ ಹಾಕಿಸೆಂದಧ್ಯಕ್ಷ ಮಕುಡೆ ಸೌಡುಗೊರೆಯಂ ಜಾಳಾಂಜರದಿಂ ಗಾಳಿಬಪ್ಪಂತೆ ಹಾಕಿಸಿ ಕೋಟೆಯಂ ಪಾದಶಾಯಿಗೆ ತೋರಿಸೆ ಕ್ಷುದ್ರಜನರಾತನ ಮೇಲೆ ಕೊಂಡಗಮಂ ಪೇಳೆ ಕೋಪಿಸಿ ಆ ಕೋಟೆಯ ಸಂದಿಯೊಳಾತನಂ ಇಕ್ಕಿ ಮುಚ್ಚಿಸಲು ಆತನ ಮಗನಾತಂಗಾ ಕೋಟೆಯ ರಂಧ್ರದಿಂ ದಿನಾಗಿಯೊಂದು ಸೇರು ತುಪ್ಪವಂ ಪೋಯ್ಯುತ್ತುಂ ಬರಲದರಿಂ ಜೀವಿಸುತ್ತಿರಲು ವರುಷದ ಮೇಲೆ ಪರದೇಶ ಕಳ್ಳಭಂಟರು ನಿಶಾವೇಳೆಯೊಳು ಪೊರಗಣಿಂ ಕೋಟೆಯ ಮೇಲೇರಿ ಬಂದು ಭಂಡಾರದೊಳೊಂದೊಂದು ವಸ್ತುವಂ ಸಾಗಿಸುತ್ತಿರಲದಕ್ಕಾರುಂ ನಿಲಿಸಲಾರದಿಪ್ಪುದುಂ ಕಾಮಾಟದ ನಾಯಕನ ಮಗನಂ ಬರಿಸಿ ನಿಮ್ಮ ತಂದೆಯಿದ್ದರೆ ಏನಾದರು ಉಪಾಯಮಂ ಪೇಳ್ವನೆಂಬುದುಂ ದೇವರ ದಯಮಿರ್ದೊಡೆ ನಮ್ಮ ತಂದೆ ಬರುತ್ತಾನೆ ಎನೆ ಅದು ಹ್ಯಾಗೆನಲು ಕೋಟೆಯ ಮೆತ್ತಿದುದನಗೆಯಿಸಿದೊಡಲ್ಲೇಯಿಪ್ಪನೆನೆ ಆಶ್ಚರ್ಯಂಬಟ್ಟು ತಾನೆ ಪೋಗಿ ಕೀಳಿಸಿ ನೋಳ್ಪುದುಮಲ್ಲಿರ್ದ ನಾಯಕಂ ಪೊರಮಡಲಾತನಂ ಲೇಸು ಮಾಡಿಸಿ ಮೂರು ದಿನದಿಂ ಮೇಲೆ ಸಭೆಗೆ ಬರಿಸಿ ವಿಚಾರವಿಲ್ಲದೆ ನಿನ್ನಂ ಶಿಕ್ಷಿಸಿದೆ ನೀನಾವದರಿಂ ಬದುಕಿದೆ ಕ್ಷಮೆಗೊಳ್ವುದೆಂದು ಪೇಳೆ ನಾಯಕನೆಂದಂ ಸ್ವಾಮಿಯಿಂದೇನುಂ ದೋಷಮಿಲ್ಲ ಕಾಲದೋಷದಿಂ ರಾಜ್ಯಮಂ ಪಾಲಿಸುವರು, ದುಷ್ಟರು ಚೆನ್ನಾಗಿ ಮೂರು ವೇಳೆ ವಿಚಾರಣೆಯಂ ಮಾಡಿ ಆರು ತಪ್ಪಂ ಕ್ಷಮಿಸಿ ಅಲ್ಲಿಂ ಮೇಲೆಯು ಕರುಣಹೃದಯನಾಗಿ ಶಾಸ್ತ್ರೋಕ್ತಮಂ ಕೇಳಿ ಪರಹಸ್ತದಿಂ ಮರ್ದಿಸಿ ಮೈತ್ರಿ ಕಾರುಣ್ಯ ಮಧ್ಯಸ್ಥಮಾಗಿಪ್ಪ ರಾಜಧರ್ಮಮಂ ಬಿಟ್ಟು ಕ್ರೋಧ ಮಾನ ಮಾಯಾ ಲೋಭಮೆಂಬ ಕಷಾಯಮುದಯಿಸೆ ನಿಷ್ಕರುಣಿಗಳಾಗೆ ಸರ್ವ ಭೂಮಿಪತಿಗಳು ಕಾಲಸ್ವಭಾವದಿಂದೆಲ್ಲರುಮವಿಚಾರಿಗಳಾಗಿ ನಾಲ್ಕು ಭಾಗದೊಳೊಂದು ಭಾಗಂ ರಾಜರಿಂ ಲಯಮುಪ್ಪುದೆಂದು ಕಾಲಾದಿ ಜ್ಞಾನಿಗಳಪ್ಪ ಮಹಾನುಭಾವಿಗಳಿಂ ಕೇಳಿರ್ಪೆನದರಿಂ ಕಾಲದೋಷಮಲ್ಲದೆ ರಾಜದೋಷಮಲ್ಲದೊಡಮವಿಚಾರದೋಷಂ ಪೊರ್ದುಗುಮೆಂತೆಂದೊಡೆ ಅವಿಚಾರಿಯೆಂಬನೋರ್ವ ರಾಜಂ ತನ್ನಿಚ್ಛೆಯಿಂ ರಾಜಧರ್ಮ ಶ್ರವಣವಿಲ್ಲದೆ ರಾಜ್ಯಮಂ ತನ್ನಿಚ್ಛೆಯಿನಾಳುತ್ತಿರಲೊಂದುದಿನ ರಾತ್ರಿಯೊಳೋರ್ವ ಕಳ್ಳನಾ ಪುರಮಂ ಪೊಕ್ಕು ರಾತ್ರಿಯೊಳೊಂದು ಮನೆಗೆ ಕನ್ನಮಂ ಸಮೆಯುತ್ತಿರಲಾ ಭಿತ್ತಿ ಪುರಾಣಂ ಮಳೆಯಿಂದಡಿಯೆಲ್ಲಂ ಸಮೆದಿರ್ದುದರಿಂ ಪತನಮಾಗೆ ಕಳ್ಳಂ ಸಾಯ್ವುದುಂ ಅವಿಚಾರಿ ಕೇಳ್ದಾ ಮನೆಯವನಂ ಬರಿಸಿ ಈತಂಗಾಜ್ಞೆಯಂ ಮಾಡಿಮೆನಲಾತನೆನ್ನಿಂದಾವ ತಪ್ಪೆನೆ ನಿನ್ನ ಮನೆಯ ಗೋಡೆ ಬಿದ್ದು ಕಳ್ಳಂ ಸತ್ತನೆಂಬುದುಂ ಪ್ರಕೃತಮನರಿದಾತನಿಂತೆಂದಂ ಗೋಡೆಯು ನಾನು ಹಾಕಿದುದಲ್ಲ, ಕಾಮಾಟದವರಿಗೆ ಕೂಲಿಯಂ ಕೊಟ್ಟು ಹಾಕಿಸಿದೆನವರು ಘಟ್ಟಿಯಾಗಿ ಗೋಡಿಯ ನಿಕ್ಕದಿರಲೆನ್ನದೃಷ್ಟಮೆಂಬುದು, ಕಾಮಾಟದವರೆಲ್ಲರಂ ಕರೆದಾಜ್ಞೆಯಂ ಮಾಡಿಮೆನೆ ಅವರೆಂದರೆಲೆ ರಾಜಾ ನಾಮುಂ ಗೋಡೆಯುನಿಕ್ಕುವಲ್ಲಿ ಸೂಳೆಯೋರ್ವಳೆಡೆಯಾಡುತ್ತಿರಲವಳ ನೋಡುತ್ತ ಗೋಡೆಯನಿಕ್ಕಿದುದರಿಂದೆಮ್ಮೊಳು ದೋಷಮಿಲ್ಲಾ ಸೂಳೆಯ ವಿಚಾರಿಸಿಮೆನಲವಳಂ ಪಿಡಿತಂದಾಜ್ಞೆಯ ಮಾಡಿಮೆನಲವಳು ನಾನುಂ ಅಕ್ಕಸಾಲೆಗೆ ಪೊನ್ನಂ ಕೊಟ್ಟಾಭರಣಮಂ ಮಾಡಿಕೊಡೆಂದೊಡಾತನು ಈಗ ಬಾ ತಿರುಗಿ ಬಾ ಇಂದು ಬಾ ನಾಳೆ ಬಾರೆಂದು ಜಾಲಂ ಮಾಡಿದುದರಿಂದೆಡೆಯಾಡಿದೆ ಯದರಿಂದಂ ತಪ್ಪಾವುದೆನೆ ಅಕ್ಕಸಾಲೆಯನಾಜ್ಞೆಯಂ ಮಾಡೆಂಬುದುಮಾತನೆಂದನೀಕೆ ಕೊಟ್ಟ ಪೊನ್ನೆಲ್ಲಮಂ ಕಟ್ಟಿಕೊಂಡು ಸಂತೆಗೆ ಚಿನ್ನಮಂ ತರಲ್ಪೋಗೆ ಎನ್ನ ಬಂಡವಾಲು ಸಹಿತಂ ಕಳ್ಳರು ಚೀಲಮಂ ಕೊಯ್ದು ತೆಗೆದುಕೊಂಡುದರಿಂದಸಲಿಲ್ಲದೆ ಈಗ ಆಗ ಬಾರೆಂದೆನುತಿರ್ದೆ ಆದ್ದರಿಂ ಕಳ್ಳರಿಂದ ತಪ್ಪೆಂಬುದುಮಾ ಕಳ್ಳರಂ ತಂದೊಪ್ಪಿಸೆನೆ ನಾನವರಂ ಕಂಡು ತಿಳಿದೊಡೆನ್ನ ದ್ರವ್ಯಮಂ ತೆಗೆದುಕೊಂಬೆನೆನಗೆ ಕಾಣಿಸಿಕೊಳ್ಳರೆಂಬುದುಂ ರಾಯನಿಂತೆಂದಂ ಯಾವ ಸಂತೆಯಲ್ಲಿ ಎಷ್ಟು ಹೊತ್ತಿನಲ್ಲಿ ಯಾರ ನೆರವಿಯೊಳ್ ಬಂದರೆನೆ ಅಕ್ಕಸಾಲೆಯೆಂದಂ ಬೊಬ್ಬೂರ ಸಂತೆಯೊಳು ಮಧ್ಯಾಹ್ನ ಕಳಿದಾಗ ಸಂತೆ ಜನಂಗಳೆಲ್ಲಾ ತುಂಬಿ ಬಹು ಸಂದಣಿವೇಳೆಯೊಳೆ ತೆಗೆದರೆಂಬುದು ಅದೇ ವೇಳೆಯೊಳೆ ಬಪ್ಪರದರಿಂ ನಾಳೆ ಸಂತೆ ತುಂಬಿದ ಆ ವೇಳೆಯೊಳೆ ಐವತ್ತು ಕುದುರೆ ಪೋಗಿ ಮುತ್ತಿ ಒಂದು ಜನಮಂ ಬಿಡದೆ ಪರಿಹರಿಸಿದೊಡಾ ಕಳ್ಳರುಮಲ್ಲೆ ಸಾಯ್ವರೆಂದು ಸಂತೆಯವರೆಲ್ಲರುಮನಾರು ಮಾಣಿಸಲುಂ ಬಿಡದೆ ಪರಿಹರಿಸಿದನಂತಪ್ಪನವಿಚಾರಿಯಲ್ಲದೆ ದೇವರೆನ್ನಂ ಕೋಟೆಯೊಳು ಸೆರೆಯಿಕ್ಕದೊಡೇನಾಯ್ತೆಂದುಪಚಾರಮಂ ನುಡಿದ ಕಾಮಾಟದ ವಜ್ರದಾಡನೆಂಬ ನಾಯಕಂಗೆ ಕೋಟೆಯಧ್ಯಕ್ಷಮಪ್ಪ ಕಿಲ್ಲೆಯವೆಂದು ಕೊಟ್ಟು ಪರಸಂಸ್ಥಾನದ ಕಳ್ಳರು ಬಂದು ರಾತ್ರಿವೇಳೆ ಕೋಟೆಯಂ ಲಂಘಿಸಿಯೊಳಗೆ ಕಳವಂ ಮಾಡುವದಕ್ಕಾವುದು ಪಾಯಮೆನಲು ನಾಯಕನೆಂದನಾತಂ ಕೋಟೆಯನೇರುವ ಬಳಿಗೆ ಲೋಳಸರ ಮೊದಲಾದುವಂ ಲೇಪಿಸುವುದೆನಲಂತೆ ಮಾಡಿಪ್ಪುದುಂ ಲಂಘಿಸಿ ಮೇಲೇರುವುದುಂ ಜಾರಿ ಬಿದ್ದು ಅಗಳೊಳು ಸತ್ತನು, ಆ ಕೋಟೆ ಬಾಗಿಲೊಳು ಪಗಡೆಖಾಜಾ ಕೋಟೆ ಬಾಣಾ ಎಂದು ಬರೆದಿದೆ ನಾನುಂ ಡಿಳ್ಳಿಯಿಂ ಪೊರಮಟ್ಟು ನಾನಾ ದೇಶಂಗಳಂ ನೋಡುತ್ತುಂ ವಿದ್ವಾಂಸರಂ ಪರೀಕ್ಷಿಸುತ್ತೆ ಪುಣ್ಯಪಟ್ಟಣಮನೆಯ್ದಿ ಪ್ರಪಾಶಾಲೆಯೊಳು ಪಥಶ್ರಮವನಾರಿಸುತ್ತಿರ್ದೊಡಲ್ಲಿರ್ದ ತರುಣಿಯೆಂಬಳ್.

ವೃತ್ತ || ಮಧ್ಯಾಹ್ನೇ ನಿಬಿಡೇ ನಿದಾಘಸಮಯೇ ತಾಪಂ ರವೌ ಮುಂಚತಿ
ಶ್ಲಾಘ್ಯೇ ಕುಬ್ಜವಟೇ ಸುಶಿತಲತಲೇ ಹೇ ಪಾಂಥ ವಿಶ್ರಾಮ್ಯತಾಮ್
ಏಕಾಕೀ ಭವಾನಹಂ ಚ ತರುಣೀ ಶೂನ್ಯಾ ಪ್ರಪಾವರ್ತತೇ
ಲಜ್ಜಾ ಮೇ ಭಣಿತುಂ ತ್ವಮೇವ ಚತುರೋ ಜಾನಾಸಿ ಕಾಲೋಚಿತಮ್ ||

ಎಂಬುದಂ ಕೇಳಿ

ವೃತ್ತ || ವಿವೇಕ ವೈರಾಗ್ಯ ಸುಪಾದುಕಾಭ್ಯಾ | ಪದೇ ಪದೇ ಸಂಚರತೀತಿಸಾಧುಃ
ಗ್ರಾಮೇಷು ಖೇಡೇಷು ಚ ಪತ್ತನೇಷು | ಸ್ತ್ರೀಕಂಟಕಾಸ್ಸಂತಿ ವಿಚಿತ್ರರೂಪಾಃ ||
ಎಂಬೀ ನೀತಿಯಂ ನೆನೆದಾಕೆಯೊಳು ಸದ್ಧರ್ಮಮಂ ಪೇಳ್ವಡೆ ||

ಶ್ಲೋಕ || ಸ್ತ್ರೀಣಾಂ ದ್ವಿಗುಣಮಾಹಾರೋ ಬುದ್ಧಿಶ್ಚಾಪಿ ಚತುರ್ಗುಣಾ
ಸಾಹಸಂ ಷಡ್ಗುಣಂ ಚೈವ ಕಾಮಮಷ್ಟಗುಣಂ ಭವೇತ್ ||
ಅನೃತಂ ಸಾಹಸಂ ಮಾಯಾ ಮೂರ್ಖತ್ವಮತಿಲೌಲ್ಯತಾ
ಅಶೌಚಂ ನಿರ್ದಯತ್ವಂ ಚ ಸ್ತ್ರೀಣಾಂ ದೋಷಾಃ ಸ್ವಭಾವಜಾಃ ||

ಆವರ್ತಸ್ಸಂಶಯಾ ನಾಮ ವಿನಯಭವನಂ ಪತ್ತನಂ ಸಾಹಸಾನಾಂ ದೋಷಾಣಾಂ ಸನ್ನಿಧಾನಂ ಕಪಟಶತಮಯಂ ಕ್ಷೇತ್ರಮಪ್ರತ್ಯಯಾನಾಂ ಸ್ವರ್ಗದ್ವಾರಸ್ಯ ವಿಘ್ನಂ ನರಕ ಪುರ ಮುಖಂ ಸರ್ವಮಾಯಾಕರಂಡಂ ಸ್ತ್ರೀಯಂತ್ರಂ ಕೇನ ಸ್ಪಷ್ಟಂ ವಿಷಮಮೃತಮಯಂ ಪ್ರಾಣಿಲೋಕಸ್ಯ ಪಾಂಶಃ

ಶ್ಲೋಕ || ದೀರ್ಘಶೃಂಗಮನಡ್ವಾಹಂ ನಿರ್ಲಜ್ಜಾ ವಿಧವಾ ಸ್ತ್ರೀಯಃ
ಶೂದ್ರಮಕ್ಷರ ಸಂಯುಕ್ತಂ ದೂರತಃ ಪರಿವರ್ಜಯೇತ್ ||
ಅಂಗಾರಸದೃಶಾ ನಾರೀ ನವನೀತಸಮಾ ನರಾಃ
ತತ್ತತ್ಸಾನ್ನಿಧ್ಯ ಮಾತ್ರೇಣ ದ್ರವೇತ್ಪುಂಸಾಂ ಹಿ ಮಾನಸಮ್ ||

ಎಂದೋದುವ ನೀತಿಯಂ ನೆನೆದು ಮೌನಮಂ ತಾಳ್ದು ಏಕಕಾಂತಾ ಗೃಹಂತ್ಯ ಜೇತ್ ಎಂದಲ್ಲಿಂದಂ ಮುಂದಕ್ಕೆ ಪೋಪಿನಂ ಒಂದೆಡೆಯೊಳೋರ್ವ ದ್ವಿಜನಂ ಕಂಡಾತನಂ ನೀನಾರೆಂದು ಬೆಸಗೊಳೆ ನಾಂ ಕರ್ಣಾಟದೇಶದಿಂ ಯಾತ್ರೆ ಬಂದಿರ್ದೆ ನೀನಾವನೆಂದೊಡೆನ್ನ ಬಂದ ವೃತ್ತಾಂತಮಂ ಸವಿಸ್ತರಂ ಪೇಳ್ದು ಪರಸ್ಪರ ಸ್ನೇಹಮಾಗೆ ಒಂದೇ ಬಳಿಯೊಳಾರೋಗಿಸಿ ನೀನೆನಗೆ ಸನ್ಮಿತ್ರನೆಯೆಂದು

ವೃತ್ತ || ಪಾಪಾನ್ನಿವಾರಯತಿ ಯೋ ಜನಯೇತ್ ಹಿತೇಷು | ಗೋಪ್ಯಂ ಚ ಗೂಹತಿ ಗುಣಾನ್ ಪ್ರಕಟೀಕರೋತಿ
ಅಪದ್ಗತಂ ಚ ನ ಜಹಾತಿ ದದಾತಿ ಕಾಲೇ | ಸನ್ಮಿತ್ರ ಲಕ್ಷಣಮಿದಂ ಪ್ರವದಂತಿ ಸಂತಃ ||

ಶ್ಲೋಕ || ದದಾತಿ ಪ್ರತಿಗೃಹ್ಣಾತಿ ಗುಹ್ಯಮಾಖ್ಯಾತಿ ಪೃಚ್ಛತಿ
ಭಂಙ್ತೀ ಭೋಜಯಚೈವ ಷಡ್ವಿಧಂ ವಿತ್ರ ಲಕ್ಷಣಮ್ ||

ವೃತ್ತ || ಕ್ಷೀರೇಣಾತ್ಮಗತೋದ ಕಾಯ ಹಿ ಗುಣೋ ದತ್ತಃ ಪುರಾತೇ ಖಿಲಾಃ ಕ್ಷೀರೋತ್ತಾಪಮವೇಕ್ಷ್ಮ ತೇನ ಪಯಸಾ ಸ್ವಾತ್ಮಾಕೃಶಾನೌ ಹುತಃ
ಗಂತುಂ ಪಾವಕಮುನ್ಮ ನಸ್ತ ದಪರಂ ದೃಷ್ಟ್ವಾತು ಮಿತ್ರಾಪದಂ
ಯುಕ್ತಂ ತೇನ ಜಲೇನ ಶಾಮ್ಯತಿ ಪುನಃ ಮೈತ್ರೀ ಸತಾಮಿದೃಶೀ ||

ಇಂತಪ್ಪ ಮಿತ್ರನಿಂದಾವುದುಮಧಿಕಮಿಲ್ಲೆಂದು ನಿಶಾಸಮಯದೊಳೊಂದು ಧರ್ಮಶಾಲೆಯೊಳುಪವಿಷ್ಟರಾಗೆ ಆತಂ ನಿಮ್ಮ ಪೆಸರಾವುದೆಂದೆನ್ನಂ ಕೇಳ್ವುದುಂ ನಾ ಪುಟ್ಟಲೆಮ್ಮ ಮಾತಾಪಿತೃಗಳಭಿರಾಮನೆಂದು ಪೆಸರಿಟ್ಟರಾನುಂ ಚತುರ್ಭಾಷಾ ಶಬ್ದ ಪಾರಂಗತನಾಗಿ ತರ್ಕಕರ್ಕಶಾಹಸ್ಕರನಾಗಿ ಬಂದ ಪ್ರಭಾಕರ ಕಾಣಾದ ಚಾರ್ವಾಕ ಬೌದ್ಧರೀ ನಾಲ್ಕು ಮತದವರನೇಕ ಸಮಯದೊಳೆ ರಾಹು ಕೊಂಡಂತೆ ದಿಙ್ಮೂಢರಂ ಮಾಡಿ ಜಯಿಸಿದಾಗಳೆಲ್ಲರುಂ ಚತುರ್ಮುಖಶಾಸ್ತ್ರಿಯೆಂದು ಕರೆದರಾ ನಾಮದಿಂದಲೆ ಕರೆವರೆಂದು ಪೇಳ್ದೊಡಾತಂ ತನ್ನ ಪೆಸರು ಶಂಕರಬಟ್ಟನೆನಲು

ಶ್ಲೋಕ || ಧರ್ಮಸಾಸ್ತ್ರ ವಿನೋದೇನ ಕಾಲೋ ಗಚ್ಛತಿ ಧೀಮತಾಮ್
ಇತರೇಷಾಂ ಮನುಷ್ಯಾಣಾಂ ನಿದ್ರಯಾ ಕಲಹೇನ ವಾ ||

ಎಂಬುದರಿಂದೊಂದು ಧರ್ಮಪ್ರಸಂಗದಿಂ ಪೊತ್ತುಗಳೆವಂ ಮನುಷ್ಯತ್ವ ಜೀವಕ್ಕತಿದುರ್ಲಭಮಲ್ಲಿ

ವೃತ್ತ || ಮಾನುಷ್ಯಂ ವರವಂಶಜನ್ಮವಿಭವೋ ದೀರ್ಘಾಯುರಾರೋಗ್ಯತಾ
ಸಮ್ಯಙ್ಮಿತ್ರ ಕಲತ್ರ ಪುತ್ರನಿಚಯೋ ಭಕ್ತಿಶ್ಚ ರತ್ನತ್ರಯೇ
ವಿದ್ವತ್ವಂ ಸುಜನತ್ವಮಿಂದ್ರಿಯದಮಃ ಸತ್ಪಾತ್ರದಾನೇ ರತಿ
ಸ್ತೇಪುಣ್ಯೇನ ವಿನಾ ತ್ರಯೋದಶಗುಣಾಃ ಸಂಸಾರಿಣಾಂ ದುರ್ಲಭಾಃ ||

ಮಾನುಷ್ಯೇ ಸತಿ ದುರ್ಲಭಾಃ ಪುರುಷತಾ ಪುಂಸೇ ಪುನರ್ವಿಪ್ರತಾ ಎಂದು ಪ್ರತಿಯಂ ಮಾಡಿದರಾದೊಡಂ ಸಮ್ಯಗ್ಮಿತ್ರ ಕಲತ್ರ ಪುತ್ರನಿಚಯಂ ದೊರೆವುದರಿಂದದರಿಂ ಸಂಸಾರಸಮುದ್ರದೊಳ್ ಮುಳುಗಿ ನರಕ ತಿರಿಕದೊಳೆ ತೊಳಲುವನೆಂದು ಪುರುಷಂ ಸ್ತ್ರೀಯರಂ ದುಶ್ಚರಿತ್ರರಂ ಬಿಡುವುದೆ ಕಾರ್ಯಮೆಂದು ಪೇಳಲಾತನೆಂದು

ಶ್ಲೋಕ || ವಸ್ತ್ರಂ ಮುಖ್ಯಸ್ತ್ವಲಂಕಾರೋ ಘೃತಮುಖ್ಯಂ ತು ಭೋಜನಮ್
ಗುಣೋ ಮುಖ್ಯಂ ತು ನಾರೀಣಾಂ ವಿದ್ಯಾ ಮುಖ್ಯಂ ತು ಬ್ರಾಹ್ಮಣಾಃ ||

ವೃತ್ತ || ವಿವಾದಶೀಲಾಂ ಸ್ವಯಮರ್ಥ ಚೋರಿಣೀಂ
ಪರಾನುಕೂಲೀಂ ಬಹುಪಾಕಪಾಕಿನೀಮ್
ಆಕ್ರಂದಿನೀಮನ್ಯಗೃಹ ಪ್ರವೇಶಿನೀಂ
ತ್ಯಜೇತ್ಕುಭಾರ್ಯಾಂ ದಶಪುತ್ರಮಾತರಂ ||

ಎಂಬ ನೀತಿಯುಂಟಾಗಿಯು ಸರ್ವೇ ಸ್ತ್ರೀಷುವಶಾಃ ಎಂಬುದರಿಂ

ವೃತ್ತ || ಶಂಭು ಸ್ವಯಂಭು ಹರಯೋ ಹರಿಣೇಕ್ಷಣಾನಾಂ
ಯೇನಾಕ್ರಿಯಂತ ಸತತಂ ಗೃಹಕುಂಭದಾಸಾಃ
ವಾಚಾಮಗೋಚರ ಚರಿತ್ರ ವಿಚಿತ್ರಿತಾಯ
ತಸ್ಮೈನಮೋ ಭಗವತೇ ಮಕರಧ್ವಜಾಯ ||
ಶ್ರೂಯತೇ ಚ ನು ಪರವಶಃ ಪ್ರಜಾಪತಿರಾತ್ಮದುಹಿತರಿ
ಹರಿರ್ಗೋಪವಧೂಷು ಹರಶ್ಚಂತನುಕಲತ್ರೇ
ಸುರಪತಿ ಗೌತಮಭಾರ್ಯಾಯಾಂ
ಚಂದ್ರಶ್ಚ ಬೃಹಸ್ಪತಿಪತ್ನ್ಯಾಂ ರವಿಃ ಕನ್ಯಾಯಾಂ ಚೇತಿ ||

ಎಂಬ ವಾಕ್ಯಂ ಪ್ರಮಾಣಂ ಘಟಿಯಿಸದು

ಶ್ಲೋಕ || ಪತಂಗ ಭೃಂಗ ಸಾರಂಗ ಗಜ ವೈಸಾರಿಣೋ ಯಥಾ
ಭುಜಂಗಮಾಃ ಪಕೈಕಾಕ್ಷೇಣ ನಶ್ಯಂತಿ ಸರ್ವೇ ಕಿಂ ವಾ ನ ನಶ್ಯತಿ ||

ಸ್ತ್ರೀ ವಶಗತನಾದವಂಗಶುಚಿತ್ವಮುಂ ದುರ್ಗತಿಯುಂ ತಪ್ಪದಪ್ಪದೆನೆ

ಶ್ಲೋಕ || ಕಾಮಃ ಪುಣ್ಯವಶಾಜ್ಜಾತಃ ಕಾಮಿನೀಪುಣ್ಯಪ್ರೇರಿತಾ
ಸೇವ್ಯಾಸೇವ್ಯಂ ಕರ್ತವ್ಯಂ ಸ್ತ್ರೀರತ್ನಂ ದುಷ್ಕಲಾದಪಿ ||
ಅಜಾಶ್ವೌ ಮುಖತೋ ಮೇಧ್ಯೌ ಗಾವೋಮೇಧ್ಯಾಸ್ತು ಪೃಷ್ಠತಃ
ಬ್ರಾಹ್ಮಣಃ ಪಾದತೋಮೇಧ್ಯ ಸ್ತ್ರೀಯೋ ಮೇಧ್ಯಾಸ್ತು ಸರ್ವತಃ ||

ಎಂದು ಕಾಮಿಗಳು ಪಾಪಕ್ಕಂಜದೆ ವ್ಯಸನಿಗರಾಗಿ ತಮಗಿಚ್ಛೆಯಾದ ವಸ್ತುವಂ ಸವೋತ್ಕೃಷ್ಟಮಾಗಿ ಯೋಗ್ಯತೆಯೆಂದು ಪೊಗಳ್ವರದು ಪ್ರಮಾಣಮಲ್ಲಮೆಂದು ಹೆಂಡತಿಯ ಮೋಹಕ್ಕೆ ಅತ್ತೆಯ ಸುಲಿದ ಶ್ವಾನ ಕಣ್ಣ ನೆಕ್ಕಿದನೆಂಬಂತೆ.

ವೃತ್ತ || ಮುಖಂ ಶ್ಲೇಷ್ಮಾಗಾರಂ ತದಪಿಶಶಾಂಕೇನ ತುಲಿತಂ
ಸ್ತನೌ ಮಾಂಸಗ್ರಂಥೀ ಕನಕಕಲಶಾವಿತ್ಯುಪಮಿತೌ
ಸ್ರವನ್ಮೂತ್ರಕ್ಲಿನ್ನಂ ಕರಿವರಶಿರಸ್ಪರ್ಧಿ ಜಘನಂ
ಮುಹುರ್ನ್ನಿಂದ್ಯಂ ರೂಪಂ ಕವಿವರವಿಶೇಷೈರ್ಗುರು ಕೃತಮ್ ||

ಶ್ಲೋಕ || ನಾರೀ ಜಘನರಂಧ್ರಸ್ಥವಿಣ್ಮೂತ್ರಮಯ ಚರ್ಮಣಾ
ವರಾಹೈ ಇವ ವಿಡ್ಭಕ್ಷೀ ಹಂತ ಮೂಢ ಸುಖಾಯತೇ ||
ನಾನಾ ಜನಪ್ರಣೀತಾರ್ದ್ರೇ ವೇಶ್ಯಾ ಮುಖ ಪತದ್ಗೃಹೇ
ಅಧರ ಗ್ರಹ ಸಂಪ್ರೀತಿಃ ಸುದೀಯಃ ಕಸ್ಯ ಜಾಯತೇ ||

ಆರ್ಯೆ || ಯೋ ನ ಚ ಯಾತಿರ್ವಿಕಾರಂ | ಯುವತೀಜನೈಃ ಕಟಾಕ್ಷಬಾಣ ವಿದ್ಧೋsಪಿ
ಸತ್ವೇನ ಶೂರಶೂರೋ ರಣ | ಶೂರೋ ನೋ ಭವೇಚ್ಛೂರಃ ||

ಒಬ್ಬ ಬ್ರಾಹ್ಮಣನ ಪೆಂಡತಿ ಗಂಡನೊಳ್ ಕಲಹಮಂ ಮಾಡುತ್ತಾ ದಿನಂಪ್ರತಿ ಒಂದೊಂದು ಮಡಕೆಯನಾತನ ತಲೆಯ ಮೇಲೆ ಒಡೆಯುತ್ತಿಪ್ಪುದುಂ ನಿತ್ತರಿಸಲಾರದೆ ಕಾಶೀಯಾತ್ರೆಯಂ ಪೋಗಲೆಂದು ಕೆಲದೂರಂ ಪೋಗಿ ಒಂದೂರ ಬ್ರಾಹ್ಮಣನ ಮನೆಯೊಳ್ ತಳುಗಲಾ ಬ್ರಾಹ್ಮಣನ ಸತಿಯತಿದುಷ್ಟೆ ಗಂಡನೊಳ್ ಕಲಹಮಂ ಪಣ್ಣಿ ಗಂಡನ ತಲೆಯ ಮೇಲೊಂದು ಮಡಕೆಯನೊಡೆದು ಕೆಲಹೊತ್ತಿನ ಮೇಲೆ ಮಡಕೆ ಕ್ರಯಮಂ ಬೇಡಿಯತಿನಿಷ್ಠೂರಮಂ ಮಾಡುತ್ತಿಪ್ಪುದುಂ ಕಾಶೀಯಾತ್ರೆ ಪೋಗಲಿರ್ದವನಿಂತೆಂದು ನೆನೆದಂ

ಶ್ಲೋಕ || ಅಹೋಗುಣವತೀ ಭಾರ್ಯಾ ಭಾಂಡ ಮೌಲ್ಯಂ ನ ಯಾಚನಿ
ಸಹ ಸಾಣಿ ಚ ಭಾಂಡಾನಿ ಭಿನ್ನಾನಿ ಮಮ ಮಸ್ತಕೇ ||

ಎಂದು ತನ್ನ ಗೃಹಮಂ ಪೊಕ್ಕನಂತಲ್ಲದೆ ಮತ್ತೊಬ್ಬ ಪಾರ್ವನ ಪೆಂಡತಿಯತಿ ದುಷ್ಟೆಯಾಗಿರಲಾತಂ ನಿತ್ಯಯಾತ್ರೆಯಿಂ ಜೀವಿಸುತ್ತೊಂದು ಪಗಲು ನಿತ್ಯಯಾತ್ರೆಯೊಳು ಬೀಯಮಂ ಪಡೆಯದೆ ದೂರಂ ಸಂಚರಿಸಿ ಅಪರಾಹ್ಣಮಾಗಿ ಬರೆ ಆತನ ಪೆಂಡತಿ ಪೊಸ್ತಿಲ ನೊದೆಗಾಲಿಂಗೊರೆಯುತ್ತುಂ ಮಲಗಿರ್ದಳನೆಬ್ಬಿಸಿ ಕಾಲದೆಶೆ ನಿಂದು

ವೃತ್ತ || ಪಾಕಂ ಕಿಂ ನ ಕರೋಷಿ ಪಾಪಿನಿ ಕುತಃ ಪಾಪೀ ತ್ವದೀಯಃ ಪಿತಾ
ರಂಡೇ ಜಲ್ಪಸಿ ಕಿಂ ತ್ವದೀಯಜನನೀ ರಂಡಾ ತ್ವದೀಯಸ್ವನಾ
ನಿರ್ಗಚ್ಛ ಸ್ವಗೃಹಾತ್ಕುತಸ್ತವ ಗೃಹಂ ಯಾಹಿ ತ್ವಮೇವಾಧುನಾ
ಹಾ ಹಾ ನಾಥ ಮಮಾಧ್ಯ (?) ಮೇವ ಮರಣಂ ಶಷ್ಟಂ ಮದೀಯಂ ಗತಮ್ ||

ಅದಲ್ಲದೆ ಕಾಷ್ಠಾಷ್ಟಮೆಂಬೂರೊಳು ಭೂತಮತಿಯೆಂಬ ವಿಪ್ರಂ ಮುಂಜಿಗಟ್ಟಲು ಮೂವತ್ತು ವರುಷಂಬರಂ ವೇದಮಂ ಪಠಿಯಿಸಿ ಚೆನ್ನಾಗಿ ಸಾಂಗಾಧ್ಯಯನಮಾಗೆ ಬಳಿಕ ಮೂವತ್ತು ವರುಷಂಬರಂ ಶಿಷ್ಯರ್ಗುಪದೇಶಂಗೈದನಂತರಂ ಯಜ್ಞೆಯೆಂಬ ಚನ್ನೆಯಪ್ಪ ಕನ್ನೆಯಂ ಮದುವೆಯಾಗಿರ್ದು ಕೆಲವಾನು ದಿವಸದಿಂದತ್ತಲು ಪೌದನಾಪುರಾಧಿಪತಿ ಯಾಗಮಂ ಮಾಡಲೆಂದು ಯೋಗ್ಯರಂ ಬರವೇಳಲು ಭೂತಮತಿ ಪೋಗಲುದ್ಯುಕ್ತನಾಗಿ ತನ್ನ ವಲ್ಲಭೆ ಯಜ್ಞೆಯಂ ಮನೆಯ ಕೋಣೆಯಿಂ ಪೊರಮಡಲಾಗದೆಂದುಂ ತನ್ನ ಛಾತ್ರನಪ್ಪ ಯಜ್ಞನಂ ನಡುಮನೆಯ ಜಗಲಿಯಿಂ ಕೋಣೆಗೆ ಪೋಗಲಾಗದೆಂದುಂ ಒಬ್ಬ ಬ್ರಾಹ್ಮಣಂ ಕಳ್ಳ ಸಿಕ್ಕಿದನೆಂದು ತೆಂಗಿನ ಮರಕ್ಕೆ ಮಡಿಯ ಧೋತ್ರಮಂ ಕಟ್ಟಿ ಪುರಕೆ ಬಂದು ಪೇಳ್ದ ಮತಿಹೀನ ಬ್ರಾಹ್ಮಣನಂತೆ ತನ್ನ ಪೆಂಡತಿ ಯಜ್ಞೆಗಂ ಛಾತ್ರಂ ಯಜ್ಞಂಗಂ ನಿಯಮಾಜ್ಞೆಯಂ ಕೊಟ್ಟು ಭೂತಮತಿ ಪೌದನಾ ಪುರಕ್ಕಂ ಪೋಗಲಿತ್ತಲು ಯಜ್ಞೆ ಯಜ್ಞಂಗೆಂದಳು, ಎನ್ನ ವಿಳಾಸ ವಿವೇಕತೆ ಎನ್ನ ಸೊಬಗೆನ್ನ ರೂಪೆನ್ನ ಗಾಡಿಯುಳ್ಳವಳು ಯೌವನನಪ್ಪನೆನ್ನೊಳೋತು ಕೂಡೆ ಸಫಲವಪ್ಪುದದರಿಂ ವೃದ್ಧನೊಳೊಪ್ಪದು ನೀನೆನ್ನೊಳೆ ಕೂಡಿ ಈ ರಾತ್ರಿ ಸುಖಾಮೃತದೊಳೋಲಾಡೆಂದು ಬಂದು ತಕ್ಕೈಸುವುದುಂ ಯಜ್ಞನಿಂತೆಂದಂ

ನೀನಪ್ಪೊಡೆ ಗುರುವಿನ ಸತಿ
ಈ ನುಡಿ ನಿನಗುಚಿತಮಲ್ತು ಲೋಕಂ ಪಳಿಗುಂ
ಭೂನಾಥಂ ದಂಡಿಪನಭಿ
ಮಾನದ ಕೇಡಕ್ಕುಮೆಯ್ದೆ ನರಕಕ್ಕಿಳಿಗುಂ

ಎಂಬುದುಂ ಧೂರ್ತೆ ಗಹಗಹಿಸಿ ನಕ್ಕು ಪುಣ್ಯಂ ಪಾಪಂ ಸ್ವರ್ಗಂ ನರಕಮೆಂದು ಮಾಡಿದ ಧೂರ್ತನ ಮಾತಿಂಗೆ ಮರುಳಾದ ಪರಿಯ ನೋಡಾ ಪುಣ್ಯ ಪಾಪಮೆಂಬೆರಡರ ಬಣ್ಣಮಾವುದುಮವಂ ಬಲ್ಲವರಾರು ಸ್ವರ್ಗ ನರಕಮೆಲ್ಲಿಪ್ಪವವಂ ಕಂಡು ಬಂದವರಾರು ಬರಿಯ ಮಾತಿಂಗೆ ಬೆಗಡುಗೊಂಡಿಪ್ಪ ಮೂರ್ಖನಂ ಕಂಡೆನೀಗಳಕಟಾ ವೃಥಾ ಸಂಸಾರ ಸುಖಕ್ಕಿತರನಾಗಿ ಜನ್ಮಮಂ ವ್ಯರ್ಥ ಮಾಡಿ ಕೆಡದೆನ್ನೊಳೆ ಕೂಡಿ ಸುರತಾಮೃತಾರ್ಣವ ದೊಳೋಲಾಡಿ ನಿಶ್ಚಿಂತಮಾಗಿರದೆ ಭ್ರಮೆಗೊಂಡಂತೆ ಮೂಗುವಟ್ಟಿರಲಾಗದೆಂದು ಮತ್ತಮೀ ಪ್ರಾಯದೊಳು ತರುಣಿಯರೊಳೋಲಾಡಿ ಪಡೆವ ಸುಖಂ ಮುಪ್ಪಿನೊಳಪ್ಪದೆ ಎಂದು ನಾನಾ ಬಗೆಯೊಳಾತನನೊಡಂಬಡಿಸಿ ಸಂಭೋಗಕೇಳೀವಿನೋದದಿಂ ಕುರಿ ಬಾಳೆಯಪಣ್ಣಂ ಮೆಚ್ಚಿದಂತೆ ಮೆಯ್ಯರಿಯದೆ ಮನೆಯ ವಾರ್ತೆಯಂ ಮರೆದು ಲಜ್ಜೆಯಂ ತೊರೆದಿರುತ್ತಿರಲು ಕೆಲವಾನು ದಿವಸಕ್ಕೆ ಉಪಾಧ್ಯಾಯಂ ಬಪ್ಪ ದಿನಮಾಗೆ ಲೆಕ್ಕಂ ಮರೆದ ಗಣಕನಂತೆ ಮುಗಿಲ್ ಕವಿದಂತೆ ಚಿಂತಾಕ್ರಾಂತನಾಗಿರ್ದ ಯಜ್ಞನಂ ಕಂಡು ಯಜ್ಞೆಯೆಂದಳಿಂತೇಕೆ ಚಿಂತಿಪೆ ಇಂದಿನಿರುಳು ಎರಡು ಪೆಣನಂ ತಂದು ಉಪಾಧ್ಯಾಯಂ ನಿಯಮಿಸಿದ ಠಾವಿನೊಳರಿಸಿ ಧನಮೆಲ್ಲಮಂ ಕೊಂಡು ಮನೆಗಗ್ನಿಪ್ರವೇಶಂ ಮಾಡಿ ಪೋಪಮೆಂದಾತೆರದಿಂದೀರ್ವರುಂ ದೇಶಾಂತರಂ ಪೋಗಲಿತ್ತಲು ವಿಪ್ರಂ ಬಂದು ಬೆಂದಿರ್ದ ಮನೆಯಂ ಕಂಡು ಇಂತೆಂದಂರ್

ಶ್ಲೋಕ || ಯಾವದಸ್ಥಿ ಮನುಷ್ಯಾಣಾಂ ಗಂಗಾತೋಯೇಷುತಿಷ್ಠತೇ
ತಾವದ್ವರ್ಷ ಸಹಸ್ರಾಣಿ ಪಿತಾ ಸ್ವರ್ಗೇಮಹೀಯತೇ ||

ಇವರೆನ್ನಾಜ್ಞೆಯಂ ಮೀರದಳಿದರಿವರ್ಗೆ ಪುಣ್ಯಮಂ ಮಾಡಿಕೊಡುವೆನೆಂದೆರಡೆ ಡೆಯಸ್ಥಿಗಳನಾಯ್ದೆರಡು ಕುಂಭದೊಳಿಕ್ಕಿ ಕರದ್ವಯದಿಂ ಧರಿಸಿ ಕಾಶಿಯ ಗಂಗೆಯನೆಯ್ದುವ ಮಧ್ಯ ಸಂದಿಗ್ಧ ಬಟ್ಟೆಯೊಳೆ ಈರ್ವರುಂ ಸಂಧಿಸೆ ಯಜ್ಞಂ ಭಯಸ್ಥನಾಗಿ ಯಜ್ಞೆ ಸಹಿತಂ ಭೂತಮತಿಯ ಪಾದಂಗಳಿಗೆ ಸಾಷ್ಟಾಂಗ ವಿನತನಾಗೆ ನೀನಾರೆಂದು ಭೂತಮತಿ ಬೆಸಗೊಳೆ ತಿಳಿದನೆಂದಂಜಿ ಸ್ವಾಮಿಯೇ ನಾಂ ನಿಮ್ಮ ಛಾತ್ರನಪ್ಪ ಯಜ್ಞನೀಕೆಯೇ ನಿಮ್ಮ ಧರ್ಮಪತ್ನಿ ಯಜ್ಞೆಯೆಂಬುದುಂ ಪಾರ್ವನವರ್ಗೆ ಪುಣ್ಯಸಂಪಾದನಾರ್ಥಮವರಸ್ಥಿಯಂ ಕೊಂಡು ಪೋಗುವಲ್ಲಿ ಧೂರ್ತನೆನ್ನ ಚಾಳಿಸಲಾಡುವನೆಂದು ಕೋಪಿಸುತ್ತಂ ಪೋಗುತ್ತಿರಲು ಯಜ್ಞೆಯಡ್ಡನಿಂದಾಂ ಬ್ರಾಹ್ಮಣಸುತೆಯೆನ್ನ ಪಿತೃಗಳು ಈತನೆಮ್ಮತ್ತೆಯ ಮಗನೀತಂಗೆ ಕೊಡಲೆಂದೀತನಂ ಮನೆಯೊಳಿಟ್ಟುಕೊಂಡಿದ್ದು ಮದುವೆ ಲಗ್ನದೊಳೆ ಪಿತೃಗಳಳಿವುದುಂ ನಾನುಮೀತನುಮೊಂದಾಗಿರ್ದು ಶೈಶವಂ ಪೋಗಲೆನ್ನೊಡನೆ ರಮಿಸಲುದ್ಯೋಗಿಸೆ ನಿನಗೆನ್ನಾ ಧಾರಾಪೂರ್ವಕಮಾಗಿ ಯಾರಾದರು ಕುಡಲು ಗ್ರಹಿಪೆನಲ್ಲದೊಡೆ ಕೂಡೆನೆಂದಿರ್ದುದರಿಂದೀತನಿಂತು ನುಡಿದನದರಿಂ ಯೋಗ್ಯರ್ ನೀವೆನ್ನನೀತಂಗೆ ತುಲಸಿ ಸಲಿಲಧಾರೆಯಿಂ ಕೊಟ್ಟು ಕನ್ಯಾದಾನ ಫಲಮಂ ಕೊಂಬುದೆಂದಡ್ಡಗೆಡೆಯೆ ತುಲಸಿದಳಯುಕ್ತದಿಂದಾತಂಗೆ ಧಾರೆಯನೆರೆದು ಪೊಗಲೀರ್ವರು ದಂಪತಿಗಳು ಯೋಗ್ಯತೆಯಿಂ ಕಾಮ ಭೋಗದೊಳೋಲಾಡಿದರ್ ಅದರಿಂ ಸ್ತ್ರೀಯರ ಬುದ್ಧಿಚಾತುರ್ಯಮನಾರ್ ಅರಿವರೆಂದು ಮತ್ತೊಂದು ಕಥೆಯಂ ಪೇಳ್ದನೆಂತೆಂದೊಡೆ

ಸೌರಾಷ್ಟ್ರದೇಶದ ಕೋಟಿಗ್ರಾಮದೊಳು ಗಾರ್ಗ್ಯೊಪಾಧ್ಯಾಯರನೇಕ ವೇದಶಾಸ್ತ್ರ ಪಾರಂಗತರಾಗಿ ಐನೂರು ಜನ ಶಿಷ್ಯರ್ಗಮಧ್ಯಯನಮಂ ಪೇಳುತ್ತಿರಲೋರ್ವ ದೇಶಾಂತ ರದರಸುಮಗಂ ಬಂದು ಶಬ್ದಾಗಮಮಂ ಕಲಿಯುತ್ತಿರಲೊಂದು ದಿನಂ ಮಠದಲ್ಲಿ ಅಧ್ಯಾಪನಗೆಯ್ಯುತ್ತೆ ರಾತ್ರಿ ತಡೆದಿಪ್ಪುದುಮಾತನ ಪೆಂಡತಿಯೊಂದು ಸಣ್ಣ ಮಗುವಂ ಬಿಟ್ಟು ಜಾರತ್ವಕ್ಕೆ ಪೋಗದಿರ್ದು ಪೊತ್ತು ಕಳೆದುದೆಂದಾ ಮಗುವನೆತ್ತಿಕೊಂಡು ಪೋಗು ತ್ತಿರಲಿದಿರೊಳುಪಾಧ್ಯಾಯರ್ ಬಂದೆಲ್ಲಿಗೆ ಪೋಗುವೆಯೆಂಬುದುಂ ನಿಮ್ಮಲ್ಲಿಗೆ ಬಂದೆನದೇ ಕೆಂದೊಡೀ ರಾತ್ರಿಯೊಳು ಪ್ರಭುವಿನ ಪಟ್ಟಸ್ತ್ರೀ ಭಾಗವತದಾಟವನಡಿಸುವಳಲ್ಲಿಗೆನ್ನಂ ಬಪ್ಪುದೆಂದು ನಾಲ್ಕಾರು ವೇಳೆ ಸಖಿಯರಂ ಕಳುಹಿಸಿದಳದರಿಂ ಪೋಗಲು ನೀವಿನಿತು ಪೊತ್ತೇಕೆ ತಡೆದಿರ್ದಿರೆಂದಾಗ್ರಹಿಸಿ ನುಡಿದು ನಾನು ಬಪ್ಪನ್ನೆವರಂ ಮಗುವಂ ತಡೆದಿರಿ ಯೆಂದುಪಾಧ್ಯಾಯರಿಂ ತಾಂಬೂಲಂಗೊಂಡು ಸಂಕೇತಾಗಾರಮನೆಯ್ದಿ ಬಂದೊಡನಿರ್ದ ರಾಜಕುಮಾರನೀಕೆಯಂದಮಂ ನೋಳ್ಪೆನೆಂದು ಗೂಢದಿಂದವಳ ಪಿಂದೆ ಪೋಗಿ ನೋಡುತ್ತಿರ್ಪುದು ಪಾಳ್ಮನೆಯೊಳಿರ್ದುಪಪತಿಯವಳು ತಡೆದುದಕ್ಕತಿಕೋಪಾರೂಢನಾಗಿ ಎಡಗಾಲಿಂದೊದೆದು ತಿರಸ್ಕರಿಸಲು ತಾನುಂ ಬಂದ ವೃತ್ತಕಮಂ ಪೇಳಿ ಚೇಷ್ಟೆಗೆಯ್ದು ವಚನರಚನೆಯಿಂ ತಿಳಿಸಿ ಕೂಡಿದಾಗಳಾ ಪಾಣ್ಬಂ ಕ್ರೀಡಿಸುತ್ತಲೀಗಂ ನಿನಗೆ ಹೇಗೆಯಿದೆ ಎನಲು ಮಹಾ ಆನಂದಮಾಗಿ ಈರೇಳು ಲೋಕಗಳು ಪ್ರತ್ಯಕ್ಷಮಾಗಿ ಕಂಡಂತಪ್ಪುದೆಂಬ ಮಾತಂ ಪೊರಗೆ ಕತ್ತೆಯನರಸುತ್ತ ಬಪ್ಪ ಮಡಿವಾಳಿಯೆಂದನೆಲೆ ಮಹಾ ಸತ್ಯವಂತೆ ಪುಣ್ಯಪುರುಷೆ ಈರೇಳು ಲೋಕಮಂ ಕಂಡ ಮಹಾತಾಯೆ ಎನ್ನದೊಂದು ಕುಂಟಗತ್ತಯಂ ಕಾಣಲಿಲ್ಲವೆ ಎಂಬುದುಂ ಮೌನದೊಳಿರ್ದು ಸ್ವಗೃಹದೊಳೆ ತನ್ನ ಪತಿಯಿರೆ ತಾವಲ್ಲಿಯೆ ಕೂಡುವ ಉಪಾಯಮಂ ಕಲಿಸೆ ಪಾಣ್ಬನವಳ್ಗೆ ಮುಸುಕಿಟ್ಟು ಪಿಂದೆ ಮೌನದಿಂ ಬರಲು ಬಂದು ಗಾರ್ಗೋಪಾಧ್ಯಾಯರ ಗೃಹಕ್ಕಂ ಬಂದವರ ಪೆಸರ್ಗೊಂಡು ಕರೆದು ಪಡಿಯಂ ತೆಗೆಯಿಸಿ ನಿಮ್ಮ ಕೀರ್ತಿ ಬಹುದೂರ ವ್ಯಾಪಿಸಿರ್ದುದರಿಂದಾಂ ಪರದೇಶದ ಬ್ರಾಹ್ಮಣಂ ಯಾತ್ರಾರ್ಥಂ ದಂಪತಿಗಳು ಬಂದಿಪ್ಪೆವು ಪುರದೊಳೆಲ್ಲಂ ನಿದ್ರಾಮುದ್ರಿತರಾಗಿಪ್ಪರ್. ಅದರಿಂದೀ ರಾತ್ರಿ ಕಳಿವನ್ನಂ ಸ್ಥಳಮಂ ದಯಗೆಯ್ದೊಡಂ ಭವದೀಯಾವಾಸದೊಳಿರ್ದು ಬೆಳಗಿನ ಮುನ್ನಮೆ ಪೋಪೆವೆನಲೆಂದ ನೆಮ್ಮಾಕೆಯರಮನೆಗೆ ಪೋಗಿದಾಳೆ ಬಂದರೆ ಕೋಣೆಯೊಳಿದಾಳೆಯದರಿಂ ನಡುಮನೆಯೊಳೊಂದು ಪ್ರದೇಶದೊಳೆ ಶಯನಂ ಮಾಡಿಮೆಂದವರಂ ಪಾಸಿನೊಳೊರಗಿಸಿ ತಾನು ಮಗುವೆರಸಿ ಮಲಗಿಪ್ಪುದುಮೊಂದು ಪೊತ್ತಿನೊಳೆ ಕೂಸು ಬಹಳ ಚಂಡಿಯಿಂದಳುತ್ತಿಪ್ಪುದುಂ ಉಪಾಧ್ಯಾಯರು ತಮ್ಮ ಕಲತ್ರಂ ಬರದೆ ತಡೆದುದಕ್ಕಂ ಕೋಪಿಸೆ ಪಾಣ್ಬಂ ಮೆಲ್ಲನಿಂತೆಂದನೆನ್ನ ಭಾರ್ಯೆಯೊಂದು ಶಿಶುವಂ ಪಡೆದಿರ್ದು ಅದು ಪೋಗಲಂದಿಂದಂ ಎದೆಯೊಳುಂ ಪಾಲುಂ ಪೋಗದಿಪ್ಪುದಾ ಮಗುವಂ ನಂಬಿಸಲು ದಯಮಾಳ್ಪುದೆಂದು ತಾನು ಬಂದಾ ಮಗುವನೆತ್ತಿಕೊಂಡದರೆ ತಾಯೊಳ್ಕೂಡಿಸೆ ಸುಮ್ಮನಾಯ್ತದಕ್ಕಮುಪಾಧ್ಯಾಯಂ ಸಂತೋಷದಿಂ ನಿದ್ರೆಗೆಯ್ಯುತ್ತಿಪ್ಪು ದುಮುಷಃ ಕಾಲಕ್ಕಂ ಮುನ್ನಲೆರ್ದು ಪೋಪೆನೆಂದು ನಾನಾ ಬಗೆ ಪ್ರಾರ್ಥಿಸಿದಾಗ್ಯು ನಿಲ್ಲದೆ ಮಗುವನೊಪ್ಪಿಸಿಯಾಗೃಹಮಂ ಪೊರಮಟ್ಟು ಪಾಣ್ಬನಂ ಕಾಂಪಿ ತಾನುಂ ತನ್ನ ಗೃಹಕ್ಕಂ ಬಂದೊಡುಪಾಧ್ಯಾಯಂ ಕೋಪಿಸಿ ಕೊಲಲು ಬಪ್ಪುದುಂ ಹೋ ತಡೆ ಎನ್ನ ಮಾತಂ ಕೇಳಿಯಾಬಳಿಕಾ ಏನಾದರು ಮಾಡೆಂದಿಂತೆಂದಳು ನಾನು ಅರಮನೆಗೆಯ್ದಿ ಒಂದಾಟಮಾಗಲೆದ್ದು ಬರುತ್ತಿರಲರಸಿ ಎನ್ನ ಕೈಯಂ ಪಿಡಿದಿನ್ನೊಂದಾಟಮಾಗಲೆಂದು ಕುಳ್ಳಿರಿಸೆ ಮತ್ತೊಂದಾಟಮಾಗೆ ಮಗುವಂ ಬಿಟ್ಟಿಪ್ಪೆನೆಂದು ಮರಳಿ ಬರುತ್ತಿರ್ದೊಡಾ ಮಗುವನಿಲ್ಲಿಗೆ ತರಿಸುವೆನೆಂದೀರ್ವರ್ ಸಖಿಯರಂ ಕಳುಹಿಸಲವರೆಮ್ಮ ಮನೆಯ ಬಾಗಿಲೊಳು ಕೂಸಂ ಬೇಡಲಿಪ್ಪವಸರದೊಳೆಮ್ಮ ಮನೆಯೊಳು ಪರಸ್ಥಳದವರಿರ್ದು ಮಗುವಂ ನಂಬಿಸುವದಂ ಕಂಡು ಬಂದೀವಾರ್ತೆಯನರಸಿಗರಿಪಿದೊಡೆನ್ನ ಬರಲೀಸದೆ ಪ್ರೀತಿಯಿಂದಿಟ್ಟುಕೊಂಡಳದರಿಂ ತಡೆದೆನಿದಕ್ಕೆ ಕೋಪವಿಷ್ಟೇಕೆಂದು ಅನ್ಯಾಯದಿಂದೆನ್ನಂ ಬೈದುದಕ್ಕೆ ನೀವೇ ಪಾಕಶುದ್ಧಿಯಂ ಮಾಳ್ಪುದೆಂದು ಕೂಸುವೆರಸಿ ಮಲಗಿ ನಿದ್ರೆಗೆಯ್ದೆರ್ದು ತಾನು ಭುಂಜಿಸಿಯರಸುಮಗನ ರೂಪು ಲಾವಣ್ಯ ಯೌವ್ವನಮಂ ನೋಡಿ ಸೋಲ್ತು ಕೂಟಕ್ಕಳಸಲಾತನಿವಳು ರಾತ್ರಿ ಮಾಡಿದ ಪ್ರಪಂಚೆಲ್ಲಮಂ ತಿಳಿದನಾಗಿ ಸ್ತ್ರೀಯರಾಟಕ್ಕೆ ವಿಸ್ಮಿತನಾಗಿ ವೈರಾಗ್ಯಪರನಪ್ಪುದರಿಂದೆನಗೊಂದುತಿಂಗಳು ಬ್ರಹ್ಮವ್ರತಮಾದುದರಿಂದಾಗದು ಮತ್ತೆ ಪೇಳ್ವೆನೆಂದು ಸಂತೈಸಿ ರಾತ್ರಿ ನೀ ಮಾಡಿದ ಹಾದರಮೆಲ್ಲಮಂ ತಿಳಿದೆನಾದುದರಿಂ ನಿನ್ನ ಚಾತುರ್ಯಮಾರಿಗಿಲ್ಲೆಂಬುದುಮಕೆಯಿಂತೆಂದಳ್ ಎನಗೆ ಗುರುವಾದವಳು ರಾಜಪುರೋಹಿತನ ಪುತ್ರಿಯಾದ ಭೋಗವತಿಯೆಂಬಳು ಪತಿಪುತ್ರರ್ಸಹಿತಂ ಸುಖ ಬಾಳ್ವಳಾಕೆಯ ಉಪದೇಶದಿಂದೆನಗೆ ಇನಿತು ಬುದ್ಧಿ ಬಂದುದವಳ ವೃತ್ತಾಮೆಂತೆಂದೊಡೆ ಈ ಪುರದ ರಾಜಪುರೋಹಿತಂ ದೇವಶರ್ಮನಾತಂಗೆಣ್ಬರ್ಕುಮಾರರಿಂ ಕಿರಿಯ ಭೋಗಾವತಿಯೆಂಬ ಪೆಣ್ಣು ಪುಟ್ಟೆ ಪಿತೃ ಭ್ರಾತೃಗಳತಿಪ್ರೀತಿಯಿಂ ಸಲಹಿ ಕನ್ಯಾಕಾಲ ದೊಳೆ ಯೋಗ್ಯ ಬ್ರಾಹ್ಮಣಂಗೆ ಮದುವೆಯಂ ಮಾಡಿದೊಡೆ ತಿಂಗಳು ತುಂಬುವುದಕ್ಕೆ ಮುನ್ನಮೆ ಪತಿವಿಯೋಗಮಪ್ಪುದು ಪಿತ್ರಾದಿಗಳತಿಶೋಕಾಕುಲರಾಗಿ ಆಕೆಗೆ ಬೇಕಾದನಿತು ದ್ರವ್ಯಮಂ ಕೊಟ್ಟು ಬೇರೊಂದುಪ್ಪರಿಕೆಯಂ ಮಾಡಿಸಿ ಇರಿಸಿಪ್ಪುದುಂ ನವ ಯೌವ್ವನಪ್ರಾಪ್ತೆಯಾಗಿ

ಶ್ಲೋಕ || ಯತೀ ಚ ಬ್ರಹ್ಮಚಾರೀ ಚ ವಿಧವಾ ಬದ್ಧಘೋಟಿಕಃ
ಅಂತಃಪುರಸ್ಥನಾರೀಕರಣಾಂ ಸದಾ ಮೈಥುನ ಚಿಂತನಮ್ ||

ಎಂಬುದರಿಂ ಕಾಮಸಂತಾಪದಿಂ ಬೇಯುತ್ತ ಜನಾಪವಾದಕ್ಕಂಜಿ ಮಾಧವಭಕ್ತೆಯಾಗಿ ಅನುಷ್ಠಾನಪರೆ ತನ್ನ ಶೀಲಮಂ ಪ್ರಕಟಿಸಲು ಪುರುಷಮುಖಾವಲೋಕನಮಾಗದೆಂದು ನೀವೀ ವಸ್ತ್ರದಿಂ ಮುಖಾಚ್ಚಾದನಂಗೆಯ್ದು ಸ್ನಾನಾರ್ಥಂ ದಿನಂಪ್ರತಿ ನದಿಗೆ ಪೋಪಾಗಳು ಪುರುಷರು ಮೆಟ್ಟಿದ ಭೂಪ್ರದೇಶಮಂ ಮೆಟ್ಟಿದೊಡೆ ದೋಷಮೆಂದು ತಾಮ್ರಭಾಜನದೊಳುದಕಮಂ ಕೊಂಡು ದರ್ಭೆಯ ಪಿಂಜರೋದಕ ಸೇಚನೆಯಂ ಮಾಡಿ ಪಾದನ್ಯಾಸದಿಂ ಪೋಗೆಯಲ್ಲಿ ಬಂದಿರ್ದ ಪುರುಷರನೀಕ್ಷಿಸುತ್ತ ಬಹಳ ಪೊತ್ತುಗಳೆದು ಬರುತ್ತಿಪ್ಪಿನಮೊಂದು ದಿವಸಮಾತನ ಸೋದರದತ್ತೆಯ ಮಗಂ ಕಾಮಶಕ್ತಿಯೆಂಬ ತರುಣಂ ಯವ್ವನಂ ಸ್ನಾನಾರ್ಥದಿಂ ಬಂದವಳ ಸಮೀಪವರ್ತಿಯಾಗಿರಲೋರೋರ್ವರಂ ನೋಡಿ ವಿರಹೋದ್ರೇಕಮಾಗೆ ಸಲ್ಲಾಪದಿಂದಾ ನದಿಯೊಳೆ

ಸೌಂದರ್ಯಪುರುಷಂ ದೃಷ್ಟ್ವಾ ಪಿತರಂ ಭ್ರಾತರಂ ಸುತಂ ಯೋನಿದ್ರವತಿ ನಾರೀಣಾಂ ಎಂಬಂತಲ್ಲಿಯೆ ಕೂಡಿದೊಡೆ ನಿಚ್ಚನಿಚ್ಚಲಾ ನದೀ ಸಮೀಪದ ಜೀರ್ಣ ಸುರಾಲಯಮೆ ಸಂಕೇತಾಗಾರಮಾಗೆ ಕೊಡುತ್ತಮಿರ್ದೊಡೆ ಕೆಲವಾನುದಿವಸಕ್ಕಾ ದೇವರ ಜಾತ್ರೆ ಬಪ್ಪುದುಂ ಪಾಣ್ಬಂ ಚಿಂತೆಯಂ ಪಾಣ್ಬೆಗರಿಪೆ ಇದಕ್ಕೆ ತಕ್ಕುಪಾಯವನಾಂ ಬಲ್ಲೆ ನಾಳೆ ದಿವಸಂ ನಾನುಂ ಭೂಮಿಶುದ್ಧಿಯಿಂ ಪೊಳೆಗೆ ಪೋಪಾಗಳ್ ರಾಜಬೀದಿಯ ಮಧ್ಯದೊಳು ನೀಂ ಬಂದು ಸರಸದಿಂದೀಕೆ ಎನ್ನ ಪೆಂಡತಿಯೆಂದೆನ್ನ ಮುಟ್ಟಿ ಪೋಗೆಂದು ಪೇಳಲಾತನಂತೆ ಬಂದು ಕೈಯಂ ಪಿಡಿದೊಡಂ ಆಕೆ ಗೋಳಿಟ್ಟಾ ಬೀದಿಯೊಳ್ ಬೀಳ್ವುದುಂ ಪಿತೃಭ್ರಾತೃಗಳ್ ಮೊದಲಾದ ಬಂಧುಗಳೆಲ್ಲ ನೆರೆದೆಬ್ಬಿಸಲಿನ್ನೆನ್ನಸುಮಂ ಬಿಡುವೆನಲ್ಲದುಳಿದೆನಲ್ಲಿಲ್ಲಿಯೆ ಚಿತೆಯ ಮಾಡಿ ಯಜ್ಞೇಶ್ವರನಂ ಪೊತ್ತಿಸಿ ಪರಪುರುಷ ಸ್ಪರ್ಶವಾದೆನ್ನ ಪಾಪದೇಹಮಂ ದಹಿಸಿಮೆಂದು ಬೇಡಿದೊಡೆ ಸಾವಿರ ಪೊನ್ನ ಮುಟ್ಟಿ ದೋಷಮಂ ಕಳೆವೆವೆಂದೆಲ್ಲರಾಕೆಯಂ ನಾನಾ ತೆರೆದಿಂದೊಡಂಬಡಿಸಿದೊಡಂ ಮಾಣದೆ ಸಾವಂ ನಿಶ್ಚೈಸಿಪ್ಪುದುಂ ಪಂಚಗವ್ಯಮಂ ತಂದಾಕೆಯ ಶರೀರಮಂ ಪ್ರಕ್ಷಾಲನಂಗೆಯ್ದಾಚಾರ್ಯೋಕ್ತ ಮಂತ್ರವಂ ನಿಜ ಮಾತೆ ದರ್ಭೆ ದೂರ್ವಾಂಕುರ ತೀರ್ಥೋದಕದಿಂ ಸೇಚನೆಗೆಯ್ದು ಪುರುಷಸ್ಪರ್ಶಪ್ರದೇಶ ಮಂತ್ರಪೂತ ತುಲಸೀದಳಂಗಳಿಂದಾಚ್ಛಾದಿಸಿ ಸಹಸ್ರ ಬ್ರಾಹ್ಮಣ್ಯಕ್ಕಂ ಸಮಾರಾಧನೆಯಂ ಮಾಡಿಸಿ ನೂರು ಕನ್ಯಾದಾನ ಅಶ್ವದಾನ ಗೋದಾನ ಮೋದಲಾದನೇಕ ಭೂರಿದಾನಂಗೊಟ್ಟಾಕೆಯಂ ನಿಜಹರ್ಮ್ಯಕ್ಕೊಯ್ದಿರಿಸುವುದುಂ ಮರುದಿವಸಂ ಬಂಧುಗಳೆಲ್ಲ ತಮ್ಮ ತಮ್ಮ ಸ್ಥಾನಕ್ಕೆಯ್ದುವುದುಂ.

ಒಬ್ಬಳು ಜೋಗಿಣಿಯು ಭಿಕ್ಷಾರ್ಥಮಾಗಿಯಾಕೆಯ ಹರ್ಮ್ಯಮಂ ಪುಗಲಾಕೆಯಂ ಪ್ರೀತಿಯಿಂ ಕರೆದು ಮೃಷ್ಟಾನ್ನಮನಿಕ್ಕಿ ಸಂತೈಸಿಕೊಂಡಿರ್ದೊಂದು ಪಣಮಂ ಕೊಟ್ಟು ಸಾಯಂಕಾಲದೊಳೀ ಪಣಕ್ಕೆ ಸುರೆಯಂ ತಪ್ಪುದೆನಲಾಕೆ ಮಹಾಪ್ರಸಾದಮೆಂದು ಪೋಗಿ ಸುರೆಯಂ ಕೊಂಡೊಂದು ಕೊಡದೊಳ್ ತುಂಬಿ ನಿಶಿಯೊಳು ಪೊತ್ತು ತಂದಿಳಿಪಿದೊಡಾಕೆಗೆ ನಾನಾ ಉಪಾಯಾಂತರದಿಂದಾ ಕಂಠಪರಿಪೂರ್ಣಮಾಗೆ ಕುಡಿಯಿಸುವುದುಂ ಪ್ರಜ್ಞೆಯಿಲ್ಲದೆ ಒರಗಿಪ್ಪುದುಂ ತಾನವಳ ಮೇಲೆ ಪುಳ್ಳಿಯ ಪೊರೆಯನಡುಕಿ ಕಸವರಮೆಲ್ಲಮಂ ಕೊಂಡಾ ಹರ್ಮ್ಯಕ್ಕೆ ಅಗ್ನಿಪ್ರವೇಶಮಂ ಮಾಡಿ ಪುರಮಂ ಪೊರಮಡಲು ತಾನು ಕಲಿಸಿದಂದದೊಳೆ ಕಾಮಶಕ್ತಿಯೆಂಬುಪಪತಿಯ ತೊರೆಯ ತಡಿಯೊಳ್ ತನ್ನ ವಸ್ತ್ರಾಭರಣಮೆಲ್ಲಮಂ ಕಳೆದಿರಿಸಿ ಮಹಾಪತಿವ್ರತೆಯನಜ್ಞಾನವಶದಿಂದೂರ ಮಧ್ಯದೊಳು ಹಸ್ತಸ್ಪರ್ಶನ ಮಾತ್ರದಿಂ ಶೀಲಮನಳಿದ ಪಾತಕ ಪ್ರಾಯಶ್ಚಿತ್ತಕ್ಕೆ ಪುಣ್ಯ ನದೀತೀರ್ಥದೊಳೆ ಪಾಯ್ದು ಸತ್ತು ಪರಮೇಶ್ವರನ ಪಾದಮಂ ಸೇರಿದೆನೆಂದು ಲೇಖನಮಂ ಬರೆದಿರಿಸಿ ತನುಂ ಬಂದು ಕೂಡುವುದುಮಿರ್ವರುಂ ರಾತ್ರಿಯೊಳೆ ಪಯಣಂ ಪೋಗಿ ದೂರಾಂತದೊಳೆ ದಂಪತಿಗಳಾಗಿ ಪಾಟಲೀಪುರಮಂ ಪೊಕ್ಕಿರ್ದಲ್ಲಿ ಮಂತ್ರವಾದಿಗಳೊಳು ಇಂದ್ರಜಾಲಾದಿಗಳಂ ಕಲ್ತು ರಾಯನಿಂ ಮಾನ್ಯಮಂ ಪಡೆದಿರ್ಪಿನಮಿತ್ತಲಾಕೆಯ ಮಾತಾ ಪಿತೃಗಳು ಕೆಲವು ದಿವಸದಿಂ ಲೋಕಾಂತರಿತರಾಗೆಯು ಪುತ್ರರೆಣ್ಬರೊಳೀರ್ವರ್ ನಿಬುದ್ಧಿಗಳುಳಿದೆಲ್ಲರುಂ ಪೋಗುವುದುಂ ರಾಜಪುರೋಹಿತಮನನ್ಯರ್ಗಿತ್ತೊಡಿವರ ಭಾಗ್ಯಮೆಲ್ಲಂ ಪೋಗಿಯತಿದಾರಿದ್ರಂ ಬಂದೊಡೆ ದೇಶಾಂತರಿತರಾಗಿ ತಿರುಗುತ್ತಂ ಬಂದು ಪಾಟಳೀಪುರ ದೂರ ಮುಂದಣ ಜಗಲಿಯೊಳ್ ಕುಳ್ಳಿರ್ಪುದುಂ ಭೋಗವತಿ ಜಲಾಶಯಕ್ಕೆ ಪೋಗುತ್ತಂ ನಿಜಾಗ್ರಜರಂ ಕಂಡು ಗೃಹಮಂ ಪೊಕ್ಕು ನಿಮ್ಮ ಭಾವಂದಿರ್ ಬಂದಿಪ್ಪರವರಂ ಗೃಹಕ್ಕೊಡಗೊಂಡು ಬಪ್ಪುದೆಂದು ಬರಿಸಿ ಮಜ್ಜನ ಭೋಜನಾದಿಗಳಿಂದುಪಚರಿಸೆ ನಿಜವೃತ್ತಾಂತಮೆಲ್ಲಮಂ ಪೇಳಿ ವಶ್ಯತಂತ್ರಮಂ ಕಲಿಸಿ ನಿಜಪುರಕ್ಕೆ ಬಪ್ಪೆನದರಿಂ ಮುನ್ನಮೆ ಪೋಗಿ ಆ ರಾಯನಂ ವಶೀಕರಣಂ ಮಾಡಿ ಪುರಜನ ಪರಿಜನಂ ಬಂದಿದಿರ್ಗೊಳಲೆಂದು ಪೇಳಿ ಕಳುಹಿಸಲವರ್ ತಮ್ಮ ಪುರಮಂಪೊಕ್ಕು ಅರಸನಂ ಕಂಡು ತಮ್ಮ ನುಜೆ ಪರಮೇಶ್ವರನ ಬೆಸದಿಂ ನರಭೋಗಮಂ ಪಡೆದು ಬಪ್ಪಳೆಂದು ಪೇಳೆಯೆಂತು ಬಪ್ಪಳೆಂದನುಮಾನದೊಳಿರಲು ಸ್ವಪ್ನದೊಳು ಕರ್ಣಪಿಶಾಚಿಯು ಬಂದು ಭೋಗಾವತಿ ಮಹಾಸತಿ ಶೀಲದಿಂದಗ್ನಿಯಿಂ ಮೃತ್ಯುವಂ ಪಡೆದು ಕೈಲಾಸಮಂ ಪಡೆದು ಪಾರ್ವತಿಯ ರೂಪನಾಂತು ರುದ್ರನ ಸಮಿಪಮನೆಯ್ದಿರಲ್ ಹೈಮವತಿ ಕರುಣಿಸಿ ಈಕೆ ನರಭೋಗವಿಲ್ಲದೆ ಬಂದಳ್ ಇನ್ನು ಕೆಲದಿವಸಂ ಗಂಗೆಯಂ ಪಾಯ್ದು ಬಂದಂಗೀಕೆಯೊಳತ್ಯಾಸೆಯುಳ್ಳುದರಿಂ ಮರ್ತ್ಯಲೋಕದೊಳೆ ಈರ್ವರುಂ ಸುಖಂ ಬಾಳಿ ಬಪ್ಪಂತು ಕಳುಹಿಸುವುದೆಂದು ಮೃಡನಂ ಬೇಡಿಕೊಂಡಾ ಈರ್ವರ್ಗೆ ಪರಿಣಯಂ ಮಾಡಿ ಕಳುಹಿಸುವುದರಿಂ ನಾಳೆ ಸೋಮವಾರ ಮಹಾವೈಭವದಿಂ ಪುರಜನಮೆಲ್ಲಂ ಇದಿರ್ಗೊಂಡು ಭಕ್ತಿಪೂರ್ವಕ ಹರ್ಮ್ಯದೊಳಿರಿಸಿ ಪೂಜಿಸದಿರ್ದೊಡೆ ನಾಡುಂ ಬೀಡುಮೆಲ್ಲಂ ಪಾಳಪ್ಪುದೆಂದು ಅತ್ಯಾಗ್ರಹಂಗೆಯ್ದೊಡೆ ಕಣ್ದೆರೆದು ಭಯಂಗೊಂಡು ಸಕಲ ವಿಭವದಿ ನದೀತೀರದೊಳ್ ಬಂದಿದ್ದ ಭೋಗವತಿಯ ಪತಿಸಹಿತಂ ಪುರಮಂ ಪುಗಿಸಿ ಹರ್ಮ್ಯಮಂ ಮಾಡಿರಿಸಿ ಬೆಸಗೆಯ್ಯುತ್ತಿರಲಾಕೆ ಮಕ್ಕಳಂ ಪಡೆದು ಬದುಕುತಿಪ್ಪಳಾಕೆಯ ಶಿಕ್ಷೆಯೆನಗೆಂದು ಗಾರ್ಘ್ಯೋಪಾಧ್ಯಾಯರ ಪತ್ನಿ ರಾಜಪುತ್ರನೊಡನುಸುರಿ ಮತ್ತಂ ಕುಂಟಣಿಯ ಸಾಮರ್ಥ್ಯಮನೆಂದಳೀ ಪುರದ ಪರದಂ ಧನಮಿತ್ರನಾತನ ಸತಿ ರೂಪವತಿಯೆಂಬಳು ಮಹಾಪತಿವ್ರತೆ ಜಗತ್ಪ್ರಸಿದ್ಧಿವಡೆದಿಪ್ಪಿನಮೊಂದು ದಿವಸಮಿ ಪೊಳಲ ವಸುದತ್ತನಾಕೆಯ ರೂಪು ಲಾವಣ್ಯಮಂ ಕಂಡು ಕಾಮ ಮೋಹವಶಗತನಾಗಿ ವಿರಹತಾಪಂ ಪುಟ್ಟಿ ನಿತ್ತರಿಸಲಾರದೊರಲುತ್ತಿಪ್ಪುದುಮಾತನ ತಾಯಿಯವನವಸ್ಥೆಯ ಬೆಸಗೊಳ್ವುದುಂ ನಿಜಾಭಿಪ್ರೇತಾರ್ಥಮಂ ಪೇಳಲಾಕೆಗೆ ಮಿಗಿಲಾದ ನಾಲ್ಕು ಪೆಣ್ಗಳಂ ತಂದು ಪರಿಣಯನಂ ಮಾಳ್ಪೆಯಕೆಯಪ್ಪೊಡೆ ಮಹಾಪತಿವ್ರತೆ ಆಕೆಯ ನೆರೆವುದಸಾಧ್ಯಮೆಂದನೇಕ ತೆರದಿನೊಡಂಬಡಿಸಿ ನುಡಿವುದುಮಂತಾದೊಡಾನುಂ ಸಾವೆನಲ್ಲದುಳಿವೆನಲ್ಲೆಂಬುದುಂ ತಾಯುಂ ಚಿಂತಾಕ್ರಂತೆಯಾಗಿ ಪಲವಂ ಪಂಚಲಿಸುತ್ತಮಿರ್ಪಿನಮೋರ್ವಳು ಕೊರವಿ ಬಂದು ಉಂಡ ಊಟಮಂ ಕಂಡ ಕನಸು ಕಾಮಕಾಂಡಂ ಮೊದಲಾದವಂ ನಿನ್ನ ಮನೋಭಾವಮೆಲ್ಲಮಂ ಕಡಲನಿತುಸುರ್ವೆ ಮೊರತುಂಬಾ ಬೀಯವನಿಕ್ಕು ತಾಯೆಯೆಂದು ಬರಲಾಕೆಯಂ ಕಂಡೆನ್ನ ಕುಮಾರನುಬ್ಬೆಗಮಿಕೆಯಿಂ ತೀರ್ಗುಮೆಂದವಳಂ ಕರೆದು ವೃಷ್ಟಾನ್ನಮನಿಕ್ಕಿ ತನ್ನ ಮಗನವಸ್ಥೆಯಂ ಪೇಳಿದೊಡಿದಾವ ಗಹನವಿಂದಿಂಗೆ ಪದಿನೈದು ದಿವಸಕ್ಕಾಕೆಯ ನಿನ್ನ ಮಗನೊಳ್ ನೆರಪದೊಡೆನ್ನ ಸ್ತನಂಗಳೆಕ್ಕದಕಾಯಿಮೆಂದುಮಾಕೆಯ ಗಂಡನ ಅಂಗಡಿಗೆ ನಿನ್ನ ಮಗನಂ ಕಳುಹಿಸಿ ನಾಲ್ವರು ಕಾಣ್ಬಂತೆ ಒಂದು ದುಪ್ಪಟಮಂ ಕ್ರಯಕ್ಕೆ ತಂದು ಪೊದೆದಿರ್ಪುದೆಂದು ಪೇಳಿ ತಾನಾಕೆಯಲ್ಲಿಗೆಯ್ದಿ ಮಹಾಸತಿ ಗಂಗಾಭವಾನಿ ನಿನ್ನ ಪತಿವ್ರತಾಮಾಹಾತ್ಮ್ಯಮಂ ಕೈಲಾಸ ವೈಕುಂಠದೊಳ್ ಪೊಗಳುರಾದೊಡಂ ಕಡೆಯೊಳಲ್ಲದೆಲ್ಲವದಂ ಬಯಸಿದಾಗಳೆ ಪುತ್ರರಪ್ಪಂತು ತಂತ್ರಮಂ ಬಲ್ಲೆನೆಂದಾಕೆಯ ಶಯ್ಯಾಗೃಹದೊಳ್ ಪೊಕ್ಕು ರಹಸ್ಯದಿಂ ಪೇಳಿ ಅವಳ್ಗತಿಸ್ನೇಹಿತೆಯಾಗಿ ದಿನಂಪ್ರತಿ ಬಿಡದವಳಂ ನಂಬಿಸಿ ಸುದತ್ತನ ಗೃಹಕ್ಕೆ ಬಂದಾತಂ ಪೊದೆದಿರ್ದ ದುಪ್ಪಟದೊಳೊಂದೆಣೆಯಂ ಪರಿಯಿಸಿಕೊಂಡು ಬಂದು ರೂಪವತಿಯು ಕಾಣದಂತು ಆಕೆಯ ಮಂಚದ ಹಾಸಿಗೆಯೊಳ್ ಸೇರಿಸಿ ಅನ್ನಮಂ ಬೇಡಲ್ಪಂದೆನೆಂದುಂ ಅವಳಂ ಪೊಗಳುತ್ತಂ ಪೊಗಲಾ ರಾತ್ರಿಯೊಳೆ ಶೆಟ್ಟಿಯು ಬಂದಾ ಮಂಚದೊಳೊರಗುವಾಗಲಾ ದುಪ್ಪಟದೆಣೆಯಂ ನೋಡಿ ವಸುದತ್ತಂ ಕೊಂಡ ವಸ್ತ್ರಮೆಂದರಿದಾತಂ ಬಂದಿರ್ದನೆಂದು ನಿಶ್ಚೈಸಿ ಪೆಂಡತಿಯೊಳತಿಕೋಪಮನೆತ್ತಿಕೊಂಡು ಮೈಯೆಲ್ಲ ಜರ್ಝರಿತಮಾಗೆ ಬಡಿಗೋಲಿಂ ಪೊಡೆದಟ್ಟಲತಿದುಃಖಿತೆಯಾಗಿ ತಾಯ ಗೃಹಮಂ ಸೇರಲು ಮೂರು ದಿವಸಕ್ಕಾ ಕೊರವಿ ಬಂದು ಕಂಡರಿಯದಂತು ಬೆಸಗೊಂಡು ನಿನ್ನ ದುಃಖಮಂ ಬಿಡೆನ್ನ ಸಾಮರ್ಥ್ಯದಿಂ ನಿನ್ನ ಪುರುಷಂ ಬಂದತಿಪ್ರೀತಿಯಿಂ ಕರೆದೊಯ್ವಂತೆ ಮೊಳ್ಪೆನಂಜವೇಡವೆಂದು ಪೇಳ್ದಳೀ ರಾತ್ರಿಯೊಳೆ ಊರ ಮುಂದಣ ಕಾಳಭೈರವನಾರಾಧಿಸಿ ನಗ್ನವೇಷದಿಂ ಮಂತ್ರಮನೋದುತ್ತಂ ಪೊಡಮಡುವಾಗಲೊರ್ವ ಪುರುಷಂ ಬಂದು ನಿನ್ನೊಳು ರತಿಕ್ರೀಡೆಯಂ ಮಾಳ್ಪನದಕ್ಕೆ ಮನಂಗೊಟ್ಟು ಕೂಡಿದೊಡೆ ಮೂರು ದಿವಸಕ್ಕೆ ನಿನ್ನ ಪತಿಯು ಬಂದು ಅತ್ಯಾಂದರದಿಂ ಕರೆದೊಯ್ದು ಉಪಚರಿಸುವನಿದಕ್ಕೆ ಚಿಂತೆ ಬೇಡೆಂದು ಕಳಿಸಿ ಕೊಟ್ಟು ಬಂದಾ ವಸುಭೂತಿಯಂ ಕಳುಹಿಸಲಾ ಭೈರವಾಲಯದೊಳೆ ರೂಪವತಿಯೊಳು ಕೂಡಿ ತನ್ನಭಿಪ್ರಾಯಮೆಲ್ಲಮಂ ಪೇಳೆ ಆತನೊಳೆ ರಮಿಸುತ್ತಿರಲಿತ್ತ ಕಣತಿಯು ಧನಮಿತ್ರನ ಶಯ್ಯಾಗೃಹದ ಬಾಗಿಲೊಳು ರೂಪವತಿ ಪೆಸರ್ಗೊಂಡು ಕೂಗಿಡುತ್ತಿರಲ್ ಧನಮಿತ್ರನಾಕೆಯನಾ ಗ್ರಹಂಗೆಯ್ಯೆ ಇಂದಿಂಗೆಂಟು ದಿವಸದ ಸಂಜೆಯೊಳೆನ್ನ ತಾಯಿ ಬಳಿಗನ್ನಮಂ ಬೇಡಲು ಬಪ್ಪಲ್ಲಿ ವಸುದತ್ತನ ತಾಯಿ ಒಂದು ದುಪ್ಪಟದೆಣೆಯಂ ಅಸಗನಿಗೆ ಕೊಡೆಂದು ಕೊಡಲಾ ದುಪ್ಪಟದೆಣೆಯನಿಲ್ಲಿಗೆ ಬಂದನ್ನದ ಸಂಭ್ರಮದೊಳಿಲ್ಲಿಯ ಮಂಚದ ಕೊನೆಯೊಳಿರಿಸಿ ಮರೆದೆನೀಗಲಾಕೆಯುಪದ್ರಂ ಪರಿದಪ್ಪುದರಿಂದಾ ವಸ್ತ್ರದೆಣೆಯಂ ಕೊಡಿಯೆಂದತ್ಯಂತಮಾಗಿ ಬೇಡುವುದುಂ ವಿಷಣ್ಣ ಚಿತ್ತನಾಗಿ ಆ ವಸ್ತ್ರಮಂ ಕೊಟ್ಟು ನಿರಾಪರಾಧಿಯಂ ನಿಗ್ರಹಿಸಿದೆನೆಂದು ತನ್ನಂ ತಾಂ ನಿಂದಿಸಿ ಪೆಂಡತಿಯನೊಡಂಬಡಿಸಿ ಕರೆಯಲ್ಬಪ್ಪಿನಂ.

ಇತ್ತಲ್ ವಸುದತ್ತನವೊಳೆ ನಿಚ್ಚ ನಿಚ್ಚ ಕೂಡಿ ಸುರತಕ್ರೀಡೆಯೊಳಿರ್ದಳಾಕೆಯಂ ಧನಮಿತ್ರಂ ಬಂದು ಅತ್ಯಾದರದಿಂದೊಡಂಬಡಿಸಿ ಕರೆದೊಯ್ದು ಸ್ನೇಹಂ ತಿಣ್ಣಮಾಗೆ ಸುಖಮಿರ್ದನಿಂತುಮುಭಯ ಪುರುಷರಂ ಸುರತದಿಂ ಸುಖಿಸುತ್ತ ಪತಿವ್ರತೆಯೆನ್ನಿಸಿಕೊಳ್ಳುತ್ತಿಪ್ಪರಿಂತಪ್ಪವರ ಬಳಿಯೊಳೆ ಪಾದರದ ಚಾತುರ್ಯಮಂ ಕಲ್ತೆ ನಿನ್ನ ನವ ಯೌವನಮಂ ವ್ಯರ್ಥಂ ಮಾಡದೆನ್ನೊಳೆ ಕೂಡಿ ಸುಖಬಡುತ್ತದೆಂದು ಸರಸ ಸಲ್ಲಾಪಗಳಂ ಮಾಡಿದೊಡಂ ರಾಜಪುತ್ರಂ ಮೌನಗೊಂಡು ತನ್ನ ಮನದೊಳಿಂತೆಂದಂ

ಆರ್ಯಾಗೀತಿ || ಬಾಲ ಸಖತ್ವಮಕಾರಣ | ಹಾಸ್ಯಂ ಸ್ತ್ರೀಷು ವಿವಾದಮಸಜ್ಜನಸಂಗಮ್
ಗರ್ದಭಯಾನಮಸಂಸ್ಕೃತ | ವಾಣೀ ಷಡೇಷು ನರೋ ಲಘುತಾಮುಪಯಾತಿ ||

ಎಂಬುದರಿಂದೀಕೆಗೆ ಪ್ರತ್ಯುತ್ತರವಂ ನುಡಿಯಲಾಗದೆಂದು ಪವಮಾನಪುರದೊಳು ಕೇತಗೌಂಡನ ಪೆಂಡತಿ ಕಲುಷೆಯೆಂಬಳು ಕುಲಟೆಯಾಗಿಯೂ ಗಂಡ ಕಾಣ್ಬನೆಂದಂಜುತ್ತ ಮಿರ್ದೊಂದು ದಿನಂ ಪೊಲಕ್ಕೆ ತನ್ನ ಪತಿಗನ್ನಪಾನಮಂ ಕೊಂಡೊಯ್ದಿರ್ದಾಗಳಲ್ಲಿರ್ದ ಕಾಳಿದೇವಿಯ ಗುಡಿಯಂ ಪೊಕ್ಕು ಮುಗಿದಕೈವೆರಸಿ ಮಹಾದೇವಿಯೆನ್ನ ಗಂಡನ ಕಣ್ಣೆರಡು ಪೋದೊಡೆ ನಿನಗಪಾರ ಪೂಜೆಗೊಟ್ಟು ದಾಸರಿಗೆ ಹರಿಸೇವೆ ಮಾಳ್ಪೆನೆಂದು ಪರಸಿಕೊಂಬಾಗಳಾಕೆಯ ಗಂಡನಾಕೆಗೆ ಕಾಣದಂತಿರ್ದು ಈ ದಿನದೊಳೆ ಅಂಧಕನಂ ಮಾಳ್ಪೆನೆಂದೊಡೆನ್ನೊಡತಿವಡೆದು ಮಾತನಾಡಿದಳೆಂದು ಗೃಹಮಂ ಪೊಕ್ಕಿರಲಾ ದಿನಾವ ಸನದೊಳೆ ಕೇತಗೌಂಡಂ ತನ್ನ ಕಣ್ಣೆರಡು ಕಾಣದಿಪ್ಪವೆಂದು ವ್ಯಾಜದಿಂ ಬೀಳುತ್ತಮೇಳುತ್ತ ಗೋಡೆ ಕಂಬಂಗಳ ಹಾಯುತ್ತಂ ಮನೆಯ ಕೆಲದ ಮೂಲೆಯೊಳೆ ಪಟ್ಟಿರಲಾಕೆ ಬಂದುಪಚರಿಸಿ ಹರಿಸೇವೆಯಿನ್ನಯನಾಂಧಕಾರ ಪರಿಹರಂ ಮಾಳ್ಪೆನೆಂದು ಪೇಳಿ ಏಳು ಮಂದಿ ದಾಸರಂ ಬರಿಸಿ ನಾನಾ ಬಗೆ ಭಕ್ಷಂಗಳಂ ಮಾಡಿರಿಸಲಾ ಗೌಂಡಂ ಪರಮಾನ್ನದೊಳ್ ವಿಷಮನಿಕ್ಕಿ ಅರಿಯದಂತಿರಲವರೆಲ್ಲ ಪಾಯಸಮನುಂಡಲ್ಲಿಯೆ ಸಾಯ್ವುದುಮಾಕೆ ಅತ್ಯಂತ ಶೋಕಾಕುಲೆಯಾಗಿರಲದೇನೆಂದು ಗೌಂಡಂ ಕೇಳಲೇಳು ಜನ ದಾಸರು ಸತ್ತರೆನಲಾ ಕ್ರೂರಮಾನಸಂ ಕಲಿಸಿದ ಮೇರೆ ಊರ ಚಾವಡಿಯೊಳಿರ್ದ ಭೈರಾಗಿಯಂ ಕರೆದು ಪಾಯಸಮಿಲ್ಲದ ಭಕ್ಷಂಗಳೆಲ್ಲಮಂ ಸಂಪೂರ್ಣಗ್ರಾಸಮನಿಕ್ಕಿ ಒಂದು ಪಣಮಂ ಕೊಟ್ಟೊಂದು ದಾಶೀಭೂತಂ ಬಂದಿರಲದನೆನ್ನ ಪತಿ ಕೊಂದೊಡಾ ಪೆಣನಿಪ್ಪುದದಂ ಕೊಂಡು ಪೋಗಿ ಪೊಳಲ ಪೊರಗಿಕ್ಕಿ ಬಾಯೆಂದೊಂದು ಪೆಣಮಂ ನಾಮಾಂಕಿತಮಂ ತೋರಿದೊಡದಂ ಪೊತ್ತುಪೋಗಿ ಪಾಳಪ್ಪ ಪೂವಿನ ತೋಟದ ಪಾಳುಬಾವಿಯೊಳಿಕ್ಕಿ ಬರಲನಿತರೊಳೆ ಮತ್ತೊಂದು ತೋರಿ ಮೊದಲದೆ ಬಂದುದೆಂದು ಸಾಗಿಸಲಿಂತು ಏಳು ಪೆಣಂಗಳಂ ಪೊತ್ತುಪೋಗಿ ಪಾಳುಬಾವಿಯೊಳಿಕ್ಕೆ ಮುಳ್ಳು ಕಲ್ಲನಡಕಿ ಬಪ್ಪಿನ ಬೆಳಗಿನ ಕುರುಹುಮಾಗಲಾಗಳಾ ಊರ ಪೂವಾಡಿಗಂ ಬಂದು ಕಂಚಿವಾಳದ ಮರನೇರಿ ಪೂವಂ ಕೊಯ್ವನಂ ಕಂಡಾತನ ನಾಮಮನೀಕ್ಷಿಸಿ ಇದೇ ಪೆಣನೆಂದು ಆತನಂ ಪಿಡಿದು ಎಳೆಯಲಾತಂ ಯುದ್ಧಂಗೆಯ್ಯಲೀರ್ವರುಂ ಪೋರಟೆಯಿಂದಾ ಬಾವಿಯೊಳೆ ಬಿದ್ದು ಸತ್ತರೆಂಬುದರಿಂದೊರ್ವಳ ಪಾದರದ ಬಯಕೆಗೆ ಒಂಬತ್ತುಮಂದಿ ಸತ್ತರದರಿಂ ಸ್ತ್ರೀಯರ ಚರಿತಂ ಮಹಾಪಾತಕಮೆಂದಾ ರಾಜಪುತ್ರಂ

ವೃತ್ತ || ಕಾಯೋಯಂ ರಸರಕ್ತಮಾಂಸವಿಸರೋ ಮೇದೋಸ್ಥಿ ಮಜ್ಜಾಕುಲೋ
ಬೀಭತ್ಸೋ ವಿತತಾಂತ್ಯಧಾತು ರುಧಿರೋಶುಕ್ಲಾರ್ತವಾಭ್ಯಾಂ ಕ್ಷಯೀ
ಜೀವಕ್ಲೇಶವಶಾತ್ತಕಾಂತಿರಖಿಲಃ ಕ್ಲೇಶೈಕ ನೀಡೋ ಜಡಃ
ಸಂಗೋsನೇನ ಸತಾಂ ದುನೋತಿ ಹೃದಯಂ ಮೋದೋತ್ರ ಲಜ್ಜಾಸ್ಪದಮ್ ||

ಹುಳಿತ ಕಬ್ಬು ಮೆಲಲೊಳ್ಳಿತಲ್ಲ ಬಿತ್ತಿದರೆ ಫಲವಪ್ಪಂತೆ ದೇಹಮಂ ಬೋಗದೊಳು ಕೆಡಿಸದೆ ತಪಕ್ಕೊಡ್ಡಿ ಆಮುತ್ರಿಕಾಸುಖಮಂ ಪಡೆಯದೆ ಕಂಟಕಾರಿಗೆ ಕೆರಹಿನಟ್ಟೆಯಂ ಕೊಂಬಂತೆಯುಂ ಶಿರೋವ್ಯಥೆಯಿಂದ ತ್ರಿಪಲೆವ್ಯಥೆಗಡಿಸಾಯಿತೆಂಬಂತೆ ಗೃಹಸ್ಥಮಾರ್ಗಮೊಳ್ಳಿತೆಂದು ಮೋಕ್ಷದ ಬಟ್ಟೆಗೆ ಮುಳ್ಳಿನಂತಪ್ಪ ಸ್ತ್ರೀಯರಂ ಕೂಡಿ ನರಕಮೆಂಬ ಕುಳಿಯೊಳೆ ಬೀಳ್ವರದರಿಂ ತಪೋಮಾರ್ಗ ಮೋಕ್ಷಮಾರ್ಗ ಸಂಸಾರಂ ಅಡವೀಮಾರ್ಗಮದಂ ಸಾರೆ ಮನ್ಮಥನೆಂಬಾನೆಯಟ್ಟಲು ದೇಹಕೂಪದೊಳ್ಬಿರ್ದು ಮಾಯುಷ್ಯಮೆಂಬ ಬೇರಂ ಪಿಡಿದು ನೇಲುತ್ತಿರಲುಮಾ ಬೇರಂ ದಿವಾ ರಾತ್ರಿಯೆಂಬ ಶೀತಾಶೀತ ಮೂಷಿಕಂಗಳು ಕಡಿವುತ್ತಾ ಬರಲು ಕ್ರೋಧಾದಿ ಕಷಾಯಮೆಂಬ ನಾಲ್ಕು ದುಷ್ಟೋರಗಂಗಳು ಕಚ್ಚಿದೊಡಸಾತಾವೇದನೀಯಮಾದ ಇಷ್ಟವಿಯೋಗಾನಿಷ್ಟ ಸಂಯೋಗಂಗಳೆಂಬ ಬಹಳ ಜೀವಪುಳುಗಳು ಮುತ್ತಿ ಶರೀರಮೆಲ್ಲಮನೂರಿ ಬಾಧಿಸುತ್ತಿರಲಾ ನೋವಿಂಗಾರದೆ ಬಾಯ್ಬಿಟ್ಟರೊಂದು ಬಿಂದು ಮಧು ಬೀಳಲದಂ ಸವಿವಂತೆ ಸಂಸಾರಸುಖಮದರಿಂ ಭೋಗಿಗೆ ರೋಗಭಯ ಸುಖಕ್ಕೆ ಕ್ಷಯಭಯ ವಿತ್ತಕ್ಕಗ್ನಿ ರಾಜ ಚೋರ ಶತ್ರುಭಯ ಶರೀರಕ್ಕೆ ಯಮನ ಭಯಮಿಂತು ಸರ್ವಕ್ಕೂ ಭಯಮುಂಟು ವೈರಾಗ್ಯಮೇವಾಭಯಂ ಎಂಬುದರಿಂದೆನಗೆ ತಪಮೆ ಶರಣೆಂದಲ್ಲಿಂ ಮೆಲ್ಲನೆರ್ದು ಪೋಗಿ ತತ್ಪುರವರೋದ್ಯಾನದೊಳಿರ್ದ ಧರ್ಮರುಚಿಯತೀಶ್ವರರಿಂ ಸಂಸಾರದಿಂದಪ್ಪ ದುರ್ಗತಿಯುಂ ಧರ್ಮದಿಂದಪ್ಪ ಮುಕ್ತಿಯಂ ಕೇಳ್ದು ಸರ್ವಸಂಗ ಪರಿತ್ಯಾಗಂಗೆಯ್ದು ದೀಕ್ಷೆಯುಂ ಸ್ವೀಕರಿಸಿ ಪಂಚಮಹಾವ್ರತ ಪಂಚಸಮಿತಿ ಸ್ಪರ್ಶನೇಂದ್ರಿಯಾದಿ ಪಂಚೇಂದ್ರಿಯಜಯ ಸಮತಾದಿ ಷಡಾವಶ್ಯಕ ಕ್ರಿಯಾ ಕಛೋತ್ಪಾಟನಾಸ್ನಾನಾದಂತಕಷಣ ದಿಗಂಬರ ಭೂಶಯನಮೇಕಭುಕ್ತಸ್ಥಿತಿ ಭೋಜನಮೆಂದೀ ಇಪ್ಪತ್ತೆಂಟು ಮೂಲಗುಣಂಗಳಂ ಅನಶನಾದಿ ಬಾಹ್ಯತಪವಾರುಂ ಪ್ರಾಯಶ್ಚಿತ್ತಾದ್ಯಭ್ಯಂತರ ತಪಮಾರುಂ ಪಂಚಾಚಾರಮುಂ ದಶಧರ್ಮಮುಂ ಗುಪ್ತಿತ್ರಯಮೆಂಬೀ ಉತ್ತರ ಗುಣಗಳೊಳ್ಕೂಡಿ ಷಡ್ಜೀವಿ ನಿಕಾಯದೊಳ್ ಅತ್ಯಂತ ದಯಾರ್ದ್ರಹೃದಯನಾಗಿ ಗುರುಗಳಂ ಬೀಳ್ಕೊಂಡು ಏಕವಿಹಾರಿಯಾಗಿ ಗ್ರಾಮೇಕರಾತ್ರೇ ನಗರೇ ಪಂಚರಾತ್ರೇ ಅಟವ್ಯಂ ದಶರಾತ್ರೇ ಎಂದಾಗಮೋಕ್ತದಿಂ ವಿಹಾರಿಸುತ್ತಂ ನಾಗಪುರಿಯಂ ಪುಗುವಲ್ಲಿ ಸೂರ್ಯಾಸ್ತಮಯಮಾಗಲಾ ಪುರದ ಮುಂದಣಿಪ್ಪುದೊಂದು ಪಾಳ್ಮನೆಯೊಳೊಂದು ಕೋಣೆಯೊಳ್ನಿಯಮದಿಂ ಕಾರ್ಯೋತ್ಸರ್ಗದಿಂ ಪರಮಾತ್ಮಧ್ಯಾನಾರೂಢನಾಗಿಪ್ಪುದುಮಾ ಪುರದರಸಿನ ಮಾನಿನಿ ತಳವಾರನೊಳ್ಪುದುವಾಳುತ್ತಮಾ ಪಾಳ್ಮನೆಯೆ ಸಂಕೆತಾಗಾರಮಾಗೆ ಬಂದು ಕೂಡುತಿರ್ದಾ ರಾತ್ರಿಯೊಳುಪಪತಿ ಸಹಿತ ತನ್ನ ಮಗುವನ್ನೆತ್ತಿಕೊಂಡು ಬಂದು ಪಾಣ್ಬನೊಳ್ಕೊಡುವಾಗಳಾ ಕೂಸುಮತ್ಯಂತ ಚಂಡಿಯಂ ಮಾಡುತ್ತಿರೆ ಸೈರಿಸದೆ ಆ ಕೂಸಂ ಗೋಣಂ ಮುರಿದು ಕೆಲದೊಳಿರಿಸುವುದುಂ ತಳಾರನತಿಕುಪಿತನಾಗಿ ಇಂತಾ ಅನ್ಯಾಯಮುಂಟೆ ಎಂದಾಕೆಯ ಭಂಗಿಸುವುದುಂ ಈತನಿಂ ತನಗಪಾಯಂ ಬಪ್ಪುದೆಂದಾತನನ ನೇಕತೆರದಿಂದುಪಚರಿಸಿ ಅವನಂ ನಂಬಿಸಿ ಸುರತಮನೊಡರ್ಚಿ ನಿದ್ರೆಯೊಳಿರ್ದ ಸಮಯದೊಳಾತನ ಖಡ್ಗದಿಂದಲೆ ಅವನ ಕೊಲರಲಂ ಕೊಯ್ದು ಎರಡು ಪೆಣನಂ ಸಮೀಪದೊಳಿರ್ದ ಕೂಪದೊಳಿಕ್ಕಿ ಬಂದು ಪಟ್ಟಿರ್ದ ಸ್ಥಾನಮಂ ನೋಳ್ಪಾಗಲು ಬೆಳಗಿನ ಕುರುಹು ತೋರಲಾ ಮೂಲೆಯೊಳ್ಕಾಯೋತ್ಸರ್ಗದಿಂದಿರ್ದ ಯೋಗಿಯಂ ಕಂಡತಿಭಯಂಗೊಂಡೀತನನಿಂದೆನಗಪಾಯಂ ತಪ್ಪದೆಂದು ನನ್ನ ಬಲ್ಲಂದದೊಳಾತನನೋಡಂಬಡಿಸಿ ಕೂಡಿಕೊಳ್ವೆನೆಂದನೇಕ ತೆರದಿಂ ರತಿಕಲೆಯಂ ತೋರಲಾ ಯೋಗೀಶ್ವರಂ ಮಂದರದಂತಚಲಿತನಾಗಿ ಮೌನಗೊಂಡಿರಲಾ ಯತೀಂದ್ರನಂ ಕೊಲಲ್ಬಗೆದು ಖಡ್ಗಮನೆತ್ತಲು ಗೃಹದೇವತೆಗಳಾಕೆಯ ಕೈಯ ಸ್ತಂಭಿಸಿ ನಿಲಿಸಲನಿತರೊಳೆ ಸೂರ್ಯೋದಯಮಪ್ಪುದುಂ ಯೋಗೀಂದ್ರಂ ಯೋಗಮಂ ಬಿಟ್ಟು ಪೋಪುದುಮರಸಂಗದೆಲ್ಲಂ ತಿಳಿಯಲಾ ಪಾಣ್ಬೆಗಾಜ್ಞೆಯಂ ಮಾಡಿಸಿದನದರಿಂ ಸ್ತ್ರೀಯರು