ದೇವಚಂದ್ರನು ಕರ್ನಾಟಕದ ಸಂಸ್ಕೃತಿಯ ದೃಷ್ಟಿಯಿಂದ ಬಹು ಮಹತ್ವದ ಕವಿ. ಈತನ ಕಾವ್ಯ ‘ರಾಜಾವಳಿ ಕಥಾಸಾರ’ ಚರಿತ್ರೆ, ಐತಿಹ್ಯ, ದಂತಕತೆ, ಧರ್ಮ, ಮತ ಸಂಘರ್ಷ, ಸ್ಥಳೀಯತೆ – ಮುಂತಾದ ಹಿನ್ನೆಲೆಯಿಂದ ಕೂಡಿರುವ ಅಪೂರ್ವ ಗ್ರಂಥ. ಈ ಕೃತಿಯನ್ನು ವಿಜ್ಞಾನಿಗಳೂ ಕೂಡಿ ಅಧ್ಯಯನಕ್ಕೊಳಪಡಿಸಬೇಕಾಗಿದೆ. ಈ ಗ್ರಂಥದ ಅಧ್ಯಯನ ಈಚೆಗೆ ಹೆಚ್ಚಾಗಿರುವುದು ಒಂದು ವಿಶೇಷ. ಇದು ನಗಣ್ಯ ಕೃತಿ ಎಂಬ ಅಪಖ್ಯಾತಿಗೆ ಹಿಂದೆ ಒಳಗಾಗಿತ್ತು, ಆದರೆ ಹದಿನೆಂಟು – ಹತ್ತೊಂಭತ್ತನೆಯ ಶತಮಾನದ ಚಾರಿತ್ರಿಕ ನೆಲೆಗಳನ್ನು ತಿಳಿಯಲು ಯತ್ನಿಸುತ್ತಿರುವ ಹೊತ್ತಿನಲ್ಲೆ ‘ರಾಜಾವಳಿ ಕಥಾಸಾರ’ವನ್ನು ನಮ್ಮ ಸಾಂಸ್ಕೃತಿಕ ಅಧ್ಯಯನಕ್ಕೆ ಪೂರಕವಾಗಿ ಬಳಸಿಕೊಳ್ಳುತ್ತಿದ್ದೇವೆ.

ದೇವಚಂದ್ರನು ಜೈನಮತಕ್ಕೆ ಸೇರಿದವನು. ಆದರೆ, ವೈದಿಕ ಹಾಗೂ ವೈದಿಕೇತರ ದರ್ಶನಗಳ ಬಗೆಗೆ ವಿರೋಧಿ ನೆಲೆಯಲ್ಲೆ ಅವನು ಸಂಚರಿಸುತ್ತಾನೆ. ಇದು ಕಾಲದ ಸಂದರ್ಭದ ವ್ಯಾಖ್ಯಾನಕ್ಕೆ ಹೊಸ ಪರಿವೇಶಗಳನ್ನೂ ಹೊಸ ತಂತುಗಳನ್ನೂ ಜೋಡಿಸುತ್ತದೆ. ದೇವಚಂದ್ರ ಹಲವು ಜ್ಞಾನವಿವರಗಳನ್ನು ಮೈಮೇಲೆ ಹಾಕಿಕೊಂಡು ಮುನ್ನಡೆಸುತ್ತಾನೆ. ಅವನ ಬಡತನ ಇನ್ನೊಂದು ಬಗೆಯಾಗಿ ಅವನನ್ನು ತುಂಬಾ ಕಾಡಿದೆ.

ದೇವಚಂದ್ರನ ಬಗೆಗೆ ಸಾಂಸ್ಕೃತಿಕ ದೃಷ್ಟಿಯಿಂದ ವ್ಯಾಪಕವಾಗಿ ಹಾಗೂ ಬಹು ಶಾಸ್ತ್ರೀಯ ನೆಲೆಯಿಂದ ಅಧ್ಯಯನ ಮಾಡಬೇಕಾಗಿದೆ. ಕನ್ನಡ ವಿಶ್ವವಿದ್ಯಾಲಯ ನಡೆಸಿದ ‘ರಾಜಾವಳಿ: ಸಾಂಸ್ಕೃತಿ ಮುಖಾಮುಖಿ’ ಎಂಬ ವಿಚಾರ ಸಂಕಿರಣದ ಪುಸ್ತಕದಲ್ಲಿರುವ ಲೇಖನಗಳು ಈ ದಿಕ್ಕಿನಲ್ಲಿ ವಿಶೇಷ ಚರ್ಚೆಗಳನ್ನು ಮಾಡಿವೆ. ಈ ಚರ್ಚೆಗಳು ಸ್ಥೂಲವೂ ಅನ್ಯ ಜ್ಞಾನ ಶಿಸ್ತುಗಳ ನೆರವಿನಲ್ಲಿದ್ದರೂ ಸ್ಥಳೀಯ ನಂಬಿಕೆ, ಪರಂಪರಾಗತ ಜ್ಞಾನದ ನೆರವಿನಿಂದ ಇನ್ನಷ್ಟು ಚರ್ಚೆಗೆ ತೊಡಗಿಕೊಳ್ಳಲು ಪೂರ್ವ ಸೂಚನೆಯನ್ನು ನೀಡುತ್ತಿವೆ. ಅಂಥ ಸಾಧ್ಯತೆಗಳನ್ನು ನಮ್ಮ ಮುಂದಿನ ತಲೆಮಾರಿನ ಯುವ ವಿದ್ವಾಂಸರು ಮುನ್ನಡೆಸಬೇಕಾಗಿದೆ.

ದೇವಚಂದ್ರನ ಕೃತಿಯನ್ನು ೧೯೮೮ ರಲ್ಲಿ ಹಿರಿಯ ವಿದ್ವಾಂಸರಾದ ಬಿ.ಎಸ್. ಸಣ್ಣಯ್ಯ ಅವರು ಸಂಪಾದಿಸಿಕೊಟ್ಟರು. ಕಳೆದ ಇಪ್ಪತ್ತು ವರ್ಷಗಳಿಂದ ಅದು ಹಲವು ಬಗೆಯ ಅಧ್ಯಯನಗಳಿಗೆ ಒಳಗಾಗಿದೆ. ನಾನು, ಅವರು ಸಂಪಾದಿಸಿರುವ ಪಠ್ಯವನ್ನು ಬಳಸಿಕೊಂಡಿದ್ದೇನೆ. ಆದರೆ, ಪಠ್ಯಕ್ಕೆ ಆಧಾರವಾಗಿದ್ದ ಕ, ಗ, ಹಸ್ತಪ್ರತಿಯನ್ನು ಮರಳಿ ಪರಿಶೀಲಿಸಿದ್ದೇನೆ. ನನಗೆ ಒಪ್ಪಿತವಾದ ರೀತಿಯಲ್ಲಿ ಕೆಲವೆಡೆ ಸಣ್ಣಪುಟ್ಟ ಮಾರ್ಪಾಟುಗಳನ್ನು ಮಾಡಿಕೊಂಡಿದ್ದೇನೆ. ಅವು ಅತಿ ನಗಣ್ಯವಾಗಿವೆಯೆಂದು ಹೇಳಿದರೆ ಸಾಕು. ಅತಿ ಹೆಚ್ಚಿನ ಮಾರ್ಪಾಡಿನ ಕಡೆಗೆ ನಾನು ಹೋಗಿಲ್ಲ. ಪ್ರಸ್ತುತ ಸಂಪುಟದ ಪಠ್ಯವು ಬಹುವಾಗಿ ಬಿ.ಎಸ್. ಸಣ್ಣಯ್ಯ ಅವರು ಸಂಪಾದಿಸಿದ ಪಠ್ಯಕ್ಕೆ ಹೆಚ್ಚು ಋಣಿಯಾಗಿದೆ.

ಕಳೆದ ಮೂರು ತಿಂಗಳ ನನ್ನ ಅನಾರೋಗ್ಯಸ್ಥಿತಿಯಲ್ಲಿ ಈ ಕೃತಿಗೆ ಸುದೀರ್ಘವೂ ಸಮಗ್ರವೂ ಆದ ಪ್ರಸ್ತಾವನೆ ಬರೆಯಬೇಕೆಂಬ ನನ್ನ ಅಪೇಕ್ಷೆಯನ್ನು ನಿಜಗೊಳಿಸಲು ನನ್ನಿಂತ ಆಗಲಿಲ್ಲ. ಆದ್ದರಿಂದ ‘ರಾಜಾವಳಿ ಕಥಾಸಾರ’ವನ್ನು ಅಧ್ಯಯನ ಮಾಡಿದ ವಿದ್ವಾಂಸರ ಚರ್ಚೆಗಳನ್ನೂ ಅಭಿಪ್ರಾಯಗಳನ್ನೂ, ಬಳಸಿಕೊಂಡು ‘ಪ್ರಸ್ತಾವನೆಯ ನುಡಿ ತೋರಣ’ವನ್ನು ನೆಯ್ದಿದ್ದೇನೆ. ಇಲ್ಲಿ ಬಳಸಿಕೊಂಡಿರುವ ಎಲ್ಲ ಲೇಖಕರಿಗೂ ನಾನು ತುಂಬಾ ಋಣಿಯಾಗಿದ್ದೇನೆ. ಈ ನುಡಿ ತೋರಣದ ಸೂಚನೆ ನೀಡಿದವರು ಪ್ರಸಾರಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರು. ಇಲ್ಲಿನ ಬಹುಪಾಲು ಕೆಲಸಗಳು ಅವರ ನೆರವಿನಿಂದ ನಡೆದಿವೆ. ಅವರ ಅವ್ಯಾಜ ಪ್ರೀತಿಗೆ ನನ್ನ ಕೃತಜ್ಞತೆಗಳು. ಈ ಪಠ್ಯವನ್ನು ಸಂಪಾದಿಸಿಕೊಡಲು ಕೇಳಿ, ಆಗಾಗ್ಗೆ ನನ್ನ ಯೋಗಕ್ಷೇಮ ವಿಚಾರಿಸಿಕೊಂಡ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಅವರಿಗೆ ನನ್ನ ತುಂಬು ಹೃದಯದ ವಂದನೆಗಳು. ಇದನ್ನು ಅಕ್ಷರ ಸಂಯೋಜನೆ ಮಾಡಿಕೊಟ್ಟು, ಮುದ್ರಿಸಿಕೊಟ್ಟ ರಾಜೇಂದ್ರ ಪ್ರಿಂಟರ್ಸ್‌ಅಂಡ್ ಪಬ್ಲಿಷರ್ಸ್ ಸಂಸ್ಥೆಯ ಒಡೆಯರಾದ ಶ್ರೀ ಡಿ. ಎನ್. ಲೋಕಪ್ಪ ಇವರಿಗೂ, ಇವರ ಮುದ್ರಣಾಲಯದ ಸಿಬ್ಬಂದಿಗಳೂ ನಾನು ವಂದನೆಗಳನ್ನು ಸಲ್ಲಿಸುತ್ತೇನೆ.

ಎಚ್. ಜೆ. ಲಕ್ಕಪ್ಪಗೌಡ