ಅವನ ಬಿರುದಾವಲಿಯೆಂತೆಂದೊಡೆ ಸ್ವಸ್ತಿ ಸಮಧಿಗತ ಪಂಚಮಹಾಶಬ್ದ ಮಹಾಮಂಡಳೇಶ್ವರಂ ದ್ವಾರಾವತೀಪುರವರಾಧೀಶ್ವರಂ ಯಾದವ ಕುಳಾಂಬರದ್ಯುಮಣಿ ಸಮ್ಯಕ್ತ್ವಚೂಡಾಮಣಿ ಮಲೆಪರೊಳ್ಗಂಡಾದ್ಯನೇಕ ನಾಮಾವಳೀಸಮಲಂಕೃತರಪ್ಪ ಶ್ರೀಮದ್ವುಜಬಳವೀರ ಗಂಗ ವಿಷ್ಣುವರ್ಧನ ಬೆಟ್ಟಿಗೆ ಹೊಯ್ಸಳದೇವರ್ ಗಂಗವಾಡಿ ತೊಂಬತ್ತಾರುಸಾಸಿರ ಗಡಿಕೊಂಗೊಳನಾಗಿ ಏಕಚ್ಛತ್ರಚ್ಛಾಯೆಯಿಂ ತಳಕಾಡು ಕೊಳಲಾ ಪರದೊಳಮಿರ್ಪಂದು ಅರಸನ ದಳಪತಿ ಪರಮ ಸಮ್ಯಗ್ದೃಷ್ಟಿಯಾತನ ಗುರುಗಳ ನ್ವಯಮೆಂತೆಂದೊಡೆ

ವೃತ್ತ ||  ಶ್ರೀಮತ್ ಸ್ವಾಮಿಸಮಂತಭದ್ರಮುನಿಪೋ ದೇವಾಕಳಂಕಸ್ತುತಃ
ಶ್ರೀಪೂಜ್ಯಾಂಘ್ರೀರುದಾತ್ತವೃತ್ತಿವಿಳಯ ಶ್ರೀವಾದಿರಾಜಾಂಬುಧೌ |
ಆಚಾರ್ಯೋದ್ರವಿಳಾನ್ವಯೋ ಜಿನಮುನಿಶ್ರೀಮಲ್ಲಿ ಷೇಣವ್ರತ್ತೀ
ಶ್ರೀಚೋಳಃ ಪರಿಪಾಲಿತಾಖಿಲವ್ರತಿಸಾನಂತವೀರ್ಯೇ ಕ್ರಮಾತ್ ||

ಅವರೊಳಜಿತಸೇನರೆ ಗುರುಗಳಾಗೆ ಮಹಾಮಾತ್ಯಕುಲಜಂ ಸಕಳ ಶಾಸನ ಚಕ್ರವರ್ತಿ ಲೋಕತ್ರಯವರ್ತಿ ಪುಣಿಸಮ್ಹಿ ಚಮೂಪನಾತಂಗೆ ಶುದ್ಧಚರಿತ್ರ ಪರಿತ್ರ ಸೋವಲೆ ಸತಿಯವರ್ಗೆ ಚಾವಣಮಂತ್ರಿಯುಂ ಕೊರಪಚಮೂಪತಿಯುಂ ನಾಗದೇವ ಕೋಶಾಧ್ಯಕ್ಷನುಮೆಂಬರಾದರ್. ಚಾವಣಚಮೂಪಂಗೆ ಪುಣಿಸಮಯ್ಯನುಂ ಬೆಟ್ಟಿಗನುಂ ಸಂಧಿವಿಗ್ರಹಿ ಚಾಮರಾಜಂ

ಪಿರಿಯ ತೊರೆಯಿಂದ ಗಂಗಾ
ಪರಯಂತಂ ಗಂಗವಾಡಿಯಿಂದಂ ತೊಂಬ
ತ್ತರುಸಾಸಿರ ಬಸದಿಯಳಂ
ಕರಿಸಿದಪಂ ಪೊಣಿಸರಾಜದಂಡಾಧೀಶಂ
.

ಅವರೊಳ್ ನಿತ್ಯನೈಮಿತ್ತಿಕೋತ್ಸವಂಗಳಂ ಮಾಡಿಸುತ್ತಿರ್ದಾಗ್ಯೂ ಅರಿಕಂಠಾರದೊಳ್ ತ್ರಿಕೂಟಮಪ್ಪ ಬಸದಿಯಂ ನೂತನಮಾಗೆ ನಿರ್ಮಿಸಿ ಶಕವರುಷ ಸಾವಿರದ ಮೂವತ್ತೋಂಬತ್ತ (೧೦೩೯)ನೆಯ ದುರ್ಮುಖಿಸಂವತ್ಸರದ ಜ್ಯೇಷ್ಠ ಬಹುಳ ೧ ಆರ್ಕವಾರ ತುಲಾರಾಶಿ ಬೃಹಸ್ಪತಿಯಂದು ಪ್ರತಿಷ್ಠೆ ಮಾಡಿಸಿ ಗ್ರಾಮಕ್ಷೇತ್ರಮಂ ಕೊಟ್ಟು ಸುಖಮಿರ್ದನತ್ತಲಾ ವಿಷ್ಣುಭೂಪಾಲಂ ಶ್ರೀಮನ್ಮಹಾಮಂಡಳೇಶ್ವರಂ ದ್ವಾರಾವತೀಶ್ವರ ಯಾದವಕುಳಾಂಬರದ್ಯುಮಣಿ ಮಂಡಳಿಕಚೂಡಾಮಣಿ ಶಶಕಪುರ ವಾಸಂತಿಕಾದೇವಿಲಬ್ದ ವರಪ್ರಸಾದಂ ದರದಳ ಮಲ್ಲಿಕಾಮೋದಂ ದರಹಸಿತ ಶರದುದಿತ ತುಹಿನಕರಂ ಶರನಿಕರ ದರಹಸನ ಸುಚಿರತಿಶಯ ಶಂಕಾ ಶ್ರೀವಿಳಾಸಂ ನಿರತಿಶಯ ನಿಖಳವಿದ್ಯಾವಿಳಾಸಂ ವಿನಯ ದಹಿತ ವಹಿಲ ಚಂಡಾಲಿಡಾ ನೂತ್ಮರತ್ನರಶ್ಮಿ ಜಳ ಜಟಿತ ಚರಣನಖಕಿರಣಂ ಚತುಸ್ಸಮಯ ಸಮುದ್ಧರಣಂ ಕರ ಕರಾಳ ಕರವಾಳ ಪ್ರಭಾಪ್ರಚಳಿತ ದಿಶಾಮಂಡಳಂ ವೀರಲಲಕ್ಷೀರತ್ನಕುಂಡಳಂ ಹಿರಣ್ಯಗರ್ಭಕುಲ ಪುರುಷಸ್ವರದ ವಿಶ್ವಚಕ್ರಕಲ್ಪವೃಕ್ಷ ಪ್ರಮುಖ ಮಖ ಶರಮುಖಂ ರಾಜವಿದ್ಯಾ ವಿಳಾಸಿನೀಸಖಂ ಸ್ಥಿರೀಕೃತ ಯಾದವಸಮುದ್ರಿತ ವಿಷ್ಣುಸಮುದ್ರೋತ್ತುಂಗಂ ತರುಗಮ್ಮುಚ್ಚೋದಿತ ದಿಶಾಕುಂಜರಂ ಶರಣಾಗತವಜ್ರ ಅಮಳಕಪಳಕುಳಿತ ಮುಕ್ತಾಂತಾ ಲಕ್ಷ್ಮಿಲಕ್ಷಿತವಕ್ಷ ವಿಬುಧಜನಕಲ್ಪವೃಕ್ಷಂ ವಿಜಯಘಟೋತ್ತರಳ ಮಾನಸಂಪದಂ ದಿಪುನೃಪಾಲಲಯಸಮಯಕ್ಷುಭಿತ ವಾರ್ಧಿವೀಚೀಚಯೋಚ್ಚಳಿತ ಜಾತ್ಯತ್ವಶಾರವಹಿಸೂರಿತ ದಿಶಾಪುಂಜಂ ಶಸ್ತ್ರೋದಾತ್ತ ಪುಣ್ಯಪುಂಜಂ ಇಂದು ಮಂದಾಕಿನೀಚ್ಛಳೋದಾತ್ತ ಗುಣಯುಕ್ತಂ ಗಂಡಗಿರಿವಾದಂ ಚಂಡಪಾಂಡ್ಯಕುಲಾಗ್ನಿಜಲಂ ಜಗದೇಕ ಜಳಾನಿಳಂ ಚಕ್ರಕೂಟಾಧೀಶ್ವರ ಸೋಮೇಶ್ವರಮದಮರ್ದನಂ ಕುಳುನೃಪಾಸುರ ಜನಾರ್ದನಂ ರಾಜಪ್ರಭಾವಂ ಕಂದನವನದಡಂಭೋಗಿರಿವಳಕಾನಳಂ ಕರವಾಳತಾರಕ ಮಯೂರವಾಹನಂ ನರಸಿಂಹಮ್ಮೋಹನಂ ಇರುಂಗೊಳಕುಳಜಳನಿಧಿ ಕುಂಭಸಂಭವಂ ದಳಿತ ತದೀಯ ಮರುನ್ನತ ಮಧ್ಯೆಯರ್ ಮನೋಹರತರ ಕಾಂಚಿಯರ್ಧೃತ ಜಯಕೇಶಿ ಮೇಘಾನಿಳನೆಂದಿವು ಮೊದಲಾದ ಬಿರುದಂಗಳಿಂ ಜನಂಗಳುಲಿಯುತ್ತಿರೆ

ಚಂ ||     ನಿರುಪಯ ಲಕ್ಷಣಾಂಗಿ [ರುಚಿಕುಂತಳೆ…………………………………. ಸರಸತಿ
ಸದ್ವಿಳಾನ್ವಿತೆಯರುಂ …………………………………………………..ಕೆ]
ಸ್ಫುರದುರುಕೀರ್ತಿವಾಗ್ಮ ಧುರೆಯರ್ ಸ್ಥಿರವಾಗಿರೆ ತನ್ನ ತೋಳೊಳೊ
ಲ್ಲಿರಿಸಿದ ನೂರ್ವರಂಗನೆಯ[ರಪ್ರತಿಮಂ] ವಿಭು ವಿಷ್ಣುಭೂಭುಜಂ

ಇಂತು ಇಷ್ಟ ಭೋಗಕಾಮಸುಖಮನನುಭವಿಸುತ್ತಿಪ್ಪು ದುಮಾತನ ಪಿರಿಯ ದಂಡನಾಯಕಂ ನಿರಂತರ ಭೋಗಾನುಭಾವಿ ಜಿನರಾಜರಾಜಿಪಾದ ರಾಜೀವ ಪೂಜಾದುರಂಧರಂ ಐಶ್ವರ್ಯಮಂದಿರ ಕೌಂಡಿನೀಗೋತ್ರಮಿತ್ರಂ ವಿಶುದ್ಧೋಭಯಾನ್ವಯ ಕರ್ಣಾಟಧರಾಮರೋತ್ತಂ ಸದಾನ ಶ್ರೇಯಾಂಸ ಯಶಃಪ್ರಕಾಶಂ ಮಂತ್ರವಿದ್ಯಾವಿಕಾಸ ಚಾರಿತ್ರ ಲಕ್ಷೀಕರ್ಣಪೂರದದ್ಧೃತ ಸತ್ಯವಾಕ್ಯ ಮಂತ್ರಿಮಾಣಿಕ್ಯ ಜಿನಧರ್ಮರಕ್ಷಾಮಣಿ ಸಮ್ಯಕ್ತ್ವಚೂಡಾಮಣಿ ಪದ್ಮಾವತೀದೇವಿ ವರಪ್ರಸಾದಕಂ ಸಕಲ ಜನರಕ್ಷಕಂ ಜಯಾಂಗನಾವಲ್ಲಭಂ ಭಯಲೋಭ ದುರ್ಲಭ ವೀರಭಟ ಲಾಟ ಪಟ್ಟದ್ರೋಹ ಘರಟ್ಟ ಅಪ್ರತಿಮತೇಜನಪ್ಪ ಗಂಗರಾಜನೆಂಬೊಂ ಶ್ರೀಗಂಗವಾಡೀ ತೊಂಬಾತ್ತಾರು. ಸಾಸಿರ ಕೊಪಣದರುವತ್ತು ಸಾಸಿರದಧಿಕಾರಿಯಾ ಗಂಗಾರಾಜನೆಂಬೊಂ.

ಆ ಗಂಗಭೂಪತಿಗಂ
ನಾಗಲಾದೇವಿಲೆಗಮುದಿಸಿದಂ ಸತ್ಪುತ್ರಂ
ಶೋಭಿಸೆ ಸದ್ಗುಣನಿಧಿಯುಂ
(?)
ಭೋಗಪುರಂದರನೆನಿಪ್ಪನಷ್ಟಂ ಬೊಪ್ಪಂ

ಆ ವೀರಲಕ್ಷೀಲೋಲವಿತರಣಶೀಲನ ಗುರು ಮಲಧಾರಿದೇವರ್ ಪೂರ್ವ ಸದ್ಗುಣಮುನಿವರಶಿಷ್ಯರಾದ್ಧಾಂತ ಸುರಾಂಬುಧಿಪಾರಗ ಶುಭಚಂದ್ರರ್ ಜಿನಧರ್ಮ ವನಧಿ ಪರಿವರ್ದನ ಗಂಗಮಂಡಲಾಚಾರ್ಯ ಪಾವನಚರಿತ ಪ್ರಭಾಚಂದ್ರಸಿದ್ಧಾಂತಿ ದೇವರ್ ಬೊಪ್ಪರಾಜನ ದೇವತಾರ್ಚನಾಗುರುವಾಗೆಯಾ ದೋರಸಮುದ್ರಮಧ್ಯದೊಳ್ ಗಂಗರಾಜಂಗೆ ಪರೋಕ್ಷವಿನಯವಾಗಿ ಸಾಸಿರದೈವತ್ತೈದನೆಯ (೧೦೫೫) ಪ್ರಮಾದೀಚ ಸಂವತ್ಸರದ ಮಾಘ ಪೂರ್ವ ಪಂಚಮಿಯೊಳ್ ಮಹಾಚೈತ್ಯಾಲಯಮನೆತ್ತಿಸಿ ನಯಕೀರ್ತಿ ಸಿದ್ಧಾಂತಚಕ್ರವರ್ತಿಗಳೆ ಪ್ರತಿಷ್ಠಾಚಾರ್ಯರಾಗೆ ದ್ರೋಹಘರಟ್ಟ ಜಿನಾಲಯ ಪ್ರತಿಷ್ಠಾನಂತರಂ ದೇವರ್ ಕೊಡೆಯನಿಂದ್ರರ್ ಕೊಂಡುಪೋಗಿ ವಿಷ್ಣುನೃಪಾಲಂಗೆ ಬಂಕಾಪುರದೊಳ್ ಕೊಡುವ ಸಮಯದೊಳ್ ಸಮರಸಮಸಣನೆಂಬನಂ ಜಯಿಸಿ ಸಾಮ್ರಾಜ್ಯಮಂ ಕೊಂಬುದುಮಾತನ ಮಹಾದೇವಿ ಲಕ್ಷ್ಮೀದೇವಿಗೆ ಪುತ್ರೋತ್ಸವಮಾಗಲ್ ವಿಜಯೋತ್ಸವ ಪುತ್ರೋತ್ಸವದಿಂ ಸಂತುಷ್ಟನಾಗಿರ್ದ ವಿಷ್ಣುರಾಜಂಗೆ ಪಾರ್ಶ್ವಜಿನಪ್ರತಿಷ್ಠಾ ಗಂಧೋದಕಶೇಷೆಯಂ ಕುಡೆ ಇದಿರೆಳ್ದು ನಮಸ್ಕಾರದಿಂ ಗಂಧೋಧಕಶೇಷೆಯಂ ಭಕ್ರಿಯಿಂ ಕೊಂಡು ಸಂತೋಷದಿಂ ತನಗೆ ರಾಜ್ಯವಿಜಯಮಾದುದರಿಂದಾ ಜಿನಪ್ರತಿಮೆಗೆ ವಿಜಯಪಾರ್ಶ್ವದೇವರೆಂದುಂ ಪುತ್ರಂಗೆ ಶ್ರೀವಿಜಯ ನಾರಸಿಂಹನೆಂದುಂ ಪೆಸರಿಟ್ಟು ಕುಮಾರಂಗಭ್ಯುದಯನಿಮಿತ್ತಂ ಶ್ರೀವಿಜಯಪಾರ್ಶ್ವದೇವಂಗೆ ಚತುರ್ವಿಂಶತಿತೀರ್ಥಂಕರನಾಗತ ತ್ರಿಕಾಲಪೂಜೋಪಕರಣಾದಿಗಳ ಸಂಧಿವಾಡ ಜಾವಗಲ್ಲು ಮೊದಲಾದ ಗ್ರಾಮ ಸೀಮೆಗಳಂ ಶಾಸನದತ್ತಮಾಗೆ ಸಾಸಿರ ನೊಳಂಬವಾಡಿ ಮೂವತ್ತಿರ್ಚ್ಛಾಸಿರ ಬನವಾಸಿ ಪನ್ನಿರ್ಚ್ಚಾಸಿರ ತೊಂಡನೂರು ಕೊಂಗಳ ನಾಡ ಮೆರೆವ ಆರುನೂರು ನಾಡೊಳ್ ದುಷ್ಟನಿಗ್ರಹ ಶಿಷ್ಟಪಾಲನೆಯಿಂದೇಕಚ್ಛತ್ರ ಛಾಯೆಂಯಿಂ ತಳಕಾಡ ಬೀಡಿನಲ್ಲು ಬಂಕಾಪುರದ ಬೀಡಿನಲ್ಲು ಸುಖಂದಿಪ್ಪುದುಂ ಶ್ರೀಮನ್ಮಹಾಪ್ರಧಾನ ಸಂಧಿವಿಗ್ರಹಿ ದಂಡನಾಯಕ ಭಟ್ಟಮಯ್ಯನಾತನನುಜಂ ಸಮಸ್ತ ದೇಶಾಧಿಕಾರಿ ಭಾವರಾಜನಾತನ ಗುರುಸಂತಾನಂ

ಪಶ್ಚಿಮ ತೀರ್ಥದೊಳ್ ಗೌತಮರ ಸಂತಾನದೊಳ್ ಸಪ್ತರ್ಧಿಸಂಪನ್ನರುಂ ಶ್ರುತಕೇವಲಿಗಳ್ ತದನ್ವಯದೊಳ್ ಭೂತಬಲಿ ಪುಷ್ಟದಂತ ಭಟ್ಟಾರಕ ಏಕಸಂಧಿ ಸಮುತಿಭಟ್ಟಾರಕರಿಂದನಂತರ ಶ್ರೀವಾದಿರಾಜ ಶಾಂತಿಷೇಣ ಜಿನಸೇನ ಮಲ್ಲಿಷೇಣ ಮಲಧಾರಿದೇವರಿಂ ಮತ್ತಮಕಳಂಕ ಸಿಂಹಾಸನಮನಳಂಕರಿಸಿದ ಶ್ರೀಪಾಲ ತ್ರೈವಿಧ್ಯದೇವರಿಂ ಅನಂತವೀರ್ಯರಿಂ ವರ್ಧಮಾನದೇವರಿಂ ಗುಣಧರ ತ್ರೈವಿಧ್ಯ ದೇವರಿಂದಿತು ತನಗೆ ಗುರುಗಳಪ್ಪ ದ್ರವಿಳಾನ್ವಯದ ಪೆಸರುಮಂ ತನ್ನಾಳ್ದನ ಪೆಸರುಮಂ ತನ್ನನ್ವಯದ ಪೆಸರುಮಂನೆಗಳ್ದ ವೀರಮಹಾನುಭಾವಂ ಭಟ್ಟಿಮಯ್ಯಂ ಗಂಗಾನ್ವಯ ಗಗನದಿನೇಶಪ್ಪ ಶಿವರಾಜನರಿಸಿ ಗಂಗಾದೇವಿಯರ ಪುತ್ರ ಮಾರವೀರಂಗೆ ಕಮಳಬ್ಬೆಯವರ್ಗೆ ಭಟ್ಟಿಮಯ್ಯ ಭಾವರಸನುಮೆಂಬ ಶೌರ್ಯವೀರ್ಯ ಪರಾಕ್ರಮಮುಳ್ಳರ್ ಬೆಳುಕೆರೆಯೊಳ್ ತ್ರಿಕೂಟ ಜಿನಾಲಯಮನೆತ್ತಿಸೆ ವಿಷ್ಣುಭೂಪಾಳಂ ಕೊಳಲಾ ಪುರದಿಂ ಬಂದು ಚೈತ್ಯಾಲಯಮಂ ನೋಡಿ ಆದೀಶ್ವರ ಶಾಂತೀಶ್ವರ ಪಾರ್ಶ್ವೇಶ್ವರಪ್ರತಿಮೆಗೆರಗಿ ಚಕ್ರೇಶ್ವರೀಮಹಾದೇವಿ ಪ್ರತಿಮೆಗಂ ಶಕವರುಷ ಸಾವಿರದರುವತ್ತ(೧೦೬೦) ನೆಯ ಸಂದ ಪಿಂಗಳ ಸಂವತ್ಸರ ಆಶ್ವೀಜ ಶುದ್ಧ ಏಕಾದಶಿ ಬುಧವಾರ ದೇವರ ಪ್ರತಿಷ್ಠೆಯಂ ಮಾಡಿಸಿ ಆರೆಧವಳನಾಡ ಬೆಳುಕೆರೆಯ ಗ್ರಾಮ ಗದ್ದಬೆದ್ದಲು ಮೊದಲಾಗೆ ಶಾಸನದತ್ತಮಾಗೆ ಕೊಟ್ಟನಂತು ಮತ್ತಂ ಶಕವರುಷ ಸಾವಿರದರುತ್ತವನೆಯ (೧೦೬೦) ಪಿಂಗಳ ಸಂವತ್ಸರ ಪುಷ್ಯ ಶುದ್ಧ ದಶಮಿ ಆದಿತ್ಯವಾರ ಮರಿಯಾನೆ ದಂಡನಾಯಕನ ಪುತ್ರದ್ರೋಹಘರಟ್ಟ ಗಂಗಪ್ಪಭಾವರಸ ದಂಡನಾಯಕರ್ ಆತುಳ ಪುರುಷ ಮಹಾದಾನ ಉತ್ತಮ ನೆಲೆಯೂರು ಸಿಂಧಗೆರೆಯೊಳ್ ಮಾಡಿಸಿದ ಜಿನಾಲಯಕ್ಕೆ ಹೊಯ್ಸಳದೇವರ್ ಧಾರಾಪೂರ್ವಕ ಶ್ರವಣಾಂಗಿಹಳ್ಳಿಯ ಸೀಮೆಯೆಲ್ಲಮಂ ಕುಡಲ್ ಭರತದಂಡನಾಯಕಂ ಮಾಣಿಕಭಂಡಾರಿಗಳುಂ ಪ್ರಾಣಾಧಿಕಾರಿಗಳಾಗಿ ದಡಿಗದಕೆರೆ ಬಗ್ಗವಳ್ಳಿಯ ಪ್ರಭುತ್ವಮಂ ಪಡೆದು ತಮ್ಮನ್ವಯದಿಂ ಬಂದ ಸಿಂಧಗೆರೆಯೊಳಿರೆ ಇತ್ತಲ್ ನಾರಸಿಂಹಮಹೀಮನಾಥಂಗೆ ಶ್ರೀವೀರಬಲ್ಲಾಳಂ ಪುಟ್ಟಿ

|| ಉದಯಂಗೆಯ್ದು ವಿರೋದಿ ಭೂಭುಜ ಪುರಸ್ಸಂತಾನಮಂ ತೂಳ್ದಿ ತ
ನ್ನದಟಿಂ ಸಾಧಿಸಿ ವಿಶ್ವಭೂವಳಿಯಮಂ ಸಾಮ್ರಾಜ್ಯಲಕ್ಷೀ ಮನೋ
ಮುದಮಂ ತಾಳ್ದು ಚಮೂಪಮಂತ್ರಿ ನಿಜವರ್ಗಶ್ರೀ ದಯಾಂಭೋತ್ಸಹಾ
ಭ್ಯದಯಂಬೆತ್ತನತಿಪ್ರತಾಪ ದಿನಪಂ ಬಲ್ಲಾಳಭೂಪಾಳಕಂ

ಅಂತಸಹಾಯಶೂರ ಶನಿವಾರಸಿಧ್ದಿ ಗಿರಿದುರ್ಗಮಲ್ಲ ಬಲ್ಲಾಳ ಸಮಧಿಗತ ಪಂಚಾಮಹಾಶಬ್ದ ಮಹಾಮಂಡಳೇಶ್ವರ ದ್ವಾರಾವತೀಪುರಾಧೀಶಂ ಯದುಕುಲತಿಲಕ ವಸುಧಾಕರ ಚಕ್ರಕೂಟಕೋಟಿ ವಿವಿಧ ವಿಧಾನ ರಿಪುಜಲಧಿಬಡಬಾನಳ ಶೌರ್ಯ ಮೃಗರಾಜಕುಲಪಾಲನವವಜ್ರದಂಡ ಮಲೆಪರೊಳ್ಗಂಡ ವಿವಿಧ ಯಾಜಕಜನೈಂಚಿತಾ ಮಣಿ ಸಮ್ಯಕ್ತ್ಷಚೂಡಾಮಣಿ ವಿವೇಕ ಕಮಲಾಸನಮೆಂದಿವು ಮೊದಲಾದ ನಾಮಾವಲಿ ಬಿರುದಾವಲಿಯಂ ತಲಕಾಡು ಕೊಂಗುಸಂಗಮ ಗಂಗವಾಡಿ ಮಳಂಬವಾಡಿ ಹುಲುಗೆರೆ ಬನವಾಸಿ ಹನುಗಲ್ಲು ಉಚ್ಚಂಗಿಗೊಂಡ ಭುಜವಳವೀರ ಗಂಗನಸಹಾಯಶೂರ ಚಲದಂಕರಾಮಪ್ರತಾಪನೆನಿಸಿ ಶ್ರೀಮದ್ರಾಜಧಾನಿ ದೋರಸಮುದ್ರದ ನೆಲೆವೀಡಿನೊಳ್ ಸುಖಸಂಕಥಾವಿನೋದದಿಂ ರಾಜ್ಯಂಗೆಯ್ಯುತ್ತಮಿರ್ದೊಂದು ದಿವಸಂ ತನ್ನ ಎಂಟನೆಯ ದಳಪತಿಯಪ್ಪ ಶಿವಾಚಾರದ ಮಾಚಿರಾಜಂಗೆ ಕೊಳತೂರ ಸ್ಥಳದೊಳ್ ಕೆರೆಯಂ ಕಟ್ಟಿಸೆಂದು ಬೆಸನಿತ್ತೊಡಾತನ ಮನೋನಯನವಲ್ಲಭೆ ಶಾಂತವ್ವೆಯೆಂಬಳ್ ತಾನೆಯಧ್ಯಕ್ಷಳಾಗಿ ತಟಾಕಮಂ ಪೂರೈಸೆ ಬಲ್ಲಾಳನವಳ್ಗೆ ಪ್ರಧಾನಪದಮಂ ಕುಡೆ ತನ್ನ ಪ್ರಶಂಸೆಗೆ ಡೆಂಕಣಾಚಾರಿಯಿಂ ಶಾಂತಲೇಶ್ವರದೇವರ ಗುಡಿಯಿಂ ಕಟ್ಟಿಸಿ ಪ್ರತಿಷ್ಠೆಯಂ ಮಾಡಿ ಶಕಾಬ್ದ ಸಾವಿರದ ನೂರನಾಲ್ಕನೆಯ ಪ್ಲವಸಂವತ್ಸರದ ವೈಶಾಖ ಶುದ್ಧ ಪಂಚಮಿಯೆಂದು ಬಲ್ಲಾಳರಿಂ ಆ ದೇವರ್ಗ ತನ್ನ ಗುರುಗಳ್ಗಂ ಮಾನ್ಯಮಂ ಬಿಡಿಸಿದಳ್. ಹುಲುಗೆರೆಯೊಳ್ ಚೆನ್ನಸೋಮದೇವರ ನಿಲಯಮಂ ಹಂಪೆಯೊಳ್ ವಿರೂಪಾಕ್ಷಾಲಯಮನುದ್ಧರಿಸಿದಳ್. ಆ ತರುವಾಯ ಮಂತ್ರಿ ಚಂದ್ರಮೌಲಿಯ ಮಹಾಸತಿ ಲಕ್ಕಮ್ಮನೆಂಬವಳ್ ಬೆಳ್ಗುಳತೀರ್ಥದೊಳ್ ಬಸದಿಯಂ ಮಾಡಿಸಿ ತನ್ನ ಸಂತತಿಯಂ ಶಾನಸದೊಳ್ ಬರೆಯಿಸಿ ಮಾನ್ಯಭೂಮಿ ಸೀಮೆಯಂ ಬಿಡಿಸಿದಳ್.

ಆದೆಂತೆಂದೊಡೆ ಶಂಭುದೇವನೆಂಬ ಶೈವಬ್ರಾಹ್ಮಣನಾತನರಸಿಯಕ್ಕಳೆಯವರ್ಗೆ ಚಂದ್ರಮೌಲಿಯೆಂಬಂ ಪುಟ್ಟಿ ವೀರಬಲ್ಲಾಳನ ಮಂತ್ರಿಯಾದನವಂಗೆ ಜೈನಶ್ರಾವಕಸುತೆ ಮದುವೆಯಾಗಿ ಜಿನಧರ್ಮದೊಳೆ ದಾನ ಪೂಜಾ ಶೀಲೋಪವಾಸದಿಂ ದಿನಮಂ ಸಲಿಸುತ್ತೆ ಪತಿಭಕ್ತೆಯಾಗಿ ಸೋಮನೆಂಬ ಮಗನಂ ಪಡೆದಳ್ ಅವಳನ್ವಯಂ ಮಾಸವಾಡಿ ಶ್ರಾವಕ ಶಿವೆಯನಾಯಕನಾತನರಿಸಿ ಚಂದವ್ವೆಯ ಮಗಂ ಬೊಮ್ಮದೇವಹೆಗ್ಗಡೆಯನುಜಂ ಭಾವೆಯನಾಯಕನನುಜೆ.

ಸರಸಿರುಹವದನೆ ಘನಕುಚೆ
ಹರಿಣಾಕ್ಷಿ ಮದೋತ್ತ ಕೋಕಿಲಸ್ವನೆ ಮದವ
ತ್ಕರಿಗಮನೆ
[ಯುಂ] ತಳೋದರಿ
ಧರೆಯೊಳ್ ಕಾಳಕ್ಕ ರೂಪಿಗಾಗರವಾದಳ್

ಆಕೆಯ ತಂಗಿ ಆಚಲದೇವಿಯು ಮಾಸವಾಡಿ ಹೇಮದೇವನೆಂಬರಸಂಗೆ ಮದುವೆಯಾಗಿರ್ದಳ್. ಆಕೆಯನುಜಂ ಸೋಮಣ್ಣನಾಯಕಂಗೆ ಶೀಲವತಿ ಬಾಚವ್ವೆಯರಸಿಯಾಗೆಯವರ ಮಗಂ ಚಾಮಣ್ಣನಾಯಕಂಗೆ ಮಾಚವ್ವೆಯರಸಿಗೆಯವನಿಂ ಕಿರಿಯ ಕುಮಾರನನುಜೆ ಅಚಲದೇವಿಯಾಕೆಯ ತಂಗಿ ಚಂದಮ್ಮಂ ಶಿವೆಯಾನಾಯಕನ ತಂಗಿ ಲಕ್ಕವ್ವೆಯೆಂಬಳ್ ಚಂದ್ರಮೌಲಿ ಸಚಿವಂಗೆ ಸತಿಯಾದಳ್. ಆ ಲಕ್ಕನಿಂದ ಬೆಳ್ಗುಳದೊಳ್ ಬಸದಿಯಂ ರಚಿಸಿ ಶಕವರುಷ ಸಾವಿರದ ನೂರ ನಾಲ್ಕನೆಯ (೧೧೦೪) ಪ್ಲವಸಂವತ್ಸರದ ಪುಷ್ಯ ಬಹುಳ ತದಿಗೆ ಶುಕ್ರವಾರ ಪ್ರತಿಷ್ಠೆ ಮಾಡಿಸಿದಳ್. ಆಕೆಯ ಸ್ವಗುರುಗಳ್ ನಯಕೀರ್ತಿ ದೇವರ್. ಆ ಕಾಳದೊಳ್ ಕಾಲದೋಷದಿಂ ಚತುರ್ಗಣದಾಚಾರ್ಯರ್ಗೆ ಪಕ್ಷಪಾತ ಪುಟ್ಟಿ ಒಬ್ಬರೊಳೊಬ್ಬರ್ ವಿರೋಧದಿಂದ ದೂಷಿಸಿ ಕಲಹಮಂ ಚರ್ಚಿಸುತ್ತಿರ್ದರ್. ಇತ್ತಲ್ ನಯಕೀರ್ತಿಗಳ್ ಪ್ರಸಿದ್ಧರಾಗಿ ತಪೋನಿಯತರಾಗಿರ್ದರವರ ಶಿಷ್ಯರಾರೆಂದೊಡೆ

|| ವರ ಸೈದ್ದಾಂತಿಕ ಭಾನುಕೀರ್ತಿಮುನಿಪ ಶ್ರೀಮತ್ಪ್ರಭಾಚಂದ್ರದೇ
ವರಶೇಷಸ್ತುತ ಮಾಘಣಂದಿಮುನಿ ರಾಜರ್ ಪದ್ಮನಂದೀಶ್ವರರ್
ಮೆರೆವಾ ಸನ್ನುತ ನೇಮಿಚಂದ್ರಮುನಿನಾಥಖ್ಯಾತರಾದರ್ ನಿರಂ
ತರರೀ ಶ್ರೀನಯಕೀರ್ತಿದೇವಮುನಿಪಾದಾಂಭೋರುಹಾರಾಧಕರ್

ಇವರ್ ಮೊದಲಾಗನೇಕ ಶಿಷ್ಯರವರೊಳ್ ಬಾಳಚಂದ್ರಮುನೀಂದ್ರರವರ ಶಿಷ್ಯಂ ನಾಗಚಂದ್ರನೆಂಬಂ ಜಿನಮುನಿತನಯ ಜಿನಾಕ್ಷರಮಾಲೆ ಮಲ್ಲಿನಾಥಪುರಾಣ ರಾಮಚರಿತ್ರೆ ಮೊದಲಾದ ವಸ್ತುಕಮಂ ರಚಿಯಿಸಿ ಅಭಿನವಪಂಪನೆನಿಸಿದನೀ ಪ್ರಕಾರದೊಳೆ ವೀರ ಬಲ್ಲಾಳರಾಯಂ ಶಿವಭಕ್ತನಪ್ಪ ತನ್ನಬುಜ ಸಿಂಧುಬಲ್ಲಾಳನಂ ತೊಂಡನೂರಲ್ಲಿರಿಸಿ ತಾನುಂ ನೆಲೆವೀಡಿನೊಳ್ ರಾಜ್ಯಂಗೆಯುಯತ್ತಮಿರಲ್.

ಅತ್ತಲ್ ಡಿಳ್ಳೀಪಟ್ಟಣದೊಳ್ ಸೋಮವಂಶದವರ ಪರಂಪರೆ ಆಳುತ್ತಿಪ್ಪಲ್ಲಿಯೊಬ್ಬ ಪಕೀರಂ ಮಕ್ಕಾದಿಂದ ಅನೇಕ ವಿದ್ಯೆಗಳಂ ಸಾಧಿಸಿಬಂದು ಪಾದಶಾಯಿಗೆ ಪಟ್ಟಮಂ ಮಾಳ್ವೆನೆಂದು ಒಬ್ಬ ಕುರಬರ ಹುಡುಗನ ಲಕ್ಷಣಮಂ ನೋಡಿಯಾತಂಗಪ್ಪುದೆಂದು ತುರುಕನಂ ಮಾಡಲುದ್ಯೋಗಿಸೆ ಆತಂ ಒಪ್ಪದೆ ಮುರಾಡಮಂ ಮಾಡಿದೊಡೆ ತನ್ನ ಯಷ್ಟಿಯಿಂದಾತನಂ ಇಪ್ಪತ್ತೊಂದು ವೇಳೆ ಪೊಡೆಯ ಕಾಲುಮುರಿದು ಕುಂಟನಾಗಲವನಂ ಮುಸಲಮಾನನಂ ಮಾಡಿ ಕರೆದೊಯಿವಲ್ಲಿ ನಿಕ್ಷೇಪ ಸಿಕ್ಕುವುದುಂ ಬಲಮಂ ಕಟ್ಟಿ ಚತುರಂಗಮಂ ಕೂಡಿಸಿಕೊಟ್ಟು ಡಿಳ್ಳಿಗೆ ದಾಳಿಯನಿಟ್ಟು ಡಿಳ್ಳೀಶ್ವರನಂ ಪಿಡಿದು ಎರಡು ಕಣ್ಗಳಂ ಕೀಳಿಸಿ ಸೆರೆಯೊಳಿಟ್ಟು ತಿಮಿರಲಂಗುಪಾದಶಾಯೆನೆಂದು ಪೆಸರಿಟ್ಟು ಡಿಳ್ಳೀಪಟ್ಟಣಮಂ ಕಟ್ಟಿ ರಾಜ್ಯಮನಾಳುತ್ತಿರೆ ಕೆಲವಾನುದಿವಸ ಪೂರ್ವದರಸಿನ ಮಂತ್ರಿ ತನ್ನರಸಂಗೆ ಶಬ್ದಗುರಿಸಾಧನೆಯುಂಟೆಂದು ಪೇಳೆ ಪಾದಶಾಯಿಯಾತನಂ ಕರೆಸಿ ಬೇರೊಂದೆಡೆಯೊಳಿರಿಸಿ ಬಿಲ್ಲುಂಬುಗಳಂ ಕೊಟ್ಟು ಮತ್ತೊಬ್ಬನಂ ಧ್ವನಿಯ ಮಾಡೆಂದು ಕೆಲದೂರದೊಳಿರಿಸಿ ತಾನು ನೋಡುತ್ತುಂ ಶಬ್ದಮಂ ಮಾಡೆನೆಯದಂ ಕೇಳ್ದು ಪಾದಶಾಯಂಗೆ ಗುರಿಯ ಪೊಡೆಯ ಪಾದಶಾಯಿ ಸಾಯ್ವುದುಂ.

ಮತ್ತೊರ್ವಂ ಬೀದಿಯೊಳ್ ಬಪ್ಪಂಗೆ ಪಟ್ಟಮಂ ಕಟ್ಟಿ ರಾಜ್ಯಮಂ ಸಾಧಿಸುತ್ತ ಮಿರಲಂತೈದಾರು ಪಟ್ಟಮಾಗಲ್ ಮತ್ತಂ ಜನ್ನುಪಾದಶಾಯಿಯೆಂಬಂ ಸಕಲ ದೇಶಮೆಲ್ಲಮಂ ವಶಂ ಮಾಡಿ ಕಪ್ಪಮಂ ಕೊಂಡುಬರುವಲ್ಲಿ ಹದಿನೆಂಟು ಮಂದಿ ವಜೀರರ್ ತಮ್ಮ ತಮ್ಮ ಚತುರಂಗಸಮೇತ ಬಂದು ಒಂದು ದಿನದೊಳ್ ೧೦೦ ಗಡಿಯಂ ಕಟ್ಟಿಕೊಂಡು ಬಂದರೆ ನೀವು ಮೆಚ್ಚಿದ ಇಮಾಮು ಕೊಟ್ಟಪೆವೆಂದು ಭಾಷೆಯಂ ಮಾಡಿದೊಡದೇಮೇರೆ ಸಾದ್ಯಮಂ ಮಾಡಿಕೊಂಡು ಬಂದು ವರುಷ ೧ಕ್ಕೆ ಎರಡೂವರೆ ಘಳಿಗೆ ಈ ಡಿಳ್ಳಿಪಟ್ಟಣಮಂ ಸೂರೆಗೊಂಬಂತೆ ಅಪ್ಪಣೆ ಬೇಡಿಕೊಂಡು ಎರಡೂವರೆ ಘಳಿಗೆ ಸೂರೆಮಾಡಿಕೊಳ್ಳುತ್ತಾ ನಾವು ಮಾಡುವ ಸೂರೆಯನೆಂದಿಗೆ ಯಾವವನಾದರೂ ತಡೆವವ ಸಮರ್ಥನಾದಂದಿಗೆ ಬಿಟ್ಟುಬಿಡುತ್ತೇವೆಂದು ಎರಡೂವರೆ ಘಳಿಗೆ ಪ್ರತಿವರಷಂ ಸೂರೆಯಂ ಮಾಡುತ್ತಿರಲಾ ಪಾದಶಾಯಿಗೆ ವರನಂದಿಯೆಂಬ ಮಗಳ್ ಅವರು ಮಾಳ್ಪ ಸೂರೆಯಂ ಸೈರಸಲಾರದೆ ಈ ಅಪಖ್ಯಾತಿಯನಾವ ಪುರುಷಂ ನಿಲಿಸುವನಾತಂಗಲ್ಲದೆ ಮದುವೆಯಾಗೆನೆಂದು ಪ್ರತಿಜ್ಞೆಯಂ ಮಾಡಿದಳ್.

ಇತ್ತಲ್ ಶ್ರೀವೀರಬಲ್ಲಾಳಿರಾಯ ವೀರಶೌರ್ಯಪರಾಕ್ರಮಮಂ ಕಂಡು ದಕ್ಷಿಣ ಪಾದಶಾಯಿ ಎಂಬುದಾಗಿ ಡಿಳ್ಳಿಗೆ ಸಮಾಚಾರಂ ಪುಟ್ಟೆಯಾತನಂ ನೋಡಲ್ ಮೂರು ಲಕ್ಷ ಕುದುರೆಯಂ ಕಳುಹಿಸಿ ಬರವೇಳ್ವುದುಂ ತನ್ನ ಚತುರಂಗಮಂ ಬೆರೆಸು ಡಿಳ್ಳಿಯ ಸಮೀಪದೊಳ್ ಬೀಡಂ ಬಿಟ್ಟಿರಲಲ್ಲಿ ಸೂರೆಸಮುಯವಾಗಲ್ ಪೊರಗಣಿಂ ಪಟ್ಟಣಕ್ಕೆ ಬರುತ್ತಿದ್ದ ಬಲಮಂ ತಡೆದು ಎರಡೂವರೆ ಘಳಿಗೆ ನಿಲ್ಲಿಸೆ ಅವರ ಪ್ರತಿಜ್ಞೆ ಸಂದು ಸೂರೆ ನಿಂತುಹೋಯಿತು. ಆ ತರುವಾಯ ಪಾದಶಾಯಿ ವೀರತ್ವಕ್ಕೆ ಮೆಚ್ಚಿ ಸಂತೋಷದಿಂ ಬರಹೇಳೆಯಾತನ ಬಳಿಗೆ ಬರತಕ್ಕವನಲ್ಲೆಂದು ನಿರಾಕರಿಸುವುದುಂ ಮಂತ್ರಿಗಳುಪಾಯದಿಂ ಕರೆದೊಯ್ದು ಬಹುಮಾನಮಂ ಮಾಡಿ ನಿನ್ನ ರಾಜ್ಯಮಂ ಪಾಲಿಸುತ್ತಿದ್ದಾರೆ. ನಮ್ಮ ಪಾದಶಾಯಿಗೆ ಸಲಾಮ ಮಾಡೆಂದು ಪೇಳ್ವುದುಂ ನೀಚನೀತಂಗೆ ಕೈಯನೆತ್ತೆನೀತನ ಕೆಳಗೆ ರಾಜ್ಯವಾಳುವವನಲ್ಲ. ಇವನಂ ನೆಲಕ್ಕೆರಗಿಸಿ ಕೊಂದುಹಾಕದೆ ಮಾಣೆನೆಂದು ನಿಷ್ಠುರವಚನಮನಾಡೆ ಕೋಪಿಸಿ ಇವನಂ ಶೂಲದೊಳಿಕ್ಕಿ ಶಿರಚ್ಛೇದನಮಂ ಮಾಡೆಂದಾಜ್ಞೆಗೊಟ್ಟಲ್ಲಿ ತಪ್ಪಿದನೆಂದು ಸಮೀಪಕ್ಕೊಂಯ್ದು ನಿನಗೆ ಮೃತ್ಯು ಬಂದಿದೆ ಇನ್ನಾದರೂ ಪಾದಶಾಯಿರಿಗೆರಗಿ ಜೀವಿಸೆಂದೆಲ್ಲರ್ ಪೇಳೆ ಬಾಯೊಳಿದ್ದ ತಂಬುಲಮಂ ತೂಯೆಂದಾತನ ಮುಂದೆ ಉಗುಳಲಾತಂ ಶೂಲದೊಳಿಕ್ಕೆಂದು ಎದ್ದು ಪೋಗಲಿತ್ತ ಮಂತ್ರಿ ಪ್ರಧಾನಿಗಳೆಲ್ಲರುಂ ಆಳೋಚಿಸಿ ಇಂತಪ್ಪ ಮಹಾವೀರಂ ಪುಟ್ಟಲಾರಂ ಇನ್ನೊಂದು ಅಪ್ಪಣೆಯಾಗುವುದರಿಂ ಮುನ್ನವೆ ಹೇಳಿಕೊಳ್ವಮೆಂದೆಲ್ಲರುಂ ಪೋಗಿ ಪಾದಶಾಯಿಗೆ ಹೇಳಿಕೊಳ್ಳಲಾಗಿ ನಮ್ಮಾಜ್ಞೆಯಂ ಮೀರಲಾಗದು. ಆದೊಡವನ ಹಸ್ತಪಾದಚ್ಛೇದನಮಂ ಮಾಡಿಮೆನೆ ವರನಂದಿ ತಂದೆಗೆ ಹೇಳಿಕೊಂಡದ್ದರಿಂದ ದಕ್ಷಿಣಹಸ್ತದ ಕಿರುವೆರಲಂ ಕೊಯ್ದು ಕಳುಹಿಸಿದ ಕಾರಣ ಬೆಟ್ಟವರ್ಧನರಾಯನೆಂಬ ಪೆಸರಾಗೆ ರಾಜ್ಯಮನಾಳುತ್ತುಮಿರಲ್.

ಇತ್ತ ದ್ರಾವಿಡದೇಶದ ವೈಷ್ಣವದ್ವಿಜಸುತಂ ರಾಮಾನುಜನೆಂಬ ಶಬ್ದ ತರ್ಕ ಕಾವ್ಯ ನಾಟಕಾದಿ ಸಕಲ ಶಾಸ್ತ್ರಮಂ ಕಲ್ಲು ವೇದಪುರಾಣಮಂ ಚೆನ್ನಾಗಿ ವಿಚಾರಿಸಿಸಂದೇಹಗ್ರಸ್ತದಿಂ ದರ್ಶನ ಮೋಹನೀಯ ಏಕಾಂತ ಮಿಶ್ರದಿಂ ಸರ್ವೋತ್ಕೃಷ್ಟತೆಯಿಂ ಮಹಾವಿಷ್ಣುವೊರ್ವನೆ ದೇವನೆಂದು ವೀರವೈಷ್ಣವತ್ವವಂ ಪ್ರಕಟಿಸಿಯನೇಕ ಗ್ರಂಥಕರ್ತೃವಾಗಿ ಆನೆಯಟ್ಟಿಬಂದರು ಶಿವಾಲಯಮಂ ಪುಗಲಾಗದೆಂದು ಐನೂರ್ವರ್ ಶಿಷ್ಯರ್ಗೆಲ್ಲ ಮುಪ್ರದೇಶಂಗೆಯ್ದು ಶ್ವೇತಚ್ಛತ್ರ ಹಗಲುದೀವಟಿಗೆ ಮುಂತಾದ ಬಿರುದು ವೆರೆಸಿ ವಿದ್ಯಾನಗರಿಯೊಳ್ ಬರುವಲ್ಲಿ ಅಲ್ಲಿರ್ದ ಸ್ಯಾದ್ವಾದವಾದಿಗಳ್ ತಡೆದುವಾದದಿಂ ಸೋಲಿಸಿ ಬಿರುದುಗಳಂ ಕಳೆದುಕೊಂಬುದುಂ ವಿಷಣ್ಣಮನದಿನತಿ ಚಿಂತಾಕ್ರಾಂತನಾಗಿ ಪೋಗಿ ಸ್ವಗೃಹದೊಳನ್ನಪಾನಾದಿಗಳಂ ಬಿಟ್ಟು ಒರಗಿಪ್ಪದುಂ ತತ್ಪುತ್ರಿಯರಪ್ಪ ಭಂಗಾರೆ ಸಿಂಗಾರೆಯೆಂಬವರ್ ಭರತಶಾಸ್ತ್ರದಿಂ ನಿಪುರಣೆಯರಾಗಿ ಸಂಗೀತ ಸಾಹಿತ್ಯ ವಿದ್ಯಾವಿಶಾರದೆಯರಪ್ಪರ್ ಬಂದು ತದ್ವಾರ್ತೆಯೆಲ್ಲಮಂ ಕೇಳ್ದು ತಮ್ಮ ತಂದೆಯಂ ಸಂತೈಸಿ ಜೈನರೆಲ್ಲರಂ ಶ್ರೀವೈಷ್ಣವರಂ ಮಾಳ್ವ ಕಜ್ಜಮನೆತ್ತಿಕೊಂಡು ಕುಂಟಸಿಂಗರಿಯಂ ಕೂಡುಕೊಂಡು ಹೊಯ್ಸಳದೇಶದ ಬಲ್ಲಾಳನ ಬೀಡಂ ಪೊಕ್ಕು ತಮ್ಮ ಸೌಂದರ್ಯ ರೂಪುಲಾವಣ್ಯ ವಿದ್ಯಾಪ್ರೌಢಿ[ಮೆಯಂ] ತೋರಿಸುತ್ತುಂ ಇರಲಾ ಬಲ್ಲಾಳರನವರ ವಿದ್ಯಕ್ಕಂ ಗಾಡಿಗಮನಕ್ಕಂ ಆಶ್ಚರ್ಯಂಬಟ್ಟು ಅತ್ಯಂತ ಪ್ರೀತಿಯಿಂ ಮನ್ನಿಸಿ ಅನವರತಮವರ ವಿದ್ಯಮಂ ಕೇಳುತ್ತಮವರಂ ಸಮ್ಯಕ್ತ್ವಕ್ಕೆ ತರಲೆಂದು ಜೈನೋಪಾಧ್ಯಾಯರಿಂ ಜಿನಾಗಮ ಪುರಾಣ ಸಾಗರಗಾರ ಧರ್ಮಂಗಳನುಪದೇಶಂಗೆಯಿಸುತ್ತಿರಲಾ ಕಾಲದೊಳೆ ಕನ್ನಡ ಪುರಾಣಂಗಳಂ ಸ್ಥಳಾಂತರಂಗದೊಳ್ ಕನ್ನಡ ಕವಿಗಳ್ ಪೇಳ್ದರ್. ಅವರೊಳ್ ಅಗ್ಗಳಕವಿ ಕವಿರನ್ನ ಹೊನ್ನ ಜನ್ನುಗ ಕರ್ಣಪಾರ್ಯ ಮಧುರ ರಾಜಹಂಸ ಬಂಧುವರ್ಮ ನಾಗವರ್ಮ ಕೇಶವ ನೇಮಿಚಂದ್ರ ಮೊದಲಾಗನೇಕ ಕವಿಗಳ್ ಕರ್ಣಾಟಕಭಾಷೆಗಳಿಂ ಪೇಳ್ದರ್ ಬಲ್ಲಾಳರಾಯನ ಸಾಮಂತರ್ ಕ್ಷೇಮಂಕರ ನಾಯಕ ಪದ್ಮನಾಭ ದಾಮೋದರಾದಿಗಳ್ ಪುರಾಣಂಗಳಂ ಮಾಡಿಸಿದರ್. ನಯಸೇನಾಚಾರ್ಯರ್ ದಿಗಂಬರದಾಸ ನೂತ್ನ ಕವಿತಾವಿಳಾಸದಿಂ ಧರ್ಮಾಮೃತದ ಕಥೆಯಂ ಪೇಳ್ದರ್. ಕಾದಂಬರಿಯೆಂಬ ಶೃಂಗಾರಕಾವ್ಯಮಂ ಮಾಡಿ ದೊರೆಯಂ ಮೆಚ್ಚಿಸಿ ಆನೆಯ ಮೇಲೇರಿಸಿ ಬಪ್ಪಲ್ಲಿ ನೇಮಿಚಂದ್ರಕವಿ ತಡೆದು ಶೃಂಗಾರಮಪ್ಪ ಲೀಲಾವತಿಯಂ ರಚಿಸಿ ಸಭೆಯೊಳೋದಿಸೆ ಕಿರುಜವ್ವನರಪ್ಪ ಸ್ತ್ರೀಪುರುಷರ್ಗೆ ಕಾಮರಸಮೊಸರೆ ಮೆಚ್ಚಿ ಕಾದಂಬರೀಕಾವ್ಯ ಪುಸ್ತಕಮಂ ಸುಟ್ಟು ಲೀಲಾವತಿಗೆ ಕಷ್ಟನಿಡುವಲ್ಲಿ ಕೇಳಿಕೊಂಡು ಮೊದಲ ಒಂದೋಲೆಯಂ ಸುಡಿಸಿ ಲೀಲಾವತಿಗೆ ಕಷ್ಟನಿಡಿಸಿದರ್.

ಅಮರಕೀರ್ತಿರಾವಳಯತಿಯರ ಶಿಷ್ಯಂ ವೃತ್ತವಿಳಾಸನೆಂಬೊಂ ಸಂಸ್ಕೃತ ಧರ್ಮಪರೀಕ್ಷೆಯಂ ವಸ್ತುಕಮಾಗಿ ಮಾಡಿದಂ ಕವಿಕೇಶವಂ ಕರ್ಣಾಟಕ ಶಬ್ದಮಂಜರಿಯಂ ರಚಿಸಿದಂ ನಾಗವರ್ಮ ಕನ್ನಡ ಛಂದಸ್ಸುಮಂ ಮಾಡಿದಂ ಮತ್ತಂ ಸುಧಾಪುರದೊಳ್ ಭಟ್ಟಾಕಲಂಕಸ್ವಾಮಿಗಳ್ ಶಾಕಟಾಯನ ಜೈನೇಂದ್ರ ಕೌಮಾರ ಮೊದಲಾಗೆ ನವವ್ಯಾಕರಣಮುಮಂ ಅಮರ ಧನಂಜಯ ವಿಶ್ವಜಯಂತಿ ರತ್ನಮಾಲೆ ಶಬ್ದಮಾಲೆ ರಭಸಕೋಶ ಮೊದಲಾದ ಪದಿನೆಂಟು ನಿಘಂಟುಗಳಂ ಕವಲಯ ಮೊದಲಾದ ಅಲಂಕಾರಗಳಂ ರತ್ನಮಂಜೂಷೆ ವೃತ್ತರತ್ನಾಕರಂ ಮೊದಲಾದ ಛಂದಸ್ಸುಗಳಂ ಭರತಾದಿ ನೀತಿಶಾಸ್ತ್ರಮಂ ಸ್ವಸಮಯ ಪರಸಮಯ ಪುರಾಣಾಗಮ ತತ್ತ್ವಂಗಳಂ ಆರ್ಯುವೇದ ಶಿಲ್ಪ ವಾಸ್ತುಶಾಸ್ತ್ರಮ ಫಲಭಾಗೆ ಪ್ರಶ್ನೆಭಾಗೆ ಜಾತಕ ಭಾಗೆಯುಳ್ಳ ಜ್ಯೋತಿಶ್ಯಾಸ್ತ್ರಮಂ ಅದಾನ ನಿದಾನ ಚಿಕಿತ್ಸಾರೂಪ ವೈದ್ಯಶಾಸ್ತ್ರಮಂ ಇಂತನೇಕವಾದ ಶಾಸ್ತ್ರಂಗಳಂ ಕಲ್ತು ಮಹಾವಿದ್ವಾಂಸರೆನಿಸಿ ಪ್ರಾಕೃತ ಸಂಸ್ಕೃತ ಮಾಗಧ ಶೂರಸೇನ ಅಪಭ್ರಂಶಮೆಂಬ ಷಡ್ಭಾಷಾಕವಿಗಳಾಗಿ ಕರ್ಣಾಟಕ ವ್ಯಾಕರಣಮಂ ರಚಿಸಿ ಕೀರ್ತಿಯಂ ಪಡೆದರ್. ದೀಪಂಗುಡಿಯಿಂದ ಬಂದ ನವಗೋತ್ರದ ಜೈನವಿಪ್ರರೊಳ್ ಭಾರದ್ವಾಜಗೋತ್ರಜರ್ ಅರಿಕುಠಾರ ತೆರಕಣಾಂಬ ಮೊದಲಾದವರೊಳ್ ನಿಂತರ್, ಶ್ರೀವತ್ಸಗೋತ್ರದ ಪಾರ್ಶ್ವಪಂಡಿತರ ಮಕ್ಕಳ್ ಚಂದ್ರಪಾರ್ಯ ಚಂದ್ರನಾಥ ಚಂದ್ರಣಾರ್ಯ ಮೊದಲಾಗೆ ಎಣ್ಣರಾದರ್, ಆ ಚಂದ್ರಪಾರ್ಯರ ಕುಮಾರರ್ ಮೂವರೊಳ್ ಮಧ್ಯಮನಾದ ಬ್ರಹ್ಮಸೂರಿಯು ಅನೇಕ ಶಾಸ್ತ್ರವಲೊಕನಂಗೆಯ್ದು ಮಹಾವಿದ್ವಾಂಸನಾಗಿ ತ್ರೈವರ್ಣಿಕಾಚಾರಮೆಂಬ ಗ್ರಂಥಮಂ ರಚಿಸಿದರ್. ಮತ್ತಂ ಪೂರ್ವದೊಳ್.

ವೃ || ವೀರಾಚಾರ್ಯ ಸುಪೂಜ್ಯಪಾದ ಜಿನಸೇನಾಚಾರ್ಯ ಸಂಭಾಷಿತೋ
ಯಃ ಪೂರ್ವ ಗುಣಭದ್ರಸೂರಿ ವಸುನಂದೀಂದ್ರಾದಿನದ್ಯೂರ್ಜಿತಃ
ಯಶ್ವಾಶಾಧರ ಹಸ್ತಿಮಲ್ಲಗದಿತೋ ಯಶ್ಚೈಲ ಸಂಧೀಡಿತಃ
ಶ್ವೇಭ್ಯಶ್ಚಾಹೃತಸಾರ ಆರ್ಯರಚಿತಃ ಸ್ಯಾಜ್ಜೈನಪೂಜಾಕ್ರಮಃ ||

ಇಂತು ಆಚಾರ್ಯೋಕ್ರವಾದ ಜಿನಪ್ರತಿಷ್ಠಾಪೂಜಾಕ್ರಮಮುಳ್ಳ ಸಂಹಿತೆಯಂ ರಚಿಸಿದರ್. ಆತನ ಜಾಮಾತೃ ತ್ರಿಕಂಬಪುರದೊಳ್ ದೇವಪ್ಪಗಳ ಮಧ್ಯಮಂ ಪುತ್ರಂ ನೇಮಿಚಂದ್ರನೆಂಬೊ ಅಭಯಚಂದ್ರಸೂರಿಗಳಲ್ಲಿ ಸಕಲಾಗಮಂಗಳಂ ಕಲ್ತು ಪ್ರತಿಷ್ಠಾದಿ ಶಾಸ್ತ್ರಮಂ ಮಾಡಿ ತುಳುವದೇಶದೊಳ್ ಶ್ರಾವಕರ್ ಜಿನಾಲಯಗಳಂ ರಚಿಸಿ ಪ್ರತಿಷ್ಠೋತ್ಸವಕ್ಕೆ ಚತುರ್ಗಣದಾಚಾರ್ಯರುಂ ಬಂದರಲ್ಲಿಗೆ ನೇಮಿಚಂದ್ರಂ ತಾಂ ರಚಿಸಿದ ಪ್ರತಿಷ್ಠಾತಿಲಕಮಂ ಕೊಂಡುಪೋಗಿ ಪೇಳ್ವುದುಮವರುಂ ಆ ಶ್ರಾಸ್ತ್ರಮಂ ವಿಚಾರಿಸಿ ಅತ್ಯಂತ ಸಂತೋಷಂಬಟ್ಟು ಉಪಾಧ್ಯಾಯಪಟ್ಟಮಂ ಕಟ್ಟಿ ಮನ್ನಣೆಯಂ ಮಾಡಿದರ್.

ಶ್ಲೋ || ವಿಹಾಯ ವಿಷ್ಣುಧಾತಾತಾ ನೇಮಿಚಂದ್ರೇಣ ಸಂಗತಿಮ್
ಶ್ರೀವಾಚಾ ಶಂಭುರಾಲೋಕ್ಯಾ ದೇಹಾರ್ತಿಕೃತಪಾರ್ವತಿಃ ||
ನೇಮಿಚಂದ್ರಸ್ಸಮಾಯಾತಿ ಸ್ಯಾದ್ವಾದವನಕೇಸರೀ
ಪಲಾಯುಧ್ವಂ ಪಲಾಯುಧ್ವಂ ರೇ ರೇ ತಾರ್ಕಿಕ ದಿಗ್ಗಜಾಃ ||

ಮತ್ತಂ ಛತ್ರತ್ರಯಪುರದ ಚಂದ್ರನಾಥಾದಿ ಸುತರ್ ಕನಕಗಿರಿಯೊಳ್ ನಿಂತರ್. ಆ ಕಾಲದೊಳೆ ಪರಸಮಯಂಗಳ್ ವೈದ್ಯ ಜ್ಯೋತಿಷಾದಿ ಶಾಸ್ತ್ರಮಂ ರಚಿಸಿದರ್. ಈ ಪ್ರಕಾರದೊಳಿಯುತ್ತಿರಲತ್ತ ಡಿಳ್ಳಿ ಪಾದಷಾಹಿ ತನ್ನ ಮಗಳಂ ಬಲ್ಲಾಳಂಗೆ ಕುಡಲ್ ಕರೆಯಬರೆ ತನ್ನ ಖಡ್ಗಮಂ ಕೊಟ್ಟು ಕಳಿಪುವುದುಂ ಆ ಖಡ್ಗಕ್ಕೆ ಧಾರೆಯನೆರೆದು ಆಪ್ತರಂ ಕೂಡಿಕೊಟ್ಟು ಅನೇಕ ಬಳುವಳಿಗಳನಿಪ್ಪತ್ತೈದು ಒಂಟೆಯ ಮೇಲಿ ಸಾಗಿಸಿ ಕೊಟ್ಟು ಆಶ್ವ ಗಜ ರಥ ಪದಾತಿಗಳ್ವೆರಸು ವರನಂದಿಕುಮಾರಿಯಂ ಬಲ್ಲಾಳನಲ್ಲಿಗೆ ಕಳುಹಿಸಲವಳ್ಗೆ ಒಂದರಮನೆಯಂ ಕಟ್ಟಿಸಿಕೊಟ್ಟನು. ಆ ಭಂಗಾರೆ ಸಿಂಗಾರಮ್ಮ ನೆಂಬೀರ್ವರು ವೀರಬಲ್ಲಾನೊಳ್ ಅತ್ಯಂತ ದಯಾರಸಕ್ಕೆ ಪಾತ್ರರಾಗಿ ನಮ್ಮ ಗುರುಗಳಪ್ಪ ರಾಮಾನುಜುಂ ಬರಿಸಿಮೆಂದು ಪೇಳಿಕೊಂಡು ವೈಭವದಿಂದಿದಿರ್ವೋಗಿ ಭಕ್ತಿಪೂರ್ವಕಂ ಕಂಡು ಸೇವೆಯಂ ಮಾಡುತ್ತಮಿರಲೊಂದು ದಿವಸ ಮಧ್ಯಾಹ್ನಕಾಲದೊಳುಪ್ಪರಿಗೆಯ ಮೇಲಣ ನೆಲೆಯೊಳೀರ್ವರಂಗನೆಯರೊಡನೆ ವಿದ್ಯಾವಿನೊದದೊಳಿಪ್ಪ ವೇಳೆಯಳುಪವಾಸದ ಪಾರಣಾನಿಮಿತ್ತಂ ಜೈನಮನಿಗಳ್ ಬೀದಿಯೊಳ್ ಈರ್ಯಾಸಮಿತಿಗೂಡಿ ಚಂದ್ರಗತಿಯಿಂ ಬರುತ್ತಿರಲವರನಾರೆಂದರಿಯದಂತೆ ರಾಯನಂ ಬೆಸಗೊಳೆ ನಮ್ಮ ಗುರುವನೆ ನಿಮ್ಮ ಗುರುವಾದಡೆ ನೀನೆ ಪೋಗಿ ನಿಲಿಸೆ ಭಿಕ್ಷೆಯ ಮಾಳ್ವನೆ? ಆತ ನಿನ್ನ ಗುರುವಲ್ಲೆಂದು ವಾಗ್ವಾದಂ ಪುಟ್ಟಿ ಈ ಗುರು ನಿನ್ನ ಕೈಯಿಂದಾಹಾರಂಗೊಂಡರೆ ನಾವು ಜಿತಮತಕ್ಕೆ ಬಪ್ಪೆವಲ್ಲದೊಡೆಮ್ಮ ಗುರುವಿಂಗೆ ಶಿಷ್ಯನಾಗಿ ವೀರವೈಷ್ಣವನಪ್ಪುದೆಂದೋರೊರ್ವರೊಳ್ ಭಾಷೆಯಾಗಿ ಶೀಘ್ರದಿಂ ಶುಚಿರ್ಭೂತನಾಗಿ ಅರಮನೆ ಬಾಗಿಲಲ್ಲಿರ್ದು ಮುನೀಂದ್ರರಂ ಪ್ರದಕ್ಷಿಣಂಗೈದು “ತಿಷ್ಠತಿಷ್ಠ ಭ್ರಾಮ [ಣೀ]ಯಾಕಾರಣಂ ಭವತು” ಎಂದು ಸುವರ್ಣದ ಗಿಂಡಿಯಿಂದ ಹಸ್ತೋದಕಮಂ ಬಿಡುವಾಗಲವನ ಹೀನಾಂಗಮಂ ಕಾಣಲೊಡನೆ ಚರ್ಯಾಂತರಾಯಮಾಗಿಯರಣ್ಯಕ್ಕೆ ಪೋದುದುಂ ಪರಿಜನಂಬೆರಸು ಪೋಗಿಯನೇಕ ತೆರೆದಿಂ ಪೇಳ್ದೊಡಂ ಬಾರದಿಪ್ಪುದುಂ ಜೈನಮತಂ ಮುಳುಗುತ್ತಿದೆಯೆಂದು ಕೋಪಂ ನುಡಿವುದುಂ ನ ಹಿ ಭೇಕೇ ಮೃತಿಂ ಯಾತೇ ಸಮುದ್ರಃ ಪೂತಿಗಂಧಿತಾ ಎಂಬುದರಿಂ ನಿನ್ನರ್ಥಿಗಾಗಿ ಹಿಡಿದ ವ್ರತಭಂಗಮಾಗೆ ದುರ್ಗತಿಗೋಪೆನಲ್ಲೆಂದು ನಿರಾಕರಿಸುವುದುಂ ಕ್ರೋಧದಿಂ ಜೈನಮತದ್ವೇಷಿಯಾಗಿ ಬರೆ ಸ್ತ್ರೀಯರ್ ತಮ್ಮ ಮನೋಭೀಷ್ಟಂ ಸಂದುದೆಂದು ಸಂತೋಷಂಬಡೆ ರಾಮಾನುಜರಲ್ಲಿಗೆಯ್ದಿ ಸಾಷ್ಟಾಂಗಪ್ರಣತನಾಗಿ ಚಕ್ರಾಂಕಿತ ಮುದ್ರೆಯನೊತ್ತಿಸಿಕೊಂಡವರಿಂ ತತ್ತ್ವೋಪದೇಶಂಗೊಂಡು ದ್ವಾದಶನಾಮಧರನಾಗಿ ತನ್ನಂ ಪೊರ್ದಿದ ಬ್ರಹ್ಮ ಕ್ಷತ್ರಿಯ ವೈಶ್ಯ ಶೂದ್ರಾದಿಗಳೆಲ್ಲರಂ ವೀರವೈಷ್ಣವರಂ ಮಾಡಿ ಕೆಲಂಬರೊಡಂಬಡದಿರ್ದವರಂ ಬಲಾತ್ಕಾರದಿಂ ನಿಗ್ರಹಿಸಿ ವಿಷ್ಣುಭಕ್ತರಂ ಮಾಡಿಸುತ್ತ ತೊಂಡನೂರು ಸ್ಥಳದಲ್ಲಿದ್ದ ಏಳನೂರೆಂಬತ್ತು ಬಸ್ತಿಯಂ ಕೀಳಿಸಿ ಸಿಂಧುಬಲ್ಲಾಳಂ ಕೆರೆಯಂ ಕಟ್ಟಿಸಿ ಕರಶಶತವಾಡಿಯೊಳ್ ನೂರು ಜಿನಾಲಯಂಗಳಂ ತೆಗೆದು ಹೆಡತಲೆಯ ಪದಿನಾರು ಬಸದಿಯಂ ಕೀಳಿಸಿ ಪಂಚಪರಮೇಷ್ಠಿಗಳಂ ಸ್ಥಾಪಿಸಲೆಂದಿರ್ದು ಐದು ದೇವಸ್ಥಾನಕ್ಕೆ ಪಂಚನಾರಾಯಣರಂ ಸ್ಥಾಪಿಸಿ ಬಲ್ಲಾಳರಾಯ ವಿಷ್ಣುವರ್ಧನರಾಯನೆಂಬ ಪೆಸರಾಂತು ಪರಮಶಿಷ್ಯನಾಗೆ ರಾಮಾನುಜಂ ರತ್ನಮಯದಡ್ಡ ಸಿವಿಗೆಯನೇರಿ ಹತ್ತು ಸಾವಿರ ಭಕ್ತರ್ವೆರಸು ಭೂಪ್ರದಕ್ಷಿಣಂ ಮಾಡುತ್ತೆ ಅಲ್ಲಲ್ಲಿರ್ದ ಜಿನಾಲಯಂಗಳ ಕೆಡಿಸುತ್ತೆ

ಸರ್ವಕ್ಕೂ ತಿರುವೆಂಬ ಶಬ್ದ ಮೊದಲಾಗೆ ಪೇಳಿಸುತ್ತೆ ಜೈನೇಭಕಂಠೀರವಂ ಎಂದು ಪೊಗಳಿಸಿಕೊಳ್ಳುತ್ತುಂ ತಿರುಪತಿಗೆಯ್ದಿಯಲ್ಲಿ ಅನೇಕರಂ ಶ್ರೀವೈಷ್ಣವರಂ ಮಾಡಿ ವೃಕ್ಷಕೋಟರದೊಳ್ ಪುಟ್ಟಿಬಂದರೆಂದು ಚಕ್ರತ್ತಾಳ್ವಾರರ್ ಮೊದಲಾಗೆ ಆಳ್ವಾರರಂ ಬರೆಯಿಸಿ ಮುಂದಕ್ಕೆ ಪೋಪಲ್ಲಿ ಜನರೆಲ್ಲ ಹಿಂದಾಗೆ ಸಹಸ್ರಜನ ಪೊಲೆಯರ್ ಬಿಡದೆ ಒಡೆಯಯ್ದುವುದುಂ ತಿರುಕುಳದಾಸರೆಂಸವರ್ಗೆ ಶಂಖು ಜಾಗಟೆ ಕೊಟ್ಟು ಮಂತ್ರವಾದದಿಂ ಪದ್ದಂ ಪಾವಾಡಂಗಳಂ ಮಾಡುತ್ತಂ ರಾಜ್ಯಮೆಲ್ಲಮಂ ತೊಳಲಿ ಬಂದು ಮೇಲುಗೋಟೆಯೆಂದು ಮಧ್ಯದೇಶದೊಳಿರ್ದ ಜಿನಾಲಯಮಂ ಮರಸಿ ಚಲುವರಾಯನೆಂದು ಸ್ಥಾಪಿಸಿ ಇವು ಮೊದಲಾಗೆ ಬಸದಿಗಳೊಳಗಿರ್ದ ಹೇಮ ರಜತಮಯೋಪಕರಣಂಗಳಂ ಪ್ರತಿಮೆಗಳಂ ಕಳ್ಳಭಂಟರಿಂ ತರಿಸಿ ವಿಷ್ಣುಗೃಹದೊಳ್ ಪ್ರತಿಮೆಗಳಂ ಮಾಡಿಸುತ್ತಂ ೧೧೧೯ ರಿಂದ ೧೨೦೦ ಪರ್ಯಂತರ ನಡೆಯಿತು. ಅಷ್ಟರಲ್ಲೆ ರಾಜ್ಯದೊಳ್ ಧರ್ಮವಿಧ್ವಂಸಮಾಗೆಯನೇಕ ಉತ್ಪಾತಂಗಳಾಗಿ ಅಡುಗೂರು ಬಳಿಯಲ್ಲಿ ಭೂಮಿ ಬಾಯ್ತೆರೆದು ಅತಿಭಯಂಕರಮಾಗೆ ಭೂಮಿಹಿದ್ದಿ ಭೂವಿವರದಿಂ ಮಹಾಖಾತಮಾಗೆ ಆಕಾಶದೊಳ್ ಪಾರುವ ಪಕ್ಷಿಗಳನೆಳೆದುಕೊಳ್ಳುತ್ತೆ ಹೆಚ್ಚಿ ಬರುತ್ತಿಪ್ಪುದುಂ ಬಲ್ಲಾಳರಾಯನದಕ್ಕೆ ಉಪಶಮಮಂ ಮಾಡಲಶಕ್ಯಮಾಗೆ ನಾನಾವಿಧ ಪ್ರತೀಕಾರಮಂ ಷಣ್ಮತದವರೆಲ್ಲಂ ಮಾಡಿದೊಡಂ ನಿಲ್ಲದೆಯಿರಲನೇಕ ಪ್ರಾಣಹಿಂಸೆಯ್ದೊಡೆ ಪೆಚ್ಚುತ್ತುಂ ಬರೆ ನರಬಲಿಯಂ ಕೊಡಲೆಂದೊಡಂ ಅತ್ಯಾಸನ್ನಕ್ಕೆಯ್ದಿದ ನರಗೋಮಹಿಷಾದಿಗಳಂ ತಾನೆ ಎಳೆದುಕೊಳ್ವುದರಿ ನಿಲಲರಿದೆಂದತಿಭೀತಿಯಿಂ ಚಿಂತಾಕ್ರಾಂತನಾಗಿ ಜಿನಮುನಿಗಳಿಂದಲ್ಲದೆ ನಿಲ್ಲದೆಂದು ಬಲ್ಲಾಳರಾಯಂ ತಾನೆ ಹನಸೋಗೆಯಲ್ಲಿಗೆಯ್ದಿ ಅಲ್ಲಿ ಮಠದೊಳಿರ್ದ ಶ್ರೀಜೈನಯೋಗೀಶ್ವರರ್ಗೆ ನಮೋಸ್ತು ಮಾಡಿ ನನ್ನ ಪಾಪೋದಯದಿಂದೆನಗಿಂತಾದುದೆನ್ನ ಜೀವರಕ್ಷದಕ್ಷನಾಗಿ ಪಾಲಿಸಬೇಕೆಂದು ಬೇಡಿಕೊಂಡವರಂ ರತ್ನಮಯ ಸಿವಿಗೆಯನೇರಿಸಿಕೊಂಡು ಬಂದಾ ಭೂಗರ್ತದ ಸಮೀಪದೊಳಿರಿಸಿ ಸಮಸ್ತ ಚರಾಚರಪ್ರಾಣಿಗಳುಳಿವಂತೆ ಏನಾದರಂ ತಾವು ಬಲ್ಲಂದರಿಂ ನಿಲ್ವಂತು ಮಾಳ್ವುದೆಂದಡ್ಡಗೆಡೆದು ಬಿನ್ನವಿಸೆಯಾ ಪ್ರದೇಶದೊಳ್ ಚತುರ್ವಿಂಶತಿ ಹಸ್ತಾವಿಸ್ತಾರಾಯಾಮಸಮ ಚತುರಸ್ರ ಸಮತುಂಗ ಚತುದ್ವಾರವಿರಾಜಿತ ಕ್ಷೀರದ್ರುಮಾದಿಗಳಪ್ಪ ಷೋಡಶಸ್ತಂಭಸಂಭೃತ ಘಂಟಾ ದರ್ಪಣಾದಿಗಳಿಂ ಧವಲದುಕೂಲವಸನ ಸಮುತ್ತಂಗಮಪ್ಪ ನಾಲ್ಕು ಮಂಡಪಂಗಳಂ ನಿರ್ಮಿಸಿ ಮಹಾಹೋಮಕಲಿಕುಂಡ ಮೃತ್ಯುಂಜಯ ಮೊದಲಾದ ಯಂತ್ರಾರಾಧನೆಗಳಿಂ ಅಂತರಂಗ ಬಹಿರಂಗ ತಫೋಲಕ್ಷಿಯುಳ್ಳ ಚಂದ್ರಕೀರ್ತಿಗಳೆಂಬ ಮುನೀಶ್ವರರಿಂ ಊರ್ಜಯಂತಪರ್ವತದ ಶಿಖರದೊಳ್ ಶ್ರೀನೇಮಿತೀರ್ಥಂಕರ ಚರಣಮನಾರಾಧಿಸುವಲ್ಲಿ ದಶಧರ್ಮ ಸಂಪತ್ತಿಯುಳ್ಳ ಅನಂತವೀರ್ಯ ಮುನೀಶ್ವರರ್ ವಿದ್ಯಾಪತಿಯೆಂಬ ಸಮ್ಯಗ್ದೃಷ್ಟಿಗುಪದೇಶಿಸಲ್ಪಟ್ಟುದು. ಅಷ್ಟವಿಂಶತಿ ಮೂಲಗುಣ ಸಂಪನ್ನ ಪಂಡಿತ ಪದ್ಮಣಂದಿಗಳೆಂಬ ಪರಮಗುರುಗಳಿಂ ಪಡೆಯಲ್ಪಟ್ಟುದು ರತ್ನತ್ರಯಶ್ರೀಯನ್ನುಳ್ಳ ರಾಜಪುತ್ರಂಗುಪದೇಶಿಲ್ಪಟ್ಟು ಬ್ರಹತ್ಸಿದ್ಧಚಕ್ರಕ್ರಮಂ ಮಹಾಶಾಂತಿಚಕ್ರಮನಾರಾಧಿಸಿ ಸೆರೆ ಸಂಕಲೆ ಮೊದಲಾದುಪದ್ರವಂ ಜನರ್ಗಿಲ್ಲದಂತು ನಿರ್ಭಯಮಂ ಮಾಡಿಸಿ ದೇವ ಮನುಷ್ಯ ತಿರ್ಯಂಚ ಮೊದಲಾದ ಜೀವಂಗಳೆಲ್ಲ ಸಂತೋಷಮಪ್ಪಂತು ತೃಪ್ತಿಬಡಿಸಿ ಸಕಲ ಸಂಪತ್ಸಂಪಾದಕ ದಯಾಮಯ ಮಹಾ ಯಜ್ಷಮಂ ಮಾಡಿಸಿ ೧೦೮ ಬೂದಿಗುಂಬಳಕಾಯಂ ತರಿಸಿ ಮಂತ್ರಿಸಿ ಒಂದೊಂದ ಕೂಷ್ಮಾಂಡಮಂ ಭೂಮಿಯಗರ್ತಕ್ಕುರುಳಿಸಲೊಂದೊಂದಂಬಿನೆಸಗೆ ಹೂಳುತ್ತುಂಬರೆ ನೂರೇಳುಫಲಕ್ಕೆ ಮೇಲೊಂದೆಸಗೆಯುಳಿಯೆ ಷಣ್ಮತಸ್ಥರೆಲ್ಲರ್ ಮುಳಿದೊಂದಂಬಿನಸಗೆಯ ಮುಚ್ಚಿಸಿಮೆಂದೊಡವರಿಂ ತೀರದೆ ತಮ್ಮ ತಮ್ಮ ಬಿರುದು ಸಿಂಹಾಂಕಿತ ಸಿಬಿಗೆ ಶ್ವೇತಚ್ಛತ್ರಮುಭಯ ಚಾಮರ ಬಲಮುರಿ ಶಂಖ ಕಾವೀವಸ್ತ್ರ ಮೊದಲಾದ ಬಿರುದುಗಳಂ ಮಂದಿರಿಸಿ ಪೊಗಳೆ ಉಳಿದಿರ್ದ ಕೂಷ್ಮಾಂಡವೊಂದಂ ಮಂತ್ರಿಸಿಕ್ಕುವುದುಂ ಭೂಮಿ ಸಮತಳಮಾಗೆಯದರ ಮೇಲೆ ಜಿನಪ್ರತಿಮೆಗೆ ಮಹಾಸ್ನಪರಾಧನೆಯಿಂ ಬಹುಜನಕ್ಕನ್ನದಾನ ಮೊದಲಾಗೆ ಮಾಡಿಸಿದರು. ಆವಾಗ ಆ ಯತೀಶ್ವರರಿಗೆ ಚಾರುಕೀರ್ತಿಯೆಂದು ಬಲ್ಲಾಳರಾಯ ಜೀವರಕ್ಷಪಾಲಕರೆಂದು ಮೊದಲಾದ ಬಿರುದಾವಲಿಯುಂಟಾಯಿತು. ಚಾರುಕೀರ್ತಿಗಳಿಗೆ ಅನೇಕ ಬಿರುದು ಕೊಟ್ಟು ಶಿಷ್ಯನಾದನು. ಆಳ್ವಾರ ಪೆರುಮಾಳಭಿಕ್ಷುಕ ರಾಮಾನುಜರನೇಕ ಶಿಷ್ಯರ್ವೆರಸಿ ಅನೇಕ ದೇಶಮಂ ಸಂಚರಿಸಿದರು. ದಿವ್ಯಕುಂಭಮೆಂದು ನಾಲ್ಕು ಸಾವಿರದ ನೂರ ಹದಿನೆಂಟು ಕಲಿವರುಷದಿಂತೊಟ್ಟು ನೂರಿಪ್ಪತ್ತು ವರುಷದವರೆಗೂ ಪ್ರಬಲವಾಗಿತ್ತು.

ಮತ್ತಂ ಅತ್ತಲು ಶ್ರೀವೀರಬಲ್ಲಾಳಬೀಡಿಂಗೆ ಡಿಳ್ಳಿಯಿಂದಾ ವರನಂದಿಬೀಬಿಯು ಬರುವಲ್ಲಿ ತಂದೆಯಂ ಬೀಳ್ಕೊಂಡು ನಾನು ದೂರ ಪೋದಪೆ ಸಮಾಚಾರಮನೆಂತು ತಿಳಿಯಬೇಕೆಂದುಂಗಾವುದಕೊಂದಭಯಭೇರಿಯಂ ಇಡಿಸಿದ್ದನು. ತಾನು ಬಂದು ಬೇರೊಂದರಮನೆಯೊಳಿರ್ದು ಬಲ್ಲಾಳಂ ತನ್ನ ಸೇರದೆ ಇರುವಲ್ಲಿ ಅರಸಿಯರು ವನೋದದಿಂ ಕಪಿಯನಲಂಕರಿಸಿ ಕಳುಹಿಸುವುದುಂ ನೋಡಿ ತನ್ನಂ ಹಾಸ್ಯ ಮಾಳ್ಪ ಭಾವಮೆಂದು ಕೋಪಿಸಿ ಭೇರೀನಾದಮಂ ಮಾಡಿಸೆ ಪಾದಶಾಯಂ ಭೇರೀನಾದಮಂ ಕೇಳಿ ನಾಲ್ಕು ಜನ ತನ್ನ ವಜೀರರಂ ಬಣ್ಣಕ್ಕೆ ಲಕ್ಷ ಕುದುರೆಯ ಸಹಿತ ಹದಿನೆಂಟು ಲಕ್ಷ ಪಾಯಿದಳ ಸಹಿತಂ ಕಳಿಪೆ ಮಲ್ಲಗಸುಂದರ್ ಮಲ್ಲಿಗುಜುನ್ನರ್ ಮಲ್ಲಿಗವಜೀರ ಎಂಬುವರು ಬಂದೊಟ್ಟನಿಲೆ ಬಲ್ಲಾಳಂ ತನ್ನ ಬಲಸಹಿತಂ ಚಂದ್ರದ್ರೋಣಪರ್ವತದೊಳು ಮಹಾಯುದ್ಧಮಂ ಮಾಳ್ವಲ್ಲಿ ವರನಂದಿಬೀಬಿ ಒಂದು ಹುಹೆಯಂ ಹೊಕ್ಕು ಅಲ್ಲೇ ಹತವಾದಳು. ಬಲ್ಲಾಳನು ಸಮಸ್ತೆ ಬಲಮಂ ತರಿದೊಟ್ಟಿ ಏಳು ದಿವಸ ಹಗಲು ರಾತ್ರಿಯಲ್ಲಿ ಎತ್ತಿದ ಕತ್ತಿಯನಿಳುಕದೆ ಬಲಮಂ ಸಂಹಾರಮಂ ಮಾಡಿ ನಿತ್ತರಿಸಲಾರದೆ ಮತ್ತೊಂದು ಗುಹೆಯಂ ಪೊಕ್ಕು ಅಲ್ಲೆ ದೀರ್ಘನಿದ್ರಗೈದಂ.

ಐದು ಜನ ವೃದ್ಧಫಕೀರರು ನಾವು ಈ ಸಮಾಚಾರವನೇನೆಂದು ಹೋಗಿ ಹೇಳಬೇಕೆಂದು ಜೀವವೆರಸಿಯಾ ಪರ್ವತದೊಳೆ ಗೋರಿಯಂ ಪೊಕ್ಕರು. ಸಿಂಧುಬಲ್ಲಾಳ ಮೊದಲಾದ ಹರಿವಂಶದರಸುಮಕ್ಕಳೆಲ್ಲಾ ಶ್ರೀಮುದ್ರೆನಾಮಧರರಾಗೆ ಒಂದೊಂದು ಗ್ರಾಮಮಂ ಪೊಕ್ಕು ಅಲ್ಲಲ್ಲಿ ಸ್ಥಳಮಂ ಮಾಡಿಕೊಂಡರು. ಜೈನವೈಶ್ಯರು ರಾಮಾನುಜರಿಂ ಶಿಕ್ಷಿಸಲ್ಪಟ್ಟರಾಗಿ ವೆಂಕಟಪುರಾಶ್ರಯದಿಂದ ನಾನಾ ಭೇದದಿಂದ ವರ್ತಿಸಿದರು. ಶೂದ್ರರೊಳು ದಾಸಗೌಡ ಬಣಜಿಗ ತಿರುಕುಲದಾಸರಾದಿಯನೇಕ ಭೇದದಿಂದೊಪ್ಪಿದರು. ಚಾತಾಳಾಭಿದಾನದಿಂ ೪೬ ಭೇದವಾಯಿತು. ಈ ಮೇರೆ ಬಲತ್ಕಾರದಿಂ ಜೈನ ಸ್ಮಾರ್ತ ಶೈವರ ಚಾತುರ್ವರ್ಣಕ್ಯಂ ನಾಮನಾಮವನಿಕ್ಕಿಸುವಲ್ಲಿ ದೇವಿಹಳ್ಳಿ ಕಡದರವಳ್ಳಿ ಅಡಗೂರು ಸಾವಂತಹಳ್ಳಿ ಹೊಂಗರೆಯೆಂಬ ಪಂಚಗ್ರಾಮದ ಶ್ರಾವಕರು ಭಂಗಾರಮ್ಮ ಸಿಂಗಾರಮ್ಮಗಳಿಗೆ ಅತಿಶಯವಾದ ವಸ್ತ್ರಾಭರಣಾದಿಗಳಂ ಕೊಟ್ಟು ಬಹಳ ಬಗೆ ಹೇಳಿಕೊಂಡು ವಿಷ್ಣುವರ್ಧನಂಗರಿಕೆಯಂ ಮಾಡಿಕೊಂಡು ನಮ್ಮ ಮನೆ ಪ್ರಸ್ತ ಪ್ರಯೋಜನದೊಳು ರಾಮಾನುಜರ ಪೆಸರು ನಿಮ್ಮ ಹೆಸರುಮಂ ಹೇಳಿ ಪೂಜೆಯಂ ಮಾಡುತ್ತಿದ್ದೇವೆ ಎಂದು ಬಿಡಿಸಿಕೊಂಡರು. ಆದರಿಂದವರು ನಾಮವಿಕ್ಕದೆ ಗೌಡರೆಂದು ಪೆಸರಾಯ್ತು.

ಪೂರ್ವಾರಭ್ಯ ಅಷ್ಟರವರಿಗು ಮತಭೇದವಾದಾಗ್ಯು ಎಲ್ಲರುಂ ಅಭ್ಯಕ್ಷ್ಮಂಗಳಂ ಮುಟ್ಟದೆ ಜಲಗಾಲನ ಮೊದಲಾದ ಶೋಧನೆ ಭೇದನೆಯಿಂ ಪಾಕಶುದ್ಧಿಯುಳ್ಳರಾಗಿರ್ದುದರಿಂ ಏಕರಾಗಿ ಭೋಜನ ಪ್ರತಿಭೋಜನಂ ಮೊದಲಾಗಿ ಕೆಲರು ಕೊಳ್ಕೊಡೆಯಿಂ ಜೈನ ಶೈವ ವೈಷ್ಣವರು ಏಕವಾಗಿ ನಡೆಯುತ್ತಿರಲೀ ರಾಮಾನುಜ ಶಂಕರಭಟ್ಟ ರುದ್ರಾರಾಧ್ಯರಿಂ ತಂತಮ್ಮ ಶಿಷ್ಯರಂ ವಿಂಗಡಿಸಿ ಪ್ರತ್ಯೇಕವಾಗಿ ನಿಂತು ಭೋಜನಾದಿಗಳಂ ಬಿಟ್ಟರು. ಅಲ್ಲಿಂದಿತ್ತ ಶೈವ ವೈಷ್ಣವಾದಿಗಳು ಶೋಧನೆ ಭೇದನೆಯಂ ಬಿಟ್ಟು ಅಭಕ್ಷಂಗಳೆಲ್ಲಮಂ ಸೇವಿಸುತ್ತಾ ಬಂದರು. ಈ ಬಲ್ಲಾಳರ ಕಾಲದೊಳೆ ಶಕಾಬ್ದ ೧೧೧೩ ರಿಂ ೧೨೩೦ ಪರ್ಯಂತರಕ್ಕು ಡಣಾಯಕರೆಂದು ಅರಸುಗಳೆ ಕೆಲಕಲವು ರಾಜ್ಯಮಂ ಬಲ್ಲಾಳರನುಮತದಿಂದಾಳಿದವರರಾರಾರೆಂದೊಡೆ ಕೇಶವಡಣಾಯಕಂ ಬಲ್ಲಾಳನ ಮಹಾ ಪ್ರಧಾನಂ ನೀಲಗಿರಿಯೊಳು ನಿಂದು ರಾಜ್ಯಂಗೆಯ್ದನಾತನ ಮಗಂ ಮಾಧವಡಣಾಯಕರವರ ಸಂತತಿಯವರು ಬೆಟ್ಟದಕೋಟೆಯೊಳಿದ್ದರು. ಅಲ್ಲಿ ಮಾದವಡಣಾಯಕ ಭೀಮ ಡಣಾಯಕನಾ ಮಾಧವಡಣಾಯಕರು ತಮ್ಮ ಪ್ರವಿತಾಮಹರು ಕಟ್ಡಸಿರ್ದ ವಾಸುದೇವರ ದೇವಸ್ಥಾನಮಂ ಜೀರ್ಣೋದ್ಧಾರಮಂ ಮಾಡಿ ಇಪ್ಪತ್ತೆರಡು ಹಳ್ಳಿಗೆ ಒಡೆಯನಾಗಿರ್ದಂ. ಹೆಡತಲೆಯಲ್ಲಿ ಚಂದಣ್ಣಡಣಾಯಕಂ ೧೫ ಗ್ರಾಮಕ್ಕೆ ಪ್ರಭುವಾಗಿರ್ದಂ. ಗೋವಿಂದಡಣಾಯಕ ಶ್ರೀಪತಿಡಣಾಯಕ ದೇವಣ್ಣಡಣಾಯಕ ವೆಂಕಟಪತಿಡಣಾಯಕರು ಬಡಗಲ ಕೆಲವು ನಾಡಿಗೆ ಒಡೆಯರಾಗಿರ್ದರು. ಬೆಟ್ಟದ ಕೋಟೆ ಗೋವಿಂದಡಣಾಯಕನ ಮನೆ ಪ್ರಸ್ತದೊಳು ಹಿಂಡಿ ಸಂಡಗೆ ವ್ಯವಹಾರದಿಂದ ನೀಲಗಿರಿಯ ಸೋಮಡಣಾಯಕಂ ದಂಡೆತ್ತಿ ಬಂದು ಬೆಟ್ಟದಕೋಟೆ ಮುತ್ತಿ ಹಿಡಿವಲ್ಲಿ ಕುದುರೆಯನೇರಿ ಬೆಟ್ಟದ ಕಮರಿಗೆ ಲಂಘಿಸಿ ಬಿದ್ದುದರಿಂದಲ್ಲಿರ್ದಸುಮಕ್ಕಳು ವರ್ತಕರು ಗವುಡಗಳು ಸಹಾ ಬಂದುತ್ತರದ ಕುಲುಗಣದಾ ಹೋಬಳಿಯೊಳು ಬಂದು ನಿಲಲು ಇಟ್ಟೆಡೆಯಾಗೆ ಹಿರೀಬೇಗೂರ ಕೂಚಿರಾಜನ ಮಗಂ ಜಿನಮತಮಂ ಬಿಟ್ಟು ನಾಮಧಾರಿಯಾಗಿ ಮಹಂಕಾಳಿ ಯೆಂಬ ದೇವಿಗೆಂ………………..ಣನೆಂಬ ಪೆಸರಿಂದಿರಲಲ್ಲಿಗೆ ಬೆಟ್ಟದ ಕೋಟೆಯಿಂ ಬಲದ ………………..ಳಾದರು, ಅರಸುಗಳು ಉತ್ತರ ಪಶ್ಚಿಮದ ಸೀಮೆಗೆಯ್ದಿ ನಿಂತರು. ಕೆಲವು ದೇಶದೊಳು ಡಣಾಯಕರು ಶಕ ೧೨೫೦ ವರಿಗೂ ಆಳಿದರು. ಅಷ್ಟರೊಳು ಲಕ್ಷ್ಮಣದೇವರಾಯಂ ರಾಜ್ಯಬಾರ ………………..ಷಯಶ್ಚಂದ್ರಿಕೆಯ ಪಸರಿಸಿದುಂ

ಇಂತೀ ಕಥೆಯಂ ಕೇಳ್ವರ
ಭ್ರಾಂತಿಯು ನೆರೆ ಕೆಟ್ಟು ಬಳಿಕಮಾಯುಂ ಶ್ರೀಯುಂ
ಸಂತಾನವೃದ್ಧಿಯಪ್ಪುದ
ನಂತರ ಸುಖಕ್ರಮದಿ ಬಪ್ಪುದಿದು ಸಿದ್ಧಾಂತಂ

ಇದು ಸತ್ಯಪ್ರವಚನ ಕಾಲಪ್ರವರ್ತನ ಪಾರಾವಾರೋದ್ಧೃತದೇವಚಂದ್ರಕೃತ ರಾಜಾವಲೀ ಕಥಾಸಾಗರದೊಳ್ ಚೋಳ ಬಲ್ಲಾಳಡಣಾಯಕ ರಾಜ್ಯಪಾಲನ ವಿವರಣಂ.

ನವಮಾಧಿಕಾರಂ