ಶ್ಲೋಕ || ರಾಜ್ಞಿಧರ್ಮಿಣಿ ಧರ್ಮಿಷ್ಠಾಃ ಪಾಪೇ ಪಾಪಾಸ್ಸಮೇ ಸಮಾಃ
ಭವಂತಿ ಸರ್ವಕರ್ಮೇಷು ಯಥಾ ರಾಜಾ ತಥಾ ಪ್ರಜಾಃ ||

ಅಂತರಸಂ ಒಲುಮೆಯಿಂ ಕವಿತ್ವಮನಿಂತು ಮಾಡುತಿರ್ದಂ

ಮುಳ್ಳಿಗೆ ಮೊನೆ ಪುಟ್ಟಿಸಿದೆ ಮಲ್ಲಯ್ಯ
ನಳ್ಳಿಗೆ ಕಾಲ ಪುಟ್ಟಿಸಿದೆ ಮಲ್ಲಯ್ಯ
ಕಲ್ಲಿಗೆ ಕಠಿಣ ಹುಟ್ಟಿಸಿದೆ
ಬಿಲ್ಲಿಗೆ ಬಾಗ ಹುಟ್ಟಿಸಿದೆ
ಎತ್ತಿಗೆ ಎರಡು ಕೊಂಬ ಹುಟ್ಟಿಸಿದೆ
ಕೊತ್ತಿಗೆರಡು ಕವಿಯ ಹುಟ್ಟಿಸಿದೆ ಮಲ್ಲಯ್ಯ

ಎಂದಿಂತನೇಕವಾಗಿ ಕವಿತ್ವಮಂ ಮಾಡುತ್ತುಂ ಪ್ರಧಾನ ಬೊಮ್ಮರಸಯ್ಯನಂ ಕರೆದು ನೀನೆನ್ನ ಕವಿತೆಯ ಬರೆಯುತ್ತಾ ಬಪ್ಪುದೆಂದು ನಿಯಮಿಸೆ ತಥಾಸ್ತು ಎಂದು ಅಹರ್ನಿಸಿಯು ಓಲೆ ಕಂಠಮಂ ಪಿಡಿದು ಬರೆಯುತ್ತುಮಿರಲೊಂದು ದಿನಂ ತಾನುಂ ಮಾಡಿಸಿದ ವನಮಂ ನೋಡಲೆಂದು ಪೋಗುತ್ತುಂ ಪೇಳ್ವ ಕವಿತೆಗಳ್ ಬರೆಯುತ್ತುಂ ಪೋಗುತ್ತಿರೆ ಒಂದು ವಾಕ್ಯಮಂ ಪೇಳೆ ಬರೆಯಲ್ ಕಂಠಂ ಜಳುಪಿ ಬೀಳ್ವುದುಂ ಕಂಠಮಂ ಕೊಂಡು ಈಗಲೊರೆದ ಕವಿತೆ ಯಾವುದದ ಕಟ್ಟುಮಾಡಿಸಿ ಬರೆವೆನೆಂಬುದುಂ ಎಲಾ ಎನ್ನಿಷ್ಟದೇವರ ಒಲುಮೆಯ ಕವಿತೆಯಂ ಬರೆಯದೆ ಮರೆದೆಯಾ ನಿನ್ನಂ ಕಡಿವೆನೆಂದು ಕತ್ತಿಯೊರೆಯನುರ್ಚುವುದುಂ ಕಂಡಾಕ್ಷಣವೆ ಕುದುರೆಯಿಂ ಲಂಘಿಸಿ ಹುಂಕಾರಂಗೆಯ್ಯುತ್ತೆ ವಸ್ತ್ರಾಭರಣಂಗಳ್ ದಿಕ್ಕುದಿಕ್ಕಿಗೆ ಚಲ್ಲರಿಯೆಯತಿವೇಗದಿಂ ತಲೆಯಂ ತಿರುಹುತ್ತುಮಾವೇಶವಾಡುವ ಪ್ರಧಾನನಂ ಕಂಡು ನೀನಾರೆನೆ ಎಲಾ ನಾನೇ ಮಲ್ಲಯ್ಯ ಕಾಣೋ ಎಂದತ್ಯಾಗ್ರಹಂಗೆಯ್ಯಲಂಜಿ ಕತ್ತಿಯ ಒರೆಯೊಳಿಕ್ಕಿ ಭಕ್ತಿಯಿಂ ಕೈಯಂ ಜೋಡಿಸಿಕೊಂಡೇನುಕಾರಣ ದಯಮಾಡಿದಿರೆಂಬುದುಂ ಎನ್ನ ನಾಮಸ್ಮರಣೆಯು ಮನಸ್ಸಿನೊಳ್ ಐಕ್ಯವಾಗಿರಬೇಕಲ್ಲದೆನ್ನಂ ಮಾರ್ಗದೊಳುಚ್ಛಿಷ್ಟದೆಡೆ ಮೊದಲಾದವರಲ್ಲಿ ಪೇಳಿಯೆನ್ನ ಗುಣಮೆಲ್ಲಂ ಬೀದಿಯ ಪಂಚಾಂಗಂ ಮಾಡಿದೆ ನಿನಗೆ ಕಿಚ್ಚ ಹಾಕದೆ ಬಿಡುವೆನೇ ಎಂದ ಮಾತಿಂಗಂಜಿ ಅಪ್ಪಣೆ ಪ್ರಕಾರ ನಡೆದುಕೊಳ್ಳುತ್ತಿದ್ದೇನೆ, ಎಂಬುದೊಳ್ಳೆಂದು ಶೀತೋದಕಮನಿಟ್ಟು ಬೀಸುವುದುಂ ಮಹಾಕಷ್ಟದಿಂದೆಚ್ಚತ್ತು ತನ್ನ ವಸ್ತ್ರಾದಿಗಳಂ ಕೊಂಡು ಕುದುರೆಯನೇರಿಬಪ್ಪಾಗಳರಸಂ ದೇವರು ಬಂದು ತನಗರಿಪಿದುದೆಲ್ಲಂ ಪೇಳೆಯದು ಸಹಜವೆಂದಿತೆಂದಂ

ಶ್ಲೋಕ || ಸೂತಕೋಚ್ಛಿಷ್ಟವಿಣಾತ್ರೇ ನೀಚ ಸಂವೇಷ್ಟಿತ ಸ್ಥಲೇ
ಶಾಸ್ತ್ರಾಣಿ ಪಠತೇ ನಿತ್ಯಂ ಮಂದಬುದ್ಧಿ ಪ್ರಚಕ್ಷ್ಯತೇ ||

ಎಂಬುದರಿಂದನುಚಿತಮೆಂದು ಸಹಜಮೆನೆ ಮತ್ತೊಂದು ದಿವಸಂ ತನ್ನ ಮಗಳ ಸ್ತನಭಾವಂಗಳಂ ನೋಡಿ ಮೋಹವಶಗತನಾಗಿಯಾಸ್ಥಾನದೊಳೆದ್ದು ಬುದ್ಧಿವಂತರಂ ಬರಿಸಿ ತಾನುಂ ಬಿತ್ತಿ ಬೆಳೆದ ಬೆಳೆಯಂ ತಾನುಣಬಹುದೆ ಎನಲೆಲ್ಲರುಮುಣಬಹುದೆಂಬುದುಮಷ್ಟರೊಳು ಪ್ರಧಾನಂ ಬರಲಾತನಂ ಕೇಳ್ವುದುಂ ಕಾಲೋಚಿತಮನರಿದು ಆಗುವದಾಗುವುದಾಗದುದಾಗದೆಂದು ನುಡಿಯೆ ತಿಳಿದನೆಂದು ಕೋಪಿಸಿರ್ದು ಮತ್ತೊಂದು ದಿವಸಮಾರೋಗಿಸಿ ಶತಪಥಮಂ ಮಾಳ್ಪಾಗಳ್ ಬೋಮ್ಮರಸಂ ಬಂದು ಕಾಣಲು ಕೈಯಲ್ಲಿ ಕಠಾರಮಂ ಪಿಡಿದಿರ್ದು ಎಲಾ ಪ್ರಧಾನಿ ಈ ಕಠಾರಿಯೊಳ್ ನಿನ್ನಂ ತಿವಿಯಲು ಹೇಗೆನಲಾದೊಡೆ ಬದುಕಿದೆನೆನಲಾಗಳೆ ಪೊಟ್ಟೆಯೊಳಿಕ್ಕಿಯೆಳೆಯಲ್ ಪ್ರಧಾನಿ ಬೊಮ್ಮರಸಂ ಮೃತನಾದಂ.

ವೃತ್ತ || ಕಾಕೇ ಶೌಚಂ ದ್ಯೂತ ಕಾರೇ ಚ ಸತ್ಯಂ
ಸರ್ಪೇ ಕ್ಷಾಂತಿ ಸ್ತ್ರೀಷು ಕಾಮೇಪ ಶಾಂತಿಃ
ಕ್ಲೀಬೇ ಧೈರ್ಯಂ ಮದ್ಯಪೇ ತತ್ವಚಿಂತಾ
ರಾಜ್ಞಾಂ….. ಮೈತ್ರೀ ಕೇನ ದೃಷ್ಟಂ ಶ್ರುತಂ ವಾ ||

ಮತ್ತಿತ್ತ ಮಹಿಸೂರೋಳು ಕೆಲಕೆಲವು ರಾಜ್ಯಮಂ ವಶಂ ಮಾಡಿ ವಿವೇಕದಿಂ ರಾಜ್ಯಪಾಲನೆ ಮಾಡುತ್ತಿರ್ದರ್.

ಉಪಜಾತಿ

ವೃತ್ತ || ಪ್ರಭುರ್ವಿವೇಕೀ ಪ್ರಮದಾ ಸುಶೀಲಃ
ವಿದ್ವಾನ್ವಿರಾಗೀ ಧನವಾನ್ ಪ್ರದಾನಾ
ತುರಂಗಮಃ ಖಡ್ಗ ನಿಪಾತಧೀರಃ
ಪಂಚೈವ ರತ್ನಾನಿ ಭವಂತಿ ಲೋಕೇ ||

ಮತ್ತಾರಾದೊಡಂ

ವಿವೇಕ ವೈರಾಗ್ಯ ಸುಪಾದುಕಾಭ್ಯಾಂ
ಪದೇ ಪದೇ ಸಂಚರತೀತಿ ಸಾಧುಃ
ಗ್ರಾಮೇಷು ಖೇಟೇಷು ಚ ಪತ್ತನೇಷು
ಸ್ತ್ರೀಕಂಟಕಾಸ್ಸಂತಿ ವಿಚಿತ್ರ ರೂಪಾಃ ||

ಅದಕ್ಕದೆಯುಂ

ವೃತ್ತ || ವಿದ್ಯಾರತ್ನಂ ಸರಸ ಕವಿತಾ ಯಾನರತ್ನಂ ತುರಂಗೋ
ವಾಂಛಾರತ್ನಂ ಪರಮಪದವೀ ಭೋಗರತ್ನಂ ಮೃಗಾಕ್ಷೀ
ಅಂಬೋರತ್ನಂ ಗಗನತಟಿನೀ ಮಾಸರತ್ನಂ ವಸಂತೋ
ಭೂಭೃದ್ರತ್ನಂ ಕನಕಶಿಖರೀ ಜ್ಞಾನರತ್ನಂ ವಿವೇಕಃ ||

ಅಂತು ರಾಜನೀತಿಯಂ ಬಿಡದೆ ವಿವೇಕದಿಂ ಷಣ್ಮತಮಂ ಪರಿಪಾಲನೆಯಂ ಮಾಡುತ್ತಿಪ್ಪುದುಂ ತೆಂಕಣನಾಡಿ ಪ್ರಜೆಗಳಂ ಮಠದ ಒಡೆಯರು ಪ್ರೇರಿಸೆ ಸಿದ್ಧಾಯಮಂ ಕುಡದಿಪ್ಪುದುಂ ವಿಚಾರದ ರಾಘವಯ್ಯನಂ ಕಳುಹಿಸೆ ನಮ್ಮ ಒಡೆಯರೆಮ್ಮ ಗುರುಗಳವರ್ಗೆಕೊಡುವೆವಲ್ಲದೆ ನಿಮಗೇಕೆ ಎಂಬುದುಂ ಅರಸುಗಳು ಭೂಮಿಯೆಲ್ಲಮಂ ನಿಮಗೆ ಕೊಟ್ಟಿಪ್ಪುದರಿಂದಾ ಭೂಮಿಯೊಳು ಪೈರುಮಾಡಿ ಅನುಭವಿಸುವುದರಿಂ ಸಿದ್ಧಾಯಮಂ ಭೂಮೀಶ್ವರ್ಗೆ ಕೊಟ್ಟು ಬಾಳ್ವುದು ಪ್ರಜೆಗೆ ನ್ಯಾಯಮದರಿಂ ಕೊಡಿಮೆಂದು ತೆಗೆದುಕೊಂಬುದುಂ ಕೆಲಂಬರ್ ವಿವೇಕಶೂನ್ಯರ್ ಭೂಮಿಯಂ ನಮಗಿತ್ತು ಆ ಭೂಮಿಯೊಳ್ ತಾನಿರ್ದು ಹಜಾರಮಂ ಮಾಡಿ ಕುಳ್ಳಿಪ್ಪನದನುತ್ತು ಬೆಳಸಂ ಮಾಳ್ಪೆವೆಂದು ಗಡಿಯೊಳಿರ್ದ ಹಜಾರಮನುಳಲುದ್ಯೋಗಿಸಲಾ ವಾರ್ತೆಯಂ ಕೇಳಿ ಇನ್ನೂರು ಕುದುರೆಯನಟ್ಟಿ ಹಿಡಿತರಿಸಿ ೧೦೦ ಪ್ರಜೆಯಂ ತರಿಸಿ ಕಾವಲೊಳಿಟ್ಟು ಅಪರಾಧಮಂ ತಾಯೆಂಬುದುಂ ಹಣಮೆಲ್ಲಿಪ್ಪುದೆಂದವರೊಳೊಬ್ಬನೆಂದನೊಂದೊಂದು ಎಮ್ಮೆಯಿಪ್ಪವನಂ ತೆಗೆದುಕೊಳ್ಳಿಮೆನೆ ಅವರ್ಗೆಲ್ಲಂ ವರುಷವೊಂದಕ್ಕೆ ಎಳ್ಳು ಬೆಳೆದವರು ಒಂದು ಕೊಳಗ ಎಮ್ಮೆ ಕರೆವರು ಒಂದು ಕೊಳಗ ಬೆಣ್ಣೆ ಈ ಪ್ರಕಾರ ಬೇಡಿದರೆಂದು ನಿಯಮಿಸಿ ಗ್ರಾಮಾದಿಗ್ರಾಮದಲ್ಲು ಪ್ರಜೆಗಳಿಂದರಮನೆಗೆ ತೆಗೆದು ಕಳುಹಿಸುವಂತೆ ನಿರೂಪಮಂ ಕೊಟ್ಟಾ ಪ್ರಜೆಗಳಂ ಬಿಟ್ಟರಲ್ಲಿಂದಿತ್ತಲು ಬೀಡಿಗೆ ಬೆಣ್ಣೆ ಎಳ್ಳು ಸಹಾ ವರುಷಂ ಪ್ರತಿವರ್ಷಂಗಳಲ್ಲಿ ಎತ್ತಿ ಕಳುಹಿಸುತ್ತಾ ಬಂದರು. ಮತ್ತೊಂದು ದಿವಸ ಡಿಳ್ಳಿಯಿಂದಮೋರ್ವ ವಿದ್ವಾಂಸಂ ಬಂದರಸನಂ ಕಾಣ್ಬುದುಂ ನೀನಾರೇನು ನಿಮಿತ್ತಮೆತ್ತಣಿಂ ಬರವೆಂಬುದುಂ ನಾಂ ಸೂರತಿದೇಶದ ಸಾಮಂತನಾಮಗ್ರಾಮದ ದೇವಶರ್ಮನೆಂಬ ದ್ವಿಜಂಗಂ ಜಯಲಕ್ಷ್ಮಿಯೆಂಬ ಸತಿಗಂ ಪುಟ್ಟಿದೆಂ ಮತಿವರನೆಂಬನೆನ್ನ ಪಿತಂ

ಶ್ಲೋಕ || ಏಕೋಪಿ ಗುಣವಾನ್ ಪುತ್ರೋ ನಿರ್ಗುಣೇನ ಶತೈರಪಿ
ಏಕಚಂದ್ರೋ ಜಗಚ್ಚಕ್ಷು ನಕ್ಷತ್ರಂ ಕಿಂ ಪ್ರಯೋಜನಂ ||

ವೃತ್ತ || ನಾಗೋ ಭಾತಿ ಮದೇನ ಕಂ ಜಲರುಹೈಃ ಪೂರ್ಣೇಂದು ನಾ ಶರ್ವರೀ
ವಾಣೀ ವ್ಯಾಕರಣೇನ ಹಂಸ ಮಿಥನೈ ನರನದ್ಯಸ್ಸಭಾಪಂಡಿತೈಃ
ಶೀಲೇನ ಪ್ರಮದಾ ಜವೇನ ತುರಗೋ ನಿತ್ಯೋತ್ಸವೈರ್ಮಂದಿರಂ
ಸತ್ಪುತ್ರೇಣ ಕುಲಂ ನೃಪೇಣ ವಸುಧಾ ಲೋಕತ್ರಯಂ ಧಾರ್ಮಿಕೈಃ ||

ಶ್ಲೋಕ || ಸಂಸಾರ ಶ್ರಾಂತ ಚಿತ್ತಾನಾಂ ತಿಸ್ರೋ ವಿಶ್ರಾಮಭೂಮಯ
ಅಪತ್ಯಂ ಚ ಕವಿತ್ವಂ ಚ ಸತಾಂ ಸಂಗತಿರೇವ ಚ ||

ಎಂಬ ನೀತಿಯ ನೆನೆದೆಮ್ಮ ಪಿರನೆನಗಕ್ಷರಾಭ್ಯಾಸಂ ಮಾಡಿ ವಿದ್ಯಮಂ ಕಲಿಸದೆ ಎನಗೆ ದ್ವಾದಶಾಬ್ದಮಪ್ಪುದುಂ

ಶ್ಲೋಕ || ಋಣಕರ್ತಾ ಪಿತಾ ಶತ್ರುರ್ಮಾತಾ ಚ ವ್ಯಭಿಚಾರಿಣೀ
ಭಾರ್ಯಾ ರೂಪವತೀ ಶತ್ರುಃ ಪುತ್ರಶ್ಶತ್ರುರಪಂಡಿತಃ

ಎಂದೆನ್ನಂ ಕರೆದಿಂತೆಂದಂ

ವೃತ್ತ || ಅಕ್ಕರವೋದದಂದು ಪರಿಪಟ್ಟಿತು ಪಾರ್ವನ ನೀತಿ ಸೂಳೆಗಂ
ಮಕ್ಕಳು ಪುಟ್ಟಿದಂದು ಪರಿಪಟ್ಟಿತು ಯೌವನದೇಳ್ಗೆಯಾಳ್ದನೊಳ್
ಕರ್ಕಶ ಪುಟ್ಟಿದಂದು ಪರಿಪಟ್ಟಿತು ಜೀವಿತದಾಸೆ ನಾರಿಯೊಳ್
ಮಿಕ್ಕ ಮುನೀಶ್ವರಂಗೆ ಪರಿಪಟ್ಟಿತು ಮೋಕ್ಷದ ಬಟ್ಟೆ ನಿಶ್ಚಯಂ

ಅಕ್ಕರವೆ ತಂದೆ ತಾಯುಂ
ಅಕ್ಕರವೇ ಬಂಧು ಬಳಗ ಸಮಯದ ಧನಮುಂ
ಅಕ್ಕರವಾತ್ಮಕ್ಕೆ ಹಿತಕರ
ಮಕ್ಕರ ಮೋಕ್ಷಕ್ಕೆ ಬೀಜ ಚಂದನತಿಲಕಂ

ವಿದ್ಯವೆ ಮಾತಾಪಿತರುಂ
ಬುದ್ಧಿಯೆ ಸೋದರನು ವಿನಯವಚನವೆ ನಂಟಂ
ಅಧ್ವಾನವಿಲ್ಲದಿಪ್ಪುದು
ಇದ್ದುದು ತನ್ನೂರು ಸುಕವಿಕರ್ಣಾಭರಣಾ

ವಿರ್ಶವಮುಳ್ಳವಗೆ ಬಡತನಂ
ಹೊದ್ದದು ಹೊದ್ದಿದರು ಇರದು ಅನುಗಾಲದೊಳುಂ
ಅಧ್ವಾನವಿಲ್ಲದಿಪ್ಪುದು
ವಿದ್ಯವೆ ಜನವಶ್ಯ ವಿದ್ಯವೆಲ್ಲರ ಮುಂದುಂ

ಒಡಲೊಳಗಿರ್ದುಂ ವಿದ್ಯಂ
ನಡೆದೊಡೆ ತಾಂ ಭಾರಮಿಲ್ಲ ತಸ್ಕರರೊಯ್ಯರ್
ಪೊಡವಿಪತಿ ಮುನಿಯಲರಿಯನು
ಒಡಹುಟ್ಟಿರೆ ಭಾಗೆಗೊಳ್ಳರು ಮೆಚ್ಚಿಸಿ ಪೆಚ್ಚುಗು (?)

ಶ್ಲೋಕ || ಕೋತಿಭಾರಸ್ಸಮರ್ಥಾನಾಂ ಕಿಂ ದೂರ ವ್ಯವಸಾಯಿನಾಮ್
ಕೋವಿದೇಶಸ್ಸುವಿದ್ಯಾನಾಂ ಕಃ ಪರಃ ಪ್ರಿಯವಾದಿನಾಮ್ ||

ವೃತ್ತ || ವಿದ್ಯಾನಾಮ ನರಸ್ಯರೂಪಮಧಿಕಂ ಪ್ರಚ್ಛನ್ನ ಗುಪ್ತಂ ಧನಂ
ವಿದ್ಯಾ ಭೋಗ ಕರೀ ಯಶಃ ಸುಖಕರೀ ವಿದ್ಯಾ ಗುರೂಣಾಂ ಗುರುಃ
ವಿದ್ಯಾ ಬಂಧುಜನೇ ವಿದೇಶಗಮನೇ ವಿದ್ಯಾಪರಂ ದೈವತಾ
ವಿದ್ಯಾರಾಜಸುಪೂಜ್ಯತೇ ನಹಿ ಧನಂ ವಿದ್ಯಾವಿಹೀನಃ ಪಶುಃ ||

”ವಾಗ್ದೇವೀ ವದನಾಂಬುಜೇ ವಸತಿ ಚೇತ್ಕೋ ನಾಮ ದೀನೋ ಜನಃ” –

ಎಂಬುದರಿಂ ನೀಂ ಪನ್ನೆರಡು ವರುಷಮಾಗಿಯು ವಿದ್ಯವಿಲ್ಲದೆನಗಮಳಲಂ ತಂದೆಯೆಂಬುದುಂ ಚಿಂತಾಕ್ರಾಂತನಾಗಿ

ವೃತ್ತ || ಆಚಾರ್ಯ ಪುಸ್ತಕ ಸಹಾಯ ನಿವಾಸ ಚರ್ಚಾ
ಬಾಹ್ಯಸ್ಥಿತಾಃ ಪಠನ ಪಂಚ ಗುಣಾ ಭವಂತಿ
ಆರೋಗ್ಯ ಬುದ್ಧಿ ವಿನಯೋದ್ಯಮ ಶಾಸ್ತ್ರರಾಗಾ
ಸ್ತೇಭ್ಯಂತರಾಃ ಪಠನ ಪಂಚಗುಣಾ ಭವಂತಿ ||

ಶ್ಲೋಕ || ಅಕ್ಷರಂ ಗುರುಹಸ್ತೇನ ಮಾತೃಹಸ್ತೇನ ಭೋಜನಮ್
ದಾನಂ ಪೂಜಾ ಸ್ವಹಸ್ತೇನ ಪರಹಸ್ತೇನ ಮರ್ದನಮ್ ||

ಅಲ್ಲದೆ

ವೃತ್ತ || ಉದರನಿಮಿತ್ತಂ ಬಹುಕೃತ ವೇಷಃ
ಕದನನಿಮಿತ್ತಂ ನಿಷ್ಠುರ ಭಾಷಾ |
ಜ್ಞಾನನಿಮಿತ್ತಂ ಗುರು [ಕುಲವಾಸಃ]
ಮರಣನಿಮಿತ್ತಂ ಗುಣ ವಿಪರೀತಮ್ ||

ಎಂಬುದರಿಂದೆಮ್ಮ ಗುರುಗಳು ಸತ್ಯಮೂರ್ತಿಗಳ ಪಾರ್ಶ್ವದೊಳೆ ಅಕ್ಷರ ಲೇಖ್ಯ ಗಣಿತ ಗಾಂಧರ್ವ ವೇದ ವೇದಾಂಗ ಕಲ್ಪ ನ್ಯಾಯ ಜ್ಯೋತಿರ್ಜ್ಞಾನ ಛಂಧೋಲಮಖಾರಂ ಕಾವ್ಯ ನಾಟಕ ತರ್ಕಾಗಮ ವ್ಯಾಕರಣ ನಿಘಂಟು ಭರತ ಸುರಸಂಗೀತ ವೈದ್ಯ ಮಂತ್ರ ವಾದಂ ಮೊದಲಾದ ಲೌಕಿಕ ಪಾರಮಾರ್ಥಿಕ ಶಾಸ್ತ್ರಂಗಳನುಪದೇಶಂಗೊಂಡು

ಆರ್ಯೆ || ಯಃ ಪಠತೀ ಲಿಖತೀ ಪರಿಪೃಚ್ಛತಿ ಪಂಡಿತಾ [ಮು] ಪಾಶ್ರಯತಿ
ತಸ್ಯ ದಿವಾಕರ ಕಿರಣೈರ್ನಲಿನೀವ ವಿಸರ್ಪತೇ ಬುದ್ಧಿಃ ||

ಎಂದಭ್ಯಾಸಿಸುತ್ತೆ

ಶ್ಲೋಕ || ಉದ್ಯೋಗಸಾರಿಣೀ ಲಕ್ಷ್ಮೀ ಕೀರ್ತಿಸ್ತ್ಯಾಗಾನುಸಾರಿಣೀ
ಅಭ್ಯಾಸಸಾರಿಣೀ ವಿದ್ಯಾ ಬುದ್ಧಿಃ ಕರ್ಮಾನುಸಾರಿಣೀ ||

ಎಂದು ನೀತಿಶಾಸ್ತ್ರಾದ್ಯಶೇಷ ಶಾಸ್ತ್ರಂಗಳಭ್ಯಾಸಮಂ ಮಾಡಿ

ವೃತ್ತ || ಶಾಸ್ತ್ರಂ ಬಂದೊಡೆ ಶಾಂತಿ ಸೈರಣೆ ನಿಗರ್ವಂ ನೀತಿ ಮೆಲ್ವಾತು ಮು
ಕ್ತಿಸ್ತ್ರೀ ಚಿಂತೆ ನಿಜಾತ್ಮ ಚಿಂತೆ ನಿಜವೇಳ್ಕಂತಲ್ಲದಾ ಶಾಸ್ತ್ರದಿಂ
ದೂಸ್ತ್ರೀ ಚಿಂತೆ ವಿವಾದ ದುರ್ಮನದೊಳುಂ ಗರ್ವಂ ಮನಂಗೊಂಡೊಡಾ
ಶಾಸ್ತ್ರಂ ಶಸ್ತ್ರಮು ಶಾಸ್ತ್ರಿಶಸ್ತ್ರಿಕನಮಂ ತನ್ನಂ ಸಮಂಗೊಲ್ವನುಂ ||

ಎಂಬುದರಿಂ ಸಜ್ಜನತ್ವಮಂ ಸಾಧಿಸಿ

ಇಂದ್ರವಜ್ರಂ || ದೇಶಾಟನಂ ಪಂಡಿತ ಮಿತ್ರತಾ ಚ
ವಾರಾಂಗನಾ ರಾಜಸಭಾ ಪ್ರವೇಶಃ
ಅನೇಕ ಶಾಸ್ತ್ರಾರ್ಥವಿಲೋಕನಂ ಚ
ಚಾತುರ್ಯ ಮೂಲಾನಿ ಭವಂತಿ ಪಂಚ ||

ಎಂದು ದೇಶಾಟನ ಮಾಡಲ್ ಪೋಗಿಯಂಗದೇಶಮಂ ಪುಗೆಯಲ್ಲಿ ಬಲಾಹಕ ಮೆಂಬೂರೊಳೊರ್ವ ವಣಿಕ್ಪುತ್ರಂ ದ್ಯೂತಾರಂಭಮಂ ಮಾಡುತ್ತಂ ಕ್ರೋಧದಿಂ ಕಲಹಮಂ ಚರ್ಚಿಸಿ ಸ್ವಗೃಹದಿಂ ತನ್ನ ತಂದೆ ಮೃತವಾದುದಂ ಪೇಳ್ದೊಡಂ ದ್ಯೂತಾಕಾಂಕ್ಷೆಯೊಳಾತನ ಕಳೇವರಮೀ ಮಾರ್ಗದೊಳೆ ಬಪ್ಪುದು ನೋಳ್ಪೆನೆಂದು ಬಂದಲ್ಲಿ ಸಂಸ್ಕರಿಸಿಯೆಂದು ತಲೆಯನೆತ್ತದಿರೆ ನೋಡಿಯಾತಂಗೆ ನೀತಿಯಂ ಪೇಳ್ದೊಡವಂ ಕೇಳದಿರ್ದೊಡೆ

ಶ್ಲೋಕ || ಉದ್ಯೋಗಃ ಕಲಹಃ ಕಂಡೂದ್ಯೂತಂ ಮದ್ಯಂ ಪರಸ್ತ್ರೀಯಃ
ಆಹಾರೋ ಮೈಥುನಂ ನಿದ್ರಾ ಸೇವ್ಯ ಮಾನೇನ ವರ್ಧತೇ ||
ವಿಷಾದಃ ಕಲಹೋ ಯುದ್ಧಃ ಕ್ರೋಧೋ ಮಾನ ಶ್ರಮೋ ಭ್ರಮಃ
ಪೈಶೂನ್ಯಂ ಮತ್ಸರಶ್ಯೋಕಃ ಸರ್ವೇ ದ್ಯೂತಸ್ಯ ಬಾಂಧವಾಃ ||

ಎಂಬುದರಿಂದೀ ದ್ಯೂತವ್ಯಸನಮನುಳಿವುದೆಂಬುದುಂ ಮತ್ತಮಾ ಚಿಂತೆಯಂ ಬಿಡುವಂದಮಾವುದೆನೆ

ಶ್ಲೋಕ || ಉತ್ತಮಂ ಸ್ವಾಂತ ಚಿಂತಾ ಚ ಮಧ್ಯಮಂ ಚಾರ್ಥ ಚಿಂತನಮ್
ಅಧಮಂ ಕಾಮಚಿಂತಾ ಚ ಪರಚಿಂತಾಧಮಾಧಮಾ ||

ಅದಲ್ಲದೆಯುಂ

ಶ್ಲೋಕ || ಶುಭಚಿಂತಾ ಮನೋಭೂಷಾ ದಾತೃತ್ವಂ ಭೂಷಣಂ ಶ್ರೀಯಃ
ವಿದ್ಯಾಯಾ ಭೂಷಣಂ ಶಾಂತಾ ಪ್ರಿಯವಾಕ್ಸರ್ವ ಭೂಷಣಮ್ ||
ಸ್ವಗೃಹೇ ಪೂಜ್ಯತೇ ಮೂರ್ಖಃ ಸ್ವಗ್ರಾಮೇ ಪೂಜ್ಯತೇ ಪ್ರಭುಃ
ಸ್ವದೇಶೇ ಪೂಜ್ಯತೇ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೇ ||
ಪ್ರಸ್ತಾವಸದೃಶಂ ವಾಕ್ಯಂ ಸ್ವಭಾವಸದೃಶಂ ಪ್ರಿಯಮ್
ಸ್ವಾತ್ಮಶಕ್ತಿ ಸಮಂತೋಪಂ ಯೋ ಜಾನಾತಿ ಸ ಪಂಡಿತಃ ||

ಎಂದಾ ವೈಶ್ಯಸುತಂಗೆ ವಿದ್ಯಾಭ್ಯಾಸಂ ಮಡಿ ವ್ಯಸನಮಂ ಬಿಡಿಸಿ

ವೃತ್ತ || ವಶ್ಯಾ ಸುತಾ ವೃತ್ತಕರೀ ಚ ವಿದ್ಯಾ | ನಿರೋಗತ ಸಜ್ಜನ ಸಂಗತಿಶ್ಚ
ಇಷ್ಟಾ ಚ ಭಾರ್ಯಾ ವಶವರ್ತಿನೀ ಚ | ದುಃಖಸ್ಯ ಮೂಲೋದ್ಧರಣಾನಿ ಪಂಚ ||

ಶ್ಲೋಕ || ಅನಭ್ಯಾಸೇನ ಶಾಸ್ತ್ರಾಣಾಂ ಅಸಂಸರ್ಗೇಣ ಧೀಮತಾಮ್
ಅವಿಗ್ರಹೇಣ ಭಿಕ್ಷೂಣಾಂ ವ್ಯಸನಂ ಜಾಯತೇ ನೃಣಾಮ್ ||

ಎಂದು ಅಭ್ಯಾಸವಿದ್ಯನಂ ಮಾಡಿ ಸ್ವಕೀಯವೃತ್ತಿಯೊಳ್ ನಿಲಿಸಿ

ಶ್ಲೋಕ || ಅಫಲಾನಿ ದುರಂತಾನಿ ಸಮವ್ಯಯ ಫಲಾನಿ ಚ
ಅಶಕ್ಯಾನಿ ಚ ಕಾರ್ಯಾಣಿ ನಾರಭೇತ ವಿಚಕ್ಷಣಃ ||
ಯತ್ರ ವಿದ್ಯಾಗಮೋ ನಾಸ್ತಿ ಯತ್ರ ನಾಸ್ತಿ ಧನಾಗಮಃ
ಯತ್ರ ಜಾತ್ಮ ಸುಖಂ ನಾಸ್ತಿ ನ ತತ್ರ ದಿವಸಂ ವಸೇತ್ ||

ಎಂದವನಂ ನಿಲಿಸಿ ಬಪ್ಪಲ್ಲಿ

ವೃತ್ತ || ಪ್ರಥಮವಯಸಿ ಪೀತಂ ತೋಯಮಲ್ಪಂ ಸ್ಮರಂತಃ
ಶಿರಶಿ ನಿಹಿತ ಭಾರ ನಾಳಿಕೇರಾ ನರಾಣಾಮ್
ಉದಕಮಮೃತಕಲ್ಪಂ ದದ್ಯುರಾಜೀವಿತಾಂತಂ
ನ ಹಿ ಕೃತಮುಪಕಾರಂ ಸಾಧವೋ ವಿಸ್ಮರಂತಿ ||

ಎಂಬುದರಿಂ ನೀಂ ಮಾಡಿದುಪಕಾರಮಂ ಮರೆವನಲ್ಲೆನಗೆ ಜನ್ಮಾಂತರದ ಮಿತ್ರನೆಂದು

ಶ್ಲೋಕ || ದದಾತಿ ಪ್ರತಿಗ್ರಹ್ಣಾತಿ ಗುಹ್ಯಮಾಖ್ಯಾತಿ ಪೃಚ್ಛತಿ
ಭುಙ್ತೇ ಭೋಜಯತೇ ಚೈವ ಷಡ್ವಿಧಂ ಮಿತ್ರಲಕ್ಷಣಮ್ ||

ಎಂದೆನಗೆ ನೂರು ಗದ್ಯಾಣಮಂ ಸಮರ್ಪಿಸಿ ಸಂತುಷ್ಟನಾಗಿಮೆಂದು ಪ್ರಣಾಮಂಗೆಯ್ಯೆ

ಶ್ಲೋಕ || ಅಸಂತುಷ್ಟೋ ದ್ವಿಜೋ ನಷ್ಟಃ ಸಂತುಷ್ಟಾಶ್ಚೈವ ಪಾರ್ಥಿವಾಃ
ಸಲಜ್ಜಾ ಗಣಿಕಾ ನಷ್ಟಾ ನಿರ್ಲಜ್ಜಾಶ್ಚ ಕುಲಾಂಗನಾ ||

ಎಂದಂ ಬರ್ಪಿನಂ

ಆರ್ಯಗೀತಾ || ಯಾವ ದ್ವಿತ್ತೋಪಾರ್ಜನ | ಸಕ್ತಸ್ತಾವನ್ನಿಜಪರಿವಾರೋ ರಕ್ತಃ
ಪಶ್ಚಾಜ್ಜೀವತಿ ಜರ್ಝರ | ದೇಹೇ ವಾರ್ತಾಂ ಕೋಪಿs ನ ಪೃಚ್ಛತಿ ಗೇಹೇ ||

ಎಂದಾ ವರ್ತಕಕುಮಾರಂ ಜಲಸ್ಥಲಯಾತ್ರೆಯಂ ಪೋಗಲಾತಂ ತೆಲುಂಗಾದಿ ದೇಶಮನೆಯ್ದಿ ಒಂದೂರ ಮುಂಗಡೆ ಬಪ್ಪ ಕೋವಿದನಂ ಕಂಡು

ವೃತ್ತ || ಕೋಪ್ಯಾಸೀನ್ನಗರೇ ಮಹಾನ್ವಸತಿ ಕಿಂ ತಾಳದ್ರುಮಾಣಾಂ ಗಣೈಃ
ಕೋ ದಾ… ತಾ ರಜಕೋ ದದಾತಿ ವಸನಂ ಪ್ರಾತುರ್ಗೃಹೀತ್ವಾ ನಿಶಿ
ಕೋ ವಿದ್ವಾನ್ ಪರದಾರವಂಚನ… ರತಾಸ್ಸರ್ವೇsಪಿ ವಿದ್ವಜ್ಜನಾಃ
ತಸ್ಮಾಜ್ಜೀವಸಿ ಹೇ ಸಖೇ ವಿಷಕ್ರಿಮಿನ್ಯಾಯೇನ ಜೀವಾಮ್ಯಹಮ್ ||

ಆರ್ಯೆ || ಕಃ ಪಥ್ಯತರೋ ಧರ್ಮಃ | ಕಶ್ಯುಚರಹ ಯಸ್ಯ ಮಾನಸಂ ಶುದ್ಧಮ್
ಕಃ ಪಂಡಿತೋ ವಿವೇಕೀ | ಕಿಂ ವಿಷಮವಧೀರಣಾ ಗುರುಷು
ಕೋ ಧರ್ಮೋ ಭೂತದಯಾ | ಕಿಂ ಸೌಖ್ಯಮರೋಗತಾ ಜಗಜ್ಜಂ ತೋಃ
ಕಃ ಸ್ನೇಹಃ ಸದ್ಭಾವಃ | ಕಿಂ ಪಾಂಡಿತ್ಯಂ ಪರಿಚ್ಛೇದಃ ||

ಇಂತು ಪ್ರಸಂಗಿಸುತ್ತೆ ಕರ್ಣಾಟಮಂ ಪುಗುವಾಗಲೊರ್ವರ ಮಾರ್ಗದೊಳೆ ಬರುತ್ತುಂ ದಾರುವಂ ಪೊತ್ತು ಬಪ್ಪುದುಮಿದು ಏತಕೆಯೆನೆಯದಕ್ಕೆಯೆನಲು ಈ ನಾಡೊಳು ಮಳೆ ಬೆಳೆ ಚೆನ್ನಾಗಿದೆಯೊ? ಎಂಬುದುಂ ಮೂರು ತಿಂಗಳ್ಗೊಮ್ಮೆ ಮಳೆಯದರಿಂದೀ ಪ್ರವಾಹಂ ದಿನಚರಿ ನೀರು ಈ ಓಣಿಯೊಳು ಆಳ ಮೇಲೆ ಬಪ್ಪುದು ಕೊಳಂಗಳು ತುಂಬಿ ಹರಿದವು. ಎಲ್ಲರೂ ಜೋಳಮಂ ಬಿತ್ತಿ ಅವರೆ ಕುಯಿದು ಸೆಜ್ಜೆ ಕಟ್ಟಿದರು. ಇಲ್ಲಿ ಪ್ರಭು ಒಂದು ಸಂಪಿಗೆವೃಕ್ಷಮಂ ಹಾಕಿಸಲದು ಪೂವಾಗೆ ಮಲ್ಲಿಗೆ ಆಗುತ್ತಿದೆ. ಇಲ್ಲಿಗು ರಾಮೇಶ್ವರಕ್ಕು ಮುನ್ನೂರು ಗಾವುದ ಮಾರಿಗೆ ಒಂದೊಂದು ಸೊಡರಂ ಪೊತ್ತಿಸುತ್ತಿದ್ದಾರೆ. ಈ ಕೆರೆಯೊಳೊರ್ವಂ ಆನೆ ಕುದುರೆ ಮುಂತಾದವಂ ಬಡಿದು ತಾನೆ ಮಡಿಯುತ್ತಿದಾನೆ. ಈ ಪಟ್ಟಣಕ್ಕೆ ಒಂದು ಕೋಟಿ ಪರರು ಬಂದು ಮುತ್ತು ಎಂದು ಹೇಳಿ ಒಂದು ಹತ್ತು ಎಂಬುದು. ಎತ್ತಂ ಹೇರೆಂಬರು ಹೆರೆತ್ತೆಂಬರು. ಆಟದವರ್ ಬಪ್ಪರು. ಗಾಣಗ ಆಡಿಸಬೇಕೆಂದು ದಿನಚರಿ ಆಡಿಸುವಂ ಕುರುಬ ನಾಡ ಬಿಡುವುದಿಲ್ಲವೆಂಬನು. ಇಲ್ಲಿ ಗೋಪಾಲಜಾತ್ರೆಯೊಳು ತೇರು ಹರಿಯದು, ದೀವಟಿಗೆ ಉರಿಯದು, ಪರಿಸೆ ನೆರೆಯದು, ಹಣ ದೊರೆಯದು, ಮಿಳೀ ಬಾರದು, ಬಿಲ್ಲು ಬಾಗದು, ಒಬ್ಬ ಸಿಪಾಯಿ ಮೇಲೆ ಬಾಣ ಬಿದ್ದು ಸಾಯ್ವುದುಮವನ ಕತ್ತಿಗೆ ನೇಣನಿಕ್ಕಿ ನೇರಿಬಿಟ್ಟಿರು. ಈ ಪಟ್ಟಣದ ಬಾಗಿಲೊಳೆಲ್ಲರು ಅಡಿಗೆ ಪೋಗುವರು ಎಂಬುದಂ ಕೇಳಿ ಅಗಳನೆತ್ತಿಕೊಂಡು ಪೋಗಿ ಪೊರಗೆ ತೊರೆಯೊಳುಂಡು ಸಂತೆಯೊಳು ಗವರಿಗ ಸಾಮಾನುಗಳು ಹೆಣದ ಮೇಲೆ ಬಂದು ಮಾರುತ್ತಿಪ್ಪುದುಮವಂ ಕೊಂಡು ಕಣ್ಣಿಗೆ ಕಟ್ಟಿಕೊಂಡು ಬಂದರು ಎಂದು ಪೇಳ್ವುದುಮಿದಾಶ್ಚರ್ಯಮಲ್ಲ ನಿನ್ನ ವೃತ್ತಿ ಯಾವುದೆನೆ

ಆನೀವೂರ ಮುದ್ದಗೌಂಡನ ಮಗನು. ಕೇತಗೌಡನೆನ್ನ ತಂಗಿ ಕೇತಿಯೆಂಬಳೆನಗೆ ಬಿರಿಗಿಯೆಂಬಳು ಜೊತೆಯಾಗಲೆಮ್ಮಪ್ಪಂ ಕಾಲಮಂ ಕಾಣಲೊಡಂ ಗೊಂಗನಾಡ ಸಿಂಗ ಗವುಡಂ ವೃದ್ಧಂ ಬಂದೆನ್ನ ತಂಗಿಯಂ ತನ್ನ ಮಗಂಗೆ ಕೊಡಿಸಲೆಂದೆಮ್ಮವ್ವೆಯೊಳು ಪ್ರಸಂಗಿಸೆ ನಿನ್ನ ಮಗಂ ರೂಪುಳ್ಳನಾಗಿ ಅಷ್ಟಾಂಗಪುಷ್ಪನೆ ? ಎನಲೊಮದು ಕಣ್ಣು ಘೋರದಿ ಬಿಳಿದಾಗಿ ಹಾಗಪಾಲು ದೃಷ್ಟಿಯಿಪ್ಪುದೆನಲ್ ಮತ್ತೊಂದು ಕಣ್ಣೊ ಎಂದು ಕೇಳಲದಿಲ್ಲ, ಈ ಕಣ್ಣೇ ಸ್ವಲ್ಪಮಪ್ಪುದೆನೆ ಮನೆಯೊಳಾರಿಪ್ಪರೆಂಬುದುಂ ನಮ್ಮಕ್ಕಂ ಪುರುಷವಿಯೋಗದಿಂ ನನ್ನ ಮನೆಯೊಳಿಪ್ಪಳಾಕೆಯೇ ನನ್ನ ಮಗನಂ ಸಲಹುತ್ತಿಪ್ಪಳಾಕೆಯೆ ನಿನ್ನ ಮಗಳಂ ಸಾಕಿಮಾಡುವಳು ಹಣಕಾಸು ಒಡವೆ ವಸ್ತುಗಳುಂಟೇ ಎಂಬುದುಂ ಮೌನದಿಂ ನೆಲಮಂ ಮೂರು ವೇಳೆ ಮುಟಟಿದಂ ಧ್ಯಾಮುಂಟೇ ಎಂಬುದುಂ ಅದೇತಕ್ಕೆ ಕೇಳುವುದು ಮನೆಯೊಳು ಮೂಡೆ ಮೂಲೆಯೊಳೆಲ್ಲಾ ರಾಶಿಯಿದೆಯೆನೆ ಕರವೇನೆಂಬುದುಂ ಹಟ್ಟಿಯಲ್ಲಿ ನಾಕೆಮ್ಮೆ ಕರೆವಾರಂಡೆ ಎಂಬುದೆಮ್ಮಬ್ಬೆ ಮರುಳಾಗಿ ಪೆಣ್ಣಂ ಕೊಡಲಾತ ಕಂಗಳನಪ್ಪುದರಿಂದನ್ನಂಬಡೆಯದೆನ್ನ ಮನೆಯೊಳೆ ಇಪ್ಪನೆನ್ನ ಮಹಾಲಕ್ಷ್ಮೀ ಸ್ವಸೃವಿನ ಕಟಾಕ್ಷದಿಂ ಕಿರಿದು ಐಶ್ವರ್ಯಮಾಗೆ ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂದು ಆರಂಭಂ ಮಡಲು ಪದಿನಾರೆತ್ತಂ ತಂದು ಮಾಳಮಂ ಮಾಡಿ ನಾಕು ನೆಗಿಲಂ ಸಂಪಾದಿಸಿ ಎತ್ತಿಲ್ಲದೊಂದಿಪ್ಪತ್ತಂ ತಂದವಕ್ಕೆ ಜೊತೆಯಂ ಮಾಳ್ಪಾಗಲೊಂದು ಸತ್ತೆಮ್ಮೆಯಕೋಣಂ ಗದ್ದೆಯನುಳುತ್ತಿಪ್ಪುದುಮದಂ ಕಂಡು ಕೊಳ್ಳಲೆಂದು ಮನೆಯೊಳಿರ್ದ ಮುನ್ನೂರು ದುಡ್ಡಿನೊಳಗೆ ನಾನೂರು ದುಡ್ಡುಂ ಮಡಗಿ ಕಡಮೆ ದುಡ್ಡಿನೊಳು ನೂರು ದುಡ್ಡಿಗೆ ಸತ್ತೆಮ್ಮೆಕೋಣನಂ ಕೊಂಡು ಇನ್ನೂರು ದುಡ್ಡುಂ ಕಟ್ಟಿಕೊಂಡು ಪೋಪಲ್ಲಿ ಕಳ್ಳರು ಸುಲಿಕೊಂಡರು. ಕೋಣನ್ನೆತ್ತನ್ನು ಕಣ್ಣಿಗೆ ಎಣ್ಣೆಯಿಕ್ಕಿ ಕಟ್ಟಿ ಉತ್ತು ಹುರಿದ ರಾಗಿಯಂ ಬಿತ್ತಿದೊಡೆ ಅದು ಹಾರಕಂ ಬೆಳೆಯಲದರೊಳರ್ಧ ರಾಗಿಯನೆಮ್ಮ ನಂಟನ ಗುಳಿಗಿಟ್ಟು ಕಡಮೆಯ ರಾಗಿಯ ಮನೆಯೊಳಿರಿಸಿದೊಡಂ ಒಂದು ದಿವಸಂ ಸೇವಗೆ ಮಾಡಲೆಂದವರೆ ಸೇವಗೆ ಮಾಡಿದರು.

ಮತ್ತೊಂದು ದಿವಸಮವರೆ ದೋಸೆಯಂ ಮಾಡುತ್ತಿಪ್ಪುದಾನುಮಿರೆ ಎನ್ನ ತಂಗಿಯು ಕಾವಲಿಯೊಳೇಳು ದೋಸೆ ಕೈವಟ್ಟಲೊಳಾರು ದೋಸೆ ನೆಲವಿನ ಮೇಲೆ ಹತ್ತು ದೋಸೆ ಕೈಯಲೆತ್ತಿ ನೋಡೆ ಮೂರೆ ದೋಸೆ ಎಂದಿಪ್ಪತ್ತು ನಾಲ್ಕು ಲೆಕ್ಕದ ದೋಸೆಯಂ ಅತ್ತೆಯುಂ ಸೊಸೆಯುಂ ತಾಯುಂ ಮಗಳುಂ ಅತ್ತಿಗೆಯುಂ ನಾದಿನಿಯುಮೆಂಬರುವರು ಮೂರು ದೋಸೆಯಂ ಮುರಿಯದೆ ಮೆಲಲು ನಾನುಂ ಹದಿನಾರು ಮುದಿಹಿಟ್ಟು ಹುರಿದ ಹುರುಳಿ ಉದಕಮನುಂಡು ಭೂಮೀ ತಳಕೆಳಕೆ ಮಾಡಿ ಬೇಸತ್ತೆ ಹಟ್ಟಿಯೊಳಿಟ್ಟ ಮೇಟ್ಟುಗೊಂಡು ಪೋಗಿ ಬರುವಲ್ಲಿ ಮನೆಯೊಳವರೆ ಸೇವಗೆ ಮಾಡಿರಲದಕ್ಕೆ ಒಳ್ಳೆಣ್ಣೆಯಂ ತಂದೊಡದು ಕೈಯೆಣ್ಣೆಯಾದೊಡದಂ ಬಿಟ್ಟು ಕಣ್ಣು ಬಿಟ್ಟುಂಡು ಕೈಗಚ್ಚಿಕೊಂಡು ಬಂದೊನೊಂದು ನಿಂಬೆಕಾಯಿ ಗಾತ್ರ ರಾಗಿಹಿಟ್ಟನಾರಾದೊಡಂ ಕೊಟ್ಟೊಡೆ ಬೆಟ್ಟಮಂ ಕುಟ್ಟುವೆನೆಂದಿಂತಪ್ಪ ಅಪ್ರೌಢವಾಕ್ಯಮಂ ಕೇಳ್ದು ಇಂತಪ್ಪ ಶಬ್ದಂ ಕನ್ನಡ ದೊಳನೇಕಮಿಪ್ಪವವರೊಳೌಚಿತ್ಯದರ್ಥಮೆಂಬುದರಿಂ ಆಯಾಯಾ ಕಾರ್ಯವರಿತು ಗ್ರಹಿಸಬೇಕೆಂದು ಪೇಳಿದೆನು.

ಇಲ್ಲಿಂ ಬಂಧುಸತ್ಕಾರ ದಕ್ಷರುಂಟೆ ಎನಲೆಂದನೋರ್ವನೆಡಶ್ರುತಿಯೆಂಬಂ ಬಂಧಕಿಯೆಂಬ ಸ್ತ್ರೀಯಂಗೂಡಿಪ್ಪನಾತಂ ಬಂಧುಗಳ್ ಬರಲವರು ಮಾತಿಂದಂ ಮನ್ನಣೆಗೆಯ್ದವರೊಳೇನಾನುಮುಳ್ಳ ವಸ್ತುಮಂ ಕಳೆದುಕೊಂಡು ಬಾಯಾರಿದರ್ವರ್ಗೊಂದು ಚುಲುಕು ನೀರಂ ಕೊಡುವನಲ್ಲನಾತನ ಮನೆಗೋರ್ವ ಛಲಗ್ರಾಹಿ ಬಂದು ಮನೆಯೊಳೆ ಕುಳ್ಳಿರ್ದುಪಾಯದಿಂ ಪೊರಮಡಿಸಿದೊಡಂ ಪೋಗದೆ ಮಧ್ಯಾಹ್ನಮದಾಗಲಿಂದೆನಗೆ ಭೋಜನಂ ನಿಮ್ಮ ಗೃಹದೊಳಾಗದಿದ್ದುದೆನಲತಿಕ್ಲೇಶದಿ ಪೆಂಡತಿಯಂ ಕರೆದತಿಥಿಗಳ್ಗೆ ಭೋಜನ ಪಾಕಶುದ್ಧಿಯಂ ಮಾಡೆಂದಾಗ್ರಹಂ ಮಾಳ್ಪಿನಂ ಎಂದಿನ ಮೇರೆ ದಂಪತಿಗಳೀರ್ವರ್ಗಂ ಸರಿಯಾಗಟ್ಟು ಮಡಗಿ ಆಕ್ರಂದನಂ ಮಾಡುತ್ತುಮಿರೆ ಇನ್ನು ಪಾಕವಾಗಿಲ್ಲವೆ ಪಾಪಿಯೆನಲು ಅತ್ಯಂತ ಕೋಪದಿಂ ನಮ್ಮ ಮನೆಗೆಯ್ದಿ ಮಡಕೆ ಕುಡಿಕೆಯಿಲ್ಲ ಎನ್ನುಪಸ್ಥಿತಿಯೊಳಡಲೆ ಎಂದಭಿನಯಿಸಿದ ಸತಿಯಂ ನೋಡಿ ರೌದ್ರದಿಂದೆರ್ದು ನೀನಟ್ಟು ಇಕ್ಕದೆ ಇಂದು ಬಾರದ ನಂಟ ಪೋಗದಿಪ್ಪನೀತನೆನ್ನ ಶಿಶ್ನವನುಂಡು ಪೋಪನೆ? ಎಂಬುದೆನ್ನ ಮನೆಯೊಳೊಂದುಮನುಕೂಲಮಿಲ್ಲಮದರಿಂ ಮುಂದಕ್ಕೆ ಪೋಗೆಂಬುದುಂ ಮೌನಂಗೊಂಡಿರೆ ಪೆಂಡತಿಗೆಂದನೆಲೆ ಮನೆಹಾಳೀ ಎರಡು ರೊಟ್ಟಿಯನಾದರೂ ತಟ್ಟಿ ಬೇಯಿಸೆಂಬುದುಂ ಸಮಿಧೆಯಿಲ್ಲ ಕಾಲನಿಕ್ಕಿ ಬೇಯಿಸಲೆ ಎನೆ ನಂಟನೆದ್ದು ಈ ಹೊತ್ತಿಗೆ ಈ ಗಳುವಂ ಮಾಡೆಂದಾ ಮನೆಯ ಹುಲ್ಲುಗಳುಮಂ ಕೀಳಲ್ ಪೋಪುದುಂ ಸಮಿಧೆಯಿದೆ ಎಂದು ಮಾಣಿಸಿ ತನ್ನ ಪೆಂಡತಿಯಂ ಕೃತಕದಿಂ ಬಡಿಯಲವಳತಿದುಃಖದಿಂದೀ ಪಾಪಿಯೆಲ್ಲಿ ಬಂದನಿಂದಿನ್ನೀ ಮನೆಯೆನಗೆರವಾದುದೆಂದು ಮನೆಯಂ ಬಿಟ್ಟು ಪೊರಗೆ ಪೋಗಲಾತ ಮನೆಯೊಳಿರ್ದ ನಂಟನೊಳು ದುಃಖದಿನೆಂದಂ ನೀಮುಂ ಮುಂದಕ್ಕೆ ದಯಮಾಡತಕ್ಕದ್ದು, ಆಕೆಯೇನಾದಳೊ ನೋಡಿಬಪ್ಪೆನೆನೆ ಆತಂ ಸುಮ್ಮನಿಪ್ಪುದುಂ ತಾನೆ ಪೊರಗೆ ಬಂದಾಗಳಾ ನಂಟಂ ಅಟ್ಟಮನೇರಿಯಡಗಿರೆ [ಎಡ]ಶ್ರುತಿ ಬಂದು ನೋಡಿ ಪೋದನೆಂದರಿದು ಮನೆಯ ಬಾಗಿಲನಿಕ್ಕಿ ಬೀಗಮನಮರ್ಚಿ ತನು ಪೊರಗೆ ಪೋಗಿರ್ದು ದಂಪತಿಗಳೀರ್ವರುಂ ನಂಟಂ ಪೋದನೆಂದು ಸಾಯಾಹ್ನದೊಳ್ ತಮ್ಮ ಗೃಹಮಂ ಪೊಕ್ಕು ಎರಡು ಎಡೆಯಂ ಬಡಿಸಿಕೊಂಡು ಭುಂಜಿಸುವ ವೇಳೆಯೊಳು ಸತಿಗೆಂದನೆಲೆ ಪ್ರಿಯಳೆ ನಾವೀ ಹೊತ್ತು ನಂಟಂಗೆ ಮಾಡಿದ ಕೆಲಸ ಹ್ಯಾಗೆ ಎನೆ ಅವಳು ನಾ ಮಾಡಿದ ಕೆಲಸ ಹ್ಯಾಗೆ ನೀವೇ ಬಲ್ಲಿರೆಂಬುದುಂ ನಂಟನುಮಟ್ಟದಿಂದಿಳಿದು ನಾನು ಮಾಡಿದ ಕೆಲಸ ಹ್ಯಾಗೆ ನೀವು ನೊಡಿ ಎಂದವರ ಬಳಿಯ ಬಂದು ಕುಳ್ಳಿರಲತಿಲಜ್ಜೆಯಿಂದಾತಗೆ ತಾನುಣಲಿಕ್ಕಿ ಕಳುಹಿಸಿದರು. ಒಬ್ಬ ಒಕ್ಕಲನ ಮನೆಗೋರ್ವ ಬಂದನ್ನಮಂ ಬೇಡಲಾತಂ ತುಪ್ಪದ ಮೊದಲೆಣ್ಣೆಯ ಕಡೆ ಚಪ್ಪರಿದುಣ್ಣೆಂಬುದುಮಾತನರಿದು ತುಟಿಯ ಮೊದಲು ಹಲ್ಲಿನ ಕಡೆಗೇರಿಸಿ ನೀನೆ ಉಣ್ಬುದೆಂದು ಪೋದಂ.

ಮತ್ತೊಬ್ಬ ಬ್ರಾಹ್ಮಣಂ ದರಿದ್ರನಾಗಿ ಶುಷ್ಕಮಪ್ಪಾಹಾರಂ ದೊರೆಯದಿರ್ದೊಡಂ ದಿನಚರಿ ಕೂಸಿಂಗೆ ಮಾಡಿದೊಂದಗುಳಂ ಮೊಸರೊಳರ್ದಿ ಮೀಸೆಯ ಕೊನೆಯಂ ಪತ್ತಿಸಿಕೊಂಡು ಸಭೆಗೆಯ್ದಿರ್ದು ಕೆಲಹೊತ್ತಾಗಲು ಎಲ್ಲರೂ ಕಾಣುವಂತೆ ತನ್ನೆಡಗಯ್ಯ ಸೆಳ್ಳುಗುರಿಂ ತೆಗೆದು ಮಿಡಿದು ಭೋಜನದ ಮಹತ್ತಂ ಪೇಳ್ವನು. ಮತ್ತೊಬ್ಬನ ಮನೆಯೊಳತ್ತೆಯುಂ ಸೊಸೆಯುಂ ಒಬ್ಬರನೊಬ್ಬರರಿಯದಂತೆ ಅತ್ತೆ ಮುಚ್ಚುಳೊಳು ಸೊಸೆಯುಂ ಕೈವಟ್ಟಲೊಳು ಅನ್ನಮನಾ ಮನೆಯ ಕದವಿನ ಮರೆಯೊಳ್ ನಿಂದುಂಡು ಬರುತ್ತಿರ್ದೊಂದು ದಿನ ಮತ್ತೆ ಬಂದು ಸೊಸೆ ಇಲ್ಲವೆಂದು ಮುಚ್ಚಳೊಳನ್ನಮಂ ಕಲಸಿ ಕದದ ಮರೆಯೊಳುಂಬಾಗ ಆ ಸೊಸೆ ಬಂದತ್ತೆಯಿಲ್ಲವೆಂದು ಬಡ್ಡಲಲ್ಲಿ ಅನ್ನಮಂ ಕಲಸಿ ಕೊಂಡಾ ಕದದ ಮರೆಗೆಯ್ದಲತ್ತೆ ಮುಚ್ಚುಳಂ ಮರಸಿಕೊಂಡಿದೇನೆಂಬುದುಂ ಮುಚ್ಚುಳೊಳುಂಬತ್ತೆಮ್ಮಗೀ ಬಟ್ಟಲೊಳ್ ಮಾಡಲೆಯಂ ತಂದೆನೆಂದವಳಂ ಭಂಗಿಸಿ ಒಂದು ದಿನಂ ಆಕೆಯ ಗಂಡಂ ಸಂಧ್ಯಾವಂದನೆಯಂ ಮಾಳ್ಪಾಗ ಸಗಣಿನೀರಂ ತಳಿಯುತ್ತಿರಲ್ ಹೊರಚ್ಚಾಗೆಂದು ಮಂತ್ರೋದಕಮಂ ಪ್ರೋಕ್ಷಿಸಲಾಕೆ ಸಗಣಿನೀರಂ ತಲೆಯೊಳೆರೆಯೆ ಕೋಪಿಸಿ ಬಳಿಕೊಮ್ಮೆ ಮಾರ್ಜನೆಯಿಂ ಗುಡಿಸುತ್ತೆ ಬಪ್ಪ ಸತಿಯಂ ಕಡೆಯೊಳ್ ಗುಡಿಸೆಂದು ಪಂಚಾಂಗಮಂ ಪಿಡಿದಿರ್ದು ಅದರೊಳೆ ಮಸ್ತಕಮಂ ಬಡಿಯಲವಳು ರಜ ಬಡಿಗೆಯಿಂ ತಲೆಯಂ ಬಡಿಯಲಾಕೆಯಂ ಮಾತನಾಡಿಸದೆ ಒಬ್ಬ ಗವುಡಿಯನಿಟ್ಟುಕೊಂಡಿರೆ ಅವಳ್ ಆಳು ಗುರಿಕಾರನಂ ಇಟ್ಟುಕೊಳ್ಳೆ ಪಂಚಾಯತಮಂ ಮಾಡಲಿಬ್ಬರು ಸಮನೆಂದರು.

ಐಶ್ವರ್ಯಮದದಿಂ ಜ್ಞಾನಮಿಲ್ಲೆಂತೆಂದೊಡೆ ಒಂದು ಗೊಲ್ಲರ ಹೆಣ್ಣು ತಾಯಿತಂದೆಗಳಿಲ್ಲದೆ ತಿರಿದುಣ್ಣಲಾಗದೆ ಹುಣಿಸೆಕಾಯನಾಯ್ದು ಮಾರಿ ಜೀವಿಸುತ್ತಿರಲದರ ಯೌವನದೊಳು ರಾಯಂ ಕಂಡದರ ರೂಪಿಂಗೆ ಸೋಲ್ತು ತನಗರಸಿಯಂ ಮಾಡಿ ಪಾಲಕಿ ಛತ್ರ ಚಾಮರಂಗಳಂ ಕುಡೆ ಮಾರ್ಗದೊಳ್ ಬರುತ್ತೆ ಹುಣಿಸೆಮರಮಂ ಕಂಡು ಆ ಅಂಕ ಡೊಂಕನ ಕಾಯಿ ಏತರ ಕಾಯೆಂದು ಕೇಳೆ ಕೆಲದೊಳಿದ್ದವನೆಂದಂ ತಾವು ಹೊತ್ತು ಮಾರುತ್ತಿರ್ದ ಹುಣಿಸೆಕಾಯಿ ಎನೆ ತನ್ನ ಮದಕ್ಕೆ ತಾನೆ ಸಿಗ್ಗಾಗಿ ನೀನಾರೊಳುಸುರದಿರೆಂದು ಪೋದಳು. ಒಬ್ಬ ಬಡ ಬ್ರಾಹ್ಮಣಂ ಯಾಚನೆ ಮಾಡುವಲ್ಲಿ ಮದುವೆ ವಸ್ತ್ರಂಗಳೊಳು ಎರಡು ಹಣಂ ಲಭ್ಯಮಾಗೆ ಸಂತೋಷದಿಂ ಮನೆಗೆ ಬಂದು ಪೆಂಡತಿಯಂ ಮಗಳಂ ಹಟ್ಟಿಯೊಳಿಪ್ಪ ಗವುಡಿಯಂ ಕರೆದು ನನಗೆ ಎರಡು ಹಣಂ ಲಾಭಮಾಯ್ತಿದಕೆ ನಿಮಗೇನು ಆಭರಣಂ ಬೇಕೆನೆ ಪೆಂಡತಿ ಮೂಗುತಿ ಬೇಕೆಂದಳು, ಮಗಳು ತಾಲಿ ಬೇಕೆಂದಳು, ಗವುಡಿ ಹಲ್ಲಿಗೆ ಕಪ್ಪನಿಡಬೇಕೆಂದಳು ಎನಲಾಗಿ ತಾನು ಸುಲಭ ದಿಂದೊಂದುಂಗುರಮಂ ಮಾಡಿಸಿ ಕಡಮೆಗವರವರು ಪೇಳಿದ ಮೇಲೆ ಆಭರಣಂಗಳಂ ಮಾಡಿಸಿಕೊಡಲಾ ಮಗಳು ತನ್ನ ತಾಲಿಯ ಕಾಣಿಸಲೆಂದು ಕತ್ತನೆತ್ತಿ ತೋರುತ್ತಿಪ್ಪಳು. ಆತಂ ತನ್ನ ಕಿರುಬೆರಲುಂಗುರಮಂ ತೋರಲಲಗಿಸುತ್ತಿಪ್ಪಂ ತದ್ವನಿತೆ ಮೂಗುತಿಯಂ ತೋರಿಸಲು ಮೊಗಮನೊಲೆಯುತ್ತಿರ್ದಳಾ ಗವುಡಿ ಪಲ್ಗಿರಿದು ತೋರಿಸುತ್ತ ಕರಣಮಂ ಮಾಳ್ಪಳಿದು ಆಭರಣದ ಹೆಮ್ಮೆಯೆಂಬುದು. ಒಬ್ಬ ಗೌಡಂಗೆ ಅಪ್ರಬುದ್ಧ ಮಗಂ ಪುಟ್ಟಿ ತನ್ನ ಪೆಂಡತಿಯ ತವರೂರಿಂದಾಕೆಯ ಕರೆದುಕೊಂಡು ಬರುತ್ತಾ ಮಳೆಗೆ ಸಿಕ್ಕಿದಲ್ಲಿ ತನ್ನ ಪೆಂಡತಿಯ ತಿರುಗಿ ನೋಡಿ ಸಣ್ಣ ಸಿರೆ ಮೆಯ್ಯ ಪತ್ತಿ ಪಣೆಯ ಕುಂಕುಮಂ ಪರಿದಿರಲೀಕೆಗೆ ದೊಡ್ಡ ಬಾವು ಮೂಡಿ ವ್ರಣಮಾಯಿತೀಕೆ ಉಳಿಯಳೆಂದು ಮಾರ್ಗದಲ್ಲಿ ಎತ್ತಂ ಕೊಂಡಾ ಹೆಣ್ಣಂ ಕೊಟ್ಟುಬಪ್ಪಲ್ಲಿ, ಎತ್ತು ಮೂತ್ರಮಂ ಪೊಯ್ಯೆ ಪೊಟ್ಟೆ ಕೂತಾದುದೆಂದು ಆ ಎತ್ತಂ ಕೊಟ್ಟೊಂದು ತಗರಂ ಕೊಂಡುಬಪ್ಪಲ್ಲಿ, ತಗರಾತನಂ ಗುದ್ದಿಕೆಡಹಿದೊಡದಂ ಕೊಟ್ಟರ್ಧ ಹಲಸಿನ ಹಣ್ಣಂ ಕೊಂಡು ತಲೆಯಮೇಲಿಟ್ಟು ಬಪ್ಪುದುಂ, ಅಂಟು ಜುಟ್ಟಿಗೆ ಹತ್ತಿ ಕಚ್ಚಿದೊಡೆ ಕೆಲಸಿ ಬಳಿಗೆ ಬಂದು ಜುಟ್ಟಂ ಬೋಳಿಸಿ ಪಣ್ಣಂ ತೆಗೆದುಕೋ ಎಂದು ಬೋಳನಾಗಿ ಮನೆಗೆ ಬಂದಂ ಅಂತಪ್ಪ ದುರ್ಬುದ್ಧಿವಂತನೆಂದು ಮತ್ತಮಿಂತೆಂದಂ.

ಮತ್ತೊಬ್ಬ ಕೃಷೀವಳಂ ಮಳೆಜಡಿಯೊಳು ಇಂಧನಂಗಳಿಲ್ಲದೆ ಒಂದುಪವಾಸಮಿರ್ದು ಬೆಳಗಿನೊಳು ಮಳೆ ಸ್ವಲ್ಪ ತವಲಾಗೆ ಕೊಡಲಿಯಂ ಕೊಂಡು ಊರ ಮುಂದಕ್ಕೆಯ್ದೆ ಮಹಾಮಳೆ ಬಪ್ಪುದುಂ ಚಾವಡಿಯನೇರಿರೆ ಮಳೆ ಬಿಡದೆ ಸಾಯಂಕಾಲಮಾಗೆ ಮಾರಿಯಂ ನೋಡಿ ಹೊನ್ನೆಮರನೆಂದರಿದೀ ಹೊತ್ತಿನ ಸಮಿಧೆಯಪ್ಪುದೆಂದು ಕೊಡಲಿಯನೆತ್ತಿ ಸೀಳ್ವ ಸಮಯದೊಳು ಹೋ ತಡೆಯೆಂದು ಮಾರಿ ಪ್ರತ್ಯಕ್ಷಮಾಗಿ ಎನ್ನನೇಕೆ ಸೀಳ್ವೆಯೆನಲೆನಗೆ ಮೂರುಪವಾಸಮಿದೆಯಿಲ್ಲೆಂಬುದುಂ ಧೈರ್ಯಕ್ಕೆ ಮೆಚ್ಚಿ ನಿನ್ನ ಮನೆಯ ಬಾಗಿಲೊಳೊಂದು ಪೊರೆ ಸಮಿಧೆಯಿದೆ ಪೋಗೆಂದು ಕಳುಹಿಸೆ ತನ್ನ ಪರಿವಾರಗಳಿಂ ನಿಚ್ಚಲೊಂದು ಪೊರೆ ಇಂಧನಮಂ ಹಾಕಿಸುತ್ತುಮಿರೆ

ಶ್ಲೋಕ || ಪುಣ್ಯಮೇಕೋ ಮಹಾಬಂಧುಃ ಪಾಪಮೇಕೋ ಮಹಾರಿಪುಃ
ಅಸಂತೋಷೇ ಮಹಾವ್ಯಾಧಿಃ ಧೈರ್ಯಂ ಸರ್ವತ್ರಸಾಧನಂ ||

ಇಂತಾಗಲಾ ನೆರೆಮನೆಯ ಗವುಡನ ಪೆಂಡತಿ ತನ್ನ ಗಂಡನಂ ಕಾಡಿ ಕೋಪಿಸಲು ಮಾರಿಯಂ ಸೀಳಲಂಜಿ ಭಯಂಗೊಳ್ಳುತ್ತಾ ಕೊಡಲಿಯನೆತ್ತಿದೊಡಾತನಂ ಸ್ತಂಭಿಸುವುದುಂ ಆತನ ಪೆಂಡತಿ ಇನ್ನೂ ಸಮಿಧೆಪೊರೆ ಬರಲಿಲ್ಲವೆಂದು ತಾನುಂ ಬಂದು ನೋಳ್ಪುದುಂ ಕುಠಾರಮನೆತ್ತಿ ಸ್ತಂಭಮಾಗಿರ್ದ ಪತಿಯಂ ಕಂಡು ತನ್ನ ಸುವರ್ಣ ಕರ್ಣಾಭರಣಮಂ ಕಾಣ್ಕೆಯಿತ್ತು ಬಿಡಿಸೆಂದೊಡಂ ಮುನ್ನೀ ಗವುಂಡನ ಮನೆಗೆ ನಿಚ್ಚಲೊಂದು ಪೊರೆ ಪುಳ್ಳಿಯನಡಕಿದೊಡಂ ಬಿಡುವೆನಲ್ಲದೊಡೆ ಬಿಡೆನೆಂದೊಡಂ ತಾನುಮಾತನ ಮನೆಗೆ ಕಟ್ಟಿಗೆ ಆಳಾದನದರಿಂ ಧೈರ್ಯಮಿಲ್ಲದಂಗಾವ ಕಾರ್ಯಮುಂ ಆಗದೆಂದು ಮತ್ತಮಿಂತೆಂದುಂ

ಶ್ಲೋಕ || ಆತ್ಮಬುದ್ಧಿಃ ಚಿರಂಜೀವೀ ಗುರುಬುದ್ಧಿ ವಿಶೇಷಣಃ
ಪರಬುದ್ಧಿರ್ವಿನಾಶಾಯ ಸ್ತ್ರೀಬುದ್ಧಿಃ ಪ್ರಲಯಾಂತಕಾ ||

ಎಂದು ಒಬ್ಬ ಬ್ರಾಹ್ಮಣಂ ರಾಜಾಶ್ರಯಂ ಮಾಡುತ್ತಾ ಆರಸಿನಲ್ಲಿ ಕಾಯ್ದು ಕೊಂಡಿಪ್ಪುದುಂ ಸಭೆಯೊಳರಸನಿಪ್ಪಲ್ಲಿ ಬಲಾಹಾರದಿಂದರಸಿಗೆ ಸಣ್ಣನಾಗಿ ಅಪಾನ ವಾಯು ಶಬ್ದಮಾಗೆ ಕಟ್ಟಿಗೆಯವರರಸನೆಂದರಿಯದೆ ಯಾರು ಯಾರೆಂದಾರ್ಭಟಿಸುವಲ್ಲಿಯಾ ಬ್ರಾಹ್ಮಣನರಿದು ನಾನು ತಪ್ಪಿದೆನೆಂದೆದ್ದು ಕೈಮುಗಿಯಲಾತನಂ ಸಭೆಯಿಂ ಗುದ್ದಿ ನೂಂಕಿದರ್ ಅರಸಂ ಮೆಚ್ಚಿ ಮತ್ತೊಂದು ನೆವದಿಂದಾತಂಗೆ ಒಂದೂರನುಂಬಳಿಗೊಡಲರಸನ ಮುಂದೆ ವಾಯು ನಡಸಿ ಉಂಬಳಿಯಂ ಪಡೆದನೆಂದು ಮತ್ತೊಬ್ಬ ಪಾರ್ವನ ಪೆಂಡತಿಯು ತನ್ನ ಗಂಡನಂ ನೀನುಂ ಅರಸನ ಬಳಿಗೆಯ್ದಿ ಅಪಾನವಾಯುವಂ ನಡಸಿ ಉಂಬಳಿಯಂ ಪಡೆವುದೆಂದತ್ಯಾಗ್ರಹಂಗೆಯ್ಯಲ್ ಅವರೆಯಂ ತಿಂದಾಸ್ಥಾನಮಂ ಪೊಕ್ಕು ಗುದದ್ವಾರದಿಂ ಶಬ್ಬಮಂ ಮಾಡಲರಸಂ ಕೋಪಿಸಿ ಕುಂಡೆಯ ಮೇಲೆ ಮೂರು ಬರೆಯಂ ಹಾಕಿಸಿ ನೂಂಕಿಸಲ್ ಅಷ್ಟರೊಳಾ ಬ್ರಾಹ್ಮಣನ ಪೆಂಡತಿ ಬೀದಿಯ ಬಾಗಿಲೊಳ್ ಮಾನ್ಯಂಬಡೆದು ಬಪ್ಪನೆಂಬ ಸಂತೋಷದಿಂ ಕಾಯ್ದಿರ್ದು ಕುಂಟುತ್ತುಂ ಬಪ್ಪ ಪತಿಯಂ ಕಂಡು ಏನಿತ್ತರೇನಿತ್ತರೆಂದು ಕೇಳುತ್ತಿರೆ ಕೋಪಿಸಿ ಬರಗೆಯಂ ಕೊಟ್ಟರೆನೆ ಆ ಗ್ರಾಮ ಒಳ್ಳೇದು ನಾವಿಬ್ಬರಿಗೆ ಮೃಷ್ಟಾನ್ನವಾಗುತ್ತಿದೆ ಎಂಬುದು ಮರಳೆ ತೇಜ ಬರೆಯೆನೆ ತೇಜಿಯನೇರೆಕೆ ಬರಲಿಲ್ಲೆಂಬಷ್ಟರೊಳು ಸಮಿಪಕ್ಕೆ ಬಂದು ಕುಂಡೆಯಂ ತೋರಿಸೆ ಹಸಿಯ ಬಿದಿರಂ ತೇದಿಕ್ಕೆ ವೇದನೆಬಟ್ಟರು.