ಬುಕ್ಕರಾಯ ರಾಜ್ಯಾನಂತರಂ ಪ್ರೌಢದೇವರಾಯನ ನಂತರ ರಾಮಚಂದ್ರರಾಯ ವಿಜಯರಾಯರೆಂದಿವರು ಕ್ರಮದಿಂದಾಳಿದರು. ಬಳಿಕ ಗದ್ದೆ ದೇವರಾಯನ ಕಾಲದಿಂ ಮೇಲೆ ರಾಮಚಂದ್ರ ವಿರೂಪಾಕ್ಷರಾಯರಾಳಿದನಂತರಂ ಮಲ್ಲಿಕಾರ್ಜುನರಾಯ ರಾಮ ರಾಯರಾಳುತ್ತಿರಲಿತ್ತ ವಿಜಯನಗರದ ಸೋಮಶೇಖರರಾಯನ ಮುಟ್ಟಗವುಡಿ ಹಂಡೆ ಕುರುಬರ ಜಾತಿ ದೀಪದಮಲ್ಲಿ ಗುದ್ಭವಿಸಿದ ಕೃಷ್ಣರಾಯಂ ಆನೆಗೊಂದಿಸಂಸ್ಥಾನಮಂ ಪರಾಕ್ರಮದಿಂ ಸಾಧಿಸಿ ನಿಂದು ಬಳಿಕ ಎಲ್ಲಾ ರಾಜ್ಯಮಂ ಸಾಧಿಸಿ ತನ್ನ ಸಾಮಂತರೆಣ್ಬರ ವರೊಳು ದೇವರಾಯ ಮಹಾರಾಯನ ಕುಮಾರ ಹರಿಹರರಾಯ ದೇವಣ್ಣರಾಯ ಭುಜಂಗರಾಯರೆಂದೀ ಮೂವರ್ಗೆ ದಕ್ಷಿಣದೇಶದ ಪ್ರಭುತ್ವಮಂ ಕೊಟ್ಟು ಕಳುಹಿಸಲವರ್ ಬಂದು ತೆರಕಣಾಂಬಿ ಸ್ಥಳಕ್ಕೆ ಬಂದು ನಿಂತರ್. ಆ ಸ್ಥಳಂ ಪೂರ್ವದೊಳು ಶಕೆ ೬೦೦ ವರ್ಷಂ ಪೋದಂದು ಕುಡಗಣೂರಿಂಗೆ ತೆರಕಣಾಂಬಿ ಎಂದು ಪೆಸರಂ ಮಾಡಿ ಪುರಮಂ ಕಟ್ಟಿಸಿ ಲಂಬಕರ್ಣನೆಂಬ ಕ್ಷತ್ರಿಯನೈವತ್ತು ವರುವಾಳಿದನಲ್ಲಿಂದಿತ್ತ ಗೊಂಡೆ ಚೋಳ ರಾಯಂ ಇಪ್ಪತ್ತು ವರುಷಂ ಪಾರ್ಥಿವರಾಯಂ ನಾಲ್ವತ್ತು ವರುಷ ಸಾಳುವರಾಯ ತತ್ಪುತ್ರ ನರಸಿಂಗರಾಯ ಇವರ ಮಗನಹೋಬಳರಾಯನ ನಂತರ ಮುಚ್ಯುತರಾಯನು ದತ್ತಪುತ್ರ ಪಾರ್ಥಿವರಾಯನೆಂದಿವರಾಳಿಕೆ ಪ್ರತಾಪರುದ್ರ ಚಾಮದೇವರಾಯ ಭೂಕರಾಯ ಮಾಳವರಾಯ ಪ್ರಭುದೇವರಾಯ ತಮ್ಮರಾಯ ನರಸಣ್ಣರಾಯ ವೀರ ನರಸಿಂಹರಾಯರ ರಹವಾಲಿನಲ್ಲಿ ನಡೆದ ತರುವಾಯ ಚಿಕ್ಕರಾಯ ಶಿವನಸಮುದ್ರದ ಮಾಧವರಾಯ ವೆಂಕಟಪತಿರಾಯ ವಸಂತರಾಯ ಚಂದ್ರಗಿರಿರಾಯ ಗೋವಿಂದರಾಯರ್ ಮೊದಲಾಗೆ ಕೆಲಂಬರಾಳಿದರ್. ಆರುನೂರಿಪ್ಪತ್ತಾಗಲಂತು ಸಾವಿರದ ಮುನ್ನೂರ ಹತ್ತು ಶಕವರುಷಂಬರಂ ನಡೆಯಲು ತ್ರಿಯಂಬಕರಾಯ ತನ್ನ ಪೆಸರಿಂ ತ್ರ‍ಯಂಬಕೇಶ್ವರಾಲಯಮಂ ಮಾಡಿಸಿ ತ್ರಿಯಂಬಕಪುರಮಂ ಕಟ್ಟಿಸಿ ಕೆಲದಿವಸಮಿರ್ದನಾತನಿಂ ಬಳಿಯಂ ಆನೆಗೊಂದಿಯಿಂ ಬಂದ ಹರಿಹರರಾಯನಾದಿ ಮೂವರೊಳು ದೇವಣ್ಣರಾಯಂ ಉಮ್ಮತ್ತೂರು ಸಂಸ್ಥಾನದೊಳಿರ್ದನವನ ಪೌತ್ರಂ ಭುಜಂಗರಾಯಂ ಹರಿಹರರಾಯಂ ಕುಡಗ ನಾಡ ತೆರಕಣಾಂಬಿಯೊಳಿರ್ದನಾತನ ಕುಮಾರಂ ವೀರರಾಯಂ ಹಿರಿಯನಾಡ ತಗಡೂರಲ್ಲಿ ಪ್ರಭುವಾದಂ.

ಇಂತು ರಾಜ್ಯಂಗೆಯ್ಯುತ್ತಿಪ್ಪುದುಂ ರಾಯನ ಶತ್ರುಗಳು ಆನೆಗೊಂದಿರಾಯಂಗೆ ಇಲ್ಲವಾದ ಅನ್ಯಾಯಮಂ ಮಾಡಿದೆನೆಂದು ದೌರ್ಜನ್ಯದಿಂ ಕ್ಷುದ್ರಂಗಳಂ ಪೇಳೆ ಕೋಪಿಸಿ ಕರೆಯಲಟ್ಟಿದೊಡಾ ವಾರ್ತೆಯಂ ಕೇಳಿ ಪೋಗಲುದ್ಯೋಗಿಸಲೊರ್ವಂ ನಿಮ್ಮ ಭ್ರಾತೃವ್ಯಂ ನಿಮ್ಮ ನಾಡುಗಳ ಬೆಡಿರ್ದನೆನೆ ಇಂತೆಂದಂ

ವೃ || ಕ್ಷಾಂತಿಶ್ಚೇತ್ಕವಚೇನ ಕಿಂ ಕಿಮರಿಭಿಃ ಕ್ರೋಧೋಸ್ತಿಚೇದ್ದೇಹಿನಾಂ
ಜ್ಞಾತಿಶ್ಚೇದನಲೇನಕಿಂ ಯದಿ ಸುಹೃದ್ದಿವ್ಯಾಷಧೈಃ ಕಿಂ ಫಲಂ
ಕಿಂ ಸರ್ಪೈರ್ಯದಿ ದುರ್ಜನಾಃ ಕಿಮುದನೈರ್ವಿದ್ಯಾನ ವಂದ್ಯಾಯದಿಕಿಂ
ವ್ರೀಡಾಚೇತ್ಕಿಮು ಭೂಷಣೈಸ್ಸುಕವಿತಾಯದ್ಯಸ್ತಿ ರಾಜ್ಯೇನ ಕಿಂ
ವ್ರೀಡಾಚೇತ್ಕಿಮುಭೂಣೈಸ್ಸುಕವಿತಾಯಷದ್ಯಸ್ತಿ ರಾಜ್ಯೇನಕಿಂ
||

ಎಂದು ಆನೆಗೊಂದಿಗೆ ಪೋಗಲೆ ಬರುತ್ತೆ ಕನಕಗಿರಿಯ ಸಮೀಪದೊಳ್ ಸಂಜೆ ಕಾಲದ ದೇವಭೋಗದ ಘಂಟೆಧ್ವನಿಯಂ ಕೇಳಿ ನನ್ನ ರಾಜ್ಯಂ ನನಗೆ ನಿಂತೊಡೆ ಈ ಮಲೆಯೂರಗ್ರಾಮಮಂ ಈ ಗಿರಿಯ ವಿಜಯ ಜಿನಪ್ರತಿಮೆಯ ಪೂಜಾರ್ಥವಾಗಿ ಸರ್ವಸಾಮಾನ್ಯಮಾಗಿ ಕೊಡುವೆನೆಂದು ಪರಸಿಕೊಂಡು ಪೋಗೆ ಅಲ್ಲಿ ರಾಜಂ ಪ್ರಸಾದದಿಂ ಕೆಲವು ರಾಜ್ಯಮಂ ಹೆಚ್ಚಿಸಿಕೊಟ್ಟು ಸಂತೋಷಂಬಡಿಸಿ ಕಳುಹಿಸೆ ಬಂದು ಕನಕಗಿರಿಯ ವಿಜಯದೇವರಿಗೆ ಮಲೆಯೂರು ಗ್ರಾಮಮಂ ಶಾಸನದತ್ತವಾಗಿ ಕೊಟ್ಟನದೆಂತೆನೆ

ಶ್ಲೋಕ || ಶ್ರೀಮತ್ಪರಮಗಂಭೀರ ಸ್ಯಾದ್ದಾದಾಮೋಘಲಾಂಛನಮ್
ಜೀಯಾತ್ತ್ರೈಲೋಕ್ಯನಾಥಸ್ಯ ಶಾಸನಂ ಜಿನಶಾಸನಮ್
||

ಸ್ವಸ್ತಿ ಸಮಸ್ತ ಪ್ರಶಸ್ತೋತ್ತರ ಶಾಲಿವಾಹನ ಶಕವರುಷ ೧೩೪೪ನೆಯ ಶಂಭಕೃತು ಸಂವತ್ಸರದ ಶ್ರಾವಣ ಶುದ್ಧ ೧೫ಯಲ್ಲು ಶ್ರೀಮದ್ರಾಜಾಧಿರಾಜ ಸ್ರೀ ವೀರ ದೇವರಾಯಮಹಾರಾಯರ ಕುಮಾರ ಹರಿಹರರಾಯರು ಸೋಮಗ್ರಹಣದಲ್ಲು ಕನಕಗಿರಿ ವಿಜಯದೇವರು ಶ್ರೀಕಾರ್ಯದ ಅಂಗರಂಗವೈಭವಂ ಮೊದಲಾದ ದೇವತಾವಿನಿಯೋಗ್ಯಕ್ಕೆ ಮಲೆಯೂರಗ್ರಾಮದ ಚತುಸ್ಸೀಮೆಯೊಳಗಾದ ಗದ್ದೆ ಬೆದ್ದಲು ತೋಟ ತುಡಿಕೆ ಸುಂಕ ಸುವರ್ಣಾದಾಯ ತಳವಾರಿಕೆ ಅಕ್ಷಣಿ ಆಗಾಮಿ ಸರದಿ ಜಲಪಾಷಾಣ ಸಿದ್ಧಪಾಷಾಣ ಸಿದ್ಧಸಾಧ್ಯ ನಿಧಿ ನಿಕ್ಷೇಪ ಸರ್ವಾದಾಯ ಸರ್ವಸ್ವಾನ್ತ ಸಗುತವಾಗಿ ಧಾರಾಪೂರ್ವಕಮಾಗಿಯಾ ಮಲೆಯೂರಗ್ರಾಮವನ್ನು ಶಾಸನದತ್ತವಾಗಿ ಕೊಟ್ಟ ದತ್ತಿ

ಶ್ಲೋಕ || ಸ್ವದತ್ತಾಂ ಪರದತ್ತಾಂ ವಾ ಯೋ ಹರೇತ ವಸುಂಧರಾಂ
ಷಷ್ಠಿರ್ವರ್ಷ ಸಹಸ್ತಾಣಿ ವಿಷ್ಠಾಯಾಂ ಜಾಯತೇಕ್ರಿಮಿಃ
||

ಎಂದು ಶಿಲಾಶಾಸನಮಂ ಬರೆಯಿಸಿ ತಾಮ್ರ ಚಪ್ಪೋಡಿನೊಳಾ ಗ್ರಾಮದ ಎಲ್ಲೆ ಸಿದ್ಧಾಯ ಹುಟ್ಟುವಳಿ ಬರೆಯಿಸಿ ತ್ರಿಯಂಬಕೇಶ್ವರಸಾಕ್ಷಿಯಿಂ ಹಿರಣ್ಯೋದಕ ಧಾರಾಪೂರ್ವಕಂ ಕೊಟ್ಟು ಜಿನಧರ್ಮಮೆ ಸತ್ಯಮೆಂದು ಹರಿಹರರಾಯಂ

ಬಸದಿಗೆ ಕೊಟ್ಟೀ ಧರ್ಮವ
ಪಿಸುಣನು ತಾನಾಗಿಯುಳಿಪಲಾಯುಂ ಶ್ರೀ ಯುಂ
ಕುಸಿದು ನರಕಾದಿ ದುಃಖದ
ಶಶಿ ರವಿಯುಳ್ಳನಕಮುಂಡು ನವೆಯುತ್ತಿಪ್ಪರ್

ಎಂದು ದೃಢಚಿತ್ತನಾಗಿರ್ದಂ ಹಿಂದೆ ಅರುವತ್ತೇಳನೆಯ ವರಷದಂದು ಶ್ರೀರಾಯನ ಪಟ್ಟಸ್ತ್ರೀಗೆ ವ್ಯಂತರಂ ಜನ್ಮಾಂತರ ಕಾರಣದಿಂ ಬಾಧಿಸುತ್ತಿರಲಾ ಕಾಲದೊಳ್ ಕನಕಗಿರಿಯೊಳಿರ್ದ ಲಲಿತಕೀರ್ತಿಗಳ ಬರಿಸಲಲ್ಲಿ ಬಸ್ತಿಯುಂ ಕಟ್ಟಿಸಿ ಜಿನಪ್ರತಿಷ್ಠೆಯಂ ದೇವಪ್ಪಗಳ ಪ್ರಪೌತ್ರನಿಂ ಮಾಡಿಸಿ ರಾಯನ ದೆವ್ವಮಂ ಬಿಡಿಸಿ ಸ್ವಾಸ್ಥ್ಯ ಮಾನ್ಯಮಂ ಬಿಡಿಸಿರ್ದರು. ಶಕವರುಷ ೧೨೭೭ನೆ ಮನ್ಮಥನಾಮ ಸಂವತ್ಸರದ ಚೈತ್ರದಲ್ಲಿ ಕನಕಗಿರಿಯೊಳ್ ತಮ್ಮ ನಿಷಿಧಿಯ ದೀಪಮಾಲೆಯ ತೋರಣಕಂಬಗಳಂ ಮಾಡಿಸಿ ಚತುಸ್ಸಂಗಮಂ ಪಾರ್ಶ್ವಪ್ರತಿಮೆಯೆಂಬ ಪ್ರತಿಯುಂ ಚತುಸ್ಸಂಗಸಹಿತಂ ಮಾಡಿಸಿದರಾ ಕಾಲದೊಳೆ ವಿಜಯನಗರದೇಶಕ್ಕೆ ಕ್ಷಾಮಂ ಬರಲಾ ದೇಶದೊಳಿರ್ದ ಚಾತುರ್ವರ್ಣಂಗಳನೇಕರೆಲ್ಲಂ ಬಂದೀ ದೇಶದೊಳ್ ನಿಂತರವರೊಳು ಕೊಲುಗಣದ ಮಾರ್ಗವಾಗಿಬ್ಬರರಸುಗಳ್ ಬರಲು ಆ ಬೆಟ್ಟಮನಲ್ಲಿಪ್ಪ ಭೂಮಿವೆರಸೊರ್ವ ಕುರುಬಂ ಗುತ್ತಿಗೆಯಂ ಮಾಡಿ ಹುಂಡಿಯಂ ನಿರ್ಮಿಸಿರಲಲ್ಲಿಗೀ ಅರಸುಗಳು ಬಂದಿಳಿಯಲೆಂಬುದುಮಾ ಕುರುಬಂ ತನ್ನ ಜನಂಗಳು ಸಹಿತಂ ಬಂದವರಂ ನಿರಾಕರಿಸಿ ನೊಂಕಿ ಕಳೆಯೆ ತೆರಕಣಾಂಬಿಗೆಯ್ದಿ ಹರಿಹರರಾಯರಿಂ ಕುಲುಗಾಣಮಂ ಕೇಳಿ ಪಡೆದಾ ಹುಂಡಿಯ ಕುರುಬನಂ ನಿರ್ಧ್ವಂಸಂ ಮಾಡಿ ಹುಂಡಿಯಂ ಕಿತ್ತು ಪೊಲನಂ ಮಾಡಿಸಿ ಪಶ್ಚಿಮದೊಳು ಪರವಾಸುದೇವರ ಗುಡೀ ಬಳಿಯ ಕೋಟೆಯಂ ಮಾಡಿಯಾ ಕುಲುಗಾಣಕ್ಕೆ ಸೇರಿದ ಆರು ಗ್ರಾಮಮಂ ಕೈಕೊಂಡು ರಾಮರಾಯನಿರಲ್

ಅತ್ತಲು ಉಮ್ಮತ್ತೂರೊಳು ದೇವಣ್ಣರಾಯಂ ತಗಡೂರ ಪ್ರಭುರಾಯ ಸೋಮಸಮುದ್ರದ ಸೋಮಶೇಖರರಾಯಂ ಬೆಟ್ಟದಪುರದ ಪಟ್ಟರಾಯಂ ಪಿರಿಯಾಪಟ್ಟಣದ ನಂಜರಾಯಂ ಕಲ್ಲಹಳ್ಳಿ ಚಂಗಳ್ವರಾಯ ರಾಘವ ಮಾಧವರಾಯರಾದಿಯಾಗೆಯನೇಕವಾಗಿ ರಾಯರಾಳಿಕೆ ಪ್ರಬಳಮಾಗಿರಲಾಗಳು ಮಹಿಸೂರಿಗೆ ಸೇರಿದ ಮೂವತ್ತು ಮೂರು ಹಳ್ಳಿಗೆ ಕಾರಗಹಳ್ಳಿ ಅರಸುಗಳಾಳುತ್ತಿರಲಿಲ್ಲ ಸಂತಾನದೊಳೊಂದು ಪೆಣ್ಗೂಸು ಪುಟ್ಟಿ ಬೆಳೆಯುತ್ತಿರಲಿಲ್ಲ ತೊರೇರು ನಾಯಕರೆಂದತಿ ಪ್ರಬಳಮಾಗೆ ಸರ್ವಾಧಿಕಾರಮೆಲ್ಲಮಂ ತಮ್ಮ ವಶಂಮಾಡಿಕೊಂಡಿರ್ದುಮರಮನೆಯೊಳಿರ್ದ ರಾಜಪುತ್ರಿಯಂ ನಾಯಕಂ ತನ್ನ ಮಗಂಗೆ ಬೇಡಿದೊಡತಿಭೀತರಾಗಿ ಕುಡಲನುಮತಂ ಮಾಡಲತಿನಿಗ್ರಹಂಗೆಯ್ದು ಮದುವೆಯಂ ಮಾಡಲು ಸನ್ನಹಂ ಮಾಡುತ್ತಿರ್ಪಾಗಳು ವಿಜಯನಗರದಿಂ ಬಂದ ಯಾದವವಂಶ ಬಲ್ಲಾಳಸಂತತಿಯ ಈರ್ವರರಸುಮಕ್ಕಳು ಬಂದು ಕೆರೆಯಮೇಲಿರ್ದ ಸಮಯದೊಳರಮನೆಯಂಗನೆಯರು ಉದ್ದಿನಬೇಳೆಯಂ ತೊಳೆಯುತ್ತೆ ದುಃಖಿಸುತ್ತಿಪ್ಪುದುಂ ಶುಭಕಾರ್ಯದೊಳೇಕೆ ಶೋಕಿಸುವಿರೆಂದು ಬೆಸಗೊಳೆ ತಮ್ಮ ಕುಮಾರಿಯಂ ತೊರೆಯಂ ಪರಿಣಯಮಂ ಮಾಡಿಕೊಳ್ವುದಂ ಪೇಳೆ ತಮ್ಮ ವಿವರಮಂ ಪೇಳಿ ಯಾರುಮರಿಯದಂತು ಅರಮನೆಯಂ ಸೇರಿರ್ದು ನಮ್ಮ ದೊರೆಗಳ ಪದ್ಧತಿಯಿಂದಲೇ ಮಾಡಬೇಕೆಂದು ಅರಮನೆಯೊಳು ಕೋಣೆಕತ್ತಲೆಯಾಗಿ ಚಪ್ಪರಮಂ ಕಲ್ಪಿಸಿ ಒಂದೆರಡು ಜನಂ ಬಪ್ಪಂತಾಗಿ ಮಾರ್ಗದಾ ಬಾಗಿಲಿಂದೊಳಗೆ ಭೂಮಿಯೊಳು ಖಾತಂಗಳಂ ಸಮೆದು ಧಾರಾಮುಹೂರ್ತಕೆಂದೊರ್ವರೀರ್ವರ್ ಬಂದೊಡಾಚೆಗೆ ಸುದ್ದಿಪೋಗದಂತು ತಾಮೀರ್ವರುಂ ಬಾಗಿಲೊಳ್ ನಿಂತು ಕೂರಲಗಿನಿಂ ಬಂದ ಬಂದ ಜನಮೆಲ್ಲಮಂ ಕೊಂದಾ ಹಳ್ಳದೊಳೆಳೆಯುತ್ತಾ ನಾಯಕರೆಲ್ಲಂ ಸಮಾಪ್ತಿಯಾಗೆ ತಮ್ಮ ಪ್ರಶಂಸೆ ಮೆರೆಯಲಾ ಕುಮಾರಿಯ ಮದುವೆ ನಿಲ್ಲದೆ ಅವರವರ ಕಡೆಗೆಯ್ದಿ ರಾಜೊಡೆಯರಂ ಪಡೆದಳು. ಪಡೆದಾ ರಾಜ್ಯಮಂ ಪಾಲಿಸುತ್ತ ರಾಜೊಡೆಯರಂ ನಾಯಕಂ ಕೊಂದನಾಕೆಯ ಸ್ತ್ರೀ….. ರ್ಭಿಣಿ ತಪ್ಪಿಸಿಕೊಂಡು ಸುಖದಿಂದಿರ್ದರ್.

ಇತ್ತ ಹದಿನಾಡು ಮುಂತಾದ ಆರುನಾಡುಗಳಂ ಸೋಮವಂಶದ ಸಮ್ಯಗ್ದೃಷ್ಟಿ ಅಭಿಚಂದ್ರನಾಳುತ್ತಿರೆ ಕುಂತೂರುಮಠದೊಳು ನಂಜಯ್ಯನೆಂಬ ಜೋಳಿಗೆ ಒಡೆಯರಿರಲಲ್ಲಿಗೆ ಬಡಗಸೀಮೆಯಿಂದೋರ್ವ ಮಾದಿಗರ ಹುಡುಗಂ ಪೂರ್ವಜನ್ಮದ ಸಂಸ್ಕಾರ….. ವ್ಯಂತರದೇವತಾ ಒಲುಮೆಯಿಂ ದೇಶಾಂತರಂ ಬಂದಾ ಮಠಮಂ ಸೇರಿ ದನಮಂ ಕಾಯ್ದುಕೊಂಡಿರ್ದು ಹೂವಂ ತರಲ್ ಪೋಗಿ ಹೇರಳೆ ಚಂಡು ಮೊದಲಾದಾಟದೊಳಿರ್ದು ಕರಡಗೆಯೊಳೆ ಸಿಕ್ಕಿದ ಪ್ರಾಣಿಯನಿಟ್ಟು ತರಲದಂ ಪೊವೆಂದು ಶಿಷ್ಯನೊಳತಿ ಶ್ರದ್ಧೆಯಿಂ ಜೋಳಿಗೆ ನಂಜೊಡೆಯಂಗೆ ದೊರೆತನ ಮಾಡಿಕೊಡುವೆನೆಂದು ನಂಬಿಸಿಯಾ ನಾಡರಸಪ್ಪಭಿಚಂದ್ರನೊಳು ಕಪಟಸ್ನೇಹದಿಂದಾಪ್ತನಾಗಿಯು ಮಂತ್ರಿ ಪ್ರಧಾನಿಗಳೆಲ್ಲರಂ ವಶಂ ಮಾಡಿಕೊಂಡಿರ್ದಾ ಮಲೆಯನಾಡ ಬೆಟ್ಟದ [ಬೋಳರೆ] ಯೊಳಷ್ಟಾಹ್ನಿಕದಷ್ಟೋಪವಾಸದಿಂ ಯೋಗಕ್ಕೆ ನಿಂದ ಭಾನುಕೀರ್ತಿಗಳೆಂಬ ಜಿನಮುನಿಯಂ ಬಂದಿಸಿ ಬಪ್ಪಂ ಬನ್ನಿಮೆಂದು ಲಾಕ್ಷವ ಪಾದುಕಮಂ ತೊಡಿಸಿ ಕಾಸಿದರೆಯ ಮೇಲೆ ನಿಲಿಸಿ ಅಲ್ಲೆ ಪರಿಹರಿಸಿಬಿಟ್ಟ ನಂಜರಾಜ ಒಡೆಯಂಗೆ ಪಟ್ಟಂಗಟ್ಟಿ ತಾನು ಗುಡ್ಡನಾಗಿರ್ದು ಪರ್ವತದ ಬೋಳರೆಯೊಳು ಯೋಗದೊಳಿರ್ದ ಶ್ರವಣಮುನಿಯಂ ಪಾಪಕ್ಕಳುಕದೆ ಕೊಂದಾ ನಂಜರಾಜಯ್ಯನ ರಾಜ್ಯಕ್ಕೆ ತಾನೆ ಅರಸಾಗಿ ಮಾದರಸನೆಂದು ಪ್ರಸಿದ್ಧಿಯಾಗಿ ತನ್ನ ಪೆಸರಿಂದಾ ಹೊಳೆಯ ಮಧ್ಯದೊಳು ಕಟ್ಟಯಂ ಕಟ್ಟಿಸಲು ಮಂತ್ರಶಕ್ತಿಯಿಂ ದೊಡ್ಡ ಕಲ್ಲನ್ನು ದೈವಂಗಳಿಂ ತರಿಸುತ್ತೆ ಇಲ್ಲಿಡಲ್ಲಿಡೆಂದು ಪೇಳುತ್ತಿರಲೊಮ್ಮೆ ಇಲ್ಲಿಡೆಂಬುದಂ ತಲೆಯಮೇಲಿಟ್ಟು ಕೊಲೆ ಸತ್ತು ವ್ಯಂತರನಾಗೆ ಆ ಣಾಡುಗಳೆಲ್ಲರೊಳು ಅತ್ಯಂತ ರುಜೆ ಮೊದಲಾದವರಿಂ ಬಹಳ ಜನಂ ಸಾಯುತ್ತಿರ್ಪುದುಂ ಸರಗೂರ ಉಪ್ಪಲಿಗರು ಗುಡ್ಡರಾಗಿ ಆವೇಶ ಬಂದು ಏಳುಮಲೆ ಮಧ್ಯದಲ್ಲಿ ಪಶ್ಚಿಮಾಭಿಮುಖದಿ ಗುಡಿ ಕಟ್ಟಿಸಿ ಮಾದನೆಂಬುದರಿಂ ಮಾದೇಶ್ವರನೆಂದು ಪೆಸರಿಟ್ಟು ಅನೇಕ ತೆರದಿಂ ಪೂಜಿಸುತ್ತೇ ಜಗತ್ಪ್ರಸಿದ್ಧಿಯಾಗೆ ಸರಗೂರ ಗುಡ್ಡನೆ ಗೊತ್ತಾಗಿ ಜಾತ್ರೆ ತೇರುತಿರನಾಳೆಂದು ವರುಷಂಪ್ರತಿ ನಡೆಸುತ್ತೆ ಬರೆ ಬಹುದೇಶದ ಜನರೆಲ್ಲಂ ಮರುಳಾಗಿ ಕಾಣಿಕೆ ಕಪ್ಪಮಂ ಕೊಡುತ್ತಿರಲು ನಾಲ್ಕು ಒಕ್ಕಲು ತಮ್ಮಡಿಗಳನಲ್ಲಿರಿಸಿ ಭೂಮಿಯಂ ಕೊಟ್ಟು ಅರಮನೆ ಆದಿಕವಿಟ್ಟು ಬಂದ ಕಾಣಿಕೆಯೆಲ್ಲ ಮನರವಮನೆಗೆ ತೆಗೆದುಕೊಂಬರಾ ಮಾದನ ಒಲುಮೆಬುಗತರೆಂದು ಅನೇಕ ಜನಂ ಗುಡ್ಡರಾಗಿರುತ್ತಿರಲಿತ್ತ ಮೂಗೂರೊಳರಸಂ ಅನಂತನಾಥ ಚೈತ್ಯಾಲಯದೊಳು ದೇಶಿಲಿಂಗಮೆಂದು ಸ್ಥಾಪಿಸಿ ನಿಕ್ಷೇಪಮಾಗಿರ್ದ ಯಕ್ಷೀಬಿಂಬಂ ಸಿದ್ಧಬಿಂಬವು ತಿಪ್ಪೆಯೊಳ್ ಸಿಕ್ಕಲಿಲ್ಲ ಗುಡಿಯಂ ನಿರ್ಮಿಸಿ ತಿಪ್ಪಾದೇವಿಯೆಂದು ಪೆಸರಿಟ್ಟಾ ಪ್ರತಿಮೆಯ ಬಸದೀ ಸಮೀಪದೊಳಳಗನಾದನೆಂದು ಪೂಜಿಸಿದರ್ ಅತ್ತ ಉಮ್ಮತ್ತೂರ ದೇವಣ್ಣರಾಯನ ಸಂತಾನದೊಳ್ ಭುಜಂಗರಾಯರ್ ಮೊದಲಾಗೆ ಊರುಗಳಲ್ಲಿ ರಾಯರೆಯಾಗಲ್

ಅತ್ತ ತುಳುವ ಪಟಳಷಟ್ಕದೊಳು ನರಸಿಂಗರಾಯಂ ತಮ್ಮ ರಾಂ ನರಸಣರಾಯಂ ವೀರನರಸಿಂಹರಾಯಂ ಕೃಷ್ಣರಾಯಂ ಅಚ್ಯುತರಾಯನಿಂದಿತ್ತ ತಿರುಮಲರಾಯ ಸದಾಶಿವರಾಯ ರಾಮರಾಜಯ್ಯ ಸಹಾ ಆಳಿದ ಶಕಾಬ್ದಾ ೧೪೮೫ ರಕ್ತಾಕ್ಷಿ ಸಂವತ್ಸರ ಮಾಘ ಶುದ್ಧ ೧ ರಲ್ಲು ರಾಮರಾಜಯ್ಯನ ಮರಣ. ಬಳಿಕ ತಿರುಮಲರಾಜಯ್ಯ ಮಾಘ ಶುದ್ಧ ೫ ಆರಭ್ಯ ವರುಷ ೭, ತಿಂಗಳು ೫, ದಿನ ೧೨ ಬಳಿಕ ಅಂಗೀರಸ ಸಂವತ್ಸರದ ಆಷಾಡ ಬಹುಳ ೨ ಅರಭ್ಯ ಶ್ರೀರಂಗರಾಯ ಶ್ರೀರಂಗಪಟ್ಟಣಮಂ ನಿರ್ಮಿಸುವಲ್ಲಿ ಅಲ್ಲಿ ನಿಕ್ಷೇಪಮಾಗಿರ್ದ ಜ್ವರಮಾರಾಚಾರ್ಯರವಿತ ಪುರುಮರಮೇಶ್ವರ ಬಿಂಬಮಂ ರಂಗಪ್ರತಿಮೆಯುಂ ವೀರಭದ್ರಪ್ರತಿಕೃತಿಯುಮಿರ್ದೊಡವಕ್ಕೆ ಮೂರು ದೇವಾಲಯಮಂ ನಿರ್ಮಿಸಿ ಕಾವೇರಿಮಧ್ಯದೊಳು ಪಟ್ಟಣಮಂ ಮಾಡಿಸಿದನು. ಹಿಂದೆ ನಾಲ್ವತ್ತು ವರುಷದಂದು ಮಹಿಸೂರಲ್ಲಿ ಈರನಗೆರೆಯ ಮಾರನಾಯಕನೆಂಬನತ್ಯಂತ ಪ್ರಾಬಲ್ಯದಿಂದ ಸಕಲಾಧ್ಯಕ್ಷಮಂ ತಾನೇ ಕೈಗೊಂಡಿರ್ದು ರಾಜದ್ರೋಹಿ ಅರಸನಂ ಪರಿಹರಿಸುವುದೆಂದು ತೀಕ್ಷ್ಣ ಪುರುಷರನಟ್ಟಲವರ್ ಪೋಗಿ ಕೊಲ್ವಾಗಳು ಮಂತ್ರಿ ಶಾಂತಯ್ಯನ ಮರೆವುಗೆ ಸರ್ವಥಾ ಈತನಂ ಕೊಲಲಾಗದು ತಾನು ಹೇಳಿದ ಪ್ರಕಾರ ಕೇಳಿಕೊಂಡಿದ್ದೇವೆ ಎಂದು ದೈನ್ಯಂಬಡೆ ನುಡಿಯುತ್ತಿರಲಾ ಮಾತಂ ಕೇಳಿ ಈರ್ವರಂ ಕೊಲ್ಲಿಸಿ ಅರಮನೆಯೊಳಿರ್ದೆಲ್ಲಾ ಅರಸುಗಳ್ ಮುಂತಾಗೆ ಪರಿಜನ ಮುಂತಾಗೆ ಗಂಡು ಹೆಣ್ಣು ಮಕ್ಕಳು ಮುಂತಾಗೆಲ್ಲರಂ ನಿಶ್ಯೇಷಮಾಗೆ ಪರಿಹರಿಸಲಾ ರಾತ್ರಿ ಶಾಂತಯ್ಯನ ತಮ್ಮನಪ್ಪ ಪದ್ಮಣಯ್ಯಂ ರಾಜನುಂ ತನ್ನಗ್ರಜನುಂ ಮೃತವಾದುದಕ್ಕತ್ಯಂತ ದುಃಖಿತನಾಗಿ ಮಧ್ಯರಾತ್ರಿಯೊಳ್ ಕಂಬಲಮಂ ಪೊದೆದರಮನೆಯೊಳುರುಳಿರ್ದ ಪೆಣಂಗಳಂ ಕಳಿದರಮನೆಬಾಗಿಲೊಳ್ ನಿಂದು ಪ್ರಲಾಪದಿಂ ಶೋಕಿಸುತ್ತಿರಲಾ ಮನೆಯ ಕದವಿನ ಮರೆಯೊಳ್ ಬಳೆ ಮೊದಲಾದ ಶಬ್ದಮಂ ಕೇಳ್ದಾರೆಂದು ಕೇಳಲರಸನ ಮಹಾದೇವಿ ಮೂರು ತಿಂಗಳ ಗರ್ಭಿಣಿಯಿರ್ದೊಡಂ ಕಂಬಲಮಂ ಪೊದೆಯಿಸಿ ತನ್ನ ಗೃಹಕ್ಕೆಯ್ತಂದು ವಿಪರೀತಮಾಗೆ ವಿರೂಪೆಯಂ ಮಾಡಿರ್ದು ಮರುದಿವಸಂ ನಾಯಕನಲ್ಲಿಗೆಯ್ದಿ ಎನ್ನಗ್ರಜನವಿವೇಕಿ ಮಹಾನಾಯಕರ ದಯಕ್ಕೆ ಪಾತ್ರನಾಗದೆ ಯಮಲೋಕಪ್ರಾಪ್ತನಾದನಾಂ ತಮ್ಮಾಜ್ಞೆಯ ಮೀರುವನಲ್ಲಮಾದೊಡಾತನ ಉತ್ತರ ಕ್ರಿಯೆಯಂ ಮಾಡಲದು ಶೂದ್ರಪೆಣವಾಯಿತದರಿಂ ನಮ್ಮ ದೇವರ ಬಳಿಯಲ್ಲಿ ಪುನಃ ಸಂಸ್ಕಾರಮಂ ಮಾಡುವುದಕ್ಕೆ ಏಚಗನಹಳ್ಳಿಗೆ ಪೋಗಲು ನಾಂ ಗಂಡುಜನ ೧ ನಿಜಭಾರ್ಯೆ ಹೆಣ್ಣು ಜನ ೧ ಹಟ್ಟಿ ಚಾಕರಿ ಹೆಣ್ಣು ಜನ ೧ ಸಹಾ ಮೂರು ಜನರ ಗುರುತಂ ನೋಡಿ ಬಿಟ್ಟು ಹತ್ತು ದಿವಸದ ಮೇಲೆ ಬಂದಲ್ಲಿ ಗುರುತು ನೋಡಿ ಕರೆದುಕೊಳ್ಳಬೇಕೆಂದು ವಚನರಚನೆಯಿಂ ನಂಬೆ ನುಡಿವುದುಂ ಈತಂ ನಮ್ಮ ಹಾರುವನೇ ಎಂದು ಆ ಪ್ರಕಾರದೊಳೆ ಅಪ್ಪಣೆಯಂ ಕುಡೆ ತಾವು ಮೂವರುಂ ಏಚಗನಹಳ್ಳಿಗೆ ಬಂದಿರಲಾ ದಿವಸ ಅರಮನೆಯ ಹೆಣಮನೆಲ್ಲ ಶೋಧಿಸಿದಲ್ಲಿ ರಾಜನ ಹೆಂಡತಿಯ ಪೆಣನಿಲ್ಲದಿರೆ ತೌರುಮನೆ ಬೆಟ್ಟದಪುರದೊಳಿರ್ದಳೆಂಬುದುಂ ಕೆಲಂಬರೆಂಟು ದಿನದೊಳು ಬಂದಳೆನಲೀ ಊರಿಂದಾರುಂ ಪೋದುದಿಲ್ಲ ಪದುಮಣ್ಣಯ್ಯ ಸಹಾ ಮೂರುಜನಂಗಳಪ್ಪಣೆಯ ಮೇಲೆ ಪೋದರವರೊಳಿದ್ದೊಡಾ ಮೂವರಂ ಪರಿಹರಿಸಿ ಬನ್ನಿಮೆಂದೀ ಪದುಮಣ್ಣಯ್ಯನ ಸ್ನೇಹಿತಂಗಪ್ಪಣೆಯಾಗಲಾ ರಾತ್ರಿಯೊಳಾ ನಾಲ್ವತ್ತು ಜನವೆರಸಿ ಬಪ್ಪುದುಮಿತ್ತಲು ನಿದ್ರೆಯೊಳಿರ್ದ ಪದುಮಣ್ಣಯ್ಯಂಗೆ ಸ್ವಪ್ನದೊಳು ಬ್ರಹ್ಮರಾಯಂ ಬಂದು ನಿನ್ನ ಪ್ರಾಣಕ್ಕೆ ಬಂದಾಪತ್ತಂ ಕಳೆದು ನಿನ್ನರಸಂಗೆ ಪುತ್ರಸಂತಾನಮಂ ಮಾಳ್ವೆನದಕ್ಕೆ ಸಂದೇಹ ಬೇಡೆಂದೆದೆಯಂ ತಟ್ಟಿ ಏಳಿಸಲವಂ ದೇವರಂ ಭಜಿಸುತ್ತ ಮಿಪ್ಪಾಗಲಾ ದೂತರ್ ಬಂದು ಪರಿಹರಿಪುದಂ ಬಿಟ್ಟು ಕರುಣಂ ಪುಟ್ಟಿ ನಿಮ್ಮಲ್ಲಿ ದೋಷಮಿಲ್ಲೆಂದು ಒಡನೆ ಬಂದರಂ ನಿಲಿಸಿ ತಾನೊರ್ವಂ ತಿರುಗಿ ಪೋಗಿ ಸರ್ವಥಾ ದೋಷಮಿಲ್ಲಾ ತನಂ ಕೊಲಲಾಗದೆಂದನೇಕ ತೆರದಿಂ ನಾಯಕನೊಳೊರೆದು ಬಿಡಿಸಲವರ್ ಬಿಟ್ಟು ಪೋಗಲಾ ಮರುದಿವಸಮರಸನ ಪೆಂಡಿರಂ ಬೆಟ್ಟದಪುರಕ್ಕೆ ನರಸಂ(?) ಮಲ್ಲನಹಳ್ಳಿಯೊಳಿರಲಲ್ಲಿಗಾಕೆಯಂ ಕಳುಹಿಸಿ ಬ್ರಹ್ಮರಾಯಂಗೆ ಪರಸಿಕೊಂಡು ಒಬ್ಬವ್ವೆಯಂ ಕರೆದುಕೊಂಡು ಮಹಿಸೂರಿಗೆಯ್ದಿ ನಾಯಕನ ದಯಕ್ಕೆ ಪಾತ್ರನಾಗಿರ್ದು ಕೆಲವು ದಿವಸಕ್ಕೊಮ್ಮೆ ದೇವರ ಸೇವೆಗೆಂದು ನಾಲ್ಕಾರು ದಿವಸಂ ಕೇಳಿಕೊಂಡು ಬಂದು ಮಲ್ಲನಹಳ್ಳಿಗಾರುಂ ಕಾಣದಂತೆ ಪೋಗಿರುತ್ತಿರ್ದನಾಗಲಾ ದೇವಿಯ ಬರ್ಘಂ ಬಳೆದು ನವಮಾಸಂ ನೆರೆದು ಪುತ್ರಂ ಪುಟ್ಟಲಾ ಶಿಶುವಿಂಗೆ ಜಾತಕರ್ಮ ನಾಮಕರ್ಮಮಂ ಮಾಡಿ ತತ್ಪತೃಗಳು ಶತ್ರುಗಳಂ ಜಯಿಸುವಂದ ಜಂಗಮನಾದ ಒಡೆಯರು ಸಹಾಯಮಾದುದರಿಂದಾ ಹೆಸರ ನಡೆಸಲು ರಾಜ ಒಡೆಯರೆಂದು ಪೆಸರಿಟ್ಟು ಬೆಳೆಯುತ್ತಿರಲಿತ್ತ ಶಾಂತಯ್ಯನ ಮಕ್ಕಳು ದೊಡ್ಡ ಶಾಂತಯ್ಯ ಚಿಕ್ಕ ಶಾಂತಯ್ಯನೆಂಬೀರ್ವರು ಬಳೆದು ಸಕಲ ವಿದ್ಯಮಂ ಕಲ್ತು ಮಾರನಾಯಕನ ಕಾರ್ಯಕಾರಣಕ್ಕನುಕೂಲರಾಗಿರೆ ಪದುಮಣ್ಣಯ್ಯಂ ರಾಜಕುಮಾರನಂ ನೋಡಲೆಂದು ಬರಲಾ ರಾಜಕುಮಾರಂ ನನ್ನ ರಾಜ್ಯಮಂ ಮಾಡಿಕೊಡೆಂದು ನುಡಿಯೆ

ವೃತ್ತ || ಕ್ರಮೇಣ ಭೂಮಿಸ್ಸಲಿಲೇನಭಿದ್ಯತೇ
ಕ್ರಮೇಣ ವೈರಿಃ ಕಪಟೇನ ಹನ್ಯತೇ
ಕ್ರಮೇಣ ವಿದ್ಯಾಸ್ಮರಣೇನ ಸಿದ್ಧ್ಯತೇ
ಕ್ರಮೇಣ ಮೋಕ್ಷಂ ಸುಕೃತೇನ ಗಮ್ಯತೇ ||

ಮತ್ತಂ

[ಅನಾರಂಭೋ ಮನುಷ್ಯಾಣಾಂ ಪ್ರಥಮಂ ಬುದ್ಧಿ ಲಕ್ಷಣಮ್]
ಪ್ರಾರಂಭೇ ಸರ್ವ ಕಾರ್ಯಾಣಿ ವಿಚಾರ್ಯಾಣಿ ಪುನಃ ಪುನಃ
ಪ್ರಾರಬ್ಧ ಸ್ಯಾಂತಗಮನಂ ಮಹಾಪುರುಷಲಕ್ಷಣಮ್
||

ಶ್ಲೋಕ || ಅನುಚಿತ ಕರ್ಮಾರಂಭ ಸ್ವಜನವಿರೋಧೋ ಬಲೀಯಸಾ ಸ್ಪರ್ಧಾ
ಪ್ರಮಾದಾಜನ ವಿಶ್ವಾಸೋ ಮೃತ್ಯುರ್ದ್ವಾರಾಣಿ ಚತ್ವಾರಿ ||

ಅದರಿಂ ಬಡಕೊತ್ತಿ ಹೆಗ್ಗಣಮಂ ಹಿಡಿದಂತಾಗದೆ ಬಲಿಷ್ಠರಂ ಸಹಾಯಂ ಮಾಡಲ್‌ವೇಳ್ಕೆಂದು ಪಿರಿಯಪಟ್ಟಣಮಂ ಪದುಮಣ್ಣಯ್ಯಂ ಪೊಕ್ಕು ಪ್ರಧಾನ ಬೊಮ್ಮರಸಂಗರಿಪಿ ನಂಜುಂಡರಸಿಂಗೆ ರಾಜ್ಯಭ್ರಷ್ಟಾದನಂ ಯೇವುದ್ಧರೇತ್ಪೂರ್ವ ಚತುರ್ಗುಣವೆಂಬುದರಿಂ ಮಹಿಸೂರ ಸಂಸ್ಥಾನಮಂ ರಾಜಂಗೆ ಮಾಡಿಕೊಡುವುದಕ್ಕೆ ತಮ್ಮ ಬಲಮೆಲ್ಲಂ ಸಹಾಯಮಾಗಬೇಕೆಂದು ಕೇಳ್ವುದುಂ ಸುಖಿಗಾಪತ್ತಂ ಪೇಳ್ದಂತೆ ಮೂಗುವಟ್ಟಿರಲಾ ಪ್ರಧಾನಂ ನಿಮ್ಮ ಸ್ಥಾನಮಂ ಸೇರಿಸಿದೊಡೆಮ್ಮರಸಂಗೆ ವರುಷಂ ಪ್ರತಿ ಸಾವಿರ ಖಂಡಿಗ ಹುರುಳಿ ಕೊಡುವುದೆಂದಾ ಹುಚ್ಚದೊರೆಯನೊಪ್ಪಿಸಿ ಪ್ರಧಾನಂ ಬಲಮೆಲ್ಲಮಂ ಕೂಡಿ ಎಡಬಲದ ಸಂಸ್ಥಾನದ ರಾಜಬಲಮಂ ಕೂಡಿಸಿ ಸಂಕೇತನದಿನಕ್ಕೆ ಬಪ್ಪಂತು ನಿಯಮಿಸಿ ಶಾಂತಯ್ಯ ಪದ್ಮಣಯ್ಯ ಮಹಿಸೂರ ಹಳೆಪೈಕದ ಜನಮೆಲ್ಲಮಂ ಒಳಗುಮಾಡಿ ಬಾಗಿಲಂ ತೆಗೆದುಬಿಡುವಂತೆ ರಾತ್ರಿಯೊಳವರ್ ಬಂದಾಗಲು ಮಾಡಿದೊಡಾ ಬಲಮೆಲ್ಲಂ ಮೂವಳಸಾಗಿ ಮುತ್ತಿ ಒಳಗಂ ಪೊಕ್ಕು ನಾಯಕಂ ಮೊದಲಾದೆಲ್ಲಾ ಬೋಯಿಗಳಂ ನಿಶ್ಯೇಷಮಾಗೆ ಕೊಂದು ರಾಜೊಡೆಯರ್ಗೆ ಪಟ್ಟಂಗಟ್ಟಿದೊಡೆ ದೊಡ್ಡ ಶಾಂತಯ್ಯನೆಂಬ ಕರಣಿಕಂ ಮಂತ್ರಿಯಾಗೆ ಮಹಿಸೂರಿಗೆ ಸೇರಿದ ಮೂವತ್ತು ಮೂರು ಹಳ್ಳಿಯೊಳು ರಾಜ್ಯಂಗೆಯ್ಯುತ್ತಿರ್ದರಿತ್ತ ತೆಂಕಣನಾಡು ಮುಂತಾದ ನಾಡುಗಳಲ್ಲಿ ರಾಘವರಾಯ ತಮ್ಮ ರಾಯ ಅಹೋಬಲರಾಯ ವೀರರಾಯ ಪ್ರಭುರಾಯ ಜಗದೇಕರಾಯ ಸೋಮಶೇಖರರಾಯ ರಾಮರಾಯ ಚೆನ್ನರಾಯ ವಿಜಯರಾಯ ಭುಜಂಗರಾಯ ಗೋಪಾಲರಾಯರು ಮೊದಲಾದ ರಾಯರು ಅಲ್ಲಲ್ಲಿ ಆಳುತ್ತಿರ್ದು ಜನ ಬಹಳ ಹೆಚ್ಚಿ ಒಂದೊಂದೂರಿಗೆ ಒಬ್ಬೊಬ್ಬ ರಾಯರಾಗಿ ಊರೂರಿಗೆ ಕೋಟೆ ಕೊತ್ತಲ ಕಂದಾಚಾರದಿಂ ಪ್ರಜೆಗಳು ಮನೆಗುದುರೆ ಆಯುಧಪಾಣಿಗಳಾಂತು ದೊಡ್ಡ ಗ್ರಾಮಸ್ಥರು ಸಣ್ಣ ಗ್ರಾಮದವರೊಳಗುಮಾಡಿಕೊಂಡು ತಮ್ಮ ಹವಾಲು ಮಾಡಿಕೊಳ್ಳುತ್ತಾ ಗ್ರಾಮ ಗ್ರಾಮಕ್ಕೆ ದೊರೆದೊರೆಗಳಾಗಿ ನಡೆದ ವರುಷ ೩೨. ಅಷ್ಟರಲ್ಲಿ ಹದಿನಾರೊಳು ಚಂದಪ್ಪನಾಯಕ ಪಾಪನಾಯಕರೆಂಬಿರ್ವರು ತೆಲುಗರು ಕೆಲವು ಮಂದಿ ಕುದುರೆಯಂ ಸಂಪಾದಿಸಿಕೊಂಡು ಬಂದು ದೇವಾದಾಯ ಬ್ರಹ್ಮಾದಾಯ ಅಗ್ರಹಾರ ಉಂಬಳಿ ಮೊದಲಾದೆಲ್ಲಮಂ ತಮ್ಮಾಧೀನಂ ಮಾಡಿ ಮಾನ್ಯಂಗಳೆಲ್ಲಮಂ ಕರೆಕೆಡಿಸ ಜನರಿಗೆ ಉಪದ್ರಮಂ ಮಾಡುತ್ತಿರೆ ಆ ಕಾಲದೊಳು ಹಗಲುಗತ್ತಲೆ ಕವಿದು ಭಯಂಕರವಾಯಿತು. ಆ ತರುವಾಯ ನಾಡೆಲ್ಲಂ ಕೂಡಿ ಚಂದಪ್ಪನಾಯಕ ಪಾಪ ನಾಯಕರಂ ಪಿಡಿದು ಕೊಡಗಗಟ್ಟಂ ಕಟ್ಟೆ ಬಲಮೆಲ್ಲಂ ಪಲಾಯನಮಾಯಿತು.

ಆ ಬಳಿಕ ಪ್ರಜೆಗಳೆಲ್ಲಾ ಗ್ರಾಮಗ್ರಾಮಂಗಳ ರಾಯರಂ ತೆಗೆದುಬಿಟ್ಟು ಮನೆ ಮನೆಗಳ ಯಜಮಾನಿಗಳು ತಮ್ಮ ತಮ್ಮ ಹಟ್ಟಿಗಳಿಗೆ ತಾವೆ ದೊರೆಗಳಾಗಿ ಹಟ್ಟಿ ಕೊಟ್ಟವಾಗಿ ಮೂರು ವರುಷ ನಡೆದುಬರುತ್ತಿರೆ ಹದಿನಾಡ ನಂಜಯ್ಯಂ ಪ್ರಬಲನಾಗಿ ಕೆಲಕೆಲವು ಗ್ರಾಮಂಗಳಂ ವಶಕ್ಕೆ ತಂದು ಹಳ್ಳಿ ಕೊಟ್ಟಮಂ ಬಿಡಿಸಿ ಎಲ್ಲರಂ ಏಕ ಮುಖಾ ಮಾಡಿದಿಂ ಬಳಿಯ ಕೆಲವು ಗಡಿಗಳೊಳೊಬ್ಬೊಬ್ಬರು ಪ್ರಭುವಾಗಿರಲಾ ಕಾಲದೊಳು ನರಮಾರಿ ಗೋಮಾರಿ ಮುಂತಾ ಮಾರಿ ಹುಟ್ಟಿ ಜನರೆಲ್ಲಾ ಲಯಮಾಗುತ್ತಿಪ್ಪುದುಂ ಗ್ರಾಮಾನುಗ್ರಾಮದೊಳು ಹಿಂದೆ ಕಾಳೆಗದೊಳು ಸತ್ತ ವೀರರಂ ಕಿಚ್ಚಂ ಪಾಯ್ದು ಸತ್ತ ಸ್ತ್ರೀಯರುಗಳಂ ಶಿಲೆಯೊಳು ಬರೆಯಿಸಿ ವೀರಜಡೆ ನಿಂಬೆಹಣ್ಣು ಒಕ್ಕಲ ಪ್ರತಾಪಾದಿಗಳಂ ಕಲ್ಪಿಸಿ ಗ್ರಾಮಗ್ರಾಮದ ಅಂಕದ ಬಾಗಿಲೊಳು ಶಿಲಾಪ್ರತಿಷ್ಠೆಯಂ ಮಾಡಿಸಿ ಕೋಲಾಹಲಮಾಗೆ ಪೂಜಿಸಿ ಹಬ್ಬಮಂ ಮಾಡುತ್ತಾ ಬಂದರದಲ್ಲದೆ ಗ್ರಾಮಂಗಳ ಮುಂಗಡೆಯೊಳು ಒಂದೊಂದು ಗುಡಿಯಂ ಕಟ್ಟಿಸಿ ಕಾಣದೇವರೆಂದು ಪ್ರತಿಷ್ಠೆಯಂ ಮಾಡಿ ಪೂಜಿಸಿ ಕೊಂಡಂಗಳಂ ಮಾಡುತ್ತಾ ಬಂದುರು. ಕಪ್ಪಡಿ ಸಂಗಮೇಶ್ವರನೆಂದು ಪೂರ್ವ ಬಸವಣ್ಣ ಉಳುಮೆ ಮನೆಪೊಕ್ಕು ಎಲೆರಾಜಯ್ಯ ಸಂಗಯ್ಯ ರುದ್ರದೇವರೆಂಬವರು ಜೀವವೆರಸಿ ಕಪ್ಪಡದೊಳೊರಗಿ ಪರವಶವಾಗೆ ಅಲ್ಲಿ ಗದ್ದುಗೆಯಿಟ್ಟು ಪೂಜಿಸುತ್ತಾ ಬಂದ ಪ್ರಕಾರ ಬೊಪ್ಪಗವುಡನಪುರ ಮೊದಲಾದ ಗ್ರಾಮಾಂತರಗಳಲ್ಲಿ ಮಂಟೇದುದ್ದಯ್ಯ ಸಿದ್ಧಯ್ಯ ರಾಜಯ್ಯನೆಂದಿವರೆ ಗದ್ದುಗೆ ಇಟ್ಟು ಪೂಹಿಸುವ ಹರಕೆ ಪ್ರಾರ್ಥನೆ ಮಾಡುತ್ತಾ ಬರುವರು. ಮತ್ತೊಬ್ಬ ಸಿದ್ಧಯ್ಯನೆಂಬಂ ಹೊಣೆಯಾಗಿ ಸತ್ತು ಗಿಡದ ಮಧ್ಯದೊಳು ವ್ಯಂತರದೇವನಾಗಿ ಬಾಧಿಸುತ್ತಿರೆ ಅಲ್ಲಿ ಗುಡಿಯಂ ಕಟ್ಟಿ ಹೊಣೆಗಾರ ಸಿದ್ಧೇಶ್ವರನೆಂದು ಪೂಜಿಸಿದರು. ಪಡುವಲು ಚಿಕ್ಕದೇವಿ ವೀರಮರಣಮಾಗೆ ಜನಕ್ಕೆ ಪೀಡೆಯಂ ಮಾಡಿದೊಡೆ ಬೆಟ್ಟದ ಮೇಲೆ ಗುಡಿಯಂ ಮಾಡಿ ಪೂಜಿಸುತ್ತಾ ಬಂದರು.

ಇತ್ತ ಉಮ್ಮತ್ತೂರಲ್ಲಿ ಭುಜಂಗರಾಯನಾಳುವಂದು ರಾಯರ ಅಪ್ಪಾಜಿಯೆಂಬ ಬ್ರಾಹ್ಮಣನು ವೇದಪಾರಾಯಣನಾಗಿ ಮಂತ್ರಿಪದವಿಯೊಳಿರ್ದು ಮೂವತ್ತುಮೂರು ಹಳ್ಳಿಯೊಳು ಮೂವತ್ತು ಮೂರು ಒಕ್ಕಲಂ ಕ್ಷೇತ್ರಾದಿ ಮಾನ್ಯಮಂ ಪಡೆದು ಮಠಮಂ ಮಾಡಿಸಿ ತನ್ನ ಪುತ್ರತು ಶಿಷ್ಯರುಗಳ್ಗೆ ವೇದಸ್ಮೈತಿ ಮುಂತಾದ ಪಾಠಮಂ ಪೇಳುತ್ತಿರೆ ಬಡಗಸೀಮೆಯಿಂದೊರ್ವ ಹೊಲೆಯರ ಹುಡುಗಂ ಬುದ್ಧಿಚಾತುರ್ಯದಿಂ ವಿವೇಕ ವಿನಯಮಂ ಪ್ರಕಟಿಸಿ ಜಾತಿಯಂ ಮರಸಿ ಬಂದಾ ಮಠಮಂ ಸೇರಿ ವೇದಮಂ ಸಾಂಗಾಧ್ಯಯನಂ ಮಾಡಿ ಪ್ರಚುರನಾಗೆ ಅಪ್ಪಾಜಿದೀಕ್ಷಿತರವನ ಬುದ್ಧಿಗೆ ಮೆಚ್ಚಿ ತನ್ನ ಮಗಳಂ ಮದುವೆಯಂ ಮಾಡಿ ಪ್ರತ್ಯೇಕ ಗೃಹಮಂ ಮಾಡಿ ಅಗ್ರಹಾರದ ಮಧ್ಯದೊಳಿರಿಸಿ ಸೋಮಯಾಜಿಯೆಂದು ಪೂಜ್ಯನಂ ಮಾಡಿಪ್ಪುದುಂ ಕೆಲವಾನು ದಿವಸದಿಂ ಮೇಲಾತನ ತಾಯಿ ತನ್ನ ಮಗನನರಸಿ ಬಂದು ಕಾಣ್ಬುದುಮಾಕೆಯ ತಲೆಯಂ ಬೋಳಿಸಿ ಗುಪ್ತದಿಂ ಮಗನಂ ತನ್ನ ಮನೆಯೊಳಿಟ್ಟುಕೊಂಡಿಪ್ಪುದುಮಾಕೆಯ ಕುಲಮಂ ತತ್ಪತ್ನಿಯರಿದು ಪಿತನೊಳುಸುರೆ ಕ್ರಮದಿಂ ಜನಜನಿತಮಾಗೆ ಅಗ್ರಹಾರದ ಬ್ರಾಹ್ಮಣರೆಲ್ಲಂ ಕೇಳಿ ಪಾಪ ಸಂಪ್ರಾಪ್ತಿಯಾಯಿತೆಂದು ಕೊಕ್ಕರಿಸಿ ಅಲ್ಲಿ ಕೆಲಬರು ಹೊಳೆಯಂ ಪಾಯ್ದರು, ಕೆಲರು ವಿಷಮಂ ಗ್ರಹಿಸಿದರು, ಕೆಲರು ಅಗ್ನಿಪ್ರವೇಶಮಂ ಮಾಡಿದರು. ಅಪ್ಪಾಜಿದೀಕ್ಷಿತಂ ಯಾತ್ರೆಗೆಯ್ದು ಬಂದು ಲಿಂಗಧಾರಿಯಾಗಿ ಕೆಲಂಬರು ಬ್ರಾಹ್ಮಣರ್ಗೆ ಲಿಂಗಮಂ ಕಟ್ಟಿಸಿ ಚೋಳಪ್ರತಿಷ್ಠೆ ಲಿಂಗಾಲಯಮನುದ್ಧರಿಸಿ ಕಪಿನೀತೀರದೊಳು ಗರಳಪುರಿಯೆಂಬ ಪುರಮನುದ್ಧರಿಸಿ ವಿಷಕಂಠನ ಪಡಿತರಕ್ಕೆ ರಾಯಂಗೆ ಹೇಳಿ ಐದು ಹಳ್ಳಿಯಂ ಬಿಡಿಸಿ ನೂರೈವತ್ತು ಲಿಂಗಾಲಯಮಂ ಮಾಡಿಸಿಯಿರಲೊಂದು ದಿವಸಂ ಭುಜಂಗರಾಯಂ ನಂಜನಗೂಡಿಗೆ ಬರುವಲ್ಲಿ ಗೊಣನಹಳ್ಳಿ ಗಿಡದೊಳೊರ್ವ ತೊರೆಯ ಜಾತಿ ಸ್ತ್ರೀಯು ಮಾಗ್ಗದೊಳ್ ಮೂತ್ರಿಸಿರ್ದೊಡೆ ರಾಯನ ಕುದುರೆ ಮೂಸಿಯಲ್ಲಿಂ ಮುಂದಕ್ಕಡಿಯಿಡದಿಪ್ಪುದುಮವಳಂ ಬರಿಸೆ ಕುದುರೆಯವಳಂ ಪತ್ತಿದೊಡಕೆ ಸತ್ತು ವ್ಯಂತರಿಯಾಗಿ ರಾಯನ ಬಲಕ್ಕೆಲ್ಲಂ ಮರಣಮಂ ಮಾಡುತ್ತಿರೆ ತಿಳಿದು ಪ್ರಾರ್ಥಿಸಿಕೊಂಡು ಗೊಣನಹಳ್ಳಿಯೊಳು ಗುಡಿಯಂ ಮಾಡಿಸಿ ಮಾರಿಯೆಂದು ಸ್ಥಾಪಿಸಿ ವರ್ಷವರ್ಷಂ ಜಾತ್ರೆ ಮಾಡಿದರು.

ಆ ತರುವಾಯ ಭುಜಂಗರಾಯನ ಕುಮಾರಂ ದೇವರಾಯನೊರ್ವನೆಯಾಗಿರೆ ಸೂಳೆಗಾರನಾಗಲಾ ಸ್ಥಳದ ಸೂಳೆಯರೆಲ್ಲರಂ ಹಿಡಿದು ತರಿಸಿ ತನ್ನ ಕುಮಾರನ ಸಂಪರ್ಕ ಮಾಡಿದವಳ್ಗೆ ಆಜ್ಞೆಯಂ ಮಾಡಿಸುವೆನೆಂದು ಎರಡು ಮೂರು ವೇಳೆ ಹೇಳಿದಾಗ್ಯೂ ಕುಮಾರಂ ವಸಂತಿಯೆಂಬ ಸೂಳೆಯ ಸಂಗತಿಯಂ ಮಾಡಿ ಹುಣ್ಣು ಹತ್ತಿ ಸಾಯ್ವುದುಮಾ ಸೂಳೆಗೆ ಹಾರೆಯಂ ಹಾಕಿ ಕೊಲಿಸಲವಳು ಮಹಾವ್ಯಂತರಿಯಾಗಿ ಪುರಜನ ಪರಿಜನರೆಲ್ಲರ್ಗಂ ಉರಿಜ್ವಾಲೆಯಂ ಕೊಡುತ್ತಾ ಬರುತ್ತಿರಲರಿದು ಆವೇಶಮಂ ಕರೆದುಕೇಳಲಾಂ ಮಹಾಮಾರಿಯೆ ಎನ್ನಂ ಪೂಜಿಸಿ ಸುಡುಗಾಡ ಕೊಳ್ಳಿಯಿಂ ಬೆಂದ ಕೂಳು ದಾಸವಾಳದ ಪೂವಿನಿಂದರ್ಚಿಸಿ ಪೂಜೆಗೊಂಡೊಂಡೆ ಶಾಂತವಪ್ಪೆನೆಂದು ಪೇಳಲಾ ಮೇರಿಯೊಳೆ ಗುಡಿಯಂ ಮಾಡಿಸಿ ಹುರಿಕಾತಿಯೆಂದು ಸ್ಥಾಪಿಸಿ ರಕ್ತಗೂಳ ಮುದ್ದೆಯಂ ಆಕಾಶಕ್ಕಿಟ್ಬೂಡಾ ದೇವತೆ ಮಾಯಮಾಗೆ ವರುಷಂಪ್ರತಿ ಜಾತ್ರೆಯಂ ಮಾಡುವರು.

ಬಳಿಕ ಲಿಂಗರಾಯನೆಂಬ ಮಗನಾಗಿರಲಾ ಭುಜಂಗರಾಯಂ ಮೃತವಾಗಲಾ ಊರಮಧ್ಯದೊಳೆ ನಿಕ್ಷೇಪಮಂ ಮಾಡಿ ಅಲ್ಲಿ ಗುಡಿಯಂ ನಿರ್ಮಿಸಿ ಭುಜಂಗೇಶ್ವರನೆಂದು ಸ್ಥಾಪಿಸಿ ಪೂಜಿಸಿದರು. ತೆಳ್ಳನೂರು ವೀರಲಕ್ಷ್ಮಿಯೆಂಬುವಳು ಕಿಚ್ಚಿನಿಂ ಸತ್ತು ಹುರಿಕಾತಿಯಾದಳು. ಇತ್ತ ಹುರಮೆಂಬ ಗ್ರಾಮದೊಳು ಹಂಪೆಯಿಂ ಬಂದ ದೇವರಾಜಯ್ಯನೆಂಬರಸಂ ಜಂಗಮನುಪದೇಶದಿಂದಲ್ಲಿಯ ಬಸ್ತಿಯೊಳು ಮಲ್ಲಿಕಾರ್ಜುನ ಸ್ಥಾಪನೆಯಂ ಮಾಡಿಸಿ ಜೈನಿಕೆ ಬಿಟ್ಟು ಆ ಮಲ್ಲಿಕಾರ್ಜುನಗೆ ಒಕ್ಕಲಾದಂ, ಅತ್ತಲು ಬೆಟ್ಟದಪುರದ ಬೆಟ್ಟದೊಳು ಮಲ್ಲಿಭಟ್ಟಾರಕನೆಂಬ ಜೈನಮಿನಿಯು ಮಲ್ಲಿತೀರ್ಥಕರ ಪ್ರತಿಷ್ಠೆಯಂ ಮಾಡಲೆಂದು ಬಸ್ತಿಯಂ ಕಟ್ಟಿಸಿ ಬಿಂಬವನ್ನು ಗೈಸಿ ಒಳ್ಳೆಯ ಲಗ್ನಮಂ ಸಾಧಿಸಲು ಪನ್ನೆರಡು ವರುಷಂಬರ ನೋಡಿದಲ್ಲಿ ನಿರ್ದೋಷಮಾಗಿ ಕನ್ನಡಿಯ ಮೇಲೆ ಉದ್ದು ಉರುಳುವಷ್ಟು ಹೊತ್ತು ಇರಲದಂ ಸಾಧಿಸುತ್ತಾ ಶಿಲ್ಪಿಯೊಳು ಪೇಳ್ದಂ ನಾಮುಂ ಶಂಖನಾದಂ ಮಾಡಲಾಕ್ಷಣದೊಳೆ ಬಿಂಬಮಂ ಸ್ಥಾಪನೆಯಂ ಮಾಳ್ವುದೆಂದು ಪೇಳ್ದೊಡಾತಂ ರಾಯನ ಪ್ರೇರಣೆಯಿಂದಾರುಮುರಿಯದಂತೊಂದು ಲಿಂಗಮಂ ಮಾಡಿರ್ದಾ ಶಂಖಧ್ವನಿಯಂ ಕೇಳುತವೆಯಾ ಲಿಂಗಮಂ ಪೀಠದೊಳ್ ತೊಡರ್ಚಲದುವಜ್ರಬಂಧಮಾಗೆ ಮುನಿಪಂ ಬಂದು ನೋಡಿಯತ್ಯಂತ ಕ್ಲೇಶದಿಂ ಸತ್ತು ಸಿಡಿಲಾಗಿ ಪುಟ್ಟಿ ಬಂದು ಪೊಡೆದೊಡೆ ಲೇಶ ಚಕ್ಕೆ ಪಾರುವುದೇ ಹೊರತು ಲಿಂಗಮೊಡೆಯದಿರೆ ರಾಯಂ ಬಹು ಜನಕ್ಕನ್ನದಾನಮಂ ಮಾಡಿಸುತ್ತುಂ ಪಿಂದೆ ಗವಾಕ್ಷಮಂ ಮಾಡಿಸಲಶನಿಯ ಲಿಂಗ ಪ್ರದಕ್ಷಿಣಂಗೆಯ್ದು ಗವಾಕ್ಷದಿಂ ಪೋಗುತ್ತಿದ್ದುದಾ ಲಿಂಗಕ್ಕೆ ದೇವಾಶ್ರಯವಾಗಿ ತನಗೆ ಹಸಿಯವರೆ ಪ್‌ಆರ್ಧಮಂ ಪಿಟ್ಟುಮನರ್ಚಿಸಿ ಸಾವಿರಜನಕ್ಕನ್ನದಾನಂ ಮಾಳ್ವುದೆಂದು ಪೇಳಲಾ ಪ್ರಕಾರಂ ಮಾಡುವರು, ಅನ್ನದಾನ ಮಲ್ಲೇಶ್ವರನೆಂದು ಪೆಸರಾಯ್ತು.

ಇತ್ತ ತಲಕೊಡೊಳೊಂದಾನೆಯು ದಿನಂಪ್ರತಿಯುದಕಮಂ ತಾವರೆಪೂವುಮಂ ತಂದು ಪುತ್ತಿನೊಳಿಕ್ಕಿ ಪೂಜಿಸುತ್ತಿಪ್ಪುದಂ ಗೋಪಾಲರಿಂ ವಿಜಯನೆಂಬರಸಂ ಕೇಳ್ದು ಬಂದು ಶೋಧಿಸಲಲ್ಲಿ ವೃಷಭಜಿನಪ್ರತಿಮೆಯಿಪ್ಪುದುಮದಕ್ಕಮಲ್ಲಿಯೆ ಬಸದಿಯಂ ಮಾಡಿಸಿಯಾ ಬಳಿಯೊಳೆ ಪುರಮಂ ನಿರ್ಮಿಸಿ ರಾಜಧಾನಿಯ ಮಾಡಿಸಿಯಾ ರಾಯನಲ್ಲೆ ಬೀಡುಮಾಡಿ ಬಲ್ಲಾಳಂಗೆ ಸಾಮಂತನಾಗಿರ್ದು ಆ ಸ್ಥಳದೊಳನೇಕ ದೇವಸ್ಥಾನಂಗಳಾಗಲಾ ದೇವರುಗಳಿಗೊಂದೊಂದಕ್ಕೆ ಸೊಲ್ಲಗೆ ಅಕ್ಕಿಯಂ ಪಡಿತರಂಗೊಡಲು ಮೂರು ಖಂಡುಗಮಪ್ಪುದರಿಂದಾ ದೇವರ್ಗೆ ದಿನಂಪ್ರತಿ ಸಣ್ಣಕ್ಕಿಯಂ ಮಾಡಿಸಿಕೊಡುತ್ತುಂ ತಾನುಂ ಸಣ್ಣಕ್ಕಿಯೊಳತಿಪ್ರೀತನಾಗಿರ್ದು ಕಡೆಯೊಳ್ ಜಂಗಮಭಕ್ತನಾಗಿ ಲಿಂಗಧಾರಿಯಾದನಾ ಸಣ್ಣಕ್ಕಿ ಸಾದಪ್ಪವಡೆಯರಸಂ ತಾನಜರು ಕೆಲಕೆಲವು ಗ್ರಾಮಮಂ ಸಾರಿರ್ದರು. ಕಳಲೆಯೊಳಿರ್ದರಸುಗಳು ಜಿನಮತಮಂ ಬಿಟ್ಟು ರಾಮಾನುಜರ ಕಾಲದೊಳೆ ವಿಷ್ಣುಮತಮನಾಚರಿಸಿರ್ದು ಕಾರ್ಯಾರ್ಥಮಾಗೆ ನಂಜುಂಡದೇವರಂ ಪ್ರಾರ್ಥಿಸಿಯಾ ದೇವರಿಗೊಕ್ಕಲಾಗಿ ಶಿವಭಕ್ತರಾಗಿಯವರೊಳು ವೀರರಾಜಂ ಕೊಡಗಿನರಸಿಗೆ ದಳಪತಿಯಾಗಿದ್ದನವರ ಮಗಂ ಲಿಂಗರಾಜನೆಂಬಂ ತಾನೆ ಪ್ರಭುವಾಗಿ ಜರಿಮಲೆಯೊಳು ಮೊದಲು ಪ್ರಭುವಾಗಿರ್ದಂ ಪಿರಿಯಾಪಟ್ಟಣದ ನರಪಾಲನೆಂಬಂ ಕಲ್ಲಹಳ್ಳಿ ಆನವಾಳರಾಯಂ ಮೊದಲಾಗಿ ಎಡಬಲದೊಳಿರ್ದರಸುಗಳು ಸಾಳ್ವಕುಲದವರು ಆ ಸ್ಥಳದ ವೈಶ್ಯರು ಎಲ್ಲಾ ಲಿಂಗಮಂ ಕಟ್ಟಿಕೊಂಡು ವೀರಶೈವಾಚಾರರಾಗಿಯು ಜೈನರೊಳು ಕೊಳ್ಕೊಡೆಯಿಂದಮಿರೆ ಜಂಗಮರಿಗೂ ಉಳಿದಿರ್ದ ಶ್ರಾವಕರಿಗೂ ವಾಗ್ವಾದಮಾಗೆ ವಿಂಗಡಿಸಿ ಬೇರೆ ಬೇರೆಯಾದರು. ನರಪಾಲನ ವಂಶಜ ನಂಜುಡರಸು ಪಿರಿಯಾಪಟ್ಟಣದೊಳರಸುಗೆಯ್ಯುತ್ತಿರ್ದಂ.

ಅಘಾಟರಾಯನುತ್ತರದೇಶದಿಂ ದಂಡುಸಮೇತಂ ಕರ್ಣಾಟಮಂ ಸೂರೆಯಂ ಮಾಡುತ್ತಂ ಬರೆ ಬೆಳ್ಗುಳದೊಳಿರ್ದ ಜನರೆಲ್ಲಂ ಕೋಟೆಯಂ ಬಲಿದು ಕವಣೆ ಮುಂತಾದವರಿಂ ಬರಲೀಸದಿಪ್ಪುದುಮವರ್ ಬಿಟ್ಟು ಪೋಗುತ್ತಿರೆ ಬೆಳ್ಗುಳದವರು ನೀನೇನಘಾಟರಾಯನೋ ಎದೆಗಟ್ಟ ರಾಯನೋ? ಎಂದು ಮೂದಲಿಸುವುದುಂ ಕೋಪಿಸಿ ತಿರಿಗಿ ಪೋಗಿ ಹಲ್ಲಾ ಮಾಡಿ ಒಳಗಿರ್ದ ಹೆಣ್ಣು ಗಂಡಿನೊಳೊಂದುಳಿಯದಂತೆ ಕೊಂದು ಬಿಟ್ಟು ಪೋಗೆ ಜೈನಬ್ರಾಹ್ಮಣರ್ ಶ್ರೀಮುಖಮಂ ಕೊಂಡು ದೇಶದ ಮೇಲೆ ಪೋಗಿದ್ದವರು ಬಂದು ಶ್ರಾವಕರ ಮನೆಯ ಹೆಣ್ಣಮ ಮದುವೆಯಾಗೆ ವಂಶ ಹೆಚ್ಚಿತು. ಸ್ಥಾನದವರಾದರು ಸಾತಾರೆಯನಾಳ್ವ ಅರಸು ಆರೆಯವನಾಗಿ ಬ್ರಾಹ್ಮಣರನೆ ಮಂತ್ರಿ ಪ್ರಧಾನಿ ನಿಯೋಗಿ ಸೇನಾಪದ ಮೊದಲಾದ ಪದವಿಯೊಳ್ ನಿಲಿಸಿಪ್ಪುದುಮವರೆಲ್ಲ ಪುಣ್ಯಪಟ್ಟಣಮೆಂದಗ್ರಹಾರಮಂ ನಿರ್ಮಿಸಿ ಸರ್ವಾಧ್ಯಕ್ಷಮಾಗೆ ಶಾಹೋಜರಾಯನೆಂದು ರಾಜ್ಯಮನಾಳ್ದರು. ಚಿತ್ರಕಲ್ಲು ಉಚ್ಚಂಗಿ ಕುಮ್ಮಟ ಮುಂತಾದ ಪಲವು ಸ್ಥಾನಂಗಳೊಳು ಬೇಡರಾದರುಸುಗಳು ಆಳುವರು. ಡಿಳ್ಳಿ ಔರಂಗಾಬಾದು ಇರಾನು ಮಕ್ಕಾದಿ ದೇಶಮಂ ತುರುಕರಾಳುವರು. ಗೇರಸೊಪ್ಪೆಯನಾಳ್ವ ಕದಂಬರಾಯನ ವಂಶಜರು ಭಂಗರೆಂಬವರು. ಒಳಲಂಕೆಯನಾಳ್ದ ಮೂಲಿಕೆ ಸಾವಂತ ಅಜಲರೆಂದಾ ಕಾರೇತ…. ಭೈರಸೊಡೆಯಂ ಜಿನದತ್ತನನ್ವಯ ಸೋಮವಂಶಜರು ಕೊಲ್ಲಾಪುರ ಬಿಳಿಗೆ ಸೋದೆ ಯಲ್ಲನಾಡು ಮೇಲುನಾಡು ಮಲೆಯೊಳ ಮುಂತಾದವಂ ಆಳಿದರವರೊಳಳಿಯ ಸಂತಾನಮಾಗೆ ನಡೆದುಬರುತ್ತಿದೆ. ವೀರಬಲ್ಲಾಳಂಗೆ ಭೈರವ ಪಾಂಢ್ಯರಾಯಸುತೆ ಅಳಕಶ್ರೀಯೆಂಬಳರಸಿಯಾಗಲವರ ಗರ್ಭಜಂ ಜಯನರಸಿಂಹನಾತನ ಸಂತತಿಯೊಳೆ ತೆಲುಗರಸುಗಳಾದರು. ಕೆಲರು ಪ್ರಭುವಾದರವರೊಳೆ ಆದುರು. ಕೆಲಂಬರಲ್ಲಲ್ಲಿ ಹೆಗ್ಗಡೆಗಳೆಂದು ವರ್ತಿಸುವರು. ಅವರೊಳು ಕುಮಾರ ಹೆಗ್ಗಡೆಗೆ ಗಟ್ಟಿತ್ತಳಗೆ (ಗಟ್ಟದ ಕೆಳಗೆ) ಮೂವರು ವ್ಯಂತರದೇವಿಯರು ಹಿಡಿದು ಪೂಜಿಸೆಂದೊಡಾಂ ಜೈನನಾಂ ಪೂಜಿಸಲು ಜಿನದರ್ಶನಕ್ಕಿತರನಕ್ಕುಮದರಿಂ ಪೂಜಿಸುವೆನಲ್ಲೆನೆಯಾದೊಡಂ ನಿನ್ನಂ ಬಿಟ್ಟಪೆವಲ್ಲದರಿಂ ಬ್ರಾಹ್ಮಣರಿಂ ಪೂಜಿಸೆಂಬುದು ಸ್ಮಾರ್ತಬ್ರಾಹ್ಮಣರಂ ಪೂಜಿಸೆಂದು ನಿಯಮಿಸೆ ಶಿವಾಲಯಮಿಲ್ಲದೆ ಪೂಜಿಸೆನೆಂಬುದುಂ ಬಿದಿರೆಯಿಂ ಲಿಂಗಮಂ ತರಿಸಿ ಪ್ರತಿಷ್ಠೆಯಂ ಮಾಡಿಸಿ ಮಂಜೇಶ್ವರನೆಂದು ಪೆಸರಾಗೆ ಮೂಡಬಿದರೆಯಿಂ ಚಂದ್ರಜಿನ ಪ್ರತಿಮೆಯಂ ತಂದು ತನಗೆ ದರ್ಶನಕ್ಕೆ ಸ್ಥಾಪಿಸಿಯಾ ದೇವತೆಗಳಂ ಪೂಜಿಸಿ ಪ್ರಸಿದ್ಧಿವಡೆದಂ. ಕರ್ಣಾಟದೊಳು ಕೆಲ್ಲಂಬಳ್ಳಿಯೆಂಬ ಗ್ರಾಮದೊಳು ಮಹಾಧನಿಕರಾದ ಲಕ್ಕಪ್ಪ ಪಾಯಪ್ಪರೆಂಬ ಜೈನವರ್ತಕರು ಮಲೆಯೂರಿ ಆದೀಶ್ವರ ಚೈತ್ಯಾಲಯಮಂ ಹೆಚ್ಚಿಸಿ ಜೀರ್ಣೋದ್ಧಾರಂ ಮಾಡಿಸುತ್ತುಂ ಇರಲಷ್ಟರಲ್ಲಿ ಒಂದು ಕಾರಣದಿಂದಂ ರಾಯಂಗಾತನ ಮೇಲೆ ಸಿಬ್ಬತಿ ಬಂದು ಹಿಡಿತರಿಸಲು ಕೆಲವು ಮಂದಿಯಂ ಕಳುಹಿಸಲಷ್ಟರಲ್ಲಿ ತಿಳಿದು ತನ್ನ ಮನೆಜನರೆಲ್ಲರಂ ಮುಂದೆ ಕಳುಹಿಸಿ ಎಂಟು ಒಂಟೆಯಮೇಲೆ ಪಣಮಂ ಸಾಗಿಸಿಕೊಂಡು ಪೋಗುತ್ತಿರಲವರು ಹಿಂದಟ್ಟಿಬಪ್ಪುದಂ ಕಂಡು ಒಂದು ಒಂಟೆಯ ಗೋಣಿಮೂಟೆಯ ಕೊಯ್ದು ಬಿಡಲವರು ಬಿದ್ದ ಹಣಮನಾಯ್ದುಕೊಂಡು ಬಪ್ಪನ್ನೆಗಂ ದಕ್ಷಿಣಮುಖದೆ ನಡೆದು ಕಣಿವೆಯನಿಳಿದು ಪೋಗಿ ಪಾಲಕಾಡನೆಯ್ದಿಯಲ್ಲಿ ಭೂಮಿಯಂಕೊಂಡು ಮಾಣಕಪಟ್ಟಣಮಂ ಚೈತ್ಯಾಲಯಮಂ ಮಾಡಿಸಿ ಪ್ರತಿಷ್ಠೆಯಂ ಮಾಡಿಸಿ ಸ್ವಾಸ್ತಿಮಾನ್ಯಮಂ ಕೊಂಡು ಬಿಟ್ಟು ಅಲ್ಲೆ ನಿಂದರು.

ತೆರಕಣಾಂಬೀ ಸ್ಥಳದಲ್ಲಿ ವಿಜಯರಾಯನೆಂಬೊಂ ವಿಜಯಾಪುರದ ಕೋಂಟೆಯಂ ನಿರ್ಮಿಸಿ ಗುಂಡಲದ ಪಶ್ಚಿಮದೊಳು ಪೇಟೆಯಂ ಮಾಡಿಸಿದಂ ತತ್ಸಮೀಪದ ಇಂಗಳ ವಾಡಿಯೊಳು ಶೈವ ವೈಷ್ಣವರಾದೀರ್ವರ್ ವರ್ತಕರು ಒಬ್ಬರೊಬ್ಬರ್ಗೆ ವಾದಮಾಗೆ ಪ್ರತ್ಯೇಕ ಶಿವಾಲಯ ಗೋಪಾಲಲಯಮಂ ಮಾಡಿಸಿ ಎರಡು ಬೀದಿಯೊಳು ತಂತಮ್ಮ ಮತದಹಂಕಾರಿದಿಂದೊಬ್ಬೊಬ್ಬರಂ ಬೆರೆಯದೆ ವೈಷಮ್ಯದಿಂ ಶಿವಗುಣಿ ಹರಿಗುಣಿಯೆಂದು ಧನಮನದಿಂದಿರ್ವರಿಪ್ಪುದುಂ ಒಬ್ಬ ಶ್ರಾವಕಂ ನೋಡೆ ಬಪ್ಪುದುಮಾ ಶಿವಾಲಯ ದೊಳೊರ್ವ ಬ್ರಾಹ್ಮಣ ನಿಂದೆಲೆ ಮಹಾದೇವಾ ನಿನ್ನ ಗುಣ ಬೇರೆ ನಡೆ ಬೇರೆ ನುಡಿ ಬೇರೆ ಮನ ಬೇರೆ ಘನ ಬೇರೆಯೆಂದು ನುತಿಸುತ್ತಿರೆ ಭಂಗಿಯಸೊಪ್ಪಿನ ಬಗೆ ಬೇರೆ ಎಂದು ಪೇಳ್ದನದಕ್ಕಾಗ್ರಹಂಗೆಯ್ಯೆ ಮಹಾದೇವಂಗೆ ಗುಣಾದಿಗಳು ಬೇರಿಲ್ಲ ಭಂಗಿಯಂ ತಿಂದಂಗೆ ಬೇರೆಬೇರಪ್ಪುದೆಂದು ವಿಷ್ಣುವಿನಾಲಯಮಂ ನೋಡಲಲ್ಲಿ ವೈಷ್ಣವಬ್ರಾಹ್ಮಣಂ ನಾಮಮನಿಕ್ಕುತ್ತಮಂಬರೀಷ ಬಲ್ಲ, ಅಕ್ರೂರ ಬಲ್ಲ, ವೈಕುಂಠ ಬಲ್ಲ, ಶ್ರೀಪತಿ ಬಲ್ಲನೆಂದೊಡೆ, ನಾ ಬಲ್ಲೆ ನೀ ಬಲ್ಲೆ ಜೇಡಿಮಣ್ಣ ಎಂದು ಪೋದನು. ಬೇಗೂರೊಳು ದಾಸಕೇಶವಶೆಟ್ಟಿ ರತ್ನಪಡಿವ್ಯಾಪಾರಮಂ ಮಾಡುತ್ತುಮಿರೆ ಕಣವೆ ಕೀಳ ಮಹಾಧನಿಕನಾದ ಕೇಶವದಾಸಶೆಟ್ಟಿಯು ಇವನ ಮಹತ್ತಂ ಕೇಳಿ ತನ್ನ ಸಮವೆಂದು ಹೆಣ್ಣ ಕೇಳಲು ನಂಟರುಗೂಡಿ ಬಂದು ಈ ಊರೊಳು ದಾಸಕೇಶವರೆಂಬ ವರ್ತಕರ ಗೃಹವಾವುದೆನೆ ಗೃಹಮಂ ತೋರಿಸೆ ಬಪ್ಪುದುಂ ತನ್ನ ಮನೆ ಮುಂಗಡೆ ತೋರದುಪ್ಪಟಮಂ ಪೊದ್ದು ಕೌಪೀನಮಾತ್ರದಿಂ ಬಿದ್ದ ಬತ್ತಂಗಳನಾಯುತ್ತಿಪ್ಪುದಂ ಕಂಡು ಮಹಾದರಿದ್ರನೆಂದು ಹಾಸ್ಯಮಾಗಿ ಪಿಂದಕ್ಕೆ ತಿರುಗಿ ಪೋಪುದಂ ಹೇಳಿ ತಾನೇ ಬಂದನೇಕತೆರದಿನೊಡಂಬಡಿಸಿ ಭೋಜನಕ್ಕೆ ಕರೆದು ಎಣ್ಬರ್ಗಂ ಸುವರ್ಣದ ಪರಿವಾಣದೊಳು ವಗ್ರವೈಡೂರ್ಯ ಪ್ರವಾಳ ಮೊದಲಾದ ನವರತ್ನಂಗಳಂ ಬೆರಸಿ ದ್ರವಿಣಮನಿಕ್ಕಿಸಿಂ ತಾನುಂ ತನ್ನ ಮಗನುಂ ಪಂಚಭಕ್ಷ್ಯಂಗಳನಿಕ್ಕಿಸಿಕೊಂಡು ಎಲ್ಲರಂ ಭೋಜನಮಂ ಮಾಡಿಮೆಂಬುದುಂ ಸುಮ್ಮನಿರ್ದು ವಿಷಣ್ಣರಾಗೆ ಮೂಹೂರ್ತಮಿರ್ದಾ ರತ್ನದ್ರವ್ಯಂಗಳಂ ಪೊರಗೆ ಸುರಿಯಿಸಿ ಭಕ್ಷ್ಯಾದಿಗಳನಿಕ್ಕಿಸಿ ತಾಂಬೂಲಸಹಿತಂ ಮನ್ನಿಸಿ ಕಳುಹಿಸಿದನಾ ರತ್ನಂಗಳಂ ದೀನಾನಾರ್ ಕೊಂಡರಿಂತಪ್ಪ ವರ್ತಕರು ಪಲಂಬರಿರ್ದು ಅಲ್ಲಲ್ಲಿ ಶಿವಾಲಯ ವಿಷ್ಣು ಸದನಂಗಳಂ ಮಾಡಿಸಿದರತ್ತ ಸಾತಾದಿ ದೇಶದೊಳು ಜಗತ್‌ಶೆಟ್ಟಿಯೆಂಬ ಜೂನವರ್ತಕರಂ ಹತ್ತು ಕೋಟಿ ಭಂಡವಾಲುಳ್ಳನಾಗಿರ್ದನಲ್ಲಿಂದತ್ತ ಉತ್ತರ ದೇಶದೊಳು ಕೋಟಿಗೊಂದು ಕಳಶಮಂ ಮಾಡಿಸಿಟ್ಟಿಪ್ಪರಲ್ಲಿಂ ದತ್ತಸವಾಜಾಯ ನಗರದವರಿಗೂ ಜಾತಿಯುಂ ವರ್ಣಾಶ್ರಮಂಗಳಿಲ್ಲದೆಯನೇಕ ತೆರದ ಪೆಸರ್ಗಳಾಗಿ ವರ್ತಿಸುತ್ತಿಪ್ಪರು. ಇತ್ತಲಾನೆಗೊಂದಿ ತೆಲುಗ ಪಟಲಂಗಳೊಳು ಅಚ್ಯುತರಾಯನಾಳಿದ ಮೇಲೆ ಕ್ಷತ್ರಿಯಪಟಲದ ತಿರುಮಲರಾಯ ಸದಾಶಿವರಾಯನಿಂದಿತ್ತಲು ರಾಮರಾಜಯ್ಯನಾಳ್ದು ಶಕವರುಷ ಸಾವಿರದ ನಾಊರೆಂಬತ್ತಾರನೆ (೧೪೮೬) ರಕ್ತಾಕ್ಷಿ ಸಂವತ್ಸರದ ಮಾರ್ಗಧಿರ ಶುದ್ಧ ೧ ರಲ್ಲು ಮೃತವಾಗೆ ಶ್ರೀರಂಗರಾಯಂ ಪ್ರಬಲನಾಗಿ ಆಂಗೀರಸಸಂವತ್ಸರದಾರಭ್ಯ ಶ್ರೀರಂಗಪಟ್ಟಣದೊಳಿರ್ದನತ್ತ ವೆಂಕಟಪತಿರಾಯ ಚಿಕ್ಕರಾಯ ಸಹಾ ಮೂವತ್ತು ವರುಷಮಾಗೆ ಶ್ರೀರಾಮದೇವರಾಯಂ ಆನಂತಸಂವತ್ಸರದಾಶ್ವೀಜ ಬಹುಳ ೩ ಆರಭ್ಯ ಆನೆಗೊಂದಿ ಪಟ್ಟಣಮನಾಳುತ್ತಿರ್ದನಿತ್ತಲು ಶ್ರೀರಂಗಪಟ್ಟಣದೊಳು ಶ್ರೀರಂಗರಾಯನಿರ್ದು ಕೆಲವು ಸಂಸ್ಥಾನಂಗಳಂ ಸಾಧಿಸಿ ವಶಂ ಮಾಡಿ ತಾನೆ ರಾಯನುಳಿದ ರಾಜರೆಲ್ಲಂ ಗೌಡರೆಂದು ಪ್ರಸಿದ್ಧಿಯಂ ಮಾಡಿ ಮಹಿಸೂರ ರಾಜಗೌಡನಂ ಬರಹೇಳಿ ಎರಡು ಮೂರು ವೇಳೆ ಹೇಳಿಕಳುಹಿಸಲಾಗಿ ಚಿಂತಾಕ್ರಾಂತನಾಗಿ ದೊಡ್ಡ ಶಾಂತಯ್ಯನೊಡನಾಳೋಚಿಸಲಿಂತೆಂದಂ

ಆರ್ಯೆ || ಅನುಚಿತ ಕರ್ಮಾರಂಭಃ | ಸ್ವಜನ ವಿರೋಧಃ ಬಲೀಯಸಾ ಸ್ಪರ್ಧಾ
ಪ್ರಮದಾಜನ ವಿಶ್ವಾಸೋ | ಮೃತ್ಯುದ್ವಾರಾಣಿ ಚತ್ವಾರಿ ||

ಎಂಬುದರಿಂ ರಾಯನೊಳೆಮಗೆ ವಿರೋಧಂ ಸಲ್ಲದು ಪೋಗಲೊಳ್ಳಿತ್ತೆನೆ

ಶ್ಲೋಕ || ಪ್ರಾರಂಭೇ ಸರ್ವ ಕಾರ್ಯಾಣಿ ವಿಚಾರ್ಯಾಣಿ ಪುನಃ ಪುನಃ
ಪ್ರಾರಬ್ಧಸ್ಯಾಂತ ಗಮನಂ ಮಹಾಪುರುಷಲಕ್ಷಣಂ ||

ಎಂಬುದರಿಂ ನಿಧಾನಿಸಿ ಕಾರ್ಯಮಂ ಮಾಳ್ಪುದೊಳ್ಳಿತ್ತೆನೆ

ಶ್ಲೋಕ || ಧರ್ಮಕಾರ್ಯೇ ಋಣಚ್ಛೇದೇ ಕನ್ಯಾದಾನೇ ಧನಾಗಮೆ
ಶತ್ರುವಿದ್ಯಾಗ್ನಿ ರೋಗೇಷು ಕಾಲಕ್ಷೇಪಂ ನಕಾರಯೇತ್ ||

ಪುರುಷಂಗೆ ಕಷ್ಟ ಬಂದ ವೇಳೆಯೊಳಾವುದೊಂದು ಕಾರ್ಯಮಂ ಶ್ರೀಘ್ರದಿಂ ಮಾಡಬೇಕಾದುದರಿಂ ಶ್ರೀರಂಗರಾಯನಂ ಕಂಡುಬಪ್ಪುದೆ ಕಾರ್ಯಮೆಂದು ಪೇಳೆ ರಾಜನೆಂದಂ ಅತಿರಭಸಕೃತಾನಾಂ ಶಲ್ಯತುಲ್ಯೋ ವಿಪಾಕಃ ಎಂಬುದರಿಂ ಪರಸೇವೆ ಕರಕಷ್ಟಮಾದುದರಿಂದಾನೊಬ್ಬನಂ ಸೇವೆಗೆಯ್ದು ಬಾಳ್ವನಲ್ಲದರಿಂ

ಸಾಲದೆ ಸೋಲದೆ ಪೊರಮ
ಟ್ಟೋಲೈಸದೆ ನಿಚ್ಚನಿಚ್ಚ ಪಯಣಂ ಮಾಡದೆ
ಆಲಯದೊಳಿರ್ದು ಸುಖಿಪುದೆ
ಮೂಲೋಕಮನಾಳ್ವ ಪದವಿ ಸುಜನೋತ್ತಂಸಾ

ಎಂಬುದರಿಂ

ಶ್ಲೋಕ || ತ್ಯಜೇದೇಕಂ ಕುಲಸ್ಯಾರ್ಥೇ ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್
ಗ್ರಾಮಂ ಜನಪದಸ್ಯಾರ್ಥೇ ಆತ್ಮಾರ್ಥೇ ಪೃಥಿವೀಂ ತ್ಯಜೇತ್‌ ||

ಎಂಬುದರಿಂದೀ ಸ್ಥಾನಮಂ ಬಿಡಲೊಳ್ಳಿತ್ತೆನೆ ಶಾಂತಯ್ಯನೆಂದಂ

ಶ್ಲೋಕ || ಪುಣ್ಯಮೇಕೋ ಮಹಾಬಂಧುಃ ಪಾಪಮೇಕೋ ಮಹಾರಿಪುಃ
ಅಸಂತೋಷೋ ಮಹಾವ್ಯಾಧಿಃ ಧೈರ್ಯಂ ಸರ್ವತ್ರಸಾಧನಂ ||

ಆದೊಡಂ

ಶ್ಲೋಕ || ಉದ್ಯಮಂ ಸಾಹಸಂ ಧೈರ್ಯಂ ಬುದ್ಧಿ ಶಕ್ತಿಃ ಪರಾಕ್ರಮಮ್
ಷಡ್ಭಿರ್ಮನುಷ್ಯಚಿಂತಾ ಸ್ಯಾತ್ಸಪ್ತಮಂ ದೈವಚಿಂತನಮ್ ||
ಸ್ವಾಮಿಕಾರ್ಯಹಿತೋಸೂರೋ ಅನಾಲಸ್ಯಾತಿಥೀಧನಃ
ಕಾಮಿತಾರ್ಥಕರೋಜ್ಞೇಯೋ ಯಸ್ಯ ರಾಜ್ಯಸ್ಯ ಸೇವಕಃ ||
ಭೃತ್ಯಂ ಬಹುವಿಧಂ ಜ್ಞೇಯಂ ಉತ್ತಮಾಧಮ ಮಧ್ಯಮಾನ್
ತೇನಯೋಜ್ಯಂ ಯಥಾರ್ಥೇಷು ಯದಾ ಕರ್ಮಣಿ ಕರ್ಮಣೀ ||
ಆದೇಶ್ಯಂ ಮುಖರಂ ಸ್ತಬ್ಧಂ ಕ್ರೂರಂ ದುರ್ವ್ಯಸನಂ ಶಠಂ
ಅಸಂತುಷ್ಟಮಭಕ್ತಂ ಚ ತ್ಯಜೇದ್ಭೃತಂ ನರಾಧಿಪಃ ||
ಆಯುರ್ವೇದವಿದಃ ಪ್ರಾಜ್ಞಃ ಸರ್ವ ಶಾಸ್ತ್ರವಿಶಾರದಃ
ಶುಚಿಶೀಲ ಗುಣೊಪೇತೋ ಯಸ್ಯ ವೈದ್ಯೋ ವಿಧೀಯತೇ ||
ಪಿತೃಪೈತಾ ಮಹಾಪ್ರೋಕ್ತಃ ಸೂಪಶಾಸ್ತ್ರ ಪರಾಯಣಃ
ಪಾಕಶುದ್ಧಿ ಶ್ಯುಚಿಶ್ಯೀಲೋ ಸೂಪಕಾರಃ ಪ್ರಶಸ್ಯತೇ ||೦
ಶಸ್ತ್ರಶಾಸ್ತ್ರ ಕೃತಾಭ್ಯಾಸೋ ವಾಹನಾರೋಹಣೇ ತಥಾ
ಶೌರ್ಯ ಧೈರ್ಯ ಗುಣೋಪೇತಃ ಸೇನಾಧ್ಯಕ್ಷೋ ವಿಧೀಯತೇ ||
ಸಕೃದ್ವಕ್ತೈಗೃಹೀತಾರ್ಥೋ ಲಘುಹಸ್ತೋ ಜಿತೇಂದ್ರಿಯಃ
ಮೇಧಾವೀ ವಾಕ್ಪಟುಃ ಪ್ರಾಜ್ಞೋ ಸೇನಭೋಗೋ ವಿಧೀಯತೇ ||
ಪುರಾಣವೇದ ತತ್ತ್ವಜ್ಞೋ ಜಪಹೋಮಪರಾಯಣಃ
ಆಶೀರ್ವಾದ ಪರೋ ನಿತ್ಯಂ ಯೇಷ ರಾಜಪುರೋಹಿತಃ ||
ತಂತ್ರಾಲೋಚನವಿಜ್ಞೇಯಃ ದೃಢಚಿತ್ತೋ ಜಿತೇಂದ್ರಿಯಃ
ಶಾಂತೋ ನಿರ್ಲೋಭಿಃ ನೀತಿಜ್ಞೋ ರಾಜಮಂತ್ರಿಃ ಪ್ರಚಕ್ಷ್ಯತೇ ||

ಎಂಬುದರಿಂ ಸ್ವಾಮಿಗತಿಹಿತರಪ್ಪ ಬುದ್ಧಿಯುಳ್ಳ ಮಂತ್ರಿ ನಿಯೋಗಿ ಸಾಮಂತಾದಿಗಳಿಂ ನೃಪನ ಕಾರ್ಯಮಾಗಲ್ವೇಳ್ಕುಮದರಿಂ ದೂತಪ್ರೇಷಣೆಯಂ ಮಾಳ್ಪುದೆನಲ್ಕೆ ತನ್ನಲ್ಲರ್ದ ಪೆರ್ಗಡೆಗಳಂ ಪೋಗವೇಳಲವರು ತಮ್ಮಿಂದಂ ತೀರದೆಂಬುದುಂ ಶಾಂತಯ್ಯನಂ ಪ್ರಾರ್ಥಿಸಿ ಯಜಮಾನಂ ವಿವೇಕ ಚಾತುರ್ಯ ಧೈರ್ಯಸ್ಥೈರ್ಯದೊಳಂ ನೀತಿನಿಧಾನದೊಳಂ ನೀನೆ ಸಂಪನ್ನನಪ್ಪುದರಿಂ ಪೋಗಿ ನಿನ್ನ ಬಲ್ಲಂದದಿಂದೆನ್ನೊಳಂ ರಾಯಂ ಪ್ರೀತನಪ್ಪಂತು ಮಾಳ್ಪುದೆನೆ ತಥಾಸ್ತೆಂದು ಕೆಲವು ಕೈಗಾಣಿಕೆ ಮುಸ್ತೈದೆಯ ಸಾಗಿಸಿಕೊಂಡು ಪೋಗಿ ಶ್ರೀರಂಗಪತ್ತನದರಮನೆ ಬಾಗಿಲೊಳ್ ನಿಂದು ರಾಜಗೌಡನ ಮನೆ ಸೇನಬೋಗಂ ಬಂದಿದಾನೆಯೆಂದು ಪೇಳಿಸೆ ಬರವೇಳೆಂಬುದುಂ ಪೋಗಿ ಪಾವುಡಮಂ ಮುಂದಿರಿಸಿ ಭಯಭಕ್ತಿಯಿಂದಾಶೀರ್ವಾದಪೂರ್ವಕಮಂಜಲೀಪುಟನಾಗೆ ರಾಯಂ ನಿರೀಕ್ಷಿಸಿ ಏನೋ ನಿನ್ನ ಗೌಡಂಗೆ ಕುಂಡೆ ಕಡಿಯುತ್ತಿದೆಯೊ? ಹೇಳಿ ಕಳುಹಿಸ್ತರೆ ಬಾರದೆಯಿದ್ದಾನೆ ಎಂದಾಗ್ರಹಂಗೆಯ್ಯೆ ವೈಮನಸ್ಕನಾಗಿ ತನ್ನ ಮನದೊಳೆ ಪ್ರಥಮ ಚುಂಬನಂ ದಂತಭಗ್ನಮೆಂಬಂತೆ ಕಂಡಾಗಲೆ ಅತ್ಯಾಗ್ರಹಂ ಮಾಳ್ಪನೀತಂ ಸತ್ಪುರುಷ ಲಕ್ಷಣನಲ್ಲಂ ಪ್ರಾಣಿರಕ್ಷಣಾರ್ಥಂ ಪುಸಿದೊಡಂ ದೋಷಮಿಲ್ಲಮೆಂದು ಮೆಲ್ಲನಿಂತೆಂದಂ ವಪುರಾಖ್ಯಾತಿ ಭೋಜನಮೆಂಬುದರಿಂದಾತನ ಶರೀರಮಂ ಪರಾಂಬರಿಕೆ ಮಾಡಿದಲ್ಲಿ ವೇದ್ಯಮಾಗುತ್ತಿದೆ ಮೃಷ್ಟಾನ್ನಮಿಲ್ಲದುದರಿಂದ ಕ್ಷುಧಾತುರಾಣಾಂ ನ ರುಚಿರ್ನಪಕ್ವಂ ಎಂದಪಥ್ಯ ಭೋಜನದಿಂ ದೇಹದೊಳುಯಟ್ಟೆಯಿಂ ವಿಸರ್ಪ ತಿಮಿರ ಕಂಡು ಪುಟ್ಟಿ ಎರಡು ಪೊರವಾರೊಳು ವೇದನೆ ತೋರಿಪ್ಪುದರಿಂ ಬರಲಾರದೆನ್ನಂ ಪೋಗಿ ಪಾದಕ್ಕರಿಕೆ ಮಾಡೆಂದಟ್ಟಿದನೆನೆ ಬಹಳ ಕಷ್ಟವೇ ಎನಲು

ಆರ್ಯೆ || ಕಷ್ಟಂ ಖಲು ಮೂರ್ಖತ್ವಂ ಕಷ್ಟಂ ಖಲು ಯವ್ವನೇ ಪಿ ದಾರಿದ್ರಂ
ಕಷ್ಟಾದಪಿ ಕಷ್ಟತರಂ | ಪರಗೃಹವಾಸಂ ಪ್ರವಾಸಂ ಚ ||

ಎಂಬುದರಿಂ ಪ್ರಾಯದೊಳ್ ದರಿದ್ರತ್ವದಿಂದನ್ನಮಿಲ್ಲಮದು ಕಷ್ಟಮೆನೆ ಅನ್ನಮಿಲ್ಲದೆ ಮಣ್ಣ ತಿನ್ನುತ್ತಾನೋ ಎನೆ, ಅನ್ನಮೇ ತಿಂಬುದಾದೊಡಂ ದಡದ ಸಣ್ಣಕ್ಕಿ ಅನ್ನ ಹಾಲು ಹಣ್ಣುವೆರಸಿ ಉಂಡದಂ ಶರೀರಕ್ಕೊಡಂಬಡದದೇನೆಂಬುದುಂ ಅದಾವುದೆನಲು ಹಾರಕದಕ್ಕಿಯನ್ನಂ ಹುರುಳಿ ಹಾಲು ಮೆಣಸಿಹಣ್ಣೆಂಬುದುಮೀತಂ ಬಹುಚಾಳಕನೆಂದು ಕೋಪಿಸಿ ನಿನ್ನ ಗವುಡಂಗಾವುದುಮಿಲ್ಲೆಂದು ಸತ್ಯಮಂ ಮಾಡೆಂದು ಪೇಳೆಯಸತ್ಯಮನರಿಕೆಮಾಳ್ಪನಲ್ಲ ನಾನಾಡಿದುದೆ ಸತ್ಯಮೆಂಬುದುಮತ್ಯಂತ ರೋಷದಿಂ ತಾಮ್ರದ ಕೊಪ್ಪರಿಕೆಯಂ ತಿದಿಯಿಂದೊತ್ತಿದಗ್ನಿಯೊಳ್‌ ಕಾಸಿ ಕುಳ್ಳಿರಿಸೆನಲಂತೆ ಕಾಯ್ದ ಕೊಪ್ಪರಿಕೆಯಂ ಮೊಗಚಿಟ್ಟು ಕುಳ್ಳಿರೆನೆ ರಾಯಂಗೆ ಕೈಮುಗಿದು ಸಭಾಜನರ್ಗೆ ವಿನಯಮಂ ನುಡಿದಿಂತೆಂದಂ