ಆರ್ಯಾ || ಕವಿರಕವಿಃ ಪಟುರಪಟುಃ ಶೂರೋಭೀರುಶ್ಚಿರಾಯುರಲ್ಪಾಯುಃ
ಕುಲಜಃ ಕುಲಹೀನೋ ಭವತೀ ನರೋ ನರಪತೇಃ ಕೋಪಾತ್ ||

ಎಂದು ಸಭೆಗಭಿಮುಖನಾಗಿ ಪೇಳಿ ರಾಯಂಗೆ ಪೃಷ್ಠಭಾಗಮಾಗೆ ಬಗ್ಗಿ ಅಂತರೀಯ ವಸ್ತ್ರಮಂ ಕಟಿಯಿಂ ಮೇಲೆತ್ತಿ ಕುಂಡೆಯಂ ವೃಷಣಮಂ ತೋರಿಸುತ್ತಾ ಬಗ್ಗುವುದುಂ ರಾಯನ ಸನ್ನೆಯಿಂ ಕಟ್ಟಿಗೆಯವರು ಮುಚ್ಚೆಂದು ದಂಡದಿಂ ಪೊಡೆದಿದೇನೆಂಬುದುಂ ಮರಸಿಕೊಂಡು ಪೇಳ್ದನೀ ಮಹಾಪ್ರಭುವಿನ ಇದಿರೊಳು ಸತ್ಯಪ್ರಮಾಣಂ ನಡೆಯಲಾರದದರಿಂ ಧೋತ್ರಮನೆನ್ನ ಪ್ರಪಿತಾಮಹಂ ಬಹು ಪ್ರಯತ್ನದಿಂ ಸಂಪಾದಿಸಿ ಮಡಗಿರ್ದೋಡೀ ಮಹಾಸ್ವಾಮಿಯ ಪಾದಮಂ ಕಾಣಲ್ಕೆಂದು ಧರಿಸಿಬಂದೆನೀ ಪುರಾಣ ವಸ್ತ್ರಂ ಬೆಂದೊಡಿದಂ ಪೊಸತಂ ಮಾಡಲೆನಗಮೆಮ್ಮ ಗೌಡಂಗಂ ಸಾಧ್ಯಮಿಲ್ಲದುದರಿಂ ಪ್ರಯತ್ನದಿಂ ಪಟ್ಟಹಾಕಿರಿಸಿದೊಡೆನ್ನ ಪುತ್ರ ಪೌತ್ರ ಪ್ರಪೌತ್ರಾದಿಗಳು ನಿರ್ಭಾಗ್ಯಂ ಮಹಾರಾಯರ ಬಳಿಯಲ್ಲಿ ವಸ್ತ್ರಮಂ ಬೇಯಿಸಿಕೊಂಡು ಬಂದು ಪಟ್ಟ ಹಾಕಿಸಿದನಿದನುಡಲಾಗದೆಂದು ನೋಡಿ ನೋಡಿರಿಸುವರಾ ದುರ್ಯಶಸ್ಸು ಮಹಾರಾಯರ್ಗೆ ಬಹುಕಾಲ ಬಪ್ಪುದರಿಂದೀಯಳಿವ ದೇಹಂ ತಿಕಂ ಬೆಂದೊಡವುಷಧಿಯಿಂ ಮಾಯಿಸಬಹುದಥವಾ ಮಾಣದೊಡಂ ತನ್ನ ತಲೆಯೊಳಗಾಗಿಯಪಕೀರ್ತಿ ಪೋಪುದದರಿಂದೆತ್ತಿದೆನೆನೆ ರಾಯನಡ್ಡಮೋರೆಯೊಳ್‌ ದರಹಸಿತವದನನಾಗಿ ನಿನ್ನ ಗೌಡಂ ಸುಖಮನರಿಯನಾತಗೇನು ದುಃಖಮದಂ ಪೇಳೆನಲೆಂದಂ

ವೃತ್ತ || ಅನೇಕ ದುಃಖಾನಿ ಭವಂತಿ ಲೋಕೇ | ಚತ್ವಾರಿ ದುಃಖಾನಿ ಬಹೂನಿ ತಾನಿ
ಕೃಷೀ ಚ ನಷ್ಟಾ ಗೃಹಿಣೀ ಚ ದುಷ್ಟಾ | ಪುತ್ರೋಪ್ಯವಿದ್ಯಾನುದರಸ್ಯ ಬಾಧಾ ||

ಎಂಬುದರಿಂದನ್ನಕ್ಕೆ ನೆಲ್ಲಿಲ್ಲದೇಕೋದ್ರವಕುಲುತ್ಥಾದಿ ಕ್ಷುದ್ರ ಧಾನ್ಯಮನುಂಡು ಬಾಳ್ವ ರಾಜರ್ಗೆ ದುಃಖಂ ಪಿರಿದಪ್ಪುದೆಂಬುದಂ ಸರ್ವಜ್ಞಚಿತ್ತಕ್ಕೆ ತಿಳಿದಿದೆಯಾಗಿ ನಾನು ಬೇರೆಯರಿಕೆಯಂ ಮಾಳ್ಪ ಶಕ್ತನಲ್ಲೆಂಬುದುಂ ರಾಯಂಗೆ ಕರುಣಂ ಪುಟ್ಟಿ ಕೈಯೊಳಿರ್ದನಂ ಬಿಡಲಾಗದಾತನೆ ಎಮ್ಮಂ ಕಂಡು ಬಾಳ್ವನಲ್ಲದೆ ಪೆರತಿಲ್ಲೆಂದಷ್ಟಗ್ರಾಮದ ಕಾಲ್ವೆಯಿಂದಾಗತಕ್ಕ ಬತ್ತದ ಗದ್ದೆಗಳೊಳ್ ಸಾವಿರ ಖಂಡಿಗಂ ಬೀಜವರಿಯಂ ಮಹಿಸೂರಂ ಹವಾಲು ಮಾಡಿ ನಿರೂಪವನ್ನು ಬರೆಸಿಕೊಟ್ಟು ಭಾರಿ ಧೋತ್ರಜೋಡಿಯ ಶಾಂತಯ್ಯಂಗುಡುಗೊರೆ ಕೊಟ್ಟು ನಿನ್ನಂತಪ್ಪ ನಿಯೋಗಿಯಿಲ್ಲೆಂದು ನಿಮ್ಮ ರಾಜನುಂ ನೀನುಂ ನೆಲ್ಲನ್ನವನುಂಡು ಸುಖಮಿಪ್ಪುದೆಂದು ಹೇಳಿಕಳುಹಿಸಿದಾಗಳೆ ಬಪ್ಪುದೆಂದು ಪ್ರಿಯಮಂ ನುಡಿಯೆ

ಆರ್ಯೆ || ದಾನಂ ಪ್ರಿಯವಾಕ್ ಸಹಿತಂ | ಜ್ಞಾನಮಗರ್ವಂ ಕ್ಷಮಾನ್ವಿತಂ ಶೌರ್ಯಮ್
ತ್ಯಾಗಸಹಿತಂ ಚ ವಿತ್ತಂ | ದುರ್ಲಭಮೇತಚ್ಚತುರ್ಭದ್ರಮ್ ||

ಎಂದು ಶಾಂತಯ್ಯಂ ಮಹಿಸೂರಿಗೆ ಬರೆ ರಾಜೊಡೆಯಂ ಸಂತೋಷದಿಂ ಬಿಗಿಯಪ್ಪಿ ನೀನೇ ಎನ್ನ ತಂದೆ ಎನ್ನ ಭಾಗ್ಯಕ್ಕೆ ನೀನೆ ಸಹಕಾರಿ ನಿನಗೇನಂ ಮಾಳ್ಪೆನೆಂದಾ ಕ್ಷಣಮೆ ಗ್ರಾಮಕ್ಕೆ ಒಂದು ಒಕ್ಕಲುಮೇರೆ ಮೂವತ್ತುಮೂರು ಒಕ್ಕಲಂ ಶಾಂತಯ್ಯಂಗೆ ಧರ್ಮಶಾಸನಮಂ ಬರೆಯಿಸಿಕೊಟ್ಟು ಅವನ ದೇವರಿಪ್ಪ ಕನಕಗಿರಿಯ ಬಸ್ತಿಪ್ರಾಕರದ ಎಸಳಬೇಲಿ ತೆಗೆಯಿಸಿ ಕೋಟೆಯಂ ಹಾಕಿಸಿದನದರಿಂದರಸೊಲಿದೊಡಾಗದ ಕಾರ್ಯಮಿಲ್ಲೆಂಬ ಮಾತು ನಿಶ್ಚಯಮಾಯ್ತೆಂದೆಲ್ಲರುಂ ಸಂತೋಷಂಬಟ್ಟರ್.

ಮತ್ತೊಂದು ದಿವಸಂ ರಾಜಪುರೋಹಿತನ ಮಗಂಗೆ ಸರ್ಪದಷ್ಟಮಾಗೆ ಆರಿಂದಲೂ ವಿಷವಿಳಿಯದಿರಲು ಶಾಂತಯ್ಯನಂ ಕರೆಯಲೆಂದು ರಾಜಸೇವಕನಂ ಕಳುಹಿಸಿದೊಡಾತಂ ಪೋಗಿ ಪುರೋಹಿತನ ಮಗಂಗೆ ಸರ್ಪವಿಷ ಪೂರಿಸಿ ಪಲವು ಮಂತ್ರ ತಂತ್ರಂಗಳಿಂದಿಳಿದುದಿಲ್ಲದರಿಂ ತಮ್ಮಂ ಕರೆಯಲಟ್ಟಿದರೆಂಬುದುಂ ತಾನೆದ್ದುಬಂದಾತನ ಮಸ್ತಕಮಂ ಕೆನ್ನೆಯಂ ಮೂರು ವೇಳೆ ಗುದ್ದಿ ವಿಷವಿಳಿದುಹೋಯಿತೆಂದು ಮೂರು ವೇಳೆ ಹೇಳಿಸಿ ಕಳುಹಿಸಲಾತಂ ಬಪ್ಪನ್ನೆಗಂ ವಿಷವಿಳಿದು ಮೈಮುರಿದೆದ್ದು ಕುಳ್ಳಿರ್ದನಷ್ಟರೊಳು ಶಾಂತಯ್ಯಂ ಖಗೇಂದ್ರಮಣಿದರ್ಪಣಮೆಂಬ ಶಾಸ್ತ್ರಮಂ ಚೆನ್ನಾಗರಿವನಪ್ಪುದರಿಂ ಗರುಡಮಂತ್ರೋಚ್ಚಾರಣೆಯಿಂದಷ್ಟನ ಪೆಸರ್ಗೊಂಡು ಮಾಡಿ ರಾಜಾಸ್ಥಾನಮನೆಯ್ದೆವಪ್ಪುದುಂ ರಾಜಂ ನಿಮಗೀ ಮಂತ್ರಮೆಂತು ಸಾಧ್ಯಮಾಯ್ತೆಂದು ಬೆಸಗೊಳೆ ಶಾಂತಯ್ಯನೆಂದಂ

ಹೆಡತಲೆಯೆಂಬೂರೊಳು ದೇವರಸನೆಂಬೊಂ ಹೆಮ್ಮರಗಾಲಮೆಂಬುದರೊಳು ಲೆಪ್ಪರಸನೆಂಬೊಂ ನೇರಳೆಯೆಂಬೂರೊಳಂತಪ್ಪರಸರೆಂದಿರ್ದರಾ ಮೂವರು ಸಹೋದರರು ಮಂತ್ರವಾದಮಂ ಸಾಧಿಸಲೆಂದು ಮಲೆಯೂರು ಬೆಟ್ಟಮನೆಯ್ದಿ ಏಳುಪವಾಸದಿಂ ನಾಗಾರ್ಜುನಂಗೊರವಿತ್ತ ಪದ್ಮಾವತೀಕಲ್ಪಕ್ರಮದಿಂ ದೇವಿಯ ಮೂಲ ಮಂತ್ರಜಪಂಗೆಯ್ದು ಮಹಾದೇವಿ ಪ್ರತ್ಯಕ್ಷಮಾಗಿಯವನ ವಿಕಾರಮನಮನರಿದು ನೀನು ಉಮ್ಮತ್ತೂರನೆಯ್ದಿ ಭೈರವನನಾರಾಧಿಸೆಂದು ತಿರಸ್ಕರಿಸೆ ಚಿಂತೆಯಿಂ ಪೋಗಿ ಲೆಪ್ಪರಸಂ ತನ್ನ ನುಜನಂತಪ್ಪರಸನಂಬೆರಸು ದರಿದ್ರಕ್ಕಾರದೆ ಇಂತೆಂದಂ

ಕರೆಯದೆ ಪೋಪುದು ಕಷ್ಟಂ
ಸಿರಿವಂತರ ಮನೆಯ ಹೆಣ್ಣ ತರುವುದು ಕಷ್ಟಂ
ಧರಿಣಿಪತಿ ಸೇವೆ ಕಷ್ಟಂ
ಧರೆಯೊಳ್ ದಾರಿದ್ಯ್ರ ಕಷ್ಟದೊಳಗತಿಕಷ್ಟಂ

ಶ್ಲೋಕ || ದೇಹೀತಿವಚನಂ ದೃಷ್ಟ್ವಾ ದೇಹಸ್ಥಃ ಪಂಚದೇವತಾಃ
ದೇಹಂ ಮುಕ್ತ್ವಾ ಬಹಿರ್ಯಾಂತಿ ಶ್ರೀರ್ಹೀರ್ಧೀ ಧೃತಿ ಕೀರ್ತಯಃ ||

ಮತ್ತಂ

ಶ್ಲೋಕ || ತೃಣಾಲ್ಲಘುತರಸ್ಥೂಲಃ ತೂಲಾಲ್ಲಘು ಚ ಯಾಚೆಕಃ
ವಾಯುನಾ ಕಿಂ ನ ನೀತೋಸೌ ಮಾಮಯಂ ಪ್ರಾರ್ಥಯೇದ್ಯದಿ ||
ದಾರಿದ್ಯ್ರಾಯ ನಮಸ್ತುಭ್ಯಂ ಸಿದ್ದೋsಹಂ ತ್ವತ್‌ಪ್ರಸಾದತಃ
ವಿಶ್ವಂ ಪಶ್ಯಾಮ್ಯಹಂ ನಿತ್ಯಂ ಸರ್ವೋ ಮಾಂ ತು ನ ಪಶ್ಯತಿ ||

ಎಂದು ಸಮ್ಯಗ್ದೃಷ್ಟಿಗಳ್ಗೆ

|| ಇರುಳೂಟಂ ಕೊಲೆ ಐದು ಪಾಲ್ಮರದ ಪಣ್ಣಾಣಂಚೆ ಬೆಳ್ಗುಂಬಳಂ
ಪರದೈವಸ್ತುತಿ ಕಳ್ಳು ಜೇನಡಗದತ್ತಾ ದಾನಮನ್ಯಾಂಗನಾ
ಹರಣಂ ಪೂವಿನ ಶಾಖ ಗಿಣ್ಣು ನವನೀತಂ ಮಿಥ್ಯ ಶಾಸ್ತ್ರೌಷಧಂ
ಪರಪೀಡಾಕರ ಜೂಜು ಬೇಂಟೆಯಿನಿತುಂ ಜೈನಂಗೆ ಮೂಲವ್ರತಂ ||

ಎಂಬುದರಿಂ ಭೈರವನಾರಾಧಿಸುವುದಾಗದೆಂದು ಸ್ವಮತದ ಪೇಳ್ದೊಡಂ ಬಿಡದೆ ದಶಾಕ್ಷರೀಮಂತ್ರಮಂ ಹಿಂಡಿಯಂ ಮೆದ್ದು ಪನ್ನೆರಡು ಸಾವಿರ ಜಪಂಗೆಯ್ಯೆ ಸಿಂಗವದನಮುಗ್ರದಂಷ್ಟ್ರದಿನತಿಭಯಂಕರಮಪ್ಪ ನನ್ನ ರೂಪಿಂ ಗ್ರಾಮಶಾರ್ದೂಲವನೇರಿ ಪ್ರತ್ಯಕ್ಷಮಾಗಲತಿಭೀತನಾಗೆರಡು ಕಣ್ಣಂ ಮುಚ್ಚಿ ಪದ್ಮಾ ಸನಮಂ ಬಿಟ್ಟುರುಳುವಾತನ ಶಿಖಿಯಂ ಪಿಡಿದೆತ್ತಿಕೊಂಡು ಪೋಗಿ ಬೆಳುಗಿರಿರಂಗನ ಬೆಟ್ಟದ ಬಿದಿರಮೆಳೆಯೊಳ್ಕಟ್ಟಿದೊಡಾ ರಾತ್ರಿ ಬೆಳಗು ಪರ್ಯಂತಂ ನೇಳುತ್ತುಂ ಮಂತ್ರಮಂ ಜಪಿಸುತ್ತಿರೆ ಮೆಚ್ಚಿ ಏನು ಬೇಕು ಬೇಡಿಕೊ ಎಂಬುದುಂ ವೆಚ್ಚಕ್ಕೆ ಪಣಮಂ ಬೇಡಲೊಂದು ಹಣಮಂ ಕೊಟ್ಟು ನಿನಗೆ ಬೇಕಾದ ವ್ಯಾಪಾರಮಂ ಕೊಂಡು ಗಂಟಿಕ್ಕಲಲ್ಲೆ ಇಪ್ಪುದೆಂದು ಪೇಳಿ ಪೋಯಿತು.

ಆರ್ಯೆ || ಅಂಧುರ್ವಾ ಸಿಂಧುರ್ವಾ | ಕಿಯದ್ಭೀರಂ ಭೋಬಿರಂ ಭಯೇತ್ಕುಂಭಂ
ಡಿಲ್ಲೀವಾ ಪಲ್ಲೀವಾ | ನಾತಿಕ್ರಮೇಣ ಪೌರುಷಂ ಭಾಗ್ಯಂ ||

ಫಲಂ ಭಾಗ್ಯಾನುಸಾರಿಣೀ ಎಂಬುದರಿಂ ಲಭ್ಯವೆಷ್ಟೋ ಅಷ್ಟೇ ಅಪ್ಪುದೆಂದು ಕೊಂಡುಬಂದಾ ಪ್ರಕಾರ ಜೀವಿಸುತ್ತಿರಲಂತಪ್ಪರಸನುಂ ದೇವರಸನುಮಾ ಪ್ರಕಾರದೊಳೆ ಭೈರವನನಾರಾಧಿಸಿ ಎರಡು ದೈವಂಗಳಂ ಕೊಂಡು ದಿನಂಪ್ರತಿ ಭಕ್ಷ್ಯಾದಿಗಳ ತರಿಸಿ ಉಣ್ಣುತ್ತಿಪ್ಪುದುಮೊಂದಾನೊಂದು ಗೌರೀಹಬ್ಬದೊಳು ಹೊಲೆಯರ ಮನೆಯಿಂ ಸೇವಗೆಯಂ ತಂದೀಯಲಾ ಪೊಲತಿ ಬಂದೆನ್ನ ಮನೆಯೊಳಿರ್ದ ಸೇವಗೆ ಪೋಯಿತೆಂದು ಬೀದಿಯೊಳ್ ಬಯ್ಯುತ್ತಿರಲಂದಿಂದದು ಬಿಟ್ಟು ಕಾಲದೋಷದಿಂದೆಮಗತಿಪಾಪಂ ಸಂಭವಿಸಿತೆಂದು ಹಸಿದಪ್ಪ ಫಲಾಹಾರಮಂ ಮಾಡಿಕೊಂಡಿರ್ದನಾ ಅಂತಪ್ಪರಸಂ ಗಾರುಡವಿದ್ಯಂಗಳೊಳತಿಸಮರ್ಥನಾಗಿ ಮಹಾಮಹಾ ಸಂರ್ಪಂಗಳನಾಕರ್ಷಣಂ ಮಾಡಿ ತನ್ನ ಗೃಹದ ಚಪ್ಪರದೊಳನೇಕ ಪಾವುಗಳನೇರಿಸಿ ಹೇಳಿದಂತೆ ಕೇಳಿಸಿಕೊಳ್ಳುತ್ತಿರ್ದಂ. ಲೆಪ್ಪರಸಂ ಭೈರವನಿತ್ತ ಹಣಮಂ ಬೇಹಾರಕ್ಕೆ ಕೊಟ್ಟು ಗಂಟಿಕ್ಕಿಕೊಳ್ಳುತ್ತಿರ್ದಂ. ಮತ್ತೊಂದು ದಿನಮೊಂದು ಮರನಂ ಕ್ರಯಕ್ಕೆ ಕೊಂಡು ಗಂಟಿಕ್ಕಲ್ ಮರೆದು ಬಂದು ಆ ಮರದ ಕಂಬಮಂ ತಂದು ತನ್ನ ಹಟ್ಟಿಯೊಳಿಟ್ಟೊಡದು ಪೆಗಲಂ ಪತ್ತೆ ಮತ್ತಂ ನೆಗೆನೆಗೆದಿಡುತ್ತಿರ್ದೊಡಂ ಬಿಡದೆ ಹೆಗಲೇರಿ ಬರುತ್ತಿರ್ದೊಡದಂ ಬಿಡಿಸುವುಪಾಯಮಂ ಕಾಣದೆ ನೂರುವೇಳೆ ಇಟ್ಟಾಗ್ಯೂ ಪೆಗಲಂ ಪತ್ತಿ ಬರುತ್ತಿರೆ ಆ ದಾರುವಂ ಪೊತ್ತು ನಿಜಗುರುಗಳಿಪ್ಪ ಕನಕಗಿರಿಗೆಯ್ದಿ ಮುನಿಪಂಗೆ ನಮೋಸ್ತು ಮಾಡಿ ತಾನು ಮಂತ್ರ ಸಾಧನಂ ಮಾಡಿದುದಾದಿಯಾಗಿ ತನ್ನ ತೆರನಂ ಸವಿಸ್ತರಂ ಪೇಳಿ ಈ ಮರನಂ ತೊಲಗಿಸುವ ತೆರನಾಮದೆಂದು ಬೇಡಿಕೊಂಬುದುಮಾ ಗುರುಗಳವನ ಪೂರ್ವಾಪರ ಸಂಬಂಧಮಂ ತಿಳಿದು ಈ ಮರಮಂ ಕೊಟ್ಟಂಗೆ ಕೊಟ್ಟು ನಿನ್ನ ಪಣದ ಗಂಟಿಕ್ಕಿಕೊಂಡು ಬಪ್ಪುದೆನಲು ಆ ಪ್ರಕಾರಂ ಮಾಡೆ ಆ ಮರಂ ಬಿಟ್ಟುಪೋಗೆ ಭೈರವನಿತ್ತ ಹಣಂ ಗಂಟಿಗೆ ಸೇರಿದೊಡೀ ಪಾಪಕೃತ್ಯಂ ಯೋಗ್ಯಮಲ್ಲೆಂದು ಗುರುಗಳಲ್ಲಿಗೆ ಬಂದು ನಮಿಸಿ ಈ ಹಣಮನೊಪ್ಪಿಸಿಕೊಂಡೆನಗೆ ವ್ರತಮನೀವುದೆಂಬುದುಂ ಮುನಿಗಳೆಂದರ್ ದಾನದೋಳು ದಾತೃವೆಂದು ಪಾತ್ರವೆಂದು ದೇಯವಸ್ತುವನರಿಯದೆ ದಾನಮಾಗಲಲ್ಲಿ ಧರ್ಮಮಂ ಕೈಗೊಳ್ಳಲ್ ಉಪದೇಶಂಗೇಳ್ವುದು. ಅಲ್ಲಿ ಮೂರ್ಖರು ಕೊಳ್ವರಲ್ಲದೆಂತೆನೆ

ವೃತ್ತ || ಕಿಂ ಮುಕ್ತಾ ಹಾರೇಣ ಚ ಮರ್ಕಟಸ್ಯ (?)
ಮೃಷ್ಪಾನ್ನಪಾನೇನ ಚ ಗರ್ದಭಸ್ಯ
ಅಂಧಸ್ಯ ನೃತ್ಯಂ ಬಧಿರಸ್ಯ ಗೀತಂ
ಮೂರ್ಖಸ್ಯ ಕಿಂ ಧರ್ಮಕಥಾಪ್ರಸಂಗಂ ||

ಶ್ಲೋಕ || ಕರ್ಮಪೂರಿತ ಜೀವಾನಾಂ ಧರ್ಮಶಾಸ್ತ್ರಮರೋಚಕಮ್
ಚರ್ಮಖಂಡನಭಕ್ಷಾಣಾಂ ಶೂನಾಂ ಘೃತಮರೋಚಕಮ್ ||

ತ್ರೈಲೋಕ್ಯದೀಪಮಪ್ಪ ಸದ್ಧರ್ಮಮಂ ಕೈಕೊಳ್ವಡಂ ಜ್ಞಾನಶೂನ್ಯಂಗಾಗದು

ಶ್ಲೋಕ || ಯಸ್ಯ ನಾಸ್ತಿ ಸ್ವಯಂ ಪ್ರಜ್ಞಾ ಶಾಸ್ತ್ರಂ ತಸ್ಯ ಕರೋತಿ ಕಿಮ್
ಲೋಚನಾಭ್ಯಾಂ ವಹೀನಸ್ಯ ದರ್ಪಣ ಕಿಂ ಕರಿಷ್ಯತಿ ||
”ಜ್ಞಾನೇನ ಮೋಕ್ಷಂ ಸುಕೃತೇನ ಗಮ್ಯತೇ”
ದುಃಖಗ್ರಾಹಗಣಾಕೀರ್ಣೇ ಸಂಸಾರಕ್ಷಾರಸಾಗರೇ
ಧರ್ಮೋಪೇತಂ ಪರಂ ಪ್ರಾಹುಸ್ತರಣಾರ್ಥಂ ಮನೀಷಿಣಃ ||

ವೃತ್ತ || ಧರ್ಮಃ ಸರ್ವಸುಖಾಕರೋ ಹಿತಕರೋ ಧರ್ಮಂ ಬುಧಾಶ್ಚಿನ್ವತೇ
ಧರ್ಮೇಭ್ಯೋವ ಸಮಾಪ್ಯತೇ ಶಿವಸುಖಂ ಧರ್ಮಾಯ ತಸ್ಮೈ ನಮಃ
ಧರ್ಮಾನ್ನಾಸ್ತ್ಯಪರಂ ಸುಹೃದ್ಭವಭೃತಾಂ ಧರ್ಮಸ್ಯ ಮೂಲಂ ದಯಾ
ಧರ್ಮೇಚಿತ್ರಮಹಂ ದಧೇ ಪ್ರತಿದಿನಂ ಹೇ ಧರ್ಮ ಮಾಂ ಪಾಲಯ ||

ಎಂಬುದರಿಂ ಧರ್ಮವಂ ಕೊಂಬವಂ ಮೊದಲು ಮೋಹಮಂ ಕ್ರೋಧಮಂ ಬಿಟ್ಟರೆ ಸಮ್ಯಗ್ದರ್ಶನಜ್ಞಾನ ಚಾರಿತ್ರದಿಂ ಮೋಕ್ಷಮಾರ್ಗಮಂ ಕಂಡು ಪೋಪನವರೊಳು ದರ್ಶನ ಮೋಹನೀಯ ಮೂರು ಅನಂತಾನುಬಂಧಿ ಕ್ರೋಧಿ ಮಾನ ಮಾಯಾ ಲೋಭಮೆಂಬ ನಾಲ್ಕುಗೂಡಿ ಏಳು ಪ್ರಕೃತಿಗಳು, ಪರಮ ಕ್ಷಾಯಿಕ ವೇದಕಮೆಂದು ಮೂರು ತೆರಂ

ಆರ್ಯೆ || ಮೋಹತಿಮಿರಾಪಹರಣೇ
ದರ್ಶನಲಾಭಾದವಾಪ್ತಸದ್ಜ್ಞಾನಃ
ರಾಗದ್ವೇಷ ನಿವೃತ್ತೈ
ಚಾರಣಿಂ ಪ್ರತಿಪಾದ್ಯತೇ ಸಾಧುಃ

ಶ್ಲೋಕ || ಕ್ರೋಧಮೂಲಮನಸ್ತಾಪೇ ಕ್ರೋಧಃ ಸಂಸಾರಬಂಧಕಃ
ಧರ್ಮಕ್ಷಯಕರಃ ಕ್ರೋಧಃ ತಸ್ಮಾತ್ ಕ್ರೋಧಂ ವಿವರ್ಜಯೇತ್ ||
ಪಕ್ಷಿಣಾಂ ಕಾಕಶ್ಚಾಂಡಾಲಃ (?) ಮೃಗಚಾಂಡಾಲ ಗಾರ್ದಭಃ
ಯತೀನಾಃ ಕೋಪೀ ಚಾಂಡಾಲಃ ಸರ್ವಚಾಂಡಾಲ ದೂಷಕಃ || (?)

ಕ್ಷಮಾರೂಪಂ ತಪಸ್ವಿನಾಂ ಎಂಬುದರಿಂ ಗೃಹಿಯಾದೊಡಂ ಯತಿಯಾದೊಡಂ ಕ್ಷಮಾಯುತನಾಗೆ ಧರ್ಮಮಕ್ಕುಂ

ಶ್ಲೋಕ || ಕ್ಷಮಾಬಲಮಶಕ್ತಾನಾಂ ಶಕ್ತಾನಾಂ ಭೂಷಣಂ ಕ್ಷಮಾ
ಕ್ಷಮಾ ವಶೀಕೃತಿಃ ಲೋಕೇ ಕ್ಷಮಯಾ ಕಿಂ ನ ಸಾಧ್ಯತೇ ||
ಪುಷ್ಪಕೋಟಿ ಸಮಂ ಸ್ತೋತ್ರಂ ಸ್ತೋತ್ರಕೋಟಿ ಸಮಂ ಜಪಃ
ಜಪಕೋಟಿ ಸಮಂ ಧ್ಯಾನಂ ಧ್ಯಾನಕೋಟಿ ಸಮಂ ಕ್ಷಮಾ ||

ವೃತ್ತ || ಅನೇಕ ಶಾಸ್ತ್ರಂ ಬಹುವೇದಿತವ್ಯಂ
ಅಲ್ಪಶ್ಚ ಕಾಲೋ ಬಹವಶ್ಚ ವಿಘ್ನಾಃ
ಯತ್ಸಾರಭೂತಂ ತದುಪಾಸಿತವ್ಯಂ
ಹಂಸೋ ಯಥಾ ಕ್ಷೀರಮಿವಾಂಬು ಮಿಶ್ರಂ ||

ಎಂಬುದರಿಂ ಮೋಹಮಂ ಕ್ರೋಧಮಾನಮಯಾಲೋಭಮಂ ಬಿಟ್ಟು ಸಮ್ಯಗ್ದರ್ಶನಮಂ ಪಿಡಿವುದುಮದು ಪರಮಾರ್ಥಸ್ವರೂಪಾಪ್ತಾಗಮ ತಪಸ್ವಿಗಳೆಂಬವರೊಳು ಶ್ರದ್ಧೆಯಿಂ ನಂಬಿ ಇಪ್ಪತ್ತೈದು ದೋಷಂಗಳು ಮೂರು ಮೂಢಂಗಳಂ ಎಂಟು ಮದಮಾರನಾಯತಂಗಳಂ ಶಂಕಾದಿ ಎಂಟು ದೋಷಮಂ ಪೊರ್ದಿಸದಿಪ್ಪುದು ಸಮ್ಯಗ್ದರ್ಶನಮೆಂಬುದದು ಧರ್ಮಕ್ಕಧಿಷ್ಠಾನಮಪ್ಪುದದರಿಂ ಮೂರು ಭವದೊಳು ಸಕಲ ಸಂಪತ್ಸಮೇತನಾಗಿ ಮುಕ್ತಿಯಂ ಪಡೆವಂ

ಶ್ಲೋಕ || ಸಮ್ಯಗ್ದರ್ಶನಶುದ್ಧಮಪಿ ಮಾತಂಗದೇ ಹಜಮ್
ದೇವಾದೇವ ವಿದುರ್ಭಸ್ಮ ಗೂಢಾಂಗಾರಾತ ಕಾಜಸಮ್ ||
ಜ್ಞಾತ್ವಾ ತಲಾಮಲಕವದ್ಭುವಿ ಸರ್ವವಿದ್ಯಾಂ
ಕೃತ್ವಾ (?) ತಪಾಂಸಿ ಬಹುಕೋಟಿ ಯುಗಾಂತರೇಷು ||
ಸದ್ದರ್ಶನಾಮೃತ ರಸಾಯನ ಪಾನಬಾಹ್ಯ
ನಾತ್ಯಂತಕೀಮನುಭವಂತಿ ಹ ಮೋಕ್ಷ ಲಕ್ಷ್ಮೀಃ ||

ಎಂಬುದರಿಂ ದರ್ಶನಂ ಭವಭವಂಗಳೊಳು ದೊರೆಯದೆ ಭವಮಾಲೆ ಯೋಗಿಗಳೊಳು ಭ್ರಮಿಸಿದೆನೀಗಳೆನಗಪೂರ್ವಲಾಭಂ ದೊರೆಕೊಂಡುದೆಂದು ನಿಶ್ಯಂಕೆಯಿಂ ಕಬ್ಬುನ ಉಂಡ ನೀರಂತೆ ದೃಢಚಿತ್ತದಿಂ ನಂಬಿ ಸಕಳ ಜೀವಂಗಳೊಳು ದಯಾಪರನಾಗಿಪ್ಪುದು ಧರ್ಮಮೆಂಬುದಕ್ಕುಂ. ಆ ಧರ್ಮಂ ಯತಿಧರ್ಮಂ ಗೃಹಸ್ಥಧರ್ಮಮೆಂದೆರಡು ಭೇದಮಲ್ಲಿ ಉತ್ತಮಕ್ಷಮೆ ಮೊದಲಾದ ಹತ್ತು ಧರ್ಮಮುಂ ಪಂಚಮಹಾ ವ್ರತ ಪಂಚಸಮಿತಿ ಪಂಚೇಂದ್ರಿಯ ಜಯ ಮೊದಲಾದಿಪ್ಪತ್ತೆಂಟು ಮೂಲಗುಣಂಗಳು ದ್ವಾದಶವಿಧ ತಪ ಪಂಚಾಚಾರ ಗುಪ್ತಿತ್ರಯ ಮೊದಲಾಗೆ ಮೂವತ್ತಾರುತ್ತರ ಗುಣಂಗಳ್ವೆರಸು ಎಂಬತ್ತುನಾಲ್ಕು ಲಕ್ಷ ಗುಣಂಗಳಂ ಪದಿನೆಂಟು ಸಹಸ್ರ ಶೀಲ ಸಹಿತಮಾದ ಯತಿಧರ್ಮಂ. ದಾನ ಪೂಜೆ ಶೀಲೋಪವಾಸಮೆಂಬೀ ನಾಲ್ಕು ಗೃಹಸ್ಥಗೆ ಧರ್ಮಮಪ್ಪವು. ಅಣುವ್ರತ ಗುಣವ್ರತ ಶಿಕ್ಷಾವ್ರತಂಗಳೈದುಂ ಮೂರು ನಾಲ್ಕು ಭೆದದಿಂದ ಹನ್ನೆರಡಪ್ಪವು. ದಾನಂ ಉತ್ತಮ ಮಧ್ಯಮ ಜಘನ್ಯಮೆಂಬ ಮೂರು ಪಾತ್ರಂಗಳ್ಗೆ ಆಹಾರಮಭಯ ಭೈಷಜ್ಯ ಶಾಸ್ತ್ರಮೆಂಬ ನಾಲ್ಕು ದಾನಂಗಳನೀವುದು.

ವೃತ್ತ || ಉತ್ಕೃಷ್ಟ ಪಾತ್ರಮನಗಾರಮಣುವ್ರತಾಢ್ಯಂ
ಮಧ್ಯವ್ರತೇನ ರಹಿತಂ ಸುದೃಢಂ ಜಘನ್ಯಮ್
ನಿರ್ದರ್ಶನಂ ವ್ರತನಿಕಾಯಯುತಂ ಕುಪಾತ್ರಂ
ಯುಗ್ಮೋಜ್ಝಿತಂ ನರಮಪಾತ್ರಮಿದಂ ತು ವಿದ್ಧಿ ||

ಶ್ಲೋಕ || ಪಾತ್ರಾಪಾತ್ರ ವಿಶೇಷೇಣ ಧೇನುಪನ್ನಗ ಯೋರಿವ
ತೃಣಾತ್ ಸಂಜಾಯತೇ ಕ್ಷೀರಂ ಕ್ಷೀರಾತ್ ಸಂಜಾಯತೇ ವಿಷಮ್ ||

ವೃತ್ತ || ಸಂತಪ್ರಾಯಸ ಸಂಸ್ಥಿತಸ್ಯ ಪಯಸೋ ನಾಮಾಪಿ ನ ಶ್ರೂಯತೇ
ಮುಕ್ತಾಕಾರತಯಾ ತದೇವ ನಳಿನೀಪತ್ರ ಸ್ಥಿತಂ ದೃಶ್ಯತೇ
ಅಂತಸ್ಸಾಗರ ಶುಕ್ತಿ ಮಧ್ಯಪತಿತಂ ತನ್ಮೌಕ್ತಿಕಂ ಜಾಯತೇ
ಪ್ರಾಯೇಣಾಧಮ ಮಧ್ಯಮೋತ್ತಮಜುಷಾ ಏವಂವಿಧಾ ವೃತ್ತಯಃ ||

ಶ್ಲೋಕ || ವಟಬೀಜಂ ಯಥಾ ತುಚ್ಛಂ ಸುಕ್ಷೇತ್ರೇ ತನ್ನಿವೇಶಿತಮ್
ಬಹು ವಿಸ್ತೀರ್ಣತಾಂ ಯಾತಿ ಪಾತ್ರದತ್ತಂ ತಥಾಶನಮ್ ||

ಇದು ದಾನಮೆಂಬುದು. ಮುನ್ನಂ ಮಹಾಪುರುಷರು ಗೃಹಸ್ಥಧರ್ಮ ಯತಿ ಧರ್ಮದೊಳ್ ಸಂಪೂರ್ಣಮಾಗೆ ನೆಗಳ್ದು ಸರ್ವಸಂಗ ಪರಿತ್ಯಾಗಂಗೆಯ್ದು ಪರಮಾತ್ಮ ಧ್ಯಾನಾಗ್ನಿಯಿಂ ಮೂಲೋತ್ತರ ಪ್ರಕೃತಿ ಸರ್ವಕರ್ಮಮಂ ದಹಿಸಿ ಪದಿನೆಂಟು ದೋಷಂಗಳಂ ಕಳೆದು ಅಷ್ಟಮಹಾಗುಣಂಗಳಂ ಪಡೆದು ಮೋಕ್ಷಮನೆಯ್ದಿದರ ಪ್ರತಿರೂಪಂ ಸುವರ್ಣ ರಜತ ತಾಮ್ರ ಲೋಹ ಶಿಲೆ ಕಾಷ್ಠ ಲೆಪ್ಪ ಚಿತ್ರಾದಿಗಳಿಂ ಸಲಕ್ಷಣಮಾಗಿ ಮಾಡಿಸಿ ಚೈತ್ಯಾಲಯದೊಳು ಯಥಾವಿಧಿಯಿಂ ಪ್ರತಿಷ್ಠೆಯಂ ಮಾಡಿಸಿ ನಿತ್ಯನೈಮಿತ್ತಿಕಂ ಮೊದಲಾಗೆ ವೈಶ್ವದೇವಂ ಮೊದಲಾಗೆ ಪೂಜಿಸುವುದು ಪೂಜೆಯೆಂಬುದು. ತತ್ಫಲಂ

ವೃತ್ತ || ಪಾಪಂ ಲುಂಪತಿ ದುರ್ಗತಿಂ ದಲಯತಿ ವ್ಯಾಪದಯತ್ಯಾಪದಂ
ಪುಣ್ಯಂ ಸಂಚಿನುತೇ ಶ್ರಿಯಂ ವಿತನುತೇ ಪುಷ್ಣಾತಿ ನೀರೋಗತಾಮ್
ಸೌಭಾಗ್ಯಂ ವಿತನೋತಿ ಪಲ್ಲವಯತಿ ಪ್ರೀತಿಂ ಪ್ರಸೂತೇ ಯಶಃ
ಸ್ವರ್ಗಂ ಯಚ್ಛತಿ ನಿರ್ವೃತಿಂ ಚ ರಚಯತ್ಯಶ್ಚಾರ್ಹತೋ ನಿರ್ಮಿತಿಃ ||

ಶೀಲಮೆಂಬುದು ತಾನು ಕೊಂಡ ವ್ರತಂಗಳಂ ಪೋಗಲೀಸದೆ ಸರ್ವ ಪ್ರಯತ್ನದಿಂ ರಕ್ಷಿಸುತ್ತೆ ಗುಣವ್ರತಂ ಮೂರು ಶಿಕ್ಷಾವ್ರತಂ ನಾಲ್ಕುಮೀ ಏಳು ಶೀಲಮಕ್ಕುಂ. ಉಪವಾಸಮೆಂಬುದು ಪರ್ವದಿವಸದೊಳನ್ನಪಾನ ಖಾದ್ಯಲೇಹ್ಯಮೆಂಬೀ ಚತುರ್ವಿಧ ಆಹಾರಮಂ ನೂರಿಪ್ಪತ್ತು ಘಳಿಗೆ ವರ್ಜಿಸಿ ಭೋಗೋಪಭೋಗಮಂ ಪಂಚಸೂನ ವರ್ಜಿಸಿ ನಿಯಮದಿಂದಿಪ್ಪುದು.

ಶ್ಲೋಕ || ಖಂಡಣೀ ಪೇಷಣಿ ಚುಲ್ಲೀವುದ ಕುಂಭೀ ಪ್ರಮಾರ್ಜನೀ (?)
ಷಂಚಸೂನಾ ಗೃಹಸ್ಥಸ್ಯ ತೇನ ಮೋಕ್ಷಂ ನ ಗಚ್ಛತಿ ||

ಎಂಬುದರಿಂದೀ ಸೂನಂ ಬಿಡುವುದು. ಈ ಪೇಳ್ದ ನಾಲ್ಕು ತೆರದ ಗೃಹಸ್ಥ ಧರ್ಮಮಂ ಭಟ್ಟಾಕಲಂಕಮುನಿಗಳು ದೇವರಸ ಲೆಪ್ಪರಸರ್ಗೆ ಪೇಳಿ ಈ ಪಾಪಸಾಧನಮಪ್ಪ ಪಣಮಂ ಕಳೆವುದೆನಲೆಲ್ಲೆಲ್ಲಿಟ್ಟೊಡಂ ಮರಳಿ ಬರುತ್ತಿರಲಮೇಧ್ಯದ ಕುಳಿಯೊಳಿಕ್ಕಿ ಮುಚ್ಚಿ ಬಂದು ಗುರುಗಳಲ್ಲಿ ಪ್ರಾಯಶ್ಚಿತ್ತವಾಂತು ಪಂಚಾಣುವ್ರತಂಗೊಂಡರಾ ಅಂತಪ್ಪರಸಂ ಸಕಲವಾದ ಸರ್ಪಂಗಳೆಲ್ಲಮಂ ತಾನು ಪೇಳಿದಂತೆ ಕೇಳಿಸಿಕೊಂಡು ಗರುಡ ಶಿರೋಮಣಿಯೆನಿಸಿರ್ದೊಂದು ದಿವಸಮಾ ಊರ ಚಾವಡಿಗೆಯ್ದಿಪ್ಪುದಲ್ಲಿಯ ಗೌಂಡರೆಲ್ಲಂ ಹಾಸ್ಯಂ ಮಾಡಲೆಂದೋರ್ವನಂ ಅಟ್ಟದೊಳು ಗೂಢದೊಳಿರಿಸಲವಂ ಪಲ್ಲಿಯಂತೆ ನಚ್ಚರಿಯಲು ಕೆಳಗಿರ್ದವರೆಂದರಾ ಪಲ್ಲಿ ಏನ ಪೇಳ್ವುದದಂ ಪೇಳ್ವುದೆಂದು ಕಾಡುತ್ತಿಪ್ಪುದಾ ದಿಕ್ಕಂ ನೋಡಿ ತನಗೆ ಮರಣಮಂ ಪೇಳ್ವುದೆಂಬುದುಂ ಆಹಾ ಎಂದಟ್ಟಹಾಸದಿ ಕೆಳಗೆ ನೆಗೆಯಲೆಂದು ಮೇಲೇಳ್ವುದು ಮೇಲೆ ಲೋಹದ ಮೋತೆಮೊಳೆ ನಡುನೆತ್ತಿಯನುರ್ಚಿಪೋಗುವುದು ಬಿದ್ದಾಗಳೆ ಸಾಯ್ವುದುಂ ತೆರಕಣಾಂಬಿರಾಯನೊಡನೆ ಬಂದು ತೆರಕಣಾಂಬಿಯೊಳಿಪ್ಪ ಹೆಬ್ಬಾರುವನನಂತಯ್ಯ ಮಾರ್ಗಮಾಗಿ ಬಂದಿರ್ದು ಕಂಡಾಶ್ಚರ್ಯಂಬಟ್ಟು ತಾನುಂ ಮಂತ್ರವಾದಮಂ ಆತನಲ್ಲೆ ಕಲ್ತು ಪ್ರಸಿದ್ಧಿವಡೆದಂ. ಮತ್ತೊಂದು ದಿನಂ ಪೆರವೂರಿಗೆ ಪೋಗಿ ಬರುವಲ್ಲಿ ಒಂದು ಪೊಲದೊಳುಳುತ್ತಿರ್ದ ಕೃಷೀವಲರು ಏರಬಿಟ್ಟು ಹಾರುವಂ ಬಪ್ಪನವನ ಪರೀಕ್ಷಿಸುವಮೆಂದೋರ್ವನ ಮಲಗಿಸಿ ಈಗಲುಳುತ್ತಿರ್ದಂಗತಿಕಷ್ಟಮಾಯ್ತಿದಂ ನೋಡಿಬನ್ನಿಮೆಂದು ಕೃತಕದಿಂ ಪೊರಳ್ವನಂ ತೋರಿದೊಡವನಂ ನೋಡಿ ರೋಗಮೇನುಮಿಲ್ಲದಿರೆ ಕೃತಕಮನರಿದು ತನ್ನಲ್ಲಿಪ್ಪ ದೈವಮಂ ಕರೆದಾತನ ಮೇಲಿರ್ದು ಬಾಯೆಂದುಮವರೊಡನೆಂದನೀತನಂ ಗ್ರಹಂ ಪಿಡಿದಂದಿದಂ ಬಿಡಿಸಲು ಮೂರು ದಿನವಾಗಬೇಕೆಂದು ಪೇಳಿ ಪೋಗಲತಿಹಾಸ್ಯಂಗೆಯ್ದಾತನನೆಬ್ಬಿಸಲೇಳದೆ ಪ್ರಜ್ಞೆಯಿಲ್ಲದೆ ಕಷ್ಟಮಾಗೆ ತಮ್ಮ ತಮ್ಮಡಿಯ ಕರೆದೀತನನೆಬ್ಬಿಸೆನಲಾತಂ ತನ್ನ ಬಲ್ಲ ಯಂತ್ರ ಮಂತ್ರ ತಂತ್ರಾದಿಗಳಿಂದೇಳಿಸಲಾರದೆ ಇದು ಪಾರ್ವತ ಕೃತ್ರಿಮಮಲ್ಲಿಗೆ ಪೋಗಿಯಾತನಂ ಬಗ್ಗಿಸುವೆನೆಂದಂತಪ್ಪರಸನ ಗೃಹಮಂ ಪುಗಲಾತಂ ಸಹಸ್ರ ಪನ್ನಗಂಗಳ ಮಧ್ಯದೊಳೊಂದು ಪಿಶಾಚಿಯಂ ತನ್ನ ದೈವದಿಂ ಮೂಗಂ ಕಟ್ಟಿಕೊಲಿ ಸುತ್ತಿರಲಂಜಿ ತಮ್ಮಡಿ ಪೊಡಮಡೆ ನೀನಾರೇಬುದುಂ ನಾಂ ಪೊಲದೊಳ್ ಬಿದ್ದಿಪ್ಪ ಕೃಷೀವಲನ ಸಹಚರನಾತನಂ ಏಳಿಸಲು ಪಣ್ಣು ಕಾಯಿ ಮುಂತಾದ ಸಾಮಾನುಂ ಪೊನ್ನುಂ ಎಷ್ಟು ಬೇಕದಂ ಕೇಳಬಂದೆನೆನೆ ಪತ್ತು ಕಾಯಿ ಇಪ್ಪತ್ತು ಹಣ್ಣು ಒಕ್ಕಳಿಕ್ಕಿ ಹತ್ತು ಪೊನ್ನು ಸಹಿತಂ ತರುವುದೆನಲಾ ಮಾತಂ ಬಂದಾ ಕೃಷೀವಲರ್ಗೆ ಪೇಳೆ ನಂದಿಗೌಡನಿಂತೆಂದಂ

ಪೂರ್ವದೊಳೊಬ್ಬ ಹರಿದಾಸನೆಂಬನತಿಸ್ಥೂಲಕಾಯಂ ನಿತ್ಯಯಾತ್ರೆಯಂ ಮಾಡಿ ಗ್ರಾಸಮಂ ಮಾಡುತ್ತಂ ಪೊಟ್ಟೆಗಟ್ಟದೆಯಿದ್ದೊಂದು ದಿನಂ ಗ್ರಾಮಾಂತರಕ್ಕೆ ಪೋಗಿ ಬೀಯಮಂ ಪಡೆಯದೆ ಬರುತ್ತೊಂದಾಲದಮರದ ಬುಡದೊಳ್ ಉಚ್ಚಸ್ವರಮಪ್ಪಪ ಸ್ವರದೊಳ್ ತಂಬುರಮಂ ಭಾಜಿಸಲಾ ವೃಕ್ಷಾನಿವಾಸಿಯಪ್ಪ ಕುಂಟದೈವಮಾ ಧ್ವನಿಗತಿ ಭಯಂಗೊಂಡೊಡಂಜಿ ಬಂದಾ ದಾಸಂಗೆ ಪೊಡೆವಟ್ಟೇನುಕಾರಣಮೀ ಘೋರಮಪ್ಪ ನಾದಮಂ ಮಾಳ್ಪೆಯೆನೆ ಗ್ರಾಸಕ್ಕಿಲ್ಲಮದರಿಂದೆಂಬುದುಂ ಗ್ರಾಸಮೆಷ್ಟು ಪೇಳಿಮೆನಲಾ ದಂಪತಿಗಳಿರ್ವರ್ಗಮೊಂದು ಖಂಡಿಗ ಬತ್ತಮಾದೊಡೆ ಅರೆ ಮುಕ್ಕಾಲು ಗ್ರಾಸಮಪ್ಪು ದೆನಲಾದೊಡೆ ತಿಂಗಳಿಂಗೊಂದು ಖಂಡಿಗ ಬತ್ತಮಂ ನೀವಿರ್ದಲ್ಲಿಗೆ ತಂದೊಪ್ಪಿಸುವೆ ನಿಮ್ಮ ಗೃಹದೊಳೆ ಇಪ್ಪುದೆಂದು ಕಳುಪಿ ಮನುಷ್ಯರೂಪಂಬಡೆದು ಗದ್ದೆಗಳೊಳ್ ಕಂಬಳಮಂ ಮಾಡಿ ತಿಂಗಳಿಗೊಂದು ಖಂಡಿಗ ಬತ್ತಮಂ ಹರಿದಾಸಂಗೆ ಕೊಡುತ್ತಿಪ್ಪುದುಂ ಕೆಲವು ದಿವಸದಿಂದಾ ಕುಂಟದೈವದ ಭಾವಮೈಂದಂ ಕುರುಡದೈವಂ ನಂಟುತನಕ್ಕಂ ಬರಲು ಕುಂಟಂ ಕೂಲಿಗೆ ಪೋಪುದಂ ಕಂಡು ಅತ್ಯಂತ ಕೋಪದಿಂ ದೈವಮಾಗಿ ಮನುಷ್ಯಂಗಾಳಾಗಿಪ್ಪುದಂ ನಿನ್ನೊಳೆ ಕಂಡೆನಿಂತಪ್ಪ ಹೀನತೆಯಂ ಬಿಡುವುದೆನೆ ಕೊಟ್ಟ ಭಾಷೆಯನೆಂತು ಬಿಡಲ್ಬಹುದೆಂಬುದುಮಂತಾದೊಡಾನುಂ ಗೃಹಕ್ಕಸ್ತಮಯಸಮಯದೊಳ್ ಬಂದೊಡಾತಂ ಅಪಸ್ವರದಿ ತಂಬುರಮಂ ಪಿಡಿದಿರಲ್ಕಂಡಂಜಿ ತಲೆವಾಗಿಲೊಳಿರ್ದಾಗಳಾತನ ಗೋವುಗಳ್ ಬರಲವರೊಳ್ ಕುಂಟಿಯುಂ ಕುರುಡಿ ಎರಡು ಪಸುಗಳ್ ಪೋರುತ್ತಿರೆ ದಾಸಂ ಕುಂಟಿಯಂ ಬಿಟ್ಟು ಕುರುಡಿಯಂ ಕಟ್ಟೆಂದುಚ್ಚಸ್ವರದಿಂ ತನ್ನ ಪೆಂಡತಿಗೆ ಪೇಳ್ವುದುಂ ಕುರುಡ ದೈವಂ ಭಯದಿಂ ನಡುಗುತ್ತುಂ ಸಾಷ್ಟಾಂಗಪ್ರಣತನಾದೊಡೆ ನೀನಾರು? ಏನು ನಿಮಿತ್ತಂ ಬಂದೆ? ಎಂಬುದುಂ ಭೀತಿಗೊಂಡೆಂದುದಾನಾಲದಮರದ ಕುಂಟನ ಭಾವಮೈದಂ ಕುರುಡನೆಂಬೆನೆಮ್ಮ ಭಾವಂ ತಿಂಗಳುಗಟ್ಟಲೆ ಒಂದು ಖಂಡಿಗ ಬತ್ತಮಂ ಕೊಡುವುದುಕ್ಕೆ ಒಂದು ಖಂಡಿಗ ಅಕ್ಕಿಯ ಕೊಡುವೆನೊ ಬತ್ತವೆ ಕೊಡಲೊ ಎಂದರಿಕೆ ಮಾಡಲೆನ್ನನಟ್ಟಿದನೆಂಬುದುಮಿಲ್ಲಿಂದಿತ್ತಲ್ ಬತ್ತಂ ಬೇಡಾ ಅಕ್ಕಿಯಂ ತಂದುಕೊಡು ಎಂದು ಪೇಳಲಂತೆಗೆಯ್ವೆನೆಂದು ತಾನುಂ ಪೋಗಿ ಕೂಲಿಯಿಂ ಬತ್ತಮಂ ಪಡೆದಕ್ಕಿಯಂ ಕೊಟ್ಟವೆಂಬ ಕಥೆಗೆ ಸರಿಯಾಗಿ ಅಂತಪ್ಪರಸನಲ್ಲಿಗೆ ಪೋದುದು ಚೆನ್ನಾಯಿತೆಂದೆಲ್ಲರು ಮಾತಂ ಬೇಡಿದೊಸ್ತುಗಳೆಲ್ಲಮಂ ಕುಡೆ ದೈವಮಂ ಕರೆದುಕೊಂಡನಂತಿರ್ದು ಒಂದಾನೊಂದು ಕಾರಣದಿ ನೀಲಗಿರಿಶಿಖರದೊಳಿರ್ದ ಉರಿಸಿಂಗಿಯೆಂಬ ಮಹಾಸರ್ಪಂ ಜ್ವಾಲಾಮಾಲಿನೀ ಮಹಾದೇವಿಯ ಸೇವೆಯೊಳಿರ್ದು ಪೊರಮಟ್ಟು ಕನಕಗಿರಿಗೆ ಬಂದಿಪ್ಪುದೆಂಬ ವಾರ್ತೆಯಂ ಕೇಳಿಯದಂ ತನ್ನಲ್ಲಿಗೆ ಬರಿಸಲು ಸಾಮಾನ್ಯ ಮಂತ್ರಗಳಿಂದಾಗದೆ ದಿವ್ಯ ಮಂತ್ರಪ್ರಯೋಗಮಂ ಮಾಡಿದೊಡಂ ಬರದೆ ಇರಲೊಂದು ಮಂತ್ರಮಂ ಬರೆದದಂ ಸುಟ್ಟಿಲೀ ಕೊರಳೊಳ್ ಕಟ್ಟಿ ಮಂತ್ರಿಸಿಬಿಟ್ಟು ತಾನಾ ದಿವಸಮಭ್ಯಂಜನ ಮಾಡಲೆಂದು ತೈಲಮಂ ತನ್ನ ಮಗಳಿಂದಂ ಒತ್ತಿಸಿಕೊಳುತ್ತಿರಲಾ ಸಮಯದೊಳ್ ಅರ್ಧಕ್ರೋಶದೊಳನಿತರೊಳೆ ಭೋರ್ಗರೆಯುತ್ತೆ ಬರ್ಪ ಉರಿಸಿಂಗಿಯಾರ್ಭಟೆಯಂ ಕೇಳ್ದು ತನ್ನ ಸುತೆಗೆಂದಂ ಬೆಟ್ಟದುರಿಸಿಂಗಿ ಬಪ್ಪುದುಂ ಏಳು ಮಂಡಲಮಂ ಬರೆವುದದಂ ಮೀರಲ್ ಸೀಳುಮಂಡಲಮಂ ಬರೆವುದೆಂದು ಪೇಳಲಾಕೆಯಾ ಗಣದೊಳ್ ಬಪ್ಪ ದಾರಿಯೊಳೇಳು ಮಂಡಲಮಂ ಬರೆದು ಬಂದೆಣ್ಣೆಯನೊತ್ತುತ್ತಿಪ್ಪುದುಂ ಮಹೋರಗನತಿರಭಸದೊಳಾ ಮಂಡಲಮಂ ದಾಂಟಲೊಂದೊಂದು ತುಂಡಾಗೆ ಏಳು ಪೋಗೆ ಶಿರೋಭಾಗಮುಳಿದು ಬಂದಾತನುಂಗುಷ್ಟಮಂ ತಿನೆಯಾತನ ಮಗಳ್ ಮಂತ್ರಿಸಿ ವಿಷಮನಿಳಿಯಿಸುವೆನೆಂದುದ್ಯೋಗಿಸಲಪಖ್ಯಾತಿಯಿಂ ಬಾಳ್ವೆನಲ್ಲದರಿಂ ಬೇಡವೆಂದೊಂದು ಶಿಲೆಯಂ ತರಿಸಿ ಮಂತ್ರಪೂತಂ ಮಾಡಿಯಾ ಊರ ಮುಂಗಡೆಯೊಳ್ ನಿಲಿಸಿ ಆರಾದೊಡಂ ಸರ್ಪದಷ್ಟಮಾದರೀ ಶಿಲೆಯಂ ಮುಟ್ಟಲ್ ವಿಷಂ ತೀರ್ಗುಮೆಂದು ನೇರಳೆಯಂತಪ್ಪರಸಂ ಮೃತವಾದನಾ ಸರ್ಪಂ ಕನಕಗಿರಿಗೆಯ್ದಿತು. ಅವನ ಪೆಸರಿಂ ಪಾರ್ವಂ ಕೇಲದಿವಸಂ ಪ್ರಸಿದ್ಧಿ ವಡೆದಿರ್ದನಾಗಳ್ ಅಸ್ಮತ್ ಪಿತಾಮಹಂ ನಮ್ಮ ವಂಶಜರಂ ಶ್ರೀವತ್ಸಗೋತ್ರದ ಸ್ಯಾದ್ವಾದಿಗಳ್ ಹಸ್ತಿಮಲ್ಲಾರ್ಯಾನ್ವಯರ್ ದೀಪಂಗುಡಿಯಿಂ ಬಂದರಿಕುಠಾರದಿಂ ಛತ್ರತ್ರಯಪುರದ ಚಂದ್ರಪ್ರಭಸ್ವಾಮಿ ಸೇವೆಯೊಳಿದ್ದಲ್ಲಿ ಅಭಿವೃದ್ಧಿಯಿಂದ ಚಂದ್ರನಾಥಂ ಮೊದಲಾಗೆಣ್ಬರ್ ಕನಕಗಿರಿ ಕೆಲಸೂರಾದಿ ಸ್ಥಳಂಗಳೊಳಿರ್ಪರಾ ಚಂದ್ರನಾಥನ ವಂಶಂ ಶಾಖಾಕೀರ್ಣದಿಂ ಪ್ರಸರಿಸೆ ಜೀವನಕ್ಕಾಗಿಯವರೊಳೀರ್ವರ್ ಗಟ್ಟದ ತಳಕ್ಕೆ ಪೋಗೆಯಲ್ಲಿ ಭೈರಾದೇವಿ ಸಂತಾನಮಿಲ್ಲದುದರಿಂ ಬೊಕ್ಕಸದೊಳಿರ್ದ ನವರತ್ನಂಗಳಂ ವೆಚ್ಚಿಸಲಾರದೆಲ್ಲಮಂ ಕುಟ್ಟಿಸಿ ಪುಡಿಯಂ ಮಾಡಿಸುತ್ತಿರಲದಂ ಕೊಂಡು ಭಸ್ಮಮಂ ಮಾಡಿ ಮಹಮಹಾ ಮಾತ್ರೆಗಳಂ ಮಾಡಿ ವೈದ್ಯದೊಳತಿಪ್ರಸಿದ್ಧಿವಡೆದು ಉಮ್ಮತ್ತೂರಲ್ಲಿ ನಿಂತನು, ಈರ್ವರು ಮಹಿಸೂರಲ್ಲಿ ನಿಂತರು. ಮತ್ತಂ ಬೆಳುಕೆರೆ ಬೋಗಾದಿ ಹಡದಣ ಕಲಶತವಾಡಿ ಮೊದಲಾದವರೊಳ್ ನಿಂತರು. ಮಹಿಸೂರೊಳು ನಿಂದೆಮ್ಮ ಪಿತಾಮಹಂ ದೇವರಸಂ ಕನಕಗಿರಿಯ ಪದ್ಮಾವತಿಮಹಾದೇವಿ ಎಮಗಿಷ್ಟ ದೇವರಾದುದರಿಂ ದೇವರ ಸೇವೆಯಂ ಮಾಡಿ ಬರುವಲ್ಲಿ ನೇರಳೆಯಂತಪ್ಪರಸನಿಂ ವಿಷಹರಮಂತ್ರ ಬೀಜಾಕ್ಷರ ಸಂಪೂರ್ಣಮಾಗಿಯುಪದೇಶಂಗೊಂಡು ಬಂದರಾ ಮಂತ್ರದಿಂ ಮಂತ್ರಿಸಿದೆನೆಂದು ಶಾಂತಯ್ಯಂ ಪೇಳೆ ರಾಜಂ ಕೇಳ್ದು ಆಶ್ಚರ್ಯಂಬಟ್ಟು ಜೈನಮತಮೊಂದೆ ಆದಿಮತ ಸತ್ಯಮದೆ ಸರ್ವೋತ್ಕೃಷ್ಟಮೆಂದು ಸಭೆಯಾಳ್ ಪ್ರಶಂಸೆಗೆಯ್ದು ಸರ್ವ ಜೀವದಯಾಪರತ್ವಂ ಜೈನಧರ್ಮದೊಳಲ್ಲದುಳಿದ ಧರ್ಮಂಗಳೊಳಿಲ್ಲ.

ವೃತ್ತ || ಹಸ್ತೌ ದಾನವಿವರ್ಜಿತೌ ಶ್ರುತಿಪುಟೌ ಸಾರಸ್ವತದ್ರೋಹಿಣೌ
ನೇತ್ರೇ ಸಜ್ಜನವೀಕ್ಷಣೇನ ವಿಮುಖೇ ಪಾದೌ ನ ತೀರ್ಥಂ ಗತೌ
ಅನ್ಯಾಯಾರ್ಜಿತವಿತ್ತಪೂರ್ಣಮುದರಂ ಗರ್ಮೇಣ ತುಂಗಂ ಶಿರಃ
ಭ್ರಾತಃ ಕುರ್ಕುರ ಮುಂಚ ಮುಂಚ ಸಹಸಾ ನೀಚಸ್ಯ ನಿಂದ್ಯಂ ವಪುಃ ||

ಅದರಿಂದೆಲ್ಲರು ಕಡಿವ ಕುಡಿವ ಪಾಪಮಂ ತೊರೆದವರಲ್ಲವೆಂದು

ಶೋಕ || ಮಾಂಸಾಶಿಷು ದಯಾ ನಾಸ್ತಿ ನ ಸತ್ಯಂ ಮದ್ಯಪಾಯಿಷು
ಧರ್ಮಭಾವೋ ನ ಜೀವೇಷು ಮಧೂದುಂಬರ ಸೇವಿಷು ||

ಎಂಬುದರಿಂ ರಾತ್ರಿಭೋಜನಮಂ ಬಿಟ್ಟು ಪಾಲುಂ ನೀರುಂ ಸಾಧಿಸಿ ಪಂಚೋದುಂಬರ ಕಂದಮೂಲಾದಿಗಳಂ ತೊರೆದವರೆ ಮಹಾತ್ಮರದರಿಂ ಗುಣಕ್ಕೆ ಮತ್ಸರಮುಂಟೆ ಎಂದು ಅರಮನೆಯೊಳಿಂದಾರಭ್ಯ ಪಾಲಂ ನೀರಂ ಶೋಧಿಸಿದಲ್ಲದೆ ಮುಟ್ಟಲಾಗದೆಂದು ನಿಯಮಿಸಿ ತಾವುಂ ಇಂಗುಮಂ ಜೇನುಮಂ ವರ್ಜಿಸಿದರು.

ಶ್ಲೋಕ || ದೃಷ್ಟಿಪೂತಂ ನ್ಯಸೇತ್ಪಾದಂ ವಸ್ತ್ರಪೂತಂ ಪಿಬೇಜ್ಜಲಮ್
ಸತ್ಯಪೂತಂ ವದೇದ್ವಾಕ್ಯಂ ಮನಃಪೂತಂ ಸಮಾಚರೇತ್ ||

ಈ ಪ್ರಕಾರಂ ಇರುವಲ್ಲಿ ಒಂದುದಿನ ರಾತ್ರಿ ನಿಶಾವಸಾನದೊಳ್ ಒಬ್ಬ ಸ್ತ್ರೀಯಂ ಶ್ವೇತವಸ್ತ್ರಾಭರಣಭೂಷಿತೆ ಮಲ್ಲಿಕಾಮಾಲೆಯಂ ಕೈಯೊಳ್ ಕೊಟ್ಟು ಆನೆ ಶೃಂಗಾರವಾಗಿ ಬಂದಿದೆ ಏಳಿಮೆಂದು ಕೈಯಂ ಪಿಡಿವುದು ಸ್ವಪ್ನಂಗಂಡೆಚ್ಚತ್ತು ಶಾಂತಯ್ಯಂಗೆ ಪೇಳೆ ನಿಮಗೆ ಶೀಘ್ರದಲ್ಲೇ ಮಹದೈಶ್ವರ್ಯಂ ಬಪ್ಪುದೆಂಬುದು ಸಂತೋಷಮಿರಲತ್ತ ಶ್ರೀರಂಗಪಟ್ಟಣದೊಳೆ ರಂಗರಾಯಂಗಸಾತಾವೇದನೀಯ ಕರ್ಮೋದಯದಿಂ ಬೆನ್ನೊಳೊಂದು ಪುಣ್ಣು ಕಂಡು ನಾನಾ ಪ್ರತೀಕಾರದಿ ಶಮನಮಾಗದಿಪ್ಪುದುಂ

ವೃತ್ತ || ವೈದ್ಯೋ ವದತೀ ಕಫ ಮಾರುತ ಪಿತ್ತಜಾಲಂ
ಜ್ಯೋತಿರ್ವಿದೋ ಗ್ರಹಗಣಂ ಪರಿಕಲ್ಪಯಂತಿ
ಭೂತಾ ಪಿಶಾಚಾ ಇತಿ ಮಂತ್ರವಿದೋ ವದಂತಿ
ಪ್ರಾಚೀನಕರ್ಮ ಬಲವತ್ ಮುನಯೋ ವದಂತಿ ||

ಅದಲ್ಲದೆ

ಶ್ಲೋಕ || ವೈದ್ಯ – ಜ್ಯೋತಿಷ – ಮಂತ್ರಾದಿ – ಸಾಮುದ್ರಿ ಕಮುಪಶ್ರುತಿಃ
ಭಾಗ್ಯಕಾಲೇ ಪ್ರಸನ್ನಾಸ್ಯುರಭಾಗ್ಯೇ ಸತಿ ನಿಷ್ಫಲಃ ||

ಎಂಬುದರಿಂ ಕರ್ಮಜನ್ಯಮಾದುದರಿಂದಾರಿಂದು ಗುಣಮಾಗದೆ ಪೆರ್ಚುತ್ತಂ ಬಪ್ಪುದುಂ ಕೆಲಂಬರೆಂದರ್

ಶ್ಲೋಕ || ಪೂರ್ವಜನ್ಮಕೃತಂ ಪಾಪಂ ವ್ಯಾಧಿರೂಪೇಣ ಬಾಧತೇ
ತಚ್ಛಂತಿರೌಷಧೈರ್ಹೋಮೈರ್ಜಪದೇವಸುರಾರ್ಚನೈಃ ||

ಎಂಬುದರಿಂದ ಜಪ ಹೋಮಾದಿ ದಾನಮಂ ಮಾಳ್ಪುದೆಂದು ಪಾರ್ವರನೇಕ ದ್ರವ್ಯಮಂ ಕೊಂಡು ಬೇಕಾದ ಭಕ್ಷ್ಯಭೋಜ್ಯ ವಸ್ತ್ರ ತಾಂಬೂಲಾದಿಗಳಿಂ ಸಂತೋಷಂ ಬಡಿಸೆ ಪರಸಿದರ್. ಕೆಲಂಬರ್ ಸಂಸಾರಂ ದುಃಖಮಯಂ ಶರೀರಂ ರೋಗಮಯಂ ಆದೊಡಿದು ದೇವತಾಕಟಾಕ್ಷದಿಂ ಪರಿಹರವಾಗಬೇಕದರಿಂದಿಲ್ಲಿ ರಾಮೇಶ್ವರ ತಳಕಾಡೆಂಬುದು ಮಹಾಕ್ಷೇತ್ರಮಲ್ಲಿಯನೇಕ ದೇವಾಲಯಮಿಪ್ಪುವವಂ ಬಂದಿಸಲೀ ಯಾತನೆ ವಿಮೋಚನಮಪ್ಪುದೆಂದು ಪೇಳಲಂತೆ ಮಾಳ್ಪೆನೆಂದು ರಾಯಂ ಪೋಗಲುದ್ಯುಕ್ತನಾಗಿ ಪಟ್ಟಣದೊಳಾರನಿರಿಸಿ ಪೋಗುವೆವೆಂದು ಯೋಚಿಸುವುದುಂ ಪಲಂಬರ್ ಬಂದು ನಾನು ತಾನೆಂದು ನಿಲ್ವುದುಂ ಬೊಮ್ಮುರಸನೆಂಬ ಸಾಮಾಜಿಕನೆಂದಂ

ಶ್ಲೋಕ || ಮೂರ್ಖಂ ವ್ಯಸನಿಗಂ ಲುಬ್ಧಂ ಅಲ್ಪಸತ್ವಂ ಮತಿಭ್ರಮಮ್
ಶಬ್ದಂ ಜಾತ್ಯಾಯ ಕರ್ತಾರು ಅಧಿಪತ್ಯಂ ನ ಯೋಜಯೇತ್ ||

ಎಂಬುದರಿಂ

ವೃತ್ತ || ದಾಕ್ಷಿಣ್ಯಂ ಸ್ವಜನೇ ದಯಾ ಪರಿಜನೇ ಶಾಠ್ಯಂ ಸದಾ ದುರ್ಜನೇ
ಪ್ರೀತಿಸ್ಸಾಧುಜನೇ ನಯೋ ನೃಪಜನೇ ವಿದ್ವಜ್ಜನೇಷ್ವಾರ್ಜಮ್
ಶೌರ್ಯಂ ಶತ್ರುಜನೇ ಕ್ಷಮಾ ಗುರುಜನೇ ನಾರೀಜನೇ ಧೂರ್ತತಾ
ಇತ್ಯೇವಂ ಪುರುಷಃ ಕಲಾಸು ಕುಶಲಃ…………ಷ್ವೇವ ಲೋಕಸ್ಥಿತಿಃ ||

ಎಂದು ಸಜ್ಜನನಪ್ಪ ಸತ್ಯವಂತಂ ಮಹಿಸೂರರಾಜಒಡೆಯನಂ ಕರೆಸಿ ಪಟ್ಟಣವನೊಪ್ಪಿಸಿ ಪೋಪಮೆಂದು ಸಮಿಪದೊಳ್ ಕಾಯ್ದುಕೊಂಡಿರ್ದರಸುಗಳಂ ಬಿಟ್ಟು ಅವರ ಬರಲೆಂದಟ್ಟುವುದು ಬುದ್ಧಿಯೊಡೆಯರೆಂದರ್.

ಆರ್ಯೆ || ಗುಣಿನೋ ಗುಣಜ್ಞೋ ರಮತೇ | ನಾಗುಣ ಶೀಲಸ್ಯ ಗುಣಿನಿ ಪರಿತೋಷಃ
ಅಳಿರೇವ ವನಾತ್ಕಮಲಂ | ನದರ್ದುರಸ್ತ್ವೇಕವಾಸೋಪಿ ||

ಎನುಲು ಪೆರ್ಗಡೆಗಳ್ ಮಹಿಸೂರನೆಯ್ದಿ ರಾಜಒಡೆಯರ್ಗೆರಗಿ ಬಿನ್ನವಿಸೆ ಶಾಂತಯ್ಯನಂ ಬರಿಸಿ ಕೇಳ್ವುದುಂ

ಶ್ಲೋಕ || ಯಸ್ಮಿನ್ ದೇಶೇ ಯದಾ ಕಾಲೇ ಯನ್ನು ಹೂರ್ತೇ ಪಿಯದ್ದಿನೇ
ಹಾನಿರ್ವೃದ್ಧಿರ್ಯಶೋಲಾಭಸ್ತತ್ತತ್ಕಾಲೇ ಭವಿಷ್ಯತಿ ||

ಅದರಿಂದೀ ದಿವಸವೇ ಸುಲಗ್ನ ಮುಹೂರ್ತ ಒಳ್ಳಿತೆಂಬುದುಂ ತನ್ನ ಸ್ವಕೀಯ ಪಿರಿಯ ಮಗನಪ್ಪ ಚಾಮರಾಜನಂ ದೊಡ್ಡಶಾಂತಯ್ಯನಂ ಮಹಿಸೂರಲ್ಲಿರವೇಳ್ದು ಕೆಲಂಬರಂ ಚಿಕ್ಕಶಾಂತಯ್ಯನಂ ಕೂಡಿಕೊಂಡು ಪಟ್ಟಣಮನೆಯ್ದಿ ರಾಯನಂ ಕಾಣ್ಬುದುಂ ವಿನಯದಿ ನೀನೀ ಪಟ್ಟಣದೊಳಿರ್ಪುದಾನು ತೀವ್ರ ರುಜಾಪೀಡಿತನಾದುದರಿಂ ತಲಕಾಡು ಮೊದಲಾದ ತೀರ್ಥಸ್ಥಲಮನೆಯ್ದಿ ಪೂರ್ವಾರ್ಜಿತ ಪುಣ್ಯದಿಂದೀ ರೋಗಂ ನಿರೋಗವಾಗೆ ಬಪ್ಪನ್ನೆವರಂ ನಾಡೆಲ್ಲಮಂ ಪಾಲಿಪುದೆಂದು ತನ್ನ ಶಿಖಿಯ ಸರಮನಿತ್ತು ಕೆಲರೊಡಗೂಡಿ ತಾನುಂ ಪೋಗಿ ದೇವತಾರ್ಚನೆ ಬ್ರಾಹ್ಮಣ ಸಂತರ್ಪಣೆಯೆಂಬ ಬಹುವಿಧದಿಂ ಮಾಡಿಸಿದಾಗ್ಯು ರೋಗಪ್ರಾಬಲ್ಯದಿಂದಲ್ಲೆ ನಾಕಸತಿಯರೊಡಗೂಡೆ

ಶಾ || ದೇವೇಂದ್ರಂ ಧರಣೀಂದ್ರ ದೈತ್ಯನಿವಹಂ ವಿದ್ಯಾಧರಾನೀಕಮುಂ
ಭಾವ ವ್ಯಂತರ ಚಂದ್ರ ಸೂರ್ಯಗ್ರಹಮುಂ ಮರ್ತ್ಯರ್ಕಳುಂ ಬಂಧುವುಂ
ದೇವಾನೀಕವು ಮಂತ್ರ ತಂತ್ರದೊದವುಂ ರುದ್ರರ್ಕಳುಂ ಬುದ್ಧಿಯುಂ
ಕಾಯಲ್ ಬಲ್ಲರೆ ಕಾಲನೆಂಬನದಟಿಂ ಕೊಂಡೊಯ್ಯೆ ಮತ್ತೆಲ್ಲಿಯುಂ ||

ಅಂತಾಗಲಾತನ ಸ್ತ್ರೀಯರ ಸಹಗಮನಮಂ ಮಾಡಿಸಿ ಶಕವರುಷ ೧೫೦೫ ಪಾರ್ಥಿವ ಸಂವತ್ಸರದಲ್ಲಿ ಶ್ರೀರಂಗಪಟ್ಟಣದೊಳು ರಾಜಒಡೆಯರ್ಗೆ ಪಟ್ಟಾಭಿಷೇಕಮಾಗೆ ಉಭಯ ರಾಜ್ಯಮನಾಳುತ್ತಂ ಕೆಲವು ರಾಜ್ಯಮಂ ಸಾಧಿಸುತ್ತ ಸುಖಮಿರಲತ್ತ ಸಿರಿಯ ಪುರದುನ್ಮತ್ತರಾಯಂ ಮಹಿಸೂರಿಂ ಬಪ್ಪ ಸಾವಿರ ಖಂಡುಗ ಹುರುಳಿ ನಿಲಕಡೆಯಾದುದಕ್ಕೆ ಪ್ರಧಾನ ಬೊಮ್ಮರಸಯ್ಯನ ಮೇಲತ್ಯಾಗ್ರಂಹಂಗೆಯ್ದು ಹುರುಳಿಯಂ ತರಲ್ ಬಾರಿಸೆ

ಎಲೆಯುದುರಿದ ಮರದ ನೆಳಲ್
ಪೊಲತಿಯ ಲಾವಣ್ಯಮುರಿವ ಬಿಸಿಲೊಳ್ ಪಯಣಂ
ಕೊಲೆಗಡಿಕ ಭೂಪನೋಲಗ
ಮಲಗಿಲ್ಲದ ಪರಜಿನಂತೆ ಬಾಳ್ವುದು ಕಷ್ಟಂ

ಎಂದು ನೆನೆದು ನಾನುಂ ಪಟ್ಟಣಮನೆಯ್ದಿ ರಾಜನಂ ಬೇಡಿಬಪ್ಪೆನೆಂದು ಮನೆಗೆ ಬಂದು ಕೆಲವು ಪಾಗುಡಂಗೊಂಡು ಪಟ್ಟಣದ ಪ್ರತಿಹಾರರಿಂ ಪಿರಿಯಪುರದ ಪ್ರಧಾನಂ ಬಾಗಿಲ್ಗೆ ಬಂದಿರ್ದನೆಂದು ಪೇಳಿಸೆ ಬರವೇಳೆಂಬುದುಂ ಸಭೆಯನೆಯ್ದಿ ರಾಜನಂ ಕಾಣ್ಬುದುಂ ಕುಳ್ಳಿರೆಂದು ನಿಮ್ಮ ನಾಡುಗಳ ಪ್ರಜೆಗಳು ಸುಖಮಿಪ್ಪರೆ ಎನೆ ಜನಂಗಳೆಲ್ಲಂ ಕಾಲಕ್ಷೇಪಂ ಮಾಳ್ಪರು. ನಮ್ಮರಸಂಗೆ ಕೆಲವು ಕುದುರೆಗಳಿರ್ದುವೀಗಲುಮವರೊಳೊಂದು ಭಾಗ ಮೃತವಾದವು. ಉಳಿದವೆಲ್ಲವತಿಬಡವಾಗಿರ್ಪವೆನೆ ನಿನ್ನ ರಾಜ್ಯದ ಪಟ್ಟಣಮಂ ಕಟ್ಟಿಕೊಳ್ಳದೆ ಸ್ವಾಭಿಮಾನಿಸಿ ಬಿಟ್ಟಿರ್ದೊಡೆಮ್ಮಲ್ಲಿ ಕಪ್ಪಮಂ ಹುರುಳಿಯಂ ಬೇಡಲು ನಿಮ್ಮರಸಂ ಕಳುಹಿಸಿದನೆ ನಾಳೆ ದಿವಸಂ ನಿನ್ನ ಪಟ್ಟಣಮಂ ತೆಗೆಯಲ್ ಬಪ್ಪರೆಂದು ನಿನ್ನರಸಂಗೆ ಪೇಳು ಪೋಗೆಂದಾಸ್ಫಾಟಿಸಿ ನುಡಿಯಲೆಮ್ಮ ಸ್ವಾಮಿಗಾಂ ಸಹಾಯಮಾಗಲೀಗಲೆ ಆಗುತ್ತಿದೆಯೆಂದು ನುಡಿವುದುಂ ತಿರಿಕೆ ಹಾರುವ ನಿನ್ನ ಸಹಾಯದಿಂದೇನಪ್ಪುದು ಆಳುಮಾತ್ರದೊರ್ವ ಭಟನ ಬಲದಿಂದ ನಿನ್ನ ಪಟ್ಟಣಮಂ ಕೊಳ್ವೆನೆನೆ ಬೊಮ್ಮರಸನೆಂದಂ ನಿಮ್ಮ ಕಟಾಕ್ಷವಿರ್ದೊಡಾವಂ ಬಂದೊಡತಿ ಹುಲಿಯಂ ಕಂಡ ಹರಿಣದಂತೋಡಿಬರುತ್ತುಂ ಬಯಂಗೊಂಡಾನೆ ಘಂಟೆಗೆ ಪುಲ್ಲಂ ಬರಿಸಿ ದೊಡೆನಗೆ ನೀರಾಜಿ ಪಾಗಂ ದಯಂ ಮಾಳ್ಪುದಲ್ಲದೊಡಾನೀ ಜನ್ಮಕ್ಕೆ ಪಾಗನೊಲ್ಲೆನೆಂದು ತನ್ನ ಶಿರದ ಪಾಗಂ ತೆಗೆದು ಮುಂದಿರಿಸಿ ತಾನುಂ ಪಿರಯಪುರಮನೆಯ್ದಲಿತ್ತ ತಿಮ್ಮ ನಾಯಕನೆಂಬ ಪೆರ್ಗಡೆಯಂ ಚತುರಂಗಂ ಬೆರಸಿ ಕಳುಹಿಸಲದಂ ಕೇಳ್ದು ಬೊಮ್ಮರಸಂ ಪುರದೊಳ್ ಸ್ವಲ್ಪ ಜನರನಿರಿಸಿ ಕಡಮೆ ಜನಮಂ ಹೊತ್ತು ಪುರದೊಳಿದ್ದ ಜನಸಹಿತ ಎಣ್ಣೆಯ ಬಟ್ಟೆ ಮುಂತಾಗಿ ಜೀವಧ ಜೀವಧನವೆರಸಿ ತಾನುಮಡವಿಯಂ ಪೊಕ್ಕು ಗ್ರಾಮಾಂತರದ ಎತ್ತುಗಳು ಎಣ್ಣೆಯ ಅರುವೆ ಮುಂತಾಗಿ ಬರಿಸಿ ಗಿಡದೊಳಿರ್ದೊಡೆ ಮಹಿಸೂರ ದಂಡು ಬಂದು ಬಹಿಃಪುರದೊಳ್ ನಿಂದಾರುಮಂ ಕಾಣದೆ ಆರೈದು ಕೋಟೆ ಬಳಿಯೊಳ್ ನಿಲ್ವುದುಂ ಕೊತ್ತಲಂಗಳೊಳ್ ಪತ್ತು ಇಪ್ಪತು ಗುಂಡಂ ಪಾರಿಸಿದೊಡೆ ಸಮೀಪಮಂ ಸಾರ್ದು ಹರುಷಿತರಾಗಿ ಕೋಟೆ ತಮ್ಮ ವಶವಾಯ್ತೆಂದು ಕೋಟೆಬುಡಮಂ ಪಿಡಿದೊಡಾಗಳಸ್ತಮಯವೇಳೆಯಾಗೆ ನಾಳೆ ಹಲ್ಲಂ ಮಾಳ್ಪಮೆಂದು ಎಲ್ಲರು ಇಳಿದು ಕುದುರೆ ಆನೆಗಳ ಸಾಮಾನುಗಳಂ ತೆಗೆದಿರಿಸಿ ಪಾಕಶುದ್ಧಿಯಂ ಮಾಡಲುದ್ಯುಕ್ತರಾಗಿ ಕೆಲಂಬರ್ ಅನ್ನ ಸಿದ್ಧಮಾಗೆ ಭುಂಜಿಸಲುದ್ಯೋಗಿಸಿದರು. ಪಾಕಮಂ ಮಾಡುವ ವೇಳೆಯರಿದು ಪತ್ತು ಸಾವಿರ ವೃಷಭಂಗಳ ಕೋಡುಗಳ್ಗೆ ಪಂಜುಗಳ ಬೆಳಗೆ ಪೂರ್ವಾಪರಂಗಳಿಂದೆರಡು ಭಾಗಮಾಗಿ ಬಿಳಿ ವಸ್ತ್ರಮಂ ಜನರ್ಗೆ ಪೊದ್ದಿಸಿ ಸಾಲುಸಲಾಗಿ ನಿಲಿಸಿ ಬಾಣಪ್ರಯೋಗದಿಂ ತಮ್ಮಟೆ ಕಹಳೆ ಮುಂತಾದ ಭೀಷಣಮಪ್ಪ ಧ್ವನಿಗಳಂ ಮಾಡುತ್ತಾ ಕೋಟೆಯ ಸಮಿಪಕ್ಕೆ ಬಪ್ಪುದುಂ ಮಹಿಸೂರಬಲಮೆಲ್ಲಂ ಭೀತಿಯಿಂದಂಜಿ ಭೋಜ ನಮನುಳಿದು ಆಯುಧಂಗಳಂ ಬಿಟ್ಟು ಬೆತ್ತಲಗುದುರೆಯಂ ಆನೆಯಂ ಪತ್ತಿ ಜಗಳಕ್ಕನು ಗಾಣದೆ ದಕ್ಷಿಣಮುಕಮಾಗಿ ಓಡಿಬಪ್ಪುದುಂ ಕಂಡು ಹಿಂದಟ್ಟುವುದುಂ ಪಿಡಿಯಲ್ ಬಪ್ಪರೆಂದಾನೆ ಘಂಟೆಗೆ ಪುಲ್ಲನಿಕ್ಕಿ ಕತ್ತಲೆಯೊಳೆಲ್ಲೂ ನಿಲ್ಲದೆ ಪಟ್ಟಣಕ್ಕೆ ಬಂದು ನಿಲಲತ್ತಂ ಬೊಮ್ಮರಸನೆಂಟು ದಿನದೊಳೆ ಪಾಗುಡಸಹಿತಂ ಬಂದು ರಾಜನಂ ಕಾಣ್ಬುದುಂ ನಿರಾಜಿ ಪಾಗು ಧೋತ್ರ ಪಚ್ಚಡ ಮೊದಲಾಗೆ ಮನ್ನಿಸಿ ನೀನೆಮ್ಮಂ ಕಂಡು ಬಾಳ್ವುದಿನ್ನು ನಿನ್ನ ಮೇಲೆತ್ತಿಬರ್ಪುದಿಲ್ಲೆಂದು ಪೇಳಿ ಕಳುಹಿಸಲಾ ನಂಜುಂಡರಸಿಂಗೆ ಮಲ್ಲೇಶ್ವರನೊಲುಮೆಯಾಗೆ ರಾಜ್ಯಂ ರಾಜನ್ವತಿಯಂ ಪಡೆಯದಾಯ್ತು.