ಶ್ರೀ ಸುಜನಸ್ತುತರಖಿಳಕ
ಳಾಸದನರ್ ಸತ್ಯವಾದಿಗಳ್‌ ಸುವಿಚಾರರ್
ಲೇಸೆಂದು ನಂಬಿ ಕೇಳ್ವುದು
ವೈಷಮ್ಯಮನುಳಿದು ಮೋಹರೋಷವ ಕಲೆದುಂ

ಈ ಪ್ರಕಾರದೊಳೆ ರಾಜ ಒಡೆಯರು ರಾಜ್ಯಂಗೆಯ್ಯುತ್ತ ಪ್ರಜಾಪರಿವಾರಂಗಳನತ್ಯಾದರದಿಂ ರಕ್ಷಿಸುತ್ತಮೆಂಟುವರ್ಷಂಬರಂ ಸುಖಮಿರ್ದು ಕಾಲಂಗಂಡೊಡೆ ಬಳಿಕ ಚಾಮರಾಜ ಒಡೆಯರ್ಗೆ ಪಟ್ಟಮಾಗೆ ವೀರವಿತರಣದಿಂ ರಾಜನೀತಿಯಂ ಬಿಡದೆ ಚಮುಂಡಿವರಪ್ರಸನ್ನರಾಗಿ ನುಡಿದ ಮಾತಿಗೆ ತಪ್ಪುವರ ಗಂಡ ಚಾಡಿವೇಳುವರ ಮಿಂಡ ಕದನಪ್ರಚಂಡ ಅರಿರಾಯಗಿರಿವಜ್ರದಂಡನೆಂದು ಬಿರುದಾಂತು ಮಲ್ಲ ರಾಜೇಂದ್ರನೆಂಬ ದಳಪತಿಸಹಿತಂ ಇಕ್ಕೇರಿ ಮಧುರೆ ಚಂದಾವೂರು ಕೊಡಗು ಮಲಯಾಳ ಮುಂತಾದ ರಾಜ್ಯಮಂ ಪಾಲಿಸುತ್ತಂ ಚೊಕ್ಕಲಿಂಗನ ಮಹಾಬಲಮಂ ಗೆಲ್ಲಂಗೊಂಡು ನಿರಂಕುಶರಾಗಿ ಇಪ್ಪತ್ತು ವರುಷಂಬರಂ ರಾಜ್ಯಮಂ ಪ್ರತಿಪಾಲಿಸುತ್ತಮೊಂದುದಿನಂ ತತ್ತ್ವಶಾಸ್ತ್ರಮಂ ಪ್ರಸಂಗಿಸುತ್ತಿರ್ದು ಜೈನಸಮಯದ ತತ್ತ್ವ ವಿಚಾರಣೆಯಂ ಮಾಡುತ್ತಂ ರತ್ನಾಕರಾಯ್ಯ ವಿರಚಿತ ಭರತೇಶ್ವರ ಚರಿತೆ ಎಂಭತ್ತುನಾಲ್ಕು ಸಂಧಿಯಂ ಬಸ್ತಿಯುಪಾಧ್ಯಾಯರಿಂ ತರಿಸಿ ಸಭೆಯೊಳೋದಿಸಿ ಈ ಜೈನತತ್ವಶಾಸ್ತ್ರಮಂ ತಿಳಿವುದು ದುರ್ಲಭಂ ಅದೊಡಮೀ ಕೃತಿಯಂ ಮಾಡಿದವನೀಶ್ವರಂ ಸರ್ವಜ್ಞನಲ್ಲದೆ ಮನುಷ್ವನಲ್ಲಾತನಾರೆಂದು ದೊರೆಗಳು ಕೇಳ್ವುದುಂ ಉಪಾಧ್ಯಾಯನೆಂದಂ ತುಳುವ ದೇಶದ ಮೂಡಬಿದರೆಯೊಳು ಸೂರ್ಯವಂಶದರಸುಗಳನ್ವಯದೊಳೆ ದೇವರಾಜನ ಪುತ್ರಂಗೆ ಕಡಲಾದಿ ಪರಮೇಶನ ಪೆಸರಿಡೆ ಬಾಲಕಾಲದೊಳೆ ಕಾವ್ಯಾಲಂಕಾರ ಲಕ್ಷಣ ಶಾಸ್ತ್ರದೊಳತಿನಿಪುಣನಾಗಿ ಸಾರತ್ರಯಕ್ಕೆ ಕೇಶವರ್ಯರು ರಚಿಸಿದ ವ್ಯಾಖ್ಯಾನಂಗಳಂ ಕುಂದಕುಂದಾರ್ಯೋಕ್ತ ಅಧ್ಯಾತ್ಮಸಿದ್ಧಾಂತಕ್ಕೆ ಪ್ರಭೇಂದುಗಳು ಮಾಡಿದ ಟೀಕಂ ಸಮಾಧಿಶತಕ ಏಕಸಪ್ತತಿ ಸ್ವರೂಪಸಂಭೋಧನೆ ಮೊದಲಾದನೇಕ ಪರಮಾಗಮಂಗಳಂ ಹೃದ್ಗತಮಾಗೆ ತಿಳಿದು ಕವೀಶ್ವರನಾಗಿ ಈ ದೇಶದರಸು ಸೋಮವಂಶದ ಭೈರಸ ಒಡೆಯರ ಸಭೆಯೊಳೆ ಶೃಂಗಾರಕವಿಯೆಂಬ ಪೆಸರಾಂತು ವಿದ್ವಾಂಸರ್ಗಧಿಕನಾಗಿ ಯೋಗರತ್ನಾಕರ ಶಾಸ್ತ್ರಭ್ಯಾಸದಿಂ ದಶವಾಯುಗಳಂ ಸಾಧಿಸಿರ್ದು ರತ್ನಾಕರನೆಂಬಭಿದಾನದಿಂ ಪೂರ್ವ ವಯಸ್ಸಿನೊಳೆ ಭೈರಸೊಡೆಯರ ಪುತ್ರಿ ಮೋಹಿಸೆ ಸೌಧಾಗ್ರಮವೇರಿ ವಾಯುಧಾರಣೆಯಂ ಮಾಡಿ ದಶವಾಯುಗಳ ಸಾಧಿಸಿ ಯೋಗಾಭ್ಯಾಸದೊಳೆ ಪ್ರೌಢನಾಗಿಪ್ಪುದರಿಂದಾಕೆಯೊಳತ್ಯಾಸಕ್ತನಾಗಿ ಆಕೆಯಂ ಕೂಡಲು ಸೌಧಾಗ್ರದ ಮೇಖಲೆಯನ್ನೇರಿ ವಾಯುಧಾರಣೆಯಿಂ ಗವಾಕ್ಷದಿಂದೆಯ್ದುತ್ತವಳೊಳೆ ನೇಹಂ ಮಾಡುತ್ತಿರಲರಸನರಿದು ಪಿಡಿಯಲುದ್ಯೋಗಿಸಲಾ ರಾತ್ರಿಯೊಳೆ ಪೋಗಿ ನಿಜಗುರುವಪ್ಪ ಮಹೇಂದ್ರಕೀರ್ತಿಗಳಿಂದ ಅಣುವ್ರತದೀಕ್ಷೆಗೊಂಡು ಆಗಮಂಗಳೊಳತಿನಿಪುಣನಾಗಿ ಅಧ್ಯಾತ್ಮದೊಳೆ ಅಹರ್ನಿಶಂ ಕೂಡಿರೆ ವಿಜಯಕೀರ್ತಿಗಳೆಂಬ ಪಟ್ಟಾಚಾರ್ಯರ ಶಿಷ್ಯರಾದ ವಿಜಯಣ್ಣಗಳು ದ್ವಾದಶಾನುಪ್ರೇಕ್ಷೆಗಳಂ ಕನ್ನಡದಿಂ ಸಂಗೀತಮಾಗಿ ಕನ್ನಡ ವೃತ್ತ ವಚನದಿಂ ಮಾಡಿ ಆನೆಯ ಮೇಲೆ ಪ್ರಭಾವನೆಯಂ ಮಾಡಿಸಲೀ ರತ್ನಾಕರಾರ್ಯಂ ಭರತೇಶ್ವರಚರಿತಂ ಈ ಎಂಭತ್ತು ನಾಲ್ಕು ಸಂಧಿಯಂ ಮಾಡಿ ಮಾತಂಗಮನೇರಿಸಿ ಮೆರೆಯಿಸಲೆಂಬುದು ಪಟ್ಟಾಚಾರ್ಯರೆಂದರಿದರೊಳೆರಡು ಮೂರು ವಾಕ್ಯಂ ಪುರಾಣಕ್ಕೆ ವಿರೋಧಮಿಪ್ಪುದದರಿಂದಾಗದೆಂಬುದುಮದೆ ಸಂವಾದಮಾಗೆ ಚರ್ಚಿಸಿದೊಡೆ ತನ್ನ ತಿರಸ್ಕರಿಸಿ ಏಳುನೂಱ ಶ್ರಾವಕರ ಗೃಹದೊಳು ಚರಿಗೆಯಂ ಮಾಡದಿರಲು ನಿಜಾನುಜೆಯಿಂದಾಹಾರಮಂಗೊಳ್ಳುತ್ತಾ ಕೋಪಮುದಯಿಸಿ ಆತ್ಮಜ್ಞಾನಿಗೆ ಜಾತಿಕುಲ ಮಾವುದಾದೊಡಂ ಸಮಮೆಂದು ಲಿಂಗಮಂ ಕಟ್ಟಿಕೊಂಡು ವೀರಶೈವ ಶಾಸ್ತ್ರಂಗಳು ಬಸವ ಪುರಾಣಂ ಮೊದಲಾಗೆ ಮಾಡಿ ಕೆಲವು ದಿನದಿಂ ಮೇಲೆ ಉಪಶಮಮಂ ತಾಳ್ದು ಸನ್ಮಾರ್ಗದೊಳು ನಂಬಿ ನಡೆದಾರಾತನಿಂ ರತ್ನಾಕರ ಶತಕಂ ಅಪರಾಜಿತ ಶತಕಂ ತ್ರಿಲೋಕ ಶತಕಂ ಅಧ್ಯಾತ್ಮಗೀತಂಗಳು ಎರಡು ಸಾವಿರ ಗ್ರಂಥದಷ್ಟು ಪೇಳಿದ ಶಕವರುಷ ೧೪೭೯ ಸಂದಿರ್ದುದೆಂದು ಪೇಳಿ ಮತ್ತಂ ಕಲ್ಲಹಳ್ಳಿಯ ವಿಜಯಭೂಪಾಲ ಸಚಿವಾಗ್ರಗಣ್ಯ ಸುಪುತ್ರ ಮಂಗರಸನೆಂಬಂ ತದಗ್ರಜಂ ನಂಜುಂಡರಸೆಂದಿರಲಾ ಕಾಲದೊಳೆ ಗಂಗನೆಂಬಂ ಕುಮ್ಮಟದ ಬೇಡರಸಂ ರಾಮನ ಸಂಗೀತಮೆಂದು ಕೃತಿಯಂ ಮಾಡಿ ಓದುತ್ತಿಪ್ಪುದು ನಿಜಗಣಿಕೆಯಿಂ ಕೇಳಿ ಆತಂ ಲಿಂಗಧಾರಿಯಾಗಿ ವೀರಶೈವಾಚಾರಿಯಾಗಿರ್ದುದರಿಂದಾ ರಾಮನ ಸಂಗೀತಮಂ ವಿಶಾಲವಾಗಿ ಮಾಡಲೆಂದು ತೊಡಗಿ ತನ್ನ ತಮ್ಮನಪ್ಪ ಮಂಗರಸಂ ಜಿನಭಕ್ತಂಗರಿಪೆಯದಂ ತೊಡಗಿ ಮೂವತ್ತೆರಡು ಸಂಧಿಯಂ ಮಿಥ್ಯಾಮಾರ್ಗವಿಡಿದು ಕರ್ಣಾಟಕ ಭಾಷೆಯಿಂ ಶೃಂಗಾರರಸಂ ಪೂರಿತಮಾಗೆ ಕಿರಾತನ ಶುಚಿಯಂ ವರ್ಣಿಸಿ ಕೃತಿಯಂ ಮಾಡಿ ಜನಮಂ ಮೆಚ್ಚಿಸಲದಕ್ಕೆ ಮಂಗರಸನ ಗುರುಗಳು ನೀಂ ರಚಿಸಿದ ಮಿಥ್ಯಾ ಕಥೆಯಿಂ ಪಾಪಸಂಪಾದನೆಯಾಗಿ ಕೆಟ್ಟುಪೋಪೆ ಎನಲದರ ಪ್ರಾಯಶ್ಚಿತ್ತಕ್ಕೆ ಹರಿವಂಶಮಂ ಪ್ರಭಂಜನಕಥೆಯಂ ಶ್ರೀಪಾಲಚರಿತೆಯಂ ಜಯಕುಮಾರಪರಿವರ್ಧಿನೀಷಟ್ಪದಿಯಂ ಸಮ್ಯಕ್ತ್ವಕೌಮುದೀಷಟ್ಟದಿ ಎಂಬೀ ಪಂಚಕಾವ್ಯಮಂ ಸಂಸ್ಕೃತ ವಸ್ತುಕಂಗಳಂ ತೆಗೆದು ಕನ್ನಡದಿ ಪಂಚಕೃತಿಯಂ ಮಾಡಿಸಿದನ್ ಅದರೊಳೆ ಸ್ಯಾದ್ವಾದಮಾರ್ಗವಿಡಿದ ಹರಿವಂಶಮಂ ತಂದು ಮುಕ್ಕಾಲುವರಿಗೆ ಓದಿಸಿ ಕೇಳಿ ತೆರಕಣಾಂಬಿ ನೇಮಿಚಂದ್ರಾರ್ಯರ ಮೊಮ್ಮಗನಪ್ಪ ಬೊಮ್ಮರಸಂ ಪೇಳಿದ ಸನತ್ಕುಮಾರ ಷಟ್ಟದಿಯಂ ಪಿರಿಯಾಪಟ್ಟಣದ ದೊಡ್ಡಯ್ಯಂ ಪೇಳ್ದ ಚಂದ್ರಪ್ರಭಚರಿತೆ ಮೊದಲಾಗೆ ಕೇಳ್ದು ಜೈನಮತಂ ದೊಡ್ಡದೆಂದು ಪ್ರಶಂಸೆಗೆಯ್ದರ್.

ಇವರಾಳಿದ್ದ ೧೮ ವರುಷದವರಿಗು ನಡೆದುಬರುವಲ್ಲಿ ಪರಚಕ್ರಮಾಗೆ ಕೆಲಕೆಲವು ದಿವಸ ರಾಜಿಕದೈವಿಕದಿಂ ಪ್ರಜೆಗಳ್ಗೆ ಉಪದ್ರಂಗಳು ಕ್ಷಾಮಂಗಳು ಹಗಲುಗತ್ತಲೆ ಉತ್ಪಾತಂಗಳು ಕಾಣುತ್ತಿರ್ದು ಮತ್ತೆ ರಾಜಬಡೆಯರ ಮೊಮ್ಮಗರಪ್ಪ ಇಮ್ಮಡಿ ರಾಜ ಒಡೆಯರು ಆಳಿದ್ದು ಒಂದೂವರೆವರ್ಷ. ಬಳಿಕ ಕಂಠೀರವ ನರಸರಾಜೊಡೆಯರು ದೊಡ್ಡ ದೇವರಾಜರು ಸಹಿತ ಹದಿಮೂರು ವರುಷದವರೆಗೆ ಆಳುವಲ್ಲಿ ಉಮ್ಮತ್ತೂರ ಜೈನಬ್ರಾಹ್ಮಣಂಗೆ ಸೂರಯ್ಯನೆಂಬ ಮಗನಾಗಿ ಅತಿಪ್ರಚಂಡನಾಗಿ ಪಂಚಮ ವರುಷದೊಳಕ್ಷರಾಭ್ಯಾಸಮಂ ಮಾಳ್ಪುದುಂ ಓದು ಬರಹಮಂ ಬಿಟ್ಟು ಹೆಳ್ಳೆಸೆಂಡು ಬುಗರಿ ಗೋಲಿ ಮೊದಲಾದವನಡುತ್ತ ತಂದೆಯಾಜ್ಞೆಯಂ ಮೀರಿ ನಡೆಯುತ್ತಿರಿ

ಶ್ಲೋಕ || ಲಾಲನದ್ಬಹವೋ ದೋಷಾಸ್ತಾಡನಾದ್ಬಹವೋ ಗುಣಾಃ
ತಸ್ಮಾತ್ಪುಂತ್ರಂ ಚ ಶಿಷ್ಯಂ ಚ ತಾಡಯೇನ್ನ ಚ ಲಾಲಯೇತ್ ||

ಎಂದು ಹಿಡಿದು ದಂಡಿಸಿ ಧೂಳಕ್ಷರಮಂ ಬರೆಯಿಸುತ್ತಾವ ಒತ್ತಂ ಕೊಟ್ಟು ಓದೆಂಬುದುಂ ಭದ್ರವಾಗಿ ಅಳ್ಳಾಡದಂದು ಕೊಟ್ಟೇನೆಂದುಂ ಕಲ್ಲು ಮೊದಲಾದವರಿಂದೊತ್ತನಿಕ್ಕುತಿಪ್ಪುದುಂ ಸ್ವರ ವ್ಯಂಜನಾಕ್ಷರ ಕೂಟಮಂ ದಿನ ಎಂಟರೊಳೆ ಕಲಿಸೆ ಮತ್ತೊಮ್ಮೆ ಹಿಡಿತಂದು ನಾಮಲಿಂಗಾನುಶಾಸನಮಂ ಪೇಳೆಂದು ಪುಸ್ತಕಮಂ ಕೊಟ್ಟು ಓದೆಂದೊಡೆ ಇದನೋದುವಂದವ ಸವಿಸ್ತರಂ ಪೇಳಲೋದುವೆನೆನೆ ಶ್ಲೋಕ ಪದ ಅರ್ಥ ಲಿಂಗ ಸಾಹಚರ್ಯ ರೂಪ ಭೇದ ವಿಶೇಷಣ ವಿಧಿ ಎಂದೀ ಪತ್ತು ಗ್ರಂಥಕ್ಕೆ ಕೇಳಿ ನಾಲ್ಕುವೇಳೆ ಪಠಿಯಿಸಿ ಪುಸ್ತಕಮಂ ಕಟ್ಟಿ ಪೋಗಿ ಬಾಲಕ್ರೀಡೆಯೊಳಾಟಮನಾಡುತಿರ್ಪುದುಂ.

ಶ್ಲೋಕ || ಆಲಸ್ಯಂ ಮಂದಬುದ್ಧಿಶ್ಚ ಸುಖೀ ಚ ವ್ಯಾಧಿಪೀಡಿತಃ
ನಿದ್ರಾಲುಃ ಕಾಮುಕಶ್ಚೈವ ಪಡೇತೇ ಶಾಸ್ತ್ರವರ್ಜಿತಾಃ ||

ಶಾಸ್ತ್ರಾಭ್ಯಾಸಿಗೆ ಬಾಹ್ಯಾಭ್ಯಂತರ ಪತ್ತು ಗುಣವಿದ್ದರೆ ಬಪ್ಪುದೆಂಬುದರಿಂದಲೂ ಮತ್ತಂ

ಶ್ಲೋಕ || ಯಃ ಪಠತಿ ಲಿಖತಿ ಪರಿಪೃಚ್ಛತಿ ಪಂಡಿತಾನುಪಾಸಯತಿ
ತಸ್ಯ ದಿವಾಕರಕಿರಣೈರ್ನಲಿನೀವ ವಿಸರ್ಪತೇ ಬುದ್ಧಿಃ ||

ಎಂದಾತನಂ ಕರೆದಂ ಓದು ಬರಹಮಂ ಬಿಟ್ಟು ಅಪ್ರಬುದ್ಧನಾಗಿ ಕೆಟ್ಟೆ ಎಂದಾಗ್ರಹದಿಂ ನುಡಿವುದುಂ ರಾತ್ರಿ ಕಂಬದ ಮೇಲೆ ದೀಪಮನಿಟ್ಟು ಪುಸ್ತಕಮಂ ಮೊದಲಿಂದಂ ಕಡೆವರಂ ತಾನುಂ ಈಕ್ಷಿಸುತ್ತ ಗ್ರಹಿಸಿ ಪುಸ್ತಕಮಂ ಕಟ್ಟುತ್ತಿರೆ ತಂದೆ ಕೋಪಿಸಿ ತ್ರಿಕಾಂಡಂ ಮುಗಿದು ಬಂದು ಮಗನಂ ಮೂದಲಿಸಿ ದೀಪಮಂ ತೆಗೆದ ಕಂಬಮಂ ನೋಡಲುಬಾರದು ಕೆಡಹಿ ಮಡಗುವುದೆನೆ ಬಾಲಕನೆಂದನಿಲ್ಲಿ ಭುಜಂಗೇಶ್ವರನ ಗುಡಿಯ ಮುಂದಣ ಕಂಬಂ ಎದ್ದು ಬಂದಾಗಲೆ ಕಾಣ್ಬುದದಂ ಕೆಡಹಿ ಬೆಳಗಾಗಲೆತ್ತುವರಾರುಮಿಲ್ಲದಂ ಕೆಡವಿ ಎತ್ತಿದೊಡೆ ನಾನುಂ ಅಂತೆ ಮಾಳ್ಪೆನೆಂದೊಡೆ ನೀನಿಂತಾಡಿಪೆ ನಿನಗೆ ನಾಮಲಿಂಗಾನುಶಾಸನಮಂ ಪ್ರಾರಂಭಿಸಿ ತಿಂಗಳ ಮೇಲಾಗಿ ಇದುವರೆಗಂ ಒಂದು ಶ್ಲೋಕವೂ ಬಾಯಿಗೆ ಬರಲಿಲ್ಲಾ ವಿದ್ಯಾವಾಗ್ಜಾಲಯಕ್ಷನಂ ಎಂಬುದು ನೀನು ಮೂಗರಂತೆ ನೋಡಿ ಪುಸ್ತಕಮಂ ಕಟ್ಟಿದ ಮಂದಮತಿಯೆನ್ನ ಮಗನೆಂಬ ಮಮಕಾರವಿಲ್ಲ ಮನೆಯೊಳಿರಲಾಗದೆಂದತ್ಯಾಗ್ರಹಂ ಮಾಡಿದೊಡೆ ಆದರೀ ಪುಸ್ತಕಮಂ ತಪ್ಪಂ ನೋಡಿಮೆಂದು ತಾತನ ಕೈಯೊಳ್ಕೊಟ್ಟು ತಾನುಂ ಸ್ವರ್ಗ ವರ್ಗ ಮೊದಲಾಗೆ ಸಂಕೀರ್ಣಾ ಲಿಂಗಾದಿ ಸಂಗ್ರಹಾಂತ್ಯಮಾಗೆ ಮೂರು ಕಾಂಡಮಪ್ಪಮರಗ್ರಂಥಮಂ ಬಿಂದು ವಿಸರ್ಗ ವ್ಯಂಜನ ಹ್ರಸ್ವ ದೀರ್ಘಪ್ಲುತ ನಾಸಿಕಾನುನಾಸಿಕಮುದಾತ್ತಾನುದಾತ್ತ ಸ್ವರಿತಪ್ರಚಯಾಲ್ಪ ಮಹಾ ಪ್ರಾಣ ಘೋಷಾಘೋಷ ಮೊದಲಾದವಂ ತಪ್ಪದಂತು ಸಂಪೂರ್ಣಮಾಗೆ ವಾಗ್ಧೋರಣೆಯಿಂ ಕಂಠಸ್ಥಿತಮಾಗೆ ಪಾಠಮಂ ಪೇಳೆ ಇನ್ನು ಮೇಲೆ ನಾನು ನಿನಗೊಂದಕ್ಕರಮಂ ಪೇಳ್ವುದಿಲ್ಲೆಂದು ತಂದೆಯು ಪ್ರತಿಜ್ಞೆಯಂ ಮಾಡಿದೊಡಾ ಸೂರಿಯು ಭಲ್ಲಾತಕೀಪುರಮನೆಯ್ದಿ ಬಂಧುಗಳ ಮನೆಯೊಳಿರ್ದು ವಿದ್ಯಾಭ್ಯಾಸಂ ಮಾಡುತ್ತಿರಲಲ್ಲಿ ರಾಜಂ ಕರೆಯಿಸಿ ಪೂರ್ವ ಭೈರಾದೇವಿಯರು ನಿಮ್ಮ ವಂಶದೊಳು ಚಿಕಿತ್ಸಾರಸಂಗಳನನೇಕಂ ಮಾಡಿಸಿದರದರಿಂ ನೀಮುಂ ವೈದ್ಯಶಾಸ್ತ್ರಮಂ ಕಲ್ವುದೆನೆ ತಾನುಂ ವೈದ್ಯದಿಂ ಫಲಮಲ್ಲದೆ ನಿಷ್ಫಲವಾಗದು ಕೆಲವೆಡೆಯೊಳು ಲಾಭಂ ಸ್ನೇಹಂ ಪೂಜ್ಯಂ ಕೀರ್ತಿಮಭ್ಯಾಸಾದಿ ಫಲಂಗಳಿಂ ಧರ್ಮಮಾಗೆ ಉಭಯ ಲೋಕಹಿತಮೆಂದಾ ಚಿಕಿತ್ಸಾಶಾಸ್ತ್ರಂಗಳು

ಶ್ಲೋಕ || ರಸಾರ್ಣವಂ ಬಾಹಟಂ ಚ ಪಾರಿಜಾತಂ ಚ ಕೌಮುದೀ
ನಾಗಾರ್ಜುನಂ ಚ ಕಾಪಾಲಂ ದಾಮೋದರಮತಂ ತಥಾ ||

            ರಸಹೃತ್ಸಿದ್ಧಸಾರಂ ಚ ಸೂತಸಾರಂ ಚ ಟಂಕಣಂ
ಗೋಪಾಲಿಂ ಇಂದುನಾಥಂ ಚ ಗುಣಚಿಂತಾಮಣಿಸ್ತಥಾ ||

ಶಾರೀರಂ ವೀರಭದ್ರೀಯಂ ವೈದ್ಯದೀಪಕಮೇವ ಚ
ಸೋಮನಾಥಮಹಾಶಾಸ್ತ್ರಂ ನಂದಿನಾಥಂ ಚಿಕಿತ್ಸಕಮ್ ||

ರಸಂ ಚ ಜೀವನೋಪಾಯಮಹಿತಾಸಾರಮೇವ ಚ
ಇನರತ್ನಾವಲೀಸಾರಂ ಯಮಲಂ ರಸದರ್ಪಣಮ್ ||

ಇಂದ್ರಸೇನಂ ಚ ಚರಕಂ ಸುಶ್ರುತಾನಿ ಸರಾನಿ ಚ
ಹಿತೋಪದೇಶವ್ಯಾಧಿಘ್ನಂ ರುಜಾನಾಶನದೀಪಿಕಾ ||

ನಿತ್ಯಾರೋಗ್ಯಂ ಚ ನಿರುಜಂ ನಿರ್ವ್ಯಾಧೀರ್ಭೇಷಜಾರ್ಣವಮ್
ಇತ್ಯಾದಯೋ ವೈದ್ಯಶಾಸ್ತ್ರೇಷ್ಟಧೀತ್ಯ ಭೀಷಗುತ್ತಮಮ್ ||

ಇಂತಲ್ಲದೆ ಪೂರ್ವದೊಳು ಪಶುಪತಿ ಬೃಹಸ್ಪತಿ ನಾತನು ಅಗ್ನಿವೇಶ್ಯ ಹಸ್ತಚಾರಿ ವಾಗ್ಬಲಿ ರಾಜಪುತ್ರ ಗಾರ್ಗ್ಯ ಭಾರ್ಗವ ಭಾರದ್ವಾಜ ಪಾಲಕ ಅತಿವಿಶಾಲ ಕೌಶಿಕಪುತ್ರ ವೈದರ್ಭ್ಯ ನರನಾರಕ ಕುಂಭದತ್ತ ವಿಭಾಂಡಕ ಹಿರಣ್ಯಾಕ್ಷ ಪಾರಾಶರ ಕೌಂಡಿನ್ಯ ಕಾಂಡಾಯಿನ ತೈತ್ತಿರ ತೈತಿಲ್ಯ ಮಾಂಡವ್ಯ ಶಿಬಿ ಶೀಬಾ ಬಹುಪುತ್ರ ಅರಿಮೇಧ ಕಾಶ್ಯಪ ಯಾಜ್ಞವಲ್ಕ್ಯ ಮೃದಶರ್ಮ ಶಾಖಾಯಿನ ಬ್ರಹ್ಮ ಪ್ರಜಾಪತ್ಯ ಅಶ್ವಿನಿ ಸುರೇಂದ್ರ ಧನ್ವಂತರಿ ಎಂದಿವರ್ ಮೊದಲಾಗೆ ಪೇಳ್ದ ವೈದ್ಯಶಾಸ್ತ್ರಂಗಳೊಳ್ ಮತಿನಿಂದ್ಯವಪ್ಪ ಅಭಕ್ಷ್ಯಂಗಳಂ ಯೋಚಿಸಿಪ್ಪುದರಿಂದತಿ ಪಾಪಹೇತುವಪ್ಪುದರಿಂ ದ್ರವ್ಯಾಪೇಕ್ಷೆಯಿಂದ ಪಾತ್ರ ಕುಪಾತ್ರಂಗಳ್ಗೆ ಕೊಟ್ಟು ನರಕಾದಿ ದುರ್ಗತಿಯಂ ಪಡೆವರದರಿಂ ಧರ್ಮಶಾಸ್ತ್ರದೊಳ್ ವೈದ್ಯ ಜೋತಿಷಂಗಳಂ ವರ್ಜಿಸುವರ್

ಶ್ಲೋಕ || ವೈದ್ಯಜ್ಯೋತಿಷವಾದಾದ್ಯೈರ್ನ್ನಾರಕತ್ವಮವಾಪ್ನುಯಾತ್
ವೈದ್ಯರಾಜ ನಮಸ್ತುಭ್ಯಂ ಯಮಜ್ಯೇಷ್ಠ ಸಹೋದರಾ ||

ಜಾತಿಗಾಥಾ || ಯಮಸ್ತು ಹರತೇ ಪ್ರಾಣಾನ್ ಧನಪ್ರಾಣಹರೋ ಭಿಷಕ್
ಯಮಃಕ್ರೂರೋ ಭಿಷಕ್ಕ್ರೂರೋ ಯಮಾತ್ಕ್ರೂರತರೋ ಭಿಷಕ್
ಯಮಸ್ತು ಹರತೇ ಪ್ರಾಣಾನ್ ವೈದ್ಯಸ್ತುಸವಸೂನಸೂನ್ ||

ಅದರಿಂ ವೈದ್ಯರು ನಿಃಕರುಣದಿ ಮಧುಮದ್ಯಮಾಂಸಾದಿ ಅಭಕ್ಷ್ಯಂಗಳಂ ಪೇಳ್ದೊಡಾಪ್ತರಲ್ಲದಾಗಮಮಲ್ಲಮೆಂದು

ಶ್ಲೋಕ || ಆಗಮೋಹ್ಯಾಪ್ತವಚನಂ ಆಪ್ತಂ ದೋಷಕ್ಷಯಂ ವಿದುಃ
ಕ್ಷೀಣದೋಷಾನೃತಂ ವಾಕ್ಯಂ ನ ಬ್ರೂಯಾದಿತ್ಯಸಂಭವಾನ್ ||

ಜ್ಞಾನಮಪ್ರತಿಹತಂ ತಸ್ಯ ವೈತಾನ್ಯಂ ಚ ಜಗತ್ಪತೇಃ
ಪದೈಶ್ವರ್ಯಂ ಧರ್ಮಶ್ಚ ಸಹಿಸಿದ್ಧಂ ಚತುಷ್ಟಯಮ್ ||

ಅದರಿಂ ದ್ರವ್ಯರಸವೀರ್ಯ ವಿಪಾತ್ಮಾಕ ವಸ್ತು ಸ್ವರೂಪಕ ನಿರೂಪಣ ಸ್ಯಾದ್ವಾದ ವಾದಮಾಶ್ರಯ ಸರ್ವ ಜೀವದಯಾಪರ ಸರ್ವಜ್ಞ ಜಿನೇಂದ್ರಪ್ರಣಿತ ವಿವಕ್ಷಿತಾಧಿಕ ಕ್ಷೀರ ಸ್ವರೂಪಾನೇಕ ಧರ್ಮಾಧಿಷ್ಠಾನೈಕವಸ್ತು ತತ್ತ್ವ ಪ್ರತಿಪಾದನ ಪರಪ್ರಾಣವಾಯು ಮಹಾಸಮುದ್ರಜನಿತ ಲಕ್ಷ್ಮಿಯಂಗೆ ಎಲ್ಲಾ ಲೋಕಹಿತ ನಿರವದ್ಯವೇದ್ಯಮೇ ಇಹಪರ ಲೋಕ ಹಿತಮಪ್ಪುದು

ಶ್ಲೋಕ || ಆಗಮೋಹ್ಯಾಪ್ತವಚನಂ ಆಪ್ತಂ ದೋಷಕ್ಷಯಂ ವಿದುಃ
ಕ್ಷೀಣದೋಷಾನೃತಂ ವಾಕ್ಯಂ ನ ಬ್ರೂಯಾದಿತ್ಯಸಂಭವಾನ್ ||

ಸ್ಥಾವರ ಜೀವವಧಾತ್ಪಾಪಂ ತ್ರಸಜೀವವಧಾದನಂತಗುಣ ಪಾಪಮಪ್ಪುದರಿಂ ಪಂಚೇಂದ್ರಿಯಮದೊಂದಕ್ಕನಂತಗುಣ ಪಾಪಸಂಪಾದನದೊಳೆ ಕೊಳ್ವುದರಿಂ ತ್ರಸವಧಾ ದೂಷಣಂ ಅದರಿಂ ನರಕಾದಿ ದುರ್ಗತಿ ಸಾಧನಮಪ್ಪುದರಿಂ ದುರ್ಮತ್ಯೇಕಾಂತವಾದಿಗಳು ರಚಿಸಿದ ವೈದ್ಯಶಾಸ್ತ್ರಮಂ ಬಿಟ್ಟು ಪ್ರಾಣಾವಾಯಮಹಾರ್ನವ ನಿರ್ಗತ ಸದ್ಧರ್ಮ ವೈದ್ಯ ಶಾಸ್‌ರಮಂ ಮೂಲಕರ್ತೃ ಉತ್ತರ ಕರ್ತೃ ಉತ್ತರೋತ್ತರ ಕರ್ತೃಗಳಾದ ಪೂರ್ವಾಚಾರ್ಯರ್ ಸರ್ವಭೂತಹಿತಾರ್ಧಿಗಳು ಪಾತ್ರಾಪಾತ್ರ ವಿವೇಕಜ್ಞರು ಕರ್ತವ್ಯಾಕರ್ತವ್ಯ ಚಿಕಿತ್ಸ ಶುದ್ಧಾಶುದ್ಧಾ ಯೋಗ್ಯಾಯೋಗ್ಯಾ ಭೋಗ್ಯಾಬೋಗ್ಯ ಭಕ್ಷ್ಯಾಭಕ್ಷ್ಯ ಪೇಯಾಪೇಯ ಗಮ್ಯಾಗಮ್ಯ ಮೊದಲಾದ ಲೋಕವ್ಯಾಪಾರಮನರಿವ ಶ್ರೀ ಸುಧರ್ಮ ಜಂಬೂ ವಿಷ್ಣು ನಂದಿಮಿತ್ರ ಭದ್ರಬಾಹು ವೀರಸೇನ ಜಿನಸೇನ ಕುಂದಕುಂದ ಪೂಜ್ಯಪಾದ ವೀರನಂದಿಷೇಣ ಇಂದ್ರನಂದಿ ಸಮಂತಭದ್ರ ಜಿನಚಂದ್ರ ಪ್ರಭಾಚಂದ್ರ ಶ್ರೀಧರ ಯಶೋಧರ ಕಲ್ಯಾಣಕೀರ್ತಿ ಕನಕಸೇನ ಉಗ್ರಾದಿತ್ಯಾಚಾರ್ಯರ್ ಮೊದಲಾದನೇಕ ಮಹಾ ಆಚಾರ್ಯೋಕ್ತ ಚಿಕಿತ್ಸಾರ್ಣವ ದೇಹಾಮೃತಭಿಷಜೋಕ್ತ ವೈದ್ಯಾರ್ಣವ ಕಲ್ಯಾಣಕಾರಕರ್ ಮೊದಲಾದ ವೈದ್ಯಶಾಸ್ತ್ರಂಗಳೊಳು ಶುದ್ಧಾಶುದ್ಧಾದಿಗಳು ಪೇಳ್ವುದರಿಂದದನರಿದು ಮಾಳ್ಪುದು. ಅದಲ್ಲದೆ

ಜಾತಿಗಾಥಾ || ನಾಮ್ನಾನಾರೀತಿ ಸಾಮಾನ್ಯಂ ಭಗಿನೀ ಭಾರ್ಯಯೋರಿಹ
ಏಕಾ ಸೇವ್ಯಾ ನ ಸೇವ್ಯೈಕಾ ತಥಾ ಚೋದನಮಾಂಸಯೋಃ
ಸತ್ಯ ಧರ್ಮ ಪರೋ ವೈದ್ಯ ಸತ್ಕಾರ್ಯೇ ತದ್ವಿಧೇ ಷು ಚ ||

ಎಂಬುದರಿಂ ತ್ರಸಜೀವಘಾತಮಂ ಬಿಟ್ಟು ಸ್ಥಾವರಂಗಳೊಳು ಸೇವಾಸೇವ್ಯಮಾನವರಿದು ಪಾಪಕಂಜುವಂ ಪ್ರಯೋಗಿಸುವೆ. ಅಲ್ಲಿ ಧರ್ಮಾಧರ್ಮವಿಕಲ್ಪಂ ನಾಲ್ಕು ವಿಧಮಪ್ಪುದು.

ಶ್ಲೋಕ || ಪಾಪಂ ಧರ್ಮನಿಮಿತ್ತಂ ಧರ್ಮಂ ಪಾಪನಿಮಿತ್ತಂ
ಧರ್ಮಂ ಧರ್ಮನಿಮಿತ್ತಂ ಪಾಪಂ ಪಾಪನಿಮಿತ್ತಂ ||

ಎಂಬ ಅನ್ಯೋನ್ಯ ಸಂಬಂಧಂಗಳಪ್ಪುದರಿಂ ಓಷಧಿಗಳಪ್ಪ ತ್ರಸವರ್ಜಿತ ದ್ರವ್ಯಂಗಳಿಂ ಚಿಕಿತ್ಸೆಯಂ ಪಾತ್ರವರಿತು ಮಾಳ್ಪುದು.

ಪಾಪಂ ಧರ್ಮಾಭಿವೃದ್ಧಯೇ ಸಾವಧ್ಯಲೇಶೋ ಬಹುಪುಣ್ಯರಾಶೌ ಅದರಿಂದಲ್ಪ ಪಾಪಂ ಮಹತ್ಪುಣ್ಯ ಸಂಪಾದಕಮಪ್ಪುದರಿಂ ಸದ್ಭಾವನೆಯಂ ಕರುಣದಿಂ ಪ್ರಾಣಿಗಳೊಳು ದಯನಾಗಿ ತೃಣ ಗುಲ್ಮಲತಾ ವೃಕ್ಷಾದಶೇಷ ಸ್ಥಾವರಂಗಳಂ ತರುವಲ್ಲಿ ಪ್ರಮಾದಾ ಜ್ಞಾನ ದರ್ಪದಿಂ ದ್ವೀಂದ್ರಿಯಾದಿ ತ್ರಸಘಾತಂ ಬಂದೊಡಂ ಪ್ರಾಯಶ್ಚಿತ್ತಗೊಂಬುದೆಂತೆಂದೊಡೆ

ಶ್ಲೋಕ || ಪ್ರಾಯ ಇತ್ಯುಚ್ಯತೇ ಲೋಕಶ್ಚಿತ್ತಂ ತಸ್ಯ ಮನೋ ಭವೇತ್
ತಚ್ಚಿತ್ತಂ ಗ್ರಾಹಕಂ ಕರ್ಮ ಪ್ರಾಯಶ್ಚಿತ್ತಮಿತಿ ಸ್ಮೃತಮ್ ||

ಅನುತಾಪೇನ ವಿಖ್ಯಾಜ್ಯಾದ್ಧಿ ತಮಾದೃತಚರ್ಯಯೋಃ
ಪಾದಮರ್ಧತ್ರಯಂ ಸರ್ವಮಪಹನ್ಯಾದಿತಿಸ್ಮೃತಮ್ ||

ಏಕಭುಕ್ತಂ ತಥಾ ನಕ್ತಂ ತಥಾಪ್ಯಯಾಚಿತೇನ ಚ
ಏಕರಾತ್ರೋಪವಾಸಶ್ಚ ಪಾದಕೃಚ್ಛ್ರಂ ಪ್ರಕೀರ್ತಿತಮ್ ||
ಪ್ರಶಾಮ್ಯಂತ್ಯಲ್ಪಪಾಪಾನಿತ್ಯೇವಂ ಸಿದ್ಧಾಂತವಾಕ್ಯತಃ

ಇಂತೆಂಬುದರಿಂದ ಸಾಧುಗಳು ಸ್ಥಾವರಂ ಜಂಗಮಮೆಂಬೆರಡು ದ್ರವ್ಯಂಗಳೊಳು ಸಾಧ್ಯಸಾಧನರಕ್ಷ್ಯರಕ್ಷಣಭಕ್ಷ್ಯಭಕ್ಷಣತಾದಿ ದ್ವಿವಿಕಲಾತ್ಮಕದಿಂದಾ ಎರಡರೊಳು ದೇಹ ಪರಿರಕ್ಷಣಾರ್ಥಂ ಸ್ಥಾವರದ್ರವ್ಯಂಗಳಂ ಚಿಕಿತ್ಸೆಯೊಳು ಗ್ರಹಿಸಲು ಯೋಗ್ಯಂಗಳು ಜಂಗಮದೊಳು ಕ್ಷೀರ ಘೃತ ದಧಿ ತಕ್ರಪ್ರಭೃತಿಗಳು ಕೊಳಲ್ಪಡುಗುಂ.

ವೃತ್ತ || ಮಾಂ ಸಂತೋ ದಧಿಹಾಹೃತೀರ್ಣ ಭವತಿ ಪ್ರತ್ಯಾತ ಸದ್ಭೇಷಜಂ (?)
ನೈವಾತ್ಯುಕ್ತಮಸದ್ರಸಾಯನಮಪಿ ಪ್ರೋಕ್ತಂ ಕಥಂ ಬಾಹ್ಮಣಾಃ
ಸರ್ವಜ್ಞೇನ ದಯಾಲುನಾ ತನುಭೃತಾಮತ್ಯರ್ಥಮೇತತ್ಕೃತಂ
ತ್ಯಕ್ತ್ವಾ ತನ್ಮಧುಮಧ್ಯಮಾಂಸಸಹಿತಂ ಪಶ್ಚಾತ್ಕೃತಂ ಲಂಪಟೈಃ ||

ಎಂದು ವೈದ್ಯಶಾಸ್ತ್ರಂಗಳೆಲ್ಲಮಂ ಲಲಿತಕೀರ್ತಿಭಟ್ಟಾರಕರಿಂ ಕೇಳ್ದವರೊಳು ಪೂಜ್ಯ ಪಾದಕೃತ ಕಲ್ಯಾಣಕಲ್ಪಮಂ ಕಲ್ಯಾಣಕೀರ್ತಿಮುನಿಕಾರಿತ ಉಗ್ರಾದಿತ್ಯಾಚಾರ್ಯವಿರಚಿತ ಕಲ್ಯಾಣಕಾರಕಮಂ ಚೆನ್ನಾಗಭ್ಯಾಸಂಗೆಯ್ದಾ ಸೂರಿಪಂಡಿತಂ ಸಕಲ ವೈದ್ಯ ಶಾಸ್ತ್ರಂಗಳನವಳೋಕಿಸಿ

ಶ್ಲೋಕ || ಬಾಹಟಂ ಕೋಹಟಂ ಚೈವ ಚರಕಂ ನರಕಂ ತಥಾ
ಸಿದ್ಧಾ ಸಾರಮಸಾರಂ ಚ ಸಾರಂ ಕಲ್ಯಾಣಕಾರಕಮ್ ||

ಎಂಬುದರಿಂದವರೊಳು ದೇಶಂಗಳಂ ದೋಷಂಗಳಂ ತಿಳಿದು ಮತ್ತಂ ವಯಸ್ಸು ಸತ್ವಮಗ್ನಿ ಶರೀರಪ್ರಕೃತಿ ಮೊದಲಾಗಿ ಕಾಲಾಚರಿತ ರಸನಾಡಿಕಾ ದಾನ ಚಿಕಿತ್ಸಾದೂತ ಶಕುನ ನಿಮಿತ್ತ ಯಂತ್ರ ಮಂತ್ರ ತಂತ್ರಾದಿಗಳನರಿದು ನಿರವದ್ಯ ವೈದ್ಯಸಂಪ್ರದಾಯ ಕೌಶಲ್ಯ ಸುಶೀಲ ನೈರಾಸ್ಯ ನಿರೋಗತಾದಿ ಗುಣದಿ ಸಿದ್ಧಪ್ರಮಾದಿಗಳಂ ಬಿಟ್ಟು ಅಮೃತ ದಂತಮೋಘ ಫಲದಾಯಿಯಪ್ಪ ಭೇಷಜಕ್ರಿಯಾ ಪ್ರಸಿದ್ಧಮಾಗಿ ಪ್ರವಚನದೊಳ್ಪೇಳ್ದ ಐದು ಕೋಟಿಯುಂ ಅರುವತ್ತೆಂಟು ಲಕ್ಷದ ತೊಂಬತ್ತೊಂಬತ್ತು ಸಾವಿರದೈನೂರೆಂಬತ್ತು ನಾಲ್ಕು ಭೇದಮುಳ್ಳ ನಾನಾ ರೋಗಪ್ರಶಮನಮಂ ಮಾಳ್ಪ ಚಿಕಿತ್ಸಕನಪ್ಪನೆಂದಾ ಸೂರಿಯು ವೈದ್ಯಶಾಸ್ತ್ರಮನೊಳ್ಳಿತ್ತಾಗಿ ಕಲ್ತು

ಶ್ಲೋಕ || ಅವ್ಯಾಕರಣಶ್ರವಣಂ ಭಿನ್ನದ್ರೋಣಿತರಂಗಿಣೀಕರಣಮ್
ಔಷಧಮಪಥ್ಯಕರಣಂ ತ್ರಯಮಪಿ ಕರಣಂ ವೃಥಾಕರಣಮ್ ||

ಅದಲ್ಲದೆ

ಗೀತಿ || ವೈಯಾಕರಣಕಿರಾತಾ | ದಪಶಬ್ದ ಮೃಗಾಃಕ್ವ ಯಾಂತಿ ಸಂತ್ರಸ್ತಾಃ
ನಟವಿಟಗಣಿಕಜ್ಯೋತಿಷ | ಭಿಷಗಾನನಗಹ್ವರಾಣಿಯದಿ ನ ಸ್ಯುಃ ||

ಎಂಬುದರಿಂ ಶಬ್ದಾಗಮಮನೋದಲೆಂದಲ್ಲಿರ್ದ ಪಟ್ಟಾಚಾರ್ಯರ ಬಳಿಯೊಳೆ ಸರ್ವ ವರ್ಮಣಾಚಾರ್ಯ ಶಾಬ್ದಿಕಾಗ್ರಗಣ್ಯ ವಿಶ್ವತಾರ್ಕಿಕ ಚಕ್ರವರ್ತಿ ಚೂಡಾಮಣಿಗಳಿಂ ರಚಿಸಲ್ಪಟ್ಟ ಸೂತ್ರಕೃತರವರ್ ವಿಶುದ್ಧ್ಯಾದಿ ಗಣನಾತೀತ ಗುಣಗಣಾಭರಣ ಶ್ರೀಮದ್ಭಾವಸೇನ ತ್ರೈವಿದ್ಯಚಕ್ರಿ ವಾದಿಪರ್ವತವಜ್ರದಂತ ವಾಕ್‌ಪ್ರಚುರತೆಯುಳ್ಳರಿಂ ಸಾರ್ವವರ್ಮಿಯ ಸೂತ್ರಕ್ಕಂ ಬಾಲಬೋಧಾರ್ಥವಾಗಿ ಕಾತಂತ್ರರೂಪಮಾಲಾಶಬ್ದಶಾಸ್ತ್ರ ಪುರಾಸಂಜ್ಞಾ ಸಂಧಿನಾಮ ಸ್ತ್ರೀಪ್ರತ್ಯಯ ಕಾರಕ ಸಮಾಸ ತದ್ದಿತಾಖ್ಯಾತ ಕೃದಂತಮೆಂಬ ನವ ಸಂಗ್ರಹಮಂ ಚೆನ್ನಾಗಿ ಕಲ್ತು ಶಾಕಟಾಯನದೊಳ್ ಪ್ರಕ್ರಿಯಾ ಸಂಗ್ರಹಮಂ ಸಂಪೂರ್ಣವಾಗಿ ಓದಿ ತಿಳಿದು ರತ್ನಮಂಜೂಷೆ ವೃತ್ತರತ್ನಾಕರಮೆಂಬ ಛಂದದೊಳಿಪ್ಪತ್ತಾರು ಉಕ್ತಾದಿ ಛಂದದ ದ್ವಿಗುಣ ದ್ವಿಗುಣಮಾದ ಪನ್ನೆರಡು ಕೋಟಿಯ ನಾಲ್ವತ್ತೆರಡು ಲಕ್ಷವು ಹದಿನೇಳು ಸಾವಿರದೇಳುನೂರಿಪ್ಪತ್ತಾರು ಸಮ ವೃತ್ತಂಗಳಂ ಮತ್ತಂ ಅನೇಕಮಾದ ವಿಷಮವೃತ್ತ ಗದ್ಯ ಪದ್ಯ ಚಂಪು ಮೊದಲಾದ ನಾನಾ ಪ್ರಕಾರಮನರಿದು

ಶ್ಲೋಕ || ಕ್ವಚಿದೇವಾಮರೀಭಾಷಾ ಚಾಮರೀವ ವನಾಂತರೇ
ಇಯಂ ತು ಪಾಮರೀ ಭಾಷಾ ಸೂಕರೀವ ಗೃಹೇ ಗೃಹೇ ||

ಎಂದು ಸಂಸ್ಕೃತ ಭಾಷಾಮಂಜರಿ ಮೊದಲಾಗರಿದು ಮತ್ತಂ

ಶ್ಲೋಕ || ಸಂಗೀತಸಾಹಿತ್ಯಮಿತಿದ್ವಯಾಯಾಃ ಕರ್ಣದ್ವಯೇ ನಿರ್ಮಿತಮಬ್ಜಧಾಮಾ
ಏಕಸ್ಯ ಹೀನಸ್ಯ ತು ಕರ್ಣಹೀನೋ ದ್ವಾಭ್ಯಾಂ ವಿಹೀನೋ ಬಧಿರಸ್ಸ ಏವ ||

ಎಂದು ಭರತಶಾಸ್ತ್ರಮನೋದಿ ತಾಳನಿರ್ಣಯಮನರಿದನದೆಂತೆನೆ

ಶ್ಲೋಕ || ಕಾಲೋ ಮಾರ್ಗ ಕ್ರಿರ್ಯಾನ್ನಾನಿ ಗ್ರಹೋ ಜಾತಿಕಲಾಲಯಃ
ಯತಿ ಪ್ರಸ್ಥಾದಕಾಶ್ಚೇತಿ ತಾಳ ಪ್ರಾಣಾಃ ದಶ ಸ್ಮೃತಾಃ ||

ಎಂದಿವರ ಪ್ರಪಂಚಮಂ ತಿಳಿದು ಪಂಚಮಹಾವಾದ್ಯ ಪ್ರಭೇದಂಗಳನರಿದು ಸುಕವಿತಾಯದ್ಯಸ್ತಿ ರಾಜ್ಯೇನ ಕಿಂ ಎಂದು ಕವಿತ್ವಮಂ ಮಾಡಲುದ್ಯೋಗಿಸಿ

ಶ್ಲೋಕ || ಕವಿತಾ ವನಿತಾ ವಿತ್ತಂ ಸ್ವಯಮೇವ ವಶೀಕೃತಾ
ಬಲಾತ್ಕಾರೇಣ ಗೃಹ್ಣೀಯಾತ್ಸರಸಾ ವಿರಸಾ ಭವೇತ್‌ ||

ಸರಸಕವಿತ್ವಮುಳ್ಳುದರಿಂ ಕವಿಸೂರಿ ಎಂಬನ್ವರ್ಥಮಾಗೆ ಸ್ವದೇಶಮನೆಯ್ದಿ ತನ್ನ ಕನಕಪುರದೊಳು ವರ್ಧಮಾನಸ್ವಾಮಿ ಚೈತ್ಯಾಲಯಮನುದ್ಧರಂ ಮಾಡಿ ಗೋಪುರ ಬಾಗಿಲಂ ನಿರ್ಮಿಸಿ ಸ್ಥಳದೊಳೆ ನಿಂತು ಪ್ರತಿಪುರುಷಾಃ ಭಿನ್ನಬುದ್ಧಯಃ ಎಂಬುದರಿಂ ವ್ಯಂಗ್ಯಂಗಳಂಬಿಡದೆ ಜನಂಗಳೆಲ್ಲ ಹೊಯ್ದ ಕೈ ಚಪ್ಪಾಳೆ ಕಳೆಯುತ್ತಂ ಹಾಸ್ಯಂ ಮಾಡುತ್ತಿಪ್ಪುದುಂ ವಿದ್ವೇಷಿಗಳು ಹುರಿಕಾತಿಗೆ ಹರಸಿ ಆತನಂ ಕೊಲಲ್ ಬಗೆದೊಡೆ ಕೈಕಾಲಂ ಸೇದಿಸಿದೊಡದನರಿದಸ್ತಮಯದಾಗಳಾ ಗುಡಿಗೆ ಮೆಲ್ಲನೆ ತೆವೆಯುತ್ತಾ ರಾತ್ರಿಯೊಳೆ ಬಾಗಿಲಂ ತೆಗೆದೊಳಗೆ ಪೊಕ್ಕಾ ದೇವರ ಬಳಿಯೊಳು ವಿಷ್ಟಿಸಿದೊಡಾಗಳೆ ಕೈಕಾಲು ಬಂದೊಡಂ ಮನೆಗೆ ಬರಲಾ ದೇವಿಯು ತಮ್ಮಡಿಯಂ ಜೋಯಿಸಸೂರಿ ವುಹುಹೂ ಎಂದು ಆ ರಾತ್ರಿಯಲ್ಲಿ ಉಪದ್ರಂ ಮಾಡಿದೊಡೆ ಬೆಳಗಾದಾಗಲು ಗುಡಿಯ ಶುದ್ಧಂ ಮಾಡಿಕೊಂಡರಾ ಸಂಸ್ಥಾನಮಂ ಮತ್ತೊಬ್ಬರು ಪುಗಲೀಸದೆ ಪುಂಡೆಬ್ಬಿಸಿ ಪೊರಡಿಸುತ್ತಿರೆ ಒಬ್ಬರು ಪುಗದಿಪ್ಪುದು ದೊರೆಗಳು ಯೋಚಿಸುತ್ತಿಪ್ಪಂದು ಅರಮನೆವಳಗುರಿಕಾರ ವೃದ್ಧನಾಗಿಯು ನೈಷ್ಠಿಕನಾಗಿ ಗಡ್ಡಮಂ ಬಹುದಿವಸದಿಂ ಗಡ್ಡದ ಬಸುವಲಿಂಗಯ್ಯನೆಂಬ ಗುರಿಕಾರು ಆ ಹಾರುವನ ಪುಂಡಂ ಬಿಡಿಸಿ ಆ ಗಡಿಯಂ ನಾನು ಮಾಡುವೆನೆಂದು ಅಪ್ಪಣೆಯಂ ತೆಗೆದುಕೊಂಡು ಬಪ್ಪ ಸಮಾಚಾರಮಂ ಬ್ರಹ್ಮಸೂರಿ ಕೇಳ್ದು ಹಾಗದಿಂ ತೊಡಗಿ ವರಹದವರೆಗು ನೇಮಕಮಾಗಿರುವದರಿಂ ಹೊನ್ನಿನ ಪಾರುಪತ್ಯಗಾರನೆಂದು ಒಂದು ಗಾವುದವೆಂಬಲ್ಲಿಗೆ ತಾಳ ಮೇಳ ಸೂಳೆಯರ್ವೆರಸಿದಿರ್ಗೊಂಡತ್ಯಾದರದಿಂ ಪುರಮಂ ಪುಗಿಸಿ ಉಪಾಯದಿಂ ನಿಚ್ಚಲೋಲಗಿಸುತ್ತ ಒಬ್ಬ ಸೂಳೆಯಂ ಸೇರಿಸಿ ಪ್ರೇರಿಸಿ ಗಡ್ಡಮಂ ಬೋಳಿಸಿ ಆ ಕೂರ್ಚೆಯಂ ಕಟ್ಟಿಯಾ ವರುಷ ಮಾಸ ತಿಥಿ ವಾರ ಘಳಿಗೆ ಲಗ್ನ ವೇಳೆ ಮೂಹೂರ್ತದೊಳ್ ಉಮ್ಮತ್ತೂರ ಸಂಸ್ಥಾನವನಾಳ್ದ ಅರಮನೆವಳಗುರಿಕಾರರ್ಗೆ ಗಡ್ಡ ಬೋಳಾಗಿ ಅಮ್ಮ ನವರ್ಗೆ ಮುಡಿ ಒಪ್ಪಿಸಿದ ಕೂರ್ಚೆಯ ಆಳಿದ ಮಹಾ ಸ್ವಾಮಿಯವರ ಸನ್ನಿಧಾನಕ್ಕೆ ಕುಳುಹಿಸಿಯಿದೆ ಎಂದು ಪ್ರಜೆಗಳ ಬಿನ್ನಹಪತ್ರಿಕೆ ಸಹಾ ಕಳುಹಿಸಲದಂ ದೊರೆಗಳಾದಿ ಸಭೆಯೆಲ್ಲಾ ಅಪಹಾಸ್ಯಂಗೆಯ್ದಾಕ್ಷಣವೇ ಗುರಿಕಾರನಂ ಕರೆಯಿಸಿ ವಿನೋದಮಂ ಮಾಡಿ ಭಂಗಿಸಿದರು.

ಮತ್ತಮಾ ಕವಿಸೂರಿಯಂ ಬರಿಸಿ ಆತಂಗಾ ಗಡಿಯಧಿಕಾರಮಂ ಕುಡಲಲ್ಲಿಯೆ ನಿಂತು ವಿಚಾರದ ವೇಳೆಯೊಳು ಸ್ಥಳ ವೆಚ್ಚಕ್ಕೇನು ಅಪ್ಪಣೆ ಎಂದು ಕೇಳುತ್ತಿರೆ ಆಯಕಟ್ಟಿನ ಮೇಲೆ ವೆಚ್ಚ ಮಾಡುವುದೆಂದಾ ಬಗೆ ನಿರೂಪಮಂ ಕೊಂಡು ಸ್ಥಳಕ್ಕೆ ಬಂದು ಅಧಿಕಾರಮಂ ಮಾಡುತ್ತಿಪ್ಪುದು ಯಾಚಕರ್ ಬಂದು ಪ್ರಸ್ತಪ್ರಯೋಜನಮೆಂದು ಕೇಳೆ ಮದುವೆ ಮೌಂಜಿ ಮುಂತಾದವಕ್ಕೆ ಆಯಕಟ್ಟು ಸಾಮಾನುಪಟ್ಟಿ ಬರೆಸಿ ವೆಚ್ಚವಂ ಮಾಡಿದೊಡೊಂದು ವರುಷಕ್ಕೆ ಹತ್ತುಸಾವಿರ ವರಹವಾಗಲಾತನಂ ಕರೆಸಿ ಕೇಳಿದೊಡೆ ಕರಣಿಕರ ಲೆಕ್ಕಮಂ ಕೇಳ್ವುದು ಅಪ್ಪಣೆ ಪ್ರಕಾರ ಆಯಕಟ್ಟಿನ ಮೆರೆ ವೆಚ್ಚಮಂ ಮಾಡಿದೆವೆಂಬುದು ಕೋಪಿಸಿ ಸೆರೆಯೊಳಿಕ್ಕಿಸೆ ಮೂರು ಉಪವಾಸಂ ಮಾಡಿ ಕಾವಲಿಕ್ಕಿದರು ಕವಿಸೂರಿ ಎಂದು ಒಂದು ಪದಮಂ ಪೇಳುತ್ತಿರ್ದೊಡಂ ಕೇಳ್ದರಸು ಮೆಚ್ಚಂ ಬೇಡುವುದೆನಲೊಂದು ಬಿಂದುವಂ ತೆಗೆಯಿಸಿ ಕೊಡಬೇಕೆಂಬುದು ಪತ್ತು ಸಾವಿರದೊಳೊಂದು ಬಿಂದುವಂ ತೆಗೆಯಲೊಂದು ಸಾವಿರಮಾಗಲದಂ ಬಿಟ್ಟು ಆತನ ಬುದ್ಧಿಚಾತುರ್ಯಂಗಳ್ಗೆ ಮನಂಗೊಂಡಾತನಂ ಸಮೀಪದೊಳೆ ಇಟ್ಟುಕೊಂಡು ಕಾರ್ಯಕಾರಣಂಗಳಂ ಕೇಳುತ್ತಮಿರೆ ರಾಜಸಭೆಯೊಳು ಕವಿತ್ವಮಂ ಪೇಳುತ್ತಿಪ್ಪುದು. ವಿದ್ವಾಂಸಂ ಗಣಗುಣಮೇನೆಂದು ಪೇಳ್ವುದು ನಾನು ಹೇಳುವುದೆ ಗಣ ಮಹಾಸ್ವಾಮಿ ಕೇಳುವುದೆ ಗುಣ ಇದಕ್ಕೆಡಬರುವನೆನ್ನ ಮನೆ ಹೆಗ್ಗಣಮೆಂದಂ. ಒಬ್ಬ ಕೈಕೊಳ ಜಾತಿಯವಂ ಸಭೆಯೊಳೆ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರರೆಂದು ಕನಿಷ್ಠಾಂಗುಲಿ ಮೊದಲಾಗಿ ಕೊಂಕಿಸಿ ಮೇಲೆ ಕೈಕೊಳನೆಂದಂಗುಷ್ಠದಿಂದೌಂಕಿ ನಿಂದು ಇದ ವ್ಯಕ್ತೀಕರಸ ಸಮರ್ಥರಾರೆಂದು ದಿನಂ ಪ್ರತಿದಿನಂ ಬಿಡದೆ ಪೇಳುತ್ತಿದ್ದೊಡಾರುಂ ಅವನಂ ಬಿಡಸಲಾರದಿರಲೊಮ್ಮೆ ಕವಿಸೂರಿಯಂ ಕೇಳಲಾತಂ ಬಂದಾತನ ಸಮದೊಳ್ನಿಂದವಂ ಪೇಳಲಂತೆ ಅಹುದೆಂದು ತಾನುಂ ಅಶ್ವಪತಿ ಗಜಪತಿ ನರಪತಿ ಸುರಪತಿ ಪ್ರಜಾಪತಿ ಎಂಬುದು ಪ್ರಸಿದ್ಧಮನೆಲಾತಂ ಪೋದಂ. ಮತ್ತಂ ಸಭೆಗೆ ಬಂದ ಶಬ್ದಸಿಂಧುವಿಗಂ ಶಬ್ದಮಣಿಪಣಕ್ಕೆಷ್ಟೆಂದರುಂ ತಾಳ ಜ್ಞಾನಿಯಂ ಬಿದ್ದ ತಾಳವನೆತ್ತುವುದು ಹ್ಯಾಗೆಂದು ಮಾಲಂಗೀಮಡುವಿಂಗೆ ಹಿಂದಕ್ಕೆ ಬಿದ್ದು ಬದುಕಿದುದಂ ಪ್ರತ್ಯಕ್ಷಮಂ ತೋರಿಸಿ ಒಬ್ಬ ಸೂಳೆಯಂ ತಾನು ಮೂತ್ರಿಸಿದುದರಿಂದಾ ಪೋಲಿಸಿಯು ಇಂತನೇಕ ವಿದ್ಯಮುಳ್ಳರಂ ಹಾಸ್ಯಂಗೆಯ್ಯುತ್ತಂ ಪರಾಜಿತರಂ ಮಾಡುತ್ತಿರ್ದಂ. ಮತ್ತ ಪರರಾಯರೆಲ್ಲಂ ಭೇದದಿಂ ರಾಜಸೇವಕರ್ಗಮೆಲ್ಲಮನೊಳಗುಮಾಡಿ ದಂಡೆತ್ತಿ ಬಂದ ಸಮಾಚಾರಮಂ ಕೇಳಿ ಅರಸನದಕ್ಕಾವುದುಮುಪಾಯಮೆಂದೆಲ್ಲರೊಳಮಾಳೋಚಿಸಿ ಕವಿಸೂರಿಯಂ ಕರೆಯಲಟ್ಟಿದೊಡಂ ಪೋಗದೆ ಹಿತ್ತಿಲೊಳಿರ್ದ ಸಸಿಗಳಂ ಕಿತ್ತು ಬೇರೊಂದೆಡೆಯೊಳೆ ನಾಟಿಯನೂರುತ್ತಂ ಈ ವಾರ್ತೆಯನರಸಂಗರಿಪೆಂದೊಡೆ ಕಂದಾಚಾರದ ಜನಂಗಳೆಲ್ಲಮಂ ಪಲ್ಲಟಮಂ ಮಾಡಲವರ್ ಬಂದು ಸಖ್ಯಮಿಲ್ಲದೆ ರಾಜ್ಯಮೆಲ್ಲಮಂ ಸೂರೆಗೊಂಡು ಪೋದರ್. ಈ ಪ್ರಸ್ತಾಪಂ ಚಿಕ್ಕದೇವರಾಜರಸ ಕಂಠೀರವಯ್ಯರಸಂಬರಂ ನಡೆದ ವೃತ್ತಕಂ. ಪಿಂದೆ ಚಾಮರಾಜರಸನಾಳಿದಿಂಬಳಿಯ ಇಮ್ಮಡಿ ರಾಜನುಂ ಕಂಠೀರವ ನರಸರಾಜ ದೊಡ್ಡದೇವರಾಜರು ಪಟ್ಟಣ ಮಹಿಸೂರಂ ನಿಷ್ಕಂಟಕಮಾಗೆ ಆಳ್ದು ಪೋಪಂದು ಚಿಕ್ಕದೇರಾಜರಸಂ ತೆಂಕಸೀಮೆ ಹಂಗಳಮೆಂಬ ಗ್ರಾಮದೊಳಿದ್ದು ವಿಶಾಲಾಕ್ಷಪಂಡಿತಂ ಬೆರಸು ಮಹಾರಾತ್ರಿಯೊಳೆ ಪಟ್ಟಣಮಂ ಪೊಕ್ಕು ರಾಜ್ಯಾಭಿಷೇಕಮನಾಂತು ಪಂಡಿತಂಗೆ ಮಂತ್ರಿ ಪದಮನಿತ್ತಾತಂ ಪೇಳ್ದಂತೆ ನಡಸುತ್ತಮಿರಲೊಂದು ದಿವಸಂ ಪುರುಪರಮೇಶ್ವರ ಚೈತ್ಯಾಲಯದೊಳೆಯರಸನ ದಯಕತ್ಯಂತಪಾತ್ರನಾದ ಜೈನಪಂಚಮ ಕಾಳಯ್ಯಶೆಟ್ಟಿಯು ಪ್ರಸಾದ ನಿಮಿತ್ತಮಾಗೆ ಮಾತಿನ ವಿರುದ್ಧಂ ಬೆಳೆದಾ ದೇವಾಲಯದ ಪ್ರಾಕಾರದೊಳೆ ಮತ್ತೊಂದು ಚೈತ್ಯಾಲಯಮಂ ನಿರ್ಮಿಸಿ ಒಳ್ಳಿತಪ್ಪ ರೀತಿಕಾಮಯದಿಂ ಪುರುಷಪ್ರಮಾಣಮಾಗಿ ಶ್ರೀವರ್ಧಮಾನತೀರ್ಥಂಕರ ಪ್ರತಿಬಿಂಬಮಂ ಪ್ರತಿಷ್ಠೆಯಂ ಮಾಡಿಸಿ ಗಂಧಕುಟಿಯೊಳು ಲೋಹಮಯ ಚವ್ವೀಸ ತೀರ್ಥಂಕರಬಿಂಬಂಗಳಂ ಶಿಲಾಮಯಮಪ್ಪ ಇಪ್ಪತ್ತು ನಾಲ್ಕು ಜೈನೇಂದ್ರ ಪ್ರತಿಕೃತಿಗಳನತಿಶಯವೆನಲ್ಮಾಡಿಸಿದಂ

ಶ್ಲೋಕ || ಸೇವಾ ತೀರ್ಥಕೃತಾ ವೈದ್ಯವಿಶಾಲಾಕ್ಷೇಣ ನಿರ್ಮಿತಾ
ಪಿತ್ರೋರ್ಬೊಮ್ಮಾರ್ಯಸುಮ್ಮಾಂಬಾನಾಮ್ನೋ ಸ್ವರ್ಗಾಪವರ್ಗದಾ ||

ಎಂದು ಬರೆಯಿಸಿಯತಿವಿಭವದಿಂ ನಿತ್ಯೋತ್ಸವಂಗಳ್ ಮೊದಲಾಗೆ ಮಾಡಿಸುತ್ತಿರ್ದು ಆ ಕಾಳಯ್ಯಶೆಟ್ಟಿಯು ತನ್ನ ಮಗಳನೀವೆನೆಂದು ಅರಿಕುಠಾರದ ಬ್ರಹ್ಮಶೆಟ್ಟಿಯೆಂಬನಂ ತನ್ನ ಮನೆಯೊಳೆ ಏಳೆಂಟು ವರ್ಷಂಬರಂ ಸಮಸ್ತ ಗೃಹವ್ಯಾಪಾರಮನಾತನಿಂದಲೆ ಮಾಡಿಸುತಿರ್ದು ಕಡೆಯೊಳಾತನಂ ತಿರಸ್ಕರಿಸಲಾತಂ ಪಂಡಿತನಂ ಸೇರಿ ಅವನ ಸ್ಥಿತಿಯೆಲ್ಲಮಂ ಪಂಡಿತಂಗರಿಯಿಸಿಪ್ಪಿನಮಾ ಕಾಳಯ್ಯಶೆಟ್ಟಿಯು ತನ್ನ ಮಗಳ ಮದುವೆಯಂ ಮಾಡಲೆಂದು ಪೆರಗೊಂದು ವರಮಂ ತಂದು ಅತ್ಯಂತ ವಿಭವದೊಳ್ ನಾಂದೀ ಮಂಗಲಮಂ ಮಾಡಿಯಾ ರಾತ್ರಿಯೊಳ್ ದೇವರಂ ತರುವಲ್ಲಿ ಅರಮನೆಯುಪ್ಪರಿಗೆಯೊಳರಸಂ ನೋಡಿ ಆಶ್ಚರ್ಯಂಬಟ್ಟಿಪಿನ ಶೆಟ್ಟಿ ಬಂದರಸನಂ ತನ್ನ ಗೃಹಕ್ಕಂ ಚಿತ್ತೈಸಿ ಎಂಬುದುಂ ಪೋಗಲುದ್ಯುಕ್ತನಾಗಿ ಪಂಡಿತನಂ ಬರಿಸಿ ಪೋಪಮೆನಲರಮನೆ ನಿಮ್ಮದೀ ದ್ರವ್ಯಂ ಶೆಟ್ಟಿಯೊಳಿಪ್ಪುದರಿಂ ಪೋಪಮಕ್ಕುಮಾದೊಡವನ ಮನಮಂ ನೋಡಲು ನಮಗೆ ಸಮಯಮಾದುದರಿಂ ಪತ್ತು ಸಾವಿರ ವರಹಮಂ ಕೇಳ್ದೊಡಾತಂ ಕೊಡದೆ ಬಡತನಮಂ ಪೇಳೆ ಕೇಳಿಯಿಲ್ಲವೆಂದೆಮ್ಮ ಪಾದಮ್ಮ ಮುಟ್ಟೆನಲಾತಂ ಮುಟ್ಟಲ್ ಬಪ್ಪುದುಂ ಆತನ ಗೃಹಮಂ ಮುತ್ತಿಸಿ ಅರಿಕುಠಾರದ ಬ್ರಹ್ಮಶೆಟ್ಟಿಯಿಂದ ನಿಕ್ಷೇಪಮಾಗಿರ್ದ ಪೊನ್ನೆಲ್ಲಮಂ ತರಿಸಿ ನೆಂಟರಿಷ್ಟರ ವಸ್ತ್ರಾಭರಣಂಗಳು ಮೊದಲಾಗಿ ಸರ್ವಸ್ವಮೆಲ್ಲಮನೆರಡು ಲಕ್ಷ ಪದಾರ್ಥಮನರಮನೆಗೆ ತೆಗೆದುಕೊಂಡೊಡಾತಂ ಸಂಕ್ಲೇಶ ಮನದಿ ಚಿಂತಾಕ್ರಾಂತನಾಗಿ ತಾನುಂ ಬೆಳ್ಗುಳದೊಳ್ಮಾಡಿಸಿದ ಶಿಲಾಮಯಮಠದ ಧರ್ಮಕೀರ್ತಿಯೊಂದು ಶಾಶ್ವತಮಾದುದೆಂದು ತಿಳಿದು ಪಟ್ಟಣಮಂ ಬಿಟ್ಟು ಶಾಲೀಗ್ರಾಮಮಂ ಸೇರಿದಂ

ಮತ್ತಂ ಗುಂಡಲದ ಬಳಿ ತಮ್ಮ ತಂದೆಯ ನಿಷಿಧಿಯೊಳೆ ಪರವಾಸು ದೇವಾಲಯಮಂ ಅತಿಶಯವೆನಲ್ಮಾಡಿಸಿ ಅನೇಕೋತ್ಸಹಂಗಳಿಗೆ ಉಪಾಸ್ತಿಮಾದ್ಯಂಗಳಂ ಕೊಟ್ಟು ದ್ವಿಶತಕ ಅಗ್ರಹಾರಮಂ ಕೊಟ್ಟು ಪೇಟೆಯಂ ಕಟ್ಟಿಸಿ ರಾಜ್ಯದೊಳೆಲ್ಲಾ ದೇವಾಲಯಕ್ಕಂ ಬ್ರಾಹ್ಮರಿಗಂ ಮಾನ್ಯಂಗಳಂ ನಡಸುತ್ತಾ ಮತಮತಾಂತರಗಳನ್ನೆಲ್ಲಾ ವಿಚಾರಿಸಿ ತಿಳಿದು ಅರಸುಗಳ ವಂಶಪರಂಪರೆಯಂ ನಾನಾ ಭೇದಂಗಳಾಗಿರ್ದೊಡದರೊಳೆ ಹದಿಮೂರು ಮಂತನ ಹದಿನೆಂಟು ಮಂತನಂಗಳಂ ವಿಂಗಡಿಸಿ ಅವರವರ ಯೋಗ್ಯತಾನುಸಾರದಿ ಆಬಳಿ ಸಂಬಳಂಗಳಂ ನಿಯಮಿಸಿ ಬಳಿಕಾ ಅರವತ್ತು ಮಂತನದ ಶೆಟ್ಟಿಗಳಂ ತಮ್ಮ ಕಡೆ ಎಂದವರಂ ಸೇವಾಯೋಗ್ಯರಂ ಮಾಡಿ ಉಳಿದ ಜಾತಿಯ ವರ್ಗದವರೆಲ್ಲರಂ ವಿಚಾರಂಗೊಂಡು ವಿಂಗಡಿಸಿ ರಾಜ್ಯದೊಳಿಪ್ಪ ಪ್ರಜೆಗಳ್ಗೆ ಸಿದ್ಧಾಯಮಂ ಹೊಲಂಗಳಂ ಕಂಬಗಟ್ಟಲೆಯಿಂ ನೂರು ಕಂಬಕ್ಕೆ ಉತ್ತರ ಮಧ್ಯಮ ಜಘನ್ನದಿಂದಾರು ನಾಲ್ಕು ಎರಡು ಹಣ ಮೇರೆ ನಿರ್ಣಯಿಸಿ ನಿರ್ಬಾಧಕದಿಂ ಪ್ರಜೆಗಳಂ ಸಲಹುತ್ತಂ ಪಂಡಿತನಿಂದ ದಯಾಧರ್ಮಮಂ ಕೇಳಿ ನಿಶ್ಚಯಮೆಂದು ಜಲಗಾಲಮಂ ಕೊಡಲಾನೆ ಜೀವದಯಮಂ ಮಾಡುತ್ತಾ ಪೂರ್ವದೊಳೆ ದುರ್ದೇವತಾಸಂಕಲ್ಪದಿಂ ನೀಚರು ಮಾಳ್ಪ ಪ್ರಾಣಿಹಿಂಸೆಗಳ್ಗಂ ತೆಂಗಿನಕಾಯಂ ಕೊಡಿಸುತ್ತಂ ಡಂಬಕ ವಿಕೃತ್ತದ ದೇಶಾಡಂಬಗಳ ಮನಮಿಕ್ಕಿದಿರುತ್ತಮಿರಲ್ ಓರ್ವ ಕೈಲಾಸದಯ್ಯನೆಂಬ ಜಂಗಮಂ ದಿನಚರಿಯೊಳಾಸ್ಥಾನಮಂ ಪೊಕ್ಕು ಕೈಲಾಸದ ವಾರ್ತೆಯನತ್ಯದ್ಭುತಮಾಗೆ ಪೇಳುತ್ತಿಪ್ಪುದುಂ ಓರ್ವ ಜಟ್ಟಿಯಂ ವೈಕುಂಠದವನೆಂದು ತಾನು ಕೈಲಾಸಮಂ ಪೊಕ್ಕು ಬಂದೆನೆಂದರವರ್ಗೆ ಸಂವಾದಮಾಗೆ ಯುದ್ಧಕ್ಕಾರಂಭಿಸಿ ಪೊಡೆಯುತ್ತಿರಲವರಂ ಬಿಡಿಸಲು ಕೆಲರ್ ಪೋಗಲ್ ಕೈಲಾಸದವರು ವೈಕುಂಠದವರ್ ಬಲ್ಲರೆಂದು ಸುಮ್ಮನೆ ಇರಿಸಿದೊಡಾತಂ ತಾಳಲಾರದೆ ಕಂಗೆಟ್ಟು ತನ್ನ ವೃತ್ತಾಂತಮೆಲ್ಲಮಂ ಪೇಳ್ದು ಪೋದಂ ಕಲಿವೀರಲಕ್ಷ್ಮಿ ಯೆಂದೋರ್ವ ಮಾತಂಗ ಸ್ತ್ರೀಯು ವಿಷ್ಣುವಿನ ಸೂಳೆಯೆಂದತಿ ಅಟ್ಟಹಾಸದಿಂ ನಿರಾಹಾರಿ ವಿಷ್ಣುವಿನ ಅಧರಾಮೃತಪಾನದಿಂದಿಪ್ಪೆನೆಂದು ಸಭಾವಂದ್ಯಳಾಗಿ ದಿನಚರಿ ರಾಜಾಸ್ಥಾನಮಂ ಪೊಕ್ಕು ಪ್ರಸಂಗಿಸುತ್ತಿರ್ದೊಡಾಕೆಗೆ ಪುಷ್ಪದೊಳಾಘ್ರಾಣಭೇದಿ ತೈಲಮಂ ಲೇಪಿಸಿ ಕೊಟ್ಟೆಡಾಘ್ರಾಣಿಸಲಾಕ್ಷಣದೊಳೆ ಛರ್ಧಿಯಾಗಲಾಕೆಯ ಪರಿಭವಿಸಿ ಕಳೆದರಿಂತು ಉದರನಿಮಿತ್ತಂ ಬಹುಕೃತ ವೇಷಂಗಳಂ ಧರಿಸಿ ಅದ್ಭುತಮಂ ತೋರ್ಪ ಜನಂಗಳಂ ಸಮ್ಮುಖಕ್ಕೆ ಸೇರಿಸದೆ ಡಂಬಕಂಗಳಂ ನಂಬದೆ ಪ್ರಮಾಣದರ್ಥ ಸಂಸಿದ್ಧಿ ಸದಾ ಭಾಷಾ ವಿಪರ್ಯಯಃ ಎಂದು ಪೇಳ್ವ ನಿಶ್ಚಯಮಂ ನಂಬಿ ರಾಜ್ಯಂಗೆಯ್ವಲ್ಲಿ ಡಿಳ್ಳಿಗೆ ಪಗದಿ ಕಳುಹಿಸಿದಲ್ಲಿ ಕಳ್ಳರು ಅಪಹರಿಸಲಾ ನಿಮಿತ್ತ ಅಣ್ಣಯಶೆಟ್ಟಿ ಎಂಬ ಜೈನಂಗಂ ದ್ರವ್ಯಮಂ ಕೊಟ್ಟು ಕಳುಹಿಸಿದೊಡಾತಂ ಪೋಗಿ ಡಿಳ್ಳಿಯನೈದಿ ಪಾದಶಾಯಿಗೆ ವರ್ತಕರಿಂ ಪೇಳಿಸಿ ಚೋರಪ್ರಯೋಗವಾಗಿರ್ದ ಪತ್ತು ಸಾಸಿರ ವರಹಕ್ಕೆ ಪಗದಿ ಹಣ ಸಂತೆಂದು ರಶೀತಿಯ ಬರೆಯಿಸಿ ತಾನು ಕೊಂಡುಪೋದ ವ್ಯಾಪಾರಕ್ಕೊಂದಕ್ಕೆರಡು ಮೂರು ಮಾಡಿ ಲಾಭಂಪಡೆದು ಬರಲು ಚಿಕ್ಕದೇವರಾಜಂ ಮೆಚ್ಚಿ ಟಂಕಸಾಲೆ ಬದುಕಂ ಕುಡೆ ಅರಮನೆಯೊಳ್ ಕೊಂಡಿರ್ದ ದ್ರವ್ಯಮೆಲ್ಲಮನೊಪ್ಪಿಸಿ ದಯಕ್ಕೆ ಪಾತ್ರರಾಗಿರೆ ಕ್ಷುದ್ರಜನಂಗಳು ಪತ್ತು ಸಾವಿರ ಪರ್ಯಂತರಂ ಪಟ್ಟಿಯಾಗುತ್ತಿದೆ ಎಂದು ರಾಜಂಗರಿಪಲು ಲೆಕ್ಕಿಗರಂ ಬರಿಸಿ ಲೆಕ್ಕಮಂ ವಿಚಾರಿಸಲು ಒಂದು ಕಾಸು ಲೆಕ್ಕವಾಗಲಿಲ್ಲ ಆ ಸಮಾಚಾರಮಂ ಶೆಟ್ಟಿ ಕೇಳ್ದು ತನಗುಳ್ಳ ದ್ರವ್ಯಂಗಳೆಲ್ಲಮಂ ಏಳು ಒಂಟೆಯ ಮೇಲೆ ತಂದು ಅರಮನೆ ಬಾಗಿಲೊಳಿಟ್ಟೊಡರಸನ್ ಅನ್ಯಾಯ ದ್ರವ್ಯಮಂ ಕೊಳಲಾಗದೆಂದು ಮುಟ್ಟದೆ ಏಳೆಂಟು ದಿವಸಂಬರಂ ಅಲ್ಲೆಯಿರ್ದು ವರ್ತಕನ ಸತ್ವಮಂ ಕೊಳಲಾಗದು ತೆಗೆದುಕೊಳ್ಳೆನಲವಂ ಅರಮನೆಗೆ ಕೊಟ್ಟ ಧನಮಂ ತಿರುಗಿ ಕೊಳ್ಳಲಾಗದೊಡಂ ರಾಜನ ಪೆಸರಿಂ ನೀರಿಗೆ ಹಾಕುವೆನೆಂದು ಬೆಳ್ಗುಳದೊಳೆ ಕಲ್ಯಾಣಿಯಂ ಮಾಡಿಸಿ ಚಿಕ್ಕದೇವರಾಯ ಕಲ್ಯಾಣಿ ಎಂದು ಪೆಸರಿಟ್ಟು ಸರೋವರ ಪ್ರತಿಷ್ಠೆಯನತಿಶಯವೆನಲ್ ಮಾಡಿ ಆರು ಸಾವಿರ ಜನಕ್ಕೆ ಅನ್ನದಾನ ವಸ್ತ್ರದಾನಾದಿಗಳಂ ಮಾಡಿಸಿ ಸಾವಿರಾರು ವರಹ ಸಂಬಳಮಂಗೊಳ್ವ ಲೆಕ್ಕದ ಪಟ್ಟಿಗಳೆಲ್ಲಮಂ ತರಿಸಿ ಕಲ್ಯಾಣಿಯೊಳಿಕ್ಕಿಸಿ ರಾಜನಂ ಬರಿಸಿ ಮಸ್ತಕಾಭಿಷೇಕ ಜಲಕ್ರೀಡಾಮಹೋತ್ಸವಂ ಮೊದಲಾದುತ್ಸವಂಗಳಂ ಮಾಡಿಸಿ ಸ್ವಾಸ್ತಿಯಂ ಕೊಟ್ಟು ಸುಖಮಿದ್ದರು.

ಮತ್ತಂ ಕಂಚಿದೇಶದ ಮಹಾವಿದ್ವಾಂಸಂ ತಾರ್ಕಿಕಚಕ್ರವರ್ತಿಯಪ್ಪ ಬುದ್ಧಿಸಾಗರವರ್ಣಿ ಆಜಾನುಬಾಹು ದೀರ್ಘಶರೀರಿ ಪ್ರಾಂಶುಧವಳಾಂತರೀಯೋತ್ತರೀಯಂ ಬೆಳ್ಳಿಯ ಪಾವುಗೆ ಸುವರ್ಣ ಗೂಟಲಾಪಟಿಯಾಂತು ಪ್ರಮೇಶ ಕಮಲಮಾರ್ತಾಂಡಗ್ರಂಥ ಬಾಹುದಂಡ ಪುಸ್ತಕಮನಾಂತು ಪರವಾದಿಗರ್ವಕುಧರ ವಾಗ್ವಜ್ರದಂಡನೆನಿಸಿ ಬಪ್ಪುದುಮಾತಂ ಮಂತ್ರವಾದಿಯುಮಪ್ಪುದರಿಂ ರಾಜಪುತ್ರಂಗೆ ಭವಾಂತರಕಾಟದಿಂ ಶರೀರದೊಳು ರುಜೆ ತಿಣ್ಣ ಮಾಗಿರಲರಸಂ ಪಂಡಿತನಿಂದಾವರ್ಣಿಯಂ ಬರಿಸಿ ಆ ಭವಾಂತರವೈರಿಯಂ ಬಿಡಿಸಲದಕ್ಕೆ ದ್ವಾದಶವಿಧ ನಿಗ್ರಹಂ ಮಾಡಲದಕ್ಕೆ ತಕ್ಕ ಸಾಮಗ್ರಿಯಂ ಕೊಡಿಸಿ ಮಾಡುವಲ್ಲಿ ಕೆಲದಿವಸದೊಳೆ ಪಂಡಿತಂಗಂ ಬುದ್ಧಿಸಾಗರಂಗಂ ವಿರೋಧಂ ಪಟ್ಟಿ ”ಕ್ರೋಧಂ ಸರ್ವಗುಣಂ ಹರೇತ್” ಎಂಬುದರಿಂ ಬಹುಭಾಷೆಗಳಿಂ ನಿಂದ್ಯಂಗಳನಾಡಿದೊಡೆ ಆ ವರ್ಣಿಯಂ ಕಾವಲೊಳಿಟ್ಟೊಡಾತಂ ಭಿಕ್ಷೆಯಂ ಬಿಟ್ಟು ಆದಿತ್ಯವಾರದೊಳೆ ದೇವತಾರಾಧನೆಗೆ ಎಂಟು ಬಗೆಯ ಪುಷ್ಪಮಂ ಪನ್ನೆರಡು ಬಗೆಯ ಫಲ ವಸ್ತುವಂ ಕಳುಹಿಸುವುದೆಂದು ಪಂಡಿತಂಗೆ ಪೇಳಿ ಕಳುಹಿಸಲೆಂದೊಡಾತ ಕಳುಹಿಸದಿರ್ದೊಡಾ ರಾತ್ರಿಯೊಳೆ ಚೆನ್ನ ಬೆಳ್ಳಿ ಭಾಜನಂಗಳೊಳೆ ಮಾಲತಿ ಮಲ್ಲಿಕಾ ಚಂಪಕ ಕುರವಕ ಕಮಲಾದಿ ಪುಷ್ಪಂಗಳಂ ಚೋಚ ಮೋಚ ದಾಡಿಮ ಜಂಜು ಜಂಬೀರಾಮ್ರ ಪನಸ ಮೊದಲಾದ ಸುಪಕ್ವಫಲಂಗಳಂ ಪಂಡಿತಂಗೆ ಕಳುಹಿಸಿದೊಡಾಶ್ಚರ್ಯಂಬಡೆದಿಪ್ಪಿನಂ ನಾಳೆ ಮಧ್ಯಾಹ್ನದೊಳಾನೀ ಪಟ್ಟಣಮಂ ಬಿಟ್ಟು ಪೋಪೆನೆಂದು ಪೇಳೆ ಕಾವಲಂ ಮೂವಳಸಿನಿಂದಿರಿಸುವುದುಮವರು ನೋಳ್ಪಿನಂ ತನ್ನ ದೇವತಾರ್ಚನೆ ಪುಸ್ತಕ ಮೊದಲಾದ ಸಾಮಾನುಗಳಂ ತನ್ನ ಕಡೆಯ ಹತ್ತು ಜನರಿಂ ತೆಗೆಯಿಸಿಕೊಂಡು ಸರ್ವರು ನೋಡುತ್ತಿರಲಾ ಕಾವಲಿಂ ಪೊರಮಟ್ಟು ಪಟ್ಟಣದ ಬಾಗಿಲಂ ದಾಂಟಿ ಶುಕ್ರವಾರದ ಪೇಟೆ ಹೊಳೆಯ ಬಳಿಯೊಳಿರ್ದು ಪಂಡಿತಂಗೆ ಹೇಳಿ ಕಳುಹಿಸಿಬಿಟ್ಟುತ್ತರದೇಶಕ್ಕೆ ಪೋಗಿ ಅಲ್ಲಿಂದಾ ಚಿಕ್ಕದೇವರಾಜರಸನ ಬಳಿಗೆ ಉಳ್ಳುದ ನಿಲ್ಲುದುದಂ ಸಂಗೀತವರ್ಣದೊಳೆ ಚರಿತ್ರೆಯ ಮಾಡಿ ಕಳುಹಿಸಲರಸಂ ನೋಡಿ ಮರುಗಿ ಕರೆಯಲೆಂದಟ್ಟಿದೊಡಾತಂ ಬರಲಿಲ್ಲ ಮತ್ತ ರಕ್ತಾಕ್ಷಿವತ್ಸರದೊಳು ಜಂಗಮರ ಹಾವಳಿ ಅತಿಯಾಗೆ ರಾಜ್ಯಕ್ಕೆಲ್ಲಾ ನಾವೆ ಒಡೆಯರಲ್ಲದೆ ಅರಸಂಗೆ ಸಲ್ಲದೆಂದು ಸೀಮೆಯ ಪ್ರಜೆಗಳೆಲ್ಲಮಂ ಮೇಳಿಗೂಟಮಂ ಕೂಡಿಸಿ ತಾಯೂರ ಬಳಿಯೊಳೆ ಪರಗಂ ಮಾಡಿ ರಾಜ ಮಂತ್ರಿ ದಳವಾಯಿ ಎಂದು ತಾವೆ ನಿಂದು ಗಡಿಗಡಿಯವರ ಬದುಕಂ ನಿಲ್ಲಿಸದೊಡೆ ಚಿಕ್ಕದೇವರಾಜಂ ಮಂತ್ರಾಲೋಚನೆಯಂ ಮಾಡಿ ವೀರನಪ್ಪ ಜಮಾದಾರಂಗೆ ಬೆಸಸಲಾತಂ ತನ್ನ ಕುದುರೆ ಸಾವಿರ ಸಹಿತಂ ಬಂದಾ ರಾಜ ಮಂತ್ರಿ ಸೇನಾನಿಯನೊಂದೆ ಸೂಳು ಪರಿಹರಿಸಿ ಸಂಜೆವೇಳೆಯೊಳೆ ಕೂಟದ ಗುಂಪಿಗೆ ಬಾಣಂಗಳಂ ಮುರಿದು ಕಟ್ಟಿ ಪತ್ತಿ ಸುಡುವುದುಂ ಗಾಳಿಗೋಡುವ ತರಗೆಲೆಯಂತೆ ದೆಸೆಗೆಟ್ಟೋಡಿ ಪೋದೊಡೆ ಇದಿರಾದರಂ ಜಂಗಮರಂ ಸದೆದು ಕೂಟಮನೆಬ್ಬಿಸಿ ಬಂದೊಡಾತಂಗೆ ಮೆಚ್ಚುಗೊಟ್ಟು ರಾಜ್ಯದೊಳಿರ್ಪ ಜಂಗಮದ ಮಠ ಮನೆಯಾ ಹೊತ್ತು ನಿಃಶೇಷಂ ಮಾಡಿ ಸ್ವಾಸ್ತಿಮಾನ್ಯಮೆಲ್ಲಮಂ ತೆಗೆದುಕೊಂಡು ಜಂಗಮರ ಹೆಸರಿಲ್ಲದಂತಾಗೆ ಕೆಲಂಬರು ವೇಷಮಂ ಮಾಚಿಕೊಂಡಿರ್ದರಾಗಲ್ ಕಮರವಳ್ಳಿ ಗುರಿಕಾರ ನಂಜೇಗೌಡಂ ಬಿನ್ನವಿಸಿ ರಾಜದೂತರೊಡಗೊಂಡು ರಾಜ್ಯದೊಳೆ ವಿಕೃತ ವೇಷಧಾರಿಗಳಾಗಿರ್ಪ ಜಂಗಮರಂ ಕಂಡು ಶರಣಂ ಮಾಡಿದೊಡಾತನಂ ಬಂಧದಿಂ ಪಿಡಿದಿಂತು ಸಾವಿರ ಜನದವರಿಗೆ ಒಪ್ಪಿಸಿ ಅವರಂ ಪರಿಹರಿಸಿದರಿಂತು ಪ್ರಭುವಿನ ಕೋಪದಿಂದೇನಾಗದಿಹುದಾಗಲು ಪ್ರಜೆಗಳ ಮೇಲೆ ಕೋಪಿಸಿ ತಾಂ ನಿಯಮಿಸಿರ್ದ ಕಂದಾಯಕ್ಕೆ ಐದು ಬಗೆ ಸರತಿಯ ಕಲ್ಪಿಸಿ ಒಂದಕ್ಕೆ ಒಂದೂವರೆ ಕಂದಾಯಮಂ ನಿಯಮಿಸಿ ಸುಂಕ ಮೊಮ್ಮು ಮೊದಲಾಗೆ ಮಣಿಯ ಪೈಕಂಗಳಂ ಪದಿನೆಂಟು ಚಾವಡಿಯಂ ನಿರ್ಮಿಸಿ ಪ್ರಜೆಗಳ್ಗೆಲ್ಲಾ ಬಾಧಕ ಪಿರಿದಾಗಲಷ್ಟರೊಳೆ ವೀರಶೈವರೆಲ್ಲರು ವಿಶಾಲಾಕ್ಷಪಂಡಿತನಿಂ ಜಂಗಮರ್ಗೆ ಇನಿತಾದುದೆಂದು ಆಳೋಚಿಸಿ ಆತನಂ ಕೊಲಲ್ ಬಗೆದು ಪಟ್ಟಣದ ನಾಗಣ್ಣನೆಂಬ ಶೆಟ್ಟಿಯಂ ಮಧ್ಯಾಹ್ನದೊಳು ನಡುಬೀದಿಯೊಳರಮೆನೆಗೆ ಸಿಬಿಕಾರೂಢನಾಗಿ ಪೋಗುತ್ತಿರ್ದ ಪಂಡಿತನಂ ಆಲಿಕೊಂಡು ಬರಿದು ಕೈದು ನಿಂದುದರಮಂ ಸೀಳ್ದು ಪೋಗಲು ಪಂಡಿತನಂ ಗೃಹಕ್ಕೆ ತಂದು ಮೂರು ದಿನದೊಳೆ ಪರಲೋಕಪ್ರಾಪ್ತನಾಗೆ ಮಹಾರಾಜಂ ಚಿಂತಾಕ್ರಾಂತನಾಗಿರ್ದು ಪಂಡಿತನೊರೆದಂತೆ ತಿರುಮಲೆಯಯ್ಯಂಗಾರನಂ ಮುಂದುಮಾಡಿ ರಾಜ್ಯಂಗೆಯ್ಯುತ್ತಿರಲಂತಃಪುರಜನಪ್ರೇರಣೆಯಿಂ ಷಡಕ್ಷರಿಯಂ ಪ್ರಶಂಸೆಗೆಯಿಸಿ ವಿದ್ಯಾನಗರಿಯಿಂ ಮಹಿಸೂರು ಸೇರಿದಾರಭ್ಯ ರಾಜರು ಶಿವಭಕ್ತರಾಗಿ ಜಂಗಮ ಶಿಷ್ಯರಾಗಿರ್ದರ್.

ಇತ್ತ ಪಟ್ಟಣದಧಿಕಾರಮಾಗುವಲ್ಲಿ ಅಳಗಿಯ ಶಿಂಗರಾರ್ಯರ್ಗೆ ರಾಜನೃಪಂ ಶಿಷ್ಯನಾಗೆಂದು ವೀರಶೈವವಂ ಪ್ರಕಟಿಸಿ ಷಡಕ್ಷರಿದೇವಂ ಲೀಲಾವತಿ ಕಾದಂಬರಿ ಮೊದಲಾದ ಅನೇಕ ವಸ್ತುಕಕಾವ್ಯದೊಳ್ ನಿಪುಣನೆನಿಸಿ ಕವಿಯಾದುದರಿಂ ರಾಜಶೇಖರಮೆಂದು ಪೊಸತೊಂದು ಕೃತಿಯಂ ಮಾಡಿ ಮೆಚ್ಚಿಸಿ ಕೆಲಕೆಲವು ಮಠಂಗಳಂ ಮಾನ್ಯಮಂ ಬಿಡಿಸಿ ಪದ್ದು ಪವಾಡಮೆಂದದ್ಭುತಂಗಳಂ ತೋರಿಸಿದರು. ತಿರುಮಲೆ ಐಯ್ಯಂಗಾರಂ ನೋಡಿ ವೀರವೈಷ್ಣವಮನ್ ಅತ್ಯಂತ ಪ್ರಬಲಂ ಮಾಡಲೆಂದು ಪೆರಸ್ಥರು ಜಾಂಬವ ಕುಲದವರ್ ಮೊದಲಾದ ಬೀಡುಮಣಿಯಮೆಂದನೇಕ ದಾಸ ತಿರುಕುಲದವರಂ ಪ್ರಬಲಂ ಮಾಡಿ ಪದ್ದು ಪಾವಾಡಂಗಳನದ್ಭುತವೆನೆ ಮಾಡಿಸುತ್ತಂ ನಾಮವಿಲ್ಲದರ ಮುಖನಿರೀಕ್ಷಣಮಂ ಮಾಡಲಾಗದೆಂದು ರಾಜಾಜ್ಞೆಯಿಂದ ಅನೇಕ ಜನಂಗಳಂ ನಾಮಧಾರಿಗಳಂ ಮಾಡಿಸುತ್ತಿರೆ ಜೈನಪಂಡಿತ ವಿದ್ವಾಂಸನಪ್ಪ ಚಿಕ್ಕಯ್ಯಪಂಡಿತಂ ಬೊಮ್ಮರಸನಾದಿ ಮೂವರು ರಾಜನ ದಯಕ್ಕೆ ಪಾತ್ರರಾಗಿ ಬಹಳೈಶ್ವರ್ಯಮಾಗಿ ವೈಷ್ಣವರೊಳು ನಂಟಂ ಮಾಡಲೆಂದು ಮಕ್ಕಳಂ ಬಿಟ್ಟು ನಾಮ ಶ್ರೀಮುದ್ರೆಯಂ ಧರಿಸಿ ದ್ವಾದಶನಾಮಧಾರಿಗಳಾಗಿ ನಿಶಾಭೋಜನಲೋಲುಪ್ತರಾದರು.

ಮತ್ತಂ ಬಲಾತ್ಕಾರದಿಂ ಸ್ಥಳ ಪರಸ್ಥಳಂಗಳ ಜನಂಗಳೆಲ್ಲರ್ಗಂ ಕೊಪ್ಪರಿಕೆಯೊಳ್ ನಾಮಮಂ ಕರದಿ ಪಿಡಿತಂದು ಪಣೆ ಮೊದಲಾದವರೊಳಿಕ್ಕುತ್ತಿರಲು ಕೆಲಂಬರೊಪ್ಪಿದರ್. ಕೆಲಂಬರ್ ಒಪ್ಪದೆ ಇದಿರಾಗಿ ಸರ್ವದಾ ಆಗದೆನೆ ಬಲಾತ್ಕಾರದಿಂದಿಕ್ಕಿದೊಡೆ ಉಜ್ಜಿ ಬಿಡುವೆ ಎಂದಲ್ಲೆ ಉಜ್ಜಿಬಿಟ್ಟರು. ಕೆಲಂಬರ್ ಇಕ್ಕಿದರೇನು ತಿರಿಣಾಮಲೆ ಬರಹವೆ ಪೊಳೆಯೊಳ್ ತೊಳೆದುಕೊಳ್ಳುತ್ತಿದ್ದೇವೆ ಎಂದು ತೊಳೆದುಬಿಟ್ಟು ಪೋದರು. ಕೆಲಂಬರಂ ಪಿಡಿದು ಮುದ್ರಧಾರಣೆಯಂ ಮಾಳ್ಪಾಗ ಅಯ್ಯೋ ಎಂದು ಪ್ರಲಾಪಿಸಿ ಬಿಡಿಸಿಕೊಂಡೋಡಿದರ್. ಒಬ್ಬರಿಬ್ಬರದಕ್ಕೆ ಸಾಕೆಂದೊಂದರೊಳೆ ಪೋದರ್. ಕೆಲರು ಭುಜಮನೇಕೆ ಸುಡುವುದೀ ಪೊಟ್ಟೆಗೋಸ್ಕರ ಪಟ್ಟೆಯಡರಿಂ ಪೊಟ್ಟೆಯಂ ಸುಡಿ ಎಂದು ಡೊಳ್ಳನೊದ್ದಿಕೊಂಬರಿಂತನೇಕ ತೆರದಿಂ ಬಾಯಿಗೆ ಬಂದಂತೆ ನುಡಿದು ಪೋದರ್. ಭಾಗ್ಯಮಂ ಪಡೆವೆವೆಂದಾಸೆಯಿಂ ನಾಮಮನಿಕ್ಕಿಕೊಂಡ ಜನರ್ಗೆ ರಾಜನಾದರಿಸಿ ವಿಚಾರಿಸದೆ ಬಿಟ್ಟುದರಿಂ ನಾಮವಿಕ್ಕಿ ಕೆಟ್ಟೆವೆಂದುಂ ಕಾರ್ಯಮಂ ಕೆಡಿಸಿದೊಡಂ ನಂಬಿಸಿ ಕೊಡದಿರ್ದೊಡಂ ನಾಮವನಿಕ್ಕಿದನೆಂಬ ಮಾತು ಲೋಕಪ್ರಸಿದ್ಧಿಯಾಯ್ತು. ಅದರಿಂ ನಾಮದಿಂದಿಹ ಪರನಾಸ್ತಿ ಎಂದು ಕೆಲರ್ ಪೇಳ್ದರ್. ಮತ್ತಂ ಚಿಕ್ಕದೇವರಾಜನಂ ನಾನಾ ಜನಂ ನಾನಾ ವಿಧಮಾಗೆ ಬಾಧಿಸುತ್ತಾಕ್ಷಣ ಚಿತ್ತನಂ ಮಾಡಿದರ್. ಮತ್ತಮುತ್ತರ ಆರೆ ಮರಾಟಿಗಳಾದಿ ದಂಡೆತ್ತಿಬಪ್ಪುದು ರಾಜ್ಯದೊಳುಳ್ಳ ಪ್ರಜೆಗಳ್ಗೆ ದಂಡಿನ ಕಾಣಿಕೆಯೆಂದು ಮುನಾಸಾಬಿನಿಂ ವರಿಯನೆತ್ತಿಕೊಟ್ಟು ಬಿಟ್ಟು ಕಾಣಿಕೆ ಕಡ್ಡಾಯಮನೆತ್ತಿಸಿ ಮತ್ತಂ ನಾಮ ತೀರ್ಥಕಾಣಿಕೆಗೆಂದು ಶೀಮೆಯೊಳ್ ನಡೆವ ದೇವಸ್ಥಾನಂಗಳೆಲ್ಲಮನರವಾಸಿಯಂ ತೆಗೆದುಕೊಂಡದಕ್ಕೆ ಅರವಾಸಿಮಣಿಯೆಂದತಿನಿಷ್ಠೂರಂ ಮಾಡುತಿರ್ದರಾಗಳ್ ಕನಕಗಿರಿಯ ಬಸ್ತಿಯ ಸರ್ವಮಾನ್ಯಮಾಗಿರ್ದ ಮಲೆಯೂರಗ್ರಾಮದ ಶಾನುಭಾಗ ವಿಜಯಪ್ಪನಂ ಕಲ್ಲ ಚಾವಡಿಯೊಳ್ ಉಪವಾಸವಿರಿಸಿ ಗ್ರಾಮದ ಸರ್ವಾದಾಯಂ ನೂರ ಇಪ್ಪತ್ತು ವರಹ ಲೆಕ್ಕಮಾಗೆ ಅರವಾಸಿ ಅರುವತ್ತು ವರಹ ವರುಷಂಪ್ರತಿ ತೆಗೆದುಕೊಳ್ಳುತ್ತಿದ್ದರಷ್ಟರೊಳೆ ಚಿಕ್ಕದೇವರಾಜರಸಂ ರಾಜಕಾರ್ಯಮಾಗೆ ಉತ್ತರ ದಿಗ್ವಿಜಯಕ್ಕೆ ಪೋಪಾಗಳು ಪಟ್ಟಣದ ಸರ್ವಾಧಿಕಾರಮಂ ದೊಡ್ಡ ದೇವಯ್ಯನೆಂಬ ಮಹತ್ತರಂಗೊಪ್ಪಿಸಿ ಪೋಗಲಿತ್ತಲವಂಗೆ ವೀರಶೈವರೆಲ್ಲರು ಪಂಡಿತಂ ಪ್ರಬಲಮಾಗಿ ನಮ್ಮ ಮಠ ಮನೆಗಳನೇಕಂಗಳಂ ಕೆಡಿಸಿದಂ. ನೀಂ ಶಿವಭಕ್ತನಾಗಿಯು ರಾಜ್ಯಾಧಿಪತಿಯಾದೆನೀಗಲ್ ಜೈನರ ಬಸ್ತಿಗಳಂ ಕೆಡಿಸಿ ಅವರ ಪೆಸರಿಲ್ಲದಂತು ಮಾಳ್ಪುದೆಂದನೇಕ ತೆರದಿಂ ಬೋಧಿಸೆ ಪಾಪಕ್ಕಂಜದೆ ಪಳಿಗಳ್ಕದೆ ದೈವದ್ರೋಹಮಂ ನಿಷ್ಕಾರಣಂ ಕಾಲದೋಷದಿಂ ರಾಜ್ಯಂಗಳೊಳು ಗ್ರಾಮಾನುಗ್ರಾಮಂಗಳೊಳು ತಪ್ಪದೆ ಒಂದು ಎರಡು ಮೂರು ನಾಲ್ಕು ಐದಾರಿದ್ದವಂ ಕಾಮಾಟದ ಜನಮಂ ಬಿಟ್ಟು ದಿನ ಮೂರರೊಳೆ ಸಾವಿರದೇಳುನೂರು ಜಿನಾಲಯಂಗಳಂ ಪ್ರತಿಮೆವೆರಸಿ ತಮ್ಮ ಸದ್ಗತಿಯಂ ಕೆಡಿಸಿ ಭೇದಿಸುವಂತೆ ಒಡೆದು ಕೆಡಸುತ್ತಿರ್ದರ್. ಅಷ್ಟರೊಳೆ ಈ ಅನ್ಯಾಯವಾರ್ತೆಯಂ ಚಿಕ್ಕದೇವರಾಜರಸಂ ಕೇಳಿ ಮಾಣಿಸಿದನಾ ದೊಡ್ಡದೇವಯ್ಯಂ ಕಾಲಾಂತರದಿಂ ಸೆರೆಯೊಳೆ ಸಿಕ್ಕಿರ್ದು ಸತ್ತಂ. ಪ್ರಜೆಗಳ್ಗೆ ರಾಗ್ನಿಕ ದೈವಿಕಮಾಗಿ ದುಃಖ ಪಿರಿದಾಗಲಿತ್ತಲು ಚಿಕ್ಕದೇವರಾಜರಸಂ ತಾರಣ ಸಂವತ್ಸರದೊಳೆ ಲೋಕಾಂತರಿತನಪ್ಪುದುಂ ಕಂಠೀರವಯ್ಯರಸಂಗೆ ಪಟ್ಟಮಾಗೆ. ಈ ವ್ಯಯ ಸಂವತ್ಸರದೊಳು ತೆಂಕಶೀಮೆಗಿಡದೊಳಾನೆಯಂ ಪಿಡಿಯಲ್ ಸಮರ್ಥರಾರೆನೆ ಅಣ್ಣಯ್ಯಶೆಟ್ಟಿಗಪ್ಪಣೆಯಂ ಕೊಡುವುದೆಂದು ವೈಷಮ್ಯದಿಂದರಸಂಗರಿಪಿ ಕಳುಹಿಸಲಾತಂ ಮಲೆಯೂರ ಮಾರ್ಗಮಾಗಿ ಬಂದು ತಳುಗಿದೊಡಾ ರಾತ್ರಿ ಪದ್ಮಾವತಿಮಹಾದೇವಿ ಸ್ವಪ್ನದೊಳೊರೆದ ಕ್ರಮದೊಳೆ ಅತಿ ಚಲ್ವನಪ್ಪ ಐದಾನೆ ಒಂದು ಧವಲವರ್ಣದ್ವಿರದ ಸಹಿತಂ ಕೊಂಡು ಪೋಗಿ ರಾಜಂಗಿತ್ತೊಡತಿಪ್ರೀತಿಯಿಂದಾತಂಗೆ ಟೆಂಕಸಾಲೆಯ ಸರ್ವಾಧ್ಯಕ್ಷತ್ವಮನಿತ್ತೊಡಾತಂ ನೂತನತರವಾದ ಸುವರ್ಣಾಭರಣಮಂ ಮಾಡಿಸಿ ತಿರುಮಲೆಯಾರ್ಯನ ಧರ್ಮಪತ್ನಿಗೊಪ್ಪಿಸಿ ಕೇಳಿಕೊಂಡಾಕೆ ತನ್ನ ಪತಿಯೊಳು ಭರವಶಂಗೊಂಡು ಅಣ್ಣಯ್ಯನ ಕುಲದೇವರಾದ ಕನಕಗಿರಿಯ ಬಸ್ತಿಗ್ರಾಮವನ್ನು ಪ್ರಾಕುಮೇರೆ ಸರ್ವಮಾನ್ಯವಾಗಿ ಬಿಟ್ಟುಕೊಟ್ಟು ಆ ದೇವರ ಪೂಜೆ ಮಾಡಿಸುವುದೆಂದು ರಾಜನ ನಿರೂಪಮಂ ಮಾಡಿಸಿ ಕೊಟ್ಟೊಡಾ ಶೆಟ್ಟಿಯು ಮಲೆಯೂರು ಬೆಟ್ಟವೆರಡರ ಜಿನಾಲಯಮನುದ್ಧರಿಸಿ ಬಾಚಹಳ್ಳಿ ಕಿರುಗುಂದದಿಂ ಮೂಲಬಿಂಬಂಗಳಂ ತಂದಿಟ್ಟ ಶಕವರುಷಂಗಳು ೧೬೨೯ನೆಯ ಸರ್ವಜಿತು ಸಂವತ್ಸರದಕ್ಷ ತ್ರಿತಯದೊಳು ಪ್ರತಿಷ್ಠೆ ಮಾಡಿಸಿ ಬಳಿಕಾ ಕ್ರೋಧಿ ಶುಭಕೃತುವರಿಗೆ ಏಚಗನಹಳ್ಳಿ ಕೆಲಸೂರು ಮೊದಲಾಗೆ ಏಳೆಂಟು ಚೈತ್ಯಾಲಯಂಗಳನುದ್ಧರಿಸಿದಂ. ಉಳಿದ ದೇವಸ್ಥಾನಂಗಳ ಜೈನಬ್ರಾಹ್ಮರುಗಳು ಕಾಲದೋಷದಿಂ ಶಿಥಿಲಮಂ ಹೊಂದಿದರ್. ಗ್ರಾಮಾನುಗ್ರಾಮದೊಳಿರ್ದ ಜೈನಗೌಡರೆಲ್ಲಂ ನಾಮಲಿಂಗಧಾರಿಗಳಾಗೆ ಊರು ಊರುಗಳೊಳೆ ಬಸವನ ಗುಡಿಗಳಂ ಮಾಡಿಕೊಂಡು ಜಂಗಮರ ಶಿಷ್ಯರಾದರಿಂತು ವರ್ತಿಸುತ್ತಿರಲು ವಿಶ್ವಾವಸು ಸಂವತ್ಸರದೊಳು ಸಮಂಜೆಯದಂದು ಬಂದು ವಿನಯದಿಂ ಕರ್ನಾಟಕ ರಾಜ್ಯಮೆಲ್ಲಮಂ ಸೂರೆಗೊಂಡು ಪೋಗೆ ಪರಾಭವದೊಳೆ ಮರಾಟಿಗಳ ದಂಡು ಬಂದು ರಾಜ್ಯದೊಳಿರ್ದ ಪ್ರಜೆಗಳ್ಗೆಲ್ಲಾ ಹಿಂಸೆಗಳನೆಸಗಿ ಸರ್ವಸ್ವಮಂ ಸುಲಿದು ಸೂರೆಗೊಂಡು ಕೊಂದುಕೂಗಿದೊಡೆ ನಿಂದಲ್ಲಿ ನಿಲ್ಲಿದೆ ಸರ್ವರು ಅನ್ನ ನೀರಂ ಕಾಣದೆ ಸತ್ತು ಕೆಟ್ಟು ಪೋದರ್. ಅಂತು ವರುಷವರುಷಂಪ್ರತಿ ರಾಜಿಕಂ ತಪ್ಪದೆ ರಾಜ್ಯಕ್ಷೋಭಮಾಗಿ ಮೂಗಹರಿಕ ನಾನಾರಾಯಂ ಮೊದಲಾಗಿ ಆರೆಯವರಾದಿ ಪರರಾಯರ ದಂಡು ಬಂದು ಸುಟ್ಟು ಸೂರೆಯಂ ಮಾಡುತ್ತಿರ್ದೊಡೆ ಪ್ರಜೆಪರಿವಾರಮೆಲ್ಲಂ ನಿತ್ತರಿಸಲಾರದೆ ದಂಡು ತೀವ್ರವೇದನೆಯೊಳು ಕ್ಷಯಮಾಗಿ ತ್ರಿಭಾಗಶೇಷವಾಗಿ ಸ್ವಪರ ರಾಜರಿಂ ಕೆಟ್ಟುಮುಳಿದುದು. ಬಳಿಕ ದೊಡ್ಡ ಕೃಷ್ಣರಾಜರ್ಗೆ ಪಟ್ಟಮಾಗಿ ರಾಜ್ಯಮಂ ಪಾಲಿಸಿದರಾಗಳ್ ಬೆಳ್ಗುಳಮಂ ನೋಡಲೆಂದು ವೈಭವ ಸಹಿತಂ ಪೋಗಿ ನೋಡಿ ಅತ್ಯಾಶ್ಚರ್ಯ ಬಡೆದು ಪಟ್ಟಾಚಾರ್ಯರೊಡಗೊಂಡು ಬಂದು ಪಟ್ಟದರಸಿಯ ಮೇಲಿದ್ದ ಪಿಶಾಚಿಯಂ ಬಿಡಿಸಿ ಮರ್ಯಾದೆಯಿಂ ಕಳುಹಿಸಿ ಕೆಲಕೆಲ ಸಂಸ್ಥಾನಂಗಳಂ ವಶಂ ಮಾಡಿದರಾಗಳು ರಾಜಿಕ ದೈವಿಕಂ ಪಿರಿದಾಗಿ ಅನರ್ಘ್ಯದಿಂ ಕ್ಷಾಮಡಾಮರದಿಂ ಪ್ರಜಾಕ್ಷೋಭಮಾಗೆ ಕೆಲದಿನಂ ಕಳಿದುದು.