ಶ್ರೀಸುಜನಸ್ತುತರಖಿಳಕ
ಳಾಸನದರ್ ಮೋಹತಿಮಿರಮಂ ಕಳೆದು ಕರಂ

ಭಾಸುರ ವಿಚಾರದಕ್ಷರ್

ವೈಷಮ್ಯಮನುಳಿದು ಕೇಳ್ವುದೀ ಸತ್ಕೃತಿಯಂ

ಈ ಪ್ರಕಾರದೊಳು ರಾಜಾವಲಿ ಕಥೆಯನ್ನು ಸಂಗ್ರಹಿಸಿ ಹನ್ನೊಂದಧ್ಯಾಯಮು ಮಹಾರಾಜಾಧಿರಾಜ ಮಹಿಸೂರ ಕೃಷ್ಣರಾಜ ಒಡೆಯರ್ಗೆ ಒಪ್ಪಿಸಲು ಮೂರು ನಾಲ್ಕು ವರುಷದಿಂ ಕೂಡಿಬರಲಿಲ್ಲಾ. ಈ ಪ್ಲವಸಂತವತ್ಸರದ ಆಶ್ವೀಜದೊಳು ಮಹಾಮಾತುಶ್ರೀ ದೇವೀರಾಂಬಿಕೆಯವರು ಮೊದಲಿಂ ಕಡೆವರೆಗೆ ಪರಾಂಬರಿಗೆ ಮಾಡಿದರೆಂತೆಂದೊಡೆ

ಶ್ರೀಯಂ ವಿತರಣದೊಳ್ವಾಕ್
ಶ್ರೀಯಂ ಸೌಜನ್ಯವೃತ್ತಿದೊಳ್ದಿಗ್ವಿಜಯ
ಶ್ರೀಯಂ ಭುಜಬಲದೊಳ್
ಸ್ವ
ಶ್ರೀಯಂ ಸಮಂತಾಳ್ದ ಕೃಷ್ಣರಾಜನರೇಂದ್ರಂ (?)

ಅಂತು ಯಶಶ್ಚಂದ್ರಿಕೆಯಂ ದಿಗ್ಫಿತ್ತಿಯೊಳ್‌ಪಸರಿಸಿ ರಾಜಾಧಿರಾಜ ರಾಜಪರಮೇಶ್ವರ ಶ್ರೀವೀರಪ್ರತಾಪ ಬಿರಿದೆಂತೆಂಬರಗಂಡನಾಖಂಡಲ ವೈಭವದಿಂ ಮಹಿಸೂರೊಳು ರತ್ನಸಿಂಹಾಸನಾರೂಢನಾಗಿ ಕೃಷ್ಣರಾಜೇಂದ್ರಂ ಪೃಥ್ವೀಸಾಮ್ರಾಜ್ಯಂಗೆಯ್ಯುತ್ತಿರಲಾ ಮಹಾಪ್ರಭುವಿನ ಮಹಾಮಾತುಶ್ರೀಯವರು

ಅತಿಶಯ ರೂಪಲಿ ರತಿ ಭಾ
ರತಿ ವಿದ್ಯದಿ ಸೊಬಗಿನಿಂದ ರೋಹಿಣಿಯೆನಿಸಿದ
ಪತಿಭಕ್ತೆ ಸಜ್ಜನಸ್ತುತೆ
ಮತಿಮಾನ್ವಿತೆ ಲೋಕದಾಂಬೆ ದೇವೀರಾಂಬೇ

ತಾರಾ ಮಂಡೋದರಿ ಸೀ
ತಾ ರೇವತಿ ಸುಪ್ರಭಾ ಯಶಸ್ವಿ ಸುನಂದಾ
ನಾರಿಯರ ಗುಣಮೆ ತಾ ದೇ
ವೀರಾಂಬೆಯ ದೇಹದೊಳಗೆ ನೆಲೆಯಾಗಿರ್ಪುದು

ರೂಪಿಗೆ ಗುಣಮಾಭರಣಂ
ರೂಪು ಗುಣಂಗಳಿಗೆ ಜ್ಞಾನ ತಾನಾಭರಣಂ
ರೂಪು ಗುಣ ಜ್ಞಾನ ಮೂರಕೆ
ತಾ ಪಿರಿದಾಭರಣ ಕ್ಷಮೆಯು ನೆಲೆಗೊಂಡಿಪ್ಪವು

ಆಚಾರ ಶೀಲ ನಿರ್ಮಲ
ಶ್ರೀ ಚೆಲುವಿಕೆ ಸತ್ಯವಾಣಿ ಸದ್ಗುಣಮಣಿಯುಂ
ಯಾಚಕಜನಚಿಂಚಾಮಣಿ
ಭೂಚಕ್ರದಿ ಕೀರ್ತಿಬಿಂಬೆ ದೇವೀರಾಂಬೇ

ಚಾಮರಾಜೇಂದ್ರನೃಪಸತಿ
ಬಾಮಿನಿಯರಿಗಧಿಕ ಸುಗುಣೆ ಜ್ಞಾನಾಭರಣೇ

ಸೋಮೆ ಸದ್ಧರ್ಮವಾರ್ಧಿಗೆ
ಈ ಮಹಿಸೂರೀಶನಂಬೆ ದೇವೀರಾಂಬೇ

ಇಂತೀ ಸಕಲ ಸದ್ಗುಣಾಭರಣೆ ಲೋಕಮಾತೆ ಸಮ್ಯಕ್ತ್ವಚೂಡಾಮಣಿಯಪ್ಪ ದೇವೀರಾಂಬಿಕೆಯು ಈ ಸತ್ಯವಾಕ್ಯಮಾದ ರಾಜಾವಲಿ ಕಥಾಸಾರಮೆಲ್ಲಮಂ ಮೊದಲಿಂ ಕಡೆವರಂ ಚೆನ್ನಾಗಿ ಲಾಲಿಸಿ ಸಂತೋಷಂ ತಾಳ್ದು ಕಥಕಂಗೆ ಅತಿಶಯಮಾದ ವಸ್ತ್ರ ತಾಂಬೂಲಾದಿಗಳನ್ನಿತ್ತು ಮನ್ನಿಸಿ ಈ ಮಹಿಸೂರ ಮಹಾಪರಮೇಶ್ವರರುಗಳ ಅನ್ವಯ ಪರಂಪರೆಯುಮಿದರೊಳಿರ್ದುದಂ ತೆಗೆದು ಆ ವಂಶದಾಮೂಲ ಪರಂಪರೆಯಂ ವ್ಯಕ್ತ ಮಪ್ಪಂತು ಸಂಕ್ಷೇಪದಿಂ ಬೇರೆ ಬರೆದು ಒಪ್ಪಿಸುವುದೆಂದು ನಿರೂಪಿಸಲಾ ಪರಂಪರೆಯಂ ನಾಮಮಾತ್ರದಿಂ ಬರೆದೊಪ್ಪಿಸಿದೆನದೆಂತೆಂದೊಡೆ

ಬಲ ಗೋವಿಂದಾನತಪದ
ಜಲರುಹ ಯುಗ ನೇಮಿನಾಥಗಭಿವಂದಿಸಿ ಭೂ
ಲಲನೇಶರಾದ ಹರಿವಂ
ಶಲಲಾಮರ ವಂಶಪಂಕ್ತಿಯಂ ವಿರಚಿಸುವೆಂ

ಅದೆಂತೆಂದೊಡೀ ಜಂಬೂದ್ವೀಪದ ಭರತಕ್ಷೇತ್ರದ ಹುಂಡಾವಸರ್ಪಿಣಿಕಾಲಂ ದಶ ಕೋಟಾಕೋಟಿ ಸಾಗರೋಪಮದೊಳು ಒಂಭತ್ತು ಕೋಟಾಕೋಟಿ ಸಾಗರೋಪಮ ಕಾಲಂ ತ್ರಿವಿಧ ಭೋಗಭೂಮಿಗೆ ಸಲ್ವಿನಂ ಕಡೆಯೊಳು ಪಲ್ಯಾಷ್ಟಮ ಭಾಗೆಯೊಳೆ ಚತುರ್ದಶ ಮನುಗಳು ಪುಟ್ಟಿ ಕರ್ಮಭೂಮಿಸ್ಥಿತಿಯಂ ಪೇಳ್ದರ್.ತದನಂತರದೊಳು ಮತಿ ಶ್ರುತಾವಧಿಯೆಂಬ ತ್ರಿಜ್ಞಾನಧರನಾದ ಆದಿಬ್ರಹ್ಮನುದ್ಭವಿಸಿ ದೇಶವಿಭಾಗೆಯಂ ಕುಲಭೇದಮಂ ಜೀವನೋಪಾಯಮಪ್ಪ ಷಟ್ಕರ್ಮ ಮೊದಲಾದ ಸಕಲ ಪ್ರಪಂಚಮಂ ಕೃತಯುಗದಾದಿಯಾಗೆ ಪೇಳ್ದು ಚತುಃಷಷ್ಟಿ ಕಲೆಗಳಂ ತನ್ನ ಅನ್ವಯಜರೆಲ್ಲರ್ಗ ಮುಪದೇಶಂಗೆಯ್ದು ವರ್ಣತ್ರಯಮಂ ನಿಯಮಿಸುವಲ್ಲಿ ಕ್ಷತ್ರಿಯರಂ ಇಕ್ಷ್ವಾಕು ಹರಿ ವಂಸಮೆಂಬೆರಡಕ್ಕೆ ಸೂರ್ಯವಂಶಮೆಂದುಂ ಕುರುವಂಶಕ್ಕೆ ಸೋಮವಂಶಮೆಂದುಂ ಮತ್ತಂ ಉಗ್ರವಂಶಮಂ ನಾಥವಂಶಮೆಂದೀ ನಾಲ್ಕು ವಂಶಮಂ ಪ್ರಕಟಿಸಿದಾತಂಗೆ ತ್ರಿಕಾಲಗೋಚರಮಪ್ಪ ಕೇವಲಜ್ಞಾನಂ ಪುಟ್ಟೆ ಸಮವಸರಣದೊಳು ಮೂವತ್ತು ನಾಲ್ಕತಿಶಯ ಅಷ್ಟಮಹಾಪ್ರಾತಿಹಾರ್ಯ ಸಮನ್ವಿತವಾಗಿ ತ್ರಿಲೋಕೇಶ್ವರನಪ್ಪ ಸರ್ವಜ್ಞನ ಮುಖಕಮಲದಿಂದಾ ಉದ್ಭವಿಸಿದ ಅಪೌರುಷೇಕ ಮಹಾವೇದ ಸಮುದ್ರದೊಳು ಚತರುನುಯೋಗಮಂ ಚತುರ್ದಶ ಪೂರ್ವೆಯುಂ ಪ್ರಕೀರ್ಣಕ ಶಾಸ್ತ್ರಮಂ ಸಹಿತವಾದ ದ್ವಾದಶಾಂಗ ಶ್ರುತಸಿದ್ಧಾಂತದೊಳೇಳನೆಯ ಅಂಗದೊಳು ಪೇಳ್ವ ಉಪವಾಸಕಾಚಾರ ಆರ್ಯ ಷಟ್ಕರ್ಮಗರ್ಭಾನ್ವಯ ದೀಕ್ಷಾನ್ವಯ ಕರ್ತನ್ವಯ ಭೇದಮುಂ ಕ್ರಿಯಾ ಮಂತ್ರ ತಂತ್ರ ವಿಧಿವಿಧಾನಂಗಳಂ ಕೇಳಿ ಅಂತ್ಯಬ್ರಹ್ಮ ಮಪ್ಪ ಪದಿನಾರನೆಯ ಮನು ಭರತೇಶ್ವರಂ ದಾನಮಂ ಕುಡಲು ಯೋಗ್ಯರಾಗಿರ್ದ ದ್ಚಿಜರುಂ ಬರಿಸಿ ಉಪಾಸಕಾಚಾರಮಂ ಕೈಕೊಳಿಸಿ ಸಿದ್ಧಾಂತ ವೇದಶಾಸ್ತ್ರಮಂ ಕಲಿಸಿ ಪದ್ಮನಿಧಿಯಿಂ ಪವಿತ್ರಮಪ್ಪ ಯಜ್ಞಸೂತ್ರಮಂ ತರಿಸಿ ಅವರವರ ನೆರೆಯರಿತು ಸೂತ್ರಧಾರಮಂ ಮಾಡಿ ಲಿಂಗ ಚತುಷ್ಟಯಮಂ ಸ್ಥಾಪಿಸಿ ದೇದೀಪ್ಯ ವಸ್ತ್ರ ಷೋಡಶಾಭರಣಂಗಳಿಂ ಪೂಜಿಸಿ ಗ್ರಾಮ ಕ್ಷೇತ್ರ ಗೃಹ ಸುವರ್ಣ ಮೊದಲಾದ ದಾನಂಗಳಂ ಕೊಟ್ಟು ಪರಬ್ರಹ್ಮ ತನೂಭವರುಂ ದ್ವಿಜನ್ಮರುಂ ವರ್ಣೋತ್ತಮರುಂ ಚಾರಿತ್ರಶುದ್ಧರುಂ ಲೋಕವಂದ್ಯರುಂ ಜಗತ್ಪೂಜ್ಯರುಂ ಧರಾಮರರೀ ಬ್ರಾಹ್ಮಣರೆಂದು ಕೊಂಡುಕೊನೆದು ಪೊಗಳಿದಂ

ಆ ಕ್ಷತ್ರಿಯರೊಳು ಹರಿವಂಶದ ಹರಿಕೇತುವೆಂಬನಾತನ ಸಂತಾನಂ ಅರವತ್ತು ಲಕ್ಷ ಕೋಟಿ ಸಾಗರೋಪಮಂಬರಮವಿಚ್ಛಿನ್ನಮಾಗಿ ಬರ್ಪಿನಮಲ್ಲಿ ಸಿಂಹಸೇನರೆಂಬ ಮಹಾರಾಜಂ ಪುಟ್ಟಿ ನರಸಿಂಹನೆನಿಸಿದನಾತನ ಸಂತಾನಂ ನಾಲ್ವತ್ತೊಂಬತ್ತು ಲಕ್ಷ್ಮಮುಂ ತೊಂಬತ್ತೊಂಬತ್ತು ಸಾಸಿರದೊಂಬೈನೂರ ತೊಂಬತ್ತೊಂಬತ್ತು ಕೋಟಿ ಸಾಗರಂ ಸಲ್ವಿನ ಶೀತಲತೀರ್ಥಸಂತಾನದೊಳೆ ಧರ್ಮಂ ಕೆಡಲಾ ಕಾಲದೊಳು ಬ್ರಾಹ್ಮಣರು ಕೆಲರು ಕಾಲದೋಷದಿಂ ಭೋಗಕಾಂಕ್ಷಿತರಾಗಿ ಮರೀಚಿ ರಚಿಸಿದ ಕಪಿಲಸಿದ್ಧಾಂತಮನವಲಂಬಿಸಿಕೆಲಂಬರು ಇಹದ ಸುಖಮನಾಪೇಕ್ಷಿತರಾಗಿ ಪ್ರಬಲ ವಿದ್ಯಾವಿಶಾರದರಪ್ಪುದರಿಂ ಶೂನ್ಯವಾದಮಂ ಪ್ರಕಟಂ ಮಾಡಿ ಬೌದ್ಧ ಚಾರ್ವಾಕಮತಮಂ ಪ್ರಕಟಿಸಿದರು. ಕೆಲಂಬರು ಸಾಂಖ್ಯ ಮೀಮಾಂಸಕ ವೈಶೇಷಿಕ ಮತಶಾಸ್ತ್ರಮಂ ವಿರಚಿಸಿದರ್.ಅಲ್ಲಿ ಮುಂಡಶಾಲಾಯನನೆಂಬ ಬ್ರಾಹ್ಮಣಂ ದಶದಾನಮಂ ಕಲ್ಪಿಸಿ ರಾಜನಂ ಮೆಚ್ಚಿಸಿದನಾಗ ಜೈನರಲ್ಲದೆ ಕೆಲಂಬರು ಇತರ ಮತಂಗಳಂ ನಂಬಿದರು. ಆ ಕಾಲದೊಳೆ ಹರಿವರ್ಷದ ಹರಿಪುರಾಧೀಶ್ವರ ಪವನಂಜಯವಿದ್ಯಾಧರಂಗೆ ಮೃಕಂಡುವೆಂಗಳ್ಗೆ ಮಾರ್ಕಂಡೇಯನೆಂಬ ವಿದ್ಯಾದರಂ ತನ್ನ ಸತಿವೆರಸು ವನಕ್ರೀಡೆಯೊಳಿರೆ ಜನ್ಮಾಂತರ ವೈರಿಯಪ್ಪ ಚಿತ್ರಾಂಗದನೆಂಬ ದೇವಂ ಕೊಲಲ್‌ಕೊಂಡು ಪೋಗುತ್ತಿರೆ ಸೂರ್ಯಪ್ರಭದೇವಂ ಮಾಡಿಸಿದೊಡೆ ಆ ಮಿಥುನಂಗಳಂ ಅಂಗದೇಶದ ಚಂಪಾಪುರದುದ್ಯಾನದೊಳು ಬಿಟ್ಟು ಪೋಗೆ ಆ ಪುರಾಧಿಪತಿ ಚಂದ್ರಕೀರ್ತಿಯೆಂಬನ ಪುತ್ರನಾಗಳಿಯಲು ಮತಂಗಜಮನರ್ಚಿಸಿದೊಡಾ ಮಿಥುನಂಗಳನೇರಸಿಕೊಂಡುಬರ್ಪುದು ಪೂರ್ವಾಪರದ ಸಂಬಂಧದಿಂ ಹರಿಮಾರ್ಕಂಡೇಯನೆಂಬನ್ವರ್ಥಮಾಗೆ ಆತಂಗೆ ಹರಿಯೆಂಬ ಮಗಂ ಆತಂಗೆ ಮಹಾಹರಿಯೆಂಬಿವರನ್ವಯನೊಳು ಪದಿಮೂವರು ಅತಿಕ್ರಾಂತರಾಗೆ

ಇತ್ತಲು ರಾಜಗೃಹಪಟ್ಟಣದೊಳು ಸುಮಿತ್ರಮಹಾರಾಜಂಗಂ ಪದ್ಮಾವತಿ ಮಹಾದೇವಿಗಂ ಪುಟ್ಟಿದ ಮುನಿಸುವ್ರತಭಟ್ಟಾರಕಂ ತೀರ್ಥಂಕರನಾಗಿ ಧರ್ಮೋಪದೇಶಂಗೆಯ್ದು ಕರ್ಮವೈರಿಯಂ ಜಯಿಸಿ ಮುಕ್ತಿಗೆ ಸಂದಂ. ಅಲ್ಲಿಂದಿತ್ತ ಆ ವಂಶದೊಳು ಕುಣಿಕಮಹಾರಾಜಂ ಕುಂಡಿನಾಪುರಮಂ ಮಾಡಿಸಿದಂ. ಅವನ ಮಗಂ ಪುಲೋಮನುಂ ತತ್ಸೂನು ಪೌಲೋಮನುಂ ಆತನ ಮಗಂ ಚರಮನುಂ ರೇವಾತಟದೊಳು ವನಮಾಲಾಪುರಮಂ ಮಾಡಿಸಿದಂ. ಆತನ ಮೊಮ್ಮಗನಪ್ಪ ಮಹಿದತ್ತಂ ಕುಲ್ಯಮೆಂಬ ಪುರಮಂ ಮಾಡಿಸಿದಂ. ಆತನ ಮಗಂ ಅರಿಷ್ಟನೇಮಿಯುಂ ಮತ್ಸ್ಯರಾಜರೆಂಬೀರ್ವರು ಮತ್ಸ್ಯಪುರಮಂ ಭದ್ರಪುರಮಂ ಮಾಡಿಸಿದರು ಆತಂಗೆ ಅಯೋಧನಂ ಮೊದಲಾಗೆ ನೂರ್ವರು ಕುಮಾರರಾದರು. ಅಯೋಧಂಗೆ ಸ್ಥೂಲನುಂ ಸ್ಥೂಲಂಗೆ ವ್ಯಾಲಂ ವ್ಯಾಲಂಗೆ ಸೂರ್ಯನೆಂಬವಂ ಪುಟ್ಟಿ ಸೂರ್ಯಪುರಮಂ ಮಾಡಿಸಿದಂ. ಆತನ ಮಗಂ ಚರಮನೆಂಬಂ ವಜ್ರಪುರಮಂ ಮಾಡಿಸಿದಂ. ಆತರನ ಮಗಂ ದೇವದತ್ತಂ ಯುದ್ಧದಿಂ ಮಿಥಿಲಾಪುರಮಂ ಕೊಂಡಂ. ಅಲ್ಲಿಂದಿತ್ತ ಆ ವಂಶದೊಳು ಹರಿಷೇಣನುಂ ನಭಷೇಣನುಂ ಸಾರಂಗನುಂ ಭದ್ರನುಂ ಅಭಿಚಂದ್ರನುಮೆಂದು ಕ್ರಮದಿಂದಾದರು. ಆ ಅಭಿಚಂದ್ರನು ಸೂಕ್ತಿಮತಿನದೀತೀರದೊಳು ಸ್ವಸ್ತಿಕಾವತಿಪುರಮಂ ಮಾಡಿಸಿದಂ. ಆತಂಗೆ ವಸುಮತಿಯೆಂಬಳ್ಗಂ ವಿಶ್ವಾವಸು ಎಂಬರಸನಾತಂಗೆ ವಸು ಎಂಬ ಮಗಂ ಪುಟ್ಟಿ ಕ್ಷೀರಕದಂಬನೆಂಬ ಮಹೋಪಾಧ್ಯಯನ ಸನ್ನಿಧಿಯಲ್ಲಿ ವಿದ್ಯಾಪಾರಗನಾಗಿ ರಾಜ್ಯದೊಳು ನಿಂದು ಸತ್ಯವಸುವೆನಿಸಿರ್ದು ಕ್ಷೀರಕದಂಬನ ಮಗನಪ್ಪ ಪರ್ವತಂಗೆ ಮಹಾಕಾಳಾಸುರದೇವಂ ಸಹಾಯನಾಗಿ ಕಾಲದೋಷದಿಂ ಹಿಂಸಾಯಜ್ಞಮಂ ಕಲ್ಪಿಸಿ ಮಾಡುತ್ತಿರ್ಪಿನಂ ನಾರದಪ್ರಭೃತಿಗಳು ವಾಗ್ವಾದಮಂ ಮಾಡೆ ಸತ್ಯವಸುವಂ ಸಾಕ್ಷೀಭೂತಮಂ ಮಾಡಿ ಬೆಸಗೊಳ್ವುದಂ ಸಂರಕ್ಷಣಾನಂದನೆಂಬ ರೌದ್ರಧ್ಯಾನದಿಂ ಹಿಂಸಾಯಜ್ಞಮಂ ಪರಮಾರ್ಥಮೆಂದು ನುಡಿಯೆ ಭೂಮಿ ಬಾಯಿದೆರೆದು ತದ್ವಿವರದೊಳೆ ನಿಮಗ್ನನಾದಂ. ಆ ವಸುವಿಂಗೆ ಹತ್ತು ಕುಮಾರಿರ್ದರವರೊಳು ಅಷ್ಟವಸುಗಳು ತ್ರಿಮಾಸದೊಳೆ ಮೃತವಾಗೆ ಅಸತ್ಯಕ್ಕೆ ಅಳುಕಿಸುವ ಬೃಹದ್ವಸುಗಳೀರ್ವರು ರಾಜಗೃಹಮಂ ಸೇರಿದರು. ಅಲ್ಲಿ ಮಿಥಿಳೆಯಂ ಸೇರಿದ ಬೃಹದ್ವಸುವಿಗೆ ಸುಬಾಹುಯೆಂಬನಾತನ ವಂಶದಳು ದೀರ್ಘಬಾಹು ವಜ್ರಬಾಹು ಬಲಸ್ತನುಂ ಭಾನುವುಂ ಸುಭಾನುವುಂ ಭೀಮ ಮೊದಲಾದವರಾದರು. ಅಲ್ಲಿ ಪೃಥ್ವೀರಾಜನ ಸುತರಪ್ಪ ಜನಕನುಂ ಕನಕನುಂ ಪುಟ್ಟಿದರು. ಆ ಜನಕಂಗೆ ಪ್ರಭಾಮಂಡಲನುಂ ಸೀತಾದೇವಿಯೆಂಬ ಮಕ್ಕಳಾದರು. ಆ ಸೀತೆಯಂ ರಾಮಂಗೆ ಕೊಡುವಲ್ಲಿ ಭೌತಿಕರೆಲ್ಲಂ ಬಂದು ನಾನಾ ಪ್ರಕಾರದೊಳು ಕೇಳಿಕೊಂಡು ಯಜ್ಞಮಂ ಮಾಡಿದರು.

ಮತ್ತಂ ನಮಿತೀರ್ಥಸಂತಾನದೊಳು ಆ ಹರಿವಂಶದೊಳು ಯದು ಎಂಬರಸಂ ಪುಟ್ಟಿ ಪ್ರಸಿದ್ಧಿವಡೆದುದರಿಂದಾ ವಂಶಜರ್ಗೆ ಯಾದವರೆಂಬಭಿಧಾನಮಾಯ್ತು. ಯದು ವಿನ ಮಗಂ ನರಪತಿಯೆಂಬನಾತಂಗೆ ಸೂರ ವೀರರೆಂಬೀರ್ವರ್ ಮಕ್ಕಳಾಗಲಾ ವೀರ ನೃಪಂ ಮಧುರಾಪುರದೊಳಿರ್ದಂ. ಆ ಸೂರಮಹಾರಾಜಂ ಶೌರಿಪುರಮಂ ಮಾಡಿಸಿದನಾತಂಗೆ ಅಂಧಕವೃಷ್ಟಿ ನರಪತಿವೃಷ್ಟಿಳಾದರು. ಆ ಅಂಧಕವೃಷ್ಟಿಗೆ ಸಮುದ್ರವಿಜಯಂ ಮೊದಲಾದ ದಶಕುಮಾ[ರರುಂ] ಕಿರಿಯ ವಸುದೇವನುಂ ಕುಂತಿ ಮಾದ್ರಿಯರು ಪುಟ್ಟಿದರು. ರಾಜಗೃಹದೊಳಿರ್ದ ವೀರನೃಪಂಗೆ ಭೋಜವೃಷ್ಟಿ ಮೊದಲಾದವರಾಗಿ ಆ ಸಂತತಿಯೊಳು ಬೃಹದ್ರಥನೆಂಬನಾತಂಗೆ ಅರ್ಧಚಕ್ರಿಯಾದ ಜರಾಸಂಧನುಂ ಅಪರಾಜಿತರು ಮೊದಲಾದವರಾದರು. ಆ ಜರಾಸಂಧಂಗೆ ಕಾಳಿಂದಿಯೆಂಬ ಅರಸಿಯೆಂಬಳ್ಗೆ ಕಾಲಯಮಾದಿ ಪುತ್ರರುಂ ಜೀವಂಜಸೆ ಮೊದಲಾದ ಪುತ್ರಿಯರುಂ ಪುಟ್ಟಿದರ್.

ಇತ್ತಲ್‌ಅಂಧಕವೃಷ್ಟಿಯ ಕಿರಿಯ ಕುಮಾರಂ ವಸುದೇವಂಗೆ ರೋಹಿಣಿಮಹಾ ದೇವಿಗಂ ಬಲಭದ್ರನುಂ ದೇವಕಿಮಹಾದೇವಿಗೆ ಕೃಷ್ಣನುಂ ಪುಟ್ಟಿ ಗೋಕುಲದೊಳ್‌ಬೆಳೆದು ಅನೇಕ ಸತ್ವಯುತನಾಗಿ ಬಂದು ಕಂಸನಂ ವಧಿಯಿಸೆ ಜರಾಸಂಧನ ಕಾರಣಮಾಗಿ ಪುತ್ರಮಿತ್ರರ್ ಸಹಿತ ಸಮುದ್ರತಟಮನೆಯ್ದಿ ದರ್ಭಶಯನಮಂ ಮಾಡಿದೊಡೆ ದೇವೇಂದ್ರಂ ಬಂದು ತ್ರಿಲೋಕಸ್ವಾಮಿ ಪುಟ್ಟುವನೆಂದು ಸಮುದ್ರಮಧ್ಯದೊಳ್‌ಸ್ಥಲಮಂ ಮಾಡಿ ಸೆಜ್ಜೆ ಪ್ರಾಸಾದ ಗೋಪುರಾಟ್ಟಾಳಕ ಮೊದಲಾದನೇಕ ಲಕ್ಷಣಮುಳ್ಳ ದ್ವಾರಾವತಿ ಪುರಮಂ ನಿರ್ಮಿಸೆ ಅಲ್ಲಿರ್ದು ಸಮುದ್ರವಿಜಯಮಹಾರಾಜಂಗಂ ಶಿವದೇವಿಮಹಾ ದೇವಿಗಂ ಗರ್ಭಾವತರಣಕಲ್ಯಾಣಪೂರ್ವಕಂ ನೇಮಿತೀರ್ಥಂಕರರ್ ಪುಟ್ಟಿ ಕೇವಲ ಜ್ಞಾನಮಂ ಪಡೆದು ಧರ್ಮಮಂ ಪೇಳಿ ಊರ್ಜಯಂತಗಿರಿಯೊಳ್‌ಮೋಕ್ಷಲಕ್ಷ್ಮೀಯಂ ಕೈಕೊಂಡರ್.ಬಲನಾರಾಯಣರ್ ಜರಾಸಂಧಂ ಮೊದಲಾದನೇಕ ಶತ್ರುಗಲಂ ಜಯಿಸಿ ಕೃಷ್ಣನುಂ ತ್ರಿಖಂಡಾಧಿಪತಿಯಾಗಿ ಸಹಸ್ರಕಾಲಂ ಚಕ್ರವರ್ತಿತ್ವಮನನುಭವಿಸಿ ದ್ವಾರಾವತಿ ಪುರಂ ನೀರೊಳ್‌ಪೋಗೆ ಕೆಲಂಬರ್ ಪುತ್ರಮಿತ್ರರ್ ಸಹಿತ ಶೌರಿಪುರ ರಾಜಗೃಹ ಮೊದಲಾದ ಪಟ್ಟಣದೊಳಿರ್ದು ತೀರ್ಥಂಕರಪುಣ್ಯಮಂ ಕಟ್ಟಿಕೊಂಡು ಪೋಗೆ ಅಲ್ಲಿಂದಿತ್ತ ವಿಶ್ವಸೇನನೆಂಬರಸಂ ಕಾಶೀಪಟ್ಟಣಮನಾಳವಂದು ಬ್ರಾಹ್ಮಣರೊಳೆ ತಮತಮಗೆ ಸಂವಾದಮಗೆ ಎರಡು ಭಾಗಮಾಗಿ ಭೋಜನ ಪ್ರತಿಭೋಜನಮಂ ಕೊಳ್ಳದೆ ಎಂಬತ್ತೆರಡು ಭಾಗಮಾಯ್ತು. ಬಳಿಕಾ ಎಂಬತ್ತುನಾಲ್ಕು ಸಹಸ್ರ ವರ್ಷಂ ಸಲೆ ವರ್ಧಮಾನತೀರ್ಥಂಕರ ಕಾಲದೊಳ್‌ ಶ್ರೇಣಿಕಮಹಾಮಂಡಲೇಶ್ವರಂ ಪುಟ್ಟಿ ವಿಪರೀತ ಮಿಥ್ಯಾತ್ವಮಂ ತಾಳ್ದಿರ್ದು ಚೇಳಿನಿಮಹಾದೇವಿಯಿಂದಾ ಸಮ್ಯಕ್ತ್ವಂ ಪುಟ್ಟೆ ಶ್ರೋತೃ ಮುಖ್ಯನಾಗಿ ತೀರ್ಥಂಕರಪುಣ್ಯಮಂ ಕಟ್ಟಿಕೊಂಡಂ. ಆ ವಂಶದೊಳೆ ಸತ್ಯಂಧರ ಜೀವಂಧರ ಮಹೀಂಧರ ವೀರಭೋಜರೆಂಬರಸುಗಳಾದರ್.ಅವರೊಳ್‌ ವೀರರಾಮ ರಾಜನೆಂಬಂ ಪಾಂಡ್ಯದೇಶದ ದಕ್ಷಿಣ ಮಧುರೆಯೊಳ್‌ ಪಾಂಡುವಂಶಜನಪ್ಪ ಧರ್ಮ ಶೇಖರನೆಂಬಂ ನಿಸ್ಸಂತಾನಮಾಗೆ. ಅಲ್ಲಿಗೆಯ್ದಿ ಕಿರೀಟಪತಿಯೆನಿಸಿ ರಾಜ್ಯಮಂ ಪಾಲಿಸುತ್ತಿರ್ದನವನ ಸಂತಾನದೊಳ್‌ ವೀರಪಾಂಡ್ಯ ಕೂನಪಾಂಡ್ಯ ಬಲ್ಲಾಶರುದ್ಭವಿಸಿದರ್.

ಇತ್ತಲ್‌ಉಜ್ಜಯಿನಿಪಟ್ಟಣದೊಳ್‌ ಗೋವಿಂದರಾಜನ ಪುತ್ರನಾದ ವಿಕ್ರಮಾದಿತ್ಯನೆಂಬ ರಾಜಂ ವೀರಸ್ವಾಮಿ ಮುಕ್ತರಾದ ೬೦೫ ವರ್ಷದಂದು ತನ್ನ ಶಕೆಯಂ ಬರೆಯಿಸಿದಂ. ಬಳಿಕ ನೂರಮೂವತ್ತಾರು ವರ್ಷ ಸಲ್ವಿನ ಮಾಘಣಂದಿಮುನಿಗಂ ಕುಲಾಲಸ್ತ್ರೀಗಂ ಪುಟ್ಟಿದ ಶಾಲೀವಾಹನ ಶಕರಾಜಂ ಬಹುಧಾನ್ಯಸಂವತ್ಸರಾರಭ್ಯ ತನ್ನ ಶಕೆಯಂ ಪ್ರಕಟಿಸಿದಂ. ಅಲ್ಲಿಂದಿತ್ತ ಯದುವಂಶದೊಳ್‌ ರಾಜಾದಿತ್ಯನಿಂಬಂ ಗಣಿತಶಾಸ್ತ್ರಮಂ ಕನ್ನಡದಿಂ ಮಾಡಿದಂ. ಭೂಪಾಲನೆಂಬರಸಂ ಭೂಪಾಲಸ್ತೋತ್ರಮಂ ಮಾಡದಂ. ಕೂನಪಾಂಡ್ಯನ ಪುತ್ರನಪ್ಪ ಹೊಯಿಸಳಬಲ್ಲಾಳಂ ರಾಜಮಲ್ಲನನುಜ್ಞೆಯಿಂ ದ್ವಾರಸಮುದ್ರದೊಳ್‌ ಬೀಡಂ ಮಾಡಿ ವಿನಯಾದಿತ್ಯಂ ಮೊದಲಾದ ಮಕ್ಕಳಂ ಪಡೆಯೆ ಆ ವಂಶದೊಳ್‌ ನವಬಲ್ಲಾಳರ್ ಸಾಳ್ವರಾಯರೆಂದಾದರ್.ಕಡೆಯ ವೀರಬಲ್ಲಾಳಂ ರಾಮಾನುಜನ ಶಿಷ್ಯನಾಗಿ ವೀರ ವೈಷ್ಣವನಾಗಿರ್ದು ಪಾದಶಾಯಿಯಿಂ ಚಂದ್ರದ್ರೋಣ ಪರ್ವತದ ಗುಹೆಯೋಳ್‌ ಮೃತನಾದನಾತನ ಮಕ್ಕಳ್‌ಕೆಲಕೆಲವು ನಾಡೊಳಿರ್ದು ಪಾಲಿಸಿದರ್.ಚೋಳ ಬಲ್ಲಾಳಡಣಾಯಕರೆಂದಿವರ್ ಶಕವರ್ಷ ೭೫೦ ರಿಂದ ತೊಡಗಿ ೧೧೦೦ ವರ್ಷ ಪರಿಯಂತರ ೩೫೦ ವರ್ಷ ಇವರಾಳಿಕೆ ಡಿಳ್ಳಿ ಪಾದಶಾಯನ ಬಗೆಯಲ್ಲಿ ವಿದ್ಯಾನಗರಿ ಸಂಬಂಧದಿಂದಲು ತೆಲುಗರಸುಗಳಿಂದಲೂ ನಡೆದು ವರ್ಷ ೩೦೦ ಅಷ್ಟರಲ್ಲಿ ಕರ್ಣಾಟ ದೇಶಕ್ಕೆ ೩ ವರ್ಷ ಬರಗಾಲಂ ಬಂದು ಕ್ಷಾಮಂ ಬಂದೊಡೆ ಕೆಲವು ಯದುವಂಶದರಸುಗಳ್‌ ಮೊದಲಾಗಿ ಅರಸುಗಳ್‌ ಶೆಟ್ಟಿಗಳ್‌ ಮುಂತಾದವರೆಲ್ಲಾ ವಿಜಯನಗರಮಂ ಸೇರಿದರ್.ಇಲ್ಲಿರ್ದರಸುಗಳ್‌ ಕೆಲರ್ ರಾಯರುಗಳೊಳ್‌ ಕೂಡಿದರ್.ಕೆಲಂಬರ್ ತೆಲುಗರಾದರ್.ಕೆಲಂಬರ್ ಕಿರಾತರುಗಳೊಳ್‌ಕೂಡಿದರ್.ಕೆಲಂಬರ್ ರಾಯರ ಕೆಳಗೆ ಪ್ರಭುಗಳಾಗಿರ್ದರ್.ಶಕವರ್ಷ ೧೩೩೬ನೆ ಜಯಸಂವತ್ಸರಾರಭ್ಯ ಪರಾಭವ ಸಂವತ್ಸರದೊರೆಗೆ ವಿಜಯನಗರದಲ್ಲಿ ಕ್ಷಾಮ ಪುಟ್ಟಿ ಅವಾಂತರಂ ಪಿರಿದಾಗಲಲ್ಲಿರ್ದ ಅರಸುಗಳ್‌ಶೆಟ್ಟಿಗಳ್‌ಮುಂತಾದವರ್ ಬಂದು ಕರ್ಣಾಟಕ ಮೊದಲಾದ ದೇಶಂಗಳಂ ಸೇರಿದರ್.

ಅವರಲ್ಲಿ ಯದುವಂಶದರಸುಗಳ್ ಮೂವರ್ ಬಂದು ನುಗ್ಗೆಹಳ್ಳಿಯೊಳಿರ್ದರವರೊಳೆ ಕಿರಿಯ ವಿಜಯರಾಜನೆಂಬೊಂ ಮಹಿಸೂರ ಕುಂಭಕಾರಕೊಪ್ಪಿಲೊಳಿರ್ದ ಗೃಹಮಂ ಮಾಡಿರ್ದು ತೋಟ ಗದ್ದೆಗಳ ವ್ಯವಸಾಯದಿಂದಿರುತ್ತಮಲ್ಲಿರ್ದ ರೂಪವತಿಯಪ್ಪ ಕುಲಾಲಸ್ತ್ರೀಯನ್ನು ಪರಿಗ್ರಹಿಸಲವರ್ ಕೋಪಿಸಿರ್ದೊಡಲ್ಲಿರ್ದ ಐದು ಗ್ರಾಮಂಗಳಂ ಗುತ್ತಿಗೆ ಮಾಡಿಕೊಂಡಾಕೆಯಂ ಅರಸಿಯಂ ಮಾಡಿಕೊಂಡಿರಲಾಕೆಗೆ ಒಂದು ಪೆಣ್ಗೂಸು ಅತಿ ಸೌಂದರ್ಯದಿ ಪುಟ್ಟಲದಂ ಸಲಹುತ್ತಿರ್ದನಿವರೊಳೆಯರಸಂ ಕಾಲಮಂ ಕಾಣಲಾತನರಸಿ ಗ್ರಾಮಂಗಳಂ ಬಿಡನೆ ನಡಸುತ್ತಿರಲಲ್ಲಿ ತೊರೆಯರತಿಪ್ರಬಲಮಾಗಿಯಾ ಕನ್ನೆಯಂ ಬೇಡಲ್‌ಮದುವೆಯಂ ಮಾಡಲೆಂದು ಯತ್ನಮಂ ಮಾಳ್ಪಾಗಲಾಕೆಯ ಸಖಿಯರ್ ಉದ್ದಿನಬೇಳೆಯಂ ತೊಳೆಯಲ್‌ಗೊಬ್ಬಳಿಕಟ್ಟೆ ಕೆರೆಗೆ ಬಂದು ದುಃಖಂಗೆಯ್ಯುತ್ತಿರ್ಪಾಗಳ್ ಯದುವಂಶದ ವಿಷ್ಣುವರ್ಧನನ ಸಂತತಿಯವರ್ ದೇವರಾಜ ತಿಮ್ಮರಾಜ ಶಾಂತರಾಜರೆಂಬ ಮೂವರ್ ಬಂದರವರೊಳ್ ತಿಮ್ಮರಾಜಂ ದನಗನಹಳ್ಳಿಯೊಳ್ ನಿಂತನುಮುಳಿದೀರ್ವರ್ ಕಪ್ಪಡಿಯಂ ಸೇರಿರ್ದು ಜಂಗಮವೇಷಧಾರಿಗಳಾಗಿ ರಾಜ್ಯ ನಿರೀಕ್ಷಣಾರ್ಥಂ ಬಂದು ಮಹಿಷಾಪುರದ ಕೆರೆಯ ಏರಿಯ ಮೇಲಿರ್ದು ಅಳುತ್ತಿರ್ಪ ಆಳಿಯರಿಂ ಮದುವೆ ವೃತ್ತಾಂತಮಂ ಕೇಳಿ ಪುರದೊಳಗಂ ಪೊಕ್ಕು ಉಪಾಯಾಂತರದೊಳೆ ಕೋಣೆಕೊತ್ತಲೆಯಾಗಿ ಚಪ್ಪರಮಂ ನಿರ್ಮಿಸಿ ಖಾತಂಗಳಂ ಮಾಡಿ ಒಬ್ಬರಿಬ್ಬರ್ ಮೂವರಂ ಬರಿಸಿ ಪರಿಹರಿಸುತ್ತಿರಲ್‌ಉಳಿದವರೆಲ್ಲಂ ಓಡಿಪೋಪುದು ತಾವೆ ಪ್ರಭುಗಳಾದರ್. ಅವರೊಳ್ ಶಾಂತರಾಜನೆಂಬಂ ಅಣ್ಣನೊಳ್ ವಿರೋಧಮಾಗಿ ಕಾರುಗೆಹಳ್ಳಿಯೊಳ್ ನಿಂತು ಕೆಲವು ಗ್ರಾಮಂಗಳಂ ಸ್ವಾಧೀನಂ ಮಾಡಿಕೊಂಡಿರ್ದಂ. ಇತ್ತ ದೇವರಾಜಂ ಮೈಸೂರಿಗೆ ಸ್ವಲ್ಪ ಕೆಲವು ಗ್ರಾಮಂಗಳಂ ಸ್ವಾಧೀನಕ್ಕೆ ತಂದು ಮಲಯೂರ ಜೈನಬ್ರಾಹ್ಮಣ ಶಾಂತಯ್ಯ ಪದುಮಣ್ಣಯ್ಯರೆಂಬೀರ್ವರಂ ಅಧ್ಯಕ್ಷರಂ ಮಾಡಿ ಹುಲ್ಲನಹಳ್ಳಿಯ ರಾಜಪುತ್ರಿಯಪ್ಪ ಕೃಷ್ಣಾಜಮ್ಮಣ್ಣಿಯಂ ಮದುವೆನಿಂದ ಬೆಟ್ಟದೊಳ್ ಮುನ್ನ ತಮ್ಮ ವಂಶದ ಬಲ್ಲಾಳರ್ಗೆ ವರಪ್ರಸನ್ನೆಯಾದ ಪದ್ಮಾವತಿದೇವಿಗೆ ವಾಸಂತಿಕಾದೇವಿಯೆಂದು ಪೂಜಿಸುತ್ತಿರ್ದರ್.ಆ ಮಹಾದೇವಿಗೆ ಚಾಮುಂಡೇಶ್ವರಿಯೆಂಬ ಅಭಿದಾನಮನಿಟ್ಟು ಬೆಟ್ಟದೊಳ್ ಗುಡಿ ಗೋಪುರಮಂ ಮಾಡಿಸಿ ಪೂಜಿಸುತ್ತ ಮೈಸೂರಿಗೆ ಕೋಟೆಯಂ ಕಟ್ಟಿಸಿ ಸುಖಮಿರಲ್‌ಇತ್ತ ಕಾರುಗೆಹಳ್ಳಿಯ ಶಾಂತೊಡೆಯರ್ ಆ ಬೆಟ್ಟದ ಮೇಲೆ ಮಹಾಬಲೇಶ್ವರನ ಗುಡಿಯಂ ನಿರ್ಮಿಸಿ ಚಾಮುಂಡೇಶ್ವರಿಯಂ ಸ್ಥಾಪಿಸಿದಂ.

ಇತ್ತಲ್‌ಕೆಲವಾನುದಿವಸದಿಂ ಮಾರನಾಯಕನೆಂಬ ತೊರೆಯನತಿಪ್ರಬಲನಾಗಿ ತನ್ನ ಜನಮಂ ಕೂಡಿಕೊಂಡು ಮೈಸೂರ ದೇವರಾಜ ಒಡೆಯನಂ ಕೊಲಲ್‌ಬಪ್ಪುದು ಶಾಂತಯ್ಯಂ ತಡೆಯಲಾಗಿ ಶಾಂತಯ್ಯನಂ ಅರಸನಂ ಸಹಿತಂ ಕೊಂದು ಅರಮನೆಯೊಳಿರ್ದಖಿಲರಂ ಪರಿಹರಿಸುವಲ್ಲಿ ರಾಜನರಿಸಿಯು ಗರ್ಭಿಣಿಯಾಗಿರ್ದು ಭೀತಿಯಿಂ ಪಾಸಿನ ಮರೆಯೊಳ್ ಕದವಂ ಮರೆಗೊಂಡು ಮೈಗರೆದಿರ್ಪಿನಮಾ ರಾತ್ರಿಯೊಳ್ ಪದುಮಣ್ಣಯ್ಯಂ ಅರಮನೆ ಬಾಗಿಲಿಗೆ ಬಂದು ದುಃಖಿಸುತ್ತಿರ್ಪಿನಬಳೆಯ ಧ್ವನಿಯಂ ಕೇಳ್ದು ಅರಸಿಯಂ ಕಂಡು ವಿಕೃತವೇಷದಿಂ ತನ್ನ ಗೃಹಕ್ಕೆಯ್ದಿರ್ದು ಮರುದಿವಸಂ ನಾಯಕನಂ ಕಂಡು ತನ್ನ ಗ್ರಜಂಗುತ್ತರಕ್ರಿಯೆಯಂ ಮಾಡಲ್‌ಏಚಗನಹಳ್ಳಿಗೆ ಪೋಪುದಕ್ಕೆ ಮೂರು ಜನಕ್ಕೆ ಬಾಗಿಲ್ಗಪ್ಪಣೆಯಂ ಮಾಡಿಸಿಕೊಂಡು ಪೋಗಲಿತ್ತಲ್‌ರಣವಂ ಶೋಧಿಸುವಲ್ಲಿ ಅರಸಿಯ ಪೆಣನಂ ಕಾಣದೆ ಪದಮಣ್ಣಯ್ಯಂ ಕರೆದೊಯ್ದನೆಂದು ತೀಕ್ಷ್ಣ ಪುರುಷರನಟ್ಟಿ ಕೊಲ್ವುದೆಂದು ಪೇಳೆಯವರ್ ಬಂದು ದೈವಾಯತ್ತದಿಂ ಕೊಲುವುದಂ ಬಿಟ್ಟು ಈತನಿಂ ತಪ್ಪಿಲ್ಲವೆಂದು ಪೋದರ್.ಇತ್ತಲ್‌ಅರಸಿಯಂ ತೌರುಮನೆಗೆಯ್ದಿಸಲಲ್ಲಿ ನವಮಾಸಂ ನೆರೆದು ರಾಜಒಡೆಯರ್ ಪುಟ್ಟಿದರ್.

ಆತನು ಬಾಲ್ಯಕಾಲದೊಳೆ ತನ್ನ ರಾಜ್ಯಮಂ ಕೊಳ್ಳಲ್‌ಬೆಟ್ಟದಪುರ ಪಿರಿಯಾಪಟ್ಟಣ ಮುಂತಾದರಸುಗಳ ಬಲಮಂ ಸಹಾಯ ಮಾಡಿಕೊಂಡು ಪದ್ಮಣ್ಣಯ್ಯಂ ಮೈಸೂರ ಹಳೆಪೈಕದ ಜನರೆಲ್ಲರನೊಳಗುಮಾಡಿಕೊಂಡು ಅವವೇಳೆಯ ಹೊತ್ತಿನೊಳ್ ಮೈಸೂರಂ ಮುತ್ತಿ ಶಾಂತಯ್ಯನ ಮಗನಾದ ದೊಡ್ಡಶಾಂತಯ್ಯನ ಪ್ರೇರಣೆಯಿಂ ಬೀಗದಕೈಯನೊಪ್ಪಿಸೆ ಕೋಂಟೆಯಂ ಕೊಂಡು ಮಾರನಾಯಕನಂ ಕಡೆಗಾಣಿಸಿ ರಾಜ್ಯದೊಳ್ ನಿಂದು ಮೈಸೂರಿಗೆ ಸಲುವ ಮೂವತ್ತುಮೂರು ಹಳ್ಳಿಗಧೀಶನಾಗಿ ದೊಡ್ಡ ಶಾಂತಯ್ಯನಂ ಮುಂದುಮಾಡಿಕೊಂಡು ಶ್ರೀರಂಗಾರಾಯರಿಂದಾ ಶ್ರೀರಂಗಪಟ್ಟನಮಂ ಪಡೆದು ವೈಷ್ಣವಭಕ್ತನಾಗಿ ಶ್ರೀರಂಗಪಟ್ಟಣದೊಳಿರ್ದ ಆತನ ಕುಮಾರ್ ಬೆಟ್ಟೊಡೆಯ ಚಾಮೊಡೆಯರೆಂಬೀರ್ವರೊಳು ಚಾಮೊಡೆಯರು ಕೆಂಚನಗೂಡು ದನಿಗನಹಳ್ಳಿಯೊಳು ನಿಂತು ಸಂತಾನಾಭಿವೃದ್ಧಿಯಂ ಪಡೆದರ್.ಹಿರಿಯ ಬೆಟ್ಟೊಡೆಯರು ಮೈಸೂರೊಳಿದ್ದು ಬೆಟ್ಟದಕೋಟೆಯ ರಾಜಪುತ್ರಿ ಗೋಪಾಜಮ್ಮನೆಂಬಳಂ ಮದುವೆ ನಿಂದು ತಿಮ್ಮರಾಜ ಒಡೆಯರಂ ಪಡೆದರ್.ಆ ತಿಮ್ಮರಾಜ ಒಡೆಯರ್ಗೆ ಕಳಲೆ ಕಾಂತಾಜಮ್ಮಣ್ಣಿ ಸತಿಯಾಗಲವರ್ಗೆ ಹಿರಿಯಚಾಮರಾಜಒಡಯರು ಪುಟ್ಟಿದರ್.

ಇತ್ತಲ್‌ರಾಜಒಡೆಯರು ಶ್ರೀರಂಗಪಟ್ಟಣಕ್ಕೆ ಅಧೀಶರಾಗಿರ್ದು ಕಾಲಂಗಂಡೊಡೆ ರಾಮರಾಯನೆಂಬಂ ಪಟ್ಟಣಮಂಕೊಂಡು ಮೈಸೂರಿಗೆ ಸಲ್ವ ಹಳ್ಳಿಯೊಳ್ ಹತ್ತು ಹಳ್ಳಿಯ ತನ್ನ ವಶಮಂ ಮಾಡಿಕೊಂಡನು. ಇತ್ತಲ್‌ಮಹಿಸೂರೊಳು ಹಿರಿಯ ಆರುವೆರಳ ಚಾಮರಸ ಒಡೆಯರ್ಗೆ ಬಿಳುಕೆರೆಯ ದೇವರಾಜನ ಸುತೆ ಪದ್ಮಾಜಮ್ಮನೆಂಬವಳರಸಿಯಾಗೆ ಅವರ್ಗೆ ಚಾಮರಾಸ ಒಡೆಯರ್ ಪುಟ್ಟಿದರ್.ಅವರ್ಗೆ ಕೋಟೆ ಅರಸಿನ ಕುಮಾರತಿ ಅಳಕಾಜಮ್ಮನೆಂಬವಳು ಸತಿಯಾದಳು. ಅವರ ಗರ್ಭದೊಳ್ ತಿಮ್ಮರಾಜ ಕೃಷ್ಣರಾಜ ಬೋಳಚಾಮರಾಜರೆಂಬ ಮೂವರರಸುಗಳಾದರಾ ತಿಮ್ಮರಾಜಂ ಯಮ್ಮನಳಿಯೊಳು ಕೃಷ್ಣರಾಜಂಗೆ ಕೆಂಬಲ್ಲು ಬೆಟ್ಟದರೆ ಚಾಮರಾಜಂಗೆ ಮಹಿಸೂರು ಈ ಮೇರೆಯೊಳಿರಲಾ ತಿಮ್ಮರಾಜಂ ಸಿಂಧುವಳ್ಳಿಯ ದೊರೆಯಂ ರಕ್ಷಿಸಿ ಹುಣಸನಾಳ ಪ್ರಭುಗಳಂ ಕೂಡಿಕೊಂಡು ನಂಜನಗೂಡ ಜಾತ್ರೆಗೆ ಹೋಗಿ ಬಿರುದುಂತೆಂಬರ ಗಂಡನೆಂಬ ಬಿರುದಂ ಪೊಗಳಿಸಿಕೊಳ್ಳುತ್ತಿರೆ ನಾಡರಸುಗಳೆಲ್ಲರ್ ಕೂಡಿ ದೊಂಬೀಜಗಳವಂ ಮಾಡೆ ಮುನ್ನೂರಾಳಗಳಿಂದ ಎಲ್ಲಾ ನಾಡರಸುಗಳೆಲ್ಲರ್ ಕೂಡಿ ದೊಂಬೀಜಗಳವಂ ಮಾಡೆ ಮುನ್ನೂರಾಳುಗಳಿಂದ ಎಲ್ಲಾ ನಾಡರಸುಗಳಂ ಜಯಿಸಿ ಬಿರುದಂ ಪ್ರಸಿದ್ಧಿಯಂ ಮಾಡಿ ಉಮ್ಮತ್ತೂರರಸುಗಳಂ ವಶಂ ಮಾಡಿ ಮೋಸಗಾರನೆನಿಸಿದಂ. ಆತನ ಅನುಜಂ ಕೃಷ್ಣರಾಜಂ ಹಲವು ನಾಡ ಪ್ರಭುಗಳಂ ಗೆಲ್ದು ಪ್ರತಾಪಶೀಲನೆನಿಸಿದಂ ಆತನಿಂ ಕಿರಿಯ ಚಾಮರಾಜನೆಂಬವಂ ಅಶನಿಪಾತದೊಳೆ ತಲೆಯ ನವಿರು ಪೋಗಿ ಜಯಸಿದುದರಿಂ ಬೋಳಚಾಮರಸ ಒಡೆಯರೆಂಬನ್ವರ್ಥಮಾಯಿತು. ಆತಂಗೆ ಮರಸೆ ರಾಜಕಮಾರತಿ ವೀರಾಜಮ್ಮಂಗೆ ರಾಜನೃಪನುಂ ಬೆಟ್ಟದ ರಾಜರೆಂಬೀರ್ವರ್ ಕಮಾರರ್ ದೇವಾಜಮ್ಮಣ್ಣಿಗೆ ದೇವರಾಜನುಂ ಚನ್ನರಾಜನುಮೆಂಬೀರ್ವರ್ ಮಕ್ಕಳಾಗೆ ಅಂತು ನಾಲ್ವರ್ ಕಾಮಧೇನುವಿನ ಸ್ತನಗಳಂತೆ ರಾಜ್ಯಮಂ ಪ್ರತಿಪಾಲಿಸುತ್ತಿರ್ದರ್.

ಆ ರಾಜನೃಪಂಗೆ ಬೆಟ್ಟದಕೋಟೆ ರಾಜಪುತ್ರಿಗೆ ನರಸರಾಜನಂ ಇಮ್ಮಡಿರಾಜರೆಂಬ ತನಯರಾಗಿರೆ ಕೆಲವು ನಾಡುಗಳಂ ವಶಂ ಮಾಡಿ ಕಾರುಗೆಹಳ್ಳಿ ವಿಜಯರಾಜನಂ ಮೂಗನರಿದು ಆತನ ಪುರಮಂ ಕೊಂಡು ಕಡಮೆಯ ನಾಡರಸುಗಳಂ ಭಂಗಿಸಿ ಸುಖಮಿರ್ಪಿನಮಿತ್ತಲ್‌ಉತ್ತರದೇಶದ ತುಂಗಭದ್ರಾತಟದೊಳ್ ರಾಜಿಸುತ್ತಿಪ್ಪ ವಿದ್ಯಾನಗರಿಯನಾಳ್ವ ಹರಿಹರ ವೀರಬುಕ್ಕರ್ ಮೊದಲಾದ ಕುರುಂಬರಾಯರಿಂದಿತ್ತ ಲಾಳ ಕುಳಾಧೀಶ್ವರ ವೀರನರಸಿಂಹ ನರಸ ಕೃಷ್ಣಾಚ್ಯುತ ರಾಮರಾಯರೆಂಬೈವರ ತರುವಾಯ ಎಳೆವರೆಯದ ಸದಾಶಿವರಾಯನಾಳ್ದನಾತನ ಸೇನಾಪತಿ ಆಂಧ್ರಕುಲದ ರಾಮರಾಜಂಗೆ ದ್ರಾವಿಡಾಂಧ್ರ ಕರ್ಣಾಟರಾಜ್ಯಮಂ ಕುಡಲಾತಂ ಪತಿಕಾರ್ಯದೊಳಪ್ರತಿಮನಾಗಿಯೊರ್ಮೆಯುತ್ತರ ದಿಗ್ವಿಜಯದೊಳ್ ಉದ್ವೃತ್ತ ಯಮನಂ ಸೇನಾಚಕ್ರಮನೊಕ್ಕಲಿಕ್ಕಿದೊಡಂದಿನಾಜಿಯೊಳಾಳ್ದನನುಜಂ ತಿಮ್ಮರಾಜನಳಿದೊಡುಳಿದರನೊಡ ಗೊಂಡೂರ್ಗೆ ನಡೆತಂದಾಳ್ದನ ಸಿರಿಗೆಳಸಿ ಯಮನಂ ಭಂಗಿಸಿ ತಾನೆ ರಾಯನೆನಿಸಿರ್ದನಾ ವಿದ್ಯಾನಗರಂ ಕಿರಿದು ದಿನದೊಳೆ ತುರುಷ್ಕರಿಂದಳಿದಡಲ್ಲಿಂ ಪೆನಗುಂಡಿಗೆಯ್ತಂದೊಂದೆರಡು ವರುಷಮಿರ್ದು ಹೊಂದಿ ಪೋಪಾಗಳ್ ತನ್ನ ಮೂವರ್ ಕುಮಾರರೊಳ್ ಪಿರಿಯನಪ್ಪ ಶ್ರೀರಂಗರಾಯನಂ ಪೆನಗುಂಡಿಯೊಳಿರಿಸಿ ತೆಲುಂಗನಾಡೊಡೆತನಮಂ ರಾಮರಾಯಂಗಿತ್ತಾತಂಗೆ ಕರ್ಣಾಟದೇಶಾಧಿಪತ್ಯಮನಿತ್ತು ಶ್ರೀರಂಗಪಟ್ಟೋಣದೊಳಿರಿಸಿ ಮೂರನೆ ವೆಂಕಟಪತಿರಾಯನಂ ಚಂದಿರಗಿರಿಯೊಳಿಟ್ಟಾತಂಗೆ ಚೋಳ ಪಾಂಡ್ಯ ತೊಂಡಿರ ಮಂಡಳೇಶ್ವರತ್ವಮನಿತ್ತನವರೊಳ್ ಶ್ರೀರಂಗರಾಯನ ಪುತ್ರನಾಗಳಿಯಲ್‌ವೆಂಕಟಪತಿ ರಾಯನಾಳುತಿರ್ದನ್‌. ಇತ್ತಲ್ ರಾಮರಾಜಂ ಕಲದಿವಸದಿಂ ಕಾಲಂಗಂಡೊಡಾತನ ಸುತಂ ತಿರುಮಲರಾಜನಾದಿಯಾಗಿ ಶ್ರೀರಂಗಪಟ್ಟದೊಳಿರ್ದು ಮಟ್ಟಿವೆಂಕಟಯ್ಯನೆಂಬ ದಳವಾಯಿಯನಿರಿಸಿ ತಾವು ಎಲೆಯವರಾದುದರಿಂ ಪೆನಗುಂಡಿಗೆಯ್ದಿ ತಮ್ಮ ಕಿರಿಯೆಯ್ಯನಲ್ಲಿ ಬೆಳೆಯುತ್ತಿರಲಿತ್ತ ವೆಂಕಟಪತಿರಾಯಂ ಮಧುರೆಯ ವೀರಪ್ಪನಾಯಕನ ಮೇಲೆತ್ತಿ ನಡೆದು ಮುತ್ತಿದೊಡಾ ವೀರಪ್ಪನಾಯಕಂ ಭೇದೋಪಾಯಮನವಲಂಬಿಸೆ ರಾಯನ ಸೇನಾನಾಯಕರ್ಗೆಲ್ಲಂ ದ್ರವ್ಯ ವಸ್ತ್ರ ಭುಷಣಾದಿಗಳಂ ಕಳುಹಿಸಿದೊಡಾ ಲಂಚಕ್ಕಂ ತಿರುಮಲರಾಯನೊಡಂಬಟ್ಟು ಕಾರ್ಯಮಂ ಬಿಟ್ಟುದಕ್ಕೆ ತನ್ನಾಳ್ದ ಕಿರಿ ಯಯ್ಯನೊಳ್ಗೆಂಟುಗೊಂಡು ತನ್ನ ಕರಿ ತುರಗ ಪದಾತಿಗಳ್ವೆರಸಿ ಶ್ರೀರಂಗಪಟ್ಟಣಕ್ಕೆ ಬಂದೊಡಾ ವಾರ್ತೆಯಂ ಮಹಿಸೂರ ರಾಜನೃಪಂ ಕೇಳ್ದು ತನ್ನನುಜ ಸೇನಾನಿ ಮಿತ್ರರೊಳಾಳೋಚಿಸಿ ಈತನೆಮ್ಮ ಪಿತೃಘಾತಕನಿವನಂ ಪಟ್ಟಣದಿಂ ಪೊರಮಡಿಸಲಕ್ಕುವೆಂದಾತನ ಸಪ್ತಾಂಗಸತ್ವಮನಾರಯ್ಯಲ್ ಗೂಢಚರರನಟ್ಟಲವರ್ ಪೋಗಿ ಕತಿಪಯದಿಸಮಿರ್ದಾತನ ಜೂಜು ಬೇಂಟೆ ಮೊದಲಾದ ವ್ಯಸನದೇಳ್ಗೆಯಂ ಸಾಮಂತರ ಪಾಪಚರ್ಯಮಂ ಅಧಿಕಾರಿಗಳುಗ್ರ ಗ್ರಾಮಾನುಗ್ರಾಮದ ಪ್ರಜೆಗಳ್ಗೆ ಸಿದ್ಧಾಯಮಂ ಪೆರ್ಚಿಸಿ ಕಾಣಿಕೆ ಕಡ್ಡಾಯ ವರಿವಟ್ಟಮನೆತ್ತಿ ಕೆಡಿಸುತ್ತಿಪ್ಪುದುಂ ಮೊದಲಾದ ಭೋಗಂಗಳ ಚಿಂತೆಯಿಂ ಮತ್ತರಾಗಿರ್ಪರೆಂದಾತನ ಸತ್ವಮಂ ತಿಳಿದು ಗೂಢಚರರ್ ಪೇಳೆ ರಾಜೃನಪನವನ ಮೇಲೆತ್ತಿ ಪೋಗಲುದ್ಯುಕ್ತನಾಗಿ ತನ್ನ ನಾಡರಸು ಗಳಂ ಬರಿಸುತ್ತಿರಲಿತ್ತ ತಿರುಮಲರಾಯನೊಡ್ಡೋಲಗದೊಳಿರಲಾ ನಾಡಿನ ಅಖಿಲ ಪ್ರಭುಗಳೊಟ್ಟುಗೂಡಿ ಬಂದೆರಗಿ ಮಹಿಸೂರವರಟ್ಟುಳಿ ಪಿರಿದಾಗಿಪ್ಪುದೆಂದು ಗಲಭೆಯಿಂ ಕೋಲಾಹಲಂ ಮಾಡುತ್ತಿರಲಾ ಕಲಕಲಮಂ ಮಾಣಿಸಿ ಓರೋರ್ವರ್ ಪೇಳಿಮೆನೆ ಕಾರುಗೆಹಳ್ಳಿಯವನಿದಿರೊಳ್ ಕೈಮುಗಿದಿಂತೆಂದಂ

ದೇವಾ ನಮ್ಮ ಪೊಳಗ್ಗೆ ಕೇರಿಗಳಾರುಮವನೆನ್ನೊಡಹುಟ್ಟಿದಾರು ಜನಂಗಳ್ ಪಂಚುಗೊಂಡಿರ್ದೆವೆಮಗಾ ರಾಜನೃಪನೊಳ್ ಪಗೆತನಂ ಬಂದುದರಿಂದೆಡೆವಿಡದೆ ಕಾದುವಾಗಲೆನ್ನೊಡಹುಟ್ಟಿದರೈವರ್ ಮಡಿದರದಕ್ಕಾನತಿಕೋಪದಿಂದೆನ್ನನುಜರನಳಿದ ವೀರಭಟನ ನೆತ್ತಿಯನೊತ್ತಿ ಕತ್ತಿಯಿಂ ಕತ್ತರಿಸಿ ಪುತ್ತದೊಳಿಕ್ಕದೊಡೆನ್ನ ನಾಡುಂ ಬೀಡುಮನೊಪ್ಪಿಸಿ ಕಪ್ಪಟಮನುಟ್ಟು ಕಪ್ಪರೆವಿಡಿದು ಜೋಗಿಯಾಗಿ ಪೋಪೆನೆಂದು ಪ್ರತಿಜ್ಞೆಗೆಯ್ದು ಕಳಿಪಲಾತಂ ತನ್ನೆಡಗಯ್ಯ ಚಮಡೆಯಿಂ ಮೂಗನರಿಯದೊಡಾಂ ವೀರನಲ್ಲೆಂದು ಪೇಳಿ ಬೆಳಗಿನಾಹವದೊಳೀರ್ವರುಂ ವಾರಣಮನೇರಿ ರಾವುತತನದ ಬಿನ್ನಾಣಮಂ ತೋರಲೆಂದು ನಡೆಯಿಪುದು ಕುಣಿಯಿಪುದು ಪಾಯಿಪುದು ಸುತ್ತಿಪುದು ತೊಲಗಿಪುದುಮವ್ವಳಿಪುದು ತರುಬುವುದುಮೆಂದಿವು ಮೊದಲಾದ ಗತಿಭೇದಂಗಳಿಂದಿನಿಸು ಪೊತ್ತಗಳೆಯುತ್ತಮಾನುಂ ಕತ್ತಿಯಿಂ ನೆತ್ತಿಯಂ ಪೊಯ್ಯಲೊಡನಾತಂ ತನ್ನ ಬಲಗಯ್ಯಲಗಿನಿಂ ತಡದೆಡಗಯ್ಯ ಚಮ್ಮಟಿಯಿಂ ಎನ್ನ ಮೊಗಮಂ ಪೊಯ್ಡೆಡೆನ್ನ ಮೂಗುಂ ಪರಿದುಪೋಗಲ್ ಮುನ್ನಾಡಿದ ಪಂಥಮನೆತ್ತಾನುಂ ಮಗುಳ್ಚುವೆನೆಂದಿಪ್ಪಿನ ಮಾತನೆನ್ನೂರಂ ಲಗ್ಗೆಯೇರಿ ಎನ್ನಂ ಪೊರಮಡಿಸಿ ಕೋಂಟೆಯಂ ಕೆಡಪಿ ಸರ್ವಸ್ವಮಂ ಕೊಂಡನಾಂ ಪೊಗಲೆಡೆಯಿಲ್ಲದೆ ಚಿಂತಿಸುತ್ತಿರ್ದೀಗಳೆನ್ನ ಭಾಗ್ಯೋದಯದಿಂ ನಿಮ್ಮಂ ಕಂಡೆನೆಂದು ತನ್ನ ಮೊಗದ ಮೈಯ ಬಾಸುಳಂ ತೋರಿ ಪೆರಸಾರ್ವುದುಂ ಕನ್ನಂಬಾಡಿಯವನೆದ್ದು ಕೈಮುಗಿದೆಂದಂ

ದೇವರಾಯ ವಜೀರರೊಳ್ ಜಗದೇವರಾಯರಸನಗ್ಗಳನೆಂಬುದು ಚಿತ್ತಕ್ಕೆ ವೇದ್ಯಮೈಸೆಯವನ ಗಡಿ ಕೋಂಟೆಗಳೆಮ್ಮ ನೆರೆಯೊಳಿಪ್ಪವವರೊಳ್ ಪೊಸ ಪೊಳಲಂ ಮೋಸದಿಂ ಕೊಳ್ಳಲೆಂದಾ ರಾಜನೃಪನೆಮ್ಮೊಳ್ ಸ್ನೇಹವಂ ಬೆರಸೆಮ್ಮ ನೆರೆಯೊಳ್ ನಡೆದಾ ಕೋಂಟೆಯಂ ಬೆಸಂಗೆಯ್ದನದಕ್ಕೆನ್ನ ಕುವರನಾತನ ಪ್ರಭು ಮಂತ್ರೋತ್ಸಾಹಶ್ತಿಯಂ ಭೃತ್ಯರ ಭಕ್ತಿಯಂ ಅನುಜರ ಸೌಜನ್ಯ ಸೌಶೀಲ್ಯಂಗಳಂ ಕುವರರ ಕೂರ್ಮೆ ಪೆರ್ಮೆಗಳಂ ದೈವದೊಲಮಂ ಕಂಡು ಕಾಣದಂತೆ ಕೆಣಕುಜಗಳದೊಳಿರಿಯಲವರಂ ಪಿಡಿದು ಕಟ್ಟಿಬಿಟ್ಟೆಂ ನೆರೆಯೂರೆಂಬ ಬೂಕನಕೆರೆಯಂ ಕೊಂಡದಕ್ಕೆ ಸ್ವಲ್ಪ ಹಳ್ಳಿಗಳಂ ತಿರುಕಳಿ ಪಾರ್ವರ್ಗಿತ್ತಡವರೆನ್ನ ದಾಯಿಗರಾಗಿಪ್ಪರಿಂದು ನಾಳೆಯೊಳಾನಿಪ್ಪೂರಂ ಕೊಳ್ಳದೆ ಮಾಣನದರಿಂದೆನಗೆ ನೀನೆ ಗತಿಯೆಂದು ಪೇಳಿ ಪೆರಸಾರ್ವುದು ತಳಕಾಡವಂ ಕೈಮುಗಿದಿಂತೆಂದಂ

ದೇವಾ ಅವಧಾರಿಪುದಾ ಜಯದೇವರಾಯರಸಿನ ಪಡೆವಳರೊಳ್ ಮೊದಲಿಗನು ಬಲ್ಗೈಯನುಮಾದಧಟರಾಯನರಕೆರೆಯಂ ಬಲ್ಮೆಯೊಳ್ ಕೊಂಡವನ ಭಂಡಾರಮಂ ಸೂರೆಗೊಂಡದರಿಂ ಪೊರವಳೆಯದ ಕಲ್ಮ ಪಾಗರಂ ಕಟ್ಟಿಸಿದಂ. ಬಳಿಕಿನ್ನಿರವರೀಯಧಟರಾಯನ ದುಬೋಧನೆಯಿಂದರಕೆರೆಯ ನಾಡೊಳತಿಹೊಯ್ಲನೆಸಗುತ್ತಿಪ್ಪಾ ರಾಜ ನೃಪನೆನ್ನ ಬನ್ನೂರಂ ಕೊಂಡನಾ ರೋಷದಿಂದಾ ಪೆರರ್ವಡೆವೆರಸಿ ಒಡ್ಡಿದೊಡೆನ್ನ ಬಲಮಂ ಲೆಕ್ಕಿಸದೆ ಸೊಕ್ಕಾನೆಯ ಮೊಕ್ಕಳಮಂ ಪೊಕ್ಕು ಪಾಯ್ದು ಪೊಯ್ದಾಯ್ವ ಸಿಂಗದಂತೆ ಪೆರರ್ವೆಟ್ಟಿನ ತಟ್ಟಿನೊಳ್ ನಟ್ಟುತಟ್ಟುಚ್ಚಲೆರಗುವ ಬರಸಿಡಿಲಂತೆ ಕಟ್ಟುಗ್ರದೊಳ್ ತುರುಬಿ ತರುಬಿ ಕೈಯಿಟ್ಟ ಪರುಂಬಳೆ ಪಂಡಿನಾಳ ಸಬಳ ಮೊದಲಾದನೇಕಾಯುಧಂಗಳಿಂ ಕೊಂಡು ಕೊರೆದಿರಿದರಿದು ನಾಂಟಿ ಅವುಂಕಿ ಕತ್ತರಿಸಿ ಉತ್ತರಿಸಿ ಕೊಯ್ದು ಕೋಟಲೆಗೊಳಿಸಿ ಪೊಕ್ಕೊಕ್ಕಲಿಕ್ಕಿ ಕೆಲರಂ ಸೆರೆವಿಡಿದು ಭಯಂಬಡಿಸಿ ಬಳಿನೀರ್ಗುಡಿಸಿ ಬವಣೆಬರಿಸಿದನದಂ ಪೇಳ್ವಡೆ ಎದೆಯೊಳಳಲುಂ ಮೆಯ್ಯೊಳ್ ನಡುಕಮುಂ ನುಡಿಯೊಳ್ ತಡಬಡಮಪ್ಪುದಾತನಂ ಗೆಲ್ವಡೆ ಮನುಷ್ಯಂಗಳವಲ್ಲೆಂದು ಕೊನೆಯುತ್ತಿರ್ಪರಾದೊಡಾತನಂ ಸದೆವುದಕ್ಕಿದು ವೇಳೆ ಈ ನೆರೆದರಸುಗಳ ಬಲಸಹಿತಂ ಸನ್ನದ್ಧರಂ ಮಾಳ್ಪುದೀ ರಾಯಗಬ್ಬದೊಳಾಂ ಪಡೆವಳನಪ್ಪೆನೆನಗಪ್ಪಣೆ ವೀಳ್ಯಮಂ ದಯಗೈವುದೆಂದು ಮಣಿದು ಪೋಪಿನಮಮಚವಾಡಿಯನೆದ್ದು ಕೈಜೋಡಿಸಿಕೊಂಡಿಂತೆಂದು ಮಹಿಸೂರವಂಗೆ ದೈವಬಲ ಬೆಂಬಲಮಾಗಿಪ್ಪುದದರಿಂದಂ ಸೋಲ್ವನಲ್ಲ. ಕಳಲೆ ಬೆಳುಗುಲಿ ಬೆಳುಕೆರೆ ಹುರ ಹುಲ್ಲನಹಳ್ಳಿ ಮೂಗೂರು ಮೊದಲಾರಸುಗಳೆಲ್ಲರವಂಗೆ ಪೆಣ್ಗಳನಿತ್ತು ಕಪ್ಪಮಂ ತೆತ್ತು ಬಾಳ್ವರಾದೊಡಮಿನ್ನುಪೇಕ್ಷಿಸಲ್ತಕ್ಕುದಲ್ಲೆಂದು ಬಿನ್ನವಿಸಿದ ನಿನ್ನ ಪಡವಳತನಮಂ ನಂಜರಾಜಂಗಿತ್ತು ಎಲ್ಲರ ಬಲಮಂ ಸನ್ನಾಹಂಬೆರಸೊಡನಪ್ಪುದೆಂದು ನಿಯಮಿಸಿ ಸುತ್ತಣರಸುಗಳ್ಗೆಲ್ಲಂ ರಾಯಸಮನಟ್ಟಿ ಕರೆಸಲಕ್ಕುಮೆಂದು ಪೇಳ್ದೊಡಂತೆ ಸನ್ನಾಹಂ ಮಾಡಿರ್ಪಿನಮಿತ್ತಲ್ ರಾಜನೃಪನಾತನ ಮನಮಂ ನೋಡಲೆಂದು ಪೆರ್ಗಡೆಗಳ ಕಳುಹಿಸಲವರ್ ಬಂದು ಪಟ್ಟಣದುಪವನದೊಳಿರ್ಪಿನಂ ರಾಯಂ ಕೇಳ್ದು ಕರೆಯಿಸಿದೊಡವನಂ ಕಂಡು ಕಾಣ್ಗೆಗೊಟ್ಟು ಕುಳ್ಳಿರ್ಪಿನ ನೃಪನ ಕ್ಷೇಮ ವಾರ್ತೆಯಂ ಬೆಸಗೊಂಡೊಡೆಮ್ಮ ರಸಂ ಪರಿಣಾಮದೊಳಿಪ್ಪಂ ದೇವರಿಲ್ಲಿಗೈತಂದುದಕ್ಕೆ ತಮ್ಮ ಕುಶಲಮಂ ತಿಳಿಯಲ್ ಪಾಗುಡಮಂ ಕೊಟ್ಟೆನ್ನನಟ್ಟಿದನೆಂಬುದುಮವಂ ಕೊಂಡು ಸಂತಸದಿಂ ತಮ್ಮೆಮ್ಮ ನೇಹಂ ಬೆಳೆವುದಕ್ಕಿದು ನಾಂದಿಯೆಂದುಪಚರಿಸಿ ಬೀಡಾರಕ್ಕೆ ಕಳುಪಿ ಮತ್ತೊಂದು ದಿನಂ ರಹಸ್ಯದಿಂದೊಳವೋಲಗಕ್ಕೆ ಕರೆದಿಷ್ಟಾಲಾಪಂಗೆಯ್ದನಂತರಂ ನಿಮ್ಮಾಳ್ದನವತರಿಸಿದ ವಂಶಮೆಂತು ಆಚಾರಮೆಂತು ಅನುಜ ತನುಜರೆಂದು ದೇಶ ಕೋಶ ಬಲಂಗಳೆಂತೆಂತೆಂದು ಬೆಸಗೊಳೆ ಅವನೆಂದಂ ನಮ್ಮಾಳ್ದನ ವಂಶಮಂ ಮಹಿಸೂರ ಕರಣಿಕನಿಂ ಕೇಳಿರ್ಪೆನೆಂತೆಂದೊಡೆ ಪೂರ್ವದೊಳ್ ಯದುಕುಲಾಗ್ರಗಣ್ಯರಪ್ಪ ಬಲನಾರಾಯಣರ ಪರಂಪರೆಯಿಂ ಬಂದು ಕೆಲಂಬರ್ ಪಾಂಡ್ಯ ಚೋಳ ಬಲ್ಲಾಳರಾದರಲ್ಲಿ ಕಡೆಯ ಬಲ್ಲಾಳಂ ವಿಷ್ಣುವರ್ಧನರಾಯನೆಂಬಭಿಧಾನದಿಂದಾ ವಂಶಶಾಖೆಯೊಳುಪಶಾಖೆ ಬೆಳೆದು ಬರೆ ಅವರೊಳ್ ಕೆಲಂಬರ್ ವಿಜಯನಗರಮಂ ಪೊಕ್ಕುಬಂದು ಮಹಿಸೂರೊಳ್ ನಿಂತ ದೇವರಾಜಸುತಂ ಮಹಿಸೂರಿಗೆ ಸಲ್ವ ಇಪ್ಪತ್ತುಮೂರು ಹಳ್ಳಿಗೆ ಪ್ರಭುವಾದ ರಾಜ ಒಡೆಯಂಗೆಸಂತಾನಂ ಬೆಳೆದವರೊಳ್ ಚಾಮರಾಜನೆಂಬ ನಾತನ ಮಕ್ಕಳ್ ತಿಮ್ಮರಾಜ ಕೃಷ್ಣರಾಜ ಚಾಮರಾಜರೆಂಬ ಮೂವರ್ ಕುಮಾರರವರೊಳ್ ಕಿರಿಯ ಚಾಮರಾಜಂಗೆ ರಾಜನೃಪಂ ಬೆಟ್ಟದ ಚಾಮರಾಜ ದೇವರಾಜ ಚೆನ್ನರಾಜರೆಂಬ ನಾಲ್ವರವರೊಳ್ ದಿಗ್ವಿಜಯೋದ್ಯೋಗದಿಂ ಷಡ್ಗುಣ್ಯಚಿಂತನ ಪ್ರಜಾಪಾಲನ ಕಂಟಕ ಶೋಧನಾದಿಗಳಂ ವಿಕ್ರಮಭುಜಪ್ರತಾಪನೆನಿಸಿಪ್ಪನಾತಂಗೆ ನರಸರಾಜ ಇಮ್ಮಡಿರಾಜರೆಂಬ ಕುಮಾರರುದಿಸಿದರಿಂತು ಅನುಜ ತನುಜರ್ವೆರಸನ್ಯೋನ್ಯದಿಂ ಮಹಿಸೂರಿಗೆ ಸಲ್ವ ಇಪ್ಪತ್ತುಮೂರು ಮರವಳ್ಳಿಯೊಳೆತ್ತಿಬಪ್ಪ ಮೂರು ಸಾಸಿರ ಪೊನ್ನಂ ಮುನ್ನೂರಾಳ್ಗೆ ಪಂಚುಗೊಟ್ಟು ಎಡಬಲದ ಮನ್ನೆಯರಿಂದ ಬಪ್ಪ ಕಪ್ಪಕಾಣಿಕೆಗಳಿಂ ಮನೆವಾರ್ತೆ ದಾನ ಧರ್ಮ ಮೊದಲಾದುವಂ ಮಾಳ್ಪರಲ್ಲದೆ ಇದಿರಾದವರನೊಕ್ಕಲಿಕ್ಕಿ ದೇವರ್ಗಂ ಬ್ರಾಹ್ಮಣರ್ಗಂ ಸತ್ರಕ್ಕಂ ಚಾಗಂಗೆಯ್ವನೆಂದು ಪೇಳೆ ಇಂತಪ್ಪ ಪುಣ್ಯಪುರುಷನಂ ಕಂಡು ಕೆಳೆಗೊಂಡು ಸ್ನೇಹಂಬೆರಸಿರ್ಪುದಕ್ಕಾನೆ ಬಪ್ಪುದಕ್ಕುಂ ಬೇಗಂ ಕಳುಹಿಸುವುದೆಂದುಡುಗೊರೆ ವೀಳೆಯಮನಿತ್ತು ಕಳುಹಿಸಲವಂ ಬಂದಾ ವಾರ್ತೆಯಂ ರಾಜನೃಪಂಗರುಪಿ ಮನದೆಗೊಂಡಿರ್ಪಿನಮಿತ್ತಲ್ ರಾಯಂ ಮತ್ತೊಂದು ದಿನ ತನ್ನ ನಾಡವರಂ ಸಾಮಾಜಿಕರುಮಂ ಕರೆಯಿಸಿ ಮಹಿಸೂರವರೊಳ್ ನಂಟಂ ಪಡೆಯಲಕ್ಕುಮೆ ಪೇಳಿಮೆನೆಯವರುಪಟಳದಿ ನೊಂದು ಬೆಂದಿಪ್ಪೆವಾತನಂ ಕೂಡುವುದು ಒಡಲೊಳ್ ಸಲಾಕಿಯಂ ಪಾಸಿನೊಳ್ ಪಾವಂ ಮನೆಯೊಳ್ ಮಾರಿಯನೂರೊಳ್ ಪುಲಿಯಂ ಪುಗಿಸಿ ಬಾಳ್ವಂತಕ್ಕುಮೀ ಮಹಿಸೂರವನ ನೆರೆಯ ಬಾಳ್ಕೆ ಪಾವಿನ ಪೆಡೆಯ ನೆಳಲನಾಶ್ರೈಸುವ ಕಪ್ಪೆಯಂತಕ್ಕುಮದರಿಂ ಎತ್ತಾನುಮಾತನ ನಿಲ್ಲಿಗೆಯಿತಂದೊಡಂ ಬಂಧಿಸುವುದು ಅಲ್ಲದೊಡೆತ್ತಿಪೋಗಿ ಪಿಡಿತಪ್ಪುದೆ ಕಾರ್ಯಮೆನೆ ಆ ಮಹಾನವಮಿ ಒಸಗೆಯ ನೇಮದಿಂ ನಾಡರಸರ್ಗೆಲ್ಲಂ ಬಳಿಯನಟ್ಟಿ ಬಲವಂ ಸನ್ನಾಹಂ ಮಾಡಿ ಬರಿಸುವುದೆನಲಂತೆ ಬರಿಸೆ ಮುಂಗಾರೊಳ್ ಮೋಹರಮಾಗಿ ಬರ್ಪ ಮುಗಿಲೊಡ್ಡಿನಂತೆಯುಂ ಮಳೆಯೊಳ್ ತುಂಬಿ ಬರ್ಪ ಪೆರ್ದೊರೆಗಳಂತೆಯುಂ ದೆಸೆದೆಸೆಯಿಂ ನಡೆದುಬರ್ಪ ಸೇನೆಗಳೂರ ಮುಂದಣ ಬಯಲೊಳು ಪೊಳೆಯ ತಡಿಯೊಳು ತೋಪುಗಳೊಳಮಿಳಿದಿರ್ಪಿನಮವಂ ಲಾವಣಗೊಳಲೆಮದೊರ್ವ ಲೆಕ್ಕಿಗನಂ ಬೆಸಸಿಯುಪ್ಪರಿಕಿಯನೇರಿ ನೋಡುತ್ತಿರ್ದೊಡವಂ ಬಂದು ದೇವಬಳ್ಳಾಪುರ ಕೊಲಾಳ ಪುಂಗನೂರ್ ಮಾಗಡಿ ಬೆಂಗಳೂರ್ ಮೊದಲಾದ ಮೊರಸುನಾಡ ಮೊಹರದೊಳಿಪ್ಪತ್ತಾನೆ ಇಚ್ಛಾಸಿರ ಕುದುರೆ ಇಪ್ಪತ್ತು ಸಾಸಿರಾಳ್ಗಳುಂ ತಳಕಾಡೆಳವಂದೂರ ಮಚವಾಡಿ ತೆರಕಣಾಂಬಿ ಕೋಟೆ ಮೊದಲಾದ ಒಳನಾಡ ದಳದೊಳೀರೈದಾನೆ ಇನ್ನೂರು ಕುದುರೆ ಈರೈಸಾಸಿರಾಳ್ಗಳುಂ ಕೆಳಲೆ ಬೇಲೂರು ಕೆಳದಿ ಮೊದಲಾಗೆ ಮಲೆನಾಡ ಬಲದೊಳಿಪ್ಪತ್ತಾನೆ ಇಚ್ಛಾಸಿರ ಕುದುರೆ ಇಪ್ಪತ್ತು ಸಾಸಿರಾಳ್ಗಳುಂ ಚಿತ್ತನ ಕಲ್ಕಿಕ ನಾಯಕನಹಳ್ಳಿ ಬಾಣಾವರ ಬಸವಾಪಟ್ಟಣ ಶೀರೆಯ ಮೊದಲಾದ ಬೇಡವಡೆಯೊಳೈದಾನೆ ಐನೂರು ಕುದುರೆ ಈರೈಸಾಸಿರಾಳ್ಗಳುಂ ತನ್ನ ಮುಲಬಲದೊಳ್ ಮೂಸಾಸಿರ ಕುದುರೆ ಮೂವತ್ತಾನೆ ಮೂವತ್ತು ಸಾಸಿರಾಳ್ಗಳುಂ ಕೂಡಿ ನೂರಾನೆ ಈರಾರು ಸಾಸಿರ ಕುದುರೆ ಲಕ್ಕ ಪಾಯದಳಮೆಂದು ಲೆಕ್ಕಿಗಂ ಬಿನ್ನವಿಸೆ ಎಲ್ಲರ್ಗಂ ವೀಳೆಯಂಗೊಟ್ಟು ಬೀಡಿಂಗೆ ಬೀಳ್ಕೊಟ್ಟರಮನೆಗೆ ಪೋಗಲಿತ್ತಲಾ ವಾರ್ತೆಯೆಲ್ಲಮಂ ರಾಜನೃಪಂ ಕೇಳ್ದದಕ್ಕೇಗೆಯ್ವೆವೆಂದೊಡೆ ಬೆಟ್ಟದ ಚಾಮರಾಜನೆಂದನೆಲೆ ಜೀಯಾ ನೀವಿದಕ್ಕೆಣಿಕೆಯನೇಕೆ ಮಾಳ್ಪಿರವರಂ ಸಂತೆಯ ಸಂದಣಿಯಂತೆ ಜಾತ್ರೆಯ ಜಂಗುಳಿಯಂತೆ ಪರದರ ಪಾಳಯದಂತೆ ಒಕ್ಕಲಿಗಳ ಮೊಕ್ಕಳದಂತೆ ಮಿಗವಿಂಡಿನಂತೆ ಕಾಗೆಯ ಬಳಗದಂತೆಯು ಕೈಪರೆಗೆ ಬೆದರೋಡುವ ತೆಲುಂಗವಡೆಯದಕ್ಕಂ ಮೊತ್ತಮೊದಲುನುವೇಳ್ಪುದುಂ ಕುಡುವುದುಂ ಓರೊರ್ವರಂ ಬೇರ್ಪಡಿಸುವುದುಮೆಂಬೀ ಮೂರುಪಾಯಮನೆಸಗಿ ಮದಕ್ಕೊಶಮಾರ್ಗದೊಡಂ ಕೊಳುಗುಳಮನೊಡರ್ಚುವುದೆಂದುಮದಕ್ಕೆ ಮೊದಲು ನಂಟಂಬಡೆದು ರಂಗನಾಥನ ದರ್ಶನಾರ್ಥಂ ಬಪ್ಪೆವೆಂದು ಬರೆದಟ್ಟಿಯದಕ್ಕವಂ ಒಪ್ಪಿದೊಡೆ ಪೋಗಿ ಆತನ ಸತ್ವಮನರಿದು ಮುನ್ನ ನಮ್ಮ ಪಿತೃಗಳ್ ಕಟ್ಟಿಸಿದ ರಂಗನಾಥನ ಮಂಡಪಮಂ ಪ್ರಾಕಾರದ ಭಿತ್ತಿಯಿಂ ನೋಡಿ ರಂಗನಾಥನಂ ಪೂಜಿಸಿ ಬಪ್ಪೆವೆಂದು ಪೇಳಲಂತೆಗೆಯ್ದು ಬೆಟ್ಟದರಸನಂ ಚೆನ್ನರಾಜನಂ ಮಹಿಸೂರೊಳಿರಿಸಿ ದೇವರಾಜಂವೆರಸು ಪಯಣಂ ಮಾಡಿ ಕಾವೇರಿ ಸನಿಹದೊಳಿರಲ್ ಅತ್ತಲ್ ತಿಮ್ಮರಾಜಂ ಬಂದಿದಿರ್ಗೊಂಡು ಉಪಪಚರಿಸಲರಸಿನ ಮನಮನೊಲಿಯಿಸುವುದೆ ಜಾಣ್ಮೆಯೆಂದಾಗಳೆ ಸರ್ವಸನ್ನಾಹಂ ಮಾಡಿಸಿ ತಾನು ಪೊರಮಟ್ಟು ತೆಂಕಣ ಪೊಳೆಯಂ ದಾಂಟಿ ಪಡುವಣ್ಗೆವರಿವ ಕಿರುವಳೆಯ ತಡಿಯೊಳ್ ಈರ್ವರ್ ಸಂಧಿಸಿ ದಂಡಿಗೆಯನಿಳಿದು ಕ್ಷೇಮಾಂಜಲಿಯಾಲಿಂಗನಂಗೈದು ಉಡುಗೊರೆಯಂ ಕೊಟ್ಟುಕೊಂಡು ಸರಿದಂಡಿಗೆಯೊಳ್ ಮಂಡಿಸಿಬಪ್ಪಲ್ಲಿ ರಾಜನೃಪಂ ತಿರುಮಲರಾಯನ ಮೊಗಮಂ ನೋಡಿ

ರಾಯಾ ನೀಂ ಪಲವುದಿವಸಮೀ ದೇಮಂ ಪೊದ್ದದೆ ಇದ್ದುದರಿಂ ಪಲಂಬರ್ ಪರಿದಾಡುತ್ತಿರ್ದರಿನ್ನೆಲ್ಲಾಮೇಕರಾಜ್ಯಮೆಯಪ್ಪುದಿದಕ್ಕೆ ಸಂದೇಹಮಿಲ್ಲೆಂಬುದುಂ ರಾಯನೆಂದಂ ನಾನೆಲ್ಲಿರ್ದೊಡಂ ಸಮಮೀ ನಾಡುಂ ಬೀಡುಂ ನಿಮ್ಮದೆಯಪ್ಪುದಿನ್ನು ನಾಮಿರ್ವರುಂ ಒಂದಾಗಿ ಪ್ರಜಾಪಾಲನೆಯಂ ಮಾಳ್ಪಮಿದು ದೇವತಾಕರುಣಮೆಂದಿಂತು ಇಷ್ಟಾಲಾಪಂಗೆಯ್ಯುತ್ತ ಪಟ್ಟಣದೊಳಗಂ ಪೊಕ್ಕು ಮುನ್ನಾ ರಾಜನೃಪಂಗೆಂದು ಸಜ್ಜುಕಂಗೆಯ್ದಿರ್ದ ಬಿಡಾರದ ಸರಿಸಕ್ಕೆ ಸಾರ್ತಪ್ಪುದುಂ ಪಡಿಯರರು ಜೀಯಾ ಪರಾಕೆಂದೆಚ್ಚರಿಸಲಲ್ಲಿ ದಂಡಿಗೆಯ ನಿಲಿಸಿ ತಿರುಮಲರಾಯಂ ತನ್ನ ದಂಡನಾಯಕ ಕೆಕ್ಕಟಿಗರಂ ಕರೆದೆನ್ನ ಪುಣ್ಯೋದಯದಿಂ ರಾಜನೃಪನೈತಂದನೀತನ ಕೆಳೆತನಮೆಮಗೆ ಮಂತ್ರಸಿದ್ಧಿಯಂತಾದುದೀತಂಗೆ ಸಂತಮಪ್ಪಂತು ಉಲುಪೆ ಉಪಚಾರಂಗಳಂ ಮಾಳ್ಪುದೆಂದು ನಿಯಮಿಸಿ ತಾನುಂ ರಾಜನೃಪನ ಮೊಗಮಂ ನೋಡಿ ವಿನಯಗೂಡಿ ಬೀಡಾರದೊಳ್ ವಿಶ್ರಮಮಂ ಮಾಳ್ಪುದೆಂದು ತಾನುಂ ತನ್ನರಮನೆಗೆ ಅಭಿಮುಖನಾಗೆ ರಾಜನೃಪನ ಕೈವಾರಿಗಳ್ ಕೈಯೆತ್ತಿ

‘ಸ್ವಸ್ತಿ ಸಮಸ್ತ ಸಾಮಂತ ಮಹಾಮಹೀಪಾಲ ಮೌಲಿಮಾಲಾಲಿತಪದ ರಾಜೀವ ರಾಜೀವಸಖ ಚಣಪ್ರತಾಪೋದಯ ದಯಾರಸತರಂಗಾ ಪಾಂಗಾಯತ ಲೋಚನಾಲೋಕನಾಪ್ಯಾಯಿತ ಕರ್ಣಾಟಮಂಡಲಾಗ್ರ ಖಂಡಿತಾರಾತಿ ನೃಪಕಂಠಕಾಂಡೋಚ್ಚಲದ್ರಕ್ತಧಾರಾಪರಿಮೃಷ್ಟ ತದೀಯ ಬಿರುದಂತೆಂಬರ ಗಂಡ ರಾಜನೃಪ ವಿಜಯೀಭವ ದಿಗ್ಗಿಜಯೀಭವ’ ಎಂದು ಪೊಗಳ್ದುದಂ ತಾನುಂ ಎಲ್ಲರುಂ ಕೇಳಿ ಪ್ರೇರಿಸೆ ಮುಂಗಾರ ಮೊಳಗಂ ಕೇಳ್ದ ಕೇಸರಿಯಂತೆ ಕನಲ್ದು ಕಾಲೋಚಿತಮಲ್ಲೆಂದು ತನ್ನ ಕೆಲದೊಳಿರ್ಪ ಮಂತ್ರಿಯೊರ್ವರಂ ಕರೆದು ನೀನು ರಾಜನೃಪನೆಡೆಗೆಯ್ದಿ ಆತನ ಮನಂ ಕದಡದಂತೆ ಬಿರುದಂತೆಂಬರ ಗಂಡನೆಂಬಿದೊಂದು ಬಿರುದಂ ನಮ್ಮ ಮುಂದೆ ಪೊಗಳದಂತೆ ಪೇಳ್ವುದೆಂದು ಕಳುಹಿಸಲವನೆಯ್ದಿಬಂದು ಕೈಮುಗಿದು ದೇವ ದೇವರೆಡೆಯೊಳೆಮ್ಮಾಳ್ದರೆಡೆಯೊಳ್ ಸ್ನೇಹಮೆರಕಮಾಗಿರ್ಪುದದರೊಳೆ ನಾನುಂ ಊಣಯಮನೂಹಿಸಲ್ ಕಾದಿಪ್ಪರದರಿಂ ಬಿರುದಂತೆಂಬರ ಗಂಡನೆಂಬೀ ಬಿರುದು ದೇವರ ವಂಶಪರಂಪರೆಯೊಳ್ ನಮ್ಮಾಳ್ದರ ಪರಂಪರೆಯೊಳ್ ಬಂದುದನೀರ್ವರುಮಿಪ್ಪೆಡೆಯೊಳ್ ಪೇಳಸಲ್ಲದೆಮದೆಮ್ಮ ಕಯವಾರಿಗಳ್ಗೆ ಕಟ್ಟಲೆಯಾಯತ್ತು ದೇವರ ಬಗೆಯ ವರ್ಗಮಂತು ನಿರವಿಸಲ್ಕೆ ಪೇಳ್ಗುಮೆಂದು ಬಿನ್ನವಿಸಲ್ ರಾಜನೃಪಂ ತನ್ನೊಡಹುಟ್ಟಿದವನ ಮೊಗಮಂ ನಿಟ್ಟಿಸಲಾ ದೇವರಾಜಂ ನಿಯೋಗಿಯಂ ನೋಡಿಯೆಂದಾಗಿ ಭಿನ್ನವಿಸಿದುದು ಸಹಜಮಾದೊಡಂ ನಿಮ್ಮರಸರ್ಗೆ ಕೈವಾರಿಗಳಿಂಬಂದುದರಿಂ ಬೇಡೆಂದೊಡೆ ಬಿಟ್ಟರು. ನಮ್ಮ ಪಿರಿಯರಿಂ ಬಂದು ನೆಗಳ್ದುದಾದುದರಿಂ ಕಯವಾರಿಗಳುಂ ಬಿಡುವರಲ್ಲೆಮ್ಮ ಮುತ್ತಯ್ಯಂ ಬೆಟ್ಟದ ಚಾಮರಾಜನ ಮನ್ನಣೆಯ ತುಳಿಲಾಳ್ಗಳು ಕಳಲೆಯ ನಂಜಶೆಟ್ಟಿಯು ನಂಜನಗೂಡಜಾತ್ರೆಯೊಳೆ ನೆರೆದ ಪಲಂಬರ್ ಪ್ರಭುಗಳ ಮುಂದುಗ್ಘಡಿಸುವ ಪಲವು ಬಿರುದುಗಳಂ ಸ್ಕೆರಿಸದೆ ಪಲವು ಪಜ್ಜೆಗಳನೊಳಕೊಂಬ ಆನೆಯ ಪಜ್ಜೆಯಂತೆಯುಂ ಪಲವು ತೊರೆಗಳನೊಳಕೊಳ್ವ ಮುನ್ನೀರಂತೆಯುಂ ಪಲವು ಬಿರಿದನೊಳಗೊಳ್ವ ಬಿರುದಂತೆಂಬರ ಗಂಡನೆಂಬಿದಂ ಮಹಿಸೂರ ರಾಜನ ಮುಂದೆ ತಾಂ ಬಲಗಯ್ಯೊಳ್ ಪಿಡಿದ ಕಠಾರಿಯೆಂದೆಡಗಯ್ಯೊಳಂಗಡಿಯ ಮಾನಮಂ ಪಿಡಿದುಗ್ಘಡಿ ಪುದುಮಲ್ಲಿ ನೆರೆದ ಪ್ರಭುಗಳೆಲ್ಲ ಮೊಗ್ಗಾಗಿ ತಮ್ಮ ದಳದೊಳವನಂ ಸುತ್ತ ಮುತ್ತುವಿನ ಮಿಗವಿಂಡಿಂಗೆ ಪುಲಿಯುಂ ಗಿಳಿವಿಂಡಿಂಗೆ ಗಿಡಗನುಂ ಕುರಿವಿಂಡಿಂಗೆ ತೋಳನುಂ ಪೊಕ್ಕಂತೆ ಪಾಯ್ದೆಲ್ಲರ ಒಕ್ಕಲಿಕ್ಕಿ ಗೆಲ್ದುದರಿಂ ಪ್ರಭುಗಳ್ ಮಹಿಸೂರವಂಗೀ ಬಿರಿದು ಸಲ್ವುದೆಂದು ಉಗ್ಘಡಿಪುದೆಂದು ವೀಳೆಯಮಂ ಕೊಟ್ಟು ಕಳುಹಿಸಲದರಿಂ ಕೈವಾರಿಗಳಂ ಬಿಡಿಸಲಾಗದೆಂದು ಪೇಳ್ವುದುಮಾ ವಾರ್ತೆಯಂ ರಾಯಂಗರಿಪೆ ಅಕ್ಕಟಾ ಕೂಗಿ ಮಾರಿಯಂ ಕರೆದಂತಾಯ್ತೆಂದು ಎಲ್ಲರಂ ಬರಿಸಿ ಇನ್ನೀತಂಗೆ ಪಿಂದೆಗೆಯದೆ ಸೆರೆಗೊಂಡು ಕಡೆಗಾಣಿಪುದೆ ಕಜ್ಜಮೆಂದು ಮರುವಗಲ್ ಪೊತ್ತಾರೆ ವೈಯಾಳಿಯ ಬಯಲೊಳಿನಿಸಿರ್ದು ಬಪ್ಪೆ ನೀಮುಂ ರಂಗನಾಥನ ಸನ್ನಿಧಿಗೆಯ್ದಿ ಸಂದರ್ಶನಂಗೆಯ್ದು ವಂದಿಪುದೆಂದು ಪೇಳಿ ತಾಂ ಪೊರವಳಯದ ಮಂಡಪದೊಳಿರ್ದೆಲ್ಲರಂ ಬರಿಸಿ ಪುಸಿವಿನಯದಿಂ ಮಹಸೂರವನಂ ಪುಗಿಸಿರ್ಪೆನಾತನಂ ಸೆರೆಗೊಳಲ್ಕಿದು ವೇಳೆಯೆಮದು ಮೇಳೈಸುತ್ತಿರ್ಪಿನಮಿತ್ತ ರಾಜನೃಪಂ ಕಾವೇರಿಯೊಳ್ ಸ್ನಾನಂಗೆಯ್ದು ವಸ್ತ್ರಮಾಲ್ಯಾದಿಗಳಿಂ ಅಲಂಕರಿಸಿ ನಿತ್ಯ ದಾನಂಗೊಟ್ಟು ರಂಗನಾಥನ ಸಂದರ್ಶನಂಗೆಯ್ದು ವಂದಿಸಿ ತೀರ್ಥಪ್ರಸಾದಂಗೊಳ್ವನಿತಕ್ಕೆ ಪರೆಕಾರನೊರ್ವನೆಯ್ತಂದು ಕಿವಿಯೊಳಾ ಪ್ರಪಂಚಮನೊರೆಯಲಾಕ್ಷಣದೊಳೆ ತನ್ನ ಬಲಂಬೆರಸು ಪೋಪಾಗಲೆಡಬಲದೊಳಿರ್ದದಳಮಂ ಲೆಕ್ಕಿಸದೆ ಪೊಳೆಯಂ ದಾಂಟಲಿತ್ತಲ್ ತಿರುಮಲರಾಯಂ ರಾಜನೃಪಂ ಮೀರಿ ಪೋದಂ ಬಲ್ಲಿದನೊಳ್ ವೈರಂ ಬೆಳೆದುದಿನ್ನುಪೇಕ್ಷಿಸಲಾಗದೆಂದು ನೆರೆದೆಲ್ಲಾ ಪ್ರಭುಗಳಂ ಕರೆದು ಮಹಿಸೂರಿಗೆ ಮುತ್ತಿಗೆಯನಿಡಲ್ ಪೋಗಿಮೆನೆಯವರ್ ಕೈಮುಗಿದೆಂದರ್

ಮುನ್ನೊಮ್ಮೆ ಪಿರಿಯರಸಂ ರಾಮಾನುಜನಂ ಎಲ್ಲರೊಡಗೊಂಡು ಮುತ್ತಿ ಮೂರು ತಿಂಗಳ್ವರಂ ಇರಲಾ ಮೈಸೂರ ಚಾಮರಾಜನೆಸಗಿದುಪಟಳಮನೆಷ್ಟೆಂದು ಪೇಳಬಹುದು. ಪಾಳಯಕ್ಕೆ ಬಪ್ಪ ಸಕಲ ವಸ್ತುಗಳಂ ನಿಲಿಸಲೊಂದೆರಳ್ಮೂರುಪವಾಸಮಿರ್ದು ಪೋದುದಕ್ಕೆ ದಾರಿಯಿಲ್ಲದೆ ನಟ್ಟಿರುಳೊಳೋಡಿಬಪ್ಪಾಗಳ್ ದಾರಿಯೊಳಡ್ಡಗಟ್ಟಿ ಕೆಲವಾನೆ ಕುದುರೆ ಕೈದುಗಳಂ ಸೆಳೆದುಕೊಂಡು ತಲೆಯನರಿದು ಮೂಗಂ ಕೊಯ್ದು ಕಳುಪಿದರಲ್ಲದೆಯವರಟ್ಟುಳಿಯಿಂ ಪಟ್ಟಣದೊಳ್ ಪದುಳಿಲ್ಲದೆ ಮೈಸೂರವರೊಳ್ ಸ್ನೇಹಂಬೆರಸಿ ಕಾಲ್ವೆಯ ಕೊತ್ತಾಗಲಾಲಮಂ ಕೊಟ್ಟರದರಿಂದೀಗಳ್ ಮೈಸೂರ ಮುತ್ತುವುದು ಮೋಸವೆಂದು ಮೊದಲೊಳ್ ಕೆಸರೆಯಂ ಮುತ್ತಿನೋಳ್ಪಮೆಂದು ತಾವರೆಗೆ ಮಂಜು ಮುಸುಕುವಂತೆ ಮುತ್ತಿ ಪಾಳೆಯಮನಿಳಿದು ತಳಿಮೇರುವೆಯ ನೊಡರ್ಚುತ್ತಿಪ್ಪುದುಮಲಿರ್ದ ಚಾಮರಾಜ ಚೆನ್ನರಾಜರ್ ಕೋಂಟೆ ಕೊತ್ತಳಮಂ ಬಲಿದಾಳ್ವೇರಿ ಮುಗಿಲಟ್ಟಣೆಗಳನೇರಿ ಕಾದುತ್ತೆ ಕತ್ತಲೆಯೊಳ್ ಪೊರಮಟ್ಟ ಪಾಳೆಯಮಂ ದಳದುಳವಾಯ್ದು ಪೊಯ್ದಾನೆ ಕುದುರೆಗಳಾನೊಯ್ವುದುಂ ಮರುವಗಲ್‌ಪೊತ್ತಾರೆ ಕವಿದೊತ್ತರಿಸಿ ಮೇಲ್ವಾಯ್ವ ಗುಂಡುಗಳ ಮರೆಗೊಂಡು ಸಗ್ಗವನೇರುವ ಅಲ್ಪ ಪುಣ್ಯರಂತೆ ಕೋಂಟೆಯನೇರುತ್ತಿಪ್ಪರಂ ಕಡೆಗೋಲ್ಗಳಿಂ ನೂಂಕಿ ಕೈಯಿಟ್ಟಿಗಳಿಂದಿಟ್ಟು ಕಾಯ್ದ ಗಂಜಿ ಎಣ್ಣೆ ಹುರಿದ ಮಳಲುಮಂ ಸೂಸಿ ಮದ್ದಿನುರಿಯನ್ನೂರ್ಚಿ ಕವಣೆಗಲ್ಗಳಂ ಬೀರಿ ಕಣೆಗಳೆಂದೆಚ್ಚಿ ಕತ್ತಿಗಳಿಂ ಕಡಿದು ಕೆಡಪುತ್ತಿರ್ದೊಡಂ ಕಿಚ್ಚಿಂಗೆ ಪೆರಸಾರ್ವ ಮೃಗದಂತೆ ಪೆರಸಾರ್ವರಂ ಕಂಡು ಮಾಣದೆ ಮಿತಿಮೀರುತ್ತಿರ್ದಪರೆಂಬುದಂ ದೂತರ್ಮುಖದಿಂ ಕೇಳ್ದು ರಾಜನೃಪಂ ಮೂಲಬಲಂಬೆರಸು ಕಿಚ್ಚುಂ ಗಾಳಿಯುಂ ಕೂಡಿಯೊಣಗಿದ ಪಳುವಂ ಪುಗುವಂತೆ ದೇವರಾಜನೊಡಗೂಡಿ ಅವರ ತೆಂಕಣ ಪಡುವಣ ಪಾಳೆಯಮಂ ಪೊಕ್ಕೊಕ್ಕಲಿಕ್ಕಿ ತರಿದಿರಿದು ಗಾಳಿಯ ಸೊಡರಂತಾಗ ಅವರೊಳ್ ಮರೆವೊಕ್ಕರಂ ಕಾಯ್ವದೆಂದವರಂ ಪುತ್ತವೇರಿದರಂ ಪುಲ್ಗರ್ಚಿದರಂ ನೀರೊಕ್ಕರಂ ಮರನನಡರ್ದರಂ ಓಡಿದರಂ ಕೈದುಬಿಟ್ಟರಂ ತಲೆಗಾಯ್ದು ಮನ್ನಿಸಿ ಮಿಕ್ಕರ ಸೊಕ್ಕನಡಂಗಿಸಿ ಸರ್ವಸ್ವಮಂ ಕೊಂಡು ಬರ್ಪಿನಂ ತೆಂಕಲ್‌ಪಡುವಲ್‌ಉಳಿದು ಮೂಡಲು ಬಡಗಲಲಿರ್ದರಂ ಚಾಮರಾಜ ಚೆನ್ನರಾಜರ್ ಸದೆದಟ್ಟಿಬರ್ಪಲ್ಲಿ ಅಣ್ಣಂದಿರಂ ಕಂಡೆರಗಿ ಬರ್ಪಿನ ಪಟ್ಟಣಮಂ ಬಿಟ್ಟು ಪೊರಗಿರ್ದ ತಿರುಮಲರಾಜನಂ ಕಂಡಟ್ಟುವುದುಮಳವಿಂಗಳ್ಕಿ ರಾಜಚಿಹ್ನೆಯನುಳಿದು ಗರಿ ಮೂಡಿದ ಪುಲ್ಲೆಯಂತೋಡಿ ವೇಷಮಂ ಮಾಚಿ ಮರೆಗೊಂಬುದುಂ ನಾಲ್ವರ್ ಮೈಸೂರ್ಗೆ ಬಂದರ್.

ಅತ್ತ ತಿರುಮಲರಾಯಂ ಮರುದಿವಸಮೊರ್ವನೆ ಪಟ್ಟಣಮಂ ಪೊರ್ದಿ ಅಳಿದುಳಿದರಂ ಬರಿಸಿ ಕೊಳಗುಳದೊಳಂದು ದಳದೊಳಳಿದರಾರುಳಿದರಾರೆಂದು ಬೆಸಗೊಳೆ ಜೀಯ ಬಿನ್ನಪ ಈ ಒಳನಾಥಪ್ರಭುಗಳನಿಬರು ಪಲವು ಸೂಳ್ ಮಹಿಸೂರವರಿಂ ನೊಂದವರವರೆಸಗುವ ಚತುರತೆ ಚೌರ್ಯದ ಪೊಯ್ಲ ಕೊಲೆಯಂ ಕಂಡಪ್ಪುದರಿಂದವರ ಮೊದಲ ಕೊಂಬು ಕಾಳೆಯ ಧ್ವನಿಯಂ ಕೇಳ್ದು ಸಿಂಗದ ರವಮಂ ಕೇಳ್ದಾನೆಯ ಪಿಂಡಿನಂತೆಯುಂ ತಳವರರ ದೀರ್ಗೋಲ ಧ್ವನಿಯಂ ಕೇಳ್ದ ಕಳ್ಳರಂತೆಯುಂ ಬೆರ್ಚಿ ಬಿಂಕಂಗುಂದಿ ಬೆವಸಂಗೊಂಡೆಡಬಲಮಂ ನೋಡದೆ ನಿಟ್ಟೋಟದಿಂ ನಿಂದಲ್ಲಿ ನಿಲ್ಲದೆ ನಿಜನಿವಾಸಮಂ ಪೊರ್ದಿ ಜಸಮಂ ಬಾರಿಸಿಯಸುವನಾದರಿಸಿ ಪೊಸತೊಂದು ಬಸಿರೊಳ್ ಬಂದಂತೆ ಸಂತಸದಿಂದಿರ್ಪರು. ಮೊರಸನಾಡ ಮೊಹರಂ ಮೊನೆಗಾರತನದ ಮೋಡಿಯೊಳ್ ಅರಿಯದೆ ಮೋಸಂಗೊಂಡಿರಲವರ್ ಬಂದು ಮುತ್ತಿ ಮೂದಲಿಸಿ ಮೂಗಂ ಕೊಯ್ದರೆಯಟ್ಟಿದರವರ್ ನಿಲಲಾರದೆ ಮುರಿದೋಡಿದರ್.ಮಲೆಯನಾಡವರ್ ಮಲೆದು ನಿಲ್ವಿನಮವರೊಡ್ಡೈಸಿ ಮಿಸುಕಲೀಯದೆ ಕೈದುಗಳಂ ಸೆಳೆದುಕೊಂಡು ಆನೆ ಕುದುರೆ ಎಕ್ಕಟಿಗಳಂ ಕಟ್ಟರಸುಗಳಂ ಸೆರೆವಿಡಿದುಕೊಳಲ್‌ಕಿರುದೊರೆಗಳುಳಿದ ಬಲಂಬೆರಸು ಮಲೆನಾಡಂ ಸಾರ್ದಿನ್ನಿತ್ತಂ ಬರಲಣ್ಮೆವೆಂದು ಭಾಷೆಗೆಯ್ದರ್.ಬೇಡವಡೆಯೆಲ್ಲಮಂ ಮುನ್ನಡವಿಯ ಗಿಡಮರಂಗಳ ಮರೆಯೊಳಿರ್ದ ಮೃಗಪಕ್ಷಿಗಳಂ ಕೋವಿಯೊಳಿಟ್ಟು ಕಣೆಯಿಂದೆಚ್ಚಿ ನಾನಾ ಬಾಧೆವಡಿಸಿ ಕೊಂದು ಕೂಗಿದ ಪಾಪಂ ತಿರುಗಿದಂತೆ ಕೆಸರೆಯ ಕೆರೆ ಕೋಡಿವಳ್ಳದೊಳೋಡುತ್ತಿಪ್ಪಾಗಲೆಡರಿ ಕೈಕಾಲ್ಗಳ್ ಮುರಿದು ನಡು ನೆಗ್ಗಿ ತೊಡೆಯುಡುಗಿ ಎದೆಯು ಬಿರಿದು ತೋಳು ತೊಳುಗಿ ಕೊರಳುಗ್ಗಿ ತೆಲಯೊಡೆದು ಪಾಶದಂತಾಗೆ ಪಳ್ಳದ ಹೆಂಟೆಗಳೆಲ್ಲಂ ಸಮತಳಮಾಗೆ ಪಿಂದೆಬಪ್ಪವರ್ ಅಟ್ಟಿಬಪ್ಪರೆಂದೋಡುತ್ತಿರಲ್‌ಬಿದ್ದು ಮಿದುಳ್ ಕಳೆದು ಉರುಳಿ ಕೈಕಾಲ್ಗಳೆಲ್ಲಾ ಮುಳ್ಳು ಬಲಿದು ತಂದೆ ಕಂದನೊಡಹುಟ್ಟಿದವರಾದೊಡಂ ಬಿದ್ದವರನೆತ್ತದೆ ಪಿಂದಿರುಗಿ ನೋಡದೆ ದೆಸೆಗೆಟ್ಟೋಡಿದರ್.ಮೂಲಬಲಂ ಮುರಿದ ತೆರನಂ ದೇವರೆ ಬಲ್ಲರೆಂದು ಪೇಳ್ವುದುಂ ರಾಯನೆಂದನಕಟಕಟ ಈ ಕೂಟದ ದಲಂಗಳ್ ಎನಿತಾದೊಡಂ ಬಳಿಸಲ್ಲದೀ ದಳವಾಯಿ ಚನ್ನಮನಾಯಕಂ ಪ್ರಧಾನಿ ರಾಮಾನುಜಯ್ಯನುಮೆನ್ನೆಡ ಬಲದೊಳಿರ್ದ ಮೈಗಾಪಿನವರ್ ಒಡೆದಿದ್ದು ಮುಂದಣ್ಗೆ ನಡೆದು ಮೊಗಮರೆಯಪ್ಪುದುಮೆನ್ನನೊಪ್ಪಿಸಿ ತಪ್ಪುದಾರಿವಿಡಿದೊಪ್ಪದಿಂ ನಡೆದರಿನ್ನೆವರಂ ಮನ್ನಿಸಿದುದು ಕಾಡೊಳತ್ತಂತೆ ಕಲ್ಲರೆಯೊಳ್ ಬಿತ್ತಿದಂತೆ ಅಂಧನೊಳಾಡಿದಂತೆ ಬದಿರನೊಳ್ ಪಾಡಿದಂತೆ ಛಿದ್ರಕುಂಭದೊಳ್ ನೀರೆರೆದಂತಾಯ್ತು. ಇಂತಿವರಂ ಮೆಚ್ಚಿ ಮೈಸೂರವರೊಳಿದಿರ್ಚಿ ಕೊಡೆಯ ಮರೆಗೊಂಡು ಸಿಡಿಲಿದಿರೊಕ್ಕಂತಾಯ್ತು, ಇನ್ನೀ ಪಟ್ಟಣದೊಳಿರಲಾಗದೆಂದು ಪಯಣ ಸನ್ನಾಹದೊಳಿರಲಿತ್ತಾಳೋಡಿಬಂದು ತಳಕಾಡೆಳವಂದೂರ ಮಚವಾಡಿ ತಗಡೂರು ಮೊದಲಾದರಸುಗಳೆಲ್ಲಮೊಗ್ಗಾಗಿ ಮಹಿಸೂರವರಿಂದೆಮಗುಳಿವಿಲ್ಲಾಗಿ ತೆಲುಂಗರಾಯಂಗೆ ಧೈರ್ಯಮಂ ನೆರಪಿ ನಾಮೆಲ್ಲಂ ಬಲಮಾಗಿ ಕಾಲವಂ ಕಳಿವವೆಂದೊರ್ವ ನಿಯೋಗಿಯಂ ಕಳುಹಿಸಲವಂ ಬಂದು ತಿರುಮಲರಾಯಂಗೆಂದರ್ ನೀವೆಮ್ಮಂ ಕೈಕೊಂಡು ಇದಿರ್ಚಿ ಗೆಲ್ಲು ಪಟ್ಟಣದೊಳ್ ಅಂಜದೆ ಸುಖಮಿಪ್ಪುದೆನೆ ಮಣ್ಣ ಕುಂಡೆಯಂ ನೆಚ್ಚಿ ಪೊಳೆಯಂ ಪಾಯ್ವಂತೆ ನೀವುಂ ಪಿಂಡಿಶೂರರ್ [ಗೇಹ] ನರ್ತಿಗರ್ ಧೈರ್ಯಹೀನರುಮಪ್ಪುದರಿಂ [ಇರುಳು ಕಂಡ ಬಾವಿಯೊಳ್ ಪಗಲು] ಬೀಳ್ವಂತೆ ಪೋದ ಮಾರಿಯಂ ಕೂಗಿ ಕರೆವಂತೆ ತಳವಗಳ್ದು ಮೇಲೆ ಕೊಂಬಂತೆಯುಮಕ್ಕುಮದರಿಂದಿಲ್ಲಿಂದಾಂ ಪೋಪೆನೆಂದ ಮಾತಿಂಗವರೆಲ್ಲಂ ತಮ್ಮುಳ್ಳ ಧನ ಧಾನ್ಯ ಮದ್ದು ಗುಂಡು ಬಾಣ ಬತ್ತಿ ಬಲಸಹಿತಂ ಬಂದು ಪಟ್ಟಣದ ಮುಂಗಡೆ ಪಾಳೆಯಮಂ ಬಿಟ್ಟಿರ್ಪ ವಾರ್ತೆಯಂ ರಾಜನೃಪಾಲಂ ಕೇಳ್ದು ಕೆಸರೆಯ ಹುಯ್ಯಲೊಳ್ ಸಿಕ್ಕಿದಾನೆ ಕುದುರೆ ಬಲಸಹಿತಮ ತನ್ನ ಪಿರಿಯಣುಗ ನರಸರಾಜಂಗಿತ್ತು ಕಳಿಪುವುದು ಆತಂ ನಡೆತಂದಾ ಪಾಳೆಯವನಿದಿರೊಳೊಡ್ಡಿ ನಿಂದೊರ್ವ ಭಟನಿಂದಾ ವೈರಿರಾಜ ವೇಶ್ಯಾಭುಜಂಗನೆನಿಪ ರಾಜಾಧಿರಾಜ ರಾಜನೃಪಾಲನ ಕುಮಾರಂ ಕೂರಾಳ್ಗಲ ಗಂಡನಾದ ನರಸರಾಜನರಿಕೆಗಾಳೆಗಂಗೊಳಲ್‌ಬಂದ ನೀಮಿಂದುಮೆಲ್ಲರು ಮರೆದಿರ್ದೆ ಮದವೇರಿರ್ದೆ ಮರವಟ್ಟಿರ್ದೆ ಪಸಿದಿರ್ದೆ ಬಳಲಿರ್ದೆ ಉಣಲಿರ್ದೆ ಒರಗಿರ್ದೆವೆಂದು ಪಿಂದೆಗೆಯದೆ ಸನ್ನದ್ಧಮಾಗಿ ಬಪ್ಪುದೆಂದು ಸಾರಿಸುತ್ತ ಮೋಹರಮನೆಯ್ದಿ ನರಸಿಂಗಂ ರಕ್ಕಸರಂ ಸದೆದಂತೆ ತಟ್ಟುರ್ಚಿತರುಬಿ ನೆರೆಯಟ್ಟುವುದುಂ ಕೆಟ್ಟು ಮುರಿದೋಡಿ ಬಡಗಲ್‌ಗಾವುದದೊಳೆ ಕೊಡೆಯಾಲಮಂ ಪುಗುವಿನ ಬೆಂಬತ್ತಿ ಸುತ್ತಿ ಮುತ್ತಿರ್ಪಿನ ಬಿಸಿಲೊಳ್ ಪರಿತಂದು ಪಸಿದು ನೀರಳ್ಕೆಯಿಂ ಬಾವಿಯನರಸಿ ಕಾಣದೆ ಬನ್ನಂಬಟ್ಟೋಡಿ ಬಸಂಗೆಟ್ಟು ಕೊಳೆತು ಪುಳಿತು ನಾರುವ ತಪ್ಪೆಯ ಹಳ್ಳದ ನೀರಂ ಕುಡಿದು ನೆಲನ ನೆಕ್ಕಿ ಕೆಟ್ಟೋಡಿದರೆಂಬ ನರಸರಾಜನ ವಿಜಯವಾರ್ತೆಯಂ ತಿರಮಲರಾಯಂ ಕೇಳ್ದು ಪಟ್ಟಣಮಂ ಪುಗುವನೆಂದಳ್ಗಿ ಒಡಲಂ ಬಿಡುವ ಜೀವದಂತೆ ಪಲತೆರದೊಳ್ ಪಲುಂಬಿ ಕೊರಗಿ ಕೋಟಲೆಗೊಂಡು ಪೆಂಡಿರಂ ಬಿಟ್ಟು ಪೊರಮಟ್ಟು ಪೋಗಿ ತಳಕಾಡ ಬಳಿಯ ಮಾಲಂಗಿಯೊಳ್ ಮೈಮರಸಿರ್ಪಿನಮೀ ವಾರ್ತೆಯೆಲ್ಲಮಂ ನರಸರಾಜಂ ರಾಜನೃಪಂಗೆ ಬಿನ್ನವಿಸಿ ಕಳುಹಿಸಲ್‌ತನ್ನ ಸೋದರರೊಡಗೊಂಡು ನಡೆತಂದೂರ ಮುಂದಣ ಬಯಲೊಳಿಳಿದು ಕುಮಾರನಂ ಬರಿಸಿ ಕೂರ್ಮೆಯಿಂದಪ್ಪಿ ಸಂತಸಂದಳೆದು ಪೊಳಲಂ ಪುಗಲ್‌ಪರಿವ ಪಾವನುರಿವ ಕಿಚ್ಚಂ ಪರರ ಪೆಂಡಿರ ಪತ್ತಿರೆ ಸಾರ್ವುದು ಅನುಚಿತಮೆಂದೊರ್ವ ಮುತ್ತಮುದುಪನಂ ತಿರುಮಲರಾಯನ ರಾಣಿ ರಂಗಮ್ಮ ನೆಡೆಗೆಯ್ದಿ ನಿಮ್ಮುಡಿಗೆ ತೊಡಿಗೆಗಳಂ ಸಾಮಾನುಮನೂಳಿಗವೆಣ್ಗಳುಮನೊಡಗೊಂಡು ನಿಮ್ಮ ರಸನಿರ್ಪಲ್ಲಿಗೆ ಪೋಪುದಕ್ಕೆ ದಂಡಿಗೆ ಭಂಡಿ ಕುದುರೆಗಳಮನೊಡಗೊಂಡು ಬಂದೆಂ ತೆರಳುವುದೆಂದು ಪೇಳಿಸಲವಳ್ ರಾಯನ್ನಂ ಬಿಟ್ಟು ಪೋದಂ ಇಂತೆಂತಪ್ಪುದೊ ಎಂದು ಚಿಂತಾಸಾಗರದೊಳ್ ಮುಳುಗಿರ್ದೆನೆಲೆಯಣ್ಣಾ ನೀನು ಮಡದಿ ಮಕ್ಕಳ್ವೆರಸಿ ಸುಖದಿಂ ನೂರು ವರ್ಷಂ ಬಾಳೆಂದು ಪರಸಿ ಕೆಳದಿಯರಂ ಕರೆದು ರಾಜನೃಪಂ ಕರುಣವಿಟ್ಟಿಂದೆನ್ನನೆನ್ನಾಳ್ದನ ಬಳಿಗೆ ಕಳಿಪುವಂ ಪೋಪಮೆಂಬುದುಮವರ್ ತಂತಮ್ಮೂಳಿಗವೆಣ್ಗಳ್ ಸಹಿತಂ ಪೊರಮಟ್ಟು ಅಂದಳಮನೇರಿ ಪೊರಗಣೆ ಬಂದು ಕಿರಿದು ದೂರದೊಳ್ ರಾಜರರಸನ ಪೌಜಂ ಕಂಡು ನಿಂದು ಕೆಳದಿಯೋರ್ವಳಂ ಕರೆದು ನೀಂ ರಾಜನೃಪನ ಹತ್ತಿರೆಯ್ದಿ ನಿಂದೆನ್ನ ನುಡಿಯನಿಂತೆಂದು ಪೇಳ್ವುದೆಲೆ ತಂದೆ ಕೇಳೆನ್ನರಸನೂರೊಳಿಲ್ಲದೆ ಮೈಗಾವಲಿಲ್ಲದೆಯೊರ್ವಳೆ ದುಃಖದ ಕಡಲೊಳ್ ಮುಳುಗಿರ್ದನೆನ್ನಂ ಕೃಪೆಯಿಂದೂಳಿಗವೆಣ್ಗಳ್ವೆರಸಿ ಕಾವಲಿಟ್ಟು ಕಡಲೊಳ್ ಮುಳುಗಿ ಕಣ್ಗೆಟ್ಟಿಪ್ಪಳನೆತ್ತಿ ಸಲಹಿ ಎನ್ನಾಳ್ದನೆಡೆಗೆ ಕಳುಪಿದೆ ಪ್ರಾಣ ಮಾನಂಗಳಂ ಕಾದೆನ್ನ ಕುಲಧರ್ಮಮಂ ಮನ್ನಿಸಿದೆ ನಾನೀಗಳ್ ನಿನ್ನ ಬಸುರೊಳಂ ಬೆನ್ನೊಳುಂ ಬಂದೆ ನೀನೆನ್ನ ಪರಕೆಯೊಳ್ ಮಯ ಮಾಂಧಾತ ನಳ ನಹುಷನಂತಿಳೆಯಂ ಪಾಲಿಸಿ ಪಗೆಗಳಂ ಗೆಲ್ದು ಪೊರ್ದಿದರಂ ಪೊರೆದು ಕಳತ್ರ ಪುತ್ರ ಪೌತ್ರ ಬಂಧು ಮಿತ್ರರೊಡಗೂಡಿ ಧರ್ಮವಿಡಿದು ಬಹುಕಾಲ ಸುಖವಾಳೆಂದು ಪರಸಿಬಪ್ಪುದೆನಲಂತೆ ಪರಸಿಪೋದಳ್.ಮರುದಿವಸಂ ರಾಜನೃಪಂ ಶಕವರುಷ ೧೫೩೧ ಸಮ್ಯಸಂ. ಕಾರ್ತಿಕ ಶುದ್ಧ ೫ ಮಂಗಳವಾರ ಮೂಲಾನಕ್ಷತ್ರದ ೩ ನೇ ಪಾದದಲ್ಲಿ ಶುಭಮುಹೂರ್ತದೊಳೆ ಗೀತ ವಾದ್ಯ ನರ್ತನಮೆಂಬ ತೌರ್ಯತ್ರಿಕದೊಡನೆ ಇತ್ತೆರದೊಳ್ ಕೈಯೆತ್ತಿ ಪೊಗಳ್ವ ಕೈವಾರಿಗಳ್ ಸಹಿತಂ ಪಟ್ಟಣಮರಮನೆಯಂ ಪೊಕ್ಕು ಶುಭಲಗ್ನದೊಳೋಲಗಂಗೊಟ್ಟು ದೇವಾದಾಯಮಂ ಬಿಟ್ಟು ಪಟ್ಟಣದ ಬಸ್ತಿಯ ಆದೀಶ್ವರಂಗೆ ಗ್ರಾಮ ಕ್ಷೇತ್ರ ಮಾನ್ಯಮಂ ಕೊಟ್ಟು ದೊಡ್ಡ ಶಾಂತಯ್ಯನರಿಕೆ ಮಾಡಿಕೊಂದೊಡೆ ಮಲೆಯೂರ ಬೆಟ್ಟದ ಬಸ್ತಿಯ ಪ್ರಾಕಾರದ ಕೋಂಟೆಯಂ ಭದ್ರಾಕಾರಮಾಗಿ ಮಾಡಿಸಿಕೊಟ್ಟು ಆ ಗ್ರಾಮದ ಶಾನುಭೋಗ ವಿಜಯಪ್ಪಂಗ ಹೆಚ್ಚು ಮಾನ್ಯಭೂಮಿಗೆ ಶಿಲಾಪ್ರತಿಷ್ಠೆಯಂ ಮಾಡಿಸಿಕೊಟ್ಟು ಬೆಳಗುಳದ ಧರಣಿಪಂಡಿತಂಗಂ ಅರಿಕುಠಾರದ ವಿಜಯಣ್ಣಪಂಡಿತಂಗಂ ಎರಡು ಗ್ರಾಮಮನುಂಬಳಿಕೊಟ್ಟು ಆ ರಾಜರಸಂಗೆ ಬೆಟ್ಟದಪುರ ಹುಲ್ಲನಹಳ್ಳಿ ಕಳಲೆ ಮೂಗೂರು ಬೆಳಗುಲಿ ಮುಂತಾದ ರಾಜಕುಮಾರತಿಯರೆಂಟು ಜನಂ ಅರಸಿಯರ್ ಪತ್ತು ಜನ ಬಂಗಾರದವರಾಗಿರ್ದರಾತಂ ತನ್ನ ವರ್ಗದವರ್ಗುಂಬಳಿಯುಚಿತಂಗಳಿಂ ಮನ್ನಿಸಿಯರಸುಗೆಯ್ಯುತ್ತಿರಲ್‌.