ಇಂತು ದೊಡ್ಡಕೃಷ್ಣರಾಜ ಒಡೆಯರ ಸ್ವೀಕಾರಪುತ್ರರಾದ ಇಮ್ಮಡಿ ಕೃಷ್ಣರಾಜ ಒಡೆಯರಿಗೆ ಕಳಲೆ ದಳವಾಯರ ಮಕ್ಕಳು ದೇವಾಜಮ್ಮಣ್ಣಿಯುಂ ಬೆಳುಗಲಿ ದೇವಾಜಮ್ಮಣ್ಣಿಯುಂ ಬೆಟ್ಟದಕೋಟೆ ಲಕ್ಷ್ಮಮ್ಮಣ್ಣಿಯುಮೆಂಬ ಮೂವರರಸಿಯರಾಗೆ ಹನ್ನೆರಡು ಜನ ಭಂಗಾರದ ಭೋಗಸ್ತ್ರೀಯರೊಡನೆ ಸುಖಮಿರ್ದು ನಂಜರಾಜನುಂ ಚಾಮರಾಜರುಮೆಂಬ ಈರ್ವರ್ ಕುಮಾರರು ಕಾಲವಾದ ಬಳಿಕ ಅರಿಕುಠಾರದೊಳಿರ್ದ ರಾಜಒಡೆಯರ ವಂಶದಲ್ಲಿ ಪುಟ್ಟಿದ ದೇವರಾಜರ ಅರಸಿ ಹೊನ್ನಾಜಮ್ಮಣಿಗಂ ಉದ್ಭವಿಸಿದ ಚಾಮರಾಜನೆಂಬ ಕುಮಾರನ ದತ್ತುವಾಗಿ ಶಕವರುಷ ೧೬೯೯ನೆ ಹೇವಿಳಂಬಿ ಸಂವತ್ಸರದೊಳ್ ಪಟ್ಟಾಭಿಷೇಕಮಾಗೆ ಆತಂಗೆ ಮೂಗೂರ ಭಾಳಲೋಚನನಗ್ರತನೂಭವೆ ರೂಪುಸಂಪನ್ನೆಯಪ್ಪ ಕೆಂಪನಂಜಾಂಬೆಯು ಹುರಕ್ಕಿ ನಂಜರಾಜತನೂಭವೆಯು ದ್ವಿಜ ರಾಜಸದೃಶವದನೆಯು ಗಜಗಮನೆಯು ತರುರಾಜೋಪಮಜಂಘೇರ ಸತಿಯಂ ಕೋಕಿಲಾಲಾಪೆಯುಮಾಗಿ ರತಿದೇವಿಯ ರೂಪ ಗೆಲ್ವ ಕೆಂಪದೇವಾಂಬೆಯುಮೆಂಬ ಇಂತೀರ್ವರು ಅರಸಿಯರಾಗೆ ಸುಖಸಂಕಥಾವಿನೋದದಿಂದಿರುತ್ತಿರಲ್ ಆ ಕೆಂಪದೇವಾಂಬೆಯು ಭೋಗಾಂತರಾಯೋದಯದಿಂ ವಿಯೋಗಮಾಗೆ ತದ್ವಿರಹಾಂಧಕಾರದಿಂ ಚಿಂತಾಕ್ರಾಂತ ಸ್ವಾಂತರಂಗನಾಗಿರ್ದು ಬಳಿಕ ಅತಿಶಯ ರೂಪನಾಂತ ಕೀಲಾಪುರದ ರಾಜಪುತ್ರಿ ಚೆಲುವಾಂಬೆಯು ಬಾಲೆಸುಳಿಯಂತೆ ತೊಳಗಿ ಬೆಳಗಿ ನಳನಳಿಸುವ ರೂಪಿನ ಬಾಲೆ ಅರಸನಣುಗಿ ಜ್ಯೇಷ್ಠಪತ್ನಿಯ ಅನುಜೆಯಪ್ಪ ದೇವಾಂಬಿಕೆಯು ಅತಿಶಯ ರೂಪಿನೊಳ್ ರತಿಯಂ ವಿದ್ಯಾನಿಪುಣೆಯಿಂ ಭಾರತಿಯಂ ಸುಗುಣ ಸೊಬಗು ಶಾಂತತೆಯೊಳ್ ರೋಹಿಣಿಯಂ ಪೋಲ್ವ ಪಂಪಾನ್ವಯನಪ್ಪ ಹುರದ ಪುಟ್ಟರಾಜರಸನ ಕುಮಾರತಿ ಪಾವನೆಯಾದ ದೇವೀರಾಂಬಿಕೆಯುಂ ರೂಪು ಲಾವಣ್ಯ ವಿಲಾಸದೊಳ್ ಸಲಕ್ಷಣಮುಳ್ಳ ತೊಂಡವಾಡಿ ಕಾಂತೆಯರಸಿನ ಪುತ್ರಿ ಲಕ್ಷಣಾಂಬೆಯುಂ ಫುಲ್ಲಶರನ ವಲ್ಲಭೆಯ ರೂಪಂ ಗೆಲ್ವ, ಹುಲ್ಲನಹಳ್ಳಿಯ ಭೂವಲ್ಲಭನ ಸುತೆ ನಂಜಾಂಬೆಯುಮೆಂಬೀ ಐವರಂ ಮಹಾದೇವಿಯರಂ ಮದುವೆಯಾಗೆ

ಇಡಿದಿರೆ ಕಾಂತಾವಿರಹದ
ಕಡುಗತ್ತಲೆ ಚಾಮನೃಪನ ಮಾನಸದೊಳಗಂ
ಕಿಡಿಸಲ್ ರತ್ನಂಗಳೊಳೈ
ಸೊಡರಂ ಪಿಡಿದಂತೆ ಚಿತ್ತ ಬೆಳಗಿದುದಾಗಳ್

ಅಂತು ಪಂಚಕಲ್ಯಾಣೋತ್ಸವದಿಂ

ಶಾ ||     ಆ ರಾಜಾಗ್ರಣಿಯಪ್ಪ ಸದ್ಗುಣ ಲಸತ್ಸರ್ವಾಂಗ ಶೋಭಾಕರಂ
ಧೀರಂ ಭೀಮಬಲಂ ಪ್ರತಾಪನಿಳಯಂ ಗಾಂಭೀರ್ಯ ಸೌಂದರ್ಯದೊಳ್
ಪಾರಾವಾರ ಪರಾಕ್ರಮಾನ್ವಿತ ಕಲಾವಿಜ್ಞಾನಸಂಪನ್ನನಾ
ದಾ ರಾಜೇಂದ್ರಶಿರೋಮಣೀಪೃಥುಯಶಂ ಚಾಮೇಂದ್ರಭೂಪಾಲಕಂ

ಅಂತಪ್ಪ ಸಾಮರ್ಥ್ಯಮನುಳ್ಳವನಾಗಿಯು ಹಿಂದೆ ಶುಭಕೃತು ಸಂವತ್ಸರದಲ್ಲಿ ಹೈದರಲ್ಲಿಯು ಸ್ವಾಮಿದ್ರೋಹಿಯಾಗಿ ರಾಜ್ಯದೊಳಿರ್ದು ಆರುಕಾಡಿಗೆ ಉತ್ತರದಿಕ್ಕಿನ ಗಾವುದದಲ್ಲಿ ತೀರಿಹೋದ್ದರಿಂದಾ ಆತನ ಶರೀರಂ ಕೊಳಾಳದಲ್ಲಿ ಹೂಳಿದ್ದು ಸುಲತಾನಂ ತಂದು ಲಾಲಬಾಗಿಲೊಳು ಹೂಳಿಸಿಟ್ಟಿದ್ದು ಸುಲತಾನಂ ಪಾದಶಾಯನಪ್ಪೆನೆಂದು ಕರ್ನಾಟಿಗಲಂ ಪಿಂದಿಕ್ಕಿ ಮೈಸೂರನ್ನು ಕಿತ್ತು ನಜರಬಾದೆಂದು ಮಾಡಿಸಿ ಸರ್ವೇಜನರಂ ತನ್ನೊಳಗುಮಾಡಿಕೊಂಡು ಇರುತ್ತಿರೆ

ಇತ್ತಲ್ ಚಾಮರಾಜೇಂದ್ರನ ಪಿರಿಯರಸಿ ಕೆಂಪನಂಜಾಂಬಿಕೆ ಪುತ್ರದೋಹಳದೊಳಿರ್ದು ಪ್ರಮಾದಿ ಸಂವತ್ಸರದ ಅಶ್ವೀಜಮಾಸದೊಳು ರುತುಮತಿಯಾಗಿರ್ದು ಚತುರ್ಥಸ್ನಾನಾನಂತರಂ ದುಕೂಲವಸ್ತ್ರಾಭರಣ ಮಾಲ್ಯಾನುಲೇಪನವಂ ಬಿಟ್ಟು ಋಷ್ಯಾ ಹಾರಮಂ ಭುಂಜಿಸಿ ನಿಶಿಯೊಳು ಚಾಮರಾಜೇಂದ್ರನ ಸೂಳ್ಗೆವಂದು ಸುರತಸುಖದ ಸಮುದ್ರದೊಳೋಲಾಡಿ ನಿದ್ರಾಮುದ್ರಿತೆಯಾಗೆ ಮನೋಹರಮೆಂಬ ಬೆಳಗಿನ ಜಾವದೊಳ್ ಪ್ರಸನ್ನ ಸರೋವರದೊಳ್ ತಾವರೆಯರಳಿರ್ಪುದಂ ಮತಂಗಜಂ ಸಮೀಪಕ್ಕೆ ಬಂದುದಂ ಎಣ್ಣೆಯು ಬತ್ತಿಯು ಸಮೆದಿರ್ಪ ಸೊಡರಂ ಸ್ವಪ್ನದೊಳ್ ಕಂಡು ಸುಖಮಿರ್ಪುದುಮೊರ್ವ ಪುರುಷಂ ಮುನ್ನಿನ ಜನ್ಮದೊಳ್ ಪಡೆದಿರ್ದ ಮಹದೈಶ್ವರ್ಯಮಾ ಧರ್ಮಕ್ಕಂ ತ್ಯಾಗಂಗೆಯ್ದು ಸಂಸಾರ ಶರೀರಭೋಗದೊಳ್ ನಿರ್ವೇಗಮಾಗೆ ಕಳತ್ರ ಪುತ್ರ ಬಂಧುಗಳಂ ವಿಸರ್ಜಿಸಿ ತಪಂಗೆಯ್ದ ಪುಣ್ಯದ ಫಲದಿಂ ಸ್ವರ್ಗಮನೆಯ್ದಿ ಸಮುದ್ರೋಪಮಕಾಲಂ ದಿವ್ಯಸುಖಮನನುಭವಿಸಿ ಶೇಷಪುಣ್ಯದಿಂದಾಕೆಯ ಗರ್ಭಕೃವತರಿಸೆ

ಹೊಂಗಿತು ಬಲದುದರಂ ನೆರೆ
ತುಂಗಕುಚಂ ಬಿಗಿದವಕ್ಷಿ ಜಡನಾದವು ತಾ
ನಂಗನೆಯ ತ್ರಿವಳಿ ಮರಸಿದ
ವಂಗಂ ಬೆಳ್ಪಾಗಿ ತೋರಿತಾ ಗರ್ಭದೊಳುಂ

ಅಂತು ಸತಿಯ ಗರ್ಭಮುಂ ಜನರ ಹರುಷಗರ್ಭಮುಂ ಬೆಳೆಯೆ ಪುಂಸವನ ಪ್ರಮೋದ ಸೀಮಂತಾದಿ ಕರ್ಮಂಗಳಂ ನಿರ್ವರ್ತಿಸಿ ಮೃದ್ಭಕ್ಷಣೆ ಮೊದಲಾದ ಬಯಕೆ ತೀರ್ವುದುಂ ನವಮಾಸಂಬರಂ ಕ್ರಮದಿಂ ಗರ್ಭಾರ್ಭಕಂ ಬೆಳೆದು ಪುಟ್ಟಿದನದೆಂತೆನೆ

ಶ್ಲೋಕ ||ಏಕರಾತ್ರೇ ತು ಗರ್ಭಂ ಸ್ಯಾತ್ಪಂಚರಾತ್ರೇ ತು ಬುದ್ಬುದಮ್
ಅರ್ಧಮಾಸೇಂಡ ರೂಪಂ ಸ್ಯಾನ್ಮಾಸೇ ಚೈಕೇ ಶಿರೋದ್ಭವಃ ||
ದ್ವಿಮಾಸೇ ಹೃದಯಂ ಬಾಹೂ ತ್ರಿಮಾಸೇ ಚೋದರಂ ಭವೇತ್
ಚತುರ್ಮಾಸೇ ತು ಸರ್ವಾಂಗಂ ಪಂಚಮಾಸೇ ಪ್ರಪೂರಿತಮ್ ||
ಷಣ್ಮಾಸೇ ಚಾಸ್ಥಿ ಸಂಯುಕ್ತಂ ಸಪ್ತಮಾಸೇ ಚ ರೋಮಕಮ್
ಅಷ್ಟಮಾಸೇ ಚ ವಿಜ್ಞಾನಂ ನವಮಾಸೇ ಪ್ರಬೋಧನಮ್ ||
ಪ್ರಸೂತಿರ್ದಶಮೇ ಮಾಸೇ ತಸ್ಯ ದೇಹಸ್ಯ ಲಕ್ಷಣಮ್ ||

ಈ ಪ್ರಕಾರವಾಗಿ ಶಕವರ್ಷ ೧೭೧೬ ಸಂದ ವರ್ತಮಾನ ಆನಂದನಾಮ ಸಂವತ್ಸರದ ಆಷಾಢ ಬಹುಳ ೨ ಚಂದ್ರವಾರ ಶ್ರವಣನಕ್ಷತ್ರಮಾಗೆ ಆ ಮಧ್ಯಾಹ್ನ ಅಭಿಜನ್ಮುಹೂರ್ತದ ಕನ್ಯಾಲಗ್ನದೊಳ್ ವಿಲಗ್ನ ಹೋರಾದ್ರೇಕ್ಕಾಣ ನವಾಂಶ ದ್ವಾದಶಾಂಶ ತ್ರಿಂಶಾಂಶಮೆಂಬೀ ಷಡ್ವರ್ಗಂಗಳೊಳ್ ವಿಜಯನೆಂಬ ಮೂಹೂರ್ತ ಸತ್ವವೇಳೆಯುಮಾಗೆ

ಪೂರ್ವರಮಣಿಯ ಪರ್ವತಮಂ
ಶಾರ್ವರಿ ಸಂಪೂರ್ಣಚಂದ್ರನಂ ಪಡೆವಂತಂ
ತರ್ವತ್ನಿ ಸರ್ವಲಕ್ಷಣ
ಸರ್ವ ಗುಣಾನ್ವಿತನೆನಿಪ್ಪ ಸುತನಂ ಪಡೆದಳ್

ಆಗಳ್

ಶ್ಲೋಕ || ತಮೋರವಿಜ್ಞಾಃ ಕಟಕೇ ತುಲಾಯಾಂ ಗುಳಿಕಃ ಕುಜಃ
ಚಾಪೇ ಗುರುರ್ವೃಷೇ ಶೌರಿಃ ಚಂದ್ರಕೇತೂ ಚ ನಕ್ರಕೇ ||
ಸಿಂಹೇ ದೈತ್ಯ ಗುರೌಯುಕ್ತೇ ಕೃಷ್ಣರಾ[ಜಸ್ಯ ಚೋದಯ:] ||

ಅಂತು ಪುಟ್ಟುವುದುಂ ಜಾತ ನಾಮಕರ್ಮ ಬಹಿರ್ಯಾನ ನಿಷಧ್ಯಾನ್ನಪ್ರಾಶನ ಚೌಲಾದಿ ಕರ್ಮಂಗಳಂ ನಿರ್ವರ್ತಿಸೆ ತುಂಬಿಗರೆದಂ ಮೊಗಮಂ ನೋಡಿಯುಂ ಮಗುಚಿ ಕೊಂಡುಪವಿಷ್ಟನಾಗಂಬೆಗಾಲನಿಕ್ಕಿ ಎದ್ದು ನಿಂದು ದಟ್ಟಡಿಯಂ ತಳರ್ದಡಿಯಂ ಸ್ಥಿರಗಮನಮಂ ಮಾಡಿ ಶುಕ್ಲಪಕ್ಷದ ಬಿದಿಗೆ ಎಳೆವೆರೆ ಬೆಳೆವಂತೆ ಶರೀರೇಂದ್ರಿಯಂಗಳ್ ಬೆಳೆದು ಹಲ ಕುಲಿಶ ಸ್ವಸ್ತಿಕಾದಿ ಶುಭಲಕ್ಷಣಂಗಳಿಂದ ಮರಿಯಾನೆಯಂತೆ ಬಾಲಕ್ರೀಡೆಯಿಂದೊಪ್ಪುತ್ತಿರ್ದನು.

ಅಷ್ಟರೊಳ್ ತತ್ಪಿತೃವಪ್ಪ ಚಾಮರಾಜೇಂದ್ರಂ ೨೦ ವರ್ಷಂಬರಂ ಶ್ರೀರಂಗಪಟ್ಟಣದ ರತ್ನಸಿಂಹಾಸನಕ್ಕಧೀಶ್ವರನಾಗಿರ್ದು ನಳಸಂವತ್ಸರದೊಳ್ ತ್ರಿದಶಲೋಕಪ್ರಪ್ತನಪ್ಪುದು ಮಾತಾಪಿತೃವಿಯೋಗದೊಳ್ ಲಕ್ಷ್ಮಣಾಂಬಿಕೆ ನಡಪುತ್ತಿರಲಷ್ಟರೊಳ್ ಇಂಗರೀಜ ಸರದಾರರ್ ಬಲಂಗೂಡಿ ಬಂದು ಸಿದ್ಧಾರ್ಥಿ ಸಂವತ್ಸರದ ಚೈತ್ರ ಬ ೩೦ ಶನಿವಾರ ಮಧ್ಯಾಹ್ನದೊಳೆ ಶ್ರೀರಂಗಪಟ್ಟಣಮಂ ಹಲ್ಲಮಂ ಹತ್ತಿ ಕೋಂಟೆಯಂ ಕೊಂಬಲ್ಲಿ ಸುಲತಾನಂ ಗುಂಡು ತಾಗಿ ಸಾಯುವುದು ಪೂರ್ವಾಪರ ಸಂಬಂಧಮಂ ವಿಚಾರಿಸಿ ಕರ್ಣಾಟ ಮೊದಲಾದ ದೇಶಂಗಳ್ಗೆ ಮೈಸೂರರಸುಗಳ್ ಪ್ರಭುಗಳೆಂದರಿದು ಪೂರ್ಣಯ್ಯನೆಂಬ ದ್ವಿಜನುಗೂಡಿ ಸರದಾರರೆಲ್ಲಂ ಕೃಷ್ಣರಾಜರಿಗೆ ಸೇವಾಸಕ್ತರಾಗಿ ಮೈಸೂರಿಗೆಯ್ತಂದು ಶಕವರುಷ ೧೭೨೧ನೆ ಸಿದ್ಧಾರ್ಥಿಸಂವತ್ಸರದ ಜೇಷ್ಠ ಶುದ್ಧ ೫ ಯೊಳೆ ಸಮಸ್ತ ದೇಶಾಧೀಶ್ವರ ಸರದಾರರು ರಾಜಮಂತ್ರಿ ಸಾಮಂತ ಪುರೋಹಿತ ಮೊದಲಾಗಿ ಚಪ್ಪನ್ನದೇಶದಖಿಲ ಭೂಸುರ ಕ್ಷತ್ರಿಯ ವೈಶ್ಯ ಶೂದ್ರ ನಾನಾ ಜಾತಿಗಳಂ ಕೂಡಿ ಕಾಮದಿವಸದ ಶುಭಲಗ್ನದೊಳ್ ನವರತ್ನನಿರ್ಮಿತ ಸಿಂಹಾಸನದೊಳೈದು ವರ್ಷದ ಕೃಷ್ಣರಾಜಕುಮಾರನಂ ಕುಳ್ಳಿರಿಸಿ ಪಟ್ಟಾಭಿಷೇಕಂಗೆಯ್ದು ಸರ್ವರು ಸಂತುಷ್ಟರಾಗಿ ಹರುಷಗಡಲೊಳೋಲಾಡುತ್ತಿರೆ ಇಂಗರೀಷ್ ಜನರಲ್ ಆರಿಷ್ ಎಂಬ ಸೇನಾಧಿಪತಿಯು ಪೂರ್ಣಯ್ಯನೆಂಬ ಬ್ರಾಹ್ಮಣಂಗೆ ಸರ್ವಾಧಿಕಾಮನಿತ್ತು ರಾಜಸೇವಾ ಕ್ರಮದೊಳಿರಿಸಿ ಕೋಲನೆಂಬ ಸರದಾರನಂ ಮೈಗಾಪಿನೊಳ್ಳಿಟ್ಟು ಪೋಗೆ ಪೂರ್ಣಯ್ಯಂ ಬೆಸಗೆಯುತ್ತಿರ್ದನಾ ಮಹಾರಾಜಕುಮಾರಂ ಕ್ರಮದಿಂ ಬೆಳೆದು ಚೌಷಷ್ಟಿಕಲಾಧರನಾಗಿ ಸ್ವಕುಲಾಬ್ಧಿಯಂ ಪೆರ್ಚಿಸುತ್ತ ಯಾಚಕ ಜಾತಕಂಗಳಿಗೆ ಮುದಮನೊದಗಿಸುತ್ತಂ ವಿದ್ವ ದ್ವೃಂದಕುಮುದಪ್ರಿಯಂ ನೋಳ್ಪ ಜನಂಗಳ್ಗೆ ಅತ್ಯಂತ ಸೌಂದರನುಂ ಸತ್ಯದೊಳ್ ರಾಮಚಂದ್ರನುಂ ಧರ್ಮದೊಳ್ ಧರ್ಮರಾಯನುಂ ವಿಕ್ರಮದೊಳ್ ಲವನುಂ ದಾನದೊಳ್ ಕರ್ಣನುಮೆನಿಸಿ ನ್ಯಾಯವಿಹಿತ ಪ್ರಜಾಪಾಲನಮುಂ ಮತಿಪಾಲನಮುಂ ಕುಲ ಪಾಲನಮುಂ ಆತ್ಮಪಾಲನಮುಮೆಂಬ ಸಮಂಜಸತ್ವಲಕ್ಷಣ ಕ್ಷಾತ್ರಧರ್ಮದೊಳ್ ಕೂಡಿದಾನಾಗಿಯು ಕಾಮಾದಿ ಅರಿಷಡ್ವರ್ಗಮಂ ಜಯಿಸುತ್ತ ವಿದ್ಯಾಭ್ಯಾಸಂಗೆಯ್ದು ಚಾಗದ ಪೆರ್ಮೆಯಂ ಪೆರ್ಚಿಸುತ್ತಿರ್ಪಂ ಮತ್ತಂ ಕೊಲೆಗಂ ಪುಸಿಗಂ ಕಳವಿಂಗಂ ಮನಂಗೊಡದೆ ಮರವೆಗಂ ಬಿರುನೋಟಕ್ಕಂ ಬಿರುನುಡಿಗಂ ಬೇಂಟೆಗಂ ಸೊಕ್ಕಿಂಗಂ ಜೂಜಿಂಗಂ ಮನಮನೆಳಸದೆ ದಯಾರಸಮೆ ರೂಪಾದಂತೆ ಬೆಳೆದೆಳೆಜವ್ವನವೇರಿ ಸೊರ್ಪುಂ ಸೌಂದರ್ಯವಿಲಾಸಮಂ ಕಂಡ ಕಾಮಿನಿಯರ್ ಬೆಂಡಾಗಿ ದಿಂಡುಗೆಡೆದಂತೆ ಬೆಂಡಾಗಿ ಮರುಳ್ಗೊಂಡು ಮೇರೆ ಮೀರಿ ಮೈಮರೆದೆಕ್ಕಟಿಯೊಳ್ ಸೊಕ್ಕಿ ಮೇಲಿಕ್ಕುವ ಸರಿಮಿಂಡಿವೆಣ್ಗಳಂ ಸದೆದು ನೋಟ ನುಡಿಯೊಳು ಪಿಂಗಿಸಿ ಸದಾಚಾರ ಸಂಪನ್ನತೆಯಂ ಬಿಡದೆ ನನ್ನಿಯ ನಲ್ಲ, ನಾಣ್ಪ, ಪುಸಿವರ ಬೊಜಗ, ಮುದ್ದುಗರ ಮೊದಲಿಗ, ಬಲ್ಲಿದರ ಬಲ್ಲಹ, ವೀರರ ವೀರ, ಸಿತಗರ ಮಿಂಡ, ಬಿರುದಂತೆಂಬರ ಗಂಡನೆಂದು ನಾಡು ಬೀಡು ರಾಜ್ಯ ಜನಂಗಳೆಲ್ಲಾ ಒಂದೆ ಕೊರಲೊಳ್ ಕೊನೆದಾಡುತ್ತಮಿರೆ ಪ್ರಜಾನುರಾಗದ ಮೊದಲು, ರಾಮಚಂದ್ರಗೆ ಬದಲು, ವೀರದ ಮೊಳೆ ಬಿನ್ನಣದ ಬೆಳೆ, ದಯದ ಸೊಂಪು, ಜಯದ ಮೋಡಿ, ಜಸದ ಗಾಡಿ, ದಾನದ ಪೊಣ್ಕೆ, ಧರ್ಮದ ಕಾಣ್ಕೆ, ತಿಳಿವಿನ ಮೆಚ್ಚು, ಧಿರತೆಯ ಪೆಚ್ಚು ಒಸಗೆಯ ಉಬ್ಬು, ಓಜೆಯ ಕೊಬ್ಬು, ಸಿರಿಯ ಕೂಟ, ಸಿಂಗದಾಮೆಂದಾ ರಾಜನಂ ಬಲ್ಲರ್ ಬಗೆದು ಪೇಳ್ವರ್.

ಮತ್ತಮೀ ರಾಜಂಗಂ ನಿತ್ಯದೊಳ್ ಸರಸ್ವತಿಯು ಪ್ರಸನ್ನಮಾಗಿ ಕರುಣಾಮೃತ ರಸದಿಂ ತುಂಬಿದ ಮುಖವೆಂಬ ಸರೋವರಕಮಲದೊಳ್ ನರ್ತಿಸಿ ನಲಿಯುತ್ತ ತನ್ನಂಕಮಾಲೆಯಂ ಪೇಳುತ್ತಿರ್ಪಳ್.ಹೃದಯದೊಳ್ ಧರ್ಮಂ ಸ್ವಾಧೀನಮಾಗಿ ನಾಲ್ಕು ಪಾದದಿಂ ಸಂಪೂರ್ಣತೆಯಪ್ಪುದರಿಂ ಕೃತಯುಗಮಲ್ಲದೆ ಕಲಿಯುಗಮಲ್ಲೆಂದು ಪೇಳುತ್ತಿರ್ಪರ್.ಮತ್ತಮೀ ರಾಜನಿರವಂ ಭಾವಿಸೆ ಕೃಪೆಯ ಪೊಲನಂ ಕಷ್ಟಮೆಂಬ ಕಡಲಂ ಕಳಿವ ಭೈತ್ರನು ಮುನಿಸೆಂಬ ಪಾವಿಂಗೆ ಗರುಡನಾಗಿಯುಂ ದುರ್ನಯತಮಕ್ಕೆ ಸೂರ್ಯನುಂ ಕುಲಕುಮುದಕ್ಕೆ ಚಂದ್ರನುಂ ದಾನಧರ್ಮೋತ್ಸವಕ್ಕೆ ಮಂಗಳನುಂ ತತ್ವಾರ್ಥದೊಳ್ ಬುಧನುಂ ಸುಗಣಂಗಳೊಳ್ ಗುರುವುಂ ಸರಸಕವಿತೆಯೊಳ್ ಕವಿಯುಂ ನಿಷ್ಕಾರ್ಯದೊಳ್ ಮಂದನುಂ ಅರಾತಿಗಳೊಳ್ ರಾಹುವುಂ ಧರ್ಮಕೀರ್ತಿಯೊಳ್ ಕೇತುವೆನಿಸಿ ಸುಜನದಾರಿದ್ರವಿದ್ರಾವಣಮೆನಿಸಿದ ಶ್ರೀಕೃಷ್ಣರಾಜಮಹಾರಾಜಂ ಸಕಲ ಶಸ್ತ್ರಶಾಸ್ತ್ರ ವಾಹನಾರೋಹಣಾದಿಗಳೊಳ್ ಅಗ್ಗಳನೆನಿಸಿ ನೀತಿಶಾಸ್ತ್ರ ಪರಾಕ್ರಮದೊಳ್ ಸಂಪನ್ನನಾಗಿ ದಿಕ್ಕುಮಾರನಂತೆ ಬೆಳೆದೆಳೆಜವ್ವನ ನೆರವುದುಂ

ಕಂಡೊಡೆ ಕಾಮಿನಿಯರ್ ಭ್ರಮೆ
ಗೊಂಡಾ ನೃಪನಂಗಸೌಂದರಕ್ಕೆಳಸಿ ಕರಂ
ಬೆಂಡಾಗಿ ವಿರಹತಾಪದೊ
ಳಂಡಲೆಯುತ್ತಿಪ್ಪರಲ್ಲದುಳಿದವರಿಲ್ಲಂ

ಅಂತತಿಶಯರೂಪವಾಗಿ ಬೆಳೆದಿರ್ಪುದುಂ ಲಾವಣ್ಯ ವಿನಯ ವಿವೇಕ ಕೌಶಲ್ಯ ಸೌಶೀಲ್ಯ ಪಾತಿವ್ರತ್ಯ ಪ್ರತ್ಯಾನುಕೂಲೆಯರಾಗಿ ರತಿಗೆ ಸಮನಾದ ರೂಪಾತಿಶಯಮುಳ್ಳ ದೇವಾಂಬಿಕೆಯಂ ಲಿಂಗಾಂಬಿಕೆಯಂ ಗೌರಾಂಬಿಕೆಯಂ ದೇವಾಜಾಂಬೆಯಂ ಲಕ್ಷ್ಮಾಂಬೆಯರೆಂಬ ರಾಜಪುತ್ರಿಯರಂ ಪ್ರತ್ಯೇಕಮಾಗಿ ಅತ್ಯಂತ ವಿಭವದಿಂ ಮದುವೆ ನಿಂದುಮದಲ್ಲದೆ ಭ್ರಮರಾಳಕದ ಹೆರೆನೊಸಲ ಕನ್ನಡಿಗದಪಿನ ಕರ್ಣಾಟ ಶ್ರೀಕಾರ ಕರ್ಣಯುಗದ ಚಂಪಕನಾಸಿಕದ ಬಿಂಬೋಷ್ಠದ ಕುಂದರದನದ ರಾಕೇಂದುಮುಖದ ಕಂಬುಕಂಠದ ಚಕ್ರವಾಕಸ್ತನದ ನಿಡುದೋಳಿನ ಪದ್ಮಪಾಣಿಯ ತೆಳುವಸುರ ಸುಳಿನಾಭಿಯ ಬಡಬಾಸೆಯ ಘನನಿತಂಬದ ಕದಳೀಸ್ತಂಭೋರುವಿನ ಹ್ರಸ್ವಜಂಘೆಯ ಗೂಢಗುಲ್ಫದ ಕೂರ್ಮಪಾದದ ತಳಿರಡಿಯ ತಾರಾಳಿನಖದ ಗಿಳಿನುಡಿಯ ಕೋಕಿಲ ನಿನಾದದ ಸ್ತ್ರೀರತ್ನಂಗಳ್ ಪಲಂಬರಾಗಲವರೊಳ್ ಮದನವಿಲಾಸದ ಮುದ್ದುಲಿಂಗಾಂಬೆಯು ಗುರುಸಿದ್ಧಮಾಂಬೆಯು ಕೆಂಪಬಸವಾಂಬೆಯು ಮರಿದೇವಾಂಬೆಯು ಲಿಂಗಮಾಂಬೆಯರ್ ಮೊದಲಾದ ಪಲಂಬರ್ ಕಳತ್ರಂಗಳಾಗೆ ಅವರೊಳ್ ದೇವಾಂಬಿಕೆಯೂ ಗರ್ಭಮಾಗಿ ಸುಖಪ್ರಸವವಾಗೆ

ಆ ತನ್ವಂಗಿಯ ಗರ್ಭದಿ
ಜಾತಂ ಸದ್ಗುಣವಿಭೂಷಣಂ ಸುಭಗಾಂಗಂ
ನೀತಿನಿಧಾನಂ ವಿಶಸ
ಖ್ಯಾತ ಯಶಂ ನಂಜರಾಜನೆಂಬ ಕುಮಾರಂ

ಅಂತಪ್ಪ ಕುಮಾರಂ ಪುಟ್ಟಿ ಬೆಳೆದು ಧೈರ್ಯ ಸ್ಥೈರ್ಯ ವೀರ್ಯ ವಿಕ್ರಮದೊಳ್ ಅಗ್ಗಳನೆನಿಸಿಪ್ಪಂ ಮತ್ತಂ ಕೆಂಪಬಸವಾಜಮ್ಮನ ಗರ್ಭದೊಳ್ ಕೆಂಪನಂಜಾಂಬೆಯೆಂಬ ಪುತ್ರಿಯುಮಾಗೆ ಇಂತಾದಿ ಪುತ್ರಪುತ್ರಿಯರೊಡನೆ ಧರ್ಮಮಂ ಬಿಡದೆ

ಉಪಜಾತಿ || ಆ ರಾಜಾಗ್ರಣಿಯಪ್ಪ ಕೃಷ್ಣಧರಿಣೀಪಾಲಂ ಸುಖಾಸೀನನುಂ
ಧೀರಂ ಭೀಮಬಲಂ ಪ್ರತಾಪನಿಳಯಂ ಗಾಂಭೀರ್ಯಮೌದಾರ್ಯದೊಳ್

ಪಾರವಾರ ಪರಾಕ್ರಮಾನ್ವಿತ ಕಲಾವಿಜ್ಞಾನಸಂಪನ್ನ ಮೈ
ಸೂರೊಳ್ ಹರ್ಯಕ್ಷಪೀಠೋ[ಪರಿ ಸೊಗಯಿ]ಸಿದಂ ಬಾಲಸೂರ್ಯ ಪ್ರಭಾಂಗಂ

ಅಂತಿರ್ದು ಅಂಗೀರಸ ವತ್ಸರಾರಭ್ಯ ಪೂರ್ಣಯ್ಯನಂ ವಿಸರ್ಜಿಸಿ ಸ್ವತಂತ್ರದಿಂ ಸ್ವಜನಂಗಳನೆ ಸಮಸ್ತ ಅಧಿಕಾರಂಗಳೊಳ್ ನಿಲ್ಲಿಸಿ ಸಂಬಳುಂಬಳಿಗಳಂ ಪೆರ್ಚಿಸಿ ದೇವಾಲಯ ದೇವಗುರು ಬ್ರಾಹ್ಮಣ ಕ್ಷತ್ರಿಯ ಸ್ವಜನ ಪರಿಜನ ವಿದ್ವಜ್ಜನಂಗಳ್ಗೆಲ್ಲಾ ಕಾಮಧೇನು ಕಲ್ಪವೃಕ್ಷ ಚಿಂತಾಮಣಿಗಳೆಂಬೀ ತ್ರಿವಿಧಾಭಿಷ್ಠ ಫಲದಾಯಿಗಳೆ ಕೈನೀಡಿ ಕೊಡುವಂತೆ ಸರ್ವರ್ಗಂ ಆಹಾರ ವಸ್ತ್ರಾಭರಣಾನುಲೇಪನ ತಾಂಬೂಲ ಧನಕನಕ ಧಾನ್ಯ ಗ್ರಾಮ ಕ್ಷೇತ್ರ ಗೃಹಾದಿ ಭೋಗೋಪಭೋಗಂಗಳನ್ನಿತ್ತು ಸಂತುಷ್ಟರಂ ಮಾಡಿ ಸಲಹುತ್ತ ಶತ್ರುಗಳಿಲ್ಲದೆ ಧರ್ಮದಿಂ ರಾಜ್ಯವಾಳುತ್ತ ಮುನ್ನಮರಣ್ಯವಾಗಿರ್ದ ಮಹಿಸೂರ ಸಂಸ್ಥಾನಮಂ ಅಮರಾವತಿಗೆ ಸಮಾನವಾಗೆ ಖಾತಿಕಾ ಪ್ರಾಸಾದಾ ಕಾಲಹರ್ಮ್ಯಾಟ್ಟಣೆ ಗೋಪುರ ಶಿಖರಂಗಳಿಂ ರಾಜಧಾನಿಯಂ ನಿರ್ಮಿಸಿ ದೇವವಿಮಾನದಂತಪ್ಪ ಆಸ್ಥಾನಮಂಟಪಮಂ ದೇಗುಲ ಮೊದಲಾದೀ ಅತಿಶಯವೆನಲ್‌ಮಾಡಿಸಿ ಧರ್ಮ ವ್ಯಾಪಾರದೊಳಿರುತ್ತಂ ಒಂದು ದಿನಂ ಪುರಮನೀಕ್ಷಿಸಲಲಂಗದ ಮೇಗಡೆಯನೆ ಬರುತ್ತ ಪಶ್ಚಿಮದಲ್ಲಿಪ್ಪ ಪುರಾತನ ಶಾಂತೀಶ್ವರ ಬಸದಿಯಂ ಕಂಡಾಗಲೆ ತಮ್ಮರಮನೆಗೆ ಆರ್ಷೆಯಾಗಿ ವೈದ್ಯನಾದ ಸೂರಿಪಂಡಿತನ ಪೌತ್ರ ಬೊಮ್ಮರಸಪುತ್ರನಾದ ಸಕಲ ಸುಗುಣ ಸಂಪನ್ನನಾದ ಲಕ್ಷ್ಮೀಪತಿಪಂಡಿತನಂ ಬರಿಸಿ ನಿಮ್ಮ ದೇವರಿಗೆ ಅಂಗರಂಗವವೈಭವಂಗಳ್ಗೆ ಸಂವತ್ಸರಕ್ಕೆ ಮುನ್ನೂರು ವರಹ ತಸ್ತೀಕು ಮಾಡಿದೇವೆ ಎಂದಾಗಲೆ ನಿರೂಪಮಂ ಮಾಡಿಸಿಕೊಟ್ಟು ಈ ಶ್ರೀಮುಖದಾರಭ್ಯ ನಡೆವಂತೆ ನಿಯಮಿಸಿದನಂತರಂ

ಮತ್ತೊಂದು ದಿವಸಂ ತಮ್ಮ ಪಿತೃ ಪಿತಾಮಹರ ಜನ್ಮಭೂಮಿಯಾದರಿಕುಠಾರಮೆಂಬ ಪುರಮನೀಕ್ಷಿಸಲ್‌ಬಂದಾ ಗ್ರಾಮಮಂ ಚಾಮರಾಜನಗರಮಂ ಮಾಡಿಸಿಯದರೊಳ್ ಕಮನೀಯಮಾಗಿ ಚಾಮರಾಜೇಶ್ವರಂಗೆ ಮಹಾದೇವಾಲಾಯಮನೆತ್ತಿಸಿಯಲ್ಲಿ ಕೆಂಪನಂಜಾ ಮಹಾಪಾರ್ವತೀಸದನಮಂ ಚಾಮುಂಡೇಶ್ವರೀಗೃಹಮಂ ಸುತ್ತಲ್‌ಲೀಲಾಮೂರ್ತಿಗಳ್ಗಾವಾಸಂಗಳನತಿಶಯವೆನಲ್‌ಮಾಡಿಸಿ ಹೊರಪೇಟೆಯೊಳ್ ನಾರಾಯಣದೇವರ ಮಂದಿರಮಂ ಮಾಡಿಸಿ ಆ ಚಾಮರಾಜನಗರವನ್ನು ಆಬಾದು ಮಾಡಿ ಬ್ರಾಹ್ಮರಿಗು ಅರಸುಗಳಿಗು ಅತಿಶಯವಾದ ಮಂದಿರಂಗಳಂ ನಿರ್ಮಿಸಿ ಆ ಪುರಮನಳಕಾಪುರಕ್ಕೆ ಪ್ರತಿಯೆನಿಸಿ ಸರ್ವಧಾರಿ ಸಂವತ್ಸರದೊಳ್ ಚಾಮರಾಜೇಶ್ವರ ಕೆಂಪನಂಜಾಂಬಿಕ ಲೀಲಾವಿಗ್ರಹ ಚಾಮುಂಡೇಶ್ವರಿ ಕಳತ್ರ ಸಹಿತಮಾದ ಆತ್ಮವಿಗ್ರಹಂಗಳ್ಗೆ ರತ್ನ ಹೇಮ ರಜತಮಯ ವಿಭೂಷಣಂಗಳಮುಪಕರಣಂಗಳುಮಂ ವಸ್ತ್ರಾದಿಗಳಂ ಕೊಟ್ಟು ನಿತ್ಯೋತ್ಸವ ಪಕ್ಷೋತ್ಸವ ಮಾಸೋತ್ಸವ ವರ್ಷೋತ್ಸವ ರಥೋತ್ಸವ ಪ್ರಮುಖೋತ್ಸವಗಳೆಂಬೀ ಐದು ಸಾವಿರ ವರಹದ ಒಂಬತ್ತು ಗ್ರಾಮಂಗಳ್ಗೆ ತನ್ನಂಕಮಾಲೆಯಿಂ ಶಿಲಾಶಾಸನಮಂ ಬರೆಯಿಸಿಕೊಟ್ಟು ಪ್ರತ್ಯಕ್ಷ ಕೈಲಾಸವೆಂಬಂತತಿಶಯಮಾಗಿ ರಚಿಸಿ ಮಹಿಸೂರೊಳರಮನೆಯ ಹತ್ತಿರದೊಳ್ ಶ್ರೀಕೃಷ್ಣದೇವಾಯಮನತ್ಯದ್ಭುತಮಾಗೆ ರಚಿಸಿಯಾ ಶಿಲಾಭೋಗಕ್ಕೆ ಮುಕ್ರಪ್ರಾಕಾರ ವೈಭವಂಗಳಂ ಮಾಡಿಸಿ ಕೊಡುತ್ತಂ ವೈಕುಂಠಮೆ ಭೂಮಿಗಿಳಿದೊಪ್ಪುವಂತಾಗೆ ಮತ್ತಮನೇಕ ದೇವಾಲಯಂಗಳಂ ಸ್ನಾನಘಟ್ಟ ತಟಾಕ ವಾಪೀ ಕೂಪಂಗಳಂ ನಿರ್ಮಿಸಿ ಆರಾಮಪ್ರಪಾಸತ್ರಾಗ್ರಹಾರ ಮೊದಲಾದ ಅನೇಕ ದಾನ ಧರ್ಮ ಪರೋಪಕಾರಮಂ ಮಾಳ್ಪುದು ವಿಸ್ತರಿಸಿ ಪೇಳಲು ಸುರೆ ಜಂಗ ಸಾಸಿರ ಜಿಹ್ವೆಯುಳ್ಳ ನಾಗೇಂದ್ರಂಗಮಳವಲ್ಲಿಲ್ಲಿಯ ಮನುಷ್ಯಂ ಪೇಳ್ವಡೆಗ್ಗನಲ್ಲದೆ ಪ್ರೌಢನಲ್ಲದರಿಂ ಪೇಳಲಂಜಿಬಿಟ್ಟೆನೆಂತೆನೆ

ಜಲಜಜನ ತಲೆಯ ಪಿಡಿದನ
ತಲೆಯೊಳಿರ್ದವನ ವೈರಿ ವೈರಿಯನೇರ್ದನ
ಸಲೆ ಮೈದುನನಣ್ಣನ ಗುಣ
ನೆಲೆಗೊಂಡುದು ಕೃಷ್ಣರಾಜಭೂಪಾಗ್ರಣಿಯೊಳ್

ಮತ್ತಂ

ಶ್ರೀಮತೃಷ್ಣಾವನಿಪತಿ
ಪ್ರೇಮದೊಳನವರತ ಕುಡುವ ದಾನದಿ ಸರ್ವರ್

ಕಾಮಿತ ಫಲಮಂ ಪಡೆದು ಧ
ರಾಮರರೆಂದೆನಿಸಿ ಮೆರೆದರತಿಸೌಖ್ಯದೊಳುಂ

ಶ್ರೀಗೆ ವರನಾದ ನೃಪನತಿ
ರಾಗದೊಳುಂ ಶಂಕೆಗೊಡೆಯೆಲ್ಲಾ ಜನರ್ಗಂ
ತ್ಯಾಗಿಸೆ ಧನಮಂತದರಿಂ
ಭೋಗೀಂದ್ರರುಮೆನಿಸಿ ಮೆರೆವಭಿಜ್ಞರು ಧರೆಯೊಳ್

ದಾರಿದ್ರಗಿತ್ತ ಧನಮದು
ನೀರಂ ಫಲವೃಕ್ಷಕೆರೆದತೆರನಂತ[ಕ್ಕುಂ]
ಭೂರಿಯ ಧನಿಕಂಗಿತ್ತೊಡೆ
ನೀರಂ ಕೊಡಲೊಳಗೆ ಸುರಿವ ಪರಿತಾನುಕ್ಕುಂ

ಎಂದರಿದು ಬಡವರಿಗೆ ಮನಸಂದಧಿಕದ್ರವ್ಯವಿತ್ತು ಮನ್ನಿಸಲವರಿಗೆ ದಂದುಗವಳಿದುಗ್ಘಡಿಸಿಲ್‌ಬಂದುದು. ಇಂತು ಕೀರ್ತಿ ಪೆರ್ಚಿರೆ ಮತ್ತೊಮ್ಮೆ ಚಾಮರಾಜನಗರಕ್ಕೆಯ್ದಿರ್ದಲ್ಲಿ ಬಸ್ತಿಯಂ ಪೊಕ್ಕಲ್ಲಿಪ್ಪ ಜಿನಪ್ರತಿಮೆಯೆಲ್ಲಮಂ ಪದ್ಮಾವತಿಪ್ರತಿಬಿಂಬ ಮೆಲ್ಲಮಂ ನೋಡಿ ತಮ್ಮಾಶ್ರಿತರಾದ ಪಂಡಿತನ ಗೃಹಮನೆಯ್ದಿ ಕೆಲಹೊತ್ತಿರುತಿರ್ದು ಒಳಸ್ಥಳದೊಳಿರ್ಪ ಜೈನಗೃಹಂಗಳಾದಿಪ್ಪತ್ತು ಮೂರು ಬಸ್ತಿದೇವರ್ಗೆ ಪಡಿತರ ದೀಪಾರಾಧನೆ ಬಗ್ಗೆ ತಸ್ತೀಕು ಮಾಡಿಸಿಕೊಟ್ಟ ಅಗ್ರಹಾರಮಂ ಕೊಡುವಲ್ಲಿ ಜೈನಬ್ರಾಹ್ಮಣರಿಗೆ ಹತ್ತು ವೃತ್ತಿಯನ್ನು ಕೊಟ್ಟು ಮತ್ತೊಮ್ಮೆ ಸುಬ್ರಹ್ಮಣಕ್ಕೆ ಕಾಸಾ ಸವಾರಿ ಪೋಗಿದ್ದಲ್ಲಿ ಗಟ್ಟದ ಕೆಳಗಿಪ್ಪ ಮೂಡುಬಿದರೆ ಕಾರಕಳ ಏಣೂರು ಮೊದಲಾದ ಜೈನ ತೀರ್ಥಸ್ಥಳಗಳನ್ನು ನೋಡಿ ಅತ್ಯಾಶ್ಚರ್ಯಂಬಟ್ಟು ಆ ಸ್ಥಳಗಳಂ ಮನ್ನಿಸಿ ಮತ್ತಂ ಬೆಳಗುಳದ ತೀರ್ಥಸ್ಥಳಗಳನ್ನು ದರ್ಶನ ಮಾಡಲೆಂದು ಲೋಗರುಗಳ ಮಾತನವಧಾರಿಸದೆ ಪೊರಮಟ್ಟು ಪೋಗಿ ಅನೇಕ ವೈಭವದಿಂ ಬಾಹುಬಲಿದೇವರ ಪ್ರತಿಬಿಂಬಕ್ಕೆ ಮಸ್ತಕಾಭಿಷೇಕಮಂ ಮಾಡಿಸಿ ಕನಕಾಭಿಷೇಕಮಂ ಮಾಡಿಸಿ ಹರುಷಚಿತ್ತರಾಗಿ ಮಹಿಸೂರಿಗೆ ಬಮದು ಖರಸಂವತ್ಸರದ ಜ್ಯೇಷ್ಠಮಾಸದೊಳ್ ಅರಮನೆ ದೊಡ್ಡಪಂಡಿತನಪ್ಪ ಲಕ್ಷ್ಮೀಪತಿಪಂಡಿತಂಗೆ ಷಷ್ಠಿಸಂವತ್ಸರಂ ಸಲ್ವುದು ತದುಗ್ರಶಾಂತಿಯಂ ಮಾಡಿಸಲ್‌ಮಹಾರಾಜಂ ಆ ಶಾಂತಿಕವಿಧಾನ ಪುರಾಣಾಗಮ ಶಾಸ್ತ್ರವಿಚಾರದಕ್ಷನಾದ ದೊಡ್ಡಪಂಡಿತ ಭಾಗಿನೇಯನಪ್ಪ ಸೂರಿಪಂಡಿತಂ

ವೃತ್ತ || ಕಮಲಜಕುಲಜಾತಃ ಜೈನಧರ್ಮಾಬ್ಜಭಾನುಃ
ವಿದಿತ ಸಕಲಶಾಸ್ತ್ರಸ್ಸದ್ಬುಧಸ್ತೋಮಸೇವ್ಯಃ
ಮುನಿಜನಪದಭಕ್ತೋ ಬಂಧುಸತ್ಕಾರದಕ್ಷಃ
ಸಕಲಸುಗುಣಧಾಮಾ ಬ್ರಹ್ಮಸೂರಿಃ ಪ್ರಸಿದ್ಧಃ ||

ಆ ಚಿಕ್ಕಪಂಡಿತಂ ಕನಕಗಿರಿಯ ದೇವಾರಾಧನಾಸಕ್ತನಾದ ಮಲೆಯೂರ ದೇವಚಂದ್ರನೆಂಬೆನ್ನಂ ಮೈಸೂರಿಗೆ ಕರೆಯಿಸೆ ಐದು ದಿವಸ ಮೃತ್ಯುಂಜಯಕಲಿಕುಂಡ ಸಿದ್ಧಶಾಂತಿಗಣಧರವಲಯಮೆಂಬ ಪಂಚ ಚಕ್ರಾರಾಧನೆಗಳಂ ಅರಮನೆಯ ತೊಟ್ಟಿಯೊಳೆ ನನ್ನಿಂದಲೆ ಮಾಡಿಸುವಲ್ಲಿ ಸರ್ವ ಶಾಸ್ತ್ರವಿಚಾರದಕ್ಷನಾದ ರಾಜಾಧಿರಾಜನಪ್ಪ ಮಹಾರಾಜಂ ನೋಡಿ ಸಂತೋಷದಿಂದನಂತರದೊಳೆ ಮೊದಲು ಅಪ್ಪಣೆ ಕೊಡಿಸಿದ್ದ ಬೆಳುಗುಳದ ತೀರ್ಥಸ್ಥಳಕ್ಕೆ ಸರ್ವಮಾನ್ಯವಾಗಿ ಏಳುನೂರು ವರಹದ ಮುರು ಗ್ರಾಮಂಗಳಿಗಂ ಆ ಸ್ಥಳದ ಸುಂಕ ಐವತ್ತು ವರಹವನ್ನು ಕನಕಗಿರಿ ದೇವಸ್ಥಾನಕ್ಕೆ ನಡೆದು ಬರುವ ಹಾಗೂ ತಾಜಾ ಸನ್ನದು ಮಾಡಿಸಿಕೊಟ್ಟು ಕಡೆಯೊಳ್ ಮೈಸೂರು ಬಸ್ತಿಯ ಶಾಂತೀಶ್ವರ ಪ್ರತಿಬಿಂಬಕ್ಕೆ ಚತುರುತ್ತರ ಪಂಚಶತ ಕಲಶಾಭಿಷೇಕಮಂ ಮಾಳ್ಪಲ್ಲಿ ಪರಿಮಿತಜನಂಬೆರಸು ಮಹಾರಾಜಂ ಬಂದು ವಿಧಿ ವಿಧಾನಂಗಳಂ ಚೆನ್ನಾಗಿಯವಧರಿಸಿ ದಿಕ್ಪಾಲಕಪೂಜಾನಂತರಂ ಮೂಲಾಮಂತ್ರ ಪ್ರಶಸ್ತಿ ಪೇಳ್ವಲ್ಲಿ ಮತ್ಸಮೀಪದೊಳ್ ನಿಂದು ಚತುಃಸಂಘಂಗಳ ಚಾತುರ್ವರ್ಣಂಗಳ ನಾಮಾವಲಿ ಬಿರುದಾವಲಿಗಳಂ ಕೇಳ್ದು ಬಳಿಕ ತಮ್ಮ ಬಿರುದಾವಲಿಯಂ ಕೇಳ್ದನದೆಂತೆನೆ

ಮಾಲಾಮಂತ್ರ || ಶ್ರೀ ಮತ್ಕೃಷ್ಟರಾಜ ಮಹಾರಾಜಃ ಸಕಲ ಸಮಾಲೋಕನ ಲೋಕಾಹ್ಲಾದಕ ಬಾಹ್ಲಿಕಾದಿ ಜಾತಾಜಾತಾಂಬರಗಂಗಾರಂಗದುರು ತುರಂಗಭಂಗಂ ರಂಗತಿಚತುರತಮ ಮಿಹಿರತುಂಗತುರಂಗತುಲಾಲಂಘನ ಜಾಂಘಿಕ ಹೈರಣ್ಯಕನೈಜೋ ದಾರಪರಿಷ್ಕೃತಾನುಷಂಗಮಂಗಲಭೂತಾ ಪಟುನಟಾಧ್ಯಾಪಕ ಪದಾಧ್ಯಾನಕ ಹೇಷಿತಾಭಿ ಭೂಷಿತ ವಿನೀತಾಜಾನೇಯಜವನಾದಿವಾಜಿವ್ರಾದ ಚಟುಲ ಖರಖುರಪುಟ ಪೃಥುತರ ರಥಯೂಥ ಪತ್ತಿಪ್ರತತಿ ಪದಸಂಘಟ್ಟನ ಸಮುದ್ಭೂತಾಂತರಿಕ್ಷವ್ಯಾಜೃಂಭೆಮಾಣ ಧೂಲಿಜಾಲಪ್ರಲಯ ವಿಧಧಾನಾನೂನ ಲಕ್ಷ್ಮಭದ್ರ ಭದ್ರ ಜಾತೀಯ ಜೀಮೂತಾನು ಕಾರಾನುಕಾರಿ ಗಂಧಸಿಂಧುರ ಘಟಾಕರಟತಟ ವಿಗಲದ್ದಾನ ಧಾರಾಸಂಸೇಕ ಸಮುತ್ಸರ್ಪದ ಮಂದಗಂಧ ಲೋಭಾಭಿಭ್ರಮದ್ಭ್ರಮರ ಮಂಜುಗುಂಜನಮಂ ಜಲಸೇವಾಸಮಸಮಾ ಗಚ್ಛದ್ಭೂಪ ಪರಸ್ಪರಸಂಘರ್ಷಣ ಪ್ರಕರ್ಷ ವಿಸ್ರಸ್ತ ರತ್ನಾವಲೀರಂಗಬಲೀಭಾಸುರ ವರಾಜೀರ ರಾಜದ್ಧವಲಿಮ ಪ್ರಾಸಾದ ಶಿಖರ ನಿಕರ ವಿಷಣ್ಣ ಕಲಧೌತ ವಿಮಲ ಕಲಶ ಜಾಲಾಗ್ರಸಂಘಟ್ಟನ ರಾಜಾಹ್ವಯ ಮೂತ್ರಾವಹದ್ವಿದುಬಿಂಬ ಧಿಕ್ಕಾರಾನುಕಾರಿ ನಿಃಪ್ರತ್ಯೂಹೇನ ಪ್ರವರ್ಧಮಾನ ಸಪ್ತಾಂಗಸಂಪನ್ನೋ ಭೂಯಾದಶ್ರಾಂತಮ್

ಶ್ರೀಮತ್ಕೃಷ್ಣರಾಜೋ ಮಹಾರಾಜೋ ನಿಜಪರಾಕ್ರಮಪ್ರಭಾವ ನತಾಖಿಲ ರಾಜಮಂಡಲಾನೇಕಮಂಡನ ಪ್ರಭಾಮಂಡಲದ್ವಿಗುಣೀಕೃತ ಸಿಂಹಾಸನಪ್ರಭಾಭಿರಾಮೋ ಭೂಯಾದಶ್ರಾಂತಮ್ ಶ್ರೀಮತ್ಕೃಷ್ಣರಾಜ ಮಹಾರಾಜಃ ರಾಮಚಂದ್ರವದಖಿಲ ಲೋಕ ಪರಿಪಾಲನಪ್ರವೀಣೋ ಭೂಯಾದಶ್ರಾಂತಮ್ ಶ್ರೀಮತ್ಕೃಷ್ಣರಾಜಮಹಾರಾಜೋ ಭರತರಾಜವತ್ಸಕಲದಿಙ್ಮಂಡಲದಿಙ್ಮಂಡಲವಿಜಯೋ ಭೂಯಾದಶ್ರಾಂತಮ್ ಶ್ರೀಮತ್ಕೃಷ್ಣರಾಜಮಹಾರಾಜೋ ಶ್ರೇಯಾಂಸವನ್ನಿಶ್ರೇಯಸನಿಧಾನ ಮಹಾದಾನ ಪ್ರಸಿದ್ಧೋ ಭೂಯಾದಶ್ರಾಂತಮ್ ಶ್ರೀಮತ್ಕೃಷ್ಣರಾಜಮಹಾರಾಜೋ ಭುಜಬಲಿಕುಮಾರವದ ವಾರ್ಯ ಭುಜವೀರ್ಯೋ ಭೂಯಾದಶ್ರಾಂತಮ್ ಶ್ರೀಮತ್‌ಕೃಷ್ಣರಾಜಮಹಾರಾಜೋ ರ್ಜುನವದನನ್ಯ ಸಾಧಾರಣ ದನುರ್ವಿದ್ಯಾವಿಶಾರದೋ ಭೂಯಾದಶ್ರಾಂತಮ್ ಶ್ರೀಮತ್ಕೃಷ್ಣರಾಜಮಹಾರಾಜೋ ಜೀವಂಧರಕುಮಾರವತ್ಸಂಗೀತ ಸಾಹಿತ್ಯಾದಿ ವಿದ್ಯಾವಿಶಾರದೋ ಭೂಯಾದಶ್ರಾಂತಮ್ ಶ್ರೀಮತ್‌ಕೃಷ್ಣರಾಜಮಹಾರೋಜೋಕ್ಷರ ಲೇಖ್ಯ ಗಣಿತ ಗಾಂಧರ್ವ ವೇದ ವೇದಾಂಗ ಕಲ್ಪ ನ್ಯಾಯ ಜ್ಯೋತಿರ್ಜ್ಞಾನ ನಷ್ಟಮುಷ್ಟಿ ಚಿಂತನಾ ಗಂಧಯುಕ್ತಿ ವೀಣಾವೇಣು ಅಂತರಿಕ್ಷಯಾನಾ ನೃತ್ಯ ಗೀತ ವಾದ್ಯ ಭರತಶಾಸ್ತ್ರ ಆಯುರ್ವೇದ ಧನುರ್ವೇದ ಲಕ್ಷಣಲಕ್ಷ್ಯಭೂತ ಭೇದಲಿಲ್ಪ ಹಸ್ತನೈಪುಣ್ಯ ತರ್ಕ ಕೌಟಿಲ್ಯ ಅಷ್ಟಾಂಗಯೋಗ ಹಸ್ತಿ ತುರಂಗಶಿಕ್ಷಾಶಾಲಿಹೋತ್ರಶಿಕ್ಷೆ ರತ್ನ ಪರೀಕ್ಷಾ ಸ್ವರ್ಣಪರೀಕ್ಷಾ ಭೂ ಪರೀಕ್ಷಾ ಚಿತ್ರಕರ್ಮ ಪತ್ರಚ್ಚೇದನ ವಾತ್ಸ್ಯಾಯನ ಮರ್ದನಶಾಸ್ತ್ರ ಅಗ್ನಿಸ್ತಂಭ ಜಲಸ್ತಂಭ ಖಡ್ಗಸ್ತಂಭ ಸೇನಾಸ್ತಂಭ ವಾಕ್‌ಸ್ತಂಭ ಇಂದ್ರಜಾಲ ಮಹೇಂದ್ರಜಾಲ ಸ್ಪರ್ಶವಾದ ರಸವಾದ ಕನ್ಯಾವಾದ ಬಿಲಪ್ರವೇಶ ಶಸ್ತ್ರಶಿಕ್ಷೆ ಶಾಸ್ತ್ರಶಿಕ್ಷೆ ಕೂಪಶಾಸ್ತ್ರ ಸೂಪಶಾಸ್ತ್ರ ತಟಾಕಶಾಸ್ತ್ರ ಸಾಮುದ್ರಿಕಾಲಕ್ಷಣ ಮಹಾಗಮನ ದೂರಾಗಮನ ಪರಕಾಯಪ್ರವೇಶ ಆಗಮಶಿಕ್ಷಾ ಆತ್ಮಜ್ಞಾನ ಸ್ವಸಮಯ ಪರಸಮಯಾಂಗನಿಮಿತ್ತಖ್ಯ ಚತುಃಷಷ್ಠಿ ಕಲಾ ಕುಶಲೋ ಭೂಯಾದಶ್ರಾಂತಮ್ ಶ್ರೀಮತ್‌ಕೃಷ್ಣರಾಜಮಹಾರಾಜಸ್ಯಾಂತಃ ಪುರ ಪುಣ್ಯಸ್ತ್ರೀಯಃ ಯಶಸ್ವತೀ ಸುನಂದಾ ಸೀತಾ ರೇವತೀ ಪ್ರಭಾವತೀ ಪ್ರಭೃತೀ ಪ್ರಸಿದ್ಧ ಪುಣ್ಯಸ್ತ್ರೀವದ್ರೂಪ ಯೌವ್ವನ ವಿಜ್ಞಾನ ಶೀಲಾದಿ ಸಕಲ ಗುಣಸಂಪನ್ನಾ ಭೂಯಾಸುರ ಶ್ರಾಂತಮ್ ಶ್ರೀಮತ್‌ಕೃಷ್ಣರಾಜಮಹಾರಾಜಸ್ಯ ಪುತ್ರಾಃಲವಂಕುಶವತ್ಸಕಲಶಸ್ತ್ರ ಶಾಸ್ತ್ರ ವಾಹನಾರೋಹಣಾದಿ ಸಕಲ ಕಲಾಕೌಶಲ್ಯ ನೀತಿಶಾಸ್ತ್ರ ಪರಾಕ್ರಮಸಂಪನ್ನಾ ಭೂಯಾಸುರಶ್ರಾಂತಮ್ .

ಎಂದಿಂತು ಅಶೇಷಜನಂಗಳ್ಗೆ ಆಶೀರ್ವಾದ ರೂಪಮಾಲಾಮಂತ್ರಂಗಳಂ ಲಾಲಿಸಿ ಸೂಕ್ಷ್ಮಬುದ್ಧಿ ಸುವಿಚಾರಿಯಾದುದರಿಂ ಚೆನ್ನಾಗವಧಾರಿಸಿ ತಿಳಿದು ಹರ್ಷೋತ್ಕರ್ಷಚಿತ್ತನಾಗಿ ಎನ್ನ ಭಾಗ್ಯಲಕ್ಷ್ಮೀ ಕಣ್ದೆರೆದು ಪೇಳ್ದಂತೆ ಈತಂಗೆ ತಿಂಗಳು ಒಂದಕ್ಕೆ ಮೂವತ್ತು ಹಣ ಸಂಬಳ ಮಾಡಿದೇವೆ ಎಂಬ ಹುಕುಮಾದುದಂ ಕೇಳಿ ನನ್ನ ಪ್ರಪಂಚಮನಾಗಳೆ ಅರಿಕೆಮಾಡಿಕೊಳ್ಳುವುದಕ್ಕೆ ಆಕರ್ಮಿಕ ಮೌನವ್ರತಧಾರಿಯಾಗಿರ್ದುದರಿಂ ಪೂಜಾಹವ್ಯಾಸದೊಳಿರ್ದೆನು. ಬೆಳಗಿನ ದಿವಸದೊಳು ಸೂರಿಪಂಡಿತಂಗೆ ಹೇಳಿ ಅರಿಕೆ ಮಾಡಿಸಿ ಗುಂಡಲ ತಾಲೋಕಿಗೆ ನಿರೂಪ ಅಪ್ಪಣೆಯಾಗಿ ಬರೆಯಿಸಿದಾಗ್ಯು ಮಹಾಸ್ವಾಮಿ ದಸಕತ್ತಾಗಿ ನನಗೆ ಬರದೆ ಮುಂದಾಗುವುದೆಂದು ನನ್ನ ಊರಿಗೆ ಪೋದೆನು. ಲಾಭಾಂತರಾಯ ಕರ್ಮೋದಯದಿಂ ಪರುಷ ಮುಟ್ಟಿಯು ವರುಷಗಡನಾದಂತಾಯ್ತು. ಅಂತಾಗಿಯು ನನ್ನ ಬಡತನವನು ಮಹಾಸ್ವಾಮಿಗೆ ಮರಳಿ ಅರಿಕೆಮಾಳ್ಪುದಕ್ಕೆ ಕೂಡಲಿಲ್ಲವಾಗಿ ತದಾರಭ್ಯದಿಂದಾ ಈ ರಾಜಾವಲಿ ಕಥೆಯಂ ಸಂಗ್ರಹಿಸಿ ಬರೆದು ಒಪ್ಪಿಸಲು ಪ್ರಯತ್ನದಿಂ ಯಾರಿಂದಲು ಸ್ವಾಮಿಗೆ ಕಾಣ್ಕೆಯಾಗಲಿಲ್ಲ. ಸೂರಿಪಂಡಿತರ್ಗೆ ಹೇಳಿಕೊಂಡದ್ದರಿಂದಾ ಹೇವಿಳಂಬಿ ಸಂವತ್ಸರದ ಫಾಲ್ಗುಣಾರಭ್ಯ ಪಟ್ಟ ಒಂದಕ್ಕೆ ಹನ್ನೆರಡು ಹಣ ಜೀವನಾ ಮಾಡಿಕೊಟ್ಟು ಇದಾರೆ. ನನ್ನ ಸಂಸಾರ ಹೊರಜನವಲ್ಲದೆ ಇಪ್ಪತ್ತೈದು ಜನವಿದೆ. ತೀವ್ರ ದಾಹವುಳ್ಳವನು ಪುಲ್ಲ ನೀರನಿಕ್ಕಿದೊಡೆ ತೃಪ್ತಿಯಾಗದೆಂದು ಈ ಕಥೆಯೊನ್ನೊಪ್ಪಿಸಿ ಸಂಪೂರ್ಣ ಗ್ರಾಸಕ್ಕಪ್ಪಣೆ ಮಾಡಿಸಲೆಂದು ಮೂರು ವರ್ಷದಿಂ ಕಾದಿರ್ದೊಡೀಗಲು ಮಹಾಮಾತುಶ್ರೀಯವರು ಮೊದಲಿಂ ಕಡೆವರಂ ಹನ್ನೊಂದು ಅಧ್ಯಾಯಮುಳ್ಳ ಈ ರಾಜಾವಳಿ ಕಥೆಯಂ ಚೆನ್ನಾಗಿ ಪರಾಂಬರಿ ಯದುಕುಲಾಗ್ರಗಣ್ಯರಪ್ಪ ಈ ಮಹಿಸೂರ ರಾಜಪರಮೇಶ್ವರುಗಳ ವಂಶಪರಂಪರೆಯಂ ಅಮೂಲವಾಗಿ ಎಡೆಬಡದೆ ಸಹಜವಾಗಿ ಬರೆದು ಒಪ್ಪಿಸುವುದೆಂಬ ನಿರೂಪಮಾದುದರಿಂ ಈ ಹನ್ನೆರಡನೆ ಅಧಿಕಾರದೊಳು ಈ ಮಹಿಸೂರ ಮಹಾರಾಜಾಧಿರಾಜರುಗಳ ವಂಶಾವಳಿ ಗುಣಾವಳಿ ಬಿರುದಾವಳಿಗಳ ಯಥಾಸ್ಥಿತಿಯಾಗಿ ಬರೆದೊಪ್ಪಿಸಿದೆನು.

||ಸ ||ನೆಲನಂ ಮರ್ಯಾದೆಯಿಂ ಪಾಲಿಸಿ ನಿಯಮಿಸಿ ವರ್ಣಾಶ್ರಮಾಚಾರಮಂ ದೋ
ಷಲವಂ ಮೈವೆರ್ಚದಂತಿಂದ್ರಿಯಸುಖದೊದವಿಂ ಪೆರ್ಚಿ ಸದ್ದರ್ಮಮಂತ
ನ್ನೊಲವಿಂದಂ ರಕ್ಷಿಸುತ್ತಂ ಪ್ರಜೆಯ ನಿವಹಮಂ ಪಾಲಿಸುತ್ತಿರ್ಪನಾ ನಿ
ರ್ಮಲಚಿತ್ತಂ ಕೃಷ್ಣರಾಜಾಧಿಪನಮಳ ಯಶಂ ಸಜ್ಜನಾಂಭೋಜಸೂರ್ಯಂ

ಶ್ರೀಮತ್ಕೃಷ್ಣಾವನಿಪಂ
ಪ್ರೇಮದೊಳನವರತ ಕುಡುವ ದಾನದಿ ಸರ್ವರ್

ಕಾಮಿತ ಫಲಮಂ ಪಡೆದು ಧ
ರಾಮರರೆಂದೆನಿಸಿ ಸುಖದಿ ಸಂತತಮಿಪ್ಪರ್

ಶ್ರೀಗೆ ವರದಾನ ನರಪತಿ
ಭೋಗೀಂದ್ರಂಗಧಿಕವಾಗಿಯವರಿವರೆನ್ನದೆ
ರಾಗದಿ ದಾನಂಗೊಡುತಿಹ
ತ್ಯಾಗದೊಳುಂ ಕರ್ಣನೀತನೆಂಬುದು ಲೋಕಂ

ದಾರಿದ್ರಗಿತ್ತ ಧನಮದು
ನೀರಂ ಫಲವೃಕ್ಷಕೆರೆದ ತೆರನಂತಕ್ಕುಂ
ಭೂರಿಯ ಧನಿಕಂಗೀಯಲ್
ನೀರಂ ಕಡಲೊಳಗೆ ಸುರಿದ ತೆರನಂತಕ್ಕುಂ

ಎಂದರಿದು ಬಡವರಿಗೆ ಮನ
ಸಂದಧಿಕ ದ್ರವ್ಯವಿತ್ತು ಮನ್ನಿಸಲವರಿಗೆ
ದಂದುಗವಳಿದುಂ ನಡೆಸಲ್
ಸಂದುದು ಸತ್ಕೀರ್ತಿ ಸ್ವರ್ಗ ಮರ್ತ್ಯದೊಳನಿಶಂ

ಗುಣಮಂ ನಿಲ್ಲಿಸಿ ಮನದೊಳ್
ಗಣಿಸದೆ ಲೋಭವನು ಬಿಟ್ಟು ವಿತರಣದಿಂದಂ
ತೃಣಕೆ ಸಮನಾಗಿ ಭಾವಿಸಿ
ಪಣಮಂ ಪೆಚ್ಚಿಸುವರಿಂತು ಭೂಮಿಪರೊಳರೇ

ಸಿರಿಯೊಳ್ ಧನದಂ ವಿಭವದಿ
ಸುರರಾಜಂ ಭೋಗದಳ್ಗೆಯೊಳ್ ನಾಗೇಂದ್ರಂ
ದೊರೆಗಳೊಳು ರಾಮಭದ್ರಗೆ
ಸರಿಯೆಂದೆನಿಸಿರ್ಪ ಕೃಷ್ಣರಾಜನರೇಂದ್ರಂ

ಎಲ್ಲಾ ಮತಗಳ ರಕ್ಷಿಸಿ
ಯಲ್ಲಲ್ಲಿಯ ತತ್ವಶಾಸ್ತ್ರ ಕಥೆಗಳ ಭಾವಿಸಿ
ನಿಲ್ಲದೆ ಹಿರಿಕಿರಿದೆಂಬೀ
ಬಲ್ಲವಿಕೆಯು ಕೃಷ್ಣರಾಜನೃಪನೊಳಗಿಪ್ಪುದು

ಅದರಿಂ ಷಣ್ಮತದೋಜೆಯ
ನಿದರೊಳೆ ಸಂಕ್ಷೇಪಮಾಗಿ ಪೇಳ್ದೆನು ಕ್ರಮದಿಂ
ಬುಧರೊಲವಿಂ ಲಾಲಿಸಿತ
ಪ್ಪಿದರೊಳಗಿರೆ ತಿದ್ದಿಪೇಳ್ವೆ ನಿಮ್ಮವನೆಂದುಂ

ಇದ್ದುದನಿದ್ದಂತೊರೆದೆನು
ಸದ್ದರ್ಮದ ಮಾರ್ಗವಿಡಿದು ಬುಧಜನರರಿಯಲ್

ಶುದ್ಧಮನದಿಂದ ಕೇಳ್ದಭಿ
ವೃದ್ಧಿಯನಿಹಪರದೊಳಾಂತು ಸುಖಿಸುತ್ತಿರ್ಕೆಂ

ಇಲ್ಲದ ಸಂಗತಿಯಂ ತಾ
ಬಲ್ಲಂದದಿ ಕವಿತೆಯಿಂದಮದ್ಭುತಮಾಗಿಯೆ
ಸೊಲ್ಲಿಸಿದುದಲ್ಲ ಸಜ್ಜನ
ರೆಲ್ಲರು ಲಾಲಿಪುದು ಮುದದಿ ರಾಜಾವಲಿಯಂ

ಅಂತು ಕುಂಪಣೀಸೇನಾಧಿಪತಿಯ ಜನರಲ್ ಆರಿಷ್ ಎಂಬುವನು ಮಹಿಸೂರು ಸುತ್ತ ಇನ್ನೂರೈವತ್ತು ಮೈಲಿಗಳ ದೂರಮಂ ನೂರನಾಲ್ವತ್ತು ಮೈಲಿಗಳ ಅಗಲಗಳ ಸೀಮೆ ಬಿಟ್ಟಕೊಟ್ಟ. ಅವರೊಳ್ ಗಡಿ ಪಟ್ಟಣ ಹಳ್ಳಿ ಗ್ರಾಮ ಸಹ ಮೂವತ್ತು ಮೂರು ಸಾವಿರ (೩೩೦೦೦). ಅಲ್ಲಿ ಇರತಕ್ಕ ಜನರು ಸುಮಾರು ಮೂವತ್ತು ಲಕ್ಷ (೩೦, ೦೦, ೦೦೦) ಉಂಟು. ಈ ದೇಶ ಸಮಧಾತ್ವಾದಿ ಆರೋಗ್ಯವುಳ್ಳದ್ದಾಗಿ ಇರುವುದು. ಇಲ್ಲಿ ಇರುವ ಮುಖ್ಯವಾದ ಕಾವೇರಿಯೆಂಬ ನದಿಯು ಕೊಡಗದೇಶದಲ್ಲಿ ಹುಟ್ಟಿ ಸ್ವಲ್ಪ ಹೆಚ್ಚು ಕಡಿಮೆ ನಾನೂರು ಮೈಲಿಗಳ ದೂರ ಸುತ್ತಿಕೊಂಡು ಹೋಗಿ ಲಂಕಾದ್ವೀಪದ ಉತ್ತರ ದಿಕ್ಕಿನ ಸಮುದ್ರದೊಳ್ ಕೂಡುತ್ತಿಹುದು. ಇಂತೀ ರಾಜ್ಯಮಂ ನಿಷ್ಕಂಟಕಮಾಗಿ ಪ್ರಜಾಪಾಲನೆಯಂ ಮಾಡುತಿರ್ಪುದು. ಸರಜಪ್ಪನಾಯಕನೆಂಬಂ ಅಪರ ಬುದ್ಧಿಯಿಂದಂ ದೊಡ್ಡನಗರದ ಸೀಮೆಯೊಳ್ ಅವಾಂತರಂಗಳ ಪಿರಿದಾಗಿ ಮಾಡುತ್ತಮಿರೆ ಆ ಕಳ್ಳನನ್ನು ಪಿಡಿಯಲ್ ಮೈಸೂರ ಸಾಮಾಜಿಕರಿಂ ಸಾಗದೆ ಕೆಲರ್ ಸಂಬಳಗಾರರಿಗೆ ಜೀವಿತಮಂ ಕೊಡದೆ ಮಂತ್ರಿ ಸೇನಾನಿಗಳ್ ನಡಪುತ್ತಿರೆ ಇಂಗರೀಷಿಯ ಸರದಾರರ್ ಕೇಳಿ ಮಹಾಸ್ವಾಮಿಯ ಸನ್ನಿಧಿಯೊಳ್ ಅಧಿಕಾರದೊಳಾರೂ ಸಮರ್ಥರಿಲ್ಲೆಂದು ಸರಜಪ್ಪನಾಯಕನಂ ಪರಿಹರಿಸಿ ರಾಜಸೇವೆಯೊಳ್ ತಾವೇ ನಿಂತು ಕಮೀಸನ್ ಸೂಪ್ರೆಂಟ ಕಚೇರಿಗಳನ್ನಿಟ್ಟು ರಾಜ್ಯದ ವಿಚಾರಣೆಯಂ ಮಾಡುತ್ತ ಹಿಂದೆ ಉಳಿದಿರ್ದು ಸಂಬಳಗಾರರಿಗೆ ಉಳಿದಿರ್ದ ಸಂಬಳವಂ ಕೊಟ್ಟು ತಿಂಗತಿಂಗಳಿಗೆ ದೊರೆಗಳಿಗೆ ಹಣವಂ ಸಲ್ಲಿಸುತ್ತಮಿಪ್ಪರು. ಮಹಾರಾಜಂ ನಿಶ್ಚಿಂತನಾಗಿ ರಾಜ್ಯದೊಳ್ ಇಂಗರೀಜರು ಎತ್ತಿಬಪ್ಪ ಹಣವನ್ನು ಕೊಡುತ್ತಮಿರೆ ಸುಖಸಂಕಥಾವಿನೋದದಿಂ ಪೂರ್ವಕೃತ ಪುಣ್ಯೋದಯದಿಂ ಒಪ್ಪುತ್ತಿರ್ಪನು.

ಕೊಲ್ಲದೆ ಪುಸಿಯದೆ ಚೌರ್ಯಗ
ಳಿಲ್ಲದೆ ಬಲುವಿನಿಂದ ಪರರ ವಸ್ತುವ ಕೊಳ್ಳದೆ
ಬಲ್ಲಿದರ ಬೇಡಿ ಕಾಡದೆ
ಯಲ್ಲಿಯೆ ಜೀವಿಸುವ ಪುರುಷನಾತನೆ ದೇವಂ

ಸಾಲದೆ ಸೋಲದೆ ಪೊರಮ
ಟ್ಟೋಲೈಸದೆ ನಿಚ್ಚ ನಿಚ್ಚ ಪಯಣಂಬೋಗದೆ
ಆಲಯದೊಳಿರ್ದು ಪಡೆವುದು
ಮೂಲೋಕಮನಾಳ್ದ ಪದವಿಯೆಂಬುದು ನಿರುತಂ

ಪಾಪಂ ತಾನಿನಿಸಿಲ್ಲದೆ
ಭೂಪಾಲಂ ದಾನಧರ್ಮಮುಪಕಾರಂಗಳ
ತಾ ಪಿರಿದಾಗಿಯು ಮಾಳ್ಪಮ
ಹಾಪುರುಷನ ಪೂರ್ವಪುಣ್ಯ ತಾನೆಂತಿಹುದೋ

ಇಂತು ಪಾಪಮಿಲ್ಲದ ಧರ್ಮದ್ರವ್ಯದಿಂದಮೆ ಧರ್ಮಮಂ ಮಾಡುತ್ತ ಸರ್ವ ಜೀವಂಗಳೊಳ್ ಮೈತ್ರಿ ಪ್ರಮೋದ ಕಾರುಣ್ಯಮಾಧ್ಯಸ್ಥದಿಂ ಧರ್ಮಪ್ರಭುವಾಗಿ ಈ ಧರೆಗಿಂದಿನ ಅರಸು ಸ್ವರ್ಗಕ್ಕೆ ನಾಳಿನರಸು ಮುಕ್ತಿಗೆ ಮುಂದಣರಸು ಎಂದು ಪೇಳಲ್ ಬಹುದೆಂದು ಸತ್ಪುರುಷರುಲಿಯುತ್ತಿರ್ಪರ್.

ಕರುಣಾಮೃತ ರಸಭರಿತ
ಸ್ಫುರಿತೋಜ್ವಲಕೀರ್ತಿ ಸಾಂದ್ರಸದ್ಗುಣಚಂದ್ರಂ
ಧರಣೀಶ ಕೃಷ್ಣರಾಜೇ
ಶ್ವರನಿಂದಗ್ಗಳರು ಭುವನದೊಳಗಾರಿಪ್ಟರ್

ಆ ಮಹಾರಾಜನ ಮಹಾಮಾಕೃಶ್ರೀ

ಕರ್ಮೋಪಶಮದಿ ಸುಮತಿಯು
ನಿರ್ಮಲಮಾಗುದಿಸೆ ನಯದಿ ತತ್ವಾರ್ಥಂಗಳ
ವೊರ್ಮೊದಲೊಳೆ ತಿಳಿದು ನೆರೆ ಸ
ದ್ಧರ್ಮವ ಪಿಡಿವಧಿಕ ಬುದ್ಧಿ ತಾ ನೆಲೆಗೊಂಡುದು

ಆವೊಂ ಪೊಗಳುವನಪ್ರತಿ
ದೇವೀರಾಂಬಿಕೆಯ ಕುಶಲಮತಿ ಅತಿಶಯಮಂ
ಸಾವದ್ಯ [ವು]ಳಿದು ತತ್ವದ
ಭಾವವ ಶಾಸ್ತ್ರದೊಳೆ ತಿಳಿದು ನಿಶ್ಚಯವಾಂತಳ್

ಪಾಲುಂ ನೀರುಂ ಬೆರೆದಂ
ತೀ ಲೋಕದಿಮಿರ್ಪ ಸಕಲ ಶಾಸ್ತ್ರವನರಿದುಂ
ಪಾಲಂ ಸೇವಿ[ಪ] ಹಂಸನ
ವೋ[ಲುಂ] ಸಾರಂಗಳನ್ನು ಗ್ರಹಿಸುವ ಬುದ್ಧಿಯಂ

ಈ ಕಥೆಯನ್ನು ಮಾಡಿಸಲಾಗಿ ಪಾಪಪುಣ್ಯಾನುಬಂಧಿಯಪ್ಪುದೆಂದು ಶುಭ ಭಾವನೆಯೊಳ್ ಈ ರಾಜಾವಲೀ ಕಥಾಸಾರದೊಳ್ ಮಹಿಸೂರ ಮಹಾಪ್ರಭುಗಳ ವಂಶಾವಲೀ ಗುಣಾವಲೀ ಬಿರುದಾವಲಿಗಳಂ ಪೇಳ್ದೆಂ

ಶ್ಲೋಕ ||ನಿಶ್ಚಲಧ್ಯಾನಯೋಗೇನ ತಪಸ್ಯನ್ವಿಜನೆವನೇ
ಕಥಾವಾ ಭ್ರಾಮರೀವೃತ್ತಿಲಪ್ಸೇ ಶುದ್ಧ ಮನಾ ಇತಿ ||
ಆತ್ಮಸಾಧ್ಯಂ ಸ್ವಯಂ ಕುರ್ಯಾದಂತಃ ಸಂರಂಭವರ್ಜಿತಃ
ತಸ್ಮಿನ್
ಕರ್ಮನಿಬದ್ದೇನ ನವಕುಂಭೇ ರಜೋಯಥಾ ||

ಎಂದಿಂತು ರಾಜಾವಲೀಕಥೆಯೊಳ್ ಸುದೇಶಜನ ಸದಾಚಾರ ಶುದ್ಧ ಬಾಂಧವಾಭಿಸಂಗತವ್ಯ ಸನವಿದೂರ ಸುಜನಜನಾಭಿಮತ ಸತ್ಕುಲಪ್ರಸೂತ ಸರ್ವ ಕರ್ಮಾಭಿಜ್ಞ ನೀತಿಶಾಸ್ತ್ರಾದ್ಯಶೇಷಶಾಸ್ತ್ರಪ್ರವೀಣ ಸರ್ವಕರ್ಮ ವ್ಯವಹಾರವಿಶಾರದ ನಿಬಿಡತಮ ನ್ಯಾಯವಿಹಿತ ಪ್ರಜಾಪಾಲನಮತಿಪಾಲನ ಸಮಂಜಸತ್ವಲಕ್ಷಣ ಕ್ಷಾತ್ರ ಧರ್ಮದ್ರಾಜರಾಜ ಪರಮೇಶ್ವರ ಪ್ರೌಢಪ್ರತಾಪ ಅಪ್ರತಿಮವೀರನರಪತಿ ಬಿರುದಂತೆಂಬರ ಗಂಡ ಲೋಕೈಕವೀರ ಯದುಕುಲಪಾರಾವಾರಪ್ರವರ್ಧನ ಸುಧಾಕರ ಶಂಕಚಕ್ರಾಂಕುಶ ಕುಠಾರ ಮಕರ ಮತ್ಸ್ಯ ಶರಭ ಸಾಳ ಗಂಡಭೇರುಂಡ ಧರಣೀವರಾಹ ಹನುಮಂತ ಕಂಠೀರವಾದ್ಯನೇಕ ಬಿರುದಾವಲೀ ವಿರಾಜಿತ್ರೇಯಗೋತ್ರದ ಅಶ್ವಲಾಯನ ಸೂತ್ರದ ಋಖ್ಯಾಖಾನುವರ್ತಿಗಳಾದಿಮ್ಮಡಿ ಕೃಷ್ಣರಾಜಒಡೆಯರ ಪೌತ್ರ ಚಾಮರಾಜ ಒಡೆಯರ ಪುತ್ರ ಶ್ರೀಮನ್ಮ ಹಿಸೂರಪುರವರ ರತ್ನಸಿಂಹಾಸನಾಧೀಶ್ವರ ಶ್ರೀಕೃಷ್ಣ ರಾಜಮಹಾರಾಜಂ ಚಿರಕಾಲಂ ಸ್ಥಿರಸಾಮ್ರಾಜ್ಯಮನಾಳುತ್ತಿರ್ಕೆ ಭದ್ರಂ ಶುಬಂ ಮಂಗಲಂ

ಇಂತಿ ರಾಜಾವಲಿಯಂ
ಸಂತಸದಿಂ ಕೇಳ್ವ ಜನರ್ಗಾಯುಂ ಶ್ರೀಯುಂ
ಸಂತಾನವೃದ್ಧಿ ಸಿದ್ಧಿ ನಿ
ರಂತರದಿಂದಿಹಪರಂಗಳೊಳ್ ದೊರೆಕೊಳ್ಗುಂ

ವೃತ್ತ ||  ಜಯತೀನೃಪಲಲಾಮ: ರೂಪಸೌಂದರ್ಯಕಾಮಃ
ಸಕಲಸುಗುಣ ಧಾಮಾ ದಾನಧರ್ಮಾಭಿರಾಮಃ
ಸುಕವಿ ಸುಜನಪ್ರೇಮಃ ಸತ್ಕುಲಾಂಬೋಧಿಸೋಮಃ
ವಿಕಸಿತಿನೃಪಸೀಮಾ ಕೃಷ್ಣರಾಜೇಂದ್ರರಾಜಃ ||

||ಸ ||ಪಿರಿದುಂ ಪುಣ್ಯೋದಯಂ ತನ್ನುದಯಮನರಿಪುತ್ತಿರ್ಪುದುಂ ಸತ್ಯವಿದ್ಯಾ
ಚರಿತಂ ತೇಜಸ್ವಿ ಸೌಖ್ಯಾಂಬುಧಿಯೆನಿಸಿದ ವಾಗ್ವಲ್ಲಕೀವೈಣಿಕಂ ವಿ
ಸ್ಫುರಿತಾನಂದಪ್ರಭೂತಂ ಮುದಮನೆ ತಳೆದಂ ವಿಶ್ವವಿದ್ಯಾವಿನೋದಂ
ಧರಣೀಶಂ ಸರ್ವ ದಿಗ್ವ್ಯಾಪಿತನಮಳಯಶಂ ಕೃಷ್ಣರಾಜೇಂದ್ರಚಂದ್ರಂ ||

ಇದು ಸತ್ಯಪ್ರವಚನ ಕಾಲಪ್ರವರ್ತನ ಪುರುಷೋತ್ತಮ ಸರ್ವಜ್ಞ ಪದಾಂಭೋಜ ಷಟ್ಟದ ಅರ್ಹತ್ ವಿಪ್ರ ದೇವಚಂದ್ರಪಂಡಿತ ವಿರಚಿತ ರಾಜಾವಲೀ ಕಥಾಸಾರದೊಳ್ ಶ್ರೀಮತ್ ಕೃಷ್ಣರಾಜವಂಶಾಭ್ಯುದಯವರ್ಣನಂ

ದ್ವಾದಶಾಧಿಕಾರ