ಅತ್ತಲ್ ಕಳಲೆಯರಸುಗಳು ಕೆಲದಿವಸದಿಂ ವೀರಶೈವಮನಾಚರಿಸಿ ನಂಜುಂಡೇಶ್ವರಂ ಇಷ್ಟದೇವರಾಗೆ ಶ್ರೀರಂಗಪಟ್ಟಣದೊಳೆ ಅಧಿಕಾರಿಗಳಾಗಿದ್ದರಾ ವಂಶದಳೆ ನಂದಿನಾಥ, ವೀರರಾಜ, ದೇವರಾಜ, ಚೆಲುವರಾಜರೆಂದಿವರಾದಿಯಾಗಿ ಸೇನಾಪತ್ಯದೊಳೆ ಸರ್ವಾಧಿಕರದೊಳು ನಿಂತು ವೀರವಿಕ್ರಮ ಪ್ರತಾಪದೊಳು ಕೆಲಕೆಲವು ಸಂಸ್ಥಾನಂಗಳ ಒಳಗುಮಾಡಿ ಅಜೇಯರೆನಿಸಿರ್ದರಾ ಸಂತತಿಯವರು ಕೊಡಗಿನ ಪ್ರಭುಗಳಾಗಿರ್ದರಿತ್ತಲ್ ದಳವಾಯಿ ದೊಡ್ಡಯ್ಯರಸಂ ಜಯಜಯಕಾಟೆಯುಂ ಜಗರೆಕಾಟಿಗಳೆಂಬ ವೀರಭಟರಂ ಗೆಲ್ದು ರಾಜ್ಯಂಗಳಂ ಸಾಧಿಸಿ ಜಗಜಟ್ಟಿಯಂ ಗೆಲ್ದು ಬಿರುದುಗಳನಾಂತಿರ್ದರಲ್ಲಿ ದೇವರಾಜ ವೀರರಾಜ ನಂಜರಾಜ ಪುಟ್ಟರಾಜಾದಿಯರಸುಗಳು ಪ್ರಬಳರಾಗಿ ಎಲ್ಲಾ ಅರಸುಗಳಂ ಪಿಂದಿಕ್ಕಿ ತಮ್ಮಾಜ್ಞೆಯಿಂ ಸರ್ವರ ನಿಗ್ರಹಿಸಿ ಶಿಕ್ಷ ರಕ್ಷೆಯಂ ಮಾಡುತ್ತಿರ್ದರಾಗಳೆ ಕೆಲಂಬರಂ ದುರ್ಗಮಂ ಪೊರ್ದಿಸಿ ಕೆಲರಿಗಾಜ್ಞೆಗೆಯ್ಸಿದರ್.

ನಂಜನಗೂಡ ದೇವಸ್ಥಾನ ಕೈಸಾಲೆ ಗೋಪುರ ಊರ ಸುತ್ತು ಕೋಟೆಯಂ ನಿರ್ಮಿಸಿ ಕಪಿನೀಹೊಳೆಗೆ ಭದ್ರಮಪ್ಪ ಸೇತುವೆಯಂ ಕಟ್ಟಿಸಿ ಪಟ್ಟಣದೊಳು ಜ್ಯೋತಿರ್ಮಹೇಶನಾಲಯಮಂ ಮಾಡಿಸಿ ಮಹಿಸೂರೊಳು ಆಂಗೀರಸ ಸಂವತ್ಸರದಂದು ತ್ರಿಣಯನಾಲಯಮಂ ಮಾಡಿಸಿ ಕೆರೆ ಕಟ್ಟೆ ಸರೋವರ ಸತ್ರ ಮೊದಲಾಗೆ ಮಾಡಿಸಿದರ್. ವಿದ್ಯಂಗಳೊಳು ನಿಪುಣರಾದುದರಿಂ ಜಯದೇವಕೃತ ಗೀತಗೋವಿಂದಮಂ ಚಾರುಕೀರ್ತಿಕೃತ ಗೀತವೀತರಾಗಮಂ ನೋಡಿ ಗೀತಗಂಗಾಧರನೆಂದಷ್ಟಪದಿಯಂ ಮಾಡಿ ಅನೇಕ ವೈದ್ಯಶಾಸ್ತ್ರಂಗಳೊಳಿಪ್ಪ ರೋಗಹರಮಪ್ಪ ಚಿಕಿತ್ಸೆಗಳಂ ಕನ್ನಡ ವಾಕ್ಯದೊಳು ವೀರರಾಜೋಕ್ತ ವಿಲಾಸಮೆಂದು ಬರೆಯಿಸಿ ಪ್ರಸಿದ್ಧಿವಡೆದರ್.

ಮತ್ತಂ ಮಹಿಸೂರ ದಳವಾಯಿ ದೊಡ್ಡಯ್ಯಪುತ್ರ ವೀರರಾಜಕುಮಾರ ದೇವರಾಜನನುಜ ಕಳಲೆ ನಂಜರಾಜಂಗೆ ಕೇರಳದೇಶ ಕೊಂಗನಾಡತ್ತಣಿಂ ದಾಂಡಿಗಳ್ ಬಂದು ಸೇರಿ ವೀರಶೈವ ಪುರಾಣಮೆಂದನೇಕ ಕಲ್ಪನಾಕಥೆಗಳಂ ಪೇಳ್ದರದರೊಳೆ ಅತಿ ಭಕ್ತಿ ಪುಟ್ಟಿ ಕನ್ನಡ ವಾಕ್ಯಂಗಳಿಂ ನಂಜರಾಜಕೃತಮೆಂದು ವಿರಚಿಸಿದನವಾವಾವೆಂದೊಡೆ ಭಕ್ತ ವಿಲಾಸಮೆಂಬ ಕಥಾಪ್ರಾರಂಭಂ ಮುನ್ನಂ ಈಶಂ ಗೌರಿಶಾಪದಿಂ ಕಮಲಾಲಯದ ತ್ಯಾಗರಾಯದೇವನಲ್ಲಿ ನರಬಾಲಕನಾಗಿ ಸದಾಪ್ರಿಯನೆಂಬ ಬ್ರಾಹ್ಮಣನಿಂ ಬೆಳೆದಂ ಸೌಂದರನೆಂಬ ಪೆಸರಿಂ ಜಯಭದ್ರನೆಂಬರಸನಿತ್ತ ಮನೆಯೊಳಿಪ್ಪಾಗಲ್ ಶಿವಂ ವೃದ್ಧ ಬ್ರಾಹ್ಮಣ ವೇಷದೆ ಬಂದು ಈತನಂ ಕ್ರಯಕ್ಕೆ ಕೊಂಡಿದೇನೆ ಎನ್ನ ದಾಸನೆಂದು ಪತ್ರ ಸಾಕ್ಷಿಯಂ ತೋರಿಸಿದೊಡೆ ನುತಿಸಿ ಪಂಚಾಕ್ಷರೀಮಂತ್ರಂಗೊಂಡು ದ್ರಾವಿಡಭಾಷೆಯಿಂ ನುತಿಸುತ್ತ ಶಿವಾಲಯಂಗಳಂ ವಂದಿಸಿ ಸಿದ್ಧವಟದರ್ಶನಂ ಮಾಡಿ ರಾತ್ರಿಯೊಳು ಶಿವಂ ಬ್ರಾಹ್ಮಣರೂಪದಿಂ ಬಂದೊರೆಯಲು ಶಿವದರ್ಶನಮಂ ಮಾಡಿ ಚಿದಂಬರಮಂ ಪೊಕ್ಕು ಕಮಲಾಲಯಕ್ಕೆ ಬಂದಿದಿರೊಳೆ ಬಂದವಂ ನುತಿಸಿ ಶಿವನಿಧಿಯೆಂಬಳಂ ಮದುವೆಯಾಗಿ ತ್ಯಾಗರಾಯಸೇವೆಗೆಯ್ದು ವೇಶ್ಯಾಪುತ್ರಿ ರುದ್ರಕನ್ನೆಯಂ ಸ್ವೀಕರಿಸಿ ಸಂಶಯಬಡುವ ಸನಕಾದಿಗಳ್ಗೆ ವೇದಮಂ ತಿಳಿಯಿಸಿ ಚಿನ್ಮಯಮುದ್ರೆಯಿಂ ತಿಳುಹಿಸಿ ಪರಮೇಶ್ವರಂ ಕಳುಹಿಸಿದ ದಿವ್ಯ ವಿಮಾನಮನೇರಿ ಕೈಲಾಸಮನೆಯ್ದಿ ಸುಖಮಿಪ್ಪನೆಂದು ಉಪಮನ್ಯು ಮುನಿಯು ಶಿಷ್ಯರ್ಗೆ ಪೇಳಲದನ್ ಅಗಸ್ತ್ಯಂ ಕಾಂಚೀಕ್ಷೇತ್ರವಾಸಿಗಳಾದ ಋಷಿಗಳ್ಗೆ ಪೇಳ್ದನೆಂದು ಸೂತ ಪೌರಾಣೀಕಂ ಶೌನಕಾದಿ ಋಷಿಗಳ್ಗೆ ಪೇಳ್ದನೆಂದು ಪೇಳ್ದುದಂ ಮತ್ತಂ ಸಹಸ್ರಭೂಸುರಂ ಚಿದಂಬರದೊಳು ನರಯಾಗಾದಿ ಸಕಲ ಯಜ್ಞಮಂ ಮಾಡಿ ವಿಭೂತಿ ರುದ್ರಾಕ್ಷಿಧರನಾಗಿ ಶಿವಲೋಕಮಂ ಪೊಕ್ಕನೆಂದುಂ ಕುಂಬಾರ ನೀಲಕಂಠನೆಂಬಂ ಚಿದಂಬರೇಶ್ವರಂಗೆ ನಿಚ್ಚಲೊಂದೊಂದು ಮಡಕೆಯನೊಪ್ಪಿಸುತ್ತಾ ಸೂಲೆಗಾರನಾಗಿರಲವನ ಪೆಂಡತಿಯು ತನ್ನಂ ಮುಟ್ಟಬೇಡೆನಲಂತಿಪ್ಪುದು ಶಿವನಾತನಂ ಪರೀಕ್ಷಿಸಲೊಂದು ಮಡಕೆಯಂ ಕೊಟ್ಟು ಅದನ್ನು ಮರಸಿ ನಿನ್ನ ಪೆಂಡತಿಯ ಪಿಡಿದು ನುಡಿವುದೆನೆ ಆಕೆಯಂ ಮುಟ್ಟದೆ ಅವಳು ಪಿಡಿದ ಕೋಲಂ ಪಿಡಿದು ನುಡಿವುದುಂ ಶಿವಂ ಮೆಚ್ಚಿ ವೃಷಭಾರೂಢನಾಗಿ ಕೈಲಾಸದೊಯ್ದನೆಂಬುದುಂ

ಚೋಳದೆಶದ ಮಹಾಧನನೆಂಬ ವೈಶ್ಯಂ ಶಿವಭಕ್ತರ್ಗೆಲ್ಲಂ ಬೇಕಾದ ಪದಾರ್ಥ ವನೀವೆನೆಂದು ಪ್ರತಿಜ್ಞೆಯಿಂದಿರಲ್ ಆತನ ಪೆಂಡತಿಯಂ ಶಿವಂ ಬೇಡಿದೊಡೆ ಆಕೆಯ ನೊಪ್ಪಿಸಲ್ ಅವಳವನೊಯ್ವಾಗ ಅವನ ಬಂದುಗಳೆಲ್ಲಂ ಬಂದು ತಡೆದೊಡಾಕೆಯ ಗಂಡಂ ಬಂಧುಗಳೆಲ್ಲರಂ ಛೇದಿಸಲು ವೃಷಭದ ಮೇಲಾ ದಂಪತಿಗಳನೇರಿಸಿ ಕೈಲಾಸ ಕ್ಕೊಯ್ದನೆಂಬುದುಂ

ಚಿದಂಬರದ ಕೊಡಲೂರ ವೆಳ್ಳಾಳಶೂದ್ರ ಮಾರನೆಂಬಂ ಶಿವಂಗೆ ಧಾನ್ಯದ ಮೊಳೆಯಂ ಕೀರೆಸೊಪ್ಪನು ಅಟ್ಟಿಕ್ಕಿ ಕೈಲಾಸಕ್ಕೆ ಸಂದನೆಂಬುದುಂ

ತಿರುಕೋವಿಲ ಸತ್ಯಾರ್ಥನೆಂಬ ಗೊಲ್ಲಂ ಶಿವಭಕ್ತಿರ್ಗೆ ಪ್ರಾಣಮನಾದರು ಕೊಡುತ್ತೇನೆಂದು ಪ್ರತಿಜ್ಞೆಯಿಂ ಮುಕ್ತಿನಾಥನೆಂಬರಸನ ಪಟ್ಟಣಮಂ ಕೊಂಡೊಡಾತಂ ವಿಭೂತಿ ರುದ್ರಾಕ್ಷಿಯಂ ದರಿಸಿ ತತ್ವೋಪದೇಶಂಗೆಯ್ವೆನೆಂದು ಕಪಟದಿಂ ಬಂದು ಸತ್ಯಾರ್ಥನಂ ಕೊಲ್ವಾಗಳ್ ಬಾಗಿಲವರ್ ಬಂದು ಮುಕ್ತಿನಾಥನಂ ಕೊಲ್ವಾಗಳ್ ವಿಭೂತಿ ರುದ್ರಾಕ್ಷಿಯುಳ್ಳ ಶಿವಭಕ್ತನೆಂದು ಕೊಲೆಯಂ ಮಾಣಿಸೆ ಶಿವಂ ಮೆಚ್ಚಿ ಮುಕ್ತಿಯಂ ಕೊಟ್ಟನೆಂಬುದುಂ

ಕೇರಳದೇಶದ ವೆಳ್ಳಾಳ ಶೂದ್ರವೀರ ಮಿಂಡನೆಂಬಂ ಶಿವದ್ವೇಷಿಗಳಂ ಛೇದಿಸುವೆನೆಂಬ ಪ್ರತಿಜ್ಞೆಯಂ ಪರಶುಗೊಡಲಿಯಂ ಪಿಡಿದು ರೌದ್ರದಿಂ ಜನಂಗಳಂ ಕೊಲ್ಲುತ್ತಂ ತಿರುವಾಲೂರ ತ್ಯಾಗರಾಯನ ಗುಡಿಗೆ ಬಪ್ಪ ಸೌಂದರನಂ ಕಂಡು ಶಿವದ್ರೋಹಿ ಎಂದಟ್ಟಿಕೊಂಡು ಬರೆ ಗರ್ಭಗೃಹಮಂ ಪೊಕ್ಕಿರಲವನಂ ಛೇದಿಸುವಾಗ ಶಿವಂ ಮುಕ್ತಿಯ ಕೊಟ್ಟನೆಂಬುದುಂ

ಚೋಳದೇಶದ ವಳಯೂರೆಂಬ ಗ್ರಾಮದೊಳು ಅಮರನೀತಿ ಎಂಬ ವೈಶ್ಯಂ ಶಿವಭಕ್ತಿರ್ಗೆ ಬೇಕಾದವಂ ಕೊಡುತ್ತಿರೆ ಶಿವಂ ಪರೀಕ್ಷಿಸುಲು ಬ್ರಹ್ಮಚಾರಿಯಾಗಿ ಬಂದು ಜಡಿಮಳೆಯೊಳು ತನ್ನ ಕೌಪೀನಮಂ ಕೊಟ್ಟದಂ ಮರಸಿ ಬೇಡಿದೊಡೆ ಕಾಣದಿರೆ ಮತ್ತೊಂದು ಕೌಪೀನಮಂ ಕೊಟ್ಟು ಅದರ ತೂಕಕ್ಕೆ ಸರ್ವಸ್ವಮಂ ಕೊಡಲು ಸಾಲದಿರ್ದೊಡೆ ತನ್ನ ಪತ್ನಿವೆರಸು ತಾನೆ ಸೇರುವುದು ಮೆಚ್ಚಿ ಕೈಲಾಸಕ್ಕೊಯ್ದನೆಂಬುದುಂ

ಕರೂರಲ್ಲಿ ಜಾತಿಯಲ್ಲಿದ ಕಾರುಕಂ ಶಿವಭಕ್ತದ್ರೋಹಿಗಳಂ ಕೊಲ್ವೆನೆಂದು ಕೊಡಲಿಯಂ ಪಿಡಿದು ಕೊಲುತ್ತಿರೆ ಶಿವವ್ರತನೆಂಬ ಪಾರ್ವಂ ಶಿವಪೂಜಾರ್ಥಮಾಗಿ ಪುಷ್ಪಮಂ ತರುತ್ತಮಿರೆ ಆನೆ ಚೆಲ್ಲಿದೊಡದಂ ಕೊಡಲಿಯಿಂ ಕೊಂದೊಡೆ ಅರಸಂ ಕೇಳಿ ಶಿವದ್ರೋಹ ಬಂದುದೆಂದು ತನ್ನಂ ಛೇದಿಸೆನಲಲ್ಲಿಂದಾ ಶಿವಭಕ್ತನಂ ಕೊಲಲಾಗದೆಂದಿರ್ದೊಡಾ ಕೊಡಲಿಯಂ ಕೊಂಡು ತಾನೆ ಛೇದಿಸಿಕೊಂಬಲ್ಲಿ ಶಿವಂ ಮುಕ್ತಿಯಂ ಕೊಟ್ಟನೆಂಬುದಂ

ಈಡಿಗ ಏನಾದಿನಾಥನಂ ಶೂರನೆಂಬವಂ ಕಪಟದಿಂ ಭಸ್ಮರುದ್ರಾಕ್ಷಿಯಂ ಧರಿಸಿ ಬಂದು ಕೊಲ್ವವಸರದೊಳು ಶಿವಂ ಪ್ರತ್ಯಕ್ಷಮಾಗಿ ಮುಕ್ತಿಯನಿತ್ತನೆಂಬುದಂ

ಬೇಡರ ಕಣ್ಣಂ ಕಾಳಹಸ್ತಿ ಸಮೀಪದುಡಂಪೂರಲ್ಲಿ ಕಾಳಹಸ್ತೀಶ್ವರಂಗೆ ತನ್ನೆರಡು ಕಣ್ಣಂ ಕಳೆದರ್ಪಿಸಿ ಮುಕ್ತಿಯಂ ಪಡೆದನೆಂಬುದಂ

ಕಳನಾಥನೆಂಬ ಬ್ರಾಹ್ಮಣಂ ನಿತ್ಯದಲ್ಲು ಶಿವಂಗೆ ಧೂಪಮನಿಕ್ಕಿ ಕೈಲಾಸಕ್ಕೆ ಪೋದನೆಂಬುದಂ

ಒಬ್ಬ ಸ್ತ್ರೀಯು ಎರಡು ಕೈಯಿಂದಾ ಮಾಲೆಯನ್ನಿಕ್ಕುತ್ತಿರಲೊಂದು ದಿನಂ ಎರಡು ಕೈಯಿಂ ಪುಷ್ಪಮಾಲೆಯ ಶಿವನ ಕೊರಳೊಳಿಕ್ಕಲೆಂದೆತ್ತಿದಾಗಲುಟ್ಟಿರ್ದ ಸೀರೆಯಳಿದೊಡದನೆರಡು ಮೊಳಕೈಯಿಂದೆರಕಿ ಚಿಂತಿಸುವಲ್ಲಿ ದೇವರು ಬಗ್ಗಿ ಮಾಲೆಯಂ ಕೊಂಡುದರಿಂ ವಕ್ರತ್ವ ಬಂತೆಂಬುದುಂ

ಶೂದ್ರರ ಮಾನಚಂಡೆಯನೆಂಬವನ ಕಥಯಂ ಶೂದ್ರ ಶಂಕುಲಾದಾಯನ ಗೊಲ್ಲರ ಗೋನಾಥನ ಮೂರ್ತಿನಾಥನೆಂಬ ವೈಶ್ಯನ ಶೂದ್ರ ಪಶುಪತಿಯ ನಂದನನ ವಿಚಾರವಂತನ ಚಂಡೇಶ್ವರನ ಶೂದ್ರ ವಾಗೀಶ್ವರನ ವಿಜಾತಿಯ ಮಂತ್ರಕುಲಪಕ್ಷನ ವಿದ್ಯಾಶೂರನ ಪೂತವತಿಯ ಅಭೂತಿಚರಣ ನೀಲನಗ್ನನ ನವನಂದಿಯ ಶಿವಜ್ಞಾನ ಸಂಬಂಧಿಯ ಕರಿಕಾಮನ ಗೊಲ್ಲರ ಕೈಲಾಸಸಿದ್ಧ ಶ್ರೀಮೂಲನ ಜಾತಿಯಿಲ್ಲದ ದಂಡಭಕ್ತನ ಮೂರ್ಖಭಕ್ತನ ಶೂದ್ರಶಾಭ್ಯನಾಥನನಿರುದ್ಧ ಶಾರ್ದೂಲರೆಂಬಿವರ ಕಥೆಯಂ ಮತ್ತಂ ದಭ್ರಭಕ್ತನೆಂಬನ ಮಗನ ಕೊಯ್ದಟ್ಟಿ ತಿಂದನೆಂಬುದಂ ಚೇರಭೂಪನ್ ಆನೇಯನೇರಿ ಪೋಗುತ್ತಮಸಗನ ಪಣೆಯಿಂ ಚೌಗಾರದ ನೀರು ಬಿಳಿದಾಗಿ ಪರಿದಿರೆ ಭಸ್ಮಾಂಗಧರನೆಂದಾನೆಯನಿಳಿದು ಸಾಷ್ಟಾಂಗವೆರಗಿನೆಂಬುದಂ

ಮತ್ತಂ ಪರಾಂತಕನೆಂಬನ ಗಣನಾಥನ ಸತ್ಯದಾಸನ ಧರ್ಮಕೇತನದ ಪ್ರತಾಪ ಸೂರ್ಯನ ಬೆಸ್ತರತಿಭಕ್ತನ ಮಾನಧನನೆಂಬನ ಗಾಣಿಗ ಕಲಿನೀತಿಯ ವೆಳ್ಳಾಳ ಶೂದ್ರ ಶಕ್ತಿನಾಥನ ಗೊಲ್ಲರ ಪಂಚಪಾದನ ಮಂಡೆಕೂದಲಿಂ ದೀಪಮನೆತ್ತಿದ ಗಣೋಲ್ಲಾಸನ ಅಭಿರಾಮನೆಂಬಂ ದಕ್ಷಿಣ ಮಧುರೆಗರಸಾಗಿರ್ದು ವೀರಶೈವನಾಗಿ ಜೈನಮತದ್ವೇಷವಿಡಿದು ಜೈನಾಲಯಂಗಳಂ ಜೈನಸಂಗಮಂ ಕೆಡಿಸಿದನೆಂದುಂ.

ನಿರ್ವಚನನೆಂಬನ ಮಾನಧನನ ಸಿಂಹಾಕನೆಂಬನ ಪೆಂಡತಿ ತಿರುವಾಲೂರ ದೇವರ ಪುಷ್ಟಮಂ ಮೂಸಲವಳ ಮೂಗಂ ಕುಯ್ಯಲು ಸಿಂಹಾಕನವಳ ಕೈಯ ಕುಯ್ದನೆಂಬುದುಂ

ಭೂತಿಧರನರಮನೆಯ ಕಣಜದ ಬತ್ತಮಂ ಕದ್ದು ಶಿವಪ್ರೀತನಾದನೆಂಬುದಂ ಸಾಹಸಪ್ರಿಯನರಸಿನ ಪಟ್ಟಸ್ತ್ರೀಯ ಮೂಗನರಿದನೆಂಬುದಂ ಕೀರ್ತಿಸಖಂಗೆ ದಿನಂಪ್ರತಿ ಶಿವಂ ಸುವರ್ಣಮಂ ಕೊಟ್ಟುಬಂದನೆಂಬುದಂ ಶೂರವ್ಯಾಘ್ರನೆಂಬ ವೆಳ್ಳಾಳಂ ಚೋಳಂಗ ಮಂತ್ರಿಯಾಗಿರ್ದು ರಾಜಕಾರ್ಯಕ್ಕೆ ಪೋಗೆ ಆತನ ನಂಟರ್ ಬಂದು ಕಣಜದ ಬತ್ತಮಂ ತೆಗೆದಾತನ ಪೆಂಡತಿಯಿಂದಡಿಸಿ ಉಂಡು ಮಂತ್ರಿಯನೇನಾದರು ಕೇಳಲೆಂದಿರಲವಂ ಬಂದು ಬತ್ತಮಂ ತೆಗೆದುದಂ ಕೇಳಿ ಕೋಪದಿಂ ಔತಣದ ನೇಮದಿಂದಾ ನೆಂಟರೆಲ್ಲರಂ ಬರಿಸಿ ನಡುಮನೆಯೊಳ್ ಕುಳ್ಳರಿಸಿ ಶಿವಾರ್ಪಣೆಗೆಂದಿರ್ದ ಬತ್ತಮಂ ಉಂಡರೆಂದೆಲ್ಲರಂ ತಲೆಗೊಯ್ದು ಪರಿಹರಿಸಿ ತನ್ನ ಪೆಂಡತಿಯು ಉಂಡಳೆಂದವಳ ಪೊಟ್ಟೆಯಂ ಸೀಳ್ದು ಅವಳ ಸ್ತನ್ಯಮನುಂಡ ಶಿಶುವಂ ಮೇಲಕ್ಕಿಟ್ಟು ಕತ್ತಿಯನೊಡ್ಡಿ ಕತ್ತರಿಸಿ ಕೈಲಾಸಮನೆಯ್ದಿದನೆಂಬ ಕಥೆಯಂ ಮತ್ತಂ ಕೀರ್ತಿನಾಥನ ಲೋಹಿತಾಕ್ಷನ ನಿರಾಕರಣ ಕಥೆಯಂ ಮಧುರೆಯ ವೀರಪಾಂಡ್ಯನ ಮಗಂ ಕೂನಪಾಂಡ್ಯಂಗೆ ಚೋಳರಾಯನ ಮಗಳು ಪದ್ಮಾವತಿ ಎಂಬಳು ಅರಸಿಯಾಗಿರಲಾ ಪದ್ಮಾವತಿಯಂ ಬೋಧಿಸಿ ವೀರಶೈವದಾಂಡಿಗಳು ಕೃತ್ರಿಮವಿದ್ಯದಿಂ ಲಿಂಗಧಾರಿಯಂ ಮಾಡಿ ಚೋಳರಾಯನಂ ಶಿವಭಕ್ತನಂ ಮಾಡಿ ಜಿನಮತದ್ವೇಷದಿಂ ಜೈನರೆಲ್ಲರಂ ಶೂಲದೊಳಿಕ್ಕಿಸಿದನವನಂ ಸುಕುಮಾರನಾದನೆಂಬುದಿವು ಮೊದಲಾದನೇಕ ಕಥೆಗಳಂ ಕಲ್ಪಿಸಿ ಸೂತಪುರಾಣೀಕರು ಅಗಸ್ತ್ಯರುಷಿಯುಮಪಮನ್ಯು ತಮ್ಮ ಶಿಷ್ಯರ್ಗೆ ಪೇಳ್ದರೆಂದು ರಚಿಸಿ ನಿತ್ಯದಲ್ಲು ಓದುತ್ತಂ ಶ್ರದ್ಧಾಪರನಾಗಿದಾಗಿಸುತ್ತಲಿತರಮತಂಗಳೊಳು ದ್ವೇಷಮಂ ತಾಳಿಯುಮಿರಲೊಂದು ದಿವಸಂ ಕೆಲಂಬರು ವಿದ್ವಾಂಸರುಂ ಪಂಡಿತರುಂ ದೇವರಾಜರಸು ಮೊದಲಾದ ಹಳೇಬೀಡು ಬೆಳುಕೆರೆ ಅರಸುಗಳು ಬಂದೀ ಕಥೆಗಳಂ ಕೇಳ್ದು ದೇವರಾಜರಸು ಪೆಣ್ಣಂಗೊಟ್ಟಿರ್ಪ ದಾಕ್ಷಿಣ್ಯಮುಳ್ಳುದರಿಂದಿಂತೆಂದನೀ ಕಥೆಗಳಾವ ಕಾಲದೊಳಾದ ಪುರಾಣದೊಳಿಪ್ಪವಿವಕ್ಕೆ ಕರ್ತೃಗಳಿಲ್ಲದುದರಿಂ ಸಂರಕ್ಷಣರೌದ್ರಮುಳ್ಳರಂ ಮೂಢಭಕ್ತರಂ ಜ್ಞಾನ ಧ್ಯಾನ ತಪೋಹೀನರಂ ಶಿವಂ ಪುತ್ರಮಿತ್ರರ್ ರ್ವೆರಸಿ ಕಾಯ ಸಹಿತಂ ಕೈಲಾಕ್ಕೊಯ್ದನೆಂದರೆ ಕರುಣಾರ್ದ್ರ ಹೃದಯ ಜ್ಞಾನಚಾರಿತ್ರ ತಪೋನುಷ್ಠಾನಂಗಳು ವ್ಯರ್ಥಮಪ್ಪುದರಿಂದೀ ರಾಗದ್ವೇಷಮಯಮಪ್ಪ ಕಥೆಗಳಂ ಕಲ್ಪಿಸಿ ಪೇಳುವರ್ಗಂ ಕೇಳುವರ್ಗಂ ಭಾವಿಸುವರ್ಗಂ ಪಾಪಾಸ್ರವಮಲ್ಲದೆ ಪುಣ್ಯಾಸ್ರವಮಾಗದದರಿಂ ನಿರ್ದೋಷಿಗಳಂ ನಿಃಕರುಣದಿಂ ಕೊಂದರ್ಗಧೋಗತಿಯಿಲ್ಲದೆ ಊರ್ಧ್ವಗತಿಯಾಗದು, ಅದೆಂತೆಂದೊಡೆ ‘ಯಾಗತಿಸಾಮತಿಃ’ ಎಂಬ ಶ್ರುತಿಯಿಪ್ಪುದರಿಂ ದುರ್ಧ್ಯಾನಮಂ ಮಾಡುಲಾಗದು

ಶ್ಲೋಕ || ಆರ್ತೇ ತಿರ್ಯಗ್ಗತಿಪ್ರಾಪ್ತೋ ರೌದ್ರೇ ನಾರಕಸಂಭವಃ
ಧರ್ಮಧ್ಯಾನೇನ ಸ್ವರ್ಗಂ ಸ್ಯಾಚ್ಛುಕ್ಲೇನಾಶಾಶ್ವತಂ ಪದಮ್ ||

ಮುನ್ನ ಶೈವಸಿದ್ಧಾಂತದಲ್ಲಿ ಕ್ರೋಧಮುಳ್ಳರ ಕಥೆಯಂ ಕೇಳ್ದೊಡೆ ಇಹಪರಮಿಲ್ಲೆಂಬುದಂ ಅನುಭವಾಮೃತದಲ್ಲಿ ಪೇಳ್ವುದಲ್ಲದೆ ಸೋಮೇಶ್ವರನ ಶತಕದೊಳ್

|| ಶುಚಿ ತಾನಾಗದೆ ಸರ್ವಶಾಸ್ತ್ರನಿಪುಣಂ ತಾನಾಗದೆ ಕಾಮಮಂ
ಪಚನಂಗೆಯ್ಯದೆ ಕ್ರೋಧಮಂ ಬಿಡದೆ ಲೋಭಚ್ಛೇದನಂ ಮಾಡದೇ
ರಚನಾಮೋಹಮನುಗ್ಗಿ ನೆಗ್ಗಿ ಮದಮಾತ್ಸರ್ಯಂಗಳಂ ನೀಗದೇ
ವಚನಬ್ರಹ್ಮದಿ ಮುಕ್ತಿಯೇ ಹರಹರಾ ಶ್ರೀ ಚೆನ್ನ ಸೋಮೇಶ್ವರಾ

ಶ್ಲೋಕ || ಏಕಾಕೀ ನಿಸ್ಪ್ರಹಃ ಶಾಂತಃ ಪಾಣಿಪಾತ್ರೋ ದಿಗಂಬರಃ
ಕದಾ ಶಂಭೋ ಭವಿಷ್ಯಾಮಿ ಕರ್ಮನಿರ್ಮೂಲನಕ್ಷಮಃ ||

ಇಂತಾದಿಯಾಗಿ ಮೂವತ್ತೆರಡುಪನಿಷದ್ವಾಕ್ಯಂಗಳು ಸಾರ್ವುದರಿಂದ ಶಾಸ್ತ್ರಕ್ಕೆ ವಿರೋಧಮಪ್ಪವು. ವೀರಶೈವಮಾದ ಬಸವಣ್ಣನ ಸೃಷ್ಟಿಯೊಳೆ ಜನಂಗಳ್ಗದ್ಭುತಮಂ ತೋರಿಸಿ ದೃಢವಿಡಿಯಿಸಲೆಂದು ಕಲ್ಪಿಸಿದ ಕಥೆಗಳು ರೌದ್ರದಂ ಮನುಷ್ಯರಂ ಶೂಲದೊಳಿಕ್ಕಿ ಆಯುಧದಿಂ ಕೊಂದವರ್ಗೆ ಮುಕ್ತಿಯಾಯ್ತೆಂಬೀ ಕಥೆಗಳಂ ಕೇಳಿ ಸದ್ಗತಿವಡೆವೆನೆಂಬುದು ವಿಷಮಂ ಉಂಡು ಬದುಕುವೆನೆಂಬಂತೆಂದು ದೇವರಾಜರಸನು ಪಂಡಿತ ವಿದ್ವಾಂಸರು ಅರಸಂ ಕೇಳ್ವಂತೆ ನುಡಿಯುತ್ತ ಪೂರ್ವದೊಳು ಚಿಕ್ಕದೇವರಾಜರಸನುಂ ಜಾತಿಗಳ ವಿಚಾರಿಸಲೆಂದು ಸಕಲ ಜಾತಿಯೊಳು ಶ್ರೇಷ್ಠರಂ ಬರಿಸಿ ಉತ್ಕೃಷ್ಟ ನಿಕೃಷ್ಟಮನರಿಯಲೆಂದೊಡೆ ಯಾವುದೊಂದು ಜೀವಂ ಯಾವುದೊಂದು ಯೋನಿಯೊಳು ಪುಟ್ಟಿದೊಡಮಲ್ಲಿಯೆ ಪರಿಣಮಿಸಿ ಉತ್ಕೃಷ್ಟಮೆಂಬ ಬುದ್ಧಿ ಪುಟ್ಟುವುದರಿಂ ಸರ್ವಜಾತಿಯವರ್ ಬಂದು ತಂತಮ್ಮ ಕುಲಶ್ರೇಷ್ಠ ಪುರಾಣಮಂ ಪೇಳ್ದರುಮವರೊಳು ಪಂಚಾಳದವನೆಂದಂ ನಾನೀ ಲೋಕಕ್ಕೆ ಮೊದಲಿಗನಾಗಿ ಬ್ರಹ್ಮಾಂಡಂಗಳಂ ನಿರ್ಮಿಸಿ ಲೋಕಮಂ ಮಾಡಿ ಸಕಲ ಪದಾರ್ಥಂಗಳಂ ತುಂಬಿಡಲವರವರ ಕಾರಣಂಗಳಿಗೆಲ್ಲಂ ನೀನಿಲ್ಲದಾಗದೆಂದು ದೇವಾದಿ ತ್ರೈಮೂರ್ತಿಗಳ್ ವಿಶ್ವಬ್ರಹ್ಮನಂ ಪ್ರಾರ್ಥಿಸೆ ತನ್ನ ಕಳೆಯಪ್ಪ ವಿಶ್ವಕರ್ಮನಂ ಕಳುಹಿಸಲಾತಂ ಬಂದು ಲೋಕದೊಳುಳ್ಳ ಸಮಸ್ತೋಪಕರಣಂಗಳಂ ನಿರ್ಮಿಸಿ ಬ್ರಹ್ಮಂಗೆ ದಂಡುಕೋಲು ಕಮಂಡಲು ಅಕ್ಷಮಾಲೆಯಂ ಮಾಡಿಕೊಟ್ಟು ವಿಷ್ಣುವಿಂಗೆ ಶಂಖ ಚಕ್ರ ಗದಾಸಿ ಮೊದಲಾದವಂ ಈಶ್ವರಂಗೆ ಕಟ್ಟಾಂಗ ತ್ರಿಶೂಲ ಪಿನಾಕಾದಿಗಳಂ ಕೊಟ್ಟು ಅವರವರ ಚಿಹ್ನೆಗಳನ್ನುಂಟುಮಾಡಿದಂ, ಅದಲ್ಲದೆ ದೇವತೆಗಳ್ಗೆ ದಾನವರ್ಗೆ ಕಾರ್ಯಕಾರಣಂಗಳಂ ನಿರ್ಮಿಸಿಕೊಟ್ಟನಾ ವಿಶ್ವಕರ್ಮನ ಸಂತತಿಯೊಳೆ ಸಮಸ್ತ ಚರಾಚರ ಜೀವಂಗಳು ಪುಟ್ಟಿದವೆಂದು

ಶ್ಲೋಕ || ವಿಶ್ವಕರ್ಮಕೃತಂ ಲೋಕಂ ತ್ರಿಮೂರ್ತೀನ್ ದೇವದಾನವಾನ್
ಸರ್ವೋಪಕರಣಂ ಚೈವ ವಿಶ್ವಕರ್ಮ ವಿನಾ ನ ಹಿ ||

ಎಂದು ಪೆರಸಾರೆ ಕುಂಭಕಾರನೆಂದಂ ನಾಂ ಲೋಕಕ್ಕೆ ಜ್ಯೇಷ್ಠನು ಮತ್ತೆ ಭೂಮಿ ಪುಟ್ಟಿತು. ಭೂಮಿಯಲ್ಲಿ ನೀರು ಪುಟ್ಟಿತು. ಮತ್ತಂ ವಾಯು ಪುಟ್ಟಿತು. ಅಲ್ಲಿಂ ಮೇಲೆ ಅಗ್ನಿ ಪುಟ್ಟಿತು. ಮತ್ತಾಕಾಶಂ ಪುಟ್ಟಲು ಕುಲಾಲಂ ಆ ಮೃತ್ತಿಕೆಯಂ ನೀರೊಳ್ ಕಲಸಿ ಸಕಲ ಪ್ರಪಂಚನೆಲ್ಲಮಂ ಸ್ವರ್ಗಮರ್ತ್ಯಪಾತಾಳಂಗಳ ಮಾಡಿ ನಡಸುತ್ತಿಪ್ಪಿನ ಛಾಯೆ ಎಂಬ ಯಮನರಸಿಯು ಅಗ್ನಿಯಂ ನುಂಗಿರಲಾ ಸಕಲಂಗಳು ಜಲಸ್ಪರ್ಶನದಿಂ ಗತಮಾಗುತ್ತಿರೆ ಈಶ್ವರನ ಉರಿಗಣ್ಣಂ ಕೀಳ್ವುದು ಕೋಪಿಸಿ ನೀನು ಸರ್ವಸೃಷ್ಟಿಯುಳ್ಳನಾಗಿಯೂ ಜಾತಿಯೋಗ್ಯನಾಗಬೇಡೆಂದು ಶಾಪವಿಕ್ಕಿದೊಡಾ ಯಜ್ಞೇಶ್ವರನಂ ಪ್ರಾರ್ಥಿಸೆ ದಕ್ಷ ಬ್ರಹ್ಮನಾಗಿ ಈಶ್ವರನಂ ಕೊಲಲ್ಬಗೆಯಲಾಗಲು ತನ್ನ ಶಕ್ತಿಯಿಂ ಪಾರ್ವತಿಯ ವರದಿಂ ವಿಷ್ಣುವಿನ ಚಕ್ರದಿಂ ದಕ್ಷಬ್ರಹ್ಮನಪಹರಿಸಲ್ ಬರೆ ಕುಂಭಕಾರಂ ಬ್ರಹ್ಮನಂ ಮರೆಗೊಂಡು ಮೃತ್ತಿಕೆಯೊಳ್ ಚತುರಂಗಬಲಮಂ ನಿರ್ಮಿಸಿ ಪಾರ್ವತೀವರಮಂ ವಿಷ್ಣುಚಕ್ರಮಂ ಗೆಲ್ದು ಯಜ್ಞಮಂ ಮಾಳ್ಪಿನ ವೀರಭದ್ರಂ ಬಂದು ಯಜ್ಞಮಂ ಮಾಣಿಸೆ ಆತನಂ ಗೆಲ್ದು ಬ್ರಹ್ಮವಶದವನಾದುದರಿಂ ಯಜ್ಞಸೂತ್ರಮಂ ಭಾಂಡದೊಳ್ ಕಲ್ಪಿಸಿ ಕುಂಭ ಹಾರುವನೆಂದು ಪೆಸರಾಗಿ ಕೆಡೆಯೊಳು ಶಾಲೀವಾಹನಂ ರಾಜ್ಯವನಾಳಿದನಾತನ ಶಕೆಯೆ ನಡೆಯುವುದಲ್ಲದೆ ಮತ್ತೊಂದಿಲ್ಲದರಿಂ ಕುಂಬಾರನೆ ಶ್ರೇಷ್ಠನೆಂದಂ.

ಕಿರಾತನೆಂದಂ ಮುನ್ನಲೀಶ್ವರಂಗಾಹಾರಮಿಲ್ಲದೆ ಜಠರಾಗ್ನಿಯಿಂ ಬೆಂದು ಸುಯ್ದು ತನ್ನ ಕಂಕುಳಬೆಮರಂ ತೆಗೆದಿಡೆ ಅಲ್ಲಿ ಶೌರ್ಯವೀರ್ಯಮುಳ್ಳ ಪುರುಷಂ ಪುಟ್ಟಿ ಪರಿಜನಮಂ ಪಡೆದು ಶೂಲಿಯೊಡವೆರಸಿ ಅರಣ್ಯಕ್ಕೆಯ್ದಿ ಮೃಗಪಕ್ಷಿಗಳಂ ಬೇಂಟೆಯನಾಡುತ್ತಮಿರೆ ಕೃಷ್ಣಂ ಕೇಳ್ದು ತನ್ನ ಕೈವಾಡದ ಜನಸಹಿತಂ ಬೇಂಟೆಯನಾಡಲಾ ಬಂದು ಅನೇಕ ಮೃಗ ಪಕ್ಷಿಗಳನೆಲ್ಲಮಂ ಕೊಂದು ಈಶಂಗುಣಲಿಕ್ಕುವುದುಂ ಈಶನೆಂದಂ ನೀನಿಕ್ಕಿದಾಗಲೆ ತೃಪ್ತಿಯಾದುದು ಬೇಡರಸೇಯೆನೆ ಆ ವೀರಪುರುಷಂಗೆ ಬೇಡನೆಂಬಪೆಸರಾದುದು ಆತಂಗೆ ಕೃಷ್ಣ ಮೆಚ್ಚಿ ಅರ್ಧರಾಜ್ಯಮಂ ಕೊಟ್ಟು ಆತನೊಡನೆ ಬೇಂಟೆಯನಾಡುತ್ತಿರಲಾತಂಗಮಿದಿರಾರುಮಿಲ್ಲದೆ ಬ್ರಹ್ಮನಂ ಗಣಿಸದೆಯಿರ್ದನಾ ವಂಶದೊಳೆ ಅನೇಕ ಜಾತಿ ಪುಟ್ಟಿದರಲ್ಲದೆ ಅರ್ಜುನಂ ಬೇಂಟೆಗೆವರೆ ಆತನೊಳೆ ಕೇಶಾಕೇಶಿ ಮುಷ್ಟಾಮುಷ್ಟಿ ಯುದ್ಧಂಗೆಯ್ದು ಸರ್ವಸ್ವಮಂ ಸುಲಿದುಕೊಂಡರ್. ಅದಲ್ಲದೆ ಪೂರ್ವದೊಳು ಕಿರಾತನ ಮಗಳಪ್ಪ ಸತ್ಯವತಿ ವ್ಯಾಸನಂ ಪೆತ್ತಳ್. ಆತನಿಂ ಪಾಂಡವರ ವಂಶಮಾಯ್ತು. ಅದರಿಂ ಕಿರಾತಕುಲವೆ ಶ್ರೇಷ್ಠವೆಂದು ನುಡಿದನು.

ಮತ್ತಂ ಕುರುಂಬನು ಮುನ್ನ ತಾನು ಬ್ರಹ್ಮನ ಹಸ್ತದೊಳು ಪುಟ್ಟಿ ವೀರ್ಯನೆಂಬ ಹೆಸರಾಂತು ಬ್ರಹ್ಮನುವೆರಸಿ ಬೇಂಟೆ ಹೋದಾಗಲು ಕಿರಾತರು ವನಮಂ ಪುಗಲೀಸದೆ ಪೊರಡಿಸುವುದು ಬೀರಂ ಪರಶುವನಾಂತು ವನಮಂ ಪೊಕ್ಕು ಆಡು ಕುರಿ ಮೊದಲಾದ ಕೆಲವು ಮೃಗಂಗಳನ್ನು ಬೇಂಟೆಗೊಳಗಾಗಲೀಸದೆ ಪಚ್ಚಂಗಿದಡಿಯಿಂದಟ್ಟಿತಂದು ಪುರದೊಳಿಟ್ಟು ಸಲಹುತಿರ್ದು ಮತ್ತೊಂದುದಿನಂ ಹುಲ್ಲೆಗಳಂ ಹಿಡಿತರುವಲ್ಲಿ ಬೇಟೆಗಾರರ್ ಬಂದು ಮೃಗಂಗಳ ಕೊಂದು ಕೊಂಡುಪೋಗುವಲ್ಲಿ ಬೆನ್ನಟ್ಟಿ ಆ ಮೃಗದ ಚರ್ಮಂಗಳಂ ಸುಲಿದು ಬ್ರಹ್ಮಂಗೆ ಕೊಟ್ಟೊಡೆ ಕೃಷ್ಣಾಂಜಿನಧರನಾದಂ. ಮತ್ತಂ ಮಾಂಸಮಂ ಭಕ್ತಿಸಲು ಪ್ರೀತಿನಾಗಿ ಯಜ್ಞಮೆಂದು ವೇದಸೂತ್ರಮಂ ನಿರ್ಮಿಸಿ ಆ ಆಡು ಕುರಿಗಳಿಗೆ ಅಜನೆಂದು ತನ್ನ ಪೆಸರಿಟ್ಟು ಯಜ್ಞಮುಖದಿಂದಾಡುಗಳಂ ಮಂತ್ರದಿಂ ಕೊಂದು ಸೇವಿಸುತಿರ್ದನಾ ಬೀರನ ವಂಶದೊಳೆ ಅನೇಕ ಜಾತಿಯು ಪುಟ್ಟಿತು. ಆ ಬೀರೇದೇವರಿಗೆ ಕಂಬಳಿ ಗದ್ದುಗೆ ಮೊದಲಾದ ಬಿರಿದು ಆಕುರುಬರೊಳು ಸಾದುಗುರುಬರು ಬೆಟ್ಟಕುರುಬರು ಹಂಡೆಕುರುಬರು ಮೊದಲಾದನೇಕ ಭೇದಮಾಯಿತು. ಅದರಿಂದೆಲ್ಲಾ ಕೈವಾಡಕ್ಕು ಕುರುಬಜಾತಿ ಶ್ರೇಷ್ಠನೆಂದು.

ತಂತುವಾಯನಿಂತೆಂದಂ ಮುನ್ನ ಪರಮೇಶ್ವರಂ ಲೋಕಸೃಷ್ಟಿಯೊಳು ಎಲ್ಲರು ಬೆತ್ತಲೆ ನಗ್ನರೂಪಗಿದ್ದುದರಿಂ ಅಂಬಿಕೆ ಚರ್ಮ ವಲ್ಕಲಾದಿಗಳಿಂ ಅಭಿಮಾನವಂ ಮರಸಿಪ್ಪುದಂ ಕಂಡು ಚಿಂತಿಸಿ ಚಳಿಯೊಳು ಕಂಪಿಸುವುದಂ ನೋಡಿ ಅದಕ್ಕುಪಾಯಮಾವುದೆಂದು ತನ್ನಂಗುಷ್ಠ ತರ್ಜನಿ ಎಂಬ ಎರಡಂಗುಲ ಸ್ಪರ್ಶನದಿಂ ಈರ್ವರ್ ಕುಮಾರರ್ ಪುಟ್ಟಿ ಬ್ರಹ್ಮನಿಂದೊರವಾಂತು ವೃಕ್ಷಂಗಳ ತಂತುಗಳಂ ಪೊಸೆದಾ ದಾರವಂ ಕಮವಿಡಿದು ನೇಯಿಸಿ ಸ್ತ್ರೀಪುರುಷರ್ಗೆ ಯೋಗ್ಯಮಪ್ಪ ವಸ್ತ್ರಂಗಳಂ ನಿರ್ಮಿಸಿ ಅವರೊಳೆ ಚೀನಿ ಚೀನಾಂಬರ ದುಕೂಲ ದೇವಾಂಗ ವಸ್ತ್ರಂಗಳಂ ನಿರ್ಮಿಸಿ ಬತ್ತಲೆಯಿರ್ದ ದೇವರ್ಕಳಿಗೆ ಕೊಡುವುದು ಅತ್ಯಂತ ಸಂತೋಷದಿಂ ತ್ರಿಮೂರ್ತಿಗಳ್ವೆರಸಿ ದೇವಾಂಗದವನೆಂದು ಪೆಸರಂ ಕುಡೆ ಆ ದೇವಾಂಗದವನಂ ಮಾನ್ಯನಾಗಿರ್ದನಾತನನ್ವಯದೊಳೆ ಅನೇಕ ಭೇದಂಗಳಾದರೆಂದು ಪೇಳ್ದಂ.

ಮತ್ತಂ ಒಕ್ಕಲಿಗಂ ಭೂಮಿ ಪುಟ್ಟಿದ ಏಳು ದಿವಸಕ್ಕೆ ಮಳೆ ಹೊಯ್ದೊಡೆ ಕಾಡೊಳ್ ಬೆಳೆದೊರಗಿರ್ದ ಧಾನ್ಯ ವಿದಳಾದಿಗಳಂ ಕಸಮಂ ಕಳಿದು ಪಾಕಮಂ ಮಾಳ್ಪುದರಿಯದೆ ಸಕಲ ಜೀವಂಗಳು ಕ್ಷುಧಾಪೀಡಿತರಾಗಿರಲ್ ಬ್ರಹ್ಮಂ ಭ್ರಮಣೆಯಿಂ ಬರುತ್ತ ಬೆಳೆದಿರ್ದ ಧಾನ್ಯಂಗಳಂ ಕಂಡು ಸಂಸ್ಕಾರಂಗೆಯ್ಯಲುಪಾಯಮಂ ಕಾಣದೆ ತನ್ನ ದಕ್ಷಿಣಾಂಘ್ರಿಯನ್ನೆತ್ತಿ ಪೊಯ್ಯಲಾ ಪಾದದೊಳೆ ಅರಂಗಡ್ಡಿ ಮೆರೆಗೋಲು ಕೊಂಗಂಗಳು ಸಹಿತಮಾಗಿ ಪುಟ್ಟಿ ಸಂಸ್ಕಾರದಿಂ ಪಚನದಿಂದಷ್ಟುಸಿದ್ಧಾನ್ನಮಂ ದೇವಾದಿದೇವರ್ಕಳೆಲ್ಲರುಮುಂಡು ತೃಪ್ತಿವಡೆದು ಶಕ್ತಿ ಪುಟ್ಟಿದುದರಿಂ ದೇವತೆಗಳೆಲ್ಲರು ಮಹಾಮೇರುಮಂ ಮಂಥಂ ಮಾಡಿ ಆದಿಶೇಷನೆ ರಜ್ಜುವಾಗೆ ಸಮುದ್ರಮಂ ಕಡೆದೊಡೆ ಅಲ್ಲಿ ಚಂದ್ರನುಂ ಲಕ್ಷ್ಮಿಯುಂ ಕೌಸ್ತುಭಮುಂ ರತ್ನಮುಂ ಅಮೃತಮುಂ ಸುರೆ ಮೊದಲಾದವು ಪುಟ್ಟೆ ಈಶಂ ಚಂದ್ರನಂ ನಾರಾಯಣನು ಲಕ್ಷ್ಮಿಯಂ ಕೌಸ್ತುಭಮಂ ದೇವತೆಗಳು ಅಮೃತಮಂ ದಾನವರು ಸುರೆಯಂ ಕೊಂಡು ಮತ್ತಂ ಅತಿಮತನಮಂ ಮಾಡಲು ವಿಷಂ ಪುಟ್ಟಿದೊಡಾರು ಕೊಳ್ಳದಿರಲ್ ಲೋಕಮಂ ದಹಿಸುತ್ತಿರಲ್ ಈಶ್ವರಂ ಕೊಂಡು ಕಂಠದೊಳ್ ಧರಿಸಿದುದರಿಂ ವಿಷಕಂಠನಾದಂ.

ಮತ್ತಂ ಈಶ್ವರಂ ಕಾಡೊಳಿರ್ದ ಧಾನ್ಯಂಗಳನೊಕ್ಕಿ ತರುವುದಕ್ಕೆ ಸಿಕ್ಕದಿರ್ಪುದು ತನ್ನ ಒಕ್ಕಲಿಂಗೆ ವೃಷಭನಂ ಕೊಟ್ಟು ಉತ್ತು ಆ ಭೂಮಿಯೊಳು ಬಿತ್ತಿ ಬೆಲೆ ಎಂದು ನೇಮಿಸೆ ಆ ಮೇರೆಯಲ್ಲು ಬಿತ್ತಿ ಬೆಳೆದು ಇರುವೆ ಮೊದಲಾದ ಎಂಬತ್ತುನಾಲ್ಕು ಜೀವರಾಶಿಗಳ್ಗೆಲ್ಲಾ ಅನ್ನಮಂ ಕೊಟ್ಟುದರಿಂ ನೀನೆ ಲೋಕಕ್ಕೆ ಜೀವನಕಾರಿ ಎಂದು ದೇವತೆಗಳಾದಿಯಾಗಿ ಅವನಂ ಕೊಂಡಾಡುವರು. ಆ ವಂಶದೊಳೆ ಅನೇಕ ಜಾತಿಗಳುತ್ಪತ್ತಿಯಾದವು. ಅದರಲ್ಲಿ ಸಾದ ಗುಡಿ ರಡ್ಡಿ ನೊಣಬ ಗಂಗಡಿಕಾರ ಕುಂಚಗ ದಾಸ ತೆಲುಗ ಮೊದಲಾದ ಭೇದಂಗಳಾಗಿ ವರ್ತಿಸುವರು. ಅದರಿಂದ ಒಕ್ಕಲಿಗನೇ ಶ್ರೇಷ್ಠನೆಂದು ಪೇಳಿದಂ.

ಮತ್ತಂ ಗಾಣಿಗನಿಂತೆಂದಂ ಮುನ್ನ ಜಗದ ಸೃಷ್ಟಿಯೊಳು ಪ್ರಭೆಯಿಲ್ಲದೆ ಅಂಧಕಾರಮಾಗಿರೆ ದೇವದಾನವರು ಕಣ್ಗಾಣದೆ ತ್ರೈಮೂರ್ತಿಗಳ್ಗೆ ಮೊರೆಯಿಡುವುದು. ಆ ಮೂವರು ಕಾಣದೆ ಕತ್ತಲೆಯೊಳು ತಡವರಿಸುತ್ತಿರೆ ಈಶ್ವರಂ ಕೋಪಿಸಿ ಪಣೆಯೊಳೊಂದು ಉರಿಗಣ್ಣಂ ಪಡೆಯಲು ಅದರೊಳೊಬ್ಬ ದೀಪ್ತ ಪುರುಷಂ ಪುಟ್ಟಿ ಪ್ರದೀಪಮಂ ಮಾಳ್ಪುಪಾಯಮಂ ಕಲ್ತು ಸ್ನಿಗ್ಧಮಪ್ಪ ವಸ್ತುಗಳೊಳು ತೈಲಮಂ ಬರಿಸಿ ದೀಪವರ್ತಿಯಂ ತೋರಿಸಿದಂ. ಮತ್ತಂ ಬಸವಣ್ಣನ ಸೃಷ್ಟಿಯೊಳು ಆ ಅನ್ವಯದವರಂ ಜ್ಯೋತಿಬಣ್ಣಮೆಂದು ಬಣ್ನದೊಳುತ್ಕೃಷ್ಟಮಾಡಿ ಮನ್ನಿಸಿದ. ಆ ವಂಶದೊಳೆ ಅನೇಕ ಜನಂ ಪುಟ್ಟಿ ಪ್ರಕಾಶಿಸಿದರ್. ಅದರಿಂ ನಾನೇ ಹೆಚ್ಚೆಂದು ಪೇಳ್ದಂ.

ಮತ್ತಂ ಗೊಲ್ಲನೆಂದು ಎಲ್ಲಾ ಕುಲಂಗಳೊಳು ಗೊಲ್ಲಕುಲಮೇ ಶ್ರೇಷ್ಠ ಗೊಲ್ಲನೇ ಮೊದಲಿಗನಾದುದರಿಂ ತ್ರೈಮೂರ್ತಿಗಳು ದೇವತೆಗಳು ಮನುಷ್ಯರು ಮೊದಲಾಗೆಲ್ಲರು ಗೊಲ್ಲರೆ ಅಲ್ಲದೆ ಬೇರಿಲ್ಲ. ಅದಕ್ಕೆ ಭಾಗವತದೊಳ್ ಪೇಳ್ವ ಗೊಲ್ಲಕಥೆಯೆ ದೃಷ್ಟಾಂತಮೆಂದು ಪೇಳ್ದನ್.

ಉಪ್ಪಲಿಗನು ಪೂರ್ವದೊಳು ಅಗಸ್ತ್ಯಋಷಿಯು ಸಮುದ್ರಮಂ ಪೀರಿದೊಡೆ ಲವಣಾಭಾವಮಾಗೆ ಈಶಂಗೆ ಮೃಡಾನಿಯು ಸಪ್ಪೆಯನಿಕ್ಕುತ್ತಮಿರಲಾತನ ಶರೀರಂ ರಸಗುಂದಿ ಕ್ಷೀಣಮಾಗೆ ದೇವಿಯು ಉಪ್ತಿಲ್ಲದೆ ಕೋಪಿಸಲು ಈಶ್ವರಂ ತನ್ನ ಮುಂಗಾಲ ಮೊಗಿಲಂ ತೆಗೆದು ಒಂದು ವಿಗ್ರಹಮಂ ಮಾಡಿ ಜೀವಂಬಡೆದಾತನಂ ಲವಣಮಂ ಮಾಡೆಂದು ಒರ್ವೆ ರೂಪವತಿಯಾದ ಶೀಲಸಂಪನ್ನೆಯಪ್ಪ ಹೆಣ್ಣಂ ಮದುವೆಯಂ ಮಾಡಿ ಕಳುಹಿಸಿದೊಡಾತಂ ಉಪ್ಪು ಮಣ್ಣರ ಸಂಗ್ರಹಿಸಿ ಸಾರಮಂ ತೆಗೆದು ಕಾಯಿಸುತ್ತಿರಲಾತನ ಪೆಂಡತಿ ಶುಚಿಯಾಗಿ ಪಾಕಶುದ್ಧಿಯಂ ಮಾಡಿ ಕುಶಲದಿಂದನ್ನಪಾನಂಗಳಂ ಪೊತ್ತು ಬರೆ ಕೋಪಿಸಿ ಇಂತಪ್ಪಳೆನಗೆ ಆಗದೆಂದೊಡಗೊಂಡು ಪೋಗಿ ಶಿವಂಗೊಪ್ಪಿಸಿ ಕೃಷ್ಣಾಂಗಿಯಪ್ಪ ಕೊಳಕಿಯಂ ಬೇಡಿ ತಂದು ಲವಣಮಂ ಮಾಡಿ ಸರ್ವಲೋಕಂಗಳ್ಗೆ ಭೋಜನರಸ ಕೊಟ್ಟು ವಿಷ್ಣುವಿನ ಬೇಂಟೆಗೆ ತಾನೆ ಮುಖ್ಯನಾಗಿ ಆತನ ವಂಶದೊಳು ಹುಟ್ಟಿದ ಸಿದ್ಧನುಂ, ಚೆನ್ನಿಗ ಮಾರನೆಂಬೀರ್ವರು ಮಹಾಪ್ರತಾಪಿಗಳಾಗಿರ್ದ ಕಾಲದೊಳು ರಾಜ್ಯಕ್ಕೆ ಒಂದು ಮಹಾ ಪರಾಕ್ರಮಮುಳ್ಳ ಸಿಂಹಂ ಬಂದು ಬಾಧಿಸುತ್ತಿರೆ ಅದಂ ಪಿಡಿಯಲು ದೇವ ಮನುಷ್ಯಾದಿಗಳಿಗೆ ಅಶಕ್ಯಮಾಗಿರೆ ಚೆನ್ನಿಗಮಾರಂ ಮುನ್ನ ಭೂಮಿಯುಂ ಜಲಮುಂ ಅಗ್ನಿಯುಂ ಒಂದೊಂದರೊಳ್ವಾಗ್ವಾದಮಾಗಿ ನಾನು ಹೆಚ್ಚು ತಾನು ಹೆಚ್ಚೆಂದು ವಾದಿಸುತ್ತಮಿರೆ ಪಂಚಾಧಿಕಾರಿಗಳು ತೀರಿಸಲಾರದೆ ದೇವತೆಗಳಂ ತ್ರಿಮೂರ್ತಿಗಳಂ ಕೂಡಿ ತೀರಿಸಲಾರದೆ ಅರಣ್ಯದೊಳಿರ್ಪ ಮೃಗಪಕ್ಷಿಗಳಂ ಪೇಳೆ ತೀರದಿರ್ದೊಡೆ ಕುರ್ಕುರಮೆಂಬ ಶ್ವಾನಂ ಬಂದು ಮೂವರಂ ಕರೆದು ಕೇಳ್ವುದು. ಭೂಮಿಯು ತಾನೆ ಹೆಚ್ಚೆಂದು ನಿಲ್ವುದು ನೀನು ಹೆಚ್ಚಲ್ಲ ನಿನ್ನೊಳು ವಂಚನೆ ಉಂಟಪ್ಪುದರಿಂ ಒಂದೊಂದು ಮೇರೆ ಇರುವುದರಿಂ ಪೆಚ್ಚಲ್ಲಮೆಂಬುದು ನೀರು ಬಂದು ಕೇಳೆ ನಿನ್ನಲ್ಲಿ ವಂಚನೆ ಪ್ರಪಂಚು ಬಹಳಮಿಪ್ಪುದರಿಂ ಹೆಚ್ಚಲ್ಲವೆನೆ ನೀನೆನ್ನ ಕುಡಿವಲ್ಲಿ ನೆಕ್ಕುವುದಲ್ಲದೆ ಪೀರಲಾಗದೆಂದು ಶಾಪಮನಿತ್ತುದು. ಮತ್ತಂ ಬೆಂಕಿಯಂ ನೀನೆ ಜಗದೊಳುತ್ಕೃಷ್ಟ ನಿನ್ನಲ್ಲಿ ವಂಚನೆ ಪ್ರಪಂಚಿಲ್ಲೆಂದು ಪೇಳ್ವುದು ಅಗ್ನಿಯು ನೀ ಎನ್ನ ಭಸ್ಮದೊಳೆ ಒರಗುವುದೆಂದು ಪೇಳೆ ನಾರಾಯಣನು ಈಶ್ವರನು ಮೆಚ್ಚಿ ತಮ್ಮ ಹೆಸರ ಮೊದಲಕ್ಷರಂಗಳಂ ಕೊಟ್ಟು ನಾಯಿ ಎಂದು ಪೆಸರಿಡೆ ಆ ನಾಯು ದೊಡ್ಡ ಮೃಗಮಂ ಸೇರಲೆಂದಾನೆಯಂ ಸೇರಿ ಹಗಲಿರ್ದು ರಾತ್ರಿಯೊಳು ಅಲ್ಲಿ ಮಲಗಲೆಂದು ಕೇಳ್ವುದು. ಎಚ್ಚರದಲ್ಲಿರ್ಪುದೆನ್ನಂ ಸಿಂಹಂ ಕೊಂಡುಪೋಪುದೆನೆ ಬೆಳಗಾಗೆ ಸಿಂಹನಂ ಸೇರಿ ಅದೇ ಪ್ರಕಾರ ಕೇಳ್ವುದು ತನಗೆ ಶರಭನ ಭಯಮುಂಟೆನೆ ಶರಭನಂ ಸೇರಿ ಕೇಳ್ವುದು ಭೇರುಂಡನ ಭಯಮುಂಟೆನೆ ಭೇರುಂಡನ ಸೇರಿದೊಡದು ರಾತ್ರಿಯೊಳು ಮರಸಿ ಒಂದು ಬೇಟೆಗಾರನೆನ್ನಂ ಕೊಲ್ವನದರಿಂದೆಚ್ಚರದಲ್ಲಿರ್ಪುದೆನೆ ಬೆಳಗಿನೊಳೆ ಬಂದು ಬೇಟೆಗಾರನಂ ಸೇರಿ ಆತಂ ಪೇಳ್ದಂತೆ ಕೇಳ್ದು ಪುರೋಗಮನಾಗಿ ನಿಂತಿತು. ಮತ್ತಮಾ ಬೆಂಟೆಗಾರಂ ನಾಯಂ ಕರೆದು ಸಿಂಗವೆಲ್ಲರ್ಪುದದಂ ತಿಳಿದು ಬಾ ಎಂದೊಡೆ ಪೋಗಿ ಸಪ್ತ ಸಮುದ್ರದ ಎಡತಿಟ್ಟಿನೊಳು ಇನಿದಾದ ಮಾವಿನಮರದಡಿಯೊಳಿರ್ಪುದಂ ಕಂಡು ಬಂದು ಚೆನ್ನನೊಡನೆ ಪೇಳ್ದೊಡೆ ಸಿದ್ಧಂ ಕೇಳಿ ಕಣ್ಣಿಗೆಣ್ಣೆಯ ಪಾವುಡೆಯಂ ಕಟ್ಟಿಕೊಂಡು ಮೇಣದೊಳೊಂದು ಪರಸುವಂ ಮಾಡಿದಟ್ಟಿ ಹಂಚಿಕಡ್ಡಿಯ ಕಾಮಂ ಬಲ ಮಗ್ಗುಲೊಳಿಟ್ಟುಕೊಂಡು ಪೋಗುತ್ತಿರೆ ಒಂದು ಚಿಕ್ಕಟದ ಹೋರಿಯು ಸಮುದ್ರಮಂ ಲಂಘಿಸುತ್ತಿರೆ ಆನೆಗಬ್ಬಳಿ ಹಂಬಂ ಕೊಂಡದಕ್ಕೆ ಮೂಗರಾಣಯನ್ನಿಕ್ಕಿ ಮೇಲೇರಿ ಪೋಗಿ ಹನ್ನೆರಡು ಯೋಜನಮಪ್ಪ ಮಾಕಂದದ ವೃಕ್ಷದ ಬುಡಮಂ ಕೋಡರಿಯಿಂ ಪೋಯ್ಯೆ ಆ ಮರಂ ಬೀಳ್ವುದು ಸಿಂಗಂ ಸತ್ತಿರ್ದುದ ಕಂಡು ಆ ಮರದ ಶಾಖೆಯೊಳಿಟ್ಟು ಪರುಷದ ಕಾಮಿಂದಲಪುರಕ್ಕೆ ತಂದು ಹೆಬ್ಬಾಗಿಲು ಪಿರಿಯಬಾಗಿಲು ಕಡೆಯದಿಪ್ಪುದು ಬಚ್ಚಲಗಿಂಡಿಯೊಳ್ದೊಂಡುಪೋಗಿ ತನ್ನ ಹಟ್ಟಿಯ ಅಟ್ಟ ಮೊದಲಾಗಿ ಹಿಡಿಯದಿಪ್ಪುದು ಸೊಡರಗೂಡೊಳಿಟ್ಟು ಬಳಲುತಿರ್ದಂಗಾತನ ಪೆಂಡತಿ ಗುಳ್ಳಕಾಯ ಭಾಗದೊಳು ಏಳು ಖಂಡುಗ ಮಜ್ಜಿಗೆಯಂ ತುಂಬಿ ಕಿರಿಗೂಡೊಳಿರಿಸಿಪ್ಪುದುಮದಂ ಕುಡಿದು ಸಾಲದೆ ಸಂಕಟಂಗೊಂಡು ಮಜ್ಜಿಗೆಯನೆಲ್ಲಿ ತಂದೆ ಎಂದು ಕೆಳಲಾಗಿ ಕುರುಬಗೇರಿಯೊಳು ಕುರುಬರ ಮನೆಯೊಳು ತಂದೆನೆಂಬುದು ತಾನೆ ಅಲ್ಲಿಗೆ ಪೋಗುವುದು ಬಳಲಿ ಪುಟ್ಟುಗಲ್ಲಲ್ಲಿ ಪುಡಿಗಲ್ಲಲ್ಲಿ ಆಡಿನ ಹಿಕ್ಕೆಯನೆಡರಿ ಬಿದ್ದು ಸಾಯ್ವುದು ಶಿವಂ ಮೆಚ್ಚಿ ಕೈಲಾಸಕ್ಕೊಯ್ದನೆಂದು. ಮತ್ತಂ ಮಾರಿಸಾಲು ಬೀರರ ಸಾಲು ಮಹಿಮರ ಸಾಲುಗಳು ಪೇಳಿದೊಡೆ ಕೇಳ್ದು ಸಭಾಜನರೆಲ್ಲಂ ಇದು ಪುಸಿ ಎಂಬುದು ಚಿಕ್ಕದೇವರಾಜಂ ಪರಿಭವಿಸಲೆಂದಿರ್ಪಿನಮಾ ಉಪ್ಪಲಿಗನ ಗುರುವಪ್ಪ ಒಕ್ಕಳ ಕೀಳಕ್ಕಪ್ಪಯ್ಯನು ಕುಂಬಳಕಾಯಿ ಸಿಂಗಪ್ಪನಂ ಮಹತ್ತಂ ಪುಸಿಯೆನ್ನಲಾಗದು ಮೊದಲು ಮಹಾವಿಷ್ಣುವಿನ ಉದರದಿಂ ಲೋಕಮಂ ಪೊರಮಡಿಸಿದುದು ಧನಂಜಯನ ಶಸ್ತ್ರಾಸ್ತ್ರ ಪ್ರಪಂಚಂ ಸಂಭವ ಪರ್ವದ ಕಥೆಯಂ ಇತಿಹಾಸ ಮೊದಲಾದವರೊಳು ಪೇಳ್ವುದಂ ನಂಬುವಂತೆ ತಿಳುವುದೆಂದರು.

ಮತ್ತಂ ಕೆಲಸಿಕುಲದವಂ ಬಂದಿಂತೆಂದಂ ತಮ್ಮ ಪೂರ್ವಪುರುಷಂ ಶಿವನ ಕಂಕುಳ ಪೊದರಿನೊಳು ಪುಟ್ಟಿ ಕುಶಲಬುದ್ಧಿಯೊಳು ಹೆಚ್ಚೆನಿಸಿಪ್ಪುದು ಆಗಳು ಸ್ತ್ರೀ ಪುರುಷರೆಲ್ಲಂ ಕರಡಿಯಂತೆ ಸರ್ವಾಂಗದೊಳು ರೋಮಂಗಳು ಪುಟ್ಟಿರ್ದುದರಿಂದುಬ್ಬೆಗಮಾಗಿ ಈಶ್ವರನಾತನಂ ಕರೆದು ಈ ರೋಮಂಗಳ್ ಪೋಪಂತೆ ಉಪಾಯಮಂ ಮಾಳ್ಪುದೆನೆ ಶಸ್ತ್ರಕರ್ತರಿಗಳಂ ನಿರ್ಮಿಸಿ ಕ್ಷೌರಮಂ ಮಾಳ್ಪಾಗಲು ಶಿಖಿಗಡ್ಡ ಮಿಸೆಗಳನುಳಿದು ಮುಖ ಕಂಠ ಬಾಹು ಉರ ಕುಕ್ಷಿ ಕಾಲ್ಗಳೆಂಬಿವುಗಳಂ ಕ್ಷೌರಂ ಮಾಳ್ಪಲ್ಲಿ ಕಕ್ಷ ಗುಹ್ಯಸ್ಥಾನಂಗಳಂ ಬಿಟ್ಟುದರಿಂ ಎಲ್ಲಾ ಬಳಿಯಲ್ಲು ರೋಮಂಗಳು ಶಿಥಿಲಮಾಗಿ ತಲೆ ಗಡ್ಡ ಮೊದಲಾದವರೊಳು ನಿಂತವು. ಅದರೊಳ್ ಸ್ತ್ರೀಜನಕ್ಕೆ ಛಾಯಾಕನ್ನೆಯು ಯಜ್ಞೇಶ್ವರನನುಗುಳ್ವಂದು ಗಡ್ಡ ಮಿಸೆಗಳುರಿದುಪೋದವು. ಅಂದಿಂದಿತ್ತ ಸ್ತ್ರೀಯರ್ಗೆ ಗಡ್ಡ ಮಿಸೆ ಚೌರಿಗಳು ಪೋಗಿ ನುಣ್ಣಗಾದವು. ಆಗಲು ಪುರುಷರ್ಗೆ ಶಿರ ಮೊದಲಾದವಂ ಕ್ಷೌರವಂ ಮಾಡಲೆಂದು ಶಿವಂ ನೇಮಿಸಿದಂ. ಆತನ ವಂಶಪರಂಪರೆಯೊಳೆ ಶೀಲವಂತೆ ಎಂಬ ರೂಪವತಿ ಪುಟ್ಟಿ ಶಿವಭಕ್ತರ್ಗೆ ಉಪಚಾರಮಂ ಮಾಡುತ್ತಿರೆ ಓರ್ವ ಜಂಗಮಂ ಶಿವಧ್ಯಾನದಿ ಬಂದು ಆಕೆಯಂ ಕಂಡು ಸೋಲ್ತು ದೈನ್ಯದಿಂ ಒಡಂಬಡಿಸಿದೊಡೆ ಭಿಕ್ಷಮನಿಡುವುದೆನಲಾಕೆ ನೀಡಿದೊಡಾ ಜಂಗಮಂ ಶಿವಾರ್ಪಣಮಸ್ತೆಂದು ಕೂಡಿದೊಡೆ ಶಿವನಾಕೆಗೆ ಅಷ್ಟೈಶ್ವರ್ಯಮನಿತ್ತು ಕೈಲಾಸಕ್ಕೆ ಕೊಂಡೊಯ್ದನಾ ನೆರೆಯವರೆಲ್ಲಂ ಪಡೆದಾಕೆಯು ಒಡೆಯರಂ ಪೋದಳೆಂದು ಪ್ರಸಿದ್ಧಿ ಮಾಡಿದರ್. ಆ ಕೆಲಸಿಗಳು ಅನೇಕ ಭೇದಮಾದರದರಿಂ ನಾವಿದನೆ ಹೆಚ್ಚೆಂದು ಪೇಳಿದಂ.

ಮತ್ತಂ ಅಗಸನಿಂತೆಂದಂ ಬ್ರಹ್ಮಾಂಡಂ ಬಲಿದು ತತ್ತಿಯಾಗಿ ಭೂಮಿಯು ಆಕಾಶಮುಂ ಎರಡು ಹೋಳಾಗಲದರೊಳೆ ಈರೇಳು ಲೋಕಮುತ್ಪತ್ತಿಯಾಯ್ತು. ಲೋಕದ ಜನಂಗಳ ಮಲಿನಮಾದ ವಸ್ತ್ರಾದಿಗಳಂ ತೊಳೆಯಲೋಸುಗ ಶಿವಂ ತನ್ನ ಮಗ್ಗುಲೊಳ್ ಮಡಿವಾಳನಂ ಪಡೆದು ನಿಯಮಿಸೆ ಶಿವನ ಕಂಥೆಯಂ ಅಂಬಿಕೆಯ ವಸ್ತ್ರಮಂ ಪೆರರ ಉಡಿಗೆಗಳಂ ಕಟ್ಟಿ ಪೊರಲಾರದೆ ಬಿದ್ದಿರ್ಪುದುಂ ಶಿವಂ ಮಾಣಿಕಶೆಟ್ಟಿಯಂ ಕರೆದು ಮಡಿವಾಳನೊಡನೆ ಪೊತ್ತು ಪೋಗೆಂಬುದು ನಾನು ಸನ್ನಿಧಾನಕ್ಕೆ ಯೋಗ್ಯ ಅಸಗಂಗಾಳಾಗಿಪ್ಪುದೆಂತೆಂದು ಕುದುರೆಯಾಕಾರದ ವಾಹನಮಂ ಕುಡಲ್ ಅದರೊಳ್ ಪೊರಿಸೆ ಪೊರಲಾರದೆ ಉಚ್ಚಸ್ವರದಿಂ ಕೂಗಲದಂ ಶಿವ ವಿರೂಪಂ ಮಾಡಿ ಕತ್ತೆಯೆಂದು ಪೆಸರಿಟ್ಟು ಕುಡೆ ಅದರೊಳ್ ಬಟ್ಟೆಯಂ ಪೊರಸಿಕೊಂಡು ಪೋಗಿ ಜಲಾಶಯದೊಳಿಳುಪಿ ಬಟ್ಟೆಗಳನೆತ್ತಿ ಒಗೆವಲ್ಲಿ ಆಕಾಶಂ ತಾಗುತ್ತಮಿರ್ಪುದು ಕೋಪಿಸಿ ಈ ಬಾನು ಆರ ಕೈಗೂ ಸಿಕ್ಕದಂತೆ ದೂರಕ್ಕೆ ಪೋಗಿಲಿ ಎಂದು ಶಾಪಮನಿಕ್ಕಿದೊಡಾಗಳೆ ಸೂಕ್ಷ್ಮರೂಪಾಗಿ ಬಹುದೂರಕ್ಕೆ ಪೋಯಿತು. ಕತ್ತೆಯನಟ್ಟಿತರಲು ಕಲ್ಲಿಲ್ಲದೆ ಕಲ್ಲೆಲ್ಲಂ ಬೆಲ್ಲಮಾಗಿರೆ ಬೆಲ್ಲಂಗಳೆಲ್ಲಂ ಕಲ್ಲಾಗಲಿ ಎಂದು ಶಪಿಸೆ ಅಕ್ಷಣಮೆ ಕಲ್ಗಳಾದವು. ಶಿವಂ ಪರೀಕ್ಷಿಸಲೆಂದು ತನ್ನ ಕಂತೆಯೊಳು ಕೂರೆಮರಿ ಸೀರ್ಗಳು ನೀವಡೀಕೃತಮಾಗೆ ನಿರ್ಮಿಸಿ ಈ ಪ್ರಾಣಿಗಳು ಒಂದೂ ಸಾಯದಂತೆ ಧಾವಲ್ಯಮಾಗಿ ಘಟ್ಟನೆಯಂ ಮಾಡಿತಪ್ಪುದೆನೆ ಕೊಂಡುಪೋಗಿ ತನ್ನ ಪೆಂಡತಿಯ ಬೆನ್ನ ಮಚ್ಚದ ಚರ್ಮಮನೆತ್ತಿ ಅವಂ ಪತ್ತಿಸೆ ಬಟ್ಟೆಯನುಬ್ಬೆಯೊಳ್ ಸಂಸ್ಕರಿಸಿ ಘಟ್ಟಿಸಿ ಆ ಪ್ರಾಣಿಗಳನೊಂದುಳಿಯದಂತೆ ಬಟ್ಟೆಗೆ ಪತ್ತಿಸಿ ತಂದೀಯಲಾ ದಂಪತಿಗಳಂ ಕೈಲಾಸಕ್ಕೊಯ್ದನ್. ಆ ವಂಶದೊಳ್ ಅನೇಕರ್ ಅತಿಕ್ರಾಂತರಾಗೆ ಬಸವಣ್ಣನ ದಿನದೊಳೆ ಮಡಿವಾಳ ಮಾಚನು ಶರಣನಾಗಿ ದೇವತರ್ಕಾಗಮವಂ ಬಲ್ಲಂಥ ಬ್ರಾಹ್ಮರೊಳೆ ವಾದಂಗೆಯ್ದು ಎಲ್ಲಾ ಮತಂಗಳಂ ಗೆಲ್ದನದರಿಂ ಮಡಿವಾಳಜಾತಿಯೇ ಲೋಕಪಾವನಮೆಂದಂ.

ವಡ್ಡಂ ಬಂದು ತನ್ನ ಕುಲವೇ ಪೆಚ್ಚೆಂದೊಡೆ ಪೂರ್ವ ಲೋಕಸೃಷ್ಟಿಯೊಳೆಲ್ಲಮಂ ಸೃಷ್ಟಿಸಿ ಕುಡ್ಡೆಯಂ ಮಾಡಲದಂ ವಿಂಗಡಿಸಲಾರುಂ ಸಮರ್ಥರಿಲ್ಲದೆ ಸಂಕರಮಾಗಿರೆ ತ್ರಿಮೂರ್ತಿಗಳ್ ಯೋಚಿಸಿ ಕಾಣದಿಪ್ಪುದು ಮಹಾವಿಷ್ಣು ಒರ್ವ ಸಮರ್ಥ ಪುರುಷನಂ ಪಡೆದುಮಿರ್ಪಿನಂ ಆತನಂ ಕರೆದು ಈ ಸೃಷ್ಟಿಯಂ ವಿಂಗಡಿಸಿ ವಡ್ಡೆಂಬುದುಮಾತಂ ಕೇಳದಿರ್ಪುದುಂ. ವಿಷ್ಣುವಿನಲ್ಲಿಗೆ ಬ್ರಹ್ಮಂ ಬಂದು ಈತಂ ವಡ್ಡನೆಂ ಪೇಳೆ ವಿಷ್ಣುವಿನಾದೇಶದಿಂದಾ ವಡ್ಡಂ ತನ್ನ ಸರ್ವಶಕ್ತಿಯಿಂ ಆ ಸೃಷ್ಟಿಯ ವಿಂಗಡಿಸಿ ಪಾತಾಳದಿಂ ತೊಡಗಿ ಕೆಳಗೇಳುಂ ಮೆಲೇಳುಂ ಲೋಕ ಭುವರ್ಲೋಕ ಮೊದಲಾದುವುಂ ಪದಿನಾಲ್ಕು ಲೋಕಂಗಳಂ ನೋಡಿ ಮಹಾಮೇರು ಮೊದಲಾದ ಪರ್ವತಂಗಳಂ ಸಪ್ತದ್ವೀಪ ಸಪ್ತ ಸಮುದ್ರಂಗಳಂ ಕಾನನಂಗಳನಲ್ಲಲ್ಲಿ ಬಡ್ಡಿ ನಿಲಿಸುವಲ್ಲಿ ಬ್ರಹ್ಮಂ ತನ್ನ ಸತ್ಯಲೊಕಮನೆಲ್ಲರಿಂ ಮೇಲೆ ಶಿಖರಮಾಗಿ ಒಡ್ಡುವುದೆಂದಂ ವಿಷ್ಣು ವೈಕುಂಠಮನೊಡ್ಡೆಂದಂ ಈಶ್ವರಂ ಕೆಲಾಸಮನೊಡ್ಡೆಂದಂ. ಇಂತು ಮೂವರು ಪೇಳೆ ಪೆಚ್ಚು ಕುಂದಪ್ಪುದೆಂದು ಒಡ್ಡದಿರಲು ಮೂವರು ವಡ್ಡನೆಂದು ಕೋಪಿಸಿ ನೀನೀ ಮೇರೆಯೊಳೆ ಕಲ್ಲು ಮಣ್ಣೊಡ್ಡಿ ಜೀವಿಸೆಂದು ಶಾಪಮನಿತ್ತರು. ಅದರಿಂದೊಡ್ಡನೇ ಶ್ರೇಷ್ಠನೆಂದು ಪೇಳ್ದಂ.

ದೊಂಬಂ ಬಂದಿಂತೆಂದಂ ಮುನ್ನ ಒಕ್ಕಲಿಗನ ದಾಯಿಗನೊರ್ವಂ ದರಿದ್ರನಾಗಿ ಪೆಣ್ಣುಮಕ್ಕಳ್ವೆರಸು ದಾಯಿಗನೊಳ್ಗೆಂಟುಗೊಂಡು ಕಾಡಿದೊಡಾತಂ ಮನೆಯಿಂ ಪೊರಮಡಿಸೆ ಬಹಿಪುಃರದೊಳ್ ನಿಂದು ಉಣಲುಡಲುಮಿಲ್ಲದೆ ನೀಚಾಹಾರಂ ಮಾಡುತ್ತಾ ವೃಕ್ಷಮೂಲದೊಳ್ ಪಡುತ್ತಮಿರ್ದು ಡಂಬಕವೇಷನಾಗಿ ಭಿಕ್ಷೆಯಂ ಮಾಡಲು ಪೋಗೆ ದಾಯಿಗಂ ಊರಂ ಪುಗಲೀಸದೆ ಅಟ್ಟುವುದು. ಊರ ಮುಂದಣ್ಗೆ ಬಂದು ದುಃಖಿಸುತ್ತಿರೆ ಶಿವಂ ಪೋಗುತ್ತಂ ಕಂಡು ಅವನ ಮಗಳಪ್ಪ ಚೆನ್ನೆಯ ರೂಪಿಂಗೆ ಸೋಲ್ತು ಸಮೀಪಕ್ಕೆ ಬಂದು ಅಲ್ಲಿ ಗುರುಗಳನೊಡ್ಡಿ ಆಕೆಯೊಳ್ ಕೂಡಲ್ ಅವಳ್ಗೆ ಮಕ್ಕಳು ಪುಟ್ಟಿ ಅವರ್ಗೆ ಲಾಗು ಲಂಘನ ಗಣೆಯೇರುವ ಮೊದಲಾದ ವಿದ್ಯೆಗಳೆಲ್ಲಮಂ ಕಲಿಸಿ ನೀನು ದಾಯಿಗದಿಂ ಜೀವಿಸೆಂದು ನೇಮಿಸಿ ಪೋಗೆ ಆ ವಂಶದೊಳು ಅನೇಕ ದೊಂಬರು ಪುಟ್ಟಿ ವಿದ್ಯೆಗಳಂ ತೋರಿಸಿ ಮಾನ್ಯಂಬಟ್ಟಿರ್ಪಿನ ಮತ್ತೊಂದು ಪಟ್ಟಣ ದೂರ ಮುಂದಣ ಬಯಲೊಳ್ಗುರಳನಿಕ್ಕಿರ್ಪುದು ಆ ಪಟ್ಟಣದ ರಾಜಗುರುವಪ್ಪ ಜಂಗಮಂ ಬಂದು ದೊಂಬರ ಚೆನ್ನಿಯಂ ನೋಡಿ ಆಸಕ್ತನಾಗಿ ಬೇಡುವುದು. ನೀನೀ ವೇಷಮಂ ಬಿಟ್ಟು ದೊಂಬನಾಗಿ ಕತ್ತೆಯಂ ಕಾಯ್ದುಕೊಂಡಿಪ್ಪುದೆನೆ ಚೆನ್ನಿ ಪೇಳ್ದಂತೆ ಕಾಯ್ದುಕೊಂಡಲ್ಲೆಯಿರಲು ರಾಜನು ತನ್ನ ಗುರುವನರಸಿ ಕಾಣದೆ ಡೊಂಬರ ಗುರುಗಳ ಸಮೀಪದೊಳು ಬಿದ್ದಿರ್ದ ಕಾವಿವಸ್ತ್ರ ಲಿಂಗರುದ್ರಾಕ್ಷಿಗಳಂ ಕಂಡು ಅರಸಂ ತಾನೆ ಬಂದು ಗುರುಭಕ್ತಿಪೂರ್ವಕಂ ವಂದಿಸಿ ಪರಕೆಯಂ ಬೇಡುವುದು. ಆತನೆಂದನೆನಗೆ ಸಾಮರ್ಥ್ಯಮಿಲ್ಲ ಚೆನ್ನಿಯಂ ಕೇಳೆನೆ ಪೋಗಿ ಚೆನ್ನಿಗೆ ಸಾಷ್ಟಾಂಗಪ್ರಣತನಾಗೆ ಆ ಗುರುಭಕ್ತಿಗೆ ಶಿವಂ ಮೆಚ್ಚಿ ಅನಿಬರಂ ಕೈಲಾಸಕ್ಕೊಯ್ದನದರಿಂ ದೊಂಬಕುಲವೆ ದೊಡ್ಡದೆಂದಂ.

ಪೊಲೆಯಂ ಉಮೆಯ ಮೊಲೆಯೊಳು ಕಡೆಯೊಳ್ ಪುಟ್ಟಿ ಕುಲದೊಳಗ್ಗಳನಾಗಿ ಶಿವನ ಬಲದ ಭುಜವಾಗಿಯು ನಿಜಾನ್ವಯದೊಳೆ ಋಷಿಗಳ್ಗೆ ಸ್ತುತ್ಯನೆನಿಸಿ ಆತನ ದುಹಿತೃಸಂತಾನದೊಳೆ ಋಷಿಗಳು ಅನೇಕವಾಗಿ ಹುಟ್ಟಿ ಬಸವಣ್ಣನ ಸೃಷ್ಟಿಯೊಳು ಹೊನ್ನನೆಂಬೊನತಿಶ್ರೇಷ್ಠನಾದುದರಿಂ ಬಣ್ಣದೊಳ್ ಪೊಲೆಯನೆ ದೊಡ್ಡವನೆಂದಂ.

ಮಾದಿಗಂ ಭೂಮಿಗೆ ಏಳುದಿನಕ್ಕೆ ಪಿರಿಯನಾಗಿ ಪುಟ್ಟಿದುದರಿಂ ತಾನುಂಡ ಎಂಜಲನೆಲ್ಲರ್ಗಂ ಯೋಗ್ಯಂ ಮಾಡೆ ವಶಿಷ್ಟಋಷಿಗೆ ಅರುಂಧತಿಯಂ ಕೊಟ್ಟನದಲ್ಲದೆ ಅಜಮಿಳನ ಸಂತತಿ ಕೋಮಟಿಗನಾಗಿ ದಾಯಿಗನಾಗಿ ಗಂಗಾಧರಂಗೆ ಗಜಚರ್ಮ ಪಾದುಕಮಂ ಕೊಟ್ಟುದರಿಂ ಮಾತಂಗನೆಂಬ ಪೆಸರಾಯ್ತು. ಅದಲ್ಲದೆ ಭಾಗವತದೊಳೆ ಮಾದಿಗವೇಷ ಪುರಾಣದೊಳ್ ಸವಿಸ್ತರಂ ಪೇಳ್ವುದರಿಂ ತಾನೆ ಪೆಚ್ಚೆಂದು ಪೇಳಿದಂ.

ಇಂತು ಅನೇಕ ಕುಲ ಜಾತಿ ರೂಪು ಬಲೈಶ್ವರ್ಯ ದೇವ ಗುರು ಮೊದಲಾದವರೊಳು ಅತ್ಯಂತ ಮೋಹಮಾಗಿ ಕುಮತಿ ಕುಶ್ರುತಿಜ್ಞಾನಂ ಪುಟ್ಟಿ ತನ್ನ ದೇಶ ಕುಲ ಮೊದಲಾದವು ಶ್ರೇಷ್ಠವೆಂಬ ನಂಬುಗೆಯಿಂದನೇಕ ದೃಷ್ಟಂಗಳಂ ತೋರಿ ಶಾಸ್ತ್ರಮಂ ಕಲ್ಪಿಸಿರ್ಪರ್ ಅದರಿಂದುಪಾದೇಯಮೆಂಬರಲ್ಲದೆ ಹೇಯಮೆಂದು ಬಿಡುವುದರಲ್ಲಮದರಿಂದದ್ಭುತಂಗಳಂ ಪೇಳಿ ಜನರಂ ಮೆಚ್ಚಿಸುವರೆಂದು ತೋಟದ ದೇವರಾಜರಸಂ ವಿದ್ವಾಂಸರೋ ಪ್ರಸಂಗಿಸೆ ಕೆಲಂಬರೆಂದರ್. ತಮ್ಮ ಬಡತನಕ್ಕೋಸ್ಕರ ಧನಿಕರೊಳಿಲ್ಗದದ್ಭುತಂಗಳಂ ಪೇಳಿ ಲಾಭಮಂ ಪಡೆವರೆಂಬುದು ಪುಣ್ಯವಿಲ್ಲದಂಗೇನಾದರಲಭ್ಯಮಿಲ್ಲೆಂದಿಂತೆಂದಂ.

ಒಬ್ಬ ಬ್ರಾಹ್ಮಣನತಿದರಿದ್ರನಾಗಿ ಒಂದು ದೇವತೆಯಂ ಪ್ರಾರ್ಥಿಸಲಾತನ ಪುಣ್ಯಮಂ ನೋಡಲೆಂದು ಒಂದು ಕುಂಬಳಕಾಯೊಳ್ ಹಣಮಂ ತುಂಬಿ ಈ ಕಾಯಂ ಕೊಂಡು ಪೋಗಿ ನಿನ್ನ ಮನೆಯೊಳುಂಬುದೆನೆ ಆಕಾಯಂ ಕೊಂಡು ಬರುತ್ತ ಅಂಗಡಿಯಂ ಕಂಡು ಕಾಯನೆರಡು ಕಾಸಿಂಗೆ ಮಾರಿ ಹುರುಳಿಯಂ ಕೊಂಡು ಕುರುಕುತ್ತಂ ಮನೆಗೆ ಬರಲ್ ಮತ್ತೊಂದು ದಿನಂ ಬ್ರಾಹ್ಮಣಂ ಪೋಪಮಾರ್ಗದೊಳೆ ಒಂದು ಕೊಪ್ಪರಿಗೆ ದ್ರವ್ಯವನ್ನಿಡಲಾತನಾ ಪ್ರದೇಶದೊಳೆ ಕುರುಡರು ಮಾರ್ಗದೊಳೆಂತು ನಡೆವರೆಂದು ಕಣ್ಣಿಗೆ ಪಾವಡೆಯಂ ಕಟ್ಟಿ ಪೋಗಿ ದ್ರವ್ಯಮಂ ಕಳಿದು ಪೋದಂ.

ಒಬ್ಬ ಶೈವ ಗೌಂಡನ ಪೆಂಡತಿ ಓದು ಕೆಳುತಿರ್ಪಾಗಳ್ ವೃದ್ಧಿಪ್ರಾಪ್ತ ಋಷಿಗಳ್ಗೆ ಮೆಣಸಿನಕಾಯ ಮುದ್ದೆಯಂ ಕೊಟ್ಟು ಪಂಚಾಶ್ಚರ್ಯಮಂ ಪಡೆದಳೆಂದು ಕೇಳಿ ತನ್ನ ಗುರುವಪ್ಪ ಜಂಗಮಂಗೆ ಮೆಣಸಿನಕಾಯನರೆದು ಬಲಾತ್ಕಾರದಿಂ ಕೊಟ್ಟು ಪರಸಿಮೆನೆ ಒಡಲೊಳ್ ಉರಿ ಹತ್ತಿ ಕ್ಲೇಶದಿಂದೆನ್ನ ಪೊಟ್ಟೆ ಉರಿದಂತೆ ನಿನ್ನ ಮನೆಯು ಉರಿಯಲೆಂದು ಬಾವಿಯ ನೀರೊಳ್ ನಿಂದು ದುಃಖಂಬಟ್ಟು ಪೋದಂ.

ಒಬ್ಬ ವರ್ತಕನಂ ಕಾಂಚಿದೇಶಮನೆಯ್ದಿ ರತ್ನ ವ್ಯಾಪಾರದಿಂ ಅನೇಕ ಲಾಭಂಗೊಂಡು ಬಪ್ಪನಂ ಪಾಶಾಕಳ್ಳರು ಕಂಡು ವ್ಯಾಪಾರಿಗರೆಂದಾತನೊಡನೆ ಬರುತ್ತ ಮಾರ್ಗದೊಳು ಶಕ್ಯಮಿಲ್ಲದೆ ಆತಂ ತನ್ನ ಹಟ್ಟಿಯಂ ಪುಗುವಲ್ಲಿ ಕಂಠಕ್ಕೆ ಪಾಶಮನಿಕ್ಕಿ ಚೀಲದೊಳಿಟ್ಟು ಅಲ್ಲಿಯೇ ತಳುಗೆ ಆತನ ಪೆಂಡತಿ ತನ್ನ ಗಂಡನ ಧ್ವನಿಯಂ ಪೊರಗೆ ಕೇಳ್ದುದರಿಂ ಚಿಂತಿಸಿ ಪುರಜನರಿಂದವರಂ ಶೋಧಿಸಲು ಚೀಲದೊಳು ಜೀವವೆರಸಿರ್ದ ಶೆಟ್ಟಿಯಂ ಕಂಠಪಾಶಮಂ ತೊಳಗಿಸಿ ಕಳ್ಳರ್ಗೆ ಆಜ್ಞೆಯಂ ಮಾಡಿದರ್.

ಒಬ್ಬ ವೇಷಧಾರಿ ಮುರಾರಿರಾಯನಂ ಕಾಯಲತಾಂ ಸಡ್ಡೆಮಾಡದಿಪ್ಪುದುಂ ಮುರಾರಿರಾಯ ಸತ್ತೆನಂದು ಬೊಬ್ಬೆಯಂ ರಾಜ್ಯದೊಳ್ ಪುಟ್ಟಿಸಲವನಂ ಕರೆಯಿಸಿ ಮರ್ಯಾದೆಯಂ ಮಾಡಿ ಅಂತಃಪುರಮಂ ಪುಗಲಪ್ಪಣೆಗುಡೆ ಮುರಾರಿರಾಯನ ವೇಷಮಂ ಧರಿಸಿ ಅಂತಃಪುರಮಂ ಪುಗೆ ಆತನರಸಿಯು ತನ್ನ ಗಂಡನೆಂದುಪಚರಿಸಿ ಮಂಚಮನೆಯ್ದಿಸಿ ವೀಳ್ಯವನಿಟ್ಟು ಎಲೆಯಂ ಮಡಿಸಿ ಕೊಡಲ್ ಬರಲೆದ್ದು ನಾನುನಿನ್ನ ಮಗನೆಂದು ಪಾದಕ್ಕೆರಗಿ ಬರೆ ರಾಯಂ ಹೇರಳದ್ರವ್ಯಮಂ ಕೊಟ್ಟು ಕಳುಪಿದಂ.

ಹೂಲಿಕುಂಟೆ ತಮ್ಮಣ್ಣಗೌಂಡನೆಂಬಂ ಪುಲಿರೂಪಿನ ವಿದ್ಯಮಂ ಕಲ್ತು ಅರಣ್ಯದೊಳ್ ಚರಿಸುತ್ತಿರೆ ಪರಂಗಿಯು ಕಂಡು ಗುಂಡಿನಿಂ ಪೊಡೆದೊಡೆ ತೊಡೆಯನುಚ್ಚಿ ಪೋದುದರಿಂ ರಂಧ್ರೋರುವಾಗಿರ್ದು ತನ್ನ ಮಗಳ್ಳಾ ವಿದ್ಯಾಮಂ ಕಲಿಸಿರ್ಪಿನಮಾಕೆಯ ಗಂಡಂ ತನ್ನೂರಿಗೆ ಕರೆದುಕೊಂಡು ಬರಿವ ಮಾರ್ಗದ ಗಿಡದೊಳೆ ನೀನು ಹುಲಿಯ ರೂಪಾಗುತ್ತಿದ್ದಿಯಷ್ಟೆ ನಾನು ನೋಡಬೇಕೆನೆ ಆತನ ಕೈಯೊಳು ಮೂರು ಕಲ್ಲಂ ಮಂತ್ರಿಸಿ ಕೊಟ್ಟು ನಾನು ಪುಲಿಯಾಗಿ ಬಂದು ಮೇಲ್ವಾಯ್ವಾಗಲೀ ಕಲ್ಲು ಗಳಂ ಎನ್ನ ಮೇಲಿಟ್ಟೊಡಾ ರೂಪಳಿವುದೆಂದು ಪೇಳಿ ಪಳುವಿನ ಮರಗೆಯ್ದಿ ವ್ಯಾಘ್ರರೂಪಿನಿಂ ಬಂದು ಮೇಲ್ವಾಯ್ವುದುಂ ಹೆದರಿ ಕಲ್ಲುಗಳಂ ಬಿಸುಟು ಬೀಳ್ವುದುಂ ಆತನಂ ಬಗೆದು ತಿಂದು ಆ ಗಿಡದೊಳೆ ಇಪ್ಪುದುಂ. ಕೆಲವಾನು ದಿವಸದಿಂದಾಕೆಯ ತಂದೆ ತಿಳಿದು ಬಂದಾ ಪುಲಿಯಂ ಬರಿಸಿ ಆ ರೂಪಂ ವಿಸರ್ಜಿಸಿ ಗೃಹಕ್ಕೆಯ್ದೆಂಬುದು ಗಂಡನ ತಿಂದಪಕೀರ್ತಿಯಂ ಪೊತ್ತಿರಲಾರೆನೆಂದಾ ರೂಪಿನೊಳೆ ಕಾಲಂಗಂಡಳದರಿಂ ದುಷ್ಟ ವಿದ್ಯಮಂ ಕಲಿಯಲಾಗದೆಂದರು. ಆ ತಮ್ಮಣ್ಣಂ ಮಂತ್ರವಾದಿಯಾಗಿರ್ದು ಊರ ಮಾರ್ಗದ ದೇವಸ್ಥಾನದ ಹೊಸ್ತಿಲ ಮೇಲೆ ಮೂರು ದುಡ್ಡನ್ನು ಮಂತ್ರಿಸಿ ಮಡಗಿದಾನೆ, ಮಾರ್ಗಿಗರು ಅಂಗಡಿಗೊಯ್ದು ಒಪ್ಪತ್ತಿನ ಗ್ರಾಸಮಂ ಮಾಡಲಾ ದುಡ್ಡಲ್ಲೆಯಿದಾವೆ ಆತನಿಗೆ ಒಕ್ಕಲೊಂದಕ್ಕೆ ಒಂದು ಕೊಳಗ ಧಾನ್ಯಮಂ ಕೊಡುವರು, ತಪ್ಪಿದೊಡೆ ಬೆಂಡಿನಲ್ಲಿ ಪಕ್ಷಿಯ ಮಾಡಿ ಕಳ್ಳರಿಂ ತರಿಸುತ್ತಿರ್ದನಂತೆ ಒಬ್ಬ ಬ್ರಾಹ್ಮಣನು ತಾ ಕೊಳ್ಳುವಂಥಾ ವಸ್ತುವಂ ಭೋಗಿಸುವಲ್ಲಿ ಮೊದಲು ವಿಷ್ಣುವಿಂಗರ್ಪಿಸಿದಲ್ಲದೆ ಕೊಳಲಾಗದೆಂದು ವ್ರತಮಂ ಧರಿಸಿರ್ದು ಋತುಶಾಂತಿಯಲ್ಲಿ ಆ ಹೆಣ್ಣಿನ ನಾಣುಪ್ರದೇಶಮಂ ಚಿವುಟಿ ಅರ್ಪಿಸಿದೊಡಾಕೆ ಅತ್ಯಂತ ವೇದನೆಯಿಂ ದುಃಖಪಟ್ಟಳ್

ಮತ್ತೊಬ್ಬ ಬ್ರಾಹ್ಮಣ ರಾಮಾಯಣಮನೋದುತ್ತ ಎದೆ ಮೇಲೆ ಪುಸ್ತಕಮನಿಟ್ಟು ದಿನಂಪ್ರತಿ ನಿದ್ರೆಗೆಯ್ಯುತ್ತಿರ್ಪುದುಂ ಆತನ ಪೆಂಡತಿ ಮಗು ರಾತ್ರಿಯೊಳು ನಿದ್ರೆಗೆಯ್ಯದೆ ಚಂಡಿ ಮಾಡುತ್ತಮಿರೆ ಗಂಡನನೆಬ್ಬಿಸಿ ರಾಮಾಯಣದ ಪುಸ್ತಕವನ್ನು ಮಗುವಿನ ಎದೆ ಮೇಲೆ ಇರಿಸೆಂದು ಕಾಡಿದೊಡೆ ಆಗದೆಂಬುದು ನಿಮಗಾದರಾದೀತು ಮಗುವಿಗೆ ಆಗದೆ ಎಂದು ಆ ಪುಸ್ತಕಮಂ ಮಗುವಿನೆದೆ ಮೇಲಿಟ್ಟು ಮೇಲೊಂದು ಶಿಲೆಯ[ನಿಡೆ] ಮಗು ಸತ್ತಿತು.

ಒಬ್ಬ ಬ್ರಾಹ್ಮಣಂ ನಾಯಕುನ್ನಿಯಂ ಕೊಂದೊಡೆ ಈತಂಗಾವುದು ಪ್ರಾಯಶ್ಚಿತ್ತಮೆನೆ ವಿದ್ವಾಂಸರೆಲ್ಲರು ಕೂಡಿ ಈತಂಗೆ ದೇವಸ್ಥಾನದ ಪಾರುಪತ್ಯಮಂ ಕೊಡಲೆಂಬುದು.

ವೃತ್ತ || ಪೌರೋಹಿತ್ಯಂ ರಜನಿಚರಿತಂ ಗ್ರಾಮಣಿತ್ವಂ ನಿಯೋಗಂ”
ಮಠಾಪತ್ಯಂ ತ್ವನೃತವಚಸ್ಸಾಕ್ಷಿವಾದಂ ಪರಾನ್ನಮ್
ಧರ್ಮದ್ವೇಷೀ ಖಲಜನರತಿಂ ದುರ್ಮತಿಂ ಮಂದಬುದ್ಧಿಂ
ಮಾ ಭೂದೇವಂ ಮಮಜಗದಹಂ ಜನ್ಮ ಜನ್ಮಾಂತರೇsಪಿ ||

ಎಂದು ಯಾತ್ರೆ ಪೋದನು. ಮತ್ತೊಬ್ಬ ಬ್ರಾಹ್ಮಣನ ಪೆಂಡತಿಯು ಸಿದ್ಧಿವಾಲನನಿಟ್ಟುಕೊಂಡಿದ್ದು ಮೂರು ತಿಂಗಳು ಗರ್ಭಮಾದಾಕೆಯಂ ಶುದ್ಧಮಂ ಮಾಡಿ ತೆಗೆದುಕೊಂಡು ಪೋಗುವಾಗಿ ನಿಷಿಧಿ ದುಗ್ಗಪ್ಪಯ್ಯನೆಂಬ ಪೆಸರಾಗೆ ಬ್ರಾಹ್ಮಣ ಶ್ರೇಷ್ಠನಾಗಿ ಐನಾರು ಜನ ಬ್ರಾಹ್ಮರಿಗೆ ಸಮಾರಾಧನೆ ಮಾಡಿಸುವಲ್ಲಿ ನಾಯಿಗಳು ಬಂದು ಎಲ್ಲಾ ಎಡೆಯಂ ಮೆಟ್ಟಿ ಪೋಗೆ ಬ್ರಾಹ್ಮರೆಲ್ಲರು ಯೋಚಿಸಿ ಅವರ ಹೆಜ್ಜೆ ತುಂಬಿ ಘೃತಮಂ ಬಿಡಿಸಿ ಭೋಜನಮಂ ಮಾಡಿದರ್.

ಮತ್ತೊಂದು ದಿನಂ ಪಾಯಸದ ಕೊಪರಿಕೆಯೊಳು ನಾಯಿ ಬಿದ್ದು ಸಾಯ್ವುದು ಕೇಳಿ ಕೊತ್ತಿ ಬಿದ್ದಿತೆಂದು ತೆಗೆವುದೆನೆ ಕೊತ್ತಿ ಬಿದ್ದರಾದೀತೆ ಎನೆ ಎಲಿ ಬಿದ್ದಿತ್ತೆಂದು ತೆಗೆವುದೆನೆ ಎಲಿಯಾದರಾದೀತೆ ಎನೆ ಪಲ್ಲಿ ಬಿದ್ದಿತ್ತೆಂದು ತೆಗೆವುದೆನೆ ಕಸಂ ಬಿದ್ದಿತ್ತೆಂದು ತೆಗೆದುಬಿಟ್ಟು ಭುಂಜಿಸಿದರ್.

ಅಪ್ಪಾಜಿದೀಕ್ಷಿತರ ಭಾರ್ಯೆ ಒಬ್ಬ ತುರುಕನನಿಟ್ಟುಕೊಂಡು ಮಗನಾಗಲಾತಂ ತುರುಕನೆಯಾಗಿ ಖಾನಖಾನನೆಂಬ ಪೆಸರಾಗೆ ಉತ್ತರ ದೇಶದೊಳು ಕೆಲವು ರಾಜ್ಯಮನಾಳಿ ಖಾನಖಾನಹಳಿಯೆಂಬ ಪುರಮಂ ಕಟ್ಟಿಸಿ ಬ್ರಾಹ್ಮರಿಗೆ ಆ ಗ್ರಾಮಮಂ ಕೊಟ್ಟು ಪ್ರಸಿದ್ಧಿವಡೆದಂ.

ತಿರಿಚಿನಾಪಳ್ಳಿಯಲ್ಲಿ ಸೋಮಯಾಜಿಗಳ ಹೆಂಡತಿಯ ಮೇಲೆ ಹಾದರದ ಮಾತಂ ಜನರಾಡುತ್ತಿರೆ ಸೊಮಯಾಜಿಗಳು ಅರಸಂ ಕೂರ್ಪುದರಿಂದ ಅರಸಂಗೆ ಪೇಳಿ ತನ್ನ ಪೆಂಡತಿಯ ಹಾದರದ ಮಾತನಾರು ಆಡದಂತೆ ಬಿಗಿ ಹತ್ತಿಸಿ ಕೊಡಬೇಕೆಂದು ಪುರದೊಳು ಡಂಗುರಮಂ ಪೊಯ್ಸಿ ರಾಜ್ಯದೊಳು ಆರು ಆಡದಂತೆ ಸಾರಿಸಿದಂ.

ಕೇರಳದೇಶದೊಳೊಬ್ಬ ಬ್ರಾಹ್ಮಣನ ಮಗಳು ರುತುವಾಗೆ ದೇವತಾಪ್ರೀತ್ಯರ್ಥಮಾಗಿ ಮೊದಲ ವಿವಸ ಯೋಗ್ಯ ಬ್ರಾಹ್ಮಣಂಗೆ ಸಮರ್ಪಿಸೆ ಕೊಡುವಲ್ಲಿ ”ಅಹಂ ವಿಷ್ಣು ಭಾವಯಾಗಿ ತ್ವಂ ಸತ್ಯಭಾಮಾ ಭಾವದ ಭೂಮಿ” ಎದು ಕೂಡೆಂಬಾಗಲಾಕೆ ಗಂಡಂ ದೊಣ್ಣೆಯನ್ನೆತ್ತಿ ”ಅಹಂ ಮೃತ್ಯುಭಾವ ಭೂಮಿ” ಎಂದು ಬಗ್ಗಿ ಪೊಡೆವಾಗಲಾತನ ರೇತಸ್ಸು ಕಣ್ಣಂ ಚುಚ್ಚಿ ದೃಷ್ಟಿ ಮಂದವಾಯಿತು.

ತಾತಾಚಾಯಂ ತನ್ನ ಗೃಹ ಛಿದ್ರಮಂ ದೊರೆಗರಿಕೆಯಂ ಮಾಡಿದೊಡೊಳ್ಳಿತೆನಲು ಕಾಯ್ದು ಕೊಂಡಿರ್ದು ಮನೆಗೆ ಬರುವಲ್ಲಿ ಹಾಸ್ಯಗಾರನಂ ಕರೆದು ದೊರೆಗಳ ಸಮಯವರಿತು ನಮ್ಮ ಮನೆ ವಿಚಾರಕ್ಕೇನೆಂದು ಅಪ್ಪಣೆಯಾದ ಪ್ರಕಾರ ಮಾಳ್ಪುದೆಂದು ಮನೆಗೆ ಬರೆ ಆ ದೊರೆಯು ಬರುವಲ್ಲಿ ಬಾಗಿಲ ಮೇಗಲ ಪೊಸ್ತಲು ಪೊಡೆದು ರಕ್ತಪ್ರವಾಹಮಾಗಿ ಕಣ್ಣೀರಿಂ ಸಂಕಟಪಡುವಲ್ಲಿ ಸ್ವಾಮಿ ತಾತಾಚಾರ್ಯನ ಮನೆ ವಿಚಾರ ಏನೆಂದು ಕೇಳುತ್ತಮಿರೆ ಕೋಪಿಸಿ ತಾತಾಚಾರ್ಯನ ಮನೆಗೆ ಬೆಂಕಿ ಹಾಕೆನಲಾಕ್ಷಣವೆ ಬಂದು ಆತನ ಮನೆಗೆ ಬೆಂಕಿ ಹಾಕಿ ಸುಟ್ಟುಬಿಟ್ಟನು.

ತಂಜಾವೂರು ಪ್ರತಾಪಸಿಂಗಂ ಬಾಲ್ಯದೊಳೆ ತಂದೆ ತೀರಿದೊಡೆ ದಕ್ಷರಿಲ್ಲದೆ ಒಬ್ಬ ಪಾರ್ವಂ ಅಧಿಕಾರಿಯಾಗಿ ಪಾಪಕ್ಕಂಜದೆ ಅರಮನೆಯವರಿಗೆಲ್ಲ ಆಹ್ವಾನಂಗಳಂ ಮಾಡಿ ಅಗ್ರಹಾರಮಾನ್ಯಂಗಳೆಲ್ಲಮಂ ಕಿತ್ತು ಸಂಬಳಗಳಂ ಕೊಡದೆ ಉಪದ್ರವಂ ಮಾಡುತ್ತಿರೆ ಒಂದೆರಡು ವರ್ಷಮಾ ಕುಮಾರಂ ತನಗೆ ಮದುವೆಯಿಲ್ಲಾ ತಾಯಿ ಒಬ್ಬಳಿದಾಳೆ ಪೋದೊಡೆನ್ನ ಜೀವಂ ಪೋಗಲಿ ಎಂದು ಅಧಿಕಾರಿಯಂ ಬರಿಸಿ ತನ್ನ ಶರೀರಕ್ಕೆ ಸ್ವಸ್ಥಮಿಲ್ಲೆಂದುಪಾಯಮಂ ಬಂದಧಿಕಾರಿಯೊಳು ಮಾತಿಂಗೆ ಮಾತಂ ತೆಗೆದು ಆತನ ಶಿರಚ್ಛೇದಮಂ ಮಾಡಿ ರಾಜ್ಯಮನಾಳಿದ. ಕೆಲವು ದಿವಸ ಆ ಬ್ರಾಹ್ಮಣನ ಮಗಂ ಒಂದು ಗಡಿ ಬದುಕು ಮಡಿಕೊಂಡು ಪ್ರಜೆಗಳ್ಗಂ ಬ್ರಾಹ್ಮಣರ್ಗಂ ಅತಿಉಪದ್ರಂ ಮಾಡುತ್ತಿರ್ದುಂ ಕೆಲವು ದಿವಸದಿಂ ರೋಗದಿಂ ನವೆದು ಅಂತ್ಯದೊಳು ಬ್ರಾಹ್ಮಣರೆಲ್ಲರಂ ಬರಿಸಿ ದೇಹಮುಳಿವುದಿಲ್ಲ ನಾನು ಮಾಡಿದ ಪಾಪಂ ಪೋಪಂತೆ ನಾನುಂ ಮಾಡಿ ಅಧೋಗತಿಯಾಗದಂತು ಮಾಳ್ಪುದೆನೆ ಅದರೊಳ್ ದುಷ್ಟಬ್ರಾಹ್ಮಣರುಂ ಊರ್ಧ್ವಗತಿಯಂ ಮಾಳ್ಪೆವೆಂದು ಭಗಿನಿಗೂಟಮಂ ತಂದು ಆತನ ಗುದದ್ವಾರಕ್ಕೆ ಪೆಟ್ಟಿ ಕೊಂದರ್.