ಶ್ರೀ ರಾಜಾವಲಿಯ ಕಥಾ
ಸಾರದೊಳುಂ ತೆಗೆದು ಜಾತಿನಿರ್ಣಯಮೆಂದೀ
ಧಾರುಣಿಯ ಬುಧರಿಗರಿವಂ
ತೋರಂತಿದ ಪೇಳ್ವೆ ಜೈನೃಋಷಿಗಳ ಮತದಿಂ

ಅದೆಂತೆಂದೊಡೀ ಹುಂಡಾವಸರ್ಪಿಣಿಕಾಲದ ಮೊದಲೊಳ್ ತ್ರಿವಿಧಭೋಗಭೂಮಿ ಯಾಗಿರ್ದು ಕಡೆಯೊಳಾ ಆರ್ಯವಂಶದೊಳ್ ಷೊಡಶ ಮನುಗಳ್ ಪುಟ್ಟಿದರವರೊಳ್ ಆದಿಬ್ರಹ್ಮ ಅಂತ್ಯಬ್ರಹ್ಮ ರುದಿಸಿದರವರಿಂ ಕರ್ಮಭೂಮಿಸ್ಥಿತಿಯನುಪದೇಶಂಗೆಯ್ದು ಕೌಶಲಾದಿ ದೇಶಂಗಳಂ ಸಾಕೇತಾದಿ ಪುರಂಗಳಂ ನಿರ್ಮಿಸಿ ಪ್ರಜಾಜೀವನೋಪಾಯಮಪ್ಪ ಅಸಿ ಮಸಿ ಕೃಷಿ ವಾಣಿಜ್ಯ ಶಿಲ್ಪ ಪಾಶುಪಾಲ್ಯಮೆಂಬ ಷಟ್ಕರ್ಮಮಂ ಬ್ರಾಹ್ಮಣಾದಿ ವರ್ಣಾಶ್ರಮಮಂ ಕುಲಭೇದಮಂ ಕುಲಚರ್ಯಮಂ ಇಕ್ಷ್ವಾಕು ಮೊದಲಾದ ವಂಶಂಗಳಂ ಅಕ್ಷರ ಲೇಖ್ಯ ಗಣಿತಾದಿ ಚೌಷಷ್ಟಿಕಲೆಗಳಂ ದಾನ ಪೂಜೆ ಶೀಲೋಪವಾಸಮೆಂಬ ಗೃಹಸ್ಥಧರ್ಮ ಉತ್ತಮಕ್ಷಮಾದಿ ಯತಿಧರ್ಮಮನುಪದೇಶಂಗಯ್ದು ತ್ರಿಲೋಕ ಸ್ವಾಮಿಯಾಗಿ ಆದಿಬ್ರಹ್ಮಂ ಕೇವಲಜ್ಞಾನಸ್ವಭಾವದಿಂ ದ್ವಾದಶಾಂಗವೇದ ಚತುರ್ದಶ ಪೂರ್ವೆ ಪ್ರಕೀರ್ಣಕ ಚತುರನುಯೋಗ ಮಹಾವೇದಶಾಸ್ತ್ರಂಗಳಂ ಪೇಳಿ ಸಮಸ್ತ ಚರಾಚರ ವಿವಿಧ ದ್ರವ್ಯಗುಣ ಪರ್ಯಾಯಮಂ ಭೂತ ಭವಿಷ್ಯದ್ವರ್ತಮಾನ ತ್ರಿಕಾಲ ಗೋಚರಮಪ್ಪ ಸರ್ವಜ್ಞನಾದುದರಿಂ ದಿವ್ಯಭಾಷಾಸ್ವಭಾವದಿಂ ದ್ವಾದಶಾಂಗ ವೇದ ಚತುರ್ದಶ ಪೂರ್ವೆ ಪ್ರಕೀರ್ಣಕ ಚತುರನುಯೋಗ ವೇದಶಾಸ್ತ್ರಂಗಳಂ ಪೇಳಿ ಬ್ರಹ್ಮ ವಿಷ್ಣ ಮಹೇಶ್ವರ ನಾಮಂ ಮೊದಲಾದ ಸಾಸಿರದೆಂಟು ನಾಮಮಂ ತಾಳ್ದು ಕೈಲಾಸಗಿರಿಯೊಳೆ ಸಕಲ ಕರ್ಮಂಗಳಂ ನಿರ್ಮೂಲನಂತೆಯ್ದು ತ್ರಿಲೋಕಾಗ್ರಶೀಖರಶೇಖರನಾಗಿ ಮುಕ್ತಿಲಕ್ಷ್ಮಿಯಂ ಪಡೆದನಾ ವಂಶದೊಳ್ ಅಂತ್ಯಬ್ರಹ್ಮನಪ್ಪ ಭರತೇಶನ ಕುಮಾರಂ ಮರೀಚಿಯೆಂಬೊಂ ಸ್ವಯಂಬುದ್ಧನಾಗಿ ಜಾತಿವರ್ಗ ಪುಟ್ಟಿ ಕಪಿಲಸಿದ್ಧಾಂತಮಂ ಮಾಡಿದಂ

ಆ ಇಕ್ಷ್ವಾಕುವಂಶ ಚಂದ್ರವಂಶ ಸೂರ್ಯವಂಶ ಕುರು ಹರಿ ಉಗ್ರ ನಾತವಂಶಗಳೊಳೊಂದು ಕೋಟಾಕೋಟಿ ಸಾಗರೋಪಮ ಕಾಲಂ ನಾಲ್ವತ್ತಿಚ್ಛಾಸಿರ ವರ್ಷಂ ಕುಂದಿತದರೊಳ್ ಚತುರ್ವಿಂಶತಿ ತೀರ್ಥಂಕರರ್ ದ್ವಾದಶಮಹಾಪೂರ್ಣ ಚಕ್ರೇಶ್ವರರುಂ ನವಬಲ ವಾಸುದೇವ ಪ್ರತಿವಾಸುದೇವ ನಾರದರುಂ ಏಕಾದಶ ರುದ್ರ್ ಪುಟ್ಟಿದರಲ್ಲದೆ ಮಂಡಳೀಕಾರ್ಧಮಂಡಳೀಕ ಮಹಾಮಂಡಳೀಕ ಮಕುಟಬದ್ಧರಾದಿಯನೇಕ ಕ್ಷತ್ರಿಯರ್ ಭೂಪತಿಗಳಾದರ್. ಆ ವಂಶಂಗಳೊಳೆ ಚಾತುರ್ವರ್ಣ ಚತುಸ್ಸಂಘಮಾಗಿ ಧರ್ಮಾರ್ಥ ಕಾಮ ಮೋಕ್ಷಮೆಂಬ ಚತುರ್ವರ್ಗಸಾಧನಂಗಳಂ ಮಾಡಿ ಸ್ವರ್ಗಾಪವರ್ಗಮಂ ಪಡೆವರಾ ತ್ರೈವರ್ಣಿಕರೊಳ್ ಬ್ರಾಹ್ಮಣರ್ ದಯಾರ್ದ್ರವೃತ್ತಿ ಮೊದಲಾದ ದಶ ಶುದ್ಧಿಯಿಂ ಯಜನ ಯಾಜನ ಅಧ್ಯಯನ ಅಧ್ಯಾಪನ ದಾನ ಪ್ರತಿಗ್ರಹಣಮೆಂಬ ಆದಿಯ ಷಟ್ಕರ್ಮ ಗರ್ಭಾನ್ವಯಕ್ರಿಯಾ ತ್ರಿಕಾಲಸಂದೋಪಾಸನ ಜಪ ದೇವಋಷಿ ಪಿತೃತರ್ಪಣ ವೈಶ್ವ ದೇವಾರ್ಚನಾಗ್ನಿಹೋತ್ರ ಪ್ರತಿಷ್ಠಾಷ್ಟಮಿ ಚತುರ್ದಶ್ಯಷ್ಠಾಹ್ನಿಕಾದಿ ನಿತ್ಯ ನೈಮಿತ್ತಿಕಾಚಾರದೊಳ್ ಕೂಡಿದಾ ಹಿತಾಗ್ನಿಗಳುಂ ಭೂದವರುಂ ದ್ವಿಜೋತ್ತಮರುಂ ಪರಮಾತ್ಮ ಜ್ಞಾನಸಂಪನ್ನರುಂ ಪರಮಬ್ರಹ್ಮತನೂಭವರುಂ ಚಾರಿತ್ರಶುದ್ಧರುಂ ಕೊಂಡಾಡಿ ಸಜ್ಜಾತ್ಯಾದಿ ಸಪ್ತ ಪರಮ ಆಚಾರ್ಯೋಪಾಧ್ಯಾಯರೆನಿಸುವರೆಂದಂತ್ಯ ಬ್ರಹ್ಮನವರ್ಗೆ ಗ್ರಾಮ ಕ್ಷೇತ್ರ ಗೃಹಂಗಳಂ ಕೊಟ್ಟು ಷೋಡಶಾಭರಣದಿಂದಲಂಕರಿಸಿ ವಸ್ತ್ರಾಭರಣ ಫಳ ತಾಂಬೂಲಾದಿ ದಾನಂಗಳಿಂ ಪೂಜಿಸಿ ಕೊಂಡಾಡಿ ಸಜ್ಜಾತ್ಯಾದಿ ಸಪ್ತ ಪರಮಸ್ಥಾನ ಯೋಗ್ಯರಿವರ್ಗತಿಬಾಲವಿದ್ಯ ಗೃಹೇಶಿತಾ ಮಾನಾರ್ಹತ್ವಾ ಅದಂಡತಾದಿ ದಶಾಧಿಕಾರಂ ಸಲ್ವುದೆಂದು ವರ್ಣೋತ್ತಮರಾದ ಬ್ರಾಹ್ಮಣರ್ ಸರ್ವಶ್ರೇಷ್ಠರಾಗಿರ್ದರ್. ಉಳಿದ ಕ್ಷತ್ರಿಯ ವೈಶ್ಯರ್

ಶ್ಲೋಕ || ದೇವಪೂಜಾ ಗುರೋಪಾಸ್ತಿ ಸ್ವಾಧ್ಯಾಯ ಸಂಯಮಂ ತಪಃ
ದಾನಂ ಚೇತಿ ಗೃಹಸ್ಥಾನಾಂ ಷಟ್ಕರ್ಮಾಣಿ ದಿನೇ ದಿನೇ ||

ಎಂಬ ಷಟ್ಕರ್ಮನಿರತರಪ್ಪುದರಿಂ ನಿತ್ಯನೈಮಿತ್ತಿಕಾಚಾರಮುಳ್ಳರಾಗಿ ದರ್ಶನೀಕಾದಿ ಏಕಾದಶ ನಿಲಯಮಪ್ಪ ಶ್ರಾವಕಧರ್ಮದೊಳುಂ ದಶಧರ್ಮಮೂಲೋತ್ತರ ಗುಣಂಗಳುಳ್ಳ ಯತಿಧರ್ಮಮಂ ವರ್ಣತ್ರಯರ್ ಕೈಕೊಳಲ್ ಯೋಗ್ಯರಪ್ಪುದರಿಂ ತ್ರಯೋವರ್ಣಾ ದ್ವಿಜಾತಯಃ ಎಂದು ತ್ರೈವರ್ಣಿಕರು ಭೋಜನ ಪ್ರತಿಭೋಜನಂಗಳಂ ಕೊಳ್ಕೊಡೆಯಂ ಮಾಳ್ಪರವರೊಳೆ ಗರ್ಭಾದಾನ ಮೊದಲಾಗಿ ಷೋಡಶ ಕರ್ಮಂಗಳ್ ನಡೆವುದರಿಂದಾ ಕ್ಷತ್ರಿಯ ವೈಶ್ಯರ್ ಪಾತ್ರದತ್ತಿ ಸಮದತ್ತಿ ಅನ್ವಯದತ್ತಿ ದಯಾದತ್ತಿಯೆಂಬ ಚತುರ್ವಿಧ ದತ್ತಿಯಂ ಮಾಡಲ್ ಯೊಗ್ಯರ್.

ಶ್ಲೋಕ || ಬ್ರಾಹ್ಮಣಃ ಕ್ಷತ್ರಿಯೋ ವೈಶ್ಯಾಃ ಇತಿ ವರ್ಣಾಃ ತ್ರಯೋ ಮತಾಃ
ತೇಷಾಂ ಶುಶ್ರೂಷಣೇ ಶೂದ್ರಾಸ್ತೇ ದ್ವಿಧಾ ಕರ್ಮಕಾರವಃ ||

ಅಧೀತ್ಯಾಧ್ಯಾಪನೇ ದಾನಂ ತಿತಿಕ್ಷೇ ಜ್ಯಾ ಚ ತತ್ಕ್ರಿಯಾಃ
ಶಿಖಾ ಯಜ್ಞೋಪವೀತಂ ಚ ಲಿಂಗಂ ತೇಷಾಂ ಪ್ರಕಲ್ಪಿತಮ್ ||

ಕ್ಷತತ್ರಾಣೇ ನಿಯುಕ್ತಾ ವೈ ಕ್ಷತ್ರಿಯಾಃ ಶಸ್ತ್ರಪಾಣಯಃ
ವಣಿಜಃ ಕೃಷಿ ವಾಣಿಜ್ಯ ಪಾಶುಪಲ್ಯೋಪಜೀವನೇ ||

ಕಾರವೋ ರಜಕಾದ್ಯಾಸ್ತ್ಯು ಸ್ತತೋನ್ಯಸ್ಯಾರಕಾರವಃ
ಕಾರವೋsಪಿ ಮತಾಃ ದ್ವೇಧಾ ಸ್ಪೃಶ್ಯಾಸ್ಪೃಶ್ಯ ವಿಕಲ್ಪತಃ ||

ತತ್ರಾಸ್ಪೃಶ್ಯಾಃಪ್ರಜಾಬಾಹ್ಯಃಸ್ಪೃಶ್ಯಾಃ ಸ್ಯುಃ ಕರ್ತಕಾರಯ
ನೀಚಾಸ್ಯುರವಗಂತವ್ಯಾಃ ಶೂದ್ರಾ ಏತೇ ಹ್ಯ ಭೂಮಯಃ ||

ಮನುಷ್ಯಜಾತಿರೇಕೈವ ಜಾತಿನಾಮೊದಯೋದ್ಭವಾಃ
ವೃತ್ತಿಭೇದಾ ಹಿ ತದ್ಭೇದಾಶ್ಚಾತುರ್ವಣ್ಯತ್ವಮಾಶ್ರಿತಾಃ ||

ನ ಚೈವಂ ಕ್ಷತ್ರಿಯತ್ವಾದಿರ್ಜ್ಜಾತಿಃ ಕಾಲ್ವನಿಕೀ ಭವೇತ್
ತತ್ತಜ್ಜಾತೇರ್ಯತೋ ಜಾತಿಸ್ತತ್ತದೃತ್ಯುಚಿತೋದಯೇ ||

ಕೇವಲಜ್ಞಾನಸಂಭೂತಿರ್ಹೇತುಃ ಸಕಲ ಸಂಯಮಃ
ತಸ್ಯೋತ್ಪತ್ತಿಸ್ತ್ರೀವರ್ಣೇಷು ಶೂದ್ರಾಣಾಂ ನಾಭಿಸಮ್ಮತಃ ||

ವರ್ಣತ್ರಯರು ತಮ್ಮತಮ್ಮೊಳೆ ಕೊಳ್ಕೊಡೆ ಸಜಾತಿಯೆಂಬುದು. ಅಲ್ಲದೆ ಕ್ಷತ್ರಿಯ ವೈಶ್ಯಕನ್ಯೆಯ ಬ್ರಾಹ್ಮಣಂಗಾಗೆ ಜನಿಸಿದ ಮಕ್ಕಳು ಕ್ಷತ್ರಿಯವೈಶ್ಯರಪ್ಪರು. ಕ್ಷತ್ರಿಯಂ ಬ್ರಾಹ್ಮಣಿಯಂ ತಂದೊಡೆ ಪುಟ್ಟಿದವಂ ಕ್ಷತ್ರಿಯನಪ್ಪಂ ಕ್ಷತ್ರಿಯವೈಶ್ಯಕನ್ಯೆಗೆ ಪುಟ್ಟಿದಂ ಬ್ರಾಹ್ಮಣಿಯಂ ತಂದೊಡೆ ಪುಟ್ಟಿದವಂ ಕ್ಷತ್ರಿಯನಪ್ಪಂ ಕ್ಷತ್ರಿಯವೈಶ್ಯಕನ್ಯೆಗೆ ಪುಟ್ಟಿದಂ ಕ್ಷತ್ರಿಯನುಂ ವೈಶ್ಯನುಮಪ್ಪನು. ವರ್ಣೋತ್ತಮರು ವರ್ಣಾಧಮ ಸ್ತ್ರೀಯರೊಳ್ ಕೂಡಿದೊಡಂ ಜನಿಸಿದವರ್ ವರ್ಣಕ್ಕೆ ಸಲ್ಲರೆಂದು ಪೇಳ್ದುದರಿಂ ವರ್ಣಸಂಕರಮಾಗದಂತು ಅವರವರ ಕ್ರಿಯಾವೃತ್ತಿಯಂ ಬಿಟ್ಟರಂ ಪಾರ್ಥಿವರ್ ದಂಡಿಸಿ ನಿಯಮಿಸದಿರ್ದೊಡೆ ಮತ್ಸ್ಯಂ ನ್ಯಾಯಮಾಗಿ ಕೆಡುವುದು. ಈ ಪ್ರಕಾರದಿಂ ನಡೆದುಬರುವಲ್ಲಿ ಕಾಲದೋಷದಿಂ ಬ್ರಾಹ್ಮಣವರ್ಣದೊಳ್ ಕೆಲಂಬರ್ ವರ್ಣಾನಾಂ ಬ್ರಾಹ್ಮಣೋ ಗುರುಃ ಎಂದು ಜಾತಿಮದಂ ಪುಟ್ಟಿ ಮರೀಚಿರಚಿತ ಕಪಿಲಸಿದ್ಧಾಂತಮನವಲಂಬಿಸಿ ಕೆಲವು ಕ್ಷತ್ರಿಯ ವೈಶ್ಯ ಶೂದ್ರಾದಿಗಳಂ ಕೂಡಿಕೊಂಡು ಪಂಚಮಿಥ್ಯಾಕರ್ವೋದಯದಿಂ ಜಿನ ಧರ್ಮಮಂ ತವಿಸಿರ್ದ ಕಾಲದೊಳ್ ಷಣ್ಮತಂಗಳಂ ಕಲ್ಪಿಸಿಯಾಯಾಯ ಮತಂಗಳೊಳ್ ರುಚಿ ಪುಟ್ಟಿ ಜಿನಸಮಯಕ್ಕಿತರಮಪ್ಪ ವೇದ ಪುರಾಣ ತರ್ಕಾಗಮಾದಿಗಳಂ ಕಲ್ಪಿಸಿ ವಿದ್ಯಾನುವಾದಸಾಮರ್ಥ್ಯದಿಂ ಅಥರ್ವಣಮಂ ಕಲ್ತು ಏಕದಂಡಿ ತ್ರಿದಂಡಿ ಹಂಸ ಪರಮಹಂಸಾದಿ ತಾಪಸರಾಗಿ ಕೆಲಂಬರ್ ಹಿಂಸಾಯಜ್ಞಮಂ ಪ್ರಕಟಿಸಿದರವರೊಳ್ ಕಾಲಾಂತರದೊಳ್ ಪಂಚಗವುಡ ಪಂಚದ್ರಾವಿಡರೆಂದು ಪತ್ತು ಭೇದಮಾಗಿಯುಮವರೊಳನೇಕ ತೆರನಾಗಿ ವರ್ತಿಸುವರ್. ಉಳಿದ ಬ್ರಾಹ್ಮಣರ್ ಕ್ರಿಯಾಕರ್ಮಮಂ ಬಿಡದೆ ಕ್ಷತ್ರಿಯ ವೈಶ್ಯರ್ಗೆ ಪುರೋಹಿತರಾಗಿಯು ಮಂತ್ರಿಪ್ರಧಾನಿಗಳಾಗಿ ವಿದ್ಯಾಶಿಕ್ಷೆಯೊಳೆ ಆರ್ಯಷಟ್ಕರ್ಮದಿಂ ಕ್ಷತ್ರಿಯರೊಳೆ ಕೂಡಿ ವೈದಿಕ ಲೌಕಿಕರಾಗಿರ್ದರ್. ಕಡೆಯೊಳ್ ಕ್ಷತ್ರಿಯ ವೈಶ್ಯರ್ ತುರುಷ್ಕರ್ ಮೊದಲಾದ ನಾನಾ ಮತಮಂ ಮಾಡುವಲ್ಲಿ ಕೂಡಿಯುಳಿದ ಜೈನರ್ ಮರಾಠ ರಜಪುತ್ರ ಆರೆ ಶ್ವೇತಾಂಬರರ್ ಮೊದಲಾದ ವಿಸಂಘದೊಳ್ ಸೇರಿದರಲ್ಲಿಂದಿತ್ತ ಬಸವನಿಂದಾದ ವೀರಶೈವರ್ ರಾಮಾನುಜನಿಂದಾದ ವೀರವೈಷ್ಣವ ರಾಗಿಯು ಕೆಲಕೆಲರ್ ಲಿಂಗನಾಮಧಾರಿಗಳಾಗಿ ಉಳಿದರಸುಗಳ್ ಚೋಳ ಬಲ್ಲಾಳ ಡಣಾಯಕ ಸಾಳ್ವ ಕೆಂಗ ಪ್ರಭು ಅಜಲ ಸಾವಂತ ರಜ ರಾಯರೆಂದು ನಾನಾ ಪೆಸರಾಗಿ ಕೆಲರ್ ಮಿಥ್ಯಮಂ ಪೊರ್ದಿದರುಳಿದವರ್ ಕರ್ಮಹೀನರಾಗಿ ವರ್ತಿಸುವಲ್ಲಿ ಬ್ರಾಹ್ಮಣರಾದ ಜೈನರ್ ವಿಂಗಡಿಸಿಕೊಂಡಿರ್ದವರೊಳೆ ಕೆಲಂಬರ್ ಮಿಥ್ಯಮಂ ಪೊರ್ದಿ ಮಾರಕರಾದರುಳಿದವರ್ ಬ್ರಾಹ್ಮಣರೆಂದು ಪಂಡಿತರೆಂದು ಉಪಾಧ್ಯಾಯರೆಂದು ಅರ್ಚಕರೆಂದು ಇಂದ್ರರೆಂದು ಸ್ಥಾನದವರೆಂದು ನಾನಾ ವಿಧ ನಾಮದಿಂದಿಪ್ಪರು. ಕ್ಷತ್ರಿಯವೈಶ್ಯರ್ ಕರ್ಣಾಟ ಮೊದಲಾಗಿರ್ದು ಪನ್ನೆರಡು ವರುಷ ದುರ್ಭಿಕ್ಷಮಾದಾಗಲು ದೇಶಾಂತರಂ ಪೋಗಿ ಚಾರಿತ್ರಗೆಟ್ಟುಬಂದು ಜೈನಮತಮಂ ಬಿಟ್ಟು ಕೆಲದಿವಸಮಿರ್ದು ಗುರುಗಳಂ ಪೊರ್ದಿ ವ್ರತಂಗೊಂಡು ಚತುರ್ಥ ಪಂಚಮರೆಂಬ ನಾಮದಿಂ ಕ್ರಿಯಾಕರ್ಮಹೀನರಾಗಿ ಸೂತಕಪ್ರೇಕಮಂ ಬಿಟ್ಟು ವರ್ತಿಪುದರಿಂ ಚಾತುರ್ವರ್ಣಂಗಳೊಳ್ ಕೂಡದೆ ಕೆಲವರಸುಗಳ್ ಭೋಗಾರರೆಂದು ಗವುಡರೆಂದು ಪಾಂಡೀಯರೆಂದಾಗಿಯವರೊಳ್ ಕೆಲರ್ ಅಣು ವ್ರತಧಾರಿಗಳಾಗಿ ಜಿನಧರ್ಮ ಪ್ರಭಾವಕರಾದ ಪಂಚಮರ್ಗೆ ಗುರುಗಳ್ ಶೌಚಾಚಾರಮಂ ಪೇಳಿ ಇಭ್ಯಕುಲದವರ್ ನೀವು ಕಾಲದೋಷದಿಂ ಪಂಚಮರಾದುದರಿಂ ನಿಮಗೆ ಕರ್ಮಹೀನವಾಗಿರುವುದಂದಲ್ಲಿಂದತ್ತ ತ್ರಿಕಾಲ ದೇವತಾವಂದನೆಗೆಯ್ದು ಧರ್ಮಚಕ್ರಮಂ ಚಂದನದಿಂ ಧರಿಸಿ ಗರ್ಭಾದಾನ ನಾಮಕರ್ಮ ಕ್ಷೌರ ವಿವಾಹಂಗಳೊಳ್ ಹೋಮಮಂ ಗೃಹಶುದ್ಧಿಯಂ ಮಾಡಿಸಿ ವ್ರತಂಗೊಂಡು ಕೆಲರ್ ಜಿನಧರ್ಮಮಂ ಪ್ರಕಟಿಸಿ ಧಾರ್ಮಿಕರೆನಿಸಿದರ್. ಕೆಲರ್ ನಾಮದಿಂ ಜೈನರೆಂದು ಕೂಡುವಳೀ ಮಾಡಿಕೊಂಡು ಕರ್ಮಹೀನರಾಗಿ ನಾನಾ ಪೆಸರಂ ತಾಳ್ದರ್. ಘಟ್ಟದ ಕೆಳಗೆ ಆಚಾರ್ಯರ್ ಏಳುನೂರು ಒಕ್ಕಲು ಭಂಟರಂ ಜೈನಮತಕ್ಕೆ ತಂದು ಜೈನಭಂಟರೆಂದು ವ್ರತಮಂ ಕೊಟ್ಟರ್. ಇಂತು ವರ್ಣಾಶ್ರಮವಿಲ್ಲದೆ ನಾನಾ ಪೆಸರಾಯ್ತು.

ಅತ್ತಲುತ್ತರ ದೇಶದೊಳೆಲ್ಲ ಜೈನರು ವರ್ಣಾಶ್ರಮವಿಲ್ಲದೆ ಪ್ರಜ್ಞೆಯೆಂದು ಶ್ರಾವಕರೆಂದು ಜಿನಭಕ್ತರೆಂದು ವರ್ತಿಸುವರ್. ಇಂತು ವರ್ತಿಸುತ್ತಿರೆ ಶಾಲಿವಾಹನ ಶಕ ವರ್ಷಗಳು ೧೫೪೫ ದುಂದುಭಿ ಸಂವತ್ಸರದೊಳ್ ಸೋದೆಯ ಪಟ್ಟಾಚಾರ್ಯರಾದ ಕಲಂಕಸ್ವಾಮಿಗಳ್ ಸ್ವರ್ಗಸ್ಥರಾಗಲವರ ಬಳಿಯೊಳೋದಿಕೊಂಡಿರ್ದ ಪಂಚಮಂ ತಾಣು ದೀಕ್ಷೆಯಂ ಕೈಕೊಳಲೆಂದು ಮತ್ತೊಬ್ಬ ಯತಿಗಳಂ ಬೇಡೆ ಆತಂಗೆ ಮಹಾವ್ರತಂಗೊಟ್ಟು ಪಟ್ಟಮಂ ಮಾಡಲೆಂದು ಎಡಬಲಸ್ಥಳದ ಬ್ರಾಹ್ಮಣ ಮೊದಲಾದ ಜೈನರೆಲ್ಲರ್ ಕುಡಿ ನಾಲ್ಕು ಗಣಗಳ ಸಿಂಹಾಸನಮುಪಸಿಂಹಾಸನಂಗಳ್ಗೆ ಪೂರ್ವಾರಭ್ಯ ಬ್ರಾಹ್ಮಣರೆಯಪ್ಪರಲ್ಲುರುಳಿದರ್ಗಾದೆಂದು ಕೆಲಂಬರ್ ಇಂತೆಂದರ್

ಶ್ಲೋಕ ||ಯಥಾವಿಧ ಮತಸ್ತೇಷಾಂ ವೃತ್ತಯಸ್ತಾಹ್ಯನೇಕಧಾ
ಬ್ರಾಹ್ಮಣಃ ಕ್ಷತ್ರಿಯೋ ವೈಶಾಃ ಪೂರ್ವಪೂರ್ವೋ ಮನಾಗ್ರವ: ||

ವೃತ್ತಯೋ ಹಿ ತದೇತೇಷಾಮಥ ಸೇಯಾಸ್ತಥಾವಿದಾಃ
ಗರ್ಭಾದಾನೋಪನೀತ್ಯಾದಿಸಂಸ್ಕಾರ ದೀಕ್ಷಿತೋ ನರಃ ||

ತತ್ಸಂಸ್ಕಾರ ಸ್ತ್ರೀವರ್ಣಾನಾಮನ್ಯೇಣು ವ್ರತಧಾರಿಣಃ
ಬ್ರಾಹ್ಮಣಃ ಕ್ಷತ್ರಿಯೋ ವೈಶ್ಯ ಏತೇ ತ್ರೈವರ್ಣಿಕಾ ಮಾತಾಃ ||

ತೇಷಾಮೇತದ್ವಿಜಾತೀನಾಂ ಕ್ರಿಯಾಸಂಸ್ಕಾರ ಇಷ್ಯತೇ
ಕ್ರಿಯಾಗರ್ಭಾದಿ ಕಾಯಾಸ್ತು ನಿರ್ವಾಣಾಂತಂ ಜನಾಗಮೇ ||

ವಿಕಲಂ ಸಕಲಂ ಚೇತಿ ದ್ವಿಧಾ ವ್ರತಮುದೀರಿತಮ್
ತದ್ವಯಂ ಹಿ ತ್ರಿವರ್ಣಾನಾಂ ಶೂದ್ರಾಣಾಂ ವಿಕಲವ್ರತಮ್ ||

ಕೇವಲಜ್ಞಾನಸಂಭೂತೇಃ ಹೇತುಸ್ಸಕಲಸಂಯಮಃ
ತಸ್ಯೋತ್ಪತ್ತಿಃ ತ್ರಿವರ್ಣೇಷು ಕ್ರಿಯೋಚ್ಚೈರ್ಗೋತ್ರಕಾಸು ಚ ||

ಎಂಬುದರಿಂ ಕ್ಷತ್ರಿಯ ವೈಶ್ಯರ್ಗಂ ಸಲ್ವುದು ಚತುರ್ಥ ಪಂಚಮರುಮವೊಳ್ ಕೂಡದೆ ಕರ್ಮರಹಿತವಾದುದರಿಂದಾಗದೆಮಬುದು ಬ್ರಾಹ್ಮಣವರ್ಣಮಂ ಭರತೇಶ್ವರಂ ಮಾಡಿದನೆಂದು ಕೆಲಂಬರೆಂದೊಡೆ

ಶ್ಲೋಕ ||ಕ್ಷತ್ರಿಯೇಷು ಕುಮಾರೇಷು ಯೇ ಅಣುವ್ರತ ಪರಾಯಣಾಃ
ಸೃಷ್ಟಾಸ್ತೇ ಬ್ರಾಹ್ಮಣಾಃ ಪಶ್ಚಾದ್ಭರತೇ ನಾಂತ್ಯವೇಧಸಾ ||

ಮುನ್ನಾ ಮನುವಂಶಜರಂ ಬ್ರಾಹ್ಮಣರಂ ಮಾಳ್ಪುದಕ್ಕೆ ಕ್ರಿಯಾಮಂತ್ರ ವಿಶೇಷಂಗಳಂ ತಿಳಿಯದಿರ್ದುದರಿಂದಾದಿಬ್ರಹ್ಮಂ ಜೀವನೋಪಾಯಂಗಳಪ್ಪ ಲೌಕಿಕ ಷಟ್ಕರ್ಮಂಗಳಂಪೇಳ್ದು ಸಕಲ ಸಂಪತ್ತಿಯಪ್ಪ ಸಮವಸರಣದೊಳ್ ದಿವ್ಯಭಾಗಾಸ್ವರೂಪದಿಂ ಉಪಾಸಕಾಂಗಮೆಂ ಬೇಳನೆಯಂಗವೆಂಬುದರೊಳ್ ಕ್ರಿಯಾಕರ್ಮ ಮಂತ್ರತಂತ್ರಾದಿ ಸಾಗರನಗಾರ ಧರ್ಮಮಂ ಪೇಳೆ ಭರತನಪ್ಪ ಅಂತ್ಯಬ್ರಹ್ಮ ಕೇಳಿರ್ದು ಪರ್ವದಿನದೊಳುಪಾಸಕಾಚಾರದಿಂ ಷಟ್ಕರ್ಮಮಂ ಬಿಟ್ಟು ದೇವಪೂಜೆ ಮೊದಲಾದ ಲೋಕೋತ್ತರ ಷಟ್ಕರ್ಮದೊಳಾಚರಿಸುತ್ತಾ ಷೋಡಶಕರ್ಮಮಂ ಪರರ್ಗಂ ಮಾಡುತ್ತಮೇಕಾದಶ ನಿಲಯಮನಾಚರಿಸಿರ್ದ ದ್ವಿಜರಂ ದಾನಗೊಡಲ್ ಬರಿಸಿ ಪರೀಕ್ಷಿಸಿಯವರ ಗುಣನಾಮಂಗಳಿಂ ಬ್ರಹ್ಮಜ್ಞಾನಮುಳ್ಳುದರಿಂ ಲೋಕಪೂಜ್ಯರುಂ ಆಹಿತಾಗ್ನಿಗಳೆಂದಿವು ಮೊದಲಾದ ಗುಣ ನಾಮಂಗಳಿಂ ಕೊಂಡಾಡಿ ಪದ್ಮನಿಧಿಯಿಂ ಹೊನ್ನ ಯಜ್ಞೋಪವೀತಮಂ ತರಿಸಿ ಷಡ್ದ್ರವ್ಯ ಪಂಚಾಸ್ತಿಕಾಯ ಸಪ್ತತತ್ವ ನವಪದಾರ್ಥಮೆಂಬಿಪ್ಪತ್ತೇಳು ತತ್ವಮೆಂದಿಪ್ಪತ್ತೇಳೆಳೆಗಳಂ ನವದೇವತಾಸ್ವರೂಪಮೆ ಮೆಂದೊಂಬತ್ತು ತೆರನಾಗಿ ರತ್ನತ್ರಯಸ್ವರೂಪಮಾದ ಭಾವಶ್ರುತಮುಪಾಸಕ ಸೂತ್ರಕ್ಕೆ ದ್ರವ್ಯಶ್ರುತಮಪ್ಪ ದಿವ್ಯಸೂತ್ರಮನೇಕಾದ್ಯೇಕಾದಶ ನಿಲಯಮನರಿದಿಕ್ಕಿ ಪವಿತ್ರ ಮುದ್ರಿಕಾ ಕುಂಡಲ ಕೇಯೂರ ಶೇಖರಾದಿ ಷೋಡಶಾಭರಣ ಊರುಲಿಂಗಮಪ್ಪ ದೇವಾಂಗವಸ್ತ್ರಂಗಳಂ ಪಂಚಕಚ್ಚೆಯಿಂದಲಂಕೃತರಂ ಮಾಡಿ ದಾನಂಗಳಂಗೊಟ್ಟು ಶ್ರಾವಣ ಶುದ್ಧ ಪೌರ್ಣಮೀ ಶ್ರವಣನಕ್ಷತ್ರದಂದು ಪೂಜಿಸಿದನಲ್ಲದೆ ಸಾಮಾನ್ಯ ಕ್ಷತ್ರಿಯ ವೈಶ್ಯ ಶೂದ್ರಾದಿಗಳಂ ಬ್ರಾಹ್ಮಣರೆಂದು ಮಾಡಲಿಲ್ಲ. ಮುನ್ನ ಪದಿಮೂರನೆಯ ಪ್ರಸನ್ನಜಿತಂಗೆ ಮೊದಲ ವಿವಾಹವಿಧಿಯಾದಾರಭ್ಯ ಭರತಾದಿ ರಾಜರುಗಳ್ಗಮರ್ಕರ್ತಿ ಮೊದಲಾದ ಕುಮಾರವರ್ಗಂ ವೈಶ್ಯರ್ ಮೊದಲಾದರ್ಗೆಲ್ಲಂ ಕರ್ಮಂಗಳುಂಟಪ್ಪುದರಿಂದವರವರೆ ಮಾಡಿಕೊಂಡರೆಂದರೆ ಅಪಹಾಸ್ಯಮಲ್ಲದೆ ಯೋಗ್ಯ ಮಾಗದದರಿಂ ರತ್ನಾಕರಂ ಪೇಳ್ದ ಮುಂದಾದ ವರ್ಣಮಂ ಹಿಂದಾದುದೆಂಡೊಡೆ ಕೊಂಡಾಡಿ ವಾದಿಸಿ ಜಾತಿಮದದಿಂ ಗತಿಗೆಡುವರೆಂಬುದಲ್ಲದೆ ಲೋಕಪ್ರಸಿದ್ಧಮಾಗಿ ವಿಶಿಷ್ಟ ಜನರು ಉಪಾಸಕರು ಸಾಮಾನ್ಯರಾದ ಆಬಾಲಕರ್ಗಾದಾಗ್ಯು ಮೊದಲೆ ದಾನ ದಕ್ಷಿಣೆಗೊಟ್ಟು ಬಳಿಕ ಕ್ಷತ್ರಿಯ ಶೂದ್ರರ್ಗೆ ಫಲದಾನಮಿಲ್ಲದೆ ತಾಂಬೂಲಮಾತ್ರಂ ಕೊಡುವುದರಿಂ ಲೌಕಿಕದೊಳ್ ವರ್ಣಾಶ್ರಮದ ತಾರತಮ್ಯಮಂ ನೋಡಿ ನಡೆಯದಿರ್ದೊಡೆಲ್ಲಾ ಜಾತಿ ಸಂಕರಮಾಗಿ ಪಾಷಂಡಿಗಳಪ್ಪರೆಂದು ಕೆಲಂಬರ್ ನುಡಿವುದುಂ ವಿದೇಹಂಗಳೊಳ್ ಬ್ರಾಹ್ಮಣರಿಪ್ಪರೆಯೆಂದು ಕೆಲಂಬರ್ ನುಡಿವುದಂ ಕೆಲರೆಮದರ್.

ಸರ್ವಜ್ಞೋದಿತಾಪೋಸಕಾಂಗಂ ಹುಂಡಾವಸರ್ಪಿಣಿ ಕುರಿತು ಭರತಕ್ಷೇತ್ರಕ್ಕೆ ಪೇಳಲಿಲ್ಲ. ಲೋಕತ್ರಯ ಕಾಲತ್ರಯಕ್ಕಂ ಅನಾದಿ ಸಂಸಿದ್ಧಮಾದ ಪೌರುಷೇಯವಪ್ಪ ಸಪ್ತಮ ವೇದದೊಳೊರೆದ ಚಾತುರ್ವರ್ಣಂಗಳೆಲ್ಲ ಕ್ಷೇತ್ರದೊಳೊಪ್ಪುತ್ತಿಪ್ಪುದರಿಂದಾರ್ಯ ಷಟ್ಕರ್ಮ ಕರ್ಮಠ ಧರ್ಮಕ್ರಿಯಾಕುತೂಹಲ ನಿತ್ಯ ನೈಮಿತ್ತಿಕಾನುಷ್ಠಾನರಾದ ದ್ವಿಜರ್ ವೈಶ್ಯ ದೇವಾಗ್ನಿಹೋತ್ರಿಯರ್ ಚಕ್ರವರ್ತಿಗಳ್ಗೆ ಪುರೋಹಿತರತ್ನರಾಗಿಯುಪಾಧ್ಯಾಯರೆನಿಸಿದ ದಾನದೀಕ್ಷೆಗೆ ಯೋಗ್ಯರಾಗಿರ್ಪರಲ್ಲದೆ ಕ್ಷತ್ರಿಯ ವೈಶ್ಯರ್ ಬೆರಳೊಳ್ ದರ್ಭೆಯಂ ಕಟ್ಟಿ ದೇವಾರ್ಚನೆ ಹೋಮಮಂತ್ರೋಪದೇಶಂಗೆಯ್ದು ಪರರ ದಕ್ಷಿಣೆಗೆ ಕೈಯೊಡ್ಡಿ ಪಾತ್ರರಾಗಿ ಶಸ್ತ್ರಪಾಣಿಯಿಂ ರಣಾಗ್ರದೊಳಿರಿದು ಪರದುಗೆಯ್ದು ವ್ಯಾಪಾರಂ ಮಾಳ್ಪರೆಂಬುದುಮಪಹಾಸ್ಯಕ್ಕೆ ಕಾರಣಮಲ್ಲದೆ ಸಹಜಮಾಗದೆಂಬುದುಂ ಕೆಲಂಬರೆಂದರ್

ಬ್ರಹ್ಮ ಕ್ಷತ್ರಿಯ ವೈಶ್ಯ ಶೂದ್ರರೆನ್ನದೆ ಆಚಾರ್ಯ ಕ್ಷತ್ರಿಯ ಬ್ರಾಹ್ಮಣ ವೈಶ್ಯ ಶೂದ್ರರೆಂದಿಂತು ಪೇಳಿಪ್ಪರೆಂದೊಡೆ ಏಕಸಂಧಿಭಟ್ಟಾರಕರೊಳ್ ಬ್ರಾಹ್ಮಣರ್ ಕೆಲರ್ ಜಾತ್ಯಾಭಿಮಾದಿಂ ನೀವು ಕ್ಷತ್ರಿಯರಾದುದರಿಂ ನಿಮ್ಮಿಂದಾ ಬ್ರಾಹ್ಮಣರ್ ವ್ರತ ಪ್ರಾಯಶ್ಚಿತ್ತಾದಿಗಳಂ ಕೊಳ್ಳಲಾಗದು, ದೀಕ್ಷಾಶಿಕ್ಷೆಯಂ ಮಾಡಲಾಗದೆಂದು ಚರ್ಚಿಸೆ ಕೇಳಿರ್ದು ತಾವು ಸಂಹಿತೆ ಮಾಳ್ಪಲ್ಲಿಯಾ ಪಕ್ಷದಿಂ ಪೇಳ್ದರಲ್ಲದೆ ಮುನ್ನ ವೀರಾಚಾರ್ಯ ಪೂಜ್ಯಪಾದ ಜಿನಸೇನಾಚಾರ್ಯ ಗುಣಭದ್ರ ವಸುನಂದಿ ಇಂದ್ರನಂದಿ ಆಶಾಧರ ಹಸ್ತಿ ಮಲ್ಲಾಚಾರ್ಯರ್ ಮೊದಲಾದ ಸಂಹಿತಾಕರ್ತರೆಲ್ಲಂ ಬ್ರಾಹ್ಮಣಾದಿ ವರ್ಣಮಂ ಪೇಳಿಪ್ಪರಾದೊಡಮೀಗಳ್ ವರ್ಣತ್ರಯಮಂ ಬಿಟ್ಟು ಉಳಿದವರ್ಗೆ ಮಾಳ್ಪುದನುಚಿತಮೆಂದು

ಶ್ಲೋಕ ||ದಾನಂ ದೀಕ್ಷಾ ತ್ರಿವರ್ಣಾನಾಂ ಚತುರ್ಥಾನಾಂ ನ ಯೋಗ್ಯತಾ
ಪಂಚಮಾದ್ಯಂತ್ಯ ಜಾತೀನಾಂ ನ ದೀಕ್ಷಾ ದಾನಯೋಗ್ಯತಾ ||

ಎಂದಾಚಾರ್ಯಸಮ್ಮತಿಯುಂಟಪ್ಪುದರಿಂದೀಯರ್ಥಕ್ಕೆ ಕನ್ನಡದಿಂ ಪೇಳ್ದ ಮಾಘಣಂದಿ ಶ್ರಾವಕಾಚಾರ ಶಾಸ್ತ್ರಸಾರ ಪದಾರ್ಥಸಾರಂ ಮೊದಲಾದವರೊಳ್ ಪೇಳಿಪ್ಪುದೆಂದು ನಿಶ್ಚೈಸಿ ಗೇರಸೊಪ್ಪೆ ಭಟ್ಟಕಳದೊಳಿರ್ದ ವಿಪ್ರರ್ ನೂರು ಒಕ್ಕಲೊಳೆಲ್ಲಾ ಪೋಗಿ ಏಳೆಂಟು ಒಕ್ಕಲವರೊಳಾರನಾದರು ಮಾಡಲೆಂದರಸಿ ಯೋಗ್ಯರಂ ಕಾಣದೆ ದಕ್ಷಿಣ ಕರ್ಣಾಟಕದೊಳ್ ಕಲಶತವಾಡಿಯೊಳ್ ನೂರಿಪ್ಪತ್ತು ಒಕ್ಕಲು ಪೋಗಿ ನಾಲ್ಕಾರು ಒಕ್ಕಲಿರಲವರನೊಪ್ಪಿಸಲಾರದೆ ಕನಕಗಿರಿಗೆ ಸೋದೆಯಿಂ ಶ್ರಾವಕರ್ ಹತ್ತು ಜನಂಗಳ್ ಬಂದು ಈ ಸ್ಥಾಳಾಂತರಂಗಳೊಳಿರ್ದ ನೂರು ಒಕ್ಕಲು ಬ್ರಾಹ್ಮಣರ್ ಪೋಗಲೊಲ್ಲದಿರೆ ಅರಿಕುರಾರದ ದೇವರಸೋಪಾಧ್ಯಾಯನೆಂಬಂ ಮಲೆಯೂರಾದಪ್ಪನ ಸುತೆಯಂ ಮದುವೆನಿಂದು ಈರ್ವರ್ ಗಂಡುಮಕ್ಕಳ್ ದೊಡ್ಡವರಾಗೆ ತನಗೆ ಐವತ್ತರ ಸಮಯವಾಗಿರ್ದು ವಿದ್ವಾಂಸನಾದುದರಿಂ ಸಂಸಾರದೊಳ್ ಹೇಯಂ ಪುಟ್ಟಿ ವಾತ್ಸಲ್ಯದಿಂ ಸುಧಾಪುರದಿಂ ಬಂದವರೊಡನೆಯ್ದಿ ದೀಕ್ಷೆಗೊಂಡು ಪಟ್ಟಾಚಾರ್ಯನಪ್ಪುದು ಬೊಮ್ಮಣ್ಣನೆಂಬ ಪಂಚಮಂ ದೀಕ್ಷೆಯಂ ಬೇಡೆ ಕೊಡುವಾಗಳ್ ಕೆಲಂಬರ್ ದೇವಾ ಪೂಜಾಚಾರ್ಯನಾಗಲ್ ದೀಕ್ಷೆಗೊಳ್ಳಲ್ ಪಂಚಮರ್ ಯೋಗ್ಯರಲ್ಲವೆಂದಿಂತೆಂದರ್

ಶೋಕ್ಲ ||ಸಾಮಾಯಿಕಾದಿಚಾರಿತ್ರೋ ಗರ್ಭಾದಾನಾದಿಸತ್ಕ್ರಿಯಃ
ಉಪನೀತ್ಯಾದಿಸಂಸ್ಕಾರೋ ಬ್ರಾಹ್ಮಣಾದಿತ್ರಯೋದ್ಭವಃ ||
ಉಪಾಸಕವ್ರತಾಚಾರ್ಯಃ ದೀಕ್ಷಾಶಿಕ್ಷಾಸಮನ್ವಿತಃ
ಏವಂ ಲಕ್ಷಣವಾನಾರ್ಯ ಜಿನಪೂಜಾ ಪ್ರಶಸ್ಯತೇ ||

“ಸಏವ ಗುರುಪೀಠಸ್ಥಃ ಭಟ್ಟಾರಕಃ ಪ್ರಶಸ್ಯತೇ” ಎಂದಿದ್ರನಂದ್ಯಾಚಾರ್ಯರ್ ಮೊದಲಾದವರ ಸಮ್ಮತಿಯುಂಟಪ್ಪುದರಿಂದೀತಂಗೆ ಮೌಂಜ್ಯಾದಿ ಸಂಸ್ಕಾರಮಿಲ್ಲದುದರಿಂ ದೇವಪೂಜಾಚಾರ್ಯನುಂ ಗುರುಪೀಠಾಚಾರ್ಯನುಮಾಗಲಾರನೆಂದು ಪೇಳೆ ಕೆಲಂಬರೀಗಳ್ ಸಮ್ಯಕ್ತ್ವವ್ರತಚಾರಿತ್ರಂಗಳೊಳ್ ಸಂತುಷ್ಟರಾಗಿಯು ಧಾರ್ಮಿಕರಾಗಿ ಇರುವುದರಿಂದ ಪಂಚಮರೆ ಪ್ರಬಳರಪ್ಪರದರಿಂ ದೀಕ್ಷೆಯಂ ಕುಡಲಪ್ಪುದೆಂದಾತಂಗಣು ವ್ರತಮಂ ಕ್ಷುಲ್ಲಕದೀಕ್ಷೆಯಂ ಕೊಡಲಾತಂ ವಿಚಾರದೊಳಿರ್ದನಲ್ಲಿಂದಿತ್ತ ಪಂಚಮರ್ಗೆ ಜಾತಕರ್ಮ ನಾಮಕರ್ಮ ಚೌಲವಿದ್ಯಾ ಪ್ರಾರಂಭಂಗಳಾದಿ ಕೆಲವು ಕರ್ಮಂಗಳಂ ಸಂಕ್ಷೇಪದಿ ನಡಸಿಕೊಂಡುಬಂದರಲ್ಲಿಂ ಕೆಲದಿವಸದಿಂ ಕಾಳಯ್ಯ ಶಾಂತಯ್ಯ ಪುಟ್ಟಶೆಟ್ಟಿ ಅಣ್ಣಯ್ಯಶೆಟ್ಟಿ ಮೊದಲಾದವರ ಪ್ರಬಳದಿಂ ಜೀರ್ಣಜಿನಚೈತ್ಯಾಲಯೋದ್ಧರಣೀಕರಾಗಿ ದೇವ ಗುರು ಬ್ರಾಹ್ಮರೊಳ್ ವಿನಯಂಬಡೆದಿರ್ದರ್. ಕಾಳಶೆಟ್ಟಿಯಂ ಎಳವಂದೂರ ಪಂಡಿತಂಗೂ ವಿರುದ್ಧಮಾಗಿಯು ಬುದ್ಧಿಸಾಗರಂ ಪಂಡಿತನೊಳಾದ ಕ್ರೋಧದಿಂ ಬ್ರಾಹ್ಮಣರಂ ಉಪೇಕ್ಷೆಗೆಯ್ದಂ. ಶಕವರ್ಷ ೧೫೦೦ ರಾರಭ್ಯ ಬೆಳ್ಗುಳದೊಳ್ ಒಂದೆರಡು ಪಟ್ಟ ಬ್ರಾಹ್ಮಣರಲ್ಲದನ್ಯರ್ಗಾಗೆ ತಿಗಳಾಣ್ಯದವರ್ ಮಹಾವಿದ್ವಾಂಸರಾಗಿರ್ದರಲ್ಲಿಂದಿತ್ತ ಭಂಗ ವಾಡಿಯವರ ಪಟ್ಟಮಾಗಲವರ ಸನ್ನಿಧಿಯೊಳ್ ರಾಮಸಮುದ್ರದ ಶಾಂತಶೆಟ್ಟಿಯು ಓದಲೆಂದಿರ್ದರವರ ಪರೋಕ್ಷದೊಳ್ ಅಲ್ಲಿಯೆ ಮಹಾವ್ರತಂಗೊಂಡು ಶಕವರ್ಷ ೧೬೮೭ ರಲ್ಲಿ ಪಟ್ಟಾಚಾರ್ಯನಾದಂ.

ಬಳಿಕ ಧರ್ಮೋಪಾಧ್ಯಾಯನು ಉದ್ದೂರ ದೇವಚಂದ್ರಯ್ಯನು ಸರಗೂರು ಅರಿಕುಠಾರ ಮುಂತಾದ ಪಂಚಮರು ಮಾಳ್ಪ ವಾತ್ಸಲ್ಯಮಂ ತಿಳಿದವರ್ಗೆ ಸ್ನಾನಾಚಮನ ಪ್ರಾಣಾಯಾಮ ತರ್ಪಣಾದಿ ಸಂಧ್ಯಾವಂದನೆಯಂ ಬರೆದುಕೊಟ್ಟು ಹೇಳಿ ಮದುವೆ ಯೊಳ್ ನಾಗಬಲಿವಿಧಾನಂ ಮಾಡಿಸಿಕೊಟ್ಟರ್. ಗೋತ್ರಸೂತ್ರಾದಿಗಳ್ ಇಲ್ಲದುದರಿಂ ಗುರುಗಳಿಂ ಗುಂಬದೊಳ್ ಗೋತ್ರಂಗಳ ಚೀಟಂ ಬರೆದಿಕ್ಕಿ ತೆಗೆದುಕೊಂಡಾ ಗೋತ್ರಮಂ ಪಿಡದರ್. ಮತ್ತಂ ಹಳೆಬೀಡಿನಲ್ಲಿ ದೇವಸ್ಥಾನದ ಪೂಜೆಮಾಡುವವರಿಲ್ಲದಿರೆ ಒಬ್ಬ ಪಂಚಮಶೆಟ್ಟಿ ತಾನೆ ಮಾಡುತ್ತಾ ಬಂದನು. ಕಡಮೆ ಸ್ಥಳಾಂತರಂಗಳಲ್ಲಿಯು ಪುಂಚಾಯಿಕ್ಕಿ ಅರ್ಘ್ಯಮನೆತ್ತುವರ್. ಈ ಚತುರ್ಥ ಪಂಚಮರು ಮೊದಲೆ ಇಷ್ಟಾರ್ಥಕ್ಕೆ ಮಾರಿ ಚಾಮುಂಡಿ ಚಂಡಿ ಹುರಕಾತಿ ಎಕನಾತಿ ಎಲ್ಲಮ್ಮ ಮೊದಲಾದ ನೀಚದೈವಂಗಳ ಒಕ್ಕಲಾಗಿ ಹೆಸರಂ ಕರೆದು ಕಾಣಿಕೆಗಪ್ಪಂಗೊಟ್ಟು ದರ್ಶನಭ್ರಷ್ಟರಾದರಿಂತು ಕಾಲ ದೋಷದಿಂ ವರ್ಣಾಶ್ರಮ ಕೆಟ್ಟು ನಾನಾ ವಿಧವಾಗಿ ಹೊದುದರಿಂ ಜಿನಧರ್ಮ ಕೆಟ್ಟು ನಾಮಮಾತ್ರದಿಂ ವರ್ತಿಸುವುದು.

ಶ್ಲೋಕ ||ಜಾತಿಕ್ರಿಯಾವ್ರತಂ ವೃತ್ತಂ ಶ್ರುತಂ ಮಂತ್ರೋ ಜಿನಾರ್ಚನಮ್
ಸಂಸ್ಕಾರಸ್ಯ ದ್ವಿಜಾತೀನಾಮಸಂಸ್ಕಾರಾತ್ತು ನ ದ್ವಿಜಾ: ||

ಶೌಚಮಾಚಾರವಾರೋಪಿ ಸಂಸ್ಕಾರ ಇತಿ ಭಾಷಿತಮ್
ದೇಹದ್ವಾರವಿಶುದ್ಧಿಸ್ಯಾತ್ ಸ್ನಾನಾದ್ಯಾಚಮನಾದಿಭಾ: ||

ಸೂತಕಾದ್ಯಘಶುದ್ಧಿಶ್ಚ ಶೌಚಮಿತ್ಯತ್ರ ಭಾಷಿತಮ್
ಆಚಾರೋ ಬಹುಧಾ ಪ್ರೋಕ್ತಃ ಗರ್ಭಾದಾನಾದಿಭೇದತಃ ||

ತದ್ಯೋಗ್ಯಾಸ್ತು ತ್ರಿವರ್ಣಾನಾಂ ಶೂದ್ರಾದೀನಾಮಸಮ್ಮತಾಃ
ದಾನಂ ದೀಕ್ಷಾ ತ್ರಿವರ್ಣಾನಾಂ ಚತು[ರ್ಥಾನಾಂ] ನಯೋಗ್ಯತಾ ||

ಎಂಬುದದರಿಂ ಚತುರ್ಥ ಪಂಚಮ ಶೂದ್ರಾದಿಗಳ್ಗೆ ಸಂಸ್ಕಾರಹೀನರಾದುದರಿಂ ಯಷ್ಟೃತ್ವಮಂ ಚತುರ್ವಿಧ ದಾನಮಂ ಅಧ್ಯಯನ ಶ್ರವಣಮಲ್ಲದೆ ಯಾಚಕನಾಗಿಯು ಪ್ರತಿಗ್ರಹಣಮಧ್ಯಯನದಿಂ ಪರರ್ಗುಪದೇಶಿಸಿ ಆಶೀರ್ವಾದಮಂ ಕುಡಲ್ ಯೋಗ್ಯರಲ್ಲರೆಂದು ಪೇಳ್ದ ಶಾಸ್ತ್ರಮಿರ್ಪುದರಿಂದೀ ಹುಂಡಾವಸರ್ಪಿಣೀ ದುಷ್ಷಮಕಾಲದೊಳ್ ವರ್ಣಸಂಕರಮಾಗಿ ಭಯಾಶಾಸ್ನೇಹ ಲೋಭ ಮೋಹಾಹಂಕಾರದಿಂ ಜಿನಧರ್ಮಂ ನಡುನಾಡೊಳಿಲ್ಲದೆ ದೇಶಾಂತರದ ಕೊನೆಯೊಳ್ ನಾಮಮಾತ್ರದಿಂ ವೀರಾಂಗದ ಮುನಿಯ ಪರ್ಯಂತಂ ವರ್ತಿಸಿ ಕೆಡುವುದೆಂಬ ಜಿನವಾಕ್ಯಮಿಪ್ಪುದರಿಂ ಜಾತಿ ಗೋತ್ತಾದಿಗಳಂ ಪಕ್ಷವಿಡಿದು ವಾದಮಂ ಮಾಡಿ ಚರ್ಚಿಸಿದೊಡೆ ಕಷಾಯೋದಯಮಾಗಿ ಪಾಪಾಸ್ರವಂ ಪೊರ್ದುಗುಮೆಂದು ನಿಶ್ಚೈಸುವುದು.

ಮತ್ತಂ ಶಕವರುರ್ಷಂಗಳ್ ೧೭೧೨ನೆಯ ಸಾಧಾರಣ ಸಂವತ್ಸರದ ಜ್ಯೇಷ್ಠ ಶುದ್ಧ ಪಂಚಮಿಯಲ್ಲು ಸೋದೆಯ ಪಟ್ಟಾಚಾರ್ಯರ್ ಸಮುದಾಯಂಬೆರಸು ಮಲೆಯೂರಿಗೆ ಬಂದು ಶ್ರುತಪಂಚಮಿ ಪ್ರಭಾವನೆಯಂ ಮಾಡಿಸಿ ಸ್ಥಳದ ಶಾನುಭಾಗ ದೇವಯ್ಯನಂ ಹೋಮದುಪಾಧ್ಯಾಯ ಪದ್ಮನಾಭಯ್ಯನಂ ಧರ್ಮೋಪಾಧ್ಯಾಯನಂ ಗುಂಡಲ ಶಿರಸ್ತೆ ದೇವಯ್ಯನು ಮೊದಲಾದ ಸ್ಥಲಾಂತರಂಗಳೊಳಗುಳ್ಳ ಬ್ರಾಹ್ಮರೆಲ್ಲರಂ ಬರಿಸಿ ನಿಮಗೆ ಗುರುಪೀಠಮಪ್ಪ ಸುಧಾಪುರಕ್ಕೆ ಸಮಾನಮಾದೀ ಕನಕಗಿರಿ ಸಿದ್ಧಸಿಂಹಾಸನಕ್ಕೆ ಐವತ್ತು ವರುಷದಿಂದಧೀಶರಲ್ಲದಿಪ್ಪುದೇಕೆ ಈಗಳ್ ನಾವು ಒಬ್ಬರಂ ನಿಯಮಿಸುವೆವು ನಿಮ್ಮಲ್ಲಿ ಬುದ್ಧಿವಂತರಂ ಬರಿಸುವುದೆಂಬುದು ವಿಪ್ರರೆಂದರಿಲ್ಲಿ ಪೂರ್ವದೊಳ್ ವಣೋತ್ತಮರ್ ಆಚಾರ್ಯಪದವಿಯನಾಂತು ಮುಂದಣ ಪಟ್ಟಮಂ ನಿಯಮಿಸಿ ನಿರ್ವಾಣಮನಾಂತು ಕಾಲಂಗಾಣುತ್ತಿರ್ದರೀಚೆಯಲ್ಲಿ ಮೂರು ಪಟ್ಟಗಳ್ ಸ್ವಯಂಕೃತಮಾಗೆ ಕೆಲಂಬರ್ ಗುರುವಿಲ್ಲದೆಂತು ದೀಕ್ಷೆಯುಂಟೇ ಎಂದು ವ್ಯವಹರಿಸಿ ವೈರಾಗ್ಯಂ ಪುಟ್ಟಿದಾಗಳ್ ಗುರುಗಳಲಾಭಮಾದೊಡೆ ಗೃಹಸ್ಥಾಚಾರ್ಯರನುಮತಿಯಿಂ ತಾನೆ ದೀಕ್ಷೆಗೊಳಲಪ್ಪುದೆಂಬ ಸಮ್ಮತಮಿರ್ದುದೆನೆ ಆರೆಂದೊಡೆ ಪೂರ್ವದೊಳ್ ತೀರ್ಥಕರ ಪರಮದೇವರುಮವರೊಡನೆಯನೇಕ ರಾಜರಾದಿಗಳ್ ತಮ್ಮಿಂದಲೆ ಧರಿಸಿದರಲ್ಲದೆ ಸುವರ್ಣಭದ್ರ ಶಿವಭೂತಿ ಪೂಜ್ಯಪಾದರ್ ಮೊದಲಾಗಿ ಕೆಲಂಬರ್ ಸ್ವಯಂಕೃತ ತಪದಿಂ ಸದ್ಗತಿವಡೆದರ್. ತ್ರಯವರ್ಣಿಕದೊಳ್ ವಿಪ್ರರ್ಗೆ ಆರ್ಯಷಟ್ಕರ್ಮಮುಂ ದಯಾರ್ದ್ರವೃತ್ತಿ ಮೊದಲಾಗೆ ದಶಶುದ್ಧಿಯಿಂದಾಹಿತಾಗ್ನಿಗಳಾಗಿಯುಂ ಅತಿಬಾಲವಿದ್ಯಮುಂ ಕುಲಾಧಿಯುಂ ವರ್ಣೋತ್ತಮತ್ವಮುಂ ಪಾತ್ರತ್ವಮುಂ ಸೃಷ್ಟ್ಯಧಿಕಾರತ್ವಮುಂ ವ್ಯವಹಾರೇಶಿತ್ವಮುಂ ಅವಧ್ಯತ್ವಮುಂ ಅದಂಡತ್ವಮುಂ ಮಾನಾರ್ಹತ್ವಮುಂ ಪ್ರಜಾಸಂಬಂಧತ್ವಮುಮೆಂಬ ದಶಾಧಿಕಾರಮುಳ್ಳುದರಿಂದ ಚೇತನಮಪ್ಪರ್ಹತ್ಸಿದ್ಧಾಚಾರ್ಯರ್ ಮೊದಲಾದ ಪ್ರತಿಮಾಪ್ರತಿಷ್ಠೆಗೆಯ್ದು ಸಾಕ್ಷಾತ್ಕರಿಸಿ ಪೂಜಿಸಿ ಪ್ರತ್ಯಕ್ಷದೇವರಂ ಮಾಳ್ಪರಪ್ಪುದರಿಂ ವ್ರತೋಪದೇಶದೀಕ್ಷೆ ಶಿಕ್ಷೆಯಂ ಮಾಡಲ್ ಯೋಗ್ಯರಪ್ಪರ್.

ಶ್ಲೋಕ || ಯಥಾರ್ಹಮಾತ್ಮಸಾತ್ಕುರ್ವನ್ ದ್ವಿಜಸ್ಸಾಲ್ಲೋಕಸಮ್ಮತಃ
ಗುಣೇಪ್ಟೇಷು ವಿಶೇಷೋsನ್ಯೋ ಯೋ ವಾಚ್ಯೋ ಬಹುವಿಸ್ತಃ ||

ಸ ಉಪಾಸಕಸಿದ್ಧಾಂತಾದಧಿಗಮ್ಯ ಪ್ರಪಂಚತಃ
ಋಷೀಣಾಂ ಶಿಕ್ಷಕೇನಾಪಿ ವಿಪ್ರೇಣಾಚಾರವರ್ತಿನಾ ||

ವ್ರತಮಂತ್ರಕ್ರಿಯಾಯುಕ್ತದ್ವಿಜೇನ ವ್ರತಧಾರಣಮ್
ಬ್ರಹ್ಮಚಾರೇರ್ಗೃಹಸ್ಥೇನ ಪಿತ್ರಾ ವಾ ವ್ರತಧಾರಣಮ್ ||

ಎಂಬುದರಿಂದುಪನಯನ ವ್ರತಾದಿಗಳನುಪದೇಶಂಗೆಯ್ವ ಯೊಗ್ಯತೆಯುಂಟಪ್ಪುದರಿಂ ವಿದ್ವದ್ವಿಷ್ಟ ಸಾಮಾಜಿಕರಪ್ಪವರಿಂದಾದರು ಕೊಳ್ಳಬಹುದೆಂದು ಪೇಳಿ ಮುನ್ನ ಜಾತಿಗೋತ್ರಂಗಳ್ ಇರ್ದುದರಿಂ ಬ್ರಾಹ್ಮಣರ್ ಮಿಥ್ಯಮಂ ಪೊರ್ದಿ ಜಿನಮತ ದ್ವೇಷಿಗಳಾದವರೊಳ್ ಗೌತಮಗ್ರಾಮದ ಗೌತಮಗೋತ್ರದ ವಿಪ್ರಗೌತಮನೆಂಬಂ ನಿಜಾನುಜರಪ್ಪ ಗಾರ್ಘ್ಯಭಾರ್ಗವರೆಂಬರ್ ಐನೂರ್ವರ್ ಶಿಷ್ಯರ್ ಸಹಿತಂ ಇಂದ್ರನೊಡನೆ ವರ್ಧಮಾನಜಿನ ಸಮವಸರಣಮನೆಯ್ದಿದಾಗಳೆ ಇಂದ್ರಭೂತ್ಯಗ್ನಿಭೂತಿ ವಾಯುಭೂತಿಗಳೆಂಬ ಪ್ರತಿನಾಮಮುಳ್ಳ ಗೌತಮಾದಿಗಳ್ ಶಿಷ್ಯರ್ವೆರಸು ಜಿನಮುಖದರ್ಶನಮಾತ್ರದೊಳೆ ಮಿಥ್ಯಾತ್ವ ಪೋಗಿಯವಧಿ ಪುಟ್ಟಿ ತ್ರಿವಿಧನಿರ್ವೇಗದಿಂ ದೀಕ್ಷೆಗೊಂಡು ಸಪ್ತರ್ಧಿಸಂಪತ್ತಿಯಿಂ ಮನಃ ಪರ್ಯಯವೆಂಬ ಚತುರ್ಥಜ್ಞಾನಂ ಪುಟ್ಟಿ ಪ್ರಥಮಗಣಧರರಾದಿಗಳಾಗೆ ಕಡೆಯೊಳ್ ಕೇವಲಿಗಳಾಗಿ ಮುಕ್ತಿಗೆ ಸಂದರ್. ಉಳಿದೈನೂರ್ವರ್ ತಪಂಗೊಂಡು ಸಮವಸರಣದೊಳ್ ಸಪ್ತವಿಧ ಋಷಿಗಳೊಳ್ ಕೂಡಿರ್ದರೆನಿತೆಂದೊಡೆ ದೇವಲಿಗಳೇಳುನೂರ್ವರಲ್ಲದೆ ಮನಃ ಪರ್ಯಯ ಶಿಕ್ಷಕ ಪೂರ್ವಧರ ಅವಧಿವಿಕ್ರಿಯವಾದಿಗಳ್ ಪನ್ನೊರ್ವರ್ ಗಣಧರರ್ವೆರಸು ಪದಿಮೂರು ಸಾವಿರದನೂರಪ್ಪನ್ನೊರ್ವರ್ ಮುಕ್ತರಾದರ್.

ಮತ್ತಂ ಸೂರ್ಯಮಿತ್ರನುಂ ಸೋಮಶರ್ಮನುಂ ವಿಷ್ಣು ಭದ್ರಬಾಹು ಪೂಜ್ಯಪಾದ ಗೋವಿಂದಭಟ್ಟರ್ ಮೊದಲಾಗೆ ಪರಸಮಯದೊಳಿರ್ದು ಜಾತಿಗೋತ್ರ ನಾಮ ಮಾತ್ರಮಿರ್ದುದರಿಂ ಜಿನದೀಕ್ಷಾಯೋಗ್ಯತೆಯಿಂ ಪೇಳಿ ಎಲ್ಲರು ಒಪ್ಪಿ ನಿರುತ್ತರಾದರಲ್ಲಿಂದಿತ್ತಲ್ ಪಟ್ಟಮಂ ತರಿಸಿರಲ್ ಅಣ್ಣಯ್ಯಶೆಟ್ಟಿಗ್ರಾಮಮಂ ಬಿಡಿಸಿ ದೇವರ ಪ್ರತಿಷ್ಠಾನಂತರ ಮಹಾಜನಂಗಳ್ ಶ್ರಾವಕರ್ ಸಹಿತ ತಗಡೂರ ದೇವರಸನ ಸುಭೆಯದೊಳ್ ಊರ ಬಸ್ತಿ ಪೂಜಾರ್ಯನಪ್ಪ ಬುಜ್ಜಯ್ಯಂಗೆ ಕನಕಗಿರಿಯ ಸಿದ್ಧಸಿಂಹಾಸನನಾಥನಾದೊಡೆ ಒಳಸ್ಥಳದ ಶ್ರಾವಕರೆಲ್ಲರತ್ಯಂತ ಭಕ್ತಿಯಿಂ ಪರ್ವ ತಿಥಿಗಳೊಳ್ ಬರಿಸಿ ಧರ್ಮಪ್ರಭಾವನೆಯಂ ಮಾಡುತ್ತಿರ್ದರವರ ಕಾಲಂಗಂಡೈವತ್ತು ವರುಷದಿಂದಂ ತರಿಸಿರ್ದುದೆಂದು ಮಹಾಜನಂಗಳ್ ಸ್ವಾಮಿಗಳ್ಗೆ ಪೇಳೆ ತಮ್ಮಿಂದ ಐವತ್ತು ವರಹಾ ಮುಟ್ಟೆ ನೇಮಿರಾಜಪುತ್ರ ಬ್ರಹ್ಮಚರ್ಯಾಶ್ರಮದೊಳಿರ್ದು ಬೊಮ್ಮರಸಂಗೆ ಧರ್ಮೋಪಾಧ್ಯಾಯ ಪದ್ಮನಾಭೋಪಾಧ್ಯಾಯರಿಂ ಜ್ಯೇಷ್ಠ ಶುದ್ಧ ಏಕಾದಶಿಯಲ್ಲು ದೀಕ್ಷಾವಿಧಿಯಂ ಮಾಡಿಸಿ ಪಟ್ಟಂಗಟ್ಟಿ ಉಪಕರಣಂಗಳಂ ಕೊಟ್ಟು ಅಷ್ಟಾಹ್ನಿಕ ಪೂಜೆಗೈವತ್ತು ವರಹಾ ಪುದುವಟ್ಟು ಮಾಡಿ ಪೋದರ್.

ಇತ್ತಲ್ ಪೂರ್ವಮೇರೆಯೊಳ್ ಅರಿಕುಠಾರ ಸ್ಥಾಳಾಂತರಂಗಗಳ ಶ್ರಾವಕರತಿ ಭಕ್ತಿಯಿಂ ಮಂಗಲ ತ್ರಯೋದಶಿ ಮೊದಲಾಗೆ ಪ್ರಸ್ತಪ್ರಯೋಜನದೊಳ್ ಪಾದಪೂಜಾಪೂರ್ವಕಂ ಪ್ರಭಾವನೆಯಂ ಮಾಡಿಸುತ್ತಿರ್ದು ಪೂರ್ವಮರ್ಯಾದೆ ತಮ್ಮ ಗೃಹದೊಳೆ ಬೇರೊಂದು ಗೃಹದೊಳ್ ಹೋಮಮಂ ಮಾಡಿಸಿ ದ್ವಿಜರಿಂ ಪಾಕಶುದ್ಧಿಯಂ ಮಾಡಿಸಿ ದೀಕ್ಷೆಯಂ ಮಾಡಿಸುತ್ತಿರ್ದು ನಾವೆ ಮಾಡಿಯಾಹಾರಮಂ ಕೊಡುವೆವೆಂದು ಪ್ರಾರ್ಥಿಸಿದೊಡೆ ಸ್ವಾಮಿಗಳೆಂದರ್ ನೀವು ವ್ರತ ಶೀಲ ಚಾರಿತ್ರಮುಳ್ಳವರಾಗಿಯು ದಾನಯೋಗ್ಯರಪ್ಪುದರಿಂ ಕೊಳ್ಳಬಹುದಾದೊಡಂ ಪೂರ್ವದೊಳ್ ಇಭ್ಯಕುಲಜರಪ್ಪ ವೈಶ್ಯರ್ ಈ ದುಷ್ಷಮ ಪಂಚಮಕಾಲದೊಳ್ ವರ್ಣಾಶ್ರಮಂಗೆಟ್ಟು ಲೌಕಿಕ ಷೋಡಶ ಕರ್ಮವಿರಹಿತರಾಗಿ ಕೆಲದಿವಸ ಚಾರಿತ್ರಂಗೆಟ್ಟು ಪ್ರತಿನಾಮಧೇಯಮಂ ತಾಲ್ದಿಪ್ಪುದರಿಂದಿಂದುವರೆಗಂ ಬ್ರಾಹ್ಮಣರ್ ಭೋಜನಮಂ ಬಿಟ್ಟಿಪ್ಪರೀಗಂ ನಿಮ್ಮ ಶೀಲ ಚಾರಿತ್ರಂಗಳಂ ಬಗೆದಾಹಾರಂಗೊಂಡೊಡುಳಿದ ಭೋಗಾರರ್ ಮೊದಲಾದ ಕೂಡುವಳಿ ಸಂತಾನಾದಿಗಳಲ್ಲಿಯು ಕೊಳ್ಳಬೇಕಾದುದರಿಂದವರ್ಗೆ ಜಾತ್ರಿಗೋತ್ರಮಿಲ್ಲದೆ ಪೂರ್ವೋತ್ತರ ಕರ್ಮಂಗಳಂ ಬಿಟ್ಟಿ ಕೆಲರನ್ಯದೇವತಾ ಭಜನೆಯುಳ್ಳುದರಿಂದವರ ಗೃಹಶುದ್ಧಿ ಮೊದಲಾದ ಕರ್ಮಂಗಳಂ ಮಾಳ್ಪಲ್ಲಿಯವರ ಮನೆಯ ಮುಸುರೆಯಂ ಮುಟ್ಟದೆ ತಂತ್ರದಿಂದಲೆ ಹೋಮಾದಿಗಳಂ ಮಾಡುತ್ತಿರ್ದರ್.

ಶೋಕ್ಲ ||ಮಂತ್ರ ತಂತ್ರಾತ್ಮ ಕೋ ಹೋಮಃ ಕರ್ತವ್ಯಃ ದ್ವಿಮಂದಿರೇ
ತಂತ್ರಮೇವ ಹಿ ಕರ್ತವ್ಯಂ ನ ಮಂತ್ರಶ್ಚಾನ್ಯಮಂದಿರೇ ||

ಎಂದಿಂತು ನಡೆಯುತ್ತಿರ್ದಿತ್ತ ಶೀಲಾಚಾರಸಂಪನ್ನರಾದುದರಿಂದವರ್ ಮಾಡಿದ ಭಕ್ಷ್ಯಾದಿಗಳಂ ಹೋಮಕ್ಕರ್ಚಿಸುವರಲ್ಲದೆ ತಾವು ಭುಂಜಿಸದೆ ಇರುವದ್ದರಿಂದಲು ನಾವು ಕೊಳ್ಳುವದೆಮತು ಪೂರ್ವದೊಳ್ ಜಾತಿನಾಮವಿರ್ದುದರಿಂ ಪರಸಮಯಿಗಳಪ್ಪ ಬ್ರಾಹ್ಮರ ಮನೆಯೊಳ್ ಭಿಕ್ಷೆಯಂ ಮಾಡುತ್ತಿರ್ದರಿತ್ತ ಶೋಧನೆ ಭೇದನೆಯಿಲ್ಲದೆ ಅಭಕ್ಷ್ಯಂಗಳಂ ಮಾಳ್ಪುದರಿಂ ಬಿಟ್ಟರೀ ಜೈನರ್ಗೆ ವರ್ಣಾಶ್ರಮ ನಾಲ್ಕರಿಂದತ್ತ ಪಂಚಮಾದಿ ನಾಮಂಗಳಾಂತು ಕುಲಮಂ ಬಿಟ್ಟು ಲೌಕಿಕಾಚಾರ ಮಾಘಶುದ್ಧಿಯಿಲ್ಲದಿಪ್ಪುದರಿಂದೆಂತು ಮಾಡಲಕ್ಕುಮೆನೆ ಕೆಲಂಬರ್ ಸಹಜಮೆಂದೊಪ್ಪಿದರ್. ಮತ್ತಮಾಚಾರ್ಯರೆಂದರ್ ಪರಮಾರ್ಥದೊಳ್ ಪುಣ್ಯಪಾಪಂಗಳಿಗೆ ಕುಲಬಲಾದಿಗಳ್ ಪ್ರಯೋಜನಮಿಲ್ಲಮೆಂತೆಂದೊಡೆ

ಶ್ಲೋಕ ||ಯದಿ ಪಾಪನಿರೋಧೋನ್ಯಸಂಪದಾ ಕಿಂ ಪ್ರಯೋಜನಮ್
ಅಥ ಪಾಪಾಸ್ರವೋಸ್ತ್ಯನ್ಯಸಂಪದಾ ಕಿಂ ಪ್ರಯೋಜನಮ್ ||

ಎಂದು ಶ್ರತಿಯಿಪ್ಪುದರಿಂದಹಂಕಾರದಿಂ ವರ್ಣಾನಾಂ ಬ್ರಾಹ್ಮಣೋ ಗುರುವೆಂದು ಗರ್ವಮಂ ತಾಳಿರ್ಪ ಜಾತ್ಯಾಭಿಮಾನಮಂ ಬಿಡಬೇಕು. ಆದೊಡಂ

ಶೋಕ್ಲ || ಸಮ್ಯಗ್ದರ್ಶನಸಂಪನ್ನಮಪಿ ಮಾತಂಗದೇಹಜಮ್
ದೇವಾದೇವಂ ವಿದುರ್ಭಸ್ಮ ಗುಢಾಂಗಾರಾಂತರೌಜಸಮ್ ||

ದರ್ಶನಸಂಪನ್ನನಪ್ಪ ಮಾದಿಗನಂ ಸದೃಷ್ಟಿಗಳ್ ದ್ರವ್ಯಭಾವದಿ ಕೊಂಡಾಡಿ ಪ್ರಶಂಸೆಗೆಯ್ವುದಲ್ಲದವನೊಳ್ ಕೂಡಿ ಅನ್ನಪಾನಾದಿಗಳ ಕೊಳ್ಳಲಾಗ ಲೌಕಿಕ ವಿರೋಧ ಮಲ್ಲದೆ ಸಹಜಮಾಗದು. ತಪಸ್ವಿಗೆ ಜಾತಿಯಿಲ್ಲೆಂದು ಕಂಡ ಪಲಂಬರೊಳಾಹಾರಂ ಗೊಂಡೊಡವಧೂತ ಸನ್ಯಾಸಿಯೆಂತಕ್ಕುಮದರಿಂದಂತರಂಗದೊಳ್ ಜಾತ್ಯಾಭಿಮಾನಮಂ ಬಿಟ್ಟು ಲೌಕಿಕ ಬಾಹ್ಯದೊಳ್ ಜಾತಿಯಂ ಬಿಟ್ಟು ಚಾರ್ವಾಕಮತಮಪ್ಪುದೆಂದು ಪೇಳಿ ಕನಕಗಿರಿಯೊಳಿರ್ದು ತೀರ್ಥವಂದನಾ ನಿಮಿತ್ತ ಘಟ್ಟದ ಕೆಳಗೆ ಪೋಗಿರ್ದು ಬಂದು ವಾಳುಕಾಪುರದೊಳಾಂಗೀರಸ ಸಂವತ್ಸರದ ಮಾಘದೊಳ್ ಸ್ವರ್ಗಸ್ಥರಾದರಾ ಫಾಲ್ಗುಣದೊಳ್ ಬ್ರಹ್ಮಸೂರಿಗಳ ಸಂತತಿ ಪದ್ಮನಾಭೋಪಾಧ್ಯಾಯನಂ ದೇವರಾಜರಸು ಪಟ್ಟಂಗಟ್ಟಿಸಿದನಂತರ ಕಾಲೋಗ್ರಗಣದಾಚಾರ್ಯರಂ ಯುವಸಂವತ್ಸರದೊಳ್ ವಾಳಿಕನಗರದೊಳ್ ಸ್ಥಾನನಂಗೆಯ್ದರಿಂತು ಜೈನಮತದೊಳ್ ಜಾತಿ ಗೋತ್ರ ಕುಲ ಆಚಾರವೆಂದು ನಾಲ್ಕಪ್ಪವಲ್ಲಿ ಜಾತಿಯೆಂಬುದು ಬ್ರಹ್ಮ ಕ್ಷತ್ರಿಯ ವೈಶ್ಯ ಶೂದ್ರರೆಂದು ನಾಲ್ಕಪ್ಪುವು. ಗೋತ್ರಂ ಕಾಶ್ಯಪ ಶ್ರೀವತ್ಸ ಮೊದಲಾದ ನಾನಾ ಭೇದವಪ್ಪುದು. ಕುಲಮೆಂಬುದು ಜಿನಶಾಸನದೇವತೆಗಳ ಸಂಬಂಧಿ ಮನು ಇಕ್ಷ್ವಾಕು ಸೂರ್ಯಚಂದ್ರ ಉಗ್ರ ನಾಥಕುಲಮೆಂದೈದು ತೆರನವರ್ಗಧಿದೇವತೆಗಳ್ ವಿಜಯ ಬ್ರಹ್ಮ ಸರ್ವಾಹ್ಣ ಧರಣೇಂದ್ರಾದಿ ಯಕ್ಷರಂ ಚಕ್ರಿಣಿ ಜ್ವಾಲಾಮಾಲಿನಿ ಕೂಷ್ಮಾಂಡಿನಿ ಪದ್ಮಾವತಿ ಮೊದಲಾದ ಜಿನಶಾಸನದೇವತೆಗಳಂ ಇಷ್ಟಪ್ರಾರ್ಥನೆಯಿಂ ಪೂಜಿಸುವುದು ಕುಲದೇವರೆಂಬುದು

ಆಚಾರಮೆಂಬುದು ಜ್ಞಾನಾಚಾರ ದರ್ಶನಾಚಾರ ತಪಾಚಾರ ಚಾರಿತ್ರಾಚಾರಮೆಂದು ನಾಲ್ಕು ತೆರನಿಂತು ಚತುರ್ವಿಧಮುಳ್ಳ ಜೈನರೆಂದು ಪೇಳ್ವುದಿಂತು ಗೋತ್ರಂಗಳಾದುದೆಂದೊಡೆ ಜಿನಸೇನಾಚಾರ್ಯೋಕ್ತ ಪ್ರಕಾರ ಮುನ್ನ ಶ್ರೀಮದಾದಿ ಪರಮೇಶ್ವರ ಮೋಕ್ಷಮಂ ಪಡೆದ ಬಳಿಕ ಸುಷಮ ದುಷ್ಷಮಮೆಂಬ ತೃತೀಯಕಾಲ ಮೂರು ವರ್ಷಮೆಂಟು ತಿಂಗಳು ಪದಿನೈದು ದಿವಸಮಿರ್ದು ಸಲ್ವಿನಂ ಬಳಿಕ ದುಷ್ಷಮ ಸುಷಮಮೆಂಬ ಚತುರ್ಥಕಾಲಂ ನಾಲ್ವತ್ತಿಚ್ಛಾಸಿರ ವರ್ಷಂ ಕುಂದಿದೊಂದು ಕೋಟಿ ಕೋಟಿ ಸಾಗರೋಪಮಂ ಬರೆ ಆ ವೃಷಭತೀರ್ಥಸಂತಾನಮಯವತ್ತು ಲಕ್ಷ ಕೋಟಿ ಸಾಗರಂ ಸಲ್ವಿನಮಜಿತಾದಿ ಪುಷ್ಪದಂತತೀರ್ಥಂಕರಸಂತಾನಕಾಲಂ ನಾಲ್ವತ್ತೊಂಬತ್ತು ಲಕ್ಷ ಕೋಟಿತೊಂಬತ್ತೊಂಬೈಸಾಸಿರದೊಂಬೈನೂರತೊಂಬತ್ತೆಂಟು ಕೋಟಿ ಸಾಗರೋಪಮ ಕಾಲಂ ಸಲ್ವಿನಂ ಕಡೆಯೊಳೊಂದು ಪಲ್ಯದ ಚಾತುರ್ಭಾಗದೊಳೊಂದು ಭಾಷೆಯೊಳ್ ಪಂಚವಿಧ ಜ್ಞಾನಿಗಳಿಲ್ಲದೆ ಸಾಗಾರನಗಾರ ಧರ್ಮಮಿಲ್ಲದೆ ಪರಮಾಗಮಮಂ ಕೇಳ್ವ ಪೇಳ್ವರ್ ನಡೆವರುಮಿಲ್ಲದೆ ಮರೀಚೀಕೃತ ಮಿಥ್ಯಾಶಾಸ್ತ್ರಂ ಪೆರ್ಚಿ ವರ್ಣತ್ರಯರು ಸಚ್ಛೂದ್ರಾಸಚ್ಛೂದ್ರರ್ ತಂತಮ್ಮ ಗೋತ್ರಾದಿಗಳಂ ಬಿಟ್ಟು ಮಿಥ್ಯಮಂ ಪೊರ್ದೆ ಜಿನಧರ್ಮ ಸುಳುವಿಲ್ಲದಿರ್ದುದಷ್ಟರೊಳ್ ದಶಮ ತೀರ್ಥಂಕರರುದಿಸುವರೆಂದು ಇಂದ್ರನವಧಿಯಿಂದರಿದು ಬಂದು ಮಲೆಯವಿಷಯದ ಭದ್ರಿಳಾಪುರದ ಇಕ್ಷ್ವಾಕುವಂಶದ ಕಾಶ್ಯಪಗೋತ್ರದ ದೃಢರಥನಾತನರಸಿ ಸುನಂದಾದೇವಿಯುಮೆಂಬ ದಂಪತಿಗಳ್ ಸ್ವಭಾವದೊಳೆ ಸಮ್ಯಕ್ತ್ವಂ ಪುಟ್ಟಿ ಮಲಮೂತ್ರಂಗಳಿಲ್ಲದೆ ಶುಚಿರ್ಭೂತ ರಾಗಿರ್ದರವರ್ಗೆ ಸುರರ್ ಮಂಗಲಸ್ನಾನಮಂ ಗಂಗಾದಿ ತೀರ್ಥಜಲದಿಂದಭಿಷೇಕಂಗೆಯ್ದು ದಿವ್ಯಗಂಧಮಾಲ್ಯಾಂಬರ ಭೂಷಣದಿಂದಲಂಕರಿಸಿ ಉಪಚರಿಸಲ್ ದೇವತೆಗಳನಿರಿಸಿ ದೇಶಂಗಳ ರಾಜಧಾನಿಗಳೊಳ್ ಚೈತ್ಯಾಲಯಂಗಳಂ ನಿರ್ಮಿಸಿ ಗರ್ಭಕ್ಕವತರಿಸಲರುದಿಂಗಳುಂಟೆನೆ ಕುಬೇರಂಗೆ ರತ್ನವೃಷ್ಟಿ ಮೊದಲಾದಾರ್ಯಪಂಚಕಂಗಳಂ ಮಾಡೆಂದು ಪೋಗೆನೆ ಗರ್ಭಾವತರಣ ಕಲ್ಯಾಣಪೂರ್ವಕಂ ತ್ರಿಜ್ಞಾನಧರಂ ಪುಟ್ಟಿ ಜನ್ಮಾಭಿಷೇಕಮನಾಂತು ಧರ್ಮಚ್ಯುತಿಯೊಳ್ ಸಂತಾಪಮಾಗಿರ್ದ ಪ್ರಜೆಯನಾರಿಸುವುದರಿಂ ಶೀತಲರೆಂಬ ಪೆಸರಾಂತು ಸಾಸಿರ್ವರರಸುಗಳ್ವೆರಸು ಪರಿನಿಷ್ಕ್ರಮಣದೊಳೆ ದೀಕ್ಷೆಗೊಮಡು ಕೇವಲ ಜ್ಞಾನೋದಯಮಾಗೆ ಆಗಳ್ ಮಿಥ್ಯಾದೃಷ್ಟಿಗಳಾಗಿರ್ದ ತ್ರೈವರ್ಣಿಕರೊಳ್ ಶ್ರೀವತ್ಸನುಂ ಕಾಶ್ಯಪನುಂ ಸೌಧರ್ಮನುಂ ವಶಿಷ್ಟನುಂ ಗೌತಮನುಂ ಸ್ಥಂಡಿಲನುಂ ಭಾರ್ಗವನುಂ ದಿವಾಕರನುಂ ಇಂದ್ರಭೂತಿಯುಂ ಅಗ್ನಿಭೂತಿಯುಂ ವಸುಮತಿ[ಯುಂ] ಸುಧರ್ಮನುಂ ಸುಪ್ರಭನುಂ ಅಗಸ್ತ್ಯನುಂ ಅಕಂಪನುಂ ಪ್ರಭಾಸನುಂ ವಿಶ್ವಾಮಿತ್ರನುಂ ಪ್ರಶಸ್ತನುಂ ಭರದ್ವಾಜನುಂ ನಂದಿಮಿತ್ರನುಂ ಪ್ರಶಸ್ತನುಂ ನಂದಿಮಿತ್ರನುಂ ಅತ್ರಿಯನುಂ ಪ್ರಜಾಪತಿಯುಂ ಕೌಂಡಿನ್ಯನುಂ ಕಣ್ವನುಂ ಪ್ರಜಾಪತಿಯುಂ ಮೈತ್ರೇಯನುಂ ಪ್ರಭಾಸನುಂ ವಿಶಾಖನುಂ ಜಯನುಂ ನಾಗನುಂ ನಂದಿಮಿತ್ರನುಂ ಗೋವರ್ಧನನುಂ ಜಯನುಂ ಭೌಮನುಂ ಬೃಹಸ್ಪತಿಯುಂ ಸನತ್ಕುಮಾರನುಂ ಸುಭದ್ರನುಂ ಯಶೋಭದ್ರನುಂ ಶ್ರೀಕಾಂತನುಂ ಶ್ರೀಭೂತಿಯುಂ ಸನತ್ಕುಮಾರನುಂ ಸುಭದ್ರನುಂ ಯಶೋಭದ್ರನುಂ ಶ್ರೀಕಾಂತನುಂ ಶ್ರೀಭೂತಿಯುಂ ಸ್ವಯಂಭುವುಂ ವೃಷಭನುಂ ದೇವಶರ್ಮನುಂ ಶ್ರೀಚಂದ್ರನುಂ ಪಷ್ಯಮಿತ್ರನುಂ ಚಂದ್ರಾಭನುಂ ವಿಷ್ಣುವುಂ ಹಿರಣ್ಯಗರ್ಭನುಂ ದೇವಪಾಲನೆಂಬಿವರ್ ಮೊದಲಾಗೆ ಐನೂರ್ವರ್ ಜಿನದೀಕ್ಷೆಯಂ ಕೈಕೊಂಡವಧಿಜ್ಞಾನಿಗಳಾಗಿ ಸಪ್ತರ್ಧಿಯೊಳ್ ಕೂಡಿರ್ದು ತಂತಮ್ಮ ಪುತ್ರಪೌತ್ರಾದಿಗಳ್ಗೆಲ್ಲಾ ಪರಮಾಗಮೋಪದೇಶಂಗೆಯ್ದು ಸಾಗಾರನಗಾರ ಧರ್ಮಮಂ ಕೈಕೊಳಿಸಿ ಪ್ರಸಿದ್ಧಿ ವಡೆದು ಅವರವರ ಸಂತಾನದವರವರವರುಪದೇಶದಿಂ ಸುಜ್ಞಾನಿಗಳಾಗಲವರ ಸಂತತಿ ಗೋತ್ರ ಮೆಂದಾಗಲ್ ಸಮವಸರಣಮಂ ಪೊಕ್ಕಿರ್ದು ಭವ್ಯರ ಸಂಖ್ಯೆ ವಿದರ್ಭಗಣಧರರ್ ಮೊದಲಾಗೆಂಬತ್ತೊರ್ವರ್ ಗಣಧರರುಂ ಸಾಸಿರದನಾನೂರ್ವರ್ ಪೂರ್ವಧರರುಂ ಎಂಟುಸಾಸಿರ ಕೇವಲಿಗಳುಂ ಅವಧಿಮನಃಪರ್ಯಯಜ್ಞಾನಿಗಳ್ ವಾದಿಗಳ್ ವಿಕ್ರಿಯರ್ದಿಸಂಪನ್ನರ್ ಶಿಕ್ಷಕರೆಂದೈದು ತೆರದ ಋಷಿಗಳ್ ತೊಂಬತ್ತುಮೂರು ಸಾಸಿರದ ನಾನೂರ್ವರ್ ಮೂರು ಲಕ್ಷ ಸಾವಿರಜ್ಜಿಕೆಯರ್ ಎರಡು ಲಕ್ಷ ಶ್ರಾವಕರ್ ನಾಲ್ಕು ಲಕ್ಷ ಶ್ರಾವಕಿಯರ್ ಸಮವಸರಣದೊಳಿರ್ದರಲ್ಲಿಂದತ್ತಲಾ ತಿರ್ಥಸಂತಾನಂ ಮೂರು ಸಾಗರಮರುವತ್ತಾರು ಲಕ್ಷಮಿಪ್ಪತ್ತಾರು ಸಾಸಿರ ವರ್ಷ ಕುಂದಿದೊಂದು ಕೋಟಿ ಸಾಗರೋಪಮ ಕಾಲಂಬರಂ ಜಿನಧರ್ಮಂ ವರ್ತಿಸುತ್ತಿರ್ದು ಮತ್ತಮದರಂತ್ಯದೊಳುಂ ಶ್ರೇಯಾಂಸ ವಾಸುಪೂಜ್ಯ ವಿಮಲಾನಂತ ಧರ್ಮತೀರ್ಥಸಂತಾನದೊಳರ್ಧತೀರ್ಥ ಸಂತಾನಾಂತ್ಯದೊಳರ್ಧತ್ರಿಚತುತ್ರಯದ್ಯೇಕಭಾಗ ಪಲ್ಯಕಾಲಂ ಜಿನಧರ್ಮವಿಚ್ಛಿನ್ನ ಮಾದಾಗಳ್ ಅರ್ಯಖಂಡದೊಳೆಲ್ಲಾ ಮಿಥ್ಯಥ್ವಮಂ ಪೊರ್ದಿರ್ದು ಆಯಾಯ ತೀರ್ಥಂಕರ ಕಾಲದೊಳೆ ತ್ರೈವರ್ಣಿಕರ್ ಸಮ್ಯಕ್ತ್ವಮಂ ಕೈಕೊಂಡು ಸದ್ಧರ್ಮಪ್ರಭಾವಕರಾಗಿರ್ದರು.

ಮತ್ತಂ ಷೋಡಶ ತಿರ್ಥಕರರಪ್ಪ ಶ್ರೀಶಾಂತಿತೀರ್ಥಂಕರಗಣ್ಯ ಪುಣ್ಯದಿಂ ಸಜ್ಜಾತಿ ಮೊದಲಾದ ಸಪ್ತಪರಮಸ್ಥಾನ ಭಾಗಿಗಳಾಗಿ ಪುಟ್ಟಿ ಸರ್ವಜ್ಞರಪ್ಪರಾಗಿ ಸಮವಸರಣದೊಳ್ ಚಕ್ರಾಯುಧ ಗಣಧರರದಿ ಸಪ್ತವಿಧ ಋಷಿಗಳು ಕೇವಲಿಗಳು ಸಹಿತ ಅರುವತ್ತುನಾಲ್ಕು ಸಾಸಿರದ ನಾನೂರಮೂವತ್ತಾರು ಸಂಖ್ಯೆಯುಂ ಸುರಕೀರ್ತಿ ಮೊದಲಾಗೆರಡು ಲಕ್ಷೆ ಶ್ರಾವಕರು ತಂತಮ್ಮ ಗೋತ್ರಮಂ ಬಿಡದಿರ್ದರವರವರ್ಗೆ ಸೂತ್ರಶಾಖೆಗಳ್ ಬಂದುದೆಂತೆಂದೊಡೆ ಗಣಧರೋಪದೇಶದಿಂ ದ್ವಾದಶಾಂಗಸೂತ್ರಂಗಳೊಳ್ ವಿಪಾಕಮೌಪಾಸಕ ತ್ರಿಲೋಕಪ್ರಜ್ಞಪ್ತಿ ಚಂದ್ರಪ್ರಜ್ಞಪ್ತಿ ಸಾಮಾಯಿಕ ತತ್ವಾರ್ಥಸೂತ್ರ ಮೊದಲಾದವಂ ಪಿಡಿದು ಶಾಸ್ತ್ರಪಾರಾವಾರ ಪಾರಂಗತರಾಗಿ ವೇದವೇದಗಳಾದುದರಿಂದಾಯಾಯ ಸೂತ್ರಂಗಳವರವರ್ಗೆ ಬಂದುದು. ಪ್ರಥಮಾನುಯೋಗಂ ಮೊದಲಾದ ಯೋಗಗಳಾದ ಶ್ರುತಸ್ಕಂಧ ಶಾಖೆಯಂ ಪಿಡಿದುದರಿಂ ವೃತ್ತಾನುಯೋಗಂ ಮೊದಲಾದ ಶಾಖೆ ಬಂದುದು. ಇಕ್ಷ್ವಾಕು ಸೂರ್ಯ ಚಂದ್ರ ಉಗ್ರ ನಾಥವಂಶಮಂ ಮುನ್ನಾದಿ ಬ್ರಹ್ಮ ನಿರ್ಮಿಸಿದ ವಂಶಮದೆ ಪ್ರವರೆಯುಮದಾದುದಿಂತು ಗೋತ್ರ ಸೂತ್ರ ಶಾಖೆ ಪ್ರವರಗಳ್ ವರ್ತಿಸುವುದು. ಇಂತು ವರ್ತಿಸುತ್ತಿರ್ದೊಡೆ ನಮಿತೀರ್ಥಸಂತಾನದೊಳೆ ವ್ಯಾಸನೆಂಬ ಪಾರಿವ್ರಾಜಕಂ ಮಿಥ್ಯಾಶಾಸ್ತ್ರಮಂ ವಿಪರೀತದಿಂ ಪ್ರಕಟಂ ಮಾಡಿ ತನ್ನ ವೇದಮಂ ಯಜುರ್ ಋಕ್ ಸಾಮ ಅಥರ್ವಭೇದದಿಂ ನಲ್ಕಾಗಿ ಮಾಡಿ ಅಶ್ವಲಾಯನ ಬೋಧಾಯನ ಆಪಸ್ತಂಬ ಜೈಮಿನೀಯಮೆಂಬ ಸೂತ್ರಚತುಷ್ಟಯಂ ಕಲ್ಪಿಸಿ ತನ್ನ ಶಿಷ್ಯರ್ಗಮುಪದಶಂಗೆಯ್ದು ಅವರ್ಗಾ ಸೂತ್ರಮಂ ಕಲ್ಪಿಸಿದಂ. ಜಿನಮತದೊಳ್ ಜಾತಿ ಗೋತ್ರ ಕುಲಂ ಆಚಾರಮೆಂದು ನಾಲ್ಕಪ್ಪುವುಮೆಂದಿಂತು ಪೂರ್ವದೊಳ್ ನಡೆದ ಪ್ರಪಂಚಮಂ ಯಥಾಸ್ಥಿತಿಯಿಂ ವಿನಯಜನಂಗಳ್ ತಿಳಿವುದಕ್ಕೋಸ್ಕರಮಾಗಿ ಸಂಗ್ರಹಿಸಿ ಪೇಲ್ದೆನಲ್ಲದೆ ಜಾತ್ಯಾಭಿಮಾನಗರ್ವದಿಂದಿಲ್ಲದುದಂ ಪೇಳ್ದೆ ನಿಲ್ಲಯದಲ್ಲದಿನ್ನೊಂದು ಪ್ರಕಾರಮಾಗಿ ಕಂಡು ಕೇಳಿ ತಿಳಿದಿರ್ದೊಡದಂ ಪ್ರಕಟಿಸುವುದಲ್ಲದೆ ಕಷಾಯೋದಯದಿಂ ತಿರಸ್ಕರಿಸಲಾಗದು.

ಆ ಕಷಾಯಂಗಳೆಂತೆಂದೊಡಾಚಾರ್ಯರ್ ಪೇಳ್ವರೆಂತೆಂದೊಡೆ

ವೃತ್ತ ||  ಸಂತಾಪಂ ತನುತೇ ಭಿನತ್ತಿ ವಿನಯಂ ಸೌಹಾರ್ದಮುಚ್ಚಾಟಯ
ತ್ಯುದ್ವೇಗಂ ಜನಯಂತ್ಯವದ್ಯವಚನಂ ಸೂತೇ ವಿಧತ್ತೇ ಕಲಿಮ್
ಕೀರ್ತಿಂ ಕೃತ್ಯತಿ ಮಾರ್ಗತಿಂ ವಿತರತಿ ವ್ಯಾಮೋಹಂ ಪುಣ್ಯೋದಯಂ
ದತ್ತೇ ಯಃ ಕುಮತಿಂ ಸಹಂತಿಮುಚಿತೋ (?)ದೋಷಸ್ಸ ರೋಷಸ್ಸತಾಂ ||೧ ||

ಔಚಿತ್ಯಾಚರಣಂ ವಿಲುಂಪತಿ ಪಯೋವಾಹಾ ನಭಸ್ಥಾನಿವ
ಪ್ರಧ್ವಂಸಂ ವಿನಯಂ ನಯತ್ಯತಿರಿವ ಪ್ರಾಣಸ್ಪೃಶಂ ಜೀವಿತಮ್
ಕೀರ್ತಿಂ ಕೈರವಣಿಂ ಮತಂಗಜ ಇವ ಪ್ರೊನ್ಮೂಲಯತ್ಯಂಜಸಾ
ಮಾನೋ ನೀಚ ಇವೋಪಕಾರನಿಕರಂ ಹಂತಿತ್ರಿವರ್ಗಂ ನೃಣಾಮ್ ||೨ ||

ಮುಷ್ಣಾತಿ ಯಃ ಕೃತ ಸಮಸ್ತ ಸಮೀಹಿತಾರ್ಥಾ
ಸಂಜೀವನಂ ವಿನಯಜೀವಿತಮಂಗಭಾಜಾಮ್
ಜಾತ್ಯಾಭಿಮಾನವಿಷಜಂ ವಿಷಮಂ ವಿಕಾರಂ
ತಂ ಮಾರ್ದವಾಮೃತರಸೇನ ನಯ ಸ್ವಶಾಂತಿಮ್ ||೩ ||

ಕುಶಲಜನನವಂಧ್ಯಾಂ ಸತ್ಯಸೂರ್ಯಾಸ್ತಸಂಧ್ಯಾಂ
ಕುಗತಿಯುವತಿಮಾಲಾಂ ಮೋಹಮಾತಂಗಶಾಲಾಮ್
ಶಮಕಮಲಹಿಮಾನಿಲದುರ್ಯಶೋರಾಜಧಾನೀಂ
ವ್ಯಸನಶತಸಹಾಯಾಂ ದೂರತೋ ಮುಂಚ ಮಾಯಾಮ್ ||೪ ||

ಮೂಲಂ ಮೋಹವಿಷದ್ರುಮಸ್ಯ ಸುಕೃತಾಂ ಬೋಧಾಲಿಜಂಝಾನಿಲಃ
ಕ್ರೋಧಾಗ್ನೆರರಣಿಃ ಪ್ರತಾಪತರಣೀ ಪ್ರಚ್ಛಾದನೇ ತೋಯದಃ
ಕ್ರೀಡಾಸದ್ಮ ಕಲೇರ್ವಿವೇಕಶಶಿನಃ ಸ್ವರ್ಭಾನುರಾಪನ್ನಧೀ
ಸಿಂಧುಃ ಕೀರ್ತಿಲತಾ ಕಲಾಪಕಲಭಃ ಲೋಭಃ ಪರಾ ಭೂಯತಾಮ್ ||೫ ||

ನಿಶ್ಯೇಷ ಧರ್ಮವನದಾಹ ವಿಜೃಂಭಮಾಣೇ
ದುಃಖೌಘಭಸ್ಮನಿ ವಿಸರ್ಪದಕೀರ್ತಿಧೂಮೇ
ಬಾಢಂ ಧನೇಂಧನ ಸಮಾಗಮದೀಪ್ಯಮಾನೇ
ಲೋಭಾನಲೇ ಶಲಭತಂ ಲಭತೇ ಗುಣೌಘಃ ||೬ ||

ಇಂತಿಪ್ಪ ಕಷಾಯಂಗಳಂ ಬಿಟ್ಟು ಕ್ಷಮೆಯಂ ತಾಳ್ದು ಉಪೇಕ್ಷೆಯಂ ಮಾಡದೆ ಆಲಸ್ಯಮಿಲ್ಲದೆ ಸತ್ಪುರುಷರೀ ಕಥೆಯನವಧಾರಿಸಿ ತಪ್ಪಿರ್ದೊಡಂ ತಿದ್ದಿ ಮೆರೆಯಿಸುವುದು.

ಶಾ ||     ಶ್ರೀಮದ್ರಾಜಾಧಿರಾಜಾಖಿಲ ಸುಗುಣಗಣಾಲಂಕೃತಃ ಕೃಷ್ಣರಾಜ (?)
ಶ್ರೀಮಂತಾಶ್ರಿತ ವಯದ್ಯರಾಜನ[ನ]ರ್ಹತ್ಪಾದಾಬ್ಜಲೀನಾಳಿ ನಿ
ಸ್ಸೀಮಂ ಸದ್ಗುಣಿ ಸೂರಿಪಂಡಿತ ಜಗದ್ವಿಖ್ಯಾತ ವಿದ್ವಜ್ಜನ
ಪ್ರೇಮ ಕಾರಿತಸತ್ಪ್ರ ಬಂಧಕಥನಂ ಭದ್ರಂ ಶುಭಂ ಮಂಗಲಮ್

ಹಳಗನ್ನಡ ಬೆಳುಗನ್ನಡ
ಒಳುಗನ್ನಡವಚ್ಚಗನ್ನಡಂ ಪೊಸತೆಂಬುದು
ತೆಳುಗನ್ನಡ ಮಿಶ್ರದಿನಿದ
ನಿಳೆಯೊಳು ಸತ್ಪುರುಷರೋದಿ ಕೇಳ್ವುದು ಸತತಂ

ಇಂತೀ ಕಥೆಯಂ ಕೇಳ್ವರ
ಭ್ರಾಂತಿಯು ನೆರೆ ಕೆಡುಗು ಬಳಿಕಮಾಯುಂ ಶ್ರೀಯುಂ
ಸಂತಾನವೃದ್ಧಿ ಸಿದ್ಧಿಯ
ನಂತಸುಖಂ ತಪ್ಪದಪ್ಪುದೆಂಬುದು ನಿರುತಂ

ಇತಿ ಸತ್ಯಪ್ರವಚನ ಕಾಲಪ್ರರ್ತನ ಕನಕಾಚಲ ಶ್ರೀಜಿನಾರಾಧಕ ಮಲೆಯೂರ ದೇವಚಂದ್ರಪಂಡಿತ ವಿರಚಿತ ರಾಜಾವಲಿ ಕಥಾಸಾರದೊಳ್ ಜಾತಿನಿರ್ಣಯ ಪ್ರರೂಪಣಂ

ತ್ರಯೋದಶಾಧಿಕಾರಂ