ಹಿನ್ನೆಲೆ:

ಈಗಿನ ಚಾಮರಾಜನಗರ ಜಿಲ್ಲೆಯ ಮಲೆಯೂರು ಗ್ರಾಮ ನಿವಾಸಿಯಾಗಿದ್ದ ದೇವಚಂದ್ರ ೧೭೭೦ ರಿಂದ ೧೮೪೧ರ ವರೆಗೆ ಬದುಕಿದ್ದ ಜೈನ ಪಂಡಿತ. ೧೭೯೯ ರ ನಾಲ್ಕನೇ ಮೈಸೂರು ಯುದ್ಧ, ಟಿಪ್ಪುವಿನ ಸಾವು, ಬ್ರಿಟಿಷರ ಆಗಮನ, ಮುಮ್ಮುಡಿ ಕೃಷ್ಣರಾಜ ಒಡೆಯರ ಆಡಳಿತ – ಈ ಮುಖ್ಯ ಚಾರಿತ್ರಿಕ ಘಟನೆಗಳನ್ನು ಕಣ್ಣಾರಿ ಕಂಡಿದ್ದ ದೇವಚಂದ್ರ. ಟಿಪ್ಪುವಿನ ಮರಣದ ನಂತರ ಮೆಕೆಂಜಿ ಎನ್ನುವ ಬ್ರಿಟಿಷ್ ಮೂಲಕ ವೀಕ್ಷಣಾಧಿಕಾರಿಯನ್ನು ಈ ಪ್ರದೇಶದ ಬಗ್ಗೆ ‘ಸರ್ವೆ’ ಮಾಡಲು ಕಂಪನಿ ಸರ್ಕಾರ ನೇಮಿಸಿತ್ತು. ಮೈಸೂರು ‘ಸರ್ವೆ’ ಕಾಲದಲ್ಲಿ ಮೆಕೆಂಜಿ ದಕ್ಷಿಣ ಭಾರತದ ಅನೇಕ ಶಾಸನ, ಹಸ್ತಪ್ರತಿ, ಐತಿಹ್ಯ, ಸ್ಥಳ ಪುರಾಣಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡಿದ್ದ. ಈ ನಿಮಿತ್ತ ೧೮೦೪ ರಲ್ಲಿ ಮೈಸೂರಿನ ಲಕ್ಷ್ಮಣರಾಯನೆಂಬ ದ್ವಿಭಾಷಿಯೊಡನೆ ಕನಕಗಿರಿಗೆ ಬಂದು ‘ದೇವಚಂದ್ರನನ್ನು ಭೇಟಿಯಾಗಿ ಸ್ಥಳಪುರಾಣಮುಂಟೆ” ಎಂದು ಕೇಳಿದನಂತೆ. ಅದಕ್ಕೆ ದೇವಚಂದ್ರನು ತಾನು ಹಿಂದೆ ರಚಿಸಿದ್ದ ‘ಪೂಜ್ಯ ಪಾದಚರಿತೆ’ಯನ್ನು ಓದಿ ಹೇಳಿದಾಗ ಮೆಕೆಂಜಿಯು ಕಮರಹಳ್ಳಿಯಲ್ಲಿ ಒಡ್ಡಿದ್ದ ತನ್ನ ಗೂಡಾರದ ಬಳಿಗೆ ದೇವಚಂದ್ರನನ್ನು ಕರೆದುಕೊಂಡು ಹೋಗಿ ಪೂರ್ವದ ವಾರ್ತೆಗಳನ್ನೆಲ್ಲಾ ಮೂರು ರಾತ್ರಿ ಚೆನ್ನಾಗಿ ಲಾಲಿಸಿದನಂತೆ. ಮುಂದೆ ಎರಡು ತಿಂಗಳು ಪರ್ಯಂತ ಬಿಡದೆ ‘ದಿನ ಒಂದಕ್ಕೆ ಗ್ರಾಸಕ್ಕೆ ಒಂದು ಹಣಮಂ ಕೊಡುತ್ತ, ರಾತ್ರಿ ಕಾಲದೊಳು, ಪೂರ್ವದ ಪ್ರಪಂಚಗಳು, ಜಾತಿ ಭೇದಗಳು ಮೊದಲಾದ ವಿವರಗಳೆಲ್ಲವನ್ನು’ ಕೇಳಿಕೊಂಡನಂತೆ. ಅಲ್ಲಿಗೂ ದೇವಚಂದ್ರನನ್ನು ಬಿಡದೆ ಬಂಗಾಲಕ್ಕೆ ಒಯ್ಯಬೇಕೆಂದಿದ್ದ. ಆದರೆ ಅವನು ಬಹು ವಿಧವಾಗಿ ಕೇಳಿಕೊಂಡಿದ್ದರಿಂದಲೂ ಅವನ ಧರ್ಮೋಪಾಧ್ಯಾಯರು ಸಹ ಅಡ್ಡಿ ಮಾಡಿದ್ದರಿಂದಲೂ ದೇವಚಂದ್ರನ ಬಂಗಾಲ ಪ್ರಯಾಣವು ತಡೆದು ನಿಂತಿತು. ಆದರೆ ‘ಕರ್ಣಾಟ ದೇಶಗೊಳು ನಡೆದ ಪ್ರಪಂಚಗಳನ್ನೆಲ್ಲಾ ಕ್ರೋಢೀಕರಿಸಿ’ ಬರೆದು ತೆಗೆದುಕೊಂಡು ಬಂದರೆ ಭಾರಿ ಸಂಬಳವನ್ನು ಮಾಡಿಸಿ ಕೊಡುತ್ತೇನೆಂದು ಹೇಳಿ, ಮೆಕೆಂಜೆಯು ಲಕ್ಷ್ಮಣರಾಯನ ಮೂಲಕ ೨೫ ಕುಂಪಣಿ ರೂಪಾಯಿಗಳನ್ನು ಕೊಡಿಸಿದನು. ಆ ಪ್ರಕಾರ ದೇವಚಂದ್ರನು ಬರೆಯಲು ಪಕ್ರಮಿಸಿ, ಮುಗಿಸಲಿದ್ದಾಗ ಮೆಕೆಂಜಿ ಮೈಸೂರನ್ನು ಬಿಟ್ಟ ದೂರ ಹೋಗಿ ಬಿಟ್ಟಿದ್ದನು. ಇದುವೆ “ರಾಜಾವಳೀಕಥೆಯ ಉದಯ” [ಶ್ರೀನಿವಾಸ ಹಾವನೂರು, ಪುಟ: ೧೪೫, ೧೪೬]. “ಇಂತಪ್ಪ ಸೂರಿ ಪಂಡಿತನೀ ರಾಜಾವಳಿ ಕಥೆಯಂ ಮಾಡಿಸಿದಂ” (ಸಂ. ಬಿ.ಎಸ್. ಸಣ್ಣಯ್ಯ ಪುಟ: ೩೧೫) ಎಂದು ಸೂರಿ ಪಂಡಿತನನ್ನು ನೆನೆಯುತ್ತಾನೆ.

ರಾಜಾವಳಿ ಕಥೆಯಲ್ಲಿ ೧೩ ಅಧಿಕಾರಗಳಿವೆ. ಮೆಕೆಂಜಿಗೆ ಕೊಡುವ ಉದ್ದೇಶದಿಂದ ಮೊದಲು ೧೧ ಅಧಿಕಾರಗಳನ್ನು ಬರೆದ. ಆದರೆ ಅವನು ದೇಶಬಿಟ್ಟು ಹೋದುದರಿಂದ ಈ ಕೃತಿ ಕೆಲಕಾಲ ನೆನೆಗುದಿಗೆ ಬಿತ್ತು. ನಂತರ ಮೈಸೂರಿನ ಕೃಷ್ಣರಾಜ ಒಡೆಯರನ್ನು ಭೇಟಿಯಾಗುವ ಉದ್ದೇಶವೂ ಈಡೇರಲಿಲ್ಲ. ಆದರೆ ಮೈಸೂರಿನ ಮಹಾರಾಣಿಯನ್ನು (ಮಹಾಮಾತುಶ್ರೀ ದೇವೀರಾಂಬೆ) ಭೇಟಿಯಾಗಿ ತನ್ನ ಕೃತಿಯ ಬಗ್ಗೆ ಹೇಳಿಕೊಂಡ. ಮೈಸೂರಿನ ಮಾತುಶ್ರೀ ದೇವೀರಾಂಬೆ. ಮೈಸೂರು ಒಡೆಯರ ವಂಶಾವಳಿಯನ್ನು ಈ ಕೃತಿಗೆ ಸೇರಿಸು ಎಂದು ಹೇಳಿದ್ದಕ್ಕಾಗಿ ೧೨ ಮತ್ತು ೧೩ನೆಯ ಅಧಿಕಾರಗಳನ್ನು ಕೊನೆಗೆ ಸೇರಿಸಿದ್ದಾನೆ. ಆದರೆ ರಾಜರ ಆಸ್ಥಾನದಿಂದ ಕೃತಿಗೆ ಸಿಗಬೇಕಾದ ಮನ್ನಣೆ ಸಿಗದೆ ಕೊನೆಗೆ ಈ ಪಂಡಿತ ಬಡತನದಲ್ಲೇ ಬದುಕಬೇಕಾಯಿತು.

ಕನ್ನಡದ ಕವಿಚರಿತೆಕಾರರಾದ ಆರ್. ನರಸಿಂಹಚಾರ್ ರವರು ರಾಜಾವಳಿ ಕಥೆಯನ್ನು ‘ಜೈನ ಸಾಹಿತ್ಯ ಚರಿತ್ರೆ’ ಎಂದು ಕರೆದಿದ್ದರೂ, ಮುಂದೆ ಸಾಹಿತ್ಯಾಸಕ್ತರು, ಇತಿಹಾಸಕಾರರು ಈ ಕೃತಿಯನ್ನು ಗಂಭೀರವಾಗಿ ಪರಿಗಣಿಸಿದಂತೆ ಇಲ್ಲ. ಕಾರಣವಿಷ್ಟೆ: ‘ರಾಷ್ಟ್ರೀಯ ಇತಿಹಾಸ’ ಕಲ್ಪನೆ ೧೯ನೇ ಶತಮಾನದಲ್ಲಿ ಬಲವಾಗಿತ್ತು. ಅದು ಬ್ರಿಟಿಶ್ ಮಾದರಿಗಳಿಂದ ನಮ್ಮದನ್ನು ಹೊಂದಿಸುವ ಕ್ರಮವಾಗಿತ್ತು. ರಾಜಾವಳಿ ಕಥೆ ಈ ಕ್ರಮಕ್ಕೆ ವಿರುದ್ಧವಾದ ಪಠ್ಯವಾಗಿತ್ತು. ಇತಿಹಾಸಕಾರರು ಗುರುತಿಸುತ್ತಿದ್ದ ಕಾಲಾನುಕ್ರಮ ಏರುಪೇರಾಗಿತ್ತು. ಆದ್ದರಿಂದ ಈ ಕೃತಿಯನ್ನು ಚರಿತ್ರಕಾರರು, ಸಾಹಿತ್ಯಾಸಕ್ತರು ಗಂಭೀರವಾಗಿ ಪರಿಗಣಿಸಲಿಲ್ಲ. ಕರ್ನಾಟಕ ‘ಚರಿತ್ರೆ’ (ದೇವಚಂದ್ರನ ಪ್ರಕಾರ ಪೂರ್ವ ಪ್ರಪಂಚು) ಬರೆಯಬೇಕೆಂಬ ಒತ್ತಡ ಮೆಕೆಂಜಿಯಿಂದ ಉಂಟಾದದ್ದು. ಭಾರತೀಯರು ಚರಿತ್ರೆಯನ್ನು ಕಟ್ಟುವ ಕ್ರಮಕ್ಕೂ ಬ್ರಿಟಿಷರು ಚರಿತ್ರೆಯನ್ನು ಕಟ್ಟುವ ಕ್ರಮಕ್ಕೂ ಭಿನ್ನತೆಗಳಿವೆ. ದೇವಚಂದ್ರ ಇವೆರನ್ನೂ ಬಳಸುವ ಪ್ರಯತ್ನ ಮಾಡಿದ್ದರಿಂದ ಆತನ ಕೃತಿ ಒಂದು ಸಂಕರ ಪಠ್ಯವಾಗಿ ಬಿಡುತ್ತದೆ. ದೇವಚಂದ್ರ ಈ ಕೃತಿಗೆ ಆಕರಗಳಾಗಿ ಬರೀ ಲಿಖಿತ ಪಠ್ಯಗಳನ್ನಷ್ಟೇ ಅಲ್ಲದೆ, ಜಾನಪದ, ಐತಿಹ್ಯ, ಸ್ಥಳಪುರಾಣಗಳನ್ನು ಬಳಸುತ್ತಾನೆ. ಆದ್ದರಿಂದ ಮಧ್ಯಕಾಲೀನವಾದ ಅನೇಕ ಸಾಂಸ್ಕೃತಿಕ ಪಂಥಗಳ ಮೊಟ್ಟ ಮೊದಲ ದಾಖಲಾತಿ ಈ ಕೃತಿಯಲ್ಲಿ ಸಿಗುತ್ತದೆ.

* * *

ದೇವಚಂದ್ರನಿಗೆ ಬೇರೆ ಬೇರೆ ಕಾರಣಗಳಿಗಾಗಿ ಜೈನ ಪುರಾಣದ ಚೌಕಟ್ಟನ್ನು ಮೀರಿ ರಾಜಾವಳಿಯ ವಿಷಯವನ್ನು ಕ್ರೋಡೀಕರಿಸಬೇಕಾಯಿತು. ಈ ಗ್ರಂಥ ‘ಭರತದಾರ್ಯ ಖಂಡದ ಪ್ರಪಂಚವನ್ನು ಆದಿಯಿಂದ’ ಹೇಳುವ, ಜೈನೇತರ ಮತಗಳನ್ನೂ ಕುರಿತು ನಿರೂಪಿಸುವ ಕೃತಿಯಾಯಿತು. ಹಾಗೂ ಅಲ್ಲಿ ಹೇಳಿದ್ದೆಲ್ಲ ‘ನಿಜವಾಗಿ ನಡೆದಂಥವು’, ತಾನು ಯಾವುದೇ ಸುಳ್ಳುಗಳನ್ನು ಹೇಳಿಲ್ಲ ಎಂದೂ ಘೋಷಿಸಬೇಕಾಯಿತು. ಈ ಎಲ್ಲ ಅಂಶಗಳೂ ನಾವು ಇಂದಿನ ಅರ್ಥದಲ್ಲಿ ‘ರಾಷ್ಟ್ರೀಯ ಇತಿಹಾಸ (ಹಿಸ್ಟರಿ)’ ಎಂದು ಗುರುತಿಸಬಹುದಾದ ಕೃತಿಯೊಂದರ ಹುಟ್ಟಿಗೆ ಕಾರಣವಾದವು. ಈ ದೃಷ್ಟಿಯಿಂದ ‘ರಾಜಾವಳಿ’ ಹತ್ತೊಂಭತ್ತನೆಯ ಶತಮಾನದ ಆದಿಭಾಗದಲ್ಲಿ, ಇನ್ನೂ ಬ್ರಿಟಿಷ್ ವಿದ್ವಾಂಸರಿಂದ ಭಾರತದ ‘ಹಿಸ್ಟರಿ’ ರೂಪುಗೊಳ್ಳುತ್ತಿದ್ದ ಸಮಯದಲ್ಲೇ ಒಬ್ಬ ಜೈನ ಪಂಡಿತನಿಂದ ಕನ್ನಡದಲ್ಲಿ ಬರೆಯಲ್ಪಟ್ಟಿದ್ದು, ನಮ್ಮಲ್ಲಿ ಸಂಭ್ರಮಾಶ್ಚರ್ಯಗಳನ್ನು ಹುಟ್ಟಿಸುತ್ತದೆ. ಆದರೆ ಇಂದಿನ ಅರ್ಥದಲ್ಲಿ ಇತಿಹಾಸ ಎಂದು ತೆಗೆದುಕೊಂಡರೆ ಅದೊಂದು ಮತೀಯ ಪೂರ್ವಗ್ರಹದ ನಂಬಲರ್ಹವಲ್ಲದ ಇತಿಹಾಸವಾಗಿ ಅದನ್ನು ಸುಲಭವಾಗಿ ಮೂಲೆಗೂ ತಳ್ಳಬಹುದು. ದೇವಚಂದ್ರನು ಕೊಡುವ ಪೂರ್ವಪ್ರಪಂಚುಗಳ ಕುರಿತು ನಾವಿಂದು ಸಾಕ್ಷ್ಯಾಧಾರಗಳ ವಿಶ್ಲೇಷಣೆಯಿಂದ ನಿಜವಾದ ಇತಿಹಾಸವನ್ನು ಕಟ್ಟಿಕೊಂಡಿದ್ದೇವೆ. ಆತನು ನೀಡುವ ರಾಜವಂಶಳ ಕುರಿತು ವ್ಯವಸ್ಥಿತವಾದ ರಾಜಮನೆತನಗಳ ಇತಿಹಾಸವನ್ನು ರಚಿಸಿದ್ದೇವೆ. ದೇವಚಂದ್ರನು ಏನನ್ನು ಮಾಡಬೇಕೆಂದು ಅವನಿಂದ ರಾಜಾವಳಿಯನ್ನು ಬರೆಸಿದ್ದರೋ ಅದನ್ನು ನಾವು ಸಮರ್ಥವಾಗಿ ಇಂದು ನಿರ್ವಹಿಸಿದ್ದೇವೆ. ನಮ್ಮ ಭಾರತದ ಇತಿಹಾಸ ಇಂದು ನಿಜವಾದ ‘ರಾಜಾವಳಿ’ಯ ಇತಿಹಾಸವಾಗಿ ಮೈತಳೆದಿದೆ. ‘ನಿಜಘಟನೆ’ಗಳೆಂದು ಇತಿಹಾಸಕಾರರು ಒಪ್ಪಿಕೊಂಡ ಘಟನೆಗಳಿಂದಲೇ ನಾವು ಈ ಇತಿಹಾಸವನ್ನು ಕಟ್ಟಿದ್ದೇವೆ. ಹಾಗಾಗಿ ದೇವಚಂದ್ರನು ಏನನ್ನು ಘೋಷಿಸಿಕೊಂಡು ರಾಜಾವಳಿಯ ಮಹತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದನೋ ಅದನ್ನು ನಾವು ನಿಜವಾಗಿಯೂ ಆಚರಿಸಿದ್ದೇವೆ ಎಂದು ನಂಬಿದ್ದೇವೆ. ಇದರ ಪರಿಣಾಮವಾಗಿ ದೇವಚಂದ್ರನ ‘ರಾಜಾವಳಿ’ ಸರಿಯಾದ ‘ನಿಜವಲ್ಲ’ ಎಂಬುದೂ ನಮಗೆ ಓದಿದ ತಕ್ಷಣ ತಿಳಿದುಬರುತ್ತದೆ. ಹೀಗೆ ನಮ್ಮ ಇಂದಿನ ಇತಿಹಾಸದ ಮುಂದೆ ದೇವಚಂದ್ರನ ‘ರಾಜಾವಳಿ’ ಅಂದಿನ ಕಾಲದ ಅಂಥದೊಂದು ಅಪರೂಪದ ಕೃತಿ ಎಂಬ ಅಂಶವನ್ನು ಬಿಟ್ಟರೆ ತನ್ನ ಉಳಿದ ಅರ್ಥಗಳನ್ನು ಕಳೆದುಕೊಂಡು ಬಿಡುವ ಸಂಭವವಿದೆ.

* * *

ದೇವಚಂದ್ರನ ಸುಳ್ಳುಗಳನ್ನು ಹಾಗೂ ಪೂರ್ವಗ್ರಹಗಳನ್ನು ಸುಲಭವಾಗಿ ಕಂಡುಕೊಳ್ಳುವ ಹಂತಕ್ಕೆ ಏರಿರುವ ನಮ್ಮ ಇಂದಿನ ರಾಷ್ಟ್ರೀಯ ಇತಿಹಾಸಕ್ಕೆ ಅವನ ‘ರಾಜಾವಳಿ’ಯ ಅಗತ್ಯವೇನಾದರೂ ಇದೆಯೆ? ಎಂಬ ಪ್ರಶ್ನೆ ಏಳುತ್ತದೆ. ಅವನು ನಿರೂಪಿಸಿದ ಘಟನೆಗಳ ನಿಜಸ್ವರೂಪವನ್ನು ನಾವು ಇಂದು ಸಾಧಿಸಿರುವುದರಿಂದ ನಾವು ಅವನನ್ನು ಅವಲಂಬಿಸುವ ಅಗತ್ಯವಿಲ್ಲ ಎಂಬ ಅಭಿಪ್ರಾಯವೂ ಬರಬಹುದು. ಆದರೆ ಇಂದಿನ ಹಂತದಲ್ಲಿ ಇನ್ನೂರು ವರ್ಷಗಳ ಹಿಂದಿನ ಈ ಇತಿಹಾಸವನ್ನು ನೋಡಿದಾಗ ನಮಗೆ ಕಾಣುವುದು ಅದರ ಸುಳ್ಳು ಮತ್ತು ಪೂರ್ವಗ್ರಹಗಳು ಮಾತ್ರವಲ್ಲ, ಅದರ ಜೊತೆಗೇ ನಮ್ಮ ಇಂದಿನ ರಾಷ್ಟ್ರೀಯ ಇತಿಹಾಸದ ಸುಳ್ಳು ಮತ್ತು ಪೂರ್ವಗ್ರಹಗಳೂ ಕೂಡಾ. ಈ ಇನ್ನೂರು ವರ್ಷಗಳಲ್ಲಿ ನಮ್ಮ ಇತಿಹಾಸ ಯಾವ ಯಾವ ನಿಜಗಳನ್ನು ಕಳೆದುಕೊಳ್ಳುತ್ತಾ, ಸುಳ್ಳುಗಳನ್ನು ಕಟ್ಟುತ್ತಾ ಸಾಗಿಬಂದಿದೆ ಎಂಬ ದರ್ಶನವೂ ಈ ‘ರಾಜಾವಳಿ’ಯನ್ನು ಓದಿದಾಗ ಸಾಧ್ಯವಾಗಬಹುದು. ಅದರ ಜೊತೆಗೇ ನಮಗೆ ನಮ್ಮ ನಿಜಗಳು ಇದ್ದಂತೇ ದೇವಚಂದ್ರನಿಗೆ ಅವನ ನಿಜಗಳು ಏನಿದ್ದವು? ಹೇಗಿದ್ದವು? ಏಕೆ ಹಾಗಿದ್ದವು? ವಸಾಹತುಪೂರ್ವದ ಇತಿಹಾಸವನ್ನು ಕಟ್ಟಲು ಅವನ ನಿಜಗಳು ನಮ್ಮ ನಿಗಳಿಗಿಂತ ಹೆಚ್ಚು ‘ನಿಜ’ವಲ್ಲವೆ? ಎಂಬ ಪ್ರಶ್ನೆಗಳೂ ಅಗವ್ಯವಾಗಿವೆ. ಈ ಎಲ್ಲ ದೃಷ್ಟಿಯಿಂದ ನೋಡಿದಾಗ ನಮ್ಮ ಹಲವು ನಿಜಗಳನ್ನು ಒರೆಗಲ್ಲಿಗೆ ಹಚ್ಚುವ ಸಾಮರ್ಥ್ಯವೂ ಕೂಡ ಈ ರಾಜಾವಳಿಗೆ ಇದೆ.

ಸಾಂಸ್ಕೃತಿಕ ಸಂಘರ್ಷ:

ಮೊದಲನೆಯದಾಗಿ ರಾಜಾವಳಿಯು ನೀಡುವ ಕರ್ನಾಟಕದ ಮತಿಯ ಸಂಘರ್ಷದ ಚಿತ್ರವನ್ನು ಗಮನಿಸಬಹುದು. ಮತ ಸಂಘರ್ಷಗಳಲ್ಲಿ ಜೈನಮತವು ಮಾಡುವ ಮುಖ್ಯ ಮುಖಾಮುಖಿ ವೈದಿಕ ಮತದ ಜತೆಗೆ ಇದೆ. ಇಲ್ಲಿ ‘ವೈದಿಕ’ ಎಂದರೆ ೧೯ನೇ ಶತಮಾನದಲ್ಲಿ ಮೈಸೂರು ಸೀಮೆಯ ಶ್ರೀ ವೈಷ್ಣವ, ರಾಜಾಶ್ರಯಕ್ಕಾಗಿ ಜೈನ ಹಾಗೂ ಶ್ರೀ ವೈಷ್ಣವ ಮತಗಳು ನಡೆಸುತ್ತಿದ್ದ ಮೇಲಾಟಗಳ ಘಟನೆಗಳಿವು. (ಮಾಸ್ತಿ ಈ ವಿದ್ಯಮಾನಕ್ಕೆ ಸಂಬಂಧಿಸಿದ ವಸ್ತುವಿಟ್ಟುಕೊಂಡು ಕತೆ ಬರೆಯುತ್ತಾರೆ.) ‘ರಾಜಾವಳಿಕಥೆ’ಯು ವೈದಿಕ ಬ್ರಾಹ್ಮಣರನ್ನು ಟೀಕಿಸುವ ಪ್ರಸಂಗಗಳು ಕುತೂಹಲ ಹುಟ್ಟಿಸುತ್ತವೆ. ಬ್ರಾಹ್ಮಣರ ಮಾಂಸ ಸೇವನೆ ಬಗ್ಗೆ, ಅವರ ಗೋಹತ್ಯಾದೋಷದ ಪರಿಕಲ್ಪನೆಯ ಬಗ್ಗೆ, ಅವರ ಅಜಯಾಗದ ಬಗ್ಗೆ, ಅವರ ಜ್ಯೋತಿಷ್ಯಶಾಸ್ತ್ರ ಸುಳ್ಳಾಗುವುದರ ಬಗ್ಗೆ, ಅವರ ಅಧಿಕಾರಸ್ಥ ಹತ್ತಿರ ಹೋಗಲು ಮಾಡುವ ಉಪಾಯಗಳ ಬಗ್ಗೆ ಇರುವ ಘಟನೆಗಳಿವು. ಹೆಚ್ಚಿನ ಘಟನೆಗಳು ಜೈನರಿಗೆ ಲಗತ್ತು ಪಡೆದಂತಹವು. ಪದ್ಮಾವತಿ ಯಕ್ಷಿಯ ಗುಡಿಯನ್ನು ಶಂಕರಾಚಾರ್ಯರು ಶಾರದಾಂಬೆ ಗುಡಿಯನ್ನಾಗಿಸುವುದು (ಪು. ೧೬೩); ವೀರಬಲ್ಲಾಳನು ಜಿನಾಲಯವನ್ನು ಧ್ವಂಸಮಾಡಿ ಶ್ರೀವೈಷ್ಣ ಗುಡಿಗಳನ್ನು ಸ್ಥಾಪಿಸುವುದು; ದಿವಾನ್ ಪೂರ್ಣಯ್ಯ ಪೂಜೆಯಿಲ್ಲದ ಬಸ್ತಿಗಳ ಕಲ್ಲನ್ನು ಸಾಗಿಸುವುದು – ಇಂತಹವು. ಪುರಾಣ ಚರಿತ್ರೆಯ ಕಥನಗಳಿಂದ ಹಿಡಿದು ಸಮಕಾಲೀನ ವಿದ್ಯಮಾನಗಳವರೆಗೆ ಎರಡು ಮತಗಳ ನಡುವಣ ಸಂಘರ್ಷಗಳನ್ನು ಸೂಚಿಸುವ ಸಂಗತಿಗಳಿವು. ವಿಶೇಷ ಎಂದರೆ ಈ ಸಂದರ್ಭದಲ್ಲಿ ಜೈನವು ಆಕ್ರಮಣಕ್ಕೆ ನಷ್ಟಕ್ಕೆ ಒಳಗಾಗುತ್ತದೆ. ಚರಿತ್ರೆಯಲ್ಲಿ ಸೋತವರಿಗೆ ಬಹುಶಃ ಬರೀ ದುಸ್ವಪ್ನಗಳೇ ಬೀಳುತ್ತವೆಯೆನಿಸುತ್ತದೆ.

ಮಾರ್ಮಿಕ ಸಂಗತಿಯೆಂದರೆ ಈ ಮತೀಯ ಮುಖಾಮುಖಿಗಳು ಅರಸರ ಮುಂದೆ ಆಸ್ಥಾನದಲ್ಲಿ ನಡೆಯುತ್ತವೆ ಎನ್ನುವುದು. ಸಂಘರ್ಷ ಅಥವಾ ವಾಗ್ವಾದದ ಬಳಿಕ ಗೆದ್ದ ಮತವು ರಾಜನ ಪೋಷಣೆಗೆ ಒಳಗಾಗುತ್ತದೆ. ಸೋತಮತ ತನ್ನ ಬದುಕುವ ಹಕ್ಕನ್ನೆ ಕಳೆದುಕೊಂಡು ಗಡಿಪಾರಾಗುತ್ತದೆ, ಇಲ್ಲವೇ ಎರಡನೇ ದರ್ಜೆಯ ಸ್ಥಾನವನ್ನು ಒಪ್ಪಿಕೊಳ್ಳುತ್ತದೆ. ಮತಗಳು ತಮ್ಮ ಅಸ್ತಿತ್ವಕ್ಕಾಗಿ ಮಾಡುವ ಸೆಣಸಾಟಕ್ಕೆ ಮಾತ್ರವಲ್ಲ, ಪ್ರಭುತ್ವಕ್ಕೆ ಹತ್ತಿರವಾಗಿ ಯಾರು ಇರಬೇಕು ಎಂಬುದರ ಸೆಣಸಾಟದ ರೂಪಕಗಳಾಗಿ ಕೂಡ ಈ ಕಥೆಗಳು ಕಾಣುತ್ತವೆ. ವಸುಪಾಲನೆಂಬ ಅರಸರ ಆಸ್ಥಾನದಲ್ಲಿ ವೇದಾಂತಿ ಬ್ರಾಹ್ಮಣರಿಗೂ ಜೈನರಿಗೂ ನಡೆಯುವ ವಾಗ್ವಾದ ಇದಕ್ಕೆ ಉದಾಹರಣೆ. ಕುಟ್ಟಿಭಟ್ಟನೆಂಬ ವೇದಾಂತಿ ಬ್ರಾಹ್ಮಣನು ತಮ್ಮ ಲೋಕದೃಷ್ಟಿಯನ್ನು ಮಂಡಿಸಿದಾಗ ‘ಮತದ್ವೇಷದಿಂದ ಮಾಡಿದ ಪುರಾಣವಿದುಂ ನಮಗೆ ಪ್ರಮಾಣಮಲ್ಲ’ ಎಂದು ಜೈನೋಪಾಧ್ಯಯರು ಅದನ್ನು ತಿರಸ್ಕರಿಸಿ, ತಮ್ಮದೇ ಆದ ಜೈನ ಪುರಾಣಗಳ ಲೋಕದೃಷ್ಟಿಯನ್ನು ಮಂಡಿಸುತ್ತಾರೆ. ಅದು ರಾಜನಿಗೆ ಒಪ್ಪಿಗೆಯಾಗಿ ಅವನು “ಸಕಲದೇಶಂಗಳೊಳ್ ಜೈನ ಬ್ರಾಹ್ಮಣರ್ ಪೌರೋಹಿತ್ಯ ಮೊದಲಾದ ಕರ್ಮಾದಿಗಳಂ ಜೈನ ಬ್ರಾಹ್ಮಣರಿಂ ಮಾಡಿಸಿಕೊಂಬುದೆ ಯೋಗ್ಯಮೆಂದು ವಸುಪಾಲ ಮಹಾರಾಜಂ ಜೈನಬ್ರಾಹ್ಮಣರ್ಗೆ ಗ್ರಾಮ ಕ್ಷೇತ್ರ ಗೃಹಾದಿ ದಾನಂಗೊಟ್ಟು ಮಂತ್ರಿಪದ ಪುರೋಹಿತ ವೈದ್ಯ ಜ್ಯೋತಿಷ ಮಂತ್ರವಾದಾದಿಗಳುಂ ಇವರ್ಗೆ ಸಲ್ಲುವುದೆಂದು ಶಾಸನ ಚಪ್ಪೋಡು ಮಾಡಿ”ಸುತ್ತಾನೆ. (೧೧೫) ಇನ್ನೊಂದು ಉದಾಹಣೆ ಹೇಮಶೀತಳ ದೊರೆಯದು. ಜೈನರ ಹೆಸರಿಲ್ಲದಂತೆ ಮಾಡುವೆನೆಂದು ಪ್ರತಿಜ್ಞೆತೊಟ್ಟು ಬೌದ್ಧ ಮತಪ್ರೇಮಿ ಹೇಮಶೀತಳನು, ಬೌದ್ಧ ಹಾಗೂ ಜೈನರ ನಡುವೆ ವಾಗ್ವಾದ ಏರ್ಪಡಿಸುತ್ತಾನೆ. ಈ ವಸುಪಾಲ ಅಥವಾ ಹೇಮಶೀತಳರು ಚಾರಿತ್ರಿಕವಾಗಿ ಇದ್ದರೋ ಇಲ್ಲವೋ ತಿಳಿಯದು. ಆದರೆ ಅವರು ಸಾಂಕೇತಿಕವಾಗಿ ದೇವಚಂದ್ರನ ಸಮಕಾಲೀನರಾಗಿದ್ದ ಮೈಸೂರು ದೊರೆಗಳೂ ಆಗಬಹುದು. ಬ್ರಿಟಿಷರೂ ಆಗಬಹುದು. ಇಲ್ಲಿನ ಬ್ರಾಹ್ಮಣರು ಜೈನರು ಪುರಾಣ ಚರಿತ್ರೆಗಳ ಪಾತ್ರಗಳಂತೆ ಕಂಡರೂ ಅವರು ದೇವಚಂದ್ರನ ಸಮಕಾಲೀನ ಪ್ರತಿನಿಧಿಗಳೂ ಆಗಿರಬಹುದು.

* * *

ವಿಚಿತ್ರ ಎಂದರೆ ರಾಜಾವಳಿಯು ಬಹುಶಃ ತನ್ನ ಸಮಕಾಲೀನ ಸಮಾಜದಲ್ಲಿ ಇರದಿದ್ದ ಬೌದ್ಧ ಮತದ ಜತೆಗೆ ಮಾಡುವ ಮುಖಾಮುಖಿಯನ್ನೂ ಒಳಗೊಂಡಿರುವುದು. ಬೌದ್ಧ ಜೈನ ವೀರಶೈವ ಇವು ಚಾರಿತ್ರಿಕವಾಗಿ ವೈದಿಕ ಮತದ ಜತೆ ಸಂಘರ್ಷ ಮಾಡಿಕೊಂಡು ಹುಟ್ಟಿದ ದರ್ಶನಗಳು. ಮೂರೂ ಕೂಡ ಮತಾಂತರ ಆಧರಿಸಿದ ಮತಗಳು. ಅದರಲ್ಲೂ ಬೌದ್ಧ ಹಾಗೂ ಜೈನಗಳು ತಾತ್ವಿಕವಾಗಿ ದೇವರನ್ನೂ ನಂಬದ ನಾಸ್ತಿಕ ಮತಗಳು. ಆದರೆ ಚಾರಿತ್ರಿಕ ಸಂದರ್ಭಗಳು ಹಾಗೂ ಸಾಮಾಜಿಕ ವಾಸ್ತವಗಳು ಅವು ತಂತಮ್ಮೊಳಗೆ ಸಂಘರ್ಷ ಮಾಡಿಕೊಳ್ಳುವ ಸನ್ನಿವೇಶ ನಿರ್ಮಿಸಿಬಿಟ್ಟವು. ವೀರಶೈವರು ಬಹುಸಂಖ್ಯಾತರು ಶಕ್ತರೂ ಆಗಿರುವ ಪ್ರದೇಶದಲ್ಲಿ ಹುಟ್ಟಿದ ‘ರಾಜಾವಳಿಕಥೆ’ಯು ವೀರಶೈವಮತದ ಪುರಾಣ ಭಂಜನದ ಕೆಲಸವನನ್ನು ಜಾಣತನದಿಂದ ಬೌದ್ಧರ ಮೂಲಕ ಮಾಡಿಸುತ್ತದೆ. ವೀರಶೈವರನ್ನು ಸೋಲಿಸಿ ಜಯಪತ್ರ ತೆಗೆದುಕೊಂಡು ಬಂದ ಬೌದ್ಧರನ್ನು ತಾನು ಸೋಲಿಸುವಂತೆ ಸನ್ನಿವೇಶ ಸೃಷ್ಟಿಸಿ, ಈ ಮೂಲಕ ಎರಡೂ ಎದುರಾಳಿಗಳ ಮೇಲೆ ಗೆಲುವನ್ನು ಪಡೆಯುತ್ತದೆ. ಇಲ್ಲಿ ಮುಖ್ಯವಾದುವು ಸೋಲು ಗೆಲುವುಗಳದ್ದಲ್ಲ. ಸೋತವರು ಗೆದ್ದವರು ನಡೆಸಿಕೊಳ್ಳುವ ವಿಧಾನದ್ದು. ಹೇಮಶೀತಳ ಏರ್ಪಡಿಸಿದ ಸ್ಪರ್ಧೆಯಲ್ಲಿ ಸುಗತಾಚಾರ್ಯರು ಸೋತ ಬಳಿಕ ಮದಿಸಿದ ಆನೆಯ ಬುದ್ಧಾಗಮವನ್ನು ಕಾಲಲ್ಲಿ ತುಳಿದು ಜಿನಾಗಮವನ್ನು ತಲೆಯಲ್ಲಿ ಇರಿಸಿಕೊಳ್ಳುತ್ತದೆ. ಸೋತ ಬೌದ್ಧರನ್ನು ಕಲ್ಲುಗಾಣಕ್ಕೆ ಹಾಕಲು ರಾಜನು ನಿರ್ಧರಿಸುತ್ತಾನೆ. ಆಗ ಅಕಲಂಕಮುನಿಗಳು ಕರುಣೆದೋರಿ ತಡೆದಾಗ, ಅವರು ಕರ್ನಾಟಕ ದೇಶ ಬಿಟ್ಟು ಸಿಂಹಳದ್ವೀಪಕ್ಕೆ ಹೋಗುತ್ತಾರೆ. ಬೌದ್ಧರನ್ನು ಇಲ್ಲಿ ಶೂನ್ಯವಾದಿಗಳು ಹೊಣೆಗೇಡಿ ಚಾರ್ವಾಕರು ಎಂಬಂತೆ ಸಾಧ್ಯವಾದಷ್ಟು ರಾಕ್ಷಸೀಕರಣ ಮಾಡಲಾಗಿದೆ.

ತನ್ನನ್ನು ಪ್ರತಿಷ್ಠಾಪಿಸಿಕೊಳ್ಳುವುದಕ್ಕೆ ಎದುರಾಳಿಯನ್ನು ರಾಕ್ಷಸೀಕರಣ ಮಾಡುವುದು ಮತೀಯ ರಾಜಕೀಯ ಸಿದ್ಧಾಂತಗಳು ಅನುಸರಿಸುವ ತಂತ್ರಗಾರಿಕೆ. ಇದನ್ನು ಜರ್ಮನಿಯ ನಾಜಿಗಳಿಂದ ಹಿಡಿದು, ಅಮೆರಿಕದ ಯುದ್ಧ ನೀತಿಗಳಲ್ಲೂ ಭಾರತದ ಹಿಂದೂ ಕೋಮುವಾದಿಗಳಲ್ಲೂ ಕಾಣಬಹುದು. ಮುಸ್ಲಿಂ ಮೂಲಭೂತವಾದಿಗಳಲ್ಲೀ ಇದಿದೆ. ವ್ಯಂಗ್ಯವೆಂದರೆ ರಾಜಾವಳಿಯಲ್ಲಿ ಎದುರಾಳಿಗಳನ್ನು ರಾಕ್ಷಸೀಕರಿಸಿ ತಾನು ಗೆದ್ದಂತೆ ಚಿತ್ರಿಸಿಕೊಳ್ಳುತ್ತಿರುವ ಜೈನವು, ವಾಸ್ತವದಲ್ಲಿ ತನ್ನ ಅಸ್ತಿತ್ವದ ಸಮಸ್ಯೆಯನ್ನು ಎದುರಿಸಿದ್ದು ವೀರಶೈವದ ಜತೆಗಿನ ಸೆಣಸಾಟದಲ್ಲಿ. ಹರಿಹರನ ಏಕಾಂತ ರಾಮಯ್ಯನ ರಗಳೆ ಈ ಸೆಣಸಾಟದ ಭೀಕರ ಪ್ರತೀಕವಾಗಿದೆ. ರಾಜಾವಳಿ ಕಥೆಯಲ್ಲೂ ಜೈನ ವೀರಶೈವರ ನಡುವಣ ಸಂಘರ್ಷಗಳು ಕಹಿಯಾಗಿವೆ. ಉದಾ: ಮಧುರೆಯ ಕೂನಪಾಂಡ್ಯನು ಜೈನಯಕ್ಷಿಯ ಗುಡಿಯನ್ನು ಮೀನಾಕ್ಷಿ ಗುಡಿಯನ್ನಾಗಿ ಮಾಡಿ, ಅಲ್ಲಿದ್ದ ಜಿನಮುನಿಗಳನ್ನು ಕೊಂದು, ಜಿನದ್ವೇಷದಿಂದ ಪ್ರತಿವರುಷ ರಾಜ್ಯದಲ್ಲಿ ಶ್ರವಣಶೂಲದ ಹಬ್ಬವನ್ನು ಆಚರಿಸುವುದು. (೧೬೩) “ಬಲಾತ್ಕಾರದಿಂದ ವೀರಶೈವರಂ ಮಾಡಿ” ಜೈನರನ್ನು ಕೊಲ್ಲುವ ಹಂಚಿಕೆ ಮಾಡಿದಾಗ ಜೈನರು ಪಲಾಯನ ಮಾಡುವ ಪ್ರಸಂಗ ಬರುತ್ತದೆ. ಮತೀಯ ಹಿಂಸೆಗೆ ಈ ದೇಶದಲ್ಲಿ ಬಹಳ ಉದ್ದನೆಯ ಚರಿತ್ರೆಯಿದೆ.

“ಜಿನಧರ್ಮ ಕುಂದುತ್ತ ಬರ್ಪಿನಂ” (೧೨೬) ಜಿನಮುನಿಗಳು ಜಿನಧರ್ಮವನ್ನು ಪುನುರುಜ್ಜೀವಿಸಲು ಕರ್ನಾಟಕದ ತುಂಬ ತಿರುಗಾಟ ಮಾಡುವ ವರ್ಣನೆಗಳಿವೆ. ಈ ತಿರುಗಾಟದಲ್ಲಿ ಬರುವ ಜೈನಧರ್ಮದ ಗೆಲುವಿನ ಕಥನವು (ಅಧ್ಯಾಯ ೧೩) ಬಹುಶಃ ಜೈನ ಮುನಿಗಳ ಒತ್ತಾಯಕ್ಕೆ ದೇವಚಂದ್ರ ಬರೆದು ಸೇರಿಸಿದಂತಿದೆ. ಜೈನಧರ್ಮದಲ್ಲಿ ಸವಣರು ಬೆತ್ತಲೆ ಇರುವುದರ ಬಗ್ಗೆ ಕೃತಿಯಲ್ಲಿ ಸುದೀರ್ಘ ಸಮರ್ಥನೆಯಿದೆ. ಆದರೆ ಈ ಆತ್ಮ ಸಮರ್ಥನೆಯಲ್ಲಿ ಆತ್ಮ ವಿಶ್ವಾಸವೇ ಇಲ್ಲ. “ಬೆತ್ತಲೆ ನಿರ್ಗ್ರಂಥನಾಗಿಪ್ಪುದು ಪೊಲ್ಲಮೆಂದೊಡೆ ಆವುದೊಂದು ವಸ್ತುವಾದೊಡಂ ನಿರ್ಗ್ರಂಥಮಾಗಲ್ಲದೆ ಯೋಗ್ಯಮಾಗದು, ಇದು ಎಂತೆನೆ ನೆಲಂ ನಿರ್ಗ್ರಂಥಮಾಗೆ ಬೀಜಕ್ಕೆ ಬಲಂ, ಆಕಾಶಂ ನಿರ್ಗ್ರಂಥಮಾಗೆ ಶುಭಕಾರ್ಯಕ್ಕೊಳಿತ್ತು, ನೀರು ನಿರ್ಗ್ರಂಥಮಾಗೆ ರೋಗಹರಂ, ಕಿಚ್ಚು ನಿರ್ಗ್ರಂಥಮಾದೊಡೆ ಅಡುಗೆಯ ಕಾರ್ಯಮಕ್ಕುಂ, ಸೂರ್ಯ ನಿರ್ಗ್ರಂಥಮಾಗೆ ದಿನಶುದ್ಧಿ, ಚಂದ್ರಂ ನಿರ್ಗ್ರಂಥಮಾದೊಡೆ ರಾತ್ರಿ ಶುದ್ಧಿ, ಅಕ್ಕಿ ನಿರ್ಗ್ರಂಥಮಾಗಲ್ ಅನ್ನದರುಚಿ”; ರಾಜಾವಳಿಕಾರ ನೀಡುವ ಹೋಲಿಕೆಗಳು ಸುಂದರವಾಗಿವೆ. ಆದರೆ ಆಳದಲ್ಲಿ ಅವು ಬಿಕ್ಕಟ್ಟನ್ನೇ ಸೂಚಿಸುತ್ತವೆ. ಜೈನಮತವು ಸಮರ್ಥನ ಧಾಟಿ ಬಿಟ್ಟುಕೊಟ್ಟು ಕೆಲವು ಕಡೆ, ಆಕ್ರಮಣಶೀಲತೆಯನ್ನು ಪಡೆಯುತ್ತದೆ. ಬತ್ತಲೆಯಿದ್ದವರನ್ನು ಕಂಡರೆ ಸಾವು ಬರುತ್ತದೆ ಎಂಬ ಜನರ ನಂಬಿಕೆಗೆ ಉತ್ತರಿಸುತ್ತ “ರತಿಯೊಳ್ ತಾನುಂ ತನ್ನ ಪೆಂಡತಿಯುಂ ಬತ್ತಲೆ ರಾಗದಿಂ ನೆರೆವಂಧು ಸತ್ತವರಾರುಮಿಲ್ಲ” (೧೪೩) ಎನ್ನುತ್ತದೆ. ಸವಣರಂ ಕಂಡುದರಿಂ ದೋಷಂ ಎಂಬ ನಂಬಿಕೆಗೆ ಉತ್ತರಿಸುತ್ತ “ಜಿನ ಋಷಿಯರ ಕಂಡವರ ಮನೆ ಪಶು ಎಮ್ಮೆಗಳ್ ಕರೆಯವೇ ಕೂಳ್ ಬೇಯದೇ ಪುಳ್ಳಗಳಡಕಿದೊಡಂ ಕಿತ್ತುರಿಯವೇ? ಮಕ್ಕಳು ಮರಿಗಳ್ ಕಾರಣಮಿಲ್ಲವೆ ಸಾವವೆ? ಉಂಡರೆ ಪಸಿವು ಪೋಗದೆ? ನಿರೂ ಕೂಳಂ ರುಚಿಯಾಗದೆ?” (೧೪೩) ಬೈಗುಳದ ಧಾಟಿಯಲ್ಲಿ ಪ್ರಶ್ನಿಸುತ್ತದೆ. ಇವೆಲ್ಲ ೧೯ನೇ ಶತಮಾನದಲ್ಲಿ ಜೈನಮತವು ಎದುರಿಸುತ್ತಿದ್ದ ಸಾಮಾಜಿಕ ನಿರಾಕರಣೆಯ ವಿಷಯ ಪರಿಸ್ಥಿತಿಯನ್ನು ಸೂಚಿಸುತ್ತವೆ.

ರಾಜಾವಳಿಯ ಆಶಯ:

ಪಂಪ ರನ್ನರು ಅನ್ಯಮತದ ಪುರಾಣಗಳನ್ನು ವಿಡಂಬಿಸುವವರು. ಆದರೆ ಅವರು ಆಳದಲ್ಲಿ ಅವುಗಳಲ್ಲಿ ಇರುವ ಸಾಂಕೇತಿಕ ಸತ್ಯವನ್ನು ನಂಬುವ ಕವಿಗಳು. ದೇವಚಂದ್ರನು ಕವಿಯಲ್ಲ. ಸಾಹಿತ್ಯಕವಾಗಿ ಅಮೂಲ್ಯವಾದ ವಸ್ತುವನ್ನು ಅವನು ಮುಟ್ಟುತ್ತಾನೆ. ಮಾಹಿತಿಗಾರನಾಗಿ ಅವನ್ನು ಪೂರ್ವಗ್ರಹಗಳೊಂದಿಗೆ ಸಂಗ್ರಹಿಸುತ್ತಾನೆ. ಆದರೆ ಅವನ್ನು ಕವಿ ಸಹನೆಯಿಂದ ತನ್ನ ಅನುಭವ ಕಲ್ಪನೆ ದರ್ಶನಗಳಿಂದ ಅರಳಿಸುವುದಿಲ್ಲ. ಅವನ್ನು ಬಳಸಿ ಹೊಸಕಥನ ಕಟ್ಟುವುದಿಲ್ಲ. ಒಂದು ಪಾತ್ರವನ್ನೋ ಘಟನೆಯನ್ನೋ ಹಿಡಿದುಕೊಂಡು ಮಾನವೀಯವಾದ ರೀತಿಯಲ್ಲಿ ನೋಡಿ ಹೊಸ ಕಥನವನ್ನು ಅರಳಿಸುವುದಾಗಿದ್ದರೆ, ಅವನೊಬ್ಬ ದೊಡ್ಡ ಕಥೆಗಾರನಾಗಬಹುದಿತ್ತು. ಆದರೆ, ಅದಕ್ಕೆ ಬೇಕಾದ ತಾಳ್ಮೆ ಪ್ರತಿಭೆಗಳೂ ಅವನಲ್ಲಿಲ್ಲ. ಅದು ಅವನ ಉದ್ದೇಶವೂ ಆಗಿರಲಿಲ್ಲ.

* * *

ಮೆಕೆಂಜಿ “ಹಿಂದಿನ ಪ್ರಪಂಚು”ಗಳನ್ನೆಲ್ಲ ಕ್ರೋಢಿಕರಿಸು ಎಂದು ಹೇಳಿದ್ದೇ ರಾಜಾವಳಿಯ ರಚನ ವಿನ್ಯಾಸಕ್ಕೆ ಮುಖ್ಯ ಕಾರಣ, ನಿಜ. ಆದರೂ ದೇವಚಂದ್ರನಲ್ಲಿ ಒಂದು ಬಗೆಯ ಕತೆಗಾರ ಪ್ರಜ್ಞೆ ಕೆಲಸಮಾಡಿದೆ. ಅವನೊಬ್ಬ ಹರಿಕಥಾದಾಸನಿದ್ದಂತೆ. ಕಥೆಗಳನ್ನು ಪುರಾಣಗಳನ್ನು ಚಾರಿತ್ರಿಕ ಘಟನೆಗಳನ್ನು ತನ್ನ ಆಶಯಕ್ಕೆ ತಕ್ಕಂತೆ ಜೋಡಿಸುತ್ತಾನೆ. ಕನ್ನಡ ಗಾದೆ, ಸಂಸ್ಕೃತ ಸೂಕ್ತಿ, ದಾಖಲೆ, ಜನಪದ ಕತೆ, ಪುರಾಣದ ಕತೆ – ಹೀಗೆ ಸಿಕ್ಕದ್ದೆಲ್ಲವನ್ನು ತನ್ನ ಉದ್ದೇಶಕ್ಕೆ ಬಳಸಿಕೊಳ್ಳುತ್ತಾನೆ. ಜನಪದ ಕಥೆಗಳಿಗೆ ತಾನು ಕಲಿತ ಸಂಸ್ಕೃತ ಶ್ಲೋಕ ಕೂಡಿಸಿ ಇಡೀ ಕಥೆಯನ್ನು ರಾಜಾವಳಿಯ ಕಥನದ ಹಾಸಿನಲ್ಲಿ ಜೋಡಿಸುತ್ತಾನೆ. ಅವುಗಳ ನಡುವೆ ವ್ಯತ್ಯಾಸ ಮಾಡುವುದಿಲ್ಲ. ಕತೆಗಳ ಒಳಗೆ ಇರುವ ಅದ್ಭುತ ನಾಟಕೀಯತೆಯನ್ನು ಕೆಲವು ಕಡೆ ಕಳೆಯದೆ ತರುತ್ತಾನೆ. ಶ್ರೀರಂಗಪಟ್ಟಣದ ರಂಗರಾಜನಿಗೂ ಮೈಸೂರ ಗವುಡನ ನಿಯೋಗಿಯಾಗಿ ಬಂದ ದೊಡ್ಡ ಶಾಂತಯ್ಯನಿಗೂ ಆಸ್ಥಾನದಲ್ಲಿ ನಡೆವ ಮಾತುಕತೆಯು ಉಲ್ಲೇಖಾರ್ಹವಾಗಿದೆ:

ದೊರೆ : ಏನೋ ನಿನ್ನ ಗೌಡಂಗೆ ಕುಂಡೆ ಕಡಿಯುತ್ತಿದೋ? ಹೇಳಿ ಕಳುಹಿಸ್ತರೆ ಬಾರದೆಯಿದ್ದಾನೆ.

ಶಾಂತಯ್ಯ: ಅಪಥ್ಯ ಭೋಜನದಿಂ ದೆಹದೊಳುಯಟ್ಟೆಯಂ ವಿಸರ್ಪತಿಮಿರ ಕಂಡು ಪುಟ್ಟಿ ಎರಡು ಪೊರವಾರೊಳು ವೇದನೆ ತೋರಿಪ್ಪುದರಿಂ ಬರಲಾರದೆ ಎನ್ನಂ ಪೋಗಿ ಪದಕ್ಕರಿಕೆ ಮಾಡೆಂದಟ್ಟಿದನ್

ದೊರೆ: ಬಹಳ ಕಷ್ಟವೇ?

ಶಾಂತಯ್ಯ: ದರಿದ್ರತ್ವದಿಂದ ಅನ್ನಮಿಲ್ಲದದು ಕಷ್ಟಂ.

ದೊರೆ: ಅನ್ನಮಿಲ್ಲದೆ ಮಣ್ಣು ತಿನ್ನತ್ತಾನೋ?

ಶಾಂತಯ್ಯ: ಅನ್ನಮೇ ತಿಂಬುದು, ಆದೊಡಂ ದಡದ ಸಣ್ಣಕ್ಕಿ ಅನ್ನ ಹಾಲು ಹಣ್ಣು ವೆರಸಿ ಉಂಡಂದಂ ಶರೀರಕ್ಕೊಡಂಬಡದದು

ದೊರೆ: ಅದೇನದು?

ಶಾಂತಯ್ಯ: ಹಾರದಕ್ಕಿಯನ್ನಂ ಹುರುಳಿ ಹಾಲು, ಮೆಣಸಿಹಣ್ಣು.

ದೊರೆ: ನಿನ್ನ ಗವುಡಂಗಾವುದುಮಿಲ್ಲೆಂದು ಸತ್ಯಮಂ ಮಾಡು.

ಶಾಂತಯ್ಯ: ಅಸತ್ಯಮನ್ ಅರಿಕೆ ಮಾಳ್ವನಲ್ಲ, ನಾನಾಡಿದುದೆ ಸತ್ಯಂ.

ರಾಜಾವಳಿಕಥೆಯಲ್ಲಿ ಕನ್ನಡ ಭಾಷೆಯ ಧ್ವನಿಪೂರ್ಣತೆಯನ್ನು ಸೂಚಿಸುವ ಅನೇಕ ಭಾಗಗಳಿವೆ. ಅದರಲ್ಲಿ ಸೂರತನಗರದ ಪರದೇಸಿಗೆ ಮುದ್ದಗೌಡನ ಮಗ ಕೇತಗೌಡನು ತನ್ನ ಕತೆ ಹೇಳುವುದು ಒಂದು (೨೩೫). ದೇವಚಂದ್ರನು ತನಗೆ ಸಿಕ್ಕ ಮಾಹಿತಿಯನ್ನು ಕೇವಲ ನಿರ್ಲಿಪ್ತವಾಗಿ ಕೊಡುವ ಕೆಲಸವನ್ನೇನೂ ಮಾಡುವುದಿಲ್ಲ. ಅವನ್ನು ಮಂಡಿಸುವಲ್ಲಿ ತನ್ನ ಕಾಲದ ಕನ್ನಡ ಭಾಷೆಯ ನುಡಿಗಟ್ಟು ತಮಾಶೆ ಗಾದೆ ಕತೆ, ಉಪಕತೆ ಎಲ್ಲದರ ಸಮೇತ ಕೊಡಲು ಯತ್ನಿಸುತ್ತಾನೆ. ದಾಖಲೆಗಳು, ಕಲ್ಪನೆ ಜನಪದ ಶ್ಲೋಕ ಗಾದೆಗಳೆಲ್ಲವನ್ನು ಭೇಗಭಾವವಿಲ್ಲದೆ ಮಿಶ್ರಣ ಮಾಡಿ ಒಂದು ಅನನ್ಯ ಶೈಲಿಯನ್ನು ಹುಟ್ಟಿಸುತ್ತಾನೆ. ತನ್ನ ಮತಶ್ರದ್ಧೆಯ ಭಾಗವಾಗಿ ಅನ್ಯಮತಗಳನ್ನು ಕುರಿತ ಪೂರ್ವಗ್ರಹಗಳನ್ನು ಅದರಲ್ಲೂ ತನ್ನ ಕಾಲದ ಸಮಾಜದ ಪ್ರತಿಷ್ಠಿತರಾದ ವೈದಿಕರ ವಿರುದ್ಧವಾದ ತನ್ನ ನಿಲುವನ್ನು ಬೆರೆಸುತ್ತಾನೆ. ಒಟ್ಟಿನಲ್ಲಿ ಸಾಹಿತ್ಯ ಪರಿಕಲ್ಪನೆಯನ್ನು ಛಿದ್ರಮಾಡುವ ಸಂಕೀರ್ಣ ಪಠ್ಯವಾಗಿ ರಾಜಾವಳಿಕಥೆ ರೂಪುಗೊಂಡಿದೆ.

* * *

ದೇವಚಂದ್ರನ ರಾಜಾವಳಿ ಕಥಾಸಾರವನ್ನು ಜಾನಪದದ ದೃಷ್ಟಿಯಿಂದ ನೋಡುವಾಗ, ಕವಿ ತನಗೆ ಗೊತ್ತಿರುವ ಎಲ್ಲವನ್ನೂ ಹೇಳಿ ಬಿಡಬೇಕೆಂಬ ಹಂಬಲದವನಾಗಿ, ಒಬ್ಬ ಜಾನಪದ ವಕ್ತಾರನಂತೆಯೇ ಕಾಣುತ್ತಾನೆ. ಎಲ್ಲವನ್ನೂ ಮೌಖಿಕ ಪರಂಪರೆಯ ವಕ್ತಾರನಂತೆಯೇ ದಡದಡನೆ ಒಪ್ಪುಸುತ್ತ ಹೋಗುವ ಓಘದಿಂದಾಗಿಯೇ ಬಹುಶ ಅವನಿಗೆ ಬರವಣಿಗೆಯ ನಯಗಾರಿಕೆಯೆಡೆಗೆ ಲಕ್ಷ್ಯ ಕೊಡುವ ಸಾಧ್ಯವಾಗಿಲ್ಲವೆನಿಸುತ್ತದೆ.

ಆತನಿಗೆ ಧಾರ್ಮಿಕ ಕೃತಿಗಳ ಓದಿನ ತಿಳುವಳಿಕೆ ಖಂಡಿತವಾಗಿಯೂ ಇದೆ. ಜತೆಗೆ ಅವನ ಧಾರ್ಮಿಕ ಮನೋಭಾವ ಹಾಗೂ ಅರಮನೆಯ ಸಂಪರ್ಕಗಳು ಮತ್ತು ಪಾಂಡಿತ್ಯದ ಕಡೆಗಿನ ಒಲವು ಇವೆಲ್ಲ ಒಟ್ಟಿಗೇ ಅವನನ್ನು ಕೈಗಿಡಿದು ಎಳೆಯುತ್ತವೆ. ಹೀಗಾಗಿಯೇ ಏನು ಹೇಳಲಿ, ಏನು ಬಿಡಲಿ ಎಂಬ ಎಳೆದಾಟದಲ್ಲಿ ಸ್ಪಷ್ಟತೆಯ ಕೊರತೆ ಎದ್ದು ಕಾಣುತ್ತದೆ.

ಜಾನಪದ ಪಠ್ಯವಾಗಿ ರಾಜಾವಳಿ ಕಥಾಸಾರವನ್ನು ನೋಡುವಾಗ ಈ ಕೃತಿಯ ೪, ೫, ೬ ಹಾಗೂ ೧೦ನೇ ಅಧ್ಯಾಯಗಳು ಗಮನಾರ್ಹವಾಗಿವೆ. ಇವೆಲ್ಲ ನಾವು ಕಾಣುವುದು ಜನಪದ ಕಥೆಗಳ ಸರಮಾಲೆಗಳನ್ನೆ. ಗಾದೆ ಪಡೆನುಡಿಗಳನ್ನು ಈಗ ಬಳಸಿಕೊಂಡದ್ದು ಕಡಿಮೆ. ಕತೆಗಳ ಹಿನ್ನೆಲೆಯಾಗಿ ಆತ ಹೇಳುವುದು ಮತ್ತೆ ಧರ್ಮದ ಚೌಕಟ್ಟಿನ ಒಳಗಿನ ಮಾತುಗಳನ್ನೇ. ‘ಸ್ತ್ರೀ ಬುದ್ಧಿ ಚಾತುರ್ಯವನಾರ್ ಅರಿವರ್’ ಎಂಬ ಮಾತಿನ ಕೆಳಗೆ ಜಾರತನಕ್ಕೆ ಸಂಬಂಧಿಸಿದ ಹತ್ತಾರು ಕಥೆಗಳನ್ನು, ‘ಬುದ್ಧಿವಂತರು ಧರ್ಮವನ್ನು ಕೊಳ್ವಲ್ಲಿ ಪರೀಕ್ಷಿಸಿಕೊಳ್ಳಬೇಕು’ ಎಂಬ ಮಾತಿನ ಕೆಳಗೆ ಮತ್ತೆ ಹತ್ತಾರು ಕಥೆಗಳನ್ನು ಹೇಳುತ್ತಾನೆ. ಸಹಜವಾಗಿಯೇ ಜೈನಧರ್ಮದ ಒಂದು ಎಳೆಯ ತಂತ್ರದಲ್ಲಿ ಇಲ್ಲಿನ ಕಥೆಗಳನ್ನು ಹೇಳುತ್ತಾನೆ. ಸಹಜವಾಗಿಯೇ ಜೈನಧರ್ಮದ ಒಂದು ಎಳೆಯ ತಂತ್ರದಲ್ಲಿ ಇಲ್ಲಿನ ಕಥೆಗಳನ್ನೆಲ್ಲ ಪೋಣಿಸಿರುವುದು ಗಮನಾರ್ಹ ಸಂಗತಿ.

‘ಕೂಗಿ ಮಾರಿಯಂ ಕರೆತಂದನೆಂಬಂತೆ’, ‘ಪಾಲಿಂಗೆ ಪುಳಿಸೇರಿ ಕೆಟ್ಟಂತೆ’, ‘ಪಂದಿಯೊಡನಾಡಿದ ಕೆಂದಗರು ಪೇಲ ತಿಂದುದೆಂಬಂತೆ’, ‘ಪರಿಪಮಿಧಲ್ಲಿ ಪಾತಾಳವೆಂಬಂತೆ’, ‘ಪರುಷಮಾದುದರಿಂದ ಲೋಹಮಂ ಸೋಂಕಲ್ ಪೊನ್ನಪ್ಪುದು’ – ಎಂಬಂತಹ ಗಾದೆ ಮಾತುಗಳನ್ನು ಹೇಳಿಕೊಂಡು ಹೋಗುತ್ತಾನೆ. ಕಾಲ್ಕೈರೆಯುತ್ತೆ ಬರಲ್ ಮುಂತಾದಿ ಅಲ್ಲಲ್ಲಿ ಕೆಲ ನುಡಿಗಟ್ಟುಗಳನ್ನು ಬಳಸಿದ್ದರೂ ಕವಿಗೆ ಅವುಗಳ ಕಡೆ ಸರಿಯಾದ ಲಕ್ಷವೇ ಇಲ್ಲ.

ಅವನಿಗೆ ಏನಿದ್ದರೂ ಕಥೆಗಳನ್ನು ಹೇಳುವ, ಇಲ್ಲವೆ ಕಥೆ ಮಾಡಿ ಹೇಳುವ ಬಯಕೆ ಹೆಚ್ಚು. ಹೀಗೆ ಕಥೆಗಳನ್ನು ಹೇಳುವಲ್ಲಿ ಜನಪದ ಕಥೆಗಳ ಬಳಕೆ ಒಂದು ಕಡೆಯಾದರೆ, ಐತಿಹ್ಯಗಳನ್ನು, ಐತಿಹ್ಯಗಳಂತಹ ಘಟನೆಗಳನ್ನು ಇನ್ನೊಂದು ಕಡೆ ಹೇಳುತ್ತಾನೆ. ಆತನು ಐತಿಹ್ಯಗಳಂತಹ ಘಟನೆಗಳನ್ನು ಬಿತ್ತರಿಸುವಾಗ ಧಾರ್ಮಿಕ ಸಂಗತಿಗಳನ್ನೂ ಐತಿಹಾಸಿಕ ಘಟನೆಗಳೆಂಬಂತೆ ಹೇಳುತ್ತಾನೆ. ಇಂಥವನ್ನು ನಂಬುವುದು, ಚರ್ಚಿಸುವುದು ಸರಿಯಾದ ಪರೀಕ್ಷೆ ಇಲ್ಲದೆ ತೊಂದರೆ ಎನಿಸುತ್ತದೆ. “ಶ್ರವಣಬೆಳ್ಗೊಳಕ್ಕೆ ಬೆಳ್ಗುಳೆ ಎಂಬ ಹೆಸರು ಹೇಗೆ ಬಂದಿತು ಎಂದು ಹೇಳುವುದು ಶುದ್ಧ ಐತಿಹ್ಯವಾಗಿದೆ. ‘ಕೂಷ್ಮಾಂಡಿನಿ ದೇವಿ ವೃದ್ಧೆಯಾಗಿ ಗುಳ್ಳಕಾಯಲ್ಲಿ ಹಾಲನ್ನು ತಂದು ಜಿನಪ್ರತಿಮೆಗೆ ಅಭಿಷೇಕ ಮಾಡಿದಾಗ, ಅದು ಪ್ರತಿಮೆಯೆಲ್ಲ ಆವರಿಸಿ, ಗುಡ್ಡದಲ್ಲೆಲ್ಲ ಹರಿದು ಊರೆಲ್ಲ ಹರಡಿ – ಬೆಳ್ಳಗೆ ಕಂಡಿದ್ದರಿಂದ ಬೆಳ್ಗುಳೆ ಎಂಬ ಹೆಸರು ಬಂದಿತು’ ಎಂಬುದನ್ನು ನಾವು ಕೇಳಲು ಖುಷಿ ಎನಿಸುತ್ತದೆ. ಬೆಳ್ಗುಳ ಎಂಬ ಹೆಸರು ಆ ಊರಿಗೆ ಹೊಸದು, ಅದು ಗುಡ್ಡದ ಮಗ್ಗುಲಲ್ಲಿದೆ, ಆ ಗುಡ್ಡದ ತುದಿಯಲ್ಲಿ ಜಿನಪ್ರತಿಮೆ ಇದೆ – ಹೀಗೆ ಐತಿಹ್ಯದಲ್ಲಿ ಸತ್ಯಸಂಗತಿಗಳು ಅಡಗಿರುವುದನ್ನು ಸರಳವಾಗಿ ಗುರುತಿಸಬಹುದಾಗಿದೆ.

ಹೀಗೆಯೇ ಪೊಂಬುಚ್ಚಪುರ ಎಂಬ ಊರಿನ ಐತಿಹ್ಯವನ್ನು ಯಾವುದೇ ಆತಂಕವಿಲ್ಲದೆ ಪರಿಶೀಲಿಸಬಹುದಾಗಿದೆ. ‘ಲಕ್ಷ್ಮೀ ವನದಲ್ಲಿ ದೇವಿಯ ಬಂಗಾರದ ಪ್ರತಿಮೆ ಕಂಡು ಅದನ್ನು ಎತ್ತಲು ಹೋದಾಗ ಸಾಧ್ಯವಾಗಲಿಲ್ಲ. ಆತನ ಸ್ವಪ್ನದಲ್ಲಿ ದೇವಿ – ಪದ್ಮಾಂಬೆ – ನಾನು ಇಲ್ಲಿಯೇ ಇರುತ್ತೇನೆ ಎಂದುದರಿಂದ, ಜಿನದತ್ತನು ಕಾಡನ್ನು ಕಡಿದು, ಪಟ್ಟಣ ಮಾಡಿದನು. ಪದ್ಮಾಂಬೆವಾಸವಾಗಿರುವ ಈ ಊರು ಪೊಂಬುಚ್ಚಪುರ ಎಂದು ಹೆಸರಾಯಿತಂತೆ” ಈ ಐತಿಹ್ಯದಲ್ಲಿ ಹೊಸ ಊರುಗಳು ನಿರ್ಮಾಣವಾಗುವ ಗುಟ್ಟಿದೆ. ಒಬ್ಬೊಬ್ಬ ಶೂರನು ತನ್ನ ಅನುಯಾಯಿಗಳೊಂದಿಗೆ ಅರಣ್ಯದಲ್ಲಿ ಉಳಿದು; ತಾನು ಆರಾಧಿಸುವ ದೇವರನ್ನು ಅಲ್ಲಿ ಪ್ರತಿಷ್ಠಾಪಿಸಿ, ಅದರ ಸುತ್ತಮುತ್ತಲಿನ ಗಿಡ – ಗಂಟಿಗಳನ್ನು ಕಡಿದು, ನಗರ ನಿರ್ಮಾಣ ಮಾಡುವ ಕಥೆ ರೋಚಕವಾಗಿದೆ. ಇಂತಹ ಇನ್ನೂ ಅನೇಕ ಐತಿಹ್ಯಗಳು ಈ ಕೃತಿಯಲ್ಲಿ ದೊರೆಯುತ್ತವೆ. ಆದರೆ ಶಂಕರಾಚಾರ್ಯರು ಮೂಲದ ಜಿನಪ್ರತಿಮೆ ತೆಗೆಸಿ ಸರಸ್ವತಿ ಪ್ರತಿಮೆ ಸ್ಥಾಪಿಸಿದರು ಎಂಬಂತಹ ಸಂಗತಿಗಳು ನಮಗೀಗ ಐತಿಹ್ಯಗಳಾಗಿ ಕಂಡರೂ ಅವನ್ನು ಶೋಧಿಸುವಲ್ಲಿ ಮೈತುಂಬಾ ಎಚ್ಚರ ವಹಿಸಬೇಕಾಗುತ್ತದೆ.

ಹೀಗೆಯೇ ಮಲೆಯ ಮಾದೇಶ್ವರರಿಗೆ ಸಂಬಂಧಪಟ್ಟ ಸಂಗತಿ: ‘ದಕ್ಷಿಣ ಸೀಮೆಯಿಂದ ಒಬ್ಬ ಮಾದಿಗರ ಹುಡುದ ಬಂದು, ತನ್ನ ಗುರುವಿಗೆ ದೊರೆತನವನ್ನು ದೊರೆಯುವಂತೆ ಮಾಡಿದ್ದು, ತಾನು ಆತನ ಭಕ್ತನಾಗಿದ್ದು, ಆ ನಾಡಿನ ಅರಸನಾದ ಅಭಿಚಂದ್ರನನ್ನು ಕಪಟದಿಂದ ಸಿಂಹಾಸನದಿಂದ ಕೆಳಗಿಳಿಸಿದ್ದು, ಭಾನುಕೀರ್ತಿಯೆಂಬ ಜೈನಮುನಿಯನ್ನು ಸಂಹರಿಸಿದ್ದು, ಹೊಳೆಗೆ ಕಟ್ಟೆಕಟ್ಟುವಾಗ ಅವನಿಗೆ ಒಂದು ಕಲ್ಲು ಹಾಕಿ ಕೊಂದದ್ದು, ನಂತರ ವ್ಯಂತರನಾಗಲು, ಸರಗೂರ ಉಪ್ಪಲಿಗರು ಅವನ ಗುಡ್ಡರಾಗಿ ಏಳುಮಲೆಯ ಮಧ್ಯದಲ್ಲಿ ಪಶ್ಚಿಮಾಭಿಮುಖವಾಗಿ ಗುಡಿಕಟ್ಟಿ, ಮಾದೇಶ್ವರನಾಗಿದ್ದು, ಇವೆಲ್ಲವನ್ನೂ ನೇರವಾಗಿ ಶುದ್ಧ ಐತಿಹ್ಯದಂತೆ ಸ್ವೀಕರಿಸಿ, ನಂಬುವುದು ದುಸ್ತರವೆನಿಸುತ್ತದೆ.

ಆದರೆ ತಾನು ಕಂಡು ಕೇಳಿದ ಹಲವಾರು ಗುಡಿಗುಂಡಾರಗಳು, ಊರುಗಳು ಹೇಗೆ ನಿರ್ಮಾಣವಾದವು ಎಂಬ ವದಂತಿಗಳನ್ನು ಹತ್ತನೇ ಅಧ್ಯಾಯದ ಪ್ರಾರಂಭದಲ್ಲಿ ಪುಂಖಾನುಪುಂಖವಾಗಿ ಹೇಳುತ್ತಾ ಹೋಗುತ್ತಾನೆ. ಇವು ಅಧ್ಯಯನ ಯೋಗ್ಯ ಸಂಗತಿಗಳೆನಿಸುತ್ತವೆ. ಹೀಗೆ ಈ ಐತಿಹ್ಯಗಳನ್ನು ಹೇಳುವಲ್ಲಿಯೂ ಆತ ಧಾರ್ಮಿಕ ಭಾವನೆಯಿಂದ ಬಿಡುಗಡೆ ಹೊಂದಿಲ್ಲವೆಂಬಂತೆ ಕಾಣುತ್ತಾನೆ. ಈ ಐತಿಹ್ಯಗಳಲ್ಲೆಲ್ಲ ಸಾಮಾನ್ಯವಾಗಿ ಕಾಣುವ ಸಂಗತಿಯೆಂದರೆ ಅಲ್ಲಲ್ಲಿ ದೇವರ ಪ್ರತಿಮೆಗಳು ಕಾಣಿಸಿಕೊಳ್ಳುವುದು, ಈ ಪ್ರತಿಮೆಗಳು ಕಾಣಿಸಿಕೊಂಡಲ್ಲಿಯೇ ಗುಡಿಗಳನ್ನು ನಿರ್ಮಿಸುವುದು ಮತ್ತು ಊರುಗಳು ಬೆಳೆದು ನಿಲ್ಲುವುದು. ಈ ಹಿಂದೆಯೇ ಪೊಂಬುಚ್ಚಪುರ ಎಂಬ ಊರಿನ ನಿರ್ಮಾಣದ ಪ್ರಸಂಗದಲ್ಲಿ ಇಂತಹ ಲಕ್ಷಣವನ್ನು ಕಂಡಿದ್ದೇವೆ.

ರಾಜಾವಳಿಯ ಪೂರ್ವಭಿತ್ತಿ:

ರಾಜಾವಳಿ ಕಥೆಯನ್ನು ಓದುವಾಗ್ಗೆ ನಮಗೆ ಗೋಚರವಾಗುವ ಮತ್ತೊಂದು ವಿವರವೆಂದರೆ ಸಂಸ್ಕೃತ ಕಾವ್ಯಕಥನಗಳ, ಹಳಗನ್ನಡ ಕಥನಗಳ ಆಶಯಗಳು ಮತ್ತು ಅದೇ ಆಶಯಗಳು ಜನಪದ ಕಥಾಸಂದರ್ಭಗಳಲ್ಲಿ ಪುನರಾವರ್ತನೆಗೊಳ್ಳುವುದನ್ನು ನಾವು ಸಾಮಾನ್ಯವಾಗಿ ಕಾಣುವುದಿದೆ. ಯಾವುದೇ ಕಾವ್ಯ ಕಥೆ ಅಥವಾ ಜನಪದ ಕಥನ ಪರಂಪರಾಗತ ಆಶಯಗಳ ಮೇಲೆಯೇ ರಚನೆಗೊಳ್ಳುತ್ತ, ಹೆಣೆದುಕೊಳ್ಳುತ್ತ ಸೃಷ್ಟಿಯಾಗಿರುವುದನ್ನು ಗಮನಿಸಬಹುದು. ಈ ಆಶಯಗಳು ಜನಪದಕ್ಕೆ ಬೇರೆಯಲ್ಲ, ಶಿಷ್ಟಪರಂಪರೆಗೆ ಬೇರೆಯಲ್ಲ. ಪಂಪ, ಕುಮಾರವ್ಯಾಸ, ಲಕ್ಷ್ಮೀಶರಂಥ ಪ್ರತಿಭಾವಂತ ಕವಿಗಳು ಜನಪದ, ಶಿಷ್ಟ ಎಂಬ ವ್ಯತ್ಯಾಸವಿಲ್ಲದೆ ತಮ್ಮ ಕಾವ್ಯ ನಿರ್ಮಿತಿಗೆ ಅಗತ್ಯವಿಸುವ ಆಶಯಗಳನ್ನೆಲ್ಲ ಬಳಸಿಕೊಂಡಿರುತ್ತಾರೆ. ಈ ಅರ್ಥದಲ್ಲಿ ದೇವಚಂದ್ರನೂ ಸಹ ಪರಂಪರಾಗತ, ಶಿಷ್ಟ ಮತ್ತು ಜನಪದ ಆಶಯಗಳ ಹಿನ್ನೆಲೆಯ ಕಥೆಗಳನ್ನೆಲ್ಲ ತನ್ನ ಕೃತಿಯಲ್ಲಿ ಬಳಸಿಕೊಂಡಿರುತ್ತಾನೆ.

ದೇವರು ಮತ್ತು ಧರ್ಮ ಸಂಬಂಧದ ವಿವರಗಳು ಬಂದಾಗ ಪರಂಪರಾಗತ ಆಶಯಗಳೇ ಹೆಚ್ಚು ಪುನರಾವರ್ತನೆಯಾಗುತ್ತವೆ. ಉದಾಹರಣೆಗೆ ಬೇಡೆ ಕಣ್ಣಪ್ಪನ ಮುಗ್ಧ ಭಕ್ತಿಯ ವಿವರ: ‘ಬೇಡಕ ಕಣ್ಣ ಎಂಬುವನು ಎಂಜಲ ಮಾಂಸವನ್ನು ಎಡದಕೈಯ್ಯಲ್ಲಿ ಬಲಗಾಲ ಕೆರದಿಂದ ತೆಗೆದು, ಬಾಯಲ್ಲಿದ್ದ ನೀರನ್ನು ಮುಕ್ಕಳಿಸಿ ಉಗಿದು ಎಡಗೈಯ್ಯ ಮಾಂಸವನ್ನು ತೋರಿಸಿ ಕೈಲಾಸವನ್ನು ಸೇರಿದ…..’ ಎಂಬ ಈ ಮಾದರಿಯ ಆಶಯಗಳು ಜನಪದ ಹಾಗೂ ಶಿಷ್ಟ ಎರಡೂ ಪರಂಪರೆಯಲ್ಲಿ ಪ್ರವಹಿಸುತ್ತವೆ. ಮೈದಾಳು ರಾಮಣ್ಣನ ಕಥೆ, ಕೋಳೂರು ಕೊಡಗೂಸು, ಮಾರ್ಕಂಡೇಯ, ಧ್ರವ ಈ ಕಥೆಗಳೆಲ್ಲ ಮುಗ್ಧ ಭಕ್ತಿಗೆ ದೇವರು ಬೇಗ ಒಲಿಯುತ್ತಾನೆ ಎಂಬುದನ್ನು ಪ್ರಚಾರ ಮಾಡುವ ಆಶಯದ ಕಥೆಗಳು. ಇದರ ಜತೆಗೆ ದೇವಚಂದ್ರ ಅನೇಕ ಜನಪದ ಮೂಲ ಆಶಯಗಳ ಕಥೆಗಳನ್ನೂ ಹೇರಳವಾಯಿ ಉದಾಹರಿಸುತ್ತಾನೆ. ವಿಶೇಷವೆಂದರೆ ದೇವಚಂದ್ರ ಉದಾಹರಿಸುವ ಪರಂಪರಾಗತ ಆಶಯಗಳ ಆ ಕಥೆಗಳೆಲ್ಲ ಮಾನವೀಯ ಮನೋಧರ್ಮದ ಹಿನ್ನೆಲೆಯಲ್ಲೇ ಇವೆ. ಈ ಬಗೆಯ ಶಿಷ್ಟ ಹಾಗೂ ಜನಪದ ಕಥೆಗಳ ಆಯ್ಕೆಯಲ್ಲಿ ದೇವಚಂದ್ರನ ಪೂರ್ವಾಪರ ವಿವೇಚನೆ ಹೆಚ್ಚು ಕೆಲಸ ಮಾಡಿರುವಂತೆ ತೋರುತ್ತದೆ.

ಮನುಷ್ಯರೆಲ್ಲ ಒಂದೇ ಆದರೂ, ಜಾತಿ ಹದಿನೆಂಟಾದವು ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿಯೇ ದೇವಚಂದ್ರ ‘….. ಆ ಬ್ರಾಹ್ಮಣರು ಆದಿ ಬ್ರಹ್ಮನ ಮುಖದಿಂದ ಹುಟ್ಟಿ ಕ್ರಿಯಾ ಮಂತ್ರೋಪದೇಶದಿಂದ ದ್ವಿಜನ್ಮರಾಗಿ ವದನಜರೆನಿಸಿಕೊಂಡರು. ಕ್ಷತ್ರಿಯರು ಬಾಹುಬಲ ಪರಾಕ್ರಮದಿಂದ ಜೀವನ ನಡೆಸುವವರಾದುದರಿಂದ ಬಾಹುಜರಾಗುವರು. ವೈಶ್ಯರು ಕಾಲಬಲದಿಂದ ಜಲಸ್ಥಲಾದಿಗಳಲ್ಲಿ ಸಂಚರಿಸಿ ಜೀವಿಸುವುದರಿಂದ ಊರುಜರಾಗುವರು. ಶೂದ್ರರು ಉಳಿದ ಮೂರು ವರ್ಗಗಳ ಪಾದಸೇವಾದಿಗಳನ್ನು ಮಾಡಿ ಜೀವಿಸುವುದರಿಂದ ಪಾದಜರಾಗುವರು. ಹೀಗೆ ಮಾನವಜಾತಿ ಒಂದೇ ಆದರೂ ಅವರವರ ವೃತ್ತಿಭೇದದಿಂದ ಬ್ರಾಹ್ಮಣರೇ ಮೊದಲಾದ ಹದಿನೆಂಟು ಜಾತಿಗಳಾದವು’ ಎಂಬ ಪರಂಪರಾಗತ ವಿವರ ಕೊಡುತ್ತಲೇ ದೇವಚಂದ್ರ, ಇನ್ನೆರಡು ವಾಕ್ಯಗಳನ್ನೂ ಕೃತಿಯ ಕೊನೆಯಲ್ಲಿ ಉದ್ಧರಿಸುವುದನ್ನು ಓದುಗರು ಗಮನಿಸಬೇಕು. ‘…. ವರ್ಣನಾಂ ಬ್ರಾಹ್ಮಣೋ ಗುರುವೆಂದು ಗರ್ವವನ್ನು ಹೊಂದಿರುವ ಜಾತಿಯ ಅಭಿಮಾನವನ್ನು ಬಿಡಬೇಕು’ ಎನ್ನುತ್ತ ಇದರ ಮುಂದಿನ ಮಾತಾಗಿ ‘….. ದರ್ಶನ ಸಂಪನ್ನನಾದ ಮಾದಿಗನನ್ನು ಉತ್ತಮ ದೃಷ್ಟಿಯುಳ್ಳವರು ದ್ರವ್ಯಭಾವದಿಂದ ಕೊಂಡಾಡಿ ಪ್ರಶಂಸಿಸಬೇಕು’ ಎಂದು ಬರೆಯುತ್ತಾರೆ.

ಸಾಮಾಜಿಕ ಏರುಪೇರುಗಳ ಅವಾಂತರ, ಜಾತಿ ಸಂಬಂಧದ ಮೇಲಾಟ, ಧರ್ಮದ ಹಿನ್ನೆಲೆಯ ಹೊಡೆದಾಟಗಳ ಅರಿವು ದೇವಚಂದ್ರನ ಸೂಕ್ಷ್ಮ ದೃಷ್ಟಿಗೆ ಸ್ಪಷ್ಟವಾಗಿಯೆ ಅರಿವಿಗೆ ಬಂದಿತ್ತೆನಿಸುತ್ತದೆ. ಜಿನಸೇನರ ಪೂರ್ವಪುರಾನದಲ್ಲಿಯೇ ಬರುವ ಮಾತನ್ನ ಪಂಪ ಕನ್ನಡಕ್ಕೆ ಭಾಷಾಂತರಿಸುತ್ತ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಇದರ ಹಿಂದಿನ ಸಮಸ್ಯೆಯನ್ನು ವಿಕ್ರಮಾರ್ಜುನ ವಿಜಯದಲ್ಲಿ ಭೀಷ್ಮ ಕರ್ಣರ ನಡುವೆ ಚರ್ಚೆಗೆ ಒಳಪಡಿಸಿರುವುದು ಈಗಾಗಲೇ ಓದುಗರಿಗೆ ವಿದಿತವಾಗಿರುತ್ತದೆ. ಆದರೆ ದೇವಚಂದ್ರ ಈ ಸಮಸ್ಯೆಯನ್ನು ತನ್ನ ಕೃತಿಯಲ್ಲಿ ಹೆಚ್ಚು ಜೀವಂತ, ಜ್ವಲಂತ ಸಮಸ್ಯೆಯಾಗಿ ಚಿತ್ರಿಸುತ್ತ, ಅದಕ್ಕೆ ಹತ್ತಾರು ಉದಾಹರಣೆಗಳನ್ನು ಕೊಡುತ್ತಾನೆ.

* * *

ವಚನಕಾರರ ಜಾತಿರಹಿತ ಸಮಾಜ ನಿರ್ಮಾಣದ ಚಳುವಳಿಯ ನಂತರವೂ ಕರ್ನಾಟಕದಲ್ಲಿ ಜಾತಿ ವ್ಯವಸ್ಥೆಯನ್ನು ನಂಬಿಕೊಂಡೇ ಜನಸಮೂಹ ನಡೆಸಿದ ಹೊಡೆದಾಟಗಳನ್ನು ದೇವಚಂದ್ರ ಅಕಸ್ಮಾತ್ತಾಗಿಯೋ, ತಸ್ಮಾತ್ತಾಗಿಯೋ ಎಂಬಂತೆ ಮುಗ್ಧ ಮನಸ್ಸಿನಿಂದ ಹೇಳುತ್ತ ಹೋಗುತ್ತಾನೆ. ಇದು ಕುತೂಹಲದ ಸಂಗತಿ. ಸೂಕ್ಷ್ಮವಾಗಿಯೂ ಗಮನಿಸಬೇಕಾದ ಅಂಶ. ಹೆಣ್ಣು ಗಂಡಿನ ಪ್ರೇಮ ಸಂಬಂಧದ ಕಥೆಯೊಂದು ಮನಮುಟ್ಟುವಂತಿದೆ: ‘ವರ್ತಕನ ಮಗಳೊಡನೆ ಮತ್ತೊಬ್ಬ ಶೆಟ್ಟಿಯ ಮಗನು ಜೊತೆಗೂಡಿದ್ದನು. ಯಾರ್ಯಾರು ಎಷ್ಟು ಬಗೆಯಾಗಿ ಹೇಳಿದರೂ ಒಬ್ಬರನ್ನೊಬ್ಬರು ಅಗಲದಾದರು. ಇದನ್ನು ಪಾದಶಾಯಿಗೆ ತಿಳಿಸಲು ಆತನು ಅವರನ್ನು ಹಿಡಿದು ತರಿಸಿ ಬಿಸಿಲಲ್ಲಿ ನಿಲ್ಲಿಸಿದನು. ನೆಲದ ಮಣ್ಣು ಕಾದು ತಡವರಿಸುತ್ತಿದ್ದ ಮಿಂಡಗಾರನ ಕಾಲಕೆಳಗೆ ಆಕೆ ತಾನುಟ್ಟ ಸೀರೆಯನ್ನೆಲ್ಲಾ ಹರಿದು ಹಾಸುತ್ತಿದ್ದಳು. ಅದನ್ನು ನೋಡಿದ ಪಾದಶಾಯಿಯು ಇದು ಜನ್ಮಾಂತರದ ಸಂಬಂಧವೆಂದು ಇಬ್ಬರನ್ನೂ ಬೇರೆ ಮಾಡದೆ ಕಳುಹಿಸಿಕೊಟ್ಟನು’’.’

ತಾನು ಕಂಡ, ಕೇಳಿದ ಸಾಮಾಜಿಕ ವಿವರಗಳನ್ನು ಅತ್ಯಂತ ಸರಳವಾಗಿ, ಮುಗ್ಧವಾಗಿ ಹೇಳಿಕೊಂಡು ಹೋಗಿರುವ ದೇವಚಂದ್ರನ ಕೃತಿ ರಾಜಾವಳೀ ಕಥಾಸಾರ ಕನ್ನಡ ಸಾಹಿತ್ಯ ಪರಂಪರೆಯ ಅಥವಾ ಕಳೆದ ಶತಮಾನಗಳ ಬದುಕಿನ ಒಂದು ಮುಖ್ಯ ದಾಖಲೆಯೆನಿಸುತ್ತದೆ. ವಿದ್ವಾಂಸರು ಅತ್ಯಂತ ತಾಳ್ಮೆಯಿಂದಲೂ, ಶ್ರದ್ಧೆಯಿಂದಲೂ ರಾಜಾವಳೀ ಕಥೆಯನ್ನು ವ್ಯಾಖ್ಯಾನಿಸಬೇಕಾಗಿದೆ.

‘ಬುದ್ಧಿವಂತರಾದವರು ಯಾವುದನ್ನು ಪರೀಕ್ಷಿಸಿ ಸ್ವೀಕರಿಸುವರು; ಕ್ರೋಧ, ಮಾಯೆ, ಲೋಭಮೋಹಗಳನ್ನು ತ್ಯಹಿಸಿ ನಿಜಸ್ವರೂಪವನ್ನು ನಂಬುವುದು ಜ್ಞಾನಿಗಳ ಲಕ್ಷಣವಾಗಿದೆ…..’ ‘…..ವಿಚಾರ ಶಕ್ತಿಯಿಲ್ಲದೆ ಧರ್ಮವನ್ನು ಸ್ವೀಕರಿಸಿದರೆ ಅನರ್ಥವಾಗುವುದು…..’ ಎಂಬ ವಾಕ್ಯಗಳನ್ನೆಲ್ಲ ಉದ್ಧರಿಸುವ ದೇವಚಂದ್ರ ಮತ್ತೊಂದು ಮುಖ್ಯ ಸೂಕ್ತಿ ಪ್ರಕೃತಿಯ ಚೇತನವೇ ಮನುಷ್ಯ ಚೇತನಕ್ಕಿಂತ ದೊಡ್ಡದೆಂದು ಭಾವಿಸಿ ರಾಜಾವಳಿ ಕಥೆಯನ್ನು ಆರಂಭಿಸಿದ್ದಾನೆ. ಹೀಗಾಗಿ ದೇವಚಂದ್ರ ಕಾಲಜ್ಞಾನ ಹೇಳುವ ಕಾಲಜ್ಞಾನಿಯಂತೆ, ಆ ಕಾಲದ ಅನೇಕ ಸತ್ಯ ಸಂಗತಿಗಳನ್ನು ಹೇಳುವ ಸಂತನಂತೆ, ಇತಿಹಾಸ ವಿವರಗಳನ್ನು ದಾಖಲಿಸುವ ಚರಿತ್ರಕಾರನಂತೆ, ಕಥೆಗಳನ್ನು ಒಂದರ ಮೇಲೆ ಒಂದರಂತೆ ಹೇಳುವ ಕಥೆಗಾರನಂತೆ ಕಾಣಿಸುತ್ತಾನೆ. ಇದರಿಂದಾಗಿ ರಾಜಾವಳಿ ಕಥೆ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಒಂದು ಮುಖ್ಯ ಸಾಂಸ್ಕೃತಿಕ ಪಠ್ಯವೆನಿಸುತ್ತದೆ. ಈ ಇಡೀ ಕೃತಿಯನ್ನು ಕನ್ನಡ ಸಾಹಿತ್ಯ ಪರಂಪರೆಯ ಚಾರಿತ್ರಿಕ ಕಾವ್ಯಗಳೊಡನೆ ತೌಲನಿಕವಾಗಿ ಇಟ್ಟು ಪರಿಶೀಲಿಸುವುದರ ಜೊತೆಗೆ ಇದರ ಭಾಷೆಯ ಸೊಗಸು ಸೊಗಡು ವೈಶಿಷ್ಟ್ಯಗಳನ್ನು ಮತ್ತು ಚರಿತ್ರೆ ಹಾಗೂ ಜಾನಪದಗಳ ಬೆರಕೆಯ ಕಾರಣದಿಂದಾಗಿ ಕೃತಿಯಲ್ಲಿ ಉದ್ಭವಿಸಿರುವ ವೈಶಿಷ್ಟ್ಯ ಮತ್ತು ಅಸಾಂಗತ್ಯಗಳನ್ನು ವಿವರವಾಗಿ ವಿಶ್ಲೇಷಿಸುವುದು ಅಗತ್ಯವಾಗಿದೆ.*

ಎಚ್. ಜೆ. ಲಕ್ಕಪ್ಪಗೌಡ

 

* ಇದು ‘ರಾಜಾವಳೀ ಕಥಾಸಾರ’ ಕೃತಿಯನ್ನು ಕುರಿತ ಅನೇಕ ವಿದ್ವಾಂಸರ ಅಭಿಪ್ರಾಯ, ಚರ್ಚೆ, ವಾಗ್ವಾದಗಳನ್ನು ಕ್ರೋಡೀಕರಿಸಿರುವ ಪ್ರಸ್ತಾವನೆಯ ನುಡಿತೋರಣವಾಗಿದೆ. ಈಯೆಲ್ಲ ಲೇಖಕರಿಗೆ ನಾನು ಋಣಿಯಾಗಿದ್ದೇನೆ.