ಆ ತಂಜಾವೂರ ದೊರೆಯು ಪರರಾಯರೊಳು ಕಾದಲೆಂದಾನೆಯನೇರಿ ಪೋಪಾಗಳ್ ಒಬ್ಬ ಸಿಪಾಯಿ ಅತ್ಯಂತ ಜವಮಪ್ಪ ಕುದುರೆಯಂ ಕುಂಭಸ್ಥಳಕ್ಕೇರಿಸಿ ಅರಸನಂ ಬಂತಿಯೊಳಿರಿದಾಗ ಸಮೀಪದೊಳಿರ್ದ ಮೈಭೋಗದ ಜೆಟ್ಟಿಯು ಕುದುರೆಯ ಕಾಲೆರಡಂ ಕತ್ತಿಯಿಂ ಕತ್ತರಿಸಿ ಕೆಡವಿದಂ. ಆತಂಗೆ ಸಪ್ತಾಂಗಮಂ ಕೊಟ್ಟಂ. ಒಬ್ಬ ಮಂತ್ರವಾದಿ ಮಂತ್ರಂಗಳಂ ಸಾಧಿಸಿ ಪಾವಿಂಗೆ ಒಂದು ಪಣಂ ನಾಯಿಗರ ಪಣಂ ಚೇಳಿಂಗೆ ಕಾಲಪಣಂ ಎಂದು ತೆಗೆದುಕೊಂಡು ವಿಷಮನಿಳಿಸುತ್ತಿರೆ ಒಬ್ಬ ಕೋಮಟಿಗಂ ಸರ್ಪದಷ್ಟಮಾಗೆ ಲೋಭದಿಂ ಚೇಳು ಕಡಿಯಿತ್ತೆಂದು ಪನ್ನೊಂದು ಖಂಡಿಗಮಂ ಬೆಳೆದ ಒಕ್ಕಲಿಗನಂತೆ ಹಾಗದ ಕಾಸಂ ಕೊಟ್ಟು ಮಂತ್ರಿಸಿಕೊಂಡು ಸಾಯೆ ಅವನ ಮನೆ ಆಧಾರಮೆರಡು ಸಾವಿರ ವರಹವು ಅರಮನೆಗಾಯ್ತು.

ಒಬ್ಬ ಬ್ರಾಹ್ಮಣಂ ಮಳಯಾಳದಿಂದಾ ಮಧುರೆಗೆ ಪೋಗಲಲ್ಲಿ ಬಿರುದಿನ ಜೆಟ್ಟಿಯ ಸರಪಣಿಯಂ ಮೆಟ್ಟಿದೊಡಾತಂ ದೊರೆಯಪ್ಪ ವೀರಪ್ಪನಾಯಕನಲ್ಲಿಗೆ ಕೊಂಡೊಯ್ದು ಈತಂಗು ನನಗು ಜೋಡಂ ಬರೆವುದೆನೆ ಪಾರ್ವನೆಂದಂ ನಾನಾಗಿ ಬಂದವನಲ್ಲಾ ಇವನಾಗಿ ಹೇಳಿದರೆ ಹಾಗೆ ಅಗಲಿ ಎಂದು ಬರೆಸಿಕೊಂಡು ಅರಸು ಕೊಟ್ಟ ರಾತೀಪನುಂಡು ಘಟ್ಟಿಯಾಗಿ ಮಹಾನವಮಿಯೊಳೊಂದು ಗೋಣಿ ಚೀಲಮನಾಂತು ನಿಂದೊಡಾ ಜಟ್ಟಿಯು ತನ್ನ ಸಾಧನೆಯಂ ತೋರುತ್ತ ಹಾರಿ ಮೇಲ್ವಾಯಲ್ ಗೋಣಿಚಿಲಮನೊಡ್ಡಿಯಾಂತು ಮೊಗಳಂ ಕಟ್ಟಿ ಪೊತ್ತುಕೊಂಡು ಬಂದಿಳುಹಿ ಇನಾಮುಗೊಂಡೂರಿಗೆ ಬಂದಂ. ಮತ್ತೊಂದು ದೇವಿಗುಡಿಯೊಳು ಅನೇಕ ಒಡವೆ ವಸ್ತು ಕಾಣಿಕೆಗಳು ದೇವೀ ಭಯದಿಂ ಒಬ್ಬರು ಮುಟ್ಟದೆ ಕಂಡವರೆಲ್ಲ ಕಾಣಿಕೆಯೊಪ್ಪಿಸುತ್ತಿಪ್ಪುದು. ಈ ಬ್ರಾಹ್ಮಣಂ ಪೋಗಿ ನೋಡಿ ಸೈರಿಸದೆ ಜನರಿಲ್ಲದ ವೇಳೆಯೊಳು ತುಲಸಿದಳಮನಾ ದೇವಿಪ್ರತುಮೆಯ ಹಸ್ತದೊಳಿಕ್ಕಿ ವಸ್ತುಗಳಂ ಮಟ್ಟಿಸಿ ಪೊರೆಗಟ್ಟಿ ಪೊತ್ತುಕೊಂಡು ಪೋದನೆಂಬೀ ವಿವಾದಿಯಾದ ಕಥೆಗಳಂ ಪೇಳ್ವ ತಾನು ಧರ್ಮಮಂ ಮಾಳ್ಪಲ್ಲಿ ಪರರಂ ನೋಯಿಸದೆ ಮಾಳ್ಪುದೆ ಧರ್ಮಂ ಪೆರರಂ ನೋಯಿಸಿ ಮಾಳ್ಪುದು ಅಧರ್ಮಂ.

ಶ್ಲೋಕ || ದುರ್ಜನಸ್ಯ ಕೃತಂ ಪುಣ್ಯಂ ಪರೋಪದ್ರವ ಕಾರಣಂ
ವ್ಯಾಘ್ರಸ್ಯ ಉಪವಾಸೇನ ಪಾರಣಂ ಪಶುಮಾರಣಂ ||

ಎನೆ ಇಲ್ಲದವಂ ಪರವಸ್ತುವಿಂದಾದರು ಮಾಳ್ಪುದೆಂಬುದು ಫಲವಿಲ್ಲೆಂದರು…. ಧಾರ್ಮಿಕನುಂ ಒಂದು ಬಾವಿ ತೆಗೆಯಿಸಿ ಸ್ವಾದೋದಕಮಾಗಿ ಸರ್ವರಂ ಕೊಳ್ಳುತ್ತಮಿರೆ ಆತಂಗೆ ನಾಲ್ವರ್ ಮಕ್ಕಳ್ಪುಟ್ಟಿ ಆ ಬಾವಿಯಂ ಪಂಚುಗೊಂಡು ಒಂದೊಂದು ಮೂಲೆಯೊಳು ಒಬ್ಬೊಬ್ಬ ಸೇದುತ್ತಮಿರೆ ಅದರೊಳೊಬ್ಬಂ ಸೈರಿಸದೆ ತನ್ನ ಮೂಲೆಯೊಳು ಅಶುಚಿಯಂ ಮಾಡಿದಂ

ನನೆವ ಮನೆ ಸಾಲದಟ್ಟುಳಿ
ನರಳುವ ಸೊಸೆ ಕಳ್ಳ ತೊತ್ತು ಕಾಡುವ ಹಯಿನುಂ
ಮರುಳು ಮಗ ದುರುಳ ಹೆಂಡತಿ
ದೊರೆಕೊಂಬುದು ಭಾಗ್ಯಲಕ್ಷ್ಮಿ ತೊಲಗಿದ ಬಳಿಕಂ

ಒಬ್ಬ ಬ್ರಾಹ್ಮಣಂ ಸತಿವೆರಸಿರ್ದು ನಿತ್ಯಯಾತ್ರೆಯಂ ಮಾಡಿತಂದ ಪಿಟ್ಟಿಂಗೆ ಮೂರು ಮಂಡಗೆಯಂ ಮಾಡಿ ಧರ್ಮಕ್ಕೊಂದಂ ಕೊಟ್ಟು ದಂಪತಿಗಳೊಂದೊಂದಂ ಭುಂಜಿಸುತ್ತಿಪ್ಪಿನ ಒಂದು ದಿನಂ ಓರ್ವ ಅತಿಥಿ ಬರಲವಂಗೆ ಒಂದು ಮಂಡಗೆ ಸಾಲದಿರೆ ತನಗೆಂದಿರ್ದುದಂ ಕೊಟ್ಟು ತೃಪ್ತಿಪಡಿಸಿದೊಡಾತಂ ತಳುಗಿದೊಡೆ ರಾತ್ರಿಯೊಳು ದಿನಂಪ್ರತಿ ವೃಷ್ಟಿಯಾಗೆ ಮನೆತುಂಬ ಜಲಪ್ರವಾಹ ಪೂರ್ಣಮಾಗುತ್ತಿರೆ ಪ್ರಯತ್ನದಿಂದ ನಾಲ್ಕಿಟ್ಟಿಗೆಯನ್ನು ಎರಡು ಮೊರಗಳಂ ಸಂಪಾದಿಸಿ ದಂಪತಿಗಳು ಎರಡಿಟ್ಟಿಗೆ ಮೇಲೆ ಪಾದಂಗಳನೂರೆ ಮಸ್ತಕದ ಮೇಲೆ ಮೊರಮಂ ಕೌಚಿಕ್ಕಿಕೊಂಡು ಬೆಳಗಂ ಕಳಿಯುತ್ತಮಿರ್ಪಿನಮಾ ದಿವಸಂ ಮಳೆಯೊಳು ಬ್ರಾಹ್ಮಣಂಗೆ ತನ್ನವೆರಡಿಟ್ಟಿಗೆಯಂ ಮೊರನಂ ಕೊಟ್ಟು ತಾನು ವೃಷ್ಟಿಯಿಂ ಜಲದೊಳೆ ಕಂಪಿಸುತ್ತಿಪ್ಪುದುಂ ಆತನ ಸತಿ ತನ್ನಿಟ್ಟಿಗೆಯಂ ತಂದಿಕ್ಕಿ ಮೊರನಂ ಪಿಡಿದೊಡೆ ಪೆಂಡತಿಗಾದವಸ್ಥೆಯಂ ನೋಡಿ ಚಿಂತಿಸಿ ಆರಿಟಟಿಗೆಯು ಮೂರು ಮೊರನುಯಿಲ್ಲದವರ ಬಾಳೇತರ ಬಾಳೆಂದು ರಾತ್ರಿಯಂ ಕಳೆದರ್.

ಅದರಿಂ ಗೃಹೋಪಕರಣಗಳು ಮಿಗಿಲಾಗಿರಬೇಕೆಂದು ಪ್ರಸಂಗಿತ್ತಿರ್ದು ಅರಸಂ ಪೋಗೆ ರಾಮಶಾಸ್ತ್ರಿ ಎಂಬವಂ ಈ ಅರಸು ಆರೆಂದು ದೇವಚಂದ್ರಪಂಡಿತನಂ ಕೇಳೆ ಪಂಡಿತನೆಂದಂ

ಪೂರ್ವದೊಳು ಚಾಮುಂಡರಾಯಂ ತನ್ನ ವಂಶಜರನೀ ಸ್ಥಳದೊಳು ಇಟ್ಟುದರಿಂದವರು ಪ್ರಬಲರಾಗೆ ನಾಮವನಿಕ್ಕದೆ ಕೆಲಕೆಲವು ನಾಡುಗಳನಾಳೂತ್ತ ಹೊರಣಮತ್ತಿ ಹೊಸಕೋಟೆ ಹಳೆಯಬೀಡು ಬಿಳುಕೆರೆ ಮೊದಲಾದ ಸ್ಥಳಂಗಳಲ್ಲಿ ಅನೇಕ ಬೈತ್ಯಾಲಯಂಗಳಂ ಮಾಡಿಸಿ ಗೊಮಟಾಪುರವೆಂದು ನಿರ್ಮಿಸಿ ಬೆಟ್ಟದೊಳು ಗೊಮಟೇಶ್ವರ ಪ್ರತಿಷ್ಠೆಯಂ ಮಾಡಿಸಿದಾನ ಪೂಜೆ ಶೀಲೋಪವಾಸದಿಂದಿರುತ್ತ ಕೆಲವಾನುದಿವಸದಿಂ ಕಾಲದೋಷದೊಳೆ ನಷ್ಟವಾಗಿ ಹಳೇಬೀಡು ಬಿಳುಕೆರೆಯೊಳು ಎರಡು ಮೂರು ಒಕ್ಕಲುಳಿಯೆ ಕೊಟ್ಟು ತರುವುದಕ್ಕೆ ಇಲ್ಲದೆಯಿರ್ಪುದು ದಳವಾಯರು ನಾನಾ ಪ್ರಕಾರದಿಂದಾ ಅವರ ಮನೆ ಕರ್ಣಿಕೆಯಂ ತಂದು ಅವರೊಳ್ ಒಡಹುಟಿದ ಚೆಲುವಯ್ಯ ಅರಸನೆಂಬವಂಗೆ ಸತ್ಯಮಂಗಲದ ಗಡಿಯಂ ಕೊಟ್ಟು ಈ ತೋಟದ ದೇವರಾಜೇ ಅರಸನಂ ತಮ್ಮ ಮನೆಯೊಳು ಭೋಜನಾ ಮಾಡಿಸಲೆಂದು ಬಹಳವಾಗೆ ಪ್ರಾರ್ಥಿಸಿ ಗೃಹಶುದ್ಧಿಯಂ ಮಾಡಿಸಿ ಜೈನಬ್ರಾಹ್ಮರಿಂದಾ ಹೋಮ ದೇವತಾರ್ಚನೆಯಂ ಮಾಡಿಸಿ ಅವರ ಕಡೆಯಿಂ ಪಾಕಶುದ್ಧಿಯಿಂ ಭೋಜನ ಮಾಡಿಸ್ತರು. ಇವರು ಜೈನರಸುಗಳು ಸೋಮವಂಶಜರೆಂದು ಪೇಳಿದಂ

ಆ ಚಲುವಯ್ಯರಸು ಸತ್ಯಮಂಗಲದೊಳಿರ್ದು ಕೆಲವು ಜಿನಾಲಯಮಂ ಜೀರ್ಣೋದ್ಧಾರಮಂ ಮಾಡಿಸಿ ಗುರುಗಳ್ಗಂ ಬ್ರಾಹ್ಮಣರ್ಗಂ ಅನೇಕ ದಾನಂಗಳಂ ಕೊಟ್ಟು ಈ ಅರಸುಗಳಲ್ಲೆ ಕೊಳುಕೊಡೆಯಿಂ ಸುಖಮಿರ್ದರಿತ್ತ ದಳವಾಯಿ ಆಂಡಿಗಳುಪದೇಶದಿಂ ಪಟ್ಟಣದ ಮಧ್ಯದೊಳುನ್ನತಮಾಗಿರ್ದ ಜಿನಾಲಯಂಗಳ ಛಾಯಂ ಅರಮನೆ ಮೇಲೆ ಬೀಳ್ವುದೆಂದು ಎರಡು ದೇವಸ್ಥಾನದೊಳಿರ್ದ ಅನೇಕ ಬಿಂಬಂಗಳಂ ತೆಗೆಯಿಸಿ ಮತ್ತೊಂದು ಮನೆಯೊಳು ತುಂಬಿಸಿಬಿಟ್ಟು ದೇವಸ್ಥಾನಂಗಳಂ ಕೀಳಿಸಿ ಜೈನರಂ ಕರೆಯಿಸಿ ನಿಮ್ಮ ದೇವರಂ ಪೂಜಿಕೊಳ್ಳಿಮನೆ ಎಲ್ಲರ ಮೌನಂಗೊಂಡು ದೇವಸ್ಥಾನಂ ಪೋದುದಕ್ಕೆ ಚಿಂತಾಕ್ರಾಂತರಾಗಿ ತಮ್ಮ ತಮ್ಮ ಮನೆಗೆ ಪೋಗಿ ಮೂರು ನಾಲ್ಕು ಉಪವಾಸಂಗೆಯ್ದರ್. ಸೂರಿಪಂಡಿತಂ ಶಾಲ್ಯನ್ನಮಂ ವ್ರತಂ ಮಾಡಿದಂ. ಮತ್ತಂ ಕೆಲವು ದಿವಸಂ ಪೋಗೆ

ಅರುಹನ ಗೃಹಮಂ ತೆಗೆದೊಡೆ
ಸಿರಿ ಆಳಿದಾಯುಷ್ಯ ಕುಂದಿ ರುಜೆ ಪಿರಿದಾಗಿಯು
ನರಕದ ದುಃಖವು ಸಾಗರ
ಪರಿಯಂತಂ ಭುಂಜಿಸುತ ನವೆಯುತ್ತಿರ್ಪರ್

ಎಂಬುದಂ ಕೇಳಿ ಅಸಗಗೇರಿ ಬಳಿಯೊಳೆ ದೇವಸ್ಥಾನಮಂ ಮಾಡಿಸಿದರ್. ವಿರೋಧಿಕೃತು ಸಂವತ್ಸರದ ಪುಷ್ಯ ಬಹುಳ ಪಾಡ್ಯ ಆರಭ್ಯ ದೊಡ್ಡ ಕೃಷ್ಣರಾಜೊಡೆಯರಿಂದಿತ್ತಲು ಚಾಮರಾಜ ಕೃಷ್ಣರಾಜ ನಂಜರಾಜ ಬೆಟ್ಟದ ಚಾಮರಾಜರೆಂಬಿವರ ಪಟ್ಟಿದೊಳೆ ದಳವಾಯರೆ ಪ್ರಬಲಮಾಗಿರೆ ಕೋಳಾಲದ ಪತ್ತೆಖಾನನ ಮಗಂ ಶಾಬಾಸಖಾನನಿಂ ಕಿರಿಯ ಹೈದರಾಖಾನನೆಂಬವಂ ಕುದುರೆಚಾಕರಿಯಲ್ಲಿರ್ದು ಅತಿಪ್ರಬಲನಾಗಿ ನೂರು ಕುದುರೆಗೆ ಜಮಾದಾರನಾಗಿರ್ದು ಗೋಲುಕೊಂಡೆ ನಿಜಾಮನ ಮಗಂ ನಾಸರಜಂಗಂ ಅವರ ಕಾಡಮೇಲೆತ್ತಿಪೋಪಂದುಮವನೊಡನೆ ಕೆಲವು ಬಲಸಹಿತಂ ಅಂಬಾರಿಯನೇರಿ ಪೋಗುತ್ತಮಿರ್ದಲ್ಲಿ ನಸರಜಂಗಂ ಪಾಳ್ಯಗಾರ ಇಮಾಮುಖಾನನೊಳು ಮಾತು ಬರೆ ತನ್ನಂಬಾರಿಯಿಂದವನಂಬಾರಿಗೆ ನೆಗೆದು ಪೊಯ್ವುದು. ನಾಸರಜಂಗ ಪೊಯ್ಯೆ ಈರ್ವರು ಸಾಯ್ವುದು. ಬಲಮೆಲ್ಲಂ ಪಲಾಯನಮಾಗೆ ನಾಲ್ವತ್ತೆಂಟುಬಾರಿಯು ಯಥಾಯಥ ಮಾಗೆಯಾಸಮಯದೊಳೆ ಎರಡು ಒಂಟೆಯ ಮೆಗಣ ದ್ರವ್ಯಂ ಹೈದರಖಾನಂಗೆ ಸಿಕ್ಕಿದೊಡೆ ಅದಂ ಕೊಂಡು ಚನ್ನಪಟ್ಟಣದೊಳು ಮನೆಯಂ ಮಾಡಿರ್ದು ಶಕವರುಷ ೧೬೯೦ನೆ ಸರ್ವಧಾರಿ ಸಂವತ್ಸರದಾರಭ್ಯ ಹೈದರಖಾನ ರಾಜ್ಯಮೆಲ್ಲಮಂ ತಾನೆ ಆಕ್ರಮಿಸಿಕೊಂಡು ಕೆಲವು ಸಂಸ್ಥಾನಮಂ ಸಾಧಿಸಿಕೊಂಡು ತಿರಚನಾಪಳ್ಲಿಯೊಳ್ ಸಿಕ್ಕಿರ್ದ ಕತ್ತಿ ಗೋಪಾಲರಸನಂ ದಳವಾಯಿ ಸಹಾ ಕರೆದುಕೊಂಡು ಬಂದರಮನೆಯೊಳಂಕೆಯೊಳಿಟ್ಟು ರಾಜ್ಯಮನಾಳುತ್ತ ಅಧಿಕಾರಿಗಳ್ಗಂ ಪ್ರಜೆಗಳ್ಗಂ ಮುಗುವಳಿ ಮುಟ್ಟುಗೋಳು ಮುಂತಾದವಂ ಮಾಡಿ ಮಾಡಿಬಾರದ ಹಿಂಸೆಗಳಂ ಮಾನಪ್ರಾಣಾಪಹಾರಂಗಳಂ ಮಾಡುತ್ತ ಕುಳಮೆಂದುವಂಬರವ [೦] ಬರ ಮೇಲೆತ್ತಿ ಸರ್ವಸ್ವಮಂ ಸುಲಿದು ಅಸುವಂಗಳಂ ತೆಗೆವರಾ ದಂಡಗೆಗಳೆಂತೆಂದೊಡೆ ಬಿಸಿಲೊಳ್ಕುಳ್ಳಿರಿಸುವುದುಂ ಒಂಟಿಗಾಲೊಳ್ ನಿಲಿಸುವುದುಂ ಅನೆಯಿಸಿ ಮೂಗಿನ ಮೇಲೆ ಸಣ್ಣ ಕಲ್ಲುನಿಟ್ಟು ನಿಲಿಸುವುದುಂ ಕತ್ತಿಗು ಕಾಲಿಗು ನೇಣನಿಕ್ಕುವುದುಂ ಪಂಜರದೊಳ್ಕೊಡುವುದುಂ ಸೊಳ್ಳೆಮನೆಯೊಳು ಕೂಡುವುದು ಚಾಪನೇರಿಸುವುದುಂ ಕಿವಿ ಮೂಗು ಹಸ್ತ ಪಾದಂಗಳಂ ಕುಯ್ವುದುಂ ಕೈಕಾಲಿಗೆ ಹಗರನಿಕ್ಕಿ ತುಳಿವುದುಂ ಸ್ತ್ರೀಯರ ಎದೆಗೆ ಹಗರನಿಕ್ಕಿ ಕೊಯ್ವುದುಂ ಮರದೊಳ್ ಕಟ್ಟಿ ನೇರವುದುಂ ಕಟ್ಟಿ ಪೊಡೆವುದುಂ ಗುಂಗರಕಾಲಂ ಕಟ್ಟಿ ಉರುಳಿಸುವುದುಂ ಕಾಸಿದ ಕುಡುವಿಂ ಮೈಯೆಲ್ಲವಂ ಬರೆವುದುಂ ಬಾಯಿ ಗುದದ್ವಾರ ಯೋನಿಗಳೊಳು ಹಾರೆಯಂ ಕಾಸಿಕ್ಕಿಸುವುದುಂ ಆನೆಕಾಲಿಗೆ ಕಟ್ಟಿಸುವುದುಂ ಶೂಲದ ಕುದುರೆಯೊಳು ಕುಳ್ಳಿರಿಸುವುದುಂ ಗುಡ್ಡದ ಮೇಲೆ ನಿಲಿಸಿ ಪೊಡೆವುದುಂ ದಬ್ಬಳದಿಂ ಮೈಯೆಲ್ಲಮಂ ಚುಚ್ಚಿ ಇರುವೆಯ ಗೂಡೊಳಿಡುವುದುಂ ಕಣ್ಣಿಗೆ ಸೂಜಿಯಂ ಬಲಿವುದುಂ ಕತ್ತಿಯಿಂ ಪೊಯ್ವುದುಂ ಗುಂಡಿನೊಳಿಡುವುದುಂ ಗುಳಿ ತೋಡಿ ಮುಚ್ಚುವುದುಂ ಬಾಚಿಯಿಂ ಕೆತ್ತುವುದುಂ ಬಚ್ಚಲೊಳ್ ಮುಳುಗಿಸುವುದುಂ ಎಂಬಿವಾದಿಯಾದ ಅನೇಕ ವಿಚಿತ್ರಮಪ್ಪ ಕೊಲೆಗಳಂ ನಿಷ್ಕರುಣಿಗಳಾಗಿ ಪ್ರತ್ಯಕ್ಷನರಕದಂಡನೆಗಳು ಇಲ್ಲಿಯೆ ಕಾಣ್ಬಂತೆ ತಮಗೆ ಬಂದ ನೋವಿಂತೆಂದರಿಯದೆ ಪಾಪಕ್ಕೆ ಭೀತರಾಗದೆ ಮನುಷ್ಯರಂ ಕೊಲ್ಲುತ್ತ ಪೆಣ್ಗಳಂ ಪಿಡಿದು ತರಿಸುತ್ತ ಸೀಮೆಯೊಳು ವಿಂಗಡಮಣಿಯಗಳಂ ಮಾಡಿ ಬಾಲದೆರಿಗೆ ಅಂಕದೆರಿಗೆ ಮೊದಲಾದವಂ ಕಲ್ಪಿಸಿ ಆಧಾರಮಾಗಿರ್ದ ಕುಳಗಳಂ ಮುಳ್ಗುಗಳಂ ತೆಗೆದು ಬಾಧಿಸುತ್ತ ಹೈದರನಬಾಬನೆಂಬನ್ವರ್ಥದಿಂ ವಿಕಾರಿ ಸಂವತ್ಸರದ ಫಾಲ್ಗುಣದೊಳೆ ಆರಕಾಡ ಮೇಲೆ ದಂಡೆತ್ತಿ ಪೋಗಲಿತ್ತ ಮುಸ್ತಾಪಲ್ಲಿಖಾನರ್ ಮೊದಲಾಗೆ ಅಧಿಕಾರದೊಳಿದ್ದು ಪ್ರಜೆಗಳಂ ಸುಲಿಯುತ್ತಿರೆ ಆ ಕಾಲದೊಳು ಹಣಕ್ಕೊಂದು ಕೊಳಗ ಧ್ಯಾನಂ ಮಾರೆ ಜನರಿಗೆ ಹೊಟ್ಟೆಗಿಲ್ಲದೆ ಬೇಲದಕಾಯಿ ಹುಣಿಸೆಬೀಜ ಹತ್ತಿಬೀಜ ಹಳುವಿನಸೊಪ್ಪು ಮುಂತಾದವಂ ತಿಂದು ಜೀವಿಸುತ್ತಿರ್ದರತ್ತ ನಬಾಬಂಗೆ ತಾ ಮಾಡಿದ ಪಾಪಂ ಇಹದೊಳೆ ಬಂದು ನೋಡಿಸಲು ಬೆನ್ನೊಳೆ ವ್ರಣಂ ಪುಟ್ಟಿ ತೀವ್ರವೇದನೆಯಿಂ ನವೆದು ಶೋಭಕೃತು ಸಂವತ್ಸರದೊಳು ಜೀವಂ ಪೋಗೆ ಸಾಮಾಜಿಕರು ಆತನ ಹಿರಿಯ ಮಗನಪ್ಪ ಟೀಪು ಸುಕಾಲನನೆಂಬಂ ಕಲ್ಲೀಕೋಟೆಯ ಮೇಲೆತ್ತಿಪೋಗಿರ್ದನಂ ಶೀಘ್ರದಿಂ ಬರಿಸಿ ಆತನ ಶರೀರಮನೊಣಗಿಸಿ ಕೊಲಾಳಕೈದಿಸಿ ತಂದು ಪಟ್ಟಣದ ಮುಂದಣ ವನದೊಳು ನಿಕ್ಷೇಪಂಗೈದರಲ್ಲಿ ಮಂಡಪಮಂ ನಿರ್ಮಿಸಿ ಪಕೀರರನಿರಿಸಿ ಪೂಜಿಸಿದರ್.

ಮತ್ತಂ ಸುಲತಾನಂ ರಾಜ್ಯದೊಳ್ ನಿಂದು ಪ್ರಾಕು ಬಲಮಾಗಿರ್ದ ಅಧಿಕಾರಿಗಳ ಕೊಲಿಸಿ ಸರ್ವಸ್ವಮಂ ಕೊಂಡು ಕ್ರೋಧಿ ಸಂವತ್ಸರದೊಳೆ ರಾಜ್ಯದೊಳುಳ್ಳ ದೇವಸ್ಥಾನಂಗಳ ಮಾನ್ಯಂಗಳಂ ಕೊಂಡಲ್ಲಿರ್ದ ಚಿನ್ನ ಬೆಳ್ಳಿ ಮುಂತಾದ ಉಪಕರಣಮಂ ತರಿಸಿಕೊಂಡು ಅಗ್ರಹಾರ ಉಂಬಳಿ ಮುಖವಾಸೆ ಮೊದಲಾದ ಮಾನ್ಯಂಗಳೆಲ್ಲಮಂ ಕಿತ್ತು ಸೀಮೆಯೊಳಗಣ ಗಡಿಗಡಿಗೆ ಅಮಲದಾರನೆಂದು ಒಬ್ಬೊಬ್ಬ ತುರುಕನನಿಟ್ಟು ಶಿರಸ್ತೆ ಎಂದು ಒಬ್ಬಿಬ್ಬರ ಲೇಕಿಗಳನಿಟ್ಟು ಜಮಂಜಾಡೆ ನಪರಜಾಡೆ ಗೊರಜಾಡೆ ಎಂದು ಬರಸಿ ಸೀಮೆಗಳ ಅವಲ್ ದೂಯಂ ಸೀಯಂ ಚಾರಂ ಎಂದು ನಾಲ್ವು ಸ್ರಯಮೆಂದು ಆಲೆಯಿಸಿ ಸಲಗಜಲುಬ್ಬು ಬೀಜವರಿಯಂ ಕಟ್ಟಿ ಎಲ್ಲೆ ಚತುಸ್ಸೀಮೆಯನಳೆದು ಮಾರ್ಗ ಬೆಟ್ಟ ಗಿಡ ಕಲ್ಲುಗಳಂ ವಿಂಗಡಿಸಿ ಅಳೆದು ಗ್ರಾಮಂಗಳೊಳಗಣ ಕುಳ ಜಾತಿ ಮನೆ ಕೊಟ್ಟಿಗೆ ಅಂಕಣ ಗಂಡು ಹೆಣ್ಣು ಮಕ್ಕಲೂ ಜೀವ ದನ ಎಮ್ಮೆ ಕುರಿ ಆಡು ಕತ್ತೆ ಮೊದಲಾದವಂ ಲೆಕ್ಕಿಸಿ ಹಾಳುಭೂಮಿಗೆ ಬಂಜರಕಂದಾಯವೆಂದು ಹೆಚ್ಚಿಗೆ ಮಾಡಿ ಗೌಡಗುತ್ತಿಗೆಯಂ ಕಲ್ಪಿಸಿ ಕಾಣಿಕ ಕಡ್ಡಾಯ ವರಿ ವಿರಾಡ ಮುಂತಾದವಂ ಎತ್ತಿ ಗುತ್ತಿಗೆ ಕೈವಳಿ ಎಂದು ಎತ್ತಿಸಿ ಹದಿನೆಂಟು ಧಾನ್ಯಂಗಳ ಜಿನಸಿ ಎಣ್ಣೆ ತುಪ್ಪು ಖಾದಿ ವಸ್ತ್ರ ತೃಣ ಕಾಷ್ಟ ಮೊದಲದೆಲ್ಲವಂ ಪ್ರಜೆಗಳಿಂದಲೆ ಉಗ್ರಾಣಕ್ಕೆ ತರಿಸಿಕೊಳ್ಳುತ್ತಂ ತಪ್ಪಾದವರ ಚೇಲಿ ಮಾಡಿಸುತ್ತ ಸರ್ವ ಜನರ್ಗೆ ಗುಡಿಗಿಚಲ್ಲಣಂಗಳಂ ಹೆಂಗಸರಿಗೆ ರವಕೆಗಳನಿಡುವಂತೆ ರಾಜ್ಯದೊಳೆಲ್ಲ ನಿಯಮಿಸಿ ವರುಷ ಮಾಸ ವಾರ ತಿಥಿ ಮೊದಲಾದ ಎಲ್ಲಾ ದ್ರವ್ಯಂಗಳ್ಗೆ ಪಾರಸೀಭಾಷೆಯನೆ ನೇಮಿಸಿ ಪಾದಶಾಯನಾಗಬೇಕೆಂದು ರತ್ನಪಡಿಸಿಂಹಾಸನಮಂ ತಕ್ತೆಯಂದು ಮಡಿಸುತ್ತಮಿರೆ ಸರ್ವೇ ಜನರು ಕೇಳಿಕೊಂಡದ್ದರಿಂದ ನಂಜನಗೂಡಿಗೆ ಇಲಾಬಾದೆಂದು ನಂಜುಂಡಲಿಂಗಮಂ ನಿರಂಜನಮೆಂದುಳಿಯಸಿ ಉಳಿದ ದೇವಸ್ಥಾನಂಗಳು ಪಾಳು ಮಾಡಿ ಮಹಿಸೂರಂ ತೆಗೆದು ಗಿಡಗಟ್ಟಿಸಿ ನಜರಬಾದೆಂದು ಮಾಡಿಸಿ ಸುಲತಾನಪೇಟೆ ನವಾಸಾಬಮೆಂದು ಕಲ್ಪಿಸಿದನ್.

ಅಷ್ಟರೊಳೆ ಸಮುದ್ರಾಂತರ ದ್ವೀಪದೊಳಿದ್ದ ಇಂಗ್ರೀಜ ಪರಂಗಿಗಳು ತಮ್ಮ ಸತ್ಯದಿಂ ಸಾಹಸದಿಂ ಇಲಾತಿಪಟ್ಟಣದೊಳು ರಾಜ್ಯಮನಾಳುತಿರ್ದು ಪೊರಗೆ ಬಂದು ತಿರಚನಾಪಳ್ಳಿ ಮೈಲಾಪುರ ಚೆನ್ನಪಟ್ಟಣ ಮೊದಲಾದ ರಾಜ್ಯಂಗಳಂ ವಶಂ ಮಾಡಿ ಯುಕ್ತಿ ಶಕ್ತಿ ಕೌಶಲ್ಯ ವೀರ್ಯ ಪರಾಕ್ರಮರಾದುದರಿಂ ಕರ್ನಾಟಕದೇಶಕ್ಕೆ ಬಂದು ಇಂಗರೀಜ ಸರದಾರರು ವಾಲೀಸು ಮೆಂಡ್ರೇಸು ಎಂಬೀರ್ವರು ಸುಲತಾನನ ಮೇಲೆತ್ತಿ ರಾಜ್ಯಕ್ಷೋಭಂ ಮಾಡದೆ ಸಮರಮನೊಡರ್ಚೆ ಸುಲತಾನಂ ನಿತ್ತರಿಸಲಾರದೆ ಹತ್ತು ವರುಷಕ್ಕೆ ಸಲ್ಲಹಂ ಮಾಡಿ ಪಾಡುಡಮಂ ಕೊಡಲು ತನ್ನ ಮಕ್ಕಳನೆಡೆಗೊಟ್ಟು ಮನ್ನಿಸಿಕಳುಹಿಸಿ ರಾಜ್ಯದೊಳಿಪ್ಪ ಸರ್ವ ಜನಂಗಳಿಂದ ನಜರಾನಾರೂಪಾಯಂ ತೆತ್ತಿಕೊಟ್ಟು ಮಕ್ಕಳಂ ಬಿಡಿಸಿಕೊಮಡನ್. ಆ ವರುಷದೊಳು ಭೂಕಂಪ ಬಾಲನಕ್ಷತ್ರ ಮೊದಲಾದ ಉತ್ಪಾತಂಗಳ ಪುಟ್ಟಿ ಕ್ಷಾಮಂಬರೆ ಪ್ರಜೆಗಳೆಲ್ಲಿ ತಿರ್ರ‍ನೆ ತಿರಿದು ಗ್ರಾಸಮಿಲ್ಲದೆ ಕೈಯೊಳ್ ಕರಟಮಂ ಪಿಡಿದು ನೆಲದೊಳ್ ಬಿದ್ದು ಧಾನ್ಯ ಮೊದಲಾದವನಾಯ್ದುಕೊಳುತ್ತ ಜೀವನಮಿಲ್ಲದೆ ಹೆಣ್ಣುಗಂಡೆಲ್ಲಾ ಪೋಗುವಲ್ಲಿ ನಿಂದಲ್ಲಿ ಮಲಗುವಲ್ಲಿಯೆ ಪ್ರಾಣಮಂ ಬಿಡೆ ಹೆಮಮಯವಾಗಿ ಹದ್ದು ಕಾಗೆಗಳ್ಗಾಹಾರ ಮಾತಾಗಲು ಹಣ ಒಂದಕ್ಕೆ ಮೂರು ಮಾನ ಜೋಳ ಮಾರಲು ಕುಂಬಳಕಾಯ್ಗಳಂ ತಿಂದು ಜೀವಿಸಿದರ್ ಆನಂದ ಸಂವತ್ಸರದೊಳು ಆ ದುರ್ಭೀಕ್ಷಂ ತೀರುವುದುಂ ಸುಲತಾನಂ ಗ್ರಾಮಾದಿಗ್ರಮದ ಶಾನುಭಾಗ ಗೌಡರಂ ಕರೆಯಿಸಿ ನೋಡಿ ಶೀಮೆಯೊಳು ಐದುಸಾವಿರ ವರಹಕ್ಕೆ ಒಂದು ಅಮಲು ಎರಡು ಶಿರಸ್ತೆಗಳಂ ನೇಮಿಸಿ ಲಕ್ಷ ಸೀಮೆಗೊಬ್ಬ ಅರಸಪ್ಪನೆಂದು ನೇಮಿಸಿ ಪ್ರಜೆಗಳ್ಗೆ ಗ್ರಾಮಗುತ್ತಿಗೆಯಂ ಮಾಡಿದನ್.

ಚಿಕ್ಕದೇವರಾಯನಿಂದಿತ್ತಲು ಪ್ರಜೆಗಳ್ಗೆ ತೆರಿಗೆ ಹೆಚ್ಚಿದವು. ಅವಾವೆಂದೊಡೆ ಎರೆಹೊಲದ ಕಂದಾಯ ಕಬ್ಬೆ ಅಡು ಹೊರಕೊಟ್ಟಿಗೆ ಹಿತ್ತಲು ತೋಟ ಬಂಜಲಭೂಮಿ ಚೌಳುಮಣ್ಣು ಹಟ್ಟಿ ಮೊದಲಾದವರ ಕಂದಾಯ ದೀಪಾವಳಿ ಯುಗಾದಿ ಬೇಡಿಗೆ ವ್ಯವರಣೆ ನಾಣ್ಯತುಂಡು ನಾಣ್ಯವಟ್ಟಿ ಹುಲ್ಲುಸರತಿ ವರಹಸರತಿ ವಿನಾಯಕನ ಕಾಣಿಕೆ ಶಾನಾಯವಿಭೂತಿಕಾಣಿಕೆ ನಾಮಗಾಣಿಕೆ ಅಂಗಡಿತೆರಿಗೆ ಬಣಜ ಹತ್ತಿಪೊಮ್ಮು ಹೊಗೆಹಣ ಹೊಗೆಪೊಮ್ಮು ಸಂಬಳ ಸರತಿ ಜಾತಕೋಟಿ ತರಗು ಚೌರಿಗೆ ಉಪ್ಪಿನಕಾವಲಿ ಉಬ್ಬೆತೆರಿಗೆ ಚಿಕ್ಕದೆರಿಗೆ ಹಡಪ ಕುಮಟ ಕುಲುಮೆ ಮಗ್ಗ ಮಾದಾರಿಕ ಚರ್ಮತೆರಿಗೆ ಕಡ್ಡಾಯ ಕಾಣಿಕೆ ಸುಣ್ಣದಗೂಡು ಚಾವಡಿಕಾಣಿಕೆ ಚಪ್ಪಗಾಣಿಕೆ ಕೈವಾಡ ಅಟ್ಟವಣೆ ತೆರಿಗೆಗಳು ಮತ್ತಂ ವಿಂಗಡಮಣೆಯ ಸುಂಕ ಏರು ಬಾಗಿಲು ಪೊಮ್ಮುಗಳುವಿನ ಗುತ್ತಿಗೆ ಅರಸಿನ ದುಂಡಗೆ ಮಸಗೋಲು ಪಟ್ಟಡಿ ಮಾರ್ಗಸುಂಕ ತುಂಬೊಳಿ ಕರಗಪಡಿ ಮದುವೆ ಕೂಡೊಳಿ ಜೀತಸುಂಕ ಕಂಬಳದೆರಿಗೆ ಜಾತಿಮಣೆಯ ಶೇಂದಿಗುತ್ತಿಗೆ ಸಾರಾಯಿ ಹೊಗೆಸೊಪ್ಪು ಕೆಂಪಿನನೂಲು ಪಸಾರಿ ಗಿಡಿಕಾವಲು ಅಡಕೆಗುತ್ತಿಗೆ ಎಲೆಗುತ್ತಿಗೆ ಗಂಧದ ಮಣೆಯ ಮೊದಲಾದ ತೆರಿಗೆಗಳು ಕಂದಾಯ ತೆರಿಗೆ ಸಮಪೈರು ಹಣ ಇದರ ಮೇಲೆ ಗುತ್ತಿಗೆ ಕೈವಳಿ ಸಹಿತ ತೆಗೆವರಲ್ಲದೆ ಚರಾದಾಯಮೆಂದು ಬಾಯಿತಪ್ಪು ಕೈತಪ್ಪು ಇರಳತಪ್ಪು ತೊಂಡು ಮೊದಲಾಗಿ ಲೆಕ್ಕದೊಳು ಸಾಗುವಳಿ ಸಂತವಳಿ ಉಟ್ಟವಳಿ ಕಟ್ಟುವಳಿ ಪತ್ತುವಳಿಯೆಂದಾದಿಯಾಗಿ ಅನೇಕ ತೆರಿಗೆಯಾಗಲು ಬಡಗಸೀಮೆಯ ರೈತರು ತಾಲೊಕ್ಕಿನ ಅಮಲದಾರರು ಮಾಳ್ಪುಪದ್ರಕ್ಕಾರದೆ ಕೂಟಮೆದ್ದು ಮೂವರು ರೆಡ್ಡಿ ಒಕ್ಕಲಿಗರ ಮುಂದು ಮಾಡಿಕೊಂಡು ಕಂಬಳಿ ನಿಶಾನಿವೆರಸು ಸಾವಿರ ಜನದವರಿಗೆ ಕರಿಘಟ್ಟದ ಬಳಿಯೊಳು ನಿಂತು ಪೊಳೆಪರ್ಯಂತರ ವಾಟ ದೊರೆಪರ್ಯಂತರ ದೂರೆಂಬುದರಿಂ ಸುಲತಾನಂಗೆ ತಮ್ಮಿರಮಂ ಪೇಳಲವರಂ ಮನ್ನಿಸಿ ಪ್ರಜಾಕ್ಷೋಭಮಂ ಮಾಡಿದುದಕ್ಕೆ ಸರ್ವಾಧಿಕಾರಿಗಳ್ ಮೊದಲಾದಧಿಕಾರಿಗಳ ಮೇಲೆ ಕೋಪಿಸಿ ಪ್ರಜೆಗಳ್ಗೆ ಸರಾಗಂ ಮಾಡಿ ಕಳುಹಿಸಲೆಂದಿಪ್ಪಿನ ಮೀರಸಾಬಿಯೆಂಬ ಸರ್ವಾಧಿಕಾರಿ ಅವರ ಮೇಲೆ ಇಲ್ಲದ ದೋಷಾರೋಪಣೆಯಂ ಕಲ್ಪಿಸಿ ಆ ಮೂವರ್ಗಂ ಕಂಠಿಪಾಶಮನಿಕ್ಕಿಸಿ ಕೊಂದು ರಾಜ್ಯದೊಳುಳ್ಳ ಗ್ರಾಮಾಧಿಗ್ರಾಮಗಳ ಗುತ್ತಿಗೆ ಮೇಲೆ ವರಹ ಒಂದಕ್ಕೆ ಮೂರು ಹಣ ಮೇರೆ ಹೆಚ್ಚಿಗೆ ಮಾಡಿದೊಡೆ ರೈತರೆಲ್ಲ ಮೊದಲು ತೆರುದ ಹಣಕ್ಕೆ ಆಧಾರಮಿಲ್ಲದೆ ಉಪದ್ರರಿಂದ ಕೆಲರು ದೇಶಾಂತರಮಂ ಪೊಕ್ಕರ್. ಕೆಲರು ಜಲಪಾತ ಮೊದಲಾದವರಿಂ ಸತ್ತರ್. ನಾರುವುದರ ಮೇಲೆ ನಾಯಿ ವಿಷ್ಟಿಸಿದಂತಾಯ್ತೆಂದು ಚಿಂತಿಸುತ್ತಿರಲತ್ತಲ್ ಇಂಗರೀಜ ಸರದಾರರ ನಿಯಮ ತೀರಿತೆಂದು ಇಲಯತಿಯತ್ತಣಿಂ ಚನ್ನಪಟ್ಟಣಕ್ಕಾಗಿ ಬಲಸಹಿತಂ ಬಪ್ಪುದಂ ಕೇಳ್ದು ಸುಲತಾನಂ ಮೀರಸಾಬಿ ಮೊದಲಾದ ಸಾಮಾಜಿಕರೊಳಾಳೋಚಿಸಿ ನಮ್ಮ ರಾಜ್ಯಮೆಲ್ಲಮಂ ಚತುರಂಗಬಲಕ್ಕೆಲ್ಲಾ ಪಂಚುಗೊಟ್ಟೊಡೆ ಅವರೆಲ್ಲರು ತಮ್ಮ ತಮ್ಮ ಗ್ರಾಮ ಸೀಮೆಯನುಳಿಯಿಸಲ್ ಪರಬಲದ ಮೇಲೆ ಕಾದಿ ಗೆಲ್ವರದರಿಂ ಪಟ್ಟಣಮೊಂದಳಿದೆಲ್ಲಮಂ ಆನೆ ಕುದುರೆ ಆಳುಗಳಿಗೆ ಸಹ ಉಂಬಳಿ ಬರೆಸಿಕೊಟ್ಟು ನಿಶ್ಚಿಂತಮಿರೆ ಸರದಾರರ ಪೌಜು ನಂಜನಗೂಡ ಮೇಲೆ ಬಂದು ಪಟ್ಟಣದ ಪಶ್ಚಿಮವಾಹಿನೀ ಬಯಲೊಳ್ ನಿಂದು ರಾಜ್ಯಕ್ಕುಪದ್ರಮಂ ಮಾಡದೆ ಪಟ್ಟಣದ ಕೋಟೆ ನೈರುತ್ಯ ಭಾಗಕ್ಕೆ ಮೂರ್ಛೆಯನೊಡ್ಡಿ ಪಿರಂಗಿಗಳನ್ನೇರಿಸಿ ಪ್ರಳಯಕಾಲದಗ್ನಿ ವೃಷ್ಟಿಯಂತೆ ಕರೆಯೆ ಸುಲತಾನನ ಪೌಜು ಪೊರಗಿರ್ದು ರಾಜ್ಯಮೆಲ್ಲಮಂ ಸುಡುತಿರ್ದರ್.

ಅತ್ತಲ್ ಬಾಣಪ್ರಯೋಗದಿಂ ಪಟ್ಟಣದ ಪ್ರತೋಳಿ ಅಶನಿಪಾತಂಗಳಿಂ ಬಿರಿದು ಬೀಳ್ವ ಬೆಟ್ಟದಂತೆ ಬೀಳ್ವುದು. ಶಕವರ್ಷ ೧೭೨೧ನೆ ಸಿದ್ಧಾರ್ಥಿ ಸಂವತ್ಸರದ ಚೈತ್ರ ಬಹುಳ ಅಮಾವಾಸಿ ಶನಿವಾರ ಮಧ್ಯಾಹ್ನದೊಳ್ ಇಂಗರೀಜಬಲಂ ಕೋಟೆಯನೇರಿ ಕಾರಮಳೆಕರೆವಂತೆ ಗುಂಡುಗಳಂ ಕರೆಯುತ್ತ ಪಟ್ಟಣದೊಳಗಂ ಪೊಗುವಾಗಲ್ ಮೀರ ಸಾಹೆಬನೊಳಗಿರ್ದು ಪೊರಗಣ್ಗೆ ಪೋಗಲೆಂದು ತನ್ನ ದ್ರವ್ಯಸಮೇತಂ ಮೂಡ ಬಾಗಿಲಿಗೆ ಬರಲು ಆ ಬಾಗಿಲವರೆ ಆತನಂ ಪರಿಹರಿಸಿಬಿಟ್ಟರ್. ಸುಲತಾನನು ಪೊರಗೆ ಪೋಪೆನೆಂದು ತುರಗಾರೂಢಾನಗಿ ಹುಲ್ಲೆಬಾಗಿಲ ಬಳಿಗೆ ಬರುತ್ತಿಪ್ಪಿನಪಲೀತಂ ಮಾಳ್ವರ ಗುಂಡು ತಗಲಿದೊಡೆ ಅಲ್ಲೆ ಮರಣವಾದಂ.

ಇಂಗರೀಜ ಫೌಜು ಪಟ್ಟಣಮನೊಂದು ಅರೆದಿವಸ ಸೂರೆಗೊಂಡು ನಿಂತರ್. ಉಳಿದ ಸುಲತಾನನ ಕಡೆ ವಜಿವೀರರು ಖಾನಖಾನರು ನಾಯಕರು ಮುಂತಾದವರು ಕೋಟೆ ಅಗಳ ಕಂದಕಕ್ಕೆ ಬಿದ್ದು ಸತ್ತರ್. ಇಂಗರೀಜ ಮೊಕಲೋಟು ಅರಸು ಮೊದಲಾದ ಸರದಾರರು ಅರಮನೆಯೊಳುಳ್ಳ ವಸ್ತುಗಳಂ ಪಂಚುಗೊಂಡು ತೊಳಶಿಖಾನೆ ಕರಣಿಕ ಪೂರ್ಣಯ್ಯನಂ ಬರಿಸಿ ಪೂರ್ವಾಪರ ಸಂಗತಿಗಳೆಲ್ಲಮಂ ವಿಚಾರಿಸಿ ದೊಡ್ಡ ನವಾಬನಾರಭ್ಯ ಅರಸುಗಳ್ಗೆ ಪಟ್ಟವೆಂದು ಮಡಗಿದ್ದರು. ಅವರೊಳು ಪೂರ್ವ ರಾಜ ಒಡೆಯರ ಸಂತಾನದ ದೇವರಾಜಒಡೆಯರು ಮಕ್ಕಳು ಅರಿಕುಠಾರದೊಳಿರೆ ದೇವರಾಜ ಅರಸಿನ ಕುಮಾರಂ ಚಾಮರಾಜ ಅರಸಿಂಗೆ ಪಟ್ಟವೆಂದು ಮಾಡಿರ್ದೊಡಾ ಕುಮಾರಂಗೆ ಕೆಂಪದೇವಾಜಮ್ಮಣ್ಣಿ ಎಂಬ ರಾಜಕುಮಾರಿಯಂ ಮದುವೆಯಾಗಿ ಆನಂದ ಸಂವತ್ಸರದೊಳು ಪುಣ್ಯಪುತ್ರನಪ್ಪ ಕೃಷ್ಣರಾಜರೆಂಬ ಕುಮಾರನಂ ಪಡೆದು ಭಾರ್ಯಾವಿಯೋಗಮಾಗೆ ಪಂಚಕಲ್ಯಾಣಮಾಗಿ ಐವರು ಸ್ತ್ರೀಯರೊಳಿರ್ದು ಸ್ಫೋಟಕದಿಂ ಲೋಕಾಂತರಿತನಪ್ಪುದು ಶಿಶುವಂ ಲಕ್ಷಮ್ಮಣ್ಣಿ ಆದರಿಸುತ್ತಿರಲಾ ಕೃಷ್ಣಮಹಾರಾಜಕುಮಾರಂಗೈದು ವರುಷಮಾಗಿರಲಾ ಕುಮಾರನಂ ಮಹಿಸೂರನಗರದ ಸಂಸ್ಥಾನಕ್ಕೆ ಅಧೀಶನಂ ಮಾಡಲು ಗಿಡಗಟ್ಟಿರ್ದ ಮಹಿಸೂರೊಳರಮನೆಯ ನಿರ್ಮಿಸಿ ಕೃಷ್ಣರಾಜೊಡೆಯರ್ಗೆ ಪಟ್ಟಂಗಟ್ಟಿ ಮೂಡಲು ಬೆಂಗಳೂರಾದಿಯಾಗಿ ಸತ್ಯಾಗಾಲದಿಂದೊಳಗೆ ತಳಕಾಡು ಹೊಂಗನೂರು ಹರದನಹಳ್ಳಿ ಮೊದಲಾಗಿ ತೆಂಕಣ ಕಣುಮೆಯಿಂದತ್ತ ಗುಂಡಲು ವಿಜಯಾಪುರ ಹುಲ್ಲನಹಳ್ಳಿ ಹೆಗ್ಗಡದೇವನಕೋಟೆ ಸಕ್ಕರೆಪಟ್ಟಣ ದೊಡ್ಡನಗರ ಮುಂತಾದ ಒಳನಾಡ ಗಡಿಗಳಂ ವಿಂಗಡಿಸಿ ಮಹಿಸೂರ ಹವಾಲು ಮಡಿ ದೊರೆಗಳಿಗೆ ನಡೆಯತಕ್ಕ ವಿನಿಯೋಗಗಳಂ ನೇಮಿಸಿ ಕಡಮೆ ಅರಸುಗಳಿಗೆ ದೇವಸ್ಥಾನಂಗಳಿಗೆ ಯಥೋಚಿತವಾಗಿ ಸಂಬಳಮಂ ಮಾಡಿಸಿ ಮಹಾರಾಜಂಗೈದು ವರುಷಮಾದುದರಿಂ ಪೂರ್ವಯ್ಯಂಗೆ ಸರ್ವಾಧಿಕಾರಮನಿತ್ತು ರಾಜ್ಯಮನಾತಂಗಪ್ಪೈಸಿ ಕೊಟ್ಟು ಕೋಲಸಾಹೇಬನೆಂಬ ಸರದಾರನಂ ಕಾಪಿರಿಸಿ ಪಟ್ಟಣಂ ಮೊದಲಾದ ಕಡಮೆ ರಾಜ್ಯಂಗಳನ್ನೆಲ್ಲಾ ಕುಂಪಣಿಹವಾಲ ಮಾಡಿಕೊಂಡು ಸರದಾರರಿಗೆ ಪಂಚುಗೊಟ್ಟು ಸುಲತಾನನ ಸತಿ ಪುತ್ರರು ಸಹಿತಮಾಗಿ ರಾಯರಾಯ ವೇಲೂರಿನಲ್ಲಿ ಕೈದಿನಿಂ ಮಡಗಿದರ್.

ಇತ್ತ ರಾಜ್ಯದೊಳು ನಿರಾತಂಕಮಪ್ಪಂತು ಮಾಡಿರೆ ದೊಂಡಿ ಎಂಬವನು ತುಂಟನಾಗಿ ಕೆಲವು ಮಂದಿ ಕುದುರೆವೆರಸು ಕಳ್ಳತನದಿಂ ರಾಜ್ಯಕ್ಷೋಭಮಂ ಮಾಡುತ್ತಿರಲು ಆತನಂ ಪಿಡಿದು ಅಲ್ಲಲ್ಲಿ ತುಂಟರಾದೆಲ್ಲರಂ ಸದೆದು ಮಳೆಯಾಳದರಸನಂ ಸುಲಭದಿಂ ಗೆಲ್ದಾ ರಾಜ್ಯಮಂ ಕೊಂಡು ಕಲ್ಲಿಕೋಟೆ ಪಾಲಕಾಡು ಮೊದಲಾದ ತೆಂಕಣ ಸಮುದ್ರದಿಂ ತೊಟ್ಟು ಮೂಡಣ ಪಡುವಣ ಸಮುದ್ರಾಂತಮುಳ್ಳ ಸಮಸ್ತ ದೇಶಂಗಳೆಲ್ಲಮಂ ಮುನ್ನಮೆ ವಶಂಮಾಡಿ ಉತ್ತರದೊಳು ಕಾಶಿ ಮೊದಲ್ಗೊಂಡು ಭರತಪುರ ಪರ್ಯಂತರಕ್ಕೂ ಸ್ವಾಜ್ಞಾನಿರರ್ಗಳಮಾಗೆ ಸರ್ವರ್ಗು ಹಿತಮಂ ಮಾಡುತ್ತ ಸತ್ಯಮಂ ಬಿಡದೆ ನಯ ವಿನಯ ನೀತಿ ನಿದಾನ ದಯ ದಾಕ್ಷಿಣ್ಯದಿಂ ಕ್ರೋಧಮಿಲ್ಲದೆ ಶೌರ್ಯ ವೀರ್ಯ ಪರಾಕ್ರಮದಿಂದಿಪ್ಪುದು ತಮ್ಮಂಕಮಾಲೆಯಂ ಪಟ್ಟಣದುತ್ತರದ ಚಿರಕುರುಳಿ ದಕ್ಷಿಣದ ತಿಟ್ಟಿನೊಳು ಮಹಾಶಿಲಾಸ್ಥಂಭಮಂ ಮಾಡಿಸಿಯಿದರೆ.

ಮತ್ತಂ ಆ ವರುಷದೊಳೆ ಪಟಕಿ ಹಿಂಡುಗಳು ಮಿಡಚೆಗಳ ಮೊತ್ತಂಗಳು ಮುಸುಕಿ ಶಲಭಾದಿ ಪುಳುಗಳು ನಿಬಡೀಕೃತಮಾಗಿ ಪೋದವು, ಮತ್ತಮೇಳು ದಿವಸಂ ಮೇಘಚ್ಛನ್ನಮಾಗೆ ವೃಷ್ಟಿಯಿಂ ಸಮುದ್ರಂ ಪೆರ್ಚು ಬಂದು ಚನ್ನಪಟ್ಟಣದ ಪೇಟೆಯಂ ಮುಚ್ಚಿ ಕೆಲವು ಗೃಹಂಗಳನೊಳಗೊಂಡಿತು. ಚಿತ್ರಭಾನು ಸಂವತ್ಸರದೊಳು ಮಾರ್ಗಶಿರಮಾಸ ಗತವಾಗೆ ರಾಜ್ಯದೊಳು ಪ್ರಜಾಕ್ಷೋಭಮಾಯ್ತು. ಉಜ್ಜೈನಿಪಟ್ಟಣದ ಮೇಲೆತ್ತಿಪೋಗಿ ಬರುವಲ್ಲಿ ಕರ್ಣಾಟದೇಶಕ್ಕೆ ವಾಂತಿಭೇದಿಯಾದ ನರಮಾರಿರೋಗಂ ಕರ್ನಾಟಮಂ ಪೊದ್ದಿ ಅನೇಕ ಜನರು ನಷ್ಟವಾದರು. ಆ ರೋಗಂ ಬಂದಲ್ಲಿ ಕೆಲವು ಕೆಲವು ದೊಡ್ಡಮ್ಮ ಚಿಕ್ಕಮ್ಮನೆಂದು ಪೆಸರಂ ಮಾಡಿ ಗುಡಿಯಂ ಕಟ್ಟಿಸಿ ದೇವತಾಸಂಕಲ್ಪಮಂ ಮಾಡಿದರ್. ಕೊಡಗಿನ ಅರಸನಂ ಕುಂಪಣಿಯವರ್ ಸಾಭಿಮಾನಿಸಿ ನಡೆಸುತ್ತಿರೆ ಅವರೊಳು ಇತರನಾದುದರಿಂದಾ ಕೊಡಗಂ ಕಟ್ಟಿಕೊಂಡು ಅಲ್ಲಿಯರಸನಂ ಕಾಶಿಗೋದಿರಿಸದರ್.

ಮತ್ತಂ ಕುಂಪಣಿ ಸರದಾರರು ಲೋಕೋಪಕಾರಮಾಗೆ ತಮ್ಮ ಕಡೆಯ ಡಾಕತರರೆಂಬ ವೈದ್ಯಪರೀಕ್ಷಾಕುಶಲಂ ಸಂಬಳಂಗೊಟ್ಟಲ್ಲಲ್ಲಿರಿಸಿ ಬಹುಕಾಲದಿಂ ಪ್ರತೀಕಾರಮಿಲ್ಲದ ಬಾಲಕರಿಗೆ ಬಪ್ಪ ಸ್ಫೋಟಕದಿಂದನೇಕಂ ಲಯವಾಗುತ್ತಿರೆ ಅದಕ್ಕೆ ಯುಕ್ತಿಯಿಂ ಹಸುವಿನ ಸಿಡಬನಂ ತೋಳ ಮೇಲಕ್ಕೇಳಿಸಿ ಒಂದೆರಡರೊಳೆ ಕಳಿವಂತೆ ಉಪಾಯಮಂ ಮಾಡಿದರ್. ರಾಜ್ಯಂಗಳೊಳು ಎಲ್ಲಿಂದೆಲ್ಲಿ ಪರ್ಯಂತರಂ ಪೋಗಲು ಮಾರ್ಗಮಂ ಲಕ್ಷಾಂತರಂ ಮುಟ್ಟಿ ಗಿಡ ಹಳ್ಳ ಬೆಟ್ಟಗಟ್ಟಂಗಳಂ ಸಮಂ ಮಾಡಿ ಅಲ್ಲಲ್ಲಿ ಬಂಗಲೀಗಳಂ ಮಾಡಿ ಗಮನನಾಗಮನಕ್ಕೆ ಸರಾಗಮಪ್ಪಂತು ಮಾಡಿ ಗ್ರಾಮಾನುಗ್ರಾಮಂಗಳ್ಗೆ ಮುಳ್ಳುಬೇಲಿ ಪೋಲೀಸ ಚಾವಡಿ ನಿಯಮಿಸಿದರ್

ಮಹಿಸೂರಧಿಕಾರಿ ಪೂರ್ಣಯ್ಯಂ ತನ್ನ ಜನರಂ ಗಡಿ ಮೊದಲಾಧಿಕಾರದೊಳಿಟ್ಟು ಸಿದ್ಧಾರ್ಥಿ ವತ್ಸರಾರಭ್ಯ ಪ್ರಜೋತ್ಪತ್ತಿ ಸಂವತ್ಸರದವರೆಗೆ ಮೊಗಮ್ಮು ಜಾಸ್ತಿಯಂ ಶೀಮೆಗೆ ಮಾಡುತ್ತಾ ಕಪಿನೀಹೊಳೆಗೆ ಕಾಲುವೆಗಳಂ ಮಾಡಿ ಗದ್ದೆಗಳಂ ಮಾಡಿಸಿ ಯಳವಂದೂರ ಹನ್ನೆರಡು ಸಾವಿರ ವರಹದ ಗಡಿಯಂ ಕುಂಪಣಿ ಅಪ್ಪಣೆಯಿಂ ಜಹಗೀರು ಪಡೆದರಮನೆ ಮೊದಲಾದವರ್ಗಂ ಮಿತಿಯಂ ಮಾಡಿ ತಾನೆ ಅಧ್ಯಕ್ಷನಾಗಿರ್ದು ಮಹಿಸೂರ ಬಸ್ತಿ ಮುಖಮಂಡಪಮಂ ಬೆಳ್ಳಿಯುಳಿಯ ಬಸ್ತಿ ಮೊದಲಾದಾರೇಳು ಪೂಜೆಯಿಲ್ಲದ ಬಸ್ತಿಯ ಕೀಳಿಸಿ ಕಲ್ಲುಗಳಂ ಸಾಗಿಸಿಕೊಂಡಂ. ತಾರಣಸಂವತ್ಸರ ದೇವರಾಜರಸಂ ಪಟ್ಟಣದೊಳಿದ್ದ ಬಸ್ತಿಯಂ ಬಿಡಿಸಿ ನಿಕ್ಷೇಪಮಾಗಿರ್ದ ದೇವರಂ ತೆಗೆಸಿ ವೈಶಾಖದೊಳು ಪ್ರತಿಷ್ಠೆ ಆಯ್ತು. ಮಹಿಸೂರಲ್ಲಿ ವರಹದ ದೇವಾಲಯಮಂ ಮಾಡಿಸಿ ತಸದೀಕು ಮಾಡಿಸಿದಂ ಅಷ್ಟರೊಳೆ ಕೃಷ್ಣರಾಜ ಮಹಾರಾಜಂ ಶುಕ್ಲಪಕ್ಷದ ಬಿದಿಗೆಯ ಚಂದ್ರನಂತೆ ಬೆಳೆದೆಳೆವರೆಯದೊಳೆ ಸಕಲ ಕಲಾಕುಶಲ ನೀತಿಶಾಸ್ತ್ರ ಪರಾಕ್ರಮಸಂಪನ್ನನಾಗಿ ಕುಂಪಣಿಯಿಂ ರಾಜಾಸನ್ನದಂ ತರಿಸಿ ತಾನೆ ವಿಚಾರಕರ್ತನಾಗಿ ನ್ಯಾಯವಿಹಿತ ಪ್ರಜಾಪಾಲನೆಯಿಂ ದೇವಗುರು ಬ್ರಾಹ್ಮಣರ್ಗಂ ತರಿಸಿ ತಾನೆ ವಿಚಾರಕರ್ತನಾಗಿ ನ್ಯಾವಿಹಿತ ಪ್ರಜಾಪಾಲನೆಯಿಂ ದೇವ ಗುರು ಬ್ರಾಹ್ಮಣರ್ಗಂ ಸಕಲವಾದ ಅರಸುಗಳ್ಗಂ ಕಾಮಧೇನು ಕಲ್ಪವಕ್ಷ ಚಿಂತಾಮಣಿ ಪ್ರಸನ್ನಮಾದಂತೆ ಅಪರಮಿತವಾಗಿ ಸಂಬಳುಂಬಳಿಗಳಂ ಕೊಟ್ಟ ಮಹಿಸೂರ ಶಾಂತೀಶ್ವರದೇವರ್ಗೆ ವರುಷಕ್ಕೆ ಮುನ್ನೂರು ವರಹ ತಸ್ತೀಕಂ ಮಾಡಿಸಿ ತಮ್ಮ ಪಿತೃಸ್ಥಾನವಾದರಿಕುಠಾರಮಂ ಚಾಮರಾಜನಗರಂ ಮಾಡಿ ಚಾಮರಾಜೇಶ್ವರಾಲಯಮಂ ನಿರ್ಮಿಸಿ ಅರಮನೆಯಂ ಸಾಮಾಜಿಕರ ಗೃಹ ಮೊದಲಾಗೆ ನಿರ್ಮಿಸಿ ದೇವಸ್ಥಾನಂ ಬ್ರಾಹ್ಮಣರಗ್ರಹಾರ ಛತ್ರ ಮೊದಲಾದನೇಕ ಧರ್ಮಂಗಳಿಗೆ ಅನೇಕ ಜಾಗಂಗೊಟ್ಟು ಸೂರಿಪಂಡಿತಂ ಕೇಳಿಕೊಂಡೊಡೆ ಬಸ್ತಿ ದೇವಸ್ಥಾನಂಗಳು ತ್ರಿವಿಂಶತಿಗಳ್ಗೆ ತಸ್ತೀಕಂ ಮಾಡಿಸಿಕೊಟ್ಟು ಮಹಿಸೂರೊಳು ಕೃಷ್ಣದೇವಾಲಾಯಂ ಮೊದಲಾಗೆ ನೂತನ ಪುರಾತನ ದೇವಾಲಾಯಗಳಂ ಮಾಡಿಸಿ ಸ್ವಾಸ್ತಿಮಾನ್ಯಂಗಳಂ ಕೊಟ್ಟು ಸ್ನಾನಘಟ್ಟ ವಾಪೀ ಕೂಪ ತಟಾಕ ಸರೋವರ ಉದ್ಯಾನಾರಾಮ ಪ್ರಪಾ ಸತ್ರಾದಿಗಳನನೇಕಮಾಗೆ ಮಾಡಿಸಿ ಬೆಳ್ಗುಳತೀರ್ಥಕೆಯ್ದಿ ಮಸ್ತಕಾಭಿಷೇಕ ಕನಕಾಭಿಷೇಕಮಂ ಮಾಡಿಸಿ ಘಟ್ಟದಕೀಳಿನ ಮೂಡಬಿದರೆಯೊಳಿಪ್ಪ ಚೈತ್ಯಾಲಯಗಳನ್ನೀಕ್ಷಿಸಿ ಅತ್ಯಾಶ್ಚರ್ಯಂಬಟ್ಟು ಬಂದು ಬೆಳಿಕೆರೆ ಶಾಂತಪಂಡಿತಂ ಕೇಳಿಕೊಂಡೊಡೆ ಪಾರ್ಥಿವದೊಳು ಮಳಲಿ ದೊಡ್ಡ ಬಸ್ತಿಯಲ್ಲಿ ಶಾಂತೀಶ್ವರಪ್ರತಿಬಿಂಬಮಂ ಮಾಡಿಸಿ ಪ್ರತಿಷ್ಠೆ ಮಾಡುವುದಕ್ಕಂ ಜಯ ಸಂವತ್ಸರದೊಳು ಕೆಲಸೂರ ಬಸ್ತಿದೇವರ ಚಿತ್ರಮಂ ನವೀನಂ ಮಾಡಿ ಪ್ರತಿಷ್ಠೆ ಮಾಡುವುದಕ್ಕಂ ಆತನ ಉಗ್ರಶಾಂತಿಗೆ ಸಹಿತವಾಗಿ ಸಾವಿರಾರು ರೂಪಾಯಂ ಕೊಡಿಸಿ ದೊಡ್ಡ ಪಂಡಿತನ ಷಷ್ಟಿವರುಷನಪೂರಣದೊಳೆ ಬೆಳ್ಗುಳದ ದೇವರಿಗೆ ಏಳುನೂರು ವರಹದ ಗ್ರಾಮ ಮೂರನ್ನು ಸರ್ವಮಾನ್ಯಮಾಗೆ ಕೊಟ್ಟು ಅಲ್ಲಿಯ ಸುಂಕದ ಬಗ್ಗೆ ಐವತ್ತು ವರಹವಂ ಕನಕಗಿರಿಯ ಬಸ್ತಿ ಪಡಿತರ ಜೀರ್ಣೋದ್ಧಾರಕ್ಕಂ ಮಾಡಲು ತಾಜ ಸನ್ನದು ಶಾಸನಮಂ ಬರೆಯಿಸಿಕೊಟ್ಟು ಪಂಡಿತಂಗುಗ್ರಶಾಂತಿಯಂ ಪಂಚವಿಧಾರಾಧನೆಯವಭೃತ ಮಹಾಸ್ನಾನಮಂ ಮಹಿಸೂರೊಳೆ ಶಾಂತೀಶ್ವರಬಿಂಬಕ್ಕಂ ಸೂರಿಪಂಡಿತನಾ ವಿಧಿವಿಧಾನಂಗಳಿಗೆನ್ನಿಂದಲೆ ಮಾಡಿಸುವಾಗಲು ಖಾಸಾಪರಂಬರಿಕೆ ಮಾಡಿ ಅತಿ ಸಂತಸಮೊದವೆ ಎನಗೆ ಸಂಬಳಂ ಮಾಡಿದೇವೆ ಎಂದು ವಾಗ್ದತ್ತಂ ಕೊಟ್ಟು ಬಹಳ ಜನದ ದಾರಿದ್ರವಿದ್ರಾವಣನೆನಿಸಿ

||     ನಳಮಾಂದಾತೃ ದಿನಾಧಿನಾಥಜ ಬಲಿಕೋಣೀಶರಂ ತ್ಯಾಗದಿಂ
ಕಲಿ ಭೀಮಾರ್ಜುನ ಭೂಪರಂ ಸಮರದಿಂ ತಾ ಗೆಲ್ವ, ಶೌರ್ಯೋನ್ನತಂ
ಛಲದಿಂ ಕೌರವನಂ ಸುಧರ್ಮಸುತನಂ ಸತ್ಯೋಕ್ತಿಯಿಂ ಶೇಷನಂ
ಬಲದಿಂ ಬಲ್ಲಿದ ಕೃಷ್ಣರಾಜನೆಸೆದಂ ರಾಜನ್ವತೀನಾಯಕಂ ||

ಇಂತಪ್ಪ ಮಹಾರಾಜನ ರಾಜ್ಯದಧಿಕಾರಿಗಳು ಕಾಲದೋಷದಿಂ ತಮ್ಮ ಕಾರ್ಯಕ್ಕೋಸ್ಕರ ನ್ಯಾಯಾನ್ಯಾಯಂಗಳಂ ಮಾಡಿ ಪ್ರಜಾಬಾಧೆಯಂ ಮಾಡುತ್ತಿರ್ದರ್ ಅತ್ತಲ್ ಸರಜನಾಯಕನೆಂಬ ನಿರ್ಬುದ್ದಿಗಂ ಅಲ್ಪ ಕುದುರೆಮಂದಿಗೂಡಿ ತುಂಟ ಭಂಟಕೆಯಂ ಮಾಡುತ್ತ ದೊಡ್ಡ ನಗರದ ಗಿಡದೊಳಡಗಿ ಆ ರಾಜ್ಯಮಂ ಸೂರೆಗೊಂಡು ಕೆಡಿಸುತ್ತಿರಲಲ್ಲಿ ಕೆಲವು ಪ್ರಜೆಗಳು ವಶಮಾಗಿರಲು ರಾಜಬಲದಧಿಕಾರಿಗಳು ವಿಚಾರವಿಲ್ಲದೆ ಕೆಲರಂ ಘಾತಪಾತಂಗಳಂ ಮಾಡುತ್ತಿರಲ್ ಕುಂಪಣಿ ಸರದಾರರಿದು ಬಂದು ಸರಜನಾಯಕನಂ ಪರಿಭವಿಸಿ ಕಳೆದು ಮಹಾರಾಜನ ಸನ್ನಿಧಿಯೊಳಧಿಕಾರಮಂ ಮಾಳ್ಪ ಬುದ್ಧಿವಂತರಿಲ್ಲೆಂದು ಖರಸಂವತ್ಸರದಾಶ್ವಯುಜ ಶು ೧೦ ಆರಭ್ಯ ವಿಚಾರಮೆಲ್ಲಮಂ ತಮ್ಮ ಹವಾಲು ಮಾಡಿಕೊಂಡು ರಾಜಂ ಮಾಡಿರ್ದ ಧರ್ಮಮಂ ನಡಸುತ್ತ ಅರಮನೆ ವೆಚ್ಚಕ್ಕೆ ಸಾಲ್ವನಿತ್ತು ದ್ರವ್ಯಮಂ ತಿಂಗಳುಗಟ್ಟಲೆ ಕೊಡುತ್ತಂ ಸಂಬಳದವರ್ಗುಳಿದಿರ್ದ ಸಂಬಳಮಂ ಕೊಡಿಸಿ ಸಾಲಗಾರರ ಸಾಲಮೆಲ್ಲಮಂ ತೀರಿಸಿ ಮಹಾರಾಜನಂ ನಿಶ್ಚಿಂತೆಯಿಂ ದಾನಧರ್ಮ ಪರೋಪಕಾರದಿಂದಿಪ್ಪಂತು ಮಾಡಿ ರಾಜ್ಯಮನೆರಡು ತುಕ್ಕಡಿಯಾಗೆ ಬೆಂಗಳೂರ ತುಕ್ಕಡಿಯೊಳು ಕಮೀಸಕಚೇರಿಯ ನಿಲಿ ಮೈಸೂರೊಳೆ ಸುಪ್ರಿಂಟ್ಯ ಕಚೇರಿಯಂ ಮಾಡಿ ಅಲ್ಲಿಗೆ ಸರದಾರರನ್ನು ಗೊತ್ತು ಮಾಡಿ ಪ್ರಜೆಗಳಂ ಕರುಣವಿಡಿದು ರಕ್ಷಿಸಲು ಕೊಟ್ಟೆಂದು ನಿರ್ಮಿಸಿ ರಾಜ್ಯದೊಳು ಅನ್ಯಾಯಂ ನಡೆಯದಂತೆ ಒಬ್ಬರನ್ನೊಬ್ಬರು ಕೊಲ್ಲದಂತೆ ಬೈಯದಂತೆ ಉಪವಾಸಮಿರಿಸದಂತೆ ಪುಸಿಯ ನುಡಿಯದಂತೆ ಒಬ್ಬರ ವಸ್ತುವನೊಬ್ಬ ಕೊಳ್ಳದಂತೆ ಕಳವಂ ಮಾಡದಂತೆ ಸತ್ಯದಿಂದಿಪ್ಪುದೆಂದು ಇಸ್ತ್ಯಾರು ಶಾಸನಮಂ ಬರೆಯಿಸಿಕೊಟ್ಟು ಬೂಸಾಜಿನಸಿಗೆ ಸುಂಕಮಂ ಇರುಳು ತಪ್ಪು ಮೊದಲಾಗೆ ಅಪರಾಧ ಜಾತಿವರಿ ಮೊದಲಾದವಂ ಬಿಟ್ಟು ಸರ್ವೇಜನರು ಸುಖದಿಂ ಬಾಳ್ಪುದೆಂದು ನಡಸಿದೊಡಂ ಅಧಿಕಾರ ಮಾಡುವ ಕರ್ನಾಟಕ ಜನರ ದಯಕ್ಕೆ ಪಾತ್ರರಾಗುವೆನೆಂದು ಪೂರ್ಣಯ್ಯಂ ಮಾಡಿದ ಮುಗಂ ಜಾಸ್ತಿಯೆಲ್ಲಮಂ ಸೇರಿಸಿ ಕಾಳಾಯುಕ್ತಿಯ ಬೇರೇಜೆಂದು ಗ್ರಾಮಗುತ್ತಿಗೆಯಂ ಹೆಚ್ಚಿಸಿ ಕಂದಾಯ ಸರಿಪೈರು ಗುತ್ತಿಗೆ ಕಯವಳಿ ಸಹಿತವಾಗಿ ರೈತರ (ರಹಿತರ) ಭೂಮಿಕಂದಾಯಕ್ಕೆ ಸೇರಿಸಿ ಒಂದಕ್ಕೆ ಮೂರು ನಾಲ್ಕು ಕಂದಾಯಮಾಗೆ ಸರದಾರರಿಗೆ ಸಹಜವೆಂದು ಅರಿಕೆ ಮಾಡುತ್ತ ತಮ್ಮ ಕಾರ್ಯಕ್ಕಾಗಿ ಪ್ರಜೆಗಳಂ ಬಾಧಿಸಿ ನೋಯಿಸುವರಲ್ಲದೆ ಸರದಾರರ ದೋಷ ಸ್ವಲ್ಪ ಮಾತ್ರವೂ ಇಲ್ಲ.

||     ಅರಿಭೂಪಾಲ ಮಹಾಂಬುದಾಳಿ ಪವನಾಘಾತರ್ ಪ್ರತೀಪಕ್ಷತೀ
ಶ್ವರ ಭೂಬೃದ್ವಿಲಯಾಶನಿ ಪ್ರತಿನಿಧಿ ಪ್ರತ್ಯರ್ಥಿ ಭೂಪಾಲ ವಿ
ಸ್ಫುರಿತಾರಣ್ಯದವಾಗ್ನಿ ವೈರಿವನಿತಾವೈಧವ್ಯ ದೀಕ್ಷಾಗುರು
ಸ್ಥಿರ ಸಾಮ್ರಾಜ್ಯ ವಿರಾಜಮಾನ ಜಗದೀಶರ್ ಕುಂಪಿಣೀಭೂಮಿಪರ್ ||

ಮಾಲಿನಿ || ರಚಿತ ಚತುರುಪಾಯಪ್ರಾಪ್ತಸಪ್ತಾಂಗರಾಜ್ಯರ್
ನಿಚಿತ ಸುಗುಣ ಷಟ್ಕಸ್ತುತ್ಯ ರಾಜಪ್ರಪೂಜ್ಯರ್
ಪ್ರಚಲಿತರಿಪು ದುರ್ನಷ್ಟಪ್ರಾಪ್ತ ಷಡ್ವೈರಿವರ್ಗರ್
ಸುಚರಿತರುಪಕಾರರ್ ಕುಂಪಣೀಭೂಮಿಪಾಲರ್

ಇಂತೊಪ್ಪುತಿರ್ಪ್ಪುದುಂ ಮೈಸೂರರಮನೆ ಆಶ್ರಯದಿಂ ಪರಂಪರೆಯಾಗಿ ಬಂಧ ವೈದ್ಯರಾದ ಅರಿಕುರಾರದ ಜೈನವಿಪ್ರ ಭಾರದ್ವಾಜಗೋತ್ರದ ಸೂರಿಪಂಡಿತರ ಪುತ್ರ ಬೊಮ್ಮರಸಪಂಡಿತನಾತ್ಮಜಂ ಲಕ್ಷ್ಮೀಪತಿಪಂಡಿತಂ ಸುಗುಣ ಮಣಿಗಣಭೂಷಣನುಂ ನಯವಿನಯ ದಯಾದಾಕ್ಷಿಣ್ಯ ನೀತಿನಿಧಾನ ನಿಗರ್ವಶಿರೋಮಣಿಯನಿಸಿರ್ದನ್. ಆತನ ಭಾಗದೇಯಂ ಕಾಶ್ಯಪಗೋತ್ರ ಕೌಂಗೆರೆಯ ದ್ವಿಜಶ್ರೇಷ್ಠಂ ಪಾಲಕಾಡ ಮಾಣಿಕಪಟ್ಟಣದೊಳ್ ಮಾನ್ಯಂಬಡೆದಿರ್ದನಾ ವಂಶದೊಳೆ ಬ್ರಹ್ಮವೆಸರ ವಿಪ್ರಂಗಂ ಮಲೆಯೂರ ಬೊಮ್ಮರಸನ ಸುತೆ ವಿಜಯಮ್ಮನೆಂಬ ಧರ್ಮಪತ್ನಿಯಾಗಲವಳ ಗರ್ಭದೊಳು ಸೂರಯ್ಯಂ ಚೆಲುವಯ್ಯಂ ಭುಜಬಲಯ್ಯನೆಂಬ ಮೂವರ್ ಕುಮಾರರಾದಲ್ಲಿ ಕಿರಿಯ ಭುಜಬಲಯ್ಯಂಗಂ ಆದಿರಾಜಪಂಡಿತ ಸುತೆಯಪ್ಪ ಕಮಲಮ್ಮನಂ ಕೊಟ್ಟು ತಮ್ಮನ್ವ ಯಾಗತಮಾದರಿಕುಠಾರದೊಳ್ ನಿಲಿಸಿದೊಡಾ ದಂಪತಿಗಳ ಗರ್ಭದೊಳೆ ಸೂರಿ ಪಂಡಿತನೆಂಬ ಕುಲಭೂಷಣಂ ಪುಟ್ಟಿ ವಿದ್ಯಾವಿವೇಕ ಜಾಣ್ಮೆಗಳ್ವೆರಸಿ ಬೆಳೆದು ಯೌವನನಾಗೆ ಮಾತುಲಂ ಕರೆಯಿಸಿ ರಾಜಾಶ್ರಯದೊಳಿರಿಸೆ ಶ್ರೀಕೃಷ್ಣರಾಜಮಹಾರಾಜನ ಕಾರುಣ್ಯಾಮೃತಪಾತ್ರನಾಗಿ ಸತ್ಯಶೌಚ ಶೀಲಾಚಾರಸಂಪನ್ನನೆನಿಸಿದಂ

ಮಸ್ರ ||  ವದನಂ ಚಂದ್ರೋದಯ ಶ್ರೀವಿಜಯಭುಜಬಲಂ ನಾಗರಾಜಪ್ರಸಾದಂ
ಹೃದಯಂ ಲಕ್ಷ್ಮೀವಿಲಾಸಂ ಪ್ರಬಲತರ ಮಹಾಚಂಡ ಭಾನುಪ್ರಾತಪಂ
ವಿದಿತ ಪ್ರಖ್ಯಾತ ಕೀರ್ತಿಸ್ಫುರಿತ ದಶದಿಶಂ ಸರ್ವರಕ್ಷೈಕದಕ್ಷಂ
ಬುಧಸೇವ್ಯಂ ಧರ್ಮಚಿತ್ತಂ ಪ್ರಥಿತ ಗುಣನಿಧಿಂ ಸೂರಿಸತ್ ಪಂಡಿತಾಖ್ಯಂ ||

ಇಂತಪ್ಪ ಸೂರಿಪಂಡಿತನೀ ರಾಜಾವಳಿಕಥೆಯಂ ಮಾಡಿಸಿದಂ. ಮತ್ತಂ ಕಥಕನ ವಂಶಾವಳಿಯೆಂತೆಂದೊಡೆ ಆದಿಬ್ರಹ್ಮತನೂಭವರಂತ್ಯಬ್ರಹ್ಮಸೃಷ್ಟಿ ಯಜನಾಧ್ಯಾಯ ಷಟ್ಕರ್ಮ ಕರ್ಮಠ ಧರ್ಮಕ್ರಿಯಾ ಕುತೂಲಹರನೇಕರ್ ಅತಿಕ್ರಾಂತರಾದಿಂ ಬಳಿಯ ಪಶ್ಚಿಮ ತೀರ್ಥಕರಿಂದಿತ್ತ ಸಮಂತಭದ್ರ ವಾದೀಭಸಿಂಹಸೂರಿ ವಾದಿರಾಜರಾದಿಂ ಬಳಿಕ ಶ್ರೀಗುಣಭದ್ರಯತಿಶಿಷ್ಯ ಶ್ರೀವತ್ಸಗೋತ್ರದ ಗೋಪಾಚಾರ್ಯಪುತ್ರ ಹಸ್ತಿಮಲ್ಲಿಷೇಣಸೂನು ಪಾರ್ಶ್ವಪಂಡಿತ ಚಂದಪಾರ್ಯವಂಶಜ ಚಂದ್ರನಾಥಂ ಕನಕಗಿರಿಯೊಳ್ ನಿಂತನಾ ವಂಶಪರಂಪರೆಯೊಳೆ ಮಧ್ಯಸ್ತ ಬ್ರಹ್ಮವಿಪ್ರತನೂಭವರ್ ನಾಲ್ವರವರೊಳೆ ಕಿರಿಯ ಶಾನುಭಾಗ ಬೊಮ್ಮರಸನಾತನ ಪುತ್ರಂ ವಿಜಯಪ್ಪಸೂನು ಬೊಮ್ಮರಸೋಪಾಧ್ಯಾಯರನ್ವಯಂ ವಿಜಯಾಪತ್ಯಂ ದೇವಯ್ಯನನುಜಂ ಅಂತಪ್ಪನಾತಂಗೆ ನಾಲ್ವರ್ ಕುಮಾರರಾಗೆ ಕಿರಿಯ ದೇವಚಂದ್ರನಯವರ್ ತನಯರೊಳು ಕಿರಿಯ ದೇವಯ್ಯನೆಂಬಂಗೆ ಬಾಚಹಳ್ಳಿ ಭಾರದ್ವಾಜಗೋತ್ರದ ಪುಟ್ಟುಪಾಧ್ಯಾಯಸುತೆ ಕುಸುಮಾಜಮ್ಮನೆಂಬಳು ಎರಡನೆಯ ವಿವಾಹಮಾಗಲಾಕೆಯ ಗರ್ಭದೊಳ್ ನಾಲ್ವರ್ ಕುಮಾರರಾಗೆ ದ್ವಿತೀಯಪುತ್ರನೈದನೆ ವರುಷದೊಳೆ ಕಾಲವಾಗಲುಳಿದ ಮೂವರು ದೀರ್ಘಾಯುಷ್ಯರಾಗಿ ಅನೇಕ ಶಾಸ್ತ್ರಾವಲೋಕನದಿಂ ಲೌಕಿಕ ಪಾರಮಾರ್ಥಿಕಮಂ ತತ್ವ ನೀತಿ ವೈದ್ಯ ಜ್ಯೋತಿಷ ಮಂತ್ರವಾದಾದಿ ವಿದ್ಯಂಗಳಂ ಕಲ್ತು ಶಾಂತಿ ಸೈರಣೆ ನಿಗರ್ವಮಂ ತಾಳಿ ಒಬ್ಬರನ್ನೊಬ್ಬರಗಲದೆ ಅತ್ಯಂತ ಪ್ರೀತಿಯೊಳತಿಸೌಜನ್ಯದಿಂದಿರ್ದರವರೊಳು ಜ್ಯೇಷ್ಠನಪ್ಪ ಚಂದಪಾರ್ಯ ಆಬಾಲ ಬ್ರಹ್ಮಚಾರಿ ಏಕಭುಕ್ತದಿಂದಾತ್ಮಧ್ಯಾನಶ್ರದ್ಧೆಯಿಂದಿಪ್ಪತ್ತುನಾಲ್ಕು ವರುಷಮಿರ್ದು ಶುಭಪರಿಣಾಮದೊಳೆ ಕಾಲಂಗಂಡಂ

ಮೂರನೆಯ ಪದ್ಮರಾಜನೆಂಬಂ ಸಕಲ ಕಲಾಕುಶಲಂ ಗೃಹಸ್ಥಾಚಾರ್ಯನಾಗಿ ಗಂಡು ಹೆಣ್ಣುಮಕ್ಕಳಂ ಪಡೆದು ಅನೇಕ ಗ್ರಂಥಂಗಳಂ ಮಾಡಿ ಪರೋಪಕಾರಿಯಾಗಿರ್ದು ಕಾಲಂಗಡಂ ನಾಲ್ಕನೆಯ ದೇವಚಂದ್ರನೆಂಬಂ ವಿಕೃತುವತ್ಸರದಾಷಾಢ ಶುದ್ಧ ಪೌರ್ನಮಿಯೊಳ್ ಪುಟ್ಟಿ ಪದಿನಾಲ್ಕು ವರ್ಷಾರಭ್ಯದಿ ಕಣಿಕಾಗ್ರಗಣ್ಯನೆನಿಸಿ ಕವಿ ಗಮಕ ವಾಗ್ಮಿತ್ವದಿಂ ಸಜ್ಜನನೆನಿಸಿಪ್ಪಿನ ರಕ್ತಾಕ್ಷಿಸಂವತ್ಸರಾಶ್ವಯುಜದೊಳು ಸೀಮೆ ಪೈಮಾಸಿಯಂ ಮಾಡಲ್ ಮಕಂಜಿಸದಾರರಂ ಲಕ್ಷ್ಮರಾಯಂವೆರಸು ಬಂದಲ್ಲಿ ಕನಕಗಿರಿಗೆ ಬಂದೆನ್ನಂ ಸ್ಥಳಪುರಾಣಮುಂಟೆ ಎಂದು ಕೇಳ್ವುದುಂ ನಾನು ಮಾಡಿದ ಪೂಜ್ಯಪಾದಚರಿತ್ರೆಯನ್ನೋದಿ ಪೇಳ್ವುದು ಎನ್ನಂ ಬಿಡದೆ ಕಮರಹಳ್ಳಿ ಬಳಿಯ ಒಡ್ಡಿರ್ದ ಗುಡಾರದ ಬಳಿಗೆ ಕರೆದುಕೊಂಡು ಪೋಗಿ ಪೂರ್ವದ ಕೆಲವು ಪ್ರಪಂಚುಗಳಂ ಮೂರು ರಾತ್ರಿ ಚೆನ್ನಾಗಿ ಲಾಲಿಸಿ ಕಳಿಲೆ ಮಹಿಸೂರುಪಟ್ಟಣ ಇಲವಾಲ ನಾಗವಾಲದವರಿಗು ಎರಡು ತಿಂಗಳು ಪರ್ಯಂತಂ ಬಿಡದೆ ದಿನ ಒಂದಕ್ಕೆ ಗ್ರಾಸಕ್ಕೆ ಒಂದು ಹಣಮಂ ಕೊಡುತ್ತ ರಾತ್ರಿಕಾದೊಳು ಪೂರ್ವದ ಪ್ರಪಂಚುಗಳಂ ಜಾತಿಭೇದಂಗಳು ಮೊದಲಾದ ವಿವರಗಳನೆಲ್ಲಮಂ ಕೇಳುತ್ತ ರಾಜ್ಯಸೀಮೆಗಳ ಚಕ್ರದಿಂದಳೆದು ವಿಂಗಡಿಸುತ್ತ ಗ್ರಾಮಾಧಿಗ್ರಾಮಂಗಳಿಗೆ ನಕ್ಷೆಯಂ ಬರೆಯಿಸಿ ಜಾತಿಕೋಮುವಾರು ಕುಳ ಮನೆ ಜನಜೀವನ ಮೊದಲಾದವಂ ಜಮಾಬಂದಿ ಮುಂತಾದವಂ ಬರೆಯಿಸಿಕೊಂಡು ನನ್ನನ್ನು ಬಿಡದೆ ಬಂಗಾಳಿಗೊಯ್ಯಲೆಂದು ಇಪ್ಪಿನ ನಾನಾ ಪ್ರಕಾರದಿಂ ಹೇಳಿಕೊಂಡದ್ದರಿಂದಲೂ ನಮ್ಮ ಧಮೋಪಾಧ್ಯಾಯರು ಬಂದದ್ದರಿಂದಲೂ ಪೂಜ್ಯಪಾದಚರಿತ್ರೆಯನ್ನು ತೆಗೆದುಕೊಂಡು ನಾನು ಪೂರ್ವದ ವೃತ್ತಾಂತಗಳನ್ನು ಪೇಳಿದುದು ಕಾಗದದ ವೈಯೊಳು ಬರೆಯಿಸಿಕೊಂಡು ಈ ಕರ್ನಾಟಕ ದೇಶದೊಳು ನಡೆದ ಪ್ರಪಂಚುಗಳನ್ನೆಲ್ಲಾ ಕ್ರೋಢಿಕರಿಸಿ ಬರೆದು ನಾವು ಇದ್ದಲ್ಲಿಗೆ ತೆಗೆದುಕೊಂಡು ತಿಂಗಳು ಒಳಗೆ ಬಂದರೆ ಭಾರಿ ಸಂಬಳವನ್ನು ಮಾಡಿಸಿಕೊಡುತ್ತೇವೆ ಎಂದು ಹೇಳಿ ಲಕ್ಷ್ಮಣರಾಯನ ಮಾರಿಫತ್ತು ಇಪ್ಪತ್ತೈದು ಕುಂಪಣಿ ರೂಪಾಯನ್ನು ಕೊಡಿಸಿ ಅಪ್ಪಣೆಕೊಟ್ಟು ಕಳುಹಿಸಿಕೊಟ್ಟನೆಂದು ಮೊದಲಾಗಿ ಈ ಕಥಾಸಂಗ್ರಹಮಂ ಮಾಡುತ್ತಿಪ್ಪಿನ ಸರದಾರಂ ಬಹುದೂರಂ ಪೋದುದರಿಂ ಒಪ್ಪಿಸುವುದಕ್ಕಿಲ್ಲವಾಯಿತು. ಈವರಿಗೆ ನನ್ನಲ್ಪಮತಿಯಿಂದ ಸಂಗ್ರಹಿಸಿದ ಶಾಸ್ತ್ರಂಗಳು ಹದಿನಾಲ್ಕು ವರುಷದಿಂ ಪದ ಪದ್ಯಂಗಳಂ ತೊಡಗಿ ಪರೀಭಾವಿ ಸಂವತ್ಸರದೊಳು ಪೂಜ್ಯಪಾದ ಚರಿತ್ರೆಯನ್ನು ಪ್ರಾರಂಭಿಸಿ ಮಾಡಿದ ಕೃತಿಗಳು ಸುಮೇರು ಶತಕ, ಯಕ್ಷಗಾನ ರಾಮಕಥಾವತಾರ, ಭಕ್ತಿಸಾರ ಶತಕತ್ರಯ, ಶಾಸ್ತ್ರಸಾರ ಲಘುವೃತ್ತಿ, ಪ್ರವಚನ ಸಿದ್ಧಾಂತ, ದ್ರವ್ಯಸಂಗ್ರಹ ದ್ವಾದಶಾನುಪ್ರೇಕ್ಷೆ ಕಥೆ ಸಹಿತ ಧ್ಯಾನಸಾಮ್ರಾಜ್ಯ ಅಧ್ಯಾತ್ಮ ವಿಚಾರಾದಿ ಕರ್ನಾಟಕ ಸಂಸ್ಕೃತ ಬಾಲನುಡಿಯಿಂ ವಿರಚಿಸಿದೆನದರಿಂ ಪಾಪವಿಚ್ಛತ್ತಿ ಪುಣ್ಯಸಂಪಾದನ ದೊರೆ ಕೊಳ್ಗುಮೆಂದು ವಿರಚಿಸಿದೆಂ. ಅವರೊಳು ತಪ್ಪಿರ್ದೊಡೆ ತಿದ್ದಿ ಸತ್ಪುರುಷರು ಗ್ರಹಿಸಲೆಂದು ಪ್ರಾರ್ಥಿಸುವೆಂ.

ವ್ಯೋಮರ್ತು ಶೈಲಶಶಿರಕೆ
ಶ್ರೀಮದ್ವತ್ಸರ ವಿಳಂಬಿ ಚೈತ್ರದೊಳೀಕೃತಿ
ಭೂಮಿಗತಿಶಯದಿ ನೆಗಳ್ದುದು
ಸೋಮಾರ್ಕಸ್ಥಾಯಿಯಿರ್ಕೆ ರಾಜಾವಲಿಯುಂ

ಮತ್ತಂ ಸತ್ಪುರುಷರಾದ ವಿದ್ವಾಂಸರು ವಿಚಾರಿಸಿದ ಕಥಕನಂ ಪ್ರಶಂಸೆಗೆಯ್ದರೆಂತೆಂದೊಡೆ

ವೃತ್ತ ||  ಜಯತಿ[ಜಿ]ನವರ್ಯೋ ದೇವಚಂದ್ರಾಖ್ಯವಿದ್ವಾನ್
ಮಲಯಪುರಿನಿವಾಸೀ ಪಾರ್ಶ್ವನಾಥಸ್ಯ ಭಕ್ತಃ
ಸ್ವಜನ ಸುಹಿತಕಾರೀ ಸರ್ವ ಸಂತೋಷಭೂಮಿಃ
ನಿಖಿಲನಿಗಮವೇದಿ ಸರ್ವರಾಜಪ್ರಪೂಜ್ಯಃ ||

ಎಂದು ಶ್ರೀರಂಗಪಟ್ಟಣದ ರಾಮಶಾಸ್ತ್ರಿ ಎಂಬಂ ವ್ಯಾಕರಣತ್ರಯಮುಪನ್ಯಾಸ ಸಾಧನಂ ಬಂದಿರ್ದು ಪರೀಕ್ಷಿಸಿ ಶ್ಲೋಕಮಂ ಮಾಡಿದನಲ್ಲದೆ ನಂಜನಗೂಡ ಚಾಮರಾಜನಗರದ ವಿದ್ವಾಂಸರಂ ಪರೀಕ್ಷಿಸಿ ಪ್ರಶಂಸೆಯಂ ಮಾಡಿ

ವೃತ್ತ ||  ಸಿದ್ಧಾಂತ ವೇದಾಂತ ವಿಚಾರದಕ್ಷಃ
ಸದ್ಧರ್ಮರಕ್ತಾತ್ಮವಿದಾಂತರಂಗಃ
ಶ್ರದ್ಧಾಪರಃ ಸಂತತ ಶುದ್ಧ ತತ್ವೇ
ಬುದ್ಧಿರ್ಜಯೋ ವೃದ್ಧಿಯುತಾಮರೇದುಃ ||

ಎಂದು ಪೇಳೆ ಆತ್ಮಸ್ತುತಿಳ್ಕಿ ನಾಂ ಪಾಪಿಷ್ಠನುಂ ಜಡಮತಿಯುಂ ದುರಾತ್ಮನುಂ ಲೋಭಿಯುಂ ಮಾಯಾವಿಯುಂ ಪ್ರಾಗ್ಜನ್ಮ ಕಷಾಯೋದಯದಿಂ ನಿರ್ಮಿಸಲ್ಪಟ್ಟ ದುಷ್ಕರ್ಮಮಂ ನಿಂದಾಪೂರ್ವಕಂ ಬಿಟ್ಟಪೆನೆಂದು ಸರ್ವಜ್ಞನುತಿಯಿಂದಾತ್ಮಪ್ರಶಂಸಾ ದೋಷಮಂ ಕಳೆದೆನ್ನಲ್ಪಮತಿಯೊಳೆ ರಚಿಸಿದ ಕೃತಿಗಳೆಲ್ಲ ಮನುಷ್ಟುಪ್ ಛಂದದೊಳ್ ಗಣಿಸಿದೊಡೀ ರಾಜಾವಳಿ ಸಹಿತಂ ಪಂಚವಿಂಶತಿ ಸಾಸಿರಮಕ್ಕುಂ

ಹಳಗನ್ನಡ ಬೆಳುಗನ್ನಡ
ವಳಗನ್ನಡ ವಚ್ಚಗನ್ನಡಂಗಬ್ಬದೊಳುಂ
ತಿಳಿದೆಲ್ಲ ಮಿಶ್ರಮಾಗಿಯು
ಮಿಳೆಗರಿವಂದದೊಳೆ ಪೇಳ್ದೆ ರಾಜಾವಲಿಯಂ

ವೃತ್ತ || ಸ್ವಸ್ತಿಶ್ರೀ ಸುಖಸಿದ್ಧಿ ವೃದ್ಧಿ ವಿಭವಃ ಪ್ರಖ್ಯಾತಯಃ ಪೂಜ್ಯತಾ
ಕೀರ್ತಿಕ್ಷೇಮಮಗಣ್ಯಪುಣ್ಯಮಹಿಮಾ ದೀರ್ಘಾಯುರಾರೋಗ್ಯತಾ
ಸೌಭಾಗ್ಯಂ ಸುಖಸಂಪದಂ ವಿಜಯ ವೀರ್ಯಂ ಶಾಂತಿಕಾಂತಿ ಶ್ರೇಯೊಭೂ
ಯಾತ್ಸರ್ವತನೂಭೃತಾಮಿಹ ಸದಾ ಭದ್ರಂ ಶುಭಂ ಮಂಗಲಮ್ ||

ಇಂತೀ ಕಥೆಯಂ ಕೇಳ್ವರ
ಭ್ರಾಂತಿಯು ನೆರೆ ಕೆಟ್ಟು ಬಳಿಕಮಾಯುಂ ಶ್ರೀಯುಂ
ಸಂತಾನವೃದ್ಧಿ ಸಿದ್ಧಿಯು
ಸಂತತದೊರೆಕೊಳ್ಗು ಸ್ವರ್ಗಮೋಕ್ಷದ ಸುಖಮಂ

ಇದು ಸತ್ಯಪ್ರವಚನ ಕಾಲಪ್ರವರ್ತನ ಕರ್ನಾಟಕ ದೇಶಾಧಿಪ ವೃತ್ತಕಮಂ ಮಲೆಯೂರ ದೇವಚಂದ್ರಪಂಡಿತ ವಿರಚಿತ ರಾಜಾವಲಿ ಕಥಾಸಾರದೊಳ್‌ಮಹಿಸೂರ ರಾಜಕುಲ ಜಾತಿ ವರ್ಣನಂ ಏಕದಶಾಧಿಕಾರಂ

ಏಕದಶಾಧಿಕಾರಂ