ಅತ್ತ ಮಧುರೆಯೊಳ್ ವೆಂಕಟಪತಿರಾಯಂ ತಿರುಮಲರಾಯನನಟ್ಟಿದುದಕ್ಕೆ ಕೋಪಿಸಿರ್ದು ಅವನ ಪೆಂಡಿರನವನ ಪೊರ್ದಿಸಿ ಜನರಂ ರಕ್ಷಿಸಿ ಕಳಿಪಿದುದಕ್ಕಂ ಮನವೆಗೊಂಡು ನಣ್ಪಂ ಪಡೆಯಲೆಂದು ನಯದಿಂ ಸಾಧಿಸಲ್‌ಆನೆ ಕುದುರೆ ಉಡತೊಡವಾದಿ ಪಾಗುಡಂಗೊಟ್ಟು ತನ್ನ ಮಂತ್ರಿಗಳೊಳ್ ಕಟ್ಟಾಳೆನಿಸಿದ ಗಂಭೀರರಾಯ ವಿರುಪಣ್ಣನಂ ಕಳುಪೆಯವನೆಯ್ತಂದು ಒಪ್ಪಿಸಲವಂ ಕೊಂಡು ಅವನಂ ಮನ್ನಿಸಿ ರಾಯಂಗೆ ಪ್ರತಿ ಪಾಗುಡಮನಟ್ಟಿ ಸಂತಸದೊಳಿರಲತ್ತಲ್‌ಪದಿನಾಡ ನಂಜರಾಜಂ ತನ್ನ ಮೊಲಗಿಪಾಲಂಬಾಡಿಯ ತೊರೆಯರ್ ಕೂಟದಾಳ್ಗಳ ನೆರವಿಯಂ ಎಳವಂದೂರು ಸತ್ಯಗಾಲದರಸರಪ್ಪ ತನ್ನೊಡಹುಟ್ಟಿದರಾ ಪಡೆಯಂ ತನ್ನ ನೆರೆಹೊರೆಯ ದೊರೆಗಳ ಪಡಿದಳಮಂ ತನ್ನ ಮೂಲಬಲಮಂ ತನಗೆ ಮಧುರೆಯವನೀವ ಕಪ್ಪದ ಹಣದೊಳ್ ಕಟ್ಟಿದಾಳ್ಗಳಂ ಕೂಡಿ ರಾಜನೃಪನೊಳ್ ಕಾದಲೆಂದೆಡದರೆಯ ಬಗಡಿಗೋಂಟೆಯೊಳ್ ಕಟ್ಟಿರ್ದ ಮೇಘ ಪುಷ್ಕರಿಣಯೆಂಬಾನೆಯ ಕಳವಿನಿಂ ಕೊಂಡೊಯ್ವುದುಂ ರಾಜನೃಪಂ ಕೇಳಿ ಸೈರಿಸದೆ ಬಲಂಗೂಡಿ ನಡೆದವನಂ ತಾಯ್ವೂರೆಂಬ ಗಡಿಗೋಂಟೆಯಂ ಒಡ್ಡೈಸಿ ಮುತ್ತುವಿನಮವಂ ಸಂವರೆಗೊಂಡು ಬಪ್ಪಿನ ದಾರಿಯೊಳಡ್ಡಗಟ್ಟಿ ಬೇಡವಡೆಯನಟ್ಟಿ ವೀರರೊಳ್ ಮೊನೆಯ ಹರಿಗೆಯ ನಂಜುಂಡನಂ ಕೋಡನಹಳ್ಳಿಯ ಕೊಂಡನಂ ಮೊದಲಾದ ಗಂಡುಗಲಿಗಳ ತಲೆಯಂ ಸಂಡಾಡಿ ನಂಜರಾಜನಂ ಕೈಸೆರೆವಿಡಿದು ಬಿಡಲೆಂದಿರ್ಪಿನಮೊರ್ವ ಮೊನೆಯೊಳಾತನಂ ಕುರುಪುಗಾಣದೆ ತಲೆಯನರಿದು ತಂದೀಯಲರಿದು ಮರುಗಿಯಾ ಪಂದಲೆಯಂ ಪೊಂದಳಿಗೆಯೊಳಿಟ್ಟು ಪೊಂಬಟ್ಟೆಯಂ ಪೊದಿಸಿಯಾತನೂರ್ಗೆ ಕಳುಪಿಯವನ ಧನಕನಕ ವಸ್ತುವಾಹನ ನಾಡುಂಬೀಡೆಲ್ಲಮಂ ಕೊಂಡಾತನ ಬಲಮಂ ಕೊಂಡು ನಾಡರಸುಗಳಂ ಬೆಸಗೆಯ್ದಿಕೊಂಡು ಮೂಗೂರ ಭಾಳಲೋಚನಂ ಉಮ್ಮತ್ತೂರ ಮಲ್ಲರಾಜನಂ ವಶಕ್ಕೆ ತಂದು ಪಟ್ಟಣಮಂ ಪೊಕ್ಕು ಮಹಿಸೂರ ಬಸ್ತಿ ಶಾಂತೀಶ್ವರಂಗೆ ಸ್ವಾಸ್ತಿಯಂ ಕೊಡಿಸಿ ತಾನಾಳ್ವ ನಾಡಿನ ಗ್ರಾಮಾನುಗ್ರಾಮದೊಳ್ ಜೈನಬ್ರಾಹ್ಮಣರಿಪ್ಪರವರಿಗಾ ಗ್ರಾಮದ ಶಾನುಭೋಗತನ ಪೌರೋಹಿತ್ಯ ಮೊದಲಾದ ಉಪಾಧ್ಯಾಯ ತನವು ಪೂರ್ವಪದ್ಧತಿಯಿಂದವರ್ಗೆ ಸಲ್ವದರಿಂದ ಆಯಾಯ ಗ್ರಾಮದಿ ಶಾನುಭೋಗತನ ಪಂಚಾಂಗಶ್ರವಣಮಂ ಗ್ರಾಮದೊಳಿಪ್ಪ ಎಲ್ಲ ಒಕ್ಕಲ ಪೌರೋಹಿತ್ಯ ಮೊದಲಾದುದಂ ಜೈನಬ್ರಾಹ್ಮಣರಿಂದಲೆ ಮಾಡಿಸಿಕೊಂಡು ಬಪ್ಪುದೆಂದು ನಿರೂಪಮಂ ಬರೆಯಿಸಿಕೊಟ್ಟು ಪಟ್ಟಣಮಂ ಪೊಕ್ಕು ರಾಜ್ಯಮಂ ಪಾಲಿಸಿ ಸುಖಮಿರ್ದು ಅಂತ್ಯದೊಳನುಜರಂ ಕರೆದು ಎಲೆ ಬೆಟ್ಟದಯ್ಯ ದೇವರಾಜರಿರಾ ಪಟ್ಟಣದೊಳ್ ನೀಂ ನಿಲ್ವುದೆಂದೊಡವರಲೊಲ್ಲದಿಪ್ಪುದುಂ ಚೆನ್ನರಾಜನೆಂಬ ಕಿರಿಯಾತಂ ನಿರ್ವಹಿಸಲಾರನೆಂದು ತನ್ನಣುಗನಪ್ಪ ನರಸರಾಜನಣುಗಂ ತನ್ನ ಮೊಮ್ಮಗನಾದ ಚಾಮರಾಜಂಗೆ ರಾಜ್ಯಾಭಿಷೇಕಂಗೆಯ್ದು ತನ್ನ ಕುವರಂಗೆ ಪಡುವಣ ಡಣಾಯಕ ದೇವನಕೋಟೆಯಂ ಬೆಟ್ಟದ ಚಾಮರಾಜರಸನ ಕುವರಗೆ ರಂಗಸಮುದ್ರ ನಳೂರ್ವಿ ಜಯಾಪುರಮಂ ದೇವರಾಜ ರಸನ ಕುವರರ್ಗೆ ಅರಕೆರೆ ಎಲೆಯೂರು ಮಂಗಲಮಂ ಕೊಟ್ಟು ಅವರೊಳ್ ದೇವರಾಜನ ಕಿರಿಯ ಕುವರಂ ಮರಿದೇವರಾಜನಂ ಕಾರುಗೆಹಳ್ಳಿಯೊಳಿರಿಸಿರ್ದುಂ ಉಳಿದರಿಬ್ಬರುಮನೆನ್ನ ಕಂಡಂತೆ ಕಾಣ್ಪುದೆಂದು ಮೊಮ್ಮಗಂಗೆ ಬೆಸಸಿ ತಾ ಮೂವರು ಭಾಗವತರಂ ಪೊರ್ದಿರಲಾ ರಾಜನೃಪಂ ಪರಮಾಯುಷ್ಯಮಾಗಿ ಎಂಬತ್ತು ವರುಷಂ ಕಳಿಯೆ ನಳಸಂವತ್ಸರದ ಮಾರ್ಗಶಿರ ಶು ೧೦ ಸೋಮವಾರದಲ್ಲು ಸಗ್ಗದರಸಾದಂ.

ಇತ್ತಲ್‌ಚಾಮರಾಜಂಗೆ ದೇವರಾಜ ಚಾಮರಾಜರೀರ್ವರ್ ತಮ್ಮಣುಗರಂ ತಮ್ಮ ಪೌತ್ರಂಗಪ್ಪೈಸಿ ಪುಣ್ಯಕ್ಷೇತ್ರದ ತೀರ್ಥಯಾತ್ರೆಗೈದಿದರ್.ಇತ್ತಲ್‌ಪಟ್ಟಣದೊಳ್ ಚಾಮರಾಜನೆಳೆವರೆಯದೊಳೆ ತ್ರಿವಿಕ್ರಮನಂತೆ ಶೌರ್ಯ ವೀರ್ಯ ಪರಾಕ್ರಮದಿಂ ದಿಗ್ವಿಜಯಂಗೆಯ್ಯಲ್‌ದಳವಾಯೊಡನೆ ಕಳುಪಿ ಮದ್ದೂರ ವೀರಣ್ಣನ ಗರ್ವಮಂ ಮುರಿದು ಜಗದೇವರಾಯನ ಮಗಳಂ ಭೋಗಸ್ತ್ರೀಯಂ ಮಾಡಲೆಂದು ಕೇಳಿಸಿ ಅದೆ ನೆವದಿಂದಾತನಂ ಕಡೆಗಾಣಿಸಿ ಭೈರನಾಯಕ ಪುವ್ವಲನಾಯಕ ಹನುಮಪ್ಪನಾಯಕ ಕೃಷ್ಣನಾಯಕ ಮುಂತಾದವರಂ ಜಯಿಸಿ ಚನ್ನಪಟ್ಟಣಮಂ ಕೊಂಡು ಅವರವರಾಯುಧಂಗಳಂ ತಗೆದುಕೊಂಡು ಬಂದು ಮಹಿಸೂರೊಳು ಅಲಗಿನ ಚಾವಡಿಯಂ ಮಾಡಿಸಿ ಮೂಡಲ್‌ಕಲಕಾಡು ಮಳವಲ್ಲಿಯಂ ಮುತ್ತಿ ಬೇಲಿಯಂ ಬಲಿದು ತಳಿಯನೊತ್ತರಿಸಿಯವಂಗೆ ಸಹಾಯಿಗನಾಗಿ ಬಂದ ಜಗದೇವರಾಯನ ಪಡೆಯನೋಡಿಸಿಯೂರೂರ್ಗೆ ಕಾವಲ್‌ನಂಬುಗೆಯಿತ್ತು ಬೆಸಂಗೆಯ್ದೊಡನೆ ತಳಕಾಡಂ ತನ್ನದೆನಿಸಿ ಅಲ್ಲಿಂದಾ ತೆಂಕಲ್‌ಕಣಮೆಯ ಬೆಟ್ಟಮನಿಳಿದು ಗಟ್ಟಿ ಮದನಾರಿಯನಟ್ಟಿ ಪೊಂಗಳೊಡನೆ ಚಂಗೊಡೆಂಬಾನೆಯನಂಗೀಕರಿಸಿ ಬಂದು ಪಡುವಲ್‌ಕಳಲೆಯ ನಾಡ ಪಿರಿಯಪಟ್ಟಣದ ದೊರೆಯನರೆಯಟ್ಟಿಯವಂಗೆ ನೆರವಾಗಿ ಬಂದ ಕೆಳದಿಯ ಸಿಂಗರಾಯನಂ ಭಂಗಿಸಿ ಬೋಳಮಲ್ಲನೆಂಬಾನೆಯೊಡನೆ ಪಾವುಡಂಗೊಂಡು ಬಡಗಲ್‌ನರಸಿಂಗಪುರದ ಅರಸನಂ ಧುರದೊಳ್ ಪರಿಭವಿಸಿಯವನಿತ್ತ ಕನಕಭೂಷಣದೊಡನೆ ಕನಕವಸಂತನೆಂಬಾನೆಯಂ ಸ್ವೀಕರಿಸಿ ಬೇಲೂರ ದಳಮಂ ಸೊಳೆಯನವಳ್ಳಿಯ ಬಳಿಯೊಳಂ ಅರಕೆರೆಯ ಸನಿಹದೊಳಂ ಎಲೆಯೂರ ಪೊಲದೊಳೊಮ್ಮೊಮ್ಮೆ ಕೊಳುಗುಳದೊಳೊಕ್ಕಲಿಕ್ಕಿ ಮಿಕ್ಕರ ಸೊಕ್ಕನಡಂಗಿಸಿ ಕೊಳತೂರಂ ಮುತ್ತಿ ಲಗ್ಗೆಯೇರಿ ಕಡಿದೊಟ್ಟಿದ ಪಂದಲೆಯಂ ಮೂನೆಲೆ ಜಗತಿಯೊಳ್ ಅಡ್ಡಗಟ್ಟಿ ಕೆಡಪಿದಾನೆಗಳನಿತು ಗೋಕುಲಗಳ ಕಂಭ ಬೋದಿಗೆ ನಿಡುಗೋವಿ ಸರಗೋವಿ ಕೈಸೆರೆ ಸಿಕ್ಕಿದ ಹದಿನಾರು ಸಾಸಿರ ಕಾಲಾಳ್ಗಳುಮಂ ಅನೇಕ ಆಯುಧಂಗಳುಮಂ ಕೊಂಡು ಬಳಿಕ್ಕೆ ಪೊಸಕೋಂಟೆಯಂ ಮುತ್ತಿ ಉಬ್ಬಸಂಗೈಸಲಲ್ಲಿಯ ದೊರೆಗೆ ನೆರವಾಗಿ ಬಂದ ಜಗದೇವರಾಯನ ಒಡಹುಟ್ಟಿದನಾದಂಕುಶರಾಯನನರೆಯಟ್ಟಿ ಭೋಜರಾಜ ಬೊಕ್ಕಳಿಕವೆಸರೆರಡಾನೆಯಂ ಕಳಿಪಿ ಪೊಸಕೋಂಟೆಯಂ ಬಸಂಗೈದು ಕೆಲವು ದಿನದಿಂ ಮೇಲೆ ಜಗದೇವರಾಯನ ಚನ್ನಪಟ್ಟಣ ನಾಗಮಂಗಲಮೆಂಬ ತಾಯಗೋಂಟೆಗಳಂ ಕೊಂಡುಮದಕ್ಕೆ ಸಲ್ವ ಬೆಳ್ಳೂರಂ ಜಳ್ಳುಮಾಡಿ ಎಡಬಲದ ರಾಯರಾಯುವಂ ತೀರ್ಚಿ ಮೇರೆಯರಿಯದೆ ಉಬ್ಬಿಕೊಬ್ಬಿದ ಚಿನ್ನನಾಯಕನಹಳ್ಳಿಯ ದಳವಾಯಾ ಗುರಿವನಾಯಕನನರಿದು ಕೆಡಪಿ ಬಲಮಂ ನೆರೆಯಟ್ಟಿ ವಸ್ತ್ರಭೂಷಣಂಗಳೊಡನೆ ರಾಮಲಿಂಗನೆಂಬಾನೆಯಂ ಕೊಂಡು ಮತ್ತಂ ಮಿತ್ರಭಾವದೊಳ್ ಪತ್ತಿ ಇಕ್ಕೇರಿ ಬಾಣಾವರ ಬಸವಾಪಟ್ಟಣಂಗಳ್ ಮೊದಲಾದ ಪೊಳಲಾಣ್ಮರೆಲ್ಲರಂ ಕನ್ನಡ ನಾಡುಮಂ ಬಸಕ್ಕೆ ತಂದು ಎಲ್ಲಾ ದೇಗುಲಗಳಂ ಪೊರೆಯುತ್ತಂ ಪೊಸತಂ ಮಾಡಿಸುತ್ತಂ ದಾನ ಧರ್ಮ ಪರೋಪಕಾರದಿಂ ರಾಜ್ಯಮಂ ಪಾಲಿಸುತ್ತಂ ಗರುಡಧ್ವಜ ಹನುಮಧ್ವಜ ಶಂಖ ಚಕ್ರ ಮಕರ ಟೆಕ್ಕೆ ಎಂಬೀ ಬಿರುದುಗಳನಾಂತು ಮಹಾನವಮಿ ಗಾಂಧರ್ವ ರಾಗಮಂ ಪ್ರಕಟಿಸಿ ಜೈನಪಂಡಿರೈವರ್ಗೆ ಗ್ರಾಮಾಂತರದೊಳ್ ಹೊಲ ಗದ್ದೆ ಮೊದಲಾದುಂಬಳಿಯಂ ಕೊಟ್ಟು ದೇವರಾಜಂ ಮೊದಲಾದ ಕುಮಾರರಂ ಪಡೆದು ಪದಿನೆಂಟು ವರುಷಂ ರಾಜ್ಯಶ್ರೀಯನನುಭವಿಸಿ ಶ್ರೀಮುಖಸಂವತ್ಸರದ ಮಾರ್ಗಶಿರ ಶುದ್ಧ ೧೧ ಭಾನುವಾರ ಸಗ್ಗದರಸಾದಂ.

ಇತ್ತ ಶ್ರೀಮುಖಸಂವತ್ಸರದ ಮಾರ್ಗಶಿರ ಶುದ್ಧ ೧೨ ಚಂದ್ರವಾರ ರಾಜರಸನ ಕುಮಾರನಾದಿಮ್ಮಡಿ ರಾಜರಸಗೆ ಪಟ್ಟಮಾದೊಡಾತನಳವುಂ ಸಾಹಸಮನನ್ಯೆಯುಂ ನಲ್ಮೆಯುಂ ಕೊಂಡಾಡುವಿನಂ ತನ್ನ ಪೆಸರನ್ವರ್ಥಗೆಯ್ಸಿ ಎಣ್ದೆಸೆಯಂ ಜಯಿಸಿ ಪಲಂಬರ್ ದೊರೆಗಳಿತ್ತ ಧನ ಕನಕ ವಸ್ತು ವಾಹನಂಗಳಂ ಕೊಂಡು ಪೊರ್ದಿದರಂ ಪೊರೆದು ತನ್ನ ತಂದೆ ಗಿಮ್ಮಡಿಯೆನಿಸಿ ಅರಕಲಗೂಡ ಕೃಷ್ಣಪ್ಪನಾಯಕನಂ ಜಯಿಸಿ ಪದಿನೆಂಟು ತಿಂಗಳು ರಾಜ್ಯಮನಾಳಿ ಯುವಸಂವತ್ಸರದ ಜ್ಯೇಷ್ಠ ಶುದ್ಧ ೧೫ ಯಲ್ಲು ದಳವಾಯಿ ವಿಕ್ರಮ ರಾಜಂ ವಿಷಮನಿಕ್ಕಿ ಕಾಲಂಗಂಡೊಡೆ ಬಳಿಕ ಬೆಟ್ಟದ ಚಾಮರಾಜರಸನ ಕುಮಾರಂ ವೈರಿರಾಜಗಜಕಂಠೀರವಂ ಕಂಠೀರವ ನರಸರಾಜನು ಯುವಸಂವತ್ಸರ ಜ್ಯೇಷ್ಠ ಬ ೧ ಶುಕ್ರವಾರ ರಾಜ್ಯಾಭಿಷೇಕಮನಾಂತು ರಾಜ್ಯದೊಳ್ ನಿಂದು ತನ್ನ ಚಿಕ್ಕಯ್ಯಂಗೆ ವಿಷಮನಿಕ್ಕಿದ ವಿಕ್ರಮನಂ ಕೊಲ್ಲಿಸಿದ. ಮತ್ತೆ ಬೆಟ್ಟದಪುರ ಹಂಪಾಪುರ ಪಿರಿಯಾಪಟ್ಟಣ ಹೊಸೂರು ಮುಂತಾಗಿ ಕಟ್ಟಿ ಕೆಂಗೆ ಹನುಮಪ್ಪನಾಯಕನಂ ಇಕ್ಕೇರಿ ವೀರಭದ್ರ ನಾಯಕನಂ ಭೇದದಿಂ ಗೆಲ್ಲು ವಿಜಯಾಪುರದ ಸುಲ್ತಾನ ಮಹಮದ ಪಾದಶಾಯನಂ ಕೊಂದವನ ಸೇನಾಪತಿ ರಣದುಲ್ಲಾಖಾನನೆಂಬಂ ನಾಲ್ವತ್ತು ಸಾಸಿರ ಕುದುರೆ ನಾಲ್ವತ್ತಾನೆ ಲಕ್ಕೆ ಪಾಯ್ದಳಂ ಬೆರಸೊಂದೆ ಸೂಳೊಳಿಕ್ಕೇರಿಯನೊಕ್ಕಲಿಕ್ಕಿದೊಡಾ ತುರುಕರ ಪಡೆ ಕೊಬ್ಬುಬ್ಬಿ ಕನ್ನಡನಾಡೊಳ್ ತನ್ನ ಪಡೆಗಿದಿರಿಲ್ಲೆಂದು ನಡೆದುಬಂದು ಸೀರೆಯದ ದೊರೆಯಂ ಸೆರೆವಿಡಿದು ಕುರುಗೆರೆಯವನಂ ತೊತ್ತಳದುಳಿದು ಬೆಂಗಳೂರವನಂ ಭಂಗಪಡಿಸಿ ಬರುತ್ತಿಪ್ಪಿನಂ ಕೆಂಗೆಯ ಹನುಮನಾಯಕಂ ತಕ್ಕುದಲ್ಲೆಂದೊಡಂಬಡದೆ ಕಡುಪಿಂದಟ್ಟಿ ಬಂದು ಪಟ್ಟಣಮಂ ಬಳಸಿ ವೇಡೈಸಿ ಕಟ್ಟಳವಿಂದಿಟ್ಟಡಿಯಂ ಪೆರದೆಗೆಯ ಇಟ್ಟು ಕೆಡಪಿದ ಪೆಣದೊಟ್ಟುಗಳಂ ಪೂಳ್ದು ಮೆಟ್ಟಿ ಮಟ್ಟಮಧ್ಯಾಹ್ನದೊಳ್ ಹತ್ತಿಬಪ್ಪ ಕಟ್ಟಾಳ್ದಳವಿಟ್ಟಿದಟ್ಟೆಯಂ ಕೆಡಪಿ ಕಟ್ಟುತನದೊಳಿಟ್ಟಿರಿಸಿ ಕುಟ್ಟಿಕೆಡಪಿದೊಡವಂ ಕೆಟ್ಟುಮುರಿದು ನಿಟ್ಟೋಟದಿಂದೋಡಿ ಬಿಟ್ಟಬಾಯಂ ಕೆಂಗೆಯ ಹನುಮನ ಬಸಿರೊಳ್ದಲೆಯಿಟ್ಟು ನುಡಿದನೆಲೆ ನಾಯಕ ನಿನೆಂದ ನುಡಿ ನಿಜಮಾದುದು ನಾಂ ವಿಜಯಾಪುರಮಂ ಪೊರಮಟ್ಟಂದು ಮೊದಲಿಂದುವರೆಗೆ ತಾಯಿಪೊಟ್ಟೆಯಿಂದ ಪುಟ್ಟಿದಂದು ಮೊದಲಿಂದುವರೆಗಂ ಈ ಪರಿಯ ವೀರನಂ ಕಂಡುಕೇಳಿದುದುಮಿಲ್ಲಕಟಾ ಮುನ್ನೀ ತೆರದ ಬಲ್ಲಿದನೆಂದರಿಯದೆ ಬಲಮೆಲ್ಲಮಂ ಬಲಿಗೊಟ್ಟು ಪಿಂತನೋಜೆಯಂ ಕೀಳ್ಪಡಿಸಿದೆನಿನ್ನೆನ್ನ ಕಂಡವರ್ ಮೇಲ್ವಾಯದೆ ಬಿಡರೆನ್ನ ಶೌರ್ಯಂಗುಂದಿತು ತುಳಿಲಾಳ್ಗಳೊಳೀರಾರು ಸಾವಿರ ಮಡಿದರ್. ಉಳಿದವರ್ ಕಂಗೆಟ್ಟು ಕಟ್ಟಳಿದು ಮೂಗುಬ್ಬಸದಿಂ ಬಿಟ್ಟು ಪೋಪಡಂ ಬಟ್ಟೆಯಿಲ್ಲದರಿಂದೀ ಪಟ್ಟಣದವನ ಕಡೆ ಗಡಿವರೆಗಮೆಮ್ಮಂ ನಾಡವರ್ ಕಾದದಂತೆ ರಾಯಸಮನೀಯಲಾಂ ಪೋಪೆನೆಂದನು ವೇಳ್ವುದುಮಂತೆಗೆಯ್ಯಲ್‌ಕಪ್ಪಿನಿಂದೆದ್ದ ಕಾಡಾನೆಯಂತೆ ನಿಲ್ಲದಲ್ಲಿ ನಿಲ್ಲದೆ ತಿರಿಗಿ ನೋಡದೆ ತನ್ನೂರ್ಗೆ ನಡೆದಂ.

ಇತ್ತಲ್‌ರಣಕಂಠೀರವ ಮೂಡಲ್‌ನಡೆದು ಮುನ್ನಾ ವಿಜಯಾಪುರದ ಸೇನಾನಿಯೆನಿಸಿದ ಖಾನಖಾನನ ಸೇನೆಯನೆಬ್ಬಟ್ಟಿ ರಾಯಗೋಂಟೆ ರನ್ನಗಿರಿ ರಾಮಗಿರಿ ವೀರಭದ್ರದುರ್ಗ ಕೆಂಗೇರಿ ಪೆನ್ನಾಗರುಗಳಂ ಕಟ್ಟಿಕೊಂಡು ತೆಂಕಲ್‌ಮಧುರೆಯ ವೀರಪ್ಪನಾಯಕ ತಿರುಮಲನಾಯಕನಂ ಜಯಿಸಿ ತೊರೆಯಸಾಂಬಳ್ಳಿ ಸತ್ಯಮಂಗಳ ಡಣಾಯಕನಕೋಟೆಗಳಂ ಕೊಂಡು ಕೊಂಗರಂ ಭಂಗಪಡಿಸಿ ಕೆಳದಿಯವರಂ ಕಳೆಗುಂದಿಸಿ ತೆಲುಗರ ಬಲವಂ ಮುರಿದು ವೀರಪ್ಪನಾಯಕನಂ ರತ್ನಗಿರಿಯೊಳಿರಿಸಿ ಶ್ರೀರಂಗರಾಯನ ಕಾರ್ಪಣ್ಯವ ಬಿಡಿಸಿ ಮಾಗಡಿಯಂ ಮುತ್ತಿ ತನ್ನ ಶರಣ್ಪೊಕ್ಕೆ ಚಿಕ್ಕ ಕೆಂಪೇಗೌಡಂಗಭಯಗೊಟ್ಟು ಯಲವಂಕನಾಡ ಮಾಗಡಿಯಂ ಕೊಟ್ಟು ಮನ್ನಿಸಿ ಕಲ್ಲೂರು ಕಡಬ ತುರುಕೆರೆ ಮಾಯಿಸಮುದ್ರಮಂ ಕಟ್ಟಿಕೊಂಡು ಪಡುವಲು ಕಳಲೆ ಪಿರಿಪಟ್ಟಣಮಂ ಕೊಂಡಾ ಮಲ್ಲರಾಜನಂ ಸೆರೆವಿಡಿದು ಬಡಗಲ್‌ಮಲ್ಲುಕನ ದಳಮಂ ಗೆದ್ದು ತುರುಗೆರೆ ಕಡಬ ಕಲ್ಲೂರು ಹೆಬ್ಬೂರು ಮೊದಲಾದವಂ ಕೊಂಡು ಬಂದು ಹಳೆಬೀಡರಸುಗಳ ಮಕ್ಕಳ್ ಕುಸುಮಾಜಮ್ಮಣ್ಣಿ ಕಮಲಾಜಮ್ಮಣ್ಣಿ ಎಂಬೀರ್ವರರಸಿಯರಾಗಿರೆ ದೊಡ್ಡಿಯೆಂಬ ಭಂಗಾರದವರಂ ಕೂಡಿ ಸುಖಮಿರ್ದು ಸಂತಾನಂ ಇಲ್ಲದುದರಿಂ ಭಂಗಾರದದೊಡ್ಡಿ ಹೆಸರಿಂ ಪಟ್ಟಣದೊಳಗಣ್ಗೆ ಕಾಲ್ವೆಯಂ ಮಾಡಿಸಿ ಗೋಮಟಾಪುರದ ಬಸ್ತಿದೇವಸ್ಥಾನಕ್ಕೆ ಮಾನ್ಯಮಂ ಕೊಟ್ಟು ಬೊಮ್ಮರಸಪಂಡಿತ ಶಾಂತಪಂಡಿತ ಪದ್ಮಪಂಡಿತ ರಾಜಾಪಂಡಿತರ್ ಮೊದಲಾದವರ್ಗೆ ಉಂಬಳಿ ಸಂಬಳಮಂ ಕೊಟ್ಟು ಪಿರಿಯಾಪಟ್ಟಣದ ಭುವನೇಶ್ವರಿ ಅರಮನೆಯೊಳಿರ್ದ ಸರ್ವಾಭರಣಮಂ ಸಂಗ್ರಹಿಸಿ ಮಹಾಬಲಾಚಲದೊಳ್ ಶಿಲಾವೃಷಭನಂ ಮಾಡಿಸಿ ತನ್ನಂತೆ ಲೋಗರೆಲ್ಲರ್ ಬದುಕಲೆಂದು ಸುತ್ತಲ್‌ಬಳಸಿದೆತ್ತರದ ಶಿಲಾಮಯ ಕೈಶಾಲೆ ಗೋಪುರ ಮಂಡಪ ಪರಿವಾರ ದೇವಾಲಯಂಗಳ್ ಬೆರಸಿದ ದೇಗುಲಮಂ ತನ್ನರಮನೆಯ ಮುಂದೆ ದೇಗುಲಮಂ ಕಟ್ಟಿಸಿ ನೃಸಿಂಹನ ಪ್ರತಿಷ್ಠೆಗೈಸಿ ತನ್ನ ಬೊಕ್ಕಸದ ಮುತ್ತುರತ್ನಪಚ್ಚೆಗಳಿಂ ಸಮೆದ ಅನೇಕ ತೊಡವುಗಳಮ ಮಿಸುನಿಯ ತಟ್ಟೆ ಬಟ್ಟಲ್‌ಮೊದಲಾದುಪಕರಣಂಗಳಂ ಪಲತೆರದ ವಾಹನಂಗಳಂ ಮಾಡಿಸಿಕೊಟ್ಟು ನಿತ್ಯೋತ್ಸವ ನೈಮಿತ್ತಿಕೋತ್ಸವಮಂ ಮಾಡಿಸುತ್ತ ಕಂಠೀರವಸಮುದ್ರಮೆಂಬ ಕೆರೆ ಕಟ್ಟೆ ಕಾಲುವೆ ಮೊದಲಾದವಂ ನಿರ್ಮಿಸಿ ಟೆಂಕಸಾಲೆಯಂ ಮಾಡಿಸಿ ಕಂಠೀರವ ಪೆಸರ ಪಣವಂ ಪೆಟ್ಟಿಸಿ ನೂತನ ಪುರಾತನ ದೇಗುಲಂಗಳುಮಂ ಪ್ರಪಾಸತ್ರಾದಿಗಳಂ ಮಾಡಿಸಿದಂ. ಮುನ್ನಮೆ ತಿರಿಚಿನಾಪಳ್ಳಿಯ ಬ್ರಾಹ್ಮಣಂ ಬಂದು ಬಿರುದಿನ ಜಟ್ಟಿಯ ವೃತ್ತಾಂತಮಂ ಪೇಳೆ ಅಲ್ಲಿಗೆಯ್ದಿ ಆತನಂ ಪಟ್ಟಾಕತ್ತಿಯಿಂ ಕೊಂದು ರಾತ್ರಿಯೊಳೆ ಕಳಿದುಬಂದುದರಿಂ ಸಂಗಾತ ಬಂದ ಹೆಗ್ಗೊಡೆ ದೇವಂಗೆ ಉಂಬಳಿಕೊಟ್ಟದ್ದು ಹೆಗ್ಗಡದೇವನಕೋಟೆ. ಬಳಿಕ ಶ್ರೀರಂಗಪಟ್ಟಣಕ್ಕೆ ವಿಶೇಷವಾದ ಕೋಟೆಯಂ ನಿರ್ಮಿಸಿ ಆಯುಧವಸ್ತು ಸಾಮಾನುಗಳಂ ಇಟ್ಟನು. ಈ ಕಂಠೀರವ ನರಸರಾಜಂ ೨೫ ವರ್ಷ ರಾಜ್ಯಮಂ ಪ್ರತಿಪಾಲಿಸಿ ಶಾರ್ವರಿ ಸಂವತ್ಸರದ ಮಾರ್ಗಶಿರ ಶು ೧೧ಲ್ಲು ಸ್ವರ್ಗಸ್ತವಾದನು.

ಬಳಿಕ ಸಕಲ ಸಾಮಂತ ಚೂಡಾವತಂಸಪದ ರಾಜೀವ ರಾಜನೃಪನನುಜ ದೇವರಾಜಂಗೆ ನಾಲ್ವರ್ ಕುಮಾರ್ ಐರಾವತಂಗೆ ನಾಲ್ಕು ಕೊಂಬು ಪುಟ್ಟಿದಂತೆ ದೊಡ್ಡ ದೇವರಾಜನುಂ ಮರಿದೇವರಾಜನುಂ ಕೆಂಪದೇವರಾಜನುಂ ಚನ್ನರಾಜರೆಂದಾದರ್.ಅವರೊಳ್ ಹಿರಿಯ ದೇವರಾಜಂ ರೂಪಿನೊಳ್ ಕಾಮನಂತೆ ಶೌರ್ಯದೊಳ್ ಭೀಮನಂತೆ ಬೆಳೆದೆಳೆವರೆಯದೊಳ್ ಯಳವಂದೂರ ಚನ್ನರಾಜನೆಂಬ ಜೈನನಾಗಿರ್ದರಸಂ ಕೆಲದಿವಸದಿಂ ಜಂಗಮರುಪದೇಶದಿಂ ಶಿವಭಕ್ತನಾಗಿ ಆರಾಧ್ಯನ ಶಿಷ್ಯನಾಗಿರ್ದನಾತನ ಪುತ್ರಿಯಾದ ಸದ್ಗುಣಾಭರಣೆ ಅಮೃತಮ್ಮನೆಂಬಳರಸಿಯಾಗೆ ಈಶ್ವರಂಗೆ ಪಾರ್ವತಿ ಕೂಡಿದಂತೆ ಸುಖಮಿರೆ ಒಂದು ದಿನ ಆತನರಸಿಯು ಹರ್ಮ್ಯದೊಳಿರ್ದು ವೀಥಿಯೊಳ್ ಬಾಲಕ್ರೀಡೆಯಂ ಮಾಳ್ಪ ಮಕ್ಕಳಂ ಕಂಡು ಪುತ್ರಕುತೂಹಲಂ ತಿಣ್ಣಮಾಗೆ ಚಿಂತೆಯಿಂ ಸಂತಾಪಂದಳೆದೆಡಗಯ್ಯ ದಳದೊಳ್ ಮೊಗದಾವರೆಯಂ ಮುಚ್ಚಿ ನಿಟ್ಟುಸುರಿಂ ಕಣ್ಬನಿಗಳಂ ಕಪಾಳದಿಂ ಪರಿದು ದುಕೂಲಮಂ ನೆನೆಯಿಸೆ ವಾಚಾಲಾಪಮನುಳಿದೊರಗಿರ್ದ ಅರಸಿಯಲ್ಲಿಗರಸಂ ಬಂದು ಮೇಲ್ವಾಸಿನೊಳ್ ಕುಳ್ಳಿರದಿದಿರೆರ್ದು ಪತಿಯ ಪಾದಾಬ್ಜದೊಳ್ ಅಲಕಾಳಿಗಳ್ ನಲಿದಾಡು ವಿನಮೊರಗಿರ್ದರಸಿಯ ಮೊಗಮನೆತ್ತಿ ಮುದ್ದು ಬೆಸಗೊಳಲ್‌ಮೌನಮಂ ತಾಳ್ದಿರಲ್ಕೆ ಕೆಲದೊಳಿರ್ದ ಕೆಳದಿಯಿಂ ಪುತ್ರದೋಹಳಮನರಿದು ಸಂತೈಸಿ ಫಲಪ್ರಾಪ್ತಿಯಿರ್ದೊಡಪ್ಪುದೆಂದು ಕಾಲಮಂ ಕಳೆಯುತ್ತಮಿರೆ ಕೆಲವಾನುದಿವಸದಿಂ ಗರ್ಭಮಾಗಿ ನವಮಾಸಂ ನೆರೆದು ಪಾರ್ಥಿವ ಸಂವತ್ಸರದ ಆಶ್ವೀಜ ಶುದ್ಧ ೧೨ ಚಂದ್ರವಾರ ಉತ್ತರಾಭಾದ್ರ ಶತತಾರೆಯೊಳ್ ಪುತ್ರೋತ್ಪತ್ತಿಯಪ್ಪುದಾ ಕಾಲದೊಳ್ ಕನ್ನೆಯೊಳ್ ರವಿಯಂ ತೊಲೆಯೊಳ್ ಮಂಗಳ ಬುಧಕವಿಗಳುಂ ಮಿಥುನದೊಳ್ ಬೃಹಸ್ಪತಿಯುಂ ಮೇಷದೊಳ್ ಶನಿಯುಂ ಕರ್ಕಟಕ ಮಕರದೊಳ್ ರಾಹುಕೇತುಗಳ್ ನಿಂತ ಸಮಯದೊಳ್ ಜೋಯಿಸರುಗಳ್ ಜಾತಕಮಂ ನೋಡಿ ಮೂವತ್ತು ವರ್ಷದಿಂ ಮೇಲೆ ಪೃಥ್ವೀಪತಿಯಪ್ಪನೆಂದು ಪೇಳ್ದರ್.ಆ ಪುಟ್ಟಿದ ಶಿಶುವಿಂಗೆ ಜಾತನಾಮಕರ್ಮಂಗಳಂ ಮಾಡಿಸಿ ಚಿಕ್ಕದೇವರಾಜನೆಂದು ಪೆಸರಿಟ್ಟು ಸುಖಮಿರಲ್‌.

ಅತ್ತಲಳಕಿಯ ಸಿಂಗರಾರ್ಯಂಗೆ ಪುತ್ರೋತ್ಪತ್ತಿಯಾಗೆ ತಿರುಮಲಾರ್ಯನೆಂದು ಪೆಸರಿಟ್ಟು ಸಲಹುತ್ತಿರೆ ಈರ್ವರುಂ ಬೆಳೆದು ನಿಷ್ಕ್ರಮಣ ಬಹಿರ್ಯಾನಾನ್ನಪ್ರಾಶನ ಚೌಲಾಕ್ಷರಾಭ್ಯಾಸ ಪುಸ್ತಕಗ್ರಹಣ ಉಪನಯನಾದಿ ಕರ್ಮಂಗಳಂ ಮಾಡಿದಷ್ಟರೊಳೆ ಯಳವಂದೂರಮೃತಾಂಬಿಕ ತೌರುಮನೆಗೆ ಗುರುವಾದ ಆರಾಧ್ಯಪುತ್ರ ಷಡಕ್ಷರಿಯುಂ ತತ್ಪುರದ ಜೈನಬ್ರಾಹ್ಮಣನಪ್ಪ ಬೊಮ್ಮರಸನ ಪುತ್ರಂ ವಿಶಾಲಾಕ್ಷಪಂಡಿತನುಂ ತಿರುಮಲಾರ್ಯನುಮಿಂತು ಮೂವರ್ ಸಹಾಧ್ಯಾಯಿಗಳಾಗೆ ನಿಘಂಟು ವ್ಯಾಕರಣ ಕಾವ್ಯ ನಾಟಕ ಛಂದೋಲಂಕಾರ ತರ್ಕ ಮೊದಲಾದ ವಿದ್ಯಮೆಲ್ಲಮಂ ಕಲ್ತು ಅರ್ಥಾವಗ್ರಹ ವ್ಯಂಜನಾವಗ್ರಹ ಈಹ ಅವಾಯಧಾರಣಾದಿಗಳಿಂ ಶೇಮುಷಿಗಳಾಗಿ ತಂತಮ್ಮ ಮತಪ್ರಮೇಯಂಗಳೊಳು ಶಿಖಾಮಣಿಗಳೆನಿಸಿ ಕವಿ ಗಮಕಿ ವಾದಿ ವಾಗ್ಮಿತ್ವದೊಳಗ್ರಗಣ್ಯರೆನಿಸಿದರವರೊಳ್ ಚಿಕ್ಕದೇವರಾಜರಸಂ ಕೋವಿದಶಿಖಾಮಣಿಯೆನಿಸಿದಂ, ತಿರುಮಲಾರ್ಯಂ ವಿದ್ಯಾವಿಶಾರದನೆನಿಸಿದಂ, ವಿಶಾಲಾಕ್ಷಂ ಸಾಹಿತ್ಯಭಾರತಿಯೆನಿಸಿದಂ, ಷಡಕ್ಷರಿಯು ಕವಿಶೇಖರನೆನಿಸಿದನಂತನಿಬರುಂ ತಂತಮ್ಮ ಮತವಾತ್ಸಲ್ಯವಿಡಿದು ಅರಸಂಗೆ ತಿರುಮಾಲಾರ್ಯನು ವೈಷ್ಣಮಮತ ಶಾಸ್ತ್ರಪುರಾಣಮೆ ಉತ್ಕ್ರಷ್ಟಮೆಂದು ಓದಿಸುವಂ, ಷಡಕ್ಷರಿಯು ವೀರಶೈವಸಿದ್ಧಾಂತಮೆ ಲೋಕಪಾವನಮೆಂದು ಮನಂಗೊಳಿಸುವಂ, ವಿಶಾಲಕ್ಷಂಜಿನಸಮಯ ಪುರಾಣಾಗಮಮಂ ತಿಳಿಯಿಸಿ ಆದಿಮತಮಿದು, ಇದರೊಳ್ ವಿರುದ್ಧದಿಂ ನಾನಾ ಮತಂಗಳ್ ಪುಟ್ಟಿದವೆಂದು ಪೇಳುತ್ತಿಪ್ಪುದು ಚಿಕ್ಕದೇವರಾಜಂ ಸೂಕ್ಷ್ಮಮತಿಯು ಸುವಿಚಾರಿಯುಮದುದರಿಂ ಎಲ್ಲಮಂ ಸಂಗ್ರಹಿಸಿಕೊಂಡು ಪ್ರಕರಣಂಗಳೊಳ್ ಪೂರ್ವಪಕ್ಷಸಿದ್ಧಾಂತಯುಕ್ತಿಗಳನಿತುಮಂ ಕ್ರೋಡೀಕರಿಸಿಯವರ ಒಟ್ಟುಗಳು ಕಳೆದು ಸಾರಂಗಳಂ ಸಂಗ್ರಹಿಸಿಯವರೊಳಿದು ಪ್ರಬಳಮಿದು ದುರ್ಬಳಮೆಂದು ತಾರತಮ್ಯವನಾರೈದು ಮೂಲಯುಕ್ತಿಗಳನೆ ಕುರುಪುಗೊಂಡಿರ್ಪ ಪಾಂಡಿತ್ಯಮುಂ ವಾದ ಕಥಾವಿನೋದದೊಳೆಸಗುವ ಉಪನ್ಯಾಸಮನಾಲಿಸೆಯವರೊಳ್ ಪ್ರಕೃತೋಪಯೋಗಮಿಲ್ಲದ ಯುಕ್ತಿಗಳಂ ಬೇರ್ಪಡಿಸಿ ಕಳೆದು ಉಪಯುಕ್ತಮಾದವರೊಳ್ ಸಾಧ್ಯಸಾಧನ ಸಮರ್ಥಂಗಳಲ್ಲದ ಯುಕ್ತಾಭ್ಯಾಸಂಗಳಂ ಕಡೆಗಾಣಿಸಿ ಮೂಲಯುಕ್ತಿಯಂ ಕುರುಪುಗೊಂಡು ಪ್ರತಿಯುಕ್ತಿಯಿಂ ಜಯಿಸುವ ಕೌಶಲ್ಯಮಂ ಸ್ವಪಕ್ಷನ್ಯಾಸಂಗೈವೆಡೆಯೊಳ್ ಪ್ರಕೃತ ಸಾಧ್ಯಸಾಧನದೊಳ್ ಪೆರ್ಚುಂ ಕುಂದುಮಿಲ್ಲದೆ ಸಮರ್ಥಮಾದ ಮೂಲಯುಕ್ತಿಗಳ್ ಪವಣ್ಗೆಯ್ದು ವಾದಿಯಂ ನಿರುತ್ತರಂಗೆಯ್ವ ನೈಪುಣ್ಯಮುಂ ಎಂದಿಂತು ಪಲವು ವಾದಚಾತುರ್ಯನಪ್ಪುದರಿಂದಿದು ಮುಖ್ಯಮಿದು ಗೌಣಮೆಂದು ತಿಳಿದಿರ್ಪಂ.

ಅದಲ್ಲದೆ ಮತ್ತಂ ಬಿಲ್ವಿದ್ಯೆ ಶಸ್ತ್ರ ವಾಹನಾರೋಹಣ ವೀಣಾವಿದ್ಯಂ ಮೊದಲಾದ ಕಲಾಶಾಸ್ತ್ರವಂ ಕಲ್ತು ನೀತಿಶಾಸ್ತ್ರ ಪರಾಕ್ರಮಸಂಪನ್ನನಾಗಿ ಪಲವು ದೇಶಂಗಳ ಭಾಷೆ ಲಿಪಿಗಳೊಳ್ ನಿಪುಣನಾಗಿಯು ಪ್ರಾಯಂದಾಳ್ವುದುಮಾ ಯವ್ವನದೊಳೆ ರಾಜ್ಯಮಂ ಕುಡಲೆಂದು ಬಗೆದುಮಳಕಿಯ ಸಿಂಗರಾರ್ಯನಂ ಬರಿಸಿ ಚಿಕ್ಕದೇವರಾಜರಸಂಗೆ ರಾಜ್ಯಮಂ ಕುಡಲೆಂಬುದುಂ ಈತನು ಎಳೆವರೆಯದವನಾದುದರಿಂ ಕೆಲದಿವಸಂ ಆತನ ಚಿಕ್ಕಯ್ಯನಪ್ಪ ದೇವರಾಜಂ ಧೈರ್ಯಸ್ಥೈರ್ಯಶೌರ್ಯಾದಿಗಳಿಂ ಪ್ರಸಿದ್ಧನಪ್ಪುದರಿಂ ಆತಂಗೆ ಕೊಡಲೆಂದು ಶಾರ್ವರಿಸಂವತ್ಸರದ ಮಾರ್ಗಶಿರ ಬಹುಳ ಪಾಡ್ಯದೊಳ್ ರತ್ನಸಿಂಹಾಸನಾರೂಢನಾಗಿ ದೊಡ್ಡದೇವರಾಜಂ ಅನುಜತನುಜರ್ವೆರಸಿ ತೀರ್ಥ ವಂದನಾನಿಮಿತ್ತಂ ಪೋಗಿ ತಿರಿಗಿಬಪ್ಪಿನ ಪಟ್ಟಣಮಂ ಪುಗಲೀಸದಿರೆ ರಾಜ್ಯಮಂ ಸಂಚರಿಸುತ್ತ ಎಳವಂದೂರಿಗೆ ಬಪ್ಪುದುಂ ಚಿಕ್ಕದೇವರಾಜರಸನ ಸೋದರಮಾವಂ ತನ್ನ ಸುತೆಯಪ್ಪ ದೇವಾಜಮ್ಮಣ್ಣಿಯಂ ಧಾರಾಪೂರ್ವಕಮಾಗಿ ಮದುವೆಯಂ ಮಾಡೆ ಅಲ್ಲಿಂ ಪೊರಮಟ್ಟು ಗುಂಡಲ ವಿಜಯಾಪುರಕ್ಕೆ ಬಂದೊಡೆ ಅಲ್ಲಿ ಹಂಗಳಮೆಂಬ ಗ್ರಾಮದೊಳ್ ಆಕೆಯೊಳ್ ಹದಿನೆಂಟು ತಿಂಗಳ್ವರಮಿರಲಲ್ಲಿ ಚಿಕ್ಕದೇವರಾಜರಸಂಗೆ ಪಿತೃವಿಯೋಗಮಾಗೆ ಆ ಕಳೇವರಮಂ ಪುಣ್ಯನದಿಯೆಂದು ಗುಂಡಲದ ಬಳಿಯೊಳ್ ಸಂಸ್ಕರಿಸಿ ಅಲ್ಲಿ ಪರವಾಸುದೇವನಾದಂ.

ಇತ್ತ ಪಟ್ಟಣದೋಳ್ ದೊಡ್ಡದೇವಾರಾಜನೆನಿಸಿದ ದೇವರಾಜಂ ರಾಜ್ಯಂಗೆಯ್ಯುತ್ತಮೊಮ್ಮೆ ಮಹಾನವಮಿಯೋಲಗದೊಳ್ ಎಣ್ದೆಸೆಯ ದೊರೆಗಳ್ ಕಪ್ಪ ಕಾಣಿಕೆಗಳನೊಪ್ಪಿಸುವಲ್ಲಿ ಇಕ್ಕೇರಿಯೊಳ್ ಶಿವಪ್ಪನಾಯಕಂ ತನ್ನಾಳ್ದನಪ್ಪ ವೀರಭದ್ರ ನಾಯಕನಂ ಪರಿಹರಿಸಿ ಆ ದೊರೆತನಮಂ ಕೊಂಡು ಕಾಣ್ಕೆ ಪಾಗುಡಮಂ ಕಳಿಪೆ ಕೋಪಿಸಿ ಬಂದ ಪಾಗುಡಮಂ ತಿರುಗಿ ಕಳುಹಿಸಿದೊಡವಂ ಬಿಗುರ್ತೆಯಿಂ ವಿದ್ಯಾನಗರಿಯ ತಲುಂಗರಾಯನ ಬಗೆ ಶ್ರೀರಂಗರಾಯನೆಂಬಂ ತನ್ನ ಬೇಲೂರು ಚಂದ್ರಗಿರಿ ಮುಂತಾದ ಕೋಟೆ ದುರ್ಗಂಗಳಂ ತುರುಕರ್ಗೆ ಸೂರೆಗೊಟ್ಟು ತಾನುಂ ತನ್ನ ಪರಿಜನಂಬೆರಸು ಖಂಚಿ ತಂಜಾವೂರ ಮಧುರೆಯಂ ಪೊದಿಧಯವರಿತ್ತ ಬಲದಿಂ ಬಂದಿರ್ದೊಡವನಂ ಕೂಡಿಕೊಂಡು ಮಹಿಸೂರ ಮೇಲೆತ್ತಲೆಂದಿರಲೀ ದೇವರಾಜಂ ಮದ್ದುಗಿರಿ ಹಾಸನ ಬೇಲೂರು ಕೊಂಡೈಗೂರು ತರಿಕೆರೆ ಪರಪನಹಳಿ ಚಿತ್ರಕಲ್‌ಮದ್ದಗಿರಿ ಮುಂತಾದ ಹಟ್ಟಿಕೊಟ್ಟಿದ ದೊರೆಗಲ ಬಲಮಂ ತನ್ನ ಸೇರಿದ ತುಳುವ ಕೊಂಕಣ ಕೊಡಗು ಮಳೆಯಾಳಂಗಳಂ ಕೊಂಡು ಶಿವಪ್ಪನಾಯಕನಂ ಗೆಲ್ದು ಪಟ್ಟಣಕ್ಕೆ ಬಂದನಾತಂಗೆ ಮೂವರರಸಿಯರ್ ಐವರ್ ಬಂಗಾರದವರಾಗಲ್‌ರಾಜ್ಯವಾಳುತ್ತಿರ್ದಂ.

ಇತ್ತ ಚಿಕ್ಕದೇವರಾಜಂ ಹಂಗಳಗ್ರಾಮದೊಳಿರಲವನ ಚಿಕ್ಕಯ್ಯರಂ ಕರೆಸಿ ಗ್ರಾಮಂಗಳಂ ಉಂಬಳಿಗೊಟ್ಟಿರಲಿತ್ತ ಚಿಕ್ಕದೇವರಾಜನ ಬಳಿಗೆ ವಿಶಾಲಕ್ಷಂ ಬಂದಿಷ್ಟಾಲಾಪಂಗೆಯ್ಯುತ್ತಂ ನಿನಗೆ ರಾಜ್ಯಮಪ್ಪುದೆಂದು ಪೇಳುತ್ತಿರ್ದೊಡಾ ದೊಡ್ಡದೇವರಾಜಂ ಪರಿಧಾವಿಸಂವತ್ಸರದ ಕಾರ್ತಿಕ ಶುದ್ಧ ೪ ಯಲ್ಲು ಸ್ವರ್ಗಸ್ಥನಾಗಲಾ ರಾತ್ರಿಯೊಳೆ ವಂದಿಗೆಯಂ ಪರಿಜನಮಂ ಕಳುಹಿಸಲಾ ರಾತ್ರಿಯೊಳೆ ಪಟ್ಟಣಮಂ ಪೊಕ್ಕು ಶಕವರುಷ ೧೬೯೩ ಸಾವಿರದ ಆರುನೂರ ತೊಂಬತ್ತುಮೂರನೆಯ ಪರೀಧಾವಿ ಸಂವತ್ಸರದ ಕಾರ್ತಿಕ ಶು ೫ ಆದಿವಾರ ಮೂಲಾನಕ್ಷತ್ರದ ಶುಭಮುಹೂರ್ತದೊಳ್ ರತ್ನಸಿಂಹಾಸನಾರೂಢನಾಗಿ ಪಟ್ಟಮಂ ತಾಳ್ದು ತನ್ನ ಚಿಕ್ಕಯ್ಯಂಗುತ್ತರಕ್ರಿಯೆಯಂ ಮಾಡಿಸಿ ವಿಶಾಲಾಕ್ಷ ಪಂಡಿತಂಗೆ ಮಂತ್ರಿಪದಮನಿತ್ತು ಈ ಫಾಲ್ಗುಣ ಶು ೫ ಅರಭ್ಯ ಸೀಮೆನಾಡುಗಳೆಲ್ಲಮಂ ಮಂತ್ರಾಲೋಚನೆಯಿಂ ರಾಜ್ಯದ ಪ್ರಜೆಗಳ್ಗೆಲ್ಲಂ ಸರಾಗಮಪ್ಪಂತು ಹೊಲಂಗಳೆಲ್ಲಕ್ಕಂ ಕಂಭಗಟ್ಟಲೆಯಂ ಮಾಡಿಸಿ ಉತ್ತಮ ಭೂಮಿ ಕಂಭ ೧೦೦ಕ್ಕೆ ಸಿದ್ಧಾಯ ಆರುಹಣ || ೧ ಮಧ್ಯಮ ಭೂಮಿ ನೂರಕ್ಕೆ ನಾಲ್ಕು ಹಣ ಜಘನ್ಯಭೂಮಿ ಎರಡು ಹಣಮೆಂದು ನಿಯಮಿಸಿ ಕಾಣಿಕೆ ಕಡ್ಡಾಯಮಂ ಬಿಡಿಸಿ ನಿರ್ಬಾಧಕಮಾಗಿ ಪ್ರಜೆಯಂ ಪಾಲಿಸುತ್ತ ಷಣ್ಮಂತಂಳಂ ಪರೀಕ್ಷಿಸಿರ್ದೊಂದು ದಿನಂ ಮತಾಂತರಂಗಳೆಲ್ಲಮಂ ವಿಚಾರಿಸಿ ಜಾತಿ ಕುಲಾಚಾರಂಗಳ ಭೇದಂಗಳೆಲ್ಲಮಂ ಮನಸಿನೊಳವಗಹನಕ್ಕೆ ತಂದುಕೊಂಡು ಅರಸುಗಳ ವಂಶಪರಂಪರೆಯಂ ಪೂರ್ವಿಕರಾದ ಬುದ್ಧಿವಂತರಂ ಬರಿಸಿಯರಸುಗಳ್ ನಾನಾ ವಿಧಮಾಗಿ ಕೂಡಿಪ್ಪುದಂ ವಿಚಾರಿಸಿ ಪದಿಮೂರು ಮಂತನಂ ಪದಿನೆಂಟು ಮಂತನಮಂ ವಿಂಗಡಿಸಿ ಮತ್ತಂ ನೂರೊಂದು ಮಂತನಮಂ ಬೇರಿರಿಸಿ ಮತ್ತಮರುವತ್ತು ಮಂತನದ ಶೆಟ್ಟಿಗಳಂ ರಾಜಸೇವೆಯೊಳಿರಿಸಿ ನಮ್ಮ ಯದುವಂಶಕ್ಕೆ ಚಂದ್ರವಂಶಮೆಂದೆಮತಾದುದೆನೆ ಪೂರ್ವಿಕರೆಂದರ್.

ಯದುವಂಶಂ ಹರಿವಂಶಜರ್ಗಪ್ಪುದು ಚಂದ್ರವಂಶಂ ಪಾಂಡವರ್ಗಪ್ಪುದುಮದರಿಂ ಯದುವಂಶಮೆ ಹರಿವಂಶಜರ್ಗೆ ಪರಂಪರೆಯಿಂ ಬಂದುದು. ಅಲ್ಲಿ ಚೋಳ ಬಲ್ಲಾಳ ಡಣಾಯಕರಾದರವರೊಳ್ ಕಡೆಯ ವೀರಬಲ್ಲಾಳಂ ವಿಷ್ಣುವರ್ಧನನೆಂದಾದನಾತನ ವಂಶಪರಂಪರೆಯಿಂ ಬಂದುದರಿಂ ಈ ವಂಶಂ ಹರಿವಂಶ ಆ ಯದುವಂಶಜರಪ್ಪರಾದೊಡಂ ಮುನ್ನಂ ಡಿಳ್ಳಿ ಪಾದಶಾಯಿ ವೀರಬಲ್ಲಾಳನ ಪ್ರತಾಪಮಂ ಕೇಳ್ದು ಚಂದ್ರವಂಶಜ ಕರ್ಣಾಟಕದೇಶಾಧೀಶ್ವರನೆಂದು ಶಾಸನಮಂ ಬರೆಯಿಸಿದನಂದಿಂದಾ ಸೋಮವಂಶಮೆಂಬರಲ್ಲದೆ ಚಂದ್ರವಂಶಜರಲ್ಲವೆಂದು ಪೇಳೆ ಕೆಲಂಬರೆಂದರ್ ಆ ಹರಿವಂಶಮಂ ಚಂದ್ರವಂಶಮೆನ್ನಬಹುದೆಂತೆಂದೊಡ

ಶ್ಲೋಕ || ಚಂದ್ರೇ ಸೂರ್ಯೇ ಯಮೇ ವಿಷ್ಣೌ ವಾಸವೇ ದರ್ದುರೇ ಹಯೇ
ಮೃಗೇಂದ್ರೇ ವಾಸರೇ ವಾಯೌ ದಶಸ್ವಪಿ ಹರಿಸ್ಮೃತಃ ||

ಹರಿಯೆಂಬುದು ಚಂದ್ರನಾಮವಾದುದರಿಂ ಪೇಳಬಹುದೆಂದರ್.ಮತ್ತಮಾ ಮೂರು ವಿಧಮಾಗಿ ಮಾಡಿದ ಕ್ಷತ್ರಿಯರ್ಗೆ ಗೋತ್ರಮಂ ಪ್ರಕಟಿಸಲೆಂದು ವಿಚಾರಿಸೆ

ವೃತ್ತ || ಶ್ರೀವತ್ಸಕಾಶ್ಯಪ ವಶಿಷ್ಠ ಪ್ರಶಸ್ತ
ಭಾರದ್ವಾಜೋಲ್ಲತ್ಪ್ರಚುರ ಗೌತಮ ಭಾರ್ಗವೌಚ
ಆತ್ರೇಯ ಕೌಂಡಿನ ಮಹತ್ಸಮಗಸ್ತ್ಯ
ವಿಶ್ವಾಮಿತ್ರಾಸ್ಸುಗೋತ್ರಾ ಬಹುಧಾ ಪ್ರಭವಂತಿ ಲೋಕೇ ||

ಎಂದು ಪೇಳಲಲ್ಲಿ ಯದುವಂಶದ ರಾಜನೃಪನ ವಂಶಪರಂಪರೆಗೆ ಆತ್ರೇಯ ಗೋತ್ರ ಆಶ್ವಲಾಯನಸೂತ್ರ ಋಕ್ಕಾಖೆಯೆಂದು ನಿರ್ಣಯಿಸಿ ಕನ್ಯಾಸ್ವೀಕಾರ ಮೊದಲಾದುದಂ ಹದಿಮೂರು ಹದಿನೆಂಟು ಮಂತನದೊಳೆಯಪ್ಪುದೆಂದು ನಿಯಮಿಸಿ ಜಾತಿಸಂಕರಮಾಗದಂತೆ ನಡೆಯಿಸುತ್ತಿರಲಲ್ಲಿ ಕೆಲಂಬರ್ ಹದಿಮೂರು ಮಂತನದವರೆ ಪಟ್ಟಕ್ಕೆ ಯೋಗ್ಯರುಳಿದರಯೋಗ್ಯಮೆನೆ ರಾಜನೆಂದನೀ ಕಾಲದೊಳ್ ಜಾತಿಕ್ಷತ್ರಿಯ ತೀರ್ಥಕ್ಷತ್ರಿಯರೆಂದಿತ್ತೆರದ ಕ್ಷತ್ರಿಯರೊಳ್ ನಾನಾ ವಿಧಮಾಗಿ ಸಜ್ಜಾತಿಯಿಲ್ಲದೆ ಸಂಕರಮಾಗಿಪ್ಪುದದರಿಂ ಯೋಗ್ಯಾಯೋಗ್ಯತೆ ಎಂಬುದದೆಂತಪ್ಪುದಲ್ಲದೆ ಭೂಪತಿಯ ಸ್ವಯಮೇವ ಮೃಗೇಂದ್ರತಾ ಎಂಬುದರಿಂದಾವ ಜಾತಿಯಾದೊಡಂ ಪೂರ್ವಪುಣ್ಯೋದಯದಿ ಶೌರ್ಯ ವೀರ್ಯ ಪರಾಕ್ರಮಮುಳ್ಳರಾಗಿ ರಾಜ್ಯದೊಳ್ ನಿಂದು ಅಧಿಪತಿಗಳಪ್ಪರ್.ಅದರಿಂದೀ ಕಾಲದೊಳ್ ತುರುಷ್ಕ ರಜಪುತ್ರ ಮಾರಾಟ ಆರೆ ತೆಲುಂಗ ಕುರುಂಬ ಕುಂಬಾರ ವೈತಾಳಿ ಕುಂಡಗೊಳಕ ಉಗ್ರಪಾಷಂಡರ್ ಮೊದಲಾಗಿ ಬ್ರಾಹ್ಮಣರಿಂ ತೊಡಗಿ ಆ ಚಾಂಡಾಲ ಮಾತಂಗಜಾತಿಗಳೊಳ್ ಪುಟ್ಟಿದರೆಲ್ಲಂ ಸಿಂಹಾಸನಕ್ಕಧಿಪರಾಗಿ ಕುಲಜರನೆರಗಿಸಿಕೊಳ್ಳುತ್ತ ರಾಜ್ಯಮನಾಳುವರೆಂದು ಪೇಳಿ ತಾನು ನಿಯಮಿಸಿದರಸುಗಳೆಲ್ಲರ್ಗಮಧಿಕಾರಮುದ್ಯೋಗಮುಂಬಳಿ ಸಂಬಳಂಗಳಂ ಮಾಡಿಸಿಕೊಟ್ಟು ಅರಿಕುಠಾದ ಪ್ರಭು ಚೆನ್ನರಾಜನ ಪುತ್ರ ಚಂದ್ರಶೇಖರನ ಮಕ್ಕಳು ಪಟ್ಟಣಕ್ಕೆ ಬಂದಿರ್ದೊಡವರ್ಗೆ ಅಧಿಕಾರಮಂ ಕೊಟ್ಟು ಮುನ್ನ ರಾಜಒಡೆಯರ ಸಂತತಿ ದೇವರಾಜವಂಶಕರು ಕಾರುಗೆಹಳ್ಳಿಯಿಂ ಪೋಗಿ ಹೊಸೂರು ಬಾಗಲೂರೊಳಿರ್ದ ಬೆಟ್ಟರಾಜನೆಂಬನಂ ಅರಿಕುಠಾರದೊಳಿರಿಸಿ ಉಂಬಳಿಗೊಟ್ಟು ತಾನು ತನ್ನ ಪಟ್ಟದರಸಿ ದೇವಾಜಮ್ಮಣ್ಣಿ ಮೊದಲಾದ ಹತ್ತು ಜನ ರಾಜಪುತ್ರಿಯರಂ ಮದುವೆನಿಂದ ಮತ್ತಂ ಪಾಳ್ಯಗಾರರ ಸುತೆಯರ ಶಿವಾಚಾರರ ಕುಮಾರಿಯರ್ ಬಣಜಗಿತ್ತಿಯರ್ ಸಹಿತಂ ಮೂವತ್ತು ಜನಂ ಭಂಗಾರಸ್ತ್ರೀಯರಾಗೆ ವಿಶಾಳಾಕ್ಷ ಪಂಡಿತನ ಮಂತ್ರಾಲೋಚನೆಯಿಂ ರಾಜ್ಯಂಗೆಯ್ಯುತ್ತಂ ತನ್ನ ಪಿತೃ ನಿಷಿದ್ಧಿಕಾ ಸ್ಥಾನಮಪ್ಪ ಗುಂಡಲ ಬಳಿಯೊಳ್ ಗೋಪುರ ಪ್ರಾಸಾದ ಶಿಖರಯುಕ್ತಮಾಗೆ ಪರವಾಸುದೇವಂಗೆ ಕೈಸಾಲೆವೆರಸಿದಾಲಯಂ ಮಾಡಿಸಿ ನಿತ್ಯ ನೈಮಿತ್ತಿಕ ರಥೋತ್ಸವಾದಿಗಳ್ಗೆ ಗ್ರಾಮ ಕ್ಷೇತ್ರಾದಿಗಳಂ ಕೊಟ್ಟು ತದಗ್ರದೊಳ್ ಸ್ಮಾರ್ತವೈಷ್ಣವರ್ಗೆ ಪ್ರಥಮ ಶತಕ ದ್ವೀತಿಯ ಶತಕಮೆಂದಿನ್ನೂರು ವೃತ್ತಿಯುಗ್ರಹಾರಮಂ ಮಾಡಿಸಿಕೊಟ್ಟು ಮತ್ತಂ ಮಂತ್ರಿಯಂ ಕರೆದು ನಿಮ್ಮ ಜೈನಬ್ರಾಹ್ಮಣರ್ಗೆ ನೂರು ವೃತ್ತಿಯಂ ಕೊಡುವೆನೆಲ್ಲರಂ ಕರೆಯಿಸುವುದೆಂದಪ್ಪಣೆಯಾಗಲಾ ಪಂಡಿತಂ ಕೆಲಂಬರ್ ಜೈನವಿಪ್ರರಂ ತನ್ನ ಗೃಹಕ್ಕಂ ಕರೆಯಿಸಿ ರಾಜದರ್ಶನಪರರಂ ಮಾಡುತ್ತಿಪ್ಪಿನ ಮತ ಮತಾಂತರಂಗಳ ತತ್ವಪ್ರಮೇಯಂಗಳೆಲ್ಲ ಮಂ ವಿಚಾರಿಸಿ ಜಿನಮತಂ ಮೊದಲು ಚೈನತತ್ವಂ ಪರಮಾರ್ಥಮೆಂದು ಜೈನಾಚಾರಂ ಪಾವನಮೆಂದು ತನ್ನರಮನೆಯವರ್ಗೆಲ್ಲಾ ನೀರಂ ಶೋಧಿಸಿ ತರುವಂತೆ ನಿಯಮಿಸೆ ಕೆಲವು ದೋಷವಸ್ತುಗಳಂ ಕೊಳ್ಳದೆ ಜೀವದಯಾಪರನಾಗಿ ಹಿಂದೆ ನೀಚರ್ ತಿನ್ನಲೋಸ್ಕರಮಾಗಿ ದೇವತಾಸಂಕಲ್ಪ ಮೊದಲಾದವೆಂದು ಕುರಿ ಮೊದಲಾದ ಪ್ರಾಣಿಗಳಂ ಲೆಕ್ಕಮಿಲ್ಲದೆಕೊಂದು ಹಿಂಸೆಯಂ ಮಾಡಿಸುತ್ತಿರ್ದವೆಲ್ಲಕ್ಕಂ ತೆಂಗಿನಕಾಯ್ಗಳಂ ನೇಮಿಸಿ ಜೀವದಯದೊಳ್ ತತ್ಪರನಾಗಿ ದಯಾಧರ್ಮದೊಳಿರ್ದನಂತಿರ್ಪುದುಮೊರ್ವ ಜಂಗಮ ಮಹಂತ ಕುಲದವಂ ವೇಷಧಾರಿಯಾಗಿ ಕೈಲಾಸದಯ್ಯನೆಂದು ಪಲವು ಮಹತ್ತಂ ಪೇಳುತ್ತ ಸಭೆಯೊಳ್ ಆಸ್ಫೋಟಿಸುತ್ತಿರಲ್ ಆತನಂ ಪರೀಕ್ಷಿಸಲು ವೈಕುಂಠದವನೆಂದು ಜಟ್ಟಿಯಂ ಬಿಟ್ಟೊಡವಂ ಮೊರೆಯಿಡೆ ಕೈಲಾಸದವರ್ ಮೈಕುಂಠದವರ್ ಬಲ್ಲರೆಂದಿರಲಾತಂ ತನ್ನ ನಿಜಪ್ರಪಂಚಂ ಪೇಳ್ದು ಪೋದಂ.

ಮತ್ತೊಮ್ಮೆ ಕವಿ ವೀರಲಕ್ಷ್ಮಿಯೆಂದೊರ್ವೆ ಮಾದಗಿತ್ತಿಯು ಅಟ್ಟಹಾಸದಿಂ ಬಂದು ತಾನು ಕೇಶವನ ಸೂಳೆ ರಾತ್ರಿಕಾಲದೊಳ್ ಗೋಪಾಲಂ ಬಂದು ಕ್ರೀಡಿಸುವ ಪ್ರಪಂಚಂ ಪೇಳುತ್ತಾ ತನಗೆ ಆಶನಮಿಲ್ಲ ರಾತ್ರಿವೇಳೆ ಕುಟುಕುದಂಬುಲದೊಳ್ ಮೂರು ಯಾಲಕ್ಕಿಕಾಳಂ ಪುರುಷೋತ್ತಮನೀವನೆಂದಿಪ್ಪುದುಂ ಆಕೆಯನಾಘ್ರಾಣವ ಮನದಿಂ ಪರೀಕ್ಷಿಸಿ ಕಳೆದು ಈ ಪ್ರಕಾರ ಉದರನಿಮಿತ್ತಂ ಬಹುವೇಷಧಾರಿಗಳಾಗಿ ಡಂಬಕದಿಂದಾಡಂಬರವೇಷಧಾರಿಗಳಾಗಿ ಬಪ್ಪರ ಮುಖಮಂ ನೋಡದೆ ಪಟ್ಟಣಮಂ ಪುಗದಂತೆ ನಿಯಮಿಸಿ ವಿಸ್ಮಯಂಗಳಂ ಗ್ರಹಿಸದೆ ಪಂಡಿತಂ ಪೇಳ್ದಂತೆ ಪಟ್ಟಣದೊಳ್ ಪುರಾಣ ಬಸದಿಯ ಸಮೀಪದೊಳೆ ವರ್ಧಮಾನತೀರ್ಥಕರ ಚೈತ್ಯಾಲಯಮಂ ಮಾಡಿಸಿ ರೀತಿ ಕಾಮಯ ಪುರುಷಪ್ರಮಾಣಿನ ಬಿಂಬಮಂ ಅಷ್ಟಮಹಾಪ್ರಾತಿಹಾರ್ಯಂಬೆರಸು ಪ್ರತಿಷ್ಠೆಯಂ ಮಾಡಿಸಿ ಶಿಲೆಯೊಳುಂ ಹಿತ್ತಾಳೆಯೊಳುಂ ಪ್ರತ್ಯೇಕ ಪ್ರತ್ಯೇಕ ಚತುರ್ವಿಂಶತಿ ಪ್ರತಿಮೆಯಂ ಮಾಡಿಸಿರಿಸಿ ಬೆಳ್ಗೊಳಕ್ಕೆ ಎರಡು ಮೂರು ವೇಳೆ ಮಸ್ತಕಾಭಿಷೇಕವಂ ಮಾಡಿಸಿ ಪ್ರಸಾದಫಲವಂ ತರಿಸಿಕೊಂಡು ಸುಖಮಿರ್ದನಾ ರಾಜನ ದಯಕ್ಕೆ ಪಾತ್ರನಾಗಿರ್ದ ಕಾಳಶೆಟ್ಟಿಯುಂ ಅರಸಿನನುಜ್ಞೆಯಿಂದಾ ಬೆಳ್ಗುಳದೊಳ್ ಶಿಲಾಮಯಮಪ್ಪ ನೂತನವಾದ ಮಠವನ್ನು ಪಟ್ಟಾಚಾರ್ಯಂಗೆ ಮಾಡಿಸಿಕೊಟ್ಟನು. ಬಳಿಕ ಡಿಳ್ಳಿಗೆ ಸಲ್ಲತಕ್ಕ ಪಗದಿಹಣ ಹತ್ತುಸಾವಿರ ವರಹವನ್ನು ಡಿಳ್ಳೀಸಮೀಪದಲ್ಲಿ ಕಳ್ಳರು ಅಪಹರಿಸಿಕೊಳ್ಳಲಾಗಿ ಅದಕ್ಕಾವುದು ಕಾಣದಿರ್ದು ಜವನಶೆಟ್ಟಿ ಮಗನು ಅಣ್ಣಯ್ಯಶೆಟ್ಟಿಯೆಂಬವನು ಅಪ್ಪಣೆಯಿಂ ಪೋಗಿ ರಶೀತಿ ತೆಗೆದುಕೊಂಡು ತನಗೆ ಲಾಭಮಾಗಿ ತಂದೊಪ್ಪಿಸೆ ಟೆಂಕಸಾಲೆ ಬದುಕಿಗೆ ಅಧ್ಯಕ್ಷನಂ ಮಾಡಿ ಆನೆಯಂ ಪಿಡಿಯಲ್ ಕಳಿಪುವುದಾನೆಗಳಂ ವಶಂ ಮಾಡಿ ತಂದೊಪ್ಪಿಸೆ ಅತ್ಯಂತ ಪ್ರೀತಿಯಂ ಮುಂದುಮಾಡಿಪ್ಪುದು ಕ್ಷುದ್ರ ಜನಂಗಳ್ ಅರಮನೆ ಹಣವಂ ತಿಂದನೆಂದು ಐವತ್ತು ಸಾವಿರ ವರಹಕ್ಕೆ ಪಟ್ಟಿಯಂ ಬರೆದು ಕೊಡೆ ಚಿಕ್ಕದೇವರಾಜಂ ನ್ಯಾಯದಿಂ ವಿಚಾರಿಸಲು ಒಂದು ಕಾಸೂ ಅವನ ಮೇಲೆ ರುಜು ಆಗದೆ ಇದ್ದಲ್ಲಿ ಅಷ್ಟರೊಳೆ ಶೆಟ್ಟಿಯು ತಾನು ಸಂಪಾದಿಸಿದ ಹಣವೆಲ್ಲಮಂ ಏಳು ಒಂಟೆ ಮೇಲೆ ಸಾಗಿಸಿಕೊಂಡು ಬಂದು ಅರಮನೆ ಮುಂದೆ ಇಳುಹಿದೊಡೆ ಅರಸನನ್ಯಾಯದ್ರವ್ಯಮಂ ಕೊಳ್ಳಲಾಗದೆಂದು ತಿರುಗಿಸಿದೊಡೆ ಆ ದ್ರವ್ಯಕ್ಕೆ ರಾಜಾಜ್ಞೆಯಿಂದಲೆ ಬೆಳ್ಗುಳದೊಳ್ ಕಲ್ಯಾಣಿಯಂ ಮಾಡಿಸಿ ಸಾವಿರ ವರಹದೊರಿಗು ಜನಂಗಳ ಮೇಗೊಳನ್ನು ಧರ್ಮಕ್ಕೆ ಬಿಟ್ಟು ಅನೇಕ ಧರ್ಮಮಂ ಮಾಡಿದನು, ಚಿಕ್ಕದೇವರಾಜ ಕಲ್ಯಾಣಿಯೆಂದು ಹೆಸರಾಯ್ತು.

ಮತ್ತೊಂದು ದಿನಂ ಕಂಚಿದೇಶದ ಬುದ್ಧಿಸಾಗರನೆಂಬ ಆರ್ಯನು ತರ್ಕದೊಳ್ ವದೀಭಸಿಂಹನೆನಿಸಿ ಮಹಾಮಂತ್ರವಾದಿಯಾಗಿ ದೇಶಮಂ ಸಂಚರಿಸುತ್ತ ಏಚಗನಹಳ್ಳಿಗೆ ಬಂದಿರೆ ಚಿಕ್ಕದೇವರಾಜಂ ಕೇಳ್ದು ತನ್ನ ಕುಮಾರರ್ ದೇವರಾಜಯ್ಯ ಕಂಠೀರವಯ್ಯರೆಂಬೀರ್ವರೊಳ್ ಪಿರಿಯವಂಗೆ ಗ್ರಹಚೇಷ್ಠೆಯಂ ಕ್ಷಯರೋಗಮಾಗಿಪ್ಪುದುಮದಂ ಬಿಡಿಸಲ್ ಬುದ್ಧಿಸಾಗರಣ್ಣಗಳಂ ವೈಭವದಿಂ ಪಟ್ಟಣದರಮನೆಯಂ ಪುಗಿಸೆ ರಾಜಕುಮಾರನ ದೇಹಸ್ಥಿತಿಯಂ ನಿರೀಕ್ಷಿಸಿ ಲಕ್ಷಣಂಗಳೊಳ್ ರತಿಕಾಮ ಬಲಿಕಾಮ ಹಂತುಕಾಮಗಳೆಂಬ ತ್ರಿವಿಧಮಪ್ಪವಲ್ಲಿ ಜನ್ಮಾಂತರವೈರಸಂಬಂಧದಿಂ ಪಿಡಿದು ಬಾಧಿಸುವವು, ದಿವ್ಯಾದಿವ್ಯ ಭೇದದಿಂ ಪುರುಷಗ್ರಹ ಸ್ತ್ರೀಗ್ರಹಗಳೆಂದು ದ್ವಿವಿಧಂಗಳಿಂ, ದೇವ ನಾಗ ಯಕ್ಷ ಗಂಧರ್ವ ಬ್ರಹ್ಮರಾಕ್ಷಸ ಭೂತ ವ್ಯಂತರಮೆಂದು ಸಪ್ತವಿಧ ಪುರುಷಗ್ರಹಂಗಳ್ , ಕಾಳಿ ಕಂಕಾಳಿ ಕರಾಳಿ ಕಾಳರಾಕ್ಷಸಿ ಜಂಘೆ ಪ್ರೇತಾಸಿನಿ ನೀಚಯಕ್ಷಿ ವೈತಾಳಿ ಕ್ಷೇತ್ರವಾಸಿನಿಯರೆಂಬ ನವವಿಧ ಸ್ತ್ರೀಗ್ರಹಂಗಳ ಲಕ್ಷಣಂಗಳಂ ನೋಡಿಯವಕ್ಕೆ ಯಂತ್ರ ಮಂತ್ರ ತಂತ್ರಾದಿಗಳಿಂ ನಿಗ್ರಹಿಸಲ್ ಹನ್ನೆರಡು ತೆರನಪ್ಪ ಪ್ರಯೋಗಮಂ ಮಾಳ್ಪುದಕ್ಕೆ ತಕ್ಕ ಸಾಮಗ್ರಿಯಂ ತರಿಸಿ ಕೆಲವಂ ಮಾಳ್ಪನ್ನೆಗಂ ತಾರ್ಕಿಕರ ಸೋಲ ಗೆಲವಂ ನೋಡಲ್ ಬುದ್ಧಿಸಾಗರನಂ ಕಳುಹಿಸಲಾ ಈರ್ವರಂ ಚಪ್ಪಟೆಗೆಯ್ಯೆ ಆ ಕಾರಣದಿಂ ಪಂಡಿತಂಗಂ ಬುದ್ಧಿಸಾಗರಂಗಮತ್ಯಂತ ಕಲಹಮಾಗೆ “ಕ್ರೋಧಂ ಸರ್ವಗುಣಂ ಹರೇತ್” ಎಂಬುದರಿಂ ಪಂಡಿತಂ ಬುದ್ಧಿಸಾಗರನಂ ಕಾವಲೊಳಿಡಲಾತಂ ಮಂತ್ರವಾದ ಸಾಮರ್ಥ್ಯದಿಂ ಫಲಪುಷ್ಪಾದಿಗಳನಾಕರ್ಷಣಮಂ ಮಾಡುತ್ತಿರ್ದು ಮಧ್ಯಾಹ್ನದೊಳೆ ತನ್ನ ಸಾಮಗ್ರಿ ಸಹಿತಮಾಗಿ ಪಟ್ಟಣಮಂ ಬಿಟ್ಟು ಶುಕ್ರವಾರಪೇಟೆ ಹೊಳೆಯೊಳಿನಿಸಿರ್ದು ಉತ್ತರ ದೇಶಕ್ಕೆ ಯಾತ್ರೆ ಪೋಗಿ ಸಂಗೀತಪ್ರಬಂಧಮಂ ಮನೋಯಿಚ್ಛೆಯಿಂ ಬರೆದು ಅರಸಿನ ಬಳಿಗೆ ಕಳುಹಿಸಿದಂ ಮತ್ತೊಂದು ದಿವಸಂ ಷಡಕ್ಷರಿಯು ಲೀಲಾವತಿ ಮೊದಲಾದ ವಸ್ತುಕ ಕಾವ್ಯಮಂ ಚೆನ್ನಾಗರಿವನಗಾಗಿ ರಾಜಶೇಕಮೆಂಬ ಪ್ರಬಂಧಮಂ ಮಾಡಿ ಅರಸಿಂಗೊಪ್ಪಿಸಿದಂ. ಇಂತು ಪಂಡಿತನುಂ ಷಡಕ್ಷರಿದೇನುಂ ತಿರುಮಲೆಯಯ್ಯಂಗಾರನುಂ ಅನ್ಯೋನ್ಯದಿಂ ಸ್ವಾಮಿಹಿತಕಾರ್ಯಕ್ಕನುಕೂಲಮಾಗಿರೆ ಚಿಕ್ಕದೇವರಾಜಂ ತಂಜಾವೂರ ಯಂಕೋಜಿಯಿಂದಾ ಮೂರು ಲಕ್ಷ ರೂಪಾಯಿಗೆ ಬೆಂಗಳೂರಂ ಕ್ರಯಕ್ಕೆ ಕಂಡು ತುಮಕೂರು ಹೊಸಕೋಟೆ ಹೊನ್ನವಳ್ಳಿ ಮೊದಲಾದ ಕೆಲವು ಸಂಸ್ಥಾನಗಳಂ ವಶಂ ಮಾಡಿ ಪ್ರಜೆಗಳು ಪರಿಪಾಲಿಸುತ್ತಿರೆ ರಾಜ್ಯದೊಳ್ ಮಠ ಮನೆ ಸ್ವಾಸ್ತಿಗಳನೇಕಮಿರ್ದುದರಿಂ ಜಂಗಮರತಿಪ್ರಬಲರಾಗಿ ಒಡೆಯರೆಂಬ ಹೆಸರೆಮಗಲ್ಲದಾರಿಗೂ ಸಲ್ಲದದರಿಂ ರಾಜ್ಯಕ್ಕೆ ತಾವೆ ಒಡೆಯರೆಂದು ರಕ್ತಾಕ್ಷಿ ಸಂವತ್ಸರದಾಶ್ವೀಜಮಾಸದೊಳೆ ಜಂಗಮರೆಲ್ಲಂ ಕೂಡಿ ರಾಜ್ಯದ ಪ್ರಜೆಗಳೆಲ್ಲರಂ ಮೇಳುಗೂಟಕೂಡಿಸಿ ಲಕ್ಷ ಜನರವರೆಗೆ ತಾಯೂರ ಬಳಿ ದೊಡ್ಡ ಹೊಲದೊಳ್ ಮುಳ್ಳುಬೇಲಿಯನಿಕ್ಕಿ ಗುಡಾರಂಗಳೊಳ್ ರಾಜ ಮಂತ್ರಿ ಸೇನಾಪತಿಯೆಂದು ನಿಯಮಿಸಿ ಗಡಿಗಡಿಗಳ ಬದುಕು ಮಾಳ್ಪರಂ ಪೊರಡಿಸಿ ತಾವೆ ದೊರೆಗಳಾಗಿ ರಾಜ್ಯದೊಳೆಲ್ಲಾ ಜಂಗಮರ ಹಾವಳಿ ಅತ್ಯಂತಮಾಗೆ ಕಂದಾಯಮಂ ನಿಲ್ಲಿಸಿ ಮನೆಗೊಂದೊಂದು ಜನಂ ಹಿಟ್ಟುಬುತ್ತಿ ಹಸಿಹಿಟ್ಟು ದೊಣ್ಣೆ ಕವಣೆ ಸಹಿತ ಕಾಯಿಸಿ ತಾವೆ ದೊರೆಗಳೆಂದಿಪ್ಪಿನ ಅರಸಂ ಕೇಳ್ದು ಸಾಮಭೇದಂಗಳಿಂ ಮಾಣಿಸಲಾರದೆ ಷಡಕ್ಷರಿ ಮೊದಲಾದ ಸಾಮಾಜಿಕರಂ ಕರೆದುಮಿದಕ್ಕಾವುದು ಕಜ್ಜಮೆನಲಿಂತೆಂದರ್

||     ಅರಸಿರ್ದಾರಡಿಗೇಲ್ದಡಂ ಪುರವನುಂ ರಕ್ಷಿಪ್ಪವಂ ಕಳ್ದೊಡಂ
ಪರದಂ ಸದ್ವ್ಯವಹಾರದೊಳ್ ಪುಸಿದೊಡಂ ಊರೆದ್ದು ಬಾಯಾರ್ದೊಡಂ
ಪರಿರಕ್ಷಿಪ್ಪುದು ಬೇಲಿಯಿದ್ದು ಪೊಲನಂ ಪೈರ್ಮೇದೊಡಂ ಭೂಪ ಕೇಳ್
ಕರುಣಾರ್ ಸಾಕ್ಷಿಗಳಾರ್ [ಸ] ಪಕ್ಷದವರಾರ್ ಕೈಕೊಳ್ವರಾರ್ ಕಾಯ್ವರಾರ್ ||

ಶ್ಲೋಕ || ಬಹವೋsಪಿ ವಿಶೋದ್ಧವ್ಯೋ ದುರ್ಜಯೋsಪಿ ಮಹಾಜನಂ
ಸ್ಫುರಂತಮಪಿ ನಾಗೇಂದ್ರಂ ಭಕ್ಷಯಂತಿ ಪಿಪೀಲಿಕಾ ||

ಎಂಬುದರಿಂದೆಲ್ಲರುಮಸಾಧ್ಯಮೆನೆ ಪಂಡಿತನಂ ಕರೆದು ಬೆಸಗೊಳೆ ಇದಿರ ಮನೆಯ ಇನ್ನೂರು ಕುದುರೆಗೆ ಜಮಾದಾರನಾದ ಪರಿದುಲ್ಲಾಖಾನನಂ ಸಾಮಗ್ರಸಹಿತಂ ಕಳುಹಿಸಿಕೊಟ್ಟರೆ ಕೂಟಮನೆಬ್ಬಿಸಿ ಬಪ್ಪನೆಂಬುದು ಅಂತೆ ಆತಂಗೆ ಸಾವಿರ ಬಾಣಮಂ ಕೊಟ್ಟು ಕಳುಹಿಸಲಾತನ ಕುದುರೆ ಸಿಪಾಯಿಗಳು ನಡುವಂ ಕಟ್ಟಿ ರೊಟ್ಟಿ ನೀರು ಸಹಿತಂ ಕುದುರೆಯನೇರಿಬಂದು ನೂರು ಇನ್ನೂರು ಕುದುರೆಗಳಂ ವಿಂಗಡಿಸಿ ಬಂದು ಚರಾಯಿನಿಮಿತ್ತ ಕಣಮೆಕೆಳಕ್ಕೆ ಅಪ್ಪಣೆಯಾಗಿದೆ ಎಂದು ಸುತ್ತಾ ಮುತ್ತಿನಿಲ್ವುದು ಜಮಾದಾರಂ ಈರ್ವರ್ ಸಿಪಾಯಿಗಳ್ವೆರಸು ಮುಳ್ಳುಬೇಲಿ ಬಾಗಿಲಿಗೆ ಬಂದು ನಾನು ಜಮಾದಾರನು ತನ್ನ ಕುದುರೆಗಳಂ ಕೇರಳದೇಶಕ್ಕೆ ಪೋಗಿರೆಂದಪ್ಪಣೆಯಾಯ್ತು. ಮುಂದಣ ದೊರೆತನಂ ತಮ್ಮದೆಂದು ಕೇಳಿಬಂದೆನದರಿಂ ಒಡೆಯರಂ ಕಂಡುಪೋಪೆನೆಂದು ಬಾಗಿಲವರಿಂ ಪೇಳಿಸೆ ಕರೆಯಿಸಲ್ ಮೂವರ್ ಉನ್ನತಾಸನದೊಳ್ ಕುಳ್ಳಿರ್ದ ರಾಜ ಮಂತ್ರಿ ಸೇನಾಪತಿಗಳ ಇದಿರೊಳ್ ಸಣ್ಣ ತುಪಾಕಿಗಳಂ ನಡುವಿನೊಳಳವಡಿಸಿ ಕೊಂಡು ವೀರಮಂಡಿಯಿಂ ನತರಾಗಿ ಆಲಾಪಿಸೆ ಮೂರು ದಿವಸದಲ್ಲಿ ನಿಮ್ಮ ರಸನಂ ತೆಗೆದು ನಾವೇ ರಾಜ್ಯಕ್ಕೊಡೆಯರಪ್ಪೆವು. ನೀವೆಮ್ಮ ಬಳಿಯೊಳೆ ಕಾದಿರ್ಪುದೆನೆ ಒಡೆಯನುಪ್ಪಿಂಗೆರಡ ಚಿಂತಿಸಲಾಗದೆಂದು ವಾಗ್ವಾದಮಾಗೆ ಗುದ್ದಿನೂಂಕಿಮೆನೆ ಮುವರನೊಂದೆ ಸಮಯದಿ ಬಾಣಪ್ರಯೋಗದಿಂ ಕೆಡಿಪೆ ಆ ಧ್ವನಿಯಂ ಕೇಳ್ದು ಕುರಿಯವಿಂಡಿಗೆ ತೋಳನುಮಾನೆಸಮೂಹಕ್ಕೆ ಸಿಂಗನುಂ ಪಕ್ಷಿವಿಂಡಿಂಗೆ ಬಿಜ್ಜುಂ ಎರಗುವಂತೆ ಪೊಕ್ಕು ಸದೆವುದು ಪುಲಿಯಂ ಕಂಡ ಪುಲ್ಲೆಯಂತೆ ಪಾವಂ ಕಂಡ ಪಂದೆಯಂತೆ ಸಿಂಗಮಂ ಕಂಡ ಮೃಗವಿಂಡಿನಂತೆ ಗುಂಪಳಿದೋಡುವರ ಸಂದಣಿಗಂ ಬಾಣಂಗಳ ಮುರಿದುಕಟ್ಟಿ ಪೊತ್ತಿಸಿಡುತ್ತಿರೆ ಬಿರುಗಾಳಿಗೆ ಚಲ್ಲರಿವರಳೆಯಂತೆ ಪಲಾಯನಮಾಗೋಡುವರಂ ಬಿಟ್ಟು ಇದಿರಾದರಂ ಜಂಗಮರಂ ತೊತ್ತಳದುಳಿದು ಕೊಂದೊಡೆ ಜಂಗಮರ ಕಾಟ ಗೌಡಗಳ ಕೂಟ ಬೇಲಿವಿಡಿದೋಟ ಮುಂದೆ ಪ್ರಜೆಗಳ್ಗೆ ಗುದದ ಗೂಟಮೆಮದೆಲ್ಲರ್ ಪಿಟ್ಟಿನ ಚೀಲಮಂ ಬಿಟ್ಟು ಉಟ್ಟರಿವೆ ಕಂಬಳೆಯಂ ನಿಟ್ಟಿಸದೆ ಕಟ್ಟ ಪಾವಡೆ ಸಮೇತಂ ಬಿಟ್ಟ ಒಕ್ಕಲಿಗಳೆಲ್ಲಂ ಬಟ್ಟೆ ತಪ್ಪಿಸಿ ಕೆಟ್ಟು ಮುರಿದು ಓಡುತ್ತ ಅಟ್ಟಿಬಪ್ಪರೆಂದು ದಟ್ಟಡಿಯಿಂ ಬೀಳುತ್ತೇಳುತ ಹೊಟ್ಟೆಯ ಪೊಸೆದುಕೊಳ್ಳುತ್ತಾ ಪೋದರ್.

ಅಂತು ಕೂಟಮೆಲ್ಲಂ ಪರೆದೋಡುವುದುಂ ಆ ವಾರ್ತೆಯಂ ಜಮಾದಾರಂ ಪೋಗಿ ರಾಜಂಗರಿಪೆ ಗ್ರಾಮಾನುಗ್ರಾಮಂಗಳೊಳಿರ್ಪ ಜಂಗಮರ ಮಠಮನೆಗಳೆಲ್ಲಮಂ ಕಿತ್ತು ಸ್ವಾಸ್ತಿಮಾನ್ಯಂಗಳಂ ಕೊಂಡು ಆಜ್ಞೆಯಂ ಮಾಡಿಸುತ್ತಿಪ್ಪಿನ ಕೆಲಂಬರ್ ಮೈಗರೆಯಲ್ ರಾಜನರಸುತ್ತಿರೆ ಕಮರದಲ್ಲಿ ಗುರಿಕಾರ ನಂಜೇಗೌಡನೆಂಬನೆನಗಪ್ಪಣೆಯಾದೊಡೆ ಸಾವಿರ ಜನಮನೊಪ್ಪಿಸುವೆನೆಂದು ವೀಳ್ಯಮಂ ಸಿಪಾಯರುಮಂ ಕೊಂಡು ರಾಜ್ಯದ ಮೇಲೆ ಬಂದು ವೇಷಮಂ ಮಾಚಿಕೊಂಡು ಒಕ್ಕಲಿಗರ ಕೆಲಸದ ಮೇಲಿರುವ ಜಂಗಮರಂ ಕಂಡು ಶರಣಂ ಮಾಡುವುದು ಅವರಂ ಕಟ್ಟಿಕೊಂಬರು. ಈ ಪ್ರಕಾರ ಸಾವಿರ ಜನಮಂ ತಂದೊಪ್ಪಿಸೆ ಅರಸಂ ಕೋಪಿಸಿ ಎಲ್ಲರಂ ಪರಿಹರಿಸಿದನು. ಆಗಳ್ ಸ್ವಾಮಿದ್ರೋಹಿಗಳೀ ಜಂಗಮರೊಳ್ ಕೂಡಿದ ರಾಜದ್ರೋಹಿಗಳಪ್ಪ ಪ್ರಜೆಗಳ್ಗೆ ತಾನು ನೇಮಿಸಿರ್ದ ಸಿದ್ಧಾಯಗಟ್ಟಿ ಒಂದೊರಹಕ್ಕೆ ಬೇಡಿಗೆ ನಾಣ್ಯವೊಟ್ಟಿ ಹುಲ್ಲುಸರತಿ ವ್ಯವಹರಣೆಯೆಂಬೀ ನಾಲ್ಕು ತೆರಿಗೆಯಿಂದೈದು ಹಣ ಅಡ್ಡ ಹೆಚ್ಚುಗೆಯ ವರಹಾ ಸರದಿವೆರಸಿ ಒಂದು ಅರಗಂದಾಯವನ್ನು ಹೊಲಕ್ಕೆ ಹೆಚ್ಚಿಸಿ ಹದಿನೆಂಟು ತೆರದ ಚಾವಡಿಯಂ ನಿರ್ಮಿಸಿ ಮಣಿಯ ಪೈಕಮಂ ಮಾಡಲ್ ಪ್ರಜೆಗಳ್ಗೆ ಬಾಧೆ ಪಿರಿದಾಯ್ತು.

ಅಷ್ಟರೊಳ್ ಮುಳಿದ ವೀರಶೈವರೆಲ್ಲಂ ಪಂಡಿತನ ಮೇಲೆ ಕೋಪಮನೆತ್ತಿಕೊಂಡು ಈ ಜೈನನೆ ನಮ್ಮ ಗುರುಗಳಪ್ಪ ಜಂಗಮರೆಲ್ಲರಂ ಕೊಲ್ಲಿಸಿ ಮಠ ಮನೆ ಸ್ವಾಸ್ತಿಯೆಲ್ಲಮಂ ಕೀಳಿಸಿದನೀತನಂ ಪರಿಹರಿಸಬೇಕೆಂದು ಸಂಪಾದಿಸಿಕೊಂಡು ನಾಗಣ್ಣನೆಂಬವಂ ಶಸ್ತ್ರಸಾಧನೆ ಮಾಡಿರ್ಪಿನಂ ಪ್ರೇರಿಸಲಾತಂ ಪಂಡಿತನ ಪರಿಜನಂಗಳನೊಳಗುಮಾಡಿಕೊಂಡಿರ್ದೊಂದು ದಿನಂ ಶಿಬಿಗೆಯನೇರಿ ಅರಮನೆಗೆ ಪೋಪನಂ ಆಲಿಕೊಂಡು ಬಂದು ಪೊಟ್ಟೆಯ ಕೈ ಅಂಬಿನಿಂದುರ್ಚೆ ಮೂಛೆಯಿಂ ಗೃಹಕ್ಕೆ ತರಲಾ ವಾರ್ತೆಯಂ ರಾಜಂ ಕೇಳ್ದು ತಾನೆ ಬಂದು ನೋಡಿ ತನ್ನ ಸರ್ವಶಕ್ತಿಯು ಪೋಯ್ತೆಂದು ದುಃಖದಿಂ ಚಿಂತಿಸುತ್ತಿರೆ ಪಂಡಿತನೆಂದನೆನಗವಸಾನಗಾಲಂ ಬಂದುದಿನ್ನು ಬುದ್ಧಿವಂತರಾರುಮಿಲ್ಲೀ ತಿರುಮಲಾರ್ಯನಂ ಮುಂದುಮಾಡಿ ಆಳೋಚಿಸಿ ರಾಜಕಾರ್ಯಮಂ ಮಾಳ್ಪುದೆಂದು ಪೇಳಿ ಮೃತವಾಗೆ ಆತನ ಮಗನಪ್ಪ ಬೊಮ್ಮರಸಂಗೆ ಏಚಗನಹಳ್ಳಿ ಗ್ರಾಮಮಂ ರಕ್ತಗೊಡಗೆಯೆಂದು ಶಿಲಾಪ್ರತಿಷ್ಠೆಯಂ ಮಾಡಿಸಿಕೊಟ್ಟು ತಾನುಂ ತಿರುಮಲಾರ್ಯನೊಳಾಳೋಚಿಸಿಕೊಂಡು ರಾಜ್ಯಮನಾಳುತ್ತಿರ್ದೊಂದು ದಿವಸಂ ವಿಹಾರಾರ್ಥವಾಗಿ ಶುಕ್ರವಾರಪೇಟೆಯೊಳಿರ್ಪಾಗಳ್ ಆಟಗಾರ ಬಸವನೆಂಬಂ ಆರುದಿಂಗಳಿಂ ಕಾದಿರ್ದು ರಾಜನಂ ಕಾಣಲ್ಪಡೆಯದೆ ಪಟ್ಟಣಮಂ ಪುಗಿಸದಿರ್ಪುದರಿಂ ತನ್ನ ಪೆಂಡತಿ ಬಾಜಿಸುವಾತೋದ್ಯಲಯಕ್ಕೆ ಸಮನಾಗಿ ಮೂವತ್ತೆರಡು ಭಾರಣೆ ವಿದ್ಯಂಗಳನಾಡಲೊಂದೊಂದು ವಿದ್ಯಾಸಾಮರ್ಥ್ಯಕ್ಕಂ ಮೆಚ್ಚಿ ರಾಜ ಮಂತ್ರಿ ಸೇನಾನಿ ಅಧಿಕಾರಿ ಗುರಿಕಾರ ಸೇನಭಾಗ ಪಾರುಪತ್ಯಾಗಾರ ಶೆಟ್ಟಿ ಗೌಡರು ಮೊದಲಾದವರೆಲ್ಲಂ ತಮ್ಮ ತಮ್ಮೊಳಿರ್ದ ಶಾಲು ಸಕಲಾತಿ ಪಾಗು ಹಚ್ಚಡ ಮುಂತಾದವನಿಡುತ್ತಿರ್ದೊಡಾ ಬಸವಂ ತನ್ನೆಡಗೈಯಿಂದೆತ್ತಿ ರಾಶಿಯಂ ಮಾಡುತ್ತಿರ್ಪಿನಮೊರ್ವಂ ಬಿಟ್ಟಿಗೆ ಬಂದ ಕುರುಬನಾ ಬಸವನಂ ಪರೀಕ್ಷಿಸಲೊಂದು ಸಣ್ಣನಪ್ಪ ಕಲ್ಲನದರ ದೇಹದೊಳಿಡಲವನರಿದಾ ಪ್ರದೇಶಮನಲುಗಿಸಲಾತಂ ಮೆಚ್ಚಿ ತನ್ನ ಪೊರ್ದಿರ್ದ ಕಂಬಲಮನಿಡಲದಂ ಬಲಗೈಯಿಂದೆತ್ತಿ ರಾಶಿಯೊಳ್ ನಿಲಿಸೆ ಇಂತು ನಾನಾ ವಿಸ್ಮಯಂಗಳಂ ತೋರಿಸಿ ಆ ವೇಷಮನುಳಿದು ಸಿಪಾಯಿವೇಷದಿಂ ಖಡ್ಗಮನಾಂತು ಬಂದು ಸ್ವರ್ಗಕೆಯ್ದಿ ಇಂದ್ರನ ಖಾಂಡವ ವನಮಂ ಕತ್ತರಿಸಲ್ ಪೋಪೆನೆಂದೊಂದು ನೂಲಿನುಂಡೆಯ ಕೊನೆಯಂ ಪಿಡಿದು ಮೇಲಕ್ಕೆಸೆದೊಡಂ ನೂಲು ಸರಿಸಮಾಗಿ ನಿಲಲದರ ಮೇಲೆ ಪತ್ತಿ ಸರ್ವರೂ ಕಾಣುವಂತೆ ಆಕಾಶಕ್ಕೆ ಪೋಗಿಪ್ಪುದಾತನ ಪೆಂಡತಿಯು ದೇವೇಂದ್ರನ ಮಾತಲಿಯಂ ಛೇದಿಸಲ್ ಪೋದನಿವನಂ ಕೊಲ್ವನಲ್ಲದೆ ಮಾಣನೆಂದು ಅತಿದುಃಖದಿಂ ಪ್ರಳಾಪಿಸುತ್ತಿರೆ ಒಂದು ಮುಹೂರ್ತದೊಳೆ ಅಶೋಕ ಪುನ್ನಾಗ ಚಂಪಕ ಸುರಗಿ ಸುರಹೊನ್ನೆ ಮೊದಲಾದ ವೃಕ್ಷಂಗಳಂ ಮೊಲ್ಲೆ ಮಲ್ಲಿಕಾದಿ ವಲ್ಲಿಗಳ ಮಾಕಂದಾದಿ ಫಲತರುಗಳ ಕಿರುಕೊಮಬು ಗೊಂಚಲು ಪತ್ರಪುಷ್ಪಳಲಾದಿಗಳ್ ರಾಶಿಯಾಗಿ ಆಕಾಶದಿಂ ಉದುರತ್ತಮಿರ್ದುದಾಕೆ ಮತ್ತಂ ದುಃಖಿಸೆ ಕಡೆಯೊಳ್ ರುಧಿರಪ್ರವಾಹದಿಂದಾತನ ತಲೆಯುಂ ಮುಂಡಮುಂ ಬಿದ್ದುರುಳ್ವುದುಂ ತದ್ದೇಹಸಂಸ್ಕಾರಂಗೆಯ್ಯಲ್ ಪುಳ್ಳಿಯಂ ತಂದೊಟ್ಟಿಸಿಮದರೊಳೆ ಶಿರಮುಂಡಂಗಳನಿಟ್ಟು ಆಗ್ನಿಯಂ ಪೊತ್ತಿಸುವಾಗಲಾತನ ಪೆಂಡತಿ ಸರ್ವದಾ ನಿಲ್ಲೆನೆಂದು ತಾನುಂ ಪೊಕ್ಕು ಅಗ್ನಿಯಂ ಪೊತ್ತಿಸಲಾಗಲೆ ದಹಿಸಿ ಭಸ್ಮಮಾಗೆ ಅರಸಂ ವಿಷಣ್ಣ ಮನದಿಂ ನೋಳ್ಪಿನಮಿಂದ್ರಜಾಲದಾಸ್ಥಾನಮಂಟಪಮದೃಶ್ಯಮಪ್ಪುದು ರಾಜಂ ವೈಮನಸ್ಯದಿಂ ಪಟ್ಟಣಮಂ ಪುಗುವಾಗಲಾ ಬಸವಂ ತನ್ನ ಪೆಂಡತಿಯಂ ಕೈಹೊಯ್ದಟ್ಟಹಾಸದಿಂ ನಗುತ್ತಂ ಬರೆ ಅತ್ಯಾಶ್ವರ್ಯಂಬಟ್ಟಾತಂಗೆ ಸಾಲ್ವನಿತು ಹೊನ್ನಂ ಕೊಟ್ಟು ಮನ್ನಿಸಿ ಕಳುಹಿದನಂದಿಂದಿತ್ತ ಅನೇಕ ವೇಷಧಾರಿಗಳು ಬಂದು ತಂತಮ್ಮ ಆಟಂಗಳಂ ತೋರಿಸುವರ್.

ಮತ್ತಂ ಶೈವಾಚಾರದೊಳ್ ಮಹತ್ತಂ ತೋರಿಸಿ ಪಾವಾಡಮನೆತ್ತಿ ಮಾನ್ಯಂಬಡೆದರ್. ಕಂಬಿಯವರ್ಗಂ ಮೇಳದವರ್ಗಂ ರಾಜ್ಯದೊಳ್ ಮನ್ನಿಸುವಂತೆ ನಿರೂಪಮಂ ಮಾಡಿಸಿಕೊಟ್ಟು ಕೆಲಕೆಲವು ಮಠಂಗಳ್ಗೆ ಸ್ವಾಸ್ತಿಕೊಟ್ಟರ್. ತಿರುಮಲೆಯಾರ್ಯಂ ವಯಷ್ಣವಮತಮಾಹಾತ್ಮ್ಯಮಂ ತೋರಿಸುತ್ತ ಪದ್ದುಪಾವಾಡಮನೆತ್ತಿಸಿ ಬಿಡು ಮಣೆಯರ ದಾಸಗಳ್ಗನೇಕ ಬಿರಿದು ಬಾವಲಿಗಳನಿತ್ತು ಸರ್ವೋತ್ಕೃಷ್ಟಂ ಮಾಡಿದೊಡಾಗಲ್ ಅನೇಕ ಜರನಂ ವೀರವಯಷ್ಣವರಂ ಮಾಡುತ್ತಮಿರೆ ಜೈನಬ್ರಾಹ್ಮಣಂ ಚಿಕ್ಕಯ್ಯ ಪಂಡಿತಂ ವಿದ್ವಾಂಸನಾಗಿಯುಂ ದಯಕ್ಕೆ ಪಾತ್ರನಾಗಲೆಂದು ತಾನುಂ ಬೊಮ್ಮರಸ ಪಂಡಿತನು ದೇವರಸನು ಸಹಿತ ಕಿರುಮಾಳಿಗೆಯೊಳ್ ಮುದ್ರೆಯಂ ಧರಿಸಿ ನಾಮಧಾರಿಗಳಾಗಿ ಜೈನಮತದ್ವೇಷಿಗಳಾದರ್. ಆ ತಿರುಮಲಯ್ಯಂಗಾರ ಮಂತ್ರಿ ಮಂತ್ರಾಲೋಚನೆಯಿಂ ವಯಷ್ಣವಮತಮಂ ಪೆರ್ಚಿಸಿಯನೇಕ ಜನರ್ಗೆ ನಾಮಮನಿಕ್ಕಿಸಿ ಮುದ್ರ ಧಾರಣೆಯಂ ಮಾಡಿಸಿ ಬಿಡುಮಣೆಯದ ದಾಸರುಗಳಂ ಪ್ರಬಲಂ ಮಾಡಿರುತ್ತ ಮತ್ತೊಂದು ದಿವಸಂ ಉತ್ತರದಿಗ್ವಿಜಯಂ ಮಾಡಲೆಂದು ಪೋಪಾಗಳ್ ಪಟ್ಟಣದೊಳ್ ದೊಡ್ಡದೇವಯ್ಯನೆಂಬ ಮಹತ್ತರನಂ ಸರ್ವಾಧಿಕಾರದೊಳಿರಿಸಿ ಪೋಪುದುಮಾತಂಗೆ ಹಿಂದೆ ಪಂಡಿತಂ ಮುಖ್ಯನಾಗಿರ್ದು ಮಠಮನೆಗಳಂ ಕೆಡಿಸಿದಂ. ನೀನು ವೀರಶೈವನಪ್ಪುದರಿಂ ರಾಜ್ಯಗಳೊಳಿಪ್ಪ ಜಿನಲಯಮಾದ ಬಸ್ತಿಗಳಂ ಪರಿಹರಿಸುವುದೆಂದು ಬೋಧಿಸೆ ಕ್ರೋಧಮುದ್ರೇಕಮಾಗಿ ಪತ್ತು ಸಾಸಿರ ಕಾಮಾಟಿಗಳಂ ಬೆಸಸಿ ಶಕ ವರ್ಷಂಗಳ್ ೧೬೨೦ನೆ ಬಹುಧಾನ್ಯ ಸಂವತ್ಸವರದ ಭಾದ್ರಪದಮಾಸದೊಳ್ ಮೈಸೂರಿಗೆ ಸೇರಿದ ಗ್ರಾಮಾನುಗ್ರಾಮಂಗಳೊಳ್ ತಪ್ಪದೆ ಇರುತ್ತಿರ್ಪ ೧೭೦೦ ಬಸದಿಗಳೊಳಗೆ ಆರೇಳು ಉಳಿದು ಕಡಮೆ ದೇವಸ್ಥಾನಂಗಳಂ ದೇವರಬಿಂಬ ಸಹಿತ ಒಡೆಯಿಸುತ್ತಿರಲಾಗಿ ಆ ಸಮಾಚಾರಮಂ ಮಹಾರಾಜಂ ಕೇಳಿ ನಿಲ್ಲಿಸಿದನಷ್ಟರಲ್ಲಿ ದೊಡ್ಡದೇವಯ್ಯಂ ಕೆಲವು ದಿವಸದೊಳ್ ಸೆರೆಯೊಳ್ ಮೃತವಾದಂ.

ಚಿಕ್ಕದೇವರಾಜರಸಂ ಶಕವರುಷ ೧೬೬೨ನೆ ತಾರಣಸಂವತ್ಸರದ ಕಾರ್ತಿಕ ಬಹುಳ ಆಮಾವಾಶಿಯೊಳು ಸ್ವರ್ಗಸ್ಥನಾಗೆ ಈ ಮಾರ್ಗಶಿರ ಶುದ್ಧ ಪಾಡ್ಯಾರಭ್ಯವಾಗಿ ಆತನ ಕುಮಾರಂ ಕಂಠೀರವಯ್ಯರಸಂ ರಾಜ್ಯಪಾಲನೆಯಂ ಮಾಡುವಲ್ಲಿಯವರಿಗೆ ಮದುವೆ ಎಳವಂದೂರಮ್ಮಣ್ಣಿಯವರ ಸೋದರದ ಸೊಸೆಯಾದ ಚಾಮಮ್ಮಣ್ಣಿಯಂ ಕಳಶೆ ದೊಡ್ಡಚಿಕ್ಕರಸಿನನುಜೆ ಚಲುವಾಜಮ್ಮಣ್ಣಿಯುಂ ಅಂತೀರ್ವರರಸಿಯರುಮೊರ್ವ ಭೋಗಸ್ತ್ರೀಯುಂ ಸಹತ ಸುಖಮಿರ್ದು ಆಯಕಟ್ಟಿನ ಚಾವಡಿ ಪದುಮಣ್ಣಯ್ಯ ಮೈಸೂರ ಕರ್ಣಿಕದೇವರಸ ಸೂರಪಂಡಿತ ಧರಣಿಪಂಡಿತ ಕುದೇರು ದೇವಚಂದ್ರಪಂಡಿತ ಉಗ್ರಾಣದ ಚಲುವಯ್ಯ ಮುಂತಾದ ಜೈನಬ್ರಾಹ್ಮರಿಗೆ ಸಂಬಳ ಉಂಬಳಿಗಳಿಗೆ ನಿರ್ಬಾಧಕಮಾಗಿ ನಿರೂಪಮಂ ಬರೆಯಿಸಿಕೊಟ್ಟು ಕನಕಗಿರಿ ಮೊದಲಾದ ಬಸ್ತಿ ದೇವಸ್ಥಾನಂಗಳಂ ಹತ್ತು ದೇವಸ್ಥಾನಂಗಳನುದ್ಧರಿಸಿ ಪೂರ್ವ ಮೇರೆ ಗ್ರಾಮ ಕ್ಷೇತ್ರಂಗಳ ಕೊಡಿಸಿ ಕೆಲ ಅಗ್ರಹಾರ ಮುಖವಾಸಿಗಳಂ ಕೊಟ್ಟು ಒಂಬತ್ತು ವರ್ಷ ದೊಡ್ಡಮ್ಮನವರು ದಳವಾಯರ ಮೇಲೆ ರಾಜ್ಯಮನಿರಿಸೆ ಹಸ್ತಸಂಜ್ಞೆಯಿಂದಾ ಒಂಬತ್ತು ವರ್ಷ ರಾಜ್ಯಮನಾಳಿ ಶಕವರುಷ ೧೬೩೫ ವಿಜಯಸಂವತ್ಸರದ ಪಾಲ್ಗುಣ ಬಹುಳ ಪಾಡ್ಯದಲ್ಲು ದಿವಮಂ ಪೊಕ್ಕೆಡೆ ಆತನ ಭಾರ್ಯೆ ಚೆಲುವಾಜಮ್ಮಣ್ಣಿಯ ಗರ್ಭೋದ್ಭವನಾದ ದೊಡ್ಡಕೃಷ್ಣರಾಜ ಒಡೆಯರು ರತ್ನಸಿಂಹಾಸನಾರೂಢರಾಗಿರ್ದರ್. ಇವರಿಗೆ ಕಳಲೆ ಚಿಕ್ಕರಸಿನವರ ಕುಮಾರತಿ ಚೆಲುವಾಜಮ್ಮಣ್ಣಿಯುಂ ದೇವಾಜಮ್ಮಣ್ಣಿಯುಂ ಕಳಲೆ ದೊಡ್ಡಚೆಲುವೆಅರಸಿನವರ ಕುಮಾರತಿ ಚೆಲುವಾಜಮ್ಮಣಿಯುಂ ಕಾಂತಮ್ಮಣ್ಣಿಯುಂ ಕಳಲೆ ತಿಮ್ಮರಾಜೆ ಅರಸಿನವರ ಪುತ್ರಿ ಚೆಲುವಾಜಮ್ಮಣ್ಣಿಯುಂ ಕೊತ್ತಾಗಾಲದ ಕೃಷ್ಣೇಅರಸಿನವರ ಕುಮಾರತಿ ಕಾಂತಮ್ಮಣ್ಣಿಯುಂ ಹುಲ್ಲನಹಳ್ಳಿ ಚಿಕ್ಕೆಅರಸಿನವರ ಪುತ್ರಿ ಕೆಂಪನಂಜಮ್ಮಣ್ಣಿಯುಂ ಮೂಗೂರ ಕೆಂಪಮ್ಮಣ್ಣಿಯುಮೆಂದೀ ಒಂಬತ್ತು ಜನ ಅರಸಿಯರಾಗೆ ಇದಲ್ಲದೆ ಪಾಳೇಗಾರರ ಮಕ್ಕಳು ಶಿವಾಚಾರದ ಶೆಟ್ಟಿಗಳ ಮಕ್ಕಳು ಸಹ ಮೂವತ್ತು ಜನ ಬಂಗಾರಸ್ತ್ರೀಯರು ಆಗೆ ಸುಖದಿಂ ರಾಜ್ಯವಾಳುತ್ತಮಿರ್ದೊಡೆ ಆತನರಸಿ ಮಾಮಮ್ಮಣ್ಣಿಗೆ ಭವಾಂತರದ ಕಾಟಮಾಗಿರಲಾರಿಂದಂಕಳಿಯದಿರಲು ಬೆಳ್ಗುಳಕ್ಕೆ ಈಕ್ಷಣಾರ್ಥಂ ಪೋಗಿ ಪುಸ್ತಕ ಪೂಜೆಯಂ ಮಾಡಿಸಿ ಚಾರುಕೀರ್ತಿಪಂಡಿತಾಚಾರ್ಯರನೊಡಗೊಂಡು ಬಂದು ತನ್ನರಸಿಯ ಭವಾಂತರಮಂ ಬಿಡಿಸುವದೆಂದು ಪೇಳೆ ಅವರಾ ದೈವಮಂ ನುಡಿಸಿದೊಡಂ ನುಡಿಯದಿಪ್ಪುದುಮದಕ್ಕೆ ಸ್ತಂಭನ ಸ್ತೋಬನ ತಾಡನ ಅಂಧಿಕರಣ ಪ್ರೇಷಣ ದಹನ ಭೇದನ ಬಂಧನ ಖಂಡನ ಗ್ರೀವಾಭಂಗ ಕಂಠಮೋಟನ ಆಂತ್ರಛೇದನ ಹಿಂಸನ ಆಪ್ಯಾಯನಮೆಂಬೀ ದ್ವಾದಶ ವಿದ ನಿಗ್ರಹಂಗೆಯ್ಯೆ ಕಂಗೆಟ್ಟು ನಾನೀಕೆಯಂ ಬಿಟ್ಟಪೆನಲ್ಲ ನೀಂ ಬಿಡಿಸಿದೊಡಂ ನಿನ್ನಂ ಬಿಡುವೆನಲ್ಲೆಂದೊಡಾದರಾಗಲಿಯೆಂದು ಬಿಡಿಸಲು ಆತನೊಡನೆ ಬಂದು ಕೊಲಲಿಪ್ಪುದು ಆ ಮುನಿಯಂ ತನ್ನ ಬಳಸಿ ಯುಗದ್ವಯಂಬರಂ ದಿಗ್ಬಂಧನದಿಂದಿರುತ್ತಿರಲೊಂದು ದಿನ ಶೌಚಕ್ಕೆ ಕಾಡಿಗೆ ಪೋಗಲ್ಲಿ ದಿಗ್ಬಂಧನದೊಳ್ ಕಮಂಡಲಮನಿಟ್ಟು ಮೌನಗೊಂಡಿರೆ ಗುಂಡಿಗೆಯ ಜೂಳಿ ಪೊರಗೆ ನೀಡಿಪ್ಪುದು ಅದಂ ಬಗ್ಗಿಸಿ ಜಲಮಂ ಸೋಸಿಸೆ ಅವರ್ ನಿಯಮದ ಪೊರಗೆ ಬಂದಾಗಳ್ ಪಿಶಾಚಂ ಕೊರಳನೌಂಕಿ ಕೆಡಿಪೆ ರಕ್ತಮಂ ಕಾರಿ ಮೃತವಾದನು.

ಈ ಕೃಷ್ಣರಾಜಂ ಹದಿನೆಂಟು ವರ್ಷ ರಾಜ್ಯದೊಳಿರ್ದು ಶಕವರ್ಷ ೧೬೫೩ನೆ ವಿರೋಧಿಕೃತು ಸಂವತ್ಸರ ಫಾಲ್ಗುಣ ಬ೫ಯಲ್ಲು ಕಾಲಂಗಂಡೊಡೆ ಅಪುತ್ರನಾದುದರಿಂ ಆ ವಂಶದಲ್ಲಿಯ ಹದಿನೆಂಟು ವರ್ಷದ ಚಾಮರಾಜನೆಂಬಂಗೆ ಪಟ್ಟಮಂ ಕಟ್ಟಿ ಮೂರು ವರ್ಷ ನಡೆವಾಗ ದಳವಾಯಗಳೊಳ್ ವಿರುದ್ಧ ಮಾಗೆ ಆತನಂ ಕಬ್ಬಾಳ ದುರ್ಗಕ್ಕೆ ಹಾಕಲಲ್ಲಿಯೆ ತೀರಿಹೋದ. ಅಷ್ಟರಲ್ಲಿ ಕೃಷ್ಣರಾಜನೆಂಬ ಐದು ವರ್ಷದ ದತ್ತು ಪುತ್ರ ಇಮ್ಮಡಿ ಕೃಷ್ಣರಾಜನೆಂಬವಂ ಐದು ವರ್ಷದ ಮಗುವಿಗೆ ಪಟ್ಟಮಾಯ್ತು. ಬಳಿಕ ಶುಕ್ಲ ಸಂವತ್ಸರದಲ್ಲಿ ನಿಜಾಮಯೆಂಬವನು ನಾಸರಜಂಘನ ಮಗನ ಮೈಸೂರಿಗೆ ಕಳುಹಿಸಿ ಪಗದಿಗೆ ನೆಲೆ ಮಾಡಿದನು. ಶಕವರುಷ ೧೬೭೧ನೇ ಪ್ರಮೋದೂತ ಸಂವತ್ಸವರದಲ್ಲಿ ಬೆಂಗಳೂರಿಗೆ ಗಾವುದದೊಳಿರುವ ರೇವಂಡಹಳ್ಳಿಗೆ ದಳವಾಯರು ಹೈದರಲ್ಲಿಯ ಸರದಾರನ ಮಾಡಿ ಮುತ್ತಿಗೆ ಹಾಕಿಸಿದರು. ಆಗ ನವಾಬು ಮುತ್ತಿಗೆ ವಿಡಿದಲ್ಲಿ ಜಮಾದಾರನಾದನು. ಶಕವರುಷ ೧೬೭೭ನೇ ಯುವಸಂವತ್ಸರದಲ್ಲಿ ಹೈದರಲ್ಲಿಯು ದಿಂಡಿಕಲ್ಲಿಗೆ ಹೋಗಿದ್ದನು. ಶಕವರುಷ ೧೬೮೦ನೆ ಬಹುಧಾನ್ಯ ಸಂವತ್ಸವರದಲ್ಲಿ ಹೈದರಲ್ಲಿಗೆ ಬೆಂಗಳೂರನ್ನು ಜಾಗೇರಿ ಮಾಡಿಕೊಟ್ಟರು. ಪ್ರಮಾದಿ ಸಂವತ್ಸರದಲ್ಲು ಆತನಿಗೆ ಬಹದರನೆಂಬ ಹೆಸರಾಯ್ತು. ಅಲ್ಲಿಂದಿತ್ತ ರಾಜನ ಹೆಸರಿಂದಾ ತಾನೆ ರಾಜ್ಯವಾಳುವನು. ವಿಷುಸಂವತ್ಸರದಲ್ಲು ಈ ಕೃಷ್ಣರಾಜಂಗೆ ಮೂರು ಲಕ್ಷ ರೂಪಾಯಿ ನಿರ್ಮಿಸಿ ರಾಜ್ಯಮನೆಲ್ಲ ತನ್ನ ವಶಮಾಡಿಕೊಂಡನು. ಶಕವರುಷ ೧೬೮೮ ವ್ಯಯ ಸಂವತ್ಸರದಲ್ಲಿ ಚಿಕ್ಕಕೃಷ್ಣರಾಜಂ ಕಾಲಂಗಂಡೊಡೆ ಈತನ ಕುಮಾರ ೧೮ ವರುಷದ ನಂಜರಾಜನೆಂಬರಸಂ ನಾಮಮಾತ್ರದಿಂ ಸಿಂಹಾಸನಮನೇರಿರ್ದೊಡಾತನ ಬಂಧನಮಂ ಮಾಡಿ ಮೂರು ಲಕ್ಷ ರೂಪಾಯನ್ನು ನಿಲ್ಲಿಸಿಬಿಟ್ಟು ಆತನ ನಂದನ ಸಂವತ್ಸರದಲ್ಲಿ ಸ್ನಾನದ ಮನೆಯೊಳಗೆ ಕುತ್ತಿಗೆ ಕುಯ್ಸಿ ಆತನನುಜನಾದ ಚಾಮರಾಜನಂ ಲಾವನಾ ಬರಸಿಟ್ಟನು.