ಶ್ರೀಮತ್ ಸಮಸ್ತ ಭುವನಶಿ
ರೋಮಣಿ ಸದ್ವಿನಯ ವಿನಮಿತಾಖಿಲಜನಚಿಂ
ತಾಮಣಿಯೆನಿಪ್ಪ ಪರಮ
ಸ್ವಾಮಿಯನಭಿನಂದಿಸಿ ಪಡೆವೆ ಶಾಶ್ವತ ಸುಖಮಂ

ಇಂತು ಇಷ್ಟದೇವತಾನಮಸ್ಕಾರಮಂ ಮಾಡಿ ಭಗವದರ್ಹತ್ ಸರ್ವಜ್ಞ ಶಾಸನ ಸಮುದಿತ ಪ್ರಥಮಾನುಯೋಗ ಕಥಾಸಾರಾಮೃತ ಪಾರಾವಾರದ ಕಥಾವತಾರದೊಳೊಂದು ಬಿಂದುಮಂತೋರ್ವಂತೆ ಸ್ವಲ್ಪವಾಗಿ ಗುರುತು ಮಾತ್ರಮಂ ತೋರುವೆನಿದಂ ಮಕರಂದಗಂಧಮಂ ಮಾರುತಂ ಪ್ರಸರಿಪಂತೆ ಸತ್ಪುರುಷರೀ ಕಥೆಯಂ ಶಬ್ದದೋಷಮಂ ತಿದ್ದಿ ಬುಧರ್ಗರಿವಂತು ಪೇಳ್ವುದೆಂದವರಂ ನುತಿಸಿ ಹೊಗನ್ನಡ ವ್ಯಾಕ್ಯಂಗಳಿಂ ವಿರಚಿಸುವೆಂ

ಶ್ರೀ ಸುಜನಸ್ತುತರಖಿಳ ಕ
ಳಾಸದೆನರ್ ಮೋಹತಿಮಿರಮಂ ಕಳೆದು ಕರಂ
ಭಾಸುರವಿಚಾರದಕ್ಷರ್
ವೈಷಮ್ಯಮನುಳಿದು ಕೇಳ್ವುದೀ ಸತ್ಕೃತಿಯಂ

ಆ ಕೃತಿಯಂ ವಿದ್ಯಾವಿಶಾರದರ್ ವಿಚಾರದಕ್ಷರ್ ವಿಚಾರ ಸಂಪನ್ನರುಮೀ ಭರತದಾರ್ಯಾಖಂಡದ ಪ್ರಪಂಚುಮನಾದಿಯಿಂ ಪೇಳ್ವುದೆನೆ ರಾಜಾವಲೀ ಕಥಾವತಾರ ಮೆಂಬಭಿಧಾನಮನಿಟ್ಟು ಪೇಳ್ವೆನೆಂತೆಂದೊಡೆ ಲೋಕಂ ಸ್ವಾತ್ಮಪ್ರತಿಷ್ಠಿತಮುಮನಾದಿ ನಿಧನಮುಮಕೃತ್ರಿಮಮಮುಂ ಪೂರ್ವಾಪರ ಸಪ್ತೈಕ ಪಂಚೈಕರಜ್ಜು ವಿಸ್ತಾರಮುಂ ದಕ್ಷಿಣೋತ್ತರ ಗತ ಸಪ್ತ ರಜ್ಜಾಯಾಮಮುಂ ತ್ರಸನಾಳಿಕಾ ಗರ್ಭೀಕೃತಮುಮನಂತಾನಂತಾಕಾಶ ಮಧ್ಯಸ್ಥಿತ ವಾಯುತ್ರಯ ಪರಿವೇಷ್ಠಿ ತಮುಮಾಗಿಪ್ಪುದು ಷಡ್ದ್ರವ್ಯಭರಿತಮಪ್ಪೀ ಲೋಕಮುಧೋ ಮಧ್ಯೋರ್ಧ್ವಭೇದಂಗಳಿಂ ತ್ರಿವಿಧಂ ಅಧೋಲೋಕದೊಳೇಳು ರಜ್ಜೂರ್ಧ್ವದೊಳೇಳು ನರಕಭೂಮಿಗಳಿಪ್ಪುವು. ಅಲ್ಲಿನೇಕ ಪಾಪಿಗಳ್ ಪುಟ್ಟಿ ಸಮುದ್ರೋಪಮಕಾಲಂಬರಂ ತೀವ್ರ ದುಃಖಂಗಳೊಳ್ ನಮೆಯುತ್ತಿಪ್ಪರು. ಅಲ್ಲಿಂ ಮೇಲೆ ಮಧ್ಯಮಲೋಕಂ ಜಂಬೂದ್ವೀಪಾದ್ಯಸಂಖ್ಯಾತ ದ್ವೀಪಂಗಳುಂ ಮಹಾಲವಣಾದ್ಯಸಂಖ್ಯಾತ ಸಮುದ್ರಮುಂ ಮೇರುವಂ ಬಳಸಿ ಲಕ್ಷಯೋಜನಂ ಮೊದಲ್ಗೊಂಡು ದ್ವಿಗುಣ ದ್ವಿಗುಣದೊಳ್ ವಲಯಾಕಾರದೊಳ್ ಸುತ್ತಿ ಸ್ವಯಂ ಭೂರಮಣಸಮುದ್ರಂ ಕಡೆಯಾದೊಂದು ರಜ್ಜುವಿನಗಲಂಬರಮಿಪ್ಪುವು. ಇಲ್ಲಿ ನರ ತಿರ್ಯಂಚ ಭವನ ವ್ಯಂತರ ಜ್ಯೋತಿಷ್ಯರು ಪ್ರತಿಷ್ಠಾನಂ ಮೇರುಶೈಲಂ ಭೂಮಿಯಿಂ ಕೆಳಗೆ ಸಾವಿರ ಯೋಜನದಿ ವಜ್ರಭೂಮಿಯಂ ಮೆಟ್ಟಿ ಮೇಲೆ ತೊಂಬತ್ತೊಂಬತ್ತು ಸಾವಿರ ಯೋಜನದಿ ಸ್ವರ್ಗಮಂ ಮುಟ್ಟಿ ಅನೇಕ ದೇವತೆಗಳ್ಗೆ ಕ್ರೀಡಾಸ್ಥಾನಮಾಗಿಪ್ಪುದು. ಅಲ್ಲಿಂ ಮೇಲೆ ಸ್ವರ್ಗಂಗಳೆರಡು ಸಾಲಾಗಿಪ್ಪುವು. ಅಲ್ಲಿಂಮೇಲೆ ಕಲ್ಬಾತೀತರಹಮಿಂದ್ರಲೋಕಮಿಹುದು. ಮೇಲೆ ಸರ್ವಾರ್ಥಸಿದ್ಧಿ. ಅಲ್ಲಿಂ ಮೇಲೆ ಲೋಕದ ತುದಿಯೊಳ್ ಶಿವಲೋಕಮಿಪ್ಪುದು. ಅಲ್ಲಿ ನೆಲಸಿಪ್ಪ ಸಾಕಾರ ನಿರಾಕಾರರಾಗಿ ಜ್ಞಾನದರ್ಶನಮೆ ರೂಪಾಗಿರ್ಪರು. ಇದು ಲೋಕ ಸ್ವರೂಪಂ.

ಈ ಮಧ್ಯಮಲೋಕದ ನಡುವಣ ಜಂಬೂದ್ವೀಪದೊಳ್ ಮಹಾಮೇರುವಿನ ಪೂರ್ವಪಶ್ಚಿಮದೊಳ್ ವಿದೇಹಕ್ಷೇತ್ರಂಗಳುಂ ದಕ್ಷಿಣೋತ್ತರಂಗಳೊಳ್ ಭೋಗ ಭೂಮಿಗಳುಂ ಅವರ ಕಡೆಯೊಳ್ ಭರತೈರಾವತಂಗಳುಮಿಪ್ಪುವು. ಈ ಭರತಕ್ಷೇತ್ರಂ ಮಹಾಯೋಜನದೊಳೈನೂರಿಪ್ಪತ್ತಾರು ಯೋಜನ, ಪತ್ತೊಂಬತ್ತು ಭಾಗದೊಳಾರು ಭಾಗಗೂಡಿದ ವಿಸ್ತಾರಮುಪ್ಪುದದರ ಮಧ್ಯದೊಳ್ ರಜತಮಯ ತ್ರಿಮೇಖಲಾಲಂಕೃತ ವಿಜಯಾರ್ಧಕ್ಷೇತ್ರಮುಳ್ಳ ಪರ್ವತಮಿರ್ಪುದದರ ಉಭಯ ಪಾರ್ಶ್ವದೊಳ್ ನೂರಹತ್ತು ಪಟ್ಟಣಂಗಳಲ್ಲಿ ವಿದ್ಯಾಧರರುದ್ಭವಿಸಿ ಸಾಧಿತವಿದ್ಯೆ ಜಾತಿವಿದ್ಯೆ ಕುಲವಿದ್ಯೆ ಎಂಬೀ ತ್ರಿವಿಧ ವಿದ್ಯೆಯಿಂ ವಿಮಾನಾರೂಢರಾಗಿಯಾಕಾಶದೊಳ್ ಚರಿಸುವರು.

ಹಿಮವತ್ಪರ್ವತದ ಮೇಗಣ ಪದ್ಮಸರೋವರದೊಳ್ ಪುಟ್ಟಿ ತೊರಮಟ್ಟು ವಿಜಯಾರ್ಧಪರ್ವತದ ದೇವಖಾತಂಗಳಿಂ ಪೊರಗೆ ಬಂದು ಪ್ರತ್ಯೇಕಂ ಪದಿನಾಲ್ಕು ಸಾಸಿರ ಕ್ಷುಲ್ಲಕ ನದಿಗಳಿಂ ಪರಿವೃತಮಾಗಿ ಗಂಗಾಸಿಂಧುವೆಂಬೆರಡು ನದಿಗಳು ಕೈಲಾಸ ಗಿರಿಯಿಂ ದಕ್ಷಿಣಕ್ಕೆ ಕೆಲವೆಡೆ ಬಂದು ಪೂರ್ವಾಪರಕ್ಕೈದಿ ಮಹಾಲವಣ ಸಮುದ್ರಮಂ ಪೊಕ್ಕಿಪ್ಪುವು.

ವಿದೇಹಂಗಳಿಗೆ ಕಾಲವ್ಯವಸ್ಥೆಯಿಲ್ಲ, ನಿತ್ಯ ದಿಂದೇಕಪ್ರಕಾರಮಾಗಿಪ್ಪುವು. ಈ ಪಂಚ ಭರತೈರಾವತಂಗಳಿಗೆ ಕಾಲವ್ಯವಸ್ಥೆಯಿಂ ಪೆಚ್ಚುತ್ತುಂ ಕುಂದುತ್ತುಂ ಶುಕ್ಲ ಕೃಷ್ಣಪಕ್ಷ ದಂತುತ್ಸರ್ಪಿಣಿಯುಮವಸರ್ಪಿಣಿಯುಮೆಂಬೆರಡು ಕಾಲಂ ಪ್ರತ್ಯೇಕಂ ದಶಕೋಟಿ ಕೋಟಿ ಸಾಗರೋಪಮಸ್ಥಿತಿಯುಳ್ಳೀ ಕಾಲದ್ವಯಂಗಳಸಂಖ್ಯಾತಮಾದೊಡಾಗಳೊಂದು ಹುಂಡಮೆಂಬುದು. ಆಗಳನೇಕ ದೋಷಂಗಳು ಪುಟ್ಟುವುವೀ ಸ್ವಭಾವದಿಂ ರಾಟವಾಳದಂತೆ ತಿರುತ್ತಿಪ್ಪ ಈ ಹುಂಡಾವಸರ್ಪಿಣಿಕಾಲಂ ಪತ್ತು ಕೋಟಿ ಕೋಟಿ ಸಾಗರೋಪಮಂಗಳೊಂಭತ್ತು ಕೋಟಿ ಕೋಟಿ ಸಾಗರಂ ಉತ್ತಮ ಮಧ್ಯಮ ಜಘನ್ಯಮೆಂಬ ಭೋಗಭೂಮಿಗೆ ಸಲ್ವುದು. ಉಳಿದೊಂದು ಕೋಟಿ ಕೋಟಿ ಸಾಗರಂ ಕರ್ಮಭೂಮಿಯಾಗಿ ವರ್ತಿಸುವುದೆಂದೊಡೆ

ಕಡೆಯ ಭೋಗಭೂಮಿ ಜರಾಯುಷ್ಯ ಒಂದು ಪಲ್ಯಮದರಷ್ಟಾಂಶದ ಕಡೆಯೊಂದಂಶದೊಳು ಪದಿನಾಲ್ಕು ಮನುಗಳನುಕ್ರಮದಿಂ ಪುಟ್ಟಿ ಅವಧಿಜ್ಞಾನದಿಂ ಕರ್ಮಭೂಮಿಸ್ಥಿತಿಗಳೆಲ್ಲಮಂ ಯಥಾಸ್ವರೂಪಮಂ ಕ್ರಮದಿಂದ ತಿಳಿಯಪೇಳ್ದರ್ ಅನ್ನೆಗಮಾದಿಬ್ರಹ್ಮ ವಿದೇಹ ಕ್ಷೇತ್ರದೊಳ್ ತಪಂಗೆಯ್ದು ಪದಿನಾರು ಶುಭಭಾವನೆಗಳಂ ಭಾವಿಸಿ ಏಕಾದಶಾಂಗಧರನಾರೂಪಂ ವಿಸರ್ಜಿಸಿ ಸರ್ವಾರ್ಥಸಿದ್ಧಿಯೊಳಹಮಿಂದ್ರನಾಗಿ ಮೂವತ್ತುಮೂರು ಸಮುದ್ರೋಪಮಕಾಲಂ ದಿವ್ಯ ಸುಖಮನನುಭವಿಸಿ ಬಂದು ತ್ರಿಜ್ಞಾನಸಮನ್ವಿತಂ ಗರ್ಭಾವತರಣಪೂರ್ವಕಮುದಿಸಿ ಜನ್ಮಾಭಿಷೇಕಮಾಗೆ ಸಹಜಾತಿಶಯಂಗಳು ಪತ್ತುಂ ವಿರಾಜಿಸೆ ಸುರರ್ ಸೇವೆಯಂ ಮಾಡುತ್ತಿರಲಾ ಕಾಲದೊಳ್ ಕಲ್ಪವೃಕ್ಷಂಗಳು ಮಲ್ಪಫಲದಂಗಳಾಗೆ ಪ್ರಜೆಗಳೆಲ್ಲಂ ಕ್ಷುಧಾತೃಷಾದಿಗಳಿಂ ಸಂತೃಪ್ತರಾಗಿ ನಾಭಿರಾಂಗೆ ಪೇಳಲಾದಿಬ್ರಹ್ಮನಲ್ಲಿಗೆ ಬಂದು ನಮ್ರಮಸ್ತಕರಾಗಿ ಬೆಸಗೊಂಬುದುಂ ಆದಿಪರಮೇಷ್ಠಿಯು ಜ್ಞಾನದಿಂ ವಿದೇಹಸ್ಥಿತಿಯನರಿದುಂ ಆ ಪ್ರಜಾನಿಕರುಂಬದೊಳೆಲ್ಲರ ಮನೋವಿಚಾರಂಗಳರಿದುಂ ಉತ್ತಮ ಮಧ್ಯಮ ಜಘನ್ಯಮೆಂದು ಮೂರು ಭಾಗಮಾಗಿರಿಸೆಯವರ್ ತಮ್ಮ ಜೀವನೋಪಾಯಮಾವುದೆಂದು ಬೆಸೆಗೊಳ್ವುದುಂ ಅಸಿಯುಂ ಮಸಿಯುಂ ಕೃಷಿಯುಂ ವಾಣಿಜ್ಯಮುಂ ಪಾಶುಪಾಲ್ಯಮುಂ ಶಿಲ್ಪಮುಮೆಂದೀ ಷಟ್ಕರ್ಮಂಗಳಂ ಯಥಾಸ್ಥಿತಿಯಿಂದುಪದೇಶಂಗೆಯ್ದವರವರ ಕಾರ್ಯಗಳೆಲ್ಲಂ ಸವಿಸ್ತರಂ ಪೇಳಲಾಗಳ್ ದೇವೇಂದ್ರಂ ಬಂದು ಕೌಶಲಾದಿ ಎಪ್ಪತ್ತಾರು ದೇಶಂಗಳಂ ಸಾಕೇತಾದಿ ರಾಜಧಾನಿಗಳಂ ನಿರ್ಮಿಸಿ ನಾಭಿರಾಂ ಮೊದಲಾದ ಮಹಾಪುರುಷರಿಂಗೊತ್ತಾಗೆ ನಿಯಮಿಸಿ ಪೋಗಲಾದಿಪಿತಾಮಹಂ ತನ್ನ ನೂರ್ವರ್ ಕುಮಾರರ್ಗಂ ಗಣಿತ ವ್ಯಾಕರಣಂ ಮೊದಲಾಗೆ ಅರುವತ್ತುನಾಲ್ಕು ವಿದ್ಯಂಗಳಂ ಕಲಿಸೆ ಕೃಷೀವಳರು ಪ್ರಜಾಪತಿಯುಪದೇಶದಿಂ ಪೋಗಿ ಪಿಂದೆ ಮನುಗಳು ಮರಣ್ಯದೊಳಿರ್ದ ವೃಷಭಾದಿಗಳಂ ತಂದು ವಾಹನೋರಾಹಣಾದಿಗಳಂ ಕಲಿಸಿಪ್ಪವಂ ಕಟ್ಟಿ ಲಾಂಗಲಾದಿಗಳಿಂ ಭೂಮಿಯನುತ್ತು ಮೊದಲು ಕಲ್ಪದ್ರುಮಂಗಳಲ್ಪಂಗಳಾದಂದು ಕಾಡೊಳು ಬೆಳೆದೊರಗಿರ್ದ ಸರ್ವೌಷಧಿ ದೀಪ್ತೌಷಧಿಗಳಪ್ಪ ಪದಿನೆಂಟು ಧಾನ್ಯಂಗಳಂ ಸಂಸ್ಕಾರದಿಂ ಮನೊಪದೇಶದಿಂ ವಚನವಂ ಮಾಡುತ್ತಿರ್ದ ಧಾನ್ಯಂಗಳಂ ಬಿತ್ತೆ ಪೈರುಗಳು ಸಂದಿಗ್ಧವಾಗಿ ಬೆಳೆಯದಿಪ್ಪುದುಂ ಸೃಷ್ಟಿಕರ್ತನಂ ಬೆಸಗೊಂಡದಕ್ಕೆ ಹರಗಣೆಯಂ ಮಾಡುವಲ್ಲಿ ಪೈರುಗಳಂ ತಿನ್ನುತ್ತುಂ ಪೋಗಲು ಬ್ರಹ್ಮೋಪದೇಶದಿಂದ ಮೊಗಬುಟ್ಟಿಯನಿಟ್ಟರು.

ಇಂತು ಲೌಕಿಕ ಷಟ್ಕರ್ಮಮಾಷಾಢ ಬ೧ಪಾಡ್ಯದೊಳಾಗೆ ಕೃತಯುಗಮೆಂಬ ಪೆಸರಾಯಿತು. ಆದಿಪರಮೇಶಂ ಸುರಕೃತ ಪರಿನಿಷ್ಕ್ರಮಣಕಲ್ಯಾಣಪೂರ್ವಕಂ ತಪಮಂ ಕೈಗೊಂಡು ಸಾವಿರವರುಷಂ ಧ್ಯಾನ ಮೌನಾನುಷ್ಠಾನದೊಳು ಕರ್ಮಂಗಳಂ ಕ್ಷಪಿಯಿಸೆ ಕ್ಷುಧಾದ್ಯಷ್ಟಾದಶ ದೋಷರಹಿತನಾಗಿ ಶರೀರ ಲಾಘವಂಬಡೆದು ಭೂಮಿಯ ಹಂಗುನುಳಿದೈದು ಸಾಸಿರ ಬಿಲ್ಲಂತರದೊಳಾಕಾಶದೊಳು ನಿಂದು ಅತೀತಾನಾಗತ ವರ್ತಮಾನ ತ್ರಿಕಾಲಗೋಚರ ದ್ರವ್ಯಗುಣಪರ್ಯಯ ವಸ್ತು ಪರಿಛೇದಕ ಕೇವಲ ಜ್ಞಾನ ಸಂಪನ್ನನಾಗಲು ಚತುರ್ನಿಕಾಯಾಮರರ್ವೆರಸು ಪುರಂದರಂ ಬಂದು ಕೇವಲಪೂಜೆಯ ಮಾಡಲಾಖಂಡಲನ ಬೆಸದಿಂದ ಕುಬೇರಂ ನವರತ್ನಮಯದಿಂದೆ ಪನ್ನೆರಡು ಯೋಜನ ವಿಸ್ತಾರಮಪ್ಪ ಸಮವಸರಣಮಂ ವಿಗುರ್ವಿಸೆ ತ್ರಿಲೋಕಂ ಸಂದಣಿಸಿದ ಸಭಾಮಧ್ಯದೊಳಷ್ಟ ಮಹಾಪ್ರಾತಿಹಾರ್ಯನುಂ ಚತುಃ ತ್ರಿಂಶದತಿಶಯಯುಕ್ತನುಮಾಗಿ ಕೈಲಾಸ ಶೈಲಶಿಖರಶೇಖರನಾಗಿಯೊಪ್ಪುತ್ತಿರ್ದಂ. ಅವನ ಮುಖಕಮಲದೊಳೋಂಕಾರ ಪೂರ್ವಕಂ ವಿನಿರ್ಗತಮಾದ ದ್ವಾದಶಾಂಗ ಶ್ರುತಮುಮಂ ಚತುರನುಯೋಗ ಮಹಾದೇವಮುಮಂ ಚತುರ್ದಶಪೂರ್ವ ಮಹಾಶಾಸ್ತ್ರಮುಮಂ ವೃಷಭಸೇನರೆಂಬ ಗಣಾಗ್ರಣಿಗಳು ಅಂತ್ಯಬ್ರಹ್ಮನಪ್ಪ ಭರತೇಶ್ವರಂಗರಿಪೆಯಾತಂ ಸೃಷ್ಟಿಕರ್ತನಾದಂ.

ಮತ್ತಂ ಪ್ರಜಾಸಂಬಂಧದೊಳೆ ವಿಧಾತನಿಂ ನಿರ್ಮಿಸಲ್ಪಟ್ಟ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರರೆಂಬ ನಾಲ್ಕುಂ ಜಾತಿಯಾಗೆ ಅವರ್ಗುಪಯೋಗಿಗಳಾದ ಪದಿನೆಂಟು ಭೇದದ ಕರಣಂಗಳಂ ಮಾಡಿ ಜೀವಿಸುವ ಪದಿನೆಂಟದರೊಳು ಕುಲಂಗಳು ನೂರೊಂದು ಭೇದಮಾಯಿತಲ್ಲಿ ಬ್ರಾಹ್ಮಣರು ಉಪಾಸನ ವೇದೋಕ್ತ ಯುಜನ ಯಾಜನಾಧ್ಯಯನಾಧ್ಯಾಪನ ದಾನ ಪ್ರತಿಗ್ರಹಣ ತ್ರಿಪಂಚಾಶತ್ಕ್ರಿಯಾ ತ್ರಿಕಾಲ ಸಂಧ್ಯೋಪಾಸನ ಜಪ ತರ್ಪಣ ನಿತ್ಯನೈಮಿತ್ತಿಕಾನುಷ್ಠಾನ ಶೀಲೋಪವಾಸ ತೀರ್ಧವಂದನಾದಿಗಳಿಂ ದ್ವಿಜನ್ಮರುಂ ಮಾನ್ಯರುಂ ಚರಿತ್ರಶುದ್ಧರುಂ ಧರಾಮರರುಮೆಂದು ಪೊಗಳಿಸಿಕೊಳ್ಳುತ್ತುಂ ದಯಾರ್ದ್ರವೃತ್ತಿ ನ್ಯಾಯನಿಷ್ಠಾಶ್ರುತಿ ಸ್ಮೃತಿ ಪುರಾವೃತ್ತ ವೃತ್ತಿ ಮಂತ್ರಕ್ರಿಯಾ ದೇವತಾ ಲಿಂಗ ಕಾಮಾನ್ನಮೆಂಬೀ ದಶವಿಧಂಗಳೊಳಂ ಶುದ್ಧರಾಗಿ ಅತಿಬಾಲವಿದ್ಯಾದಿ ದಶಾಧಿಕಾರಂಗಳಂ ಪಡೆದು ಉಳಿದ ವರ್ಣತ್ರಯಕ್ಕಂ ಗುರುಗಳಪ್ಪರು.

ಕ್ಷತ್ರಿಯರು ನ್ಯಾಯವಿಹಿತವಾಗೆ ಪ್ರಜಾಪಾಲನಮುಂ ಕುಲಪಾಲನಮುಂ ಆತ್ಮಪಾಲನಮುಮೆಂಬೀ ಸಮಂಜಸತ್ವ ಲಕ್ಷಣ ಕ್ಷಾತ್ರಧರ್ಮಮುಳ್ಳರಾಗಿಯುಂ, ಕಾಮ ಲೋಭ ಕ್ರೋಧ ಮಾನ ಹರ್ಷ ಮದಂಗಳೆಂಬೀ ಅಂತರಂಗಶತ್ರುಜಯಮುಳ್ಳುರಾಗಿಯುಂ, ಪ್ರಭು ಮಂತ್ರ ಉತ್ಸಾಹಮೆಂಬ ಶಕ್ತಿತ್ರಯಸಮನ್ವಿತರಾಗಿಯುಂ, ಸ್ವಾಮಿ ಅಮಾತ್ಯ ಸುಹೃತ್ ಕೋಶ ದುರ್ಗ ದೇಶ ಗಜಾಶ್ವ ರಥ ಪದಾತಿಗಳೆಂಬ ಚರುತಂಗಬಲಮೆಂಬೀ ಸಪ್ತಾಂಗರಾಜ್ಯ ಸಂಪನ್ನರಾಗಿ ಪ್ರಜೆಗಳು ಮಾಡಿರುವ ಭೂಮಿಯೊಳು ಷಡ್ಭಾಗಾವಶೇಷಮಂ ಕೊಂಡು ದುಷ್ಟನಿಗ್ರಹ ಶಿಷ್ಟಪರಿಪಾಲನೆಯಂ ಮಾಡುತ್ತುಂ ತಮ್ಮ ವೈರಿಗಳಾದವರಂ ಸಾಮ ಭೇದ ದಾನ ದಂಡಂಗಳೆಂಬ ಚತುರೋಪಾಯಂಗಳಿಂದೊಳಗು ಮಾಡುತ್ತುಂ ಧರ್ಮಮಂ ಬಿಡದೆ ರಾಜ್ಯಮಂ ಪಾಲಿಸುವರು

ವೈಶ್ಯರು ಜಲಯಾತ್ರಾ ಸ್ಥಲಯಾತ್ರಾದಿಗಳಿಂ ಸತ್ಯದೊಳು ವ್ಯವಹರಿಸುತ್ತುಂ ದಾನ ಪೂಜೆ ಶೀಲೋಪವಾಸಂಗಳಿಂ ಪ್ರಪಾ[ತ]ಸತ್ರಾದಿ ನಿರ್ಮಾಪಣಮಂ ಮಾಡಿಸುವರು.

ಭೂವಾಹ ಭಾಟಕಾದಿಗಳಿಂ ವರ್ಣತ್ರಯಂಗಳ್ಗೆ ಶುಶ್ರೂಷಾದಿಗಳಂ ಮಾಳ್ವರು ಶೂದ್ರರು ಅಲ್ಲಿ ಸಚ್ಛೂದ್ರರುಮಸಚ್ಛೂದ್ರರೆಂದಿತ್ತೆರಂ.

ಆದಿ ಬ್ರಹ್ಮ ಮುಖದಿಂ ಪುಟ್ಟಿದ ಕ್ರಿಯಾಮಂತ್ರೋಪದೇಶದಿಂ ದ್ವಿಜನ್ಮರಾದುದರಿಂದ ವದನಜರೆಂಬುದು.

ಕ್ಷತ್ರಿಯರು ಭುಜವೀರ್ಯಪರಾಕ್ರಮದಿಂ ಜೀವನಮುಳ್ಳುದರಿಂ ಬಾಹುಜರೆಂಬುದು. ವೈಶ್ಯರು ಜಂಘಾಬಲದ ಜಲಸ್ಥಲಾದಿ ಯಾತ್ರೆಯಿಂ ಜೀವಿಸುವುದರಿಂದೂರುಜರೆಂಬುದು.

ಶೂದ್ರರು ತ್ರಿವರ್ಣಂಗಳ ಪಾದಸೇವಾದಿಗಳಿಂ ಜೀವಿಗಳಾದುದರಿಂ ಪದಜರೆಂಬುದು.ಇಂತು ಮನುಷ್ಯಜಾತಿಯೊಂದೆಯಾದೊಡಮವರವರ ವೃತ್ತಿಭೇದದಿಂ ಬ್ರಾಹ್ಮಣಾದಿಗಳಾಗೆ ಪದಿನೆಂಟು ಜಾತಿಗಳುಮವರವರ ವೃತ್ತಿಯಿಂದಲೆ ಭೇದಂಗಳಾಗಿಪ್ಪವು.

ಮತ್ತಂ ಕ್ಷತ್ರಿಯರೊಳು ಸೂರ್ಯವಂಶಂ ಚಂದ್ರವಂಶಂ ನಾಥವಂಶಂ ಉಗ್ರವಂಶಂ ಎಂದು ನಾಲ್ಕು ತೆರನಾಗಲಿಲ್ಲ ಇನವಂಶದೊಳಾದಿಪುರುಷನಿಕ್ಷುಕಾಂಡಂಗಳಂ ಪೇಳಿ ಗುಡ ಶರ್ಕರಾದಿಗಳಂ ಮಾಳ್ಪುಪಾಯಮಂ ತೋರಿದುದರಿಂದಿಕ್ಷ್ವಾಕುಲಮೆಂದಾಯ್ತು.

ಚಂದ್ರವಂಶದ ಸೋಮಪ್ರಭಮಹಾರಾಜಂಗಂ ಕುರುರಾಜಾಭಿಧಾನಮಿನಿಟ್ಟು ಕುರುಕುಲಾಗ್ರಗಣ್ಯನಂ ಮಾಡಿದುದರಿಂ ಕುರುವಂಶಮಾಯ್ತು. ಸೂರ್ಯವಂಶದ ಹರಿಕಾಂತಂಗೆ ಹರಿನಾಮಮನಿಟ್ಟುದರಿಂ ಹರಿವಂಶಮಾಯ್ತು. ಅಕಂಪಂಗಂ ಶ್ರೀನಾಥ ನಾಮವನಿಟ್ಟುದರಿಂ ನಾಥವಂಶಮಾಯ್ತು. ಕಾಶ್ಯಪಂಗೆ ಉಗ್ರಾಭಿಧಾನಮನಿಟ್ಟುದರಿಂದುಗ್ರವಂಶಮಾಯ್ತು. ಇಂದು ನಾಲ್ಕರೊಳೈದು ಭೇದಮಾಗಿ ವರ್ತಿಸುತ್ತಿಪ್ಪುದುಂ ಭರತರಾಜಂಗೆ ಚಕ್ರರತ್ನಂ ಪುಟ್ಟೆ ಚತುರ್ದಶರತ್ನ ನವನಿಧಿಗಧೀಶನಾಗಿ ದಿಗ್ವಿಜಯಂಗೆಯ್ದ ಷಟ್ಖಂಡಮಂ ಬಾಳಿಸಿ ಬಪ್ಪಲ್ಲಿ ಆತನನುಜನಪ್ಪ ಬಾಹುಬಲಿರಾಜಂ ಪೌದನಪುರದೊಳಿರ್ದು ಹುಂಡಾವಸರ್ಪಿಣಿಕಾಲದೋಷದಿಂದಿದಿರೊಟ್ಟಿ ನಿಂದು ದೃಷ್ಟಿಯುದ್ಧ ಜಲಯುದ್ಧ ಮಲ್ಲಯುದ್ಧಂಗಳಿಂದಣ್ಣನಂ ಗೆಲ್ದು ನಿರ್ವೇಗಂ ಪುಟ್ಟಿ ದೀಕ್ಷೆಗೊಂಡು ಮಾನಕಪಾಯದಿಂ ಭರತನ ಭೂಮಿಯೊಳ್ ತಪಂಗೆಯ್ವೆನಲ್ಲೆಂದು ತಿರುಗುತ್ತೆ ಪೋಗುತ್ತಿದೆ ಗೊಮಟನೆಂಬ ಪೆಸರಾಗಿ ಪೋಗುತ್ತಿರಲೊರ್ವ ದೇವಂ ಸರ್ಪಾಕೃತಿಯಿಂ ಪುತ್ತದಿಂ ಪೊರಮಟ್ಟೆನ್ನ ವಲ್ಮೀಕದ ಮೇಲೆ ನಿಂದು ತಂಪಗೆಯ್ವುದೀ ಭೂಮಿಯೆನ್ನದು ಭರತನದಲ್ಲವೆಂದು ಪೇಳ್ದೊಡಾ ಪುತ್ತಿನಮೇಲೆ ಕಾಯೋತ್ಸರ್ಗದಿಂ ನಿಂತು ತಪಗೆಯ್ಯುತ್ತಿರ್ದಂ.

ಇತ್ತ ಭರತಚಕ್ರಿಯುಮಯೋಧ್ಯೆಯಂ ಪೊಕ್ಕು ಸಾಮ್ರಾಜ್ಯಾಭಿಷೇಕಮನಾಂತು ಸಮಸ್ತಕ್ಕುಂ ಭರತಗಟ್ಟಲೆಯಂ ಮಾಡಿ ಕೈಲಾಸಮನೆಯ್ದು ಬಂದು ಬಾಹುಬಲಿಯುಯನಿಲ್ಲಿರೆ ಬಂದೆರಗಿ ಬೋಧಿಸೆ ಮನಃಕಷಾಯಂ ಪೋಗೆ ಕೇವಲಜ್ಞಾನೋತ್ಪತ್ತಿಯಾಗಿ ಲೋಕಾಲೋಕಪ್ರಕಾಶನಾಗಿ ತ್ರಿಭುವನಸೇವ್ಯಂ ಕೈಲಾಸೋಪರಿಯೊಳೊಪ್ಪುತ್ತಿಪ್ಪ ಸಮವಸರಣಮೆನೆಯ್ದೆ ಭರತಚಕ್ರೇಶ್ವರಂ ಸಾಕೇತಮಂ ಪೊಕ್ಕು ಸುಖಮಿರ್ದೊಂದು ನಿಶಾವಸಾನದೊಳು ಮುಂದಣ ದುಷ್ಪಮಕಾಲಪ್ರರ್ವತಕಮಪ್ಪ ಪದಿನಾರು ದುಃಸ್ವಪ್ನಂಗಳಂ ಕಂಡು ಕೈಲಾಸಮನೇರಿ ಆದಿ ಪರಮೇಶ್ವರಂಗೆ ಸಾಷ್ಟಾಂಗವೆರಗಿ ನುತಿಸಿ ಮನುಷ್ಯಕೋಷ್ಠದೊಳ್ ಕುಳ್ಳಿಪ್ಪುದುಂ ದಿವ್ಯಭಾಷಾಸ್ವಭಾವದಿಂದ ಷಡ್ದ್ರವ್ಯಮಂ ಪಂಚಾಸ್ತಿಕಾಯಮಂ ಸಪ್ತತತ್ವಮಂ ನವಪದಾರ್ಥಮಂ ತ್ರೈಕಾಲ್ಯಮಂ ತ್ರೈಲೋಕ್ಯಂ ಷಡ್ಜೀವನಿಕಾಯಮಂ ಲೇಶ್ಯಮಂ ವ್ರತಮಂ ಸಮಿತಿಯಂ ಭರತೇಶನಂ ಕುರಿತು ತತ್ಪ್ರಪಂಚಮಂ ಪೇಳ್ದ ಸರ್ವಭಾಷಾತ್ಮಕಮಪ್ಪ ದಿವ್ಯಧ್ವನಿಯಿಂ ನಿರೂಪಿಸಲದೆಲ್ಲಮಂ ವೃಷಭಸೇನಗಣಧರರ್ ಪ್ರತಿರಚನೆಯಿಂ ಪೇಳೆ ಕೇಳ್ದುಮಯೋಧ್ಯೆಗೆವರೆ.

ಅತ್ತಲ್ ಮುನ್ನಮಾದಿದೇವರೊಡನೆ ಭರತನರಸಿ ಅನಂತಸೇನೆಯಂ ಪುತ್ರಮರೀಚಿಯು ಕಾಳಗಗೊಂಡವರರುದಿಂಗಳಿಂಗಲ್ಲದೆ ಕೈಯೆನೆತ್ತನೆಂದು ನಿಲ್ವುದುಂ ಒಡನಿರ್ದ ಮರೀಚಿಯು ಕ್ಷುತ್ಪಿಪಾಸಾದಿ ಪರೀಷಹಂಗಳಂ ಸೈರಿಸಲು ನೆರೆಯದೆ ಕೆಲಂಬರ್ ಕೂಡಿ ಜಟಾ ದಂಡ ವಲ್ಕಲಾದಿ ವಸನರಾಗಿ ಅಗ್ನಿಯನಿಟ್ಟು ಕಂದಲಮೂಲ ಫಲಾಹಾರಂಗಳಿಂ ಜೀವಿಸುತ್ತಿರ್ದು ಅಕ್ಷರಾದಿ ಚತುಃಷಷ್ಟಿ ವಿದ್ಯಾವಿಶಾರದಂ ಸ್ವಯಂ ಬುದ್ಧನಾಗಿ ಕಪಿಲಸಿದ್ಧಾಂತಮಂ ಪೇಳ್ದು ಕೋಟಿಗ್ರಂಥಮಂ ರಚಿಸಿ ತನ್ನ ಮೂರು ಕೋಟಿ ಶಿಷ್ಯರ್ಗಮುಪದೇಶಂಗೈದಂ. ಅವರೆಲ್ಲಾ ಕೇಳ್ದು ನಂಬಿದವರಲ್ಲಿ ಏಕಾಂತ ವಿನಯ ವಿಪರೀತ ಸಂದೇಹಾಜ್ಞಾನಮೆಂಬ ಪಂಚಭಾವಂ ಪುಟ್ಟಿ ವ್ಯವಹರಿಸುತ್ತಿರ್ದರು.

ಇತ್ತು ಪುರುಪರಮೇಶ್ವರಂ ತನ್ನ ಸಮಾನಮಪ್ಪ ಕೇವಲಿಗಳಿಪ್ಪತ್ತು ಸಾಸಿರ್ವವೆರಸೊಂದು ಲಕ್ಷದ ಮೇಲರವತ್ತು ಸಾಸಿರದ ನಾನೂರತೊಂಬತ್ತೆರಡು (೧,೬೦,೪೯೨) ಲೆಕ್ಕದ ಸಪ್ತವಿಧ ಋಷಿನಿಕರಂ ಬಳಸಿದೆ, ಮತ್ತಂ ಮೂರುವರೆ ಲಕ್ಷ (೩,೫೦,೦೦೦) ಆರ್ಯಿಕೆಯರುಂ, ಎಂಟು ಲಕ್ಷ (೮,೦೦,೦೦೦) ಮನುಷ್ಯ ಸ್ತ್ರೀಪುರುಷರುಂ, ಅಸಂಖ್ಯಾತ ದೇವರುಂ ದೇವಿಯರುಂ, ಅಸಂಖ್ಯಾತ ತಿರ್ಯಗ್ಜಾತಿಗಳುಂ ಬೆರಸಿಪ್ಪ ಸಮವಸರಣದೊಳ್ ಸಿಂಹಾಸನಮಂ ಸೋಂಕದೆ ನಾಲ್ಕಂಗುಲಮಂ ಬಿಟ್ಟು ಕೋಟಿ ಚಂದ್ರಾದಿತ್ಯರ ಕಾಂತಿಯಿಂ ಸುಜ್ಞಾನಮೆ ಮೆಯ್ಯಾಗಿ ರಾರಾಜಿಸುತ್ತಿರಲ್ ಆ ಪರಮಾತ್ಮಂ ಮುನ್ನ ನೊಸಲೊಳ್ ಜ್ಞಾನದೃಷ್ಟಿ ಪುಟ್ಟಿ ಕರ್ಮಮಂ ಸುಟ್ಟುದರಿಂ ತ್ರಿಣೇತ್ರನುಂ ಭಾಳಲೋಚನಂ ಪಾವಕನೇತ್ರನೆಂದು ವೀರ್ಯಶ್ರೀಯಸ್ಸ ಮಗ್ರನಾದುದರಿಂದ ಭಗವಾನ್

ಐಶ್ವರ್ಯಸ್ಯ ಸಮಗ್ರಸ್ಯ ವೀರ್ಯಸ್ಯಯಶಸಃ ಶ್ರೀಯಃ
ವೈರಾಗ್ಯಸ್ಯಾವಭೋಛಸ್ಯ ಷಣ್ಣಾಂಭಗ ಇತಿ ಸ್ಮೃತಃ
||
…..ಪುರುಷೋತ್ತಮಃ ತ್ರಿಲೋಕೋದರವತಿನಾಂ
ಸರ್ವೇಷಾಂ ಪುರುಷಾಣಾಂ ಮಧ್ಯೇ ಅಸ್ಸೈವ ಶ್ರೇಷ್ಠತ್ವಾತ್ ||

ಹರಿಃ ಹರತಿ ಸ್ವೀಕರೋತಿ ಕ್ಷಾಯಿಕಸಮ್ಯಕ್ತ್ವಾದಿ ಗುಣಾನಿತಿ; ಹರಃ ಹರತ್ಯ ಪಾಕರೋತಿ ಸ್ವಸ್ಯಪರೇಷಾಮಪ್ಯಘಮಿತಿ; ಸ್ವಯಂಭೂಃ ಸ್ವಯಮೇವ ಪರೋಪದೇಶ ಮಂತರೇಣ ಮೋಕ್ಷಮಾರ್ಗಮನುತಿಷ್ಠದನಂತ ಚತುಷ್ಟಯೋದ್ಯೋ ಭವತೀತಿಲ ವಿಯಃ (?) ವಿಶ್ವವ್ಯಾಪೀತ್ಯರ್ಥಃ, ವಿಷ್ಣುಃ ಕೇವಲಜ್ಞಾನೇನ ವಿಶ್ವಂ ವೇವೆಷ್ಟಿ ವ್ಯಾಪ್ನೋತೀತಿ ಜಿಷ್ಣುಃ ಜಯಶೀಲ ಇತಿ; ಮಹೇಶ್ವರಝ ಮಹಾಂಕ್ಚಾಷೌ ಈಶ್ವರಶ್ವ ದೇವೇಂದ್ರ ನಾಗೇಂದ್ರ ನರೇಂದ್ರ ಸೇವಿತತ್ವಾತ್; ಸ್ಥಾಣುಃ ಪರಮಪದೇ ನಿತ್ಯಂ ತಿಷ್ಠತೀತ; ಪುರಾಣಃ ಪೂರ್ವೇಷಾಮಪಿ ಪುರುಷಾಣಾಂ ಪೂರ್ವ ಇತ್ಯರ್ಥಃ; ಅಚ್ಯುತಃ ಜ್ಞಾನಾದಿ ಸ್ವರೂಪಾತ್ಮ ನಾ ಕಿಂಚಿದಪಿನ ಚ್ಯವತ ಇತಿ; ಸರ್ವಜ್ಞಃ ಸರ್ವಂ ಜಾನಾತೀತಿ; ಸುಗತಃ ಸುಷ್ಠುಗತಃ ಅಜಿತಃ ಅಜಿತಃ ಪರೈರ್ಜೇತುಮಶಕ್ಯತ್ವಾತ್; ಪಶುಪತಿಃ ಪಶೂನ್ಮಂದಬುದ್ಧೀನಪಿ ಧರ್ಮೋಪದೇಶೇನ ಪಾತೀತಿ; ತೀರ್ಥಂಕರಃ ತೀರ್ಥಪವಚನಂ ದಿವ್ಯಭಾಷಾಂ ಕರೋತೀತಿ; ಶಂಕರಃ ಸುಖಂ ಕರೋತೀತಿ; ಸಿದ್ಧದ್ಧ ಸಕಲ ಕರ್ಮನಿಷ್ಟನ್ನಃ; ಬುದ್ಧಃ ಬುದ್ಧ್ಯತೇ ಸ್ವಸ್ಮಿನ್ ಸ್ವಸ್ವರೂಪಂ ಜಾನಾತೀತಿ; ಉಮಾಪತಿಃ ಉಮಾಕೀರ್ತಿರ್ಲಕ್ಷ್ಮೀಶ್ಚ ಕೀರ್ತಿವಲ್ಲಭೋ ಲಕ್ಷ್ಮೀವಲ್ಲಭಶ್ಚೇತಿ; ಜಿನಪತಿಃ ಅನೇಕ ಭವಗಹನ ವಿಷಮವ್ಯಸನ ಪ್ರಾಪಕಹೇತೂನ್ ದುರ್ಜಯಕರ್ಮಥ ಕರ್ಮರಾತೀನ್ ಜಯಂತಿ ನಿರ್ಮೂಲಯಂತೀತಿ ಜಿನಾಃ; ಅಪ್ರಮತ್ತಾದಿ ಗುಣಸ್ಥಾನಾದೇಕ ದೇಶವರ್ತಿನೋ ಜಿನಃ; ತೇಷಾಂಪತಿರ್ಜಿನಪತಿಃ

ಇತ್ಯಾದಿ ಸಾಸಿರದೆಂಟನ್ವರ್ಥನಾಮಂಗಳಿಂ ಶಕ್ರಂ ನುತಿಸುತ್ತಿರಲೈವತ್ತಾರು ದೇಶಂಗಳೊಳು ವಿನೇಯಜನ ಸಸ್ಯಂಗಳಂ ಧರ್ಮಾಮೃತವರ್ಷದಿಂ ತಣಿಯಿಸುತ್ತುಂ ಎಂಟು ಖರ್ವಮುಂ, ನಾಲ್ಕು ನಿರ್ಬುದಮುಂ, ಒಂಬತ್ತರ್ಬುದಮುಂ, ಒಂಬೈನೂರು ತೊಂಬತ್ತೊಂಬತ್ತು ಕೋಟಿಯುಂ, ತೊಂಬತ್ತೊಂಬತ್ತು ಲಕ್ಷಮುಂ, ತೊಂಬತ್ತೊಂಬತ್ತು ಸಾಸಿರ ವರ್ಷಂ ಪೋಗೆ ಮಾಘ ಬಹುಳ ಚತುರ್ದಶಿ ಬೆಳಗಪ್ಪ ಜಾವದೊಳಭಿಜಾತಮೆಂಬ ಮುಹೂರ್ತದೊಳ್ ಅನಂತಜ್ಞಾನದರ್ಶನ ವೀರ್ಯ [ಕ್ಷೌಯಿಕ ಸಮ್ಯಕ್ತ್ವ ಸೂಕ್ಷ್ಮತ್ವ] ಮವ್ಯಾಬಾಧಾಗುರುಲಘುತ್ವಾವಗಾಹಮೆಂಬೀ ಅಷ್ಟ ಗುಣಂಗಳೊಡಗೂಡಿ ತ್ರಿಲೋಕಾಗ್ರದೊಳ್ ಕೈವಲ್ಯಲಕ್ಷ್ಮೀಕಾಂತನಾದಂ.

ಇತ್ತಲ್ ಭರತಚಕ್ರೇಶ್ವರನೈನೂರು ದಂಡೋತ್ಸೇಧನುಂ ಕಲ್ಯಾಣವರ್ಣನುಂ ಎಂಬತ್ತುನಾಲ್ಕು ಲಕ್ಷ ಪೂರ್ವೆ ಪರಮಾಯುಷ್ಯನುಮಾಗಿ ದಶಾಂಗಭೋಗಮನನುಭವಿಸಿ ಕಡೆಯೊಳ್ ಒಂದು ದಿನಂ ಸನ್ಯಸನವಿಧಿಯಿಂ ಕೇವಳಿಯಾಗಿ ಲೋಕ್ಷಲಕ್ಷ್ಮಿಯಂ ಕೈಕೊಂಡು – ತತ್ಪುತ್ರರರ್ಕಕೀರ್ತಿಯುಮಾದಿರಾಜನಂ ಸುಬಾಹು ಯಶೋಬಾಹು ಮೊದಲಾಗಿ ಅನೇಕ ರಾಜಪುತ್ರರು ಕ್ರಮದಿಂ ರಾಜ್ಯಮನಾಳುತ್ತಿರ್ದರ್

ಅಂತುಮಾ ಕಾಲದೊಳಾ ವೃಷಭೇಶ್ವರಂ ದೀಕ್ಷೆಗೊಂಡರುದಿಂಗಳ್ ಯೋಗಂಗೈದು ಪಾರಣಾರ್ಥಂ ಬಾವಲಿಯನಿಟ್ಟು ಬಪ್ಪುದುಮಾರುಂ ನಿಲಿಸಲರಿಯದಿರೆ ಕುರುವಂಶ ಶ್ರೇಯಾಂಸಮಹಾರಾಜಂ ಪೂರ್ವಭವಸ್ಮರಣೆಯಾಗೆ ಸ್ವಪ್ನಂಗಂಡು ಬೆಳಗಿನೊಳ್ ವೈಶಾಖ ಶುದ್ಧ ತದಿಯೊಳ್ ಮುನೀಂದ್ರೋತ್ತಮಂ ಬಪ್ಪುದುಂ ನವವಿಧ ಪುಣ್ಯ ಸಪ್ತಗುಣಸಂಪನ್ನನಾಗಿ ಇಕ್ಷುರಸಮಂ ಹಸ್ತದೊಳೆರೆಯೆ ನಿರಂತರಾಯಮಾಗಲ್ ದೇವತೆಗಳ್ ಪಂಚಾಶ್ಚರ್ಯಮಂ ಮಾಡಿ ಅಕ್ಷಯದಾನವೆಂದು ಕೊಂಡಾಡಿದುದರಿಂದ [ಕ್ಷತ್ರಿಯನೆ] ಯೆಂದಂದಿಂದಂ ಪ್ರಶಂಸೆಯಂ ಮಾಡಿದರ್.

ಭರತಚಕ್ರೇಶ್ವರಂ ಶ್ರಾವಣ ಶುದ್ಧ ಪೌರ್ಣಮಿ ಶ್ರವಣಾರ್ಷ ದಿದೊಳರಮನೆಯ ಮಾರ್ಗದೊಳ್ ಪರೀಕ್ಷಿಸಲೆಂದು ಹರಿತಾಂಕುರಮಂ ಕೆದರಿಸಿ ದ್ವಿಜರೆಲ್ಲರಂ ದಾನಂಗುಡಲ್ ಬರಿಸೆ ಕೆಲಂಬರ್ ಮೆಟ್ಟುತ್ತುಂ ಬಂದರ್, ಕೆಲರಂಕುರಮಂ ಮೆಟ್ಟದೆ ನಿಲೆ ಪೆರತೊಂದೆಡೆಯಿಂ ಬರಿಸಿ ನೀವೇನು ಕಾರಣಮಂಕುರಮಂ ಮೆಟ್ಟಿ ಬಂದಿರಿಲ್ಲೆಂಬುದುಂ ಈಯಂಕುರಂ ನಿಗೋಧ ಪ್ರಾಣಿಗಳೆಂಬುದಂ ಸರ್ವಜ್ಞರಿಂ ಕೇಳ್ದೆವದರಿಂದೀ ಪರ್ವದಿನಂ ಪಾಪಭೀರುಗಳಾಗಿ ಮೆಟ್ಟದೆ ನಿಂದೆವೆನೆ ಚಕ್ರೇಶ್ವರಂ ಮೆಚ್ಚಿ ತತ್ತ್ವಾರ್ಥ ವೇದಾಧ್ಯಯನಂ ಪೇಳಿಸೆ ಸಂತೋಷಂಬಟ್ಟು ಪದ್ಮನಿಧಿಯಿಂದ ದಿವ್ಯ ಸೂತ್ರಮಂ ತರಿಸಿ ಅವರವರ ವ್ರತ ಶೀಲ ದೃಢಚರ್ಯಮಂ ಪ್ರಕಟಿಸಿ ಷಡ್ದ್ರವ್ಯ ಪಂಚಾಸ್ತಿಕಾಯ ಸಪ್ತತತ್ತ್ವ ನವಪದಾರ್ಥಂಗಳೆಂಬಿಪ್ಪತ್ತೇಳು ಮಡಿಯಾಗೆ ನವದೇವತಾಸಂಕಲ್ಪದಿಂದೊಂಬೊಂಬತ್ತೆಳೆಯಂ ಹುರಿಗೂಡಿ ಸಮ್ಯಗ್ದರ್ಶನ ಜ್ಞಾನ ಚಾರಿತ್ರಮೆಂಬೀ ರತ್ನತ್ರಯ ಪವಿತ್ರಗಾತ್ರರಿವರ ಭಾವಸೂತ್ರಕ್ಕೆ ದ್ರವ್ಯಸೂತ್ರಮನವರ ಕೊರಳೊಳಿಕ್ಕಿಸಿ ವಸ್ತ್ರಾಭರಣಾದಿಗಳಿಂ ಪೂಜಿಸಿ ಗೃಹ ಗ್ರಾಮ ಕ್ರೇತ್ರಾದಿಗಳನಿತ್ತು ಮನ್ನಿಸಿ ಧರಾಮರರ್ ನೀವೆಂದು ಕೊಂಡಾಡಿದನಂದಿಂದಾ ದ್ವಿಜರ್ಗೆ ಶ್ರಾವಣ ಶು ೧೫ ಶ್ರವಣನಕ್ಷತ್ರಮುಪಾಕರ್ಮಮೆಂಬ ಪರ್ವತಿಥಿಯಾಯ್ತು.

ಶ್ರೀಮದಾದಿಪರಮೇಶ್ವರಂ ಮಾಘ ಬಹುಳ ಚತುರ್ದಶಿಯೊಳ್ ಶಿವಲೋಕ ಪ್ರಾಪ್ತನಪ್ಪುದುಂ ದೇವೆಂದ್ರಾದಿ ಚತುರ್ನಿಕಾಯಾಮರರೆಯ್ದು ದಿವ್ಯಮಪ್ಪ ಜಲ ಗಂಧಾಕ್ಷತ ಪುಷ್ಪ ಚರು ರೀಪ ಧೂಪ ಫಲಾರ್ಘ್ಯಂಗಳಿಂದನೇಕಾರ್ಚನೆಗಳಿಂದಾ ಕೈಲಾಸಮಂ ಪೂಜಿಸಿ ಪರಿನಿರ್ವಾಣ ಕಲ್ಯಾಣೋತ್ಸವಗಳಂ ಮಾಡಿ ಪೋಗಲಂದಿಂದಿತ್ತಲುಮಾ ತಿಥಿಯು ಶಿವರಾತ್ರಿಯೆಂಬ ಪುಣ್ಯದಿನಮಾಯ್ತು.

ಇಂತೀ ಕಥೆಯಂ ಕೇಳ್ದರ
ಭ್ರಾಂತಿಯು ನೆರೆ ಕೆಟ್ಟು ಬಳಿಕಮಾಯುಂ ಶ್ರೀಯುಂ
ಸಂತಾನವೃತ್ತಿ ಸಿದ್ಧಿಯು
ಸಂತತ ನೌಖ್ಯಂಗಳಿಹಪರಂಗಳೊಳಕ್ಕುಂ

ಇದು ಸತ್ಯಪ್ರವಚನ ಪಾರಾವಾರ ಸಮುತ್ಪನ್ನ ಕಾಲಪ್ರವರ್ತನ ಕಿಂಚಿನ್ ಮಾತ್ರದಿಂ ವಿಬುಧೇಂದು ವಿರಚಿತ ರಾಜಾವಲಿ ಕಥಾಸಾರದೊಳಾದಿಬ್ರಹ್ಮ ಸೃಷ್ಟಿ ನಿರೂಪಣಂ.

ಪ್ರಥಮಾಧಿಕಾರಂ