ಶ್ರೀಸುಜನಸ್ತುತರಖಿಳ ಕ
ಳಾಸದನರ್ ಮೋಹತಿಮಿರಮಂ ಕಳೆದು ಕರಂ
ಭಾಸುರ ವಿಚಾರದಕ್ಷರ್
ವೈಷಮ್ಯಮನುಳಿದು ಕೇಳ್ವುದೀ ಸತ್ಕೃತಿಯಂ

ಮುಂದಣ ಕಥೆಯೇನೆಂದೊಡೆ ಚಂಪಾಪುರದರಸಂ ದಂತಿವಾಹನನಾತನರಸಿ ಪದ್ಮಾವತಿ ಗರ್ಭಮಾಗಲಾಕೆಯ ಬಯಕೆಯಂ ತೀರ್ಚಲ್ ಪೋಪಾಗಲಾನೆಯನೇರಿಸಿಕೊಂಡು ಪೋಗುತ್ತಿರಲದು ಪೂರ್ವಜನ್ಮದ ವೈರದಿಂದಿರ್ವರುಮನರಣ್ಯದೊಳ್ ತಿರುಗಿಸುತ್ತಿರಲೊಂದುಮರದಡಿಯಂ ಪೊಗಲಾ ಸಮಯದೊಳಾ ಮರನಂ ಪಿಡಿದು ಪತ್ತಿದಂ ಆ ಪದ್ಮಾವತಿಯಂ ಕೊಂಡು ತಿರುಗುತ್ತುಮೊಂದು ಸರೋವರಮಂ ಪುಗೆಯಲ್ಲಿ ಬೀಳ್ವಳಂ ಸೊಂಡಿಲಿಂ ತೆಗೆದು ಸರೋವರದ ವೇದಿಕೆಯೊಳಿರಿಸಲೊರ್ವಂ ಕಮಲಮಂ ಕೊಳ್ಳಲ್ ಬಂದ ವೈಶ್ಯಂ ನೀನಾರೆಂಬುದುಂ ತನ್ನ ವೃತ್ತಾಂತಮಂ ಪೇಳೆ ತನ್ನನುಜಾತೆಗೆ ಸಮವೆಂದು ತನ್ನರಸಿಗೆ ಇವಳನಾದರಿಸೆಂದಪ್ಪೈಸಲವಳ್ ಅತ್ಯಂತ ಕೋಪದಿಂ ಮನೆಯಿಂದ ತಗುಳ್ವುದುಂ, ಪದ್ಮಾವತಿ ಸ್ಮಾನದೊಳ್ ಪ್ರಸವಿಸಲೊರ್ವ ವಿದ್ಯಾಧರನ್ ವಿದ್ಯಮೆಲ್ಲಮಂ ಧರಣೀಂದ್ರ ವಿನಾಶಕ್ಕೆ ಸ[ಲಿ]ಸಲಾತಂ ಬೇಡಿಕೊಳೆ ಉಜ್ಜಯನಿಯ ಪ್ರೇತಾವಾಸೊಳದ ಪುಟ್ಟಿದಾ ತಂ[ಗೆ] ಧರಣೀಂದ್ರಂ ಪ್ರಸನ್ನನಪ್ಪನಾಗಳ್ ತನ್ನ ವಿದ್ಯಂ ಕೈಸಾರ್ಗುಮೆಂಬಾದೇಶದಿಂದ ಸತಿಗೂಡಿ ಕಾಯ್ದುಕೊಂಡಿದ್ದ ಕೂಸಂ ಬೇಡಿಕೊಂಡು ತನ್ನಾವಾಸದೊಳ್ ಕರಕಂಡುವೆಂಬ ಪೆಸರಿಟ್ಟು ಸಾಕುತ್ತುಮಿರೆ ನವಯವ್ವನದೊಳಾ ಪುರದರಸಂಗೆ ಸಂತಾನಮಿಲ್ಲದುದರಿಂದಾನೆಯನರ್ಚಿಸೆ ಅಜು ಕರ ಕಂಡುವಂ ಪೂಜಿಸಿ ಸಿಂಹಾಸನಮನೇರಿಸೆ ಪಟ್ಟಂಗಟ್ಟಿರಲ್

ಅತ್ತ ಚಂಪಾನಗರಿಯೊಳಿರ್ದ ದಂತಿವಾಹನಂ ಮಗನೆಂಬುದರಿಯದೆ ಸಮರಕ್ಕುದ್ಯುಕ್ತನಪ್ಪುದುಂ ಕರಕಂಡು ಮಹಾರಾಜನ ತಾಯಪ್ಪ ಪದ್ಮಾವತಿ ಬಂದು ತದ್ವೃತಾಂತಮೆಲ್ಲಮಂ ಪೇಳಲೊಡಂ ದಂತಿವಾಹನಂ ಚಂಪಾನಗರಕ್ಕಾತನನರಸನಂ ಮಾಡಿ ಸುಖಮಿರಲಾ ಪುರದ ದಕ್ಷಿಣ ದಿಗ್ಭಾಗದ ಪರ್ವತದ ಮೇಲೊಂದು ವಲ್ಮೀಕದೊಳಗೊಂದು ಶ್ವೇತಗಜ ದಿನಂಪ್ರತಿ ಸರೋವರದಿಂದ ತಾವತೆಯುದಕಮನೆರೆದು ನಾನಾ ಪುಷ್ಪಗಳಿಂ ಪೂಜಿಸುತೆ ಪ್ರದಕ್ಷಿಣ ನಮಸ್ಕಾರಮಂ ಮಾಡುತ್ತಿರಲಾ ವಾರ್ತೆಯಂ ಕರಕಂಡು ಮಹಾರಾಜಂ ಕೇಳಿ ಅಲ್ಲಿಗೆಯ್ದಿ ನೋಡುತ್ತಂ ಪುತ್ತಮನಗೆಯಿಸಿದೊಡಲ್ಲಿ ಸಹಸ್ರ ಪೆಡೆಯುಳ್ಳ ನಾಗೇಂದ್ರಂ ಪ್ರಸನ್ನನಾಗಲಲ್ಲಿಪ್ಪ ದೇವರಂ ಪೂಜಿಸಿ ಆನೆ ಸದ್ಗತಿಯಂ ಪಡೆಯೆ ಕರಕಂಡು ಮಹಾರಾಜಂ ಮೊದಲಾಗೆ ಸರ್ವರುಂ ಪೂಜಿಸುತ್ತೆ ಬರಲಲ್ಲಿಂದಿತ್ತ ಸರ್ಪನಂ ರಚಿಸಿ ಪೂಜಿಸುತ್ತೆ ಸಂತಾನಾಭಿವೃದ್ಧಿಯಂ ಪಡೆವರ್. ಮತ್ತಂ ಚಿಂಚಗಾತೆಯೆಂಬೂರಗೌಡನ ಪೆಂಡತಿ ಪುತ್ತಮಂ ಪೂಜಿಸಲಂದಿಂದಂ ಹಿಟ್ಟಿನ ಬಂಡಿ ಹಾಲುತುಪ್ಪ ಮೊದಲಾಗಿ ಪುತ್ತಮಂ ಪೂಜಿಸುತ್ತೆ ಬಂದರ್.

ಅತ್ತಲಯೋಧ್ಯಾಪುರದೊಳಜಮಹಾರಾಜಂ ತನ್ನ ದೇಶದೊಳಿರ್ದರಣ್ಯಮೆಲ್ಲಮಂ ಪುರಂಗಳಂ ಮಾಡಿಸಿರಲನರಣ್ಯನೆಂಬ ಪೆಸರಾಗಿರಲಾತನ ಸಭೆಯೊಳ್ ಋಷಿಗಳುಂ ಬ್ರಾಹ್ಮಣರುಂ ಸಂವಾದಮಾಗೆ ದೇವರು ಮೂರ್ತಿಸ್ವರೂಪನಪ್ಪ ಉಪಾಧಿಯುಳ್ಳನದರಿಂದ ಮೂರ್ತನೆ ನಿರಂಜನನಪ್ಪನವನ ಸ್ವರೂಪವನರಿವುದಾರ್ಗಂ ಶಕ್ಯಮಲ್ಲದರಿಂ ನಿಷ್ಕಳಂಕನವನ ಗುರುತುಮಾತ್ರಮಂ ಗೋಳಾಕಾಕೃತಿಯಿಂ ಲಿಂಗಮಂ ಮಾಡಿ ಪೂಜಿಸಲ್ ನಿಶ್ಚೈಸಿದರ್.

ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಮ್
ಲಿಂಗಾದ್ಬಾಹ್ಯಂ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್

ಎಂದು ಲಿಂಗಪ್ರತಿಷ್ಠೆಯಂ ಮಾಡಿದರಲ್ಲಿಂದಿತ್ತ ಕೆಲಂಬರೀಶ್ವರನ ಲಿಂಗಮದಂ ಬ್ರಹ್ಮ ವಿಷ್ಣು ಪರೀಕ್ಷೆಯೊಳಂ ಋಷಿಯ ಶಾಪನಿಮಿತ್ತದಿಂದಂ ಲಿಂಗಮಂ ಪೂಜಿಸಿದರೆಂದರ್.

ಮತ್ತಂ ಸ್ವಸ್ತಿಕಾವತಿಯೊಳ್ ವಿಶ್ವಾವಸುಮಹಾರಾಜನಾತನ ಮಗಂ ವಸುವೆಂಬಂ ಆ ಪುರದೊಳ್ ಕ್ಷೀರಕದಂಬನೆಂಬನಾತನ ಮಕ್ಕಳ್ ನಾರದನುಂ ಪರ್ವತನುಮೆಂಬಿರ್ವರುಂ ಪೆರರ ಕುಮಾರರ್ ಸಹಿತಮೈನೂರ್ವರ್ಗಂ ಪನ್ನೆರಡು ವರ್ಷಂಬರೆಗಮನೇಕ ಶಾಸ್ತ್ರಂಗಳಂ ಕ್ಷೀರಕದಂಬನು ಕಲಿಸಲೆಲ್ಲುರುಂ ಯಥೋಪದಿಷ್ಟಗ್ರಾಹಿಗಳಾದರ್. ಪರ್ವತನು ನಾರದನ ಮೇಲಣ ವೈಷಮ್ಯದಿಂ ವಿಪರೀತಗ್ರಾಹಿಆಗಿ ನಾರದನ ಮೇಲೆ ಇತರನಾಗಿ ಅಜೈರ್ಹೋತವ್ಯಮೆಂಬ ಸೂತ್ರಮಂ ಪಶುವಾಚಿಯೆಂದು ತನ್ನ ಶಿಷ್ಯರ್ಗುಪದೇಶಂಗೆಯ್ಯಲೆಲ್ಲರುಂ ಕೇಳ್ದಾತನ ಊರಿಂ ತಗುಳೆ ದುಃಖದಿಂ ವನಮಂ ಪೊಕ್ಕಿರಲಲ್ಲಿಗರುವತ್ತು ಸಾಸಿರ ದೇವತೆಗಳ್ಗಧೀಶ್ವರನಪ್ಪ ಮಹಾಕಾಳನೆಂಬ ದೇವಂ ಭೌಮವಿಹಾರಾರ್ಥಂ ಬರುತ್ತಿರ್ದೀ ಬ್ರಾಹ್ಮಣನಂ ಕಂಡು ಜನ್ಮಾಂತರದ ವೈರಿಯಪ್ಪ ಸಾಕೇತದರಸಂ ಸಗರ ಸುಲಸಾ ವಿಶ್ವಭೂಪ್ರಭೃತಿಗಳನುಪಾಯದಿನಪಾಯಂ ಮಾಡಿ ಇಹಪರದೊಳಾಪತ್ತಂ ಪೊರ್ದಿಸಲೆಂದಾ ಪರ್ವತಂಗೆ ವೇದಶಾಸ್ತ್ರಮೆಂಬಥರ್ವಣಂಗಳುಮಂ ಅರವತ್ತಾರು ಸಾಸಿರ ಮರೀಚಿಗಳುಮನುತ್ಪಾದಿಸಿ ಕೊಟ್ಟಾತಂಗೆ ಪಶ್ಯಾದ್ಯಾಭಿಚಾರಗಳಂ ಕಲಿಸಿ ತಚ್ಛಾಂತಿಹೇತುವಾಗೆ ಯಜ್ಞಮಂ ಪ್ರಕಟಿಸಿ ನಾಲ್ಕು ಸಾವಿರ ದೇವತೆಗಳಂ ಪರ್ವತಂಗಪ್ಪೈಸಿಕೊಟ್ಟ ಯೋಧ್ಯೆಗೆ ಕಳಿಪುವುದುಂ ಸಗರ ವಿಷಯಕಂ ರೋಗಂ ಸಂಭವಿಸೆ ಯಜ್ಞಕ್ರಿಯೆಯಿಂ ತಚ್ಛಾತಿಹೇತುವಾಗೆ ಬೊಂದಿಗೆವೆರಸು ಸ್ವರ್ಗಕ್ಕೆ ಪೋಪಂತಾಗೆ ಮಾಡಿ ಅರವತ್ತು ಸಾವಿರ ಪಶುಗಳಂ ಪುಲಸೆಯಂ ಪಟ್ಟದ ಕುದುರೆಯಂ ಯಜ್ಞಂ ಮಾಡಿ ತೋರಿಸಲೆಲ್ಲರುಂ ನಂಬೆಯನೇಕ ಜನಂಗಳ್ ನಿಲಿಸಿದೊಡಂ ನಿಲ್ಲದೆ ನಡೆಯಲಲ್ಲಿಂದಿತ್ತಲ್ ಹಿಂಸಾಯಜ್ಞಂ ಪುಟ್ಟಿ ನಡೆಯಿತು.

ಮತ್ತಂ ಮಿಥಿಳಾಪುರದ ಹರಿವಂಶ ಜನಕಂ ಮೊದಲಾದ ಕ್ಷತ್ರಿಯರ್ ಯಜ್ಞಾಕಾಂಕ್ಷೆಯಂ ಮಾಡಿಸುತ್ತಂ ಬಂದರ್ ಬಳಿಕಮಯೋಧ್ಯೆಯೊಳ್ ದಶರಥಮಹಾರಾಜನಾತಂಗೆ ರಾಮನುಂ ಲಕ್ಷ್ಮಣನುಂ ಭರತನುಂ ಶತ್ರುಜ್ಞನುಮೆಂಬ ನಾಲ್ವರ್ ಮಕ್ಕಳ್ ಅವರೊಳ್ ರಾಮಂಗೆ ಸೀತಾದೇವಿ ಪೆಂಡತಿಯಾಗಲ್ ರಾವಣಂ ಭವಬದ್ಧ ಸಂಬಂಧದಿಂದ ಲಂಕಾಪತಿ ಕೊಂಡೊಯ್ದಡೆ ರಾಮಂ ಸುಗ್ರೀವ ಹನುಮಂತ ನಳ ನೀಳ ಜಾಂಬವಾದಿಗಳಾದಿಯಾಗಿ ಪೋಗಿ ರಾವಣನಂ ಕೊಂದು ಸೀತೆಯಂ ತಂದು ಪ್ರಜೆಗಳ ಮಾತಿಗವಳಂ ಬಿಡೆ ಲವಾಂಕುಶರೆಂಬ ಮಕ್ಕಳ್ ಪುಟ್ಟಿ ಅತಿಶೌರ್ಯಯುತರಾಗಿ ಬಂದು ತಂದೆಗಳೊಳ್ ಜಗಳಂ ಮಾಡೆ ತಿಳಿದು ಮಕ್ಕಳು ಸಮೇತ ರಾಜ್ಯಮಂ ಪ್ರತಿಪಾಲಿಸಿ ಕಡೆಯೊಳ್ ತಪದಿಂ ಮೋಕ್ಷಲಕ್ಷ್ಮೀಪತಿಯಾಗಲ್ ಇತ್ತ ತತ್ಪುತ್ರಂ ವಿಜಯರಾಮಂ ರಾಜ್ಯಂಗೆಯ್ದು ತಪಮಂ ಕೈಕೊಂಡನಿಂತು ಇಕ್ಷ್ವಾಕುವಂಶ ಕುರುವಂಶ ನಾಥವಂಶ ಉಗ್ರವಂಶಮೆಂಬಿವರೊಳೆ ಚತುರ್ಮಿಂಶತಿ ತೀರ್ಥಕರರುಂ ದ್ವಾದಶ ಚಕ್ರವರ್ತಿಗಳುಂ ನವಬಲದೇವರುಂ ವಾಸುದೇವರುಂ ಏಕಾದಶ ರುದ್ರರುಂ ಮುಂತಾಗಿಯನೇಕ ಪುಣ್ಯಪುರುಷರ್ ಪುಟ್ಟಿ ಸ್ವರ್ಗಮುಕ್ತಿಯಂ ಪಡೆದರೆ ಹರಿವಂಶದೊಳ್ ಯದುವೆಂಬರಸನಿಂದಿತ್ತಲ್ ವಂಶ ಯದುವಂಶಮಾಗಲಿಲ್ಲ ಶೂರವೀರರೆಂಬರ್ ಪುಟ್ಟಿದೊಡಾ ಶೂಲಮಹಾರಾಜಂ ಶೌರಿಪುರಮಂ ಮಾಡಿಸಿದಂ.

ಅತ್ತಲ್ ಕುರುವಂಶದವರ್ ಹಸ್ತಿನಾಪುರದೊಳ್ ಶಾಂತಿ ಕುಂಥು ಅರಚಕ್ರವರ್ತಿಗಳ್ ಪುಟ್ಟಿ ಶಿವಲೋಕದೊಳ್ ಶಾಶ್ವತಸಂಖಪ್ರಾಪ್ತರಾದರಿತ್ತಲನೇಕವತ್ಸರಂ ಕಳೆಯಲಾ ವಂಶದೊಳ್ ಶಕ್ತಿಯೆಂಬರಸಂಗಂ ಧಾರಿಣಿಯೆಂಬರಸಿಗಂ ವಶಿಷ್ಟನೆಂಬ ಮಗನಾದೊಡಾತಂ ರಾಜ್ಯದೊಳಿರ್ದು ಪರಾಶರನುಂ ಶಂತನುಮೆಂಬಿರ್ವರ್ ಮಕ್ಕಳಾಗೆ ಶಂತನುಗೆ ಪಟ್ಟಂಗಟ್ಟಿ ಪರಾಶರಂಬೆರಸು ಪರಿವ್ರಾಜಕನಾಗಿ ಪಂಚಾಗ್ನಿ ಮಧ್ಯದೊಳ್ ತಪಂಗೆಯ್ಯುತ್ತಿರಲಾ ಮಾರ್ಗದೊಳ್ ವೀರಭದ್ರ ವೀರಭದ್ರನೆಂಬ ಮಹಾತಪೋಧನರ್ ತೀರ್ಥವಂದನಾ ನಿಮಿತ್ತಂ ಪೋಗುತಿರ್ಪರಂ ಕರೆದೆನ್ನ ತಪಸ್ಸಾಮರ್ಥ್ಯದಿಂದಗ್ಗಳಮುಂಟೆ ಎಂಬುದುಮೀ ತಪದಿಂ ಸಾವದ್ಯಮಪ್ಪುದರಿಂ ನಿಷ್ಟನ್ನತೆಯಾಗಲರಿಯದೀ ಕಾಯಕ್ಲೇಶದಿಂ ಸ್ವರ್ಗಾದಿ ಸುಖಮಂ ಮಾಳ್ಕುಮೆನಲತ್ಯಂತ ಕೋಪದಿಂ ಸಾವದ್ಯಮೆಂತಪ್ಪುದಂ ತೋರೆಂದಾ ಗ್ರಹಂಗೆಯ್ಯಲಲ್ಲಿರ್ದ ಪುಳ್ಳೆಯಂ ಕುಠಾರದಿಂದ ಸೀಳಿಸಿದೊಡಲ್ಲಿರ್ದ ಕ್ರಿಮಿ ಪಿಪೀಲಿಕ ಸರ್ಪಂಗಳಾದಿ ನಾನಾ ಜೀವರಾಶಿಗಳ್ ಬೆಂದು ಕೆಲವು ಒರಲುತ್ತಿರ್ದ ಪ್ರಾಣಿಗಳಂ ತೋರಿ ತಪಕ್ಕೆ ಜ್ಞಾನಮೆ ಕಾರಣಂ ಅನಶನಾದಿ ತಪಂಗಳ್ ಮುಕ್ತಿ ಸಾಧನಮೆಂಬುದುಂ ವಶಿಷ್ಟಂ ವಿಶಿಷ್ಟಮಾದನಶನಾದಿ ತಪಮಂ ಕೈಕೊಂಡು ಏಕೋಪವಾಸ ಪಷ್ಟೋಪವಾಸ ಪಕ್ಟೋಪವಾಸಂಗಳಂ ಮಾಡಿ ಬಳಿಕಂ ನಿರವದ್ಯಮಾಗಿ ಮಾಸೋಪವಾಸಮಂ ಕೈಕೊಂಡು ಮಧುರಾಪುರದ ಬಹಿರುದ್ಯಾನದೊಳ್ ಕಾಯೋತ್ಸರ್ಗದಿಂ ಧ್ಯಾನಾರೂಢನಾಗಿರ್ಪುದುಂ ತತ್ಪುರಾಧಿಪನಪ್ಪ ಸೋಮವಂಶದುಗ್ರಸೇನಮಹಾರಾಜಂ ಪುರಜನ ಸಮೇತಂ ವನವಿಹಾರಾರ್ಥಂ ಬಂದಾ ಋಷಿಯಂ ಕಂಡೀ ತಪಸ್ವಿಗಳ ಮಾಸೋಪವಾಸದ ಪಾರಣೆಯಂ ನಾನೇ ಮಾಡಿಸುವೆನೀ ಪೊಳಲೊಳಾರುಂ ಮಾಡಿಸಲೇಗದೆಂದು ಘೋಷಿಸಲಾ ಮುಮುಕ್ಷು ಕೈಯೆತ್ತಿಕೊಂಡು ಮಾಸೋಪವಾಸದ ಪಾರಣೆಗೆಂದು ಪಟ್ಟಣಮಂ ಪೊಕ್ಕು ಚರಿಸುತ್ತಿರಲರಸನ ಪಟ್ಟದಾನೆಗೆ ಮದವೇರಿ ಕಂಭಮಂ ಕಿಳ್ತು ಜನಕ್ಷೋಭಮಂ ಮಾಡಲಾ ವ್ಯಥಿಕರದಿಂ ಯತಿಯಂ ನಿಲಿಸಲ್ ಮರೆಯೆ ಮುನಿಗಳ್ ಅಲಾಭಮಾಗೆ ಪೋಗಿ ಬಳಿಕೊಂದು ತಿಂಗಳ್ ತಪಂಗೆಯ್ದು ಚರಿಗೆವರೆಯಾ ದಿವಸಮರಮನೆಯಂ ಕಿಚ್ಚು ತಗುಳಿರಲದರಿಂದ ವ್ರತಿಗಳಂ ನಿಲಿಸಲ್ ಮರೆಯಲಾ ಸಮಯಕಮಲಾಭಮಾಗೆ ತಪೋವನಕೆಯ್ದಿ ತ್ರಿಮಾಸಾಂತರದೊಳ್ ಬಂದ ಯೋಗಿಯಂ ನಿಲಿಸಲರಸನ ಬಿಯಗರಂ ಕಳುಹಿಸಲ್ ಸಂದಣಿಯಿಂ ಮರೆಯಲಾ ತಪೋಧನಂ ತಿರುಗಿ ವನಮನೆಯ್ದಲ್ ಶಕ್ತಿಯಿಲ್ಲದೆ ದಡದಡಿಸುತ್ತೆ ತರಗೆಲೆಯಂತೆ ತೂರಾಡುತ್ತೆ ಬಪ್ಪುದಂ ಪುರಜನಂಗಳ್ ಕಂಡು ಈ ಪುರದರಸು ತಾನುಂ ನಿಲಿಸನಾರುಮಂ ನಿಲಿಸಲೀಯನ್ ಏನು ವೈರವೊ ಎಂಬ ವಚನಂ ತಾಪಸಿಯ ಕಿವಿಯಂ ಪುಗೆ ಕ್ರೋಧವಂಕುರಿಸಿದಾ ಸಮಯದೊಳ್ ಅವಸಾನಮಾಗಲಾತನ ತಪಕ್ಕೇಳು ದೇವತೆಗಳ್ ಬಂದೆಮಗೆ ಬೆಸನಾವುದೆನೆ, ಉತ್ತರ ಭವಕ್ಕೊದಗುವುದೆಂದಾಗಳೆ ಶರೀರಮನುಳಿದುಗ್ರಸೇನಮಹಾರಾಜನರಸಿ ಪದ್ಮಾವತಿಯ ಗರ್ಭದೊಳ್ ಜನಿಸೆ ಪೊಲ್ಲದ ಬಯಕೆ ಪುಟ್ಟಿ ಕೃತ್ರಿಮದರಸನಂ ರಸರುಧಿರಾದಿ ಧಾತುಗಳಂ ಪಡೆದು ತೋರಿದಳುದರಮಂ ಸೀಳಿ ರಕ್ಷಮಂ ಕುಡಿದಾಗಳೆ ಪತಿ ಸತ್ತನೆಂದು ಮೂರ್ಛೆಗೆ ಸಂದೆಚ್ಚೆತ್ತು ದುಃಖಿಸುತ್ತಿರಲರಸನಿಪ್ಪನೆಂದು ತೋರೆ ಸುಖಮಿರ್ದ ನವಮಾಸಂ ನೆರೆಯೆ ಗುಂಡುಗೂಸು ಪುಟ್ಟಿದೊಡದರ ಮುಖಮಂ ತಂದೆ ನೋಡೆ ಕಡೆಗಣ್ಣೊಳ್ ಕಿಡಿ ಸೂಸೆಯಾ ಶಿಶುವಿಂದರಿಷ್ಟವೆಂದು ಮಂಜೂಷೆಯೊಳಿಟ್ಟು ವಂಶವಂ ಬರೆಯಿಸಿ ಜಗುನೆಯೊಳ್ ಬಿಡಲಾ ಮಂದಾಸಂ ನೀರೊಳ್ ಬಪ್ಪುದುಂ ಕೌಶಂಬಿಪುರದ ಕಿರಾತಂ ಕೊಂಡು ಪೋಗಿ ಶಿಶುವಂ ಕಂಡು ಕಂಸನೆಂದು ಪಡಸರಿಟ್ಟು ಸಲಹಿದೊಡೆ ಬೆಳೆದತಿಪ್ರಚಂಡನಾಗಿ ಪಟ್ಟಣಮಂ ಕ್ಷೋಭಿಸಲೆಲ್ಲರುಂ ಕೂಡಿಯಲ್ಲಿ ಪೊರಮಡಿಸಲ್ ಶೌರಿಪುರದ ಅಂಧಕವೃಷ್ಣಿಮಹಾರಾಜನನುಜಂ ನರಪತಿವೃಷ್ಟಿಯೆಂಬ ಅಧಿರಾಜಗಂ ಸಮುದ್ರವಿಜಯನಾದಿಯಾಗೆ ಕುಮಾರರ್ ಪತ್ತು ಜನರಿಂ ಕಿರಿಯ ವಸುದೇವನಲ್ಲಿಗೆ ಬಂದು ಬಿಲ್ವಿದ್ಯೆ ಮೊದಲಾದನೇಕ ರಾಜವಿದ್ಯಮಂ ಕಲ್ತು ಸಮರ್ಥನಾಗಿ ಸಿಂಹರಥನಂ ಪಿಡಿದು ತಂದು ಜರಾಸಂಧಂಗೊಪ್ಪಿಸೆ ಪ್ರತಿಜ್ಞೆಯಿಂ ತನ್ನ ಮಗಳ್ ಜೀವಂಜಸೆಯನರ್ಧರಾಜ್ಯಮುಮಂ ಕುಡುವಲ್ಲಿ ಮಧುರೆಯಂ ಬೇಡಿ ಪಡೆದು ತಂದೆತಾಇಗಳನಸಿಪಂಜರದೊಳಿಕ್ಕೆ ತಮ್ಮ ಚಿಕ್ಕಯ್ಯನ ಮಗನತಿಮುಕ್ತನೆಂಬಂ ದೀಕ್ಷೆಯಂ ಕೈಕೊಂಡೊಡಾತನಿಂ ಕಿರಿಯ ದೇವಕೀದೇವಿಯಂ ವಸುದೇವಂಗೆ ಮದುವೆಯಂ ಮಾಡಿ ಸುಖಮಿರಲೊಂದುದಿವಸಮತಿಮುಕ್ತಮಿನಿಗಳ್ ಅವಧಿಜ್ಞಾನಸಂಪನ್ನರಾ ಮಧುರೆಗೆ ಭಿಕ್ಷಾರ್ಥಂ ಬಪ್ಪುದುಂ ದೇವಕಿ ನಿಲಿಸಿ ಆಹಾರ ದಾನಂ ಕುಡುವಾಗಳ್ ಜೀವಂಜಸೆ ಬಂದು ಸರಸದಿಂ ಎಲೆ ಭಾವಾ ಬತ್ತಲೆಯಿರ್ದಪೆ ಈ ವಸ್ತ್ರಮಂ ಕೊಳ್ಳೆಂದು ಕೆಲದೊಳಿರ್ದ ಮೈಲಿಗೆಯಂ ಮುಂದಿಕ್ಕೆ ಮೌನದಿಂ ಪೋಪ ಮುನಿಗಡ್ಡಂ ನಿಂದು ದೇವಕಿಯ ಗರ್ಭಮಾಗೆ ಮಗನಂ ಪಡೆವಳೆಂದು ಕಾಡಿದೊಡಾ ಮುನಿಗಳೆಂದರ್ ನಿನ್ನ ಪತಿಯಂ ಪಿತನುಮಂ ಕೊಲ್ವ ಪುರುಷಂ ಪುಟ್ಟುವನೆಂದು ಪೇಳಿ ಪೋಪುದುಂ ಚಿಂತಾಕ್ರಾಂತೆಯಾಗಿರಲರಸಂ ಕೇಳಿ ನಿಶ್ಚೈಸಿಯವಳಂ ಸಂತೈಸಿದಂ. ಮತ್ತಂ ದೇವಕಿ ಗರ್ಭಮಾಗೆ ಕಂಸಂ ತನ್ನ ಗೃಹದೊಳೆ ಪ್ರಸವವಾಗಲೆಂದು ವಸುದೇವನಂ ಬೇಡಿ ದೇವಕಿಯಂ ತನ್ನ ಮನೆಗೊಡಗೊಂಡು ಬಂದು ಆಕೆ ಮೂರು ಸೂಳ್ ಪೆತ್ತಮಳ್ಗಳಂ ನೈಗಮದೇವತೆ ತೆಗೆದುಕೊಂಡರ್ಧಾಯುಷ್ಯದ ಪೆಣ್ಗೂಸುಗಳಂ ತಂದಿರಿಸಲವನಾಗಳೆ ಕೊಪ್ಪಿಸಲ್ ಮತ್ತೆ ಗರ್ಭಮಾದೇಳು ತಿಂಗಳ್ಗೆ ಪುತ್ರನಂ ಪಡೆದೊಡಂ ವಸುದೇವ ಬಲಭದ್ರರು ಕಂಸನರಿಯದಂತು ನಾರಾಯಣನಂ ರಾತ್ರಿಯೊಳೆತ್ತಿಕೊಂಡೊಯ್ವಾಗಳಾ ಪುರದ ಬಾಗಿಲ ಕವಾಟಂಗಳಾ ಶಿಶುವಿನ ಪಾದಸ್ಪರ್ಶನ ಮಾತ್ರದೊಳೆ ಕವಾಟೊದ್ಘಾಟನಮಾಗಲ್ ಪೊರಗೆ ಪೋಗಲತ್ಯಂಧಕಾರಮಾಗಿರಲ್ ಆ ಶಿಶುವಿನ ಪುಣ್ಯದೇವತೆ ಕೋಡುಗಳೊಳ್ ದೀಪಮಂ ಬೆಳಗುತ್ತುಂ ವೃಷಭಾಕಾರದೊಳ್ ಮುಂದೆ ಪೋಗುತ್ತುಂ ಜಗುನೆಯಂ ಪುಗೆ ಜಲಸ್ತಂಭದಿಂ ಮಾರ್ಗಮಾಗೆಯಲ್ಲಿ ಕೃಷ್ಣದೇವೀಗೃಹಾಸನ್ನರಾಗಿರೆ ತುರುಪಟ್ಟಿಯಿಂ ನಂದಗೋಪನೊಂದು ಪೆಣ್ಗೂಸನೆತ್ತಿಕೊಂಡು ಬಂದು ಎಲೆ ದೇವಿ ಪಲಸೂಳ್ ನಿನ್ನಂ ಪರಸಿ ಪುತ್ರನಂ ಪಡೆಯ ಲೆಂದೀಗಳುಂ ಪೆಣ್ಣುದುದರಿಂದೀ ಶಿಶುವಂ ನೀನೆ ತೆಗೆದುಕೊಳ್ಳೆಂದು ಮುಂದಿಟ್ಟು ಪೋಗಲಾ ಶಿಶುವಂ ಪೈಗರೆದಿರಲವಂ ಬಂದು ನೋಡಿ ಗಂಡುಗೂಸನತ್ಯಂತ ಸಂತೋಷದಿಂ ಕೊಂಡು ಪೋಗಿ ಮಹಾದೇವಿ ಪುತ್ರನಂ ಕೊಟ್ಟಳೆಂದು ತನ್ನ ಪೆಂಡತಿಗೆ ಕುಡೆ ಹರುಷಂ ಮಿಗೆ ಕೃಷ್ಣನೆಂದು ಪಸರಿಟ್ಟು ಸಲಹುತಿರ್ದಂ. ಇತ್ತಲಾ ಪೆಣ್ಗೂಸಂ ತಂದು ದೇವಕಿಯ ಮುಂದಿಡೆ ಪೆಣ್ಣು ಪುಟ್ಟಿದುದೆಂದು ಕಂಸಂ ಕೇಳಿ ಅದರ ಗೋಣರಿಯಿಸಲದು ಬೆಳೆದು ವಿರೂಪಿಗೆ ಕೊಪ್ಪರಿಸಿ ವಿಂಧ್ಯಗಿರಿಯೊಳ್ ತಪಸ್ವಿಯಾಗಲ್ಲಿಯೆ ಮೂರಂಗುಲಿಯಂ ಕಾಣಿಸುತ್ತುಂ ವಿಂಧ್ಯದೇವತೆಯಾಗಿ ಪೂಜಿಸಿಕೊಂಡಳ್.

ಇತ್ತ ಮಧುರಾಪುರದೊಳುತ್ಪಾತಂಗಳ್ ಪುಟ್ಟಿ ಕಂಸಂ ನೈಮಿತ್ತಿಕನಂ ಬೆಸಗೊಂಡಡೆ ನಿನ್ನ ವೈರಿಯೊರ್ವಂ ಬಳೆವನವನಿಂದಂ ನಿನಗೆ ವಿನಾಶಮಪ್ಪುದೆಂದು ಪೇಳೆ ಶತ್ರು ವಿನಾಶನ ಕಾರಣಂಗಳಂ ಮಾಡಿಸುತ್ತುಂ ಚಿಂತಿಸುತ್ತಿರೆ ಪೂರ್ವಜನ್ಮದೊಳ್ ತನ್ನ ತಪದಗ್ಗಳಿಕ್ಕೆಗೆ ಪ್ರಸನ್ನರಾಗಿ ಬೆಸನಂ ಬೇಡಿದೇಳುದೇವತೆಗಳುಂ ಬರಲೆನ್ನ ವೈರಿಯೆಲ್ಲಿದ್ದಾನೆ ಆತನಂ ಪರಿಹರಿಸುವುದೆಂಬುದುಮಾ ದೇವತೆಗಳ್ ಪೂತಿನಂ ಮೊದಲಾದ ರೂಪಿನಿಂ ಪೋಗಿ ಪರಿಭವಿಸಲಾರದೆ ವಿಷ್ಣುವಿನಿಂ ಪರಾಜಿತಂಗಗಳಾಗಿ ಪೋದವು. ಕೃಷ್ಣಂ ಬಾಲ್ಯಾರಂಭದಿಂ ತನ್ನ ಶಕ್ತಿಯೊಳೆ ಪೂತಿನಿ ಮೊದಲಾದ ದೇವತೆಗಳಂ ಗೆಲ್ದು ಗೋವರ್ಧನ ಪರ್ವತಮನೆಡಗಯ್ಯೊಳೇಳು ದಿವಸಂಬರಂ ಪಿಡಿದಿರ್ದು ಕಾಳಾಹಿಯಂ ಕೊಂದು ಕಮಲಮಂ ತಂದು ವ್ಯಾಲಶಯನಮನೇರಿ ಕಾಲದಂಡೋಪಮ ಶಾರ್ಙ್ಗಮೆಂಬ ಚಾಪಮನೇರಿಸಿ ಪಾಂಚಜನ್ಯಮೆಂಬ ಪಂಚಮುಖ ಶಂಖಮನೂದಿ ಮದದಾನೆಯ ಕೊಂಬಂ ಕಿಳ್ತು ಚಾಣೂರ ಜಗಜಟ್ಟಿ ಮೊದಲಾದ ಮಲ್ಲರನಪ್ಪಳಿನಿ ತನ್ನ ಮೇಲ್ವಾಯ್ದ ಕಂಸನ ಮಿದುಳಂ ಕಿತ್ತು ಸಮುದ್ರ ಮಧ್ಯದೊಳೇಳುದಿವಸಂ ದರ್ಭಶಯನದಿನಿರ್ದು ಇಂದ್ರನಿಂ ದ್ವಾರಾವತಿಪುರಮಂ ಪಡೆದು ಬಂದು ಶಿಶುಪಾಲನಂ ಕೊಂದು ವಿಜಯಾರ್ಧ ಪರ್ವತಮನೆಯ್ದಿ ಜಾಂಬವನನಿಕ್ಕಿ ಹಿರಣ್ಯಕಶಿಪುವಂ ಪೊಡೆದು ಮುರನಂ ಮರಣಂ ಮಾಡಿ ಎರಡನೆ ದಿವಿಯನೆಯ್ದಿ ಶಂಖಮಂ ಪೂರಿಸಿ ದೈತ್ಯರೆಲ್ಲರಂ ಸದೆದು ಮಧುಕೈಟಭರನೊದೆದು ಜರಾಸಂಧನನಾತನ ಚಕ್ರದಿಂ ಕೊಂದು ಪಾಂಡವರಂ ಪರಿಪಾಲಿಸಿ ತ್ರಿಖಂಡಾಧಿಪತಿಯಾಗಿ ದಿಗ್ವಿಜಯದೊಳ್ ಮಾಗಧವರತ ಪ್ರಭಾಸಾಮರರೆಂಬ ದೇವರಿಂ ದಿವ್ಯ ಕಟಕ ಕಟಿಸೂತ್ರ ಕುಂಡಲು ಕೇಯೂರ ಹಾರ ಮಣಿಮುದ್ರಿಕಾದ್ಯಾಭರಣ್ಯಂಗಳಂ ದಿವ್ಯ ಪೀತಾಂಬರಾದಿ ವಸ್ತ್ರಂಗಳುಮಂ ಛತ್ರ ಚಾಮರಧ್ವಜ ಸಿಂಹಾಸನಂಗಳುಂ ದಿವ್ಯಾಯುಧಂಗಳುಂ ಪಡೆದು ದೇವತೆಗಳಿಂ ಸಹಸ್ರಸುವರ್ಣ ಘಟಂಗಳಿಂದಭಿಷಿಕ್ತನಾಗಿ ಸತ್ಯಭಾಮಾ ರುಕ್ಮಿಣಿ ಲಕ್ಷ್ಮೀ ಜಾಂಬವತಿ ಪದ್ಮಾವತಿ ಗೌರಿ ಗಾಂಧಾರಿ ಸುಸೀಮಾದೇವಿಯರ್ ಮೊದಲಾಗೆ ಹದಿನಾರು ಸಾಸಿರಮಂತಃಪುರಮಂ (೧೬೦೦೦) ಸಾಸಿರ ಯಕ್ಷ ರಕ್ಷಿತಂಗಳಪ್ಪ ಚಕ್ತ ಗದಾ ಶಂಖ ಖಡ್ಗ ಧನುಶಕ್ತಿ ದಂಡಂಗಳೆಂಬೇಳು ರತ್ನಂಗಳಂ ಕೇಶವಂಗೆ ಮುಸಲ [ಹಲ] ಗದಾ ರತ್ನಮಾಲೆ ಎಂಬ ನಾಲ್ಕು ರತ್ನಂಗಳು ಬಲಭದ್ರಾಂಗಾಗೆ ಮತ್ತಂ ದಾಮೋದರಂಗೆ ಪರಿನಾರು ಸಾವಿರ ಮಕುಟಬದ್ಧರುಂ [೧೬೦೦೦], ನೂರುಪದಿಂಬರ್ ವಿದ್ಯಾಧರಮಹಾರಾಜರುಂ (೧೧೨), ಎಣ್‌ಸಾಸಿರ್ವರ್ ಗಣಬದ್ಧದೆವರುಂ (೧೬೦೦೦), ನೂರುಪದಿಂಬರ್ ನಾಲ್ವತ್ತೆಂದು ಲಕ್ಷ ಗಜಂಗಳುಂ (೪೮,೦೦,೦೦೦), ಅನಿತೆ ರಥಂಗಳುಂ (೪೮,೦೦,೦೦೦), ಒಂಬತ್ತು ಕೋಟಿಯುಂ ನಾಲ್ವತ್ತೆರಡು ಲಕ್ಷ ಪದಾತಿಯುಂ (೯,೪೨,೦೦,೦೦೦), ಪದಿನಾರು ಸಾವಿರ ವಿಷಯಂಗಳುಂ (೧೬೦೦೦) ಒಂಬೈಸಾಸಿರದೆಂಟು ನೂರೈವತ್ತು ದ್ರೋಣಾಮುಖಂಗಳುಂ (೯೮೫೦), ಇಪ್ಪತ್ತೈಸಾಸಿರ ಪತ್ತನಂಗಳುಂ (೨೫,೦೦೦), ಪನ್ನಿಚ್ಛಾಸಿರ ಖರ್ವಡಂಗಳುಂ (೧೨,೦೦೦), ಅನಿತೆ ಮಡಂಬಂಗಳುಂ (೧೨,೦೦೦), ಎಣ್ಭಾಸಿರ ಖೇಟಂಗಳುಂ (೮೦೦೦), ಇಪ್ಪತ್ತೆಂಟಂತರ ದ್ವೀಪಂಗಳುಂ (೨೮), ನಾಲ್ವತ್ತೆಂಟುಕೋಟಿ ಗ್ರಾಮಂಗಳುಂ (೪೮,೦೦,೦೦,೦೦೦), ಒಂದು ಕೋಟಿ ಸ್ವಬಂಧುಗಳ್ವೆರಸು ಶಿವದೇವಿಮಹಾದೇವಿಗಂ ಜನಿಸಿ ಪಂಚಮಹಾಕಲ್ಯಾಣಮನಾಂತು ಕೇವಲಜ್ಞಾನಿಯಾಗಿ ತ್ರಿಲೋಕಂ ಸಂದಣಿಸಿದ ಸಮವಸರಣದೊಳೂರ್ಜಯಂತಗಿರಿಯೊಳ್ ವಿಹರಿಸುತ್ತಿಪ್ಪ ನೇಮಿಶ್ವರ ತೀರ್ಥಂಕರರಲ್ಲಿಗೆ ಬಲನಾರಾಯಣರ್ ಪೋಗಿ ತಂತಮ್ಮ ಭವಾವಳಿಯಂ ಸ್ತ್ರೀಯರ ಭವಸಂಬಂಧಮಂ ದ್ವಾರಾವತಿ ಪೋಪುದಂ ಮೊದಲಾಗೆ ಎಲ್ಲಾ ಪ್ರಪಂಚಮಂ ಕೇಳ್ದು ಬಂದು ಸುಖಮಿರ್ದರಾತನ ವಂಶಂ ಪರಂಪರೆಯಿಂ ಬರೆ

ವೃತ್ತ || ನೆಗಳ್ದೀ ಯಾದವವಂಶಜರ್ ಪುರುವರಾತ್ರೀ ಸೋಮ ಶ್ರೀಪಾಲ ಭೀ
ಮಗ ಜಂಬೂಕುಳ ಸಿಂಹವಿಕ್ರಮ ಯಯಾತಿ ಶ್ರೀಪ್ರಭಾಪದ್ಮಸಾ
ಸಿಗ ಸೂರ್ಯಪ್ರಭ ಚಂದ್ರಚೂಳ ನಹುಷ ಶ್ರೇಯಾಂಸ ಗೋಪಾಲರಾ
ದಿಗಳತ್ಯಂತ ಯಶಸ್ತೀಯಂ ಪಡೆದು ಧಾತ್ರೀಪಾಲರಾದರ್ ಪಲರ್

ಇಂತೀ ಕಥೆಯಂ ಕೇಳ್ವರ
ಭ್ರಾಂತಿಯು ನೆರೆ ಕೆಟ್ಟು ಬಳಿಕಮಾಯು ಶ್ರೀಯುಂ
ಸಂತಾನವೃದ್ಧಿ ಸಿದ್ಧಿಯು
ಸಂತತ ಸೌಖ್ಯಂಗಳಿಹಪರಂ ಗಳೊಳಕ್ಕುಂ

ಇದು ಸತ್ಯಪ್ರವಚನ ಪಾರಾವಾರ ಸಮುತ್ಪನ್ನ ಕಾಲಪ್ರವರ್ತನ ಕಿಂಚಿನ್ಮಾತ್ರದಿಂ ವಿಭುಧೇಂದು ವಿರಚಿತ ರಾಜಾವಲಿ ಕಥಾಸಾರದೊಳ್ ನಾರಾಯಣ ವಿಭೂತಿ

ತೃತೀಯಾಧಿಕಾರಂ