ಶ್ರೀ ಸುಜನಸ್ತು ತರಖಿಳ ಕ
ಳಾ ಸುಗುಣವ್ರಾತ ಸತ್ಯನಿಧಿ ಸುವಿಚಾರರ್
ಭಾಸುರ ಧೀರೋದಾತ್ತರ್
ವೈಷಮ್ಯಮನುಳಿದು ಕೇಳ್ವುದೀ ಸತ್ಕಥೆಯಂ

ಮತ್ತಂ ಮುಂದಣ ಕಥಾಲಾಪಮೆಂತೆಂದೊಡಾ ರಾಜಗೃಹಪಟ್ಟಣದ ಶ್ರೇಣಿಕ ಮಹಾಮಂಡಲೇಶ್ವರನ ಪುತ್ರನಾದ ಗಜಕುಮಾರಂ ಜಿನಪಾಳಿತ ಧರ್ಮಮೂರ್ತಿಗಳೆಂಬವಧಿಜ್ಞಾನಿಗಳಂ ಕಂಡು ಪೊಡೆವಟ್ಟು ಧರ್ಮಶ್ರವಣಾನಂತರಂ ಬೆಸೆಗೊಂಡನೆಲೆ ಗುರುವೆ ಮಣಿಮಾಲಿಯೋಗೀಂದ್ರರು ಸ್ಮಶಾನದೊಳ್ ಮೃತಕಶಯ್ಯೆಯೊಳಿರ್ದಾಗಳ್ ಬೆಂದ ಶಿರೋಭಾಗಮೆಂತುಮಾದುದೆನೆ ಮುನಿಗಳಿಂತೆಂದರ್.

ಜೈಮಿನಿಪುರದ ಜಿನದತ್ತಶೆಟ್ಟಿ ಮುನಿಗಾದುಪಸರ್ಗಮಂ ಕೇಳಿಬಂದು ಕರೆದೊಯ್ದು ತನ್ನ ದೇವಾಲಯದೊಳಿರಿಸಿ ವೈದ್ಯರಂ ಬರಿಸಿ ಕೇಳ್ವುದುಂ ಸೋಮಶರ್ಮಭಟ್ಟರ ಮನೆಯೊಳ್ ಲಕ್ಷಮೂಲಮೆಂಬ ತೈಲಮಿಪ್ಪುದದರಿಂ ಬೆಂದ ಪುಣ್ಣು ಮಾಣ್ಗುಮೆನಲಲ್ಲಿಗೆ ಶೆಟ್ಟಿ ತಾನೆ ಪೋಗಿ ಸೋಮಶರ್ಮನ ಧರ್ಮಪತ್ನಿ ತೂಂಕಾರಿಯಂ ತೈಲಮಂ ಬೇಡು ಕುಪ್ಪಿಗೆಯೊಳವಲ್ಲಿ ತೆಗೆದುಕೊಂಡು ಪೋಗಿಮೆನೆ ತಾಂ ಪೋಗಿಯೊಂದು ಕುಪ್ಪಿಗೆಯಂ ತನ್ನ ಮನುಷ್ಯನ ಕೈಯೊಳ್ ಕೊಡಲಾತಂ ಬರುತ್ತಂ ಜಾರಿ ಕುಪ್ಪಿಗೆಯೊಡೆಯಲದಕ್ಕೆ ಕೋಪಿಸುವಳೆಂದಂಜಿ ಸುಮ್ಮನೆ ನಿಂದಿರ್ದ ಶೆಟ್ಟಿಯಂ ನೋಡಿ ತಿಳಿದಿಂತೆಂದಳ್. ಪೋದಡೇನಾಯ್ತು ನಿಮಗೆ ಬೇಕಾದನಿತಂ ಕೊಂಡುಪೋಗಿಮೆನೆ ಹರ್ಷಿತನಾಗಿ ಬಳಿಕೊಂದು ಕುಪ್ಪಿಗೆಯಂ ಕೊಂಡುಬಪ್ಪಾಗಳೊರ್ವ ದುಷ್ಟಂ ಉಪಾದಾನಕ್ಕೆ ಬಂದು ತಡವಾದುದಕ್ಕೆ ಬಿಕನಾಶಿ ರುಂಡೆ ಭಿಕ್ಷಮಿಕ್ಕೆಂದು ನಿಷ್ಠೂರ ವಚನಮಂ ಪೇಳ್ದೂಡಂ ದಯಾರಸದಿಂದುಪಾದಾನಮನಿಕ್ಕೆ ಶೆಟ್ಟಿಯವಳೆ ಕ್ಷಮಾಗುಣಕ್ಕಾಶ್ಚರ್ಯಂಬಟ್ಟಲೆ ತಾಯೆ ನಿಮಗೇನು ಕಾರಣ ಕೋಪಂ ಬಪ್ಪುದಿಲ್ಲಮೆಂದು ಬೆಸೆಗೊಳೆ

ಕ್ರೋಧಂ ಮೊದಲ ಕಷಾಯಂ
ವ್ಯಾಧಿ ಶರೀರಕ್ಕೆ ಉಭಯಲೋಕ ವಿರುದ್ಧಂ
ಭೇದಿಸಲನಂತ ಪಾಪ
ಕ್ಕಾಧಾರಮನುಳಿದೊಡುಳಿವನುಳಿಯದೊಡುಳಿಯಂ

ಕ್ರೋಧಂಚ ದೇಹಿನಾಂ ರಿಪುಃ ಎಂದು ನಾಮಂ ಕೋಪಮಂ ತೊರೆದೆನೆಂತೆದೊಡೆ ಆನಂದಪುರದ ದೇವಶರ್ಮನೆಂಬ ಬ್ರಾಹ್ಮಣನಾತನ ಭಾರ್ಯೆ ಕಮಳಶ್ರೀಯವರ್ಗೆಣ್ಬರ್ ಗಂಡುಮಕ್ಕಳವರಿಂ ಕಿರಿಯಾಳಾಂ ಭಟ್ಟಿನಿಯೆಂಬ ಕಡೆಯ ಮುದ್ದಿನ ಮಗಳ್ ಅತಿಭಯಸ್ಥೆಯಾಗಿ ಬೆಳೆದಿಮಿರಲೊರ್ವ ಬಂದು ತೂಂ[ಯೆಂ]ದಂಜಿಸೆ ಅತಿಭಯದಿಂ ಮನೆಯಂ ಪೊರಮಡದಿಪ್ಪುದುಂ ತೂಂಕಾರಿಯೆಂಬ ಪೆಸರಾಗಲ್ ಕೋಪಮಿಲ್ಲದರಿಗೆ ಮದುವೆ ಮಾಡಲೆಂದು ಸೋಮಶರ್ಮನತಿಕ್ಷಮಾರೂಪನಾತಂಗೆ ಪರಿಣಯನ ವಿಧಿಯಿಂ ಕುಡಲ್ ಅದರದಿಂ ನಡುಪುತ್ತಿರ್ದೊಂದು ದಿನಂ ಚಂದ್ರೋದಯದೊಳ್ ಎನ್ನರಸಂ ಪುರದೊಳಗಣ ನಾಟ್ಯಮಂ ನೋಡಿ ತಡೆದುಬಂದು ಎಲೆ ಪ್ರಿಯೆಳೆ ಕದಮಂ ತೆರೆಯೆನಲಾತಂ ತಡೆದುಬಂದುದಕ್ಕೆ ಕೋಪಿಸಿ ಕದಮಂ ತೆರೆಯದಿಪ್ಪುದು ಬಹಳ ಪೊತ್ತು ಪೊರಗೆ ಛಳಿಗಾರದೆ ಎಲೆ ತೂಂಕಾರಿ ಬಾಗಿಲ ತೆಗೆಯೆಂದುಚ್ಛಸ್ವರದಿಂ ಕೂಗಿದಾಡನತಿಕೋಪದಿಂ ಕದಮಂ ಬಿಚ್ಚಿ ಮನೆಯಂ ಪೊರಮಟ್ಟರ್ಧರಾತ್ರಿಯೊಳೆ ವನಮಂ ಪೊಕ್ಕೊಡೆ ಕಿರಾತರ್ ಕಂಡೆನ್ನುಡತೊಡವೆಲ್ಲಮಂ ಕೊಂಡೆನ್ನಂ ತಮ್ಮ ಭಿಲ್ಲರಾಜಂಗೊಪ್ಪಿಸೆಯಾತನೆನ್ನ ರೂಪಿಂಗಳಿಪಂ ತರಲಾಂ ಶೀಲದಿಂದೊಳಗಾಗದಿರಲಾತಂ ನಿಗ್ರಹಿಸುತ್ತರೆ ಸತ್ಯದೇವತತೆಗಳಾತನಂ ಭಯಂಗೊಳಿಸುವುದುಂ ಸ್ವೇಚ್ಛಾಬಾಹುವೆಂಬ ಪರದಂಗೆ ಮಾರುವುದುಮಾತಂ ತನಗೊಳಗಂ ಮಾಡಲೆಂದು ನೋಯಿಸುತ್ತಿರ್ದೊಡಂ ನಗರದೇವತೆಗಳ್ ಆತನಂ ನಿಗ್ರಹಿಸಲಾತಂ ಎನ್ನಂ ಕ್ರಿಮಿರಾಗದ ಕಂಬಳಮಂ ಮಾಳ್ವ ದ್ವೀಪಕೊಯ್ದುಮಲ್ಲಿ ಪಾರಸರಾಜಕುಲದವರಿಗೆ ಮಾರಲವರ್ ಸೆರೆಯೊಳಿಕ್ಕಿ ಪದಿನೈದು ದಿವಸಕ್ಕೊಮ್ಮೊಮ್ಮೆ ಸೆರೆಯಂ ಬಿಟ್ಟೆನ್ನ ಮೆಯ್ಯ ರಕ್ತಮಂ ತೆಗೆದು ನೂಲಿಂಗೂಡುತ್ತೆನ್ನ ಮೈವ್ರಣಕ್ಕೆ ಲಾಕ್ಷಮೂಲತೈಲಮನಿಕ್ಕಿ ಮಾಣಿಸುತ್ತಿರ್ದರಿಂತು ದುಃಖಕ್ಕೊಳಗಾಗಿರುತ್ತಿರೆ ಕೆಲವು ದಿನಸದಿಂದೆನ್ನಗ್ರಜಂ ಧನದೇವನೆಂಬಂ ಪಾರಸರಾಜನಲ್ಲಿಗೆ ಕಾರ್ಯಾರ್ಥಂ ಬಂದೆನ್ನ ಕಂಡು ಬಿಡಿಸಿಕೊಂಡು ಬಂದೆನ್ನರಸಂ ಸೋಮಶರ್ಮಂಗರ್ಪಿಸಿದಂದು ನಾಂ ಕೋಪದ ಫಲಮನಿಹಜನ್ಮದೊಳೆಯನುಭವಿಸಿದುದರಿಂ ಜ್ಞಾನಸಾಗರೆಂಬ ಗುರುಗಳಿಂ ದೇವರ ಸಾಕ್ಷಿಯಿಂ ಕ್ರೋಧನಿವೃತ್ತಿವ್ರತಮಂ ಕೈಕೊಂಡೆನು. ಲಾಕ್ಷಾಮೂಲತೈಲ ಪ್ರಯೋಗಮಂ ತಿಳಿದಿರ್ದುದರಿಂ ಲೋಕೋಪಕಾರಿಮಾಗಿ ಮಾಡಿಸಿದೆನೆಂದು ಸೋಮಶರ್ಮನ ಭಾರ್ಯೆ ತೂಂಕಾರಿ ಪೇಳೆ ಜಿನದತ್ತಂ ಪೇಳ್ದಾಕೆಯ ಕ್ಷಮಭಾವಕ್ಕೆ ಸಂತೋಷಂಬಟ್ಟೆಂತೆಂದಂ ಕ್ಷಾಂತಿಶ್ಚೇತ್ಕವಚೇನ ಕಿಂ ಎಂಬುದಲ್ಲದೆ

ಶ್ಲೋಕ || ಕ್ಷಮಾಬಲಮಶಕ್ತಾ ನಾಂ ಶಕ್ತಾನಾಂ ಭೂಷಣಂ ಕ್ಷಮಾ
ಕ್ಷಮಾವಶೀಕೃತಿಃ ಲೋಕೇ ಕ್ಷಮಯಾಂ ಕಿಂ ನ[ಸಿಧ್ಯತಿ]
ದಾನಂ ಪ್ರಿಯವಾಕ್ಸಹಿತಂ ಜ್ಞಾನಮವರ್ಗಂ ಕ್ಷಮಾನ್ವಿತಂ ಶೌರ್ಯಮ್
ತ್ಯಾಗಸಹಿತಂ ಚ ವಿತ್ತಂ ದುರ್ಲಭಮೆತಚ್ಛತುರ್ಭದ್ರಮ್ ||
ಕಾರ್ಯೇಷು ಮಂತ್ರೀ ಕರುಣೇಷು ದಾಸೀ [ಭೋಜ್ಯೇಷು] ಮಾತಾ
ಶಯನೇಷು ವೇಶ್ಯಾ
ಧರ್ಮೇನುಕೂಲಾ ಕ್ಷಮಯಾ ಧರಿತ್ರೀ [ಬಾರ್ಯಾ ಚ ಷಾಡ್ಗುಣ್ಯವತೀಹ
ದುರ್ಲಭಾ] ||

ಎಂದು ಪ್ರಶಂಸೆಗೆಯ್ದು ಲಾಕ್ಷಾಮೂಲತೈಲಮಂ ಕೊಂಡುಬಂದು ಮುನಿಯ ಬೆಂದ ಪುಣ್ಗಂ ಮಾಣಿಸೆ ಕೆಲವು ದಿವಸಮಿಪ್ಪಲ್ಲಿಯಾ ಮುನಿ ಕಾಣೆ ತನ್ನಲ್ಲಿರ್ದನರ್ಘ್ಯ ರತ್ನಂಗಳಂ ತಾಮ್ರಕರಂಡದೊಳಿಕ್ಕಿ ಮುನಿಗಳ್ ಪಟ್ಟಿರ್ಪ ಮಣೆಯ ಕೆಳಗೆ ಪೂಳ್ದಿರ್ದೊಡದನಾ ಶೆಟ್ಟಿಯ ಮಗಂ ಕುಬೇರದತ್ತಂ ತಿಳಿದಾ ಮುನಿಗಳ್ ಕಂಡಂತೆ ತೆಗೆದು ಮತ್ತೊಂದು ಬಳಿಯೊಳ್ ಪೊಳ್ವುಪೋದಂ. ಮೆತ್ತಮಾ ಮುನಿಗಳ್ ತಮ್ಮ ಯೋಗಸ್ಥಾನಕ್ಕೆ ಪೋಗಲ್ ಶೆಟ್ಟಿಯಂ ಪರಸಿ ಪೋಗೆ ತಾನು ಬಯ್ತಿಟ್ಟ ರತ್ನಕರಂಡಕಮಂ ನೋಡಲಲ್ಲಿಯಿಲ್ಲದಿಪ್ಪುದುಂ ತಳವೆಳಗಾಗಿ ಮುನಿ ಪೋದ ಮಾರ್ಗವಿಡಿದು ಪೋಗಿಯವರಂ ಮುಗುಳೊಡಗೊಂಡು ಬರುತ್ತಂ ಪೊತ್ತುಪೋಗುಲೊಂದು ಕಥೆಯಂ ಪೇಳ್ವುದೆಂದು ಶೆಟ್ಟಿ ಬೆಸಗೊಂಡೊಡೆ ಮುನೀಂದ್ರಂ ನೀಂ ಪೇಳೆಂಬುದು ತನ್ನಭಿಪ್ರಾಯಮಂ ಸೂಚಿಸಲೆಂದಿಂತೆಂದಂ.

ಈ ವಾರಣಾಸಿಪುರದರಸಂ ಜಿತಶತ್ರುವಾತನ ಮನೆ ವೈದ್ಯಂ ಧನದತ್ತನಾತಂಗೆ ಧನಮಿತ್ತನು ಧನಚಂದ್ರರೆಂಬಿರ್ವರ್ ಮಕ್ಕಳಿಗಾಗಿ ತಂದೆಯಾಜ್ಞೆಯಂ ಕೇಳದೆ ವಿದ್ಯಮಿಲ್ಲದಿರೆ.

ಶ್ಲೋಕ || ಅನೇಕ ದುಃಖಾನಿ ಭವಂತಿ ಲೋಕೆ ಚತ್ವಾರಿ ದುಃಖಾನಿ ಬಹೂನಿತಾನಿ
ಕೃಷೀ ಚ ನಷ್ಟಾಗೃಹಣೀ ಚ ದುಷ್ಟಾ ಪುತ್ರೋಷ್ಟವಿದ್ವಾನು ಧರಾಂಶ್ಚಭಾದಾ ||

ಎಂದಾ ಧನದತ್ತನಿರ್ದು ಸಾಯಲಾತನ ಜೀವಿತಮಂ ಜಿತಶತ್ರು ಮತ್ತೊರ್ವಂಗೀಯೆ ಧನದತ್ತನ ಸುತರೀರ್ವರುಂ ಸಿಗ್ಗಾಗಿಯಭಿಮಾನದಿ ಪೋಗಿ ಚಂದಾಪುರದ ಶಿವಭೂತಿಯೊಳ್ ವೈದ್ಯಶಾಸ್ತ್ರಮನೊಳ್ಳಿತ್ತಾಗಿ ಕಲ್ತು ಬಪ್ಪಾಗಳ್ ಪೇರಡವಿಯೊಳೊಂದು ಪೆರ್ಬುಲಿಯಂ ಕಣ್ಣಬೇನೆಯಿಂದೊರುಲುತ್ತಿರಲದಂ ಕಂಡು ಕರುಣಿಸಿ ಈ ಪ್ರಾಣಿಗೌಷಧಿಯಂ ಮಾಳ್ವೆನೆಂದು ಧನಮಿತ್ರ,ಧನಚಂದ್ರ ಬೇಡೆಂದೊಡಂ ದುಷ್ಟಮೃಗಕ್ಕೆ ಮದ್ದನಿಕ್ಕಿದಾಕ್ಷಣದೊಳೆ ರೋಗೋಪಶಮಮಾಗೆ ಪಸಿದಿರ್ದ ಪುಲಿಯಾತನಂ ತಿಂದುದೆಂದು ಶೆಟ್ಟಿ ಪೇಳೆ ಮನೀಶ್ವರನೆಂದನಂತಾದೊಡೆ

ಹಸ್ತಿನಾಪುರದ ವಿಶ್ವಸೇನನೆಂಬರಸಂಗೆ ಸುದತ್ತನೆಂಬ ಪರದಂ ದ್ವೀಪಾಂತರದಿಂ ಪ್ರಯತ್ನದಿಂ ರುಜಾಪಹಾರಮಾದ ಮಾವಿನ ಬೀಜಮಂ ತಂದೊಪ್ಪಿಸೆ ವನಪಾಲಂ ಕರೆದು ಕೊಟ್ಟಿದಂ ಉದ್ಯಾನದೊಳ್ ಬಿತ್ತಿ ಸಲಹುವುದೆಂದು ಪೇಳಲಾತಂ ಬಹಳವಾಗಿ ನಡಪೆ ಬೆಳೆದು ಫಲಮಾಗಲಾಕಾಶದೊಳ್ ಗರುಡಂ ಕೃಷ್ಣಸರ್ಪನಂ ಕಚ್ಚಿ ಪೋಗುತ್ತಿರಲದರ ವಿಷವೊಂದು ಫಲದ ಮೇಲೆ ಪನಿಯಲಾ ಉಷ್ಣದಿಂ ಪಣ್ಣಾದಂತಿರ್ದೊಡದಂ ವನಪಾಲನರಸಂಗೀಯೆ ತನ್ನ ಪ್ರಿಯಮಗಂ ರೋಗಿಯಪ್ಪನೆಂದವಂಗೆ ಕೊಟ್ಟಡವಂ ತಿಂದು ವಿಷ ಪೂರಿಸೆ ಸಾಯ್ವುದುಮರಸಂ ಕೋಪಿಸಿಯಾ ಮರೆವಂ ಕಡಿದು ಬಿಸಾಡಿಸುವುದಮಾ ಪೊಳಲೊಳ್ ಮತ್ತೊರ್ವಂ ರೋಗಿದಿಂ ನಿತ್ತರಿಸಲಾರದೆ ಸಾಯಲೆಂದಲ್ಲಿ ಬಿರ್ದಿರ್ದ ಕಾಯಂ ತಿನಲಾಕ್ಷಣದೊಳೆ ರೋಗಮೆಲ್ಲ ಪೋಗಿ ಸ್ವಸ್ಥಮಾಗಲದಂ ಕೇಳ್ದರಸಂ ಮರುಗುತ್ತಿರ್ದನೆಂದು

ಮತ್ತಂ ಚಂಪಾಪುರದ ಸುರಸೌಂದರಿಯೆಂಬ ಗಣಿಕೆಯೊಂದು ಗಿಳಿಯನತ್ಕಾದರದಿಂ ಸಾಕುತ್ತಿರಲದು ಸಕಲವಾದ ಕಾರ್ಯಕ್ಕನುಕೂಲದಿಂದಿರಲಾದಿತ್ಯವಾರ ಪಾಲಿಗೊಪ್ಪುತ್ತಿರಲೊಂದು ಬಟ್ಟಲೊಳು ಪಾಲಂ ತುಂಬಿಟ್ಟು ಗಿಳಿಯಂ ಬಿಟ್ಟು ಒಳಗಣ್ಣೆ ಪೋಗಿ ಬಪ್ಪನ್ನೆಗಾಕೆಗೆ ಶತ್ರುವಾಗಿರ್ದ ದೇವದತ್ತಯರಿದಾ ಪಾಲಿಂಗೆ ವಿಷಮನಿಕ್ಕಿ ಪೋಗಲಾ ಗಿಳಿಯು ತನ್ನಾಳ್ದಳ ಸಾವಂ ತಪ್ಪಿಸಲೆಂದಾ ಬಟ್ಟಲ ಕೆಡಪಲಾ ಸುರಸುಂದರಿ ಬಂದು ಗಿಳಿಯಂ ಕೊಂದುಳದುಕಾರಣಂ ವಿಚಾರಮಿಲ್ಲದವರೆಂಬುದುಂ ಶೆಟ್ಟಿಯೆಂದಂ

ರಾಜಗೃಹಪುರದ ವಿಶ್ವಭೂತಿಯೆಂಬಂ ಗಂಗಾನದಿಯೊಳ್ ಬಿರ್ದು ಪೋಪುದೊಂದಾನೆಯಮರಿಯಂ ತೆಗೆದುದದನತ್ಯಾದರದಿಂ ಸಾಕಿ ಮಹಾ ಮತಂಗನಾಗಿಪ್ಪುದುಂ ಶ್ರೇಣಿಕಮಹಾರಾಜಂ ಕೇಳಿ ಬೇಡಿಯಟ್ಟಲಾ ವಿಶ್ವಭೂತಿ ಶುಂಡಾಲನಂ ಕೊಂಡು ಪೋಗಿಯರಸಂಗೆ ಸಮರ್ಪಿಸಿದೊಡಾ ಸಾಮಾಜಂ ಮುಗುಳ್ದು ಮಠಕ್ಕೆ ಬಂದಿರಲರಸನದಂ ತರಿಸಿ ಕುಂಭದೊಳ್ ಕಟ್ಟಿಸೆ ಕಂಭಮಂ ಕಿಳ್ತುಬರಲದಂ ಕಂಡು ವಿಶ್ವಭೂತಿ ಮರಳಿ ಯರಮನೆಗೊಯ್ಯಲೆಂದು ಬಪ್ಪಾಗಳವನಂ ಕೊಂದರಣ್ಯಕ್ಕೆಯ್ದಿದುದು. ದುಷ್ಟರು ಮಾಡಿದುಪಕಾರಮನರಿಯರೆಂದುಂ.

ಮತ್ತಂ ವಾರಣಾಸಿಪುರದ ವರ್ತಕಂ ಡೊಳ್ಳು ಬೆಳೆದಿರಲಾತಂ ತನ್ನ ನಾಣ್ಯಂಗಳಂ ಚೀಲದೊಳ್ ಕಟ್ಟಿಕೊಂಡಂಗಡಿಯ ಮುಂದೆ ಕುಳ್ಳಿರಲೊರ್ವ ಕಳ್ಳಂ ಕದ್ದು ಕೊಂಡೋಡಿ ಬಪ್ಪಮಂ ತಳಾರನಟ್ಟಿ ಬರುತ್ತಿರಲಾ ಕಳ್ಳಂ ಶೆಟ್ಟಿಯಂ ಮರೆವುಗಲಾತನಂ ತನ್ನ ಚೀಲದ ಮರೆಯೊಳಿಸಿ ದುಪ್ಪಟಮಂ ಹೊದೆಯಿಸಿಕೊಂಡಿರಲ್ ತಳಾವರ್ ಬಂದುಮಿತಂಗೆ ಡೊಳ್ಳು ಸ್ವಭಾವಮೆಂದು ಮುಂದಕ್ಕೆ ಪೋಗಲವನಂ ಮರಳಿ ಕಳಿಪುವುದುಂ ಆ ಶೆಟ್ಟಿಯ ಉಡಿಯೊಳಿರ್ದ ಚೀಲಮಂ ಕೊಯ್ದುಲ್ಲಿರ್ದ ಪೊ‘ನ್ನೆಲ್ಲಮಂ ಕೊಂಡೊಪೋದಂ.

ಅಯೋಧ್ಯಾಪುರದಡವಿಯೊಳೊರ್ವಂ ಕಪಿಳನೆಂಬಂ ನೀರಿಲ್ಲದೆ ತೃಷಿಯೊಳತಿ ಬಳಲುತ್ತಿಪ್ಪಂಗೊಂದು ಗೋಲಾಂಗುಲಂ ಸರೋವರಮಂ ತೋರೆ ನೀರ್ಗುಡಿದದ ಹತಿಯಿಸಿತಿತ್ತಿಯೊಳ್ ಮುಂದೆಣ್ಗೆ ನೀರಂ ಕೊಂಡೊಯ್ದಂ ಈ ಮೇರೆ ಉಪಕಾರ ಮಾಡಿದರ್ಗಪಕಾರಂ ಮಾಡಬಹುದೆನೆ ಮುನಿಗಳಿಂತೆಂದರ್.

ಚಂಪಾನಗರಿಯೊಳೊರ್ವ ಸೋವಿಲನೆಂಬ ಪಾರ್ವನಾತಂಗೆ ಸೋವಿಲೆ ಸೋಮದತ್ತೆಯರೆಂಬಿರ್ವರ್ ಪೆಂಡಿರಾಗೆ ಗರ್ಭಮಾಗಿಯೊಂದು ಗಂಡುಗೂಸಂ ಪೆತ್ತಿಪ್ಪಿನಮಾ ಪುರುದೊಳೊಂದು ಗೂಳಿಯತ್ಯಂತ ಸಾಧುವಾದುದರಿಂದೆಲ್ಲರುಂ ಪ್ರೀತಿಯಿಂ ಗ್ರಾಸಮನಿಕ್ಕುತ್ತಂ ಪೋಷಿಸುತ್ತಿರಲೊಂದು ದಿನಂ ಸೋವಿಲನ ಗೃಹಕ್ಕೆವಪ್ಪುದುಂ ಸೋಮದತ್ತೆ ಸವತಿಯೊಳಾದ ವೈರಂದಿಂದಂಗಣದೊಳಾಡುತ್ತಿರ್ದ ಮಗುವನೆತ್ತಿಯಾ ಗೂಳಿಯ ಕೊಂಬಿನೊಳ್ ಸೆಕ್ಕಿ ಕೊಲ್ವುದುಮಂದಿಂದಾ ಪೆಣನಂ ಕೊಂಬಿನೊಳಿಕ್ಕಿಕೊಂಡು ಬರಲದಂ ಕಂಡರೆಲ್ಲುರುಮಾ ಗೂಳಿಯಂ ದಂಡಿಸುತ್ತಿರಲತಿಬಡವಾಗಿ ಮತ್ತೊಂದು ದಿನವೊರ್ವ ಶೆಟ್ಟಿಯ ಪೆಂಡತಿಯೊಳ್ ಪಾದರದ ಮಾತು ಬೀಳೆಯವಳ್ ದಿವ್ಯಮಂ ಪಿಡಿವೆನೆಂದೊಡೊಂದು ಪಾಳಮಂ ಕಾಯ್ಸಿ ಪಿಡಿಯಿಸುವ ಸಮಯದೊಳಾ ವೃಷಭಂ ಕಾದಿರ್ದ ಪಾಳಮಂ ತನ್ನ ಬಾಯೊಳ್ ಕರ್ಚಿಕೊಂಡೂರೊಳ್ ತಿರುಗಿ ತಾನುಂ ಶುದ್ಧನಾಗೆ ಸೋಮದತ್ತೆ ಮಾಡಿದನ್ಯಾಯಮಂ ತಿಳಿದು ಆಕೆಯಂ ನಿಗ್ರಹಿಸಿದರದಲ್ಲದೆ.

ಕೌಶಂಬಿಪುರದೊಳೊರ್ವ ಶಿವಶರ್ಮನೆಂಬವಾತನ ಪೆಂಡತಿ ಕಪಿಳೆಯವರ್ಗೆ ಮಕ್ಕಳಿಲ್ಲದಿರಲೊಂದು ದಿವಸಮಾ ಪಾರ್ವಂ ವನಾಂತರಕ್ಕೆ ಸಮಿದ್ದರ್ಭೆಯಂ ತರಲ್ ಪೋಗಿ ಬರುವಲ್ಲಿ ಒಂದು ಕೀರನ ಮರಿಯಂ ಕಂಡದಂ ತನ್ನ ಪೆಂಡತಿಗಂ ಕುಡೆ ಅತ್ಯಾದರದಿಂ ಮಗನೆಂದು ಸಾಕುತ್ತಿರಲನಿತಕ್ಕೆ ಕಪಿಳೆ ಗರ್ಭಮಾಗೆ ಗಂಡಮಂಗುವಂ ಪೆತ್ತದಂ ನಡುಪುತಿರ್ದು ಒಂದು ದಿನಂ ತೊಟ್ಟಿಲೊಳ್ ಕೂಸಂ ಮಲಗಿಸಿ ನಕುಲನಂ ಕಾವಲಿಟ್ಟು ಭತ್ತವಂ ಕುಟ್ಟುತ್ತೆ ಪೊರಗಿರ್ಪಾಗಳ್ ತೊಟ್ಟಿಲ ಮೇಗಳಿಂಯೊಂದು ಘಟಸರ್ಪನಿಳಿದು ತೊಟ್ಟಿಲಿಗೆ ಬಪ್ಪುದಂ ಕಂಡು ಶತಖಂಡಮಾಗೆ ಸರ್ಪನಂ ಬಾಯಿಂ ಖಂಡಿಸಿ ತನ್ನ ಸಲಹಿದಳಿಗೆ ಪೇಳಲು ಬಪ್ಪ ನಕುಲನ ಬಾಯೊಳು ರಕ್ತಮಂ ಕಂಡು ಮಗುವಂ ಕಚ್ಚಿ ಕೊಂದುದೆಂದು ಕೋಪದಿಂ ಒನಕೆಯಿಂ ಪೊಯ್ದು ಕೊಂದು ಬಳಿಕ ಬಂದು ಮಗುವಂ ನೋಡಿ ಕೀರನಂ ವಿಚಾರಮಿಲ್ಲದೆ ಕೊಂದೆನೆಂದು ಮರುಗಿದಳ್.

ವಿಚಾರಮಿಲ್ಲದವರ್ ಕಣ್ಗಾನರೆಂದು ಮತ್ತಂ ಶಾಲಿಗ್ರಾಮದ ಕೇಶವಭಟ್ಟನೆಂಬನೊಂದು ಕಾಮಧೇನುವಿನಂತಪ್ಪ ಪಶುವಂ ಪಡೆದವರ ಗೋರಸಮಂ ವಿಕ್ರಯಂ ಮಾಡಿ ಗೃಹವ್ಯಾಪಾರಮಂ ಕಳಿಯುತ್ತಿರ್ದು ತಾನೊಂದೂರಿಗೆ ಪೋಗುತ್ತಂ ತನ್ನ ಮಗಂಗೆ ಈ ಆಕಳಂ ಗ್ರಾಸಮಂ ಕೊಟ್ಟು ಸಲಹುವುದೆಂದು ಪೇಳಿ ಪೋಗಲಾತ ಸೂಳೆಗಾರನಪ್ಪದರಿಂದಂ ಸೂಳೆಯಾತನಿಂ ತರಿಸಿಕೊಂಡಿರೆ ಪಾರ್ವಂ ಬಂದಾ ವಾರ್ತೆಯಂ ಕೇಳಿ ಸೂಳೆಯಲ್ಲಿಗೆಯ್ದಿ ಪಶುವಂ ಕೊಳ್ಳಲವಳ್ ಬ್ರಾಹ್ಮಣನ ತಿರಸ್ಕಾರಂ ಮಾಡೆ ಈರ್ವರುಮವಿಚಾರಿಯಾದರಸಂಗೆ ಪೇಳಲೆಂದು ಪೋಗೆ ಆ ಸೂಳೆಯೆಂದಳೆನ್ನ ಹಟ್ಟಿಯ ಎತ್ತು ಒಂದು ಪಶುವನೀದೊಡೀ ಬ್ರಾಹ್ಮಣಂ ತನ್ನದೆಂದು ಬೀದಿಗೆ ತಂದಿರ್ದನೆನೆಯರಸನಾ ಸೂಲೆಗೆ ಕೂರ್ಪನಪ್ಪುದರಿಂದಾ ಪಶುವಂ ಕೊಟ್ಟಿಗೆಯೊಳ್ ಕಟ್ಟಿ ಪುಲ್ಲನಿಕ್ಕೆಂದಾ ಬ್ರಾಹ್ಮಣನಂ ನೂಂಕಿಸಿದನಂತವಿಚಾರಿಗಳ್ ಕಾಣರೆಂದು ಮತ್ತಮಿಂತೆಂದಂ.

ಕೌಶಂಬೀಪುರದರಸಂ ಗಂಧರ್ವನೀಕನಾತನ ಮನೆಯ ವ್ಯವಹಾರಿಯಂಗಾರವೇಗೆನೆಂಬಂ ಚರಿಗೆಮಂದ ಮಹಾಮುನಿಗಳ್ಗಾಹಾರದಾನಮನೀಯಲೆಂದವರಂ ನಿಲಿಸೆ ತನ್ನಂಗಣದೊಳವರ್ಗೆ ಪಾದೋದಕಮನೆರೆವಾಗಳ್ ಕೈಯೊಳಿರ್ದ್ದ ರತ್ನಮಂ ಕೆಲದೊಳಿಡುವದುಂ ಮಯೂರನದಮ ಮಾಂಸಖಂಡಮೆಂದು ನುಂಗಲದು ಗಂಟಲೊಳ್ ಸಿಕ್ಕಿಪ್ಪುದುಮದನಂಗಾರವೇಗಂ ಕಾಣದೆ ಮುನಿಗಳ್ ಕೊಂದರೆಂದವರಂ ಕೇಳಿ ನಾನಾ ಭಾಷೆಯಿಂ ಕಾಡಿದೊಡವರ್ ಮೋನಮಂ ಕೊಂಡಿಪ್ಪುದುಂ ಕಿಡಿಕಿಯೋಗಿ ರತ್ನಮಂ ನುಂಗಿದೆ ನಿನ್ನ ಪೊಟ್ಟೆಯಂ ಸೀಳ್ದು ರತ್ನಮಂತೆಗೆವನೆಂದಂಗಾರವೇಗನ್ರಹಿಸುವುದುಂ ಮನೀಶ್ವರರೀ ಉಪಸರ್ಗಂ ಪಿಂಗುವನ್ನಮಾಹಾರ ಶರೀರ ನಿವೃತ್ತಿಯೆಂದು ಸಲ್ಲೇಖನದಿಂ ಧ್ಯಾನಾರೂಢರಾಗಿರೆ ಕೆಲದೊಳಿರ್ದ ಕಾಷ್ಠಾಮನಿಡಲದು ಮುನಿಪನಂತಾಗಿ ಕೆಲದೊಳಿರ್ದ ನವಿಲಂ ಪೊಡೆಯಲದರ ಕಂಠಂ ಮುರಿದಾ ರತ್ನಂ ಬೀಳೆಯದಂ ಕಂಡಂಗಾರವೇಗಂ ಪ್ರಮಾದಾಜ್ಞಾನದರ್ಪದಿಂ ಮುನಿಗಿಂತುಪಸರ್ಗಂ ಮಾಡಿದೆನೆಂದು ತನ್ನ ತಾಂ ನಿಂದಿಸಿಯವರ್ಗೆ ಪೊಡೆವಟ್ಟು ತಪಮಂ ಕೈಕೊಂಡನಿಂತು ಅವಿಚಾರಿಗಳ್ ಮುಂದುಗಾಣರೆಂದು ಯತೀಂದ್ರಂ ಪೇಳೆ ಶೆಟ್ಟಿ ಬಳಕಿಂತೆಂದಂ.

ಶಾಲಿಗ್ರಾಮದೊಳ್ ಗೂಢಭೂತಿಯೆಂಬ ಬ್ರಾಹ್ಮಣಂ ಬಹುಕಾಲಂ ಸಂಪಾದಿಸಿದ ಧನಮೆಲ್ಲಮನೊಂದು ಯಷ್ಟಿಯೊಳಿಕ್ಕಿ ಯಾರು ಕಾಣದಂತೆ ಅತಿಲೋಭದಿಂದತಿ ವೃದ್ಧನಾಗಿಯುಮಾ ಕೋಲನೊಮ್ಮೆಯುಂ ಬಿಡದಿರ್ದೊಮ್ಮೆ ಗಂಗಾತಟಮನೆಯ್ದಿ ಪೋಗುತ್ತಿಪ್ಪುದುವೊರ್ವ ಧೂರ್ತನಪ್ಪ ಪಾರ್ಪನಾತನ ಯಷ್ಟಿಯೊಳ್ ಪೊನ್ನಿಪ್ಪುದಂ ತಿಳಿದಾತಂಗೆ ಛಾತ್ರನಾಗಿ ಶುಶ್ರೂಶಾದಿಗಳಂ ಮಾಡುತ್ತಂ ನಿನ್ನೊಡನೆ ನಾನುಂ ಗಂಗೆಗೆ ಬಪ್ಪೆನೆಂದಭಕ್ತಿಯಿಂದೊಡನಿರ್ದೊಂದು ದಿನದ ರಾತ್ರಿಯೊಳೊಂದೂರ ಕುಂಬಾರನ ಶಾಲೆಯೊಳ್ ನಿದ್ರೆಗೈದೆರ್ದು ಮರುವಗಲು ಪೋಗುತ್ತುಂ ಛಾತ್ರನತಿಭಯದಿಂದಾ ವೃದ್ಧಬ್ರಾಹ್ಮಣನೊಳಿಂತೆಂದಂ ಆರೂ ಕೊಡದ ಕುಂಬಾರನ ಮನೆಯ ಪುಲ್ಲಕಡ್ಡಿ ಎನ್ನ ತಲೆಯೊಳ್ ಪತ್ತಿ ಬಂದುದೀ ಪಾಪಕ್ಕೇಗೆಯ್ದೆನೆಂದು ನೊಂದು ನುಡಿದಾ ಪುಲ್ಲನಾತಂಗೊಪ್ಪಿಸಿ ಬಪ್ಪೆನೆಂದು ತಿರುಗಿ ಪೋಗಿಯಾ ಪುಲ್ಲನೊಪ್ಪಿಸಿ ಬರಲಾ ವೃದ್ಧನಾತನ ಶುದ್ಧವೃತ್ತಿಗೆ ಮೆಚ್ಚಿ ಪೋಗುತ್ತಂ ಮುಂದಣೊಂದೂರಿನ್ಲಲಿ ಯೊರ್ವನ ಮನೆಯೊಳ್ ಗ್ರಾಸಮಂ ನಿಯಮಿಸಿಯೊಂದು ಮಂಠೆಯಮಂ ಸಾರ್ದಿಪುನಿತಕ್ಕೆ ಸೂರ್ಯಾಸ್ತಮಯಾಮಾಗೆ ರಾತ್ರಿಯೊಳ್ ಶಿಷ್ಯಂ ಬರೆ ಸಂತೋಷದಿಂ ವೃದ್ಧನೆಂದನೊಂದು ಮನೆಯೊಳ್ ಗ್ರಾಸಮಂ ಪೇಳಿ ಬಂದೆನಲ್ಲಿಗೆ ನೀಂ ಪೋಗಿ ಭುಂಜಿಸಿಪ್ಪುದೆನೆ ತಾಮುಂ ದಯಮಾಡುವುದೆಂಬುದು ನಮಗೀ ರಾತ್ರಿಯಶನಂ ಬೇಡಾ ನೀ ಪೋಗಿ ಬಪ್ಪುದೆಂದುಪಚಾರವಚನದಿಂ ಕಳಿಪೆ ಪೋಗಿ ಬಂದುಮಾತನ ಮನೆಯೊಳ್ ಸಿಂಗದಂತಪ್ಪ ನಾಯಿಗಳ್ ಬಪ್ಪುದರಿಂ ಪೋಗುಲುಮಾಗದೆ ಬಂದನೆಂಬುದುಂ ಕರುಣಿಸಿ ಆ ಮರದೊಳಿರ್ದೊಂದು ಸಣ್ಣ ಬೆತ್ತಮಂ ಕೊಟ್ಟು ಪೋಗೆನೆ ಗುಡಿಯೊಳಗಣ ಮೂಲದೇ ವರ್ಗೆಡೆಯಿಲ್ಲದೆ ಪಡಿಯಂ ತೆರೆವಾಗ ಬಾಗಿಲ ಭೈರವನಮೃತಾನ್ನಮಂ ಬೇಡುವಂತೆ ದೇವರುಪವಾಸವಿರಲೆನ್ನ ಉದರಮನೆಂತು ಪೊರೆಯಲಪ್ಪುದಲ್ಲದೆಯಾ ಜಾಯಿಲ ನಾಯಿಗಳೀ ಸಣ್ಣ ಬೆತ್ತಕ್ಕಂಜುವಲ್ಲದರಿಂ ಕ್ಷೇತ್ರಂ ಮಾಳ್ವೆನೆಂಬುದುಂ ದಯಾರಸದಿಂದಾ ವೃದ್ಧನಾಗಲಿ ನನ್ನಗ್ರಯಷ್ಟಿಯಂ ಕೊಂಡು ಪೋಗಿ ಕಕ್ಕುರಂಗಳಂ ನಿವಾರಿಸಿ ಜೋಪಾನದಿಂ ತಂದುಕೊಡೆಂದಾ ಕೋಲಂ ಕುಡುವುದುಂ ತಮ್ಮ ಕೃಪೆಯಿಂದನ್ನಮನುಣ್ಬೆನೆಂದು ಕುಣಿಯುತ್ತೆ ಪೋಗಿ ತನ್ನ ದೇಶಮನೆಯ್ದಿದನದರಿಂ ದ್ರೋಹಿಗಳಂ ನಂಬಿದರ್ಗೆ ಕೇಡು ತಪ್ಪದೆಂದು ಮತ್ತಮಿಂತೆಂದಂ.

ಗಿರಿನಗರದಾನೊರ್ವ ಪೌರುಷಪುರುಷನರಣ್ಯದೊಳರಸುತ್ತಂ ಬರ್ಪಾಗಲೊಂದು ಮದಗಜಂ ಕೊಲಲಟ್ಟಿಬರಲೊಂದು ಪೆರ್ಮರನನೇರಿ ತಪ್ಪಿಸಲಾರನೆ ಪೋಪುದುಂ ತಾನಾ ಮಠದಿಂದಿಳಿದು ದೆಸೆಯಂ ನೋಡುತ್ತೆ ಬಪ್ಪಗಲರಮನೆಯ ಬಡಗಿಗಳ್ ಬೇರಿಗೆ ಬಲುಮರನನವಳೋಕಿಸುತ್ತುಂ ಬರುತ್ತಿರಲ್ ದೇವದತ್ತಂ ತಾನೇರಿದ ಬಲು ಮರಂ ಭೇರಿಗೆ ತಕ್ಕುದೆಂದಾ ಮರನಂ ಕಡಿಯಿಸಿದನದರಿಂ ದುಷ್ಟರಾದರುಪಕಾರಕ್ಕಪಕಾರಮಂ ಮಾಳ್ವರೆಂದು ಮತ್ತಮಿಂತೆಂದಂ.

ವೃತ್ಸದೇಶದ ಕೌಶಂಬಿಪುರದೊಳ್ ಶುಭಚಂದ್ರನೆಂಬನಾತನ ಭಾರ್ಯೆ ಶುಭಾವತಿಯವರ್ಗೆ ಸ್ವಯಂಪ್ರಭೆ ಮೊದಲಾಗೆ ನಾಗದತ್ತೆ ಕಡೆಯಾಗೆ ಎಣ್ಣರುಮತ್ಯಂತ ರೂಪವತಿಯರಾಗೆ ಬೆಳೆಯುತ್ತಪ್ಪಿನಮತ್ತ ವಿಜಯಾಮರ್ಧಪರ್ವತದ ದಕ್ಷಿಣಶ್ರೇಣಿಯ ರತ್ನಸಂಚಯಪತ್ತನದ ಮೇಘವಾಹನನೆಂಬ ಖೇಚರೇಂದ್ರಂ ತನ್ನ ಬ್ರಾತೃವ್ಯನಪ್ಪ ಸುಕಂಠನೆಂಬನತಿದುಷ್ಟನಾಗಿ ದುರ್ಬುದ್ಧಿಯಿಂ ನಡೆದು ತನ್ನೊಳೊಡ್ಡಿ ಕಾಳಕ್ಕನುವಾಗೆ ಕೋಪಿಸಿ ಮೇಘವಾಹನಂ ಸುಕಂಠನಂ ವಿದ್ಯಾಧ – – ಕ್ಷೇತ್ರಮಂ ಪೋಗಲೀಸದೆ ನಿರ್ದಾಟಿಸೆ ಇರವಿಲ್ಲದೆ ಕೌಶಂಬಿಪುರಕ್ಕೆಲ್ಲ ನಾಥವಾಗಿ ಬಂದು ಶುಭಚಂದ್ರಮಹಾರಾಜನಂ ಕಂಡು ತನ್ನ ವೃತ್ತಕಮಂ ಪೇಳ್ದಿಂತೆಂದಂ.

ವೃ ||     ಬಂದುದನರ್ಘ್ಯಕಾಲ ಬಲುಗಾರರೊಳಾದುದು ಸಾಲ
ನಿಂದುದು ಶತ್ರು ಮಧ್ಯ ನಿಲಲಾರದೆ ಪೋದಡೆ ಹೀನ
ಸಂಧಿ ತನುವಿಗೆ ಬಂದುದು ವ್ಯಾಧಿ ಪಿರಿದಾದ ದರಿದ್ರತೆ ಪೇಳ್ವ
ರಂದಿನ ರಾಯರಿಲ್ಲ ಜನಕ್ಕೊಂದಡಸಿದರೇಳಡಸಿತೆಂಬ ನೀತಿ ನಿಶ್ಚಯಂ ||(?)

ಎಂಬಾಂತಾಯ್ತೆನ್ನಿರವೆಂಬುದು ಶುಭಚಂದ್ರಂ ಕರುಣಿಸಿ ತನ್ನೊಳಿಂತೆಂದಂ

ಶ್ಲೋಕ || ನಷ್ಟಂ ಕುಲಂ ಕೂಪತಟಾಕವಾಪೀಪ್ರಭ್ರಷ್ಟರಾಜಂ ಶರಣಾಗತಂ ಚ
ಗಾಂ ಬ್ರಾಹ್ಮಣಂ ಜೀರ್ಣಸುರಾಲಯಂ ಚ ಯಶ್ಚೋದ್ಧರೇತ್ ಪೂರ್ವ
ಚತುರ್ಗುಣಸ್ಸ್ಯಾತ್ ||

ಎಂಬ ನೀತಿಯಂ ನೆನದಾತನಂ ಮನ್ನಿಸಿ ಭೋಗೋಪಭೋಗಂಗಳಿಂ ಸಂತುಷ್ಟನಂ ಮಾಡಿ ತನ್ನಲ್ಲಿಟ್ಟುಕೊಂಡಿಪ್ಪುದುಂ ಕೆಲವು ದಿವಸದಿಂ ತಾನಿಪ್ಪುದಕ್ಕೆ ಪ್ರತ್ಯೇಕಮಾಗಿಯೊಂದು ಸ್ಥಳಮಂ ಬೇಡಿದೊಡೊಂದು ಪರಸ್ತರಣಮಂ ತನ್ನ ಪುರದ ಕಿರಿದುವೆಡೆಯೊಳ್ ತೋರಿಯದರಲ್ಲಿ ಒಂದು ಪೊಳಲು ಮಾಡಿಸಿಕುಡೆ ಬೆರಳಂ ತೋರಿದೊಡೆ ಹಸ್ತಮಂ ನುಂಗಿದಂತೆ ಕೆಲವು ರಾಜ್ಯಮಂ ವಶ್ಯಮಂ ಮಾಡಿಕೊಂಡು ತಾನಿಪ್ಪ ಪುರಕ್ಕೆ ದುರ್ಲಂಘ್ಯಪುರಮೆಂಬ ಪೆಸರಿಟ್ಟು ‘ಸ್ವಯಮೇವ ಮೃಗೇಂದ್ರಾತಾ’ ಎಂಬಂತೆ ದರ್ಪದಿಂ ರಾಜ್ಯದೊಳ್ ನಿಂದು ಶುಭಚಂದ್ರನ ಮಕ್ಕಳೆಣ್ಬರಂ ತನಗೆ ಬೇಡಿಯಟ್ಟಿದೊಡಾತಂ ಕುಡದಿಪ್ಪುದುಂ ಮೇಲೆತ್ತಿ ಬಂದವನಂ ಕೊಂದು ತತ್ಪುತ್ರಿಯರಿಂ ಮದುವೆಯಪ್ಪುದೆನೆ ಪೆಣ್ಗಳ್ ತಮ್ಮ ತಂದೆಯಂ ಕೊಂದಾತನನಾವಂ ಕೊಲ್ವನವಂಗೆ ಸತಿಯರಪ್ಪೆವೆಂದು ಪ್ರತಿಜ್ಞೆಯಂ ಮಾಡೆಯವರಂ ಸೆರೆಯೊಳಿಕ್ಕಿ ಬಾದಿಸೆ ದೈವಾಯುತ್ತದಿಂ ಕಿರಿಯ ನಾಗದತ್ತೆಯು ಹಸ್ತಿನಾಪುರಮನೆಯ್ದಿ ಅಭಿಚಂದ್ರನೆಂಬ ತಮ್ಮ ಚಿ‌ಕ್ಕಯ್ಯಂಗರಿಪುವುದುಂ ತಕ್ಷಣದೊಳೆ ನಾಗಕುಮಾರಂಗೆ ಬಳಿಯನಟ್ಟಲಾ ಮಹಾಪುರುಷಂ ಬಂದು ಸುಕಂಠನಂ ಕೊಂದಾ ಸ್ತ್ರೀಯರಂ ಪರಿಯಣದಿ ಕೈಕೊಂಡನದರಿಂ ದುರ್ಜನರ್ಗೆ ಲೇಸ ಮಾಡಲು ಬೆಂಕಿಯೊಳ್ ಸಾಯ್ವ ವೃಶ್ಚಿಕನಂ ತೆಗೆದೊಡೆ ಕೈಯನೂರುವಂತೆ ನಚ್ಚುಗಮಂ ಮಾಳ್ವೆರೆಂದು ಜಿನದತ್ತಶೆಟ್ಟಿ ಪೇಳೆ ಗುಣಪಾಳಮುನಿಪತಿಗಳದಿಂ ಬಲ್ಲವೆಂದು ಮತ್ತೊಂದು ಕಥೆಯನಿಂತೆಂದು ಪೇಳ್ವರ್.

ದ್ವಾರಾವತಿಪುರದೊಳ್ ಶ್ರೀಮನ್ನಾರಾಯಣಂ ಸುಖದಿಂ ರಾಜ್ಯಂಗೆಯ್ವಾಗಳ್ ತತ್ಪುರೋಪವನದೊಳ್ ಯೋಗಿಶ್ವರರ್ ಬಂದಿರ್ದರೆಂದು ವನಪಾಲಕಂ ಪೇಳೆ ಕತಿಪಯ ಪರಿಜನಸಹಿತಂ ವಂದನಾಮಿತ್ತಂ ಪೋಗಿ ನಿಷ್ಕಳಂಕ ಮುನೀಂದ್ರರ್ಗೊಂದಿಸಿ ಧರ್ಮಶ್ರವಣಮಂ ಕೇಳ್ದು ತದನಂತರಮಾ ಮುನಿಗಳ ಶರೀರದೊಳ್ ವ್ಯಾಧಿಯಪ್ಪುದರಿದದಕ್ಕೆ ಚಿಕಿತ್ಸೆಯಂ ಮಾಡಿಸಲ್ ತನ್ನರಮನೆಯ ವೈದ್ಯನಂ ಬರಿಸಿ ನೋಡಿಸೆ ಪಿತ್ತಮಯಮಿದಕ್ಕೆ ನವಣಕ್ಕಿಪಟ್ಟಿನ ಪಥ್ಯದೊಳಮಿರ್ದೊಡೆ ಪೋಪುದೆನಲಾ ನಾರಾಯಣನವರುಪವಾಸದಿಂ ಪೊರಗಾಗೆ ಏಕಭುಕ್ತದಿನದೊಳ್ ನವಣಕ್ಕಿಪಿಟ್ಟಿನಿಂ ನಿರವದ್ಯಮಪ್ಪಾರಹಾರಮಂ ಕೈಯೆತ್ತಿಸುತ್ತಂ ಬರಲಾ ದಾನದಿಂ.

ಶ್ಲೋಕ || ಭೇಷಜದಾನ ಫಲೋದಯತಃ ಸ್ಯಾತ್ ಸತ್ಪಪರಃ ಸಕಲಾಯೈಶೂನ್ಯಃ
ಶಂಬರವಿದಂದು (?) ಝಷಾಂಕುಸಪದ್ಮಾದ್ಯಕ್ಷ ಯಲಕ್ಷಣ ಲಕ್ಷಿತಗಾತ್ರಃ ||

ಎಂಬೀ ಫಲಪ್ರಾಪ್ತಿಯಾಗುವಿನಂ ಪದ್ಮನಾಭನಾ ಮುನಿಗಳ್ಗೆ ಮಾಡಿದ ಔಷಧ ದಾನದಿಂದಾ ರೋಗಂ ಪಿಂಗುವುದುಮದಂ ಕೇಳಿ ವೈದ್ಯಂ ಬಂದು ನಾಂ ಪೇಳಿದ ಮದ್ದಿನಿಂ ನಿಮ್ಮ ಕುತ್ತಂ ಪೋದುವೆ ಎಂದು ಬೆಸೆದುಗೊಂಡೊಡಾ ಮುನಿ ಎನ್ನ ಕರ್ಮೊದಯದಿಂ ಬಂದು ಕರ್ಮೋಪಶಮದಿಂ ಪೋದುದೆಂಬುದುಂ ಕೋಪಿಸಿಯರಣ್ಯದೊಳ್ ಕಾಯೋತ್ಸರ್ಗಮಿರ್ದ ಋಷಿಯರಂ ವಧಿಯಿಸಲೆಂದು ಪೋಪನಂ ಪುಲಿ ತಿನ್ನೆ ಸತ್ತಮಾ ವನದೊಳ್ ಕೋಡಗನಾಗಿ ಪುಟ್ಟಿ ಯೋಗದೊಳಿರ್ದ ಮುನಿಯಂ ಕಂಡು ಕ್ರೋಧಂಪುಟ್ಟಿ ತೊಡೆಯೊಳ್ ದಸಿಯಿಂ ಬಲಿಯೆ ದೇಹದ ಮೇಲಾಸೆಯಿಲ್ಲದ ಸಮತಾಭಾವಮಾಗೆ ಶಾಂತತೆಯೊಳಿರ್ದೊಡೆ ಮುಳ್ಳುಗಳ ಮೈಯೊಳ್ ಚುಚ್ಚಿಯವರ ಪರಿಣಾಮಂಗೆಡದಿರೆ ಕಂಡು ತಾನುಂ ಕ್ರೋಧಮನಿಳಿದು ದಸಿಯಂ ಕಿಳ್ತು ಮುಳ್ಳುಗಳಂ ತೆಗೆದು ಗಾಯಕ್ಕೊಂದೌಷಧಿಯಂ ತಂದಿಕ್ಕಿ ಮಾಣಿಸಿಯಾ ಬನದೊಳಗಣ ಪಷ್ಪಂಗಳಿಂ ಪಾದಾರ್ಚನೆಯಂ ಮಾಡಿ ಉಪಸರ್ಗಂ ಪಿಂಗಿತು ಕೈಯನಿತ್ತಿಕೊಳ್ಳಿಮೆಂದು ಹಸ್ತಸಂಜ್ಞೆಯಂ ಮಾಳ್ಪುದುಮವರ್ ಕಣ್ಣಂ ತೆರೆದು ಪರಸಿ ಧರ್ಮಮಂ ಪೇಳಿಯಹಿಂಸಾವ್ರತಮಂ ಕುಡೆ ಜಾತಿಸ್ಮರಣದಿಂ ತ್ರಿಕರಣಶುದ್ಧಿಯಿಂ ಕೈಕೊಂಡು ಸದ್ಗತಿಯಂ ಪಡೆದುದೆಂದು ಗುಣಪಾಲಮುನಿ ಜಿನದತ್ತಶೆಟ್ಟಿಗೆ ಪೇಳ್ವನಿತಕ್ಕೆ ಕುಬೇರದತ್ತಂ ಕೇಳ್ದು ಬಂದುಪವಾಸಸಹಿತಂ ಪ್ರಸಂಗಿಸುತ್ತಿಪ್ಪ ಯತೀಂದ್ರರುಮಂ ತಂದೆಯಮಂ ಕೇಳಿದಾಕ್ಷಣದೊಳೆ ತಾನುಂ ಬೈತಿಟ್ಟ ರತ್ನದ ಕಳಶಮಂ ತಂದು ಮುಂದಿಡೆ ಕ್ಷಮೆಯಿಂದೀ ಸಂಸಾರದೊಳಿರ್ಪಂಗೆ ಅಜ್ಞಾನಂ ಬಿಡದೆಂದು ಇಂತೆದರ್.

ಭೋಗೇ ರೋಗಭಯಂ ಕುಲೇ ಚ್ಯುತಿಭಯಂ ವಿತ್ತೇ ನೃಪಾಲಾದ್ಭಯಂ
ಮಾನೇ ಧೈನ್ಯಭಯಂ ಬಲೇ ರಿಪುಭಯಂ ರೂಪೇ ಜರಾಯಾ ಭಯಮ್
ಶಾಸ್ತ್ರೇ ವಾದಭಯಂ ಗುಣೇ ಖಲಭಯಂ ಕಾಯೇ ಕೃತಾಂತಾದ್ಭಯಂ
ಸರ್ವಂ ವಸ್ತು ಭಯಾನ್ವಿತಂ ಭುವಿನೃಣಾಂ ವೈರಾಗ್ಯಮೇವಾಭಯಮ್
||
 – ಭರ್ತೃಹರಿಯ ಶತಕತ್ರಯ

ಎಂಬುದಂ ಬಗೆವಾ ಮುನಿಪತಿಗಳೊಡನೆ ವನಮಂ ಪೊಕ್ಕು ಪಿತನುಂ ಪುತ್ರನುಂ ತಪಮಂ ಕೈಕೊಂಡೆರೆಂದು ವಿಪುಲಮತಿಮುನಿಗಳ್ ಪೇಳ್ವುದುಂ ಗಜಕುಮಾರಂ ನೂರ್ವರರಸುಮಕ್ಕಳುಮೈವತ್ತು ಬ್ರಾಹ್ಮಣರುಮೈವತ್ತು ವೈಶ್ಯಪುತ್ರರುಂಬೆರಸು ಸಮವಸೃತಿಯನೆಯ್ದು ಒಂದು ಪಾದಲೇಪಯುಕ್ತಮಪ್ಪ ಪ್ರಥಮ ಸೋಪಾನಮಂ ಮೆಟ್ಟಿಯಾಕ್ಷಣದೊಳೆ ವಿಂಶತಿಸಹಸ್ರಸೋಪನಮಂ ಕಳೆದು ಧೂಳಿಸಾಲ ಮಾನಸ್ತಂಭ ಸರೋವರ ಪೊನ್ನುಪ್ಪರಿಕಾಗೋಪುರದಿಂದೊಳೆಗೆ ಕ್ರಮದಿಂ ಜಲಖಾತಿಕಾ ಪುಷ್ಪವಾಟಿ ಪ್ರಾಕಾರ ನಾಟ್ಯಶಾಲೋಪವನ ವೇದಿಕಾಧ್ವಜಭೂಮಿಸಾಲ ಕಲ್ಪದ್ರುಮ ಸೂಪ್ತ ಹರ್ಮ್ಮಾವನಿಯಿಂದೊಳಗೆ ಸ್ಪಟಿಕಾಪ್ರಾಕಾರದೊಳಗಣ ದ್ವಾದಶ ಕೋಷ್ಟಂಗಳೊಳ್ ಸಪ್ರವಿಧ ಋಷಿಸಮುದಾಯ ಸುರಾಸುರೋರಗ ಮನುಷ್ಯ ಮೃಗ ಪಕ್ಷಿ ಸಮೂಹದಿಂ ಬಳಸಿದ ತ್ರೀಪೀಠಂಗಳ ಮೇಲೆ ಸಿಂಹಾಸನದ ಮೇಲೆ ನಾಲ್ವೆರಳಂ ಮುಟ್ಟಿದಂಬರದೊಳಪ್ಪ ಮಹಾಪ್ರಾತಿಹಾರ್ಯದಿಂದೊಪ್ಪುವ ಸನ್ಮತಿ ಮಹತಿಮಹಾವೀರ ಶ್ರೀ ವರ್ಧಮಾನಸ್ವಾಮಿ ಕೋಟಿ ಶಶಿಸೂರ್ಯಕಾಂತಿಯಿಂ ದೇದೀಪ್ಯಮಾನದಿಂ ಪೊಳೆಯುತ್ತಿಪ್ಪುದುಂ ನೋಡಿ ತಮ್ಮ ಕಣ್ಗಳ್ ಸಫಲಂಗಳಾದುವೆಂದು ತ್ರಿಲೋಕ ಸ್ವಾಮಿಯ ಗಂಧಕುಟಿಯಂ ತ್ರಿಪ್ರದಕ್ಷಿಣಂಗೆಯ್ದು ಸಾಷ್ಟಾಂಗಪ್ರಣಾಮದಿಂ ವಸ್ತುಸ್ತವ ಗುಣಸ್ತವ ರೂಪಸ್ತವಂಗಳಿಂ ನುತಿಯಿಸಿ ಗೌಡಮಗಣಧರರ್ ಮೊದಲಾಗೆ ಋಷಿಗಳಿಗಭಿವಂದಿಸಿ ಪನ್ನೊಂದನೆಯ ಮನುಷ್ಯಕೋಷ್ಠದೊಳ್ ಕುಳ್ಳಿಪ್ಪುದುಂ ಸರ್ವಜ್ಞಮುಖ ಸರೋಜದಿಂ ಓಂಕಾರಮಾದ ಸರ್ವಾರ್ಥ ಮಾಗಧೀಯ ಭಾಷಾಸ್ವರೂಪ ದಿವ್ಯಧ್ವನಿ ಪೊಣ್ಮೆ ಗೌತಮಗಣಧರರದಂ ವ್ಯಕ್ತೀಕರಿಸಿ ಸಕಳ ತತ್ತ್ವಾರ್ಥಾದ್ಯಂತಮೆಲ್ಲಮಂ ಸವಿಸ್ತರಂ ಪೇಳಿ ಈ ಹುಂಡಾವಸರ್ಪಿಣಿ ಕಾಲಪ್ರವರ್ತಮನಿಂತೆಂದು ಪೇಳ್ವರ್.

ಈ ಅವಸರ್ಪಿಣಿಯೊಳ್ ಒಂಬತ್ತು ಕೋಟಾಕೋಟಿ ಸಾಗರೋಪಮಕಾಲಮುತ್ತಮ ಮಧ್ಯಮ ಜಘನ್ಯವೆಂಬ ಭೋಗಭೂಮಿಗೆ ಸಲ್ವನಮುಳಿದೊಂದು ಕೋಟಾಕೋಟಿ ಸಾಗರೋಪಮದೊಳ್ ನಾಲ್ವತ್ತೆರಡು ಸಾವಿರ ವರ್ಷಂ ಕುಂದಿದರೊಳ್ ಮೊದಲೈನೂರು ಚಾಪೋತ್ಸೇಧಂ ಕಡೆಯೊಳೇಳು ಹಸ್ತ ಪ್ರಮಾಣ ಶರೀರಂ ಪಂಚವರ್ಣಂಗಳ್ ದಿವದೊಳೊಂದು ವೇಳೆ ಭುಕ್ತರುಮಾ ಕಾಲದೊಳೆ ಇಪ್ಪತ್ತುನಾಲ್ವರ್ ತೀರ್ಥಂಕರರ್ ದ್ವಾದಶ ಚಕ್ರವರ್ತಿಗಳ್ ನವಬಲದೇವ ವಾಸುದೇವ ಪ್ರತಿವಾಸುದೇವರುಂ ನವನಾರದರುಂ ಏಕಾದಶ ರುದ್ರಮಂ ಪುಟ್ಟಿ ಕರ್ಮಭೂಮಿ ಪ್ರವರ್ತನದಿಂದಂ ನಡೆವುದು. ಬಳಿಯಮಿಪ್ಪತ್ತೊಂದು ಸಾಸಿರ ವರ್ಷಸ್ಥಿತಿನುಳ್ಳ ದುಷ್ಟಮಮೆಂಬ ಪಂಚಮ ಕಾಲಮದರ ಮೊದಲ್ ಎಳು ಮೊಳದುನ್ನತಂ ನೂರಿಪ್ಪತ್ತು ವರುಷಾಯಷ್ಠ ರೂಕ್ಷವರ್ಣ ಶರೀರರ್, ಎರಡು ಮೂರು ವೇಳೆ ಭುಕ್ತರ್, ಸಮ್ಯಕ್ತ್ವ ಸದಾಜ್ಞನ ಸಚ್ಚಾರಿತ್ರಹೀನರಾಗಿ ಪರಿಲೋಕಸುಖಮಂ ಬಯಸದೆ ಕ್ರೋಧಾಧಿಗಳಿಂದೊಪ್ಪುವ ನಾನಾ ಜಾತಿಗಳಾಗಿ ಮನುಷ್ಯರೆಲ್ಲಂ ವಿಪರೀತ ಗ್ರಾಹಿಗಳಪ್ಪರ್. ಮತ್ತಮಾಗಳತಿವೃಷ್ಟಿಯಮನಾವೃಷ್ಟಿಯು ಮೃಗಪಕ್ಷಿ ಮೂಷಕ ಶಲಭ ಕ್ರಿಮಿ ಪಿಪೀಲಿಕಾದಿ ಭಾದೆಯುಂ ಸ್ವಚಕ್ರಪರಚಕ್ರಾದಿಂ ರಾಜಾರಿ ಮಾರಿ ಚೋರಾದಿ ಬಾಧೆಗಳ್ ಪ್ರಬಲಮಾಗಿಪ್ಪುವು.

ಶ್ಲೋಕ || ದಾತಾ ದರಿದ್ರಃ ಕೃಪಣೋ ಧನಾಢ್ಯಃ
ಪಾಪೀ ಚಿರಾಯುಃ ಸುಕೃತೀ ಗತಾಯುಃ
ಅಕುಲೇ ಸುರಾಜ್ಯಂ ಸುಕುಲೇ ಚ ಸೇವಾ
ಕಾಲೇ ಕಲೌ ಷಡ್ಗುಣಮಾಶ್ರಯಂತಿ ||

ನಿರ್ವಿರ್ಯಾ ಪೃಥಿವೀ ನಿರೋಷಧಿರಸಾನೀ ಚಾ ಮಹತ್ವಂ ಗತಾಃ
[ಭೂಪಾಲಾ ನಿಜಕರ್ಮಧರ್ಮರಹಿತಾ ವಿಪ್ರಾಃ ಕುಮಾರ್ಗೇ ಗತಾಃ]
ಭಾರ್ಯಾ ಭರ್ತೃಷ್ಟು [ವಿರೋಧಿನೀ ಪರರ್ ತಾ] ಪುತ್ರಾ ಪಿತುರ್ದ್ವೇಷಿಣಃ
[ಕಷ್ಟಂ ತತ್ಖಲುವರ್ತತೇ] ಕಲಿಯುಗೇ ವನಾಂತಂಗತಃ ||

ಧರ್ಮಃ ಪ್ರವ್ರಜಿತಸ್ತಪಃ ಪ್ರಚಲಿತಂ ಸತ್ಯಂ ಚ ದೂರಂ ಗತಂ
ಪೃಥ್ವೀ ಮಧ್ಯ ಫಲಾ ನೃಪಾಃ ಕಪಟಿನೋ ಲೌಲ್ಯೇ ಸ್ಥಿತಾ ಬ್ರಾಹ್ಮಣಾಃ ||

ಮತ್ಯಾಕಃ ಸ್ತ್ರೀವಶಗಾಃ ಸ್ತ್ರೀ ಯೋ – – ಪಿ ಚಪಲಾಃ ನೀಚಾಜನಾ ಉನ್ನತಾಃ
ಸಾಧುಸ್ಸೀದತಿ ದುರ್ಜನಃ ಪ್ರಭವತಿ ಪ್ರಾಯೇಣ ಕಾಲೇ ಕಲೌ ||

ಮತ್ತಮೀ ದುಷ್ಟಕಾಲದೊಳ್ ಸಾವಿರ ವರುಷಕ್ಕೊರ್ವ ಕಲ್ಕಿಯುಮೈನೂರು ವರುಷಕ್ಕೊರ್ವಮುಪಕಲ್ಕಿಯುಮಪ್ಪರ್. ದುಷ್ಟಮಕಾಲದ ಕಡೆಯೊಳ್‌ಕಡೆಯ ಕಲ್ಕಿರಾಜಂ ಜಳಮಂಡನೆಂಬನಾ ಕಾಲದೊಳ್ ವೀರಾಂಗದನೆಂಬ ಋಷಿಯುಂ ಸರ್ವಶ್ರೀಯೆಂಬಜ್ಜಿಯುಂ ಅಗ್ಗಿಲನೆಂಬ ಶ್ರಾವಕನುಂ ಪಂಶುಶ್ರೀಯೆಂಬ ಶ್ರಾವಕಿಯುಮಿಪ್ಪಿನಾಗಳಾಯಷ್ಯಮಿಪ್ಪತ್ತೈದು ವರುಷಮೆರಡು ಮೊಳನುತ್ಸೇಧ ಶರೀರಂಗಳಾಗೆ ಆ ಕಲ್ಕಿರಾಜಂ ತನಗೆ ತಕ್ಕನಿತು ರಾಜ್ಯಮಂ ಸಾಧಿಸಿ ಎನಗಸಾಧ್ಯರಾರೆಂದು ಮಂತ್ರಿಯಂ ಬೆಸೆಗೊಳಲೊರ್ವ ಮನಿಯಿಪ್ಪನೆನಲಾತನೊಳೇನಿಪ್ಪುದೆಂದು ಬೆಸೆಗೊಳೆ ಬಾಹ್ಯಾಭ್ಯಂತರ ಪರಿಗ್ರಹ ರಹಿತನುಂ ಸಕಲ ಸಂಯಮಸಂಪನ್ನನುಂ ಸ್ವಾತ್ಮಧ್ಯಾನನಿರತನುಮಾಗಿ ಶರೀರ ಸಂರಕ್ಷಣಾರ್ಥಮಾಗೆ ಮಧ್ಯಾಹ್ನಕಾಲದೊಳ್ ಪರಗೃಹದಲ್ಲಿ ನಿವವದ್ಯಾಹಾರಮಂ ಪಾಣಿ ಪುಟದೊಳ್ ಚರಿಗೆಯಂ ಮಾಳ್ವನೀತನೊರ್ವಂ ನಿನಗೆ ತೆತ್ತು ಬಾಳ್ವನಲ್ಲೆಂಬುದುಂ ಕಾಲಾವಸಾನಮಪ್ಪುದರಿಂದಾತನ ಮೊದಲ ತುತ್ತಂ ಸುಂಕಂಗೊಳ್ಳಿಮೆಂದು ದೂತನನಟ್ಟಲವರ್ ಪೋಗಿ ಬೇಡಿದೊಡಾ ಮುನಿಗಳ್ ಪಾನೀಯಮಂ ಕೊಟ್ಟಂತರಾಯಮಾಗೆ ನಿಜಯೋಗಸ್ಥಾನದೊಳಿಪ್ಪುದುಂ ಅಜ್ಜಿಕೆಯರುಂ ಶ್ರಾವಕ ಶ್ರಾವಕಿಯರುಂ ಪೋಗಿ ಮುನಿಗಳಂ ಕೇಳ್ದೊಡವರಧಿಜ್ಞಾನದಿಂ ಕಾಲಾವಸಾನಮಾಯ್ತಿನ್ನು ಭರತಕ್ಷೇತ್ರದೊಳ್ ಧರ್ಮನಾಶನಮಪ್ಪುದು ಮೊದಲಾಗೆ ಪೇಳಿ ಇಲ್ಲಿಯ ಚತುಃಸಂಘ ಚಾತುರ್ವರ್ಣಂಗಳ್ಗಂ ಮೂರು ದಿನದಾಯುಷ್ಯವೆಂದು ಪೇಳಲನಿರಬರುಮಾಹಾರ ಶರೀರ ನಿವೃತ್ತಿಗೆಯ್ದು ಸಕಲ ಸನ್ಯಸನವಿಧಿಯಿಂ ಕಾರ್ತಿಕ ಕೃಷ್ಣಾಂತ್ಯದೊಳ್ ಸ್ವಾತೀನಕ್ಷತ್ರದ ಸೂರ್ಯೋದಯಯೊಳ್ ಶರೀರಂಗಳನುಳಿದರ್. ಆ ವೀರಾಂಗದ ಮುನೀಂದ್ರರ್ ಸೌಧರ್ಮಮೆಂಬ ಮೊದಲ ಸ್ವರ್ಗದೊಳ್ ಸಾಗರೋಪಮಸ್ಥಿತಿಯಪ್ಪರ್. ಉಳಿದ ಮೂವರಾ ಸ್ವರ್ಗದೊಳಾ ಸಾಧಿತ ಪಲ್ಯೋಪಮಸ್ಥಿತಿಗೊಡೆಯರಪ್ಪರ್. ಅಂದಿನ ಪೂರ್ವಾಹ್ನದೊಳವರ ಮರಣದಿಂ ಧರ್ಮನಾಶನಮುಂ ಮಧ್ಯಾಹ್ನದೊಳಸುರದೇವಂ ಬಂದು ವಜ್ರಾಯುಧದಿಂ ಕಲ್ಕಿರಾಜನನಿರಿದು ಕೊಲ್ಪುದುಂ ರಾಜನಾಶಮಕ್ಕುಂ. ಸಾಯಾಹ್ನಮಾಗೆ ಪುದ್ಗಲ ನಿಸ್ಸಾರತೆಯಿಂ ಕಿಚ್ಚು ಕೆಡಗುಂ.

ಮುಂದೆ ದುಷ್ಟಮೆಮೆಂಬ ಪಂಚಮಕಾಲದೊಳ್ ಮೂರು ವರ್ಷಮೆಂಟು ತಿಂಗಳು ಪದಿನೈದು ದಿನಮಿರ್ದಲ್ಲಿಂದಿತ್ತಲತಿದುಷ್ಟಮಮೆಂಬ ಷಷ್ಠಮ ಕಾಲ ಪ್ರಾರಂಭಮಾ ಕಾಲಸ್ಥಿತಿ ಏಕವಿಂಶತಿ ಸಹಸ್ರವರುಷಮದರ ಮೊದಲೊಳ್ ಮನುಷ್ಯರಿಮ್ಮೊಳ ನಿಡಿಯರಿಪ್ಪತ್ತು ವರುಷಾಯುಷ್ಯರುಂ ಧೂಮ್ರವರ್ಣರುಂ ಸಂತಾತಾಹಾರಿಗಳುಮಾ ಕಾಲದ ಕಡೆಯೊಳೊಮ್ಮೊಳನ ತಪದಿನೈದು ಸಂವತ್ಸರಾಯುಷ್ಯಮಾಗೆ ಜೀವಿಸಿ ಸತ್ತು ನರಕ ತಿರಿಯಂಚಗತಿಯೊಳ್ ಪುಟ್ಟುವರುಮಾಜೀವಗ್ರ ವಸ್ತ್ರಾದಿ ವಸನಂಗಳಿಲ್ಲದೆ ಮೃಗಪಕ್ಷಿಯಂತೆವಾವೆ ವರ್ತನಂಗಳ್ ಕುಲಭೇದಮುಂ ಜಾತಿ ಧರ್ಮಮುಂ ಮರಸಾಳೆಂಬುದಿಲ್ಲದೆ ಮತ್ಸ್ಯಾದಿಗಳೆ ತಮಗಾಹಾರಮಾಗೆ ಜೀವಿಸಿ ಸತ್ತು ನರಕ ತಿರಿಯಂಚಿಗತಿಯೊಳ್ ಪುಟ್ಟುವರುಮಾ ಜೀವಿಗಳೆ ಬಂದಿಲ್ಲಿ ಪುಟ್ಟುವರಾ ಕಾಲ ಸ್ಥಿತಿ ಇಪ್ಪತ್ತೊಂದು ಸಾಸಿರ ವರುಷಂ ಸಲೆ ಕಡೆಯ ನಾಲ್ವತ್ತೊಂಬತ್ತು ದಿನಮುಳಿದಲ್ಲಿ ಪ್ರಳೆಯವೆಂಬುದಕ್ಕುಮವರೊಳೆ ಪ್ರಾಣಿಗಳ್ಗೆ ಘೋರತರ ಭಯಂಕರಮಾಗೆ ತೀವ್ರ ವಾತಮುಂ ಕ್ಷಾರಮುಂ ವಿಷಮುಂ ರೂಕ್ಷಮಗ್ನಿ ಮೊಲಾಗೇಳೇಳು ದಿವಸಮಾಗೆ ಕ್ಷುಲ್ಲಕ ಪರ್ವತಮುಮುಪನಸಿಯುಮುಪಸಮುದ್ರಂಗಳ್ ಕರಗೆ ಭೂಮಿ ಸಮತಲಮಾಗಲ್ ಮುಂದೇಳು ದಿಸಂ ರಜಮುಂ ಧೂಮಮುಂ ವ್ಯಾಪಿಸಿಪ್ಪುವಲ್ಲಿಗೀಯವಸರ್ಪಿಣಿ ಕಾಲಂ ಪೋಗೆ ಬಳಿಕುತ್ಸರ್ಪಿಣಿಕಾಲಂ ಪಿಟ್ಟುಗುಮದರ ಮೊದಲತಿ ದುಷ್ಟಮದ ನಾಲ್ವತ್ತೊಂಬತ್ತು ದಿನಂಬರಂ ಜಲಪ್ರಳಯದಿಂದೇಳು ದಿನಂ ಪಂಚಾಮೃತದಿಂದೇಳೇಳು ದಿನಂ ವರ್ಷಮಾಗೆಯಲ್ಲಿಂದತ್ತಲ್ ಜೀವಂಗಳ್ ವಿಜಯಾರ್ಧಗುಹೆಯಿಂ ಖೇಚರರಿಂ ಮ್ಲೇಂಛಾಂತ್ಯದಿಂ ಗಂಗಾ ಸಿಂಧುವಿಂ ಪೊರಮಟ್ಟು ಮೃಷ್ಟತರವಾದ ಮೃತ್ತಿಕಾಹಾರದಿಂ ಶರೀರೋನ್ನತಾಯರ್ಬಳಾದಿಗಳ್ ಪೆರ್ಚುತ್ತುಂ ಪೋಗಲಾ ಕಾಲದೊಳಾವ ಧರ್ಮದ ಸುಳುವಿಲ್ಲಮೆರಡನೆ ಕಾಲದ ಕಡೆಯೊಳ್ ಮನುಗುಳುತ್ಪತ್ತಿಯುಂ ಮೂರನೆ ಕಾಲದೊಳ್ ತೀರ್ಥಂಕರ ಚಕ್ರವರ್ತಿ ಬಲ ವಾಸುದೇವರುತ್ಪತ್ತಿ ಉಳಿದ ಮೂರು ಕಾಲಂ ಭೋಗಭೂಮಿಯಪ್ಪವಲ್ಲಿಂದತ್ತಸರ್ಪಿಣಿವರ್ತನಮೆಂದು ಗೌಡಮಸ್ವಾಮಿಗಳ್ ನಿರೂಪಿಸಿ ಮತ್ತಮಿಂತೆಂದರ್.

ಈ ಕಾಲದ ಕಡೆ ಈ ವರ್ಧಮಾನ ತೀರ್ಥಂಕರರಿಂದತ್ತಲ್ ತೀರ್ಥಂಕರರಿಲ್ಲ ನಾಮುಂ ಸುಧರ್ಮರುಂ ಜಂಬೂನಾಮರುಂ ಮೂವರನುಬದ್ಧಕೇವಲಿಗಳ ಗಂಧಕುಟಿಯಿಂ ಬಳಿಕ್ಕೆ ಗಂಧಕುಟಿಯಿಲ್ಲ. ಕಡೆಯ ಕೇವಲಿಯಪ್ಪ ಶ್ರೀಧರರ್ ಕುಂತುಗಿರಿಯೊಳ್ ಮುಕ್ತರಾದಿಂ ಬಳಿಕ ಮೋಕ್ಷಮಾರ್ಗಮಿಲ್ಲ. ಚಾರಣೂತ್ಕ್ರಷ್ಟದಿಂ ಸುಪಾರ್ಶ್ವಚಂದ್ರರಿಂ ಬಳಿಕಿಲ್ಲ ಚತುರಂಗುಲ ಚಾರಣರ್ ಸಮಂತಭದ್ರರಿಂದತ್ತಲಿಲ್ಲ. ಪ್ರಜ್ಞಾಶ್ರಮಣರೊಳ್ ವಜ್ರಯಶನುಂ ಅವಧಿಜ್ಞಾನಿಗಳೊಳ್ ಶ್ರೀದಾಮನುಮೆಂಬವರಿಂ ಬಳಿಕ್ಕಂತಪ್ಪರಿಲ್ಲ. ಚಂದ್ರಗುಪ್ತನೆಂಬ ಮಕುಟಬದ್ಧಂ ದೀಕ್ಷೆಗೊಂಡಿಂ ಬಳಿಯಂ ಮಕುಟಬದ್ಧರ್ಗೆ ದೀಕ್ಷೆಯಿಲ್ಲಮಲ್ಲಿಂದತ್ತಂ ಕ್ರಮದಿಂ ಜ್ಞಾನಶೂನ್ಯರಪ್ಪರೆಂದು ಗೌತಮಗಣಾಗ್ರಹ್ಯರೊರೆವುದುಮಂತು ಕೇಳ್ದು ಮನುಷ್ಯರೆಂತಪ್ಪರೆಂದೊಡೆ.

ಗಾಹೆ || ಪಂಚಮಯಾಲಿ ಮಣುಜೋ ವಿಷಯಕಸಾಯಮಯಿಮುತ್ತೋ
ಲಂಪಟಧಂಮವಿಹೀನೋ ಕುಡಿಲಪಪಂಚೇಹಿ ಭಟ್ಟದುಸ್ಸಂಗೋ ||

ದಾನಮೆಂತಪ್ಪುದೆನೆ

ವಿಣಓ ಭತ್ತಿವಿಹೀಣೋ ಮಹಿಳಾಂನಿಂ ರೋದನಂ ವಿಣ್ಣಾಣೇಹಿಂ ಚ
ಗೋಯರಗ್ಗವಿಣಾ ವಿದೇ ಏದೇ ಡೊಂಬಾರಿಯಾ ಭಣಿಯಾ

ಭಯಾಶಾಸ್ನೇಹಿಲೋಭಾದಿಗಳಿಂ ಧರ್ಮಂ ಪ್ರವರ್ತಿಸುಗಮಲ್ಲಿ ಧಾರ್ಮಿಕರ್ ಕೆಲಂಬರ್ ಭಕ್ತಪೂರ್ವಕಂ ಸಮ್ಯಗ್ದರ್ಶನದೊಳ್ ಮಿಶ್ರಪರಿಣಾಮರ್ ಸಾಧಾರಣದಿಂದನೇಕರಪ್ಪನರ್ ಶುದ್ಧ ಸಮ್ಯಗ್ದೃಷ್ಟಿಗಳನವರತಂ ಮೂವರಿಂ ಕಡಿಮೆಯಿಲ್ಲಾದರಿಂ ಪೆರ್ಚರೆಂದರ್

ಗಾಹೆ || ಪಂಚಮಯಾಲೇ ಮಣುಜೋ ಸಂಮುದ್ಧಟ್ಠೀ ಬದ್ಧ ಪರಿಣಾಮೀ
ಸೇ ಮರಿಯೇ ವಿದೇಹೇ ಣರಮವಸ್ಸೇಹಿ ಕೇವಲಿ ಹೋ ಈ

ಎಂಬಿವಾದಿಯಾದ ಮುಂದಣ ಕಾಲದೊಳಗೆಲ್ಲಂ ಏಳನೂರತ್ತೊಂಬತ್ತು ಜಾತಿಗಳುಮವರವರ ಒಳಭೇದಂಗಳುಮನೇಕಂಗಳಾಗಿ ಕುಧರ್ಮಂಗಳಪ್ಪವೆಂದೀ ಕಾಲದೋಷಂಗಳೆಲ್ಲ ಪೇಳೆ ಕೇಳ್ದನಿಬರಂ ನಿರ್ವೇಗದಿಂ ದೀಕ್ಷಿತರಾದ ರಾತ್ರಿ ಲೋಕಸ್ವಾಮಿ ಮೂವತ್ತು ವರ್ಷಂ ವಿಹಾರಿಸುತ್ತೆ ಧರ್ಮಾಮೃತವರ್ಷದಿಂ ಭವ್ಯಸಸ್ಯಮಂ ತಣಿಪಿ ಬಳಿಕ ಪಾವಾಪುರದ ಬಹಿರುದ್ಯಾನವನದೊಳುನ್ನತ ಭೂಮಿ ಪ್ರದೇಶದೊಳ್ ಪದ್ನಸರೋವರ ಮಧ್ಯದೊಳ್ ದಂಟಕವಾಟಪ್ರತರ ಲೋಕಾಪೂರಾಣಮೆಂಬ ಚತುಸ್ಸಮುದ್ಘಾತದಿಂ ಸಾತಾವೇದನೀಯಾಯುಷ್ಯ ನಾಮ ಗೋತ್ರಂಗಳೆಂಬ ನಾಲ್ಕು ಮಘಾತಿಗಳ್ ದಗ್ಧರಜ್ಜುವಂತಿರ್ದವಂ ದೂರೀಕೃತಂ ಮಾಡಿ ನಿತ್ಯ ನಿರಂಜನ ನಿರ್ಮಲ ಪಾವನ ಪವಿತ್ರ ನಿತ್ಯಾನಂದ ನಿರ್ವಿಕಲ್ಪ ಚಿದಾನಂದಸ್ವರೂಪನು ಸಮ್ಯಕ್ತ್ವಾದ್ಯಷ್ಟಗುಣ ನಿರುಪಮಾಮೂರ್ತ ಪರಮಾತ್ಮನು ಕಲ್ಯಬ್ದಂಗಳು ಎರಡು ಸಾವಿರದ ನಾನೂರ ಮೂವತ್ತೆಂಟು ಸಂದ ಕಳಾಯುಕ್ತಿ ಸಂವತ್ಸರದಾಶ್ವೀಜ ಬಹುಳಮಾ ದ್ವಾದಶಿ ಸ್ವಾತೀ ನಕ್ಷತ್ರದ ಬೆಳಗಪ್ಪ ಜಾವದೊಳ್ ಪಂಚಹ್ರಸ್ವಾಕ್ಷರ ಮಾತ್ರದೊಳ್ ತ್ರಿಲೋಕದ ತುತ್ತತುದಿಯ ಈಷತ್ಟ್ರಾಗ್ಬಾರದ ಸಿದ್ಧಶಿಲೋಪರಿಯತನುಪಾಂತದೊಳ್ ಸರ್ವವ್ಯಾಪಿಯಾಗಿ ಮೋಕ್ಷಸಂಪತ್ತಿಗಧೀಶ್ವರನಾಗಲಿತ್ತಲಾ ಪ್ರದೇಶಕ್ಕೆ ಚತುರ್ನಿಕಾಯಸಮೇತಂ ದ್ವಾತ್ರಿಂಶತ್ ಸುರೇಂದ್ರರ್ ತಂತಮ್ಮ ವಾಹನ ವಧೂಚಿನ್ನಸಹಿತಂ ಬಂದಾ ಪಾವಾಪುರದ ಸರಸಿಭೂಮಿಯಂ ದಿವ್ಯಾರ್ಚನೆಗಳಿಂದರ್ಚಿಸಿ ಚತುರಸ್ರಕುಂಡದೊಳ್ ಅಗ್ನೀಂದ್ರತಿರೀಟೋದ್ಭವ ಗಾರ್ಹಪತ್ಯಾಗ್ನಿಯೊಳಾ ದೇವದೇವನ ರೂಪ ಮಾಯಾಮಯಮಂ ಕಾಳಾಗರು ಗೋಶೀರ್ಷ ಸುರಭಿ ಚಂದನಾದಿಗಳಿಂ ಭಾವಸತ್ಕಾರಂಗೆಯ್ದು ಮುನಿನರಸುರಾಸುರರೆಲ್ಲ ಕರ್ಪೂರಘೃತಂ ಮೊದಲಾದ ಕೃತ್ರಿಮ ದೀಪವರ್ತಿಗಳುಂ ಪನ್ನೆರಡು ಲಕ್ಷಗಳು ಕೋಟಿರತ್ನದೀಪಂ ಮೆರೆಯೆ ದೇವಕಾಂತೆಯರು ಮಂಗಲ ದ್ರವ್ಯಂಗಳಂ ಭಾಜನದೊಳಿಟ್ಟು ಬರೆ ದಿವ್ಯಜಲ ಗಂಧಾಕ್ಷತೆ ಪುಷ್ಪಚರು ದೀಪಧೂಪ ಪಲಾರ್ಘ್ಯಂಗಳ ಪ್ರತ್ಯೇಕ ಪರ್ವತೋಪಮಮಾಗರ್ಚಿಸಿ ದಿವ್ಯವಾದಿತ್ರಮೆಸೆಯೆ ಸರ್ವರುಮಾ ವಿಭೂತಿಯಂ ಸ್ವಕೀಯ ದೇಹಂಗಳೊಳಿಟ್ಟು ಆನಂದನೃತ್ಯಮಾಡಿ ದೇವೇಂದ್ರಂ ಪರಿನಿರ್ವಾಣ ಕಲ್ಯಾಣಪೂಜೆಯಂ ಮಾಡಿ ಪೋದನಂದಿಂದಿದತ್ತಲ್ ವರ್ಷಂಪ್ರತಿ ಜನರೆಲ್ಲ ದೀಪಾವಲಿಯೆಂದುಂ ಲಕ್ಷದೀಪಾವಳಿಯೆಂದುಂ ದೀಪಂಗಳಂ ಪೊತ್ತಿಸುವರ್ ಮತ್ತಮಾ ದಿವಸದೊಳೆ ಗೌತಮಸ್ವಾಮಿಗಳ್ಗೆ ಕೇವಲಜ್ಞಾನೋತ್ಪತ್ತಿಯಾಗೆ ಭೂಮಿಯಿಂ ಮೇಲೆ ಎರಡೂವರೆ ಕ್ರೋಶೋನ್ನತಮಾದಂಬರದೊಳ್ ನಿಲೆ ಇಂದ್ರನ ಬೆಸದಿಂ ರಾಜರಾಜನಿರ್ಮಿತಮಪ್ಪ ಮಾನಸ್ತಂಭಾದಿ ಚತುಃಪ್ರಾಕಾರ ಸಿಂಹಾಸನಾದಿ ನಾಲ್ಕು ಮಹಾಪ್ರಾತಿಹಾರ‍್ಯಾದ್ಯತಿಶಯದಿ ಋಷಿಯರ್ಚಿಕಾ ಶ್ರಾವಕ ಶ್ರಾವಿಕಾ ಚತುರ್ನಿಕಾಯ ದೇವ ತಿರ್ಯಂಚಾದಿ ಪರಿವೃತರಾಗಿ ದ್ವಾದಶ ವರುಷಂ ವಿಹಾರಿಸುತ್ತಂ ಧರ್ಮಾಮೃತಮಂ ಕರೆಯುತ್ತುಂ ಕುಳಿಕರಾಜಂಗೆ ಭವಾವಲಿಯಂ ಪೇಳಿ ಮೋಕ್ಷ ಲಕ್ಷಿಯಂ ಕೈಕೊಳ್ವುದುಮಾ ದಿನವೆ ಸುಧರ್ಮರಿಗೆ ಕೇಲೋತ್ಪತ್ತಿಯಾಗಿ ವಿಹಾರಿಸಿ ಮುಕ್ತರಾದರಾಗಳೆ ಜಂಬೂಸ್ವಾಮಿಗಳ್ಗೆ ಗಂಧಕುಟುಯಾಯ್ತು. ಈ ಅನುಬದ್ಧಕೇವಲಿಗಳಾದರ್.

ಅತ್ತಲ್ ಸೌರಾಷ್ಟ್ರ ದೇಶದೊಳ್ ಪಾರ್ಶ್ವಭಟಾರಕಂ ಏಕಾದಶ ಶುತ್ರಧಾರಿಯಾಗಿ ಸಕಲ ವಿದ್ಯಾಪ್ರವೀಣಂ ವರ್ಧಮಾನಸ್ವಾಮಿಗಳ್ಗೆ ಗಣಧರನಾಗಲೆಂದಿರ್ದು ಗರ್ವಸ್ಥನಾಗೆ ಗೌರಮರ್ಗಾಪದಿವಯಪ್ಪುದುಮತ್ಯಂತ ಕ್ರೋಧಂ ಸಂಭವಿಸಿ ಇಂದ್ರಜಾಲದಿಂ ಪ್ರತಿ ಸಮರಸರನಮನೊಡ್ಡಿ ತೋರಿದೊಡಂ ಭವ್ಯರೆರಗದಿಪ್ಪುದುಂ ತನ್ನ ಶಿಷ್ಯರ್ ಭಾವಸೇನ್ ವರಸೇನರ್, ಮೊದಲಾಗೆ ಐನೂರ್ವರ್ ಶಿಷ್ಯರ್ವೆರಸು ತಾನು ಅಜ್ಞಾನಮಿಥ್ಯಮಂ ಕೈಕೊಂಡು ಪಸ್ಕರೀಪುರಣಮನವಲಂಬಿಸಿ ಅಲ್ಲಾಕುದನೆಂದು ತಾನೊಂದು ನವೀನ ಮತಮಂ ನಿರ್ಮಿಸಲೆಂದು ಅದಕ್ಕೆ ತಕ್ಕ ಸೂತ್ರಂಗಳಂ ಕಲ್ಪಸಿ ಷಣ್ಮತಂಗಳಂ ಪೂರ್ವಪಕ್ಷಂಗೆಯ್ದು ವೇಷ ಭಾಷೆ ನಡೆಯೆಲ್ಲಮಂ ಪೊಸಕಂ ಮಾಡಿ ಪಾರ್ಶಿಯೊಳರಿಪು ಮೊದಲಾಗೆ ವರ್ಣಂಗಳಂ ಶಾಸ್ತ್ರಭೇದಮಂ ಶಿವಂ ದಯೆಗೆಯ್ದನೆಂದು ವಿದ್ಯಾಬಲದಿಂ ಮಕ್ಕಾದೇಶದ ಪೈಗಂಬರ ಮೆಹಮ್ಮದರೆಂದು ಬೌದ್ಧಾಚಾರಮುಳ್ಳ ದೊರೆಗಳ್ ನಾಲ್ವರಂ ವಶಂ ಮಾಡಿಕ್ಕೊಂಡು ಪ್ರತ್ಯಂತ ದೇಶದರಸುಗಳ್ಗಂ ಉಪದೇಶಂಗೈದು ವೇದದೊಳ್ ಪೇಳ್ದಂತೆ ಮಂತ್ರಪೂರ್ವಕಂ ಜೀವಮಂ ಕೊಂದು ತಿಂದೊಡಂ ಪಾಪಮಿಲ್ಲೆಂದು ಇಹಲೋಕಸುಖಮುಂ ಬಯಸಿ ಸರ್ವರ್ಗಂ ಪೇಳೆ ಎಲ್ಲರಂ ನಂಬಿಸಿ ಕೈಕೊಳಿಸಿ ತಾನುಂ ದೇವಾಲಯಮಂ ಪೊಕ್ಕು ಶಾಪಮನಿಕ್ಕಿ ಪೋಗುಲಿತ್ತಲಾ ಮುಸಲಮಾನರುಂ ಪಿಂದಣರಸುಗಳ್ ಬಹುದಿನಂ ಕಾದಿ ಮಡಿದರ್. ಪಾರ್ಶ್ವಭಟ್ಟನ ಶಿಷ್ಯಂ ಮಲ್ಲಿಭಟ್ಟಂ ಮುಲ್ಲಾಶಾಸ್ತ್ರಮಂ ಮಾಡಿ ಅಲ್ಲಿ ಪಾರ್ಶಿ ದಕಿನಿಯೆಂದು ಎರಡು ಭೇದಮಾಯ್ತು. ಮುಸಲಮಾನರು ನಾಲ್ಕಾಗಿಯೂ ಮತ್ತೆ ಮತ್ತೆ ಪದಿನೆಂಟು ಭೇದಮಾಗೆ ವರ್ತಿಸುವರ್.

ಮತ್ತಂ ಕಿರಾತದೇಶದೊಳ್ ಭಿಲ್ಲರಾಜನೆಂಬನತಿಪ್ರಬಳನಾಗಿ ತನ್ನ ದೇಶದೊಳಿರ್ದರಂ ಯುವನ ಬಿಲ್ಲ ಮೊದಲಾಗೆ ಇಪ್ಪತ್ತೊಂದು (೨೧) ಜಾತಿಯಂ ಮಾಡಿದನಿಂತಾಗೆ ಪಾಟಳಿಪುರದೊಳ್ ಹರಿವಾಹನನೆಂಬರಸನಾಳುತ್ತಿರೆ ಶಾಕ್ಯನೆಂಬ ಬೌದ್ಧಾಚಾರಿ ತನ್ನ ಶಿಷ್ಯವರ್ಗ ಸಹಿತಂ ಬಂದು ತನ್ನ ಮತಪ್ರಭಾವನೆಯಂ ಮಾಡುತ್ತ ವಿದ್ಯಾವಿಶೇಷ ರಾಜಸಭೆಯನೆಯ್ದಿದಂ. ಛಂದೋಲಂಕಾರ ತರ್ಕ ವ್ಯಾಕರಣಾದಿ ಶಾಸ್ತ್ರಂಗಳೊಳ್ ಪಾರಗಂ ಗರ್ವೊದ್ಧತವಾಗಿ ಜೀವಾಭಾವಮಂ ನುಡಿದು ಕರ್ಮ ಕರ್ತೃವಾಗಿಯುಂ ಭೋಕ್ತೃವಲ್ಲೆಂದು ನುಡಿವ ಮಾತಿಂಗೆ ವಿಷ್ಣುಯೋಗಿಶ್ವರರ ಶಿಷ್ಯಸ್ಥವಿಷ್ಟಾಚಾರ್ಯರೆಂದರ್. ಪಾಪಕರ್ತೃಗಳಿಗೆ ನರಕ ಪುಣ್ಯಕರ್ತೃಗಳಿಗೆ ಸ್ವರ್ಗ ಪಾಪಪುಣ್ಯಂ ಮಿಶ್ರವಾದ ಕರ್ತೃಗಳ್ಗೆ ಮನುಷ್ಯಗತಿಯಪ್ಪುದರಿಂದಲ್ಲಿಯ ದುಃಖ ಸುಖಾದಿಗಳಂ ಭುಜಿಸುವುದೆ ಫಲಮೆಂಬುದುಂ ಶಾಕ್ಯಂ ನಗುತ್ತಮಿಂತೆಂದಂ ಪಾಪಪುಣ್ಯಂಗಳೆಂತಿಪ್ಪವವರ ಬಣ್ಣಮೆಂತುಟು ನರಕ ಸ್ವರ್ಗಗಳೆಲ್ಲಿಪ್ಪವವಂ ಕಂಡುಬಂದವರಾರು? ಬರಿಯ ಮಾತಿದು ಗಂಧರ್ವನಗರವಿಳಾಸದಂತೆಂದು ನುಡಿವುದಾಚಾರ್ಯನೆಂದು ಕಣ್ಣಿಲ್ಲದ ಕಂಗಳನೆಂತುಂ ಮುಂದಿರ್ದ ಮುದ್ದಾನೆಯಂ ಕಾಳ್ಬನಲ್ಲನಂತೆ ಜ್ಞಾನಲೋಚನವಿಲ್ಲದವರು ಪಾಪಪುಣ್ಯ ಸ್ವರ್ಗಾದಿಗಳಂ ಕಾಣರದರಿಂ ಪಾಪಮಂಧಕಾರರೂಪದಿಂ ವ್ಯಾಘ್ರವನದಂತಿಪ್ಪುದು. ಪುಣ್ಯಂ ಪ್ರಕಾಶಸ್ವರೂಪಾಗಿ ಚಂದನಕಲ್ಪದಂತಿಪ್ಪುದು. ದುಃಖ ಸುಖಾದಿಗಳನನುಭವಿಸಿದ ಜೀವಂಗಳೆಲ್ಲಂ ಕಂಡುಬಂದವರು. ನಿನ್ನ ಪತ್ತಿಪ್ಪ ಬೆನ್ನಂ ನೀ ಕಾಣೆ ಬಹುದೂರಮಾಗಿರ್ಪ ಸ್ವರ್ಗಮನೆಂತು ಕಾಣ್ಬೆ? ಲೋಕದೊಳ್ ಸುಲಭ ಬಾಳುವವರಂ ಕಂಡು ಅವರ ಪುಣ್ಯಫಲಮೆಂಬರು. ದುಃಖದಿಂ ನಮೆವವರಂ ನೋಡಿ ಪಾಪದ ಫಲಮೆಂಬೀ ಜನವಾಕ್ಯಮಂ ಕಂಡು ಕೇಳಿ ಅಂಧ – ಬಧಿರನಂತೆ ಜೀವಕ್ಕೆ ಪುಣ್ಯ ಪಾಪಮಿಲ್ಲೆಂದು ವಾದಿಸುವುದುಮುಗ್ರಮಪ್ಪ ಕರ್ಮ ಸಂಪೂರ್ಣಮಪ್ಪ ಸಂಸಾರ ಜೀವಸ್ವಭಾವಂ.

ಶ್ಲೋಕ || ಹಸಂತೀ ಕರ್ಮಮಾದತ್ತೇ ರುದಂತೀ ಚಾನುಭೂಯತೇ
ಸಹಂತೂ ಗರ್ಭಮಾದತ್ತೇ ರುದಂತೀವ ಪ್ರಸೂಯತೇ ||

ತರಣಿಪುಳು ಪ್ರಯತ್ನದಿ ಗೂಡಂ ಮುಚ್ಚಿ ಅಲ್ಲೆ ಸಾಯ್ವಂತೆಯುಂ ಕೋಟಗನುರುಳಿಕ್ಕಿದ ಪಿಟ್ಟಿಗೆರಗಿಯುರುಳೊಳ್ ಸಿಕ್ಕಿಂ ಪಲ್ಲಂ ಕಿರಿವಂತೆ ಅಭವ್ಯಜೀವಕ್ಕೆಂದುಂ ಮುಕ್ತಿಯಿಲ್ಲದುದರಿಂ ಶೂನ್ಯವಾದಮಂ ಪಿಡಿದು ಚರ್ಚಿಸುವರೆಂದು ಆಚಾರ್ಯರ್ ಪೇಳ್ವದು, ಮಿಥ್ಯಾ ಬ್ರಾಹ್ಮಣರ್ ಕೆಲರೆಂದರ್ ಪೂರ್ವಭವಸ್ಮರಣೆಯು ಆತ್ಮಂಗೇಕೆ ತಿಳಿಯದೆಂದೊಡಮಾಚಾರ್ಯನೆಂದನೀ ಭವದೊಳ್ ಗರ್ಭದೊಳಿರ್ದುದು ಪುಟ್ಟಿದುಮ ತೊಟ್ಟಿಲೊಳ್ ಬೆಳೆದುದಾದಿಯಾಗಿ ತನ್ನನುಭವಂ ತನಗೆ ಅಜ್ಞಾನದಿಂ ತಿಳಿಯದಿರ್ದೊಡದೆಲ್ಲಂ ಪುಸಿಯೆಂದು ಪೇಳಬೇಕು. ಅಂತೆ ಪೂರ್ವಜನ್ಮ ಪ್ರಪಂಚಮಂ ಜ್ಞಾನಾವರಣಿಯ ಕರ್ಮಾಂಧಕಾರದಿಂ ಕಾಣರೆಂದಿವಾದಿ ಹೇತುದೃಷ್ಟಾಂತಿದಿಂ ಪೇಳಿ ಸಭಾಪತಿಯಂ ಸಭೆಯಂ ಮೆಚ್ಚಿಸೆ ಜೀವಸಿದ್ಧಿಯೆಲ್ಲರುಂ ನಂಬಿ ಷಣ್ಮತಂಗಳೊಳ್ ಜೈನಮತಮೆ ಸತ್ಯಮೆಂದು ಸರ್ವರ್ ನಿಶ್ಚಯಂ ಮಾಡಿದರ್.

ಈ ಪ್ರಕಾರದಿಂ ಕೆಲವು ಕಾಲಂ ಸಲೆ ಈ ಭರತ ಪುಂಡವರ್ಧನ ವಿಷಯದ ಕೋಟುಕಪುರಮಾನಾಳ್ವ ಪದ್ಮರಥನಾತರಸಿ ಪದ್ಮಶ್ರೀಯವರ ಪುರೋಹಿತಂ ಸೋಮಶರ್ಮನೆಂಬ ಬ್ರಾಹ್ಮಣನಾತನ ಕುಲವಧು ಸೋಮಶ್ರೀಯವರ್ಗೊರ್ವ ಪುತ್ರಂ ಶುಭಲಗ್ನದೊಳ್ ಪುಟ್ಟೆ ಸೋಮಶರ್ಮಂ ಜ್ಯೋತಿಶ್ಯಾಸ್ತ್ರಪ್ರವೀಣನಪ್ಪುದರಿಂ ಶೋಧಿಸಿ ನೋಡಿ ಈತಂ ಜೈನದರ್ಶನದೊಳ್ ಮಾನ್ಯನಪ್ಪನೆಂದರಿದು ಭದ್ರಬಾಹುವೆಂದು ಪೆಸರಿಟ್ಟು ಜಿನಪೂಜೆಯಂ ಮಾಡಿಸಿ ಜಿನಮತ ಮರ್ಯಾದೆಯೊಳ್ ಬಾಳಾಕ್ಷರಭ್ಯಾಸೋಪನಯನಂ ಮಾಡೆ ಏಳುವರುಷಮಾಗಲೊಂದು ದಿವಸಂ ಭದ್ರಬಾಹುಕುಮಾರಂ ತನ್ನೊಡನಾಡುವ ಮಾಣಿಗಳಂ ಕೂಡಿಕೊಂಡು ಪುರದ ಪೊರವೊಳಲೊಳ್ ಗೊಟ್ಟಿಯನಾಡುತ್ತುಂ ಗೊಟ್ಟಿಗಳನೊಂದರ ಮೇಲಾಗೆ ಪದಿಮೂರು ಗೊಟ್ಟಿಯನಿರಿಸಿದ ಸಮಯದೊಳ್.