ಇತ್ತ ಜಂಬೂಸ್ವಾಮಿ ನಿರಂಜನಪ್ರಾಪ್ರರಾದಿಂ ಬಳಿಯಿಂ ವಿಷ್ಣು ನಂದಿಮಿತ್ರಾಪರಾಜಿತ ಗೋವರ್ಧನರೆಂಬ ನಾಲ್ವರ್ ಶ್ರುತಕೇವಲಿಗಳ್ ವಂದನಾನಿಮಿತ್ತಂ ಪೋಗಿ ಜಂಬೂಸ್ವಾಮಿ ನಿರ್ವಾಣವಂದನೆಯಂ ಮಾಡಿಪಲ್ಲಿ ಅವರೊಳ್ ಗೋವರ್ಧನ ಮಹಾ ಮುನಿಗಳ್ ಪಂಚಶತಮುನಿಗಳ್ವೆರಸು ಕೋಟಿಕಪುರದ ಪೊರವೊಳಲೊಳೆ ಬರುತ್ತುಂ ಪದಿಮೂರು ಗೊಟ್ಟಿಯನಿಟ್ಟು ಆಡುವ ಭದ್ರಬಾಹುವಂ ಕಂಡು ಆತನಷ್ಟಾಂಗ ಮಹಾ ಲಕ್ಷಣಮಂ ನೋಡಿ ಈತಂ ಕಡೆಯ ಶ್ರುತಕೇವಲಿಯಪ್ಪನೆಂದು ಗೋವರ್ಧನಸ್ವಾಮಿಗಳಾ ಭದ್ರಬಾಹುವಿನ ಕೈಯಂ ಪಿಡಿದೊಡಗೊಂಡು ಪೋಗಿ ಸೋಮಶರ್ಮಂಗೆ ಭವತ್ಪತ್ರ ಭದ್ರಬಾಹುವನೆಮಗೆ ಕುಡಲ್ ಶಾಸ್ತ್ರಾಭ್ಯಾಸಮಂ ಪೇಳ್ದು ಸಕಲಾಗಮದೊಳ್ ಪ್ರವೀಣನಂ ಮಾಳ್ವೆನೆನೆ ಸೋಮಶರ್ಮಂ ನಮಸ್ಕಾರಪೂರ್ವಕಂ ಇಂತೆಂದನೀತಂ ಪುಟ್ಟಿದಂದೆ ಜೈನಶಾನಸದೊಳ್ ಸಮರ್ಥನಪ್ಪನೆಂದರಿದಿರ್ದೆನೀತನಂ ನಿಮ್ಮಂತು ಮಾಳ್ವದೆಂದವರ್ಗೊಪ್ಪಿಸಲಾತನ ಜನನಿಯಪ್ಪ ಸೋಮಶ್ರೀ ವಿಷಣ್ಣೆಯಾಗಿ ಈತಂಗೆ ದೀಕ್ಷೆಯಂ ಕುಡುವಾಗಲೆಮ್ಮಲ್ಲಿಗಟ್ಟಿದೊಡವನಂ ನೋಡಿ ಕಳುಹಿಸವೆ ನೆನೆ ಗೋವರ್ಧನಸ್ವಾಮಿಗಳಾತನಂ ಕರೆದುಕೊಂಡು ಬಂದಾತಂಗೊರ್ವ ಶ್ರಾವಕನ ಗೃಹದೊಳ್ ಭೋಜನಾದಿಗಳ್ಗೆ ನಿಯಮಿಸಿಯಾತಂಗೆ ಯೋಗಿನಿ ಸಂಗಿನಿ ಪ್ರಜ್ಞಾನಿ ಪ್ರಜ್ಷಪ್ತಿಗಳೆಂಬ ನಾಲ್ಕು ಮಹಾವಿದ್ಯಮಂ, ಅನುಯೋಗ ಚತುಷ್ಟಯವೇದಮಂ ಪರ್ಯಾಯಕ್ಷರ ಪದಸಂಘಾರ ಚತುರ್ದಶಪೂರ್ವೆ ಮೊದಲಾದ ಶಾಸ್ತ್ರಮನೋದಿಸೆ ಸಂಸಾರ ಶರೀರ ಭೋಗದೊಳ್ ವೈರಾಗ್ಯಂ ಪುಟ್ಟಿ ದೀಕ್ಷೆಯಂ ಬೇಡಲವರ ತಂದೆತಾಯಿಗಳಲ್ಲಿಗೆ ಕಾಣಿಸುವಾಗಳ್ ರಾಜಭವನದೊಳ್ ಪತ್ರಾಲಂಬನಮಂ ಮಾಡಿದುದನಾರ್ಗಂ ಭೇದಿಸಲ್ ನರೆಯದಿರಲದಂ ಭದ್ರಬಾಹು ನೋಡಿ ತಿಳಿದುಸುರ್ದೊಡರಸಂ ಸೋಮಶರ್ಮನುಂ ಗೋವರ್ಧನರುಂ ಭದ್ರಬಾಹುವಂ ಪೂಜಿಸಿ ಪೊಡೆವಟ್ಟು ಕಳಿಪೆ ತಾಯಂ ಕಂಡು ಕಳುಹಿಸಿಕೊಂಡು ಬಂದು ದೀಕ್ಷೆಗೊಂಡು ಜ್ಞಾನ ಧ್ಯಾನ ತಪಸ್ಯಯಮಸಂಪನ್ನರಾಗಿಯಾಚಾರ್ಯಪಟ್ಟಮನಾಂತಿರಲಾ ಗೋವರ್ಧನ ಶ್ರುತಿಕೇವಲಿಗಳ್ ಸಮಾಧಿವಿಧಿಯಿಂ ನಿರ್ಜರಲೋಕಪ್ರಾಪ್ತರಾದಿರತ್ತ ಮತ್ತೊಂದು ಕಥಾಂತರಮೆಂತೆಂದೊಡೆ.

ಪಾಟಳೀಪುತ್ರಮೆಂಬ ಪುರದೊಳ್ ನಂದಮಹಾರಾಜನಾತನ ಮಂತ್ರಿಗಳ್ ಬಿಂದು ಸುಬಿಂದು ಕುಬೇರ ಸಕಟಾಳನೆಂಬ ನಾಲ್ವರೊಳ್ ಸಕಟಾಳಂ ಚತುರೋಪಾಯಸಂಪನ್ನನಾಗಿರಲೊಂದು ದಿನಂ ಪ್ರತ್ಯಂತವಾಸಿಗಳೆತ್ತಿಬಂದು ನಾಡ ಗಡಿಗಳಂ ಕೊಂಡು ನಂದನನಂ ಸಮರಕ್ಕೆ ಬರವೇಳ್ದುದಂ ಸಕಟಾಳ ಮಂತ್ರಿ ಪೇಳೆ ನಂದಿನಿಂತೆಂದನೀ ವಿಷಯಕ್ಕೆ ನೀನೆ ಸಮರ್ಥನಪ್ಪುದರಿಂ ನೀನೆಯದಕ್ಕುಪಾಯಮಂ ಪೇಳೆಂಬುದುಂ ಸಕಟಾಳಂ ಅವರತಿ ಬಲಿಷ್ಠರಾದುದರಿಂ ಕಾಳಿಗಂ ಸಲ್ಲದುದರಿಂದುಪಪ್ರದಾನಂ ಮಾಡಲಕ್ಕುಮೆನೆ, ಅಂತಾದೊಡೆ ನೀಂ ಪೇಳ್ದುದೆ ಕಾರ್ಯಮೆಂದು ಕೋಶಾಧ್ಯಕ್ಷನಂ ಕರೆದು ಸಕಟಾಳಮಂತ್ರಿಯು ಕೇಳಿದಷ್ಟು ದ್ರವ್ಯಮಂ ಕುಡುವುದೆಂದು ಪೇಳೆ ಬೊಕ್ಕಸದೊಳಿರ್ದ ವಿತ್ತಮಂ ಕೊಂಡೊಯ್ದು ಸಕಟಾಳಂ ಪರನೃಪರಂ ಮನ್ನಿಸಿ ಕೊಟ್ಟುಕಳುಪಿದಂ.

ಮತ್ತೊಂದು ದಿನಂ ನಂದನಂ ಭಂಡಾರಮಂ ನೋಡಿ ದ್ರವ್ಯಮೆಲ್ಲಂ ಎತ್ತ ಪೋದುದೆನೆ ಭಂಡಾರಿಯಿಂತೆಂದನಲ್ಲೆಮಂ ಸಕಟಾಳ ಮಂತ್ರಿ ಶತ್ರುಗಳ್ಗೆ ಕೊಟ್ಟನೆಂಬುದುಂ ವಿಚಾರವಿರಹಿತಂ ದುಷ್ಟಬುದ್ಧಿಯಿಂ ಸಕಟಾಳಂ ಪುತ್ರ ಕಳತ್ರ ಸಹಿತಂ ನೆಲವಾಳಿಗೆಯೊಳಿಕ್ಕಿ ಮುಚ್ಚಿ ಒಂದು ಗವಾಕ್ಷದೊಳ್ ದಿನವೊಂದರೊಳೊಂದು ಮುಷ್ಟಿ ಪಿಟ್ಟಂ ಒಂದು ಮಾನಮುದಕಮುಮಂ ಕೊಡುವದೆಂದಾ ಪ್ರಕಾರದೊಳೆ ಸೆರೆಯನಿಕ್ಕಿದೊಡೆ ಸಕಟಾಳಂ ನೋಡಿ ತಮ್ಮ ವರ್ಗೆ ಈ ಕೂಳಂ ನೀರುಮನಾನವನೊರ್ವಂ ನಂದನನ ವಂಶ ನಿರ್ಮೂಲನಂ ಮಾಳ್ವನಾತಂ ಕೊಂಡು ಬದುಕುವುದೆಂದು ಪೇಳೆ ಅವರ್ ನೀನೆ ಕೊಂಬುದೆಂದು ಪೇಳಿಯೆಲ್ಲರುಂ ಸಾಯೆ ತಾನದಂ ತಿಂದು ಜೀವಿಸಿಕೊಂಡಿರಲಿತ್ತಲ್ ಪರರಾಯರು ಮಂತ್ರಿಯಿಲ್ಲದುದನರಿದು ಪಟ್ಟಣವಂ ಮುತ್ತವುದುಂ ನಂದನಂ ಚಿಂತಿಸಿ ಪ್ರಧಾನರಿಲ್ಲದ ರಾಜ್ಯಂ ಪಾಳಪ್ಪುದೆಂದು ಸಕಟಾಳಮಂತ್ರಿಯಂ ನೆನೆದು ಎಲ್ಲಿರ್ಪನೆಂದು ವಿಚಾರಿಸೆ ಒರ್ವನೆಂದಂ ನಿಯಮಿಸಿದ ಮೇರೆಯೊಳೊಂದು ಮುಷ್ಟಿ ಪಿಟ್ಟಂ ನೀರುಮಂ ಗವಾಕ್ಷದಿಂ ನೀಡದಲಂ ಕೊಳ್ವರಲ್ಲಿ ಯಾರುಳಿದಿಪ್ಪರೊ ಅರಿಯಲ್ ಬಾರದೆನೆಯರಸಂ ತಾನೆ ಪೋಗಿಯಾತನಂ ಕರೆದು ತಂದು ಮಜ್ಜನ ಭೋಜನಾದಿಗಳಂ ಮಾಡಿಸಿ ನೀನಂದು ಕಳುಹಿಸಿ ಪರರಾಜರ್ ಮುತ್ತಿಪ್ಪರವರಂ ಸಮಾಧಾನಂ ಮಾಳ್ಪುದೆಂದು ಕಳುಪೆ ಪೋಗಿಯವರನುಪಾಯಾಂತರದಿದೋಡಿಸಿಬಪ್ಪುದುಂ ನಿನ್ನ ಮಂತ್ರಿಪದಮಂ ಕೈಕೊಳ್ಳೆಂದೊಡೆ ಸಕಟಾಳನೊಲ್ಲದೆ ಛತ್ರಶಾಲೆಯ ನಿಯೋಗಕಧ್ಯಕ್ಷನಾಗಿಯರಸಂಗುಪಾಯಮಂ ಚಿಂತಿಸುತ್ತಿರ್ದೊಂದು ದಿನಂ ಪುರದ ಪೊರವೊಳಲೊಳೆ ಸುತ್ತಿಬರುತ್ತುಂ ದರ್ಭೆಯ ಮೊನೆ ಕಾಲ ತಳಮನಡರಲದರ ಸಮೂಲಮನಗುಳ್ದು ಕಿತ್ತು ಸುಟ್ಟು ತೂರುತ್ತಿರ್ದ ಚಾಣಕ್ಯನೆಂಬ ಪಾರ್ವನಂ ಕಂಡೀತನಿಂ ನಂದನನ ವಂಶನಿರ್ಮೂಲನಂ ಮಾಡಲಪ್ಪುದೆಂದು ಪೋಗಿ ಛತ್ರದಲ್ಲರಸನಮತಿಸಂತೋಷಂಬಡಿಸುತ್ತಿರ್ದು ಕ್ರಮದಿಂ ತಿರಸ್ಕಾರಮಂ ಮಾಡಿಸಿಯರಸಿನೊಳ್ ಮುನಿದು ಪ್ರತ್ಯಂತರಾಜರಂ ಮಂತ್ರೋಪಾಯದಿಂದೆತ್ತಿಸಿ ತಂದು ನಂದನನ ವಂಶಮಂ ನಿರ್ಮೂಲಮಂ ಮಾಡಿ ವೃದ್ಧ ಚಂದ್ರಗುಪ್ರನೆಂಬರಸಂಗೆ ಪಟ್ಟಂಗಟ್ಟಿಪ್ಪುದುಂ ಕೆಲವು ದಿವಸಕ್ಕೆ ಚಂದ್ರಗುಪ್ತಂ ತನ್ನ ಮಗಂ ಬಿಂದುಸಾಗರಂಗೆ ರಾಜ್ಯಮಂ ಕೊಟ್ಟು ಚಾಣಕ್ಯವೆರಸು ತಪಮಂ ಕೊಳಲ್.

ಇತ್ತಲ್ ಬಿಂದುಸಾಗರಂ ರಾಜ್ಯಗೆಯ್ದು ತನ್ನ ಮಗನಶೋಕಂಗೆ ಪಟ್ಟಂಗಟ್ಟಿ ಜಾತರೂಪನಾಗೆ ಅಶೋಕಂಗೆ ಕುನಾಳನೆಂಬ ಮಗನಾಗಿ ಬಾಲಕಾಲದೊಳುಪಾಧ್ಯಾಯರಲ್ಲಿ ಓದಿಸುತ್ತರೆ ಅಶೋಕಂ ಆತ್ಮೀಯ ನಗರದ ಕಾಪಂ ಕಪಿಳನೆಂಬ ಮಂತ್ರಿಗಪ್ಪೈಸಿ ತಾಂ ಪರಚಕ್ರ ಮೇಲೆತ್ತಿ ಪೋಗಿ ಪಲವು ದಿನಂ ತಡೆದುದಕ್ಕೆ ಲೇಖನಮಂ ಪ್ರಧಾನನಲ್ಲಿಗೆ ಕಳಿಪಿದೊಡದನೋದಿ ನೋಳ್ವಾಗದರೊಳುಪಾಧ್ಯಾಯಾಯ ಕೂರಂದತ್ವಾ ಕುಮಾರ ಆಪ್ಯಾಯತಾಂ ಕುಮಾರೋ ಮಂದಮಧ್ಯಾದಯತಾಂ (?) ಎಂದುರ್ದೊಡುಪಾಧ್ಯಾಯಂಗೆ ಕಳವಯೋಗರಮನಿಕ್ಕಿಸಿ ಕುಮಾರನ ಕಣ್ಣಂ ಕಳೆಯಿಸೆ ಕೆಲವು ದಿವಸ ಶತ್ರುಗಳಂ ಗೆಲ್ದು ಪುರಕ್ಕೆ ಬಂದು ಕುರುಡನಾಗಿರ್ದ ಮಗನಂ ಕಂಡು ಪ್ರಧಾನನ ಕಣ್ಣಂ ಕೀಳಿಸಿ ಪುರದಿಂ ಪೊರಮಡಿಸಿ ಮಂಗಂಗೆ ಚಂದ್ರಾನನೆಯೆಂಬುಳಂ ಮದುವೆಯಂ ಮಾಡಲಾ ಈರ್ವರ್ಗಂ ಚಂದ್ರಗುಪ್ತನೆಂಬ ಮಗನಾಗಿ ಬಳೆಯಲಾತಂಗೆ ಪಟ್ಟಿಂಗಟ್ಟಿ ಕುನಾಳ ಸಹಿತಂ ದೀಕ್ಷೆಗೊಳಲ್.

ಇತ್ತಲ್ ಚಂದ್ರಗುಪ್ತಂ ರಾಜ್ಯಂಗೆಯುತ್ತಿರ್ದೊಂದು ದಿನಸಂ ಯಶೋಭದ್ರರೆಂಬ ದಿವ್ಯಜ್ಞಾನಿಗಳ್ ಉದ್ಯಾನವನಕ್ಕೆ ಬಂದಿರ್ದರೆಂದು ವನಪಾಲಕಂ ಪೇಳೆ ವಿನತಮಸ್ತಕನಾಗಿ ವನಪಾಂಲಂಗುಚಿತಮನಿತ್ತು ಕೆಲಂಬರ್ವೆರಸು ಪೋಗಿ ಭಕ್ರಿಪೂರ್ವಕಮಾ ಯೋಗೀಂದ್ರರಂ ಬಂದಿಸಿ ಧರ್ಮಶ್ರವಣಾನಂತರಂ ಚಂದ್ರಗುಪ್ತ ಮಹಾರಾಜಂ ತನ್ನ ಮುನ್ನಿನವ ಭವಸಂಬಂಧಮಂ ಬೆಸೆಗೊಳೆ ಮುನೀಂದ್ರರಿತೆಂದು ಬೆಸಸಿದರ್.

ಜಂಬೂದ್ವೀಪದ ಭರತದಾರ್ಯಖಂಡದವಂತೀವಿಷಯದ ವೈಶೇಕಮೆಂಬ ಪೊಳಲನಾಳ್ವ ಜಯವರ್ಮನಾತಂಗೆ ಸತಿ ಧಾರಿಣೀ ಸಹಿತಂ ಸುಖಮಿರಲಾ ಸಮೀಪದ ಪಲಾಲಕೂಟಗ್ರಾಮದ ಪರದಂ ದಿವಿಜತನಾನ ಪೃಥುವಿಯವರ ಮಗಂ ನಂದಿಮಿತ್ರನತಿ ಧರಿದ್ರನಾಗಿರುತ್ತಿಪ್ಪಿನಂ ಕಾಷ್ಠತಟುವೆಂಬ ಗಡಿಕಾರಂ ಪುಳ್ಳಿಯ ಪೊರೆಯಂ ಪೊತ್ತು ಬರುತ್ತಂ ಬಳಲಿ ಪೊರೆಯನಿಳುಪೆ ಮಲಗಿರ್ದನಂ ಕಂಡು ಕೇಳೆ ಪೇಳ್ದನೀ ಪೊರೆಯಂ ನಾಲ್ವರಿಂ ಮಿಗಿಲಾದ ಪೊರೆಯಂ ದಿನಂಪ್ರತಿ ತಲೆಯೊಳಿಟ್ಟು ತನ್ನ ಮನೆಗೊಡಗೊಂಡು ಪೋಗಿ ತನ್ನ ಪೆಂಡತಿ ಜಯಘಂಟೆಯಂ ಕರೆದು ಕಾಷ್ಠತಟುವಿಂಗೆ ಜೋಳದ ಪಿಟ್ಟಂ ನೀರಂಬಲಿಯಂ ನಿಯಮಿಸೆ ಪ್ರತಿದಿನಂ ಕುಡುವುದದು ಹೆಚ್ಚು ಕಡಿಮೆಯಾಗೆ ಲಗುಡ ತಾಡನೆಯಂ ಮಾಳ್ವೆನೆಂದು ನಿಯಮಿಸೆ ಪ್ರತಿದಿನಂ ಭಾರಿ ಭಾರಿ ಪೊರೆಗಳಂ ತಪ್ಪುದುಂ ವಿಕ್ರಯಂ ಮಾಡಿ ಮಿತಿಯಿಲ್ಲದೊಡೆಮೆಯಂ ಗಳಿಯಿಸಿ ಸುಖಮಿರ್ದೊಂದುದಿವಸಂ ಪರ್ವಮಾಗೆ ನೋಡಿ ಜಯಘಂಟೆ ತನ್ನ ಮನದೊಳಿಂತೆಂದಳ್.

ಈತನ ಪ್ರಸಾರದಿಂದಿನಿತು ಸಿರಿಯಾದುದು, ಪಿಂದಿಯಾತಂಗೆ ಬಸುರು ತುಂಬಿ ಕೂಳನಿಕ್ಕದುದಿಲ್ಲೆಂದು ಪೇಳ್ದು ಇಂದೀತಂಗೆ ಯಥೇಪ್ಸಿತ ಭೋಜನಮನಿಕ್ಕುವೆನೆಂದು ಕ್ಷೀರಾನ್ನಘೃತ ಪೂರಿಕಾ ಮಂಡಗೆ ಮೋದಕಾದಿಗಳನಿಕ್ಕಿ ಬಸುರು ತೀವುವಂತೆ ತೃಪ್ತಿ ಬಡಿಸಿ ಕರ್ಪೂರ ವೀಳಯಮಂ ಕುಡೆ ಅತಿಸಂತುಷ್ಟನಾಗಿ ಪುಳ್ಳೆಯಂ ಮಾರುತ್ತಿರ್ದ ಕಾಷ್ಠಕೂಟದವನೆಂಬ ನಂದಮಿತ್ರನಲ್ಲಿಗೆ ಪೋಗಿ ಉಡಲೊಂದು ವಸ್ತ್ರಮಂ ಬೇಡೆ ಪೊರೆದು ಮಣಿಯನಿಂದಿರ್ದನಂ ನಂದಮಿತ್ರಂ ನೋಡಿ ತನ್ನ ಮನೆಗೆ ಬಂದು ತನ್ನ ಪೆಂಡತಿಯನೀತಂಗೇನನುಣಲಿಕ್ಕಿದೆಯೆನಲಾ ಸರೂಪಮಂ ಪೇಳೆ ಕೋಪಿಸಿ ಪಿಡಿದ ಕೋಲಿಂ ಪೇಸದ ಕೊಂದು ಕೆಡಹಿದುದಂ ಕಾಷ್ಠತಟು ಕಂಡೆನ್ನನಿಮಿತ್ತಮೀಕೆಗೆ ನೋವಾದುದೆಂದು ಇನ್ನೀ ಮನೆಯೊಳಪ್ಪುದನುಚಿತಮೆಂದು ಪೋರಮಟ್ಟುಪೋಗಿ ಮರುದಿವಸ ಭಾರಿಯ ಪುಳ್ಳೆಪೊರೆಯಂ ತಂದು ಸಂತೆಯೊಳಿಪ್ಪುದುಂ ಪೊರೆಯಂ ಕೊಳಲ್ಪಂದರೆಲ್ಲಂ ಕೆಲದ ಕಿರುಪೊರೆಗಳಂ ಮಾರುಗೊಂಡಾತನ ಪೊರೆಯನಾರು ನುಡಿಸದಿರೆ ಮಧ್ಯಾಹ್ನಮಾದಗಳ್ ಪಸಿದೆತ್ತ ಪೋಪೆನೆಂದಿರ್ಪ ಸಮಯದೊಳ್ ನಯಗುಪ್ರಾಚಾರ್ಯರ್ ಮಾಸೋಪವಾಸದ ಪಾರಣಾರ್ಥಂ ರಾಜವಿದಿಯೊಳೆಯ್ದುತ್ತಿಪ್ಪರಂ ಕಂಡೆನಗೊಂದು ಕಪ್ಪಡಮುಂಡವಂಗಮದು ದೊರಕಿದುದಿಲ್ಲೆನ್ನಿಂದಮತಿಬಡವನೀತನೆಂತು ಜೀವಿಪನೆಲ್ಲಿಗೆ ಪೋಪನಿದಂ ನೋಳ್ವೆನೆಂದಾ ಕಾಷ್ಠದ ಪೊರೆಯನಲ್ಲೆ ಬಿಸುಟವರ ಪಿಂದೆ ಪೋಪುದುಮಾ ಮುನೀಂದ್ರರಾ ನಗರಾಧಿನಾಯಕಂ ನಿಲಿಸೆ ಸ್ಥಾಪನಾದಿ ನವವಿಧ ಪುಣ್ಯ ಶ್ರದ್ಧಾದಿ ಸಪ್ತಗುಣ ಸಮನ್ವಿತನಾಹಾರದಾನಮಂ ಕೊಟ್ಟು ನಿಂದಿರ್ದ ಕಾಷ್ಠತಟುವಂ ನಂದಿಮಿತ್ರಂ ಕಂಡೀತಂ ಶ್ರಾನಕನೆಂದು ಸಾಲ್ವನಿತು ಭೋಜನಮಂ ಯಥೇಷ್ಟಮನಿಕ್ಕೆ ಮುನಿಗಳ್ಗೆ ನಿರಂತರಾಯದೊಳೆ ಪಂಚಾಶ್ಚರ್ಯಮಾಗೆ ಕಂಡೀತಂ ದೇವನಪ್ಪನಿವರಡಿಯಂ ಬಿಡದಿಪ್ಪೆನೆಂದಿರ್ದನಂ ಮುನೀಂದ್ರಂ ಭವ್ಯನೆಂದರಿದಿಪ್ಪಿನಮರೊಡನೆಯರಿಪ್ಪ ಗುಹೆಗೆ ಪೋಗಿ ವಂದಿಸಿ ಪೇಳ್ದುಂ ದೇವರೆನ್ನಂ ನಿಮ್ಮಂತ ಮಾಳ್ವುದೆನೆ ಮುನಿಗಳುಮೀತನಾಸನ್ನಭವ್ಯನಾಗಿಯುಮಲ್ವಾಯುಷ್ಯನೆಂದರಿದು ದೀಕ್ಷೆಯಂ ಕೊಟ್ಟು ಉಪದೇಶಂಗೆಯ್ಯೆ ಉಪವಾಸಮಂ ಕೈಕೊಂಡಿರೆ ಪಾರಣೆಯ ದಿವಸಂ ಶ್ರಾವಕರೆಲ್ಲಂ ನಮಗೆ ತಮಗೆ ಪುಣ್ಯಮೆಂದು ಸಂಭ್ರಮಂಗೊಳ್ವುದುಂ ನೋಡಿಯಿಂದೆನಗೆ ಭವಮಿಂತಾದುದು, ನಾಳಿನತಿಶಯಮೆಂತಪ್ಪುದೆಂದು ಪಾರಣೆಯನೊಲ್ಲದೆ ಮತ್ತಮುಪವಾಸಮಂ ಮಾಳ್ವುದುಂ.

ಮರುದಿವಸ ರಾಜಶ್ರೇಷ್ಠಿ ಮೊದಲಾಗೆಲ್ಲರುಂ ಬಂದತ್ಯಾದರದಿಂ ಬಾವಲಿಯಂ ಬೇಡೆ ನಂದಿಮಿತ್ರಮುನಿ ನಾಳಿನಿಶಯಮೆಂತಪ್ಪುದೆಂದು ಇದುಮುಪವಾಸಮಂ ಕೈಕೊಂಡೆನೆನಲೆಲ್ಲರುಂ ಪ್ರಾರ್ಥಿಸಿದೊಡೆಮೊಲ್ಲದಿರಲೀ ವಾರ್ತೆಯರಸುಂ ಕೇಳ್ದು ಮರುದಿವಸಂ ಪಟ್ಟಮಹಾದೇವಿವೆರಸು ವಿಭವದಿಂ ಗುಹೆಯನೆಯ್ದಿ ನಮೋಸ್ತುಗೆಯ್ದು ಬಾವಲಿಯಂ ಪ್ರಾರ್ಥಿಸೆ ಮುನಿಪಂ ದೃಡಚಿತ್ತದಿ ನಿಂದು ನಿರ್ಭರಮುಪವಾಸೆವೆಂದು ಪಂಚನಮಸ್ಕಾರಸ್ಮರಣೆಯಿಂದಾ ಇರುಳ ಬೆಳಗಿನೊಳ್ ನಿಜಾಯುಷ್ಯದವಸಾನಮಾಗೆ ನಯಗುಪ್ರಾಚಾರ್ಯರುಪದೇಶಭಾವನೆಯಿಂ ಮುಡುಪಿ ಸಾಗರೋಪಮಸ್ಥಿತಿಯುಳ್ಳ ಸೌಧರ್ಮಕಲ್ಪದೊಳಣಿಮಾದಿ ಗುಣಯುಕ್ತಮಾದ ದಿವ್ಯಸುಖಸುಧಾರತೃಪ್ತನಾಗಿ ತನ್ನ ಮಹಿಮೆಯುಂ ತೋರಲ್ ಬರ್ಪಿನಮಿತ್ತಲಾ ಸಾಧು ಸಮಾಧಿವಡೆದುದಂ ಕೇಳ್ದು ಸೂರ್ಯೋದಯದೊಳ್ ಪುರಜನ ಪರಜನಸಂಬೆರಸು ಜಯವರ್ಮಮಹಾರಾಜಂ ಬಂದನೇಕ ಪ್ರಕಾರ ವಸ್ತುಗಳಿಂ ಶರೀರಪೂಜೆಯ್ದು ಮಹಾಪ್ರಭಾವನೆಯಿಂ ಶರೀರ ಸಂಸ್ಕಾರಮಂ ಮಾಳ್ವಾಗಲಾ ಇಂದ್ರಂ ತನ್ನ ಮುನ್ನಿನ ರೂಪುಗೊಂಡೊಂದು ಪುಳ್ಳೆಯ ಪೊರೆಯಂ ಪೊತ್ತು ಕುಣಿಯತ್ತೇ ತನ್ನುಪವಸಾದ ಫಲಮಂ ಮುನ್ನೆ ತನ್ನ ಕಾಷ್ಠಕೂಟನಿಂದಾದ ವೃತ್ತಕಮೆಲ್ಲಮಂ ಪೇಳ್ದು ಆ ರೂಪಂ ಬಿಟ್ಟು ತನ್ನ ನಿಜಸ್ವರೂಪದಿಂ ಕಾಷ್ಠತಟು ದಿವ್ಯಗಂಧಮಾಲ್ಯ ವಸ್ತ್ರಭೂಷಣ ದಿವ್ಯಕಾಂತಾಜನಪರಿವಾರಸಹಿತಂ ದೇವವಿಮಾನ ಮೊದಲಾದ ದೇವಿವಿಭೂತಿಯಂ ತೋರಿ ನಂದಿಮಿತ್ರಚರದೇವಂ ದೇವಲೋಕಕ್ಕೆ ಪೋಗಲ್.

ಇತ್ತಲರಸಂ ಮೊದಲಾದ ಸಮಸ್ತಜನಂ ಧರ್ಮಮಹಾತ್ಮ್ಯಕತ್ಯಾಶ್ಚರ್ಯಂಬಟ್ಟು ಮುನಿದು ಕಳೇಬರವಂ ಸಂಸ್ಕರಿಸೆ ವೈರಾಗ್ಯದಿಂ ಜಯವರ್ಮಂ ತನ್ನ ಮಗಂ ಶ್ರೀವರ್ಮಂಗೆ ರಾಜ್ಯಮನಿತ್ತು ಮಂತ್ರಿ ರಾಜಶ್ರೇಷ್ಠಿ ಮೊದಲಾಗೆ ಐನೂರ್ವರ್ವೆರಸು ದೀಕ್ಷೆಯಂ ಕೈಕೊಂಡರ್, ಕೆಲಂಬರ್ ಏಕಾದಶನಿಲಯಮಂ ತಾಳ್ದರ್, ಕೆಲಂಬರ್ ಸಮ್ಯಕ್ತ್ವದಿಂ ದೃಢಚಿತ್ತರಾದರ್, ಆ ಕಾಷ್ಠತಟು ಚರದೇವಂ ದಿವ್ಯಸುಖಮಂ ಸಮುದ್ರೋಪಮಕಾಲಮನುಭವಿಸಿ ಸ್ವರ್ಗದಿಂದೃಶ್ಯನಾಗಿ ಬಂದು ಕುನಾಳನರಿಸಿ ಚಂದ್ರಾನನೆಯ ಗರ್ಭಕ್ಕವತರಿಸಿ ಚಂದ್ರಗುಪ್ತಮಹಾರಾಜಂ ನೀನಾದೆಯೆಂಬುದಂ ಕೇಳ್ದು ಮುನಿಗಳಿಗೆರಗಿ ಬೀಳ್ಕೊಂಡು ಪುರಮಂ ಪೊಕ್ಕು ಸುಖದಿಂ ರಾಜ್ಯಂಗೆಯ್ಯುತ್ತಿರ್ದೊಂದು ಕಾರ್ತಿಕದ ಪುಣ್ಣಮೆಯೆಂದು ಚಂದ್ರಿಕಾವಿಹಾರಂ ಮಾಡಿ ಶಯ್ಯಾಹದೊಳ್ ಮಿದ್ರಾಮುದ್ರಿತನಾಗಿರ್ದು ನಿಶಾವಸಾನದೊಳ್ ಪದಿನಾರು ಸ್ವಪ್ನಂಗಳಂ ಕಂಡನೆಂತೆಂದೊಡೆ ಸೂರ್ಯಾಸ್ತಮಾನಮಂ ಕಲ್ಪವೃಕ್ಷ ಕೊಂಬು ಮುರಿದು ಬೀಳ್ವುದಂ ದೇವವಿಮಾನಂ ಬರುತ್ತಾಕಾಶಮಾರ್ಗದಿಂ ತಿರುಗಿಪೋಪುದಂ ಚಂದ್ರಮಂಡಲಂ ಬಿನ್ನಮಾಗಿರ್ದುದಂ ಕೃಷ್ಣಗಜಂಗಳ್ ಪೋರುತ್ತಿಪ್ಪುದಂ ಮೀಂಬುಳುಗಳ್ ಸಂಜೆಯ ಬೆಳಗಿನೊಳ್ ಚರಿಸುವುದಂ ಬತ್ತಿರ್ದ ಕೆರೆಯಂ ಧೂಮಂ ವ್ಯಾಪಿಸಿರ್ದುದಂ ಕೋಡಗಂ ಸಿಂಹಾಸನಮನೇರಿಪ್ಪುದಂ ಪಾಯಸಮಂ ಪೊನ್ನಹರಿವಾಣದೊಳ್ ನಾಯಿ ತಿಂಬುದಂ ಎಳೆಯ ಹೋರಿಗಳುದ್ಯೋಗಮಂ ಕ್ಷತ್ರಿಯಪುತ್ರರ್ ಕತ್ತೆಯನೇರಿರ್ದುದಂ ಕಪಿಗಳು ಹಂಸೆಗಳಂ ಬಾದಿಸುವುದಂ ಬಾಲವೃಷಭಂ ಸಮುದ್ರಮಂ ಪಾಯ್ವುದಂ ವೃದ್ಧವೃಷಭನಂ ನರಿಗಳಟ್ಟುವುದಂ ಪನ್ನೆರಡು ತಲೆಯ ಪಾಪು ಬರ್ಪುದಂ ಇಂತು ಹದಿನಾರು ಸ್ವಪ್ನಮಂ ಕಂಡು ನಿದ್ರಿಯಿಂದೆಚ್ಚುತ್ತು ಸೂರ್ಯೊದಯಮಾಗೆ ನಿತ್ಯಾಚಾರಮಂ ನಿರ್ವರ್ತಿಸಿ ಓಲಗದೊಳಿರೆ ವನಪಾಲಕಂ ಬಂದು ಭದ್ರಬಾಹುಸ್ವಾಮಿಗಳ್ ಸಮುದಾಯಂಬೆರೆಸು ಅನೇಕ ದೇಶಂಗಳೊಳ್ ವಿಹಾರಂ ಬಂದೆಮ್ಮ ಉದ್ಯಾನದೊಳಿರ್ದರೆನೆ ಪರಿಜನ ಪುರಜನಂಬೆರಸು ಪೋಗಿ ವಂದಿಸಿ ಧರ್ಮಶ್ರವಣಾನಂತರಂ ತಾನು ಕಂಡ ಕನಸಿನ ಬೆಸಗೊಂಬುದುಂ ಮುನೀಂದ್ರರಿಂತೆಂದು ಬೆಸಸಿದರ್.

ಸೂರ್ಯನ ಅಸ್ತಮಾನಮಂ ಕಂಡುದರಿಂ ಸಕಲ ವಸ್ತುಪ್ರಕಾಶಮಪ್ಪ ಕೇವಲ ಜ್ಞಾನಾಸ್ತಮಯಮಪ್ಪುದು. ಕಲ್ಪದ್ರುಮದ ಕೊಂಬು ಮುರಿದುದರಿಂ ಜಿನಧರ್ಮಕ್ಷೀಣಮಾಗಿ ನಿನ್ನಿಂದ ಮುಂದೆ ಪುಟ್ಟಿದ ಮಕುಟಬದ್ಧರಾದಿಗಳ್ ಜಿನದೀಕ್ಷೇಯಂ ತಾಳುವ ರಾಜರಿಲ್ಲ. ವಿಮಾನಂ ಬಂದು ಮುಗುಳೆ ಪೋದುದರಿಂದಿತ್ತ ಸುರರುಂ ವಿದ್ಯಾಧರರುಂ ಚಾರಣರುಂ ಭರತಕ್ಷೇತ್ರಕ್ಕೆ ಬಪ್ಪುದಿಲ್ಲ. ಚಂದ್ರಮಂಡಲಂ ಭಿನ್ನಮಾಗಿರ್ದುದರಿಂ ಜಿನಧರ್ಮಂ ಸಂಘಭೇದಮಾಗಿ ನಾನಾ ಬಗೆಯಪ್ಪುದು. ಕೃಷ್ಣಗಜಂಗಳ ಪೊರೆಯಿಂ ಮೇಘವರ್ಷಂ ಕಾಲಕಾಲಕ್ಕಾಗದೆ ಸಸಿಗಳಲ್ಪಘಲದಂಗಳಪ್ಪುವು. ಸಂಜೆಯೊಳ್ ಮಿಂಚುಂಬುಳುವಾಡುವುದಂ ಕಂಡುದರಿಂ ಮನಃಪರ್ಯಯಜ್ಞಾನಂ ಪೋಗೆ ಕ್ಷೀಣಮಾದವಳಿಯೊಳ್ ಕ್ರಮದಿಂ ಕುಂದುತ್ತಿಪ್ಪ ಮತಿಶ್ರುತಜ್ಞಾನದಿಂ ವಸ್ತುಸ್ವರೂಪಮನವ್ಯಕ್ತದಿಂ ತಾಳ್ವದು. ನಡು ಬತ್ತಿದ ಕರೆಯಂ ಕಂಡುದರಿಂದಾರ್ಯಖಂಡ ಮಧ್ಯದೊಳ್ ಜಿನಧರ್ಮಮಿಲ್ಲದೆ ಕಡೆ ಕಡೆಯೊಳ್ ಮಿಥ್ಯಾಸಂಕಲಿತಮಾಗಿ ವರ್ತಿಸುವುದು. ಧೂಮವ್ಯಾಪನೆಯಂ ಕಂಡುದರಿಂ ದುರ್ಜನರು ಪ್ರಬಲದಿಂ ಸದ್ಧರ್ಮಮಂ ಕಾಣದಂತೆ ಮರೆಸುವುದು. ಸಿಂಹಾಸನಮಂ ಕೋಡಗನೇರಿರ್ದುದಂ ಕಂಡುದರಿಂ ನೀಚರು ಕುಲಹೀನರು ಕುಮಾನುಷ್ಯರೆ ರಾಜ್ಯಾದಿಪ್ಪರಪ್ಪರು. ಸುವರ್ಣಭಾಜದೊಳ್ ಪಾಯಸಮಂ ನೆಕ್ಕುವ ಶ್ವಾನನ ಕಂಡುದರಿಂ ಪ್ರಜೆಗಳ ಷಡ್ಭಾಗಮಂ ಬಿಟ್ಟು ಸಿದ್ಧಾಯಮಂ ಮಾಡಿ ಕ್ರಮದಿಂದಾ ಕಂದಾಯಂ ದ್ವಿಗುಣ ತ್ರಿಗುಣಮಾಗೆ ತೆಗೆದು ಪ್ರಜೆಗಳಂ ಬಾಧಿಸುವರು ತರುಣ ವೃಷಭಂಗಳುದ್ಯೋಗಮಂ ಕಂಡುದರಿಂ ಪೂರ್ವವಯಸ್ಸಿನೊಳೆ ವೈರಾಗ್ಯದಿಂ ಧರ್ಮೋದ್ಯೋಗಂಗೆಯ್ವರಪರವಯಸ್ಸಿನೊಲಿಲ್ಲದೆ ನಡೆವರು. ಖರಮನೇರಿದ ರಾಜಕುಮಾರರಂ ಕಂಡುದರಿಂ ಸತ್ಕುಲರಪ್ಪರಸುಗಳ್ ಕುಲಚಾರಮಂ ಬಿಟ್ಟು ಸಂಕರತ್ವದಿಂ ನೀಚರ ಸಂಧಿಯೊಳ್ ಜೀವಿಪರು. ಕಪಿಗಳು ಹಂಸೆಗಳನಂಜಿಸುವುದಂ ಕಂಡುದರಿಂ ನೀಚರ್ ಪ್ರಬಲನಾಗಿ ಸತ್ಕುಲರಂ ನಿಂದಿಸಿ ತಮ್ಮ ಕಲಕ್ಕೆಲ್ಲರಂ ಮಾಳ್ವೆಮೆಂದು ಜಾತಿಕುಲವಂ ಬಿಟ್ಟು ನೆಗಳ್ವರು. ವೃದ್ಧವೃಷಭಂಗಳಂ ನರಿಗಳಟ್ಟುವುದಂ ಕಂಡುದರಿಂ ಕುಜನರು ಗುಣಿಗಳಂ ಜ್ಞಾನಿಗಳಂ ವೃದ್ಧರಂ ಸದ್ಧೇವರಂ ಸದ್ಗುಣಿಗಳಂ ಸತ್ಪರುಷರಂ ನಿಂದಿಸಿ ಬಾಧಿಸಿ ಅಪಹಾಸ್ಯಂಗೆಯ್ದು ಕಳೆವರು. ಮತ್ತಮಾ ರಾಜಾಧ್ಯಕ್ಷರು ಪ್ರಜೆಗಳ್ಗೆ ಸಂಕ ಮೊದಲಾದನ್ಯಾಯದ ತೆರೆಗೆಯಂ ಮಾಡಿ ಬಾಧಿಸುವುದಕ್ಕೆ ಸಹಾಯರಪ್ಪರು. ಪನ್ನೆರಡು ತಲೆಯ ಪಾವಂ ಕಂಡುದರಿಂದೀ ದೇಶಕ್ಕೆಲ್ಲಾ ಪನ್ನೆರಡು ವರುಷಂ ಬರಂ ದುರ್ಭಿಕ್ಷಮಪ್ಪದೆಂದಿತು ನಿರೂಪಿಸಿ ಮುನ್ನ ಪ್ರಥಮ ಚಕ್ರೇಶ್ವರಂ ಪದಿನಾರು ಸ್ವಪ್ನಮಂ ದುಷ್ಟಮಕಾಲಪ್ರವರ್ತನಕ್ಕೆ ಕಾರಣಂಗಳಪ್ಪವಂ ಕಂಡು ಆದೀಶ್ವರರಲ್ಲಿ ತತ್ಪಲಮಂ ಕೇಳ್ದಂ. ನೀಂ ಕಡೆಯ ಮಕಜಟಬದ್ಧನಪಪ್‌ಉದರಿಂದೀ ದುಷ್ಟಮಕಾಲದೊಳಪ್ಪ ವಿಪರೀತಂಗಳ್ಗೆ ಕಾರಣಮೀ ಸ್ವಪ್ನಮಂ ಕಂಡೆಯೆಂದು ಭದ್ರಬಾಹುಸ್ವಾಮಿಗಳ್ ಪೇಳೆ ಕೇಳ್ದು ವಿಷಣ್ಣಮನದಿ ಮುನಿಗಳಂ ಬೀಳ್ಕೊಂಡು ತಚ್ಛಾಂತಿಹೇತುವಾಗೆ ಮಹಾಭಿಷೇಕ ಕಲಿಕುಂಡಾದಿ ಯಂತ್ರಾರಾಧನೆ ಸಂಘಪೂಜಾದಿಗಳಂ ಮಾಡಿಸಲೆಂದಿರ್ಪಿನಂ.

ಇತ್ತ ಭದ್ರಬಾಹುದ್ವಾಮಿಗಳುವೊಡನಿರ್ದ ಸಮುದಾಯಮಂ ಚರ್ಯಾನಿಮಿತ್ತಂ ಶ್ರಾವಕರ ಮನೆಗಳಿಗೆ ಕಳಿಪಿ ತಾಮುವೊಂದು ಮನೆಗೆ ಬಾವಲಿಯನಿಟ್ಟು ಪೋಗೆಯಲ್ಲಿ ತೊಟ್ಟಿಲೊಳಿರ್ದ ಶಿಶು ಬೊಳಹ ಬೊಳಹಮೆಂದು ಪನ್ನೆರಡು ವೇಳೆ ಪೇಳ್ದೊಡೆ ಪನ್ನೆರಡಬ್ದ ಪರ್ಯಂತರಂ ಈ ದೇಶಕ್ಕೆ ಬರನಂ ಬಪ್ಪುದೆಂದು ಚರ್ಯಾಂತರಾಯಮಾಗೆ ಯೋಗ ಸ್ಥಾನದೊಳ್ ಬಂದು ನಿಲ್ವುದುಂ ಚಂದ್ರಗುಪ್ತಮಹಾರಾಜನ ಮಂತ್ರಿ ಗೋಪಾಲನೆಂಬಂ ದುಃಸ್ವಪ್ನದೋಷಮಂ ಕಳೆಯಲೆಂದು ಪುರದೊಳಗಣ ಪೊರಗಣ ನೀಚದೈವಂಗಳ್ಗನೇಕವಾದ ಪ್ರಾಣಿಹಿಂಸೆಯ ಮಾಡಿಸುವುದಂ ಚಂದ್ರಗುಪ್ತಮಹಾರಾಜನರಿದು ಪಾಪಭೀರುವಾಗಿ ಭದ್ರಬಾಹುಮುನಿಗಂತರಾಯಮಾದುದದ ತಿಳಿದವರ ಸಮೀಪಕ್ಕೆ ಸಂಸಾರ ಶರೀರಭೋಗ ನಿರ್ವೇಗದಿಂ ತನ್ನ ಮಗನಪ್ಪ ಸಿಂಹಸೇನಂಗೆ ರಾಜ್ಯಮಂ ಕೊಟ್ಟು ಭದ್ರಬಾಹುಸ್ವಾಮಿಗಳ ಸಮಕ್ಷದೊಳ್ ಜಿನದೀಕ್ಷೆಯಂ ಕೈಕೊಳಲಿತ್ತ ಸಿಂಹಸೇನನುಂ ಮಂತ್ರಿಗಳುಮಾಳೋಚಿಸಿ ದುರ್ಬಿಕ್ಷಾದಿ ರಾಜ್ಯಾರಿಷ್ಟಕ್ಕೇನಂ ಮಾಳ್ವೆನೆಂದು ಭೌತಿಕರಂ ಬರಿಸಿ ಕೇಳ್ವುದುಂ ಯಜ್ಞಮಂ ಮಾಡಿಸಾದೊಡೆ ರಾಜಸ್ತರಾಷ್ಟ್ರಮೆಲ್ಲಂ ಸೌಖ್ಯದೊಳಿರ್ಕುಂ, ಪಿತೃಗಳ ತೃಪ್ತರಪ್ಪರ್,ಇಂದ್ರಪಚವಿಉತ್ತರದೊಳಪ್ಪುದೆಂದು ಪೇಳಿ ಯಜ್ಞಕ್ಕೆ ತಕ್ಕ ಸಾಮಗ್ರಿಯಂ ಕೂಡಿಸುತ್ತೆ ಮೂಲಬ್ರಾಹ್ಮಣರಂ ಬರಿಸಿ ಕೇಳ್ವಿನಂ ಅವರಿಂತೆಂದರ್ ಯಜ್ಞೋದ್ಧರಾದಿ ಶಬ್ದ ದೇವಪೂಜೆ ದಾನಾದಿಗಳಪ್ಪ ಸಕಲ ಸಂಪಂತ್ಸಪಾದಕ ದಯಾಮಯ ಮಹಾಯಾಗಂ ಹಿಂಸಾಯಾಗದಿಂ ಪಾಪಸಾಧನಮಲ್ಲದೆ ಪುಣ್ಯಸಾಧನಮಲ್ಲದರಿಂದ ಹಿಂಸಾರೂಪಂ ಧರ್ಮಮಲ್ಲದೆ ಹಿಂಸೆಯುಂ ಧರ್ಮಮಾಗದು.

ಶ್ಲೋಕ || ಅಹಿಂಸಾ ಪರಮೋ ಧರ್ಮೋಹ್ಯಧರ್ಮಃ ಪ್ರಾಣಿನಾಂ ವಧಃ
ತಸ್ಮಾದ್ಧರ್ಮಾರ್ಥಿನಾ ಲೋಕೇ ಕರ್ತವ್ಯಾ ಪ್ರಾಣಿನಾ ದಯಾ ||
ಹಿಂಸಾಭಿಃರೌರವಂ ಭವೇತ್
ಅತ್ಮವತ್ ಸರ್ವಭೂತಾನಿ ಪರದ್ರವ್ಯಾಣಿ ಲೋಷ್ಠವತ್
ಮಾತೃವತ್ಪರದಾರೇಷು ಯಃ ಪಶ್ಯತಿ ಸ ಪಶ್ಯತಿ ||
ಧರ್ಮ ಕಾಮಾರ್ಥಕಾರ್ಯೋಭ್ಯೋ ಯೋಜಂತುಃ ಹನ್ಯತೇ ಯದಿ
ಸಸಪ್ತ ನರಕೇ ಘೋರದುಃಖಸಾಗರಮಾಪ್ನಯಾತ್ ||

ಎಂಬುದರಿಂದಾರ್ಷಾಕ್ರಮವಲ್ಲ.ಮಧ್ಯದೊಳ್ ಮಹಾಕಾಳಾಸುರಂ ತನ್ನ ಶತ್ರುವಂ ನಿರ್ವಂಶಂ ಮಾಡಿ ನರಕದುಃಖಮಂ ಮಾಡಲ್ ಪರ್ವತನೆಂಬ ಪಾರ್ವಂಗೆ ಹಿಂಸಾವೇದಮಂ ರಚಿಸಿ ದೇವತೆಗಳಂ ಸಹಾಯಂ ಮಾಡಿಕೊಟ್ಟು ಪ್ರಕಟಿಸಿದನದು ವೇದಮುಖ್ಯಮಲ್ಲೆಂದು ಸದ್ಬಾಹ್ಮಣರ್ ಪೇಳೆ ವೇದಮಪೌರುಷೇಯಮದರೊಳೆ ಪೇಳ್ದುದನೆಂತು ಬಿಡುವುದು. ನೀಮುಂ ವೇದಬಾಹ್ಯರಪ್ಪುದರಿಂ ನುಡಿವಿರೆನೆ ಅಪೌರುಷೇಯಮಾದೊಡೆ ಸರ್ವಜೀವಹಿತರಕಮಪ್ಪುದುಮನಾದಿಯಿಂ ಸರ್ವ ಪ್ರಾಣಿಗಳುಂ ಪರಿಣಾಮಾಗೆಯಿವಂ ಪರಸುಖಸಾಧನಂ ಅವನಾನು ತನ್ನ ಇಹದ ಕಾರ್ಯನಿಮಿತ್ತಂ ಜೀವಮಂ ವಧಿಯಿಸಿ ರಾಕ್ಷಸರ್ ಮೊದಲಾಗೆ ದುರ್ದೇತೆಗಳಂ ತೃಪ್ತಿಮೂಡಿಸಲ್ ನಿರ್ಮಿಸಿದುದೆಂದರಿವುದರಿಂದೆ ಪೌರುಷೇಯಮಲ್ಲ.

ಶ್ಲೋಕ || ಶ್ರುತಂ ಸುವಿಹಿತಂ ವೇದಾಂ ದ್ವಾದಶಾಂಗಕಲ್ಯಷಮ್
ಹಿಂಸೋಪ್ರದೇಶಮದ್ಬಾಕ್ಯಂ ನ ವೇದಸ್ಸಾ ಕೃತಾಂತವತ್ ||

ನೆರೆದಾದಿಮ್ಯಧ್ಯಾವಸಾನಂಬರಂ ಚೆನ್ನಾಗಿ ವಿಚಾರಿಸಿ ಮಣ್ಣಂ ಪೊದಿಸಿ ಸುವರ್ಣಮಂ ಕೊಂಬೆಂತೆ ವೇದಸಾರಮಪ್ಪ ಸದ್ಭರ್ಶನ ಸದ್ಙ್ಞಾನ ಧ್ಯಾನ ಸಚ್ಚಾರಿತ್ರಮಂ ಭೇದಿಸಿಕೊಳ್ಳುವೆ ತಾಯ ದೇಹದೊಳಿರ್ದ ಸ್ತನ್ಯಮಂ ಸೇವಿಸಿ ಬೆಳೆವ ಮಗು ಅಜ್ಞಾನಂ ಮೂಲಮಂತ್ರಮಂ ಸೇವಿಸೆ ಸಾಯ್ವಂತೆ ಹಿಂಸಾಯಜ್ಞಮಂ ಮಾಡಿ ಇಹಪರಮಂ ಕೆಡಿಸಿ ಪಾಪನುಬಂಧಕ್ಕೊಳಗಪ್ಪುದು ಮತವಲ್ಲ.

ಶ್ಲೋಕ || ಅನೇಕ ಶಾಸ್ತ್ರಂ ಬಹುವೇದಿತವ್ಯಂ
ಅಲ್ಪಶ್ಚ ಕಾಲೋ ಬಹವಶ್ಚ ವಿಘ್ನಾಃ
ಯತ್ಸಾರಭೂತಂ ತದುಪಾಸಿತವ್ಯಂ
ಹಂಸೋ ಯಥಾ ಕ್ಷೀರಮಿವಾಂಬು ಮಧ್ಯಾತ್ ||

ತತ್ವಜ್ಞಾನಂ ಪರಮಾರ್ಥಾನಾಂ ಶ್ರದ್ಧಾನಂ ವೇಮುಚ್ಯತೇ ಎಂಬುದರಿಂ ಕ್ಷಾರಜಲಧಿಯೊಳನರ್ಘ್ಯರತ್ನಮಿಪ್ಪಂತೆ ವೇದದೊಳ್ ನಿಶ್ಚುತತ್ತ್ವಮಿಪ್ಪುದಂ ತಿಳಿಯದೆ ತಂಗಿನಫಲದೊಳಿಪ್ಪ ಕಾಯಂ ಕಾಣದೆ ಮೇಗಣ ಮಟ್ಟೆಯನಗಿವಂತೆ ವೇದಚಾರವಿಲ್ಲದವರೆ ವೇದಬಾಹ್ಯರಪ್ಪರ್.

ಶ್ಲೋಕ || ಯಸ್ಯ ನಾಸ್ತಿಸ್ವಯಂ ಪ್ರಜ್ಞಾ ಶಾಸ್ತ್ರಂ ತಸ್ಯ ಕರೋತಿಕಂ
ಲೋಚನಾಭ್ಯಾಂ ವಿಹೀನಸ್ಯ ದರ್ಪಣಂ ಕಿಂ ಕರಿಷ್ಯತಿ (?)

ವಕ್ತೃಪ್ರಮಾಣದಿಂದ ವಚನಪ್ರಮಾಣಮಪ್ಪುದು. ಹಿಂಸಾವೇದಕ್ಕೆ ವಕ್ತೃಪ್ರಮಾಣಮಿಲ್ಲ. ಕರ್ತೃವಿಲ್ಲ. ದೃಷ್ಟೇಷ್ಟಕ್ಕೆ ವಿರುದ್ಧ ಪೂರ್ವಾಪರ ವಿರುದ್ಧ ಮಾದುದಿಂ ಬಿಟ್ಟುಳಿರ ಸಾರ ಸುಜ್ಞಾನ ಪ್ರವರ್ಧನ ದಯಾಮೂಲ ಧರ್ಮಮಂ ಕೈಕೊಳ್ವುದು.

ಶ್ಲೋಕ || ದಯಾಮೂಲೋ ಭವೇದ್ಧರ್ಮೋ ದಯಾ ಪ್ರಾಣ್ಯನಕಂಪನಮ್
ದಯಾಯಾಃ ಪರಿರಕ್ಷಾರ್ಥಂ ಗುಣಾಃ ಶ್ರೇಷ್ಠಾಃ ಪ್ರಕೀರ್ತಿತಾಃ
ಧರ್ಮಃ ಪ್ರಾಣಿದಯಾ ಸತ್ಯಂ ಕ್ಞಾಂತಿಃ ಶೌಚಂ ವಿತೃಷ್ಣತಾ
ಜ್ಞಾನವೈರಾಗ್ಯಸಂಪತ್ತಿರಧರ್ಮಸ್ತದ್ವಿಪರ್ಯಯಃ ||

ಯಜ್ಞಾರ್ಥಂ ಪಶುಮಾಲ ಭೆತ್ಪರವಧೂ ಪುತ್ರಾರ್ಥಮಾಶ್ಲೇಷಯೇದಿತ್ಯಾದಿ ದುಶ್ಯಾಶ್ತ್ರಮಂ ನಂಬಿ ಮಾಂಸಾಶಿಗರಾಗಿ ಸುರಾಪಾನಾದ್ಯಭಕ್ಷಣಂಗಳಂ ಸೇವಿಸುವ ಮಹಾಪಾತಕರಂ ನಿಂದ್ಯರುಂ ಪಾಪಸೂತ್ರಾದಿಗಳುಂ ಕರ್ಮಚಂಡಾಲರುಂ ದುರ್ಗತಿ ಸಾಧಕರೆನ್ನದೆ ಜಾತಿಶ್ರೇಷ್ಠರ್ ವರ್ಣೊತ್ತಮರ್ ಲೋಕಪೂಜ್ಯರ್ ಧರಾಮರರೆಂಬುದೆಂತು.

ಶ್ಲೋಕ || ಸತ್ಯಂ ಬ್ರಹ್ಮ ತಪೋ ಬ್ರಹ್ಮ ಬ್ರಹ್ಮ ಇಂದ್ರಿಯಾನಿಗ್ರಹಃ
ಸರ್ವಭೂತದಯಾಬ್ರಹ್ಮ ಏತದ್ಪ್ರಾಹ್ಮಣ ಲಕ್ಷಣಮ್
ಸತ್ಯಂ ನಾಸ್ತಿ ತಪೋ ನಾಸ್ತಿ ನಾಸ್ತಿ ಚೇಂದ್ರಿಯನಿಗ್ರಹಃ
ಸರ್ವಭೂತದಯಾ ನಾಸ್ತಿ ಏತಚ್ಚಾಂಡಾಲಲಕ್ಷಣಮ್ ||
ಶ್ಲೋಕ || ಅಜಂ ಹತ್ವಾ ಸುರಾಂ ಪೀತ್ವಾ ಕೃತ್ವಾ ಪಲಲಭೋಜನಮ್
ಯದಿ ಸ್ವರ್ಗಂ ಗತಂ ಚಾಪಿ ನರಕಂ ಕೇನ ಲಭ್ಯತೇ ||

ಎಂದಾರ್ಹರ ವಿಪ್ರರಾದಿ ಸ್ಯಾದ್ವಾದಮತಾನುಸಾರಿಗಳ್ ಪೇಳೆ ಸಿಂಹಾಸೇನ ಮಹಾರಾಜನ ಸಭಾಸದರೆಲ್ಲಂ ಒಪ್ಪಿ ಸಂತೋಷಂಬಡೆ ಬ್ರಾಹ್ಮಣರೆಲ್ಲಂ ನಿರುತ್ತರರಾಗಿ ಕೆಲಂಬರ್ ಹಿಂಸಾಯಜ್ಞಮಂ ಬಿಟ್ಟರ್. ಕೆಲಂಬರ್ ಪಿಷ್ಟುಪಶುವೆಂದು ಕಲ್ಪಸಿದರ್. ಕೆಲಂಬರ್ ನರ ಹಯಾದಿಗಳನುಳಿದರ್, ಮದ್ಯಮಾಂಸಾದಿಗಳಂ ಬಿಟ್ಟರ್.

ಶ್ಲೋಕ || ಆಶ್ವಾಲಂಬಂ ಗವಾಲಂಬಂ ಸನ್ಯಾಸಂ ಪಲಪೈತೃಕಂ
ದೇವರೇಣ ಸಂತೋತ್ಪತ್ತಿಃ ಕಲೌಪಂಚೌ ವಿನರ್ಜಯೇತ್ ||

ಎಂದು ಭ್ರಾತೃದಾರಾಸಂಗಮನುಳಿದು ಕೆಲಂಬರ್ ಮತ್ಸ್ಯಮಾಂಸಮಂ ಬಿಡದೆಯುಂ ಲೋಕಮರಿಯದಂತೆ ಮಧ್ಯಸೇವೆಯಂ ಮಾಡುವರ್. ಬ್ರಾಹ್ಮಣ್ಯಂ ಗೌಡಬ್ರಾಹ್ಮಣರೆಂದುಂ ದ್ರಾವಿಡ ಬ್ರಾಹ್ಮಣರೆಂದು ಪ್ರತ್ಯೇಕಮ್ಯೆದು ಭೇದದಿಂ ದಶವಿಧಿಮಾಯ್ತು.

ಶ್ಲೋಕ || ಸಾರಸ್ವತಾ ಕಾನ್ಯಕುಬ್ಜಾಃಗೌಡಮೈಥಿಲು ಉತ್ಕಾಲಾಃ
ಪಂಚಗೌಡಾ ಇತಿ ಖ್ಯಾತಾ ವಿಂದ್ಯಸ್ಯೋತ್ತರ ವಾಸಿನಃ ||
ಮಹಾರಾಷ್ಟ್ರಾ ಗುರ್ಜರಾಶ್ಚಾ ಆಂಧ್ರಾ ಕರ್ನಾಟಕಾಸ್ತಥಾ
ದ್ರಾವಿಡಾಶ್ಚ ಸಮಖ್ಯಾತಾ ವಿಂಧ್ಯ ದಕ್ಷಿಣ ವಾಸಿನಃ ||

ವಿಂಧ್ಯಪರ್ವತದುತ್ತರದೇಶದೊಳ್ ಪಂಚಗೌಡ ಬ್ರಹ್ಮಣರು ಆ ಪರ್ವತದ ದಕ್ಷಿಣದೇಶದೊಳ್ ಪಂಚದ್ರಾವಿಡ ಬ್ರಾಹ್ಮಣರೆಮದು ಹತ್ತು ಭೇದಮಾಗಿಯವರೊಳೊಂದೊಂದಕ್ಕೆ ಐದು ಆರು ಭೇದಮಾಗಿ ಅವರವರೊಳ್ ಪರಸ್ಪರ ವಿರೋಧದಿಂದಪ್ಪುದುಮಾ ಸಿಂಹಸೇನ ಮಹಾರಾಜಂ ಜೈನನಾಗಿಯುಂ ಮಿಥ್ಯಮಂ ಪೊದ್ದಿರಲಾ ಕಾಲದೊಳ್ ವಿಂದ್ಯಾದ್ರಿಯಿಂ ತೊಡಗಿ ನೀಲಗಿರಿಯವರೆಗೆ ಮಳೆ ಬೆಳೆಯಿಲ್ಲದೆ ಪ್ರಜೆಗಳ್ ಕ್ಷುಧಾ ತೃಷಾದಿಗಳಿಮ ಸಂತಪ್ತರಾಗಿ ನಿಧನರಾಗುವಂದಾ ಅತ್ಯುತ್ಕಟಮಪ್ಪ ಕ್ಷಾಮಂ ಪನ್ನೆರಡು ವರ್ಷಂಬರಂ ಬಪ್ಪಿನಮಿತ್ತ ಭದ್ರಬಾಹುಸ್ವಾಮಿಗಳ್ ಚಂದ್ರಗುಪ್ತಾಚಾರ್ಯರ್ ಮೊದಲಾಗಿರ್ದ ಶಿಷ್ಯರೆಲ್ಲರಂ ಬರಿಸಿ ಇಲ್ಲಿ ಪನ್ನೆರಡು ವರ್ಷಂಬರಂ ದುರ್ಭಿಕ್ಷಮಪ್ಪುದುದರಿಂದಿಲ್ಲಿರ್ದೊಡೆ ನಿಮ್ಮ ವ್ರತಾಚಾರಂಗಳ್ಗೆ ಭಂಗಮಕ್ಕುಮದುಕಾರಣ ನೀಮೆಲ್ಲಂ ದಕ್ಷಿಣಾಭಿಮುಖರಾಗಿ ಪೋಪುದೆನೆ ರಾಮಿಲ್ಯಾಚಾರ‍್ಯರ್ ಸ್ಥೂಲಭದ್ರಾಚರ‍್ಯರ್ ಮೊದಲಾಗೆ ಅತಿಸಮರ್ಥರಾಗಿರ್ದ ಶ್ರಾವಕರ ವಚನದಿಂ ಕೆಲಂಬರ್ ಸಂಘಮಂ ಕೂಡಿಕೊಂಡಲ್ಲೆ ನಿಲ್ವುದುಂ ಭದ್ರಬಾಹುಸ್ವಾಮಿಗಳ್ ಪನ್ನೆರಡು ಸಾವಿರ ಶಿಷ್ಯರಂ ಕೂಡಿಕೊಂಡು ದಕ್ಷಿಣ ದೇಶಮನೆಯ್ದೆ ಬಂದು ಪಿರಿದಪ್ಪರಣ್ಯಮಂ ಪೊಕ್ಕು ಅಲ್ಲಿಪ್ಪ ಬೆಟ್ಟದ ಕಿರುಗುಹೆಯಂ ನಿಷಿದ್ಧಿಯಂ ಪುಗುವಾಗಲೊಂದು ವಚನಮಾದುದು. ನಿಮ್ಮ ನಿಲ್ಲಿಯೆ ನಿಷಿದ್ಧಿಯಕ್ಕುಮೆಂಬ ವಚನಮಂ ಕೇಳ್ದು ಎಮಗಾಯುಷ್ಯಾವಸಾನಮೆಂದರಿದು ತನ್ನ ಶಿಷ್ಯರೊಳೇಕಾದಶಕಾಂಗ ದಶಪೂರ್ವಧರರಪ್ಪ ವಿಶಾಖಾಚಾರ‍್ಯರೆಂಬ ಮುನಿಪತಿಗಳಂ ಸಮುದಾಯಕ್ಕಾಚಾರ್ಯರಂ ಮಾಡಿಯವರ ಕೂಡೆ ಸಮುದಾಯದ ಪನ್ನಿಚ್ಚಾಸಿರ ಶಿಷ್ಯರ್ ಸಹಿತ ದಕ್ಷಿಣದಿಕ್ಕಿನ ಚೋಳ ಪಾಂಡ್ಯದೇಶಕ್ಕೆ ಕಳುಹಿಸಿ.

ಇತ್ತ ಚಂದ್ರಗುಪ್ತಮುನಿಗಳಂ ಕರೆದು ನೀಮುಮವರೊಡನೆ ಪೋಪುದೆನೆ ಪನ್ನೆರಡುವರುಷಂ ಗುರುಪಾದಸೇವೆಯಂ ಮಾಡುವುದದರಿಂ ಪೋಪೆನಲ್ಲೆಂದು ನಿಲ್ಚುದುಮುಳಿದ ಸಮುದಾಯಂಬೆರಸು ವಿಶಾಖಮುನಿಪತಿಯು ದಕ್ಷಿಣದೇಶಮನೆಯ್ದಲಿತ್ತ ಭದ್ರಬಾಹುಸ್ವಾಮಿಗಳ್ ಸನ್ಯಸನಮಂ ಕೈಕೊಂಡು ತದ್ಗುಹಾಂತದೊಳಾರಾಧನಾ ವಿಧಿಯಿಂ ನೆಗುಳುತ್ತಿರೆ ಚಂದ್ರಗುಪ್ರಯೋಗೀಂದ್ರಂ ಉಪವಾಸದೊಳ್ ಗುರುಸೇವೆಯಂ ಮಾಡುತ್ತಿಪ್ಪುದುಂ ಗುರುಗಳೆಂದರ್ ನಮ್ಮ ದರ್ಶನದೊಳುಪಾವಸ ನಿಯಮ ಪಾರಣಾರ್ಥಕ್ಕಮರುಣ್ಯಚರ್ಯಮುಳ್ಳುದರಿಂದ ಪೋಗಿ ವೃಕ್ಷಂಗಳ ಸಮೀಪಮನೆಯ್ದಿ ಬಾವಲಿಯನಿಕ್ಕಿ ಬಪ್ಪುದೆಂಬುದುಂ ಗುರುವಚನಮಂ ಮೀರದೆ ಪೋಗಲಾ ಚಂದ್ರಗುಪ್ರ ಮುನಿಯ ಮನಮಂ ಪರೀಕ್ಷಿಸಲೆಂದೊರ್ವ ಯಕ್ಷಿಯು ತನ್ನ ರೂಪಂ ಕಾಣಲೀಯದೆ ಕಂಕಣದ ಕೈಯೊಳ್ ಸುವರ್ಣದ ಸಟ್ಟುಗದೊಳ್ ತೊವ್ವೆಯಿಂದಂ ಕಲಸಿದ ಕಳವೆಯ ಕೂಳಂ ತುಪ್ಪ ಸಹಿತಂ ನಿಂದಿರೆ ಕಂಡು ಕಾಂತಾರಾಭಿಕ್ಷೆಯೊಳಕ್ಷಮೆಂದಲಾಭದಿಂ ತಿರುಗಿಬಂದು ಗುರುಗಳಿಂ ಪ್ರತ್ಯಾಖ್ಯಾನಮಂ ಕೈಕೊಂಡು ಕಂಕಣದ ಕೈಯ ಸ್ವರೂಪಮಂ ಪೇಳ್ವುದುಂ ಮಾರ್ಗಮಲ್ಲೆಂದು ನಿಮ್ಮ ಪುಣ್ಯದೇವಿಯೆಂದರಿಪೆ ಮರುದಿವಸಂ ಮತ್ತೊಂದು ದೆಸೆಗೆ ಬಾವಲಿಯನಿಕ್ಕೆ ಒಂದೆಡೆಯೊಳ್ ಪೊನ್ನೆ ಪರಿಯಾಣದೊಳ್ ಪರಪರಿಯ ಪಕ್ವಾನ್ನಮನಿಟ್ಟು ಕಳಶದೊಳ್ ನೀರುಸಹಿಮತ್ಯಂತ ರೂಪವತಿಯಪ್ಪ ಬಾಲಕಿಯು ಬರುತ್ತಿಪ್ಪುದುಂ ಯತೀಂದ್ರ ಕಂಡು ನೋಡುತಿಪ್ಪಿನಮಾಕೆ ಬಂದು ನಮೋಸ್ತು ಎಂದು ನಿಲಿಸಲೀಯರಣ್ಯದೊಳಾರುಮಿಲ್ಲದೊರ್ವ ಹೆಣ್ಣು ಬಂದು ನಿಲಿಸೆ ನಿಲ್ವುದುಚಿತಮಾರ್ಗಮಲ್ಲೆಂದು ಮಗುಳೆಬಂದು ಪ್ರತ್ಯಾಖ್ಯಾನಂಗೊಂಡಾ ಸ್ವರೂಪಮಂ ಗುರುಗಳ್ಗೆ ಪೇಳೆಯವುವೊಳ್ಳಿತ್ತಂ ಮಾಡಿದಿರಿ ಎಂಬುದಿಂ ಮರುದಿವಸಂ ಭದ್ರಬಾಹುಸ್ವಾಮಿಗೆ ಮರಣಸಮಯವಾದಾಗಳ್ ಬೇರೊಂದೂರ್ಧ್ವಶಿಲಾವಲದೊಳಿರಿಸೆಯಾ ಮೂನೀಂದ್ರರ್ ಸಮಾಧಿವಡೆಯೆ ಚಂದ್ರಾಗುಪ್ರರವರ ಶರೀರಮಂ ಸಂಸ್ಕರಿಸಿಯದರ ಶ್ರೀಪಾದಂಗಳಂ ಗುಹಾಬಿತ್ತಿಯೊಳ್ ರಚಿಸಿ ಆರಾದಿಸುತ್ತರ್ದರಣ್ಯಚರ್ಯಂ ಪೋಗಲಲ್ಲಿರ್ದ ಶೋಭಾಕರಮಪ್ಪ ದೇವನಿರ್ಮಿತ ಪುರಮಂ ಕಂಡು ಪುಗಲಲ್ಲಿ ಶ್ರಾವಕಂ ವಿಧಿಪೂರ್ವಕ ಮಹಾರಮಂ ಕುಡೆ ಕೊಂಡುಬಂದಾ ಶಿಲಾಮಯಗಿರಿಯಲ್ಲಿ ಗುರುಪಾದ ಭಕ್ತಿಯಿಂದಷ್ಟ ಪಕ್ಷಮಾಸಾದ್ಯಪವಾಸಂಗಳಿಂ ನೆಗಳುತ್ತೆ ಕಾಯಸ್ಥಿತಿನಿಮಿತ್ತಮಹಾರಂಗೊಳುತ್ತೆ ಧ್ಯಾನ ಮೌನಾನುಜಷ್ಠಾನದಿಂ ಕಾಲಮಂ ಕಳೆಯುತ್ತಿಪ್ಪುದುಂ.

ಅತ್ತಲ್ ವಿಶಾಖಾಚಾರ್ಯರ್ ಸಮುದಾಯಂಬೆರೆಸು ಪೋಗುತ್ತಂ ಗ್ರಾಮ ನಗರಾದಿಗಳೊಲಿರ್ಪ ಜಿನಾಲು ಜಿನಬಿಂಬಗಳಂ ವಂದಿಸುತ್ತಮಲ್ಲಿರ್ದ ವಿನೇಯ ಜನಂಗಳ್ಗೆ ಧರ್ಮಾಮೃತಮಂ ಕರೆಯುತ್ತುಂ ಚೋಳಮಂಡಲ ಮೊದಲಾದ ದೇಶಂಗಳೊಲ್ ವಿಹಾರಿಸುತ್ತಿರ್ದರಿತ್ತಲ್ ಪಾಟಲೀಪುತ್ರನಗರದೊಳ್ ರಾಮೀಲ್ಯಾಚಾರ್ಯರ್ ಮೊದಲಾದವರ್ ದುರ್ಭಿಕ್ಷದೊಳಿರುತ್ತಮಿರೆ ಶ್ರಾವಕವರ್ಗೆ ಪೂರ್ವಸ್ಥಿತಿಯೊಳೆ ವೈಯಾಪೃತ್ಯಮಂ ಮಾಡುತ್ತಿರೆ ರಾಜ್ಯದೊಳತ್ಯಂತ ಬರಮಾಗಿ ಧಾನ್ಯಮೆಲ್ಲ ಮರೆಯಾಗಿ ಪುತ್ರ ಪುಷ್ಪ ಫಲ ಮೂಲ ಬೀಜಾದಿಗಳುಮಿಲ್ಲದೆ ಜನಂಗಳೆಲ್ಲಂ ತಿಟ್ಟನೆ ತಿರಿದುಲಯಮಾಗುತ್ತಿಪ್ಪಾಗಳ್ ಜೈನಾಚಾರವ್ರತಾದಿಗಳ್ ಕೆಟ್ಟು ಭ್ರಷ್ಟಮಾಗಿ ನಡೆವಾಗ ಸ್ಥೂಳಭದ್ರಾದಿ ಮುನಿಗಳ್ಗೆ ಬಲ್ಲಿದರಾಗಿರ್ದ ಶ್ರಾವಕರ್ ಯಥೋಚಿತ ಭಿಕ್ಷೆಯಂ ಮಾಡಿಸುತ್ತರಲೊಂದು ದಿನಂ ಚರಿಗೆ ಪೋಗಿವಪ್ಪ ಋಷಿಯರಂ ಬಣಗುಗಳ್ ಕಂಡವರ ಪೊಟ್ಟೆಯಂ ಸೀಳ್ದು ಬಸುರೊಳಿರ್ದನ್ನಮಂ ತೋಡಿತಿಂಬುದುಂ ಕಂಡು ಶ್ರಾವಕರ್ ಭಯಗೊಂಡಲ್ಲಿಂದಿತ್ತ ರಾತ್ರಿಯೊಳನ್ನಮಂ ಬೇಡಿಕೊಂಡು ಸ್ರಾವೆಯೊಳ್ ಬಸದಿಯೊಳಿಟ್ಟಿರ್ದು ಬಾಗಿಲಂ ಮುಚ್ಚಿ ಬೆಳಗಾದಾಗಳ್ ಗವಾಕ್ಷದ ಬೆಳಗಿನೊಳೊರ್ವರ್ಗೊರ್ವ ಕೈಸೋದಿಸಿಕೊಂಬುದು ಪಗಲು ಪರಮಡಲಾಗದೆಂಬುಮಂತೆಗೆದ್ವೆಮೆಂದು ರಾಮಿಲ್ಯಾಚಾರ್ಯರ್ ಮೊದಲಾಗೆ ಒಪ್ಪಿ ಕೆಲವು ದಿವಸಂ ಪೋಗಲೊಂದು ರಾತ್ರಿಯೊಳ್ ಧೀರ್ಘಶರೀರ ಭೇತಾಳಾಕೃತಿಯಿಂ ಪಿಂಛ ಕಮಂಡಲಯುತರ್ ಬೀದಿ ಬೀದಿಯೊಳ್ ಬರುವುದುಂ ನಾಯಿಗಳ್ ಕಂಡು ಕೂಕಿರಿಯುತ್ತಮುಟ್ಟುತ್ತಂ ಬಂದೊರ್ವ ಮುನಿಯಂ ಕಡಿವುದುಂ ಶ್ರಾವಕರ್ ನಾಯ್ಗಳಂ ನಿವಾರಿಸೆ ಬಪ್ಪುದೆನೆ ಕೈಯಲ್ಲೊಂದೊಂದು ದೊಣ್ಣೆಯಂ ಗ್ರಹಿಸಿ ಬರುತ್ತಿರಲ್ಲೊಮ್ಮೆ ಕಾಷ್ಠದಂಡಮಂ ಕೈಯೊಳಾಂತು ತೊಟ್ಟನೆ ಮನೆಯಂಗಣದ ಮಣದಿರ್ದ ಭೇತಾಳರೂಪನೊರ್ವ ಬಸುರ ಹೆಂಗಸು ಕಂಡು ನಡುಗಿ ಭಯಂಗೊಂಡಾಕ್ಷಣ ಪೊಟ್ಟೆಯೊಳಿರ್ದ ಗರ್ಭಂ ತೊಟ್ಟನೆಕರಗಿ ಬೀಳ್ವುದುಂ ಶ್ರಾವಕರ್ ಕಂಡೆಂದರ್ ನೀವಿಲ್ಲಿಂದಿತ್ತ ರಾತ್ರಿಯೊಳನ್ನಮಂ ಬೇಡಿ ಬಪ್ಪಾಗಳ್ ಬಿಳಿಯ ಕಂಬಳಿಯಂ ಪೊದೆದು ಸೀರೆಯನುಟ್ಟು ಕುಂಚಮಂ ಕಟಿಯೊಳಡಂಗಿಸಿ ಗುಂಡಿಗೆಯಂ ಸ್ಕಂದಪ್ರದೇಶದೊಳಳವಡಿಸಿ ಬಪ್ಪುದಲ್ಲದೆ ಬಂದಂರನರ್ಥಮಕ್ಕುಮೆಂದೊಡಾ ಪ್ರಕಾರದೊಳೆ ಕೆಲವು ದಿವಸಂ ನಡೆಯಲವರ್ಗಡ್ಡಕಪ್ಪಟ ತೀರ್ಥಕರೆಂಬ ಪೆಸರಾಗಲೀ ಕ್ರಮದಿಂದಿರುತ್ತಿರ್ದು ಪನ್ನೆರಡು ವರ್ಷದ ದುರ್ಭಿಕ್ಷಂ ತೀರಿಬರೆ ಸುಭಿಕ್ಷೆವಾಗಲಿತ್ತ ಪನ್ನಿಚ್ಚಾಸಿರ ಶಿಷ್ಯರ್ವೆರಸಿ ವಿಶಾಖಾಚಾರ್ಯರ್ ಉತ್ತರಾಭಿಮುಖದಿಂ ಕರ್ಣಾಟಕದೇಶಮನೆಯ್ದಿ ಬಂದು ಸ್ವಗುರು ಭದ್ರಸ್ವಾಮಿಗಳ್ ಸಿಷಿದ್ಧವಂದನಾರ್ಥಮುವರಿರ್ದ ಗುಹೆಗೆಯ್ದಿ ಬಪ್ಪುದುಮಲ್ಲಿ ಗುರುಪಾದರಾಧನೆಯೊಳ್ ಪ್ರಥಮ ದೀಕ್ಷೆಯೊಳುದಲೋಚನಿಂ ಮೇಲೆ ಪುಟ್ಟಿದ ಜಟಾವಲಂಬಮಾಗಿರ್ದ ಚಂದ್ರಗುಪ್ರಮುನಿಗಳ್ ವಿಶಾಖಾಚಾರ್ಯರ್ಗಿದಿರೆದ್ದು ವಂದಿಸೆ ಇರರು ಕಂದ ಮೂಲ ಫಲಾಹಾರಿಗಳ್ ಕ್ಷಾರದೊಳೆ ಚಾರಿತ್ರಂಗೆಟ್ಟಿಪ್ಪರೆಂದು ಪ್ರತಿವಂದನೆಗೆಯ್ಯದೆ ನಿಷಿದ್ಧಿ ಕ್ರಿಯೆಯಂ ಮಾಡಿ ಭದ್ರಸ್ವಾಮಿಯ ಪ್ರಪಂಚಮೆಲ್ಲಮಂ ಕೇಳ್ವುಪವಾಸಮಿರ್ದು ಮರುದಿವಸ ಪಾರಣೆಗೆ ಸಮೀಪದೊಳ್ ಗ್ರಾಮಮಿಲ್ಲದುದರಿಂ ಪೆರತೊಂದೂರಿಂಗೆ ಪೋಗುಲುದ್ಯೋಗಿಸೆ ಚಂದ್ರಗುಪ್ತರೆಂದರೀ ವನದೊಳತ್ಯಾಸನ್ನಮಾಗೊಂದು ಪುರಮಿಪ್ಪದಲ್ಲಿಗೆ ಪಾರಣೆಗೆ ಪೋಪಮೆನೆ ಆಶ್ಚರ್ಯಮಗೆ ಮಧ್ಯಾಹ್ನಂಬರಮಲ್ಲಿರ್ದು ಚಂದ್ರಗುಪ್ರಮುನಿಪುರಸ್ಸರಂ ಪೋಗೆ ಮುಂದೆ ಸಂದರತವೆತ್ತಿರ್ದ ಪಟ್ಟಣಮಂ ಕಂಡೊಳಗಂ ಪೊಕ್ಕು ಬಾವನಲಿಯನಿಕ್ಕಲಲ್ಲಿರ್ದ ಶ್ರಾವಕರ್ ಬಂದು ಸ್ಥಾಪನಾದಿ ನವವಿಧ ಪುಣ್ಯ ಶ್ರದ್ಧಾದಿ ಸಪ್ತಗುಣ ಸಮೇತಮಾಹಾರಮಂ ಕುಡೆ ಕೊಂಡು ಗುಹೆಗೆ ಮುಗುಳ್ದು ಬಪ್ಪವಸರೊಳೊರ್ವ ಬ್ರಹ್ಮಚಾರಿ ತನ್ನ ಕಮಂಡಳಮಣ ಮರೆದು ಬಂದು ಪಿಂದಣಾ ಪುರುಮನರಸಿ ಪೋಗೆ ಪತ್ತನಮದೃಶ್ಯಮಾಗಿಯೊಂದು ಗಿಡದ ಕೊಂಬಿನೊಳ್ ನೇಲ್ದಿರ್ದ ಗುಂಡಗೆಯಂ ಕೊಂಡು ಬಂದಾ ಪ್ರಪಂಚಮಂ ವಿಶಾಖಾಚಾರ್ಯಗೆ ಪೇಳೆ ಚಂದ್ರಗುಪ್ರಮುನಿಯ ಪುಣ್ಯಪ್ರಭಾವ ತಪಃಪ್ರಶಂಸೆಯಂ ಪೇಳ್ದು ಚಂದ್ರಗುಪ್ರರ್ ಜಟಾಭಾರಮಂ ಲೋಚು ಮಾಡಿಸಿ ಪ್ರಾಯಶ್ಚಿಯತ್ತಂಗೊಟ್ಟು ತಮ್ಮ ತಮ್ಮ ಸ್ಥಾನಕ್ಕೆ ಪೋಗೆ ಪಾಟಲೀಪುರದ ಸಿಂಹಸೇನನ ಕುಮಾರಂ ಭಾಸ್ಕರನೆಂಬರಸಂ ಗುರುವಂದಾನಾರ್ಥಂ ಬಲಸಹಿತಂ ಬಂದು ಭದ್ರಬಾಹುಸ್ವಾಮಿಗಳ ನಿಷಿದ್ಧಿ ಸ್ಥಾನಮಂ ಪೂಜಿಸಿ ಗುರುಪಿತಾಮಹ ಚಂದ್ರಗುಪ್ರರ್ಗಂ ಪೊಡೆವಟ್ಟಲ್ಲಿಯೆ ಬೀಡುಬಿಟ್ಟು ಚೈತ್ಯಾಲಯಂಗಳಲ್ಲಿ ನಿರ್ಮಿಸಿ ಆ ಗಿರಿಯ ಸಮೀಪದೊಳೊಂದು ಪುರಮಂ ನಿರ್ಮಿಸಿ ಕೆಲವು ದಿವಸಮಿರಲದಕ್ಕೆ ಬೆಳ್ಗುಳಮೆಂದು ಪೆಸರಾಯ್ತು.

ಅಂದಿಂದಿತ್ತ ರಾಮಿಲ್ಯಾಚಾರ್ಯರ್ ಸ್ಥೂಳಭದ್ರಾಚಾರ್ಯರ್ ಸಮಾಳೋಚಿಸಿ ವೃದ್ಧರುಂ ತಾಮುಂ ಪ್ರಾಯಶ್ಚಿತ್ತಂಗೊಂಡು ಸ್ಥೂಳಾಚಾರ್ಯರ್ಗವರ ಶಿಷ್ಯರ್ಗಂ ಪ್ರಾಯಶ್ಚಿಯತ್ತಮಂ ಕೊಳ್ಳಿಮನಲವರೊಡಂಬಡದೆ ಚರ್ಚಿಸಿ ಕಮಲಭದ್ರ ಕಮಲಸೇನ ರೆಂಬತಿವಿದ್ಯಮುಳ್ಳವರಪ್ಪುದರಿಂ ಸ್ಥೂಳಾಚಾರ್ಯರ ಮಾನನೊಡಂಬಡದೆ ಪ್ರಾಯಶ್ಚಿತ್ತಂಗೊಳ್ಳದಿರೆ ಸ್ಥೂಳಾಚಾರ್ಯರ್ ತಾವುಂ ಕೊಂಡವರ್ಗಮವರ ಶಿಷ್ಯರ್ಗಂ ನಿಚ್ಚ ನಿಚ್ಚಂ ಪೇಳುತ್ತಿಪ್ಪುದುಂ ಕ್ರೋಧಮನೆತ್ತಿಕೊಂಡು ರಾತ್ರಿಯೊಳೇಕಾಂತದೊಳಿರ್ದ ಸ್ಥೂಳಾಚಾರ್ಯರಂ ವಧಿಯಿಸಲವರ್ ಸಮಾಧಿಯಿಂ ಸ್ವರ್ಗಸ್ಥರಾದರುಳಿದರೆಲ್ಲ ಪ್ರಾಯಶ್ಚಿತ್ತಂಗೊಳ್ಳದೆ ಸ್ವೇಚ್ಚೇಯಿಂದಿಪ್ಪುದುಮೊಮ್ಮೆ ವಿಶಾಖಾಚಾರ್ಯರ್ ಸಮುದಾಯಂವೆರಸು ಬರ್ಪುದುಮವರೆಲ್ಲರಂ ಬಂದಿಸೆ ಪ್ರತಿವಂದನೆಯಿಂ ಕಾಡದಿರ್ಪುದುಂ ಕ್ರೋಧಂ ಪುಟ್ಟಿ ಬೇರೆಯಾಗಿ ಕೇವಲಿಗಳ್ ಮಾತನಾಡುವರ್ ಕುಬಳಾಹಾರಂಗೊಳ್ವರ್ ಪಶುಸ್ತ್ರೀಯರ್ ತದ್ಬವದೊಳೆ ಮುಕ್ತರಪ್ಪರ್ ಸಗ್ರಂಥದೊಳ್ ಮುಕ್ತರಪ್ಪರೆಂದಾದಮಾಭಾಸಮಂ ಕಲ್ಪಿಸಿ ಸ್ವಾಮಿಯೆಂಬ ರಾಜಪುತ್ರಿಯನೋದಿಸೆ ಆಕೆಯಂ ಸುರಾಷ್ಟ್ರದೇಶದ ವಾರಿಭಪುರಾಧಿಪಂ ಜನನೃಪಂಗೆ ಮದುವೆಯಂ ಮಾಡಲಾಕೆಗೆಗ್ರಮಹಿಷಿ ಪಟ್ಟಂಗಟ್ಟೆ ತನ್ನ ಗುರುವಂ ಬರೆಸಿರೆಂದು ನೃಪಂಗರಿಸಿ ಕರೆಯಿಸಲಾತಂ ಬಪ್ಪುದಂ ಕೇಳ್ದಿದಿರ್ಗೊಳಲರಸನುಂ ತಾನುಂ ಪೋಗಲರಸಂ ದೊರೆದೊಳೆ ಕಂಡು ಎಲೆ ಮನಸ್ವಿ ನಿನ್ನ ಗುರುಗಳ್ ಸಂಪೂರ್ಣವಸ್ತ್ರವೇಷ್ಟಿತರಲ್ಲ ನಿರ್ಗ್ರಂಥರುಮಲ್ಲ ವಿಪರೀತಮೀ ವೇಷಧಾರಿ ಎನ್ನ ಪಟ್ಟಣಂ ಪುಗಲಾಗದೆಂದವರಂ ತಿರಸಕರಿದೊಡವರ ಕಟಯ ಬಿಳಿ ಕಂಬಲ ಶ್ವೇತ ಪಟ್ಟಮಂ ತೆಗೆಯಿಸಿ ನಿರ್ಗ್ರಂಥರಾಗಿ ಬನ್ನಿಮೆಂದೊಡವರ್ ನಾಚಿಕೆಯಿಂ ಬಾರದೆ ಪೋಗೆ ಕೆಲವಾನು ದಿವಸಕ್ಕಾ ಸ್ವಾಮಿನಿಗೆ ಜಕ್ಕಳೆಯೊಂಬೊರ್ವ ಮಗಳ್ ಪುಟ್ಟಲಾಕೆಯಂ ಶ್ವೇತಾಂಬರರಲ್ಲಿ ಓದಲಿಡೆಯವರ ಶಾಸ್ತ್ರದೊಳ್ ಪ್ರವೀಣೆಯಾಗೆ ಕರ್ಣಾಟಕದೇಶದ ಕೊಲ್ಲಾಪುರಾಧಿಪತಿ ಭೂಪಾಲನೆಂಬರಸಂಗೆ ಕುಡೆ ಪಟ್ಟಮಹಾದೇವಿಯಾಗಿ ಶ್ವೇತಾಂಬರಗಮುನನೆಲ್ಲರ್ಗುಪ್ರದೇಶಂಗೆಯ್ದಿ ಸುಖಮಿರ್ದಳಿತ್ತ ಚಂದ್ರಗುಪ್ತಮುನೀಂದ್ರಂ ಸಕಲ ಸನ್ಯಸನಂಗೆಯ್ದಾರಾಧನಾವಿಧಿಯಿಂ ಮುಡಿಪಿ ಸ್ವರ್ಗಮಂ ಪಡೆದರ್ ಶ್ರೀವರ್ಧಮಾನಸ್ವಾಮಿ ಮೋಕ್ಷಮನೆಯ್ದೆ ಗೌತಮರಾಯನು ಬದ್ಧಕೇವಲಿಗಳ ಕಾಲ ಅರವತ್ತೆರಡು (೬೨) ವರುಷ, ಮತ್ತಂ ಶಿಷ್ಯ ನಂದಿಮಿತ್ರಾದಿ ಶ್ರುತಕೇವಲಿಗಳೈವರ ಕಾಲ ನೂರು ( ೧೦೦) ವರುಷ, ಮತ್ತಂ ವಿಶಾಖರಾದಿ ದಶಪೂರ್ವಧರರ್ ಪನ್ನೊರ್ವರ ಕಾಲ ನೂರೆಂಬತ್ತುಮೂರು (೧೮೩) ವರುಷಮಕ್ಕುಂ, ಮತ್ತಂ ನಕ್ಷತ್ರರ್ ಮೊದಲಾದ ಏಕಾದಶಾಂಗಧರರೈವರ ಕಾಲಮಿನ್ನೂರಿಪ್ಪತ್ತುಮೂರು (೧೨೩) ವರುಷಮಕ್ಕುಂ.

ಇಂತು ಕಾಲಂ ಪ್ರವರ್ತಿಸುತ್ತಿರಲತ್ತ ಉಜ್ಜಯಿನಿ ನಗರಾಧಿಪತಿ ಭಾನುರಾಜಂಗಂ ಸುಪ್ರಭೆಗಂ ಪುಟ್ಟಿದ ಗೋವಿಂದನೆಂಬಂ ಪರಿವ್ರಾಜಕನಾಗಿರ್ದ ತಂದೆಯ ಪರೋಕ್ಷದೊಳ್ ಶ್ರೀಕಾಂತಯೆಂಬ ರಾಜಪುತ್ರಿಯಂ ಮದುವೆ ನಿಂದು ರಾಜ್ಯದೊಳ್ ನಿಲೆಯಾತನ ಸ್ತ್ರೀಗೆ ಗರ್ಭಮಾಗೆ ನವಮಾಸಂ ನೆರೆದು ಶುಲಗ್ನದೊಳ್ ವಿಕ್ರಮಾದಿತ್ಯನೆಂಬ ಮಗಂ ಪುಟ್ಟಿ ರಾಜ್ಯದೊಳ್ ನಿಂದು ರಾಜ್ಯಮಂ ಪಾಲಿಸುತ್ತುಂ ಸಿದ್ಧಾಂತದೊಳಿರ್ದ ಜ್ಯೋತಿರ್ಲೋಕ ಚಂದ್ರಸೂರ್ಯಪ್ರಜ್ಞಪ್ರಿಯಂ ಗ್ರಹಚಾತ ಕ್ಷೇತ್ರಭೇದಮಂ ವೇಂದಾತಿಗಳಪ್ಪ ಬ್ರಾಹ್ಮರನೋದಿಸಿ ಪಂಚಾಂಗಮಂ ಬರೆಯಿಸಿ ವರ್ಧಮಾನರ್ ಮುಕ್ತಿಗೆ ಸಂದ ಆರುನೂರೈದನೆಯ ರುಧಿರೋದ್ಗಾರಿ ಸಂವತ್ಸರಾರಭ್ಯ ತನ್ನ ಶಕೆಯಂ ಪ್ರಕಟಿಸಿದಂ.

ಅತ್ತ ಜಿನಚಂದ್ರನೆಂಬ ಯತೀಂದ್ರಂ ಶ್ವೇತಾಂಬರಮತಸ್ಥಾಪನೆಯಂ ಮಾಡಿ ಶಾಸ್ತ್ರಾದಿಳಂ ರಚಿಸಿ ಪ್ರಸಿದ್ಧಿ ಪಡೆದ ವೀರಸೇನಮುನಿ ಅಪಲಸಂಘಮೆಂದು ಮಾಡಿದರ್.

ಶ್ಲೋಕ || ಷಟ್ಟತ ನವವರ್ಷೇಭ್ಯಃ ಶಕೇಸಮುತ್ಪನ್ನೇ
ಶ್ರೀವರ್ಧಮಾನ ಭಗವತಿ ಮೋಕ್ಷಗತೇ ಶ್ವೇತಪಟದೃಶ್ಯಾಃ ||

ಮೇಲೆ ಇಪ್ಪತ್ತೈದು (೨೫) ವರುಷದಲ್ಲಿ ಅಪಲಸಂಘ ಪುಟ್ಟಿತು. ವಿಕ್ರಮಾರ್ಕನಿಂ ಮುಂದೆ ಐನೂರೈವತ್ತಾರು (೫೫೬) ವರುಷದಂದು ಪೂಜ್ಯಪಾದರ ಶಿಷ್ಯ ವಜ್ರನಂದಿ ದ್ರಾವಿಡಮತಸ್ಥಾಪನಂಗೆಯ್ದು. ಮೇಲೆ ಧರ್ಮಸೇನಾಚಾರ್ಯ ಶಿಷ್ಯಂ ಕುರವಸೇನಂ ಶೀತಾವ್ಯಾಧಿಯಿಂ ನಿಶ್ವಾಸನಾಗೆ ಸ್ಮಶಾನಕ್ಕೊಯ್ದು ಚಿತೆಯೊಳಿಟ್ಟಗ್ನಿಯಂ ಪೊತ್ತಿ ಸಲಗ್ನಿ ಜ್ವಾಲೆಯಿಂ ಶೀತರೋಗಂ ಪರೆಯಲೆದ್ದು ಕುಂಚಂ ಬೆಂದಿರ್ದೊಡೆ ಪೊಂಬಾಳೆಯನಾಂತು ಬಪ್ಪುದುಮೂರಂ ಪುಗಲೀಸಿದರೆ ಪ್ರಾಯಶ್ಚಿತ್ತಂಗೊಳ್ಳದೆ ಶಿಷ್ಯರಂ ಕೂಡಿಕೊಂಡು ಕಾಷ್ಠಸಂಘವ ಮಾಡಿದರ್. ಮತ್ತಮೈವತ್ತು ವರ್ಷದಂದು ತುರಾನಗರದ ರಾಮಸೇನಮುನಿ ಮರೆತುಸಂಘಸ್ಥಾಪನೆಂ ಮಾಡಿದಂ.

ಮತ್ತಂ ದಕ್ಷಿಣದೇಶದ ಪುಷ್ಯರಾವತೀನಗರದ ಅಭಿಚಂದ್ರಮುನಿ ಬಿಲಸಂಘ ಸ್ಥಾಪನೆಯಂ ಮಾಡಿದಂ ಈ ದುಷ್ಟಮಕಾಲದೋಷದಿಂ ಜೈನಮತದೊಳನೇಕ ಮತಮತಾಂತರಂಗಳಾದುವು, ಎಂಬತ್ತು ನಾಲ್ಕು ಗಚ್ಚಂಗಳಾದುವು, ಗಣಂಗಳನೇಕ ಭೇದಮಾದವಲ್ಲಿ ಮುಂದೆ ಅಷ್ಟಾಂಗ ನಿಮಿತ್ತಜ್ಷರಪ್ಪರ್ಹದ್ಬಲ್ಯಾಚಾರ್ಯರಿಂ ಸೃಷ್ಟಿಸಿದ ಸಿಂಹಸಂಘಮುಂ ಸೇನಸಂಘಮುಂ ನಂದಿಸಂಘಮುಂ ದೇವಸಂದಘಮುಮೆಂದು ಶ್ರೀಮೂಲಸಂಘದೊಳ್ ಸ್ಥಾನಸ್ಥಿತಿವಿಶೇಷದಿಂ ಗಣಗಚ್ಛಂಗಳಂ ಒಂದರೊಳೊಂದು ಭೇದಂಗಳಿಲ್ಲದಂತು ನಿಯಮಿಸಿ ಪಕ್ಷದಿಂ ಧರ್ಮಂ ವರ್ತಿಸುವುದೆಂದು ದೇಸೀಗಣ ಸೇನಗಣ ಕಾಣಾಗ್ರಗಣ ಬಲಾತ್ಕಾರಗಣಮೆಂದವರೊಳ್ ಸೇನೆಗಣಕ್ಕೆ ಪುಷ್ಯರಗಚ್ಚ ದಿಳ್ಳಿ ಕೊಲ್ಲಾಪುರ ಪೆನಗುಂಡೆ ಮೊದಲಾದ ಸ್ಥಾನಂಗಳ್ , ಸೇನೆಭದ್ರ ವೀರರಾಚಾದಿ ನಾಮಂಗಳ್ ,ವೃಷಭಸೇನಾನ್ವಯ ಜ್ವಾಲಿಮಾಲಿನಿ ವರಪ್ರಸನ್ನ ರಾಜದ್ವಾರಸೇನಾ ವೀರರಾಚಾದಿ ನಾಮಂಗಳ್ , ವೃಷಭಸೇನಾನ್ವಯ ಜ್ವಾಲಮಾಲಿನಿ ವರಪ್ರಸನ್ ರಾಜದ್ವಾರಸೇನಾ ಮಧ್ಯದೊಳ್ ಯೋಗಂಗೊಂಡಿರ್ದ ಸೇನೆಯೆಲ್ಲಮಂ ಶಿಷ್ಯರಂ ಮಾಡಿಕೊಂಡರ್, ವಂಕದಿ ಕಡಿವಾಣ ಬಿರಿದು ಮಂಗಳವಾರಗಟ್ಟಲೆಯಿಂದೆದ್ದು ಬಳಿಕಮದರೊಳೆ ಜೀನಸೇನ ಲಕ್ಷೀಸೇನರೆಂದೆರಡು ಭೇದವಾಯ್ತು. ನಂದಿಸಂಘ ಬಲಾತ್ಕಾರಗಣ ಭಾರತಿಗಚ್ಚ ಡಿಳ್ಳಿಮಲೆಯ ಖೇಟ ವರಂಗ ಪೊಂಬುಚ್ಚಪುರಾದಿ ಸಿಂಹಾಸನಸ್ಥಾನಂಗಳ್ ನಂದ ನಂದಿ ಚಂದ್ರಕೀರ್ತಿ ಭೂಷಣಾದಿ ನಾಮಂಗಳ್ ಕುಂದಕುಂದಾನ್ವಯ ಪದ್ಮಾವತಿಪ್ರಸನ್ನ ಸ್ಮಶಾನದೊಳ್ ಬಲಾತ್ಕಾರಯೋಗದೊಳ್ ನಿಂದು ಶುಕ್ರವಾರಗಟ್ಟಲೆ ಸಿಂಹಸಂಘ ದೇಸಿಗಣ ಪುಸ್ತಕಗಚ್ಛ ದಿಳ್ಳಿಸೋದೆ ಗೇರೆಸೊಪ್ಪೆ ಸಂಗೀತಪುರ ಸುಧಾಪುರ ಕನಕಾದ್ರಿ ಹನಸೋಗೆ ಬೆಳ್ಗುಳ ಸಿಂಹಾಸನಂಗಳ್. ಸಿಂಹಕೀರ್ತಿ ಪ್ರಸಾದಶರ ಅಕಳಂಕಾದಿನಾಮ ಅಮ್ರಕೂಷ್ಮಾಂಡಿವರ ಕುಂದಕುಂದಾನ್ವಯ ಗುರುವಾರಗಟ್ಟಲೆ ದೇಶ್ಯಾವಾಟದೊಳ್ ತಪಮಂ ಮಾಡಿಯವರೆಲ್ಲರಂ ವ್ರತಕ್ಕೆ ತಂದರ್. ಶ್ರೇಯಾಂಸನೀ ದೇವರಸಂಘ ಕಾಣಾಗ್ರಗಣ ತಿಂತ್ರಿಣಿ ಚಂದ್ರಕಾಮತಗಚ್ಛ ದಿಳ್ಳಿ ವೇದಲಾಪುರ ಕೊಪಣ ಲಕ್ಷ್ಮೇಶ್ವರ ವಾಲುಕ ದ್ವಾದಶ ನಗರಾದಿ ಸಿಂಹಾಸನಸ್ಥಾನಂಗಳ್ ದೇವದತ್ತ ನಾಗತುಂಗನಾಮಂಗಳ್ ಚಕ್ರೇಶ್ವರಿ ಮಹಾಕಾಳಿ ವರಗುತ್ತಿಯಮೇಲೆ ಉಗ್ರಯೋಘ ಕುಂದಕುಂದಾನ್ವಯ ಶನಿವಾರಗಟ್ಲೆ ಕೀರ್ತಿನಾಮಂ ಕೆಲದಿವಸದಿಂ ಮೇಲೆ ದೇಸಿಗಣಕ್ಕುಂ ಕಾಲೋಗ್ರಗಣಕ್ಕುಂ ಬಂತು ಅಜ್ಜಿಯರು ನಾಲ್ಕು ಗಣಕ್ಕು ಸಮ. ಈ ಚತುಸ್ಸಂಘಗಳ್ ಶ್ರೀಮೂಲಸಂಘಮೆ. ಅಲ್ಲಿ ವಿಸಂಘಂಗಳ್ ಪುಟ್ಟಿದವು.

ಶ್ಲೋಕ || ಶ್ವೇತಾಂಬರೋ ದ್ರಾವಿಡಶ್ಚ ಕಾಷ್ಠಸಂಘ ಸಮಾನ್ವಿತಃ
ಯಾಪನೀಯಾ ವಿಭೇದಾಶ್ಚ ವಿಸಂಘಾ ಪರಿಕೀರ್ತಿತಃ
ಗೋಪುಚ್ಛಕ ಶ್ವೇತವಾಸಾ ದ್ರಾವಿಡಾ ಯಾಪುನೀಯಕಃ
ನಿಷ್ಟಿಂಯಂಚಶ್ಚೇತಿ ಪಂಚೈ ತೇ ಜೈನಾಭಾಸಾ ಪ್ರಕೀರ್ತಿತಾಃ

ಅಲ್ಲಿ ಶ್ವೇತಾಂಬರರೊಳ್ ಲಕ್ಷೀಸೇನರ್, ಕಾಷ್ಠಸಂಘದೊಳ್ ಕಮಪಾಭಟ್ಟಾರಕರ್ ದ್ರವಿಡಸಂಗದೊಳ್ ಧರಸೇನರ್, ಯಾಪನೀಯರೊಳ್ ಕೇಶವಚಂದ್ರದೇವರೆಂಬವರ್ ಪ್ರಸಿದ್ಧಿವಡೆದು ಕೀರ್ತಿಯಂ ಪಡೆದರ್.

ಇಂತೀ ಕಥೆಯಂ ಕೇಳ್ದರ
ಭ್ರಾಂತಿಯು ನೆರೆ ಕೆಡುಗು ಬಳಿಮಾಯಂ ಶ್ರೀಯುಂ
ಸಂತಾನವೃದ್ಧಿ ಸಿದ್ಧಿಯ
ನಂತ ಸುಖಂ ತಪ್ಪದಿಹಪರಂಳೊಳಕ್ಕುಂ

ಇದು ಸತ್ತಪ್ರವಚನ ಕಾಲಪ್ರವರ್ತನ ಕಥಾರ್ಣವೋದ್ಧುತ ಸ್ಯಾದ್ವಾದಸಮಯ ಸಮುದಿತ ದೇವಚಂದ್ರ ವಿರಚಿರ ರಾಜಾವಳಿ ಕಥಾಸಾರದೊಳ್ ಗಣಗಚ್ಛೋತ್ಪತಿ ನಿರೂಪಣಂ.

ಷಷ್ಠಾಧಿಕಾರಂ