ಕನ್ನಡ ವಿಶ್ವವಿದ್ಯಾಲಯವು ಕರ್ನಾಟಕ ಸರ್ಕಾರದ ಆರ್ಥಿಕ ನೆರವಿನಿಂದ ರೂಪಿಸಿ, ಪ್ರಕಟಿಸುತ್ತಿರುವ ಸಮಗ್ರ ಕನ್ನಡ ಸೈನ ಸಾಹಿತ್ಯ ಸಂಪುಟಗಳ ಯೋಜನೆಯು ಕನ್ನಡ ಸಾಹಿತ್ರ ಚರಿತ್ರೆಯಲ್ಲಿಯೇ ಮಹತ್ವಪೂರ್ಣವಾದದ್ದು. ೨೦೦೬ರ ಶ್ರವಣಬೆಳಗೊಳದ ಐತಿಹಾಸಿಕ ಗೊಮ್ಮಟ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯು ಈ ಸಮಗ್ರ ಕನ್ನಡ ಜೈನ ಸಾಹಿತ್ಯ ಸಂಪುಟಗಳ ಯೋಜನೆಯನ್ನು ರೂಪಿಸಿ ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿತು. ಕರ್ನಾಟಕ ಸರ್ಕಾರವು ಈಗಾಗಲೇ ಸಮಗ್ರ ವಚನಸಾಹಿತ್ಯ ಮತ್ತು ದಾಸ ಸಾಹಿತ್ಯ ಸಂಪುಟಗಳನ್ನು ಹೊರತಂದಿದ್ದು, ಈಗ ಸಮಗ್ರ ಜೈನ ಸಾಹಿತ್ಯ ಸಂಪುಟಗಳ ಪ್ರಕಟಣೆಯ ಮೂಲಕ ಪ್ರಾಚೀನ ಕನ್ನಡ ಸಾಹಿತ್ಯದ ಬಹಳ ಮಹತ್ವದ ಕಾರ್ಯವೊಂದನ್ನು ಪೂರ್ಣಗೊಳಿಸುತ್ತಿದೆ. ಈ ಸಮಗ್ರ ಜೈನಸಾಹಿತ್ಯ ಸಂಪುಟಗಳ ಪ್ರಕಟಣೆಯ ಮೂಲಕ ಪ್ರಾಚೀನ ಕನ್ನಡ ಸಾಹಿತ್ಯದ ಬಹಳ ಮಹತ್ವದ ಕಾರ್ಯವೊಂದನ್ನು ಪೂರ್ಣಗೊಳಿಸುತ್ತಿದೆ. ಈ ಸಮಗ್ರ ಜೈನ ಸಾಹಿತ್ಯ ಸಂಪುಟದ ಯೋಜನೆಯನ್ನು ೨೦೦೬ ರ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದ ಭಾಗವಾಗಿ ಕರ್ನಾಟಕ ಸರ್ಕಾರ ಅಂಗೀಕರಿಸಿ ಸಾರಸ್ವತ ಮಹಾಮಸ್ತಕಾಭಿಷೇಕ ಮಾಡಿದ ಪುಣ್ಯಕ್ಕೆ ಪಾತ್ರವಾಗಿದೆ. ಈ ಯೋಜನೆಯ ಮಹತ್ವವನ್ನು ಮನಗಂಡು ಉದಾರವಾದ ಆರ್ಥಿಕ ನೆರವು ನೀಡಿದೆ ಆಗಿನ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎನ್. ಧರ್ಮಸಿಂಗ್ ಅವರಿಗೂ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಎಂ.ಪಿ. ಪ್ರಕಾಶ್ ಅವರಿಗೂ ಸನ್ಮಾನ್ಯ ಲೋಕೋಪಯೋಗಿ ಸಚಿವರಾದ ಶ್ರೀ ಎಚ್. ಡಿ. ರೇವಣ್ಣ ಅವರಿಗೂ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅಂದು ಚಾಲನೆಗೊಂಡ ಯೋಜನೆಗೆ ಮತ್ತೆ ಜೀವ ತುಂಬಿದ ಈಗಿನ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಚ್ ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಶೇಷ ವಂದನೆಗಳನ್ನು ಸಲ್ಲಿಸುತ್ತೇನೆ. ಈ ಪ್ರಸ್ತಾಪವನ್ನು ವಿಧಾನ ಪರಿಷತ್ತಿನಲ್ಲಿ ಮಂಡಿಸಿದ ಪರಿಷತ್ತಿನ ಸದಸ್ಯರಾದ ಡಾ. ಎಂ.ಆರ್. ತಂಗಾ, ಡಾ. ಚಂದ್ರಶೇಖರ ಕಂಬಾರ, ಡಾ.ಎಲ್. ಹನುಮಂತಯ್ಯ, ಶ್ರೀ ಹಸನಬ್ಬ ಅವರ ನೆರವನ್ನು ವಿಶೇಷವಾಗಿ ಸ್ಮರಿಸುತ್ತೇನೆ. ಕನ್ನಡದ ಹಿರಿಯ ಸಾಹಿತಿಗಳಾದ ಮತ್ತು ಜೈನ ಸಾಹಿತ್ಯದಲ್ಲಿ ವಿಶೇಷ ಪಾಂಡಿತ್ಯವುಳ್ಳ ಡಾ. ಹಂಪ ನಾಗರಾಜಯ್ಯ ಮತ್ತು ಡಾ. ಕಮಲಾ ಹಂಪನಾ ಅವರು ಈ ಸಂಪುಟಗಳ ರೂಪರೇಷೆಯಿಂದ ತೊಡಗಿ ಕರ್ನಾಟಕ ಸರ್ಕಾರಕ್ಕೆ ಇದರ ಮಹತ್ವವನ್ನು ಮನವರಿಕೆ ಮಾಡಿಕೊಡುವವರೆಗೆ ವಿಶೇಷವಾದ ಕಾಳಜಿ ವಹಿಸಿ ಸಹಕರಿಸಿದ್ದಾರೆ.

ಪ್ರಾಚೀನ ಕನ್ನಡ ಸಾಹಿತ್ಯ ಆರಂಭ್ಯವಾಗುವುದೇ ಜೈನ ಸಾಹಿತ್ಯ ಕೃತಿಗಳ ಮೂಲಕ. ಆದಿಕವಿ ಪಂಪನ ವಿಕ್ರಮಾರ್ಜುನ ವಿಜಯ ಮತ್ತು ಆದಿಪುರಾಣಗಳು ಕನ್ನಡ ಸಾಹಿತ್ಯದ ಮೊತ್ತಮೊದಲ ಮಹಾಕಾವ್ಯಗಳು. ಶಿವಕೋಟ್ಯಾಚಾರ್ಯನ ವೊಡ್ಡಾರಾಧನೆ ಕನ್ನಡದ ಮೊತ್ತಮೊದಲ ಉಪಲಬ್ಧ ಗದ್ಯಗ್ರಂಥ. ಸಂಸ್ಕೃತವೇ ಸಾಹಿತ್ಯ ನಿರ್ಮಾಣದ ಪ್ರಧಾನ ಭಾಷೆಯಾಗಿದ್ದ ಭಾರತ ದೇಶದಲ್ಲಿ ಕನ್ನಡದಂತಹ ಪ್ರಾದೇಶಿಕ ಭಾಷೆಯಲ್ಲಿ ಕಾವ್ಯ ರಚನೆ ಮಾಡುವ ಮೂಲಕ ಜೈನಕವಿಗಳು, ಪ್ರಾದೇಶಿಕ ಸಾಹಿತ್ಯ ನಿರ್ಮಾಣಕ್ಕೆ ನಾಂದಿ ಹಾಡಿದರು. ಆದಿಕವಿ ಪಂಪ ಇದು ನಿಚ್ಚಂ ಪೊಸತು ಅರ್ಣವಂಬೋಲ್ ಅತಿ ಗಂಭೀರಂ ಕವಿತ್ವಂ ಎಂದು ಹೇಳಿದ್ದಾನೆ. ಪಂಪಕವಿಯು ಆದಿಪುರಾಣದಲ್ಲಿ ಆದಿನಾಥನ ಭವಾಬಳಿಗಳನ್ನು ಮತ್ತು ಆತನ ಮಕ್ಕಳಾದ ಭರತ ಬಾಹುಬಲಿಯರು ರಾಜ್ಯದ ಒಡೆತನಕ್ಕಾಗಿ ಪರಸ್ಪರ ಎದುರಾಳಿಗಳಾಗುವ ಸನ್ನಿವೇಶವನ್ನು ಚಿತ್ರಿಸಿದ್ದಾನೆ. ಅಣ್ಣ ತಮ್ಮಂದಿರ ನಡುವೆ ಮುಖಾಮುಖಿ ಯುದ್ಧದಲ್ಲಿ ಅಣ್ಣ ಭರತ ಸೋಲುತ್ತಾನೆ, ತಮ್ಮ ಬಾಹುಬಲಿ ಗೆಲ್ಲುತ್ತಾರೆ. ಆದರೆ, ಈ ರೀತಿ ಗೆದ್ದ ಬಾಹುಬಲಿಯು ರಾಜ್ಯದ ಒಡೆತನವನ್ನು ನಿರಾಕರಿಸಿ ವೈರಾಗ್ಯಪರನಾಗಿ ಪ್ರತಿಮಾಯೋಗದಲ್ಲಿ ನಿಂತು ಗೊಮ್ಮಟನಾಗುತ್ತಾನೆ. ಅಂತಹ ವೈರಾಗ್ಯದ ಪ್ರತಿಮೆಯಾದ ಗೊಮ್ಮಟನ ಮಹಾಮಸ್ತಕಾಭಿಷೇಕದ ನೆನಪಿಗಾಗಿ ಕನ್ನಡ ಸಾಹಿತ್ಯದ ಗೊಮ್ಮಟ ಸದೃಶ ಜೈನಕೃತಿಗಳನ್ನು ಮತ್ತೆ ಹೊಸದಾಗಿ ಶುಭ್ರ ಗೊಳಿಸಿ ಸಾಹಿತ್ಯ ಮತ್ತು ಶಾಸ್ತ್ರದ ವಿಭಿನ್ನ ಅರ್ಚನೆಗಳ ಮೂಲಕ ಅವುಗಳಿಗೆ ಪ್ರಕಟಣೆಯ ಅಭಿಷೇಕವನ್ನು ಮಾಡಲಾಗಿದೆ.

ಆದಿಕವಿ ಪಂಪನು ತನ್ನ ವಿಕ್ರಮಾರ್ಜುನ ವಿಜಯದಲ್ಲಿ ಬೆಳಗುವೆನಿಲ್ಲಿ ಲೌಕಿಕಮಂ ಅಲ್ಲಿ ಜಿನಾಗಮಮಂ ಎಂದು ಹೇಳಿಕೊಂಡಿದ್ದಾನೆ. ಹೀಗಾಗಿ ಪ್ರಾಚೀನ ಕಾವ್ಯಗಳಲ್ಲಿ ಲೌಕಿಕ ಮತ್ತು ಆಗಮಿಕ ಎನ್ನುವ ಕಾವ್ಯ ಮತ್ತು ಪುರಾಣಗಳ ನಿರ್ಮಾಣದ ಒಂದು ಪರಂಪರೆ ಕಾಣಿಸಿಕೊಳ್ಳುತ್ತದೆ. ಪಂಪನಿಂದ ತೊಡಗಿ ಪೊನ್ನ ರನ್ನರಿಂದ ಮುಂದುವರಿದು ಮುಂದಿನ ಕವಿಗಳಲ್ಲಿ ಆಗಮಿಕ ಕಾವ್ಯಗಳಾದ ತೀರ್ಥಂಕರರ ಪುರಾಣಕೃತಿಗಳ ನಿರ್ಮಾಣ ಒಂದು ನೋಂಪಿಯಂತೆ ಕಾಣಸಿಗುತ್ತದೆ. ಇನ್ನೊಂದು ಕಡೆ ನಯಸೇನ, ಜನ್ನ, ಬ್ರಹ್ಮಶಿವ, ವೃತ್ತ ವಿಲಾಸರಂತಹ ಕವಿಗಳು ಲೌಕಿಕ ಕಥೆಗಳಿಗೆ ಜೈನ ಆವರಣವನ್ನು ನಿರ್ಮಾಣ ಮಾಡಿ ಲೌಕಿಕ – ಧಾರ್ಮಿಕಗಳನ್ನು ಒಂದುಗೂಡಿಸುವ ವಿಶಿಷ್ಟ ಕಲೆಗಾರಿಕೆಯನ್ನು ಮೆರೆಯುತ್ತಾರೆ. ಹೀಗೆ ೨೪ ತೀರ್ಥಂಕರರ ಪುರಾಣಕಾವ್ಯ ಒಂದು ಧಾರೆಯಾದರೆ ಚರಿತ್ರೆ ಲೌಕಿಕಕಥೆ ನೀತಿಕಥೆಗಳ ಮೂಲಕ ಸಮಕಾಲೀನ ಬದುಕಿಗೆ ಸ್ಪಂಧಿಸಿದ ವೈವಿಧ್ಯಮಯ ಕಾವ್ಯ ಪರಂಪರೆ ಪ್ರಾಚೀನ ಜೈನ ಸಾಹಿತ್ಯದ ಇನ್ನೊಂದು ಮುಖ್ಯ ಧಾರೆಯಾಗಿದೆ. ಇದರೊಂದಿಗೆ ಗದ್ಯ ಸಾಹಿತ್ಯದ ದೃಷ್ಟಿಯಿಂದ ಶಿವಕೋಟ್ಯಾಚಾರ್ಯನ ವೊಡ್ಡಾರಾಧನೆ ಮತ್ತು ಚಾವುಂಡರಾಯನ ಚಾವುಂಡರಾಯ ಪುರಾಣ ಇನ್ನೊಂದು ಪರಂಪರೆಯನ್ನು ಕಟ್ಟಿಕೊಡುತ್ತವೆ. ಒಂದು ಕಡೆ ಜೈನಧರ್ಮದ ಚೌಕಟ್ಟಿನ ಒಳಗಡೆ ಕತೆಗಳು ಮಾಧ್ಯಮವಾಗಿ ಬಳಕೆಯಾದರೆ, ಇನ್ನೊಂದೆಡೆ ಜೈನಧರ್ಮದ ಮೇಲ್ಮೆಗಾಗಿ ಸಾಧನೆ ಮಾಡಿದ ಸಾಂಸ್ಕೃತಿಕ ವ್ಯಕ್ತಿಯ ಸುತ್ತ ಕಥನವೊಂದು ನಿರ್ಮಾಣವಾಗುತ್ತದೆ. ಇವುಗಳ ನಡುವೆ ನಾಗವರ್ಮನಂತಹ ಶಾಸ್ತ್ರಕಾರನು ಭಾಷೆ ಮತ್ತು ಕಾವ್ಯಲಕ್ಷಣಕ್ಕೆ ಸಂಬಂಧಿಸಿದ ಶಾಸ್ತ್ರಗ್ರಂಥಗಳನ್ನು ರಚಿಸಿದ್ದಾನೆ. ಮಧ್ಯಯುಗೀನ ಕಾಲದಲ್ಲಿ ರತ್ನಾಕರವರ್ಣಿಯಂತಹ ಕವಿಯು ಸಾಂಗತ್ಯದಲ್ಲಿ ಭರತೇಶ ವೈಭವ ಕಾವ್ಯ ರಚಿಸಿ ಜೈನಕಾವ್ಯಗಳ ಆಶಯದ ಸಾಂಸ್ಕೃತಿಕ ಪಲ್ಲಟವನ್ನು ದಾಖಲಿಸುತ್ತಾನೆ. ೧೮೦೦ ರ ಕಾಲದಲ್ಲಿ ಬರುವ ದೇವಚಂದ್ರನ ರಾಜಾವಳಿ ಕಥೆಯು ಆಧುನಿಕ ಕನ್ನಡದ ಪೂರ್ವದ ಕಥಾರಚನೆಯ ಅರುಣೋದಯದ ಹೆಜ್ಜೆಯಾಗಿ ಮುಖ್ಯವಾದ ಕೃತಿಯಾಗಿದೆ.

ಒಂದು ಅಂದಾಜಿಕ ಪ್ರಕಾರ ಸುಮಾರು ೪೫೦ ಜೈನ ಕವಿಗಳು ೫೨೦ ಕ್ಕೂ ಹೆಚ್ಚಿನ ಕನ್ನಡ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ಕೃತಿಗಳು ಲಭ್ಯವೆಂದು ನಾವು ಭಾವಿಸಿದರೂ ಇವುಗಳ ಪ್ರಮಾಣ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಗಣನೀಯ ಎನ್ನಿಸುತ್ತದೆ. ಮಹಾಕಾವ್ಯದಿಂದ ತೊಡಗಿ ಮುಕ್ತಕದವರೆಗೆ, ಗಣಿತಶಾಸ್ತ್ರದಿಂದ ಹಿಡಿದು ಸೂಪಶಾಸ್ತ್ರದ ವರೆಗೆ, ಜನಪದ ಕಥೆಯಿಂದ ಆರಂಭಿಸಿ ವಿಡಂಬನ ಸಾಹಿತ್ಯದವರೆಗೆ ಕನ್ನಡ ಜೈನ ಸಾಹಿತ್ಯದ ಹರಹು ವ್ಯಾಪಿಸಿಕೊಂಡಿದೆ.

ಪಂಪಕವಿಯು ತನ್ನ ಕಾವ್ಯದಲ್ಲಿ ಮಾರ್ಗ ಮತ್ತು ದೇಸಿಗಳ ಕುರಿತು ಮಾತನಾಡುತ್ತಾನೆ. ಕನ್ನಡ ಜೈನ ಸಾಹಿತ್ಯದ ಬಗ್ಗೆ ಹೇಳುವಾಗ ಜೈನ ಪುರಾಣಗಳ ಪರಿಭಾಷೆ ಮತ್ತು ಪರಿಣಾಮಗಳು ಮಾರ್ಗವಾದರೆ, ಇತಿಹಾಸ, ಸಮಾಜ, ಲೌಕಿಕ ಪ್ರಪಂಚ ದೇಸಿಯಾಗುತ್ತದೆ. ಪಂಪನ ಕಾವ್ಯಗಳ ನಾಣ್ಣುಡಿಯಿಂದ ತೊಡಗಿ, ವಡ್ಡಾರಾಧನೆ ಕತೆಗಳ ಗ್ರಾಮೀಣ ಬದುಕಿನಿಂದ ಮುಂದುವರಿದು, ನಯಸೇನನ ಧರ್ಮಾಮೃತದ ಕಥೆಗಳ ಮಾಲೋಪಮೆಗಳಿಂದ ಹಾದು ಬಂದು, ರತ್ನಾಕರನ ಭರತೇಶ ವೈಭವದ ನುಡಿಗಟ್ಟುಗಳವರೆಗೆ ಕನ್ನಡದ ನಿಜವಾದ ದೇಸಿಯನ್ನು ಜೈನಸಾಹಿತ್ಯ ನಿರ್ಮಿಸಿಕೊಂಡಿದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಂಪೂಕಾವ್ಯ ಪ್ರಕಾರ ಜೈನರಿಂದ ಆರಂಭವಾಯಿತು. ಸಾಂಗತ್ಯಕಾವ್ಯ ಪ್ರಕಾರಕ್ಕೆ ನಾಂದಿ ಹಾಡಿದವರು ಜೈನಕವಿಗಳು. ಗದ್ಯವನ್ನು ಮೊದಲು ಮಾಡಿದವರು ಜೈನ ಕಥೆಗಾರರು. ಕಾವ್ಯ ಶಾಸ್ತ್ರ, ಛಂದಸ್ಸು, ವ್ಯಾಕರಣ, ಸೂಪಶಾಸ್ತ್ರದಂತಹ ಶಾಸ್ತ್ರ ಪಾಂಡಿತ್ಯವನ್ನು ಕನ್ನಡದಲ್ಲಿ ಕಟ್ಟಿಕೊಟ್ಟವರು ಜೈನರು. ಹೀಗೆ ಕನ್ನಡದ ವಿದ್ವತ್ತು, ವಿವೇಕ ಮತ್ತು ವಿಸ್ಮಯ ಕನ್ನಡ ಸಾಹಿತ್ಯದಲ್ಲಿ ಜೈನಕವಿಗಳಿಂದ ಅಪೂರ್ವವಾಗಿ ನಿರ್ಮಾಣವಾಗಿದೆ ಮತ್ತು ಪ್ರಸಾರವಾಗಿದೆ.

ಈ ಹಿನ್ನೆಲೆಯಲ್ಲಿ ಸಮಗ್ರ ಕನ್ನಡ ಜೈನ ಸಾಹಿತ್ಯ ಯೋಜನೆಯನ್ನು ನಿಗದಿತ ಕಾರ್ಯ ವಿಧಾನದ ಮೂಲಕ ರೂಪಿಸಿಕೊಂಡು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕೆಂದು ನಾವು ತೀರ್ಮಾನಿಸಿಕೊಂಡೆವು. ಇದಕ್ಕಾಗಿ ಈ ಕ್ಷೇತ್ರದಲ್ಲಿ ನುಡಿತ ನಾಡಿನ ಹಿರಿಯರನ್ನೊಳಗೊಂಡ ಉನ್ನತ ಸಲಹಾ ಸಮಿತಿ ಹಾಗೂ ಸಂಪನ್ಮೂಲ ವಿದ್ವಾಂಸರನ್ನು ಈ ಯೋಜನೆಯ ವ್ಯಾಪ್ತಿಗೆ ಒಳಗೊಳ್ಳಲು ಬಯಸಲಾಯಿತು. ಅದರಂತೆ ನಾಡಿನ ಗಣ್ಯ ವಿದ್ಯಾಂಸರು ಈ ಬೃಹತ್ ಯೋಜನೆಯಲ್ಲಿ ಪಾಲ್ಗೊಂಡರೆಂಬುದು ಕನ್ನಡ ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ಸಂಗತಿ.

ಸಮಗ್ರ ಕನ್ನಡ ಜೈನ ಸಾಹಿತ್ಯ ಸಂಪುಟದ ಯೋಜನೆಯ ಉನ್ನತ ಸಲಹಾ ಸಮಿತಿಯ ಸದಸ್ಯರಾದ ಡಾ. ದೇ. ಜವರೇಗೌಡ, ಡಾ. ಜಿ.ಎಸ್. ಶಿವರುದ್ರಪ್ಪ, ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ, ಡಾ. ಹಂಪ ನಾಗರಾಜಯ್ಯ, ಡಾ. ಕಮಲಾ ಹಂಪನಾ, ಡಾ. ಚಂದ್ರಶೇಖರ ಕಂಬಾರ, ಡಾ. ಎಂ.ಎಂ. ಕಲಬುರ್ಗಿ, ಡಾ. ಎಚ್. ಜೆ. ಲಕ್ಕಪ್ಪಗೌಡ, ಡಾ. ಎಂ. ಜಿ. ಬಿರಾದಾರ ಮತ್ತು ಕನ್ನಡ ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರು, ಕರ್ನಾಟಕ ಸರ್ಕಾರದ ಕಂದಾಯ ಮತ್ತು ಮುಜರಾಯಿ ಇಲಾಖೆಯ ಕಾರ್ಯದರ್ಶಿಗಳು ತಮ್ಮ ಸೂಚನೆ ಸಲಹೆಗಳಿಂದ ಈ ಸಂಪುಟಗಳ ಸ್ವರೂಪ ಮತ್ತು ಅನುಷ್ಠಾನಗಳ ಎಲ್ಲಾ ಹಂತಗಳಲ್ಲಿಯೂ ಮಾರ್ಗದರ್ಶನ ಕೊಟ್ಟಿದ್ದಾರೆ. ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಸಮಿತಿಯ ಸಂಚಾಲಕರಾಗಿ ಇಡೀ ಯೋಜನೆಯ ಅನುಷ್ಠಾನದ ಕೆಲಸವನ್ನು ಹೆಜ್ಜೆ ಹೆಜ್ಜೆಗೂ ಸಮರ್ಥವಾಗಿ ನಿರ್ವಹಿಸಿದ್ದಾರೆ. ಹಿಂದಿನ ಕುಲಸಚಿವರಾದ ಪ್ರೊ. ಕರೀಗೌಡ ಬೀಚನಹಳ್ಳಿ ಅವರು ಯೋಜನೆಯ ಆಡಳಿತಾತ್ಮಕ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದಾರೆ. ಈಗಿನ ಕುಲಸಚಿವರಾದ ಶ್ರೀ ವಿ. ಶಂಕರ್ ಅವರು ಯೋಜನೆಯ ಆಡಳಿತಾತ್ಮಕ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಡೆಸುತ್ತಿದ್ದಾರೆ. ನಮ್ಮ ವಿಶ್ವವಿದ್ಯಾಲಯದ ಜೈನಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕರಾದ ಡಾ. ಎಂ. ಉಷಾ ಅವರು ಈ ಯೋಜನೆಯನ್ನು ರೂಪಿಸುವಲ್ಲಿ ವಿಶೇಷವಾಗಿ ಸಹಕರಿಸಿದ್ದಾರೆ.

ವಿಶ್ವವಿದ್ಯಾಲಯವು ಈ ಯೋಜನೆಯನ್ನು ಕೈಗೆತ್ತಿಕೊಂಡಾಗ ಪ್ರಕಟಣ ಸ್ವರೂಪವನ್ನು ಸ್ಥೂಲವಾಗಿ ಹೀಗೆ ಗುರುತಿಸಿಕೊಳ್ಳಲಾಯಿತು. ಇದು ಡೆಮ್ಮಿ ೧/೮ ಆಕಾರದ ಸುಮಾರು ಇಪ್ಪತ್ತು ಸಂಪುಟಗಳಿಂದ ಕೂಡಿರಬೇಕು. ಪ್ರತಿ ಸಂಪುಟವೂ ಅಂದಾಜು ೬೦೦ ಪುಟಗಳಾಗಿರಬೇಕು. ಸಂಪುಟದ ಸಂಪಾದಕರು ಆಯಾ ಸಂಪುಟಕ್ಕೆ ಸೂಕ್ತವಾದ ಕವಿ ಕಾವ್ಯ ಪರಿಚಯ, ಚಾರಿತ್ರಿಕ ಹಾಗೂ ಸಾಹಿತ್ಯಿಕ ಮಹತ್ವ ಇತ್ಯಾದಿ ವಿವರಗಳನ್ನು ಒಳಗೊಂಡ ಪ್ರಸ್ತಾವನೆ ಬರೆಯಬೇಕೆಂದು ನಿರ್ಣಯಿಸಲಾಯಿತು. ಸಂಪುಟಗಳು ಜನಪ್ರಿಯ ಆವೃತ್ತಿ ಆಗಿರುವುದರಿಂದ ಪಠ್ಯಗಳಲ್ಲಿ ಪಾಠಾಂತರಗಳನ್ನು ನೀಡಬೇಕಾಗಿಲ್ಲ. ಪ್ರತಿಯೊಬ್ಬ ಕವಿಯ ಸಮಗ್ರ ಕಾವ್ಯವನ್ನು ಒಂದು ಸಂಪುಟದಲ್ಲಿ ತರುವುದೆಂದು ಸಮಿತಿ ತೀರ್ಮಾನಿಸಿತು. ವಸ್ತು ವಿಷಯಕ್ಕೆ ಅನುಗುಣವಾಗಿ ಬೇರೆ ಬೇರೆ ಎರಡೆರಡು ಕಾವ್ಯಗಳನ್ನು ಒಂದೇ ಸಂಪುಟದಲ್ಲಿ ಅಳವಡಿಸುವುದು ಸೂಕ್ತವೆಂದು ತೀರ್ಮಾನ ತೆಗೆದುಕೊಳ್ಳಲಾಯಿತು. ಈಗಾಗಲೇ ಸಂಪಾದನೆಗೊಂಡು, ಪ್ರಕಟವಾಗಿರುವ ಕಾವ್ಯಗಳನ್ನು ಮೊದಲ ಹಂತದಲ್ಲಿ ತೆಗೆದುಕೊಳ್ಳುವುದೆಂದೂ ಅಪೂರ್ವ ಕೃತಿಗಳನ್ನು ಈ ಮಾಲೆಯಲ್ಲಿ ಸೇರಿಸಿಕೊಳ್ಳುವುದೆಂದೂ ನಿಶ್ಚಯಿಸಲಾಯಿತು. ಪಂಪ, ಪೊನ್ನ, ರನ್ನ, ಜನ್ನ, ನಾಗವರ್ಮ, ನಯಸೇನ, ಸಾಳ್ವ ಮುಂತಾದವರ ಕಾವ್ಯಗಳು ಈಗಾಗಲೇ ಮುದ್ರಣಗೊಂಡಿವೆ. ಆದರೂ ಪಾಠಕ್ಲೇಶ ಅರ್ಥಕ್ಲೇಶಗಳು ಹೇಗೋ ಉಳಿದುಬಿಟ್ಟಿವೆ. ಆದುದರಿಂದ ಎಲ್ಲ ಮುದ್ರಿತ ಪಾಠಗಳನ್ನು ಗಮನಿಸಿ ಈ ಎಲ್ಲ ಕ್ಲೇಶಗಳನ್ನು ನಿವಾರಿಸಿ ಸರ್ವಪ್ರತಿಪಾಠಗಳನ್ನು ಇಟ್ಟುಕೊಳ್ಳುವುದು ಅಗತ್ಯವೆಂದು ಸಮಿತಿ ಭಾವಿಸಿತು. ಗ್ರಂಥದ ಕೊನೆಗೆ ಶಬ್ದಾರ್ಥಕೋಶ, ಪಾರಿಭಾಷಿಕ ಕೋಶ, ಸಹಾಯಕ ಸಾಹಿತ್ಯ ನೀಡುವುದು ಅಗತ್ಯವೆಂದು ಸಂಪಾದಕರಿಗೆ ಬಿನ್ನವಿಸಿಕೊಳ್ಳಲಾಯಿತು. ಈ ಹಿನ್ನೆಲೆಯಲ್ಲಿ ಪ್ರಸ್ತುತ ಇಪ್ಪತ್ತು ಸಂಪುಟಗಳು ನಿಮ್ಮ ಎದುರಿಗಿವೆ.ಶ್ರಮಸಾಧ್ಯವಾದ ಇಂಥ ಕಾವ್ಯಗಳನ್ನು ಸಂಪಾದಿಸಿಕೊಟ್ಟ ಕನ್ನಡದ ಹಿರಿಯ ವಿದ್ವಾಂಸರಾದ ಎಲ್ಲ ಸಂಪಾದಕರಿಗೆ ಕೃತಜ್ಞತೆ ಹೇಳುವುದು ಮಾತ್ರ ಈಗ ನಮಗೆ ಸಾಧ್ಯವಾಗಿದೆ.

ದೇವಚಂದ್ರ ಕರ್ನಾಟಕ ಸಂಸ್ಕೃತಿಯ ದೃಷ್ಟಿಯಿಂದ ಬಹು ಮಹತ್ವವುಳ್ಳ ಕವಿ. ಈತನ ‘ರಾಜಾವಳಿ ಕಥಾಸಾರ’ ಒಂದು ಗದ್ಯಕೃತಿ. ಇದು ಕವಿ, ಕಾವ್ಯ, ಚರಿತ್ರೆ, ಐತಿಹ್ಯ ಮುಂತಾದ ನೆಲೆಗಳಲ್ಲಿ ವಿಶಿಷ್ಟ ಅಧ್ಯಯನವನ್ನು ಬೇಡುತ್ತದೆ. ಇಂಥ ಮಹತ್ತ್ವದ ಕೃತಿಯು ಕಳೆದ ಶತಮಾನದ ಕೊನೆಯವರೆಗೂ ಅಲಕ್ಷಿತವಾಗಿಯೇ ಇತ್ತು. ಇಂಥ ಅಲಕ್ಷಿತ ಕೃತಿಯ ಅಧ್ಯಯನ ಈಚೆಗೆ ಹೆಚ್ಚಾಗಿ ಆಗುತ್ತಿರುವುದು ಸಂತೋಷದ ಸಂಗತಿ. ಈ ಕೃತಿಯು ಚರಿತ್ರೆ, ಐತಿಹ್ಯ, ದಂತಕಥೆ, ಧರ್ಮ, ಮತೀಯ ಸಂಘರ್ಷ, ಸ್ಥಳೀಯತೆ ಮುಂತಾದ ಸಮಗತಿಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಕಳೆದ ಹದಿನೆಂಟು ಮತ್ತು ಹತ್ತೊಂಬತ್ತನೆಯ ಶತಮಾನದ ಸಾಂಸ್ಕೃತಕ ಚರಿತ್ರೆಯನ್ನು ತಿಳಿಯುವವರಿಗೆ ಇದೊಂದು ಅನರ್ಘ್ಯ ಗಣಿ.

ಪ್ರಾಚೀನ ಕನ್ನಡ ಸಾಹಿತ್ಯದ ಅಪಾರ ಅನುಭವವುಳ್ಳ, ಕನ್ನಡ ಪ್ರಾಧ್ಯಾಪಕರಾಗಿ ಪ್ರಾಚೀನ ಕಾವ್ಯಗಳ ಬಹುಶ್ರುತತ್ವ ಹೊಂದಿರುವ ಡಾ. ಎಚ್. ಜೆ. ಲಕ್ಕಪ್ಪಗೌಡರು ದೇವಚಂದ್ರನ ‘ರಾಜಾವಳಿ ಕಥಾಸಾರ’ವನ್ನು ಸಮರ್ಪಕವಾಗಿ ಸಂಪಾದನೆ ಮಾಡಿದ್ದಾರೆ. ಈ ಕಾವ್ಯವನ್ನು ಕುರಿತ ಅನೇಕ ವಿದ್ವಾಂಸರ ಅಭಿಪ್ರಾಯ, ಚರ್ಚೆ ಮತ್ತು ವಾಗ್ವಾದಗಳನ್ನು ಒಟ್ಟುಗೂಡಿಸಿ ವಿದ್ವತ್ ಪೂರ್ಣವಾದ ‘ತೋರಣ ನಾಂದಿ’ ಎಂಬ ಪ್ರಸ್ತಾವನೆಯ ಬಾಸಿಂಗವನ್ನು ಕಟ್ಟಿದ್ದಾರೆ. ಬಿ.ಎಸ್. ಸಣ್ಣಯ್ಯ ಅವರ ಸಂಪಾದನೆಯನ್ನು ಗಮನಿಸಿಕೊಂಡು, ಅಗತ್ಯ ಬಂದ ಕಡೆ ಪರಿಷ್ಕರಣೆ ನಡೆಸಿರುವ ಈ ಕಾಯ್ಯ ಕನ್ನಡ ಜೈನ ಸಾಹಿತ್ಯದ ಸಂಪಾದನ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಿದೆ. ಜನಪದ ಕತೆಗಳನ್ನು ಸಂಗ್ರಹಿಸಿ, ಸಂಪಾದಿಸಿ ಅನುಭವವುಳ್ಳ ಡಾ. ಎಚ್. ಜೆ. ಲಕ್ಕಪ್ಪಗೌಡ ಅವರು ಜೈನ ಜನಪದ ಕಥಾ ಸಂಕಲನವಾಗಿರುವ ‘ರಾಜಾವಳಿ ಕಥಾಸಾರ’ವನ್ನು ಸಂಪಾದಿಸಿಕೊಟ್ಟಿರುವುದು ಔಚಿತ್ಯಪೂರ್ಣವಾಗಿದೆ. ಕನ್ನಡ ವಿಶ್ವವಿದ್ಯಾಲಯದ ವಿಶ್ತಾಂತ ಕುಲಪತಿಗಳೂ ಸಮಗ್ರ ಜೈನ ಸಾಹಿತ್ಯ ಸಂಪುಟದ ಉನ್ನತ ಸಲಹಾ ಸಮಿತಿಯ ಸದಸ್ಯರೂ ಆಗಿರುವ ಡಾ. ಎಚ್. ಕೆ. ಲಕ್ಕಪ್ಪಗೌಡ ಅವರು ಪ್ರಸ್ತುತ ಗ್ರಂಥವನ್ನು ಸಂಪಾದಿಸಿಕೊಟ್ಟಿರುವುದಕ್ಕಾಗಿ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಈ ಗ್ರಂಥಗಳನ್ನು ಅಚ್ಚುಕಟ್ಟಾಗಿ ಹೊರತರುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ಆಭಾರಿಯಾಗಿದ್ದಾನೆ.

ಬಿ.ಎ. ವಿವೇಕ ರೈ
ಕುಲಪತಿ