ದೇವದಾಸಿ ಸಂಪ್ರದಾಯ ತನ್ನ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಅದು ಪಡೆದುಕೊಂಡ ಪ್ರೇರಣೆ ವಿವಿಧ ಮುಖಗಳುಳ್ಳದ್ದು. ಧಾರ್ಮಿಕ, ಸಾಮಾಜಿಕ , ಆರ್ಥಿಕ, ರಾಜಕೀಯ ಇತ್ಯಾದಿ ಅಂಶಗಳು ಈ ಸಂಪ್ರದಾಯದೊಂದಿಗೆ ಪ್ರತ್ಯಕ್ಷ ಇಲ್ಲವೆ ಪರೋಕ್ಷವಾಗಿ ಸಂಬಂಧ ಪಡೆದುಕೊಂಡಿದೆ.

ದೇವದಾಸಿಯರು ಎಂದರೆ ದೇವರ ದಾಸಿಯರು, ದೇವರ ಸೇವೆಗೆ ಮೀಸಲಾದವರು ಎಂದರ್ಥ. ಹಿಂದೆ ಇವರು ದೇವಸ್ಥಾನಗಳಲ್ಲಿ ನೃತ್ಯ, ಗೀತ ಸೇವೆ ಮಾಡಿಕೊಂಡು ಜೀವಿಸುತ್ತಿದ್ದವರು. ಮೂಲತಃ ದೇವದಾಸಿ ಸಂಪ್ರದಾಯ ಶುದ್ಧ ಧಾರ್ಮಿಕ ಆವರಣದಲ್ಲಿಯೇ ಜನ್ಮ ತಳೆದರೂ ಮುಂದೆ ಅದು ಪ್ರಭಾವಶಲಿ ಬುದ್ಧಿವಂತರ ಕಪಿಮುಷ್ಠಿ ಸೇರಿ, ಶೋಷಣೆಯ ರೂಪ ಪಡೆದುಕೊಂಡಿತು.

ಈ ಪದ್ಧತಿಯ ಪ್ರೇರಣೆಯನ್ನು ಗುರುತಿಸುವ ಮೊದಲು ಈ ಶಬ್ದದ ಬಗೆಗೆ ಸ್ಪಷ್ಟೀಕರಣ ಅಗತ್ಯ. ಬಸವಿ, ಜೋಗತಿ, ದಾಸಿ, ಗೆಜ್ಜೆಪೂಜೆ, ಮಣಿಕಟ್ಟು , ಮುತ್ತುಕಟ್ಟು ಈ ಎಲ್ಲ ಪಾರಿಭಾಷಿಕ ಪದಗಳು ದೇವದಾಸಿ ವೃತ್ತಿಯ ಸೂಚಕಗಳಾಗಿವೆ. ದೇವರ ಸೇವಕರು ಎಂಬ ಸಾಮಾನ್ಯಾರ್ಥದಲ್ಲಿ ಎಲ್ಲರನ್ನು ದೇವದಾಸಿ ಎಂಬ ತಲೆಬರಹದಡಿಯಲ್ಲಿಯೇ ವಿಶ್ಲೇಷಿಸುತ್ತೇವೆ. ಆದರೆ ಒಟ್ಟಂದದಲ್ಲಿ ಹೀಗೆ ಕರೆಯುವಾಗ ಇರುವ ತೊಡಕುಗಳನ್ನು ಮೊದಲಿಗೆ ಗಮನಿಸಬೇಕು. ಏಕೆಂದರೆ ದೇವದಾಸಿ ಎಂಬ ಹೆಸರಿನಿಂದಲೇ ನಿರ್ದೇಶಿಸಲಾಗುವ ಒಂದು ವರ್ಗ ನಮ್ಮಲ್ಲಿ ಇತ್ತೆಂಬುದು ಗಮನಾರ್ಹ. ಜೊತೆಗೆ ಬಸವಿ, ಜೋಗತಿ, ದೇವದಾಸಿ ಈ ಎಲ್ಲ ಶಬ್ದಗಳು ಏಕಕಾಲಕ್ಕೆ ಚಾಲ್ತಿಯಗುತ್ತಿವೆ. ಹೀಗಾಗಿ ಇವುಗಳ ನಡುವೆ ಸೂಕ್ಷ್ಮ ವ್ಯತ್ಯಾಸವಿದೆ ಎಂಬುದು ಸ್ಪಷ್ಟ. ಒಂದರಿಂದ ಇನ್ನೊಂದು ಸ್ಪೂರ್ತಿ ಪಡೆದಿರಬಹುದಾದರೂ, ಅವುಗಳಿಗಾದ ಪ್ರೇರಣೆ ಗುರುತಿಸುವಲ್ಲಿ ಅವುಗಳನ್ನು ಪ್ರತ್ಯೇಕ ಮಾಡಿ ಅಭ್ಯಸಿಸಬೇಕಾಗುತ್ತದೆ.

ಮೇಲಿನ ಶಬ್ದಗಳು ಒಂದು ದೃಷ್ಟಿಯಿಉಂದ ಸಮಾನತೆ ಹೊಂದಿದ್ದರೂ ಮೂಲತಃ ಅವು ಬೇರೆಯಾದವು, ಹುಟ್ಟಿಕೊಂಡ ಕಾರಣಗಳು ವಿಭಿನ್ನವಾದವು. ‘ದೇವದಾಸಿ’ ವರ್ಗ ದೇವರ ಸೇವೆಗಾಗಿ, ಕೆಲಸಕ್ಕಾಗಿ ನೇಮಕಗೊಂಡದ್ದು. ಇವರು ದೇವಸ್ಥಾನದ ಆಡಳಿತವರ್ಗಕ್ಕೆ ಸಂಬಂಧಪಟ್ಟಿದ್ದು, ವ್ಯವಸ್ಥಿತವಾದ ಬದುಕನ್ನು ರೂಪಿಸಿಕೊಂಡವರು. ಇವರ ವೃತ್ತಿ ಪರಂಪರಾನುಗತವಾದದ್ದು. ಇವರು ಧರ್ಮಪ್ರಸಾರಕರಲ್ಲ, ಧರ್ಮ ಭಿಕ್ಷುಗಳೂ ಅಲ್ಲ. ಆದರೆ ಬಸವಿ, ಜೋಗತಿಯರು ಹರಕೆ ಅಥವಾ ಇನ್ನಾವುದೋ ಉದ್ದೇಶದಿಂದ ದೇವರಿಗೆ ಅರ್ಪಿಸಿಕೊಂಡವರು. ಇವರಿಗೆ ದೇವಸ್ಥಾನದಲ್ಲಿ ಯಾವ ರೀತಿಯ ಪ್ರಾಮುಖ್ಯತೆಯೂ ಇಲ್ಲ.. ಇವರ ಬದುಕು ನಿಶ್ಚಿತವಾಗಿಲ್ಲ. ಜೋಗತಿಯರು ಎಲ್ಲಮ್ಮ ಪಂಥದ ಪ್ರಸಾರಕರು, ಹಾಗೂ ಧರ್ಮದ ಹೆಸರಿನಲ್ಲಿ ಭಿಕ್ಷೆ ನಡೆಸುವವರು. ಹೀಗೆ ಮೂಲತಃ ಇವರಲ್ಲಿ ವ್ಯತ್ಯಾಸಗಳಿವೆ. ಆದರೆ ಧಾರ್ಮಿಕ ಆಶಯಹೊಂದಿದ್ದು ಇಬ್ಬರ ಕೇಂದ್ರ ಬಿಂದು ದೇವರೇ ಎಂಬುದು ಮುಖ್ಯ. ಈ ಎರಡು ಪಂಥದವರು ಯಾವುದೋ ಒಂದು ಹಂತದಲ್ಲಿ ನೈತಿಕ, ಧಾರ್ಮಿಕ, ಸಾಮಾಜಿಕ ಮಹತ್ವವನ್ನು ಕಳೆದುಕೊಂಡು ವೇಶ್ಯಾವೃತ್ತಿಗೆ ತಿರುಗಿರಬಹುದು.

ದೇವದಾಸಿ ಪದ್ಧತಿಯ ಹುಟ್ಟು, ಬೆಳವಣಿಗೆ, ತಿರುವುಗಳ ವಿಶ್ಲೇಷಣೆಯ ಈ ಪದ್ಧತಿಯ ಪ್ರೇರಣೆಯನ್ನು ಸ್ಪಷ್ಟೀಕರಿಸುತ್ತದೆ. ಈ ನಿಟ್ಟಿನಲ್ಲಿಯೇ ನನ್ನ ವಿಚಾರಗಳು ಮಂಡಿತವಾಗಿವೆ. ಮಾನವ, ದೇವರು ಧರ್ಮ ಈ ಕಲ್ಪನೆಗಳನ್ನು ಹುಟ್ಟು ಹಾಕಿಕೊಂಡು, ಆರಾಧಿಸಲು ಮೊದಲ್ಗೊಂಡ ಹಂತಕ್ಕೆ ನಾವು ಈ ಪದ್ಧತಿಯ ಉಗಮವನ್ನು ಗುರುತಿಸಬೇಕಾಗುತ್ತದೆ. ದೇವರು, ಧರ್ಮ ಇವು ಪುರಾತನ ಕಾಲದಿಂದಲೂ ನಮ್ಮ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿ ಜೀವನದಲ್ಲಿ ಪ್ರಮುಖ ಪಾತ್ರವಹಿಸಿವೆ. ನಮ್ಮ ದೇಶದಲ್ಲಿ ಎಲ್ಲದಕ್ಕೂ ಕೊರತೆ ಇದ್ದರೂ ದೇವಾಲಯಗಳಿಗೆ ಮಾತ್ರ ಕೊರೆತೆಯಿಲ್ಲ. ನಮ್ಮ ನಾಗರಿಕತೆಯ ಒಳ್ಳೆಯದು, ಕೆಟ್ಟದ್ದು ಎಲ್ಲವೂ ಈ ದೇವಾಲಯಗಳಿಗೆ ಸಂಬಂಧಿಸಿ ಇವೆ. ಇವುಗಳಿಂದಲೇ ನಮ್ಮಲ್ಲಿ ಅಸೇತು ಹಿಮಾಚಲ ಪರ್ಯಂತ ಜಾತೀಯ ಐಕ್ಯತೆ ಆಗಿದೆ. ಇವುಗಳಿಂದಲೇ ಮತ ವಿದ್ವೇಶಗಳಿಂದ ಜಗಳವನ್ನೂ ಮಾಡುತ್ತಿದ್ದೇವೆ. ಇವುಗಳಲ್ಲಿ ಇದ್ದ ಧನಕ್ಕೆ ಆಸೆಪಟ್ಟು ಎಷ್ಟೋ ಮಂದಿ ನಮ್ಮ ಮೇಲೆ ದಂಡೆತ್ತಿ ಬಂದಿದ್ದರು. ಇವುಗಳ ಪ್ರಾಕಾರದಲ್ಲಿ ಸಾವಿರಾರು ಕುಟುಂಬಗಳು ಕಷ್ಟದ ಸಮಯದಲ್ಲಿ ಆಶ್ರಯ ಪಡೆದಿದ್ದವು. ನಮ್ಮ ಶಿಲ್ಪ, ಚಿತ್ರಲೇಖನ, ನೃತ್ಯ, ಸಂಗೀತ, ಎಲ್ಲಕ್ಕೂ ಈ ದೇವಾಲಯಗಳೇ ನೆಲಗಳಾಗಿದ್ದವು. ಈ ವಿಧವಾಗಿ ಈ ದೇವಾಲಯಗಳು ನಮ್ಮ ಒಳ್ಳೆ ಕಾಲ ಹಾಗೂ ಕೆಟ್ಟಕಾಲಗಳೆರಡರಲ್ಲೂ ಉಪಕರಿಸಿವೆ.  (ಧರ್ಮರಾವ್‌, ೧೯೮೩). ಇಂದು ನಾವು ಸಾಮಾಜಿಕ ಅನಿಷ್ಟವೆಂದು ಪರಿಗಣಿಸುವ ದೇವದಾಸಿ ಪದ್ಧತಿಯೂ ಈ ದೇವಾಲಯಗಳ ಕೊಡುಗೆಯೆ.

ವಿವಾಹ, ಕುಟುಂಬ ಈ ಕಟ್ಟುಪಾಡಿಗೆ ಮಾನವ ಬದ್ಧನಾಗಿ ಹೆಣ್ಣನ್ನು ತನ್ನ ವೈಯಕ್ತಿಕ ಆಸ್ತಿಯೆಂದು ಪರಿಗಣಿಸುವ ಮೊದಲು ಲೈಂಗಿಕ ವಿಚಾರದಲ್ಲಿ ಮಡಿವಂತಿಕೆ, ಪಾತಿವ್ರತ್ಯದ ಕಲ್ಪನೆಯೂ ಇರಲಿಲ್ಲ. ಅನಂತರವೂ ಲೈಂಗಿಕ ಸಂಪರ್ಕ ಹೊಂದುವುದು ಪವಿತ್ರವಾದ ಆರಾಧನೆ ಎಂದೇ ಪರಿಗಣಿಸಿದ್ದ ಮಾನವ ದೇವರು ಜೀವಂತ ವ್ಯಕ್ತಿಯೆಂದು ಪರಿಗಣಿಸಿ ತಾನು ಅನುಭೋಗಿಸುವ ಸಕಲ ಭೋಗಗಳನ್ನೂ ಆತನಿಗೆ ಅರ್ಪಿಸಿದ. ಆ ಬಗೆಗೆ ಅಸಹ್ಯವಾಗಲಲಿ, ನೈಚ್ಯಭಾವವಾಗಲಿ ಇರಲಿಲ್ಲ. ನಿರ್ವಾಣ ಸೇವೆ, ಶಯನೋತ್ಸವ ಇಂತಹ ಆಚರಣೆಗಳನ್ನು ಇಂದಿಗೂ ಕಾಣುತ್ತೇವೆ. ದೇವರ ಹೆಸರಿನಲ್ಲೇ ಲೈಂಗಿಕತೆ ಬಗ್ಗೆ ಜನ ಎಷ್ಟು ಮುಕ್ತರಾಗಿದ್ದರು ಎಂಬುದಕ್ಕೆ ಇಲ್ಲೊಂದು ಕುತೂಹಲಕಾರಿ ಸಂಗತಿ ಪ್ರಸ್ತಾಪಿಸಬಹುದು. ದಕ್ಷಿಣ ಹಿಂದೂಸ್ತಾನದಲ್ಲಿ ‘ಕಂಚುಕೋತ್ಸವ’ ವೆಂಬ ಒಂದು ಹಬ್ಬ ಆಚರಿಸುತ್ತಾರೆಂತೆ. ಅಂದು ಹೆಣ್ಣುಗಳು ದೇವಸ್ಥಾನಕ್ಕೆ ಬಂದು ಪೂಜಾ ನಂತರ ತಮ್ಮ ರವಿಕೆಗಳನ್ನೆಲ್ಲ ಬಿಚ್ಚಿ ರಾಶಿ ಹಾಕಬೇಕು. ನಂತರ ಗಂಡಸರೆಲ್ಲ ಒಳಗೆ ಪ್ರವೇಶಿಸಿ ಒಂದೊಂದು ರವಿಕೆ ತೆಗೆದುಕೊಳ್ಳುತ್ತಾರೆ. ಯಾರ ರವಿಕೆ ಯಾರ ಕೈಯಲ್ಲಿದೆಯೋ ಆ ಹೆಣ್ಣು ಆ ಗಂಡಿನೊಂದಿಗೆ ಆ ರಾತ್ರಿ ಕಳೆಯಲೇಬೇಕು. ಇಲ್ಲಿ ಪಾಲಿಗೆ ಬಂದದ್ದು ಪಂಚಾಮೃತ. ಆಯ್ಕೆಯ ಪ್ರಶ್ನೆಯೇ ಇಲ್ಲ ! ಮರುದಿನದಿಂದ ಯಥಾಪ್ರಕಾರ ಗಂಡನೊಂದಿಗೆ ಕೂಡಿ ಸಂಸಾರ ನಡೆಸುತ್ತಾರೆ. ಪಾರ್ಸಿಗಳಲ್ಲಿ ಇದಕ್ಕೆ ವಿರುದ್ಧವಾಗಿ ಹೆಣ್ಣು ಗಂಡಿನ ಬಟ್ಟೆ ಹಿಡಿದುಕೊಂಡು ಆ ಗಂಡನ್ನು ಕೂಡುತ್ತಾಳೆ. ಉತ್ತರ ಹಿಂದೂಸ್ತಾನದಲ್ಲಿನ ‘ರಾಮಾಮೇಲ’ ಎಂಬ ಒಂದು ಉತ್ಸಹವು ಈ ಸ್ವರೂಪದ್ದೇ. ನಾವಿಂದು ಪಾವಿತ್ಯ್ರತೆ, ಅಸ್ಪೃಶ್ಯತೆಗಳನ್ನು ಕಂಡುಕೊಂಡು, ಅನವರತ ಒಳಿತಿಗಾಗಿ ಗೋಗರೆಯುವ ದೇವರ ಗುಡಿಗಳಲ್ಲಿ ಇಂತಹ ಒಂದು ಪದ್ಧತಿ ಇಂದಿಗೂ ಇದೆ ಎಂದ ಮೇಲೆ ಹಿಂದಿನವರ ಪಾಡೇನು ! ಅಂತೂ ಆರಂಭಕಾಲದಿಂದಲೂ ಈ ರೀತಿ ದೇವರ ಸಮಕ್ಷಮದಲ್ಲಿ ಲೈಂಗಿಕ ಸಂಪರ್ಕ ನಡೆಸುವುದು ಸರ್ವೇಸಾಧಾರಣವಾಗಿತ್ತು. ಅವರಿಗೆ ಅದು ‘ವೇಶ್ಯಾವೃತ್ತಿ’ ಎನಿಸಿರಲಿಲ್ಲ.

ದೇವದಾಸಿಯರ ವರ್ಗ ಯಾವಾಗ ಸೃಷ್ಟಿಯಾಯಿತು ಎಂಬ ಪ್ರಶ್ನೆಗೆ ಉತ್ತರಿಸಲು ಖಚಿತ ದಾಖಲೆಗಳಿಲ್ಲವಾದರೂ ದೇವದಾಸಿಯರಿಗೆ ದಾನ, ದತ್ತಿ ಕೊಟ್ಟ ಅನೇಕ ಪ್ರಸಂಗಗಳು ಶಾಸನಗಳಲ್ಲಿ ಉಲ್ಲೇಖಗೊಂಡಿವೆ. ದೇವಾಲಯಗಳಲ್ಲಿ ದೇವರ ಸೇವೆಗಾಗಿ ಸ್ತ್ರೀಯರನ್ನು ಬಿಟ್ಟು ಅವರನ್ನು ದೇವದಾಸಿ. ಬಸವಿ ಎಂದು ಕರೆದು ಆಕೆಯ ಉದರಂಭಣಕ್ಕೆ ಜಮೀನು ಬಿಟ್ಟ ದಾಖಲೆಗ ಳಿವೆ. ಡಾ. ಚಿದಾನಂದಮೂರ್ತಿಯವರು ಶಾಸನಗಳಲ್ಲಿ ಬರುವ ವಿಚಾರಗಳ ಬಗೆಗೆ ದೀರ್ಘ ವಿವರ ನೀಡಿದ್ದಾರೆ. ಆದರೆ ದೇವದಾಸಿಯರು ಯಾವ ಕುಲದವರು, ಅವರು ಯಾಕೆ ದೇವದಾಸಿಯರಾದರು. ಈ ವಿಚಾರಗಳಿಗೆ ಶಾಸನಗಳಲ್ಲೂ ಮಾಹಿತಿಗಳಿಲ್ಲ. ಜಾತಕಕತೆಗಳಲ್ಲಿ, ಅರ್ಥಶಾಸ್ತ್ರ, ಕಾಮಶಾಸ್ತ್ರ ಮುಂತಾದ ಪ್ರಾಚೀನ ಗ್ರಂಥಗಳಲ್ಲಿ ದೇವದಾಸಿಯರ ಉಲ್ಲೇಖ ಸಿಗುವುದಿಲ್ಲ. ಆದರೆ ಪುರಾಣಗಳಲ್ಲಿ ಮಾತ್ರ ದೇವರಪೂಜೆಗೆ ದೇವದಾಸಿಯರ ಅವಶ್ಯಕತೆಯನ್ನು ಒಪ್ಪಿಕೊಂಡು, ಅದಕ್ಕಾಗಿ ಸುಂದರವಾದ ಹೆಣ್ಣುಗಳನ್ನು ದೇವರಿಗೆ ಅರ್ಪಿಸಿರಿ ಹಾಗೂ ಗಣಿಕಾ ಸ್ತ್ರೀಯರನ್ನು ಕೊಳ್ಳಿರಿ ಎಂದು ಹೇಳಲಾಗಿದೆ. ಭವಿಷ್ಯಪುರಾಣದಲ್ಲಿ ಸೂರ್ಯಲೋಕದ ಪ್ರಾಪ್ತಿಯಾಗಬೇಕಾದರೆ ಸೂರ್ಯಮಂದಿರದಲ್ಲಿ ನೃತ್ಯ, ಗಾಯಕ, ಕುಶಲ ತರುಣಿಯರನ್ನು ಅರ್ಪಿಸಿಬಿಡಿರಿ ಎಂದು ಹೇಳಿದೆ. ಹೀಗಾಗಿ ಮಧ್ಯಯುಗದಲ್ಲಿ ಸೂರ್ಯಮಂದಿರದಲ್ಲಿ ವಿಶೇಷ ಆಕರ್ಷಣೆಯಾಗಿ ದೇವದಾಸಿಯರಿದ್ದುದು ಕಂಡುಬರುತ್ತದೆ. “ಮಂದಿರದಲ್ಲಿರುವ ದೇವಮೂರ್ತಿ ಎಂದರೆ ಪ್ರತ್ಯಕ್ಷ ದೇವರೆಂದು ಪರಿಗಣಿಸಿ ಅವರಿಗೆ ಸ್ನಾನ, ಗಂಧ, ಪುಷ್ಪ, ಅನ್ನವಸ್ತ್ರ ಇತ್ಯಾದಿ ಮಾನವಭೋಗಗಳನ್ನು ಅರ್ಪಿಸುವ ಪದ್ಧತಿ ದೇವಪೂಜೆ ಎಂಬ ಹೆಸರಿನಿಂದ ರೂಢಿಯಲ್ಲಿತ್ತು. ಹಾಗಿರುವುದರಿಂದ ಅದೇ ಪ್ರಕರ ದೇವರಿಗೆ ಶಯನ ಭೋಗವೂ ಸಿಗಬೇಕೆಂದು ಹೇಳಿ ಈ ಮಂದಿರದಲ್ಲಿ ದಾಸಿಯರನ್ನಿಡುವ ಪದ್ಧತಿ ಮಧ್ಯಯುಗದಲ್ಲಿ ಪ್ರಾರಂಬವಾಯಿತು” (ಜೋಶಿ, ೪೬೬). ಈ ಕಾರಣದಿಂದ ಮಂದಿರದ ವ್ಯವಸ್ಥಾಪಕರು ಗಣಿಕಾಸ್ತ್ರೀಯರನ್ನು ಕೊಂಡುಕೊಳ್ಳುತ್ತಿದ್ದರು. ಇನ್ನು ಕೆಲವರು ತಾವಾಗಿಯೇ ತಮ್ಮ ಮಕ್ಕಳನ್ನು ದೇವರಿಗೆ ಅರ್ಪಿಸಿಬಿಡುತ್ತಿದ್ದರು. ಅನಂತರದಲ್ಲಿ ಆ ದೇವದಾಸಿಯರು ದೇವಸ್ಥಾನದ ಪರಿಸರದಲ್ಲಿ ನಿಂತು ದೇವರಸೇವೆ ಹಾಗೂ ಗಣಿಕಾವೃತ್ತಿ ಎರಡರ ಮೇಲೆ ಉಪಜೀವನ ನಡೆಸುತ್ತಿದ್ದರು. ಇನ್ನು ಕೆಲವು ದೇವದಾಸಿಯರಿಗೆ ಜೀವನೋಪಾಯಕ್ಕೆ ದೇವಸ್ಥಾನದಿಂದಲೇ ಜಮೀನು ಕೊಡಲಾಗುತ್ತಿತ್ತು. ಆ ಜಮೀನಿನ ಮೇಲೆ ಅವರಿಗೆ ಸಂಪೂರ್ಣ ಹತೋಟಿ ಇತ್ತು. ಹೀಗೆ ದೇವದಾಸಿ ಸಂಪ್ರದಾಯ ಆರಂಭವಾಗಿ ಕಾಲಾನಂತರದಲ್ಲಿ ಅವರದೇ ಒಂದು ವರ್ಗ ರೂಪುಗೊಂಡಿತು. ಅವರ ಆಚಾರ, ವಿಚಾರ, ವಾರಸುದಾರಿಕೆ ಹಕ್ಕು – ಈ ವಿಷಯಗಳಲ್ಲಿ ನಿಯಮಗಳನ್ನು ರೂಪಿಸಲಾಯಿತು. ಅವರಲ್ಲಿ ಜನಿಸಿದ ಗಂಡು, ಹೆಣ್ಣು ಮಕ್ಕಳಿಬ್ಬರಿಗೂ ಸಮಾನ ವಾರಸುದಾರಿಕೆ ಹಕ್ಕಿತ್ತು. ಗಂಡುಮಗ ನೃತ್ಯ, ಗಾಯನಕ್ಕೆ ನೆರವು ನೀಡಿದರೆ, ಹೆಣ್ಣುಮಗಳನ್ನು ನೃತ್ಯಕ್ಕೆ ತೊಡಗಿಸುತ್ತಿದ್ದರು.

ನೃತ್ಯಕಲೆಗೂ ಹಾಗೂ ದೇವದಾಸಿಯರ ಉಗಮಕ್ಕೂ ನೇರ ಸಂಬಂಧವಿರುವುದರಿಂದ ಆ ಕುರಿತು ವಿಚಾರ ಮಾಡುವುದು ಮುಖ್ಯ. ನೃತ್ಯಕಲೆ ಶ್ರೇಷ್ಠವಾದ ಕಲೆ ಎಂದು ಪುರಾತನ ಕಾಲದಲ್ಲಿ ಪುರಸ್ಕಾರ ಪಡೆದಿತ್ತು. ನಮ್ಮ ದೇವಾಲಯಗಳ ಶಿಲ್ಪ , ಶಾಸನಗಳು ಇದಕ್ಕೆ ಪುರಾವೆ ಒದಗಿಸಿವೆ. ಭಾರತೀಯ ನೃತ್ಯಸಂಪ್ರದಾಯದಲ್ಲಿ ಧಾರ್ಮಿಕ ಮತ್ತು ಲೌಕಿಕ ಎಂದು ಎರಡು ವಿಧಗಳಿವೆ. ದೇವಾಲಯದಲ್ಲಿ ಪ್ರಾರ್ಥನಾ ರೂಪದಲ್ಲಿ ದೇವರಿಗೆ ತಮ್ಮ ದೇಹವನ್ನು ಮುಡುಪಾಗಿಟ್ಟು ನರ್ತಿಸುವವರು ದೇವದಾಸಿಯರು. ಇವರದು ಧಾರ್ಮಿಕ ಸಂಪ್ರದಾಯವಾದರೆ ದೇವಾಲಯಗಳ ಹೊರಗೆ ಜೀವನೋಪಾಯಕ್ಕಾಗಿ ನೃತ್ಯವನ್ನು ಪ್ರದರ್ಶಿಸುವ ಸ್ತ್ರೀಯರು ಲೌಕಿಕ ಸಂಪ್ರದಾಯದವರು. ನೃತ್ಯಕಲೆ ಧಾರ್ಮಿಕ ಸಂಸ್ಕಾರವಾಗಿಯೇ ಹುಟ್ಟು ಪಡೆಯಿತು. ಬ್ರಹ್ಮನಿಂದ ಭರತನಿಗೆ ನಂತರ ಶಿಷ್ಯರಿಗೆ, ಪಾರ್ವತಿಗೆ, ಹೀಗೆ ದೈವಿಕ ಆವರಣದಲ್ಲಿ ಜನ್ಮತಳೆದ ನೃತ್ಯಕಲೆ ಭೂಲೋಕಕ್ಕೆ ಇಳಿದು ಇಲ್ಲಿ ತನ್ನ ಅಸ್ತಿತ್ವ ಸ್ಥಾಪಿಸಿಕೊಂಡಿತು. ಎಲ್ಲದರ ಮೂಲವನ್ನೂ ದೇವರ ಮೂಲಕ್ಕೆ ಎಳೆದೊಯ್ಯುವುದು ನಮ್ಮ ರೂಢಿ. ದೇವಲೋಕದಲ್ಲಿನ ಅಪ್ಸರೆ ಸ್ತ್ರೀಯರಂತೆ ಭೂಲೋಕದಲ್ಲಿಯೂ ನೃತ್ಯಗಾರ್ತಿಯರು ಹುಟ್ಟಿಕೊಂಡರು. ಹೀಗಾಗಿ ಪುರಾತನ ಕಾಲದಲ್ಲಿ ಈ ‘ನಾಟ್ಯ’ ದೇವರಿಗೆ ಅರ್ಪಿಸುವ ಪೂಜಾ ವಿಧಾನಗಳಲ್ಲಿ ಒಂದಾಯಿತು. ದೇವರನ್ನು ಸುಪ್ರಭಾತ ಹಾಕಿ ಎಬ್ಬಿಸುವುದರಿಂದ ಮೊದಲಾಗಿ ಜೋಗುಳ ಹಾಡಿ ಮಲಗಿಸುವವರೆಗೆ ಎಲ್ಲ ವಿಧದ ಭೋಗಗಳು ಆತನಿಗೆ ಸಲ್ಲಿಕೆಯಾದವು. ಅಂಗಭೋಗ ಹಾಗೂ ರಂಗಭೋಗದ ಪ್ರಸ್ತಾಪ ಶಾಸನಗಳಲ್ಲಿ ಬಂದಿದೆ. ಅಂಗಭೋಗ ದೇವರ ಮೂರ್ತಿಗೆ ಮಾಡಬೇಧಕಾದ ಅಲಂಕಾರಿಕ ಸಾಮಗ್ರಿಗೆ ಸಂಬಂಧಿಸಿದರೆ, ರಂಗಭೋಗ ಗರ್ಭಗುಡಿಯ ಮುಂದಿನ ರಂಗದಲ್ಲಿ ದೇವರಿಗೆ ಅರ್ಪಿಸುತ್ತಿದ್ದ ಗೀತೆ ನೃತ್ಯ ಸೇವೆಗಳಿಗೆ ಸಂಬಂಧಿಸಿದುದು. ಷೋಡಶೋಪಚಾರ ಪೂಜೆಯಲ್ಲಿ ‘ಗೀತಂ ಸಮರ್ಪಯಾಮಿ ವಾದ್ಯ ಸಮರ್ಪಯಾಮಿ ನೃತ್ಯ ಸಮರ್ಪಯಾಮಿ’ ಎಂದು ಮಂತ್ರ ಪೂರ್ವಕ ಪ್ರಾಯೋಗಿಕ ಆಚರಣೆಗಳು ದೇವರಿಗೆ ಅರ್ಪಿತವಾಗುತ್ತಿದ್ದವು. ಆ ಸಂದರ್ಭದಲ್ಲಿ ದೇವದಾಸಿಯರು ನೃತ್ಯ ಮಾಡಿ ತೆರಳುತ್ತಿದ್ದರು.  ದೇವರನ್ನು ಜೀವಂತವ್ಯಕ್ತಿ ಎಂದು ಭಾವಿಸಿದ ನಮ್ಮ ಜನರ ಮೂಢತೆಯಲ್ಲೆ ದೇವದಾಸಿ ಪದ್ಧತಿಯ ಮೂಲವಿದೆ. ಇದು ಕ್ರಿ.ಶ. ಮೂರನೇ ಶತಮಾನದಲ್ಲಿ ಆರಂಭವಾಗಿರಬಹುದೆಂದು ಡಾ|| ಆಲ್ಟೇಕರರು ಊಹಿಸುತ್ತಾರೆ.

[1] ಹೀಗೆ ಅರ್ಚನೆಯ ಒಂದು ಅಂಗವಾಗಿ ಪ್ರಾಧಾನ್ಯತೆ ಪಡೆದಿದ್ದ ನೃತ್ಯಗಾರ್ತಿಯರಿಗೆ ‘ದೇವದಾಸಿಯರು’ ಎಂದು ಅದರದೇ ಆದ ಘನತೆ, ಪಾವಿತ್ಯ್ರತೆ ಹೊಂದಿದ ಪದ ಚಾಲ್ತಿಯಲ್ಲಿತ್ತು.

ದೇವಸ್ಥಾನಗಳಲ್ಲಿ ಈ ನೃತ್ಯಕಲೆ ರೂಢಿಗೆ ಬಂದರೂ, ರಾಜರ ಆಶ್ರಯದಿಂದ ಅದು ಅಭಿವೃದ್ಧಿ ಹೊಂದಿತು. ಪ್ರತ್ಯಕ್ಷ ದೇವರೆಂದು ಭಾವಿಸುತ್ತಿದ್ದ ರಾಜನಿಗೂ ದೇವದಾಸಿಯರು ಮೀಸಲಾದರು . ಅಲ್ಲದೆ ದೇವಸ್ಥಾನದ ಹಿತಾಸಕ್ತರಾದ ರಾಜರು ಆಸ್ಥಾನದಲ್ಲೂ ಈ ಕಲೆಯ ಪ್ರದರ್ಶನಕ್ಕೆ ಅನುವು ಮಾಡಿದ್ದರಿಂದ, ಅರಮನೆಯಲ್ಲೂ ಈ ದೇವದಾಸಿಯರು ಸ್ಥಾನಪಡೆದುಕೊಂಡರು. ರಾಜನ ಪಟ್ಟದರಸಿಯರು ದೇವಾಲಯದಲ್ಲಿ ನೃತ್ಯಮಾಡುತ್ತಿದ್ದ ನಿದರ್ಶನಗಳಿವೆ. ಹೀಗೆ ಕೇವಲ ದೇವರ ಸಂತೋಷಕ್ಕಾಗಿ ಬಂದ ನೃತ್ಯ ಕ್ರಮೇಣ ಶ್ರೀಮಂತರನ್ನು, ಪ್ರತಿಷ್ಠಿತರನ್ನು ಸಂತೋಷಪಡಿಸುವ ದುಬಾರಿ ಕಲೆಯಾಯಿತು. ಹೀಗೆ ನೃತ್ಯದ ಹುಟ್ಟು, ಬೆಳವಣಿಗೆಯೊಂದಿಗೆ ದೇವದಾಸಿ ಪದ್ಧತಿಯೂ ಅಸ್ತಿತ್ವ ಪಡೆದುಕೊಂಡಿತು. ಈ ದೇವದಾಸಿಯರು ಸುಂದರಿಯರಾಗಿದ್ದು ನೃತ್ಯಪ್ರವೀಣೆಯರಲ್ಲದೆ ಸರ್ವವಿದ್ಯೆಯಲ್ಲೂ ಪಾಂಡಿತ್ಯ ಹೊಂದಿರುತ್ತಿದ್ದರು. ವೈಭವದ ಜೀವನ ಇವರದಾಗಿತ್ತು ವಿಜಯಾದಿತ್ಯನ ಪ್ರಾಣವಲ್ಲಭೆ ಎನಿಸಿದ ವೀಣಾ ಪೋಟಿ ಎಂಬ ದೇವದಾಸಿ ಮಹಾಕೂಟ ದೇವಾಲಯಕ್ಕೆ ಚಿನ್ನದ ಪೀಠವನ್ನೂ, ಬೆಳ್ಳಿಯ ಛತ್ರಿಯನ್ನೂ ಅರ್ಪಿಸಿದ್ದಳಂತೆ. ಇಂತಹ ನಿದರ್ಶನಗಳು ಹಲವಾರು. ಇಲ್ಲಿ ಇನ್ನೊಂದು ಪ್ರಶ್ನೆ. ದೇವದಾಸಿಯರೆಲ್ಲರೂ ಉನ್ನತ ಬದುಕು ನಡೆಸಿದ್ದರೇ? ಎಂಬುದು. ಆದರೆ ವೃತ್ತಿಗನುಗುಣವಾಗಿ ಜಾತಿ ಹುಟ್ಟಿಕೊಂಡಂತೆ ಈ ದೇವದಾಸಿಯರಲ್ಲಿ ಎರಡು ವರ್ಗಗಳು ಗೋಚರಿಸುತ್ತವೆ.

೧) ನೃತ್ಯ, ಗಾಯನ, ವಾದನಗಳಲ್ಲಿ ಕುಶಲರಾದ ಕಲಾವಂತೆಯರದು ಒಂದು ಪಂಗಡ. ಈ ವರ್ಗದ ಸ್ತ್ರೀಯರು ಪ್ರಾಮಾಣಿಕರು, ಸುಂದರಿಯರು, ಬುದ್ಧಿವಂತರು, ದೇವರಲ್ಲಿ ಭಯಭಕ್ತಿ ಇಟ್ಟುಕೊಂಡವರು. ಇವರಲ್ಲಿ ಕೆಲವರು ಒಬ್ಬನೇ ಪುರುಷನೊಂದಿಗೆ ಖಾಯಂ ಸಂಬಂಧ ಹೊಂದಿ, ನೈತಿಕ ದೃಷ್ಟಿಯಿಂದ ಒಳ್ಳೆಯ ಜೀವನ ನಡೆಸುತ್ತಿದ್ದರು.

೨) ದೇವಸ್ಥಾನದಲ್ಲಿ ಕಸ ಗುಡಿಸುವುದು, ರಂಗೋಲಿ ಹಾಕುವುದು, ಹೂ ಕಟ್ಟುವುದು ಇತ್ಯಾದಿ ದೇವಸ್ಥಾನದ ಸೇವೆ ಕಾರ್ಯಗಳನ್ನು ಮಾಡುವ ಸ್ತ್ರೀಯರದು ಇನ್ನೊಂದು ವರ್ಗ. ಇವರು ಸ್ವಲ್ಪ ಕೆಳವರ್ಗದವರು. ಇವನ್ನು ‘ಭಾವಿಣಿ’ ಎಂದು ಹೇಳುತ್ತಿದ್ದರು. ರತ್ನಗಿರಿ, ಸಾವಂತವಾಡಿ, ಗೋಮಂತಕ ಪ್ರದೇಶಗಳಲ್ಲಿ ಇವರು ವಿಶೇಷವಾಗಿ ನೆಲೆಸಿದ್ದರು. ಇವರು ವೇಶ್ಯಾವೃತ್ತಿಯಿಂದಲೇ ಜೀವನ ಸಾಗಿಸುತ್ತಿದ್ದರು. ಇವರನ್ನು ದೇವರಿಗೆ ಅರ್ಪಿಸುವಲ್ಲಿ, ಒಂದು ಹೆಣ್ಣಿಗೆ ಗಂಡು ವೇಷಧರಿಸಿ ಆಕೆಯೊಂದಿಗೆ ಇವಳನ್ನು ಮದುವೆ ಮಾಡುತ್ತಿದ್ದರು. ಈ ‘ಶೇನ್ಸ್ ವಿಧಿ’ ನಡೆದ ನಂತರ ಆಕೆ ದೇವದಾಸಿಯಾಗಿ ಪುರುಷ ಸಂಬಂಧ ಹೊಂದಲು ಪರವಾನಿಗೆ ಪಡೆದಂತೆ. ಆದರೆ ನಮ್ಮ ಸ್ಮೃತಿ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಈ ಬಗ್ಗೆ ಉಲ್ಲೇಖವಿಲ್ಲವಾದ್ದರಿಂದ ಇದು ಧರ್ಮಸಮ್ಮತವಲ್ಲ. ಕೇವಲ ಪರಂಪರಾನುಗತ ಆಚಾರವಷ್ಟೆ.

ದೇವದಾಸಿಯರಿಗೆ ಸಮಾಜದಲ್ಲಿ ಗಣ್ಯಸ್ಥಾನವಿತ್ತು. ಸಾವಿಲ್ಲದ ದೇವರನ್ನು ಮದುವೆಯಾದ ಇವರು ವಿಧವೆಯರಾಗುವುದು ಸಾಧ್ಯವೆ ಇಲ್ಲ. ಹೀಗೆ ನಿತ್ಯ ಸುಮಂಗಲಿಯರೆನಿಸಿಕೊಂಡ ಇವರು ಬಾರದೆ ಯಾವುದೇ ಮಂಗಳಕಾರ್ಯ ಜರಗುತ್ತಿರಲಿಲ್ಲ. ಅರಸು ಮನೆತನದ ಮದುವೆಗಳಲ್ಲಿ ‘ನಾಗೋಲಿ’ ತಾಳಿಯು ಇವರಿಂದಲೇ ಕಟ್ಟಲ್ಪಡುತ್ತಿತ್ತು. ಹೀಗೆ ಸಾಮಾಜಿಕ ಅಂತಸ್ತನ್ನು ಪಡೆದ ದೇವದಾಸಿಯರು ಕ್ರಮೇಣ ಸ್ಥಾನಪಲ್ಲಟಗೊಂಡರು. ೧೯ನೇ ಶತಮಾನದ ಅಂತ್ಯದವರೆಗೂ ದೇವಾಲಯಗಳಲ್ಲಿ ನರ್ತನ ಜರಗುತ್ತಿತ್ತು. ಅನಂತರ ದೈವಿಕ ಆವರಣದಲ್ಲೇ ಜನ್ಮತಳೆದ ಈ ನೃತ್ಯಕಲೆ ಹಾಗೂ ದೇವದಾಸಿಯರು ಅವನತಿಯ ಹಾದಿ ಹಿಡಿದರು. ಇದಕ್ಕೆ ಆ ಸಂದರ್ಭದಲ್ಲಾದ ಸಾಮಾಜಿಕ ಬದಲಾವಣೆ ಮುಖ್ಯ ಪ್ರೇರಣೆಯಾಯಿತು. ಮುಸ್ಲೀಂ ಆಳ್ವಿಕೆಯಲ್ಲಿ ದೇವಸ್ಥಾನಗಳನ್ನು ನಾಶಪಡಿಸಿದರು. ಅಲ್ಲಿ ಆಶ್ರಯ ಪಡೆದ ದಾಸಿಯರ ಮೇಲೆ ಆಕ್ರಮಣ ನಡೆಸಿದರು. ಹೀಗಾಗಿ ನತದೃಷ್ಟ ಹೆಣ್ಣುಗಳು ಅನಿವಾರ್ಯವಾಗಿ ವೇಶ್ಯಾಗೃಹಕ್ಕೆ ಸೇರುವಂತಾಗಿರಬಹುದು. ಹೀಗೆ ದೇವದಾಸಿ ಪದ್ಧತಿ ಅಳಿದು ಅದು ವಿಕೃತರೂಪ ಪಡೆದುಕೊಳ್ಳುವಲ್ಲಿ ಮುಸ್ಲೀಂ ಆಳ್ವಿಕೆ ಪ್ರಬಲ ಪ್ರೇರಣೆಯಾಯಿತು.

ಬ್ರಿಟಿಷರ ಆಗಮನದಿಂದ ದೇವಾಲಯದಲ್ಲಿನ ದೇವದಾಸಿಯರ ನೃತ್ಯ ನಿಷೇಧವಾಯಿತು. ಸರ್ಕಾರ ಅವರಿಗೆ ನೀಡಿದ ಸೌಲತ್ತುಗಳನ್ನು ಇವರು ಕಿತ್ತುಹಾಕಿದರು. ಹೀಗೆ ಬದುಕು ದಾರುಣವಾದಾಗ ಜೀವನೋಪಾಯಕ್ಕೆ ವೇಶ್ಯಾವೃತ್ತಿಯನ್ನೊಳಗೊಂಡಂತೆ ಬೇರೆ ಬೇರೆ ಮಾರ್ಗ ಅನುಸರಿಸಬೇಕಾಯಿತು.

ಧಾರ್ಮಿಕ ಶ್ರದ್ಧೆಯಿಂದ ಈ ‘ದೇವದಾಸಿ ಪದ್ಧತಿ’ಯ ಉಗಮವಾಗಿದೆ ಎಂಬುದು ಸ್ಪಷ್ಟ. ಇದಕ್ಕೆ ನಮ್ಮ ಸಾಹಿತ್ಯ ವಲಯದಲ್ಲೂ ಸಾಕಷ್ಟು ಪುರಾವೆಗಳಿವೆ. ದೇವರ ಸೇವೆ ಮಾಡಿ ಜೀವನ ನಡೆಸಿದರೆ ಪುಣ್ಯ ಲಾಭವಾಗುತ್ತದೆ. ದೇಹ ಸಾರ್ಥಕವಾಗುತ್ತದೆ ಎಂಬ ಭಾವನೆ ಆರಂಭಕಾಲದ ಜನರಲ್ಲಿತ್ತು. ಲಿಬಿಯಾ, ಈಜಿಪ್ಟ್, ಆಫ್ರಿಕ ಎಲ್ಲ ಕಡೆಯೂ ಇಂತಹ ನಿದರ್ಶನಗಳಿವೆ. ಈ ವಿಚಾರಗಳ ಬಗ್ಗೆ ಚಿಂತಿಸಿದ ಸರ್ ಫ್ರೇಜರ್ ಎಂಬಾತ” ಈ ವಿಧವಾದ ಪರಿಸ್ಥಿತಿಯು ಏಶಿಯಾ ದೇಶದಲ್ಲಿ ಹಲವಾರು ಕಡೆ ಕಂಡುಬರುತ್ತದೆ. ಅಭಿಪ್ರಾಯ ಏನೇ ಇದ್ದರು ಈ ಲೈಂಗಿಕ ಚಟುವಟಿಕೆಗಳು ವಿಷಯ ಲೋಲುಪತೆಯಿಂದ ಮಾಡಿದ ಕೆಲಸಗಳಲ್ಲ. ಮಹಾಮಾತೆಯ ಸೇವೆಯಲ್ಲಿ ಮಾಡಬೇಕಾದ ವಿದಾಯಕಗಳು. ಕೇವಲ ಶ್ರದ್ಧೆಯಿಂದ ಮಾಡಿದ ಕೆಲಸವೆ ಹೊರತು ಬೇರೆ ಅಲ್ಲ” (ಧರ್ಮರಾವ್‌, ಅದೇ) ಎನ್ನುತ್ತಾರೆ. ಜನರ ಈ ಒಂದು ದೈವಿಕ ನಂಬಿಕೆ, ಶ್ರದ್ಧೆಯೇ ದೇವದಾಸಿಯರು ಹುಟ್ಟಿಕೊಳ್ಳಲು ಕಾರಣವಾಯಿತು. ಅನಂತರದಲ್ಲಿ ದೇವರಿಗೂ, ಭಕ್ತರಿಗೂ ಮಧ್ಯವರ್ತಿಯಾಗಿ ಪೂಜಾರಿಯ ಆಗಮನವಾದಾಗ ದೇವರಿಗೆ ಅರ್ಪಿಸುವ ಸಕಲ ಪೂಜೋಪಚಾರಗಳು ಪೂಜಾರಿಗೆ ಸ್ವೀಕೃತವಾಗಬೇಕು, ಆ ಮೂಲಕ ದೇವರಿಗೆ ತಲುಪಬೇಕು ಎಂಬ ಭಾವನೆ ಬಂದು, ದೇವರಿಗೆ ಅರ್ಪಿಸಿದ ಹೆಣ್ಣು, ದೇವರ ಪ್ರತಿರೂಪವೆಂದು ಭಾವಿಸಿದ ಪೂಜಾರಿಯ ಅನುಭೋಗಕ್ಕೆ ಮೀಸಲಾದಳು. ಈ ಸಂದರ್ಭದಲ್ಲಿ ಹಣ ಪ್ರಾಮುಖ್ಯತೆ ಪಡೆದುಕೊಂಡಿತು. ಹೀಗಾಗಿ ಹುಡುಗಿಯರು ನರ್ತಕಿಯರು ಪೂಜಾರಿಗಳ ದಾಸಿಯರಾದರು. ದೇವರು ಪೂಜಾರಿಗಳ ನಂತರ ಮೂರನೆ ಹಂತದಲ್ಲಿ ರಾಜರ ಹಾಗೂ ಸರದಾರರ ಪ್ರಭಾವವನ್ನು ಕಾಣಬಹುದು. ಅವರ ಆಶ್ರಯ, ಪ್ರೋತ್ಸಾಹಗಳಿಂದ ಈ ಪದ್ಧತಿಯ ಪ್ರಸಾರ ಅಧಿಕವಾಯಿತು. ಅಂಧಶ್ರದ್ಧೆಗೆ ಬಲಿಯಾದ ಈ ಮುಗ್ಧೆಯರು ಸರದಾರರ, ಜಹಗೀರದಾರರ, ಪೂಜಾರಿಗಳ ಮತ್ತು ಯಾಂತ್ರಿಕರ ವಿಷಯವಾಸನೆ ತೃಪ್ತಿಪಡಿಸುವ ಸಾಧನ ಎಂಬುದೇ ಕಡ್ಡಾಯವಾದಂತಾಯಿತು. ಹೀಗೆ ಹಂತ ಹಂತವಾಗಿ ಹೆಣ್ಣು ಶೋಷಣೆಗೆ ಒಳಗಾದಳು. ದೇವತೆಯ ಆರಾಧನೆ ಜೊತೆ ವೇಶ್ಯಾವೃತ್ತಿ ಆರಂಭವಾಯಿತು. ಹೀಗೆ ಧಾರ್ಮಿಕತೆಯ ಜೊತೆ ಹಣ ಸಂಪಾದನೆ ಮುಖ್ಯವಾಯಿತು. ಕಾಲಕ್ರಮೇಣ ಸಾಮಾಜಿಕ ಬೆಳವಣಿಗೆಯ ಹಂತದಲ್ಲಿ ಈ ಧಾರ್ಮಿಕ ಸಂಬಂಧ ಸಂಪೂರ್ಣ ಕಡಿದು ಹೋಗಿ ವೇಶ್ಯಾಗೃಹಗಳು ಜನ್ಮ ತಳೆದಿರಬೇಕು.

ಮೇಲೆ ವಿವರಿಸಿದ ದೇವದಾಸಿಯರು ಈ ಹೆಸರಿನಿಂದಲೇ ಗುರುತಿಸಲ್ಪಟ್ಟು ಸಮಾಜದಲ್ಲಿ ಶ್ರೇಷ್ಠತೆ ಹೊಂದಿದ್ದರು. ದೊಡ್ಡ ದೇವಾಲಯ, ರಾಜಾಸ್ಥಾನಗಳು ಅವರ ಆಶ್ರಯಸ್ಥಾನವಾಗಿದ್ದವು. ಆದರೆ ಇವರ ವೈಯಕ್ತಿಕ ಬದುಕಿನ ಬಗೆಗೆ ಹೆಚ್ಚಿನ ವಿವರಗಳು ಇಂದು ಲಭ್ಯವಾಗುವುದಿಲ್ಲ. ಆ ವರ್ಗಕದಕೆ ಸಂಬಂಧಿಸಿದವರಿದ್ದರೂ, ಇಂದು ಅವರಿಗಿದ್ದ ‘ಸಾಮಾಜಿಕ ಮನ್ನಣೆ’ಯಿಂದ ಅವರು ಆ ಹೆಸರಿನಿಂದ ಗುರುತಿಸಿಕೊಳ್ಳಲು ಇಚ್ಛಿಸುವುದಿಲ್ಲ. ದೇವದಾಸಿಯರು ಗಾಂಧರ್ವ ವಿಧಿಯಿಂದ ವಿವಾಹವಾಗುತ್ತಿದ್ದುದಾಗಿ ತಿಳಿದು ಬರುತ್ತದೆ. ಹೀಗೆ ವೃತ್ತಿ ಪ್ರಧಾನವಾಗಿ ಹುಟ್ಟಿ ಬೆಳೆದ ಒಂದು ಪ್ರಬಲ ಪರಂಪರೆ ಇಂದು ಮೂಲೆಗುಂಪಾಗಿದೆ.

ದೇವರ ಸೇವೆಗಾಗಿ ನೇಮಕಗೊಂಡ ದೇವದಾಸಿಯರದು ಒಂದು ವರ್ಗವಾದರೆ ದೇವರಿಗೆ ಅರ್ಪಿತರಾದಂತಹ ದೇವದಾಸಿಯರದು ಇನ್ನೊಂದು ವರ್ಗ. ಇವರನ್ನು ಜೋಗತಿ, ಬಸವಿ, ಸೂಳೆ, ದಾಸಿ, ಗುಡ್ತಿ ಎಂಬ ನಾಮಾಂಕಿತದಿಂದಲೇ ನಿರ್ದೇಶಿಸುತ್ತಾರೆ. ಇವರಿಗೆ ದೇವರೆ ಗಂಡ. ಇವರು ಕರ್ನಾಟಕದ ಎಲ್ಲ ಭಾಗಗಳಲ್ಲೂ ಕಂಡು ಬರುತ್ತಾರೆ. ದುರ್ಗಮ್ಮ, ಮಂಟೆಸ್ವಾಮಿ, ಬಿಳಿಗಿರಿರಂಗ, ನಂಜುಂಡೇಶ್ವರ, ಹೀಗೆ ಹತ್ತಾರು ದೇವರಿಗೆ ಬಸವಿ ಬಿಡುವ ಪದ್ಧತಿ ಇದೆ. ಎಲ್ಲಮ್ಮನ ಭಕ್ತರನ್ನು ಜೋಗತಿ ಎಂದರೆ, ವಿಷ್ಣುಭಕ್ತರಿಗೆ ದಾಸಿ ಎಂದೂ, ಶಿವಭಕ್ತರಿಗೆ ‘ಗುಡ್ತಿ’ ಎಂದೂ ಕರೆಯುತ್ತಾರೆ.

ಈ ಅರ್ಪಣ ಭಾವದ ಕಲ್ಪನೆ ನಮ್ಮಲ್ಲಿ ಏಕೆ ಹುಟ್ಟಿಕೊಂಡಿತೆಂಬುದು ಮುಖ್ಯ. ಕರ್ನಾಟಕದ ಅಕ್ಕಮಹಾದೇವಿ, ತಮಿಳುನಾಡಿನ ಆವೈಯಾರ್ ಇವರೆಲ್ಲ ದೇವರಿಗೆ ಅರ್ಪಿಸಿಕೊಂಡವರೆ. ‘ಲೋಕದ ಸಾವ ಕೆಡುವ ಗಂಡರನೊಯ್ದು ಒಲೆಯೊಳಗಿಕ್ಕು, ಚೆನ್ನಮಲ್ಲಿಕಾರ್ಜುನನೇ ನನ್ ಪತಿಯಾಗಬೇಕೆಂದು ಹಲಕಾಲ ತಪಸಿದ್ದೆ ನೋಡಾ’ ಎನ್ನುತ್ತಾಳೆ ಅಕ್ಕಮಹಾದೇವಿ. ಭಕ್ತಿಭಾವಗಳಲ್ಲಿ ಸತಿಪತಿ ಭಾವವೇ ಶ್ರೇಷ್ಠ ಎಂಬ ತತ್ವ, ಈ ರೀತಿ ಅಸ್ತಿತ್ವವಿಲ್ಲದ, ವಾಸ್ತವ ನೆಲೆಯಿಂದ ದೂರಾದ ದೇವರನ್ನು ಗಂಡ ಎಂದು ಕರೆದುಕೊಳ್ಳಲು ಕಾರಣವಾಯಿತು. ಅಕ್ಕ. ಮೀರಾಬಾಯಿ ಇವರೆಲ್ಲ ಪಾರಮಾರ್ಥಕ್ಕೆ ಒಲಿದವರು. ದೈಹಿಕ ಕಾಮನೆಗಳನ್ನು ಮೀರಿ ವೈರಾಗ್ಯಭಾವದಿಂದ ದೇವರನ್ನೇ ಗಂಡನೆಂದು ನೆಚ್ಚಿಕೊಂಡವರು. ಇವರ ಈ ಅರ್ಪಣಭಾವದ ಆಶಯವನ್ನು ನಾವಿಂದು ಕಾಳಜಿ ವಹಿಸಿರುವ ದೇವದಾಸಿ ಪದ್ಧತಿಯಲ್ಲೂ ಗುರುತಿಸುತ್ತೇವೆ. ಅಂದರೆ ದೇವರಿಗೆ ಅರ್ಪಿಸಿಕೊಳ್ಳುವ ಕ್ರಿಯೆ ಇಂದಿನದಲ್ಲ. ಸು. ೭ನೇ ಶತಮಾನದಲ್ಲಿಯೇ ತಮಿಳುನಾಡಿನಲ್ಲಿ ಆಂಡಾಳ್‌ ಕಾಣಿಸಿಕೊಳ್ಳುತ್ತಾರೆ. ಇವರೆಲ್ಲರ ಮಾರ್ಗ ಮುಂದಿನವರಿಂದ ಅನುಕರಣೆಯಾಗಿರಲು ಸಾಧ್ಯ. ಕಾಲಚಕ್ರದಲ್ಲಿ ಭಿನ್ನರೂಪಕ್ಕೆ ಎಡೆ ಕೊಟ್ಟಿರಲೂ ಬಹುದು. ದೇವರನ್ನೇ ಗಂಡನೆಂದು ನಂಬಿಕೊಂಡ ಹೆಣ್ಣು ತನ್ನ ದೈಹಿಕ ತೃಪ್ತಿಗಾಗಿ ಪರಪುರುಷನ ಸಂಗ ಮಾಡಿರುವುದು ಸಹಜ. ಹೀಗೆ ಯಾವುದೇ ಒಂದು ಆಚರಣೆಯ ಹುಟ್ಟಿನ ಆಶಯ ಸದುದ್ದೇಶ ಹೊಂದಿದ್ದರೂ, ನಾಗರಿಕತೆಯ ಬೆಳವಣಿಗೆಯಲ್ಲಿ ಅದು ಪಡೆದುಕೊಳ್ಳುವ ರೂಪ ಬೇರಾಗುತ್ತದೆ. ಜೊತೆಗೆ ನಮ್ಮಲ್ಲಿ ಭಕ್ತಿಯ ಸ್ವರೂಪ, ಆಚರಣೆಗಳೂ ವರ್ಗಾವಲಂಬಿಯಾಗಿರುವುದು ಗಮನಾರ್ಹ ಅಂಶ.

ಮಾನವ ಸಂಸ್ಕೃತಿಯ ಮೊದಲ ಹಂತದಲ್ಲಿ ನೈಸರ್ಗಿಕ ವೈಚಿತ್ಯ್ರಗಳಿಗೆ ಬೆರಗಾಗಿ ಶಕ್ತಿದೇವತೆಯ ಆರಾಧನೆಗೆ ಆರಂಭಿಸಿ ಗ್ರಾಮ್ಯ ದೇವತೆಗಳನ್ನು ಸೃಷ್ಟಿಸಿಕೊಂಡ. ಅನೇಕ ಸಾಂಕ್ರಾಮಿಕ ರೋಗಗಳಿಗೆ, ಗ್ರಾಮದ ಸಕಲ ಚರಾಚರ ವಸ್ತುಗಳ ರಕ್ಷಣೆಗಾಗಿ ದೇವತೆಗೆ ಬಲಿಕೊಡುವ, ಕೆಂಡ ಹಾಯುವ, ಬೆತ್ತಲೆ ಸೇವೆ ನಡೆಸುವ, ಬಸವಿ ಬಿಡುವ ಪದ್ಧತಿಗಳನ್ನು ಹುಟ್ಟುಹಾಕಿಕೊಂಡ. ಧರ್ಮದ ಹೆಸರಿನಲ್ಲಿ ಮುಗ್ಧೆಯರನ್ನು ಸೂಳೆಯರನ್ನಾಗಿಸುವ ಕಂದಾಚಾರದ ಹಬ್ಬಗಳು ಹಲವು ನಮ್ಮಲ್ಲಿವೆ. ಇವೆಲ್ಲವೂ ನಾವಿಂದು ಗುರುತಿಸುವ ಅಶಿಷ್ಟ, ಅವಿದ್ಯಾವಂತ ವರ್ಗದಲ್ಲಿ ಹೆಚ್ಚಾಗಿ ಸ್ಥಾನ ಪಡೆದವು. ಇದು ಸಹಜ.

ಇಲ್ಲಿ ಕರ್ನಾಟಕದಲ್ಲಿ ಕಂಡುಬರುವ ಕುಮಾರರಾಮನ ಹೆಸರಿನ ಸೂಳೆ, ಬಸವಿ. ಎಲ್ಲಮ್ಮ ಸಂಪ್ರದಾಯದ ಜೋಗತಿ, ಇವರನ್ನು ಮುಖ್ಯವಾಗಿ ಗಮನಿಸಬಹುದು. ಇವರ ಹುಟ್ಟು ಧಾರ್ಮಿಕ ಸಂಬಂಧವೇ ಆದರೂ ಸಾಮಾಜಿಕ, ಆರ್ಥಿಕ ಕಾರಣಗಳೂ ಇವರ ಮೇಲೆ ಪ್ರಬಲ ಪರಿಣಾಮ ಬೀರಿರುವುದು ಮುಖ್ಯ.

ಕುಮಾರರಾಮನ ಹೆಸರಿನ ಮೇಲೆ ಹೆಣ್ಣನ್ನು ಅರ್ಪಿಸುವಂತಹ ಪದ್ಧತಿ ಡೊಂಬರಲ್ಲಿ ಚಾಲ್ತಿಯಲ್ಲಿದೆ. ಇವರು ಶಿವಮೊಗ್ಗ ಜಿಲ್ಲೆಯಲ್ಲಿ ವಿಶೇಷವಾಗಿದ್ದು ಇಂದಿಗೂ ಅಲ್ಲಿ ಕುಮಾರರಾಮನಿಗೆ ಬಿಟ್ಟ ಸೂಳೆಯರಿದ್ದಾರೆ. ಇವರು ದೇವದಾಸಿಯರಾಗಲು ಆದಂತಹ ಪ್ರೇರಣೆ ಏನು? ಎಂಬ ಪ್ರಶ್ನೆಗೆ ಅವರು ನೀಡುವ ಕಾರಣ ಧಾರ್ಮಿಕ ಸಂಬಂಧದ್ದಾದರೂ, ಕುತೂಹಲಕಾರಿಯಾದದ್ದು. ಇಂದಿಗೂ ಡೊಂಬರ ಹಬ್ಬದಲ್ಲಿನ ಹಲವು ಆಚರಣೆಗಳು ಅವರು ಹೇಳುವ ‘ಕತೆ’ಗೆ ಸಂಗತವಾಗಿವೆ. ಐತಿಹಾಸಿಕ ವ್ಯಕ್ತಿಯಾದ ಕುಮಾರರಾಮ ಧಾರ್ಮಿಕ ಸ್ವರೂಪ ಹೊಂದಿರುವುದು ಗಮನಾರ್ಹ. ಕುಮಾರರಾಮನ ತಂದೆ ಕಂಪಿಲರಾಜ ಒಮ್ಮೆ ತಮಿಳುನಾಡಿಗೆ ದಂಡೆತ್ತಿ ಹೋದ ಸಂದರ್ಭದಲ್ಲಿ ಅಲ್ಲಿ ‘ಚೆನ್ನಮ್ಮಾಜಿ’ ಎಮಬ ಡೊಂಬರ ಹುಡುಗಿಯನ್ನು ನೋಡಿ ಮೆಚ್ಚಿದ. ಊರಿಗೆ ವಾಪಸಾದ ಬಳಿಕ ರಾಜಧರ್ಮದಂತೆ ಪಟ್ಟದಕತ್ತಿಗೆ ಧಾರೆ ಎರೆಸಿ ಹುಡುಗಿಯನ್ನು ಬರಮಾಡಿಕೊಂಡ. ಸುಂದರಿಯಾದ ಚೆನ್ನಮ್ಮಾಜಿಯನ್ನು ಯುವರಾಜನಾದ ಕುಮಾರರಾಮನಿಗೆ ವಿವಾಹ ಮಾಡದೆ, ತಾನೇ ಅಂತಃಪುರಕ್ಕೆ ಸೇರ್ಪಡೆ ಮಾಡಿಕೊಂಡ. ಆಕೆ ಮಾತ್ರ ದೈಹಿಕವಾಗಿ ಕಂಪಿಲನಿಗೆ ಅರ್ಪಿತಳಾದರೂ ಮನಸ್ಸು ರಾಮನನ್ನು ಬಯಸುತ್ತಿತ್ತು. ಇದಾವುದೂ ಅರಿಯದ ರಾಮ ನಿರ್ಲಿಪ್ತನಾಗಿದ್ದ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಒಮ್ಮೆ ರಾಮನ ಚೆಂಡು ಚಿಕ್ಕಮ್ಮನಾದ ಚೆನ್ನಮ್ಮಾಜಿ ಅಂತಃಪುರಕ್ಕೆ ಬೀಳಲು, ಅದನ್ನು ತರಲು ಬಂದ ರಾಮನನ್ನು ಚೆನ್ನಮ್ಮಾಜಿ ಬಯಸುತ್ತಾಳೆ. ಮಲತಾಯಿಯ ವರ್ತನೆಯಿಂದ ವಿಸ್ಮಿತನಾದ ರಾಮ ಆಕೆಗೆ ವಿವೇಕ ಹೇಳಿ ಅಲ್ಲಿಂದ ಪಾರಾಗುತ್ತಾನೆ. ಇದರಿಂದ ಸೇಡಿನ ಕಿಡಿಯಾದ ಚೆನ್ನಮ್ಮಾಜಿ ರಾಮನನ್ನು ಅಪರಾಧಿ ಸ್ಥಾನಕ್ಕೆ ಸೇರಿಸಿ ಶಿರಚ್ಛೇದಕ್ಕೆ ಕಾರಣಳಾಗುತ್ತಾಳೆ. ಶಿರಚ್ಛೇದವಾದ ಸಂದರ್ಭದಲ್ಲಿ ಆಕಾಶಕ್ಕೆ ನೆಗೆದ ರಾಮನ ರುಂಡ ಹೀಗೆಂದು ಶಾಪವಿಟ್ಟಿತಂತೆ “ಅನ್ಯಾಯವಾಗಿ ವೇಶ್ಯೆಯಂತೆ ವರ್ತಿಸಿ ನನ್ನನ್ನು ಶಿರಚ್ಛೇದ ಮಾಡಿದ ಫಲವಾಗಿ ನಿನ್ನ ವಂಶದವರೆಲ್ಲ ವೇಶ್ಯೆಯರಾಗಲಿ ಹಾಗೂ ವರ್ಷಕ್ಕೊಮ್ಮೆ ಸಾರ್ವಜನಿಕರ ಸಮಕ್ಷಮದಲ್ಲಿ ವೀರಗಾಸೆ ಹಾಕಿ ಸೆರಗು ತೆಗೆದು ನನ್ನ ಹೆಸರಿನ ಮೇಲೆ ಅವಮಾನಕ್ಕೆ ಒಳಗಾಗುತ್ತೀರಿ”. ಈ ಶಾಪದ ಫಲವೇ ದೇವದಾಸಿ ಪದ್ಧತಿಗೆ ಮೂಲವಾಯಿತೆಂದು ಅವರು ಹೇಳಿಕೊಳ್ಳುತ್ತಾರೆ. ಆತನ ತಲೆಯಿಂದ ಬಿದ್ದ ಒಂದೊಂದು ಹನಿ ರಕ್ತದಿಂದ ನಿರ್ಮಾಣಗೊಂಡ ಗ್ರಾಮಗಳು ‘ರತೆ’ ಎಂಬ ಹೆಸರಿನಿಂದ ಕರೆಯಲಾದುವು. ಒಂದೊಂದು ಗ್ರಾಮದಲ್ಲಿ ಒಂದೊಂದು ಮೂರ್ತಿ ಪ್ರತಿಷ್ಠಾಪನೆಗೊಂಡವು. ಚೆನ್ನಮ್ಮಾಜಿಯ ಎರಡು ಹೆಣ್ಣುಮಕ್ಕಳಿಂದ ಎರಡು ಡೊಂಬರ ವಂಶಗಳು ಬೆಳೆದು ಒಂದೊಂದು ಮನೆತನಕ್ಕೆ ೬೪ ರತೆಗಳು ಎಂದು ಶಿವಮೊಗ್ಗ ಜಿಲ್ಲೆಯಲ್ಲಿ ನೇಮಕವಾಯಿತಂತೆ. ಇದೊಂದು ಜಾನಪದ ಕತೆ. ಇಂದಿಗೂ ಶಿವಮೊಗ್ಗ ಜಿಲ್ಲೆಯಲ್ಲಿ ಯಾವ ಹುಡುಗಿಯಾದರೂ ವೇಶ್ಯಾವೃತ್ತಿಗಿಳಿದಿದ್ದರೆ, ಇಲ್ಲವೆ ತುಂಬ ಬೆಡಗಿಯಾಗಿದ್ದರೆ ಅವಳನ್ನು ‘ಡೊಂಬರ ಚೆನ್ನಿ’ ಎಂದೇ ನಿರ್ದೇಶಿಸಿ ಆಡಿಕೊಳ್ಳುವುದನ್ನು ಗಮನಿಸಬಹುದು. ಹಾಗೆಯೇ ‘ಮದಾನ್ತಿಕೆ’ ಎಂಬ ಒಂದು ಶಬ್ದವೂ ಚಾಲ್ತಿಯಲ್ಲಿದೆ. ದೇವರ ಉತ್ಸವದಲ್ಲಿ ದೇವರಿಗೆ ಬಿಟ್ಟ ವೇಶ್ಯೆಯರು ಬಂದು ನೃತ್ಯ ಮಾಡುವ ಕ್ರಿಯೆಗೆ ‘ಮದಾನ್ತಿಕೆ’ ಎನ್ನುತ್ತಿದ್ದು ಇಂದೂ ಅಹಂಭಾವದ ಹೆಣ್ಣು ಮಕ್ಕಳ ನಡವಳಿಕೆಯನ್ನು ಈ ಶಬ್ದದಿಂದಲೇ ನಿರ್ದೇಶಿಸುತ್ತಾರೆ.


[1]     A.S. Altekar – `The position of Women in Hindu Civilization