ಹೀಗೆ ಕುಮಾರರಾಮನ ಶಾಪದ ಫಲವಾಗಿ ಡೊಂಬರ ಮನೆತನದ ಹೆಣ್ಣು ಮಕ್ಕಳು ಸೂಳೆಯರಾಗಬೇಕಾಯಿತು. ಈ ಡೊಂಬರು ಮೂಲತಃ ಶೆಟ್ಟಿ ತೆಲಗರು ಎಂದು ಹೇಳಿ ಕೊಳ್ಳುತ್ತಾರೆ.

[1] ಇವರಲ್ಲಿ  ಡೊಳ್ಳಿಗೆ ವಿಶೇಷ ಪ್ರಾಶಸ್ತ್ಯವಿದ್ದು, ಪ್ರಾಯಕ್ಕೆ ಬಂದ ಹೆಣ್ಣನ್ನು ಅದಕ್ಕೆ ಧಾರೆ ಎರೆದು, ಗೆಜ್ಜೆ ಕಟ್ಟುತ್ತಾರೆ. ಅಮದೇ ಅವಳು ಸಭೆಯಲ್ಲಿ ಕುಣಿಯಬೇಕು. ಆ ದಿನವೇ  ಅವಳ ಪ್ರಸ್ಥವೆಂದು ಪರಿಗಣಿಸುತ್ತಾರೆ. ಊರಿನ ದೊಡ್ಡ ಕುಳವೆನಿಸಿಕೊಂಡ, ಹಣದ ಮದವೇರಿದ ವ್ಯಕ್ತಿ ಅಂದು ಆಕೆಯನ್ನು ಪಡೆಯಬಹುದು. ನಂತರ ಅವರಿಬ್ಬರ ನಿಷ್ಠೆಯ ಮೇಲೆ ಸಂಬಂಧದ ಅವಧಿ ನಿರ್ಧರಿತವಾಗುತ್ತದೆ. ಇಂದಿಗೂ ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು ೧೨ ಹಳ್ಳಿಗಳಲ್ಲಿ ಕುಮಾರರಾಮನ ಅಥವ ಡೊಂಬರ ಹಬ್ಬ ನಡೆಯುತ್ತದೆ. ಗ್ರಾಮದ ಒಡೆಯನೆನಿಸಿಕೊಂಡ ರಾಮನ ಹೆಸರಿನಲ್ಲಿ ಗ್ರಾಮದೇವತೆಯ ಹಬ್ಬ ನಡೆಯುತ್ತದೆ. ಅಲ್ಲಿ ಡೊಂಬರ ವೇಶ್ಯೆಯರು ಹಾಜರಿದ್ದು, ದೇವರ ಮುಂದೆ ನೃತ್ಯ ಮಾಡಿ ಹಾಡಿ ಹೊಗಳಿ ದೇವರ ಸೇವೆ ಸಲ್ಲಿಸಬೇಕೆಂಬ ನಿಯಮವಿದೆ. ಇವರ ಹೊರತಾಗಿ ಹಬ್ಬ ನಡೆಯದು. ಹೀಗೆ ಐತಿಹಾಸಿಕ ವ್ಯಕ್ತಿಯೊಬ್ಬ ಧಾರ್ಮಿಕ ವ್ಯಕ್ತಿಯಾಗಿ ಪ್ರಭಾವ ಬೀರಿರುವುದು ಮುಖ್ಯ. ಇದೆಲ್ಲ ಎಷ್ಟರಮಟ್ಟಿಗೆ ನಂಬಲರ್ಹ ಕಥೆಗಳೆನಿಸಿದರೂ, ಅವರು ನಡೆಸುವ ಆಚರಣೆಗಳನ್ನು ಗಮನಿಸಿದರೆ ಅವರು ಹೇಳುವ ಪ್ರೇರಣೆಗಳನ್ನು ಸುಲಭವಾಗಿ ತಳ್ಳಲಾಗದು. ಚೆನ್ನಮ್ಮಾಜಿ ಮಗನ ಮೇಲೆ ಮಾಡಿದ ಅಪರಾಧಕ್ಕೆ ಆಕೆಯನ್ನು ಶೂಲಕ್ಕೆ ಹಾಕಿದ್ದರಂತೆ. ಅದರ ಫಲವಾಗಿ ಹಿಂದೆ ಡೊಂಬರ ಹೆಣ್ಣನ್ನು ಶೂಲಕ್ಕೆ ಹಾಕುವ ಪದ್ಧತಿ ಇದ್ದು, ಇಂದು ಅದರ ಪ್ರತೀಕವಾಗಿ ಕೋಳಿಯನ್ನು ಶೂಲಕ್ಕೆ ಹಾಕುತ್ತಾರೆ. ಕಾಲಕ್ಕೆ ತಕ್ಕಂತೆ ಆಚರಣೆಗಳೂ ಸರಳೀಕೃತವಾಗುತ್ತವೆ. ಕುಮಾರ ರಾಮನ ಶಾಪದ ಫಲವಾಗಿ ಈ ಜನಾಂಗದಲ್ಲಿ ದೇವದಾಸಿ ಪದ್ಧತಿ ಒಂದಿದೆ ಎಂಬುದು ಧಾರ್ಮಿಕವಾದ ಒಂದು ಕಾರಣವಾದರೆ, ಸಾಮಾಜಿಕವಾಗಿ ನೋಡಿದರೆ ಈ ಡೊಂಬರು ಹಿಂದೆ ಅಲೆಮಾರಿಗಳಾಗಿ ಇದ್ದಂತವರು. ಇವರ ಕುಡಿತ, ಜೂಜು – ಮೋಜುಗಳಿಗೆ ಈ ಹೆಣ್ಣು ಮಕ್ಕಳನ್ನು ಬಲಿಯಾಗಿಸಿದರು. ಆರ್ಥಿಕ ಭದ್ರತೆ ಇಲ್ಲದೆ ಇರುವಾಗ ಹಣದಾಸೆಗೆ, ಶ್ರೀಮಂತರ ಚಟಕ್ಕೆ ಹೆಣ್ಣುಗಳನ್ನು ಮಾರಿದರು. ಇಲ್ಲಿಯೂ ಮೇಲ್ವರ್ಗ, ಕೆಳವರ್ಗವನ್ನು, ಗಂಡಸು-ಹೆಂಗಸನ್ನು ದುರುಪಯೋಗಪಡಿಸಿಕೊಂಡಿರುವುದು ಸ್ಪಷ್ಟವಿದೆಇಂದು ಈ ಪದ್ಧತಿ ಮಾಯವಾಗಿದೆ. ಆದರೆ ಅವರ ಪಳೆಯುಳಿಕೆ ಇದೆ. ಆರಂಭದಲ್ಲಿ ಎಲ್ಲ ಹೆಣ್ಣುಗಳೂ ರಾಮನಿಗೆ ಅರ್ಪಿತವಾದರೆ, ನಂತರದಲ್ಲಿ ಮನಗೊಂದು ಹೆಣ್ಣನ್ನು ಬಿಟ್ಟು ಉಳಿದವರನ್ನು ಮದುವೆ ಮಾಡಲು ಆರಂಭಿಸಿದರು. ಇಂದಿಗೂ ಇವರಲ್ಲಿ ಹೆಣ್ಣನ್ನು ಬಿಡದೇ ಹೋದರೆ ದೇವರಕಾರ್ಯ ಹೇಗೆ ಜರುಗುವುದೆಂದು ಪ್ರಶ್ನಿಸುವ ದೇವದಾಸಿ ಪದ್ಧತಿಯನ್ನು ಪ್ರೇರೇಪಿಸುವ ಜನರು ಇದ್ದಾರೆ. ಆದರೆ ವಿದ್ಯಾವಂತರು ಹೆಚ್ಚುತ್ತಿರುವ ಈ ವರ್ಗದಲ್ಲಿ ಇಂದು ಈ ಪದ್ಧತಿ ಸಂಪೂರ್ಣ ಮಾಯವಾಗಿದೆ. ಕಾನೂನಿಂದಾಗಿ ಹಾಗೂ ಆ ಕೃತ್ಯಕ್ಕೆ ಹೇಸಿ ಡೊಂಬರ ಸ್ತ್ರೀಯರು ಯಾವ ಜಾತಿಯ ಹುಡುಗನನ್ನಾದರೂ ಮದುವೆಯಾಗಲು ನಿರ್ಧರಿಸಿದ್ದಾರೆ. ಅಂತೂ ಒಂದು ಕಾಲಕ್ಕೆ ಅದು ಹುಟ್ಟಿ, ಬೆಳೆದು ವಿಜೃಂಭಿಸಲು ಕಾರಣವಾದ ಪ್ರೇರಣೆಗಳು ಇಲ್ಲಿ ಮುಖ್ಯ.

ಎರಡೆನಯದಾಗಿ ‘ಬಸವಿ’ ಬಿಡುವಂತಹ ಪದ್ಧತಿಯನ್ನು ಗಮನಿಸಬಹುದು. ಇವರ ಉಗಮವನ್ನು ನಿರ್ದಿಷ್ಟವಾಗಿ ಗುರುತಿಸಲು ಸಾಧ್ಯವಿಲ್ಲ. ಬಸವಿ ಬಿಡಲು ನಿರ್ದಿಷ್ಟ ದೇವರಿಲ್ಲ. ಊರಿನ ಯಾವುದೇ ಪ್ರಮುಖ ದೇವರಿಗೆ ಬಸವಿ ಬಿಡಬಹುದು. ಬ್ರಹ್ಮಚಾರಿಯಾದ ಹನುಮಂತನಿಗೂ ಬಸವಿಯರಿದ್ದಾರೆ! ತಿಕೋಟದ ಹನುಮಂತ, ಸಾಂಗ್ಲಿಯ ಹನುಮಂತ ದೇವರಿಗೆ ಬಸವಿ ಬಿಡುವ ಪದ್ಧತಿ ಇದೆ. ಮಾದೇಶ್ವರ, ನಂಜುಂಡೇಶ್ವರ, ರಂಗಸ್ವಾಮಿ, ಭೈರವ ಹೀಗೆ ಅನೇಕ ದೇವರಿಗೆ ‘ಬಸವ’ನನ್ನು ಬಿಡುವ ಪದ್ಧತಿ ನಮ್ಮಲ್ಲಿ ರೂಢಿಯಲ್ಲಿದೆ. ದೇವರ ಮುದ್ರೆ ಹೊತ್ತ ಬಸವನಿಗೆ ಸಂಪೂರ್ಣ ಸ್ವಾತಂತ್ಯ್ರವಿದೆ. ಬಸವಿಯರೂ ಈ ಹಿನ್ನೆಲೆಯಲ್ಲಿ ಕಂಡುಬರುತ್ತಾರೆ. ವಿಜಯನಗರದ ಅರಸರ ಕಾಲದಲ್ಲಿ ಭೋಯ ಜನರಲ್ಲಿ ಬಸವಿ ಸ್ತ್ರೀಯರನ್ನು ಬಿಡುವ ಪದ್ಧತಿ ಇದ್ದು, ಅವರು ಯುದ್ಧಗಳಲ್ಲಿ ಗಾಯಾಳುಗಳ ಆರೈಕೆ ಮಾಡುತ್ತಿದ್ದರಂತೆ. ೧೯ನೇ ಶತಮಾನದ ಅಂತ್ಯದಲ್ಲಿ ಬಸವಿಯರಾಗಲು ಪರವಾನಿಗೆ ಪಡೆಯಲು ಯೂರೋಪಿಯನ್‌ ಮೆಜೆಸ್ಟ್ರೇಟರಿಗೆ ಸಲ್ಲಿಸಿದ ಅರ್ಜಿಗಳಿಂದ ಹುಡುಗಿಯರು ಬಸವಿಯರಾಗಲು ಇದ್ದಂತಹ ಪ್ರೇರಣೆಗಳೇನು ಎಂಬುದನ್ನು ಗಮನಿಸಬಹುದು. ಈ ವಿಚಾರಗಳನ್ನು ಡಾ. ಕಡೆತೋಟದ (೧೯೮೩) ಅವರ ಪುಸ್ತಕದಿಂದ ಪ್ರಸ್ತಾಪಿಸಿದ್ದೇನೆ. ಕಾರಣಗಳು ಹೀಗಿವೆ: ೧೮ ವರ್ಷದ ನಾನು ಬಸವಿಯಾಗಬೇಕೆಂದು ಇಚ್ಛಿಸಿದ್ದೇನೆ. ನನ್ನ ಜಾತಿಯ ಪದ್ಧತಿಯ ಮೇರೆಗೆ ಗುರುಗಳಿಂದ ಮುದ್ರೆ ಹಾಕಿಸಿಕೊಳ್ಳಬೇಕೆಂದು ಇಚ್ಛಿಸುತ್ತೇನೆ. ಆದ್ದರಿಂದ ನನಗೆ ಮುದ್ರೆ ಹಾಕಿಸಿಕೊಂಡು ಬಸವಿಯಾಗಲು ಅಪ್ಪಣೆ ಕೊಡಬೇಕು. ಮತ್ತೊಬ್ಬಳು ಸ್ತ್ರೀಯು ತನ್ನ ೧೨ ಮತ್ತು ೧೫ ವರ್ಷದ ಹೆಣ್ಣು ಮಕ್ಕಳನ್ನು ಬಸವಿ ಮಾಡಲು ಈ ಕಾರಣ ನೀಡಿದ್ದಾಳೆ. ನನಗೆ ಗಂಡುಸಂತಾನವಿಲ್ಲದ್ದರಿಂದ ಇಬ್ಬರು ಹೆಣ್ಣುಮಕ್ಕಳಿಗೆ ದೇವಾಲಯದಲ್ಲಿ ತಾಳಿ ಕಟ್ಟಿಸಬೇಕೆಂದು ಇಚ್ಛಿಸಿದ್ದೇನೆ. ಇದು ನಮ್ಮ ಗುರುಗಳ ಅಪ್ಪಣೆಯ ಮೇರೆಗೆ ಮತ್ತು ಜಾತಿಯ ಪದ್ಧತಿಯ ಪ್ರಕಾರ ಇರುತ್ತದೆ. ಮತ್ತೊಂದು ಅರ್ಜಿಯಲ್ಲಿ ೧೭ ಮತ್ತು ೧೯ ವರ್ಷದ ಹುಡುಗಿಯರು ತಮ್ಮ ತಂದೆ ತಾಯಿಗಳು ಸತ್ತಿದ್ದಾರೆಂದೂ, ತಮ್ಮ ಮನೆತನದ ಹೆಸರು ಉಳಿಸಲು ತಾವು ಬಸವಿಯಾಗಬೇಕೆಂದು ಇಚ್ಛಿಸುವುದಕ್ಕೆ ಮತ್ತು ತಾಯಿಯ ಉದ್ಯೋಗವನ್ನು ಮುಂದುವರಿಸುವ ಪದ್ಧತಿಯನ್ನು ಆಚರಿಸಲು ಕೋರಿದರು. ಈ ಅಂಶಗಳನ್ನು ಗಮನಿಸಿದಾಗ ಪರಂಪರಾನುಗತವಾಗಿ ಬಂದಿದೆ. ಗಂಡು ಸಂತಾನವಿಲ್ಲದೆ ಇರುವಾಗ ಹೆಣ್ಣುಮಗಳನ್ನು ಬಸವಿಬಿಟ್ಟು ಆ ಮೂಲಕ ತಮ್ಮ ವಂಶವನ್ನು ಮುಂದುವರಿಸಿಕೊಳ್ಳುತ್ತಾರೆ. ಅಲ್ಲದೆ ಗಂಡು ಸಂತಾನವಿಲ್ಲದಾಗ ತಮ್ಮ ಆಸ್ತಿ ಬೇರೆಯವರ ಇಲ್ಲವೆ ಅಳಿಯನ ಪಾಲಾಗಬಾರದೆಂಬ ಉದ್ದೇಶದಿಂದ ದೇವರಿಗೆ ಬಸವಿ ಬಿಟ್ಟು ಮಗಳನ್ನೇ ಆಸ್ತಿಗೆ ಹಕ್ಕುದಾರಳನ್ನಾಗಿ ಮಾಡುತ್ತಾರೆ. ಇಲ್ಲಿ ಹೆತ್ತವರ ಸ್ವಾರ್ಥವೂ ಮುಖ್ಯ. ಗಂಡುಮಕ್ಕಳಿಲ್ಲದೆ ಇರುವಾಗ ಮುಪ್ಪಿನ ಆಶ್ರಯದ ಭಯ, ಸುಲಭವಾಗಿ ಹೆಣ್ಣುಮಕ್ಕಳಿಗೆ ಮಣಿಕಟ್ಟಿಸಲು ಪ್ರೇರೇಪಿಸಿದೆ. ಇಂದಿಗೂ ಕರ್ನಾಟಕದ ಹಲವೆಡೆ ಇದು ಕಂಡು ಬರುತ್ತದೆ. ಅದೂ ವಿಶೇಷವಾಗಿ ಹರಿಜನರಲ್ಲಿ. ಆದರೆ ಇವರು ವೇಶ್ಯಾವೃತ್ತಿಯನ್ನೇ ವಿಶೇಷವಾಗಿ ನಡೆಸುವುದಿಲ್ಲ. ಹುಡುಗಿ ಪ್ರಾಪ್ತ ವಯಸ್ಕಳಾದಾಗ ಯಾರಾದರೊಬ್ಬ ಆಕೆಯನ್ನು ಬಂದು ಕೂಡಿಕೊಳ್ಳಬಹುದು. ಈ ಬಗೆಗೆ ಹಲವರನ್ನು ನಾನು ಪ್ರಶ್ನಿಸಿದಾಗ ನಮ್ಮ ಮಗ ಬೇರೆ ಊರಿಗೆ ಹೋಗಿ ಬಸವಿಯರನ್ನು ಕೂಡಿಕೊಳ್ಳುವುದರಿಂದ, ನಾವು ಮಗಳನ್ನು ಬಸವಿ ಬಿಡುವುದು ಅನಿವಾರ್ಯವಾಗಿದೆ ಎಂದರು. ಹೀಗೆ ಇದು ಒಂದು ರೀತಿಯಲ್ಲಿ ಅನಿವಾರ್ಯವಾಗಿ ನಡೆದುಬಂದಿದೆ.

ಈ ಬಸವಿಯರು ಹರಕೆ ಅಥವಾ ವಂಶಾಭಿವೃದ್ಧಿಯ ಆಶಯದಿಂದ ದೇವರಿಗೆ ಅರ್ಪಿತರಾದವರು. ಮಕ್ಕಳಿಲ್ಲದೆ ಚಿಕ್ಕ ವಿಧವೆಯರನ್ನು ಬಸವಿ ಮಾಡಬಹುದಂತೆ. ಮಧ್ಯಯುಗದಲ್ಲಿ ಕರ್ನಾಟಕದಲ್ಲಿ ಯಾವುದೇ ಜಾತಿಯಲ್ಲಾಗಲಿ ಪ್ರತಿಯೊಂದು ಮನೆಯಿಂದ ಒಬ್ಬಳನ್ನು ದೇವರಿಗೆ ಅರ್ಪಿಸುತ್ತಿದ್ದರಂತೆ. ಅವಳಿಗೆ ದೇವರ ಖಡ್ಗದ ಜೊತೆ ವಿವಾಹ ಮಾಡಿದ ನಂತರ ಯಾರಾದರೂ ಉಚ್ಚ ಜಾತಿಯ ಪುರುಷನೊಡನೆ ಸಂಬಂಧ ಇಟ್ಟುಕೊಳ್ಳಲು ಸ್ವಾತಂತ್ಯ್ರ ಪಡೆಯುತ್ತಿದ್ದಳು. ಅವಳು ಅಖಂಡ ಸೌಭಾಗ್ಯವತಿಯಾದ್ದರಿಂದ ಕೆಲವು ಭಾಗಗಳಲ್ಲಿ ಅವಳ ಕೈನಲ್ಲಿ ಮಂಗಳಸೂತ್ರ, ತಾಳಿಯನ್ನು ತಯಾರಿಸುತ್ತಿದ್ದರು. ಬಸವಿಯರಿಗೆ ಯಾವುದೇ ದೇವತೆಯ ಶಾಪದ ಭಯವಾಗಲಿ, ದೇವರ ಕೈಂಕರ್ಯ ಕೈಗೊಳ್ಳಬೇಕೆಂಬ ನಿಶ್ಚಿತ ಉದ್ದೇಶವಾಗಲಿ ಕಂಡು ಬರುವುದಿಲ್ಲ. ಹರಕೆ, ವಂಶಾಭಿವೃದ್ಧಿ ಮುಖ್ಯ ಪ್ರೇರಣೆಯಾಗಿರುವುದರ ಜೊತೆಗೆ ಆರ್ಥಿಕ ಭದ್ರತೆಯು ಪ್ರಮುಖ ಕಾರಣವಾಗಿದೆ.

ಇಂದು ವಿಶೇಷವಾಗಿ ಗೋಚರಿಸುತ್ತಿದ್ದು ನಮ್ಮ ಮುಖ್ಯ ಕಾಳಜಿಯಾಗಿರುವುದು ಎಲ್ಲಮ್ಮ ಜೋಗತಿಯರ ಪರಂಪರೆ, ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದಲ್ಲಿ ಇವರು ಹೆಚ್ಚಾಗಿ ಕಂಡುಬರುತ್ತಾರೆ. ಸಾಮಾಜಿಕ ಪಿಡುಗೆನಿಸಿದ ಈ ಪದ್ಧತಿ, ಸುಧಾರಣೆಯಾಗದ ಹಂತಕ್ಕೆ ತನ್ನ ಪ್ರಭಾವವನ್ನು ಚಾಚಿಕೊಂಡಿದೆ. ಎಲ್ಲಮ್ಮ ಅಥವಾ ರೇಣುಕೆ ಎಂಬ ಪೌರಾಣಿಕ ಸ್ತ್ರೀಯ ಕಥೆಯನ್ನಾಧರಿಸಿದ ಈ ಜೋಗತಿ ಸಂಪ್ರದಾಯ ತಲೆತಲಾಂತರದಿಂದ ಬೆಳೆದು ಬಂದಿದ್ದು ಹಲವು ಐತಿಹಾಸಿಕ, ಪೌರಾಣಿಕ ಕಥೆಗಳನ್ನು ಒಳಗೊಂಡಿದೆ. ಅವುಗಳ ಬಗೆಗೆ ನಾನಿಲ್ಲಿ ವಿಚಾರ ಮಾಡುವುದು ಅಪ್ರಸ್ತುತವಾದರೂ, ಈ ಸಂಪ್ರದಾಯಕ್ಕಾದ ಪ್ರೇರಣೆಯ ದೃಷ್ಟಿಯಿಂದ ಪೌರಾಣಿಕ ಪ್ರಸಂಗವೊಂದನ್ನು ಗಮನಿಸುವುದು ಮುಖ್ಯ. ಏಕೆಂದರೆ ಇಂದು ಎಲ್ಲಮ್ಮನ ಭಕ್ತರನ್ನು ಕುರಿತು ಮುಗ್ಧೆಯೊಬ್ಬಳ ಬದುಕಿಗೆ ಅನ್ಯಾಯವೆಸಗುತ್ತೀರೆಂದು ಪ್ರಶ್ನಿಸಿದರೆ, ಅವರ ದೃಷ್ಟಿಯಲ್ಲಿ ಅದು ಅಪರಾಧವಲ್ಲ. ಧಾರ್ಮಿಕ ಕಾರ್ಯವೆನಿಸಿದೆ. ದೇವರ ಹೆಸರಿನಲ್ಲಿ ಇಂತಹ ಅನ್ಯಾಯ ಸರಿಯೆ? ಜೋಗತಿ ಬಿಡದಿದ್ದರೆ ಏನಾಗುತ್ತದೆ? ಎಂದು ಪ್ರಶ್ನಿಸಿದರೆ ಎಲ್ಲಮ್ಮ ಮುನಿಯುತ್ತಾಳೆಂದು ಹಾರಿಕೆ ಉತ್ತರ ಕೊಡುತ್ತಾರಷ್ಟೆ.

ಎಲ್ಲಮ್ಮನ ಕತೆಯೊಂದಿಗೆ ಹಲವು ೠಷಿ, ಮುನಿಗಳ ಹೆಸರು ಸೇರ್ಪಡೆಯಾಗಿದ್ದು, ದೇವದಾಸಿ ಸಂಪ್ರದಾಯಕ್ಕೆ ಎಲ್ಲಮ್ಮ ಮಾತ್ರ ಕಾರಣಳಲ್ಲ. ಪ್ರಸ್ತುತ ಸಂದರ್ಭದಲ್ಲಿ ಈ ಮಾತು ಹೆಚ್ಚು ಅರ್ಥಪೂರ್ಣ. ಎಲ್ಲಮ್ಮನನ್ನು ಎಲ್ಲ ಜಾತಿಯವರು ಆರಾಧಿಸಿದರೂ ಜೋಗ್ತಿ ಬಿಡುವ ಸಂಪ್ರದಾಯ ವಿಶೇಷವಾಗಿ ಕಂಡುಬರುವುದು ನಿಮ್ನವರ್ಗದವರಲ್ಲಿ ಮಾತ್ರ, ಎಂಬುದು ಗಮನಾರ್ಹ.  ಇದಕ್ಕೆ ಕಥೆಯ ಮೂಲದಲ್ಲೇ ಒಂದು ಸಿದ್ಧ ಆಧಾರವಿದೆ. ಪತಿವ್ರತೆಯಾದ ರೇಣುಕೆ ಪತಿಯೇ ಪರದೈವವೆಂದು ನಂಬಿದಳು. ಪಾತಿವ್ರತ್ಯದಿಂದ ಅರ್ಜಿಸಿದ ಶಕ್ತಿಯಲ್ಲೆ ಮರಳಿನಲ್ಲಿ ಮಡಕೆ ಮಾಡಿ, ಹಾವಿನ ಸಿಂಬೆ ಮಾಡಿ ದಿನನಿತ್ಯ ನದಿಯಿಂದ ಗಂಡನ ಪೂಜೆಗೆ ನೀರು ಒದಗಿಸುತ್ತಿದ್ದಳು. ಒಮ್ಮೆ ನೀರು ತರುವಾಗ ಗಂಧರ್ವನನ್ನು ಕಂಡ ಮನಸ್ಸು ಕೊಂಚ ಚಂಚಲಿತವಾಯಿತಂತೆ. ಅಷ್ಟೇ ಸಾಕು ಅವಳ ಪಾತಿವ್ರತ್ಯ ಭಂಗಕ್ಕೆ. ಮಡಕೆ ಒಡೆಯಿತು. ಜಮದಗ್ನಿಯ ದಿವ್ಯದೃಷ್ಟಿಗೆ ಇದು ಗೋಚರಿಸಿತು. ಮಾನಸಿಕ ವ್ಯಭಿಚಾರಿಣಿಯಾಗಿ ರೇಣುಕೆ ಮಗನಾದ ಪರಶುರಾಮನಿಂದ ಶಿರಚ್ಛೇದಕ್ಕೆ ಗುರಿಯಾಗುತ್ತಾಳೆ. ತಂದೆ ಆಜ್ಞೆ ಪಾಲಿಸಿ ಸುಪ್ರೀತನಾದ ಮಗ, ಪುನಃ ತಾಯಿಯನ್ನು ಉಳಿಸಿಕೊಡುವಂತೆ ವರ ಕೇಳುತ್ತಾನೆ. ಆಗ ಮಾಂಗ್‌ಬುಡಕಟ್ಟಿಗೆ ಸೇರಿದ ಹುಡುಗಿಯೊಬ್ಬಳ ತಲೆಯನ್ನು ತಂದು ರೇಣುಕೆಗೆ ಜೋಡಿಸಿದರಂತೆ. ಅಂದಿನಿಂದ ಮಾಂಗ್ ಬುಡಕಟ್ಟಿಗೆ ರೇಣುಕೆ ಕುಲದೇವತೆಯಾದಳು.  ಆ ಕುಲದ ಹೆಣ್ಣು ಮಕ್ಕಳನ್ನು ರೇಣುಕೆಯ ಮಗ ಪರಶುರಾಮನಿಗೆ ಅರ್ಪಿಸುವ ಪದ್ಧತಿ ಜಾರಿಗೆ ಬಂದಿತು. ರೇಣುಕೆಯಾದ ಈಕೆ ಎಲ್ಲರ ಅಮ್ಮನಾಗಿ ಎಲ್ಲಮ್ಮನಾದಳು. ಇಂತಹ ಒಂದು ದಂತಕಥೆ ದೇವದಾಸಿ ಪದ್ಧತಿಗಾದ ಪ್ರೇರಣೆಗೆ ಆಧಾರವಾಗಿದೆ. ಇಲ್ಲಿ ಪ್ರಸ್ತಾಪಿಸಿರುವ ಮಾಂಗ್‌ ಜನರು ಮಹಾರಾಷ್ಟ್ರದ ಪೂರ್ವ ಭಾಗದಲ್ಲಿ ಕಂಡುಬರುತ್ತಾರೆ. ಇವರು ಸಮಾಜದಲ್ಲಿ ತೀರಾ ಕೆಳವರ್ಗದವರೆಂದು ಪರಿಗಣಿಸಲ್ಪಟ್ಟವರು. ಆ ವರ್ಗದ ಹೆಣ್ಣು ಎಲ್ಲಮ್ಮನಿಗೆ ಪುರ್ನಜನ್ಮ ಕೊಟ್ಟಳೆಂಬುದು ಮುಖ್ಯ. ಕೆಳವರ್ಗದವರಲ್ಲಿ ಜೋಗತಿ ಪದ್ಧತಿ ಹೆಚ್ಚಾಗಿ ಕಂಡುಬರಲು ಕಥೆ ನೀಡುವ ಸಮಾಧಾನವಿದು.

ಎಲ್ಲಮ್ಮನಿಗೆ ‘‘ಜೋಗ್ತಿ’’ ಬಿಡುವ ಸಂಪ್ರದಾಯದ ಬಗ್ಗೆ ಸ್ಪಷ್ಟ ಆಧಾರಗಳಿಲ್ಲ. ಡೊಂಬರಲ್ಲಿ ಕುಮಾರರಾಮನ ಶಾಪ ಕಾರಣವೆನ್ನುತ್ತಾರೆ. ಅದರ ವಾಸ್ತವತೆ ಏನಾದರಿರಲಿ ಅಂತೂ ಇಂತಹ ಯಾವುದೇ ನಿರ್ದಿಷ್ಟ ಕಾರಣ, ಘಟನೆಗಳು ಜೋಗತಿಯರಲ್ಲಿ ಕಂಡುಬರುವುದಿಲ್ಲ. ಜೊತೆಗೆ ಎಲ್ಲಮ್ಮ ಎರಡು ರೀತಿಯಲ್ಲಿ ಆರಾಧನೆಗೊಳ್ಳುವುದು ಮುಖ್ಯ ಅಂಶ. ಕೆಲವರಿಗೆ ಎಲ್ಲಮ್ಮ ಕುಲದೇವತೆಯಾಗಿದ್ದು ಅವರಲ್ಲಿ ಈ ಜೋಗತಿ ಬಿಡುವ ಸಂಪ್ರದಾಯವಿಲ್ಲ.. ಹೀಗಿರುವಾಗ ನಿಮ್ನವರ್ಗದವರು ಆರಾಧನೆಗಷ್ಟೆ ಎಲ್ಲಮ್ಮನನ್ನು ಆಧರಿಸಿ, ಹೆಣ್ಣನ್ನು ಆಕೆಗೆ ಅರ್ಪಿಸುವ ಹಾಗೂ ಆ ಹೆಸರಿನಲ್ಲಿ ಧಾರ್ಮಿಕ ವೇಶ್ಯಾವೃತ್ತಿ ನಡೆಸುವ ಪ್ರವೃತ್ತಿ ಏಕಾಗಿ ಹುಟ್ಟಿಕೊಂಡಿತು ಎಂಬುದು ವಿಚಾರಣೀಯ. ಕೇವಲ ನಿಮ್ನವರ್ಗವಷ್ಟೆ ಈ ಸಂಪ್ರದಾಯಕ್ಕೆ ಬಲಿಯಾಗಿದೆ ಎಂಬ ಹಿನ್ನೆಲೆಯಲ್ಲಿ ಶತಮಾನಗಳಿಂದಲೂ ಸಾಮಾಜಿಕ ಪಾತ್ರ ನಿರ್ವಹಿಸುತ್ತಿರುವ ವರ್ಣವ್ಯವಸ್ಥೆ ಮುಖ್ಯವಾಗಿದೆ ಎಂಬುದು ಸ್ಪಷ್ಟ. ಎಲ್ಲಮ್ಮನ ಹೆಸರಿನಲ್ಲಿ ಹೆಣ್ಣಿನ ಬೇಟೆಯಾಡುವ ಸಂಗತಿ ಸಾಮಾನ್ಯವಾಗಿದೆ. ಬಡತನ, ಅನಕ್ಷರತೆ, ಅಜ್ಞಾನ, ನಿರುದ್ಯೋಗ, ದೇವರು, ಧರ್ಮ ಇವುಗಳ ಚಕ್ರದಲ್ಲಿ ಸಿಲುಕಿ ನಲಗುತ್ತಿರುವ ಹಲವಾರು ಕುಟುಂಬಗಳು ಅನಿವಾರ್ಯವಾಗಿ ಜೋಗತಿ ಸಂಪ್ರದಾಯಕ್ಕೆ ಕಟ್ಟುಬಿದ್ದಿವೆ. ಹೀಗಾಗಿ ಧಾರ್ಮಿಕತೆಯ ಜೊತೆ ಆರ್ಥಿಕ ಹಾಗೂ ಸಾಮಾಜಿಕ ಕಾರಣಗಳು ಈ ಪದ್ಧತಿಗೆ ಮುಖ್ಯ ಪ್ರೇರಣೆಯಾಗಿವೆ.

ಮೊದಲನೆಯದಾಗಿ ಧಾರ್ಮಿಕ ಶ್ರದ್ಧೆ, ಮೂಢನಂಬಿಕೆ ಜೋಗತಿ ಬಿಡಲು ಮುಖ್ಯ ಪ್ರೇರಣೆಯಾಗಿದೆ. ಏನೇ ಕಷ್ಟನಷ್ಟ ಸಂಭವಿಸಿದರು ಅವೆಲ್ಲಕ್ಕೂ ಎಲ್ಲಮ್ಮನೇ ಕಾರಣ. ಮಕ್ಕಳಾಗದೆ ಇರುವವರು, ರೋಗದಿಂದ ನರಳುವವರು, ದೇವರಿಗೆ ಹರಕೆ ಕೊಡುವುದು ನಮ್ಮ ಜಾಯಮಾನಕ್ಕೆ ಅಂಟಿಕೊಂಡದ್ದು. ಎಲ್ಲಮ್ಮನಿಗೆ ಜೋಗತಿ ಬಿಡುವುದೂ ಈ ಕಾರಣಕ್ಕಾಗಿಯೆ. ಕೆಲವರು ಅದು ತಮ್ಮ ಕುಲಕಸುಬೆಂದೇ ಭಾವಿಸಿದ್ದಾರೆ. ಇದರಿಂದ ಹೆಣ್ಣುಮಗು ಋತುಮತಿಯಾಗುವ ಮೊದಲೆ ೬. ೭ ವರ್ಷಕ್ಕೆ ಜೋಗತಿ ಪಟ್ಟ ಕಟ್ಟುತ್ತಾರೆ. ಒಳಿತು ಕೆಡುಕಿನ ಪರಿಜ್ಞಾನವಿಲ್ಲದ ಮುಗ್ಧೆಯನ್ನು ಧಾರ್ಮಿಕ ಭಯದಿಂದ ಬಂಧಿಸಿ ಈ ಕೂಪಕ್ಕೆ ತಳ್ಳುತ್ತಾರೆ. ಈ ಸಂಪ್ರದಾಯ ಬಿಟ್ಟರೆ ಎಲ್ಲಮ್ಮ ಶಾಪ ಕೊಡುತ್ತಾಳೆ ಎಂಬ ಭೀತಿ, ಭ್ರಾಂತಿಗಳು ಈ ಪದ್ಧತಿಯ ಮುಂದುವರಿಕೆಗೆ ಕಾರಣವಾಗಿವೆ. ಪ್ರಾಪ್ತ ವಯಸ್ಸಿಗೆ ಬಂದಾಗ ಯಾವ ಪುರುಷನೊಡನಾದರೂ ಸಂಬಂಧ ಪಡೆಯಬಹುದು. ಇಬ್ಬರ ನಿಷ್ಠೆಯ ಮೇಲೆ ಸಂಬಂಧ ನಿರ್ಧಾರವಾಗುತ್ತದೆ. ಏಕಪತಿತ್ವ ಹೊಂದಿ ಅಚ್ಚುಕಟ್ಟಿನ ಬಾಳು ನಡೆಸುವ ಹಲವು ಜೋಗತಿಯರನ್ನು ನಾನು ಗಮನಿಸಿದ್ದೇನೆ.

ಧಾರ್ಮಿಕ ಪಾವಿತ್ಯ್ರತೆ ಇಂದಿಗೂ ಈ ಸಂಪ್ರದಾಯದ ಮುಂದುವರಿಕೆಗೆ ಕಾರಣವಾಗಿದೆ. ಅಂದರೆ ಸಮಾಜ ಜೋಗತಿಗೆ ನೀಡುವ ಮನ್ನಣೆ ಮುಖ್ಯ. ಒಂದು ಹೆಣ್ಣು ಯಾವುದೇ ಕಾರಣದಿಂದ ಸಮಾಜದಲ್ಲಿ ಬಹಿಷ್ಕೃತಳಾದರೂ, ಆಕೆ ಜೋಗತಿಯಾಗುವುದರ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾಳೆ. ಈ ದೇವದಾಸಿಯರು ನಿತ್ಯಸುಮಂಗಲಿಯರು ಹಾಗೂ ಎಲ್ಲಮ್ಮನ ಪ್ರತಿರೂಪವೆಂದು ಪರಿಗಣಿಸಿ ಶುಭಸಮಾರಂಭಗಳಿಗೆ ಅವರನ್ನು ಕರೆಸಿ ಉಡುಗೆರೆ ನೀಡಿ ಸತ್ಕರಿಸುತ್ತಾರೆ. ಈ ಬಗೆಯ ಸಾಮಾಜಿಕ ಮನ್ನಣೆಯೂ ಈ ಪದ್ಧತಿಯ ಮುಂದುವರಿಕೆಗೆ ಕಾರಣವಾಗಿದೆ. ದೇವದಾಸಿಯಾದ ಹೆಣ್ಣು ತನ್ನ ಸುಖದ ಬಾಳನ್ನೆಲ್ಲ ಕಳೆದು ಮುಪ್ಪಾಗಿ ಹಳ್ಳಿಸೇರಿ, ಹೆಣ್ಣಿನ ಶೋಷಣೆಗೆ ಮುಂದಾಗುತ್ತಾಳೆ. ತನ್ನ ಜೀವಿತ ಕಾಲದಲ್ಲಿ ಒಂದು ಹೆಣ್ಣನ್ನಾದರೂ ದೇವದಾಸಿ ಮಾಡದೆ ಹೋದರೆ ಆಕೆಯ ಆತ್ಮ ನರಕವಾಸಿಯಾಗುತ್ತದೆ ಎಂಬ ನಂಬಿಕೆ ಇದಕ್ಕೆ ಪ್ರಬಲ ಕಾರಣವಾಗಿದೆ.ಜೊತೆಗೆ ಅವಳ ಆರ್ಥಿಕ ಭದ್ರತೆ. ಇದರಿಂದ ತಂದೆ, ತಾಯಿಗಳನ್ನು ಪ್ರೇರೇಪಿಸುತ್ತಾಳೆ. ಹೀಗೆ ಇದು ಅಳಿಸಲಾಗದ ಭೀಕರ ಸಮಸ್ಯೆಯ ವರ್ತುಲವಾಗಿದೆ. ಜೊತೆಗೆ ಸಮಾಜದಲ್ಲಿ ಅವಜ್ಞೆಗೊಳಗಾದ ಫಲವಾಗಿ ಕೆಳವರ್ಗ ಈ ಮಾರ್ಗ ತುಳಿದಿರಬಹುದು. ಇಂದು ಎಷ್ಟೋ ನಪುಂಸಕರು ‘‘ಜೋಗಯ್ಯ’’ ಎಂಬ ಹೆಸರಿನಿಂದ ಮನ್ನಣೆ ಪಡೆಯುತ್ತಿದ್ದಾರೆ. ಕಾರಣ ಸಮಾಜ ಅವರ ಬಗೆಗೆ ತಾಳಿದ ಧೋರಣೆ. ಹೀಗೆ ಮಾನಸಿಕ ಸ್ಥಿತಿಯೂ ಇಲ್ಲಿ ಮುಖ್ಯವಾಗುತ್ತದೆ.

ವೇಶ್ಯಾವೃತ್ತಿಗೆ ಬಡತನ ಪ್ರಮುಖ ಕಾರಣವೆಂಬುದು ಸಾಮಾನ್ಯ ನಂಬಿಕೆ. ಆರ್ಥಿಕ ಮುಗ್ಗಟ್ಟಿನ ಜೊತೆಗೆ ಇತರ ಪ್ರೇರಕ ಅಂಶಗಳು ದೇವದಾಸಿ ವೃತ್ತಿಗೆ ಪೂರಕ ಕಾರಣವಾಗಿವೆ. ಬಡತನ ಇಲ್ಲವೆ ಅನಾಥಸ್ಥಿತಿಯನ್ನೆ ದುರುಪಯೋಗಪಡಿಸಿಕೊಳ್ಳುವ ಸಮಾಜಘಾತಕರು ಹಲವರಿದ್ದಾರೆ. ಇಲ್ಲಿ ಅನ್ಯಮಾರ್ಗಗಳೂ ಇಲ್ಲ. ಕರ್ನಾಟಕದ ಈ ಪ್ರದೇಶದಲ್ಲಿ ಭೂಮಿ ಫಲವತ್ತಾಗಿಲ್ಲ. ಒಣ ಹಾಗೂ ಬಂಜರು. ಜೊತೆಗೆ ಕೈಗಾರಿಕೋದ್ಯಮಗಳೂ ಕಡಿಮೆ. ಜನರ ವಿದ್ಯಾಭ್ಯಾಸವೂ ಅತ್ಯಲ್ಪ. ಇಂತಹ ಪರಿಸ್ಥಿತಿಯಲ್ಲಿ, ಪ್ರದೇಶದಲ್ಲಿ ಬದುಕುವ ಮಾರ್ಗಗಳು ಕಡಿಮೆ. ಯಾವುದೇ ಉದ್ಯೋಗವಿಲ್ಲದ ಗಂಡಸರು ಸಹಜವಾಗಿಯೇ ತಮ್ಮ ಮನೆಯ ಹೆಣ್ಣುಗಳನ್ನು ಈ ಪದ್ಧತಿಗೆ ಪ್ರೇರೇಪಿಸುತ್ತಾರೆ. ಉತ್ತೇಜನ ನೀಡುತ್ತಾರೆ. ಸುಲಭದ ಹಣಗಳಿಕೆಗೆ ತಂದೆತಾಯಿಯರೂ ತಮ್ಮ ಮಕ್ಕಳನ್ನು ಅಂಗವಿಕಲನಿಗೆ ಮದುವೆ ಮಾಡಿ, ವಿಚ್ಛೇದನ ಪಡೆದು ಈ ಪದ್ಧತಿಗೆ ತೊಡಗಿಸುವ ಸಾಧ್ಯತೆಗಳೂ ಇವೆಯಂತೆ. ಹೀಗೆ ಹೆಣ್ಣನ್ನು ಈ ಪ್ರದೇಶದಲ್ಲಿ ಸಂಪಾದನೆಯ ಮುಖ್ಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ. ಶ್ರೀಮಂತರ, ಪುರೋಹಿತರ ಹಣದ ಬೆಳಕಿನಲ್ಲಿ ಬಹುಜನರ ಬದುಕು ಸಾಗುತ್ತಿದೆ.

ಎಲ್ಲಮ್ಮನ ಹೆಸರಿನಲ್ಲಿ ‘‘ಧಾರ್ಮಿಕ ವೇಶ್ಯಾವೃತ್ತಿ’’ ತಪ್ಪೆಂಬ ಭಾವನೆ ಅವರಲ್ಲಿಯೂ ಇದೆ. ಸರಜೂ ಕಾಟಕರರು ಭೇಟಿಯಾದ ಯಮುನವ್ವ ಹೀಗೆ ಹೇಳಿದ್ದಾಳೆ “ಹರಕೆ ಹೊತ್ತಿರುವುದು ಎಲ್ಲಮ್ಮನ ಸೇವೆ ಮಾಡುತ್ತೀವೆಂದು. ಎಲ್ಲಮ್ಮ ನಮಗೆ ಸೂಳೆಯಾಗೆಂದು ಎಂದೂ ಹೇಳಿಲ್ಲ. ಎಲ್ಲಮ್ಮನ ದೇವದಾಸಿಯರು ಸೂಳೆತನ ಮಾಡಿದರೆ ಅದು ಮಾಡುವವರ ಸೊಕ್ಕು” ಎನ್ನುತ್ತಾರೆ. ಅಂದರೆ ಈ ಸಂಪ್ರದಾಯದ ಹುಟ್ಟಿನ ಆಶಯ ಏನೇ ಇದ್ದರೂ ಇಂದು ಅನಿವಾರ್ಯತೆಯ ಅನುಕರಣೆಯಾಗಿ ಬೇರೆ ರೂಪ ಪಡೆದಿದೆ ಎಂಬುದು ಸ್ಪಷ್ಟ.

ದೇವದಾಸಿ ಸಂಪ್ರದಾಯ ಹಾಗೂ ವೇಶ್ಯಾವೃತ್ತಿ ಸಂಪೂರ್ಣ ಭಿನ್ನವೆಂದು ಅನೇಕರ ಅಭಿಪ್ರಾಯ. ಆದರೆ ಇಂದು ದೇವದಾಸಿಯರು ಧಾರ್ಮಿಕ ಸಂಪ್ರದಾಯದವರು ಹಾಗೂ ವೇಶ್ಯೆಯರು ಲೌಕಿಕ ಸಂಪ್ರದಾಯದವರಾಗಿದ್ದು ಹೆಚ್ಚುಕಡಿಮೆ ಸ್ವರೂಪ ಒಂದೇ ಬಗೆಯದಾಗಿದೆ. ದೇವದಾಸಿಯರು ಧಾರ್ಮಿಕ ಮುಸುಕಿನಿಂದ ವೇಶ್ಯಾವೃತ್ತಿ ನಡೆಸುತ್ತಾರಷ್ಟೆ. ದೇವರ ಹೆಸರಿನಲ್ಲಿ ವಂಚಿತರಾದ ಹೆಣ್ಣುಮಕ್ಕಳು ಪೂನಾ, ಮುಂಬಯಿಗೆ ನಿರಂತರವಾಗಿ ರವಾನೆಯಾಗುತ್ತಲೇ ಇದ್ದಾರೆ. ವಿರೋಧಿ ಕಾನೂನು ಜಾರಿಯಲ್ಲಿದ್ದರೂ ಸವದತ್ತಿಯಲ್ಲಿ ಜರಗುವ ಕ್ರಿಯೆ ಹಲವು ಮರಿಎಲ್ಲಮ್ಮ ಗುಡಿಗಳಲ್ಲಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಎಲ್ಲಮ್ಮನ ಗುಡಿಗಳ ಸಂಖ್ಯೆಯೂ ಹೆಚ್ಚಿದೆ. ಮುಂಬಯಿಯ ಬಣ್ಣದ ಬದುಕಿಗೆ ಮಾರುಹೋದ ವೇಶ್ಯೆಯರೇ ದೇವರ ನೆವದಲ್ಲಿ ಹೆಣ್ಣುಗಳ ಶೋಷಣೆ ಮಾಡುತ್ತಲಿದ್ದಾರೆ ಎಂಬುದು ಗಮನಾರ್ಹ. ವೇಶ್ಯಾವಾಟಿಕೆಯ ಬೇಡಿಕೆ ಹೆಚ್ಚಿದಂತೆ ಎಲ್ಲಮ್ಮನ ಬೇಡಿಕೆಯೂ ಹೆಚ್ಚುತ್ತದೆ. ಹೆಣ್ಣುಗಳಿಗೆ ಇದು ಅನೈತಿಕವೆನಿಸಿದರೂ, ಆರಾಮ ಬದುಕಿನ ಕಲ್ಪನೆ ಅವರನ್ನು ಭ್ರಮಾಧೀನನ್ನಾಗಿಸಿದೆ. ಯಾವುದೇ ಬೇಡಿಕೆಯ ಪೂರೈಕೆಗೆ ಒಂದು ವ್ಯವಸ್ಥೆ ತನಗೆ ತಾನೇ ರೂಪಗೊಳ್ಳುತ್ತದೆ. ಇದರಿಂದ ಮಧ್ಯಸ್ಥಗಾರರು ಈ ಪೂರೈಕೆಗೆ ಇಂತಹ ಸಂಪ್ರದಾಯಗಳನ್ನು ಇನ್ನೂ ಉಲ್ಬಣಾವಸ್ಥೆಗೆ ತರುತ್ತಿದ್ದಾರೆ. ಒಬ್ಬ ಹೋಟೆಲ್‌ ಕೂಲಿಕಾರನೂ ಮುಂಬಯಿಯ ಅನೇಕ ಶ್ರೀಮಂತರ ಒಳಗುಟ್ಟನ್ನು ಅರಿತು, ಊರಿನ ಹೆಣ್ಣುಗಳನ್ನು ರವಾನಿಸಿ ಲಕ್ಷಾಧಿಪತಿಯಾಗುವ ತವಕ ಹೊಂದಿದ್ದಾನೆ. ಇಂತಹ ಮಧ್ಯವರ್ತಿಗಳೂ ಈ ದೇವದಾಸಿ ಪದ್ಧತಿ ಮುಂದುವರಿಯಲು ಪ್ರೇರಣೆಯಾಗಿದ್ದಾರೆ.

ಮೂಢನಂಬಿಕೆಗಳಿಂದ ಇಂದು ದೂಷ್ಯಾರ್ಹವಾದ ಹಲವು ಸಂಪ್ರದಾಯ ಹಾಗೂ ಸಂಸ್ಥೆಗಳು ರಚನೆಗೊಂಡಿವೆ. ದೇವದಾಸಿ ಸಂಪ್ರದಾಯ ಈ ಬಗೆಯಿದೆ. ಮೂಢನಂಬಿಕೆಯ ಹೆಸರಿನಲ್ಲಿ ಎಂತಹ ಅತಿರೇಕಕ್ಕೆ ನಾವು ಹೋಗುತ್ತೇವೆ ಎಂಬುದಕ್ಕೆ ಒಂದು ಕಾಲಕ್ಕೆ ಪ್ರಬಲವಾಗಿದ್ದ ಆಚಾರ ಪದ್ಧತಿಯನ್ನೆ ಗಮನಿಸಬಹುದು. ಇದು ನಮ್ಮಲ್ಲಿಯೂ ಕಂಡುಬರುತ್ತಿದ್ದ ಪದ್ಧತಿಯಾದರೂ ಚೀನದೇಶದ ಒಂದು ಪ್ರಸಂಗವನ್ನು ತಾಪೀ ಧರ್ಮರಾವ್‌ (೧೯೮೩) ಉದಾಹರಿಸಿದ್ದಾರೆ : ಚೀನಾದಲ್ಲಿ ಯಾರಾದರೂ ಅತಿಥಿ ಮನೆಗೆ ಬಂದರೆ ಆತನನ್ನು ಆಹಾರ, ನಿದ್ರೆ, ಸಂಗಮ ಈ ಎಲ್ಲ ವಿಧದಿಂದಲೂ ಸಂತೃಪ್ತಿಗೊಳಿಸಬೇಕೆಂದಿದ್ದು, ತನ್ನ ಹೆಂಡತಿಯನ್ನು ಅತಿಥಿ ಬಳಿ ಕಳುಹಿಸುತ್ತಿದ್ದರು. ಈ ಅತಿಥಿ ಪೂಜೆ ಮಾಡದವನು ಪಾಪಕ್ಕೆ ಗುರಿಯಾಗುತ್ತಾನೆಂದು ನಂಬಿದ ಚೈನಾಜನರು ಈ ಪದ್ಧತಿಗೆ ಬಲವಾಗಿಯೇ ಅಂಟಿಕೊಂಡಿದ್ದರು. ಆದರೆ ಚಕ್ರವತಿಯೊಬ್ಬ ಈ ಪದ್ದತಿಯ ಹೇಯರೂಪ ಕಂಡು ಇದನ್ನು ನಿಷೇಧಿಸಿದ. ಇದಾದ ೩ ವರ್ಷಗಳಲ್ಲೆ ಅಲ್ಲಿ ಕ್ಷಾಮ ತಲೆದೋರಿತು. ಆಚಾರ್ಯರುಗಳು ಬಿಗುರಿದರು. ಅತಿಥಿಪೂಜೆ ನಿಷೇಧವೇ ಕ್ಷಾಮಕ್ಕೆ ಕಾರಣವೆಂದು ಚಕ್ರವರ್ತಿ ವಿರುದ್ಧ ನಿಂತರು. ಕ್ಷಾಮದಿಂದ ತತ್ತರಿಸಿದ ಚಕ್ರವರ್ತಿ ಅನಿವಾರ್ಯವಾಗಿ ಕಾನೂನು ರದ್ದುಪಡಿಸಿದ. ಯಥಾಪ್ರಕಾರ ಅತಿಥಿಪೂಜೆ ಆರಂಭವಾಯಿತು. ದೇವರ ಪ್ರೇತ್ಯಾರ್ಥವಾಗಿ ಇಂತಹ ಒಂದು ವ್ಯಭಿಚಾರ ರೂಢಿಗೆ ತಂದಿದ್ದರು. ಅಂದರೆ ಒಂದು ಧಾರ್ಮಿಕ ನಂಬಿಕೆಗೆ ಜನ ಹೇಗೆ ಬದ್ಧರಾಗುತ್ತಾರೆ, ಅದರಿಂದ ವಂಚಿತರಾಗುತ್ತಾರೆಂಬುದು ಇಲ್ಲಿ ಮುಖ್ಯ. ‘ದೇವದಾಸಿ’ ಪದ್ಧತಿಯ ಸ್ಥಿತಿಯೂ ಹೀಗೆ ಆಗಿದೆ.

ಒಟ್ಟಾರೆ ದೇವದಾಸಿ ಪದ್ಧತಿ ಕುರಿತು ಯೋಚಿಸುವಾಗ ಮೂರು ಅಂಶಗಳನ್ನು ಗಮನಿಸಬೇಕು. ಧರ್ಮ, ಜಾತಿವ್ಯವಸ್ಥೆ ಹಾಗೂ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆ. ಧರ್ಮಕ್ಕೆ ಎರಡು ಮುಖಗಳಿವೆ. ಸೈದ್ಧಾಂತಿಕ ಹಾಗೂ ಆಚರಣಾತ್ಮಕ. ಧರ್ಮವನ್ನು ಸೈದ್ಧಾಂತಿಕವಾಗಿ ತಿಳಿದವರು ಕಡಿಮೆ. ಇದು ಹೆಚ್ಚಾಗಿ ಮೇಲ್ವರ್ಗ, ಹಾಗೂ ಬುದ್ಧಿಜೀವಿಗಳ ಸ್ವತ್ತಾಗುತ್ತದೆ. ಸಾಮಾನ್ಯ ಜನ ಧರ್ಮವನ್ನು ಆಚರಣೆಯ ಮೂಲಕ ನೋಡುತ್ತಾರೆ. ಯಾವುದೇ ಧಾರ್ಮಿಕ ವ್ಯವಸ್ಥೆಯನ್ನು ತೆಗೆದುಕೊಂಡರೂ ಮೊದಲಿಗೆ ತತ್ವ ಕ್ಲಿಷ್ಟವಾಗಿರುತ್ತದೆ. ಕಾಲಕ್ರಮೇಣ ಸಮಾಜ ದೊಡ್ಡದಾದಂತೆ ಆಚರಣೆಯ ತತ್ವ ಹಾಗೆ ಉಳಿದುಕೊಂಡು ಬೇರೆ ಮಾರ್ಪಾಟುಗಳು ನಡೆದು ವಿಭಿನ್ನತೆ ಜಾಸ್ತಿಯಾಗುತ್ತಾ ಹೋಗುತ್ತದೆ. (ಉದಾ: ಅಯ್ಯಪ್ಪ ಸ್ವಾಮಿಯ ಆಚರಣೆಗಳು ಇಂದು ಸರಳೀಕೃತಗೊಂಡಂತೆ) ಹಾಗೆ ದೇವದಾಸಿ ಪದ್ಧತಿಯೂ ಒಂದು ವಿಚಿತ್ರ ಪರಿಸ್ಥಿತಿಯಲ್ಲಿ ವೇಶ್ಯಾವೃತ್ತಿಗೆ ದಾರಿಮಾಡಿಕೊಟ್ಟಿರಬಹುದು. ಆರಂಭದಲ್ಲಿ ಧಾರ್ಮಿಕ ವಿಧಿಯಾಗಿ ಸರಳ ರೂಪದಲ್ಲಿಯೇ ಹುಟ್ಟಿಕೊಂಡರೂ ಮುಂದೆ ಬರುತ್ತಾ ಸಂಕೀರ್ಣ ರೂಪ ಪಡೆದುಕೊಂಡಿತು. ಪ್ರಭಾವಶಾಲಿಗಳಿಂದ ವಿಕೃತರೂಪಕ್ಕೆಡೆ ಕೊಟ್ಟಿತು. ನೃತ್ಯಕ್ಕಾಗಿ ಮೂಲತಃ ದೇವರಿಗೆ ಅರ್ಪಿಸುವ ಭಾವನೆ ಮಾಯವಾಗಿ, ನೃತ್ಯಕ್ಕಾಗಿ ಮೀಸಲಾದ ಬದುಕು ದೇಹ ಮಾರಾಟಕ್ಕೆ ಮಾರ್ಪಾಟಾಗಿರಬಹುದು. ಹಿಂದಿನ ಶಾಸ್ತ್ರೀಯ ನೃತ್ಯದ ವಿಕೃತ ರೂಪವನ್ನು ಇಂದಿನ ಜೋಗತಿಯರಲ್ಲೂ ಗುರುತಿಸಬಹುದು.

ಎರಡನೆಯದಾಗಿ ಜಾತಿವ್ಯವಸ್ಥೆಯ ಬಗೆಗೆ ಹೆಚ್ಚಾಗಿ ಹೇಳಬೇಕಾಗಿಲ್ಲ. ಸೇವೆಯೇ ಮುಖ್ಯಗುರಿಯೆಂದು ವರ್ಗೀಕರಿಸಲ್ಪಟ್ಟ ಕೆಳವರ್ಗದ ಜನ ಎಲ್ಲ ರೀತಿಯಿಂದಲೂ ಮೇಲ್ವರ್ಗದವರ ಶೋಷಣೆಗೆ ಬಲಿಯಾಗಿದ್ದಾರೆ. ಜಾತೀಯತೆಯನ್ನು ಪೋಷಿಸಿದ ಪುರೋಹಿತಶಾಹಿಯೇ ವ್ಯಭಿಚಾರವನ್ನೂ ಪರೋಕ್ಷವಾಗಿ ಪ್ರಚೋದಿಸಿದೆ ಎಂಬುದನ್ನು ಅಲ್ಲಗಳೆಯಲಾಗದು. ಸಾಮಾಜಿಕವಾಗಿ ಅಸ್ಪೃಷ್ಯತೆಯನ್ನಿಟ್ಟುಕೊಂಡ ಮೇಲ್ವರ್ಗಕ್ಕೆ ದೇಹಸಂಬಂಧ ಹೊಂದಲು ಈ ಅಸ್ಪೃಷ್ಯತೆ ಅಡ್ಡಿ ಬರಲಿಲ್ಲವೆಂಬುದು ಮುಖ್ಯ. ಧರ್ಮದ ಮಧ್ಯಮದಿಂದ ಕೆಳವರ್ಗದ ಹೆಣ್ಣುಮಕ್ಕಳ ಶೋಷಣೆ ನಿರಂತರವಾಗಿದೆ. ದೇವಾಲಯಗಳೇ ಈ ಶೋಷಣೆಗೆ ಕೇಂದ್ರಗಳಾಗಿವೆ.

ಮೂರನೆಯದಾಗಿ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯೂ ದೇವದಾಸಿ ಪದ್ಧತಿಗೆ ಪ್ರೇರಕವಾಯಿತು. ಪೇಶ್ವೆಯರ ಆಳ್ವಿಕೆಯಲ್ಲಿ ಈ ವ್ಯವಸ್ಥೆಯನ್ನು ಕಾಣುತ್ತೇವೆ. ಹೆಚ್ಚು ಹೆಚ್ಚು ಹೆಣ್ಣುಗಳ ಸಂಪರ್ಕವೂ, ಘನತೆಯ ಪ್ರಶ್ನೆಯಾದ್ದರಿಂದ, ಈ ಬಗೆಯಲ್ಲಿ ಉಪಪತ್ನಿಯರಾದವರು ಕೊನೆಯಲ್ಲಿ ಜೀವನ ನಿರ್ವಹಣೆಗೆ ಈ ರೂಪ ತಾಳಿರಬಹುದು.

ಹೀಗೆ ಹತ್ತು ಹಲವಾರು ಪ್ರೇರಣೆಗಳು ದೇವದಾಸಿ ಸಂಪ್ರದಾಯದ ಹುಟ್ಟು, ಬೆಳವಣಿಗೆ ಕಾರಣವಾಗಿವೆ. ಅಪ್ರಾಪ್ತ ಬಾಲಕಿಯರನ್ನು ಈ ರೀತಿ ಅನೀತಿಯ ಉದ್ದೇಶಕ್ಕೆ ಅರ್ಪಿಸುವ ಬಗೆಗೆ ಗಾಂಧೀಜಿಯವರು ಯಂಗ್‌ ಇಂಡಿಯಾದಲ್ಲಿ ಹೀಗೆಂದು ಬರೆಯುತ್ತಾರೆ. “ದೇವದಾಸಿಯರೆಂದು ಕರೆದು ಧರ್ಮದ ಹೆಸರಿನಲ್ಲಿ ದೇವರಿಗೇ ಅಪಮಾನ ಮಾಡುತ್ತಿದ್ದೇವೆ. ಇದು ಎರಡು ರೀತಿಯ ಪಾತಕ. ಒಂದನೆಯದಾಗಿ ಈ ಸಹೋದರಿಯರನ್ನು ನಮ್ಮ ಕಾಮತೃಪ್ತಿಗೆ ಉಪಯೋಗಿಸಿಕೊಳ್ಳುವುದು. ಇನ್ನೊಂದು ದೇವರ ಹೆಸರಿನಲ್ಲಿ ಈ ಕಾರ್ಯ ನಡೆಸುವುದು. ಈ ರೀತಿಯ ಅನೀತಿಯ ಸೇವೆ ಸಲ್ಲಿಸುವುದಕ್ಕಾಗಿಯೇ ಒಂದು ಜನವರ್ಗವೂ, ಈ ಕರಾಳ ನೀತಿಯನ್ನು ಸಹಿಸಿಕೊಂಡಿರುವ ಇನ್ನೊಂದು ಜನವರ್ಗವೂ ಇರುವುದನ್ನು ಯೋಚಿಸಿದರೆ ಬಾಳಿನ ಬಗೆಗೆ ನಿರಾಶೆ ಜನಿಸುತ್ತದೆ.” ಈ ಮಾತುಗಳಲ್ಲಿ ದೇವದಾಸಿಯರ ಬಗ್ಗೆ ಗಾಂಧೀಜಿಯವರಿಗಿದ್ದ ಕಳಕಳಿ ವ್ಯಕ್ತವಾಗುತ್ತದೆ. ಈ ಸಂದರ್ಭದಲ್ಲಿಯೇ ಇನ್ನೊಂದು ಅಂಶವನ್ನು ಪ್ರಸ್ತಾಪಿಸುತ್ತೇವೆ. ಒಬ್ಬ ಲೇಖಕ, ಸಮಾಜಚಿಂತಕ ಇಂತಹ ಸಂಪ್ರದಾಯಗಳ ಪ್ರೇರಣೆ ಕುರಿತು ಹಾಗೂ ಪರಿಹಾರ ಕುರಿತು ಯೋಚಿಸುವಾಗ ಗಂಭೀರವಾಗಿ ಚಿಂತಿಸಬೇಕಾಗುತ್ತದೆ. ನವೆಂಬರ ಮಯೂರದಲ್ಲಿ ಚೆನ್ನಣ್ಣಾ ವಾಲಿಕಾರರು ‘ಸಿದ್ದಾಂತ’ ಎಂಬೊಂದು ಕತೆಯನ್ನು ‘ಬಸವಿ’ ಸಮಸ್ಯೆ ಕುರಿತಂತೆ ಬರೆದಿದ್ದಾರೆ. ಬಸವಿಯಾದ ಹೆಣ್ಣಿಗೆ ಯುವಕನೊಬ್ಬ ಉದಾರತೆಯಿಂದ ಬದುಕು ಕೊಟ್ಟರೂ, ಆಕೆ ಅದಕ್ಕೆ ಹೊಂದಿಕೊಳ್ಳದೆ ಓಡಿಹೋಗುತ್ತಾಳೆ. ಇದು ಕತೆಯ ಸಾರಾಂಶ. ಸತ್ಯಸ್ಥಿತಿ ಏನಾದರಿರಲಿ, ಒಂದು ಅನಿಷ್ಟ ವ್ಯವಸ್ಥೆಯ ವಿರುದ್ಧವಾಗಿ ನಾವು ಯೋಚಿಸಬೇಕಾಗುತ್ತದೆ. ‘ನಾಯಿ ಬಾಲ ಡೊಂಕೇ’ ಎಂಬ ತತ್ವವನ್ನು ಪ್ರತಿಪಾದಿಸುವಂತೆ ಬಂಡಾಯ ಸಾಹಿತಿಯಾದ ಚೆನ್ನಣ್ಣವಾಲಿಕಾರರೇ ಬರೆದರೆ, ಸಾಹಿತ್ಯವಲಯದಲ್ಲಿನ ಇದರ ಪರಿಣಾಮದ ಬಗೆಗೆ ಗಮನ ಹರಿಸಬೇಕಾಗುತ್ತದೆ. ಪ್ರೇರಣೆ ಕುರಿತು ಚಿಂತಿಸುವಾಗ ಇಂತಹ ಅಂಶಗಳು ಗಮನಾರ್ಹ ಎಂದು ನನ್ನ ಅನಿಸಿಕೆ.

ದೇವದಾಸಿ ಸಂಪ್ರದಾಯದ ವಿರೋಧಿ ಕಾನೂನು ಬಂದರೂ ಇದರ ಪರಿಹಾರ ಕಷ್ಟವಿದೆ. ಬದುಕಿಗೆ ಪರ್ಯಾಯವಾದ ಜೀವನ ವ್ಯವಸ್ಥೆಯನ್ನು ಕಲ್ಪಿಸುವವರೆಗೂ ಇದರ ಸಂಪೂರ್ಣನಾಶ ಕಷ್ಟವಿದೆ. ದೇವದಾಸಿಯರೇ ಅಂತಸ್ಪೂರ್ತಿಯಿಂದ ತಮಗೆ ತಾವೇ ಹೊಣೆಗಾರರಾಗಬೇಕೆಂದು ಸುಲಭದಲ್ಲಿ ಹೇಳಬಹುದಾದರೂ ಆಕೆ ಬದುಕುತ್ತಿರುವ ಸಾಮಾಜಿಕ ಸಂದರ್ಭದಲ್ಲಿ ಇದು ಸಾಧ್ಯವೇ ಎಂಬುದನ್ನು ಯೋಚಿಸಬೇಕು. ಪರಿಸರ ಹಾಗೂ ವೈಯಕ್ತಿಕತೆ ಎರಡೂ ಮುಖ್ಯ. ದೇವತೆಯ ಭಯ, ಹಾಗೂ ಇದು ದೈವದತ್ತ ಕೊಡುಗೆ ಎಂದು ಬೋಧಿಸುವ ತಂದೆತಾಯಿಯರ ನಡುವೆ ಹೆಣ್ಣಿನ ವೈಯಕ್ತಿಕತೆ ಗೌಣವಾಗಿದೆ. ಈ ಸಂಪ್ರದಾಯದ ಹೆಣ್ಣನ್ನು ಮದುವೆಯಾಗಲು ಹಿಂದಾಗುವ ಗಂಡಸರು ಆಕೆಯೊಡನೆ ಗುಪ್ತ ಸಂಬಂಧ ಹೊಂದಲು ಕ್ಯೂ ನಿಲ್ಲುತ್ತಾರೆ. ಯಾವುದೋ ಪರಿಸ್ಥಿತಿಯಲ್ಲಿ ಕಾಲುಜಾರಿ, ಕ್ಷಮಿಸುವ ಸಮಾಜವಿಲ್ಲದೇ ಇರುವಾಗ ಹೆಣ್ಣು ಅನಿವಾರ್ಯವಾಗಿ ಇಂತಹ ಪದ್ಧತಿಗೆ ಬಲಿಯಾಗಿರುವ ಸಾಧ್ಯತೆಗಳೂ ಇವೆ. ಹಾಗೂ ತನ್ನದೇ ಆದ ವರ್ಗವನ್ನು ಕಟ್ಟಿಕೊಳ್ಳುತ್ತಾಳೆ.

ಕೆಳವರ್ಗ ಆರ್ಥಿಕವಾಗಿ ದುರ್ಬಲವಾದರೆ, ಹೆಣ್ಣು ದೈಹಿಕವಾಗಿ ದುರ್ಬಲಳೆನಿಸಿಕೊಂಡಳು. ‘‘ಮಾತೃದೇವೋಭವ’’, ‘‘ಯತ್ರನಾರ್ಯಸ್ತು’’, ‘‘ಪೂಜ್ಯತೇ ರಮಂತೆ ತತ್ವ ದೇವತಾ’’ ಎಂದು ಹೆಮ್ಮೆಯಿಂದ ಹೆಣ್ಣನ್ನು ಹೊಗಳಿದ ಸಮಾಜವೇ ‘‘ನಸ್ತ್ರೀ ತಂತ್ಯ್ರಮರ್ಹತಿ’’ ಎಂಬ ಕಟ್ಟುಪಾಡಿಗೆ ಒಳಗುಮಾಡಿ ಅವಳ ಬದುಕನ್ನು ದಾರುಣವಾಗಿಸಿತು. ‘‘ಹೆಣ್ಣನ್ನು ವ್ಯಕ್ತಿತ್ವವಿಲ್ಲದ ಒಂದು ವಸ್ತುವೆಂದು ಪರಿಗಣಿಸಿತು. ಅಥರ್ವಣ ವೇದದಲ್ಲಿ ಬಂಜೆ ಸ್ತ್ರೀಗೆ ಪರಪುರುಷನ ಬಳಿ ಹೋಗಲು ಅನುಮತಿ ಇದೆ. ಇಂತಹ ವಿಪರ್ಯಾಸಗಳು ನಮ್ಮ ಸಂಸ್ಕೃತಿಯ ನಡುವೆ ಇದೆ. ಮಕ್ಕಳಿಲ್ಲದೆ ಮೋಕ್ಷವಿಲ್ಲವೆಂಬ ನಂಬಿಕೆ ಏನೆಲ್ಲವನ್ನೂ ಮಾಡಿಸುತ್ತದೆ. ಹೆಣ್ಣನ್ನು ತನ್ನ ಆಶಯಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳುವ ಪುರುಷರ ಪರಂಪರಾನುಗತ ನಡವಳಿಕೆ ಹೆಣ್ಣನ್ನು ಅಧೀರಳನ್ನಾಗಿಸಿತು; ವ್ಯವಸ್ಥೆಗೆ ಬದ್ಧಳನ್ನಾಗಿಸಿತು. ಹೀಗಾಗಿ ದೇವದಾಸಿ ಸಂಪ್ರದಾಯವು ಒಪ್ಪಿತವಾಗಿಯೇ ಮುಂದುವರಿದುಕೊಂಡು ಬಂದಿತು. ದೇವರು ಧರ್ಮ, ಸರ್ಕಾರ, ಕಾನೂನು – ಈ ಎಲ್ಲವೂ ಸಮಸ್ಯೆಗಳ ಪರಿಹಾರಾರ್ಥವಾಗಿ ಹುಟ್ಟಿಕೊಂಡರೂ ಅವು ಪ್ರಭಾವಶಾಲಿಗಳ ಕೈಯಲ್ಲಿ ಸಿಲುಕಿದ ಪರಿಣಾಮವಾಗಿ ಏನನ್ನೂ ಸಾಧಿಸದಾದವು. ದೇವದಾಸಿ ಸಂಪ್ರದಾಯದ ವಿಚಾರಕ್ಕೂ ಇದು ಸತ್ಯ.

 

ಗ್ರಂಥ ಋಣ

೧) ಎನ್. ಕೆ. ಕಡೆತೋಟದ- ಎಲ್ಲಮ್ಮನ ಜೋಗತಿಯರು ಹಾಗೂ ದೇವದಾಸಿ ಪದ್ಧತಿ, ಉಪನ್ಯಾಸ ಗ್ರಂಥಮಾಲೆ, ಕ.ವಿ.ವಿ., ಧಾರವಾಡ, ೧೯೮೩.

೨) ನಿಂಗಣ್ಣ ಸಣ್ಣಕ್ಕಿ- ಎಲ್ಲಮ್ಮನ ಜೋಗಿಗಳು, ಐಬಿಎಚ್‌ ಪ್ರಕಾಶನ, ಬೆಂಗಳೂರು, ೧೯೮೧.

೩) ತಾಪಿ ಧರ್ಮಾರಾವ್‌, ಎಸ್‌. ಆರ್. ಶಾಸ್ತ್ರಿ (ಅನು)- ದೇವಾಲಯಗಳಲ್ಲಿ ಲೈಂಗಿಕ ಶಿಲ್ಪ, ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು, ೧೯೮೩.

೪) ಚಿದಾನಂದಮೂರ್ತಿ, ಎಂ.- ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಪ್ರಸಾರಾಂಗ, ಮೈ. ವಿ.ವಿ., ಮೈಸೂರು, ೧೯೬೬.

೫) ಚಿದಾನಂದಮೂರ್ತಿ, ಎಂ.- ಗ್ರಾಮೀಣ, ಬಾಪ್ಕೋ ಪ್ರಕಾಶನ, ಬೆಂಗಳೂರು, ೧೯೭೭.

೬) ನಾರಾಯಣಗೌಡ (ಸಂ)- ಚೌಡಿಕೆ ಕಾವ್ಯಗಳು, ಸಂಯುಕ್ತ ಪ್ರಕಾಶನ, ಮೈಸೂರು, ೧೯೭೪.

೭) ಕೃಷ್ಣರಾವ್‌, ಯು.ಎಸ್‌., ಚಂದ್ರಭಾಗಾದೇವಿ, ಯು.ಕೆ.- ನೃತ್ಯಕಲೆ, ಪ್ರಸಾರಾಂಗ, ಬೆಂ. ವಿ.ವಿ. ೧೯೮೦.

೮) ಪಂಡಿತ ಮಹದೇವಶಾಸ್ತ್ರಿ ಜೋಶಿ, (ಸಂ)- ಭಾರತೀಯ ಸಂಸ್ಕೃತ ಕೋಶ ೪ನೇ ಖಂಡ, ಭಾರತೀಯ ಸಂಸ್ಕೃತ ಕೋಶಮಂಡಳಿ, ಶನಿವಾರಪೇಟೆ, ಪುಣೆ.

೯) ಮಹಾರಾಷ್ಟ್ರೀಯ ಜ್ಞಾನಕೋಶ, ೧೫, (ಶರೀರಖಂಡ).

 

ನಿಯತಕಾಲಿಕಗಳು

೧ ತರಂಗ – ಜನವರಿ ೨೩, ೩೦, ಫೆಬ್ರವರಿ ೬, ೧೯೮೦.

೨ ಕನ್ನಡಪ್ರಭ, ಮಾರ್ಚ್ ೬, ೧೯೮೩.

೩ ಸುಧಾ, ಡಿಸೆಂಬರ ೧೩, ೧೯೮೧.

೪ Women’s Era : July 1981

೫ Carvan : December 1983

೬ Society : June 1983

* * *

(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)


[1]     ಮೈಸೂರಿನ ಹೆಗ್ಗಡದೇವನಕೋಟೆ ತಾಲ್ಲೂಕಿನ ಮೊಗ್ಗೆ ಪ್ರದೇಶದಲ್ಲಿಯೂ ಒಂದು ಕಾಲಕ್ಕೆ ವಿಶೇಷವಾಗಿ ವೇಶ್ಯೆಯರಿದ್ದು ಅವರೂ ಮೂಲತಃ ಶೆಟ್ಟಿತೆಲಗರು ಎನ್ನುತ್ತಾರೆ, ಅವರದೇ ಒಂದು ಮನೆತನವಿತ್ತಂತೆ. ಇಂದು ಆ ಪ್ರದೇಶ ಮುಳುಗಡೆಯಾಗಿ ಅವರೆಲ್ಲ ಬೇರೆ ಬೇರೆ ಕಡೆ ಹೋಗಿ ನೆಲಸಿದ್ದಾರೆ. ಮದುವೆ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಹಾಗೆಯೂ ಇದ್ದಾರೆ. ಆದರೆ ಅವರು ಏಕಾಗಿ ವೇಶ್ಯೆಯರಾದರೆಂಬ ಬಗ್ಗೆ ಇಂದು ಮಾಹಿತಿಗಳಿಲ್ಲ. ಯಾವ ದೇವರಿಗೂ ಬಿಟ್ಟಿರುವುದು ಕಂಡುಬರುವುದಿಲ್ಲ. ಈ ವೃತ್ತಿ ಒಂದು ಮನೆತನದಲ್ಲಿ ಮುಂದುವರಿದಿರುವುದನ್ನು ಗಮನಿಸಿದರೆ, ಭಾಗಶಃ ವ್ಯಾಪಾರಕ್ಕಾಗಿ ಬಂದವರಿಂದ ಈ ವೃತ್ತಿ ಆರಂಭವಾಗಿ ಮುಂದುವರಿದ ಸಾಧ್ಯತೆಗಳನ್ನು ಊಹಿಸಬಹುದೇನೋ?