ದೇವರು ಆರಾಧನೆಯ ವಸ್ತುವಲ್ಲ, ಅಧ್ಯಯನದ ವಸ್ತುವೆಂದು ತಿಳಿಯಲು ಪ್ರಾರಂಭಿಸಿದ್ದು ಭಾರತದ ವಿದ್ವತ್ ಲೋಕದ ಕ್ರಾಂತಿ ಎಂದೆ ಭಾವಿಸಬೇಕಾಗುತ್ತದೆ. ದೇವರುಗಳ ಅಧ್ಯಯನವೆಂದರೆ ಜನಾಂಗಗಳ ಸಂಸ್ಕೃತಿಯ ಅಧ್ಯಯನದ ಮುಖ್ಯ ಭಾಗವೆಂದು ತಿಳಿದಾಗ ನನ್ನಂಥ ನಾಸ್ತಿಕರೂ ದೇವರುಗಳಿಗೆ ಗಂಟುಬೀಳುವುದು ಸಹಜವಿದೆ. ಜ್ಞಾನಾರ್ಜನೆ ಸಂಶೋಧನೆ, ಅಧ್ಯಯನ ಕ್ಷೇತ್ರದ ಪ್ರಗತಿಗೆ, ಆರಾಧಕ ಮನೋಭಾವ ತೀವ್ರವಾದ ಅಡ್ಡಿಯುಂಟು ಮಾಡುತ್ತವೆ. ಹಲವಾರು ಜಾತಿ ಮತ, ಪಂಥ, ಧರ್ಮಗಳಿಂದ ತುಂಬಿರುವ ಭಾರತದ ವಿದ್ವಾಂಸರಂತೂ ಧರ್ಮಾತೀತ, ಜಾತ್ಯತೀತ. ಅಂದರೆ ನಾಸ್ತಿಕ ತತ್ತ್ವಜ್ಞಾನಿಗಳಾಗಬೇಕಾದುದು ಮೊಟ್ಟ ಮೊದಲು ಅಗತ್ಯವಾಗಿದೆ. ನಮ್ಮ ನಮ್ಮ ಜಾತಿ ಸಂಸ್ಕೃತಿಗಳಿಂದ ಸಿಡಿದು ಹೊರಗೆ ನಿಂತಾಗ ಮಾತ್ರ ನಮ್ಮ ಸಂಸ್ಕೃತಿಗಳ ನಿಜವಾದ ಸಾಧನೆ, ಕೊರತೆ, ಸಾಧ್ಯತೆ, ಘನತೆ, ವಿಕೃತತೆಗಳ ದರ್ಶನವಾಗಬಲ್ಲದು.

ಭಾರತೀಯ ದೈವೀಕಲ್ಪನೆಯಲ್ಲಿ ೧. ಆಧ್ಯಾತ್ಮವಾದಿ ದೇವರು ೨. ಭೌತವಾದಿ ದೇವರು ಎಂದು ಎರಡು ಪ್ರಮುಖ ಭಾಗಗಳನ್ನು ಮಾಡಬಹುದೆಂದು ಭಾವಿಸುತ್ತೇನೆ. ಪಿತೃಪ್ರಧಾನ ಪಶುಪಾಲಕ ಆರ್ಯ ವೈದಿಕರ ಋಗ್ವೇದದ ಕಾಲದ (ಕ್ರಿ. ಶ. ಪೂ. ೧೫೦೦) ನಂತರದಲ್ಲಿ. ಶೋಷಕವರ್ಗಗಳಿಗೆ ಅಸ್ತ್ರವಾದದ್ದು ಆಧ್ಯಾತ್ಮವಾದಿ ದೇವರು. ದೇವರು ಎಂಬ ಪದವೇ ಇಲ್ಲದ; ಶೋಷಕ ಜಾತಿ ವ್ಯವಸ್ಥೆಯನ್ನು ಒಪ್ಪದೇ ಇದ್ದ ದ್ರಾವಿಡ ಕುಲಗಳನ್ನು ಭೌತವಾದಿ ದೇವರು. ಆಧ್ಯಾತ್ಮವಾದಿ  ದೇವರುಗಳ ಸುತ್ತ ಹೆಣೆಯಲ್ಪಟ್ಟ ಪುರಾಣ ಪ್ರಪಂಚ ಬಹುದೊಡ್ಡದು; ಮೂಢ ನಂಬಿಕೆ ಕಂದಾಚಾರಗಳ ಪರಿವಲಯವೂ ತುಂಬ ವಿಸ್ತಾರವಾದುದು. ಲಿಖಿತ ಪರಂಪರೆಯಿಂದಾಗಿ ಇದರ ಆಳ ಹೆಚ್ಚಿತು. ಸಂಸ್ಕೃತ ಭಾಷೆಯಲ್ಲಿ ವೇದಾಂತದಿ ತಾತ್ತ್ವಿಕ ಸಿದ್ಧಾಂತಗಳಲ್ಲಿ ಇದು ತನ್ನ ಶಿಖರವನ್ನು ಮುಟ್ಟಿತು. ಮುಖ್ಯವಾಗಿ ಬ್ರಾಹ್ಮಣರು ಇದರ ವಕ್ತಾರರಾದರು. ಇದಕ್ಕೆ ಪ್ರತಿಯಾಗಿ ಭೌತಿಕ ದೇವರು ಆಚರಣಾತ್ಮಕವಾದ ನಂಬಿಕೆಯ ನೆಲೆಯಲ್ಲೆ ಸ್ಥಿರಗೊಂಡು, ಮೌಖಿಕ ವಾಙ್ಮಯದಲ್ಲಿ ರಕ್ಷಿತವಾಯಿತು. ಇದರಲ್ಲಿ ಮೂಢನಂಬಿಕೆಯ ಪ್ರಮಾಣ ಕಡಿಮೆ ಇತ್ತು. ಮೋಸದ ಮಿತಿಯೂ ಅಲ್ಪವಿತ್ತು. ಇದು ಅದಿಮ ರೂಪಗಳನ್ನು ಪ್ರಕಟಪಡಿಸುವ ಸ್ವಭಾವ ಹೊಂದಿತ್ತು. ಆಧ್ಯಾತ್ಮವಾದಿ ದೇವರುಗಳನ್ನು ಬೆಳೆಸಿದವರು, ವರ್ಗ ವರ್ಣ ದೃಷ್ಟಿಯಿಂದ ಮೇಲಿದ್ದವರು. ಅಂದರೆ ಶೋಷಕ ವರ್ಗಗಳಿಗೆ ಏರಿದ ಜನಾಂಗಗಳು. ಇವರಿಗೆ ಆಳುವ ವರ್ಗಗಳ ಸಂಪೂರ್ಣ ಬೆಂಬಲವಿತ್ತು. ಭೌತವಾದಿ ದೇವರುಗಳನ್ನು ಹುಟ್ಟು ಹಾಕಿ ಉಳಿಸಿಕೊಂಡು ಬಂದವರು ದೇವರುಗಳನ್ನು ಹುಟ್ಟುಹಾಕಿ ಉಳಿಸಿಕೊಂಡು ಬಂದವರು ಈ ದೇಶದ ದುಡಿಯುವ ಜನವರ್ಗ ಮತ್ತು ಬುಡಕಟ್ಟು ಕುಲಗಳು.

ಅಂದರೆ ಶೋಷಕ ವರ್ಗವನ್ನು ವಿರೋಧಿಸಲಿಕ್ಕೆ ಬೇಕಾದ ಸೈದ್ಧಾಂತಿಕ ಅಸ್ತ್ರವನ್ನು ದ್ರಾವಿಡ ಪರಂಪರೆ ಪಡೆದುಕೊಂಡಿದೆ. ದೇವರು ಕಲ್ಪನೆಯ ಇದಕ್ಕೆ ಉತ್ತಮ ಉದಾಹರಣೆ. ದ್ರಾವಿಡ ಕುಲಗಳಿಂದ ಶೋಷಕ ವರ್ಗವಾಗಿ ಮೇಲೆ ಹೋದ ಜನ ವಿಭಾಗಗಳನ್ನು ಹೊರತು ಪಡಿಸಿ ಉಳಿದ ಬಹುಪಾಲು ಜನ ಕುಲಗಳ ಸಂಸ್ಕೃತಿ ಪರಂಪರೆ ಜನಪರವಾಗಿಯೆ ಇದೆ: ಜಾತಿ ವಿರೋಧಿಯಾಗಿದೆ; ಕುಲಪರವಾಗಿದೆ. ‘ಜಾತಿ ವಿರೋಧಿತ್ವ’ ‘ಕುಲಪರತ್ವ’, ಭಾರತೀಯ ಸಾಮಾಜಿಕ ಚಿಂತನೆಯ ಪರ್ಯಾಯ ಮಾದರಿಗಳಾಗಿವೆ ಎಂಬುದನ್ನು ಮರೆಯಬಾರದು. ಇಂದು ದಕ್ಷಿಣದ ದ್ರಾವಿಡರ ಅನನ್ಯ ಕೊಡುಗೆಯಾಗಿದೆ.

ದ್ರಾವಿಡ ಕುಲಗಳಿಂದ ವರ್ಗೀಯವಾಗಿ ಮೇಲೆ ಹೋದವರು ವೈದಿಕ ಪಂಥಗಳಿಗೆ, ಇಲ್ಲವೆ ಜೈನ, ಬೌದ್ಧಾದಿ ಅವೈದಿಕ ಪಂಥಗಳಿಗೆ ಸೇರುತ್ತಿದ್ದರು. ದ್ರಾವಿಡ ಕುಲಗಳ ಜಾತಿ ವಿರೋಧಿ ಗುಣವು ಆರ್ಯ ವೈದಿಕರ ಶೋಷಕ ವರ್ಣ ವ್ಯವಸ್ಥೆಗೆ ಕೊಟ್ಟ ಬಲವಾದ ಪೆಟ್ಟಾಗಿತ್ತು. ಮತಾಂತರವನ್ನು ಹೇಳಿದ ಆ ವೈದಿಕ ಧರ್ಮಗಳು ಕೂಡ ತಮ್ಮ ಹುಟ್ಟಿನ ಪ್ರಥಮದಲ್ಲಿ ಜಾತಿಯನ್ನು ವಿರೋಧಿಸಿದ ಉದಾರ ಗುಣವನ್ನೇ ಮೆರೆದವು. ಆದರೆ ಧರ್ಮದ ತೆಕ್ಕೆಗೆ ಬಿದ್ದು ಅವೂ ಕೂಡ ಶೋಷಕ ವರ್ಣ (ವರ್ಗ) ವ್ಯವಸ್ಥೆಗೆ ಬಲಿಯಾದವು. ಅಂದರೆ ಜನ ವಿರೋಧಿಯಾದವು.

ನಮ್ಮ ನಾಡಿನ ಅಸಂಖ್ಯ ಜಾತಿ ಬುಡಕಟ್ಟುಗಳನ್ನು ಪ್ರಧಾನವಾಗಿ ೧. ಮೂಲ ನೆಲಸುಗಾರ ಕೃಷಿಕರು; ಮತ್ತು ೨. ವಲಸೆಗಾರ ಪಶುಪಾಲಕರು ಎಂಬ ವಿಭಾಗಗಳನ್ನಾಗಿ ಮಾಡಿಕೊಳ್ಳಲು ಸಾಧ್ಯವಿದೆ. ಈ ಎರಡೂ ಭಿನ್ನ ಸಂಸ್ಕೃತಿ ಜನಕುಲಗಳು ಮಾನವನ ಅತ್ಯಂತ ಪ್ರಾಚೀನ ಸಾಮಾಜಿಕ ಘಟ್ಟವಾಗಿದ್ದ ಬುಡಕಟ್ಟು ಕಾಲದಿಂದ ಉಳಿದು ಬೆಳೆದು ಬಂದಿವೆ. ಹಾಗಾಗಿ ಇಂದಿಗೂ ಅನೇಕ ಜಾತಿಗಳು ಬುಡಕಟ್ಟು ಕಾಲದಿಂದ ಉಳಿದು ಬೆಳೆದು ಬಂದಿವೆ. ಹಾಗಾಗಿ ಇಂದಿಗೂ ಅನೇಕ ಜಾತಿಗಳು ಬುಡಕಟ್ಟು ಸಮಾಜದ ಅವಶೇಷಗಳನ್ನು ಉಳಿಸಿಕೊಂಡಿವೆ. ಕೆಳಜಾತಿಗಳನ್ನು ಜಾತಿ ಎನ್ನಬೇಕೋ ಬುಡಕಟ್ಟು ಎನ್ನಬೇಕೋ ಎಂಬ ಗೊಂದಲ ವಿದ್ವಾಂಸರಲ್ಲಿದೆ. ಪ್ರತ್ಯೇಕತೆ ಮತ್ತು ಸಮನ್ವಯದ ಎರಡೂ ಲಕ್ಷಣಗಳನ್ನು ತೋರ್ಪಡಿಸುವ ಈ ಜನಾಂಗಗಳಿಂದ ಕನ್ನಡ ದ್ರಾವಿಡ ಸಂಸ್ಕೃತಿ ಹುಟ್ಟಿತು. ಈ ಬುಡಕಟ್ಟು ಕುಲಗಳನ್ನು ನಾಶಮಾಡುತ್ತ ಸಾಮಾಜಿಕ ಪ್ರಗತಿಗೆ ಕಾರಣವಾದ ವರ್ಣ ಜಾತಿ ವ್ಯವಸ್ಥೆಯನ್ನು ತಂದವರು ಉತ್ತರದ ಆರ್ಯ ವೈದಿಕರು. ಅಂದರೆ ನಮ್ಮ ಸಮಾಜ ತನ್ನ ಆಂತರಿಕ ಸಹಜ ನಿಯಮಗಳಿಂದಲ್ಲ ಪ್ರತಿಯಾಗಿ ಬಾಹ್ಯ ಒತ್ತಡಗಳಿಂದ ಚರಿತ್ರೆಗೆ ಕಾಲಿಟ್ಟಿದೆ. ಇದು ಯಜಮಾನಿಕೆಯನ್ನು ತಂದ ಸಂಸ್ಕೃತಿಯನ್ನು ವಿರೋಧಿಸುವ ದೇಸೀ ಸಂಸ್ಕೃತಿಯ ರಚನೆಗೆ ಕಾರಣವಾಗುತ್ತದೆ. ಈ ಲಕ್ಷಣಗಳ ಹಿನ್ನೆಲೆಯಲ್ಲಿ ನಮ್ಮ ಜನಪದರು ದೇವರುಗಳ ನಂಬಿಕೆಯ ಕುರಿತ ಚರ್ಚೆಯನ್ನು ಕೈಗೆತ್ತಿಕೊಳ್ಳಬೇಕಿದೆ. ಸಾಮಾಜಿಕ ಅಸಮಾನ ಬೆಳವಣಿಗೆಯಿಂದಾಗಿ ಮೇಲೆ ಹೇಳಿದ ಎಲ್ಲ ಲಕ್ಷಣಗಳು ಚಾರಿತ್ರಿಕ ಒತ್ತಡಗಳ ಮಧ್ಯೆಯೂ ಉಳಿದುಬಂದಿವೆ.

ಬುಡಕಟ್ಟುಗಳ ಕಾಲದಲ್ಲಿ ದೇವರುಗಳಲ್ಲ, ಟೊಟೆರಗಳಿರುತ್ತವೆ. ಆರಾಧನೆ, ಬೇಡಿಕೆಗಳಲ್ಲ, ಮಾಟ ಮಂತ್ರ ಆಜ್ಞೆ ಒತ್ತಾಯಗಳಿರುತ್ತವೆ. ಕುಲವೊಂದರ ಜನಸಮುದಾಯವೇ ಸರ್ವಶಕ್ತವಾಗಿರುತ್ತದೆ, ದೇವರಲ್ಲ, ಎಂದು ಗ್ರೀಕ ಸಮಾಜವನ್ನು ಅಧ್ಯಯನ ಮಾಡಿದ ಥಾವಲ್ಸನ್ ಹೇಳುತ್ತಾನೆ. (ಲೋಕಾಯತ್) (೧೪೦) ಯಥಾವತ್ತಾಗಿ ಇದೇ ರೂಪಗಳನ್ನು ನಮ್ಮ ಬುಡಕಟ್ಟು ಸಮಾಜಗಳಲ್ಲಿ ಉಳಿದಿರದಿದ್ದರೂ ಇದರ ಬಹುಪಾಲು ಲಕ್ಷಣಗಳನ್ನು ಜನಪದ ಆಚರಣೆಗಳಲ್ಲಿ, ನಂಬಿಕೆಗಳಲ್ಲಿ ವ್ಯಾಪಕವಾಗಿರುವುದನ್ನು ಕಾಣುತ್ತೇವೆ. ನಮ್ಮ ಜನಪದ ಕುಲಘಟಕಗಳು ಬುಡಕಟ್ಟು ಅವಶೇಷಗಳನ್ನು ಹೆಚ್ಚುಗಟ್ಟಿಯಗಿ ಉಳಿಸಿಕೊಂಡಿರುವ ಕಡೆ ಟೊಟೆಮಿಕ್ ಲಕ್ಷಣ ಸ್ಪಷ್ಟವಾಗುತ್ತವೆ. ಅಸಮಾನ ಬೆಳವಣಿಗೆಯಿಂದಾಗಿ ದೇವರು ಹುಟ್ಟಿದ ಕಾಲಕ್ಕೂ ಜನಪದರ ಸ್ಥಿತಿ-ಗತಿಗೂ ವೈರುದ್ಯವಿದೆ. ವರ್ಗ ಶೋಷಣೆಗೂ, ದೇವರ ಹುಟ್ಟಿಗೂ ಸಂಬಂಧವಿದೆ. ಅದರೆ ನಮ್ಮಲ್ಲಿ ಪಕ್ಕಾದೇವರು ಎಲ್ಲಿವೆ? ಎಷ್ಟಿವೆ? ಹೇಗೆ ಇವೆ? ಭೂತದ ಬಗೆಗಿನ ಗೊಂದಲವೇ ಇದಕ್ಕೆ ಉತ್ತಮ ಉದಾಹರಣೆ. ಊಳಿಗಮಾನ್ಯ ಕಾಲದ ಗ್ರಾಮಗಳ ಕಲ್ಲೇಶ್ವರಗಳು ವೈಭವದ ಅಂಗ-ರಂಗ ಭೋಗದಲ್ಲಿದ್ದಿದ್ದರೆ, ಈಗ ಪೂಜೆ ಇಲ್ಲದೇ ಕೂತಿರುವುದು ಇಂಥ ಇನ್ನೊಂದು ನಿರ್ದಶನ, ಈ ಕುರಿತು ಹೆಚ್ಚಿನ ಸಂಶೋಧನೆ ಶಿಷ್ಟಬದ್ಧವಾಗಿ ನಡೆದೇ ಇಲ್ಲ. ಅಲ್ಪ ಸ್ವಲ್ಪ ಆಗಿರುವ ಕಡೆ ಗೊಂದಲವೇ ಉಳಿದಿದೆ.

ಜನಪದರಲ್ಲಿ ದೇವರ ಬಗೆಗಿನ ನಂಬಿಕೆಯ ಕುರಿತು ಮಾತನಾಡುವಾಗ ನಮ್ಮ ನಾಡಿನ ಆದಿಮ ಬುಡುಕಟ್ಟು ಭೂತಕಾಲವನ್ನು ಒಳಗೊಂಡು ಬೆಳೆದು ಬಂದಿರುವ ಸಾಮಾಜಿಕಾರ್ಥಿಕ ರಾಜಕೀಯ ಸ್ವರೂಪದ ಹಿನ್ನೆಲೆಯನ್ನು ಸ್ಪಷ್ಟಪಡಿಸಿಕೊಳ್ಳುವ ಅಗತ್ಯವಿದೆ.

ಮೊದಲು ನಂಬಿಕೆಯನ್ನು ಕುರಿತು ಕೆಲವು ಮಾತುಗಳು : ಮೂಲಭೂತವಾಗಿ ನಂಬಿಕೆಯನ್ನು ನಿರಾಕರಿಸಲು ಸಾಧ್ಯವಿಲ್ಲ. ಅಂತೆಯೇ ಮೂಢನಂಬಿಕೆ ಮತ್ತು ವೈಜ್ಞಾನಿಕನಂಬಿಕೆ ಎಂಬ ವೈರುದ್ಯಾತ್ಮಕ ದ್ವಂದ್ವಗಳನ್ನು ಕಲ್ಪಿಸಿಕೊಂಡು ನಮ್ಮ ಸಂಸ್ಕೃತಿಯ ಒಳಗನ್ನು ಅರಿಯಲು ಯತ್ನಿಸಲಾಗುತ್ತಿದೆ. ತುಂಬ ಸರಳವಾದ ಮತ್ತು ಎದ್ದು ಕಾಣುವ ಒಂದು ಉದಾಹರಣೆಯನ್ನು ಕೊಡುವುದಾದರೆ ದೇವರನ್ನು ನಂಬುವುದು ಮೂಢನಂಬಿಕೆಯಾದರೆ, ನಂಬದಿರುವುದೇ ವೈಜ್ಞಾನಿಕ ನಂಬಿಕೆಯಾಗಿದೆ. ಮೂಢ ಮತ್ತು ವೈಜ್ಞಾನಿಕ ನಂಬಿಕೆಗಳನ್ನು ಹೊರತುಪಡಿಸಿ ಇರುವ, ಸಾಮಾನ್ಯ ನಂಬಿಕೆಗಳನ್ನು ಇಲ್ಲಿ ಚರ್ಚಿಸುವ ಅಗತ್ಯವಿಲ್ಲ. ತತ್ತ್ವಜ್ಞಾನದಲ್ಲಿ ಇಂಥ ಚರ್ಚೆಯ ತುರ್ತು ಹೆಚ್ಚಿದೆ. ಸಮಾಜ ವಿಶ್ಲೇಷಣೆ ಮತ್ತು ಬದಲಾವಣೆಯ ಅಗತ್ಯಗಳಿಗೆ ಈ ಬಗೆಯ ಚರ್ಚೆಗಳು ಅಡಿಪಾಯಗಳಾಗುತ್ತಿವೆ. ಆಳುವ ವರ್ಗಗಳ ಹಿತವನ್ನು ಎತ್ತಿಹಿಡಿಯುವ ಪರೋಕ್ಷವಾಗಿ ವ್ಯವಸ್ಥೆಯನ್ನು ಸ್ಥಿರೀಕರಿಸಲು, ಮತ್ತು ಸಮರ್ಥಿಸಲು ನಿಲ್ಲುವ ತತ್ವಜ್ಞಾನ ನಂಬಿಕೆಗಳನ್ನು ಬಳಸಿಕೊಳ್ಳುವ ರೀತಿ ಒಂದು ವಿಧದ್ದಾದರೆ ಶೋಷಿತ ಜನವರ್ಗಗಳ ಹಿತವನ್ನು ಕಾಯುವ ಅವರ ಹೋರಾಟಕ್ಕೆ ಸ್ಥೂರ್ತಿಯ ಸೆಲೆಯಾಗುವ ತತ್ವಜ್ಞಾನ ಹೇಳುವ ನಂಬಿಕೆಗಳೇ ಇನ್ನೊಂದು ವಿಧದವು. ಇವುಗಳ ನಡುವೆ ಜಾನಪದ (ಈ ಪದ ಬಳಕೆಯೇ ಅತೃಪ್ತಿಕರವಾಗಿದೆ. ಮಾನವಪದವೆಂಬುದು ಏಕೆ ಸೂಕ್ತವಾದೀತೆಂದು ಮಾನವಶಾಸ್ತ್ರದಲ್ಲಿ ವಿವರಿಸಿದ್ದೇನೆ) ನಂಬಿಕೆಗಳು ಎಲ್ಲಿ ನಿಲ್ಲುತ್ತವೆ ಎಂಬುದು ಪ್ರಮುಖ ಪ್ರಶ್ನೆಯಾಗುತ್ತಿದೆ. ಎಡವಾದಿ ಸಂಘಟನೆ ಮತ್ತು ಚಳುವಳಿಗಳ ಇಂದಿನ ಕಾಲದಲ್ಲಿ ಜಾನಪದವನ್ನು ಹೆಚ್ಚು ಸಹನೆಯಿಂದ ನೋಡುವ ಅಪೇಕ್ಷೆ ಬೆಳೆಯುತ್ತಿದೆ. ಜನ ಸಮುದಾಯಗಳ ಸಾಂಸ್ಕೃತಿಕ ನೆರೆಯನ್ನು ಅರ್ಥ ಮಾಡಿಕೊಳ್ಳುವ ಅಗತ್ಯವನ್ನು ಬರಿ ಎಡವಾದಿಗಳಷ್ಟೇ ಅಲ್ಲ ಬೇರೆ ಬೇರೆ ಕಾರಣಗಳಿಗಾಗಿ ಉದಾರವಾದಿ ವಿದ್ವಾಂಸರು, ಭೂಷ್ಟ್ರಾ ಪಂಡಿತರೂ ಮನಗಾಣುತ್ತಿದ್ದಾರೆ. ಈ ಮೂರೂ ಬಗೆಯ ವಿದ್ವಾಂಸರು ತಮ್ಮದೇ ಆದ ದೃಷ್ಟಿಕೋನಗಳಿಂದ ಜಾನಪದಲೋಕಕ್ಕೆ ಕಾಲಿಟ್ಟಾಗ ಅವರವರ ಅಪೇಕ್ಷೆಗಳಿಗೆ ತಕ್ಕ ಆಹಾರ ಸಿಕ್ಕೇ ಸಿಗುತ್ತದೆ. ವಿಷಯದ ಗೋಜಲು ಎಷ್ಟು ವಿಪರೀತವಾಗಬಲ್ಲದು ಎಂಬುದಕ್ಕೆ ಇದು ಒಂದು ಸಣ್ಣ ಸೂಚನೆಯಷ್ಟೇ.

ಕನ್ನಡ ದ್ರಾವಿಡ ಜಾನಪದದಲ್ಲಿ ದೇವರು ಸಂಬಂಧಿ ನಂಬಿಕೆಗಳನ್ನು ಕುಲ ಮತ್ತು ಕುಟುಂಬ ಆಚರಣೆಗಳಿಂದ ಪ್ರತ್ಯೇಕಿಸಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದು. ದೇವರು ನಮ್ಮ ಜನಪದರಲ್ಲಿ ತತ್ವಜ್ಞಾನದ ವಿರಾಮದ ಚರ್ಚೆಯ ವಸ್ತು ವಿಷಯವಲ್ಲ. ಇದು ವೈದಿಕ ಬ್ರಾಹ್ಮಣರ ಮತ್ತು ಮೇಲ್ಜಾತಿ ಧರ್ಮಗಳಿಗಿಂತ ಭಿನ್ನವಾದ ಗ್ರಹಿಕೆಯ ನೆರೆಯಾಗಿದೆ. ದುಡಿಯುವ ಜನವರ್ಗ ಅನಕ್ಷರಸ್ಥರಾಗಿರುವುದೇ ಇದಕ್ಕೆ ಕಾರಣವಾಗಿದೆ. ಎರಡನೇ ಪ್ರಮುಖ ಅಂಶವೆಂದರೆ ಕಾಲ ಕಾಲಕ್ಕೆ ಬದಲುತ್ತ ಬಂದ ಜನರ ಭೌತಿಕ ಸ್ಥಿತಿಗಳಿಗೆ ಅನುಗುಣವಾಗಿ ದೇವರು ಸಂಬಂಧಿ ನಂಬಿಕೆ ಮತ್ತು ಆಚರಣೆಗಳು ಬದಲುತ್ತ ಬಂದಿವೆ. ಹಾಗಾಗಿ ಚರಿತ್ರೆಯ ಗತಿಶೀಲತೆಯ ಮಧ್ಯೆ ದೇವರ ಕುರಿತ ನಂಬಿಕೆಗಳನ್ನು ತಿಳಿಯ ಬೇಕಾದರೆ ಮೊಟ್ಟ ಮೊದಲು ಜನವರ್ಗಗಳು ತಮ್ಮ ಉತ್ಪಾದನಾ ಸಂಬಂಧದಲ್ಲಿ ಕಂಡ ಪರಿವರ್ತನೆಗಳ ಸ್ವರೂಪವನ್ನು ಅರಿಯಬೇಕಾಗುತ್ತದೆ.

‘ಮಾನಪದಶಾಸ್ತ್ರ’ದ ನಿಯಮಗಳ ಆಧಾರದಲ್ಲಿ ನಮ್ಮ ನಾಡಿನ ವಿವಿಧ ಜನಕುಲಗಳ ಅಧ್ಯಯನವನ್ನು ವ್ಯವಸ್ಥಿತವಾಗಿ ಕೈಕೊಳ್ಳಬೇಕಾದಾಗ ಕೆಲವು ಮೂಲಭೂತ ಖಚಿತತೆಗಳಿಗೆ ನಿಲುಕಲೇ ಬೇಕಾಗುತ್ತದೆ. ಅಂಥ ಖಚಿತತೆಗಳು ರಾಜಕೀಯ ಅರ್ಥಶಾಸ್ತ್ರ, ಪ್ರಾಚ್ಯಶಾಸ್ತ್ರ, ಮಾನವಶಾಸ್ತ್ರ, ಸಮಾಜಶಾಸ್ತ್ರ, ಚರಿತ್ರೆ ಮಾನವಕುಲಶಾಸ್ತ್ರ, ಮೊದಲಾದ ಶಿಸ್ತುಗಳ ಬೆಂಬಲದಿಂದ ಗಟ್ಟಿಗೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅಲ್ಲಮಟ್ಟಿನ ನನ್ನ ಶೋಧನೆಯ ಫಲಶ್ರುತಿ ಎಂದರೆ ೧. ನಮ್ಮ ನಾಡಿನ ಮೂಲ ನೆಲಸುಗಾರರು ಹಳ್ಳಿಗಳನ್ನು ಸ್ಥಾಪಿಸಿಕೊಂಡು ಬಾಳಿದ ಕೃಷಿಕ ಮಾತೃ ಮೂಲೀಯ ಹೊಲೆಯರು ಮಾದಿಗರು. ಇವರು ತಮ್ಮ ಕೃಷಿ ಜೀವನ ಸಂಸ್ಕೃತಿಯ ಆಧಾರದಲ್ಲಿ ಮಾತೃ ದೇವತೆಯ ಆರಾಧಕರಾಗಿದ್ದರು. ತಾಂತ್ರಿಕ, ಕೌಲ, ಕಾಪಾಲಿಕಾದಿ ಪಂಥಗಳನ್ನು ಕಂಡು ಕೊಂಡರು. ಕಲೆಗಳು, ಯೋಗ ವೈದ್ಯ ಹಬ್ಬಗಳು ಇವರ ಸಂಸ್ಕೃತಿಯ ಕೊಡುಗೆಗಳು.

೨. ಹಟ್ಟಿ, ಕೊಪ್ಪ, ಕೊಪ್ಪಲಿ, ರೊಪ್ಪ, ಹಾಡಿಗಳ ಸಂಸ್ಕೃತಿಯ ವಲಸೆಗಾರ ಪಶುಪಾಲಕ ಕನ್ನಡ ದ್ರಾವಿಡ ಕುಲಗಳು ಕುರುಬರು, ಬೇಡರು, ಗೊಲ್ಲರು, ಗೌಡರು (ಒಕ್ಕಲಿಗರು) ಮುಂತಾದವರು ಶಿಶ್ನಾರಾಧಕರಾಗಿದ್ದ ಇವರ ದೇವರುಗಳ ಶಿವ, ಮೈಲಾರ, ಭೈರವ, ರಂಗ, ಹನುಮಂತ ಮುಂತಾದವು ಇಂದಿಗೂ ಕುರುಬ ಬೇಡ, ಗೊಲ್ಲ ಈ ಮೂರು ಪಶುಪಾಲಕ ಜನಕುಲಗಳಲ್ಲಿ ಊರು, ಕಾಡು ಎಂಬ ಕುಲಭೇದ ಉಳಿದಿದೆ.

ಊರಗೊಲ್ಲ, ಕಾಡುಗೊಲ್ಲ, ಊರು ಕುರುಬ, ಕಾಡು ಕುರುಬ, ಊರ ಬೇಡ, ಕಾಡುಬೇಡ, (ಮ್ಯಾಸ ನಾಯಕರು) ಎಂಬ ಸ್ಪಷ್ಟ ಕುಲಭೇದಗಳಿವೆ. ಭಾರತದಲ್ಲಿ ಉಳಿದಿರುವ ಏಕೈಕ ಪಶುಪಾಲಕ ಬುಡುಕಟ್ಟು ನೀಲಗಿರಿಯ ತೋಡರೆಂದು ದೇವಿಪ್ರಸಾದ ಛಟೋಪಾಧ್ಯಾಯ (ಲೋಕಾಯತ ೫೩.೨ ಪುಟ) ಹೇಳುತ್ತಾರೆ. ಆದರೆ ಮ್ಯಾಸನಾಯಕ, ಕಾಡುಗೊಲ್ಲರಂಥ ಕನ್ನಡ ದ್ರಾವಿಡ ಪಶುಪಾಲಕ ಕುಲಗಳೂ ಅಸ್ತಿತ್ವದಲ್ಲಿವೆ. ಇದು ಇಲ್ಲಿಯ ಪ್ರಶ್ನೆಯಲ್ಲ ತೋಡರನ್ನು ಆಳವಾಗಿ ಅಧ್ಯಯನ ಮಾಡಿದ Rivers ತೋಡರ ದೇವರುಗಳ ಸ್ವರೂಪವನ್ನು ತಿಳಿಯಲು ಕಷ್ಟಬೀಳುತ್ತಾನೆ. ಆಧುನಿಕರ ಕಲ್ಪನೆಯ ದೇವರೇ ಅವರಲ್ಲಿಲ್ಲ. ‘ತಿಯು’ ಎಂಬ ಅವರ ದೇವರು ಅವರಂತೇ ಮಾನವ ಸ್ವರೂಪಿ ಅವನಿಗೂ ಎಮ್ಮೆಗಳಿವೆ. ಹೈನಿನ ಮನೆಯಿದೆ. ಅಂದರೆ ಆಧ್ಯಾತ್ಮವಾದಿ ದೇವರ ಕಲ್ಪನೆಗೆ ತೋಡರು ಬಂದು ತಲುಪಲಿಲ್ಲ. ಅವರ ಭೌತಿಕ ಜೀವನ ಆಧ್ಯಾತ್ಮವಾದಿ ದೇವರನ್ನು ಕಲ್ಪಿಸುವ ಮಟ್ಟಕ್ಕೆ ಬೆಳೆಯಲಿಲ್ಲ. ತೋಡರ ಪ್ರಾರ್ಥನೆಗಳು ದೈನಂದಿನ ಬದುಕಿನ ಬೇಡಿಕೆಗಳೇ ಆಗಿವೆ. ಅವರಿಗೆ ದನಗಳು, ಹೈನಿನ ಮನೆಗಳೆ ಅತ್ಯಂತ ಪವಿತ್ರ ಇಂಥದೇ ಸ್ಥಿತಿ, ಎತ್ತೈಗಳ ಹಟ್ಟಿಯ ವ್ಯಾಸ ನಾಯಕರಲ್ಲಿದೆ. ಪವಿತ್ರ ಎತ್ತೈಗಳೆ ಮ್ಯಾಸರ ದೇವರು, ಎತ್ತೈಗಳ ಹಟ್ಟಿಯ ಧಾರ್ಮಿಕ ಕೇಂದ್ರ (ಇಲ್ಲಿ ‘ಧರ್ಮ’ ಎಂಬ ಪದ ಬಳಕೆಯ ಸರಿಯಲ್ಲ) ಎತ್ತು ಕಾಯುವ ದೀಕ್ಷೆ ಪಡೆದ ಕಿಲಾರಿಗಳೆ ಪೂಜಾರಿಗಳ ಮತ್ತು ವೈದ್ಯರು. ಕಾಡುಗೊಲ್ಲರಲ್ಲೂ ಪೆಟ್ಟಿಗೆ ದೇವರು ಮತ್ತು ಅವರ ಪುರಾಣ ಆಚರಣೆ ನಂಬಿಕೆಗಳಲ್ಲಿ ಪಶುಪಾಲಕ ಜೀವನದ ಒಳವಿನ ರಗಳೆ ಇವೆ. ಇಂಥ ಅಸಂಖ್ಯೆ ಉದಾಹರಣೆಗಳನ್ನು ದ್ರಾವಿಡ ನಾಡುಗಳ ಹಲವಾರು ಕುಲಾಚರಣೆಗಳಿಂದ ಆಯ್ದು ಕೊಡಬಹುದು.

ನೆಲಸುಗಾರ ಕೃಷಿಕ ಹೊಲೆಯ ಮಾದಿಗ ಕುಲ ಸಂಸ್ಕೃತಿ ಮತ್ತು ಪಶುಪಾಲಕ ವಲಸೆಗಾರ ಸಂಸ್ಕೃತಿಗಳು ಒಂದು ಹಂತದಲ್ಲಿ ಸಮನ್ವಯ ಗೊಂಡಾಗ ಹುಟ್ಟಿದ್ದೇ ಕನ್ನಡ ದ್ರಾವಿಡ ಸಂಸ್ಕೃತಿ. ನಂದಿ ಸಹಿತ ಶಿವಲಿಂಗ ಈ ಸಂಸ್ಕೃತಿಯ ಮತೀಯ ಸಂಕೇತವಾಗಿದೆ. ಎತ್ತಯ್ಯ, ಮುತ್ತಯ್ಯಗಳ ಹಟ್ಟಿಯ ಅದ್ಭುತ ಪರಂಪರೆಯಿರುವ ಕಾಡುಗೊಲ್ಲ, ಕಾಡುಬೇಡರು, ‘ನಂದಿ’ ಯನ್ನು ಪ್ರತಿನಿಧಿಸಿದರೆ, ಲಿಂಗದ ಮೇಲ್ಭಾಗ (ಪಿಂಡಿ) ಪಿತೃ ಪ್ರಧಾನ ಪಶುಪಾಲಕ ಕುರುಬ ಒಕ್ಕಲಿಗ (ಗೌಡ) (ಗೊಂಡ) ಮೊದಲಾದವರನ್ನು ಪಾಣಿಪೀಠ ಕೃಷಿಕ ಹೊಲೆ-ಮಾದಿಗ ಪದ್ಧತಿಗಳನ್ನು ಸಂಕೇತಿಸುತ್ತವೆ. ಸಮನ್ವಯದ ಕಾಲದ ನಂತರ ಉತ್ತರದ ಆರ್ಯ ವೈದಿಕ ಮತ್ತು ಜೈನ, ಬೌದ್ಧಾದಿ ಆವೈದಿಕರು ದಕ್ಷಿಣಕ್ಕೆ ಪ್ರವೇಶಿಸಿದ್ದು ಯಜಮಾನ್ಯನ (ಹೆಜಿಮನಿ) ಸ್ಥಾಪನೆಗೆ ಕಾರಣವಾಯಿತು. ಆಗ ಬುಡಕಟ್ಟು ಸಮಾಜಗಳು ಕುಸಿಯುತ್ತ ವರ್ಣಾಧಾರದ (ವರ್ಗ) ಅಂದರೆ ಖಾಸಗಿ ವ್ಯವಸ್ಥೆಯ ಆಧಾರದ ರಾಜ್ಯಗಳು (ಗಂಗ, ಕದಂಬಾದಿ) ಉದಯಿಸಿದವು. ಅಧಿಕ ಉತ್ಪಾದನೆ ಮತ್ತು ವ್ಯಾಪಾರಗಳು ತೀವ್ರವಾಗಿ ಅಭಿವೃದ್ಧಿಹೊಂದಿದ್ದ ಕರ್ನಾಟಕದ ಭಾಗಗಳಲ್ಲೇ ಮೊದಲ ರಾಜ್ಯಗಳು ಹುಟ್ಟಿದ್ದನ್ನು, ಅಲ್ಲಿಯ ಶೋಷಿಕ ಧರ್ಮಗಳು ಹಬ್ಬಿಹರಡಿದ್ದನ್ನು ಗಮನಿಸಬಹುದು. ಕರ್ನಾಟಕದ ಬಹುತೇಕ ಕೃಷಿ ಭೂಮಿಯನ್ನು (ಅಂದರೆ ಮೂಲ ಕೃಷಿಕ ಹೊಲೆಯ-ಮಾದಿಗರ ಆಸ್ತಿಯನ್ನು) ಅಗ್ರಹಾರ, ಮತ, ದೇಗುಲ, ಗೌಡ, ಶಾನುಭೋಗಾದಿ ಶೋಷಕ ವರ್ಗಗಳ ಖಾಸಗಿ ಒಡೆತನಕ್ಕೆ ಒಳಪಡಿಸಿದ್ದನ್ನು ೩೦ ಸಾವಿರ ಶಾಸನಗಳು ಖಚಿತಪಡಿಸುತ್ತವೆ. ಇವುಗಳಲ್ಲಿ ಶೇಕಡಾ ೯೦ ಶಾಸನಗಳು ದಾನ ಶಾಸನಗಳಾಗಿರುವುದೇ ಇದಕ್ಕೆ ಸಾಕ್ಷಿ. ಈ ಹಂತದಲ್ಲೇ ನೆಲಸುಗಾರ ಕೃಷಿಕರು ಅಸ್ಪಶ್ಯರಾದರು. ತೀವ್ರವಾದ ಪ್ರತಿಭಟನೆಗೆ ಸಿಕ್ಕ ಪ್ರತಿಫಲ ಇದಾಗಿತ್ತು. ದೇಸಿ ಮೂಲದ ವೀರಶೈವ ಚಳುವಳಿ, ನಂತರ ವೈದಿಕ ಮೂಲದ ಅದ್ವೈತ, ದ್ವೈತ, ವಿಶಿಷ್ಟಾದ್ವೈತಗಳ ಪ್ರಭಾವ. ಇವು ಚಾರಿತ್ರಿಕ ಕರ್ನಾಟಕದ ಉದ್ದಕ್ಕೂ ಆಳುವ ವರ್ಗಗಳ ತತ್ತ್ವಜ್ಞಾನ ಮತ್ತು ಸಮಾಜ ರಚನೆಯ ಆಧಾರಾಂಶಗಳಾದವು. ಆಧುನಿಕಯುಗಕ್ಕೆ ಕಾಲಿಡುತ್ತಿದ್ದ ಕರ್ನಾಟಕದ ಸಂದರ್ಭ, ಅಂದರೆ ವಸಾಹತುಶಾಹಿ, ನಂತರ ಈಚೆಗೆ ನವವಸಾಹತುಶಾಹಿ ಕಾಲದ ಪರಿಣಾಮಗಳನ್ನು ಕೂಡ ಈ ಸಂದರ್ಭದಲ್ಲಿ ಗಮನಿಸಬೇಕಾಗುತ್ತವೆ.

ಮೇಲೆ ಹೇಳಲಾಗಿರುವ ಪ್ರತಿಯೊಂದು ಅಂಶಕ್ಕೂ ದೀರ್ಘವಾದ ವಿವರಗಳು ಬೇಕೆಂಬುದನ್ನು ಬಲ್ಲೆ. ನಮ್ಮ ಶೀರ್ಷಿಕೆಗೆ ಸಂಬಂಧಿಸಿದ ಅನಿವಾರ್ಯವಾಗಿದ್ದ ಈ ಸ್ಥೂಲ ಹಿನ್ನೆಲೆ ಚಿತ್ರವನ್ನು ಕೊಡಲೇ ಬೇಕಿದ್ದುದರಿಂದ ಈ ವಿಷಯಗಳನ್ನು ಇಲ್ಲಿ ಪ್ರಾಸ್ತಾಪಿಸಬೇಕಾಯಿತು.

ಸಾವಿರಾರು ವರ್ಷಗಳ ಹಿಂದೆ ಹುಟ್ಟಿ ನಿರಂತರವಾಗಿ ಪರಿಷ್ಕರಣೆಗೆ ಮತ್ತು ಬದಲಾವಣೆಗೆ ಒಳಗಾಗುತ್ತ ಬಂದ ಕನ್ನಡ ಜಾನಪದವನ್ನು ಮೇಲೆ ಹೇಳಿದ ಚಾರಿತ್ರಿಕ ಗತಿಶೀಲತೆಯಲ್ಲಿಟ್ಟೆ ನೋಡಬೇಕಾಗುತ್ತದೆ. ಏಕೆಂದರೆ ನಂಬಿಕೆಯಂಥ ಆಂತರಿಕ ವಿಷಯ, ಬಾಹ್ಯ ಪರಿಸರ, ಪರಿಸ್ಥಿತಿಗಳನ್ನೇ ಮುಖ್ಯವಾಗಿ ಆಧರಿಸಿಕೊಂಡಿರುತ್ತದೆ. ಇದು ತದ್ವಿರುದ್ಧವಾಗಿ ಬಾಹ್ಯಪರಿಸರ, ಪರಿಸ್ಥಿತಿಗಳನ್ನು ಪ್ರಭಾವಿಸಿ ಬದಲಿಸಬಲ್ಲ ಚಾಲಕ ಶಕ್ತಿಯಾಗಿ ಮಾರ್ಪಡುತ್ತದೆಂಬುದೂ ಕೂಡ ಅಷ್ಟೆ ನಿಜ.

ದೇವರು ಸಂಬಂಧಿ ನಂಬಿಕೆಗಳು ಕನ್ನಡ ಮೂಲ ನೆಲಸುಗಾರ ಕೃಷಿಕ ಹೊಲೆಯ ಮಾದಿಗರಲ್ಲಿ ಹೇಗಿದ್ದವು, ಪಶುಪಾಲಕ ಜನವರ್ಗಗಳಲ್ಲಿ ಹೇಗಿದ್ದವು. ಈ ಎರಡೂ ಸಂಸ್ಕೃತಿ ಜನವರ್ಗಗಳು ಸಂಘರ್ಷ ಮತ್ತು ಸಮನ್ವಯಗೊಂಡಾಗ ಉಂಟಾದ ಅವುಗಳ ಸ್ವರೂಪ, ಉತ್ತರದ ದಾಳಿಯ ನಂತರ ಮತ್ತು ಚರಿತ್ರೆಯ ಮುಂದಿನ ಪ್ರಭಾವಗಳ ನಂತರ ಅವು ಹೇಗೆ ಮಾರ್ಪಡುತ್ತ ಬಂದವು ಎಂಬುದೆ ನಮ್ಮದುರು ನಿಲ್ಲುವ ಪ್ರಶ್ನೆಯಾಗಿವೆ.

ಆಧ್ಯಾತ್ಮವಾದಿ ವೈದಿಕ ಪ್ರಪಂಚ ಹುಟ್ಟಿಸಿರುವ ‘ದೇವರು’ ಎಂಬ ಪದಕ್ಕೆ ಸಂವಾದಿಯಾದ ಪದ ಇಡಿ ದ್ರಾವಿಡ ಭಾಷೆಗಳಲ್ಲಿಲ್ಲ ಅಥವಾ ದೇವರನ್ನು ಹೋಲುವ ದ್ರಾವಿಡ ಪದ ‘ಅಮ್ಮ’. ವೈದಿಕ ಮತ್ತು ದ್ರಾವಿಡ ಸಂಸ್ಕೃತಿ ಪರಂಪರೆ ಮತ್ತು ಇದನ್ನು ಪ್ರತಿನಿಧಿಸಿದ ಜನವರ್ಗಗಳ ಜೀವನ ರೂಪಗಳ ನಡುವೆ ಅಗಾಧ ವ್ಯತ್ಯಾಸವಿರುವುದೇ ಈ ಪರಿಸ್ಥಿತಿಗೆ ಮುಖ್ಯ ಕಾರಣವಾಗಿದೆ. ‘ಅಮ್ಮ’, ‘ಅಪ್ಪ’ ನಮಗೆ ಅತ್ಯಂತ ಆತ್ಮೀಯವಾದ ಕೌಟುಂಬಿಕ ಪರಿಭಾಷೆ ನಮ್ಮ ದೇವರುಗಳು ಈ ಹಂತವನ್ನು ದಾಟಿ ಬೆಳೆಯಲೇ ಇಲ್ಲ. ವಿಶ್ವಸೃಷ್ಟಿಯ ಬಗ್ಗೆ ಹೇಳುವಾಗಲೂ ಕೂಡ ದ್ರಾವಿಡ ಕುಲಗಳು ಅಮ್ಮ ಅಪ್ಪನ ಸಂಬಂಧದ ನೆಲೆಯನ್ನೇ ಆಧಾರವಾಗಿಟ್ಟುಕೊಳ್ಳುತ್ತವೆ. ಇದು ಸಾಂಖ್ಯ, ಯೋಗ ಮೊದಲಾದ ದ್ರಾವಿಡ ತತ್ತ್ವಜ್ಞಾನಗಳಲ್ಲಿ ಪ್ರಕೃತಿ, ಪುರುಷ, ಕುಂಡಲಿಶಕ್ತಿ, ಚಕ್ರಗಳು ಎಂದು ಸಾರ್ವತ್ರೀಕರಿಸಲ್ಪಡುತ್ತವೆ. ಮತೀಯ ಆಚರಣೆಗಳಲ್ಲಿ ಇದು ಗಂಗೆ, ಗೌರಿ, ಶಿವ, ಲಕ್ಷ್ಮಿ ರಂಗ, ಚಾಮುಂಡಿ, ನಂಜುಂಡ, ಕೋಮಾಲಿ, ಕುರುಬತೆವ್ವ ಮೈಲಾರಲಿಂಗ ಮುಂತಾಗಿ ಸಾಕಾರಗೊಳ್ಳುತ್ತವೆ. ಪಿತೃ ಪ್ರಧಾನ ಸಮಾಜದ ಕನ್ನಡ ಪಶುಪಾಲಕ ದ್ರಾವಿಡ ಕುಲಗಳು, ಶಿವ, ರಂಗ, ಪೆಟ್ಟಿಗೆ ದೇವರು,. ಎತ್ತಪ್ಪ ಜುಂಜಪ್ಪ, ಜವಳ ಮೊದಲಾದ ಗಂಡು ದೇವರುಗಳನ್ನು ಪ್ರಮುಖವೆಂದು ಭಾವಿಸಿ ಅವುಗಳ ಸುತ್ತ ಬೆಳಸಿಕೊಂಡ ನಂಬಿಕೆಗಳು ಜಾತ್ರೆಗಳು, ಸಿದ್ಧವೇಶ, ಗೌರಪ್ಪ, ಗೌರಮ್ಮ, ದಾಸಪ್ಪ, ದಾನಮ್ಮ, ಜೋಗಪ್ಪ ಜೋಗಮ್ಮ, ಜೋಕುಮಾರ ಕಾಮಣ್ಣ ಮೊದಲಾದ ಸಾಂಸ್ಕೃತಿಕ ಸಿದ್ಧಾಂತಾಂಶ (ಪೆರೆಡಿಂ)ಗಳ ರೂಪದಲ್ಲಿ ಪ್ರಕಟವಾದವು. ಕನ್ನಡ ಪ್ರಧಾನ ಪಶುಪಾಲಕರಾದ ಮ್ಯಾಸನಾಯಕರು ಬುಡಕಟ್ಟು ಸ್ಥಿತಿಯನ್ನು ಉಳಿಸಿಕೊಂಡಿದ್ದು ೧೨ ಪೆಟ್ಟಿಗೆ ದೇವರನ್ನು ಗುಡ್ಡಕ್ಕೆ ಒಯ್ದು ತಾತ್ಕಾಲಿಕ ಗುಡಿಸಲು ಹಾಕಿ, ಪೂಜಿಸಿ, ದೇವರೆತ್ತುಗಳ ಮೆರವಣಿಗೆ ಮಾಡಿಕೊಂಡು ಬರುವುದು ಜಾತ್ರೆಯ ಮುಖ್ಯಸಂಗತಿಯಾಗಿದ್ದು, ಇದು ವಲಸೆಗಾರಿಕೆ, ಪಶುಪಾಲನೆ, ಹಟ್ಟಿ ಸ್ಥಾಪನೆಗಳ ಮೊದಲಾದ ಆಶಯಗಳನ್ನು ಸೂಚಿಸುತ್ತದೆ. ಇಂಥದೇ ಆಚರಣೆ ಕಾಡುಗೊಲ್ಲರಲ್ಲಿ ಮತ್ತು ಎಲ್ಲ ಕನ್ನಡ ಜಾತಿ ಕುಲ ಜನಗಳ ಹಬ್ಬ ಜಾತ್ರೆಗಳಲ್ಲಿ ಪಡಿಮೂಡುತ್ತವೆ.

ಆದರೆ ಪಶುಪಾಲಕ ವೃತ್ತಿಗಿಂತ ಬೇಸಾಯವೇ ನಾಡಿನ ಮುಖ್ಯ ಕಸುಬಾಗಿ ಸ್ಥಿರಗೊಂಡುದರಿಂದ ಮೂಲ ಕೃಷಿಕ ಜನವರ್ಗಗಳ ‘ಅಮ್ಮ’ನ ಪಂಥ ಕಾಲಕಾಲಕ್ಕೆ ಅನೇಕ ಪರಿವರ್ತನೆಗಳನ್ನು ಕಂಡರೂ ಸಮಾಜದ ಅಸಮಾನ ಬೆಳವಣಿಗೆಯ ಕಾರಣದಿಂದ ಹಲವು ಬಗೆಯ ಆಕೃತಿಗಳು ಉಳಿದು ಬಂದವು. ಇಲ್ಲಿ ಆಕಸ್ಮಿಕವಾಗಿ ಹೆಚ್ಚು ಬದಲಾಗದೆ ಉಳಿದಿರುವ ಆದಿಮರೂಪಗಳನ್ನು ಕೂಡ ಕಂಡುಕೊಳ್ಳಲು ಶಕ್ಯವಿದೆ.

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉತ್ತರ ಕೇರಳನ್ನು ಒಳಗೊಂಡಿರುವ ‘ತುಳು’ ಪ್ರದೇಶದಲ್ಲಿರುವ ಭೂತಾರಾಧನೆ ದೈವ ಅಥವಾ ತೆಯ್ಯಂ ಆರಾಧನೆಯಾಗಿದೆ ಎಂದು ವಿದ್ವಾಂಸರು ಹೇಳುತ್ತಾರೆ. ಪಾಶ್ಚಾತ್ಯ ವಿದ್ವಾಂಸರ ತಪ್ಪುಕಲ್ಪನೆಯಿಂದ ‘ಭೂತ’ ಎಂಬ ಪದ ಪ್ರಚುರವಾಯಿತೆಂದು ದೇಸೀ ವಿದ್ವಾಂಸರು ಪ್ರತಿಪಾದಿಸಿದರು. (ಸಿ. ರಾಘವನ್, ಅಮೃತ್ ಸೋಮೇಶ್ವರ ಮೊದಲಾದವರು) ಆಶ್ಚರ್ಯವೆಂದರೆ ದೈವ ಅಥವಾ ತೆಯ್ಯಂ ಎಂಬ ಪದವೂ ಕೂಡ ವೈದಿಕರು ತುಳು ಪ್ರದೇಶಕ್ಕೆ ಬಂದಾಗ ಅವರು ಕೊಟ್ಟ ಪದಗಳು, ಎಂಬುದನ್ನು ದೇಸೀ ವಿದ್ವಾಂಸರು ಒತ್ತಿ ಹೇಳದೆ ಇದ್ದುದು. ನಲ್ಕೆ, ಪಂಬದ, ಪರವ ಮೊದಲಾದ ಆ ಪ್ರದೇಶದ ಹೊಲೆ ಮಾದಿಗರು ಕಟ್ಟುವ ‘ಭೂತ’ ವೇಷಕ್ಕೆ ಮೂಲದ ಹೆಸರೇನು? ಮೊದಲ ಸ್ವರೂಪವೇನು? ‘ಅಮ್ಮ’ ಎಂಬ ಪದವೇ ಜನಪದರಲ್ಲಿದ್ದರೂ ದೈವಕ್ಕ ಅದನ್ನು ಪರ್ಯಾಯವೆಂದು ಸ್ವೀಕರಿಸಲು ವಿದ್ವಾಂಸರು ಹಿಂದೆ ಮುಂದೆ ನೋಡುತ್ತಾರೆ. ಚಾರಿತ್ರಿಕ ಕಾರಣಗಳಿಂದಾಗಿ ಬ್ರಾಹ್ಮಣ ಪರಂಪರೆಯನ್ನು ನೇರವಾಗಿ ಎದುರಿಸಿದ ದಲಿತರ ಭೂತಗಳನ್ನು ಬ್ರಾಹ್ಮಣರೂ ಸ್ವೀಕರಿಸಿದರು. ಆದರೆ ಮನೆಯ ಹೊರಗೆ ಅವಕ್ಕೆ ಸ್ಥಾನ ಕಲ್ಪಿಸಿದರು. ದ್ರಾವಿಡ ಕುಲಗಳಂತೆ ಮನೆಯ ಒಳಗೆ ಸ್ಥಾಪಿಸಿಕೊಳ್ಳಲಿಲ್ಲ. ಪಾಡ್ಹನಗಳಲ್ಲಿ ‘ಸತ್ಯೋಳ’ ಎಂದರೆ ಸತ್ಯದ ಪ್ರತ್ಯಕ್ಷ ರೂಪವೇ ಭೂತವೆಂದು ಅಮೃತ ಸೋಮೇಶ್ವರ ಹೇಳುತ್ತಾರೆ. ‘ಭೂತ’ ಕೃಷಿಕ ಹೊಲೆ ಮಾದಿಗರ ಆದಿಮ ಸೃಷ್ಟಿ ಎಂಬುದರಲ್ಲಿ ಸಂಶಯ ತೋರುತ್ತಿಲ್ಲ. ಆದರೆ ವರ್ಗ ವರ್ಣ ಸಮಾಜದಲ್ಲಿ ಅದು ‘ದೇವರ’ ಲಕ್ಷಣವನ್ನು ಮೈಗೂಡಿಸಿಕೊಂಡಿತು. ಆಗ ಅದರ ಆದಿಮ ಹೊರಮೈ ರೂಪ ಉಳಿಯಿತು. ವರ್ಗ ಶೋಷಣೆಯ ವಸ್ತುವನ್ನು ಅಳವಡಿಸಿಕೊಂಡಿತು. ಹಾಗಾಗಿ ಜನರೆಲ್ಲ ಆಜ್ಞೆ ಮಾಡುವ ಬುಡಕಟ್ಟು ಕಾಲದ ಸ್ವರೂಪ ಮಾಯವಾಗಿ ಭೂತವೇ ಜನರನ್ನು ಹೆದರಿಸಲು ನಿಂತಿತು.

ಬುಡಕಟ್ಟಿನ ಗೆಳೆಯನಾಗಿದ್ದ ಭೂತ, ಜಾತಿ, ಸಮಾಜದಲ್ಲಿ ಆಶೀರ್ವದಿಸುವ ದೇವರಾಯಿತು. ಆದರೆ ಅದು ಯಾರಲ್ಲಿ ಹುಟ್ಟಿತ್ತೊ ಆ ಜನರಿಂದ ಪ್ರತ್ಯೇಕಗೊಳ್ಳಲಿಲ್ಲ. ಹಾಗಾಗಿ ಅಸ್ಪೃಶ್ಯರು ಭೂತದ ಮೂಲಕ ಶೋಷಿತರನ್ನು ಒಳಗೊಂಡು ಶೋಷಿಕರನ್ನೂ ಹೆದರಿಸುವಂತಾಯಿತು. ಈ ಚಾರಿತ್ರಿಕ ವ್ಯಂಗ್ಯ ಬಯಲು ಸೀಮೆಯಲ್ಲಿ ಬೇರೆ ಬೇರೆ ಬಗೆಗಳಲ್ಲಿದೆ.

ದೇವರುಗಳ ಸ್ವರೂಪ ತಿಳುವಳಿಕೆಗೆ ಒಂದು ಒಳ್ಳೆಯನ್ನು ಉದಾಹರಣೆಗೆ ತೆಗೆದುಕೊಳ್ಳೋಣ. ಹಟ್ಟಿ, ಕೇರಿಗಳ ಜನ ಅಮ್ಮನ ಪ್ರಾಚ್ಯರೂಪವನ್ನು ಅಂದರೆ ಕಟ್ಟೆಯ ಅಥವಾ ಮರದ ಕೆಳಗಿನ ದುಂಡನೆಯ ಕಲ್ಲನ್ನು ಪೂಜಿಸುತ್ತಾರೆ. ಕೆಲವು ಕಡೆ ಇವುಗಳ ಜತೆ ಕೇಲುಗಳಿರುತ್ತವೆ. ಅದೇ ಹಳ್ಳಿಯ ಪಂಚಾಳರು ಮನೆಯ ಆಕಾರದ ಗುಡಿಯಲ್ಲಿ ಕಾಷ್ಟ ವಿಗ್ರಹವನ್ನು ದ್ಯಾಮವ್ವ ಊರಮ್ಮ, ಮಾರೆಮ್ಮ ಎಂದು ಪೂಜಿಸುತ್ತಾರೆ. ರಾಜಶಾಹಿಕಾಲದ ಪ್ರಭಾವದಿಂದ ಊರಮ್ಮನಿಗೆ ನಾಲ್ಕುಕೈ, ಆಯುಧಗಳು, ಸಿಂಹವಾಹನ, ಮೊದಲಾದ ಆಡಂಬರ ಪ್ರಾಪ್ತವಾಯಿತು. ನಾವಿರುವ ಹರಪನಹಳ್ಳಿ ತಾಲೂಕಿನ ಬಾಗಳಿ, ನೀಲಗುಂದ, ಅರಸಿಕೆರೆ ಮೊದಲಾದ ಪ್ರಾಚೀನ ಗ್ರಾಮಗಳ ಎಷ್ಟೋ ದೇಗುಲಗಳು ಇಂದು ಹಾಳು ಸುರಿಯುತ್ತಿವೆ. ಹಿಂದಲ ಅವುಗಳ ವೈಭವ, ಆಡಂಬರದ ಜತೆ ಈಗಿನ ಸ್ಥಿತಿಯನ್ನು ಹೋಲಿಸಿದರೆ ದೇವರುಗಳ ಸ್ಥಿತಿಯು ಕಾಲಕ್ಕೆ ತಕ್ಕಂತೆ ಪರಿವರ್ತನೆಯಾಗುವುದು ಖಂಡಿತವೆನಿಸುತ್ತದೆ. ಅಗ್ರಹಾರ, ಕಾಳಾಮುಖ ಮಠಗಳ ಸಂಪರ್ಕವಿದ್ದ ಕಾಲದಲ್ಲಿ ಈ ಗುಡಿಗಳ ಅಂಗರಂಗ ಭೋಗ ವೈಭವವನ್ನು ಊಹಿಸಿಕೊಳ್ಳಬೇಕು. ಆಗಿನ ಆರ್ಥಿಕ ರಾಜಕೀಯ ರಚನೆ ಇಂದು ಉಳಿದಿಲ್ಲ. ಹಾಗಾಗಿ ಈ ಗುಡಿಗಳು ಪ್ರವಾಸಿಗರ ಆಕರ್ಷಣೆಯ ಸ್ಥಾನಗಳಾಗಿ ಮಾತ್ರ ಉಳಿಯಬೇಕಾಗಿದೆ. ಹೀಗೆ ಕಾಲಬದ್ಧ ಸಂಸ್ಕೃತಿಯ ವಿವಿಧ ಸ್ತರಗಳನ್ನು ಒಂದು ಗ್ರಾಮದಲ್ಲಿ ಕಾಣಲು ಸಾಧ್ಯವಿದೆ. ಈ ವೈಶಿಷ್ಟ್ಯ ತುಂಬ ಮಹತ್ವದ್ದು. ಇದು ವೈರುಧ್ಯಾತ್ಮಕ ಸಾಂಸ್ಕೃತಿಕ ಘಟಕಗಳು ಒಂದೇ ಕಡೆ ಉಳಿದಿರುವುದನ್ನು ಸೂಚಿಸುತ್ತದೆ. ಆರ್ಥಿಕ ರಾಜಕೀಯ ತಳಹದಿಯ ಆಧಾರದಲ್ಲಿ ವರ್ಗ ಜಾತಿ ಶ್ರೇಣಿಕರಣದಿಂದಾಗಿ ಹೊಲೆ ಮಾದಿಗರು ಅಸ್ಪೃಶ್ಯರಾಗಿ ಒಂದು ತುದಿಯಲ್ಲಿದ್ದರೆ. ವಲಸೆ ಹೋಗುತ್ತಿದ್ದ ಪಶುಪಾಲಕ ಕುರುಬ ಬೇಡ, ಗೌಡ ಒಕ್ಕಲಿಗ ಮೊದಲಾದವರು ಮಧ್ಯದಲ್ಲಿ ಲಿಂಗಾಯತ, ಬ್ರಾಹ್ಮಣ ಇನ್ನೊಂದು ತುದಿಯಲ್ಲಿ ನಿಂತರು, ಸಂಘರ್ಷಕ್ಕಾಂತ ಸಮನ್ವಯದ ನೆಲೆ ಶ್ರೇಣಿಕೃತ ಗ್ರಾಮವೊಂದರ ಸಾಂಸ್ಕೃತಿಕ ರಚನೆಯನ್ನು ಕಣ್ಮುಂದೆ ನಿಲ್ಲಿಸುತ್ತದೆ. ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ಮತ್ತು ಅಸ್ಪೃಶ್ಯ ಜಾತಿಗಳಲ್ಲಿ ಬುಡಕಟ್ಟು ಲಕ್ಷಣಗಳು ಹೆಚ್ಚುಳಿದವು ಮತ್ತು ಅವರಲ್ಲಿಯ ದೇವರುಗಳ ಪ್ರಾಚ್ಯ ರೂಪಗಳು ಕೂಡ. ಇಡಿ ಗ್ರಾಮಕ್ಕೆ ಸಂಬಂಧಪಟ್ಟ ದ್ಯಾಮವ್ವ ಅಥವಾ ಉರಮ್ಮ ಮಧ್ಯಮ ಮತ್ತು ಮೇಲ್ಜಾತಿಗಳ ಕೈಗೆ ಸೇರಿದರೂ ಜಾತ್ರೆ ಹಬ್ಬಗಳಂಥ ನಿರ್ದಿಷ್ಟ ಪ್ರಸಂಗಗಳಲ್ಲಿ ಚರಗ ಚೆಲ್ಲಲು, ಬಲಿನೀಡಲು, ಪೊಲಿ ಹಂಚಲು ಆಕೆಯ ನಿಜವಾದ ಹಕ್ಕುದಾರರಾದ ತಿಲಸುಗಾರ ದಲಿತರು ಪ್ರವೇಶಿಸುವುದು ತಪ್ಪಲಿಲ್ಲ. ಕೃಷಿ ಶೋಧನೆಗೂ, ಮಾತೃ ಆರಾಧನೆಗೂ, ಮಾತೃಪ್ರಧಾನ ಸಮಾಜ ರಚನೆಗೂ ನಿಕಟ ಸಂಬಂಧವಿರುವುದನ್ನು ಜಗತ್ತಿನ ಹಲವಾರು ವಿದ್ವಾಂಸರು ಖಚಿತಪಡಿಸಿದ್ದಾರೆ. ಈ ಎಲ್ಲವೂ ದಲಿತರಲ್ಲೇ ಕಂಡು ಬರುವುದು ನಮ್ಮ ದೇಶದ ವೈಶಿಷ್ಟ್ಯವಾಗಿದೆ.

‘ಬಳಂ’ ಎಂಬ ಉಗ್ರ ಹೆಣ್ಣು ದೇವತೆಯ ಕಾರಣದಿಂದ ‘ಬಳ್ಳಾರಿ’ ಎಂಬ ಊರ ಹೆಸರಾಯಿತೆಂದು ಒಂದು ಲೇಖನದಲ್ಲಿ ಪ್ರತಿಪಾದಿಸಲು ಯತ್ನಿಸಿದ್ದೇನೆ. (ಸಾಧನೆ) ‘ಹೆಂಪಮ್ಮ’ ನಿಂದ ಹಂಪಿ, ‘ಹುಲಿಗೆಮ್ಮ’ನಿಂದ ‘ಹುಲಿಗಿ’, ಉಚ್ಚಂಗಿಮ್ಮನಿಂದ ‘ಉಚ್ಚಂಗಿದುರ್ಗ’ ಹೀಗೆ ಸರ್ವೇಸಾಮಾನ್ಯವಾದ ಲಕ್ಷಣವನ್ನು ಗುರುತಿಸಬಲ್ಲ ಸಂಸ್ಕೃತಿ ಪರಂಪರೆಯ ವಿಶಿಷ್ಟಾಂಶ ಬಳ್ಳಾರಿ ಜಿಲ್ಲೆಯಲ್ಲಿದೆ. ಒಂದು ಕೇಂದ್ರ ಸ್ಥಾನದಲ್ಲಿರುವ ದೇವರೊಂದು ಹಲವಾರು ಕಾರಣಗಳಿಂದ ಕಾಲಕಾಲಕ್ಕೆ ತನ್ನಸುತ್ತಲ ಪ್ರದೇಶಗಳಿಗೆ ಹರಡಿ ಒಂದು ಸಾಂಸ್ಕೃತಿಕ ವಲಯವನ್ನು ನಿರ್ಮಿಸಿಕೊಳ್ಳುತ್ತದೆ.

ಹೀಗೆಯೇ ಬಳರೆಮ್ಮ ಹಲವೆಡೆ ದುರಗಮ್ಮನಾಗಿ, ಹಲವೆಡೆ ಬಳರೆಮ್ಮ, ಬಳಾರೆಮ್ಮ ಎಂಬ ಮೂಲ ಹೆಸರಿನಿಂದ ಉಳಿದು ಬಂದಿದ್ದು, ರಾಜವಂಶಗಳ ಸಂಪರ್ಕದಿಂದ ಆಯುಧ ಪಾಣಿಯಾಗಿ, ಚತುರ್ಭುಜೆಯಾಗಿ ಮಾರ್ಪಟ್ಟು ದ್ವಿರುಕ್ತಿ ದೋಷಕ್ಕೆ ಪಕ್ಕಾಗಿ ‘ಬಳ್ಳಾರಿ ದುರಗಮ್ಮ’ ಎಂದಾದಳು. ಈಕೆ ಹರಪನಹಳ್ಳಿ ತಾಲೂಕು ಅರಸಿಕೆರೆಗೆ ಬಂದು ನೆಲೆ ನಿಂತುದು ಒಂದು ಸ್ವಾರಸ್ಯಕರವಾದ ಕಥೆ. ಅದರ ವಿವರಗಳಿಗೆ ಪ್ರವೇಶಿಸಲು ಇಲ್ಲಿ ಅವಕಾಶ ಸಾಲದು. ಆದರೆ ಸುಮಾರು ೫-೬ ಸಾವಿರ ವರ್ಷಗಳ ಹಿಂದಿನ ಕೃಷಿಕ ಹೊಲೆ ಮಾದಿಗ ಬುಡಕಟ್ಟುಗಳ ಜೀವನ ಪದ್ಧತಿಯನ್ನು ಉಳಿಸಿಕೊಂಡು ಬಂದಿರಬಹುದೋ ಎಂಬಂತಿರುವ ಹಬ್ಬದ ಎರಡು ಘಟನೆಗಳನ್ನು ಇಲ್ಲಿ ಪ್ರಸ್ತಾಪ ಮಾಡಬೇಕಿದೆ. ಇದು ನಮ್ಮ ಜನಪದರ ದೇವರ ಬಗೆಗಿನ ನಂಬಿಕೆಯ ಸ್ವರೂಪವನ್ನು ಅರಿಯಲು ಸಹಾಯಕವಾಗಿದೆ. ಚರಿತ್ರೆಯ ಕಾಲದಿಂದ ಇಂದಿನವರೆಗೂ ಹಲವಾರು ವ್ಯತ್ಯಾಸಗಳು ಆಗುತ್ತ ಬಂದಿದ್ದರೂ ಭೂತಕಾಲದ ಸಂಬಂಧ ಪೂರ್ಣವಾಗಿ ಕಳಚಿಹೋಗಿಲ್ಲ. ಬಳ್ಳಾರಿ ಜಿಲ್ಲೆಯ ಪ್ರತಿ ಹಳ್ಳಿ ಊರುಗಳಲ್ಲಿ ಹೆಣ್ಣ ಗಂಡು, ಸಣ್ಣ ದೊಡ್ಡ, ಮೇಲ್ಜಾತಿ ಕೆಳಜಾತಿ ಎಂಬ ಭೇದವಿಲ್ಲದಂತೆ ಎಲ್ಲ ದೇವರುಗಳಿಗೂ ‘ಕಾರ್ತಿಕ’ ಹಬ್ಬ ಮಾಡುವ ಸಂಪ್ರದಾಯವಿದೆ. ಡಿಶೆಂಬರದಲ್ಲಿ ಬರುವ ಅಮವಾಸ್ಯೆಯಿಂದ ಮುಂದೆ ಸೂನೇವು ಪ್ರಾರಂಭವಾಗುವುದರಿಂದ ಅದರ ಹಿಂದಿನ ಇಡೀ ತಿಂಗಳು ಕಾರ್ತಿಕವನ್ನು ಮಾಡಲಾಗುತ್ತದೆ. ಇದಕ್ಕೆ ಕೇಂದ್ರ ಸ್ಥಾನ ವಿಜಯನಗರ ಸಾಮ್ರಾಜ್ಯ ಕಾಲದ ಹಂಪಿಯ ವಿರುಪಾಕ್ಷನ ದೀಪೋತ್ಸವವಾಗಿರುವ ಸಾಧ್ಯತೆಯಿದೆ. ಅರಸಿಕೆರೆ ದಂಡಿನ ದುರುಗಮ್ಮನ ಎರಡು ಗುಡಿಗಳು ಹರಿಜನಕೇರಿಯಲ್ಲಿವೆ. ಆಕೆಗೆ ೧೫-೧೨-೯೫ ರಂದು ಕಾರ್ತಿಕೋತ್ಸವವನ್ನು ಮಾಡಲಾಯಿತು. ಈ ಊರಲ್ಲಿ ಬೇರಾವ ದೇವರುಗಳಿಗೂ ನಡೆಯದಂಥ ಹಬ್ಬ ಈ ಅಮ್ಮನ ಹೆಸರಿನಲ್ಲಿ ಕಾರ್ತಿಕದ ನಂತರದ ಎರಡು ದಿನಗಳಲ್ಲಿ ನಡೆಯುತ್ತದೆ. ೧೭-೧೨-೯೫. ರಂದು ಭಾನುವಾರ ಬೆಳಿಗ್ಗೆ ಅಮ್ಮ ಹೊಳೆಗೆ ಹೋಗಿ ಬರುವ ಸಂದರ್ಭವಿದೆ. ಊರಿಂದ ೨. ಕಿ. ಮೀಟರು ದೂರದ ಹೊಂಡದಲ್ಲಿ ದೇವಿಯ ಕೇಲುಗಳನ್ನು ತೊಳೆದು ಪೂಜಿಸುವವರು ಮಾದಿಗಕುಲದ ಪೂಜಾರಿಗಳು. ಇದೇ ಕುಲದ ಐದು ಜನ ದೇವರು ಹೊತ್ತ ಹೆಂಗಸರನ್ನು ಈ ಸಂದರ್ಭದಲ್ಲಿ ದುರುಗಿಯರನ್ನಾಗಿ ಮಾಡಲಾಗುತ್ತದೆ. ಕೂದಲು ಕೆದರಿ ಬಿಟ್ಟು ಕೈಗೆ ಕಂಕಣ ಕಟ್ಟಿ ಮುಖದ ತುಂಬ ಅರಿಶಿಣ, ಕುಂಕುಮ ಬಳಿದುಕೊಂಡು ಇದೊಂದು ದಿನ ಮಾತ್ರ ಇವರು ದುರುಗಿಯರಾಗುತ್ತಾರೆ. ಅಂದರೆ ಸಾಕ್ಷಾತ್ ಅಮ್ಮನೇ ಆಗುತ್ತಾರೆ. ಇವರ ಜತೆ ಸೀರೆಯ ಗೊಂಗಡಿ ಹೊತ್ತ, ಪಟ್ಟದ ಪೂಜಾರಿ ಅಮ್ಮನ ಕೇಲು ಹೊತ್ತು ಗುಡಿಗೆ ಬರುತ್ತಾನೆ. ಹೊಳೆಯಿಂದ ದೇವರು ಎದ್ದ ಕೂಡಲೇ ಬೇಡಿಕೊಂಡ ಕುರುಬರು ಮರಿಗಳನ್ನು ಹೊಟ್ಟೆ ಮೇಲು ಮಾಡಿ ಕಾಲು ಜಗ್ಗಿ ಹಿಡಿದು ನಿಂತಿರುತ್ತಾರೆ. ಈ ವರ್ಷ ಇಂಥ ೧೪೦ ಮರಿಗಳನ್ನು ಪೂಜಾರಿಯ ಪಕ್ಕದಲ್ಲಿರುವ ತಳವಾರ ದೊಡ್ಡ ಕುಡುಗೋಲಿನಿಂದ ಕಡಿಯುತ್ತ ಬಂದ ಇದರ ಮಧ್ಯೆ ರಕ್ತದ ದಾರಿಯಲ್ಲಿ ಅಮ್ಮನ ಕೇಲು ಹೊತ್ತು ಪೂಜಾರಿ ನಡೆದು ಬರುತ್ತಾನೆ. ಇದಾದ ಕೂಡಲೇ ಹಬ್ಬಕ್ಕೆ ನೆರೆದ ಜನ ಲಿಂಗಾಯತರಾದಿಯಾಗಿ ಕುರುಬ ಬೇಡ ಗೊಲಲ ಉಪ್ಪಾರ ಹೊಲೆಯ ಮಾದಿಗ ಎಂಬ ಜಾತಿ ಭೇದವನ್ನು ಸಂಪೂರ್ಣ ನಾಶಮಾಡಿ ರಸ್ತೆಯ ಮಧ್ಯೆ ಡಬ್ಬ ಮಲಗಿ ಎರಡು ಕಿಲೋಮೀಟರು ಮಾನವ ರಸ್ತೆಯನ್ನು ಅಥವಾ ಮಾನವ ನಡೆಮುಡಿಯನ್ನು ನಿರ್ಮಿಸುತ್ತಾರೆ. ಈ ಅದ್ಭುತ ಸನ್ನಿವೇಶ ಸಮೂಹ ಸನ್ನಿ. ಹೀಗೆ ಡಬ್ಬ ಮಲಗಿದ ಹೆಂಗಸರು, ಗಂಡಸರು, ಮಕ್ಕಳು, ಮುದಿಯರನ್ನು ತುಳಿಯುತ್ತ ದೇವಿಯನ್ನು ಹೊತ್ತ ಮಾದಿಗರ ಪೂಜಾರಿ ಗುಡಿಗೆ ಬರುತ್ತಾನೆ. ಇವನ ಜತೆ ಬಂದ ದುರುಗಿಯರು ಗುಡಿಯ ಒಂದು ಭಾಗವಾಗಿರುವ ಕೋಣೆಯಲ್ಲಿ ಜೋಳದ ರಾಶಿಯ ಮೇಲೆ ಸಂಜೆಯ ವರೆಗೂ ಕೂತಿರುತ್ತಾರೆ. ಸಂಜೆ ಐದೂವರೆಗೆ ಜಾತ್ರೆಗೆ ಸೇರಿದ ಜನ ಗುಡಿಯ ಸುತ್ತಲ ಅಂಗಳದಲ್ಲಿ ನೂರಾರು ಸಂಖ್ಯೆಯಲ್ಲಿ ಊಟಕ್ಕೆ ಕೂರುತ್ತಾರೆ. ಇದು ಒಂದೇ ಪಂಕ್ತಿಯಲ್ಲಿ ಮಾತ್ರ ನಡೆಯುವ ಸಾಮೂಹಿಕ ಭೋಜನ. ಕೇರಿಯ ಎಲ್ಲರ ಮನೆಗೂ ಭಕ್ತರು ಕೊಟ್ಟ ಮೀಸಲು ಅಕ್ಕಿಯನ್ನು ಹಂಚಿ ಅನ್ನ ಮಾಡಿಸಿ ಗುಡಿಯಲ್ಲಿ ಕೂಡಿಟ್ಟಿರುತ್ತಾರೆ. ಎರಡು ಮೂರು ದಿನಗಳಿಂದ ದೂರ ದೂರದಿಂದ ಬರುವ ಭಕ್ತರು ತಂದ ಮೀಸಲು ಹಾಲು ತುಪ್ಪ ಮೊಸರು ಮೊದಲಾದ ರಸಾಯನವನ್ನು ಗುಡಿಯಲ್ಲಿಟ್ಟಿರುವ ನಾಲ್ಕು ಡ್ರಮ್ಮುಗಳಲ್ಲಿ ಸಂಗ್ರಹಿಸಿಟ್ಟಿರುತ್ತಾರೆ. ಇದೆಲ್ಲವನ್ನೂ ಪಂಕ್ತಿಗೆ ಬಡಿಸಿರುತ್ತಾರೆ. ಆದರೆ ಗುಡಿಯ ಒಳಗೆ ದುರುಗಿಯ ಊಟವಾಗುವ ವರೆಗೆ ಪಂಕ್ತಿ ಊಟ ಮಾಡುವಂತಿಲ್ಲ. ಗರ್ಭಗುಡಿಯ ಮುಂದಿನ ಕೋಣೆಯಲ್ಲಿ ಪರದೆ ಇಳಿಬಿಟ್ಟು ಅನ್ನ ಮೀಸಲು ಹಾಲು ತುಪ್ಪ, ಮೊಸರು, ಸುಲಿದ ಬಾಳೆಹಣ್ಣು, ಹೋಳಿಗೆಗಳನ್ನು ಜೋಳದ ರಾಶಿಯಂತೆ ಇಲ್ಲವೇ ಬಣವಿಯಂತೆ ಪೂಜಾರಿಗಳು ವ್ಯವಸ್ಥಿತವಾಗಿ ಕುಟುರಿ ಮಾಡುತ್ತಾರೆ. ಇದರ ಬಹು ನಿಧಾನವಾಗಿ ಅಂದವಾಗಿ ನಡೆಯುವ ಕ್ರಿಯೆ. ಕೊನೆಗೆ ಈ ಅನ್ನದ ಗುಂಪಿಗೆ ಪೂಜೆ ಸಲ್ಲಿಸಿ ಊದಿನ ಕಡ್ಡಿಗಳನ್ನು ನಕ್ಷತ್ರಗಳಂತೆ ಚುಚ್ಚುತ್ತಾರೆ. ದುರುಗಿಯರನ್ನು ಕರೆತಂದು ಅನ್ನದ ರಾಶಿಗೆ ಕೈಯಿಡಿಸಿ ಮತ್ತೆ ಗರ್ಭ ಗುಡಿಯಲ್ಲಿಯ ಅಮ್ಮನನ್ನು ಪೂಜೆ ಮಾಡಿ ಅನ್ನಕ್ಕೆ ಕರ್ಪುರ ದೀಪ ಬೆಳಗಿ ಉಧೋ ಉಧೋ ಅನ್ನುತ್ತಾರೆ. ದುರುಗಿಯರು ರಾಶಿಯ ಮೂರ್ನಾಲ್ಕು ತುತ್ತು ಉಂಡದ್ದೇ ತಡ ಅಲ್ಲಿ ಕಾತರದಿಂದ ನೆರೆದವರೆಲ್ಲ ರಾಶಿಯನ್ನು ಹುಲುಸು ಎಂದು ಗೆಬರಾಡಿಕೊಂಡು ಒಯ್ಯುತ್ತಾರೆ. ಊಟ ಮಾಡುತ್ತಾರೆ. ಪ್ರಸಾದವೆಂದು ಪಂಕ್ತಿಯ ರಾಶಿ ಅನ್ನಕ್ಕೆ ಸೇರಿಸುತ್ತಾರೆ. ಹೀಗೆ ದುರುಗಿಯರು ಊಟ ಮಾಡುತ್ತಾರೆ. ಪ್ರಸಾದವೆಂದು ಪಂಕ್ತಿಯ ರಾಶಿ ಅನ್ನಕ್ಕೆ ಸೇರಿಸುತ್ತಾರೆ. ಹೀಗೆ ದುರುಗಿಯರು ಊಟ ಮಾಡಿದ ಶಾಸ್ತ್ರದ ನಂತರವೇ ಹೊರಗೆ ನೆರೆದ ಪಂಕ್ತಿಯ ಊಟ ಪ್ರಾರಂಭ. ತೆಲಗು ನಾಡಿನ ಮೊಲರು (ಹೊಲೆಯರು) ಮದುವೆಯ ಸಂದರ್ಭದಲ್ಲಿ ಇಂಥದೇ ಅನ್ನದ ರಾಶಿಯನ್ನು ಮಾಡಿ ಸುಂಕಲಮ್ಮ ಎಂದು ಪೂಜಿಸಿ ಪ್ರಾಣಿ ಬಲಿಕೊಟ್ಟು ಅದನ್ನು ಸೇವಿಸುತ್ತಾರೆ. ಇಂಥ ಅನ್ನದ ಅಮ್ಮಂದಿರು ದ್ರಾವಿಡ ಕೃಷಿಕ ಸಮಾಜಗಳಲ್ಲಿ ಅನೇಕ ವಿಧದಿಂದ ಅನೇಕ ಸಂದರ್ಭಗಳಲ್ಲಿ ಬರುತ್ತಾರೆ. ಇದು ಅತ್ಯಂತ ಖಚಿತವಾಗಿ ಸಾವಿರಾರು ವರ್ಷಗಳ ಹಿಂದಿನ ಕೃಷಿಕ ಬುಡಕಟ್ಟು ಸಮಾಜ ಕೂಡಿದುಡಿದು, ಕೂಡಿ ಸಂಗ್ರಹಿಸಿ, ಕೂಡಿ ಉಣ್ಣುವ ರೀತಿ ರಿವಾಜನ್ನು ಸೂಚಿಸುತ್ತದೆ. ಇಲ್ಲಿ ಆ ಇಡೀ ದಿನ ದೇವರು ಹೊತ್ತ ವೇಶ್ಯಯರೇ ದೇವರುಗಳಾಗಿ (ದುರುಗಿಯರು) ಮಾರ್ಪಡುವುದು ಮಾತೃ ಪ್ರಧಾನ ಸಮಾಜದ ತಾಯಿ ಪಂಥದ ಪಳೆಯುಳಿಕೆಯಾಗಿದೆ. ಮಹಿಳೆಯರೇ ಕೃಷಿಯನ್ನು ಮೊದಲು ಕಂಡು ಹಿಡಿದರು, ಎಂಬ ವಿದ್ವಾಂಸರ ವಾದಕ್ಕೆ ಅನುಗುಣವಾಗಿ ದುರುಗಿಯರು ಹೊರಗೆ ಬರದಂತೆ ಇಡೀ ದಿನ ಜೋಳದ ಮೇಲೆ ಕೂತಿರುತ್ತಾರೆ. ಇದು ಫಲವಂತಿಕೆಯ ಸಂಕೇತವಾಗಿದೆ. ಇಲ್ಲಿ ಮೋಕ್ಷ ಪರಲೋಕ, ಮೊದಲಾದ ಅಧ್ಯಾತ್ಮವಾದಿ ಪರಿಕಲ್ಪನೆಗಳೇ ಇಲ್ಲ. ಬಹುಶಃ ಇಡೀ ಬುಡಕಟ್ಟಿನ ಹೆಂಗಸರೇ ಮೊದಲು ದುರುಗಿಯರಾಗುತ್ತಿದ್ದರು. ಇದು ಗಿರೀಪದ. ಈಗ ಇದು ಸಾಂಕೇತಿಕ ವಾಗುಳಿಯಿತು. ಪುರುಷಪ್ರಧಾನ ಸಮಾಜ ಒತ್ತಡದಿಂದ ಸ್ತ್ರೀ ಪೂಜಾರಿಯ ಸ್ಥಾನದಲ್ಲಿ ಅಮ್ಮನ ಪೂಜಾರಿ ಪುರುಷನಾದುದು ಗಮನಾರ್ಹ. ಅಂತೆಯೇ ಆತ ಸ್ತ್ರೀ ವೇಷಧಾರಿಯಾಗಿಯೇ ಇರಬೇಕಾಯಿತು. ಹಾಗಾಗಿ ಕೇಲು ಹೊತ್ತಾಗ ಆತ ಸೀರೆಯ ಗೊಂಗಡಿ ಹೊತ್ತಿರುವುದು ಗಿರೀಪದ, ಜಾನಪದವಾದುದರಿಂದ ದೇವರು ತುಳಿಯಲೆಂದು ಜನ ಡಬ್ಬ ಬೀಳುವ ಪರಿಸ್ಥಿತಿ ಪ್ರಾಪ್ತವಾಯಿತು.

ಋಗ್ವೇದದ ಮೊದಲ ಭಾಗ ಹುಟ್ಟಿದ ಕಾಲದ ಆರ್ಯ ವೈದಿಕರ ಯಜ್ಞವು ಅವರ ಬುಡಕಟ್ಟು ಜೀವನದ ಅನಿವಾರ್ಯ ಭಾಘವಾಗಿದ್ದಾಗ ನಡೆಯುತ್ತಿದ್ದ ಕ್ರಮಗಳನ್ನು ಈ ದುರುಗಮ್ಮನ ಹಬ್ಬ ಇನ್ನೊಂದು ವಿಧದಿಂದ ಸೂಚಿಸುತ್ತದೆ. ಲಿಖಿತ ರೂಪಿ ಪ್ರಧಾನ ಪರಂಪರೆಗೆ ವಿರುದ್ಧವಾಗಿ ಲಿಖಿತ ಮತ್ತು ಆಚರಣಾತ್ಮಕವಾಗಿರುವ ಜಾನಪದ ಸಂಪ್ರದಾಯವೊಂದರ ಈ ದೀರ್ಘವಾದ ವಿವರಣೆಗಳು ಕನ್ನಡ ದ್ರಾವಿಡ ಸಂಸ್ಕೃತಿಯಲ್ಲಿ ದೇವರುಗಳ ಕುರಿತು ಸಂಚಿಕೆಯನ್ನು ಸ್ಪಷ್ಟವಾಗಿ ವಿಶದೀಕರ ಸುತ್ತದೆಂದು ನನ್ನ ಭಾವನೆ.

ಮೇಲಿನ ಹಬ್ಬದಲ್ಲಿ ವಲಸೆಗಾರ ಪಶುಪಾಲಕರು ಹೊಳೆ ದಂಡೆಯಲ್ಲಿ ಕುರಿಗಳನ್ನು ಬಲಿಗಾಗಿ ತಂದಿರುವಲ್ಲಿ ಮತ್ತು ಅವನ್ನು ಬಲಿಕೊಡುವಲ್ಲಿ ಮಾತ್ರ ಸೇರಿಕೊಳ್ಳುತ್ತಾರೆ ಎಂಬುದನ್ನು ಗಮನಿಸಬಹುದು. ಅಲ್ಲಿಗೆ ಅವರ ಪಾತ್ರ ಮುಗಿಯುತ್ತದೆ. ಮೈಲಾರನ ಜಾತ್ರೆ, ಕಾಡುಗೊಲ್ಲ, ಮ್ಯಾಸನಾಯಕರ ಪೆಟ್ಟಿಗೆ ದೇವರುಗಳ ಜಾತ್ರೆಗಳಲ್ಲಿ ಈ ಪಶುಪಾಲಕ ವಸಲೆಗಾರ ಕುಲಗಳ ಪಿತೃಪ್ರಾಧಾನ್ಯತೆ ಎದ್ದು ಕಾಣುತ್ತದೆ. ಮೈಲಾರದಲ್ಲಿ ದೇವರು ಪ್ರಧಾನ ಗೊರವಪ್ಪನ ವೇಷದಲ್ಲಿ ಪ್ರತ್ಯಕ್ಷನಾಗುತ್ತಾನೆ. ಆದರೆ ಕೃಷಿ ಪ್ರಧಾನ ಮಾತೃ ಮೂಲೀಯ ಹೊಲೆ ಮಾದಿಗ ಸಮಾಜದಲ್ಲಿ ಆಟಿಕಳಂಜ, ಕಂಬುಲ, ಕರಂಗೋಲು, ಕಾಡ್ಯಾನಾಟ (ನಾಗಾರಾಧನೆ) ವಿವಿಧ ಬಗೆಯ ಅಮ್ಮಂದಿರ ಹಬ್ಬಗಳು ಮುಂತಾದವುಗಳಿವೆ. (ಇದರ ವಿವರಗಳನ್ನು ನನ್ನ ‘ಹಬ್ಬಗಳು’ ಮತ್ತು ಜಾತ್ರೆಗಳು ಎಂಬ ಎರಡು ಪುಸ್ತಕಗಳಲ್ಲಿ ಗಮನಿಸಬಹುದು.) ದಕ್ಷಿಣ ಕನ್ನಡ ಜಿಲ್ಲೆಯ ತುಳು ಜನಾಂಗದಲ್ಲಿ ಹರಿಜನರ ಹಲವು ಪಂಗಡಗಳಿವೆ. ಇವರಲ್ಲಿ ಮನ್ಸರು ಅಂಥವರು ಕೃಷಿಗೆ ಸಂಬಂಧಪಟ್ಟು ಮಾಡುವ ಇವರ ‘ಕರಂಗೋಲು’ ಆಚರಣೆಯನ್ನು ವಿವರವಾಗಿ ಡಾ. ಚನ್ನಪ್ಪಗೌಡ ವಿಶ್ಲೇಷಿಸಿದ್ದಾರೆ. (ಸಿರಿ-೩೯೨) ಆದರೆ ಕೃಷಿಕ ಮೂಲ ನಿವಾಸಿಗಳಾದ (ಮೂಲೊದಕ್ಲು) ಮನ್ಸರ ಆದಿಮ ಬೇಸಾಯವನ್ನು ಈ ಆಚರಣೆ ಸೂಚಿಸುವುದನ್ನು ಅವರು ಮನಗಾಣುವುದಿಲ್ಲ. ಜಾತಿ ವರ್ಗ ಸಮಾಜದ ಪ್ರಧಾನ ಆಚರಣೆ ಮತ್ತು ಹಾಡಿನಲ್ಲಿರುವುದೇ ಇದಕ್ಕೆ ಕಾರಣವಾಗಿದೆ. ಈ ಆಚರಣೆಯಲ್ಲೂ ಸಾಮೂಹಿಕ ಭೋಜನ ಮತ್ತು ಪ್ರಸಾದ ವಿತರಣೆಗಳಿವೆ. ಗ್ರಾಮದ ಇತರ ಜಾತಿಯ ಜನಗಳು ಈ ಆಚರಣೆಯಲ್ಲಿ ಭಾಗವಹಿಸುತ್ತಾರೆ. ಆಶ್ಚರ್ಯವೆಂದರೆ ಗೌಡರು ಇದರ ವಿವರಗಳನ್ನು ನೀಡುವುದಿಲ್ಲ. ಆದರೆ ಗೌಡರು ಕೊಡುವ ವಿವರಗಳು ಅನುಮನವಿಲ್ಲದಂತೆ ಬುಡಕಟ್ಟು ಕಾಲದ ಮೂಲ ನಿವಾಸಿ ಕೃಷಿಕ ಮನ್ಸರ ಮಾಂತ್ರಿಕ ವಿಧಿಕ್ರಿಯೆಗಳನ್ನು ಸೂಚಿಸುತ್ತದೆ. ಇಲ್ಲಿ ‘ಪೊಲಿ'(ಸಮೃದ್ಧಿ) ಇದೆ, ಕುಣಿತವಿದೆ, ಹಾಡಿದೆ, ವಿಧಿಯಾಚರಣೆಯಿದೆ, ಸಮೃದ್ಧಿಯ ಆಶೆಯವಿದೆ. ಗೌಡರು ತಿಳಿದಿರುವಂತೆ ಕರಂಗೋಲು ಕುಣಿತವಲ್ಲ ಆಚರಣೆ. ದ.ಕ.ದ. ಇನ್ನೊಂದು ಹರಿಜನ ಪಂಗಡ ಮೇರರು ಬತ್ತದ ಸುಗ್ಗಿ ತಿಂಗಳಲ್ಲಿ ಇವರು ಆಚರಿಸುವ ಚನ್ನು ಕುಣಿತದಲ್ಲಿ ಹುಣ್ಣಿವೆಯೆಂದು ಘಟ್ಟದ ಮೇಲಿಂದ ಗರ್ಭಿಣಿಯಾಗಿ ಬರುವ ಚೆನ್ನು ಹೆರುವುದು, ತೊಟ್ಟಿಲು ತೂಗುವುದು ಮೊದಲಾದ ವಿವರಗಳು ಪಾಡ್ದನದಲ್ಲಿವೆ. ವಿಶೇಷವೆಂದರೆ ಚೆನ್ನು (ಚೆಲುವು) ಹೋದ ಕಡೆ ಫಲ ವೃದ್ಧಿಸುತ್ತಿದೆ. ಇಲ್ಲಿ ಭೂತಾಯಿಯನ್ನೇ ಚೆನ್ನು ಎಂದು ಮನುಷ್ಯ ರೂಪದಲ್ಲಿ ಕಲ್ಪಿಸಲಾಗಿದೆ.

ಕನ್ನಡ ಪಶುಪಾಲಕ ಕುಲಗಳ ಜಾತ್ರೆಗಳ ಸಂಪ್ರದಾಯದಲ್ಲೂ, ಕನ್ನಡ ಹೊಲೆ ಮಾದಿಗ ಕುಲಗಳ ಹಬ್ಬಗಳ ಸಂಪ್ರದಾಯದಲ್ಲೂ ‘ದೇವರು’ ಅಭೌತಿಕವಲ್ಲ ಅಧ್ಯಾತ್ಮಿಕವಲ್ಲ, ಪರಲೋಕ ಸಂಬಂಧಿಯಲ್ಲ. ಕುಲಕ್ಕಾಗಿ, ಬುಡಕಟ್ಟಿಗಾಗಿ ವಿಶೇಷ ಸಾಧನೆ ಮಡಿ ತೀರಿಹೋದ ಹಿರಿಯರೇ ಅಮ್ಮ ಮತ್ತು ಅಪ್ಪಂದಿರು. ಅಂದರೆ ದೇವರುಗಳು ಮ್ಯಾಸನಾಯಕ ಮತ್ತು ಕಾಡುಗೊಲ್ಲರ ದೇವರುಗಳ ಬಗೆಗಿನ ಸಂಚಿಕೆ ಮತ್ತು ಆಚರಣೆಗಳ ಅಧ್ಯಯನದಿಂದ ಇದು ಸೂರ್ಯಸ್ಪಷ್ಟವಾಗಿದೆ. ಅಧ್ಯಾತ್ಮವಾದಿ ತತ್ವಶಾಸ್ತ್ರಕ್ಕೆ ಪ್ರವೇಶಿಸಿರುವ ನಮ್ಮ ದ್ರಾವಿಡ ದೇವರಾದ ಶಿವ, ವಿಷ್ಣು, (ರಂಗ), ವೀರಭದ್ರ ಇವು ಕೂಡ ದ್ರಾವಿಡ ಜನಪದದಲ್ಲಿ ಬುಡಕಟ್ಟು ರಕ್ಷಣೆ ಮತ್ತು ಏಳ್ಗೆಗೆ ಮಡಿದ ವೀರರೆಂದೇ ಚಿತ್ರಿತವಾಗುತ್ತವೆ. ಮೈಲಾರಲಿಂಗ, ಶ್ರೀಶೈಲ ಮಲ್ಲಿಕಾರ್ಜುನ, ಪುರಿಯ ಜಗನ್ನಾಥ, ತಿರುಪತಿ ತಿಮ್ಮಪ್ಪ, ರಂಗನಾಥ, ನಂಜುಂಡ, ಆದಿಚುಂಚನಗಿರಿ ಭೈರವ, ಸಿದ್ಧೇಶ್ವರ ಮೊದಲಾದ ಪುರುಷ ದೇವತೆಗಳು ಇಂಥವು. ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ಅಮ್ಮಂದಿರ ಆಳವಾದ ಅಧ್ಯಯನ ಮಾಡಿದರೆ, ಅದ್ಭುತವಾದ ಹೊಸ ಪ್ರಪಂಚವೇ ನಮ್ಮೆದುರು ತೆರೆದುಕೊಳ್ಳುವ ಸಾಧ್ಯತೆಯಿದೆ.

ಜೀವನದ ಪ್ರತಿ ಘಟನೆ, ವಸ್ತು ವಿವರಗಳೆಲ್ಲವೂ ಅಮ್ಮನಿಂದ ತುಂಬಿಹೋಗಿರುವುದರಿಂದ ಎಲ್ಲವೂ ಅಮ್ಮನೇ ಆಗುತ್ತವೆ. ಮಣ್ಣಮ್ಮ, ಮನೆಯಮ್ಮ, ಬಿಸಿಲಮ್ಮ, ಜೇನಮ್ಮ, ಮಂದಲಿಕಮ್ಮ (ಚಾಪೆಯಮ್ಮ) ತಿಪ್ಪಮ್ಮ, ಎಲ್ಲಮ್ಮ, ಅಣ್ಣಮ್ಮ, ಗಂಗಮ್ಮ, ಬಂಗಾರಮ್ಮ, ಮರೆಯಮ್ಮ, ದಡಾರದಮ್ಮ, ಮೈಲಮ್ಮ, ಇತ್ಯಾದಿ ಇದು ಮಾತೃಪ್ರಧಾನ ಹಿಂದಲ ಹೊಲೆ ಮಾದಿಗ ಸಮಾಜ ಕಂಡುಕೊಂಡ ಲೋಕದೃಷ್ಟಿಯಾಗಿತ್ತು. ದ್ಯಾಮವ್ವ, ಊರಮ್ಮ, ಮಾರೆಮ್ಮ, ಸ್ತ್ರೀ ಭೂತಗಳು ಎಂದು ಕರ್ನಾಟಕದ ನಾಲ್ಕು ಪ್ರಮುಖ ಪ್ರದೇಶಗಳಲ್ಲಿ ಪ್ರಸಾರಗೊಂಡಿರುವ ‘ಅಮ್ಮನ’ ಹಬ್ಬ, ಜಾತ್ರೆ, ಉತ್ಸವ, ಆಚರಣೆ ಪದ್ಧತಿ, ನಂಬುಗೆ, ಸಂಪ್ರದಾಯ ಕಥೆ, ಕಾವ್ಯಗಳನ್ನು ವಿಶ್ಲೇಷಿಸಿದರೆ ಕೃಷಿಕ ಹೊಲೆ ಮಾದಿಗರ ಸಾಂಸ್ಕೃತಿಕ ಕೊಡುಗೆಯ ಅಪೂರ್ವ ದರ್ಶನವಾಗುತ್ತದೆ. ಸ್ಮಶಾನವನ್ನೇ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡು ಒಂದಡೆ ಕಲೆ, ಇನ್ನೊಂದೆಡೆ ವೈದ್ಯಕೀಯಕ್ಕೆ ಮೂಲವಾದ ಮಾಟ ಮಂತ್ರಗಳ ವಿಧಿಕ್ರಿಯೆಗಳನ್ನು ದ್ರಾವಿಡ ಸಮಾಜ ಸಾಧಿಸಿತ್ತು. ಅವು ಸಾಂಖ್ಯ, ನ್ಯಾಯ, ವೈಶೇಷಿಕ ಲೋಕಾಯತ, ಪೂರ್ವಮೀಮಾಂಸೆ, ತಂತ್ರ, ಯೋಗ ಕಲೆಗಳು ಇವೆಲ್ಲವುಗಳಲ್ಲಿ ಪರಿಷ್ಕಾರಗೊಂಡು ಬೆಳೆದವು, ಎಂದು ದೇವಿಪ್ರಸಾದ ಛಟೋಪಾಧ್ಯಾಯ ‘ಲೋಕಾಯತ’ದಲ್ಲಿ ಸ್ಪಷ್ಟಪಡಿಸುತ್ತಾರೆ. ಆಳವಾದ ಶೋಧನೆಯ ಮೂಲಕ ಇನ್ನೂ ಹೆಚ್ಚಿನ ಫಲಿತಾಂಶಗಳನ್ನು ಕಂಡುಕೊಳ್ಳಲು ಅವಕಾಶವಿದೆ. ವೈದಿಕ ಬ್ರಾಹ್ಮಣ ಮತಕ್ಕೆ ದೊಡ್ಡ ಆಘಾತವನ್ನುಂಟುಮಾಡಿದ ನಿರೀಶ್ವರವಾದಿ ಜೈನ, ಬೌದ್ಧ ತತ್ವಗಳ ಸೃಷ್ಟಿಗೆ ಉತ್ತರದ ದ್ರಾವಿಡ ಪದ್ಧತಿ ಪರಂಪರೆಗಳೇ ಕಾರಣವಾಗಿವೆ ಎಂಬುದು ನನ್ನ ಗ್ರಹಿಕೆಯಿದೆ. ಇದನ್ನು ಸಹ ಹೆಚ್ಚಿನ ಶೋಧನೆಯಿಂದ ಬೆಳಕಿಗೆ ತರಬೇಕಿದೆ.

ಉತ್ತರದ ಆರ್ಯ ವೈದಿಕರ ಸಾವಿರಾರು ವರ್ಷಗಳ ಸಾಂಸ್ಕೃತಿಕ ದಾಳಿಯನ್ನು ಎದೆಗುಂದದೇ ತಡೆದು ನಿಂತು ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಪರಂಪರೆಯನ್ನು ಇಡೀ ದಕ್ಷಿಣ ಭಾರತದ ಜನಸಾಗರ ಉಳಿಸಿಕೊಂಡು ಬಂದಿದೆ. ಇದು ಅವರ ದೇವರುಗಳ ಬಗೆಗಿನ ನಂಬಿಕೆ ಮತ್ತು ಆಚರಣೆಗಳನ್ನು ಸಂಶೋಧಿಸುವುದರಿಂದ ತಿಳಿಯುತ್ತದೆ. ಇತಿಹಾಸ, ತತ್ವಶಾಸ್ತ್ರ, ಸಾಹಿತ್ಯ, ಆಯುರ್ವೇದ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರವೇ ಮೊದಲಾದ ಜ್ಞಾನವೆಲ್ಲ ಉತ್ತರದ ಸಾಂಸ್ಕೃತಿಕ ಯಜಮಾನಿಕೆಯಿಂದ ತುಂಬಿ ಹೋಗಿದೆ. ಇದನ್ನು ಸಮರ್ಥವಾಗಿ ಎದುರಿಸಬಲ್ಲ ಸಾಮರ್ಥ್ಯ ದಕ್ಷಿಣ ಭಾರತದ ಜಾನಪದದ ವೈಜ್ಞಾನಿಕ ಶೋಧನೆಯಿಂದ ಲಭಿಸುತ್ತದೆಂದು ತಿಳಿಯುವುದು ಅಗತ್ಯವಿದೆ. ದ್ರಾವಿಡ ದೇವರುಗಳ ದ್ವಂದ್ವಮಾನ ಮತ್ತು ಚಾರಿತ್ರಿಕ ಭೌತಿಕವಾದೀ ತತ್ವಜ್ಞಾನದ ಶಿಸ್ತಿನಲ್ಲಿ ನಡೆವ ಅಧ್ಯಯನ ಮೂಢನಂಬಿಕೆಯನ್ನು ಬೆಂಬಲಿಸುವುದಿಲ್ಲ ಪ್ರತಿಯಾಗಿ ನಮ್ಮ ಸಂಸ್ಕೃತಿ ಪರಂಪರೆಯ ಅದ್ಭುತಲೋಕವನ್ನು ತೆರೆದು ತೋರಿಸುತ್ತದೆ.

ಒಟ್ಟಾರೆ : ೧) ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ದೇವರುಗಳ ಮತ್ತು ಆಚರಣೆಗಳ ತೌಲನಿಕ ಅಧ್ಯಯನ ಆಗತ್ಯವಿದೆ. ಇಡೀ ಭಾರತದ ದಲಿತರು ಮತ್ತು ದ್ರಾವಿಡ ಮೂಲದ ಜನಾಂಗಗಳ ದೇವರು ಮತ್ತು ಆಚರಣೆಗಳ ತೌಲನಿಕ ಅಧ್ಯಯನ ಕೈಕೊಳ್ಳಬೇಕಾಗಿದೆ. ೨) ಇವುಗಳ ಅಧ್ಯಯನ ಮೂಲ ದ್ರಾವಿಡ ಜನಾಂಗಗಳ ಇತಿಹಾಸ ಸಂಸ್ಕೃತಿ ಪರಂಪರೆಗಳ ಅಧ್ಯಯನಕ್ಕೆ ಆಕರವಾಗುವುದನ್ನು ಅಲ್ಲಗಳೆಯಲಿಕ್ಕಾಗದು. ದೇವರು ಸಂಬಂಧಿ ಮೂಢನಂಬಿಕೆ, ಕಂದಾಚಾರ, ಅರ್ಥಹೀನ ಸಂಪ್ರದಾಯಗಳು ಜನಪದರನ್ನು ತೀವ್ರವಾಗಿ ಬಾಧಿಸುತ್ತಿದ್ದರೂ ಕೂಡ ಕಾಲ ದೇಶ ಸ್ಥಿತಿಗಳು ಪ್ರಗತಿಪರವಾಗಿ ಪರಿವರ್ತನೆಹೊಂದುತ್ತ ಹೋದಂತೆ ಜನರ ದೇವರ ಸಂಬಂಧಿ ನಂಬಿಕೆಗಳೂ ಕೂಡ ಪರಿವರ್ತನೆಯಾಗುತ್ತ ಮುಂದೊಂದು ದಿನ ವೈಜ್ಞಾನಿಕ ನಂಬಿಕೆಗಳು ದೃಢವಾಗಬಹುದು. ಆಗ ಮಾನವಕುಲಕ್ಕೆ ದೇವರುಗಳ ಅಗತ್ಯವೇ ಉಳಿಯಲಾರದು. ೩) ಪರ್ಯಾಯ ಸಂಸ್ಕೃತಿ ಮಾದರಿಯೊಂದರ ಪರಿಕಲ್ಪನೆ ಸಾಧ್ಯವಾಗುವುದು  ಈ ಬಗೆಯ ಅಧ್ಯಯನದಿಂದಲೇ ೪) ಲಿಖಿತ ಪರಂಪರೆ ಕೊಟ್ಟಿರುವ ಅನೇಕ ಪಾವನಗ್ರಹಗಳನ್ನು ನಾಶಪಡಿಸಿಕೊಳ್ಳಲು ಈ ಅಭ್ಯಾಸ ಸಹಾಯಮಾಡುತ್ತದೆ.