ಸುತ್ತಮುತ್ತ ಕತ್ತಲು,
‘ಏನು, ಯಾಕೆ’ – ಕೇಳಬೇಡ
ಅರಿವರಿಯದ ಬತ್ತಲು ;
ಟಕ್ಕ ಟಕ್ಕ ಟಕ್ಕ ಸದ್ದು
ಅತ್ತ ಇತ್ತ ಎತ್ತಲು !

‘ಏನಿದೇನು’ ‘ತಿಳಿಯೆ ನೀನು’
‘ಏಕೆ ಬಿದ್ದೆ ಈ ಕಡೆ?’
‘ನಿನ್ನಂತೆಯೆ ನೂರು ಬಂಡೆ,
ಈಗ ಇದೇ ನಿಲುಗಡೆ.’

ಅದೋ ಬಂತು ಒಂದು ಕೈಯಿ
ಮೈಯಿಲ್ಲದ ಮನಸದು !
ಮಿಂಚಿನುಳಿಯ ಹಿಡಿದು ಬಂತು
ಕನಸಿನಾಚೆ ಕನಸದು !
‘ಟಕ್ಕ ಟಕ್ಕ ಟಕ್ಕ ಸದ್ದು
ಕೊರೆಯುತಿಹುದು ಜೀವವ’
‘ಉಳಿಯ ಕಿರಣ ತೆರೆಯುತಿಹುದು
ನಿನ್ನನಂತ ಪದರವ !’
‘ಅಯ್ಯೊ ನೋವು, ಅಯ್ಯೊ ಪೆಟ್ಟು’
‘ತಾಳಿಕೊಳ್ಳೊ ಕೀಟವೆ,
ಹಾರುತಲಿದೆ ಹುಡಿ ಹುಡಿ ಹುಡಿ
ಸಂಸ್ಕಾರದ ವಾಸನೆ
ತಿಳಿಯದಿದ್ದರೇನೊ ನಿನಗೆ
ದೇವಶಿಲ್ಪ ಕಲ್ಪನೆ.’

‘ನನ್ನನೇನು ಮಾಡುತಿರುವೆ
ಸಾಕು ಸಾಕು ನಿಲ್ಲಿಸು.’
‘ನಿನಗೇತಕೊ ಅದರ ಚಿಂತೆ?’
‘ಸರಿಯೆ, ನನ್ನ ಸಾಯಿಸು.’

‘ಸಾವಲ್ಲವೊ ಮರುಳೇ ಇದು
ಸ್ವಸ್ವರೂಪ ಕಾರಣ.
ಕೃತಿಯು ಮುಗಿದ ಮೇಲೆ ಕಾಣೊ
ಆಕೃತಿಗಳ ದರ್ಶನ !’