ಫೀನಿಕ್ಸ್‌ನಿಂದ ಹೂಸ್ಟನ್‌ಗೆ ಎರಡೂವರೆ ಗಂಟೆಗಳ ಪಯಣ. ನಾನು ಕೂತ ಕಾಂಟಿನೆಂಟಲ್ ಏರ್‌ಲೈನಿನ ವಿಮಾನ, ಅರಿಜ್ಹೋನಾ ರಾಜ್ಯದಿಂದ ಪೂರ್ವಾಭಿಮುಖವಾಗಿ ಟೆಕ್ಸಾಸ್ ರಾಜ್ಯವನ್ನು ಪ್ರವೇಶಿಸಿತು. ನಾನು ವಿಮಾನವನ್ನೇರಿದಾಗ ಮಧ್ಯಾಹ್ನದ ಊಟದ ಸಮಯ. ಎಂದಿನಂತೆ ವಿಮಾನದ ಸಿಬ್ಬಂದಿಯವರು ಪ್ರಯಾಣಿಕರ ‘ಲಂಚ್’ಗೆ ವ್ಯವಸ್ಥೆ ಮಾಡತೊಡಗಿದರು. ಊಟದ ಪ್ಯಾಕೆಟ್‌ಗಳನ್ನಿರಿಸಿಕೊಂಡ ತಳ್ಳುಗಾಡಿ ನನ್ನ ಬಳಿಗೆ ಬಂದಾಗ ನಾನೆಂದೆ ‘ನಾನು ಅಪ್ಪಟ ಶಾಖಾಹಾರಿ’ ಎಂದು. ನನ್ನ ಮಾತು ಬಹುಶಃ ಸಿಬ್ಬಂದಿಯವರಿಗೆ ಸರಿಯಾಗಿ ಕೇಳಿಸಿರಲಾರದು. ನನ್ನ ಬಳಿ ಪ್ರಶ್ನಾರ್ಥಕ ಮುಖ ಮಾಡಿ ನಿಂತ ಗಗನಸಖ (ಸಖಿ ಅಲ್ಲ) ನಿಗೆ ಕೂಡಲೆ ಚೀಟಿಯೊಂದರಲ್ಲಿ ‘No fish, No meat, No egg. Vegetarian’ (ಮೀನು ಬೇಡ, ಮಾಂಸಬೇಡ, ಮೊಟ್ಟೆ ಬೇಡ, ನಾನು ಸಸ್ಯಾಹಾರಿ) ಎಂದು ಬರೆದು ಕೈಗೆ ಕೊಟ್ಟೆ. ಆತ ಅದನ್ನೋದಿಕೊಂಡಿ ಅದೇ ಚೀಟಿಯಲ್ಲಿ ಏನನ್ನೋ ಬರೆದುಕೊಟ್ಟ. ಓದಿ ನೋಡಿದೆ. ‘Chicken, Ok?’ (ಕೋಳಿ, ಆಗಬಹುದಲ್ಲ?) ಎಂದು ಬರೆದಿತ್ತು. ಅಂದರೆ, ಸಸ್ಯಾಹಾರದಲ್ಲಿ ಕೋಳಿಯೂ ಸೇರುತ್ತದೆ ಎಂದಾಯಿತು! ನಾನು ಆತನಿಗೆ ವಿವರಿಸಿದ ನಂತರ, ನಾನು ತಿನ್ನಬಹುದಾದದ್ದು ಏನೂ ಇರಲಿಲ್ಲವಾದ ಕಾರಣ, ನನಗೆ ಒಂದು ಪ್ಯಾಕೆಟ್ ಹಾಲು, ಒಂದಷ್ಟು ಹಣ್ಣಿನ ರಸ ದೊರಕಿತು.

ನಾನು ಟೆಕ್ಸಾಸ್ ರಾಜ್ಯದ ಹೂಸ್ಟನ್‌ದಲ್ಲಿ ಇಳಿದಾಗ ನನ್ನ ಗಡಿಯಾರದಲ್ಲಿ ಸಂಜೆ ನಾಲ್ಕು ಗಂಟೆ. ಆದರೆ ಹೂಸ್ಟನ್ ಕಾಲಮಾನದ ಪ್ರಕಾರ ಅಲ್ಲಿ ಸಂಜೆ ಆರು ಗಂಟೆ. ನನ್ನ ಗಡಿಯಾರವನ್ನು ಎರಡು ಗಂಟೆಗಳ ಕಾಲ ಮುಂದಕ್ಕೆ ತಿರುಗಿಸಿ, ವಿಸ್ತಾರವಾದ ಮೊಗಸಾಲೆಗೆ ಬಂದೆ. ನನಗಾಗಿ ಶ್ರೀ ವತ್ಸಕುಮಾರ್ ಅವರು ಕಾದಿದ್ದರು. ಅವರು ನನ್ನನ್ನು ತಮ್ಮ ಕಾರಿನಲ್ಲಿ ವಿಮಾನ ನಿಲ್ದಾಣದಿಂದ ನಲವತ್ತು ಮೈಲಿಗಳ ದೂರದ ತಮ್ಮ ಸ್ನೇಹಿತರಾದ ಜಯರಾಂ ನಾಡಿಗ್ ಅವರ ಮನೆಗೆ ಕರೆದೊಯ್ದರು. ಅರಿಜ್ಹೋನಾ ಪ್ರಾಂತ್ಯದಲ್ಲಿ ಕಾಣೆಯಾಗಿದ್ದ ಹಸಿರು, ಮತ್ತೆ ಹೂಸ್ಟನ್ನಿನ ದಾರಿಯಲ್ಲಿ ದಟ್ಟವಾಗಿ ಎರಡೂ ಕಡೆ ಬ್ಬಿಕೊಂಡಿತ್ತು.

ಮರುದಿನ ಸೋಮವಾರ, ಕೆಲಸಕ್ಕೆ ಬಿಡುವಿಲ್ಲದಿದ್ದರೂ ವತ್ಸಕುಮಾರ್ ಅವರು ನನಗಾಗಿ ರಜೆಹಾಕಿ, ಅಂದು ನನ್ನನ್ನು ಹೊರಕ್ಕೆ ಕರೆದುಕೊಂಡು ಹೋದರು. ಬೆಳಿಗ್ಗೆ ಹತ್ತುಗಂಟೆಯ ವೇಳೆಗೆ ಮನೆಬಿಟ್ಟ ನಾವು, ಕಾರಿನ ಗಾಲಿಗಳ ಮೇಲೆ ಉರುಳುತ್ತಾ ಹೋದಂತೆ, ಬರೀ ಹಸಿರು, ದಟ್ಟವಾದ ಹಸಿರು; ನಾವು ಊರನಡುವೆ ಹೋಗುತ್ತಿದ್ದರೂ ಮನೆಗಳೇ ಕಾಣದಂತೆ ಮುಚ್ಚಿಕೊಂಡ ಹಸಿರು. ಈ ದಾರಿಯನ್ನು ಕ್ರಮಿಸಿ ದೇವಸ್ಥಾನವೊಂದರ ಬಳಿ ನಿಂತೆವು. ವಿಸ್ತಾರವಾದ ಹಸಿರ ಬಯಲ ನಡುವೆ ಮೂರು ಗೋಪುರಗಳ ದೇವಸ್ಥಾನವೊಂದು ಆಕರ್ಷಕವಾಗಿ ಕಣ್ಣು ಸೆಳೆಯಿತು. ದೇವಸ್ಥಾನದ ಒಳಗೆ ಶುಭ್ರವಾದ ನೆಲ; ಗರ್ಭಗುಡಿಯ ಒಳಗೆ ನಂದಾದೀಪದ ಬೆಳಕಿನಲ್ಲಿ ಶಿವ, ಮೀನಾಕ್ಷಿ ಮತ್ತು ವೆಂಕಟರಮಣಸ್ವಾಮಿಯ ವಿಗ್ರಹಗಳಿದ್ದವು. ಕನ್ನಡವೂ ಸೇರಿದಂತೆ ಇನ್ನೂ ಹಲವು ಭಾಷೆಗಳನ್ನು ಮಾತನಾಡಬಲ್ಲ ಅರ್ಚಕರು ನಮ್ಮ ದೇಶದವರಂತೆಯೆ ಪಂಚೆ ಉಟ್ಟುಕೊಂಡು, ಉತ್ತರೀಯ ಹೊದ್ದುಕೊಂಡು ಪೂಜೆಯಲ್ಲಿ ತೊಡಗಿದ್ದರು. ಬೇಸಗೆಯ ಕೊನೆಗಾಲವಾದ್ದರಿಂದ ಈ ಉಡುಪು; ಇನ್ನುಳಿದ ಬಹುತೇಕ ಛಳಿಗಾಲದಲ್ಲಿ ಇವರ ವೇಷ ಬೇರೆಯೇ ಆಗಿರುವುದು ಅನಿವಾರ‍್ಯ. ಗರ್ಭಗುಡಿಯ ಎದುರು ಹಾಲುಗಲ್ಲು ಹಾಸಿದ ಶುಭ್ರವಾದ ಅಂಗಳ. ಇದು ಅಮೆರಿಕಾದ ಪರಿಸರವಾದ್ದರಿಂದ ದೇವಸ್ಥಾನ ಇಷ್ಟು ಚೊಕ್ಕಟವಾಗಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ದೇವಸ್ಥಾನದ ಒಳ ಅಂಗಳದ ಪಕ್ಕದ ಕೊಣೆಯಲ್ಲಿ ದೇವಸ್ಥಾನದ ಕಛೇರಿಯಲ್ಲಿ ತಮಿಳುನಾಡಿನ ಮ್ಯಾನೇಜರ್ ಒಬ್ಬರು ಕಂಪ್ಯೂಟರ್ ಮುಂದೆ ಕುಳಿತು, ಲೆಕ್ಕಪತ್ರಗಳನ್ನೋ, ದೇವಸ್ಥಾನದ ಕಾರ್ಯಕ್ರಮಗಳನ್ನೋ ರೂಪಿಸುತ್ತಿದ್ದರೆಂದು ಕಾಣುತ್ತದೆ. ಅವರೊಡನೆ ಮಾತನಾಡಿದೆವು. ಈ ದೇವಸ್ಥಾನಕ್ಕೆ ಸಾಕಷ್ಟು ಸಂಖ್ಯೆಯ ಭಕ್ತರು ಬರುತ್ತಾರಂತೆ. ಶನಿವಾರ- ಭಾನುವಾರಗಳು ಅವರ ಸಂಖ್ಯೆ ಹೆಚ್ಚು. ಮಕ್ಕಳಿಗೆ ಕಿವಿ ಚುಚ್ಚುವುದು, ತಲೆಕೂದಲು ತೆಗೆಯಿಸುವುದು, ಇತ್ಯಾದಿಗಳಲ್ಲಿ ನಂಬಿಕೆಯುಳ್ಳವರು ಇಲ್ಲಿ ಬಂದು ಅವುಗಳನ್ನು ನಡೆಸುತ್ತಾರೆ. ಹಲವು ಮದುವೆಗಳೂ ಇಲ್ಲಿ ಆಗುತ್ತವೆ. ಬೇರೆ ಬೇರೆ ಅರ್ಚನೆ-ಅಭಿಷೇಕಗಳಿಗೂ ಕೊರತೆಯಿಲ್ಲ. ಈ ದೇವಸ್ಥಾನವನ್ನು ಕಟ್ಟಿಸಲು ಮುಂದೆ ಬಂದವರು, ಮುಖ್ಯವಾಗಿ ಹೂಸ್ಟನ್ನಿನಲ್ಲಿ ನೆಲಸಿರುವ ಕೆಲವು ಡಾಕ್ಟರುಗಳು ಮತ್ತು ಎಂಜಿನಿಯರ್‌ಗಳು. ಬರುವ ಭಕ್ತಾದಿಗಳೆಲ್ಲ ಭಾರತೀಯರೇ. ದೂರದ ಈ ದೇಶದಲ್ಲಿ ಬಂದು ನೆಲಸಿರುವ ನಮ್ಮ ಭಾರತೀಯರಿಗೆ, ಧಾರ್ಮಿಕ ಅವಶ್ಯಕತೆಗಳನ್ನು ಪೂರೈಸುವ ಇಂಥ ದೇವಸ್ಥಾನಗಳು ಅಮೆರಿಕಾದಲ್ಲಿ ಸಾಕಷ್ಟಿವೆ.

ಧಾರ್ಮಿಕ ನಂಬಿಕೆಗಳು, ದೇವಸ್ಥಾನಗಳ ಅವಶ್ಯಕತೆ, ಇವೆಲ್ಲಾ ಭಾರತದಿಂದ ಬಂದು ನೆಲಸಿ ಹಲವು ವರ್ಷಗಳಿಂದ ವಾಸಮಾಡುತ್ತಿರುವ ಈ ತಲೆಮಾರಿನವರಿಗೆ ಮಾತ್ರ. ಆದರೆ ಇಲ್ಲಿಯೇ ಹುಟ್ಟಿ ಬೆಳೆದ ಇವರ ಮಕ್ಕಳಿಗೆ, ಬಹುಶಃ ಇವೊಂದೂ ಅರ್ಥವಾಗಲಾರವು. ಏನೋ, ಅಪ್ಪ ಅಮ್ಮಂದಿರ ಬಲವಂತಕ್ಕೆ ಈ ಧಾರ್ಮಿಕ ಆಚರಣೆಗಳಲ್ಲಿ ತಾವೂ ಪಾಲುಗೊಳ್ಳುವಂತೆ ತೋರಿಸಿಕೊಳ್ಳುತ್ತವೆ. ಈ ಮಕ್ಕಳು ಬೇರು ಬಿಡುತ್ತಿರುವುದು ಈ ಪರಿಸರದಲ್ಲಿಯೇ, ಅವರ ಬದುಕಿನ ವ್ಯವಹಾರ ಹಾಗೂ ನಾಳಿನ ಅವರ ಜೀವನ ನಡೆಯಬೇಕಾದದ್ದು ಇಲ್ಲಿಯೇ ಎಂಬುದು, ಈ ಹಿರಿಯರಿಗೆ ಗೊತ್ತಿದೆ. ತಮ್ಮನ್ನು ನಿಯಂತ್ರಿಸುವ ಭಾರತೀಯವಾದ ನೆನಪುಗಳು ಹಾಗೂ ನಂಬಿಕೆಗಳು,  ಈ ತಮ್ಮ ಮಕ್ಕಳನ್ನು ಅಷ್ಟಾಗಿ ಕಾಡಿಸುವ ಸಂಗತಿಗಳಲ್ಲ ಎಂಬುದೂ ಇವರಿಗೆ ಗೊತ್ತಿದೆ. ತಮ್ಮ ಮಕ್ಕಳು ಈ ಪರಿಸರದ ಸಂಸ್ಕೃತಿಯಲ್ಲಿ ಕ್ರಮಕ್ರಮೇಣ ಕರಗಿಹೋಗುತ್ತಿರುವುದನ್ನು ಕಂಡು, ಇವರಿಗಾಗುತ್ತಿರುವ ತಲ್ಲಣಗಳನ್ನು ನಾನು ಗಮನಿಸಿದ್ದೇನೆ. ಹೇಗೋ ಏನೋ ಇಲ್ಲಿಗೆ ಬಂದು ಇಲ್ಲಿನ ಲೌಕಿಕ ಸಂತೋಷಗಳಲ್ಲಿ ನೆಮ್ಮದಿಯಾಗಿ ಬದುಕುತ್ತಿರುವ ನಮ್ಮ ಈ ಜನ, ಸ್ವಲ್ಪ ವಯಸ್ಸಾದ ನಂತರ ನಮ್ಮ ದೇಶಕ್ಕೆ ಹಿಂದಿರುಗಿ, ತಮ್ಮ ನೆಂಟರು – ಇಷ್ಟರೊಡನೆ ಬದುಕಬೇಕು ಎಂಬ ಕನಸನ್ನು ಕಟ್ಟಿಕೊಂಡರೂ, ಈ ಮಕ್ಕಳು ಈ ಪರಿಸರವನ್ನು ಬಿಟ್ಟು  ತಮ್ಮ ಜತೆ ಬರಲಾರರು ಎಂಬ ಕಟು ವಾಸ್ತವವನ್ನು ಒಪ್ಪಿಕೊಂಡು ‘ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’ ಎಂಬ ದ್ವಂದ್ವದಲ್ಲಿ ತೊಳಲುತ್ತಿದ್ದಾರೆ. ತಮ್ಮ ಮಕ್ಕಳು, ಈ ದೇಶದ ಹದಿಹರೆಯದವರಂತೆಯೇ, ವಿವಾಹಪೂರ್ವ ಪ್ರಣಯ ವ್ಯವಹಾರಗಳಲ್ಲಿ ತೊಡಗುವ ತೊಡಕನ್ನು ಕಂಡು, ಸದ್ಯ ಈ ನಮ್ಮ ಮಕ್ಕಳು ಹದಿಮೂರು ಹದಿನಾಲ್ಕು ವರ್ಷದವರಷ್ಟಾಗುವವರೆಗೆ ಮಾತ್ರ ಇಲ್ಲಿನ ಉದ್ಯೋಗಗಳಲ್ಲಿ ಇದ್ದು, ಅನಂತರ ನಮ್ಮ ದೇಶಕ್ಕೆ ಹೋಗಿ ಅವಕ್ಕೆ ಮದುವೆಮಾಡಿ ಅಲ್ಲೇ ನಮ್ಮ ನಾಳಿನ ದಿನಗಳನ್ನು ಕಳೆಯುವ ಯೋಚನೆ ನಮ್ಮದು ಎಂದವರ ಮಾತುಗಳನ್ನೂ ನಾನು ಕೇಳಿದ್ದೇನೆ. ಮತ್ತೆ ಕೆಲವರು ಇಲ್ಲಿಗೆ ಹೇಗೋ ಬಂದದ್ದಾಯಿತು, ಇಲ್ಲಿನ ಜೀವನಕ್ರಮವನ್ನು ಅನಿವಾರ‍್ಯವಾಗಿ ಒಪ್ಪಿಕೊಳ್ಳಬೇಕಾಗಿದೆ; ಈ ಮಕ್ಕಳಂತೂ ಇಲ್ಲೇ ಇರುತ್ತೇವೆ ಅನ್ನುವವರು; ಇಲ್ಲಿ ಅವರಿಗೆ ದೊರೆಯುವ ಸುಖ-ಸಂತೋಷ ಸೌಲಭ್ಯಗಳು, ನಾವು ಅವರನ್ನು ಬಲವಂತಕ್ಕೆ ಹಿಂದಕ್ಕೆ ಕರೆದುಕೊಂಡು ಹೋದರೆ, ನಮ್ಮ ದೇಶದಲ್ಲಿ ಖಂಡಿತವಾಗಿಯೂ ಸಿಗಲಾರವು; ಹೀಗಿರುವಾಗ ನಾವೂ ಅವರ ಜತೆಗೆ ಇಲ್ಲೇ ಇದ್ದು ಬಿಡುತ್ತೇವೆ; ಆಗಾಗ ನಾವಂತೂ ಭಾರತಕ್ಕೆ ಹೋಗಿ ಬಂದರಾಯಿತು – ಅನ್ನುತ್ತಾರೆ ಕೆಲವರು. ಅಂತೂ ಈ ಬಗೆಯ ಸಾಂಸ್ಕೃತಿಕ ಸಂಘರ್ಷಕ್ಕೆ ಸಿಕ್ಕ ಈ ಜನಕ್ಕೆ ಬೇಕಾಗಿದೆ, ಇಂಥ ದೇವಸ್ಥಾನಗಳು, ಧಾರ್ಮಿಕ ನಂಬಿಕೆಗಳು ಇತ್ಯಾದಿ.

ನಾನೂ ವತ್ಸಕುಮಾರ್ ಅವರೂ ಈ ವಿಚಾರಗಳನ್ನು ಕುರಿತು ಮಾತನಾಡುತ್ತ ವಿಸ್ತಾರವಾದ ಹುಲ್ಲು ಹಾಸಿನ ಮೇಲೆ ಮಂಡಿತವಾದ, ಮೂರು ಗೋಪುರಗಳ ದೇವಸ್ಥಾನವನ್ನು ನೋಡಿಕೊಂಡು, ಹೊರಕ್ಕೆ ಬಂದಾಗ, ದೇವಸ್ಥಾನಕ್ಕೆ ಸೇರಿದ ಹೂವಿನ ತೋಟದಲ್ಲಿ ಒಬ್ಬಳು ಅಮೆರಿಕನ್ ಮಹಿಳೆ ಕಳೆ ಕೀಳುತ್ತ ಕುಳಿತಿದ್ದಳು. ನಮ್ಮನ್ನು  ಕಂಡು ಎದ್ದು ನಿಂತು ‘ಹಾಯ್’ ಎಂದು ಕೈ ಬೀಸಿ ಮುಗುಳ್ನಕ್ಕಳು. ಆಕೆ ಈ ದೇವಸ್ಥಾನದ ತೋಟದ ಕೆಲಸಕ್ಕಾಗಿ ನೇಮಕಗೊಂಡ ‘ಕೂಲಿ’ ಯವಳೆಂದು ತಿಳಿಯಿತು.  ಆಕೆಯ ಕಾರು ಅಲ್ಲೇ ನಿಂತಿತ್ತು. ಇಪ್ಪತ್ತೈದು ಮೈಲಿ ದೂರದ ತನ್ನ ಮನೆಯಿಂದ ಈಕೆ ದಿನಾ ಕಾರಿನಲ್ಲಿ ಬಂದು, ಸಂಜೆಯವರೆಗೂ ತೋಟದ ಕೆಲಸ ಮಾಡಿ ಮನೆಗೆ ಹಿಂದಿರುಗಿ ಹೋಗುತ್ತಾಳಂತೆ. ನಮ್ಮ ದೇಶದ ‘ಕೂಲಿ’ ಯವರೊಂದಿಗೆ ಇವಳನ್ನು ಹೋಲಿಸಲಾದೀತೆ?

ಮಧ್ಯಾಹ್ನ ವತ್ಸಕುಮಾರ್ ಅವರ ಮಿತ್ರರ ಮನೆಯಲ್ಲಿ ಊಟ ಮುಗಿಸಿಕೊಂಡು, ಒಂದಷ್ಟು ವಿಶ್ರಾಂತಿಯ ನಂತರ ‘ನಾಸಾ’ Nasa ವನ್ನು ನೋಡಲು ಹೊರಟೆವು. Nasa ಎಂದರೆ National Aeronautics and Space Centre ಎಂದು ಅರ್ಥ. ಹೂಸ್ಟನಿನಲ್ಲಿ ನೋಡಬೇಕಾದದ್ದು ಇದನ್ನೇ.  ಬಾಹ್ಯಾಂತರಿಕ್ಷಕ್ಕೆ ಈ ದೇಶದಲ್ಲಿ ನಡೆಯಿಸುವ ಉಡಾವಣೆಗಳ ನಿಯಂತ್ರಣ ಕೇಂದ್ರವೇ ಇದು. ಅನೇಕ ನೂರು ಎಕರೆಗಳಷ್ಟು ವಿಸ್ತಾರದಲ್ಲಿ ಯುದ್ಧೇತರವಾದ ಎಲ್ಲ ಬಗೆಯ ಅಂತರಿಕ್ಷಯಾನಗಳಿಗೂ ಸಂಬಂಧಿಸಿದ ಸಂಶೋಧನೆ ಹಾಗೂ ಅವುಗಳಿಗೆ ಸಂಬಂಧಪಟ್ಟ ಕಛೇರಿಗಳೂ, ಪ್ರಯೋಗಾಲಯಗಳೂ, ಪ್ರದರ್ಶನಾಲಯಗಳೂ ಇಲ್ಲಿ ಕೇಂದ್ರೀಕೃತವಾಗಿವೆ. ಇಲ್ಲಿರುವ ಪ್ರದರ್ಶನಾಲಯದಲ್ಲಿ ಇದುವರೆಗಿನ ಬಾಹ್ಯಾಕಾಶದ ಇತಿಹಾಸವೆಲ್ಲವೂ, ಅಂಕಿ ಅಂಶಗಳೊಂದಿಗೆ ನಮೂದಿತವಾಗಿದೆ. ಅಷ್ಟೇ ಅಲ್ಲ, ಚಂದ್ರಗ್ರಹಕ್ಕೆ ಹಾರಿಸಲಾದ ಹಾಗೂ ಅಲ್ಲಿಂದ  ನೆಲಕ್ಕೆ ಇಳಿಸಲಾದ ಕ್ಷಿಪಣಿಯ ಭಾಗವೂ, ಮನುಷ್ಯ ಚಂದ್ರಗ್ರಹಕ್ಕೆ ಈ ಕ್ಷಿಪಣಿಯಲ್ಲಿ ಕೂತು ಹಾರಿದಾಗ ಅವನು ತೊಟ್ಟ ಕವಚ ಸದೃಶವಾದ ಉಡುಪೂ, ಇರುವುದರ ಜತೆಗೆ, ಚಂದ್ರಲೋಕಕ್ಕೆ ನಡೆದ ಉಡ್ಯಾಣವನ್ನು ತೋರಿಸುವ ಸಾಕ್ಷ್ಯಚಿತ್ರದ ಪ್ರದರ್ಶನದ ವ್ಯವಸ್ಥೆಯೂ ಇದೆ. ಅಷ್ಟೇ ಅಲ್ಲ, ಮನುಷ್ಯನು ಆ ದೂರದ ಚಂದ್ರಮಂಡಲದಿಂದ ತಂದ ಕಲ್ಲುಗಳೂ ಇಲ್ಲಿನ ಪ್ರದರ್ಶನಾಲಯದಲ್ಲಿ ಇವೆ.

ಹೂಸ್ಟನ್‌ದಲ್ಲಿರುವ ‘ನಾಸಾ’ ಎಂಬ ಹೆಸರಿನ ಈ ಸಂಸ್ಥೆ ಮೂಲತಃ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು ನಡೆಯಿಸುವ ಮತ್ತು ರಾಕೆಟ್, ಉಪಗ್ರಹ, ಮಾನವ ಚಾಲಿತ ಅಂತರಿಕ್ಷ ಸಾಧನಗಳನ್ನು ನಿಯೋಜಿಸುವ ಮತ್ತು ಉಡಾವಣೆಗಳನ್ನು ನಿಯಂತ್ರಿಸುವ ಕೇಂದ್ರವಾಗಿದೆ. ವಾಸ್ತವವಾಗಿ ಎಲ್ಲಾ ಉಡಾವಣೆಗಳೂ ನಡೆಯುವುದೂ ಫ್ಲಾರಿಡಾದಿಂದ. ‘ನಾಸಾ’ ಎಂಬ ಹೆಸರಿನ ಈ ಜಟಿಲಕುಟಿಲಮಯ ಪ್ರಯೋಗ – ಪ್ರದರ್ಶನಾಲಯದೊಳಗೆ ವತ್ಸಕುಮಾರ್ ಅವರ ಜತೆಗೆ ಕೆಲವು ಗಂಟೆಗಳ ಕಾಲ ಸುತ್ತಾಡಿದ ನನ್ನ ತಲೆಗೆ ಹೋದದ್ದು ತೀರಾ ಕಡಿಮೆಯೇ ಆದರೂ, ಈ ಪರಿಸರದಲ್ಲಿ ಒಂದೆಡೆ ವೀಕ್ಷಕರಿಗಾಗಿ ಇರಿಸಿರುವ ಬ್ರಹ್ಮರಾಕ್ಷಸ ಗಾತ್ರದ ಕ್ಷಿಪಣಿಗಳನ್ನು ಕಂಡು ನಾನು ದಂಗುಬಡಿದು ನಿಂತದ್ದಂತೂ ನಿಜ.