ವಿದಿಶಾ ನಗರದಲ್ಲಿ ವಾಸುದೇವನ ಆಲಯಕ್ಕೆ ಸಂಬಂಧಿಸಿದ, ಹೆಲಿಯೋಡರಸ್ ಸ್ಥಾಪಿಸಿದ ಗರುಡ ಸ್ತಂಭದ ಉಲ್ಲೇಖ ದೇವಾಲಯದ ಅಸ್ತಿತ್ವವನ್ನು ಗುರುತಿಸುವ ಒಂದು ಮೈಲಿಗಲ್ಲು. ಇದರ ಕಾಲ ಕ್ರಿ.ಪೂ. ಎರಡನೆಯ ಶತಮಾನ.

83_382_DV-KUH

ಕ್ರಿ.ಪೂ. ಎರಡನೆಯ ಶತಮಾನದ ಕಾಲಕ್ಕೆ ವೃಷ್ಣೀ ವಂಶದ ವಾಸುದೇವ ಕೃಷ್ಣ ದೈವತ್ವಕ್ಕೇರಿ, ದೇವಾಲಯಗಳಲ್ಲಿ ಪ್ರತಿಷ್ಠಾಪಿಸಲ್ಪಟ್ಟ ದೇವತೆಯಾಗಿದ್ದ. ಭಾಗವತ ಸಂಪ್ರದಾಯದಲ್ಲಿ ಮೂರ್ತಿಪೂಜೆಯು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿತ್ತು. ವಾಸುದೇವ ಕೃಷ್ಣನನ್ನು ಪರಿಚಯಿಸಿದ ಮಹಾಭಾರತದ ಕಾಲ ದ್ವಾಪರಯುಗ. ವಿದ್ವಾಂಸರು ಮಹಾಭಾರತದ ಕಾಲವನ್ನು ಕ್ರಿ.ಪೂ. ೨೦೦೦ ರಿಂದ ೧೫೦೦ರವರೆಗೆ ಗುರುತಿಸುತ್ತಾರೆ. ಮಹಾಭಾರತದ ಯುದ್ಧ ನಡೆದದ್ದು ದ್ವಾಪರ ಯುಗದ ಅಂತ್ಯದಲ್ಲಿ. ಮಹಾಭಾರತದ ಕಾಲ ಹಾಗೂ ಮಹಾಭಾರತ ಕಾವ್ಯರಚನೆಯ ಕಾಲ ಇವೆರಡರ ನಡುವೆ ಹಲವು ಶತಮಾನಗಳ ಅಂತರವಿದೆ. ಆದರೆ ಈಗ ಲಭ್ಯವಿರುವ ಕಾವ್ಯವು ಕ್ರಿ.ಪೂ. ಐದನೆಯ ಶತಮಾನದಿಂದ ಕ್ರಿ.ಶ. ಎರಡನೆಯ ಶತಮಾನದವರೆಗೆ ಮಾಹಿತಿಯನ್ನು ಒಳಗೊಂಡಿದೆ ಎಂದು ವಿದ್ವಾಂಸರು ಅಭಿ‌ಪ್ರಾಯ ಪಡುತ್ತಾರೆ.

ಮಹಾಭಾರತದಲ್ಲಿ ಪಾಶುಪತರ, ವೈಖಾನಸರ ಮತ್ತು ಪಾಂಚರಾತ್ರಿಗಳ ಉಲ್ಲೇಖಗಳಿವೆ. ಮೋಕ್ಷಧರ್ಮಪರ್ವದಲ್ಲಿ ವೈಖಾನಸರನ್ನು ಒಂದು ಸಮೂಹವಾಗಿ ಗುರುತಿಸುವುದನ್ನು ಕಾಣಬಹುದು (ರಂಗಸ್ವಾಮೀ: ೧೯೮೨ : ೨೨೨೬).

ಋಷೀಣಾಂ ಉಗ್ರತಪಸಾಂ ಧರ್ಮನೈಪುಣ್ಯದರ್ಶಿನಾಃ
ಅನ್ಯೇಚ ಅಪರಿಮೇಯಾಶ್ಚ ಬ್ರಾಹ್ಮಣಾ ವನಮಾಶ್ರಿತಾಃ
ವೈಖಾನಸೋ ವಾಲಖಿಲ್ಯಾಃ ಸೈಕತಾಶ್ಚ ತಥಾಪರೇ

ಆಗಮಗಳ ವರ್ಗೀಕರಣದಲ್ಲಿ, ವೈಷ್ಣವಾಗಮವು ವೈಖಾನಸ ಮತ್ತು ಪಾಂಚರಾತ್ರ ಎಂದು ಎರಡು ಪ್ರಭೇದಗಳನ್ನೊಳಗೊಂಡಿದೆ. ಇವುಗಳಲ್ಲಿ ವೈಖಾನಸವು ಅತಿಪ್ರಾಚೀನವೆಂದು ಪರಿಗಣಿಸಲಾಗಿದೆ. ಇದರ ಪ್ರಾಚೀನತೆಯ ಬಗ್ಗೆ ಮತ್ತಷ್ಟು ಚರ್ಚೆಗೆ ಅವಕಾಶವಿದೆ. ಆಗಮಗಳ ವರ್ಗೀಕರಣವೂ ತದನಂತರದ ಕಾಲದಲ್ಲಿ ರೂಪಿತವಾದದ್ದೆಂದು ತಿಳಿಯಬಹುದು. “ಆಗಮ” ಎಂಬ ಪದವೂ ಆಗಮ-ನಿಗಮಗಳ ವರ್ಗೀಕರಣ ಸಂದರ್ಭದಲ್ಲಿ ಖಚಿತತೆಯನ್ನು ಪಡೆದುಕೊಂಡಿದೆ.

ಆಗಮದ ಪದದ ಬಳಕೆಯೊಂದಿಗೆ, ಈ ಜ್ಞಾನದ ಶಾಖೆಗೆ ತಂತ್ರ ಎಂಬ ಪದವೂ ಹೆಚ್ಚು ರೂಢಿಯಲ್ಲಿತ್ತು. ಸಂಹಿತೆ, ಬ್ರಾಹ್ಮಣ, ಆರಣ್ಯಕ ಉಪನಿಷತ್ತುಗಳನ್ನು ನಿಗಮದ ಅಡಿಯಲ್ಲಿ ಸೂಚಿಸಿದ್ದು ಇದಕ್ಕೆ ಹೊರತಾದ, ನಂತರ ಬಂದ ಸಾಹಿತ್ಯವನ್ನು ಆಗಮವೆನ್ನಲಾಗಿದೆ. ಉಪನಿಷತ್ತುಗಳು ನಿಗಮದಡಿಯಲ್ಲಿ ಸೇರಿದ್ದರೂ ವೇದಾಂತವೆಂದು ಹೆಸರಿಸಲ್ಪಟ್ಟಿದ್ದು ನಿಗಮ- ಆಗಮಗಳ ಸಾಹಿತ್ಯಕ್ಕೆ ನಡುವಣ ಕೊಂಡಿಯಂತಿದೆ. ಆಗಮ ಪದದ ವಿವರಣೆ ಇಂತಿದೆ. (ಆಸೂರೀ:೧೯೭೫:೨).

ಆಗತಂ ಶಿವಕ್ತ್ರೇಭ್ಯೋ ಗತಂ ಜೈವ ಗಿರಿಜಾನನೇ
ಮತಂ ವಾಸುದೇವಸ್ಯ ತಸ್ಮಾತ್ ಆಗಮಮುಚ್ಯತೇ

ಈ ಶ್ಲೋಕವು ಅಲ್ಪ ಸ್ವಲ್ಪ ವ್ಯತ್ಯಾಸದೊಡನೆ ಹಲವೆಡೆ ಪ್ರಸ್ತಾಪಗೊಂಡಿದೆ. ಈ ಸಾಲುಗಳು ವಸ್ತನಿಷ್ಟ ವಿವರಣೆಯನ್ನು ಒಳಗೊಂಡಿಲ್ಲ ಎಂದು ಗಮನಿಸಬಹುದು. ಇದು ಶಿವಪರವಾದ ಹೇಳಿಕೆಯಾಗಿದೆ. ಆದರೆ ವಾಸುದೇವ ಕೃಷ್ಣನನ್ನೂ ತನ್ನ ತೆಕ್ಕೆಯಲ್ಲಿ ತೆಗೆದುಕೊಂಡಿದೆ. ಶೈವಾಗಮಗಳು ವೈಷ್ಣದೇವತೆಗಳನ್ನು ಉಪೇಕ್ಷಿಸಿಲ್ಲವೆಂದು ಗಮನಿಸಬಹುದು. ಶೈವಾಗಮಗಳು ಆರಂಭವಾದಾಗ ಆಗಮಗಳ ವರ್ಗೀಕರಣಕ್ಕೆ ಚಾಲನೆ ದೊರೆತಿದ್ದು, ಈ ಶ್ಲೋಕದ ಮೂಲಕ ಶೈವಾಗಮಗಳ ಮನೋಧರ್ಮ ಪ್ರಕಟಗೊಂಡಿತು ಎನ್ನಬಹುದು. ಮಹಾಭಾರತದ ಕಾಲಕ್ಕೆ ಅಥವಾ ಈ ಕಾವ್ಯರಚನೆಯ ಕಾಲಕ್ಕೆ ವೈಖಾನಸರೆಂಬ ಗುಂಪು ಅರಣ್ಯಗಳಲ್ಲಿ ವಾಸಿಸುತ್ತಿದ್ದರೆಂದು ದೃಢಪಟ್ಟಿದೆ. ಮನುಸ್ಮೃತಿಯ ಭೋಧಾಯನಭಾಷ್ಯದಲ್ಲಿ ವೈಖಾನಸರನ್ನು ಹೆಸರಿಸಲಾಗಿದ್ದು ವೈಖಾನಸೋ ವಾನಪ್ರಸ್ತ ಏವ ಎಂಬ ಉಲ್ಲೇಖವಿದೆ.

ವೈದಿಕ ಧರ್ಮವನ್ನು ಆಚರಿಸುತ್ತಿದ್ದವರಲ್ಲಿ ಕೆಲವು ದ್ವಿಜರು ಗೃಹಸ್ಥಾಶ್ರಮದ ನಂತರ ವಾನಪ್ರಸ್ತಾಶ್ರಮದಲ್ಲಿ ಅರಣ್ಯಗಳಲ್ಲಿ ವಾಸಿಸುತ್ತಿದ್ದರು. ಈ ರೀತಿ ಜೀವಿಸುತ್ತಿದ್ದವರಲ್ಲಿ ವೈಖಾನಸರೂ ಒಂದು ಗುಂಪು; ಇವರೊಂದಿಗೆ ವಾಲಖಿಲ್ಯರು, ಸೈಕತರೂ ಇತರ ಗುಂಪುಗಳು. ಈ ಗುಂಪು ಅಥವಾ ಪಂಗಡಗಳ ಬಗ್ಗೆ ಹೆಚ್ಚು ತಿಳಿದಿಲ್ಲ. ಯಜ್ಞಯಾಗಾದಿಗಳನ್ನು ಆಚರಿಸುತ್ತಿದ್ದ ವೈಖಾನಸರು, ವಯೋಧರ್ಮಕ್ಕೆ ಅನುಸಾರವಾಗಿ ಹೆಚ್ಚು ನಿಶ್ಶಕ್ತರಾದಾಗ, ಯಜ್ಞಯಾಗಾದಿಗಳಿಗೆ ಪರ್ಯಾಯವಾಗಿ ಧ್ಯಾನ, ಜಪತಪಾದಿಗಳನ್ನು ಬೆಳೆಸಿದರು. ಇದು ಮಾನಸ ಪೂಜೆ ಎನ್ನಿಸಿತು. ವೈಖಾನಸ ಪದದ ಉತ್ಪತ್ತಿಯನ್ನು ಗಮನಿಸಬೇಕು.

“ಮನಸಃ ಖನನಾತ್ ವಿಖನಾ ಇತಿ ಪ್ರೋಕ್ತೋ ತಸ್ಯಸುತಃ ವೈಖಾನಸಃ”

ಮಾನಸಿಕ ಪೂಜೆಯನ್ನು ಆರಂಭಿಸಿದ ಪಂಗಡವನ್ನು ವೈಖಾನಸರೆಂದು ಗುರುತಿಸಿರಲು ಸಾಧ್ಯವಿದೆ. ಮನಸ್ಸಿನ ಖನನವೆಂದಲ್ಲಿ, ಮನದೊಳಗಿನ ಚಿಂತನೆ, ಶೋಧಗಳನ್ನು ಕುರಿತದ್ದು. ಇದು ಧ್ಯಾನವೇ.ಇದೆ ಮಾನಸಪೂಜೆ. ಈ ಹಾದಿ ಅಷ್ಟೇನೂ ಸುಲಭವಲ್ಲ. ಧ್ಯಾನಂ ನಿರ್ವಿಷಯ ಮನಃ– ಇದು ಸಾಮಾನ್ಯನಿಗೆ ಸುಲಭ ಸಾಧ್ಯವಲ್ಲ. ಧ್ಯಾನಕ್ಕೆ ಅವಲಂಬನೆಬೇಕು. ವಿಷ್ಣು ಸಂಹಿತೆಯ ಕೆಳಗಿನ ಶ್ಲೋಕಗಳು ಧ್ಯಾನದ ಅವಲಂಬನೆಗೆ ಪ್ರತಿಮಾ ರೂಪವನ್ನು ಬೇಡುತ್ತದೆ. (ಗಣಪತಿ ಶಾಸ್ತ್ರ ೧೯೯೧:೨೩೬)

ನಿರಾಕರೇ ತು ಯಾ ಭಕ್ತ್ಯಾ ಪೂಜೇಷ್ಟಾ ಧ್ಯಾನಮೇವ ವಾ
ರಮಣೀಯಮಿವಾ ಭಾತಿ ತದನರ್ಥಸ್ಯ ಕಾರಣಂ
ಸ್ಥೂಲಭಾವ ಪ್ರಸಂಗೀನಿ ಜನ್ಮನಾಸ್ಯ ಇಂದ್ರಿಯಾಣಿ ಹಿ
ರೂಪಂ ವಿನಾ ದೇವೋ ಧ್ಯಾತುಂ ಕೇನಾಪಿ ಶಕ್ಯತೇ
ತಸ್ಮಾತ್ ವಿದ್ವಾನ್ ಉಪಾಸೀತ ಬುದ್ಧ್ಯಾ ಸಾಕಾರಮೇವ ತಂ

ಯಜ್ಞಯಾಗಾದಿಗಳೊಂದಿಗೆ ವೈಖಾನಸರು ಮಾನಸ ಪೂಜೆಯನ್ನು ಅಳವಡಿಸಿಕೊಂಡರು. ಮಾನಸಪೂಜೆಗೆ ಅವಲಂಬನೆಗಾಗಿ ರೂಪವನ್ನು ಕಲ್ಪಿಸಿಕೊಂಡರು. ವೈಖಾನಸರು ಮೂರು ರೀತಿಯ ಪೂಜೆಯನ್ನು ಅಂಗೀಕರಿಸಿರುವುದನ್ನು ವೈಖಾನಗ್ರಂಥಗಳು ಗುರುತಿಸಿವೆ.

ಉಪಾಯಸ್ತ್ರಿವಿಧಃ ಪ್ರೋಕ್ತೋ ಪೂಜಯಾ ಶೃಣುತ ದ್ವಿಜಃ
ಮಾನಸೀ ಹೋಮಪೂಜಾ ಬೇರಪೂಜೇತಿ ಸಾ ತ್ರಿಧಾಃ

ವಿಷ್ಣು ಸಂಹಿತೆ ವೈಖಾನಸರ ಸ್ಪಷ್ಟ ಚಿತ್ರಣವನ್ನು ನೀಡಿದೆ (ಗಣಪತಿಶಾಸ್ತ್ರಿ ೧೯೯೧:೨೩೯)

ಸ್ಥಂಡಿಲಾಜಿನಶಾಯೀ ಧ್ಯಾಯನ್ ವೈಖಾನಸಃ ಸದಾ
ವನ್ಯವೃತ್ತಿ ತ್ರಿಸಂಧ್ಯಾರ್ಚೀ ಜಪ ಹೋಮ ಪರಾಯಣಃ

ವನಗಳಲ್ಲಿ ವಾಸಿಸುತ್ತಿದ್ದ ವೈಖಾನಸರು, ಕೃಷ್ಣಾಜಿನದ ಮೇಲೆ ಮಲಗಿ, ತ್ರಿಸಂಧ್ಯಾರ್ಚನೆ, ಜಪ, ಹೋಮಾದಿಗಳನ್ನು ನಿರಂತರವಾಗಿ ಕೈಗೊಳ್ಳುತ್ತಿದ್ದರು. ವಿಷ್ಣುಧರ್ಮೋತ್ತರ ಪುರಾಣವು ಅರಣ್ಯಗಳಲ್ಲಿ ಪ್ರತಿಷ್ಠಾಪಿಸಲ್ಪಟ್ಟ ದೇವತಾ ಮೂರ್ತಿಗಳ ಬಗ್ಗೆ ಪ್ರಸ್ತಾಪಿಸಿದೆ.

ಪ್ರತ್ಯಕ್ಷೇಣಾಪಿ ದೃಶ್ಯಂತೇ ತ್ರೇತಾ ದ್ವಾಪರಯೋರ್ಜನಾಃ
ದೇವಾನಾಂ ಪ್ರತಿಮಾಃ ಕೃತ್ವಾ ಪೂಜಯನ್ತಿ ಯಥಾ ವಿಧಿ
ಗೃಹೇ ಪ್ರತಿಷ್ಠಾ ತತ್ರಾಪಿ ತ್ರೇತಾಯಾಂ ತಂ ಪ್ರವರ್ತಿತಾಃ
ದ್ವಾಪರೇ ಚಾಪಿ ಅರಣ್ಯೇಷು ಋಷಿಭಿಃ ಕೃತಾ

ತ್ರೇತಾ ಮತ್ತು ದ್ವಾಪರಯುಗಗಳಲ್ಲಿ ದೇವತೆಗಳ ಪ್ರತ್ಯಕ್ಷ ದರ್ಶನಕ್ಕೆ ಅವಕಾಶವಿತ್ತು. ದೇವತೆಗಳ ಪ್ರತಿಮೆಗಳಿಗೂ ಪೂಜೆ ಸಲ್ಲುತ್ತತ್ತು. ತ್ರೇತಾಯುಗದಲ್ಲಿ ಮನೆಗಳಲ್ಲಿ ದೇವತೆಗಳ ವಿಗ್ರಹಗಳನ್ನು ಸ್ಥಾಪಿಸಿ ಪೂಜೆಗೈಯುತ್ತಿದ್ದರು. ದ್ವಾಪರಯುಗದಲ್ಲಿ ಅರಣ್ಯಗಳಲ್ಲಿ ಪ್ರತಿಷ್ಠಾಪನೆಗೊಂಡು ಪೂಜೆ ಕೈಂಕರ್ಯಗಳು ಆರಂಭವಾದವು. ಇದನ್ನು ದೇವತಾಯತನ ದಡಿಯಲ್ಲಿ ಗುರುತಿಸಲಾಗಿದೆ. ಅರಣ್ಯಗಳಲ್ಲಿ ಪ್ರತಿಷ್ಠೆ ಎಂದಲ್ಲಿ ಆ ವಿಗ್ರಹಗಳಿಗೆ ಆಶ್ರಯಬೇಕಷ್ಟೆ. ಈ ಆಶ್ರಯದ ತಾಣಗಳೇ ದೇವಾಲಯಗಳು. ಆದರೆ ಅಂದಿನ ದೇವಾಲಯದ ಸ್ವರೂಪ ವ್ಯಕ್ತವಾಗದು. ಮಹಾಭಾರತದ ಆದಿಪರ್ವವನ್ನು ಗಮನಿಸಿ; ದುಶ್ಯಂತ ಬೇಟೆಗೆ ಹೊರಟವನು ಒಂಟಿಯಾಗಿ ಕಣ್ವರ ಆಶ್ರಮದೆಡೆಗೆ ಸಾಗುತ್ತಾನೆ. ಆಗ ಹಾದಿಯಲ್ಲಿ ಅರಣ್ಯದಲ್ಲಿ ದ್ವಿಜರಿಂದ ಪೂಜಿಸಲ್ಪಡುತ್ತಿದ್ದ ದೇವಾಲಯಗಳನ್ನು ಕಾಣುತ್ತಾನೆ (ಬಾಬಣಿಪೈ : ೧೯೬೧ : ೬೫೮).

ದೇವತಾಯತನಾನಾಂ ಪ್ರೇಕ್ಷ್ಯ ಪೂಜಾಂ ಕೃತಾಂ ದ್ವಿಜೈಃ
ಬ್ರಹ್ಮ ಲೋಕಸ್ಥಮಾತ್ಮಾನಂ ನಮೇನೇ ನೃಪಸತ್ತಮಃ

ಕಲಿಯುಗದಲ್ಲಿ ನದೀ ತೀರಗಳಲ್ಲಿ, ವನಗಳಲ್ಲಿ, ಉಪವನಗಳಲ್ಲಿ, ಸರೋವರಗಳಲ್ಲಿ ಬೆಟ್ಟದ ಶಿಖರಗಳಲ್ಲಿ, ತಪ್ಪಲಿನಲ್ಲಿ, ರಮ್ಯವಾದ ಪ್ರದೇಶಗಳಲ್ಲಿ ಗುಹೆಗಳಲ್ಲಿ ಪ್ರತಿಷ್ಠಾಪನಾದಿ ಕಾರ್ಯಗಳನ್ನು ಕೈಗೊಳ್ಳಬಹುದಾಗಿತ್ತು. ಇದನ್ನು ವಿಷ್ಣುಧರ್ಮೋತ್ತರ ಪುರಾಣವು ಪ್ರತಿಷ್ಠಾತು ಕಲೌಯುಗೇ ಎಂದು ಗುರುತಿಸುತ್ತದೆ.

ವೈಖಾನಸರು ಹೋಮ, ಧ್ಯಾನ, ಬೇರಪೂಜೆಗಳನ್ನು ವೈದಿಕ ಮೂಲದ ಆಚರಣೆಗಳೊಂದಿಗೆ ಕಟ್ಟುನಿಟ್ಟಾಗಿ ಪಾಲಿಸಿದರು. ವೈದಿಕ ಮಂತ್ರಗಳನ್ನೇ ಬಳಸಿದರು. ವೈಖಾನಸರ ಅಸ್ತಿತ್ವ ಪ್ರಾಚೀನ ವೆನಿಸಿದರೂ, ಲಭ್ಯವಿರುವ ವೈಖಾನಸ ಗ್ರಂಥಗಳು ಅಷ್ಟು ಪ್ರಾಚೀನವಲ್ಲ. ಆದರೂ ಕೆಲವು ವೈಶಿಷ್ಟ್ಯಗಳನ್ನು ಗಮನಿಸಬಹುದು.

ವೈಖಾನಸರ ಗ್ರಂಥಗಳಲ್ಲಿ ಜ್ಞಾನ, ಯೋಗ, ಕ್ರಿಯಾ, ಚರ್ಯಾಪಾದಗಳಿಲ್ಲ. ಜ್ಞಾನಪಾದವು ತಾತ್ತ್ವಿಕ ಭಾಗವೆನಿಸಿದ್ದು, ವೈಖಾನಸರು ವೈದಿಕ ಮೌಲ್ಯಗಳನ್ನೇ ಅನುಸರಿಸಿದ್ದರಿಂದ ಪ್ರತ್ಯೇಕ ತಾತ್ತ್ವಿಕ ಪ್ರತಪಾದನೆಗೆ ಮಹತ್ವ ನೀಡಲಿಲ್ಲ. ಯೋಗಪಾದದಲ್ಲಿ ಇನ್ನಿತರ ಆಗಮಗ್ರಂಥಗಳು ಹೆಚ್ಚಾಗಿ ಅಷ್ಟಾಂಗ ಯೋಗವನ್ನು ಅನುಸರಿಸಿವೆ. ವೈಖಾನಸರ ಕ್ರಿಯಾಧಿಕಾರ ಗ್ರಂಥವು ಪ್ರಾಣಾಯಾಮದೊಂದಿಗೆ ಮಾನಸಪೂಜೆಯನ್ನು ಪ್ರಸ್ತಾಪಿಸಿದೆ.

ವೈಖಾನಸ ವಿಧಿಗಳು ಸರಳ ಹಾಗೂ ನೇರವಾದದ್ದು. ಮಹಾಭಾರತದಲ್ಲಿ ಧ್ಯಾನ, ಯೋಗಗಳ ಪ್ರಸ್ತಾಪವಿದೆ. ಇದು ಪತಂಜಲಿಯ ಅಷ್ಟಾಂಗ ಯೋಗಕ್ಕಿಂತ ಪ್ರಾಚೀನವಾದದ್ದು. ಖಿಲಾಧಿಕಾರ ಗ್ರಂಥದಲ್ಲಿ ಬೇರ ಪೂಜೆಯು ಕೆಳಕಂಡಂತಿದೆ.

ಕೃತ್ವಾ ಯತ್ ಪ್ರತಿಮಾಂ ವಿಷ್ಣೋಃ ಯಥಾ ಲಕ್ಷಣಮಾದರಾತ್
ಸಂಸ್ಥಾಪ್ಯತಾಂ ತು ವಿಧಿನಾ ದೇವಾಗಾರೇ ಅಥ ವೇಶ್ಮನಿ
ನಿತ್ಯಮಾರಾಧನಂ ಭಕ್ತ್ಯಾ ಸಾ ಪೂಜಾ ಬೇರಪೂಜನಂ

ವೈಖಾನಸರು ವಿಷ್ಣವನ್ನು ಪರಮದೈವವೆಂದು ಸ್ವೀಕರಿಸಿದ್ದಾರೆ. ವಿಷ್ಣಾತೇರ್ವಿಷತೇ ವಿಷ್ಣುಃ ಎಲ್ಲಡೆ ವ್ಯಾಪಿಸಿರುವವನು. ವಿಷ್ಣು. ವೈಖ್ಯಾನಸರಿಗೆ ವಿಷ್ಣುವನ್ನು ಬಿಟ್ಟರೆ ಅನ್ಯ ದೇವರಿಲ್ಲ. ವಿಷ್ಣುವೇ ಪರಮ ಪದ. ವೈದಿಕ ಪರಂಪರೆಯ ಪ್ರಭಾವ ಸ್ಪಷ್ಟವಾಗಿ ಇಳಿದು ಬಂದಿದೆ. ಆದ್ದರಿಂದ ಬೇರ ಪೂಜೆಯಲ್ಲಿಯೂ ವಿಷ್ಣು ಆರಾಧ್ಯ ದೈವ ಎನಿಸಿದ. ಇಂದಿಗೂ ಈ ಪರಂಪರೆ ಮುಂದುವರೆದಿದೆ ಎಂದು ಗಮನಿಸಬಹುದು.

ಮಹಾಭಾರತದ ಮೋಕ್ಷಧರ್ಮಪರ್ವದಲ್ಲಿ ಪಾಂಚರಾತ್ರ ಮತ್ತು ಪಾಶುಪತರ ಉಲ್ಲೇಖವಿದೆ. ಇವು ವೈಖಾನಸರ ನಂತರ ಬೆಳಕಿಗೆ ಬಂದ ಆಗಮ ಸಂಪ್ರದಾಯಗಳು. ಇವು ವೈಷ್ಣವ ಮತ್ತು ಶೈವ ಸಂಪ್ರದಾಯಗಳೆನಿಸಿದ್ದು ಪ್ರತ್ಯೇಕ ಶಾಸ್ತ್ರ ಸಂದೋಹಗಳನ್ನು ಕಟ್ಟಿಕೊಂಡು ಬೆಳೆದವು.ವಾಸುದೇವ ಅರ್ಜುನಾಭ್ಯಾಂವುನ್ ಎಂಬ ಸೂತ್ರವನ್ನಾಧರಿಸಿ ಪಾಂಚರಾತ್ರವು ಕ್ರಿ.ಪೂ. ನಾಲ್ಕನೆ ಶತಮಾನಕ್ಕಿಂತ ಪೂರ್ವದ್ದೆಂದು ಅಭಿಪ್ರಾಯವನ್ನು ವಿದ್ವಾಂಸರು ಮಂಡಿಸುತ್ತಾರೆ. ವಾಸುದೇವ ಕೃಷ್ಣನನ್ನು ದೈವತ್ವಕ್ಕೇರಿಸಿ ಆರಾಧ್ಯದೇವತೆಯಾಗಿ ಸ್ವೀಕರಿಸಿದ್ದನ್ನು ಶಾಸನಗಳಲ್ಲಿ ಗುರುತಿಸಲಾಗಿದೆ. ಕ್ರಿ.ಪೂ. ಒಂದನೆಯ ಶತಮಾನಕ್ಕೆ ಸೇರಿದ ಮೋರ್ ಶಾಸನವು ವೃಷ್ಣೀಸಂತತಿಯ ಪಂಚವೀರರಾದ ಸಂಕರ್ಷಣ – ವಾಸುದೇವ – ಪ್ರದ್ಯುಮ್ನ-ಅನಿರುದ್ಧ-ಸಾಂಬರನ್ನು ಗುರುತಿಸಿದೆ. ಪಂಚವೀರರ ಆರಾಧನೆಯೊಂದಿಗೆ ಭಾಗವತ ಸಂಪ್ರದಾಯ ಪ್ರಚಲಿತದಲ್ಲಿತ್ತೆನ್ನಬಹುದು.

ಮಹಾಭಾರತ ಕಾವ್ಯದಲ್ಲಿ ಚತುರ್ವ್ಯೂಹಗಳ ತಾತ್ತ್ವಿಕ ಅಂಶಗಳನ್ನು ಕಾಣಲು ಸಾಧ್ಯ. ಇದನ್ನು ಪಾಂಚರಾತ್ರವು ಆಗಮಗಳ ಬೆಳವಣಿಗೆಯಲ್ಲಿ ಬಳಸಿಕೊಂಡಿತು. ಪಂಚವೀರರಲ್ಲಿ ಸೇರಿದ್ದ ಎಂಬ ಸಂಪೂರ್ಣವಾಗಿ ನಿರ್ಲ್ಲಕ್ಷಿಸಲ್ಪಟ್ಟ. ಮಹಾಭಾರತದ ಕಾಲದಲ್ಲಿ ಹಾಗೂ ತದನಂತರದ ಕೆಲವು ಶತಕಗಳಲ್ಲಿ ಭಾಗವತ ಸಂಪ್ರದಾಯ ಚಾಲನೆಯಲ್ಲಿತ್ತು. ಭಾಗವತ ಸಂಪ್ರದಾಯಕ್ಕೆ ಗ್ರಾಮೀಣ ಅಥವಾ ಜಾನಪದ ಹಿನ್ನೆಲೆಯನ್ನು ಗುರುತಿಸಲು ಸಾಧ್ಯವಿದೆ.

ಮಹಾಭಾರತದಲ್ಲಿ ಉಲ್ಲೇಖಗೊಂಡ ಚತುರ್ವ್ಯೂಹ ಸೃಷ್ಟಿ ಪಾಂಚರಾತ್ರದ ಆರಂಭಿಕ ಹಂತ ಎನ್ನಬಹುದು. ತದನಂತರ ಬೆಳೆದ ಆಗಮ ಸಂಪ್ರದಾಯ ವಿಭವಾತಾರಗಳನ್ನು, ಚತುರ್ವಿಂಶತಿಮೂರ್ತಿಗಳನ್ನು ಅಳವಡಿಸಿಕೊಂಡಿತು. ಇದು ಎರಡನೆಯ ಹಂತ. ರಾಮಾನುಜರ ಪ್ರಪತ್ತಿಯೊಂದಿಗೆ ಪ್ರಚಾರಗೊಂಡು ಪ್ರಚಲಿತದಲ್ಲಿರುವ ನಡೆ ಮೂರನೆಯ ಹಂತ. ಮಧ್ವಾಚಾರ್ಯರ ವೈಷ್ಣವ ಮತವೂ ಪಾಂಚರಾತ್ರವನ್ನು ಅವಲಂಬಿಸಿದೆ ಎಂದು ಗಮನಿಸಬಹುದು. ಮಹಾಭಾರತದಲ್ಲಿ ಉಲ್ಲೇಖಿಸಲ್ಪಟ್ಟ ಪಾಶುಪತದ ಬಗ್ಗೆಯೂ ಅಧ್ಯಯನ ಮುಂದುವರೆಯಬೇಕಾಗಿದೆ. ಹರಪ್ಪ ಮಹೇಂಜೋದಾರೋ ಉತ್ಖನಗಳಲ್ಲಿ ದೊರೆತ ‘ಪಶುಪತಿ’ ಎನ್ನಲಾದ ಮುದ್ರೆ ಶೈವ ಸಂಪ್ರದಾಯವನ್ನು ಸೂಚಿಸುವುದು ಎನ್ನುವುದು ಹಲವು ವಿದ್ವಾಂಸರ ಅಭಿಮತ. ಆದರೆ ಮುದ್ರೆಯಲ್ಲಿರುವ ಲಿಪಿಯೇ ಕಗ್ಗಂಟು.

ಕ್ರಿ.ಪೂ. ಎರಡನೆಯ ಶತಮಾನಕ್ಕೆ ಸೇರಿದ ಗುಡಿಮಲ್ಲಂನಲ್ಲಿರುವ ಲಿಂಗ, ಅದರಲ್ಲಿರುವ ಪ್ರಾತಿನಿಧಿಕ ಪುರುಷ ರೂಪ ಒಂದು ದಿಕ್ಸೂಚಿ. ಲಿಂಗವು ಹಲವು ದೇವತೆಗಳಿಗೆ ಪ್ರತೀಕವಾಗಿ ಹಲವು ಶತಮಾನಗಳವರೆಗೆ ಮುಂದುವರೆದದ್ದನ್ನು ಕಾಣಬಹುದು. ವೈಖಾನಸರು ಲಿಂಗವನ್ನು ಪ್ರತಿಷ್ಠಾಪಿಸಿ, ಮುಂದುಗಡೆ ವಿಷ್ಣುವಿಗ್ರಹವನ್ನಿಟ್ಟು ಪೂಜಿಸುವುದುಂಟು. ಇದಕ್ಕೆ ವಿಷ್ಣೇಶ್ವರ ಲಿಂಗವೆಂದು ಹೆಸರು. ಇಲ್ಲಿ ಲಿಂಗ ಕೇವಲ ಪ್ರತೀಕವೆನಿಸಿದೆ. ಕರ್ನಾಟಕದ ತ್ರೈಪುರುಷರ ದೇವಾಲಯಗಳಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರನ್ನು ಮೂರು ಲಿಂಗಗಳಾಗಿ ಸ್ಥಾಪಿಸಿ ಪೂಜಿಸಲಾಗಿದೆ. ಶೈವಾಗಮಗಳ ಬೆಳವಣಿಗೆಯೊಂದಿಗೆ ಲಿಂಗವು ಶೈವ ಸ್ವರೂಪ ಪಡೆಯಿತೇ? ಚರ್ಚೆಗೆ ಅರ್ಹವಾದ ವಿಷಯ. ಶೈವ ಸಂಪ್ರದಾಯದಲ್ಲಿಯೂ ಮೂರು ಹಂತಗಳನ್ನು ಗುರುತಿಸಬಹುದು. ತಮಿಳುನಾಡಿನ ನಾಯನಾರರ ಭಕ್ತಿ ಪರಂಪರೆ ಮೊದಲನೆಯದು. ಕಾಶ್ಮೀರದಿಂದ ವಲಸೆಬಂದು ಆಗಮಗಳನ್ನು ರಚಿಸಿದವರು ಎರಡನೆಯವರು. ಲಾಕುಲೀಶ ಪಾಶುಪತ ಕಾಳಾಮುಖರು ಮೂರನೆಯ ಹಂತ. ಈ ಹಂತಗಳು ಒಂದರೊಡನೆ ಮತ್ತೊಂದು ಬೆರೆತು ಪ್ರಭಾವ ಬೀರಿದೆ. ಬಾದಾಮಿ ಚಾಲ್ಯಕರ ಕಾಲದಲ್ಲಿ ಲಾಕುಲೀಶನ ದೇವಾಲಯಗಳೂ ಶಿಲ್ಪಗಳೂ ದೊರೆತಿವೆ. ತದನಂತರ ಕಾಲದಲ್ಲಿ ಪಾಶುಪತರೂ ಕಾಳಾಮುಖರೂ ಜೀವನದಲ್ಲಿ ನೈಷ್ಠಿಕತೆಯನ್ನು ಬೋಧಿಸಿದ್ದಾರೆ. ಇವರ ಕಾಲದಲ್ಲಿ ದೇವಾಲಯಗಳು ರಚನೆಗೊಂಡಿದ್ದು, ಇವರು ದೇವಾಲಯಗಳಲ್ಲಿ ಹಾಗೂ ಮಠಗಳಲ್ಲಿ ಸ್ಥಾನಪತಿಗಳಾಗಿ ಮುಂದುವರೆದು, ಆಡಳಿತ, ವಿದ್ಯಾಭ್ಯಾಸವನ್ನು ನಿರ್ದೇಶಿಸಿದ್ದಾರೆ. ಸಾಮಾಜಿಕ ಉನ್ನತಿಗಾಗಿ ಶ್ರಮಿಸಿದ್ದಾರೆ. ಇವರ ಯೋಗ, ಧ್ಯಾನಾದಿಗಳಿಗೆ, ಜಪ ಮೌನಾನುಷ್ಠಾನಗಳಿಗೆ ಹೆಚ್ಚು ಒಲವು ತೋರಿದವರು. ಪಾಶುಪತರದಲ್ಲಿ ಶ್ರೌತಿ, ಅಶ್ರೌತಿಗಳೆಂಬ ಎರಡು ವಾಹಿನಿಗಳಿವೆ. ಇವುಗಳ ಮೂಲಕ ಸಾಮಾನ್ಯ ಜನರನ್ನೂ ತಲುಪಲು ಸಾಧ್ಯವಾಹಿತೆನ್ನಬಹುದು. ಕರ್ನಾಟಕದಲ್ಲಿ ರಚನೆಗೊಂಡ ಆಗಮ ಗ್ರಂಥಗಳು ಈವರೆಗೆ ಅಲಭ್ಯ. ಈ ದಿಸೆಯಲ್ಲಿ ವ್ಯಾಪಕವಾದ ಅಧ್ಯಯನ ನಡೆಯಬೇಕು.

ಮಹಾಭಾರತ ಮತ್ತು ವಿಷ್ಣುಧರ್ಮೋತ್ತರ ಪುರಾಣಗಳನ್ನಾಧರಿಸಿ, ದೇವಾಲಯಗಳ ಆರಂಭಕ್ಕೆ ವೈಖಾನಸರು ಕಾರಣರು ಎಂದು ಗುರುತಿಸಲು ಸಾಧ್ಯವಾಗಿದೆ. ಶೈವಾಗಮಗಳೊಂದಿಗೆ ಆಗಮಗಳ ವರ್ಗೀಕರಣ ಸಾಧ್ಯವಾಗಿದ್ದು, ಶೈವಾಗಮಗಳಲ್ಲಿ ಶಿವ ವಿಷ್ಣುವಿನ ಭೇದ ಎಣಿಸದಿರುವುದು ಸ್ಪಷ್ಟವಿದೆ. ಪಾಶುಪತ ಕಾಳಾಮುಖರ ಕಾಲದಲ್ಲಿ ಕರ್ನಾಟಕದಲ್ಲಿ ಯೋಗ ಜಪತಪಾದಿಗಳಿಗೆ ಹೆಚ್ಚು ಒತ್ತು ನೀಡಿದ್ದು ಈ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದೆ.