ಪ್ರಾಚೀನ ಕರ್ನಾಟಕದಲ್ಲಿ ದೇವಾಲಯ ಹಾಗೂ ಪ್ರತಿಮಾ ರಚನೆಗಳಲ್ಲಿ ಯಾವ ಮಾನವನ್ನು ಅನುಸರಿಸುತ್ತಿದ್ದರು ಎನ್ನುವುದು ಈವರೆಗೆ ಹೆಚ್ಚು ಚರ್ಚೆಗೆ ಒಳಗಾಗಿಲ್ಲ. ಅಳತೆಗಳನ್ನು ಕುರಿತು ಹಲವು ವಿವರಗಳು ಪ್ರಾಚೀನ ಗ್ರಂಥಗಳಲ್ಲಿದ್ದರೂ ಖಚಿತವಾಗಿ ನಿರ್ಧರಿಸಲು ಸಾಧ್ಯವಾಗಿಲ್ಲ ಹಾಗೂ ಈವರೆಗೆ ಒಮ್ಮತ ಮೂಡಿ ಬಂದಿಲ್ಲ. ದೇವಾಲಯಗಳಿಗೆ ಹಸ್ತಮಾನವನ್ನು ಪ್ರತಿಮೆಗಳಿಗೆ ತಾಳಮಾನವನ್ನೂ ಬಳಸುವುದು ಗ್ರಂಥಗಳಿಂದ ಸಾಮಾನ್ಯವಾಗಿ ವ್ಯಕ್ತವಾಗಿದೆ. ಹಸ್ತ ಮತ್ತು ತಾಳಮಾನಕ್ಕೆ ಮೂಲಮಾನವೊಂದಿರಬೇಕು. ಇದು ನಿಶ್ಚಿತವಾದ, ಪೂರ್ವನಿರ್ಧಾರಿತವಾದ ಅಳತೆಯಾಗಿರುತ್ತದೆ. ಇದಕ್ಕೆ ಯೂನಿಟ್ (Unit) ಎನ್ನುವುದು ಇಂಗ್ಲಿಷ್‌ನ ಪರ್ಯಾಯ ಪದ. ಈ ಮೂಲಮಾನ ವಾಸ್ತು ಗ್ರಂಥಗಳ ಪ್ರಕಾರ ಅಂಗುಲ. ‘ಅಂಗುಲ’ಕ್ಕೆ ಸಂಸ್ಕೃತದ “ಅಂಗುಲಿ”ಯೇ ಮೂಲ. ಮೂಲಮಾನವನ್ನು ಬೆರಳಿನಿಂದ ಗುರುತಿಸಿದ್ದು ಇತಿಹಾಸ. ಈ ಅಂಗುಲದ ಉದ್ದವನ್ನು ಖಚಿತಪಡಿಸಿಕೊಂಡಲ್ಲಿ ಇದರ ಗುಣಿತದಿಂದ, ಗ್ರಂಥಗಳು ವಿವರಿಸುವ ಕೋಷ್ಠಕಗಳನ್ನಾಧರಿಸಿ ದೇವಾಲಯಗಳ, ಪ್ರತಿಮೆಗಳ ಅಳತೆಯನ್ನು ಪರಿಶೀಲಿಸಬಹುದು.

ಕನ್ನಡದ ಶಾಸನಗಳನ್ನಾಧರಿಸಿ, ಪ್ರಾಚೀನ ಕಾಲದಲ್ಲಿ ದೇವಮಾನ ಮತ್ತು ರಾಜಮಾನ ಎಂಬ ಎರಡು ರೀತಿಯ ಅಳತೆ ಬಳಕೆಯಲ್ಲಿತ್ತು ಎಂದು ಗುರುತಿಸಬಹುದು. ದೇವಮಾನವು ಸರ್ವಕಾಲಿಕವಾದುದು. ರಾಜಮಾನವು ಸಾಂದರ್ಭಿಕವಾದುದು. ದೇವಮಾನವು ನಿಶ್ಚಿತವಾದದು, ಬದಲಾಗದು. ರಾಜಮಾನವು ದೇಶಕಾಲವನ್ನು ಅನುಸರಿಸಿ ನಿರ್ಧರಿಸಲ್ಪಟ್ಟದ್ದು. ಅಂಗುಲವನ್ನು ಗುರುತಿಸುವಾಗ ಮಾನಾಂಗುಲ ಮತ್ತು ಮಾತ್ರಾಂಗುಲ ಎಂದು ಎರಡು ವಿಧ. ಮಾನಾಂಗುಲವೇ ದೇವಮಾನ. ಮಾತ್ರಾಂಗುಲವೇ ರಾಜಮಾನ. ಮಾನಾಂಗುಲಕ್ಕೆ ಸಂಬಂಧಿಸಿದಂತೆ ಮಯಮತದ ಉಲ್ಲೇಖ ಇಂತಿದೆ (ಡಗೆನ್ಸ್ : ೧೯೭೦ : ೫೭).

ಪರಮಾಣುಕ್ರಮಾದ್ ವೃದ್ಧ್ವಂ ಮಾನಾಂಗುಲಮಿತಿ ಸ್ಮೃತಂ

ಭರತನ ನಾಟ್ಯಶಾಸ್ತ್ರ, ಕೌಟಿಲ್ಯನ ಅರ್ಥಶಾಸ್ತ್ರದ ಕಾಲದಿಂದಲೂ ಮಾನಾಂಗುಲ ಅಳತೆ ಬಳಕೆಯಲ್ಲಿದೆ. ಮಾನಾಂಗುಲದ ಅಳಗೆ ಹಾಗೂ ಕೋಷ್ಠಕಗಳು ಎಲ್ಲಾ ಗ್ರಂಥಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸಗಳೊಂದಿಗೆ ಉಲ್ಲೇಖಗೊಂಡಿದೆ. ಇದರ ಪರಿವರ್ತನಾ ಕೋಷ್ಠಕ ಎಂಟರ ಗುಣಿತದ್ದು (ನರಸಿಂಹಶಾಸ್ತ್ರೀ ೧೯೭೭:೨೯)

ಅನುವ್ಯೋsಷ್ಟೌರಜಃ ತಾನ್ಯಷೌಬಾಲ ಉಚ್ಚತೇ
ಬಾಲಾ ಸ್ತ್ವಷ್ಟೌಭವೇಲ್ಲಿಕ್ಷಾ ಯೂಕಾಲಿಕ್ಷಾಷ್ಟಕಂ ಭವೇತ್
ಯುಕಾಸ್ತ್ವಷ್ಟೌಯವೋಜ್ಞೇಯೋ ಯವಾಸ್ತ್ವಷ್ಟೌ ತಥಾಂಗುಲಂ

ಪರಮಾಣುವೇ ಅಣು, ಎಂಟು ಅಣು=ಒಂದು ರಜ, ಎಂಟು ರಜ= ಒಂದು ಬಾಲ, (ಬಾಲಾಗ್ರ ಕೂದಲಿನ ತುದಿ) ಎಂಟು ಬಾಲ = ಒಂದು ಲಿಕ್ಷಾ, ಎಂಟು ಲಿಕ್ಷಾ = ಒಂದು ಯೂಕ, ಎಂಟು ಯೂಕ = ಒಂದು ಯವ, ಎಂಟು ಯವ = ಒಂದು ಉತ್ತಮ ಮಾನಾಂಗುಲ. [ಏಳು ಯವ=ಒಂದು ಮಧ್ಯಮಮಾನಾಂಗುಲ, ಆರು ಯವ= ಒಂದು ಕನಿಷ್ಠಮಾನಾಂಗುಲ]

ಹನ್ನೆರಡು ಅಂಗುಲಕ್ಕೆ ಒಂದು ತಾಲ [ಭಟ್:೧೯೬೭:೫). ಇಪ್ಪತ್ತ ನಾಲ್ಕು ಅಂಗುಲಕ್ಕೆ ಒಂದು ಹಸ್ತ (ನರಸಿಂಹಶಾಸ್ತ್ರೀ: ೧೯೭೭:೨೯).

ರವ್ಯಂಗುಲಮಿದಂ ತಾಲಮಿತಿ ಶಾಸ್ತ್ರಸ್ಯನಿಶ್ಚಯಃ
ಅಂಗುಲಾನಿ ತಥಾಹಸ್ತ ಚತುರ್ವಿಂಶತಿರುಚ್ಯತೇ

೨೪ ಅಂಗುಲದ ಹಸ್ತಕ್ಕೆ ‘ಕಿಷ್ಕು’ ಎಂಬ ಹೆಸರಿದೆ. ೨೫ ಅಂಗುಲದ ಹಸ್ತಕ್ಕೆ “ಪ್ರಜಾಪತಿ” ಹಸ್ತವೆಂದು ಹೆಸರು. ಈ ಹಸ್ತವನ್ನೂ ಗೃಹ, ಆಲಯ ರಚನೆಗಳಲ್ಲಿ ಬಳಸಲು ಅವಕಾಶವಿದೆ.

ಹಸ್ತಮಾನವನ್ನು ದೇವಾಲಯಗಳಲ್ಲಿ ತಾಲಮಾನವನ್ನು ವಿಗ್ರಹಗಳಲ್ಲಿ ಬಳಸಲಾಗುತ್ತದೆ ಎಂದು ಆಗಲೇ ಗುರುತಿಸಿದೆ. ದೇವಮಾನ ಅಥವಾ ಮಾನಾಂಗುಲಕ್ಕೆ ಸಂಬಂಧಿಸಿದಂತೆ ಈಗ ಖಚಿತ ಕೋಷ್ಠಕವಿದೆ. ಆದರೆ ಇನ್ನೂ ಕೆಲವು ಗೊಂದಲಗಳಿಂದ ಮುಕ್ತವಾಗಿಲ್ಲ. ಯವ ಎಂದಲ್ಲಿ ಗೋಧಿ ಅಥವಾ ಬಾರ್ಲಿಕಾಳಿನ ದಪ್ಪ. ಇದನ್ನು ಖಚಿತ ಅಳತೆ ಎನ್ನಲು ಹೇಗೆ ಸಾಧ್ಯ?

ಬೇಲೂರಿನ ಚೆನ್ನಕೇಶವ ದೇವಾಲಯದ ಆಗ್ನೇಯ ದಿಕ್ಕಿನ ಕಕ್ಷಾಸನದ ಹೊರಭಾಗದಲ್ಲಿ ಒಂದು ಅಳತೆ ಪಟ್ಟಿಯ ಕಂಡರಣೆ ಇದೆ (ಪ್ರಭಾಕರ್ : ೧೯೯೬ : ೫೨೦). ಇದರೊಂದಿಗೆ “ದೇವಹಸ್ತದ ಖಂಡೇಯ” ಎಂಬ ಶಾಸನವಿದೆ. ಈ ಅಳತೆಯ ಅತಿ ಚಿಕ್ಕಮಾನವನ್ನು ಅಂಗುಲ ಎಂದು ಡಾ.ಜಗದೀಶ್‌ರವರು ಗುರುತಿಸಿದ್ದು ಅಂಗುಲ ಒಂದಕ್ಕೆ ನಾಲ್ಕು ಸೆಂ.ಮೀ. ಎಂದು ವಿವರಿಸುತ್ತಾರೆ. ದೇವಾಲಯದ ರಚನೆಯ ಕಾಲ ಕ್ರಿ.ಶ. ೧೧೧೬. ದೇವಾಲಯ ರಚನೆ ಪೂರ್ಣಗೊಳ್ಳಲು ಸುಮಾರು ೫೦-೬೫ ವರ್ಷಗಳು ಹಿಡಿದಿರಬಹುದು. ದೇವಾಲಯದ ಮುಂಭಾಗದ ರಚನೆ ಹೊಯ್ಸಳ ವೀರಬಲ್ಲಾಳನ ಕಾಲದ್ದು ಎಂದು ವಿದ್ವಾಂಸರ ಅಭಿಪ್ರಾಯವಿದೆ. ಆದ್ದರಿಂದ ಈ ಅಳತೆ ಪಟ್ಟಿಕೆಯು ೧೨ನೇ ಶತಮಾನದ ಮಧ್ಯ ಭಾಗದ್ದು ಅಥವಾ ತದನಂತರ ಕಾಲದ್ದು. ಇದರೊಂದಿಗೆ ಡಾ.ಜಗದೀಶ್‌ರವರು ಮತ್ತೊಂದು ಅಳತೆಪಟ್ಟಿಯನ್ನು ಗುರುತಿಸುತ್ತಾರೆ. ಇದನ್ನು ಶ್ರವಣಬೆಳಗೊಳದ ಗೊಮ್ಮಟನ ಎಡಪಾದದ ಮುಂದೆ ಕಂಡರಿಸಲಾಗಿದೆ (ಜಗದೀಶ್ : ೨೦೦೫ : ೧೦೧). ಇಲ್ಲಿ ಶಾಸನವಿಲ್ಲ.

ಈ ಅಳತೆಪಟ್ಟಿಯ ಅತಿ ಚಿಕ್ಕ ಮಾನವೂ ನಾಲ್ಕು ಸೆಂ.ಮೀ ಗಳು. ಗೊಮ್ಮಟನ ಕಂಡರಣೆಯ ಕಾಲ ಕ್ರಿ.ಶ. ೯೮೧; ಅಂದರೆ ಹತ್ತನೆಯ ಶತಮಾನದ ಅಂತ್ಯದ್ದು. ಡಾ. ಜಗದೀಶ್ ಗುರುತಿಸುವಂತೆ, ಇವೆರಡೂ ಅಳತೆಗಳನ್ನಾಧರಿಸಿ ಹಸ್ತ ಒಂದಕ್ಕೆ ೯೬ ಸೆಂ.ಮೀ.ಗಳು. ಒಂದು ಹತ್ತನೆಯ ಶತಮಾನದ ಅಂತ್ಯದ್ದು; ಮತ್ತೊಂದು ಹನ್ನೆರಡನೆಯ ಶತಮಾನದ ಮಧ್ಯಭಾಗದ್ದು. ಎರಡೂ ಕಾಲದಲ್ಲಿ ಒಂದೇ ಮಾನವು ಗುರುತಿಸಲಾಗಿರುವುದರಿಂದ ಇದು ದೇವಮಾನ ಅಥವಾ ಮಾನಾಂಗುಲ.

ತಮಿಳುನಾಡಿನ ವಿದ್ವಾಂಸ ಡಾ.ಗಣಪತಿ ಸ್ಥಪತಿಯವರು ತಮ್ಮ ಗ್ರಂಥವೊಂದರಲ್ಲಿ ಅಳತೆಯೊಂದನ್ನು ಸೂಚಿದ್ದು ಅವರ ಪ್ರಕಾರ ಅಂಗುಲ ಒಂದಕ್ಕೆ ೩.೪೯೨೪ ಸೆಂ.ಮೀ.ಗಳು. ಇದರ ಪ್ರಕಾರ ಹಸ್ತವೊಂದಕ್ಕೆ ಬ್ರಿಟಿಷ್ ಪದ್ಧತಿಯ ೩೩ ಅಂಗುಲಗಳು (ಸ್ಥಪತಿ : ೧೯೯೬:೧೪೧), ಈ ಅಳತೆಗೆ ಯಾವುದೇ ಪ್ರಾಚೀನ ವಾಸ್ತು ಗ್ರಂಥಗಳನ್ನು ಆಧಾರವೆಂದು ಗುರುತಿಸಿಲ್ಲ. ಇವರು ಹಲವು ದಶಕಗಳಿಂದ ವೃತ್ತಿನಿರತ ಸ್ಥಪತಿಗಳು.

ಪ್ರತಿಮಾಶಾಸ್ತ್ರಕ್ಕೆ ಸಂಬಂಧಿಸಿದ “ಸಕಲಾಧಿಕಾರ” ಗ್ರಂಥದಲ್ಲಿ, ಸಂಪಾದನಕಾರರಾದ ಶ್ರೀಯುತ ವಿ.ಗೋಪಾಲಯ್ಯಂಗಾರ್‌ರವರು, ಗ್ರಂಥದ ಪ್ರಸ್ತಾವನೆಯನ್ನು ಹಸ್ತದ ವಿವರಣೆ ನೀಡಿದ್ದಾರೆ. ಹಸ್ತವು ಮೊಣಕೈ ಕೆಳತುದಿಯಿಂದ ಹಸ್ತದ ಮಧ್ಯ ಬೆರಳಿನ ತುದಿಗೆ ಸಮನಾದ ಅಳತೆ ಎಂದು ತಿಳಿಸುತ್ತಾರೆ (ಐಯ್ಯಂಗಾರ್ : ೧೯೭೩: xii).

“ಭರತಖಂಡದ ದೇವಾಲಯಗಳು” ಗ್ರಂಥಕರ್ತೃ, ವಿದ್ವಾನ್ ಆಸೂರಿ ಶ್ರೀನಿವಾಸ ಐಯಂಗಾರ್‌ರವರು ಹಸ್ತದ ಉದ್ದ ಬ್ರಿಟಿಷ್ ಪದ್ಧತಿಯ ಹದಿನೆಂಟು ಅಂಗುಲಗಳು ಎಂದು ನಿರ್ಣಯಿಸಿದ್ದಾರೆ (ಪ್ರಭಾಕರ್ : ೧೯೮೩ : ೫೩೨).

ಈ ವಿವರಗಳೊಂದಿಗೆ ಡಾ.ಜಗದೀಶ್‌ರವರ ನಿರ್ಣಯವನ್ನು ಪರಿಶೀಲಿಸಿದಾಗ, ಬೇಲೂರು ಮತ್ತು ಶ್ರವಣಬೆಳಗೊಳದ ಅಳತೆಪಟ್ಟಿಯ ಉದ್ದ ಎರಡು ಹಸ್ತಗಳುಳ್ಳದ್ದು ಎಂದು ತಿಳಿಯಬಹುದು. ಆದ್ದರಿಂದ ಒಂದು ಹಸ್ತಕ್ಕೆ ೪೮ ಸೆ.ಮೀ.ಗಳು. ಇದು ದೇವಮಾನ ಎನಿಸಿದ್ದು, ಇದರ ಮೂಲಮಾನ ಅಂಗುಲವೊಂದಕ್ಕೆ ಎರಡು ಸೆ.ಮೀ.ಗಳು. ಈ ಅಳತೆ ಶ್ರೀಯುತ ಗೋಪಾಲಯ್ಯಂಗಾರ್ ಹಾಗೂ ವಿದ್ವಾನ್ ಆಸೂರಿ ಶ್ರೀನಿವಾಸ ಐಯ್ಯಂಗಾರ್‌ರವರ ಗುರುತಿಸುವಿಕೆಗಿಂತ ಕೊಂಚ ದೊಡ್ಡದು. ದೇವಮಾನ ಅಥವಾ ಮಾನಾಂಗುಲವನ್ನು ಪ್ರತಿನಿಧಿಸುವ ಬೇಲೂರು ಮತ್ತು ಶ್ರವಣಬೆಳಗೊಳದ ಅಳತೆಪಟ್ಟಿಯ ಲಭ್ಯತೆ ಈ ಅಧ್ಯಯನದಲ್ಲಿ ಒಂದು ಮೈಲಿಗಲ್ಲು. ಇದರ ಆಧಾರದೊಂದಿಗೆ ವಾಸ್ತುರಚನೆ ಇತ್ಯಾದಿಗಳನ್ನು ಪರಿಶೀಲಿಸಬಹುದು. ದೇವಮಾನದ ನಂತರ ರಾಜಮಾನವನ್ನು ಪರಿಶೀಲಿಸಬೇಕು. ರಾಜಮಾನ ಎಂದಲ್ಲಿ ಯಜಮಾನನು ನಿರ್ಧರಿಸಿದ ಅಥವಾ ಸೂಚಿಸಿದ ಅಳತೆಯಾಗಿರಬಹುದು; ಅಥವಾ ರಾಜನ ಮೇಲಿನ ಗೌರವಕ್ಕಾಗಿ ಅವನ ಕೈ ಅಳತೆಯನ್ನು ಆಧರಿಸಿದ ಅಳತೆಯನ್ನು ಜಾರಿಗೆ ತಂದಿರಬಹುದು. ಕೆಲವು ಶಾಸನಗಳಲ್ಲಿ ವಿಷ್ಣುವರ್ಧನನ ಗಳೆ (ಗೋಪಾಲ್ : ೧೯೯೯ : ೧೦೭), ವಿಷ್ಣುವರ್ಧನನ ಕೋಲು (ಅದೇ : ೮೭) ಎಂಬ ಉಲ್ಲೇಖಗಳಿವೆ. ಇವನ್ನು ವಿಷ್ಣುವರ್ಧನನಿಗೆ ಗೌರವ ಸೂಚಿಸಲು ಸಲುವಾಗಿ ಕೆಲವು ಪ್ರದೇಶದಲ್ಲಿ ಮಾತ್ರ ಜಾರಿಯಲ್ಲಿದ್ದ ಅಳತೆ ಎಂದು ತಿಳಿಯಬಹುದು. ಈ ಅಳತೆಗಳನ್ನು ಜಮೀನು, ಹೊಲ, ಗದ್ದೆ, ತೋಟ ತುಡಿಕೆಗಳನ್ನು ಅಳೆಯಲು ಒಂದು ನಿಶ್ಚಿತ ಕಾಲದಲ್ಲಿ ಬಳಸುತ್ತಿದ್ದರು. ಮಾತ್ರಾಂಗುಲವೂ ಇಂತಹ ಒಂದು ವ್ಯವಸ್ಥೆ. ಸಕಲಾಧಿಕಾರದಲ್ಲಿ ಕೆಳಕಂಡ ಉಲ್ಲೇಖವಿದೆ (ಐಯ್ಯಂಗಾರ್ : ೧೯೭೩ :೧೯).

ಯಜಮಾನ ದಕ್ಷಿಣೇ ಹಸ್ತ ಮಧ್ಯಮಾಂಗುಲಿ ಮಧ್ಯಮೇ
ಪರ್ವದೀರ್ಘತಮಂ ವಾಪಿ ಮಾತ್ರಾಂಗುಲಂ ವಿಧೀಯತೇ

ಮಾತ್ರಾಂಗುಲವನ್ನು ನಿರ್ಧರಿಸುವಲ್ಲಿ, ಯಜಮಾನನ ಬಲಗೈಯ, ಮಧ್ಯೆ ಬೆರಳಿನ ಮಧ್ಯ ಪಲ್ಲವದ ಉದ್ದ, ಅಗಲ ಅಥವಾ ಸುತ್ತಳತೆಯನ್ನು ಅಂಗುಲವಾಗಿ ಸ್ವೀಕರಿಸಿ ಅಳತೆಯನ್ನು ನಿರ್ಧರಿಸಬಹುದು. ಪ್ರತಿಮಾರಚನೆಗಾಗಿ ಅಪರಾಜಿತಪೃಚ್ಛಾ ಗ್ರಂಥದಲ್ಲಿ ತಾಲದ ವಿವರಣೆ ಕೆಳಕಂಡತಿದೆ (ಮಂಕಡ್ : ೧೯೫೦ : ೫೩೭).

ಸ್ವಕೀಯಾಂಗುಲಿಮಾನೇನ ಭಾಗಂ ವೈ ದ್ವಾದಶಾಂಗುಲಂ

‘ಸ್ವಕೀಯ’ ಎಂದಲ್ಲಿ ಯಜಮಾನನೇ ಅಥವಾ ಪ್ರತಿಮೆಯನ್ನು ರೂಪಿಸಿದ ಶಿಲ್ಪಿಯೇ? (ಜೋಷ್ಯರ್ : ೧೯೬೯ : ೯೭)

ಆಚಾರ್ಯ ದಕ್ಷಿಣಕರೇ ಮಧ್ಯಮಾಂಗುಲಿ ಮಧ್ಯಮೇ
ಪರ್ವಣೋರಂತರಂ ದೀರ್ಘಂ ಮಾತ್ರಾಂಗುಲಮುದಾಹೃತಂ

ಶಿಲ್ಪಿಯ ಅಥವಾ ಆಚಾರ್ಯನ ಬಲಹಸ್ತದ ಮಧ್ಯದ ಬೆರಳಿನ ಮಧ್ಯಪಲ್ಲವದ ಉದ್ದವೇ ಮಾತ್ರಾಂಗುಲ ಎಂದು ಪಾದ್ಮಸಂಹಿತೆ ವಿವರಿಸಿದೆ.

ದೇವಹಲಬ್ಧಾಂಗುಲೇನೈವ ಪ್ರತಿಮಾಂಗಾನಿ ಕಲ್ಪಯೇತ್

ಪಾದ್ಮಸಂಹಿತೆಯ ಪ್ರಕಾರ ದೇಹದ ಭಾಗದ ಅಳತೆಯೊಂದನ್ನು ಆಧರಿಸಿದ ಅಂಗುಲ ಮಾನದಿಂದ, ಅಂದರೆ ಈ ರೀತಿ ಲಬ್ಧವಾದ ಮಾತ್ರಾಂಗುಂಲದಿಂದ ಪ್ರತಿಮೆಯನ್ನು ರಚಿಸಬೇಕು (ಅದೇ.,).

ಶಾಸ್ತ್ರ ಗ್ರಂಥಗಳು ಪ್ರತಿಮಾರಚನೆಗೆ ಸಂಬಂಧಿಸಿದಂತೆ, ಉದ್ದ, ಅಗಲ, ದಪ್ಪ ಇತ್ಯಾದಿಗಳನ್ನು ಗುರುತಿಸುವ ಸಲುವಾಗಿ ಹಲವು ರೀತಿಯ ಮಾನಗಳನ್ನು ಹೇಳಿವೆ. ಅಜಿತಾಗಮವು ಐದು ರೀತಿಯ ಮಾನಗಳನ್ನು ಹೆಸರಿಸಿದೆ (ಭಟ್ : ೧೯೬೭:೮)ಕಾರಣಾಗಮವು ಆರು ರೀತಿಯ ಮಾನಗಳನ್ನು ಗುರುತಿಸುತ್ತದೆ (ಅದೇ; ಅಡಿಟಿಪ್ಪಣಿ).

ಮಾನಂ ಪ್ರಮಾಣಮುನ್ಮಾನಂ ಲಂಬಮಾನೋಪಮಾನಕೇ
ಏವಂ ಪಂಚ ಪ್ರಮಾಣೇನ ವ್ಯಕ್ತಲಿಂಗಂ ತು ಕಾರಯೇತ್

ಮಾನ, ಪ್ರಮಾಣ, ಉನ್ಮಾನ, ಲಂಬಮಾನ, ಉಪಮಾನ ಇವು ಅಜಿತಾಗಮದ ಪ್ರಕಾರ ಐದುಮಾನಗಳು. ಕಾರಣಾಗಮವು ಇವುಗಳೊಂದಿಗೆ ಪರಿಮಾಣವನ್ನು ಸೇರಿಸಿದೆ.

ಮಾನಂಚೈವ ಪ್ರಮಾಣಂ ಉನ್ಮಾನಂ ಹ್ಯುಪಮಾನಕಂ
ಪರಿಮಾಣಂ ಲಂಬಮಾನಂ ಷಡ್ವಿಧಂ ಮಾನಮಿಷ್ಯತೇ

ಮಾನ=ಉದ್ದ, ಪ್ರಮಾಣ=ಅಗಲ, ಉನ್ಮಾನ=ದಪ್ಪ, ಉಪಮಾನ=ಅಂಗಗಳ ಮಧ್ಯಂತರದ ಅಳತೆ, ಪರಿಮಾಣ =ನಾಹ =ಸುತ್ತಳತೆ, ಲಂಬಮಾನ=ಲಂಬಸೂತ್ರಗಳ ಉದ್ದ ಈ ವಿವರಗಳು ವಿಗ್ರಹ ರಚನೆಯಲ್ಲಿ ಹೆಚ್ಚು ಅವಶ್ಯಕವೆನಿಸಿದೆ.

ದೇವಾಲಯಗಳ ಮೂಲ ವಿಗ್ರಹಗಳ ಕಂಡರಣೆಯಲ್ಲಿ ಹಲವು ವಿಧದ ಅಳತೆಯನ್ನು ಶಾಸ್ತ್ರ ಗ್ರಂಥಗಳು ಸೂಚಿಸಿವೆ (ಜೋಷ್ಯರ್: ೧೯೬೯:೯೪).

ಗರ್ಭ ವಿಸ್ತಾರಮಾನಂ ವಾ ದ್ವಾರ ದೈರ್ಘ್ಯಮಥಾಪಿ ವಾ
ಪ್ರಾಸಾದ ಪಾದಮಾನಂ ವಾ ಹಸ್ತಮಾನಮಥಾಪಿ ವಾ
ಯಜಮಾನ ಪ್ರಮಾಣಂ ವಾ ಸ್ತಂಭ ಮಾನಮಥಾಪಿ ವಾ
ಕುರ್ಯಾಧ್ರುವ ಪ್ರತಿಕೃತಿಂ ಗ್ರಾಮದೇರನುಕೂಲಿಕಾಂ

ಪಾದ್ಮಸಂಹಿತೆಯ ಪ್ರಕಾರ ಮೂಲವಿಗ್ರಹ ರಚಿಸುವಲ್ಲಿ, ಗರ್ಭಗೃಹದ ವಿಸ್ತಾರ, ದ್ವಾರದ ಎತ್ತರ, ದೇವಾಲಯದ ಸ್ತಂಭದ ಎತ್ತರ, ಹಸ್ತಮಾನ, ಯಜಮಾನನ ಅಳತೆ ಇತ್ಯಾದಿಗಳಲ್ಲಿ ಒಂದನ್ನು ಆಧರಿಸಿ ಮೂಲವಿಗ್ರಹದ ಎತ್ತರವನ್ನು ನಿರ್ಧರಿಸಬೇಕು. ಇವುಗಳಲ್ಲಿ ಪುನರ್ ಪ್ರಭೇದಗಳನ್ನು ಗ್ರಂಥಗಳು ವಿವರಿಸುತ್ತವೆ. ಇದೇ ರೀತಿ ಕಾಮಿಕಾಗಮ ಗ್ರಂಥವೂ ಪ್ರಾಸಾದ ಗರ್ಭದ್ವಾರಾಭ್ಯಾಂ ಪಾದಾಧಿಷ್ಠಾನಮಾನತಃ– ಎಂದು ಗುರುತಿಸಿದೆ (ಶಿವಾಚಾರ್ಯ : ೧೯೭೫ : ೧೭೭).

ಡಾ. ಜಗದೀಶ್, ತಮ್ಮ ಗ್ರಂಥದಲ್ಲಿ ಹಲವಾರು ಅಳತೆ ಪಟ್ಟಿಕೆಗಳನ್ನು ದಾಖಲಿಸಿದ್ದಾರೆ. ಇವರು ದಾಖಲಿಸಿರುವ ಹೆಚ್ಚಿನ ಅಳತೆ ಪಟ್ಟಿಕೆಗಳು ದೇವಾಲಯಗಳ ಪರಿಸರದಲ್ಲಿವೆ. ಈ ಅಳತೆಗಳನ್ನು ಹೆಸರಿಸದಿದ್ದರೂ, ಕೆಲವು ಅಳತೆಗಳು ದೇವಾಲಯದ ನಿರ್ಮಾಣಕ್ಕೆ ಕಾಣರವಾಗಿರಬಹುದು. ದೇವಾಲಯಗಳೊಂದಿಗೆ ಪರಿಶೀಲಿಸಿದಾಗ ಮಾತ್ರ ಸತ್ಯಾಸತ್ಯತೆಯನ್ನು ತಿಳಿಯಬಹುದು.

ಕೆಲವೆಡೆ ಅಳತೆಪಟ್ಟಿಕೆಗಳೊಂದಿಗೆ ಶಾಸನಗಳ ಕಂಡರಣೆ ಇವೆ. ಈ ಶಾಸನಗಳಲ್ಲಿ “ಗಡಿಂಬ” ಎಂಬ ಪದ ಗಮನಾರ್ಹ. ಗಡಿಂಬ, ಕೋಲು, ಗಳೆ ಮುಂತಾದವು ಭೂಮಿ ಕಾಣಿಗಳ ಅಳತೆಗೆ ಸಂಬಂಧಿಸಿದೆ. ದೇವಾಲಯಗಳು ಸಾಮಾಜಿಕ ಸಂಸ್ಥೆಗಳಾಗಿದ್ದು, ಸಾರ್ವಜನಿಕರ ಅವಗಾಹನೆಗಾಗಿ, ಅಳತೆಗೋಲು ಇಲ್ಲಿ ಪ್ರದರ್ಶಿತವಾಗುತ್ತಿತ್ತು. ಕೆಲವೊಮ್ಮೆ ಸ್ಥಳೀಯ ನ್ಯಾಯ ತೀರ್ಮಾನಗಳಲ್ಲಿ, ವ್ಯಾಜ್ಯಾದಿಗಳನ್ನು ಪರಿಹರಿಸುವಲ್ಲಿ ನೆರವಾಗುತ್ತಿತ್ತು. ಮೇಲ್ಕಂಡ ವಿವರಗಳಿಂದ ಪ್ರಾಚೀನ ಕಾಲದ ಅಳತೆ ಪದ್ಧತಿಯ ಚಿತ್ರಣ ಮೂಡಿದಲ್ಲಿ ಈ ಲೇಖನದ ಉದ್ದೇಶ ಸಾರ್ಥಕ ಎನ್ನಿಸುತ್ತದೆ.