ಕಲ್ಯಾಣದ ಚಾಲುಕ್ಯರ ಮತ್ತು ಹೊಯ್ಸಳರ ಕಾಲದ ದೇವಾಲಯಗಳನ್ನು ಕಣ್ಣ ಮುಂದಿರಿಸಿಕೊಂಡು ಕರ್ನಾಟಕಕ್ಕೇ ಸೀಮಿತವಾದ ವಾಸ್ತುಶೈಲಿ ಇಲ್ಲವೇ ಎಂಬ ಪ್ರಶ್ನೆ ವಿದ್ವಾಂಸರನ್ನು ಬಹುದಿನಗಳಿಂದ ಕಾಡಿದೆ. ಈ ನಾಡಿನಲ್ಲಿ ರಚನೆಗೊಂಡ, ಈ ದೇವಾಲಯಗಳನ್ನು ಗುರುತಿಸಲು ಸಾಧ್ಯವಾಗುವ ವಾಸ್ತುಗ್ರಂಥಗಳು ಈವರೆವಿಗೆ ಲಭ್ಯವಿಲ್ಲ. ಆದರೆ, ಗುಜರಾತ್ ಪ್ರಾಂತದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಭುವನದೇವ ಪ್ರಣೀತ “ಅಪರಾಜಿತಪೃಚ್ಛಾ” ಗ್ರಂಥದಲ್ಲಿ, ಕರ್ನಾಟೇ ದ್ರಾವಿಡಂ ಸ್ಮೃತಂ ಎಂಬ ಉಲ್ಲೇಖವಿದೆ. ಈ ಗ್ರಂಥದ ಕಾಲ ಕ್ರಿ.ಶ. ೧೨ನೆಯ ಶತಮಾನ. ಈ ಶತಮಾನದ ಆಸುಪಾಸಿನಲ್ಲಿ ಕರ್ನಾಟಕದಲ್ಲಿ ಕಲ್ಯಾಣದ ಚಾಲುಕ್ಯರ ಕಾಲದ ಮತ್ತು ಹೊಯ್ಸಳರ ಕಾಲದ ದೇವಾಲಯಗಳು ಬೆಳೆದಿವೆ. ಅಪರಾಜಿತಪೃಚ್ಛಾ ಗ್ರಂಥಕಾರನು ಈ ದೇವಾಲಯಗಳನ್ನು ಗಮನದಲ್ಲಿರಿಸಿಕೊಂಡು ಹೇಳಿದ್ದಾನೆ ಎನ್ನಬಹುದು. ಈ ನೆಲದಲ್ಲಿ ರಚನೆಗೊಂಡ ವಾಸ್ತು‌ಗ್ರಂಥಗಳಿಲ್ಲದಿರಬಹುದು, ಆದರೆ ಶಾಸನೋಲ್ಲೇಖಗಳಿವೆ. ಕ್ರಿ.ಶ. ೧೧೨೯ರ ಹಂತೂರು ಶಾಸನವು “ನಾಗರಿಕ ದ್ರಾವಿಳ”ವೆಂಬ ಶೈಲಿಯನ್ನು ಗುರುತಿಸಿದೆ. ‘ನಾಗರಿಕ ದ್ರಾವಿಳ’ವೇ ದೊಡ್ಡಗದ್ದವಳ್ಳಿ ಶಾಸನಮೂಲದಿಂದ ಗುರುತಿಸಲ್ಪಟ್ಟ ಔತ್ತರೇಯ ದ್ರಾವಿಡ ಶೈಲಿ. ಕರ್ನಾಟಕದಲ್ಲಿ ಅರಳಿದ ಈ ಶೈಲಿಯು ದಾಕ್ಷಿಣಾತ್ಯ ಸಂಪ್ರದಾಯದ ಸಾಕಷ್ಟು ಲಕ್ಷಣಗಳನ್ನು ಬಳಸಿಕೊಂಡು ವೃದ್ಧಿಸಿದೆ. ಈ ದೇವಾಲಯಗಳನ್ನು ತಿಳಿಯುವಲ್ಲಿ ದಾಕ್ಷಿಣಾತ್ಯ ಸಂಪ್ರದಾಯದ ಕೊಡುಗೆಯನ್ನೂ ಗಮನಿಸಬೇಕು. ಅಪರಾಜಿತಪೃಚ್ಛಾ ಮತ್ತು ಸಮರಾಂಗಣ ಸೂತ್ರಧಾರ ಗ್ರಂಥಗಳಲ್ಲಿ ದ್ರಾವಿಡ ಶೈಲಿಯನ್ನು ಕುರಿತ ಪ್ರತ್ಯೇಕ ಅಧ್ಯಾಯಗಳಿವೆ. ಈ ಗ್ರಂಥಗಳಲ್ಲಿರುವ ಪೀಠರಚನೆ ಹಾಗೂ ತಲರಚನೆಗಳನ್ನು ತಾಳೆನೋಡಿ ವಿವರಿಸಲು ಪ್ರಯತ್ನಿಸಲಾಗಿದೆ. ಲಭ್ಯವಿರುವ ವಾಸ್ತುರಚನೆಗಳಲ್ಲಿ ಇವುಗಳನ್ನು ಹುಡುಕಿ ತೆಗೆಯುವುದು ಕಷ್ಟವೇ.

ಔತ್ತರೇಯ ದ್ರಾವಿಡಶೈಲಿಯ ದೇವಾಲಯವನ್ನು ವಿವರಿಸಲು ಬಳಸಿರುವ ಕೆಲವು ಪಾರಿಭಾಷಿಕ ಪದಗಳು ಅಧ್ಯಯನದಿಂದ ಮೂಡಿಬಂದದ್ದೇ ಹೊರತು ವಾಸ್ತುಗ್ರಂಥಗಳಲ್ಲಿಲ್ಲ. ಇದನ್ನ ವಿದ್ವಾಂಸರು ಪರಾಮರ್ಶಿಸಿ ಸೂಕ್ತ ತಿದ್ದುಪಡಿಗಳೊಂದಿಗೆ ಬಳಸಬಹುದೆಂದು ಅರಿಕೆ ಮಾಡಿ ಕೊಳ್ಳುತ್ತೇನೆ.

ಕರ್ನಾಟಕದ ದಾಕ್ಷಿಣಾತ್ಯ ದೇವಾಲಯಗಳನ್ನು ಅಧ್ಯಯನ ದೃಷ್ಟಿಯಿಂದ ಸ್ಥೂಲವಾಗಿ ಮೂರು ಕಾಲಘಟ್ಟಗಳಲ್ಲಿ ಗುರುತಿಸಬಹುದು.

೧. ಆರಂಭದ ಬಾದಾಮಿ ಚಾಲುಕ್ಯರ ಕಾಲ – ಕ್ರಿ.ಶ. ೭ ಮತ್ತು ೮ನೆಯ ಶತಮಾನ.

೨. ಮಧ್ಯಕಾಲೀನ ಗಂಗ ಮತ್ತು ನೊಳಂಬರ ಕಾಲ – ಕ್ರಿ.ಶ. ೯ ಮತ್ತು ೧೦ನೆಯ ಶತಮಾನ.

೩. ಅಂತಿಮ ಹಂತ ವಿಜಯನಗರ ಮತ್ತು ವಿಜಯನಗರೋತ್ತರ ಕಾಲ – ಕ್ರಿ.ಶ. ೧೪ನೆಯ ಶತಮಾನದಿಂದ………

ಬಾದಾಮಿ ಚಾಲುಕ್ಯರ ಕಾಲದಲ್ಲಿ ಶೈಲಿ ಸಂಪ್ರದಾಯಗಳ ಆರಂಭದ ಬೆಳವಣಿಗೆಯನ್ನು ಕಾಣಬಹುದು. ಗಂಗ ಹಾಗೂ ನೊಳಂಬರ ಕಾಲದಲ್ಲಿ ಶೈಲಿ, ಸಂಪ್ರದಾಯ ಹಾಗೂ ಅಲಂಕಾರಿಕ ರಚನೆಗಳು ಖಚಿತಗೊಂಡವು. ವಿಜಯನಗರ ಹಾಗೂ ವಿಜಯನಗರೋತ್ತರ ಕಾಲದಲ್ಲಿ ದೇವಾಲಯ ಸಂಕೀರ್ಣಗಳು ವಿಸ್ತಾರವಾಗಿ ಬೆಳೆದವು. ವಾಸ್ತುವಿಕಾಸ ದೃಷ್ಟಿಯಿಂದ ಕಡೆಯ ಹಂತ ಹೆಚ್ಚು ಮಹತ್ವವೆನಿಸಿಲ್ಲ. ದಾಕ್ಷಿಣಾತ್ಯ ವಾಸ್ತುಗ್ರಂಥಗಳಲ್ಲಿರುವ ವಿವರಣೆಯು ಹೆಚ್ಚಿನವು ಮಧ್ಯಕಾಲೀನ ದೇವಾಲಯಗಳನ್ನು ಕುರಿತದ್ದು. ಈ ಗ್ರಂಥಗಳ ರಚನೆ ಬಹುಶಃ ಎಂಟನೆಯ ಶತಮಾನ ಹಾಗೂ ನಂತರದ ಕಾಲದ್ದೆನಿಸಿದೆ. ಈ ವಿವರಗಳನ್ನಾಧರಿಸಿ ಆರಂಭಿಕ ಹಂತವನ್ನೂ, ಮುಂದುವರೆದ ಹಂತಗಳನ್ನೂ ವಿವರಿಸಲು ಸಾಧ್ಯವಿದೆ. ಈ ಗ್ರಂಥಗಳಲ್ಲಿರುವ ಲಕ್ಷಣಗಳನ್ನು ಪ್ರಾತಿನಿಧಿಕವಾಗಿ ಸಂಗ್ರಹಿಸಿ, ದೇವಾಲಯಗಳ ಚಿತ್ರಣ ನೀಡಲು ಸಾಧ್ಯವಾಗುವಂತೆ ಉದಾಹರಣೆಗಳೊಂದಿಗೆ ಸಂಕಲಿಸಲಾಗಿದೆ. ದೇವಾಲಯಗಳ ಸರಳ ವಿವರಣೆ ಹಾಗೂ ಒಟ್ಟು ನೋಟಕ್ಕೆ ಈ ಮಾಹಿತಿ ಉಪಯುಕ್ತ.

ನನ್ನ ಈ ಸಂಶೋಧಕ ಪ್ರವೃತ್ತಿಯನ್ನು ಪ್ರೋತ್ಸಾಹಿಸಿ ಬೆಳೆಸಿದ ಹಲವರಿದ್ದಾರೆ. ಅವರನ್ನು ನಾನು ನೆನೆಯಬೇಕು. ನನ್ನ ಹೆಚ್ಚಿನ ಬರಹಗಳನ್ನು ಪ್ರಕಟಿಸಿದವರು ಕರ್ನಾಟಕ ಇತಿಹಾಸ ಅಕಾಡೆಮಿಯವರು. ಈ ಸಂಸ್ಥೆಯ ಸದಸ್ಯರು ನಾನು ಬೆಳೆಯಲು ಕಾರಣರಾಗಿದ್ದಾರೆ. ಗೌರವಾಧ್ಯಕ್ಷರಾದ ಶ್ರೀಯುತ ಡಾ.ಸೂರ್ಯನಾಥ ಕಾಮತರು, ಅವರ ಸಂಪಾದಕತ್ವದಲ್ಲಿ ಮಿಥಿಕ್ ಸೊಸೈಟಿಯ ತ್ರೈಮಾಸಿಕ ಸಂಶೋಧನಾ ಪತ್ರಿಕೆಯಲ್ಲಿ ನನ್ನ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ. ಈ ಸಂಸ್ಥೆಗಳಿಗೆ ಹಾಗೂ ಹಿರಿಯ ವಿದ್ವಾಂಸರಿಗೆ ನನ್ನ ಕೃತಜ್ಞತೆಗಳು. ಬರಹಗಳ ಮೌಲ್ಯವನ್ನು ಗುರುತಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದವರು ಕನ್ನಡ ವಿಶ್ವವಿದ್ಯಾಲಯದವರು. ಕ್ರಿ.ಶ. ೨೦೦೦ ರಲ್ಲಿ ಪ್ರಕಟಗೊಂಡ ಪುಸ್ತಕ ಒಂದೇ ವರ್ಷದಲ್ಲಿ ಮಾರಾಟವಾಗಿ ಪುನಃ ಬೇಡಿಕೆಯನ್ನು ಸೃಷ್ಟಿಸಿತು. ಕನ್ನಡ ವಿಶ್ವವಿದ್ಯಾಲಯದವರು ಪರಿಷ್ಕೃತ ಹಾಗೂ ವಿಸ್ತೃತ ರೂಪವನ್ನು ಹೊರತರಲು ಉತ್ಸಾಹ ತೋರಿ, ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರಿಗೆ, ಪ್ರಸಾರಾಂಗದ ನಿರ್ದೇಶಕರಾದ ಡಾ. ಎ. ಸುಬ್ಬಣ್ಣ ರೈ ಮತ್ತು ಸಿಬ್ಬಂದಿ ವರ್ಗಕ್ಕೆ ನನ್ನ ಕೃತಜ್ಞತೆಗಳು. ಪುಸ್ತಕವನ್ನು ಅಂದವಾಗಿ ಅಣಿಗೊಳಿಸಿ, ಮುದ್ರಣಕ್ಕೆ ಮುತುವರ್ಜಿ ವಹಿಸಿದ ಗೆಳೆಯ ಶ್ರೀಯುತ ಕೆ.ಎಲ್. ರಾಜಶೇಖರ್ರವರಿಗೆ ವಿಶೇಷವಾದ ಕೃತಜ್ಞತೆಗಳು.

ಎಂ.ಎನ್. ಪ್ರಭಾಕರ್