‘ಇರುವುದಕ್ಕೊಂದು ಸೂರು’ ಎನ್ನುವುದು ಮಾನವನ ಮೂಲಭೂತ ಅವಶ್ಯಕತೆಗಳಲ್ಲೊಂದು. ಮೊದಲಿಗೆ ಆತ ಹೆಬ್ಬಂಡೆಗಳ ಅಡಿಯಲ್ಲಿ ಕೊಂಚ ಜಾಗವನ್ನಾರಿಸಿದ. ನಂತರ ಹೆಬ್ಬಂಡೆಗಳ ಅಡಿಯಲ್ಲಿ ಕೊಂಚ ವಿಶಾಲವಾದ, ಸುರಕ್ಷಿತವೆನಿಸುವ ಆಹಾರಾದಿ ಗಳಿಗೆ ಹತ್ತಿರ ಎನಿಸುವ ಸ್ಥಳಕ್ಕೆ ಧಾವಿಸಿದ. ಈ ಗುಹೆಯೇ ಮನೆಯ ಕಲ್ಪನೆಯ ಮೂಲವೆನಿಸಿದೆ. ಇಂತಹ ಪ್ರಾಚೀನ ಗುಹೆ-ಗವಿಗಳನ್ನು ಹಲವೆಡೆ ಕಾಣುತ್ತೇವೆ. ಇವು ಇತಿಹಾಸಪೂರ್ವದ ಮಾನವನ ಬದುಕನ್ನು ವ್ಯಾಖ್ಯಾನಿಸಲು ನೆರವಾಗಿವೆ. ಮನೆಯ ಸ್ವತಂತ್ರ ರಚನೆಯ ಕಲ್ಪನೆ, ಗರಿಗೆದರಿದಾಗ ಗುಹೆಯೊಂದಿಗೆ ಕಟ್ಟಡಗಳ ನಿರ್ಮಾಣವೂ ಮೂಡಿಬಂತು. ನಿವಾಸಾತ್ ಸರ್ವ ಭೂತಾನಾಂ ವಾಸ್ತುರಿತಿ ಶಬ್ದಿತಃ“- ಎಲ್ಲ ಪ್ರಾಣಿಗಳ ವಸತಿಗಾಗಿ ವಾಸ್ತು ಪದವು ಬಳಕೆಗೊಂಡಿದೆ; ಇದು ಅಮರಕೋಶದ ವ್ಯಾಖ್ಯೆ. ಮಯಮತ ಗ್ರಂಥವು ವಾಸ್ತುಶಬ್ದವನ್ನು ಎರಡು ಹಂತಗಳಲ್ಲಿ ವಿವರಿಸಿದೆ (ಡಗೆನ್ಸ್: ೧೯೭೦:೩೫).

01_382_DV-KUH

ಅಮರ್ತ್ಯಾಶ್ಚೈವ ಮರ್ತ್ಯಾಶ್ಚ ಯತ್ರ ಯತ್ರ ವಸಂತಿ ಹಿ ತದ್ವಸ್ತು ಇತಿ ಮತಂ– ಮರ್ತ್ಯರು ಮತ್ತು ಅಮರ್ತ್ಯರು ವಾಸಿಸುವ ಸ್ಥಳಕ್ಕೆ ವಸ್ತು ಎಂದು ಹೆಸರು. ವಸ್ತುವನ್ನು ಆಶ್ರಯಿಸಿದ್ದು ವಾಸ್ತು. ಪ್ರಾಸಾದಾದೀನಿ ವಾಸ್ತೂನಿ ವಸ್ತುತ್ವಾತ್ ವಸ್ತು ಸಂಶ್ರಯಾತ್– ಪ್ರಾಸಾದ, ಹರ್ಮ್ಯ, ಸೌಧ ಇತ್ಯಾದಿಗಳು ವಸ್ತುವನ್ನು ಆಶ್ರಯಿಸಿದ್ದು, ವಾಸ್ತು ಎಂದೆನಿಸಿಕೊಳ್ಳುತ್ತದೆ. ಆದ್ದರಿಂದ ‘ವಾಸ್ತು’ ಎಂದಲ್ಲಿ ವಸತಿ ಯೋಗ್ಯ ಭೂಮಿ ಹಾಗೂ ಆ ಭೂಮಿಯ ಮೇಲೆ ನಿಂತ ಕಟ್ಟಡ ಎರಡನ್ನೂ ಒಳಗೊಳ್ಳುತ್ತದೆ. ನಿಸರ್ಗದ ಮಡಲಿನಲ್ಲಿ, ಗುಹೆಗಳಲ್ಲಿ ವಾಸಿಸಿದ ಮನುಷ್ಯ, ಸ್ವತಂತ್ರ ಕಟ್ಟಡಗಳ ರಚನೆಯಲ್ಲಿ ತನ್ನ ಕೌಶಲ್ಯವನ್ನು ಪ್ರದರ್ಶಿಸಿದರೂ, ಗುಹೆಗಳಂತಿರುವ ಸುಂದರ ತಾಣಗಳನ್ನು ಆಯ್ದು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದ. ಗುಹಾಂತರ ದೇವಾಲಯಗಳ ಮೂಲಕಥೆಯೇ ಇದು. ಇಂದು ಕಾಣುತ್ತಿರುವ ಗುಹಾಂತರ ದೇವಾಲಯಗಳ ನಿರ್ಮಾಣದ ಕಾಲಕ್ಕೆ, ಕಟ್ಟಡಗಳ ರಚನೆಯೂ ಸಮರ್ಥವಾಗಿ ಬೆಳೆದಿತ್ತು ಎಂದು ತಿಳಿಯಲು ಅವಕಾಶವಿದೆ. ಈ ದಿಸೆಯಲ್ಲಿ ಮಂಡಗಪಟ್ಟುವ ಶಾಸನವನ್ನು ಗಮನಿಸಬೇಕು (ಶ್ರೀನಿವಾಸನ್: ೧೯೬೪ : ೪೭).

ಏತದನಿಷ್ಟಕಮದ್ರುಮ

[ಲೋ]
ಹಮಸುಧಂ [ವಿಚಿತ್ರ ಚಿ]ತ್ತೇನ
ನಿರ್ಮಾಪಿತಂ ನೃಪೇ []ಬ್ರಹ್ಮೇ
ಶ್ವರ ವಿಷ್ಣು ಲಕ್ಷಿತಾಯತನಂ

ಗುಹೆ ಅಥವಾ ಗವಿಗಳು ವಸತಿಮೂಲವೆನಿಸಿದರೂ, ಲಕ್ಷಿತಾಯತನವೆಂಬ ಈ ಗುಹಾಂತರ ದೇವಾಲಯಕ್ಕೆ ಮುನ್ನ ಸ್ವತಂತ್ರ ದೇವಾಲಯಗಳೂ ಇದ್ದವೆಂದು ಪರೋಕ್ಷವಾಗಿ ದೃಢಪಡಿಸುತ್ತದೆ. ಈ ಗುಹಾಂತರ ದೇವಾಲಯವು ವಿಕಾಸದ ಹಾದಿಯಲ್ಲಿ ಹೊಸ ಆವಿಷ್ಕಾರವೆನ್ನುವಂತೆ, ಇಟ್ಟಿಗೆ, ಮರ, ಲೋಹ ಇತ್ಯಾದಿಗಳಿಂದ ರಚಿಸಲ್ಪಡುವ ರಚನೆಗಳನ್ನು ಹಿಂಸರಿಸಿ, ರಚನೆಗೊಂಡದ್ದನ್ನು ಸ್ಪಷ್ಟಪಡಿಸುತ್ತದೆ.

ದೇವಾಲಯಗಳ ಬೆಳವಣಿಗೆಯಲ್ಲಿ, ಗುಹಾಂತರ ದೇವಾಲಯಗಳ ರಚನೆಗಳನ್ನೂ ಗಮನಿಸಬೇಕು. ದೇವಾಲಯವನ್ನು ರಚಿಸುವ ಸ್ಥಪತಿ ಅಥವಾ ಕುಶಲಕರ್ಮಿಗೆ ಯಜಮಾನನಿಂದ ಒದಗುವ ಪ್ರೇರಣೆ ಮುಖ್ಯ ಎನಿಸಿ, ಆತನ ಆದೇಶಕ್ಕೆ ಹೆಚ್ಚು ಸ್ಪಂದಿಸುವುದರಿಂದ, ವಿಕಾಸದ ಹಾದಿ, ಶೈಲಿಗಳು ಗೌಣವೆನಿಸುವ ಸಾಧ್ಯತೆ ಉಂಟು. ಆದ್ದರಿಂದ ವಿಕಾಸದ ಹಾದಿಯನ್ನು ಸರಳರೇಖೆಯಲ್ಲಿ, ಕಾಲಾನುಕ್ರಮದಲ್ಲಿ, ಸುಲಭವಾಗಿ ಗುರುತಿಸಲಾಗದು. ಸರಳ ಹಾಗೂ ಸಾಮಾನ್ಯ ರಚನೆಗಳನ್ನು ಗುರುತಿಸುವುದು ಸಾಧ್ಯವೆನಿಸಿದೆ.

ವಸತಿಯೋಗ್ಯ ವಾಸ್ತುವನ್ನು ಸೈಂಧವ ಸಂಸ್ಕೃತಿಯ ದಿನಗಳಿಂದ ಕಾಣಬಹುದಾಗಿದ್ದು ಗ್ರಂಥ ಅಥವಾ ಲಿಖಿತ ರೂಪದಲ್ಲಿ ಈ ಮಾಹಿತಿ ಲಭ್ಯವಿಲ್ಲ. ಹರಪ್ಪ ಮತ್ತು ಮಹೆಂಜೋದಾರೋ ಉತ್ಖನನ ಸ್ಥಳಗಳಲ್ಲಿ ಲಭ್ಯವಿರುವ ನಗರಗಳ ರಚನೆ, ಕಟ್ಟಡಗಳ ರಚನೆ, ಹಾದಿಬೀದಿಗಳು, ಅಂದಿನ ಜನರ ಬುದ್ಧಿಮತ್ತೆಯನ್ನೂ, ಲೌಕಿಕ ಜಾಣ್ಮೆಯನ್ನೂ, ಧಾರಾಳವಾಗಿ ತೋರಿಸುತ್ತವೆ; ಅವುಗಳಲ್ಲಿ ಪ್ರಯೋಜನ ದೃಷ್ಟಿ ಹೆಚ್ಚಾಗಿದಿಯೇ ಹೊರತು, ಜನರ ಭಾವಜೀವನಕ್ಕೆ ಸಂಬಂಧಿಸಿದ ಅಂಶಗಳು ಕಡಿಮೆ ಎಂದು ವಿದ್ವಾಂಸರು ವಿವರಿಸಿದ್ದಾರೆ (ಕಾರಂತ : ೧೯೬೫ : ೧೩). ಮಹಾಕಾವ್ಯಗಳಲ್ಲಿ ಕ್ಚಚಿತ್ತಾಗಿ ವಿವರಿಸಲ್ಪಡುವ ಹರ್ಮ್ಯ, ಸೌಧ, ರಾಜಗೃಹಗಳ ನಂತರ, ಭರತನ ನಾಟ್ಯಶಾಸ್ತ್ರದಲ್ಲಿ ದೊರಕುವ ರಂಗಮಂಟಪದ ರಚನೆ ಶಾಸ್ತ್ರೀಯ ದೃಷ್ಟಿಯ ಮೊದಲ ವಾಸ್ತು ವಿವರಣೆ ಎನ್ನಿಸಿದೆ (ನರಸಿಂಹಶಾಸ್ತ್ರೀ : ೧೯೭೭ : ೩೧-೪೮).

ಪ್ರಾಸಾದ ಪ್ರತಿಮಾರಾಮ ಗೃಹ ವಾಪ್ಯಾದಿ ಸಂಸ್ಕೃತಿಃ
ಕಥಿತಾ ಯತ್ರ ತಚ್ಛಿಲ್ಪಶಾಸ್ತ್ರಮುಕ್ತಂ ಮಹರ್ಷಿಭಿಃ

ದೇವಾಲಯ, ಅರಮನೆ ಅಥವಾ ರಾಜಗೃಹ ರಚನೆ, ದೇವತಾಮೂರ್ತಿಗಳ ರಚನೆ, ಸರ್ವ ಜನೋಪಯೋಗಿ ಕಟ್ಟಡಗಳು, ಬಾವಿ, ಪುಷ್ಕರಿಣಿ ಮುಂತಾದವನ್ನು ಶುಕ್ರನೀತಿ ಗ್ರಂಥವು ಶಿಲ್ಪಶಾಸ್ತ್ರದಡಿಯಲ್ಲಿ ಗುರುತಿಸುತ್ತದೆ (ಮಿಶ್ರಾ : ೧೯೬೮ : ೨೩೦). ಕೆರೆಗಳ ನಿರ್ಮಾಣ, ಬಾವಿ ತೋಡಿಸುವಿಕೆ, ದೇವಾಲಯ ರಚನೆ ಇತ್ಯಾದಿಗಳು, ಪ್ರಾಚೀನ ಸಮಾಜದಲ್ಲಿ ಉಳ್ಳವರು ಕೈಗೊಳ್ಳುವ ಸತ್ಕಾರ್ಯ ಅಥವಾ ಕರ್ತವ್ಯ ಎನಿಸಿತ್ತು. ದೇಶದ ಉದ್ದ ಅಗಲಕ್ಕೂ ಕಂಡುಬರುವ ಗುಡಿಗೋಪುರಗಳ ನಿರ್ಮಾಣಕ್ಕೆ ಹಿನ್ನೆಲೆಯಾಗಿರುವ, ಈ ಸಾಮಾಜಿಕ ವ್ಯವಸ್ಥೆಯನ್ನು ಶಾಸನಗಳು ಸತ್ತ್ವಪೂರ್ಣವಾಗಿ ಚಿತ್ರಿಸಿವೆ. ಪ್ರಾಚೀನ ವಾಸ್ತುರಚನೆಗಳಲ್ಲಿ, ಇಂದು ಅಳಿದುಳಿದಿರುವುದು ಗುಡಿಗೋಪುರಗಳೇ ಆಗಿವೆ. ಇವು ಕಲಾಮೌಲ್ಯದಿಂದ ಕೂಡಿದ್ದು ಸಾಂಸ್ಕೃತಿಕ ವಾಸ್ತು ಎನ್ನಿಸಿದೆ. ವಾಸ್ತುಗ್ರಂಥಗಳಲ್ಲಿ ದೇವಾಲಯಗಳಿಗೆ ಸಂಬಂಧಿಸಿದ ವಿವರಗಳು ಹೆಚ್ಚಾಗಿದ್ದು ದೇವಾಲಯ ರಚನೆಯೇ ವಾಸ್ತುಶಾಸ್ತ್ರವೆನ್ನಿಸದೆ. ಇದನ್ನು ವಾಸ್ತುವಿದ್ಯೆಯೆಂದೂ, ವಾಸ್ತುಶಿಲ್ಪವೆಂದೂ ಪರ್ಯಾಯವಾಗಿ ಗುರುತಿಸುವುದುಂಟು.

ಚತುಷಷ್ಠಿ ಕಲೆಗಳಲ್ಲಿ ವಾಸ್ತುವಿದ್ಯೆ, ದಾರುಕರ್ಮಗಳೂ ಸೇರಿದ್ದು, ಭರತನ ನಾಟ್ಯಶಾಸ್ತ್ರದಲ್ಲಿ ಮಂಟಪ ರಚನೆಯೊಂದಿಗೆ ದಾರುಕರ್ಮದ ವಿವರಗಳೂ ಇವೆ. ವಾಸ್ತುಶಾಸ್ತ್ರಕ್ಕೆ ಸಂಬಂಧಿಸಿದ ಶಬ್ದಕೋಶದ ಮುನ್ನುಡಿಯಲ್ಲಿ ವಿದ್ವಾಂಸ ಪಿ.ಕೆ. ಆಚಾರ್ಯರವರು ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ ಪದಗಳನ್ನು ಪರ್ಯಾಯ ಪದಗಳೆಂಬಂತೆ ಬಳಸಿದ್ದಾರೆ. ವಾಸ್ತು ಮತ್ತು ಶಿಲ್ಪ ಶಬ್ದಗಳು ಖಚಿತಾರ್ಥಗಳನ್ನೊಳಗೊಂಡಿದ್ದು, ಅಧ್ಯಯನ ದೃಷ್ಟಿಯಿಂದ ನಿರ್ದಿಷ್ಟವಾಗಿ ಬಳಸಬೇಕಾಗಿದೆ. ನಾಟ್ಯಶಾಸ್ತ್ರದ ಆರಂಭದಲ್ಲಿ ಭರತನು ನಾಟ್ಯಶಾಸ್ತ್ರವನ್ನು ಸರ್ವಶಿಲ್ಪ ಪ್ರವರ್ತಕ ಎಂದು ವಿವರಿಸಿದ್ದಾನೆ (ನರಸಿಂಹಶಾಸ್ತ್ರೀ : ೧೯೭೭ : ೩).

ಸರ್ವಶಾಸ್ತ್ರಾರ್ಥ ಸಂಪನ್ನಂ ಸರ್ವಶಿಲ್ಪ ಪ್ರವರ್ತಕಂ
ನಾಟ್ಯಾಖ್ಯಂ ಪಂಚಮಂ ವೇದಂ ಸೇತಿಹಾಸಂ ಕರೋಮ್ಯಹಂ

ಈ ಉಲ್ಲೇಖದಲ್ಲಿ ಶಾಸ್ತ್ರ ಮತ್ತು ಶಿಲ್ಪಗಳನ್ನು ಪ್ರತ್ಯೇಕಗೊಳಿಸಿದ್ದನ್ನು ಕಾಣಬಹುದು. ರಸ, ಭಾವ, ಲೋಕಧರ್ಮ ಇತ್ಯಾದಿಗಳನ್ನು ಶಾಸ್ತ್ರವೆಂದೂ, ನೃತ್ಯ, ಗಾನ, ರಂಗಮಂಟಪ ರಚನೆ, ಇತ್ಯಾದಿಗಳನ್ನು ಶಿಲ್ಪವೆಂದು ಗಮನಿಸಲಾಗಿದೆ. ಈ ರೀತಿ, ಶಾಸ್ತ್ರ ಮತ್ತು ಶಿಲ್ಪಗಳ ಪ್ರತ್ಯೇಕತೆಯನ್ನು ಕಾಣಬಹುದು. ಭಾರತೀಯ ವಾಸ್ತು, ಮೂರ್ತಿ, ಚಿತ್ರಕಲೆಗಳ ಅಧ್ಯಯನಕ್ಕೆ ಸಂಬಂಧಿಸಿದ ಪ್ರಾಚೀನ ಗ್ರಂಥಗಳನ್ನು ಶಿಲ್ಪಶಾಸ್ತ್ರಗಳೆಂದೇ ಗುರುತಿಸುವುದುಂಟು. ಕೆಲವೊಮ್ಮೆ ಶಿಲ್ಪಶಾಸ್ತ್ರವೆಂದಲ್ಲಿ ಮೂರ್ತಿ ಅಥವಾ ಪ್ರತಿಮಾ ರಚನೆ, ಅವುಗಳ ಲಕ್ಷಣಗಳು, ತಾಳಮಾನ ಇತ್ಯಾದಿಗಳನ್ನು ಹೆಸರಿಸುವುದುಂಟು. ಪ್ರೊ.ಫಣೀಂಧ್ರನಾಥ ಬೋಸ್‌ರವರು “ಭಾರತೀಯ ಶಿಲ್ಪಶಾಸ್ತ್ರದ ಮೂಲತತ್ತ್ವಗಳ”ನ್ನು ಗುರುತಿಸುವಾಗ ಶಿಲ್ಪಶಾಸ್ತ್ರ ಪದವನ್ನು ವಾಸ್ತು ಹಾಗೂ ಪ್ರತಿಮಾಶಾಸ್ತ್ರ ಎರಡನ್ನೂ ಒಳಗೊಂಡಂತೆ ವಿವರಿಸಿದ್ದಾರೆ (೧೯೭೮ : ೮).

ಶಿಲ್ಪವೆನ್ನುವ ಪದವು ಮೂರ್ತಿಶಿಲ್ಪವೆಂಬ ಅರ್ಥದಲ್ಲಿ ರೂಢಿಗತವಾಗಿದ್ದರೂ, ಅದಕ್ಕೆ ತನ್ನದೇ ಆದ ಖಚಿತಾರ್ಥವಾಗಿದೆ. ಶಿಲ್ಪಂ ಕರ್ಮಕಲಾಧಿಕಂ ಇದು ಅಮರಸಿಂಹನ ಅಮರ ಕೋಶದ ವಿವರಣೆ. ಕರ್ತೃವಿನ ಅಧಿಕ ಕೌಶಲ್ಯವನ್ನೊಳಗೊಂಡ ಕರ್ಮ ಅಥವಾ ಕ್ರೀಯೆಗೆ ಶಿಲ್ಪವೆಂದು ಹೆಸರು. ಇದು ತಾಂತ್ರಿಕ ಪರಿಣಿತಿಯನ್ನು ಅಪೇಕ್ಷಿಸುತ್ತದೆ. ಶಿಲ್ಪಶಬ್ದಸ್ತು ಪುನಃ ಶೀಲ ಸಮಾಧೌ ಇತಿ ಧಾತೋಃ ಮನಸಃ ಸಮಾಧಾನಕಾರಣಂ ವಸ್ತುಜಾತಮಿತಿ ಉತ್ಪದ್ಯತೇ ಶಿಲ್ಪ ಶಬ್ದವು ಮನಸ್ಸಿಗೆ ಸಮಾಧಾನವನ್ನು ಉಂಟುಮಾಡುವ ಕ್ರೀಯೆಯಾಗಿದ್ದು ಕಲೆಯ ದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ (ಕೃಷ್ಣರಾಯ ಮತ್ತು ಆಪ್ಟೆ : ೧೯೨೬ : ೨). ಸದಭಿರುಚಿಯಿಂದ ಕೂಡಿದ, ಸೌಂದರ್ಯಾನುಭವನ್ನುಂಟುಮಾಡುವ ಕ್ರೀಯೆ ಎನಿಸಿದ್ದು, ಇದನ್ನು ಶಿಲ್ಪವೆಂದೂ, ಕರ್ಮಕಲಾಧಿಕ್ಯವೆಂದು ಅಮರಸಿಂಹನು ಗುರುತಿಸುತ್ತಾನೆ.

ಈಗ ವಾಸ್ತುಶಾಸ್ತ್ರ ಮತ್ತು ವಾಸ್ತುಶಿಲ್ಪ ಪದಗಳನ್ನು ಸುಲಭವಾಗಿ ಅರ್ಥೈಸಬಹುದು. ವಾಸ್ತುವಿಗೆ ಸಂಬಂಧಿಸಿದ ಮೂಲಸ್ವರೂಪಗಳನ್ನು ಗುರುತಿಸುವುದೇ ವಾಸ್ತುಶಾಸ್ತ್ರ. ವಾಸ್ತುಶಿಲ್ಪ ಪದಗಳನ್ನು ಸುಲಭವಾಗಿ ಅರ್ಥೈಸಬಹುದು. ವಾಸ್ತುವಿಗೆ ಸಂಬಂಧಿಸಿದ ಮೂಲಸ್ವರೂಪಗಳನ್ನು ಗುರುತಿಸುವುದೇ ವಾಸ್ತುಶಾಸ್ತ್ರ. ವಾಸ್ತುಶಿಲ್ಪ ಎಂದಲ್ಲಿ ತಾಂತ್ರಿಕ ಪರಿಣಿತಿಯನ್ನು ಹೊಂದಿದ, ಭಾವ ಸಂಬಂಧವೂ ಬೆಸೆಯಲ್ಪಟ್ಟ ಸಾಂಸ್ಕೃತಿಕ ವಾಸ್ತುರಚನೆಗಳು ಹಾಗೂ ವಿವರಗಳು ಪ್ರಧಾನಪಾತ್ರ ವಹಿಸುತ್ತವೆ. ದೇವಾಲಯ ವಾಸ್ತುವನ್ನು ಸಾಂಸ್ಕೃತಿಕ ವಾಸ್ತು ಎಂದೂ ಹೆಸರಿಸಬಹುದು. ದೇವಾಲಯವಾಸ್ತು, ಪ್ರತಿಮಾರಚನೆ ಹಾಗೂ ಲಕ್ಷಣಗಳು, ಚಿತ್ರರಚನೆ ಇತ್ಯಾದಿಗಳಿಗೆ ಸಂಬಂಧಿಸಿದ ಶಾಸ್ತ್ರಗಳೂ ಶಿಲ್ಪಶಾಸ್ತ್ರ ಎನ್ನಿಸಿದೆ. ಶಿಲ್ಪಶಾಸ್ತ್ರವು ಇಷ್ಟಕ್ಕೇ ಸೀಮಿತವಾಗಿಲ್ಲ ಪ್ರತಿಯೊಂದು ತಾಂತ್ರಿಕ ವಿದ್ಯೆಯನ್ನೂ ಶಿಲ್ಪಶಾಸ್ತ್ರ ಎನ್ನಬಹುದಾಗಿದೆ. ವಿಜ್ಞಾನಕ್ಕೆ ಸಂಬಂಧಿಸಿದಂತೆ “ಸೈನ್ಸ್” ಮತ್ತು “ಟೆಕ್ನಾಲಜಿ” ಎಂಬ ಎರಡು ಪದಗಳು ಬಳಕೆಯಲ್ಲಿವೆ. ಶಾಸ್ತ್ರ ಹಾಗೂ ಶಿಲ್ಪ ಶಬ್ದಗಳು ಕ್ರಮವಾಗಿ ಈ ಪದಗಳ ಅರ್ಥವನ್ನು ಧ್ವನಿಸುತ್ತವೆ. ಭೃಗುಸಂಹಿತೆಯನ್ನು ಶಿಲ್ಪದ ವಿವರಣೆ ಕೆಳಕಂಡಂತಿದೆ (ರಾಮಕೃಷ್ಣ ರಾವ್ : ೧೯೮೭ : ೧೨೧).

ನಾನಾವಿಧಾನಾಂ ವಾಸ್ತೂನಾಂ ಯಂತ್ರಾಣಾಂ ಕಲ್ಪ ಸಂಪದಾಂ
ಧಾತೂನಾಂ ಸಾಧನಾನಾಂ ವಾಸ್ತೂನಾಂ ಶಿಲ್ಪಸಂಜ್ಞಿತಂ

ಶಿಲ್ಪಸಂಬಂಧಿ ವಸ್ತುವೈವಿಧ್ಯವನ್ನು ತಿಳಿಯುವ ಸಲುವಾಗಿ ಈ ಶಾಸ್ತ್ರಗಳ ಪಟ್ಟಿಯನ್ನು ಯಥಾವತ್ತಾಗಿ ನೀಡಲಾಗಿದೆ (ರಾಮಕೃಷ್ಣರಾವ್ : ೧೯೮೭: ೧೨೩-೧೨೪).

ಶಿಲ್ಪಶಾಸ್ತ್ರ

ಧಾತುಖಂಡ ಸಾಧನಖಂಡ ವಾಸ್ತುಖಂಡ
ಕೃಷಿಶಾಸ್ತ್ರ ನೌಕಾಶಾಸ್ತ್ರ ವೇಶ್ಮಶಾಸ್ತ್ರ
ಜಲಶಾಸ್ತ್ರ ರಥಶಾಸ್ತ್ರ ಪ್ರಾಕಾರಶಾಸ್ತ್ರ
ಖನಿಶಾಸ್ತ್ರ ವಿಮಾನಶಾಸ್ತ್ರ ನಗರ ರಚನಾಶಾಸ್ತ್ರ
ವೇಶ್ಮ ಶಾಸ್ತ್ರ ಪ್ರಾಕಾರಶಾಸ್ತ್ರ ನಗರ ರಚನಾಶಾಸ್ತ್ರ
ವಾಸೋವಿದ್ಯಾ ದುರ್ಗವಿದ್ಯಾ ಆಪಣವಿದ್ಯಾ
ಕುಟ್ಟಿವಿದ್ಯಾ ಕೂಟವಿದ್ಯಾ ರಾಜಗೃಹವಿದ್ಯಾ
ಮಂದಿರವಿದ್ಯಾ ಆಕರವಿದ್ಯಾ ಉಪವನವಿದ್ಯಾ
ಪ್ರಾಸಾದವಿದ್ಯಾ ಯುದ್ಧವಿದ್ಯಾ ಸರ್ವಜನಾವಾಸವಿದ್ಯಾ ದೇವಾಲಯವಿದ್ಯಾ

ಭಾರತೀಯ ಶಿಲ್ಪಕಲೆಯನ್ನು ಕುರಿತ ಮೂರುನೂರು ಗ್ರಂಥಗಳು ದೊರೆಯುತ್ತವೆ ಎಂದು ಶ್ರೀಧರ್ ಭಾಸ್ಕರ್ ವರ್ಣೇಕರ್ ತಿಳಿಸುತ್ತಾರೆ. ವಿದ್ವಾಂಸ ವಝೆಯವರು ೧೨೫ ಗ್ರಂಥಗಳನ್ನು ಹೆಸರಿಸಿದ್ದಾರೆ.

ಕ್ರಿ.ಶ. ೧೯೫೦ರಲ್ಲಿ ಬರೋಡಾದಿಂದ ಪ್ರಕಟವಾದ “ಅಪರಾಜಿತಪೃಚ್ಛಾ” ಗ್ರಂಥವು ವಾಸ್ತುಶಾಸ್ತ್ರವೆನಿಸಿದ್ದು, ಧಾರಾಗೃಹ, ಕ್ರೀಡಾಗೃಹ, ಉದ್ಯಾನ, ವಿಹಾರಭೂಮಿ, ಕ್ರೀಡಾಭೂಮಿ, ಜಲೋದ್ಯಾನ, ಜಲವೇಶ್ಮ, ಲತಾಗೃಹ, ಲತಾಮಂಡಪ, ವಾಪಿ, ಕೂಪ, ತಟಾಕ, ಜಲಾಶಯ ಮುಂತಾದವನ್ನೂ ಹೆಸರಿಸಿದೆ. ಅಶ್ವಶಾಲಾ, ಗಜಶಾಲಾ, ರಾಜಗೃಹ, ಏಕಶಾಲಾ, ದ್ವಿಶಾಲಾ, ತ್ರಿಶಾಲಾ, ಚತುಶ್ಶಾಲಾ ಹಾಗೂ ದೇವಾಲಯಗಳ ವಿವಿಧ ಶೈಲಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಅಧ್ಯಾಯಗಳನ್ನು ಹೊಂದಿದೆ. ಈ ಗ್ರಂಥದಲ್ಲಿ ಪ್ರಾಸಾದ ರಚನೆಯೂ, ಪ್ರತಿಮಾ ಲಕ್ಷಣಗಳೂ, ಔತ್ತರೇಯ ಸಂಪ್ರದಾಯದ ವಿವಿಧ ಶೈಲಿಗಳೂ ವಿಸ್ತಾರವಾಗಿ ಗುರುತಿಸಲ್ಪಟ್ಟಿವೆ. ಪ್ರಾಚೀನ ಭಾರತದಲ್ಲಿ ದೇವಾಲಯಗಳು ಸಾಮಾಜಿಕ ಹಾಗೂ ಸಾಂಸ್ಕೃತಿಕ ಕೇಂದ್ರಗಳಾಗಿ ಬೆಳೆದಿದ್ದು, ಈ ವ್ಯವಸ್ಥೆಯನ್ನು ಕಾಪಾಡುವಲ್ಲಿ ಸಾರ್ವಜನಿಕರೂ ಸಹಕರಿಸುತ್ತಿದ್ದರು. ಶತಮಾನಗಳ ಇತಿಹಾಸವುಳ್ಳ ಈ ದೇವಾಲಯಗಳು ಕಲಾತ್ಮಕವಾಗಿ ಬೆಳೆದು ಹಲವಾರು ಶೈಲಿ ಸಂಪ್ರದಾಯಗಳನ್ನು ಸೃಷ್ಟಿಸಿದವು.

ಭಾರತವನ್ನು ಪ್ರವೇಶಿಸಿದ ಪಾಶ್ಚಿಮಾತ್ಯರಿಗೆ ಇಲ್ಲಿಯ ಕಲಾಪೂರ್ಣ ಜಗತ್ತು ಅಚ್ಚರಿ ಮೂಡಿಸಿದ್ದು, ಇವುಗಳ ಅಧ್ಯಯನಕ್ಕೆ ಪ್ರೇರಣೆ ದೊರೆಯಿತು. ಈ ರೀತಿ ದೇವಾಲಯಗಳ ಅಧ್ಯಯನವು ಹತ್ತೊಂಬತ್ತನೆಯ ಶತಮಾನದ ಮೊಲದ ದಶಕಗಳಲ್ಲಿ ಆರಂಭವಾಯಿತು. ದೇವಾಲಯ ವಾಸ್ತುವಿನ ಅಧ್ಯಯನ ಕೈಗೊಂಡವರಲ್ಲಿ ರಾಂರಾಜ್ ಮೊದಲಿಗರು. ಇವರು ಹಿಂದೂ ದೇವಾಲಯಗಳನ್ನು ಕುರಿತ ಪ್ರಬಂಧವೊಂದನ್ನು ಸಿದ್ಧಪಡಿಸಿದರು. ಕ್ರಿ.ಶ. ೧೮೨೮ರಲ್ಲಿ ಇವರು ರಿಚರ್ಡ್‌‌ಕ್ಲಾರ್ಕ್‌ಮಹಾಶಯನಿಗೆ ಬರೆದ ಪತ್ರದಲ್ಲಿ ಪ್ರಬಂಧದ ವ್ಯಾಪ್ತಿಯನ್ನೂ, ಕೈಗೊಂಡ ವಿಧಿ ವಿಧಾನಗಳನ್ನೂ ತಿಳಿಸಿದ್ದಾರೆ (೧೯೭೧ : ೧೪).

ರಾಂರಾಜ್‌ರವರು ತಮ್ಮ ಜೀವಿತದ ಕೊನೆಯ ದಿನಗಳಲ್ಲಿ ಬ್ರಿಟಿಷ್ ಸರ್ಕಾರದ ಸೇವೆಯಲ್ಲಿದ್ದು ಬೆಂಗಳೂರಿನಲ್ಲಿ ನೇಟಿವ್ ಜಡ್ಜ್ ಹಾಗೂ ಮ್ಯಾಜಿಸ್ಟ್ರೇಟರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಪ್ರಬಂಧದ ವಿವರಣೆಗಳು ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿದ ಕರ್ನಾಟಿಕ್ ಜಿಲ್ಲೆಗಳಿಗೆ ಸಂಬಂಧಿಸಿದೆ. ರಾಂರಾಜ್ ಅನುಸರಿಸಿದ ಅಧ್ಯಯನದ ರೀತಿ ನೀತಿಗಳು ಇಂದಿಗೂ ಆದರಣೀಯವಾಗಿವೆ (೧೯೭೨ : ೫).

ಕರ್ನಾಟಕದ ದೇವಾಲಯ ವಾಸ್ತುವಿಗೆ ಸಂಬಂಧಿಸಿದಂತೆ ಪ್ರಕಟವಾದ ಮೊದಲ ಗ್ರಂಥ ಬಹುಶಃ ಮೆಡೋಸ್ ಟೈಲರ್‌ನಿಂದ. ಬಿಜಾಪುರದ ವಾಸ್ತುಶಿಲ್ಪವನ್ನು ಕುರಿತ ಗ್ರಂಥ ಕ್ರಿ.ಶ. ೧೮೫೪ರಲ್ಲಿ ಪ್ರಕಟಗೊಂಡಿದೆಯೆಂದು ವಿದ್ವಾಂಸರು ತಿಳಿಸುತ್ತಾರೆ. ಕ್ರಿ.ಶ. ೧೮೬೬ರಲ್ಲಿ ಆರ್ಕಿಟೆಕ್ಟರ್ ಆಫ್ ಮೈಸೂರ್ ಅಂಡ್ ಧಾರ್‌ವಾರ್ ಎಂಬ ಗ್ರಂಥವನ್ನೂ ಈತ ಪ್ರಕಟಿಸಿದ. ಕೇವಲ ಒಂದು ನೂರು ಪ್ರತಿಗಳು ಮಾತ್ರ ಅಚ್ಚಾಗುತ್ತಿದ್ದ ಕಾಲದಲ್ಲಿ ಈ ಗ್ರಂಥಗಳು ಮುದ್ರಣ ಕಂಡಿದ್ದವು. ಈ ಗ್ರಂಥಗಳು ಈಗ ನೋಡಲೂ ಸಿಗಲಾರದು (ಪಾಟೀಲ್ ಪುಟ್ಟಪ್ಪ : ೩೦-೩೧).

ಹತ್ತೊಂಬತ್ತನೆಯ ಶತಮಾನದಲ್ಲಿ, ಭಾರತೀಯ ಭಾಷೆ, ಸಾಹಿತ್ಯ ಸಂಸ್ಕೃತಿ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ, ಅಧ್ಯಯನಕ್ಕೆ ಪಾಶ್ಚಿಮಾತ್ಯರು ತಮ್ಮನ್ನು ತಾವೇ ತೊಡಗಿಸಿ ಕೊಂಡಿದ್ದು, ಅಂದು ಅಳುತ್ತಿದ್ದ ಅರಸರ ಪ್ರತಿನಿಧಿಗಳಿಂದಲೂ ಪ್ರೋತ್ಸಾಹ ದೊರೆಯುತ್ತಿತ್ತು. ಕ್ರಿ.ಶ.೧೮೬೨ರಲ್ಲಿ ಭಾರತದ ಗೌವರ್ನರ್ ಜನರಲ್ ಆಗಿದ್ದ ಲಾರ್ಡ್‌ಕನ್ನಿಂಗ್ ಮಹಾಶಯನು ಭಾರತೀಯ ಪ್ರಾಚೀನ ಅವಶೇಷಗಳನ್ನು ಮುಂದಿನ ಪೀಳಿಗೆಯ ಸಲುವಾಗಿ ದಾಖಲಿಸುವ ಅಥವಾ ರಕ್ಷಿಸುವ ಅವಶ್ಯಕತೆಯನ್ನು ಗುರುತಿಸಿ, ಕೈಗೊಳ್ಳಬೇಕಾದ ಕಾರ್ಯವ್ಯಾಪ್ತಿಯ ಬಗ್ಗೆ ಚರ್ಚಿಸಿದ್ದಾನೆ.

ಜೇಮ್ಸ್ ಫರ್ಗುಸನ್‌ರವರ “ಹಿಸ್ಟರಿ ಆಫ್ ಇಂಡಿಯನ್ ಅಂಡ್ ಇಂಡೋನೇಷಿಯನ್ ಆರ್ಕಿಟೆಕ್ಚರ್” ಪ್ರಕಟವಾದದ್ದು ಕ್ರಿ.ಶ. ೧೮೭೫ರಲ್ಲಿ. ಈ ಗ್ರಂಥವು ಪ್ರಾಚೀನ ಭಾರತದ ಸಮಗ್ರ ನೋಟವನ್ನು ಒದಗಿಸಿದ್ದು, ಈ ರೀತಿಯ ಅಧ್ಯಯನಕ್ಕೆ ನಾಂದಿಯಾಯಿತು. ಫರ್ಗುಸನ್ ಆರಂಭಿಸಿದ ವಸ್ತುನಿಷ್ಠ ಅಧ್ಯಯನವನ್ನು ಹೆನ್ರಿ ಕಜಿನ್ಸ್, ಜೇಮ್ಸ್ ಬರ್ಗೆಸ್, ಪರ್ಸಿ ಬ್ರೌನ್, ಬೆಂಜಮಿನ್ ರೋಲೆಂಡ್, ಜೆ.ಸಿ.ಹಾರ್ಲೆ ಮುಂತಾದ ವಿದ್ವಾಂಸರು ಮುಂದುವರೆಸಿದರು.

ರಾಂರಾಜ್ ಕೈಗೊಂಡ ಅಧ್ಯಯನದ ರೀತಿ ನೀತಿಗಳನ್ನು ಸ್ಟೆಲ್ಲಾ ಕ್ರಾಂರಿಚ್ ಮುಂದುವರೆಸಿದರು. ಪ್ರಾಚೀನ ವಾಸ್ತುಶಾಸ್ತ್ರಗಳನ್ನು ಗುರುತಿಸಿ, ಅವುಗಳ ನೆರವಿನಿಂದ ದೇವಾಲಯ ವಾಸ್ತುವನ್ನು ಗುರುತಿಸುವ ಕಾರ್ಯ ಮುಂದುವರೆಯಿತು. ಮತ್ತಷ್ಟು ದೇಶೀಯ ವಿದ್ವಾಂಸರು ಇದೇ ಹಾದಿಯಲ್ಲಿ ಸಾಗಿದ್ದು ಕೆ.ಆರ್. ಶ್ರೀನಿವಾಸನ್, ಟಿ.ವಿ.ಮಹಾಲಿಂಗಂ, ಕೆ.ವಿ. ಸೌಂದರರಾಜನ್ ಮುಂತಾದವರು, ದಾಕ್ಷಿಣಾತ್ಯ ದೇವಾಲಯವನ್ನು ಶಾಸ್ತ್ರರೀತ್ಯಾ ಗುರುತಿಸಿದರು. ವಿದ್ವಾಂಸ ಪಿ.ಕೆ.ಆಚಾರ್ಯರವರಿಂದ “ಮಾನಸಾರ”ಗ್ರಂಥದ ಸಂಪಾದನೆ ವ್ಯವಸ್ಥಿತವಾಗಿ ನಡೆದು, ಭಾಷಾಂತರ, ಟಿಪ್ಪಣಿಗಳೊಂದಿಗೆ ಹಲವು ಸಂಪುಟಗಳಲ್ಲಿ ಪ್ರಕಟಿಸಲ್ಪಟ್ಟಿತು. ಕೆಲವು ದೇಶೀಯ ವಿದ್ವಾಂಸರು ಔತ್ತರೇಯ ಗ್ರಂಥವನ್ನು ಟೀಕೆ, ಟಿಪ್ಪಣಿಗಳೊಂದಿಗೆ ಪ್ರಕಟಿಸಿದರು. ಇವರಲ್ಲಿ ಗುಜರಾತಿನ ಪಿ.ಒ. ಸೋಂಪುರ ಎಂಬ ವಿದ್ವಾಂಸರು ಕಾರ್ಯನಿರತ ಸ್ಥಪತಿಗಳಲ್ಲಿ ಪ್ರಮುಖರು. ಹೆಚ್ಚಿನ ದೇಶೀಯ ವಿದ್ವಾಂಸರಿಗೆ ಪ್ರಾದೇಶಿಕ ಶೈಲಿಗಳೇ ಮಹತ್ವದ್ದೆನಿಸಿ, ಅವರುಗಳು ಭಾರತೀಯ ದೇವಾಲಯಗಳನ್ನು ಸಮಗ್ರವಾಗಿ ಅವಲೋಕಿಸಿ ಗುರುತಿಸಿದ್ದು ಕಡಿಮೆ ಎಂದೇ ಹೇಳಬಹುದು. ಪ್ರಾಚೀನ ಗ್ರಂಥಗಳನ್ನು ಸರಿಯಾಗಿ ಅರ್ಥೈಸಲಾಗದೆ, ಫರ್ಗುಸನ್ ತೋರಿದ ವಸ್ತುನಿಷ್ಠ ಅಧ್ಯಯನದ ಹಾದಿಯನ್ನು ಅನುಸರಿಸಿರುವುದನ್ನು ಕಾಣಬಹುದು.

ನಮ್ಮ ಪ್ರಾಚೀನ ವಾಸ್ತುಗ್ರಂಥಗಳಂತೆ, ವಿಟ್ರೂವಿಯಸ್ ರಚಿಸಿದ ವಾಸ್ತುಗ್ರಂಥ ಪಾಶ್ಚಿಮಾ ತ್ಯರಿಗೊಂದು ದಾರಿದೀಪ. ದೇಶ ಕೋಶಗಳು ವಿಭಿನ್ನವಾದರೂ, ವಿಟ್ರೂವಿಯಸ್ ಗುರುತಿಸುವ ವಿಚಾರಗಳು ಸರ್ವಕಾಲಿಕ ಮೌಲ್ಯವುಳ್ಳದ್ದು. ಸ್ಥಪತಿಃ ಸ್ಥಾಪಯೇತ್ ಸ್ಥಿರಂ ಇದು ಮಯಮತೋಕ್ತಿ (ಡಗೆನ್ಸ್ : ೧೯೮೫ : ೧೦). ಈ ಉಲ್ಲೇಖದಲ್ಲಿ ವಾಸ್ತುಸ್ವರೂಪವೂ, ಸ್ಥಪತಿಯ ಕರ್ತವ್ಯವೂ ಗುರುತಿಸಲ್ಪಟ್ಟಿದೆ. ಸ್ಥಪತಿಯಿಂದ ರಚಿಸಲ್ಪಟ್ಟಿದ್ದು ಸರ್ವಕಾಲಿಕ ಮೌಲ್ಯಗಳನ್ನೊಳಗೊಂಡಿರಬೇಕು. ಲಕ್ಷ್ಯ ಲಕ್ಷಣಾಯುಕ್ತಾರ್ಥ ಶಾಸ್ತ್ರನಿಷ್ಠೋ ನರೋ ಭವೇತ್ ಇದು ಸಮರಾಂಗಣ ಸೂತ್ರಧಾರ ಗ್ರಂಥದ ಒಕ್ಕಣೆ (ಅಗ್ರವಾಲಾ : ೧೯೬೬ : ೨೪೬). ಈ ಗ್ರಂಥದ ಪ್ರಕಾರ, ಸಾಮುದ್ರ, ಗಣಿತ, ಜ್ಯೋತಿಷ್ಯ, ಛಂದ, ಶಿಲ್ಪ ಇವೆಲ್ಲವೂ ಸ್ಥಪತಿಗೆ ತಿಳಿದಿರಬೇಕು.

ಆರ್ಕಿಟೆಕ್ಟ್ ಎಂದರೆ ವಾಸ್ತುಶಿಲ್ಪಿಯೇ. ಶಿಲ್ಪಿ ಎಂದಲ್ಲಿ ತಾಂತ್ರಿಕ ಪರಿಣಿತಿಯುಳ್ಳವನು. ತಂತ್ರಜ್ಞಾನ ಮತ್ತು ಪರಿಣಿತಿಗಳನ್ನು ವಿಶ್ಲೇಷಿಸುವಾಗ, ಶಾಸ್ತ್ರ ಮತ್ತು ತಾಂತ್ರಿಕತೆಯ ನಡುವಣ ಅಂತರ ಕೂದಲೆಳೆಯಷ್ಟು. ಇವೆರಡೂ ಪರಸ್ಪರ ಪೂರಕವೂ ಹೌದು. ದೇವಾಲಯವೇ ಭಗವಂತನ ಶರೀರವೆಂದೂ, ಶರೀರದ ಅಂಗಗಳಿಗೆ ಸಮನಾಗಿ ದೇವಾಲಯದ ವಿವಿಧ ಅಂಗಗಳೂ ಆರೋಪಿಸಲ್ಪಟ್ಟಿವೆ (ಆಸೂರಿ : ೧೯೭೮ : ೩೭)

ಗರ್ಭಗೇಹಂ ಶಿರಃಪ್ರೋಕ್ತೋ ಶಿಖಾ ಶಿಖರಮುಚ್ಯತೇ
ನಾಸಿಕಾ ಶುಕನಾಸೀ ಸ್ಯಾತ್ ಅಂತರಲಾಂಗುಲಂ ಸ್ಮೃತಂ
ಮಂಟಪಂ ದೇಹಮಿತ್ಯುಕ್ತಂ ಪ್ರಾಕಾರಃ ಕರ ಉಚ್ಯತೇ
ಗೋಪುರಂ ಪಾದ ಇತ್ಯುಕ್ತಂ ದೇವಸ್ಥಾನಂ ಪ್ರಕಥ್ಯತೇ

ವಿಟ್ರೂವಿಯಸ್ಸನ ವಾಸ್ತುಶಾಸ್ತ್ರವು ಮಾನವ ಶರೀರರಚನೆಯಲ್ಲಿರುವ ವಿವಿಧ ಅಂಗಾಂಗ ಗಳೊಂದಿಗಿರುವ ಸಾಮರಸ್ಯ ಸಮತೋಲನವನ್ನು, ವಾಸ್ತುರಚನೆಗಳಲ್ಲಿಯೂ ಆಪೇಕ್ಷಿಸುತ್ತದೆ (ಮಾರ್ಗನ್ : ೧೯೬೪ : ೧೪). ವಾಸ್ತುರಚನೆಯು ಪರಿಪೂರ್ಣತೆಯನ್ನು ಸಾಧಿಸುವಲ್ಲಿ ಗಮನಿಸಬೇಕಾದ ಇನ್ನಿತರ ಅಂಶಗಳನ್ನೂ ವಿಟ್ರೂವಿಯಸ್ ಗುರುತಿಸುತ್ತಾನೆ. ಅಂಗಾಂಗಗಳ ಸಾಮರಸ್ಯದಂತೆ ಇತರ ಅಂಶಗಳೂ ವಾಸ್ತುರಚನೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ.

ದೇವಾಲಯಗಳ ಅಧ್ಯಯನದಲ್ಲಿ, ಅಂದಿನ ರಾಜಕೀಯ ಪರಿಸರ, ದೇವಾಲಯಕ್ಕೆ ಸಂಬಂಧಿಸಿದ ಶಾಸನಗಳನ್ನು, ಅವುಗಳ ಟಿಪ್ಪಣಿಗಳನ್ನು, ಇಂದಿನವರೆಗೆ ಮೇಲುಗೈ ಸಾಧಿಸುತ್ತಿದ್ದು, ವಾಸ್ತುವನ್ನು ಕುರಿತ ವಿವರಗಳು ಸಾಲದೆ, ಅಸ್ಪಷ್ಟವೆನಿಸುತ್ತಿತ್ತು. ಈ ಪರಿಸ್ಥಿತಿಗೆ ವಾಸ್ತುಗ್ರಂಥಗಳಲ್ಲಿರುವ ವಿವರಗಳ ಪೂರ್ಣಗ್ರಹಿಕೆಯ ಕೊರತೆಯೇ ಕಾರಣ ಎನಿಸುತ್ತಿತ್ತು. ಈಗ ಗ್ರಂಥಗಳ ವ್ಯವಸ್ಥಿತ ಅಧ್ಯಯನದಿಂದ ಕೆಲವು ಕೊರತೆಗಳು ಪರಿಹಾರವಾಗಿದ್ದು, ದಾರಿ ತೋರುವಲ್ಲಿ ಶಕ್ತವಾಗಿದೆ. ಅಂತಹ ಉದ್ದೇಶದಿಂದ ಈ ಲೇಖನ ಮಾಲೆಯನ್ನು ಸಂಕಲಿಸಲಾಗಿದೆ.