ದೇವಾಲಯಗಳ ವಾಸ್ತುವಿವರಣೆಯಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಹಾಗೂ ವಾಸ್ತುಗ್ರಂಥಗಳಲ್ಲಿ ಹೆಚ್ಚು ಮನ್ನಣೆ ಪಡೆದಿರುವ ಪ್ರಮುಖ ವಾಸ್ತುಶೈಲಿಗಳು ಮೂರು. ಇವು ನಾಗರ, ದ್ರಾವಿಡ, ವೇಸರ ಶೈಲಿಗಳು. ಈ ಶೈಲಿಗಳನ್ನು ಕರ್ನಾಟಕದ ಶಾಸನಗಳೂ ಹೆಸರಿಸಿವೆ. ಚಿರ ಪರಿಚಿತವಾಗಿರುವ ಈ ಶೈಲಿಗಳನ್ನು ಕರಾರುವಾಕ್ಕಾಗಿ ಗುರುತಿಸಲು ನಿರಂತರವಾಗಿ ಪ್ರಯತ್ನಗಳು ನಡೆದಿವೆ. ಈ ದಿಸೆಯಲ್ಲಿ ಪ್ರೊ. ಢಾಕೆಯವರ ಪ್ರಯತ್ನ ಗಮನಾರ್ಹವಾದುದು. ಢಾಕೆಯವರು ಬರೆದು ಪ್ರಕಟಿಸಿರುವ “ಇಂಡಿಯನ್ ಟೆಂಪಲ್ ಫಾರಂಸ್ ಇನ್ ಕರ್ನಾಟ, ಇನ್ ಸ್ಕ್ರಿಪ್‌ಷನ್ಸ್ ಅಂಡ್ ಆರ್ಕಿಟೆಕ್ಚರ್” ಎಂಬ ಗ್ರಂಥದಲ್ಲಿ, ಕರ್ನಾಟಕದಲ್ಲಿ ಲಭ್ಯವಿರುವ ಶಾಸನೋಲ್ಲೇಖಗಳನ್ನೂ, ವಾಸ್ತುಶೈಲಿಯ ಮಾದರಿಗಳನ್ನೂ ಅಭ್ಯಸಿಸಿದ್ದಾರೆ. ಇವುಗಳನ್ನು ವಾಸ್ತುಶಾಸ್ತ್ರಗಳ ವಿವರಗಳೊಂದಿಗೆ ಗುರುತಿಸಲು ಪ್ರಯತ್ನಿಸಿದ್ದಾರೆ. ಭಾರತೀಯ ದೇವಾಲಯಗಳ ಶೈಲಿಗಳನ್ನು ಗುರುತಿಸಲು ಕರ್ನಾಟಕವನ್ನು ಆಶ್ರಯಿಸಬೇಕಾದ ಅವಶ್ಯಕತೆಯನ್ನು ಗ್ರಹಿಸಿದ್ದಾರೆ (೧೯೭೭ : ೨೮). ಈ ಪ್ರಯತ್ನದಲ್ಲಿ ಅವರು ಸಂಪೂರ್ಣ ಯಶಸ್ವಿಯಾಗಿಲ್ಲ ಎಂದು ಗಮನಿಸಬಹುದು.

 02_382_DV-KUH

ಪ್ರೊ. ಢಾಕೆಯವರು ಈ ವಿಷಯಕ್ಕೆ ಪೂರಕವಾಗಿ ಹಾಸನ ಜಿಲ್ಲೆಯ ದೊಡ್ಡಗದ್ದವಳ್ಳಿ ಶಾಸನ ಮಾಹಿತಿಯನ್ನೂ, ಅದೇ ಕಾಲದ ಔತ್ತರೇಯ ವಾಸ್ತುಗ್ರಂಥಗಳನ್ನೂ ಕೂಲಂಕುಷವಾಗಿ ಪರಿಶೀಲಿಸಿದ್ದಲ್ಲಿ, ಅವರ ಶ್ರಮ ಸಾರ್ಥಕವಾಗುತ್ತಿತ್ತು. ಪ್ರಸ್ತುತ ಅಧ್ಯಯನದಲ್ಲಿ ಅವರು ಗಮನಿಸಿದ ಶಾಸನಗಳನ್ನೂ, ಲಭ್ಯವಿರುವ ವಾಸ್ತುಮಾದರಿಗಳನ್ನೂ, ಔತ್ತರೇಯ ಗ್ರಂಥಗಳ ವಿವರಗಳೊಂದಿಗೆ ಸಮೀಕರಿಸಿ ನೋಡಲಾಗಿದೆ. ಪ್ರೊ.ಢಾಕೆಯವರ ತೀರ್ಮಾನಗಳು ಪುನರ್ ವಿಮರ್ಶೆಗೊಳಗಾಗಿದ್ದು, ಈಗ ಸ್ಪಷ್ಟವಾದ ದಾರಿ ಪ್ರಾಪ್ತವಾಗಿದೆ. ಇದರಿಂದ ದೇವಾಲಯಗಳ ವರ್ಗೀಕರಣಕ್ಕೆ ನಿಶ್ಚಿತ ಆಕಾರ ಮೂಡಿದೆ. ವರ್ಗೀಕರಣ ವಿಧಾನಕ್ಕೆ ಹೊಸ ಆಯಾಮ ಒದಗಿಬಂದಿದೆ. ಇದೇ ಹಾದಿಯಲ್ಲಿ ಮುಂದಿನ ಅಧ್ಯಯನ ಮುಂದುವರೆಯಬೇಕಾಗಿದೆ. ದೇವಾಲಯಗಳನ್ನು ವಾಸ್ತುಗ್ರಂಥಗಳ ವಿವರಣೆಯೊಂದಿಗೆ ನೋಡುವ ಪ್ರಯತ್ನ ಈಗ ಸಾಧ್ಯವಾಗುತ್ತಿದೆ. ದೇವಾಲಯಗಳ ವಾಸ್ತುಶೈಲಿಗಳನ್ನು ಹೆಸರಿಸುವ ಕರ್ನಾಟಕದ ದೊಡ್ಡ ಗದ್ದವಳ್ಳಿ, ಕುಬಟೂರು ಮತ್ತು ಹೊಳಲು ಶಾಸನಗಳಲ್ಲಿ, ದಡ್ಡಗದ್ದವಳ್ಳಿಯ ಶಾಸನವು ಪ್ರಮುಖವಾದುದು. ಬಿ.ಎಲ್.ರೈಸರ ಹಾಸನ ಜಿಲ್ಲೆಯ ಶಾಸನ ಸಂಪುಟದಲ್ಲಿ, ಇದಕ್ಕೆ ಸಂಬಂಧಿಸಿದ ಶಾಸನದ ಕಡೆಯ ಎರಡು ಸಾಲುಗಳು ಇಂತಿವೆ (೧೯೦೨ : ೧೨೪).

ವಿಮಾನ ಸರ್ವ್ವತೋಭದ್ರ ವ್ರಿಸ್ವಭಾವಳಿಶಿಕ್ತಂ ಉತ್ತುಂಗವೈ
ರಾಜಗರುಡ ವರ್ದ್ಧಮಾನ ಶಂಖವ್ರಿತ್ತ ಪುಱ್ಪಕಗ್ರಿಹರಾಜಸ್ವಸ್ತಿ

ವಾಸ್ತು ಶಾಸ್ತ್ರಗಳನ್ನಾಧರಿಸಿ, ಈ ಸಾಲುಗಳನ್ನು ಕೆಳಕಂಡಂತೆ ಸರಿಪಡಿಸಲಾಗಿದೆ.

ವಿಮಾನಃ ಸರ್ವತೋಭದ್ರ ವೃಷಭ ನಳಿನಿಕ ಉತ್ತುಂಗ ವೈರಾಜ
ಗರುಡ ವರ್ಧಮಾನ ಶಂಖಾವರ್ತ ಪುಷ್ಪಕ ಗೃಹರಾಜ ಸ್ವಸ್ತಿಕ

ಆರ್. ನರಸಿಂಹಚಾರ್‌ರವರು “ದಿ ಲಕ್ಷ್ಮೀದೇವಿ ಟೆಂಪಲ್ ಅಟ್ ದೊಡ್ಡಗದ್ದವಳ್ಳಿ” ಎಂಬ ಕಿರುಪುಸ್ತಕದಲ್ಲಿ (೧೯೮೨ : ೫) ಈ ಶಾಸನದ ಸಾಲುಗಳನ್ನು ಗುರುತಿಸಿ, ಈ ವಾಸ್ತುಶೈಲಿಗಳು ಸಂಸ್ಕೃತ ಗ್ರಂಥಗಳಿಂದ ಉದ್ದರಿಸಿದ ಪಾರಿಭಾಷಿಕ ಪದಗಳೆನ್ನುತ್ತಾರೆ. ಎರಡನೆಯ ಸಾಲಿನ ಕೊನೆಯ ಪದವನ್ನು ಪೂರ್ಣವಾಗಿ ಕೈಬಿಟ್ಟಿದ್ದಾರೆ. ಪ್ರೊ. ಢಾಕೆಯವರು ಕಡೆಯ ಪದವನ್ನು ಸರಿಯಾಗಿ ಸೂಚಿಸಿದ್ದರೂ ಅಡಿಟಿಪ್ಪಣಿಯಲ್ಲಿ ಪ್ರಶ್ನಾರ್ಥಕ ಚಿಹ್ನೆ ಇರಿಸಿದ್ದಾರೆ (೧೯೭೭ : ೪೪)

ದೊಡ್ಡಗದ್ದವಳ್ಳಿ ಶಾಸನವನ್ನು ಸರಿಯಾಗಿ ಗುರುತಿಸಲು ನೆರವಾದ ಔತ್ತರೇಯ ವಾಸ್ತುಗ್ರಂಥಗಳಾದ “ಸಮರಾಂಗಣ ಸೂತ್ರಧಾರ” ಮತ್ತು ” ಅಪರಾಜಿತಪೃಚ್ಛಾ” ಗ್ರಂಥಭಾಗಗಳನ್ನು ಅವಶ್ಯಕವಾಗಿ ಸ್ಮರಿಸಬೇಕು. ಈ ಗ್ರಂಥಭಾಗಗಳು ಈವರೆಗೆ ವಿದ್ವಾಂಸರ ಗಮನಕ್ಕೆ ಬಾರದೆ, ಕರ್ನಾಟಕದ ದೇವಾಲಯಗಳ ವರ್ಗೀಕರಣವೂ ತ್ರಿಶಂಕುಸ್ಥಿತಿಯಲ್ಲಿತ್ತು ಎಂದು ಗಮನಿಸಬಹುದು. ಈ ಶಾಸನದ ಸಾಲುಗಳು ಔತ್ತರೇಯ ಗ್ರಂಥಗಳ ಸಾಲುಗಳನ್ನು ಹೋಲುತ್ತವೆ ಎಂದು ಒಪ್ಪಿಕೊಳ್ಳವುದರೊಂದಿಗೆ, ಕರ್ನಾಟಕದ ಕಲ್ಯಾಣದ ಚಾಲುಕ್ಯರ ಮತ್ತು ಹೊಯ್ಸಳರ ಕಾಲದ ಬಹುಪಾಲು ದೇವಾಲಯಗಳು ಔತ್ತರೇಯ ಸಂಪ್ರದಾಯಕ್ಕೆ ಸೇರುತ್ತವೆ ಎಂದು ಒಪ್ಪಿಕೊಳ್ಳಬೇಕಾಗಿದೆ.

ಕ್ರಿ.ಶ. ೧೦೧೮ ರಿಂದ ೧೦೬೦ರವರೆಗೆ ಧಾರಾನಗರಿಯನ್ನು ಆಳುತ್ತಿದ್ದ ಭೋಜದೇವನ “ಸಮರಾಂಗಣ ಸೂತ್ರಧಾರ” ಗ್ರಂಥವು ಕ್ರಿ.ಶ. ಹನ್ನೊಂದನೆಯ ಶತಮಾನದ ಮಧ್ಯಭಾಗದ್ದೆಂದು ಗುರುತಿಸಲಾಗಿದೆ (ಮಂಕಡ್: ೧೯೫೦ : ೧೧). ಶಾಸನಕ್ಕೆ ನೆರವಾದ ಗ್ರಂಥದ ಸಾಲುಗಳು ಇಂತಿವೆ (ಅಗ್ರವಾಲಾ : ೧೯೬೬ : ೪೩೨-೪೩೩).

ಪ್ರಾಸಾದಾನಾಂ ಚತುಷಷ್ಠಿರಿದಾನೀಮಭಿದೀಯತೇ
ಯೋ ಪೂರ್ವಂ ಬ್ರಹ್ಮಣಾದತ್ತ ಪ್ರಾಸಾದ ವಿಶ್ವಕರ್ಮಣೇ
………………
ವಿಮಾನಃ
ಸರ್ವತೋಭದ್ರ ಗಜಪೃಷ್ಠೋಥ ಪದ್ಮಕಃ
ವೃಷಭೋ ಮುಕ್ತಕೋಣಶ್ಚ ನಲಿನೋ ದ್ರಾವಿಡಸ್ತಥಾ
…………..
ಗರುಡ
ವರ್ಧಮಾನಶ್ಚ ಶಂಖಾವರ್ತೋಪುಷ್ಪಕಃ
ಗೃಹರಾಟ್ ಸ್ವಸ್ತಿಕಶ್ಚೈವ ರುಚಕಃ ಪುಂಡ್ರವರ್ಧನಃ

ವಾಸ್ತುವಿದ್ಯಾ ಎಂಬ ಅಪ್ರಕಟಿತ ಗ್ರಂಥವು ಬರೋಡಾದಿಂದ ಪ್ರಕಟಗೊಂಡ ಅಪರಾಜಿತ ಪೃಚ್ಛಾ ಗ್ರಂಥಕ್ಕೆ ಮೂಲವಿರಬೇಕೆಂದು ವಿದ್ವಾಂಸ ಢಾಕೆಯವರು ಅಭಿಪ್ರಾಯ ಪಡುತ್ತಾರೆ. ಅಪರಾಜಿತ ಪೃಚ್ಛಾ ಗ್ರಂಥದ ವಿಮಾನಾದಿ ಚತುಷಷ್ಠಿ ಪ್ರಾಸಾದ ಲಕ್ಷಣಾತ್ಮಕ ಅಧ್ಯಾಯವು (ಮಂಕಡ್ : ೧೯೫೦ : ೪೬೦-೪೬೧), ಸಮರಾಂಗಣ ಸೂತ್ರಧಾರ ಗ್ರಂಥದ ಮೇಲ್ಕಂಡ ಶ್ಲೋಕಗಳಂತೆ ಅರವತ್ತನಾಲ್ಕು ಪ್ರಾಸಾದಗಳನ್ನು ಹೆಸರಿಸಿದೆ. ಆದ್ದರಿಂದ ಇವೆರಡೂ ಗ್ರಂಥಗಳಿಗೆ ಪ್ರಾಚೀನ ಮೂಲದ ಮತ್ತೊಂದು ಗ್ರಂಥವು ಆಕರಗ್ರಂಥವಾಗಿರುವ ಸಾಧ್ಯತೆ ಇದೆ. ಈ ಗ್ರಂಥಗಳ ಸಾಲುಗಳನ್ನು ಶಾಸನದ ಸಾಲುಗಳು ಹೋಲುತ್ತಿರುವುದರಿಂದ, ಅಂದಿನ ಕರ್ನಾಟಕದ ಶಿಲ್ಪಿಗಳಿಗೆ, ಔತ್ತರೇಯ ಗ್ರಂಥಗಳ ಪರಿಚಯವಿತ್ತು ಎಂದು ಗುರುತಿಸಬಹುದಾಗಿದೆ. ದೇವಾಲಯಗಳ ಕಂಡರಣೆಯಲ್ಲಿ ಈ ಗ್ರಂಥಗಳನ್ನು ಆಧರಿಸಿದರು ಎಂದು ಹೇಳಬಹುದಾಗಿದೆ.

ಡಾ. ಶ್ರೀಕಂಠಶಾಸ್ತ್ರಿಯವರು ತಮ್ಮ “ಹೊಯ್ಸಳ ವಾಸ್ತುಶಿಲ್ಪ” ಗ್ರಂಥದಲ್ಲಿ (೧೯೬೫ : ೧೨-೧೩) ಹೊಯ್ಸಳರ ಕಾಲದ ದೇವಾಲಯಗಳನ್ನು ವಿವರಿಸುವಾಗ, ಹೊಯ್ಸಳರ ಆಶ್ರಯದಲ್ಲಿ ಸಂಸ್ಕೃತದಲ್ಲಾಗಲಿ, ಕನ್ನಡದಲ್ಲಾಗಲಿ, ಶಿಲ್ಪಗ್ರಂಥಗಳು ರಚಿತವಾದಂತೆ ಕಂಡುಬರುವುದಿಲ್ಲ ಎಂದು ತಿಳಿಸಿದ್ದಾರೆ. ವರಾಹ ಮಿಹಿರನ ಬೃಹತ್ ಸಂಹಿತಾ, ಮಾನಸಾರ, ಅಭಿಲಷಿತಾರ್ಥ ಚಿಂತಾಮಣಿ ಇತ್ಯಾದಿ ಗ್ರಂಥಗಳಲ್ಲಿ ಕಂಡುಬರುವ ಅಂಶಗಳಿಗಿಂತ ಭಿನ್ನವಾದ ಕೆಲವು ಅಂಶಗಳು ಹೊಯ್ಸಳ ಕಟ್ಟಡಗಳಲ್ಲಿ ಕಂಡುಬರುತ್ತದೆ ಎಂದು ಗುರುತಿಸಿದ್ದಾರೆ. ಡಾ.ಕೆ.ವಿ. ಸೌಂದರರಾಜನ್ ರವರು ಔತ್ತರೇಯ ಸಂಪ್ರದಾಯದ ಪ್ರಭಾವವನ್ನು ಚಾಲುಕ್ಯರ ಮತ್ತು ಹೊಯ್ಸಳರ ಕಾಲದ ದೇವಾಲಯಗಳಿಗೆ ಸಂಬಂಧಿಸಿದಂತೆ ಸಂಪೂರ್ಣವಾಗಿ ನಿರಾಕರಿಸುತ್ತಾರೆ (೧೯೬೯ : ೩೩). ಹೊಯ್ಸಳರಿಗೆ ಹಾಗೂ ಧಾರಾನಗರಿಯನ್ನು ಆಳುತ್ತಿದ್ದ ಮಾಳವಾಧೀಶ್ವರಿಗೆ ಸಂಬಂಧವಿತ್ತೇ ಎಂದು ಪ್ರಶ್ನಿಸಿದಲ್ಲಿ ಕೆಲವು ಶಾಸನಗಳಲ್ಲಿ ಇವರ ಸ್ಪಷ್ಟ ಉಲ್ಲೇಖಗಳಿವೆ (ರೈಸ್ : ೧೯೦೨ : ೧೭೫).

ಧಾರಾ ಧಾರೋ ಭುಜ ಬಳಯುತಾಂ ಮಾಳವಾಧೀಶ್ವರಾಣಾಂ
ಭೋಜೋನೌಜೋ ವಿಜಿತರಿಪುಣಾ ವರ್ಧಿತಯಾ ಪ್ರಸಿದ್ಧಾಃ
ಸಾಭೂದಾಪೋಶನ ಮಹಿತಭೂ ಭೋಜನೇ ಯಸ್ಯ ಪೂರ್ವಂ
ಕೌಬೇರಾಶಾ ವಿಜಯ ಸಮಯೇ ವರ್ಣ್ಯತೇ ಕಿಂ ಸವೀರಃ

ಈ ಶಾಸನಾಧಾರಗಳಿಂದ ಹೊಯ್ಸಳರ ಕಾಲದಲ್ಲಿ ಆ ದೇಶದೊಡನೆ ಇದ್ದ ಸಂಬಂಧ ವ್ಯಕ್ತವಾಗುವುದರಿಂದ, ಹೊಯ್ಸಳರ ಕಾಲದ ಶಿಲ್ಪಗಳಿಗೆ ಔತ್ತರೇಯ ಗ್ರಂಥಗಳ ಪರಿಚಯ ಇತ್ತು ಎಂದು ತಿಳಿಯಲು ಅವಕಾಶವಿದೆ.

ವಾಸ್ತು ಗ್ರಂಥಗಳಲ್ಲಿ ಔತ್ತರೇಯ ಮತ್ತು ದಾಕ್ಷಿಣಾತ್ಯ ಸಂಪ್ರದಾಯವೆಂಬ ವರ್ಗೀಕರಣವಿಲ್ಲ. ಆದರೆ, ಇವೆರಡೂ ಸಂಪ್ರದಾಯಗಳು ಗ್ರಂಥಗಳ ಸೂಕ್ಷ್ಮಾವಲೋಕನದಿಂದ ಅರಿವಿಗೆ ಕರಾರುವಾಕ್ಕಾದ ವಗೀಕರಣ ಅನಿವಾರ್ಯ ಎನಿಸಿದೆ. ಬಳ್ಳಾರಿ ಜಿಲ್ಲೆಯ ಹೊಳಲು ಗ್ರಾಮದ ಶಾಸನದ ಪಾಠ ಕೆಳಕಂಡಂತಿವೆ (ಢಾಕೆ : ೧೯೭೭ : ೨).

ಸ್ವಸ್ತಿ ಸಮಸ್ತ ಶಿವಪಾದ ಶೇಖರ
ಕಲಿಯುಗ ವಿಶ್ವಕರ್ಮ ಚೌಷಷ್ಠಿ ಕಳಾ
ವಿದ್ಯೆ ಪ್ರವೀಣ ಚೌಷಷ್ಠಿ ಪ್ರಾಸಾದ
ವಿಶಾರದ ನಾಗರ ಕಳಿಂಗ ದ್ರಾವಿಳ ವೇಸರ
ಚತುರ್ಜಾತಿ ಪ್ರಾಸಾದ ವಿನಿರ್ಮಿತ ಸೂತ್ರಧಾರಿ
ಸೋಗೆಯ ಪಾದೋಜರ ಛತ್ರ ಬೊಮ್ಮೋಜನು…….

ಶಾಸನದ ಲಿಪಿಯನ್ನಾಧರಿಸಿ ಡಾ.ಕೆ.ವಿ. ರಮೇಶ್‌ರವರು, ಈ ಶಾಸನವು ಕ್ರಿ.ಶ.ಹನ್ನೆರಡನೆಯ ಶತಮಾನದ ಅಂತ್ಯದ್ದೆಂದು ತಿಳಿಸಿದ್ದಾರೆ (ಢಾಕೆ : ೧೯೭೭ : ೪೪). ಔತ್ತರೇಯ ಗ್ರಂಥಗಳನ್ನು ವಿಶ್ವಕರ್ಮ ಪ್ರಣೀತ ಗ್ರಂಥಗಳೆಂದು ಗುರುತಿಸುವ ಪರಿಪಾಠವಿದೆ. ಅಂತಹ ಹದಿನೇಳು ಗ್ರಂಥಗಳನ್ನು ಡಾ.ಅಫ್ರೆಟ್ಚ್‌ರವರು ಪಟ್ಟಿ ಮಾಡಿದ್ದಾರೆ (ಮಂಕಡ್ : ೧೯೫೦ : ೯೧).

ಶಿಲ್ಪಿಗಳನ್ನು ಅರವತ್ತನಾಲ್ಕು ಕಲೆಗಳನ್ನು ಬಲ್ಲವನೆಂದೂ, ಕಲಿಯುಗದ ವಿಶ್ವಕರ್ಮನೆಂದೂ ಗೌರವಿಸುವ ಸಂಪ್ರದಾಯವಿದೆ. ಸಮರಾಂಗಣ ಸೂತ್ರಧಾರ ಹಾಗೂ ಅಪರಾಜಿತಪೃಚ್ಛಾ ಗ್ರಂಥದಲ್ಲಿ ಅರವತ್ತನಾಲ್ಕು ಪ್ರಾಸಾದಲಕ್ಷಣಗಳ, ಅಧ್ಯಾಯವನ್ನು ಮೊದಲಿಗೆ ಗುರುತಿಸಲಾಗಿದೆ. ಹೊಳಲು ಶಾಸನವು “ಚೌಷಷ್ಠಿ ಪ್ರಾಸಾದ ವಿಶಾರದ” ಎಂದು ಗುರುತಿಸಿದೆ. ಶಾಸನದಲ್ಲಿ ಉಲ್ಲೇಖಗೊಂಡ ದೇವಾಲಯಗಳ ನಾಲ್ಕು ಶೈಲಿಗಳಾದ “ನಾಗರ ಕಳಿಂಗ ದ್ರಾವಿಳ ವೇಸರ” ಗಳನ್ನು ಗಮನಿಸಬೇಕು. ಅಪರಾಜಿತ ಪೃಚ್ಛಾ ಗ್ರಂಥದ ಪ್ರಕಾರ (ಮಂಕಡ್ : ೧೯೫೦ :೨೬೬-೨೬೭) ದೇವಾಲಯಗಳ ವರ್ಗೀಕರಣದಲ್ಲಿ ಹದಿನಾಲ್ಕು ಜಾತಿ ಪ್ರಾಸಾದಗಳಿದ್ದು, ಅದರಲ್ಲಿ ಪ್ರಮುಖವಾದ ಎಂಟು ಶೈಲಿಗಳನ್ನು “ಪ್ರಾಸಾದಮಂಡನ” (ಜೈನ್ : ೧೯೬೩ : ೩) ಮತ್ತು “ದೀಪಾರ್ಣವ” (ಸೋಂಪುರ : ೧೯೬೦ : ೫೫ – ೫೬) ಗ್ರಂಥಗಳು ಹೆಸರಿಸಿವೆ. ಪ್ರಾದೇಶಿಕ ವರ್ಗೀಕರಣ ರೀತ್ಯಾ, ಅಪರಾಜಿತಪೃಚ್ಛಾ ಗ್ರಂಥವು ನಾಗರ, ದ್ರಾವಿಡ, ವೇಸರಗಳು ದಾಕ್ಷಿಣಾತ್ಯ ಸಂಪ್ರದಾಯದ ಶೈಲಿಗಳು. ಈ ಮೂರು ಶೈಲಿಗಳನ್ನು ಮಹಾಕೂಟ ಮತ್ತು ಪಟ್ಟದಕಲ್ಲುಗಳಲ್ಲಿ ಕಾಣಬಹುದಾಗಿದೆ.

ಶಿವಮೊಗ್ಗ ಜಿಲ್ಲೆಯ ಕುಬಟೂರಿನ ಶಾಸನದ ಉಲ್ಲೇಖ ಕೆಳಕಂಡಂತಿದೆ (ಢಾಕೆ : ೧೯೭೭ ; ೩).

ಕೈಲಾಸಾದ್ರಿಯ ವಿಶ್ವಕರ್ಮನೆ ಭವಂಗೆಂದೊಲ್ದು
ಸದ್ಭಕ್ತಿಯೊಳ್ ಭದ್ರದಿಂ ಕಂಡರಿಸಿಟ್ಟನೆಂಬೀ ನೆಗಳ
ನೇಕ ದ್ರಾವಿಡಂ ಭೂಮಿಜಂ ಪಿರಿದುಂ ನಾಗರಮೆಂಬ
ಬಹುವಿಧದ ಭದ್ರೋಪೇತದಿಂ……….

ದೇವಾಲಯ ರಚನೆಯಲ್ಲಿ ಭಿತ್ತಿ ಅಥವಾ ಜಂಘಾ ಭಾಗದ ವಿವರಗಳನ್ನು ನೀಡುತ್ತಾ ಶಾಸನಕಾರನು ದ್ರಾವಿಡ, ಭೂಮಿಜ, ಪಿರಿದುಂ ನಾಗರ ಎಂಬ ಶೈಲಿಗಳ ಶಿಖರ ಮಾದರಿಗಳು ಭದ್ರ ಭಾಗದ ಉಬ್ಬು ರಚನೆಗಳಾಗಿ ಕಂಡದ್ದನ್ನು ವಿವರಿಸುತ್ತಾನೆ. ಈ ಶಾಸನದ ಕಾಲವನ್ನು ಕ್ರಿ.ಶ.ಹನ್ನೆರಡನೆಯ ಶತಮಾನದ ಆರಂಭ ಎಂದು ಗುರುತಿಸಲಾಗಿದೆ. ಡಾ.ಪಿ.ಕೆ. ಆಚಾರ್ಯ ಅವರು “ಇಂಡಿಯನ್ ಆರ್ಕಿಟೆಕ್ಚರ್ ಎಕಾರ್ಡಿಂಗ್ ಟು ಮಾನಸಾರ ಶಿಲ್ಪಶಾಸ್ತ್ರ” ಎಂಬ ಗ್ರಂಥದಲ್ಲಿ ( ೧೯೨೭ : ೧೭೬, ೧೮೦) ಈ ಮೂರೂ ಶಾಸನಗಳನ್ನು ಗಮನಿಸಿದ್ದು ನಾಗರ, ದ್ರಾವಿಡ, ವೇಸರಗಳು ಭೌಗೋಳಿಕವಾಗಿ ವರ್ಗೀಕೃತಗೊಂಡಿವೆಯೆಂದೂ, ಭೂಮಿಜ ಶೈಲಿಯು ವೇಸರ ಶೈಲಿಗೆ ಪರ್ಯಾಯವಾಗಿ ಉದಯಿಸಿತೆಂದು ಅಭಿಪ್ರಾಯ ಮಂಡಿಸಿದ್ದಾರೆ. ಅಪರಾಜಿತಪೃಚ್ಛಾ ಗ್ರಂಥದ ಸಂಪಾದಕರು ಈ ವಾದವನ್ನು ಸಮರ್ಥಿಸುತ್ತಾ, ಭೂಮಿಜ ಶೈಲಿ ಕ್ರಿ.ಶ. ಒಂಬತ್ತನೆಯ ಶತಮಾನದ ನಂತರ ಕಾಣಿಸತೊಡಗಿತೆಂದು ತಮ್ಮ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ (ಮಂಕಡ್ : ೧೯೫೦ : ೩೧).

ಕುಬಟೂರು ಶಾಸನವು ಗುರುತಿಸುವ ಶೈಲಿಗಳು, ಕರ್ನಾಟಕದಲ್ಲಿ ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ಮತ್ತು ಹೊಯ್ಸಳ ಕಾಲದಲ್ಲಿ ಪ್ರಕಟಗೊಂಡ ಔತ್ತರೇಯ ಶೈಲಿಗಳಾಗಿವೆ. ಬಾದಾಮಿ ಚಾಲುಕ್ಯರ ಕಾಲದ ಕಳಿಂಗ ಶೈಲಿಯು ಒಂಬತ್ತನೆಯ ಶತಮಾನದ ನಂತರ ವಿಸ್ತಾರಗೊಂಡು, ಔತ್ತರೇಯ ಸಂಪ್ರದಾಯದ ದ್ರಾವಿಡ, ಭೂಮಿಜ ಮತ್ತು ಪಿರಿದುಂ ನಾಗರವೆಂಬ ಪ್ರಭೇದ ಅಥವಾ ಶೈಲಿಗಳಲ್ಲಿ ಮೈದಳೆಯಿತು. ಈ ಪ್ರಭೇದ ಅಥವಾ ಶೈಲಿಗಳನ್ನು ಕರ್ನಾಟಕದಲ್ಲಿ ಕಾಣಬಹುದಾಗಿದೆ. ದಾಕ್ಷಿಣಾತ್ಯ ಸಂಪ್ರದಾಯದೊಡನೆ ಬೆಳೆದ ಸಂಬಂಧದ ಫಲವಾಗಿ ಉದಯಿಸಿದ ಪ್ರಭೇದವನ್ನು ಔತ್ತರೇಯ ದ್ರಾವಿಡಶೈಲಿಯೆಂದು ಗುರುತಿಸಬಹುದಾಗಿದೆ. ಬಾಗಿದ ಶಿಖರವುಳ್ಳ ಕಳಿಂಗ ಶೈಲಿಯು, ಲತಿನ ಮತ್ತು ವಿಮಾನನಾಗರ ಶೈಲಿಗಳಿಗೆ ಮೂಲ ವೆನಿಸಿತು. ಇವೆರಡೂ ಪಿರಿದುಂ ನಾಗರ ಶೈಲಿಯ ಪ್ರಭೇದಗಳು. ಲತಿನ ಶೈಲಿಯು ಏಕಶೃಂಗ ರಚನೆಯಾದರೆ, ವಿಮಾನ ನಾಗರವು ಬಹುಶೃಂಗ ರಚನೆ ಎನಿಸಿದೆ. ಭೂಮಿಜ ಶೈಲಿಯು ಮೂಲತಃ ಬಾಗಿದ ಶಿಖರವುಳ್ಳದ್ದಾದರೂ, ಕರ್ನಾಟಕದಲ್ಲಿರುವ ರಚನೆಗಳು ಮೇಲಕ್ಕೇರುತ್ತಾ ಕಿರಿದಾಗಿ ಸಾಗುತ್ತವೆ.

ಪ್ರೊ. ಢಾಕೆಯವರ ಕಲ್ಯಾಣದ ಚಾಲುಕ್ಯರ ಮತ್ತು ಹೊಯ್ಸಳರ ಕಾಲದ ಪ್ರಮುಖ ದೇವಾಲಯಗಳ ಸರ್ವೇಕ್ಷಣೆ ಕೈಗೊಂಡಿದ್ದು, ಕುಬಟೂರು ಶಾಸನದ ಆಧಾರದಿಂದ ಗುರುತಿಸಲು ಪ್ರಯತ್ನಿಸಿದ್ದಾರೆ. ಸಮರಾಂಗಣ ಸೂತ್ರಧಾರ ಗ್ರಂಥಗಳಲ್ಲಿರುವ ಲಕ್ಷಣಗಳನ್ನು ಗಮನಿಸಿ, ಭೂಮಿಜ, ಲತಿನ, ವಿಮಾನನಾಗರ (ಕೇಸರಿ : ಶೇಖರಿ) ಶಿಖರಗಳ ಮಾದರಿಗಳನ್ನು ಗುರುತಿಸಿದ್ದಾರೆ. ದ್ರಾವಿಡ ಶೈಲಿಯನ್ನು ಗುರುತಿಸಲಾಗದೆ ಎಡವುತ್ತಾರೆ. ಶಾಸನವಿರುವ ಕೋಟೀಶ್ವರ ದೇವಾಲಯವೇ (ಔತ್ತರೇಯ) ದ್ರಾವಿಡ ಶೈಲಿ. ಕುಬಟೂರು ಶಾಸನವು ಹೆಸರಿಸುವ ಎಲ್ಲಾ ಶೈಲಿಗಳೂ ಔತ್ತರೇಯ ಸಂಪ್ರದಾಯಕ್ಕೆ ಸೇರಿವೆ. ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ, ಭೂಮಿಜವು ಔತ್ತರೇಯ ಶೈಲಿ, ವೇಸರವು ದಾಕ್ಷಿಣಾತ್ಯ ಶೈಲಿ. ಒಂದು ಮತ್ತೊಂದರ ಮುಂದುವರಿಕೆ ಎನ್ನುವುದು ಹಾಸ್ಯಾಸ್ಪದ. ಔತ್ತರೇಯ ಸಂಪ್ರದಾಯವೇ ಬೇರೆ, ದಾಕ್ಷಿಣಾತ್ಯ ಸಂಪ್ರದಾಯವೇ ಬೇರೆಯದು.

ಔತ್ತರೇಯ ಗ್ರಂಥಗಳನ್ನಾಧರಿಸಿ, ಕುಬಟೂರಿನ ಕೋಟೀಶ್ವರ, ಕುಕ್ಕನೂರಿನ ಕಲ್ಲೇಶ್ವರ, ಹಾವೇರಿಯ ಸಿದ್ಧೇಶ್ವರ, ಚೌಡದಾನಪುರದ ಮುಕ್ತೇಶ್ವರ, ಡಂಬಳದ ದೊಡ್ಡಬಸಪ್ಪ ಮುಂತಾದ ದೇವಾಲಯಗಳನ್ನು ಔತ್ತರೇಯ ದ್ರಾವಿಡ ಎಂಬ ಗುರುತಿಸಬಹುದು. ಈ ದೇವಾಲಯಗಳ ಪಟ್ಟಿ ಪ್ರಾತಿನಿಧಿಕವೇ ಹೊರತು, ಸಂಪೂರ್ಣವಲ್ಲ. ಈವರೆಗೆ ವೇಸರವೆಂದು ನಂಬಿದ್ದ ಕಲ್ಯಾಣದ ಚಾಲುಕ್ಯರ ಕಾಲದ ಮತ್ತು ಹೊಯ್ಸಳರ ದೇವಾಲಯಗಳು ಔತ್ತರೇಯ ದ್ರಾವಿಡ ಎನಿಸಿದ್ದು ಈ ದಿಸೆಯಲ್ಲಿ ಅಧ್ಯಯನ ಮುಂದುವರೆಯಬೇಕಾಗಿದೆ.

 03_382_DV-KUH

ಕರ್ನಾಟಕದ ಔತ್ತರೇಯ ದೇವಾಲಯಗಳಲ್ಲಿ ಹಾನುಗಲ್ಲಿನ ಗಣಪತಿ ದೇವಾಲಯವನ್ನು ವಿಮಾನ ನಾಗರ ಶೈಲಿಯೆಂದೂ, ಹತ್ತರಗಿರಿಯ ಶಿಖರೇಶ್ವರ ದೇವಾಲಯವನ್ನು ಲತಿನ ಶೈಲಿಯೆಂದೂ ಗುರುತಿಸಲಾಗಿದೆ. ಪ್ರೊ.ಢಾಕೆಯವರು ತುರುವೇಕೆರೆಯ ಮೂಲೆಶಂಕರೇಶ್ವರ, ನುಗ್ಗೇಹಳ್ಳಿಯ ಸದಾಶಿವ ದೇವಾಲಯಗಳನ್ನು ಪ್ರಾದೇಶಿಕ ಲಕ್ಷಣಗಳನ್ನು ಮೈಗೂಡಿಸಿಕೊಂಡ ಭೂಮಿಜ ಶೈಲಿ ಎಂದಿದ್ದಾರೆ (೧೯೭೭ : ೨೦). ಉತ್ತರಭಾರತದ ಭೂಮಿಜ ಶೈಲಿಯು ಬಾಗಿದ ಶಿಖರಗಳಿಂದ ಕೂಡಿದೆ. ಕರ್ನಾಟಕದ ಈ ದೇವಾಲಯಗಳು ಮೇಲೆರುತ್ತಾ ಕಿರಿದಾಗುವ ಶಿಖರ ರಚನೆಯಾಗಿದೆ. ಉತ್ತರದ ಹಾಗೂ ಮಧ್ಯಭಾರತದ ಭೂಮಿಜ ಶೈಲಿಯ ದೇವಾಲಯಗಳನ್ನು ಈ ದೇವಾಲಯಗಳೊಂದಿಗೆ ತುಲನಾತ್ಮಕವಾಗಿ ಪರಿಶೀಲಿಸುವ ಅಗತ್ಯವಿದೆ. ಈ ದೇವಾಲಯಗಳ ಗುರುತಿಸುವಿಕೆಯಿಂದಾಗಿ, ದೇವಾಲಯಗಳ ವರ್ಗೀಕರಣ ಮೂಲಭೂತವಾಗಿ ಮಾರ್ಪಾಡು ಹೊಂದಿದೆ. ದಾಕ್ಷಿಣಾತ್ಯ ಮತ್ತು ಔತ್ತರೇಯ ಸಂಪ್ರದಾಯಗಳ ವರ್ಗೀಕರಣ ಸಾಧ್ಯವಾಗಿದೆ. ಇವೆರಡೂ ಸಂಪ್ರದಾಯಗಳಲ್ಲಿ ನಾಗರ, ದ್ರಾವಿಡ ಶೈಲಿಗಳಿದ್ದು, ಪ್ರತ್ಯೇಕ ಲಕ್ಷಣಗಳೊಂದಿಗೆ ಗುರುತಿಸಿ ಅಧ್ಯಯನ ಕೈಗೊಳ್ಳಬೇಕಾಗಿದೆ. ದೇವಾಲಯಗಳ ಅಧ್ಯಯನದಲ್ಲಿ ಸಾರ್ವತ್ರಿಕವಾಗಿ ಬಳಕೆಯಾಗುತ್ತಿದ್ದ ನಾಗರ ಮತ್ತು ದ್ರಾವಿಡ ಪದಗಳನ್ನು ನಿರ್ದಿಷ್ಟವಾದ ಜಾಡಿನಲ್ಲಿ ಎಚ್ಚರಿಕೆಯಿಂದ ಬಳಸಬೇಕಾಗಿದೆ.