ಕ್ರಿಸ್ತಶಕಕ್ಕೆ ಮುನ್ನ ದೇವಾಲಯಗಳು ರಚನೆಗೊಂಡವು ಎಂದು ಹೇಳಲು ಸಾಧ್ಯವಿದ್ದರೂ ಅವುಗಳ ಸ್ವರೂಪ ವ್ಯಕ್ತವಾಗುವುದಿಲ್ಲ. ಹರಪ್ಪ ಮಹೆಂಜೋದಾರೋ ಉತ್ಖನನಗಳಲ್ಲಿ ಸಾರ್ವತ್ರಿಕ ಕಟ್ಟಡಗಳನ್ನು ಗುರುತಿಸಬಹುದೇ ಹೊರತು ದೇವಾಲಯಗಳೆಂದು ಗುರುತಿಸಲಾಗುವ ರಚನೆಗಳಿಲ್ಲ. ಕ್ರಿಸ್ತಪೂರ್ವ ಎರಡನೆಯ ಶತಮಾನದಲ್ಲಿ ಹೆಲಿಯೋಡರಸ್ ಸ್ಥಾಪಿಸಿದ ಗರುಡ ಸ್ತಂಭದ ಉಲ್ಲೇಖ ವಾಸುದೇವನ ದೇವಾಲಯಕ್ಕೆ ಸಂಬಂಧಿಸಿದ್ದು, ಇದು ದೇವಾಲಯಕ್ಕೆ ಸಂಬಂಧಿಸಿದ ಪ್ರಾಚೀನ ಮಾಹಿತಿಯಾಗಿದೆ (ಸರ್ಕಾರ್ : ೧೯೪೨ : ೯೦-೯೧). ರಾಜಾಸ್ಥಾನದ ಗೌಸುಂದಿಯಲ್ಲಿ ಕ್ರಿಸ್ತಶಕ ಒಂದನೆಯ ಶತಮಾನದಲ್ಲಿ ನಾರಾಯಣನಿಗಾಗಿ ಕಟ್ಟಲ್ಪಟ್ಟ “ನಾರಾಯಣ ವಾಟಿಕಾ”ದ ಉಲ್ಲೇಖವಿದೆ (ಸರ್ಕಾರ್ :೧೯೪೨: ೯೦-೯೧). ಕಟ್ಟಡದೊಂದಿಗೆ ಗುರುತಿಸಲಾಗುವ ಅತಿಪ್ರಾಚೀನ ದೇವಾಲಯ, ತಿಗುವಾದಲ್ಲಿರುವ ವಿಷ್ಣುದೇವಾಲಯವೆಂದು ಹೆಸರಿಸಬಹುದು. ಇದರೊಂದಿಗೆ ಸಾಂಚಿಯ ಹದಿನೇಳನೇ ಸಂಖ್ಯೆ ದೇವಾಲಯವನ್ನೂ ವಿದ್ವಾಂಸರು ಕ್ರಿ.ಶ. ಐದನೆಯ ಶತಮಾನಕ್ಕೆ ಸೇರಿದ್ದೆಂದು ಪರಿಗಣಿಸಿದ್ದಾರೆ. ಈ ದೇವಾಲಯಗಳಲ್ಲಿ ಚತುರಶ್ರಾಕಾರದ ಗರ್ಭಗೃಹವಿದ್ದು, ಮುಂಭಾಗದಲ್ಲಿ ಸ್ತಂಭಗಳಿಂದ ಕೂಡಿದ ಮುಖಮಂಟಪವಿದೆ. ಈ ರಚನೆಗಳ ಛಾವಣಿ ಸಮತಟ್ಟಾಗಿದೆ. ಇವೆರಡೂ ಸ್ವತಂತ್ರ ದೇವಾಲಯಗಳ ಮೂಲ ಎಂದು ಗುರುತಿಸಲಾಗಿದೆ.

04_382_DV-KUH

ಗರ್ಭಗೃಹವೊಂದರಿಂದಲೇ ದೇವಾಲಯ ಎಂದು ಗುರುತಿಸಲು ಸಾಧ್ಯವಿದೆ. ದೇವಾಲಯಗಳ ಮಾದರಿಗಳನ್ನು ಗಮನಿಸಿದಾಗ, ಗರ್ಭಗೃಹ ಮತ್ತು ಅದಕ್ಕೆ ಹೊಂದಿಕೊಂಡಂತೆ ಮುಖಮಂಟಪ, ಇದು ಕನಿಷ್ಠ ಅವಶ್ಯಕತೆ ಎನ್ನಲಾಗಿದೆ. ಪಾಶ್ಚಿಮಾತ್ಯರ ದೇವಾಲಯಗಳ ಸ್ವರೂಪವೂ ಇದೇ ರೀತಿಯನ್ನು ಅನುಸರಿಸಿದ್ದು, ಈ ಕನಿಷ್ಠ ಅವಶ್ಯಕತೆಯ ಸಾರ್ವತ್ರಿಕ ರೂಪ ತಳೆದಿದೆ ಎನ್ನಬಹುದು. ವಿಟ್ರೂವಿಯಸ್ ಗುರುತಿಸುವ ಆಂಟಿಸ್ ಮತ್ತು ಪ್ರೊಸ್ಟೈಲ್ ಮಾದರಿಗಳಲ್ಲಿ ಗರ್ಭಗೃಹ ಮತ್ತು ಮುಖಮಂಟಪಗಳನ್ನು ಮಾತ್ರ ಕಾಣಬಹುದು (ಮಾರ್ಗನ್ : ೧೯೬೦ :೭೫).ತಿಗುವಾ ಮತ್ತು ಸಾಂಚಿ ದೇವಾಲಯಗಳ ನಂತರ, ಗುಪ್ತರ ಕಾಲದ ದೇವಘರ್‌ನಲ್ಲಿರುವ ವಿಷ್ಣುದೇವಾಲಯ, ಭೂಮಾರದಲ್ಲಿರುವ ಶಿವಾಲಯ, ನಾಚ್ನಕುಟಾರದಲ್ಲಿರುವ ಪಾರ್ವತಿ ದೇವಾಲಯ, ಇವುಗಳಲ್ಲಿ ಗರ್ಭಗೃಹವು ಮಧ್ಯದ ಪ್ರದೇಶವನ್ನು ಆಕ್ರಮಿಸಿದೆ. ಈ ರಚನೆಗಳನ್ನು ವಿದ್ವಾಂಸರು ಐದನೆಯ ಶತಮಾನದ್ದೆಂದು ನಿರ್ಣಯಿಸಿದ್ದಾರೆ (ಅಗರ್‌ವಾಲಾ : ೧೯೬೮ :೩೫-೩೬). ಇದೇ ಹಾದಿಯಲ್ಲಿ ಕರ್ನಾಟಕದಲ್ಲಿ ಲಭ್ಯವಿರುವ ದೇವಾಲಯಗಳನ್ನು ಪರಿಶೀಲಿಸಬಹುದು.

ಕರ್ನಾಟಕದಲ್ಲಿ ಕ್ರಿಸ್ತಶಕದ ಆರಂಭದಲ್ಲಿ ಕಟ್ಟಿದ ದೇವಾಲಯಗಳು ಉಳಿದಿಲ್ಲವಾದರೂ, ಕ್ರಿ.ಶ. ೧೫೦ರ ಕದಂಬರ ಪ್ರಾಕೃತ ಶಾಸನವು ದೇವಾಲಯಗಳು ರಚನೆಗೊಂಡಿರುವುದನ್ನು ದೃಢೀಕರಿಸತ್ತದೆ (ಚಿದಾನಂದಮೂರ್ತಿ : ೧೯೬೬: ೧೭೩-೧೭೪). ಕರ್ನಾಟಕದ ಅತಿಪ್ರಾಚೀನ ಎನಿಸಿರುವ ಕ್ರಿ.ಶ. ೪೫೦ರ ತಾಳಗುಂದದ ದೇವಾಲಯವು ತನ್ನ ಮೂಲಸ್ವರೂಪವನ್ನು ಕಳೆದುಕೊಂಡಿರುವುದರಿಂದ ದೇವಾಲಯವಿತ್ತೆಂಬ ದಾಖಲೆಯಾಗಿ ಉಳಿಯುತ್ತದೆ. ಇದು ದೇವಾಲಯದ ಸ್ವರೂಪದ ಬಗ್ಗೆ ಮಾಹಿತಿ ನೀಡುವುದಿಲ್ಲ. ಆದ್ದರಿಂದ ದೇವಾಲಯಗಳ ಉಗಮ ವಿಕಾಸಗಳನ್ನು ಗುರುತಿಸುವ ಸಲುವಾಗಿ, ಐಹೊಳೆ, ಬಾದಾಮಿ, ಪಟ್ಟದಕಲ್ಲು ಮತ್ತು ಮಹಾಕೂಟಗಳಲ್ಲಿರುವ ರಚನೆಗಳನ್ನು ಪರಿಶೀಲಿಸಬೇಕು. ಕನಿಷ್ಠ ಅವಶ್ಯಕತೆಯೊಡನೆ ನಿಂತ ಹಲವಾರು ರಚನೆಗಳನ್ನು ಮಹಾಕೂಟೇಶ್ವರ ದೇವಾಲಯದ ಆವರಣದಲ್ಲಿ, ಬಾದಾಮಿಯ ಭೂತನಾಥ ಗುಡಿಯ ಗುಂಪುಗಳಲ್ಲಿ ಹಾಗೂ ಐಹೊಳೆಯ ಪರಿಸರದಲ್ಲಿ ಕಾಣಬಹುದಾಗಿದೆ. ಕೆಲವೆಡೆ ಕೇವಲ ಮಂಟಪ, ನಂತರ ಗರ್ಭಗೃಹದೊಂದಿಗೆ ಹೊಂದಿಕೊಂಡ ಎರಡು ಅಥವಾ ನಾಲ್ಕು ಸ್ತಂಭಗಳುಳ್ಳ ಮುಖಮಂಟಪ ಅಥವಾ ಗರ್ಭಗೃಹದೊಂದಿಗೆ ಕಕ್ಷಾಸನವುಳ್ಳ ಮಂಟಪ, ಮತ್ತೊಂದೆಡೆ ಮಧ್ಯೆ ಮಂಟಪವಿದ್ದು, ಇಕ್ಕೆಲಗಳಲ್ಲಿ ಗರ್ಭಗೃಹ, ಮುಖಮಂಟಪ ಈ ರೀತಿಯ ರಚನೆಗಳನ್ನು ಕಾಣುತ್ತೇವೆ. ತಿಗುವಾ ಮತ್ತು ಸಾಂಚಿ ದೇವಾಲಯಗಳಿಗೂ, ಇಲ್ಲಿರುವ ದೇವಾಲಯಗಳಿಗೂ ಯಾವುದೇ ಸಂಬಂಧವಿಲ್ಲದಿದ್ದರೂ, ದೇವಾಲಯಗಳ ಬೆಳವಣಿಗೆಯಲ್ಲಿ ಇವುಗಳನ್ನು ಅವಶ್ಯಕವಾಗಿ ಗಮನಿಸಬೇಕಾಗಿದೆ.

ಐಹೊಳೆ, ಬಾದಾಮಿ, ಪಟ್ಟದಕಲ್ಲುಗಳಲ್ಲಿರುವ ರಚನೆಗಳನ್ನು ವಿಶ್ಲೇಷಿಸಿ, ದೇವಾಲಯಗಳು ಬೆಳೆದು ಬಂದ ಹಾದಿಯನ್ನು ಗುರುತಿಸುವ ಹಲವಾರು ಪ್ರಯತ್ನಗಳು ಈವರೆಗೆ ನಡೆದಿವೆ. ಇಲ್ಲಿರುವ ದೇವಾಲಯಗಳ ಸಮೂಹವನ್ನು ವಿದ್ವಾಂಸರು ಈಗಾಗಲೇ “ದೇವಾಲಯಗಳ ತೊಟ್ಟಿಲು” ಎಂದು ಹೆಸರಿಸಿದ್ದಾರೆ. ಐಹೊಳೆಯ ಲಾಡ್‌ಖಾನ್ ದೇವಾಲಯ, ಗೌಡರ ಗುಡಿ, ಕೊಂತಿಗುಡಿಗಳನ್ನು ಪ್ರಾರಂಭಿಕ ದೇವಾಲಯಗಳೆಂದು ಗುರುತಿಸಲಾಗಿದ್ದು, ಇವುಗಳ ಪ್ರಾಚೀನತೆಯನ್ನು ಗುರುತಿಸುವಲ್ಲಿ ವಾದ ವಿವಾದಗಳ ಸುಳಿಯಲ್ಲಿ ಸಿಕ್ಕಿಕೊಂಡಿವೆ. ದಾಕ್ಷಿಣಾತ್ಯ ಹಾಗೂ ಔತ್ತರೇಯ ಸಂಪ್ರದಾಯಗಳು, ಪಟ್ಟದಕಲ್ಲು ಮತ್ತು ಮಹಾಕೂಟದ ರಚನೆಗಳಲ್ಲಿ ಬೆರೆತಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಉತ್ತರದ ದೇವಾಲಯಗಳು ರಚನೆಗೊಂಡು ಖಚಿತ ಆಕಾರ ತಳೆದಿದ್ದು ಈ ಭೂಪ್ರದೇಶದಲ್ಲಿ ಎಂದು ಗಮನಿಸಬಹುದು. ಇದರಿಂದಾಗಿ ಈ ಪ್ರದೇಶದ ದೇವಾಲಯಗಳ ಅಧ್ಯಯನ ಮಹತ್ವದ್ದೆನಿಸಿದೆ. ದೇವಾಲಯಗಳ ರಚನೆಯ ವಿನ್ಯಾಸ, ಲಭ್ಯವಿರುವ ಶಾಸನಗಳು, ಇವುಗಳನ್ನಾಧರಿಸಿ ವಿದ್ವಾಂಸರು ಪ್ರಾಚೀನತೆಯನ್ನು ನಿರ್ಧರಿಸುತ್ತಿದ್ದರು. ಇದರೊಡನೆ ದೇವಾಲಯಗಳ ಸುತ್ತ ತುಂಬಿದ್ದ ಮಣ್ಣಿನ ಸ್ತರಗಳ ಸರ್ವೇಕ್ಷಣೆ ನಡೆಸಿ ಪ್ರಾಚೀನತೆಯನ್ನು ನಿಷ್ಕರ್ಷಿಸಿದರು. ಈ ರೀತಿ ಹಲವು ಮಾನಗಳಿಂದ ಮೂಡಿಬಂದ ಅಧ್ಯಯನದ ಫಲಿತಾಂಶಗಳು ವಿವಿಧ ರೀತಿಯವು. ವಿದ್ವಾಂಸ ಪರ್ಸಿ ಬ್ರೌನ್‌ರವರು ವಾಸ್ತು ಮೂಲವನ್ನಾಧರಿಸಿ ಲಾಡ್‌ಖಾನ್ ದೇವಾಲಯವನ್ನು ಅತಿಪ್ರಾಚೀನ ರಚನೆಯೆಂದು ಗುರುತಿಸಿದರು (೧೯೬೫: ೫೧-೫೨). ಕೆ.ವಿ. ಸೌಂದರರಾಜನ್‌ರವರು ಐಹೊಳೆಯ ಜ್ಯೋತಿರ್ಲಿಂಗ ಗುಡಿಯ ನಾಲ್ಕು ಸ್ತಂಭಗಳ ರಚನೆಯನ್ನು ದೇವಾಲಯದ ಮೂಲವೆಂದು ವಿವರಿಸಿದರು (೧೯೬೯ : ೩). ಇದರೊಂದಿಗೆ ಮಹಾಕೂಟದ ಪುಷ್ಕರಿಣಿಯಲ್ಲಿರುವ ಮಂಟಪವನ್ನು ಮೂಲವೆಂದು ಗುರುತಿಸಿದರು. ದೇವಾಲಯಗಳ ಸುತ್ತ ತುಂಬಿದ್ದ ಮಣ್ಣಿನ ಸ್ತರಗಳ ಸರ್ವೇಕ್ಷಣೆಯಿಂದ ಇದಕ್ಕಿಂತ ಭಿನ್ನವಾದ ಫಲಿತಾಂಶ ಕಂಡುಬಂದಿದ್ದು, ಡಾ.ಎಸ್.ಆರ್.ರಾವ್‌ರವರು ಈ ಅಧ್ಯಯನ ರೀತ್ಯಾ ಗೌಡರ ಗುಡಿಯನ್ನು ಪ್ರಾಚೀನವೆಂದು ಗುರುತಿಸಿದರು (೧೯೭೨ : ೯).

ವಾಸ್ತುರಚನೆಗಳಿಗೆ ಸಂಬಂಧಿಸಿದಂತೆ ವಾಸ್ತುಗ್ರಂಥಗಳೇ ಅಲ್ಲದೆ, ಮತ್ಸ್ಯಪುರಾಣ, ಶುಕ್ರನೀತಿ, ಮಾನಸೋಲ್ಲಾಸ ಇತ್ಯಾದಿ ಗ್ರಂಥಗಳೂ ವಾಸ್ತುರಚನೆಗಳನ್ನು ಪ್ರಾಸಂಗಿಕವಾಗಿ ವಿವರಿಸಿವೆ. ಈ ಗ್ರಂಥಗಳು ಗುರುತಿಸುವ ವಾಸ್ತು ರಚನೆಗಳು ಆಯಾಗ್ರಂಥಗಳು ರಚನೆಗೊಂಡ ಕಾಲಕ್ಕೆ ಅಥವಾ ಹಿಂದಕ್ಕೆ ಪ್ರಚಲಿತದಲ್ಲಿತ್ತು ಎಂದು ಗಮನಿಸಬಹುದು. ಪ್ರಾಚೀನವೆನ್ನುವ ಈ ಗ್ರಂಥಗಳ ಕಾಲಮಾನವು ಖಚಿತವಾಗಿ ತಿಳಿಯಲಾಗದಿದ್ದರೂ ದೇವಾಲಯಗಳ ಬೆಳವಣಿಗೆಯನ್ನು ಸೂಚಿಸುವ ಆಕರಗಳಾಗಿ ವ್ಯವಸ್ಥಿತವಾದ ಕಕ್ಷೆಯಲ್ಲಿರಿಸಿಕೊಂಡು, ಅಧ್ಯಯನ ಮುಂದುವರೆಸಬಹುದು.

ಲಾಡ್‌ಖಾನ್ ದೇವಾಲಯ, ಐಹೊಳೆ

ಲಾಡ್‌ಖಾನ್ ದೇವಾಲಯ, ಐಹೊಳೆ

ಗೌಡರಗುಡಿ, ಐಹೊಳೆ

ಗೌಡರಗುಡಿ, ಐಹೊಳೆ

ವಿದ್ವಾಂಸ ಪರ್ಸಿ ಬ್ರೌನರ ಪ್ರಕಾರ ಲಾಡ್‌ಖಾನ್ ಗುಡಿಯು ಅತಿಪ್ರಾಚೀನ ದೇವಾಲಯ ಎನ್ನಿಸಿದೆ. ಇದರ ಸ್ವರೂಪವು ಚತುರಶ್ರಾಕಾರವೆನಿಸಿದ್ದು, ಮುಂಭಾಗದಲ್ಲಿ ಮುಖಮಂಟಪವನ್ನು ಹೊಂದಿದೆ. ಚತುರಶ್ರಾಕಾರ ರಚನೆಯ ಮಧ್ಯಭಾಗದಲ್ಲಿ ನಾಲ್ಕು ಬೃಹತ್ ಸ್ತಂಭಗಳ ಚತುಷ್ಕವಿದ್ದು ಸುತ್ತ ಅಲಿಂದ ರಚನೆಯಿದೆ. ಅಲಿಂದ ರಚನೆಯಲ್ಲಿ ಎರಡು ಹಂತಗಳಿದ್ದು ಇಳಿಜಾರಾದ ಛಾವಣಿಯನ್ನು ಹೊಂದಿದೆ. ಅಲಿಂದ ರಚನೆಯ ಸ್ತಂಭಗಳು ಎತ್ತರ ಗಾತ್ರದಲ್ಲಿ ಸ್ಥಾನಕ್ಕೆ ತಕ್ಕಂತೆ ಬದಲಾಗಿವೆ. ಹೊರಭಾಗದ ಎರಡನೆಯ ಹಂತದ ಅಲಿಂದ ರಚನೆಯ ಮೂಲೆಗಳಲ್ಲಿ ಸ್ತಂಭಕ್ಕೆ ಬದಲಾಗಿ ಕುಡ್ಯಸ್ತಂಭಗಳಿವೆ. ಹಿಂಬದಿಯ ಭಿತ್ತಿಗೆ ಅಂಟಿಕೊಂಡಂತೆ ತದನಂತರ ಕಾಲದಲ್ಲಿ ರಚನೆಗೊಂಡ ಗರ್ಭಗೃಹವು ಚತುಷ್ಕ ಹಾಗೂ ಅಲಿಂದದ ಸ್ತಂಭಗಳನ್ನು ಆಧರಿಸಿದೆ. ಮುಂಗಡೆ ಹನ್ನೆರಡು ಸ್ತಂಭಗಳ ಮುಖಮಂಟಪವಿದ್ದು ಕಕ್ಷಾಸನವನ್ನು ಹೊಂದಿದೆ. ಮುಖಮಂಟಪದ ಸ್ತಂಭಗಳ ಮೇಲೆ ಮಿಥುನ ಶಿಲ್ಪಗಳನ್ನೂ, ಕಕ್ಷಾಸನದ ಹೊರಭಾಗದಲ್ಲಿ ಚಿತ್ರಕುಂಭ ರಚನೆಗಳನ್ನೂ ಕಾಣಬಹುದು. ಪರ್ಸಿ ಬ್ರೌನರ ಪ್ರಕಾರ, ಈ ದೇವಾಲಯವು ಸಾರ್ವಜನಿಕ ಸಭೆಗಳನ್ನು ನಡೆಸಬಹುದಾದ “ಶಾಂತಗಾರ”. ಔತ್ತರೇಯ ಗ್ರಂಥಗಳು ಇಂತಹ ರಚನೆಗಳನ್ನು “ಸಭಾ” ಎಂದು ಗುರುತಿಸುತ್ತವೆ. ದೇವಾಲಯಗಳು ನಿಶ್ಚಿತ ಆಕಾರ ತಳೆಯುವ ಮುನ್ನ, ಸಾರ್ವಜನಿಕ ಕಟ್ಟಡಗಳನ್ನು ಬಳಸಿದವು ಎಂದು ಹೇಳಲು ಲಾಡ್‌ಖಾನ್ ಕಟ್ಟಡವು ಉದಾಹರಣೆಯಾಗಿದೆ. ಈ ರೀತಿ ಕಟ್ಟಡಗಳು ಬೆಳೆದು ಬಂದ ಬಗೆಯನ್ನು ಶಾಸ್ತ್ರ ರೀತ್ಯಾ ಹಂತ ಹಂತವಾಗಿ ಗುರುತಿಸಿದಲ್ಲಿ, ದೇವಾಲಯಗಳು ಅನುಸರಿಸಿದ ಹಾದಿ ವ್ಯಕ್ತಗೊಳ್ಳುವುದು.

ಕೆ.ವಿ. ಸೌಂದರರಾಜನ್‌ರವರು ಮಂಟಪ ರಚನೆಯನ್ನು ದೇವಾಲಯದ ಮೂಲವೆಂದು ಗುರುತಿಸಿದ್ದು, ಐಹೊಳೆಯ ಜ್ಯೋತಿರ್ಲಿಂಗ ಗುಡಿಗಳ ಗುಂಪಿನಲ್ಲಿರುವ ನಾಲ್ಕು ಸ್ತಂಭಗಳ ರಚನೆಯನ್ನು ಆರಂಭಿಕ ಹಂತ ಎಂದು ಗುರುತಿಸಿದರು. ಮಂಟಪವನ್ನು ಮಯಮತ ಗ್ರಂಥವು ವಿವರಿಸುವಾಗ ಮಂಡಂ ಸುಭೂಷಣಂ ತಂ ಪಾತೀತಿ ಎಂದು ಉಲ್ಲೇಖಿಸಿದೆ (ಡಗೆನ್ಸ್ : ೧೯೭೦ : ೬೧೯). ಈ ವಿವರವನ್ನು ಆಧರಿಸಿ, ಮಂಡಪವು ಅಲಂಕಾರವನ್ನು ರಕ್ಷಿಸುವಂಥದ್ದು ಎಂದು ಅರ್ಥೈಸಿದಲ್ಲಿ, ರಕ್ಷಣೆಯ ಮೂಲದೃಷ್ಟಿಯುಳ್ಳ ಇನ್ನಿತರ ವಾಸ್ತುರಚನೆಗಳನ್ನು ಗಮನಿಸಬೇಕಾಗಿದೆ. ದಾಕ್ಷಿಣಾತ್ಯ ಗ್ರಂಥಗಳ ಪ್ರಕಾರ “ಪ್ರಪಾ” ರಚನೆಯು ವಾಸ್ತುಮೂಲವೆನ್ನಿಸಿದರೆ, ಔತ್ತರೇಯ ಗ್ರಂಥಗಳ ಪ್ರಕಾರ “ಶಾಲಾ” ರಚನೆಗಳನ್ನು ಮೂಲವೆನ್ನಬಹುದು. ದಾಕ್ಷಿಣಾತ್ಯ ಗ್ರಂಥಗಳಲ್ಲಿ ವಿವರಿಸಿರುವ ಪ್ರಪಾ ಶಬ್ದವು ಪಾ ರಕ್ಷಣೇ ಎಂಬ ಧಾತು ಮೂಲದಿಂದ ಉದಯಿಸಿದೆ. ಆಚ್ಛಾದಿತಾ ಪ್ರಪಾ ನಾಮ ಪ್ರಸ್ತರಂ ಚಾತ್ರ ಮಂಡಪಂ ಕಾಮಿಕಾಗಮದ ಪ್ರಕಾರ ಆಚ್ಛಾದಿತವಾದದ್ದು ಪ್ರಪಾ (ಶಿವಾಚಾರ್ಯ : ೧೯೭೫ : ೧೩೪). ಸ್ತಂಭ ಮತ್ತು ಪ್ರಸ್ತರದಿಂದ ಕೂಡಿದ್ದು ಪ್ರಪಾ, ಈ ರಚನೆಯಲ್ಲಿ ಅಧಿಷ್ಠಾನಕ್ಕೆ ಸ್ಥಾನವಿಲ್ಲ ಎಂದು ಗಮನಿಸಬೇಕು. ಆದ್ದರಿಂದ ದ್ವಿವರ್ಗ ರಚನೆ ಎನ್ನಿಸಿದೆ. ಮಾನಸಾರ ಗ್ರಂಥದಲ್ಲಿ ಪ್ರಪಾ ರಚನೆಯ ವಿವರಗಳಿವೆ (ಆಚಾರ್ಯ: ೧೯೭೯ : ೩೩೧).

ಅಧಿಷ್ಠಾನಂ ವಿನಾ ಕುರ್ಯಾತ್ ಜನ್ಮಾದಿ ಪ್ರಸ್ತರಾಂತಕಂ
ಅಥವಾ ಪಾದವಂಶ ಸಂಯುಕ್ತಂ ತತ್ ಪ್ರಪಾಂಗಕಂ

ಪ್ರಪಾ ರಚನೆಯಲ್ಲಿ ಆಚ್ಛಾದನೆಗೆ ತೆಂಗಿನ ಗರಿಗಳನ್ನು ಗಾಳಿಗೆ ಹಾರಿ ಹೋಗದಂತೆ ಕಟ್ಟಿ ಬಳಸಬಹುದು. ಮರದ ಕಂಭವನ್ನು ನಿಲ್ಲಿಸಿ ಮೇಲೆ ಹೊದಿಸಬಹುದು. ಪ್ರಪಾ ರಚನೆಯನ್ನು ಪೂರ್ಣ ಪ್ರಮಾಣದಲ್ಲಿ ಶಿಲೆಯಿಂದಲೂ ನಿರ್ಮಿಸಬಹುದು.

ನಾರಿಕೇರದಲಾಭಿಶ್ಚ ಬಧ್ವಾsಛ್ಛಾದನಂ ಭವೇತ್
ವಾತೇನತ್ವಾಚಲಂ ತತ್ರ ಕುರ್ಯಾದ್ ಅಕ್ಷಿಣಿಕಾ ಪ್ರಪಾ
ಅನ್ಯೈಃ ಸಾರದ್ರುಮೈಃ ಪ್ರೋಕ್ತಂ ಹೋಮಾಂತಂ ಪಾದ ದಾರು
ಅಥವಾ ಶಿಲಾಸಂಯುಕ್ತಂ ಪ್ರಪಾ ಸರ್ವಾಂಗಮೇವ ವಾ

ಕನ್ನಡ ಶಾಸನಗಳಲ್ಲಿ ವಿವರಸಲ್ಪಟ್ಟಿದ್ದ ಅರವಟ್ಟಿಗೆಗಳ ಸಂಸ್ಕೃತದ ಪ್ರಪಾ ಎಂದೆನಿಸಿವೆ. ಪ್ರಪಾ ಪಾನೀಯಶಾಲಿಕಾ ಇದು ಅಮರಕೋಶದ ಉಕ್ತಿ, ಪ್ರಪಾದ್ವಯಂ ಪಾನೀಯ ಶಾಲಿಯಾಂ ಇದು ಅಮರಕೋಶದ ಉಲ್ಲೇಖದ ಬಗ್ಗೆ ಟೀಕೆ. ಕನ್ನಡ ಶಾಸನಗಳಲ್ಲಿಯೂ ಪ್ರಪೆ ಶಬ್ದದ ಬಳಕೆ ಇದೆ. ಪಿಬಂತಸ್ಯಾಂ ಪ್ರಪಾ ಎಂಬ ಪದ ಉತ್ಪತ್ತಿಯೂ ಉಂಟು. ವಿದ್ವಾಂಸ ಬ್ರೂನೋ ಡಗೆನ್ಸ್ ಪ್ರಪಾ ಪದವನ್ನು “ಲೈಟ್ ಬಿಲ್ಡಿಂಗ್” ಎಂದು ಅನುವಾದಿಸಿದ್ದಾರೆ. ಅರವಟ್ಟಿಗೆಗಳು ನಾಡಿನ ಹೆದ್ದಾರಿಗಳಲ್ಲಿ ಯಾತ್ರಿಕರ ಸಲುವಾಗಿ, ನೀರಡಿಕೆಯನ್ನು ಪರಿಹರಿಸಿಕೊಳ್ಳಲು, ಕೊಂಚಕಾಲ ವಿಶ್ರಮಿಸಲು, ರಚನೆಗೊಂಡ ತಂಗುದಾಣಗಳೆನಿಸಿದ್ದವು. ಇವು ಸರಳವಾದ ವಾಸ್ತುರಚನೆಗಳೆನಿಸಿದ್ದು, ಸ್ವತಂತ್ರ ರಚನೆಗೆ ಮೂಲವೆನಿಸಿದೆ.

ಔತ್ತರೇಯ ಗ್ರಂಥಗಳ ಪ್ರಕಾರ ಶಾಲಾ ರಚನೆಯ ಸ್ವತಂತ್ರ ರಚನೆಗಳ ಮೂಲವೆನಿಸಿದ್ದು, ಸಮರಾಂಗಣ ಸೂತ್ರಧಾರ ಗ್ರಂಥವು ಗೃಹಮೇಕಂ ತು ಯಚ್ಛನ್ನಂ ಸರ್ವಂ ಶಾಲೇತಿ ಸ್ಮೃತಾ ಎಂದು ವಿವರಿಸುತ್ತದೆ (ಅಗ್ರವಾಲಾ : ೧೯೬೬ : ೯೦). “ಯಚ್ಛನ್ನಂ” ಎಂದಲ್ಲಿ ಹೊದ್ದಿಸಿದ್ದು ಅಥವಾ ರಕ್ಷಣೆ ನೀಡುವಂಥದ್ದು ಎಂಬ ಅರ್ಥವಿದೆ. ಶಾಲಾ ಪದದ ಮೂಲ ಉದ್ದೇಶ ರಕ್ಷಣೆ ನೀಡುವುದಾದರೂ ತದನಂತರ ವ್ಯಾಪಕವಾಗಿ ಬಳಕೆಗೊಂಡದ್ದನ್ನು ಕಾಣಬಹುದು.

ಶಾಲಾ ರಚನೆಯ ವಿಸ್ತೃತ ವಿವರಣೆಯಲ್ಲಿ ಚತುಷ್ಕವನ್ನು ವಿವರಿಸಲಾಗಿದೆ. ಚತುಷ್ಕವನ್ನು ಚತುಷ್ಕಶ್ಚ ಚತುಸ್ತಂಭೈಃ ಎಂದು ವಿವರಿಸಿದ್ದು (ಮಂಕಡ್ : ೧೯೫೦ : ೪೮೪)ನಾಲ್ಕು ಸ್ತಂಭಗಳಿಂದ ಕೂಡಿದ್ದು ಎಂದೆನಿಸಿದೆ. ಔತ್ತರೇಯ ಗ್ರಂಥಗಳ ಈ ವಿವರಣೆಯನ್ನು ಗಮನಿಸಿದರೆ, ಚತುಷ್ಕವು ಸ್ವತಂತ್ರ ರಚನೆಯ ಆರಂಭ ಸ್ಥಿತಿ. ದಾಕ್ಷಿಣಾತ್ಯ ಗ್ರಂಥಗಳ ಪ್ರಪಾ, ಬಹುಶಃ ಶಾಲಾ ಅಥವಾ ಚತುಷ್ಕಕ್ಕೆ ಸಮನಾದುದು. ಮೇಲ್ಭಾಗದಲ್ಲಿ ಮುಚ್ಚಿಗೆ ಇದ್ದದ್ದು ಶಾಲಾ ಸ್ತಂಭಗಳಿಂದ ಕೂಡಿದ್ದು ಚತುಷ್ಕ. ಮಂಡಪದಲ್ಲಿ ಸ್ತಂಭಗಳು ಅಲಂಕಾರವುಳ್ಳದ್ದು. ಮಂಟಪಗಳು ಮೊದಲಿಗೆ ತೆರೆದ ರಚನೆಗಳಾಗಿದ್ದು ನಂತರ ಜಾಲಂದ್ರ, ಭಿತ್ತಿ, ಕಕ್ಷಾಸನ ಇತ್ಯಾದಿಗಳನ್ನು ಅಳವಡಿಸಿಕೊಂಡಿತು. ಚತುಷ್ಕದ ನಂತರ ಮಂಡಪ, ವಿಸ್ತೃತಶಾಲಾ ಇತ್ಯಾದಿಗಳನ್ನು ಗಮನಿಸಬಹುದು.

ಕ್ರಿ.ಶ. ೯೪೫ರಲ್ಲಿ ರಾಷ್ಟ್ರಕೂಟರ ಮುಮ್ಮಡಿ ಕೃಷ್ಣನ ಪ್ರಧಾನಿ ನಾರಾಯಣನು ಶಾಲೆಯನ್ನು ನಿರ್ಮಿಸಿ ತ್ರಿಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದನ್ನು ಬಿಜಾಪುರದ ಬಿಜಾಪುರದ ಸಾಲೋಟಗಿ ಶಾಸನವು ಬಣ್ಣಿಸಿದೆ (ಹುಲ್‌ಕ್ಷ್: ೧೮೯೬: ೬೦-೬೧). ಕ್ರಿ.ಶ. ೧೦೫೮ರ ಚಾಲುಕ್ಯ ಆಹವಮಲ್ಲನ ಕಾಲದ ಕಲಬುರ್ಗಿ ಜಿಲ್ಲೆಯ ನಾಗಾವಿ ಶಾಸನವು ಮತ್ತೊಂದು ತ್ರೈಪುರುಷರ ದೇವಾಲಯವನ್ನು ಹೆಸರಿಸಿದೆ (ಅಣ್ಣಿಗೇರಿ ಮತ್ತು ಮಲ್ಲಾರಿ : ೧೯೬೧ : ೪೩). ಕ್ರಿ.ಶ. ಹತ್ತು ಮತ್ತು ಹನ್ನೊಂದನೆಯ ಶತಮಾನದಲ್ಲಿ ತ್ರೈಪುರುಷರ ದೇವಾಲಯಗಳನ್ನು ಶಾಲಾ ಎಂದು ಗುರುತಿಸುತ್ತಿದ್ದರು ಎಂದು ಗಮನಿಸಬಹುದು.

ಶಾಲಾ ರಚನೆಯನ್ನು ಮತ್ಸ್ಯಪುರಾಣ, ಮಾನಸೋಲ್ಲಾಸ, ಸಮರಾಂಗಣ ಸೂತ್ರಧಾರ, ಅಪರಾಜಿತಪೃಜ್ಛಾ, ಕಾಮಿಕಾಗಮ ಇತ್ಯಾದಿ ಗ್ರಂಥಗಳೂ ವಿವರಿಸಿವೆ. ಈ ನಾಡಿನಲ್ಲಿ ವೈವಿಧ್ಯಮಯವಾದ ಶಾಲಾ ರಚನೆಗಳಿದ್ದವು ಎನ್ನಲು ಈ ಕೆಳಕಂಡ ಶಾಸನದ ಉಲ್ಲೇಕವು ಸಾಕ್ಷಿಯಾಗಿದೆ (ಸೀತಾರಾಮ್ ಜಾಗೀರ್‌ದಾರ್ : ೧೯೮೮ : ೪).

ಲೀಲೆಯಿನೆಸೆವೇಕ
ಶಾಲ ದ್ವಿಶಾಲ ತ್ರಿ
ಶಾಲ ಚತುಶ್ಯಾಲ ಪಂಚಶಾಲಂ
ಮೇಲೆನಿಸಿತ್ತಲ್ಲಿಂ
ಮೇಲೆ ಪಲ್ಲವನ ಜಿ
ನಾಲಯಂ ಸರ್ವತೋಭದ್ರದಿಂ

ಶಾಲಾ ರಚನೆಗಳು ಆರಂಭದಲ್ಲಿ ಶುಭಂ ದೇವ ನೃಪಾಲಯೇ ಎಂದು ಸೂಚಿಸಲ್ಪಟ್ಟಿದ್ದರೂ, ಕಾಲಾನಂತರದಲ್ಲಿ ಮಾರ್ಪಾಡು ಹೊಂದಿ, ಬಹು ಉಪಯೋಗಿ ಎನಿಸಿದವು. ಈ ಮಾರ್ಪಾಡುಗಳೊಂದಿಗೆ ಸಭಾ, ಮಠ, ಮುಂತಾದವು ರಚನೆಗೊಂಡವು. ಮತ್ಸ್ಯಪುರಾಣ ಮತ್ತು ಮಾನಸೋಲ್ಲಾಸ ಗ್ರಂಥಗಳು ಶಾಲಾ ರಚನೆಯನ್ನು ಮಾತ್ರ ವಿವರಿಸಿವೆ. ದೇವಾಲಯಗಳಿಗಾಗಿ ಪ್ರತ್ಯೇಕ ವಿವರಣೆ ಇಲ್ಲ. ಇವೆರಡೂ ಒಂದೇ ಮೂಲವನ್ನು ಆಶ್ರಯಿಸಿವೆ. ಕೆಳದಿ ಬಸಪ್ಪ ನಾಯಕನ “ಶಿವತತ್ತ್ವ ರತ್ನಾಕರ” ಗ್ರಂಥವು ವಾಸ್ತು ವಿಷಯಗಳಿಗೆ ಸಂಬಂಧಿಸಿದಂತೆ ಮಾನ ಸೋಲ್ಲಾಸ ಗ್ರಂಥವನ್ನು ಆಶ್ರಯಿಸಿದೆ (ಶ್ರೀ ಗೊಂಡೇಕರ್: ೧೯೩೯ : ೪).

ಚತ್ವಾರೋ ಮಧ್ಯಗಾ ಸ್ತಂಭಾ ಯತ್ರ ತಸ್ಯಾ ಚತುಷ್ಕಕಂ
ತಸ್ಮಾದ್ ಬಹಿರಲಿಂದಂ ಸ್ಯಾತ್ ಶಾಲಾ ಸ್ಯಾತ್ ತದನಂತರಂ
ಅಲಿಂದಂ ಪುನಃ ಶಾಲಾ ಕ್ರಮೇಣೈವ ಪ್ರವರ್ಧತೇ

ಮಾನಸೋಲ್ಲಾಸ ಗ್ರಂಥದ ಪ್ರಕಾರ, ಮಧ್ಯೆ ನಾಲ್ಕು ಸ್ತಂಭಗಳ ಚತುಷ್ಕ, ಅದರ ಸುತ್ತ ಅಲಿಂದ, ನಂತರ ಶಾಲಾ, ಪುನಃ ಅಲಿಂದ ಹೀಗೆ ಶಾಲಾ ರಚನೆಯು ಮುಂದುವರೆಯುತ್ತದೆ. ಚತುಷ್ಕವನ್ನಾವರಿಸಿದ ಅಲಿಂದವು ಪ್ರದಕ್ಷಿಣಾ ಪಥದಂತೆ ಕಾಣುವುದು ಸಹಜ. ಶಾಲಾ ರಚನೆಯು ಒಟ್ಟಾರೆ ಒಂದು ವಾಸ್ತು ರಚನೆಗೆ ಅಥವಾ ಒಂದು ಭಾಗಕ್ಕೆ ಅನ್ವಯಿಸುತ್ತದೆ. ಪಟ್ಟಶಾಲಾ, ಮುಖಶಾಲಾ ಇವೇ ಇಂದು ಬಳಕೆಯಲ್ಲಿರುವ ಪಡಸಾಲೆ, ಮೊಗಸಾಲೆ ಪದಗಳು. ಇವನ್ನು ಕಟ್ಟಡದ ಒಂದು ಭಾಗವಾಗಿ ಗುರುತಿಸಲಾಗುತ್ತದೆ. ಶಾಲಾ ರಚನೆಯ ಮುಂದುವರೆದ ಹಂತವಾಗಿ ಸಭಾರಚನೆಯನ್ನು ಗಮನಿಸಬಹುದು. ಛನ್ನಂ ಭವೇತ್ ಮಹಾಜನಸ್ಯ ಸ್ಥಾನಂ ಸಭಾ ಯಾ ಕಥಿತಾ ಶಾಲಾ ಇದು ಸಮರಾಂಗಣ ಸೂತ್ರಧಾರ ಗ್ರಂಥದ ಉಕ್ತಿ (ಅಗ್ರವಾಲಾ: ೧೯೬೯:೯೩). ಮಹಾಜನರು ಒಂದೆಡೆ ಸೇರುವ, ವಿಚಾರ ಮಾಡುವ, ನಿರ್ಣಯಗಳನ್ನು ಕೈಗೊಳ್ಳುತ್ತಿದ್ದ ಸ್ಥಳಕ್ಕೆ “ಸಭಾ” ಎಂದು ಹೆಸರು. ಸಭೆಯ ಸರಳ ರಚನೆ ಕೆಳಕಂಡಂತಿದೆ (ಮಂಕಡ್ : ೧೯೫೦ : ೧೯೨).

ಚತುರಶ್ರೀಕೃತೇ ಕ್ಷೇತ್ರೇ ದ್ವಿರಷ್ಟ ಪದ ವಿಭಾಜಿತೇ
ಮಧ್ಯಮ ಪದ ಚತುಷ್ಕೇಣ ಚತುಷ್ಕೋಲಿಂದ ಶೇಷತಃ
ನಂದಾ ನಾಮ ಸಮಾಖ್ಯಾತಾ ಸರ್ವಕಾಮ ಫಲಪ್ರದಾ
ಚತುಷ್ಕೋ ಭದ್ರ ವಿಸ್ತಾರಾ ಏಕೋ ಭಾಗಶ್ಚ ನಿರ್ಗಮಃ

ಸಭಾ ರಚನೆಯಲ್ಲಿ “ನಂದಾ” ಎಂಬ ಪ್ರಭೇದವು ೨೪ ಸ್ತಂಭಗಳಿಂದ ಕೂಡಿದ್ದು, ಮಧ್ಯದಲ್ಲಿ ಚತುಷ್ಕ, ಸುತ್ತ ಅಲಿಂದ ರಚನೆ ಇದೆ. ಅಲಿಂದ ರಚನೆಯ ನಂತರ ಒಂದೆಡೆ ಭದ್ರ ಭಾಗದಲ್ಲಿ ಪ್ರಾಗೀವವನ್ನು ರಚಿಸಬಹುದು. ಸಮರಾಂಗಣ ಸೂತ್ರಧಾರ ಗ್ರಂಥವು ನಾಲ್ಕು ದಿಕ್ಕಿನಲ್ಲಿಯೂ ಪ್ರಾಗೀವ ರಚನೆಗೆ ಅವಕಾಶ ಕಲ್ಪಿಸಿದೆ (ಅಗ್ರವಾಲಾ : ೧೯೬೬: ೧೫೩).

ಪ್ರಾಗ್ರೀವಾಖ್ಯಾ ತೃತೀಯಶ್ಚ ಬಹಿಃ ಕ್ಷೇತ್ರಾ ಚತುರ್ದಿಶಾ

ನಂದಾ ರಚನೆಯ ಮುಂದಿನ ಹಂತವು ೩೬ ಸ್ತಂಭಗಳುಳ್ಳದ್ದು. ಮಧ್ಯೆ ಚತುಷ್ಕ, ಸುತ್ತ ಎರಡು ಹಂತದ ಅಲಿಂದ ರಚನೆ, ಮುಂಭಾಗದಲ್ಲಿ ಪ್ರಾಗೀವ.

ಸ್ತಂಭಾನ್ ಷಟ್‌ತ್ರಿಂಶತ್ ಏತಾಸು ಪಂಚಸ್ವಮಪಿ ನಿವೇಶಯೇತ್
ಸ್ತಂಭಾನ್ ಪ್ರಾಗೀವ ಸಂಬದ್ಧಾನ್ ಪೃಥಗೇಭ್ಯೋ ವಿನಿರ್ದಿಶೇತ್

ಮೇಲ್ಕಂಡ ಶ್ಲೋಕಗಳನ್ನಾಧರಿಸಿ, ಐಹೊಳೆಯ ಲಾಡ್‌ಖಾನ್ ದೇವಾಲಯವನ್ನು “ಸಭಾ” ರಚನೆಯೆಂದು ಖಚಿತವಾಗಿ ಗುರುತಿಸಬಹುದು. ಈ ರಚನೆಯ ಹೊರಭಾಗದಲ್ಲಿ ಕ್ರಿ.ಶ. ಎಂಟನೆಯ ಶತಮಾನದ ಶಾಸನಗಳಿದ್ದು, ಈ ಶಾಸನಗಳು ಐಹೊಳೆಯ ಐನೂರು ಮಹಾ ಜನರನ್ನು ಬಣ್ಣಿಸಿದೆ. ಈ ಮಹಾಜನರು ಈ ಸ್ಥಳದಲ್ಲಿ ಸಭೆ ನಡೆಸುತ್ತಿದ್ದರೆಂದು ತಿಳಿಯಲು ಅವಕಾಶವಿದೆ (ಅಣ್ಣಿಗೇರಿ: ೧೯೭೪ : ೧೪೬-೧೪೭). ಶಾಲಾ ರಚನೆಯೊಂದಿಗೆ ಉದಯಿಸಿದ ಗರ್ಭಗೃಹದ ಪರಿಕಲ್ಪನೆಯನ್ನು ಗಮನಿಸಬಹುದು. ಸಾಮಾನ್ಯವಾಗಿ ಮೂಲಬೇರವನ್ನೊಳಗೊಂಡ ದೇವಾಲಯದ ಭಾಗಕ್ಕೆ ಗರ್ಭಗೃಹವೆನ್ನುತ್ತಾರೆ. ಶಾಲಾ ರಚನೆಯ ಮಧ್ಯಭಾಗವು ಮೇಲ್ಛಾವಣಿಯನ್ನು ಹೊಂದಿದ್ದು ಗರ್ಭಗೃಹವೆಂದು ಗುರುತಿಸಲಾಗುತ್ತದೆ (ಅಗ್ರವಾಲಾ ೧೯೬೬ : ೯೦).

ಶಾಲಾನಾಂ ಯತ್ ಪುನರ್ಮಧ್ಯಂ ವಾಪೀ ಪುಷ್ಕರಣೀ ಸಾ
ಸಚ್ಛನ್ನಾಪಿ ಯಸ್ಯಸ್ಯಾತ್ ತದ್ ಗರ್ಭಗೃಹಮುಚ್ಯತೇ

ಸುತ್ತ ಶಾಲಾ ರಚನೆಯಿದ್ದು, ಬಾವಿ, ಪುಷ್ಕರಣಿಗಳನ್ನು ಮಧ್ಯದ ಆವರಣದಲ್ಲಿ ಕಾಣುತ್ತೇವೆ. ಸುತ್ತ ಶಾಲಾ ಇದ್ದು, ಮಧ್ಯದ ಮೇಲ್ಭಾಗವು ಛಾವಣಿಯನ್ನು ಹೊಂದಿದ್ದರೆ ಗರ್ಭಗೃಹ ಎನ್ನಲಾಗುತ್ತದೆ. ಲಾಡ್‌ಖಾನ್ ದೇವಾಲಯದ ಮಧ್ಯದಲ್ಲಿರುವ ಚತುಷ್ಕದ ಸ್ತಂಭಗಳಿಗೆ ಭಿತ್ತಿ ಫಲಕಗಳನ್ನು ಅಳವಡಿಸಿ ಗರ್ಭಗೃಹವಾಗಿ ಮಾರ್ಪಡಿಸಬಹುದಿತ್ತು. ಆದರೆ ತದನಂತರದ ಕಾಲದಲ್ಲಿ ಶಿವಾಲಯವಾಗಿ ಮಾರ್ಪಡಿಸಿದವರು ಹಿಂಬದಿಯ ಗೋಡೆಯೂ ಸೇರಿದಂತೆ ಅಲಿಂದ ರಚನೆಗೆ ಭಿತ್ತಿಯನ್ನು ಅಳವಡಿಸಿ ಗರ್ಭಗೃಹವನ್ನು ನಿರ್ಮಿಸಿದರು.

ವಿಶ್ವಕರ್ಮ ಪ್ರಕಾಶ ಗ್ರಂಥವು ದ್ವಾರವಿಲ್ಲದ ಶಾಲಾರಚನೆಯನ್ನು ನಿಷೇಧಿಸಿದೆ (ಶ್ರೀ ಗೊಂಡೇಕರ್ : ೧೯೩೯ : ೬).

ಯತ್ರಾಲಿಂದಂ ತತ್ರ ಶಾಲಾ ದ್ವಾರಂ ಶೋಭನಂ
ಶಾಲಾಲಿಂದ ದ್ವಾರಹೀನಂ ಕಾರಯೇತ್ ಬುಧಃ

ಶಾಲಾ ರಚನೆಯಲ್ಲಿ ಶುದ್ಧ, ಸಂಬದ್ಧ, ಸಂಯುತಾ ಮತ್ತು ಸಂಭ್ರಮಾ ಎಂದು ನಾಲ್ಕು ಪ್ರಭೇದಗಳು. ಶುದ್ಧ ಎಂದಲ್ಲಿ ಶಾಲಾ ಅಥವಾ ಚತುಷ್ಕ ಮಾತ್ರ (ಮಂಕಡ್ : ೧೯೫೦ : ೨೫೨).

ಸರ್ವಶ್ಚಾಲಿಂದ ರಹಿತಾಃ ಶುದ್ಧಾನಾಮ್ನಾ ಸಮೀರಿತಾ

ಇದನ್ನು ಆಲಿಂದವಿಲ್ಲದ್ದು ಎಂದು ಅರ್ಥೈಸಬಹುದು. ಕೇವಲ ನಾಲ್ಕು ಸ್ತಂಭಗಳ ಚತುಷ್ಕ ರಚನೆ ಶುದ್ಧ ಪ್ರಭೇದವೇ ಆಗಿದೆ. ಇದಕ್ಕೆ ಧ್ರುವ ಎಂಬ ಹೆಸರುಂಟು. ಶುದ್ಧ ಎಂದಲ್ಲಿ ಕೇವಲ ಚತುಷ್ಕ ಮಾತ್ರ. ಒಂದೇ ದಿಕ್ಕಿನ ಆಲಿಂದ ರಚನೆಯನ್ನೂ ದಿಕ್ಕಿಗೆ ತಕ್ಕಂತೆ ಪ್ರಭೇದಗಳ ಹೆಸರುಗಳನ್ನೂ ಕಾಣಬಹುದು (ಶ್ರೀ ಗೊಂಡೇಕರ್ : ೧೯೩೯ : ೬).

ಯಾತ್ರಾಲಿಂದಂ ತತ್ರ ಶಾಲಾ ದ್ವಾರಂ ಶೋಭನಂ
ಶಾಲಾಲಿಂದ ದ್ವಾರಹೀನಂ ಕಾರಯೇತ್ ಬುಧಃ

ಶಾಲಾ ರಚನೆಯಲ್ಲಿ ಶುದ್ಧ, ಸಂಬದ್ಧ, ಸಂಯುತಾ ಮತ್ತು ಸಂಭ್ರಮಾ ಎಂದು ನಾಲ್ಕು ಪ್ರಭೇದಗಳು. ಶುದ್ಧ ಎಂದಲ್ಲಿ ಶಾಲಾ ಅಥವಾ ಚತುಷ್ಕ ಮಾತ್ರ (ಮಂಕಡ್ :೧೯೫೦ : ೨೫೨).

ಸರ್ವಶ್ಚಾಲಿಂದ ರಹಿತಾಃ ಶುದ್ಧಾನಾಮ್ನಾ ಸಮೀರಿತಾ

ಇದನ್ನು ಆಲಿಂದವಿಲ್ಲದ್ದು ಎಂದು ಅರ್ಥೈಸಬಹುದು. ಕೇವಲ ನಾಲ್ಕು ಸ್ತಂಭಗಳ ಚತುಷ್ಕ ರಚನೆ ಶುದ್ಧ ಪ್ರಭೇದವೇ ಆಗಿದೆ. ಇದಕ್ಕೆ ಧ್ರುವ ಎಂಬ ಹೆಸರುಂಟು. ಶುದ್ಧ ಎಂದಲ್ಲಿ ಕೇವಲ ಚತುಷ್ಕ ಮಾತ್ರ. ಒಂದೇ ದಿಕ್ಕಿನ ಆಲಿಂದ ರಚನೆಯನ್ನೂ ದಿಕ್ಕಿಗೆ ತಕ್ಕಂತೆ ಪ್ರಭೇದಗಳ ಹೆಸರುಗಳನ್ನೂ ಕಾಣಬಹುದು (ಶ್ರೀ ಗೊಂಡೇಕರ್: ೧೯೩೯ : ೬).

ಧ್ರುವಂ ಹೀನಮಾಲಿಂದೇನ ಪೂರ್ವಾಲಿಂದಂ ತು ಧಾನ್ಯಕಂ
ಜಯಂ ಸ್ಯಾತ್ ದಕ್ಷಿಣಾಲಿಂದಂ ಪಶ್ಚಾದಲಿಂದಂ ಖರಂ ಭವೇತ್
ದುರ್ಮುಖಂ ಚೋತ್ತರಾಲಿಂದಮೇಕಾಲಿಂದಂ ಚತುರ್ಗೃಹಂ

ಚತುಷ್ಕದೊಡನೆ ಏಕಾಲಿಂದ ರಚನೆಯನ್ನು, ಗರ್ಭಗೃಹ ಮತ್ತು ಅದಕ್ಕೆ ಹೊಂದಿಕೊಂಡ ಮುಖಮಂಟಪ ಅಥವಾ ಅರ್ಧಮಂಟಪ ಎನ್ನಬಹುದು. ಐಹೊಳೆ, ಬಾದಾಮಿ, ಪಟ್ಟದಕಲ್ಲುಗಳಲ್ಲಿ ಇಂತಹ ಹಲವಾರು ರಚನೆಗಳಿವೆ. ಐಹೊಳೆಯ ರಾವಳಫಡಿ ಗುಹಾಲಯದ ಸ್ವಲ್ಪ ದೂರದಲ್ಲಿ ಎರಡು ಏಕಾಲಿಂದ ರಚನೆಗಳಿವೆ. ಒಂದು ಶಿಖರವುಳ್ಳದ್ದು, ಮತ್ತೊಂದು ಶಿಖರವಿಲ್ಲದ್ದು. ಶಿಖರವಿರುವ ರಚನೆಯು ಅತಿ ಒರಟಾದ, ಕಲ್ಲುಗಳನ್ನು ಜೋಡಿಸಿ ಇಟ್ಟಂತಿರುವ, ಶಿಖರವನ್ನು ಹೊಂದಿದೆ. ಚತುಷ್ಕಮೂಲದ ರಚನೆಗಾಗಿ ಮಹಾಕೂಟದ ಪುಷ್ಕರಿಣಿಯ ಮಧ್ಯದಲ್ಲಿರುವ ರಚನೆಯನ್ನು ಗಮನಿಸಬಹುದು. ಇವಲ್ಲದೆ ಮಹಾಕೂಟದಲ್ಲಿ ಸಂಪೂರ್ಣ ಬೆಳವಣಿಗೆಯನ್ನು ಹೊಂದಿದ ಶಿಖರವುಳ್ಳ ಹಲವು ಏಕಾಲಿಂದ ರಚನೆಗಳನ್ನು ಕಾಣಬಹುದು. ಏಕಾಲಿಂದ ರಚನೆಯ ನಂತರ ಸುತ್ತ ಶಾಲಾ ರಚನೆಯುಳ್ಳದ್ದು ಸಂಯುತ. ಒಂಬತ್ತು ಅಂಕಣಗಳ ಮಧ್ಯೆ ಚತುಷ್ಕ, ಸುತ್ತ ಅಲಿಂದ ರಚನೆ. ಮಧ್ಯದ ಚತುಷ್ಕವನ್ನುಳಿದು ಸುತ್ತ ಇರುವ ಎಂಟು ಅಂಕಣಗಳ ಅಲಿಂದ ರಚನೆಯನ್ನು ಶಾಲಾ ಎಂದೂ ಗುರುತಿಸಬಹುದು (ಮಂಕಡ್ : ೧೯೫೦ :೧೯೩).

ಶಿಖರವಿಲ್ಲದ ಸಾಧಾರಣ ರಚನೆ, ಐಹೊಳೆ

ಶಿಖರವಿಲ್ಲದ ಸಾಧಾರಣ ರಚನೆ, ಐಹೊಳೆ

ಒರಟಾದ ಆರಂಭಿಕ ಶಿಖರ ರಚನೆ, ಐಹೊಳೆ

ಒರಟಾದ ಆರಂಭಿಕ ಶಿಖರ ರಚನೆ, ಐಹೊಳೆ

ಚತುರಶ್ರಸಮಂ ಕ್ಷೇತ್ರಂ ವಿಭಕ್ತಂ ನವಾಂಗಕೈಃ
ಕೇವಲಾ ನವಶಾಲಾಶ್ಚ ದಿವ್ಯಾನಾಮಪಿ ಸುಂದರೀ

ಸಭಾ ಅಥವಾ ಶಾಲಾ ರಚನೆಗಳಲ್ಲಿ ಚತುಷ್ಕದ ಸುತ್ತ ಎರಡು ಮೂರು ಹಂತದ ಅಲಿಂದ ರಚನೆಯಿದ್ದು, ಚತುಷ್ಕವು ಭಿತ್ತಿಯನ್ನೊಳಗೊಂಡಿದ್ದು ನಂತರದ ಅಲಿಂದ ರಚನೆಯು ಪ್ರದಕ್ಷಿಣಾ ಪಥವೆನ್ನಿಸುತ್ತದೆ. ಇದನ್ನು ಮಧ್ಯಾಲಿಂದಾ ಪರಿಭ್ರಮಾ ಎಂದು ಗುರುತಿಸಲಾಗಿದೆ.

ಮಧ್ಯೆ ಗರ್ಭಗೃಹ, ಸುತ್ತ ಅಲಿಂದ, ಮುಂಭಾಗದಲ್ಲಿ ಮುಖಮಂಟಪ ಅಥವಾ ಪ್ರಾಗೀವ, ಇದನ್ನು ಏಕಶಾಲಾ ಎಂದು ಗಮನಿಸಬಹುದು. ದ್ವಿಶಾಲಾ ರಚನೆಯಲ್ಲಿ, ಮುಂಬದಿಯ ಮುಖಮಂಟಪದಂತೆ, ಹಿಂಬದಿಯಲ್ಲಿ ಚತುಷ್ಕವನ್ನು ಅಳವಡಿಸಿ, ಗರ್ಭಗೃಹವನ್ನು ಹಿಂದಕ್ಕೆ ವರ್ಗಾಯಿಸಲಾಯಿತು. ಇದರಿಂದ ಗರ್ಭಗೃಹದ ಮುಂದೆ ವಿಶಾಲವಾದ ಮಂಟಪಕ್ಕೆ ಅವಕಾಶ ಒದಗಿದ್ದು, ದೇವಾಲಯಗಳ ಸ್ವರೂಪ ಖಚಿತವಾಗಿ ರೂಪುಗೊಳ್ಳಲು ಸಹಾಯವಾಯಿತು.

ಈವರೆಗೆ ವಿವರಿಸಿದ ವಿವಿಧ ರಚನೆಗಳ ಶಾಲಾ ಮೂಲದಿಂದ ಉದ್ಭವಿಸಿವೆ. ದೇವಾಲಯಗಳ ಮುಂದಿನ ಬೆಳವಣಿಗೆಯನ್ನು ಊರ್ಧ್ವಕ್ರಮ, ತಿರ್ಯಕ್‌ಕ್ರಮ ಎಂದು ಗುರುತಿಸಲಾಗುತ್ತದೆ. ಈ ಪ್ರಕ್ರಿಯೆಯ ಆರಂಭದಲ್ಲಿ ಮಂಡಪವನ್ನು ತ್ರಿವರ್ಗ ಎಂದು ಗುರುತಿಸಲಾಗಿದೆ. ಈ ಪ್ರಕ್ರಿಯೆಯ ಆರಂಭದಲ್ಲಿ ಮಂಡಪವನ್ನು ತ್ರಿವರ್ಗ ಎಂದು ಗುರುತಿಸಲಾಗಿದೆ. ನಂತರ ಚತುರ್ವರ್ಗ, ಪಂಚವರ್ಗ, ಷಡ್ವರ್ಗ ಇತ್ಯಾದಿ ಹಂತಗಳೆನಿಸಿದೆ. ಮೊದಲಿಗೆ ಮಂಡಪದ ವಿವರಣೆಯನ್ನು ಗಮನಿಸಬೇಕು (ಭಟ್ : ೧೯೭೨ : ೧೫೩):

ಪಂಕ್ತಿತ್ರಯ ಸಮಾಯುಕ್ತಂ ಕಲಾಸ್ತಂಭ ಸಮನ್ವಿತಂ
ಅಧಿಷ್ಠಾನಾಂಘ್ರಿ ಮಂಚಾಖ್ಯಂ ವರ್ಗತ್ರಯ ಸಮನ್ವಿತಂ

ಅಧಿಷ್ಠಾನ, ಪಾದ, ಪ್ರಸ್ತರ ಇವೇ ಮಂಡಪದ ತ್ರಿವರ್ಗದ ಸ್ತರಗಳು. ಅಧಿಷ್ಠಾನವೆಂದಲ್ಲಿ ಪೀಠ ; ಪಾದವು ಸ್ತಂಭ ರಚನೆಯಾಗಿದೆ. ಪ್ರಸ್ತರವು ವ್ಯವಸ್ಥಿತ ಮೇಲ್ಛಾವಣಿ, ಇದನ್ನು ಮಂಚ ಎಂದೂ ಪರಿಚಯಿಸಲಾಗಿದೆ. ಮಂಡಪದ ವ್ಯಾಪ್ತಿಗೆ ಬಂದಾಗ ಸ್ತಂಭಗಳು ಅಲಂಕಾರವುಳ್ಳದ್ದು ಎನ್ನುವುದು ಸ್ಪಷ್ಟ. ಕಲಾಸ್ತಂಭ ಸಮನ್ವಿತಂ ಇದರ ಅರ್ಥವೇ ಅದು. ಅಂಶುಮದ್‌ಕಾಶ್ಯಪ ಗ್ರಂಥವು ಉಪಪೀಠಮಧಿಷ್ಠಾನಂ ಚರಣಂ ಪ್ರಸ್ತರಂ ತಥಾ ಎಂದು ಮಂಟಪವನ್ನು ಪರಿಚಯಿಸಿದೆ. ತ್ರಿವರ್ಗ ಅಥವಾ ಷಡ್ವರ್ಗಗಳ ಎಣಿಕೆಯಲ್ಲಿ ಉಪಪೀಠಕ್ಕೆ ಸ್ಥಾನವಿಲ್ಲ ಎಂದು ಗಮನಿಸಬೇಕು. ಕಾಮಿಕಾಗಮ ಗ್ರಂಥದಲ್ಲಿ ಪ್ರಪಾನಂತರ ಮಂಡಪ, ತದನಂತರ ಹರ್ಮ್ಯಾದಿಗಳ ಉಲ್ಲೇಖವಿದೆ (ಶಿವಾಚಾರ್ಯ : ೧೯೭೫ : ೧೩೪).

ಆಚ್ಛಾದಿತಾ ಪ್ರಪಾ ನಾಮ ಪ್ರಸ್ತರಂ ಚಾತ್ರ ಮಂಡಪಂ
ಪ್ರಭೂತ ಶಿಖರೋಪೇತಂ ಹರ್ಮ್ಯಂ ನಾಮ್ನಾ ಪ್ರಕೀರ್ತಿತಂ

ಮಂಡಪದ ನಂತರ ಶಿಖರ ಕ್ರೀಯೆ ಆರಂಭವಾಗುತ್ತದೆ. ಮೊದಲ ಹಂತದಲ್ಲಿ ಲುಪಾಕಾರದ ದೇವಾಲಯಗಳನ್ನು ಚತುರ್ವರ್ಗ ಎಂದು ವರ್ಗೀಕರಿಸಲಾಗಿದೆ. ಕಾಶ್ಯಪಶಿಲ್ಪ ಗ್ರಂಥದಲ್ಲಿ ಚತುರ್ವರ್ಗಗಳ ವಿವರ ಕೆಳಕಂಡಂತಿದೆ (ಕೃಷ್ಣರಾಯ ಮತ್ತು ಆಪ್ಟೆ : ೧೯೨೬ : ೬೨)

ಉತ್ತುಂಗೇ ಸಪ್ತಭಾಗೇ ತು ವ್ಯೋಮಾಂಶಂ ಧರಾತಲಂ
ಪಕ್ಷಾಂಶಂ ಪಾದತುಂಗಂ ತು ಶಿಖರೋಚ್ಚಂ ಗುಣಾಂಶಕಂ
ಸ್ತೂಪ್ಯುತ್ಸೇಧಂ ತಥೈಕಾಂಶಮೇತತ್ ಸ್ಯಾತ್ ಸರ್ವಕಾಮಿಕಂ

ಷಡ್ವರ್ಗಗಳ ಸರ್ವಕಾಮಿಕ ರಚನೆಗೆ ಬದಲಾಗಿ ಇಲ್ಲಿ ಚತುರ್ವರ್ಗಗಳ ರಚನೆಯನ್ನು ಗುರುತಿಸಲಾಗಿದೆ. ಅಧಿಷ್ಠಾನ, ಪಾದ, ಶಿಖರ ಮತ್ತು ಸ್ತೂಪಿ ಇವೇ ನಾಲ್ಕು ವರ್ಗಗಳು. ವಿಮಾನಾರ್ಚನಕಲ್ಪ ಗ್ರಂಥವೂ ಚತುರ್ವರ್ಗ ರಚನೆಯನ್ನು ಸೂಚಿಸಿದೆ. ಈ ರಚನೆಗಳು ಕೇರಳ, ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ರೂಪುಗೊಂಡಿದೆ. ಅಜಿತಾಗಮದ ಪ್ರಕಾರ ಸಭಾರಚನೆಯು ಪಂಚವರ್ಗವುಳ್ಳದ್ದು (ಭಟ್ : ೧೯೬೪ : ೧೦೫). ಆದರೆ ಪಂಚವರ್ಗಗಳ ವಿವರಣೆ ಅಲಭ್ಯ.

ಸಭಾ ನಾಮತುಯದ್ಧಾಮಾ ಪಂಚವರ್ಗಯುತಂ ಭವೇತ್

ಪೂರ್ಣಪ್ರಮಾಣದ ದೇವಾಲಯಗಳನ್ನು ಷಡ್ವರ್ಗ ದೇವಾಲಯಗಳೆಂದು ಹೆಸರಿಲಾಗಿದೆ. ಅಧಿಷ್ಠಾನ, ಪಾದ, ಪ್ರಸ್ತರ, ಕಂಠ, ಶಿಖರ ಮತ್ತು ಸ್ತೂಪಿ ಇವೇ ಆರು ವರ್ಗಗಳು. ಷಡ್ವರ್ಗದ ವಿವರಣೆಯನ್ನು ಸಾಮಾನ್ಯವಾಗಿ ದಾಕ್ಷಿಣಾತ್ಯ ಸಂಪ್ರದಾಯದ ಎಲ್ಲಾ ಗ್ರಂಥಗಳೂ ನೀಡಿವೆ.

ಅಧಿಷ್ಠಾನ ಪಾದ ಪ್ರಸ್ತರ ಗ್ರೀವ ಶಿಖರ ಸ್ತೂಪಿಕಾಶ್ಚೇತಿ
ಷಡ್ವರ್ಗಯುಕ್ ಏಕಭೂಮಿಃ

ಏಕತಲ ಅಥವಾ ಏಕಭೂಮಿ ರಚನೆಯು ಷಡ್ವರ್ಗವೆನಿಸಿದರೆ, ದ್ವಿತಲ, ತ್ರಿತಲ ರಚನೆಗಳು ಎಂಟು, ಹತ್ತು ವರ್ಗಗಗಳನ್ನು ಹೊಂದಿದೆ. ಇಲ್ಲಿ ಕಂಠ ಹಾಗೂ ಪ್ರಸ್ತರಗಳು ಪ್ರತಿಭೂಮಿಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ದೇವಾಲಯಗಳಲ್ಲಿ ಒಂದರಿಂದ ಹನ್ನೆರಡರವರೆಗೆ ಅಥವಾ ಹದಿನಾರರವರೆಗೆ ತಲ ಅಥವಾ ಭೂಮಿ ರಚನೆಯನ್ನು ಶಾಸ್ತ್ರಗ್ರಂಥಗಳು ವಿಧಿಸಿವೆ. ದಾಕ್ಷಿಣಾತ್ಯ ಹಾಗೂ ಔತ್ತರೇಯ ಸಂಪ್ರದಾಯದ ಸಂಲಗ್ನದಿಂದ ವಿಕಸನಗೊಂಡಿದ್ದು ಔತ್ತರೇಯ ದ್ರಾವಿಡ ಶೈಲಿ. ಈ ಶೈಲಿಯ ರಚನೆಗಳು ಚಾಲುಕ್ಯರ ಕಾಲದಲ್ಲಿ ಹಾಗೂ ಹೊಯ್ಸಳರ ಕಾಲದಲ್ಲಿ ವಿಪುಲವಾಗಿವೆ. ಈ ದೇವಾಲಯಗಳನ್ನು ಸಪ್ತವರ್ಗ ಎಂದು ಗುರುತಿಸಬಹುದು. ಪೀಠ, ಜಂಘಾ, ಛಾದ್ಯ, ಭೂಮಿ, ವೇದಿ, ಘಂಟಾ, ಕಲಶ ಇವೇ ಸಪ್ತವರ್ಗಗಳು. ಇವು ಅಧ್ಯಯನ ದೃಷ್ಟಿಯಿಂದ ವರ್ಗೀಕರಿಸಿಕೊಂಡ ಸಪ್ತವರ್ಗಗಳೇ ಹೊರತು ವಾಸ್ತುಗ್ರಂಥಗಳಲ್ಲಿಲ್ಲ.

ಔತ್ತರೇಯ ಸಂಪ್ರದಾಯದ ಕಳಿಂಗ ಶೈಲಿಯ ವಿವರಗಳು ಅಪುರೂಪ ಎನ್ನುವಂತೆ, ದಾಕ್ಷಿಣಾತ್ಯ ಸಂಪ್ರದಾಯದ ಗ್ರಂಥವಾದ ಕಾಮಿಕಾಗಮದಲ್ಲಿದೆ. ಇದನ್ನು ಅಷ್ಟವರ್ಗ ಎಂದು ಗುರುತಿಸಲು ಸಾಧ್ಯವಿದೆ. ಮಸೂರಕ, ಜಂಘಾ, ಕಪೋತ, ಶಿಖರ, ಗಲ, ಆಮಲಸಾರ, ಕುಂಭ ಮತ್ತು ಶೂಲಗಳೇ ಅಷ್ಟವರ್ಗಗಳು. ಸಂಪ್ರದಾಯಗಳು ಬದಲಾದಾಗ ಪಾರಿಭಾಷಿಕ ಪದಗಳೂ ಬದಲಾಗುತ್ತವೆ ಎಂದು ಗಮನಿಸಬಹುದು (ಶಿವಾಚಾರ್ಯ : ೧೯೭೫ : ೧೨೫).

ಮೂಲಂ ಮಸೂರಕಂ ಜಂಘಾ ಕಪೋತಂ ಶಿಖರಂ ಗಲಂ
ಊರ್ಧ್ವೇ ಚಾಮಲಸಾರೇಣಾಷ್ಟವರ್ಗಃಕುಂಭ ಶೂಲಯುಕ್

ದೇವಾಲಯಗಳ ತಿರ್ಯಕ್‌ಕ್ರಮ ರಚನೆಯನ್ನು ಕೆಳಕಂಡಂತೆ ಸ್ಥೂಲವಾಗಿ ಪರಿಚಯಿಸಬಹುದು. ಬಿಂಡಿಗನವಲೆಯ ವಿಜಯನಗರ ಕಾಲದ ಶಾಸನವೊಂದು ಗರ್ಭಗೃಹ, ಸುಖನಿವಾಸ, ರಂಗಮಂಟಪ ಮುಂತಾದವನ್ನು ಹೆಸರಿಸಿವೆ. ಇವು ದೇವಾಲಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಭಾಗಗಳು. ಕಾಶ್ಯಪಶಿಲ್ಪ ಗ್ರಂಥವು ಗರ್ಭಗೃಹದ ನಂತರ ಕಂಡುಬರುವ ನಾಲ್ಕು ವಿಧವಾದ ಮಂಟಪ ರಚನೆಗಳನ್ನು ವಿವರಿಸಿದೆ (ಕೃಷ್ಣರಾಯ ಮತ್ತು ಆಪ್ಟೆ: ೧೯೨೬ : ೧೧೭).

ಮುಖಮಂಡಪಮಾದೌ ತು ಪ್ರತಿಮಾಮಂಡಪಂ ತತಃ
ಸ್ನಾಪನಾರ್ಥಂ ತೃತೀಯಂ ನೃತ್ಯಾರ್ಥಂ ಚತುಷ್ಟಯಂ

ಗರ್ಭಗೃಹದ ಮುಂದೆ, ಅರ್ಧಮಂಟಪ, ಅಂತರಾಳ, ಸುಖನಾಸಿ ಅಥವಾ ಸುಖನಿವಾಸ ಎಂಬ ರಚನೆಯಿದ್ದು ನಂತರ ವಿಶಾಲವಾದ ಮಂಡಪವಿರುತ್ತದೆ. ಔತ್ತರೇಯ ಗ್ರಂಥಗಳಲ್ಲಿ ಅರ್ಧಮಂಟಪಕ್ಕೆ ಪರ್ಯಾಯವಾಗಿ ಕೋಲಿ, ಕೋಲಿಕಾ ಅಥವಾ ಅಂತರಾಲ ಎಂದು ಗುರುತಿಸುತ್ತಾರೆ. ಅಂತರಾಳದ ಮುಂದೆ ಪ್ರತಿಮಾ ಮಂಟಪವಿದೆ. ಇದನ್ನು ನವರಂಗವೆನ್ನುವ ವಾಡಿಕೆ ದಾಕ್ಷಿಣಾತ್ಯ ಸಂಪ್ರದಾಯದಲ್ಲಿದೆ. ಒಂಬತ್ತು ಅಂಕಣಗಳಿಂದ ಕೂಡಿದ್ದು ನವರಂಗ ನವಾಂಗೈಃ ನವರಂಗಂ“. ಬಿಡಿ ಬಿಡಿಯಾದ ಕೆಲವು ಪ್ರತಿಮೆಗಳನ್ನು ಇದರಲ್ಲಿ ಕಾಣಬಹುದು. ಅದಕ್ಕಾಗಿ ಪ್ರತಿಮಾ ಮಂಟಪ ಎಂಬ ಹೆಸರಿದೆ.

ಮೇಲ್ಕಟ್ಟಡ ಆರಂಭಿಕ ಹಂತ, ಐಹೊಳೆ

ಮೇಲ್ಕಟ್ಟಡ ಆರಂಭಿಕ ಹಂತ, ಐಹೊಳೆ

ಮೇಲ್ಕಟ್ಟಡ ಆರಂಭಿಕ ಹಂತ, ಸೂರ್ಯಗುಡಿ ಐಹೊಳೆ

ಮೇಲ್ಕಟ್ಟಡ ಆರಂಭಿಕ ಹಂತ, ಸೂರ್ಯಗುಡಿ ಐಹೊಳೆ

ಔತ್ತರೇಯ ಸಂಪ್ರದಾಯದ ಆರಂಭ ಕಾಲದಲ್ಲಿ ಇವು ತೆರೆದ ಕಕ್ಷಾಸನವುಳ್ಳ ಮಂಟಪಗಳು. ದೇವಾಲಯಗಳನ್ನು ವಿಸ್ತರಿಸಿದಾಗ, ಕಕ್ಷಾಸನದ ಮೇಲೆ ಭಿತ್ತಿ ಅಥವಾ ಜಾಲಂದ್ರಗಳನ್ನು ಅಳವಡಿಸಿದ್ದು ಗೂಢಮಂಟಪವೆಂದು ಗುರುತಿಸಲಾಯಿತು. ಈ ಮಂಟಪದ ಎರಡೂ ಕಡೆ ಅಥವಾ ಮುಂಭಾಗದಲ್ಲಿ ಮುಖಮಂಟಪಗಳನ್ನು ಜೋಡಿಸಲಾಗಿದೆ. ನವರಂಗದ ನಂತರ ಶಾಸ್ತ್ರರೀತ್ಯಾ ಸ್ನಪನ ಮಂಟಪಕ್ಕೆ ಅವಕಾಶವಿದ್ದರೂ ದೇವಾಲಯಗಳಲ್ಲಿ ಕಾಣಲಾಗದು. ನವರಂಗದ ನಂತರ, ಹಲವೆಡೆ ನೃತ್ಯ ಶಾಲಾ ಅಥವಾ ನೃತ್ಯಮಂಟಪವಿದೆ. ಔತ್ತರೇಯ ದ್ರಾವಿಡ ಶೈಲಿಯ ದೇವಾಲಯಗಳಲ್ಲಿ ನೃತ್ಯಮಂಟಪದಲ್ಲಿ ಕಕ್ಷಾಸನದೊಂದಿಗೆ ರಚಿಸಲಾಗಿದೆ. ಇವು ಕರ್ನಾಟಕದ ದೇವಾಲಯಗಳಲ್ಲಿ ಪ್ರಮುಖವಾಗಿ ಕಾಣಲ್ಪಡುವ ಭಾಗಗಳು. ಈ ಭಾಗಗಳನ್ನೊಳಗೊಂಡಂತೆ ದೇವಾಲಯದ ಸುತ್ತ ಪ್ರಾಕಾರವಿದೆ. ಬಲಿಪೀಠ, ಧ್ವಜಸ್ತಂಭ, ದೀಪಸ್ತಂಭ, ಪುಷ್ಕರಿಣಿ ಮುಂತಾದವನ್ನು ಪ್ರಾಕಾರದ ಆವರಣದಲ್ಲಿ ಕಾಣಬಹುದು. ಪ್ರಾಕಾರವೆಂದರೆ ಪ್ರಾಕಾರ ಭಿತ್ತಿಯೇ. ಇದಕ್ಕೆ “ಸಾಲಾ” ಅಥವಾ ಪೌಳಿ ಎಂದೂ ಹೆಸರು. ಸಾಲಾ ರಚನೆಯೊಂದಿಗೆ ಒಳಭಾಗದಲ್ಲಿ “ಆವೃತ ಮಂಪಟ”ಗಳಿವೆ. ಇವನ್ನು ಸುತ್ತಾಲಯ ಅಥವಾ ಪಟ್ಟಸಾಲೆ ಎಂದು ಶಾಸನಗಳು ಗುರುತಿಸಿವೆ. ಯಾಗಶಾಲೆ, ಪಾಕಶಾಲೆ, ಭೋಗಮಂಟಪಗಳನ್ನೂ ಈ ಆವೃತ ಮಂಟಪಗಳೊಂದಿಗೆ ಕಾಣಬಹುದು. ಐದರವರೆಗೆ ಪ್ರಾಕಾರಗಳನ್ನು ರಚಿಸಲು ಶಾಸ್ತ್ರಾವಕಾಶವುಂಟು. ದೇವಾಲಯ ಸಂಕೀರ್ಣ ದೊಡ್ಡದಾದರೆ ಪ್ರಾಕಾರಕ್ಕೆ ಹೊಂದಿಕೊಂಡಂತೆ ನಾಲ್ಕು ದಿಕ್ಕಿಗೆ ನಾಲ್ಕು ಗೋಪುರಗಳ ರಚನೆ ಇದೆ. ಸಾಮಾನ್ಯವಾಗಿ ಪೂರ್ವ ದಿಕ್ಕಿನಲ್ಲಿ ಅಥವಾ ದಕ್ಷಿಣದಲ್ಲಿ ಗೋಪುರಗಳುಂಟು. ಗೋಪುರ ಎಂದಲ್ಲಿ ಪ್ರವೇಶದ್ವಾರ. ಪುರದ್ವಾರಂತು ಗೋಪುರಂ” ಇದು ಶಾಸ್ತ್ರೋಕ್ತಿ. ಪುರ ಪ್ರವೇಶಕ್ಕೆ ರಚನೆಗೊಂಡ ಗೋಪುರ, ದೇವಾಲಯಗಳಿಗೂ ವಿಸ್ತರಿಸಿತು. ಗೋಪುರಕ್ಕೆ ಮೇಲ್ಕಟ್ಟದ ಇರಬೇಕೆಂಬ ನಿಯಮವೇನೂ ಇಲ್ಲ. ಅಲಂಕಾರಾರ್ಥವಾಗಿ ತಲರಚನೆಯು ಗೋಪುರದ ಮೇಲೆ ರಚನೆಗೊಳ್ಳುವುದು ತದನಂತರ ಕಾಲದಲ್ಲಿ ಮೇಲ್ಕಟ್ಟಡ ರಚನೆ ಇಲ್ಲ. ಉದಾಹರಣೆಯಾಗಿ ಲಕ್ಷ್ಮೇಶ್ವರ, ದೊಡ್ಡಗದ್ದವಳ್ಳಿ, ಬಸ್ರಾಳು, ಸೋಮನಾಥಪುರಗಳಲ್ಲಿರುವ ಪ್ರವೇಶದ್ವಾರಗಳನ್ನು ಹೆಸರಿಸಬಹುದು. ಬೇಲೂರಿನಲ್ಲಿ ಪೂರ್ವದಿಕ್ಕಿನಲ್ಲಿ ಎರಡು ದ್ವಾರಗಳಿವೆ. ಚನ್ನಕೇಶವನ ಎದುರಿಗಿರುವ ರಚನೆ ವಿಜಯನಗರ ಕಾಲದಲ್ಲಿ ಗುಂಡ ಚಮೂಪ ಮಾಡಿಸಿದ್ದು. ಆಗ್ನೇಹ ದಿಕ್ಕಿನಲ್ಲಿರುವ ಸಾಧಾರಣವಾದ ಆನೆಬಾಗಿಲು ಪ್ರಾಚೀನ ಕಾಲದ್ದು. ವಿಜಯನಗರದ ಅರಸರ ಕಾಲದಲ್ಲಿ ಗೋಪುರಗಳು ಆಕರ್ಷಣೀಯವಾಗಿ ಬೆಳೆದು ರಾಯಗೋಪುಗಳೆನಿಸಿದವು. ಇವುಗಳ ಪಾತ್ರ ಕರ್ನಾಟಕದಲ್ಲಿ ಗೌಣ ಎನಿಸಿದರೂ ಆಮೂಲಾಗ್ರವಾದ ಅಧ್ಯಯನದಲ್ಲಿ ಈ ವಿವರಗಳನ್ನು ಗಮನಿಸಬೇಕು.