ದೇವಾಲಯ ವಾಸ್ತುವಿನ ವ್ಯವಸ್ಥಿತ ಅಧ್ಯಯನದಲ್ಲಿ ವರ್ಗೀಕರಣಕ್ಕೆ ಮಹತ್ವದ ಸ್ಥಾನವಿದೆ. ಈ ದಿಸೆಯಲ್ಲಿ ಹಲವಾರು ಹಿರಿಯ ವಿದ್ವಾಂಸರು ಹೆಚ್ಚು ಶ್ರಮಿಸಿದ್ದಾರೆ. ಈ ಹಿರಿಯ ವಿದ್ವಾಂಸರ ವಿಧಿ-ವಿಧಾನಗಳನ್ನು ಪ್ರತ್ಯೇಕವಾಗಿ ಗಮನಿಸಿ, ಅವಶ್ಯಕವಾಗಿ ವಿಮರ್ಶಿಸಬೇಕಾಗಿದೆ. ಅಪರಾಜಿತಪೃಚ್ಛಾ ಗ್ರಂಥದ ಸಂಪಾದನಕಾರರು, ಗ್ರಂಥದ ಪ್ರಸ್ತಾವನೆಯಲ್ಲಿ ವಿದ್ವತ್‌ಪೂರ್ಣ ಸಂಪಾದನಕಾರರು, ಗ್ರಂಥದ ಪ್ರಸ್ತಾವನೆಯಲ್ಲಿ ವಿದ್ವತ್‌ಪೂರ್ಣ ಪ್ರಬಂಧವೊಂದನ್ನು ಮಂಡಿಸುತ್ತಾ ಭಾರತೀಯ ವಾಸ್ತುಶೈಲಿಗಳ ಬಗ್ಗೆ ಕೂಲಂಕುಶವಾಗಿ ಚರ್ಚಿಸಿದ್ದಾರೆ (ಮಕಂಡ್ : ೧೯೫೦ : ೩೫). ಇವರ ಬರಹದಿಂದ ವರ್ಗೀಕರಣ ವಿಧಾನದಲ್ಲಿರುವ ಕ್ಲಿಷ್ಟತೆಯನ್ನು ಗಮನಿಸಬಹುದಾಗಿದೆ. ಪ್ರತಿಯೊಂದು ಶಾಸ್ತ್ರಗಳ ಅಧ್ಯಯನದಲ್ಲಿಯೂ, ವರ್ಗೀಕರಣ ವಿಧಿ-ವಿಧಾನಗಳು ಮಾತೃಸ್ಥಾನದಲ್ಲಿದೆ ಎನ್ನಬಹುದು. ಈ ವಿಧಿ-ವಿಧಾನಗಳನ್ನು ವ್ಯವಸ್ಥಿತ ಕಕ್ಷೆಯಲ್ಲಿರಿಸಿ ಸರ್ವರಿಗೂ ಗ್ರಾಹ್ಯವಾಗುವಂತೆ ವಿವರಿಸುವುದೇ ವರ್ಗೀಕರಣಶಾಸ್ತ್ರ, ನಮ್ಮ ಹಲವಾರು ಸಂಶೋಧಕರ ಬರಹಗಳಲ್ಲಿ “ಇಕ್ಕಿ ಮೆಟ್ಟಿದವು ಮುನ್ನಿನ ಶಾಸ್ತ್ರಂಗಳನೆಲ್ಲ” ಎಂಬ ಕೆಚ್ಚಿದ್ದರೂ, ಸ್ವತಂತ್ರ ಹಾಗೂ ಸಮರ್ಥ ದೃಷ್ಟಿಯನ್ನೂ ಒದಗಿಸುವಲ್ಲಿ ಸೊರಗಿವೆ. ಆದರೂ ಈ ಹಿರಿಯ ವಿದ್ವಾಂಸರ ಲೇಖನಗಳು, ಮುಂದುವರೆದ ಇಂದಿನ ಶಾಸ್ತ್ರಾಧ್ಯಯನಕ್ಕೆ ಸೋಪಾನದಂತಿದೆ ಎನ್ನುವುದು ಸತ್ಯ.

11_382_DV-KUH

ಕಳೆದ ಎರಡು ಶತಮಾನಗಳಲ್ಲಿ ದೇವಾಲಯದ ಅಧ್ಯಯನವು ಹಲವು ಮಾನದಂಡಗಳನ್ನನುಸರಿಸಿ ಬೆಳೆಯಿತು. ದೇವಾಲಯ ರಚನೆಗೆ, ಆಯಾ ಕಾಲದ ಧಾರ್ಮಿಕ ಪರಿಸರ, ಅಂದಿನ ರಾಜ ಮಹಾರಾಜರದೃಷ್ಟಿ, ಕಲೋಪಾಸನೆ ಇತ್ಯಾದಿ ಅಂಶಗಳೂ ನೆರವಾದವು. ದೇವಾಲಯಗಳನ್ನು ಶೈವ, ವೈಷ್ಣವ, ಜೈನ ಮುಂತಾಗಿ ವಿಂಗಡಿಸಲಾಯಿತು. ಆಯಾ ರಾಜವಂಶಗಳ ಕಾಲದಲ್ಲಿ ನಿರ್ಮಾಣಗೊಂಡ ದೇವಾಲಯಗಳ ಲಕ್ಷಣಗಳನ್ನು ಪ್ರತ್ಯೇಕವಾಗಿ ಗಮನಿಸಿ, ಚಾಲುಕ್ಯ, ಹೊಯ್ಸಳ, ಗಂಗ, ಕದಂಬ ಶೈಲಿಗಳೆಂದು ಗುರುತಿಸಲಾಯಿತು. ಪಾಶ್ಚಿಮಾತ್ಯ ವಿದ್ವಾಂಸರು, ಈ ದೇವಾಲಯಗಳನ್ನು ಇಂಡೋಆರ್ಯನ್, ದ್ರವಿಡಿಯನ್, ಚಾಲುಕ್ಯನ್ ಮುಂತಾಗಿ ಗುರುತಿಸಿದರು. ಈ ರೀತಿಯ ವರ್ಗೀಕರಣ ವಿಧಾನ ಜನಪ್ರಿಯಗೊಂಡು ಇಂದಿಗೂ ಬಳಕೆಯಲ್ಲಿದೆ. ಇದಲ್ಲದೆ, ಪ್ರಾಚೀನವೆನ್ನುವ ಆಗಮಾದಿ ಗ್ರಂಥಗಳೂ ವಾಸ್ತುಗ್ರಂಥಗಳೂ, ದೇವಾಲಯಗಳ ಶೈಲಿ ಸಂಪ್ರದಾಯಗಳನ್ನು ಶಾಸ್ತ್ರರೀತ್ಯ ವಿವರಿಸಿವೆ. ಭಾರತದ ದೇವಾಲಯಗಳ ಅಧ್ಯಯನ ಕೈಗೊಂಡವರಲ್ಲಿ ಜೇಮ್ಸ್ ಫರ್ಗುಸನ್ ಪ್ರಮುಖರು. ಇವರಿಗೆ ಪ್ರಾಚೀನ ಗ್ರಂಥಗಳ ವಸ್ತುಸ್ಥಿತಿಯ ಅರಿವಿತ್ತೆನ್ನಬಹುದು. ಅಂದು ಅವನ್ನು ಅರ್ಥೈಸಲು ದೊರೆಯಬಹುದಾದ ನೆರವು, ಅಧಿಕೃತ ಮಾಹಿತಿ ಕೊಡಬಲ್ಲ ಪಂಡಿತರು ಇರಲಿಲ್ಲವೆಂದೇ ತಿಳಿಯಬಹುದು (ಫರ್ಗುಸನ್ : ೧೯೭೨ : ೪).

ಜೇಮ್ಲ್ ಫರ್ಗುಸನ್ ತನ್ನದೇ ಆದ ಚೌಕಟ್ಟನ್ನು ನಿರ್ಮಿಸಿಕೊಂಡು, ಅದರ ತಳಹದಿಯ ಮೇಲೆ ಅಧ್ಯಯನ ಮುಂದುವರೆಸಿದರು. ಇಂದಿಗೂ ಅವರ ವಿಧಿ ವಿಧಾನಗಳು ಮುನ್ನಣೆ ಗಳಿಸಿದೆ. ನಮ್ಮ ಕೆಲವು ವಿದ್ವಾಂಸರು ಪಾಶ್ಚಿಮಾತ್ಯರ ರೀತಿನೀತಿಗಳನ್ನೂ ಕಡೆಗಣಿಸಿ, ಪ್ರಾಚೀನ ವಾಸ್ತುಗ್ರಂಥಗಳನ್ನೂ ಅರ್ಥೈಸಲಾಗದೆ ತೊಳಲಾಡಿರುವುದುಂಟು. ವಿದ್ವಾಂಸೆ, ಸ್ಟೆಲ್ಲಾಕ್ರಾಂರಿಜ್ ವಾಸ್ತುಗ್ರಂಥಗಳನ್ನು ಆಧರಿಸಿ ದೇವಾಲಯಗಳ ಬಗ್ಗೆ ಮಾಹಿತಿ ನೀಡಿದ್ದರೂ ಸಮಗ್ರ ನೋಟ ನೀಡುವಲ್ಲಿ ವಿಫಲರಾದರೆಂದು ತಿಳಿಯಬೇಕು. ಅವರಿಗೆ ದೊರೆತ ಗ್ರಂಥ ಮಾಹಿತಿಯೂ ಸಾಲದು. ಕೆಲವೊಮ್ಮೆ ಅವರ ವಿಶ್ಲೇಷತೆ ಉತ್ಪ್ರೇಕ್ಷೆ ಎನಿಸುವುದುಂಟು (ಪ್ರಸ್ತಾವನೆ : ೧೯೭೯).

ಸ್ಟೆಲ್ಲಾಕ್ರಾಂರಿಜ್‌ರವರ ಗ್ರಂಥವು ಲಕ್ಷಣಶಾಸ್ತ್ರವನ್ನು ಹೆಚ್ಚು ವಿವರಿಸಿದೆಯೇ ಹೊರತು ಸೋದಾಹರಣೆಯಾಗಿ ಗುರುತಿಸಿದ್ದು ಕಡಿಮೆ. ಕ್ರಾಂರಿಜ್‌ರವರ ಕಾಲದಲ್ಲಿ ಪ್ರಕಟಗೊಂಡಿದ್ದ, ಪರಿಪೂರ್ಣವೆನಿಸುವಂಥ ಗ್ರಂಥಗಳ ಸಂಖ್ಯೆಯೂ ಕಡಿಮೆ. ಉದಾಹರಿಸಲು ಸಾಲದೆನಿಸುವಷ್ಟು ಮಾಹಿತಿ ಲಭ್ಯವಿತ್ತು. ಫರ್ಗುಸನ್ ವಸ್ತುರೀತ್ಯಾ ದೇವಾಲಯಗಳನ್ನು ವಿವರಿಸಲು ಯತ್ನಿಸಿದ. ಪ್ರಾಚೀನ ಗ್ರಂಥಗಳಲ್ಲಿ ಕಾಣುವ ಅಂಶಗಳನ್ನು ದೇವಾಲಯಗಳಲ್ಲಿ ಗುರುತಿಸಲಾಗದೆ ಸಮಸ್ಯೆಯಾಗಿದೆ. ಇದರಿಂದ ವರ್ಗೀಕರಣ ರೀತಿಯೂ ತ್ರಿಶಂಕುಸ್ಥಿತಿಯನ್ನು ಅನುಭವಿಸಿದೆ. ಆದರೆ, ಈಗ ಲಭ್ಯವಿರುವ ಗ್ರಂಥವಿವರಗಳನ್ನಾಧರಿಸಿ ವಾಸ್ತುಮಾದರಿಗಳನ್ನೂ, ವಾಸ್ತುಶೈಲಿಗಳನ್ನೂ ಗುರುತಿಸಲು ಸಾಧ್ಯವಿದೆ.

ಈವರೆಗೆ ನಡೆದಿರುವ ಅಧ್ಯಯನವನ್ನಾಧರಿಸಿ, ದೇವಾಲಯಗಳ ವರ್ಗೀಕರಣವನ್ನು ಪ್ರಾಚೀನ ಮತ್ತು ಪಾಶ್ಚಿಮಾತ್ಯ ರೀತಿ ಎಂದು ಗುರುತಿಸಲು ಸಾಧ್ಯವಿದೆ. ಇವು ಕ್ರಮವಾಗಿ ಪ್ರತ್ಯಕ್ಷ ಮತ್ತು ಪರೋಕ್ಷ ಪ್ರಮಾಣಗಳನ್ನು ಅವಲಂಬಿಸಿದೆ. ಉದಾಹರಣೆಗೆ, ಒಂದು ದೇವಾಲಯಗಳನ್ನು ದ್ರಾವಿಡಶೈಲಿ ಎಂದಲ್ಲಿ ಪ್ರಾಚೀನ ರೀತಿಯ ವರ್ಗೀಕರಣ, ಅದೇ ದೇವಾಲಯವನ್ನು ಚಾಲುಕ್ಯರ ಶೈಲಿ ಎಂದಲ್ಲಿ ಪಾಶ್ಚಿಮಾತ್ಯರ ವರ್ಗೀಕರಣ. ಪ್ರಾಚೀನ ಎಂದಲ್ಲಿ ವಾಸ್ತುಗ್ರಂಥಗಳನ್ನಾಧರಿಸಿದ್ದು, ಪರೋಕ್ಷ ಅಥವಾ ಪಾಶ್ಚಿಮಾತ್ಯ ಎಂದಲ್ಲಿ, ಆಯಾ ರಾಜಮನತನದ ಕಾಲಕ್ಕೆ ಸೇರಿದ್ದು ಎನ್ನುವುದರ ಮೂಲಕ ಗುರುತಿಸುವ ವರ್ಗೀಕರಣ. ಕದಂಬ ನಾಗರಶೈಲಿ ಎಂದು ಗುರುತಿಸಲಾಗದು. ಕದಂಬರ ಕಾಲಕ್ಕೆ ಸೇರಿದ್ದು ಎನ್ನಬಹುದು ಅಥವಾ ನಾಗರಶೈಲಿ ಎನ್ನಬಹುದು. ಕೆಲವು ವಿದ್ವಾಂಸರು ಗುಪ್ತ, ಪಲ್ಲವ, ಚಾಲುಕ್ಯ, ಹೊಯ್ಸಳ ಎಂದು ಶೈಲಿಗಳನ್ನು ಗುರುತಿಸುವುದನ್ನು ಅಲ್ಲಗಳೆಯುತ್ತಾರೆ. ಅದಕ್ಕೆ ಪ್ರತಿಯಾಗಿ ಸಮಾಧಾನಕರ ವ್ಯವಸ್ಥೆಯನ್ನೂ ಸೂಚಿಸದೆ, ಅದರ ಪ್ರಭಾವದಿಂದ ತಪ್ಪಿಸಿಕೊಳ್ಳಲೂ ಆಗದೆ ಎಡವುತ್ತಾರೆ. ಪ್ರಾಚೀನ ವಾಸ್ತುಗ್ರಂಥಗಳ ಪ್ರಕಾರ, ನಾಗರ, ದ್ರಾವಿಡ, ವೇಸರ ಶೈಲಿಗಳು ಹೆಚ್ಚು ಚಿರಪರಿಚಿತವಾಗಿವೆ ಹಾಗೂ ಪ್ರಾಮುಖ್ಯತೆ ಪಡೆದಿವೆ. ಇದರೊಂದಿಗೆ ದಾಕ್ಷಿಣಾತ್ಯ ಔತ್ತರೇಯ ಸಂಪ್ರದಾಯಗಳೂ ಬೆಳೆದಿದ್ದವು ಎಂದು ಗಮನಿಸಬಹುದು. ಪ್ರತ್ಯೇಕ ಸಂಪ್ರದಾಯಗಳು ಅರಿವಿಗೆ ಬಂದಿದ್ದರೂ ವಿದ್ವಾಂಶರು ಅವುಗಳ ವಿವರಗಳಿಗೆ ಹೆಚ್ಚು ಗಮನಹರಿಸಲಿಲ್ಲ. ಫರ್ಗುಸನ್ ಗುರುತಿಸುವ ದ್ರವಿಡಿಯನ್ ಮತ್ತು ಇಂಡೋ ಆರ್ಯನ್ ಶೈಲಿಗಳು ಕ್ರಮವಾಗಿ ದಾಕ್ಷಿಣಾತ್ಯ ಮತ್ತು ಔತ್ತರೇಯ ಸಂಪ್ರದಾಯಗಳೇ ಆಗಿವೆ. ಈ ಸಂಪ್ರದಾಯಗಳಲ್ಲಿ ಪ್ರತ್ಯೇಕ ಶೈಲಿಗಳಿವೆ.

ದಾಕ್ಷಿಣಾತ್ಯ ಸಂಪ್ರದಾಯಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಾಚೀನ ಗ್ರಂಥಗಳು ಬೆಳಕಿಗೆ ಬಂದಿದ್ದು, ಇವುಗಳಲ್ಲಿ ನಾಗರ, ದ್ರಾವಿಡ, ವೇಸರ ಶೈಲಿಗಳು ಪ್ರಕಟಗೊಂಡಿವೆ. ಮಾನಸಾರ, ಮಯಮತ, ಪಾದ್ಮಸಂಹಿತೆ, ಕಾಮಿಕಾಗಮ, ರೌರವಾಗಮ, ಅಜಿತಾಗಮ, ವಿಮಾನಾರ್ಚನಕಲ್ಪ, ಕಾಶ್ಯಪಶಿಲ್ಪ ಮುಂತಾದ ಗ್ರಂಥಗಳು ಮುದ್ರಣಭಾಗ್ಯ ಪಡೆದಿವೆ. ದಾಕ್ಷಿಣಾತ್ಯ ಸಂಪ್ರದಾಯವನ್ನು ಗುರುತಿಸಲು ಈ ಗ್ರಂಥಗಳು ಸಾಕಷ್ಟು ಮಾಹಿತಿಯನ್ನೊದಗಿಸಿವೆ. ಕರ್ನಾಟಕದಲ್ಲಿ ಔತ್ತರೇಯ ಸಂಪ್ರದಾಯವೂ ಬೆಳೆದಿವೆ. ಎರಡೂ ಸಂಪ್ರದಾಯಗಳು ಈ ನೆಲದಲ್ಲಿ ಬೇರೂರಿದ್ದು, ಕೊಡುವ ಮತ್ತು ಕೊಳ್ಳುವ ವ್ಯವಹಾರವು ಎರಡೂ ಸಂಪ್ರದಾಯದಲ್ಲಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಪ್ರಸ್ತುತ ಪ್ರಬಂಧದಲ್ಲಿ ದಾಕ್ಷಿಣಾತ್ಯ ಶೈಲಿಗಳನ್ನು ಗಮನಿಸಲಾಗಿದೆ. ದಾಕ್ಷಿಣಾತ್ಯ ಗ್ರಂಥಗಳಲ್ಲಿ ಭೌಗೋಳಿಕ ಕಕ್ಷೆಯನ್ನಾಧರಿಸಿದ ವರ್ಗೀಕರಣವಿದೆ ಎಂದು ಗುರುತಿಸಬಹುದು. ಈ ವಿವರಣೆಯಲ್ಲಿ ಸಮಗ್ರ ಭಾರತವನ್ನೇ ಲಕ್ಷ್ಯದಲ್ಲಿರಿಸಿಕೊಂಡು ಚಿತ್ರಿಸಲಾಗಿದೆ.

ಹಿಮಾದ್ರಿ ಕನ್ಯಯೋರಂತರ್ಗತೋ ದೇಶ ಉದಾಹೃತಃ
ಸೋಪಿ ದೇಶ ಉದಾಹೃತಃ
ಸೋಪಿ ದೇಶ ತ್ರಿಧಾಭಿನ್ನಾಸ್ತತ್ತದ್ದೇಶೋ ಭವೇತ್ ಗುಣೈಃ

ಹಿಮಾಲಯದಿಂದ ವಿಂಧ್ಯಯವರೆಗೆ ಇರುವ ಪ್ರದೇಶವನ್ನು ಸಾತ್ತ್ವಿಕ ವಲಯವೆಂದೂ ನಾಗರ ಪ್ರಾಸಾದಗಳ ಪ್ರದೇಶವೆಂದೂ, ವಿಂಧ್ಯೆಯಿಂದ ಕೃಷ್ಣಾನದೀವರೆಗಿರುವ ಭೂಮಿಯನ್ನು ರಾಜಸ ಭೂಭಾಗವೆಂದೂ, ದ್ರಾವಿಡ ಪ್ರಾಸಾದಗಳ ತಾಣವೆಂದೂ, ಕೃಷ್ಣೆಯಿಂದ ಕನ್ಯಾಕುಮಾರಿಯವರೆಗೆ ವ್ಯಾಪಿಸಿರುವ ಭಾಗವನ್ನು ತಾಮಸವೆಂದೂ ವೇಸರ ಪ್ರಾಸಾದಗಳ ಕ್ಷೇತ್ರವೆಂದೂ ಕಾಶ್ಯಪಶಿಲ್ಪವು ವ್ಯಾಖ್ಯಾನಿಸಿದೆ (ಕೃಷ್ಣರಾಯ ಮತ್ತು ಅಪ್ಟೆ : ೧೯೨೬ : ೫೪). ಇದೇ ಸಾಲುಗಳನ್ನು ಶಿಲ್ಪರತ್ನ ಗ್ರಂಥದಲ್ಲಿಯೂ ಕಾಣಬಹುದು.

ಹಿಮಾದ್ರಿ ವಿಂಧ್ಯಯೋರಂತರ್ಗತಾ ಸತ್ತ್ವಾ ವಸುಂಧರಾ
ವಿಂಧ್ಯಾದಿ ಕೃಷ್ಣವೇಣ್ಯಾಂತಾ ರಾಜಸಾಖ್ಯಾ ಮಹೀಮತಾ
ಕೃಷ್ಣವೇಣ್ಯಾದಿ ಕನ್ಯಾಂತಂ ತಾಮಸಂ ಭೂತಲಂ ಭವೇತ್
ನಾಗರಂ ಸಾತ್ತ್ವಿಕೇ ದೇಶೇ ತಾಮಸಂ ವೇಸರಂ ಭವೇತ್
ರಾಜಸಂ ದ್ರಾವಿಡೇ ದೇಶೇ ಕಾಮದೇವಂ ಹಿ ಭಾವಯೇತ್

ವಿದ್ವಾಂಸ ಪರ್ಸಿ ಬ್ರೌನ್ ಆಯಾ ಪ್ರದೇಶಗಳಿಗೆ ಸೀಮಿತಗೊಂಡಂತೆ ಲಭ್ಯವಿರುವ ವಾಸ್ತುಶೈಲಿಗಳನ್ನು ಕುರಿತು ಅಧ್ಯಯನ ನಡೆಸಬೇಕು ಎಂದು ಸೂಚಿಸುತ್ತಾರೆ (೧೯೭೬ :೧೦೧). ಪ್ರಾದೇಶಿಕ ವಾಸ್ತುಶೈಲಿಗಳ ಅಧ್ಯಯನ ಸಮಂಜಸ ಎಂದೆನಿಸಿದರೂ, ಸಮಗ್ರವಾದ ದೃಷ್ಟಿಯ ಕೊರತೆಯಿಂದಾಗಿ ಅಧ್ಯಯನ ಕುಂಠಿತವಾಗಬಹುದು. ನಾಗರ, ದ್ರಾವಿಡ, ವೇಸರ ಶೈಲಿಗಳಿಗೆ ಕಾಶ್ಯಪ ಶಿಲ್ಪವು ಗುರುತಿಸುವ ಪ್ರಾದೇಶಿಕ ವಿಭಾಗಗಳು ಅಸಂಗತ ಎನಿಸುತ್ತದೆ. ಕೇವಲ ಮಾನಸಾರ ಗ್ರಂಥವನ್ನು ಕೈಯಲ್ಲಿ ಹಿಡಿದು ಭಾರತದ ಎಲ್ಲಾ ದೇವಾಲಯಗಳನ್ನೂ ಗುರುತಿಸುವುದು ಹಾಸ್ಯಾಸ್ಪದವೆನಿಸುತ್ತದೆ. ಕೃಷ್ಣೆಯಿಂದ ಮೇಲಕ್ಕೆ ಔತ್ತರೇಯ ಸಂಪ್ರದಾಯವಿದೆ ಎಂದು ಗಮನಿಸಬೇಕು. ಕೃಷ್ಣೆಯಿಂದ ಕೆಳಗಡೆ ದಾಕ್ಷಿಣಾತ್ಯ ಸಂಪ್ರದಾಯವಿದೆ. ಕರ್ನಾಟಕದಲ್ಲಿ ಇವೆರಡೂ ಸಂಪ್ರದಾಯಗಳು ಮೀಳಿತವಾಗಿ ಬೆರೆತಿದೆ ಎಂದು ಗಮನಿಸಬೇಕು. ಕಾಶ್ಯಪಶಿಲ್ಪ ಗ್ರಂಥವು ನಾಗರ, ವೇಸರ, ದ್ರಾವಿಡ ಆಲಯಗಳಿಗೆ ಕ್ರಮವಾಗಿ ವಿಷ್ಣು, ಮಹೇಶ್ವರ ಬ್ರಹ್ಮಾದಿ ದೇವತೆಗಳ ಹೆಸರುಗಳನ್ನೂ ಸೂಚಿಸಿದೆ (ಕೃಷ್ಣರಾಯ ಮತ್ತು ಆಪ್ಟೆ : ೧೯೨೬ : ೫೪). ಇದನ್ನು ಕೇವಲ ತಿಳುವಳಿಕೆಗಾಗಿ ನೆನೆಯಬೇಕೇ ಹೊರತು ಹೆಚ್ಚಿನ ಉಪಯೋಗವಾಗದು.

ವಿಷ್ಣುರ್ಮಹೇಶ್ವರೋಧಾತಾ ಕ್ರಮಾದ್ ಹರ್ಮ್ಯಾದಿ ದೇವತಾಃ

ವಿದ್ವಾಂಸ ಜೇಮ್ಸ್ ಫರ್ಗುಸನ್ ತನ್ನ ವರ್ಗೀಕರಣದಲ್ಲಿ ಉತ್ತರ ಮತ್ತು ದಕ್ಷಿಣದಲ್ಲಿ ವ್ಯಾಪಿಸಿರುವ ದೇವಾಲಯಗಳನ್ನು ಇಂಡೋಆರ್ಯನ್ ಮತ್ತು ದ್ರವಿಡಿಯನ್ ಎಂದು ಕ್ರಮವಾಗಿ ಗುರುತಿಸಿದ (೧೯೭೨ : ೪೨೦). ಚಾಲುಕ್ಯರ ಕಾಲದ ದೇವಾಲಯಗಳನ್ನು ಗುರುತಿಸುವಲ್ಲಿ ಸಂದಿಗ್ಧತೆ ಉಂಟಾಗಿ ಇವುಗಳನ್ನು ಚಾಲುಕ್ಯನ್ ಎಂದು ಪ್ರತ್ಯೇಕಿಸಿದ. ಈತನ ಪ್ರಕಾರ ಚಾಲುಕ್ಯನ್ ದೇವಾಲಯಗಳು ದ್ರವಿಡಿಯನ್ ಶೈಲಿಯಿಂದ ಉದಯಿಸಿದೆ. ಈತನ ವರ್ಗೀಕರಣವನ್ನು ಸ್ವೀಕರಿಸಿ, ವಿದ್ವಾಂಸರು ಅಧ್ಯಯನ ಮುಂದುವರಿಸಿದ್ದಾರೆ. ಚಾಲುಕ್ಯರ ಕಾಲದ ದೇವಾಲಯಗಳನ್ನೂ, ವಾಸ್ತುಶಾಸ್ತ್ರಗಳಲ್ಲಿರುವ ವೇಸರಶೈಲಿಯನ್ನೂ ಖಚಿತವಾಗಿ ಅರ್ಥೈಸಲಾಗದೆ, ವರ್ಗೀಕರಣವೂ ಇಕ್ಕಟ್ಟಿಗೆ ಸಿಲುಕಿರುವುದನ್ನು ಗಮನಿಸಬಹುದು. ಔತ್ತರೇಯ ಮತ್ತು ದಾಕ್ಷಿಣಾತ್ಯ ಸಂಪ್ರದಾಯಗಳನ್ನು ಸರಿಯಾಗಿ ವಿಭಾಗಿಸಿಕೊಳ್ಳದೆ ಇಂತಹ ಪರಿಸ್ಥಿತಿ ಉದ್ಭವಿಸಿದೆ ಎನ್ನಬಹುದು.

ವಿದ್ವಾಂಸರಾದ ಗ್ರಾವ್ಲಿ ಮತ್ತು ರಾಮಚಂದ್ರನ್‌ರವರು ವಾಸ್ತುಶಾಸ್ತ್ರ ರೀತ್ಯಾ ನಾಗರಶೈಲಿಯನ್ನು ಅರ್ಥೈಸುವಲ್ಲಿ ಸಫಲರಾದರೂ ವಾಸ್ತುರಚನೆಗಳನ್ನು ಗುರುತಿಸುವಲ್ಲಿ ಎಡುವುತ್ತಾರೆ (೧೯೭೭ : ೨೩). ಇವರಿಗೆ ಔತ್ತರೇಯ ಮತ್ತು ದಾಕ್ಷಿಣಾತ್ಯ ಸಂಪ್ರದಾಯಗಳನ್ನು ಪ್ರತ್ಯೇಕಿಸಲು ಸಾಧ್ಯವಾಗಿಲ್ಲ. ಇವರ ಹೇಳಿಕೆಗಳು ಅಸಂಗತೆ ಎನಿಸುತ್ತವೆ. ಈ ವಿದ್ವಾಂಸರು ಗುರುತಿಸುವ ಐಹೊಳೆಯ ದುರ್ಗಾದೇವಾಲಯವು, ಬಾಗಿದ ಶಿಖರವನ್ನು ಹೊಂದಿದ್ದು, ಈ ಶಿಖರದ ಮೇಲೆ ರಚನೆಗೊಳ್ಳುವ ಆಮಲಸಾರ ಕಾಣೆಯಾಗಿದೆ. ಆಮಲಕ ಅಥವಾ ಆಮಲಸಾರ ವೃತ್ತಾಕಾರದಲ್ಲಿದ್ದು, ಇದು ವೇಸರ ಎಂಬ ಅನುಮಾನ ವಿದ್ವಾಂಸರನ್ನು ಕಾಡಿದೆ. ಅದರೊಂದಿಗೆ ಲಾಳಾಕಾರ ಗರ್ಭಗೃಹವೂ ಗೊಂದಲವನ್ನು ಸೃಷ್ಟಿಸಿದೆ. ಈ ದೇವಾಲಯಗಳನ್ನು ದಾಕ್ಷಿಣಾತ್ಯ ಗ್ರಂಥಗಳನ್ನಾಧರಿಸಿ ಗುರುತಿಸಲು ತೊಡಗುತ್ತಾರೆ. ದುರ್ಗಾ ದೇವಾಲಯದ ಬಾಗಿದ ಶಿಖರ ರಚನೆಯು ತದನಂತರದ ಕಾಲದ್ದು ಎಂಬ ಅಭಿಪ್ರಾಯವಿದೆ. ಈ ದೇವಾಲಯದ ಬಾಗಿದ ಶಿಖರ ರಚನೆಯು ತದನಂತರದ ಕಾಲದ್ದು ಎಂಬ ಅಭಿಪ್ರಾಯವಿದೆ. ಈ ದೇವಾಲಯ, ದೇವಾಲಯ ಸ್ವರೂಪ, ಶೈಲಿಗಳು ಖಚಿತಗೊಳ್ಳಲು ಹವಣಿಸುತ್ತಿದ್ದ ಪ್ರಾಯೋಗಿಕ ಹಂತದ ಕಾಲಕ್ಕೆ ಸೇರಿದ್ದು ಎನ್ನಬಹುದು. ಬಾಗಿದ ಶಿಖರ, ಆಮಲಸಾರ ರಚನೆ, ಔತ್ತರೇಯ ಸಂಪ್ರದಾಯಕ್ಕೆ ಸಂಬಂಧಿಸಿದ್ದು, ಈ ವಿವರಗಳಿಗೆ ಔತ್ತರೇಯ ಗ್ರಂಥಗಳನ್ನೇ ಆಧರಿಸಬೇಕು.

ಬಾದಾಮಿ ಚಾಲುಕ್ಯರ ಕಾಲದಲ್ಲಿ ನಾಗರ, ದ್ರಾವಿಡ, ವೇಸರ ಮತ್ತು ಕಳಿಂಗ ರಚನೆಗಳಿವೆ. ಇವುಗಳಲ್ಲಿ ನಾಗರ, ದ್ರಾವಿಡ, ವೇಸರಗಳು ದಾಕ್ಷಿಣಾತ್ಯ ಸಂಪ್ರದಾಯದ ರಚನೆಗಳು. ಕಳಿಂಗವು ಔತ್ತರೇಯ ಸಂಪ್ರದಾಯಕ್ಕೆ ಸೇರಿದೆ. ಮುಂದಿನ ಹಂತಗಳಲ್ಲಿ ಅಂದರ ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ಔತ್ತರೇಯ ಸಂಪ್ರದಾಯದ ಇತರ ಶೈಲಿಗಳು ಬೆಳೆದವು. ಹೊಯ್ಸಳರ ಕಾಲದಲ್ಲಿಯೂ ಮುಂದುವರೆದು, ಈ ಪದ್ಧತಿಯು ಸೌರಾಷ್ಟ್ರಾದಿ ರಾಷ್ಟ್ರಗಳಲ್ಲಿ ಲೀನವಾಯಿತು. ದಾಕ್ಷಿಣಾತ್ಯ ಸಂಪ್ರದಾಯವು ಬಾದಾಮಿ ಚಾಲುಕ್ಯರ ನಂತರ ಚೋಳ, ನೊಳಂಬ, ಗಂಗರ ಕಾಲದಲ್ಲಿ ಪೋಷಿಸಲ್ಪಟ್ಟು ಪುನಃ ವಿಜಯನಗರ ಅರಸರ ಕಾಲದಲ್ಲಿ ವಿಜೃಂಭಿಸಿತು. ಪಾದ್ಮಸಂಹಿತೆ, ವಿಮಾನಾರ್ಚನಕಲ್ಪ, ಶಿಲ್ಪರತ್ನ, ಈಶಾನ ಶಿವಗುರುದೇವ ಪದ್ಧತಿ, ಅಜಿತಾಗಮ, ಮಾನಸಾರ , ಮಯಮತ ಮುಂತಾದ ದಾಕ್ಷಿಣಾತ್ಯ ಗ್ರಂಥಗಳು ದಾಕ್ಷಿಣಾತ್ಯ ಸಂಪ್ರದಾಯದ ಪ್ರಮುಖ ಮೂರು ಶೈಲಿಗಳನ್ನು ಗುರುತಿಸಿದೆ (ಜ್ಯೋಷ್ಯರ್ : ೧೯೬೧ : ೬೧).

ನಾಗರಂ ದ್ರಾವಿಡಂ ಚೈವ ವೇಸರಂ ಚೇತಿ ತ್ರಿಧಾ

ಈ ಶೈಲಿಗಳನ್ನು ವಾಸ್ತುಗ್ರಂಥಗಳ ವಿವರಗಳೊಂದಿಗೆ ಹಾಗೂ ಖಚಿತ ಉದಾಹರಣೆಗಳೊಂದಿಗೆ ಗುರುತಿಸಬೇಕಾಗಿದೆ. ಈ ಶೈಲಿಗಳ ವಿವರಣೆಗಳನ್ನು ಅರ್ಥೈಸುವ ಮುನ್ನ “ಈಶಾನ ಶಿವಗುರು ದೇವ ಪದ್ಧತಿ”ಯಲ್ಲಿರುವ ಭರತ ವಾಕ್ಯವನ್ನು ಅವಶ್ಯಕವಾಗಿ ಗಮನಿಸಬೇಕು (ಕ್ರಾಂರಿಜ್ : ೧೯೭೬ : ೧೭೮).

ಶಿಖರಸ್ಯತು ಭೇದೇನ ಸರ್ವೇಷಾಂ ಭೇದಮುದ್ಧಿಶೇತ್

ದೇವಾಲಯಗಳ ಶೈಲಿಗಳನ್ನು ಗುರುತಿಸುವಲ್ಲಿ ಶಿಖರವು ಪ್ರಮುಖ ಪಾತ್ರವಹಿಸುತ್ತದೆ. ಈ ವಾಕ್ಯವು ದಾಕ್ಷಿಣಾತ್ಯ ಸಂಪ್ರದಾಯಕ್ಕೆ ಮಾತ್ರ ಸೀಮಿತಗೊಳ್ಳದೆ ಔತ್ತರೇಯ ಸಂಪ್ರದಾಯ, ಶೈಲಿಗಳಿಗೂ ಅನ್ವಯಿಸುತ್ತದೆ. ಅಜಿತಾಗಮ ಗ್ರಂಥದ ಪ್ರಕಾರ (ಭಟ್ : ೧೯೭೪ : ೮೨) ದಾಕ್ಷಿಣಾತ್ಯ ಶೈಲಿಗಳ ವಿವರಣೆ ಕೆಳಕಂಡಂತಿದೆ :

ಪ್ರಾಸಾದಸ್ತ್ರಿವಿಧಃ ಪ್ರೋಕ್ತಃ ತ್ರೈವಿಧ್ಯಮಪಿ ಕಥ್ಯತೇ
ನಾಗರಂ ದ್ರಾವಿಡಂ ಚೈವ ವೇಸರಂ ಚೇತಿ ನಾಮತಃ
ಭೌಮಾದಿ ಸ್ತೂಪಿ ಪರ್ಯಂತಂ ನಾಗರಂ ಚತುರಶ್ರಕಂ
ಕಂಠಾತ್ ಪ್ರಭೃತಿ ಚಾಷ್ಟಾಶ್ರಂ ದ್ರಾವಿಡಂ ಪರಿಕೀರ್ತಿತತ್
ಕಂಠಾತ್ ಪ್ರಭೃತಿ ವೃತ್ತಂ ಯದ್ವೇಸರಂ ಧಾಮ ಕಥ್ಯತೇ

ಭೂಮಿಯಿಂದ ಸ್ತೂಪಿಯವರೆಗೆ ಚತುರಶ್ರವೆನಿಸಿದ್ದು ನಾಗರಶೈಲಿ, ಕಂಠದಿಂದ ಮೇಲಕ್ಕೆ ಅಷ್ಟಾಶ್ರ ಎನಿಸಿದ್ದು ದ್ರಾವಿಡಶೈಲಿ, ಕಂಠದಿಂದ ಮೇಲಕ್ಕೆ ವೃತ್ತಾಕಾರವುಳ್ಳದ್ದು ವೇಸರ ಶೈಲಿ. ಇದೇ ಅಭಿಪ್ರಾಯವನ್ನು ಹಲವಾರು ಗ್ರಂಥಗಳು ಅನುಮೋದಿಸಿವೆ. ವಿದ್ವಾಂಸರು ಉದಾಹರಣೆಗಳನ್ನು ನೀಡುವಲ್ಲಿ ಎಡವಿದ್ದಾರೆ. ಅಸ್ಪಷ್ಟವೆನಿಸುವ ಕೆಲವು ಗ್ರಾಂಥಿಕ ವಿವರಣೆಗಳೂ ಕಾಣರವಾಗಿದೆ. ಅಸ್ಪಷ್ಟ ಎನಿಸುವ ವಿವರಗಳನ್ನು ಅಲಕ್ಷಿಸಬೇಕು, ಖಚಿತವೆನಿಸುವ ಗ್ರಾಂಥಿಕ ವಿವರಗಳನ್ನು ಉಳಿಸಿಕೊಳ್ಳಬೇಕು. ಇದನ್ನು ಅನುಕೂಲಸಿಂಧು ಎನ್ನಲಾಗದು. ಪ್ರತಿಯೊಂದು ಶೈಲಿಗಳನ್ನೂ, ಪ್ರತ್ಯೇಕವಾಗಿ ಹಲವು ಗ್ರಂಥಗಳ ವಿವರಗಳೊಂದಿಗೆ ತಾಳೆ ನೋಡಬೇಕು. ಆಗ ಖಚಿತ ವಿವರಗಳು ಬೆಳಕಿಗೆ ಬರಲು ಸಾಧ್ಯ.

ಆಸ್ತೂಪಿ ಕರ್ಣಮಾರಭ್ಯ ಚತುರಶ್ರಂ ಪ್ರಕಲ್ಪಿತಂ
ಧಾಮಾಯತಾಶ್ರಮಥವಾ ನಾಗರಂ ತದುದಾಹೃತಂ

ಇದು ಪಾದ್ಮ ಸಂಹಿತೆಯ ನಾಗರ ಶೈಲಿಯ ವಿವರಣೆ (ಜ್ಯೋಷ್ಯರ್ : ೧೯೬೧ : ೬೧). ಕರ್ಣದಿಂದ ಸ್ತೂಪಿಯವರೆಗೆ ಚತುರಶ್ರ ಅಥವಾ ಆಯತಾಶ್ರವಾಗಿರುವುದು ನಾಗರ ಶೈಲಿ. ಷಡ್ವರ್ಗ ರಚನೆಗಳಲ್ಲಿ ಅಧಿಷ್ಠಾನ, ಪಾದ, ಪ್ರಸ್ತರಗಳನ್ನುಳಿದ ಮೇಲ್ಭಾಗ ಗ್ರೀವ, ಶಿಖರ, ಸ್ತೂಪಿ ರಚನೆಗಳು ಶೈಲಿಗಳನ್ನು ನಿರ್ಧರಿಸುತ್ತವೆ. ಸಾಮಾನ್ಯವಾಗಿ ಅಧಿಷ್ಠಾನ, ಪಾದ ಪ್ರಸ್ತರ ರಚನೆಗಳು ಚತುರಶ್ರ ರಚನೆಗಳೇ ಆಗಿವೆ. ವ್ಯತ್ಯಾಸವೇನಿದ್ದರೂ ಮೇಲ್ಭಾಗ ಮಾತ್ರ. ಇಲ್ಲಿ ಕರ್ಣ ಎಂದಲ್ಲಿ ಪ್ರಸ್ತರದ ಮೂಲೆಭಾಗ. ಇದರಿಂದ ಮೇಲಕ್ಕೆ ಚತುರಶ್ರ ಅಥವಾ ಆಯತಾಶ್ರ ಆಕಾರವಿದ್ದಲ್ಲಿ “ನಾಗರ”ಶೈಲಿ. ಕರ್ಣದಿಂದ ಮೇಲಕ್ಕೆ ಎಂದು ಸೂಚಿಸಿರುವುದು ಬಹುಶಃ ಇದೊಂದೇ ಗ್ರಂಥದಲ್ಲಿ ಎನ್ನಬಹುದು. ಕಾಶ್ಯಪಶಿಲ್ಪ ಗ್ರಂಥದ ವಿವರವು ಕೆಳಕಂಡಂತಿದೆ (ಕೃಷ್ಣರಾಯ ಮತ್ತು ಆಪ್ಟೆ : ೧೯೨೬:೫೬)

12_382_DV-KUH

ಜನ್ಮಾದಿ ಸ್ತೂಪಿ ಪರ್ಯಂತಂ ಯುಗಾಶ್ರಂ ನಾಗರಂ ಭವೇತ್

ಅಧಿಷ್ಠಾನವು ಆದ್ಯಂಗ ಎಂದು ಗುರುತಿಸಲ್ಪಟ್ಟರೂ, ಅಧಿಷ್ಠಾನದ ಕೆಳಗೆ ಉಪಪೀಠವಿದೆ. ಉಪಪೀಠದ ಕೆಳಗೆ ನೆಲದಲ್ಲಿ ಹುದುಗಿರುವ ಹಲವು ಸ್ತರಗಳಿವೆ. ಅವುಗಳ ಮೇಲಿನ ಸ್ತರವನ್ನು “ಜನ್ಮ” ಎಂದು ಗುರುತಿಸಲಾಗುತ್ತದೆ. ಜನ್ಮೋಪಪೀಠಾಧಿಷ್ಠಾನ ಸ್ತಂಭಃ ಪ್ರಸ್ತರ ಕಂಧರೈಃ ಎಂದು ದೇವಾಲಯದ ಆರೋಹಣ ಕ್ರಮವನ್ನು ವಿವರಿಸುವುದುಂಟು. ಜನ್ಮದಿಂದ ಸ್ತೂಪಿಯವರೆಗೆ ಚತುರಶ್ರವಿದ್ದಲ್ಲಿ ನಾಗರಶೈಲಿ ಎಂದು ಕಾಶ್ಯಪಶಿಲ್ಪ ಗ್ರಂಥವು ವಿವರಿಸಿದೆ.

ಸರ್ವಂವೈ ಚತುರಶ್ರಂ ಯತ್ ಪ್ರಾಸಾದಂ ನಾಗರಂ ತ್ವಿದಂ

ಆಮೂಲಾಗ್ರವಾಗಿ ಚತುರಶ್ರ ರಚನೆಯನ್ನು ನಾಗರಶೈಲಿಯೆಂದು ಸುಪ್ರಭೇದಾಗಮವು ಸೂಚಿಸಿದೆ (ಗ್ರಾವ್ಲಿ ಮತ್ತು ರಾಮಚಂದ್ರನ್ : ೧೯೭೭ : ೧). ಮಾನಸಾರ ಗ್ರಂಥವು ಚತುರಶ್ರಾಕಾರ ರಚನೆಯನ್ನು ನಾಗರವೆಂದು ಆರಂಭದಲ್ಲಿ ಸೂಚಿಸಿದ್ದರೂ, ಕಂಠದಿಂದ ಮೇಲ್ಭಾಗವು ದ್ವಯಶ್ರ ಅಥವಾ ವೃತ್ತಾಕಾರವಿದ್ದಲ್ಲಿ ಅದನ್ನು ನಾಗರವೆಂದಿದೆ! (ಆಚಾರ್ಯ : ೧೯೭೯ : ೩೦) ಇದನ್ನು ತಿರಸ್ಕರಿಸಬೇಕು.

ಮೂಲಾದಿ ಸ್ತೂಪಿ ಪರ್ಯಂತಂ ವೇದಾಶ್ರಂ ಚಾಯತಾಶ್ರಕಂ
ದ್ವಯಶ್ರಂ ವೃತ್ತಾಕೃತಿಂ ವಾಥ ಗ್ರೀವಾದಿ ಶಿಖರಾಕೃತಿಃ
ಸ್ತೂಪಿಕಾತ್ರಯ ಸಂಯುಕ್ತಂ ದ್ವಯಂ ವಾ ಚೈಕಮೇವ ವಾ
ಚತುರಶ್ರಾಕೃತಿಂ ಯಸ್ತು ನಾಗರಂ ತತ್ ಪ್ರಕೀರ್ತಿತಂ

ಮೇಲಿನ ನಾಲ್ಕು ಸಾಲುಗಳಲ್ಲಿ ಒಂದು ಮತ್ತು ನಾಲ್ಕನೆಯ ಸಾಲುಗಳನ್ನು ಉಳಿಸಿಕೊಂಡು ಎರಡನೆಯ ಮತ್ತು ಮೂರನೆಯ ಸಾಲನ್ನು ಸಾರಾಸಗಟಾಗಿ ತಿರಸ್ಕರಿಸಬಹುದು. ಚತುರಶ್ರಾಕೃತಿಯೊಡನೆ ಆಯತಾಶ್ರ ರಚನೆಯೂ ಸೇರ್ಪಡೆಯಾಗಿವೆ. ಆಯತಾಶ್ರವು ಶಾಲಾ ರಚನೆಯೇ ಆಗಿದೆ. ಕಾಶ್ಯಪಶಿಲ್ಪ ಗ್ರಂಥವು ಶಾಲಾಕಾರ ರಚನೆಯನ್ನು ನಾಗರವೆಂದೇ ಸ್ಪಷ್ಟವಾಗಿ ತಿಳಿಸಿದೆ (ಕೃಷ್ಣರಾಯ ಮತ್ತು ಆಪ್ಟೆ : ೧೯೨೬: ೫೪).

ವೇದಾಶ್ರಂ ಶೀರ್ಷಂ ಕಂಠಂ ಸ್ಯಾತ್ ಸಾಲಾಕಾರಮಥಾಪಿ ವಾ
ನಾಗರಂ ಭವನಂ ಖ್ಯಾತಂ ತತ್ತದ್ದೇಶೇ ಪ್ರಕಲ್ಪಿತಂ

ಆಮೂಲಾಗ್ರವಾಗಿ ಚತುರಶ್ರಾಕಾರದಲ್ಲಿರುವ ಪ್ರಾಚೀನ ದೇವಾಲಯಗಳು ದಕ್ಷಿಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ. ಈ ದೇವಾಲಯಗಳನ್ನು ದಾಕ್ಷಿಣಾತ್ಯ ಸಂಪ್ರದಾಯದಡಿಯಲ್ಲಿ ನಾಗರವೆಂದು ಅಥವಾ ದಾಕ್ಷಿಣಾತ್ಯ ಸಂಪ್ರದಾಯವೆಂದು ಗುರುತಿಸುವ ಬದಲು ದ್ರಾವಿಡಶೈಲಿ ಎನ್ನುತ್ತಾರೆ. ಶೈಲಿ, ಸಂಪ್ರದಾಯವನ್ನು ವರ್ಗಿಕರಿಸಿಕೊಳ್ಳದಿರುವುದರಿಂದ ಈ ರೀತಿ ಗೋಜಲು ಗೋಜಲಾಗಿದೆ ಎಂದು ಗಮನಿಸಬಹುದು. ಇದೇ ರೀತಿ ಔತ್ತರೇಯ ಸಂಪ್ರದಾಯವೆನ್ನದೆ ನಾಗರಶೈಲಿ ಎನ್ನುತ್ತಾರೆ. ಇದರಿಂದ ಮುಕ್ತವಾಗಿ ಹೊರಬರಬೇಕಾಗಿದೆ. ದಾಕ್ಷಿಣಾತ್ಯ ನಾಗರಶೈಲಿಯ ಉದಾಹರಣೆಗಳಿಗಾಗಿ, ಬಾದಾಮಿಯ ಮೇಲಿನ ಶಿವಾಲಯ, ಭೂತನಾಥ ಗುಡಿ, ಪಟ್ಟದಕಲ್ಲಿನ ವಿಜಯೇಶ್ವರ (ಸಂಗಮೇಶ್ವರ) ದೇವಾಲಯಗಳನ್ನು ಹೆಸರಿಸಬಹುದು. ತದನಂತರದ ಕಾಲದ ಉದಾಹರಣೆಗಾಗಿ ಪೂರ್ಣ ಬೆಳವಣಿಗೆಯನ್ನು ಕಂಡ, ಕೋಲಾರ ಜಿಲ್ಲೆಯ ನಂದಿಯ ಭೋಗನಂದೀಶ್ವರ ದೇವಾಲಯವನ್ನು ಹೆಸರಿಸಬಹುದು. ದಾಕ್ಷಿಣಾತ್ಯ ಸಂಪ್ರದಾಯದ ವೇಸರ ಶೈಲಿಯ ಲಕ್ಷಣಗಳು ಕೆಳಕಂಡಂತಿವೆ (ಕೃಷ್ಣರಾಯ ಮತ್ತು ಆಪ್ಟೆ : ೧೯೨೬ : ೫೬).

ವೃತ್ತಗ್ರೀವ ಶಿರೋಪೇತಂ ವೇಸರಂ ಹರ್ಮ್ಯಮೀರಿತಂ

ಕಾಶ್ಯಪಶಿಲ್ಪ ಗ್ರಂಥದ ಈ ಹೇಳಿಕೆಯಂತೆ ಕಂಠ ಹಾಗೂ ಶಿರೋಭಾಗವು ವೃತ್ತಾಕಾರವಿದ್ದಲ್ಲಿ ವೇಸರಶೈಲಿ. ಶಿರ ಎಂದಲ್ಲಿ ಶಿಖರದ ಭಾಗವೇ ಆಗಿದೆ. ಶಿಲ್ಪರತ್ನ ಗ್ರಂಥವೂ ಈ ಹೇಳಿಕೆಯನ್ನು ಸಮರ್ಥಿಸುತ್ತದೆ. ಸುಪ್ರಭೇದಾಗಮ ಗ್ರಂಥವು ಕಂಠದಿಂದ ಮೇಲಕ್ಕೆ ವೃತ್ತಾಕಾರವೆನಿಸಿದ್ದನ್ನು ವೇಸರವೆಂದೇ ಅನುಮೋದಿಸಿದೆ (ಗ್ರಾವ್ಲಿ ಮತ್ತು ರಾಮಚಂದ್ರನ್ : ೧೯೭೭ : ೯).

ಕಂಠಾದಾರಭ್ಯ ವೃತ್ತಂ ಯತ್ ವೇಸರಮಿತಿ ಸ್ಮೃತಂ

13_382_DV-KUH

ಪಂಚಕೂಟ ಬಸದಿ, ವೇಸರ ಶಿಖರ, ಕಂಬದಹಳ್ಳಿ

 

ವೃತ್ತಾಕಾರ ಗರ್ಭಗೃಹವಿದ್ದಲ್ಲಿ ಅದನ್ನು ವೇಸರವೆಂದೇ ಕಾಶ್ಯಪಶಿಲ್ಪ ಗ್ರಂಥವು ಗುರುತಿಸಿದೆ (ಕೃಷ್ಣರಾಯ ಮತ್ತು ಆಪ್ಟೆ : ೧೯೨೬ : ೫೫). ಇದು ಗರ್ಭಗೃಹದ ಒಳಭಾಗ ಮತ್ತು ಹೊರಭಾಗಕ್ಕೂ ಅನ್ವಯಿಸುತ್ತದೆ.

ವೃತ್ತ ಗರ್ಭಗೃಹಾಕಾರಂ ಬಾಹ್ಯ ವೃತ್ತಾಭಮೇವ ವಾ

ಮಾನಸಾರ ರೀತ್ಯಾ ಮೂದದಲ್ಲಿ ಅಥವಾ ಕೆಳಭಾಗದಲ್ಲಿ ವೃತ್ತಾಕಾರ ಅಥವಾ ವೃತ್ತಾಯತ, ಕಂಠದಿಂದ ಮೇಲಕ್ಕೆ ಚತುರಶ್ರ ರಚನೆಯೂ ವೇಸರವೆಂದು ಗುರುತಿಸಲ್ಪಡುತ್ತದೆ. ವೃತ್ತಾಕಾರ ಮೂಲದೊಂದಿಗೆ ದ್ವಯಶ್ರ ಅಥವಾ ಲಾಳಾಕಾರದ ಮೇಲು ರಚನೆಯು ವೇಸರವೆನ್ನಿಸಿದೆ.

ಮೂಲಾಗ್ರಂ ವೃತ್ತಮಾಕಾರಂ ತದ್ ವೃತ್ತಾಯತಮೇವ ವಾ
ಗ್ರೀವಾದಿ ಸ್ತೂಪಿಪರ್ಯಂತಂ ಯುಕ್ತಾದೌ ಯುಗಾಶ್ರಕಂ
ವೃತ್ತಸ್ಯಾಗ್ರೇ ದ್ವಶ್ರಕಂ ತದ್ ವೇಸರೀ ನಾಮಕಂ ಭವೇತ್

ಎಲ್ಲಾ ಗ್ರಂಥಗಳು ಒಂದು ಹಾದಿ ಹಿಡಿದರೆ, ಮಾನಸಾರದ ಹಾದಿ ತುಸು ಕ್ಲಿಷ್ಟವೇ ಆಗಿದೆ. ಈಶಾನ ಶಿವಗುರು ಪದ್ಧತಿಯ ಭರತವಾಕ್ಯವನ್ನು ನೆನೆದರೆ, ಮಾನಸಾರ ಇದಕ್ಕೊಂದು ಅಪವಾದ ಎನ್ನಿಸಿದೆ. ಎಲ್ಲಾ ವಾಸ್ತುಗ್ರಂಥಗಳಿಗಿಂತ ಮೊದಲು ವ್ಯವಸ್ಥಿತ ರೀತಿಯಲ್ಲಿ ಪ್ರಕಟವಾದದ್ದು ಮಾನಸಾರ ಗ್ರಂಥ. ಆದ್ದರಿಂದಲೇ ಇದಕ್ಕೆ ಮನ್ನಣೆ ಹೆಚ್ಚು. ಈ ಗ್ರಂಥ ಪ್ರಾಚೀನವೆನ್ನಿಸಿದರೂ ಸೇರಿಸಿಕೊಂಡಿದೆ. ಆದ್ದರಿಂದ ಶುದ್ಧಪಾಠವನ್ನು ನಿರ್ಣಯಿಸುವುದು ಕಷ್ಟ. ಮಾನಸಾರದ ಪ್ರಕಾರ ಕೆಳಭಾಗವಿರಲಿ, ಮೇಲ್ಭಾಗವಿರಲಿ, ಯಾವ ಭಾಗದಲ್ಲಾದರೂ ವೃತ್ತಾಕಾರ ಅಥವಾ ವೃತ್ತಾಯತವಿದ್ದಲ್ಲಿ ಅದು ವೇಸರಶೈಲಿ.

ರೌರವಾಗಮ ಗ್ರಂಥವು ಕುಂಡಲಾಂತಮುಪಾನಾದಿ ವೃತ್ತಂ ವೇಸರ ಮುಚ್ಯತೇ ಎಂದು ಗುರುತಿಸುತ್ತದೆ (ಭಟ್ : ೧೯೭೨ : ೧೪೮). “ಕುಂಡಲ”ದ ಬದಲಿಗೆ “ಕುಡ್ಮಲ”ವಿರಬೇಕು. ಕುಡ್ಮಲವು ಸ್ತೂಪಿಯ ಅಂತಿಮಸ್ತರ. ಉಪಾನದಿಂದ ಸ್ತೂಪಿಯವರೆಗೆ ಅಥವಾ ಕುಡ್ಮಲದವರೆಗೆ ವೃತ್ತಾಕಾರವಿದ್ದಲ್ಲಿ, ಅದನ್ನು ವೇಸರಶೈಲಿ ಎನ್ನುತ್ತಾರೆ. ಇತರ ಕೆಲವು ಗ್ರಂಥಗಳು ಈ ಹೇಳಿಕೆಯನ್ನು ಅನುಮೋದಿಸಿವೆ. ವಿದ್ವಾಂಸೆ ಸ್ಟೆಲ್ಲಾ ಕ್ರಾಂರಿಂಜ್‌ರವರು “ದಿ ಹಿಂದೂ ಟೆಂಪಲ್” ಗ್ರಂಥದಲ್ಲಿ ವೇಸರ ಪದದ ಅರ್ಥವನ್ನು ವಿಶ್ಲೇಷಿಸುತ್ತಾ, ವೇಸರ ಎಂದಲ್ಲಿ “ಮಿಶ್ರ” ಎಂದು ವ್ಯಾಖ್ಯಾನಿಸುತ್ತಾರೆ. ಗ್ರಾವ್ಲಿ ಮತ್ತು ರಾಮಚಂದ್ರನ್‌ರವರು, ವೇಸರ ಪದದ ಉತ್ಪತ್ತಿಯೇ ಅಸ್ಟಷ್ಟ ಎನ್ನುತ್ತಾರೆ. ಪ್ರೊ.ಢಾಕೆಯವರು ಕಾಮಿಕಾಗಮದ ಕೆಲವು ಶ್ಲೋಕಗಳನ್ನಾಧರಿಸಿ, ವೇಸರವು ಸಂಕರ ಅಥವಾ ಮಿಶ್ರ ಶೈಲಿ ಎನ್ನುತ್ತಾರೆ (೧೯೭೭ : ೨೧). ಮಿಶ್ರ ಎಂದಲ್ಲಿ ದಾಕ್ಷಿಣಾತ್ಯ ಮತ್ತು ಔತ್ತರೇಯ ಸಂಪ್ರದಾಯಗಳಿಂದ ಒಡಮೂಡಿದ್ದು ಎಂದರ್ಥ. ಇವರು ಬಾದಾಮಿಯ ಯಲ್ಲಮ್ಮನ ಗುಡಿ, ಮೊಸಳೆಯಲ್ಲಿರುವ ಚನ್ನಕೇಶವ ದೇವಾಲಯಗಳನ್ನು ವೇಸರಶೈಲಿ ಎನ್ನುತ್ತಾರೆ. ಇವು ವೇಸರವಾಗದೆ ಔತ್ತರೇಯ ದ್ರಾವಿಡ ಶೈಲಿ ಎಂದೆನಿಸಿದೆ. ಈ ಶೈಲಿ ಸ್ಪಷ್ಟವಾದದ್ದು ಒಂಬತ್ತನೆಯ ಶತಮಾನದ ನಂತರ; ವೇಸರ ಶೈಲಿಯು ಇದಕ್ಕಿಂತ ಪ್ರಾಚೀನ ಎಂದು ಗಮನಿಸಬೇಕು. ಡಾ.ಆನಂದಕುಮಾರ ಸ್ವಾಮಿಯವರೂ ಸಹ ಕಲ್ಯಾಣದ ಚಾಲುಕ್ಯರ ದೇವಾಲಯಗಳನ್ನು ವೇಸರವೆಂದು ಗುರುತಿಸುತ್ತಾರೆ. ಇದು ನಾಗರ ಮತ್ತು ದ್ರಾವಿಡ ಶೈಲಿಗಳ ಮಧ್ಯಂತರ ಶೈಲಿ ಎಂಬ ಹೇಳಿಕೆ ನೀಡುತ್ತಾರೆ.

ದೇವಾಲಯ ವಾಸ್ತು ಸಂಪ್ರದಾಯಗಳಲ್ಲಿ ಮೊದಲು ಖಚಿತಗೊಂಡದ್ದು ದಾಕ್ಷಿಣಾತ್ಯ ಶೈಲಿಗಳು. ಇದಕ್ಕೆ ಸಮಕಾಲೀನವೆನಿಸಿದ್ದು ಔತ್ತರೇಯ ಸಂಪ್ರದಾಯದ ಕಳಿಂಗ ಶೈಲಿ. ದಾಕ್ಷಿಣಾತ್ಯ ಸಂಪ್ರದಾಯದ ಮೇಲೆ ಉಂಟಾದ ಔತ್ತರೇಯ ಸಂಪ್ರದಾಯದ ಪ್ರಭಾವದಿಂದ ವಿಕಸಿತಗೊಂಡದ್ದು ಔತ್ತರೇಯ ದ್ರಾವಿಡ ಶೈಲಿ. ಇದನ್ನು ಔತ್ತರೇಯ ಗ್ರಂಥಗಳು ಗುರುತಿಸಿವೆ. ಈ ಸಂಪ್ರದಾಯ ಶೈಲಿಗಳ “ಸಂಕರ” ಆರಂಭಗೊಂಡದ್ದು ರಾಷ್ಟ್ರಕೂಟರ ಕಾಲದಲ್ಲಿ. ಇದರ ಸ್ಪಷ್ಟ ಬೆಳವಣಿಗೆ ಕಲ್ಯಾಣದ ಚಾಲುಕ್ಯರ ಕಾಲದಲ್ಲಿ. ಪರಾಕಾಷ್ಟೆಯನ್ನು ಮುಟ್ಟಿದ್ದು ಹೊಯ್ಸಳರ ಕಾಳದಲ್ಲಿ. ಹಿರಿಯ ವಿದ್ವಾಂಸರು ದಾಕ್ಷಿಣಾತ್ಯ ಮತ್ತು ಔತ್ತರೇಯ ಸಂಪ್ರದಾಯಗಳನ್ನು ಖಚಿತವಾಗಿ ಈವರೆಗೆ ಗುರುತಿಸದೆ ಎಡವಿರುವುದು ಖಂಡಿತಾ ಸತ್ಯ.

ವೇಸರ ಶೈಲಿಗೆ ಅತಿಪ್ರಾಚೀನ ಉದಾಹರಣೆಗಾಗಿ ಪಟ್ಟದಕಲ್ಲಿನ ಮಲ್ಲಿಕಾರ್ಜುನ ದೇವಾಲಯವನ್ನು ಹೆಸರಿಸಬಹುದು. ಕರ್ನಾಟಕದಿಂದ ದಕ್ಷಿಣಕ್ಕೆ, ತಮಿಳುನಾಡಿನಲ್ಲಿ ಹಲವಾರು ವೇಸರ ಶೈಲಿಯ ದೇವಾಲಯಗಳಿವೆ. ಕಣ್ಣಾನೂರಿನ ಬಾಲಸುಬ್ರಹ್ಮಣ್ಯ, ನಾರ್ತ ಮಲೈನಲ್ಲಿರುವ ವಿಜಯಾಲಯ ಚೋಳೇಶ್ವರ, ಈಸಲಂನಲ್ಲಿರುವ ರಾಮನಾಥೇಶ್ವರ, ಮದಗಡಿಪಟ್ಟುವಿನ ಮಹಾದೇವ, ಲಡ್ಡಿಗಂನಲ್ಲಿರುವ ನೀಲಕಂಠೇಶ್ವರ, ಪೆರುಂಗಾಡಿಯಲ್ಲಿರುವ ಅಗಸ್ತ್ಯೇಶ್ವರ ಹೀಗೆ ಹಲವು ದೇವಾಲಯಗಳನ್ನು ಹೆಸರಿಸಬಹುದು (ಮೈಖೇರ್ ಮತ್ತು ಢಾಕೆ : ೧೯೮೩). ಬೆಂಗಳೂರು ಜಿಲ್ಲೆಯ ಬೇಗೂರಿನಲ್ಲಿರುವ ಜೋಡಿ ದೇವಾಲಯಗಳಲ್ಲೊಂದು ವೇಸರ ಶೈಲಿ ಎನಿಸಿದೆ. ಕಂಬದಹಳ್ಳಿಯ ಪಂಚಕೂಟ ಬಸದಿಯಲ್ಲೊಂದು ವೇಸರ ಶೈಲಿಯ ಶಿಖರವಿದೆ. ದ್ರಾವಿಡ ಶೈಲಿಯ ಲಕ್ಷಣಗಳು ಕೆಳಕಂಡಂತಿವೆ.

ಕೆಳಗಿನ ಶಿವಾಲಯ, ದ್ರಾವಿಡ ಶಿಖರ ಬಾದಾಮಿ

ಕೆಳಗಿನ ಶಿವಾಲಯ, ದ್ರಾವಿಡ ಶಿಖರ ಬಾದಾಮಿ

ಗ್ರೀವಮಾರಭ್ಯ ಅಷ್ಟಾಶ್ರಂ ವಿಮಾನಂ ದ್ರಾವಿಳ್ಹಾಖ್ಯಕಂ

ಇದು ಸುಪ್ರಭೇದಾಗಮದ ಉಲ್ಲೇಖ (ಗ್ರಾವ್ಲಿ ಮತ್ತು ರಾಮಚಂದ್ರನ್ : ೧೯೭೭ : ೧). ಕಂಠದಿಂದ ಆರಂಭಿಸಿ ಎಂಟುಕೋನಗಳುಳ್ಳ ರಚನೆಯು ದ್ರಾವಿಡ ಶೈಲಿ.

ವಸ್ವಶ್ರಂ ಶೀರ್ಷಂ ಕಂಠಂ ದ್ರಾವಿಡಂ ಭವೇತ್

ಕಾಶ್ಯಪಶಿಲ್ಪ ಗ್ರಂಥದಲ್ಲಿ ಸ್ಪಷ್ಟ ಸೂಚನೆ ಇದೆ (ಕೃಷ್ಣರಾಯ ಮತ್ತು ಆಪ್ಟೆ : ೧೯೨೬ :೫೬). ಕಂಠ ಮತ್ತು ಶಿಖರ (ಶೀರ್ಷವು) ಎಂಟು ಕೋನಗಳಿದ್ದಲ್ಲಿ ದ್ರಾವಿಡ ಶೈಲಿ ಎನ್ನಿಸಿದೆ. ಮಾನಸಾರ ಗ್ರಂಥದ ವಿವರಗಳು ಹೆಚ್ಚು ವಿವರಗಳುಳ್ಳದ್ದು (ಆಚಾರ್ಯ : ೧೯೭೯ : ೧೩೦).

ಮೂಲಾಗ್ರಾತ್ ಸ್ತೂಪಿ ಪರ್ಯಂತಂ ಚಾಷ್ಟಾಶ್ರಕಂ ಷಡಶ್ರಕಂ
ತದಗ್ರಂ ಚಾಯತಂ ವಾಪಿ ಗ್ರೀವಸ್ಯಾಧೋ ಯುಗಾಶ್ರಕಂ
ಪೂರ್ವವತ್ ಊರ್ಧ್ವದೇಶಂ ಸ್ಯಾತ್ ದ್ರಾವಿಡಂ ಪರಿಕೀರ್ತಿತಂ

ಮೂಲದಿಂದ ಸ್ತೂಪಿಯವರೆಗಿಗೆ ಎಂಟು ಅಥವಾ ಆರು ಕೋನಗಳು. ಮೇಲ್ಭಾಗದಲ್ಲಿ ಆಯತಾ ಕಾರ ಅಥವಾ ಗ್ರೀವದಿಮದ ಕೆಳಗೆ ಚತುರಶ್ರ ಅಥವಾ ಊರ್ಧ್ವಭಾಗವು ಹಿಂದೆ ತಿಳಿಸಿದಂತೆ ಅಷ್ಟಾಶ್ರ ಅಥವಾ ಷಡಶ್ರ, ಎಂಟು ಅಥವಾ ಆರು ಕೋನಗಳು ಊರ್ಧ್ವ ಭಾಗಕ್ಕೆ ಸಂಬಂಧಿಸಿದ್ದೇ ಎನ್ನುವ ಸೂಚನೆ ಇಲ್ಲ. ಆದರೆ ಮಾನಸಾರವು ಕೆಳಭಾಗವಾಗಲಿ ಮೇಲ್ಭಾಗವಾಗಲಿ ಅಥವಾ ಪೂರ್ಣವಾಗಿ ಷಡಶ್ರ ಅಥವಾ ಅಷ್ಟಾಶ್ರವಿದ್ದಲ್ಲಿ ದ್ರಾವಿಡವೆನಿಸುತ್ತದೆ. ದ್ರಾವಿಡ ಶೈಲಿಯ ಅತಿಪ್ರಾಚೀನ ಉದಾಹರಣೆಯಾಗಿ ಮಹಾಕೂಟದಲ್ಲಿರುವ ಮಹಾಕೂಟೇಶ್ವರ ದೇವಾಲಯವನ್ನು ಸ್ಮರಿಸ ಬೇಕು. ವಿದ್ವಾಂಸರು ಈ ದೇವಾಲಯದ ಕಾಲವನ್ನು ಸ್ತಂಭ ಶಾಸನವನ್ನು ಆಧರಿಸಿ ಕ್ರಿ.ಶ. ೬೦೧ಕ್ಕೆ ನಿರ್ಧರಿಸಿದ್ದಾರೆ. ಈಗ ಲಭ್ಯವಿರುವ ದೇವಾಲಯ ಸ್ವರೂಪ ಈ ಕಾಲದ್ದೇ ಎಂದು ಹೇಳಲು ಆಧಾರ ಸಾಲದು. ಮಹಾಕೂಟದಲ್ಲಿರುವ ಮಲ್ಲಿಕಾರ್ಜುನ, ಬಾದಾಮಿಯ ಮಾಲೇಗಿತ್ತಿ ದೇವಾಲಯ, ಶ್ರವಣಬೆಳಗೊಳದ ಚಾವುಂಡರಾಯ ಬಸದಿ, ಎಲ್ಲೋರದಲ್ಲಿರುವ ಕೈಲಾಸನಾಥ ದೇವಾಲಯ ಇವು ದ್ರಾವಿಡ ಶೈಲಿಯ ಉತ್ತಮ ಉದಾಹರಣೆಗಳು.

ಕಂಬದಹಳ್ಳಿಯ ಪಂಚಕೂಟ ಬಸದಿಯಲ್ಲಿ ದಾಕ್ಷಿಣಾತ್ಯ ಸಂಪ್ರದಾಯದ ಮೂರೂ ಶಿಖರಗಳನ್ನು ಪ್ರತಿನಿಧಿಸುವ ಅಪುರೂಪದ ರಚನೆಗಳಿವೆ. ಮಧ್ಯದಲ್ಲಿ ನಾಗರ ಮುಂಭಾಗದಲ್ಲಿ ವೇಸರ ದ್ರಾವಿಡ ರಚನೆಗಳಿವೆ.

ಪಂಚಕೂಟ ಬಸದಿ, ವೇಸರ, ದ್ರಾವಿಡ ಶಿಖರಗಳು, ಕಂಬದಹಳ್ಳಿ

ಪಂಚಕೂಟ ಬಸದಿ, ವೇಸರ, ದ್ರಾವಿಡ ಶಿಖರಗಳು, ಕಂಬದಹಳ್ಳಿ

ವಾಸ್ತುಗ್ರಂಥಗಳಲ್ಲಿ ದೇವಾಲಯ ವಾಸ್ತುವಿನ ವಿವರಗಳೊಂದಿಗೆ, ನಾಗರ, ದ್ರಾವಿಡ, ವೇಸರ ಶೈಲಿಗಳ ಲಕ್ಷಣಗಳನ್ನು ಹೇಳಿದೆ. ಷಡ್ವರ್ಗಗಳಲ್ಲಿ ಎರಡು ಭಾಗ. ಅಧೋಭಾಗ ಮತ್ತು ಊರ್ಧ್ವಭಾಗ. ಅಧಿಷ್ಠಾನ, ಪಾದ, ಪ್ರಸ್ತರಗಳು ಅಧೋಭಾಗ; ಕಂಠ, ಶಿಖರ, ಸ್ತೂಪಿಗಳು ಊರ್ಧ್ವಭಾಗ. ಕಾಶ್ಯಪಶಿಲ್ಪ ಗ್ರಂಥವು ಊರ್ಧ್ವಭಾಗವನ್ನು ಶೈಲಿಯ ನಿರ್ಣಯದಲ್ಲಿ ಹೆಚ್ಚು ಗಮನಿಸಿ ವಿವರಿಸಿದೆ. ಅದಕ್ಕಾಗಿ ಸರಳೀಕರಿಸಿದ ಸೂತ್ರವನ್ನು ನೀಡಿದೆ (ಕೃಷ್ಣರಾಯ ಮತ್ತು ಆಪ್ಟೆ : ೧೯೨೬ : ೪೨, ೪೫).

ವೇದಾಶ್ರಂ ನಾಗರೇ ಗಲಂ ವಸ್ವಶ್ರಂ ದ್ರಾವಿಡೇ ಗಲಂ
ವೃತ್ತಂ ತು ವೇಸರೇ ಹರ್ಮ್ಯೇ ಗಲಮಾನ ಕುಲಂ ನಯೇತ್
ನಾಗರೇ ಚತುರಶ್ರಂ ತದ್‌ವಸ್ವಶ್ರಂ ದ್ರಾವಿಡೇ ಶಿರಃ
ವೃತ್ತಂ ತು ವೇಸರೇ ಹರ್ಮ್ಯೇ ಶಿರಸೋವರ್ತನಂ ಕ್ರಮಾತ್

ಇದನ್ನು ಬಹುಪಾಲು ಗ್ರಂಥಗಳು ಒಪ್ಪಿಕೊಂಡಿವೆ. ಆದರೆ ಮಾನಸಾರ ಗ್ರಂಥವು ಮೇಲ್ಭಾಗವಾಗಲಿ ಕೆಳಭಾಗವಾಗಲಿ ದೇವಾಲಯ ರಚನೆಯಲ್ಲಿ ವಶ್ವಶ್ರ ಅಥವಾ ಷಡಶ್ರವಿದ್ದರೆ ದ್ರಾವಿಡ, ವೃತ್ತಾಕಾರ ಅಥವಾ ದ್ವಯಶ್ರವೆನಿಸಿದರೆ ವೇಸರ ಎನ್ನುತ್ತದೆ.

ಮೇಲ್ಕಂಡ ವಿವರಗಳು ದಾಕ್ಷಿಣಾತ್ಯ ಸಂಪ್ರದಾಯದ ಪ್ರಮುಖ ಶೈಲಿಗಳ ಬಗ್ಗೆ ಸಾಕಷ್ಟು ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿವೆ.