ಕರ್ನಾಟಕದ ದೇವಾಲಯಗಳನ್ನು ಸ್ಥೂಲವಾಗಿ ಗಮನಿಸಿದಾಗ, ದಾಕ್ಷಿಣಾತ್ಯ ಮತ್ತು ಔತ್ತರೇಯ ಎಂಬ ಎರಡು ಸಂಪ್ರದಾಯಗಳನ್ನು ಮೇಲುನೋಟದಲ್ಲೇ ಗುರುತಿಸಬಹುದು. ಇವೆರಡೂ ಸಂಪ್ರದಾಯಗಳಿಗೆ ಸಂಬಂಧಿಸಿದಂತೆ ಹಲವಾರು ಗ್ರಂಥಗಳು ಪ್ರಕಟವಾಗಿದ್ದು, ಇವುಗಳ ಅಧ್ಯಯನದಿಂದ ದೇವಾಲಯಗಳ ಶೈಲಿಗಳನ್ನು ಗುರುತಿಸಬಹುದು. ದಾಕ್ಷಿಣಾತ್ಯ ಸಂಪ್ರದಾಯದ ಗ್ರಂಥಗಳು ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಕಟಗೊಂಡಿದ್ದು ಈ ಗ್ರಂಥಗಳ ವಿವರಗಳನ್ನು ಪರಿಶೀಲಿಸಿ, ವ್ಯವಸ್ಥಿತಿವಾಗಿ ಕ್ರೋಢೀಕರಿಸಿದಲ್ಲಿ, ದೇವಾಲಯದ ಸ್ವರೂಪ ವ್ಯಕ್ತವಾಗುತ್ತದೆ. ಈ ದೇವಾಲಯಗಳು ಷಡ್ವರ್ಗ ದೇವಾಲಯಗಳೆನಿಸಿದ್ದು ಈ ದೇವಾಲಯಗಳ ವಿವರಗಳನ್ನು ಒಂದು ಚೌಕಟ್ಟಿನಲ್ಲಿ ನೀಡುವುದು ಈ ಪ್ರಬಂಧದ ಉದ್ದೇಶವೆನಿಸಿದೆ.

16_382_DV-KUH

ವಿಮಾನ : ಷಡ್ವರ್ಗ ರಚನೆ

ಅಧಿಷ್ಠಾನದ ಉಪಾನಸ್ತರದಿಂದ ಆರಂಭಿಸಿ ಸ್ತೂಪಿಯಲ್ಲಿ ಅಂತ್ಯಗೊಳ್ಳುವ ರಚನೆಗಳನ್ನು ಯದ್ ಉಪಾನಾದಿ ಸ್ತೂಪಿ ಪರ್ಯಂತಂ ಎಂದು ಗುರುತಿಸಲಾಗಿದ್ದು, ಈ ಷಡ್ವರ್ಗ ರಚನೆಗಳನ್ನು “ವಿಮಾನ”ವೆಂದೂ ಗುರುತಿಸಲಾಗಿದೆ. ಇವುಗಳ ಸಾಮಾನ್ಯ ವಿವರಣೆಯು ಕೆಳಕಂಡಂತಿದೆ.

ವಿಮಾನಾನಾಂ ಸರ್ವೇಷಾಂ ಸಾಮಾನ್ಯ ಮಿದಮುಚ್ಯತೇ
ಅಧಿಷ್ಠಾನಂ ಪಾದವರ್ಗಃ ಪ್ರಸ್ತರಃ ಗ್ರೀವಕಾದಪಿ
ಶಿಖರಸ್ಥೂಪಿಕಾಶ್ಚೇತಿ ಷಡ್ವರ್ಗ ಇತಿ ಕೀರ್ತಿತಃ

ಶಿಖರವಿರುವ ದೇವಾಲಯಗಳಿಗೆ ವಿಮಾನವೆಂಬ ಹೆಸರು. ಅಧಿಷ್ಠಾನ, ಪಾದ, ಪ್ರಸ್ತರ, ಗ್ರೀವ, ಶಿಖರ, ಸ್ತೂಪಿಗಳೇ ಷಡ್ವರ್ಗಗಳು. ಇದನ್ನೇ ಏಕತಲ ರಚನೆ, ಏಕಭೂಮಿ ರಚನೆ ಎಂದೂ ವಿವರಿಸಲಾಗಿದೆ.

ಅಥೈಕಭೂಮಿಂ ವಕ್ಷೇ ಅಧಿಷ್ಠಾನಂ ಪಾದ ಪ್ರಸ್ತರ ಗ್ರೀವ
ಶಿಖರ ಸ್ತೂಪಿಕಾಶ್ಚೇತಿ ಷಡ್‌ವರ್ಗಯುಕ್ ಭೂಮಿಃ

ಏಕಭೂಮಿ ರಚನೆಯು ಸರಳವಾದದ್ದು. ತಲ ಅಥವಾ ಭೂಮಿ ರಚನೆ ಹೆಚ್ಚಿದಂತೆ ಅಲಂಕಾರ ಭಾಗವೂ ಹೆಚ್ಚುತ್ತದೆ. ಪಾದ, ಪ್ರಸ್ತರಗಳೇ ಅಲಂಕಾರಿಕ ಭಾಗಗಳು. ದ್ವಿತಲ ಎಂದಲ್ಲಿ ಅಧಿಷ್ಠಾನ, ಪಾದ, ಪ್ರಸ್ತರ, ಪುನಃ, ಪ್ರಸ್ತರ, ನಂತರ ಕಂಠ, ಶಿಖರ, ಸ್ತೂಪಿಗಳಿವೆ. ಭೂಮಿ ರಚನೆ ಅಥವಾ ತಲ ರಚನೆ ಹೆಚ್ಚಾದಂತೆ ಪಾದ, ಪ್ರಸ್ತರ ರಚನೆಗಳು ಪುನರಾವರ್ತನೆಗೊಳ್ಳುತ್ತವೆ. ಕೆಲವು ಗ್ರಂಥಗಳು ದ್ವಿತಲ, ತ್ರಿತಲ ಇತ್ಯಾದಿಯಾಗಿ ಹನ್ನೆರಡರವರೆಗೆ ವಿಸ್ತರಿಸಿವೆ.

ಏಕಭೂಮಿ ವಿಮಾನಾದಿ ರವಿಭೂಮ್ಯವಸಾನಕಂ

ಮಯಮತ, ಮಾನಸಾರ, ವಿಮಾನಾರ್ಚನ ಕಲ್ಪ ಗ್ರಂಥಗಳು ಹನ್ನೆರಡರವರೆಗೆ ವಿಸ್ತರಿಸಿವೆ. ಕಾಶ್ಯಪಶಿಲ್ಪ ಗ್ರಂಥವು ಹದಿನಾರು ಭೂಮಿಯವರೆಗೆ ಹೆಸರಿಸಿದೆ.

ಏಕಾದಿ ಷೋಡಶಾಂತಂ ಭೂಮಿನಾಂ ಯಥಾಕ್ರಮಂ

ಆರಂಭದಲ್ಲಿ ಹನ್ನೆರಡು ಭೂಮಿ ರಚನೆಗೆ ಸೀಮಿತವಾಗಿದ್ದ ನಿಯಮಗಳು ನಂತರ ಸಡಿಲಗೊಂಡು ಹದಿನಾರರವರೆಗೆ ಅವಕಾಶ ನೀಡಿತು ಎಂದು ಗಮನಿಸಬಹುದು.

ಹೋಮ” – ತಳಪಾಯ

ದೇವಾಲಯದ ತಳಪಾಯ ಅಥವಾ ಬುನಾದಿ ಭದ್ರವಾಗಿರಬೇಕು. ಅದಕ್ಕಾಗಿ ಗಟ್ಟಿಯಾದ ನೆಲ ಸಿಗುವವರೆಗೆ ತೋಡಬೇಕು. ಕನಿಷ್ಠ ಪಕ್ಷ ಒಂದಾಳೆತ್ತರ (ಅಂಜಲೀ ಬದ್ಧ ಪುರುಷ ಪ್ರಮಾಣ) ವಾದರೂ ತೋಡಿ, ನೀರು, ಮರಳು, ಜಲ್ಲಿ ಕಲ್ಲುಗಳ ಮಿಶ್ರಣದಿಂದ ತುಂಬಿ, ಆನೆಯ ಪಾದದಾಕಾರದ ಮರದ ದಂಡದಿಂದ ಕುಟ್ಟಿ ದಮ್ಮಸ್ ಮಾಡಬೇಕು. ಈ ರೀತಿಯಲ್ಲಿ ಮಾಡಿದ ಭದ್ರ ಬುನಾದಿಯ ಮೇಲೆ ಆಲಯ ರಚನೆಯನ್ನು ಕೈಗೊಳ್ಳಬೇಕು.

ಖನಯೇತ್ ಭೂತಲಂ ಶ್ರೇಷ್ಠಂ ಪುರುಷಾಂಜಲಿ ಮಾತ್ರಂ
ಜಲಾಂತಂ ವಾ ಶಿಲಾಂತಂ ವಾ ಪೂರಯೇತ್ ವಾಲುಕೈರ್ಜಲೈಃ
ಹಸ್ತಿಪಾದಾಕೃತಿ ದಾರುಸ್ತಂಭೇನ ಪ್ರಹಾರಯೇತ್
ಏವಂ ದೃಢಂ ಕೃತಂ ಚೋರ್ಧ್ವೇ ಯಥಾ ಹರ್ಮ್ಯಂ ತು ಕಾರಯೇತ್

ಉಪಪೀಠ

ಅಧಿಷ್ಠಾನದ ಕೆಳಗೆ ಉಪಪೀಠ ರಚನೆ ಇದೆ. ಉಪಪೀಠಕ್ಕೆ ಷಡ್ವರ್ಗಗಳ ಎಣಿಕೆಯಲ್ಲಿ ಸ್ಥಾನವಿಲ್ಲ. ಆದ್ದರಿಂದ ಇದರ ರಚನೆ ಐಚ್ಛಿಕ. ಆದರೆ ಪಾದ್ಮ ಸಂಹಿತೆಯು ಎಲ್ಲಾ ದೇವಾಲಯಗಳಲ್ಲಿ ಉಪಪೀಠ ಇರಬೇಕು ಎಂದು ನಿರ್ಬಂಧಿಸುತ್ತದೆ.

ಕೃತ್ವಾ ಉಪಪೀಠಂ ಉಪರಿಸ್ಯಾದಧಿಷ್ಠಾನಮುತ್ತಮಂ
ವಿನಾ ವಾಪ್ಯುಪಪೀಠಂ ಸ್ಯಾದಧಿಷ್ಠಾನ ಕಲ್ಪನಂ

ಉಪಪೀಠ ರಚನೆಯು ದೇವಾಲಯಗಳಿಗೆ ಒಂದು ರೀತಿಯ ರಕ್ಷಣೆ, ಸೌಂದರ್ಯ ಹಾಗೂ ಔನ್ನತ್ಯದ ಘನತೆಯನ್ನು ತಂದುಕೊಡುತ್ತದೆ.

ಉನ್ನತಾರ್ಥಂ ಶೋಭಾರ್ಥಂ ರಕ್ಷಾರ್ಥಂ ಬಲಾರ್ಥಕಂ

ಉಪಪೀಠ ರಚನೆಯಲ್ಲಿ ಮೂರು ವಿಧಗಳನ್ನು ಗುರುತಿಸಲಾಗಿದೆ.

ವೇದಿಭದ್ರಂ ಪ್ರತಿಭದ್ರ, ಸುಭದ್ರಂ, ವಾ ತ್ರಿಧಾ ಸ್ಮೃತಂ

ಈ ಮೂರು ಪ್ರಭೇದಗಳ ಲಕ್ಷಣಗಳು ಇಂತಿವೆ. ಪ್ರತಿಭದ್ರ ರಚನೆಯಲ್ಲಿ ಕಪೋತ ಸ್ತರವಿದೆ. ವೇದಿಭದ್ರ ರಚನೆಯಲ್ಲಿ ಕಪೋತ ರಚನೆಯಿಲ್ಲ. ಸುಭದ್ರವೆನ್ನುವ ಪ್ರಭೇದದಲ್ಲಿ ಸಿಂಹ, ಮಕರ, ಆನೆ, ಯಾಳಿ ಮುಖಗಳ ಅಲಂಕಾರವಿದೆ. ವೇದಿಭದ್ರ ಉಪಪೀಠದಲ್ಲಿ ಅಷ್ಟಾಂಗ, ಷಡಂಗ ಮತ್ತು ಪಂಚಾಂಗ ಎನ್ನುವ ಪುನಃ ಪ್ರಭೇದಗಳಿವೆ. ಅಷ್ಟಾಂಗ ರಚನೆಯ ವಿವಿಧ ಸ್ತರಗಳು ಕೆಳಕಂಡಂತಿದೆ.

ಉಪಪೀಠ, ಪ್ರವೇಶದ್ವಾರ ಭೋಗನಂದೀಶ್ವರ ದೇವಾಲಯ, ನಂದಿ

ಉಪಪೀಠ, ಪ್ರವೇಶದ್ವಾರ ಭೋಗನಂದೀಶ್ವರ ದೇವಾಲಯ, ನಂದಿ

ಉಚ್ಛ್ರಾಯೇ ಭಾನುಭಾಗೇ ತು ಸೋಪಾನಮೀರಿತಂ
ಪದ್ಮಮಂಶಂ ತದೂರ್ಧ್ವಂ ಕ್ಷೇಪಣಂ ಪಂಚಭಾಗಿಕಂ
ಗ್ರೀವಮರ್ಧೇನ ಕಂಪಂ ಸ್ಯಾತ್ ಭಾಗೈಕೇನ ಅಂಬುಜಂ ಭವೇತ್
ಶೇಷಾಂಶಂ ವಾಜನಂ ಕಂಪಂ ಅಷ್ಟಾಂಗಂ ಉಪಪೀಠಕಂ

ಅಷ್ಟಾಂಗ ಉಪಪೀಠ ರಚನೆಯಲ್ಲಿ ಉಪಾನ, ಪದ್ಮ, ಕ್ಷೇಪಣ, ಗ್ರೀವ, ಕಂಪ, ಊರ್ಧ್ವ ಪದ್ಮ, ವಾಜನ ಮತ್ತು ಕಂಪ ಎಂಬ ಎಂಟು ಸ್ತರಗಳು. ಷಡಂಗ ರಚನೆಯಲ್ಲಿ ಮೇಲೆ ತಿಳಿಸಿದ ಎಂಟು ಸ್ತರಗಳಲ್ಲಿ ಪದ್ಮ ಮತ್ತು ಊರ್ಧ್ವಪದ್ಮಗಳಿಲ್ಲ.

ಅಷ್ಟಾಂಗಮೇವಾಖ್ಯಾತಂ ಷಡಂಗಂ ತದ್ ವಿನಾಂಬುಜಂ

ಪಂಚಾಂಗವು ಷಡಂಗ ಮೂಲದಿಂದ ಬೆಳವಣಿಗೆ ಪಡೆದಿದೆ. ಷಡಂಗದಲ್ಲಿ ಪದ್ಮ, ಊರ್ಧ್ವ ಪದ್ಮಗಳನ್ನು ತ್ಯಜಿಸಿದಂತೆ, ಪಂಚಾಂಗದಲ್ಲಿ ಮೇಲ್ಭಾಗದ ಕಂಪ ರಚನೆಯನ್ನೂ ಕೈಬಿಡಲಾಗಿದೆ.

ಊರ್ಧ್ವೇಕಂಪಂ ವಿನಾ ವಾಪಿ ಪಂಚಾಂಗಮುಪಪೀಠಕಂ

ಪ್ರತಿಭದ್ರ ರಚನೆಯಲ್ಲಿ ಎರಡು ಪ್ರಭೇದಗಳು. ಮೊದಲ ಪ್ರಭೇದದಲ್ಲಿ ಕಪೋತದೊಂದಿಗೆ ಪ್ರತಿ ಮತ್ತು ವಾಜನ ಸ್ತರಗಳಿವೆ. ಮತ್ತೊಂದು ಪ್ರಭೇದದಲ್ಲಿ ಕಂಪದ ಬದಲಿಗೆ ಆಲಿಂಗ, ಅಂತರಿಕ ಸ್ತರಗಳು. ಪ್ರತಿಭದ್ರ ಉಪಪೀಠದ ವಿವರಗಳು ಇಂತಿವೆ.

ಪಾದುಕಂ ಪಂಕಜಂ ಕಂಪಂ ಕಂಠಮುತ್ತರಮಂಬುಜಂ
ಕಪೋತ ಪಾಲಿಕಾಂತಾದಿ ಪ್ರತಿವಾಜನಮುಚ್ಯತೇ
ಪ್ರತಿಭದ್ರಮಿದಂ ನಾಮ್ನಾ ಸರ್ವಾಲಂಕಾರ ಸಂಯುತಂ

ಸುಭದ್ರ ಅಥವಾ ಸೌಭದ್ರ ಉಪಪೀಠದಲ್ಲಿಯೂ ಎರಡು ಪ್ರಭೇದಗಳಿವೆ. ಇದರ ಕಂಠಭಾಗವು ಸಿಂಹ, ಯಾಳಿ, ಮಕರ ಮುಖಗಳನ್ನು ಹೊಂದಿದೆ.

ಸುಭದ್ರಂ ದ್ವಿಧಾ ಪ್ರೋಕ್ತಂ ಸರ್ವಾಲಂಕಾರ ಸಂಯುತಂ

ಅಧಿಷ್ಠಾನ

ಉಪಪೀಠದ ನಂತರ ದೇವಾಲಯದ ಆದ್ಯಂಗವೆನಿಸಿದ ಅಧಿಷ್ಠಾನ ರಚನೆ ಇದೆ. ಮಸೂರಕ, ತಲ, ಧರಾತಲ, ಕುಟ್ಟಿಮ ಇವು ಪರ್ಯಾಯ ಪದಗಳು.

ಮಸೂರಕಂ ಅಧಿಷ್ಠಾನಂ ವಸ್ವಾಧಾರಂ ಧರಾತಲಂ
ತಲಂ ಕುಟ್ಟಿಮಮಾದ್ಯಂಗಂ ಪರ್ಯಾಯವಚನಾನಿ

ಅಧಿಷ್ಠಾನ, ವಿರೂಪಾಕ್ಷ ದೇವಾಲಯ, ಪಟ್ಟದಕಲ್ಲು

ಅಧಿಷ್ಠಾನ, ವಿರೂಪಾಕ್ಷ ದೇವಾಲಯ, ಪಟ್ಟದಕಲ್ಲು

ಪ್ರತ್ಯಂಗ ಮತ್ತು ಪಟ್ಟಿಕಾಂಗ ಎಂದು ಎರಡು ಪ್ರಮುಖ ಪ್ರಭೇದಗಳು. ಈ ಪ್ರಭೇದಗಳನ್ನು ಪ್ರತಿಯೊಂದು ವಾಸ್ತುಗ್ರಂಥಗಳೂ ವಿವರಿಸಿವೆ. ಪ್ರತ್ಯಂಗದಲ್ಲಿ ಪ್ರತಿಸ್ತರವಿದ್ದರೆ ಪಟ್ಟಿಕಾಂಗದಲ್ಲಿ ಪಟ್ಟಿಕಾ ರಚನೆ ಇದೆ.

ದ್ವಿಧಾ ತದಿಹಂ ಪ್ರೋಕ್ತಂ ಪ್ರತ್ಯಂಗಂ ಪಟ್ಟಿಕಾಂಗಂ

ಅಧಿಷ್ಠಾನವನ್ನು ಪಾದಬಂಧ ಮತ್ತು ಪ್ರತಿಬಂಧ ಎಂದೂ ಗುರುತಿಸಲಾಗುತ್ತದೆ. ಅಧಿಷ್ಠಾನ ಮತ್ತು ದ್ವಾರರಚನೆಗೆ ಸಂಬಂಧಿಸಿದಂತೆ ಪಾದಬಂಧ ರಚನೆಯನ್ನು ಗುರುತಿಸಬಹುದು.

ಅಧಿಷ್ಠಾನ, ಬಸದಿ, ಕಂಬದಹಳ್ಳಿ

ಅಧಿಷ್ಠಾನ, ಬಸದಿ, ಕಂಬದಹಳ್ಳಿ

ಪಾದಬಂಧೇ ಜನ್ಮಾದಿ ಪಂಚವರ್ಗೇಷು ತತ್ತದಂಗ ಅವಸಾನಕೇ ದ್ವಾರಸ್ಥಲಂ
ಸಂಕಲ್ಪಯೇತ್, ಅನ್ಯೇಷು ಪಟ್ಟಿಕಾಂತೇಷು ಏವಂ ಯುಕ್ತ್ಯಾಕಾರಯೇತ್
ಪ್ರತ್ಯಂಗೇಷು ಪ್ರತೇರುಪರಿ ದ್ವಾರಸ್ಥಲಂ ಸಂಕಲ್ಪಯೇತ್, ಪ್ರತಿಚ್ಛೇದಂ ಕುರ್ಯಾತ್

ಪಾದಬಂಧ ಅಧಿಷ್ಠಾನದಲ್ಲಿ ಐದು ಸ್ತರಗಳಿವೆ. ದ್ವಾರರಚನೆಯನ್ನು ಈ ಐದು ಸ್ತರಗಳಲ್ಲಿ ಯಾವ ಸ್ತರದ ಮೇಲಾದರೂ ಕೂರಿಸಿ ರಚಿಸಬಹುದು. ಪಟ್ಟಿಕಾಂಗ ಅಥವಾ ಪ್ರತಿಬಂಧ ರಚನೆಯಲ್ಲಿ ಪ್ರತಿಯ ಮೇಲೆ ದ್ವಾರವನ್ನು ರಚಿಸಬೇಕು. ಇದರಲ್ಲಿ ಕೆಳಸ್ತರಗಳ ಮೇಲೆ ರಚನೆಗೆ ಅವಕಾಶವಿಲ್ಲ. ಪ್ರಾಕಾರ, ಗೋಪುರ ದ್ವಾರಗಳಲ್ಲಿ ಪಾದಬಂಧ ಅಧಿಷ್ಠಾನವಿದೆ. ಮಂಟಪಗಳಲ್ಲಿ ಪ್ರತಿಬಂಧ ಅಧಿಷ್ಠಾನವಿದ್ದು, ಸ್ತಂಭಗಳು ಅಧಿಷ್ಠಾನದ ಮೇಲೆ ನಿಂತಿವೆ. ಮಾನಸ್ತಂಭಗಳ ರಚನೆಯಲ್ಲಿ ಪಾದಬಂಧ ಅಧಿಷ್ಠಾನವನ್ನು ಕಾಣಬಹುದು.

ಪ್ರಾಕಾರ ಗೋಪುರ ದ್ವಾರಂ ಸ್ಯಾದಧಿಷ್ಠಾನ ಛೇದನಂ

ಅಧಿಷ್ಠಾನ ಪ್ರಭೇದಗಳಿಗೂ ಕುಮುದ ರಚನೆಗೂ ನೇರವಾದ ನೆಂಟು.

ಸರ್ವೇಷಾಂ ಪ್ರತಿಬಂಧಾನಾಂ ಕುಮುದಂ ವೃತ್ತಮಾಚರೇತ್
ಪಾದಬಂಧ ತಲಾನಾಂ ತು ವಸ್ವಶ್ರಂ ಕುಮುದಂ ಭವೇತ್

ಪ್ರತಿಬಂಧ ಅಧಿಷ್ಠಾನದಲ್ಲಿ ವೃತ್ತಕುಮುದವೂ ಪಾದಬಂಧ ಅಧಿಷ್ಠಾನದಲ್ಲಿ ಅಷ್ಟಾಶ್ರಕುಮುದವೆಂದು ಶಾಸ್ತ್ರಗ್ರಂಥಗಳ ನಿಯಮವಿದೆ. ಆದರೆ ಕುಮುದ ಸ್ತರದ ಕೆಳಗೆ ಮತ್ತು ಮೇಲ್ಭಾಗದಲ್ಲಿ ಪದ್ಮರಚನೆ ಇದ್ದಲ್ಲಿ ಪಾದಬಂಧದಲ್ಲಿಯೂ ವೃತ್ತಕುಮುದವನ್ನು ರಚಿಸಬಹುದು.

ಊರ್ಧ್ವಾ ಅಧಸ್ತಾತ್ ಅಂಬುಜೋಪೇತಂ ಕುಮುದಂ ವೃತ್ತಮಾಚರೇತ್
ಅನ್ಯೇವೈ ಕುಮುದಂ ಸರ್ವೇ ಪ್ರತಿಬಂಧಾಂಘ್ರಿಬಂಧಯೋಃ
ವೃತ್ತಂ ವಸುಕೋಣಂ ಕ್ರಮೇಣೈವ ತು ಕಲ್ಪಯೇತ್

ಪಾದಬಂಧ ಮತ್ತು ಪ್ರತಿಬಂಧ ಅಧಿಷ್ಠಾನದಲ್ಲಿ ಹಲವಾರು ಪ್ರಭೇದಗಳನ್ನು ಗ್ರಂಥಗಳು ವಿವರಿಸಿವೆ. ಪ್ರಸ್ತುತ ಲಭ್ಯವಿರುವ ದೇವಾಲಯಗಳಲ್ಲಿ ಎಲ್ಲಾ ಲಕ್ಷಣಗಳನ್ನೂ ಗುರುತಿಸಲು ಸಾಧ್ಯವಾಗದು. ಪ್ರಮುಖ ಪ್ರಭೇದಗಳು ಸಾಮಾನ್ಯ ಲಕ್ಷಣಗಳನ್ನು ತಿಳಿಯಬಹುದು.

ಅಧಿಷ್ಠಾನಸ್ಯಚೋತ್ಸೇಧಂ ಪಂಚವಿಂಶತಿ ಭಾಜಿತೇ
ಶಿವಾಂಶಂ ಪಾದುಕೋತ್ಸೇಧಂ ಜಗತೀ ವಸುಭಾಗಯಾ
ಧಾತ್ವಂಶಂ ಕುಮುದೋತ್ಸೇಧಂ ವ್ಯೋಮಾಂಶಂ ಕಂಪಮಾನಕಂ
ಅತಲಾಂಶಂ ಗಲೋತ್ಸೇಧಂ ಶಶ್ಯಾಂಶೇ ಊರ್ಧ್ವಕಂಪಕಂ
ಮಹಾಪಟ್ಟೀ ಗುಣಾಂಶಂ ತು ತದೂರ್ಧ್ವಂಶೇನ ಕಂಪಕಂ
ಪಾದಬಂಧಮಿತಿ ಖ್ಯಾತಮುಪಾನ ರಹಿತಂ ತಥಾ

ಪಾದಬಂಧ ಅಧಿಷ್ಠಾನದಲ್ಲಿ ಕ್ರಮವಾಗಿ ಪಾದುಕ, ಜಗತಿ, ಕುಮುದ, ಕಂಪ, ಗಲ, ಊರ್ಧ್ವಕಂಪ, ಮಹಾಪಟ್ಟಿ, ಕಂಪ, ಸ್ತರಗಳನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ. ಇಲ್ಲಿ ಉಪಾನ ರಚನೆ ಇಲ್ಲ.

ಅಧಿಷ್ಠಾನಸ್ಯಚೋತ್ಸೇಧಮೇಕೋನವಿಂಶದಂಶಿತೇ
ಉಪಾನಂಚೇತ್ ಭಾಗೇನ ಸಪ್ತಾಂಶಂ ಜಗತೀ ಭವೇತ್
ಷಡಂಶಂ ಕುಮುದೋತ್ಸೇಧಮಾಲಿಂಗಂತ್ವೇಕಭಾಗಯಾ
ತ್ರಿಪಟ್ಟಂ ತ್ವೇಕಭಾಗೇನ ಪ್ರತ್ಯೋತ್ಸೇಧಂ ದ್ವಿಭಾಗಿಕಂ
ವಾಜನಂ ಚೈವ ಭಾಗೇನ ಪ್ರತಿಬಂಧಮಿದಂ ಜಗತ್

ಉಪಾನ, ಜಗತಿ, ಕುಮುದ, ಆಲಿಂಗ, ತ್ರಿಪಟ್ಟ, ಪ್ರತಿ ಮತ್ತು ವಾಜನಗಳು ಪ್ರತಿಬಂಧ ಅಧಿಷ್ಠಾನದ ಸ್ತರಗಳು. ತ್ರಿಪಟ್ಟಕುಮುದ, ತ್ರಿಪಟ್ಟ ಎರಡೂ ರಚನೆಗಳು ಬೇರೆ ಬೇರೆ. ವಸ್ವಶ್ರ ಕುಮುದದ ಮುಂಭಾಗ ಕಾಣುವ ಪರಿಯನ್ನು ಅನುಸರಿಸಿ ತ್ರಿಪಟ್ಟಕುಮುದ ಎಂದು ಗುರುತಿಸಿದ್ದಾರೆ.

ಕೇವಲ ತ್ರಿಪಟ್ಟ ಎಂದಲ್ಲಿ ಅಗಲವಾದ ಪಟ್ಟಿಕೆ. ಇದರಲ್ಲಿ ಅಲಂಕರಣಕ್ಕೆ ಅವಕಾಶವಿದೆ. ತ್ರಿಪಟ್ಟದ ನಂತರ ಯಾವಾಗಲೂ ಪ್ರತಿಯ ರಚನೆ ಇರುತ್ತದೆ.

ತ್ರಿಪಟ್ಟೋರ್ಧ್ವೇ ಪ್ರತಿಹ್ಯೇವ ಸರ್ವತ್ರ ಪರಿಕಲ್ಪಯೇತ್

ಆಧಿಷ್ಠಾನದ ನಂತರ ಸ್ತಂಭ ರಚನೆಗೆ ಮುನ್ನ ವೇದಿಕಾ ಭಾಗವನ್ನು ಕಾಣಬಹುದು.

ಅಧಿಷ್ಠಾನೋಪರಿಷ್ಟಾತ್ತು ಸ್ತಂಭಮೂಲೇ ತು ಕಲ್ಪಯೇತ್

ಕಾಶ್ಯಪಶಿಲ್ಪ ಗ್ರಂಥದ ಪ್ರಕಾರ ಕಂಠ, ಪದ್ಮ ಹಾಗೂ ಕಂಪ ಇವು ವೇದಿಕಾ ರಚನೆಯ ಸ್ತರಗಳು.

ಷಡಂಶೇ ವೇದಿಕೋತ್ಸೇಧಂ ಗುಣಾಂಶಂ ಗಲಮಾನಕಂ
ಗಲೋರ್ಧ್ವೇ ಕಂಪಮೇಕಾಂಶಂ ಏಕೇನಾಬ್ಜಂ ಕಲ್ಪಯೇತ್
ತದೂರ್ಧ್ವೇ ಕಂಪಮೇಕಾಂಶಂ ಕರ್ತವ್ಯಂ ದ್ವಿಜಸತ್ತಮಾ

ಗಲ ಅಥವಾ ಕಂಠಭಾಗದಲ್ಲಿ, ನಿಗದಿತ ಅಂತರದಲ್ಲಿ ಗಲಪಾದ ರಚನೆಯನ್ನು ಕಾಣಬಹುದು. ಗಲಭಾಗದಲ್ಲಿ ಅಲಂಕರಣವೂ ಇದೆ.

ಸರ್ವೇಷಾಂ ವೇದಿಕಾನಾಂತು ಗಲಮಂಘ್ರಿ ವಿಭೂಷಣಂ

ಪಾದವರ್ಗ : ಸ್ತಂಭ ಅಥವಾ ಭಿತ್ತಿಭಾಗ

ಪಾದವರ್ಗವು ದ್ವಿತೀಯಾಂಗವೆನಿಸಿದ್ದು, ಸ್ಥಾಣು, ಸ್ಥೂಣ, ಜಂಘಾ, ಚರಣ, ಆಂಘ್ರಿ, ತಲಿಪ, ಕಂಪ ಇವು ಪರ್ಯಾಯ ಪದಗಳಾಗಿ ಬಳಕೆಯಲ್ಲಿವೆ.

ಸ್ಥಾಣುಃ ಸ್ಥೂಣಶ್ಚ ಪಾದಶ್ಚ ಜಂಘಾ ಚರಣೋಂಘ್ರಿಕಃ
ಸ್ತಂಭಶ್ಚ ತಲಿಪಃ ಕಂಪಃ ಪರ್ಯಾಯ ವಚನಾನಿ ಹಿ

ಪ್ರತಿಸ್ತಂಭ ಮತ್ತು ನಿಖಾತಸ್ತಂಭಗಳೆಂದು ಸ್ತಂಭಗಳಲ್ಲಿ ಎರಡು ವಿಧ. ನೆಲದ ಮೇಲೆ ಅಥವಾ ಅಧಿಷ್ಠಾನದ ಮೇಲೆ ನಿಂತದ್ದು ಪ್ರತಿಸ್ತಂಭ. ತಗ್ಗು ನೋಡಿ ನೆಲದಲ್ಲಿ ಹೂತದ್ದು ನಿಖಾತ ಸ್ತಂಭ. ಪ್ರತಿಸ್ತಂಭಗಳನ್ನು ವಿಶಾಲಸ್ತಂಭ ಎಂದು ಗುರುತಿಸಲಾಗಿದೆ.

ಪ್ರತೇರುತ್ತದೆ ಸೀಮಾಂತೇ ವಿಶಾಲಸ್ತಂಭ ಉಚ್ಯತೇ
ಉಪಾನಾದುತ್ತರಾಂತಸ್ಥೋ ನಿಖಾತಸ್ತಂಭಸ್ತದುಚ್ಯತೇ

ಅಧಿಷ್ಠಾನದ ಮೇಲೆ ನಿಂತದ್ದು ವಿಶಾಲಸ್ತಂಭ. ಅಧಿಷ್ಠಾನದ ವಿವಿಧ ಸ್ತರಗಳ ಮೇಲೆ ರಚಿಸಿದ್ದು ನಿಖಾತಸ್ತಂಭ, ನಿಖಾತಸ್ತಂಭಗಳು ಬಹಳ ಅಪುರೂಪದ್ದು.

ಸ್ತಂಭವನ್ನು ಸರಳವಾಗಿ ಪಾದಮೂಲ, ಪಾದಮಧ್ಯ ಮತ್ತು ಪಾದಾಗ್ರ ಎಂದು ವಿಭಾಗಿಸಿಕೊಳ್ಳಬಹುದು. ಪಾದಮೂಲವೇ ಸ್ತಂಭದ ಪೀಠಭಾಗ, ಪಾದಮಧ್ಯವೇ ದಂಡಭಾಗ, ಪಾದಾಗ್ರವು ಅಲಂಕಾರಿಕ ಅಥವಾ ವಿಷ್ಕಂಭ ಭಾಗ. ಸ್ತಂಭವನ್ನು ಚತುರಶ್ರ, ಅಷ್ಟಾಶ್ರ, ವೃತ್ತಾಕಾರಗಳಲ್ಲಿ ಕಡೆದಿರುತ್ತಾರೆ. ಹಲವು ಆಕಾರಗಳ ರಚನೆಗಳೂ ಇವೆ. ಒಂದೊಂದಕ್ಕೂ ಪ್ರತ್ಯೇಕ ಹೆಸರುಗಳು.

ಸ್ತಂಭ, ಪಂಚಕೂಟ ಬಸದಿ, ಕಂಬದಹಳ್ಳಿ

ಸ್ತಂಭ, ಪಂಚಕೂಟ ಬಸದಿ, ಕಂಬದಹಳ್ಳಿ

ಚತುರಶ್ರಂ ಬ್ರಹ್ಮಕಾಂತಂ ಸ್ಯಾದಷ್ಟಾಶ್ರಂ ವಿಷ್ಣು ಕಾಂತಕಂ
ಷೋಡಶಾಶ್ರಂ
ತು ವೃತ್ತಂ ರುದ್ರಕಾಂತಂ ಇತಿಸ್ಮೃತಂ
ಪಂಚಾಶ್ರಂ ಶಿವಕಾಂತಂ ಸ್ಯಾದ್ ಷಡಶ್ರಂ ಸ್ಕಂದಕಾಂತಕಂ

ಮಾನಸಾರ ಗ್ರಂಥದ ಪ್ರಕಾರ, ಚುತರಶ್ರ-ಬ್ರಹ್ಮ ಕಾಂತ, ಅಷ್ಟಾಶ್ರ (ಎಂಟು) – ವಿಷ್ಣುಕಾಂತ, ವೃತ್ತ ಅಥವಾ ಷೋಡಶ (ಹದಿನಾರು)- ರುದ್ರಕಾಂತ, ಪಂಚಾಶ್ರ (ಐದು)- ಶಿವಕಾಂತ, ಷಡಶ್ರ (ಆರು)- ಸ್ಕಂದಕಾಂತ ಈ ಹೆಸರುಗಳು ಗ್ರಂಥದಿಂದ ಗ್ರಂಥಕ್ಕೆ ಕೊಂಚ ಬದಲಾಗಬಹುದು. ಕೆಲವು ಸ್ತಂಭಗಳಲ್ಲಿ ಪೀಠವು ಚತುರ ಶ್ರಾಕಾರವಿದ್ದು, ದಂಡಭಾಗವು ಅಷ್ಟಾಶ್ರ ಹಾಗೂ ಅಲಂಕಾರಿಕ ಮೇಲ್ಭಾಗವು ವೃತ್ತಾಕಾರದಲ್ಲಿ ರಚನೆಗೊಳ್ಳುತ್ತವೆ. ಪೀಠವಿಲ್ಲದ ಸ್ತಂಭಗಳೂ ಉಂಟು. ಇವನ್ನು ಚಿತ್ರಸ್ಕಂಭವೆನ್ನುತ್ತಾರೆ. ವಿಶಾಲವಾದ ಮಂಟಪಗಳಲ್ಲಿ ಇದರ ಹೆಚ್ಚು ಬಳಕೆಯನ್ನು ಕಾಣಬಹುದು.

ಮೂಲೇ ವಿನಾಸನಾ ಸ್ತಂಭಂ ಚಿತ್ರಸ್ಕಂಭಮುದೀರಿತಂ

ಪೀಠಭಾಗವು ಪದ್ಮರಚನೆಯನ್ನು ಹೊಂದಿದ್ದು ಪದ್ಮಾಸನವೆನ್ನುತ್ತಾರೆ. ಪದ್ಮಾಸನದ ಕೆಳಭಾಗವು ಉದಯಭಾಗವೆನಿಸಿದ್ದು, ನಂತರ ಸುತ್ತಲೂ ಪದ್ಮರಚನೆಯ ಪಕಳೆಗಳು ಹರಡಿವೆ.

ದಂಡಂ ವಾ ಸಾರ್ಧದಂಡಂ ವಾ ಮೂಲೇ ಪದ್ಮಾಸನೋದಯಂ
ದ್ವಿದಂಡಂ ಪತ್ರ ವಿಸ್ತಾರಂ ಪದ್ಮಾಕಾರಂ ತು ಕಾರಯೇತ್

ಸ್ತಂಭಗಳನ್ನು ಸಾಶ್ರಯ, ನಿರಾಶ್ರಯ ಎಂದೂ ಗುರುತಿಸಲಾಗುತ್ತದೆ. ಸಾಶ್ರಯ ಸ್ತಂಭಗಳಲ್ಲಿ ಪೀಠದ ಮೇಲೆ ಆಸೀನ ಭಂಗೀಯ ಸಿಂಹ, ಗಜ, ವ್ಯಾಳಿಗಳ ರಚನೆಯನ್ನು ದಂಡಭಾಗದಲ್ಲಿ ಕಾಣಬಹುದು. ನಿರಾಶ್ರಯ ಸ್ತಂಭಗಳಲ್ಲಿ ಕೇವಲ ದಂಡವಿರುತ್ತದೆ.

ಪಾದಾಶ್ಚ ವಿವಿಧಾ ಪ್ರೋಕ್ತಾ ಸಾಶ್ರಯ ನಿರಾಶ್ರಯಾಃ
ಸಿಂಹ ಹಂಸ ಗಜ ವ್ಯಾಳಾಃ ಪಾದಾನಾಮಾಶ್ರಯಃ ಶುಭಾಃ

ಪಾದಾಗ್ರ ಭಾಗದಲ್ಲಿ ಹಲವು ಸ್ತರಗಳ ವಿಷ್ಕಂಭ ರಚನೆ ಇದೆ. ಇದನ್ನು ಸ್ತಂಭಭೂಷಣವೆಂದೂ ಗುರುತಿಸಲಾಗಿದೆ. ಈ ಭಾಗದಲ್ಲಿರುವ ಅಲಂಕಾರಿಕ ಸ್ತರಗಳನ್ನು ಕೆಲವು ಗ್ರಂಥಗಳು ಆರೋಹಣ ಕ್ರಮದಲ್ಲಿ ಮತ್ತೆ ಕೆಲವು ಅವರೋಹಣ ಕ್ರಮದಲ್ಲಿ ವಿವರಿಸುತ್ತವೆ. ಬೋದಿಗೆ, ವೀರಕಂಠ, ಮಂಡೀ, ಕುಂಭ ಸ್ಕಂದ, ಪದ್ಮಬಂಧ, ಮಾಲಾಸ್ಥಾನ ಮುಂತಾದ ಸ್ತರಗಳನ್ನು ಅವರೋಹಣ ಕ್ರಮದಲ್ಲಿ ಕಾಣಬಹುದು.

ಪೋತಿಕಾಖಂಡ ಮಂಡೀನಿ ಕುಂಭಂ ಸ್ಕಂದಂ ಪದ್ಮಕಂ
ಮಾಲಾಸ್ಥಾನಂ ಕ್ರಮೇಣೈವ ಸ್ತಂಭಾಗ್ರಾತ್ ಪರಿಕಲ್ಪಯೇತ್

ಈ ವಿವರಗಳು ಗ್ರಂಥದಿಂದ ಗ್ರಂಥಕ್ಕೆ ಬದಲಾಗಿವೆ. ಮೇಲಿನ ವಿವರಗಳು ಒಂದು ಸರಳ ವಿವರಣೆ ಮಾತ್ರ. ಕೆಲವು ಸ್ತರಗಳು ಬದಲಾಗಬಹುದು. ಬೋದಿಗೆಯು ಸ್ತಂಭಾಗ್ರ ತುದಿಯಲ್ಲಿರುವ ಅಂಗ. ಒಂದು ಕಾಲಕ್ಕೆ ಇದು ಸ್ತಂಭದಿಂದ ಪ್ರತ್ಯೇಕಗೊಳ್ಳದ ನಿರ್ಮಿತಿಯಾಗಿತ್ತು.

ಕನೀಯಸಾ ಭೋದಿಕಾಖ್ಯಾತಂ ಆಂಘ್ರಿಯೋರ್ಭೋದಿಕಾನ್ವಿತಂ

ಛಾಯಾಭಾಗವು ಬೋದಿಗೆಯ ಅಲಂಕಾರ ಭಾಗವೆನ್ನಿಸಿದೆ. ಛಾಯಾಭಾಗದ ಮೇಲ್ಗಡೆ ಕ್ಷೇಪಣವಿದ್ದು ತುಸು ಮುಂಚಾಚಿದೆ. ಚಿತ್ರಬೋದಿಗೆ, ಪತ್ರಬೋದಿಗೆ, ತರಂಗಬೋದಿಗೆ ಎಂದು ಮೂರು ಪ್ರಭೇದಗಳು. ಈ ಪ್ರಭೇದಗಳನ್ನು ಅಲ್ಪಸ್ವಲ್ಪ ವ್ಯತ್ಯಾಸಗಳೊಂದಿಗೆ ಕಾಮಿಕಾಗಮವು ನಾಗವೃತ್ತ, ಪತ್ರಚಿತ್ರ, ಸಮುದ್ರೋರ್ಮಿ ಎಂದು ಗುರುತಿಸಿದೆ.

ನಾಗವೃತ್ತಾ ಪತ್ರಚಿತ್ರಾ ಸಮುದ್ರೋರ್ಮೀತಿ ತ್ರಿಧಾ

ಬೋದಿಗೆಯ ಛಾಯಾಭಾಗವು ಹಿಂಬಾಗುವಿಕೆಯಿಂದ ಕೂಡಿದ್ದು, ತರಂಗ ಅಥವಾ ಅಲೆಗಳ ಮಡಿಕೆಗಳನ್ನು ಸೃಷ್ಟಿಸಿದೆ. ಮಧ್ಯದಲ್ಲಿ ೧/೨ ಅಥವಾ ೧/೩ ಭಾಗದಷ್ಟು ಸರಳ ರೀತಿಯ ನೇರಪಟ್ಟಿ ಇದೆ. ಇದನ್ನು ಮಧ್ಯಪಟ್ಟ ಎನ್ನುತ್ತಾರೆ. ಈ ಪ್ರಭೇದವೇ ತರಂಗ ಬೋದಿಗೆ ಅಥವಾ ಸಮುದ್ರೋರ್ಮಿ.

ಮಧ್ಯೇ ಪಟ್ಟ ತ್ರಿಭಾಗೈಕಂ ವಿಸ್ತಾರಾರ್ಧಮಥಾಪಿ ಮಾ
ಪಾರ್ಶ್ವಯೋರುಭಯೋಃ ಶೇಷಂ ತರಂಗಸ್ಥಾನಮುಚ್ಯತೇ
ಚತುರ್ಭಾಗೈಕ ಭಾಗೇನ ಯುಗ್ಮತರಂಗಕೈಃ
ಯಥೇಷ್ಟೈಃ ಪಾರ್ಶ್ವಯೋಶ್ಚೈವ ಸಮುದ್ರೋರ್ಮೀರಿತಿ ಸ್ಮೃತಾ

ಮುಷ್ಟಿಬಂಧ ಎಂದು ಗುರುತಿಸುವ ಬೋದಿಗೆ ಮತ್ತೊಂದು ಪ್ರಭೇದವೆನ್ನಿಸಿದೆ. ಬೋದಿಗೆಯ ಮುಂಭಾಗ ಮುಷ್ಟಿಹಿಡಿದಿರುವಂತೆ ಚಿತ್ರಿತವಾಗಿರುತ್ತದೆ. ಮುಷ್ಟಿಹಿಡಿಯ ಮುಂದೆ ಮಕರ, ವ್ಯಾಳಿ ಮುಂತಾದ ಅಲಂಕಾರಗಳಿವೆ.

ಮುಷ್ಟಿಬಂಧೋಪರಿಕ್ಷಿಪ್ತಾ ವ್ಯಾಳಸಂಹೃತಿ ರೂಪವತ್
ಸನಾಲಿಕಂ ಸಮತಲಂ ಸನಾಟಕಮಥಾಪಿವಾ
ಭೂತೇಭ ಮಕರೈರ್ವ್ಯಾಳ ಸಂಯುಕ್ತಾ ಚಾಗ್ರಮಂಡನಂ

ಪತ್ರಗಳಿಂದ ಅಲಂಕರಿಸಿದ್ದು ಪತ್ರಬೋದಿಗೆ ಎನ್ನಿಸಿದೆ.

ಪತ್ರೈರ್ವಿಚಿತ್ರಿತಾ ಪತ್ರಬೋದಿಕಾ ತು ಪ್ರಕೀರ್ತಿತಾ

ಸರಳವಾದ ಬೋದಿಗೆ ಎಂದಲ್ಲಿ ಚಿತ್ರಬೋದಿಗೆ ಅಥವಾ ನಾಗವೃತ್ತ.

ಕಾಶ್ಯಪಶಿಲ್ಪ ಗ್ರಂಥವು ಪದ್ಮ ಮುಕುಳಾಕಾರ ಬೋದಿಗೆಯನ್ನು ವರ್ಣಿಸಿದೆ. ಈ ರಚನೆಯ ಛಾಯಾಭಾಗದಲ್ಲಿ ಊರ್ಧ್ವಪದ್ಮ ಮತ್ತು ಅಧೋಪದ್ಮ ರಚನೆಗಳಿವೆ. ಊರ್ಧ್ವಪದ್ಮ ಎಂದಲ್ಲಿ ಪದ್ಮಮುಖವು ಮೇಲಕ್ಕಿರುವುದು. ಅಧೋಪದ್ಮ ಎಂದಲ್ಲಿ ಪದ್ಮವು ಕೆಳಮುಖವಾಗಿರುವುದು. ಊರ್ಧ್ವಪದ್ಮವು ಮೇಲ್ಮುಖವಾಗಿ ಪಟ್ಟಿಕಾಸ್ತರದವರೆಗೆ ಮುಂಚಾಚಿರುತ್ತದೆ. ಅಧೋಮುಖದ ಮುಂಬಾಗು ಇಳಿಮುಖವಾಗಿದ್ದು ಬಾಳೇಹೂವಿನೋಪಾದಿಯಲ್ಲಿ ಕಾಣಬಹುದು. ವಿಜಯನಗರದ ಅರಸರ ಕಾಲದಲ್ಲಿ ಹಾಗೂ ವಿಜಯನಗರೋತ್ತರ ಕಾಲದಲ್ಲಿ ಈ ರಚನೆಗಳು ಹೆಚ್ಚು ಪ್ರಚಲಿತದಲ್ಲಿದೆ.

ಪದ್ಮ ಮುಕುಳಾಕಾರ ಬೋದಿಗೆ

ಪದ್ಮ ಮುಕುಳಾಕಾರ ಬೋದಿಗೆ

ಅನ್ಯದ್‌ಭೋಧಂ ಷಡಂಶಂ ಕೃತ್ವಾ ಊರ್ಧ್ವಂ ಪಟ್ಟಿಕಾನ್ವಿತಂ
ಊರ್ಧ್ವಪದ್ಮಂ ಅಥಾಂಶೇನ ಕಂಠಮಧ್ಯೇನಕಾರಯೇತ್
ಅಧೋಪದ್ಮಂ ದ್ವಿಭಾಗೇನ ಚೋರ್ಧ್ವಪಟ್ಟಂ ಅಂಶಮುಚ್ಯತೇ
ಅಧಸ್ತು ಅಂಬುಜಮಧ್ಯಾಂಶಂ ಕಲ್ಪಯೇತ್ ಕ್ರಮೇಣ ತು
ಪದ್ಮಸ್ಯ ಮುಕುಳಾಕಾರಂ ಅಗ್ರಾತ್ ಅಧೋಗತಂ ಕುರು

ಬೋದಿಗೆಯ ಕೆಳಗಿನ ಸ್ತರ ವೀರಕಂಠ. ಇದು ಕಿರಿದಾದ ಭಾಗವೆನಿಸಿದ್ದು ಚತುರಶ್ರಾಕಾರ ರಚನೆ.

ಸ್ತಂಭದ ವಿಷ್ಕಂಭದ ಸ್ತರಗಳು, ಪಂಚಕೂಟ ಬಸದಿ, ಕಂಬದಹಳ್ಳಿ

ಸ್ತಂಭದ ವಿಷ್ಕಂಭದ ಸ್ತರಗಳು, ಪಂಚಕೂಟ ಬಸದಿ, ಕಂಬದಹಳ್ಳಿ

ಸರ್ವೇಷಾಮಪಿ ಪಾದಾನಾಂ ವೀರಕಂಠಂ ಯುಗಾಶ್ರಕಂ