ವೀರಕಂಠದ ಕೆಳಗೆ ಫಲಕ ಹಾಗೂ ಪದ್ಮಸ್ತರಗಳಿವೆ. ಇವೆರಡೂ ಸೇರಿ ಮಂಡೀ ಎಂಬ ಸಂಯುಕ್ತ ಸ್ತರವನ್ನು ಶಾಸ್ತ್ರ ಗ್ರಂಥಗಳು ಗುರುತಿಸಿವೆ. ನಂತರ ದೃಕ್, ಕಳಶ, ಆಶ್ಯ, ವೃತ್ತಕ, ಹೀರಕ ಮುಂತಾದ ಸ್ತರಗಳಿವೆ. ದೃಕ್ ಎನ್ನುವುದು ವೀರಕಂಠದಂತೆ ಕೊಂಚ ಕಿರಿದಾದ ಸ್ತಂಭ. ಈ ಎಲ್ಲಾ ಸ್ತರಗಳನ್ನು ಎಲ್ಲೆಡೆಯೂ ಕಾಣಲಾಗದು. ಕಲಶ ರಚನೆಯು ನಾಲ್ಕು ಪ್ರಭೇದಗಳನ್ನು ಹೆಸರಿಸುತ್ತದೆ. ಈ ವೈವಿಧ್ಯಮಯ ರಚನೆಗಳನ್ನು ಗುರುತಿಸಲು ಸಾಧ್ಯವಾಗಿಲ್ಲ. ಈ ಪ್ರಭೇದಗಳನ್ನು ಮಾತ್ರ ಹೆಸರಿಸಲಾಗಿದೆ.

ಪ್ರಿಯದರ್ಶನಂ ಸೌಮ್ಯಂ ಚಂದ್ರಕಾಂತಂ ಶ್ರೀಕರಂ

ಕೆಳಕಂಡ ಸಾಲುಗಳಲ್ಲಿ ಸ್ತಂಭದ ವಿಷ್ಕಂಭ ಭಾಗದ ಸಮಗ್ರ ಚಿತ್ರಣವನ್ನು ಕಾಣಬಹುದು.

ಊರ್ಧ್ವಭಾಗಂ ತು ಸಂಗ್ರಾಹ್ಯಂ ದ್ವಾವಿಂಶದಂಶಕಂ ಭಜೇತ್
ಯುಗಾಂಶಂ ಬೋದಿಕೋತ್ಸೇಧಂ ವೀರಕಂಠಂ ತತ್ಸಮಂ
ಭೂತಾಂಶಂ ಫಲಕೋತ್ಸೇಧಂ ಮಧ್ಯಮೂಲಂ ಶಿವಾಂಶಕಂ
ಕುಂಭೋತ್ಸೇಧಂ ವೇದಾಂಶಂ ಶಿವಾಂಶಂ ಕಂಠಮಾನಕಂ
ತದಾಸ್ಯೋದಯಮೇಕಾಂಶಂ ಪದ್ಮಮೇಕೇನ ಕಾರಯೇತ್
ವೃತ್ತಮರ್ಧೇನ ಕರ್ತವ್ಯಂ ಹೀನಂ ತತ್ಸಮಮುಚ್ಯತೇ
ಲಶುನಾಬ್ಜಲತಾ ಯುಕ್ತಂ ಮಾಲಾ ಮಾನಾದಿ ಪೂರ್ವವತ್

ಈ ವಿವರಣೆಯ ಪ್ರಕಾರ ವಿಷ್ಕಂಭದ ಅಲಂಕಾರಿಕ ಸ್ತರಗಳು ಇಂತಿವೆ. ಬೋದಿಗೆ (೪), ವೀರಕಂಠ (೪), ಫಲಕ (೫), ಮಧ್ಯಮೂಲ (ದೃಕ್) (೧), ಕುಂಭ (೪), ಕಂಠ (೧), ಆಸ್ಯ (೧), ಪದ್ಮ (೧), ವೃತ್ತ (೧/೨) ಮತ್ತು ಹೀನಕ (೧/೨)

[ಕೆಲವು ಸ್ತರಗಳುಳ್ಳ ಕುಂಭ ಎಂಬ ಸಂಯುಕ್ತ ಸ್ತರವನ್ನು ಕೆಲವು ಗ್ರಂಥಗಳು ಸೂಚಿಸಿದೆ. ಆದರೆ ಸ್ಪಷ್ಟವಾಗದು]. ಈ ಸ್ತರಗಳ ಅಂತ್ಯದಲ್ಲಿ ಮಾಲಾಸ್ಥಾನ ಎಂಬ ರಚನೆ ಇದೆ. ಇದರಲ್ಲಿ ಮುತ್ತುಗಳನ್ನು ಪೋಣಿಸಿದ ಹಾರಗಳು ಒಂದರ ಪಕ್ಕ ಮತ್ತೊಂದರಂತೆ ಸ್ತಂಭವನ್ನು ಸುತ್ತುವರೆದಿದೆ.

ಸ್ತಂಭಗಳಲ್ಲಿ ಚಿತ್ರ ಸ್ಕಂಭ, ಪಾಲಿಕಾ ಸ್ತಂಭ, ಸಂಯೋಗ ಸ್ತಂಭಗಳೆಂಬ ಹಲವು ವಿಧದ ರಚನೆಗಳನ್ನು ಮಾನಸಾರ ಗ್ರಂಥವು ಹೆಸರಿಸುತ್ತದೆ. ಪೀಠವಿಲ್ಲದ ಸ್ತಂಭಗಳು, ಚಿತ್ರ ಸ್ಕಂಭಗಳು, ಪಾದಮೂಲದಲ್ಲಿ ಪದ್ಮಾನಸಕ್ಕೆ ಪರ್ಯಾಯವಾಗಿ ಅಗಲವಾದ ‘ಕೂಡು’ ರಚನೆಗೆ ಪಾಲಿಕೆ ಎಂದು ಹೆಸರು. ಕೂಡು ಎಂದಲ್ಲಿ ಜೋಡಣೆಗೆ ನೆರವಾಗುವಂತಹದು. ಇದನ್ನುಳ್ಳದ್ದು ಪಾಲಿಕಾ ಸ್ತಂಭ.

ಪಾಲಿಕಾಕೃತಿವತ್ ವಾಪಿ ಶೇಷಂ ಯುಕ್ತ್ಯಾಪ್ರಯೋಜಯೇತ್
ಅಥವಾ ತನ್‌ಮೂಲೇತು ವಾ ಪಾಲಿಕಾದೀನಿ ವಿನ್ಯಸೇತ್

ಸ್ತಂಭಕ್ಕೆ ಪರ್ಯಾಯವಾಗಿ ಭಿತ್ತಿ ರಚನೆಯನ್ನು ಕಾಣಬಹುದು. ಈ ಭಿತ್ತಿಭಾಗದಲ್ಲಿ ಕುಂಭ ಪಂಜರ, ಕುಂಭ ಸ್ತಂಭ ಮುಂತಾದ ಅಲಂಕರಣವಿದೆ. ಕುಂಭಸ್ತಂಭ ರಚನೆಯ ಸರಳ ವಿವರಣೆ ಇಂತಿದೆ :

ಪಾದಮೂಲೈಕ ದಂಡೇನ ಪಾಲಿಕೋನ್ನತಮಿಷ್ಯತೇ
ತದ್ವಿಸ್ತಾರಂ ದ್ವಿದಂಡಂ ಕುಂಭತುಂಗಂ ದ್ವಿದಂಡಕಂ
ತತ್ ಪಾದಾಸ್ಯಾಗ್ರಕೇ ಕುರ್ಯಾನ್ನಾಸಿಕಾ ಪಂಜರಾನ್ವಿತಂ

ಪಾದಮೂಲದಲ್ಲಿ ಪಾಲಿಕಾ ರಚನೆ, ನಂತರ ಕುಂಭ, ಕುಂಭ ಮುಖದಿಂದ ದಂಡ, ದಂಡದ ಮೇಲ್ಭಾಗದಲ್ಲಿ ನಾಸಿಕೆಯಂತಹ ಪಂಜರ ರಚನೆ; ಅಲಂಕಾರ ಹೆಚ್ಚಾದಲ್ಲಿ ದಂಡದ ಇಕ್ಕೆಲಗಳಲ್ಲಿ ಲತಾ ರಚನೆ ಹರಡಿರುತ್ತದೆ. ಕುಂಭ ಪಂಚರವೇ ಇದು. ಸಂಯುಕ್ತ ಸ್ತಂಭವೆಂದಲ್ಲಿ ಉಪಪಾದಗಳುಳ್ಳದ್ದು. ಹೆಚ್ಚು ಕಡಿಮೆ ಪಾದದ ಎರಡರಷ್ಟು ಅಗಲವುಳ್ಳದ್ದು. ಮೂಲಪಾದಕ್ಕೆ ಅಂಟಿ ಕೊಂಡಂತೆ ಕಿರುಸ್ತಂಭಗಳಿರುತ್ತವೆ. ಇವೇ ಉಪಪಾದಗಳು. ಪದ್ಮಾಸನಕ್ಕೆ ಬದಲಾಗಿ ಅಗಲವಾದ ಪಾಲಿಕೆ, ಉಪಪೀಠದಂತಿರುತ್ತದೆ. ಪದ್ಮಾಸನವೆಂದು ಗುರುತಿಸಿದರೂ ಸರಳ ರಚನೆಯಲ್ಲ.

ಏಕೋಪಪಾದ ಸಂಯುಕ್ತಂ ದ್ವಿತ್ಯುಪಪಾದೇನ ಸಂಯುಕ್ತಂ
ಏವಂ ಕ್ರಮಮಿತಿ ಪ್ರೋಕ್ತಂ ಮೂಲೋ ಪದ್ಮಾಸನಾನ್ವಿತಂ

ಉಪಪಾದಗಳಿಗೆ ಬದಲಾಗಿ ಸಿಂಹ, ಯಾಳಿ, ಅಶ್ಚರಚನೆಗಳನ್ನೂ ಕಾಣಬಹುದಾಗಿದೆ.

ಸರ್ವೇಷಾಂ ಪಾದಮೂಲೋ ತು ಪಾಲಿಕಾಂ ಉಪಪೀಠವತ್
ಕುರ್ಯಾತ್ ಸಿಂಹಸ್ಯರೂಪಂ ವಾ ಪಾದಂ ಪತ್ರಾದಿಭೂಷಿತಂ

ಜಾಲಕಜಾಲಂದ್ರ ಇತ್ಯಾದಿ

ಜಾಲಕ, ಅರುಣಾಚಲೇಶ್ವರ ದೇವಾಲಯ, ನಂದಿ

ಜಾಲಕ, ಅರುಣಾಚಲೇಶ್ವರ ದೇವಾಲಯ, ನಂದಿ

ಸ್ತಂಭಕ್ಕೆ ಬದಲಾಗಿ ಭಿತ್ತಿ ರಚನೆ ಇದ್ದು ಭಿತ್ತಿಭಾಗದಲ್ಲಿ ಜಾಲಕವಿದ್ದಲ್ಲಿ ಜಾಲಕ ಭಿತ್ತಿ ಎಂದು ಹೆಸರು. ಗವಾಕ್ಷ, ಕುಂಜರಾಕ್ಷ, ಗುಳಿಕಾಜಾಲಕ, ಪತ್ರಜಾಲಕ ಮುಂತಾಗಿ ಹಲವು ಪ್ರಭೇದಗಳು. ಕಾಶ್ಯಪಶಿಲ್ಪ ಗ್ರಂಥದಲ್ಲಿ ಗೋನೇತ್ರ, ಹಸ್ತಿನೇತ್ರ, ನಂದ್ಯಾವರ್ತ, ಋಜುಕ್ರಿಯಾ, ಪುಷ್ಪಕರ್ಣ, ಸಕರ್ಣ ಎಂಬ ಆರು ಪ್ರಭೇದಗಳು. ಜಾಲಕ ಅಥವಾ ಜಾಲಂದ್ರದ ರಂಧ್ರಗಳು ಆಯತಾಶ್ರ ಅಥವಾ ದೀರ್ಘಾಶ್ರವಿದ್ದಲ್ಲಿ ಗೋನೇತ್ರವೆಂದು ಹೆಸರು. ಚತುರಶ್ರವಿದ್ದಲ್ಲಿ ಹಸ್ತಿನೇತ್ರ ಎಂದು ಹೆಸರು. ಐದು ಬಾಹುಗಳೊಂದಿಗೆ ಪುಷ್ಪಾಕಾರವಿದ್ದಲ್ಲಿ ನಂದ್ಯಾವರ್ತವೆಂದು ಹೆಸರು. ಲತಾಪತ್ರಗಳಿಂದ ಅಲಂಕೃತವಾದದ್ದು ಪತ್ರ ಜಾಲಕ, ಗುಳಿಕಾಜಾಲಕವು ವರ್ತುಲಾಕಾರ ರಂಧ್ರವುಳ್ಳದ್ದು. ಜಾಲಕಗಳಲ್ಲಿ ಉಬ್ಬುಶಿಲ್ಪಗಳನ್ನು ಅಳವಡಿಸಿರುವುದನ್ನು ಕಾಣಬಹುದಾಗಿದೆ.

ತೋರಣ

ತೋರಣಗಳ ರಚನೆಯೇ ಅಲಂಕಾರದ ಸಲುವಾಗಿ, ಕೆಲವೆಡೆ ಸ್ವತಂತ್ರವಾಗಿ ಭಿತ್ತಿಯ ಬೋಳುತನ ಪರಿಹರಿಸುವುದಕ್ಕಾಗಿ ರಚಿಸಿರುವುದುಂಟು.

ಮಂಗಳಾರ್ಥೇ ತುರಂತಿ ಯತ್ರ ತೋರಣಂ
ದ್ವಾರಾಗ್ರೇ ಸ್ತಂಭೇ ಉಪನಿಬದ್ಧಂ ಸಿಂಹದ್ವಾರಾಖ್ಯಂ

ತೋರಣಾಲಂಕಾರ, ಭಿತ್ತಿಕೋಷ್ಠ, ಕಂಬದಹಳ್ಳಿ

ತೋರಣಾಲಂಕಾರ, ಭಿತ್ತಿಕೋಷ್ಠ, ಕಂಬದಹಳ್ಳಿ

ದ್ವಾರದ ಮುಂದೆ ಬಾಗಿಲುವಾಡವನ್ನಾಧರಿಸಿ ನಿಂತದ್ದು ದ್ವಾರತೋರಣ, ಸ್ತಂಭಗಳನ್ನು ಆಧರಿಸಿ ನಿಂತಿದ್ದು ಸ್ತಂಭತೋರಣ, ಭಿತ್ತಿಯ ಅಲಂಕಾರಕ್ಕಾಗಿ ಮೂಡಿದ್ದು ಕುಡ್ಯತೋರಣ. ಗರ್ಭಗೃಹ ಮಂಟಪದ ನಡುವೆ, ಸುಕನಾಸಿ ಹಾಗೂ ಮಂಟಪದ ನಡುವೆ ತೋರಣ ರಚನೆಗಳನ್ನು ಕಾಣಬಹುದು.

ಪ್ರಾಸಾದ ಮಂಡಪಾದೀನಾಂ ಮಧ್ಯಭಾಗೇತು ತೋರಣಂ
ಅನೇನ ವಿಧಿನಾ ವಿಪ್ರ ಕರ್ತವ್ಯಂ ಕುಡ್ಯಬಾಹ್ಯಕೇ

ತೋರಣಗಳಲ್ಲಿ ಪ್ರಮುಖವಾಗಿ ಪತ್ರ ತೋರಣ, ಮಕರ ತೋರಣ ಮತ್ತು ಚಿತ್ರ ತೋರಣ ಎಂದು ಮೂರು ವಿಧ.

ಪತ್ರಾಖ್ಯಂ ತೋರಣಮೇಕಂ ದ್ವಿತೀಯಂ ಮಕರತೋರಣಂ
ತೃತೀಯಂ ಚಿತ್ರತೋರಣಂ ತು ತ್ರಿಧಾ ತೋರಣಾಕೃತಿಃ

ಇವುಗಳಲ್ಲಿ ಅತ್ಯಂತ ಜನಪ್ರಿಯವಾದುದು ಮಕರ ತೋರಣ. ಕನ್ನಡ ಶಾಸನಗಳಲ್ಲಿಯೂ ಮಕರ ತೋರಣಗಳ ಉಲ್ಲೇಖಗಳುಂಟು. ಇದರ ವಿವರಗಳು ಗ್ರಂಥದಿಂದ ಗ್ರಂಥಕ್ಕೆ ಕೊಂಚ ಬದಲಾಗುವುದುಂಟು. ತೋರಣದಲ್ಲಿ ಮೂರು ಭಾಗಗಳು. ಸ್ತಂಭಭಾಗ, ಗುಹಾಭಾಗ ಹಾಗೂ ಝಷಭಾಗ. ಝಷ ಎಂದಲ್ಲಿ ಅಲಂಕಾರ ಭಾಗ. ಪತ್ರತೋರಣವೇ ಸರಳವಾದ ರಚನೆ. ಇದು ಸ್ತಂಭಗಳ ಮೇಲೆ ಅರ್ಧಚಂದ್ರಾಕಾರವುಳ್ಳದ್ದು, ಕೆಲವೆಡೆ ಪತ್ರಗಳ ಅಲಂಕಾರವುಳ್ಳದ್ದು.

ಬಾಲಚಂದ್ರ ನಿಭಾಕಾರಂ ಪತ್ರೈಶ್ಚಿತ್ರಿತಂ ಪತ್ರತೋರಣಂ

ಕಾಶ್ಯಪಶಿಲ್ಪ ಗ್ರಂಥದ ಪ್ರಕಾರ ಮಕರ ತೋರಣವು ಎರಡೂ ಕಡೆ ಐದು ಬಾಗುಗಳುಳ್ಳದ್ದು. ಎರಡು ತುದಿಯಲ್ಲಿ ಮಕರ ಮುಖಗಳಿವೆ. ಮಧ್ಯೆ ಪೂರಿಮ ಮತ್ತು ಲತಾಲಂಕಾರವಿದೆ. ಪೂರಿಮ ಎಂದಲ್ಲಿ ಶಿಖರ ಪ್ರಾಯವೆನಿಸಿದ ಆಭರಣದಂತಹ ರಚನೆ.

ಪಂಚವಕ್ತ್ರ ಸಮಾಯುಕ್ತಂ ಪಾರ್ಶ್ವಯೋರ್ಮಕರಾಸ್ಯಕಂ
ಮಧ್ಯೇಪೂರಿಮ ಸಂಯುಕ್ತಂ ನಾನಾಫಲಲತಾನ್ವಿತಂ

ಮಯಮತ ಗ್ರಂಥದ ಪ್ರಕಾರ ಮಕರ ತೋರಣವು ಎರಡೂ ಕಡೆ ಮಕರ ವಕ್ತ್ರ, ಲತಾಲಂಕಾರ, ಮೇಲ್ಗಡೆ ಮಧ್ಯದಲ್ಲಿ ಪೂರಿಮ ಅಥವಾ ಪೂರಿತ.

ದ್ವಯೋರ್ಮಕರವಕ್ತ್ರಸ್ಥಿತ ಮಧ್ಯಮ ಪೂರಿಮಂ
ನಾನಾವಿಧಲತಾಯುಕ್ತಂ ಏತನ್ ಮಕರತೋರಣಂ

ಚಿತ್ರತೋರಣವು ಮಕರತೋರಣದ ಎಲ್ಲಾ ಲಕ್ಷಣಗಳೊಂದಿಗೆ, ಭೂತ, ವಿದ್ಯಾಧರ, ಯಾಳೀ ಹಂಸ, ಸಿಂಹ ಮುಖಗಳನ್ನೂ ಮುತ್ತಿನ ಹಾರಗಳನ್ನು ಧರಿಸಿದೆ.

ನಕ್ರತುಂಡಂ ಪ್ರಕರ್ತವ್ಯಂ ಭೂತವಿದ್ಯಾಧರಸ್ತಥಾ
ಸಿಂಹೈವ್ಯಾಳಕ ಹಂಸಾದ್ಯೈಬಲಾಗ್ರ ಮುಕ್ತಾದಾಮಕೈಃ

ಭಿತ್ತಿ ತೋರಣಗಳ ಗುಹಾಭಾಗದಲ್ಲಿ ದೇವ ದೇವತೆಗಳ ವಿಗ್ರಹಗಳನ್ನು ಇರಿಸಲು ಅವಕಾಶವಿದೆ.

ಗುಹಾಸು ಪ್ರತಿಮಾದ್ಯಾಸ್ಯುಃ ಪಾದಾಸ್ಸರ್ವಾಣಿ ಶೋಭಿತಃ

ದ್ವಾರತೋರಣಗಳ ಝಷಭಾಗದಲ್ಲಿ ಮಕರತೋರಣ ಅಥವಾ ಚಿತ್ರತೋರಣಗಳ ಅಲಂಕಾರವನ್ನು ಕಾಣಬಹುದು.

ಗರ್ಭಗೃಹ ಹಾಗೂ ಮಂಟಪ ಅಥವಾ ಸುಕನಾಸಿ ಅಥವಾ ಮಂಟಪಗಳ ನಡುವೆ ತೋರಣ ಭಾಗದಲ್ಲಿ ಅಷ್ಟ ಮಂಗಳಗಳ ರಚನೆಯನ್ನು ಕಾಣಬಹುದು. ಅಷ್ಟ ಮಂಗಲಗಳಲ್ಲಿ ಕಾಣುವ ಮಂಲಕರ ಚಿಹ್ನೆಗಳು ಎಂಟು. ಇವು ಬದಲಾಗುವುದುಂಟು.

ದರ್ಪಣಂ ಪೂರ್ಣಕುಂಭಂ ವೃಷಭಂ ಯುಗ್ಮಚಾಮರಂ
ಶ್ರೀವತ್ಸಂ ಸ್ವಸ್ತಿಕಂ ಶಂಖಂ ದೀಪಂ ದೇವಾಷ್ಟಮಂಗಲಂ

ಕಾಮಿಕಾಗಮ ಗ್ರಂಥವು ಒಂಬತ್ತು ಬಗೆಯ ಅಷ್ಟಮಂಗಲಗಳನ್ನು ಹೇಳಿದೆ. ಬದಲಾದ ಮಂಗಲ ಚಿಹ್ನೆಗಳೊಂದಿಗೆ ಮತ್ತೊಂದು ಬಗೆಯ ಅಷ್ಟಮಂಗಲವು ಕೆಳಕಂಡಂತಿದೆ.

ಪತಾಕಾ ಪೂರ್ಣಕುಂಭಂ ಶಂಖಂ ಚಕ್ರಂ ಶ್ರೀ ಅಂಕುಶೌ
ಛತ್ರಂ ಚೈವ ಪ್ರದೀಪಶ್ಚ ಭೂಭುಜಾಮಷ್ಟಮಂಗಲಂ

ಭಿತ್ತಿಯಲ್ಲಿ ಅಲಂಕರಣಕ್ಕಾಗಿ ಅನಾವರಣಗೊಂಡ ಇನ್ನಿತರ ರಚನೆಗಳೆಂದರೆ ವೃತ್ತಸ್ಫಾಟಿತ, ಕಪೋತಪಂಜರ, ಕುಂಭಲತಾದಿಗಳು. ವೃತ್ತಾಸ್ಫಾಟಿತ ಹಾಗೂ ಕಪೋತಪಂಜರಗಳಿಗೆ ತೋರಣಗಳ ನೆಂಟಸ್ತನವಿದೆ. ಇವು ಕುಡ್ಯಸ್ತಂಭಗಳು ಮಧ್ಯೆ ಹಾಗೂ ಹಾರಾಂತರ ಭಾಗಗಳಲ್ಲಿ ರಚನೆಗೊಳ್ಳುತ್ತವೆ.

ವೃತ್ತಾಖ್ಯಂ ವೃತ್ತಸ್ಫಾಟಿತಂ ಚೈವ ಹಾರಾಂತರೇಷು ಕಲ್ಪಯೇತ್
ಸ್ತಂಭಾಂತರೇವ ಕರ್ತವ್ಯಂ ಹರ್ಮ್ಯಾದೀನಾಂ ವಿಶೇಷತಃ

ವೃತ್ತಸ್ಫಾಟಿತ

ವೃತ್ತಸ್ಫಾಟಿತ

ವೃತ್ತಸ್ಫಾಟಿತದಲ್ಲಿ ತೋರಣ ಸ್ಥಂಭಗಳಂತೆ ಸ್ತಂಭಿಕೆಗಳಿವೆ. ಶುಕನಾಸ ಅಥವಾ ಕರ್ಣಕೂಟಾ ಕೃತಿಗಳು ಈ ಸ್ತಂಭಿಕೆಗಳ ಝಷ ಭಾಗದಲ್ಲಿ ರಾರಾಜಿಸುತ್ತವೆ.

ವೃತ್ತಾಕಾರ ಸಮಂ ತಚ್ಚ ತೋರಣಾಂಘ್ರಿವದಾಯತಂ
ಸಕಂಧರಂ ತದೂರ್ಧ್ವೇತು ಶುಕನಾಸಾನ್ವಿತಂ ತು ವಾ
ಕರ್ಣಕೂಟಾಕೃತಿಂ ವಾಥ ವೃತ್ತಾಕಾರಂ ಪ್ರಕಲ್ಪಯೇತ್

ವೃತ್ತಸ್ಫಾಟಿತವು ಒಂದು ರೀತಿಯಲ್ಲಿ ಸರಳವಾದ ಕಪೋತಪಂಜರ ರಚನೆಯನ್ನು ಹೋಲುತ್ತದೆ. ಗಾತ್ರದಲ್ಲಿ ಚಿಕ್ಕದು. ಪೀಠಭಾಗಕ್ಕೆ ಆದ್ಯತೆ ಇಲ್ಲ. ಇವನ್ನು ಅಲಂಕರಣ ಭಾಗದ ವಿಕಾಸದ ಹಂತಗಳೆನ್ನಲು ಅಡ್ಡಿ ಇಲ್ಲ.

ಕಪೋತಪಂಜರ ರ‍ಚನೆ ಗಾತ್ರದಲ್ಲಿ ದೊಡ್ಡದು. ಅಧಿಷ್ಠಾನದಿಂದ ಪ್ರಸ್ತರದ ಕಪೋತದವರೆಗೆ ವಿಸ್ತರಿಸಬಹುದು. ಎರಡು ಸ್ತಂಭಗಳನ್ನಾಧರಿಸಿದ ಮಂಟಪದಂತೆ, ಉಪಪೀಠ, ಅಧಿಷ್ಠಾನ, ಪಾದ, ಪ್ರಸ್ತರ, ಪಂಜರಗಳನ್ನೊಳಗೊಂಡಿದ್ದು, ಭಿತ್ತಿಯಿಂದ ಮುಂದಕ್ಕೆ ಹೊರಚಾಚಿದಂತೆ ರಚನೆಗೊಳ್ಳುತ್ತದೆ. ಕಪೋತ ಪಂಜರದ ಪ್ರಸ್ತರ ಭಾಗದಲ್ಲಿ ನರ್ತಕೀ ಶಿಲ್ಪಗಳನ್ನು, ದೇವಾನುದೇವತೆಗಳ ವಿಗ್ರಹಗಳನ್ನೂ ಇರಿಸುವುದುಂಟು. ನರ್ತನ ಭಂಗಿಯ ಶಿಲ್ಪಗಳಿಗೆ ‘ನಾಟಕ’ ಎಂಬ ಪದವನ್ನು ಬಳಸುತ್ತಾರೆ.

ಕುಂಭಪಂಜರ ರಚನೆಯ ಮೂರು ಪ್ರಭೇದಗಳನ್ನು ಶಾಸ್ತ್ರ ಗ್ರಂಥಗಳು ಗುರುತಿಸಿವೆ. ಇವನ್ನು ವಿಕಾಸದ ಹಂತಗಳೆಂದು ತಿಳಿಯಬಹುದು. ಈ ಹಂತಗಳ ಮೂಲಕ ಅರಳಿರುವುದೇ ಕುಂಭ ಪಂಜರ.

ಕಪೋತಪಂಜರ

ಕಪೋತಪಂಜರ

ಕುಂಭಪಂಜರ

ಕುಂಭಪಂಜರ

ಚಿತ್ರಕುಂಭಲತಾಪೂರ್ವಾ ಸ್ತಂಭಕುಂಭಲತಾಪರಾ
ಕುಂಭಕುಂಭಲತಾ ಚಾನ್ಯಾ ತಾಸಾಂ ಲಕ್ಷಣಮುಚ್ಯತೇ

ಚಿತ್ರ ಕುಂಭಲತಾ -ಸ್ತಂಭ ಕುಂಭಲತಾ-ಕುಂಭ ಕುಂಭಲತಾ, ಇವೇ ಮೂರು ಹಂತಗಳು ಅಥವಾ ಪ್ರಭೇದಗಳು. ಇವನ್ನು ಅಚ್ಚುಕಟ್ಟಾಗಿ ಗುರುತಿಸುವುದು ತುಸು ಕಠಿಣವೇ ಆಗಿದೆ. ಮಾನಸಾರ ಗ್ರಂಥದಲ್ಲಿರುವ ವಿವರಣೆ ಕೆಳಕಂಡಂತಿದೆ.

ಕುಂಭೇ ಸ್ತಂಭ ಸಹಿತಾ ನಾಸಿಕಾ ಪಂಜರಾಯುಕ್ತಮೇವ ವಾ
ಶಾಲಾ ಪಂಜರ ಯುಕ್ತಂ ತೋರಣೈಃ ಸಮಲಂಕೃತ್ಯಯುಕ್ತಾ

ಪದ್ಮಾಸನ ಅಥವಾ ಪಾಲಿಕೆಯ ಮೇಲೆ ಕುಂಭ. ಕುಂಭಮುಖದಿಂದ ಸ್ತಂಭ, ಸ್ತಂಭದ ತುದಿಯಲ್ಲಿ ವಿಷ್ಕಂಭದಂತೆ ಹಲವು ಸ್ತರಗಳು. ವೀರಕಂಠ (ವೀರಕಾಂಡ)ಕ್ಕೆ ಕೆಲವೆಡೆ ಅವಕಾಶವಿಲ್ಲ. ಮೇಲ್ಭಾಗದಲ್ಲಿ ಶುಕನಾಸ, ಕರ್ಣಕೂಟ ಅಥವಾ ಶಾಲಾ ರಚನೆ. ಕುಂಭಮುಖದಿಂದ ಅಥವಾ ಸ್ತಂಭದ ಎರಡೂ ಕಡೆಯಿಂದ ಲತಾಲಂಕರಣ. ಈ ರಚನೆಯನ್ನು ತೋರಣಗಳ ಗುಹಾಭಾಗದಲ್ಲಿ ಅಳವಡಿಸಿರುವುದುಂಟು.

ಪ್ರಸ್ತರ

ಪ್ರಸ್ತರ ಎಂದಲ್ಲಿ ಷಡ್ವರ್ಗ ರಚನೆಯ ಮೂರನೇ ಅಂಗ. ಕಾಶ್ಯಪಶಿಲ್ಪ, ವಿಮಾನಾರ್ಚನ ಕಲ್ಪ, ಅಜಿತಾಗಮಗಳಲ್ಲಿ ಪೂರ್ಣ ವಿವರಗಳಿವೆ. ಕಾಶ್ಯಪಶಿಲ್ಪ ಗ್ರಂಥದ ವಿವರಗಳು ಕೆಳಕಂಡಂತಿದೆ.

ತದುಚ್ಚಸ್ಯೇಕವಿಂಶಾಂಶೇ ಕೃತ್ವಾ ಗುಣಾಂಶಂ ಉತ್ತರಂ
ವಾಜನಸ್ಯೈಕ ಭಾಗೇನ ಭೂತಮಾಲೋನ್ನತಂ ತ್ರಿಭಿಃ
ಭೂತಮಾಲೋಪರಿಷ್ಟಾತ್ತು ವಾಜನಸ್ಯೈಕ ಭಾಗಯಾ
ಸಪ್ತಾಶಂ ತು ಕಪೋತೋಚ್ಛಂ ಆಲಿಂಗಸ್ಯೈಕ ಭಾಗಯಾ
ಅಂಶೇನಾಂತರಿತಂ ಕುರ್ಯಾತ್ ಪ್ರತ್ಯುತ್ಯೇಧಂ ಗುಣಾಂಶಕಂ
ವಾಜನಸ್ಯೈಕ ಭಾಗೇನ ಕುರ್ಯಾದ್ ವೈ ಚಾನ್ಯಭೇದತಃ

ಪ್ರಸ್ತರವನ್ನು ಕಪೋತ ಪೂರ್ವಭಾಗ, ಕಪೋತ, ಕಪೋತೋತ್ತರಭಾಗ ಎಂದು ಮೂರು ಹಂತಗಳಾಗಿ ವಿಂಗಡಿಸಿಕೊಳ್ಳಬಹುದು

ಉತ್ತರ (೩), ವಾಜನ (೧), ಭೂತಮಾಲಾ (೩), ವಾಜನ (೧) – ಇವು ಕಪೋತ ಪೂರ್ವ ಭಾಗ, ಕಪೋತ (೭)- ಇದು ಆಲಿಂಗ (೧), ಅಂತರಿಕ (೧), ಪ್ರತಿ (೩) ಮತ್ತು ವಾಜನ (೧)- ಇದು ಕಪೋತೋತ್ತರ ಭಾಗ. ಇವನ್ನೇ Architrave, Cornice ಮತ್ತು frieze ಎಂದು ಗುರುತಿಸುತ್ತಾರೆ.

ಉತ್ತರ ರಚನೆಯ ಅಗಲ, ಎತ್ತರಗಳನ್ನಾಧರಿಸಿ ಖಂಡೋತ್ತರ, ಪತ್ರೋತ್ತರ (ಪತ್ರಬಂಧ) ಮತ್ತು ರೂಪೋತ್ತರ ಎಂಬ ಮೂರು ಪ್ರಭೇದಗಳನ್ನು ಗುರುತಿಸಲಾಗಿದೆ.

ಉತ್ತರಂ ತ್ರಿವಿಧಂ ಪಾದವಿಸ್ತಾರಂ ತತ್ಸಮೋದ್ಗಮಂ
ತ್ರಿಪಾದೋದಯ ಮಧ್ಯೋಚ್ಚಂ ವಿಸ್ತಾರಂ ಪಾದತಃ ಸಮಂ
ಖಂಡೋತ್ತರಂ ಪತ್ರಬಂಧಂ ರೂಪೋತ್ತರಮಿತಿ ತ್ರಿಧಾ

ವಾಜನವು ಉತ್ತರದ ಸ್ತರವೆನಿಸಿದ್ದು ಚತುರಶ್ರಾಕಾರ ಅಥವಾ ಪದ್ಮಾಕಾರದಲ್ಲಿದೆ.

ವಾಜನಂ ಚತುರಶ್ರಂ ವಾ ಪದ್ಮಾಶ್ರಂ ಚೋತ್ತರೋಪರಿ

ವಾಜನದ ನಂತರ ಇರುವ ಸ್ತರವೇ ಅಲಂಕರಣವುಳ್ಳ ವಲಭೀ. ಅಲಂಕಾರಕ್ಕೆ ತಕ್ಕಂತೆ ವಸಂತಕ, ಭೂತಮಾಲಾ, ಮಹಾಂಬುಜ ಎಂಬ ಪರ್ಯಾಯನಾಮಗಳಿವೆ. ಯಕ್ಷ ಯಕ್ಷಿಯರು, ಹಂಸಾದಿಗಳೂ ಅಲಂಕಾರದಲ್ಲಿ ಪಾಲ್ಗೊಳ್ಳುವುದುಂಟು.

ವಲಭೀ ವೃತ್ತ ಹಂಸಾದ್ಯೈರ್ಭೂಷಯೇತ್ ಉತ್ತರೋಪರಿ

ಮಾನಸಾರ ಗ್ರಂಥದ ಪ್ರಕಾರ ಉತ್ತರಾ ನಂತರ ಕ್ಷುದ್ರ ಪದ್ಮ ಮತ್ತು ಮಹಾಂಬುಜ ಸ್ತರಗಳಿವೆ. ಇದು ಭೂತಮಾಲಕ್ಕೆ ಪರ್ಯಾಯವಾಗಿದೆ. ಗ್ರಂಥದಿಂದ ಗ್ರಂಥಕ್ಕೆ ಸ್ತರಗಳ ಜೋಡಣೆಯಲ್ಲಿ ಕೊಂಚ ವ್ಯತ್ಯಾಸಗಳುಂಟು.

ಉತ್ತರೋಚ್ಚಂ ತ್ರಯಂಶಂ ವಾ ವಾಜನಂ ಚೈಕಭಾಗಿಕಂ
ತತ್‌ಸಮಂ ಕ್ಷುದ್ರಪದ್ಮಂ ಸ್ಯಾತ್ ತ್ರಯಂಶೋರ್ಧ್ವೇ ಮಹಾಂಬುಜಂ
ತದೂರ್ಧ್ವೇ ವಾಜನಂ ಚೈಕಂ ಧಾತುಭಾಗಂ ಕಪೋತಕಂ

ಪ್ರಸ್ತರದಲ್ಲಿ ಛಾದ್ಯಭಾಗವೇ ಕಪೋತ. ಇದಕ್ಕೆ ಆಚ್ಛಾದನವೆಂದು ಹೆಸರು. ಛಾದ್ಯದ ಅಲಂಕಾರಿಕ ಮುಂಭಾಗವೇ ಕಪೋತ.

ಯಥಾಬಲಂ ಯಥಾಶೋಭಂ ಆಚ್ಛಾದ್ಯಂ ತದುಪರ್ಯಯಾ
ದಾರುಭಿರ್ವೇಷ್ಟಕಾಭಿರ್ವಾ ಯಥಾಬಲ ಘನಾನ್ವಿತಂ
ಬಹಿಃ ಕಪೋತಕರಣಂ ವಾಜನೋಪರಿ ಕಲ್ಪಯೇತ್

ಕಪೋತದ ಮೇಲೆ ನಾಸಿಕಾ ರಚನೆಗಳಿದ್ದು, ಕಪೋತ ನಾಸೀ ಅಥವಾ ಕ್ಷುದ್ರ ನಾಸಿಕಾ ಎಂದು ಕರೆಯಲ್ಪಡುತ್ತವೆ.

ಕಪೋತನಾಸಿಕಾಯುಕ್ತಂ ತತ್ತಾರಸ್ಯಾರ್ಧದಂಡತಃ

ಕಪೋತ - ಕಪೋತನಾಸಿ

ಕಪೋತ – ಕಪೋತನಾಸಿ

ನಾಸಿಕಾ ರಚನೆಯಲ್ಲಿ ಗಾಢ ಹಾಗೂ ಶಕ್ತಿ ಧ್ವಜವೆಂಬ ಎರಡು ಭಾಗಗಳು. ಗಾಢದ ಒಳಭಾಗಕ್ಕೆ ಕುಕ್ಷಿ ಎಂದು ಹೆಸರು. ಕುಕ್ಷಿಯು ಮುಖಪಟ್ಟಿಕೆಯಿಂದ ಸುತ್ತುವರೆದಿದೆ. ಗುಂಡಗಿರುವ ಗಾಢದ ಮೇಲ್ಭಾಗದಲ್ಲಿ ಶಕ್ತಿಧ್ವಜವಿದೆ. ಶಕ್ತಿಧ್ವಜದಲ್ಲಿ ಎರಡು ಭಾಗಗಳು. ಗಲ ಮತ್ತು ಕಿನ್ನರೀ ವಕ್ತ್ರ. ಶಕ್ತಿಧ್ವಜದ ಮೂರನೇ ಒಂದು ಭಾಗ ಗಲ.

ಉಳಿದದ್ದು ಕಿನ್ನರೀ ವಕ್ತ್ರ. ನಾಸಿಕೆಯ ಒಟ್ಟು ಎತ್ತರದ ಅರ್ಧದಷ್ಟು ಗಾಢ ರಚನೆ. ಅದರ ಅರ್ಧದಷ್ಟು ಮುಖಪಟ್ಟಿಕೆ ಎರಡೂ ಕಡೆ ಆವರಿಸಿದೆ.

ಕಪೋತಲಂಬನಾತ್ ಕ್ಷುದ್ರನಾಸೋಚ್ಚಂ ತು ಸಾ ಕಲ್ಪಯೇತ್
ಪ್ರತಿವಾಜನ ಸೀಮಾಂತಂ ತಸ್ಯ ಶಕ್ತಿಧ್ವಜೋನ್ನತಂ
ತದುಚ್ಯಂ ತ್ರಿಧಾ ಭಜ್ಯ ಏಕಾಂಶಂ ಕಂಠಮಾನಕಂ
ಶೇಷಂ ಕಿನ್ನರೀವಕ್ತ್ರ ದ್ವೈತಾರಂ ಯುಕ್ತವಶಾನ್ನಯೇತ್
ನಾಸಿಕಾ ತಾರಾರ್ಧಂ ಗಾಢಂ ಸ್ಯಾತ್ ಗಾಢಾರ್ಧಮುಖಪಟ್ಟಿಕಾ

ಶಕ್ತಿಧ್ವಜವು ಕಪೋತೋತ್ತರ ಭಾಗಕ್ಕೂ ವಿಸ್ತರಿಸಿದೆ. ನೀರು ಹರಿದು ಹೋಗಲು ಜಲಹರಿ ಅಥವಾ ಗೋಪಾರ ರಚನೆಯನ್ನು ಕಪೋತಭಾಗದಲ್ಲಿ ಕಾಣಬಹುದು.

ಕಪೋತಂ ಗೋಪಾನ ಸಹಿತಂ ಗೋಪಾನ ರಹಿತಂ ತು ವಾ

ಪ್ರಸ್ತರಕ್ಕೆ ಪರ್ಯಾಯ ಪದಗಳಾಗಿ ಗೋಪಾನ, ಪ್ರಾಚ್ಛಾದನ, ನೀವ್ರ, ಮಂಚ ಮುಂತಾಗಿ ಶಾಸ್ತ್ರ ಗ್ರಂಥಗಳು ಗುರುತಿಸಿವೆ.

ಕಪೋತಂ ಪ್ರಸ್ತರಂ ಚೈವ ಮಂಚಂ ಪ್ರಚ್ಛಾದನಂ ತಥಾ
ಗೋಪಾನಂ ವಿತಾನಂ ವಲಭೀ ಮತ್ತವಾರಣಂ
ವಿಧಾನಂ ಲುಪಾಂ ಚೈವಮೇತೇ ಪರ್ಯಾಯವಾಚಕಾಃ

ಕಪೋತದ ಮೇಲೆ ನಾಸಿಕಾ ರಚನೆಯಲ್ಲದೆ ಮೂಲೆಗಳಲ್ಲಿ ಲತಾಲಂಕಾರ, ಪತ್ರಾಲಂಕಾರಗಳನ್ನೂ ಕಾಣಬಹುದು.

ನಾನಾ ಪತ್ರಲತಾದ್ಯೈಸ್ತು ಕಪೋತಂ ಕರ್ಣಪಾಲಿಕಾಂ

ಕಪೋತೋತ್ತರ ಭಾಗಗಳಲ್ಲಿ ಆಲಿಂಗ, ಅಂತರಿಕ, ಪ್ರತಿ, ವಾಜನ ಸ್ತರಗಳಿವೆ. ಪ್ರತಿ ಸ್ತರದಲ್ಲಿ ಸಿಂಹ ಅಥವಾ ಮಕರ ಮುಖಗಳಿವೆ.

ಪ್ರತ್ಯಗ್ರ ಮಕರೀಬಂಧ ಪ್ರತಿ ಸಿಂಹಾದಿಭೂಷಿತಂ

ಮಯಮತ ಗ್ರಂಥದ ಪ್ರಕಾರ ಪ್ರತಿ ರಚನೆಯಲ್ಲಿ ಸಮಕರ, ಚಿತ್ರಖಂಡ ಮತ್ತು ನಾಗವಕ್ತ್ರ ಎಂದು ಮೂರು ಪ್ರಭೇದಗಳು.

ಸಮಕರಂ ಚಿತ್ರಖಂಡಂ ನಾಗವಕ್ತ್ರಮಿತಿ ತ್ರಿಧಾ

ನಾಗವಕ್ತ್ರ ಎಂದಲ್ಲಿ ಹಾವಿನ ಹೆಡೆಯಂತೆ ಸ್ವಸ್ತಿಕಾಕೃತಿ, ಚಿತ್ರಖಂಡ ಎಂದಲ್ಲಿ ಆನೆಯ ಸೊಂಡಲಿನ ಆಕಾರ ಅಥವಾ ಅರ್ಧಚಂದ್ರಕಾರ, ಸಮಕರ ಎಂದಲ್ಲಿ ಮಕರಮುಖ.

ನಾಗವಕ್ತ್ರಂ ನಾಗಫಣಂ ಸ್ವಸ್ತಿಕಾಕೃತಿ ಶಿರಃಕ್ರಿಯಾಂ
ಚತುರಶ್ರಂ ಖಂಡಾಗ್ರಂ ಮಕರಂ ಚಿತ್ರಖಂಡಂ
ಹಸ್ತಿರೂಪಂ ಭವೇನ್ ಮುಂಡಂ ಪ್ರತ್ಯಗ್ರಂ ಚಿತ್ರಸನ್ನಿಭಂ

ಪ್ರತಿಯ ನಂತರ ವಾಜನವಿದೆ. ಇವಿಷ್ಟೂ ಪ್ರಸ್ತರ ಭಾಗದಲ್ಲಿ ಗುರುತಿಸಲಾಗುವ ಸಾಮಾನ್ಯ ಲಕ್ಷಣಗಳು.

ಕಾಮಿಕಾಗಮ, ಮಯಮತ ಗ್ರಂಥಗಳಲ್ಲಿ ಕಪೋತಪೂರ್ವಭಾಗದಲ್ಲಿ ಕೊಂಚ ಭಿನ್ನಸ್ತರಗಳಿದ್ದು, ಉತ್ತರ, ವಾಜನ, ಮುಷ್ಟಿಬಂಧ, ಪ್ರಮಾಲಿಕ, ದಂಡಿಕಾ ವಲಯ ಎಂದು ಗುರುತಿಸಲಾಗಿದೆ. ಈ ಸ್ತರಗಳನ್ನು ಗುರುತಿಸುವುದು ಕೊಂಚ ಕಷ್ಟವೆನಿಸಿದೆ.

ಪ್ರಸ್ತರದ ನಂತರ ಏಕತಲ ವಿಮಾನದಲ್ಲಿ ಕಂಠ, ಶಿಖರ, ಸ್ತೂಪಿಗಳಿದ್ದು, ತಲ ಅಥವಾ ಭೂಮಿ ರಚನೆ ಹೆಚ್ಚಿದಂತೆ ಪಾದ ಮತ್ತು ಪ್ರಸ್ತರಗಳು ಪುನರಾವರ್ತನೆಯಾಗುತ್ತವೆ. ಜಂಘಾ ಅಥವಾ ಭಿತ್ತಿ ಭಾಗದಲ್ಲಿ ಕಪೋತಪಂಜರ, ವೃತ್ತಸ್ಫಾಟಿಕ, ಕುಂಭಲತಾದಿಗಳಿದ್ದಲ್ಲಿ ಎರಡನೆ ತಲದ ಪ್ರಸ್ತರ ಭಾಗವು ಕರ್ಣಕೂಟ, ಪಂಜರ, ಕೋಷ್ಠ ಹಾರಾಂತರಗಳನ್ನೊಳಗೊಳ್ಳುತ್ತದೆ. ಕಂಠಮೂಲದಲ್ಲಿ ವೇದಿಕಾ ರಚನೆಯನ್ನು ಕಾಣಬಹುದು.

ವಕ್ಷೇಹಂ ಕೂಟ ಕೋಷ್ಠಾನಾಂ ಪಂಜರಾಣಾಂ ತು ಲಕ್ಷಣಂ
ದ್ವಿತಲಾದಿ ತಲಾಂತಾನಾಂ ಸಮಮೇವ ಪ್ರಕಲ್ಪಿತಂ