ಕೂಟ ಮತ್ತು ಕೋಷ್ಠ

ಕೂಟ, ಸ್ವಸ್ತಿಕ, ಸಭಾ ಇವು ಪರ್ಯಾಯಪದಗಳೆನಿಸಿವೆ. ಇದೇ ರೀತಿ ಕೋಷ್ಠ ಮತ್ತು ಶಾಲಾ ಪರ್ಯಾಯಪದಗಳೆನಿಸಿವೆ. ಕೂಟಗಳು ಸಾಮಾನ್ಯವಾಗಿ ಪ್ರಸ್ತರ ಭಾಗದ ಮೂಲೆಗಳಲ್ಲಿ ರಚನೆಗೊಳ್ಳುತ್ತವೆ. ಆದ್ದರಿಂದ ಕರ್ಣಕೂಟವೆಂಬ ಹೆಸರು. ಚಚ್ಚೌಕ ರಚನೆಗಳೇ ಲಭ್ಯ. ಅಪರೂಪಕ್ಕೆ ವರ್ತುಲಕಾರ, ಅಷ್ಟಾಶ್ರ ರಚನೆಗಳನ್ನು ಕಾಣಬಹುದು.

ಚತುರಶ್ರಂ ವಸ್ವಶ್ರಂ ಷೋಡಶಾಶ್ರಂ ತು ವರ್ತುಲಂ
ಮಸ್ತಕಸ್ತೂಪಿಕೋಪೇತಂ ಕರ್ಣಕೂಟಮಿದಂ ಮತಂ

ಕೂಟ, ಕೋಷ್ಠಗಳ ಎತ್ತರವನ್ನು ವೇದಿಕಾ, ಕಂಠ, ಶೀರ್ಷ, ಸ್ತೂಪಿಕಾ ಎಂದು ವಿಭಜಿಸಲಾಗಿದೆ. ಕೂಟ, ಕೋಷ್ಠಗಳು ಪಂಜರಗಳೊಂದಿಗೆ ಸಾಲುಗಟ್ಟಿ ನಿಂತು ಹಾರ ಎಂದು ಗುರುತಿಸಲ್ಪಡುತ್ತದೆ.

ಕರ್ಣಕೂಟ

ಕರ್ಣಕೂಟ

ಏಕಾಂಶಂ ವೇದಿಕೋತ್ಸೇಧಂ ಸಾರ್ಧಂಶಂ ಗಲಮುನ್ನತಂ
ಶೀರ್ಷಂತು ವಿಗುಣಾಂಶೇನ ಶೇಷಂ ಸ್ತೂಪ್ಯುದಯಂ ಭವೇತ್
ಏವಂ ತು ಕೂಟ ಕೋಷ್ಠಾದೌ ದ್ವೌಕಲ್ಪಯೇತ್ ತಲಂಪ್ರತಿ

ಶೀರ್ಷವು ಕರ್ಣಕೂಟದ ಪ್ರಮುಖ ಭಾಗ. ಇದರ ಉಬ್ಬು ಕಪೋತದಂತೆ. ನಾಲ್ಕು ದಿಕ್ಕಿನಲ್ಲಿಯೂ ನಾಸಿಕಾ ರಚನೆ. ನಾಸಿಕವು ಶೀರ್ಷದ ಒಟ್ಟು ಅಗಲದಲ್ಲಿ ಮೂರನೇ ಒಂದು ಭಾಗದಷ್ಟು, ಶೀರ್ಷದ ತುದಿಯಲ್ಲಿ ಸ್ತೂಪೀ ರಚನೆ.

ಕೂಟಸ್ಯ ತ್ರಿಭಾಗೈಕಂ ಸ್ವನಾಸೀ ವಿಸ್ತೃತಂ ಭವೇತ್
ಕರ್ಣಕೂಟೇ ಕಪೋತಂ ತು ನಾಸಿಕಾ ನಿರ್ಗಮನಂ ಭವೇತ್
ಚತುರ್ದಿಕ್ಷು ಚತುರ್ನಾಸೀ ಕೂಟಾನಾಂ ಪರಿಕಲ್ಪಯೇತ್

ಪ್ರಸ್ತರದ ಮಧ್ಯಭಾಗದಲ್ಲಿ ಸಾಮಾನ್ಯವಾಗಿ ದೀರ್ಘ ಚತುರಶ್ರಾಕಾರವೆನಿಸಿದ ಕೋಷ್ಠ ರಚನೆ. ಕೋಷ್ಠದ ಎರಡೂ ಪಾರ್ಶ್ವದಲ್ಲಿ ಲಲಾಟದಲ್ಲಿರುವಂತೆ ನಾಸಿಕಾ ರಚನೆ. ಇದನ್ನು ಪಾರ್ಶ್ವವಕ್ತ್ರ ಎಂದು ಗುರುತಿಸಲಾಗಿದೆ. ಎರಡೂ ಕಡೆ ತುದಿಯಲ್ಲಿ ಮುಖಪಟ್ಟಿಕೆ ಇದೆ. ಕೋಷ್ಠ ಮಧ್ಯದಲ್ಲಿ ಮುಖನಾಸಿ ರಚನೆಯನ್ನು ಕಾಣಬಹುದು.

ಶಾಲಾ, ನರಸಮಂಗಲ

ಶಾಲಾ, ನರಸಮಂಗಲ

ಶಾಲಾನಾಂ ಪಾರ್ಶ್ವಯೋರ್ವಿಪ್ರ ಲಲಾಟಾಖ್ಯಾ ತು ನಾಸಿಕಾ
ಶಾಲಾ ವ್ಯಾಸ ವಿಶಾಲಾ ತು ಉನ್ನತಾ ಮೂಲ ಪಟ್ಟಿಕಾ
ಶಾಲಾ ದೈರ್ಘ್ಯಂ ತ್ರಿಭಾಗೈಕಂ ಮುಖನಾಸೀ ವಿಶಾಲಕಂ
ಸ್ತೂಪೀತ್ರಯ ಸಮಾಯುಕ್ತಂ ನಾಗರೇ ಭವನೇ ದ್ವಿಜಾ

ಸಾಮಾನ್ಯವಾಗಿ ಕೋಷ್ಠದ ವಿಸ್ತಾರ, ಕೂಟದ ಎರಡರಷ್ಟು. ಕೆಲವೆಡೆ ಅರ್ಧಕೋಷ್ಠ ರಚನೆಗಳನ್ನು ಕಾಣಬಹುದು.

ಏಕಾಂಶಂ ಕೂಟ ವಿಸ್ತಾರಂ
ಕೋಷ್ಠಂ ತು ದ್ವಿಗುಣಾಯಾಮಂ

ಕೋಷ್ಠವು ಮಧ್ಯದಲ್ಲಿರದೆ ಇನ್ನಿತರ ಭಾಗಗಳಲ್ಲಿದ್ದಾಗ ಅರ್ಧಕೋಷ್ಠ ರಚನೆಯನ್ನು ಕಾಣಬಹುದು. ಇದನ್ನು ಕ್ಷುದ್ರಕೋಷ್ಠ ಎಂದು ಕಾಮಿಕಾಗಮ ಗ್ರಂಥವು ಗುರುತಿಸಿದೆ.

ಮಧ್ಯೇಕೂಟಂ ತಯೋರ್ಮಧ್ಯೇ ಕ್ಷುದ್ರಕೋಷ್ಠಾದಿ ಶೋಭಿತಂ
ಛಂದಮೇತತ್ ಸಮುದ್ಧಿಷ್ಟಂ ಕೂಟಂ ವಾ ಕೋಷ್ಠಕಂ ತು ವಾ

ಪಂಜರ

ಹಾರ ರಚನೆಯಲ್ಲಿ ಪಂಜರವು ಅಲಂಕಾರಿಕ ಭಾಗ. ಹಲವು ಆಕಾರಗಳುಳ್ಳ ಪ್ರಭೇದಗಳನ್ನು ಕಾಶ್ಯಪಶಿಲ್ಪ ಗ್ರಂಥವು ಗುರುತಿಸಿದೆ.

ಪಂಜರೋ ನಾಸಿಕಾಕಾರಃ ಕೂಟಕೋಷ್ಠಾಕೃತಿಸ್ತು ವಾ
ಹಸ್ತಿಪೃಷ್ಠ ವಿಮಾನಂ ಸ್ಯಾತ್ ಶಿಖರಾಂತಮಥಾಪಿ ವಾ

ಪಂಜರವು ನಾಸಿಕೆಯಂತೆ ಶಾಲಾಕೋಷ್ಠಗಳಷ್ಟೇ ಹರವು. ಹಸ್ತಿಪೃಷ್ಠ ಅಥವಾ ಹಂಸದಂತೆ ಹಿಂಭಾಗವುಳ್ಳದ್ದು.

ಅರ್ಧಕೋಷ್ಠ

ಅರ್ಧಕೋಷ್ಠ

ಹಂಸತುಂಡನಿಭಂ ಪೃಷ್ಠೇ ಶಾಲಾಕಾರಂ ಮುಖೇ ಮುಖೇ
ಪಂಜರಂ ವಿಹಿತಂ ಕೂಟಕೋಷ್ಠಯೋರಂತರಂ ದ್ವಿಜಃ

ಕಾಶ್ಯಪಶಿಲ್ಪವು ಎಂಟು ಪಂಜರ ಪ್ರಭೇದಗಳನ್ನು ಗುರುತಿಸಿದೆ.

ನಾಸಿಕಾತ್ವಷ್ಟದಾಜ್ಞೇಯಾ ತಸ್ಯಾದೌ ಸಿಂಹ ಸಂಜ್ಞಕಂ
ಸಾರ್ಧಪಂಜರಮನ್ಯತ್ ಸ್ಯಾತ್ ತೃತೀಯಂ ಪಂಜರಂ ಮತಂ
ನಿರ್ಯೂಹಪಂಜರಂ ಪಶ್ಚಾತ್ ಪಂಚಮಂ ಲಂಬನಾಸಿಕಂ
ಸಿಂಹಶ್ರೋತ್ರಂತು ಷಷ್ಠಂ ಸ್ಯಾತ್ ಖಂಡನಿರ್ಯೂಹಕಂ ತತಃ
ಝಷಪಂಜರಮನ್ಯತ್ ತಾಸಾಂ ಲಕ್ಷಣಮುಚ್ಯತೇ

ಪಂಜರ, ನಂದಿ

ಪಂಜರ, ನಂದಿ

ಪಂಜರ, ಶ್ರವಣಬೆಳಗೊಳ

ಪಂಜರ, ಶ್ರವಣಬೆಳಗೊಳ

೧. ಸಿಂಹ ಪಂಜರ ೨. ಅರ್ಧ ಪಂಜರ ೩. ಪಂಜರ, ೪. ನಿರ್ಯೂಹ ಪಂಜರ ೫. ಲಂಬ ನಾಸಿಕಾ ೬. ಸಿಂಹ ಶ್ರೋತ್ರ ೭. ಖಂಡ ನಿರ್ಯೂಹಕ ಮತ್ತು ೮. ಝಷ ಪಂಜರ ಇವೇ ಗ್ರಂಥವು ಗುರುತಿಸಿದ ಎಂಟು ಪ್ರಭೇದಗಳು. ಪ್ರಸ್ತುತ ಲಭ್ಯವಿರುವ ದೇವಾಲಯಗಳಲ್ಲಿ ಈ ಪ್ರಭೇದಗಳನ್ನು ಗುರುತಿಸಲು ಸಾಧ್ಯವಾಗದು. ಪಂಜರ, ನೀಡಾ, ನಾಸಿಕಾ ಇವು ಪರ್ಯಾಯ ಪದಗಳು.

ಇವಲ್ಲದೆ ಅಲ್ಪನಾಸೀ, ಮುಖನಾಸೀ, ಭದ್ರನಾಸೀ, ಮಹಾನಾಸೀ, ಕಪೋತನಾಸೀ, ಕ್ಷುದ್ರನಾಸೀ, ನೇತ್ರನಾಸೀ ಹೀಗೆ ಹಲವಾರು ರಚನೆಗಳು ಅವುಗಳ ಸ್ಥಾನಕ್ಕೆ ತಕ್ಕಂತೆ ಕಾಣಬಹುದು. ಶಿಲ್ಪಿಗಳ ಕೈಚಳಕವಿಂದ ಅಲಂಕರಣ ಹೆಚ್ಚಾದಂತೆ, ಅರಳಿದ ವಿನ್ಯಾಸಗಳು, ಗುರುತಿಸುವಲ್ಲಿ ಕೊಂಚ ಕಷ್ಟವೆನಿಸುತ್ತವೆ. ಹಾರ ರಚನೆಯಲ್ಲಿ ಕೂಟ ಕೋಷ್ಠಗಳಿಗಿರುವ ಪ್ರಾಮುಖ್ಯತೆ ಪಂಜರಕ್ಕೆ ದಕ್ಕಿದೆ. ಆದರೆ, ಅಲ್ಪನಾಸೀ, ಕ್ಷುದ್ರನಾಸಿ, ನೇತ್ರನಾಸಿ ಮೊದಲಾದವು ಕಪೋತದ ಅಲಂಕಾರದ ಭಾಗವಾಗಿ ಮೂಡಿಬಂದಿದೆ. ಅಂತಿಮ ತಲ ರಚನೆಯ ಪ್ರಸ್ತರದ ಮೂಲೆಗಳಲ್ಲಿ ಸಿಂಹ, ನಂದಿ ಮೊದಲಾದ ವಾಹನಗಳ ವಿಗ್ರಹಗಳನ್ನು ಕಾಣಬಹುದು.

ಗ್ರೀವಾಧಸ್ತಾತ್ ಪ್ರಸ್ತರೋರ್ಧ್ವೇ ಕೋಣೇ ಕೋಣೇ ವೃಷಾನ್ ನ್ಯಸೇತ್

ಗಲಗ್ರೀವ

ಪ್ರಸ್ತರ ಅಥವಾ ಭೂಮಿ ರಚನೆಯನಂತರ ಕಂಠರಚನೆಯು ಷಡ್ವರ್ಗಗಳಲ್ಲಿ ನಾಲ್ಕನೆಯ ಅಂಗ. ಕಂಠದಲ್ಲಿ ವೇದಿಕಾ ಮತ್ತು ಗಲೋದಯ ಎಂದು ಎರಡು ಭಾಗಗಳು.

ಕಂಠಸ್ಯ ಲಕ್ಷಣಂ ವಕ್ಷೇ ಸಮಾಸಾಚ್ಛೃಣುತ ದ್ವಿಜಃ
ತನ್‌ಮೂಲೇ ವೇದಿಕಾ ಕಾರ್ಯಾ ಕಂಠೋತ್ಸೇಧಾ ತ್ರಿಭಾಗತಃ

ವೇದಿಕೆಯು ಗಲ, ಕಂಪ , ಪದ್ಮ ಹಾಗೂ ಕಂಪ, ಸ್ತರಗಳುಳ್ಳದ್ದು. ಗಲಭಾಗದಲ್ಲಿ ನಿಯತ ಅಂತರದಲ್ಲಿ ಗಲಪಾದ ರಚನೆಗಳಿವೆ.

ಸರ್ವೇಷಾಂ ವೇದಿಕಾನಾಂ ತು ಗಲಮಂಘ್ರಿ ವಿಭೂಷಿತಂ

ಗಲೋದಯ ಭಾಗದಲ್ಲಿ ಪ್ರಸ್ತರದ ಕಪೋತ ಪೂರ್ವಭಾಗದಂತೆ ಉತ್ತರ, ವಾಜನ, ಮುಷ್ಟಿಬಂಧ, ಮೃಣಾಲಿಕಾ, ದಂಡಿಕಾ, ವಲಯಗಳೆಂಬ ಸ್ತರಗಳಿವೆ. ಮುಷ್ಟಿಬಂಧನ ಮುಂಭಾಗದಲ್ಲಿ ವ್ಯಾಳ ಅಥವಾ ಸಿಂಹಮುಖ ಅಥವಾ ನರ್ತಕೀ ಶಿಲ್ಪಗಳನ್ನೂ ಕಾಣಬಹುದು.

ಉತ್ತರಂ ವಾಜನಂ ಚೈವ ಮುಷ್ಟಿಬಂಧಂ ಮೃಣಾಲಿಕಾ
ದಂಡಿಕಾ ವಲಯಂ ಚೈವ ಗಲಭೂಷಣಮಿಷ್ಯತೇ
ಮುಷ್ಟಿಬಂಧೋಪರಿಕ್ಷಿಪ್ತಂ ವ್ಯಾಳನಾಟಕಮೂರ್ಧ್ವತಃ
ದಂಡಿಕಾ ವಿಧಾತವ್ಯಾ ತದೂರ್ಧ್ವೇ ಶಿಖರ ಕ್ರಿಯಾ

ಗಲ ಹಾಗೂ ಶಿಖರದ ಆಕಾರಕ್ಕೂ ದೇವಾಲಯದ ಶೈಲಿಗೂ ನೇರವಾದ ಸಂಬಂಧವಿದೆ. ಇದನ್ನು ಕಾಶ್ಯಪಶಿಲ್ಪ ಗ್ರಂಥವು ಸ್ಪಷ್ಟವಾಗಿ ವಿವರಿಸಿದೆ. ನಾಗರಶೈಲಿಯಲ್ಲಿ ವೇದಿಕೆಯು ಚತುರಶ್ರವಾಗಿದ್ದು, ದ್ರಾವಿಡ ಮತ್ತು ವೇಸರಗಳಿಗೆ ಅಷ್ಟಾಶ್ರ ರಚನೆ ಇದೆ. ಅಥವಾ ನಾಗರ, ದ್ರಾವಿಡ, ವೇಸರ ಶೈಲಿಗಳಿಗೆ ಕ್ರಮವಾಗಿ ಚತುರಶ್ರ, ಅಷ್ಟಾಶ್ರ ಮತ್ತು ವೃತ್ತಾಕಾರವಾಗಿ ರಚನೆಗೊಂಡಿದೆ.

ಯುಗಾಶ್ರಂ ವೇದಿಕಾಕಾರಂ ನಾಗರೇ ಪ್ರಸ್ತರೋ ಪರಿ
ದ್ರಾವಿಡೇ ವೇಸರೇ ಹರ್ಮ್ಯೇ ವಸ್ವಶ್ರಂ ವೇದಿಕಾಕೃತಿಃ
(
ಅಥವಾ ವೇಸರೇ ಹರ್ಮ್ಯೇ ವೇದಿಕಾಗ್ರತ ಏವ )
ವೇದಾಶ್ರಂ ನಾಗರೇ ಕಂಠಂ ವಸ್ವಶ್ರಂ ದ್ರಾವಿಡೇ ಗಲಂ
ವೃತ್ತಂ ತು ವೇಸರೇ ಹರ್ಮ್ಯೇ ಗಲಮಾನಕುಲಂ ನಯೇತ್

ಕಂಠದ ಭದ್ರ ಭಾಗದಲ್ಲಿ ನಾಲ್ಕೂ ಕಡೆ ನಾಸೀಪಾದವಿದ್ದು, ವೃತ್ತಸ್ಫುಟಿತ ರಚನೆಯನ್ನು ಕಾಣಬಹುದು.

ವೇದಿ, ಗಲ, ಶಿಖರ, ಸ್ತೂಪಿ, ನಂದಿ

ವೇದಿ, ಗಲ, ಶಿಖರ, ಸ್ತೂಪಿ, ನಂದಿ

ಗ್ರೀವಾಯಾಂ ಚತುರ್ದಿಕ್ಷು ನಾಸಿಪಾದಾಂಶ್ಚ ವಿನ್ಯಸೇತ್
ತತ್ರೈವಕಾರಯೇತ್ ವೃತ್ತಸ್ಫುಟಿತಂ ಸಮಂತತಃ

ಶಿಖರ

ಕಂಠದ ಮೇಲೆ ಶಿಖರವೆಂಬ ಮುಚ್ಚಿಗೆ ಇದೆ. ಇದು ಷಡ್ವರ್ಗಗಳಲ್ಲಿ ಐದನೆಯ ಅಂಗ. ಆಕಾರದಲ್ಲಿ ಇದು ಕರ್ಣಕೂಟವೇ; ಆದರೆ ಗಾತ್ರದಲ್ಲಿ ದೊಡ್ಡದು. ಅಜಿತಾಗಮ ಗ್ರಂಥವು ಇದರ ಉದ್ದ ಅಗಲಗಳನ್ನು ವೇದಿಕೆಯ ಅಳತೆಯೊಂದಿಗೆ ಸಮೀಕರಿಸಿ ಗುರುತಿಸುತ್ತದೆ.

ಶಿಖರಸ್ಯಾಪಿ ವಿಸ್ತಾರಂ ತದ್ ವೇದೀ ಸಮಮುಚ್ಯತೇ
ವೇದ್ಯಸ್ತಾರಂ ತ್ರಿಭಾಗೈಕಂ ಮಹಾನಾಸ್ಯಸ್ತು ವಿಸ್ತರಂ
ವಿಸ್ತಾರಸ್ಯ ತ್ರಿಪಾದೇನ ತಸ್ಯೋತ್ಸೇಧಂ ಪ್ರಕಲ್ಪಯೇತ್

ವೇದಿಕೆಯ ಅಗಲದಷ್ಟು ಶಿಖರದ ವಿಸ್ತಾರವಿರಬೇಕು. ವೇದಿಕೆಯ ಎತ್ತರದ ೧/೩ ಭಾಗದಷ್ಟು ಮಹಾನಾಸಿಯ ಅಗಲವಿರಬೇಕು. ಮಹಾನಾಸಿಯ ಎರಡೂ ಕಡೆಯ ಅಗಲವು ಗಲಪಾದದಷ್ಟು ಇರಬೇಕು.

ತದ್‌ಪಾರ್ಶ್ವದ್ವಯ ವಿಸ್ತಾರಂ ಗ್ರೀವಪಾದಾವದಿಷ್ಯತೇ

ಶಿಖರದ ಎತ್ತರಕ್ಕೆ ಸಂಬಂಧಿಸಿದಂತೆ ಕಾಶ್ಯಪಶಿಲ್ಪವು, ಅಂತಿಮ ತಾಲ ರಚನೆಯ ಪಾದದ ೧/೬ ಭಾಗ ಎಂದು ಸೂಚಿಸಿದೆ.

ಊರ್ಧ್ವಭೂಸ್ತಂಭ ತುಂಗಸ್ಯ ಷಡಂಶಂ ಶಿಖರೋದಯಂ

ಕಾಮಿಕಾಗಮವು ಗಲೋದಯದ ಅಳತೆಯನ್ನು ಆಧರಿಸಿ ಶಿಖರದ ಎಂಟು ಪ್ರಭೇದಗಳನ್ನು ಹೆಸರಿಸುತ್ತದೆ. ಈ ಪ್ರಭೇದಗಳನ್ನು ಗುರುತಿಸಲು ಸಾಧ್ಯವಾಗದು.

ವೇದಿ, ಗಲ, ಶಿಖರ, ಸ್ತೂಪಿ, ಪಟ್ಟದಕಲ್ಲು

ವೇದಿ, ಗಲ, ಶಿಖರ, ಸ್ತೂಪಿ, ಪಟ್ಟದಕಲ್ಲು

ಪಾಂಚಾಲಂ ಚಾಪಿ ವೈದೇಹಂ ಮಗಧಂ ಚಾಪಿ ಕೈರವಂ
ಕೌಸಲಂ ಸೌರಸೇನಂ ಗಾಂಧಾರಾವಂತಿಕಾಂ ಪಥಾ

ಮಹಾನಾಸೀ, ಭದ್ರನಾಸೀ, ಲಲಾಟನಾಸೀ ಇವೆಲ್ಲವೂ ಶಿಖರದ ಅಲಂಕಾರಕ್ಕಾಗಿ ಮೂಡಿದ ನಾಸೀ ರಚನೆಗೆ, ಪರ್ಯಾಯ ಪದಗಳು ಎನಿಸಿವೆ. ಮಹಾನಾಸೀ ಎನ್ನುವ ಹೆಸರು ಶಿಖರಕ್ಕೆ ಸೀಮತ. ಭದ್ರ ಅಥವಾ ಲಲಾಟ ಭಾಗದಲ್ಲಿ ಮೂಡಿದ ಅಲಂಕಾರಕ್ಕೆ ಭದ್ರನಾಸೀ ಅಥವಾ ಲಲಾಟನಾಸೀ ಎಂದು ಹೆಸರು. ಲಲಾಟನಾಸೀ ಎನ್ನುವ ಹೆಸರು ಶಾಸ್ತ್ರಗ್ರಂಥಗಳ ವಿವರಣೆಯಂತೆ ಎತ್ತರವನ್ನು ನಿರ್ದೇಶಿಸಿದೆ. ಶಿಖರದ ಎತ್ತರಕ್ಕೆ ಸಮನಾಗಿ ರಚಿಸಿದ್ದು ಲಲಾಟನಾಸೀ (ಗಮನಿಸಿ : ಶಾಲಾ ರಚನೆಯಲ್ಲಿರುವ ಪಾರ್ಶ್ವನಾಸೀ ರಚನೆಗಳನ್ನು ಲಲಾಟನಾಸೀ ಎಂದಿದ್ದು ಎತ್ತರವನ್ನು ಗುರುತಿಸುವ ಸಲುವಾಗಿ) ಶಿಖರದ ಅಗಲವನ್ನು ಮೂರು, ನಾಲ್ಕು ಅಥವಾ ಐದರಿಂದ ಭಾಗಿಸಿ ೧/೩, ೧/೪ ಅಥವಾ ೧/೫ ಭಾಗದ ಎತ್ತರವಿರುವ ಮಹಾನಾಸೀ ರಚನೆಯನ್ನು ಉತ್ತಮ, ಅಧಮ, ಮಧ್ಯಮ ಎಂದು ಗುರುತಿಸಲಾಗಿದೆ.

ಲಲಾಟನಾಸಿಕಾ ಖ್ಯಾತಾ ಶಿಖರೇ ತಾರತಃ ಸಮಂ
ಶಿಖರಸ್ಯತು ವಿಸ್ತಾರೇ ತ್ರಿಚತುಷ್‌ಪಂಚ ಭಾಜಿತೇ
ನಾಸಿಕಾತಾರಮೇಕಾಂಶಮುತ್ತಮಾಧಮಾ ಮಧ್ಯಮಂ
ಮಹಾನಾಸೀತಿ ವಿಖ್ಯಾತಾ ತ್ರಿವಿಧಾಸ್ಯಾತ್ ವಿಮಾನಕೇ

ದೇವಾಲಯಗಳ ಶೈಲಿಗಳನ್ನು ಗುರುತಿಸುವಲ್ಲಿ ಶಿಖರವೇ ಪ್ರಧಾನ ಪಾತ್ರ ವಹಿಸಿರುವುದನ್ನು ಶಾಸ್ತ್ರಗ್ರಂಥಗಳಿಂದ ತಿಳಿಯಬಹುದಾಗಿದೆ. ಪಾಠದೋಷದಿಂದ, ಸ್ಖಾಲಿತ್ಯಗಳಿಂದಾಗಿ ಈವರೆಗೆ ಶೈಲಿಗಳನ್ನು ಗುರುತಿಸುವುದು ತೊಡಕಿನ ಕಾರ್ಯವೆನಿಸಿತ್ತು. ಮಾನಸಾರದಂಥ ಪ್ರಮುಖ ವಾಸ್ತುಗ್ರಂಥಗಳಲ್ಲಿ ಕೆಲವು ತಪ್ಪುಗಳೂ ನುಸುಳಿವೆ. ಕಾಶ್ಯಪ ಶಿಲ್ಪ ಗ್ರಂಥದ ಉಲ್ಲೇಖಗಳು ಖಚಿತವಾದದ್ದು.

ನಾಗರೇ ಚತುರಶ್ರಂ ತದ್ ವಸ್ವಶ್ರಂ ದ್ರಾವಿಡೇ ಶಿರಃ
ವೃತ್ತಂತು ವೇಸರೇ ಹರ್ಮ್ಯೇ ಶಿರಸೋ ವರ್ತನಂ ಕ್ರಮಾತ್
ನಾನಾಪತ್ರಲತಾಭಿಸ್ತು ಶಿಖರಂ ತು ಭೂಷಯೇತ್

ಶಿಖರವು ಚತುರಶ್ರ, ಅಷ್ಟಾಶ್ರ, ವೃತ್ತಾಕಾರವಿದ್ದಲ್ಲಿ ಕ್ರಮವಾಗಿ ನಾಗರ, ದ್ರಾವಿಡ ಮತ್ತು ವೇಸರ ಎಂದು ಶೈಲಿಗಳು ನಿರ್ಧರಿಸಲ್ಪಡುತ್ತದೆ. ಶಿಖರದಲ್ಲಿ ಎಲೆ ಬಳ್ಳಿಗಳ ಅಲಂಕಾರವೂ ಉಂಟು. ಅಷ್ಟಾಶ್ರದೊಂದಿಗೆ ಷಡಶ್ರವನ್ನೂ ದ್ರಾವಿಡವೆಂದು ಗುರುತಿಸಬಹುದು. ಮಾನಸಾರ ಗ್ರಂಥವು ದೇವಾಲಯದ ಅಧಿಷ್ಠಾನ, ಪಾದ, ಪ್ರಸ್ತರಾದಿ ಭಾಗಗಳು, ಅಷ್ಟಾಶ್ರ ಅಥವಾ ವೃತ್ತಾಕಾರವಿದ್ದಲ್ಲಿ ಕ್ರಮವಾಗಿ ನಾಗರ, ದ್ರಾವಿಡ ಮತ್ತು ವೇಸರ ಎಂದು ಶೈಲಿಗಳು ನಿರ್ಧರಿಸಲ್ಪಡುತ್ತದೆ. ಶಿಖರದಲ್ಲಿ ಎಲೆ ಬಳ್ಳಿಗಳ ಅಲಂಕಾರವೂ ಉಂಟು. ಅಷ್ಟಾಶ್ರದೊಂದಿಗೆ ಷಡಶ್ರವನ್ನೂ ದ್ರಾವಿಡವೆಂದು ಗುರುತಿಸಬಹುದು. ಮಾನಸಾರ ಗ್ರಂಥವು ದೇವಾಲಯದ ಅಧಿಷ್ಠಾನ, ಪಾದ, ಪ್ರಸ್ತರಾದಿ ಭಾಗಗಳು, ಅಷ್ಟಾಶ್ರ ಅಥವಾ ವೃತ್ತಾಕಾರವಿದ್ದಲ್ಲಿ ಅವುಗಳನ್ನೂ ಕ್ರಮವಾಗಿ ದ್ರಾವಿಡ, ವೇಸರ ಎಂದು ಗುರುತಿಸುತ್ತದೆ. ಈ ದೇವಾಲಯಗಳಲ್ಲಿ ಸಾಮಾನ್ಯವಾಗಿ ಶಿಖರ ಭಾಗವು ಚತುರಶ್ರ ರಚನೆಯುಳ್ಳದ್ದು. ಶಿಖರ ರಚನೆಯಲ್ಲಿ ವಲಭೀ, ವಾಜನ, ನೀವ್ರ ಮುಂತಾದ ಸ್ತರಗಳನ್ನು ಗ್ರಂಥಗಳಲ್ಲಿ ಹೆಸರಿಸಲಾಗಿದೆ. ಆದರೆ ಈ ವಿವರಗಳು ಅಸ್ಟಷ್ಟ ಹಾಗೂ ಗುರುತಿಸಲಾಗದು.

ವಲಭೀ ವಾಜನ ನೀವ್ರಂ ದಂಡಂ ವಾದ್ಯರ್ಧ ಏವಚ
ದ್ವಿದಂಡಂ ವಾ….. ನೀವ್ರಂ ಚಾಲಂಬನಂ ಸಮಂ
ತನೀವ್ರ ಸದೃಶಂ ತುಂಗಂ ಕಪೋತಂ ವಲಭೀ ವಾಜನಾತ್
(
ಶಿರಸ್ತಾರಂ ಕಪೋತೋರ್ಧ್ವಂ ವಲಭೀ ವಾಜನ ಸಮಂ)

ಶಿಖರದ ಮೇಲ್ತುದಿಯಲ್ಲಿ ಫಲಿಕಾಮಂಡಲವಿದೆ. ಇದರ ವಿಸ್ತಾರ, ಶಿಖರದ ಎತ್ತರದ ೧/೫ ಭಾಗ. ಫಲಿಕಾಮಂಡಲದ ಕೆಳಗೆ ಹಾಗೂ ಮೇಲ್ಗಡೆ ವೇತ್ರ ರಚನೆ ಇದೆ. ಮಂಡಲದ ೨/೫ರಷ್ಟು ಪದ್ಮ ರಚನೆಯು ಮಂಡಲ ಮಧ್ಯದಲ್ಲಿದೆ. ಶಿಖರದ ತುದಿಯಲ್ಲಿ ಸ್ತೂಪೀರಚನೆ.

ವೇದಿ, ಗಲ, ಶಿಖರ, ಕಂಬದಹಳ್ಳಿ

ವೇದಿ, ಗಲ, ಶಿಖರ, ಕಂಬದಹಳ್ಳಿ

ಶಿಖರೇ ವಲಿಕಾಸ್ಥೂನಂ ಭೂತಾಂಶೇಷು ಶಿಖರೋದಯಂ
ವೇದಭಾಗಾವಸಾನೇ ತು ಫಲಿಕಾಮಂಡಲಾ ಕೃತಿಂ
ವಲಿಕಾನಾಮಧಶ್ಚೋರ್ಧ್ವೇ ವೇತ್ರೇ ತಸ್ಯಾರ್ಧಮಾನತಃ
ವಲಿಕಾ ವ್ಯಾಸಭೂತಾಂಶೇ ಯುಗ್ಮಾಂಶಂ ಪದ್ಮ ವಿಸ್ತೃತಂ

ಸ್ತೂಪೀ

ಷಡ್ವರ್ಗಗಳಲ್ಲಿ ಅಂತಿಮ ಸ್ತರವೇ ಸ್ತೂಪಿ. ಸ್ತೂಪಿಕಾ, ಘಟ, ಶಿಖಾ, ಚೂಲಿಕಾ, ಚುಳುಕ ಮುಂತಾಗಿ ಪರ್ಯಾಯ ಪದಗಳು. ಕಲಶವೆನ್ನುವ ಪದ ಮೂಲತಃ ಔತ್ತರೇಯ ಸಂಪ್ರದಾಯದ್ದು. ಕನ್ನಡ ಶಾಸನಗಳಲ್ಲಿ “ಕಳಸ” ಪದದ ಬಳಕೆ ಹೆಚ್ಚು. ಲೋಹದ ಸ್ತೂಪೀ ರಚನೆಗಳನ್ನು ಚಿನ್ನ ಹಾಗೂ ಬೆಳ್ಳಿಯ ತಗಡುಗಳನ್ನು ಹೊದೆಸಿದ ಶಿಖರಗಳನ್ನು ಕಾಣಬಹುದು. ತಾಮ್ರದ ಕಬ್ಬಿಣದ ಸ್ತೂಪೀ ರಚನೆಗಳುಂಟು. ತಿರುಮಲ-ತಿರುಪತಿ ದೇವಾಲಯದ ಶಿಖರ, ಸ್ತೂಪಿ ರಚನೆಗಳಲ್ಲಿ, ಸುವರ್ಣಕಲಶ ಹಾಗೂ ಚಿನ್ನದ ತಗಡುಗಳನ್ನು ಹೊದೆಸಿದ್ದು “ಆನಂದ ನಿಲಯ” ಎಂದು ಗುರುತಿಸಲಾಗಿದೆ. ಕಾಳಹಸ್ತಿಯ ದೇವಾಲಯದ ಶಿಖರದ ಹೆಸರು “ಪುಣ್ಯಕೋಟಿ”, ಈ ಹೆಸರುಗಳನ್ನು ಮೂಲವನ್ನು ಖಚಿತವಾಗಿ ತಿಳಿಯಲಾಗಿಲ್ಲ.

ಸೌವರ್ಣಂ ರಜತಂ ವಾಪಿ ತಾಮ್ರಜಂ ತ್ರಪುಜಂ ತು ವಾ
ಪ್ರಾಸಾದ ಶಿಖರೇ ಕುಂಭೇ ವಿಧಾನೈವ ತು ಕಾರಯೇತ್

ವಿಮಾನಾರ್ಚನಕಲ್ಪ ಗ್ರಂಥವು ಕಬ್ಬಿಣದ ಶಲಾಕೆಯೊಂದಿಗೆ ಸುಣ್ಣಗಾರೆಯನ್ನು ಬಳಸಿ ಸ್ತೂಪಿಯನ್ನು ರಚಿಸಬಹುದೆಂದು ತಿಳಿಸಿದೆ.

ಅಶಕ್ತಾಶ್ಚೇತ್ ಸುಧಯಾಕೃತ್ವ ಅಗ್ರೇ
ಆಯಸಾಂ ಸೂಚಿಂ ಸಂಪ್ರಯೋಜಯೇತ್

ಸ್ತೂಪೀರಚನೆಯ ಮಾನಗಳು ಗ್ರಂಥದಿಂದ ಗ್ರಂಥಕ್ಕೆ ವ್ಯತ್ಯಾಸಗೊಂಡಿವೆ. ಸ್ತೂಪಿಯ ಆಕಾರವೂ ವಿವಿಧ ರೀತಿಯದು. ಅದರಂತೆ ಸ್ತರಗಳೂ ವ್ಯತ್ಯಾಸಗೊಳ್ಳುತ್ತವೆ.

ಘಟಾಗ್ರಂ ಮುಕುಳಾಕಾರಂ ದೀಪಾಕಾರಮಥಾಪಿ ವಾ

ಇದು ಪಾದ್ಮಸಂಹಿತೆಯ ಉಲ್ಲೇಖ. ಮರದಿಂದ ಮಾಡಿದ ಸ್ತೂಪಿಯನ್ನೂ ಈ ಗ್ರಂಥವು ವಿವರಿಸಿದೆ.

ಸೌವರ್ಣೇ ರಾಜತೀ ತಾಮ್ರಿ ಸ್ತೂಪೀ ದಾರುಮಯೀ ತಥಾ

ವಿಮಾನಾರ್ಚನ ಕಲ್ಪ ಗ್ರಂಥದ ಪ್ರಾಕರ ಸ್ತೂಪಿಯ ಸ್ತರಗಳು ಇಂತಿವೆ. ಪದ್ಮ (೪), ಕರ್ಣಿಕಾ (೧), ಕುಂಭ (೫), ನಾಲ (೭), ಪಾಲೀ (೧ ೧/೨) ಮತ್ತು ಮುಕುಳಾ (೩ ೧/೨) ಒಟ್ಟು ಎತ್ತರ ೨೨.

ದ್ವಾವಿಂಶತಿಭಾಗಂ ಕೃತ್ವಾ ಚತುರಂಶಂ ಪದ್ಮಂ, ಏಕಾಂಶಂ ಕರ್ಣಿಕೋತ್ಸೇಧಂ, ಪಂಚಾಂಶಂ ಕುಂಭೋತ್ತುಂಗಂ, ಸಪ್ತಾಶಂ ನಾಲಂ, ಸಾರ್ದಾಂಶಂ ಪಾಲೀ, ತ್ರಯರ್ಧಾಂಶಂ ಮುಕುಲಂ ಸ್ಯಾತ್

ಮಯಮತದ ಪ್ರಕಾರ ಸ್ತೂಪಿಯ ಸ್ತರಗಳು ಪದ್ಮ, ವಲಗ್ನ, ಕುಂಭ, ಕಂಠ, ಪಾಲೀ ಹಾಗೂ ಕುಡ್ಮಲ. ಇವುಗಳ ವಿವರಣೆ ಇಂತಿದೆ :

ಫಾಲಿಕೇ ಪಂಚಭಾಗೇತು ಯುಗಾರ್ಧಂ ಪದ್ಮ ವಿಸ್ತೃತಂ
ಪದ್ಮತಾರ ತ್ರಿಭಾಗೈಕಂ ಕುಂಭತಾರಮಿತಿ ಸ್ಮೃತಂ
ಕುಂಭತಾರ ತ್ರಿಭಾಗೈಕಂ ಕುಂಭಸ್ಯೋಪರಿ ಕಂಧರಂ
ಕಂದರ ತ್ರಿಗುಣಂ ಪಾಲೀ ತತ್ತ್ರಿಗುಣಂ ಕುಡ್ಮಲಂ

ಫಲಿಕಾ ಮಂಡಲದ ೨/೫ ಭಾಗ ಪದ್ಮದ ವಿಸ್ತಾರ. ಇದನ್ನು ಶಿಖರ ಭಾಗದಲ್ಲೇ ವಿವರಿಸಲಾಗಿದೆ. ಫಲಿಕಾಮಂಡಲದಲ್ಲಿರುವ ಪದ್ಮ ರಚನೆಯೇ ಸ್ತೂಪಿಯ ಪದ್ಮ ರಚನೆ ಎನ್ನಿಸಿದೆ.

ಪದ್ಮದ ಎತ್ತರದ ೧/೩ ಭಾಗ ಕುಂಭ. ಕುಂಭದ ೧/೩ ಭಾಗ ಕುಂಭದ ಕೆಳಗಿರುವ ವಲಗ್ನ. ವಲಗ್ನದ ೧/೩ ಭಾಗ ಕುಂಭದ ಮೇಲಿರುವ ಕಂಠ, ಕಂಠದ ಮೂರರಷ್ಟು ಪಾಲೀ (ಅಂದರೆ ಪಾಲಿ ಮತ್ತು ವಲಗ್ನ ಒಂದೇ ಎತ್ತರವುಳ್ಳದ್ದು) ಅದರ ಮೂರನೇ ಒಂದು ಭಾಗ ಕುಡ್ಮಲ (ಕುಡ್ಮಲ ಮತ್ತು ಕಂಠ ಸಮನಾದುದು).

ಪರಿವಾರ ದೇವತೆಗಳುವಿಮಾನ ತಲದೇವತೆಗಳು

ದೇವಾಲಯದಲ್ಲಿ ಮೂಲವಿಗ್ರಹವಲ್ಲದೆ, ವಿಮಾನ ರಚನೆಯಲ್ಲಿ ವಿಮಾನದ ತಲಗಳಲ್ಲಿ ಹಲವಾರು ದೇವತಾ ವಿಗ್ರಹಗಳನ್ನು ಪ್ರದರ್ಶಿಸಲಾಗಿದೆ. ದೇವಾಲಯಗಳ ಭೂಮಿ ಅಥವಾ ತಲಗಳಲ್ಲಿ ಇಡಲ್ಪಡುವ ವಿಗ್ರಹಗಳಿಗೆ ನಿಶ್ಚಿತ ಕ್ರಮವನ್ನು ಅನುಸರಿಸಲಾಗಿದೆ. ಇವನ್ನು ಶಾಸ್ತ್ರ ಗ್ರಂಥಗಳಲ್ಲಿ ಗುರುತಿಸಲಾಗಿದೆ. ಗ್ರಂಥದಿಂದ ಗ್ರಂಥಕ್ಕೆ ಈ ವಿವರಗಳು ಹೆಚ್ಚು ಬದಲಾಗದು.

ಪೂರ್ವಾಯಾಂ ದ್ವಾರಪಾಲೌತು ನಂದಿಕಾಳೌಚ ವಿನ್ಯಸೇತ್
ದಕ್ಷಿಣೇ ದಕ್ಷಿಣಾಮೂರ್ತಿಂ ಪಶ್ಚಿಮೇತ್ಯುತಮೇವ ಹಿ
ಅಥವಾ ಲಿಂಗಸಂಭೂತಮುತ್ತರೇತು ಪಿತಾಮಹಂ

ಪೂರ್ವ ದಿಕ್ಕಿನಲ್ಲಿ ದ್ವಾರಪಾಲಕರಾಗಿ ನಂದಿ ಹಾಗೂ ಕಾಲ, ದಕ್ಷಿಣದಲ್ಲಿ ದಕ್ಷಿಣಾ ಮೂರ್ತಿ, ಪಶ್ಚಿಮದಲ್ಲಿ ಅಚ್ಯುತ ಅಥವಾ ಲಿಂಗೋದ್ಭವಮೂರ್ತಿ, ಉತ್ತರದಲ್ಲಿ ಬ್ರಹ್ಮ ಅಥವಾ ಪಿತಾಮಹ ಇವರನ್ನು ದೇವಕೋಷ್ಠಗಳಲ್ಲಿ ಇರಿಸಬಹುದು. ಇವು ಏಕತಲ ವಿಮಾನದಲ್ಲಿ ಇರಿಸಲಾಗುವ ದೇವತಾ ವಿಗ್ರಹಗಳು.

ಪುರಂದರಂ ನ್ಯಸೇತ್ ಪೂರ್ವೇ ಸುಬ್ರಹ್ಮಣ್ಯಮಥಾಪಿ ವಾ
ದಕ್ಷಿಣೇ ವೀರಭದ್ರಂ ಸ್ನಾನ್ನರಸಿಂಹಶ್ಚ ಪಶ್ಚಿಮೇ
ಉತ್ತರೇತು ವಿಧಾತಾ ಸ್ಯಾದ್ ಧನಧೋ ವಾ ವಿಧೀಯತೇ
ಏವಂ ದ್ವಿತಲೇ ವಿನ್ಯಾಸಂ ತ್ರಿತಲೇ ಮರುದ್ಗಣಾನ್
ತಲೇ ತಲೇ ಅಮರಾನ್ ಸಿದ್ಧಾನ್ ಗಂಧರ್ವಾದಿ ಮುನೀನ್ ನ್ಯಸೇತ್

ದ್ವಿತಲವಿಮಾನದ ದ್ವಿತೀಯತಲದಲ್ಲಿ ಪೂರ್ವದಲ್ಲಿ ಪುರಂದರ ಅಥವಾ ಸುಬ್ರಹ್ಮಣ್ಯ ದಕ್ಷಿಣದಲ್ಲಿ ವೀರಭದ್ರ, ಪಶ್ಚಿಮದಲ್ಲಿ ನರಸಿಂಹ, ಉತ್ತರದಲ್ಲಿ ವಿಧಾತ ಅಥವಾ ಕುಬೇರ ಮೂರ್ತಿಗಳಿರಬೇಕು.

ಮೂರು ತಲಗಳುಳ್ಳ ವಿಮಾನದಲ್ಲಿ ಮೂರನೇ ತಲದಲ್ಲಿ ಮರುದ್ಗಣಗಳಿರಬೇಕು. ಇದೇ ರೀತಿ ಅಮರರಿಗೆ, ಸಿದ್ಧರಿಗೆ, ಗಂಧರ್ವರಿಗೆ ಸ್ಥಾನಗಳನ್ನು ಕಲ್ಪಿಸಲಾಗಿದೆ. ಇದು ಶೈವ ದೇವಾಲಯಗಳಲ್ಲಿ ಅನುಸರಿಸುವ ಸಾಮಾನ್ಯಕ್ರಮ. ಮಾನಸಾರ ಗ್ರಂಥದಲ್ಲಿ ದ್ವಿತಲ ದೇವಾಲಯವನ್ನು ವಿವರಿಸುವಾಗ ಮೊದಲ ಹಾಗೂ ಎರಡನೆ ತಲದ ದೇವತಾಮೂರ್ತಿಗಳನ್ನು ಒಟ್ಟಿಗೆ ಹೆಸರಿಸಿದೆ. ಈ ವಿವರಗಳೂ ಮೇಲೆ ತಿಳಿಸಿದ ವಿವರಗಳಿಗಿಂತ ಹೆಚ್ಚು ಭಿನ್ನವೆನಿಸಿಲ್ಲ. ವೈಷ್ಣವ ದೇವಾಲಯಗಳಲ್ಲಿ ಈ ವಿಮಾನ ತಲದೇವತೆಗಳು ಕೊಂಚ ಬದಲಾಗುವುದು ಸಹಜ.

ದೇವಾಲಯದ ಸಮಗ್ರ ರೂಪವನ್ನು ತಿಳಿಯುವ ಸಲುವಾಗಿ, ಹಲವಾರು ವಿವರಗಳನ್ನು ಹಲವು ಪ್ರಕಟಿತ ಗ್ರಂಥಗಳಿಂದ ಆಯ್ದು ಇಲ್ಲಿ ನೀಡಲಾಗಿದೆ. ಗ್ರಂಥಗಳಲ್ಲಿ ಹಲವು ತಪ್ಪು ಒಪ್ಪುಗಳಿದ್ದಾಗ್ಯೂ ಇನ್ನಿತರ ಗ್ರಂಥಗಳನ್ನು ನೋಡಿ ಸರಿಪಡಿಸಿಕೊಳ್ಳಲು ಸಾಧ್ಯವಿದೆ. ಅಂತಹ ಒಂದು ಪ್ರಯತ್ನ ಇದು. ಈ ವಿವರಗಳಿಂದ ದೇವಾಲಯದ ಅಂಗಗಳ ಸ್ಥೂಲ ಚಿತ್ರಣ ದೊರಕಿದಲ್ಲಿ ಈ ಲೇಖನ ಸಾರ್ಥಕತೆ ಪಡೆಯುತ್ತದೆ.

ಬಸದಿಕಂಬದಹಳ್ಳಿ

೧. ಶಿಖರ ೨.ಮಹಾನಾಸಿ ೩. ವೇದ ೪. ಪ್ರತಿ-ವಾಜನ (ಅಲಂಕೃತ) ೫. ಕಪೋತ ೬. ನಾಸೀಕೋಷ್ಠ ೭. ಶಾಲಾ ೮. ಕರ್ಣಕೂಟ ೯. ಪ್ರತಿ-ವಾಜನ (ಅಲಂಕೃತ) ೧೦. ಕಪೋತ (ಪ್ರಸ್ತರ) ೧೧. ಭಿತ್ತಿ ೧೨. ಕುಡ್ಯಸ್ತಂಭ ೧೩. ಭಿತ್ತಿಕೋಷ್ಠ ೧೪. ವೇದಿ (ಪ್ರತಿ-ವಾಜನ) ೧೫. ಕಂಠ ೧೬. ಕುಮುದ (ತ್ರಿಪಟ್ಟ) ೧೭. ಜಗತಿ

೧. ಶಿಖರ ೨.ಮಹಾನಾಸಿ ೩. ವೇದ ೪. ಪ್ರತಿ-ವಾಜನ (ಅಲಂಕೃತ) ೫. ಕಪೋತ ೬. ನಾಸೀಕೋಷ್ಠ ೭. ಶಾಲಾ ೮. ಕರ್ಣಕೂಟ ೯. ಪ್ರತಿ-ವಾಜನ (ಅಲಂಕೃತ) ೧೦. ಕಪೋತ (ಪ್ರಸ್ತರ) ೧೧. ಭಿತ್ತಿ ೧೨. ಕುಡ್ಯಸ್ತಂಭ ೧೩. ಭಿತ್ತಿಕೋಷ್ಠ ೧೪. ವೇದಿ (ಪ್ರತಿ-ವಾಜನ) ೧೫. ಕಂಠ ೧೬. ಕುಮುದ (ತ್ರಿಪಟ್ಟ) ೧೭. ಜಗತಿ