ಈ ಶೈಲಿಯ ದೇವಾಲಯಗಳ ಜಂಘಾ ಭಾಗದ ಅಲಂಕರಣವು ಪ್ರಮುಖವಾಗಿ ಎರಡು ರೀತಿಯದು. ಒಂದು ಔತ್ತರೇಯ ಸಂಪ್ರದಾಯದ ನಾಗರಾದಿ ಶೈಲಿಗಳ ಅನುಕರಣೆ ಮತ್ತೊಂದು ದಾಕ್ಷಿಣಾತ್ಯ ಸಂಪ್ರದಾಯದ ಕೊಡುಗೆ. ಎರಡೂ ಸಮರ್ಥವಾಗಿ ಮೂಡಿ ಬಂದಿದೆ. ಔತ್ತರೇಯ ನಾಗರಾದಿ ಶೈಲಿಗಳಲ್ಲಿ ಪೀಠೋಪಪೀಠ ಜಂಘಾಭಿರ್ಮೇಖಲಾ ಕೂಟಛಾದ್ಯಕೈಃ ಎಂದು ಗುರುತಿಸಿದೆ. ನಾಗರಾದಿ ಶೈಲಿಗಳಲ್ಲಿ ಪೀಠ, ಉಪಪೀಠ (?), ಜಂಘಾ, ಕೂಟಛಾದ್ಯ ಇವಿಷ್ಟೂ ಮಂಡೋವರದ ಲಕ್ಷಣಗಳು. ಪೀಠವು ಎರಡು ಹಂತದ ರಚನೆ ಇದ್ದು, ಮೇಲಿನ ಹಂತಕ್ಕೆ ಉಪಪೀಠವೆನ್ನುವ ಹೆಸರಿರಬಹುದು. ಆರಂಭದಲ್ಲಿ ಭಿತ್ತಿಯ ಬೋಳುತನ ಪರಿಹರಿಸುವುದಕ್ಕಾಗಿ ಜಂಘಾ ಭಾಗದಲ್ಲಿ ಅಡ್ಡಪಟ್ಟಿಕೆ ಇತ್ತು. ಇದು ಗರ್ಭಗೃಹ, ಅಂತರಾಳ ಭಾಗದಲ್ಲಿ ಪೂರ್ಣವಾಗಿ ಸುತ್ತುವರೆದಿದ್ದರಿಂದ ಮೇಖಲಾ ಎಂದು ಸೂಚಿಸಿರಬಹುದು. ನಂತರ ಛಾದ್ಯದ ಅನುಕರಣೆಯಿಂದಾಗಿ ಕೂಟಛಾದ್ಯ ಎಂದೆನಿಸಿತು. ಕಳಿಂಗ ಶೈಲಿಯ ದೇವಾಲಯಗಳಲ್ಲಿಯೂ ಇಂತಹ ವ್ಯವಸ್ಥೆ ಇದೆ. ಕೂಟಛಾದ್ಯದ ಮೇಲೆ ಮೊದಲ ಭೂಮಿಯ ಜಂಘಾ, ಕೂಟರಚನೆ ಇದೆ ಕೂಟಛಾದ್ಯವು ಅಲಂಕಾರಗಳನ್ನೊಳಗೊಂಡು ಕೊಂಚ ಬಾಗಿದೆ. ಕೂಟಛಾದ್ಯದ ಅಡಿಯಲ್ಲಿ ದೇವಾನುದೇವತೆಗಳ ಪ್ರತಿಮೆಗಳನ್ನು ಕಡೆದು ನಿಲ್ಲಿಸುವ ಪರಿಪಾಠವಿದೆ. ಇದು ಶಾಸ್ತ್ರಸಮ್ಮತವೆನಿಸಿದ್ದು, ಅಪರಾಜಿತಪೃಚ್ಛಾ ಗ್ರಂಥಕಾರನು ಅಷ್ಟಮೂಲೆಗಳಲ್ಲಿ ಅಷ್ಟದಿಕ್ಪಾಲಕರನ್ನು ನಿರ್ದೇಶಿಸಿದ್ದಾನೆ (ಮಂಕಡ್ : ೧೯೫೦ : ೩೧೮).

ಕರ್ಣೇಷು ಅಷ್ಟೌ ದಿಕ್ಪಾಲಾಃ ಪ್ರಾಚ್ಯಾದಿಷು ಪ್ರದಕ್ಷಿಣಾ
ನಟೇಶಃ ಪಶ್ಚಿಮೇಭದ್ರೇ ಹ್ಯಂದಕೈಃ ಸದಕ್ಷಿಣೇ
ಚಂಡಸ್ಯೋತ್ತರೇ ದೇವೀ ದಂಷ್ಟ್ರಾನನ ಶೋಭಿತಾ

ಜಂಘಾ ಭಾಗದಲ್ಲಿ ಪ್ರದಕ್ಷಿಣಾನುಸಾರ ಎಂಟು ಮೂಲೆಗಳಲ್ಲಿ ಎಂಟು ದಿಕ್ಪಾಲಕರು, ಪಶ್ಚಿಮ ದಿಕ್ಕಿನಲ್ಲಿ ನಟೇಶ, ದಕ್ಷಿಣ ದಿಕ್ಕಿನಲ್ಲಿ ಅಂಧಕೇಶ್ವರ, ಉತ್ತರ ದಿಕ್ಕಿನಲ್ಲಿ ವಿಕೃತ ಸ್ವರೂಪಳಾದ ಚಂಡಿಕಾದೇವಿ ಎಂದು ಹೆಸರಿಸಲಾಗಿದೆ.

ನಾಗರಾದಿ ಶೈಲಿಗಳಿಗೆ ಶಾಸ್ತ್ರಸಮ್ಮತವಾದದ್ದನ್ನು ಹೊಯ್ಸಳರ ಕಾಳದ ರೂವಾರಿಗಳು ದ್ರಾವಿಡ ಶೈಲಿಗೂ ವಿಸ್ತರಿಸಿದರು. ಜಾವಗಲ್ಲಿನ ನರಸಿಂಹ, ಮೊಸಳೆಯ ನಾಗೇಶ್ವರ, ಕೇಶವ, ಸೋಮನಾಥಪುರದ ಕೇಶವ ಹಾಗೂ ಬೇಲೂರು, ಹಳೇಬೀಡುಗಳಲ್ಲಿರುವ ದೇವಾಲಯಗಳಲ್ಲಿ ಜಂಘಾ ಭಾಗದಲ್ಲಿ ದೇವದೇವತೆಗಳ ಲೀಲಾಮೂರ್ತಿಗಳನ್ನು ಕಂಡರಿಸಲಾಯಿತು. ಕೂಟಛಾದ್ಯದ ನಂತರ, ಪುನಃ ಇರುವ ಜಂಘಾಭಾಗದಲ್ಲಿ ವಿಮಾನಾಕೃತಿಗಳನ್ನು ಕಡೆಯಲಾಗಿದೆ. ನಕ್ಷತ್ರಾಕಾರ ಅಥವಾ ಹಲವು ಕೋನಗಳುಳ್ಳ ತಲಚ್ಛಂದದ ದೇವಾಲಯಗಳಲ್ಲಿ ಕರ್ಣಭಾಗಗಳು ಸ್ತಂಭದೋಪಾದಿಯಲ್ಲಿದ್ದು ಲೀಲಾಮೂರ್ತಿಗಳು ಸ್ತಂಭಗಳ ಮೇಲೆ ಕಡೆದಂತಿದೆ. ಅರಸೀಕೆರೆಯ ಶಿವಾಲಯವು ಷೋಡಶಾಶ್ರ ರಚನೆ ಎನಿಸಿದ್ದು, ಜಂಘಾಭಾಗದಲ್ಲಿ ವಿಷ್ಣುವಿನ ಚತುರ್ವಿಂಶತಿ ಮೂರ್ತಿಗಳಿವೆ. ಜಾವಗಲ್ಲಿನ ಲಕ್ಷ್ಮೀನರಸಿಂಹ ದೇವಾಲಯದಲ್ಲಿಯೂ ಚತುರ್ವಿಂಶತಿ ಮೂರ್ತಿಗಳನ್ನು ಕಾಣಬಹುದು.

ಜಂಘಾಭಾಗದಲ್ಲಿ ಲೀಲಾಮೂರ್ತಿಗಳು, ಹೊಸಹೊಳಲು

ಜಂಘಾಭಾಗದಲ್ಲಿ ಲೀಲಾಮೂರ್ತಿಗಳು, ಹೊಸಹೊಳಲು

ದಾಕ್ಷಿಣಾತ್ಯ ಸಂಪ್ರದಾಯದಿಂದ ಅರಳಿದ ಭಿತ್ತಿಯ ಅಲಂಕಾರವನ್ನು ಪರೀಕ್ಷಿಸಬಹುದು. ತೋರಣ, ವೃತ್ತಸ್ಫುಟಿತಗಳನ್ನು ಮೊದಲಿಗೆ ಗಮನಿಸೋಣ. ತೋರಣವು ಭಿತ್ತಿಯ ಅತಿಪ್ರಾಚೀನ ಅಲಂಕಾರ. ಲಕ್ಕುಂಡಿಯ ಕಾಶಿ ವಿಶ್ವೇಶ್ವರ ದೇವಾಲಯದಲ್ಲಿ ಭಿತ್ತಿ ಫಲಕದ ಮಧ್ಯೆ ತೋರಣ ರಚನೆಯನ್ನು ಕಾಣಬಹುದು. ಫಲಕದ ಮಧ್ಯೆ ಸ್ತಂಭಗಳ ಕಂಡರಣೆ ಇದ್ದು ಅವುಗಳ ಮೇಲ್ಗಡೆಯಾಳಿ ಆಕೃತಿಗಳು ಎರಡೂ ಕಡೆ ಹರಡಿರುವಂತೆ ಪ್ರದರ್ಶಿಸಲಾಗಿದೆ. ಮಧ್ಯದಲ್ಲಿ ಮೇಲ್ಗಡೆ ಪೂರಿಮ ಅಥವಾ ಸಿಂಹಮುಖಗಳಿವೆ. ಸ್ತಂಭಗಳ ಮಧ್ಯೆ ಗುಹಾ ಭಾಗದಲ್ಲಿ ವಿಗ್ರಹಗಳಿವೆ. ತೋರಣದ ಕಮಾನುಗಳು ಇಲ್ಲ ಅಸ್ಪಷ್ಟ. ಇದು ಆರಂಭದ ತೋರಣ. ತದನಂತರ ಕಾಲದಲ್ಲಿ ಫಲಕದ ಮಧ್ಯೆ ಸ್ತಂಭಪಂಜರಗಳಿದ್ದು ಅದನ್ನು ಆವರಿಸಿದಂತೆ ತೋರಣವನ್ನು ರಚಿಸಲಾಯಿತು. ಈ ಹಂತದಲ್ಲಿ ಮೇಲ್ಭಾಗದಲ್ಲಿ ತ್ರಿವಳ್ಳಿಗಳುಳ್ಳ ಕಮಾನು,ಲತಾಲಂಕಾರ, ಮಧ್ಯದಲ್ಲಿ ಪೂರಿಮ ಅಥವಾ ಸಿಂಹ ಮುಖಗಳನ್ನು ಸ್ಪಷ್ಟವಾಗಿ ರಚಿಸಲಾಯಿತು.

ಮಕರತೋರಣ ರಚನೆ, ಲಕ್ಕುಂಡಿ

ಮಕರತೋರಣ ರಚನೆ, ಲಕ್ಕುಂಡಿ

ವೃತ್ತ ಸ್ಫುಟಿತವು ಎರಡು ಸ್ತಂಭಗಳ ಮೇಲೆ ಶುಕನಾಸಿ ಅಥವಾ ಶಿಖರಾಕೃತಿಗಳನ್ನು ಹೊಂದಿದ್ದರೆ ಸ್ತಂಭ ಪಂಜರವು ಒಂದೇ ಸ್ತಂಭದ ಮೇಲೆ ಶಿಖರಾಕೃತಿಯನ್ನು ಹೊಂದಿದೆ. ವೃತ್ತ ಸ್ಫುಟಿತದಲ್ಲಿ ಎರಡು ಸ್ತಂಭಗಳ ಮಧ್ಯೆ ಗುಹಾಭಾಗದಲ್ಲಿ ವಿಗ್ರಹಗಳ ಕಂಡರಣೆ ಇದೆ. ಕಾಶ್ಯಪಶಿಲ್ಪ ಗ್ರಂಥದಲ್ಲಿ ವೃತ್ತಸ್ಫುಟಿತದ ವಿವರಗಳಿವೆ. (ಕೃಷ್ಣರಾಯ ಮತ್ತು ಆಪ್ಟೆ : ೧೯೨೬ : ೩೮).

ವೃತ್ತಾಕಾರ ಸಮಂ ತಚ್ಛ ತೋರಣಾಂಘ್ರಿ ವದಾಯತಂ
ಸಕಂದರಂ ತದೂರ್ಧ್ವೇತು ಶುಕನಾಸಂ ತು ವಾ
ಕರ್ಣಕೂಟಾಕೃತಿಂ ವಾಥ ವೃತ್ತಾಕಾರಂ ಪ್ರಕಲ್ಪಯೇತ್

ವೃತ್ತ ಸ್ಫುಟತಿದಲ್ಲಿ ಎರಡು ಸ್ತಂಭಗಳ ಮೇಲೆ ಕರ್ಣಕೂಟ ರಚನೆ ಅಥವಾ ವೃತ್ತಾಕಾರವನ್ನು ರಚಿಸಬಹುದೆಂದು ನಿರ್ದೇಶಿಸಿದೆ. ದಾಕ್ಷಿಣಾತ್ಯ ಮೂಲದ ವೃತ್ತ ಸ್ಫುಟಿತದ ಆರಂಭದ ಉದಾಹರಣೆಗಾಗಿ ನಂದಿಯ ಅರುಣಾಚಲೇಶ್ವರ ದೇವಾಲಯದ ದಕ್ಷಿಣ ಭಾಗದ ಹೊರ ಭಿತ್ತಿಯನ್ನು ನೋಡಬಹುದು. ಈ ರಚನೆಯಲ್ಲಿ ಎರಡು ಸ್ತಂಭಗಳು ಒತ್ತೊಟ್ಟಿಗೆ ಇದ್ದು ಮೇಲ್ಗಡೆ ಪಂಜರಾಕೃತಿಯೊಂದಿಗೆ ವೃತ್ತಾಕಾರ ಕುಕ್ಷಿ ಇದೆ. ಸ್ತಂಭದ ಮುಂದೆ ಪ್ರತಿಮೆ ಇದೆ. ತದನಂತರ ಕಾಲದಲ್ಲಿ ಸ್ತಂಭದ ನಡುವೆ ಅಂತರ ಹೆಚ್ಚಿದ್ದು ಮೇಲ್ಗಡೆ ಪಂಜರಕ್ಕೆ ಬದಲಾಗಿ ಕರ್ಣಕೂಟಾಕೃತಿ ಅಥವಾ ಶಿಖರಾಕೃತಿಗಳಿವೆ. ವೃತ್ತಸ್ಫುಟಿತವು ದಾಕ್ಷಿಣಾತ್ಯ ದೇವಾಲಯಗಳಿಗಿಂತ ಔತ್ತರೇಯ ದ್ರಾವಿಡ ಶೈಲಿಯಲ್ಲಿ ಗಮನಾರ್ಹವಾಗಿ ಪ್ರದರ್ಶನಗೊಂಡಿದೆ. ಸ್ತಂಭಪಂಜರವನ್ನು ಗಮನಿಸಬೇಕು.

ಮಕರತೋರಣ ಸ್ತಂಭಪಂಜರ, ವೃತ್ತಸ್ಫುಟಿತ ರಚನೆ,ಲಕ್ಕುಂಡಿ

ಮಕರತೋರಣ ಸ್ತಂಭಪಂಜರ, ವೃತ್ತಸ್ಫುಟಿತ ರಚನೆ,ಲಕ್ಕುಂಡಿ

ದಾಕ್ಷಿಣಾತ್ಯ ಗ್ರಂಥಗಳಲ್ಲಿ ಚಿತ್ರಕುಂಭಲತಾ, ಸ್ತಂಭಕುಂಭಲತಾ ಮತ್ತು ಕುಂಭಕುಂಭಲತಾಗಳ ವಿವರವಿದೆ. ಈ ವಿವರಗಳೂ ಅಸ್ಪಷ್ಟ. ದೇವಾಲಯಗಳಲ್ಲಿ ಸಾಮಾನ್ಯವಾಗಿ ಕುಂಭ ಪಂಜರವೆಂದು ಗುರುತಿಸಲಾದ ರಚನೆ ಇದ್ದು ಇದರ ವಿವರಗಳು ಹೆಚ್ಚೂ ಕಡಿಮೆ ಕುಂಭ ಸ್ತಂಭದ ವಿವರಣೆಯನ್ನು ಹೋಲುತ್ತದೆ. ಇದರ ಪ್ರಕಾರ ಪಾದ ಮೂಲದಲ್ಲಿ ಪಾಲಿಕೆ ಇದ್ದು ನಂತರ ಕುಂಭ; ಕುಂಭ ಮುಖದಿಂದ ಸ್ತಂಭ, ಸ್ತಂಭಾಗ್ರದಲ್ಲಿ ನಾಸಿಕಾ ಅಥವಾ ಪಂಜರ. ಕುಂಭಮುಖದಿಂದ ಅಥವಾ ಸ್ತಂಭದ ಪಾರ್ಶ್ವಗಳಿಂದ ಲತಾಲಂಕಾರ. ಇದು ಕುಂಭಪಂಜರದ ವಿವರಣೆ. ಸ್ತಂಭಪಂಜರವು ಕುಂಭಸ್ತಂಭದ ಪ್ರಭೇದ. ಸ್ತಂಭಪಂಜರದಲ್ಲಿ ಪಾದಮೂಲದಲ್ಲಿ ಪಾಲಿಕೆಯುಂಟು; ನಂತರ ನೀಳವಾದ ಸ್ತಂಭ. ಸ್ತಂಭಾಗ್ರದಲ್ಲಿ ನಾಸಿಕಾ, ಪಂಜರ ರಚನೆ ಅಥವಾ ಶಿಖರಾಕೃತಿಗಳು. ಸ್ತಂಭಮೂಲದಲ್ಲಿ ಕುಂಭವಿಲ್ಲ, ಲತಾಲಂಕಾರವೂ ಇಲ್ಲ. ಇವಿಷ್ಟೇ ಸ್ತಂಭಪಂಜರದ ಸ್ತರಗಳು. ಭಿತ್ತಿಯ ಫಲಕದಲ್ಲಿ ಸ್ವತಂತ್ರವಾಗಿ ನಿಂತ ಸ್ತಂಭ ಪಂಜರಗಳುಂಟು; ತೋರಣಗಳಿಂದ ಆವೃತವಾದ ಸ್ತಂಭಪಂಜರಗಳುಂಟು. ಕಕ್ಷಾಸನದ ಹೊರ ಭಾಗದಲ್ಲಿ ಸಾಲಾಗಿ ಜೋಡಿಸಿದ ಸ್ತಂಭಪಂಜರಗಳೂ ಉಂಟು. ಇದು ಔತ್ತರೇಯ ದ್ರಾವಿಡ ಶೈಲಿಯಲ್ಲಿ ಕಾಣುವ ಸಾಮಾನ್ಯ ಅಲಂಕಾರವೆನಿಸಿದೆ.

ಸಮರಾಂಗಣ ಸೂತ್ರಧಾರ ಗ್ರಂಥವು ಪೀಠಾನಂತರ ರಚಿಸಲಾಗುವ ಕಕ್ಷಾಸನವನ್ನು ಕೆಳಕಂಡಂತೆ ವಿವರಿಸಿದೆ (ಅಗ್ರವಾಲಾ: ೧೯೬೬ : ೫೪೦).

ಕಕ್ಷಾಸನ ಅಲಂಕಾರ, ತಿಳವಳ್ಳಿ

ಕಕ್ಷಾಸನ ಅಲಂಕಾರ, ತಿಳವಳ್ಳಿ

ಭಾಗಿಕಂ ರಾಜಸೇನಂ ಸ್ಯಾತ್ ವೇದಿಕಾಪಿ ದ್ವಿಭಾಗಕೀ
ಮತ್ತವಾರಣಕಂ ಕಾರ್ಯಂ ಭಾಗದ್ವಯ ಸಮ್ಮಿತಂ

ಪೀಠಾನಂತರ, ಕಕ್ಷಾಸನದ ಸ್ತರಗಳಾಗಿ ರಾಜಸೇನ, ವೇದಿಕಾ ಮತ್ತು ಮತ್ತವಾರಣ ಎಂದು ಗುರುತಿಸಬಹುದು. ಕಕ್ಷಾಸನದ ಒರಗು ಭಾಗವೇ ಮತ್ತವಾರಣ. ಸ್ತಂಭಪಂಜರದ ರಚನೆಯ್ನನು ಹೊರಭಾಗದ ಉಬ್ಬು ಶಿಲ್ಪವಾಗಿ ಕಾಣಬಹುದಾಗಿದ್ದು ತೋರಣ ರಹಿತ ಸ್ಥಿತಿ ಎನಿಸಿದೆ. ಭಿತ್ತಿಯ ಅಲಂಕಾರಕ್ಕೆ ಸಂಬಂಧಿಸಿದಂತೆ ದೀಪಾರ್ಣದ ಗ್ರಂಥದ ವಿವರವನ್ನು ನೋಡಬಹುದು (ಸೋಂಪುರ : ೧೯೬೦ : ೬೩).

ನಾಗರೀ ತಥಾ ಲಾಟೀ ವೈರಾಟೀ ದ್ರಾವಿಡೀ ತಥಾ
ಶುದ್ಧಾ ತು ನಾಗರೀ ಖ್ಯಾತಾ ಪರಿಕರ್ಮ ವರ್ಜಿತಾ
ಸ್ತ್ರೀಯುಗ್ಮ ಸಂಯುತಾ ಲಾಟೀ ವೈರಾಟೀ ಪತ್ರಸಂಕುಲಾ
ಮಂಜರೀ ಬಹುಲಾ ಕಾರ್ಯಾಜಂಘಾ ದ್ರಾವಿಡೀ ಸದಾ

ಜಂಘಾ ರಚನೆಯ ಅಲಂಕಾರವನ್ನಾಧರಿಸಿ, ಔತ್ತರೇಯ ಸಂಪ್ರದಾಯದಲ್ಲಿ ನಾಗರೀ, ಲಾಟೀ, ವೈರಾಟೀ, ದ್ರಾವಿಡೀ ಎಂಬ ನಾಲ್ಕು ಪ್ರಭೇದಗಳನ್ನು ಗುರುತಿಸಲಾಗಿದೆ. ಸಮರಾಂಗಣ ಸೂತ್ರಧಾರ ಗ್ರಂಥವು ಮಂಜರಿಯ ಸ್ಥಾನವನ್ನು ಮಂಜುಯಾಸ್ತಂಭ ಸೀಮಾನಾಂ ಎಂದಿದ್ದು, ಮಂಜರಿಯ ಸ್ವರೂಪವನ್ನು ನೀಲೋತ್ಪಲ ದಲಾಕಾರಾ ಮಂಜುರ್ಯಾ ಸರ್ವಶೋಭನಾ ಎಂದು ವಿವರಿಸಿದೆ. ಮಂಜರೀ ಪದವನ್ನು ವಿದ್ವಾಂಸರು ಶೃಂಗ ಅಥವಾ ಅಂಡಕ ಎಂದು ಅರ್ಥೈಸಿದ್ದಾರೆ. ಇದು ಆರಂಭ ಕಾಲದ ಸ್ತಂಭಪಂಜರ ಅಥವಾ ವೃತ್ತ ಸ್ಫುಟಿತ ರಚನೆ ಇರಬೇಕು.

ದಾಕ್ಷಿಣಾತ್ಯ ಗ್ರಂಥಗಳಲ್ಲಿ ಕುಂಭಸ್ತಂಭ ರಚನೆಯಲ್ಲಿ ಕುಂಭಕ್ಕೆ ಬದಲಾಗಿ ಫಲಕದ ಮೇಲ್ಗಡೆ ಪದ್ಮವಿರುವುದನ್ನು ಗುರುತಿಸಿದೆ. ಇದಕ್ಕೆ ಪರ್ಯಾಯವಾಗಿ ಕೂಟ, ಶುಕನಾಸ, ಪಂಜರಗಳಿವೆ. ಪದ್ಮರಚನೆಯು ಕೆಲವೆಡೆ ಕಾಣಿಸಿಕೊಂಡಿದೆ. ಇದು ಆರಂಭದ ಸೂಚನೆ. ಪದ್ಮದ ಬದಲಾಗಿ ಶುಕನಾಸ, ನಂತರ ಕೂಟ, ಇದು ವಿಕಾಸದ ಹಾದಿಯೆನಿಸಿದ್ದು, ಕುಂಭಸ್ತಂಭ ಅಥವಾ ಸ್ತಂಭಪಂಜರ ರಚನೆಯಲ್ಲಿ ಸ್ತಂಭಾಗ್ರದಲ್ಲಿ ಕೂಟ ರಚನೆಯನ್ನು ಕಾಣುತ್ತೇವೆ. ಕುಬಟೂರು ಶಾಸನದ ಒಕ್ಕಣೆಯಲ್ಲಿರುವ “ಬಹುವಿಧದ ಭದ್ರೋಪೇತದಿಂ…” ಎಂಬ ಸಾಲು ಸ್ತಂಭಪಂಜರ ಹಾಗೂ ವೃತ್ತಸ್ಫುಟಿತಗಳನ್ನು ಸೂಚಿಸಿದೆ.

ಜಂಘಾ ಅಥವಾ ಭಿತ್ತಿ ಭಾಗದಲ್ಲಿ ಪರ್ಯಾಯವಾಗಿ ನಿಂತ ಸ್ತಂಭದ ಭಾಗಗಳನ್ನು ಕುಂಭೀ, ಸ್ತಂಭ, ಭರಣೀ, ಸ್ತಂಭಶೀರ್ಷ ಎಂದು ಗುರುತಿಸಬಹುದು. ಕುಂಭೀ ಎಂದಲ್ಲಿ ಪಾದಮೂಲ, ಸ್ತಂಭ ಎಂದಲ್ಲಿ ಪಾದಮಧ್ಯ. ಭರಣಿ ಮತ್ತು ಸ್ತಂಭ ಶೀರ್ಷಗಳು ಪಾದಾಗ್ರಕ್ಕೆ ಸಂಬಂಧಿಸಿವೆ. ಭರಣಿಯು ಕುಂಭ ಮಂಡಾದಿ ಸಂಯುತಂ ಎಂಬ ವಿವರಣೆಗೆ ಸಮನಾದುದು. ಸ್ತಂಭಶೀರ್ಷ ಎಂದಲ್ಲಿ ಬೋದಿಗೆ ಮಾತ್ರ. ದಾಕ್ಷಿಣಾತ್ಯ ಸಂಪ್ರದಾಯದ ಗಂಗರ ಕಾಲದ ದೇವಾಲಯಗಳಲ್ಲಿ ಈ ಪರ್ಯಾಯ ಭಾಗಗಳನ್ನು ಅಚ್ಚುಕಟ್ಟಾಗಿ ಗುರುತಿಸಿಕೊಳ್ಳಬಹುದು.

ಸ್ತಂಭ, ಆನೇಕೆರೆ / ಸ್ತಂಭ, ಅಮೃತಾಪುರ

ಸ್ತಂಭ, ಆನೇಕೆರೆ / ಸ್ತಂಭ, ಅಮೃತಾಪುರ

ಔತ್ತರೇಯ ದ್ರಾವಿಡ ಶೈಲಿಯಲ್ಲಿ ಪೀಠಾನಂತರ ಭೂಮಿ ರಚನೆಯಾದ್ದರಿಂದ ಛಾದ್ಯವನ್ನು ಪ್ರತ್ಯೇಕ ಎನ್ನುವಂತೆ ಗುರುತಿಸಿಲ್ಲ. ಕಪೋತವೇ ಛಾದ್ಯ. ದಾಕ್ಷಿಣಾತ್ಯ ಸಂಪ್ರದಾಯದ ಪ್ರಭಾವದಿಂದ ಮೊದಲ ಹಂತದ ಭೂಮಿ ವಿಸ್ತಾರವಾಗಿ ಬೆಳೆದು ಜಂಘಾ ಮತ್ತು ಛಾದ್ಯಗಳನ್ನು ಪ್ರತ್ಯೇಕವಾಗಿ ವಿವರಿಸಲು ಅವಕಾಶವಾಯಿತು.

ಆರಂಭದಲ್ಲಿ ಮಂಟಪದೆಡೆಯಲ್ಲಿದ್ದ ಹೆಚ್ಚು ಬಾಗುಳ್ಳ ಛಾದ್ಯವನ್ನು ಗರ್ಭಗೃಹ ಹಾಗೂ ಅಂತರಾಳದ ಸುತ್ತ ವಿಸ್ತರಿಸಲಾಯಿತು. ಈ ಬಾಗುವಿಕೆ ಜಂಘಾ ಭಾಗದ ಅಲಂಕಾರಕ್ಕೆ ರಕ್ಷಣೆ ಎಂಬಂತೆ ಬಿಂಬಿತವಾಯಿತು.

ಬಾಗಿದ ಶಿಖರವುಳ್ಳ ಔತ್ತರೇಯ ದೇವಾಲಯಗಳಲ್ಲಿ ಛಾವಣಿಯಿಂದ ಮೇಲಕ್ಕೆ ನಿಂತ ಭಾಗವನ್ನು ಶೃಂಗವೆನ್ನುತ್ತಾರೆ. ಈ ಭಾಗದಲ್ಲಿ ಏಕ ಶೃಂಗ ರಚನೆ ಇರಬಹುದು ಅಥವಾ ಬಹುಶೃಂಗ ರಚನೆ ಇರಬಹುದು, ಇದು ಶೈಲಿಯನ್ನು ನಿರ್ಧರಿಸುತ್ತದೆ. ಶೃಂಗೇಣೈಕೇನ ಲತಿನಃ – ಏಕ ಶೃಂಗವಿರುವುದು ಲತಿನ; ಏಕಾಂಡೈಶ್ಚ ವಿಭೂಷಿತಾನ್– ಒಂದಕ್ಕಿಂತ ಹೆಚ್ಚು ಶೃಂಗಗಳಿರುವುದು ವಿಮಾನ ನಾಗರ. ಮೂಲಶೃಂಗ, ಉರುಶೃಂಗ, ಪ್ರತ್ಯಂಗ, ಕರ್ಣ ಶೃಂಗಗಳಿದ್ದು ನಿಯಮಿತ ಕ್ರಮವನ್ನು ಅನುಸರಿಸಿ ಹಲವು ಪುನಃ ಪ್ರಭೇದಗಳನ್ನು ಸೃಷ್ಟಿಸುತ್ತದೆ. ಭೂಮಿಜ ಶೈಲಿಯಲ್ಲಿ ಕಿರುಶೃಂಗಗಳು ಮುತ್ತು ಪೋಣಿಸಿದಂತೆ ಮಾಲಾಕಾರವನ್ನು ಪಡೆಯುತ್ತದೆ -“ಶೃಂಗಂ ಮಾಲಿಕಾಕೃತಿ“. ಭೂಮಿಜ ಶೈಲಿ ಔತ್ತರೇಯ ನಾಗರಾದಿ ಶೈಲಿಗಳಿಗೂ ದ್ರಾವಿಡ ಶೈಲಿಗೂ ನಡುವಣ ಕೊಂಡಿಯಂತಿದೆ. ಬಾಗಿದ ಶಿಖರವಲ್ಲದೆ, ಚೂಪಾದ ಶಿಖರವೂ ಭೂಮಿಜ ಶೈಲಿಯಲ್ಲಿ ಉಂಟು. ಇದು ಕೆಳಗಿನಿಂದ ಮೇಲಕ್ಕೆ ಕಿರಿದಾಗುತ್ತಾ ಸಾಗುವುದುಂಟು. ತುದಿಯಲ್ಲಿ ಘಂಟಾ ರಚನೆಯುಂಟು.

ಏಕಶೃಂಗ-ಲತಿನ / ಬಹುಶೃಂಗ-ವಿಮಾನ ನಾಗರ / ಮಾಲಿಕಾಕೃತಿ-ಭೂಮಿಜ

ಏಕಶೃಂಗ-ಲತಿನ / ಬಹುಶೃಂಗ-ವಿಮಾನ ನಾಗರ / ಮಾಲಿಕಾಕೃತಿ-ಭೂಮಿಜ

ಔತ್ತರೇಯ ದ್ರಾವಿಡ ಶೈಲಿಯಲ್ಲಿ ಉರುಶೃಂಗಗಳಿಲ್ಲ. ಅದಕ್ಕೆ ಬದಲಾಗಿ ಶಾಲಾ ರಚನೆ ಇದೆ. ಕರ್ಣ ಹಾಗೂ ಪ್ರತಿರಥದ ಭಾಗದಲ್ಲಿ ಪ್ರತ್ಯಂಗ ಮತ್ತು ಅಲಂಕಾರಿಕ ಶೃಂಗಗಳಿಲ್ಲ. ಪಂಜರ, ಹಾರಾಂತರ, ಕರ್ಣಕೂಟಗಳ ಜೋಡಣೆ ಇದೆ. ಅಪರಾಜಿತ ಪೃಚ್ಛಾ ಗ್ರಂಥಕಾರನು ಉರುಶೃಂಗಂ ಯದಾ ಲುಪ್ತಂ ರೇಖಾ ಕರ್ಣ ಜಲಾಂತರೈಃ ಎಂದು ಗುರುತಿಸಲಾಗುತ್ತಾನೆ. ಕರ್ಣ ಎನ್ನುವುದು ಕರ್ಣಕೂಟವನ್ನು ಪ್ರತಿನಿಧಿಸಿದ್ದು, ಜಲಾಂತರವು ಹಾರಾಂತರಕ್ಕೆ ಪರ್ಯಾಯ ಪದ. ರೇಖಾ ಎನ್ನುವುದು ಶಾಲಾ ಪದಕ್ಕೆ ಸಂವಾದಿಯೇ? ಖಚಿತವಾಗಿ ತಿಳಿದಿಲ್ಲ. ದ್ರಾವಿಡ ಶೈಲಿಯನ್ನು ವಿವರಿಸುವಲ್ಲಿಲತಾಶೃಂಗ ಕ್ರಮೋದ್ಭವಾಃ ಎಂಬ ಉಲ್ಲೇಖವನ್ನು ಆಗಲೇ ಗಮನಿಸಿದ್ದೇವೆ. ಇದು ಶಾಲಾ-ಪಂಜರ-ಕರ್ಣಕೂಟಗಳ ಜೋಡಣೆಯನ್ನು ಕುರಿತ ಉಲ್ಲೇಖವೇ? ಇದೂ ಸ್ಪಷ್ಟವಿಲ್ಲ. ಕುಕ್ಕನೂರಿನ ಕಲ್ಲೇಶ್ವರ ದೇವಾಲಯದಲ್ಲಿ ಹಾರ ರಚನೆಯನ್ನು ಅತೀ ವಿಸ್ತಾರವಾದ ಶಾಲಾ ರಚನೆಯನ್ನು ಕಾಣಬಹುದು. ಆರಂಭದ ಈ ಶಾಲಾರಚನೆ ಲತಾಶೃಂಗ ಎಂಬ ಹೆಸರು ಪಡೆದಿತ್ತೇ? ಚರ್ಚೆಗೆ ಅವಕಾಶವಿದೆ. ವಾಸ್ತುಗ್ರಂಥ ರೀತ್ಯಾ ದ್ರಾವಿಡ, ಭೂಮಿಜ, ವರಾಟ ಶೈಲಿಯ ದೇವಾಲಯಗಳಲ್ಲಿ ಹನ್ನೆರಡರವರೆಗೆ ಭೂಮಿ ರಚನೆಗೆ ಅವಕಾಶವಿದೆ. (ಮಂಕಡ್: ೧೯೫೦ : ೩೧೫).

ಏಕಭೂಮ್ಯಾದಿತೋ ವೃದ್ಧಿರಂತೇ ದ್ವಾದಶ ಭೂಮಿಕಾಃ

ಔತ್ತರೇಯ ದ್ರಾವಿಡ ಶೈಲಿಯ ಭೂಮಿ ರಚನೆಯಲ್ಲಿ ಐದು ಪ್ರಭೇದಗಳು (ಅಗ್ರವಾಲ : ೧೯೬೬ : ೪೬೯).

ತತ್ರಪದ್ಮೋ ಮಹಾಪದ್ಮೋ ವರ್ಧಮಾನಸ್ತಥಾಪರಃ
ಸ್ವಸ್ತಿಕ ಸರ್ವತೋಭದ್ರಃ ಪ್ರಾಸಾದಾಃ ಪಂಚಕೀರ್ತಿತಾಃ

ಭೂಮಿರಚನೆಯಲ್ಲಿರುವ ಶಾಲಾ, ಪಂಜರ, ಕರ್ಣಕೂಟ ಮತ್ತು ಹಾರಾಂತರಗಳ ಜೋಡಣೆ, ಅಳತೆ, ತಲಚ್ಛಂದ ಮುಂತಾದವುಗಳನ್ನು ಅನುಸರಿಸಿ ಈ ಪ್ರಭೇದಗಳು ಗುರುತಿಸಲಾಗಿದೆ. ಪದ್ಮ, ಮಹಾಪದ್ಮ, ವರ್ಧಮಾನ, ಸ್ವಸ್ತಿಕ, ಸರ್ವತೋಭದ್ರ ಇವೇ ಐದು ಪ್ರಭೇದಗಳು. ತಲಚ್ಛಂದದಲ್ಲಿ ಚತುರಶ್ರ ಮತ್ತು ವೃತ್ತಕ ಎಂದು ಮೂಲ ಪ್ರಭೇದಗಳು. ವೃತ್ತದಲ್ಲಿ ಅಷ್ಟಾಶ್ರ ಮತ್ತು ಷೋಡಶಾಶ್ರ ಮುಂತಾದ ರಚನೆಗಳಿವೆ. ಇವನ್ನು ನಕ್ಷತ್ರಾಕಾರ ರಚನೆ ಎನ್ನಬಹುದು. ಶಾಸ್ತ್ರಗ್ರಂಥಗಳಲ್ಲಿ ನಕ್ಷತ್ರಾಕಾರ ಎಂಬ ಉಲ್ಲೇಖವಿಲ್ಲ. ಪ್ರತಿಮೂಲೆಗಳಲ್ಲಿ ಕರ್ಣಕೂಟ ರಚನೆ ಇದ್ದು, ಶಾಲಾ ರಚನೆಗೆ ಇಲ್ಲಿ ಸ್ಥಾನವಿಲ್ಲ. ಕರ್ಣಕೂಟಗಳ ಮಧ್ಯೆ ಸೂಕರಾನನ ಎಂಬ ಅಲಂಕಾರವಿದೆ. ಇದು ದಾಕ್ಷಿಣಾತ್ಯ ರಚನೆಗಳಲ್ಲಿ ಕಂಡುಬರುವ ಮಕರಾನನ, ವ್ಯಾಳದಂತೆ ವಿಶಿಷ್ಟವಾದುದು (ಅಗ್ರವಾಲಾ. ೧೯೬೬. ೪೭೦).

ಸಪ್ತಭೂಮಿ ರಚನೆ - ವೃತ್ತಾಕಾರ, ಡಂಬಳ

ಸಪ್ತಭೂಮಿ ರಚನೆ – ವೃತ್ತಾಕಾರ, ಡಂಬಳ

ಕೂಟಯೋರುಭಯೋರ್ಮಧ್ಯೇ ಸೂಕರಾನನ ಸನ್ನಿಭಂ

ಪದ್ಮ ಹಾಗೂ ಮಹಾಪದ್ಮ ಕ್ರಮವಾಗಿ ಅಷ್ಟಾಶ್ರ ಮತ್ತು ಷೋಡಶಾಶ್ರ ರಚನೆಗಳು. ಇವಲ್ಲದೆ ಇಪ್ಪತ್ತುನಾಲ್ಕು ಮತ್ತು ಮೂವತ್ತೆರಡು ಕೋನಗಳುಳ್ಳ ರಚನೆಗಳನ್ನು ಕೈಲಾಸ ಹಾಗೂ ಮೇರುನಾಯಕ ಎಂದು ಹೆಸರಿಸಲಾಗಿದೆ (ಮುಂಕಡ್. ೧೯೫೦.೪೪೯).

ಪಂಚಭೂಮಿ - ಹದಿನಾರು ಕೋನಗಳ ರಚನೆ, ಶಿವಾಲಯ, ಅರಸೀಕೆರೆ

ಪಂಚಭೂಮಿ – ಹದಿನಾರು ಕೋನಗಳ ರಚನೆ, ಶಿವಾಲಯ, ಅರಸೀಕೆರೆ

ಅಷ್ಟಕೋಣಾಃ ಪಂಚಭೂಮಾ ಪದ್ಮಾನಾಮಾ ಕಾಮದಃ
ಪಂಚಭೂಮಾ ದ್ವಷ್ಟದಲಾ ಮಹಾಪದ್ಮ ಇತಿಸ್ಮೃತಃ
ಚತುರ್ವಿಂಶತಿಭಿರ್ವೃತ್ತಃ ಕೈಲಾಸ ಸಪ್ತಭೂಮಿಕಃ
ದ್ವಾತ್ರಿಂಶದ್ಭಿಃ ದಲೈರ್ವೃತ್ತಃ ಭವೇನ್ಮೇರುನಾಯಕಃ

ವರ್ಧಮಾನ, ಸ್ವಸ್ತಿಕ ಮತ್ತು ಸರ್ವತೋಭದ್ರ ಇವು ಚತುರಶ್ರ ರಚನೆಗಳು. ಈ ಪ್ರಭೇದಗಳನ್ನು ದೊಡ್ಡಗದ್ದವಳ್ಳಿ ಶಾಸನ ಹೆಸರಿಸಿದೆ. ಈ ಪ್ರಭೇದಗಳಲ್ಲಿ ಕರ್ಣಕೂಟ, ಹಾರಾಂತರ, ಪಂಜರ ಮತ್ತು ಶಾಲಾ ಇವುಗಳ ಅಳತೆಗಳಲ್ಲಿ ವ್ಯತ್ಯಾಸವಿದ್ದು ಪ್ರತಿ ಪ್ರಭೇದಗಳಿಗೂ ಕರಾರುವಾಕ್ಕಾದ ವಿವರಗಳಿವೆ (ಅಗ್ರವಾಲಾ : ೧೯೬೬ : ೪೭೦). ಹಾರಾಂತರಕ್ಕೆ ಪರ್ಯಾಯವಾಗಿ, ಸಲಿಲಾಂತರ, ಜಲಮಾರ್ಗ, ತೋಯಮಾರ್ಗ ಪದಗಳಿವೆ. ಕರ್ಣಕೂಟ ಮತ್ತು ಶಾಲಾ ರಚನೆಯ ಸಂಬಂಧದಿಂದ ಈ ಪ್ರಭೇದಗಳನ್ನು ಪ್ರತ್ಯೇಕವಾಗಿ ಗುರುತಿಸಬಹುದು. ಸ್ವಸ್ತಿಕ ರಚನೆಯಲ್ಲಿ ಶಾಲಾ ಅಳತೆಯು ಕರ್ಣಕೂಟದ ಎರಡರಷ್ಟು ವಿಸ್ತಾರವುಳ್ಳದ್ದು. ಸರ್ವತೋಭದ್ರ ಪ್ರಭೇದದಲ್ಲಿ ಪಂಜರ ರಚನೆಯಿಲ್ಲದೆ ಶಾಲಾ, ಕೂಟದ ಮಧ್ಯೆ ಮತ್ತೊಂದು ಕೂಟವಿದೆ. ದಾಕ್ಷಿಣಾತ್ಯ ಸಂಪ್ರದಾಯದಲ್ಲಿ ಶಾಲಾಕೂಟ ರಚನೆಗಳೊಂದಿಗೆ ದೇವಕೋಷ್ಟಗಳ ರಚನೆಯೂ ಉಂಟು. ಔತ್ತರೇಯ ದ್ರಾವಿಡ ಶೈಲಿಯಲ್ಲಿ ದೇವಕೋಷ್ಟ ರಚನೆ ಜಂಘಾ ಅಥವಾ ಭಿತ್ತಿಯ ಮಧ್ಯಭಾಗದಲ್ಲಿದೆ. ಇದನ್ನು ಕೆಲವು ದೇವಾಲಯಗಳಲ್ಲಿ ಮಾತ್ರ ಕಾಣಬಹುದು.

ಸಮರಾಂಗಣ ಸೂತ್ರಧಾರ ಗ್ರಂಥವು ಹನ್ನೆರಡು ಭೂಮಿ ರಚನೆಯನ್ನು ವಿಸ್ತಾರವಾಗಿ ಬಣ್ಣಿಸಿದೆ. ಈ ವಿವರಗಳು ಅಸ್ಪಷ್ಟ, ಹಲವೆಡೆ ಗ್ರಂಥಪಾಗಳಿಂದ ಕೂಡಿದೆ. ಅಪರಾಜಿತ ಪೃಚ್ಛಾ ಗ್ರಂಥವು ಏಕಭೂಮಿ, ತ್ರಿಭೂಮಿ, ಪಂಚಭೂಮಿ, ಸಪ್ತಭೂಮಿಗಳನ್ನು ವಿವರಿಸಿದೆ. ಕ್ರಮವಾಗಿ ತ್ರಯಂಗ, ಪಂಚಾಂಗ, ಸಪ್ತಾಂಗ, ನವಾಂಗಗಳನ್ನು ಹೆಸರಿಸಿದ್ದು, ಕರ್ಣ, ಪ್ರತಿರಥ, ಉಪರಥ, ಭದ್ರ ಇತ್ಯಾದಿ ಅಂಗಗಳೂ ವಿವರಿಸಲ್ಪಟ್ಟಿವೆ. ಸಮರಾಂಗಣ ಸೂತ್ರಧಾರ ಗ್ರಂಥದ ಪ್ರಕಾರ, ಏಕಭೂಮಿ ರಚನೆಯು ಐದು ಹಸ್ತಗಳಷ್ಟು ವಿಸ್ತಾರವುಳ್ಳದ್ದು; ಎತ್ತರವು ಏಳು ಹಸ್ತಗಳು. ಇದೇ ರೀತಿ ಹನ್ನೆರಡು ಭೂಮಿಯವರೆಗೆ ಅಗಲ ಮತ್ತು ಎತ್ತರವನ್ನು ಗುರುತಿಸುತ್ತದೆ. ಜಂಘಾ ಭಾಗದ ವಿವರಣೆಯಲ್ಲಿ ಜಂಘಾ ಕರ್ತವ್ಯಾ ಸ್ತಂಭಯುತಾ ಎಂದಿದ್ದು, ಜಂಘಾ ಭಾಗದಲ್ಲಿ ಸ್ತಂಭಗಳು ಗಮನಾರ್ಹಪಾತ್ರ ವಹಿಸುತ್ತವೆ. ಜಂಘಾ ಅಥವಾ ಸ್ತಂಭದ ಸ್ತರಗಳಾಗಿ, ಮಾಲಾ, ಲಶುನ, ಭರಣಿ, ವೀರಗಂಡ, ಉಜ್ಜಾಲ, ಹೀರಕ, ಪಟ್ಟ, ಪಟ್ಟಿಕಾ, ವಸಂತ, ವಸಂತಪಟ್ಟಿಕಾ, ಕಪೋತ ಮುಂತಾದ ಸ್ತರಗಳಿವೆ. ದಾಕ್ಷಿಣಾತ್ಯ ಸಂಪ್ರದಾಯದ ಪ್ರಸ್ತರದಲ್ಲಿ ಕಾಣಬರುವ ಸ್ತರಗಳೂ ಇದರೊಂದಿಗೆ ಸೇರ್ಪಡೆಯಾಗಿವೆ ಎನ್ನಬಹುದು. ಈ ಗ್ರಂಥದ ಪ್ರಕಾರ ಐದು ಭೂಮಿವರೆಗಿನ ರಚನೆ ಸಾಧಾರಣ ಕ್ರಿಯೆ ಎನ್ನಿಸಿದೆ (ಅಗ್ರವಾಲಾ : ೧೯೬೬ : ೪೮೬).

ಪಂಚಭೂಮಿಕಾ ಪರ್ಯಂತಂ ಕಾರ್ಯಾ ಸಾಧಾರಣ ಕ್ರಿಯಾ

ಭೂಮಿ ರಚನೆಯ ನಂತರ ವೇದೀ ಭಾಗವಿದೆ. ಸಮರಾಂಗಣ ಸೂತ್ರಧಾರ ಗ್ರಂಥದಲ್ಲಿ ಇದರ ವಿವರಣೆ ಇದೆ (ಅಗ್ರವಾಲಾ : ೧೯೬೬ : ೪೮೫).

ಭಾಗಃ ಕಂಠಃ ಪಟ್ಟಿಕಾ ವೇದೀ ಕಾರ್ಯಾ ದ್ವಿಭಾಗಕೀ
ಛೇದೋ ಭಾಗೇನ ಕರ್ತವ್ಯಃ ಕಂಠಶ್ಚಾನ್ಯ ತ್ರಿಭಾಗಿಕಃ
ಪಟ್ಟಿಕಾಂ ಪದ್ಮಪತ್ರೀಂ ವಿದಿಧೀತ ಸ್ತರಸ್ತರಂ

ವೇದಿರಚನೆಯಲ್ಲಿ ಕಂಠ (೧), ಪಟ್ಟಿಕಾ (೧), ವೇದೀ (೨), ಕಂಠ (೩), ಪಟ್ಟಿಕಾ (೧) ಮತ್ತು ಪದ್ಮಪತ್ರ (೧), ಸ್ತರಗಳೆನಿಸಿವೆ.

ಅಪರಾಜಿತಪೃಚ್ಛಾ ಗ್ರಂಥಕಾರನು, ವೇದೀಬಂಧ ಎಂದು ಹೆಸರಿಸಿದ್ದು, ಪುನಃ ಏಕಸಂಘಾಟ, ದ್ವಿಸಂಘಾಟ, ತ್ರಿಸಂಘಾಟ ಎಂದು ಪ್ರಭೇದಗಳನ್ನು ಗುರುತಿಸುತ್ತಾನೆ (ಮಂಕಡ್ : ೧೯೫೦ : ೪೪೯). ಇವನ್ನು ಖಚಿತವಾಗಿ ಅರ್ಥೈಸಲು ಸಾಧ್ಯವಾಗಿಲ್ಲ.

ಸಂಘಾಟೇ ಪ್ರಥಮೇ ಕುರ್ಯಾನ್ ಮಕರಾನ್ ವಿಕೃತಾನನಾನ್
ದ್ವಿತೀಯೇ ಕೋಟಪಾಲಾಂಶ್ಚ ಕಂಟಕೇ ತೃತೀಯಕೇ

ಕಂಟಕ ರಚನೆಯನ್ನು ಭೂಮಿ ರಚನೆಯಲ್ಲಿದ್ದಂತೆ ವೇದೀ ಭಾಗದಲ್ಲಿಯೂ ಸೂಚಿಸಲಾಗಿದೆ. ಸರಿಯಾದ ಉದಾಹರಣೆಗಳಿಲ್ಲದೆ ಗುರುತಿಸುವುದು ದುಸ್ತರವೆನಿಸಿದೆ. ವೇದೀ ರಚನೆಯ ನಂತರ ಘಂಟಾರಚನೆಯನ್ನು ಕಾಣಬಹುದು. ಭೂಮಿ ರಚನೆಯನ್ನು ಕಾಣುವ ಕರ್ಣಕೂಟವು ಸಾಮಾನ್ಯವಾಗಿ ಘಂಟಾರಚನೆಯನ್ನು ಹೋಲುತ್ತದೆ. ಔತ್ತರೇಯ ನಾಗರಾದಿ ಶೈಲಿಗಳಲ್ಲಿ ಕಾಣುವ ಆಮಲಸಾರಕ್ಕೆ ಬದಲಾಗಿ ದ್ರಾವಿಡಾದಿ ಶೈಲಿಗಳಲ್ಲಿ ಘಂಟಾ ರಚನೆ ಇದೆ. ದಾಕ್ಷಿಣಾತ್ಯ ದೇವಾಲಯಗಳಲ್ಲಿರುವ ಶಿಖರವು ಔತ್ತರೇಯ ದ್ರಾವಿಡ ಶೈಲಿಯ ಘಂಟಾ ರಚನೆಗೆ ಪರ್ಯಾಯವೆನಿಸಿದೆ. ದಾಕ್ಷಿಣಾತ್ಯ ಸಂಪ್ರದಾಯದಲ್ಲಿ ಶಿಖರದ ವಿವರಗಳು, ಅಳತೆಗಳು ಸ್ಪಷ್ಟವಾಗಿ ಲಭ್ಯವಿಲ್ಲ.

ಅಪರಾಜಿತಪೃಚ್ಛಾ ಗ್ರಂಥಕಾರನು ದ್ರಾವಿಡೀ ಮತ್ತು ವರಾಟೀ ಘಂಟಾ ರಚನೆಗಳನ್ನು ವಿವರಿಸಿದ್ದಾನೆ. ದ್ರಾವಿಡೀ ಘಂಟಾ ರಚನೆಯು ಚತುರಶ್ರಾಕಾರ ಎನಿಸಿದರೆ, ವರಾಟೀ ರಚನೆಯು ಹದಿನಾರು ಅಥವಾ ಮೂವತ್ತೆರಡು ಕೋನವುಳ್ಳದ್ದು. ದ್ರಾವಿಡೀ ಘಂಟಾ ರಚನೆ ಯಲ್ಲಿ ನಾಲ್ಕು ಕಡೆಯೂ ನಾಸಿಕಾ ರಚನೆ ಇದೆ. ವರಾಟ ಘಂಟಾ ರಚನೆಯು “ಮಂದಾರ ಪುಷ್ಪಾಕಾರ” ಎಂದು ಗುರುತಿಸಲ್ಪಟ್ಟಿದೆ. ನಕ್ಷತ್ರಾಕಾರ ಅಥವಾ ವೃತ್ತಕ ತಲಚ್ಛಂದವುಳ್ಳ ದೇವಾಲಯಗಳಲ್ಲಿ ಘಂಟಾರಚನೆಯು ಪುಷ್ಪಾಕಾರವಿರುವುದರಿಂದ “ವರಾಟ ಘಂಟಾ” ಎನ್ನಲು ಸಾಧ್ಯವಿದೆ. ದ್ರಾವಿಡೀ ಘಂಟಾ ರಚನೆ ಕೆಳಕಂಡಂತಿದೆ (ಮಂಕಡ್: ೧೯೫೦ : ೩೫೨).

ದ್ವಿರಷ್ಟ ಭಾಗ ವಿಸ್ತಾರೇ ಉಚ್ಛ್ರಾಯೇ ದಶಭಾಗತಃ
ಅಂತಃಪತ್ರಂ ಭವೇತ್ ಭಾಗಂ ಭಾಗಾರ್ಧಂ ಚೈವ ಪಟ್ಟಿಕಾ
ಕರ್ಣಸ್ತು ಸಾರ್ಧಭಾಗಶ್ಚ ತದೂರ್ಧ್ವೇ ಪದ್ಮಪತ್ರಿಕಾ
ಸ್ಕಂಧಃ ಷಡ್ಭಾಗಿಕೋ ಜ್ಞೇಯಾ ಉಚ್ಛ್ರಾಯೇ ಭಾಗಸಂಖ್ಯಯಾ
ಷಡ್ಭಾಗಶ್ಚ ಭವೇತ್ ಸ್ಕಂಧೋ ನಿರ್ಗಮಃ ಪಂಚಭಾಗಿಕಃ
ದ್ರಾವಿಡೀ ಭವೇತ್ ಘಂಟಾ ನಾಸಿಕೋಪಾಂಗ ಶೋಭಿತಾ

ಔತ್ತರೇಯ ದ್ರಾವಿಡ ಶಿಖರ, ಕಲಶ, ನುಗ್ಗೇಹಳ್ಳಿ

ಔತ್ತರೇಯ ದ್ರಾವಿಡ ಶಿಖರ, ಕಲಶ, ನುಗ್ಗೇಹಳ್ಳಿ

ಈ ವಿವರಣೆಯ ಪ್ರಕಾರ ಘಂಟಾ ರಚನೆಯ ಎತ್ತರ ಹತ್ತು, ಅಗಲ ಹದಿನಾರು. ಎತ್ತರದ ಸ್ತರಗಳ ಕೆಲವು ವಿವರಗಳಿದ್ದು ಸ್ವಲ್ಪ ಅಸ್ಪಷ್ಟತೆ ಇದೆ. ಈ ವಿವರಣೆಯಲ್ಲಿ ಅಂತರ ಪತ್ರ (೧), ಪಟ್ಟಿಕಾ (೧/೨), ಕರ್ಣ(೧ ೧/೨), ಪದ್ಮಪತ್ರಿಕಾ (?), ಸ್ಕಂದ (೨), ನಿರ್ಗಮ (೫).

ಸಮರಾಂಗಣ ಸೂತ್ರಧಾರ ಗ್ರಂಥವು ಏಕಭೂಮಿ ರಚನೆಯಲ್ಲಿ ಘಂಟಾ ಎನ್ನುವುದಕ್ಕೆ ಬದಲಾಗಿ ಕೂಟ ಎಂದೇ ನಿರ್ದೇಶಿಸಿದೆ. ಈ ಕೂಟಾಲಂಕಾರವು ನಾಸಿಕಾ, ಪದ್ಮ ರಚನೆಯನ್ನು ಹೊಂದಿದೆ (ಅಗ್ರವಾಲಾ : ೧೯೬೬ : ೪೭೭).

ನಾಸಿಕಾ ಪದ್ಮಯುಕ್ತಂ ತದೂರ್ಧ್ವೇ ಕಲಶೋ ಭವೇತ್

ಘಂಟಾರಚನೆಯ ತುದಿಯಲ್ಲಿರುವ ಪದ್ಮರಚನೆಯನ್ನು ದಾಕ್ಷಿಣಾತ್ಯ ಗ್ರಂಥಗಳು ಫಲಿಕಾ ಮಂಡಲ ಎಂದು ನಿರ್ದೇಶಿಸಿವೆ. ಕಲಶದಸ್ತರಗಳು ಪದ್ಮಪತ್ರದಿಂದ ಆರಂಭಗೊಳ್ಳುತ್ತದೆ. ಘಂಟಾರಚನೆಯನ್ನು ಕುರಿತಂತೆ ಸಮರಾಂಗಣ ಸೂತ್ರಧಾರ ಗ್ರಂಥದಲ್ಲಿ ಮತ್ತೊಂದು ವಿವರಣೆ ಇದೆ (ಅಗ್ರವಾಲಾ: ೧೯೬೬ : ೪೮೦).

ಸ್ತರಾಣಾಂವಿಂಶತಿ ಘಂಟಾ ಭವೇತ್ ಗರ್ಭಾರ್ಧ ವಿಸ್ತೃತಾ
ಚಂದ್ರಶಾಲಾ ಕರ್ತವ್ಯಾ ದರ್ಶನೀಯಾ ಚತುರ್ದಿಶಾ

ಚಂದ್ರಶಾಲಾ ಎನ್ನುವುದು ನಾಸಿಕಾ ಪದಕ್ಕೆ ಪರ್ಯಾಯವೆಂಬಂತೆ ಬಳಕೆಯಾಗಿದೆ. ಆದರೆ ಚಂದ್ರಶಾಲೆಯು, ಶುಕನಾಸದ ಮೇಲುಪಟ್ಟಿಕೆ ಎಂದೆನಿಸಿದೆ. ಶುಕನಾಸವನ್ನು ನಾಲ್ಕೂ ದಿಕ್ಕಿನಲ್ಲಿ ರಚಿಸುವ ಸಂಪ್ರದಾಯವಿಲ್ಲ. ಘಂಟಾ ರಚನೆಯ ಎತ್ತರವನ್ನು ವಿಸ್ತಾರಾರ್ಧಂ ಸಮುಚ್ಛ್ರಿತಿಃ ಎಂದು ಗುರುತಿಸಲಾಗಿದೆ. ವರಾಟ ಘಂಟೆಯ ವಿವರಗಳು ಅಪರಾಜಿತ ಪೃಚ್ಛಾ ಗ್ರಂಥದಲ್ಲಿದೆ. ಆದರೆ ಅಸ್ಪಷ್ಟ (ಮಂಕಡ್ : ೧೯೫೦ : ೩೫೨).

ಪೃಥುತ್ವಂ ತು ದ್ವಾದಶಾಂಶಮುಚ್ಛ್ರಾಯೇ ನವಭಾಗಿಕಂ
ಕರ್ಮಸ್ತಥಾಚೈಕ ಭಾಗಃ ಸ್ಕಂಧಾದ್ಯಂ ಚಾಷ್ಟಭಾಗಿಕಂ
ಅಷ್ಟಾಶ್ರೋರ್ಧ್ವೇ ಷೋಡಶಾಶ್ರಾ ತತೋ ದ್ವಾತ್ರಿಂಶದಶ್ರಕಾ
ಮಂದಾರ ಪುಷ್ಪಕಾಕಾರಾ ಕಾರ್ಯಾ ವರಾಟ ಘಂಟಿಕಾ

ಘಂಟಾ ರಚನೆಯ ನಂತರ ಕಲಶವಿದೆ. ದಾಕ್ಷಿಣಾತ್ಯ ದೇವಾಲಯಗಳಲ್ಲಿಲ ಶಿಖರದ ನಂತರ ಸ್ತೂಪಿ ಇದ್ದಂತೆ ಔತ್ತರೇಯ ಸಂಪ್ರದಾಯದಲ್ಲಿ ಆಮಲಸಾರ ಅಥವಾ ಘಂಟಾ ರಚನೆಯ ನಂತರ ಕಲಶ. ಕಲಶದ ವಿವರಗಳು ಅಪರಾಜಿತಪೃಚ್ಛಾ ಮತ್ತು ಸಮರಾಂಗಣ ಸೂತ್ರಧಾರ ನಂತರ ಕಲಶ. ಕಲಶದ ವಿವರಗಳು ಅಪರಾಜಿತಪೃಚ್ಛಾ ಮತ್ತು ಸಮರಾಂಗಣ ಸೂತ್ರಧಾರ ಗ್ರಂಥಗಳೆರಡಲ್ಲಿಯೂ ಇದೆ. ಅಪರಾಜಿತಪೃಚ್ಛಾ ಗ್ರಂಥವು ಎರಡು ಮಾನಗಳನ್ನು ಗುರುತಿಸಿದ್ದು, ದ್ರಾವಿಡಾದಿ ಶೈಲಿಗಳಿಗೇ ಪ್ರತ್ಯೇಕ ಎನಿಸುವ ಅಳತೆ ಇದೆ (ಮಂಕಡ್ : ೧೯೫೦ : ೩೫೩).

ಕಳಶ, ಬಳ್ಳಿಗಾವೆ / ಕಳಶ, ಲಕ್ಕುಂಡಿ

ಕಳಶ, ಬಳ್ಳಿಗಾವೆ / ಕಳಶ, ಲಕ್ಕುಂಡಿ

ವರಾಟೇ ದ್ರಾವಿಡೇಚೈವ ಭೂಮಿಜೇ ಚೈವ ವಿಮಾನಕೇ
ಪ್ರಾಸಾದಸ್ಯತು ಷಷ್ಠಾಂಶೇ ಸಮಸ್ತ ವಲಭೀಷು

ಕಲಶದ ಎತ್ತರವು ದೇವಾಲಯದ ಎತ್ತರದ ಆರನೆಯ ಒಂದು ಭಾಗದಷ್ಟು ಎಂದು ವಿವರಿಸಿದ್ದರೂ, ಲಭ್ಯವಿರುವ ದೇವಾಲಯಗಳಲ್ಲಿ ಅಸಂಭವ ಎನ್ನಿಸಿದೆ. ಕಲಶದ ಸ್ತರಗಳಿಗೆ ಸಂಬಂಧಿಸಿದಂತೆ ಅಪರಾಜಿತಪೃಚ್ಛಾ ಗ್ರಂಥದಲ್ಲಿ ಸುದೀರ್ಘವಾದ ವಿವರಣೆ ಇದೆ (ಮಂಕಡ್ : ೧೯೫೦ : ೩೫೪).

ಪದ್ಮಪತ್ರ ನಿಭಾಕಾರಾ ತ್ರಿಪದಾ ಪದ್ಮಪತ್ರಿಕಾ
ಕರ್ಣಿಕಾ ಪದಮೇಕಂ ತು ಸಪಾದಃ ಪದ್ಮಸಂಭವಃ
ದ್ವಿಭಾಗಂ ಚಾಂಡಕಂ ಕುರ್ಯಾದ್ ವೃತ್ತಾಕಾರಂ ಸಲಕ್ಷಣಂ
ಗ್ರೀವಾ ಪಾದೋನ ಭಾಗಾ ಸ್ಯಾದ್ ಭಾಗಾರ್ಧಂ ಚಾರ್ಕಪಟ್ಟಿಕಾ
ಲತಿನೇ ಪ್ರಕರ್ತವ್ಯಾ ಅರ್ಧಂ ವೈ ಪದ್ಮಪತ್ರಿಕಾ
ತ್ರಿಭಾಗಂ ಬೀಜಪೂರಂ ಅಧಿಕಸ್ಯ ಪದ್ಮಾಕೃತಿಃ

ಈ ವಿವರಣೆಯ ಪ್ರಕಾರ ಕಲಶದ ಸ್ತರಗಳು, ಪದ್ಮಪತ್ರ (೩), ಕರ್ಣಿಕಾ(೧), ಪದ್ಮಸಂಭವ (ಊರ್ಧ್ವಪದ್ಮ) (೧ ೧/೪), ಅಂಡಕ (೨), ಗ್ರೀವ (೩/೪), ಅರ್ಕಪಟ್ಟಿಕಾ (೧/೨) ಹಾಗೂ ಬೀಜಪೂರ (೩). ಮುಂದುವರೆದ ಕಲಶದ ವಿವರಣೆಯು ಅಗಲವನ್ನು ಸೂಚಿಸಿದೆ.

ಉಚ್ಛ್ಯಃ ಕಥಿತಶ್ಚೇತ್ಥಂ ವಿಸ್ತರಂ ಶೃಣು ಸಾಂಪ್ರತಂ
ಪದ್ಮಪತ್ರಂ ತ್ರಿಭಿರ್ಭಾಗೈಃ ದ್ವಿಭಾಗಾ ಕರ್ಣಿಕಾವೃತಾ
ಪದ್ಮಾಗ್ರೇ ಪತ್ರಿಕಾಚೈವ ಚತುರ್ಭಾಗಾಚ ವಿಸ್ತರೇ
ಷಡ್ಭಾಗಮಂಡಕಂ ಚೈವ ಗ್ರೀವಾಮಧ್ಯೇ ದ್ವಿಭಾಗಿಕಾ
ಅರ್ಕಪಟ್ಟೀ ಚತುರ್ಭಾಗಾ ಸಾರ್ಧತ್ರಯಂಶಾ ಪತ್ರಿಕಾ
ಸಾರ್ಧದ್ವಯಂ ಬೀಜಪೂರಂ ನಿಮ್ನಾಗ್ರೇ ಪದ್ಮಾಕೃತಿಃ

ಕಲಶದ ಪ್ರತಿ ಸ್ತರಗಳ ಅಗಲವು ವಿವರಣೆಯಂತೆ ಪದ್ಮಪತ್ರ (೩), ಕರ್ಣಿಕಾ (೨), ಊರ್ಧ್ವಪದ್ಮ (೨ ೧/೪), ಅಂಡಕ (೬), ಗ್ರೀವ (೨), ಅರ್ಕಪಟ್ಟೀ (೪) ಮತ್ತು ಬೀಜಪೂರ. ಬೀಜಪೂರವು ನೀಳವಾದ ಅಧೋಪದ್ಮದಂತಿದ್ದು ಕೆಳಭಾಗ (೩ ೧/೨) ಯಿಂದ ಆರಂಭಿಸಿ, (೨ ೧/೨) ಯಲ್ಲಿ ಅಂತ್ಯಗೊಳ್ಳುತ್ತದೆ.

ಸಮರಾಂಗಣ ಸೂತ್ರಧಾರ ಗ್ರಂಥವು ಪದ್ಮ, ಕುಂಭ, ಗ್ರೀವ, ಕರ್ಣಿಕಾ, ಬೀಜಪೂರ ಸ್ತರಗಳುಳ್ಳ ಕಲಶವನ್ನು ದ್ರಾವಿಡ ಶೈಲಿಗೆ ನಿರ್ದೇಶಿಸಿದೆ (ಅಗ್ರವಾಲಾ : ೧೯೬೬ : ೪೮೫).

ಕುರ್ವೀತ ತ್ರಿಸ್ತರಂ ಪದ್ಮಂ ಚಿತ್ರಪತ್ರ ಸಮನ್ವಿತಂ
ತಸ್ಯೋಪರಿ ಭವೇತ್ ಕುಂಭಶ್ಚತುರ್ದಶ ವಿಭಾಗಿಕಃ
ಗ್ರೀವಾ ದ್ವಿಭಾಗಿಕಾ ಕಾರ್ಯಾ ಕರ್ಣಶ್ಚೈವ ತಥಾವಿದಃ
ಬೀಜಪೂರಂ ತತಃಕಾರ್ಯಾ ಶೋಭಾ ಸಂಯುಕ್ತಮರ್ಧತಃ
ಪದ್ಮಚಕ್ರಂ ತ್ರಿಶೂಲಂ ವಿಧಾತವ್ಯಂ ಯಥೋಚಿತಂ

ದ್ರಾವಿಡ ಶೈಲಿಯ ಕಲಶದ ಸ್ವರೂಪ ಅಸ್ಪಷ್ಟವೆನಿಸಿದರೂ, ಇತರ ವಿವರಗಳಿಂದ ಕಲಶದ ಸ್ಥೂಲ ಸ್ವರೂಪ ಲಭ್ಯವಿದೆ. ಈ ಹಿನ್ನೆಲೆಯಲ್ಲಿ ಲಭ್ಯವಿರುವ ಕಲಶಗಳನ್ನಾಧರಿಸಿ ಸ್ತರಗಳನ್ನು ಗುರುತಿಸಬಹುದು.

ಕರ್ನಾಟಕದಲ್ಲಿ ಕಲ್ಯಾಣದ ಚಾಲುಕ್ಯರ ಮತ್ತು ಹೊಯ್ಸಳರ ಕಾಲದ ದೇವಾಲಯಗಳನ್ನು ವೇಸರ ಎಂದು ಗುರುತಿಸುವ ಪ್ರಯತ್ನ ಈವರೆಗೆ ಸಾಗಿತ್ತು. ದೇವಾಲಯಗಳ ರಚನೆಯಲ್ಲಿ ಔತ್ತರೇಯ ಮತ್ತು ದಾ‌ಕ್ಷಿಣಾತ್ಯ ಸಂಪ್ರದಾಯದ ಅರಿವಿಲ್ಲದೆ ಔತ್ತರೇಯ ದೇವಾಲಯಗಳನ್ನು ನಾಗರವೆಂದೂ ದಾಕ್ಷಿಣಾತ್ಯ ದೇವಾಲಯಗಳನ್ನು ದ್ರಾವಿಡವೆಂದೂ ಗುರುತಿಸುತ್ತಿದ್ದರು. ಈ ಸಂಪ್ರದಾಯಗಳಿಗೆ ಪ್ರತ್ಯೇಕ ವಾಸ್ತುಗ್ರಂಥಗಳಿವೆ. ಈ ಗ್ರಂಥಗಳನ್ನು ಆಧರಿಸಿ ದೇವಾಲಯಗಳನ್ನು ಗುರುತಿಸಬೇಕು. ಹೊಯ್ಸಳರ ಮತ್ತು ಕಲ್ಯಾಣದ ಚಾಲುಕ್ಯರ ದೇವಾಲಯಗಳು ದಾಕ್ಷಿಣಾತ್ಯ ಸಂಪ್ರದಾಯದ ಪ್ರಭಾವದಿಂದ ಔತ್ತರೇಯ ದ್ರಾವಿಡ ಶೈಲಿಯಾಗಿ ಬೆಳೆಯಿತು. ಇದರೊಂದಿಗೆ ಪ್ರಾದೇಶಿಕ ಲಕ್ಷಣಗಳನ್ನು ಮೈಗೂಡಿಸಿಕೊಂಡ ಭೂಮಿಜ ಶೈಲಿಯೂ ಇದೆ. ಶಾಸ್ತ್ರ ಗ್ರಂಥಗಳು ಔತ್ತರೇಯ ದ್ರಾವಿಡ ಶೈಲಿಯಲ್ಲಿ ವೃತ್ತಕವೆಂಬ ಪ್ರಭೇದವನ್ನು ಗುರುತಿಸಿದ್ದು, ಇವು ಎಂಟು, ಹದಿನಾರು, ಇಪ್ಪತ್ತಾಲ್ಕು ಮತ್ತು ಮೂವತ್ತೆರಡು ಕೋನಗಳುಳ್ಳದ್ದು. ಕರ್ನಾಟಕದ ಶಾಸನಗಳಲ್ಲಿ “ವರಾಟ” ಶೈಲಿಯ ಉಲ್ಲೇಖವಿಲ್ಲ. ಬಹುಶಃ ವೃತ್ತಾಕಾರವುಳ್ಳ ಅಥವಾ ಹಲವು ಕೋನಗಳುಳ್ಳ ದೇವಾಲಯಗಳನ್ನು ಔತ್ತರೇಯ ದ್ರಾವಿಡ ಶೈಲಿಯಡಿಯಲ್ಲಿ ಗುರುತಿಸುತ್ತಿದ್ದರು ಎಂದು ತಿಳಿಯಬಹುದು. ಆದ್ದರಿಂದಲೇ ಶಾಸನಗಳಲ್ಲಿ ಉಲ್ಲೇಖವಿಲ್ಲ. ದೇವಾಲಯಗಳ ಅಧ್ಯಯನದಲ್ಲಿ ಮೊದಲಿಗೆ ದಾಕ್ಷಿಣಾತ್ಯ ಮತ್ತು ಔತ್ತರೇಯ ಸಂಪ್ರದಾಯಗಳನ್ನು ಗುರುತಿಸಿಕೊಳ್ಳಬೇಕು. ನಂತರ ಪ್ರತ್ಯೇಕ ಶೈಲಿಗಳ ಅಧ್ಯಯನ. ಕಲ್ಯಾಣದ ಚಾಲುಕ್ಯರ ಮತ್ತು ಹೊಯ್ಸಳರ ಕಾಲದ ಬಹುಪಾಲು ದೇವಾಲಯಗಳು ಔತ್ತರೇಯ ದ್ರಾವಿಡ ಶೈಲಿಗೆ ಸೇರಿದ್ದು ಎನ್ನುವುದು ಸತ್ಯ ಹಾಗೂ ನಿರ್ವಿವಾದ.

ಔತ್ತರೇಯ ದ್ರಾವಿಡ ಶೈಲಿದೊಡ್ಡಗದ್ದವಳ್ಳಿ

೧. ಕಲಶ ೨. ಘಂಟಾ ೩. ನಾಸಿಕಾ ೪. ವೇದಿ ೫. ಜಂಘಾ ೬. ಕರ್ಣಕೂಟ ೭. ಶಾಲಾ ೮. ವೇದಿ ೯.ಕಂಟಕ ೧೦. ಕಪೋತ ೧೧. ಛಾದ್ಯ ೧೨. ವೃತ್ತಸ್ಫುಟಿತ ೧೩. ಜಂಘಾ ೧೪. ಕುಂಭಸ್ತಂಭ ೧೫. ವೇದಿ ೧೬. ಕಂಟಕ ೧೭. ಕಪೋತ ೧೮. ಕುಮುದ ೧೯. ಖುರಕ/ಪದ್ಮಪತ್ರ ೨೦.ಭಿಟ್

೧. ಕಲಶ ೨. ಘಂಟಾ ೩. ನಾಸಿಕಾ ೪. ವೇದಿ ೫. ಜಂಘಾ ೬. ಕರ್ಣಕೂಟ ೭. ಶಾಲಾ ೮. ವೇದಿ ೯.ಕಂಟಕ ೧೦. ಕಪೋತ ೧೧. ಛಾದ್ಯ ೧೨. ವೃತ್ತಸ್ಫುಟಿತ ೧೩. ಜಂಘಾ ೧೪. ಕುಂಭಸ್ತಂಭ ೧೫. ವೇದಿ ೧೬. ಕಂಟಕ ೧೭. ಕಪೋತ ೧೮. ಕುಮುದ ೧೯. ಖುರಕ/ಪದ್ಮಪತ್ರ ೨೦.ಭಿಟ್