ಕರ್ನಾಟಕದ ದೇವಾಲಯಗಳ ರಚನೆಯಲ್ಲಿ ಶೈಲಿ, ಸಂಪ್ರದಾಯಗಳನ್ನು ಗುರುತಿಸುವಲ್ಲಿ ಶಾಸನಗಳು ಹೆಚ್ಚು ಸಹಕಾರಿ ಎನಿಸಿದ್ದು, ದೇವಾಲಯಗಳ ವರ್ಗೀಕರಣವೂ ನಿಶ್ಚಿತ ರೂಪವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಔತ್ತರೇಯ ದ್ರಾವಿಡ ಶೈಲಿಯ ತವರು ಎನಿಸುವ ಕರ್ನಾಟಕದಲ್ಲಿ ಈ ಶೈಲಿಯನ್ನು ವಿವರಿಸುವ ಗ್ರಂಥಗಳಾಗವುವೂ ಈವರೆಗೆ ದೊರೆತಿಲ್ಲ. ಈ ನಾಡಿನಲ್ಲಿ ಲಭ್ಯವಿರುವ ಶಾಸನಗಳ ಉಲ್ಲೇಖಗಳೇ ಈ ನೆಲಕ್ಕೆ ಔತ್ತರೇಯ ಸಂಪ್ರದಾಯದ ಪರಿಚಯವಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿವೆ.

38_382_DV-KUH

ಕ್ರಿ.ಶ. ೧೧೧೬ರ ಕೃಷ್ಣರಾಜಪೇಟೆ ತಾಲ್ಲೂಕಿನ ಮಾಳಗುಂದದ ಶಾಸನವು (ರೈಸ್: ೧೮೯೮:೩೧೨) ಮನು, ಮಯ, ವಿಶ್ವಕರ್ಮರೊಂದಿಗೆ ತೋಟಕಾಚಾರ್ಯನನ್ನು ಉಲ್ಲೇಖಿಸಿದೆ. ಮನು, ಮಯ, ವಿಶ್ವಕರ್ಮರು ಪೌರಾಣಿಕ ವಿದ್ವಾಂಸರು. ಮಯನ ಹೆಸರು “ಮಯಮತ” ವಾಸ್ತುಗ್ರಂಥದೊಂದಿಗೆ ಗುರುತಿಸಲ್ಪಟ್ಟಿದೆ. ವಿಶ್ವಕರ್ಮದ ಹೆಸರು ಔತ್ತರೇಯ ಗ್ರಂಥಗಳಲ್ಲಿ ಹಲವೆಡೆ ಪ್ರಸ್ತಾಪಗೊಂಡಿದೆ. ಔತ್ತರೇಯ ಗ್ರಂಥಗಳನ್ನು ವಿಶ್ವಕರ್ಮ ಪ್ರಣೀತ ಗ್ರಂಥಗಳೆನ್ನುವುದೂ ಒಂದು ಸಂಪ್ರದಾಯ. ಶಾಸನವು ಹೆಸರಿಸಿದೆ ತೋಟಕಾಚಾರ್ಯನು ಕರ್ನಾಟಕದಲ್ಲಿದ್ದ ಹನ್ನೆರಡನೇ ಶತಮಾನದ ವಾಸ್ತುವಿದ್ವಾಂಸನಿರಲು ಸಾಧ್ಯವಿದೆ.

ಕ್ರಿ.ಶ. ೧೦೯೯ರ ಬಳ್ಳಾರಿ ಜಿಲ್ಲೆಯ ಕುರುವತ್ತಿಯ ಶಾಸನವು (ಅಣ್ಣಿಗೇರಿ ಮತ್ತು ಮಲ್ಲಾರಿ : ೧೯೬೧:೭೬) ಗುಣಪಾ-ರ್ಯನೆಂಬ ವಾಸ್ತು ಶಾಸ್ತ್ರಕಾರನನ್ನು ಹೆಸರಿಸಿದೆ. ಕುರುವತ್ತಿಯ ದೇವಾಲಯ ಬಲ್ಲವನು ಎಂದು ಹೇಳಲು ಮಾತ್ರ ಸಾಧ್ಯವಾಗಿದೆ.

ಕ್ರಿ.ಶ. ೧೧೨೯ರ ಮೂಡಗೆರೆ ತಾಲ್ಲೂಕು ಹಂತೂರು ಶಾಸನವು (ರೈಸ್: ೧೯೦೧: ೨೪೮) ನಾಗರಾದಿ ನಾಗರಿಕದ್ರಾವಿಳ ಸಮುದ್ಧ ರಣನಪ್ಪ ಮಾಣಿಯೋಜನ ಮಗ ಬಿರುದ ರೂವಾರಿ ವೇಶ್ಯಾಭುಜಂಗ ಬಲಕೋಜ ಎಂದು ಉಲ್ಲೇಖಿಸಿದೆ. ವಿದ್ವಾಂಸರು ಮಾಣಿಯೋಜನನ್ನು ಶಿಲ್ಪ ಪಂಥವೊಂದರ ಪ್ರತಿಷ್ಠಾಪಕ ಅಥವಾ ಪರಿಷ್ಕರ್ತ ಎಂದು ಊಹಿಸುತ್ತಾರೆ. ಈ ಶಾಸನವು ಗುರುತಿಸುವ “ನಾಗರಿಕ ದ್ರಾವಿಳ”ವೇ ಬಳ್ಳಾರಿ ಜಿಲ್ಲೆಯ ಹೊಳಲು ಗ್ರಾಮದ ಶಾಸನವು ಗುರುತಿಸುವ “ದ್ರಾವಿಳ” ಶೈಲಿ. ಇದು ಔತ್ತರೇಯ ಸಂಪ್ರದಾಯದ ಶೈಲಿಯಾಗಿದ್ದು ನಾಗರಿಕ ಎಂಬ ಪದದಲ್ಲಿ ಸಂಪ್ರದಾಯದ ಸೂಚನೆ ಇದೆ. “ಔತ್ತರೇಯ ದ್ರಾವಿಡ” ಎನ್ನುವ ಪದ ಇದಕ್ಕೆ ಸಂವಾದಿಯಾದುದು. ಔತ್ತರೇಯ ದ್ರಾವಿಡ ಶೈಲಿಯ ಸುಳಿವು ದೊರೆತದ್ದು ದೊಡ್ಡ ಗದ್ದವಳ್ಳಿ ಶಾಸನದಿಂದ. ಅಸ್ಪಷ್ಟವಾಗಿ ದೊರೆತ ಸುಳಿವಿಗೆ ಸಮರಾಂಗಣ ಸೂತ್ರಧಾರ ಹಾಗೂ ಅಪರಾಜಿತಪೃಚ್ಛಾ ಗ್ರಂಥಗಳಲ್ಲಿರುವ ಉಲ್ಲೇಖಗಳು ಪುಷ್ಠಿ ನೀಡಿವೆ. ಅಪರಾಜಿತಪೃಚ್ಛಾ ಗ್ರಂಥಕಾರನು ದೇಶ ಜಾತಿಗಳನ್ನು ಗುರುತಿಸುತ್ತಾ ಕರ್ನಾಟೇ ದ್ರಾವಿಡಂ ಸ್ಮೃತಂ ಎಂದು ನಿಚ್ಚಳವಾಗಿ ವಿವರಿಸುತ್ತಾನೆ. (ಮಂಕಡ್: ೧೯೫೦:೫೮೬) ಈ ಅಧ್ಯಾಯದ ಇತರ ಶೈಲಿಗಳ ವಿವರಗಳು ಅಸ್ಪಷ್ಟವೆನಿಸಿದರೂ “ಕರ್ನಾಟಕದಲ್ಲಿ ದ್ರಾವಿಡ ಶೈಲಿ” ಎನ್ನುವುದು ಸ್ಪಷ್ಟವಾಗಿದೆ. ಔತ್ತರೇಯ ಗ್ರಂಥಗಳೆನಿಸಿದ ಸಮರಾಂಗಣಸೂತ್ರಧಾರ ಮತ್ತು ಅಪರಾಜಿತಪೃಚ್ಛಾ ಗ್ರಂಥಗಳಲ್ಲದೆ, ಹದಿನಾರನೆಯ ಶತಮಾನದಲ್ಲಿದ್ದ ಸೂತ್ರಧಾರ ಮಂಡನನ “ಪ್ರಾಸಾದಮಂಡನ” ಗ್ರಂಥದಲ್ಲಿ ಭೂಮಿಜ, ಲತಿನ, ವಿಮಾನನಾಗರ, ಪುಷ್ಪಕ ಶೈಲಿಗಳೊಂದಿಗೆ ದ್ರಾವಿಡ ಶೈಲಿಯನ್ನು ಹೆಸರಿಸುತ್ತಾನೆ. (ಜೈನ: ೧೯೬೩:೩). ದ್ರಾವಿಡವೆನ್ನುವ ಈ ಶೈಲಿಗೆ ಸಂಬಂಧಸಿದಂತೆ ಈ ಗ್ರಂಥದಲ್ಲಿ ಕೆಲವು ಉಲ್ಲೇಖಗಳಿವೆ. ಆದರೆ ಮೊದಲೆರಡು ಗ್ರಂಥಗಳಲ್ಲಿ ದ್ರಾವಿಡ ಶೈಲಿಯನ್ನು ವಿವರಿಸಲು ಪ್ರತ್ಯೇಕವಾಗಿ ಎರಡೆರಡು ಅಧ್ಯಾಯಗಳು ಮೀಸಲಾಗಿದೆ. ಈ ಅಧ್ಯಾಯಗಳಲ್ಲಿ ದೊರೆಯುವ ವಿವರಣೆಗಳಿಂದ ಔತ್ತರೇಯ ದ್ರಾವಿಡ ಶೈಲಿಯ ಅಧ್ಯಯನ ಮುಂದುವರೆಯಬೇಕಾಗಿದೆ. ಈ ಅಧ್ಯಾಯಗಳಲ್ಲಿರುವ ಎಲ್ಲಾ ಶ್ಲೋಕಗಳನ್ನೂ ಅರ್ಥೈಸಲು ಸಾಧ್ಯವಾಗಿಲ್ಲ. ಖಚಿತವಾಗಿ ಅರ್ಥೈಸಲು ಸಾಧ್ಯವಿರುವ ವಿವರಗಳಿಂದ ಈ ಶೈಲಿಯ ಒಂದು ಸ್ವರೂಪ ಕಂಡುಕೊಳ್ಳಲು ಸಾಧ್ಯವಿದೆ. ಈ ಶೈಲಿಯಲ್ಲಿ ಕಂಡುಬರುವ ಕಂಟಕ, ಜಂಘಾ, ಶಿಖರ ಮುಂತಾದ ಭಾಗಗಳು ದಾಕ್ಷಿಣಾತ್ಯ ಸಂಪ್ರದಾಯದಿಂದ ಪ್ರಭಾವಿತವಾಗಿದ್ದು, ಅಲ್ಲಿಯ ಲಕ್ಷಣಗಳನ್ನೂ ಮೈಗೂಡಿಸಿಕೊಂಡಿವೆ. ಇವುಗಳನ್ನು ತಿಳಿಯಲು ದಾಕ್ಷಿಣಾತ್ಯ ಸಂಪ್ರದಾಯದಲ್ಲಿರುವ ವಿವರಣೆಗಳೂ ಅಗತ್ಯವೆನಿಸಿದೆ. ಕೆಲವು ಅಲಂಕಾರಿಕ ರಚನೆಗಳು ದಾಕ್ಷಿಣಾತ್ಯ ದೇವಾಲಯಗಳಿಗಿಂತ ಈ ರಚನೆಗಳಲ್ಲಿ ಸ್ಪಷ್ಟವಾಗಿ ಮೂಡಿವೆ. ಈ ಹಿನ್ನೆಲೆಯಲ್ಲಿ ಔತ್ತರೇಯ ದ್ರಾವಿಡ ಎನ್ನುವ ಹೆಸರು ಔಚಿತ್ಯ ಪೂರ್ಣವಾದುದು. ಈ ದಿಸೆಯಲ್ಲಿ ಹಲವು ಗ್ರಾಂಥಿಕ ವಿವರಗಳನ್ನು ಗ್ರಹಿಸಿ, ಸಂಗ್ರಹಿಸಿ, ವ್ಯವಸ್ಥಿತವಾಗಿ ಗುರುತಿಸಿದಲ್ಲಿ ಔತ್ತರೇಯ ದ್ರಾವಿಡ ಶೈಲಿಯ ಅಧ್ಯಯನ ಸಮರ್ಪಕವಾದ ಹಾದಿಯನ್ನು ಕಂಡುಕೊಳ್ಳುತ್ತದೆ ಎನ್ನಬಹುದು.

ಔತ್ತರೇಯ ಸಂಪ್ರದಾಯದಲ್ಲಿ ಮೊದಲು ಖಚಿತಗೊಂಡು ಪ್ರದರ್ಶನಕ್ಕೆ ಅಣಿಯಾದ ಶೈಲಿ ಕಳಿಂಗ ಶೈಲಿ. ಇದರ ತವರು ಮನೆ ಭುವನೇಶ್ವರ. ಕ್ರಿ.ಶ. ಏಳನೇ ಶತಮಾನ; ಇಲ್ಲಿನ ಪರಶುರಾಮೇಶ್ವರ ದೇವಾಲಯವೇ ಪ್ರಾಚೀನವಾದುದು. ಇದು ಇತರ ಶೈಲಿಗಳಿಗೆ ನಾಂದಿಯಾಯಿತು.

ಕರ್ನಾಟಕದಲ್ಲಿ ಕಂಡದ್ದು ಪ್ರಾದೇಶಿಕ ಲಕ್ಷಣಗಳನ್ನು ಮೈಗೂಡಿಸಿಕೊಂಡ ಕಳಿಂಗ ಶೈಲಿ. ಐಹೊಳೆಯ ಹುಚ್ಚಿಮಲ್ಲಿಗುಡಿ, ತಾರಬಸಪ್ಪನಗುಡಿ, ಹುಚ್ಚಪ್ಪಯ್ಯನಗುಡಿ, ಮಹಾಕೂಟದಲ್ಲಿರುವ ಸಂಗಮೇಶ್ವರ, ಮಹಾಲಿಂಗ, ಪಟ್ಟದಕಲ್ಲಿನ ಜಂಬುನಾಥ, ಗಳಗನಾಥ, ಪಾಪನಾಥ ಹೀಗೆ ಹಲವಾರು ಹತ್ತು ದೇವಾಲಯಗಳಿವೆ. ಈ ರಚನೆಗಳನ್ನು ಭುವನೇಶ್ವರದ ಪರಶು ರಾಮೇಶ್ವರ ದೇವಾಲಯದೊಂದಿಗೆ ಸಮೀಕರಿಸಿ ನೋಡಬೇಕಾಗಿದೆ. ಇಲ್ಲಿಯ ದೇವಾಲಯಗಳು ಬಾದಾಮಿ ಚಾಲುಕ್ಯರ ಕಾಲದ್ದು. ಕರ್ನಾಟಕದಲ್ಲಿಯೂ ಕಳಿಂಗ ಶೈಲಿಯ ಉಲ್ಲೇಖ ಶಾಸನದಲ್ಲಿ ದೊರೆತಿದೆ. ಆದರೆ ಈ ಶಾಸನವು ಕಾಲದ್ದು. ಈ ದೇವಾಲಯಗಳನ್ನು ವಿವರಿಸುವಾಗ, ಒರಿಸ್ಸಾದಲ್ಲಿ ಪ್ರಚಲಿತದಲ್ಲಿರುವ ವಾಸ್ತು ಸಂಪ್ರದಾಯವನ್ನು ಅವಲಂಬಿಸಬೇಕು. ಆಮಲಸಾರವುಳ್ಳ ಬಾಗಿದ ಶಿಖರವುಳ್ಳ ರಚನೆಯೇ ಔತ್ತರೇಯ ಸಂಪ್ರದಾಯದ ಮೂಲ ಮತ್ತು ಪ್ರಧಾನ ಲಕ್ಷಣವೆನಿಸಿದೆ. ತದನಂತರದ ಕಾಲದಲ್ಲಿ ಪ್ರಕಟಗೊಂಡ ವಾಸ್ತುಗ್ರಂಥಗಳು ಆಮಲಸಾರವುಳ್ಳ ದೇವಾಲಯಗಳನ್ನು ಘಂಟಾ ಶಿಖರಗಳುಳ್ಳ ದೇವಾಲಯಗಳಿಂದ ಪ್ರತ್ಯೇಕಿಸಿದವು (ಮಂಕಡ್ : ೧೯೫೦ : ೩೪೬).

ಹುಚ್ಚಿಮಲ್ಲಿಗುಡಿ, ಐಹೊಳೆ

ಹುಚ್ಚಿಮಲ್ಲಿಗುಡಿ, ಐಹೊಳೆ

ಕಳಿಂಗ ಶೈಲಿ, ಗಳಗನಾಥ ದೇವಾಲಯ, ಪಟ್ಟದಕಲ್ಲು

ಕಳಿಂಗ ಶೈಲಿ, ಗಳಗನಾಥ ದೇವಾಲಯ, ಪಟ್ಟದಕಲ್ಲು

ದ್ವಯೋಃ ಪ್ರರಥಯೋರ್ಮಧ್ಯೇ ವೃತ್ತಮಾಮಲಸಾರಕಂ
ನಾಗರೇ ಲತಿನೇ ಕುರ್ಯಾತ್ ಸಾಂಧಾರೇ ಚೈವ ಮಿಶ್ರಕೇ
ವಿಮಾನನಾಗರಾಃ ಛಂದೇ ವಿಮಾನಪುಷ್ಪಕೇ ತಥಾ

ಆಮಲಸಾರ ಹಾಗೂ ಬಾಗಿದ ಶಿಖರಗಳುಳ್ಳ ಲತಿನ, ಸಾಂಧಾರ, ವಿಮಾನ ನಾಗರ, ವಿಮಾನ ಪುಷ್ಪಕ ರಚನೆಗಳನ್ನು ದ್ರಾವಿಡ, ಭೂಮಿಜ ಮತ್ತು ವರಾಟಶೈಲಿಗಳಿಂದ ಪ್ರತ್ಯೇಕಿಸಲಾಯಿತು. ಈ ಮೂರು ಶೈಲಿಗಳು ಘಂಟಾಶಿಖರಗಳನ್ನು ಹೊಂದಿವೆ.

ವಿಮಾನೇ ಭೂಮಿಜೇ ಚೈವ ವೃತ್ತೇ (?) ಕರ್ಣಿಕಾಂತಕೇ
ದ್ರಾವಿಡೇ ತು ತಥಾ ಚೈವಂ ತಂತು ರೇಖಾನುಪೂರ್ವಕಂ
ವರಾಟೇತು ಭವೇತ್ ಘಂಟಾ ಯಾದೃಕ್ ಮಂದಾರಪುಷ್ಪಕಃ

ಮೇಲಿನ ಶ್ಲೋಕಗಳನ್ನು ಪೂರ್ಣವಾಗಿ ಅರ್ಥೈಸಲು ಸಾಧ್ಯವಾಗಿಲ್ಲ. ಆದರೂ ಸಾರಾಂಶವನ್ನು ತಿಳಿಯಬಹುದು. ದ್ರಾವಿಡ ಶೈಲಿಯ ಶಿಖರದ ಮುಂಭಾಗದಲ್ಲಿ ನಾಸಿಕಾಂಗ ರಚನೆಯನ್ನು ಗುರುತಿಸಿದೆ (ಮಂಕಡ್ :೧೯೫೦ :೩೫೨).

ದ್ರಾವಿಡೀ ಭವೇತ್ ಘಂಟಾ ನಾಸಿಕೋಪಾಂಗ ಶೋಭಿತಾ

ಔತ್ತರೇಯ ದ್ರಾವಿಡ- ಘಂಟಾಶಿಖರ, ಕಲಶ, ಲಕ್ಕುಂಡಿ

ಔತ್ತರೇಯ ದ್ರಾವಿಡ- ಘಂಟಾಶಿಖರ, ಕಲಶ, ಲಕ್ಕುಂಡಿ

ದೇವಾಲಯದ ತಲಚ್ಛಂದವು ಚತುರಶ್ರವಾಗಿದ್ದಲ್ಲಿ ಘಂಟಾ ರಚನೆಯೂ ಚತುರಕ್ರಾಕಾರವಾಗಿದ್ದು, ಭದ್ರಭಾಗದಲ್ಲಿ ನಾಸಿಕಾ ರಚನೆ ಇದೆ. ಆದ್ದರಿಂದ ದ್ರಾವಿಡ ಶೈಲಿ. ಇಲ್ಲಿ ದಾಕ್ಷಿಣಾತ್ಯ ಸಂಪ್ರದಾಯದ ಸ್ಪಷ್ಟ ಪ್ರಭಾವವನ್ನು ಕಾಣಬಹುದು. ದೇವಾಲಯ ನಕ್ಷತ್ರಾಕಾರ ಅಥವಾ ಬಹುಕೋನಗಳುಳ್ಳದ್ದೆನಿಸಿ ಘಂಟಾ ಶಿಖರವೂ ಅದೇ ರೀತಿಯಲ್ಲಿದ್ದು ನಾಸಿಕಾರಚನೆ ಇಲ್ಲ. ಘಂಟಾರಚನೆ ಕೆಳಮುಖವಾಗಿರುವ ಪುಪ್ಪಾಕಾರವನ್ನು ಹೋಲುತ್ತದೆ. ಇದನ್ನು ಮಂದಾರಪುಷ್ಪಕ ಎನ್ನಬಹುದೇ? ದೊಡ್ಡಗದ್ದವಳ್ಳಿಶಾಸನ “ಪುಷ್ಪಕ” ಎಂಬ ಶೈಲಿಯನ್ನು ಹೆಸರಿಸಿದೆ.

ಕರ್ನಾಟಕದಲ್ಲಿ ಪ್ರಸ್ತುತ ಕಾಣಲಾಗುತ್ತಿರುವ ದೇವಾಲಯಗಳಲ್ಲಿ ವರಾಟ ಶೈಲಿಯನ್ನು ಗುರುತಿಸಲು ಸಾಧ್ಯವಾಗಿಲ್ಲ. ಆದರೆ ಬಹುಕೋನ ರಚನೆಯನ್ನೇ ಮಂದಾರ ಪುಷ್ಪಕಾಕಾರ ಎಂದು ತಿಳಿಯಲು ಸಾಧ್ಯವಿದೆ. ಉದಾಹರಣೆಗಾಗಿ ಸೋಮನಾಥಪುರದ ಕೇಶವ ದೇವಾಲಯ, ಕಲ್ಯಾಣದ ಚಾಲುಕ್ಯರ ಕಾಲದ ಡಂಬಳದ ದೊಡ್ಡ ಬಸಪ್ಪ ಇವುಗಳನ್ನು ಹೆಸರಿಸಬಹುದು.

ವೇದಿ ಮತ್ತು ಘಂಟಾ ರಚನೆ, ದೊಡ್ಡಬಸಪ್ಪ ದೇವಾಲಯ, ಡಂಬಳ

ವೇದಿ ಮತ್ತು ಘಂಟಾ ರಚನೆ, ದೊಡ್ಡಬಸಪ್ಪ ದೇವಾಲಯ, ಡಂಬಳ

ಭೂಮಿಜ ಶೈಲಿ ಮೂಲತಃ ಬಾಗಿದ ಶಿಖರ ಮತ್ತು ಆಮಲಸಾರವುಳ್ಳದ್ದು. ಈಗ ಶಾಸ್ತ್ರಭಾಗದಲ್ಲಿ ಗುರುತಿಸಲಾದ ಭೂಮಿಜ ಶೈಲಿಯಲ್ಲಿ ಘಂಟಾಶಿಖರವಿದೆ. ಶಿಖರದ ಆಕಾರ ಘಂಟಾ ರಚನೆಗೆ ತಕ್ಕಂತೆ ಪ್ರಸ್ತರ ಅಥವಾ ಛಾದ್ಯದ ನಂತರ ಕೆಳಗಿನಿಂದ ಮೇಲಕ್ಕೆ ಕಿರಿದಾಗುತ್ತಾ ಸಾಗುವ ಶಿಖರ ರಚನೆ ಇರಬೇಕು. ಇದು ದಾಕ್ಷಿಣಾತ್ಯ ಸಂಪ್ರದಾಯದ ಬಳುವಳಿ. ಕರ್ನಾಟಕದಲ್ಲಿ ಇಂತಹ ಎರಡು ಭೂಮಿಜ ಮಾದರಿಯ ದೇವಾಲಯಗಳಿವೆ. ಭೂಮಿಜ, ದ್ರಾವಿಡ, ವರಾಟ ಶೈಲಿಗಳೆಲ್ಲಾ ದಾಕ್ಷಿಣಾತ್ಯ ಸಂಪ್ರದಾಯದಂತೆ ಕಿರಿದಾಗುತ್ತಾ ಸಾಗುವ ಪಿರಮಿಡ್ ಆಕಾರದ ಶಿಖರದೊಂದಿಗೆ ಘಂಟಾ ರಚನೆಯನ್ನು ಹೊಂದಿದೆ. ಭೂಮಿಜ ಶೈಲಿ ಔತ್ತರೇಯ ಮತ್ತು ದಾಕ್ಷಿಣಾತ್ಯ ಸಂಪ್ರದಾಯಗಳ ನಡುವಣ ಕೊಂಡಿ ಎನ್ನಬಹುದು.

ಕಾಮಿಕಾಗಮ ಗ್ರಂಥವು (ಶಿವಾಚಾರ್ಯ: ೧೯೭೫:೧೨೪) ದಾಕ್ಷಿಣಾತ್ಯ ದೇವಾಲಯವನ್ನು ಷಡ್ವರ್ಗವೆಂದೂ ಔತ್ತರೇಯ ಕಳಿಂಗ ಶೈಲಿಯ ದೇವಾಲಯಗಳನ್ನು ಅಷ್ಟವರ್ಗವೆಂದು ಸೂಚಿಸಿದೆ. ಔತ್ತರೇಯ ದ್ರಾವಿಡ ಶೈಲಿಯ ದೇವಾಲಯವನ್ನು ಸಪ್ತವರ್ಗವೆನ್ನಬಹುದು. ಇದು ವ್ಯವಸ್ಥಿತ ಅಧ್ಯಯನಕ್ಕಾಗಿ ನಾವು ಸೃಷ್ಟಿಸಿದ ಹಂತವೇ ಹೊರತು ವಾಸ್ತು ಗ್ರಂಥಗಳಲ್ಲಿಲ್ಲ. ಔತ್ತರೇಯ ದ್ರಾವಿಡ ಶೈಲಿಯು ದಾಕ್ಷಿಣಾತ್ಯ ಮತ್ತು ಔತ್ತರೇಯ ಸಂಪ್ರದಾಯಗಳ ಸಂಸರ್ಗದಿಂದ ಒಡಮೂಡಿದ ಶೈಲಿ. ಈ ಶೈಲಿಯಲ್ಲಿ ಎರಡೂ ಸಂಪ್ರದಾಯದ ಲಕ್ಷಣಗಳನ್ನು ಕಾಣಬಹುದು. ಪೀಠ, ಜಂಘಾ, ಛಾದ್ಯ, ಭೂಮಿ, ವೇದಿ, ಘಂಟಾ, ಕಲಶ ಇವು ಈ ಶೈಲಿಯ ದೇವಾಲಯದಲ್ಲಿ ಕಾಣಲಾಗುವ ಸ್ತರಗಳು.

ದಾಕ್ಷಿಣಾತ್ಯ ದೇವಾಲಯದ ಅಧಿಷ್ಠಾನಕ್ಕೆ ಪರ್ಯಾಯವಾಗಿ ಔತ್ತರೇಯ ದೇವಾಲಯಗಳಲ್ಲಿ ಪೀಡ ರಚನೆ ಇದೆ. ಉಪಪೀಠಕ್ಕೆ ಬದಲಾಗಿ ಜಗತಿ ಇದೆ. ಭಿಟ್‌ಸ್ತರವು ನೆಲದಲ್ಲಿದ್ದು ಪೀಠ ಹಾಗೂ ಜಗತೀ ಕೆಳಗಡೆ ಕಂಡೂ ಕಾಣದಂತಿದೆ. ಭಿಟ್‌ಸ್ತರದ ಕೆಳಗೆ ಖರಶಿಲಾ ಸ್ತರವು ಭೂಮಿಯಲ್ಲಿ ಮರೆಯಾಗಿದೆ. ಖರಶಿಲಾ, ಭಿಟ್, ಜಗತಿ ಮತ್ತು ಪೀಠ ಇವು ಔತ್ತರೇಯ ಸಂಪ್ರದಾಯದ ದೇವಾಲಯದಲ್ಲಿ ಕಾಣಲಾಗುವ ಸ್ತರಗಳು. ದಾಕ್ಷಿಣಾತ್ಯ ದೇವಾಲಯಗಳಲ್ಲಿ ಖಾತಕುಡ್ಯ, ಹೋಮ, ಉಪಪೀಠ ಮತ್ತು ಅಧಿಷ್ಠಾನದ ಸ್ತರಗಳಿವೆ. ಇದು ಪರ್ಯಾಯ ವ್ಯವಸ್ಥೆಯಂತೆ ಕಂಡರೂ ಸಾಕಷ್ಟು ಭಿನ್ನವೆನಿಸಿದೆ.

ಅಧಿಷ್ಠಾನದಲ್ಲಿರುವ ಉಪಾನ, ಜಗತಿ, ಕುಮುದ, ಕಂಠ, ಪಟ್ಟಿಕಾ, ಪ್ರತಿ ಸ್ತರಗಳಂತೆ ಪೀಠರಚನೆಯೂ ಹಲವು ಸ್ತರಗಳುಳ್ಳದ್ದು. ಅಪರಾಜಿತಪೃಚ್ಛಾ ಮತ್ತು ಸಮರಾಂಗಣ ಸೂತ್ರಧಾರ ಗ್ರಂಥಗಳಲ್ಲಿ ದ್ರಾವಿಡ ಪೀಠವನ್ನು ವಿವರಿಸುವ ಪ್ರತ್ಯೇಕ ಅಧ್ಯಾಯಗಳಿವೆ. ಇವುಗಳಲ್ಲಿರುವ ವಿವರಗಳು ಹೆಚ್ಚು ಕಡಿಮೆ ಒಂದೇ ಎನಿಸಿದೆ. ಈ ಗ್ರಂಥಗಳ ಪ್ರಕಾರ ಪಾದಬಂಧ, ಶ್ರೀಬಂಧ, ವೇದೀಬಂಧ, ಪ್ರತಿಕ್ರಮ ಮತ್ತು ಖುರಕಬಂಧ ಎಂಬ ಐದು ಪ್ರಭೇದಗಳನ್ನು ಒಳಗೊಂಡಿದೆ. ಈಗ ಲಭ್ಯವಿರುವ ವಾಸ್ತು ರಚನೆಗಳಲ್ಲಿ ಈ ಪೀಠ ರಚನೆಗಳನ್ನು ಗುರುತಿಸುವುದು ಕಷ್ಟವೇ ಆಗಿದೆ. ಲಕ್ಕುಂಡಿಯ ಕಾಶಿ ವಿಘ್ನೇಶ್ವರ, ನನ್ನೇಶ್ವರ ಮೊದಲಾದ ದೇವಾಲಯಗಳಲ್ಲಿ ಎತ್ತರವಾದ ಪೀಠರಚನೆ ಇದ್ದು ಎರಡು ಹಂತಗಳಲ್ಲಿ ಗುರುತಿಸಬಹುದು. ಬಹುಶಃ ಇವು ಆರಂಭಕಾಲದ ಔತ್ತರೇಯ ದ್ರಾವಿಡ ಶೈಲಿಯನ್ನು ಪ್ರತಿನಿಧಿಸಿವೆ. ತದನಂತರದ ಕಾಲದಲ್ಲಿ ಮೊದಲ ಹಂತದ ಪೀಠವು ಮುಂದಕ್ಕೆ ಚಾಚಿಕೊಂಡು ಜಗತಿಯ ರಚನೆಗೆ ಕಾರಣವಾಯಿತೆನ್ನಬಹುದು. ಈ ಹಿನ್ನೆಲೆಯಲ್ಲಿ ಲಕ್ಷೇಶ್ವರದ ಊರೊಳಗಿರುವ ದೇವಾಲಯವೊಂದರ ಜಗತಿಯನ್ನು ಕಾಣಬಹುದು. ಲಕ್ಷ್ಮೇಶ್ವರದ ಸೋಮೇಶ್ವರ ದೇವಾಲಯದ ದಕ್ಷಿಣ ದಿಕ್ಕಿನಲ್ಲಿರುವ ಪ್ರವೇಶ ದ್ವಾರದ ಎರಡೂ ಭಾಗದಲ್ಲಿರುವ ಎರಡು ಹಂತದ ಪೀಠವನ್ನು ಗಮನಿಸಬೇಕು. ಇದರ ಮೊದಲ ಹಂತವನ್ನು ಮುಂಚಾಚಿ ರಚಿಸಿದರೆ ಜಗತಿ ರಚನೆಯ ಸ್ಪಷ್ಟಕ್ರೀಯೆ ಎನಿಸುತ್ತದೆ.

ಹೊಯ್ಸಳರ ಕಾಲದ ರಚನೆಗಳಲ್ಲಿ ಜಗತಿಯು ಗಮನಾರ್ಹವಾಗಿ ಬೆಳೆದು, ದೇವಾಲಯಗಳ ಸೌಂದರ್ಯ ವೃದ್ಧಿಸಿತು. ನಾಗಮಂಗಲದ ದೇವಾಲಯದಲ್ಲಿ ಎತ್ತರವಾದ ಜಗತಿಯನ್ನು ಎರಡು ಹಂತದ ಪೀಠರಚನೆಯನ್ನು ಕಾಣಬಹುದು. ಎತ್ತರದ ಪೀಠರಚನೆಗಳಲ್ಲಿ ಸ್ತರಗಳಿಗೆ ಪರ್ಯಾಯವಾಗಿ ಪಟ್ಟಿಕಾ ರಚನೆಗಳಿವೆ. ಈ ಪಟ್ಟಿಕೆಗಳು ಸೂಕ್ಷ್ಮ ಕೆತ್ತನೆಗೆ ಹೆಚ್ಚಿನ ಸ್ಥಳಾವಕಾಶವನ್ನು ಒದಗಿಸಿವೆ.

ಹೊಯ್ಸಳರ ಕಾಲದ ಹಳೇಬೀಡಿನ ಹೊಯ್ಸಳೇಶ್ವರ, ಜಾವಗಲ್ಲಿನ ಲಕ್ಷ್ಮೀನರಸಿಂಹ, ನುಗ್ಗೇಹಳ್ಳಿಯ ಕೇಶವ, ಹಾರ್ನಹಳ್ಳಿಯ ಕೇಶವ, ಸೋಮೇಶ್ವರ ಮುಂತಾದೆಡೆ ಜಗತಿಯ ರಚನೆ ಇದೆ. ಜಗತಿಯು ದೇವಾಲಯ ರಚನೆಗೆ ಎತ್ತರವಾದ ವೇದಿಕೆಯನ್ನು ಕಲ್ಪಿಸಿದೆ. ಜಗತಿಯ ಮಧ್ಯದಲ್ಲಿ ದೇವಾಲಯ ರೂಪುಗೊಂಡಿದೆ. ಜಗತಿಯ ನಂತರ ಪೀಠ ರಚನೆ ಇದೆ. ಪೀಠದ ಕೆಳಗೆ ಹಲವೆಡೆ ಭಿಟ್‌ಸ್ತರವಿದೆ. ಇದು ಕೆಲವೊಮ್ಮೆ ಐಚ್ಛಿಕವೂ ಹೌದು. ಪೀಠವು ಹಲವೆಡೆ ಎರಡು ಹಂತದಲ್ಲಿದ್ದು, ಖುರಕ, ಪದ್ಮಪತ್ರ, ಕರ್ಣಿಕ, ಕಪೋತ, ಪುನಃ ಖುರಕ, ಪದ್ಮಪತ್ರ, ಕರ್ಣಿಕಾ, ಕಪೋತ ಸ್ತರಗಳನ್ನು ಕಾಣಬಹುದು. ಅಪರಾಜಿತಪೃಚ್ಛಾ ಗ್ರಂಥಕಾರನು, ನೃತ್ಯ ಮಂಟಪದ ಭಾಗದಲ್ಲಿ ಪೀಠದ ಸ್ತರಗಳ ಬದಲಾಗಿ ಐದು ಪಟ್ಟಿಕೆಗಳ ರಚನೆಯನ್ನು ಅಂಗೀಕರಿಸಿದ್ದಾನೆ (ಮಂಕಡ್: ೧೯೬೫:೪೮೪).

ಜಗತಿ ರಚನೆ, ಹಳೇಬೀಡು

ಜಗತಿ ರಚನೆ, ಹಳೇಬೀಡು

ಜಗತಿ ರಚನೆ, ನುಗ್ಗೇಹಳ್ಳಿ

ಜಗತಿ ರಚನೆ, ನುಗ್ಗೇಹಳ್ಳಿ

ಪಂಚಪಟ್ಟೋಪರಿ ಕುರ್ಯಾತ್ ವಿಖ್ಯಾತ ನೃತ್ಯಮಂಡಪಾನ್

ಆರಂಭದಲ್ಲಿ ದೇವಾಲಯಗಳ ಪೀಠರಚನೆಯು ಹಲವು ಸ್ತರಗಳನ್ನೊಳಗೊಳ್ಳುತ್ತಿತ್ತು. ನಂತರ ಕಕ್ಷಾಸನವುಳ್ಳ ಭಾಗಕ್ಕೆ ಸ್ತರಗಳ ಬದಲಿಗೆ ಪಟ್ಟಿಕೆಗಳನ್ನು ಅಳವಡಿಸಿದರು. ತದನಂತರ ಕಾಲದಲ್ಲಿ ಗರ್ಭಗೃಹ ಹಾಗೂ ಅಂತರಾಳದ ಹೊರಭಾಗಕ್ಕೂ ಪಟ್ಟಿಕೆಗಳನ್ನು ವಿಸ್ತರಿಸಿದರು. ಬೇಲೂರಿನ ಗರ್ಭಗೃಹದ ಸುತ್ತ ಪೀಠಸ್ತರಗಳಿವೆ. ಕಕ್ಷಾಸನವಿರುವಲ್ಲಿ ಪಟ್ಟಿಕೆಗಳಿವೆ. ಸೋಮನಾಥಪುರ, ಹೊಸಹೊಳಲುವಿನ ದೇವಾಲಯಗಳಲ್ಲಿ ದೇವಾಲಯದ ಸುತ್ತ ಪಟ್ಟಿಕಾ ರಚನೆಯನ್ನು ಕಾಣಬಹುದು. ಪಟ್ಟಿಕೆಗಳಲ್ಲಿ ಆನೆಗಳ ಸಾಲು, ಅಶ್ವಾರೋಹಿಗಳ ಸಾಲು, ಪೌರಾಣಿಕ ಕಥಾ ಮಾಲಿಕೆ, ಲತಾ, ಸಿಂಹ, ಯಾಳಿ, ಹಂಸ ಇತ್ಯಾದಿಗಳನ್ನೊಳಗೊಂಡ ಅಲಂಕಾರಿಕ ಪಟ್ಟಿಕೆಗಳನ್ನು ಕಾಣಬಹುದು. ಅಲಂಕಾರದಿಂದ ಆವೃತವಾದ ಕಂಟಕ ರಚನೆಯನ್ನು ಕಾಣಬಹುದು. ಜಗತಿಯ ರಚನೆಯನ್ನೂ ಲಕ್ಷಣಗಳನ್ನೂ ಶಾಸ್ತ್ರಗ್ರಂಥಗಳು ಸವಿವರವಾಗಿ ಚಿತ್ರಿಸಿವೆ (ಮಂಕಡ್ : ೧೯೫೦ : ೨೮೬).

ಪೀಠ ರಚನೆ - ಪಟ್ಟಿಕೆಗಳು, ಬಸರಾಳು

ಪೀಠ ರಚನೆ – ಪಟ್ಟಿಕೆಗಳು, ಬಸರಾಳು

ಚತುರಶ್ರಾ ತಥಾಯತಾ ವೃತ್ತಾಯತಾ ತಥಾ
ಅಷ್ಟಾಶ್ರಾ ಕಥಾ ಕಾರ್ಯಾ ಪ್ರಾಸಾದಸ್ಯಾನುರೂಪತಃ

ವೃತ್ತ, ವೃತ್ತಾಯತ ರಚನೆಗಳನ್ನು ಗುರುತಿಸಲು ಸಾಧ್ಯವಾಗಿಲ್ಲ. ದೇವಾಲಯದ ಆಕಾರವನ್ನು ಜಗತಿ ಅನುಸರಿಸುವುದನ್ನು ಹಲವೆಡೆ ಗುರುತಿಸಬಹುದಾಗಿದೆ (ಜೈನ್.೧೯೬೩.೩೩).

ಜಗತೀ ತಾದೃಶೀ ಕಾರ್ಯಾ ಪ್ರಾಸಾದೋ ಯಾದೃಶೋ ಭವೇತ್
ಭಿನ್ನಚ್ಛಂದಾ ಕರ್ತವ್ಯಾ ಪ್ರಸಾದಾಸನ ಸಂಸ್ಥಿತಾ

ಜಗತಿಯ ರಚನೆಯನ್ನು ಪ್ರದಕ್ಷಿಣಾ ಪಥಕ್ಕೆ ಬದಲಾಗಿ ದೇವಾಲಯಗಳಲ್ಲಿ ಕಾಣಲು ಸಾಧ್ಯ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಆಮಲಕವುಳ್ಳ ಔತ್ತರೇಯ ಸಂಪ್ರದಾಯದ ದೇವಾಲಯಗಳಲ್ಲಿ ಸಾಂಧಾರ ಎನ್ನುವ ಪ್ರಭೇದವಿದೆ. ಆದರೆ ಅಲ್ಲಿಯೂ ಸರಿಯಾದ ಉದಾಹರಣೆಗಳಿಲ್ಲ. ದೇವಾಲಯದ ಸುತ್ತ ಕಡೆದ ಅಲಂಕಾರಶಿಲ್ಪಗಳನ್ನು ನೋಡಲು, ಪ್ರದಕ್ಷಿಣೆ ಹಾಕಲು ಜಗತಿ ಸಹಾಯಕವಾಗಿದೆ ಎನ್ನಬಹುದು. ದಾಕ್ಷಿಣಾತ್ಯ ದೇವಾಲಯಗಳ ಉಪಪೀಠದಲ್ಲಿ ಹಲವು ಸ್ತರಗಳಿರುವಂತೆ, ಔತ್ತರೇಯ ದೇವಾಲಯಗಳ ಜಗತಿಯೂ ಹಲವು ಸ್ತರವುಳ್ಳದ್ದು. ಜಗತಿಯ ರಚನೆಯಲ್ಲಿಯೂ ಜಾಡ್ಯಕುಂಭ, ಕರ್ಣಿಕಾ, ಶೀರ್ಷಪತ್ರಿಕಾ, ಕ್ಷುರಕ, ಕುಂಭಕ, ಅಂತರಪತ್ರ, ಕಪೋತ, ಪುಷ್ಪಕ ಮುಂತಾದ ಹಲವು ಸ್ತರಗಳನ್ನು ಶಾಸ್ತ್ರಗ್ರಂಥಗಳು ಗುರುತಿಸಿವೆ. (ಮಂಕಡ್. ೧೯೫೧.೨೬೭).

ತಥೋಚ್ಛ್ರಾಯಂ ಭಜೇತ್ ಅಷ್ಟಾವಿಂಶತಿ ಪದೈರಥಃ
ಜಾಡ್ಯಕುಂಭಂ ತ್ರಿಪದಿಂ ಕರ್ಣಕಂ ದ್ವಿಪದಂ ತಥಾ
ಪದ್ಮಪತ್ರ ಸಮಾಯುಕ್ತಾ ತ್ರಿಪದಾ ಶೀರ್ಷಪಟ್ಟಿಕಾ
ಕ್ಷುರಕಂ ದ್ವಿಪದಂ ಪೋಕ್ತಂ ಕುಂಭಕಂ ಸಪ್ತಭಿಃ ಪದೈಃ
ತ್ರಿಪದಃ ಕಲಶಃ ಪ್ರೋಕ್ತೋ ಪದಂಚಾಂತರಪತ್ರಿಕಂ
ಕಪೋತಾಲೀ ತ್ರಿಪದಾ ಪುಷ್ಪಕಂ ಯುಗಸಂಖ್ಯಯಾ

ಈ ರೀತಿಯ ಸ್ತರಗಳುಳ್ಳ ಜಗತೀ ರಚನೆಯು ಕರ್ನಾಟಕದಲ್ಲಿ ಅಲಭ್ಯ. ಖುರಕ, ಪದ್ಮಪತ್ರ, ಅಂತರಪತ್ರ, ಕರ್ಣಿಕಾ, ಪಟ್ಟಿಕಾ, ವೇದಿ ಮುಂತಾದ ಸ್ತರಗಳುಳ್ಳ ರಚನೆಗಳಿವೆ. ನುಗ್ಗೇಹಳ್ಳಿ, ಜಾವಗಲ್ಲು, ಅರಳಗುಪ್ಪೆ ಮುಂತಾದೆಡೆಯಲ್ಲಿ ಮೂರು-ಮೂರುವರೆ ಅಡಿ ಎತ್ತರದ ಜಗತಿಯೂ, ಬೇಲೂರು, ಹಳೇಬೀಡು, ನಾಗಮಂಗಲಗಳಲ್ಲಿ ನಾಲ್ಕು-ನಾಲ್ಕೂವರೆ ಅಡಿ ಎತ್ತರದ ಜಗತಿಯನ್ನು ಕಾಣಬಹುದು. ಕೆಲವೆಡೆ ಕಂಠ ಹಾಗೂ ಪಟ್ಟಿಕೆಗಳಿದ್ದು, ಪಟ್ಟಿಕೆಗಳಲ್ಲಿ ಉಬ್ಬು ಶಿಲ್ಪಗಳಿವೆ. ದೇವಾಲಯಕ್ಕೆ ಪ್ರವೇಶವಿರುವೆಡೆಯಲ್ಲಿ ಜಗತಿ ಭಾಗದಲ್ಲಿ ಸೋಪಾನ ರಚನೆ ಇದ್ದು ಇಕ್ಕೆಲಗಳಲ್ಲಿ ವಿಮಾನಾಕೃತಿಗಳಿವೆ. ಇವುಗಳ ಶಿಖರ ಸ್ವರೂಪ ದೇವಾಲಯದ ಶೈಲಿಯನ್ನು ಅನುಸರಿಸುತ್ತದೆ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಜಗತಿಯ ಮೂಲೆಗಳಲ್ಲಿ ದಿಕ್ಪಾಲಕರನ್ನು ಇರಿಸಲು ಶಾಸ್ತ್ರ ಗ್ರಂಥಗಳು ಸೂಚಿಸಿವೆ (ಮಂಕಡ್. ೧೯೫೦. ೨೮೭).

ಕರ್ಣೇಷು ದಿಶಾಪಾಲಾ ಪ್ರಾಚ್ಯಾದಿಷು ಪ್ರದಕ್ಷಿಣಾ

ಜಗತಿಯ ಮೂಲೆಗಳಲ್ಲಿ ಆನೆ, ಯಕ್ಷ, ನಾಗಶಿಲ್ಪಗಳು ರಚನೆಗೊಂಡಿರುವುದನ್ನು ಸೋಮನಾಥಪುರದ ದೇವಾಲಯದಲ್ಲಿ ಕಾಣಬಹುದು. ಗರ್ಭಗೃಹದಿಂದ ಹೊರಬರುವ ಅಭಿಷೇಕ ಜಲಕ್ಕಾಗಿ, ಮಕರಮುಖವುಳ್ಳ ಜಲಪ್ರಣಾಳವನ್ನು ಜಗತಿಯ ಭಾಗದಲ್ಲಿ ರಚಿಸಬೇಕು (ಮಂಕಡ್. ೧೯೫೦.೨೮೮).

ಜಲನಿಷ್ಠಾನ ಮಕರಮುಖೈಶ್ಚ ವಿಕೃತಾನನೈಃ

ಔತ್ತರೇಯ ದ್ರಾವಿಡ ಶೈಲಿಯ ದೇವಾಲಯಗಳಲ್ಲಿ ಎರಡು ರೀತಿಯ ಪೀಠರಚನೆಯನ್ನು ಸಾಮಾನ್ಯವಾಗಿ ಕಾಣಬಹುದು. ಒಂದು ಜಗತಿಯುಳ್ಳ ಪೀಠರಚನೆ ಮತ್ತೊಂದು ಕಂಟಕವುಳ್ಳ ಪೀಠರಚನೆ. ಔತ್ತರೇಯ ಗ್ರಂಥಗಳಲ್ಲಿ ಸಾಧಾರಣ ಪೀಠರಚನೆ ಇದ್ದು ಈ ಪೀಠದೊಂದಿಗೆ ಕಂಟಕವೂ ಸೇರಿದಲ್ಲಿ ಕಂಟಕಪೀಠವೆನಿಸುತ್ತದೆ. ಕುಕ್ಕನೂರಿನ ಕಲ್ಲೇಶ್ವರ, ಬಾದಾಮಿಯ ಯಲ್ಲಮ್ಮನಗುಡಿ, ಬಳ್ಳಿಗಾಮೆಯ ಕೇದಾರೇಶ್ವರ, ಹಾವೇರಿಯ ಸಿದ್ಧೇಶ್ವರ ಮೊದಲಾದವು ಕಂಟಕ ಪೀಠಕ್ಕೆ ಉದಾಹರಣೆಗಳು. ಅಪರಾಜಿತಪೃಚ್ಛಾ ಗ್ರಂಥದಲ್ಲಿರುವ ಸಾಧಾರಣ ಪೀಠ ರಚನೆಯನ್ನು ಗಮನಿಸಬಹುದು (ಮಂಕಡ್. ೧೯೫೦. ೩೧೩).

ಕಂಟಕಪೀಠ ರಚನೆ - ಮಕರ ಮೂಖಾಲಂಕಾರ, ಹಳೇಬೀಡು

ಕಂಟಕಪೀಠ ರಚನೆ – ಮಕರ ಮೂಖಾಲಂಕಾರ, ಹಳೇಬೀಡು

ಜಾಡ್ಯಕುಂಭಃ ಕರ್ಣಕಶ್ಜ ಊರ್ಧೈ ವೈ ಶೀರ್ಷಪಟ್ಟಿಕಾ
ಶಿರಃಪಾಲೀ ವಿನಾತ್ವೇವಂ ಕರ್ಣಪೀಠಂ ತು ಕಾರಯೇತ್

ಈ ವಿವರಣೆಯು ಅಲ್ಪದ್ರವ್ಯದೊಡನೆ ರಚಿಸುವ ಪೀಠಕ್ಕೆ ಸಂಬಂಧಿಸಿದ್ದು ಇದನ್ನು ಕರ್ಣಪೀಠ ಅಥವಾ ಕಣಪೀಠ ಎಂದು ಹೆಸರಿಸಲಾಗಿದೆ. ಇದನ್ನು ಸಾಧಾರಣ ಪೀಠ ಎಂದೂ ಗುರುತಿಸಬಹುದು. ಕಣಪೀಠದಲ್ಲಿ ಜಾಡ್ಯಕುಂಭ, ಕರ್ಣಿಕಾ, ಶೀರ್ಷಪಟ್ಟಿಕೆ ಎಂಬ ಸ್ತರಗಳಿವೆ. ಜಾಡ್ಯಕುಂಭವು ಸಂಯುಕ್ತ ಸ್ತರವೆನಿಸಿದ್ದು ಖುರಕ ಮತ್ತು ಪದ್ಮಪತ್ರ ಸ್ತರಗಳನ್ನೊಳಗೊಳ್ಳುತ್ತದೆ. ಶಾಸ್ತ್ರೋಕ್ತಿಗಳ ಪ್ರಕಾರ ಪ್ರಾಸಾದ ರಚನೆ ಖರಶಿಲಾದಿಂದ ಆರಂಭಗೊಳ್ಳುತ್ತದೆ (ಮಂಕಡ್. ೧೯೫೦ .೩೦೭).

ಪ್ರಾಸಾದಚ್ಛಂದ ಮಸ್ಯೋರ್ಧ್ವೇದೃಡ್ ಖರಶಿಲೋತ್ತಯಾ

ಖರಶಿಲಾ ನಂತರ ಭಿಟ್‌ಸ್ತರವಿದೆ. ಖರಶಿಲಾ ಭಾಗವು ಸಂಪೂರ್ಣವಾಗಿ ನೆಲದಲ್ಲಿ ಸೇರಿದ್ದು ಭಿಟ್‌ಸ್ತರವು ಮೇಲ್ಗಡೆ ಕಾಣಲು ಸಾಧ್ಯ (ಜೈನ್: ೧೯೬೩ : ೪೨).

ಶಿಲೋಪರಿ ಭವೇತ್ ಭಿಟ್ಟಮೇಕಹಸ್ತೇಯುಗಾಂಗುಲಂ

ಭಿಟ್‌ಸ್ತರದ ನಂತರ ಖುರಕ, ಪದ್ಮಪತ್ರ, ಕರ್ಣಿಕಾ(ಕುಮುದ), ಕಪೋತ ಸ್ತರಗಳನ್ನು ಕಾಣಬಹುದು. ದಾಕ್ಷಿಣಾತ್ಯ ದೇವಾಲಯಗಳಲ್ಲಿ ಕಾಣುವ ಕಂಪ, ಕ್ಷೇಪಣ, ಅಲಿಂಗ, ಅಂತರಿತ ಮೊದಲಾದ ಸ್ವರಗಳಿಗೆ ಪರ್ಯಾಯವಾಗಿ ಔತ್ತರೇಯ ದೇವಾಲಯಗಳಲ್ಲಿ ಛೇದ, ಅಂತರಪತ್ರ ಎಂಬ ಸ್ತರಗಳಿವೆ. ಕಂಟಕ ರಚನೆಯು ಔತ್ತರೇಯ ದ್ರಾವಿಡ ಶೈಲಿಗೆ ವಿಶಿಷ್ಟವಾದುದು. ಕಂಟಕ ರಚನೆಯನ್ನು ಫೀಠ ಹಾಗೂ ಭೂಮಿ ರಚನೆಯಲ್ಲಿಯೂ ಕಾಣುತ್ತೇವೆ. ಈ ರಚನೆಯನ್ನು ಅಪರಾಜಿತಪೃಚ್ಛಾ ಗ್ರಂಥವು ವಿವರಿಸಿದೆ (ಮಂಕಡ್ : ೧೯೫೦ : ೫೮೫).

ಬದರೀ ಕೇತಕೀನಾಂಚ ಕಂಟಕ್ಕೆ ದ್ರಾವಿಡೈಸ್ಮೃತಃ

ದ್ರಾವಿಡ ಶೈಲಿಯ ದೇವಾಲಯಗಳಲ್ಲಿ ಕಂಟಕ ಸ್ವರೂಪವು ಬದರೀ ಅಥವಾ ಕೇತಕೀ (ಕೇದಗೆ)ಯಂತಿದೆ ಎಂದು ಶಾಸ್ತ್ರಗ್ರಂಥಗಳ ಉಲ್ಲೇಖ. ಕೇತಕೀ ಎನ್ನುವುದು ಕೇದಗೆಯ ಮುಳ್ಳು; ಬದರೀ ಎನ್ನುವುದು ಗಿಣಿಯ ಕೊಕ್ಕಿನ ಆಕಾರ (ಮಂಕಡ್. ೧೯೫೦,೫೮೬).

ಶುಕಚಂಚು ಸಮಾಕಾರಂ ಬದರೀ ಕಂಟಕಾಕೃತಿಃ

ಕಂಟಕಪೀಠ ರಚನೆ - ಗಿಣಿಯ ಕೊಕ್ಕಿನ ಆಹಾರ, ಮೊಸಳೆ

ಕಂಟಕಪೀಠ ರಚನೆ – ಗಿಣಿಯ ಕೊಕ್ಕಿನ ಆಹಾರ, ಮೊಸಳೆ

ದಾಕ್ಷಿಣಾತ್ಯ ದೇವಾಲಯದ ಅಧಿಷ್ಠಾನದ ಸ್ತರಗಳೊಂದಿಗೆ ಹೋಲಿಸಿ ನೋಡುವ ಅವಶ್ಯಕತೆ ಇಲ್ಲಿದೆ. ದೇವಾಲಯದ ಮಾಟಕ್ಕೆ, ರಚನೆಗೆ ಬಳಸಿರುವ ಮೃದುಶಿಲೆ ಹೆಚ್ಚು ಅಲಂಕಾರಕ್ಕೆ ಒಗ್ಗಿದ್ದು, ಈ ಅಲಂಕಾರವು ಕೆಲವೊಮ್ಮೆ ತಬ್ಬಿಬ್ಬುಗೊಳಿಸುತ್ತದೆ. ದಾಕ್ಷಿಣಾತ್ಯ ಸಂಪ್ರದಾಯದ ಪ್ರತಿಬಂಧ ಅಧಿಷ್ಠಾನದಲ್ಲಿ ವೃತ್ತಕುಮುದವಿದ್ದು, ಇದರ ವಿಕಸತಿರೂಪವೇ ಕರ್ಣಿಕಾ ಸ್ವರೂಪ. ಕರ್ಣಿಕಾದ ನಂತರ ಕಪೋತ, ನಂತರ ವೇದಿಕರಚನೆ. ಕಪೋತದ ಮೇಲಿರುವ ಕ್ಷುದ್ರನಾಸೀ ರಚನೆಗಳು ಮಾತ್ರ ಉಳಿದು ಕೇದಗೆಯ ಮುಳ್ಳಾಗಿರಲು ಸಾಧ್ಯ. ವೇದಿಕೆಯ ಗಲಪಾದದ ಮುಂಚಾಚಿದ ಅಲಂಕರಣವೇ ಬದರೀಕಂಟಕಾಕೃತಿ ಅಥವಾ ಗಿಣಿಯ ಕೊಕ್ಕಿನ ಆಕಾರ ಎನ್ನಿಸಿದೆ. ಇದಕ್ಕೆ ಮಕರವೆಂಬ ಹೆಸರೂ ಬಳಕೆಯಾಗಿದೆ. ಕಂಟಕವುಳ್ಳ ಪೀಠರಚನೆಯನ್ನು ಅಪರೂಪವಾಗಿ ಜಗತಿಯುಳ್ಳ ದೇವಾಲಯಗಳಲ್ಲಿಯೂ ಕಾಣಬಹುದು. ಮುಂದುವರೆದ ದೇವಾಲಯಗಳಲ್ಲಿ ಪಟ್ಟಿಕೆಗಳೇ ಹೆಚ್ಚು ಜಾಗವನ್ನು ಆಕ್ರಮಿಸಿದ್ದು ಜಂಘಾಭಾಗವನ್ನು ಕಿರಿದಾಗಿಸಿದೆ.

ಔತ್ತರೇಯ ದ್ರಾವಿಡ ಶೈಲಿಯ ಮೂಲ ಮತ್ತು ವಿಕಾಸದ ಹಾದಿಯನ್ನು ಅರ್ಥಮಾಡಿಕೊಂಡಲ್ಲಿ ಈ ದೇವಾಲಯಗಳನ್ನು ಸುಲಭವಾಗಿ ವಿಶ್ಲೇಷಿಸಿ ಗುರುತಿಸಬಹುದು. ಈ ದೇವಾಲಯಗಳ ಜಂಘಾ ಭಾಗದಲ್ಲಿ ಕಾಣುವ ಅಲಂಕಾರ ಮತ್ತಷ್ಟು ವೈವಿಧ್ಯಮಯವಾದದ್ದು. ದ್ರಾವಿಡ ಶೈಲಿಯ ಮುಖ್ಯ ಲಕ್ಷಣಗಳನ್ನು ಅಪರಾಜಿತಪೃಚ್ಛಾ ಗ್ರಂಥಕಾರನು ಸಂಕ್ಷೇಪವಾಗಿ ಕೆಳಕಂಡಂತೆ ಗುರುತಿಸುತ್ತಾನೆ (ಮಂಕಡ್. ೧೯೫೦. ೨೩೭).

ಪೀಠೋರ್ಧ್ವೇ ಕರ್ಣರೇಖಾಶ್ಚ ಭೂಮಿಕಾಕ್ರಮ ಸಂಸ್ಥಿತಾಃ
ವಿಭಕ್ತಿದಲನಾಪೂರ್ಣಾ ಲತಾಶೃಂಗ ಕ್ರಮೋದ್ಭವಾಃ
ಮೇಷ ಮಕರ ಕೂಟಪೈಃ ಕಂಟಕೈರಾವೃತಾಶುಭಾಃ
ವೇದೀ ಘಂಟಾ ನಾಸಿಕಾದ್ಯಾಃ ದ್ರಾವಿಡಾಃ ಶುಭಲಕ್ಷಣಾಃ

ಈ ಶ್ಲೋಕಗಳನ್ನು ಸಂಪೂರ್ಣವಾಗಿ ಅರ್ಥೈಸಲು ಸಾಧ್ಯವಾಗಿಲ್ಲ. ಆದರೂ ಕೆಲವು ಅಂಶಗಳನ್ನು ಗಮನಿಸಬಹುದು. ಪೀಠಾನಂತರ ಕರ್ಣರೇಖೆಯುಳ್ಳ (ಕರ್ಣಕೂಟವುಳ್ಳ?) ಕ್ರಮವಾದ ಭೂಮಿ ರಚನೆ ಇದೆ. ದ್ರಾವಿಡ ಶೈಲಿಯ ಈ ಭೂಮಿಯ ರಚನೆಗೆ “ಲತಾಶೃಂಗ” ಎಂದು ಹೆಸರು (ಭೂಮಿಜ ಶೈಲಿಯಲ್ಲಿ ಶೃಂಗಂ ಮಾಲಿಕಾಕೃತಿ ಎಂದಿದೆ). ಮೇಷ (ಕ್ಷುದ್ರ ನಾಸಿಭಾಗ) ಮಕರ (ಗಲಪಾದ) ಕೂಟ (ಕರ್ಣಕೂಟ) ಕಂಟಕಗಳಿಂದ ಆವರಿಸಲ್ಪಟ್ಟಿದೆ. ಭೂಮಿ ರಚನೆಯ ನಂತರ ವೇದಿ, ಘಂಟಾ, ನಾಸಿಕಾ ರಚನೆಗಳಿದ್ದು ಇವು ದ್ರಾವಿಡ ಶೈಲಿಯ ಲಕ್ಷಣ ಗಳೆನ್ನಿಸಿದೆ.

ಈ ವಿವರಣೆಯ ಪ್ರಕಾರ ಪೀಠ, ಭೂಮಿ, ವೇದಿ, ಘಂಟಾ/ನಾಸಿಕಾ ಇವು ಊರ್ಧ್ವಕ್ರಮದ ಪ್ರಮುಖ ಅಂಗಗಳು. ಜಂಘಾ, ಛಾದ್ಯ ರಚನೆಗಳ ಸ್ಥಾನಗೌಣ. ಇವು ಭೂಮಿ ರಚನೆಯಲ್ಲಿ ಅಂತರ್ಗತವಾಗಿವೆ. ಅಪರಾಜಿತಪೃಚ್ಛಾ ಗ್ರಂಥಕಾರನು ಮತ್ತೊಂದೆಡೆಯಲ್ಲಿ, ಭೂಮಿಜ ವರಾಟ ಮತ್ತು ದ್ರಾವಿಡ ಶೈಲಿ ದೇವಾಲಯಗಳ ಮಂಡೋವರವನ್ನು ವಿವರಿಸಿದ್ದಾನೆ (ಮಂಕಡ್: ೧೯೫೦ : ೩೧೫).

ವಿಸ್ತಾರಸಮ ಉತ್ಸೇಧೇ ಯಾವತ್ ಪ್ರಥಮ ಭೂಮಿಕಾ
ಶೃಂಗಕೋಟೋದಯಂ ತಕ್ತ್ವಾ ಶೇಷಂ ಮಂಡೋವರಂ ಭವೇತ್
ವಿಮಾನೇ ಭೂಮಿಜೇ ಚೈವ ವರಾಟೇ ತಥೈವ
ದ್ರಾವಿಡೇಚೈವ ಉತ್ಸೇಧಂ ತಾವತ್ ಪೀಠೋರ್ಧ್ವ ಮಸ್ತಕಂ

ಮಂಡೋವರವು ಮಂಡಾದ್ರಿ ಪದದಿಂದ ನಿಷ್ಪನ್ನಗೊಂಡಿದೆಯೆಂದು ವಿದ್ವಾಂಸರು ಗುರುತಿಸುತ್ತಾರೆ. ಮಂಡ ಎಂದಲ್ಲಿ ಅಲಂಕಾರವೇ. ಮಂಡೋವರದ ಭಾಗದಲ್ಲಿ ಹೆಚ್ಚು ಅಲಂಕಾರವೇ ಅಡಗಿದೆ. ಮಂಡೋವರವೇ ಜಂಘಾಭಾಗ. ಮೇಲ್ಕಂಡ ವಿವರಣೆ ಪ್ರಕಾರ ವಿಸ್ತಾರಕ್ಕೆ ಸಮನಾದ ಎತ್ತರದಲ್ಲಿ ಮೊದಲ ಭೂಮಿ ರಚನೆಯು ಅಂತ್ಯಗೊಳ್ಳುತ್ತದೆ. ಮೊದಲ ಭೂಮಿ ರಚನೆಯ ಶೃಂಗ/ಕೂಟವನ್ನು ಹೊರತುಪಡಿಸಿದ ಉಳಿದ ಭಾಗವೇ ಮಂಡೋವರ ಎಂದು ಗುರುತಿಸಲಾಗಿದೆ. ಇದೇ ಜಂಘಾಭಾಗವೆನ್ನಿಸಿದೆ.

ಪ್ರತಿಭೂಮಿ ರಚನೆಯಲ್ಲಿ ಜಂಘಾ ಮತ್ತು ಕೂಟ ಭಾಗಗಳಿವೆ. ಮೊದಲ ಭೂಮಿಯ ಜಂಘಾ ಭಾಗವು ವಿಕಾಸಗೊಂಡು ಪೂರ್ಣಪ್ರಮಾಣದ ಭಿತ್ತಿರಚನೆಗೆ ಕಾರಣವಾಯಿತು. ಇಲ್ಲಿ ದಾಕ್ಷಿಣಾತ್ಯ ಸಂಪ್ರದಾಯದ ಪ್ರಭಾವವಿದೆ. ಈ ಹಿನ್ನೆಲೆಯಲ್ಲಿ ಔತ್ತರೇಯ ದ್ರಾವಿಡ ಶೈಲಿಯ ಭಿತ್ತಿ ಅಥವಾ ಜಂಘಾ ಭಾಗವನ್ನು ಪರೀಕ್ಷಿಸಬೇಕು. ಹರಳಹಳ್ಳಿಯ ಗಳಗನಾಥ ದೇವಾಲಯದಲ್ಲಿ ಮೇಲ್ಕಂಡ ವಿವರಣೆಗೆ ತಕ್ಕಂತೆ ಭೂಮಿರಚನೆಯನ್ನು ಕಾಣಬಹುದು. ಛಾದ್ಯ ಅಥವಾ ಕಪೋತದ ಮುಂಬಾಗುವಿಕೆ ಇಲ್ಲವೇ ಇಲ್ಲ. ಔತ್ತರೇಯ ದ್ರಾವಿಡ ಶೈಲಿಯ ಮೂಲಕಲ್ಪನೆಗೆ ಇದೊಂದು ಸ್ಪಷ್ಟ ಉದಾಹರಣೆ. ಬಾದಾಮಿಯ ಯಲ್ಲಮ್ಮನಗುಡಿ, ಡಂಬಳದ ದೊಡ್ಡ ಬಸಪ್ಪ ದೇವಾಲಯಗಳ ಛಾದ್ಯರಚನೆಯೂ ಬಾಗಿಲ್ಲ. ಮುಂಬರುವ ರಚನೆಗಳಲ್ಲಿ ಜಂಘಾ ಭಾಗವೂ ಹೆಚ್ಚು ಬೆಳವಣಿಗೆಯನ್ನು ಕಂಡಿದ್ದು, ಛಾದ್ಯದಬಾಗು ಮುಂಚಾಚಿತು. ದಾಕ್ಷಿಣಾತ್ಯ ಸಂಪ್ರದಾಯದ ಅಲಂಕಾರವನ್ನು ಅನುಸರಿಸಿತು.