ಔತ್ತರೇಯ ದ್ರಾವಿಡ ಶೈಲಿಯನ್ನು ವಿವರಿಸಲು, ಲಭ್ಯವಿರುವ ಗ್ರಂಥಗಳು ಕೇವಲ ಎರಡು; ಭೋಜನ ಸಮರಾಂಗಣ ಸೂತ್ರಧಾರ ಮತ್ತು ಭುವನದೇವನ ಅಪರಾಜಿತಪೃಚ್ಛಾ. ಇವೆರಡೂ ಗ್ರಂಥಗಳಲ್ಲಿ ಎರಡು ಅಧ್ಯಾಯಗಳು ಮಾತ್ರ ಈ ಶೈಲಿಗಾಗಿ ಮೀಸಲಾಗಿದೆ. ಮೊದಲ ಅಧ್ಯಾಯದಲ್ಲಿ ಪೀಠರಚನೆಯೂ ಎರಡನೇ ಅಧ್ಯಾಯದಲ್ಲಿ ಭೂಮಿ ರಚನೆಯೂ ವಿವರಿಸಲ್ಪಟ್ಟಿದೆ. ಎರಡೂ ಗ್ರಂಥಗಳಲ್ಲಿರುವ ಮಾಹಿತಿಯಲ್ಲಿ ಹಲವು ವ್ಯತ್ಯಾಸಗಳುಂಟು. ಆದರೆ ಒದಕ್ಕೊಂದು ಪೂರಕವೂ ಹೌದು. ಈ ಗ್ರಂಥಗಳ ಮಾಹಿತಿಯನ್ನು ವ್ಯವಸ್ಥಿತವಾಗಿ ಕ್ರೋಢೀಕರಿಸಿಕೊಂಡಲ್ಲಿ ಔತ್ತರೇಯ ದ್ರಾವಿಡ ಶೈಲಿಯ ಸ್ವರೂಪ ದರ್ಶನವಾಗುವುದು. ಈ ಗ್ರಂಥಗಳಿಂದ ಖಚಿತ ಮಾಹಿತಿಯನ್ನು ಹೆಕ್ಕಿ ತೆಗೆಯುವುದೇ ಈ ಲೇಖನದ ಉದ್ದೇಶ. ಈ ಗ್ರಂಥಗಳಲ್ಲಿ ಕಾಣುವ ಹಲವು ವಿಶೇಷಗಳನ್ನು ಮೊದಲಿಗೆ ಗಮನಿಸಬೇಕು. ಮೊದಲಿಗೆ, ಈ ಶೈಲಿಯು ದಾಕ್ಷಿಣಾತ್ಯ ಸಂಪ್ರದಾಯದಿಂದ ಹೇಗೆ ಭಿನ್ನ ಎಂಬ ಅರಿವು ಮೂಡಿಸುತ್ತದೆ. ಈ ಶೈಲಿಯಲ್ಲಿ ಪೀಠರಚನೆಯ ನಂತರ ಭೂಮಿ ರಚನೆ ಇರುವುದರಿಂದ ವಿವರಣೆಯೂ ಎರಡು ಅಧ್ಯಾಯಗಳಿಗೇ ಸೀಮಿತ. ದಾಕ್ಷಿಣಾತ್ಯ ಸಂಪ್ರದಾಯದಂತೆ ಪ್ರತ್ಯೇಕವಾಗಿ ಭಿತ್ತಿ ಅಥವಾ ಪಾದ ರಚನೆಯನ್ನು ಗುರುತಿಸಿಲ್ಲ. ಮೊದಲ ಭೂಮಿ ರಚನೆಯ ಜಂಘಾ ಭಾಗವೇ ಪಾದ ಅಥವಾ ಭಿತ್ತಿಗೆ ಪರ್ಯಾಯವೆನಿಸಿದೆ. ಪ್ರಸ್ತರದಂತಹ ಪ್ರತ್ಯೇಕ ರಚನೆ ಇಲ್ಲ. ಮೊದಲ ತಲ ರಚನೆಯಲ್ಲಿಯೇ ಕಪೋತವು ಸರಳವಾಗಿದ್ದು ಹೆಚ್ಚು ಮುಂಚಾಚಿಲ್ಲವೆಂದು ಗಮನಿಸಬಹುದು. ಮೊದಲ ತಲದ ಜಂಘಾಭಾಗವು ತದನಂತರ ಕಾಲದಲ್ಲಿ ತನ್ನ ಎತ್ತರವನ್ನು ಹೆಚ್ಚಿಸಿಕೊಂಡು ಭಿತ್ತಿಯ ಅಲಂಕಾರವನ್ನು ಪಡೆಯಿತು. ಛಾದ್ಯದ ಬಾಗುವಿಕೆಯೂ ಗಮನಾರ್ಹವಾಗಿ ವೃದ್ಧಿಸಿತು. ಭಿತ್ತಿಯಲ್ಲಿ ಕೂಟಛಾದ್ಯದ ಬೆಳವಣಿಗೆಯನ್ನೂ ಕಾಣಬಹುದಾಗಿದೆ. ಔತ್ತರೇಯ ದ್ರಾವಿಡ ಶೈಲಿಯ ಮೂಲ ಸ್ವರೂಪದೊಂದಿಗೆ ಹೋಲಿಸಿದಾಗ ಈ ಬೆಳವಣಿಗೆ ಅಗಾಧವಾದದ್ದು.

59_382_DV-KUH

ಸಮರಾಂಗಣ ಸೂತ್ರಧಾರ ಗ್ರಂಥದಲ್ಲಿ ಒಂದರಿಂದ ಹನ್ನೆರಡು ಭೂಮಿಯವರೆಗೆ ಅಳತೆಗಳನ್ನು ಕೊಡಲಾಗಿದೆ. ಅಪರಾಜಿತಪೃಚ್ಛಾ ಗ್ರಂಥದಲ್ಲಿ ಒಂದು, ಮೂರು, ಐದು, ಏಳು ಭೂಮಿ ರಚನೆಗಳಿಗೆ ಸೀಮಿತಗೊಳಿಸಲಾಗಿದೆ. ಸಮರಾಂಗಣ ಸೂತ್ರಧಾರ ಗ್ರಂಥ ಕ್ರಿ.ಶ. ಹನ್ನೊಂದನೆಯ ಶತಮಾನದ ಮಧ್ಯಭಾಗಕ್ಕೆ ಸೇರಿದ್ದು. ಅಪರಾಜಿತ ಪೃಚ್ಛಾ ಸುಮಾರು ಒಂದು ಶತಮಾನದ ನಂತರದ ರಚನೆ. ಆ ಹೊತ್ತಿಗೆ ದೇವಾಲಯ ರಚನೆಯಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಹಾಗೂ ಔಚಿತ್ಯವೆನಿಸುವ ವಿವರಗಳನ್ನು ಕ್ರೋಢೀಕರಿಸಲಾಗಿದೆ ಎಂದು ತಿಳಿಯಬಹುದು. ಲಭ್ಯವಿರುವ ಸಮರಾಂಗಣ ಸೂತ್ರಧಾರ ಗ್ರಂಥದಲ್ಲಿ ಹಲವೆಡೆ ಗ್ರಂಥಪಾತಗಳಿವೆ ಹಾಗೂ ಅಸ್ಪಷ್ಟವೆನಿಸುವ ಉಲ್ಲೇಖಗಳಿವೆ. ಅಪರಾಜಿತಪೃಚ್ಛಾ ಗ್ರಂಥದ ಪಾಠಗಳು ಉತ್ತಮ. ಆದರೂ ವಿಷಯ ಸ್ಪಷ್ಟತೆಗಾಗಿ ಪರಸ್ಪರ ಅವಲಂಬನೆ ಅಗತ್ಯ, ಅನಿವಾರ್ಯ.

ಈ ದೇವಾಲಯಗಳಲ್ಲಿ ಚತುರಶ್ರಾಕಾರ ಹಾಗೂ ನಕ್ಷತ್ರಾಕಾರ ರಚನೆಗಳೂ ಇವೆ ಎಂದು ಗಮನಿಸಬೇಕು. ಭಿತ್ತಿ ಅಥವಾ ಜಂಘಾ ರಚನೆಗಳಲ್ಲಿ ಅಲಂಕಾರಕ್ಕಾಗಿ ಹೆಚ್ಚು ಅವಕಾಶ ಕಲ್ಪಿಸುವ ಸಲುವಾಗಿ ಚತುರಶ್ರ ರಚನೆಗಳಲ್ಲಿ ಹಿಂಬೆಣೆ ಮತ್ತು ಮುಂಬೆಣೆಗಳು ಮೂಡಿದ್ದು ಇದನ್ನು ಅಪರಾಜಿತಪೃಚ್ಛಾ ಗ್ರಂಥವು ವಿವರಿಸಿದೆ. ನಕ್ಷತ್ರಾಕಾರ ರಚನೆಗಳಲ್ಲಿ ಮೂಲೆಗಳು ೯೦ ಡಿಗ್ರಿಗಿಂತ ಕಡಿಮೆ ಇದೆ ಎಂದು ಗಮನಿಸಬೇಕು. ಚತುರಶ್ರಾಕಾರ ರಚನೆಗಳಲ್ಲಿ ಮೂಲೆಗಳು ೯೦ ಡಿಗ್ರಿಗೆ ಸಮನಾದುದು. ಚತುರಶ್ರಾಕಾರದ ರಚನೆಯಲ್ಲಿ ಹೆಚ್ಚು ಹಿಂಬೆಣೆ ಮುಂಬೆಣೆಗಳು ಆವರಿಸಿದಲ್ಲಿ ನಕ್ಷತ್ರಾಕಾರ ಭಾವನೆ ಬರುವುದು ಸಹಜ. ಆದ್ದರಿಂದ ಚಾಲುಕ್ಯ ಮತ್ತು ಹೊಯ್ಸಳರ ಕಾಲದ ಎಲ್ಲಾ ದೇವಾಲಯಗಳನ್ನು ನಕ್ಷತ್ರಾಕಾರ ಎನ್ನಲಾಗದು.

ಸಮರಾಂಗಣ ಸೂತ್ರಧಾರ ಗ್ರಂಥದಲ್ಲಿ ಐದು ಪೀಠಗಳ ರಚನೆಯಲ್ಲಿ ವಿವರಿಸಿದ್ದು ವೇದೀ ಬಂಧ ಮತ್ತು ಪ್ರತಿಕ್ರಮ ರಚನೆಗಳಲ್ಲಿ ಕೆಲವು ಶ್ಲೋಕಗಳು ಕಾಣೆಯಾಗಿವೆ. ಈ ವಿವರಗಳಿಗೆ ಅಪರಾಜಿತಪೃಚ್ಛ ಗ್ರಂಥವನ್ನು ಅವಲಂಬಿಸಿದೆ. ಈ ಗ್ರಂಥದ ವಿವರಗಳನ್ನು ಮೂಲ ಮಾತೃಕೆಯಂತೆ ಸ್ವೀಕರಿಸಿ ವಿವೇಚಿಸಲಾಗಿದೆ (ಮಂಕಡ್: ೧೯೫೦ : ೪೪೫).

ಪೀಠರಚನೆ

ದ್ರಾವಿಡಾಂಶ್ಚ ಪ್ರವಕ್ಷಾಮಿ ಪ್ರಾಸಾದಾನ್ ಶುಭಲಕ್ಷಣಾನ್
ಪೀಠಾನ್ ಪಂಚೈವ ಸಂಪ್ರೋಕ್ತಾನ್ ಕಥಯಿಷ್ಯಾಮ್ಯನುಕ್ರಮಾತ್          || ||

ಪಾದಬಂಧನ ಆದ್ಯಃ ಸ್ಯಾತ್ ಶ್ರೀಬಂಧಾಖ್ಯೋ ದ್ವಿತೀಯಕಃ
ತೃತಿಯೋ ವೇದಬಂಧಾಖ್ಯಃ ಚತುರ್ಥಶ್ಚ ಪ್ರತಿಕ್ರಮಃ   || ||

ಪಂಚಮಃ ಪೀಠ ಆಕ್ಯಾತೋ ನಾಮ್ನಾ ಖುರಕ ಬಂಧನಃ
ಏಕೈಕಾನುಕ್ರಮಂ ವಕ್ಷೇ ಶೃಣು ಚೈಕಾಗ್ರ ಮಾನಸಃ     || ||

ದ್ರಾವಿಡ ಪೀಠಗಳಲ್ಲಿ ಐದು ವಿಧ-ಪಾದಬಂಧನ, ಶ್ರೀಬಂಧ, ವೇದಬಂಧ, ಪ್ರತಿಕ್ರಮ ಮತ್ತು ಖುರಕಬಂಧನ. ಇವು ಹಲವು ಸ್ತರಗಳನ್ನೊಳಗೊಂಡಿದ್ದು ಪ್ರತಿಯೊಂದು ಪೀಠರಚನೆಯನ್ನು ಅಳತೆಯೊಂದಿಗೆ ನೀಡಲಾಗಿದೆ.

ಉತ್ಸೇಧಂ ಭಾಗವಿಂಶತ್ಯಾ ವಿಭಜೇತ್ ಪಾದಬಂಧನೇ
ಶ್ರೀಬಂಧೇ ಸಪ್ತವಿಂಶತ್ಯಾ ವಿಂಶತ್ಯಾ ವೇದಿಬಂಧನೇ
ಪ್ರತಿಕ್ರಮೇ ನವದಶ ವಿಂಶತ್ಯಾ ಖುರಕೇ ತಥಾ         || ||

ಪಾದಬಂಧನ = ೨೦ ಭಾಗ, ಶ್ರೀಬಂಧ = ೨೭ ಭಾಗ, ವೇದಿಬಂಧನ = ೨೦ ಭಾಗ, ಪ್ರತಿಕ್ರಮ = ೧೯ ಭಾಗ ಮತ್ತು ಖುರಕಬಂಧ = ೨೦ ಭಾಗ

ತದನುಕ್ರಮತಃ ಪ್ರೋಕ್ತಂ ಪ್ರವಕ್ಷೇ ಪಾದಬಂಧನೇ      || ||

ಪಾದಬಂಧ

ಖುರಕಃ ಪಂಚಭಾಗಸ್ತು ದ್ವಿಭಾಗಾ ಪದ್ಮಪತ್ರಿಕಾ
ತ್ರಿಭಾಗಶ್ಚ ಕಪೋತಃ* ಸ್ಯಾತ್ ಛೇದೋ ಭಾಗಃ ಪ್ರಕೀರ್ತಿತಃ     || ||

ಕಂಠೋ ದ್ವಿಭಾಗಃ ಕರ್ತವ್ಯಃ ತ್ರಿಭಾಗಃ ಪದ್ಮಪತ್ರಿಕಾ
ತ್ರಂಶಃ ಕಪೋತಃ ಪಟ್ಟೀತು ಭಾಗಾಸ್ಯಾತ್ ಪಾದಬಂಧನೇ       || ||

ಖುರಕ = ೫ ಭಾಗ, ಪದ್ಮಪತ್ರಿಕಾ = ೨ ಭಾಗ, ಕುಮುದ*= ೩ ಭಾಗ, ಛೇದ = ೧ ಭಾಗ, ಕಂಠ = ೨ ಭಾಗ, ಪದ್ಮಪತ್ರಿಕಾ = ೩ ಭಾಗ, ಕಪೋತ = ೩ ಭಾಗ, ಪಟ್ಟಿ = ೧ ಭಾಗ= ಒಟ್ಟು ೨೦ ಭಾಗ.

ಖುರಕ, ಪದ್ಮಪತ್ರದ ನಂತರ ಕುಮುದ ರಚನೆಯೇ ಸರಿ. ಯಾವುದೋ ತಪ್ಪಿನಿಂದಾಗಿ ಪಾಠವು ಕಪೋತವೆಂದಿದೆ. ಇದನ್ನು ಕುಮುದ ಎಂದು ಸರಿಪಡಿಸಬೇಕು.

ಶ್ರೀಬಂಧ

ನೀಡಾವರ್ತೀ ಚತುರ್ಭಾಗಃ ದ್ವಿಭಾಗ ಪದ್ಮಪತ್ರಿಕಾ
ಏಕಭಾಗಾ ಕರ್ಣಿಕಾ ಕುಮುದೇ ತ್ರಯಂಶಕೋನ್ನತಿಃ || ||

ಛೇದೋ ಮೇಷಶ್ಚ ಮಕರೋ ನಕ್ರಪಟ್ಟೀ ಛೇದಕಃ
ಕಂಠಶ್ಚ ಪಟ್ಟಿಕಾ ವೇದೀ ಛೇದಃ ಸ್ಯುರ್ಭಾಗಭಾಗತಃ    || ||

ದ್ವಿಭಾಗಃ ಕಂಠ ಇತ್ಯುಕ್ತಃ ಪಟ್ಟಿಕಾ ಭಾಗಮೇವ
ಪದ್ಮಪತ್ರೀ ಭವೇದ್ ಭಾಗಾ ಕಪೋತಾಲೀ ತ್ರಿಭಾಗಿಕಾಃ          || ೧೦ ||

ಛೇದಸ್ತಥೈಕ ಭಾಗಃ ಸ್ಯಾತ್ ಶ್ರೀಬಂಧಾಖ್ಯಃ ಸಮುನ್ನತಃ
ಸಪ್ತವಿಂಶತ್ಯುನ್ನತಃ ಸ್ಯಾತ್ ಪ್ರವಕ್ಷೇ ವೇದೀಬಂಧನಂ   || ೧೧ ||

ನೀಡಾವರ್ತಿ (ಖುರಕ) = ೪ ಭಾಗ, ಪದ್ಮಪತ್ರಿಕಾ = ೨ ಭಾಗ, ಕರ್ಣಿಕಾ = ೧ ಭಾಗ, ಕುಮುದ = ೩ ಭಾಗ, ಛೇದ = ೧ ಭಾಗ, ಮೇಷ = ೧ ಭಾಗ, ಮಕರ = ೧ ಭಾಗ, ನಕ್ರಪಟ್ಟಿ = ೧ ಭಾಗ, ಛೇದ = ೧ ಭಾಗ, ಕಂಠ = ೧ ಭಾಗ, ಪಟ್ಟಿಕಾ = ೧ ಭಾಗ, ವೇದಿ = ೧ ಭಾಗ, ಛೇದ = ೧ ಭಾಗ, ಕಂಠ = ೨ ಭಾಗ, ಪಟ್ಟಿಕಾ = ೧ ಭಾಗ, ಪದ್ಮಪತ್ರ = ೧ ಭಾಗ, ಕಪೋತ = ೩ ಭಾಗ ಮತ್ತು ಛೇದ = ೧ ಭಾಗ = ಒಟ್ಟು ೨೭ ಭಾಗಗಳು ಶ್ರೀಬಂಧ ರಚನೆ ಎನಿಸಿದೆ.

ವೇದೀಬಂಧ

ನೀಡಾವರ್ತೀ ಚತುರ್ಭಾಗಾ ದ್ವಿಭಾಗಾ ಪದ್ಮಪತ್ರಿಕಾ
ಕರ್ಣಿಕಾ ಭಾಗಮೇಕಂ ತು ತ್ರಿಭಾಗಾ ಕುಮುದೋನ್ನತಿಃ || ೧೨ |

ಛೇದೋ ಮೇಷಶ್ಚ ಮಕರಶ್ಚ ನಕ್ರಪಟ್ಟೀ ಛೇದಕಃ
ಕಂಠಃ ಪದ್ಮಪತ್ರೀ ಭಾಗಂ ಭಾಗಂ ಸಮುನ್ನತಃ
ವೇದೀ ದ್ವಿಭಾಗಾ ಕರ್ತವ್ಯಾ ಭಾಗಾಸ್ಯಾತ್ ಛೇದಕೋನ್ನತಿಃ
ವೇದೀಬಂಧನ ಉಕ್ತಶ್ಚ ವಿಂಶತ್ಯಂಶೈಃ ಸಮುಚ್ಛ್ರಿತಃ     || ೧೪ ||

ನೀಡಾವರ್ತೀ = ೪ ಭಾಗ, ಪದ್ಮಪತ್ರ = ೨ ಭಾಗ, ಕರ್ಣಿಕಾ = ೧ ಭಾಗ, ಕುಮುದ = ೩ ಭಾಗ, ಛೇದ = ೧ ಭಾಗ, ಮೇಷ = ೧ ಭಾಗ, ಮಕರ = ೧ ಭಾಗ, ನಕ್ರಪಟ್ಟಿ = ೧ ಭಾಗ, ಛೇದ = ೧ ಭಾಗ, ಕಂಠ = ೧ ಭಾಗ, ಪದ್ಮಪತ್ರ = ೧ ಭಾಗ, ವೇದಿ = ೨, ಭಾಗ ಮತ್ತು ಛೇದ = ೧ ಭಾಗ = ಒಟ್ಟು ವೇದಿಬಂಧ ೨೦ ಭಾಗ.

ಪ್ರತಿಕ್ರಮ

ನೀಡಾವರ್ತೀ ಪಂಚಭಾಗಾ ದ್ವಿಭಾಗಾ ಪದ್ಮಪತ್ರಿಕಾ
ಏಕಭಾಗಾ ಕರ್ಣಿಕಾ ಕುಮುದಂ ತ್ರಿಪದೋನ್ನತಂ    || ೧೫ ||

ಛೇದೋಭಾಗಂ ದ್ವಯಂ ಕಂಠಃ ಪಟ್ಟಿಕಾ ಭಾಗಮೇವ
ಪದ್ಮಪತ್ರೀ ಭವೇದ್ ಭಾಗಂ ರಸನಾ ದ್ವಿಭಾಗಿಕಾ       || ೧೬ ||

ಛೇದೋಭಾಗಃ ಪ್ರಕರ್ತವ್ಯೋನಾಮ್ನಾ ಸ್ಯಾತ್ ಪ್ರತಿಕ್ರಮಃ
ಊನವಿಂಶತಿ ಭಾಗೈಶ್ಚ ಕರ್ತವ್ಯಾತು ಸಮುಚ್ಛ್ರಿತಿಃ      || ೧೭ ||

ನೀಡಾವರ್ತೀ = ೫ ಭಾಗ, ಪದ್ಮಪತ್ರ = ೨ ಭಾಗ, ಕರ್ಣಿಕಾ = ೧ ಭಾಗ, ಕುಮುದ = ೩, ಭಾಗ, ಛೇದ = ೧ ಭಾಗ, ಕಂಠ = ೨ ಭಾಗ, ಪಟ್ಟಿಕಾ = ೧ ಭಾಗ, ಪದ್ಮಪತ್ರ = ೧ ಭಾಗ, ರಸನಾ = ೨ ಭಾಗ ಮತ್ತು ಛೇದ = ೧ ಭಾಗ = ಒಟ್ಟು ೧೯ ಭಾಗಗಳು.

ನೀಡಾವರ್ತೀ ಎನ್ನುವ ಪದ “ಖುರಕ”ಕ್ಕೆ ಪರ್ಯಾಯ ಪದ. ದಾಕ್ಷಿಣಾತ್ಯ ಸಂಪ್ರದಾಯದಲ್ಲಿ ಎರಡು ಪ್ರಧಾರ ಸ್ತರಗಳ ಮಧ್ಯೆ ಅಂತರಿತ (Fillet) ಎಂಬ ಕಿರಿದಾದ ಪಟ್ಟಿ ಇದೆ. ಇದನ್ನು ಈ ಶೈಲಿಯನ್ನು ವಿವರಿಸುವ ಗ್ರಂಥಗಳಲ್ಲಿ ಛೇದ ಒಂದು ಗುರುತಿಸಲಾಗಿದೆ. “ರಸನಾ” ಎಂಬ ಪದ ಅತ್ಯಪರೂಪದ ಬಳಕೆ. ಇದು ಕಣ್‌ತಪ್ಪಿನಿಂದ ಬೇರೆ ಪದದ ಬದಲಾಗಿ ಬಂದಿರಲೂ ಸಾಧ್ಯ; ಅಥವಾ ಕಪೋತಕ್ಕೆ ಪರ್ಯಾಯವೇ? ನಿಶ್ಚಿತವಾಗಿ ತಿಳಿಯದು.

ಖುರಕಬಂಧ

ನೀಡಾವರ್ತೀ ಚತುರ್ಭಾಗಾ ದ್ವಿಭಾಗಾ ಪದ್ಮಪತ್ರಿಕಾ
ಕರ್ಣಿಕಾ ಚೈಕ ಭಾಗೇನ ದ್ವಿಭಾಗಾ ಕುಮುದೋನ್ನತಿಃ   || ೧೮ ||

ಮೇಷೋನಕ್ರಶ್ಚ ಮಕರೀ ಪಟ್ಟೀ ಛೇದಶ್ಚ ಭಾಗತಃ
ಕಂಠಃ ಪಟ್ಟೀ ಭಾಗಂ ಭಾಗಂ ಭಾಗಸ್ಯಾತ್ ಪದ್ಮಪತ್ರಿಕಾ         || ೧೯ ||

ಕಪೋತಸ್ತು ತ್ರಿಭಾಗೈಃ ಸ್ಯಾತ್ ಛೇದೋ ವೈ ಭಾಗ ಏವ
ಆವೃತಃ ಪಂಚಮಃ ಪೀಠೋ ನಾಮ್ನಾ ಖುರಕಬಂಧನಃ || ೨೦ ||

ನೀಡಾವರ್ತೀ = ೪ ಭಾಗ, ಪದ್ಮಪತ್ರಿಕಾ = ೨ ಭಾಗ, ಕರ್ಣಿಕಾ = ೧ ಭಾಗ, ಕುಮುದ = ೨ ಭಾಗ, ಮೇಷ = ೧ ಭಾಗ, ನಕ್ರ = ೧ ಭಾಗ, ಮಕರಪಟ್ಟೀ = ೧ ಭಾಗ, ಛೇದ = ೧ ಭಾಗ, ಕಂಠ=೧ ಭಾಗ, ಪಟ್ಟೀ= ೧ ಭಾಗ, ಪದ್ಮಪತ್ರಿಕಾ = ೧ ಭಾಗ, ಕಪೋತ = ೩ ಭಾಗ ಮತ್ತು ಛೇದ = ೧೨ ಭಾಗ = ಒಟ್ಟು ಖುರಕಬಂಧ ೨೦ ಭಾಗಗಳು.

ಪೀಠರಚನೆಯಲ್ಲಿ ಸಮರಾಂಗಣಸೂತ್ರಧಾರ ಗ್ರಂಥವು ವೇದಿಬಂಧ ರಚನೆಯ ಸ್ತರಗಳನ್ನು ಮೊದಲಿಗೆ ಗುರುತಿಸಿದೆ. ಉದಾಹರಣೆಗೆ ಪೀಠರಚನೆಯಲ್ಲಿ ಎರಡನೆಯ ಸ್ತರವು ಮೊದಲ ಸ್ತರಕ್ಕಿಂತ ಎರಡು ಅಂಗುಲ ಹಿಂದಕ್ಕೆ ಸರಿಸಿ ಜೋಡಿಸಲಾಗುತ್ತದೆ. ಈ ಅಂತರವನ್ನು ಪ್ರವೇಶ ಎಂದಿದ್ದಾರೆ (ಅಗ್ರವಾಲಾ : ೧೯೬೬ : ೪೬೭).

ಪದ್ಮಪತ್ಯ್ರಾಃ ಪ್ರವೇಶಃ ಖುರಕಾದಂಗುಲದ್ವಯಂ

ಪದ್ಮಪತ್ರವು ಖುರಕ ರಚನೆಗಿಂತ ಎರಡು ಅಂಗುಲ ಹಿಂದಕ್ಕೆ ಸರಿದಿದೆ. ಇದೇ ರೀತಿ ಇತರ ಸ್ತರಗಳೂ ಹಿಂದುಮುಂದಕ್ಕೆ ರಚನೆಗೊಳ್ಳುತ್ತವೆ. ಈ ವಿವರಗಳು ಕೆಲವೆಡೆ ಅಸ್ಪಷ್ಟ.

ಗ್ರಾಸಃ ಷಡಂಗುಲಸ್ತಸ್ಯಾಃ ಕುಮುದಂ ಸಪ್ತ ನಿರ್ಗಮಂ  || ||

ಪ್ರವೇಶಮಾನಂ ತಾವದ್‌ಸ್ಯಾತ್ ಯಾವತ್ ದ್ವಿಚ್ಛೇದ ಪಟ್ಟಿಕಾ
ಷಡಂಗುಲಂ ಪ್ರವೇಶಂ ಛೇದ ಪಟ್ಟಸ್ಯಕಾರಯೇತ್   || ೧೦ ||

ಸಮಸ್ತತ್ರಂ ವಿಧಾತವ್ಯಂ ಛೇದಸ್ಯ ಕರ್ಣಿಕಸ್ಯಚ
ನಿರ್ಗಮೇನ ಪುನಸ್ತಸ್ಮಾದ್ ದ್ವಯಂಗುಲ ಕಂಠಪಟ್ಟಿಕಾ
ಅಂಗುಲತ್ರಿತಯಂ ತಸ್ಯಾಃ ಪದ್ಮಪತ್ರೀ ವಿನಿರ್ಗಮಃ    || ೧೧ ||

ಪೀಠ ಭಾಗದಲ್ಲಿ ಉಬ್ಬು ರಚನೆಯ ಅಲಂಕಾರವುಳ್ಳ ಪಟ್ಟಿಕೆಗೆ ಗ್ರಾಸಪಟ್ಟೀ ಎಂದು ಹೆಸರು. ಗ್ರಾಸಪಟ್ಟೀ, ಛೇದ, ಪಟ್ಟ ಇವುಗಳ ಪ್ರವೇಶಮಾನ ಆರಂಗುಲ. ಕುಮುದದ ಪ್ರವೇಶ ಏಳಂಗುಲ. ಕಂಠ, ಪಟ್ಟಿಕೆಗಳು ಎರಡಂಗುಲ ಹಿಂಸರಿಯಬೇಕು. ಇನ್ನಿತರ ವಿವರಗಳು ಅರ್ಥವಾಗದು.

ಪೀಠರಚನೆಯ ನಂತರ ತಲಚ್ಛಂದದ ವಿವರಗಳನ್ನು ಕಾಣಬಹುದು. ಈ ವಿವರಗಳಲ್ಲಿ ಎರಡು ವಿಧ. ಒಂದು ಚತುರಶ್ರ ರಚನೆಗಳಾದ ತ್ರಯಂಗ, ಪಂಚಾಂಗ, ಸಪ್ತಾಂಗಗಳಲ್ಲಿ ಭದ್ರ, ಕರ್ಣ, ಪ್ರತಿರಥಾದಿ ಭಾಗಗಳನ್ನು ನಿಗದಿತ ಮಾನದೊಂದಿಗೆ ಗುರುತಿಸುವುದು. ಮತ್ತೊಂದು ಭೂಮಿ ರಚನೆಯಲ್ಲಿ ಕೂಟ ಶಾಲಾ ಪಂಜರಗಳನ್ನು ನಿರ್ಧಾರಿತ ಮಾನದೊಂದಿಗೆ ವಿವರಿಸುವುದು.

ಸಮಾರಾಂಗಣ ಸೂತ್ರಧಾರ ಗ್ರಂಥದ ಪೀಠರಚನೆಯ ಅಧ್ಯಾಯದಲ್ಲಿ ಭೂಮಿ ಅಥವಾ ಶಿಖರ ರಚನೆಯ ತಲಚ್ಛಂದಕ್ಕೆ ಸಂಬಂಧಿಸಿದ ವಿವರಗಳಿವೆ. ಇಲ್ಲಿ ಹೆಸರಿಸುವ ಪದ್ಮ ಹಾಗೂ ಮಹಾಪದ್ಮ ಪ್ರಭೇದಗಳು ನಕ್ಷತ್ರಾಕಾರ ರಚನೆಗಳು. ಇವುಗಳ ವಿವರ ಅರ್ಥವಾಗದು. ಚತುರಶ್ರಾಕಾರದ ಪ್ರಭೇದಗಳೆನಿಸಿದ ಸರ್ವತೋಭದ್ರ, ಸ್ವಸ್ತಿಕ, ವರ್ಧಮಾನ ರಚನೆಗಳ ವಿವರಗಳು ಗ್ರಂಥಪಾತದಿಂದ ಕೂಡಿದ್ದು ಸರಿಪಡಿಸಿಕೊಳ್ಳಲು ಸಾಧ್ಯವಾಗಿದೆ (ಅಗ್ರವಾಲಾ. ೧೯೬೬ .೪೭೦).

ಇದಾನೀಂ ವರ್ಧಮಾನಸ್ಯ ತಲಚ್ಛಂದೋಭಿದೀಯತೇ  || ೪೪ ||

ಚತುರಶ್ರಂ ಭಜೇತ್ ಪಂಚದಶಧಾ ಕ್ಷೇತ್ರಮಾದಿತಃ
ಕೂಟಂ ದ್ವಿಭಾಗಿಕಂ ಭಾಗಮೇಕಂ ಸಲಿಲಾಂತರಂ     || ೪೫ ||

ಪಂಜರಂ ಸಾರ್ಧಭಾಗಂ* ಭಾಗಿಕಂ ಸಲಿಲಾಂತರಂ
ಚತುರ್ಭಾಗಾ ಭವೇತ್ ಶಾಲಾ   || ೪೬ ||

* ಚಿಹ್ನೆ ಇರುವೆಡೆಯಲ್ಲಿ ಗ್ರಂಥಪಾತವಿದ್ದು ಉಚಿತ ಪಾಠವನ್ನು ಒದಗಿಸಲಾಗಿದೆ. ವರ್ಧಮಾನ ಪ್ರಭೇದದ ತಲಚ್ಛಂದದಲ್ಲಿ, ಕ್ಷೇತ್ರದ ಒಂದು ಪಾರ್ಶ್ವದ ಅಳತೆಯನ್ನು ಗುರುತಿಸಿದ್ದು, ಇದನ್ನು ಹದಿನೈದು ಭಾಗಗಳಾಗಿ ಭಾಗಿಸಿ, ಕರ್ಣ = ೨ ಭಾಗ, ಸಲಿಲಾಂತರ = ೧ ಭಾಗ, ಪಂಜರ = ೧ ೧/೨ ಭಾಗ, ಸಲಿಲಾಂತರ = ೧ ಭಾಗ ಹಾಗೂ ಶಾಲಾ = ೪ ಭಾಗ ಎನಿಸಿದೆ. ಪುನಃ ಸಲಿಲಾಂತರ, ಪಂಜರ, ಸಲಿಲಾಂತರ ಮತ್ತು ಕರ್ಣಕೂಟಗಳು ಸೇರಿ ವರ್ಧಮಾನ ಪ್ರಭೇದವೆನಿಸಿದೆ.

ಚತುರಶ್ರಸಮಂ ಕ್ಷೇತ್ರಂ ಅಷ್ಟಾವಿಂಶತಿಧಾ ಭಜೇತ್    || ೫೦ ||

ಕುರ್ಯಾತ್ ಕೂಟಂ ಚತುರ್ಭಾಗಂ ದ್ವಿಭಾಗಂ ಸಲಿಲಾಂತರಂ
ತ್ರಿಭಾಗಂ ಪಂಜರಂ ತದ್ವತ್ ದ್ವಿಭಾಗಂ ಸಲಿಲಾಂತರಂ
ಶಾಲಾ ಷಡ್ಭಾಗಕೀ ಕುರ್ಯಾತ್  || ೫೧ ||

ಸ್ವಸ್ತಿಕ ತಲಚ್ಛಂದದಲ್ಲಿ ಕ್ಷೇತ್ರದ ಒಂದು ಪಾರ್ಶ್ವ ಭಾಗವನ್ನು ಇಪ್ಪತ್ತೆಂಟು ಭಾಗಗಳಾಗಿ ವಿಭಾಗಿಸಿ, ಕರ್ಣಕೂಟ = ೪ ಭಾಗ, ಸಲಿಲಾಂತರ = ೨ ಭಾಗ, ಪಂಜರ = ೩ ಭಾಗ, ಸಲಿಲಾಂತರ = ೨ ಭಾಗ, ಶಾಲಾ = ೬ ಭಾಗ ಎನಿಸಿದೆ. ಪುನಃ ಸಲಿಲಾಂತರ, ಪಂಜರ, ಸಲಿಲಾಂತರ ಕರ್ಣಕೂಟಗಳು ಪುನರಾವರ್ತನೆಗೊಳ್ಳುತ್ತವೆ. ಸರ್ವತೋಭದ್ರ ರಚನೆಯಲ್ಲಿ ಪಂಜರಕ್ಕೆ ಬದಲಾಗಿ ಕೂಟರಚನೆ ಇದೆ.

ಇದಾನೀಂ ಸರ್ವತೋಭದ್ರ ತಲಚ್ಛಂದೋ ಅಭಿದೀಯತೇ
ಚತುರಶ್ರೀಕೃತೇ ಕ್ಷೇತ್ರೇ ಗರ್ಭಂ ಕುರ್ಯಾತ್ ದ್ವಿಭಾಗಿಕಂ        || ೫೬ ||

ಕುರ್ಯಾತ್ ತ್ರಿಭಾಗಿಕಂ ಕೂಟಂ ಜಲಮಾರ್ಗಂ ದ್ವಿಭಾಗಿಕಂ
ತ್ರಿಭಾಗಿಕಂ ತತಃಕೂಟಂ ತೋಯಮಾರ್ಗಂ ದ್ವಿಭಾಗಿಕಂ
ಶಾಲಾಷ್ಟಭಾಗಕೀ ಕುರ್ಯಾತ್ ಜಲವತ್ಮಾ ದ್ವಿಭಾಗಿಕಂ          || ೫೭ ||

ಸರ್ವತೋಭದ್ರ ಪ್ರಭೇದದಲ್ಲಿ ಕರ್ಣಕೂಟ = ೩ ಭಾಗ, ಜಲಮಾರ್ಗ = ೨ ಭಾಗ, ಕೂಟ = ೩ ಭಾಗ, ತೋಯಮಾರ್ಗ = ೨ ಭಾಗ, ಶಾಲಾ = ೮ ಭಾಗ; ಪುನಃ ತೋಯಮಾರ್ಗ, ಕೂಟ, ಜಲಮಾರ್ಗ, ಕರ್ಣಕೂಟಗಳು ಪುನರಾವರ್ತನೆಗೊಳ್ಳುತ್ತವೆ.

ವರ್ಧಮಾನ, ಸ್ವಸ್ತಿಕ, ಸರ್ವತೋಭದ್ರ ಪ್ರಭೇದಗಳಿಗೆ ನಿರಂಧಾರ ರಚನೆಯೇ ಸೂಕ್ತ ಎಂದು ಗ್ರಂಥಕಾರನ ಅಭಿಮತ. ಪ್ರದಕ್ಷಿಣಾ ಪಥವುಳ್ಳದ್ದು ಸಾಂಧಾರ. ಹೊಯ್ಸಳರ ಕಾಲದಲ್ಲಿ ಜಗತಿಯನ್ನೇ ಪ್ರದಕ್ಷಿಣೆಗಾಗಿ ಬಳಸಿದರು. ಆದರ ಜಗತಿ ದೇವಾಲಯದ ಔನ್ನತ್ಯವನ್ನು ಹೆಚ್ಚಿಸಲು ರಚನೆಗೊಂಡದ್ದು; ಪ್ರದಕ್ಷಿಣಾಪಥಕ್ಕೆ ಪರ್ಯಾಯವಲ್ಲ. ಪ್ರದಕ್ಷಿಣಾಪಥ ಗರ್ಭಗೃಹಕ್ಕೆ ಸೀಮಿತವಾದದ್ದೇ ಹೊರತು ಇಡೀ ದೇವಾಲಯಕ್ಕಲ್ಲ. ನಿರಂಧಾರ ರಚನೆಯಲ್ಲಿ ಗರ್ಭಗೃಹದ ಪಾರ್ಶ್ವವನ್ನು ನಾಲ್ಕು ಭಾಗ ಮಾಡಿ ಮಧ್ಯದ ಎರಡು ಭಾಗವು ಗರ್ಭಗೃಹವನ್ನಾವರಿಸಿದರೆ ಎರಡೂ ಕಡೆ ಒಂದೊಂದು ಭಾಗವು ಭಿತ್ತಿಯಿಂದ ಆವರಿಸಲ್ಪಡುತ್ತದೆ. ಸಾಂಧಾರ ರಚನೆಗಳು ಲಭ್ಯವಿಲ್ಲದಿದ್ದರೂ ಅಧ್ಯಾಯದ ಅಂತ್ಯದಲ್ಲಿ ವಿವರಗಳಿವೆ (ಅಗ್ರವಾಲಾ : ೧೯೬೬ : ೪೭೧).

ಚತುರಶ್ರೀಕೃತಂ ಕ್ಷೇತ್ರಂ ಭಜೇತ್ ದ್ವಾದಶಭಿಃ ಪದೈಃ
ಚತುರ್ಭಾಗೋ ಭವೇತ್ ಗರ್ಭೋ ಭಾಗಿಕ್ಯೋ ಭಿತ್ತಯಃ ಸ್ಮೃತಾಃ         || ೬೨ ||
ಭಾಗಿಕಾಂಧರಿಕಾ
ತದ್ವತ್ ದ್ವಿಭಾಗಾ ಬಾಹ್ಯಭಿತ್ತಯಃ

ಸಾಂಧಾರ ರಚನೆಯಲ್ಲಿ ಗರ್ಭಗೃಹದ ವಿಸ್ತಾರವನ್ನು ಹನ್ನೆರಡು ಭಾಗ ಮಾಡಿ, ಗರ್ಭಗೃಹವು ಮಧ್ಯದ ನಾಲ್ಕು ಭಾಗ, ಒಳಗಿನ ಭಿತ್ತಿ ಒಂದು ಭಾಗ, ಪ್ರದಕ್ಷಿಣಾಪಠ ಅಥವಾ ಅಂಧಾರಿಕಾ ಒಂದು ಭಾಗ, ಬಾಹ್ಯಭಿತ್ತಿ ಅಥವಾ ಹೊರಭಿತ್ತಿ ಎರಡು ಭಾಗ ರಚಿಸಬೇಕು. ಇವಿಷ್ಟೂ ಪೀಠರಚನೆಯ ಅಧ್ಯಾಯದಲ್ಲಿ ಎರಡೂ ಗ್ರಂಥಗಳಲ್ಲಿ ಗುರುತಿಸಲು ಸಾಧ್ಯವಾದ ಖಚಿತವೆನಿಸುವ ಲಕ್ಷಣಗಳು.

ಎರಡೂ ಗ್ರಂಥಗಳ ಎರಡನೆಯ ಅಧ್ಯಾಯವು ದ್ರಾವಿಡ ಪ್ರಾಸಾದದ ಲಕ್ಷಣಗಳಿಗೆ ಸಂಬಂಧಿಸಿದೆ. ಪ್ರಾಸಾದ ಲಕ್ಷಣಗಳೆಂದಲ್ಲಿ ಪೀಠಾನಂತರ ಭೂಮಿ ಅಥವಾ ತಲರಚನೆಗೆ ಸಂಬಂಧಿಸಿದ್ದು. ಈ ವಿವರಗಳೊಂದಿಗೆ ದೇವಾಲಯಗಳ ಎತ್ತರ, ಅಗಲಗಳನ್ನೂ ಸೂಚಿಸಲಾಗಿದೆ. ಚತುರಶ್ರ ರಚನೆಯಲ್ಲಿ ಭದ್ರ, ಕರ್ಣ, ಪ್ರತಿರಥಗಳ ವಿವರಣೆ, ಅಳತೆ ಹಾಗೂ ಪ್ರಭೇದಗಳ ವಿವರಗಳಿವೆ. ಇಲ್ಲಿಯೂ ಅಪರಾಜಿತಪೃಚ್ಛಾ ಗ್ರಂಥದ ವಿವರವನ್ನು ಮೂಲ ಮಾತೃಕೆಯಾಗಿ ಸ್ವೀಕರಿಸಿ ನಂತರ ಸಮರಾಂಗಣ ಸೂತ್ರಧಾರ ಗ್ರಂಥದ ವಿವರಗಳನ್ನು ಚರ್ಚಿಸಲಾಗಿದೆ (ಮಂಕಡ್: ೧೯೫೦ : ೪೪೭).

ಇದಾನೀಂ ದ್ರಾವಿಡಾನ್ ವಕ್ಷೇ ಪ್ರಾಸಾದಾನ್ ಸರ್ವಕಾಮದಾನ್
ಪೀಠಪಂಚಕಮಿತ್ಯುಕ್ತಂ ತಲಚ್ಛಂದಸ್ತು ಪಂಚಧಾ        || ||

ಐಂದ್ರೋದ್ಭವೋ ರಾಜಹಂಸೋ ನಂದನಃ ಸಿಂಹಪಂಜರಃ
ತ್ರಯಂಗಾಶ್ಚತ್ವಾರಾ ಏವೋಕ್ತಾ ದ್ರಾವಿಡಾಃ ಏಕಭೂಮಿಕಾಃ      || ||

ಗರುಡೋ ವರ್ಧಮಾನಶ್ಚ ಶ್ರೀತರುಃ ಪ್ರಮದಾಪ್ರಿಯಃ
ನಂದಿಘೋಷಃ ಸಮಾಖ್ಯಾತಾ ಪಂಚಾಂಗಶ್ಚ ತ್ರಿಭೂಮಿಕಾಃ      || ||

ಸ್ವಸ್ತಿಕಃ ಶಂಖುಕರ್ಣಾಖ್ಯೋ ಗೋವಿಂದೋ ನಂದಿವರ್ಧನಃ
ಪೃಥ್ವೀಜಯಃ ಪತಾಕಶ್ಚ ಸಪ್ತಾಂಗಾಃ ಪಂಚಭೂಮಿಕಃ   || ||

ಸರ್ವಾಂಗಃ ಸರ್ವತೋಭದ್ರಃ ಸರ್ವಸುಂದರ ಸಂಭ್ರಮಾ
ಜನಾನಂದಃ ಕ್ಷಿತಿಧರೋ ನವಾಂಗಾಃ ಸಪ್ತಭೂಮಿಕಃ    || ||

ಪದ್ಮಸೂತ್ರೋ ಮಹಾಪದ್ಮಃ ಕೈಲಾಸೋ ಮೇರುನಾಯಕಃ
ಚತ್ವಾರೋ ವೃತ್ತಕಾ ಉಕ್ತಾ ದ್ರಾವಿಡಾಃ ಪಂಚವಿಂಶತಿಃ || ||

ದ್ರಾವಿಡ ತಲಚ್ಛಂದ

60_382_DV-KUH

ಚತುರಶ್ರಾಕಾರ ರಚನೆಗಳಲ್ಲಿ ಈ ಪ್ರಭೇದಗಳಿಗೆ ಸಂಬಂಧಿಸಿದ ವಿವರಳಿವೆ. ಈ ವಿವರಗಳೊಂದಿಗೆ ಸಲಿಲಾಂತರದ (ಜಲಹರಿ) ಸ್ಥಾನವನ್ನೂ ಗುರುತಿಸಲಾಗಿದೆ. ಶಿಖರ ರಚನೆಯಲ್ಲಿ ಸಲಿಲಾಂತರ – ವಾರಿಮಾರ್ಗ- ತೋಯ ಮಾರ್ಗ – ಜಲವತ್ಮಾ ಇತ್ಯಾದಿ ಪದಗಳು ಸಮನಾಂತರವಾಗಿ ಬಳಕೆಯಾಗಿದೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಇದರ ಔಚಿತ್ಯ ಅರ್ಥವಾಗದು. ಈ ಪ್ರಭೇದಗಳಲ್ಲಿ ಸಲಿಲಾಂತರವು ಪ್ರಭೇದ ಲಕ್ಷಣವನ್ನು ನಿರ್ದೇಶಿಸುತ್ತದೆ. ಇದು ಪ್ರಭೇದಗಳನ್ನು ಅರ್ಥೈಸುವಲ್ಲಿ ಕಗ್ಗಂಟಾಗಿದೆ. ಈ ಕಗ್ಗಂಟನ್ನು ಜಟಿಲಗೊಳಿಸದೆ ತಿಳಿಯಾದ ವಿವರಗಳನ್ನು ಮಾತ್ರ ವಿವರಿಸಲಾಗಿದೆ.

ಭಕ್ತಂ ವೇದಾಶ್ರಕಂ ಚಾರ್ಧೇ ಭದ್ರಂ ಪಾದಂಚ ನಿರ್ಗತಂ
ಐಂದ್ರೋದ್ಭವಃ ಪದಂ ಕರ್ಣ ಉದಕಾಂತರ ಭೂಷಿತಃ  || ||

ಭದ್ರಾರ್ಧೇ ಮುಖಭದ್ರಂ ರಾಜಹಂಸಶ್ಚ ನಾಮತಃ
ಭದ್ರೋದಯೇ ನಂದನಾಖ್ಯಃ ಕರ್ಣಭದ್ರೇ ಪಂಜರಃ  || ||

ತ್ರಯಂಗ: ತ್ರಯಂಗ ಎಂದಲ್ಲಿ ಚತುರಶ್ರ ರಚನೆಯಲ್ಲಿ ಪ್ರತಿಮಗ್ಗುಲಿನಲ್ಲಿ ಕಾಣುವ ಮೂರು ಅಂಗಗಳು ಎಂದರ್ಥ. ಇದು ಹಿಂಬೆಣೆ, ಮುಂಬೆಣೆಗಳ ವಿವರಣೆ. ಕರ್ಣ-ಭದ್ರ-ಕರ್ಣ ಇವು ಮೂರು ಅಂಗಗಳು. ಭದ್ರಭಾಗವು ಕೊಂಚ ಮುಂದೂಡಿದ್ದರಿಂದ ಉಂಟಾದದ್ದು. ಆದ್ದರಿಂದ ಮುಂಬೆಣೆ. ನೇರವಾದ ಒಂದು ಪಾರ್ಶ್ವ ಅಥವಾ ಮಗ್ಗುಲನ್ನು ನಾಲ್ಕು ಭಾಗ ಮಾಡಿ ಮಧ್ಯದ ಎರಡು ಭಾಗವನ್ನು ಕೊಂಚ ಮುಂದೂಡಿ ಭದ್ರ ಎಂದು ಗುರುತಿಸಬಹುದು. ಇದರ ಇಕ್ಕೆಲಗಳಲ್ಲಿ ಉಳಿದದ್ದು ಕರ್ಣ ಅಥವಾ ನಿರ್ಗತ. ಅದೇ ಹಿಂಬೆಣೆ. ಇದು ಐಂದ್ರೋದ್ಭವ ಎನ್ನುವ ಪ್ರಭೇದ. ಭದ್ರದ ಭಾಗವನ್ನು ಪುನಃ ನಾಲ್ಕು ಭಾಗ ಮಾಡಿ ಮಧ್ಯದ ಎರಡು ಭಾಗವನ್ನು ಮತ್ತಷ್ಟು ಮುಂದೂಡಿದಲ್ಲಿ, ಅದು ಮುಖಭದ್ರ; ಉಳಿದದ್ದು ಭದ್ರಕರ್ಣ. ಇದು ರಾಜಹಂಸ ಎನ್ನುವ ಪ್ರಭೇದ. ಇವೆರಡರ ಕರ್ಣಭಾಗದಲ್ಲಿ ಉದಕಾಂತರವಿದ್ದರೆ ಸಿಂಹಪಂಜರ. ಉದಕಾಂತರದ ಬಗ್ಗೆ ಇನ್ನಷ್ಟು ಮಾಹಿತಿ ಬೇಕು. ಉದಕಾಂತರ ಎನ್ನುವುದು ನೀರು ಹರಿದು ಹೋಗಲು ರಚಿಸಿದ ಜಲಹರಿಯೇ? ಇದು ಪ್ರಭೇಗಳನ್ನು ನಿರ್ಧರಿಸುವಷ್ಟು ಪ್ರಾಮುಖ್ಯತೆಯನ್ನು ಹೊಂದಿದೆಯೇ? ಅರ್ಥವಾಗದು. ಅಪರಾಜಿತಪೃಚ್ಛಾ ಗ್ರಂಥವು ಏಕಭೂಮಿ ರಚನೆಗೆ ತ್ರಯಂಗವನ್ನು ಸೀಮಿತಗೊಳಿಸಿದೆ.

ಪೀಠೋರ್ಧ್ವೇ ಕರ್ಣಮಾನೇನ ವಿಭಕ್ತಂ ಪಂಚಭಾಗಿಕಂ
ಸಾರ್ಧಭಾಗೇ ಭವೇಜ್ಜಂಘಾ ಸಪಾದಃ ಕೂಟಕೋದಯಃ          || ||

ವೇದೀ ಪಾದೋನಭಾಗಾ ಸ್ಯಾತ್ ಘಂಟಾ ವೈ ಸಾರ್ಧಭಾಗಿಕಾ
ಊರ್ಧ್ವೇ ಕಲಶಮಾಖ್ಯಾತಂ ಕರ್ತವ್ಯಂ ಸರ್ವಕಾಮದಂ         || ೧೦ ||

ಪೀಠಾ ನಂತರ ಊರ್ಧ್ವಮಾನದಲ್ಲಿ ಜಂಘಾ = ೧ ೧/೨ ಜಂಘಾ = ೧ ೧/೨ ಭಾಗ, ಕೂಟ = ೧ ೧/೪, ಭಾಗ, ವೇದಿ = ೩/೪ ಭಾಗ, ಘಂಟಾ = ೧ ೧ ೧/೨ ಭಾಗ; ಕಲಶದ ಎತ್ತರ ಸೂಚಿಸಿಲ್ಲ. ಸಮರಾಂಗಣ ಸೂತ್ರಧಾರವು ಪೀಠದ ಎತ್ತರವನ್ನು ೨ ಹಸ್ತ ಎಂದು ಸೂಚಿಸಿದೆ. ಕಲಶವನ್ನುಳಿದು ಏಕಭೂಮಿಯ ರಚನೆಯ ಎತ್ತರ ೨ ಹಸ್ತ. ಅಗಲ ೫ ಹಸ್ತ. ಈ ಗ್ರಂಥವು ಉದ್ದ ಅಗಲಗಳನ್ನು ಹಸ್ತಮಾನದಲ್ಲಿ ಗುರುತಿಸಿದೆ (ಅಗ್ರವಾಲಾ : ೧೯೬೬ : ೪೭೨).

ಊರ್ಧ್ವಮಾನಮಥಬ್ರೂಮೋ ಘಂಟಾಂತ ಪ್ರತಿಪಾದಿತಃ
ಪ್ರಮಾಣೇನ ಕರ್ಣಮಾನೇನ ಸರ್ವೇಷಾಂ ಏವ ಧಾರಯೇತ್    || ||

ತತ್ರೈಕ ಭೂಮಿಕಃ ಕಾರ್ಯೋ ಹಸ್ತಪಂಚ ವಿಸ್ತೃತಃ
ಅಂಗುಲ ದ್ವಿತೀಯೋಪೇತೋ ಸಪ್ತಹಸ್ತ ಸಮುಚ್ಛ್ರಿತಃ    || ||
ಪಾದೋ
ದ್ವಿಹಸ್ತಾ ಉತ್ಸೇಧಾತ್ ಸರ್ವಾಲಂಕಾರಭೂಷಿತಃ

ಮೇಲಿನ ಏಕತಲ ರಚನೆಯಲ್ಲಿ ಜಂಘಾ ಭಾಗದ ವಿವರಣೆಯ ನಂತರ ಕೂಟ ಹಾಗೂ ವೇದಿಭಾಗ ಇವೆರಡರ ವಿವರವನ್ನು ಒಟ್ಟಿಗೆ ನೀಡಲಾಗಿದೆ. ಕೂಟದ ವಿವರವು ಮಾಲಾಸ್ತರದಿಂದ ಆರಂಭಿಸಿ ವೇದೀಭಾಗದ ಪದ್ಮಪತ್ರದವರೆಗೆ ವಿವರಗಳನ್ನು ನೀಡಲಾಗಿದೆ. ಪಾಠ ಅಶುದ್ಧವಿದ್ದರೂ ಅರ್ಥೈಸಲು ಕೊರತೆ ಎನಿಸಿಲ್ಲ.

ಸಾರ್ಧ ಹಸ್ತ ಉತ್ಸೇಧಾ || ||

ಮಾಲಾತು ದ್ವಿಸ್ತಾರಾ ಪ್ರೋಕ್ತಾ ಸ್ತರೋ ಲಶುನಕಂ ಭವೇತ್
ಭರಣಂ ಸ್ತರಮೇಕಂ ಸ್ಯಾದ್ ಭರಣಾರ್ಧಂ ಸ್ತರದ್ವಯಂ || ||

ಕಲಶಾದುತ್ತರಂ ಜ್ಞೇಯಂ ವೀರಗಂಡ ಸಮನ್ವಿತಂ
ದ್ವಿಸ್ತರಂ ಫಲಕಂ ಕುರ್ಯಾತ್ ಪದ್ಮಪತ್ರ ಸಮನ್ವಿತಂ   || ||

ವೀರಗಂಡಂ ಪುನಃ ಕುರ್ಯಾತ್ ಸ್ತರಮೇಕಂ ತದೂರ್ಧ್ವತಃ
ದ್ವಿಸ್ತರಂ ಹೀರಕಂ ಪ್ರೋಕ್ತಂ ಪಟ್ಟಶ್ಚೈವ ತಥಾವಿಧಃ      || ||

ಪಟ್ಟಿಕಾಸ್ತರಮೇಕಂ ಸ್ಯಾತ್ ವಸಂತಂ ದ್ವಿಸ್ತರಂ ವಿದುಃ
ವಸಂತಪಟ್ಟಿಕಾಚೋರ್ಧ್ವಂ ಸ್ತರಮೇಕಂ ವಿಧೀಯತೇ   || ||

ಕಪೋತಂ ನಾಸಿಕಾಯುಕ್ತಂ ವಿಧಧೀತ ಸ್ತರತ್ರಯಂ
ಅನಂತರಂ *ಪ್ರಕುರ್ವೀತ* ಮೇಡಮೇಕಂ ಸ್ತರಂ ತತಃ || ||

ಸ್ತರ ಪ್ರಮಾಣಂ ಮಕರಂ ತದ್ವತ್ ಮಕರ ಪಟ್ಟಿಕಾಂ
ಪುನಃ ಛೇದಂ ಸ್ತರಂ ಕುರ್ಯಾತ್ ವೇದಿಬಂಧಸ್ತತಃ ಸ್ತರಂ        || ||

ಛೇದಃ ಸ್ತರಪ್ರಮಾಣಶ್ಚ ಕಂಠಶ್ಚ ದ್ವಿಸ್ತರಂ ತತಃ
ಪಟ್ಟಿಕಾಸ್ತರಮೇಕಂ ತು ತದ್ವಚ್ಚ ಅಂಬುಜಪಟ್ಟಿಕಾ       || ೧೦ ||
ಮಾಲಾದಿ
ಪದ್ಮಪತ್ರಾಂತಂ ದ್ವಿಹಸ್ತೋತ್ಸೇಧಮೀರಿತಂ

ಮಾಲಾ = ೨ ಭಾಗ, ಲಶುನ = ೧ ಭಾಗ, ಭರಣ =

[೧/೨ + ೧/೨] ೧ ಭಾಗ (?) ಕಲಶ = ೧ ಭಾಗ (?), ವೀರಗಂಡ = ೧ ಭಾಗ, ಫಲಕ [+ ಪದ್ಮಪತ್ರ] = ೨ ಭಾಗ, ವೀರಗಂಡ = ೧ ಭಾಗ, ಹೀರಕ = ೨ ಭಾಗ, ಪಟ್ಟ = ೨ ಭಾಗ, ಪಟ್ಟಿಕಾ = ೧ ಭಾಗ, ವಸಂತ = ೨ ಭಾಗ, ವಸಂತ ಪಟ್ಟಿಕಾ = ೧ ಭಾಗ, ಕಪೋತ = ೩ ಭಾಗ, ಮೇಡ (ಷ) = ೧ ಭಾಗ, ಮಕರ = ೧ ಭಾಗ, ಮಕರ ಪಟ್ಟಿಕಾ = ೧ ಭಾಗ, ಛೇದ = ೧ ಭಾಗ, ವೇದೀಬಂಧ = ೧ ಭಾಗ, ಛೇದ = ೧ ಭಾಗ, ಕಂಠ = ೨ ಭಾಗ, ಪಟ್ಟಿಕಾ = ೧ ಭಾಗ, ಅಂಬುಜಪಟ್ಟಿಕಾ = ೧ ಭಾಗ.

ಕೆಲವು ಕಡೆ ಪಾಠದಲ್ಲಿ ಅಸ್ಪಷ್ಟತೆ ಇದೆ, ಸಮಯೋಚಿತ ಎನಿಸಿದ್ದನ್ನು ನೀಡಲಾಗಿದೆ. ಆದರೂ ಸ್ತರಗಳ ಉಲ್ಲೇಖದಲ್ಲಿ ದ್ವಂದ್ವಿವಿದೆ. ಉದಾಹರಣೆಗೆ ಭರಣ ಎನ್ನುವ ಮತ್ತೊಂದು ಸ್ತರ ಇದೆಯೇ? ಆದ್ದರಿಂದ ಕೆಲವು ತೊಡಕುಗಳುಂಟು. ವೇದಿಕಾ ರಚನೆಯ ನಂತರ ಘಂಟಾ ರಚನೆ ಇದ್ದು ಕೂಟ ಎಂದೇ ಸಂಭೋದಿಸಿದೆ.

ಸಾರ್ಧಹಸ್ತ ಸಮುತ್ಸೇಧಃ ಕೂಟಸ್ಯ ಪರಿಕೀರ್ತಿತಃ      || ೧೧ ||

ನಾಸಿಕಾ ಪದ್ಮಯುಕ್ತಂ ತದೂರ್ಧ್ವೇ ಕಲಶೋ ಭವೇತ್

ಏಕ ಭೂಮಿರಿದಂ ಮಾನಂ ಪ್ರಾಸಾದಸ್ಯ ಪ್ರಕೀರ್ತಿತಂ  || ೧೨ ||

ಪಂಚಾಂಗ : ಚತುರಶ್ರ ರಚನೆಯ ವಿಸ್ತಾರವನ್ನು ಆರು ಭಾಗ ಮಾಡಿ, ಮಧ್ಯದಲ್ಲಿ ಭದ್ರ = ೨ ಭಾಗ, ಪ್ರತಿರಥ ಮತ್ತು ನಿರ್ಗಮ ಅಥವಾ ಕರ್ಣವು ಎರಡೂ ಕಡೆಗಳಲ್ಲಿ ಒಂದೊಂದು ಭಾಗವಾಗಿ ವಿಭಾಗಿಸಿದಲ್ಲಿ ಪಂಚಾಂಗ ಎಂದು ಹೆಸರಿಸಬಹುದು. ನಿರ್ಗಮ ಅಥವಾ ಕರ್ಣದ ಅರ್ಧಭಾಗದಲ್ಲಿ ವಾರೀಮಾರ್ಗ ಜೋಡಣೆ ಇದೆ. ನಿರ್ಗಮ-ಪ್ರತಿರಥ-ಭದ್ರ-ಪ್ರತಿರಥ-ನಿರ್ಗಮ ಇವು ಪಂಚಾಂಗದ ಸ್ತರಗಳು.

ಷಡ್‌ಭಾಗಶ್ಚೈವ ವಿಸ್ತಾರೋ ಭಾಗಃ ಪ್ರತಿರಥೋ ಭವೇತ್         || ೧೧ ||
ನಿರ್ಗಮಾsರ್ಧೇ ವಾರ್ಮಾರ್ಗಯುಕ್ ಶೇಷಂ ಪೂರ್ವಕಲ್ಪಿತಂ

ಗರುಡಾಖ್ಯೋ ಮುಖಭದ್ರೇ ವರ್ಧಮಾನಃ ಉಚ್ಯತೇ       || ೧೨ ||
ಭದ್ರೋದಯೇ ಶ್ರೀಧರೋ ಭದ್ರಕರ್ಣೇ ಪ್ರಮದಾಪ್ರಿಯಃ

ಯಥಾ ಪ್ರತಿರಥೇ ಭದ್ರಂ ನಂದಿಘೋಷಃ ಉಚ್ಯತೇ  || ೧೩ ||

ಕರ್ಣ ಭಾಗದಲ್ಲಿ ವಾರಿಮಾರ್ಗವಿದ್ದಲ್ಲಿ ಗರುಡ ಎಂಬ ಪ್ರಭೇದ, ಮುಖಭದ್ರ ಅಥವಾ ಭದ್ರಮುಖದಲ್ಲಿದ್ದರೆ ವರ್ಧಮಾನ, ಭದ್ರದ ಉದಯ ಭಾಗದಲ್ಲಿದ್ದರೆ ಶ್ರೀಧರ, ಭದ್ರದ ಮೂಲೆಯಲ್ಲಿದ್ದರೆ ಪ್ರಮದಾ ಪ್ರಿಯ. ನಂದಿಘೋಷ ಪ್ರಭೇದದ ವಿವರಣೆ ಅರ್ಥವಾಗದು. ಈ ವಿವರಗಳನ್ನು ಲಭ್ಯವಿರುವ ದೇವಾಲಯಗಳಲ್ಲಿ ಗುರುತಿಸಲು ಸಾಧ್ಯವೇ? ಬಹುಶಃ ಹೆಚ್ಚಿನ ಉಪಯೋಗವಾಗದು. ಮೇಲ್ಕಂಡ ವಿವರಗಳು ಅಪರಾಜಿತಪೃಚ್ಛಾದಲ್ಲಿದೆ. ನಂತರ ತ್ರಿಭೂಮಿ ರಚನೆಯ ವಿವರವಿದೆ.

ಸಪಾದ ದ್ವಯಂಶಕಾ ಜಂಘಾ ಕೂಟಂ ಭಾಗ ದ್ವಯೋನ್ನತಂ
ಪಾದೋನ ದ್ವಯಂಶಕಾ ಜಂಘಾ ಸಾರ್ಧಕೂಟ ಸಮುಚ್ಛ್ರಯಃ    || ೧೪ ||

ಸಪಾದ ಜಂಘಾಂಶಕಾ ಕೂಟೋ ವೇದೀ ಸಾರ್ಧ ಭಾಗಕಾ
ಪಾದೋನ ತ್ರಯಂಶಕಾ ಘಂಟಾ ಕರ್ತವ್ಯಶ್ಚ ತ್ರಿಭೂಚ್ಛ್ರಯಾಃ     || ೧೫ ||

ಪೀಠಾ   ಜಂಘಾ  ಕೂಟ    ಜಂಘಾ  ಕೂಟ     ಜಂಘಾ      ಕೂಟ       ವೇದಿ    ಘಂಟಾ
(೨)+    ೨ ೧/೪ +        + ೨ +  ೧ ೩/೪ + ೧ ೧/೨+  ೧ ೧/೪+    ೧ +  ೧/೨+  ೨+  ೨ ೩/೪ = ೧೫

ಮೂರು ಭೂಮಿಯ ರಚನೆಯನ್ನು ಸಮರಾಂಗಣ ಸೂತ್ರಧಾರ ಗ್ರಂಥವೂ ವಿವರಿಸಿದೆ. ದೇವಾಲಯದ ಒಟ್ಟು ಎತ್ತರ ಹಾಗೂ ಅಗಲ ಲೆಕ್ಕಕ್ಕೆ ಈ ವಿವರಗಳೇ ಲಭ್ಯ (ಅಗ್ರವಾಲ್ : ೧೯೬೬ : ೪೭೪).

ತಸ್ಯೈಕಾದಶವಿಸ್ತಾರೋ ಹಸ್ತಾ ಪಂಚದಶೋಚ್ಛ್ರಯಃ    || ೩೩ ||
ಚತುರ್ದಶಾಂಗುಲಾಂ ಅನ್ಯೇಷಾಂ ಭವೇದಸ್ಯಾಧಿಕಾಪಿ

ದೇವಾಲಯದ ಎತ್ತರ ಹದಿನೈದು ಹಸ್ತ (+ ೧೪ ಅಂಗುಲ), ಅಗಲ ಹನ್ನೊಂದು ಹಸ್ತ ಎಂದು ಗುರುತಿಸಲಾಗಿದೆ. ಜಂಘಾ ಕೂಟ ರಚನೆಗಳಲ್ಲಿ ಈ ಗ್ರಂಥ ಗುರುತಿಸುವ ಅಳತೆಗಳು ಕೊಂಚ ವಿಭಿನ್ನ ರೀತಿಯದು.

ಪೀಠಂ ದ್ವಿಹಸ್ತಂ ಕುರ್ವೀತ ತತ್ರಾದೌ ಪೂರ್ವಸೂಚಿತಂ
ಜಂಘಾ ತ್ರಿಭಾಗಿಕೋತ್ಸೇಧಂ ಕೂಟೋಚ್ಛ್ರಾಯಂ ತು ಭಾಗಿಕಂ   || ೩೫ ||

ಭವೇದ್ ಜಂಘಾ ತೃ (ದ್ವಿ?) ತೀಯಾ ಸಾರ್ಧಭಾಗದ್ವಯಂ ತತಃ
ಭಾಗಂ ಕೂಟ ಪ್ರಸ್ತರಶ್ಚಂದ್ರಶಾಲಾ ವಿಭೂಷಿತಃ      || ೩೬ ||

ಪುನರ್ ಜಂಘಾ ಸ್ಯಾದ್ ಭಾಗದ್ವಯ ಸಮುಚ್ಛ್ರಿತಃ
ತತಶ್ಚ ಕೂಟ ಪ್ರಸ್ತರೋ ಭಾಗಿಕೋ ಭೂಷಣಾನ್ವಿತಃ     || ೩೭ ||

ಭಾಗಂ ಸ್ಯಾತ್ ವೇದಿಬಂಧಃ ಸಗುಣದ್ವಾರ ಕಂಟಕಃ
ಚತುರ್ದಶಾಮಸೌ ಕಾರ್ಯೋ ಭೂಷಾಯುಕ್ತೋ ಯಥೋಚಿತಂ || ೩೮ ||

ಘಂಟಾಚ್ಛೇದಸ್ತು ಭಾಗಾದ್ವೌ ದ್ವಯಂಗುಲ ಸಂಯತೌ
ಏಕಾದಶಸ್ತರಾ ಕುರು ತಸ್ಯೋಪರಿ ವಿಧೀಯತೇ         || ೩೯ ||

ಪೀಠ    ಜಂಘಾ  ಕೂಟ    ಜಂಘಾ  ಕೂಟ    ಜಂಘಾ  ಕೂಟ    ವೇದಿ    ಘಂಟಾ

೨+      ೩+      ೧+      ೨ ೧/೨+         ೧+      ೨+      ೧       +೧      +೨ = ೧೫ ೧/೨

ಅಶುದ್ಧ ಪಾಠ ಎನಿಸಿದರೂ ಭೂಮಿ ರಚನೆಯನ್ನು ಗುರುತಿಸಲು ಭಾದಕವಿಲ್ಲ. ಕಲಶದ ಎತ್ತರವನ್ನು ಗಣನೆಗೆ ತೆಗೆದುಕೊಂಡಿಲ್ಲ. ಆದರೆ ಅದರ ಎತ್ತರ ಹನ್ನೊಂದು ಅಂಗುಲ ಇರಬಹುದು.

ಸಪ್ತಾಂಗ/ಪಂಚಭೂಮಿ: ಅಪರಾಜಿತಪೃಚ್ಛಾ ಗ್ರಂಥದಲ್ಲಿ ಸಪ್ತಾಂಗಗಳ ವಿವರವಿದ್ದು ಈ ಪ್ರಭೇದಗಳನ್ನು ಅರ್ಥೈಸಲು ಸಾಧ್ಯವಾಗದು. ನಂತರ ಪಂಚಭೂಮಿಯ ವಿವರಗಳಿವೆ. ಇದನ್ನು ಅವಶ್ಯವಾಗಿ ಗಮನಿಸಬೇಕು.

ಪೀಠೋರ್ಧ್ವೇ ಕರ್ಣಮಾನೇನ ಷಡ್‌ವಿಂಶತಿ ವಿಭಾಜಿತೇ
ಜಂಘಾ ಸಾರ್ಧತ್ರಯಂ ಕುರ್ಯಾತ್ ಕೂಟಂ ವೈ ಪಾದಯುಕ್ ತ್ರಯಂ    || ೧೯ ||

ತ್ರಿಭಾಗಂ ಪುನರ್‌ಜಂಘಾ ಕೂಟ ಪಾದ ವಿವರ್ಜಿತಂ
ಸಾರ್ಧದ್ವಿಭಾಗ ಜಂಘಾ ಕೂಟಂ ಪಾದಯುತಂ ದ್ವಯಂ      || ೨೦ ||

ದ್ವಿಭಾಗಂ ತಥಾ ಜಂಘಾ ಕೂಟಂ ಪಾದೋನ ದ್ವಯಂಶಕಂ
ಜಂಘಾ ಸಾರ್ಧಭಾಗೋಕ್ತಾ ಕೂಟಂ ಭಾಗ ಸಮುಚ್ಛ್ರಿತಂ       || ೨೧ ||

ಅರ್ಧಭಾಗಾ ಭವೇತ್ ವೇದೀ ಘಂಟಾ ಪಾದೋನ ದ್ವಯಂಶಕಾ
ಏವಮಾದಿ ಗುಣೋಪೇತಾಃ ಕರ್ತವ್ಯಾಃ ಪಂಚಭೂಮಿಕಃ         || ೨೨ ||

ಪೀಠ    ಜಂಘಾ  ಕೂಟ    ಜಂಘಾ  ಕೂಟ    ಜಂಘಾ  ಕೂಟ    ಜಂಘಾ
(೨)+    ೩ ೧/೨+         ೩ ೧/೪+         ೩+      ೨ ೩/೪+         ೨ ೧/೨+         ೨ ೧/೪+         ೨

ಕೂಟ    ಜಂಘಾ  ಕೂಟ    ವೇದಿ    ಘಂಟಾ
೧ ೩/೪+         ೧ ೧/೨+         ೧ ೧/೪+         ೧/೨+   ೧ ೩/೪ = (೨) + ೨೬

ಈ ವಿವರಗಳ ಪ್ರಕಾರ ಒಟ್ಟು ಎತ್ತರ ೨ + ೨೬ ಹಸ್ತಗಳು. ಸಮರಾಂಗಣ ಸೂತ್ರಧಾರ ಗ್ರಂಥದಲ್ಲಿಯೂ ಪಂಚಭೂಮಿ ರಚನಾಕ್ರಮವನ್ನು ವಿವರಿಸಲಾಗಿದೆ. ಈ ಗ್ರಂಥದ ಪ್ರಕಾರ ವಿಸ್ತಾರ ೨೧ ಹಸ್ತ; ಎತ್ತರ ೨೯ ಹಸ್ತ. ಈ ಪಾಠಗಳಲ್ಲಿ ಕೊಂಚ ಗೊಂದಲವಿದೆ.

ಪೀಠಂ ಭಾಗದ್ವಯಂ ಸಾರ್ಧಂ (?) ಜಂಘಾ (ಸಪಾದ?) ತ್ರಿಭಾಗಿಕೀ
ಕುರ್ವೀತ ಕೂಟ ಪ್ರಸ್ತರಂ ಸಾರ್ಧಹಸ್ತಂ ಬುದ್ಧಿಮಾನ್         || ೧೦೮ ||

ಜಂಘಾ ದ್ವಿತೀಯಾ ಕರ್ತವ್ಯಾ ಹಸ್ತತ್ರಿತಯಮುಚ್ಛ್ರಿತಾ
ಭೂಯೋsಪಿ ಕೂಟ ಪ್ರಸ್ತರಂ ಸಾರ್ಧಹಸ್ತಂ ಪ್ರಕಲ್ಪಯೇತ್       || ೧೦೯ ||

ಜಂಘಾ ತೃತೀಯಾ ಕರ್ತವ್ಯಾ ಪಾದಹೀನಂಕರದ್ವಯಂ
ಸಾರ್ಧಹಸ್ತ ಸಮುತ್ಸೇಧಃ ಕೂಟ ಪ್ರಸ್ತರ ಇಷ್ಯತೇ       || ೧೧೦ ||

ಚತುರ್ಭೂಮಿಜಂಘಾ ಸಾರ್ಧಹಸ್ತದ್ವಯೋಚ್ಛ್ರಿತಾಃ
ಕೂಟ ಪ್ರಸ್ತಾರಕಂ ಕುರ್ಯಾತ್ ಪೂರ್ವಮಾನೇನ ಬುದ್ಧಿಮಾನ್  || ೧೧೧ ||

ಪಂಚಮ್ಯಾಂ ಭುವಿ ಕುರ್ವೀತ ಜಂಘಾ (ಸಪಾದ?) ಕರದ್ವಯಂ
ಕುರ್ವೀತ ಕೂಟ ಪ್ರಸ್ತಾರಂ ತಥಾ ಪ್ರಾಗುದಿತೋ ಯಥಾ         || ೧೧೨ ||

ಕುರ್ಯಾತ್ ಹಸ್ತದ್ವಯೋತ್ಸೇಧಂ ಕಪೋತ (?) ಮಪಿ ಬುದ್ಧಿಮಾನ್
ಚತುರ್ಭಾಗಾ ಸಮುತ್ಸೇಧಾ ಮಹಾಘಂಟಾವಿಧಿ ರುಚ್ಯತೇ       || ೧೧೩ ||

ಪೀಠ    ಜಂಘಾ  ಕೂಟ    ಜಂಘಾ  ಕೂಟ    ಜಂಘಾ  ಕೂಟ    ಜಂಘಾ
೨ ೧/೨ +        ೩ ೧/೪ +        ೧ ೧/೨ +        ೩ + ೧ ೧/೨ +   ೨ ೩/೪ + ೧ ೧/೨ +      ೨ ೧/೨ +

ಕೂಟ    ಜಂಘಾ  ಕೂಟ    ಕಪೋತ ಘಂಟಾ
೧ ೧/೨ +        ೨ ೧/೪+         ೧ ೧/೨ +        ೨ +     ೪       = ೨೯ ೩/೪

ಉಪರಿಷ್ಟಾದ್ ಭವೇತ್ ತತ್ರ ಪ್ರಾಸಾದೇ ಪಂಚಭಾಗಿಕೇ
ಕುಂಭಂ ತದೂರ್ಧ್ವೇ ಕುರ್ವೀತ ಸ್ತರಾನ್ ಏಕೋನವಿಂಶತಿಃ      || ೧೧೪ ||
ಸಂಸ್ಥಾನಮೇತತ್
ಕರ್ತವ್ಯಂ ಸರ್ವತೋಭದ್ರ ಸಂಜ್ಞಿಕೇ

ಈ ಪಂಚಭೂಮಿ ರಚನೆಯಲ್ಲಿ ಕಲಶವು ೧೯ (ಅಂಗುಲ?) ಸ್ತರವುಳ್ಳದ್ದು. ಪಂಚಭೂಮಿ ರಚನೆಗೆ ಸರ್ವತೋಭದ್ರ ತಲಚ್ಛಂದವು ಹೆಚ್ಚು ಸೂಕ್ತ ಎನ್ನುವಂತೆ ಬಣ್ಣಸಿದೆ. ಹೊಯ್ಸಳರ ಮತ್ತು ಕಲ್ಯಾಣದ ಚಾಲುಕ್ಯರ ಕಾಲದ ದೇವಾಲಯಗಳಲ್ಲಿ ಏಕಭೂಮಿ, ತ್ರಿಭೂಮಿ, ಪಂಚಭೂಮಿ ರಚನೆಗಳನ್ನು ಈ ವಿವರಗಳೊಂದಿಗೆ ತುಲನಾತ್ಮಕವಾಗಿ ಗಮನಿಸಬಹುದಾಗಿದೆ. ಗ್ರಂಥಗಳಲ್ಲಿ ಹನ್ನೆರಡರವರೆಗೆ ಭೂಮಿ ರಚನೆ ಇದ್ದರೂ ಅಧ್ಯಯನಕ್ಕೆ ಮೇಲ್ಕಾಣಿಸಿದ ವಿವರಗಳು ಸಾಕು. ಅದಲ್ಲದೆ ಗ್ರಾಂಥಿಕ ವಿವರಗಳೂ ಸುಲಭವಾಗಿ ಅರ್ಥವಾಗದು. ಈಗ ನೀಡಿರುವ ವಿವರಗಳು ಹೆಚ್ಚಿನ ಅಧ್ಯಯನಕ್ಕೆ ಸೋಪಾನವಾಗಬಹುದು.