ಸೀತಾಫಲ ಮತ್ತು ರಾಮಫಲ ಎಂಬ ಹಣ್ಣುಗಳು ನಮ್ಮಲ್ಲಿವೆ. ಈ ಹಣ್ಣಿನ ಸಸ್ಯಗಳನ್ನು ಸಸ್ಯಶಾಸ್ತ್ರಜ್ಞರು ‘ಅನೋನಾ ಸ್ಕೈಮೋಸಾ’ ಮತ್ತು ‘ಅನೋನಾ ರೆಟಿಕ್ಯು ಲೇಟಾ’ ಎಂದು ಗುರುತಿಸಿದ್ದಾರೆ. ಈ ಸಸ್ಯಗಳಲ್ಲಿರುವ ಲಕ್ಷಣಗಳನ್ನು ಅಧ್ಯಯನ ಮಾಡಿ ಈ ರೀತಿ ಹೆಸರುಗಳನ್ನು ನೀಡಿದ್ದಾರೆ. ಇವೆರಡೂ ಒಂದೇ ಕುಟುಂಬಕ್ಕೆ ಸೇರಿದ ಸಸ್ಯಗಳು. ಕೆಲವು ವ್ಯತ್ಯಾಸಗಳುಂಟು, ಅವುಗಳಲ್ಲಿ ಹಣ್ಣಿನ ಬಣ್ಣವೂ ಒಂದು. ಇಂತಹ ವ್ಯತ್ಯಾಸಗಳೇ ಬೇರೆ ಬೇರೆ ಹೆಸರು ನೀಡಲು ಕಾರಣವೆನಿಸಿದೆ. ಸೀತಾಫಲ, ರಾಮಫಲ ಎಂದಲ್ಲಿ ನಾವುಗಳ ಮಾತ್ರ ಗುರುತಿಸಬಲ್ಲೆವು. ಆದರೆ ಸಸ್ಯಶಾಸ್ತ್ರಜ್ಞರು ಕೊಟ್ಟ ಹೆಸರಿನಿಂದಾಗಿ ಪ್ರಪಂಚದ ಯಾವ ಮೂಲೆಯಲ್ಲಾದರೂ ಸರಿ, ಈ ಸಸ್ಯಗಳನ್ನು ನಿಖರವಾಗಿ ಗುರುತಿಸಬಲ್ಲರು.

61_382_DV-KUH

“ಅನೋನೇಸಿ” ಎನ್ನುವುದು ಒಂದು ಕುಟುಂಬ (ಫ್ಯಾಮಿಲಿ). ಅದಕ್ಕೆ ಖಚಿತವಾದ ಲಕ್ಷಣಗಳಿವೆ. ಅನೋನೇಸಿಯಲ್ಲಿ “ಅನೋನಾ” ಎನ್ನುವುದು ಒಂದು ಪ್ರಭೇದ (ಜೆನಿರಾ). ಅದಕ್ಕೇ ಆದ ಸೀಮಿತ ಲಕ್ಷಣಗಳಿವೆ. ನಂತರ ಅನೋನಾದಲ್ಲಿ ‘ಸ್ಕ್ವಾಮೋಸಾ’ ಎನ್ನುವುದೊಂದು ಪುಟ್ಟ ಜಾತಿ; ‘ರೆಟಿಕ್ಯುಲೇಟಾ’ ಎನ್ನುವುದು ಮತ್ತೊಂದು ಜಾತಿ. ಇವುಗಳು ತಮ್ಮದೇ ಆದ ಲಕ್ಷಣಗಳನ್ನು ಹೊಂದಿದ್ದು ಬೇರೆ ಬೇರೆಯಾಗಿ ಗುರುತಿಸಲ್ಪಡುತ್ತದೆ. ಹೀಗೆ, ಕುಟುಂಬ, ಪ್ರಭೇದ, ಜಾತಿ ಲಕ್ಷಣಗಳನ್ನು ಗುರುತಿಸಬಹುದು ಅಥವಾ ಸಸ್ಯದಿಂದ ಆರಂಭಿಸಿ, ಅದರ ಬೇರು, ಕಾಂಡ, ಎಲೆ, ಹೂವು, ಹಣ್ಣು, ಬೀಜ ಹೀಗೆ ಲಕ್ಷಣಗಳನ್ನು ವಿವರಿಸಬಹುದು. ಇದರೊಂದಿಗೆ ಈ ಸಸ್ಯಗಳು ಬೆಳೆಯುವ ಪ್ರದೇಶ, ಪರಿಸರ, ಹವಾಮಾನ, ಉಪಯೋಗ ಎಲ್ಲವನ್ನೂ ವಿವರಿಸಬಹುದು. ಇದೊಂದು ಶಾಸ್ತ್ರೀಯ ಅಧ್ಯಯನ. ಈ ರೀತಿಯ ಶಾಸ್ತ್ರೀಯ ಅಧ್ಯಯನಕ್ಕೆ ವರ್ಗೀಕರಣಶಾಸ್ತ್ರ (ಟ್ಯಾಕ್ಸಾನಮಿ) ಎಂದು ಹೆಸರು. ಒಂದು ಭೌಗೋಳಿಕ ವಲಯದ ಸಸ್ಯಸಂಪತ್ತನ್ನು ಗುರುತಿಸುವ ವ್ಯವಸ್ಥೆಯೂ ಉಂಟು. ಅದಕ್ಕೆ ಆ ವಲಯದ “ಪ್ಲೋರಾ” ಎಂದು ಕರೆಯುತ್ತಾರೆ. ಕರ್ನಾಟಕದ ಸಸ್ಯಸಂಪತ್ತನ್ನು “ಪ್ಲೋರಾ ಆಫ್ ಕರ್ನಾಟಕ” ಎಂದು ಗುರುತಿಸಬಹುದು. ಇಂತಹ ಅಧ್ಯಯನಗಳು ಅವಶ್ಯವೂ ಹೌದು.

ಸಸ್ಯಗಳ ವರ್ಗೀಕರಣಶಾಸ್ತ್ರದ ಬಗ್ಗೆ ತಿಳಿಸಿದ ಉದ್ದೇಶದ ಮೂಲ ಆಶಯ, ಇಂತಹ ವರ್ಗೀಕರಣಶಾಸ್ತ್ರ ಪ್ರಾಚೀನ ದೇವಾಲಯಗಳಿಗೂ ಸಾಧ್ಯವೇ ಎಂದು ಪರಿಶೀಲಿಸುವುದು. ಸಸ್ಯಗಳು ನಿಸರ್ಗದ ಕೊಡುಗೆ; ದೈವದತ್ತವಾದದ್ದು, ಇವುಗಳ ರಚನೆಯಲ್ಲಿ ಮನುಷ್ಯರ ಕೈವಾಡವಿಲ್ಲ. ದೇವಾಲಯಗಳು ಮಾನವ ನಿರ್ಮಿತ; ಮನುಷ್ಯನ ಬುದ್ಧಿಮತ್ತೆಯ ಕೂಸು. ದೇವಾಲಯಗಳ ರಚನೆ ಪೂರ್ವನಿಯೋಜಿತ. ದೇವಾಲಯಗಳ ಲಕ್ಷಣಗಳನ್ನು ಮಾನವ ವ್ಯವಸ್ಥಿತವಾಗಿ ಸೃಷ್ಟಿಸಿದ್ದಾನೆ. ಅದರ ಅರಿವೇ ಮುಂದಿನ ವರ್ಗೀಕರಣಕ್ಕೆ ಅಧ್ಯಯನಕ್ಕೆ ದಾರಿದೀಪ. ದೇವಾಲಯಗಳನ್ನು ಕುರಿತಂತೆ ವಾಸ್ತುಗ್ರಂಥಗಳು ಪ್ರಾಚೀನ ಋಷಿಗಳ ಹೆಸರಿನಲ್ಲಿವೆ. ಮಯಮತ, ಮಾರೀಚ ಸಂಹಿತಾ, ಕಾಶ್ಯಪಶಿಲ್ಪ, ಈಶಾನಶಿವಗುರು ದೇವ ಪದ್ಧತಿ ಇತ್ಯಾದಿ., ಇವೆಲ್ಲವೂ ಋಷಿ ಮುನಿಗಳಿಂದ ರಚನೆಗೊಂಡವು ಎಂದು ಪ್ರತೀತಿ. ಋಷಿಗಳ ಪೂರ್ವಾಪರಗಳು ಲಭ್ಯವಾಗದಿದ್ದರೂ, ಅವರ ಹೆಸರುಗಳಿಂದ ಪೂಜ್ಯಸ್ಥಾನ ಪ್ರಾಪ್ತವಾಗಿದೆ.

ಯದುಕ್ತಂ ಶಂಭುನಾ ಪೂರ್ವಂ ವಾಸ್ತುಶಾಸ್ತ್ರಂ ಪುರಾತನಂ
ಪರಾಶರಃ ಪ್ರಾಹ ಬ್ರಹದ್ರಥಾಯ, ಬೃಹದ್ರಥಃ ಪ್ರಾಹ ವಿಶ್ವಕರ್ಮಣೇ |
ವಿಶ್ವಕರ್ಮ ಜಗತಾಂ ಹಿತಾಯ ಪ್ರೋವಾಚ ಶಾಸ್ತ್ರಂ ಬಹುಭೇದಯುಕ್ತಂ ||
ವಿಶ್ವಕರ್ಮೋವಾಚ ವಾಸ್ತುಶಾಸ್ತ್ರಂ ಪ್ರವಕ್ಷಾಮಿ ಲೋಕಾನಾಂ ಹಿತಕಾಮ್ಯಯಾ ||

ಶಿವೋಕ್ತವಾದ ವಾಸ್ತುಶಾಸ್ತ್ರ, ಶಿವಶಂಭುವಿನಿಂದ ಪರಾಶರನಿಗೆ, ಪರಾಶರನಿಂದ ಬೃಹದ್ರಥನಿಗೆ, ಬೃಹದ್ರಥನಿಂದ ವಿಶ್ವಕರ್ಮನಿಗೆ; ಲೋಕದ ಹಿತಕ್ಕಾಗಿ ವಿಶ್ವಕರ್ಮನಿಂದ ವಾಸ್ತುಶಾಸ್ತ್ರದ ಧರೆಗಿಳಿಯಿತು ಎಂದು ಬೃಹತ್‌ಸಂಹಿತೆಯ ಕರ್ತೃ ವಿವರಿಸುತ್ತಾನೆ (ಶಾಸ್ತ್ರ ಮತ್ತು ಭಟ್ : ೧೯೪೭ : ೪೨೨). ತರ್ಕ, ವ್ಯಾಕರಣ, ಛಂದಸ್ಸು, ಜ್ಯೋತಿಷ್ಯ ಮುಂತಾದ ವಿಷಯಗಳಲ್ಲಿ ಪರಿಣಿತರಾದವರು ಹಲವರಿದ್ದಾರೆ. ಆದರೆ ವಾಸ್ತುಶಾಸ್ತ್ರವನ್ನು ಬಲ್ಲವರು ಕೇವಲ ಬೆರಳೆಣಿಕೆಯಷ್ಟು ಈ ಶಾಸ್ತ್ರವನ್ನು ತಿಳಿದವರನ್ನು ಎರಡು ಹಂತದಲ್ಲಿ ಗುರುತಿಸಬಹುದು. ಶಾಸ್ತ್ರವನ್ನು ತಿಳಿದ ವಿದ್ವಾಂಸರು ಒಂದೆಡೆಯಾದರೆ, ಶಾಸ್ತ್ರಗಳನ್ನು ಬಳಸುವ ಸ್ಥಪತಿಗಳು ಮತ್ತೊಂದೆಡೆ ಸೇರುತ್ತಾರೆ. ಬಹುಶಃ ಇದು ಎಲ್ಲಾ ಕಲೆಗಳಿಗೂ ಅನ್ವಯಿಸುತ್ತದೆ. ಕೆಲವೊಮ್ಮೆ ಸ್ಥಪತಿಗಳಿಗೆ ಈ ಜ್ಞಾನವು ತಲೆತಲಾಂತರದಿಂದ ಹರಿದುಬಂದದ್ದು. ತಂದೆಯಿಂದ ಮಗನಿಗೆ, ಗುರುವಿನಿಂದ ಶಿಷ್ಯನಿಗೆ ಹರಿದುಬಂದ ವಿದ್ಯೆ ಎನ್ನಿಸಿದೆ. ಇದು ಅವರಿಗೆ ವೃತ್ತಿಯೂ ಹೌದು. ಇಲ್ಲಿ ಕೆಲವರಿಗೆ ಶಾಸ್ತ್ರಗ್ರಂಥಗಳ ತಿಳಿವು ಇಲ್ಲದಿರಬಹುದು. ದೇವಾಲಯ ರಚನೆ, ಅಲಂಕಾರ ಎಲ್ಲವೂ ತಿಳಿದಿದೆ; ಇದು ಏಕೆ ಹೀಗೆ? ಎಂದಲ್ಲಿ ಉತ್ತರಿಸಲಾರರು.

ವರ್ಗೀಕರಣದ ವಿಧಾನವನ್ನು ಪ್ರಾಚೀನ ಮತ್ತು ಪಾಶ್ಚಿಮಾತ್ಯ ಎಂದು ಎರಡು ರೀತಿಯಲ್ಲಿ ವಿವರಿಸಬಹುದು. ಯಾವುದೇ ಲಕ್ಷಣವನ್ನು ಗುರುತಿಸುವಲ್ಲಿ ಅರ್ಥಖಚಿತತೆ ಅಗತ್ಯ. ಪ್ರಾಚೀನ ಎಂದಲ್ಲಿ ವಾಸ್ತುಶಾಸ್ತ್ರಗಳನ್ನಾಧರಿಸಿ ಗುರುತಿಸುವಿಕೆ; ಪಾಶ್ಚಿಮಾತ್ಯ ಎಂದಲ್ಲಿ ಪಾಶ್ಚಿಮಾತ್ಯ ವಿದ್ವಾಂಸರು ಅನುಸರಿಸಿದ ಹಾದಿ. ವಾಸ್ತು ಗ್ರಂಥಗಳ ವಿವರಣೆಗಳ ಮೂಲಕ ಕೆಲವೊಮ್ಮೆ ಅರ್ಥೈಸಲು ಸಾಧ್ಯವಾಗದು, ಆಗ ಪಾಶ್ಚಿಮಾತ್ಯರು ತುಳಿದ ಹಾದಿಯಲ್ಲಿಯೂ ಸಾಗಬೇಕು. ಸಸ್ಯಶಾಸ್ತ್ರದಲ್ಲಿದ್ದಂತೆ ದ್ವಿಪದೀಯ ನಾಮಕರಣ ಪದ್ಧತಿ ಇಲ್ಲಿ ಅಗತ್ಯವಿಲ್ಲ. ಆದರೆ ಶೈಲಿ, ಸಂಪ್ರದಾಯಗಳನ್ನು ಒಟ್ಟಿಗೆ ತಿಳಿಸುವುದು ಉಪಯುಕ್ತ. ದೇವಾಲಯಗಳಿಗೆ ಸ್ಥಳೀಯವಾಗಿ ಗುರುತಿಸುವ ಹೆಸರುಗಳುಂಟು. ಈ ಹೆಸರುಗಳು ಶಾಸನದಲ್ಲಿ ಗುರುತಿಸುವ ಹೆಸರುಗಳಿಗಿಂತ ಕೆಲವೊಮ್ಮೆ ಭಿನ್ನವಾಗಿರುತ್ತವೆ. ಮೂಲದೇವರಿಗಿಂತ ಮರಿದೇವರೇ ಪ್ರಧಾನವಾಗಿ ಗುರುತಿಸಲ್ಪಡುತ್ತಾರೆ. ಅವರುಗಳ ಹೆಸರಿನಲ್ಲೇ ಪೂಜೆ ಪುನಸ್ಕಾರಗಳು, ಜಾತ್ರೆ ಪರಿಷೆಗಳು, ವೈಭವಯುತವಾಗಿ ಸಾಗುತ್ತವೆ.

ದೇವಾಲಯ ರಚನೆಯ ಕಾಲವನ್ನು ಗುರುತಿಸುವಲ್ಲಿ ಲಭ್ಯವಿರುವ ಶಾಸನಗಳು ನೇರವಾಗಿ ನೆರವಾಗುತ್ತವೆ. ದೇವಾಲಯದ ಕೈಂಕರ್ಯಕ್ಕಾಗಿ ದಾನಶಾಸನಗಳಿದ್ದು ಪರೋಕ್ಷವಾಗಿ ಇವುಗಳೂ ನೆರವಾಗುತ್ತವೆ. ದೇವಾಲಯ ವಾಸ್ತುವಿನ ರಚನೆ, ಅಲಂಕಾರಗಳನ್ನು ಗಮನಿಸಿ ದೇವಾಲಯಗಳ ಕಾಲವನ್ನು ಸುಮಾರಾಗಿ ನಿರ್ಧರಿಸಬಹುದು. ಶಾಸನಗಳೇ ಅಲ್ಲದೆ ಇನ್ನಿತರ, ದಾಖಲೆಪತ್ರಗಳೂ ನೆರವಾಗಬಹುದು. ಇದರೊಂದಿಗೆ ದೇವಾಲಯ ರಚನೆಯ ಕಾಲದಲ್ಲಿದ್ದ ಧಾರ್ಮಿಕ ಪರಿಸರ, ಒದಗಿಬಂದ ರಾಜಾಶ್ರಯ ಮೊದಲಾದ ಮಾಹಿತಿಗಳೂ ಲಭ್ಯವಾಗಬಹುದು.

ದೇವಾಲಯದ ಸಂಪ್ರದಾಯ ಶೈಲಿಗಳನ್ನು ಗುರುತಿಸಬೇಕು. ಇದಕ್ಕೆ ವಾಸ್ತುಗ್ರಂಥಗಳಿಂದ ಪಡೆದ ಜ್ಞಾನವೇ ಮುಖ್ಯ. ಕರ್ನಾಟಕದಲ್ಲಿ ದಾಕ್ಷಿಣಾತ್ಯ ಮತ್ತು ಔತ್ತರೇಯ ಸಂಪ್ರದಾಯಗಳೆರಡೂ ಬೆರತಿವೆ. ಬಾದಾಮಿ ಚಾಲುಕ್ಯರ ಕಾಲದಲ್ಲಿ ದಾಕ್ಷಿಣಾತ್ಯ ಸಂಪ್ರದಾಯದ ದೇವಾಲಯಗಳೇ ಪ್ರಮುಖವಾದವು. ಔತ್ತರೇಯ ಸಂಪ್ರದಾಯದ ಕಳಿಂಗ ಶೈಲಿಯೊಂದೇ ಲಭ್ಯ. ಐಹೊಳೆ, ಬಾದಾಮಿ, ಪಟ್ಟದಕಲ್ಲುಗಳಲ್ಲಿ ಆರಂಭದ ದೇವಾಲಯಗಳು ಸಾಕಷ್ಟ ಸಂಖ್ಯೆಯಲ್ಲಿವೆ. ಲಭ್ಯವಿರುವ ಗ್ರಂಥಸ್ಥ ವಿವರಣೆಗಳಿಗೂ ದೇವಾಲಯಗಳಿಗೂ ಹೊಂದಿಕೆಯಾಗದು. ಕರ್ನಾಟಕದ ದೇವಾಲಯಗಳನ್ನು ಗುರುತಿಸಲು ಈ ನೆಲದಲ್ಲಿ ಅರಳಿದ ವಾಸ್ತುಗ್ರಂಥದ ಅವಶ್ಯಕತೆ ಇತ್ತು; ಆದರೆ ಈವರೆಗೆ ಲಭ್ಯವಿಲ್ಲ.

ರಾಷ್ಟ್ರಕೂಟರ ಕಾಲದಲ್ಲಿ ಕರ್ನಾಟಕದ ದೇವಾಲಯಗಳ ಮೇಲೆ ಔತ್ತರೇಯ ಸಂಪ್ರದಾಯದ ಪ್ರಭಾವವನ್ನು ಕಾಣಬಹುದು. ಕಲ್ಯಾಣದ ಚಾಲುಕ್ಯರ ಮತ್ತು ಹೊಯ್ಸಳರ ಕಾಲದಲ್ಲಿ ಔತ್ತರೇಯ ದ್ರಾವಿಡ ಶೈಲಿಯ ದೇವಾಲಯಗಳನ್ನು ಹೆಚ್ಚಾಗಿ ಕಾಣುತ್ತೇವೆ. ಹಳೆಯ ಮೈಸೂರಿನ ದಕ್ಷಿಣ ಭಾಗದಲ್ಲಿ ಗಂಗ, ನೊಳಂಬರ ಕಾಲದಲ್ಲಿ ದಾಕ್ಷಿಣಾತ್ಯ ಸಂಪ್ರದಾಯವೇ ಮುಂದುವರೆಯಿತು. ಹೊಯ್ಸಳರ ಕಾಲದಲ್ಲಿ ದಾಕ್ಷಿಣಾತ್ಯ ಸಂಪ್ರದಾಯದ ದೇವಾಲಯಗಳು ಕೇವಲ ಬೆರಳೆಣಿಕೆಯಷ್ಟು, ಇಕ್ಕೇರಿ ಅರಸರ ದೇವಾಲಯಗಳು ಪುನಃ ದಾಕ್ಷಿಣಾತ್ಯ ಸಂಪ್ರದಾಯಕ್ಕೆ ತಲೆಬಾಗುತ್ತವೆ. ವಿಜಯನಗರದ ಅರಸರ ಕಾಲಕ್ಕೆ ಔತ್ತರೇಯ ಸಂಪ್ರದಾಯವು ಕರ್ನಾಟಕದಲ್ಲಿ ಪೂರ್ಣ ಅಸ್ತಂಗತವಾಯಿತು. ದಾಕ್ಷಿಣಾತ್ಯ ಸಂಪ್ರದಾಯ ವೃದ್ಧಿಸಿತು.

ದೇವಾಲಯ ರಚನೆಯಲ್ಲಿ ಕಾಲಾನುಕಾಲಕ್ಕೆ ಬದಲಾದ ಶಿಲೆಗಳ ಮಾಧ್ಯಮವೂ ಗಮನಾರ್ಹ ಪಾತ್ರವಹಿಸಿದೆ. ಬಾದಾಮಿ ಚಾಲುಕ್ಯರ ಕಾಲದಲ್ಲಿ ಮರುಳುಗಲ್ಲಿನ ರಚನೆಗಳೂ, ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ಹೆಚ್ಚು ಕಾಠಿಣ್ಯವಲ್ಲದ ಕಪ್ಪು ಹಾಗೂ ಹಸಿರು ಮಿಶ್ರಿತ ಶಿಲೆಯಲ್ಲಿ ರಚನೆಗಳು ಪ್ರಕಟಗೊಂಡವು. ಹೊಯ್ಸಳರ ಕಾಲದಲ್ಲಿ ಮೃದುವಾದ ಬಳಪದ ಕಲ್ಲಿನದೇ ಅಧಿಪತ್ಯ. ವಿಜಯನಗರದ ಅರಸರ ಕಾಲದಲ್ಲಿ ಕಠಿಣವಾದ ಗ್ರಾನೈಟ್ ಶಿಲೆಯೇ ಆವರಿಸಿದೆ. ಗ್ರಾನೈಟ್ ಶಿಲಾರಚನೆಗಳೊಂದಿಗೆ ಅತೀ ಸೂಕ್ಷ್ಮವಾದ ರಚನೆಗಳು ಮಾಯವಾಯಿತು.

ದಾಕ್ಷಿಣಾತ್ಯ ಶೈಲಿಗಳಾದ ನಾಗರ, ದ್ರಾವಿಡ ಮತ್ತು ವೇಸರಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಲ್ಲಿ ಕರ್ನಾಟಕದ ಔತ್ತರೇಯ ದ್ರಾವಿಡ ಶೈಲಿಯನ್ನೂ ಗುರುತಿಸಲು ಸಾಧ್ಯ. ಶಿಖರದ ಆಕಾರದಿಂದಲೇ ಶೈಲಿಗಳ ವರ್ಗೀಕರಣ. ಮಲೆನಾಡಿನ ಪರಿಸರದಲ್ಲಿ ಲುಪಾಕಾರದ ದೇವಾಳಯಗಳಿವೆ. ಇವುಗಳ ರಚನೆಯಲ್ಲಿ ಅಧಿಷ್ಠಾನ, ಪಾದ, ಶಿಖರ ಮತ್ತು ಸ್ತೂಪಿ ಸ್ತರಗಳಿವೆ. ಶಿಖರವು ಇಳಿಜಾರಾಗಿದ್ದು ಪಾದ ಅಥವಾ ಭಿತ್ತಿ ರಚನೆಗೆ ರಕ್ಷಣೆ ಒದಗಿಸಿ ಮುಂಚಾಚಿದೆ. ಇವನ್ನೂ ದಾಕ್ಷಿಣಾತ್ಯ ಸಂಪ್ರದಾಯದ ಅಡಿಯಲ್ಲಿ ಗುರುತಿಸಬಹುದು. ಔತ್ತರೇಯ ಸಂಪ್ರದಾಯದ ಇನ್ನಿತರ ಶೈಲಿಗಳಾದ ಭೂಮಿಜ, ವಿಮಾನನಾಗರ, ಲತಿನ ಮಾದರಿಯ ರಚನೆಗಳು ಕರ್ನಾಟಕದಲ್ಲಿ ಅಪರೂಪವಾಗಿ ಲಭ್ಯ. ಅವುಗಳ ಶಿಖರ ರಚನೆಯನ್ನು ಗುರುತಿಸುವಾಗ ಔತ್ತರೇಯ ಗ್ರಂಥಗಳನ್ನೇ ಆಶ್ರಯಿಸಬೇಕು.

ಸಂಪ್ರದಾಯ, ಶೈಲಿಗಳ ನಂತರ ದೇವಾಲಯಗಳಲ್ಲಿ ಕಾಣುವ ವಿಶೇಷ ರಚನೆಗಳನ್ನು ಉಲ್ಲೇಖಿಸಬಹುದು. ಉದಾಹರಣೆಗೆ, ಬೇಲೂರಿನ ಕೇಶವ ದೇವಾಲಯದಲ್ಲಿರುವ ಶಿಲಾ ಬಾಲಿಕೆಯರು, ಹಳೇಬೀಡಿನ ಗರ್ಭಗೃಹದ ಹಿಂಭಾಗದಲ್ಲಿರುವ, ದೇವ ದೇವತೆಗಳ ಲೀಲಾ ವಿಗ್ರಹಗಳು, ಅರಸೀಕೆರೆಯ ಶಿವಾಲಯದ ನಕ್ಷತ್ರಾಕಾರ ನೃತ್ಯಮಂಟಪ, ಗರ್ಭಗೃಹವನ್ನು ಆವರಿಸಿದ ಚತುರ್ವಿಂಶತಿ ಮೂರ್ತಿಗಳು, ಹಾನುಗಲ್ಲಿನ ತಾರಕೇಶ್ವರ ದೇವಾಲಯದ ನೃತ್ಯಮಂಟಪದ ಮೇಲ್ಭಾಗದ ಸಂವರಣ ರಚನೆ ಇತ್ಯಾದಿ.

ದೇವಾಲಯದ ವಿಸ್ತೃತ ವಿವರಣೆಗೆ ನಂತರದ ಸ್ಥಾನ. ಮೊದಲಿಗೆ ಊರ್ಧ್ವಕ್ರಮದ ವಿವರಣೆ. ನಂತರ ತಿರ್ಯಕ್ರಮ. ದೇವಾಲಯದ ವಿವಿಧ ಅಂಗಗಳನ್ನು ಪ್ರತ್ಯೇಕವಾಗಿ ಗುರುತಿಸಿ ವಿವರಿಸಬಹುದು. ದಾಕ್ಷಿಣಾತ್ಯ ದೇವಾಲಯಗಳ ಉಪಪೀಠ, ಅಧಿಷ್ಠಾನ, ಪಾದ ಪ್ರಸ್ತರ, ತಲರಚನೆ, ಕಂಠ, ಶಿಖರ, ಸ್ತೂಪಿಗಳಂತೆ ಔತ್ತರೇಯ ದೇವಾಲಯಗಳ ಪೀಠ, ಜಂಘಾ, ಛಾದ್ಯ, ಭೂಮಿ ಅಥವಾ ಶೃಂಗರಚನೆ, ಘಂಟಾ ಅಥವಾ ಆಮಲಸಾರ ಮತ್ತು ಕಲಶಗಳನ್ನು ವಿವರಿಸಬಹುದು. ಛಾದ್ಯದ ನಂತರ ಶೃಂಗರಚನೆಯಲ್ಲಿ ಶೃಂಗ, ಉರುಶೃಂಗ, ಪ್ರತ್ಯಂಗಗಳ ಜೋಡಣಾಕ್ರಮವನ್ನು ವಿವರಿಸಬಹುದು.

ತಿರ್ಯಕ್ರಮದಲ್ಲಿ ವಿಮಾನ/ಪ್ರಾಸಾದ, ಅಂತರಾಳ/ಅರ್ಧಮಂಟಪ, ನವರಂಗ/ಪ್ರತಿಮಾ ಮಂಟಪ, ನೃತ್ಯ ಮಂಟಪ/ನೃತ್ಯಶಾಲಾ, ಮುಖಮಂಟಪ, ಪ್ರಾಕಾರ, ಗೋಪುರ ಹಾಗೂ ಇನ್ನಿತರ ರಚನೆಗಳನ್ನು ಗಮನಿಸಿಬಹುದು.

ದೇವಾಲಯಗಳ ಅವಿಭಾಜ್ಯ ಅಂಗವನಿಸುವ ವಿಗ್ರಹಗಳನ್ನು ಗುರುತಿಸಬೇಕು. ಮೂಲ ವಿಗ್ರಹವಲ್ಲದೆ, ಸ್ನಪನಬೇರ, ಕೌತುಕಬೇರ, ಬಲಿಬೇರ, ಉತ್ಸವಬೇರೆ ಮೊದಲಾದ ವಿಗ್ರಹಗಳಿವೆ. ಸಾಮಾನ್ಯವಾಗಿ ಮೂಲವಿಗ್ರಹ ಹಾಗೂ ಉತ್ಸವ ಮೂರ್ತಿಗಳೇ ಹೆಚ್ಚು ಬಳಕೆಯಲ್ಲಿವೆ. ಉತ್ಸವಮೂರ್ತಿಗೇ ಸ್ನಪನ, ಬಲಿ ಮೊದಲಾದ ಕೈಂಕರ್ಯಗಳೂ ನಡೆಯುತ್ತವೆ. ದೇವಾಲಯದ ತಲ ಅಥವಾ ಭೂಮಿ ರಚನೆಗಳಲ್ಲಿ ದೇವದೇವತೆಗಳ ಹಲವು ಪ್ರತಿಮೆಗಳನ್ನು ಕಡೆದು ನಿಲ್ಲಿಸಿದ್ದಾರೆ. ಇವುಗಳನ್ನು ವಿಮಾನತಲದೇವತೆಗಳೆನ್ನುತ್ತಾರೆ. ಪ್ರತಿಯೊಂದು ದೇವತೆಗೂ ತಲರಚನೆಯಲ್ಲಿ ನಿರ್ದಿಷ್ಟ ಸ್ಥಾನವನ್ನು ಶಾಸ್ತ್ರ ರೀತ್ಯಾ ಸೂಚಿಸಲಾಗಿದೆ. ಈ ನಿರ್ದಿಷ್ಟ ಕ್ರಮವನ್ನೂ, ಪ್ರತಿಮಾ ಲಕ್ಷಣಗಳನ್ನೂ ಗುರುತಿಸಬೇಕು.

ಮೇಲ್ಕಾಣಿಸಿದ ವಿವರಗಳನ್ನು ವ್ಯವಸ್ಥಿತವಾಗಿ ಕ್ರೋಢೀಕರಿಸಿ, ಪ್ರತಿಯೊಂದು ದೇವಾಲಯಗಳಲ್ಲಿಯೂ ಗುರುತಿಸಿ ನೀಡಿದಲ್ಲಿ ಶಾಸ್ತ್ರೀಯ ಅಧ್ಯಯನಕ್ಕೆ ನಾಂದಿಯಾಗಬಲ್ಲದು; ತೌಲನಿಕ ಅಧ್ಯಯನಕ್ಕೂ ಸಹಕಾರಿಯಾಗಬಲ್ಲದು. ಈ ಹಂತಗಳನ್ನು ಮತ್ತೊಮ್ಮೆ ಹಂತಹಂತವಾಗಿ ಗುರುತಿಸಲಾಗಿದೆ.

೧. ದೇವಾಲಯದ ಹೆಸರು : ಸ್ಥಳೀಯ/ಜನಪ್ರೀಯ/ಶಾಸನಸ್ಥ

೨.ಸ್ಥಳ : ಊರು/ ತಾಲ್ಲೂಕು/ಜಿಲ್ಲೆ ಇತ್ಯಾದಿ.,

೩. ಚಾರಿತ್ರಿಕ ಹಿನ್ನೆಲೆ : ಅಂದಿನ ಧಾರ್ಮಿಕ, ಸಾಂಸ್ಕೃತಿಕ ಪರಿಸರ

೪. ಕಾಲಮಾನ : ಶಾಸನಾಧಾರಿತ/ಇತರ ದಾಖಲೆಗಳು/ ವಾಸ್ತುರಚನೆಯನ್ನು ಆಧರಿಸಿ.,

೫. ಸಂಪ್ರದಾಯ, ಶೈಲಿ : ಶಿಖರವನ್ನಾಧರಿಸಿದ ವರ್ಗೀಕರಣ ದಾಕ್ಷಿಣಾತ್ಯ : ನಾಗರ ದ್ರಾವಿಡ ವೇಸರ ಶಾಲಾಕಾರ – ಲುಪಾಕಾರ ಫಾಂಸನಾಕಾರ ಔತ್ತರೇಯ : ಕಳಿಂಗ ದ್ರಾವಿಡ ಭೂಮಿಜ ಲತಿನ ವಿಮಾನ ನಾಗರ

೬. ವಿಶೇಷ ಲಕ್ಷಣಗಳು : ದೇವಾಲಯ ರಚನೆಯಲ್ಲಿ ಅಪರೂಪದ ಲಕ್ಷಣ/ಮಾಹಿತಿಗಳಿದ್ದಲ್ಲಿ ಅವುಗಳ ಉಲ್ಲೇಖ ಹಾಗೂ ವಿವರಣೆ.

೭. ದೇವಾಲಯಗಳ ವಿಸ್ತೃತ ವಿವರಣೆ : ದಾಕ್ಷಿಣಾತ್ಯ ದೇವಾಲಯಗಳಿಗೊಂದು ಮಾರ್ಗದರ್ಶಿ ಸೂತ್ರವೊಂದನ್ನು ಸಿದ್ಧಪಡಿಸಿ ನೀಡಲಾಗಿದೆ. ಔತ್ತರೇಯ ದೇವಾಲಯಗಳಿಗೂ ಈ ರೀತಿ ಸಿದ್ಧಪಡಿಸಿಕೊಂಡಲ್ಲಿ ಹೆಚ್ಚು ಉಪಕಾರಿಯಾಗಬಲ್ಲದು.

ದಾಕ್ಷಿಣಾತ್ಯ ದೇವಾಲಯ ಊರ್ಧ್ವಕ್ರಮ:

ಉಪಪೀಠ : ಪ್ರಭೇದಗಳು : ವೇದೀಭದ್ರ/ಪ್ರತಿಭದ್ರ/ಸುಭದ್ರ

ವೇದೀಭದ್ರ : ಸರಳ ರಚನೆಲ ಪುನಃ ಪ್ರಭೇದಗಳು – ೩ ಅಷ್ಟಾಂಗ/ಷಡಂಗ/ಪಂಚಾಂಗ

ಅಷ್ಟಾಂಗ : ಎಂಟು ಸ್ತರಗಳು ಪಾದುಕ, ಪದ್ಮ, ಕ್ಷೇಪಣ, ಕಂಠ, ಕಂಪ, ಪದ್ಮ, ವಾಜನ ಮತ್ತು ಕಂಪ

ಷಡಂಗ : ಅಷ್ಟಾಂಗದಲ್ಲಿರುವ ಎರಡು ಪದ್ಮ ರಚನೆಯನ್ನು ಬಿಟ್ಟು ಉಳಿದ ಸ್ತರಗಲು- ಆರು.

ಪಂಚಾಂಗ : ಅಷ್ಟಾಂಗದಲ್ಲಿರುವ ಎರಡು ಪದ್ಮ ಮತ್ತು ವಾಜನ ರಚನೆಯನ್ನು ಬಿಟ್ಟು ಉಳಿದ ಸ್ತರಗಳು-ಐದು.

ಪ್ರತಿಭದ್ರ : ಮುಖ್ಯವಾಗಿ ಕಪೋತ, ಪ್ರತಿ, ವಾಜನ ಸ್ತರಗಳು.
ಪಾದುಕ, ಪದ್ಮ, ಕಂಪ, ಕಂಠ, ಉತ್ತರ, ಕಪೋತ, ಅಲಿಂಗ, ಪಟ್ಟಿಕಾ, ಪ್ರತಿ ಮತ್ತು ವಾಜನ

ಸುಭದ್ರ : ಹಲವು ಸ್ತರಗಳು, ಕಂಠಭಾಗದಲ್ಲಿ ಆನೆ, ಸಿಂಹಮುಖ ಇತ್ಯಾದಿ ಉಪಾನ, ಪದ್ಮ, ಕಂಠ, ಪದ್ಮ, ಮಹಾಪದಿ, ಪದ್ಮ ಕಂಠ, ಕಂಪ ಮತ್ತು ಪದ್ಮ.

ಅಧಿಷ್ಠಾನ : ಪ್ರಭೇದಗಳು:೧. ಪಾದಬಂಧ/ಪ್ರತಿಬಂಧ/ಕಪೋತಬಂಧ ೨. ಪಟ್ಟಿಕಾಂಗ/ಪ್ರತ್ಯಂಗ

ಸರಳವಾದ ಉಪಪೀಠ, ಕಂಬದಹಳ್ಳಿ

ಸರಳವಾದ ಉಪಪೀಠ, ಕಂಬದಹಳ್ಳಿ

ಅಧಿಷ್ಠಾನ, ಕಂಬದಹಳ್ಳಿ / ಅಧಿಷ್ಠಾನ -ಗೋಪುರ ಭಾಗ, ನಂದಿ

ಅಧಿಷ್ಠಾನ, ಕಂಬದಹಳ್ಳಿ / ಅಧಿಷ್ಠಾನ -ಗೋಪುರ ಭಾಗ, ನಂದಿ

ಪಾದಬಂಧ : ಅಧಿಷ್ಠಾನದ ನಡುವೆ ದ್ವಾರ/ಗೋಪುರ ಪಾದ ರಚನೆ ೧. ಉಪಾನ, ಜಗತಿ,ಕುಮುದ, ಕಂಪ, ಕಂಠ, ಕಂಪ, ಪಟ್ಟಿಕಾ

೨. ಉಪಾನ, ಜಗತಿ, ಪದ್ಮ, ಕುಮುದ, ಪದ್ಮ, ಕಂಠ, ಪಟ್ಟಿಕಾ (ಸಾಮಾನ್ಯವಾಗಿ ತ್ರಿಪಟ್ಟ ಕುಮುದ) ಕುಮುದದ ಕೆಳಗೆ, ಮೇಲ್ಗಡೆ ಪದ್ಮರಚನೆ ಇದ್ದಲ್ಲಿ ವೃತ್ತಕುಮುದ.

ಪ್ರತಿಬಂಧ : ಅಧಿಷ್ಠಾಣದ ಮೇಲೆ ಸ್ತಂಭ, ದ್ವಾರ, ಜಾಲಂದ್ರ, ಇತ್ಯಾದಿ., ವೃತ್ತಕುಮುದ ರಚನೆ.

೧. ಉಪಾನ, ಜಗತಿ, ವೃತ್ತಕುಮುದ, ಕಂಠ, ಪ್ರತಿ, ವಾಜನ.

೨. ಉಪಾನ, ಜಗತಿ, ವೃತ್ತಕುಮುದ, ಆಲಿಂಗ, ಅಂತರಿತ, ಪ್ರತಿ, ವಾಜನ

ಕಪೋತಬಂಧ : ಅಧಿಷ್ಠಾನದಲ್ಲಿ ಕಪೋತವಿದ್ದರೆ ಕಪೋತಬಂಧ ಪಟ್ಟಿಕಾಂಗ : ಅಧಿಷ್ಠಾನದಲ್ಲಿ ಪಟ್ಟಿಕೆ ಇದ್ದರೆ ಪಟ್ಟಿಕಾಂಗ

ಪ್ರತ್ಯಂಗ : ಪ್ರತಿ, ವಾಜನ ಸ್ತರಗಳಿದ್ದರೆ ಪ್ರತ್ಯಂಗ

ವೇದಿಕಾ : ಅಧಿಷ್ಠಾನದ ಮೇಲೆ ವೇದಿಕಾ ರಚನೆ ಕಂಠ (ಗಲ), ಕಂಪ, ಪದ್ಮ, ಕಂಪ, ಕಂಠಭಾಗದಲ್ಲಿ ನಿಯಮಿತ ಅಂತರದಲ್ಲಿ ಗಲಪಾದ.

ಸ್ತಂಭ : ಪ್ರಭೇದಗಳು: ೧. ಹೋಮಸ್ತಂಭ ಪ್ರತಿಸ್ತಂಭ ಝಷಾಲಸ್ತಂಭ ೨. ಸಾಶ್ರಯ/ನಿರಾಶ್ರಯ

ಹೋಮಸ್ತಂಭ : ಅಧಿಷ್ಠಾನ/ಭೂಮಿಯಲ್ಲಿ ನೆಟ್ಟ ಸ್ತಂಭ

ಪ್ರತಿಸ್ತಂಭ : ಅಧಿಷ್ಠಾನದ ಪ್ರತಿಸ್ತರದ ಮೇಲೆ ನಿಂತ ಸ್ತಂಭ

ಝಷಾಲಸ್ತಂಭ : ತೋರಣವುಳ್ಳ ಸ್ತಂಭ

ಕುಡ್ಯಸ್ತಂಭ  /  ಸ್ತಂಭದ ಅಲಂಕಾರಿಕ ಭಾಗಗಳು

ಕುಡ್ಯಸ್ತಂಭ  /  ಸ್ತಂಭದ ಅಲಂಕಾರಿಕ ಭಾಗಗಳು

ಸ್ತಂಭದ ಭಾಗಗಳು : ಪಾದಮೂಲ/ಪಾದಮಧ್ಯ/ಪಾದಾಗ್ರ

ಪಾದಮೂಲ : ಸ್ತಂಭದ ಪೀಠಭಾಗ, ಪದ್ಮಾಸನವುಳ್ಳದ್ದು

[ಚಿತ್ರಸ್ಕಂಭ: ಸ್ತಂಭದಪೀಠ ಭಾಗವಿಲ್ಲದ್ದು]

ಪಾದಮಧ್ಯ : ಸಾಶ್ರಯ/ನಿರಾಶ್ರಯ

ಸಾಶ್ರಯ : ಸ್ತಂಭದ ಪೀಠ/ಪದ್ಮಾಸನದ ಮೇಲೆ ಸಿಂಹ, ಗಜ, ವ್ಯಾಳಿ ಇತ್ಯಾದಿ ರಚನೆ.

ನಿರಾಶ್ರಯ : ಪೀಠದ ಮೇಲೆ ನೀಳವಾದ ಕೇವಲ ದಂಡಭಾಗ.

ಪಾದಾಗ್ರ : ಬೋದಿಗೆಯಿಂದ ಮೂಲಾಸ್ಥಾನದವರೆಗೆ ಅಲಂಕಾರಿಕ ಸ್ತರಗಳು : ವಿಷ್ಕಂಭ/ಸ್ತಂಭಭೂಷಣ – ಮಾಲಾಸ್ಥಾನ, ಲಶುನ, ಪದ್ಮ ಬಂಧ, ಆಸ್ಯ, ಕಂಠ, ಕುಂಭ, ಮಧ್ಯಮೂಲ, ಪದ್ಮ, ಫಲಕ, ವೀರಕಂಠ,ಬೋದಿಗೆ

ಬೋದಿಗೆ : ತರಂಗ/ಮುಷ್ಟಿಬಂಧ/ಪದ್ಮಮುಕುಳಾಕಾರ -ಕ್ಷೇಪಣ, ಛಾಯಾಭಾಗ

ತರಂಗ  : ಛಾಯಾಭಾಗದ ಮಧ್ಯದಲ್ಲಿ ಮಧ್ಯಪಟ್ಟ, ಎರಡೂ ಕಡೆ ತರಂಗ ರಚನೆ

ಮುಷ್ಟಿಬಂಧ : ಸುರುಳಿಯಾಕಾರದಲ್ಲಿ ಕ್ಷೇಪಣದ ಮುಂಚಾಚು ಛಾಯಾಭಾಗವು ಸರಳವಾಗಿ ಹಿಂದಕ್ಕೆ ಬಾಗಿದೆ ಮುಂಭಾಗದಲ್ಲಿ ವ್ಯಾಳ, ಯಾಳಿ ರಚನೆ.

ಪದ್ಮ ಮುಕುಳಾ : ಕ್ಷೇಪಣದ ಕೆಳಗೆ ಛಾಯಾಭಾಗದಲ್ಲಿ

ಕಾರ : ಊರ್ಧ್ವಪದ್ಮ, ಅಧೋಪದ್ಮ. ಅಧೋಪದ್ಮವು ಊರ್ಧ್ವ ಪದ್ಮವನ್ನು ಬಳಸಿ ಬಾಳೇಹೂವಿನಂತೆ ಮುಂದಕ್ಕೆ ಬಾಗುವಿಕೆ.

ವೀರಕಂಠ : ಬೋದಿಗೆ, ಫಲಕಗಳ ಮಧ್ಯೆ ಕಿರಿದಾದ ಚತುರಶ್ರ ರಚನೆ (ವೀರಗಂಡ/ಗಂಡ)

ಫಲಕ ಮತ್ತು : ವೀರಕಂಠದ ಕೆಳಗೆ ಅಗಲವಾದ (ಚತುರಶ್ರ) ಫಲಕ, ಪದ್ಮ ಅದಕ್ಕೆ ಹೊಂದಿಕೊಂಡಂತೆ ಕೆಳಗೆ ಊರ್ಧ್ವಪದ್ಮ.

ಮಧ್ಯಮೂಲ : ವೀರಕಂಠದಂತೆ ಪದ್ಮ ಮತ್ತು ಕುಂಭಗಳ ನಡುವೆ ಕಿರಿದಾದ ರಚನೆ

ಕುಂಭ : ಮಧ್ಯಮೂಲದ ಕೆಳಗೆ ಕುಂಭ ರಚನೆ.

ಆಸ್ಯ : ಕುಂಭದ ಕೆಳಗೆ ಆಸ್ಯ; ಒಂದರ ಮೇಲೊಂದು ತಟ್ಟೆಗಳನ್ನು ಜೋಡಿಸಿದಂತೆ.

ಪದ್ಮ : ಆಸ್ಯದ ಕೆಳಗೆ ಪದ್ಮ ರಚನೆ

ಲಶುನ : ಕುಂಭಕ್ಕಿಂತ ಕೊಂಚ ನೀಳವಾದ, ಅಗಲವಾದ ಕಂಠವುಳ್ಳ ರಚನೆ

ಮೂಲಾಸ್ಥಾನ : ಸ್ತಂಭಾಗ್ರದ ಕೆಳಗಿನ ಸ್ತರ, ಪೋಣಿಸಿದ ಮುತ್ತಿನ ಮಾಲೆಗಳ ಸ್ತಂಭದ ಸುತ್ತ ಉಬ್ಬು ಕೆತ್ತನೆ (ಮೇಲಿನ ಎಲ್ಲಾ ಸ್ತರಗಳನ್ನು ಕಾಣಲಾಗದು.)

ಸ್ತಂಭಗಳ ಆಕಾರ : ಚತುರಶ್ರ : ಬ್ರಹ್ಮಕಾಂತ
ಪಂಚಾಶ್ರ : ಶಿವಸ್ಕಾಂತ
ಷಡಶ್ರ   : ಸ್ಕಂದಕಾಂತ
ಅಷ್ಟಾಶ್ರ : ವಿಷ್ಣುಕಾಂತ
ಷೋಡಶಾಶ್ರ : ಚಂದ್ರಕಾಂತ
ವೃತ್ತ : ರುದ್ರಕಾಂತ

ಸ್ತಂಭಮೂಲದಲ್ಲಿ ಚತುರಶ್ರ, ಸ್ತಂಭಮಧ್ಯದಲ್ಲಿ ವಸ್ವಶ್ರ/ಷೋಡಶಾಸ್ತ್ರ, ಸ್ತಂಭಾಗ್ರದಲ್ಲಿ ವೃತ್ತಾಕಾರ

ಸಂಯೋಗಸ್ತಂಭ : ೧-೨-೪-೬-೮ ಉಪಪಾದಗಳು.
ಉಪಪಾದಗಳಲ್ಲಿ ಯಾಳಿ, ವ್ಯಾಳ, ಗಜ, ಸಿಂಹ ಇತ್ಯಾದಿ..,

ಭಿತ್ತಿ : ಜಾಲಕಭಿತ್ತಿ : ಗವಾಕ್ಷ/ಕುಂಜರಾಕ್ಷ/ಗುಳಿಕಾಜಾಲಕ ನಾಗಬಂಧ/ಪುಷ್ಪಬಂಧ/ವಲ್ಲೀಬಂಧ.

ಗವಾಕ್ಷ : ವಿಷಮಸಂಖ್ಯೆಯ ಕೋನ/ಬಾಹುಗಳುಳ್ಳ ರಂಧ್ರಗಳು

ಕುಂಜರಾಕ್ಷ : ಸಮಸಂಖ್ಯೆಯ ಕೋನ/ಬಾಹುಗಳುಳ್ಳ ರಂಧ್ರಗಳು

ಗುಳಿಕಾಜಾಲಕ : ವೃತ್ತಾಕಾರವುಳ್ಳ ರಂಧ್ರಗಳು.

ಭಿತ್ತಿಯ ಅಲಂಕಾರ : ತೋರಣ/ಕುಂಭಪಂಜರ/ವೃತ್ತಸ್ಫುಟತಿ ಇತ್ಯಾದಿ.,

ತೋರಣಗಳು : ಕುಡ್ಯತೋರಣ/ಪತ್ರತೋರಣ/ಚಿತ್ರತೋರಣ/ಮಕರ ತೋರಣ

ಭಿತ್ತಿಜಾಲಕ, ಬಾದಾಮಿ  /  ವಲ್ಲೀಬಂಧ, ನಂದಿ  /  ಗುಳಿಕಾಚಾಲಕ, ಬಾದಾಮಿ

ಭಿತ್ತಿಜಾಲಕ, ಬಾದಾಮಿ  /  ವಲ್ಲೀಬಂಧ, ನಂದಿ  /  ಗುಳಿಕಾಚಾಲಕ, ಬಾದಾಮಿ

ಪತ್ರತೋರಣ : ಭಿತ್ತಿಯ ಭದ್ರಭಾಗದಲ್ಲಿ ಸ್ತಂಭಗಳ ಮೇಲೆ ಅರ್ಧಚಂದ್ರಕಾರ, ಪತ್ರಾಜಿತಯುಳ್ಳ ರಚನೆ.

ಮಕರ ತೋರಣ : ತೋರಣ ಸ್ತಂಭಗಳ ಮೇಲೆ ಮಕರಾನನ, ಪಂಚವಕ್ತ್ರ, ಮಧ್ಯೆಪೂರಿದು

ತೋರಣಾಲಂಕಾರ, ಕಂಬದಹಳ್ಳಿ

ತೋರಣಾಲಂಕಾರ, ಕಂಬದಹಳ್ಳಿ

ಚಿತ್ರತೋರಣ : ತೋರಣಸ್ತಂಭಗಳ ಮೇಲೆ ಮಕರಾನನ, ಪಂಚವಕ್ತ್ರ, ಮಧ್ಯೆ ಪೂರಿಮ, ಸಿಂಹ, ಯಾಳಿ, ವಿದ್ಯಾಧರ ಮೂರ್ತಿಗಳು.

ಸ್ತಂಭತೋರಣ : ಅಂತರಾಳ, ನವರಂಗರ ನಡುವೆ ಎರಡು ಪೂರ್ಣಸ್ತಂಭ ಅಥವಾ ಅರ್ಧಸ್ತಂಭಗಳು ಬಾಗಿಲುವಾಡದೊಂದಿಗೆ, ತೋರಣ ಭಾಗದಲ್ಲಿ ವಿವಿಧ ಅಲಂಕಾರಗಳು, ಅಷ್ಟ ಮಂಗಲಗಳು.

ಅಷ್ಟಮಂಗಲ : ಎಂಟು ಮಂಗಳಸೂಚಕ ಚಿಹ್ನೆಗಳು. ದರ್ಪಣ, ಪೂರ್ಣ ಕುಂಭ, ವೃಷಭ, ಯುಗ್ಮ ಚಾಮರ, ಶ್ರೀವತ್ಸ, ಶೂಲ, ಸ್ವಸ್ತಿಕ, ಶಂಖ, ದೀಪ ಇತ್ಯಾದಿ.,

ವೃತ್ತಸ್ಫುಟಿಕ : ಫಲಕ ಮಧ್ಯದಲ್ಲಿ ತೋರಣಸ್ತಂಭಗಳಂತೆ ಉಬ್ಬು ಕೆತ್ತನೆ, ಸ್ತಂಭಗಳ ಮೇಲ್ಭಾಗದಲ್ಲಿ ಪಂಜರ, ಶಾಲಾ, ಶಿಖರಾಕೃತಿಗಳು, ಸ್ತಂಭಗಳ ಮಧ್ಯೆ ಗುಹಾಭಾಗದಲ್ಲಿ ವಿಗ್ರಹ ರಚನೆ.

ಕುಂಭಪಂಜರ : ಫಲಕ ಮಧ್ಯದಲ್ಲಿ ಉಬ್ಬುಶಿಲ್ಪ, ಸ್ತಂಭರಚನೆಯಂತೆ, ಸ್ತಂಭ ಮೂಲದಲ್ಲಿ ಪದ್ಮಾಸನ, ನಂತರ ಪೂರ್ಣಕುಂಭ, ಕುಂಭ ಮುಖದಿಂದ ಸ್ತಂಭ, ಸ್ತಂಭದ ಎರಡೂ ಕಡೆ, ಸ್ತಂಭದಿಂದ ಹೊರಟ ಲತಾಲಂಕಾರ, ಸ್ತಂಭಾಗ್ರದಲ್ಲಿ ಪಂಜರ, ಶಾಲಾ, ಶಿಖರಾಕೃತಿಗಳು.

ಪ್ರಸ್ತರ : ೧. ಕಪೋತ ಪೂರ್ವಭಾಗ ೨. ಕಪೋತ ೩. ಕಪೋತೋತ್ತರ ಭಾಗ.

ಕಪೋತಪೂರ್ವಭಾಗ : ಉತ್ತರ, ವಾಜನ, ವಲಭೀ ಸ್ತರಗಳು.

ಉತ್ತರ = ತುಲಾ/ತೊಲೆ, ವಾಜನ = ಮುಂಚಾಚಿದ ಪಟ್ಟಿ, ವಲಭೀ = ಭೂತಮಾಲಾ/ಹಂಸಮಾಲಾ ಇತ್ಯಾದಿ., ಉತ್ತರ ವಾಜನದ ಮುಂಭಾಗದಲ್ಲಿ ಸ್ತಂಭದ ಮೇಲೆ ನಾಟಕ, ಯಕ್ಷ, ವಿದ್ಯಾಧರ ನರ್ತಕೀ ವಿಗ್ರಹಗಳು. ವಲಭೀ ನಂತರ ಕೆಲವೆಡೆ ಮುಷ್ಟಿಬಂಧ/ಪದ್ಮ.ವಾಜನ.

ಕಪೋತ : ಕಪೋತ ರಚನೆ ; ಕಪೋತದ ಮೇಲೆ ಕಪೋತ ನಾಸಿ/ಕ್ಷುದ್ರ ನಾಸೀ/ನೇತ್ರನಾಸೀಮೂಲೆಗಳಲ್ಲಿ ವಲ್ಲೀಮಂಡಲ, ಕರ್ಣ ಭದ್ರಗಳ ನಡುವೆ ಕಪೋತನಾಸೀ ನೇತ್ರನಾಸಿಯ ಕೆಳಗೆ ಭಿತ್ತಿ ಭಾಗದಲ್ಲಿ ನಾಸೀಪಾದ, ಕಪೋತದ ಮುಂಚಾಚು ವಲಭೀ ವರೆಗೆ ಗೋಪಾನ.

ಪ್ರಸ್ತರದ ಭಾಗಗಳು, ಶ್ರವಣಬೆಳಗೊಳ

ಪ್ರಸ್ತರದ ಭಾಗಗಳು, ಶ್ರವಣಬೆಳಗೊಳ

ಕಪೋತೋತ್ತರ ಭಾಗ : ಆಲಿಂಗ, ಅಂತರಿತ, ಪ್ರತಿ, ವಾಜನ ಪ್ರತಿಯ ಭಾಗದಲ್ಲಿ ಚಿತ್ರಖಂಡ, (ಸ) ಮಕರ, ಪ್ರಸ್ತರದ ಮೂಲೆಗಳಲ್ಲಿ ಮೇಲ್ಗಡೆ ನಂದಿ, ಸಿಂಹ ವಾಹನಗಳು.

ಭೂಮಿ/ತಲರಚನೆ : ಹಾರ :ಕರ್ಣಕೂಟ, ಹಾರಾಂತರ, ಪಂಜರ, ಅಲ್ಪನಾಸೀ ಕೋಷ್ಠ ಇತ್ಯಾದಿ.

ಕರ್ಣಕೂಟ : ಚತುರಶ್ರ, ಅಷ್ಟಾಶ್ರ, ವೃತ್ತಾಕಾರ ವೇದಿ, ಕಂಠ, ಶೀರ್ಷ, ಸ್ತೂಪಿಕಾ ಸ್ತರಗಳು. ಶೀರ್ಷ=ಮಸ್ತಕ, ಶೀರ್ಷಭಾಗದಲ್ಲಿ ನಾಲ್ಕು ದಿಕ್ಕಿನಲ್ಲಿಯೂ ನಾಸಿಕ ರಚನೆ, ಗುಹಾ ಭಾಗದಲ್ಲಿ ದೇವತಾ ವಿಗ್ರಹ.

ಕೂಟ-ನಾಸಿ-ಕೋಷ್ಠ-ನಾಸಿ-ಕೂಟ, ಕಂಬದಹಳ್ಳಿ

ಕೂಟ-ನಾಸಿ-ಕೋಷ್ಠ-ನಾಸಿ-ಕೂಟ, ಕಂಬದಹಳ್ಳಿ

ಕೋಷ್ಠ : ಶಾಲಾ, ಆಯತಾಕಾರ ರಚನೆ, ಎರಡೂ ಪಾರ್ಶ್ವಗಳಲ್ಲಿ ಪಟ್ಟಿಕೆಗಳಿಂದ ಕೂಡಿದ ಲಲಾಟ ನಾಸಿಕಾ ನಾಸೀ=ನಾಸಿಕಾ=ಅಲ್ಪನಾಸೀ=ಕ್ಷುದ್ರಪಂಜರ

ನಾಸಿಕಾ : ಪ್ರಭೇದಗಳು-೧. ಶಕ್ತಿಧ್ವಜ ಸಹಿತ ೨. ಸ್ವಸ್ತಿಕಾಕಾರ ೩. ಅರ್ಧಕೋಟಿ ಸಮನ್ವಿತ

ಶಕ್ತಿಧ್ವಜ ಸಹಿತ   : ನಾಸ ಅಥವಾ ಗಾಢ ಮತ್ತು ಧಕ್ತಿಧ್ವಜ

ನಾಸ : ವೃತ್ತಾಕಾರ, ಮುಖಪಟ್ಟಿಕೆ ಮತ್ತು ವಲ್ಲೀಯಮಂಡಲದಿಂದ ಆವೃತವಾದ ಕುಕ್ಷೀ ಅಥವಾ ಗಾಢ.

ಶಕ್ತಿಧ್ವಜ : ಗಲ ಮತ್ತು ಕಿನ್ನರೀ ವಕ್ತ್ರ

ಕರ್ಣಕೂಟ, ನಂದಿ  /  ನಾಸಿಕಾ - ಶಕ್ತಿಧ್ವಜ ಸಹಿತ, ಲಕ್ಕುಂಡಿ

ಕರ್ಣಕೂಟ, ನಂದಿ  /  ನಾಸಿಕಾ – ಶಕ್ತಿಧ್ವಜ ಸಹಿತ, ಲಕ್ಕುಂಡಿ

ಪಂಜರ : ಮುಂಭಾಗ ನಾಸಿಕಾಕಾರ, ಹಿಂಭಾಗ ಹಸ್ತಿಪುಷ್ಠ ಹಂಸತುಂಡ ಅಧಿಷ್ಠಾನ, ಪಾದ, ಪ್ರಸ್ತರ, ನಾಸ, ಶಕ್ತಿಧ್ವಜ.

ಗ್ರೀವ : ದೇವಾಲಯದ ಶೈಲಿಯನ್ನು ಅನುಸರಿಸಿ ಗ್ರೀವದ ಆಕಾರ, ಚತುರಶ್ರ ನಾಗರ, ಅಷ್ಟಾಶ್ರ ದ್ರಾವಿಡ, ವೃತ್ತ ವೇಸರ (ವೇದಿಕಾ ಭಾಗ ಮತ್ತು ಗಲೋದಯ) ಗಲೋದಯಾದಲ್ಲಿ ಉತ್ತರ, ವಾಜನ, ಮುಷ್ಟಿಬಂಧ, ಮೃಣಾಲಿಕಾ, ನಂತರ ದಂಡಿಕಾ, ವಲಯ. ಮುಷ್ಟಿಬಂಧದ ಮುಂಭಾಗದಲ್ಲಿ ವ್ಯಾಳ, ಸಿಂಹಮುಖ (ನಾಟಕ) ನರ್ತಕೀಶಿಲ್ಪ.

ಶಿಖರ : ದೇವಾಳಯದ ಶೈಲಿಯನ್ನು ಅನುಸರಿಸಿ ಕಂಠದಲ್ಲಿ ಗುರುತಿಸಿದಂತೆ ನಾಗರ ದ್ರಾವಿಡ ವೇಸರ ಶಿಖರಗಳು. ಶಿಖರದಲ್ಲಿ ಮಹಾನಾಸೀ ಭದ್ರನಾಸೀ ಅಥವಾ ವೃತ್ತಸ್ಪುಟಿತದ ನಾಸಿಕಾ ಭಾಗ ಮುಖಪಟ್ಟಿಕೆಯಿಂದ ಆವರಿಸಿದ ಕುಕ್ಷೀ, ಗಲ, ಕನ್ನರೀ ವಕ್ತ್ರ. ಕಪೋಲ/ಕರ್ಣಭಾಗದಲ್ಲಿ ಲತಾಲಂಕಾರ, ಮೇಲ್ತುದಿಯಲ್ಲಿ ಫಲಿಕಾ ಮಂಡಲ ಮತ್ತು ಪದ್ಮ.

ಸ್ತೂಪೀ : ಶಿಲಾ/ಲೋಹ ರಚನೆ (ಪದ್ಮ), ವಲಗ್ನ, ಕುಂಭ, ಕಂಧರ, ಪಾಲೀ, ಕುಡ್ಮಲ

ಪ್ರಾಕಾರ : ೧. ಅಂತರ್ಮಂಡಲ ೨. ಅಂತರ್ಹಾರ ೩. ಮಧ್ಯಹಾರ ೪. ಮರ್ಯಾದ ಮತ್ತು ೫. ಮಹಾಮರ್ಯಾದ. ಪ್ರಾಕಾರ ಭಿತ್ತಿ = ಸಾಲಶೀರ್ಷ, ಮೊದಲ ಎರಡು ಪ್ರಕಾರಗಳಲ್ಲಿ ಆವೃತ ಮಂಡಪಗಳು ಮಾಲಿಕಾ ಮಂಡಪಗಳು/ಸುತ್ತಾಲಯ.

ನಾಗರ ಶೈಲಿ ಚತುರಶ್ರ ರಚನೆ  /  ವೇಸರ ಶೈಲಿ ವೃತ್ತಾಕಾರ ರಚನೆ  /  ದ್ರಾವಿಡಶೈಲಿ ಅಷ್ಟಾಶ್ರ ರಚನೆ

ನಾಗರ ಶೈಲಿ ಚತುರಶ್ರ ರಚನೆ  /  ವೇಸರ ಶೈಲಿ ವೃತ್ತಾಕಾರ ರಚನೆ  /  ದ್ರಾವಿಡಶೈಲಿ ಅಷ್ಟಾಶ್ರ ರಚನೆ

ಸುತ್ತಾಲಯ : ಹಲವು ದೇವತಾ ವಿಗ್ರಹಗಳು, ಜಾಲಂದ್ರಗಳು.

ಗೋಪುರ : ೧. ದ್ವಾರಶೋಭಾ ೨. ದ್ವಾರಶಾಲಾ ೩. ದ್ವಾರ ಪ್ರಾಸಾದ ೪. ದ್ವಾರ ಹರ್ಮ್ಯ ಮತ್ತು ೫. ದ್ವಾರಗೋಪುರ ೩-೪-೫-೬-೭ ತಲ/ಭೂಮಿರಚನೆ ಶಾಲಾಶಿಖರ, ಹಲವು ಸ್ತೂಪೀ ರಚನೆ. ತಲ ರಚನೆಯಲ್ಲಿ ಕರ್ಣಕೂಟ, ಪಂಜರ, ಕ್ಷುದ್ರನೀಡ, ಶಾಲಾರಚನೆ.

ಚಾವುಂಡರಾಯ ಬಸದಿ - ದ್ರಾವಿಡ ಶಿಖರ, ಶ್ರವಣಬೆಳಗೊಳ

ಚಾವುಂಡರಾಯ ಬಸದಿ – ದ್ರಾವಿಡ ಶಿಖರ, ಶ್ರವಣಬೆಳಗೊಳ

ಪರಿವಾರ ದೇವತೆಗಳು / ವಿಮಾನತಲ ದೇವತೆಗಳು   ದ್ವಾರ ದೇವತೆಗಳು : ಶಿವಹರ್ಮ್ಯ : ನಂದಿ ಮತ್ತು ಮಹಾಕಾಳ ವಿಷ್ಣುಹರ್ಮ್ಯ : ಚಂಡ ಮತ್ತು ಪ್ರಚಂಡ ಗರ್ಭಗೃಹ / ಅಂತರಾಳ – ಹೊರಭಿತ್ತಿ ಮುಂಭಾಗ : ಬಲಭಾಗ – ನೃತ್ಯಮೂರ್ತಿ ಅಥವಾ ವಿನಾಯಕ ಎಡಭಾಗ : ದುರ್ಗಾ ಅಥವಾ ಸರಸ್ವತೀ ಪ್ರಾಸಾದಭಿತ್ತಿ / ಗರ್ಭಗೃಹಭಿತ್ತಿ/ ಹೊರಾವರಣ ದಕ್ಷಿಣ ಮಧ್ಯ : ವ್ಯಾಖ್ಯಾನ ದಕ್ಷಿಣಾಮೂರ್ತಿ ಕೋಷ್ಠ : ಗ್ರೀವಭಾಗ ಗೇಯಮೂರ್ತಿ/ವೀರಭದ್ರ ಪಶ್ಚಿಮ ಮಧ್ಯ ಕೋಷ್ಠ : ಲಿಂಗೋದ್ಭವ / ಅರ್ಧನಾರೀಶ್ವರ ಗ್ರೀವಕೋಷ್ಠ : ಕೇಶವ, ನರಸಿಂಹ, ಅಚ್ಯುತ ಉತ್ತರ ಮಧ್ಯಕೋಷ್ಠ : ಸ್ಥಾನಕಬ್ರಹ್ಮ ಗ್ರೀವಕೋಷ್ಠ : ಧನದ/ಕಮಲಜ ಪೂರ್ವ ಗ್ರೀವ ಕೋಷ್ಠ : ಗಜಾರೂಢ ಇಂದ್ರ/ಪುರಂದರ/ ಸುಬ್ರಹ್ಮಣ್ಯ

ಪರಿವಾರ ದೇವತೆಗಳು : ೮-(೧೨)-೧೬-೩೨

ಅಂತರ್ಹಾರ-೮, ಮಧ್ಯಹಾರ-೮, ಅಂತರ್ಮಂಡಲ-೮

೧. ವೃಷಭ, ಗಣಾಧಿಪ, ಕಮಲಜ, ಮಾತೃ, ಗುಹ, ಆರ್ಯ, ಅಚ್ಯುತ ಮತ್ತು ಚಂಡೇಶ (೮).

೨. ವೃಷಭ, ಆರ್ಯಕ, ಸಪ್ತಮಾತೃಕ, ಗಣೇಶ್ವರ, ಸುಬ್ರಹ್ಮಣ್ಯ, ಜ್ಯೇಷ್ಠಾ, ಭಾಸ್ಕರ, ಕಮಲಜ (೮).

೩. ವೃಷಭ, ಕಮಲಜ, ಗುಹ, ಹರಿ, ರವಿ, ಗಜವದನ, ಯಮ, ಮಾತೃ, ಜಲೇಶ, ದುರ್ಗಾ ಧನದ ಮತ್ತು ಚಂಡ (೧೨).

೪. ಇತರರು : ಅನಲ, ವೀರಭದ್ರ, ಕಾತ್ಯಾಯಿನಿ, ವಿಷ್ಣು, ಅಶ್ವಿನಿದೇವತೆಗಳು, ಪಿತಾಮಹ, ವೈವಸ್ವತ, ರೋಹಿಣಿ, ಮರುತ್, ರುದ್ರ, ಸರಸ್ವತೀ, ಲಕ್ಷ್ಮೀ ಇತ್ಯಾದಿ.

ದಾಕ್ಷಿಣಾತ್ಯ ಸಂಪ್ರದಾಯನಾಗರಶೈಲಿ

ರಾಮಲಿಂಗೇಶ್ವರ ದೇವಾಲಯ, ನರಸಮಂಗಲ

ರಾಮಲಿಂಗೇಶ್ವರ ದೇವಾಲಯ, ನರಸಮಂಗಲ