ಪ್ರಾಚೀನ ಕರ್ನಾಟಕದಲ್ಲಿರುವ ಔತ್ತರೇಯ ಸಂಪ್ರದಾಯದ ದೇವಾಲಯಗಳನ್ನು ಎರಡು ಹಂತಗಳಲ್ಲಿ ಗುರುತಿಸಬಹುದು. ಇದಕ್ಕೆ ಶಾಸನಗಳ ಉಲ್ಲೇಖಗಳೇ ಆಧಾರ. ಬಳ್ಳಾರಿ ಜಿಲ್ಲೆಯ ಹೊಳಲು ಶಾಸನವು ಹನ್ನೆರಡನೆಯ ಶತಮಾನದ್ದೆನಿಸಿದರೂ, ಮೊದಲನೆಯ ಹಂತದ ದೇವಾಲಯಗಳು ಬಾದಾಮಿ ಚಾಲುಕ್ಯರ ಕಾಲಕ್ಕೆ ಸಂಬಂಧಿಸಿದ್ದು, ಈ ದೇವಾಲಯಗಳನ್ನು ಕ್ರಿ.ಶ. ಏಳನೆ ಶತಮಾನದ ಆರಂಭದಿಂದ ಒಂಬತ್ತನೆ ಶತಮಾನದವರೆಗೆ ಗುರುತಿಸಬಹುದು. ಈ ಕಾಲದಲ್ಲಿ ಕಳಿಂಗ ಶೈಲಿಯೊಂದೇ ಔತ್ತರೇಯ ಸಂಪ್ರದಾಯದ ಪ್ರತಿನಿಧಿಯಾಗಿತ್ತು. ಉಳಿದ ದೇವಾಲಯಗಳು ದಾಕ್ಷಿಣಾತ್ಯ ಶೈಲಿಗಳಲ್ಲಿ ರಚನೆಗೊಂಡಿವೆ. ಈ ದೇವಾಲಯಗಳು ಐಹೊಳೆ, ಬಾದಾಮಿ, ಪಟ್ಟದಕಲ್ಲು, ಮಹಾಕೂಟಗಳಲ್ಲಿ ಒಟ್ಟಿಗೆ ಪ್ರದರ್ಶನಗೊಂಡಿವೆ. ಈ ದೇವಾಲಯಗಳನ್ನು ಸಂಪ್ರದಾಯ, ಶೈಲಿ ರೀತ್ಯಾ ಪ್ರಾತಿನಿಧಿಕವಾಗಿ ಗುರುತಿಸಲಾಗಿದೆ.

73_382_DV-KUH

ಸಂಪ್ರದಾಯ ಶೈಲಿ ದೇವಾಲಯ ಸ್ಥಳ
ಔತ್ತರೇಯ ಕಳಿಂಗ ತಾರಬಸಪ್ಪನ ಗುಡಿ ಐಹೊಳೆ
ಹುಚ್ಚಿಮಲ್ಲಿ ಗುಡಿ ಐಹೊಳೆ
ಹುಚ್ಚಪ್ಪಯ್ಯನ ಗುಡಿ ಐಹೊಳೆ
ಸಂಗಮೇಶ್ವರ ಮಹಾಕೂಟ
ಗಳಗನಾಥ ಪಟ್ಟದಕಲ್ಲು
ಪಾಪನಾಥ ಪಟ್ಟದಕಲ್ಲು
ದಾಕ್ಷಿಣಾತ್ಯ ನಾಗರ ಭೂತನಾಥ ಬಾದಾಮಿ
ಮೇಲಿನ ಶಿವಾಲಯ ಬಾದಾಮಿ
ವಿಜಯೇಶ್ವರ ಪಟ್ಟದಕಲ್ಲು
ದ್ರಾವಿಡ ಮಹಾಕೂಟೇಶ್ವರ ಮಹಾಕೂಟ
ಮಲ್ಲಿಕಾರ್ಜುನ ಮಹಾಕೂಟ
ಮಾಲೆಗಿತ್ತಿ ಶಿವಾಲಯ ಬಾದಾಮಿ
ವೇಸರ ಮಲ್ಲಿಕಾರ್ಜುನ ಪಟ್ಟದಕಲ್ಲು

ಎರಡನೆಯ ಹಂತದ ಔತ್ತರೇಯ ಸಂಪ್ರದಾಯದ ದೇವಾಲಯಗಳು ಕಲ್ಯಾಣದ ಚಾಲುಕ್ಯರ ಹಾಗೂ ಹೊಯ್ಸಳರ ಕಾಲಕ್ಕೆ ಸೇರಿದೆ. ಈ ದೇವಾಲಯಗಳು ಕ್ರಿ.ಶ. ಹತ್ತನೆಯ ಶತಮಾನದಿಂದ ಹದಿಮೂರನೆ ಶತಮಾನದ ಅಂತ್ಯದವರೆಗೆ ರಚನೆಯಾದವು. ಈ ಕಾಲದಲ್ಲಿ ಔತ್ತರೇಯ ದ್ರಾವಿಡ ಶೈಲಿಯೇ ಪ್ರಮುಖವಾದುದು. ಈ ಶೈಲಿಯ ದೇವಾಲಯಗಳನ್ನು ವ್ಯಾಪಕವಾಗಿ ಕಾಣಬಹುದು. ಇದರೊಂದಿಗೆ, ಭೂಮಿಜ, ವಿಮಾನನಾಗರ ಹಾಗೂ ಲತಿನ ಶೈಲಿಯ ರಚನೆಗಳಿವೆ. ಇವುಗಳ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು. ಕುಬಟೂರು ಶಾಸನವು ಗುರುತಿಸುವ “ಪಿರಿದುಂ ನಾಗರ” (Greater Nagara) ಶೈಲಿಯು ಲತಿನ ಮತ್ತು ವಿಮಾನ ನಾಗರ ಶೈಲಿ ಅಥವಾ ಪ್ರಭೇದಗಳನ್ನೊಳಗೊಂಡಿದೆ.

ವರಾಟ ಶೈಲಿಯನ್ನು ಶಾಸನವು ಗುರುತಿಸದೆ ಇರುವುದರಿಂದ, ನಾಸಿಕಾ ರಚನೆ ಇಲ್ಲದ ಔತ್ತರೇಯ ದ್ರಾವಿಡ ಶೈಲಿಯಡಿಯಲ್ಲಿ ಗುರುತಿಸಬಹುದು. ಕುಬಟೂರು ಶಾಸನವೂ ಹನ್ನೆರಡನೆಯ ಶತಮಾನದ್ದು. ಈ ಕಾಲದಲ್ಲಿ ಹಲವು ದೇವಾಲಯಗಳು ರಚನೆಗೊಂಡಿವೆ. ಶಾಸನವು ಗುರುತಿಸುವ ಶೈಲಿಗಳನ್ನನುಸರಿಸಿ ಕೆಲವು ದೇವಾಲಯಗಳನ್ನು ಪ್ರಾತಿನಿಧಿಕವಾಗಿ ಉದಾಹರಿಸಿದೆ.

ಸಂಪ್ರದಾಯ ಶೈಲಿ ದೇವಾಲಯ ಸ್ಥಳ
ಔತ್ತರೇಯ ದ್ರಾವಿಡ ಕಲ್ಲೇಶ್ವರ ಕುಕ್ಕನೂರು
ಯಲ್ಲಮ್ಮನಗುಡಿ ಬಾದಾಮಿ
ಗಳಗನಾಥ ಹರಳಹಳ್ಳಿ
ದೊಡ್ಡಬಸಪ್ಪ ಡಂಬಳ
ಕೇಶವ ಸೋಮನಾಥಪುರ
ಶಿವಾಲಯ ಅರಸೀಕೆರೆ
ಮಲ್ಲಿಕಾರ್ಜುನ ಬಸರಾಳು
ಭೂಮಿಜ ಮೂಲೆಶಂಕರೇಶ್ವರ ತುರುವೇಕೆರೆ
ಸದಾಶಿವ ನುಗ್ಗೇಹಳ್ಳಿ
ಚೆನ್ನಕೇಶವ (?) ಬೇಲೂರು
ಪಿರಿದುಂನಾಗರ:
-ಲತಿನ ಶಿಖರೇಶ್ವರ ಹತ್ತರಗಿ
-ವಿಮಾನ ನಾಗರ ಗಣಪತಿ ಹಾನುಗಲ್ಲು

ಪ್ರೊ. ಢಾಕೆಯವರು ಔತ್ತರೇಯ ದ್ರಾವಿಡ (ನಾಗರಿಕ ದ್ರಾವಿಳ) ಶೈಲಿಯ ದೇವಾಲಯವನ್ನು ವೇಸರ ಅಥವಾ ಕರ್ನಾಟ (Later Karnata) ಶೈಲಿ ಎನ್ನುತ್ತಾರೆ. ಆದರೆ ಪ್ರಸ್ತುತ ಅಧ್ಯಯನದಲ್ಲಿ ಶಾಸನಗಳಲ್ಲಿ ಕಂಡುಬರುವ ಶೈಲಿಗಳ ಹೆಸರುಗಳನ್ನೇ ದಾರಿದೀಪವಾಗಿ ಸ್ವೀಕರಿಸಿರುವುದರಿಂದ ಈ ಶೈಲಿಗಳನ್ನು ಶಾಸ್ತ್ರರೀತ್ಯಾ ಗುರುತಿಸಲು ಪ್ರಯತ್ನಿಸಲಾಗಿದೆ. ದೊಡ್ಡಗದ್ದವಳ್ಳಿ ಶಾಸನದಲ್ಲಿರಿವ ಸರ್ವತೋಭದ್ರ, ವರ್ಧಮಾನ, ಸ್ವಸ್ತಿಕ ಪ್ರಭೇದಗಳನ್ನು ಔತ್ತರೇಯ ದ್ರಾವಿಡ ಶೈಲಿಯಲ್ಲಿ ಗುರುತಿಸಲಾಗಿದೆ. ಪ್ರೊ.ಢಾಕೆಯವರು ಹೊಯ್ಸಳರ ಕಾಲದ ಮೂಲೆ ಶಂಕರೇಶ್ವರ, ಸದಾಶಿವ ದೇವಾಲಯಗಳನ್ನು ಪ್ರಾದೇಶಿಕ ಶೈಲಿಗಳನ್ನು ಮೈಗೂಡಿಸಿಕೊಂಡ ಭೂಮಿಜ ಶೈಲಿ ಎನ್ನುತ್ತಾರೆ. ಹಾನುಗಲ್ಲಿನ ಗಣಪತಿ ದೇವಾಲಯವನ್ನು ಶೇಖರಿ ಪ್ರಭೇದವೆನ್ನುತ್ತಾರೆ. ಔತ್ತರೇಯ ಸಂಪ್ರದಾಯದ ಲತಿನವು ಏಕಶೃಂಗ ರಚನೆಯಾದರೆ ವಿಮಾನ ನಾಗರವು ಬಹುಶೃಂಗ ರಚನೆ. ಪ್ರಾಸಾದಮಂಡನ ಗ್ರಂಥದ ಪ್ರಕಾರ ಒಂದೇ ಶೃಂಗವುಳ್ಳದ್ದು ಲತಿನ. ಶೃಂಗೇಣೈಕೇನ ಲತಿನಃ“- ಇದು ಶಾಸ್ತ್ರೋಕ್ತಿ (ಜೈನ್ : ೧೯೩:೧೧೨). ಅಪರಾಜಿತಪೃಚ್ಛಾ ಗ್ರಂಥಕಾರನು ಬಹುಶೃಂಗ ರಚನೆಯನ್ನು ಏಕಾಂಡೈಶ್ಚ ವಿಭೂಷಿತಾನ್ ಎಂದಿದ್ದಾನೆ(ಮಂಕಡ್: ೧೯೫೦ : ೩೮೮).

ಬಹುಶೃಂಗ ರಚನೆಯಲ್ಲಿ ಕೇಸರಿ ಎಂಬ ಪ್ರಭೇವಿದ್ದು, ಇದನ್ನು ಪ್ರೊ.ಢಾಕೆಯವರು ಶೇಖರಿ ಎಂದಿದ್ದಾರೆ. ಕೇಸರಿಯೊಂದಿಗೆ ಹಲವು ಪ್ರಭೇದಗಳಿವೆ. ಪ್ರಾಸಾದ ಮಂಡನ ಗ್ರಂಥದಲ್ಲಿ ಇವುಗಳ ವಿವರಣೆ ಇಂತಿದೆ (ಜೈನ್: ೧೯೬೩ : ೧೧೩).

ಕೇಸರೀ ಪ್ರಮುಖಾ ಕರ್ಣೇ ವಿಮಾನಮುರುಶೃಂಗಕಂ
ತಥೈವ ಮೂಲಶಿಖರಂ ಪಂಚಭೂಮಿ ವಿಮಾನಕಂ
ವಿಮಾನನಾಗರಾ ಜಾತಿಸ್ತದಾ ಪ್ರಾಜ್ಞೆರುದಾಹೃತಾ
ಏವಂ ಶೃಂಗೋರುಶೃಂಗಾಣಿ ಸಂಭವಂತಿ ಬಹೂನ್ಯಪಿ

ಕೇಸರಿ ಮುಂತಾದ ಪ್ರಭೇದಗಳಲ್ಲಿ ಮೂಲಶೃಂಗವು ಪಂಚ ಭೂಮಿ ರಚನೆ. ಮೂಲ ಶೃಂಗವನ್ನು ಸುತ್ತುವರೆದಂತೆ ಉರುಶೃಂಗಗಳಿವೆ. ಉರುಶೃಂಗ ಹಾಗೂ ಪ್ರತ್ಯಂಗಗಳ ನಿಯಮಿತವಾದ ಜೋಡಣೆ ಇದೆ. ಔತ್ತರೇಯ ರಚನೆಗಳಲ್ಲಿ ನಿರಂಧಾರ ಮತ್ತು ಸಾಂಧಾರ ಎಂದು ಎರಡು ರೀತಿ. ನಿರಂಧಾರ ಎಂದಲ್ಲಿ ಪ್ರದಕ್ಷಿಣಾ ಪಥವಿಲ್ಲದ್ದು. ಸಾಂಧಾರ ಎಂದಲ್ಲಿ ಪ್ರದಕ್ಷಿಣಾಪಥವುಳ್ಳದ್ದು. ನಿರಂಧಾರದಲ್ಲಿ ಪುನಃ ಹಲವು ಪ್ರಭೇದಗಳಿವೆ. ಇವನ್ನು ವೈರಾಜ್ಯಾದಿ ಪ್ರಭೇದಗಳೆನ್ನುತ್ತಾರೆ. “ವೈರಾಜ” ಎನ್ನುವ ಪದ ದೊ‌ಡ್ಡಗದ್ದವಳ್ಳಿ ಶಾಸನದಲ್ಲಿದೆ. ವೈರಾಜವು ಲತಿನಕ್ಕೆ ಸಂವಾದಿ. ಇದು ಏಕಶೃಂಗ ರಚನೆ; ಚತುರಶ್ರಾಕಾರವುಳ್ಳದ್ದು. ಹೆಚ್ಚು ಅಲಂಕಾರವಿಲ್ಲ. ವೈರಾಜ ನಂತರದ ಪ್ರಭೇದಗಳು ಮೂಲಶೃಂಗದ ಸುತ್ತ ಉರುಶೃಂಗ, ಪ್ರತ್ಯಂಗಗಳಿಂದ ಕೂಡಿದ್ದು, ಇವುಗಳಲ್ಲಿ “ಮಂದರ” ಎನ್ನುವ ಪ್ರಭೇದ ಹಾನುಗಲ್ಲಿನ ಗಣಪತಿ ದೇವಾಲಯದಲ್ಲಿ ರೂಪುಗೊಂಡಿದೆ. ಶಾಸ್ತ್ರ ಗ್ರಂಥಗಳಲ್ಲಿರುವ ಪ್ರತಿಯೊಂದು ಅಂಶಗಳನ್ನು ವಾಸ್ತುರಚನೆಗಳಲ್ಲಿ ಕಾಣಲಾಗದಿದ್ದರೂ, ಸ್ಥೂಲವಾಗಿ ಕೆಲವು ಲಕ್ಷಣಗಳನ್ನು ಗುರುತಿಸಿಕೊಂಡು ಅಧ್ಯಯನಕ್ಕೊಂದು ಮಾರ್ಗವನ್ನು ಕಂಡುಕೊಳ್ಳಬಹುದು.

ಹಾನುಗಲ್ಲಿನ ತಾರಕೇಶ್ವರ ದೇವಾಲಯದ ಶಿಖರದ ಮುಂಭಾಗದಲ್ಲಿ ಶುಕನಾಸದ ಮೇಲೆ ಹೊಯ್ಸಳ ಲಾಂಛನವಿದೆ. ಹನ್ನೆರಡನೆ ಶತಮಾನದಲ್ಲಿ ಕೆಲವು ಕಾಲ ಆಳ್ವಿಕೆ ನಡೆಸಿದ ಹೊಯ್ಸಳ ಅರಸರು ಈ ದೇವಾಲಯ ರಚನೆಯನ್ನು ಪ್ರೋತ್ಸಾಹಿಸಿರಬಹುದು. ತಾರಕೇಶ್ವರ ದೇವಾಲಯದ ಮಂಟಪದ ಒಳಛತ್ತಿನ ಅಲಂಕಾರ ಹಾಗೂ ಪಕ್ಕದಲ್ಲಿರುವ ಗಣಪತಿ ದೇವಾಲಯದ ಮುಖ ಮಂಟಪದ ವಿತಾನ ರಚನೆಗೂ ಸಾಮ್ಯವಿದೆ. ಇವೆರಡೂ ದೇವಾಲಯಗಳ ರಚನೆಗೆ ಒಂದೇ ಗುಂಪಿನ ಕಂಡರಣೆಕಾರರು ದುಡಿದಿರಲು ಸಾಧ್ಯವಿದೆ. ಇವೆರಡೂ ದೇವಾಲಯಗಳು ಸಮಕಾಲೀನ ರಚನೆಗಳು.

ಹೊಯ್ಸಳರ ಪ್ರಮುಖ ನೆಲೆ ದಕ್ಷಿಣ ಕರ್ನಾಟಕ. ತುಂಗಭದ್ರೆಯ ಕೆಳಗೆ; ಇಲ್ಲಿ ಬಳಪದ ಕಲ್ಲಿನ ಪಾರುಪತ್ಯ. ತುಂಗಭದ್ರೆಯ ಮೇಲಕ್ಕೆ ಮರಳುಗಲ್ಲು ಹಾಗೂ ಕಪ್ಪುಹಸಿರು ಮಿಶ್ರಿತ ತುಸು ಗಡುಸಾದಕಲ್ಲಿನ ಬಳಕೆ ಇದೆ. ಬಳಪದಕಲ್ಲಿನಷ್ಟು ಮೆದುವಲ್ಲ. ಹೆಚ್ಚು ಕುಸುರಿ ಕಲೆ ಇಲ್ಲ. ತಾರಕೇಶ್ವರ, ತಿಳವಳ್ಳಿಯ ಬಸದಿ ಮೊದಲಾದೆಡೆಗಳಲ್ಲಿ ಭಿತ್ತಿಯಲ್ಲಿ ಮೂಡಿದ ವಿಮಾನ ನಾಗರ ಶೈಲಿಯನ್ನು ಗಣಪತಿ ದೇವಾಲಯದ ಶಿಖರದಲ್ಲಿ ಪೂರ್ಣಪ್ರಮಾಣದಲ್ಲಿ ಮೂಡಿಸಿದ್ದಾರೆ. ತುರುವೇಕೆರೆಯ ಮೂಲೆ ಶಂಕರೇಶ್ವರ ಹಾಗೂ ನುಗ್ಗೇಹಳ್ಳಿಯ ಸದಾಶಿವ ದೇವಾಲಯಗಳು ಹೊಯ್ಸಳರ ಕಾಲದ ರಚನೆಗಳು. ಇವೆರಡೂ ಭೂಮಿಜ ಶೈಲಿಯ ರಚನೆಗಳು. ಔತ್ತರೇಯ ಸಂಪ್ರದಾಯದ ಈ ಮೂರು ದೇವಾಲಯಗಳನ್ನು ವ್ಯವಸ್ಥಿತ ರೀತಿಯಲ್ಲಿ ವಿವರಿಸಲು ಯತ್ನಿಸಲಾಗಿದೆ. ಈ ವಿವರಣೆಗಳು ಹಲವು ಪರಿಷ್ಕರಣೆಗಳೊಂದಿಗೆ ಮುಂದಿನ ಅಧ್ಯಯನಕ್ಕೆ ಮಾದರಿಯಾಗಬಲ್ಲದು.

-೧-

. ದೇವಾಲಯದ ಹೆಸರು : ಗಣಪತಿ ದೇವಾಲಯ

. ಸ್ಥಳ : ಹಾನುಗಲ್ಲು, ಹಾವೇರಿ ಜಿಲ್ಲೆ; ಹಿಂದೆ ಇದು ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿತ್ತು.

. ಚಾರಿತ್ರಿಕ ಹಿನ್ನೆಲೆ: ಹಾನುಗಲ್ಲಿನ ಪ್ರಾಚೀನ ರೂಪ ಪಾನುಂಗಲ್ಲ. ಪೌರಾಣಿಕವಾಗಿ ಹಾನುಗಲ್ಲಿನ ಕೋಟೆಗೆ (ಮಹಾಭಾರತದ)ವಿರಾಟನ ಪೊಳಲು ಎಂಬ ಹೆಸರಿದೆ. ಇದೊಂದು ಪ್ರಾಚೀನ ಕಾಲದ ಸುಪ್ರಸಿದ್ಧ ನಾಲ್ಕು ಸುತ್ತಿನ ಮಣ್ಣಿನ ಕೋಟೆ ಎಂದು ಹೆಸರಿಸಲಾಗಿದೆ. ಊರ ಮಧ್ಯದಲ್ಲಿ ತಾರಕೇಶ್ವರ ದೇವಾಲಯ ಮತ್ತು ಗಣಪತಿ ದೇವಾಲಯಗಳಿವೆ.

ಹಾನುಗಲ್ಲಿನ ಕದಂಬ ವಂಶದವರು ಕಲ್ಯಾಣದ ಚಾಲುಕ್ಯರಿಗೆ ಹಾಗೂ ಹೊಯ್ಸಳರಿಗೆ ಹನ್ನೆರಡನೇ ಶತಮಾನದಲ್ಲಿ ಮಹಾಸಾಮಂತರಾಗಿ ಇಲ್ಲಿ ಆಳ್ವಿಕೆ ನಡೆಸಿದರು. ಹೊಯ್ಸಳ ವಿಷ್ಣುವರ್ಧನ ಹಲವು ಬಾರಿ ಇಲ್ಲಿಗೆ ಲಗ್ಗೆ ಇಟ್ಟಿದ್ದ. ಬಂಕಾಪುರವನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ್ದ. ಇವನ ನಂತರ ಇಮ್ಮಡಿ ಬಲ್ಲಾಳನು ಈ ಸ್ಥಳವನ್ನು ಆಕ್ರಮಿಸಿಕೊಂಡಿದ್ದ. ಹನ್ನೆರಡನೆ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಆರನೇ ವಿಕ್ರಮಾದಿತ್ಯ, ಮೂರನೆಯ ಸೋಮೇಶ್ವರ ಇವರು ಈ ಭಾಗದಲ್ಲಿ ಆಳುತ್ತಿದ್ದರು.

. ಕಾಲ: ಈ ದೇವಾಲಯವು ಹನ್ನೆರಡನೇ ಶತಮಾನದ ಮಧ್ಯ ಭಾಗದ ರಚನೆ; ಈ ದೇವಾಲಯಕ್ಕೆ ಸಂಬಂಧಿಸಿದ ಯಾವ ಶಾಸನಗಳೂ ಲಭ್ಯವಿಲ್ಲ. ತಾರಕೇಶ್ವರ ಮತ್ತು ಗಣಪತಿ ದೇವಾಲಯಗಳನ್ನು ಒಂದೇ ಗುಂಪಿನ ಕಂಡರಣೆಕಾರರು ರಚಿಸಿರಬಹುದು. ಈ ರೂವಾರಿಗಳಿಗೆ ಔತ್ತರೇಯ ಸಂಪ್ರದಾಯದ ಖಚಿತ ಅರಿವಿತ್ತು ಎಂದು ತಿಳಿಯಬಹುದು.

. ಸಂಪ್ರದಾಯ/ಶೈಲಿ: ದೇವಾಲಯವತು ಔತ್ತರೇಯ ಸಂಪ್ರದಾಯದ ವಿಮಾನನಾಗರ ಶೈಲಿಯದು; ಮಂದರವೆಂಬ ಪ್ರಭೇದದ ಶಿಖರವಿದೆ.

. ವಿಶೇಷ ಮಾಹಿತಿ/ಲಕ್ಷಣಗಳು: ಕರ್ನಾಟಕದಲ್ಲಿ ಪೂರ್ಣಪ್ರಮಾಣದ ವಿಮಾನ ನಾಗರ ಶೈಲಿಯ ದೇವಾಳಯ ಇದೊಂದೇ ಲಭ್ಯ. ಈ ರೀತಿಯ ಶಿಖರದ ಮಾದರಿಗಳು ಕರ್ನಾಟಕದಲ್ಲಿ ಔತ್ತರೇಯ ಸಂಪ್ರದಾಯದ ಭಿತ್ತಿ ಅಥವಾ ಜಂಘಾ ಭಾಗದಲ್ಲಿ ಹಲವೆಡೆ ಲಭ್ಯವಿದೆ. ಮಂದರ ಪ್ರಭೇದ ಹೆಚ್ಚು ಜನಪ್ರೀಯವಾದದ್ದು. ಕುಬಟೂರಿನ ಕೋಟಿನಾಥ ದೇವಾಲಯದ ಭಿತ್ತಿಯಲ್ಲಿ ಇಂತಹ ಮಾದರಿಯೊಂದನ್ನು (ಶೇಖರಿ), ಢಾಕೆಯವರು ಗುರುತಿಸಿದ್ದಾರೆ. ತಿಳವಳ್ಳಿಯ ಶಾಂತಿನಾಥ ಬಸದಿಯಲ್ಲಿಯೂ ಈ ಶಿಖರ ಮಾದರಿಯನ್ನು ಕಾಣಬಹುದು.

ಗಣಪತಿ ದೇವಾಲಯದ ಪೂರ್ಣಚಿತ್ರ

ಗಣಪತಿ ದೇವಾಲಯದ ಪೂರ್ಣಚಿತ್ರ

. ವಿಸ್ತೃತ ವಿವರಣೆ : ಗಣಪತಿ ದೇವಾಲಯದ ಊರ್ಧ್ವಕ್ರಮವನ್ನು ಪೀಠ, ಜಂಘಾ, ಛಾದ್ಯ, ಶಿಖರ, ಆಮಲಸಾರ ಮತ್ತು ಕಲಶ ಎಂದು ವಿಭಾಗಿಸಿಕೊಳ್ಳಬಹುದು. ತಿರ್ಯಕ್ರಮದಲ್ಲಿ ಗರ್ಭಗೃಹ, ಅಂತರಾಳ (ಕೋಲಿಕಾ) ಮತ್ತು ಕಕ್ಷಾಸನವುಳ್ಳ ಮಂಟಪವಿದೆ.

. ಊರ್ಧ್ವಕ್ರಮ :ಪೀಠ: ದೇವಾಲಯದ ಪೀಠ ರಚನೆ ಎತ್ತರವಾಗಿದ್ದು ಎರಡು ಹಂತಗಳ ಪೀಠವುಳ್ಳದ್ದು. ಗರ್ಭಗೃಹದ ಭಾಗದಲ್ಲಿ ಪೀಠದ ಕೆಲವು ಸ್ತರಗಳು ಭೂಮಿಯಲ್ಲಿ ಮರೆಯಾಗಿದ್ದರೂ, ಮಂಟಪದ ಭಾಗದಿಂದ ಗುರುತಿಸಬಹುದು. ಮೊದಲ ಹಂತದ ಪೀಠವು ಗರ್ಭಗೃಹ, ಮಂಪಟದ ಭಾಗ ಎರಡನ್ನೂ ಆವರಿಸಿದೆ. ಈ ಭಾಗವು ದಕ್ಷಿಣಾತ್ಯ ಸಂಪ್ರದಾಯದಲ್ಲಿ ಕಾಣುವ ಉಪಪೀಠದಂತಿದೆ. ಮೊದಲ ಹಂತದ ಪೀಠದ ಕೆಳಗೆ ಭಿಟ್ ಸ್ತರವಿದೆ; ನಂತರ ಎರಡು ಸ್ತರಗಳ ಖುರಕ, ಪದ್ಮ ಪತ್ರ, ಛೇದ, ಕಂಠ, ಅಂತರಪತ್ರ ಹಾಗೂ ಕಪೋತ ರಚನೆ ಇದೆ. ಎರಡನೆ ಹಂತದ ಪೀಠ ಭಾಗವು ಗರ್ಭಗೃಹದ ಭಾಗದಲ್ಲಿದ್ದು, ಕಕ್ಷಾಸನದ ಸ್ತರಗಳನ್ನು ಮುಖಮಂಟಪದೆಡೆಯಲ್ಲಿ ಕಾಣಬಹುದು. ಗರ್ಭಗೃಹದ ಭಾಗವು ಪಕ್ಕಾ ಔತ್ತರೇಯ ಸಂಪ್ರದಾಯದ ಸ್ತರಗಳನ್ನು ಹೊಂದಿದೆ. ಕೆಳಹಂತದ ಕಪೋತಾನಂತರ ಛೇದ, ಖುರಕ, ಪದ್ಮಪತ್ರ, ಛೇದ, ಕರ್ಣಿಕಾ, ಛೇದ, ಕುಂಭ, ಛೇದ, ಕಂಠ, ಛೇದ, ಕರ್ಣಿಕಾ (ಕುಮುದ), ಕಂಠ, ಅಂತರಪತ್ರ, ಕಪೋತ ಭಾಗಗಳಿವೆ. ಇಲ್ಲಿರುವ ಕುಂಭ ರಚನೆಯ ಮಧ್ಯದಲ್ಲಿ ಅಲಂಕೃತ ಉಬ್ಬುಪಟ್ಟಿಕೆ ಇದೆ. ಕೆಳಹಂತ ಪೀಠದ ನಂತರ ಗರ್ಭಗೃಹ ಭಾಗದಲ್ಲಿ ಎಡಕ್ಕೆ ಜಲಪ್ರನಾಳದ ಮುಂಚಾಚನ್ನು ಕಾಣಬಹುದು.

ಜಂಘಾ: ಪೀಠ ರಚನೆಯ ನಂತರ ಜಂಘಾ ಅಥವಾ ಭಿತ್ತಿ ಭಾಗವು ಸರಳ ರಚನೆಯಾಗಿದ್ದು ಅಣುಕು ಸ್ತಂಭಗಳನ್ನು ಕಾಣಬಹುದು. ಅಂತರಾಳದ ಭಾಗದಲ್ಲಿ ಕುಂಭೀ, ಸ್ತಂಭ, ಭರಣಿ, ಸ್ತಂಭ ಶೀರ್ಷ ಮೊದಲಾದ ಭಾಗಗಳನ್ನೂ ಗುರುತಿಸಬಹುದು.

ಛಾದ್ಯ: ಗರ್ಭಗೃಹದ ಭಾಗದಲ್ಲಿ ಛಾದ್ಯದ ಮುಂಬಾಗು ಹೆಚ್ಚು ಕೆಳಗಿಳಿದಿಲ್ಲ. ಮಂಪಟದ ಭಾಗದಲ್ಲಿ ತುಸುಭಿನ್ನವಾಗಿದ್ದು ಹೆಚ್ಚು ಮುಂಚಾಚಿದ್ದು ಮಂಟಪಕ್ಕೆ ರಕ್ಷಣೆ ಒದಗಿಸಿದೆ.

ಶಿಖರ: ಛಾದ್ಯದ ನಂತರ ಶಿಖರ ರಚನೆ; ಮೂಲಶೃಂಗವು ಉರುಶೃಂಗ ಮತ್ತು ಪ್ರತ್ಯಂಗಗಳಿಂದ ಸುತ್ತುವರೆದ ಮಂದರ ಪ್ರಭೇದವೆನ್ನಿಸಿದೆ. ಅದರ ವಿವರಣೆ ಕೆಳಕಂಡಂತಿದೆ (ಮಂಕಡ್ : ೧೯೫೦ : ೩೮೨).

ಪೀಠ ಮತ್ತು ಜಂಘಾ ಭಾಗ

ಪೀಠ ಮತ್ತು ಜಂಘಾ ಭಾಗ

ದ್ವೇದ್ವೇ ಕರ್ಣೇ ತಥಾಭದ್ರೇ ಶೃಂಗಂ ಪ್ರತಿರಥೇಥವಾ
ಏವಂ ವಿಧಃ ಪ್ರಕರ್ತವ್ಯಃ ಮಂದರಸ್ತು ಶಿವಾತ್ಮಜಃ

ವಿಮಾನ ನಾಗರ - ಮಂದರ ಪ್ರಭೇದ

ವಿಮಾನ ನಾಗರ – ಮಂದರ ಪ್ರಭೇದ

ಸಾಂಧಾರ ಮತ್ತು ನಿರಂಧಾರ ಎರಡು ದೇವಾಲಯಗಳಲ್ಲಿ ಶಿಖರವು ಒಂದೇ ರೀತಿಯದು. (ಮಂಕಡ್ಃ: ೧೯೫೦ : ೩೮೯).

ಕರ್ಣೇ ದ್ವೇಭದ್ರಕೇ ದ್ವೇ ಚೈಕಂ
ಪ್ರತಿರಥೇ ತಥಾ

ಗರ್ಭಗೃಹದ ತಲಚ್ಛಂದ ಪಂಚಾಂಗವುಳ್ಳದ್ದು; ಕರ್ಣ – ಪ್ರತಿರಥ – ಭದ್ರ – ಪ್ರತಿರಥ – ಕರ್ಣ – ಇವೇ ಐದು ಅಂಗಗಳು. ಕರ್ಣಭಾಗದಲ್ಲಿ ಕರ್ಣಶೃಂಗ, ಪ್ರತಿರಥ ಭಾಗದಲ್ಲಿ ಪ್ರತ್ಯಂಗ, ಭದ್ರಭಾಗದಲ್ಲಿ ಉರುಶೃಂಗ; ಕರ್ಣಶೃಂಗ ಮತ್ತು ಪ್ರತ್ಯಂಗಗಳಲ್ಲಿ ಭೇದವಿಲ್ಲ. ಮೂಲಶೃಂಗವನ್ನು ಸುತ್ತುವರೆದಂತೆ ಭದ್ರಭಾಗದಲ್ಲಿ ಎರಡು, ಕರ್ಣ ಭಾಗದಲ್ಲಿ ಎರಡು, ಪ್ರತಿ ರಥ ಭಾಗದಲ್ಲಿ ಒಂದೊಂದು, ಮೂಲ ಶೃಂಗವೂ ಸೇರಿ ಶೃಂಗಗಳ ಸಂಖ್ಯೆ ಇಪ್ಪತ್ತೈದು – ಇದು ಮಂದರ ಪ್ರಭೇದವೆಂದು ಗುರುತಿಸಲ್ಪಟ್ಟಿದೆ. ಶೃಂಗಗಳ ಮುಂಭಾಗದಲ್ಲಿ ನಾಸಿಕೆಯಂತಹ ಅಲಂಕಾರವೂ, ತುದಿಯಲ್ಲಿ ಕೀರ್ತಿ ಮುಖವನ್ನು ಕಾಣಬಹುದು.

ಆಮಲಸಾರ: ಶೃಂಗಗಳ ಮೇಲ್ಭಾಗದಲ್ಲಿ ಆಮಲಸಾರವೂ ನಂತರ ಗುಬಟೆಯಾಕಾರದ ಕಲಶ ರಚನೆ ಇದೆ. ಅಪರಾಜಿತಪೃಚ್ಛಾ ಗ್ರಂಥಕಾರನು ಕಲಶಕ್ಕೆ ಬದಲಾಗಿ ‘ಆಕಾಶ ಲಿಂಗ’ ಎಂಬ ಪದವನ್ನು ಬಳಸಿದ್ದಾನೆ. ಈ ದೇವಾಲಯದಲ್ಲಿರುವ ಕಲಶ ರಚನೆಯನ್ನು ಆಕಾಶ ಲಿಂಗ ಎನ್ನಲು ಮತ್ತುಷ್ಟು ಸಾಕ್ಷಾಧಾರಗಳು ಬೇಕು.

ಕಕ್ಷಾಸನದ ಹೊರಭಾಗದ ಅಲಂಕಾರ

ಕಕ್ಷಾಸನದ ಹೊರಭಾಗದ ಅಲಂಕಾರ

ತಿರ್ಯಕ್ರಮ: ಗರ್ಭಗೃಹವು ಚತುರಶ್ರಾಕಾರ ರಚನೆ. ಇದಕ್ಕೆ ಹೊಂದಿಕೊಂಡಂತೆ ಅಂತರಾಳ ಅಥವಾ ಕೋಲಿಕಾ. ಬಾಗಿಲುವಾಡವು ಚತುಃಶಾಖೆಯುಳ್ಳದ್ದು. ಶಾಖೆಗಳ ಮಧ್ಯದಲ್ಲಿ ರೂಪಸ್ತಂಭ ಅಲಂಕೃತವಾದದ್ದು. ಲಲಾಟ ಬಿಂಬದಲ್ಲಿ ಗಣಪತಿಯ ಉಬ್ಬು ಕೆತ್ತನೆ ಇದೆ. ಬಾಗಿಲುವಾಡದ ಕೆಳಗೆ ಹೊಸ್ತಿಲು ಅಥವಾ ಉದುಂಬರದ ಮುಂದೆ ಚಂದ್ರ ಶಿಲೆ ಇದೆ. ಅಂತರಾಳದ ಮುಂಭಾಗದ ಎರಡು ಸ್ತಂಭಗಳು ಮತ್ತು ಮಧ್ಯಭಾಗದ ನಾಲ್ಕು ಸ್ತಂಭಗಳು ಪೂರ್ಣ ಪ್ರಮಾಣದ್ದು. ಬಾಗಿಲುವಾಡದ ಇಕ್ಕೆಲಗಳಲ್ಲಿ ಎರಡು ಅರೆಗಂಭಗಳು; ಉಳಿದವು ಸುತ್ತಲೂ ಇರುವ ಕಕ್ಷಾಸನದೊಂದಿಗೆ ಬೆಸೆಯಲ್ಪಟ್ಟಿವೆ. ಮಂಟಪದ ಭಾಗದಲ್ಲಿ ಮೊದಲ ಹಂತದ ಪೀಠ ರಚನೆ, ನಂತರ ಕಕ್ಷಾಸನವಿದೆ. ರಾಜಸೇನಾ, ವೇದಿಕಾ, ಆಸನಪಟ್ಟ, ಮತ್ತವಾರಣ – ಇವು ಕಕ್ಷಾಸನದ ಭಾಗಗಳು. ಮತ್ತವಾರಣವೇ ಕಕ್ಷಾಸನದ ಒರಗುಭಾಗ. ವೇದಿಕಾ ಭಾಗದಲ್ಲಿ ಸ್ತಂಭಕುಂಭ ಅಥವಾ ಸ್ತಂಭ ಪಂಜರಗಳ ಅಲಂಕರಣವಿದೆ. ಇಲ್ಲಿ ಲತಿನ ಮಾದರಿಯ ಏಕಶೃಂಗಗಳ ಉಬ್ಬು ಕೆತ್ತನೆಗಳನ್ನು ಕಾಣಬಹುದು. ಕಕ್ಷಾಸನದ ಒಳಭಾಗದಲ್ಲಿ ಆಸನ ಪಟ್ಟದ ಮೇಲೆ ಸ್ತಂಭಗಳು ನಿಂತಿವೆ. ಸ್ತಂಭಶೀರ್ಷಾ ನಂತರ ಛಾದ್ಯದ ಬಾಗುವಿಕೆಯನ್ನು ಮಂಟಪದ ಸುತ್ತ ಕಾಣಬಹುದು. ಛಾದ್ಯದ ಮೇಲಿರುವ ಕೈಪಿಡಿ ಗೋಡೆ ನಾಶವಾಗಿದ್ದು ಇತ್ತೀಚೆಗಿನ ರಿಪೇರಿಯಾದ ಭಾಗವನ್ನು ಕಾಣಬಹುದು. ಮಂಡಪದಲ್ಲಿ ವಿತಾನ ರ‍ಚನೆ ಇದ್ದು, ಇದರ ಅಲಂಕಾರ ತಾರಕೇಶ್ವರ ದೇವಾಲಯದ ವಿತಾನದಂತಿದೆ. ಈ ರೀತಿಯ ಅಲಂಕಾರವನ್ನು ಗುಜರಾತಿನ ದೇವಾಲಯಗಳಲ್ಲಿ ಕಾಣಬಹುದು.

ಗರ್ಭಗೃಹದಲ್ಲಿ ಗಣಪತಿ ವಿಗ್ರಹ, ದೇವಾಲಯದ ಗಾತ್ರಕ್ಕೆ ಹೋಲಿಸಿದಲ್ಲಿ ಚಿಕ್ಕದು; ಇದು ತದನಂತರದ ಕಾಲದಲ್ಲಿ ಇರಿಸಿದ ವಿಗ್ರಹವಿರಬಹುದು.

-೨-

. ದೇವಾಲಯದ ಹೆಸರು : ಸದಾಶಿವ ದೇವಾಲಯ

. ಸ್ಥಳ : ನುಗ್ಗೇಹಳ್ಳಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ

. ಚಾರಿತ್ರಿಕ ಹಿನ್ನೆಲೆ : ಹೊಯ್ಸಳರ ಕಾಲದಲ್ಲಿ ದೇವಾಲಯ ರಚನೆ ಪರಾಕಾ‌ಷ್ಟೆಯನ್ನು ಕ್ರಿ.ಶ. ೧೩ನೆಯ ಶತಮಾನದಲ್ಲಿ ಮುಟ್ಟಿದ್ದು ದೇವಾಲಯಗಳ ಸ್ವರ್ಣಯುಗ ಎನ್ನಬಹುದು. ಹೊಯ್ಸಳ ಸೋಮೇಶ್ವರನ ಮಹಾಪ್ರಧಾನ ಹಾಗೂ ದಂಡನಾಯಕ ಬೊಮ್ಮಣ್ಣನು ನುಗ್ನೇಹಳ್ಳಿಯಲ್ಲಿ ಶ್ರೀ ವಿಜಯ ಸೋಮನಾಥಪುರವೆಂಬ ಅಗ್ರಹಾರವನ್ನು ನಿರ್ಮಿಸಿದ. ಕ್ರಿ.ಶ. ೧೨೪೭ರಲ್ಲಿ ಪ್ರಸನ್ನಕೇಶವ, ನರಸಿಂಹ ಮತ್ತು ಗೋಪಾಲರನ್ನು ಒಳಗೊಂಡ ದೇವಾಲಯವೂ ಕ್ರಿ.ಶ. ೧೨೪೯ರಲ್ಲಿ ಸದಾಶಿವ ದೇವಾಲಯವೂ ನಿರ್ಮಾಣಗೊಂಡಿದ್ದು ದೇವಾಲಯದ ಕೈಂಕರ್ಯಕ್ಕಾಗಿ ಹಲವು ದಾನದತ್ತಿಗಳನ್ನು ನೀಡಿ, ನಿರಂತರ ಪೂಜೆಗೆ ವ್ಯವಸ್ಥೆಗೊಳಿಸಿದ.

ಸದಾಶಿವ ದೇವಾಲಯದ ಪೂರ್ಣಚಿತ್ರ

ಸದಾಶಿವ ದೇವಾಲಯದ ಪೂರ್ಣಚಿತ್ರ

. ಕಾಲಮಾನ : ದೇವಾಲಯದ ಪ್ರತಿಷ್ಠಾಪನೆ ಕ್ರಿ.ಶ. ೧೨೪೯

. ಸಂಪ್ರದಾಯ ಶೈಲಿ : ಔತ್ತರೇಯ ಸಂಪ್ರದಾಯ – ಭೂಮಿಜ ಶೈಲಿ

. ವಿಶೇಷ ಮಾಹಿತಿ/ಲಕ್ಷಣಗಳು : ಈ ದೇವಾಲಯವು ಪ್ರಾದೇಶಿಕ ಲಕ್ಷಣಗಳನ್ನು ಮೈಗೂಡಿಸಿಕೊಂಡ ಭೂಮಿಜ ಶೈಲಿ. ಕರ್ನಾಟಕದಲ್ಲಿ ಭೂಮಿಜ ಮಾದರಿಯ ಶಿಖರಗಳನ್ನು ಪ್ರೊ. ಢಾಕೆಯವರು ಲಕ್ಕುಂಡಿಯ ಕಾಶಿವಿಶ್ವೇಶ್ವರ ದೇವಾಲಯಗಳಲ್ಲಿ ಗುರುತಿಸಿ, ಅತಿ ಪ್ರಾಚೀನವೆಂದಿದ್ದಾರೆ (ಕ್ರಿ.ಶ. ೧೦೧೦).ಕಲ್ಯಾಣದ ಚಾಲುಕ್ಯರ ಹಾವೇರಿ ಸಿದ್ಧೇಶ್ವರ, ಹೊಯ್ಸಳರ ಕಾಲದ ಕಿಕ್ಕೇರಿಯ ಮಲ್ಲೇಶ್ವರ, ಅಮೃತಾಪುರದ ಅಮೃತೇಶ್ವರ ದೇವಾಲಯಗಳಲ್ಲಿಯೂ ಭೂಮಿಜ ಮಾದರಿಯ ಶಿಖರಗಳು ಗುರುತಿಸಲ್ಪಟ್ಟಿವೆ.

. ವಿಸ್ತೃತ ವಿವರಣೆ : ದಖ್ಖನ್ ಪ್ರದೇಶದಲ್ಲಿ ಭೂಮಿಜ ಶೈಲಿಯ ದೇವಾಲಯಗಳು, ಬಾಗಿದ ಶಿಖರ ಮತ್ತು ಆಮಲಕಗಳನ್ನು ಹೊಂದಿವೆ. ಕರ್ನಾಟಕದಲ್ಲಿ ಕಿರಿದಾಗುತ್ತಾ ಮೇಲೇರುವ ಪಿರಮಿಡ್ ಆಕಾರದ ಶಿಖರವನ್ನೂ, ಕೊಂಚ ಚಪ್ಪಟಿಯಾದ ಆಮಲಸಾರವನ್ನು ಹೋಲುವ ಘಂಟಾ ರಚನೆಯನ್ನೂ ಹೊಂದಿದೆ. ಕಿರುಶೃಂಗಗಳ ಮಾಲಿಕೆಗಳ ಮಧ್ಯೆ ಇಮ್ಮೊಗದ ಪಟ್ಟಿಕಾರಚನೆ ಇದೆ. ಊರ್ಧ್ವಕ್ರಮದಲ್ಲಿ ಜಗತಿ, ಪೀಠ, ಜಂಘಾ, ಛಾದ್ಯ, ಶಿಖರ, ವೇದಿ ಘಂಟಾ ರಚನೆಗಳಿವೆ. ತುದಿಯಲ್ಲಿ ಇತ್ತೀಚಿನ ಲೋಹದ ಕಲಶವಿದೆ. ತಿರ್ಯಕ್ರಮದಲ್ಲಿ ಗರ್ಭಗೃಹ, ಅಂತರಾಳ, ಮಂಟಪ, ತ್ರಿಕ, ನಂದೀಮಂಟಪವೂ, ದಕ್ಷಿಣ ದಿಕ್ಕಿನಲ್ಲಿ ಪ್ರಮುಖ ದ್ವಾರವನ್ನೊಳಗೊಂಡ ಮುಖಮಂಟಪವೂ ಸೇರಿದೆ. ದೇವಾಲಯವು ಅಷ್ಟ ಮೂಲೆಗಳುಳ್ಳ ನಕ್ಷತ್ರಾಕಾರ ಗರ್ಭಗೃಹವನ್ನು ಹೊಂದಿದೆ. ಶಿಖರವು ತ್ರಿಭೂಮಿ ರಚನೆಯೆನಿಸಿದೆ.

ಜಗತಿ : ದೇವಾಲಯದ ತಲಚ್ಛಂದದಂತೆ ಸುತ್ತ ಜಗತಿ ರಚನೆ ; ಸುಮಾರು ಮೂರು – ಮೂರುವರೆ ಅಡಿಗಳಷ್ಟು ಎತ್ತರವುಳ್ಳದ್ದು. ಜಗತಿಯ ಕೆಳಗೆ ಭಟ್ ಸ್ತರವಿದೆ. ನಂತರ ಖುರಕ, ಪದ್ಮಪತ್ರ, ಅಂತರಪತ್ರ, ಕಂಠ, ಪಟ್ಟಿಕೆ, ಅಂತರಪತ್ರ ಹಾಗೂ ವೇದಿ ಸ್ತರಗಳಿವೆ. ಈ ಸ್ತರಗಳ ನಡುವೆ ಕೆಲವೆಡೆ ಛೇದವೆನ್ನುವ ಕಿರಿದಾದ ಜೋಡಣೆ ಸ್ತರವನ್ನು ಕಾಣಬಹುದು.

ಪೀಠ ರಚನೆ

ಪೀಠ ರಚನೆ

ಪೀಠ: ಪೀಠವು ಸರಳವಾದ ರಚನೆ, ಖುರಕ, ಪದ್ಮಪತ್ರ, ಕರ್ಣಿಕಾ, ಪದ್ಮಪತ್ರ (ಕುಂಭ?), ವೃತ್ತ ಕುಮುದ, ಕಪೋತ ಮೊದಲಾದ ಸ್ತರಗಳಿವೆ. ಇಲ್ಲಿಯೂ ಕಿರಿದಾದ ಛೇದ, ಅಂತರಪತ್ರಗಳನ್ನು ಜೋಡಣೆಗಾಗಿ ಸ್ತರಗಳ ಮಧ್ಯೆ ಕಾಣಬಹುದು. ಪೀಠದ ಕೆಳಗೆ ಭಿಟ್ ಸ್ತರವಿದೆ.

ಜಂಘಾ: ಗರ್ಭಗೃಹವು ಒಳ ಭಾಗದಲ್ಲಿ ಚತುರಶ್ರಾಕಾರವಿದ್ದರೂ ಹೊರಭಾಗ ನಕ್ಷತ್ರಾಕಾರವಿದ್ದು ಜಂಘಾ ಭಾಗದ ಮೂಲೆಗಳು ಸ್ತಂಭ ರಚನೆಯನ್ನು ಅನುಕರಿಸುತ್ತವೆ.

ಛಾದ್ಯ: ಜಂಘಾ ನಂತರ ಛಾದ್ಯವಿದ್ದು, ಹೆಚ್ಚು ಬಾಗಿಲ್ಲದೆ ಸರಳವಾಗಿ ಪದ್ಮ ಪತ್ರದಂತಿದೆ.

ಶಿಖರ: ಔತ್ತರೇಯ ದೇವಾಲಯಗಳ ಇತರ ಶೈಲಿಗಳಲ್ಲಿ ಮೂಲಶೃಂಗ, ಉರುಶೃಂಗಗಳು ಕಂಡುಬಂದರೆ, ಭೂಮಿಜ ಶೈಲಿಯಲ್ಲಿ ಕುರುಶೃಂಗಗಳು (ಪ್ರತ್ಯಂಗಗಳು) ಕೆಳಗಿನಿಂದ ಮೇಲಕ್ಕೆ ಸ್ಥಾನಕ್ಕೆ ತಕ್ಕಂತೆ ಕಿರಿದಾಗುತ್ತಾ ಸಾಗುತ್ತವೆ. ಇದನ್ನು ಅಪರಾಜಿತಪೃಚ್ಛಾದ ಗ್ರಂಥಕಾರನು ಶೃಂಗಾಣಾಂ ಮಾಲಿಕಾಕ್ರಮಃ ಎಂದು ಗುರುತಿಸಿದ್ದಾನೆ. ಈ ಮಾಲಿಕೆಗಳ ಜೋಡಣೆಯ ಮಧ್ಯೆ ಇಮ್ಮೊಗದ ಕಿರುಪಟ್ಟಿಕೆ, ಲತಾಲಂಕಾರದೊಂದಿಗೆ ಕೆಳಗಿನಿಂದ ಮೇಲಕ್ಕೆ ಸಾಗುತ್ತದೆ. ಈ ಕಿರುಶೃಂಗಗಳ ರಚನೆಯಲ್ಲಿಯೂ ಛಾದ್ಯ, ಶಿಖರ, ಕಲಶ ರಚನೆಗಳನ್ನು ಕಾಣಬಹುದು. ಶಿಖರವು ಮೂರು ಹಂತಗಳುಳ್ಳ ತ್ರಿಭೂಮಿ ರಚನೆಯಾಗಿದ್ದು ಶಿಖರದ ನಂತರ ವೇದಿ ರಚನೆಯನ್ನು ಕಾಣಬಹುದು. ವೇದಿಯ ಮೂಲೆಗಳಲ್ಲಿ ಕೆಲವೆಡೆ ನಂದಿ ವಿಗ್ರಹಗಳಿವೆ.

ಭೂಮಿಜ ಶಿಖರ

ಭೂಮಿಜ ಶಿಖರ

ಘಂಟಾ : ಔತ್ತರೇಯ ದ್ರಾವಿಡ ಶೈಲಿಯಲ್ಲಿ ಘಂಟಾ ಭಾಗವು ಅಗಲದ ಮೂರನೆ ಎರಡರಷ್ಟು ಎತ್ತರವುಳ್ಳದ್ದು. ಭೂಮಿಜ ಶೈಲಿಯಲ್ಲಿ ಘಂಟಾ ರಚನೆಯು ಆಮಲಸಾರಕ್ಕೆ ಹೆಚ್ಚು ಹತ್ತಿರವಾದದ್ದು. ಇದೂ ತಲಚ್ಛಂದದಂತೆ ಅಷ್ಟಾಶ್ರ ರಚನೆ. ಘಂಟಾ ರಚನೆಯ ಮೇಲ್ಭಾಗದಲ್ಲಿ ಪದ್ಮರಚನೆ ಇದ್ದು ನಂತರದ ಕಲಶ ಸ್ಥಾಪನೆಗೆ ವೇದಿಕೆ ಎನಿಸಿದೆ.

ಕಲಶ : ದೇವಾಲಯದಲ್ಲಿದ್ದ ಶಿಲಾಕಲಶ ನಶಿಸಿದ್ದು, ತದನಂತರದ ಕಾಲದ ಲೋಹ ಕಲಶವಿದೆ.

ತಿರ್ಯಕ್ರಮ : ಗರ್ಭಗೃಹದ ಒಳಭಾಗ ಚತುರಶ್ರರಚನೆ, ನಂತರ ಅಂತರಾಳವಿದೆ. ಅಂತರಾಳದ ಲಲಾಟ ಭಾಗದಲ್ಲಿ ನಾಟ್ಯ ಗಣಪತಿಯ ಉಬ್ಬು ಶಿಲ್ಪವಿದೆ. ಅಂತರಾಳದ ನಂತರ ಮಂಟಪ; ಪೂರ್ವ ಹಾಗೂ ದಕ್ಷಿಣ ದಿಕ್ಕಿನಲ್ಲಿ ದ್ವಾರಗಳಿವೆ. ಮಂಟಪ ಮಧ್ಯದಲ್ಲಿ ಪೂರ್ಣಪ್ರಮಾಣದ ನಾಲ್ಕು ಸ್ತಂಭಗಳು, ಸುತ್ತ ಭಿತ್ತಿಗೆ ಸೇರಿರುವ ಅರೆಗಂಭಗಳು. ಮಧ್ಯದ ಅಂಕಣ ಹೆಚ್ಚು ವಿಸ್ತಾರವುಳ್ಳದ್ದು ಮತ್ತು ಇದರ ನೆಲಹಾಸು ತುಸು ಎತ್ತರವುಳ್ಳದ್ದು. ಪೂರ್ವದಿಕ್ಕಿನ ದ್ವಾರದಲ್ಲಿ ಉಮಾಸಹಿತ ಶಿವನ ಉಬ್ಬು ಕೆತ್ತನೆ. ನಂತರ ನಂದಿ ಮಂಟಪವಿದೆ. ನಂದಿ ಮಂಟಪದ ಹೊರಭಾಗ ಕಕ್ಷಾಸನವುಳ್ಳದ್ದು. ಸರಳವಾದ ಜಾಲಂದ್ರಗಳ ಜೋಡಣೆ ಇದೆ. ಪೂರ್ವದ್ವಾರ ಮತ್ತು ನಂದಿಮಂಪಟದ ಮಧ್ಯೆ ಎರಡು ಪಾರ್ಶ್ವಗಳಿಂದ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದು ಮೇಲ್ಗಡೆ ಮೇಲ್ಛಾವಣೆ ಜೋಡಣೆಗೊಂಡಿದೆ. ಈ ಭಾಗಕ್ಕೆ ತ್ರಿಕ ಎನ್ನುವ ಹೆಸರು. ದಕ್ಷಿಣ ದಿಕ್ಕಿನ ದ್ವಾರವೇ ಪ್ರಮುಖ ದ್ವಾರ. ಇಲ್ಲಿ ಮುಖಮಂಪಟವಿದೆ.

ವಿಜಯನಗರದ ಅರಸರ ಕಾಲದಲ್ಲಿ ಸ್ಥಳೀಯ ನಾಯಕರು ಮುಖಮಂಟಪದಿಂದ ಮುಂದಕ್ಕೆ ವಿಸ್ತರಿಸಿದ್ದಾರೆ. ಪಾರ್ವತೀ ದೇವಾಲಯ, ಪಾತಾಳಾಂಕಣ, ಗೋಪುರದ್ವಾರ ಇವು ಸ್ಥಳೀಯ ನಾಯಕರ ಕಾಲದ ರಚನೆಗಳು. ಗರ್ಭಗೃಹದಲ್ಲಿ ಸದಾಶಿವನ ಲಿಂಗವಿದೆ. ಮಂಟಪದಲ್ಲಿ ಸಪ್ತಮಾತೃಕೆಯರು, ಗಣಪತಿ, ದುರ್ಗಾ, ಷಣ್ಮುಖ, ಸೂರ್ಯ ಮೊದಲಾದ ಪ್ರತಿಮೆಗಳಿವೆ. ಖಡ್ಗ, ತ್ರಿಶೂಲ, ಡಮರುಗ ಹಾಗೂ ರುಂಡವನ್ನು ಹಿಡಿದಿರುವ ಆಸೀನ ಭೈರವನ ವಿಗ್ರಹ ಅಪರೂಪದ್ದು. ಇದರ ಕೇಶವಿನ್ಯಾಸ ವಿಶಿಷ್ಟವಾದದ್ದು. ಬಳಪದಕಲ್ಲಿನ ಕೆತ್ತನೆಯಲ್ಲಿ ಸೌಮ್ಯ ಸ್ವರೂಪ ವ್ಯಕ್ತವಾಗಿದೆ. ಇದನ್ನು ಚೇಳಿನ ಚಿಹ್ನೆಯುಳ್ಳ ಪೀಠದ ಮೇಲೆ ಇರಿಸಿದ್ದಾರೆ.

-೩-

ದೇವಾಲಯದ ಹೆಸರು : ಮೂಲೆ ಶಂಕರೇಶ್ವರ

ಸ್ಥಳ : ತುರುವೇಕೆರೆ, ತುಮಕೂರು ಜಿಲ್ಲೆ

ಚಾರಿತ್ರಿಕ ಹಿನ್ನೆಲೆ : ದಖ್ಖನ್ ಪ್ರದೇಶದಲ್ಲಿ ಹಲವಾರು ಭೂಮಿಜ ಶೈಲಿಯ ದೇವಾಲಯಗಳನ್ನು ವಿದ್ವಾಂಸ ಹೆನ್ರಿ ಕಸಿನ್ಸ್ ಗುರುತಿಸಿದ್ದಾರೆ. ಶಿಲಾಹಾರ ಮನೆತನದವರ ಕಾಲದಲ್ಲಿ ನಿರ್ಮಾನಗೊಂಡ ಅಂಬರನಾಥ ದೇವಾಲಯ ಪ್ರಮುಖವಾದುದು. ಇದರ ಕಾಲ ಕ್ರಿ.ಶ. ೧೦೬೦. ಸಿನ್ನಾರ‍್ನಲ್ಲಿರುವ ಗೊಂಡೇಶ್ವರ, ರತನ್‌ಮಾಡಿಯ ಅಮೃತೇಶ್ವರ, ಜಾಮ್ಲಿಯ ಜಮಾಲೇಶ್ವರ ದೇವಾಲಯಗಳೂ ಭೂಮಿಜ ಶೈಲಿಯವು. ಆಂಧ್ರದಲ್ಲಿರುವ ನಂದಿಕುಂಡಿನ್ ಸ್ಥಳದ ರಾಮಲಿಂಗೇಶ್ವರ ಹಾಗೂ ಕರ್ನಾಟಕದಲ್ಲಿರುವ ಭೂಮಿಜ ಶೈಲಿಯ ದೇವಾಲಯಗಳಿಗೂ ಸಾಮ್ಯವಿದೆ ಎಂದು ಗಮನಿಸಬಹುದು.

ಮೂಲೆ ಶಂಕರೇಶ್ವರ ದೇವಾಲಯದ ಪೂರ್ಣಚಿತ್ರ

ಮೂಲೆ ಶಂಕರೇಶ್ವರ ದೇವಾಲಯದ ಪೂರ್ಣಚಿತ್ರ

ಸಂಪ್ರದಾಯ ಶೈಲಿ: ಔತ್ತರೇಯ ಸಂಪ್ರದಾಯ – ಪ್ರಾದೇಶಿಕ ಲಕ್ಷಣಗಳನ್ನು ಮೈಗೂಡಿಸಿಕೊಂಡ ಭೂಮಿಜ ಶೈಲಿ.

ಕಾಲಮಾನ: ದೇವಾಲಯ ರಚನೆ ಕ್ರಿ.ಶ. ಹದಿಮೂರನೆ ಶತಮಾನದ ಮಧ್ಯಭಾಗಕ್ಕೆ ಸೇರಿದ್ದು. ಇದೇ ಸ್ಥಳದಲ್ಲಿರುವ ಚೆನ್ನಕೇಶವ ಹಾಗೂ ಮೂಲೇಶಂಕರೇಶ್ವರ ದೇವಾಲಯಗಳು ಸಮಕಾಲೀನ ರಚನೆಗಳು. ವಿಷ್ಣು ಹಾಗೂ ಶಿವನ ದೇವಾಲಯಗಳನ್ನು ಊರಿನಲ್ಲಿ ಪ್ರತಿಷ್ಠಾಪಿಸುವ ಪದ್ಧತಿ ಹೊಯ್ಸಳರ ಕಾಲದಲ್ಲಿತ್ತು. ಇವೆರಡೂ ದೇವಾಲಯಗಳ ರಚನೆಯಲ್ಲಿ ಬಹುಶಃ ನಾಲ್ಕಾರು ವರ್ಷಗಳ ಅಂತರವಿರಬಹುದು. ದೇವಾಲಯಗಳ ರಚನೆಗೆ ಸಂಬಂಧಿಸಿದಂತೆ ನೇರವಾದ ಯಾವ ಶಾಸನವೂ ದೊರಕಿಲ್ಲ. ಮೂಲೆ ಶಂಕರೇಶ್ವರ ದೇವಾಲಯದ ದಕ್ಷಿಣ ದ್ವಾರದ ತೊಲೆಯ ಮೇಲೆ ದಾನ ಶಾಸನವಿದೆ. ಹೊಯ್ಸಳ ನರಸಿಂಹ (ಕ್ರಿ.ಶ. ೧೩೦೭?) ನ ಕಾಲದ್ದೆಂದು ವಿದ್ವಾಂಸರು ಗುರುತಿಸಿದ್ದಾರೆ.

ಊರಮಧ್ಯದಲ್ಲಿರುವ ಚೆನ್ನಕೇಶವನ ದೇವಾಲಯದ ಮಂಟಪ ಹಾಗೂ ಮುಖಮಂಟಪದ ತೊಲೆಯ ಮೇಲೆ ಕ್ರಿ.ಶ. ೧೨೬೩-೧೨೬೭ರ ದಾನ ಶಾಸನಗಳಿವೆ. ಇವು ಹೊಯ್ಸಳ ವೀರನರಸಿಂಹನ ಕಾಲದ ಶಾಸನಗಳು. ವೀರನರಸಿಂಹನ ಮಹಾಪ್ರಧಾನ ಸಂಧಿವಿಗ್ರಹಿ ಸೋವಣ್ಣ ದಂಡನಾಯಕ ತುರುವೇಕೆರೆಯಲ್ಲಿ ಸರ್ವಜ್ಞ ವಿಜಯನಾರಸಿಂಹಪುರವೆಂಬ ಅಗ್ರಹಾರವನ್ನಾಗಿ ಮಾಡಿ ದಾನ ನೀಡಿದ ಉಲ್ಲೇಖವಿದೆ. ಶಾಸನಗಳ ಕಾಲಕ್ಕೆ ಈ ಎರಡೂ ದೇವಾಲಯಗಳು ರಚನೆಗೊಂಡಿದ್ದವು ಎಂದು ನಿರ್ಧರಿಸಬಹುದು.

೮೦ರ ದಶಕದ ಮೂಲೆ ಶಂಕರೇಶ್ವರ ದೇವಾಲಯದ ಪಾರ್ಶ್ವನೋಟ

೮೦ರ ದಶಕದ ಮೂಲೆ ಶಂಕರೇಶ್ವರ ದೇವಾಲಯದ ಪಾರ್ಶ್ವನೋಟ

ವಿಶೇಷ ಮಾಹಿತಿ ಲಕ್ಷಣಗಳು : ದೇವಾಲಯದ ಜಗತಿ ಹಾಗೂ ಪೀಠದ ಆರಂಭಿಕಸ್ತರಗಳು ಹೂತು ಹೋಗಿದ್ದು, ಹತ್ತಾರು ವರ್ಷಗಳ ಹಿಂದೆ ಸುತ್ತ ತುಂಬಿದ್ದ ಮಣ್ಣನ್ನು ತೆಗೆದಿದ್ದರಿಂದ ಜಗತಿ, ಪೀಠ ರಚನೆಗಳು ನಿಚ್ಚಳವಾಗಿ ಕಾಣತೊಡಗಿದೆ. ಆದರೆ ದೇವಾಲಯದ ಅಂತರಾಳ ಹಾಗೂ ಮಂಟಪದ ಮೇಲಿನ ಕೈಪಿಡಿ ಗೋಡೆಗೆ ಇತ್ತೀಚಿನ ಸಿಮೆಂಟ್‌ನಲ್ಲಿ ತಯಾರಿಸಿದ ಅಲಂಕರಣವನ್ನು ಜೋಡಿಸಿ ಮೂಲದೇವಸ್ಥಾನದ ಸ್ವರೂಪ, ಶೈಲಿಯನ್ನು ಅಂದಗೆಡಿಸಿದ್ದಾರೆ.

ದೇವಾಲಯದ ತಲಚ್ಛಂದ ಚತುರಶ್ರಾಕಾರವುಳ್ಳದ್ದು ಹಾಗೂ ಚತುರ್ಭೂಮಿ ರಚನೆ. ದೇವಾಲಯದ ವೈಶಿಷ್ಟ್ಯತೆ ಇರುವುದು ಶಿಖರ ರಚನೆಯಲ್ಲಿ; ಉಳಿದಿದ್ದು ಸಾಂಪ್ರದಾಯಿಕ ರಚನೆ. ಭದ್ರಭಾಗವನ್ನು ಆವರಿಸಿಕೊಂಡ ಪಟ್ಟಿಕೆ ಶಿಖರ ಭಾಗದಲ್ಲಿ ಅಲಂಕಾರವಿಲ್ಲದೆ ಕಿರಿದಾಗುತ್ತಾ ಮೇಲಕ್ಕೆ ಸಾಗುತ್ತದೆ. ಇದನ್ನು ಸಮರಾಂಗಣ ಸೂತ್ರಧಾರ ಗ್ರಂಥಕಾರನು ‘ಪಲ್ಲವಿಕಾ’ ಎಂದು ಗುರುತಿಸುತ್ತಾನೆ. ಕರ್ಣ ಹಾಗೂ ಭದ್ರ ಭಾಗದ ನಡುವೆ ಪ್ರತಿರಥ ರಚನೆ ಇದ್ದು ಕಿರುಶೃಂಗಗಳ ಮೂರು ಸಾಲು ಕರ್ಣ ಹಾಗೂ ಪ್ರತಿರಥ ಭಾಗದಲ್ಲಿ ಕಿರಿದಾಗುತ್ತಾ ಮೇಲೇರುತ್ತವೆ. ಇದನ್ನು ಪ್ರಾಸಾದ ಮಂಡನ ಗ್ರಂಥಕಾರನು ಭೂಮಿಕೋಪರಿ ಭೂಮಿಶ್ಚ ಹ್ರಸ್ವ ಹ್ರಸ್ವನವಾಂತಕಂ ಎಂದು ಗುರುತಿಸುತ್ತಾನೆ. ಇದರ ಪ್ರಕಾರ ಒಂಬತ್ತರವರೆಗೆ ಭೂಮಿ ರಚನೆಗೆ ಅವಕಾಶವಿದೆ. ಈ ದೇವಾಲಯ ಚತುರ್ಭೂಮಿ ರಚನೆ.

ವಿಸ್ತೃತ ವಿವರಣೆ : ಹೊಯ್ಸಳರ ಕಾಲದಲ್ಲಿ ಗ್ರಾಮಗಳಲ್ಲಿ ದೇವಾಲಯಗಳನ್ನು ರಚಿಸುವಾಗ ನಿರ್ದಿಷ್ಟ ಕ್ರಮವನ್ನು ಅನುಸರಿಸುತ್ತಿದ್ದರು. ಊರ ಮಧ್ಯದಲ್ಲಿ ವಿಷ್ಣು ದೇವಾಲಯವನ್ನೂ ಈಶಾನ್ಯ ದಿಕ್ಕಿನಲ್ಲಿ ಶಿವನನ್ನು ಸ್ಥಾಪಿಸುತ್ತಿದ್ದರು. ಇದನ್ನು ಐಶಾನ್ಯಾಂದಿಶಿ ಪಂಚವದನಾಃ …. ಶ್ರೀ ಕೇಶವೋಮಧ್ಯತಃ ಎಂದು ಶಾಸನವು ಗುರುತಿಸಿರುವುದನ್ನು ಕಾಣಬಹುದು. ಈ ರೀತಿ ರಚನೆಗೊಂಡ ದೇವಾಲಯಗಳಲ್ಲಿನ ಶಿವನ ದೇವಾಲಯದ ‌ಪ್ರಮುಖ ದ್ವಾರ ಸಾಮಾನ್ಯವಾಗಿ ದಕ್ಷಿಣ ದಿಕ್ಕಿನಲ್ಲಿರುತ್ತದೆ. ಈ ದೇವಾಲಯದ ದ್ವಾರವೂ ದಕ್ಷಿಣ ದಿಕ್ಕಿನಲ್ಲಿದೆ. ಈಶಾನ್ಯ ಮೂಲೆಯಲ್ಲಿರುವುದರಿಂದ ಮೂಲೆಶಂಕೇಶ್ವರ ಎಂಬ ಹೆಸರು ಬಂದಿರಬಹುದು. ಊರ್ಧ್ವಕ್ರಮದಲ್ಲಿ ಜಗತಿ, ಪೀಠ, ಜಂಘಾ, ಛಾದ್ಯ ಶಿಖರ, ವೇದಿ, ಘಂಟಾ, ಕಲಶಗಳಿವೆ. ತಿರ್ಯಕ್ರಮದಲ್ಲಿ ಗರ್ಭಗೃಹ, ಅಂತರಾಳ, ಮಂಟಪ ಹಾಗೂ ದಕ್ಷಿಣ ದಿಕ್ಕಿನಲ್ಲಿ ಮುಖ ಮಂಟಪವಿದೆ.

ಜಗತಿ : ಜಗತಿಯು ಸುಮಾರು ಮೂಡು ಅಡಿ ಎತ್ತರವುಳ್ಳದ್ದು. ಇದರ ಆಕಾರ ದೇವಾಲಯದ ತಲಚ್ಛಂದವನ್ನು ಅನುಸರಿಸಿದೆ. ಪದ್ಮಪತ್ರ, ಕಂಠ, (ಪಟ್ಟಿಕೆ) ಹಾಗೂ ವೇದಿಕೆಯಂತಹ ಸ್ತರಗಳಿವೆ. ಈ ಸ್ತರಗಳ ಮಧ್ಯೆ ಛೇದವೆಂಬ ಜೋಡಣೆ ಸ್ತರವನ್ನು ಕಾಣಬಹುದು.

ಪೀಠ : ಪೀಠವು ಸಾಧಾರಣ ರಚನೆ; ಖುರಕ, ಪದ್ಮಪತ್ರ ಕರ್ಣಿಕಾ, ಪದ್ಮಪತ್ರ (ಕುಂಭ?), ವೃತ್ತ ಕುಮುದ ಹಾಗೂ ಕಪೋತ ರೀತಿಯ ವೇದಿಕೆ ಇದೆ. ಈ ಸ್ತರಗಳ ಮಧ್ಯೆ ಜೋಡಣೆ ಸ್ತರಗಳನ್ನೂ ಕಾಣಬಹುದು. ಪೀಠದ ಕೆಳಗೆ ಭಿಟ್ ಸ್ತರವಿದೆ.

ಜಂಘಾ : ಜಂಘಾ ಭಾಗದಲ್ಲಿ ಅಲಂಕರಣವಿಲ್ಲ. ಬೋಳುತನ ಪರಿಹರಿಸಲು ಸ್ತಂಭದಂತೆ ಕಂಡರಣೆ. ಕರ್ಣ ಹಾಗೂ ಭದ್ರಗಳ ನಡುವೆ ಸ್ತಂಭ ಕುಂಭ ಅಥವ ಸ್ತಂಭ ಪಂಜರ ರಚನೆಗಳಿವೆ.

ಛಾದ್ಯ : ಛಾದ್ಯದ ಮುಂಚಾಚು ಹೆಚ್ಚು ಬಾಗದೆ ಸರಳವಗಿದೆ.

ಶಿಖರ: ಶಿಕರವು ನಾಲ್ಕು ಭೂಮಿಯುಳ್ಳದ್ದು. ಎರಡು ಭದ್ರಗಳ ನಡುವೆ ಪ್ರತಿರಥ ಕರ್ಣ – ಪ್ರತಿರಥಗಳ ಭಾಗದಲ್ಲಿ ಮೂರು ಸಾಲು ಕಿರುಶೃಂಗಗಳು (ಪ್ರತ್ಯಂಗ) ಕಿರಿದಾಗುತ್ತಾ ಮೇಲೇರುತ್ತವೆ. ಭದ್ರಭಾಗದಲ್ಲಿರುವ ಪಟ್ಟಿಕೆ ಗಮನಾರ್ಹವಾದದ್ದು. ಈ ಪಟ್ಟಿಕೆ, ಆಮಲಸಾರದಂತಹ ಘಂಟಾ ರಚನೆ, ಕಿರುಶೃಂಗಗಳ ಮಾಲಿಕೆ ಇವೇ ಭೂಮಿಜ ಶೈಲಿಯನ್ನು ನಿರ್ಧರಿಸುವ ಅಂಶಗಳು. ಕಿರುಶೃಂಗಗಳ ಜೋಡಣೆ ಅಂತರಾಳ ಹಾಗೂ ಮಂಟಪದ ಕೈಪಿಡಿ ಗೋಡೆಯ ಭಾಗಕ್ಕೂ ವಿಸ್ತರಿಸಲಾಗಿದೆ. ಕಿರುಶೃಂಗಗಳಲ್ಲಿಯೂ ಛಾದ್ಯ, ಶಿಖರ, ವೇದಿ, ಘಂಟಾ, ಕಲಶ ರಚನೆಗಳನ್ನು ಕಾಣಬಹುದು. ಶಿಖರದ ನಂತರ ವೇದಿಕಾ ರಚನೆ ಇದೆ.

ಘಂಟಾ ಕಲಶ : ಆಮಲಸಾರದಂತಹ ಘಂಟಾ ರಚನೆಯ ಆಕಾರವೂ ತಲಚ್ಛಂದವನ್ನು ಅನುಸರಿಸಿದೆ. ಘಂಟಾ ರಚನೆಯ ಸ್ವರೂಪವೂ ವಿಶಿಷ್ಟವಾದದ್ದು. ಮಧ್ಯೆ ಸುತ್ತಲೂ ವಿಸ್ತರಿಸಿದ ಪಟ್ಟಿಕೆ ಇದೆ. ಘಂಟಾ ರಚನೆಯ ಮೇಲೆ ಕಲಶವನ್ನಿಡಲು ವಿಸ್ತಾರವಾದ ಪದ್ಮಕಾರದ ಪೀಠವಿದೆ. ಇದು ಆಮಲಸಾರದ ಮೇಲಿನ ಖಾಪುರಿಗೆ ಸಮನಾದುದು. ಮೇಲ್ಗಡೆ ಪ್ರಾಚೀನ ಶಿಲಾ ಕಲಶವಿದೆ (ಈಗ ಕಾಣೆಯಾಗಿದೆ).

ತಿರ್ಯಕ್ರಮ: ದೇವಾಲಯದ ಗರ್ಭಗೃಹ, ಅಂತರಾಳ ಹಾಗೂ ಮಂಪಟಗಳು ಸರಳ ರಚನೆಗಳು, ಮಂಟಪದ ಮಧ್ಯೆ ನಾಲ್ಕು ಪೂರ್ಣಪ್ರಮಾಣದ ಸ್ತಂಭಗಳು ಉಳಿದವು ಭಿತ್ತಿಯೊಡನಿರುವ ಅರೆಗಂಭಗಳು. ದೇವಾಲಯಕ್ಕೆ ದಕ್ಷಿಣ ದಿಕ್ಕಿನಲ್ಲಿ ಪ್ರಮುಖ ದ್ವಾರ. ಈ ದಿಕ್ಕಿನಲ್ಲಿ ಕಕ್ಷಾಸನವುಳ್ಳ ಮುಖಮಂಟಪವಿದೆ. ಪೂರ್ವದಿಕ್ಕಿನ ಭಿತ್ತಿಯ ನಡುವೆ ಒಂದು ರಂಧ್ರವಿದೆ. ಹೊರಭಾಗದಲ್ಲಿ ವೃತ್ತಸ್ಫುಟಿತವು ಮಧ್ಯದಲ್ಲಿ ಈ ರಂಧ್ರವನ್ನೊಳಗೊಂಡಿದೆ. ಮಂಟಪದಲ್ಲಿ ಸಪ್ತಮಾತೃಕೆಯರು, ಗಣಪತಿ, ಷಣ್ಮುಖ, ವೀರಭದ್ರ, ನಂದಿ ಮೊದಲಾದ ವಿಗ್ರಹಗಳಿವೆ.